ಜನಪದ ಭಾಷಾ ಚಮತ್ಕಾರ ಭಾಷೆಯ ಚಮತ್ಕಾರ ಎಂದರೆ ಚಾತುರ್ಯ, ಕೌಶಲ, ಬೌದ್ಧಿಕ ಪ್ರದರ್ಶನವಾಗಿದೆ. ಹಾಸ್ಯ, ವಿನೋದ, ವಿಡಂಬನೆ, ಮನರಂಜನೆ ಇತ್ಯಾದಿಗಳಿಗೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ. ಭಾಷಾ ಚಮತ್ಕಾರಗಳು ಹೆಚ್ಚಾಗಿ ಜನಪದ ಕಥೆ, ಒಗಟು, ಗಾದೆ, ಗಣಿತ ಈ ಮೊದಲಾದವುಗಳ ಮುಂದುವರಿದ ಭಾಗವಾಗಿವೆ. ಇವುಗಳ ವಸ್ತು ಇಂಥದೇ ಎನ್ನಬೇಕಿಲ್ಲ. ಪೌರಾಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮೊದಲಾದ ಕ್ಷೇತ್ರಗಳ ಹರಹನ್ನು ಇದು ಒಳಗೊಂಡಿದೆ.

ಒಗಟು, ಒಡಪು, ಗಣಿತ, ಗಾದೆಗಳ ಹಾಗೆ ಇಲ್ಲಿಯ ಭಾಷಾ ಪ್ರಯೋಗದ ಪ್ರತಿಯೊಂದು ಮಾತಿನಲ್ಲಿ ಜಾಣ್ಮೆ ಇರುತ್ತದೆ. ಸವಾಲು ಹಾಕುವುದು, ಬಿಡಿಸಿಕೊಳ್ಳುವುದು, ಸಮಸ್ಯೆಗೆ ಮತ್ತೊಂದು ಸಮ್ಯೆಯನ್ನಿಟ್ಟು ಬೆಳೆಸುವುದು ಇಲ್ಲಿ ಸರ್ವೇ ಸಾಮಾನ್ಯ. ಪ್ರತಿಯೊಬ್ಬ ವ್ಯಕ್ತಿಯ ಬುದ್ಧಿಯನ್ನು ಕೆರಳಿಸಿ, ಪ್ರಚೋದಿಸಿ, ಚೂಪುಗೊಳಿಸಿ ವಾಕ್‌ ಚಾತುರ್ಯದ ಜಾಣ್ಮೆಗೆ ಪುಟವಿಕ್ಕಿ ಪರೀಕ್ಷಿಸುವುದು ಇವುಗಳ ಮುಖ್ಯ ಉದ್ದೇಶವಾಗಿದೆ.

ಅಕ್ಷರ ಚಮತ್ಕಾರಗಳು:

೧. ಪ್ರಶ್ನೆ: ‘ಕೈ’ ಮುಂದೆ ಏನೈತಿ?
ಉತ್ತರ: ‘ಕೊ’ (ಕಾಗುಣಿತದ ಅಕ್ಷರ)

೨. ಪ್ರಶ್ನೆ: ‘ಕೈ’ನಲ್ಲಿ ಐವತ್ತು ತೆಗೆದರೆ ಏನುಳಿತು?
ಉತ್ತರ: ‘ಕೆ’ (ಒತ್ತಕ್ಷರ ತೆಗೆಯಬೇಕು)

೩. ಪ್ರಶ್ನೆ: ಹೇಗಾದರೂ ಓದಿ. ಮದ್ರಾಸಿನಲ್ಲಿನ ಸಿದ್ರಾಮ, ಗಿರಿಬಸಕನ, ಕಸಬರಿಗಿ, ಕುಬೇರನಿಗೇನಿರಬೇಕು.

ಪದಚಮತ್ಕಾರಗಳು:

೧.ಪ್ರಶ್ನೆ: ಒಬ್ಬ ‘ಮೈಸೂರಿಗೆ ಹೋಕನಿ ನೋಡಾಕೆ’ ಅಂದ. ಇನ್ನೊಬ್ಬ ಹೇಳಿದ್ದ ‘ಇಲ್ಲೇ ಮೈಸೂರು ತೋರುಸ್ತೇನಿ ಬಾ’ ಅಂತ, ‘ಹ್ಞೂ ಹಾಗಾದ್ರೆತೋರಿಸು?’ ಅಂದ. ಹಾಗಾದ್ರೆ ಹೇಗೆ ತೋರಿಸಬೇಕು.

ಉತ್ತರ: ಇಬ್ಬರು ಮನೆಯ ಜಗಲಿ ಕಟ್ಟೆಯಲ್ಲಿ ಕುಳಿತಿರುತ್ತಾರೆ. ಆಗ ತನ್ನ ‘ಮೈ’ಯನ್ನು ‘ಮೈ’ ಎಂದೂ, ಅಲ್ಲೇ ಮನೆಯ ಮುಂಭಾಗದ ‘ಸೂರು’ (ಅಂಚು) ಅನ್ನು ‘ಸೂರು’ ಎಂದೂ ‘ಇದೆಯಪ್ಪಾ ಮೈಸೂರು’ ಎಂದು ಹೇಳಿದರೆ ಸಾಕು.

ಇದೇ ರೀತಿಯಲ್ಲಿ ಕಲ್ಲು+ಕತ್ತ (ಹಗ್ಗ)= ಕಲ್ಕತ್ತ, ಬೊಂಬು+ಬಾಯಿ=ಬೊಂಬಾಯಿ ಎಂದು ಇದ್ದಲ್ಲಿಯೇ ತೋರಿಸಬಹುದು.

೨. ಪ್ರಶ್ನೆ: ಬೆಂಡೆಕಾಯಿ ಬಿತ್ತಿ ಅವರೆಕಾಯಿ ಕೀಳಬೇಕು. ಹೇಗೆ?

ಉತ್ತರ: ಬೆಂಡೆಕಾಯಿಯ ಬೀಜವನ್ನು ನೆಲದಲ್ಲಿ ಯಾರು ಹಾಕಿರು(ಊಳರು)ತ್ತಾರೆಯೋ ಅವರೇ (ಆ ವ್ಯಕ್ತಿಯೇ) ಅದು ಕಾಯಿ ಬಿಟ್ಟಾಗ ಕಿತ್ತುಕೊಂಡು ಬರಬೇಕು. ಇದೇ ಇಲ್ಲಿಯ ಸೊಗಸು.

ಉಕ್ತಿ ಚಮತ್ಕಾರಗಳು:

೧. ಪ್ರಶ್ನೆ: ವಿರಾಟರಾಯನ ಹೆಂಡತಿ ತಮ್ಮನ ವೈರಿಯ ಅಣ್ಣನ ಅಪ್ಪನ ವಾಹನ ಯಾವುದು?

ಉತ್ತರ: ಕೋಣ

ವಿರಾಟರಾಯನ ಹೆಂಡತಿಯ ತಮ್ಮ ಕೀಚಕ. ಇವನವೈರಿ ಭೀಮ. ಇವನ ಅಣ್ಣ ಧರ್ಮರಾಯ. ಇವನ ಅಪ್ಪ ಯಮ. ಯಮನ ವಾಹನ ಕೋಣ.

೧. ಪ್ರಶ್ನೆ: ಹರನ ಹಾರನ ಆಹಾರನ ಸುತನ ಸ್ವಾಮಿಯ ಅನುಜನ ವೈರಿ ಯಾರು?

ಉತ್ತರ: ಇಂದ್ರಜಿತ್‌

ಭಾಷೆಗೆ ಸಂಬಂಧಿಸಿದ ಚಮತ್ಕಾರಗಳು ಜನಪದದ ಅನೇಕ ರೂಪಗಳಲ್ಲಿ ನಮಗೆ ಹೇರಳವಾಗಿ ದೊರಕಬಲ್ಲವು. ಒಂದೊಂದು ಪ್ರಕಾರದಲ್ಲಿ ಇವುಗಳ ಪ್ರಯೋಗ ಚಮತ್ಕಾರಪೂರಿತವಾಗಿಯೆ ಬಳಕೆಯಾಗಿವೆ.

ಒಗಟು ಚಮತ್ಕಾರಗಳು:

ಊಟ ಮಾಡಿದೂಟ ಮತ್ತೊಂದ್‌ ಸಾರಿ ಸಿಕ್ಕಲ್ಲ
ಇದೆಂಥಾ ಊಟಾಂತ ಹೇಳ್ತೀರಾ ನೀವೆಲ್ಲಾ?

ಉತ್ತರ: ತಾಯಿಯ ಎದೆ ಹಾಲು ಊಟ

ಒಗಟು ಕಥೆಗಳು

‘ಒಬ್ಬ ಸಾಧು ದೇಶದ ದೊಡ್ಡ ದೊಡ್ಡ ಪರಡಿತ್ತುನೆಲ್ಲ ಗೆದ್ದು ಆನೆಮ್ಯಾಲೆ ಕಥೆಪುರಾಣದ ಪುಸ್ತ್ಕನೆಲ್ಲ ಹೇರ್ಕೊಂಡು ಬರ್ತಾಯಿದ್ದ. ಅಲ್ಲೊಂದು ಕಣ. ಕಣದಲ್ಲಿ ಅಪ್ಪಮಗಳು ಒಕ್ಕಲು ಮಾಡ್ತಾ ಇದಾರೆ. ಸ್ವಾಮಿಗಳನ್ನೋಡಿ ಮಗಳು ‘ಬರ್ರಿ‍ ಸ್ವಾಮಿಗಳೆ’ ಅಂತ ಕರೀತು. ಅಡಿಕ್ಕಾಸಲು ಏನೂ ಇದ್ದಿಲ್ಲ. ಅಪ್ಪನ ಕೈಯಾಳ ಮೊರ ತಂದಿಟ್ಟು. ಕಲುತಗಳ್ರೀಂತು. ಆಗ ಒಂದು ಪ್ರಶ್ನೆ ಕೇಳ್ತು. ‘ಸ್ವಾಮಿ, ಆಗೊಮ್ಮೆ ಈಗೊಮ್ಮೆ ಏನು ಹೇಳ್ರಿಂತು’. ಆ ಸಾಧು ಯೋಚ್ನೆ ಮಾಡ್ದ. ಹೊಳೀಲಿಲ. ಪುರಾಣದ ಪುಸ್ತ್ಕ ತಿರುವಿ ಹಾಕ್ದ. ಉತ್ರ ಸಿಕ್ಲೇ ಇಲ್ಲ. ಸೋತು ‘ನಾನು ಎಂತೆಂತೋರ್ಗೊ ಸೋಲಿಸ್ದೆ ಕಣವ್ವ. ನಿನ್ನ ಪ್ರಶ್ನೆಗೆ ಉತ್ರ ಹೇಳ್ಳಿಕ್ಕಾಗಲಿಲ್ಲ. ನೀನೇ ಹೇಳವ್ವ ‘ಅಂತಂದು ಶರಣಾದ್ರು. ಇದರ ಅರ್ಥ ಏನು?’

ಉತ್ತರ: ಸಾಧುವನ್ನು ಮೊರದ ಮೇಲೆ ಕೂರಿಸಿದ್ದರಿಂದ ಹೀಗೆ ಹೇಳಿದಳು. ಮಗು (ಕೂಸು)ವಾಗಿದ್ದಾಗ (ಆಗ) ಮೊರದಲ್ಲಿ ಮಗುವನ್ನು ಹಾಕಿರ್ತಾರೆ. ಈಗ ನೀವು ಅದೇ ಮೊರದ ಮೇಲೆ ಕುಳಿತಿದ್ದೀರಿ ಅಂದಳು. ಆತ ಗೆದ್ದು ತಂದಿದ್ದ ಬಹುಮಾನಗಳನ್ನೆಲ್ಲ ಆಕೆಗೆ ಕೊಟ್ಟ.

ಸಂಭಾಷಣಾ ಒಗಟು ಚಮತ್ಕಾರಗಳಲ್ಲ: ಏಟಿಗೆ ಎದಿರೇಟು ಎನ್ನುವ ಹಾಗೆ ಒಬ್ಬರು ಒಗಟಿನಲ್ಲಿಯೇ ಪ್ರಶ್ನೆ ಹಾಕಿದರೆ ಅದಕ್ಕೆ ಒಗಟಿನಲ್ಲಿಯೇ ಉತ್ತರಿಸುವುದು ಇಲ್ಲಿಯ ಬಗೆ . ಕತೆಯ ಒಳಗೇ ಸಂಭಾಷಣಾ ಒಗಟು ಚಮತ್ಕಾರಗಳು ಎರಡನ್ನು ಬಿಡಿಸಿ ಹೇಳುವ ಪ್ರಸಂಗ ಇಲ್ಲಿ ಉಂಟಾಗುತ್ತದೆ. ಉದಾ: ಅತ್ತೆ – ಅಳಿಯರ ಒಗಟು:

ಪ್ರಶ್ನೆ: ಅತ್ತೆ: ಕರಕಟ್ಟಿದೆ, ಹುಲ್ಲು ಹಾಕಿದೆ
ಕರಯಾಕೆ ಮೇಯ್ತಾ ಇಲ್ಲ?

ಅಳಿಯ: ಮೋಡಕಟ್ಟಿದೆ ಮೇಲೆಕಟ್ಟಿದೆ
ಮಳೆಯಾಕೆ ಆಗ್ತಾ ಇಲ್ಲ?

ಉತ್ತರ: ಅತ್ತೆ: ಊಟಕ್ಕೆ ನೀಡಿದೆ. ಊಟ ಯಾಕೆಮಾಡುತ್ತಿಲ್ಲ?

ಅಳಿಯ: ತುಪ್ಪ ಇದ್ದರು ಯಾಕೆ ಬಿಡ್ತಾ ಇಲ್ಲ

ಗಣಿತಾತ್ಮಕ ಒಗಟು ಚಮತ್ಕಾರಗಳು: ಗಣಿತವನ್ನೊಳಗೊಂಡ ಒಗಟಿನ ರೂಪದ ಚಮತ್ಕಾರಗಳು ಈ ಗುಂಪಿಗೆ ಸೇರುತ್ತದೆ. ಗಣಿತದ ಅಂಶವನ್ನು ಪ್ರಕಟಗೊಳಿಸುತ್ತಲೇ ಮೋಸಗೊಳಿಸುವ ಜಾಣ್ಮೆ ಇಲ್ಲಿಯ ಚಮತ್ಕಾರಗಳಲ್ಲಿ ಕಂಡು ಬರುತ್ತವೆ.

ಪ್ರಶ್ನೆ: ಕೊಣಿಗ್ಯಾಗೆ ಒಂದು ರೊಟ್ಟಿ
ಹೆಂಚಿನ್ಯಾಗೆ ಹತ್ತು ರೊಟ್ಟಿ
ಪುಟ್ಯಾಗೆ ಆರು ರೊಟ್ಟಿ
ಹಂಗಾರೆ ಏಸು ರೊಟ್ಟಿ

ಉತ್ತರ : ಒಂದು.
(ಕೊಣಿಗೆಯಲ್ಲಿ ಸುಟ್ಟ (ತಟ್ಟಿ)ದ ರೊಟ್ಟಿಯನ್ನು ಹೆಂಚಿನಲ್ಲಿ ಬೇಯಲು ಹಾಕಿ, ಅನಂತರ ಆರಲು ಪುಟ್ಟಿಯ್ಲಿ ಹಾಕಬೇಕು.

ಚುಟುಕು ಲೆಕ್ಕ ಚಮತ್ಕಾರಗಳು: ಚುಟುಕು ಲೆಕ್ಕ ಚಮತ್ಕಾರಗಳನ್ನು ಒಂದು ರೀತಿಯಲ್ಲಿ ಮೋಸಗೊಳಿಸುವ ಜಾಣ ಚಮತ್ಕಾರಗಳೆಂದೇ ಕರೆಯಬೇಕಾಗುತ್ತದೆ. ಉತ್ತರ ತಕ್ಷಣ ಹೊಳೆಯುತ್ತಿದ್ದರೂ ಸರಿಯೊ ತಪ್ಪೊ ಎಂದು ಯೋಚಿಸುವ ಹೊತ್ತಿಗಾಗಲೇ ಯಾವುದೋ ಒಂದು ಉತ್ತರವನ್ನು ಹೇಳಿ ಮೋಸ ಹೋಗಿರುತ್ತೇವೆ; ಮೋಸಗೊಳಿಸಿರುತ್ತೇವೆ. ಇವುಗಳಿಗೆ ಸಮಯ, ಜಾಣ್ಮೆ ಅತ್ಯಂತ ಮುಖ್ಯ. ಇಲ್ಲಿ ಬರುವ ಅಕ್ಷರ, ಪದಗಳ ಚಮತ್ಕಾರ ಗಣಿತ ಮತ್ತು ಒಗಟಿನ ರೂಪದಲ್ಲಿ ಸೇರಿಕೊಂಡಿರುತ್ತದೆ.

೧. ಪ್ರಶ್ನೆ: ‘ಮುದ್ದೆ ಮುರುಕಿ’ಗೆ ಮೂರು ಅವರೆಕಾಳು ಹಾಗಾದ್ರೆ ಮುದ್ದಿಗೇಸ್‌ ಬಿದ್ದು?

ಉತ್ತರ: ಆರು.
(ಮುದ್ದೆ ಮುರುಕು=ಒಂದು ಮುದ್ದೆಯಲ್ಲಿನ ಅರ್ಧಭಾಗ)

೨. ಪ್ರಶ್ನೆ: ಮುನ್ನೂರು ರೂಪಾಯ್‌ದಾಗೆ
ನಾನೂರು ತಗೊಂಡ್ರೆ
ಇನ್ನೆಷ್ಟು ಉಳೀತು?

ಉತ್ತರ: ಇನ್ನೂರು. (ಮುನ್ನೂರು – ನಾ – ನೂರು=ಇನ್ನೂರು)

ಚಮತ್ಕಾರಗಳು: ಕೇಳಿದ ಪ್ರಶ್ನೆಗೆ ಬೇಗನೆ ಯೋಚಿಸಿ ಉತ್ತರಿಸುವ ಕೌಶಲ್ಯ ಇಲ್ಲಿ ಮುಖ್ಯ. ಸಣ್ಣ ಪ್ರಶ್ನೆಯಲ್ಲೇ ಇಡೀ ಕತೆಯ ಚಿತ್ರಣ ಇರುತ್ತದೆ. ಅರ್ಥ ಮಾಡಿಕೊಂಡು ಉತ್ತರಿಸ ಬೇಕಾಗುತ್ತದೆ.

೧. ಪ್ರಶ್ನೆ: ಮುಟ್ಟಿ ಕೆಟ್ಟವನಾರು? ಮುಟ್ಟದ ಕೆಟ್ಟವನಾರು?

ಉತ್ತರ: ಇಂದ್ರ. (ಅಹಲ್ಯೆಯನ್ನು ಮುಟ್ಟಿ ಕೆಟ್ಟವನಾದ)
ದುಶ್ಯಾಸನ (ದ್ರೌಪದಿಯ ಸೀರೆಯನ್ನು ಎಳೆದು ಕೆಟ್ಟ)

೨. ಪ್ರಶ್ನೆ: ಕೊಟ್ಟು ಕೆಟ್ಟವನಾರು? ಕೊಡದೆ ಕೆಟ್ಟವನಾರು

ಉತ್ತರ: ಕರ್ಣ (ಕವಚ ಕುಂಡಲ) ದುರ್ಯೋಧನ (ಭೂಮಿ )

ಇಲ್ಲಿಯ ಚಮತ್ಕಾರಗಳಲ್ಲಿ ಹೊರಗೆಡಹುವ ಅರ್ಥ, ಧ್ವನಿ, ಸಂಕೇತಗಳು ಭಾಷೆಯ ಮೇಲ್ಮೈಯನ್ನು ಯಾವ ಕಾಲಕ್ಕೂ ಜೀವಂತಬಿಡುತ್ತವೆ. ಜನಪದದ ಅನೇಕ ಪ್ರಕಾರಗಳಂತೆ ಭಾಷಾ ಚಮತ್ಕಾರಗಳ ಕೊಡುಗೆ ಅಪಾರವಾಗಿದೆ. ವೈವಿಧ್ಯಮಯವಾಗಿದೆ.

– ಜಿ.ಎಸ್‌.

ಜನಪದ ಮಹಾಕಾವ್ಯಗಳು ಯಾವ ದೀರ್ಘ ಕಥನಗೀತೆಗಳನ್ನು ನಾವು ಜನಪದ ಮಹಾಕಾವ್ಯಗಳೆಂದು ಕರೆಯುತ್ತೇವೆಯೋ ಅವುಗಳನ್ನು ಜನಪದರು ಮಹಾಕಾವ್ಯಗಳೆಂದು ಕರೆಯುವುದಿಲ್ಲ. ಆ ದೀರ್ಘ ಕಥನೆಗಳು ಬಿಡಿ ಬಿಡಿ ಭಾಗಗಳನ್ನು ಆಯಾ ಮುಖ್ಯ ಪಾತ್ರಗಳೊಡನೆ ಹೆಸರಿಸುತ್ತಾ ಕಥೆ ಮಾಡುವುದು, ಸಾಲು ಹೇಳುವುದು ಎಂದು ತಿಳಿಯುತ್ತಾರೆ. ಈ ಮಹಾಕಾವ್ಯಗಳನ್ನು ತಂತಮ್ಮ ಪ್ರದೇಶಗಳಲ್ಲಿ ಆಗಿ ಹೋದ ಸಂತರು, ಜಂಗಮರ ಸಾಧನೆ ಮತ್ತು ಬದುಕಿನ ಹಿನ್ನೆಲೆಯಲ್ಲಿ ಕಟ್ಟಿಕೊಂಡು ಭಕ್ತಿಪೂರ್ವಕವಾಗಿ ಹಾಡುತ್ತಾ ಒಬ್ಬರಿಂದ ಒಬ್ಬರಿಗೆ ಕಲಿಸುತ್ತಾ ಹೋಗುತ್ತಾರೆ. ಈ ಹಾಡುವಿಕೆ ಮತ್ತು ಕೇಳುವಿಕೆಯಿಂದಲೇ ಇಂದು ಕರ್ನಾಟಕಾದ್ಯಂತ ಅಸಂಖ್ಯಾತ ಜನಕಪದ ಗಾಯಕರು ತಮ್ಮ ನಡುವೆ ಯಾವುದೋ ಕಾಲದಲ್ಲಿ ಆಗಿ ಹೋದ ಸಂತರನ್ನು, ಐತಿಹಾಸಿಕ ವೀರರನ್ನು, ಸಾಮಾಜಿಕ – ಸೇವಕರನ್ನು ನೆನೆಯುತ್ತಾ ಬಂದಿದ್ದಾರೆ. ಈ ನೆನೆಯುವಿಕೆ ಯಾವ ಮತ ಧರ್ಮಕ್ಕೂ ಸಂಬಂಧ ಪಡದ ಧಾರ್ಮಿಕ ಮತ್ತು ಆರಾಧನೆಯ ಹಿನ್ನೆಲೆಯಲ್ಲಿರುತ್ತದೆ. ಹೀಗೆ ಕರ್ನಾಟಕದಲ್ಲಿ ಮಲೆಯ ಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಹಾಲು ಮತ ಮಹಾಕಾವ್ಯ. ಸಿರಿಪಾಡ್ದನ, ಜತೆಗೆ ಮಹಾಭಾರತಗಳನ್ನು ಕುರಿತಾಗಿಯೂ ಅತಿ ದೀರ್ಘ ಕಥಾನಕಗಳಿವೆ.

ಮಂಟೇಸ್ವಾಮಿ ಮಹಾಕಾವ್ಯದ ಭಾಗಗಳನ್ನು ದಕ್ಷಿಣ ಕರ್ನಾಟಕದಲ್ಲಿ ನೀಲಗಾರರೆಂಬ ಸಮೂಹದವರು ತಂಬೂರಿಯೊಡನೆ ಹಾಡಿದೆ, ಮಹದೇಶ್ವರನ ಕಾವ್ಯಭಾಗಗಳನ್ನು ಕಂಸಾಳೆ ವಾದ್ಯ ಸಾಧನದೊಡನೆ ಗುಡ್ಡರು ಹಾಡುತ್ತಾರೆ. ಈ ಕಾವ್ಯಭಾಗಗಳು ಮಾತಿನ ಧಾಟಿಯ ಕಾವ್ಯಗಳಾಗಿರುತ್ತವೆ. ಅವು ಒಮ್ಮೆಮ್ಮೆ ಕಾವ್ಯಾತ್ಮಕವಾಗಿ ಮತ್ತೊಮ್ಮೆ ಗದ್ಯದ ಧಾಟಿಯಲ್ಲಿಯೂ ಸಂಭಾಷಣೆಯ ಧಾಟಿಯಲ್ಲಿಯೂ ಇರುತ್ತವೆ. ಈ ಕಾವ್ಯಭಾಗಗಳನ್ನು ನೀಲಗಾರರು, ಗುಡ್ಡರು ಕೇವಲ ರಂಜನೆಗಾಗಿಯೊ ಆಸಕ್ತಿಯಿಂದಲೊ ಹಾಡುವಂತಿಲ್ಲ. ಜನಪದ ಸಂತರನ್ನು ಕುರಿತಾದ ಮಹಾಕಾವ್ಯಗಳನ್ನು ಹಾಡಲು ದೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ.

ದಕ್ಷಿಣ ಕರ್ನಾಟಕಾದ್ಯಂತ ವಿವಿಧ ಜಾತಿಸಮೂಹದಲ್ಲಿ ಸೌಹಾರ್ದವನ್ನು ಆಧ್ಯಾತ್ಮವನ್ನು ಬಿತ್ತಿದ ಮಾದಯ್ಯನ ಲೋಕದೃಷ್ಟಿ ಆತನನ್ನು ಕುರಿತಾದ ದೀರ್ಘ ಕಥನಗಳಲ್ಲಿ ಬೇರೆ ಬೇರೆಯಾಗಿಯೇ ಇರುತ್ತದೆ. ಕಥನದಲ್ಲಿ ಮಾದಯ್ಯ ಒಬ್ಬ ಕೆಳವರ್ಗದವನಂತೆ ಇದ್ದು, ಆತನಿಗೆ ಮೇಲ್ವರ್ಗದವರ ಮಠಗಳಲ್ಲಿ ದೀಕ್ಷೆ ಸಿಗದೇ ತನ್ನದೇ ಸ್ವಂತ ಮಾರ್ಗದಲ್ಲಿ ಜನೋದ್ಧಾರದ ಕಾಯಕ ಕೈಗೊಳ್ಳುತ್ತಾನೆ. ಇದೇನೆ ಇದ್ದರೂ ಈತನ ಭಕ್ತರೆನಿಸುವ ಗುಡ್ಡರು ಮತ್ತು ಗ್ರಾಮೀಣರು ಈತನನ್ನು ದುಷ್ಟಶಿಕ್ಷಕ ಶಿಷ್ಟ ರಕ್ಷಕ ಎಂಬಂತೆ ಕಥೆಗಳಲ್ಲಿ ಚಿತ್ರಿಸಿದ್ದಾರೆ. ಆದರೆ ಗುಡ್ಡರು ತಾವು ದೀಕ್ಷೆ ಪಡೆಯುವ ಸಂದರ್ಭದಲ್ಲಿ ಆಡುವ ಮಾತುಗಳನ್ನು ಗಮನಿಸಿದರೆ ಆತ ತುಂಬ ಸೌಮ್ಯಸ್ವರೂಪಿಯ ಸಂತನಾಗಿ ಕಂಡು ಬರುತ್ತ ಜನಸಮೂಹದಲ್ಲಿ ಸೌಹಾರ್ದತೆಯನ್ನು ಬಿತ್ತುವ ಪ್ರಯತ್ನ ಮಾಡಿದಂತೆ ತೋರುವುದು. ಆದರೆ ಜನಪದ ಕಥನಕಾವ್ಯಗಳಲ್ಲಿ ರೈತತ್ವಕ್ಕೆಂದು ವ್ಯಕ್ತಿತ್ವಗಳನ್ನು ದುಷ್ಟಶಿಕ್ಷಕ ಶಿಷ್ಟರಕ್ಷಕರನ್ನಾಗಿ ನೋಡಿರುವುದೇ ಹೆಚ್ಚು. ಮಧ್ಯಕರ್ನಾಟಕದ ಜುಂಜಪ್ಪ, ಮಂಟೇಸ್ವಾಮಿ ಕಥೆಯಾದರೂ ಅಷ್ಟೆ. ಜುಂಜಪ್ಪ ಮಹಾಕಾವ್ಯದ ಉದ್ದಕ್ಕೂ ಬೆಂಕಿಯಂತೆ ಉರಿಯುತ್ತಾನೆ.

ಜನವಿರೋಧಿ ಪಾಳೆಯಗಾರನಾಗಿದ್ದ ಶ್ರವಣದೊರೆಯನ್ನು ಮಹದೇಶ್ವರ ಸುಟ್ಟು ಬಿಡುತ್ತಾನೆ. ಬೇವಿನಟ್ಟಿ ಕಾಳಿಯನ್ನು ಕೇವಲ ಒಂದೆರಡು ಕೊಳಗ ಎಳ್ಳು ಬೇಡಲು ಹೋಗಿ ಅದನ್ನು ಕೊಡದೆ ಪಿಸುಣತನ ತೋರುವ ಆಕೆಯನ್ನು ಮಾದಯ್ಯ ಸರ್ವನಾಶ ಮಾಡಿಬಿಡುತ್ತಾನೆ. ಅದರಂತೆ ತನ್ನ ಭಕ್ತರಾಗುವವರಿಗೆ ಆಶ್ರಯವನ್ನು ಕರುಣಿಸುತ್ತ, ಸಂತಾನ ಹೀನರಿಗೆ ಮಕ್ಕಳ ಫಲಕೊಟ್ಟು, ಹಾಗೆ ಜನಿಸಿದ ಶಿಶುಗಳನ್ನು ಗುಡ್ಡರನ್ನಾಗಿ ಮಾಡಿಕೊಳ್ಳುತ್ತಾನೆ. ಈ ಗುಡ್ಡರು ಮತ್ತೆ ತಮ್ಮ ಗುರುಹೇಳಿಕೊಟ್ಟದ್ದನ್ನು ಜನಸಮೂಹದ ನಡುವೆ ಬಿತ್ತುತ್ತ ಹೋಗುತ್ತಾರೆ. ಒಂದೆಡೆ ನಿಂತು ಗುಡಿ, ದೇವಾಲಯ ಕಟ್ಟುವುದು ಮಹದೇಶ್ವರ, ಮಂಟೇಸ್ವಾಮಿಗಳ ಉದ್ದೇಶವಾಗಿರಲಿಲ್ಲ. ಶಿಷ್ಯರನ್ನು ಪಡೆಯುತ್ತ ಅವರ ಮೂಲಕ ತಮ್ಮ ಸಂದೇಶಗಳನ್ನು ಸಾರುತ್ತ ದಕ್ಷಿಣ ಕರ್ನಾಟಕದಲ್ಲೆ ಸಂಚರಿಸಿದ ಸಂತರು ಇವರು. ಮಹದೇಶ್ವರ, ಮಂಟೇಸ್ವಾಮಿ ಕಥನಗಳಲ್ಲಿ ಇವರನ್ನು ಉತ್ತರ ಕರ್ನಾಟಕರಿಂದ ಬಂದವರೆಂದು ಹೇಳಲಾಗಿದೆ.

ಮಂಟೇಸ್ವಾಮಿ ಮಹಾಕಾವ್ಯದ ಆರಂಭಕ್ಕೆ ಆತನನ್ನು ಹನ್ನೆರಡನೇ ಶತಮಾನದ ಬಸವಣ್ಣನವರಂತೆ ಮುಖಾಮುಖಿ ಮಾಡಲಾಗಿದೆ. ಕಥನದ ಪ್ರಕಾರ ಅಲ್ಲಮನ ಅವತಾರವೆನಿಸುವ ಮಂಟೇಸ್ವಾಮಿ ಬಸವಣ್ಣನವರ ಸತ್ಯವನ್ನು ದೃಢತೆಯನ್ನು ಪರೀಕ್ಷಿಸುತ್ತಾನೆ. ಬಸವಣ್ಣ ಕಟ್ಟಿದ ಮಹಾಮನೆಯಲ್ಲಿ ನೆರೆದ ಎಲ್ಲರನ್ನೂ ಬಿಟ್ಟು ಕತ್ತಲರಾಜ್ಯವೆನಿಸುವ ದಕ್ಷಿಣ ಕರ್ನಾಟಕದ ಕಡೆ ಮುಖ ಮಾಡುತ್ತಾನೆ. ಇದೊಂದು ಮಂಟೇಸ್ವಾಮಿಯ ದೀರ್ಘಪ್ರಯಾಣ. ದಾರಿಯಲ್ಲಿ ಆತ ಅನೇಕ ಪವಾಡಗಳನ್ನು ನಡೆಸುತ್ತಾನೆ. ರಾಚಪ್ಪಾಜಿ, ಸಿದ್ದಪ್ಪಾಜಿ, ದೊಡ್ಡಮ್ಮ ತಾಯಿ ಮೊದಲಾದವರನ್ನು ಶಿಷ್ಯರನ್ನಾಗಿ ಪಡೆಯುತತಾನೆ. ಹಲಗೂರಿನಲ್ಲಿ ಕಬ್ಬಿಣದ ಸಾಮಾನು ಸರಂಜಾಮುಗಳ ನಿರ್ಮಾಣದಲ್ಲಿ ತೊಡಗಿದ್ದ ಪಾಂಚಾಳರ ಅಹಂಕಾರವನ್ನು ತನ್ನ ಶಿಷ್ಯ ಸಿದ್ಧಾಪ್ಪಾಜಿಯ ಮಾಟದ ಶಕ್ತಿಯ ಮೂಲಕ ತಗ್ಗಿಸುತ್ತಾನೆ. ಈ ಎಲ್ಲ ಕಥನಗಳನ್ನು ಭಾಗ ಭಾಗಗಳಲ್ಲಿ ನೀಲಗಾರರು ಹಾಡುತ್ತಾ ಹೋಗುತ್ತಾರೆ. ಗ್ರಾಮಸಮೂಹದ ಪ್ರತಿಯೊಂದು ಮನೆಗಳ ಹುಟ್ಟುಸಾವು ಇನ್ನಿತರ ಹಬ್ಬ ಹರಿದಿನ ಮತ್ತು ಆಯಾ ಮನೆತನದ್ದೇ ಆದ ವಿಶೇಷದಿನಗಳಲ್ಲಿ ಈ ಕಥನಗಳನ್ನು ಹಾಡಲಾಗುತ್ತದೆ. ಸಂದರ್ಭಕ್ಕೆ ತಕ್ಕಂತೆಯೂ ಕಥಾನಕಗಳನ್ನು ಹಾಡಿಸುವುದುಂಟು.

ದಕ್ಷಿಣಕರ್ನಾಟಕದಲ್ಲಿ ಮಂಟೇಸ್ವಾಮಿಯನ್ನು ವಚನಕಾರ ಅಲ್ಲಮಪ್ರಭುವಿನ ಅವತಾರವೆಂದೂ ಮಹದೇಶ್ವರನನ್ನು ಶಿವನ ಅವತಾರವೆಂದೂ ಪರಿಗಣಿಸಿರುವಂತೆ, ಮಧ್ಯ ಕರ್ನಾಟಕದಲ್ಲಿ ಜುಂಜಪ್ಪನನ್ನು ವೀರಭದ್ರನ ಅವತಾರವೆಂದು ಪರಿಗಣಿಸಲಾಗಿದೆ. ಮಧ್ಯಕರ್ನಾಟಕದ ಎಲ್ಲ ಜನಪದ ಸಂಕಥನಗಳೂ ಪಶುಪಾಲನೆ ಇಲ್ಲವೇ ಸ್ತ್ರೀಸಂಬಂಧದ ಸಮಸ್ಯೆಗಳ ಸುತ್ತ ಬೆಳೆಯುತ್ತವೆ. ಚಿತ್ರದುರ್ಗದ ಕಾಡುಗೊಲ್ಲರ ಮಧ್ಯ ಸುಪ್ರಸಿದ್ಧವಿರುವ ಜುಂಜಪ್ಪನ ಕಥಾನಕಗಳೇ ಪಶುಪಾಲನೆಯ ಸಂಬಂಧದ ಮನಸ್ತಾಪಗಳ ಹಿನ್ನೆಲೆಯ ಕಥನವಾಗಿರುತ್ತವೆ. ಈ ದೀರ್ಘ ಕಾವ್ಯವನ್ನು ಗಣೆವಾದ್ಯ ಸಾಧನದ ಮೇಲೆ ಅನೇಕ ರಾತ್ರಿಗಳಲ್ಲಿ ಹಾಡುತ್ತಾರೆ. ಈ ಮಹಾಕಾವ್ಯ ಮೂರ್ನಾಲ್ಕು ತಲೆಮಾರುಗಳ ಘಟನೆಗಳನ್ನು ಒಳಗೊಂಡಿದೆ. ಈತ ಕಾಡುಗೊಲ್ಲರ ಐತಿಹಾಸಿಕ ಸಾಂಸ್ಕೃತಿಕ ವೀರನಾಗಿದ್ದು ಇವನ ಸಂಬಂಧದ ಸ್ಮಾರಕಗಳು ತುಮಕೂರು ಜಿಲ್ಲೆ ಹಾಗೂ ಸಿರಾ ತಾಲ್ಲೂಕುಗಳಲ್ಲಿದ್ದು ಇವು ಇಂದಿಗೂ ಕಾಡುಗೊಲ್ಲರ ಶ್ರದ್ಧಾ ಕೇಂದ್ರಗಳಾಗಿವೆ.

ನಾಲ್ಕು ತಲೆಮಾರುಗಳಲ್ಲಿ ಹರಿಯುವ ಅತ್ಯಂತ ದೀರ್ಘ ಸಂಕಥನವಾದ ಜುಂಜಪ್ಪನ ಕಥೆಯನ್ನು ಗದ್ಯರೂಪದಲ್ಲಿ ಪುರುಷ ಹಾಡುಗಾರರು ರಾತ್ರಿಯೆಲ್ಲ ಹಾಡುತ್ತಾರೆ. ಗಣೆಯೆಂಬ ಕೊಳಲು ಮಾದರಿಯ ವಾದ್ಯವನ್ನು ಒಬ್ಬ ಊದುತ್ತಾ ಹೋಗುವಲ್ಲಿ ಮತ್ತೊಬ್ಬ ಜುಂಜಪ್ಪನ ಮಹಿಮೆಯನ್ನು ಭಕ್ತಿ ಭಾವದಿಂದ ಹಾಡುತ್ತಾ ಹೋಗುವುದುಂಟು. ಗಂಡಸರು ಹಾಡುವುದು ಗದ್ಯ ರೂಪದಲ್ಲಿದ್ದರೆ ಹೆಂಗಸರು ಹಿಮ್ಮೇಳ ಮುಮ್ಮೇಳಗಳಲ್ಲಿ ಹಾಡುವ ಕಾವ್ಯ ತ್ರಿಪದಿಗಳಲ್ಲಿರುತ್ತವೆ. ಆದರೆ ಈ ತ್ರಿಪದಿಗಳಲ್ಲಿ ಜುಂಜಪ್ಪನ ಕಥೆ ಪ್ರಧಾನವಾಗಲ್ಲದೆ ಆತನ ಮಹಿಮೆಯನ್ನಷ್ಟೇ ನೂರಾರು ತ್ರಿಪದಿಗಳಲ್ಲಿ ವಿವರಿಸಲಾಗಿದೆ.

ಜನಪದ ಸಾಹಿತ್ಯಕ್ಕೆ ಉತ್ತರಕರ್ನಾಟಕ ಮೂಲ ನೆಲೆಯೆನಿಸಿದರೂ ಅಲ್ಲಿ ಮಹದೇಶ್ವರ , ಮಂಟೇಸ್ವಾಮಿಯಂಥ ಮಹಾಕಾವ್ಯಗಳು ಈ ವರೆಗೆ ಲಭ್ಯವಾಗಿರಲಿಲ್ಲ. ೨೦೦೦ನೇ ವರ್ಷದಲ್ಲಿ ವೀರಣ್ಣ ದಂಡೆಯವರು ಸಂಗ್ರಹಿಸಿದ ಜನಪದ ಹಾಲುಮತ ಮಹಾಕಾವ್ಯ ಪ್ರಕಟವಾಗಿರುತ್ತದೆ. ಇದು ಉತ್ತರ ಕರ್ನಾಟಕದ ಮುಖ್ಯ ಸಮುದಾಯವೆನಿಸುವ ಕುರುಬ ಜನಾಂಗಕ್ಕೆ ಸೇರಿದ್ದಾಗಿದೆ. ಹಾಲು ಮತದ ಕಾವ್ಯದ ಪ್ರಕಾರ ವಿಶ್ವದ ಪ್ರಥಮ ಮಾನವನ ಹುಟ್ಟಿಗೆ ಶಿವನೇ ಕಾರಣ. ಕಮಲಾದೇವಿ ಗಂಡನಿಲ್ಲದೆ ಗರ್ಭ ಧರಿಸುತ್ತಾಳೆ. ಹುಟ್ಟಿದ ಮಗುವನ್ನು ದಾಸಿಯರು ಕಮಲಾದೇವಿಯ ತಂದೆಗೆ ತಿಳಿಯದಂಥೆ ಕೊರವಂಜಿಯ ಬುಟ್ಟಿಗೆ ಹಾಕಿಬಿಡುತ್ತಾರೆ. ಮತ್ತೆ ಶಿವನೇ ಹದ್ದಾಗಿ ಬಂದು ಕೊರವಂಜಿಯ ರೂಪದ ಪಾರ್ವತಿಯ ಬುಟ್ಟಿಯಿಂದ ಮಗುವನ್ನು ಹಾರಿಸಿಕೊಂಡು ಬಂದು ದ್ವೀಪದ ಒಂದು ಕಮಲದ ನಡುವೆ ಇಡುತ್ತಾನೆ. ಈ ಕಮಲ ಹಗಲು ತೆರದಿರುತ್ತದೆ. ಕತ್ತಲೆಯಲ್ಲಿ ಮುಚ್ಚಿ ಮಗುವಿಗೆ ರಕ್ಷಣೆ ನೀಡುತ್ತದೆ. ಶಿವನ ಪೂಜಾರಿಯಿಂದ ಈ ಕೂಸು ಮತ್ತೆ ಪಾರ್ವತಿಯ ಕೈಗೆ ಬರುತ್ತದೆ. ಜನಪದದ ಎಲ್ಲ ಕಥೆಗಳಲ್ಲಿ ಕೂಡ ಶಿವ ಪಾರ್ವತಿಯರನ್ನು ಕುರಿತ ಆಶಯ ಇದೇ ಮಾದರಿಯಾಗಿದೆ.

ಮಹದೇಶ್ವರ, ಮಂಟೇಸ್ವಾಮಿ ಕಾವ್ಯದಂತೆ ಹಾಲುಮತ ಕಾವ್ಯವೂ ಕತೆಗಳ ಗುಚ್ಛ, ಕಥಾನಕಗಳ ಜೋಡಣೆಯಲ್ಲಿ ನಿಶ್ಚಿತತೆ ಇರುವುದಿಲ್ಲ. ಒಂದೊಂದು ಕಥನ ಭಾಗವನ್ನೂ ಹಬ್ಬ, ಹರಿದಿನ, ಜಾತ್ರೆ, ಮೇಳಗಳಲ್ಲಿ ಇಡಿಯಾಗಿಯೂ, ಬಿಡಿಯಾಗಿಯೂ ಹಾಡಿಕೊಳ್ಳುತ್ತಾರೆ. ಅಗತ್ಯ ಕಂಡ ಕಡೆ ಅವು ಬೆಳೆಯುತ್ತಲೂ ಹೋಗುತ್ತವೆ. ಮಹದೇಶ್ವರ ಸಾಮಾನ್ಯರಂತೆ ನರಮಾನವರಿಗೆ ಹುಟ್ಟಿದರೂ ಅವನು ಜನರ ಕಣ್ಣಿಗೆ ಹುತ್ತದಿಂದ ಮೇಲೆದ್ದು ಬರುವಂತೆ ಕಾಣುತ್ತದೆ ಅಂತೆಯೇ ಬೀರಪ್ಪನೂ ಪಾರ್ವತಿಯ ಮಣ್ಣು, ಬೆವರು ಮತ್ತು ಅವಳ ಎದೆಹಾಲಿನಿಂದ ಹುಟ್ಟಿಬರುತ್ತಾನೆ. ಹುಟ್ಟುತ್ತಿದ್ದಂತೆಯೇ ಸೂಲಗಿತ್ತಿಯವರಿಗೆ ಬಿಸಿ ಮುಟ್ಟಿಸುತ್ತಾನೆ. ವೀರಪ್ಪ, ಜುಂಜಪ್ಪರ ಹುಟ್ಟಿನ ಬಗ್ಗೆಯೂ ಇಂಥವೇ ಕಥೆಗಳಿವೆ . ದುಷ್ಟರನ್ನು ಶಿಕ್ಷಿಸುತ್ತಲೇ ಹುಟ್ಟುವುದು ಮತ್ತು ಬೆಳೆಯುತ್ತಿದ್ದಂತೆ ಯಾವುದನ್ನು ಮನುಷ್ಯ ದುಷ್ಟ ಮೃಗಗಳು ಎಂದು ದೂರ ಸರಿಸುತ್ತಾನೋ ಅದೇ ಹಾವು, ಹುಲಿ, ಚೇಳು, ಆನೆ ಇಂಥವುಗಳ ಸಖ್ಯದಲ್ಲಿಯೇ ಇವರು ಬೆಳೆಯತೊಡಗುತ್ತಾರೆ. ಹಾಲುಮತ ಮಹಾಕಾವ್ಯದಲ್ಲಿ ಮೊದಲಿಗೆ ಜಗತ್ತಿನ ಹುಟ್ಟು, ವೀರಪ್ಪನ ಜನನ, ಮಾಳಿಂಗರಾಯನ ಪೂರ್ವವೃತ್ತಾಂತ, ಗುರುವೀರಣ್ಣನ ಸೇವೆ, ಡಂಕನಾಡ ಕೈಗೊಂಡವೃತ್ತಾಂತ, ಅಮೋಘಸಿದ್ಧಾಂತನ ವೃತ್ತಾಂಥ, ಪಾಂಡುರಂಗನ ವೃತ್ತಾಂತ, ರೇವಣ್ಣಸಿದ್ಧನ ವೃತ್ತಾಂತ, ಲಿಂಗಮ್ಮನ ವೃತ್ತಾಂತ, ಗಂಗಿಮಾಳಮ್ಮನ ವೃತ್ತಾಂತ, ಸಿದ್ಧರಾಮನ ವೃತ್ತಾಂತ – ಇವೆಲ್ಲವೂ ಬರುತ್ತವೆ. ಮಂಟೇಸ್ವಾಮಿ, ಮಹದೇಶ್ವರ ಕಾವ್ಯದಂತೆ ಹಾಲುಮತ ಕಾವ್ಯವು ಆಡುಮಾತಿನ ಶೈಲಿಯ ವಾಕ್ಯಗಳ ಧಾಟಿಯಲ್ಲಿ ಜೀವಪರವುಳ್ಳ ಜಂಗಮತ್ವದ ಲಕ್ಷಣವುಳ್ಳ ನಾಯಕ ಗುಣದಿಂದ ಜನಭಾಷೆಯಲ್ಲಿ ಉತ್ತರಕರ್ನಾಟಕದಲ್ಲಿ ಪ್ರಚಲಿತವಿರುವ ಕಾವ್ಯದಾಗಿದೆ.

ಕರ್ನಾಟಕದ ದಕ್ಷಿಣ ಕನ್ನಡ ಪ್ರದೇಶದಲ್ಲಿ ಪ್ರಚಾರದಲ್ಲಿರುವ ಸಿರಿ ಪಾಡ್ದನ ಮಹಾಕಾವ್ಯ ಸಿರಿಯನ್ನು ಕುರಿತದ್ದು. ಈ ಸಿರಿಯ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಸಿರಿ ಪಾಡ್ದನದ ಹಾಡುಗಾರಿಕೆ ಮತ್ತು ಆಚರಣೆ ಪ್ರಧಾನವಾಗಿರುತ್ತದೆ. ಮಂಟೇಸ್ವಾಮಿ, ಮಹದೇಶ್ವರ, ಜುಂಜಪ್ಪ, ಹಾಲುಮತ ಕಾವ್ಯಗಳೆಲ್ಲ ಪುರುಷ ಪ್ರಧಾನವಾದರೆ ಸಿರಿ ಪಾಡ್ದನ ಸ್ತ್ರೀ ಪ್ರಧಾನ ಕಾವ್ಯ. ಸಿರಿ ಎಂಬ ಹೆಸರೇ ಜನಪದ ಜಗತ್ತಿನಲ್ಲಿ ಅತ್ಯಂತ ಕುತೂಹಲಕರವಾದುದು. ಸಿರಿ ಎಂಬ ಸ್ತ್ರೀ ದೇವತೆಯ ಹೆಸರಿನಲ್ಲಿ ಏಪ್ರಿಲ್‌ ಮೇ ತಿಂಗಳಲ್ಲಿ ಜಾತ್ರೆ ನಡೆಯುವುದು. ಸಾಮಾನ್ಯವಾಗಿ ಕ್ಷುದ್ರದೇವತೆಯ ಆಚರಣೆಗಳು ಅಮಾವಸ್ಯೆಯ ರಾತ್ರಿಯಲ್ಲಿ ನಡೆದರೆ ಸಿರಿ ಆಚರಣೆಯು  ನಡೆಯುವುದೇ ಅರಣ್ಯ ಮತ್ತು ಬೆಳದಿಂಗಳ ಪ್ರತ್ಯೇಕ ವಾತಾವರಣದಲ್ಲಿ. ಹೆಣ್ಣು ಮಕ್ಕಳು ಹಳದಿ ಸೀರೆಯುಟ್ಟು, ಮಲ್ಲಿಗೆ ಮುಡಿದು ಅಲಂಕಾರಗೊಂಡು ಬಂದರೆ, ಕುಮಾರರೆಂಬುವರು ಕಚ್ಚೆ ಪಂಚೆಯುಟ್ಟು, ಪೇಟಧರಿಸಿ, ಮಲ್ಲಿಗೆಹಾರ ಹಾಕಿಕೊಂಡು ಮಕ್ಕಳಂತೆ ಬರುತ್ತಾರೆ. ಹೆಣ್ಣು ಗಂಡು ಅಡಕೆಯ ಸಿಂಗಾರ ಹಿಡಿದು ಅದೇ ಗುಂಗಿನಲ್ಲಿ ಸಿರಿ ಪಾಡ್ದನ ಹಾಡಿಕೊಳ್ಳುತ್ತಾರೆ. ಆ ರಾತ್ರಿಯೆಲ್ಲವೂ ಸಿರಿ ಹಾಡುಗಾರಿಕೆ ಇರುತ್ತದೆ. ಕಾವ್ಯದ ಭಾಗಗಳನ್ನು ಪೂರ್ಣ ಇಲ್ಲವೆ ಅಪೂರ್ಣ ರೀತಿಯಲ್ಲಿ ಹಾಡಿಕೊಂಡು ಮೈಮರೆತ ಸ್ಥಿತಿಯಲ್ಲಿ ಒಟ್ಟು ಆ ಸ್ತ್ರೀ ಪುರುಷ ಸಮುದಾಯವಿರುತ್ತದೆ. ಇದನ್ನು ಸಿರಿ ಜಾತ್ರೆಯೆಂತಲೇ ಕರೆಯುವುದಿದೆ. ಸಿರಿ ಪಾಡ್ದನದ ಪ್ರಕಾರ ಸಿರಿ ಎಂಬಾಕೆ ಒಬ್ಬ ಪರಿತ್ಯಕ್ತ ಸ್ತ್ರೀ. ಲಂಪಟನಾಗಿದ್ದ ಕಾಂಪೂ ಪೂಂಜ ಎಂಬ ಗಂಡನನ್ನು ಬಿಟ್ಟು ಸಿರಿ ಕೊಡ್ಸದಾಳ್ಯ ಎಂಬಾತನನ್ನು ವಿವಾಹವಾಗುತ್ತಾಳೆ. ಹಾಗೆ ವಿವಾಹವಾಗಿ ಸೊನ್ನೆ ಎಂಬ ಮಗಳನ್ನು ಪಡೆಯುತ್ತಾಳೆ. ಬ್ರಹ್ಮನಿಗೆ ಹರಕೆ ಹೊರುವುದರ ಮೂಲಕ ಸೊನ್ನೆ ಗರ್ಭ ಧರಿಸಿ ಅಬ್ಬಗೆ ಮತ್ತು ದಾರಗಎ ಎಂಬಿಬ್ಬರು ಮಕ್ಕಳನ್ನು ಪಡೆಯುತ್ತಾಳೆ. ಬ್ರಹ್ಮನಿಗೆ ಹರಕೆ ನೆರವೇರಿಸದ ಕಾರಣ ಅಬ್ಬಗೆ ದಾರಗೆ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡು ಸಾವನ್ನಪ್ಪುತ್ತಾರೆ. ಹೀಗಿರುವ ಈ ಕಥನವು ಕಾಲಕಾಲಕ್ಕೆ ಬೇರೆ ಬೇರೆ ಆಶಯಗಳನ್ನು ಹೊಂದಿ ಸಿರಿಪಾಡ್ದನ ಮಹಾಕಾವ್ಯವಾಗಿ ಬೆಳೆದಿದೆ.

ಶತಮಾನಗಳಿಂದ ಭಾರತದಲ್ಲಿ ಬೆಳೆದು ಬಂದ ರಾಮಾಯಣ ಮಹಾಭಾರತ ಕಾವ್ಯಗಳು ಕೂಡ ಅನೇಕ ಬದಲಾವಣೆಗಳೊಡನೆ ಜನಪದರ ನಡುವೆ ಪ್ರಚಾರದಲ್ಲಿವೆ. ಆದರೆ ಯಥಾವತ್ತಾಗಿ ಅಲ್ಲ. ಮಲೆಯ ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳಂತೆ ಭಾಗಭಾಗವಾಗಿಯೂ ಪ್ರಚಾರದಲ್ಲಿರುತ್ತವೆ. ಅಂದರೆ ತಾವೇ ಕಟ್ಟಿಕೊಂಡ ರಾಮಾಯಣ ಮಹಾಭಾರತಗಳ ಕಥೆಗಳನ್ನು ಬಿಡಿಬಿಡಿಯಾಗಿ ಹಾಡಿಕೊಳ್ಳುತ್ತಾರೆ. ಇದರೊಂದಿಗೆ ಮಹಾಭಾರತ, ರಾಮಾಯಣದ ಕೆಲವು ಮುಖ್ಯ ಪಾತ್ರಗಳು ಜನಪದರ ಗಮನವನ್ನು ಬಹಳವಾಗಿ ಸೆಳೆದಂತಿರುತ್ತವೆ. ರಾಮಾಯಣದ ಬಹುಮುಖ್ಯ ಪಾತ್ರ ಹನುಮಂತನನ್ನು ಕುರಿತಾಗಿ ಎಲ್ಲ ಗ್ರಾಮಗಳಲ್ಲೂ ದಂತಕಥೆಗಳು ಮತ್ತು ಗೀತೆಗಳು ಪ್ರಚಾರದಲ್ಲಿರುತ್ತವೆ. ಮಹಾಭಾರತ ಕಥನದ ಸಂಬಂಧದಲ್ಲಿ ಅಭಿಮನ್ಯು, ದ್ರೌಪದಿ, ಅರ್ಜುನ, ಕುಂತಿ ಈ ಪಾತ್ರಗಳು ಜನಪದರ ಗಮನವನ್ನು ಸೆಳೆಯುತ್ತವೆ. ಅವರ ಮೇಲೆ ವ್ಯಾಪಕವಾಗಿ ಖಂಡಕಾವ್ಯಗಳನ್ನೂ ಹಾಡುವುದಿದೆ. ಪಿ.ಕೆ. ರಾಜಶೇಖರ ಅವರು ಸಂಗ್ರಹಿಸಿರುವ ಜನಪದ ಮಹಾಭಾರತದಲ್ಲಿ ದ್ರೌಪದಿಯದೇ ಪ್ರಮುಖ ಪಾತ್ರ. ಆಕೆ ಆದಿಶಕ್ತಿಯಂತೆ ಚಿತ್ರಿತಳಾಗಿರುತ್ತಾಳೆ. ಜೂಜಾಟದಲ್ಲಿ ಸೋತ ಪಾಂಡವರನ್ನು ಕೊನೆಗೆ ಗೆಲ್ಲಿಸುವವಳು ದ್ರೌಪದಿ. ಅಲ್ಲದೆ ಕುರುಕ್ಷೇತ್ರ ಯುದ್ಧದಲ್ಲಿ ಗೆದ್ದವರು ಯಾರೆಂಬ ಭೀಮಾರ್ಜುನರ ವಿವಾದಕ್ಕೆ ತೀರ್ಪು ಹೇಳುವ ಭದ್ರಬಾಹು ದ್ರೌಪದಿಯನ್ನು ತೋರಿಸುತ್ತ ಆಕೆಯೇ ಕುರುಕ್ಷೇತ್ರ ಗೆದ್ದವಳು ಎಂಬ ಅರ್ಥದಲ್ಲಿ ಮಾತನಾಡುತ್ತಾನೆ. ಒಟ್ಟು ಮಹಾಭಾರತ ಕಥೆಯೇ ಬೇರೊಂದು ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್. ಆರ್. ನಾಯಕರು ‘ವಾವೊಕ್ಕಲ ಭಾರತ’ ಎಂಬ ಜನಪದ ಭಾರತವನ್ನು ಸಂಗ್ರಹಿಸಿರುತ್ತಾರೆ. ಪಿ.ಕೆ. ರಾಜಶೇಖರ ಮತ್ತು ರಾಗೌ ಅವರು ಜನಪದ ರಾಮಾಯಣವನ್ನು ಸಂಗ್ರಹಿಸಿ ಪ್ರಕಟಿಸಿರುತ್ತಾರೆ. ಈ ಎಲ್ಲ ಕೃತಿಗಳು ಆಯಾ ಪ್ರದೇಶದ ಜೀವನ ಕ್ರಮ, ಮನೋಭಾವ, ಪರಿಸರಕ್ಕೆ ಅನುಗುಣವಾಗಿ ಬದಲಾವಣೆಗೊಂಡು ರಚಿತವಾಗಿರುತ್ತವೆ. ಹೀಗಾಗಿ ಶಿಷ್ಯ ಪರಂಪರೆಯ ರಾಮಾಯಣ ಮಹಾಭಾರ ಕೃತಿಗಳಂತೆ ಜನಪದ ಪರಂಪರೆಯಲ್ಲಿಯೂ ಅನೇಕ ರೂಪಗಳಲ್ಲಿ ಈ ಕಾವ್ಯಗಳು ಅಭಿವ್ಯಕ್ತಗೊಂಡಿವೆ.

ಕೆ.ಎಚ್.