ಜನಪದ ಲೆಕ್ಕಾಚಾರ ಜನಪದ ಬದುಕು ಹಾಗೂ ಅವರ ದಿನನಿತ್ಯದ ಜೀವನದ ವ್ಯವಹಾರದ ಲೆಕ್ಕಾಚಾರಗಳು ವೈವಿಧ್ಯಮಯವಾಗಿವೆ. ಮಾನವನ ಜೀವನದ ಎಲ್ಲ ಕ್ಷಣಗಳೂ ಲೆಕ್ಕಾಚಾರದ ಆಧಾರದ ಮೇಲೆಯೇ ನಿಂತಿವೆ. ಕುಲಕಸುಬಿನ ಹಿನ್ನೆಲೆಯಲ್ಲಿ ರೂಪುಗೊಂಡ ಮಾನವನ ಬದುಕು ಒಂದೊಂದು ಬುಡಕಟ್ಟು, ಜನಾಂಗಗಳ ಜನರಿಗೆ ತಮ್ಮ ಕುಟುಂಬ ಸದಸ್ಯರ ಲೆಕ್ಕ ಇಟ್ಟುಕೊಳ್ಳುವಾಗ, ಒಟ್ಟಿಗೆ ಹೋಗಿ ಬೇಟೆಯಾಡಿ ತಂದ ಪ್ರಾಣಿಗಳ ಮಾಂಸ ಹಾಗೂ ಇತರ ಉತ್ಪನ್ನಗಳನ್ನು ಹಂಚಿಕೊಳ್ಳುವಾಗ, ಕಾಲ, ಮಳೆ ಗಾಳಿ, ದವಸ, ಧಾನ್ಯ, ಶೀತ ಉಷ್ಣ, ಉದ್ದ ಅಗಲ, ಆಳ ಎತ್ತರ ತೂಕ ಗಾತ್ರ, ಮುಂತಾದವುಗಳ ಪ್ರಮಾಣಗಳನ್ನು ನಿರ್ಧರಿಸಿಕೊಳ್ಳಲು ಲೆಕ್ಕಾಚಾರದ ಸ್ವರೂಪ ತನ್ನದೇ ಆದ ವಿಧಿ ವಿಧಾನಗಳನ್ನು ಹುಟ್ಟು ಹಾಕಿದ್ದಿದೆ.

ಇದಕ್ಕೂ ಮುಂಚೆ ಇದ್ದ ಸನ್ನೆಗಳು ಗೊಂದಲಕ್ಕೀಡು ಮಾಡುವ ಸಾಧ್ಯತೆ ಇದ್ದುದರಿಂದ ನಿರ್ದಿಷ್ಟವಾದ ಲೆಕ್ಕಚಾರ ರೂಢಿಗೆ ಬಂದಿರುವುದು ಕಂಡುಬರುತ್ತದೆ. ಈ ಲೆಕ್ಕಾಚಾರವೇ ಮುಂದೆ ಗಣಿತದ ಸ್ವರೂಪದ ಪಡೆದಿದ್ದರಲ್ಲಿ ಆಶ್ಚರ್ಯವಿಲ್ಲ. ಬಹುಕಾಲದ ಹಿಂದಿನ ಆರ್ಥಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪ್ರಾಚೀನರು ತಾವು ಬೆಳೆದ, ಉತ್ಪಾದಿಸಿದ ಉತ್ಪನ್ನಗಳನ್ನು ಒಂದು ಬುಡಕಟ್ಟಿನಿಂದ ಮತ್ತೊಂದು ಬುಡಕಟ್ಟಿನ ಜನರಿಗೆ ಕೊಡು ಕೊಳ್ಳುವಿಕೆಯ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅಲೆಮಾರಿಗಳಾಗಿದ್ದ ಆದಿವಾಸಿಗಳು ಕಾಡಿನಲ್ಲಿ ಬೇಟೆಯಾಡಿದ ಪ್ರಾಣಿಗಳ ಮಾಂಸ, ಅಲ್ಲಿಂದ ತಂದೆ ಜೇನುತುಪ್ಪ, ಅಲ್ಲಿ ಲಭ್ಯವಾಗುವ ಕಾಡಿನ ಉತ್ಪನ್ನಗಳನ್ನು ತಂದು ಕೃಷಿ ಕೆಲಸ ಮಾಡುವ ನಾಡಿನ ಜನರಿಗೆ ಕೊಡುತ್ತಿದ್ದರಲ್ಲದೆ ಅವರಿಂದ ತಮಗೆ ಬೇಕಾದ ದಸಧಾನ್ಯ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಪಡೆದುಕೊಂಡು ಹೋಗುತ್ತಿದ್ದರು.

ಈ ಚಾಟಿಪದ್ಧತಿ ವಸ್ತುಗಳನ್ನು ಅದಲು ಬದಲು ಮಾಡಿಕೊಳ್ಳಲು ತಾತ್ಕಾಲಿಕವಾಗಿ ನೆರವಾಗಿತ್ತು. ಜೊತೆಗೆ ವಾಣಿಜ್ಯ ವ್ಯಾಪಾರಗಳಲ್ಲಿ ಲೆಕ್ಕಾಚಾರ ಪದ್ಧತಿ ಒಂದು ನಿರ್ದಿಷ್ಟ ರೂಪ ಪಡೆದುಕೊಳ್ಳಲು ಸಹಾಯಕವಾಯಿತು. ಇಂಥ ಲೆಕ್ಕಾಚಾರ ಪದ್ಧತಿ ಹಾಗೂ ಅಳತೆ ಮತ್ತು ತೂಕದ ಸಾಧನಗಳು ಪ್ರಮುಖ ಪಾತ್ರವನ್ನು ವಹಿಸಿದ್ದರಿಂದ ಕಾಲದಿಂದ ಕಾಲಕ್ಕೆ ಮಾರ್ಪಾಟುಗೊಳ್ಳುತ್ತಾ ಸಾಗಿ ದಶಮಾಂಶ ಪದ್ಧತಿಯನ್ನು ಹೊಂದುವವರೆಗೂ ಜೀವನಕ್ರಮದ ಮೇಲೆ ತನ್ನದೆ ಆದ ಪ್ರಭಾವವನ್ನು ಉಳಿಸಿಕೊಂಡು ಬಂದವು.

ಕಾಲ ಬದಲಾದಂತೆಲ್ಲ ತಮ್ಮದೇ ಆದ ನಿರ್ದಿಷ್ಟ ಅಳತೆ, ತೂಕ, ಪರಿಮಾಣ, ಗಾತ್ರ, ವಾರ, ತಿಂಗಳು, ವರ್ಷ, ಸಂವತ್ಸರ ಮೊದಲಾದವುಗಳ ಲೆಕ್ಕಾಚಾರ ಜನಜೀವನದ ಕ್ರಮವನ್ನೇ ಬದಲಿಸತೊಡಗಿದವು. ಆಗ ಜನರ ವ್ಯಾವಹಾರಿಕ ಬದುಕು ಅರ್ಥಪೂರ್ಣಗೊಳ್ಳುತ್ತಾ ಹೋಯಿತು. ನಿರ್ದಿಷ್ಟತೆ ಕಂಡುಕೊಂಡಂತೆಯೇ ಲೆಕ್ಕಾಚಾರದ ಪದ್ಧತಿ ತಾನೇ ತಾನಾಗಿ ಬಲಗೊಳ್ಳುತ್ತಾ ಹೋಯಿತು. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಹಳೆಯ ಪದ್ಧತಿಗಳು ಕಣ್ಮರೆಯಾಗುತ್ತಾ, ಪರಿಷ್ಕೃತಗೊಳ್ಳುತ್ತಾ ಹೋಗುತ್ತಿರುವುದನ್ನು ಈಗಲೂ ಗುರುತಿಸಬಹುದಾಗಿದೆ. ಕೆಲವೊಂದು ಉದಾಹರಣೆಗಳ ಮೂಲಕ ಇಲ್ಲಿ ಗಮನಿಸಬಹುದು.

ಕಾಲದ ಗಣನೆಗೆ ಸೂರ್ಯ, ಚುಕ್ಕಿ, ಚಂದ್ರರೇ ಆಧಾರ. ಇವುಗಳ ಚಲನೆ ಆಧರಿಸಿ ಕಾಲ ನಿರ್ಧಾರ ಮಾಡಿಕೊಳ್ಳುವುದುಂಟು. ಮುಂಜಾನೆ, ಮಧ್ಯಾಹ್ನ ಸಂಜೆ ಹಾಗೂ ಮಧ್ಯರಾತ್ರಿಗಳ ಬಗೆಗೆ ತಮ್ಮದೇ ಆದ ವಿಶಿಷ್ಟ ಪದಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಬೆಳ್ಳಿ ಮೂಡೊಹೊತ್ತು, ಕೋಳಿ ಕೂಗೊ ಹೊತ್ತು, ಮೂಡ್ಲು ಹರಿದಿತ್ತು, ಮಟಮಟ ಮಧ್ಯಾಹ್ನದ ಹೊತ್ತು, ಬೈಗಿನ ಹೊತ್ತು, ಸಂಜೆ ಹೊತ್ತು, ಸರ್ವೊತ್ತು, ದೆವ್ವ ತಿರ್ಗೊ ಹೊತ್ತು ಇತ್ಯಾದಿ. ಹೀಗೆ ದಿನದ ಕಾಲಮಾನ ಸೂಚಿಸಲು ಬಳಸುತ್ತಿದ್ದ ಪದಗಳಾಗಿವೆ. ಕಾಲವನ್ನು ಕುರಿತಂತೆ ಬೇಸಿಗೆಕಾಲ, ಮಳೆಗಾಲ, ಚಳಿಗಾಲವೆಂತಲೂ ವ್ಯವಸಾಯಕ್ಕೆ ತಕ್ಕಂತೆ ಬಿತ್ತುವ ಕಾಲ, ಕೊಯ್ಲು ಕಾಲ, ಒಕ್ಕಲು ಕಾಲ ಎಂದು ಸೂಚಿಸಿಕೊಂಡಿದ್ದಾರೆ. ಹಗಲು, ರಾತ್ರಿ, ದಿನ, ವಾರ, ತಿಂಗಳು, ವರ್ಷ, ಸಂವತ್ಸರಗಳನ್ನು ಹುಣ್ಣಿಮೆ ಅಮಾವಾಸ್ಯೆಗಳ ಕಾಲಗಣನೆಯಿಂದ ಲೆಕ್ಕಾಚಾರ ಮಾಡಿ ನಿಗದಿಪಡಿಸಿಕೊಂಡಿದ್ದಾರೆ. ಹೀಗೆ ವಿವಿಧ ರೀತಿಯ ನಿಸರ್ಗದ ಕ್ರಿಯೆಗಳನ್ನು ಎಲ್ಲರೂ ಅನುಸರಿಸಿಕೊಂಡು ಬರುವಂತೆ ಮಾಡಿಕೊಂಡಿದ್ದಾರೆ.

ಮಳೆ ಗಾಳಿ ಕುರಿತಂತೆ ಜನಪದರ ಕಲ್ಪನೆ ವಿಶಿಷ್ಟ. ಅಶ್ವಿನಿಯಿಂದ ರೇವತಿವರೆಗೆ ೨೭ ಮಳೆಗಳಿವೆ. ಒಂದೊಂದು ಮಳೆಗೂ ಒಂದೊಂದು ನಕ್ಷತ್ರಗಳ ಹೆಸರಿದ್ದು ಪ್ರತಿಯೊಂದು ನಾಲ್ಕು ಪದಗಳನ್ನು ಒಳಗೊಂಡಿದೆ. ಮುಂಗಾರು ಮಳೆ, ಹಿಂಗಾರು ಮಳೆಗಳ ಲೆಕ್ಕಾಚಾರಕ್ಕೆ ಅನುಗುಣವಾಗಿ ದವಸಧಾನ್ಯಗಳನ್ನು ಬೆಳೆದುಕೊಳ್ಳುತ್ತಾರೆ. ಮಳೆಯ ಪ್ರಮಾಣವನ್ನು ಹೇಳುವಾಗ ಹದಮಳೆ, ನೆನಮಳೆ, ಜಿಡಿಮಳೆ, ಅಡ್ಡಮಳೆ, ಜಿಟುರುಮಳೆ, ಸೋನೆಮಳೆ, ಸೂರ್‌ಮಳೆ ಮುಂತಾಗಿ ಹೇಳುತ್ತಾರೆ. ಗಾಳಿಯ ವಿಚಾರದಲ್ಲಿ ಮೂಡ್ಲುಗಾಳಿ, ಪಡೋಗಾಳಿ, ಬಿರುಗಾಳಿ, ಸುಂಟರಗಾಳಿ, ತಂಗಾಳಿ, ಬಿಸಿಲುಗಾಳಿ ಇತ್ಯಾದಿ ಪದಗಳಲ್ಲಿ ವರ್ಣಿಸುತ್ತಾರೆ.

ಶೀತ ಉಷ್ಣಗಳ ಬಗೆಗಿನ ಕಲ್ಪನೆಗೆ ಬಂದಾಗ ಜನಪದರು ಬಳಸುವ ಪದಗಳು ಲೆಕ್ಕಾಚಾರದಿಂದಲೇ ಕೂಡಿವೆ. ನೀರಿನ ಬಿಸಿ ಹೇಳಲು ಉಗುರು ಬೆಚ್ಚಗೆ, ಕಾದು ಮಳ್ತವೆ. ಕಾದು ಸುಡ್ತವೆ, ಹದಕ್ಕೆ ಕಾದವೆ ಮುಂತಾಗಿ ಪದ ಬಳಸುತ್ತಾರ. ಜ್ವರದ ತಾಪವನ್ನು ಕುರಿತಂತೆ ಮೈಕಾದು ಕೆಂಡಾಗಿದೆ, ಬೆಂಕಿ ಉರ್ದಂಗೆ ಉರಿತದೆ, ಮೈ ಬೆಚ್ಚಗಿದೆ, ಎಳ್ ಸಿಡಿದಂಗೆ ಸಿಡಿತದೆ ಅಂತ ಹೇಳುವುದುಂಟು. ಶಾಖವನ್ನು ಕುರಿತು ಹೇಳುವಾಗ ಎಳೆ ಬಿಸಿಲು, ಸುಡು ಬಿಸಿಲು, ಹೊಳೆ ಬಿಸಿಲು, ಉರಿಬಿಸಿಲು, ಮಧ್ಯಮಬಿಸಿಲು ಮುಂತಾಗಿ ಹೇಳುತ್ತಾರೆ. ಶೀತದ ಬಗ್ಗೆ ಹೇಳುವಾಗ ತಣ್ಣಗೆ ಕೊರಿತದೆ, ಹಲ್ಲು ಕಡಿಯಂಗಾಗಿದೆ, ಗಡಗಡ ನಡುಗಂಗಾಗಿದೆ, ತಂಡಿಗೆ (ಹವಾ) ಕ್ಕೆ ಕಾಲು ಸೆಳೆಯಂಗಾಗಿದೆ ಅಂತೆಲ್ಲ ಹೇಳುತ್ತಾರೆ.

ಉದ್ದ ಮತ್ತು ಅಗಲದ ಮಾತು ಬಂದಾಗ ಚೋಟು, ಗೇಣು, ಮೊಳ ಮಾರು ಮುಂತಾದ ಪ್ರಮಾಣಗಳು ಬಳಕೆಯಲ್ಲಿವೆ. ದೂರ ಮತ್ತು ಉದ್ದ ಗುರುತಿಸುವಾಗ ಗಾವುದ, ಮೈಲು, ಹರದಾರಿ, ಯೋಜನ ಪದಗಳನ್ನು ಬಳಕೆಗೆ ತಂದುಕೊಂಡಿದ್ದಾರೆ. ಹೊಲಗಳ ವಿಸ್ತೀರ್ಣ ಅವುಗಳಲ್ಲಿ ಬೆಳೆಯುವ ಬೆಳೆಗಳ ಸಾಮರ್ಥ್ಯಗಳನ್ನು ಹೇಳುವಾಗ ಅವರದೇ ಆದ ಪ್ರಮಾಣಗಳ ಪರಿಕಲ್ಪನೆಯಿದೆ. ಅಗಲದ ವಿಚಾರದಲ್ಲಿ ಅಂಗೈಯಗಲ, ಕಾಸಗಲ, ರೂಪಾಯಗಲ, ಚಾಪೆಯಗಲ, ಕಣದಗಲ, ರೊಟ್ಟಿಯಗಲ, ಗಂಗಾಳದಗಲ, ಊರಗಲ, ಮೊದಲಾದ ಪದಗಳಲ್ಲಿ ವಿವರಿಸುತ್ತಾರೆ.

ಆಳ ಮತ್ತು ಎತ್ತರ ಕುರಿತಂತೆ ಮಾರು ಮತ್ತು ಆಳಿನ ಪ್ರಮಾಣ ನೆರವಿಗೆ ಬಂದಿದೆ. ನಾಕಾಳು, ಹತ್ತಾಳು, ಎಂಟಾಳು, ಮೂರಾಳು, ಎದೆಮಟ್ಟ, ಕುತ್ತಿಗೆ ಮಟ್ಟ, ಹಣೆಮಟ್ಟ, ಪಾತಾಳ, ಮರದೆತ್ತರ, ಆಕಾಶದೆತ್ತರ ಮುಂತಾದ ಪದಗಳ ಬಳಕೆಯಲ್ಲಿವೆ. ವ್ಯಕ್ತಿಯ ಆಕಾರ ಮತ್ತು ಗಾತ್ರವನ್ನು ಕುರಿತಂತೆ ಹೇಳುವಾಗ ಕುಳ್ಳ ಗಿಡ್ಡ, ಲಂಬು, ಮೋಟ, ಚೋಟ, ಬ್ಯಾತಾಳ, ಗಣೆಯಂಗಿ ಪದಗಳು ಎತ್ತರವನ್ನು ಕುರಿತು ಹೇಳುತ್ತವೆ. ಗಾತ್ರವನ್ನು ಕುರಿತಂತೆ ಸಣಕಲ, ಒಣಕಲ, ಬಡಕಲ, ಡುಮ್ಮ, ಠೊಣಪ, ಬರಗಡ್ಲಿ ಮೊದಲಾದ ಪದಗಳು ಬಳಕೆಯಲ್ಲಿವೆ.

ತೂಕ ಮತ್ತು ಗಾತ್ರದ ಪರಿಕಲ್ಪನೆ ಇಂದಿಗೂ ಮಾರ್ಗದರ್ಶಕವಾಗಿದೆ. ಬೆಣ್ಣೆಯನ್ನು ತಕ್ಕಡಿಯಲ್ಲಿ ತೂಗಿ ಕೊಡುತ್ತಿದ್ದುದು, ವಸ್ತು, ತರಕಾರಿಗಳನ್ನು ತೂಕದ ಬಟ್ಟುಗಳನ್ನಿಟ್ಟು ಅಂದರೆ ತೊಲ, ಪಾವು, ಅಚ್ಚೇರು, ಸೇರು, ಮಣ, ಪಡಿ ಇತ್ಯಾದಿಗಳಿಂದ ತೂಗುತ್ತಿದ್ದುದು, ಚಿನ್ನ ಬೆಳ್ಳಿಗಳನ್ನು ಗುಲಗಂಜಿಯನ್ನು ಬಳಸಿ ತೂಗುತ್ತಿದ್ದುದುಂಟು. ಇವೆಲ್ಲವೂ ಹಳ್ಳಿಗರ ಬದುಕಿನ ವ್ಯವಹಾರದ ಲೆಕ್ಕಾಚಾರವನ್ನು ವಿವರವಾಗಿ ಸ್ಪಷ್ಟಪಡಿಸುತ್ತವೆ. ವಸ್ತುಗಳ ಗಾತ್ರ ಕುರಿತಂತೆ ರವಷ್ಟು ಅವರೆಕಾಳು, ನಿಂಬೆಕಾಯಿ, ಗುಲಗಂಜಿ, ಹಿಟ್ಟಿನ, ಕುಂಬಳಕಾಯಿನ, ಸಾಸಿವೆಕಾಳಿನ, ಬೆರಳಿನ, ಗೋಲಿ, ಗಜ್ಜುಗ, ಮೂಡೆ ಹೆಸರಿನೊಂದಿಗೆ ಗಾತ್ರವನ್ನು ಹೇಳುತ್ತಿದ್ದರು.

ದ್ರವಪದಾರ್ಥ, ದವಸಧಾನ್ಯಗಳ ಅಳತೆ ಬಗೆಗೆ ಜನಪದರ ಕಲ್ಪನ ತುಂಬಾ ವಿಶಿಷ್ಟವಾದುದು. ಸೇರು, ಅಚ್ಚೇರು, ಪಾವು, ಅರೆಪಾವು, ಚಟಾಕು, ನೌಟಾಕುಗಳಿಂದ ಎಣ್ಣೆ ಪದಾರ್ಥಗಳನ್ನು ಅಳೆದುಕೊಡುತ್ತಿದ್ದರು. ಬಿದಿರಿನ ಹಂಡೆಯಲ್ಲಿ ಹಾಲು, ಎಣ್ಣೆ, ಜೇನುತುಪ್ಪಗಳನ್ನು ಅಳೆದುಕೊಳ್ಳುತ್ತಿದ್ದ ಕ್ರಮ ಗಮನಾರ್ಹ. ದ್ರವಗಳ ಪ್ರಮಾಣದಲ್ಲಿ ತೊಟ್ಟು, ಹನಿ, ಗುಟುಕು, ಚಂಬು, ಹಂಡೆ, ಕೊಳಗದಷ್ಟು ಎನ್ನುವಲ್ಲಿ ಇದರ ಸ್ಪಷ್ಟತೆ ಗೋಚರಿಸುತ್ತದೆ. ದವಸ ಧಾನ್ಯಗಳನ್ನು ಅಳೆಯುವಾಗ, ಸ್ಸರೆ, ಹಿಡಿ, ಬೊಗಸೆ, ಚಟಾಕು, ಪಾವು, ಅಚ್ಚೇರು, ಸೇರು, ಬಳ್ಳ, ಕೊಳಗ, ಮಾನ ಬುಡ್ಜೀಲ, ಕೊರೆ ಚೀಲ, ಚೀಲ, ಪಲ್ಲ ಹೆಡಿಗೆ, ಬುಟ್ಟಿ, ಮಂಕರಿ ಮುಂತಾದ ಪದಗಳು ನಮಗೆ ಸಾಕಷ್ಟು ಕುತೂಹಲ ಮೂಡಿಸುತ್ತವೆ.

ಎಣಿಕೆ ವಿಚಾರದಲ್ಲಾಗಲಿ, ವಯಸ್ಸಿನ ಗಣನೆಯನ್ನು ಕುರಿತಾಗಲಿ ಅಂದಾಜು ಹಾಕುವ ಲೆಕ್ಕಾಚಾರ ಹಾಗೂ ನಿರ್ದಿಷ್ಟ ಸಂಖ್ಯೆಯ ಎಣಿಕಾ ಕ್ರಮ ಗಣಿತ ಪದ್ಧತಿಗೆ ಹೊಸ ಆಯಾಮ ನೀಡಿದಂತಾಗಿದೆ. ಕೈ ಮತ್ತು ಕಾಲುಗಳ ಬೆರಳುಗಳು ಹಾಗೂ ಅವುಗಳ ಮಧ್ಯದಲ್ಲಿ ಗೆರೆಗಳ ಲೆಕ್ಕಾಚಾರದಿಂದ ಎಷ್ಟು ಸಂಖ್ಯೆಯನ್ನಾದರೂ ಎಣಿಕೆ ಮಾಡಬಹುದೆಂಬುದನ್ನು ತೋರಿಸಬಲ್ಲದು. ನಾಣ್ಯಗಳ ಚಲಾವಣೆಯಲ್ಲಿಯೂ ಇವರು ಅನುಸರಿಸುತ್ತಿದ್ದ ಕ್ರಮ ಕಾಲಕಾಲಕ್ಕೂ ಬದಲಾಗುತ್ತಿದ್ದ ಸಂಗತಿಗಳನ್ನು ಸ್ಪಷ್ಟಪಡಿಸುತ್ತದೆ. ಪ್ರತಿಯೊಂದು ಹಂತದಲ್ಲಿಯೂ ಜನಪದರು ತಮ್ಮ ಜೀವನಕ್ರಮಕ್ಕನುಗುಣವಾಗಿ ಲೆಕ್ಕಾಚಾರ ಹಾಕಿಯೆ ಬದುಕುತ್ತಿದ್ದುದು ಇಂದಿಗೂ ವಿಸ್ಮಯಕಾರಿಯಾಗಿದೆ.

ಇಂದಿನ ವೈಜ್ಞಾನಿಕ ಯುಗದಲ್ಲಿ ಮಾನವ ಎಷ್ಟೇ ಮುಂದುವರಿದಿದ್ದರೂ ಅವುಗಳ ಮೂಲ ಜನಪದರ ಲೆಕ್ಕಾಚಾರದ ತಳಹದಿಯಿಂದಲೇ ಮೂಡಿಬಂದಂತಹುದು ಎಂದು ಧೈರ್ಯವಾಗಿ ಹೇಳಬಹುದು. ವ್ಯವಹಾರ ಹಾಗೂ ವಿನೋದಕ್ಕಾಗಿ ಹುಟ್ಟಿಕೊಂಡ ಲೆಕ್ಕಾಚಾರಗಳು ಗಣಿತದ ಸ್ವರೂಪವನ್ನೇ ತನ್ನ ಮುಷ್ಟಿಯಲ್ಲಿಟ್ಟುಕೊಂಡು ಇಂದಿನ ಗಣಿತಕ್ಕೆ ನಾಂದಿ ಹಾಡಿತೆನ್ನಬಹುದು.

– ಜಿ.ಎಸ್.

ಜನಪದ ವಾದ್ಯಗಳು ಸಂಗೀತದ ಉಗಮಕ್ಕೆ ಮೂಲ ಪ್ರೇರಣೆ ನಿಸರ್ಗವೆಂದು ಹೇಳಬೇಕು. ಈ ಸಂಗೀತದ ಮಾಧುರ್ಯಕ್ಕೆ ಅದರ ಲಯಗತಿಗೆ ಪೂರಕ ಶಕ್ತಿಯಾಗಿ ವಾದ್ಯಗಳು ಮೊದಲಿನಿಂದಲೂ ಬಳಕೆಯಾಗುತ್ತ ಬಂದಿವೆ. ಆದಿಮಾನವನ ಹಂತದಲ್ಲಿ ಅವನ ಹಾಡು ಕುಣಿತಕ್ಕೆ ತಕ್ಕನಾಗಿ ವಿವಿಧ ರೀತಿಯ ವಾದ್ಯಗಳನ್ನು ಬಳಸಲಾಗುತ್ತಿತ್ತೆಂಬುದು ತಿಳಿದಿರುವ ಸಂಗತಿ. ಪುರಾಣ ದೇವತೆಗಳಾದ ಸರಸ್ವತಿಯ ಕೈಯಲ್ಲಿ ವೀಣೆ, ಶಿವನ ಕೈಯಲ್ಲಿ ಡಮರುಗ, ಕೃಷ್ಣನ ಕೈಯಲ್ಲಿ ಕೊಳಲು ವಿಷ್ಣುವಿನ ಕೈಯಲ್ಲಿ ಶಂಖ, ಬ್ರಹ್ಮನ ಕೈಯಲ್ಲಿ ಮೃದಂಗ ಇರುವುದು ಈ ವಾದ್ಯಗಳ ಮಹತ್ವ ಮತ್ತು ಪ್ರಾಚೀನತೆಯನ್ನು ಸೂಚಿಸುತ್ತದೆ.

ಜನಪದರು ತಮ್ಮ ಹಾಡು ನೃತ್ಯಕ್ಕೆ ವಿವಿಧ ವಾದ್ಯಗಳನ್ನು ಬಳಸುವುದು ರೂಢಿ, ತಾಳ, ತಂಬೂರಿ, ತಬಲ, ಮೃದಂಗ ಮೊದಲಾದ ವಾದ್ಯಗಳ ಬಳಕೆಯಿಲ್ಲದೆ ಸಂಗೀತ ಚಲನಶೀಲಗೊಳ್ಳುವುದು ಕಷ್ಟ. ಆದ್ದರಿಂದ ಸಂಗೀತದ ಪ್ರಮುಖ ಅಂಗವಾಗಿ ಈ ವಾದ್ಯಗಳು ಮೊದಲಿನಿಂದಲೂ ಬಳಕೆಯಲ್ಲಿವೆ. ಕರ್ನಾಟಕದಲ್ಲಿ ಜನಪದ ವಾದ್ಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳನ್ನು ಅಧ್ಯಯನದ ದೃಷ್ಟಿಯಿಂದ ೧. ತಾಳವಾದ್ಯಗಳು ೨. ಚರ್ಮವಾದ್ಯಗಳು ೩. ತಂತೀವಾದ್ಯಗಳು ೪. ಊದುವವಾದ್ಯಗಳೆಂದು ಸ್ಥೂಲವಾಗಿ ವಿಂಗಡಿಸಿಕೊಳ್ಳಬಹುದು.

ತಾಳವಾದ್ಯಗಳು ಅಥವಾ ಘನವಾದ್ಯಗಳು : ಘನವಾದ್ಯಗಳಲ್ಲಿ ‘ತಾಳ’ ಹೆಚ್ಚು ಜನಪ್ರಿಯವಾದುದು. ಭಜನೆ ಮೇಳ, ಯಕ್ಷಗಾನ, ಬಯಲಾಟ, ಕರಪಾಲ ಮೇಳ, ಗೊಂಬೆಯಾಟ ಮುಂತಾದ ಕಲೆಗಳಲ್ಲಿ ತಾಳ ಒಂದು ಮುಖ್ಯ ವಾದ್ಯವಾಗಿ ಬಳಕೆಯಲ್ಲಿದೆ. ಈ ಮೇಳಗಳಲ್ಲಿ ಮುಖ್ಯಗಾಯಕ ತಾಳಗಳನ್ನು ಹಿಡಿದಿರುತ್ತಾನೆ. ಹಿತ್ತಾಳೆಯ ಲೋಹದಿಂದ ಈ ತಾಳಗಳನ್ನು ತಯಾರಿಸುತ್ತಾರೆ. ಮರದ ದಿಂಡಲ್ಲಿ ತಾಳಗಳನ್ನು ತಯಾರಿಸಲಾಗುವುದು. ಇವುಗಳನ್ನೂ ‘ಚಿಟಿಗೆ’ ಎಂದು ಕರೆಯುತ್ತಾರೆ. ತಾಳವಾದ್ಯಗಳಲ್ಲಿ ‘ಕಂಸಾಳೆ’ ತುಂಬ ವಿಶಿಷ್ಟವಾದುದು. ಈ ಕಂಸಾಳೆಯನ್ನು ಹಿತ್ತಾಳೆ ಇಲ್ಲವೆ ಕಂಚಿನಿಂದ ಮಾಡಿರುತ್ತಾರೆ. ಮಲೆಯ ಮಾದೇಶ್ವರನ ಸಂಪ್ರದಾಯವಿರುವ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಜಿಲ್ಲೆಗಳಲ್ಲಿ ಮಾತ್ರ ಈ ಕಂಸಾಳೆ ವಾದ್ಯ ಕಂಡುಬರುತ್ತದೆ: ಗಂಟೆ ಹೆಳವರು ಗಂಟೆಯೊಂದನ್ನು ತಾಳವನ್ನಾಗಿ ಮಾಡಿಕೊಂಡು ಹಲವಾರು ಹಾಡುಗಳನ್ನು ಹೇಳುತ್ತಾರೆ. ಹಾಗಾಗಿ ಈ ಗಂಟೆಗೆ ‘ಹೆಳವನ ಗಂಟೆ’ ಎಂಬ ಹೆಸರು ನಿಂತಿದೆ. ಲೌಕಿಕ ವೃತ್ತಿಗಾಯಕ ವರ್ಗಕ್ಕೆ ಸೇರಿದ ಈ ಗಂಟೆ ಹೆಳವರು ಕೈಯಲ್ಲಿ ಗಂಟೆ ಹಿಡಿದು, ಹೆಗಲಿಗೆ ಜೋಳಿಗೆ ಹಾಕಿ ತಮ್ಮ ಭಾಗಕ್ಕೆ ಬಂದ ಕುಟುಂಬಗಳ ವಂಶಾವಳಿಯನ್ನು ಹೇಳುತ್ತ ಹಾಡು ಹಾಡುತ್ತಾರೆ.

ಕರಡೆ ಮಜಲು, ಡೊಳ್ಳುಕುಣಿತ, ಹಲಗೆ ಮೇಳ, ಚಿಟ್‌ಮೇಳ ಮೊದಲಾದ ವಾದ್ಯಮೇಳಗಳಲ್ಲಿ ಜಲ್ಲರಿಗಳೆಂಬ ಹಿತ್ತಾಳೆಯ ದೊಡ್ಡ ತಾಳಗಳನ್ನು ಬಳಸುತ್ತಾರೆ. ದಾಸಸಂಪ್ರದಾಯದಲ್ಲಿ ಬಳಸುವ ಸಾದಾಜಾಗಟೆ ಮತ್ತು ಜಗನ್ನಾಥ ಜಾಗಟೆಗಳು ಘನವಾದ್ಯಗಳ ಗುಂಪಿಗೆ ಸೇರುತ್ತವೆ. ದೊಂಬಿದಾಸರ ಹೆಂಗಸರು ಹಾಡುವಾಗ ತಾಳಕ್ಕೆಂದು ಕಂಚಿನ ತಣಿಗೆಯೊಂದನ್ನು ವಾದ್ಯವಾಗಿ ಬಳಸುತ್ತಾರೆ. ಕೋಲು, ಗೆಜ್ಜೆ, ಬೀಸುವಕಲ್ಲು, ಗಗ್ಗರ, ಬಳೇಕೋಲುಗಳನ್ನು ನಾವು ಘನವಾದ್ಯಗಳ ಪೆಟ್ಟಿಗೆ ಸೇರಿಸಬಹುದು.

ಚರ್ಮವಾದ್ಯಗಳು : ಚರ್ಮವಾದ್ಯಗಳು ಜನಪದ ವಾದ್ಯಗಳಲ್ಲಿ ಪ್ರಮುಖಸ್ಥಾನ ಪಡೆದಿವೆ. ಲೋಹ, ಮರ, ಮಣ್ಣಿನಿಂದ ಮಾಡಿದ ಹೋಳುಗಳಿಗೆ ಪ್ರಾಣಿಗಳ ಚರ್ಮ ಬಿಗಿದು ಈ ವಾದ್ಯಗಳನ್ನು ತಯಾರಿಸುತ್ತಾರೆ. ಇವುಗಳನ್ನು ಕೈಯಲ್ಲಿ ಇಲ್ಲವೆ ಕೋಲಿನಿಂದ ಬಡಿಯಲಾಗುತ್ತದೆ. ‘ಮದ್ದಲೆ’ ಅಥವಾ ‘ಮೃದಂಗ’ವನ್ನು ಯಕ್ಷಗಾನ, ಬಯಲಾಟಗಳಲ್ಲಿ, ಶಾಸ್ತ್ರೀಯ ನಾಟ್ಯಗಳಲ್ಲಿ ಬಳಸುತ್ತಾರೆ. ಇದನ್ನು ಸಾಮಾನ್ಯವಾಗಿ ಹಲಸಿನ ಮರ ಮತ್ತು ಆಡಿನ ಚರ್ಮದಿಂದ ಮಾಡುತ್ತಾರೆ. ಪ್ರದೇಶದಿಂದ ಪ್ರದೇಶಕ್ಕೆ ಇದರ ಆಕಾರ ವ್ಯತ್ಯಾಸಗೊಳ್ಳುತ್ತ ಹೋಗುತ್ತದೆ. ಇದು ನಾದವೈವಿಧ್ಯ ಹೊಂದಿರುವ ಒಂದು ಚರ್ಮವಾದ್ಯ. ‘ತಮಟೆ’ ಅಥವಾ ‘ತಮ್ಮಟೆ’ ಎಂಬ ಚರ್ಮವಾದ್ಯವನ್ನು ನಮ್ಮ ಜನಪದರು ಮದುವೆ, ಮರಣ, ಉತ್ಸವ, ಮೆರವಣಿಗೆ ಮುಂತಾದ ಎಲ್ಲ ಶುಭ ಮತ್ತು ಅಶುಭ ಸಂದರ್ಭಗಳಲ್ಲಿ ಬಳಸುತ್ತಾರೆ. ಒಂದೂವರೆ ಅಡಿಯಷ್ಟು ಅಗಲದ ಕಬ್ಬಿಣದ ಬಳಗೆಗೆ ದನದ ಇಲ್ಲವೆ ಆಡಿನ ಚರ್ಮವನ್ನು ಬಿಗಿದು ಈ ವಾದ್ಯವನ್ನು ತಯಾರಿಸುತ್ತಾರೆ. ಪಟಕುಣಿತ, ಸೋಮನ ಕುಣಿತ, ರಂಗದ ಕುಣಿತ ಮೊದಲಾದ ಹಳ್ಳಿಯ ಕುಣಿತಗಳಲ್ಲೂ ತಮಟೆಯನ್ನು ಬಡಿಯಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ತಮಟೆಯನ್ನು ‘ಹಲಗೆ’ ಎಂದು ಕರೆಯುತ್ತಾರೆ. ತಮಟೆಯ ಗತ್ತು ಗಮ್ಮತ್ತಿಗೆ ಯಾರಿಗಾದರೂ ಕುಣಿಯಬೇಕೆನಿಸುತ್ತದೆ. ಜನಪದ ವಾದ್ಯಗಳಲ್ಲಿ ತುಂಬ ಪ್ರಮುಖವಾದ ಚರ್ಮವಾದ್ಯವೆಂದರೆ ‘ಡೊಳ್ಳು’. ಇದು ವಿವಿಧ ಗಾತ್ರದಲ್ಲಿ ಪ್ರಚಲಿತದಲ್ಲಿದೆ. ಸಾಮಾನ್ಯ ಗಾತ್ರದ ಡೊಳ್ಳನ್ನು, ಹೊನ್ನೆ ಇಲ್ಲವೆ ಬುಗುರಿ ಮರದಲ್ಲಿ ಹೋಳನ್ನು ಕೊರೆದು ಅದರ ಎರಡು ಬದಿಗೆ ಆಡು ಮತ್ತು ಹೋತದ ಚರ್ಮವನ್ನು ಬಿಗಿದು ತಯಾರಿಸುತ್ತಾರೆ. ಇದನ್ನು ಕೈ ಮತ್ತು ಕೋಲುಗಳಿಂದ ಬಡಿಯುತ್ತಾರೆ. ಇದು ಎರಡು ಇಲ್ಲವೆ ಮೂರು ಅಡಿ ಉದ್ದವಾಗಿರುತ್ತದೆ. ದೇವರ ಉತ್ಸವಗಳಲ್ಲಿ ಇದನ್ನು ಬಾರಿಸುತ್ತಾರೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಬೀರೇದೇವರ ಭಕ್ತರು ವೀರಾವೇಶದಿಂದ ಡೊಳ್ಳುಮೇಳವನ್ನು ಮಾಡುತ್ತಾರೆ. ಇದರಿಂದ ಆರು ಅಡಿಯವರೆಗಿನ ದೊಡ್ಡ ಗಾತ್ರದ ಡೊಳ್ಳನ್ನು ಎಮ್ಮೆ ಚರ್ಮದಿಂದ ತಯಾರಿಸಿ ದೇವಾಲಯದಲ್ಲಿ ಪೂಜಾ ಸಂದರ್ಭಗಳಲ್ಲಿ ಬಡಿಯುತ್ತಾರೆ. ಇದರ ಶಬ್ದ ಬಹುದೂರದವರೆಗೆ ಕೇಳಿಸುತ್ತದೆ. ಇದನ್ನು ‘ರಣಡೊಳ್ಳು’ ಇಲ್ಲವೆ ‘ಯಮಡೊಳ್ಳು’ ಎಂದೂ ಕರೆಯುತ್ತಾರೆ. ಮರ, ಹಿತ್ತಾಳೆ, ಇಲ್ಲವೆ ಕಂಚಿನ ಹೋಳುಗಳ ಎರಡು ಕಡೆಗೆ ಆಡಿನ ಚರ್ಮವನ್ನು ಬಿಗಿದು ‘ಹರೆ’ಯನ್ನು ತಯಾರಿಸುತ್ತಾರೆ. ಎಡಗೈಯಲ್ಲಿ ಬಾಗಿದ ಈಚಲು ಕಡ್ಡಿಹಿಡಿದು ಉಜ್ಜುತ್ತಾರೆ; ಬಲಗೈಯಲ್ಲಿ ತೆಂಗು ಇಲ್ಲವೆ ಹಂಗರ ಕಡ್ಡಿ ಹಿಡಿದು ಬಡಿಯುತ್ತಾರೆ. ಬೀದಿಯ ಮಾರಿ ಇಲ್ಲವೆ ಗೂಡೆಯ ಮಾರಿಯನ್ನು ಹೊತ್ತು ಊರೂರು ತಿರುಗುವವರು ಇದನ್ನು ಬಳಸುತ್ತಾರೆ. ಇದನ್ನು ‘ಉರುಮೆ’ ಎಂದೂ ಕರೆಯುತ್ತಾರೆ. ಲೋಹದ ಗುಂಭಗಳಿಗೆ ಚರ್ಮವನ್ನು ಹೊದಿಸಿ ಮಾಡಿದ ವಾದ್ಯವನ್ನು ‘ನಗಾರಿ’ ಎಂದು ಕರೆಯುತ್ತಾರೆ. ಇದು ಕೋಡುವಾದ್ಯವಾಗಿದ್ದು, ಇದನ್ನು ‘ರಣವಾದ್ಯ’ ವೆಂದೂ ಕರೆಯುತ್ತಾರೆ. ಪ್ರಾಚೀನ ಜನಪದ ವಾದ್ಯಗಳಲ್ಲಿ ‘ಕರಡಿ’ (ಡೆ) ಒಂದು ಪ್ರಮುಖವಾದ ಜನಪದ ವಾದ್ಯವಾಗಿದೆ. ಹೊನ್ನೆ, ಬುಗುರಿ, ತೆಂಗು ಮೊದಲಾದ ಮರಗಳ ಹೋಳುಗಳಿಗೆ ಆಡಿನ ಚರ್ಮ ಬಿಗಿದು ಈ ತಂಡಕಟ್ಟಿಕೊಂಡು ಬಾರಿಸುವುದರಿಂದ ಇದನ್ನು ‘ಕರಡಿ ಮಜಲು’ ಎಂದು ಕರೆಯುತ್ತಾರೆ. ಮಣ್ಣಿನ ಹೋಳಿಗೆ ಮೇಕೆ ಇಲ್ಲವೆ ಜಿಂಕೆ ಚರ್ಮ ಬಿಗಿದು ತಯಾರಿಸಿದ ವಾದ್ಯವೇ ‘ಗುಮ್ಮಟೆ’ ಎಂಬುದು. ವಿವಿಧ ಗಾತ್ರದ ಈ ವಾದ್ಯವನ್ನು ಕರಪಾಲಮೇಳ, ತಂಬೂರಿ ಮೇಳಗಳಲ್ಲಿ ಬಡಿಯುತ್ತಾರೆ. ಮಣ್ಣಿನ ಜೋಡು ಪಾತ್ರೆಗಳಿಗೆ ಚರ್ಮ ಬಿಗಿದು ಮಾಡಿದ ವಾದ್ಯವೇ ‘ಟಕೂರಿ’. ವಾದ್ಯಮೇಳ, ಗಾನದಲ್ಲಿ ಇದನ್ನು ಬಾರಿಸುತ್ತಾರೆ. ಬಿಲ್ವಪತ್ರೆಕಾಯಿ ಹೋಳು, ಲೋಹದ ಹೋಳುಗಳಿಗೆ ಕಪ್ಪೆ ಚರ್ಮ ಬಿಗಿದು ತಯಾರಿಸಿದ ವಾದ್ಯವೇ ‘ಬುಡಬುಡಕೆ’. ಶಕುನ ಹೇಳಲು, ಭವಿಷ್ಯ ಹೇಳಲು ಬುಡಬುಡಕೆಯವರು ಇದನ್ನು ಬಳಸುತ್ತಾರೆ. ಡಮರುಗ, ಕುಣಿಮಣಿ, ತಾಸೆ, ಡೋಲು, ದಪ್ಪು ಮುಂತಾದ ಹಲವಾರು ಜನಪದ ಚರ್ಮವಾದ್ಯಗಳೂ ಬಳಕೆಯಲ್ಲಿವೆ.

ತಂತೀವಾದ್ಯಗಳು : ತಂತೀವಾದ್ಯಗಳಲ್ಲಿ ಏಕತಾರಿ ಒಂದು ಪ್ರಮುಖವಾದ್ಯ. ತಿರುಳನ್ನು ತೆಗೆದ ಒಣಗಿದ ಸೋರೆಬುರುಡೆಯ ಮೂಲಕ ಮೂರು ಅಡಿ ಉದ್ದದ ಒಂದು ಬಿದಿರುಗಳುವನ್ನು ಅಳವಡಿಸಿ, ತಂತಿಯೊಂದನ್ನು ಈ ತುದಿಯಿಂದ ಆ ತುದಿಯವರೆಗೆ ಎಳೆದು ಕಟ್ಟಿದರೆ ಏಕತಾರಿ ಸಿದ್ಧಗೊಳ್ಳುತ್ತದೆ. ಒಂದೇ ತಂತಿಯನ್ನು ಅಳವಡಿಸುವುದರಿಂದ ಇದಕ್ಕೆ ‘ಏಕತಾರಿ’ ಎಂಬ ಹೆಸರು ನಿಂತುಕೊಂಡಿದೆ. ತಂತೀವಾದ್ಯಗಳಲ್ಲಿ ನಮ್ಮ ಜನಪದ ಗಾಯಕರು ಬಳಸುವ ‘ತಂಬೂರಿ’ ವಿಶಿಷ್ಟವಾದುದು. ಹಲಸಿನ ಮರದಿಂದ ತಯಾರಿಸಲಾಗುವ ಇದು ಸುಮಾರು ಎರಡು ಮೊಳ ಉದ್ದವಿರುತ್ತದೆ. ಇದರ ಒಂದು ತುದಿಯಲ್ಲಿ ಸಿಂಹದ ಮುಖ ಇಲ್ಲವೆ ನಾಗರ ಹೆಡೆ ಬಿಡಿಸುತ್ತಾರೆ. ಇದು ನಾಲ್ಕು ತಂತಿಯ ವಾದ್ಯವಾಗಿದ್ದು, ನೀಲಗಾರರು ಮತ್ತು ತಂಬೂರಿ ಸಂಪ್ರದಾಯದವರು ಈ ವಾದ್ಯವನ್ನು ಬಳಸುತ್ತಾರೆ. ಜನಪದ ಗಾಯಕರು ಇದನ್ನು ‘ಸರಸ್ವತಿ’ ಎಂದೂ ಕರೆಯುತ್ತಾರೆ. ‘ಕಿನ್ನರಿ’ ಎಂಬ ತಂತೀವಾದ್ಯವನ್ನು ಸೋರೆಬುರುಡೆಯಿಂದ ಮಾಡುತ್ತಾರೆ. ಮೂರು ಅಡಿ ಉದ್ದದ ಒಂದು ಗಳುವಿಗೆ ಮೂರು ಸೋರೆಬುರುಡೆಗಳನ್ನು ಅಳವಡಿಸಿ ಮುಳ್ಳುಹಂದಿ ಜಾತಿಯ ಪ್ರಾಣಿಯ ಹನ್ನೆರಡು ಚಿಪ್ಪುಗಳನ್ನು ಮೇಣದಿಂದ ಗಳುವಿಗೆ ಅಂಟಿಸಿ ಇವುಗಳ ಮೇಲೆ ನಾಲ್ಕು ತಂತಿಗಳನ್ನು ಅಳವಡಿಸಿದರೆ ‘ಕಿನ್ನರಿ’ ಸಿದ್ಧಗೊಳ್ಳುತ್ತದೆ. ಕಿನ್ನರಿ ಜೋಗಿಗಳು ಈ ವಾದ್ಯವನ್ನು ಹಿಡಿದು ಅರ್ಜುಜೋಗಿ ಹಾಡುಗಳನ್ನು, ಮಹಾಭಾರತದ ಕಥೆಗಳನ್ನು ಹಾಡುತ್ತಾರೆ. ‘ಚೌಡಿಕೆ’ಗೆ ತಂತಿಯನ್ನು ಅಳವಡಿಸದಿದ್ದರೂ ಇದನ್ನು ತಂತೀವಾದ್ಯದ ಗುಂಪಿಗೆ ಸೇರಿಸಲಾಗುತ್ತದೆ. ತಂತಿಗೆ ಬದಲು ಕುರಿಯ ಕರುಳಿನ ದಾರವನ್ನು ಬಳಸುತ್ತಾರೆ. ಗೊಂದಲಿಗರು ಮತ್ತು ಚೌಡಿಕೆ ಸಂಪ್ರದಾಯದವರು ಇದನ್ನು ನುಡಿಸುತ್ತ ಹಾಡುವರು. ಇದು ಇಲ್ಲಮ್ಮನ ಸಂಪ್ರದಾಯದ ವಾದ್ಯವಾಗಿರುವುದರಿಂದ ಇದಕ್ಕೆ ‘ಚೌಡಿಕೆ’ ಎಂಬ ಹೆಸರು ನಿಂತಿದೆ. ನ್ಯಾಲಗುಮ್ಮ, ತುಂತುಣಿ ಮುಂತಾದ ಕೆಲವು ಜನಪದ ತಂತೀವಾದ್ಯಗಳೂ ಬಳಕೆಯಲ್ಲಿವೆ.

ಊದುವ ವಾದ್ಯಗಳು : ಮನುಷ್ಯನ ಉಸುರಿನಿಂದ ಊದುವ ವಾದ್ಯಗಳನ್ನು ಊದುವ ವಾದ್ಯಗಳೆಂದು ಕರೆಯಲಾಗುತ್ತದೆ. ಕೊಳಲು, ಗಣಿ, ಪಿಳ್ಳಂಗೋವಿ, ಮೌರಿ, ಮುಖವೀಣೆ, ಕೊಂಬು, ಕಹಳೆ, ಪುಂಗಿ, ಭೋಂಕಿ, ಶಂಖ ಮೊದಲಾದ ಹಲವಾರು ಊದುವ ವಾದ್ಯಗಳನ್ನು ಜನಪದರಲ್ಲಿ ಕಾಣಬಹುದಾಗಿದೆ. ಕೊಳಲು, ಗಣಿ, ಪಿಳ್ಳಂಗೋವಿ, ಮುಖವೀಣೆ, ಪುಂಗಿ, ಓಲಗಗಳನ್ನು ಸಂಗೀತಕ್ಕೆ ಬಳಸುವ ಸಂಗೀತ ಪ್ರಧಾನ ವಾದ್ಯಗಳೆಂದು ಕರೆಯಬಹುದು. ಕೊಂಬು, ಕಹಳೆ, ಶಂಖ, ಭೋಂಕಿ ಮೊದಲಾದವುಗಳನ್ನು ಅವುಗಳ ವಿಶಿಷ್ಟ ಶಬ್ದಗಳಿಂದಾಗಿ ಇನ್ನೊಂದು ಗುಂಪಿಗೆ ಸೇರಿಸಬಹುದು.

ಕೊಳಲು, ಗಣೆ, ಪಿಳ್ಳಂಗೋವಿಗಳು ಒಂದೇ ಬಗೆಯ ವಾದ್ಯಗಳು. ಇವುಗಳನ್ನು ಬಿದಿರಿನಿಂದ ಮಾಡಿರುತ್ತಾರೆ. ‘ಗಣೆ’ ಮಾತ್ರ ಮೂರು ಅಡಿಗಳಷ್ಟು ಉದ್ದವಾಗಿ ವಿಶಿಷ್ಟವಾಗಿರುತ್ತದೆ. ಗೊಲ್ಲರು ಇದನ್ನು ‘ಕಣಿ’ ಎಂದು ಕರೆದು ಭವಿಷ್ಯ ಹೇಳಲು ಬಳಸುತ್ತಾರೆ. ‘ಓಲಗ’ ಊದುವ ವಾದ್ಯಗಳಲ್ಲಿ ಪ್ರಸಿದ್ಧವಾಗಿದ್ದು, ಮಂಗಳವಾದ್ಯವಾಗಿದೆ. ಒಂದೂವರೆ ಎರಡು ಅಡಿ ಉದ್ದವಾಗಿದ್ದು, ಮದುವೆ, ದೇವರ ಉತ್ಸವ ಮೊದಲಾದ ಮಂಗಳ ಕಾರ್ಯಗಳಲ್ಲಿ ಇದನ್ನು ಊದುತ್ತಾರೆ. ‘ಮುಖವೀಣೆ’ ಒಂದು ಅಡಿ ಉದ್ದದ ಮರದ ವಾದ್ಯವಾಗಿದ್ದು ಮೂಡಲಪಾಯ, ಯಕ್ಷಗಾನಗಳಲ್ಲಿ ಬಳಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಇದನ್ನು ‘ಸೊನಾಯಿ’ ಎನ್ನುತ್ತಾರೆ. ಶಿಷ್ಟ ಪರಂಪರೆಯ ‘ಶಹನಾಯಿ’ಗೆ ಈ ಜಾನಪದ ‘ಸೊನಾಯಿ’ ಮೂಲವೆನ್ನಬೇಕು. ಸೋರೆಬುರುಡೆಯಿಂದ ತಯಾರಿಸಿದ ಪುಂಗಿಯೂ ಒಂದು ವಿಶಿಷ್ಟ ಬಗೆಯ ಊದು ವಾದ್ಯವಾಗಿದೆ. ಕೊಂಬು, ಕಹಳೆ, ರಣಕಹಳೆ, ಭೋಂಕಿಗಳು ಲೋಹದಿಂದ ತಯಾರಿಸಿದ ಊದು ವಾದ್ಯಗಳು. ‘ಶಂಖ’ ಸಮುದ್ರದಲ್ಲಿ ದೊರಕುವ ವಿಶಿಷ್ಟ ಬಗೆಯ ರಣವಾದ್ಯ. ಜಿಂಕೆಯ ಕೊಂಬಿನಿಂದ ಮಾಡಿದ ಸಿಂಗನಾದವೂ ಒಂದು ಜನಪದ ಊದು ವಾದ್ಯವಾಗಿದೆ.

74

ಹೀಗೆ ನಮ್ಮ ಜನಪದ ವಾದ್ಯಗಳು ವೈವಿಧ್ಯಮಯವಾಗಿದ್ದು, ನೂರಾ ಐವತ್ತಕ್ಕಿಂತೂ ಹೆಚ್ಚಿನ ಸಂಖ್ಯೆಯಲ್ಲಿರುವುದು ತಿಳಿದುಬರುತ್ತದೆ. ಪ್ರಾದೇಶಿಕ ಭಿನ್ನತೆಗೆ ಅನುಗುಣವಾಗಿ ಭಿನ್ನ ಸಂಪ್ರದಾಯಗಳಿಗೆ ಸಂಬಂಧಿಸಿದ ವಾದ್ಯಗಳು ಕಂಡುಬರುತ್ತವೆ. ಜನಪದ ಸಂಗೀತದ ಸೊಗಡು ಮೂಲನೆಲೆಯಲ್ಲಿ ಉಳಿಯಬೇಕಾದರೆ ಜನಪದ ವಾದ್ಯಗಳಣ್ನು ರಕ್ಷಿಸಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿದೆ.

– ಸಿ.ಪಿ.ಎಸ್.

ಜನಪದ ಸಂಗೀತ : ಹಳ್ಳಿಯ ಹಾಡು, ಗ್ರಾಮ್ಯಗಾನ, ಲೋಕಗೀತ ಇತ್ಯಾದಿ ಹೆಸರುಗಳಿಂದ ಕರೆಯಿಸಿಕೊಳ್ಳುವ ಜನಪದ ಸಂಗೀತ ಪ್ರಕಾರ ಅನಾದಿಕಾಲದಿಂದಲೂ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದೆ. ಪ್ರಪಂಚಾದ್ಯಂತ ಪ್ರಾಚೀನ ಕಾಲದಿಂದ ಆಳವಾಗಿ ತನ್ನ ಬೇರನ್ನು ಬಿಟ್ಟಿರುವ ಈ ಸಂಗೀತ ಪ್ರಕಾರ ಜನತೆಯ ಸಾಂಸ್ಕೃತಿಕ ಬದುಕಿನ ತಿರುಳನ್ನೇ ತನ್ನಲ್ಲಿ ಅಡಗಿಸಿಕೊಂಡಿದೆ. ಈ ಸಂಗೀತ ಜನರ ಹೃದಯದಿಂದ ಉಕ್ಕಿಬಂದ ಸಾಹಿತ್ಯವನ್ನು ಹೊಂದಿದ್ದು ಗ್ರಾಮ್ಯ ಜನಜೀವನದ ನೋವು ನಲಿವುಗಳ ವಿಚಾರದ ಮೇಲೆ ಹೆಚ್ಚು ಬೆಳಕು ಚೆಲ್ಲುವುದರೊಂದಿಗೆ ಸಾಹಿತ್ಯದ ಒಂದು ಬಹುಮುಖ್ಯ ಪ್ರಕಾರವೂ ಆಗಿದೆ.

ಜನಪದ ಗೀತೆಗಳಲ್ಲಿ ಅಳವಟ್ಟಿರುವ ಸಂಗೀತ ಹಾಗೂ ತಾಳ ಎರಡೂ ಅತ್ಯಂತ ಸರಳವಾಗಿದ್ದು ಇವುಗಳೇ ಮುಂದೆ ಶಾಸ್ತ್ರೀಯ ಸಂಗೀತದ ಹುಟ್ಟು ಬೆಳೆವಣಿಗೆಗಳಿಗೆ ಕಾರಣವಾದವು ಎಂಬುದು ಅತ್ಯಂತ ಗಮನಾರ್ಹ ಸಂಗತಿ. ಶಾಸ್ತ್ರೀಯ ಸಂಗೀತದ ಪ್ರಮುಖ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು ಜನಪದ ಸಂಗೀತದ ಹಲವು ರಾಗಗಳನ್ನು ಬಳಸಿಕೊಂಡು ತಮ್ಮ ಹಲವು ಕೀರ್ತನೆಗಳನ್ನು ರಚಿಸಿದ್ದಾರೆಂಬುದು ಹೆಚ್ಚು ವಿಶಿಷ್ಟವಾಗಿದೆ. ಗ್ರಾಮಗೀತೆಗಳು ದಕ್ಷಿಣ ಭಾರತದಲ್ಲಿ ಹೇರಳ. ಈ ಗೀತೆಗಳಲ್ಲಿ ಗಮಕಗಳು ಹೆಚ್ಚಾಗಿ ಕಂಡುಬರದಿದ್ದರೂ ದಕ್ಷಿಣಾದಿ ಸಂಗೀತದ ಹಲವು ಸಮಾನ ರಾಗಗಳು ಈ ಸಂಗೀತದಲ್ಲಿವೆ. ೩ – ೪ ಸ್ತರಗಳಲ್ಲೇ ತನ್ನ ಪೂರ್ಣ ಸಂಚಾರವನ್ನು ಅಡಗಿಸಿಕೊಂಡಿರುವ ಗ್ರಾಮಗೀತೆಗಳ ಸಂಚಾರ ಹೆಚ್ಚು ಆಕರ್ಷಣೀಯ. ಜಾನಪದ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತದ ಮಂಗಳಕರವಾದ ಕುರಂಜಿ, ಆನಂದಭೈರವಿ, ಸೈಂಧವಿ, ನೀಲಾಂಬರಿ, ಪುನ್ನಾಗವರಾಳಿ, ನಾದನಾಮಕ್ರಿಯ, ನವರೋಜ್ ಇವೇ ಮೊದಲಾದ ಅನೇಕ ರಾಗಗಳ; ಆದಿ, ರೂಪಕ, ಛಾಪು ಇತ್ಯಾದಿ ತಾಳಗಳ; ಒಂದೇ ಗ್ರಹವುಳ್ಳ ಮತ್ತು ಅನಾಗತ ಗ್ರಹವುಳ್ಳ ಹಾಡುಗಳು ಹೇರಳವಾಗಿವೆ.

ಕೆಲಸದ ಪರಿಶ್ರಮವನ್ನು ಕಡಿಮೆ ಮಾಡಿಸುವ ಮನರಂಜನೆ ನೀಡುವ, ಉತ್ಸಾಹ ತುಂಬುವ ಧ್ಯೇಯೋದ್ದೇಶಗಳೇ ಈ ಹಾಡುಗಳ ಮುಖ್ಯ ಕೆಲಸ. ಹಲವು ಶ್ರಮದಾಯಕ ಕೆಲಸಗಳನ್ನು ಮಾಡುವಾಗ ಉದಾ: ಭಾರ ಎತ್ತುವುದು, ತಳ್ಳುವುದು, ಬಾವಿಯಿಂದ ನೀರೆತ್ತುವುದು, ಬೆಟ್ಟ ಹತ್ತುವುದು, ದೋಣಿ ನಡೆಸುವುದು, ಕುಟ್ಟುವುದು ಇತ್ಯಾದಿ ಕೆಲಸಗಳನ್ನು ಮಾಡುವಾಗ ಆಯಾ ಕೆಲಸಗಳಿಗೇ ನಿರ್ದಿಷ್ಟವಾದ ಹಾಡುಗಳು ಸಾಕಷ್ಟು ಇವೆ. ಈ ಹಾಡುಗಳು, ಕೆಲಸ ಮಾಡುವವರಿಗೆ ಉತ್ಸಾಹ ತುಂಬುವುವಲ್ಲದೆ ಮಾಡುವ ಕೆಲಸವೂ ಕ್ರಮಬದ್ಧವಾಗಿರಲು ಸಹಾಯ ಮಾಡುತ್ತವೆ. ಈ ಗೀತೆಗಳ ಸಾಹಿತ್ಯ ಸರಳವಾಗಿದ್ದು ಸಂಗತಿಗಳ ಉಪಾದಿಯಿಲ್ಲದೆ ಅಪರೂಪವಾಗಿ ಸಾಧಾರಣ ಗಮಕಗಳಿಂದ ಕೂಡಿದ್ದು, ಸಾಧ್ಯವಾದಷ್ಟೂ ತ್ರಿಪದಿ ಛಂದಸ್ಸಿನಲ್ಲಿರುವುದರಿಂದ ರಾಗವಾಗಿ ಸುಲಭವಾಗಿ ಹೇಳಲು ಮತ್ತು ತಾಳಮದ್ದಲೆಗೆ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗಿದೆ. ಗೀತೆಗಳಲ್ಲಿ ಮಂದ್ರಸ್ಥಾಯಿಯ ಸಂಚಾರಗಳು ಹೆಚ್ಚು. ಒಂದು ಸ್ಥಾಯಿಯಲ್ಲಿ ೪ – ೫ ಸ್ವರಗಳ ಮೇಲೆ ಶ್ರುತಿಯು ಏರುವುದಿಲ್ಲ. ಈ ಗೀತೆಗಳಲ್ಲಿ ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳೆಂಬ ಮೂರು ಅಂಗಗಳಿರುವುದಿಲ್ಲ. ಆದರೆ ಇತ್ತೀಚಿನ ಕೆಲವು ಗೀತೆಗಳಲ್ಲಿ ಮಾತ್ರ ಈ ಅಂಗಗಳನ್ನು ಗುರುತಿಸಬಹುದಾಗಿದೆ. ಅಂತ್ಯಪ್ರಾಸ, ಹಾಸ್ಯ ಇವೂ ಈ ಗೀತಗಳ ಸಾಹಿತ್ಯದ ವೈಶಿಷ್ಟ್ಯವಾಗಿದೆ. ಕೃಷಿಕರ ಜೀವನದ ಒಂದೊಂದು ಸಂದರ್ಭಕ್ಕೂ ಹೊಂದುವ ಅನೇಕ ಗೀತೆಗಳಿವೆ. ಈ ಗೀತೆಗಳನ್ನು ಸ್ಥೂಲವಾಗಿ ಕೆಲಸಕ್ಕೆ ಸಂಬಂಧಿಸಿದ ಗೀತೆಗಳು, ಕೌಟುಂಬಿಕ ಗೀತೆಗಳು, ಕೃಷಿಸಂಬಂಧಿತ ಗೀತೆಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಈ ವಿಭಾಗಗಳನ್ನೇ ಗ್ರಾಮ್ಯಗೀತೆಗಳು ಮತ್ತು ಉತ್ತಮಗೀತೆಗಳು ಎಂಬ ಎರಡು ವಿಭಾಗಗಳಡಿಯಲ್ಲಿಯೂ ಗುರುತಿಸಲಾಗುತ್ತದೆ. ಗ್ರಾಮ್ಯಗೀತೆಗಳು ಮುಖ್ಯವಾಗಿ ವ್ಯವಸಾಯ, ಕಸುಬುಗಳಿಗೆ ಸಂಬಂಧಿಸಿದ್ದಾದರೆ ಉತ್ತಮಗೀತೆಗಳು ಲಗ್ನಮುಹೂರ್ತದ ಹಾಗೂ ಪೌರಾಣಿಕ ಸಂದರ್ಭಗಳಿಗೆ ಸಂಬಂಧಿಸಿವೆ. ಗ್ರಾಮ್ಯಗೀತೆಗಳ ಸಂಗೀತ ಬಹಳ ಮೋಹಕವಾಗಿದೆ. ಉತ್ತಮಗೀತೆಗಳು ಪರಿಚಿತ ರಾಗಗಳನ್ನು ಹೊಂದಿದ್ದು ಲಾಲಿ, ಉಯ್ಯಾಲೆ, ಸುವ್ವಿ ಹಾಡುಗಳಾಗಿವೆ. ಒಬ್ಬೊಬ್ಬರೇ ಹಾಡುವುದು, ಸಾಮೂಹಿಕವಾಗಿ ಹಾಡುವುದು, ಎರಡು ಗುಂಪುಗಳು ಹಾಡುವುದು, ಮೊದಲು ಒಬ್ಬ ಹಾಡಿ ಅನಂತರ ಇನ್ನೊಂದು ಗುಂಪು ಹಾಡುವುದು, ಸ್ತ್ರೀ ಪುರುಷರಿಬ್ಬರೂ ಸೇರಿ ಹಾಡುವುದು, ಸ್ತ್ರೀ ಪುರುಷರು ಪ್ರತ್ಯೇಕ ಪ್ರತ್ಯೇಕವಾಗಿ ಹಾಡುವುದು, ಒಬ್ಬರ ಅನಂತರ ಮತ್ತೊಬ್ಬರು ಹಾಡುವುದು ಈ ಬಗೆಯ ವೈವಿಧ್ಯಗೀತೆಗಳು ಜಾನಪದ ಸಂಗೀತದಲ್ಲಿ ಬಹಳಷ್ಟಿದೆ.

ಜನಪದ ಗೀತೆಗಳಲ್ಲಿ ವಸ್ತು ವೈವಿಧ್ಯ ಹೆಚ್ಚು. ವಸ್ತುವಿನ ದೃಷ್ಟಿಯಿಂದ ಜನಪದ ಗೀತೆಗಳನ್ನು ಸ್ತುತಿಪದಗಳು, ಸುಗ್ಗಿಯಹಾಡು, ನೀತಿಯಹಾಡು, ತತ್ತ್ವಪದ, ಸಂಪ್ರದಾಯದ ಹಾಡುಗಳು, ಕಸಬಿನ ಹಾಡುಗಳು, ಲಾಲಿಹಾಡುಗಳು, ಭಕ್ತಿಯ ಹಾಡುಗಳು, ಚಾರಿತ್ರಿಕ ಪ್ರಸಂಗಗಳ ಹಾಡುಗಳು, ಪೌರಾಣಿಕ ಹಾಡುಗಳು, ಸಮುದಾಯದ ಹಾಡುಗಳು, ಸಮಸ್ಯಾತ್ಮಕ ಹಾಡುಗಳು, ಹಾಸ್ಯದ ಹಾಡುಗಳು, ವನೌಷಧಿ ಮತ್ತು ಆರೋಗ್ಯದ ಹಾಡುಗಳು, ಆರತಿ ಹಾಡುಗಳು ಹೀಗೆ ಹಲವು ಬಗೆಗಳಲ್ಲಿ ವರ್ಗೀಕರಿಸಬಹುದು.

ಗ್ರಾಮೀಣ ಜನತೆಗೆ ದೇವರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ದೈವ ತಮಗೆ ಒಲಿದರೆ ಮಾತ್ರ ತಮ್ಮ ಬಾಳು ಹಸನಾಗಿರುತ್ತದೆ; ಅದೇ ದೈವ ಮುನಿದರೆ ತಮಗೆ ಬಾಳೇ ಇಲ್ಲ ಎಂಬ ಗಾಢನಂಬಿಕೆಯಿರುವ ಇವರು ಹಾಡುವ ಗೀತೆಗಳಲ್ಲಿ ಬಿಡಿಪದಗಳನ್ನು ಹೊರತುಪಡಿಸಿ ಮಿಕ್ಕಂತೆ ಸ್ತುತಿಸ್ತವನಗಳಿಂದ ಹಾಡುಗಳು ಇಲ್ಲವೇ ಇಲ್ಲ ಎಂದರೆ ತಪ್ಪಾಗದು. ಇವರ ಸ್ತುತಿಪದಗಳು ಮತ್ತು ಭಕ್ತಿಪ್ರಧಾನ ಹಾಡುಗಳು ಗ್ರಾಮದೇವತೆ ಅಥವಾ ದೇವರು, ದೆವ್ವ, ಪಿಶಾಚಿಗಳನ್ನು ಕುರಿತದ್ದಾಗಿರುತ್ತವೆ. ಸುಗ್ಗಿಯ ದೇವರು, ಭೂತಾಯಿ, ಮಳೆರಾಜ, ಬನ್ನಿವೃಕ್ಷ, ಪತ್ರಿಯ ಗಿಡ ಇತ್ಯಾದಿಗಳನ್ನು ಕುರಿತ ಹಾಡುಗಳೂ ಸಾಕಷ್ಟಿವೆ. ದಿನದ ಸುಪ್ರಭಾತವೇ ಸೂರ್ಯ ಹಾಗೂ ಭೂಮಿಯನ್ನು ನೆನೆಯುವಲ್ಲಿ ಆರಂಭವಾಗುತ್ತದೆ. ಒಟ್ಟಾರೆಯಾಗಿ ಈ ಬಗೆಯ ಸ್ತುತಿಪದಗಳು ಗ್ರಾಮೀಣ ಜನರು ಭೂತ ಪ್ರೇತ, ದೇವರು, ಪ್ರಕೃತಿಗಳ ಮೇಲೆ ಹೊಂದಿರುವ ನಂಬಿಕೆಗಳು ಹಾಗೂ ಭಾವನೆಗಳ ಮೇಲೆ ಹೆಚ್ಚು ಬೆಳಕು ಬೀರುತ್ತವೆ.

ನೀತಿಪ್ರಧಾನ ಗೀತೆಗಳಲ್ಲಿ ನಿತ್ಯಜೀವನದಲ್ಲಿ ಹಾಗೂ ಸಮಾಜದಲ್ಲಿ ಅನುಸರಿಸಬೇಕಾದ ಮರ್ಯಾದೆ, ನಡತೆ, ನೀತಿ ನಿಯಮಗಳನ್ನು ಕುರಿತ ವಸ್ತು ವಿಷಯಗಳು ಪ್ರಧಾನವಾಗಿರುತ್ತವೆ.

ತತ್ತ್ವಪದಗಳಲ್ಲಿ ಲೋಕಸಂಬಂಧವಾದ ಅನೇಕ ಗಾದೆಗಳು, ಮಹರ್ಷಿಗಳ ಉಪದೇಶ ವಿಚಾರಗಳು ಮುಖ್ಯವಾಗಿರುತ್ತವೆ.

ಗ್ರಾಮೀಣ ಜನರ ಸಂಪ್ರದಾಯದ ಹಾಡುಗಳು ಮುಖ್ಯವಾಗಿ ಅವರು ಆಚರಿಸುವ ಹಲವಾರು ಸಂಪ್ರದಾಯಗಳನ್ನು ಕುರಿತವಾಗಿರುತ್ತವೆ. ಉಹಾ : ಶಿಶುಜನನ, ನಾಮಕರಣ, ತೊಟ್ಟಿಲು, ಮದುವೆ, ಹೂ ಮುಡಿಸುವುದು, ಮಡಿಲು ತುಂಬುವುದು, ಚಪ್ಪರ, ಆರತಿ, ಸಾವು, ನೋವುಗಳು ಮತ್ತು ಅವರು ಆಚರಿಸುವ ಹಬ್ಬಗಳಲ್ಲಿ ಅನುಸರಿಸುವ ಸಂಪ್ರದಾಯಗಳು ಇತ್ಯಾದಿ ವಿಷಯಗಳನ್ನು ವಸ್ತುವಾಗಿ ಹೊಂದಿರುತ್ತವೆ.

ಚಾಪೆ ಹೊಲಿಯುವುದು, ಗಾಡಿ ಓಡಿಸುವುದು, ಏತದಿಂದ ನೀರೆತ್ತುವುದು, ಕೋಲಾಟವಾಡುವುದು, ಬತ್ತ ಇತ್ಯಾದಿಗಳನ್ನು ಕುಟ್ಟುವುದು, ಕೇರುವುದು, ರಾಗಿಕಲ್ಲು ಬೀಸುವುದು ಇತ್ಯಾದಿ ಗ್ರಾಮೀಣ ಬದುಕಿನ ಕೆಲಸಕಾರ್ಯಗಳಿಗೆ ಸಂಬಂಧಿಸಿದಂತೆ ಹಲವಾರು ಹಾಡುಗಳಿವೆ. ಹಾಡುತ್ತ ಕೆಲಸ ಮಾಡುವುದು ಗ್ರಾಮೀಣ ಜನರ ಅಭ್ಯಾಸ. ಈ ಬಗೆಯ ಹಾಡುಗಳನ್ನು ಕಸಬಿನ ಹಾಡುಗಳು ಎಂದೂ ಕರೆಯಲಾಗುತ್ತದೆ.

ತಾಯಿ ಹಸುಮಕ್ಕಳನ್ನು ನಿದ್ರೆ ಮಾಡಿಸುವಾಗ ಹಾಡುವ ಹಾಡುಗಳು ಜೋಗುಳದ ಹಾಡುಗಳೆನಿಸಿವೆ. ಈ ಬಗೆಯ ಹಾಡುಗಳು ಹೆಚ್ಚಾಗಿ ಮಾಧುರ್ಯ ಪ್ರಧಾನವಾದ ನೀಲಾಂಬರಿ, ಆನಂದಭೈರವಿ, ಯದುಕುಲಕಾಂಭೋಜಿ ಇತ್ಯಾದಿ ರಾಗಗಳಿರುತ್ತವೆ.

ಊರ ರಾಜರ ಚರಿತ್ರೆ ಹಾಗೂ ಅವರ ಕಾರ್ಯಕ್ಷಮತೆಯ ವರ್ಣನೆಗಳನ್ನು ಕುರಿತಂತೆ ಉದಾ: ಸಂಗೊಳ್ಳಿರಾಯಣ್ಣ ಮೊದಲಾದ ಇತಿಹಾಸ ಪ್ರಸಿದ್ಧ ವ್ಯಕ್ತಿ ವಿಚಾರಗಳನ್ನು ಕುರಿತು ಇವರು ಹಾಡುವ ಹಾಡುಗಳು ಚಾರಿತ್ರಿಕ ಪ್ರಸಂಗಗಳ ಹಾಡುಗಳೆಂದು ಜನಪ್ರಿಯವಾಗಿವೆ. ಇವನ್ನು ಲಾವಣಿಗಳೆಂತಲೂ ಕರೆಯಲಾಗುವುದು.

ರಾಮಕೃಷ್ಣ, ಭೀಮ ಮೊದಲಾದ ಪುರಾಣ ಪ್ರಸಿದ್ಧ ಮಹಾವ್ಯಕ್ತಿಗಳು ಹಾಗೂ ಪುರಾಣದಲ್ಲಿ ಬರುವ ಸೀತೆ, ಸಾವಿತ್ರಿ ಮೊದಲಾದ ಸ್ತ್ರೀ ವ್ಯಕ್ತಿತ್ವಗಳನ್ನು ಕುರಿತ ಕಥಾ ಪ್ರಸಂಗಗಳು, ಗುಣ ಚರಿತ್ರೆಗೆ ಸಂಬಂಧಿಸಿದಂತಹ ಹಾಡುಗಳು ಪೌರಾಣಿಕ ಹಾಡುಗಳೆನಿಸಿವೆ.

ಕುಮ್ಮಿ, ಕೋಲಾಟ, ಮಕ್ಕಳ ಆಟ, ಹಳ್ಳಿಯ ಕುಣಿತ ಇವುಗಳಿಗೆ ಸಂಬಂಧಿಸಿದ ಹಾಡುಗಳು ಸಮುದಾಯದ ಹಾಡುಗಳೆನಿಸಿವೆ. ಇವುಗಳಲ್ಲದೆ ತಮ್ಮ ಬಿಡುವಿನ ವೇಳೆಯಲ್ಲಿ ಕೆಲವು ಸಮಸ್ಯೆಗಳನ್ನು ಯೋಚಿಸಿ ಹಾಡಿನ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಮಸ್ಯಾತ್ಮಕ ಹಾಡುಗಳು, ಒಗಟಿನ ಹಾಡುಗಳು ಎನಿಸಿವೆ.

ಬೀಗತಿ ಹಾಡು, ಪ್ರಿಯ ಪ್ರೇಯಸಿ, ಗಂಡ ಹೆಂಡತಿಯರ ಹಾಸ್ಯ ನಗೆ ಪ್ರಸಂಗಗಳು ಇತ್ಯಾದಿ ವಿಷಯಗಳನ್ನೊಳಗೊಂಡ ಹಲವಾರು ಹಾಡುಗಳು ಜಾನಪದದಲ್ಲಿವೆ. ಇಂತಹ ಹಾಡುಗಳಲ್ಲಿ ನಗೆ ಪ್ರಧಾನವಾಗಿದ್ದು ಹಾಸ್ಯದ ಹಾಡುಗಳೆನಿಸಿವೆ.

ಗ್ರಾಮೀಣ ಜನತೆ ತಮ್ಮ ಸುತ್ತಲಿನ ಪ್ರಕೃತಿ ಪರಿಸರದಿಂದಲೇ ತಮ್ಮ ಆರೋಗ್ಯ ವಿಚಾರಗಳಿಗೆ ಅನೇಕ ಔಷಧಿಗಳನ್ನು ಕಂಡುಕೊಳ್ಳುತ್ತಾರೆ. ಈ ಔಷಧಿಗೆ ಸಹಕಾರಿಯಾಗುವ ಮೂಲಿಕೆಗಳು, ಮರದ ಬೇರು, ಎಲೆ ಇತ್ಯಾದಿಗಳನ್ನು ಕುರಿತಂತೆಯೂ ಹಾಡುಗಳಿವೆ. ಇವುಗಳನ್ನು ವನೌಷಧಿಗಳು ಮತ್ತು ಆರೋಗ್ಯದ ಹಾಡುಗಳೆಂದು ವರ್ಗೀಕರಿಸಲಾಗಿದೆ.

ಇಷ್ಟೇ ಅಲ್ಲದೆ ಜನಪದ ನಾಟಕಗಳು, ಲಾವಣಿಗಳು, ಕೂಟನೃತ್ಯಗಳು, ಯಾತ್ರೆಯ ಹಾಡುಗಳು, ರಸಾವೇಶ, ಬೇಸರಿಕೆ, ಜಗುಪ್ಸೆ ಇತ್ಯಾದಿಗಳಿಗೆ ಸಂಬಂಧಿಸಿದಂತೆಯೂ ಅನೇಕ ಹಾಡುಗಳು ಆಯಾ ಪ್ರದೆಶಕ್ಕನುಗುಣವಾಗಿ ವೈವಿಧ್ಯಮಯವಾಗಿವೆ.

ಜನಪದ ಸಂಗೀತದಲ್ಲಿ ಬಳಕೆಯಲ್ಲಿರುವ ಕೆಲವು ವಾದ್ಯಗಳೆಂದರೆ ಜಮಿಡಿಕ (ಚೌಡಿಕೆ), ರಂಡೋಲು, ತಂತಿಪಾಣಿ, ಏಕನಾದ, ದೊಡ್ಡಕೊಂಬು, ಕಂಜಿರ, ತಾಳ, ಕರತಾಳ, ಗೆಜ್ಜೆ ಮತ್ತು ಸಾಮಕಲ್ಲು. ಬುಡಬುಡಕೆ, ಪಂಚವಾದ್ಯ, ಕೊಳಲು, ನಂದುಣಿ, ಎಕ್ಕಳ ಮತ್ತು ಶಂಖ, ಮುಗುಡಿ, ಚಿಪ್ಪಿನ ಪಿಟೀಲು ಇತ್ಯಾದಿಗಳು. ಈ ವಾದ್ಯಗಳಲ್ಲಿ ಕೆಲವು ವಾದ್ಯಗಳ ರಚನೆ ಮತ್ತು ನುಡಿಸುವಿಕೆಯ ವಿಧಾನ ಕೆಳಕಂಡಂತಿದೆ:

ಹಿತ್ತಾಳೆ ಅಥವಾ ಮರದಿಂದ ತಯಾರಿಸಲ್ಪಡುವ ಜಮಿಡಿಕ ವಾದ್ಯ ಬಕೆಟ್ಟಿನ ಆಕಾರದಲ್ಲಿರುವ ಡೋಲಿನ ಸ್ವರೂಪದ್ದಾಗಿದೆ. ಈ ವಾದ್ಯ ಎರಡು ಮುಖಗಳನ್ನು ಹೊಂದಿದ್ದು ಒಂದು ಅಡಿ ವ್ಯಾಸವುಳ್ಳ ಒಂದು ಮುಖ ಮುಚ್ಚಿರುತ್ತದೆ. ತೆರೆದಿರುವ ಮತ್ತೊಂದು ಮುಖದ ವ್ಯಾಸ ಸುಮಾರು ಒಂಬತ್ತು ಅಂಗುಲಗಳಿರುತ್ತವೆ. ಇದರ ಮಧ್ಯಭಾಗದಲ್ಲಿ ಕಟ್ಟಿರುವ ದಾರವನ್ನು ತಾಳಕ್ಕೆ ತಕ್ಕಂತೆ ಎಳೆದು ನುಡಿಸಲಾಗುತ್ತದೆ. ಸಮೂಹ ಗಾನದಲ್ಲಿ ಈ ವಾದ್ಯವನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ವಾದ್ಯವನ್ನು ಎಡಮೊಳಕ್ಕೆ ಮತ್ತು ಎಡಭಾಗದ ಉದರದ ಮೇಲಿಟ್ಟುಕೊಂಡು ಬಲಗೈಯ ಹೆಬ್ಬೆರಳು ಮತ್ತು ತೋರ್ಬೆರಳುಗಳಿಂದ ದಾರವನ್ನು ಎಳೆದು ನುಡಿಸಲಾಗುತ್ತದೆ. ಈ ವಾದ್ಯದಿಂದ ಹೊರಡುವ ನಾದ ಬಂ, ಬಂ, ಬಂ ಮಾದರಿಯದು.

ರಂಡೋಲು ಎಂಬುದು ಹೆಸರೇ ಸೂಚಿಸುವಂತೆ ರಂ, ರಂ, ರಂ ಎಂದು ಶಬ್ದ ಉಂಟುಮಾಡುವ ಡೋಲಾಗಿದೆ. ಸುಮಾರು ಎರಡು ಅಡಿಗಳಷ್ಟು ವ್ಯಾಸವುಳ್ಳ ಈ ವಾದ್ಯ ನೋಡಲು ಸಣ್ಣ ಪೀಪಾಯಿಯಂತಿರುತ್ತದೆ. ಇದರ ಒಂದು ಕಡೆಯ ದಪ್ಪ ಕೊನೆಯ ಭಾಗವನ್ನು ಕಡ್ಡಿಯಿಂದ ಬಡಿದು ಶಬ್ದ ಉಂಟುಮಾಡುಬೇಕು. ಮುಖ್ಯವಾಗಿ ಇದು ತಾಳವಾದ್ಯವಾಗಿದ್ದು ಚತುರಶ್ರ, ತ್ರಿಶ್ರ, ಮಿಶ್ರ ಮೊದಲಾದ ತಾಳಗತಿಗಳನ್ನು ಸೂಚಿಸಲು ಮಾತ್ರ ಬಳಸಲ್ಪಡುತ್ತದೆ. ಇದು ಭಾರತದ ದಕ್ಷಿಣಭಾಗದ ಪ್ರದೇಶದ ಜನಪದ ಸಂಗೀತದಲ್ಲಿ ವಿಶೇಷವಾಗಿ ಬಳಕೆಯಲ್ಲಿದೆ.

ತಂತಿಪಾಣಿ ಎಂಬುದು ಶ್ರುತಿ ಮತ್ತು ಲಯ ಎರಡನ್ನೂ ನಿಭಾಯಿಸುವ ವಾದ್ಯವಾಗಿದೆ. ಗುಡ್ಡಗಾಡಿನ ಜನರಲ್ಲಿ ಈ ವಾದ್ಯದ ಬಳಕೆ ಹೆಚ್ಚು. ಮಡಕೆಯ ಆಕಾರದ ಈ ವಾದ್ಯದ ಬಾಯನ್ನು ಆಡಿನ ಚರ್ಮದಿಂದ ಮುಚ್ಚಿರುತ್ತಾರೆ. ಮಡಕೆಯ ಮೇಲ್ಭಾಗದಲ್ಲಿರುವ ಮೂರು ರಂಧ್ರಗಳ ಮೂಲಕ ಕಟ್ಟಿರುವ ತಂತಿಗಳಿಂದ ಬೇಕಾದ ಶ್ರುತಿಯನ್ನು ಮಾಡಿಕೊಳ್ಳಬಹುದು. ಈ ವಾದ್ಯಕ್ಕೆ ಸಣ್ಣ ಲೋಹದ ಬಳೆಗಳನ್ನೂ ಅಳವಡಿಸಲಾಗಿರುತ್ತದೆ. ಈ ಕಾರಣದಿಂದ ವಾದ್ಯವನ್ನು ಮಧ್ಯದ ಬೆರಳಿನಿಂದ ನುಡಿಸಿದಾಗ ತಂತಿ ಮತ್ತು ಬಳೆಗಳ ಕಂಪನಗಳಿಂದ ಮಧುರವಾದ ನಾದ ಮೂಡಿಬರುತ್ತದೆ. ಇದರಲ್ಲಿ ವಾದ್ಯಗಾರನು ಅನೇಕ ಜತಿಗಳನ್ನೂ ನುಡಿಸಬಹುದು. ಬೇರೆ ಬೇರೆ ತಂತಿಗಳನ್ನು ಪಯೋಗಿಸಿ ಮಧ್ಯಷಡ್ಜದಿಂದ ತಾರಷಡ್ಜದವರೆಗಿನ ಶ್ರುತಿಗಳಿಗೆ ತಕ್ಕಂತೆ ವಾದ್ಯವನ್ನು ಶ್ರುತಿ ಮಾಡಿಕೊಳ್ಳಬಹುದು.

ದೊಡ್ಡ ಕೊಂಬು ಎಂಬುದು ಹಿತ್ತಾಳೆಯಿಂದ ಮಾಡಿದ ಅರ್ಧಚಂದ್ರಾಕೃತಿಯ ಲೋಹವಾದ್ಯ, ಮೇಲ್ಭಾಗ ಕಿರಿದಾಗಿದ್ದು ಕೆಳಭಾಗಕ್ಕೆ ಬರಬರುತ್ತಾ ದೊಡ್ಡದಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಪಂಚವಾದ್ಯಗೋಷ್ಠಿಯಲ್ಲಿ ಬಳಸುತ್ತಾರೆ. ಇದರಿಂದ ಹೊರಹೊಮ್ಮುವ ಶಬ್ದ ತುತ್ತೂರಿಯ ಶಬ್ದವನ್ನು ಹೋಲುತ್ತದೆ.

ಮರದ ಬಳೆಯಲ್ಲಿ ಎರಡು ಸಾಲಿನ ೧೨ ಸಣ್ಣ ರಂಧ್ರಗಳಿದ್ದು ಆ ರಂಧ್ರಗಳಲ್ಲಿ ಸಣ್ಣ ಸಣ್ಣ ಗೆಜ್ಜೆಗಳನ್ನು ಕಟ್ಟಿ ತೆಳು ಚರ್ಮದಿಂದ ಒಂದು ಮುಖವನ್ನು ಮುಚ್ಚಿರುವ ಸ್ವರೂಪದ ವಾದ್ಯ ಕಂಜಿರ. ಹಾಡಿನ ಗತಿಗೆ ಇದನ್ನು ಕೈಯಿಂದ ಬಡಿಯಲಾಗುತ್ತದೆ. ಇದು ಉಳಿದ ಸಂಗೀತ ಪ್ರಕಾರಗಳಲ್ಲಿ ಬಳಸುವ ಖಂಜರವಾದ್ಯವನ್ನು ಹೆಚ್ಚಾಗಿ ಹೋಲುತ್ತದೆ. ಹೀಗೆ ಜಾನಪದ ಸಂಗೀತದಲ್ಲಿ ಬಳಸುವ ಒಂದೊಂದು ವಾದ್ಯವೂ ತನ್ನದೇ ಆದ ನಾದ ವೈಶಿಷ್ಟ್ಯಗಳನ್ನು ಹೊಂದಿ ಹಾಡುಗಾರನ ಹಾಡಿಗೆ ಮೆರುಗನ್ನು ನೀಡಿ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತವೆ.

ಜನಪದ ಸಂಗೀತದ ಕೆಲವು ಪ್ರಮುಖ ಲಕ್ಷಣಗಳನ್ನು ಒಟ್ಟಾರೆಯಾಗಿ ಕೆಳಕಂಡಂತೆ ಗುರುತಿಸಬಹುದು:

ಜನಪದ ಸಂಗೀತದ ಹಾಡುಗಳು ಸಾಮಾನ್ಯವಾಗಿ ಒಂದು ಸ್ಥಾಯಿಯನ್ನನುಸರಿಸುತ್ತವೆ. ಕೆಲವು ಹಾಡುಗಳ ಸ್ಥಾಯಿ ಕೆಳಗಿನ ಪಂಚಮದಿಂದ ಮಧ್ಯದ ಪಂಚಮದವರೆಗೆ ಇರುತ್ತದೆ. ಪ್ರತಿಮಧ್ಯಮ ಹಾಗೂ ಅಪೂರ್ವರಾಗಗಳ ಹಾಡುಗಳು ವಿರಳ.

ಈ ಸಂಗೀತದ ಪ್ರಧಾನ ಲಕ್ಷಣ ಕೇಳುಗರ ಮನಸ್ಸನ್ನು ಕ್ಷಣಾರ್ಧದಲ್ಲಿ ಸೆಳೆದುಕೊಳ್ಳುವುದು. ಹಾಡಿನ ಪ್ರತಿಯೊಂದು ಭಾಗವೂ ಒಂದೇ ಬಗೆಯ ಸಂಗೀತ ಸಂಯೋಜನೆ ಹೊಂದಿರುತ್ತದೆ. ಹೆಚ್ಚು ಗಮಕಗಳು, ಸಂಗತಿಗಳು ಇರುವುದಿಲ್ಲ.

ನಿಷಾದ, ದೈವತ ಮತ್ತು ಪಂಚಮಾಂತ್ಯ ರಾಗಗಳ ಬಳಕೆ ಹೆಚ್ಚಾಗಿದ್ದು, ಅನೇಕ ಹಾಡುಗಳ ರಾಗಗಳು ಸಂಕೀರ್ಣವಾಗಿರುತ್ತವೆ. ಹಾಡುಗಳಿಗೆ ಅಳವಡಿಸಿರುವ ತಾಳಗಳು ಅತ್ಯಂತ ಸರಳವಾಗಿರುತ್ತವೆ. ಲಾವಣಿಯಂತಹ ಹಾಡುಗಳಲ್ಲಿ ಗಂಡಸು, ಹೆಂಗಸು ಇಬ್ಬರೂ ಸೇರಿ ಹಾಡುತ್ತಾರೆ. ಪ್ರಶ್ನೆ ಉತ್ತರದ ರೀತಿಯಲ್ಲಿ ಈ ಹಾಡುಗಳು ರಚನೆಗೊಂಡಿದ್ದು ಅದನ್ನು ಆ ಮಾದರಿಯಲ್ಲಿಯೇ ಹಾಡಲಾಗುತ್ತದೆ.

ಕರ್ನಾಟಕದಲ್ಲೆಡೆ ಜನಪದ ಗಾಯಕರು ತಮ್ಮ ತಮ್ಮ ಭಾಷೆಗೆ ಸಹಜವಾಗಿ ಹೊಂದಬಹುದಾದ ಹೋ, ಹಾ, ಭಲೇ, ಐಸಾ ಇತ್ಯಾದಿ ಉದ್ಗಾರಗಳನ್ನು ತಾವು ಹಾಡುವ ಹಾಡಿಗೆ ಸೇರಿಸಿ ಹಾಡುವುದನ್ನು ಗಮನಿಸಬಹುದು. ಈ ಉದ್ಗಾರಗಳು ಹಾಡಿನ ಲಯಕ್ಕೆ ಒಂದು ನಿಲುಗಡೆಯನ್ನೋ ಬಿರುಸನ್ನೋ ಮುಕ್ತಾಯವನ್ನೋ ಪರಿಣಾಮಕಾರಿಯಾಗಿ ಸೂಚಿಸುವಂತಹದ್ದಾಗಿರುತ್ತವೆ.

ಭಾರತದ ಎಲ್ಲ ಪ್ರದೇಶಗಳ ಜನಪದ ಗಾಯನ ಪದ್ಧತಿಯಲ್ಲಿ ಹಲವಾರು ಸಾಮ್ಯಗಳಿವೆ. ಉದಾ: ಉತ್ತರ ಕರ್ನಾಟಕದ ಗೀಗೀ ಪದಗಳು, ಹಳೆಯ ಮೈಸೂರಿನ ಲಾವಣಿಗಳು, ಒರಿಸ್ಸದ ಹಾಡುಗಬ್ಬಗಳು; ಮಹಾರಾಷ್ಟ್ರದ ಲಾವಣಿಗಳು, ಗುಜರಾತಿನ ದುಹಾಛಂದಗಳು, ಮದುವೆ ಸಂಪ್ರದಾಯಗಳು, ದೈವನೃತ್ಯಗಳು ಇತ್ಯಾದಿ ಬಗೆಯ ಹಾಡುಗಳ ನಾದ, ಲಯ ಮುಂತಾದವುಗಳಲ್ಲಿ ಗಮನಾರ್ಹವಾದ ಸಾಮ್ಯತೆಗಳಿರುವುದು ಅಚ್ಚರಿಯ ಸಂಗತಿಯಾಗಿದೆ.

– ಎನ್.ಕೆ.