ಜಾಂಬ ಪುರಾಣ : ತೆಲುಗರ ಕುಲಪುರಾಣ, ಜಾತಿಗಳಿಗೆ ಸಂಬಂಧಿಸಿದ ಸಾಮಾಜಿಕ ವಿಷಯಗಳನ್ನು ತುಂಬಾ ಪ್ರಭಾವಯುತವಾಗಿ ಪ್ರದರ್ಶಿಸುವ ಕುಲಪುರಾಣ ಜಾಂಬಪುರಾಣ ಮಾದಿಗರು, ಹೊಲೆಯರು ಮೊದಲಾದ ದಲಿತ ಜಾತಿಗಳು ಮತ್ತು ಉಪಜಾತಿಗಳೆಲ್ಲರ ಮಹಾಪುರಾಣವಿದು. ಅವರಿಗೆ ಪವಿತ್ರ ಪುರಾಣ ಇದೇ. ಇದೇ ಅವರ ಮಹಾಭಾರತ. ತೆಲುಗುನಾಡಿನಲ್ಲಿರುವ ದಲಿತ ಕುಲದವರಿಗೆಲ್ಲ ಜಾಂಬವಪುರಾಣವನ್ನು ತಿಳಿದುಕೊಳ್ಳುವ ವ್ಯವಸ್ಥೆ ಇದೆ. ಮಾದಿಗ ಜಾತಿಯಾದರಿಗೆ ಜಾಂಬಪುರಾಣವನ್ನು ಪ್ರಚಾರ ಮಾಡಲು ಸುಸ್ಥಿತ ವ್ಯವಸ್ಥೆ ಇದೆ. ಮಾದಿಗರು ಮತ್ತು ಅವರ ಉಪ ಜಾತಿಗಳವರಿಗೆ ಮಿರಾಸಿ ವ್ಯವಸ್ಥೆಯೂ ಇದೆ. ಮಾದಿಗ ಜಾತಿಯವರಿಗೆ ಇತರ ಜಾತಿಯವರಿಗೆ ಇಲ್ಲದಷ್ಟು ಆಶ್ರಿತ ಜಾತಿಗಳಿದ್ದು ಮಿರಾಸಿ ಹಕ್ಕನ್ನು ಹೊಂದುತ್ತಾ ವಿವಿಧ ಸೇವೆಗಳನ್ನು ನೀಡುತ್ತಿದ್ದಾರೆ. ಜಾಂಬಪುರಾಣವನ್ನು ಪ್ರದರ್ಶಿಸುವುದು ಒಂದು ಸೇವೆ. ನುಲಕಚಂದಯ್ಯಲು ಎಂಬ ಜಾತಿಯವರು ಮಾದಿಗರಿಗೆ ಗುರುಗಳಾಗಿದ್ದು ಅವರಿಗೆ ಮತಪರವಾದ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಜಾಂಬಪುರಾಣ ಕಥೆಯನ್ನು ಪುರಾಣ ಪ್ರವಚನ ಪದ್ಧತಿಯಲ್ಲಿ ಹೇಳುತ್ತಿದ್ದಾರೆ. ಇದು ಪ್ರದರ್ಶನ ಕಲೆಯಾಗಿದೆ. ಭಿನ್ನವಾದ ಕಲೆಯಾಗಿದೆ. ಡಕ್ಕಲಿಗರು ಪಟದ ಕಥೆ ಎಂಬ ಪ್ರದರ್ಶನಕಲೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಇದರಲ್ಲಿ ಅವರು ಜಾಂಬಪುರಾಣವನ್ನು ಪಟ ಪ್ರದರ್ಶನ ಸಹಾಯದಿಂದ ಗಾನಮಾಡುತ್ತಾರೆ. ಬವನೀಲು, ಇಲ್ಲವೆ ಬೈಂಡ್ಲದವರು ಸಹ ಜಮುಕುಲ ಕಥೆಯಲ್ಲಿ ಈ ಕಥೆಯನ್ನು ಹೇಳುತ್ತಾರೆ. ಇವರು ಇನ್ನು ಇತರ ಕಥೆಗಳನ್ನು ತುಂಬ ಹೇಳುತ್ತಾರೆ. ಮುಖ್ಯವಾಗಿ ಶಕ್ತಿ ಕಥೆಗಳು ಇಲ್ಲವೆ ಗೌತು ಪುರಾಣ ಇವರ ಕಥಾ ಪ್ರದರ್ಶನದಲ್ಲಿ ಪ್ರಧಾನ ವಸ್ತುಗಳು. ಆಸಾದಿಗಳೊಂದಿಗೆ ಅತ್ತ ಮಾದಿಗರಿಗೆ ಇತ್ತ ಹೊಲೆಯರಿಗೆ ಸೇವೆಗಳನ್ನು ನೀಡುವವರು ಇದ್ದಾರೆ. ಆಸಾಧಿ ಕಥೆ ಎಂಬ ಕಲೆಯಲ್ಲಿಯೂ ವಿವಿಧ ಕಥೆಗಳ ಜೊತೆಗೆ ಜಾಂಬಪುರಾಣವನ್ನು ಹೇಳುತ್ತಾರೆ. ಚಿಂದುಗಳು ಪ್ರದರ್ಶಿಸುವ ಕಲೆಗಳಲ್ಲಿ ಎರಡು, ಇದರಲ್ಲಿ ಒಂದು ಗೋಸಂಗಿ ವೇಷ, ಇನ್ನೊಂದು ಯಕ್ಷಗಾನ, ಈ ಎರಡು ರೂಪಗಳಲ್ಲೂ ಜಾಂಬಪುರಾಣವನ್ನು ಇವರು ಪ್ರದರ್ಶಿಸುತ್ತಾರೆ. ಯಕ್ಷಗಾನದಲ್ಲಿ ಪೂರ್ಣ ಕಥಾ ಪ್ರದರ್ಶನವಿರುತ್ತದೆ. ಗೋಸಂಗಿವೇಷ ಅಥವಾ ಚಿಂದು ಕಥಾ ಪ್ರದರ್ಶನದಲ್ಲಿ ಜಾಂಬವನು, ಬ್ರಾಹ್ಮಣನು ಎರಡು ಪಾತ್ರಗಳಾಗಿದ್ದು ಅವರ ಸಂವಾದದ ಮೂಲಕ ಜಾಂಬಪುರಾಣವನ್ನು ಜನರಿಗೆ ತಲುಪಿಸುವ ಇನ್ನೊಂದು ಕಲೆಯ ರೂಪವೂ ಇದೆ. ಹೀಗೆ ಅದು ಪ್ರಧಾನ ಸಂಪ್ರದಾಯಗಳಲ್ಲಿ ಜಾಂಬಪುರಾಣ ಪ್ರದರ್ಶನ ಹೇಳುತ್ತಾ ಪ್ರಚಾರದಲ್ಲಿದೆ. ಯಾವುದೇ ಸಿನಿಮಾ ಪ್ರಭಾವ ಮತ್ತಿತರ ಪ್ರಭಾವಗಳಿದ್ದರೂ ಸಹ ಅನೇಕ ರೂಪಗಳಲ್ಲಿ ಜಾಂಬಪುರಾಣ ಪ್ರದರ್ಶನಗಳು ಚೆನ್ನಾಗಿ ನಡೆಯುತ್ತಿವೆ. ಜಾಂಬಪುರಾಣಕ್ಕೆ ಇದ್ದಷ್ಟು ಗೌರವ ಈ ಕುಲಗಳವರಲ್ಲಿ ಮತ್ತೆ ಯಾವ ಕಥೆಗೂ ಕಲೆಗೂ ಇರುವುದಿಲ್ಲ. ಮಾದಿಗ ಜಾತಿ, ಇತರ ದಲಿತ ಜಾತಿಗಳು ಹೇಗೆ ಉದ್ಭವಿಸಿದವು. ಅವುಗಳ ಕುಲ ಪುರುಷನು ಯಾರು, ಮಾದಿಗರಿಗೆ ಅಸ್ಪೃಶ್ಯತೆ ಹೇಗೆ ಬಂತು, ಯಾವಾಗ ತೊಲಗುತ್ತೆ, ಹಾಗೆಯೇ ಮಾದಿಗರಲ್ಲಿ ವಿವಿಧ ಉಪ ಜಾತಿಗಳು ಹೇಗೆ ಹುಟ್ಟಿದವು. ಅವರ ವೃತ್ತಿಗಳು ಹೇಗೆ ಬಂದವು. ಮಾದಿಗ ಜಾತಿ ಇತರ ದಲಿತ ಜಾತಿಗಳಿಗಿಂತ ಉನ್ನತವಾದುದು ಹೇಗೆ ಆಗುತ್ತದೆ. ಮಾದಿಗ ಎಂಬ ಪದ ಹೇಗೆ ಬಂತು. ಅದು ಏಕೆ ಪವಿತ್ರವಾದುದು ಎಂಬ ವಿಷಯಗಳು ಜಾಂಬಪುರಾಣದಲ್ಲಿ ಚರ್ಚಿತವಾಗುತ್ತವೆ ಹಾಗೂ ವರ್ಣಿಸಲ್ಪಟ್ಟಿದೆ. ಜಾನಪದ ಸಾಹಿತ್ಯ ಪ್ರಕಾರಕ್ಕೆ ಇರುವ ಲಕ್ಷಣಗಳೆಲ್ಲವೂ ಜಾಂಬಪುರಾಣ ಎಂಬ ಕುಲಪುರಾಣಕ್ಕೂ ಇದೆ. ಮೇಲೆ ತಿಳಿಸಿದ ಆರು ಉಪಜಾತಿಗಳವರೇ ಅಲ್ಲದೆ ಹೊಲೆಯರಿಗೆ ಆಶ್ರಿತರಾದ ವಿವಿಧ ಉಪ ಜಾತಿಗಳವರೂ ಜಾಂಬಪುರಾಣ ಕಥೆಯನ್ನು ಅವರವರ ದಾತೃಗಳ ಮನೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಜಾಂಬಪುರಾಣದಲ್ಲಿ ಭಿನ್ನ ಭಿನ್ನ ಪಾಠಾಂತರಗಳು ಇರುತ್ತವೆ. ಒಂದೊಂದು ಪ್ರದರ್ಶನ ಶೈಲಿ ಒಂದು ಪ್ರತ್ಯೇಕ ಕಲೆಯಾಗಿ ಅಭಿವೃದ್ಧಿ ಹೊಂದಿದೆ.

ಮಾದಿಗರ ಗುರುಗಳಾದ ನುಲಕಚಂದಯ್ಯ ಹೇಳುವ ಜಾಂಬಪುರಾಣ ಕಥೆ ಪ್ರಾಮಾಣಿಕವಾದುದೆಂದು ಭಾವಿಸುತ್ತಾರೆ. ಆದರೆ ಉಳಿದ ಪ್ರದರ್ಶನದಲ್ಲಿ ಕಲಾತ್ಮಕವಾಗಿ ಜನರಿಗೆ ಆನಂದವನ್ನು ನೀಡುವ ಗುಣವಿರುತ್ತದೆ. ಜಾಂಬಪುರಾಣ ಎಂಬುದು ಮಾದಿಗರಿಗೇ ಅಲ್ಲದೆ ಉಳಿದ ದಲಿತ ಜಾತಿಗಳವರಿಗೆ ಆತ್ಮ ಗೌರವದ ಪ್ರತೀಕವಾಗಿ ಭಾವಿಸಲ್ಪಡುತ್ತದೆ. ಇವರ ಜಾತಿಗಳಿಗೆ ಇವರು ಹೇಳುವ ಸಮಾಧಾನಗಳೆಲ್ಲವೂ ಜಾಂಬಪುರಾಣದ ಮೂಲಕವೇ ಹೇಳುತ್ತಾರೆ. ಹಾಗೆಯೇ ಇತರ ಜಾತಿಗಳವರ ಆಧಿಕ್ಯವನ್ನು ಖಂಡಿಸಲು ಇವರು ಜಾಂಬಪುರಾಣವನ್ನೇ ಅವಲಂಬಿಸಿದ್ದಾರೆ. ಇನ್ನು ಜಾಂಬಪುರಾಣ ಕಥೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ಇಲ್ಲಿ ನೋಡೋಣ. ಮೊದಲು ಹದಿನೆಂಟು ಯುಗಗಳು ಇರುತ್ತಿದ್ದವು. ಈ ಹದಿನೆಂಟು ಯುಗಗಳಿಗೂ ಮೊದಲು ಭೂಮಿ ಇಲ್ಲ, ಜಲ ಇಲ್ಲ, ಗಾಳಿ ಇಲ್ಲ, ನೀರು ಇಲ್ಲ, ಬೆಂಕಿ ಇಲ್ಲ ಮೂವತ್ತಮೂರು ಕೋಟಿ ದೇವತೆಗಳಲ್ಲಿ ಚರಾಚರ ಸೃಷ್ಟಿ ಯಾವುದೂ ಇಲ್ಲ. ಹಾಗೆ ಏನೂ ಇಲ್ಲದ ನಿರಾಕಾರ ನಿರಂಜನ ನಿರಾಳಂಬವಾದ ಸಮಯದಲ್ಲಿ ಜ್ಯೋತಿರ‍್ಮಯ ಮಹೇಶ್ವರನು ಕಾಂತಿ ರೂಪದಲ್ಲಿ ತನ್ನಷ್ಟಕ್ಕೆ ತಾನೇ ಹುಟ್ಟಿದನು. ಅವನು ವಿರಾಟ ಸ್ವರೂಪನು. ಆಗ ಜಲ ಹುಟ್ಟಿತು. ಎತ್ತ ನೋಡಿದರೂ ಜಲವೇ, ಅದು ಬಿಟ್ಟು ಮತ್ತೇನೂ ಇಲ್ಲ. ಆ ಜಲದಿಂದ ಒಂದು ಕಮಲ ಹುಟ್ಟಿತು. ವಿರಾಟಸ್ವರೂಪನ ಓಂಕಾರ ಜೇಂಕಾರ ಮಂತ್ರ ಪ್ರಭಾವದಿಂದ ಒಬ್ಬ ಸುರಕನ್ಯೆ ಹುಟ್ಟಿದಳು. ಆ ದೇವತೆಯ ಸೂಕ್ಷ್ಮಾಕಾರದಲ್ಲಿ ಒಂದು ಬುಗ್ಗೆ ಹುಟ್ಟಿತು. ಅದರ ಒಳಗಿಂದ ಕಮಲ ಹುಟ್ಟಿತು. ಅದು ಪರಿಪಕ್ವವಾದ ಮೇಲೆ ಕೆಲವು ದಿನಗಳ ಬಳಿಕ ಅದರಿಂದ ಶಂಕು ಹುಟ್ಟಿತು. ಆ ಶಂಕದ ಮೂಲಕ ಪ್ರಣವ ಮಂತ್ರ ಪ್ರಭಾವದಿಂದ ಆದಿ ಜಾಂಬವಮುಣಿ ಹುಟ್ಟಿದನು. ಅವನಿಗೆ ಶಿರದಲ್ಲಿ ಜಡೆಗಳು ಕರದಲ್ಲಿ ಜಪಮಾಲೆ ಆಕರ್ಷಕನೋಟ ಕೀಲು ಕೀಲುಗಳಲ್ಲಿ ಲಿಂಗ, ರೋಮು ರೋಮಗಳಲ್ಲಿ ರುದ್ರಾಕ್ಷಿ, ಕೀಲು ಕೀಲುಗಳಲ್ಲಿ ಸಾವಿರ ಸಿಂಹಗಳ ಬಲ, ಓಂಕಾರ, ಜೇಂಕಾರ ಪ್ರಣವಮಂತ್ರವನ್ನು ಜಪಿಸುತ್ತಾ ಗಂಗೆಯಲ್ಲಿ ಹುಟ್ಟಿದನು. ಆದ್ದರಿಂದಲೇ ಗಂಗಾಧರಿಗೋತ್ರ, ಅವನೇ ಜಾಂಬವಂತ, ಕೆಲವು ದಿನಗಳ ಅನಂತರ ಆದಿ ಜಾಂಬವ ಮುನಿ ಪ್ರಣವ ಮಂತ್ರವನ್ನು ಜಪಿಸಿದ್ದರಿಂದ ಮತ್ತೊಂದು ಕಮಲ ಹುಟ್ಟಿತು. ಆ ಕಮಲದಿಂದ ತಾನೇ ತಾನಾಗಿ ಶಕ್ತಿ ಹುಟ್ಟಿತು. ಅವಲೇ ಆದಿಶಕ್ತಿ. ಕೆಲವು ದಿನಗಳ ನಂತರ ಆ ಶಕ್ತಿ ತನ್ನ ಹಾಗೆ ಈ ಸೃಷ್ಟಿಯಲ್ಲಿ ಇನ್ನೂ ಯಾರಾದರೂ ಇರುವರೇ ಏಂದು ನೋಡಿದಳು. ಕೆಲವು ಯೋಜನಗಳ ದೂರದಲ್ಲಿ ಆದಿ ಜಾಂಬವ ಮುನಿ ಕಮಲದಲ್ಲಿ ತಪಸ್ಸು ಮಾಡುವುದು ಕಾಣಿಸಿತು. ಎಲ್ಲವೂ ಜಲಮಯವಾಗಿಯೇ ಇದೆ. ಶಕ್ತಿ ಅಲ್ಲಿಗೆ ಹೋದಳು. ಮಹಾನುಭಾವ, ನನಗೆ ಪುರುಷ ಮೋಹ ಹುಟ್ಟಿದೆ. ನನ್ನ ಬಯಕೆಯನ್ನು ಈಡೇರಿಸಿ ಎಂದು ಕೋರಿದಳು. ಆಗ ಜಾಂಬವ ಮುನಿ ದಿವ್ಯ ದೃಷ್ಟಿಯಿಂದ ನೋಡಿ ನೀನು ಶಕ್ತಿ ನಾನು ಆದಿಮುನಿ, ಆದ್ದರಿಂದ ನಾವು ಹೀಗೆ ಬಯಕೆಯನ್ನು ತೀರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದನು. ಹಾಗೆ ಹೇಳಿದ ಸ್ವಲ್ಪ ಸಮಯದಲ್ಲಿಯೇ ಆದಿ ಜಾಂಬವ ಮುನಿ ಆ ಶಕ್ತಿ ಇಬ್ಬರೂ ನವಿಲು ರೂಪವನ್ನು ಹೊಂದಿದರು. ಆ ರೂಪದಲ್ಲಿ ಅವರು ಒಬ್ಬರನ್ನೊಬ್ಬರು ಸೇರಿದರು. ಆಗ ನವಿಲು ರೂಪದಲ್ಲಿದ್ದ ಶಕ್ತಿ, ಕೋಳಿ ಕೆರೆದಂತೆ ಕೆರೆದು ಮೂರು ಮೊಟ್ಟೆಗಳನ್ನು ಇಟ್ಟಿತು. ಆದಿ ಜಾಂಬವ ಮುನಿ ಪ್ರಣವ ಮಂತ್ರವನ್ನು ಜಪಿಸಿ ಆ ಮೊಟ್ಟೆಗಳ ಮೇಲೆ ನೀರು ಚೆಲ್ಲಿದನು. ಆಗ ಮೊಟ್ಟೆಗಳು ಪರಿಪಕ್ವವಾಗಿ, ಒಡೆದು ಅವುಗಳಿಂದ ಬ್ರಹ್ಮ, ವಿಷ್ಣು, ಮಹೇಶ್ವರರು ಹುಟ್ಟಿದರು. ಅವರಿಂದ ಸೃಷ್ಟಿ ನಿರ್ಮಾಣ ನಡೆಯುತ್ತದೆಂದು ಪರಾತ್ಪರನಾದ ಜಾಂಬವ ಮುನಿ ಹೇಳಿದ್ದಾನೆ. ಆಗಲೇ ಪರಾತ್ಪರನು, ಸಪ್ತಸಮುದ್ರಗಳನ್ನು, ಪರ್ವತಗಳನ್ನು ದ್ವೀಪಗಳನ್ನು ಗಿಡಗಳನ್ನು ಬಳ್ಳಿಗಳನ್ನು ಸಕಲ ಸೃಷ್ಟಿಯನ್ನು ಮಾಡಿದನು. ಅನಂತರ ಸ್ವಲ್ಪ ಕಾಲಕ್ಕೆ ಪರಾತ್ಪರನು ಪ್ರಣವ ಮಂತ್ರವನ್ನು ಜಪಿಸಿದ್ದರಿಂದ ಹಾಲು ಸಮುದ್ರದಿಂದ ಕಲ್ಪವೃಕ್ಷ, ಕಾಮಧೇನು ಹುಟ್ಟಿದವು. ಆ ತ್ರಿಮೂರ್ತಿಗಳಿಗೆ ಆಕೆ ವಿದ್ಯಾಬುದ್ಧಿಗಳನ್ನು ಹೇಳಿಕೊಟ್ಟು ದೊಡ್ಡವರನ್ನಾಗಿ ಮಾಡಿದಳು. ಹಾಗೆ ಅವರು ದೊಡ್ಡಚರಾದರು. ಕೆಲವು ದಿನಗಳು ಕಳೆದವು. ದೊಡ್ಡವರಾದ ಮೇಲೆ ಒಂದು ದಿನ ಆ ಶಕ್ತಿಗೆ ಪುರುಷಮೋಹ ಹುಟ್ಟಿತು. ಅವರನ್ನು ಸಮೀಪಿಸಿ ತನ್ನೊಂದಿಗೆ ರತಿ ಕ್ರೀಡೆಯಾಡುವಂತೆ ಕೋರಿದಳು. ಅದಕ್ಕೆ ಅವರು ಅಮ್ಮ ನಾವು ನಿನ್ನ ಮಕ್ಕಳು ಆಗುತ್ತೇವೆ. ಇದು ಮಹಾ ಪಾಪ ಎಂದು ದುಃಖಿಸಿದರು. ಆಗ ಅವಳು ಉಗ್ರ ರೂಪ ತಾಳಿದಳು. ನನ್ನ ಬಯಕೆ ತೀರಿಸದಿದ್ದರೆ ನೀವೇಕೆ ನಿಮ್ಮನ್ನು ತಿಂದು ಬಿಡುತ್ತೇನೆ ಎಂದು ಹಿಂದೆ ಬಿದ್ದಳು. ಅವರು ಪರಾತ್ಪರನಾದ ಆದಿ ಜಾಂಬವಮುನಿ ಹತ್ತಿರ ಓಡಿಹೋದರು. ಅವರ ಹಿಂದೆಯೇ ಶಕ್ತಿಯೂ ಹೋಯಿತು. ಆಗ ಜಾಂಬವಮುನಿ ಆ ಶಕ್ತಿಯ ಬಳಿ ಹಣ್ಣೆಕಣ್ಣು, ಶಕ್ತಿ ಬೆತ್ತಗಳಿವೆ. ಆಕೆಯ ಬಳಿ ಸರ್ವಶಕ್ತಿಗಳೂ ಇವೆ ಎಚ್ಚರಿಕೆ ಎಂದು ಹೇಳಿ ಒಂದು ಉಪಾಯ ತಿಳಿಸಿದನು. ಅದರಂತೆ ಅವರು ಹೊರಟು ಹೋಗುತ್ತಾರೆ. ಶಕ್ತಿ ಮತ್ತೆ ಅವರ ಹತ್ತಿರ ಬಂದಳು. ಆಗ ತ್ರಿಮೂರ್ತಿಗಳಲ್ಲಿ ಶಂಕರನು ಮುಂದೆ ಬಂದು ನಿನ್ನ ಕೋರಿಕೆಯನ್ನು ಅಂಗೀಕರಿಸಿದ್ದೇನೆ ಎಂದು ಹೇಳುತ್ತಾನೆ. ಆದರೆ ನೀನು ಮೊದಲು ಸಮುದ್ರದಲ್ಲಿ ಸ್ನಾನ ಮಾಡಿ ಬರಬೇಕು ಎಂದು ಹೇಳಿದನು. ಆಗ ಅವಳು ತನ್ನ ಮೂವತ್ತೆರಡು ಬಿರುದು ಅಲಂಕಾರಗಳನ್ನು ತೆಗೆದು ಕೆಳಗೆ ಇಟ್ಟಳು. ತನ್ನ ಹಣೆಗಣ್ಣನ್ನು ತೆಗೆದು ಅಲ್ಲಿ ಇಟ್ಟಲು. ಬೆತ್ತವನ್ನು ತೆಗೆದು ಕೆಳಗೆ ಇಟ್ಟು ಸಮುದ್ರದೊಳಗೆ ಸ್ನಾನಕ್ಕೆ ಹೊರಟಳು. ಶಿವನು ಆ ವಸ್ತುಗಳೆಲ್ಲವನ್ನು ಧರಿಸಿದನು. ಹಣೆಗಣ್ಣನ್ನು ತೆಗೆದಿಟ್ಟುಕೊಂಡನು. ಶಕ್ತಿ ಸ್ನಾನ ಮಾಡಿ ಹೊರಗೆ ಬಂದ ಕೂಡಲೆ ತನ್ನ ಹಣೆಗಣ್ಣಿನಿಂದ ಶಿವನು ಆ ಶಕ್ತಿಯನ್ನು ಭಸ್ಮ ಮಾಡಿದನು. ಅಷ್ಟರಲ್ಲಿ ಅಲ್ಲಿಗೆ ಆದಿ ಜಾಂಬವಮುನಿ ಬಂದು ಆ ಬೂದಿಯನ್ನು ಐದು ಗುಡ್ಡೆ ಮಾಡುತ್ತಾನೆ. ಮೂರು ಗುಡ್ಡೆಗಳಲ್ಲಿ ಸರಸ್ವತಿ, ಲಕ್ಷ್ಮಿ, ಪಾರ್ವತಿ ಹುಟ್ಟುತ್ತಾರೆ. ಅವರನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೆಂಡತಿಯರನ್ನಾಗಿ ಮಾಡುತ್ತಾನೆ. ಅನಂತರ ನಾಲ್ಕನೆಯ ಗುಡ್ಡೆಯಿಂದ ಹುಟ್ಟಿದ ಸ್ತ್ರೀಯನ್ನು ಜಾಂಬವಮುನಿಗೆ ಹೆಂಡತಿಯೆಂದು ನಿರ್ಣಯಿಸುತ್ತಾನೆ. ಪರಾತ್ಪರನು, ಜ್ಯೋತಿರ‍್ಮಯಮಹೇಶ್ವರನು. ಜಲ ವೀರಕನ್ಯೆಯ ಐದನೆಯ ಗುಡ್ಡೆಯಿಂದ ಕಾಳಿಕಾದೇವಿ ಹುಟ್ಟಿದಲು. ಇವಳು ತ್ರಿಪುರಾಸುರರ ಸಂಹಾರದಲ್ಲಿ ಶಂಕರನಿಗೆ ಸಹಾಯ ಮಾಡುತ್ತಾಳೆ. ಈಕೆಗೆ ಮಹಾಕಾಳಿಯಾಗಿ ಎಲ್ಲ ಪ್ರಾಂತ್ಯಗಳಲ್ಲೂ ನೆಲಸು ಎಂದು ಹೇಳುತ್ತಾನೆ. ಅನಂತರ ತ್ರಿಮೂರ್ತಿಗಳಿಗೆ ವಿವಾಹಗಳು ನಡೆಯುತ್ತವೆ. ಆಗ ಅನೇಕ ವಸ್ತುಗಳು, ಆಭರಣಗಳು, ಉಪಕರಣಗಳು ಬೇಕಾದವು. ಈ ಉಪಕರಣಗಳನ್ನು, ಆಭರಣಗಳನ್ನು, ಸೃಷ್ಟಿಸುವುದಕ್ಕೆ ವಿಶ್ವಕರ್ಮನ ಅವಶ್ಯಕತೆ ಉಂಟಾಯಿತು. ಪರಾತ್ಪರನ ಪ್ರಣವ ಮಂತ್ರದ ಪ್ರಭಾವದಿಂದ ವಿಶ್ವ ಕರ‍್ಮನು ಹುಟ್ಟಿದನು. ಅವನಿಗೆ ಬೆಳ್ಳಿ, ಚಿನ್ನದ ಗಟ್ಟಿಗಳನ್ನು ಕರಗಿಸಿ ಆಭರಣಗಳನ್ನು ತಯಾರಿಸಲು ಕುಲುಮೆ ಸುತ್ತು ಇತರ ಉಪಕರಣಗಳು ಬೇಕಾದವು. ಆಗ ಜಾಂಬವ ಮುನಿ ತನ್ನ ಬಲದಪಕ್ಕೆಯಿರುವ ಒಬ್ಬ ಬಾಲಕನನ್ನು ಹುಟ್ಟಿಸುತ್ತಾನೆ. ಆ ಬಾಲಕನನ್ನು ವಧಿಸಿ ಅವನ ಪಕ್ಕೆಯಿಂದ ಕುಲುಮೆ ತತ್ತಿಯನ್ನು ತಯಾರಿಸುತ್ತಾನೆ. ಅವನ ವಿವಿಧ ಶರೀರ ಭಾಗಗಳಿಂದ ವಿವಿಧ ರೀತಿಯ ಉಪಕರಣಗಳನ್ನು ತಯಾರಿಸಿ ಜಾಂಬವನು ವಿಶ್ವ ಕರ‍್ಮನಿಗೆ ಕೊಡುತ್ತಾನೆ. ಇತರ ಜಾತಿಗಳವರ ವ್ಯಕ್ತಿಗಳಿಗೂ ಉಪಕರಣಗಳನ್ನು ಕೊಡುತ್ತಾನೆ. ಜಾಂಬವಂತನ ಉಳಿದ ಪಕೆಯಿಂದ ಒಬ್ಬ ಬಾಲಕನು ಹುಟ್ಟುತ್ತಾನೆ. ಅವನನ್ನು ನೋಡಿ ನೀನು ಪಕ್ಕೆಯಿಂದ ಹುಟ್ಟಿಪಕ್ಕೆ ಬಾಲಕನಾಗಿದ್ದೀಯೆ, ಆದ್ದರಿಂದ ದಕ್ಕಲಿಗನಾಗಿ ಕಲಿಯುಗದಲ್ಲಿ ನಮ್ಮ ವಂಶದವರನ್ನು ಯಾಚಿಸುತ್ತಾ ಬದುಕುವೆ ಎನ್ನುತ್ತಾನೆ. ಆ ಮಗುವೇ ಯುಗಮಹಾಮುನಿ. ಅವನು ಜಾಂಬವನನ್ನು ಕಂಡು ದುಃಖಿಸಿ ನನ್ನನ್ನು ಏಕ ಸಂಹರಿಸಿದೆ ಎಂದು ಪ್ರಶ್ನಿಸಿ ‘ಕಲಿಯುಗದಲ್ಲಿ ನಿನ್ನವರೆಲ್ಲರೂ ಅಸ್ಪೃಶ್ಯರಾಗಿ ಊರಿನಿಂದ ಹೊರಗೆ ದೂರದಲ್ಲಿ ಬದುಕುವುದು’ ಎಂದು ಹೇಳುತ್ತಾರೆ. ಶಪಿಸುತ್ತಾನೆ. ಆಗ ಪರಾತ್ಪರನು ಅಲ್ಲಿದ್ದು ಈ ಶಾಪ ಹತ್ತು ಸಾವಿರ ವರ್ಷಗಳು ಮಾತ್ರವೇ ಇರುತ್ತದೆ ಎಂದು ಕಲಿಯುಗದಲ್ಲಿ ಈ ಶಾಪ ಹೋಗಿ ಮತ್ತೆ ನಿಮ್ಮವರೆಲ್ಲರೂ ಎಲ್ಲರ ಹಾಗೆ ಜಪತಪ ನಿಯಮನಿಷ್ಠಾಗರಿಷ್ಠರಾಗಿ ಎಲ್ಲರಿಂದ ಗೌರವಿಸಲ್ಪಡುತ್ತಾರೆ ಎಂದು ಹೇಳುತ್ತಾನೆ. ಅಷ್ಟೆ ಅಲ್ಲ ಅನಂತರ ಆ ಪರಾತ್ಪರನು ಜಾಂಬವಮುನಿಗೆ ಮತ್ತೊಂದು ವರವನ್ನು ಕೊಡುತ್ತಾನೆ. ಅದರ ಪ್ರಕಾರ ಇಬ್ಬರ ಶಂಕರನ ಸನ್ನಿಧಾನಕ್ಕೆ ಹೋಗುತ್ತಾರೆ. ಅಲ್ಲಿ ಪರಾತ್ಪರನು ತನ್ನ ಕಮಂಡಲದ ನೀರನ್ನು ತೆಗೆದು ಪ್ರಣವ ಮಂತ್ರವನ್ನು ಜಪಿಸಿ ಶಂಕರನ ಮೇಲೆ ಜಲವನ್ನು ಚೆಲ್ಲಿದಾಗ ಶಂಕರನ ದೇಹದಿಂದ ಜಟಾಜೂಟಧಾರನಾಗಿ ಕೈಯಲ್ಲಿ ಬಂಗಾರದ ಲಿಂಗ, ಕೊರಳಲ್ಲಿ ರುದ್ರಾಕ್ಷಿಯನ್ನು ಧರಿಸಿದ ಒಬ್ಬ ಬಾಲಕನು ಹುಟ್ಟುತ್ತಾನೆ. ಇವನೇ ಶಾಕ್ಯಮುನಿ. ಕೆಲವು ನೀರಿನ ಹನಿಗಳು ನೆಲದ ಮೇಲೆ ಬಿದ್ದದ್ದರಿಂದ ಅವುಗಳಿಂದ ರುದ್ರಾಕ್ಷಿಗಳು ಹುಟ್ಟಿದವು. ಅಲ್ಲಿಯೇ ಜಲವೀರ ಕನ್ಯೆ ಹುಟ್ಟಿದ್ದು ಇವಳೇ ಶಾಕ್ಯ ಕನ್ಯೆ, ಇವಳು ಶಾಕ್ಯಮುನಿಗೆ ಹೆಂಡತಿಯಾದಳು. ಈ ಶಾಕ್ಯಮುನಿ ನೂಲಿನಿಂದ ಬತ್ತಿಗಳನ್ನು ಮಾಡಿ ತನ್ನ ಹೆಂಡತಿಯೊಂದಿಗೆ ರುದ್ರಾಕ್ಷಿಗಳಿಂದ ಶಿವನನ್ನು ಪೂಜಿಸುವುದರಿಂದ ಇವನು ನುಲಕಸಂಗಯ್ಯ ಆದನು (ಸಂಗಮುಲು ಎಂದರೆ ರುದ್ರಾಕ್ಷಿ) ಅನಂತರ ಇವರೇ ನುಲಕಚಂದಯ್ಯ ಎಂದಾದರು. ಇವರಿಗೆ ಶಿವ ಪಾರಮ್ಯವನ್ನು ಕೀರ್ತಿಸುತ್ತಾ ಜಾಂಬವನ ಕಥೆಯನ್ನು ಜಾಂಬುವವ ವಂಶಿಕರಿಗೆ ವಿವರಿಸುತ್ತಾ ಅವರಿಗೆ ಮಗುವಾಗಿ ಬದುಕಿ ಎಂದು ಹೇಳುತ್ತಾನೆ, ಪರಾತ್ಪರನು. ಆ ಜಾಂಬವಂತನಿಗೆ ಮತ್ತು ಜಲವೀರಕನ್ಯೆಗೆ ಹುಟ್ಟಿದ ಕುಮಾರನೇ ಚಿಂದುಗಳ ಮೂಲ ಪುರುಷ. ಅವನು ಚಿಂದುವನಾಗಿ ಜಾಂಬವನ ವಾರಸುದಾರರಿಗೆ ಜಾಂಬವ ಪುರಾಣವನ್ನು ಹೇಳುತ್ತಾ ಅವರಿಗೆ ಸೇವೆಗಳನ್ನು ನೀಡುತ್ತಾ ಅವರ ಮೂಲಕ ಜೀವನ ಸಾಗಿಸುವೆ ಎಂದು ಜಾಂಬುವನು ಆದೇಶಿಸುತ್ತಾನೆ.

ಒಂದು ಸಲ ಪಾರ್ವತಿ ತನ್ನ ಮಲಿನವಾದ ಬಟ್ಟೆಯನ್ನು ಒಂದು ಪೊದೆಯ ಮೇಲೆ ಹಾಕಿದಾಗ ಮಾಲ ಚನ್ನಯ್ಯ ಎಂಬ ಬಾಲಕ ಹುಟ್ಟಿದನು. ಅವನನ್ನು ಕಾಮಧೇನುವಿನ ಪಾಲನೆಗಾಗಿ ದೇವತೆಗಳು ನಿರ್ದೇಶಿಸಿದರು. ಕೆಲವು ದಿನಗಳ ಕಾಲ ಚನ್ನಯ್ಯ ಆ ಕಾಮಧೇನುವನ್ನು ಕಾಯುತ್ತಿರಲು, ಹಸಿವಾಯಿತು. ಆಗ ಕಾಮಧೇನುವನ್ನು ಹಾಲನ್ನು ಕೊಡುವಂತೆ ಕೇಳಿದನು. ಚನ್ನಯ್ಯನಿಗೆ ಕಾಮಧೇನು ಒಂದು ಮುತ್ತುಗದ ಎಲೆಯನ್ನು ದೊಪ್ಪೆ ಮಾಡಿ ತರುವಂತೆ ಹೇಳಿತು. ಆ ದೇವತಾ ಹಸುವು ಅದರ ತುಂಬ ಹಾಲನ್ನು ಸುರಿಸಿತು. ಆ ಹಾಲನ್ನು ಕುಡಿದನು. ಚೆನ್ನಯ್ಯನಿಗೆ ಒಂದು ಆಲೋಚನೆ ಬಂತು. ಇದರ ಹಾಲೇ ಇಷ್ಟು ಮಧುರವಾಗಿದ್ದರೆ. ಇನ್ನು ಇವರ ಮಾಂಸ ಎಷ್ಟು ರುಚಿಯಾಗಿರಬೇಕು ಎಂದುಕೊಂಡನು. ಆಲೋಚನೆ ಬರುತ್ತಲೇ ಕಾಮಧೇನು ಮುರಿದು ಬಿದ್ದು ಪ್ರಾಣ ಹೊರಟು ಹೋಗುತ್ತದೆ. ಅದನ್ನು ನೋಡಿ ದೇವತೆಗಳೆಲ್ಲ ಸಂಜೀವ ಕಡ್ಡಿಗಳಿಂದ ಆ ಕಾಮಧೇನುವಿನ ಶರೀರವನ್ನು ಕೆಳಕ್ಕೆ ತರಲು ಪ್ರಯತ್ನಿಸಿದರು. ದೇವತೆಗಳೆಲ್ಲ ಎಷ್ಟು ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ್ಲ. ಆಗ ಅವರಿಗೆ ಬೇರೆ ದಿಕ್ಕು ತೋಚದೆ ಈ ಕೆಲಸವನ್ನು ಮಾಡಬಲ್ಲವನು ಆದಿ ಜಾಂಬವಮುನಿ ಎಂದು ಭಾವಿಸಿ ಅವನನ್ನು ಗೌರವ ಪೂರ್ವಕವಾಗಿ ಕರೆದರು. ‘ತಾತಾ ಮಹಾದಿಗಿರಾ’ ಎಂದು ಕರೆದರು. ಹಾಗೆ ‘ತಾತಾ ಮಹಾದಿಗಿರಾ’ ಎಂದು ಕರೆದದ್ದರಿಂದ ಆತನ ವಂಶಜರು ‘ಮಹಾದಿಗ’ ಅನಂತರ ‘ಮಾದಿಗ’ರು ಆದರು. ಆಗ ಜಾಂಬವಂತನು ಒಂದು ಎಡಗೈಯಿಂದ ಆ ಕಾಮಧೇನುವಿನ ಶರೀರವನ್ನು ಕೆಳಕ್ಕೆ ತಂದನು. ಇದು ಅತ್ಯಮತ ಪವಿತ್ರವಾದ ಗೋವು ಆದ್ದರಿಂದ ಇದರ ಶರೀರ ವೃಥಾ ಹೋಗಬಾರದು ಎಂದು ಅದನ್ನು ಪೂರ್ತಿಯಾಗಿ ಭುಜಿಸಬೆಕು ಎಂಬ ಜಾಂಬವನ ಸಲಹೆಯ ಮೇರೆಗೆ ನಿರ್ಣಯಿಸಿದರು. ಜಾಂಬುವನು ಅದನ್ನು ತುಂಡು ತುಂಡುಗಳಾಗಿ ಕತ್ತರಿಸಿ ಬಾಣಲೆಯಲ್ಲಿ ಹಾಕಿ ಬೇಯಿಸಲು ಪ್ರಾರಂಭಿಸಿದರು. ಬಾಲಕನಾದ ಚನ್ನಯ್ಯ ಆದಿ ಅಡುಗೆಯ ಬಳಿ ಇದ್ದು ನೋಡುತ್ತಿದ್ದನು. ಅಷ್ಟರಲ್ಲಿ ಒಂದು ತುಂಡು ಕೆಳಕ್ಕೆ ಬಿತ್ತು. ‘ಅಯ್ಯೋ’ ಎಂದು ಆ ತುಂಡನ್ನು ಕಾಗೆ ಎತ್ತಿಕೊಂಡು ಅದಕ್ಕೆ ಮೆತ್ತಿದ್ದ ಧೂಳನ್ನು ‘ಉಫ್’ ಎಂದು ಊದಿ ಮತ್ತೆ ಅದನ್ನು ಬಾಣಲೆಯಲ್ಲಿ ಹಾಕಿದನು. ದೇವತೆಗಳೆಲ್ಲ ಅದನ್ನು ಅಪವಿತ್ರವೆಂದು ಭಾವಿಸಿ ಚೆನ್ನಯ್ಯನಿಗೆ ಶಾಪವಿತ್ತರು. ಬರುವ ಯುಗದಲ್ಲಿ ನಿನ್ನವರೆಲ್ಲರೂ ಮುಟ್ಟಬಾರದ ಜನರಾಗಿ ಪಶು ಮಾಂಸ ಭಕ್ಷಕರಾಗಿ ಊರಿನಿಂದ ದೂರದಲ್ಲಿ ಜೀವಿಸುತ್ತಾರೆ ಎಂದು ಶಪಿಸಿದರು. ಆ ಆಹಾರವನ್ನು ಬಡಿಸಿದ್ದರಿಂದ ಜಾಂಬುವಿನ ವಾರಸುದಾರರಿಗೂ ಈ ಶಾಪ ತಟ್ಟಿತು. ಆದರೆ ಈ ಶಾಪ ಹತ್ತು ಸಾವಿರ ವರ್ಷಗಳೇ ಇರುತ್ತದೆಂದು ಅನಂತರ ಕಲಿಯುಗದಲ್ಲಿ ಅವರಿಗೆ ಮೊದಲಿನಂತೆ ಪೂರ್ತಿ ಜಪತಪ ನಿಯಮ ನಿಷ್ಠೆಗಳು ಬರುತ್ತವೆ ಎಂದು ಮತ್ತೆ ಸಮಾಜದಲ್ಲಿ ಎಲ್ಲರಿಂದ ಗೌರವವನ್ನು ಪಡೆಯುತ್ತಾರೆಂದು ದೇವತೆಗಳು ಹೇಳಿದರು. ಇದು ಕೊಲನುಪಾಕ ನುಲಕ ಚಂದಯ್ಯನವರ ಜಾಂಬುವ ಪುರಾಣಕ್ಕೆ ಅತ್ಯಮತ ಸಂಕ್ಷಿಪ್ತ ರೂಪ. ಇದು ಕುಲಪುರಾಣಗಳ ಪ್ರಕಾರ ಹಾಗೂ ಮೂಲಪುರಾಣ ಪ್ರಕಾರಕ್ಕೂ ಒಳ್ಳೆಯ ಉದಾಹರಣೆ ಎಂದು ಹೇಳಬಹುದು.

– ಪಿ.ಎಸ್.ಸಿ.ಅನುವಾದ ವಿ.ಆರ್.

ಜಾತಪು : ‘ಜಾತಪು’ ಬುಡಕಟ್ಟುಗಳು ಆಂಧ್ರದ ಶ್ರೀಕಾಕುಳಂ, ವಿಜಯನಗರಂ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು. ಇವರು ಜಾತಪುಗಳು ಸ್ಥಿರ ವ್ಯವಸಾಯ, ಒಣ ಬೇಸಾಯ ಮಾಡುತ್ತಿದ್ದಾರೆ. ಬೇಸಾಯದ ಕೂಲಿಕಾರಾಗಿಯೂ ದುಡಿಯುತ್ತಿದ್ದಾರೆ. ಹುಡುಗನ ವಯಸ್ಸು ೧೬ – ೨೦ ವರ್ಷ, ಹುಡುಗಿಯ ವಯಸ್ಸು ೧೪ ರಿಂದ ೧೬ರವರೆಗೂ ಇದ್ದರೆ ಮದುವೆ ಮಾಡುತ್ತಾರೆ. ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವುದಿಲ್ಲ. ಮಾತುಕತೆಯ ಮೂಲಕ, ಪ್ರೇಮ ವಿವಾಹ, ಓಡಿ ಹೋಗುವುದು ಮುಂತಾದವು ನಡೆಯುತ್ತದೆ. ಜಾತಪುಗಳಲ್ಲಿ ಅವಿವಾಹಿತ ಹುಡುಗ ಮತ್ತು ಅವಿವಾಹಿತ ಹುಡುಗಿಯರು ಯಾವುದಾದರೂ ಶುಭಕಾರ್ಯಗಳಿಗೆ ಹಾಜರಾದಾಗ ಅಲ್ಲಿಯೇ ಇಷ್ಟವಾದ ಹುಡುಗಿ ಹುಡುಗನಿಗೆ ಹಣ ಇಲ್ಲದೆ ಎರಡು ಅಥವಾ ಮೂರು ಪೈಸೆಗಳನ್ನು ಕೊಡುವುದು ನಡೆಯುತ್ತದೆ. ಇದರಿಂದಾಗಿ ಇಬ್ಬರಿಗೂ ಇಷ್ಟವಿದೆಯೆಂಬುದು, ಒಪ್ಪಿಗೆಯಿದೆಯೆಂಬುದು ತಿಳಿಯುತ್ತದೆ. ಅದೇ ರೀತಿಯಲ್ಲಿ ಹುಡುಗಿಯರು ಹುಡುಗರನ್ನು ಹಣ ಕೇಳುವುದೂ ಉಂಟು. ಮೊದಲು ಕೊಟ್ಟ ಹಣಕ್ಕಿಂತ ಹುಡುಗ ದುಪ್ಪಟ್ಟು ಹಣ ಕೊಡಬೇಕಾಗುತ್ತದೆ. ಆಗ ಅವರಿಬ್ಬರ ಮದುವೆ ಸಾಮಾಜಿಕವಾಗಿಯೂ ಒಪ್ಪಿಗೆಯನ್ನು ಪಡೆದಂತೆ. ಅನಂತರ ಎರಡು ಮನೆಯವರು ಹುಡುಗ, ಹುಡುಗಿಯರ ಮನೆಗಳಿಗೆ ಹೋಗಿ ‘ಓಲಿ’ ಸಂಪ್ರದಾಯದಂತೆ ಕೊಡುವುದು ನಡೆಯುತ್ತದೆ.

‘ಓಲಿ’ ದುಡ್ಡಿನ ರೂಪದಲ್ಲಿ ಇಲ್ಲವೇ ವಸ್ತುವಿನ ರೂಪದಲ್ಲಿ ಇರುತ್ತದೆ. ಸಾರಾಯಿ, ಹೆಂಡ ಕುಡಿಯುತ್ತಾರೆ. ವಿವಾಹ ವಿಚ್ಫೇದನದ ವ್ಯವಸ್ಥೆಯಿದ್ದು ಗ್ರಾಮ ಪಂಚಾಯಿತಿಯಲ್ಲಿ ಹಿರಿಯರು ಇವರಿಗೆ ವಿಚ್ಫೇದನಕ್ಕೆ ಒಪ್ಪಿಗೆಯನ್ನು ನೀಡುತ್ತಾರೆ. ಮಕ್ಕಳು ಮಾತ್ರ ತಂದೆಗೆ ಸೇರಿದವರಾಗುತ್ತಾರೆ. ವಿಚ್ಫೇದನ ಪಡೆದ ಮಹಿಳೆಗೆ ಪುನರ್ವಿವಾಹಕ್ಕೆ ಅವಕಾಶ, ಅನುಮತಿಗಳಿವೆ. ಈ ಸಮುದಾಯದಲ್ಲಿ ಪಿತೃಪ್ರಧಾನ ವ್ಯವಸ್ಥೆಯಿದೆ. ತಂದೆಯ ಅನಂತರ ಮಗ ಆ ಕುಟುಂಬದ ಯಜಮಾನನಾಗಿ ಜವಾಬ್ದಾರಿಯನ್ನು ಹೋರುತ್ತಾನೆ. ಅವಿಭಕ್ತ ಕುಟುಂಬಗಳೇ ಹೆಚ್ಚು. ತಾಯಿಯ ಆಭರಣಗಳು ಮಗಳಿಗೆ ವಾರಸತ್ವವಾಗಿ ಬರುತ್ತವೆ. ಆದರೆ ಆಕೆಯ ಗಂಡನಿಗೆ ಯಾವ ಹಕ್ಕುಗಳೂ ಇರುವುದಿಲ್ಲ. ಐದು ತಿಂಗಳ ನಂತರ ಕೂಸಿಗೆ ಹೆಸರಿಡುತ್ತಾರೆ. ಮೂರು ವರ್ಷದ ಹುಡುಗನಿಗೆ ಮೂಗು ಚುಚ್ಚುವುದು, ಕಿವಿ ಚುಚ್ಚುವುದುಂಟು. ‘ಹಿವಾಂತ’ ಗ್ರಾಮದ ಮುಖಂಡನಾಗಿರುತ್ತಾನೆ. ಪೂಜಾರಿಯನ್ನು ‘ಜನ್ನಿ’ ಎಂದು ಕರೆಯುತ್ತಾರೆ. ‘ಜಕ್ರಾ’ ದೇವತೆಯನ್ನು ಪೂಜಿಸುತ್ತಾರೆ. ಪ್ರಾಣಿ ಬಲಿಗಳನ್ನು ಕೊಡುವುದುಂಟು.

೨೦೦೧ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ ಒಟ್ಟು ೧,೧೮,೬೧೩ ಅಂದರೆ ಶೇಕಡಾ ೨.೧೬.

– ಬಿ.ಕೆ.ಆರ್. ಅನುವಾದ ಕೆ.ಎಸ್.

ಜಾತಿ ಪಿಳ್ಳೈಗಳ್ ತಮಿಳುನಾಡಿನಲ್ಲಿ ನಿರ್ದಿಷ್ಟವಾದ ಕೆಲವು ಜಾತಿಯ ಜನರನ್ನು ಹಾಡಿ ಹೊಗಳುವ ಕೆಲವು ಜಾತಿಯವರಿದ್ದಾರೆ. ಇವರು ತಮಗೆ ಸೀಮಿತವಾದ ಮೇಲ್ಜಾತಿಯ ಜನರನ್ನು ಹಾಡಿ ಹೊಗಳುವ ಮೂಲಕ ಅವರಿಂದ ಕಾಣಿಕೆಗಳನ್ನೂ, ಇನಾಮನ್ನೂ ಸ್ವೀಕರಿಸುತ್ತಾರೆ. ಇಂತಹ ಜನರನ್ನೇ ಜಾತಿ ಪಿಳ್ಳೈಗಳ್ ಎಂದು ಕರೆಯಲಾಗುವುದು.

ತಮಿಳುನಾಡಿನ ಉತ್ತರ ಭಾಗದ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಕಂಡು ಬರುವ ‘ವನ್ನಿಯರ್’ ಎಂಬ ಜನಾಂಗದವರನ್ನು ಆಶ್ಯದಾತರೆಂದು ಇವರು ಭಾವಿಸುತ್ತಾರೆ. ಹೀಗಾಗಿ ವರ್ಷಕ್ಕೊಮ್ಮೆ ‘ವನ್ನಿಯರ್’ಗಳ ಮನೆಗೆ ಹೋಗಿ ಅವರನ್ನು ಹಾಡಿನ ಮೂಲಕ ಸ್ತುತಿಸಿ ಅವರಿಂದ ದವಸ ಧಾನ್ಯಗಳು, ಹಣ, ಉಡುಪು ಇತ್ಯಾದಿಗಳ ಕಾಣಿಕೆ ಪಡೆದು ಹಿಂದಿರುಗುತ್ತಾರೆ. ಇತ್ತೀಚೆಗೆ ಇದನ್ನು ‘ತೆರಿಗೆ ವಸೂಲಿ’ ಮತ್ತೆ ವಸೂಲಿ ಮಾಡಿಕೊಳ್ಳುವುದು’ ಎಂದೂ ಹೇಳಲಾಗುತ್ತದೆ.

ಹೆಸರಿನ ಕಾರಣ : ‘ಜಾತಿಪಿಳ್ಳೈ’ ಎನ್ನುವ ಹೆಸರು ಈ ಜಾತಿಯವರಿಗೆ ಬರಲು ಕಾರಣವನ್ನು ತಿಳಿಸುವ ರೀತಿ ಒಂದು ಕಥೆ ಜನರ ನಡುವೆ ಪ್ರಚಲಿತದಲ್ಲಿದೆ. ‘ವನ್ನಿಯರ್ ಪುರಾಣ’ ದೊಂದಿಗೆ ಸಂಬಂಧ ಹೊಂದಿರುವ ರೀತ್ಯಾ ಇವರ ಉಗಮವನ್ನು ಹೇಳಲಾಗಿದೆ. ಅಗ್ನಿ ವನ್ನಿಯನ್, ಕೃಷ್ಣ ವನ್ನಿಯನ್, ಬ್ರಹ್ಮ ವನ್ನಿಯನ್, ಶಂಭು ವನ್ನಿಯನ್ ಹೀಗೆ ವನ್ನಿಯರ್‌ಗಳಲ್ಲಿ ನಾಲ್ಕು ಪಂಗಡಗಳಿವೆಯೆಂದು ವನ್ನಿಯರ್ ಪುರಾಣ ತಿಳಿಸುತ್ತದೆ. ಇವುಗಳೊಳಗೆ ಅಗ್ನಿ ವನ್ನಿಯರ್ ವಂಶದಿಂದ ಬಂದವರೇ ‘ಜಾತಿ ಪಿಳ್ಳೈಗಳ್’ ಹದಿನೆಂಟನೇ ಶತಮಾನದ ಆರಂಭದಲ್ಲಿ ತಮಿಳುನಾಡಿನಲ್ಲಿ ನಡೆದ ಬಲಗೈ, ಎಡಗೈ ಸಂಘರ್ಷದ ಸಂದರ್ಭದಲ್ಲಿ ಬಲಗೈ ಪಂಗಡಕ್ಕೆ ಸೇರಿದೆ ಮೊದಲಿಯಾರ್‌ಗಳಿಗೂ ಎಡಗೈ ಜಾತಿಯವರಾದ ವನ್ನಿಯರ್‌ಗಳಿಗೂ ನಡುವೆ ನಡೆದ ಆರಾಧನಾ ವಿಷಯಕ್ಕೆ ಸಂಬಂಧಿಸಿದ ಸಂಘರ್ಷದ ಸಮಯದಲ್ಲಿ ತಮ್ಮ ಮಗನನ್ನೆ ಬಲಿ ನೀಡಿ ಅದನ್ನು ಪರಿಹರಿಸಿದುದಕ್ಕಾಗಿ ಅವರಿಗೆ ‘ಜಾತಿ ಪಿಳ್ಳೈಗಳ್’ ಎಂದು ಹೆಸರಾಯಿತು.

ಉಗಮ ಹಾಗೂ ಪ್ರಾಚೀನತೆ : ಅಗ್ನಿ ವನ್ನಿಯನ್‌ಗೂ, ತೆಲುಗಿನ ನಾಯಕರ್ ವಂಶಕ್ಕೆ ಸೇರಿದ ಹೆಣ್ಣಿಗೂ ಜನಿಸಿದವನೇ ‘ಜಾತಿ ಪಿಳ್ಳೈ’, ಬೇರೆ ಜಾತಿಯ ಹೆಣ್ಣಿನಲ್ಲಿ ಜನಿಸಿದವನು ಎಂಬ ಕಾರಣದಿಂದ ಜಾತಿ ಪಿಳ್ಳೆಗೆ ಆಸ್ತಿಯಲ್ಲಿ ಪಾಲು ನೀಡಲಿಲ್ಲ. ಇದರಿಂದ ಅವನು ಸಿಟ್ಟುಗೊಂಡು ‘ಕೊಚ್ಚಿ ಮಲಯಾಳಂ’ಗೆ ಹೋಗಿ ಅಲ್ಲಿದ್ದ ಮೂಕರಾಜನ ಬಳಿ ಸೇವಕನಾಗಿ ಸೇರಿಕೊಂಡನು. ಇದರ ನಡುವೆ ಇತ್ತ ತಮಿಳುನಾಡಿನಲ್ಲಿ ನಡೆದ ಆರಾಧನೆಗೆ ಸಂಬಂಧಿಸಿದ ಸಂಘರ್ಷದ ಸಮಯದಲ್ಲಿ, ಅವರ ನಡುವಿನ ಜಗಳವನ್ನು ಪರಿಹರಿಸುವುದಕ್ಕಾಗಿ ಜಾತಿಪಿಳ್ಳೈಗೆ ಹೇಳಿಕಳಿಸಿದರು. ಜಾತಿಪಿಳ್ಳೈಯೂ ಅಲ್ಲಿಂದ, ಹುಲಿಯ ಬಾಯಿಯನ್ನು ಕಟ್ಟಿ ಅದರ ಮೇಲೇರಿ ಬಂದನು. ಇದರಿಂದ ಅವನನ್ನು ‘ಒಂಟಿ ಹುಲಿ’ ಎಂದೂ ಕರೆಯುತ್ತಾರೆ. ಹೀಗೆ ಅವನು ಅವರ ನಡುವಿನ ಸಂಘರ್ಷವನ್ನು ಪರಿಹರಿಸಿದುದಕ್ಕಾಗಿ ‘ಜಾತಿ ಪಿಳ್ಳೈ’ ಎಂಬ ಬಿರುದು ನೀಡಿ ವನ್ನಿಯರ್‌ಗಳಿಂದ ತೆರಿಗೆ ವಸೂಲಿ ಮಾಡುವ ಹಕ್ಕನ್ನು ಅವನಿಗೆ ನೀಡಲಾಯಿತು. ಇದಕ್ಕೆ ಆಧಾರವಾಗಿ, ೧೭೦೮ರಲ್ಲಿ ನೀಡಿದ ಒಂದು ತಾಮ್ರಶಾಸನ ಸೇಲಂ ಜಿಲ್ಲೆಯ ನಂಗವಲ್ಲಿ ಗ್ರಾಮದಲ್ಲಿರುವ ‘ಜಾತಿಪಿಳ್ಳೈ’ಯೊಬ್ಬರ ಮನೆಯಲ್ಲಿದೆ.

ರೂಢಿ – ಆಚರಣೆಗಳು : ಜಾತಿಪಿಳ್ಳೈಗಳನ್ನು ನೋಡಿದ ಕೂಡಲೇ ಗುರುತು ಹಿಡಿಯುವಂತಹ ಆಕಾರ ಹೊಂದಿದ್ದಾರೆ. ನೀಳವಾದ ಮುಖ, ದೊಡ್ಡದಾದ ಮೀಸೆ ಇವರನ್ನು ಎತ್ತಿ ತೋರಿಸುವ ಗುರುತುಗಳಾಗಿವೆ. ಕುದುರೆ ಸಾಕುವುದು ಇವರ ಅಭ್ಯಾಸ. ತೆರಿಗೆ ವಸೂಲಿ ಮಾಡಲು ಬರುವಾಗ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಲು ತಮ್ಮದೇ ಕುದುರೆ ಗಾಡಿಯನ್ನು ಬಳಸಿಕೊಳ್ಳುತ್ತಾರೆ. ಈ ಅಭ್ಯಾಸ ಇಂದು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಇದಕ್ಕೆ ಬದಲಾಗಿ ಬಸ್‌ಗಳಲ್ಲಿ ಸಂಚರಿಸುವುದು ರೂಢಿಯಲ್ಲಿದೆ. ಮದ್ಯಪಾನ ಸೇವನೆ ಇವರಲ್ಲಿ ಸರ್ವೇಸಾಮಾನ್ಯ. ಸಾಮಾನ್ಯವಾಗಿ ಇವರು ಎರಡು ಮದುವೆ ಮಾಡಿಕೊಳ್ಳುತ್ತಾರೆ. ವನ್ನಿಯರ್‌ಗಳನ್ನು ಇವರು ‘ಅಪ್ಪಾ’ ಎಂದೇ ಕರೆಯುತ್ತಾರೆ. ಇವರ ಮಾತೃಭಾಷೆ ತೆಲುಗು. ತಂದೆಯ ಭಾಷೆ ತಮಿಳು. ಇತರ ಜನರೊಂದಿಗೆ ಮಾತನಾಡುವಾಗ ತಮಿಳಿನಲ್ಲೂ, ತಮ್ಮೊಳಗೇ ಸಂಭಾಷಣೆ ನಡೆಸುವಾಗ ತೆಲುಗಿನಲ್ಲೂ ಮಾತನಾಡುತ್ತಾರೆ. ತೆರಿಗೆ ವಸೂಲಿಗೆ ಬರುವಾಗ ರಾಜರು ಧರಿಸುವಂತೆ ರುಮಾಲು ಸುತ್ತಿಕೊಂಡು, ಕೋಟ್ ಧರಿಸಿ, ಕಚ್ಚೆ ಪಂಚೆಯುಟ್ಟುಕೊಂಡು ಬರುತ್ತಿದ್ದರು. ಆದರೆ ಈಗ ಪ್ಯಾಂಟ್ ಷರ್ಟ್ ಧರಿಸಿಯೇ ಬರುವುದು ಸಾಮಾನ್ಯವಾಗಿದೆ. ‘ಪಾಂಗಾ’ ಎನ್ನುವ ಒಂದು ರೀತಿಯ ಕೊಳಲನ್ನು ಊದುವುದರೊಂದಿಗೆ ‘ವೆಂಡಯಂ’ ಎನ್ನುವ ಸಂಗೀತ ಸಾಧನವನ್ನು ನುಡಿಸುತ್ತಾ ವನ್ನಿಯರ್‌ಗಳ ಹಿರಿಮೆಯನ್ನೂ ಹಾಡಿ ಹೊಗಳುತ್ತಾರೆ.

ವೃತ್ತಿ : ಮೇಲೆ ತಿಳಿಸಿದ ಶಾಸನದಲ್ಲಿ ತಿಳಿಸಿರುವ ಪ್ರಕಾರ ವನ್ನಿಯರ್‌ಗಳ ಮನೆಗಳಿಗೆ ಹೋಗಿ ತೆರಿಗೆ ವಸೂಲಿ ಮಾಡುವುದೇ ಇವರ ಪ್ರಮುಖ ವೃತ್ತಿಯಾಗಿದೆ. ಹೀಗೆ ತಾವು ಸಂಚರಿಸುವ ಪ್ರಾಂತ್ಯಗಳಲ್ಲಿ ವಿಷಜಂತುಗಳ ಕಡಿತಕ್ಕೆ ಮೂಲಿಕೆ ಚಿಕಿತ್ಸೆಯನ್ನು ಮಾಡುತ್ತಾರೆ. ವನ್ನಿಯರ್‌ಗಳ ನಡುವೆ ಆಚರಿಸುವ ನಾನಾ ಬಗೆಯ ಆಚಾರ ವಿಚಾರ ರೂಢಿಗಳ ಸಂದರ್ಭದಲ್ಲಿ ಇವರೂ ಪಾಲ್ಗೊಳ್ಳುತ್ತಾರೆ. ವನ್ನಿಯರ್‌ಗಳ ಮಕ್ಕಳನ್ನು ಸಂತೋಷಪಡಿಸುವುದಕ್ಕಾಗಿ ಸಣ್ಣ ಪುಟ್ಟ ಜಾದೂ, ಮಾಯಾ ಮಂತ್ರಗಳನ್ನೂ ಮಾಡಿ ತೋರಿಸುತ್ತಾರೆ. ವರ್ಷಕ್ಕೊಮ್ಮೆ ಕುಯಿಲಿನ ಸಂದರ್ಭದಲ್ಲಿ ಬಂದು ತೆರಿಗೆ ವಸೂಲಿ ಮಾಡಿಕೊಂಡು ಹೋಗುತ್ತಾರೆ. ಉಳಿದ ದಿನಗಳಲ್ಲಿ ಹಿತ್ತಾಳೆ ಕಂಚಿನ ಪಾತ್ರೆಗಳಿಗೆ ಕಲಾಯಿ ಹಾಕುವ ಕಸುಬು ಮಾಡುತ್ತಾರೆ.

ವಾಸಿಸುವ ಸ್ಥಳ : ಇವರಿಗೆ ಸ್ಥಿರ ವಾಸಸ್ಥಳವೆಂಬುದು ಒಂದು ಊರಿನಲ್ಲಿದ್ದರೂ, ಸುಂಕ ವಸೂಲಿಗಾಗಿಯೂ ಕಲಾಯಿ ಹಾಕುವುದಕ್ಕಾಗಿಯೂ ನಿರಂತರವಾಗಿ ವಿವಿಧ ಪ್ರಾಂತ್ಯಗಳಲ್ಲಿ ಸಂಚಾರ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಇವರದು ಒಂದು ಬಗೆಯ ವಲಸೆ ಜೀವನವೇ ಆಗಿದೆ. ತಾವು ಸಂಚರಿಸುವ ಊರುಗಳಲ್ಲಿ, ಅಲ್ಲೇ ಯಾವುದಾದರೊಂದು ಮರದ ಕೆಳಗೆ ಅಥವಾ ಬಯಲು ಪ್ರದೇಶದಲ್ಲಿ ಬಿಡಾರ ಹೂಡಿಕೊಂಡು ತಂಗುತ್ತಾರೆ. ಆಗಾಗ (ಕೆಲಸವೇನೂ ಇಲ್ಲದ ದಿನಗಳಲ್ಲಿ) ತಮ್ಮ ಸ್ವಂತ ನಿವಾಸಗಳಲ್ಲಿ ವಾಸಿಸುತ್ತಾರೆ. ಸುಂಕ ವಸೂಲಿ ಮಾಡುವ ಊರುಗಳನ್ನು ತಮ್ಮೊಳಗೇ ಹಂಚಿಕೊಳ್ಳುತ್ತಾರೆ.

ಮದುವೆ : ಜಾತಿ ಪಿಳ್ಳೈಗಳ ನಡುವಿನ ವಿವಾಹ ಮಾನಸಿಕವಾದುದಾಗಿರುತ್ತದೆ. ಹೆಣ್ಣನ್ನು ನೋಡಿ, ನಿಶ್ಚಯಿಸುವ ಪದ್ಧತಿಯಿದೆ. ನಿಶ್ಚಯದ ಸಂದರ್ಭದಲ್ಲಿ ತೆರ ನೀಡುವ ಪದ್ಧತಿಯೂ ಉಂಟು. ಹಿಂದಿನ ಕಾಲದಲ್ಲಿ ೩ ರಿಂದ ೨೦ ವರಹಗಳವರೆಗೆ ತೆರಿಗೆ ನೀಡುತ್ತಿದ್ದರು (ಇವು ಮೊಲೆಯೂಡಿಸುವ ಕೂಲಿ, ದಾರಿ ಖರ್ಚು ಮದುವೆಯಲ್ಲಿ ಉಡುವ ಹತ್ತಿಯಿಂದ ತಯಾರಿಸಿದ ಕೆಂಪು ಬಣ್ಣದ ‘ಕೂರೆ ಸೀರೆ’, ತಾಲಿ, ಮುಂತಾದವುಗಳನ್ನೂ ಒಳಗೊಂಡಿರುತ್ತದೆ). ಮದುವೆಯನ್ನು ಸಾಮಾನ್ಯವಾಗಿ ದೇವಾಲಯಗಳಲ್ಲಿ ನಡೆಸುತ್ತಾರೆ. ಅಣ್ಣ ಮರಣ ಹೊಂದಿದರೆ ಅವನ ಹೆಂಡತಿಯನ್ನು ತಮ್ಮ ಮರುಮದುವೆ ಮಾಡಿಕೊಳ್ಳುವ ಪದ್ಧತಿ ಇವರಲ್ಲಿದೆ. ಎರಡನೆಯ ಮದುವೆಯನ್ನು ‘ನಡುಮನೆಯ ಮದುವೆ’ ಎನ್ನಲಾಗುವುದು.

ಧರ್ಮ : ಜಾತಿ ಪಿಳ್ಳೈಗಳು ಕಾಳಿ, ವೀರ, ಕಾಮಾಕ್ಷಿ ಮುಂತಾದ ಕುಲದೇವತೆಗಳನ್ನು ಆರಾಧಿಸುತ್ತಾರೆ. ‘ವೀರ’ ಇವರ ಪ್ರಧಾನ ಕುಲದೈವ. ಆಷಾಢಮಾಸ, ಪುಷ್ಯ ಮಾಸಗಳಲ್ಲಿ ವೀರನಿಗೆ ‘ಪೊಂಗಲ್’ ನೈವೇದ್ಯ ಸಲ್ಲಿಸಿ ಪೂಜಿಸುತ್ತಾರೆ. ಪ್ರಾಣಿಬಲಿ ನೀಡುವ ರೂಢಿಯೂ ಇವರಲ್ಲಿ ಸಾಮಾನ್ಯವಾಗಿದೆ.

– ಆರ್.ಪಿ.ಯು.ಅನುವಾದ ಟಿ.ಎಸ್.