ತ್ರಿಶ್ಯೂರ್ ಪೂರಂ ತ್ರಿಶ್ಯೂರ್ ಪೂರಂ ಕೇರಳದ ಅತಿಪ್ರಖ್ಯಾತ ಉತ್ಸವಗಳಲ್ಲೊಂದು. ಇಂದು ಇದನ್ನು ಉತ್ಸವಗಳ ಉತ್ಸವ ಎಂದು ತಿಳಿಯುವಂತಾಗಿದೆ. ತ್ರಿಶ್ಯೂರ್ ನಗರ ಮತ್ತು ಸಮೀಪದ ಹತ್ತು ದೇವಾಲಯಗಳು ಇದರಲ್ಲಿ ಪಾಲುಗೊಳ್ಳುತ್ತವೆ. ಕಣಿಮಂಗಲಂ ಶಾಸ್ತಾದೇವಾಲಯ, ಪನಮುಕ್ಕಂಪಿಳ್ಳಿ ಶಾಸ್ತಾದೇವಾಲಯ (ಕಿಳಕ್ಕಂಬಾಟ್ಟಕರ), ಚೆಂಬುಕ್ಕಾವ್ ಭಗವತೀ ದೇವಾಲಯ, ಕಾರಮುಕ್ಕ್ ಭಗವತೀ ದೇವಾಲಯ, ಲಾಲೂರ್ ಭಗವತೀ ದೇವಾಲಯ, ಪುರಕ್ಕೋಟ್ಟ್‌ಕಾವ್ ಭಗವತೀ ದೇವಾಲಯ (ಮುದುವರ), ತೈಲಕ್ಕಾವ್ ಭಗವತೀ ದೇವಾಲಯ (ಕೊಟ್ಟೂರು), ಪಾರಮೇಕ್ಕಾವ್ ಭಗವತೀ ದೇವಾಲಯ, ತಿರುವಂಬಾಡಿ ಶ್ರೀಕೃಷ್ಣ ದೇವಾಲಯ-ಇವು ತ್ರಿಶ್ಯೂರ್ ಪೂರಂನಲ್ಲಿ ಭಾಗವಹಿಸುವ ದೇವಾಲಯಗಳು.

ಮೇಷ ತಿಂಗಳಲ್ಲಿ (ಏಪ್ರಿಲ್, ಮೇ) ತ್ರಿಶ್ಯೂರ್ ಪೂರಂ ನಡೆಯುತ್ತದೆ. ಉತ್ತರಾಷಾಢ ನಕ್ಷತ್ರದ ಮಧ್ಯರಾತ್ರಿಗೆ ಆರಾಟ್ಟ್ ಉತ್ಸವ (ಆವಭೃತೋತ್ಸವ). ಪೂರಂ ಉತ್ಸವದ ದಿನ ನಿಶ್ಚಯದ ಲೆಕ್ಕಾಚಾರವೆಂದರೆ ಆರಾಟ್ಟ್‌ನ ಹಿಂದಿನ ದಿನ ಎಂಬುದು. ಹೆಚ್ಚಿನಂಶ ಮಖ ನಕ್ಷತ್ರದಂದು ಪೂರಂ ನಡೆಯುತ್ತದೆ. ಎರಡು ಅರ್ಧರಾತ್ರಿಗಳಲ್ಲಿ ಉತ್ತರಾಷಾಢ ಬರುವುದಾದರೆ ಮೊದಲ ರಾತ್ರಿಯನ್ನು ಪಾಟ್ಟ್‌ಗೆ ಎಂದು ಪರಿಗಣಿಸಲಾಗುತ್ತದೆ. ಉತ್ತರಾಷಾಢ ಎರಡು ರಾತ್ರೆಗಳಲ್ಲಿದ್ದರೂ ಅರ್ಧರಾತ್ರಿಯಷ್ಟು ದೀರ್ಘವಾಗಿಲ್ಲದಿದ್ದರೆ ಮರುದಿನವನ್ನಷ್ಟೆ ಪರಿಗಣಿಸಲಾಗುತ್ತದೆ.

ಐತಿಹ್ಯ: ಈಗ ತ್ರಿಶ್ಯೂರ್‌ಪೂರಂನಲ್ಲಿ ಭಾಗವಹಿಸುವ ದೇವಾಲಯಗಳು ಹಿಂದೆ ಆರಾಟ್ಟ್‌ಪುಯ ಪೂರಂನಲ್ಲಿ ಭಾಗವಹಿಸುತ್ತಿದ್ದವು. ಆರಾಟ್ಟ್‌ಪುಯದಲ್ಲಿ ನಡೆಯುವ ಪೂರಂಗೆ ಒಮ್ಮೆ ತ್ರಿಶ್ಯೂರ್ ಪೂರಂನ ತಂಡ ತಡವಾಗಿ ತಲಪಿತು. ಹೋಗುವ ಹೊತ್ತಿಗೆ ಸರಿಯಾಗಿ ಮಳೆ ಸುರಿದುದರಿಂದ ಚಕ್ಕಾಲಪ್ಪುರ (ಗಾಣದ ಕೊಟ್ಟಿಗೆ) ಯಲ್ಲಿ ನಿಲ್ಲಬೇಕಾಯಿತು. ಅಲ್ಲಿ ನಿಂತುದರಿಂದ ಅಶುದ್ಧವಾಯಿತೆಂದೂ ಅದನ್ನು ಕಳೆದುಕೊಳ್ಳಲು ಪುಣ್ಯಾಹ ಮಾಡಬೇಕೆಂದೂ ಆರಾಟ್ಟುಪುಯಪೂರಂನ ಸಂಘಟಕರಾಗಿದ್ದ ನಂಬೂದಿರಿಗಳು ಬಯಸಿದರು. ತ್ರಿಶ್ಯೂರ್‌ನವರು ಅದಕ್ಕೆ ಒಪ್ಪಲಿಲ್ಲ. ಅವರು ಪೂರಂನಲ್ಲಿ ಭಾಗವಹಿಸಲು ನಂಬೂದಿರಿಗಳು ಅವಕಾಶ ನೀಡಲಿಲ್ಲ. ಅವರು ಮರಳಿ ಹೋದರು. ಕೊಚ್ಚಿ ಅರಸನಾಗಿದ್ದ ಶಂಕರನ್ ತಂಬುರಾವ್ ವಿಷಯ ತಿಳಿದು ತ್ರಿಶ್ಯೂರ್‌ಪೂರಂನ ಸಂಬಂಧಿತ ವ್ಯಕ್ತಿಗಳನ್ನು ಬರಮಾಡಿಸಿದ. ಇನ್ನು ಮುಂದೆ ಆರಾಟ್ಟುಪುಯ ಪೂರಂಗೆ ಅವರು ಹೋಗಬೇಕಾಗಿಲ್ಲವೆಂದೂ ತ್ರಿಶ್ಯೂರ್‌ನಲ್ಲಿಯೇ ಪೂರಂ ಉತ್ಸವವನ್ನು ಪ್ರಾರಂಭಿಸಿಕೊಳ್ಳುವಂತೆಯೂ ಅವರಿಗೆ ನಿರ್ದೇಶನ ನೀಡಿದ. ಪೂರಂಗೆ ಅಗತ್ಯವಾದ ಸಹಾಯವನ್ನೂ ನೀಡಿದ.

ಪೂರಂನ ಕಾರ್ಯಕ್ರಮಗಳು:

.ಧ್ವಜಾರೋಹಣ – ಪೂರಂಗೆ ಒಂದು ವಾರ ಮೊದಲೇ ಪೂರಂನಲ್ಲಿ ಭಾಗವಹಿಸುವ ಸದಸ್ಯ ದೇವಾಲಯಗಳಲ್ಲಿ ಧ್ವಜಾರೋಹಣವಾಗುತ್ತದೆ. ಮೊದಲೇ ದಿನ ನಿಶ್ಚೈಸಿ ತಂತ್ರಿ, ಮೇಲ್‌ಶಾಂತಿ (ಹಿರಿಯ ಪೂಜಾರಿ) ಯರ ಮುಂದಾಳ್ತನದಲ್ಲಿ ಧ್ವಜಾರೋಹಣಕ್ಕೆ ಮುಂಚಿತವಾಗಿ ‘ಶುದ್ಧಕಲಶ’ ಕಾರ್ಯಕ್ರಮವನ್ನು ನಡೆಸಿರುತ್ತಾರೆ. ಆಚಾರಿಗಳು ತಯಾರಿಸಿ ಕೊಡುವ ಕಂಗು, ಧ್ವಜಸ್ತಂಭ, ದೇವಾಲಯದ ತಂತ್ರಿ, ಮೇಲ್‌ಶಾಂತಿ-ಇವರು ಧ್ವಜಾರೋಹಣದ ಜವಾಬ್ದಾರಿವಹಿಸುತ್ತಾರೆ. ನಯವಾಗಿ ಹೊರಗಿನ ಸಿಪ್ಪೆಯನ್ನು ಕೆತ್ತಿ ಧ್ವಜವನ್ನು ಏರಿಸಲು ಅನುಕೂಲವಾಗುವಂತೆ ರೀಪು ಬಡಿದು ಸಿದ್ಧಪಡಿಸಿದ ಕಂಗಿನಲ್ಲಿ ಗೋಳಿಯ ಎಲೆ, ಮಾವಿನ ಎಲೆಗಳನ್ನು ಕಟ್ಟುತ್ತಾರೆ. ದೇವಾಲಯದ ಅಧಿಕಾರಿಗಳ ಸಾನ್ನಿಧ್ಯದಲ್ಲಿ ಆ ವ್ಯಾಪ್ತಿಯಲ್ಲಿಯ ಜನರು ಆರ್ಪುವಿಳಿ(ಮ.) (ಬಾಯಿಯಿಂದ ಹೊರಡಿಸುವ ಒಂದು ತೆರನ ಮಂಗಲ ಸೂಚಕ ಶಬ್ದ) ಗಳೊಂದಿಗೆ ಧ್ವಜಸ್ತಂಭವನ್ನು ಸ್ವೀಕರಿಸಿ ಮೊದಲೇ ಸಿದ್ಧಪಡಿಸಿಕೊಂಡಿರುವ ಗುಳಿಯಲ್ಲಿ ಇಟ್ಟು ಪ್ರತಿಷ್ಠಾಪಿಸುತ್ತಾರೆ. ಅಲ್ಲಲ್ಲಿಯ ಸಮಯಾನುಸಾರವಾಗಿ ಒಂದೊಂದು ದೇವಾಲಯದಲ್ಲೂ ಧ್ವಜಾರೋಹಣಕ್ಕೆ ಮುನ್ನ ಆಚಾರಿ ಭೂಮಿ ಪೂಜೆ ನಡೆಸುತ್ತಾನೆ. ದೇವಸ್ವಂ ಬೋರ್ಡಿನ ಕಾರ್ಯದರ್ಶಿಯ ನೇತೃತ್ವದಲ್ಲಿ ಧ್ವಜಸ್ತಂಭವನ್ನು ಆ ಪ್ರದೇಶದ ಜನ ತೆಗೆದುಕೊಳ್ಳುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಭಗವತಿಯ ಕೋಲಂ(ವೇಷ ಮತ್ತು ಕುಣಿತ)ನಡೆಯುತ್ತದೆ. ಸ್ತ್ರೀಯರು ಕುರವ (ಬಾಯಿಯಿಂದ ಹೊರಡಿಸುವ ಒಂದು ತೆರನ ಮಂಗಳ ಧ್ವನಿ) ಹೊರಡಿಸುತ್ತಾರೆ. ವಾದ್ಯಮೇಳ ಇರುತ್ತದೆ. ಭಗವತಿಯ ಮೂರ್ತಿಯನ್ನು ಏರಿಸಿದ ಆನೆ ಮತ್ತು ವಾದ್ಯಮೇಳ ಮೂರು ಬಾರಿ ದೇವಾಲಯ ಪ್ರದಕ್ಷಿಣೆ ಮಾಡಬೇಕು.

ಧ್ವಜಾರೋಹಣವಾದ ಕೂಡಲೆ ಧ್ವಜಸ್ತಂಭದ ಸಮೀಪ ಜನರು ಕಳಸೆಯನ್ನು ತುಂಬಿಸುವ ರೂಢಿ ಪರಮೇಕ್ಕಾವು ತಿರುವಂಬಾಡಿ ದೇವಾಲಯದಲ್ಲಿದೆ. ಇದಕ್ಕೆ ಕೊಡಕ್ಕಲ್ ಪರ (ಕಳಸೆ) ಎಂದು ಹೆಸರು. ಬತ್ತ, ಅರಳು, ಅವಲಕ್ಕಿ, ಬೆಲ್ಲ, ಸಕ್ಕರೆ, ಬಾಳೆಹಣ್ಣು, ಹೂ, ಅರಸಿನ ಕೊಂಬು-ಇವುಗಳನ್ನು ಕಳಸೆ ತುಂಬುವುದಕ್ಕೆ ಬಳಸಲಾಗುತ್ತದೆ.

ಧ್ವಜಾರೋಹಣವಾದಂದು ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ತಿರುವಂಬಾಡಿ ಭಗವತಿಯ ‘ಪೂರಂ ಹೊರಡುವಿಕೆ’ ಆರಂಭವಾಗುತ್ತದೆ. ಆನೆಯ ಮೇಲೆ ಮೂರ್ತಿಯನ್ನು ಏರಿಸಿಕೊಂಡ ಬಳಿಕ ಮೆರವಣಿಗೆ ಆರಂಭವಾಗುತ್ತದೆ. ಮೂರ್ತಿಯನ್ನು ಹಿಡಿದುಕೊಳ್ಳುವುದು ಮೇಲ್ ಶಾಂತಿ (ಮುಖ್ಯ ಪೂಜಾರಿ). ವಾದ್ಯಮೇಳದ ಸಂಗಾತದಲ್ಲಿ ಭಗವತಿ ಹೊರಗಿನ ಮೆರವಣಿಗೆಗೆ ತೊಡಗುತ್ತಾಳೆ. ದಾರಿಯಲ್ಲಿ ‘ಕಳಸೆ ತುಂಬಿಸುವುದು’ ಕಾರ್ಯಕ್ರಮವಿರುತ್ತದೆ. ಬ್ರಹ್ಮಸ್ವಂ ಮಠದ ಆರಾಟ್ಟ್‌ನ ಬಳಿಕ (ಅವಭೃತ ಸ್ನಾನ) ಮೆರವಣಿಗೆ ಮರಳಿ ಬರುತ್ತದೆ. ಪಾರಮೇಕ್ಕಾವ್‌ನಲ್ಲಿ ಶ್ರೀ ಭೂತಬಲಿಯಿಂದ ‘ಪೂರಂ ಹೊರಡುವಿಕೆ’ ಆರಂಭ.

. ಪರಯೆಡುಪ್ಪ್ (ಕಳಸೆ ತೆಗೆಯುವುದು): ಧ್ವಜಾರೋಹಣದ ಬಳಿಕ ದೇವಾಲಯದ ವ್ಯಾಪ್ತಿ ಪ್ರದೇಶದಲ್ಲಿ ‘ಪರಯೆಡುಪ್ಪ್’ (ಕಾಣಿಕೆ ಸ್ವೀಕಾರ) ನಡೆಯುತ್ತದೆ. ದೇವತೆ ಗ್ರಾಮದರ್ಶನಕ್ಕಾಗಿ ಮೆರವಣಿಗೆ ಹೊರಡುವಾಗ ಭಕ್ತರು ಅವರ ಮನೆಗಳಲ್ಲಿ ನೀಡುವ ಧಾರ್ಮಿಕ ಸ್ವಾಗತವೇ-ಪರ. ವಾದ್ಯಘೋಷಗಳೊಂದಿಗೆ ದೇವಾಲಯದಿಂದ ಪರಯೆಡುಪ್ಪ್‌ಗೆ ಹೋಗುತ್ತಾರೆ. ಮನೆಗಳಿಗೆ ತಲುಪಿದರೆ ಗಣಪತಿ ಪೂಜೆಯ ಬಳಿಕ ಕಳಸೆಯಲ್ಲಿ ಬತ್ತವ್ನನು ತೆಗೆದುಕೊಂಡು ಮೂರು ಬಾರಿ ಪ್ರದಕ್ಷಿಣೆ ಬಂದು ಪೂರ್ವಾಭಿಮುಖವಾಗಿ ನಿಂತು ಸುರಿಯುತ್ತಾರೆ. ಕಳಸೆಯಲ್ಲಿ ತುಂಬಿದ ಬತ್ತವ್ನನು ಬೆಳ್ಚಪ್ಪಾಡನಾಗಲಿ ಆನೆಯಾಗಲಿ ಸ್ಪರ್ಶಿಸುವಲ್ಲಿಗೆ ಪರಯೆಡುಪ್ಪ್ ಪೂರ್ತಿಯಾಗುತ್ತದೆ.

ಪೂರಂಗಾಗಿ ಧ್ವಜವೇರಿದ ಮೇಲೆ ವ್ಯಾಪ್ತಿ ಪ್ರದೇಶದಲ್ಲಿ ನಡೆಸುವ ಪರಯೆಡುಪ್ಪನ್ನು ಪೂರಪ್ಪರ ಎಂದೂ ಕರೆಯುತ್ತಾರೆ. ಧ್ವಜಾರೋಹಣದ ಬಳಿಕ ಪೂರಂನಲ್ಲಿ ಭಾಗವಹಿಸುವ ದೇವಾಲಯಗಳಲ್ಲಿ (ಅವಭೃತ ಸ್ನಾನ) ಎಂದರೆ ಧಾರ್ಮಿಕವಾದೊಂದು ಸ್ನಾನ.

ಸಾಮಾನ್ಯವಾಗಿ ತೆರೆಯದ ವಡಕ್ಕುಂನಾಥ ದೇವಾಲಯದ ತೆಂಕುಗೋಪುರವನ್ನು ಪೂರಂಗಾಗಿ ತೆರೆಯಲಾಗುತ್ತದೆ. ಪೂರಂನ ಹಿಂದಿನ ದಿನದ ಮುಂಚಿತವಾಗಿ ನೈತಲಕ್ಕಾಡ್ ಭಗವತಿಯು ಮೆರವಣಿಗೆಯಲ್ಲಿ ತ್ರಿಶ್ಯೂರಿಗೆ ಬಂದು ತಲಪುತ್ತಾಳೆ. ವಡಕ್ಕುಂನಾಥ ದೇವಾಲಯದ ಪಶ್ಚಿಮ ಗೋಪುರದ ದಾರಿಯಾಗಿ ಒಳಪ್ರವೇಶಿಸಿ ತೆಂಕುಗೋಪುರದ ಬಾಗಿಲ ಮೂಲಕ ಹೊರಕ್ಕೆ ದಾಟುತ್ತಾಳೆ.

ಸ್ಯಾಂಪಲ್ ವೆಡಿಕೆಟ್ಟ್ (ಸಿಡಿಮದ್ದು ಪ್ರದರ್ಶನ): ಪೂರಂನ ಹಿಂದಿನ ದಿನ ಸ್ಯಾಂಪಲ್ ‘ವೆಡಿಕೆಟ್ಟ್’ ನಡೆಯುತ್ತದೆ. ಪಾರಮೇಕ್ಕಾವ್, ತಿರುವಂಬಾಡಿ ವಿಭಾಗಗಳು ರಾತ್ರಿ ಏಳುಗಂಟೆಯಾಗುವಾಗ ಸ್ಯಾಂಪಲ್‌ ಸಿಡಿಮದ್ದು ಪ್ರದರ್ಶನವನ್ನು ಮಾಡುತ್ತಾರೆ. ಯಾವುದಾದರೂ ಒಂದು ವಿಭಾಗ ಸಿಡಿಮದ್ದಿಗೆ ಮೊದಲು ಬೆಂಕಿ ತಗಲಿಸುತ್ತದೆ. ಸ್ಪರ್ಧಾ ಮನೋಭಾವ ಸ್ಯಾಂಪಲ್ ಪ್ರದರ್ಶನದಲ್ಲೂ ಕಾಣಿಸಿಕೊಳ್ಳುತ್ತದೆ. ಅಮಿಟ್ಟ್, ಕುಳಿಮಿನ್ನಿ, ಗುಂಡ (ವಿಭಿನ್ನ ಸಿಡಿಮದ್ದುಗಳು) ಮುಂತಾದುವುಗಳ ಹೊರತು ಕೆಲವರ್ಷಗಳಲ್ಲಿ ಓಲೆ ಪಟಾಕಿಗಳನ್ನು ಸಿಡಿಸುವ ರೂಢಿ ಕಾಣುತ್ತದೆ.

ಅಲಂಕಾರ ಆನೆಗಳ ಪ್ರದರ್ಶನ: ಪೂರಂ ಹಿಂದಿನ ದಿನ ತಿರುವಂಬಾಡಿ ಪಾರಮೇಕ್ಕಾವ್ ದೇವಸ್ವಂಗಳು ಪೂರಂಗೆ ಸಾಲ್ಗೊಂಡು ನಿಲ್ಲಿಸುವ ಆನೆಗಳ ಅಲಂಕಾರ ಪ್ರದರ್ಶನಗೊಳ್ಳುತ್ತದೆ. ನೆಟ್ಟಿಪಟ್ಟಂ (ಹಣೆಪಟ್ಟಿ), ಕೊಡೆಗಳು, ವಟ್ಟಕ್ಕಯರ್(ಮ.), ಕೋಲಂ, ಆಲಪ್ಪಟ್ಟಂ (ಆಲವಟ್ಟ-ನವಿಲುಗರಿಗಳಿಂದ ತಯಾರಿಸಿದ ವೃತ್ತಾಕಾರದ ಬೀಸಣಿಗೆ), ವೆಂಜಾಮರಂ (ಬಿಳಿ ಚಾಮರಗಳು)-ಇತ್ಯಾದಿಗಳು ಪ್ರದರ್ಶಿತವಾಗುತ್ತವೆ. ತುಂಬುಗಳಸೆಯನ್ನೂ ನೆಲದೀಪವನ್ನೂ ಇರಿಸಿ ಸುಂದರವಾಗಿ ಅಲಂಕರಿಸಿ ಪ್ರದರ್ಶನ ನಡೆಯುತ್ತದೆ.

ಪೂರಂ ಪ್ರದರ್ಶನ: ಪಾರಮೇಕ್ಕಾವ್, ತಿರುವಂಬಾಡಿ ದೇವಸ್ವಂಗಳು ಜಂಟಿಯಾಗಿ ಪೂರಂ ಪ್ರದರ್ಶನ ನಡೆಸುತ್ತವೆ. ತೇಕಿನ್‌ಕಾಡ್ ಮೈದಾನದ ಈಶಾನ್ಯ ಭಾಗದಲ್ಲಿ ಪ್ರರ್ಶನ ನಡೆಯುತ್ತದೆ. ಪೂರಂಗೆ ಒಂದು ತಿಂಗಳ ಮೊದಲೇ ಪ್ರದರ್ಶನ ಆರಂಭವಾಗಿ ಎರಡು ವಾರಗಳವರೆಗೆ ಮುಂದುವರಿಯುತ್ತದೆ. ಸರಕಾರಿ ವಿಭಾಗಗಳು, ಕೃಷಿ ವಿಶ್ವವಿದ್ಯಾಲಯ, ಜಿಲ್ಲಾ ಪಂಚಾಯತ್, ಮೆಡಿಕಲ್ ಕಾಲೇಜು ಮುಂತಾದುವು ಪಾಲ್ಗೊಳ್ಳುವ ಈ ಪ್ರದರ್ಶನದಲ್ಲಿ ಆಟದ ಸಾಮಾನುಗಳು, ಗೃಹೋಪಕರಣಗಳು, ಅಲಂಕಾರ ಸಾಮಗ್ರಿಗಳು ಮುಂತಾದುವುಗಳು ಇರುತ್ತವೆ. ಸಂಜೆ ನೃತ್ಯ, ಸಂಗೀತ, ನಾಟಕ ಮುಂತಾದ ಒಳ್ಳೊಳ್ಳೆಯ ಕಾರ್ಯಕ್ರಮಗಲು ಇರುತ್ತವೆ.

ಪೊಗಲ್‌ಪ್ಪೂರಂ (ಹಗಲು ಪೂರಂ): ಪಾರಮೇಕ್ಕಾವ್, ತಿರುವಂಬಾಡಿಗಳ ಹೊರತಾಗಿ ನಡೆಸುವ ಪೂರಂಗಳನ್ನು ಚೆರುಪೂರಂ (ಸಣ್ಣ ಪೂರಂ)ಗಳೆಂದು ಕರೆಯುತ್ತಾರೆ. ಹಗಲು ಪೂರಂನಲ್ಲಿ ಸಣ್ಣಪೂರಂಗಳ ಬರುವಿಕೆಯಿರುತ್ತದೆ. ವಾದ್ಯಮೇಳಗಳೊಂದಿಗೆ ಆನೆಗಳ ಮೆರೆವಣಿಗೆ ಮುಂಜಾನೆಯಿಂದಲೆ ದೇವಾಲಯಗಳಿಂದ ಹೊರಟು ತ್ರಿಶ್ಯೂರಿಗೆ ಮುಂದುವರಿಯುತ್ತವೆ.

ತಿರುವಂಬಾಡಿಯು ಮಠಕ್ಕೆ ಬರುವುದು: ಕೋಲಂ ಏರಿಸಿದ ಆನೆಯೂ ಸೇರಿ ಮೂರು ಆನೆಗಳೊಂದಿಗೆ ವಾದ್ಯಮೇಳಗಳ ಜತೆ ದೇವಾಲಯದಿಂದ ಏಳೂವರೆ ಗಂಟೆಗೆ ಭಗವತಿಯ ಮೆರವಣಿಗೆ ಹೊರಡುತ್ತದೆ. ರಸ್ತೆಯ ಇಬ್ಬದಿಗಳಲ್ಲಿಯ ಮನೆಗಳಿಂದ ‘ಪರ’ ಸ್ವೀಕರಿಸುತ್ತ ನಡುವಿಲ್ ಮಠಕ್ಕೆ(ನೆಡುಮಠ) ತಲುಪುತ್ತದೆ. ಇಲ್ಲಿ ವಿಗ್ರಹವನ್ನು ಪೂಜೆಗಾಗಿ ಕೆಳಗಿಳಿಸಲಾಗುತ್ತದೆ. ಪ್ರಧಾನ ಅರ್ಚಕರ ಪೂಜೆ ಮುಗಿದಾಗ ಕೋಲಂ ಮತ್ತು ದೇವೀಮೂರ್ತಿಗಳನ್ನು ವಡಕ್ಕೇ ಮಠ (ಬಡಗುಮಠ)ದ ಒಂದು ಕೊಠಡಿಯಲ್ಲಿ ಇರಿಸಲಾಗುತ್ತದೆ. ಹೊಸಮಾಲೆಯನ್ನು ಹಾಕಿ ಅಲಂಕರಿಸಿದ ಬಳಿ ಮೂರ್ತಿಗಳನ್ನು ಹತ್ತಿರ ಹತ್ತಿರ ಇರಿಸಿ, ‘ಪ್ರಾಣಿ’ ಬಾರಿಸಿ, ಕೋಲಂ ಅನ್ನು ಹೊರತೆಗೆಯಲಾಗುತ್ತದೆ.

ಮಠಕ್ಕೆ ಬರುವುದು: ನಡುವಿಲ್ ಮಠದ ಮೇಲ್ಭಾಗದಲ್ಲಿ ತಾತ್ಕಾಲಿಕವಾಗಿ ರಚಿಸಿದ ‘ಅನೆಚಪ್ಪರ’ದಲ್ಲಿ ಕೋಲಂ ಏರಿಸಿಕೊಳ್ಳಲು ಯೋಗ್ಯವಾದ ಮೂರು ಆನೆಗಳನ್ನು ನಿಲ್ಲಿಸುತ್ತಾರೆ. ಮಠದಿಂದ ಹೊರಕ್ಕೆ ತರುವ ಕೋಲ ಆನೆಯ ಮೇಲೇರುತ್ತದೆ. ಈ ಸಂದರ್ಭದಲ್ಲಿ ಮೂರು ಬಾರಿ ಶಂಖ ಊದಿದಾಗ ಪಂಚವಾದ್ಯ ಆರಂಭವಾಗುತ್ತದೆ. ಕದಿನೆ (ಒಂದು ತೆರನ ದೊಡ್ಡ ಸಿಡಿಮದ್ದು) ಸಿಡಿಯುತ್ತದೆ. ಪಂಚವಾದ್ಯದೊಂದಿಗೆ ನಾದಸ್ವರವನ್ನೂ ಆರಂಭಿಸುತ್ತಾರೆ. ಹದಿನೇಳು ತಿಮಿಲೆ ವಾದ್ಯ, ಹತ್ತು ಮದ್ದಳಂ, ಹದಿನೇಳರಂತೆ ಕೊಂಬು, ಚಕ್ರತಾಳ, ಮೂರ ಉಡಿಕ್ಕಿ-ಇವುಗಳಿಂದ ಕೂಡಿದ ಪಂಚವಾದ್ಯವೂ ಮೆರವಣಿಗೆಯೂ ಪ್ರಾರಂಭವಾಗುತ್ತದೆ. ನಯ್ಕನಾಲ್ ಚಪ್ಪರದಲ್ಲಿ ಪಂಚವಾದ್ಯ ಮುಕ್ತಾಯವಾಗುತ್ತದೆ. ಮೆರವಣಿಗೆಗೆ ಇನ್ನೂ ಎಂಟು ಆನೆಗಳ ಸೇರ್ಪಡೆಯಾಗುತ್ತದೆ. ನೇರವಾಗಿ ತೇಕ್ಕಿನ್‌ಕಾಡ್ ಮೈದಾನಕ್ಕೆ ಸಾಗುತ್ತದೆ. ಚೆಂಬಡ ಮೇಳದ ಬಳಿಕ ಪಾಂಡಿಮೇಳ ಪ್ರಾರಂಭವಾಗುತ್ತದೆ.

ಪಾಲಚ್ಚೋಟ್ಟಿಲ್ ಮೇಳಂ: ಹದಿನೈದು ಆನೆಗಳ ಪಾಂಡಿಮೇಳದೊಂದಿಗೆ ಪಾರಮೇಕ್ಕಾವು ದೇವಾಲಯದ ಪಶ್ಚಿಮ ದ್ವಾರದ ಹೊರಗೆ ಒಂದುಗಂಟೆಯ ಹೊತ್ತಿಗೆ ಮೆರವಣಿಗೆ ಪ್ರಾರಂಭವಾಗುತ್ತದೆ. ನೇರವಾಗಿ ತೇಕ್ಕಿನ್ ಕಾಡ್ ಮೈದಾನಕ್ಕೆ ಸಾಗುತ್ತದೆ. ಇದನ್ನೇ ಪಾಲಚ್ಚೋಟ್ಟಿಲ್ ಮೇಳಂ ಎನ್ನುತ್ತಾರೆ.

ಇಲಂಞಿತ್ತರಮೇಳಂ: ಇಲಂಞಿತ್ತರದ ಸಮೀಪ ರಚಿಸಿರುವ ಕಿರುಚಪ್ಪರದಲ್ಲಿ ಮೇಳದವರು ನಿಲ್ಲುತ್ತಾರೆ. ಹದಿನೈದು ಉರುಟ್ಟು ಚೆಂಡೆಗಳು, ಎಪ್ಪತ್ತೈದಕ್ಕಿಂತ ಹೆಚ್ಚು ಡೋಲುಗಳು, ಇಪ್ಪತ್ತೊಂಬರಷ್ಟು ಕೊಂಬು, ಹದಿನೇಳು ಕೊಳಲು, ಐವತ್ತು ಚಕ್ರತಾಳಗಳು-ಇಷ್ಟು ಭಾಗವಹಿಸುತ್ತವೆ. ಮೇಳದ ಮೊದಲ ಸಾಲಿನಲ್ಲಿ ಹೆಸರುವಾಸಿ ವಾದ್ಯದವರು ನಿಲ್ಲುತ್ತಾರೆ. ಉರುಟ್ಟು ಚೆಂಡಗಳ ಮಧ್ಯದಲ್ಲಿ ಮೇಳದ ಮುಖ್ಯಸ್ಥ ನಿಲ್ಲುತ್ತಾನೆ. ಪ್ರಮಾಣದವರ ಎಡ ಬಲಗಳಲ್ಲಿ ನಿಲ್ಲುವ ಚೆಂಡೆಯವರು ಅಗ್ರಪಂಕ್ತಿಯ ಕಲಾವಿದರಾಗಿರುತ್ತಾರೆ.

ತೆಕ್ಕೋಟ್ಟಿರಕ್ಕಂ: ಇಲಂಞಿತ್ತರ ಮೇಳ ಕಳೆದು ಪಾರಮೇಕ್ಕಾವು ಪೂರಂನ ಆನೆಗಳೂ ವಾದ್ಯದವರೂ ವಡಕ್ಕುಂನಾಥ ದೇವಾಲಯದ ತೆಂಕುಗೋಪುರದ ದಾರಿಯಾಗಿ ಹೊರಗಿಳಿಯುತ್ತಾರೆ. ಬಳಿಕ ತಿರುವಂಬಾಡಿ ಪೂರಂದ ಆನೆಗಳೂ ವಾದ್ಯದವರೂ ಪಶ್ಚಿಮ ಗೋಪುರದ ಮೂಲಕ ಒಳಪ್ರವೇಶಿಸಿ ದೇವಾಲಯ ಪ್ರದಕ್ಷಿಣೆ ಹಾಕಿ ತೆಂಕುಗೋಪುರದ ಮೂಲಕ ಹೊರಹೋಗುತ್ತಾರೆ. ತಿರುವಂಬಾಡಿಯ ಹದಿನೈದು ಆನೆಗಳು ತೆಂಕು ಗೋಪುರದ ಸಮೀಪ ನಿಲ್ಲುತ್ತವೆ. ಎರಡು ವಿಭಾಗದ ಮೆರವಣಿಗೆಯವರೂ ತೆಂಕು ಗೋಪುರದ ಮೂಲಕ ಹೊರಗೆ ಹೋಗುವುದನ್ನೇ ‘ತೆಕ್ಕೋಟ್ಟಿರಕಂ’ ಎಂದು ಕರೆಯಲಾಗುತ್ತದೆ (ತೆಂಕು ದಿಕ್ಕಲ್ಲಿ ಇಳಿಯುವುದು ಎಂದು ಅರ್ಥ).

ಕುಡಮಾಟ್ಟಂ: ತೆಂಕುಗೋಪುರದ ಮೂಲಕ ಹೊರಬಂದು ಪಾರಮೇಕ್ಕಾವ್ ಪೂರವು ಮಣಿಕಂಠನ್ ಜಂಕ್ಷನಲ್ಲಿ ನೆರೆಯುತ್ತದೆ. ಎರಡು ಪೂರಂಗಳೂ ಅಭಿಮುಖವಾಗಿ ನಿಲ್ಲುತ್ತವೆ. ಐದೂವರೆ ಗಂಟೆಯ ಹೊತ್ತಿಗೆ ಎರಡು ವಿಭಾಗದವರೂ ಆನೆಗಳ ಮೇಲೆ ಹಿಡಿದಿರುವ ಕೊಡೆಗಳನ್ನು ಬದಲಾಯಿಸಿ ಹೊಸ ಕೊಡೆಗಳನ್ನು ಹಿಡಿಯುತ್ತಾರೆ. ಮೊದಲು ಮಧ್ಯಭಾಗದಲ್ಲಿ ಹಸಿರು ಕೊಡೆಗಳು, ಉಳಿದುವೆಲ್ಲ ಕೆಂಪು ಕೊಡೆಗಳು. ‘ಕೊಡೆ ಬದಲಿಸುವ’ ಕಾರ್ಯಕ್ರಮವನ್ನು ತಿರುವಂಬಾಡಿ ವಿಭಾಗವು ಪ್ರಾರಂಭಿಸುತ್ತದೆ. ಕಾರ್ಯಕ್ರಮ ಸ್ಪರ್ಧಾತ್ಮಕವಾಗಿರುತ್ತದೆ. ಎರಡು ವಿಭಾಗಗಳವರೂ ಒಮ್ಮೆ ಕೊಡೆ ಬದಲಿಸಿದರೆ ಮೂರು ಬಾರಿ ಆಲವಟ್ಟ ವೆಂಚಾಮರಗಳನ್ನು ಬೀಸಬೇಕು. ದೇವರ ಮೂರ್ತಿಯನ್ನು ಏರಿಸಿದ ಆನೆಯ ಮೇಲಿನ ಕೊಡೆಯನ್ನು ಪ್ರತಿಸಲ ಬದಲಾಯಿಸುವಾಗಲೂ ಉಳಿದುವುಗಳಿಗಿಂತ ವ್ಯತ್ಯಸ್ತವಾಗಿರಬೇಕು. ವಿಭಿನ್ನ ಬಣ್ಣ, ರೂಪಗಳುಳ್ಳ ಕೊಡೆಗಳನ್ನು ಎರಡು ವಿಭಾಗದವರೂ ಬದಲಾಯಿಸುತ್ತಾರೆ.

ಕುಡಮಾಟ್ಟಂ ಕಾರ್ಯಕ್ರಮ ಮುಗಿದ ಬಳಿಕ ಎರಡು ವಿಭಾಗಗಳು ಎರಡು ದಿಕ್ಕಿಗೆ ಸರಿಯುತ್ತವೆ. ಮೆರೆವಣಿಗೆ ಮರಳಿಸುವ ನಾದಸ್ವರ ಇದ್ದೇ ಇರುತ್ತದೆ.

ರಾತ್ರಿ ಪೂರಂ: ರಾತ್ರಿಯ ಪೂರಂನ ಮೆರವಣಿಗೆ ಹಗಲುಪೂರಂನ ಹಾಗೆಯೇ ಇರುತ್ತದೆ. ಚೆರುಪೂರಂ (ಸಣ್ಣಪೂರಂ)ಗಳು ರಾತ್ರಿಯಲ್ಲಿ ಒಂದು ಗಂಟೆ ಕಾಲ ಮಾತ್ರ ಇರುತ್ತವೆ. ಚೆಂಬುಕ್ಕಾವ್ ಭಗವತಿಯ ಹೊರತಾಗಿ ಯಾವುದೂ ಆವರಣದೊಳಗೆ ಪ್ರವೇಶಿಸುವುದಿಲ್ಲ. ಹಗಲು ಪೂರಂನಲ್ಲಿರುವಷ್ಟು ಆನೆಗಳೂ ರಾತ್ರಿ ಪೂರಂನಲ್ಲಿ ಪಾಲುಗೊಳ್ಳುವುದಿಲ್ಲ.

ಸಿಡಿಮದ್ದು ಪ್ರದರ್ಶನ: ಬೆಳಗಿನ ಜಾವ ಮೂರು ಗಂಟೆ ಕಳೆಯುವಾಗ ಸಿಡಿಮದ್ದು ಪ್ರಾರಂಭವಾಗುತ್ತದೆ. ಪಾರಮೇಕ್ಕಾವ್, ತಿರುವಂಬಾಡಿ ದೇವಸ್ವಂಗಳು ತೇಕ್ಕಿನ್‌ಕಾಡ್ ಮೈದಾನದಲ್ಲಿ ಸಿಡಮದ್ದು ಪ್ರದರ್ಶಿಸುತ್ತವೆ. ಅಮಿಟ್ಟು(ದೊಡ್ಡ ಸಿಡಿಮದ್ದು)ಗಳನ್ನು ಇಡಲು ಅಗತ್ಯವಾದ ಗುಳಿಗಳನ್ನು ಸಿದ್ಧಪಡಿಸಿ ಇಡಲಾಗುತ್ತದೆ. ಓಲೆ ಪಟಾಕಿಗಳು, ಮುಳಿಪ್ಪೂವ್(ಮ.), ಲಾತ್ತಿರಿ(ಮ.) ಇತ್ಯಾದಿಗಳನ್ನು ಸಿದ್ದಪಡಿಸುತ್ತಾರೆ. ಜಿಲ್ಲಾಧಿಕಾರಿ, ಹಿರಿಯ ಪೊಲೀಸ್‌ ಅಧಿಕಾರಿಗಳ ಅನುಮತಿ ಪಡೆದು ಸಿಡಿಮದ್ದುಗಳನ್ನು ಸಿಡಿಸಲಾಗುತ್ತದೆ.

ಮರುದಿನದ ಹಗಲುಪೂರಂ: ಸಿಡಿಮದ್ದು ಸಿಡಿಸಿದ ಬಳಿಕ ನಾಯ್ಕನಾರ್ ಚಪ್ಪರದಲ್ಲೂ ಕೋಲಂ ಅನ್ನು ಹೊತ್ತು ನಿಂತಿರುವ ಎರಡು ಕಡೆಯ ಆನೆಗಳ ಮೇಲಿರುವ ಕೋಲಂಗಳನ್ನು ಬೇರೆ ಆನೆಗಳ ಬೆನ್ನಿಗೆ ಏರಿಸುತ್ತಾರೆ. ಹದಿನೈದು ಆನೆಗಳಂತೆ ಎರಡು ಕಡೆಯಲ್ಲೂ ನಿಂತು ಪೂರಂ ಆರಂಭವಾಗುತ್ತದೆ. ಸುಮಾರು ಎಂಟುಗಂಟೆಯ ಹೊತ್ತಿಗೆ ಮೆರೆವಣಿಗೆ ಪ್ರಾರಂಭವಾಗುತ್ತದೆ. ಮೆಲ್ಲಗೆ ಶ್ರೀಮೂಲಂ ಸ್ಥಾನಕ್ಕೆ ಮುಂದುವರಿಯುತ್ತದೆ. ವಾದ್ಯಮೇಳವು ಕ್ರಮ ಪ್ರಕಾರ ಕಾರ್ಯಕ್ರಮವನ್ನು ಮುಗಿಸುತ್ತದೆ.

ಉಪಚಾರ ಹೇಳಿ ವಿದಾಯ: ಶ್ರೀಮೂಲ ಸ್ಥಾನದಲ್ಲಿ ವಾದ್ಯಮೇಳ ನಿಂತ ಬಳಿಕ ಪಾರಮೇಕ್ಕಾವಿನ ದೇವೀ ವಿಗ್ರಹವನ್ನೇರಿಸಿದ ಆನೆಯೂ ಒಂದಿಷ್ಟು ವಾದ್ಯದವರೂ ಪಶ್ಚಿಮ ಗೋಪುರದ ಮೂಲಕ ದೇವಾಲಯದ ಒಳಗೆ ಬಂದು ವಡಕ್ಕುಂನಾಥ(ಶಿವ)ನಿಗೆ ಪ್ರದಕ್ಷಿಣೆ ಹಾಕಿ ಮರಳುತ್ತಾರೆ. ಎಡಭಾಗದಲ್ಲಿ ಬಂದು ನಿಲ್ಲುತ್ತಾರೆ. ತಿರುವಂಬಾಡಿಯ ಆನೆಯೂ ವಾದ್ಯದವರೂ ವಡಕ್ಕುಂನಾಥ ದೇವಾಲಯದ ಒಳಗೆ ಹೋಗಿ ಬಲಬಂದು ಮರಳುತ್ತಾರೆ. ಹೊರಬಂದು ನೇರವಾಗಿ ಪಶ್ಚಿಮಕ್ಕೆ ಸಾಗಿ ಮಧ್ಯಕ್ಕೆ ತಲಪಿ ಮತ್ತೆ ಶ್ರೀಮೂಲಂ ಸ್ಥಾನದ ಸಮೀಪಕ್ಕೆ ಬರುತ್ತಾರೆ. ಎರಡು ತಂಡಗಳಲ್ಲಿ ಮೂರ್ತಿಗಳನ್ನು ಹೊತ್ತ ಆನೆಗಳು ಅಭಿಮುಖವಾಗಿ ನಿಲ್ಲುತ್ತವೆ. ಪರಸ್ಪರ ಉಪಚಾರ ಹೇಳಿ ಭಗವತಿಯರು ವಿದಾಯ ಹೇಳುವುದರೊಂದಿಗೆ ಪೂರಂ ಮುಗಿಯುತದೆ.

ಪೂರಕಂಞಿ(ಪೂರಂ ಗಂಜೆ): ವಿದಾಯ ಹೇಳಿ ಸರಿದ ಬಳಿ ಪೂರಂ ಗಂಜಿಯನ್ನು ಬಡಿಸುತ್ತಾರೆ, ಎರಡು ವಿಭಾಗಗಳವರೂ ಆಯಾ ದೇವಾಲಯದ ಪರಿಸರದಲ್ಲಿ ಗಂಜಿ ಬಡಿಸುತ್ತಾರೆ. ಕಂಗಿನ ಹಾಳೆಗಳಲ್ಲಿ ಬಡಿಸಿದ ಗಂಜಿಯನ್ನು ಹಲಸಿನ ಎಲೆಯಲ್ಲಿ ಎತ್ತಿಕೊಂಡು ಕುಡಿಯುತ್ತಾರೆ.

ಧ್ವಜಾರೋಹಣ: ತಿರುವಂಬಾಡಿ ವಿಭಾಗವು ‘ನಡಪಾಣೀಮೇಳ’ದೊಂದಿಗೆ ತಿರುವಂಬಾಗಡಿ ದೇವಾಲಯಕ್ಕೆ ತೆರಳುತ್ತದೆ. ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಬಂದ ಆನೆಯ ಮೇಲಿರುವ ಮೂರ್ತಿಯನ್ನು ‘ಪಲಂದಲ’ (ಒಂದುನಿರ್ದಿಷ್ಟ ತಾಳಲಯದಲ್ಲಿ ವಾದ್ಯ ಬಾರಿಸುವುದು) ಬಾರಿಸಿದ ಬಳಿಕ ಇಳಿಸಿ ಗರ್ಭಗುಡಿಗೊಯ್ದು ಪೂಜೆ ಮಾಡಲಾಗುತ್ತದೆ. ಮೂರು ಗಂಟೆಯ ಹೊತ್ತಿಗೆ ಪರಯೆಡುಪ್ಪ್‌ಗಾಗಿ ಮೆರೆವಣಿಗೆ ಹೊರಡುತ್ತದೆ. ಬ್ರಹ್ಮಸ್ವಮಠದಲ್ಲಿ ಆರಾಟ್ಟು ಕಳೆದು ದೇವಾಲಯಕ್ಕೆ ಮೆರೆವಣಿಗೆ ಮರಳುತ್ತದೆ. ದೇವಾಲಯದಲ್ಲಿ ‘ಆರಾಟ್ಟುಕೋಲ’ ನಡೆಯುತ್ತದೆ. ಉತ್ತರಾಷಾಢ ಜಾತ್ರೆಯ ಬಳಿ ನಿತ್ಯಬಲಿ (ದೇವರ ಬಿಂಬದ ಪ್ರದಕ್ಷಿಣೆ) ನಡೆಯುತ್ತದೆ. ದೇವಾಲಯಕ್ಕೆ ಒಮ್ಮೆ ಪ್ರದಕ್ಷಿಣೆ ಹಾಕಿ ಕೋಲವನ್ನು ಇಳಿಸಿಕೊಳ್ಳುತ್ತಾರೆ. ಕೀಳಿಸಲಾಗುತ್ತದೆ. ಆನೆ ಒಮ್ಮೆ ಸ್ಪರ್ಶಿಸುತ್ತದೆ, ಬಳಿಕ ಜನರು ಅದನ್ನು ಕೀಳುತ್ತಾರೆ. ಪಾರ ಮೇಕ್ಕಾವ್‌ನಲ್ಲಿ ಹೀಗೆಯೇ ಮೆರೆವಣಿಗೆಯೂ ಮರಳಿ ಬಂದು ಆರಾಟ್ಟು ಮುಗಿಸಿ ರಾತ್ರಿಯೇ ಧ್ವಜಾವರೋಹಣವಾಗುತ್ತದೆ. ಪೂರಂ ಮುಗಿಯುತ್ತದೆ.

ಎಸ್.ಡಿ.ಎಸ್. ಅನುವಾದ ಕೆ.ಕೆ.