ತೊಗಲುಗೊಂಬೆಯಾಟ ತೊಗಲುಗೊಂಬೆಯಾಟ ಜನಪದ ವೃತ್ತಿರಂಗಭೂಮಿಯ ಒಂದು ವಿಶಿಷ್ಟ ಕಲಾರೂಪ; ಹಲವು ವೈಶಿಷ್ಟ್ಯಗಳ ಸಂಗಮ. ಇದು ಒಂದು ಜನಸಮುದಾಯಕ್ಕೆ ಸೀಮಿತವಾದ ಕಲೆ. ಅವರೇ ಹಕ್ಕುದಾರರಾಗಿ ಇದನ್ನು ನಡೆಸಿಕೊಂಡು ಬಂದಿದ್ದಾರೆ. ರಂಗಭೂಮಿಯ ಇತರ ಪ್ರಕಾರಗಳಲ್ಲಿ ಕಲಾವಿದರು ಪ್ರೇಕ್ಷಕರಿಗೆ ನೇರವಾಗಿ ಕಂಡುಬಂದರೆ, ತೊಗಲುಗೊಂಬೆಯಾಟದಲ್ಲಿ ಪರದೆಯ ಮೇಲೆ ಗೊಂಬೆಗಳ ನೆರಳು ಮಾತ್ರ ಕಂಡುಬರುತ್ತದೆ. ಅವುಗಳನ್ನು ಆಡಿಸುವ ವ್ಯಕ್ತಿ, ಹಾಡುವ ವ್ಯಕ್ತಿ ಹಾಗೂ ಇತರ ವಾದ್ಯವೃಂದದವರೂ ಒಂದೇ ಕುಟುಂಬದವರಾಗಿದ್ದು ಅವರೆಲ್ಲ ತೆರೆಮರೆಯಲ್ಲಿರುತ್ತಾರೆ.

ಇದೊಂದು ಛಾಯಾಮೂಲವಾದ ಕಲೆಯಾಗಿ ತನ್ನ ವೈಶಿಷ್ಟ್ಯವನ್ನು ಹೊಂದಿರುವಂತೆಯೇ, ‘ಕಿಳ್ಳೇಕ್ಯಾತ’-ಎಂಬ ಜನಸಮುದಾಯಕ್ಕೆ ಸೀಮಿತವಾಗಿ ವಂಶಪಾರಂಪರ್ಯವಾಗಿ ಬೆಳೆದು ಬಂದಿರುವುದೂ ಮತ್ತೊಂದು ವೈಶಿಷ್ಟ್ಯವಾಗಿದೆ. ‘ಕೀಳ್ಳೇಕ್ಯಾತ’ ಶಬ್ದ ಬಗ್ಗೆ ಹಾಗೂ ಆ ಜನರ ಬಗ್ಗೆ ನಿರ್ದಿಷ್ಟವಾಗಿ ಏನೂ ತಿಳಿದು ಬರುವುದಿಲ್ಲವಾದರೂ ಜನಪದರಲ್ಲಿಯೇ ಹರಡಿರುವ ಹಲವು ನಂಬಿಕೆಗಳ ಮೂಲಕ ಅವುಗಳ ಮೂಲವನ್ನು ಊಹಿಸಲು ಸಾಧ್ಯವಿದೆ. ಒಂದು ಊಹೆಯ ಪ್ರಕಾರ ‘ಕಿಳ್ಳೇಕ್ಯಾತ’ ಎಂಬ ಶಬ್ದ ಅರ್ಥ ‘ಕೀಳುಕಥೆ’ ಎಂದಿರಬೇಕೆಂದು, ಆ ಕಾರಣದಿಂದ ಕಿಳ್ಳೇಕ್ಯಾತರು ಅರ್ಥ ‘ಕೀಳುಕಥೆ’ ಎಂದಿರಬೇಕೆಂದು, ಆ ಕಾರಣದಿಂದ ಕಿಳ್ಳೇಕ್ಯಾತರು ಎಂಬ ಒಂದು ವರ್ಗಹುಟ್ಟಿಕೊಂಡಿರಬೇಕೆಂಬ ಊಹೆ ಎಷ್ಟು ನಿಜವೆಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಅನಂತರದ ದಿನಗಳಲ್ಲಿ ಇವರು ಬಯಲಾಟದ ಪ್ರಭಾವಕ್ಕೆ ಒಳಗಾಗಿ ರಾಮಾಯಣ, ಮಹಾಭಾರತದ ಪ್ರಸಂಗಗಳನ್ನೇ ಅಳವಡಿಸಿಕೊಂಡು ಆಡಲು ಪ್ರಾರಂಭಿಸಿದರು ಎಂದು ಹೇಳಳಾಗುತ್ತದೆ.

ತೊಗಲುಗೊಂಬೆಯಾಟ ಕರ್ನಾಟಕದಲ್ಲಷ್ಟೇ ಅಲ್ಲದೆ, ಆಂಧ್ರಪ್ರದೇಶ, ಕೇರಳದ ಭಾಗಗಳಲ್ಲಿಯೂ ಕಂಡುಬರುತ್ತದೆ. ಆಂಧ್ರದಲ್ಲಿ ಇದನ್ನು ‘ತೋಲುಬೊಮ್ಮಲಾಟ’ ಎಂದೂ ಕೇರಳದಲ್ಲಿ ‘ತೋಲಪಾವೈಕೂತ್ತು’ ಎಂದೂ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಇದನ್ನು ‘ತೊಗಲುಗೊಂಬೆಯಾಟ’ ‘ಗೊಂಬೆರಾಮರಾಟ’ ಎಂಬ ಹೆಸರಿನಿಂದಲೂ ಕರೆಯುವುದುಂಟು. ಹಾಗಾಗಿ ಇದನ್ನು ಆಡಿಸುವವರಿಗೆ ‘ಗೊಂಬೆರಾಮರು’ ಎಂಬ ಹೆಸರೂ ರೂಢಿಯಲ್ಲಿದೆ. ಈ ಹೆಸರು ಇವರಿಗೆ ಬಂದದ್ದರ ಬಗೆಗೆ ಒಂದು ಕಥೆಯೇ ಇದೆ: ಇವರ ಪೂರ್ವಜರು ಶ್ರೀರಾಮನ ಭಕ್ತರಾಗಿದ್ದು ಅವನ ಸೇವೆಯನ್ನು ಮಾಡಿಕೊಂಡು ಕಾಡಿನಲ್ಲಿದ್ದರಂತೆ. ಶ್ರೀರಾಮ ಅಲ್ಲಿಂದ ತೆರಳುವ ಸಂದರ್ಭ ಬಂದಾಗ ಇವರೆಲ್ಲಾ ಶ್ರೀರಾಮನಲ್ಲಿ ಮೊರೆ ಇಡುತ್ತ ತಮ್ಮ ಮುಂದಿನ ಗತಿಯೇನು? ಎಂದು ಕೇಳಿದಾಗ, ರಾಮ ತನ್ನದೊಂದು ಚಿತ್ರವನ್ನು ಅವರಿಗೆ ಮಾಡಿಕೊಟ್ಟು ಇದನ್ನು ಆಡಿಸಿಕೊಂಡು ಜೀವನಮಾಡಿ ಎಂದು ತಿಳಿಸಿದನಂತೆ.

ಈ ಕಥೆ ಅವರ ಮೂಲದ ಬಗ್ಗೆ ತಿಳಿಸುವುದಷ್ಟೇ ಅಲ್ಲದೆ, ಅವರ ಪ್ರಾಚೀನತೆಯ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಇಂತಹ ಕತೆಗಳು ಹಲವು ಕಂಡುಬರುತ್ತವೆ. ಅವುಗಳೆಲ್ಲ ನಿಜವಲ್ಲದಿದ್ದರೂ ಅವರ ಬದುಕಿನ ಸುತ್ತ ಸುಂದರವಾಗಿ ಹೆಣೆದುಕೊಂಡಿರುವ ಸುಂದರ ಕತೆಗಳಾಗಿ ಗಮನ ಸೆಳೆಯುತ್ತವೆ.

ಇವೆಲ್ಲ ಏನೇ ಇದ್ದರೂ ಕಿಳ್ಳೇಕ್ಯಾತರು ಒಂದು ವಿಶಿಷ್ಟ ಮೂಲದವರು. ತಮ್ಮದೇ ಆದ ರೀತಿಯಲ್ಲಿ ಬಣ್ಣದ ಬದುಕನ್ನು ಹೆಣೆದುಕೊಂಡವರು. ಒಂದೇ ಕುಟುಂಬಕ್ಕೆ ಸೇರಿದ ಕಲಾತಂಡವೊಂದು ಗುಂಪು ಗುಂಪಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಲೆದಾಡುತ್ತ ಬದುಕನ್ನು ತಲೆತಲಾಂತರದಿಂದ ಸಾಗಿಸುತ್ತ ಬಂದವರು. ಆ ಒಂದೊಂದು ತಂಡದಲ್ಲಿಯ ಗಂಡ, ಹೆಂಡತಿ, ಮಕ್ಕಳು ಎಲ್ಲರೂ ಕಲಾವಿದರಾಗಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ವಿಶೇಷತೆಯನ್ನು ಮೆರೆಯುತ್ತ ಬಂದಿರುವರು. ಇದರಲ್ಲಿ ಕಲಾಪ್ರದರ್ಶನದ ಅದ್ಭುತ ಒಂದು ಕಡೆಯದಾದರೆ, ಅವರ ಬದುಕಿನ ಭಾಗ ಮತ್ತೊಂದು ಅದ್ಭುತದಿಂದ ಕೂಡಿದುದು.

ತೊಗಲುಗೊಂಬೆಯಾಟ ಪ್ರಾದೇಶಿಕವಾದ ವೈಶಿಷ್ಟ್ಯಗಳೊಂದಿಗೆ ಬೆಳೆದು ಬಂದಿರುವ ಒಂದು ಕಲೆ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ರಂಜಿಸಬಲ್ಲ ಕಲಾಶಕ್ತಿಯನ್ನು ಮೈಗೂಡಿಸಿಕೊಂಡು ಬಂದಿರುವ ಒಂದು ಪ್ರಕಾರ. ಇದೊಂದು ಪೂರ್ಣ ಸ್ವಾವಲಂಬಿಯಾದ ಕಲೆ. ಎಲ್ಲವನ್ನೂ ಅವರೇ ಸಿದ್ಧಪಡಿಸಿಕೊಳ್ಳುತ್ತಾರೆ. ಗೊಂಬೆಯನ್ನು ಸಿದ್ಧಪಡಿಸಲು ಬೇಕಾದ ಚರ್ಮದಿಂದ ಹಿಡಿದು, ಪಾತ್ರಗಳಿಗೆ ತಕ್ಕಂತೆ ಅವನ್ನು ಕತ್ತರಿಸಿ ಅವಕ್ಕೆ ರೂಪಕೊಡುವ, ಬಣ್ಣವನ್ನು ತಯಾರಿಸಿ ಅದಕ್ಕೆ ಹಚ್ಚುವ ಕಲೆಗಾರಿಕೆಯವರೆಗೆ ಎಲ್ಲವನ್ನೂ ಅದು ಒಳಗೊಂಡಿರುತ್ತದೆ. ಇವೆಲ್ಲದರಲ್ಲಿಯೂ ಅವರು ನಿಪುಣರೇ. ಶತಮಾನದಷ್ಟು ಕಾಲದ ಹಿಂದಿನ ಗೊಂಬೆಗಳು ಇಂದಿಗೂ ಬಣ್ಣ ಕಳೆದುಕೊಳ್ಳದೆ ಅಂದವಾಗಿ ಆಡಿಸಲು ಯೋಗ್ಯವಾಗಿ ಉಳಿದಿವೆ ಎಂಬುದನ್ನು ಕಂಡಾಗ ಆ ಕಲೆಗಾರಿಕೆಯಲ್ಲಿ ಇವರ ಕೈಚಳಕ ಎಂತಹುದೆಂಬುದು ವೇದ್ಯವಾಗುತ್ತದೆ.

ಕಿಳ್ಳೇಕ್ಯಾತರು ಅಲೆಮಾರಿಗಳು. ಕುಟುಂಬ ಸಮೇತರಾಗಿ ತಮ್ಮ ಸರ್ವಸ್ವವನ್ನೂ ಹೊತ್ತು ಊರಿಂದ ಊರಿಗೆ ಅಲೆದಾಡುತ್ತ ಬದುಕನ್ನು ಸಾಗಿಸುತ್ತಾರೆ. ತಂಗಿದ ಊರಿನಲ್ಲಿ ಪ್ರದರ್ಶನ ನಡೆಸುತ್ತಾರೆ. ಇದಕ್ಕೆ ಊರಿನವರೂ ನೆರವಾಗುತ್ತಾರೆ. ಪ್ರಮುಖವಾಗಿ ಊರಿನ ಮುಖಂಡ ಇದಕ್ಕೆ ಬೇಕಾದ ಸಹಾಯ ಹಸ್ತವನ್ನು ನೀಡುತ್ತಾನೆ. ಅದನ್ನೊಂದು ಕೇಂದ್ರವಾಗಿಸಿಕೊಂಡು ಅದರ ಸುತ್ತಮುತ್ತಲ ಊರುಗಳಲ್ಲಿ ಪ್ರದರ್ಶನ ನೀಡುತ್ತ ಅನಂತರ ತಮ್ಮ ಸ್ಥಳವನ್ನು ದೂರದ ಊರಿಗೆ ಸ್ಥಳಾಂತರಿಸುತ್ತಾರೆ. ಇದಕ್ಕಾಗಿ ಇವರು ಬಳಸುವುದು ಕತ್ತೆ, ಕುದುರೆ.

ತೊಗಲು ಗೊಂಬೆಗಳ ರಚನೆಯಲ್ಲಿ ಪ್ರಾದೇಶಿಕವಾದ ವ್ಯತ್ಯಾಸಗಳೂ ಇವೆ. ಪ್ರಮುಖವಾದ ಎರಡು ವ್ಯತ್ಯಾಸಗಳೆಂದರೆ, ಒಂದೂವರೆ-ಎರಡಡಿಯ ಗೊಂಬೆಗಳನ್ನು ತಯಾರಿಸುವಂತೆಯೇ, ಐದು-ಐದೂವರೆ ಅಡಿಯ ಆಳೆತ್ತರದ ಗೊಂಬೆಗಳೂಇವೆ. ಆಂಧ್ರ ಪ್ರದೇಶದ ಭಾಗಗಳಲ್ಲಿ ಈ ಆಳೆತ್ತರದ ಗೊಂಬೆಗಳನ್ನು ಬಿಟ್ಟರೆ, ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಈ ಎತ್ತರದ ಗೊಂಬೆಗಳು ಕಂಡುಬರುತ್ತವೆ. ಉಳಿದಂತೆ ಚಿಕ್ಕ ಚಿಕ್ಕ ಗೊಂಬೆಗಳೇ ಹೆಚ್ಚು. ಈ ಚಿಕ್ಕ ಚಿಕ್ಕ ಗೊಂಬೆಗಳನ್ನು ತಯಾರಿಸಲು ಜಿಂಕೆ ಹಾಗೂ ಆಡಿನ ಚರ್ಮವನ್ನು ಬಳಸಿದರೆ, ದೊಡ್ಡ ದೊಡ್ಡ ಗೊಂಬೆಗಳ ರಚನೆಗೆ ಎಮ್ಮೆಯ ಚರ್ಮವನ್ನು ಬಳಸಲಾಗುತ್ತದೆ.

ತೊಗಲುಗೊಂಬೆಯಾಟಕ್ಕೆ ಸಂಬಂಧಿಸಿದ ರಂಗಸಜ್ಜಿಕೆ ಕೂಡ ಗೊಂಬೆಗಳ ಅಳತೆಗೆ ತಕ್ಕಂತೆ ಭಿನ್ನ ರೂಪವನ್ನು ಹೊಂದಿರುತ್ತದೆ. ಇದ್ಕೆ ಸಿದ್ಧಪಡಿಸುವ ರಂಗಮಂದಿರ ವಿಶಿಷ್ಟವಾಗಿಯೇ ಇರುತ್ತದೆ. ನಾಲ್ಕುಗಳನ್ನು ಅಳತೆಗೆ ಸರಿಯಾಗಿ ನೆಟ್ಟು, ಮುಂಭಾಗಕ್ಕೆ ಬಿಳಿಯ ಪಂಚೆಗಳನ್ನು ಕಟ್ಟಿರುತ್ತಾರೆ. ಉಳಿದ ಮೂರು ಭಾಗವನ್ನು ಕಂಬಳಿಯಿಂದ ಮರೆಮಾಡಿ ಕಲಾವಿದರೆಲ್ಲ ಗೊಂಬೆಗಳ ಸಹಿತ ಅದರ ಒಳಭಾಗದಲ್ಲಿ ಸೇರಿಕೊಂಡಿರುತ್ತಾರೆ. ಬಿಳಿಯ ಪರದೆ ಕಟ್ಟಿರುವ ಭಾಗದಲ್ಲಿ ಅದರ ಕೆಳಭಾಗದ ಕಾಲುಭಾಗದಷ್ಟನ್ನು ಕರಿಯ ಬಟ್ಟೆಯಿಂದ ಮುಚ್ಚಿರುತ್ತಾರೆ. ಇದರ ಉದ್ದೇಶ ಒಳಗೆ ಕುಳಿತಿರುವ ವ್ಯಕ್ತಿಗಳು ಹೊರಗಿನವರಿಗೆ ಕಾಣಬಾರದೆಂಬುದು. ಹಾಗಾಗಿ ಹೊರಗೆ ಕುಳಿತು ನೋಡುವವರಿಗೆ ಗೊಂಬೆಗಳ ಹೊರತಾಗಿ ಬೇರೇನೂ ಕಾಣಿಸುವುದಿಲ್ಲ. ಅದೊಂದು ರೀತಿ ಸಿನಿಮಾ ಪರದೆಯ ಮೇಲೆ ಚಿತ್ರ ವೀಕ್ಷಿಸಿದಂತೆ.

ಪ್ರದರ್ಶನ ಆರಂಭವಾಯಿತೆಂದರೆ ಒಳಗೆ ಕುಳಿತಿರುವ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಬಗೆಯ ಚಟುವಟಿಕೆಯಲ್ಲಿ ತೊಡಗಿರುತ್ತಾನೆ. ಸಂಭಾಷಣೆ, ಹಾಡು, ವಾದ್ಯ-ಇವುಗಳ ಜೊತೆ ಜೊತೆಯಲ್ಲಿಯೇ ಕೈಚಳಕದ ಮೂಲಕಗೊಂಬೆಗಳಿಗೆ ಜೀವ ತುಂಬುವ ಕಾರ್ಯ ಎಲ್ಲವೂ ಒಟ್ಟೊಟ್ಟಿಗೆ ನಡೆಯುತ್ತಿರುತ್ತವೆ. ಹೇಳಬೇಕೆಂದರೆ, ಅದೊಂದು ಅದ್ಭುತ ಕಾರ್ಯಾಗಾರ. ಆ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವವರೆಲ್ಲರೂ ಕಲಾವಿದರೆ ಆಗಿರುತ್ತಾರೆ.

ತೊಗಲುಗೊಂಬೆಯಾಟಕ್ಕೆ ಬಳಸುವ ಪ್ರಸಂಗ ಸಾಹಿತ್ಯ-ರಾಮಾಯಣ, ಮಹಾಭಾರತದ್ದೇ ಆಗಿರುತ್ತದೆ. ಹೆಚ್ಚಾಗಿ ಇಲ್ಲಿ ಯಕ್ಷಗಾನ ಬಯಲಾಟದ ಪ್ರಸಂಗಗಳ ಕಥಾವಸ್ತುವಿನ ಪ್ರಭಾವವೇ ಕಂಡುಬಂದರೂ ಅದು ಪದ್ಯಗಳಲ್ಲಿ ಮಾತ್ರ. ಗದ್ಯಭಾಗ ಅವರದ್ದೇ ಸ್ವಂತದ್ದಾಗಿರುತ್ತದೆ. ಆದರೆ ಇದೂ ಕೂಡ ಪರಂಪರೆಯಿಂದ ಮೌಖಿಕವಾಗಿಹರಿದು ಬಂದದ್ದು. ಪೂರ್ಣ ಶಿಷ್ಟವೂ ಅಲ್ಲದ, ಪೂರ್ಣ ಜಾಣಪದವೂ ಅಲ್ಲದ ವಿಶಿಷ್ಟ ಶೈಲಿ. ಆದರೆ ಮಧ್ಯೆ ಮಧ್ಯೆ ಅವರು ತರುವ ಉಪಕತೆಗಳು ಹಾಗೂ ಹಾಸ್ಯ ಚಟಾಕೆಗಳು ಮಾತ್ರ ಪೂರ್ಣ ಅವರದ್ದೇ ಆದ ಅಶ್ಲೀಲದಲ್ಲಿ ಅದ್ದಿತೆಗೆದವುಗಳು. ಪ್ರೇಕ್ಷಕರು ನಾಚುವಂತೆ, ಹೊಟ್ಟೆ ಹುಣ್ಣೆದ್ದು ಹೋಗುವಷ್ಟು ನಗೆಬರಿಸುವಂತೆ ಇವು ಹೊರಹೊಮ್ಮುತ್ತವೆ. ಆದರೆ, ಪ್ರೇಕ್ಷಕರ ಗುಂಪನ್ನು ಗಮನಿಸಿ ಈ ಹಾಸ್ಯ ಚಟಾಕೆಯನ್ನು ಹಾರಿಸುವ ‘ಔಚಿತ್ಯ’ ಪ್ರಜ್ಞೆಯೂ ಆಗಾಗ ಕಂಡುಬರುವುದುಂಟು.

ತೊಗಲುಗೊಂಬೆಯಾಟ ಅಪ್ಪಟ ದೇಶೀಮೂಲವಾದ ಕಲೆ. ಇದು ಪೂರ್ಣವಾಗಿ ಜನಪದ ಸಂಸ್ಕೃತಿಯಲ್ಲಿ ಬೇರು ಬಿಟ್ಟು ಅರಳಿದ ಒಂದು ಕಲಾ ಪ್ರಕಾರ. ಹಾಗಾಗಿಯೇ ಜನಪದರ ಬದುಕಿನಲ್ಲಿಯೂ ಹಾಸುಹೊಕ್ಕಾಗಿ ಬೆರೆತು ಬಂದಿದೆ. ಇವರಾಡುವ ಭಾಷೆ-ಕನ್ನಡ, ತೆಲುಗು, ಮರಾಠಿ ಮಿಶ್ರಿತವಾದದ್ದು. ಉರ್ದು ಭಾಷೆಯನ್ನೂ ಅಲ್ಲಲ್ಲಿ ಬಳಸುವುದುಂಟು. ಆದರೆ ಎಲ್ಲೆಲ್ಲಿ ಪ್ರದರ್ಶನ ನೀಡುತ್ತಾರೊ ಅಲ್ಲಲ್ಲಿಯ ಸ್ಥಳೀಯ ಭಾಷೆಯನ್ನು ಬಳಸುವುದು ಅವರ ವೈಶಿಷ್ಟ್ಯ. ಅನಿವಾರ್ಯ ಕೂಡ. ಆದರೆ ಸಂಭಾಷಣೆಯ ಮಧ್ಯೆ ಕೆಲವು ಅನ್ಯಭಾಷಾ ಪದಗಳು ಸಹಜವಾಗಿಯೇ ತೂರಿಬರುವುದುಂಟು.

ರಂಗಭೂಮಿಯ ಇತರ ಪ್ರಕಾರಗಳಲ್ಲಿ ಕಾಣದ ಒಂದು ಹೆಚ್ಚಿನ ವೈಶಿಷ್ಟ್ಯ ತೊಗಲುಗೊಂಬೆಯಾಟಕ್ಕಿದೆ. ಅದೆಂದರೆ ಅದು ಜನಪದರಲ್ಲಿ ಹಲವು ನಂಬಿಕೆಗಳನ್ನು ಹುಟ್ಟು ಹಾಕಿರುವುದು. ತೊಗಲುಗೊಂಬೆಯಾಟ ಆಡಿಸಿದರೆ ಮಳೆ ಬರುತ್ತದೆ, ದನಗಳ ರೋಗ ವಾಸಿಯಾಗುತ್ತದೆ, ಗೊಂಬೆಗಳನ್ನು ಮಾಡಿಸಿಕೊಡುವುದರಿಂದ ವ್ಯಕ್ತಿಗೆ ಒಳ್ಳೆಯದಾಗುತ್ತದೆ ಇತ್ಯಾದಿ ನಂಬಿಕೆಗಳಿಂದಾಗಿ ತೊಗಲುಗೊಂಬೆಯಾಟ ಜನಪದ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆದು ಉಳಿದು ಬಂದಿದೆ. ಅದಕ್ಕೆ ಧಾರ್ಮಿಕವಾದ, ಸಾಂಸ್ಕೃತಿಕವಾದ ಹಾಗೂ ಸಾಮಾಜಿಕವಾದ ಸಂಬಂಧ ನಿಟಕವಾಗಿದೆ.

ತೆರೆಮರೆಯಲ್ಲಿ ನಿಂತು ನಿರ್ಜೀವ ಗೊಂಬೆಗಳಿಗೆ ಜೀವ ತುಂಬಿದಂತೆ ಪ್ರದರ್ಶಿಸುವಲ್ಲಿ ತೊಗಲುಗೊಂಬೆ ಕಲಾವಿದ ತೋರುವ ತಂತ್ರ ಅಪೂರ್ವ ರೀತಿಯದ್ದು. ಆಧುನಿಕತೆಯ ಹಾಗೂ ವಿವಿಧ ಮಾಧ್ಯಮಗಳ ಪ್ರಭಾವ ಇಂತಹ ಕಲೆಗಳನ್ನು ಮಸುಕಾಗಿಸುವಲ್ಲಿ ಮುಂದಾಗಿದ್ದರೂ ಅವು ಜೀವ ಹಿಡಿದು ಉಸಿರಾಡುವಲ್ಲಿ ನೆರವಾಗಿರುವುದು ಅವುಗಳ ಸಾಮಾಜಿಕ ಹಾಗೂ ಸಾಂಸ್ಕೃತಿ ಸಂಬಂಧವೇ ಎಂದು ಹೇಳಬಹುದು.

ಡಿ.ಕೆ.ಆರ್.

 

ತೋಟಿ ಇವರು ಆಂಧ್ರದ ತೆಲಂಗಾಣದ ಆದಿಲಾಬಾದ್, ಖಮ್ಮಂ, ಕರೀಂನಗರ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ತೋಟಿಗಲ ಮಾತೃಭಾಷೆ ಗೋಂಡಿ. ಗೊಂಡರು ತೋಟಿಗಳನ್ನು ‘ಬಿರ‍್ದಾಲ್‌’ (ಗ್ರಹಿತ್) ಎಂದು ತೋಟಿಗಳು ಗೊಂಡರನ್ನು ‘ಧನಿ’ (ದಾತ) ಎಂದು ಕರೆಯುತ್ತಾರೆ. ತಮ್ಮ ಗೊಂಡದಾತರನ್ನು ಕೀರ್ತಿಸುವ ಕವಿಗಳಾಗಿ ನಡೆದುಕೊಳ್ಳುವುದು ತೋಟಿಗಳ ಸಾಂಪ್ರದಾಯಿಕ ವೃತ್ತಿ. ಇತ್ತೀಚೆಗೆ ಬೇಸಾಯದ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಆದರೆ ಆದಿಲಾಬಾದ್ ಜಿಲ್ಲೆಯ ತೋಟಿಗಳನ್ನು ಹೊರತುಪಡಿಸಿದರೆ ಇತರೆ ತೋಟಿಗಳು ‘ವಾಯು ಭಾರತ ಪುರಾಣ’ವನ್ನು ತೆಲುಗು ಭಾಷೆಯಲ್ಲಿ ಇತರರ ಮುಂದೆಯೂ ಹಾಡುತ್ತಿದ್ದಾರೆ. ಆದ್ದರಿಂದ ಇವರನ್ನು ‘ಪಾಂಡವರು’ ಎಂದು ಕೂಡಾ ಕರೆಯುತ್ತಾರೆ. ಭುಜದ ಮೇಲೆ, ಎದೆಯ ಮೇಲೆ, ಕೈ ಮೇಲೆ, ನಾನಾ ತರದ ಹೆಜ್ಜೆಗಳನ್ನು ಹಾಕುತ್ತಾರೆ. ಇದು ಕೇವಲ ಹೆಂಗಸರಿಗೆ ಮಾತ್ರ ಸಾಧ್ಯ. ಗೊಂಡು, ಪ್ರಧಾನ್ ಬುಡಕಟ್ಟು ಸಮುದಾಯಗಳೊಂದಿಗೆ ಇವರು ಹೆಚ್ಚಿನ ಸಂಬಂಧಗಳನ್ನು ಹೊಂದಿರುತ್ತಾರೆ. ಗಂಡಸರು ಹಕ್ಕಿಗಳನ್ನು ಬೇಟೆಯಾಡಿ, ಪ್ರಾಣಿಗಳನ್ನು ಬೇಟೆಯಾಡಿ ಅವುಗಳಿಂದ ನಾಟಿ ಔಷಧಿಯನ್ನು ತಯಾರಿಸಿ ಇತರ ಸಮಾಜದವರಿಗೆ ಮಾರುತ್ತಾರೆ. ಅವುಗಳಿಂದ ಬರುವ ಹಣದಿಂದ ತಮ್ಮ ದೈನಂದಿನ ಆಹಾರ ಪದಾರ್ಥಗಳನ್ನು ಖರೀದಿಸುತ್ತಾರೆ.

ಇವರಲ್ಲಿ ನಾಲ್ವರು ಸೋದರನ ದಿವ್ಯ ಸಮೂಹ, ಐವರು ಸೋದರರ ದಿವ್ಯ ಸಮೂಹ, ಆರು ಮಂದಿ ಸೋದರರ ದಿವ್ಯ ಸಮೂಹ, ಏಳು ಮಂದಿ ಸೋದರರ ದಿವ್ಯ ಸಮೂಹ ಎಂಬ ಗೋತ್ರ ವಿಭಜನೆಗಳಿವೆ. ತೀರಿಕೊಂಡ ಸೋದರನ ಹೆಂಡತಿಯನ್ನು ಮದುವೆಯಾಗುವ ಆಚಾರವಿದೆ. ವಿಚ್ಛೇದನದ ಸಂಪ್ರದಾಯವಿದೆ. ಪ್ರಧಾನರಂತೆಯೇ ಹಾಡುಗಳನ್ನು ಹಾಡುತ್ತಾರೆ. ಉಟ್ನೂರು ಪ್ರಾಂತದಲ್ಲಿಯ ತೋಟಿಗಳು ಗೊಂಡರ ಪುರಾಣ ಗಾದೆಗಳನ್ನು ಹಾಡುತ್ತಾರೆ. ಅಕ್ಷರಸ್ಥರ ಸಂಖ್ಯೆ ತುಂಬಾ ಕಡಿಮೆ. ಅಸಿಷಾಬಾದ್‌ ಪ್ರಾಂತದವರು ಪಾಂಡವರ ಹಾಡುಗಳನ್ನು ಕಥೆಗಳ ರೂಪದಲ್ಲಿ ಹಾಡುತ್ತಾರೆ.ಇವರು ಮಾಂಸಾಹಾರಿಗಳು.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಸಂಖ್ಯೆ ೨,೦೭೪. ಅಂದರೆ ಶೇಕಡಾ ೦.೦೪.

ಬಿ.ಕೆ.ಆರ್. ಅನುವಾದ ಕೆ.ಎಸ್

 

ತೋಟ್ಟಂ ಪಾಟುಗಳ್ ಆರಾಧನೆಯ ಅಂಗವಾಗಿ ಹಾಗೂಇತರ ಸಂದರ್ಭಗಳಲ್ಲಿ ಕೇರಳದ ವಿವಿಧ ಭಾಗಗಳಲ್ಲಿ ವಿಭಿನ್ನವಾದ ತೋಟ್ಟಂಪಾಟುಗಳು ಪ್ರಚಲಿತವಾಗಿವೆ. ಇವುಗಳಲ್ಲಿ ಹೆಚ್ಚಿವನವುಗಳು ಆಚರಣೆಗಳಿಗೆ ಸಂಬಂಧಿಸಿದೆ. ಭಗವತಿ ತೋಟ್ಟಂ, ದಾರಿಕವಧ ತೋಟ್ಟಂ, ಕನ್ನಗಿ ತೋಟ್ಟಂ, ಪಾನ, ಭದ್ರಕಾಳಿತೋಟ್ಟಂ, ಪುಳ್ಳುವರ ಕಳಮೆಳುತ್ತು ತೋಟ್ಟಂ, ತೀಯಾಡಿ ಮತ್ತು ತೆಯ್ಯಂಬಾಡಿಗಳ ತೋಟ್ಟಂ, ಕುರುಪ್ಪರು ಹಾಗೂ ತೀಯಾಟುಣ್ಣಿಗಳು ಹಾಡುವ ಭದ್ರಕಾಳಿತೋಟ್ಟಂ, ಮಣಿಮಂಗತೋಟ್ಟಂ, ದಕ್ಷಿಣ ಕೇರಳದ ವೇಲನ್ ಸಮುದಾಯದವರು ಹಾಡುವ ಭಗವತಿಪಾಟು, ಮಧ್ಯ ಕೇರಳದ ಮಣ್ಣಾನ್, ಪುಲಯನ್ ಮೊದಲಾದವರು ಹಾಡುವ ತೋಟ್ಟಂ-ಹೀಗೆ ತೋಟ್ಟಂ ಪಾಟುಗಳು ವೈವಿಧ್ಯಮಯವಾಗಿವೆ. ತೋರುವುದು, ಸೃಷ್ಟಿಸುವುದು, ಪುನರ್‌ಸೃಷ್ಟಿ, ಪ್ರತ್ಯಕ್ಷಗೊಳ್ಳುವುದು, ಪ್ರಕಾಶಿಸುವುದು ಮೊದಲಾದ ಅರ್ಥಗಳನ್ನು ವಿದ್ವಾಂಸರು ಕೊಟ್ಟಿದ್ದಾರೆ.

ಕಾಳಿ ಹಾಗೂ ಕನ್ನಗಿ ಸಂಬಂಧವಾದ ‘ಒತ್ತತೋಟ್ಟಂ’ ದಕ್ಷಿಣ ಕೇರಳದ ಹೆಚ್ಚು ಪ್ರಚಲಿತವಾಗಿದೆ. ಮಧ್ಯ ಕೇರಳದಲ್ಲಿ ಅಯ್ಯಪ್ಪ, ನಾಗ, ಕುಟ್ಟಿಚಾತನ್ ಮೊದಲಾದ ದೈವಗಳ ತೋಟ್ಟಂ, ಉತ್ತರ ಕೇರಳದಲ್ಲಿ ಪಾಣನ್, ವಣ್ಣಾನ್, ಮುನ್ನೂಟಾನ್, ಮಲಯಾನ್ ಮೊದಲಾದವರು ಹಾಡುವ ಬಲಿಕಳ ತೋಟ್ಟಂ, ತೀರಿ ಹೋದ ವೀರ ಪುರುಷರ ಕುರಿತಾದ ತೋಟ್ಟಂಗಳು ಕೇರಳದಲ್ಲಿ ಸಾಕಷ್ಟಿವೆ. ಕೇರಳದ ಹೆಚ್ಚಿನ ತೋಟ್ಟಂಪಾಟುಗಳು ತೆಯ್ಯಾರಾಧನೆಗೆ ಸಂಬಂಧಪಟ್ಟಿವೆ.

ತೋಟ್ಟಂಪಾಟುಗಳಲ್ಲಿ ತೆಯ್ಯಂಗಳ ಹುಟ್ಟು,ಕಾರಣಿಕ, ಸಂಚಾರ, ಸ್ವರೂಪಗಳ ಕುರಿತು ವರ್ಣನೆಗಳಿರುತ್ತವೆ. ಜನ ಸಾಮಾನ್ಯರಲ್ಲಿ ಭಕ್ತಿ, ಜ್ಞಾನ, ನಂಬಿಕೆಗಳನ್ನು ಬೆಳೆಸಲು ತೋಟ್ಟಂಪಾಟುಗಳು ಕಾರಣವಾಗಿವೆ. ತೋಟ್ಟಂಪಾಟುಗಳನ್ನು ಹಾಡುವಾಗ ಚೆಂಡೆ, ತಗಿಲ್, ಚಕ್ರತಾಳ, ತಾಳ, ವಿಲ್ಲ್, ದುಡಿ, ದಪ್ಪ್ ಮೊದಲಾದ ವಾದ್ಯೋಪಕರಣಗಳನ್ನು ಸಂದರ್ಭಾನುಸಾರ ಬಳಸುತ್ತಾರೆ.

ತೆಯ್ಯಾರಾಧನೆಯಲ್ಲಿ ವಿವಿಧ ಹಂತಗಳಲ್ಲಿ ತೋಟ್ಟಂಪಾಟುಗಳು ಬಳಕೆಯಾಗುತ್ತವೆ. ಅವುಗಳನ್ನು ಹೀಗೆ ಗುರುತಿಸಬಹುದು.

೧. ವರವಿಳಿ ೨. ಸ್ತುತಿ ೩. ಅಂಜಡಿ ೪. ನೀಟುಕವಿ ೫. ತಾಳವೃತ್ತ ೬. ಪದಿಕಂ ೭. ತೋಟ್ಟಂ ೮. ಪೊಲಿಚ್ಚುಪಾಟ್ ೯. ಉರಚ್ಚಿಲ್‌ ತೋಟ್ಟಂ ೧೦. ಮುಂಬಸ್ಥಾನಂ

ಇಷ್ಟ ದೈವವನ್ನು ಮಧ್ಯಂತರ ಜಗತ್ತಿಗೆ ಕರೆದುಕೊಂಡು ಬರಲು ‘ವರವಿಳಿ’ ತೋಟ್ಟವನ್ನು ಹಾಡುವರು. ದೈವದ ಹೆಸರು ಹೇಳಿ ಕರೆಯುವುದು ಇದರ ವೈಶಿಷ್ಟ್ಯ. ಹೀಗೆ ಆವಾಹನೆಗೊಂಡ ದೈವವನ್ನು ಆಪಾದಮಸ್ತಕ ಸ್ತುತಿಸಿ ಹಾಡುವರು. ಇದನ್ನು ಅಂಜಡಿ ತೋಟ್ಟಂ ಎನ್ನುವರು. ಇದರಲ್ಲಿ ಸಾಂಪ್ರದಾಯಿಕ ಹಾಡುಗಳೊಂದಿಗೆ ಹೊಸ ಹಾಡುಗಳನ್ನು ಸೇರಿಸುತ್ತಾರೆ. ತೋಟ್ಟಂ ಹಾಡುವ ಕಲಾವಿದರ ಮನೋಧರ್ಮ ಹಾಗೂ ಕವಿತ್ವ ಈ ಭಾಗದಲ್ಲಿ ಪ್ರಕಟವಾಗುವುದು. ನೀಟುಕವಿ ಭಾಗದಲ್ಲಿ ದೈವದ ಹುಟ್ಟು, ಪ್ರಯಾಣದ ವಿವರಗಳಿರುತ್ತವೆ. ತಾಳವೃತ್ತದಲ್ಲಿ ತೋಟ್ಟಂ ಪಾಟುಗಳನ್ನು ತಾಳದೊಂದಿಗೆ ಹಾಡುವರು. ಸ್ತುತಿಪರವಾದ ಪದ್ಯ ಖಂಡವೇ ಪದಿಕಂ.

ಕೆಲವು ತೆಯ್ಯಂಗಳ ಸಂದರ್ಭದಲ್ಲಿ ಪೂರ್ವರಂಗ ಎಂಬಂತೆ ಸಣ್ಣಪುಟ್ಟ ವೇಷಗಳೊಂದಿಗೆ ಕಲಾವಿದ ತೋಟ್ಟಂ ಹಾಡುತ್ತಾ ಆವೇಶಗೊಳ್ಳುತ್ತಾನೆ, ಕುಣಿಯುತ್ತಾನೆ. ತೆಯ್ಯಾಚರಣೆಯ ಈ ವಿಧಿಗೆ ತೋಟ್ಟಂ ಎಂಬ ಹೆಸರು ಇದೆ. ತೆಯ್ಯಂ ಸಂದರ್ಭದಲ್ಲಿ ಕೊಡಿಯೆಲತೋಟ್ಟಂ. ಉಚ್ಚತೋಟ್ಟಂ, ಅಂದಿತೋಟ್ಟಂ ಎಂಬ ವಿಧಿಗಳಿವೆ. ತೆಯ್ಯಂ ಆರಾಧನೆಯ ಅಂಗವಾಗಿ ನಡೆಯುವ ವೆಳ್ಳಾಟಂ ಸಂದರ್ಭದಲ್ಲಿಯೂ ತೋಟ್ಟಂ ಹಾಡುವರು.

ತಿರ ಆರಾಧನೆಯಲ್ಲಿ ‘ಅಣಿಯರ ತೋಟ್ಟಂ’ ಹಾಡುವರು. ವೇಷಭೂಷಣಗಳನ್ನು ಧರಿಸುವಾಗ ಇದನ್ನು ಹಾಡುವರು. ಅದೇ ರೀತಿ ‘ಕೈತಾಂಗ್‌ ತೋಟ್ಟಂ’ ವೆಳ್ಳಾಟಂ ಸಂದರ್ಭದಲ್ಲಿ ಹಾಡುವುದಾಗಿದೆ. ದೈವ ಪುರಾಣಗಳನ್ನು ಹೇಳುವ ‘ಒಟ್ಟಡತಿ ತೋಟ್ಟ’ ಕೂಡಾ ತಿರ ಆಧಾಧನೆಯಲ್ಲಿದೆ. ಮಡಕೋಲ, ಮುಂಬಸ್ಥಾನಂ, ಕೀಳಾಚಾರಂ, ಕುಲಸ್ಥಾನ ಮೊದಲಾದ ತೆಯ್ಯಂ ಆಚರಣೆಗಳನ್ನು ತೋಟ್ಟಂ ವಿಭಾಗದಲ್ಲಿ ಸೇರಿಸಬಹುದು. ಬಾಧೆಗಳ ಉಚ್ಛಾಟನೆ ಸಂದರ್ಭದಲ್ಲಿ ತೋಟ್ಟಂಗಳನ್ನು ಹಾಡುವ ಕ್ರಮವಿದೆ.

.ವಿ.ಎ. ಅನುವಾದ ಎನ್.ಎಸ್.

 

ತೋರ್ತ್‌ ಸೊಂಟದಿಂದ ಕೆಳಗೆ ಮೊಣಕಾಲ ಮೇಲೆ ನಿಲ್ಲುವ ಕೇರಳದ ಒಂಟಿವಸ್ತ್ರ ತೋರ್ತ್‌/ಬೈರಾಸು. ಮುಂಡು(ಒಂಟಿ ಪಂಚೆ) ವ್ಯಾಪಕವಾಗುವುದಕ್ಕಿಂತ ಹಿಂದೆ ತೋರ್ತು ಉಡುವ ರೂಢಿ ಹೆಚ್ಚಾಗಿತ್ತು. ಮುಂಡು ಜನಪ್ರಿಯವಾದಾಗ ಬೈರಾಸು ಹಿಂದೆ ಸರಿಯಿತು. ಉಟ್ಟುಕೊಂಡು ಸ್ನಾನ ಮಾಡಲು ಮತ್ತು ತಲೆ ಮೈಗಳನ್ನು ಒರಸಿಕೊಳ್ಳುವುದಕ್ಕೂ ಇರುವಂಥದು ಎಂಬ ದುರ್ದೆಸೆ ಬೈರಾಸಿಗೆ ಬಂತು. ಸ್ತ್ರೀಯರೂ ಪುರುಷರೂ ತೋರ್ತು ಉಪಯೋಗಿಸುತ್ತಾರೆ. ತಲೆಗೆ ಕಟ್ಟುವುದು, ಕೊರಳಿಗೆ ಸುತ್ತಿಕೊಳ್ಳುವುದು, ಹೆಗಲಲ್ಲಿ ಹಾಕಿಕೊಳ್ಳುವುದು, ಸೊಂಟಕ್ಕೆ ಸುತ್ತಿಕೊಳ್ಳುವುದು, ಕೈಗೆ ಮಡಚ್ಚಿ ಇಟ್ಟುಕೊಳ್ಳುವುದು-ಹೀಗೆ ಬೇರೆ ಬೇರೆ ರೀತಿಗಳಲ್ಲಿ ಬೈರಾಸನ್ನು ಉಪಯೋಗಿಸಿಕೊಳ್ಳುತ್ತಿದ್ದರು. ತಲೆಗೆ ಕಟ್ಟುವುದು ಕೂಡ ಹಲವು ರೀತಿಗಳಲ್ಲಿ. ಪರಸ್ಪರ ಹೊಡೆದಾಟವಾಗುವಾಗ ಬೈರಾಸನ್ನು ಒಮ್ಮೆ ಕೊಡವಿ ನೇರವಾಗಿ ಹಿಡಿದು ತಲೆಗೆ ಕಟ್ಟಿದಾಗ ಎದುರಾಳಿಯ ಮೇಲಿನ ಆದಿಪತ್ಯವು ಸ್ಥಾಪಿತವಾಗಿ ಬಿಡುತ್ತದೆ. ತಲೆಗೆ ಬೈರಾಸು ಕಟ್ಟೆ ಮದುವೆ ನಿಶ್ಚಯ ಮಾಡುವುದಕ್ಕೆ ಮುಂದಾಳತ್ವ ವಹಿಸುವ ಪದ್ಧತಿ ದಕ್ಷಿಣ ಕೇರಳದಲ್ಲಿದೆ.

ಹಿಂದಿನ ಕಾಲದಲ್ಲಿ ಹೊಲಗದ್ದೆಗಳಲ್ಲೂ ಮನೆಗಳಲ್ಲೂ ಕೆಲಸ ಮಾಡುವವರು ಬೈರಾಸು ಉಟ್ಟುಕೊಂಡೇ ಕೆಲಸ ಮಾಡುತ್ತಿದ್ದರು. ಬಿಸಿಲು ಮನೆಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ತಲೆಗೆ ಬೈರಾಸು ಕಟ್ಟುವ ಕ್ರಮ ಇತ್ತು. ಆಚಾರಾನುಷ್ಠಾನಗಳಲ್ಲಿ ತೊಡಗಿಕೊಳ್ಳುವಾಗ ಪ್ರತ್ಯೇಕ ರೀತಿಯಲ್ಲಿ ಬೈರಾಸು ಉಡುವುದು, ಕಟ್ಟಿಕೊಳ್ಳುವುದು ಇದೆ. ಹಿಂದೆ ಸ್ತ್ರೀಯರು ಮನೆಯಿಂದ ಹೊರಗೆ ಇಳಿಯುವಾಗ ಎದೆಗೆ ಬೈರಾಸನ್ನು ಹಾಕಿಕೊಳ್ಳುತ್ತಿದ್ದರು. ಅನ್ಯಪುರುಷರ ನೋಟವು ಬೀಳದಂತೆ ತಡೆಯಾಗಿ ಹಾಗೆ ಬೈರಾಸು ಹಾಕಿಕೊಂಡು ಹೊರಗಿಳಿಯುತ್ತಿದ್ದರು.

ಒಂದು ಶತಮಾನದ ಹಿಂದೆ ಶಾಲೆಗಳಿಗೆ ಮಕ್ಕಳು ಬೈರಾಸು ಉಟ್ಟು ಹೋಗುತ್ತಿದ್ದರು. ಅಂದು ಊರ ಹಿರಿಯರು ಬೈರಾಸು ಹೆಗಲಿಗೆ ಹಾಕಿ ಬರುತ್ತಿದ್ದರು. ಕೆಲವರು ಅದನ್ನು ಕೊರಳಿಗೆ ಸುತ್ತಿನಡೆದಾಡುವ ಕ್ರಮವೂಇತ್ತು. ಬೈರಾಸು ಕೊಟ್ಟ ಸಂತಸ ಪಡಿಸುವ ಸಂದರ್ಭಗಳು ಒಂದು ಕಾಲದಲ್ಲಿದ್ದುವು. ಓಣಕ್ಕೋಡಿ ಎಂಬ ಹೆಸರಿನ ಹಳದಿ ಬಟ್ಟೆಕೂಡ ಬೈರಾಸಿನ ರೂಪದಲ್ಲಿದೆ. ಬಳಸುವ ವ್ಯಕ್ತಿಗೂ ಒದಗಿದ ಸಂದರ್ಭಕ್ಕೂ ಅನುಸಾರವಾಗಿ ಹಾಗೆ ಅದನ್ನು ಧರಿಸುವುದರ ಅರ್ಥ ಹೇಳಲು ಸಾಧ್ಯ.

ಇಂದು ಬೈರಾಸು ರಾಜಕೀಯ ಪಕ್ಷಗಳ ನೇತಾರರನ್ನು ಬರಮಾಡಿಕೊಳ್ಳಲು ಸಂದರ್ಭಗಳಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದೆ. ಮಾರ್ಕ್ಸಿಸ್ಟ್ ಪಾರ್ಟಿಯ ನೇತಾರರ ಸ್ವಾಗತ ಸಮಾರಂಭಗಳಲ್ಲಿ ಬೈರಾಸು ಸಮರ್ಪಿಸುತ್ತಾರೆ, ಕಾಂಗ್ರೆಸ್ ಪಕ್ಷದ ನೇತಾರರ ಸ್ವಾಗತ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಬೈರಾಸಿನ ಪರಿಷ್ಕೃತ ಮತ್ತು ಮೇಲುಸ್ತರದ ರೂಪವಾದ ಶಾಲನ್ನು ಸಮರ್ಪಿಸಲಾಗುತ್ತಿದೆ.

ಬೈರಾಸು ಎನ್ನುವುದು ಉಟ್ಟುಕೊಂಡು ಸ್ನಾನ ಮಾಡಬಹುದಾದ ಬಟ್ಟೆ ಕೂಡ. ಹಿಂದಿನವರು ಸ್ನಾನ ಮಾಡುತ್ತಿದ್ದುದು ಹೊಳೆಗಳಲ್ಲಿ ಇಲ್ಲವೇ ಕೊಳಗಳಲ್ಲಿ. ಹೊರಗಿನ ಸ್ನಾನವು ಮನೆಯೊಳಗಿನದ್ದಾಗಿ ಬದಲಾದಾಗ ಅದಕ್ಕನುಸಾರವಾಗಿ ಐರೋಪ್ಯ ಮಾದರಿಯ ಬಚ್ಚಲ ಸೌಲಭ್ಯಗಳೂ ಒದಗಿದುವು. ಬೈರಾಸಿನ ಜಾಗವನ್ನು ಟವೆಲ್ ಆಕ್ರಮಿಸಿಕೊಂಡಿತು. ಮಧ್ಯಮ ವರ್ಗವು ಹೆಚ್ಚು ಕಮ್ಮಿ ಟವೆಲ್‌ಗೆ ಬದಲಾಗಿದ್ದಾರೆ. ಬೈರಾಸಿನ ಒರಟು ಸ್ವಭಾವವು ದೇಹಕ್ಕೆ ಉಂಟುಮಾಡುವ ಕಿರಿಕಿರಿ ಕೂಡ ಸಮಸ್ಯೆಯಾಗಿ ಬಿಟ್ಟಿದೆ. ಬೈರಾಸು ಸಾಮಾನ್ಯರಲ್ಲೂ ಕೆಳಗಿನವರಲ್ಲಿ, ದಲಿತರಲ್ಲಿ ಮಾತ್ರ ಸ್ನಾನದಲ್ಲಿ ಬಳಕೆಯಾಗುವ ಬಟ್ಟೆಯಾಗಿ ಸಂಕೋಚಗೊಂಡಿದೆ. ಒಂದು ಮನೆಯಲ್ಲಿ ಒಬ್ಬೊಬ್ಬರಿಗೂ ಬೇರೆ ಬೇರೆ ಬೈರಾಸು ಎಂಬ ಸ್ಥಿತಿಯೂ ಉಂಟಾಯಿತು. ಭವಿಷ್ಯದಲ್ಲಿ ಬಹುಶಃ ಕೆಲವು ಧಾರ್ಮಿಕಾಚಾರಣೆಯ ವೇಳೆಯಲ್ಲಿ ಮಾತ್ರ ಬಳಕೆಯಾಗುವ ವಸ್ತ್ರವಾಗಿ ಬೈರಾಸು ಬದಲಾಗಬಹುದೆಂದು ತಿಳಿಯಬೇಕಾಗಿದೆ.

ಹಲವು ಬಣ್ಣಗಳಲ್ಲಿ ಬೈರಾಸುಗಳು ಲಭ್ಯವಿದೆ. ಮಾರುಕಟ್ಟೆಗೆ ಅಂಥ ಬೈರಾಸುಗಳು ತಲುಪುವುದು ತಮಿಳ್ನಾಡಿನಿಂದ. ಆದರೆ ಇಲ್ಲಿ ಬಿಳಿಯ ಬೈರಾಸುಗಳಿಗೆ ಹೆಚ್ಚು ಬೇಡಿಕೆ. ಅದನ್ನು ಹೆಚ್ಚಾಗಿ ಗುಡಿಸಲುಗಳಲ್ಲಿಯೂ ಕಿರು ಉದ್ಯಮ ಕೇಂದ್ರಗಳಲ್ಲಿಯೂ ನೇಯ್ಗೆ ಮಾಡಲಾಗುತ್ತದೆ.

ಬಿ.ಬಿ. ಅನುವಾದ ಕೆ.ಕೆ.

 

ತೋಲ್‌ಪಾವೈಕೂತ್ತು (ಕೇರಳ) ಕೇರಳದ ತ್ರಿಶ್ಯೂರು, ಪಾಲಕ್ಕಾಡು, ಮಲಪುರಂ ಜಿಲ್ಲೆಗಳಲ್ಲಿ ಭದ್ರಕಾಳಿ ಕ್ಷೇತ್ರಗಳಲ್ಲಿ ಜಾತ್ರೆಯ ಅನುಬಂಧವಾಗಿ ನಡೆಸುವ ಕಲೆ. ಇದು ನೆರಳು ಗೊಂಬೆಯಾಟ ಎಂಬ ಹೆಸರಿನಲ್ಲಿಯೂ ಪ್ರಸಿದ್ಧವಾಗಿದೆ. ರಾಮಾಯಣದ ಕಥೆಯನ್ನು ತೊಗಲು ಬೊಂಬೆಯಾಟದ ಮೂಲಕ ಜನರಿಗೆ ತಲುಪಿಸುತ್ತಾರೆ. ತಮಿಳಿನ ಕಂಬರಾಮಾಯಣದ ಕಥೆಯನ್ನು ತೊಗಲು ಗೊಂಬೆಯಾಟಕ್ಕಾಗಿ ಬಳಸುತ್ತಾರೆ. ತಮಿಳು ಸಂಸ್ಕೃತಿಯ ಅನನ್ಯತೆ ಈ ಕಲೆಯ ಮೂಲಕ ಕೇರಳದಲ್ಲಿ ಅನಾವರಣಗೊಳ್ಳುತ್ತದೆ.

ತೊಗಲು ಗೊಂಬೆಯಾಟವನ್ನು ಪ್ರದರ್ಶಿಸುವವರು ‘ಪುಲವರ್’ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಇವರಲ್ಲಿ ಪ್ರಧಾನ ವ್ಯಕ್ತಿಗಳನ್ನು ‘ಮಾಡಪುಲವರ್’ ಎಂದು ಕರೆಯುತ್ತಾರೆ. ಪುಲವ ಎಂಬ ಪದಕ್ಕೆ ವಿದ್ವಾಂಸ, ಪಂಡಿತ ಎಂಬ ಅರ್ಥಗಳಿವೆ. ನಾಯರ್ ಸಮುದಾಯದವರು ತೊಗಲು ಬೊಂಬೆಯಾಟದಲ್ಲಿ ಪರಿಣತರಾದರೂ ಅವರಿಗೆ ಈ ಹೆಸರು ಸಲ್ಲುವುದಿಲ್ಲ.

ಕಂಬರಾಮಾಯಣದ ೧೨,೧೨೬ ಶ್ಲೋಕಗಳನ್ನು ಹತ್ತರಲ್ಲಿ ಒಂದಕ್ಕಿಳಿಸಿ, ಸಂಕ್ಷಿಪ್ತಗೊಳಿಸಿ ಕೇರಳದಲ್ಲಿ ತೊಗಲು ಗೊಂಬೆಯಾಟಕ್ಕೆ ಬಳಸುತ್ತಾರೆ. ಇದರ ಪೂರ್ಣ ಹೆಸರು ‘ಕಂಬ ರಾಮಾಯಣ ಆಡಲ್‌ಪಟ್ಟ ತೊಗಲುಗೊಂಬೆಯಾಟ’ ಎಂದಾಗಿದೆ. ಅಂಗಾಂಗಗಳನ್ನು ಚಲಿಸುವ ರೀತಿಯಲ್ಲಿ ಬೊಂಬೆಯ ಭಾಗಗಳನ್ನು ಸಿದ್ಧಪಡಿಸಿರುತ್ತಾರೆ. ಅದಕ್ಕೆ ಬಳಸುವ ಸಾಹಿತ್ಯವನ್ನು ಆಡಲ್ ಪಟ್ಟ ಎನ್ನುವರು. ಇದು ಗದ್ಯಪದ್ಯ ಮಿಶ್ರಿತವಾದ ಸಾಹಿತ್ಯವಾಗಿದೆ.

06_70A_DBJK-KUH

ಜಾತ್ರೆಯ ಸಂದರ್ಭದಲ್ಲಿ ದೇವೀ ಕ್ಷೇತ್ರಗಳಲ್ಲಿ ೨೧ ದಿವಸಗಳ ಕಾಲ ತೊಗಲು ಬೊಂಬೆಯಾಟ ನಡೆಯುತ್ತದೆ. ಇದಕ್ಕೆ ಅನುಗುಣವಾಗಿ ರಾಮಾಯಣದ ಕಥೆಯನ್ನು ವಿನ್ಯಾಸಗೊಳಿಸಲಾಗಿದೆ. ಶ್ರೀರಾಮನ ಜನನದಿಂದ ಪಟ್ಟಾಭಿಷೇಕದವರೆಗಿನ ಕಥೆಯನ್ನು ೨೧ರಾತ್ರಿಗಳಲ್ಲಿ ಪ್ರದರ್ಶಿಸುತ್ತಾರೆ. ಪ್ರತಿ ದಿವಸ ರಾತ್ರಿ ೯ ಗಂಟೆಯಿಂದ ಬೆಳಗ್ಗಿನವರೆಗೆ ಈ ಕಲಾಪ್ರದರ್ಶನ ಹರಕೆಯ ರೂಪದಲ್ಲಿ ನಡೆಸುವವರಿದ್ದಾರೆ.

ಹಿಂದೆ ತೊಗಲು ಗೊಂಬೆಯಾಟದ ಬೊಂಬೆಗಳನ್ನು ತಾಳೆಯ ಓಲೆಗಳಿಂದ ನಿರ್ಮಿಸುತ್ತಿದ್ದರು. ಅನಂತರ ಕಾಲದಲ್ಲಿ ಜಿಂಕೆಯ ಚರ್ಮವನ್ನು ಬಳಸಿದರು. ಇದುಹೆಚ್ಚು ಬಾಳ್ವಿಕೆ ಬರುವುದರಿಂದ ತೊಗಲುಬೊಂಬೆಗಳು ಪ್ರಸಿದ್ಧವಾದುವು. ಈ ಬೊಂಬೆಗಳಿಗೆ ಬಣ್ಣ ಬಳಿದು, ಬಿದಿರಿನ ಕೋಲಿಗೆ ಸಿಕ್ಕಿಸಿ, ಬೇಕಾದ ಹಾಗೆ ಚಲಿಸುತ್ತಾರೆ.

ದೇವಸ್ಥಾನಗಳಲ್ಲಿ ಆಟ ನಡೆಯುವ ಸ್ಥಳವನ್ನು ‘ಕೂತ್‌ಮಾಡಂ’ ಎನ್ನುತ್ತಾರೆ. ಆಟ ನಡೆಯುವ ವೇದಿಕೆಯನ್ನು ‘ಆಯಪುಡವ’ ಎನ್ನುವರು. ರಾಮಾಯಣ ಯುದ್ಧ ಸಂದರ್ಭದಲ್ಲಿ ಭದ್ರಕಾಳಿ ಶಿವನ ಆಜ್ಞೆಯ ಪ್ರಕಾರ ಸ್ವಯಂಭೂಲಿಂಗ ಕ್ಷೇತ್ರದಲ್ಲಿ ವಾಸವಾಗಿದ್ದಳಂತೆ, ದಾರಿಕಾಸುರನನ್ನು ವಧಿಸಿದ ದೇವಿ ದೊಡ್ಡ ಯುದ್ದವನ್ನು ಮುಗಿಸಿ ಬಂದಿರುವುದಾಗಿ ಶಿವನಿಗೆ ಹೇಳುತ್ತಾಳೆ. ಆಗ ಶಿವನು ಇದಕ್ಕಿಂತಲೂ ದೊಡ್ಡ ಯುದ್ಧ ರಾಮ ಮತ್ತು ರಾವಣರಿಗೆ ನಡೆದಿರುವಂಥದ್ದು ಎನ್ನುತ್ತಾನೆ. ದೇವಿ ಆ ಯುದ್ಧವನ್ನು ಕಾಣುವ ಬಯಕೆಯನ್ನು ಪ್ರಕಟಿಸುತ್ತಾಳೆ. ಹೀಗಾಗಿ ಕೇರಳದ ದೇವಸ್ಥಾನಗಳಲ್ಲಿ ನೆಲೆಗೊಂಡು ತೊಗಲು ಬೊಂಬೆಯಾಟದ ಮೂಲಕ ರಾಮ ರಾವಣರ ಯುದ್ಧವನ್ನು ನೋಡುವಂತೆ ಶಿವನು ಅನುಗ್ರಹಿಸುತ್ತಾನೆ. ಹೀಗೆ ಕೇರಳದಲ್ಲಿ ವಿವಿಧ ಕಡೆಗಳಲ್ಲಿ ನೆಲೆಗೊಂಡ ಭದ್ರಕಾಳಿಯು ತೊಗಲು ಬೊಂಬೆಯಾಟದ ಮೂಲಕ ರಾಮಾಯಣವನ್ನು ನೋಡುತ್ತಾಳೆ ಎಂಬುದು ನಂಬಿಕೆ. ಸಾಮಾನ್ಯವಾಗಿ ದೇವಿಕ್ಷೇತ್ರದ ಗರ್ಭಗುಡಿಗೆ ಅಭಿಮುಖವಾಗಿ ತೊಗಲು ಗೊಂಬೆಯಾಟದ ವೇದಿಕೆ ಇರುತ್ತದೆ.

ಧನುರ್ಮಾಸದಿಂದ ಮೇಷ ಮಾಸದವರೆಗೆ ತೊಗಲು ಗೊಂಬೆಯಾಟ ನಡೆಯುವುದು. ವರ್ತಮಾನ ಕಾಲದಲ್ಲಿ ತೊಗಲುಬೊಂಬೆಯಾಟ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಗೊಂಬೆಯಾಟವನ್ನು ನಿರ್ವಹಿಸಲು ವಿಶೇಷವಾದ ಪರಿಣತಿ ಅಗತ್ಯ, ಈ ಕಲೆಯನ್ನು ನೋಡುವ ಪ್ರೇಕ್ಷಕವರ್ಗವೂ ಕಡಿಮೆಯಾಗುತ್ತಿದೆ. ಹೀಗಾಗಿ ಈ ಕಲೆಯ ಸ್ಥಿತಿ ಚಿಂತಾಜನಕವಾಗಿದೆ.

ಪಿ.ವಿ.ಎಂ.ಅನುವಾದ ಎನ್.ಎಸ್.