ತೆಲುಗರ ನಂಬಿಕೆಗಳು ಸಂಸ್ಕೃತಿಯ ಒಂದು ಭಾಗವಾಗಿ ಸಮಾಜದಲ್ಲಿ ಭದ್ರವಾಗಿ ಬೇರೂರಿರುವ ನಂಬಿಕೆಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವ ಅವಶ್ಯಕತೆ ಇದೆ. ಅವಿದ್ಯಾವಂತರೇ ಅಲ್ಲದೆ ವಿದ್ಯಾವಂತರೂ ಮೂಢನಂಬಿಕೆಯ ಬಲೆಯಲ್ಲಿ ಸಿಲುಕಿಕೊಂಡು ಚಡಪಡಿಸುತ್ತಿರುತ್ತಾರೆ. ನಂಬಿಕೆಗಳು ಸಾಮಾಜಿಕ ಆಚಾರಗಳಲ್ಲಿ ಒಂದು ಭಾಗವೇ ಆಗಿವೆ. ಸಮಾಜವೇ ಅನೇಕ ವಿಶ್ವಾಸಗಳನ್ನು ಮಾನವನಿಗೆ ಮೂಡಿಸುತ್ತಾ ಇದೆ. ಸಮಾಜವೇ ಇಲ್ಲದಿದ್ದರೆ ಮೂಢನಂಬಿಕೆಗಳು ತೊಂಬತ್ತು ಭಾಗ ಇಲ್ಲದಂತೆಯೇ ಸರಿ.

ನಂಬಿಕೆ ಎಂದರೆ ಒಂದು ಮಾತಿನ ಮೇಲೆ ವಸ್ತುಗಳ ಮೇಲೆ ಪರಿಸ್ಥಿತಿ ಕುರಿತು ಮಾನವ ಸಮ್ಮತಿಯನ್ನು ವ್ಯಕ್ತಪಡಿಸುವ ಒಂದುಮಾನಸಿಕ ಸ್ಥಿತಿ. ತಲೆಮಾರುಗಳಿಂದ ಪುರರಾವೃತ್ತಿಯನ್ನು ಹೊಂದುತ್ತಾ ಸಾಮೂಹಿಕವಾದ ಅನುಮತಿಯನ್ನು ಸಂಪಾದಿಸುವ ಮಾನಸಿಕ ಸ್ಥಿತಿಯನ್ನು ನಂಬಿಕೆಗಳೆಂದು ವ್ಯಾಖ್ಯಾನಿಸಬಹುದು. ಜನಪದರ ಜೀವನದ ಅನಾಯಾಸವಾಗಿ ಪ್ರವೇಶಿಸುವ ನಂಬಿಕೆಗಳು ಕೊನೆಗೆ ಅವರ ಜೀವನವನ್ನೇ ನಿಯಂತ್ರಣಗೊಳಿಸುವ ಪ್ರಬಲ ಶಕ್ತಿಗಳಾಗಿ ಮಾರ್ಪಡುತ್ತವೆ. ಇದು ಒಂದೊಂದು ಸಾರಿ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸ ಮೂಡಿಸಬಹುದು, ಭಯ ಹುಟ್ಟಿಸಿ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಬಹುದು. ನಂಬಿಕೆಗಳಲ್ಲಿ ಹೆಚ್ಚಿನವು ಮೂಢನಂಬಿಕೆಗಳು. ಇವುಗಳಿಗೆ ಯಾವುದೇ ಬಗೆಯ ವೈಜ್ಞಾನಿಕ ಆಧಾರವೂ ಸಿಗುವುದಿಲ್ಲ. ಮಂತ್ರ ತಂತ್ರಗಳಲ್ಲಿ, ಕ್ಷುದ್ರ ಶಕ್ತಿಗಳಲ್ಲಿ ನಂಬಿಕೆ ಮೂಡುವಂತೆ ಮಾಡುವುದಲ್ಲದೆ, ಮೂಢನಂಬಿಕೆಗಳು ಮಾನವನನ್ನು ಭಯಭೀತನನ್ನಾಗಿಸುತ್ತವೆ. ನಮ್ಮ ಜೀವನದಲ್ಲಿ ನಂಬಿಕೆಗಳು ಅನಿವಾರ್ಯವಾಗಿ ನುಸುಳಿವೆ. ನಂಬಿಕೆಗಳು ಕೆಲವು ಅನುಭವಗಳಿಗೆ ಪ್ರತಿನಿಧಿ ಮಾತ್ರವೇ ಹೊರತು ಅಭಿವ್ಯಕ್ತಿಯಲ್ಲವೆಂದು ಕೆಲವರು ವಿದ್ವಾಂಸರ ಅಭಿಪ್ರಾಯವಾಗಿದೆ. ಮಾನವನ ಮನಸ್ಸು ಎಂದೂ ಕಷ್ಟಗಳನ್ನು ಹೋಗಲಾಡಿಸಿಕೊಳ್ಳಲು, ಸಂತೋಷ ಹೊಂದಲು ಪ್ರಯತ್ನಿಸುತ್ತಿರುತ್ತದೆ. ಆದ್ದರಿಂದ ನಂಬಿಕೆಯೇ ಒಂದು ವಿಧದಲ್ಲಿ ಮಾನಸಿಕ ಅನುಭವವೆಂದು ಹೇಳಬಹುದು.

ನಂಬಿಕೆಗಳ ಹುಟ್ಟು: ಮಾನವನ ಹುಟ್ಟಿನೊಂದಿಗೆ ನಂಬಿಕೆಗಳು ಹುಟ್ಟಿದವೆಂಬುದು ಸಮಂಜಸ. ಮಾನವನು ಸಮಾಜವಾಗಿ ರೂಪಗೊಂಡಾಗಷ್ಟೇ ನಂಬಿಕೆಗಳು ಬಲಿಷ್ಠಗೊಂಡವೆಂಬುದೂ ನಿಜ. ಮಾನವ ತನಗೆಂದು ಒಂದು ಭಾಷೆಯನ್ನು ನಿಗದಿಪಡಿಸಿಕೊಂಡ ಮೇಲೆ ನಂಬಿಕೆಗಳು ಒಬ್ಬನಿಂದ ಮತ್ತೊಬ್ಬನಿಗೆ ಬಂದವು. ಪ್ರಕೃತಿ ಮಾನವನ ಎಷ್ಟೋ ನಂಬಿಕೆಗಳಿಗೆ ಕಾರಣವಾಯಿತು. ಮಳೆ, ಪ್ರವಾಹ, ಗುಡುಗು, ಸಿಡಿಲು ಮೊದಲಾದವು ನಂಬಿಕೆಗಳ ಹುಟ್ಟಿಗೆ ಕಾರಣವಾದವು. ಪ್ರಕೃತಿಯಲ್ಲಿ ಸಂತೋಷವನ್ನು ಉಂಟು ಮಾಡುವ ವಿಷಯಗಳು ಎಷ್ಟು ಇವೆಯೊ ಭಯ ಹುಟ್ಟಿಸುವ ವಿಷಯಗಳೂ ಅಷ್ಟೇ ಇವೆ. ಬಿರುಗಾಳಿ, ಪ್ರಕೃತಿ ವೈಪರೀತ್ಯ, ಕ್ರೂರಮೃಗಗಳ ದಾರುಣ ಕೃತ್ಯಗಳು ಮೊದಲಾದವು ಮಾನವನ ಭಯಕ್ಕೆ ಕಾರಣವಾದವು. ಮಾನವಾತೀತ ವ್ಯಕ್ತಿಗಳ ಮೇಲೆ ಮಾನವನಿಗೆ ಭಯದಿಂದ ಕೂಡಿದ ನಂಬಿಕೆ ಉಂಟಾಗಿ ಎಷ್ಟೋ ನಂಬಿಕೆಗಳು ಹುಟ್ಟಿಕೊಳ್ಳಬಹುದು.

ತೆಲುಗು ನಂಬಿಕೆಗಳ ಹುಟ್ಟು ಕುರಿತು ತಿಳಿದುಕೊಳ್ಳುವುದು, ತೆಲುಗರ ಹುಟ್ಟಿನ ಪರ್ವಾಪರಗಳನ್ನು ತಿಳಿದುಕೊಳ್ಳುವಷ್ಟು ಕಷ್ಟ ಸಾಧ್ಯವಾದುದು. ಆಂಧ್ರ ನಂಬಿಕೆಗಳು ಐತರೇಯ ಬ್ರಾಹ್ಮಣದಷ್ಟು ಪ್ರಾಚೀನವಾದುವೆಂದು ಹೇಳಿದರೆ ತಪ್ಪಾಗದು. ನನ್ನಯ್ಯನಿಗಿಂತ ಪೂರ್ವಯುಗಗಳಿಗೆ ಸೇರಿದ ಶಾಸನಗಳಲ್ಲೇ ತೆಲುಗರಿಗೆ ಸಂಬಂಧಿಸಿದ ನಂಬಿಕೆಗಳು ಕಾಣಿಸುತ್ತವೆ. ದಾನಶಾಸನಗಳಲ್ಲಿ ದಾನವನ್ನು ಅಳಿಸಿದವನು ಪಂಚಮಹಾಪಾತಕಗಳನ್ನು ಮಾಡಿದವನೆಂದು, ಕಾಶಿಯಲ್ಲಿ ಗೋವವನ್ನು ಕೊಂಡವನೆಂದು ಹೇಳಲ್ಪಟ್ಟ ಮಾತುಗಳು ಶಾಸನಗಳಲ್ಲಿ ಕಾಣಸಿಗುತ್ತವೆ. ಆಂಧ್ರ ಮಹಾಭಾರತ ಎಷ್ಟು ವಿಶಿಷ್ಟವಾದ ಕಾವ್ಯವಾದರೂ ಜಾನಪದದ ನಂಬಿಕೆಗಳು ಅನೇಕ ಸಂದರ್ಭಗಳಲ್ಲಿ ಪ್ರತ್ಯಕ್ಷಗೊಳ್ಳುತ್ತಲೇ ಇರುತ್ತವೆ. ಗುಬ್ಬಚ್ಚಿ, ತೇನೆ ಹಕ್ಕಿ, ಗೂಬೆ, ಮನೆಗೆ ಪ್ರವೇಶಿಸಿದರೆ ಶಾಂತಿ ಮಾಡಿಸಬೇಕೆಂದು ಅನುಶಾಸನಿಕ ಪರ್ವದಲ್ಲಿ ಇದೆ. ಮುಹೂರ್ತಗಳು, ಶಾಸನಗಳು ಮೊದಲಾದವು ತೆಲುಗು ಕಾವ್ಯಗಳಲ್ಲಿ ಅಸಂಖ್ಯಾತವಾಗಿ ಕಾಣಸಿಗುತ್ತವೆ. ಕ್ರೀಡಾಭಿರಾಮದಲ್ಲಿ ಇಂಥವು ಹೇರಳವಾಗಿವೆ. ಬಾಳು ಬಂಗಾರವಾಗುವಂಥ ಒಳ್ಳೆಯ ಶಕುನಗಳನ್ನು ಹೆಸರಿಸಿ ಗೋವಿಂದಶರ್ಮ ‘ಅಚ್ಚುಕಟ್ಟಾಗಿ ಫಲಿಸುವ ನಮ್ಮ ಶೋಭನ ಕಾರ್ಯಗಳೆಲ್ಲ ಟಿಟ್ಟಿಭಾ’ ಎಂದಿದ್ದಾನೆ. ಒಳ್ಳೆಯ ಶಕುನಗಳು ಒಳ್ಳೆಯದನ್ನು ಮಾಡುವವೊ ಇಲ್ಲವೊ ಆದರೆ ಮನೋಬಲ ಇಲ್ಲದವನಿಗೆ ಕೆಟ್ಟ ಶಕುನಗಳು ಮಾಡುವ ಕೆಡುಕು ಮಾತ್ರ ಹೆಚ್ಚೆಂದೇ ಹೇಳಬಹುದು. ಯಾವುದೋ ಒಂದುಹಠಾತ್ ಸಂಘಟನೆ ನಂಬಿಕೆಗೆ ಮೂಲ ಕಾರಣವಾಗಿ ಅಪಶಕುನಗಳ ಪಟ್ಟಿಯಲ್ಲಿ ಮನೋಫಲಕದ ಮೇಳೆ ತಯಾರಾಗಿ ಹೋಗುತ್ತದೆ. ಮಕ್ಕಳು ಹೋರಾಡುವುದು, ಸೀನುವುದು, ಹಲ್ಲಿ ಲೊಚಗುಟ್ಟುವುದು, ಮೈಲಿಗೆ ಸೀರೆಗಳು ಎದುರಾಗುವುದು ಮೊದಲಾದವು ಅಪಶಕುನಗಳೆಂದು ‘ಸಿಂಹಾಸನ ದ್ವಾತ್ರಿಂಶಿಕ’ದಲ್ಲಿ ಹೇಳಿದೆ.

ಪ್ರಪಂಚಾದ್ಯಂತ ಇರುವ ನಂಬಿಕೆಗಳು ಯಾವ ಪ್ರಾಂತ್ಯಗಳಲ್ಲಿ ಹುಟ್ಟಿದವು. ಎಲ್ಲಿಂದ ಬಂದವು. ಎಲ್ಲಿಗೆ ಹೋದವು ಎಂದು ಹೇಳುವುದು ಬಹಳ ಕಷ್ಟ. ಮೂಲಭಾವ ಒಂದೆ ಆದರೂ ಪ್ರಾದೇಶಿಕವಾಗಿ ನಂಬಿಕೆಗಳು ಬದಲಾಗುತ್ತಿರುತ್ತವೆ. ಕೆಲವು ಬಲಿ ವಿಧಾನಗಳು ಪ್ರಪಂಚಾದ್ಯಂತ ಇದ್ದರೂ ಅಭಿರುಚಿಗೆ ತಕ್ಕಂತೆ ಪ್ರಾದೇಶಿಕ ಆಚರಣೆಗಳನ್ನು ಅನುಸರಿಸಿ ಕೆಲವು ವ್ಯತ್ಯಾಸಗಳು ಕಾಣಿಸುತ್ತಿರುತ್ತವೆ. ಕೆಲವು ನಂಬಿಕೆಗಳು ಮಾತ್ರ ಪೂರ್ತಿಯಾಗಿ ಭಿನ್ನವಾಗಿರುತ್ತವೆ. ಕೋಗಿಲೆಯ ಹಾಡು ನಮಗೆ ಅತ್ಯಂತ ಮಧುರ, ಕೋಗಿಲೆ ನಮಗೆ ಪ್ರೀತಿಪಾತ್ರವಾದ ಪಕ್ಷಿ. ಆದರೆ ಪಾಶ್ಚಾತ್ಯರು ಅದನ್ನು ಮೋಸಗೊಳಿಸುವ ಪಕ್ಷಿ ಎಂದು ಭಾವಿಸುತ್ತಾರೆ. ಗೂಬೆ ಎಂದರೆ ನಮಗೆ ಸರಿ, ಕಾಣದು. ಆದರೆ ಪಾಶ್ಚಿಮಾತ್ಯರ ಪಾಲಿಗೆ ಗೂಬೆ ವಂತಿಕೆಯ ಸಂಕೇತ.

ನಂಬಿಕೆಯ ಬಗೆಗಳು: ನಂಬಿಕೆಗಳಲ್ಲಿ ಕೆಲವು ಕೆಲಸಕ್ಕೆ ಬರುವ, ಇನ್ನು ಕೆಲವು ಕೆಲಸಕ್ಕೆ ಬಾರದ ನಂಬಿಕೆಗಳು. ಕೆಲವು ಶಾಸ್ತ್ರೀಯವಾಗಿ ವಿಶ್ಲೇಷಿಸಬಲ್ಲವು, ಕೆಲವು ಕೇವಲ ಅವಿವೇಕದಿಂದ ಉಂಟಾದಂಥವು. ವೈದ್ಯಕ್ಕೆ ಸಂಬಂಧಿಸಿದ ನಂಬಿಕೆಗಳಲ್ಲಿ ಕೆಲವು ಒಳ್ಳೆಯವು, ಮತ್ತೆ ಕೆಲವು ಪ್ರಾಣಾಪಾಯವನ್ನು ಉಂಟು ಮಾಡುವವು. ಪಶುಪಕ್ಷಿಗಳಿಗೆ ಸಂಬಂಧಿಸಿದ ಕೆಲವು ನಂಬಿಕೆಗಳು ಪರಿಶೀಲನೆಗಳಿಂದ ಏರ್ಪಟ್ಟಿರಬಹುದು. ನಂಬಿಕೆಗಳು ಮಾನವನ ಜೀವನಕ್ಕೆ ಸಂಬಂಧಿಸಿದವು. ಮಾನವಾತೀತ ಶಕ್ತಿಗಳಿಗೆ ಸಂಬಂಧಿಸಿದವನ್ನು ಎರಡು ವಿಧಗಳಲ್ಲಿ ವಿಭಜಿಸಬಹುದು. ಹಾಗೇ ಪ್ರಕೃತಿಗೆ ಸಂಬಂಧಿಸಿದ, ಗೃಹಕ್ಕೆ ಸಂಬಂಧಿಸಿದ, ವೈದ್ಯಕ್ಕೆ ಸಂಬಂಧಿಸಿದ, ಪೌರಾಣಿಕ ಮತ್ತು ನೀತಿಗೆ ಸಂಬಂಧಿಸಿದವು ಎಂದು ವಿಭಜಿಸಿಕೊಂಡು ಹೋಗಬಹುದು.

ತೆಲುಗರ ಕೆಲವು ನಂಬಿಕೆಗಳು: ದೇವರಿಗೆ-ಇತರ ಮಾನವಾತೀತ ಶಕ್ತಿಗಳಿಗೆ ಸಂಬಂಧಿಸಿದವು

೧. ದೇವಾಲಯದಿಂದ ಬಂದ ತಕ್ಷಣ ಕಾಲುಗಳನ್ನು ತೊಳೆಯಬಾರದು. ದೇವಾಲಯಗಳಿಗೆ ಹೋದವರು ಸ್ವಲ್ಪ ಹೊತ್ತು ಅಲ್ಲೇ ಕುಳಿತಿರಬೇಕು.

೨. ದೇವರಿಗೆ ಪೂಜೆ ಮಾಡಿದ ಹೂವನ್ನು ಪೊರಕೆಯಿಂದ ಗುಡಿಸಬಾರದು.

೩. ದೇವರಿಗಾಗಿ ಇಟ್ಟ ಹೂವನ್ನು ಮೂಸಿ ನೋಡಬಾರದು.

೪. ಬಾಣಂತಿ ಮಡಿದರೆ ದೆವ್ವವಾಗುತ್ತಾಳೆ.

೫. ಹುಣಿಸೆ ಗಿಡದ ಮೇಲೆ, ಆಲದ ಮರದ ಮೇಳ ದೆವ್ವಗಳಿರುತ್ತವೆ.

೬. ದೇವರ ಚಿತ್ರ ಇರುವ ಕಡೆ ಕಾಲುಚಾಚಿ ಮಲಗಬಾರದು.

೭. ನಾಗರಹಾವನ್ನು ಕೊಂದರೆ ಅಂತ್ಯಕ್ರಿಯೆ ಮಾಡಬೇಕು.

ಮನುಷ್ಯನ ಜೀವನಕ್ಕೆ ಸಂಬಂಧಿಸಿದ ನಂಬಿಕೆಗಳು

೮. ಅಪರೂಪವಾಗಿ ಮಗು ಹುಟ್ಟಿದಾಗ ಊಟದೆಲೆಯ ಮೇಲೆ ಹೊರಳಿಸಿ ಪುಲ್ಲಯ್ಯ ಎಂದು ಹೆಸರಿಟ್ಟರೆ ಒಳಿತು.

೯. ಹೆಣ್ಣು ಮಗು ಶುಕ್ರವಾರ ಹುಟ್ಟಿದರೆ ಒಳ್ಳೆಯದು.

೧೦. ಮದುವೆ ಆದವರು ಒಂದು ವರ್ಷ ಶ್ರಾದ್ಧದ ಊಟ ಮಾಡಬಾರದು.

೧೧. ಅಮಾವಾಸ್ಯೆಯ ದಿನ ಹುಟ್ಟಿದ ಮಗು ಕಳ್ಳನಾಗುತ್ತಾನೆ.

೧೨. ಸಾವಿನ ಸುದ್ದಿ ಹೇಳುವ ಕಾಗದಗಳಿಗೆ ತುದಿಯಲ್ಲಿ ಮಸಿ ಬಳಿಯಬೇಕು. ಶುಭಕಾರ್ಯಗಳಾದರೆ ಅರಿಶಿನ ಹಚ್ಚಬೇಕು.

೧೩. ಬಳೆ ಒಡೆದರೂ ಕನ್ನಡಿ ಚೂರಾದರೂ ಅಶುಭ.

೧೪. ನಿದ್ರೆಯಿಂದ ಎದ್ದಾಗ ಬಲಬದಿಯಿಂದ ಏಳಬೇಕು.

೧೫. ನಿದ್ರೆ ಹೋಗುವಾಗ ಅಲಂಕರಿಸಬಾರದು.

೧೬. ತೊಲೆಗಳ ಕೆಳಗೆ ಮಲಗಬಾರದು

೧೭. ಬೆಳಗಿನ ಜಾವ ಬಂದ ಕನಸು ನಿಜವಾಗುತ್ತದೆ.

೧೮. ರಾತ್ರಿಯ ಹೊತ್ತು ಸೂಜಿಯಿಂದ ಹೊಲಿಯಬಾರದು.

೧೯. ರಾತ್ರಿ ಹೊತ್ತು ತಲೆ ಬಾಚಬಾರದು.

೨೦. ಅನ್ನವನ್ನುಂಡು ಮೈ ಮುರಿಯಬಾರದು.

೨೧. ಹಲ್ಲು ಬಿದ್ದರೆ ಹೂತಿಟ್ಟರೆ ಬಂಗಾರ ದೊರೆಯುತ್ತದೆ.

೨೨. ಅಗಲವಾದ ಕಿವಿಗಳಿದ್ದರೆ ಅದೃಷ್ಟವಂತ.

೨೩. ದೇಹದ ಮೇಲೆ ಧರಿಸಿದ್ದಾಗಲೇ ಬಟ್ಟೆಯನ್ನು ಹೊಲಿಯಬಾರದು.

೨೪. ಬಂಜೆ ಮಕ್ಕಳನ್ನು ಮುಟ್ಟಬಾರದು.

೨೫. ಹುಟ್ಟಿದ ಕೂದಲನ್ನು ಕೊಡುವವರೆಗೂ ಬಾಚಣಿಗೆಯಿಂದ ಬಾಚಬಾರದು.

೨೬. ಬೆಕ್ಕು ಅಡ್ಡ ಬಂದರೆ ಅಪಶಕುನ.

೨೭. ಯಾರಾದರೂ ಹೊರಹೊರಟರೆ ‘ಮಲ್ಲಿಗೆ’ ಎಂದು ಕೇಳಬಾರದು.

೨೮. ಎಂಜಲು ತಟ್ಟೆಯನ್ನು ದಾಟಬಾರದು.

೨೯. ಉಪ್ಪು, ಪೊರಕೆ ಮೊದಲಾದವನ್ನು ಕೈಗೆ ನೀಡಬಾರದು.

೩೦. ಬಾಗಿಲ ಚಿಲಕ ಶಬ್ದ ಮಾಡಕೂಡದು.

ಪ್ರಕೃತಿ, ಪಶು-ಪಕ್ಷಿಗಳಿಗೆ ಸಂಬಂಧಿಸಿದವು

೩೧. ಕರಡಿಯ ಕೂದಲು ರಕ್ಷಾಯಂತ್ರದಲ್ಲಿ ಇಟ್ಟು ಕಟ್ಟಿದರೆ ಪೀಡೆಗಳು ಬಿಟ್ಟುಹೋಗುತ್ತವೆ.

೩೨. ಹಾವುಗಳು ಬೆಸೆದುಕೊಂಡಾಗ ನೋಡಿದರೆ ಅಶುಭ.

೩೩. ಬೆಕ್ಕು ಹೆರುವುದನ್ನು ನೋಡಿದರೆ ಪುಣ್ಯ.

೩೪. ಗೂಬೆ ಮನೆ ಹೊಕ್ಕರೆ ಆರುತಿಂಗಳು ಮನೆ ಬಿಟ್ಟು ಬಿಡಬೇಕು.

೩೫. ನಾಯಿಯನ್ನು ಪೊರಕೆಯಲ್ಲಿ, ಕಾಲಲ್ಲಿ ಹೊಡೆಯಬಾರದು.

೩೬. ಹಾಲು ತುಳಿಯಬಾರದು, ನೆಲದ ಮೇಲೆ ಬಿದ್ದರೆ ಒರೆಸಿಬಿಡಬೇಕು.

೩೭. ಮೈಮೇಲೆ ಜೇಡರಹುಳು ಬಿದ್ದರೆ ಹೊಸ ಬಟ್ಟೆ ಬರುತ್ತದೆ.

೩೮. ಆನೆ ಕನಸಿನಲ್ಲಿ ಸಿಂಹ ಕಂಡರೆ ಆಣೆ ಸತ್ತು ಹೋಗುತ್ತದೆ.

೩೯. ಬಿಸಿಲು-ಮಳೆ ಒಟ್ಟಿಗೆ ಬಂದರೆ ನಾಯಿ ನರಿ ಮದುವೆಯಾಗುತ್ತದೆ.

೪೦. ತಿಗಣೆಯನ್ನು ಕೊಂದು ವಾಸನೆ ನೋಡಿದರೆ ತಲೆನೋವು ಕಡಿಮೆಯಾಗುತ್ತದೆ.

೪೧. ಜೇನುಹುಳು ಕಚ್ಚಿದರೆ ಅದೃಷ್ಟ ಕೂಡಿ ಬರುತ್ತದೆ.

೪೨. ಜೇನುಹುಳು ಹೆಚ್ಚಾಗಿ ಎಗರುತ್ತಿದ್ದರೆ ಮಳೆ ಬರುತ್ತದೆ.

೪೩. ಕುಂಬಳಕಾಯಿಯನ್ನು ಸುಮ್ಮನೆ ತೆಗೆದುಕೊಳ್ಳಬಾರದು.

೪೪. ಹಿತ್ತಲಲ್ಲಿ ಹರಳೆಣ್ಣೆಗಿಡ ಇರಕೂಡದು.

೪೫. ವಿರಾಟಪರ್ವ ಓದಿದರೆ ಮಳೆ ಬರುತ್ತದೆ.

೪೬. ಗ್ರಹಣದ ಸಂದರ್ಭದಲ್ಲಿ ಏನಾದರೂ ತಿಂದರೆ ಹೊಟ್ಟೆನೋವು ಬರುತ್ತದೆ.

೪೭. ಗ್ರಹಣದ ಸಂದರ್ಭದಲ್ಲಿ ಗರ್ಭವತಿ ಹೊರಬಂದರೆ ಹುಟ್ಟುವ ಮಕ್ಕಳು ಅಂಗವಿಕಲರಾಗುತ್ತಾರೆ.

೪೮. ಗ್ರಹಣದ ಸಮಯದಲ್ಲಿ ನೀರಿನ ಮೇಲೆ, ಆಹಾರ ಪದಾರ್ಥಗಳ ಮೇಳೆ ಉಪ್ಪಿನಕಾಯಿಗಳ ಮೇಲೆ ದರ್ಬೆ ಹಾಕಿ ಇಡಬೇಕು.

೪೯. ನೀರಿನ ಮೇಲೆ ಮೀನು ಆಡುತ್ತಿದ್ದರೆ ಆ ದಿನ ಮಳೆ ಬರುತ್ತದೆ.

೫೦. ಚಂದ್ರನ ಸುತ್ತಲೂ ಪ್ರಭೆ ಬಂದರೆ ಆ ತಿಂಗಳು ಮಳೆ ಬರುವುದಿಲ್ಲ.

ಆರ್.ವಿ.ಎಸ್.ಅನುವಾದ ಎಸ್.ಎಲ್.ಡಿ.

 

ತೆಲುಗರ ನುಡಿಗಟ್ಟುಗಳು ಭಾಷೆಯ ಬೆಳೆವಣಿಗೆಗೆ ನೆರವಾಗುವ ಮುಖ್ಯವಾದ ಅಂಶಗಳಲ್ಲಿ ನುಡಿಗಟ್ಟುಗಳು ಸೇರುತ್ತವೆ. ಒಂದು ಭಾಷೆಯ ವೈಶಿಷ್ಟ್ಯವನ್ನು ತಿಳಿದುಕೊಳ್ಳಲು ಇವು ನೆರವಾಗುತ್ತವೆ. ಆಡುನುಡಿಯ ಚೆಲುವೆಲ್ಲ ಈ ನುಡಿಗಟ್ಟುಗಳಲ್ಲಿ ಪ್ರತಿಬಿಂಬಿತವಾಗುತ್ತವೆ. ನುಡಿಗಟ್ಟುಗಳು ಗಾದೆಗಳಂತೆ ವಾಕ್ಯರೂಪದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ. ಇವು ಕೇವಲ ಪದಬಂಧಗಳಾಗಿಯೂ ಇರಬಹುದು. ಭಾಷಾ ಸೌಂದರ್ಯದ ಜೊತೆಗೆ ಭಾವ ಸೌಂದರ್ಯ, ಸಾಹಿತ್ಯಕ ಸೌಂದರ್ಯ ಇವುಗಳಲ್ಲಿರುತ್ತದೆ. ಪದಗಳಿಗಿರುವ ಸಹಜವಾದ ಅರ್ಥವನ್ನು ಮರೆಮಾಚಿ ವಿಲಕ್ಷಣವಾದ ಅರ್ಥವನ್ನು ನುಡಿಗಟ್ಟುಗಳು ಕೊಡುತ್ವೆ. ಒಂಟಿಯಾಗಿರುವ ಪದದಲ್ಲಿ ಇಲ್ಲದ ಸೊಗಸು ಅದು ಬೇರೆ ಪದಗಳ ಜೊತೆಗೆ ಸೇರಿದಾಗ ಉಂಟಾಗುತ್ತದೆ. ಇದರಿಂದ ಆ ಸಂದರ್ಭಕ್ಕೂ ಒಂದು ಹೊಸ ಸೊಗಸು ಬರುತ್ತವೆ. ಒಂದು ಭಾಷೆಯಲ್ಲಿರುವ ನುಡಿಗಟ್ಟುಗಳು ಬೇರೆ ಭಾಷೆಯಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ. ಆದರೆ ಸೋದರ ಭಾಷೆಗಳಲ್ಲಿ ಒಮ್ಮೊಮ್ಮೆ ಕೆಲವು ನುಡಿಗಟ್ಟುಗಳು ಸಮಾನವಾಗಿರಬಹುದು. ಅಥವಾ ಸಂಸ್ಕೃತದಿಂದ ಅಂಥವನ್ನು ಎರವಲು ತೆಗೆದುಕೊಳ್ಳಬಹುದು. ಉದಾಹರಣೆಗೆ ‘ಸತ್ತು ಹೋದ’ ಎಂದು ಹೇಳಲು ‘ಗುಟುಕ್ಕುಮನ್ನಾಡು’ (ಗೊಟಕ್ ಎಂದ) ಹೇಳುತ್ತಾರೆ. ವಾಚಾಳಿತನವನ್ನು ಹೇಳಲು ‘ನೋರು ಚೇಸುಕುನ್ನಾಡು’ (ಬಾಯ್ಮಾಡ್ದ) ಎನ್ನುತ್ತಾರೆ. ಕಾಯಿಲೆ ಬಿದ್ದ ಎನ್ನಲು ‘ಪಡಕ ವೇಸ್ಯಾಡು’ (ಹಾಸಿಗೆ ಹಿಡಿದ) ಎಂದು ಹೇಳುವುದುಂಟು. ಇದ್ದೂ ವ್ಯರ್ಥವೆಂದು ಹೇಳುವಾಗ ಅಡವಿ ಗಾಚಿನ ವೆನ್ನೆಲ (ಕಾಡಿನಲ್ಲಿ ಹರಡಿದ ಬೆಳದಿಂಗಳು) ಎನ್ನುತ್ತಾರೆ. ಸಂಸ್ಕೃತ ದಿಂದ ಶಿವಾಕ್ಷರ, ಅಗ್ನಿಪರೀಕ್ಷೆ ಮುಂತಾದವು ತೆಲುಗಿಗೆ ಬಂದಿವೆ.

ಚಮತ್ಕಾರದಿಂದ ಮಾತನಾಡಬೇಕೆಂಬ ಭಾವನೆ ನುಡಿಗಟ್ಟುಗಳ ಉಗಮನಕ್ಕೆ ಕಾರಣವಾಗುತ್ತದೆ. ಮನುಷ್ಯ ತನ್ನ ಭಾವನೆಗಳನ್ನು ಅನುಭವಗಳನ್ನು ನೇರವಾಗಿ ಹೇಳದೆ ವಿಲಕ್ಷಣವಾಗಿ ಹೇಳುವ ಪ್ರಯತ್ನವೇ ನುಡಿಗಟ್ಟುಗಳ ಮೂಲ. ಪರಿಸರದ ಪ್ರಭಾವ ಪರಿಸರಗಳಲ್ಲಿರುವ ವಸ್ತುಗಳ ದೈನಿಕ ಜೀವನದ ರೀತಿ ನೀತಿಗಳು, ಸ್ಥಳ ಪುರಾಣಗಳು ಚಾರಿತ್ರಕ ವಿಷಯಗಳು, ಪ್ರೌರಾಣಿಕ ಘಟನೆಗಳು, ಪ್ರಕೃತಿ ಸಂಬಂಧ ವಸ್ತುಗಳು, ಶರೀರದ ಅವಯವಗಳು, ಪಶುಪಕ್ಷ್ಯಾದಿಗಳು, ಆಹಾರ ಪದಾರ್ಥಗಳು-ಈ ಎಲ್ಲವನ್ನು ನುಡಿಗಟ್ಟುಗಳು ಒಳಗೊಳ್ಳುತ್ತವೆ.

ನುಡಿಗಟ್ಟುಗಳಲ್ಲಿ ಅನೇಕ ಬಗೆಗಳಿವೆ. ತೆಲುಗು ಸಾಹಿತ್ಯದ ಉದ್ದಕ್ಕೂ ಸಾವಿರಾರು ನುಡಿಗಟ್ಟುಗಳು ಬಳಕೆಯಾಗಿವೆ. ಜನಪದ ಸಾಹಿತ್ಯದಲ್ಲಂತು ನುಡಿಗಟ್ಟುಗಳು ಅಸಂಖ್ಯಾತವಾಗಿವೆ. ‘ನೇತ್ರೋತ್ಸವ’ (ಶ್ರೀನಾಥನ ಶೃಂಗಾರನೈಷಧ), ‘ತೇನೆವೂಸಿನ ಕತ್ತಿ’ (ಜೇನುತುಪ್ಪ ಲೇಪಿಸಿದ ಕತ್ತಿ, ಮೋಸಗಾರನನ್ನು ಕುರಿತದ್ದು, ಪಾಂಡುರಂಗ ಮಾಹಾತ್ಮ್ಯ) ಮುಂತಾದವು ಸಾಹಿತ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಕಂಡುಬರುತ್ತವೆ. ‘ಕಾಕಿಮುಕ್ಕುಕು ದೊಂಡಪಂಡು (ಕಾಗೆಯ ಮೂಗಿಗೆ ತೊಂಡೆಹೆಣ್ಣು, ಅನುವಲ್ಲದ ದಾಂಪತ್ಯವನ್ನು ಸೂಚಿಸುವಾಗ ಹೇಳುವ ನುಡಿಗಟ್ಟು ಅಥವಾ ಸರಿಜೋಡಿಯಲ್ಲದ ವಧು ವರರನ್ನು ಸೂಚಿಸುವಾಗ ಬಳಸುವ ನುಡಿಗಟ್ಟು) ‘ತಲಲೋನಾಲುಕ’ (ಕೃತಜ್ಞತಾ ಪೂರ್ವಕವಾಗಿ ಒಬ್ಬನನ್ನು ಅನೇಕರು ನೆನೆಯುವುದು. ನೂರು ಮಂದಿ ಬಾಯಲ್ಲಿ ಅವನ ಹೆಸರು ಎನ್ನುವಂತೆ) ‘ಮೂನ್ನಾಳ್ಳ ಮುಚ್ಚಟ್ಲು’ (ಮೂರು ದಿನದ ಆಟ) ‘ಗಂಗಪಾಲು’ (ಗಂಗೆ ಪಾಲಾಯಿತು ಎಂದರೆ ವ್ಯರ್ಥವಾಯಿತು ಎಂದರೆ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆ.) ಮುಂತಾದವು ಜನಪದ ಸಾಹಿತ್ಯದಲ್ಲಿ ಹೇರಳವಾಗಿ ಬಳಕೆಯಾಗುತ್ತವೆ.

ವಿಶೇಷಾರ್ಥದ ನುಡಿಗಟ್ಟು– ನುಡಿಗಟ್ಟುಗಳಲ್ಲಿ ಅನೇಕ ತರಹದ ಅಭಿವ್ಯಕ್ತಿಗಳನ್ನು ಕಾಣಬಹುದು. ಕೆಲವು ಭಾಷಾ ಸಂಬಂಧವಾದ ನುಡಿಗಟ್ಟುಗಳಿವೆ.

೧. ಒಂದೇ ಪದದಿಂದ ಕೂಡಿರುವಂಥದ್ದು ಉದಾ: – ಕೀಚಕ, ಬೃಹಸ್ಪತಿ, ಶಕುನಿ ಮುಂತಾದವು.

೨. ಒಂದೇ ಅರ್ಥದ ಭಿನ್ನಪದಗಳ ಪುನರುಕ್ತಿಗೆ ಉದಾ: ಅಂದಚೆಂದ, ಪಂಡುಗಪಬ್ಬಂ (ಹಬ್ಬ ಹರಿದಿನ)

೩. ವಿಭಕ್ತಿಗಳಿಂದ ಕೂಡಿದ್ದಕ್ಕೆ ಉದಾ: ಪಾನಕಂಲೋ ಪುಡಕ (ಪಾನಕದಲ್ಲಿ ಕಡ್ಡಿ ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ಎನ್ನುವಂತೆ), ಗುಡ್ಡಿಲೋಮೆಲ್ಲ (ಕುಡ್ಡಿನಲ್ಲಿ ಮೆಳ್ಳೆ, ಸ್ವಲ್ಪ ಪರವಾಗಿಲ್ಲ ಎಂಬ ಅರ್ಥದಲ್ಲಿ.)

೪. ಪ್ರಾಸಗಳಿಂದ ಕೂಡಿದುದು, ಉದಾ: ‘ತೋಡುನೀಡ’ (ನೆರಳಿನಂತೆ ಜೊತೆ), ‘ಈಡುಜೋಡು’ (ಸರಿಯಾದ ಜೋಡಿ)

೫. ಗಾದೆಗಳಂಥವು ಉದಾ: ಅರಣ್ಯರೋದನೆ, ಪಿಚ್ಚುಕ ಮೀದ ಬ್ರಹಾಸ್ತ್ರಂ (ಗುಬ್ಬಚ್ಚಿಯ ಮೇಲೆ ಬ್ರಹಾಸ್ತ್ರ). ಚೆಪ್ಪೇರಿ ಶ್ರೀರಂಗನೀತುರು (ನೀತಿ ಹೇಳುವಂತೆ ನಟಿಸುವುದು ಬದನೆಕಾಯಿ ಎಂಬಂತೆ ಶಾಸ್ತ್ರ ಹೇಳುವುದು), ಉತ್ತರಕುಮಾರುನಿ ಪ್ರಗಲ್ಭಾಲು (ಉತ್ತರ ಕುಮಾರನ ಪ್ರಲಾಪಗಳು),

ಕೆಲವು ನುಡಿಗಟ್ಟುಗಳು ವಸ್ತುನಿಷ್ಠವಾಗಿರುತ್ತದೆ.

೧. ಪ್ರಕೃತಿ ಸಂಬಂಧಿ, ಉದಾ: ಗಾಲಿಮೇಡಲು (ಗಾಳಿಗೋಪುರ)

೨. ಶರೀರದ ಅವಯವಗಳು ಉದಾ: ಗುಂಡೆಚೆರು ವಯ್ಯಿಂದಿ. (ಎದೆ ಕೆರೆಯಾಯಿತು) ದುಃಖದ ಸಂಕೇತ. ಎತ್ತಿನ ಚೆಯಿ (ಎತ್ತಿದ ಕೈ)

೩. ಪಶುಪಕ್ಷ್ಯಾದಿಗಳು ಉದಾ: ಕುಟಿಲಬುದ್ದಿಗೆ ಕೊಂಗಜಪಂ (ಕೊಕ್ಕರೆಯ ಜಪ), ಮೊಸಲಿ ಕನ್ನೀರು (ಮೊಸಳೆ ಕಣ್ಣೀರು), ಮೇಕವನ್ನೆಪುಲಿ (ಗೋಮುಖ ವ್ಯಾಘ್ರ ಎಂರ್ಥದಲ್ಲಿ ಮೇಕೆ ಬಣ್ಣದ ಹುಲಿ)

೪. ಆಹಾರ ಪದಾರ್ಥಗಳು ಉದಾ: ತಿಲೋದಕ (ಒಂದರ ಮೇಲೆ ಆಸೆ ಬಿಡುವುದು) ಪಪ್ಪುಲೋ ಕಾಲುವೇಯಿ, (ತೊವ್ವೆಯಲ್ಲಿ ಕಾಳಿಟ್ಟ ಹಾಗೆ, ಮೂರ್ಖತನಕ್ಕೆ ಸೂಚನೆ).

ಪುರಾಣ ಸಂಬಂಧವಾದ ಅನೇಕ ನುಡಿಗಟ್ಟುಗಳನ್ನು ನೋಡಬಹುದು. ಉದಾ: ರಾಮಬಾಣಂ, ತ್ರಿಶಂಕು ಸ್ವರ್ಗಂ, ಗೊಂತ್ಯಮ್ಮ ಕೋರಿಕ (ಕೊಂತ್ಯಮ್ಮನ ಕೋರಿಕೆ), ಭಗೀರಥ ಪ್ರಯತ್ನ, ಅಕ್ಷಯಪಾತ್ರ.

ಚಾರಿತ್ರಿಕ ಸಂಬಂಧವಾದ ಅನೇಕ ನುಡಿಗಟ್ಟುಗಳು ಕಂಡುಬರುತ್ತವೆ. ಚಾಣಕ್ಯ ನೀತಿ, ಪಿಚ್ಚಿ ತೊಘಲಕ್, (ಹುಚ್ಚು ತೊಘಲಕ್) ಸ್ಥಳನಾಮಸಾಮ ಸೂಚಿಯಾಗಿ ಕೂಡ ಕೆಲವು ನುಡಿಗಟ್ಟುಗಳು ಹುಟ್ಟಿಕೊಂಡಿವೆ.

ಉದಾ: ತಿರುಪತಿ ಕ್ಷೌರ, ಕುಂಭಕೋಣಂ(ಮೋಸ), ಚಿದಂಬರ ರಹಸ್ಯ.

ಭಾಷೆಯ ಹಲವಾರು ರೀತಿಯ ಅಭಿವ್ಯಕ್ತಿಗಳನ್ನು ನುಡಿಗಟ್ಟುಗಳಲ್ಲಿ ಕಾಣುತ್ತೇವೆ. ಅಂಕಿತ ಆಗುವುದೆಂದರೆ ತೆಲುಗಿನಲ್ಲಿ ಯಾವುದಾದರೊಂದು ವಿಷಯಕ್ಕೆ ಬದ್ಧವಾಗುವುದು. ಮೂರು ಹೂವು ಆರು ಕಾಯಿ ಎಂದರೆ ಬಹಳ ಅಭಿವೃದ್ಧಿಯನ್ನು ಹೊಂದುವುದು. ಸಾವಿರಗುಡಿಯ ಪೂಜಾರಿ ಎಂದರೆ ಅಲ್ಲಲ್ಲಿ ತಿರುಗಾಡುವುದು, ಮುದ್ರಾರಾಕ್ಷಸವೆಂದರೆ ಹೆಚ್ಚಿನ ತಪ್ಪುಗಳು, ಮಾತು ಬಂಗಾರವೆಂದರೆ ಚಿನ್ನದಂಥ ಮಾತುಗಳನ್ನು ಹೇಳುತ್ತಾರೆಂದು ಅರ್ಥ.

ಜಿ.ಎಸ್.ಎಂ. ಅನುವಾದ ಎ.ಎಂ.ಡಿ.

 

ತೆಲುಗರ ಬೈಗುಳಗಳು ಪ್ರಪಂಚದ ಎಲ್ಲ ಭಾಷೆಗಳಲ್ಲೂ ಇರುವಂತೆಯೇ ತೆಲುಗರಲ್ಲೂ ಸಾವಿರಾರು ಬೈಗುಳಗಳಿವೆ. ‘ನೋರು ಮಂಚಿದುವುತೇ ಊರು ಮಂಚಿದವುತುಂದಿ’ (ಬಾಯಿ ಚೆನ್ನಾಗಿದ್ದರೆ ಊರೂ ಚೆನ್ನಾಗಿರುತ್ತೆ) ಎಂಬುದೊಂದು ಗಾದೆ. ಆದರೆ ಎಲ್ಲರ ಬಾಯಿ ಚೆನ್ನಾಗಿರುವುದಿಲ್ಲ. ಬೈಗುಳಗಳನ್ನು ಒಮ್ಮೆಯಾದರೂ ಬಳಸದವರು ಬಹಳ ವಿರಳ. ಆದರೆ ಅವುಗಳನ್ನು ಬಳಸುವುದರಲ್ಲಿಯ ತೀವ್ರತೆ ಸಾಂದರ್ಭಿಕವಾಗಿ ಬದಲಾಗಬಹುದು. ಕೆಲವರು ಸ್ವಲ್ಪ ಸಭ್ಯವಾಗಿ, ಇನ್ನು ಕೆಲವರು ಹೆಚ್ಚು ಅಸಭ್ಯವಾಗಿ, ಇನ್ನೂ ಕೆಲವರು ಕಿವಿ ಮುಚ್ಚಿಕೊಳ್ಳಬೇಕಾದ ಹಾಗೆ ಬೈಯುತ್ತಾರೆ. ಇಂಥ ತೀವ್ರವಾದ ಬೈಗುಳಗಳನ್ನು ತೆಲುಗಿನಲ್ಲಿ ‘ಬೂತು’ (ಅಶ್ಲೀಲ) ಎನ್ನುತ್ತಾರೆ.

ಬೈಗುಳಕ್ಕೆ ಪ್ರೇರಣೆ ಕೋಪ. ‘ತನ ಕೋಪಮೆ ತನ ಶತ್ರುವು’ (ತನ್ನ ಕೋಪವೇ ತನ್ನ ಶತ್ರು) ಎಂಬುದು ಪ್ರಸಿದ್ಧವಾದ ಹೇಳಿಕೆಯಾಗಿದ್ದರೂ ಮಾನವನಿಗೆ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದುರ್ಬಲತೆಯನ್ನು ಬಚ್ಚಿಟ್ಟುಕೊಳ್ಳಲು ಮಾಡುವ ಪ್ರಯತ್ನದಲ್ಲಿ ದುರ್ಬಲತೆಯನ್ನು ಬಚ್ಚಿಟ್ಟುಕೊಳ್ಳಲು ಮಾಡುವ ಪ್ರಯತ್ನದಲ್ಲಿ ಬೈಗುಳಗಳು ಹೊರಹೊಮ್ಮುತ್ತವೆ. ಬೈಗುಳ ಆತ್ಮರಕ್ಷಣೆಯ ತಂತ್ರವೆಂದು ಕೂಡ ಹೇಳಬಹುದು. ಸಾಮಾನ್ಯವಾಗಿ ಬಲಹೀನರೇ ಬೈಗುಳಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ದೈಹಿಕಬಲ ಮತ್ತು ಮನೋಬಲ ಇಲ್ಲದವರು ಬೈಗುಳಗಳನ್ನು ಆಶ್ರಯಿಸುತ್ತಾರೆ.

ಬೈಗುಳಗಳಲ್ಲಿ ತೀವ್ರವಾದ ಆಶ್ಲೀಲ ಪದ ಜಾಲವನ್ನು ಬಳಸುವ ಪ್ರವೃತ್ತಿಯನ್ನು ಮನೋವೈಜ್ಞಾನಿಕವಾಗಿ ಪರಿಶೀಲಿಸುವ ಅವಶ್ಯಕತೆ ಇದೆ. ‘ತಿಟ್ಟೇನೋರು ಕೊಟ್ಟಿನಾ ಊರಕುಂಡದು’ (ಬೈಯುವ ಬಾಯಿ ಒದ್ದರೂ ಸುಮ್ನಿರದು), ತಿಟ್ಟಿತೇ ಕೋಪಂ ಕೊಟ್ಟಿತೇ ನೊಪ್ಪಿ’ (ಬೈದರೆ ಕೋಪ ಹೊಡೆದರೆ ನೋವು), ‘ತಿಡಿತೇ ಚಚ್ಚಿನವಾಡುಲೇಡು, ದೀವಿಸ್ತೇ ಬ್ರತಿಕಿನವಾಡು ಲೇಡು’ (ಬೈದರೆ ಸತ್ತವನೂ ಇಲ್ಲ, ಹರಸಿದರೆ ಬದುಕಿದವನೂ ಇಲ್ಲ), ಎಂಬ ಗಾದೆಗಳು ಪ್ರಚಾರದಲ್ಲಿವೆ.

ತೆಲುಗಿನಲ್ಲಿ ಬೈಗುಳವನ್ನು ‘ತಿಟ್ಟು’ ಎನ್ನುತ್ತಾರೆ. ಇದು ಕ್ರಿಯಾಪದವೂ ಹೌದು, ನಾಮಪದವೂ ಹೌದು, ನಾಮಪದವೂ ಹೌದು. ಇದನ್ನೆ ದೂಷಣೆ, ನಿಂದೆ ಶಾಪ ಮುಂತಾದ ಪದಗಳಿಂದಲೂ ಕರೆಯುತ್ತಾರೆ (ತೆಲುಗಿನಲ್ಲಿ ದೂಷಣ, ನಿಂದ ಶಾಪಂ) ‘ತಿಟ್ಟು’ ಎಂಬುದಕ್ಕೆ ಸಂದರ್ಭಕ್ಕೆ ತಕ್ಕಂತೆ ನಿಂದಿಸುವುದು, ಶಾಪ ಕೊಡುವುದು, ಗೇಲಿ ಮಾಡುವುದು ಮಾಡುವುದು ಮುಂತಾದ ಅರ್ಥಗಳಿವೆ.

ತೆಲುಗು ಬೈಗುಳಗಳ ಮೇಲೆ ಹಿಂದಿ, ಉರ್ದು, ಇಂಗ್ಲಿಷ್ ಮುಂತಾದ ಭಾಷೆಗಳ ಪ್ರಭಾವವೂ ಇದೆ. ಹಿಂದೆ ಭಾಷೆಯ ‘ಸುವರ್’, ಉರ್ದುವಿನ ‘ಬಾಂಚೇದ್’, ‘ಮಾದರ್‌ಚೇದ್’, ಇಂಗ್ಲಿಷಿನ ‘ಫೂಲ್’, ‘ರಾಸ್ಕೆಲ್’, ‘ಈಡಿಯಟ್’, ‘ಡಾನ್‌ಕಿ’, ‘ಮಂಕಿ’ ಮುಂತಾದವು ತೆಲುಗಿನಲ್ಲಿ ಸೇರಿವೆ. ತೆಲುಗಿನಲ್ಲಿ ಒಂದು ವಿಶೇಷವೆಂದರೆ ಅಶ್ಲೀಲ ಶಬ್ದಗಳನ್ನು ಬಳಸುವವರನ್ನು ಕುರಿತು ‘ಸಂಸ್ಕೃತ ಮಾತನಾಡಬೇಡ’ ಎಂದು ಹೇಳುತ್ತಾರೆ. ‘ಸಂಸ್ಕೃತ’ ಎಂಬುದಕ್ಕೆ ಒಂದು ಅರ್ಥ ‘ಅಶ್ಲೀಲ’ ಎಂದು!

ಜನಪದ ಮತಾಚರಣೆಗಳಲ್ಲಿ ಅನೇಕ ಬೈಗುಳಗಳು ಕೇಳಿಬರುತ್ತವೆ. ಜಾತ್ರೆಗಳಲ್ಲಿ, ಉತ್ಸವಗಳಲ್ಲಿ ಈ ತರಹದ ಬಳಕೆ ಹೇರಳವಾಗಿದೆ. ಮುಖ್ಯವಾಗಿ ಗ್ರಾಮದೇವತೆಗಳ ಜಾತ್ರೆಗಳಲ್ಲಿ ಯಥೇಚ್ಛವಾಗಿ ಬೈಗುಳಗಳನ್ನು ಬಳಸುತ್ತಾರೆ. ಪೂರಿಯ ಜಗನ್ನಾಥ ರಥೋತ್ಸವದಲ್ಲಿ ರಥ ನಿಂತಾಗ ಬಹಳಷ್ಟು ಬೈಗುಳಗಳನ್ನು ಬಳಸುತ್ತಾರಂತೆ. ಹಾಗೆಯೇ ಬೈಯದಿದ್ದರೆ ಪಾಪ ಬರುತ್ತದೆಂಬ ನಂಬಿಕೆಯೂ ಇದೆ. ಗ್ರಾಮದೇವತೆಗಳನ್ನು ಬೈಗುಳಗಳಿಂದ ಕೆರಳಿಸಿ ತಮಗೆ ವರಕೊಡುವಂತೆ ಕೇಳುವ ಸಂಪ್ರದಾಯವಿದೆ.

ತೆಲುಗಿನಲ್ಲಿ ತುಂಬ ಪ್ರಚಾರದಲ್ಲಿರುವ ಬೈಗುಳವೆಂದರೆ ‘ವೈಧವ’ (ವಿಧವೆಯಿಂದ ಬಂದ್ದು) ಇದನ್ನೇ ಇನ್ನೊಂದು ರೀತಿ ‘ಮುಂಡ’ (ಮುಂಡೆ) ಎಂದು ಹೇಳುವುದುಂಟು. ವೈಧವ ಎಂಬುದನ್ನು ಪ್ರೀತಿಯಿಂದಲೂ ಬಳಸುವ ಅಭ್ಯಾಸವಿದೆ. ‘ನಮ್ಮವನು ಒಳ್ಳೆಯವನು’ ಎಂದು ಹೇಳುವಾಗಲೂ, ‘ಮಾ ವೆಧವ ಮಂಚೋಡು’ ಎಂದು ಹೇಳುವುದುಂಟು. ‘ನಾ ಕೊಡಕ’ (ನನ್ನ ಮಗನೇ) ಎಂಬುದು ಕೂಡ ಸಾಮಾನ್ಯವಾಗಿ ಬಳಸುವ ಬೈಗುಳವಾಗಿದೆ. ಅನೇಕ ಬೈಗುಳಗಳಲ್ಲಿ ಅನೈತಿಕ ಸಂಬಂಧದ ಸೂಚನೆ ಕಂಡುಬರುತ್ತದೆ. ವಿಧವೆಯನ್ನು ಬೈಗುಳದಲ್ಲಿ ಮುಖ್ಯವಸ್ತುವನ್ನಾಗಿ ಮಾಡುವುದು, ಬೇರೆಯವರನ್ನು ಮಗನೆಂದು ಹೇಳುವುದು, ಇವೆಲ್ಲ ಅನೈತಿಕ ಸಂಬಂಧದ ಸೂಚನೆಯಾಗಿ ಕೂಡ ಇರಬಹುದು. ದೈಹಿಕ ಕಾರ್ಯಗಳನ್ನು, ಕಾಯಿಲೆಗಳನ್ನು ಮುಟ್ಟಿನಂಥ ಸಂದರ್ಭಗಳನ್ನು ಬೈಗುಳಗಳಲ್ಲಿ ಸೇರಿಸುವುದನ್ನು ಕೂಡ ನೋಡುತ್ತೇವೆ. ಸ್ತ್ರೀ ಸಂಬಂಧಗಳನ್ನು ಅನೇಕ ವಿಧದ ಬೈಗುಳಗಳನ್ನಾಗಿ ನಿರೂಪಿಸುವುದನ್ನು ಕಾಣಬಹುದು.

ಬೈಗುಳಗಳಿಗೆ ಪ್ರತ್ಯೇಕವಾದ ಭಾಷಾಭಿವ್ಯಕ್ತಿ ಇದೆ. ಅದರಲ್ಲಿ ಬಳಕೆಯಾಗುವ ಪದಗಳನ್ನು ವಾಕ್ಯಗಳನ್ನು ಸಂದರ್ಭವನ್ನು ಭಾಷೆಯ ಸ್ವರೂಪವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿದೆ. ವಿದ್ಯಾವಂತರು, ಅನಕ್ಷರಸ್ಥರು, ಬುಡಕಟ್ಟುಗಳು, ಗ್ರಾಮೀಣರು, ನಾಗರಿಕರು, ವಿದ್ಯಾರ್ಥಿಗಳು, ಅಧ್ಯಾಪಕರು, ರಾಜಕಾರಣಿಗಳು, ಅಧಿಕಾರಿಗಳು ಮೊದಲಾದವರು ಬಳಸುವ ನೇಪಥ್ಯವನ್ನು ಕೂಡ ಪರಿಶೀಲಿಸಬೇಕಾಗಿದೆ.

ಪ್ರಾಚೀನ ಕವಿಗಳು ಕೂಡ ತಮ್ಮ ಕಾವ್ಯಗಳಲ್ಲಿ ಬೈಗುಳಗಳನ್ನು ಸೇರಿಸಿದ್ದಾರೆ. ಪ್ರಾಚೀನ ಕಾವ್ಯಗಳಲ್ಲಿ ಅಡಗಿರುವ ಬೈಗುಳಗಳನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ. ಪ್ರಾಚೀನ ಸಾಹಿತ್ಯದಲ್ಲಿ ಶಾಪವಾಕ್ಯಗಳು, ವರಗಳು, ಸ್ತುತಿಗಳು ಮುಂತಾದವುಗಳ ಬಗ್ಗೆ ಈಗಾಗಲೇ ಅಧ್ಯಯನ ನಡೆದಿದೆಯಾದರೂ ಬೈಗುಳಗಳ ಬಗ್ಗೆ ಪ್ರತ್ಯೇಕವಾಗಿ ಅಧ್ಯಯನ ಅಷ್ಟಾಗಿ ನಡೆದಿಲ್ಲ. ಆದರೆ ತೆಲುಗಿನಲ್ಲಿರುವ ಅಧೀಕ್ಷೇಪ ಕಾವ್ಯಗಳು, ಅವಹೇಳನ ಕಾವ್ಯಗಳು ಮುಂತಾದವುಗಳ ಬಗ್ಗೆ ಅಧ್ಯಯನ ನಡೆದಿದೆ. ತೆಲುಗಿನ ಬೈಗುಳಗಳ ಬಗ್ಗೆ ಒಂದೆರಡು ಕೃತಿಗಳು ಬಂದಿವೆ.

ಬೈಗುಳಗಳಲ್ಲಿ ತೀಕ್ಷ್ಣವಾದ ಬೈಗುಳಗಳು, ಸರಳವಾದ ಬೈಗುಳಗಳು, ಪ್ರೀತಿಯಿಂದ ಆಡುವ ಬೈಗುಳಗಳು ಮತ್ತು ಇತರ ಬೈಗುಳಗಳು ಎಂಬ ವಿಭಾಗವನ್ನು ಕೆಲವು ವಿದ್ವಾಂಸರು ಮಾಡಿದ್ದಾರೆ. ಪುರುಷರಿಗೆ ಸಂಬಂಧಿಸಿದ ಬೈಗುಳಗಳು, ಹೆಣ್ಣು ಮಕ್ಕಳ ಬೈಗುಳಗಳು, ಮಕ್ಕಳ ಬೈಗುಳಗಳು ಮುಂತಾಗಿ ವಿಂಗಡಿಸಬಹುದು. ದರಿದ್ರ, ಶನಿ, ತಿಂಡಿಪೋತ, ಸೋಂಬೇರಿ, ಕೋಡಂಗಿ ಮುಂತಾದವನ್ನು ಸರ್ವೇಸಾಮಾನ್ಯವಾಗಿ ಬಳಸುತ್ತಾರೆ. ತೆಲುಗಿನ ಬೈಗುಳಗಳನ್ನು ಪರಿಶೀಲಿಸಿದಾಗ ಅನೇಕ ತರಹದವು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಅಂಗವಿಕಲತೆಯ ಸೂಚನೆ, ಜಾತಿ ಸೂಚನೆ, ವೃತ್ತಿ ಸೂಚನೆ, ಪ್ರಾಣಿಗೆ ಹೋಲಿಕೆ, ರೋಗ ಸೂಚನೆ, ಶೀಲ ಸೂಚನೆ, ಲೈಂಗಿಕ ಸಂಬಂಧಗಳು, ಶಾಪಗಳು, ಮಾನವ ಸ್ವಭಾವ ಸೂಚನೆ, ಮುತ್ತೈದೆತನವನ್ನು ಕಳೆದುಕೊಳ್ಳಬೇಕೆಂಬ ಸೂಚನೆ, ಅಶುದ್ಧವಸ್ತುಗಳನ್ನು ಉಲ್ಲೇಖಿಸುವ ಸೂಚನೆ ಕಂಡುಬರುತ್ತದೆ.

ಬೈಗುಳಗಳನ್ನು ಸಂಗ್ರಹಿಸಿ, ವರ್ಗೀಕರಿಸಿ, ಆಳವಾದ ಅಧ್ಯಯನ ಮಾಡುವುದರ ಮೂಲಕ ಒಂದು ಪ್ರದೇಶದ ಸಂಸ್ಕೃತಿ, ಅಭಿವ್ಯಕ್ತಿಯ ಸ್ವರೂಪ, ಭಾಷಾ ವೈವಿಧ್ಯಗಳನ್ನು ಗುರುತಿಸಬಹುದು.

ಜಿ.ಎಸ್.ಎಂ.ಅನುವಾದ ಎ.ಎಂ.ಡಿ