ಜನಪದ ಆಟಗಳು ‘ಆಟ’ ಶಬ್ದ ತುಂಬ ಕುತೂಹಲವನ್ನು ಕೆರಳಿಸುವಂತಹುದು. ಈ ಶಬ್ದದ ಅರ್ಥವನ್ನು ವ್ಯಾಖ್ಯಾನಿಸಲು ವಿದ್ವಾಂಸರು ಪ್ರಯತ್ನಿಸಿದರೂ ಹಿಡಿತಕ್ಕೆ ಸಿಕ್ಕಿಲ್ಲ. ಈ ವಿಚಾರ ಅದರ ವ್ಯಾಪ್ತಿ ಎಷ್ಟು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಸಂಕೀರ್ಣತೆ ಕೇವಲ ಕನ್ನಡ ಭಾಷೆಗೆ ಮಾತ್ರ ಸಂಬಂಧಪಟ್ಟದ್ದು ಎಂದಲ್ಲ. ಆಂಗ್ಲ, ಹಿಂದಿ, ಮರಾಠಿ ಸಾಮಾನ್ಯವಾಗಿ ಎಲ್ಲ ಭಾಷೆಗಳಲ್ಲಿಯೂ ಈ ಬಗೆಯ ಸಂಕೀರ್ಣತೆ ಇದ್ದೇ ಇದೆ. ತೊಟ್ಟಿಲಲ್ಲಿ ಇದ್ದ ಮಗು – ಕೈಕಾಲು ಅಲುಗಾಡಿಸಿದರೆ ಸಾಕು ಮಗು ಆಟವಾಡುತ್ತಿದೆ ಎನ್ನುತ್ತೇವೆ. ಒಬ್ಬನೇ ಆಡಿದರೂ ಆಟವೆನ್ನುತ್ತೇವೆ. ಇಪ್ಪತ್ತು ಜನ ಸೇರಿ ಆಡಿದರೂ ಆಟವೆನ್ನುತ್ತೇವೆ. ಅಂಗಸಾಧನೆ, ಭಾರ ಎತ್ತುವುದು, ಕುಸ್ತಿ ವ್ಯಾಯಾಮ, ಆಸನಗಳು, ಸಾಂಪ್ರದಾಯಿಕವಾಗಿ ಆಚರಿಸುವ ಗುಳ್ಳವ್ವ, ಗುರ್ಜಿ, ಗೌರಿ, ಜೋಕಾಲಿ ಇಂಥವುಗಳಿಗೆಲ್ಲ ಆಟವೆಂದೇ ಕರೆಯುತ್ತೇವೆ. ವೃತ್ತಿಕಲೆಗಳಾದ ದೊಂಬರಾಟ, ಮಂಗನಾಟ, ಕರಡಿಕುಣಿತ, ತೊಗಲು ಬೊಂಬೆಯಾಟ, ಗರ್ದಿಗ ಮತ್ತು ವೃತ್ತಿಯೇತರದ ಹೆಜ್ಜೆಯಾಟ, ಕೋಲಾಟಗಳಿಗೂ ಆಟವೆಂದೇ ಕರೆಯುತ್ತೇವೆ. ವೇಷಗಳು, ಯಕ್ಷಗಾನ, ಬಯಲಾಟ, ಚಲನಚಿತ್ರ, ನಾಟಕ (ಒಂದನೇ ಆಟ, ಎರಡನೆಯ ಆಟ) ರಾಜಕಾರಣದ ಕುತಂತ್ರ ವ್ಯವಹಾರದ ಬಗೆಗೂ ಆಟವೆಂದೇ ಕರೆಯುತ್ತೇವೆ. ಅಷ್ಟೇ ಏಕೆ ಜಗವೇ ಒಂದು ನಾಟಕ ಶಾಲೆ. ನಾವೆಲ್ಲ ಪಾತ್ರಧಾರಿಗಳು, ಆ ದೇವ ಆಡಿಸಿದಂತೆ ನಾವೆಲ್ಲ ಆಡುತ್ತೇವೆ ಎಂದು ಆಧ್ಯಾತ್ಮಿಕಕ್ಕೂ ತಂದು ನಿಲ್ಲಿಸಲಾಗುತ್ತದೆ. ಮನಃಶಾಸ್ತ್ರಜ್ಞರು ಕೆಲಸವನ್ನೂ ಆಟವೆಂದೇ ಕರೆಯುತ್ತಾಋಎ. ಹೀಗಿರುವಾಗ ಆಟ ಎಂದರೆ ಯಾವುದು ಎಂದು ನಿರ್ಧರಿಸುವುದು ಕಷ್ಟದ ಕೆಲಸ. ಅದರಲ್ಲೂ ಜನಪದ ಆಟಗಳೆಂದು ಬೇರ್ಪಡಿಸುವುದು ಇನ್ನೂ ಕಷ್ಟ.

ನಿಯಮಾನುಸಾರ ಆಡುವ ಇಂದಿನ ಶಿಷ್ಟ ಆಟಗಳೇ ಬೇರೆ, ಜನಪದ ಆಟಗಳೇ ಬೇರೆ ಎಂದು ತಕ್ಷಣ ಹೇಳಬಹುದು. ಆದರೆ ಬೇರ್ಪಡಿಸಲು ನಿಂತಾಗ ಸಮಸ್ಯೆಗಳು ಎದುರಾಗುತ್ತವೆ. ಆದರೆ ಕೆಲವೊಂದು ಲಕ್ಷಣಗಳ ಮೇಲೆ ಬೇರ್ಪಡಿಸಲು ಸಾಧ್ಯವಿದೆ. ಆಟದ ತರಬೇತಿ, ಉಪಕರಣ, ಸಜ್ಜಾದ ಕ್ರೀಡಾಂಗಣ, ಆಟಗಾರರ ಸಂಘಟನೆ, ನಿಯಮ, ಪ್ರೇಕ್ಷಕರು ಮುಂತಾದ ಲಕ್ಷಣಗಳ ಆಧಾರದಿಂದ ಪ್ರತ್ಯೇಕಿಸಲು ಸಾಧ್ಯ. ಗ್ರಾಮಗಳಲ್ಲಿಯ ಜನಪದ ಆಟಗಳು ನಗರದಲ್ಲಿ ಕಾಣಸಿಗದು ಎಂದು ಹೇಳುವ ಹಾಗಿಲ್ಲ. ಆದರೆ ಪ್ರಮಾಣ ಕಡಿಮೆ. ಜತೆಗೆ ನಾಗರಿಕತೆಗೆ ಅನುಗುಣವಾಗಿ ಹೊಸ ಬಗೆಯ ಆಟಗಳು ಬಂದು ಸೇರಿರುತ್ತವೆ. ಪೆನ್ನು – ಪೇಪರ್, ಸಂಗೀತ ಮತ್ತು ಟೇಬಲ್‌ ಕುರ್ಚಿಗಳನ್ನು ಬಳಸಿ ಆಡುವ ಆಟಗಳು – ಇಂಥವುಗಳನ್ನೆಲ್ಲ ಜನಪದ ಆಟಗಳೆಂದು ಕರೆಯಲಾಗಿಲ್ಲ. ಇವನ್ನು ನಗರ ಜನಪದ ಆಟಗಳೆಂದು ಕರೆಯಬಹುದು. ಯಾವುದೇ ಒಂದು ಅಧ್ಯಯನ ಆಯಾಕಾಲದ ಪರಿಮಿತಿಗೆ ಸೀಮಿತವಾಗಿರುತ್ತದೆ. ಮುಂದೊಂದು ಕಾಲಕ್ಕೆ ನಗರ ಜಾನಪದವೇ ‘ಜಾನಪದ’ ವಾಗಬಹುದು. ವಿಶೇಷ ಗುಣಗಳು ಎಂದು ಗುರುತಿಸುವಂಥವು ಸಾರ್ವಕಾಲಿಕವಾಗಿರುತ್ತವೆ ಎಂದು ಹೇಳಲಾಗದು. ಆದರೆ ಅಂದಿನ ಸ್ಥಿತಿ – ಗತಿಗೆ ಬದ್ಧವಾಗಿರುತ್ತದೆ ಎಂದು ಧಾರಾಳವಾಗಿ ಹೇಳಬಹುದು. ಈ ಹಿನ್ನೆಲೆಯಲ್ಲಿ ಜನಪದ ಆಟಗಳ ವಿಶೇಷತೆಯನ್ನು ಹೀಗೆ ಗುರುತಿಸಬಹುದು.

ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಟಗಳು ಭಿನ್ನವಾಗುತ್ತವೆ. ಇದಕ್ಕೆ ಭೌಗೋಳಿಕ ಪರಿಸರವೇ ಕಾರಣ. ಒಂದೇ ಬಗೆಬಗೆಯ ಆಟಗಳು ಬೇರೆ ಬೇರೆ ಪ್ರದೇಶಗಳಲ್ಲಿ ಆಡುವುದು ಕಂಡುಬಂದಾಗಲೂ ಅದರಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿರುತ್ತವೆ. ಅದೇ ರೀತಿಯಲ್ಲಿ ಕೇರಿಯಿಂದ ಕೇರಿಗೂ ಆಟಗಳು ಭಿನ್ನವಾಗುತ್ತವೆ. ಇದಕ್ಕೆ ಜಾತಿ – ಮತಗಳ ಸಂಬಂಧವೂ ಪ್ರಧಾನ ಕಾರಣವಾಗುತ್ತದೆ. ಆಟಗಳು ಒಂದರೊಳಗೊಂಡು ಸೇರ್ಪಡೆಯಾಗಿ ಬಿಡಿಸಿ ನೋಡಲಾಗದ ಹಾಗೆ ಬೆಸೆದುಕೊಂಡಿವೆ. ದೀರ್ಘವಾದ ಆಟಗಳನ್ನು ತುಂಡುಮಾಡಿ, ಬಿಡಿ ಬಿಡಿ ಭಾಗಗಳನ್ನು ಆಡುವುದೂ ಉಂಟು. ಈ ಬಗೆಯ ಆಟಗಳು ಸ್ವತಂತ್ರ ಅಸ್ತಿತ್ವವುಳ್ಳವುಗಳಂತೆ ಮೋಸ ಮಾಡುತ್ತವೆ. ಹೀಗೆ ಜನಪದ ಆಟಗಳು ವಿಭಿನ್ನ ನೆಲೆಯಲ್ಲಿ ಮೂಡಿಬಂದವುಗಳಾಗಿವೆ.

ಗಂಡು ಮತ್ತು ಹೆಣ್ಣುಗಳ ಶಾರೀರಕ ಬೆಳವಣಿಗೆ ಮತ್ತು ರಚನೆಗೆ ತಕ್ಕಂತೆ ಜನಪದ ಆಟಗಳು ಬೆಳೆದು ಬಂದಿವೆ. ಈ ಆಟಗಳು ದಿನನಿತ್ಯದ ಕೆಲಸಗಳನ್ನೂ ಅವಲಂಬಿಸಿವೆ. ಜನಪದರು ತಮ್ಮ ವ್ಯಕ್ತಿಗತ ಶ್ರಮದ ಮೇಲೆ ಹೆಚ್ಚು ನಂಬಿಕೆಯುಳ್ಳವರು. ಹೀಗಾಗಿ ಅವರ ಆಟಗಳಲ್ಲಿ ಭಾರವನ್ನು ಎತ್ತುವ, ಎಳೆಯುವ, ಹೇರುವ ಬಗೆಯ ತಂತ್ರಗಳನ್ನು ಅವಲಂಬಿಸಿ ಆಟಗಳು ಬಂದಿವೆ. ಆದರೆ ಈ ಬಗೆಯ ತಂತ್ರದ ಆಟಗಳು ಮಹಿಳೆಯರಿಗೆ ಅನ್ವಯವಾಗುವುದಿಲ್ಲ. ಅವರ ದಿನನಿತ್ಯದ ಚಟುವಟಿಕೆಗಳು ಬೇರೆ, ಅವರ ಶಾರೀರಿಕ ರಚನಾ ಬಗೆಯೇ ಬೇರೆ. ಹೀಗಾಗಿ ಅವರ ಆಟಗಳು ಇನ್ನೊಂದು ಬಗೆಯವು. ಹೊಲ – ಮನೆಗಳ ಕೆಲಸ ನಿರ್ವಹಿಸಲು ಸಹಾಯಕಾರಿಯಾಗುವ, ಬೆರಳಿನ ಚಾಕಚಕ್ಯತೆಗೆ ಸಂಬಂಧಿಸಿದಂತಹ, ಕಣ್ಣುಕಟ್ಟಿಯೂ ಕೆಲಸ ಮಾಡಬಹುದಾದಂತಹ, ಬಲಸಂವರ್ಧನೆಗೆ(ಪ್ರಸೂತಿ ವೇದನೆ ಸಹಿಸಲು) ಸಂಬಂಧಿಸಿದಂತಹ ಆಟಗಳು ಮಹಿಳೆಯರ ಸ್ವತ್ತಾಗಿವೆ. ಅಂಗವಿಕಲರಿಗೆ ಬಲಹೀನರಿಗೆ ಸಂಬಂಧಿಸಿದ ಆಟಗಳೂ ಜನಪದರ ಕಕ್ಷೆಯಲ್ಲಿರುವುದು ಗಮನಾರ್ಹ.

ಜನಪದ ಆಟಗಳನ್ನು ಸಂಗ್ರಹಿಸುವುದು ಸುಲಭ. ಆದರೆ ಅವನ್ನೆಲ್ಲ ಒಂದು ವ್ಯವಸ್ಥಿತ ಚೌಕಟ್ಟಿನಲ್ಲಿ ಹಿಡಿದಿಡಲು ಸಾಧ್ಯ ಎಂದು ಹೇಳಲಾಗದು. ಆಟಗಳ ಕುರಿತು ಅಧ್ಯಯನ ಮಾಡಿದ ವಿದ್ವಾಂಸರು ತಮ್ಮದೇ ಆದ ವಿಂಡಗಣಾಕ್ರಮದಲ್ಲಿ ದಾರಿ ತುಳಿದಿರುವುದು ಕಂಡುಬರುತ್ತದೆ. ಆದರೆ ಒಬ್ಬರು ತುಳಿದ ದಾರಿಯನ್ನು ಇನ್ನೊಬ್ಬರು ತುಳಿದಿರುವುದು ಕಂಡುಬರುವುದಿಲ್ಲ. ಹೀಗಾಗುವುದಕ್ಕೆ ಪ್ರಮುಖ ಕಾರಣ ಆಟಗಳಲ್ಲಿರುವ ಸಂಕೀರ್ಣತೆ. ಈವರೆಗೆ ವರ್ಗೀಕರಿಸಿದ ವಿದ್ವಾಂಸರ ವರ್ಗೀಕರಣಗಳನ್ನು ಗಮನಿಸಿ, ಅಧ್ಯಯನದ ಅನುಕೂಲಕ್ಕಾಗಿ ವಸ್ತು, ಕಾಲ, ಕ್ರಿಯೆ, ತಂತ್ರ ಇಂಥವುಗಳನ್ನು ಗಮನದಲ್ಲಿಟ್ಟುಕೊಂಡು ಹೀಗೆ ವರ್ಗೀಕರಿಸಿಕೊಳ್ಳಬಹುದು: ಹೀಗೆ ಜನಪದ ಆಟಗಳು, ಶಿಷ್ಟ ಆಟಗಳು.

ದೈನಂದಿನ ಕಾಲದ ಆಟಗಳು, ನಾಟಕೀಯ ಆಟಗಳು, ಸಮ್ಮಿಶ್ರಣದ ಆಟಗಳು, ತಂತ್ರಪ್ರಧಾನ ಆಟಗಳು, ಓಟಾಟಗಳು, ಮುಟ್ಟಾಟಗಳು, ಆಕ್ರಮಕಣದ ಆಟಗಳು, ಕುಂಟಾಟಗಳು, ಕಣ್ಣುಮುಚ್ಚುವ ಆಟಗಳು, ಬೆರಳಿಂದ ಆಡುವ ಆಟಗಳು, ತಿರುಪಿನ ಆಟಗಳು, ಆಳಿನೇರಿಕೆಯ ಆಟಗಳು, ಉಪಕರಣ ಪ್ರಧಾನ ಆಟಗಳು, ಗುಪ್ಪೆಯ ಆಟಗಳು, ಲಡ್ಡು ಟೋಪಿಯ ಆಟಗಳು, ಚಂಡಿನ ಆಟಗಳು, ಕಟ್ಟಿಗೆ ಬಳಸಿ ಆಡುವ ಆಟಗಳು, ಕಲ್ಲು ಬಳಸಿ ಆಡುವ ಆಟಗಳು, ಗುಂಡುಕಲ್ಲು ಬಳಸಿ ಆಡುವ ಆಟಗಳು, ಆಣೆಕಲ್ಲುಗಳಿಗೆ ಸಂಬಂಧಿಸಿದ ಆಟಗಳು, ಒಟ್ಟಪ್ಪಗಳಿಗೆ ಸಂಬಂಧಿಸಿದ ಆಟಗಳು, ನಕ್ಷೆಯ ಆಟಗಳು, ಅಪ್ರತ್ಯಕ್ಷ ನಕ್ಷೆಯ ಆಟಗಳು, ಅಪ್ರತ್ಯಕ್ಷ ಸಮಸ್ಯೆಯ ನಕ್ಷೆಯ ಆಟಗಳು, ಗಳಿಕೆಯ ನಕ್ಷೆಯ ಆಟಗಳು, ಕಡತದ ನಕ್ಷೆಯ ಆಟಗಳು, ರೇಖಾನಕ್ಷೆಯ ಆಟಗಳು, ಹಗ್ಗ – ದಾರ ಬಳಸಿ ಆಡುವ ಆಟಗಳು, ನೀರಿನಲ್ಲಿ ಆಡುವ ಆಟಗಳು ನಿರ್ದಿಷ್ಟ ಕಾಲದ ಆಟಗಳು, ಸಂಪ್ರದಾಯದ ಆಟಗಳು, ಹಬ್ಬದ ಆಟಗಳು, ಮದುವೆಯ ಸಂದರ್ಭದ ಆಟಗಳು, ಮದುಮಕ್ಕಳ ಆಟಗಳು (ವಧು – ವರ), ಬೀಗರ ಆಟಗಳು, ಸಾಂದರ್ಭಿಕ ಆಟಗಳು, ಪ್ರದರ್ಶನದ ಆಟಗಳು, ಸಾಹಸದ ಆಟಗಳು, ಸಾಹಸೇತರ ಆಟಗಳು, ಜೂಜಾಟಗಳು, ಕಾಳಗಗಳು, ಪಂದ್ಯಗಳು, ಜಿದ್ದಿನ ಆಟಗಳು.

ಈ ಬಗೆಯ ಸ್ಥೂಲ ವರ್ಗೀಕರಣದಿಂಧ ಜನಕಪದ ಆಟಗಳ ಬೆಳವಣಿಗೆಯನ್ನು ಸಲೀಸಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಆಟಿಕೆಯ ಬಳಕೆಯ ವೈವಿಧ್ಯತೆ ಮತ್ತು ಅದರಲ್ಲಿ ಬಂದು ಸೇರುವ ನಿಯಮಗಳಲು ಯಾವ ಕಾರಣಕ್ಕಾಗಿ ಭಿನ್ನತೆಯನ್ನು ಪಡೆದುಕೊಳ್ಳುತ್ತವೆ ಎಂದು ಸ್ಪಷ್ಟಪಡಿಸಬಹುದು.

ಎ.ಎಂ.

ಜನಪದ ಕಥೆಗಳು ಜನಪದ ಗದ್ಯಕಥನಗಳಲ್ಲಿ ಜನಪದ ಕಥೆಯೇ ಅತ್ಯಂತ ಪ್ರಮುಖವಾದುದು. ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದುಬಂದಿರುವ ಕಥೆಯನ್ನು ಸ್ಥೂಲವಾಘಿ ಜನಪದ ಕಥೆ ಎಂಬುದಾಗಿ ಕರೆಯಬಹುದು. ಈ ಜನಪದ ಕಥೆಗಳು ನಮ್ಮಲ್ಲಿ ‘ಅಜ್ಜಿಯ ಕಥೆಗಳು’ ಎಂದು ಪ್ರಸಿದ್ಧಿ ಪಡೆದುಕೊಂಡಿವೆ. ಕಥೆ ಹೇಳುವಲ್ಲಿ ಅಜ್ಜಿ ಪ್ರಧಾನ ಪಾತ್ರವಹಿಸುವುದರಿಂದ ಕಥೆಗಳಿಗೆ ಈ ಹೆಸರು ಬಂದಿದೆ. ವಾಚಕ ಪರಂಪರೆಯ ಈ ಕಥೆಗಳು ಕಾಲದ ಮೂಲಕ ಹರಿದು ಬರುವಾಗ ಸಾಹಿತ್ಯಿಕ ಪರಂಪರೆಗೆ ಹೋಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಹಾಗೆ ಹೋದ ಸಾಹಿತ್ಯಿಕ ಪರಂಪರೆಯ ಇಂತಹ ಕಥೆಗಳು ಮೂಲ ವಸ್ತುವಿನ ಸಾಂಪ್ರದಾಯಿಕ ಸ್ವಭಾವವವನ್ನು ಕಳೆದುಕೊಳ್ಳುವುದಿಲ್ಲ. ಬದಲಾಗುವುದೂ ಬೆಳೆಯುವುದೂ ಸಾಮಾನ್ಯ ಪ್ರಕ್ರಿಯೆ. ಕಥೆಗಳು ತಮ್ಮ ವಸ್ತುವಿನಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳಬಹುದು. ಕಥೆ ಹೇಳಲುವ ಪರಿಸ್ಥಿತಿಗಳೂ ಉದ್ದೇಶಗಳೂ ಬದಲಾವಣೆ ಹೊಂದಬಹುದು. ಆದರೆ ಒಂದೇ ಬಗೆಯ ಸಾಮಾಜಿಕ ಮತ್ತು ವೈಯಕ್ತಿಕ ಅಗತ್ಯಗಳು ಎಲ್ಲ ಕಡೆ ಇದ್ದೇ ತೀರುತ್ತವೆ.

ಕಥೆಗಳನ್ನು ಹೇಳುವುದಾಗಲಿ ಕೇಳುವುದಾಗಲಿ ನಿನ್ನೆ ಮೊನ್ನೆಯದಲ್ಲ. ಮೊದಲಿನಿಂದಲೂ ಮಾನವ ಕಥೆ ಹೇಳುವುದನ್ನು ಕಲೆಯಾಗಿ ಬೆಳೆಸಿಕೊಂಡ. ಈ ಕಾರಣದಿಂದಾಗಿಯೇ ಜನಪದ ಕಥೆಗಳು ತಲೆಮಾರಿನಿಂದ ತಲೆಮಾರಿಗೆ ದಾಟಿ ಬರುವುದು ಸಾಧ್ಯವಾಯಿತು. ಕಥೆ ಹೇಳುವ ಪ್ರಕ್ರಿಯೆಗೆ ವಿಶೇಷ ಸಂದರ್ಭಗಳು ಇರುತ್ತಿದ್ದವು. ಕೆಲವನ್ನು ಚಳಿಗಾಲದಲ್ಲೂ, ಕೆಲವನ್ನು ಬೇಸಿಗಯಲ್ಲೂ ಹೇಳುತ್ತಿದ್ದರು. ಕೆಲಸದ ಸಮಯದಲ್ಲಿ ಕೆಲಸದ ಶ್ರಮವನ್ನು ಮರೆಯಲು ಕಥೆಗಳನ್ನು ಹೇಳುತ್ತಿದ್ದರು. ಮಕ್ಕಳನ್ನು ಮಲಗಿಸಲು ಕಥೆ ದೊಡ್ಡ ಸಾಧನವಾಗಿ ಬಳಕೆಯಾಯಿತು. ರಾಜರು ಕಥೆ ಹೇಳುವವರನ್ನು ನೇಮಿಸಿಕೊಂಡಿದ್ದರ ಉಲ್ಲೇಖಗಳಿವೆ. ಹಳ್ಳಿಯ ಕಡೆಗಳಲ್ಲಿ ಇವೊತ್ತಿಗೂ ಊಟ ಮುಗಿದ ಮೇಲೆ ಬೆಳದಿಂಗಳಿನಲ್ಲಿ ಕಥೆ ಹೇಳುವವರನ್ನೂ ಅವರ ಸುತ್ತ ಕುಳಿತು ಕೇಳುವವರನ್ನೂ ನೋಡುತ್ತೇವೆ. ಈ ಕಥೆಗಳನ್ನು ಹೇಳಲು ಹಾಗೂ ಕೇಳಲು ಗಂಡಸರು, ಹೆಂಗಸರು, ಮಕ್ಕಳು – ಯಾರಾದರೂ ಆಗಿರಬಹುದು. ಅದು ಯಾವುದೇ ಪ್ರದೇಶ, ನಾಗರಿಕತೆಗೆ ಸೀಮಿತವಾದುದಲ್ಲ.

ಜನಪದ ಕಥೆಗಳಲ್ಲಿ ಸಮರೂಪತೆ ಒಂದು ಲಕ್ಷಣ. ವ್ಯತ್ಯಾಸಗಳೂ ಅಷ್ಟೇ ಮುಖ್ಯ. ಅವು ಕಾಲ ಮತ್ತು ಸ್ಥಳಗಳಲ್ಲಿ ಬದುಕುತ್ತವೆ; ಈಗಿರುವ ಭೂವಲಯ ಸ್ವಭಾವದಿಂದ ಪರಿಣಾಮಗೊಳ್ಳುತ್ತವೆ. ವರ್ಷಗಳು ಉರುಳಿದಂತೆ ಚಾರಿತ್ರಿಕ ವ್ಯತ್ಯಾಸಕ್ಕೆ ಗುರಿಯಾಗುತ್ತವೆ. ಜನಪದ ಕಥೆಗಳು ಕಾಲದಿಂದ ಕಾಲಕ್ಕೆ, ಬಾಯಿಂದ ಬಾಯಿಗೆ, ದೇಶದಿಂದ ದೇಶಕ್ಕೆ ಹರಿದು ಬರುವಾಗ ಅರಿತೋ ಅರಿಯದೆಯೋ ಬದಲಾವಣೆಯನ್ನು ಹೊಂದುತ್ತವೆ. ಈ ರೂಪಾಂತರ ಪ್ರವೃತ್ತಿಯಿಂದಾಗಿ ಕಥೆಗಳ ರಚನೆ ಬಿಗಿಯಾಯಿತು, ಶೈಲಿ ಸುಂದರವಾಯಿತು. ಜನಪದ ಕಥೆಗಳು ಅಧಿಕ ಪ್ರಮಾಣದಲ್ಲಿ ದೊರೆಯುವಂಥವು, ರೂಪದಲ್ಲಿ ವೈವಿಧ್ಯವಿರುವಂಥವು; ಭೌಗೋಳಿಕವಾಗಿ ಮತ್ತು ಚಾರಿತ್ರಿಕವಾಗಿ ವಿಸ್ತೃತ ವಿತರಣೆಯನ್ನು ಪಡೆದಿರುವಂಥವು.

ಜನಪದ ಕಥೆಯೊಂದು ನಮ್ಮ ಊಹೆಗೆ ಏನನ್ನೂ ಬಿಡುವುದಿಲ್ಲ. ಎಲ್ಲವನ್ನೂ ಸಮರ್ಪಕವಾಗಿ ಹೇಳಿಬಿಡುತ್ತದೆ. ಕಥೆ ಪ್ರಾರಂಭವಾಯಿತೆಂದರೆ ಮುಕ್ತಾಯದ ತನಕ ನಿರರ್ಗಳವಾಗಿ ಹರಿಯುತ್ತದೆ. ಕಥೆಗಳು ನೇರ ಹಾಗೂ ಸ್ಪಷ್ಟ. ವೈವಿಧ್ಯತೆಯ ಆರ್ಭಟವಿಲ್ಲ; ಸಂಕೀರ್ಣತೆಯ ಸೆಣಸಾಟವಿಲ್ಲ. ನಿಧಾನವಾದ ಪ್ರವೇಶ; ಸಾವಕಾಶ ಮುಕ್ತಾಯ. ವಸ್ತುವಿನ ಜಟಿಲತೆಯಿಲ್ಲ; ಪಾತ್ರಗಳ ತೊಡಕಿಲ್ಲ. ಉಪಕಥೆಗಳ ಗೋಜಿಲ್ಲ. ಕಥೆ ಹೇಳುವುದೊಂದೇ ಇಲ್ಲಿ ಪ್ರಧಾನ. ಉಳಿದುದು ಯಾವುದಿದ್ದರೂ ಅದಕ್ಕೆ ಪೂರಕವಾಗಿರಬೇಕು. ಇಲ್ಲಿ ನಡೆಯುವ ಕ್ರಿಯೆಗಳೆಲ್ಲ ಸರಳ ಹಾಗೂ ಸಹಜ; ಪರಿಣಾಮಕಾರಿ ಹಾಗೂ ಫಲಕಾರಿ. ಒಟ್ಟಿನಲ್ಲಿ ಜನಪದ ಕಥೆಗಳು ರಚನೆಯ ದೃಷ್ಟಿಯಿಂದ ಒಂದೇ ಮಾದರಿಯವು ಎನ್ನಬೇಕಾಗುತ್ತದೆ.

ಜನಪದ ಕಥೆಗಳಲ್ಲಿ ಮನುಷ್ಯ ಪಾತ್ರ ವಹಿಸುವುದಲ್ಲದೆ, ದೇವತೆ, ಪ್ರಾಣಿ, ದೆವ್ವ, ಬೇತಾಳ, ರಾಕ್ಷಸ ಮೊದಲಾದ ಮನುಷ್ಯೇತರರೂ ನಿರ್ಜೀವ ವಸ್ತು, ಮರಗಿಡಗಳೂ ಪಾತ್ರವಹಿಸುವುದುಂಟು. ಸ್ವರ್ಗ, ಮರ್ತ್ಯ, ನರಕ – ಈ ಮೂರು ಲೋಕಗಳಿಗೂ ಪಾತ್ರಗಳು ಸಂಬಂಧಿಸಿರುತ್ತವೆ. ಸಾಮಾನ್ಯವಾಗಿ ಪಾತ್ರಗಳ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಪಾತ್ರಗಳನ್ನು ನಾಯಕ ನಾಯಿಕೆಯರು, ಸಹಾಯಕರು ಮತ್ತು ಪ್ರತಿನಾಯಕರು ಎಂಬುದಾಗಿ ಮೂರು ವಿಭಾಘ ಮಾಡಿಕೊಳ್ಳಬಹುದು. ಇವರೆಲ್ಲರಿಗೂ ಸಾಹಸವೇ ಮೂಲವಾಗಿರುವುದರಿಂದ ಸಮಸ್ಯೆ ತಾನಾಗಿ ಗೋಚರಿಸುತ್ತದೆ. ನಾಯಕ ಸಾಮಾನ್ಯವಾಗಿ ಅನ್ವೇಷಕನಾಗಿ ಕಾಣಿಸಿಕೊಳ್ಳುತ್ತಾನೆ. ಇವನಲ್ಲಿ ಉತ್ತಮ ಗುಣಗಳ ಸಮಾವೇಶವೇ ಆಗಿರುತ್ತದೆ. ನಾಯಿಕೆ ಧೈರ್ಯವೊಂದನ್ನು ಬಿಟ್ಟರೆ, ನಾಯಕನ ಉಳಿದೆಲ್ಲ ಗುಣಗಳನ್ನೂ ಹೊಂದಿರುತ್ತಾಳೆ. ನಾಯಕ ನಿಷ್ಕ್ರಿಯನಾದಾಗ ಅತಿಮಾನುಷ ಸಹಾಯಕರೇ ನಾಯಕನ ಕೆಲಸವನ್ನು ನಿರ್ವಹಿಸುತ್ತಾರೆ. ಕಥಾನಾಯಕ ಸಾಮಾನ್ಯವಾಗಿ ಕಿರಿಯ ಮಗನಾಗಿರುತ್ತಾನೆ. ಸಂಸಾರದ ಹೊಣೆಯನ್ನು ಹಿರಿಯಮಗ ಹೊತ್ತಿರುವುದರಿಂದ, ಅವನ ಪ್ರಾಧಾನ್ಯ ಹೆಚ್ಚಿ ಕಿರಿಯ ವಂಚಿತನಾಗುವುದು. ಇದಕ್ಕೆ ಕಾರಣವಿರಬೇಕು. ಪ್ರಾಚೀನ ಕಾಲದಲ್ಲಿ ಆಸ್ತಿ ಹಕ್ಕು ಕಿರಿಯ ಮಗನ ಮೂಲಕ ಹೋಗುತ್ತಿದ್ದ ಪದ್ಧತಿಯೂ ಇದಕ್ಕೆ ಇನ್ನೊಂದು ನಿಮಿತ್ತವಾಗಿರಬೇಕು. ಪರಿತ್ಯಕ್ತನಾದ ಕಿರಿಯ ಮಗ ಸಹಜವಾಗಿ ಸ್ವತಂತ್ರನೂ ಸಾಹಸಿಯೂ ಆಗಬೇಕಾದ ಪ್ರಮೇಯ ಒದಗಿರಬೇಕೆಂದು ಕಾಣುತ್ತದೆ. ಇಲ್ಲವೆ ಇದಕ್ಕೆ ಕೇವಲ ಸಾಹಿತ್ಯಿಕ ತಂತ್ರವಾಗಿರಲೂಬಹುದು. ನಾಯಕ ರಾಜಕುಮಾರಿಯನ್ನು ವಿವಾಹವಾಗಿ ಮಾವನ ಸಾಮ್ರಾಜ್ಯಕ್ಕೆ ಒಡೆಯನಾಗುವುದು ಕಂಡುಬರುವುದಿದೆ. ಇದಕ್ಕೆ ಸಾಮ್ರಾಜ್ಯ ಮಗಳ ಮೂಲಕ ಹೋಗುತ್ತಿದ್ದುದು ಕಾರಣವೆಂದು ಊಹಿಸಲಾಗಿದೆ.

ಜನಪದ ಕಥೆಗಳಲ್ಲಿ ಸಹಾಯಕರ ಪಾತ್ರ ವೈವಿಧ್ಯಪೂರ್ಣವಾದುದು. ನಾಯಕ ಸಹಾಯಕರಿಂದ ಸಹಾಯ ಪಡೆದು ಸಾಧನೆಗಳನ್ನು ಮಾಡುವನು. ಸಹಾಯಕರಿಲ್ಲದೆ ನಾಯಕ ಜಯ ಪಡೆಯಲಾರ. ಹೀಗೆ ಸಹಾಯಕರ ಸಹಾಯ ಪಡೆಯಬೇಕಾದರೆ ನಾಯಕ ದಯಾಪರವಾದ ಕಾರ್ಯವನ್ನು ಮಾಡಿರಬೇಕಾಗುತ್ತದೆ. ಸಹಾಯಕರನ್ನು ಪ್ರಾಣಿಗಳು, ಅತಿಮಾನುಷ ಶಕ್ತಿಗಳು ಮತ್ತು ಅಚೇತನ ವಸ್ತುಗಳು ಎಂದು ವಿಭಜಿಸಿಕೊಳ್ಳಬಹುದು. ಕೆಲವೊಂದು ಸಂದರ್ಭದಲ್ಲಿ ಅಶರೀರವಾಣಿಯ ಆದೇಶ ನಾಯಕ ಕ್ರಿಯಾಶೀಲನಾಗುವಂತೆ ಮಾಡಬಹುದು. ಜನಪದ ಕಥೆಗಳಲ್ಲಿ ಪ್ರತಿನಾಯಕರ ಪಾತ್ರವೂ ಗಮನಾರ್ಹವಾದುದೇ. ಪ್ರತಿನಾಯಕರನ್ನು ವಿರೋಧಿಗಳೆಂದು ಕರೆಯುವುದು ಸೂಕ್ತ. ಸಂಸಾರದಲ್ಲಿಯ ಹೆಂಗಸು ಬಹುಮಟ್ಟಿಗೆ ಖಳನಾಯಕಳ ಪಾತ್ರವನ್ನು ವಹಿಸುವುದು ಸಾಮಾನ್ಯ. ‘ಮಲತಾಯಿ’ಯ ಪಾತ್ರ ಇದರಲ್ಲಿ ಮುಖ್ಯವಾದುದು. ಪ್ರತಿನಾಯಕರಲ್ಲೂ ಎರಡು ಗುಂಪುಗಳಿರುತ್ತವೆ. ಹಗೆತನ ಸಾಧಿಸುವ ಚಿಕ್ಕಪ್ಪಂದಿರು, ಕ್ರೂರ ಮಲತಾಯಿಯರು, ಅಸೂಯಾಪರ ಮಲಸೋದರ ಸೋದರಿಯರು, ವಿಶ್ವಾಸ ಘಾತುಕ ಜೊತೆಗಾರರು ಮೊದಲ ಗುಂಪಿನಲ್ಲಿ ಬರುವರು, ರಾಕ್ಷಸ, ಪ್ರೇತ, ದೆವ್ವ, ಐಂದ್ರಜಾಲಿಕ, ಮಾಟಗಾತಿ/ಮಾಟಗಾರ ಮುಂತಾದವರು ಎರಡನೆಯ ಗುಂಪಿನವರು. ಮೊದಲ ಗುಂಪಿನವರೇ ನಿಜವಾದ ಪ್ರತಿನಾಯಕರು, ಎರಡೂ ವರ್ಗದ ವಿರೋಧಿಗಳಿಗೆ ಶಿಕ್ಷೆ ಮಾತ್ರ ಸಮಾನವಾಗಿಯೇ ಇರುತ್ತದೆ.

ಜನಪದ ಕಥೆಗಳಲ್ಲಿ ಕಂಡು ಬರುವ ಮತ್ತೊಂದು ವಿಶೇಷ ಲಕ್ಷಣವೆಂದರೆ, ಮಾಂತ್ರಿಕ ವಸ್ತುಗಳು. ಮಂತ್ರದ ದಂಡ, ಮಾಯದ ಉಂಗುರ, ಕಪ್ಪು, ಭೂತಗನ್ನಡಿ, ಮಂತ್ರದ ಚಾಪೆ ಮೊದಲಾದವು ಇಲ್ಲಿ ಬರುತ್ತವೆ. ಕಥೆಗಳಲ್ಲಿ ಕಾಣಿಸಿಕೊಳ್ಳುವ ಸಾಂಪ್ರದಾಯಿಕ ನಿಯಮಗಳು ಅಥವಾ ಕಟ್ಟಳೆಗಳೂ ಸಾಮಾನ್ಯ ನಮೂನೆಗಳೇ. ಇವುಗಳಲ್ಲಿ ಎರಡು, ಮೂರು, ನಾಲ್ಕು, ಏಳು ಮತ್ತು ನಾಲ್ವತ್ತು ಸಂಖ್ಯೆಗಳು ಮತ್ತೆ ಮತ್ತೆ ಬರುವುದು ಪ್ರಮುಖವಾದ ಅಂಶ. ಎರಡರ ಸಂಖ್ಯೆಗೆ ಅವಳಿ ಸೋದರರು ಉದಾಹರಣೆಯಾಗುತ್ತಾರೆ. ಮೂರರ ಸಂಖ್ಯೆ ದಿನ, ತಿಂಗಳು ಮತ್ತು ವರುಷಗಳ ಕಾಲಮಿತಿಯನ್ನು ಸೂಚಿಸುವುದಕ್ಕೆ ಉಪಯೋಗವಾಗುತ್ತದೆ. ಮೂರರ ಸಂಖ್ಯೆ ಪಾತ್ರಗಳಿಗೆ ಎಂತೊ ಘಟನೆಗಳಿಗೂ ಅಂತೆಯೇ ಅನ್ವಯಿಸುತ್ತದೆ. ಕಥನ ಕ್ರಿಯೆ ಮೂರರ ಮೇಲೆ ಕೇಂದ್ರೀಕೃತವಾಗುವುದನ್ನು ಕಾಣುತ್ತೇವೆ. ರಾಜನ ಮೂರು ಜನ ಗಂಡು ಮಕ್ಕಳಲ್ಲಿ ಕಿರಿಯವನಾದ ಮೂರನೆಯವನೇ ನಾಯಕನಾಗುವುದು ಇದಕ್ಕೆ ಉದಾಹರಣೆ. ನಾಲ್ಕು ಮತ್ತು ಏಳರ ಸಂಖ್ಯೆಗಳು ಕಾಣಿಸಿಕೊಳ್ಳುವುದು ವಿರಳ. ಏಳರ ಸಂಖ್ಯೆ ಸಾಮಾನ್ಯವಾಗಿ ಪಾತ್ರಗಳ ಮೇಲೆ ನಿಲ್ಲುವುದು ಗಮನಾರ್ಹ. ನಾಲ್ವತ್ತರ ಸಂಖ್ಯೆ ನಾಲ್ವತ್ತು ದಿನಗಳನ್ನು ಸೂಚಿಸುವುದಕ್ಕೆ ಬಳಕೆಯಾಗುವುದು.

ಜನಪದ ಕಥೆಯ ಆರಂಭ ಮತ್ತು ಮುಕ್ತಾಯಕ್ಕೆ ಸಂಬಂಧಿಸಿದ ಕಥನ ತಂತ್ರ ಬಹಳ ಮುಖ್ಯವಾದುದು. ಸಾಮಾನ್ಯವಾಗಿ ಕಥೆಗಳಲ್ಲಿ ಸೂತ್ರಬದ್ಧ ಆರಂಭ ಮತ್ತು ಸೂತ್ರಬದ್ಧ ಮುಕ್ತಾಯ ಇರುತ್ತದೆ. ಇದನ್ನು ‘ಕಥಾಸೂತ್ರ’ ಎಂದು ಕರೆಯಲಾಗಿದೆ. ಕಥೆಗಳನ್ನು ಹೇಳುವ ಮತ್ತು ಕೇಳುವ ಪ್ರಕ್ರಿಯೆಯನ್ನು ಗಮನಿಸಿ ಈ ಲಕ್ಷಣಗಳನ್ನು ಹೇಳಲಾಗಿದೆ. ಅಂದರೆ ಪಠ್ಯದ ‘ಸಂದರ್ಭ’ವನ್ನು ಗಮನಿಸಿ ಇದನ್ನು ರೂಪಿಸಲಾಗುವುದು. ಮುಖ್ಯವಾಗಿ, ಆರಂಭ ಮತ್ತು ಮುಕ್ತಾಯಗಳು ಗೊತ್ತಾದ ಸೂತ್ರಕ್ಕೆ ಒಳಪಟ್ಟಿರುತ್ತವೆ ಎಂಬುದು ನಿರ್ವಿವಾದ ವಿಷಯ. ಸಾಮಾನ್ಯವಾಗಿ ಜನಪದ ಕಥೆಗಳು “ಒಂದಾನೊಂದು ಕಾಲ, ಒಂದಾನೊಂದು ಊರು, ಒಬ್ಬ ದೊರೆ, ಅವನಿಗೆ ಮಕ್ಕಳಿರಲಿಲ್ಲ” ಎಂಬ ರೀತಿಯಲ್ಲಿ ಸಾಗುತ್ತವೆ. ಕೆಲವು ಬಾರಿ ವಿಸ್ತೃತ ಸೂತ್ರಗಳೂ ಬರುತ್ತವೆ. ಕೆಲವು ಕಥೆಗಳು ವ್ಯಕ್ತಿಗಳ ಮತ್ತು ಸ್ಥಳಗಳ ಹೆಸರಿನಿಂದ ಆರಂಭವಾಗುವುದುಂಟು. ಉದಾಹರಣೆಗೆ, “ಚಂದ್ರಾವತಿ ಪಟ್ಟಣ, ಚಂದ್ರಶೇಖರಾಯ ದೊರೆ” ಇತ್ಯಾದಿ. ಗ್ರಾಂಥಿಕ ಕಥೆಗಳಲ್ಲಿ ಹೆಸರುಗಳಿಂದ ಆರಂಭವಾಗುವುದು ಸಹಜವಾದರೂ, ಜನಪದ ಕಥೆಯದು ಅಂತಹ ಜಾಯಮಾನವಲ್ಲ. ಒಂದು ಪಕ್ಷ ಬಂದರೆ, ಅದು ಸಾಹಿತ್ಯಿಕ ಕಥೆಯ ಸಂಪರ್ಕ ಮತ್ತು ಪ್ರಭಾವಗಳಿಂದ ಆದುದೆಂದು ಹೇಳಬೇಕಾಗುತ್ತದೆ. ಕೆಲವು ಸಾರಿ ಕಥೆ ಹೇಳುವವರು ಕಥೆಯ ಆರಂಭವನ್ನು ತಮ್ಮ ವೈಯಕ್ತಿಕ ಪರಿಸರಕ್ಕೆ ಹೊಂದಿಸಿಕೊಂಡು ಹೇಳುವುದುಂಟು. ಇಂಥ ಸಂದರ್ಭಗಳಲ್ಲಿ ಕಥಾವಕ್ತೃ ತನ್ನನ್ನೊ ತನ್ನ ಸಮಕಾಲೀನರಾದ ಮತ್ತರನ್ನೊ ಬಳಸಿಕೊಳ್ಳುವುದು ವಾಡಿಕೆ. ಊರು, ರಾಜ, ರಾಣಿ ಮುಂತಾದ ಹೆಸರುಗಳು ಸಾರ್ವತ್ರಿಕವಾಗಿ ಬಳಕೆಯಾಗುವುದರಿಂದ, ಅವುಗಳ ಬದಲು ಇನ್ನಾವ ಹೆಸರನ್ನು ಸೇರಿಸಿದರೂ ಕಥೆಯ ಮೂಲ ರಚನೆಯಲ್ಲಿ ವ್ಯತ್ಯಾಸವೇನೂ ಸಂಭವಿಸುವುದಿಲ್ಲ. ಕಥನ ಪರಿಣಾಮವನ್ನು ತೀವ್ರಗೊಳಿಸುವುದಕ್ಕೂ ಈ ಬಗೆಯ ವಿಧಾನ ಬಳಕೆಯಾಗಬಹುದು. ಹೀಗೆ ಮಾಡುವುದು ಸಾಧ್ಯವಾಗುವುದು ಕಥಾಶ್ರೋತೃ ಪರಿಚಿತ ಪರಿಸರದವರಾಗಿದ್ದಾಗ ಮಾತ್ರ. ಕಥೆ ಹೇಳುವವರು ಹೇಳುವ ಧಾಟಿಯಲ್ಲಿ ಮಾಡಿಕೊಳ್ಳುವ ಬದಲಾವಣೆ ಇದೆಂದು ವಿವರಿಸಬೇಕಾಗಿದೆ.

ಕಥೆಯ ಆರಂಭದಂತೆಯೇ ಮುಕ್ತಾಯವೂ ಗಮನಾರ್ಹವಾದುದೇ. “ಆಮೇಲೆ ಅವರು ಸುಖವಾಗಿದ್ದರು”, “ಅವರು ಅಲ್ಲಿ ಬಾಳ್ತಾ ಇದ್ರೆ, ನಾವು ಇಲ್ಲಿದ್ದೇವೆ” ಎಂಬಂತಹ ಸೂತ್ರಬದ್ಧ ಮುಕ್ತಾಯ ಪದೇ ಪದೇ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಕಥೆ ಸುಖಾಂತವಾಗಿ, ಅದರಲ್ಲಿಯೂ ಮದುವೆಯ ಉತ್ಸವದಲ್ಲಿ ಮುಕ್ತಾಯ ಪಡೆಯುತ್ತದೆ. ಈ ಸಂದರ್ಭದಲ್ಲಿ ವಿವರವಾಸ ಸೂತ್ರಗಳೂ ಬರುತ್ತವೆ. ಉದಾಹರಣೆಗೆ, “ಕೊಟ್ಟಣ ಕುಟ್ಟಿಸಿ ಪಟ್ಟಣಸಾರಿಸಿ, ಕಾಣದವರಿಗೆ ವಾಲೆ ಬರೆದು, ಕಂಡವರಿಗೆ ಕರಪತ್ರ ಕಳುಹಿಸಿ, ಉಘೇ ಅಂತ ಮದುವೆ ಮಾಡ್ಕೊಂಡು ಸುಖವಾಗಿದ್ರು”. ಇದನ್ನು ನೋಡಿದರೆ ಕಥಾವಕ್ತೃ ಕೂಡ ಪ್ರತಿನಿಧಿಯಾಗಿದ್ದನೋ ಎನಿಸುತ್ತದೆ. ಕೆಲವು ಸಾರಿ ಒಂದು ಕಥೆ ಮುಗಿದೊಡನೆ, ಬೇರೊಂದು ಕಥೆ ಹೇಳು ಎಂದು ಕೇಳುವುದುರ ಮೂಲಕ ಕೇಳಿದವರ ಹೆಸರು, ಹೇಳಿದವರ ಹೆಸರುಗಳೊಡನೆ ಇನ್ನೊಂದು ಕಥೆಗೆ ಮುಂದುವರಿಯುವುದನ್ನು ಗುರುತಿಸಬಹುದು. ಬೃಹತ್ಕಥೆ, ಪಂಚತಂತ್ರ ಮುಂತಾದ ಗ್ರಾಂಥಿಕ ಸ್ವರೂಪದ ಕಥೆಗಳಲ್ಲಿ ಇದನ್ನು ಕಾಣುತ್ತೇವೆ. ಕಥಾವಕ್ತೃ, ಶ್ರೋತೃವಿನಲ್ಲಿ ಆಸಕ್ತಿ ಕೆರಳಿಸುವುದಕ್ಕಾಗಿ ಇದ್ದಕ್ಕಿದ್ದಂತೆ ನಿಲ್ಲಿಸಿದಾಗ, ಶ್ರೋತೃವಿನ ಪ್ರಶ್ನೆ, ವಕ್ತೃವಿನ ಉತ್ತರ, ಹೀಗೆ ಕಥೆ ಸಾಗುವುದು ಕೂಡ ಕಥನ ಕ್ರಿಯೆಯಲ್ಲಿ ಕಂಡುಬರುತ್ತದೆ. ಕಥನ ತಂತ್ರದ ಇನ್ನೊಂದು ಅಂಶವೆಂದರೆ, ಕಥನಕ್ರಿಯೆಯ ನಡುವೆ ಕಥಾವಕ್ತೃ ಶ್ರೋತೃಗಳನ್ನು ‘ಅರ್ಥವಾಯಿತೆ’, ‘ತಿಳಿಯತೆ’ ಮುಂತಾಗಿ ಆಸಕ್ತಿಯಿಂದ ಪ್ರಶ್ನಿಸುವುದು, ಅವರು ತಾವು ಕೇಳಿದ್ದನ್ನು ಸ್ಪಷ್ಟಪಡಿಸಲು ‘ಹ್ಞೂ’ ಗುಟ್ಟುವುದು. ಈ ರೀತಿಯ ಕಥೆಯ ನಡವಳಿಕೆ ನಮ್ಮ ಕುತೂಹಲವನ್ನು ಹಿಡಿದಿಡುವುದರಲ್ಲಿ ಯಶಸ್ವಿಯಾಗುತ್ತದೆ.

ಜನಪದ ಕಥೆಗಳು ಕಲಾತ್ಮಕ ಸೃಷ್ಟಿಗಳೆಂಬುದು ನಿಜ. ಅವು ಜನತೆಯ ಸಾಂಸ್ಕೃತಿಕ ಇತಿಹಾಸದ ಬಹುಮುಖ್ಯ ಭಾಗ ಕೂಡ. ಮನುಷ್ಯನ ಬೌದ್ಧಿಕ ಮತ್ತು ರಸಾಭಿಜ್ಞತೆಯ ತಿಳಿವಳಿಕೆಯನ್ನು ಅವು ನೀಡುತ್ತವೆ. ಅದ್ಭುತ ರಂಜಕತೆ ಅವುಗಳ ವೈಶಿಷ್ಟ್ಯ. ಪ್ರಮುಖ ಘಟನೆಗಳು ಮನಶ್ಸಾಸ್ತ್ರೀಯ ಹಿನ್ನೆಲೆಯಲ್ಲಿ ರೂಪಿತವಾಗಿರುತ್ತವೆ. ಆಗಾಗ್ಗೆ ಭಾವನಾತ್ಮಕವಾಗುವ ಸಂಭವವೂ ಇರುತ್ತದೆ. ಜನತೆಯ ಆಚಾರ – ವಿಚಾರಗಳ, ನಂಬಿಕೆ ನಡಾವಳಿಗಳ, ವಿವೇಕ ಬುದ್ಧಿವಂತಿಕೆಗಳ ಪ್ರತಿನಿಧಿಗಳು ಈ ಕಥೆಗಳು. ಇಂದಿಗೂ ಸಮಾಜದ ಎಲ್ಲ ವಯಸ್ಸಿನವರಿಗೂ ಮನರಂಜನೆ ನೀಡುವ ಪ್ರಮುಖ ಪ್ರಕಾರವಾಗಿಯೂ ಇವು ಪ್ರಸಿದ್ಧವಾಗಿವೆ. ಸಾಹಸ ಕಾರ್ಯಗಳ, ಜ್ಞಾನ ಸಾಧನೆಯ ಸಂಕೇತವೂ ಇವಾಗಿವೆ. ಬೇಸರ ತರುವ ಏಕತಾನತೆಯಿಂದ ಇವು ಬಿಡುಗಡೆ ಮಾಡುತ್ತವೆ. ನೋವನ್ನು ನಿವಾರಿಸುತ್ತವೆ, ಬದುಕುವುದನ್ನು ಕಲಿಸುತ್ತವೆ.

ಜನಪದ ಕಥೆಗಳನ್ನು ಒಟ್ಟಾರೆ ಸಂಕೀರ್ಣ ಕಥೆಗಳು ಮತ್ತು ಸರಳ ಕಥೆಗಳು ಎಂಬುದಾಗಿ ಎರಡು ವಿಭಾಗ ಮಾಡಿಕೊಳ್ಳಬಹುದು. ಅನೇಕ ಆಶಯಗಳು, ವಿಸ್ತಾರವಾದ ಕಥೆ, ಮೇಲಿಂದ ಮೇಲೆ ಬರುವ ಘಟನಾವಳಿ, ಅತಿಮಾನುಷ ವಾತಾವರಣ – ಇವು ಸಂಕೀರ್ಣ ಕಥೆಗಳ ಲಕ್ಷಣಗಳಾಗುತ್ತವೆ. ಸರಳ ಕಥೆಗಳು ಕಡಿಮೆ ಆಶಯಗಳಿಂದ ಕೂಡಿದ ಚಿಕ್ಕ ಕಥೆಗಳು; ಅಪಾರ ಸಂಖ್ಯೆಯಲ್ಲಿ ಸಿಗುತ್ತವೆ. ಪ್ರಾಣಿ, ವಿನೋದ, ಬುದ್ಧಿವಂತಿಕೆ, ನೀತಿ ಮೊದಲಾದವುಗಳಿಗೆ ಮಾಡಿಕೊಳ್ಳಬಹುದು: ಕಟ್ಟು ಕಥೆ ಮತ್ತು ಅದಕ್ಕೆ ಸಂಬಂಧಿಸಿದ ಕಥಾರೂಪಗಳು, ಮಾಂತ್ರಿಕತೆ ಮತ್ತು ಅದ್ಭುತಗಳು, ಪ್ರೇಮಿಗಳು ಮತ್ತು ದಂಪತಿಗಳು, ಪರೀಕ್ಷೆಗಳು ಮತ್ತು ಅನ್ವೇಷಣೆಗಳು, ವಿಧೇಯತೆ, ಒಳ್ಳೆಯ ಹಾಗೂ ಕೆಟ್ಟ ಬಂಧುಗಳು. ಅತೀತ ಶಕ್ತಿಗಳು, ಮೂರು ಲೋಕಗಳು ಎಂಬುದಾಗಿ ಒಡೆದುಕೊಳ್ಳುತ್ತದೆ. ಎರಡನೆಯದರಲ್ಲಿ ಜಾಣತನ, ಮೋಸ, ವಂಚನೆ, ಕಳ್ಳತನ ಮೊದಲಾದವುಗಳಿಗೆ ಸಂಬಂಧಿಸಿದ ಕಥೆಗಳು ಬರುತ್ತವೆ. ಸರಳ ಕಥೆಗಳನ್ನು ವಿನೋಧ ಕಥೆಗಳು, ಪ್ರಾಣಿ ಕಥೆಗಳು, ಸೂತ್ರಕಥೆಗಳು, ಐತಿಹ್ಯ ಮತ್ತು ಸಂಪ್ರದಾಯಗಳು ಎಂಬುದಾಗಿ ಒಳವಿಭಾಗಗಳಾಗಿ ವಿಭಜಿಸಿಕೊಳ್ಳಬಹುದು. ವಿವಿಧ ಪ್ರಕಾರಗಳ ನಡುವೆ ನಿರ್ದಿಷ್ಟವಾಗಿ ಗೆರೆ ಎಳೆಯುವುದು ಕಷ್ಟವಾಗಿದೆ. ಆಯಾ ಪ್ರಕಾರದ ಕಥೆಗಳಲ್ಲಿ ಪ್ರಧಾನವಾಗಿ ಕಾಣುವ ಲಕ್ಷಣಗಳನ್ನು ಗಮನದಲ್ಲಿರಿಸಿಕೊಂಡು ವರ್ಗೀಕರಿಸಲಾಗಿದೆ.

ಜನಪದ ಕಥೆಗಳಲ್ಲಿ ಆಶಯ ಮತ್ತು ವರ್ಗ ಪರಿಕಲ್ಪನೆಗಳು ಮಹತ್ವದ ಪಾತ್ರವಹಿಸಿವೆ. ಕಥನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಇವುಗಳಿಂದ ಬಹಳವಾಗಿ ಉಪಯೋಗವಾಗಿವೆ. ಕಥೆಯ ಅತ್ಯಂತ ಚಿಕ್ಕ ಘಟಕ ಅಥವಾ ಮೂಲಾಂಶವೇ ಆಶಯವೆನಿಸುತ್ತದೆ. ಕಥನ ಆಶಯಗಳು ಬಹಳ ಸರಳ ಕಲ್ಪನೆಗಳು, ಸಾಂಪ್ರದಾಯಿಕ ಕಥೆಗಳಲ್ಲಿ ನಿರಂತರವಾಗಿ ಕಾಣಸಿಗುತ್ತವೆ. ಇವು ಸ್ವಾಭಾವಿಕವಾಗಿರದೆ, ಅದ್ಭುತವೂ ಅಸಾಮಾನ್ಯವೂ ಆಗಿರುತ್ತದೆ. ಸಾಮಾನ್ಯವಾಗಿ ಇವು ಕಿನ್ನರರು, ಮಾಟಗಾತಿಯರು, ರಾಕ್ಷಸರು, ಕ್ರೂರ ಮಲತಾಯಿಯರು , ಮಾತನಾಡುವ ಪ್ರಾಣಿಗಳು ಇತ್ಯಾದಿಗಳಾಗಿರುತ್ತವೆ. ಹೀಗೆಯೇ ಮಾಂತ್ರಿಕತೆ ಕ್ರಿಯಾಶೀಲವಾಗಿರುವ ಅದ್ಭುತ ಜಗತ್ತುಗಳು, ಎಲ್ಲ ರೀತಿಯ ಮಾಂತ್ರಿಕ ವಸ್ತುಗಳು ಮತ್ತು ಅಸಾಮಾನ್ಯ ದೈಹಿಕ ವಿಷಯಗಳು – ಇವೂ ಆಶಯಗಳಾಗುತ್ತವೆ. ಈ ಎಲ್ಲ ವಿಷಯಗಳೂ ತಮಗೆ ತಾವು ಆಶಯಗಳೆನಿಸಿಕೊಳ್ಳುವುದಿಲ್ಲ. ಅವು ನಿರ್ವಹಿಸುವ ಕಾರ್ಯಗಳಿಂದ ಹಾಗೆ ಪರಿಗಣಿತವಾಗುತ್ತವೆ. ಮಂತ್ರದ ದಂಡ, ಮಾಯದ ಚಾಪೆಗಳನ್ನೆ ಉದಾಹರಿಸಬಹುದು. ಎಷ್ಟು ಜನರಿಗೆ ಬೇಕಾದರೂ ಉಣಬಡಿಸುವ ಶಕ್ತಿಯಿಂದಾಗಿ ಮಂತ್ರದದಂಡವೂ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುವ ಸಾಮರ್ಥ್ಯದಿಂದಾಗಿ ಮಾಯದ ಚಾಪೆಯೂ ಆಶಯಗಳಾಗಿವೆ. ಪ್ರತಿಯೊಂದು ಆಶಯಕ್ಕೂ ಕ್ರಿಯಾಶೀಲ ಭಾಗವೊಂದು ಇರುವುದರಿಂದಾಗಿ ಅದಕ್ಕೆ ಆ ಮಹತ್ತ್ವ ಬಂದಿರುತ್ತದೆಯೆಂದೇ ತಿಳಿಯಬೇಕು. ಕೆಲವು ಸಾರಿ ಆಶಯ ವಿಷಯಗಳಿಗೂ ಅವುಗಳ ಕ್ರಿಯೆಗಳಿಗೂ ತರ್ಕಬದ್ಧ ಸಂಬಂಧ ಇರುತ್ತದೆ. ನಾಯಕನೊಬ್ಬನನ್ನು ವಿರೋಧಿ ಹಿಂಬಾಲಿಸಿದಾಗ ಅವನನ್ನು ತಡೆಯಲು ತನ್ನ ಹಿಂದಕ್ಕೆ ಇದ್ದಿಲನ್ನೊ ಮರಳನ್ನೊ ಎಸೆಯುತ್ತಾನೆ. ಆಗ ಕ್ರಮವಾಗಿ ಇದ್ದಿಲಿಂದ ಬೆಂಕಿಯೂ, ಮರಳಿಂದ ಹೊಗೆಯೂ, ಉತ್ಪನ್ನವಾಗಿ ವಿರೋಧಿಯನ್ನು ತಡೆಯುತ್ತದೆ. ಆಶಯ ಚಿಕ್ಕದಾಗಿರುವುದು ಮಾತ್ರವಲ್ಲದೆ, ಸರಳ ಕಥೆಯೊಂದರ ಸ್ವತಂತ್ರ ಅಸ್ತಿತ್ವವನ್ನು ಪಡೆದಿರಬಹುದು.

ಆಶಯ ಸಾಮಾನ್ಯ ವಸ್ತುಸ್ಥಿತಿಗಿಂತ ಮಿಗಿಲಾದುದು, ಜನರು ಸುಲಭವಾಗಿ ನೆನಪಿಟ್ಟುಕೊಳ್ಳುವಂಥದು; ಪುನರಾವರ್ತಿಸುವ ವಿಶೇಷದ್ದು, ತಾಯಿ ಆಶಯವಾಗಲಾರಳು; ಆದರೆ ಕ್ರೂರ ಮಲತಾಯಿ ಆಶಯವಾಗಬಹುದು . ಸೋದರ ಆಶಯವಾಗಲಾರ; ಆದರೆ ಕ್ರೂರ ಮಲಸೋದರ ಆಶಯವಾಗುವನು. ಜೀವನದ ಸಾಮಾನ್ಯ ಸಂಗತಿಗಳು ಆಶಯಗಳಾಗುವುದಿಲ್ಲ. ಹಸುವಿನಿಂದ ಹಾಲು ಕರೆದುಕೊಳ್ಳುವುದು ಆಶಯವಾಗುವುದಿಲ್ಲ; ಆದರೆ, ಹುತ್ತಕ್ಕೆ ಹಸು ತನಗೆ ತಾನೆ ಹಾಲು ಕರೆದರೆ ಅದು ಆಶಯವಾಗುವುದು. ಕಾಡಿಗೆ ಹೋಗಿ ಪಕ್ಷಿಯನ್ನು ಹಿಡಿದು ತಂದರೆ ಆಶಯವಾಗಲಾರದು; ಆದರೆ ಕಥಾನಾಯಕ ಏಳು ಸಮುದ್ರದ ಆಚೆ ಕೀಳು ಸಮುದ್ರಕ್ಕೆ ಹೋಗಿ ವಿರೋಧಿಯ ಪ್ರಾಣವಿರುವ ‘ಅದ್ಭುತ ಶಕ್ತಿ’ಯನ್ನು ತಂದರೆ ಅದು ಆಶಯವಾಗುತ್ತದೆ. ಈ ಪ್ರತಿಯೊಂದು ಆಶಯವೂ ಜೀವಂತವಾದುದು. ತಲೆಮಾರುಗಳ ಮೂಲಕ ಕಥಾವಕ್ತೃಗಳನ್ನೂ ಶ್ರೋತೃಗಳನ್ನೂ ತೃಪ್ತಿಪಡಿಸಿರುವುದು ಇದಕ್ಕೆ ಕಾರಣ. ಕಥೆ ಬೆಳವಣಿಗೆಯಾಗುವುದು ಆಶಯದ ಮೂಲಕವೇ .

ಸ್ವತಂತ್ರ ಅಸ್ತಿತ್ವವುಳ್ಳ ಯಾವುದೇ ಸಾಂಪ್ರದಾಯಿಕ ಕಥೆ ‘ವರ್ಗ’ವಾಗಬಲ್ಲದು. ಅದು ಅರ್ಥದಲ್ಲಿ ಬೇರೆ ಕಥೆಯನ್ನು ಅವಲಂಬಿಸಿರದೆ ತನಗೆ ತಾನೆ ಪೂರ್ಣವಾಗಿರಬೇಕು. ಕೆಲವು ವರ್ಗಗಳು ಹತ್ತಾರು ಆಶಯಗಳನ್ನೊಳಗೊಂಡಂತೆ ದೀರ್ಘವಾಗಿರಬಹುದು. ಇನ್ನು ಕೆಲವು ವರ್ಗಗಳು ಒಂದೇ ಆಶಯವನ್ನೊಳಗೊಂಡ ಚಿಕ್ಕಕಥೆಯಾಗಿರಬಹುದು. ಆಶಯಕ್ಕೆ ತಕ್ಕಂತೆ ಕಥೆ ದೀರ್ಘ ಅಥವಾ ಚಿಕ್ಕದಾಗುತ್ತದೆ. ಒಂದೇ ಆಶಯವಿದ್ದಾಗ ಕಥನ ಆಶಯಕ್ಕೂ ಕಥಾವರ್ಗಕ್ಕೂ ವ್ಯತ್ಯಾಸ ಕಂಡುಬರುವುದಿಲ್ಲ. ಪ್ರತಿ ವರ್ಗದಲ್ಲೂ ಆಶಯ ಇದ್ದೇ ತೀರಬೇಕು; ಆದರೆ ಪ್ರತಿ ಆಶಯವೂ ವರ್ಗವಾಗಿರಬೇಕೆಂಬ ನಿಯಮವಿಲ್ಲ. ಕಥಾವರ್ಗವೊಂದರಲ್ಲಿ ಒಂದು ಆಶಯವಿದ್ದಾಗ ಮಾತ್ರ ಅದು ಸ್ವತಂತ್ರ ಕಥನವಾಗಿ, ಅಂದರೆ ಕಥಾವರ್ಗವಾಗಿ ನಿಂತುಕೊಳ್ಳುತ್ತದೆ. ಉದಾಹರಣೆಗೆ, ‘ಕುಂಟನಕ ಸಾಹಸ’ ಎಂಬ ಕಥೆಯನ್ನೆ ನೋಡಬಹುದು. ರಾಕ್ಷಸಿಗೆ ಅವಳಿಗಿಂತ ದೊಡ್ಡ ರಾಕ್ಷಸಿ ಇದೆ ಎಂದು ಭ್ರಮೆ ಹುಟ್ಟಿಸಿ ಉದ್ದಿಷ್ಟ ಕಾರ್ಯವನ್ನು ಸಾಧಿಸಿಕೊಳ್ಳುವುದು ಇದರ ಕಥಾವರ್ಗವಾಗಿದೆ. ಇದು ಆಂಟಿ ಆರ್ನೆ ಮತ್ತು ಸ್ವಿತ್‌ ಥಾಮ್ಸನ್‌ ಅವರ ವರ್ಗಸೂಚಿಯ ೧೧೫೨ನೆಯ ವರ್ಗವನ್ನು ಹೋಲುತ್ತದೆ. ಇದರಲ್ಲಿ ಒಬ್ಬ ಅಥವಾ ಅನೇಕ ವ್ಯಕ್ತಿಗಳು ರಾಕ್ಷಸ ಅಥವಾ ರಾಕ್ಷಸಿಯನ್ನು ಹೆದರಿಸಬಹುದು. ಪ್ರಸ್ತುತ ಕಥೆಯಲ್ಲಿ ಕುಂಟನ ಜೊತೆಗೆ ಅವನ ಅಣ್ಣಂದಿರೂ ಸೇರಿಕೊಳ್ಳುವುದರಿಂದ ಇಲ್ಲಿ ರಾಕ್ಷಸಿಯನ್ನು ಹೆದರಿಸಲು ಪ್ರಯತ್ನ ಮಾಡುವವರು ಅನೇಕರಾಗುತ್ತಾರೆ. ಅಂದರೆ ಕುಂಟನ ಪಾತ್ರವೇ ಪ್ರಧಾನ ಸ್ಥಾನದಲ್ಲಿದ್ದು ಉಳಿದವರು ನೆಪಮಾತ್ರಕ್ಕೆ ಬರುವರು. ರಾಕ್ಷಸಿ ಅಪಹರಿಸಿಕೊಂಡು ಹೋದ ತಂಗಿಯನ್ನು ಕುಂಟ ಮತ್ತಿತರರು ತರಲು ಪ್ರಯತ್ನಿಸುವುದೇ ಇಲ್ಲಿಯ ಕ್ರಿಯೆ. ಇದಕ್ಕಿದ್ದ ಒಂದೇ ಮಾರ್ಗವೆಂದರೆ ಆ ರಾಕ್ಷಸಿಯನ್ನು ಅವಳಿಗಿಂತ ದೊಡ್ಡ ರಾಕ್ಷಸಿಯ ಅಸ್ತಿತ್ವದ ಕಲ್ಪನೆಯ ಮೂಲಕ ಹೆದರಿಸುವುದು. ಹೀಗೆ ಮಾಡಬೇಕಾದೆ ದೊಡ್ಡ ರಾಕ್ಷಸಿಯ ಕಲ್ಪನೆಯನ್ನು ಕೆಲವು ಗುರುತುಗಳ ಮೂಲಕ ತೋರಬೇಕಾಗುತ್ತದೆ. ಈ ಗುರುತುಗಳು ಅವರು ದಾರಿಯಲ್ಲಿ ಸಂಗ್ರಹಿಸದ ವಸ್ತುಗಳೇ ಆಗಿರುತ್ತವೆ. ಈ ವಸ್ತುಗಳು ಮತ್ತು ಅವು ನಿರ್ವಹಿಸುವ ಕಾರ್ಯವನ್ನು ಆಶಯಗಳೆಂದು ಪರಿಗಣಿಸಬಹುದು. ಪ್ರಸ್ತುತ ಕಥಾವರ್ಗದ ಆಶಯಗಳು ಹೀಗೆ ಇವೆ:

೧. ನೇಗಿಲು – ದೊಡ್ಡರಾಕ್ಷಸಿಯ ಕಾಲು
೨. ನೊಗ – ದೊಡ್ಡ ರಾಕ್ಷಿಸಯ ಕೈ
೩. ಪಾನಿ – ದೊಡ್ಡ ರಾಕ್ಷಸಿಯ ಹೊಟ್ಟೆ
೪. ಮೇಕೆಯ ಕೊಂಬು – ದೊಡ್ಡ ರಾಕ್ಷಸಿಯ ಉಗುರು
೫. ಕತ್ತೆತಿಕಕ್ಕೆ ಕಡಜ ಬಿಡುವುದು – ದೊಡ್ಡ ರಾಕ್ಷಸಿಯ ಧ್ವನಿ.

ಸಂಗ್ರಹಿಸಿದ ವಸ್ತುಗಳು ಕೆಲವು ಬಾರಿ ಭಿನ್ನವಾಗಿರಲು ಸಾಧ್ಯವಿದೆ. ಆಗ ಅವು ತೋರಿಸುವ ಗುರುತುಗಳು ಕೂಡ ಬೇರೆಯಾಗಿರುತ್ತವೆ. ನೇಗಿಲು ಕೆಲವೊಮ್ಮೆ ರಾಕ್ಷಸ ಅಥವಾ ರಾಕ್ಷಸಿಯ ಹಲ್ಲಿಗೆ ಗುರುತಾಗಿ ಬರಬಹುದು. ಕೆಲವು ಪಾಠಗಳ ಪ್ರಕಾರ ಹಲುಬಿ ರಾಕ್ಷಸಿಯ ಹಲ್ಲುಗಳನ್ನು ಸೂಚಿಸಬಹುದು. ಹಲ್ಲುಗಳನ್ನು ಸೂಚಿಸಲು ಬರುವ ನೇಗಿಲು ಮತ್ತು ಹಲುಬಿಗಳಲ್ಲಿ ನೇಗಿಲೇ ಸರಿಯಾದ ಪಾಠವೆಂದೇ ತೋರುತ್ತದೆ. ನೇಗಿಲು ಮೂಲದಲ್ಲಿದ್ದು ಆಮೇಲೆ ಅದರ ಸ್ಥಾನದಲ್ಲಿ ಹಲುಬಿ ಬಂದಿರಬೇಕು. ಇದರ ಮಾರ್ಪಾಟಿಗೆ ಕಥಾವಕ್ತೃಗಳೇ ಕಾರಣವಾಗಿದ್ದಾರೆ. ರಾಕ್ಷಸಿಯರಿಗೆ ಕೋರೆ ಹಲ್ಲುಗಳಿವೆ ಎಂಬುದು ಜನಪದ ಕಲ್ಪನೆಯಾದುದರಿಂದ, ನೇಗಿಲನ್ನು ಹಲ್ಲುಗಳಿಗೆ ಬಳಸಿಕೊಂಡುದರಲ್ಲಿ ಹೆಚ್ಚು ಔಚಿತ್ಯವಿದೆ. ಈ ಎಲ್ಲದರಲ್ಲಿಯೂ ರಾಕ್ಷಸಿಯ ಪಾತ್ರವನ್ನು ಕಲ್ಪಿಸಲು ಲೋಕದ ವಸ್ತುಗಳನ್ನೆ ಬಳಸಿಕೊಂಡಿರುವುದು ಗಮನಾರ್ಹ.

ಆಶಯ ಮತ್ತು ವರ್ಗಗಳೆರಡೂ ಒಂದೇ ಆಗಿರುವುದಕ್ಕೆ ಒಂದು ನಿದರ್ಶನ ‘ನೆಂಟ’ ಕಥೆ. ಇದರಲ್ಲಿ ನೆಂಟನನ್ನು ಕಟ್ಟುವ ಮುಖ್ಯಕ್ರಿಯೆಯೊಡನೆ ಕಥೆ ಚಲಿಸುತ್ತದೆ. ಇಲ್ಲಿಯ ನೆಂಟನ ಕಲ್ಪನೆ ಸಾಮಾನ್ಯಾರ್ಥದಲ್ಲಿ ಮಾತ್ರವಲ್ಲದೆ, ವಿಶೇಷ ಪಾತ್ರದಲ್ಲಿಯೂ ಹರಿಯುವುದರಿಂದ ಅರ್ಥಪೂರ್ಣ ಹಾಸ್ಯದ ಸೃಷ್ಟಿಗೆ ಕಾರಣವಾಗುವುದು. ಒಬ್ಬ ತನ್ನ ಎತ್ತುಗಳಿಗೆ ‘ನೆಂಟ’ ಮತ್ತು ‘ದೊಣ್ಣೆ’ ಎಂದು ಹೆಸರಿಟ್ಟಿದದನು. ಹಾಗೆಯೇ ನಾಯಿ ಮತ್ತು ಬೆಕ್ಕುಗಳಿಗೆ ‘ಕುರೋ ಅಡ್ಡ ಬಳಸು’ ಮತ್ತು ‘ಸೀಟ್‌ ಕಂಡಬೀಡ’ ಎಂದು ಹೆಸರಿದ್ದವು. “ನೆಂಟನನ್ನು ಕಟ್ಟು ದೊಣ್ಣೆಯನ್ನು ಬಳಸಿಕೊಂಡು ಬರುತ್ತೇನೆ” ಎಂಬ ಮಾತನ್ನು ಕೇಳಿದ ನಿಜವಾದ ನೆಂಟ ತನ್ನನ್ನು ಕಟ್ಟಿ ಹೊಡೆಯಲು ಪ್ರಯತ್ನಿಸುತ್ತಾರೆಂದು ತಿಳಿದು ಓಡಿಹೋಗುವುದು ಇಲ್ಲಿಯ ಕಥಾವಸ್ತು. ನಾಯಿ ಮತ್ತು ಬೆಕ್ಕುಗಳ ಹೆಸರುಗಳೂ ಈ ಕ್ರಿಯೆಗೆ ಸಹಾಯವಾಗುತ್ತವೆ. ಕಥೆಯಲ್ಲಿ ಇಡಲಾಗಿರುವ ತುಪ್ಪ, ಪಾಯಸ, ಅವುಸೆ, ನೆಂಟ, ದೊಣ್ಣೆ ಮುಂತಾದ ಹೆಸರುಗಳೂ ಸಾಂಕೇತಿಕ ಸ್ವರೂಪದವಲ್ಲ, ಆ ಮೂಲಕ ದ್ವಂದ್ವವನ್ನು ಸೃಷ್ಟಿಮಾಡಿ ಹಾಸ್ಯವನ್ನು ತರುವುದೆ ಮುಖ್ಯ ಉದ್ದೇಶ . ಈ ಕಥೆ ಆರ್ನೆ – ಥಾಮ್ಸನ್‌ರ ‘ವರ್ಗಸೂಚಿ’ಯ ೧೫೩೦ನೆಯ ಕಥಾವರ್ಗವನ್ನು ಹೋಲುತ್ತದೆ. ಇದೊಂದು ಸರಳ ಕಥೆಯಾಗಿದ್ದು, ವರ್ಗ ಮತ್ತು ಆಶಯಗಳೆರಡೂ ಒಂದೇ ಆಗಿ ಕೆಲಸಮಾಡುತ್ತವೆ. ಈ ‘ನೆಂಟ’ ಕಥೆ ಹಿಂದೆ ಹೇಳಿದ ‘ಕುಂಟನ ಸಾಹಸ’ಕ್ಕಿಂತ ಸ್ವತಂತ್ರವಾಗಿರುವುದರಿಂದ, ಇವೆರಡನ್ನೂ ಭಿನ್ನ ಕಥಾವರ್ಗಗಳೆಂದು ಪರಿಗಣಿಸಬಹುದಾಗಿದೆ.

ಒಂದು ಕಥೆ ನಿರ್ದಿಷ್ಟ ವರ್ಗಕ್ಕೆ ಸಂಬಂಧಪಟ್ಟಿದೆಯೆ ಅಲ್ಲವೆ ಎಂಬುದನ್ನು ಕೆಲವು ಸಾರಿ ನಿರಾತಂಕವಾಗಿ ಹೇಳಬಹುದು . ಆದರೆ ಸಾಕಷ್ಟು ಸಾದೃಶ್ಯಗಳು ಕಾಣಬರದಿದ್ದಾಗ ಸಹಜವಾಗಿಯೇ ಸಮಸ್ಯೆಗಳು ತಲೆದೋರುತ್ತವೆ. ಒಂದು ಕಥೆಯಲ್ಲಿ ಬೇರೆ ಬೇರೆ ಕಥಾವರ್ಗಗಳ ಅಂಶಗಳು ಸೇರಿಕೊಂಡು ಜಟಿಲವಾಗಿರುವುದೂ ಇದೆ. ಈ ಕಾರಣಗಳಿಂದಾಗಿ ವರ್ಗಕಲ್ಪನೆಯ ಮೂಲಕ ಕಥೆಗಳನ್ನು ವರ್ಗೀಕರಿಸುವುದರ ಸಪ್ರಮಾಣತೆಯ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿರುವುದುಂಟು. ಆದರೆ, ಇಲ್ಲೆಲ್ಲ ನಾವು ಸಾದೃಶ್ಯಗಳ ಗುಣಾತ್ಮಕ ಪರಿಗಣನೆಯಿಂದಲೇ ಹೊರಡಬೇಕಾಗುತ್ತದೆ. ಆದ್ದರಿಂಧ ಕಥಾ ವರ್ಗವೊಂದಕ್ಕೆ ದೊರೆಯುವ ಭಿನ್ನ ಪಾಠಗಳನ್ನೆಲ್ಲ ಒಟ್ಟುಗೂಡಿಸಿ, ಅವುಗಳ ಸಾದೃಶ್ಯದ ಮೂಲಕ ನಿರ್ದಿಷ್ಟ ಸ್ವತಂತ್ರ ಕಥಾನಕದ ಮೂಲಪ್ರತಿಯನ್ನು ಕಂಡುಹಿಡಿಯಬೇಕಾಗುತ್ತದೆ. ಇಂಥ ಸ್ವತಂತ್ರ ಕಥನವುಳ್ಳ ವರ್ಗಗಳು ಯಾವುದೇ ನಿರ್ದಿಷ್ಟ ಸಂಸ್ಕೃತಿಯಲ್ಲಿ ಪರಿಮಿತ ಸಂಖ್ಯೆಯಲ್ಲಿ ಇರುತ್ತವೆ. ಜನಪದ ಕಥೆಗಳು ಮೂಲಭೂತವಾಗಿ ಮನುಷ್ಯನ ವೈಯಕ್ತಿಕ ಹಾಗೂ ಸಾಮಾಜಿಕ ಅವಶ್ಯಕತೆಗಳ ಫಲಗಳೆಂದೇ ಹೇಳಬಹುದು. ಆದಕಾರಣ ಯಾವುದೇ ನಿಶ್ಚಿತ ಪ್ರದೇಶಕ್ಕೆ, ಗೊತ್ತಾದ ಕಾಲಕ್ಕೆ ಕಥೆಗಳನ್ನು ಬಂಧಿಸಲಾಗುವುದಿಲ್ಲ. ರಾಷ್ಟ್ರ, ಜನಾಂಗ, ಭಾಷೆ, ಸಂಸ್ಕೃತಿ – ಇವುಗಳಿಗೆ ಅನುಗುಣವಾಗಿ ರೂಪಾಂತರಗೊಳ್ಳುವ ಅಥವಾ ಪಾಠಾಂತರಗೊಳ್ಳುವ ಎಲ್ಲ ಸಾಧ್ಯತೆಯೂ ಇರುತ್ತದೆ.

ಜನಪದ ಕಥೆಗಳು ಸಾಮಾಜಿಕ ಶಾಸನಗಳಿಗೆ ಗುಪ್ತ ಪ್ರತಿಕ್ರಿಯೆಗಳಾಗಿವೆ; ಮನಶ್ಶಾಸ್ತ್ರೀಯ ಬಿಡುಗಡೆಗೆ ವಾಹಕವಾಗಿಯೂ ಕೆಲಸಮಾಡುತ್ತವೆ – ಮನಸ್ಸಿನ ಜಾಗೃತ ಮತ್ತು ಸುಪ್ತ ಸ್ತರಗಳ ಮೇಲಿನ ಸೃಷ್ಟ್ಯಾತ್ಮಕ ಅಭಿವ್ಯಕ್ತಿಯೇ ಇದು . ಪುರಾತನ ಜಗತ್ತಿನ ಕಾಯಕ ಜನರ ಭರವಸೆಗಳು ಮತ್ತು ನಿರೀಕ್ಷೆಗಳನ್ನು ಕಥೆಗಳಲ್ಲಿ ಕಾಣಬಹುದು. ಜನಪದ ಕಥೆಯ ಜಗತ್ತು ಬಹುಮಟ್ಟಿಗೆ ಆದರ್ಶವಾದುದು. ಭ್ರಾಮಕ ಕಲ್ಪನೆಗಳಿಂದ ಕೂಡಿದುದು. ಇರುವಿಕೆಗಿಂತ ಆಗುವಿಕೆಯ ಕಡೆಗೆ ತುಡಿಯುವಂಥದು. ಜನಪದ ಕಥೆಗಳಲ್ಲಿ ಪ್ರಾಚೀನ ಮಾನವನ ಸುಪ್ತಮನಸ್ಸು ವರ್ಣರಂಜಿತವಾಗಿ ತೆರೆದುಕೊಂಡಿದೆ. ಅಭಿಲಾಷೆಗಳಿಗೆ ಆಕಾರಕೊಡುವುದು ಕಷ್ಟವಾದಾಗ ಮನಸ್ಸು ಆಕಾಶಯಾನವಾಗುವುದು ಯಾವೊತ್ತು ಇದ್ದುದೇ. ಇದಕ್ಕಾಗಿ ಸುಪ್ತಮನಸ್ಸು ಕಿನ್ನರ ಪ್ರಪಂಚವನ್ನು ಕಟ್ಟಿಕೊಂಡುದು ಸ್ಪಷ್ಟವೇ. ಇದು ಒಂದು ಬಗೆಯ ಪಲಾಯನವಾದ ಎಂದು ನಮಗನ್ನಿಸಿದರೂ; ಅವರ ದಟ್ಟ ನಗ್ನ ಬದುಕು ಇಂತಹ ಸುವರ್ಣ ಕಟ್ಟಿಗೆ ಆತುಕೊಂಡುದು, ಸಂಲಗ್ನವಾದುದು ಅವಶ್ಯವಿತ್ತೆಂದು ತೋರುತ್ತದೆ. ಹೀಗಾಗಿ, ಪುರಾತನ ಮಾನವ ತನ್ನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳಿಗೆ ಏಕಾಂಗಿಯಾಗಿಯೊ ಸಾಮೂಹಿಕವಾಗಿಯೊ ತೋರಿದ ಪ್ರತಿಕ್ರಿಯೆಗಳ ಮಾನಸಿಕ ವೈಪರೀತ್ಯಗಳು ಜನಪದ ಕಥೆಗಳ ತುಂಬ ಚೆಲ್ಲವರಿದಿದೆ. ಈ ಕುರಿತು ಅಧ್ಯಯನ ಮಾಡುವವರಿಗೆ ಸವಾಲಾಗಿದೆ ಕೂಡ. ಈ ಎಲ್ಲ ಕಾರಣಗಳನ್ನು ಜನಪದ ಕಥೆಗಳ ಸಾಂಸ್ಕೃತಿಕ ಅಧ್ಯಯನ ಫಲವತ್ತಾದ ಕ್ಷೇತ್ರವೆಂಬುದನ್ನು ಮರೆಯುವಂತಿಲ್ಲ.

ಆರ್.ಜಿ.