ಡಕ್ಕಲಿಗರು : ಉತ್ತರ ಕರ್ನಾಟಕದ ಅಲೆಮಾರಿ ಜನ. ಡಕ್ಕ ಎಂದರೆ ಒಂದು ವಾದ್ಯದ ಹೆಸರು. ಡಕ್ಕದಿಂದ ಡಗ್ಗ ಡಗ್ಗಾ ಎಂದಾಗಿರಬಹುದಾದ ಈ ಚರ್ಮ ವಾದ್ಯವನ್ನು ಮಾಡುವದರಲ್ಲಾಗಲೀ ನುಡಿಸುವುದರಲ್ಲಾಗಲೀ ನಿಪುಣತೆಯನ್ನು ಪಡೆದು ಇದರ ಮೇಲಿಂದಲೇ ಇವರಿಗೆ ಡಕ್ಕಲಿಗರು ಎಂದು ಹೆಸರು ಬಂದಿರಬಹುದು. ಆದರೆ ಈಗ ಯಾವ ವಾದ್ಯ ನುಡಿಸುವದಾಗಲೀ ಮಾಡುವುದಾಗಲೀ ಇಲ್ಲ. ಇವರನ್ನು ಡಕ್ಕರು, ಡಕ್ಕಲೋರು, ಡಕ್ಕಲರು, ಮ್ಯಾಗಿನವರು ಎಂದೂ ಕರೆಯುವರು. ಇವರ ಬಗೆಗೆ ಪೌರಾಣಿಕ ಕತೆಯೊಂದನ್ನು ಹೇಳುವುದುಂಟು.

ದಕ್ಷ ಬ್ರಹ್ಮನಿಗೆ ಅರ‍್ವತ್ತಮೂರು ಜನ ಹೆಣ್ಣು ಮಕ್ಕಳು. ಅದರಲ್ಲಿ ಕೊನೆಯದಳು ಪಾರ್ವತಿ. ಆಕೆಯ ಬೆನ್ನು ಹಿಂದೆ ಇನ್ನೊಬ್ಬ ತಮ್ಮ ಹುಟ್ಟಿದ. ಪಾರ್ವತಿ ಶಿವನಿಗೆ ಮೋಹಿತಳಾಗಿ ತಂದೆ ಮದುವೆಗೆ ಒಪ್ಪಿಗೆ ಕೊಡದ್ದರಿಂದ ತಂದೆಯ ಮಾತನ್ನು ತಿರಸ್ಕರಿಸಿ ಶಿವನ ಹಿಂದೆಯೇ ಓಡಿ ಹೋದಳು. ದಕ್ಷ ಬ್ರಹ್ಮ ತನ್ನ ಸೇಡು ತೀರಿಸಿಕೊಳ್ಳುವುದಕ್ಕಾಗಿ ಹೋಮ ನಡೆಸುವುದಾಗಿ ಎಲ್ಲರಿಗೂ ಕರೆಯೋಲೆ ಕಳುಹಿಸಿದ. ಆದರೆ ಶಿವನಿಗೆ ಮಾತ್ರ ಕಳಿಸಲಿಲ್ಲ. ತಂದೆ ಹೋಮ ಮಾಡುವ ಸುದ್ದಿ ತಿಳಿದು ಪಾರ್ವತಿ ಹೊರಟು ನಿಂತಾಗ, ಶಿವ ‘ಕರಿಯದವರ ಮನೆಗೆ ಕಳಸಗಿತ್ತಿಯಾಗಿ ಹೋಗುವದು ಒಳ್ಳೆಯದಲ್ಲವೆಂದರೂ ಹಠ ತೊಟ್ಟು ಹೋಗುವಳು. ಅಲ್ಲಿ ಛೀಮಾರಿಯಾಗಿ ಮುಖಭಂಗವಾದಾಗ ಶಿವನಿಗೆ ಹೇಗೆ ಮುಖ ತೋರಿಸುವುದು ಎಂದು ತಂದೆ ನಡೆಸಿದ ಹೋಮದಲ್ಲಿಯೇ ಜಿಗಿದುಬಿಟ್ಟಳು. ಜಿಗಿಯುವಾಗ ತಾನೊಬ್ಬಳೇ ಜಿಗಿಯಲಿಲ್ಲ. ತನ್ನ ಜೊತೆಗೆ ಒಡಹುಟ್ಟಿದ ತಮ್ಮನನ್ನೂ ತೆಗೆದುಕೊಂಡು ಜಿಗಿದಳು. ಶಿವ ಮತ್ತೆ ಇವರನ್ನು ಕೈಲಾಸಕ್ಕೆ ಕರೆದುಕೊಂಡ. ಶಿವ ಮತಾನುಯಾಯಿಯಾಗಿ ಬಂದ ಪಾರ್ವತಿಯ ತಮ್ಮನ ವಂಶದವರೇ ಡಕ್ಕಲಿಗರಾದರು.

ಇವರ ಮನೆಯಲ್ಲಿ ಮಗುವಿಗೆ ಜನ್ಮವಿತ್ತರೆ, ಇಲ್ಲವೆ ಯಾರಾದರೂ ಮರಣ ಹೊಂದಿದರೆ ಇವರ ಮನೆಗೆ ಐನೋರು ಬರುವವರೆಗೂ ಯಾವ ವಿಧಿ ಸಂಸ್ಕಾರಗಳೂ ನಡೆಯುವುದಿಲ್ಲ. ಪಡದಪ್ಪನವರು ಬಂದು ಶವಕ್ಕೆ ಜಳಕ ಮಾಡಿಸಿ ಮಣ್ಣು ಮಾಡಿಸುವರಂತೆ. ಹಿಂದೂ ಪದ್ಧತಿಯಂತೆ ಉಳಿದೆಲ್ಲವೂ ಯಥಾ ಪ್ರಕಾರವಾಗಿ ನಡೆಯುವುದು. ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ದುರಗಮ್ಮ, ಮರಗಮ್ಮ, ಎಲ್ಲಮ್ಮ, ಬಾಳಮ್ಮ, ಬಸಮ್ಮ ಎಂದು ಕರೆಯುವರು. ಅದೇ ರೀತಿಯಲ್ಲಿ ಗಂಡು ಮಕ್ಕಳಿಗೆ ಹನುಮಂತ, ಸಂಗಪ್ಪ, ಯಮನಪ್ಪ, ಗೋವಿಂದ ಎಂದು ಮೊದಲಾದ ಹೆಸರುಗಳನ್ನಿಟ್ಟು ಕರೆಯುವರು.

ಮದುವೆಯ ಸಂದರ್ಭದಲ್ಲಿ ಹಿಂದೂ ಧರ್ಮದ ಸಂಪ್ರದಾಯದಂತೆ ವಿವಾಹ ನಡೆದು ಹೈರಣಗಿ, ಹಾಲಗಂಬ ತರುವರು, ತಾಳಿ ಕಟ್ಟುವುದು ಸಾಮಾನ್ಯವಾಗಿ ಎಲ್ಲವೂ ಇವೆ.

ಡಕ್ಕಲಿಗರು ಶಿವ ಮತದವರು, ಗಣಾಚಾರಿಗಳೆಂದು ಹೆಸರಿದ್ದು ಊರಲ್ಲಿ ಇರುವ ಹಿರೇಮಠದವರು ಮತ್ತು ನಾವು ಸಹೋದರರು ಎಂದು ಹೇಳಿಕೊಳ್ಳುತ್ತಾರೆ. ಇವರು ಸಸ್ಯಾಹಾರಿಗಳೂ ಹೌದು, ಮಾಂಸಾಹಾರಿಗಳೂ ಹೌದು. ಆದರೆ ಒಲೆ ಹೊತ್ತಿಸಿ ಅಡಿಗೆ ಮಾಡುವವರಲ್ಲ.

ಇವರು ಕನ್ನಡವನ್ನೇ ಎಳೆದು ಮಾತನಾಡುತ್ತಾರೆ. ಸಂಚಾರಿ ಜನಾಂಗವಾಗಿರುವುದರಿಂದ ಕನ್ನಡವಲ್ಲದೆ ತೆಲುಗು, ಮರಾಠಿ ಮಾತನಾಡುವುದು ಕಂಡು ಬರುತ್ತದೆ. ಉಡಿಗೆಯಂತೂ ಒಕ್ಕಲಿಗರಂತಿದ್ದು ಗಂಡಸರು ತೊಡೆಯವರೆಗೆ ಉದ್ದ ತೋಳಿದ ಅಂಗಿ, ಧೋತರ, ತಲೆಯ ಮೇಲ ಟೋಪಿ ಇಲ್ಲವೆ ರುಮಾಲು ಧರಿಸುತ್ತಾರೆ. ಹೆಣ್ಣು ಮಕ್ಕಳು ಸೀರೆ, ಕುಪ್ಪಸ ತೊಡುವರು. ಕೈಯಲ್ಲಿ ಬೆಳ್ಳಿಯ ಬಳೆಗಳು, ಹಣೆಯ ಮೇಲೆ ವಿಭೂತಿ ಹಚ್ಚುವರು. ಹೆಣ್ಣುಮಕ್ಕಳು ಮೂಗು ಕಿವಿ ಚುಚ್ಚಿಕೊಂಡರೆ ಗಂಡಸರು ಕಿವಿ ಚುಚ್ಚಿಕೊಳ್ಳುವರು. ಹೆಚ್ಚಾಗಿ ಹೊಂಗಲ, ಉಮದಿ, ಯಾದಗಿರಿ ಹಣಮಸಾಗರ, ಕೊಡೆಕಲ್ಲ, ಚಳಗೇರಿ, ಮುದಗಲ್ಲದಲ್ಲಿ ಕಂಡುಬರುತ್ತದೆ. ಗೌರಿ ಹುಣ್ಣಿಮೆ ಜಾತ್ರೆಯಲ್ಲಿ ಒಂದೆಡೆ ಎಲ್ಲರೂ ಸೇರುವರು. ಇವರ ಮನೆಯ ದೇವರು ಹನುಮಂತ. ಇದಲ್ಲದೆ ದ್ಯಾಮವ್ವ ದುರ‍್ಗಮ್ಮ ಕಾಳಮ್ಮ ಇವರೆಲ್ಲರಿಗೂ ನಡೆದುಕೊಳ್ಳುತ್ತಾರೆ.

– ಎ.ಎಂ.

ಡಪ್ಪು ಇದು ವೃತ್ತಾಕಾರದಲ್ಲಿರುವ ಒಂದು ಚರ್ಮವಾದ್ಯ. ಈ ವಾದ್ಯವನ್ನು ಗ್ರಾಮದೇವತೆಯ ಉತ್ಸವಗಳಲ್ಲಿ, ಹುಲಿವೇಷ ಮುಂತಾದ ನರ್ತನಗಳಲ್ಲಿ, ಏನಾದರೂ ವಿಶೇಷ ಸಮಾಚಾರವನ್ನು ಸಾರಬೇಕಾದ ಸಂದರ್ಭಗಳಲ್ಲಿ, ಸಾವಿನ ಸಂದರ್ಭದಲ್ಲಿ ಬಳಸುತ್ತಾರೆ. ಕರ್ನಾಟಕದಲ್ಲಿ ಈ ವಾದ್ಯವನ್ನು ‘ತಮಟೆ’ ಎಂದು ಕರೆಯುತ್ತಾರೆ.

೨ ಅಡಿ ವ್ಯಾಸವುಳ್ಳ ವಾದ್ಯದೊಂದು ಮುಖವನ್ನು ದನದ ಚರ್ಮದಿಂದ ಮುಚ್ಚುತ್ತಾರೆ. ಚರ್ಮದ ಹೊದಿಕೆಯನ್ನು ಅಳವಡಿಸಿದ ಚರ್ಮದ ಬಾರುಗಳನ್ನು ಇನ್ನೊಂದು ಮುಖದ ನಡುವೆ ಇರುವ ಕಬ್ಬಿಣದ ಬಳೆಯೊಂದಕ್ಕೆ ಬಿಗಿಯಾಗಿ ಕಟ್ಟುತ್ತಾರೆ. ಎಡಗೈಯಲ್ಲಿ ಈ ವಾದ್ಯವನ್ನು ಹಿಡಿದು ಅದನ್ನು ಸೊಂಟಕ್ಕೆ ಒತ್ತು ಕೊಟ್ಟುಕೊಂಡು ಎಡಗೈ ಬೆರಳಿನ ಸಣ್ಣ ಕೋಲು ಮತ್ತು ಬಲಗೈಯಲ್ಲಿರುವ ದೊಡ್ಡ ಕೋಲಿನಿಂದ ಇದನ್ನು ನುಡಿಸುತ್ತಾರೆ. ಕೆಲವರು ಕೈಯಿಂದಲೂ ನುಡಿಸುವುದುಂಟು.

ಈ ವಾದ್ಯದ ಅಳತೆಯನ್ನನುಸರಿಸಿ ಇದು ಮೂರು ಬಗೆಗಳಾಗಿ ಕಂಡುಬರುತ್ತದೆ. ಮೊದಲನೆಯದು ಆಕಾರದಲ್ಲಿ ದೊಡ್ಡದಾದದ್ದರಿಂದ ‘ಪೆದ್ದಡಪ್ಪು’ ಎಂದು ಕರೆಯುತ್ತಾರೆ. ತಪ್ಪೆಟ, ಡಪ್ಪು, ಪಲಕ, ಕೊಯ್ಯ ಎಂಬ ಹೆಸರಿನಲ್ಲಿ ಆಯಾ ಪ್ರಾಂತ್ಯಗಳಲ್ಲಿ ಈ ವಾದ್ಯಕ್ಕೆ ಹೆಸರುಗಳಿವೆ. ‘ಪೆದ್ದಡಪ್ಪು’ಗಿಂತ ಅಳತೆಯಲ್ಲಿ ಚಿಕ್ಕದಾದನ್ನು ‘ಕನಕ ತಪ್ಪೆಟ’ ಎನ್ನುತ್ತಾರೆ. ಇದು ಎರಡನೆಯ ಬಗೆ. ಇನ್ನು ಮೂರನೆಯದು ಈ ಎರಡಕ್ಕಿಂತಲೂ ಚಿಕ್ಕದು. ಇದನ್ನು ‘ಟಕೋರ’ ಎಂದು ಕರೆಯುತ್ತಾರೆ.

ಡಪ್ಪು ವಾದ್ಯವನ್ನು ಬಾರಿಸುವ ಚಿಕ್ಕ ಕೋಲನ್ನು ‘ಡಪ್ಪು ಚಕ್ರ’ ಎಂದು ಕರೆಯುತ್ತಾರೆ. ಡಪ್ಪು ಪುಲ್ಲ, ಪಲಕ ಪುಲ್ಲ ಎಂದೂ ಕರೆಯುವುದುಂಟು. ದೊಡ್ಡ ಕೋಲನ್ನು ಡಪ್ಪು ಜೆಟಿಕೆ ಅಥವಾ ಚಿಟಿಕೆಪುಲ್ಲ ಎಂದು ಕರೆಯುತ್ತಾರೆ. ಇದು ಸಣ್ಣ ಕೋಲಿಗಿಂತಲೂ ಆರು ಅಂಗುಲ ಉದ್ದ ಹೆಚ್ಚಾಗಿರುತ್ತದೆ.

ತಿರುಪತಿ ಗಂಗ ಜಾತರೆ ಸಂದರ್ಭದಲ್ಲಿ ಹಲವಾರು ವೇಷಗಳನ್ನು ಪ್ರದರ್ಶಿಸುವುದುಂಟು. ದೂರವೇಷಂ, ಮಾತಂಗಿ ವೇಷಂ, ಎಲುಗುಬಂಟಿ ವೇಷಂ, ಪೋಟುವೇಷಂ ಇತ್ಯಾದಿ ಸಂದರ್ಭಗಳಲ್ಲಿ ಈ ವಾದ್ಯವನ್ನು ಬಾರಿಸುವುದುಂಟು. ಅಂತೆಯೇ ಆದಿವಾಸಿಗಳು ನೃತ್ಯಗಳಲ್ಲಿಯೂ ಮುಸ್ಲಿಂಮರ ಹಬ್ಬವಾದ ಪೀರ್ಲ ಪಂಡಗ (ಮೊಹರಂ) ಸಂದರ್ಭದಲ್ಲಿಯೂ ಈ ವಾದ್ಯವನ್ನು ಬಳಸುತ್ತಾರೆ. ಅಕ್ಷರ ದಾಸೋಹ, ಕುಟುಂಬ ಕಲ್ಯಾಣ ಮುಂತಾದ ಸರ್ಕಾರೀ ಕಾರ್ಯಕ್ರಮಗಳನ್ನು ತಿಳಿಸಲು ಈ ವಾದ್ಯವನ್ನು ಒಂದು ಪ್ರಚಾರ ಸಾಧನವನ್ನಾಗಿ ಬಳಸುತ್ತಿದ್ದಾರೆ.

ಮರಣ ಸಮಯದಲ್ಲಿ ಹೆಣವನ್ನು ಸ್ಮಶಾನಕ್ಕೆ ಒಯ್ಯುವ ಸಂದರ್ಭದಲ್ಲಿ.

ಜಗು ಜಗು ನಕುನ್ನ
ಜಗು ಜಗು ನಕುನ್ನ
ಜಗು ಜಗು ನಕುನ್ನ

ಎಂಬ ‘ಜತು’ ಗಳನ್ನು ಬಾರಿಸುತ್ತಾರೆ. ಹೀಗೆ ಬಾರಿಸುವುದರಿಂದ ಇದು ಇತರ ಸಂದರ್ಭಗಳಿಗಿಂತ ಭಿನ್ನವಾಗಿರುತ್ತದೆ ಎಂಬ ಅಭಿಪ್ರಾಯವಿದೆ. ಹುಲ್ಲಿನ ಅಥವಾ ಸೋಗೆಯ ಬೆಂಕಿಯಿಂದ ಈ ವಾದ್ಯಕ್ಕೆ ಶಾಖ ಕೊಟ್ಟರೆ ಶಬ್ದ ಹದವಾಗಿ ಬರುತ್ತದೆ.

– ಜಿ.ಎಸ್.ಎಂ.

ಡಪ್ಪು ನೃತ್ಯ : ಇದು ಮನರಂಜನಾ ಪ್ರಧಾನವಾದ ಜನಪದ ಪ್ರದರ್ಶನ (ತಮಟೆ ಕುಣಿತ). ಇದು ಸಮೂಹ ನೃತ್ಯಕ್ಕೆ ಸಂಬಂಧಪಟ್ಟಿದ್ದು, ಆಂಧ್ರಪ್ರದೇಶದ ಎಲ್ಲ ಪ್ರಾಂತ್ಯಗಳಲ್ಲಿ ಈ ಕಲೆ ಇದೆ. ಮಾದಿಗ ಕಲಾವಿದರಿಗೆ ಸಂಬಂಧಿಸಿದ ಹತ್ತು ಹನ್ನೆರಡು ಜನ ಒಂದು ತಂಡವಾಗಿ ತಲೆಗೆ ಪೇಟ ಸುತ್ತಿಕೊಂಡು, ಹೆಗಲಿಗೆ ತಮಟೆ ನೇತು ಹಾಕಿಕೊಂಡು ಅದನ್ನು ಎದೆಯ ಮೇಲೆ ಇರುವಂತೆ ಮಾಡಿಕೊಂಡು ಎರಡು ಕಡ್ಡಿಗಳ ಸಹಾಯದಿಂದ ಲಯಬದ್ಧವಾಗಿ ಬಾರಿಸುತ್ತಾ ಅದಕ್ಕೆ ಅನುಗುಣವಾಗಿ ನೃತ್ಯ ಮಾಡುತ್ತಾ ನೀಡುವ ಪ್ರದರ್ಶನವೇ ತಮಟೆ ನೃತ್ಯ. ಇದನ್ನು ತಮಟೆ ಮೇಳ ಎಂದೂ ಕರೆಯುತ್ತಾರೆ. ಇವುಗಳನ್ನು ‘ಕನಕ ತಪ್ಪೆಟ್ಲು’ ಎಂದೂ ಕರೆಯುತ್ತಾರೆ. ಇದು ಚರ್ಮ ವಾದ್ಯ. ತಮಟೆಯಿಂದ ವಿಭಿನ್ನ ಧ್ವನಿಗಳನ್ನು ಹೊರಡಿಸಿ ಪ್ರದರ್ಶನಕ್ಕೆ ಸಾಕಷ್ಟು ಮೆರಗನ್ನು ತುಂಬುತ್ತಾರೆ. ಇದರಲ್ಲಿ ಭಾಗವಹಿಸುವವರೆಲ್ಲ ಗಂಡಸರೇ. ಸಂಖ್ಯಾ ನಿಯಮ ಇಲ್ಲ. ಇಬ್ಬಿಬ್ಬರು ಜೋಡಿಯಾಗಿ ಎಷ್ಟು ಜನ ಬೇಕಾದರೂ ಪಾಲ್ಗೊಳ್ಳಬಹುದು. ಇದು ಕುಲಮೂಲದ ಸಾಂಪ್ರದಾಯಿಕ ಕಲೆ. ಇದನ್ನು ಮಾದಿಗ ಜಾತಿಯವರು ಪ್ರದರ್ಶಿಸುತ್ತಾರೆ. ಇತ್ತೀಚೆಗೆ ಮಾದಿಗೇತರರು ಸಹ ಪ್ರದರ್ಶನ ನೀಡುತ್ತಿದ್ದಾರೆ. ಇದು ಹೆಜ್ಜೆ, ವರಸೆ, ಹಾಡು, ನೃತ್ಯ, ಧ್ವನಿ ಎಲ್ಲವನ್ನು ಒಳಗೊಂಡಿರುತ್ತದೆ. ಇದನ್ನು ಗ್ರಾಮದೇವತೆಯ ಜಾತ್ರೆಯಲ್ಲಿ, ಉತ್ಸವ, ಮೆರೆವಣಿಗೆಗಳಲ್ಲಿ ಪ್ರದರ್ಶಿಸುತ್ತಾರೆ. ತಮಟೆಯ ಇತಿಹಾಸ ಬಹಳ ಪ್ರಾಚೀನವಾದುದು. ಇವರು ತಮಟೆಯನ್ನು ಕುರಿತು ಒಂದು ದಂಡಕವನ್ನು ಓದುತ್ತಾರೆ. ‘ಆದಿ ಅಂಶಂಬುನ ಅಲರಿಪುಟ್ಟಿನ ಡಪ್ಪು, ಅಸುರಂಬುನ ನಗಲಿ ಮೀದಟೈನ ಡಪ್ಪು ಊರಂತ ತಿರುಗುತು ದಂಡೋರ ರೂಪಮುನ ಜರಿಗಿನ ವೃತ್ತಾಂತಮುನು ಪ್ರಜಲಕು ತೆಲಿಯ ಚೇಸಿನ ಡಪ್ಪು’ ಎಂದು ರಾಗಬದ್ಧವಾಗಿ ಹೇಳುತ್ತಾರೆ. ಇವರ ವೇಷಭೂಷಣಗಳು ಬಿಳಿ ಇಲ್ಲವೆ ಗೋಧಿಬಣ್ಣದ ಪಂಚೆ ಕಟ್ಟಿಕೊಂಡು ಅದರ ಮೇಲೆ ಕೆಂಪನೆಯ ಅಂಗಿಯನ್ನು ಅಥವಾ ಗುಲಾಬಿ ಬಣ್ಣದ ಅಂಗಿಯನ್ನು ಹಾಕಿಕೊಂಡು ಟವಲನ್ನು ತಲೆಗೆ ಸುತ್ತಿಕೊಂಡು ಸೊಂಟಕ್ಕೆ ಒಂದು ಟವಲನ್ನು ಬಿಗಿದು ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಹಣೆಗೆ ಕುಂಕುಮ ಅಥವಾ ವಿಭೂತಿ ಹಾಕಿಕೊಂಡು ಪ್ರದರ್ಶನಕ್ಕೆ ಸಿದ್ಧರಾಗುತ್ತಾರೆ. ಇಲ್ಲಿ ಗುರು ಇಲ್ಲವೆ ಮೇಳದ ನಾಯಕನ ವೇಷ ಮಾತ್ರ ಭಿನ್ನವಾಗಿರುತ್ತದೆ. ಅವನು ರಾಜನಂತೆ ಗರುಡರೆಕ್ಕೆಯ ಕುಚ್ಚನ್ನು ತಲೆಗೆ ಸಿಕ್ಕಿಸಿಕೊಂಡು ಲುಂಗಿಯಂತೆ ಪಂಚೆಯನ್ನು ಕೆಳಕ್ಕೆ ಇಳಿಬಿಟ್ಟು ಕೈಗೆ ಕಂಕಣಕಟ್ಟಿಕೊಂಡು ಬೆರಳುಗಳಿಗೆ ಉಂಗುರಗಳನ್ನು ತೊಟ್ಟುಕೊಂಡು, ಕೊರಳಲ್ಲಿ ಶಿಳ್ಳೆ ನೇತುಹಾಕಿಕೊಂಡು ಪ್ರದರ್ಶನದಲ್ಲಿ ಮುಖ್ಯ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ. ಪ್ರದರ್ಶನ ಆರಂಭವಾಗುವಾಗ ಐದು ಹತ್ತು ನಿಮಿಷಗಳು ಅವರವರ ಸ್ಥಾನದಲ್ಲಿ ಅವರು ಇದ್ದು ಒಟ್ಟಿಗೆ ಮೊದಲ ಧ್ವನಿಯನ್ನು ನುಡಿಸುತ್ತಾರೆ. ಅನಂತರ ಸುತ್ತಲೂ ತಿರುಗುತ್ತಾ ಧ್ವನಿಯನ್ನು ಮೆಲ್ಲ ಮೆಲ್ಲಗೆ ವೇಗಗೊಳಿಸುತ್ತಾ ಪ್ರದರ್ಶನದ ವೇಗವನ್ನು ಹೆಚ್ಚಿಸುತ್ತಾರೆ. ಅನಂತರ ಹಿಂದೆ ಮುಂದೆ ಬಾಗುತ್ತಾ ಮತ್ತೊಂದು ಧ್ವನಿಯನ್ನು ಬಾರಿಸುತ್ತಾರೆ. ಈಗ ಎರಡೂ ಗುಂಪಿನವರು ಬೇರೆ ಬೇರೆಯಾಗಿ ಹಿಂದೆ ಮುಂದೆ ಹೋಗುತ್ತ ಬರುತ್ತಾ ಪ್ರದರ್ಶನಕ್ಕೆ ಕಳೆ ತುಂಬುತ್ತಾರೆ. ಪ್ರದರ್ಶನದಲ್ಲಿ ಗುರು ಅಥವಾ ಮೇಳನಾಯಕನು ಮಧ್ಯೆ ಮಧ್ಯೆ ಜಾನಪದ ಗೀತೆಗಳನ್ನು ಹಾಡುತ್ತಾ ಎಲ್ಲರನ್ನು ಆಕರ್ಷಿಸುತ್ತಾನೆ. ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಈ ನೃತ್ಯಕ್ಕೆ ಪ್ರಾಧಾನ್ಯ ಇದೆ.

– ಟಿ.ಎಸ್.ಎನ್. ಅನುವಾದ ಎನ್. ಆರ್.

ತಂದಾನಪಾಟ : ತೀರಾಂಧ್ರದ ವಿಶಿಷ್ಟ ಕಲಾಪ್ರಕಾರ. ಇದನ್ನು ‘ತಾಂಬರಪಾಟ’ ಎಂದೂ ಕರೆಯುತ್ತಾರೆ. ಕೆಲವರು ಕಲಾವಿದರು ಹಳ್ಳಿಗಳನ್ನು, ಮನೆಮನೆಗಳನ್ನು ಸುತ್ತುತ್ತಾ ಯಾವುದಾದರೂ ಒಂದು ಕಥೆಯನ್ನು ಹಾಡುತ್ತಾ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ಒಂದು ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಈ ಕಲಾರೂಪಕ್ಕೆ ಪ್ರತ್ಯೇಕವಾದ ಪ್ರದರ್ಶನಾ ಕಾಲವಿರುವುದಿಲ್ಲ. ವರ್ಷದುದ್ದಕ್ಕೂ ಕಥೆಗಳು ಹೇಳುತ್ತಾ ಪ್ರದರ್ಶನಗಳು ಕೊಡುತ್ತಿದ್ದಾರೆ. ಜನಪದರು ಶ್ರಾದ್ಧ ದಿವಸಗಳಲ್ಲಿ ಈ ಹಾಡನ್ನು ವಿಧಿಯಾಗಿ ಹಾಡಿಸುತ್ತಾರೆ. ಅಂದು ಹಾಡಿಸದೇ ಇದ್ದಲ್ಲಿ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂಬ ನಂಬಿಕೆ ಇದೆ.

ತಂದಾನಪಾಟ ಪ್ರದರ್ಶನದಲ್ಲಿ ಇಬ್ಬರು ಕಲಾವಿದರಿರುತ್ತಾರೆ. ಇವರು ಯಾವ ವಿಧವಾದ ವೇಷವನ್ನು ಧರಿಸುವುದಿಲ್ಲ. ಕಥೆ ಹೇಳುವವನು ‘ಆನಬಗಾಯ ತಂಬರ’ ವನ್ನು ಧರಿಸುತ್ತಾನೆ. ಸಹಗಾಯಕನು ಢಕ್ಕೆಯನ್ನು ಬಾರಿಸುತ್ತಾನೆ. ಇದನ್ನು ‘ಸಮ್ಮೆಟ’ ಎಂದೂ ಕರೆಯುತ್ತಾರೆ. ಕಥೆಯನ್ನು ಹೇಳಿಸುವವರ ಮನೆಮುಂದೆ ಒಂದು ಚಾಪೆಯ ಮೇಲೆ ಕುಳಿತು ಕಥೆಯನ್ನು ಹಾಡುತ್ತಾರೆ. ಕಥೆಗಾರ ಉದ್ದವಾಗಿ ಕೂದಲನ್ನು ಬೆಳಸಿರುವುದರಿಂದ, ಇದೇ ಒಂದು ಭೂಷಣವಾಗಿ ಶೋಭಿಸುತ್ತದೆ. ಒಂದು ಕೈಯಲ್ಲಿ ಚಿಟಿಕೆಗಳನ್ನು ಧರಿಸುತ್ತಾನೆ. ಎರಡನೇ ಕೈಯಲ್ಲಿ ತಂಬೂರಿಯನ್ನು ಮೀಟುತ್ತಾ ದೀರ್ಘವಾದ ರಾಗಗಳನ್ನು ಎಳೆಯುತ್ತ ಹಾಡುವಾಗ, ಅವನ ಹಾಡಿಗೆ ಅನುಗುಣವಾಗಿ ಗುಮ್ಮಟೆಯನ್ನು ಒಂದೇ ಸ್ಥಾಯಿಯಲ್ಲಿ ಹೆಚ್ಚು ಕಡಿಮೆಗಳಿಂದ ಬಾರಿಸುತ್ತಾ ಸಹಗಾಯಕನು ಹಾಡುತ್ತಲೇ ಇರುತ್ತಾನೆ. ನಡುರಾತ್ರಿಯಿಂದ ಮುಂಜಾನೆವರೆಗೂ ಈ ಕಲಾರೂಪ ಮುಂದುವರಿಯುತ್ತದೆ. ಕಥೆಯ ಮಧ್ಯದಲ್ಲಿ ಹಾಸ್ಯವನ್ನು ಜೋಡಿಸಿ ಕಥೆಯನ್ನು ಮುಂದುವರಿಸುತ್ತಾನೆ. ಇವರ ಹಾಸ್ಯವು ಒರಟಾಗಿರುತ್ತದೆ. ಈ ಕಲಾಪ್ರಕಾರ ಹೆಚ್ಚಾಗಿ ಪೂರ್ವ ಮತ್ತು ಪಶ್ವಿಮ ಗೋದಾವರಿ ಜಿಲ್ಲೆಗಳಲ್ಲಿ ಮತ್ತು ಇತರ ತೀರಾಂಧ್ರ ಜಿಲ್ಲೆಗಳಲ್ಲಿ ಕಂಡುಬರುತ್ತದೆ.

– ಜಿ.ಎಸ್.ಎಂ.

ತಂಬೂರಿಯವರು : ತಂಬೂರಿ ಸಂಪ್ರದಾಯ ಕರ್ನಾಟಕದ ವೃತ್ತಿಗಾಯಕ ಸಂಪ್ರದಾಯಗಳಲ್ಲಿ ಮುಖ್ಯವಾದುದು. ತಂಬೂರಿ ಮೀಟುತ್ತಾ ಸುದೀರ್ಘ ರಚನೆಗಳನ್ನು ಹಾಡುವ ಗಾಯಕರನ್ನು ತಂಬೂರಿಯವರು ಎಂದು ಕರೆಯಲಾಗುತ್ತದೆ. ಹರಿಜನರಲ್ಲಿ ಎಡಗೈ ವರ್ಗದ ಚಲುವಾದಿ ಮತ್ತು ಹಣತರು ಎಂಬ ಉಪಜಾತಿಗಳಿಗೆ ಸೇರಿದವರು ತಂಬೂರಿ ಹಾಡುಗಾರಿಕೆಯನ್ನು ಅವಲಂಬಿಸಿದ್ದಾರೆ. ಹಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ಜನ ಇವರು. ಆದರೂ ಇವರಲ್ಲಿ ಬಹುಮಂದಿಗೆ ಅಲ್ಪಸ್ವಲ್ಪ ಭೂಮಿ ಇರುವುದರಿಂದ ವರ್ಷದ ಕೆಲವು ತಿಂಗಳುಗಳಲ್ಲಿ ಮಾತ್ರ ಹಾಡುಗಾರಿಕೆ ವೃತ್ತಿ ಜೀವಂತವಾಗಿರುತ್ತದೆ. ಉಳಿದ ಕಾಲದಲ್ಲಿ ಭೂಸಾಗುವಳಿ, ಚಮ್ಮಾರಿಕೆ ಇತ್ಯಾದಿ ಕಸಬುಗಳಲ್ಲಿ ತೊಡಗಿರುತ್ತಾರೆ.

ಸದ್ಯ ಇವರು ಹಾಸನಜಿಲ್ಲೆಯ ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಹಾಸನ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಯೂ ಚಿಕ್ಕಮಗಳೂರು, ಮಂಡ್ಯ, ಮೈಸೂರು ಮತ್ತು ಉತ್ತರಕೊಡಗಿನ ಕೆಲವು ಭಾಗಗಳಲ್ಲಿ ವಿರಳ ಸಂಖ್ಯೆಯಲ್ಲೂ ಕಂಡುಬಂದಿದ್ದಾರೆ.

ತಂಬೂರಿ ಗಾಯಕರು ಬಳಸುವ ವಾದ್ಯಗಳಲ್ಲಿ ಪ್ರಮುಖವಾದುದು ತಂಬೂರಿ. ಕಣಿಗಲೆ, ತೇಗ, ಕೊಂಡಬೇವಿನ ಮರ, ಹಲಸು, ಕೂಳಿ ಈ ಯಾವುದಾದರೂ ಒಂದು ಜಾತಿಯ ಮರದಿಂದ ತಯಾರಿಸಿದ ಸುಮಾರು ಮೂರೂವರೆ ಅಡಿ ಉದ್ದ ವಾದ್ಯ. ಇದಕ್ಕೆ ಮೂರು ಅಥವಾ ನಾಲ್ಕು ಉಕ್ಕಿನ ತಂತಿಗಳಿದ್ದು ಶ್ರುತಿಗೈಯುವುದಕ್ಕಾಗಿ ಮೂರು ಅಥವಾ ನಾಲ್ಕು ಬಿರಡೆಗಳನ್ನು ಅಳವಡಿಸಿರಲಾಗುತ್ತದೆ. ಇದರ ಮೇಲ್ತುದಿಯಲ್ಲಿ ನಾಗರಹೆಡೆ ಇಲ್ಲವೆ ಸಿಂಹಮುಖವನ್ನು ಹೋಲುವ ಕೆತ್ತನೆ ಇರುತ್ತದೆ. ಆ ಕೆತ್ತನೆಯ ಭಾಗವನ್ನು ಬೆಂಡಿನ ಕೀಸುಳಿಗಳಿಂದ ತಯಾರಿಸಿದ ಗೊಂಡೇದ ಹೂವಿನಿಂದ ಅಲಂಕರಿಸಿರಲಾಗುತ್ತದೆ.

76

ಧಾರ್ಮಿಕ ವೃತ್ತಿಗಾಯಕರೆಂದು ಪರಿಗಣಿತರಾಗಿರುವ ನೀಲಗಾರರು ಸಹ ತಂಬೂರಿ ಗಾಯಕರು ಬಳಸುವ ತಂಬೂರಿಯನ್ನೇ ವಾದ್ಯವಾಗಿ ಬಳಸುತ್ತಾರೆ. ಆದರೆ ಈ ವಾದ್ಯ ವಿಶೇಷದ ಏಕತೆಯಿಂದಲೇ ತಂಬೂರಿ ಸಂಪ್ರದಾಯವನ್ನು ಧಾರ್ಮಿಕ ವೃತ್ತಿಗಾಯಕ ಸಂಪ್ರದಾಯದಿಂದ ಸಿಡಿದು ತನ್ನದೇ ಆದ ಲೌಕಿಕ ಸಂಪ್ರದಾಯದಲ್ಲಿ ಬೆಳೆವಣಿಗೆ ಹೊಂದಿದ ಒಂದು ಸಂಪ್ರದಾಯವೆಂದು ಭಾವಿಸುವುದಾಗಲೀ ಎರಡೂ ಸಂಪ್ರದಾಯದವರು ಒಂದೇ ಮೂಲದಿಂದ ಬಂದವರು ಎಂದು ಹೇಳುವುದಾಗಲೀ ಸರಿಕಾಣುವುದಿಲ್ಲ. ಏಕೆಂದರೆ ತಂಬೂರಿಯವರಲ್ಲಿ ನೀಲಗಾರರು ಬಳಸುವ ನಾಡ ತಂಬೂರಿಯಂಥ ವಾದ್ಯವೇ ಇದ್ದರೂ ಇವೆರಡೂ ಸಂಪೂರ್ಣವಾಗಿ ವಿಭಿನ್ನ ಸಂಪ್ರದಾಯಗಳು ಎಂದು ಹೇಳಲು ಸಾಕಷ್ಟು ಆಧಾರಗಳಿವೆ. ೧. ನೀಲಗಾರರಿಗಿರುವ ಧಾರ್ಮಿಕ ಕಟ್ಟುಪಾಡು ತಂಬೂರಿಯವರಿಗಿಲ್ಲ. ೨. ನೀಲಗಾರರು ಹಾಡುವ ಮಂಟೇಸ್ವಾಮಿ ಕಾವ್ಯ ತಂಬೂರಿಯವರಿಗೆ ಅಪರಿಚಿತ. ೩. ತಂಬೂರಿಯವರು ತಂಬೂರಿಯ ಜೊತೆಗೆ ಬಟ್ಟುತಾಳ ಮತ್ತು ಗುಮ್ಚಿ ಬಳಸಿದರೆ ನೀಲಗಾರರು ತಂಬೂರಿಯ ಜೊತೆಯಲ್ಲಿ ಗಗ್ಗರ ಮಾತ್ರ ಬಳಸುತ್ತಾರೆ. ೪. ನೀಲಗಾರರು ಕಾಣಬರುವ ಕಡೆ ತಂಬೂರಿಯವರು ಕಂಡುಬರುವುದಿಲ್ಲ ಈ ಎಲ್ಲ ಅಂಶಗಳು ತಂಬೂರಿಯವರು ಮತ್ತು ನೀಲಗಾರರು ಬೇರೆ ಬೇರೆ ಮೂಲದಿಂದ ಬಂದವರು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಹರಿಜನರಲ್ಲಿ ಎಡಗೈ ವರ್ಗಕ್ಕೆ ಸೇರಿದ ‘ದಾಸಯ್ಯಗಳು’ ತಂಬೂರಿ ಗಾಯಕರಾಗಿರುವ ಸಂದರ್ಭಗಳೇ ಹೆಚ್ಚು. ಇವರನ್ನು ‘ತಂಬೂರಿ ದಾಸರು’ ಎಂದೂ ಕರೆಯಲಾಗುತ್ತದೆ. ಇವರ ಹಾಡುಗಾರಿಕೆಯಲ್ಲಿ ಅತಿಭಾವುಕತೆ ಎದ್ದು ಕಾಣುವುದಾದರೂ ಅಚ್ಚುಕಟ್ಟುತನ, ಮಡಿವಂತಿಕೆ, ಕ್ರಮಬದ್ಧವಾದ ಆರಂಭ ಮುಕ್ತಾಯ ಇವೇ ಮುಂತಾದ ಗುಣಗಳನ್ನು ಗುರುತಿಸಬಹುದು. ಅವಾಚ್ಯ ಶಬ್ದಗಳು, ಅಶ್ಲೀಲ ವರ್ಣನೆಗಳು ಇವರ ಹಾಡುಗಾರಿಕೆಯಲ್ಲಿ ತಲೆ ಹಾಕುವುದಿಲ್ಲ.

ತಂಬೂರಿಯವರ ವೇಷಭೂಷಣಗಳಲ್ಲಿ ಗುರುತಿಸಬಹುದಾದ ವಿಶೇಷತೆ ಏನೂ ಇಲ್ಲ. ಸಾದಾ ಉಡುಗೆಗಳಲ್ಲಿಯೇ ಕಾಣಿಸಿಕೊಳ್ಳುವ ಇವರು ಊರಾಡಲು ಹೋಗುವಾಗ ಒಂದು ಬಗಲಲ್ಲಿ ಜೋಳಿಗೆ ಇನ್ನೊಂದರಲ್ಲಿ ತಂಬೂರಿಯನ್ನು ನೇತು ಹಾಕಿಕೊಂಡಿರುತ್ತಾರೆ. ಇವಲ್ಲದೆ ಬೆತ್ತದ ದೊಣ್ಣೆಯನ್ನು ಕಂಕುಳಲ್ಲಿ ಇರಿಸಿಕೊಳ್ಳುವುದೂ ಉಂಟು. ತಂಬೂರಿಯನ್ನು ಹೆಗಲಿಗೇರಿಸಿಕೊಂಡ ಮೇಲೆ ಚಪ್ಪಲಿ ತುಳಿಯಬಾರದೆಂಬ ನಿಯಮವಿದೆ. ಚಪ್ಪಲಿ ತುಳಿದರೆ ಶಾರದೆಗೆ, ಕಸುಬಿಗೆ ಅಪಚಾರವೆಸಗಿದಂತೆ ಎಂಬ ಕಳವಳ.

ಎಲ್ಲೋ ಕೆಲವೆಡೆಗಳಲ್ಲಿ ಮಾತ್ರ ತಂಬೂರಿಗಾಯಕರು ಬಿಳಿಕಾಸೆ ಪಂದೆ, ತಲೆಗೆ ಸೊಗಸಾದ ರುಮಾಲು, ಷರಾಯಿ, ಕೋಟು ಧರಿಸುವುದು ಸಾಮಾನ್ಯವಾದರೂ ತಂಬೂರಿಯವರೆಲ್ಲರೂ ನೀಲಗಾರರಂತೆ ತಲೆಗೆ ಕೆಂಪು ರುಮಾಲು, ಮೈಗೆ ಬಣ್ಣದ ನಿಲುವಂಗಿ, ಹೆಗಲ ಮೇಲೆ ಶಲ್ಯ, ಬಿಳಿಕಾಸೆ ಪಂಚೆ ಮುಂತಾದುವನ್ನು ಕಡ್ಡಾಯವಾಗಿ ಧರಿಸಬೇಕಾಗಿಲ್ಲ. ಇನ್ನು ಕೆಲವು ಪ್ರದೇಶಗಳಲ್ಲಿ ಕಾವಿಬಟ್ಟೆ ಧರಿಸಿ ರುದ್ರಾಕ್ಷಿಯನ್ನು ಕೊರಳಿಗೆ ಹಾಕಿಕೊಂಡು ಸುತ್ತಾಡುವವರೂ ಕಂಡುಬಂದಿದ್ದಾರೆ. ಇವರು ಸ್ವಲ್ಪಮಟ್ಟಿಗೆ ತಂಬೂರಿ ದಾಸರನ್ನೇ ಹೋಲುತ್ತಾರೆ. ಆದರೆ ಇವರ ಸಂಖ್ಯೆ ಕಡಿಮೆ.

ಇನ್ನೊಂದು ಮುಖ್ಯ ಸಂಗತಿಯೆಂದರೆ ತಂಬೂರಿಯವರು ಹಣೆಗೆ ನಾಮ ಮತ್ತು ವಿಭೂತಿ ಎರಡನ್ನೂ ಸಮನಾಗಿ ಧರಿಸುವುದು. ದಾಸಯ್ಯರಾಗಿ ದೀಕ್ಷೆ ಪಡೆದ ಗಾಯಕರು ಬಿಳಿನಾಮ ಧರಿಸುವುದು ಸಾಮಾನ್ಯವಾದರೂ ದೀಕ್ಷೆ ಪಡೆಯದ ಕೆಲವು ಗಾಯಕರು ಕೂಡ ಹಣೆಗೆ U ಆಕಾರದಲ್ಲಿ ಬಿಳಿನಾಮ ಧರಿಸಿ ನಡುವೆ ಕೆಂಪನೆಯ ಉದ್ದನಾಮ ಎಳೆದುಕೊಳ್ಳುವುದುಂಟು. ಹೀಗೆ ಇವರು ನಾಮ ಧರಿಸುವುದರಿಂದಲೂ ವೈಷ್ಣವ ಸಂಪ್ರದಾಯಕ್ಕೆ ಸೇರಿದ ವಾದ್ಯವನ್ನು ಬಳಸುವುದರಿಂದಲೂ ಇವರು ವೈಷ್ಣವ ಮೂಲದವರೇನೊ ಎಂಬ ಸಂಶಯ ಬಲವಾಗುತ್ತದೆ. ಆದರೆ ಇವರಲ್ಲಿ ವಿಭೂತಿ ಧರಿಸುವವರ ಸಂಖ್ಯೆಯೂ ಕಡಿಮೇನಿಲ್ಲ. ದೀಕ್ಷೆಗೆ ಮೊದಲು ವಿಭೂತಿ ದೀಕ್ಷೆಯ ಬಳಿಕ ನಾಮಧರಿಸುವ ಪದ್ಧತಿ ಇರುವುದರಿಂದಲೂ ಶೈವ ದೇವಾಲಯಗಳಿಗೆ ಹೆಚ್ಚು ನಡೆದುಕೊಳ್ಳುವುದರಿಂದಲೂ ಶೈವ ಸಂಪ್ರದಾಯಕ್ಕೆ ಸೇರಿದ ಹರಿಜನರಲ್ಲಿ ಎಡಗೈ ವರ್ಗಕ್ಕೆ ಸೇರಿದವರು ಮಾತ್ರ ಈ ಕಸುಬಿಗೆ ಅಂಟಿಕೊಂಡಿರುವ ನಿದರ್ಶನಗಳಿರುವುದರಿಂದಲೂ ಇವರು ಶೈವ ಮೂಲಕ್ಕೆ ಸೇರಿದವರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ವೈಷ್ಣವ ಸಂಪ್ರದಾಯಕ್ಕೆ ಸೇರಿದ ತಂಬೂರಿ ವಾದ್ಯ ಇವರಿಗೆ ಬಂದ ಬಗೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ.

ಇತರ ವೃತ್ತಿಗಾಯಕ ಸಂಪ್ರದಾಯದವರಂತೆ ಇವರು ಕೂಡ ಮೇಳಗಳನ್ನು ನಡೆಸುತ್ತಾರೆ. ಆದರೆ ಇವರಲ್ಲಿ ನೃತ್ಯ ಇರುವುದಿಲ್ಲ. ಕುಕ್ಕರಗಾಲಿನಲ್ಲಿ ಕುಳಿತು ಕಥೆ ಮಾಡುವುದು ಇವರ ವಿಶೇಷ. ಬಟ್ಟುತಾಳ, ಗುಮ್ಟೆ, ತಂಬೂರಿ ಇವು ಇವರು ಬಳಸುವ ಪ್ರಮುಖ ವಾದ್ಯಗಳು. ಮೇಳದಲ್ಲಿ ಕಡೇಪಕ್ಷ ಮೂವರಾದರೂ ಭಾಗವಹಿಸಬೇಕು. ಇದನ್ನು ಮೇಳ ಎನ್ನುವುದಕ್ಕಿಂತ ಅವರ ಪರಿಭಾಷೆಯಲ್ಲೇ ಕಥೆ ಮಾಡುವುದು ಎಂದು ಕರೆಯುವುದು ಹೆಚ್ಚು ಅರ್ಥಪೂರ್ಣ. ಮುಮ್ಮೇಳಕ್ಕೆ ಒಬ್ಬ ಹಿಮ್ಮೇಳಕ್ಕೆ ಇಬ್ಬರು. ಪ್ರಧಾನ ಗಾಯಕ ತಂಬೂರಿ ಮೀಟುತ್ತ ಹಾಡಿದರೆ ಹಿಮ್ಮೇಳಗಾರರಲ್ಲಿ ಒಬ್ಬ ಗುಮಟೆ ಬಾರಿಸುತ್ತಾನೆ. ಇನ್ನೊಬ್ಬ ತಾಳ ಹಾಕುತ್ತಾ ಅವನೊಂದಿಗೆ ಸೊಲ್ಲು ಹೇಳುತ್ತಾನೆ.

ಬೇರೆಲ್ಲ ವೃತ್ತಿಗಾಯಕರಂತೆ ಇವರಲ್ಲಿ ಗುರುಮುಖೇನ ಹಾಡುಗಾರಿಕೆ ಕಲಿಯಬೇಕೆಂಬ ನಿರ್ಬಂಧವಿಲ್ಲ. ಅಲ್ಲದೆ ಇದು ವಂಶಪಾರಂಪರ್ಯವಾಗಿ ಹರಿದು ಬರುವ ಕಲೆಯೂ ಅಲ್ಲ. ತಂದೆಯ ಕಸಬನ್ನು ಮಗ ಅನುಸರಿಸಬೇಕೆಂಬ ನಿಯಮವೂ ಇಲ್ಲ. ಕಸಬು ಕಲಿಯಲಿಚ್ಫೆಯುಳ್ಳವರು ಕೆಲವು ಸಮಯ ನುರಿತ ಗಾಯಕರ ಹಿಂದೆ ಹಳ್ಳಿಯಿಂದ ಹಳ್ಳಿಗೆ ಅಲೆದರೆ ಸಾಕು, ಪ್ರವೀಣರಾಗುವುದು ನಿಶ್ಚಿತ. ಹೀಗಾಗಿ ಇವರಲ್ಲಿ ಶಿಷ್ಯರು ಎಂಬ ಪ್ರತ್ಯೇಕ ವರ್ಗ ಕಾಣಸಿಗದು.

ತಂಬೂರಿಯವರಲ್ಲಿ ಹಲವರು ಬದುಕುವ ಸಲುವಾಗಿಯೇ ಪಶುಪಾಲನೆ, ನೇಯ್ಗೆ, ಚಮ್ಮಾರಿಕೆ, ವ್ಯಾಪಾರ ಮುಂತಾದ ಕಸಬುಗಳನ್ನು ಅವಲಂಬಿಸಿರುವುದರಿಂದ ಸುಗ್ಗಿ ಕಾಲದಲ್ಲಿ ಮಾತ್ರ ಹಾಡುಗಾರಿಕೆ ವೃತ್ತಿ ನಡೆಸುವುದು ಸಾಮಾನ್ಯವಾಗಿದೆ. ಸುಗ್ಗಿ ಕಾಲ ಇವರ ಪಾಲಿಗೆ ಲಾಭದಾಯಕ ಕಾಲವಾದ್ದರಿಂದ ಏನೇ ಕಸಬಿನಲ್ಲಿ ತೊಡಗಿದ್ದರೂ ಅದನ್ನು ಬಿಟ್ಟು ತಂಬೂರಿಯನ್ನು ಹೆಗಲೇರಿಸಿಕೊಂಡು ಭಿಕ್ಷಾಟನೆಗಾಗಿ ಹಳ್ಳಿಯಿಂದ ಹಳ್ಳಿಗೆ ಇವರು ಸಾಗುವುದು ಸ್ವಾಭಾವಿಕ.

ಊರಾಡಲು ಹೋಗುವಾಗ ಕೈಕಾಲು ಮುಖ ತೊಳೆದುಕೊಂಡು ಗುಡಿಸಲ ಮೂಲೆಯೊಂದರಲ್ಲಿ ಗೂಟದಲ್ಲಿ ನೇತು ಬೀಳಿಸಿಟ್ಟ ತಂಬೂರಿಗೆ ವಿಧ್ಯುಕ್ತವಾಗಿ ಪೂಜೆ ಕೈಗೊಳ್ಳುವುದು ಸಂಪ್ರದಾಯ. ಮಳೆಗಾಲದ ದಿನಗಳಲ್ಲಿ ಊರಾಡಲು ಹೋಗದಿದ್ದರೂ ಶನಿವಾರದಂದು ತಪ್ಪದೆ ತಂಬೂರಿಯನ್ನು ದೇವಸ್ಥಾನದಲ್ಲಿಟ್ಟು ಪೂಜಿಸಲಾಗುವುದು, ಸೂತಕದ ದಿನಗಳಲ್ಲಿ ಗಾಯಕನೂ ಸೇರಿಕೊಂಡಂತೆ ಕುಟುಂಬದ ಯಾರೂ ತಂಬೂರಿಯನ್ನು ಸ್ಪರ್ಶಿಸುವುದಿಲ್ಲ.

ತಂಬೂರಿಯವರು ಕಥೆ ಮಾಡುವುದು ಮುಖ್ಯವಾಗಿ ಜನರನ್ನು ರಂಜಿಸುವುದಕ್ಕಾದರೂ ಕೆಲವು ನಿರ್ದಿಷ್ಟ ಸಮಯ, ಸಂದರ್ಭಗಳಲ್ಲಿ ಮಾತ್ರ. ಅದೂ ಅರ್ಧ ಧಾರ್ಮಿಕ ಆವರಣದಲ್ಲಿ ಕಥೆ ಮಾಡುವ ಪರಿಪಾಠವಿಟ್ಟು ಕೊಂಡಿರುವುದು ಗಮನಾರ್ಹ. ಹೀಗೆ ಅರೆ ಧಾರ್ಮಿಕ ಆವರಣದಲ್ಲಿ ಕಥೆ ಮಾಡುವುದರಿಂದ ಇವರ ಕೆಲವು ಕಥೆಗಳು ಒಂದು ಬಗೆಯಲ್ಲಿ ಆರಾಧನಾ ಕಥೆಗಳಾಗಿ ಪರಿಣಮಿಸಿವೆ.

ತಂಬೂರಿಯವರು ಸುಮಾರು ೨೦ಕ್ಕೂ ಮೀರಿ ಅನೇಕ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಮತ್ತು ಇತರ ಕಾವ್ಯಗಳನ್ನು ಹಾಡುತ್ತಾರೆ. ಗುರುಬತ್ತುರಾಯ, ಅಂಜನಾದೇವಿ ಇತ್ಯಾದಿ ರಾಮಾಯಣ, ಮಹಾಭಾರತ ಕಥೆಗಳ ಕೆಲವು ಪ್ರಸಂಗಳನ್ನಷ್ಟೇ ಅಲ್ಲದೆ ಕನ್ನೆಗಜವತಿ, ಸರ್ಜಪ್ಪನಾಯಕ, ಬೂಬೇದಗುಡ್ಡದ ಸ್ವಾಮಿ, ಕುಸುಮಾಲೆ, ಪಿರಿಯಾಪಟ್ಟಣದ ಈರರಾಜ, ಕೊಡಗಿನ ನಿಂಗವ್ವ, ನಂಜುಂಡೇಶ್ವರ, ಚನ್ನಿಗರಾಮ, ಅಂಬಿಗರಣ್ಣ, ಕೊಣವೇಗೌಡ, ಕಾಡುಸಿದ್ದಾದೇವಿ, ಅರಣ್ಯಗೊಮಾರ, ಕತ್ತಲು ಮಹಾರಾಜ, ಸತ್ಯಭೋಜರಾಜ, ಬಾಲನಾಗಮ್ಮ, ಎಲ್ಲಮ್ಮ ಇನ್ನು ಮುಂತಾದ ಕಾವ್ಯಗಳನ್ನು ಹಾಡುತ್ತಾರೆ.

ಕಥೆ ನಡೆಸುವಾಗ, ತ್ವರಿತಗತಿಯಲ್ಲಿ ಬೇರೆ ಬೇರೆ ಮಟ್ಟುಗಳನ್ನು ಅಳವಡಿಸಿಕೊಂಡು ಹಾಡುವುದಕ್ಕೆ ಹೆಸರಾದವರು ತಂಬೂರಿಯವರು. ಇವರ ಎಲ್ಲ ಕಾವ್ಯಗಳೂ ಬಹುಪಾಲು ರಗಳೆಯನ್ನು ಹೋಲುವ ಛಂದಸ್ಸಿನಲ್ಲಿ ಹರಿಯುತ್ತವೆ. ಎಲ್ಲ ವೃತ್ತಿಗಾಯಕರಲ್ಲೂ ಸಾಮಾನ್ಯವಾಗಿರುವ ಪದ್ಯಗಂಧಿ ವಚನ ಇವರಲ್ಲಿ ಹೆಚ್ಚು ಪ್ರಾಚುರ್ಯ ಪಡೆದಿದ್ದರೂ ಪದ್ಯ ಭಾಗಗಳಿಗೂ ಅಷ್ಟೇ ಪ್ರಾಶಸ್ತ್ಯವಿದೆ.

– ಎ.ಎಚ್.

ತಪ್ಪ್ ತಪ್ಪ್ ಎಂಬ ವಾದ್ಯೋಪಕರಣವನ್ನು ತ್ರಿಶ್ಯೂರ್, ಮಲಪ್ಪುರಂ, ಪಾಲ್ಘಾಟು ಜಿಲ್ಲೆಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು. ಇದನ್ನು ಕೋಣನ ಚರ್ಮದಿಂದ ಹೊದೆಸಲಾಗುತ್ತದೆ. ಉತ್ಸವಾದಿಗಳಲ್ಲೂ ಹುಲಿವೇಷದಲ್ಲೂ ತಪ್ಪ್‌ನ ಉಪಯೋಗ. ಇದರ ಅನುಚರನಾಗಿ ಚಕ್ರತಾಳವೂ ಇರುತ್ತದೆ.

ಪ್ರಸ್ತುತ ವಿವೇಚಿಸುತ್ತಿರುವ (ಕುತ್ತಿ ಇರುವ) ತಪ್ಪನ್ನು ಕೋಲಿನಿಂದ ಬಾರಿಸುತ್ತಾರೆ. ಇದಕ್ಕೆ ತೆಂಗಿನ ಗೊಂಚಲ ಕೋಲನ್ನು ಕೆತ್ತಿ ನಯಗೊಳಿಸಿ ಬಳಸಲಾಗುತ್ತದೆ. ತಪ್ಪ್ ಬಾರಿಸುವ ತಂಡದಲ್ಲಿ ಎಂಟೋ ಹತ್ತೋ ಜನರಿರುತ್ತಾರೆ. ಅದರ ತಾಳಕ್ಕೆ ಅನುಸರಿಸಿ ಅದನ್ನು ಬಾರಿಸುವವರು ಹೆಜ್ಜೆ ಹಾಕುತ್ತಾರೆ. ಪೂರಂಗೆ ಪೂರಕವಾಗಿ ತಪ್ಪ್ ವಾದ್ಯ ತಂಡದವರು ಇರುವುದಿದೆ. ತಪ್ಪ್‌ತಂಡದವರಿಗೇ ವಿಶಿಷ್ಟವಾದ ಸಮವಸ್ತ್ರ ಇರುತ್ತದೆ. ಚೆಂಡೆಯ ಎಡ (ಕೆಳಭಾಗ)ದ ಶಬ್ದ ತಪ್ಪ್‌ನಲ್ಲೂ ಮೂಡಿ ಬರುತ್ತದೆ.

ಹಿಂದಿನ ಕಾಲದಲ್ಲಿ ಕೇವಲ ಪುಲಯರು ಮಾತ್ರ ಬಾರಿಸುತ್ತಿದ್ದ ವಾದ್ಯವಿದು. ತಪ್ಪ್‌ನಲ್ಲಿ ಮಣಿನಾದ (ಮೃದುಸದ್ದು) ಇಲ್ಲ. ಅದನ್ನು ಬಿಸಿ ಮಾಡಿದಾಗ ಮಾತ್ರ ಹೆಚ್ಚಿನ ಸದ್ದು ಅದರಿಂದ ಹೊರಡುತ್ತಾರೆ. ಇಲ್ಲಿ ಪ್ರಸ್ತಾಪಿಸಿರುವ ತಪ್ಪ್ ವಾದ್ಯಕ್ಕೆ ಅನುಷ್ಠಾನಕ್ಕೆ ಸಂಬಂಧಿಸಿದ ವಿಚಾರಗಳು ತೀರ ಕಡಿಮೆ. ಅದುದರಿಂದಲೇ ಕ್ರಿಶ್ಚಿಯನ್ನರ ಪಳ್ಳಿಪೆರುನ್ನಾಳ್’ ಗಳಲ್ಲೂ ಕೆಲವು ಶುಭ ಸಂದರ್ಭಗಳಲ್ಲೂ ತಪ್ಪ್ ಬಾರಿಸುತ್ತಾರೆ. ತಪ್ಪ್ ಬಾರಿಸುವಾಗ ಯಾವುದೇ ಹಾಡುಗಳು ಇರುವುದಿಲ್ಲ. ಜತೆ ವಾದ್ಯಗಳಾಗಿ ಚೆಂಡೆ ಮತ್ತು ಚಕ್ರತಾಳಗಳನ್ನು ಬಾರಿಸಲಾಗುತ್ತದೆ.

ತಿರುವಾದಿರದ ದಿನಗಳಲ್ಲಿ ತಿರುವಾದಿರ ಜೋಗಿಗಳು ಬರುತ್ತಾರೆ. ಜೋಗಿ ಕುಣಿತಕ್ಕೆ ಅನುಚರನಾಗಿ ತಪ್ಪ್ ಬಾರಿಸುತ್ತಾರೆ. ಅಂತೆಯೇ ಹುಲಿವೇಷಕ್ಕೂ ಜತೆಯಲ್ಲಿ ತಪ್ಪ್ ವಾದ್ಯವನ್ನು ಇಂದು ಬಳಸುತ್ತಾರೆ. ಹಿಂದಿನ ಕಾಲದಲ್ಲಿ ತ್ರಿಶ್ಯೂರಿನ ಎಲ್ಲೆಡೆ ಹುಲಿಕುಣಿತ ನಡೆಯುತ್ತಿತ್ತು. ಅದಕ್ಕಾಗಿಯೇ ಕುಣಿತವನ್ನು ಹೇಳಿಕೊಡುವ ಗುರುಗಳಿದ್ದರು. ಈ ಗುರುಗಳು ತಪ್ಪ್ ಬಾರಿಸುವುದರಲ್ಲೂ ಪ್ರವೀಣರಾಗಿದ್ದರು. ತಪ್ಪ್‌ಗೆ ಪ್ರತ್ಯೇಕವಾದ ಚೌಕಟ್ಟಾಗಲಿ ಲೆಕ್ಕವಾಗಲಿ ಇಲ್ಲ. ಉತ್ಸವ ಸ್ಥಳದಲ್ಲಿನ ಕೆಲಸಕ್ಕೆ ಅನುಸಾರವಾಗಿ ತಪ್ಪ್ ಬಾರಿಸಲಾಗುತ್ತದೆ. ತಪ್ಪ್‌ನ ಜತೆಯಲ್ಲಿ ಕರಿಂಕಾಳಿ, ಮೂಕನ್, ಚಾತ್ತನ್ ಮುಂತಾದ ವೇಷಗಳು ಹೆಜ್ಜೆ ಹಾಕಿ ಕುಣಿಯುತ್ತಿದ್ದುವು.

ಬಹಳ ಪುರಾತನವಾದ ಹೆಜ್ಜೆಗಳನ್ನಿರಿಸಿ ಕೈಯಲ್ಲಿನ ಕೋಲುಗಳನ್ನು ಪ್ರತ್ಯೇಕ ರೀತಿಯಲ್ಲಿ ಆಡಿಸಿ, ಕೋಲುಗಳನ್ನೆತ್ತಿ ಜೋರಾಗಿ ತಪ್ಪ್‌ನಲ್ಲಿ ತಾಳವನ್ನು ಬಾರಿಸಲಾಗುತ್ತದೆ. ಗುಂಪಿನ ಎಲ್ಲರೂ ಒಂದೇ ತೆರನಾಗಿ ತಪ್ಪ್ ಬಾರಿಸುತ್ತಾರೆ. ಯಾರಾದರೂ ತಪ್ಪಿ ಬಾರಿಸಿದರೆ ಕೂಡಲೇ ಅದು ಗಮನಕ್ಕೆ ಬರುತ್ತದೆ. ಆದುದರಿಂದಲೇ ತುಂಬ ತರಬೇತಿಯ ಬಳಿಕವಷ್ಟೇ ತಪ್ಪ್‌ನ ಗುರುಗಳು ತಪ್ಪ್ ಬಾರಿಸಲು ಅನುಮತಿ ನೀಡುತ್ತಿದ್ದರು.

ಮೂಲಭೂತವಾದ ಒಂದು ತಾಳವನ್ನು ತಪ್ಪ್‌ನಲ್ಲಿ ಮೂಡಿಸುವುದು ಕಂಡು ಬರುತ್ತದೆ. ಅದು ಮೂಲನಿವಾಸಿಗಳಿಗೇ ವಿಶಿಷ್ಟವಾದ ತಾಳವೆಂದು ತಪ್ಪ್‌ವಾದನವನ್ನು ಆಸ್ವಾದಿಸಿದವರಿಗೆ ಹೇಳಲು ಸಾಧ್ಯವಿದೆ. ಎಡದ ಕೈಯಲ್ಲಿ ತಪ್ಪನ್ನು ಹಿಡಿದುಕೊಂಡು, ನೆಲದಿಂದ ನೆಗೆದು ಬಲದ ಕೈಯಿಂದ ತಪ್ಪ್ ಬಾರಿಸುತ್ತಾರೆ. ಹೆಚ್ಚು ಎತ್ತರಕ್ಕೆ ನೆಗೆಯುವವರು ನಿತ್ಯವೂ ಅಭ್ಯಾಸ ಮಾಡುವವರಾಗಿರುತ್ತಾರೆ.

ಪಾಲ್ಘಾಟು ಜಿಲ್ಲೆಯ ಕಪ್ಪೂರ್, ತೃತ್ತಾಲ, ಪಟ್ಟಾಂಬಿ ಮುಂತಾದ ಕಡೆಗಳಲ್ಲಿ ತಪ್ಪ್ ಬಾರಿಸುವ ಕಲಾವಿದರಿದ್ದಾರೆ. ಸ್ವಂತವಾಗಿ ತಪ್ಪ್ ವಾದ್ಯೋಪಕರಣವನ್ನು ಹೊಂದಿದವರು ವಿರಳವೇ ಸರಿ. ಹತ್ತೋ ಹದಿನೈದೋ ತಪ್ಪ್‌ಗಳನ್ನು ಬಾಡಿಗೆಗೆ ಪಡೆದ ತಪ್ಪ್ ಬಾರಿಸಲಾಗುತ್ತಿತ್ತು. ತಪ್ಪ್‌ನ ಮೇಲೇರಿ ಕುಳಿತುಕೊಂಡೂ ಮಲಗಿಕೊಂಡೂ ಕಳರಿ ಭಂಗಿಗಳಲ್ಲಿಯೂ ತಪ್ಪ್‌ಕಲಾವಿದರು ಅದನ್ನು ಬಾರಿಸುತ್ತಿದ್ದರು. ವೃತ್ತಾಕಾರವಾಗಿ ಕುಳಿತುಕೊಂಡು ತಪ್ಪ್‌ಗಳನ್ನು ಒಂದೆಡೆ ಇಟ್ಟು ಪ್ರತಿಯೊಬ್ಬವಾದ್ಯಕಾರನೂ ಬದಲಿಸಿ ತಾಳವನ್ನು ಬಿಡದೆ ತಪ್ಪ್ ಬಾರಿಸುವು ಒಂದು ಕೌತುಕವೇ ಸರಿ. ತಲೆಕುತ್ತಿ ಮಗು ಚುತ್ತ, ತಾಳ ಬಿಡದೆ ಬಾರಿಸುವ ವಿದಗ್ಧರು ಪಾಲ್ಘಾಟ್ ಜಿಲ್ಲೆಯಲ್ಲಿದ್ದಾರೆ. ತ್ರಿಶ್ಯೂರಿನಲ್ಲಿ ಹುಲಿಕುಣಿತಕ್ಕೆ ತಪ್ಪ್ ಮೇಳ ವಿಶೇಷವಾದುದು. ಹುಲಿವೇಷ ಮಾಡುವವನು ತಪ್ಪ್ ಕೂಡ ಬಾರಿಸಬಲ್ಲನೆಂಬುದು ತ್ರಿಶ್ಯೂರ್‌ನಲ್ಲಿ ಓಣಂ ಸಂದರ್ಭದಲ್ಲಿ ಕಾಣಬಹುದಾಗಿದೆ.

ತಪ್ಪ್ ಎಂಬ ವಾದ್ಯ ಪಡಯಣಿಯಲ್ಲೂ ಇದೆ. ಆ ತಪ್ಪ್ ಬೇರೆಯೇ. ಅದು ದೇವಿಯನ್ನು ಪ್ರಸನ್ನೀಕರಿಸಲು ಉಪಯೋಗಿಸುವ ವಾದ್ಯೋಪಕರಣವಾಗಿದೆ.

– ಕೆ.ಯು.ಎಚ್. ಅನುವಾದ ಕೆ.ಕೆ.