ತೋಲ್‌ಪಾವೈಕ್ಕೂತ್ತು ತಮಿಳುನಾಡಿನ ತೋಲ್‌ಪಾವೈಕ್ಕೂತ್ತು(ತೊಗಲುಗೊಂಬೆಯಾಟ) ಕಲೆಯನ್ನು ಪ್ರದರ್ಶಿಸಲು ಸಂಪೂರ್ಣ ಹಕ್ಕನ್ನು ಹೊಂದಿದ್ದವರು ಮಂಡಿರ್. ಇವರು ಮರಾಠಿ ಭಾಷೆಯನ್ನು ಮಾತನಾಡುವ ಕಣಿಕರ್(ಲೆಕ್ಕಿಗರು) ಜಾತಿಯ ಒಂದು ಪಂಗಡದವರು. ರಾವ್ ಎಂದು ತಮ್ಮನ್ನು ಗುರುತಿಸಿಕೊಳ್ಳುವ ಕಣಿಕರ್ ಜಾತಿಯವರಲ್ಲಿ ಬಹುಪಾಲು ಜನರು ಮಧುರೈ, ಕನ್ಯಾಕುಮಾರಿ, ತಿರುನೆಲ್‌ವೇಲಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಕಣಿಕರೆಂಬ ಜಾತಿಯರು ಕೋಂತಳ, ಚವಾನ್, ಸಶಾನ್, ಸಾಶ್ತಾ, ಟೊರ್ಕಾ, ಪಾಂಗೋತ್, ಪುತ್ರಿಕರ್, ಮಂಡಿಗರ್, ಮುತ್ತೀರೀಕರ್, ವಾಕಡಕರ್, ವಾಡುಗರ್, ವಾವುಡಗರ್ ಎಂಬ ಹನ್ನೆರಡು ಒಳಪಂಗಡಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ತೇಳಿರಾಜ, ಅಮ್ಪಶ್ಯಾ, ಕೋಣ್ಡು, ಮೆಗಾಗ, ಅಡಗಾ ಮುಂತಾದ ಪಂಗಡಗಳೂ ಇವೆ.

ಕೋಂತಳಾ (ಗೊಂದಲ) ಎಂಬ ಸಂಗೀತಸಾಧನದಿಂದ ಹೆಸರುಗಳಿಸಿದ್ದ ಕೋಂತಳಾ ಪಂಗಡದವರು ಮರಗಾಲು ಗೊಂಬೆಗಳ ಕಲೆಯನ್ನುಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿದ್ದಾರೆ. ನಲ್ವತ್ತರ ದಶಕಗಳಲ್ಲಿ ಇವರು ತೊಗಲುಗೊಂಬೆಯಾಟವನ್ನೂ ಪ್ರದರ್ಶನ ಮಾಡುವ ಊರುಗಳಲ್ಲಿ ಸಂಮುಳ್ ಮೇಳ ಎಂಬ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದರು.

ರಾಶಿಚೊಟ್ಟ ಚವಾನ್, ಪಿನಾಟ್ಟಿ ವಾಲಾ ಚವಾನ್ ಎಂಬ ಪಂಗಡಗಳನ್ನು ಹೊಂದಿದ್ದ ಚವಾನ್ ಪಂಗಡದವರು ಕಣಿಕರ ಪಂಚಾಯಿತಿಯಲ್ಲಿ ನ್ಯಾಯ ತೀರ್ಮಾನಾ ನೀಡುವ ಹಕ್ಕನ್ನು ಹೊಂದಿದ್ದವರು. ಚಶಾನ್, ಅವರು ಮೊಲವನ್ನು ಬೇಟೆ ಮಾಡುವುದಿಲ್ಲ. ಟೊರ್ಕರು, ಕಣಕರಂತೆ ತೊಲುಗೊಂಬೆಯಾಟವನ್ನು ಪ್ರದರ್ಶನ ಮಾಡಲು ಹಕ್ಕನ್ನು ಹೊಂದಿದ್ದವರು. ಕಣಿಕರಲ್ಲಿ ತುಮಲಾ, ಕಣ್ಣೀಪ್ಪಕ್ಕರೆಂಬ ಒಳಪಂಗಡದವರಿದ್ದರು.

ಕಣಿಕರಲ್ಲಿ ಮಂಡಿಗಳನ್ನು ಹೊರತುಪಡಿಸಿ ಇತರ ಪಂಗಡದವರಲ್ಲಿ ಬಹುಪಾಲು ಜನರು ಬುಡಬುಡಿಕೆ ನುಡಿಸುತ್ತಾ ಶಾಸ್ತ್ರ ಹೇಳುವಿಕೆ, ಗಿಣಿ, ಕೋತಿ ಮುಂತಾದವುಗಳನ್ನಿಟ್ಟುಕೊಂಡು ಜ್ಯೋತಿಷ್ಯ ಹೇಳುವಿಕೆ, ಹಸ್ತ ನೋಡಿ ಶಾಸ್ತ್ರ ಹೇಳುವಿಕೆ ಮುಂತಾದವುಗಳನ್ನು ಜೀವನಾಧಾರ ಕಸುಬಾಗಿ ಮಾಡುತ್ತಿದ್ದಾರೆ. ಇವರನ್ನು ರಾತ್ರಿ ದುಡಿಮೆಗಾರರು ಎಂದು ಮಂಡಿಗರು ಕರೆಯುತ್ತಾರೆ.

ಕಣಿಕರ ಹನ್ನೊಂದು ಪಂಗಡದವರೂ ಜ್ಯೋತಿಷ್ಯ ಕಲೆಯನ್ನು ತಮ್ಮ ಪರಂಪರಾಗತ ಆಸ್ತಿಯೆಂಬುದಾಗಿ ಭಾವಿಸುತ್ತಿದ್ದಾರೆ. ಇವರು ಕಟ್ಟುವಿಆಯಿ (ಹಲ್ಲು ಇಲ್ಲದ ಅಮ್ಮ) ಎಂದೂ ರೂಪವಿಲ್ಲದ ಹೆಣ್ಣು ದೇವರನ್ನು ಪೂಜಿಸಿ ತಮ್ಮ ಶಕ್ತಿಯನ್ನು ನವೀಕರಿಸಿಕೊಳ್ಳುತ್ತಾರೆ.

ಕಣಿಕರು ಮದುರೈ ಚೈತ್ರ ಹುಣ್ಣಿಮೆಯೆಂದು ಒಂದುಗೂಡಿ ಮಾತನಾಡುವಿಕೆ, ಹಳೆಯ ಸಂಬಂಧಗಳನ್ನು ನವೀಕರಿಸಿಕೊಳ್ಳುವಿಕೆ ಮುಂತಾದ ಸಂಪ್ರದಾಯಗಳನ್ನು ಇಂದಿಗೂ ಬಳಕೆಯಲ್ಲಿಟ್ಟಿದ್ದಾರೆ. ಕಣಿಕರ ಒಳಪಂಗಡದವರೆಲ್ಲರೂ ಮಹಾರಾಷ್ಟ್ರವನ್ನು ಪೂರ್ವಸ್ಥಳವನ್ನಾಗಿ ಹೊಂದಿದ್ದವರು. ಇವರ ತಾಯಿ ಭಾಷೆ ಮರಾಠಿ. ಕಣಿಕರು ಮಹಾರಾಷ್ಟ್ರದಿಂದ ತಮಿಳುನಾಡಿನ ವಲಸೆ ಬಂದಿರುವುದಕ್ಕೆ ಮರಾಠೀ ಅರಸರಾದ ಷಹಾಜಿ ಇವರನ್ನು ಸೇನೆಯಲ್ಲಿ ಸೇರಿಸಿದ್ದು ಒಂದು ಕಾರಣವಾದರೂ, ಮೇಘಾಲಯ ದೊರೆಗಳು ಇವರನ್ನು ಮತಾಂತರಗೊಳಿಸಲು ಪ್ರಯತ್ನಿಸಿದ್ದೇ ಪ್ರಮುಖ ಕಾರಣವೆಂದು ಹೇಳುತ್ತಿದ್ದಾರೆ. ಇವರು ತೆಲಗು ನಾಯಕರ ಕಾಲದಲ್ಲೂ ತಂಜಾವೂರಿನಲ್ಲಿ ಮರಾಠರ ಆಳ್ವಿಕೆಯ ಕಾಲದಲ್ಲಿ ಪ್ರತ್ಯೇಕ ಗುಂಪುಗಳಾಗಿ ಬಂದಿರಬಹುದು ಎಂಬ ಅಭಿಪ್ರಾಯವೂ ಉಂಟು.

ಕಣಿಕರು ತಮ್ಮನ್ನು ರಘುವಂಶಸ್ಥರೆಂದು ಹೇಳಿಕೊಳ್ಳುತ್ತಿದ್ದಾರೆ. ತೊಗಲುಗೊಂಬೆಯಾಟದವರಿಗೆ ‘ರಾಮಕ್ಕುಳೂವನ್’ ಎಂಬ ಹೆಸರಿದೆ. ರಾಮನು ಅರಣ್ಯಕ್ಕೆ ಹೋದಾಗ ಅವರನ್ನು ಹಿಂಬಾಲಿಸಿದ ಅಯೋದ್ಯೆ ಜನತೆಯಲ್ಲಿ ತೊಗಲುಗೊಂಬೆಯಾಟದವರೂ ಇದ್ದರು. ರಾಮ ಪುನಃ ಅಯೋಧ್ಯೆಗೆ ಹಿಂತಿರುಗುವರೆಗೆ ಗಂಗಾನದಿ ತೀರದಲ್ಲಿಯೇ ಇವರು ತಂಗಿದ್ದರು. ರಾಮನ ಮಾತನ್ನು ಮೀರಿ ತಂಗಿದ್ದುದರಿಂದ ಮಂಡಿಗರು ಅಲೆಮಾರಿಗಳಾದರೆಂಬ ಒಂದು ದಂತ ಕಥೆಯಿದೆ.

ಮಂಡಿಗರು ತಂಜಾವೂರಿನ ಪ್ರದೇಶದಿಂದ ದಕ್ಷಿಣ ತಮಿಳು ಪ್ರದೇಶಕ್ಕೆ ವಲಸೆ ಬಂದಿರುವುದಕ್ಕೆ ಸಾಮಾಜಿಕ, ಐತಿಹಾಸಿಕ ಕಾರಣಗಳಿವೆ. ತಂಜಾವೂರಿನ ಮರಾಠಿ ರಾಜರಲ್ಲಿ ಎರಡನೆಯ ಸರಪೋಜಿಯ (೧೭೯೮-೧೮೩೩) ಅನಂತರ ಬಂದ ರಾಜರು ತೊಗಲುಗೊಂಬೆಯಾಟದ ಕಲೆಗಾರರಿಗೆ ಆಶ್ರಯ ನೀಡಲಿಲ್ಲ. ಅದು ಮಾತ್ರವಲ್ಲದೆ ಇವರಿಗೆ ಉಂಬಳಿಯಾಗಿ ಕೊಟ್ಟಿದ್ದ ಭೂಪ್ರದೇಶಗಳನ್ನು ಕಂಪೆನಿ ಸರ್ಕಾರ ಕಸಿದುಕೊಂಡಿತು. ಹೀಗಾಗಿ ಜೀವನಾಧಾರಕ್ಕಾಗಿ ಇವರು ಜೀವಿಸಿದ್ದ ನಾಯ್ಡು, ರೆಡ್ಡಿಗಳು, ನಾಯಕರು ಮುಂತಾದವರು ರಾಮಾಯಣ ಕಥೆಗೆ ಬೆಂಬಲವನ್ನು ಸೂಚಿಸಿದರು.

ಕಣಿಕರಲ್ಲಿ ಮಂಡಿಗರು ಮಾತ್ರ ಈ ಕಲೆಯನ್ನು ಪ್ರದರ್ಶಿಸಲು ಸಾಧ್ಯ. ಇತರ ಪಂಗಡದವರು ಪ್ರದರ್ಶನಮಾಡಿದರೆ ತೊಗಲುಗೊಂಬೆ ಯಾಟದವರು ಅವರನ್ನು ‘ಮಂಡಿಗರ್‌ಚ್ಚು ಪಿಂದಾಚ್ಚು’ (ತೊಗಲುಗೊಂಬೆಯಾಟದವರಿಗೆ ಹುಟ್ಟಿದವನು) ಎಂದು ಹೀಯಾಳಿಸುವರು. ಆದರೆ ಮಂಡಿಗರ ಅನುಮತಿಯೊಡನೆ ‘ಪಾಲ್‌ಕಾಪಾಚ್ಚಾ’ ಎನ್ನುವ ಶಾಸ್ತ್ರವಿಧಿ ಪ್ರಕಾರ ಮಾಡುವ ಕ್ರಿಯೆಯನ್ನು ಮಾಡಿ ಪ್ರದರ್ಶನ ನಡೆಸಬಹುದು.ಕೊರ್ಕರು ಈ ರೀತಿ ನಡೆಸುತ್ತಾರೆ.

ಕಣಿಕರ ಹನ್ನೆರಡು ಪಂಗಡದವರ ಜೀವನ ವಿಧಿವಿಧಾನಗಳುಒಂದೇ ತೆರನಾಗಿದ್ದರೂ ಇತರ ಹನ್ನೊಂದು ಪಂಗಡದವರಿಂದ ಮಂಡಿಗರು ಬೇರ್ಪಡಿಸುವುದು ಈ ತೊಗಲುಗೊಂಬೆಯಾಟದ ಕಲೆಯೇ. ಇವರ ಜೀವನ ವಿಧಿ ವಿಧಾನಗಳನ್ನು ಮಂಡಿಗರಲ್ಲದ ಕಣಿಕರ ಪಂಗಡದವರು ಮಾತ್ರ ನಡೆಸಬಹುದು. ಈ ವಿಧಿವಿಧಾನದಲ್ಲಿ ದೊರೆಯುವ ದಕ್ಷಿಣೆ ಈ ಹನ್ನೊಂದು ಪಂಗಡದವರಿಗೆ ಮಾತ್ರ ಸ್ವಂತವಾದದ್ದು.

ಹೆಣ್ಣಿನ ಹೆರಿಗೆ ಗಂಡನ ಮನೆಯಲ್ಲಿಯೇ ಆಗಬೇಕೆಂಬುದು ಹಳೆಯ ಪದ್ಧತಿ. ಹೆರಿಗೆಯು ಸೂತಕವಾದದ್ದು. ಹೆರಿಗೆಯಾದ ಹೆಣ್ಣಿನ ದೇಹದಿಂದ ಹೊರಬರುವ ರಕ್ತ, ಸತ್ತೆ(ನಂಜು) ಮುಂತಾದವುಗಳನ್ನು ಭೂಮಿಯಲ್ಲಿ ಹೂತಿಟ್ಟು ಮಾಡುವ ವಿಧಿವಿಧಾನವನ್ನು ‘ನಾಣಿ ಪೂಜಿತಾಲಾ’ (ಸೂತಕದಮ್ಮ) ಎನ್ನಲಾಗುತ್ತದೆ. ಈ ಕ್ರಿಯೆಯನ್ನು ಗಂಡ ಅಥವಾ ಮಾವ ಮಾಡಬೇಕು.

ಮಗು ಜನಿಸಿದ ಹನ್ನೆರಡು ದಿನಕ್ಕೆ ಹೆಸರಿಡುವರು. ಇದನ್ನು ‘ಸಟ್ಟುವಿ’ ಎನ್ನಲಾಗುವುದು. ಇದನ್ನು ಮಾಡದವರನ್ನು ‘ಕಟ್ಟುವಿಳ ಸಲ್ಲಾ ಹಾರಂಗು ಬಿಲ್ಲಾ’ (ಸಟ್ಟುವಿ ಮಾಡದವನ ಮಗು ಯಾರಿಗೋ ಹುಟ್ಟಿದ ಮಗು) ಎಂದು ಕರೆಯುವರು. ಸಟ್ಟುವಿ ಮಾಡುವ ಸಂದರ್ಭದಲ್ಲಿ ಆಡಿನ ಮಾಂಸದ ಸಾಂಬಾರ್ ಬಡಿಸಲಾಗುತ್ತದೆ.

ದೊಡ್ಡವಳಾಗುವ ಸಂದರ್ಭದಲ್ಲಿ ಮಾಡುವ ಕ್ರಿಯೆ, ವಿವಾಹ ಸಂದರ್ಭ, ನಾಮಕರಣ ಮುಂತಾದ ಸಂದರ್ಭಗಳಲ್ಲಿ, ಕ್ರಿಯೆಯನ್ನು ಮಾಡಲು ಅರ್ಹತೆಯುಳ್ಳವರ ಮಡಿಲಲ್ಲಿ ಕಡಲೆ ಚಕ್ಕುಲಿಗಳಂತಹ ತಿಂಡಿಗಳನ್ನು ಹಾಕುವುದೆಂಬುದು ಸಾಮಾನ್ಯವಾಡಿಕೆ. ಇದನ್ನು ‘ವಾಟ್ಟಾ ಪುರೂತ್ತಾಲಾ’ ಎನ್ನಲಾಗುತ್ತದೆ.

ಹೆಣ್ಣು ದೊಡ್ಡವಳಾದಾಗ ಅರಿಸಿನದ ನೀರು ಹೊಯ್ಯುವ ಸಂದರ್ಭದಲ್ಲಿ ಆ ಹೆಣ್ಣಿನ ತಲೆಯ ಮೇಲೆ ಬೇವಿನಸೊಪ್ಪನ್ನಿಟ್ಟು ನೀರು ಹೊಯ್ಯುವ ಕಾರ್ಯಕ್ರಮ ತೊಗಲುಗೊಂಬೆಯಾಟದವರಲ್ಲಿ ನಡೆಯುತ್ತದೆ.

ಇವರದು ಪಿತೃಪ್ರಧಾನ ಹಿನ್ನೆಲೆಯುಳ್ಳದ್ದು. ಇವರು ಒಂದೇ ಗೋತ್ರದವರೆಂಬುದಾಗಿ ಭಾವಿಸುವರು. ಆದುದರಿಂದ ಮಂಡಿಗರ ಹೆಣ್ಣು ಕಣಿಕರ ಇತರ ಪಂಗಡದವರೊಡನೆ ವಿವಾಹ ಸಂಬಂಧವನ್ನಿಟ್ಟು ಕೊಳ್ಳಬಹುದು. ಇಂಥ ನೆಲೆ ಈಗ ಬದಲಾವಣೆಯಾಗುತ್ತ ಬರುತ್ತಿದೆ. ವಿಧವೆಯರಿಗೂ, ವಿವಾಹ ರದ್ದು ಆದವರಿಗೂ ಮರುವಿವಾಹದ ಹಕ್ಕುಂಟು.

07_70A_DBJK-KUH

ಇವರಲ್ಲಿ ವರದಕ್ಷಿಣೆ ಕೊಡುವ ಪದ್ಧತಿ ಇಲ್ಲ. ವಿವಾಹದ ಖರ್ಚನ್ನು ವರನ ಕಡೆಯವರೇ ಮಾಡಬೇಕು. ಬಾಲ್ಯ, ಮರುವಿವಾಹ ಪದ್ಧತಿ ಬಳಕೆಯಲ್ಲಿತ್ತು. ಇವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವೆಂಬುದು ವಿವಾಹದ ನೋಂದಣಿ ಆಗಿತ್ತು.

ಮಂಡಿಗರ ವಿವಾಹ ಮೂರು ದಿನಗಳ ಕಾರ್ಯಕ್ರಮ. ಮೊದಲನೆಯ ದಿನ ವರನ ಮನೆಯ ಮುಂದೆ ಆಲದ ಮರದ ಕವಲು ಅಥವಾ ಚಿಗುರನ್ನು ನೆಟ್ಟು ಗಂಧವನ್ನು ಲೇಪಿಸುವುದು, ವರ ಆಡಿನ ಕತ್ತನ್ನು ಕತ್ತರಿಸುವುದು, ಆಡಿನ ರಕ್ತವನ್ನು ಲೇಪಿಸಿದ ಕಂಕಣವನ್ನು ಮದುಮಗನ ಕೈಯಲ್ಲಿ ಸೋದರಮಾವ ಕಟ್ಟುವುದು, ಅನಂತರ ರಾತ್ರಿ ಒಂಬತ್ತು ಗಂಟೆಗೆ ತಾಳಿಕಟ್ಟುವುದು ಮುಂತಾದವು ನಡೆಯತ್ತವೆ.

ಮಂಡಿಗರ ಹೆಣ್ಣಿನ ತಾಳಿ ಕರಿಮಣಿ ಹಾಗೂ ಚಿನ್ನದ ಬೊಟ್ಟನ್ನು ಹೊಂದಿರುತ್ತದೆ. ಇದನ್ನು ಅಂಟುತಾಳಿಯೆಂದು ಕರೆಯಲಾಗುತ್ತದೆ. ತಾಳಿಕಟ್ಟುವಿಕೆ ಮುಗಿದ ಮೇಲೆ ಹೆಣ್ಣೂ ಗಂಡೂ ಬೇರೆ ಬೇರೆಯಾಗಿ ನಿದ್ರಿಸುವರು. ಮಾರನೆಯ ದಿನ ಮದುಮಗಳು ಮದುಮಗನ ಮೇಲೆ ಅರಿಶಿನದ ನೀರು ಎರಚಿ ಓಕುಳಿಯಾಡುವುದು, ನೀರು ತುಂಬಿದ ಕೊಡದಲ್ಲಿ ತಾಮ್ರದ ನಾಣ್ಯ, ಕಬ್ಬಿಣ ಉಂಗುರ ಎರಡನ್ನೂ ಹಾಕುವಿಕೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಮೂರನೆಯ ದಿನ ಪ್ರಸ್ತ (ಕೂಡುಪೆರುವತ್ತಾಲಾ) ನಡೆಯುತ್ತದೆ. ಈಗ ಈ ಮದುವೆಯ ಕಾರ್ಯಕ್ರಮವು ಒಂದೇ ದಿನದಲ್ಲಿ ನಡೆದು ಮುಗಿಯುತ್ತದೆ.

ಮಂಡಿಗರಲ್ಲಿ ಈಗ ಅಂತರ್‌ಜಾತಿಯ ವಿವಾಹಗಳು ಸಹಜವಾಗಿ ನಡೆಯುತ್ತವೆ. ಇವರೆಲ್ಲರೂ ಹಿಂದುಗಳೇ. ಇವರಲ್ಲಿ ವಿವಾಹ ರದ್ದು ಪಡೆಯುವುದು ಬಹಳ ಸುಲಭ. ಗಂಡ ಮತ್ತು ಹೆಂಡತಿಯರಿಬ್ಬರೂ ಪಂಚಾಯಿತಿಯ ಮುಂದೆ ಕುಳಿತು ಸೂಜಿಯಲ್ಲಿ ಪೋಣಿಸಲ್ಪಟ್ಟ ನೂಲನ್ನು ಕೊಯ್ದು ಸೂಜಿಯನ್ನು ಒಡೆದರೆ ಸಾಕು ವಿವಾಹ ರದ್ದು ಸುಲಭವಾಗಿ ಸಿಗುತ್ತದೆ.

ಇವರಲ್ಲಿ ಮರಣಾನಂತರ ವಿಧಿವಿಧಾನಗಳು ಬಹಳ ಸರಳವಾಗಿ ನಡೆಯುತ್ತವೆ. ಆಳವಾದ ಗುಂಡಿ ತೋಡಿ ಇದರಲ್ಲಿ ಹೆಣವನ್ನು ಕೂರಿಸಿ ಹೂಳುತ್ತಾರೆ. ಸತ್ತವನ ಹೆಂಡತಿಯ ತಾಳಿಯ ಹಕ್ಕು ಅವನ ತಮ್ಮನಿಗಿರುತ್ತದೆ.

ಹೆಣವನ್ನು ಚಟ್ಟದಲ್ಲಿ ಕೊಂಡೊಯ್ಯುವಾಗ ಎರಡು ಮೂರು ಜಾಗಗಳಲ್ಲಿ ನೆಲದ ಮೇಲೆ ಇಳಿಸುವುದು, ಮನೆಯಲ್ಲಿ ಹಣವನ್ನಿರಿಸಿದ್ದ ಜಾಗದಲ್ಲಿ ಮಣ್ಣಿನಿಂದ ಒಂದು ಎತ್ತರವಾದ ಕಟ್ಟೆಯನ್ನು ನಿರ್ಮಿಸಿ ಪೂಜಿಸುವುದು, ಆ ಕಟ್ಟೆಯ ಗುರುತುಗಳನ್ನಿಟ್ಟು ಸತ್ತವರು ಸ್ವರ್ಗಕ್ಕೆ ಹೋಗಿದ್ದಾರೆಯೇ ಅಥವಾ ನರಕಕ್ಕೆ ಹೋಗಿದ್ದಾರೆಯೇ ಎಂದು ಗಮನಿಸುವುದು, ಹೆಣವನ್ನು ಹೂತ್ತಿಟ್ಟ ಸ್ಥಳದಲ್ಲಿ ಹಾಲು ಸುರಿಯುವುದು ಮುಂತಾದ ಆಚರಣೆಗಳು ಇವರಲ್ಲಿವೆ.

ಮಂಡಿಗರ ಗಂಡು ಮೀಸೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಮೀಸೆಯಿಲ್ಲದ ಗಂಡನ್ನು ಹೆಣ್ಣಿನ ಶೆಟ್ಟಿ (ಕೈಲಾಗದವನು) ಎನ್ನುವರು. ಜನಿವಾರ ಧರಿಸುವ ಅಭ್ಯಾಸ ಇವರಲ್ಲಿತ್ತು. ಈಗ ವಿವಾಹದ ಸಂದರ್ಭಧಲ್ಲಿ ಮಾತ್ರ ಧರಿಸಲಾಗುತ್ತದೆ. ಇವರಿಗೆ ಭಾಷಾಭಿಮಾನ ಹೆಚ್ಚು ಇದೆ. ಇತ್ತೀಚೆಗೆ ಇವರು ಕುಲಶೇಖರ ಪಟ್ಟಣ (ತೂತ್ತುಕುಡಿ ಜಿಲ್ಲೆ) ಮುತ್ತಾರಮ್ಮನ್ ದೇವಸ್ಥಾನದೊಂದಿಗೆ ಹೆಚ್ಚಿಗೆ ಸಂಪರ್ಕವನ್ನು ಹೊಂದಿದ್ದಾರೆ.

ಇವರಲ್ಲಿ, ಪಂಚಾಯ್ತಿಯಲ್ಲಿ ದಂಡವನ್ನು ಕಟ್ಟುವಿಕೆ, ದಂಡದ ಹಣವು ಸಾರಾಯಿಯಾಗಿ ಪರಿವರ್ತನೆಗೊಂಡು ವಿನಿಯೋಗವಾಗುವುದು ಸಹಜವಾಗಿದೆ. ಇವರ ಪಂಚಾಯ್ತಿಯ ನಡಾವಳಿಯೂ, ಕುಡಿತವೂ ಇವರ ಅಭಿವೃದ್ಧಿಗೆ ಬಾಧಕವಾಗಿವೆ. ಹಣ ಲೇವಾದೇವಿಯ ಸಂಬಂಧವಾಗಿ ದೂರುಗಳು ಹೆಚ್ಚಿಗೆ ಇವರ ಪಂಚಾಯ್ತಿಯಲ್ಲಿ ಬರುವುದಿಲ್ಲ. ತೊಗಲುಗೊಂಬೆಯಾಟದವರು ಮಾಂಸಹಾರಿಗಳು. ಹಸುವಿನ ಮಾಂಸವನ್ನು ತಿನ್ನುವುದಿಲ್ಲ. ಇವರಲ್ಲಿ ಶ್ರಮ ಜೀವಿಗಳುಕಡಿಮೆ. ಗಂಡಸರು ಬಲೂನ್, ಪ್ಲಾಸ್ಟಿಕ್ ವ್ಯಾಪಾರ ಮಾಡುವರು, ಮಹಿಳೆಯರು ಕಡಿಮೆ ಬೆಲೆಯ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವರು. ಕೆಲವರು ಸಂಗೀತ ಕಾರ್ಯಕ್ರಮದಲ್ಲಿ ಹಾಡಿಗೆ ನೃತ್ಯವಾಡಲು ಹೋಗುತ್ತಾರೆ.

ಇತ್ತೀಚೆಗೆ ಇವರನ್ನು ಶೋಷಣೆಗೊಳಗಾದ ಗುಂಪಿನಲ್ಲಿ ಸೇರಿಸಲಾಗಿದೆಯಾದರೂ ಈ ಜಾತಿಯ ಎಲ್ಲರಿಗೂ ಈ ಅವಕಾಶ ದೊರಕಲಿಲ್ಲ ಹೀಗಾಗಿ ಶೋಷಣೆಗೊಳಪ್ಟ ‘ನಾಟ್ಟಾರ್’ ಕಲೆಗಾರರಿಗೆ ಸಿಗುವ ಸೌಲಭ್ಯ ಇವರಿಗೆ ಸಿಗಲಿಲ್ಲ.

ವಿ.ಜಿ. ಅನುವಾದ ಎಂ.ಆರ್.

 

ತೋಲುಬೊಮ್ಮಲಾಟ ಪ್ರದರ್ಶನ ಕಲೆ, ಹಸ್ತಕಲೆ, ತೆಲುಗರ ಜನಪದ ಪ್ರದರ್ಶನ ಕಲೆಗಳಲ್ಲಿ ತೊಗಲು ಗೊಂಬೆಯಾಟ ಪ್ರಮುಖವಾದುದು. ತೊಗಲು ಗೊಂಬೆಯಾಟ ನಮ್ಮ ರಾಜ್ಯದಲ್ಲೇ ಅಲ್ಲ, ಭಾರತ ದೇಶಾದ್ಯಂತ, ಅಷ್ಟೇ ಅಲ್ಲ ಪ್ರಪಂಚದ ಎಲ್ಲ ನಾಗರಿಕತೆಗಳಲ್ಲೂ ಇರುವಂತೆ ಇದುವರೆಗೂ ನಡೆದಿರುವ ಸಂಶೋಧನೆಗಳಿಂದ ತಿಳಿಯುತ್ತದೆ. ವಿಶೇಷವಾಗಿ ಏಷಿಯಾ ದೇಶಗಳಲ್ಲೆಲ್ಲ ಯಾವುದೋ ಒಂದು ರೂಪದಲ್ಲಿ ತೊಗಲುಗೊಂಬೆಯಾಟಗಳು ಇತರೆ ರೀತಿಯ ಬೊಂಬೆಯಾಟಗಳು ಇದ್ದಂತೆ ತಿಳಿದುಬರುತ್ತದೆ. ತೊಗಲು ಗೊಂಬೆಯಾಟಕ್ಕೆ ಭಾರತವೇ ತೌರುಮನೆ ಎಂಬ ವಾದ. ಇತ್ತ ಕೆಲವು ಭಾರತೀಯ ಸಂಶೋಧಕರಲ್ಲೂ ಅತ್ತ ಪಾಶ್ಚಾತ್ಯ ಸಂಶೋಧಕರಲ್ಲೂ ಇದೆ. ಏಷ್ಯಾದ್ಯಂತ ವ್ಯಾಪಿಸಿದ ತೊಗಲುಗೊಂಬೆಯಾಟ ಕಲಾರೂಪದಲ್ಲಿ ಭಾರತೀಯ ಕಥಾವಸ್ತುವಿನ ಮೂಲಕವೇ ಪ್ರದರ್ಶನಗಳು ಇರುವುದನ್ನು ನೋಡಿ ಏಷಿಯಾ ದೇಶಗಳಲ್ಲಿರುವ ಈ ಕಲೆ ಭಾರತ ದೇಶದಿಂದಲೇ ವ್ಯಾಪಿಸಿದೆ ಎಂದು ಹೇಳಲು ಅವಕಾಶವಿದೆ.

ಕಂಬೋಡಿಯ, ಥಾಯ್ಲೆಂಡ್, ಚೀನಾಗಳಲ್ಲಿದ್ದ ಬೊಂಬೆಯಾಟ ಪ್ರದರ್ಶನಗಳಲ್ಲಿ ಇಂದಿಗೂ ರಾಮಾಯಣ ವಸ್ತುವನ್ನುಳ್ಳ ಪ್ರದರ್ಶನಗಳಿವೆ. ತೊಗಲುಗೊಂಬೆಯಾಟದ ಮನುಷ್ಯ ಅತ್ತ ಹಸ್ತಕಲೆಗಳಲ್ಲೂ ಇತ್ತ ಪ್ರದರ್ಶನ ಕಲೆಗಳಲ್ಲೂ ತಾನು ಸಾಧಿಸಿದ ಕಲಾಪ್ರಗತಿಗೆ ಚಿಹ್ನೆಯಾಗಿ ಕಂಡುಬರುತ್ತಾನೆ. ಇದು ಸಂಗೀತ, ಸಾಹಿತ್ಯ, ನಾಟ್ಯ, ಚಿತ್ರಕಲೆ ಎಂಬ ನಾಲ್ಕು ಲಲಿತಕಲೆಗಳನ್ನು ಒಳಗೊಂಡ ಒಂದು ಕಲಾಸಂಗಮವಾಗಿ ಕಂಡುಬರುತ್ತದೆ. ಭಾರತ ದೇಶದಲ್ಲಿಯ ಇದರ ಪ್ರಾಚೀನತೆಯ ವಿಷಯಕ್ಕೆ ಬಂದರೆ ಇದು ತುಂಬಾ ಪ್ರಾಚೀನವಾದ ಕಲೆ ಎಂದು ಹೇಳಲು ಇದುವರೆಗೂ ಸಾಕಷ್ಟು ಚಾರಿತ್ರಿಕ ಆಧಾರಗಳು ದೊರೆತಿವೆ. ಕ್ರಿಸ್ತಪೂರ್ವ ನಾಲ್ಕೈದು ಶತಮಾನಗಳ ಕಾಲಕ್ಕೆ ಭಾರತ ದೇಶದಲ್ಲಿ ತೊಗಲುಗೊಂಬೆಯಾಟ ಇತ್ತು ಎಂದು ಹೇಳಲು ಆಧಾರಗಳು ಸಿಕ್ಕಿದೆ. ಸಂಸ್ಕೃತ ಮಹಾಭಾರತದಲ್ಲಿ ಇನ್ನಿತರ ಸಂಸ್ಕೃತ ಕಾವ್ಯಗಳಲ್ಲಿ ತೊಗಲುಗೊಂಬೆಯಾಟದ ಪ್ರಸ್ತಾಪವಿದೆ. ಮಹಾಭಾರತದಲ್ಲಿ ರೂಪೋಪ ಜೀವನಂ ಎಂಬ ಮಾತು ಇದೆ.ಇದಕ್ಕೆ ವ್ಯಾಖ್ಯಾನ ಮಾಡಿದ ಪಂಡಿತರು ಇದನ್ನು ತೊಗಲುಗೊಂಬೆಯಾಟವೆಂದು ವಿವರಿಸಿದ್ದಾರೆ. ಭಾರತೀಯ ಕಾವ್ಯಶಾಸ್ತ್ರಕ್ಕೆ ತಲೆಯ ಮಾಣಿಕ್ಯವಾದ ವಿವರಿಸಿದ್ದಾರೆ. ಭಾರತೀಯ ಕಾವ್ಯಶಾಸ್ತ್ರಕ್ಕೆ ತಲೆಯ ಮಾಣಿಕ್ಯವಾದ ಭರತನ ನಾಟ್ಯಶಾಸ್ತ್ರದಲ್ಲಿ ‘ಸೂತ್ರಧಾರ’ ಶಬ್ದ ಪ್ರಮುಖವಾದುದು. ಸೂತ್ರಧಾರ ಎಂಬ ಮಾತು ಪ್ರಧಾನವಾಗಿ ಬೊಂಬೆಯಾಟಕ್ಕೆ ಸಲ್ಲುತ್ತದೆ. ವಾಚ್ಯಾರ್ಥದ ಪ್ರಕಾರ ಸೂತ್ರವನ್ನು ಹಿಡಿದುಕೊಂಡು ಬೊಂಬೆಯನ್ನು ಆಡಿಸುವವನು ಎಂದು ಇದರ ಅರ್ಥ. ಅನಂತರ ಇದು ರೂಪಕಾಲಂಕಾರ ವ್ಯಕ್ತೀಕರಣದಲ್ಲಿ ಸೂತ್ರಧಾರ ಎಂದರೆ ಅನೇಕ ಅರ್ಥಗಳು ಬರುವಂತೆ ಇದರ ವ್ಯಾಪ್ತಿ ಬೆಳೆದಿದೆ. ನಾಟಕಗಳಲ್ಲಿ ಯಕ್ಷಗಾನಗಳಲ್ಲಿ ಸೂತ್ರಗಳೆಲ್ಲವನ್ನು ರಂಗಪ್ರವೇಶ ಮಾಡಿಸಿ ಆ ಪಾತ್ರಗಳನ್ನು ಕುರಿತು ವಿವರಿಸಿ ಅವುಗಳ ಪ್ರವೇಶವನ್ನು ನಿಷ್ಕ್ರಮಣವನ್ನು ಕುರಿತು ವಿವರಣೆ ನೀಡುವ ಪಾತ್ರಕ್ಕೆ ಸೂತ್ರಧಾರ ಎಂದು ಹೇಳುವುದು ಅಭ್ಯಾಸವಾಗಿದೆ. ಭರತನ ನಾಟ್ಯಶಾಸ್ತ್ರ ಎರಡು ಸಾವಿರ ವರ್ಷಗಳ ಹಿಂದಿನದೆಂದು ಇತಿಹಾಸ ತಜ್ಞರು ಹೇಳಿದ್ದಾರೆ. ನಾಟ್ಯಶಾಸ್ತ್ರದಲ್ಲಿಯ ವರ್ಣನೆಗಳನ್ನು ಗಮನಿಸಿ ವಿವಿಧ ನಾಟಕ ರೂಪಗಳು ಅವನಿಗಿಂತ ತುಂಬಾ ಹಿಂದೆಯೇ ಪ್ರಚಲಿತದಲ್ಲಿದ್ದವೆಂದು ತಿಳಿಯುತ್ತದೆ. ಸೂತ್ರಧಾರ ಶಬ್ದ ವಾಚ್ಯರ್ಥದಿಂದ ಲಕ್ಷ್ಯಾರ್ಥಕ್‌ಎಕ ಪರಿವರ್ತನೆಯಾಗವುದಕ್ಕೆ ತುಂಬ ಸಮಯ ತೆಗೆದುಕೊಂಡ ಕಾರಣದಿಂದ ಭರತನಿಗಿಂತ ಬಹಳ ಹಿಂದಿನ ಕಾಲದಿಂದಲೇ ಬೊಂಬೆಯಾಟ ಇತ್ತೆಂದು ಹೇಳಲು ಅವಕಾಶವಿದೆ.

ದಕ್ಷಿಣ ಭಾರತದಲ್ಲಿ ಗೊಂಬೆಯಾಟ ಇತ್ತೆಂದು ಹೇಳಲು ಅವಕಾಶವಿದೆ. ದಕ್ಷಿಣ ಭಾರತದಲ್ಲಿ ತಮಿಳಿನ ಅತ್ಯಂತ ಪ್ರಾಚೀನವಾದ ಕಾವ್ಯ ಶಿಲಪ್ಪದಿಗಾಳಿರಂನಲ್ಲಿಯೇ ತೊಗಲುಗೊಂಬೆಯಾಟದ ಪ್ರಸ್ತಾಪವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದಿನದೆಂದು ಹೇಳಬಹುದು. ಎಲ್ಲ ದ್ರಾವಿಡ ಭಾಷಾ ಪ್ರಾಂತ್ಯಗಳಲ್ಲೂ ತೊಗಲುಗೊಂಬೆಯಾಟದ ಕಲೆ ಇದೆ. ಆದ್ದರಿಂದ ಅವುಗಳಿಗೆ ಸಂಬಂಧಿಸಿದ ವಿಫುಲವಾದ ವಿಭಾಗಗಳನ್ನು ಈ ಗ್ರಂಥದಲ್ಲೇ ನೋಡಬಹುದು. ತೆಲುಗಿನಲ್ಲೂ ಬೊಂಬೆಯಾಟದ ಪ್ರಸ್ತಾಪ ತುಂಬ ಪ್ರಾಚೀನಕಾಲದಿಂದಲೆ ನಮಗೆ ಕಾಣಿಸುತ್ತದೆ. ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ್ರೆಯಲ್ಲಿ “ಭಾರತಾದಿ ಕಥಲ ಜೀರಮರುಗುಲನಾರುಗ ಬೊಮ್ಮಲನಾಡಿಂಚುವಾದು ಗಡುನದ್ಭುತಂಬುಗ ಗಂಬ ಸೂತ್ರಂಬುಲಡರಂಗ ಬೊಮ್ಮಲನಾಡಿಂಚುವಾಡು” ಎಂದು ಇರುವುದನ್ನು ಲಕ್ಷಿಸಿ ಆ ಕಾಲಕ್ಕೆ ತೊಗಲುಗೊಂಬೆಯಾಟ, ಕೀಲುಗೊಂಬೆಯಾಟ ತೆಲುಗಿನಾಡಿನಲ್ಲಿ ಇದ್ದುವೆಂದು ಹೇಳಲು ಅವಕಾಶವಿದೆ. ತೆಲುಗಿನಲ್ಲಿರುವ ಇತರ ಕಾವ್ಯಾಧಾರಗಳು, ಶಾಸನಾಧಾರಗಳು ತೊಗಲುಗೊಂಬೆಗಳು ಕನಿಷ್ಠ ೭ನೆಯ ಶತಮಾನದಿಂದ ಇವೆಯೆಂದು ಹೇಳಲು ಆಧಾರಗಳಿವೆ. ತೊಗಲುಗೊಂಬೆಯಾಟ, ಕೀಲುಗೊಂಬೆಯಾಟಕ್ಕೆ ಸಂಬಂಧಿಸಿದ ಚರಿತ್ರೆಯನ್ನು ಹೇಳಲು ಇತರ ಕಾವ್ಯಾಧಾರಗಳು ಹೇರಳವಾಗಿ ಸಿಗುತ್ತವೆ.

ಪ್ರಸ್ತುತ ಕಾಲಕ್ಕೆ ಬಂದರೆ ತೊಗಲುಗೊಂಬೆಯ ಕಲಾವಿದರು ಆಂಧ್ರಪ್ರದೇಶದಲ್ಲಿ ಅನೇಕ ಕಡೆ ಕಾಣಿಸುತ್ತಿದ್ದಾರೆ. ಈಗಿರುವ ತೊಗಲುಗೊಂಬೆಯ ಕಲಾವಿದರು ಅರೆಮರಾಠಿ ಎಂಬ ಪಂಗಡಕ್ಕೆ ಸೇರಿದವರು. ಇವರ ಮಾತೃಭಾಷೆ ಮರಾಠಿ. ಕೆಲವು ನೂರು ವರ್ಷಗಳ ಹಿಂದೆ ಅವರ ಪೂರ್ವಿಕರು ಇಲ್ಲಿಗೆ ಬಂದಂತೆ ಅವರು ತಿಳಿಸುತ್ತಾರೆ. ಹಿರಿಯ ತಲೆಮಾರಿನವರು ಸ್ಮರಿಸಿಕೊಳ್ಳುವಂತೆ ಈಗ ೪೦-೫೦ ವರ್ಷಗಳ ಹಿಂದಿನ ವಾತಾವರಣ ಕಾಣಿಸುತ್ತದೆ. ತೊಗಲುಗೊಂಬೆಯಾಟದ ಮೂರುನಾಲ್ಕು ಕುಟುಂಬದವರು ಒಟ್ಟಿಗೆ ಎರಡು ಮೂರು ಎತ್ತಿನ ಗಾಡಿನಲ್ಲಿ ಬಿದಿರು ದಬ್ಬೆಗಳಿಂದ ಮಾಡಿದ ದೊಡ್ಡ ದೊಡ್ಡ ಬೊಂಬೆಗಳ ಪೆಟ್ಟಿಗೆಗಳು ತೆರೆಯನ್ನು ನೆಡಲು ಬೇಕಾದ ಗಳುಗಳು, ಸಂಗೀತವಾದ್ಯಗಳು, ಅವರ ನಿತ್ಯಜೀವನಕ್ಕೆ ಅವಶ್ಯಕವಾದ ಸಾಮಾನುಗಳನ್ನು ತೆಗೆದುಕೊಂಡು ಮಕ್ಕಳು ಮರಿಗಳು ಒಟ್ಟಿಗೆ ವಲಸೆ ಪ್ರಯಾಣ ಮಾಡುತ್ತಾ ಗ್ರಾಮ ಗ್ರಾಮಗಳಲ್ಲಿ ನಿಂತು ತೊಗಲುಗೊಂಬೆಯಾಟದ ಪ್ರದರ್ಶನಗಳನ್ನು ಮಾಡಿದ ಘಟನೆಗಳು ಇನ್ನೂ ಕಣ್ಮುಂದೆ ಬರುತ್ತವೆ. ತೆಲುಗು ಮೂಲದ ತೊಗಲುಗೊಂಬೆಯಾಟ ತುಂಬ ಜನಪ್ರಿಯವಾಗಿ ಜನರಂಜನೆಯಿಂದ ವ್ಯಾಪ್ತಿಯನ್ನು ಪಡೆದ ಕಲೆ ಎಂದು ಹೇಳಬಹುದು. ‘ತೊಂಬೈಆಮಡ ಪೋಯಿ ಅಯಿನಾ ತೋಲುಬೊಮ್ಮಲಾಟ ಚೂಡಾಲಿ’ (ತೊಂಬತ್ತು ಮೈಲಿ ಹೋಗಿಯಾದರೂ ತೊಗಲುಗೊಂಬೆಯಾಟ ನೋಡಬೇಕು) ಎಂಬ ಗಾದೆ ಇದಕ್ಕೆ ಇರುವ ಪ್ರಚಾರವನ್ನು ತಿಳಸುತ್ತದೆ. ಸುಮಾರು ಹತ್ತು ಅಡಿಗಳ ಅಂತರದಲ್ಲಿ ಎರಡು ಬಿದಿರುಗಳನ್ನು ನೆಟ್ಟು ಅದಕ್ಕೆ ಬಿಳಿಯ ಪಂಚೆಯನ್ನು ಸುತ್ತಿ ಅದರ ಹಿಂದೆ ದೀಪಗಳಿಟ್ಟು ಬೆಳಕು ಮಾಡುತ್ತಾರೆ. ತೆರೆಯ ಹಿಂದೆ ಇದ್ದು ತೆರೆಗೆ ತೊಗಲುಬೊಂಬೆಯನ್ನು ಹತ್ತಿಸಿ ಅದನ್ನು ಕಡ್ಡಿಗಳಿಂದ ಅಲುಗಾಡಿಸಿ ನಾಟ್ಯ ಮಾಡಿಸುತ್ತಾ ಕಥೆಗಳನ್ನು ಅವರು ಹಾಡುತ್ತಾ ಪ್ರದರ್ಶಿಸುತ್ತಾರೆ. ಇವರ ಹಾಡಿಗೆ ತಕ್ಕಂತೆ ಹಾರ‍್ಮೋನಿಯಂ ಶ್ರುತಿ ಇರುತ್ತದೆ. ಲಯಕ್ಕೆ ಮದ್ದಲೆ ಮತ್ತು ತಾಳಗಳಿರುತ್ತವೆ. ಸ್ತರೀಯರು ಸ್ತರೀಪಾತ್ರಗಳಿಗೆ ಪುರುಷರು ಪುರುಷ ಪಾತ್ರಗಳಿಗೆ ಧ್ವನಿ ನೀಡುತ್ತಾರೆ. ಪ್ರಧಾನವಾಗಿ ರಾಮಾಯಣ, ಭಾರತದ ಘಟನೆಗಳನ್ನು ಪ್ರದರ್ಶಿಸುತ್ತಾರೆ. ರಾಮಾಯಣದಲ್ಲಿಯ ಸುಂದರಕಾಂಡ ಇವರಿಗೆ ಮತ್ತಷ್ಟು ಪ್ರಿಯವಾದ ಕಥೆ. ಈಗಲೂ ತೆಲುಗು ಮೂಲದ ತೊಗಲುಗೊಂಬೆಯಾಟದವರು ಈ ಕಥೆಗಳನ್ನೇ ಯಕ್ಷಗಾನ ರೂಪದಲ್ಲಿ ಪ್ರದರ್ಶಿಸುತ್ತಾರೆ. ಆಧುನಿಕ ಕಥಾವಸ್ತುಗಳನ್ನು ಗ್ರಹಿಸುವ ಕೆಲಸ ಇನ್ನೂ ಆಗಿಲ್ಲ. ಕಥೆಗಾರರಿಗೆ ಹೆಣ್ಣಾಗಲಿ ಗಂಡಾಗಲಿ ಸಂಗೀತದೊಂದಿಗೆ ಹಾಡು ಮತ್ತು ನಾಟ್ಯವೂ ತಿಳಿದಿರಬೇಕು. ಗೊಂಬೆಯವರು ಆಡಿಸುವ ಗತಿಯಲ್ಲಿ ನಾಟ್ಯದ ರೀತಿ ಸ್ಪಷ್ಟವಾಗಿ ನಮಗೆ ಕಾಣಿಸುತ್ತದೆ. ಈ ಪದ್ಧತಿಗಳನ್ನು ಬಾಲ್ಯದಿಂದಲೇ ಅವರು ಕಲಿಯುತ್ತಾರೆ.

08_70A_DBJK-KUH

ಸಂಗೀತ ವಾದ್ಯಗಳ ಜೊತೆಗೆ ಕಥೆಗಾರನ ಕಾಲಕೆಳಗೆ ತುಳಿಯುವ ಚೆಕ್ಕ ಎಂಬ ಚಿಕ್ಕಹಲಗೆ ಇರುತ್ತದೆ. ಕಾಲಿನಿಂದ ಇದನ್ನು ತುಳಿದಾಗ ಶಬ್ದ ಬರುತ್ತದೆ. ಈ ಶಬ್ದವನ್ನು ಸಹ ಸಂಗೀತದ ಒಂದು ಭಾಗವಾಗಿ ಉಪಯೋಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ವಿವಿಧ ರೀತಿ ಯುದ್ಧ ಶಬ್ದಗಳನ್ನು ಇನ್ನಿತರ ಶಬ್ದಗಳನ್ನು ಉಂಟು ಮಾಡಲು ಉಪಯೋಗಿಸುತ್ತಾರೆ. ಈ ಪದ್ಧತಿಗಳೆಲ್ಲ ಹಿಂದಿನ ಕಾಲದಿಂದಲೇ ಬಳಕೆಯಲ್ಲಿವೆ. ತೊಗಲುಗೊಂಬೆಯ ಕಲಾಪ್ರದರ್ಶನದಲ್ಲಿ ಕಾಲಕಾಲಕ್ಕೆ ಸಾಕಷ್ಟು ಬದಲಾವಣೆಗಳಾಗಿವೆ. ತೆರೆಯ ಹಿಂದಿನ ವಿಷಯಕ್ಕೆ ಬಂದರೆ ಪಂಜುಗಳು ಮತ್ತು ಹರಳೆಣ್ಣೆ, ದೀಪಗಳ ಸ್ಥಾನದಲ್ಲಿ ಪೆಟ್ರೋಮ್ಯಾಕ್ಸ್ ದೀಪಗಳು ಬಂದವು. ಅನಂತರ ವಿದ್ಯುತ್ ದೀಪಗಳು ಬಂದವು. ಕಟ್ಟುವ ಪರದೆಯಲ್ಲೂ ಆಧುನಿಕತೆ ವಿದ್ಯುತ್ ದೀಪಗಳು ಬಂದವು. ಕಟ್ಟುವ ಪರದೆಯಲ್ಲೂ ಆಧುನಿಕತೆ ಬಂದಿದೆ. ಗಳುಗಳ ಬದಲು ಸ್ಥಿರವಾಗಿರಬಲ್ಲ ಸ್ಟ್ಯಾಂಡುಗಳನ್ನು ಬಳಸುತ್ತಿದ್ದಾರೆ. ವಾದ್ಯಗಳಲ್ಲಿ ಬದಲಾವಣೆಯಾಗಿಲ್ಲ, ಹಳೇಕಾಲದಿಂದ ಉಪಯೋಗಿಸುತ್ತಿದ್ದ ಪಠ್ಯಗಳು ರೂಪದಲ್ಲೇ ಇವೆ. ಅವರ ರಾಮಾಯಣ ಕಥಾಪ್ರದರ್ಶನಕ್ಕೆ ಇಂದಿಗೂ ರಂಗನಾಥ ರಾಮಾಯಣವೇ ಪಠ್ಯಾಧಾರವಾಗಿದೆ. ಆದರೆ ಪ್ರದರ್ಶನಗಳಲ್ಲಿ ಹಾಡನ್ನು ಹೊರತು ವಚನಮಾತ್ರ ಅಲ್ಲಲ್ಲಿ ಬದಲಾಗುತ್ತಿರುತ್ತದೆ. ಇದೇ ಈ ಕಲೆಯನ್ನು ಜನಪದ ಕಲೆಯನ್ನಾಗಿ ಮಾಡುತ್ತದೆ. ಪ್ರದರ್ಶನಕ್ಕೆ ಅವಶ್ಯಕವಾದ ವಸ್ತುಗಳೆಲ್ಲವನ್ನು ಅದರಲ್ಲೂ ಮುಖ್ಯವಾಗಿ ಗೊಂಬೆಗಳನ್ನು ಇಂದಿಗೂ ಅವರೇ ತಯಾರಿಸುತ್ತಿದ್ದಾರೆ. ತೊಗಲಿನಿಂದ ಗೊಂಬೆಗಳನ್ನು ತಯಾರು ಮಾಡುವುದು ಒಂದುಪ್ರತ್ಯೇಕವಾದ ಕಲೆ. ಈ ಗೊಂಬೆಗಳನ್ನು ತಯಾರಿಸಲು ಮೇಕೆ ತೊಗಲನ್ನು ಉಪಯೋಗಿಸುತ್ತಾರೆ. ರಾಮಾದಿದೇವತೆಗಳ ಪಾತ್ರಗಳ ಗೊಂಬೆಗಳನ್ನು ಮಾಡಲು ಜಿಂಕೆಯ ಚರ್ಮವನ್ನು ಉಪಯೋಗಿಸುತ್ತಿದ್ದರೆಂದೂ ಈಗ ಜಿಂಕೆಯ ಚರ್ಮ ಲಭಿಸುವುದಿಲ್ಲವೆಂದು ಕಾಕಿನಾಡದ ಹತ್ತಿರವಿರುವ ಮಾಧವ ಪಟ್ಟಣದ ಕಲೆಗಾರರು ಹೇಳಿದರು. ಮೇಕಚರ್ಮವನ್ನು ಉಗುರುಬೆಚ್ಚನೆಯ ನೀರಿನಲ್ಲಿ ನೆನೆಹಾಕುತ್ತಾರೆ. ಚರ್ಮ ನೆನೆದ ಮೇಲೆ ಅದರ ಮೇಲಿದ್ದ ತುಪ್ಪಟವನ್ನೆಲ್ಲಾ ಚಾಕುವಿನಿಂದ ಕೆರೆದು ಶುದ್ದ ಮಾಡುತ್ತಾರೆ. ಚರ್ಮ ಸಮವಾಗಿ ಬೆಳ್ಳಗೆ ಕಾಗದದ ಹಾಗೆ ಪಾರದರ್ಶಕದಂತೆ ಕಾಣಿಸುತ್ತದೆ. ಮಾಮೂಲಿನಂತೆ ತೆಲಗು ಮೂಲದವರು ಪ್ರದರ್ಶಿಸುವ ತೊಗಲುಬೊಂಬೆಗಳು ಮೂರು ಅಡಿಗಳಿಂದ ಆರು ಅಡಿಗಳವರೆಗೆ ಎತ್ತರವಾಗಿರುತ್ತವೆ.

ದೊಡ್ಡ ಗೊಂಬೆ ತಯಾರಿಸಲು ಮೂರು ಮೇಕೆಗಳ ತೊಗಲು ಬೇಕಾಗುತ್ತದೆ. ಚಿಕ್ಕ ಚಿಕ್ಕ ಗೊಂಬೆಗಳಿಗೆ ಒಂದು ತೊಗಲು ಸಾಕು. ಹೀಗೆ ತಯಾರಿಸಿದ ತೊಗಲಿನ ಮೇಲೆ ಗೆರೆಗಳಿದ ಗೊಂಬೆಯನ್ನು ಚಿತ್ರಿಸಿಕೊಂಡ ಮೇಲೆ ಉಳಿಯಂಥ ಪರಿಕರದಿಂದ ಇವುಗಳನ್ನು ಕತ್ತರಿಸುತ್ತಾರೆ. ಗೊಂಬೆಗಳ ಮಧ್ಯೆ ತರಹಾವರಿ ಆಕಾರಗಳಲ್ಲಿ ರಂಧ್ರಗಳಿರುತ್ತವೆ. ಈ ರಂಧ್ರಗಳ ಸುತ್ತ ಬಣ್ಣಗಳನ್ನು ತುಂಬುತ್ತಾರೆ. ವಿವಿಧ ಆಭರಣಗಳನ್ನು ಗೊಂಬೆಯ ಮೇಲೆ ಚಿತ್ರಿಸುತ್ತಾರೆ. ಇವು ಬೆಳಕಿನ ತೆರೆಯ ಹಿಂದೆಯಿಂದ ಕಾಣಿಸಿಕೊಂಡಾಗ ಅತ್ಯಂತ ಬೆಲೆಬಾಳುವ ಆಭರಣಗಳ ಹಾಗೆ ಕಾಣಿಸುತ್ತದೆ. ವಸ್ತ್ರಗಳಿಗೆ ಶರೀರಾಕೃತಿ ತೋರಿಸಲು ವಿವಿಧ ಬಣ್ಣಗಳನ್ನು ತುಂಬುವರು. ಈ ಬಣ್ಣಗಳು ಅವರಿಗೆ ಈಗ ಮಾರುಕಟ್ಟೆಗಳಲ್ಲಿ ದೊರೆಯುತ್ತಿವೆ. ಹಿಂದಿನ ಕಾಲದಲ್ಲಿ ಬಣ್ಣಗಳನ್ನು ಸಹ ಅವರೇ ತಯಾರಿಸಿಕೊಳ್ಳುತ್ತಿದ್ದರು. ಹಿಂದಿನ ಕಾಲದ ಗೊಂಬೆಗಳಲ್ಲಿಎರಡೋ ಮೂರೋ ಬಣ್ಣಗಳು ಕಾಣಿಸುವುವು. ಆದರೆ ಈಗ ಮಾಡುತ್ತಿರುವ ಗೊಂಬೆಗಳಲ್ಲಿ ತುಂಬಾ ಬಣ್ಣಗಳು ಕಾಣಿಸುತ್ತಿವೆ. ಬಟ್ಟೆಯಲ್ಲಿ ಹತ್ತಿಯನ್ನು ಉಂಡೆಯಂತೆ ಕಟ್ಟಿ ಅದರಿಂದ ಬಣ್ಣಗಳನ್ನು ಹಚ್ಚುವ ಪದ್ಧತಿ ತುಂಬಾ ಕೌಶಲ್ಯದಿಂದ ಕೂಡಿರುತ್ತದೆ. ಗೊಂಬೆಗಳ ತಯಾರಿಕೆಯೇ ಒಂದು ಪ್ರತ್ಯೇಕವಾದ ಕಲೆ ಎಂದು ಹೇಳಬಹುದು. ಒಂದು ಗೊಂಬೆಯ ಮಧ್ಯದಲ್ಲಿಯ ಮುಂಡದ ಭಾಗ ಒಂದು ಕೈಯನ್ನು ಮೂರು ಭಾಗಗಳು ಕಾಲು ಮೂರು ಭಾಗಗಳ ತಲೆ ಒಂದು ಭಾಗವಾಗಿ ಕೀಲು ಕೂಡಿಸಿ ಮಾಡುವರು. ಗೊಂಬೆಯ ಕೈ ಭಾಗ ಕಾಲಿನ ಭಾಗ, ತಲೆಯ ಭಾಗದಲ್ಲೂ ಪೂರ್ತ ಅಲುಗಾಡಲು ಈ ರೀತಿಯ ತಯಾರಿಕೆಯಿಂದ ಸಾಧ್ಯವಾಗುತ್ತದೆ. ಆ ಗೊಂಬೆಗಳ ತಯಾರಿಕೆಯಲ್ಲಿ ಕಲೆಗಾರರು ಅಲ್ಲಿಂದ ಇಲ್ಲಿಯವರೆಗೆ ತುಂಬಾ ಉನ್ನತವಾದ ಕಲಾಪ್ರತಿಭೆಯನ್ನು ಕಂಡುಕೊಳ್ಳುತ್ತಿದ್ದಾರೆ. ಯಾವ ಗೊಂಬೆಗೆ ಯಾವ ಬಣ್ಣ ತುಂಬಿಸಬೇಕು ಎಂಬುದರಲ್ಲಿಯೂ ಇವರಿಗೆ ಕೆಲವು ಸಂಪ್ರದಾಯಗಳಿವೆ. ಪ್ರಧಾನ ಪಾತ್ರಗಳಿಗೆ ಸಂಬಂಧಿಸಿದ ಗೊಂಬೆಗಳನ್ನು ಆಗಾಗ ಪರಿಶೀಲಿಸುತ್ತಾ ಅವುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತಾರೆ. ತಲೆಯ ಮೇಲೆ ವಿವಿಧ ಬಣ್ಣಗಳಲ್ಲಿ ಕಂಗೊಳಿಸುವ ಗೊಂಬೆಗಳು ನಡೆದಾಡುತ್ತಾ ಅಲುಗಾಡುತ್ತಾ ಕಾಲುಗಳನ್ನು ಕುಣಿಸುತ್ತಾ, ನಾಟ್ಯವಾಡುತ್ತಾ ಆಡುತ್ತಿದ್ದರೆ ಹಿಂದೆಯಿಂದ ಮಾತುಗಳು ಕೇಳಿಸುವ ರೀತಿ ಪ್ರೇಕ್ಷಕರಿಗೆ ಮನೋಹರವಾಗಿರುತ್ತದೆ.

ತೆರೆಯ ಮೇಲೆ ಗೊಂಬೆಯನ್ನು ಇರಿಸಿ ಅದನ್ನು ಲಯಬದ್ಧವಾಗಿ ಅಗತ್ಯಕ್ಕೆ ಅನುಗುಣವಾಗಿ ಅಲುಗಾಡಿಸಿದಾಗ ಗೊಂಬೆ ಸಜೀವವಾಗಿ ನಡೆಯುತ್ತಿದೆ ಎಂಬ ಭ್ರಮೆಯನ್ನು ಪ್ರೇಕ್ಷಕರಿಗೆ ಉಂಟು ಮಾಡುವುದು ಈ ಕಲೆಗಾರರಲ್ಲಿರುವ ಅಪರೂಪವಾದ ಕಲೆ. ಈ ದೃಷ್ಟಿಯಿಂದ ಇದೊಂದು ಪ್ರತ್ಯೇಕ ಅಧ್ಯಯನ ಯೋಗ್ಯವಾದ ಕಲೆಯಾಗುತ್ತದೆ. ಎರಡು ಪಾತ್ರಗಳು ಎದುರು ಬದುರು ನಿಂತು ಹೆಚ್ಚಿನ ಸಮಯ ಮಾತನಾಡಬೇಕಾದಾಗ ಗೊಂಬೆಗಳನ್ನು ಗೊಬ್ಬಳಿ ಮುಳ್ಳಿನಿಂದ ಚುಚ್ಚಿ ತೆರೆಯ ಮೇಲೆ ನಿಲ್ಲಿಸುವರು. ಆದರೆ ಕೈ ಮತ್ತು ತಲೆ ಅಲುಗಾಡದಂತೆ ಇರುವ ಹಾಗೆ ಹಿಡಿದುಕೊಳ್ಳುತ್ತಾರೆ. ಇನ್ನು ನಾಟ್ಯ ಮಾಡಬೇಕಾದ ಗೊಂಬೆಗಳು ಸುತ್ತಿ ಸುತ್ತಿ ಮಾತಾಡಬೇಕಾದಾಗ ಪೂರ್ತಿ ಕೈಯಿಂದಲೇ ಸ್ವೇಚ್ಛೆಯಿಂದ ಸುತ್ತಿಸುತ್ತಾರೆ. ಹೀಗೆ ಗೊಂಬೆಗಳನ್ನು ಆಡಿಸುವುದನ್ನು ಗುರುವಿನ ಬಳಿ ಪ್ರತ್ಯೇಕವಾಗಿ ಕಲಿಯಬೇಕೆಂದು ಅವರು ತಿಳಿಸುತ್ತಾರೆ. ಅವರ ಮಕ್ಕಳು ಬಾಲ್ಯದಿಂದಲೇ ಅವರ ಬಳಿ ಈ ಕಲೆಯನ್ನು ಕಲಿತುಕೊಳ್ಳುತ್ತಾರೆ. ಹೀಗೆ ಸಂಗೀತ, ಗಾನ, ಆಟ, ಮಾತು, ಗೊಂಬೆಗಳ ತಯಾರಿ ಇಷ್ಟು ಕಲೆಗಳನ್ನು ಬೆರೆಸಿರುವ ಸಂಗಮಸ್ಥಾನವಾಗಿ ಈ ತೊಗಲುಗೊಂಬೆಯಾಟ ಕಾಣಿಸುತ್ತದೆ. ಈ ಎಲ್ಲ ಕಲೆಗಳನ್ನು ಅರೆದು ಕುಡಿದವರು ತೊಗಲುಗೊಂಬೆಯವರು. ಆದ್ದರಿಂದಲೇ ಈ ಕಲೆಯಲ್ಲಿಯ ಆಕರ್ಷಣಾ ಶಕ್ತಿ ನಶಿಸಿ ಹೋಗಿಲ್ಲ. ನಾಲ್ಕೈದು ಶತಮಾನಗಳ ಹಿಂದಿನವರೆಗೂ ಕನಿಷ್ಠ ೨೫-೩೦ವರ್ಷಗಲ ಹಿಂದೆಯೂ ಈ ಕಲೆಯ ಮೂಲಕ ಕಲೆಗಾರರಿಗೆ ಜೀವನೋಪಾಯ ಚೆನ್ನಾಗಿಯೇ ನಡೆಯುತ್ತಿತ್ತು. ಪ್ರಸ್ತುತ ತೊಗಲುಗೊಂಬೆ ಕಲೆಗಾರರ ವೃಂದಗಳು ನಾಲ್ಕೈದಕ್ಕಿಂತ ಹೆಚ್ಚಿಲ್ಲ. ಕಾಕಿನಾಡ ಪಟ್ಟಣದಲ್ಲಿ ಒಂದು ವೃಂದ ಅದಕ್ಕೆ ಹತ್ತಿರದ ಮಾಧವ ಪಟ್ಟಣದಲ್ಲಿ ಅಲ್ಲೇ ಇರುವ ಜಮುನ ಕಾಲೋನಿಯಲ್ಲಿ ಎರಡು ವೃಂದ, ಅನಂತಪುರ ಜಿಲ್ಲೆಯ ನಿಮ್ಮ ಲಕುಂಟದಲ್ಲಿ ಒಂದು ವೃಂದ, ನೆಲ್ಲೂರು ಜಿಲ್ಲೆಯಲ್ಲಿ ಒಂದು ವೃಂದದವರಿದ್ದಾರೆ.

ನಿಮ್ಮ ಲಕುಂಟದಲ್ಲಿ ಮತ್ತು ಮಾಧವಪಟ್ಟದಲ್ಲಿ ಇವರಿಗೆ ಸರ್ಕಾರದಿಂದ ಕಾಲೋನಿ ಕಟ್ಟಿಸಿ ಪ್ರೋತ್ಸಾಹಿಸಿದ್ದಾರೆ. ಈ ಕಲೆಗಾರರು ಪ್ರಸ್ತುತ ಕೆಲವು ಸಹಕಾರ ಸಂಘಗಳನ್ನು ಮಾಡಿಕೊಂಡಿದ್ದಾರೆ. ಹೀಗೆ ವಿವಿಧ ಸರ್ಕಾರಿ ಯೋಜನೆಗಳ ಮೂಲಕ ಸಹ ಉಪಯೋಗಗಳನ್ನು ಪಡೆಯುತ್ತಿದ್ದಾರೆ. ಆಧುನಿಕ ಕಾಲದಲ್ಲಿ ಮಿಕ್ಕೆಲ್ಲ ಜಾನಪದ ಕಲೆಗಳಿಗೆ ಆಸಕ್ತಿ ಕುಂದಿದಂತೆ ಬದಲಾವಣೆ ಕಂಡಂತೆ, ತೊಗಲುಗೊಂಬೆ ಕಲೆಗೂ ಪ್ರೇಕ್ಷಕರ ಬರ ಬಂದಿದೆ. ಈ ಪ್ರದರ್ಶನ ಸಂಪ್ರದಾಯಗಳಲ್ಲಿ ಅನೇಕ ಬದಲಾವಣೆಗಳು ಬಂದಿವೆ. ಒಂದು ಗ್ರಾಮಕ್ಕೆ ಹೋಗಿ ಅಲ್ಲಿ ನಾಲ್ಕೈದು ದಿನಗಳ ಕಾಲವಿದ್ದು, ನಾಲ್ಕೈದು ರಾತ್ರಿಗಳು ಸುದೀರ್ಘವಾಗಿ ರಾಮಾಯಣ ಕಥೆಯನ್ನೋ ಮಹಾಭಾರತದ ಕಥೆಯನ್ನೇ ಪ್ರದರ್ಶಿಸುವಂಥ ಘಟನೆಗಳು ನಡೆಯುತ್ತಿಲ್ಲ. ಕನಿಷ್ಠ ಒಂದು ರಾತ್ರಿ ಪೂರ ಗೊಂಬೆಯಾಟ ಆಡಿಸಲು ಯಾವ ಗ್ರಾಮದವರೂ ಕರೆಯುವ ಪರಿಸ್ಥಿತಿ ಪ್ರಸ್ತುತ ಇಲ್ಲ. ಇವರಿಗೆ ಮೇರೆಯಿಂದ ಬರುವ ಗ್ರಾಮಗಳಾಗಲಿ ಮಿರಾಸಿ ಕುಟುಂಬಗಳಾಗಲಿ ಪ್ರತ್ಯೇಕವಾಗಿ ಇಲ್ಲ. ಇಂತಹ ವ್ಯವಸ್ಥೆ ಕೆಲವು ಜಾನಪದ ಕಲೆಗಳಿಗೆ ಇದೆ. ಸದ್ಯಕ್ಕೆ ಗ್ರಾಮಗಳವರು ಪ್ರತ್ಯೇಕವಾಗಿ ಕರೆದು ಆಟ ಆಡಿಸುವುದು ಎಂಬ ವಿಷಯ ಸಂಪೂರ್ಣವಾಗಿ ಅಂತ್ಯಗೊಂಡಿದೆ ಎಂದು ಹೇಳಬಹುದು. ಇವರು ಸಹ ಬಂಡಿಗಳನ್ನು ಕಟ್ಟಿಕೊಂಡು ಗ್ರಾಮಗಳಿಗೆ ಪ್ರಯಾಣ ಮಾಡುವುದು ಎಂಬುದು ಪೂರ್ತಿಯಾಗಿ ನಿಂತು ಹೋಗಿದೆ. ಆದರೆ ಪ್ರದರ್ಶನಗಳು ಪೂರ್ಣವಾಗಿ ಮಾಯವಾಗಿವೆ ಎಂದು ಹೇಳಲು ಬರುವುದಿಲ್ಲ. ಸರ್ಕಾರದವರು ನಿರ್ವಹಿಸುವ ಕಾರ್ಯಕ್ರಮಗಳಲ್ಲಿ ಆಹ್ವಾನಗಳಲ್ಲಿ ಇತರ ಸರ್ಕಾರಿ ಸಂಸ್ಥೆಗಳಲ್ಲಿ, ವಿದ್ಯಾಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಮಾತ್ರವೇ ಇವರ ಪ್ರದರ್ಶನಗಳು ಕಾಣಸಿಗುತ್ತವೆ. ಈ ಪ್ರದರ್ಶನಗಳಲ್ಲಿ ಇವರ ಕಾರ್ಯಕ್ರಮಕ್ಕೆ ಹತ್ತು ನಿಮಷ ಅಥವಾ ಅರ್ಧ ಗಂಟೆ, ಹೆಚ್ಚೆಂದರೆ ಒಂದು ಗಂಟೆ ಕಾಲಾವಕಾಶ ಸಿಗುತ್ತದೆ.

ಹೀಗೆ ಸುದೀರ್ಘವಾದ ಪ್ರದರ್ಶನ ಸಂಪ್ರದಾಯಗಳ ಸ್ಥಾಣದಲ್ಲಿ ಇಂಥ ಸಣ್ಣ ಕಾರ್ಯಕ್ರಮಗಳ ಮೂಲಕ ಇವರ ಪ್ರದರ್ಶನಗಳಲ್ಲಿ ಗುಣಾತ್ಮಕ ಪರಿಣಾಮಗಳು ಸಂಭವಿಸಿದೆ. ಪ್ರದರ್ಶನಗಳಲ್ಲಿ ಸ್ಥಿರಪಠ್ಯಗಳಿಗಿಂತ ತತ್ಕಾಲಕ್ಕೆ ಬರುವ ಪಠ್ಯ ಬಂದೊದಗಿದೆ. ಸಮಯಕ್ಕೆ ಅನುಗುಣವಾಗಿ ವರ್ತಿಸುವುದು ಇತ್ಯಾದಿ ಇವರು ಕಲಿತು ಬಿಟ್ಟಿದ್ದಾರೆ. ಸರ್ಕಾರಿ ಸಂಸ್ಥೆಗಲ ಪ್ರೋತ್ಸಾಹವೂ ಕಡಿಮೆಯಾದರೆ ಈ ಕಲೆ ಅದೃಶ್ಯವಾಗುವ ಸಂಭವವಿದೆ. ಈಕಲೆಗಾರರು ತಮ್ಮ ಜೀವನ ವಿಧಾನದಲ್ಲೂ ಮತ್ತೊಂದು ಬದಲಾವಣೆ ಮಾಡಿಕೊಂಡಿದ್ದಾರೆ. ಇವರು ಗೊಂಬೆಗಳನ್ನು ತಯಾರಿಸುವ ಕಲೆಯನ್ನು ಮತ್ತೊಂದು ರೀತಿಯಲ್ಲಿ ಬದಲಾಯಿಸಿಕೊಂಡಿದ್ದಾರೆ. ತೊಗಲಿನಿಂದ ಜನರಿಗೆ ಉಪಯೋಗಕ್ಕೆ ಬರುವ ವಸ್ತುಗಳನ್ನು ತಮ್ಮದೇ ಆದ ಶೈಲಿಯಲ್ಲಿ ತಯಾರಿಸಿ ಮಾರುತ್ತಿದ್ದಾರೆ. ಲಾಂಪುಷೆಡ್ ಬಾಗಿಲುಗಳಲ್ಲಿ ನೇತು ಹಾಕುವ ಗೊಂಬೆಗಳು, ಪುರಾಣ ಪಾತ್ರಗಳ ಚಿಕ್ಕ ಚಿಕ್ಕ ಗೊಂಬೆಗಳು, ಮನೆಯ ಅಲಂಕಾರಕ್ಕೆ ಉಪಯೋಗಕ್ಕೆ ಬರುವಂತೆ ತಯಾರಿಸಿ ಮಾರುತ್ತಿದ್ದಾರೆ. ಕರಕುಶಲ ವಸ್ತುಗಳನ್ನು ಮಾರುವ ಅಂಗಡಿಗಳಿಗೆ, ಸಂಸ್ಥೆಗಳಿಗೆ, ಏಜೆಂಟರಿಗೆ ಮಾಡಿಕೊಡುತ್ತಿದ್ದಾರೆ. ಅವರ ಜೀವನೋಪಾಯಕ್ಕಾಗಿ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹೀಗೆ ತೊಗಲುಗೊಂಬೆ ಸಂಪ್ರದಾಯದಲ್ಲಿ ಆಧುನಿಕ ಕಾಲಕ್ಕೆ ತಕ್ಕ ಬದಲಾವಣೆಗಳು ಬಂದಿವೆ. ಈ ಕಲೆ ಅದೃಶ್ಯವಾಗುವ ಕೊನೆಯ ಘಟ್ಟದಲ್ಲಿದ್ದು ಸರ್ಕಾರದವರ ದಾಕ್ಷಿಣ್ಯದ ಮೇಲೆ ಆಧಾರಪಟ್ಟಿದೆ. ಆದರೂ ಇದ್ದರಲ್ಲಿಯ ಆಕರ್ಷಕ ಗುಣ ಕಡಿಮೆಯಾಗಿಲ್ಲ. ಸಂಪ್ರದಾಯದ ಹಿನ್ನೆಲ ಬದಲಾಗಿಲ್ಲ.

ಪಿ.ಎಸ್.ಸಿ. ಅನುವಾದ ವಿ.ಆರ್.