ತಪ್ಪೆಟಗುಳ್ಳು ಉತ್ತರಾಂಧ್ರದ ಯಾದವರ ಒಂದು ಕಲಾರೂಪ. ಉತ್ತರಾಂಧ್ರದಲ್ಲಿ ಯಾದವಕುಲದಲ್ಲಿ ‘ಆಲಗೊಲ್ಲ’ ಪಂಗಡದವರು ಈ ಕಲಾರೂಪವನ್ನು ಪ್ರದರ್ಶಿಸುತ್ತಾರೆ. ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ನಂ, ತೂರ್ಪು ಗೋದಾವರಿ ಜಿಲ್ಲೆಗಳಲ್ಲಿ ಈ ಕಲಾರೂಪವೂ ಅತ್ಯಂತ ಜನಪ್ರಿಯವಾಗಿದೆ. ಈ ಪ್ರದೇಶದ ಯಾದವರನ್ನು ಗೊಲ್ಲಲು, ಕೋನಾರುಗಳೆಂದು ಕರೆಯುತ್ತಾರೆ. ಇವರಲ್ಲಿ ಹಲವಾರು ಜನ ಅನಕ್ಷರಸ್ಥರು, ಇವರು ಕಾಡುಗಳಲ್ಲಿ ಮೇಕೆ, ಸಾಯಂಕಾಲದವರೆಗೂ ಕುರಿಗಳನ್ನು ಕಾಯುತ್ತಾರೆ. ಅನಂತರ ರಾತ್ರಿ ಅವುಗಳನ್ನು ರೈತರ ಹೊಲಗಳಲ್ಲಿ ಗುಂಪು ಗೂಡಿಸಿ ಕಾವಲುಕಾಯುತ್ತಾರೆ. ಒಬ್ಬಂಟಿಕೆಯನ್ನು ಮರೆಯಲು ಹಾಡುಗಳನ್ನು ಹಾಡುತ್ತಾರೆ. ಅಲ್ಲದೆ ಕ್ರೂರಮೃಗಗಳಿಂದ ರಕ್ಷಿಸಿ ಕೊಳ್ಳಲು ತಮ್ಮಟೆಯನ್ನು ಬಾರಿಸುತ್ತಾ ಹಾಡುಗಳನ್ನು ಹಾಡುತ್ತಾರೆ. ‘ತಪ್ಪೆಟಗುಳ್ಳು’ ಪ್ರದರ್ಶನದ ಆವಿಷ್ಕಾರಕ್ಕೆ ಇದೂ ಆಧಾರವೆಂದು ಹೇಳಬಹುದು.

ತಪ್ಪೆಟಗುಳ್ಳು ಪ್ರದರ್ಶನದಲ್ಲಿ ಹತ್ತರಿಂದ ಇಪ್ಪತ್ತೈದು ಮಂದಿ ಇರುತ್ತಾರೆ. ‘ತಪ್ಪೆಟಗುಂಡು’ ತಗಡಿನಿಂದ ಮಾಡಿದ ಒಂದು ಗೋಳಾಕಾರದ ವಾದ್ಯ. ಇದನ್ನು ಎದೆಯ ಮೇಲೆ ಕಟ್ಟಿಕೊಳ್ಳುತ್ತಾರೆ. ಬಣ್ಣ ಬಣ್ಣದ ಬನಿಯನುಗಳನ್ನು ಉಡುತ್ತಾರೆ. ಗೆಜ್ಜೆಗಳನ್ನು ಚಡ್ಡಿಗಳನ್ನು ಧರಿಸುತ್ತಾರೆ. ಇದರ ಮೇಲೆ ಲಂಗೋಟಿ ಕಟ್ಟಿಕೊಳ್ಳುತ್ತಾರೆ. ಕಾಲಿಗೆ ಅಂದುಗೆಗಳನ್ನು ಧರಿಸುತ್ತಾರೆ. ಕೆಲವರಿಗೆ ಉದ್ದವಾದ ತಲೆಕೂದಲಿರುತ್ತದೆ. ತಪ್ಪೆಟಗುಳ್ಳು ವೃಂದಕ್ಕೆ ಒಬ್ಬ ಮುಖ್ಯಸ್ಥ (ಗುರು) ನಿರುತ್ತಾನೆ. ಗುರುವಿನ ಮಾತು, ಆಟದ ಪ್ರಕಾರ ಪ್ರದರ್ಶನ ನಡೆಯುತ್ತದೆ. ಎಲ್ಲರೂ ವೃತ್ತಾಕಾರದಲ್ಲಿ ನಿಂತುಕೊಳ್ಳುತ್ತಾರೆ. ಮಧ್ಯದಲ್ಲಿ ‘ಗುರು’ (ಮುಖ್ಯಸ್ಥ) ನಿಂತು ಹಾಡುತ್ತಿರಲು ಎಲ್ಲರೂ ಎದೆಗಳಿಗೆ ಕಟ್ಟಿಕೊಂಡ ತಪ್ಪೆಟಗುಂಡನ್ನು ಎರಡು ಕೈಗಳಿಂದ ಜೋರಾಗಿ, ಬಾರಿಸುತ್ತಾ, ಹಾಡನ್ನು ಹಾಡುತ್ತಾ, ಲಯ, ತಾಳಗಳನ್ನು ಕ್ರಮ ತಪ್ಪದೆ ನರ್ತಿಸುತ್ತಾರೆ. ಪ್ರದರ್ಶನದ ಸ್ಥಾಯಿ (ಮಟ್ಟ) ಹೆಚ್ಚುತ್ತಿದ್ದಂತೆ ಒಬ್ಬೊಬ್ಬರು ತಮ್ಮ ಪ್ರತಿಭಾವಿಶೇಷಗಳನ್ನು ಪ್ರದರ್ಶಿಸುತ್ತಾರೆ. ವಿನ್ಯಾಸಗಳನ್ನು ಮಾಡುತ್ತಾರೆ. ಮಡಕೆಯ ಮೇಲೆ ನಿಂತು ನರ್ತಿಸುತ್ತಾರೆ. ಎರಡು ಮೂರು ಚೆಂಬುಗಳನ್ನು ತಲೆಯ ಮೇಲಿಟ್ಟುಕೊಂಡು ಅವುಗಳು ಬೀಳದಂತೆ ನೃತ್ಯ ಮಾಡುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಹತ್ತಿ ಪಿರಮಿಡ್ ಆಕಾರದಲ್ಲಿ ನಿಲ್ಲುತ್ತಾರೆ. ಅವರೆಲ್ಲರ ಮೇಲೆ ಇನ್ನೊಬ್ಬ ನಿಂತು ತಮ್ಮಟೆಯನ್ನು ಬಾರಿಸುತ್ತಾನೆ. ಕೊನೆಗೆ ಒಬ್ಬೊಬ್ಬರೂ ಕೆಲಗೆ ಇಳಿಯುತ್ತಾರೆ. ಈ ಕಲೆಯನ್ನು ‘ಗೊಲ್ಲ’ ಕುಲದವರು ಮಾಡಿಕೊಳ್ಳುವ ‘ಗಾವು ಸಂಬರ’ಗಳಲ್ಲಿಯೂ, ಗಂಗಾದೇವಿಯ ಹಬ್ಬಗಳಲ್ಲಿಯೂ, ದೇವರ ಹಬ್ಬಗಳಲ್ಲಿಯೂ, ‘ಶ್ರೀರಾಮ ಕೊಲುಪು’ ಗಳಲ್ಲಿಯೂ ಪ್ರದರ್ಶಿಸುತ್ತಾರೆ. ಗ್ರಾಮದೇವತೆಯ ಹಬ್ಬಗಳಲ್ಲಿಯೂ ಬೆಳಗ್ಗೆ ಮತ್ತು ರಾತ್ರಿ ಸಮಯಗಳಲ್ಲಿ ಪ್ರದರ್ಶಿಸುತ್ತಾರೆ. ಇವರು ಭಾರತ, ರಾಮಾಯಣ, ಭಾಗವತ, ದಶಾವತಾರ, ಚೆಂಚುಲಕ್ಷ್ಮಿ, ಸಾರಂಗಧರ, ಲಕ್ಷ್ಮಣ ಮೂರ್ಛಗಳೊಂದಿಗೆ ಚುಟ್ಟಪಾಟ, ಗಾಜುಲೋಡಿ ಪಾಟ ಮುಂತಾದ ಸ್ಥಳೀಯ ಕಥೆಗಳನ್ನು ಹಾಡುತ್ತಾರೆ.

– ಜಿ.ಎಸ್.ಎಂ.

ತಮಟೆ ವಾದನ ಕೊಡಗು ಮತ್ತು ದಕ್ಷಿಣ ಕನ್ನಡವನ್ನುಳಿದು ಕರ್ನಾಟಕದಾದ್ಯಂತ ತಮಟೆ ಪ್ರಸಿದ್ಧವಾಗಿದೆ. ಹರಿಜನರ ಅದರಲ್ಲೂ ಮುಖ್ಯವಾಗಿ ಆದಿ ಕರ್ನಾಟಕದವರ ವಾದನ ವಿಶೇಷವೆಂಬುದು ಹೆಗ್ಗಳಿಕೆ. ಹಲಗೆ, ತಪ್ಪಡೆ, ಪಡದ, ಹರೆ ಎಂದು ಕರ್ನಾಟಕದಲ್ಲಿ ಕರೆಯಲಾಗುವ ಇದನ್ನು ಪಲಕ ಎಂದು ತೆಲುಗಿನಲ್ಲಿ ಕರೆಯುತ್ತಾರೆ.

ತಮಟೆಗೆ ಬಹಳ ಪ್ರಾಚೀನವಾದ ಇತಿಹಾಸವಿದೆ. ಅದರ ಪ್ರಾಚೀನತೆ ವಡ್ಡರಾಧನೆಯ ಕಾಲಕ್ಕೆ ಹೋಗುತ್ತದೆ (ಕ್ರಿ.ಶ.೯ನೇ ಶತಮಾನ). ‘ಪರ’ ಎಂದು ‘ವಡ್ಡಾರಾಧನೆ’ ಯಲ್ಲಿಯೂ ಅಲ್ಲಮನ ವಚನ, ಬಸವಣ್ಣನ ವಚನಗಳು, ಜೀವಂಧರ ಚರಿತ್ರೆಗಳಲ್ಲಿ ಹರೆ (ಪರೆ) ಎಂಬುದಾಗಿಯೂ ‘ಸನತ್ಕುಮಾರ ಚರಿತ್ರೆ’ ಸೊಬಗಿನ ಸೋಣೆ, ರಾಘವಾಂಕ ಚರಿತ್ರೆ, ಚೆನ್ನಬಸವ ಪುರಾಣ, ಭರತೇಶ ವೈಭವ, ಸಿದ್ಧರಾಮ ಚರಿತ್ರೆಗಳಲ್ಲಿ ತಪ್ಪಟೆ, ತಂಬರ ಇತ್ಯಾದಿ ಹೆಸರುಗಳಿಂದಲೂ ಉಲ್ಲೇಖಿತವಾಗಿದೆ.

ತಮಟೆ ಹಳ್ಳಿಯ ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಾತ್ರೆ, ಉತ್ಸವ, ಕುಣಿತ, ಹಬ್ಬ ಬಯಲಾಟ, ಮರಣ, ಮದುವೆ ಮೆರೆವಣಿಗೆಗಳಿಗೆ ಹಲಗೆ ಅವಶ್ಯಕ. ರಾಜರ ಕಾಲದಲ್ಲಿ ಹಲಗೆ ಬಡಿಯುತ್ತಲೇ ಡಂಗೂರ ಸಾರುವುದು ವಾಡಿಕೆಯಾಗಿತ್ತು. ಇತ್ತೀಚಿನ ದಿನಗಳಲ್ಲಿಯೂ ಕಾಲರಾ, ನೆರೆ ಮುಂತಾದ, ತಕ್ಷಣ ಎಚ್ಚರಿಕೆ ವಹಿಸಬೇಕಾದ ಸಂದರ್ಭಗಳಲ್ಲಿ ಹಲಗೆ ಇರುವ ಕಡೆ ಡಂಗುರ ಸಾರುವುದುಂಟು.

ತಮಟೆಯ ತಯಾರಿ ಸರಳವಾದುದು. ಒಂದು ವೃತ್ತಾಕಾರವಾದ ಮರದ ಇಲ್ಲವೇ ಕಬ್ಬಿಣದ ಬಳೆಯನ್ನು ಸಿದ್ಧಗೊಳಿಸಲಾಗುತ್ತದೆ. ಈ ಬಳಿಗೆ ನಾಲ್ಕು ಚಕ್ಕೆಗಳನ್ನು ಮಾಡಿ ಮೊಳೆ ಹೊಡೆದು ಬಿಗಿಗೊಳಿಸಲಾಗುತ್ತದೆ. ಮರದ ಬಳೆಗಾದರೆ ಹೊನರು ಮರ, ಸಿಗರೇವು ಮರ, ಹಲಸಿನ ಮರವನ್ನು ಹಾಕಿದರೆ ಉತ್ತಮ ತಮಟೆಯಾಗುತ್ತದೆ. ಕಬ್ಬಿಣದ ಬಳೆಗಾದರೆ ಬಂಡಿಯ ಚಕ್ರದ ಪಟ್ಟಾವನ್ನು ಉಪಯೋಗಿಸುತ್ತಾರೆ. ಈ ಬಳೆಯ ವ್ಯಾಸ ಸುಮಾರು ಅರ್ಧ ಅಂಗುಲದಿಂದ ಒಂದುವರೆ ಅಡಿಯಾಗಿರುತ್ತದೆ. ಮೇಕೆ ಚರ್ಮ ಇದರ ಮುಚ್ಚಳಿಕೆಯಾಗಿರುತ್ತದೆ. ಹುಣಿಸೆ ಬೀಜದ ಅಂಟು, ಮೇಕೆ ಇಲ್ಲವೇ ದನದ ಚರ್ಮದ ದಾರದಿಂದಲೇ ಈ ಚರ್ಮವನ್ನು ಬಳೆಗೆ ಬಿಗಿಯಲಾಗುತ್ತದೆ. ಪ್ರಾದೇಶಿಕವಾಗಿ ಹಲಗೆಯ ಆಕಾರ ವ್ಯತ್ಯಾಸವಾಗುತ್ತದೆ. ಹೀಗಾಗಿ ಒಂದೂವರೆ ಅಡಿಯಿಂದ ಎಂಟು ಅಡಿ ವ್ಯಾಸದ ಹಲಗೆಗಳಿವೆ.

ಹಲಗೆಯನ್ನು ನುಡಿಸುವುದಕ್ಕೆ ಮೊದಲು ಬೆಂಕಿಯಲ್ಲಿ ಕಾಯಿಸಿದರೆ ನಾದ ಹಿತವಾಗಿರುತ್ತದೆ. ಹಲಗೆಯ ಕಂಠಕ್ಕೆ ತೊಗಲಿನ ಬಾರು ಇರುತ್ತದೆ. ಇದನ್ನು ಹೆಗಲಿಗೆ ಏರಿಸಿ ಎದೆಯ ಎಡ ಭಾಗಕ್ಕೆ ಎತ್ತರಿಸಿ ನುಡಿಸುತ್ತಾರೆ. ಎಡಗೈ ಕಂಠದ ಮೇಲ್ಗಡೆಯಲ್ಲಿರುತ್ತದೆ. ಈ ಕೈಗೆ ಒಂದೂವರೆ ಅಡಿ ಉದ್ದ ಬೆತ್ತದ ಇಲ್ಲವೆ ಬಿದಿರಿನ ‘ಛಡಿ’ ಇರುತ್ತದೆ. ಎಡಗೈ ಹಲಗೆಯ ಕಂಠದ ಭಾಗದಲ್ಲಿ ಮಾತ್ರ ನುಡಿಸುತ್ತಿದ್ದರೆ ಬಲಗೈ ಗುಣಿಕೆ ಹಲಗೆಯ ವಿವಿಧ ಭಾಗಗಳಲ್ಲಿ ಸಂಚರಿಸಿ ವಿವಿಧ ಗತಿಯ ನಾದವನ್ನು ಹೊರಡಿಸುತ್ತದೆ.

ಈಗಾಗಲೇ ಹೇಳಿರುವಂತೆ ಪ್ರಾದೇಶಿಕ ವ್ಯತ್ಯಾಸಗಳಿಗುನುಸಾರವಾಗಿ ಹಲಗೆಯ ಆಕಾರ ಬದಲಾದಂತೆ ಹಲಗೆ ಮೇಳದ ಸ್ವರೂಪವೂ ಬದಲಾಗುತ್ತದೆ. ಗುಲ್ಬರ್ಗಾ, ಬಳ್ಳಾರಿ ಜಿಲ್ಲೆಗಳಲ್ಲಿ ಕೇವಲ ನಾಲ್ಕಾರು ಹಲಗೆಗಳನ್ನು ಮಾತ್ರ ಸೇರಿಸಿ ಗತ್ತು ಬಾರಿಸುತ್ತಾರಾದರೆ ಸನಾದಿ, ತಾಸೆ, ದಿಮ್‌ಗಳನ್ನು ಸೇರಿಸಿ ಮೇಳ ಮಾಡುವುದು ಇತರೆಡೆ ಪ್ರಚಲಿತವಾಗಿದೆ. ಗತ್ತು ಬಾರಿಸುವುದಕ್ಕೆ ದೊಡ್ಡ ಹಲಗೆಗಳಾದರೆ ಸಣ್ಣ ಹಲಗೆಗಳು ಬೋಲ್ ಬಾರಿಸುವುದಕ್ಕೆ ಸಹಕಾರಿಯಾಗುತ್ತದೆ.

ಹಲಗೆ ಮೇಲಕ್ಕೆ ಹಲಗೆ ಮಜಲು, ಹಲಗೆ ಬಾಜಿ, ಹಲಗೆ ಮದಲಸಿ ಮುಂತಾದ ಹೆಸರುಗಳಿವೆ. ಏನೇ ಇದ್ದರೂ ಹಲಗೆಯೇ ಇಲ್ಲಿ ಪ್ರಧಾನ, ಅದಕ್ಕೆ ಸಾಥಿಯಾಗಿ ಸನಾದಿ, ದಿಮ್ಮು, ಟಕೂರಿ, ಜಾಗಡಿ ಮೊದಲಾದ ವಾದ್ಯಗಳಿರುತ್ತವೆ. ಕೆಲವೆಡೆ ತಾಸೆಯೂ ಇರುವುದುಂಟು. ಹಲಗೆಯನ್ನು ಹರಿಜನರು ಮಾತ್ರ ಬಾರಿಸುವುದರಿಂದ ಹೊಲೇರ ಮ್ಯಾಳ, ಚಲವಾದಿಗಳ ಮೇಳ ಎಂದೂ ಕರೆಯುವುದುಂಟು. ಹರಿಜನರು ‘ಪೋತುರಾಜ’ ಎಂಬ ವೇಷ ಹಾಕಿಕೊಂಡು ಹಬ್ಬ ಹರಿದಿನಗಳಲ್ಲಿ ಹಲಗೆ ನುಡಿಸುತ್ತಾ ಕುಣಿಯುತ್ತಾರೆ. ಲಂಬಾಣಿಗರೂ ತಮ್ಮದೇ ಆದ ಸಣ್ಣ ಗಾತ್ರದ ಫಗರಿ ಎಂದು ಕರೆಯಲಾಗುವ ಹಲಗೆಯನ್ನು ಹೊಂದಿದ್ದಾರೆ.

ತಮಟೆ ಬಾರಿಸುತ್ತಾ ನೆಲದ ಮೇಲೆ ಇರುವ ನೋಟು, ಸೂಜಿ ಇತ್ಯಾದಿಗಳನ್ನು ಕಣ್ಣು ರೆಪ್ಪೆಯಿಂದ ತೆಗೆಯುವ ಚಮತ್ಕಾರತೆಯನ್ನು ಹಲಗೆವಾದಕರು ಮಾಡುವುದುಂಟು. ಕೆಲವು ಕಲಾವಿದರು ಎರಡು ಹಲಗೆಗಳನ್ನು ಕಟ್ಟಿಕೊಂಡು ಬಾರಿಸುವುದು, ಮುಂದಕ್ಕೆ ಉರುಳಿ, ಅಕ್ಕಪಕ್ಕಕ್ಕೆ ತಿರುಗಿ, ಅಂಗಾತ ಮಲಗಿ, ಎರಡು ಕಾಯಿಗಳ ಮಧ್ಯೆ ತಮಟೆ ಇಟ್ಟು ಹೀಗೆ ವೈವಿಧ್ಯಮವಾಗಿ ತಮಟೆ ನುರಿಸುವುದುಂಟು. ಬಹಳ ಮುಖ್ಯವಾದ ವಿಚಾರವೆಂದರೆ ದೇವರ ಉತ್ಸವ, ಧಾರ್ಮಿಕ ಕಾರ್ಯ, ತೇರು ಜಾತ್ರೆ ಹಾಗೂ ಹಲವು ಕಲೆಗಳಿಗೆ ಪೂರಕವಾಗಿ ತಮಟೆ ಇಲ್ಲದಿದ್ದರೆ ಏನೂ ನಡೆಯುವಂತಿಲ್ಲ.

– ಎಚ್.ಸಿ.ಬಿ.

ತಮಿಳರ ಜೀವನಚಕ್ರದ ಆಚರಣೆಗಳು ಮಾನವನು ಹುಟ್ಟಿನಿಂದ ಸಾವಿನವರೆಗೆ ಸಾಕಷ್ಟು ಶಾಸ್ತ್ರಗಳನ್ನು ಮಾಡುತ್ತಾನೆ. ಈ ಶಾಸ್ತ್ರಗಳ ಉದ್ದೇಶ ಆಯುಷ್ಯ, ಆರೋಗ್ಯ, ಫಲ, ಸಮೃದ್ಧಿ ಇತ್ಯಾದಿಗಳನ್ನು ಬೇಡುವುದೇ ಆಗಿದೆ. ಇವುಗಳಣ್ನು ವಾಳ್ಕೈವಟ್ಟಚ್ಚಡಂಗುಗಳ್ (ಬದುಕಿನ ಶಾಸ್ತ್ರಗಳು) ಎಂದು ಕರೆಯಲಾಗುತ್ತದೆ. ಮಾನವನ ಜೀವನದಲ್ಲಿ ಮುಖ್ಯವಾಗಿ ಹುಟ್ಟು, ಋತುಮತಿ, ಮದುವೆ, ಸಾವು ಈ ನಾಲ್ಕು ಸಂದರ್ಭಗಳಲ್ಲಿ ಅನೇಕ ಆಚರಣೆಗಳನ್ನು ಮಾಡುವುದಿದೆ. ಮಾನವ ಬದುಕಿನಲ್ಲಿ ಇವು ಅನಿನಾಭಾವ ಸಂಬಂಧ ಪಡೆದುಕೊಂಡಿರುವುದನ್ನು ನೋಡಿದಾಗ ಇವುಗಳ ಮಹತ್ತ್ವ ತಿಳಿಯುತ್ತದೆ.

ಹುಟ್ಟಿನ ಶಾಸ್ತ್ರ : ಜನರ ಜೀವನದ ಪದ್ಧತಿಯಲ್ಲಿ ಹುಟ್ಟಿನ ಶಾಸ್ತ್ರವನ್ನು ಎರಡು ಭಾಗವಾಗಿ ವಿಂಗಡಿಸಬಹುದು. ೧. ಬಳೆ ತೊಡುವ ಶಾಸ್ತ್ರ (ಸೀಮಂತ) ೨. ಜನನದ ಶಾಸ್ತ್ರ (ಮಗು ಪಡೆಯುವ ಶಾಸ್ತ್ರ)

. ಬಳೆತೊಡುವ ಶಾಸ್ತ್ರ : ಮದುವೆಯಾಗಿ ಗರ್ಭಧರಿಸಿದ ಹೆಣ್ಣಿಗೆ ಏಳು ಇಲ್ಲವೇ ಒಂಬತ್ತು ತಿಂಗಳಿನಲ್ಲಿ ‘ವಳೈಕಾಪ್ಪು’ ಎಂಬ ಶಾಸ್ತ್ರವನ್ನು ನಡೆಸುವುದು ರೂಢಿಯಲ್ಲಿದೆ. ಇದನ್ನು ಚೊಚ್ಚಿಲ ಮಗುವನ್ನು ಹೆರುವ ತಾಯಿಗೆ ಮಾಡಲಾಗುತ್ತದೆ. ಈ ಶಾಸ್ತ್ರವನ್ನು ‘ಸೋರೊಕ್ಕಿಪ್ಪೊಡುದಲ್’ (ಊಟ ಹಾಕಿಸುವುದು) ಎಂದೂ ‘ಕಟ್ಟುಚ್ಚೋರು ಕಟ್ಟುದಲ್’ (ಹುಳಿ ಅನ್ನದ ಬುತ್ತಿ ಕಟ್ಟುವುದು) ಎಂದೂ ‘ಸೀಮಂದಮ್ ಸೆಯ್ದಲ್’ (ಸೀಮಂತ ಮಾಡುವುದು) ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಹೆಣ್ಣಿನ ಮನೆಯವರು ತಮ್ಮ ಅಳಿಯನ ಮನೆಯಲ್ಲಿ ನಡೆಸುತ್ತಾರೆ. ಈ ಶಾಸ್ತ್ರವನ್ನು ಬಹುಪಾಲು ಮೊದಲ ಮಗುವಿನ ಹುಟ್ಟಿಗೆ ಮುಂಚೆ ಮಾಡುವರು.

‘ವಳೈಕಾಪ್ಪುಚ್ಚಡಂಗು’ ಎಂಬುದು ಗರ್ಭಧರಿಸಿದ ಹೆಣ್ಣಿಗೆ ೫, ೭,೯ ತಿಂಗಳಲ್ಲಿ ಬಳೆ ತೊಡಿಸುವ ಕಾಪ್ಪು ಕಟ್ಟುವ (ರಕ್ಷಣೆಗಾಗಿ ತಾಯಿತ ಕಟ್ಟುವುದು) ಶಾಸ್ತ್ರವಾಗಿದೆ. ಈ ಸಂದರ್ಭದಲ್ಲಿ ನಡೆಸುವ ಆಚರಣೆಗಳು :

೧. ಹಲವಾರು ಬಗೆಯ ಅಡುಗೆಗಳನ್ನು ಮಾಡುವರು. ಪುಳಿಯೋಗರೆ, ಅಗ್ರಸ್ಥಾನವನ್ನು ಪಡೆದಿರುತ್ತದೆ. ಇದು ಅಲ್ಲದೆ, ಮೊಸರನ್ನ, ಚಿತ್ರಾನ್ನ, ಸಕ್ಕರೆ ಅನ್ನ, ಕಾಯಿತುರಿ ಅನ್ನ, ಪಾಯಸ ಮೊದಲಾದವನ್ನು ಮಾಡಿರುತ್ತಾರೆ.

೨. ಹೆಣ್ಣಿಗೆ ಇಷ್ಟವಾದ ತಿಂಡಿ ಪದಾರ್ಥಗಳನ್ನು ಇಟ್ಟಿರುತ್ತಾರೆ.

೩. ಮಾವಿನ ಹಣ್ಣು ಮತ್ತು ವಿವಿಧ ಬಗೆಯ ಹಣ್ಣು ಹಂಪಲುಗಳನ್ನು ಇಟ್ಟಿರುತ್ತಾರೆ.

೪. ಗಾಜಿನ ಬಳೆ, ಹೂವು, ಕುಂಕುಮ, ಗಂಧ, ಅರಿಸಿನದ ದಾರ ಇತ್ಯಾದಿ ವಸ್ತುಗಳು ಇರುತ್ತವೆ.

ಈ ಶಾಸ್ತ್ರಕ್ಕೆ ಹತ್ತಿರದ ಸಂಬಂಧಿಕರು ನಂಟರಿಷ್ಟರು ಎಲ್ಲರನ್ನು ಕರೆಯುವರು. ಹೆಣ್ಣಿನ ಮನೆಯವರು ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ತಂದು ಮನೆಯ ಮುಂದುಗಡೆ ಇಡುತ್ತಾರೆ. ಗರ್ಭಧರಿಸಿದ ಹೆಣ್ಣಿಗೆ ಅವಲ ಮದುವೆ ಸೀರೆಯನ್ನು ಉಡಿಸಿ ಅವಳನ್ನು ಸಿಂಗರಿಸಿ ಮೂರು ಕಾಲಿನ ಕುರ್ಚಿಯ ಮೇಲೆ ಕೂರಿಸುತ್ತಾರೆ. ‘ಚೆತ್ತಾಲುಮ್, ಸಾಗುಮ್, ಪೆತ್ತಾಲುಮ್ ಪೆಕ್ಕುಮ್ (ಸತ್ತರೆ ಸಾಯುವುದು ಹುಟ್ಟಿದರೆ ಹುಟ್ಟುವುದು) ಎಂಬ ಗಾದೆಮಾತನ್ನು ಮನಸ್ಸಿನಲ್ಲಿ ನೆನೆದು ಗರ್ಭಿಣಿಗೆ ಆರತಿ ಎತ್ತುವರು.

ಆರತಿ ಮುಗಿದ ಮೇಲೆ ಹೆಣ್ಣಿನ ಅತ್ತೆ ಅವಳಿಗೆ ಗಾಜಿನ ಬಳೆಯನ್ನು ತೊಡಿಸುತ್ತಾರೆ. ಕೆಲವರು ಚಿನ್ನದ ಬಳೆಗಳನ್ನು ತೊಡಿಸುವುದು ಉಂಟು. ೫,೭,೯,೧೧ ಎಂಬ ಬೆಸಸಂಖ್ಯೆಯಲ್ಲಿ ಬಳೆ ತೊಡಿಸುವರು. ಅದು ಹಾಗೆಯೇ ಇರಬೇಕೆಂಬ ನಿಯಮವಿದೆ. ಬಳೆ ತೊಡಿಸುವ ಶಾಸ್ತ್ರದಲ್ಲಿ ಆ ಹೆಣ್ಣಿಗೆ ಎರಡು ಕೆನ್ನೆಗಳ ಮೇಲೆ ಮತ್ತು ಎರಡು ಕೈಗಳ ಮೇಲೆ ಗಂಧವನ್ನು ಹಚ್ಚುತ್ತಾರೆ. ಈ ಶಾಸ್ತ್ರ ಮುಗಿದ ನಂತರ ಹೊಸ ಅರಿಸಿನದ ದಾರಕ್ಕೆ ತಾಳಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಹಾಡನ್ನು ಸಹ ಹೇಳುತ್ತಾರೆ. ಅನಂತರ ಹೆಣ್ಣು ಹಿರಿಯರ ಕಾಲಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆಯುತ್ತಾಳೆ.

ಅನಂತರ ಹುಳಿ ಅನ್ನದ ಬುತ್ತಿಯನ್ನು ಬಿಚ್ಚಿ ಅಲ್ಲಿದ್ದ ಎಲ್ಲರಿಗೂ ಹಂಚುತ್ತಾರೆ. ಈ ದಿನದ ಖರ್ಚು ವೆಚ್ಚ ಹೆಣ್ಣಿನ ಮನೆಯವರಿಗೆ ಸೇರಿರುತ್ತದೆ.

ಬಳೆ ತೊಡಿಸುವ ಶಾಸ್ತ್ರ ಮುಗಿದ ಮೇಲೆ ಮಡಿಲು ತುಂಬುವ ಶಾಸ್ತ್ರ ನಡೆಯುತ್ತದೆ. ಮನೆಯ ಮಧ್ಯಭಾಗದಲ್ಲಿ ಗರ್ಭಿಣಿ ಹೆಂಗಸನ್ನು ಕೂರಿಸಿ ಅವಳ ಸೆರಿಗಿಗೆ ಆಕೆಯ ಅತ್ತೆ ವೀಳ್ಯದೆಲೆ, ಅಡಕೆ, ಹಣ್ಣು, ಹೂವು ಮೊದಲಾದವುಗಳನ್ನು, ಹಲವು ವಿಧವಾದ ಅನ್ನವನ್ನು, ಸಿಹಿಪದಾರ್ಥಗಳನ್ನು ಇಡುತ್ತಾರೆ. ಈ ಮಡಿಲು ತುಂಬುವ ಶಾಸ್ತ್ರವನ್ನು ಒಂದು ಅಥವಾ ಒಂಬತ್ತು ಸಂಖ್ಯೆಯಲ್ಲಿ ಮತ್ತೆ ಮತ್ತೆ ಎತ್ತಿ ಇಟ್ಟು ಮಾಡುತ್ತಾರೆ. ಈ ಶಾಸ್ತ್ರದ ಉದ್ದೇಶ ಹೆಣ್ಣಿಗೆ ಇಷ್ಟವಾದ ಎಲ್ಲವನ್ನು ಕೊಡುವುದಾಗಿದೆ. ಅನಂತರ ಅತ್ತೆಯ ಅನುಮತಿಯನ್ನು ಪಡೆದು ಗರ್ಭಿಣಿ ಹೆಂಗಸು ಗಂಡನ ಮನೆಯಿಂದ ತವರಿಗೆ ಹೋಗುತ್ತಾಳೆ.

. ಜನನದ ಶಾಸ್ತ್ರ : ಪ್ರಸ್ತುತದಲ್ಲಿ ಹೆಚ್ಚಿನ ಹೆರಿಗೆಗಳು ಆಸ್ಪತ್ರೆಗಳಲ್ಲಿಯೇ ನಡೆಯುತ್ತಿವೆ. ಹಿಂದೆ ಊರಿನಲ್ಲೇ ಸೂಲಗಿತ್ತಿಯರು ಹೆರಿಗೆ ಮಾಡುವ ಪದ್ಧತಿ ಇತ್ತು. ಗರ್ಭಿಣಿಗೆ ತುಂಬ ನೋವು ಬಂದ ತಕ್ಷಣ ಆ ಊರಿನ ಸೂಲಗಿತ್ತಿಯನ್ನು ಕರೆಸಿಕೊಳ್ಳುತ್ತಿದ್ದರು. ಆ ಸೂಲಗಿತ್ತಿ ಬಂದು ಆ ನೋವು ಹೆರಿಗೆ ನೋವೇ ಅಲ್ಲವೇ ಎಂದು ಪತ್ತೆಹಚ್ಚುವಳು. ಇದನ್ನು ತಿಳಿಯಲು ಸೂಲಗಿತ್ತಿ ಬೆಳ್ಳುಳ್ಳಿ, ನುಗ್ಗೆ ಹೂವುಗಳನ್ನು ಅರೆದು ನೀರಿನಲ್ಲಿ ಬೆರೆಸಿ ಕುಡಿಸುತ್ತಿದ್ದಳು. ಹೆರಿಗೆ ನೋವಾಗಿಲ್ಲದಿದ್ದರೆ ಆನೋವು ವಾಸಿ ಆಗುತ್ತಿತ್ತು. ಹೆರಿಗೆ ನೋವಾಗಿದ್ದರೆ ವಾಸಿಯಾಗುತ್ತಿರಲಿಲ್ಲ. ಹೀಗೆ ಸೂಲಗಿತ್ತಿ ಹೆರಿಗೆ ನೋವನ್ನು ಪತ್ತೆಹಚ್ಚುತ್ತಿದ್ದಳು.

ಮಗು ಹುಟ್ಟಿದ ಮೇಲೆ ಮಗುವಿನ ಕಡೆಯವರು ಕೇಕೆ ಹಾಕಿ ಸಂತೋಷಪಡುತ್ತಾರೆ. ಹೆಣ್ಣು ಜನಿಸಿದರೆ ಏಳು ಕೇಕೆ, ಗಂಡುಮಗು ಜನಿಸಿದರೆ ಒಂಬತ್ತು ಕೇಕೆಯನ್ನು ಹಾಕುತ್ತಾರೆ. ಇದಾದ ಅನಂತರ ತಾಯಿ ಮತ್ತು ಮಗುವನ್ನು ಮಂಚದ ಮೇಲೆ ಮಲಗಿಸುತ್ತಾರೆ. ಆ ಮಗು ಹೆತ್ತ ತಾಯಿಗೆ ಅಂಗಡಿಯಿಂದ ಶುಂಠಿ, ಮೆಣಸು, ಹಿಂಗು, ಬೆಳ್ಳುಳ್ಳಿ, ಜೀರಿಗೆ ಮುಂತಾದ ಔಷಧಿ ಇರುವ ವಸ್ತುಗಳನ್ನು ತಂದು ಸಾರನ್ನು ಮಾಡಿ ತಿನ್ನಿಸುತ್ತಾರೆ. ಈ ಔಷಧಿ ವಸ್ತುಗಳ ಸೇವನೆಯಿಂದ ಬಾಣಂತಿ ದೇಹದ ಕೆಟ್ಟ ರಕ್ತ ಹೊರಗೆ ಹೋಗಿ ದೇಹ ಲವಲವಿಕೆಯಿಂದ ಕೂಡಿರುತ್ತದೆ.

. ಮಗು ಹುಟ್ಟಿದ ಮೇಲಿನ ಶಾಸ್ತ್ರಗಳು : ಜೋಲಿ ಕಟ್ಟುವುದು ಅಥವಾ ತೊಟ್ಟಿಲು ಕಟ್ಟುವುದು, ಮನೆಗೆ ಎಲ್ಲರವನ್ನು ಆಹ್ವಾನಿಸಿ ಮಗುವನ್ನು ಎತ್ತಿ ಅಡಿಸಿ ಹಾಡನ್ನು ಹಾಡಿ ಎಲ್ಲರಿಗೂ ಸಿಹಿಯನ್ನು ಹಂಚುತ್ತಾರೆ. ಮಗು ನೋಡಲು ಬಂದ ಜನರೆಲ್ಲ ಮಗುವಿನ ಅಂಗಿಗೆ ದುಡ್ಡನ್ನು ಸಿಕ್ಕಿಸುತ್ತಾರೆ.

(ಅ) ಮಗುವಿನ ಇತರ ಆಹಾರಗಳು : ಮಗು ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲು ಬರುವುದಿಲ್ಲವೆಂದು ಸಕ್ಕರೆ ನೀರು ಕುಡಿಸುವರು. ಆಮೇಲೆ ತಾಯಿಯ ಹಾಲನ್ನು ಕುಡಿಸುತ್ತಾರೆ. ಜಾಕಾಯಿಯನ್ನು ಹರಳೆಣ್ಣೆಯಲ್ಲಿ ತೇದು ಮಗುವಿಗೆ ಕೊಡಲಾಗುತ್ತದೆ. ಮಕ್ಕಳಿಗೆ ಇದನ್ನು ಮೂರು ವರ್ಷಗಳವರೆಗೆ ತಿನಿಸುವರು. ಆರು ತಿಂಗಳಾದ ಮೇಲೆ ರಾಗಿ ಹಿಟ್ಟಿನಿಂದ ಸರಿ ಮಾಡಿ ತಿನ್ನಿಸಲಾಗುತ್ತದೆ. ಇದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಕೆಲವರು ತಮ್ಮ ಪೂರ್ವಿಕರ ಗೋರಿ ಇರುವ ಸ್ಥಳದಿಂದ ಮಣ್ಣನ್ನು ತೆಗೆದುಕೊಂಡು ಬಂದು ಅದನ್ನು ಹಾಲಿನಲ್ಲಿ ಬೆರೆಸಿ ಕೊಡುವರು. ಇದಲ್ಲದೆ, ಗೆದ್ದಲು ಮಣ್ಣು, ಕಡಜದ ಗೂಡಿನ ಮಣ್ಣು ಮತ್ತು ಹುತ್ತದ ಮಣ್ಣು ಇವುಗಳಲ್ಲಿ, ಯಾವುದಾದರೂ ಒಂದನ್ನು ಜೇನಿನಲ್ಲಿ ಬೆರೆಸಿ ಮಗುವಿಗೆ ಕೊಡುತ್ತಾರೆ. ಹರಳೆಣ್ಣೆ ಬೆರೆಸಿದ ಆಹಾರವನ್ನು ಆಗಾಗ್ಗೆ ಮಗುವಿಗೆ ಕೊಡುತ್ತಾರೆ. ಹೀಗೆ ಕೊಟ್ಟರೆ ಮಗುವಿನ ಹೊಟ್ಟೆ ಶುಚಿಯಾಗುತ್ತದೆ.

(ಆ) ತೊಟ್ಟಿಲಶಾಸ್ತ್ರ : ಹುಟ್ಟಿದ ಮಗುವನ್ನು ತೊಟ್ಟಿಲಲ್ಲಿ ಮಲಗಿಸುವುದನ್ನು ಒಂದು ಶಾಸ್ತ್ರವಾಗಿ ಆಚರಿಸುತ್ತಾರೆ. ಆ ಸಂದರ್ಭದಲ್ಲಿ ಎಲ್ಲಾ ಸಂಬಂಧಿಕರನ್ನು ಕರೆಸಿ ತೊಟ್ಟಿಲಶಾಸ್ತ್ರ ಮಾಡುತ್ತಾರೆ. ಮಾವನ ಮನೆಯವರು ತೊಟ್ಟಿಲಶಾಸ್ತ್ರ ಮಾಡಲು ಅಗತ್ಯವಾದ ಜೋಲಿ, ಪಂಚೆ, ಹಗ್ಗ ಮೊದಲಾದವುಗಳನ್ನು ತಂದು ಕೊಡುತ್ತಾರೆ. ಜೋಲಿಯ ಕೆಳಗೆ ಕಬ್ಬಿಣದ ವಸ್ತುವನ್ನು ಇಲ್ಲವೇ ಪೊರಕೆಯನ್ನು ಇಟ್ಟಿರುತ್ತಾರೆ. ಇದರ ಉದ್ದೇಶ ದುಷ್ಟಶಕ್ತಿಗಳು ಮಗುವಿನ ಹತ್ತಿರ ಬರಬಾರದು ಎಂಬುದೇ ಆಗಿದೆ.

(ಇ) ಕಾಪ್ಪುಕಟ್ಟುವಶಾಸ್ತ್ರ (ತಾಯಿತ) : ಹುಲಿಯ ಹಲ್ಲುಗಳ ತಾಯಿತ, ಐಮ್ ಪಡೈತಾಳಿ (ಒಂದು ಬಗೆಯ ತಾಯಿತ) ಗಿಡಮೂಲಿಕೆಯ ತಾಯಿತ ಮುಂತಾದವನ್ನು ಮಗುವಿನ ರಕ್ಷಣೆಗಾಗಿ ಮೂವತ್ತು ದಿನಗಳವರೆಗೆ ಮಗುವಿನ ಕತ್ತು, ಕೈ ನಡುಗಳಿಗೆ ಕಟ್ಟಿರುತ್ತಾರೆ. ಮಗುವಿನ ಹೊಟ್ಟೆಗೆ, ಕೈಮಣಿಕಟ್ಟಿಗೆ, ಹಣೆಗೆ ಬರೆಹಾಕುವ ಪದ್ಧತಿ ಕೆಲವು ಜನರಲ್ಲಿ ರೂಢಿಯಲ್ಲಿದೆ. ಮಗುಹುಟ್ಟಿದ ಹದಿನೈದು ದಿನಗಳ ಒಳಗೆ ಈಗಾಗಲೇ ಬಳಸಿರುವ ಮಣ್ಣಿನ ಪಾತ್ರೆಗಳನ್ನು ಬದಲಾಯಿಸುತ್ತಾರೆ. ಈ ಶಾಸ್ತ್ರವನ್ನು ‘ಚಟ್ಟಿಪಾನೈಮಾಟ್ರುದಲ್’ (ಪಾತ್ರೆಗಳ ಬದಲಾವಣೆ) ಎಂದು ಕರೆಯಲಾಗುತ್ತದೆ. ಅಲ್ಲದೆ ಹಳೆಯ ಪಾತ್ರೆಗಳು ಕಳೆದು ಹೋದವು ಎಂಬ ತೃಪ್ತಿಯನ್ನು ಹೊಂದುತ್ತಾರೆ.

(ಈ) ಗಂಡನ ಮನೆಗೆ ಆಹ್ವಾನ : ಮಗುವನ್ನು ಹೆರಲು ತವರುಮನೆಗೆ ಹೋದ ಹೆಣ್ಣು ತನ್ನ ಮಗುವಿನೊಡನೆ ಗಂಡನ ಮನೆಗೆ ಬರುವುದನ್ನು ‘ಕಣವನ್ ವೀಡು ಅಳೈಪ್ಪು’ (ಗಂಡನ ಮನೆಗೆ ಬರುವುದು) ಎನ್ನುತ್ತಾರೆ. ಗಂಡನ ತನ್ನ ಪೋಷಕರೊಡನೆ ಹೆಂಡತಿ ಮನೆಗೆ ಹೋಗಿ ತನ್ನ ಹೆಂಡತಿಯನ್ನು ಕರೆದುಕೊಂಡು ಬರುತ್ತಾನೆ. ಈ ರೀತಿಯಲ್ಲಿ ಗಂಡನ ಮನೆಗೆ ಹೋಗುವ ಹೆಣ್ಣಿಗೆ ಈ ಕೆಳಕಂಡ ಉಡುಗೊರೆಗಳನ್ನು ಕೊಟ್ಟು ಕಳುಹಿಸುತ್ತಾರೆ.

೧. ಮಗು ಮತ್ತು ತಾಯಿಗೆ ಹೊಸಬಟ್ಟೆಗಳು, ೨. ಜೋಲಿಕಟ್ಟಲು ಹಗ್ಗ, ೩. ತೊಟ್ಟಿಲ, ತೊಟ್ಟಿಲ ಬಟ್ಟೆ, ೪. ಹಾಲು ಕುಡಿಸಲು ಒಳಲೆ, ಹಾಲಿನ ಡಬ್ಬಿ, ೫. ಬೆಳ್ಳಿ ಉಡಿದಾರ, ಹೆಣ್ಣು ಮಗುವಿಗೆ ಕಾಲಂದಿಗೆ

ಅನುಕೂಲ ಇರುವವರು ಚಿನ್ನದ ಉಡಿದಾರ, ಚಿನ್ನದ ಸರ, ಚಿನ್ನದ ಉಂಗುರ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಕೊಟ್ಟು ಕಳುಹಿಸುತ್ತಾರೆ. ಈ ಎಲ್ಲ ವಸ್ತುವಿನೊಡನೆ ಬಂದ ತಾಯಿ ಮಗುವನ್ನು ಗಂಡನ ಮನೆಯಲ್ಲಿ ಆರತಿ ಎತ್ತುವ ಮೂಲಕ ದೃಷ್ಟಿ ತೆಗೆದು ಸ್ವಾಗತಿಸುತ್ತಾರೆ.

) ಮಗುವಿಗೆ ಹೆಸರು ಇಡುವುದು : ನಾಮಕರಣ ಎಂಬುದು ಮಧ್ಯೆ ಒಂದು ದೊಡ್ಡ ಶಾಸ್ತ್ರವಾಗಿ ಸ್ಥಾನ ಪಡೆದಿವೆ. ಮಗು ಹುಟ್ಟಿ ಮೂವತ್ತು ದಿನ ಆದ ಮೇಲೆ ಈ ಶಾಸ್ತ್ರವನ್ನು ಮಾಡುತ್ತಾರೆ. ಕುಲದೇವರ ಹೆಸರಿನಲ್ಲಿಯೋ ಕುಟುಂಬದ ಹಿರಿಯರ ಹೆಸರಿನಲ್ಲಿಯೋ ನಾಮಕರಣ ಮಾಡುತ್ತಾರೆ. ಅಜ್ಜನ ಹೆಸರನ್ನು ಇಟ್ಟುಕೊಂಡಿರುವ ಮೊಮ್ಮಕ್ಕಳು ಆ ವಂಶದ ಪರಂಪರೆಯನ್ನು ಪಡೆದವರಾಗಿರುತ್ತಾರೆ. ಮಕ್ಕಳಿಗೆ ಹಿರಿಯರ ಹೆಸರನ್ನು ಇಲ್ಲವೆ ಹೆಚ್ಚಾಗಿ ದೇವರ ಹೆಸರನ್ನು ಇಡುವುದು ರೂಢಿಯಲ್ಲಿದೆ.

ಚೊಚ್ಚಲ ಮಗುವಿಗೆ ಆಡನ್ನು ಬಲಿಕೊಟ್ಟು ಪೊಂಗಲ್ ಇಟ್ಟು ನಾಮಕರಣ ಮಾಡುವ ಪದ್ಧತಿ ಜನರಲ್ಲಿ ರೂಢಿಯಲ್ಲಿದೆ. ಈ ಸಂದರ್ಭದಲ್ಲಿ ಬತ್ತ ಕುಟ್ಟಿ ಅಕ್ಕಿಯನ್ನು ತೆಗೆದು ಪೊಂಗಲ್ ಮಾಡುತ್ತಾರೆ. ಹಣ್ಣು ಹಂಪಲು, ತೆಂಗಿನಕಾಯಿ, ಊದುಬತ್ತಿ, ಪೊಂಗಲ್ ಮುಂತಾದವನ್ನು ಊರಿನ ದೇವರುಗಳಾದ ಊರ್‌ಕಾಲಸ್ವಾಮಿ, ಕರುಪ್ಪಸ್ವಾಮಿ, ಅಯ್ಯನಾರ್‌ಗೆ ಎಡೆ ಇಟ್ಟು ಪ್ರಾರ್ಥಿಸುತ್ತಾರೆ. ಅನಂತರ ಮಗುವಿಗೆ ಹೆಸರನ್ನು ಇಡುತ್ತಾರೆ. ಈ ರೀತಿ ನಾಮಕರಣ ಮಾಡುವುದಕ್ಕೆ ‘ಅರಸಿ ಕುತ್ತಿಪ್ಪೆಯರ್’ ಎಂದು ಕರೆಯಲಾಗುತ್ತದೆ. ಅಂದರೆ ಅಕ್ಕಿ ಕುಟ್ಟಿಮಾಡಿದ ನಾಮಕರಣ ಎನ್ನಬಹುದು. ಕುಲದೇವರ ಹೆಸರು ಇಡುವುದು ಕುಲದ ಅನನ್ಯತೆಯನ್ನು ತಿಳಿಸುತ್ತದೆ, ಹಾಗೆಯೇ ದೇವರ ಅನುಗ್ರಹ ಸಹ ಮಗುವಿಗೆ ಲಭಿಸುತ್ತದೆ. ಇದರಿಂದ ಮಗುವಿಗೆ ಆಯುರಾರೋಗ್ಯ, ಐಶ್ವರ್ಯ ಎಲ್ಲವೂ ಲಭಿಸುತ್ತದೆ ಎಂಬುದು ಜನರ ಬಲವಾದ ನಂಬಿಕೆ.

) ಮಗುವಿಗೆ ಕಿವಿ ಚುಚ್ಚುವ ಶಾಸ್ತ್ರ : ಮಗುವಿಗೆ ಮುಡಿಕೊಟ್ಟ ಅನಂತರ ಕಿವಿಚುಚ್ಚುವುದುಂಟು. ಈ ಎರಡೂ ಶಾಸ್ತ್ರಗಳು ದೇವಾಲಯದಲ್ಲಿ ಒಂದೇ ದಿನ ನಡೆಯುತ್ತವೆ. ಈ ಶಾಸ್ತ್ರವನ್ನು ಕಾದಣಿ ವಿಳಾ, (ಕಿವಿ ಚುಚ್ಚುವ ಸಂಭ್ರಮ), ಕಾದು ಕುತ್ತುಚ್ಚಡಂಗು, (ಕಿವಿ ಚುಚ್ಚುವ ಶಾಸ್ತ್ರ), ಕಾದುಕುತ್ತು ಕಲ್ಯಾಣಂ (ಕಿವಿ ಚಿಚ್ಚುವ ಕಲ್ಯಾಣವೆಂದೆಲ್ಲ ಕರೆಯುತ್ತಾರೆ. ಅಲ್ಲದೆ ಮಗುವಿಗೆ ಮುಡಿಕೊಟ್ಟು ಒಂದು ತಿಂಗಳ ಅನಂತರವೇ ಕಿವಿ ಚುಚ್ಚಬೇಕೆಂಬ ನಂಬಿಕೆ ಕೆಲವು ಜನರಲ್ಲಿದೆ. ಈ ಕಿವಿಚುಚ್ಚುವ ಶಾಸ್ತ್ರವನ್ನು ಆಹ್ವಾನ ಪತ್ರವನ್ನು ಅಚ್ಚು ಹಾಕಿಸಿ ತುಂಬ ಸಂಭ್ರಮದಿಂದ ಆಚರಿಸುತ್ತಾರೆ. ಕಿವಿಯನ್ನು ಚುಚ್ಚಿ ಚಿನ್ನದ ಓಲೆಯನ್ನು ಹಾಕುತ್ತಾರೆ. ಹಿಂದಿನ ಕಾಲದಲ್ಲಿ ಬತ್ತದಿಂದ ಕಿವಿಚುಚ್ಚಲಾಗುತ್ತಿತ್ತು ಎಂದು ಜನಸಾಮಾನ್ಯರು ಹೇಳುತ್ತಾರೆ.

ವಿಜೃಂಭಣೆಯಿಂದ ಇದನ್ನು ಮಾಡುವ ಜನರು ಸೋದರಮಾವನನ್ನು ಕರೆಸಿ ಹೋತವನ್ನು ಕತ್ತರಿಸಿ ತಲೆ ಮುಡಿಕೊಡಿಸುತ್ತಾರೆ. ಕಿವಿಚುಚ್ಚಲು ಒಳ್ಳೆಯ ಮುಹೂರ್ತವನ್ನು ನೋಡಿ ಸೋದರ ಮಾವನ ಮಡಿಲಲ್ಲಿ ಕೂರಿಸಿ ಆಚಾರಿ ಕೈಯಿಂದ ಕಿವಿ ಚುಚ್ಚಿಸಿ ಓಲೆಯನ್ನು ಹಾಕಿಸುತ್ತಾರೆ. ಈ ರೀತಿ ಕಿವಿ ಚುಚ್ಚುವುದರಿಂದ ಯಾವ ದುಷ್ಟಶಕ್ತಿಯ ತೊಂದರೆಯೂ ಮಗುವಿಗೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ಈ ರೀತಿಯ ಕಿವಿ ಚುಚ್ಚುವ ಆಚರಣೆ ದೇವಾಲಯದಲ್ಲಿಯೇ ನಡೆಯುತ್ತಿತ್ತು. ಅಂದರೆ ದೇವಾಲಯದಲ್ಲಿ ಕಿವಿಚುಚ್ಚಿ ಅನಂತರ ಜನರಿಗೆ ಅಡುಗೆ ಮಾಡಿ ಬಡಿಸುತ್ತಿದ್ದರು. ಆದರೆ ಪ್ರಸ್ತುತದಲ್ಲಿ ಆ ಅಭ್ಯಾಸ ಬಿಟ್ಟು ಹೋಗಿ ಈ ಶಾಸ್ತ್ರವನ್ನು ಕಲ್ಯಾಣ ಮಂಟಪಗಳಲ್ಲಿ ನಡೆಸುತ್ತಾರೆ. ಅನುಕೂಲಕ್ಕೆ ತಕ್ಕಂತೆ ಸೋದರ ಮಾವ ಚಿನ್ನದ ಓಲೆ, ಹೊಸಬಟ್ಟೆ, ದುಡ್ಡು, ಅಕ್ಕಿ, ಹಣ್ಣು, ತೆಂಗಿನಕಾಯಿ, ಮಡಕೆ, ಹಂಡೆ, ಆಡು, ಸಿಹಿ ತಿಂಡಿಗಳು, ಕಾಲಂದಿಗೆ ಹೀಗೆ ಹಲವಾರು ವಸ್ತುಗಳನ್ನು ಉಡುಗೊರೆಯಾಗಿ ಮಗುವಿಗೆ ಕೊಡುತ್ತಾನೆ.

ಸೋದರಮಾನ ಉಡುಗೊರೆಯನ್ನು ವಾದ್ಯಮೇಳಗಳೊಡನೆ ತರುತ್ತಾನೆ. ಪ್ರಾರಂಭದಲ್ಲಿ ಈ ಶಾಸ್ತ್ರವನ್ನು ದುಷ್ಟಶಕ್ತಿಗಳಿಂದ ಮಗುವನ್ನು ರಕ್ಷಿಸಲು ಮಾಡುತ್ತಿದ್ದರು. ಆದರೆ ಕಾಲಾಂತರದಲ್ಲಿ ಸೋದರ ಮಾವನ ಬಳಿ ಉಡುಗೊರೆ ಪಡೆಯುವ ಸಲುವಾಗಿಯೇ ಮಾಡುವಂತಿದೆ. ತವರು ಮನೆಯ ಸ್ಥಾನಮಾನವನ್ನು ಗಂಡನ ಮನೆಯವರಿಗೆ ತಿಳಿಯಪಡಿಸಲು ಇಂದು ಈ ಶಾಸ್ತ್ರವನ್ನು ಆಚರಿಸಲಾಗುತ್ತಿದೆ ಎಂದು ಹೇಳಬಹುದು.

– ಎ.ಬಿ. ಅನುವಾದ ಆರ್. ಎಸ್.

ತಮಿಳರ ಸಾರು ಮತ್ತು ಪಲ್ಯದ ಬಗೆಗಳು : ತಮಿಳು ನಾಡಿನ ಜನರ ಪ್ರಮುಖ ಆಹಾರ ಧಾನ್ಯ ಅಕ್ಕಿ, ಮೊದಲು ಅವರು ಕಂಬು (ನವಣೆ), ಚೋಳಂ (ಜೋಳ), ಕೇಳ್‌ವರಗು (ರಾಗಿ) ಮೊದಲಾದ ಧಾನ್ಯಗಳನ್ನು ಆಹಾರಕ್ಕಾಗಿ ಬಳಸುತ್ತಿದ್ದರು. ಆದರೆ ಅವುಗಳ ಬಳಕೆ ಇಂದು ಕಡಿಮೆಯಾಗಿ ಅಕ್ಕಿಯೇ ಅವರ ಪ್ರಮುಖ ಆಹಾರ ಧಾನ್ಯವಾಗಿವೆ. ಅವರು ಅಕ್ಕಿಯ ಜೊತೆಗೆ ತರಕಾರಿ, ಬೇಳೆ ಇತ್ಯಾದಿಗಳನ್ನು ಆಹಾರಕ್ಕೆ ಬಳಸುತ್ತಾರೆ. ಸಾರು ಮತ್ತು ಪಲ್ಯಗಳ ಬಗೆಗಳು ಭೋಜನಕ್ಕೆ ರುಚಿ ಕೊಡುವಂಥವು.

ಜನಪದರ ಸಾರು ಮತ್ತು ಪಲ್ಯದ ಬಗೆಗಳನ್ನು ತಮಿಳುನಾಡಿನ ಪ್ರದೇಶಕ್ಕೆ ತಕ್ಕಂತೆ ಮೂರು ಭಾಗಗಳಾಗಿ ವಿಭಾಗಿಸಬಹುದು. ೧. ದಿನನಿತ್ಯ ಮಾಡುವ ಸಾರು ಮತ್ತು ಪಲ್ಯ, ೨. ಹಬ್ಬಹರಿದಿನಗಳಲ್ಲಿ ಮಾಡುವ ಸಾರು ಮತ್ತು ಪಲ್ಯ, ೩. ಬಾಣಂತಿಗೆ ಮಾಡುವ ಪಥ್ಯದ ಸಾರು.

ಸಾರಿಗೆ ಬಗೆಗಳು : ಜನಪದರ ಸಾರಿನ ಬಗೆಗಳು ಬಹಳ ಸರಳವಾದವು. ಆಯಾಯ ಕಾಲದಲ್ಲಿ ಕಡಿಮೆ ಬೆಲೆಗೆ ಹೆಚ್ಚಾಗಿ ಸಿಗುವ ತರಕಾರಿಗಳನ್ನು ಉಪಯೋಗಿಸಿಕೊಂಡು ಸಾರನ್ನು ತಯಾರಿಸುತ್ತಾರೆ. ಅವರು ಸಾರಿಗೆ ಹುಳಿ ಮತ್ತು ಉಪ್ಪುನ್ನು ಹೆಚ್ಚಾಗಿ ಸೇರಿಸುತ್ತಾರೆ. ಹುಳಿಯ ರುಚಿಗಾಗಿ ಟೊಮ್ಯಾಟೊ, ಮಾವಿನಕಾಯಿ ಹುಣಿಸೆಹಣ್ಣುಗಳನ್ನು ಉಪಯೋಗಿಸುತ್ತಾರೆ.

ಬೆಂಡೆಕಾಯಿ, ಬದನೆಕಾಯಿ, ನುಗ್ಗೆಕಾಯಿ, ಮೂಲಂಗಿ, ಕ್ಯಾರೆಟ್ ಮೊದಲಾದ ತರಕಾರಿಗಳೊಡನೆ ತೊಗರಿಬೇಳೆಯನ್ನು ಸೇರಿಸಿ ಮಾಡಲಾಗುವ ದ್ರವಪದಾರ್ಥವನ್ನೇ ಸಾರು ಎಂದು ಕರೆಯಲಾಗುತ್ತದೆ.

ತರಕಾರಿಗಳನ್ನು ಹಾಕಿ ಹುಳಿ ಸೇರಿಸಿ ಮಾಡಲಾಗುವ ಸಾರಿನಲ್ಲಿ ಹುಳಿಸಾರು ಮತ್ತು ಖಾರದ ಸಾರು ಎಂಬವು ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಮೇಲೆ ಹೆಸರಿಸಿದ ತರಕಾರಿಯ ಆಧಾರದ ಮೇಲೆ ಸಾರನ್ನು ಖಾರದ ಸಾರು ಇಲ್ಲವೇ ಹುಳಿ ಸಾರು ಎಂದು ಗುರುತಿಸಬಹುದು. ಮುಖ್ಯವಾಗಿ ಬದನೆಕಾಯಿಂದ ಮಾಡುವ ಸಾರು ಖಾರದ ಸಾರು ಆಗಿರುತ್ತದೆ ಮತ್ತು ಬೆಂಡೆಕಾಯಿಂದ ಮಾಡುವ ಸಾರು ಹುಳಿ ಸಾರು ಆಗಿರುತ್ತದೆ. ಜನಪದರು ಎಲ್ಲ ಬಗೆಯ ತರಕಾರಿಗಳನ್ನು ಸಾರಿಗೆ ಉಪಯೋಗಿಸುತ್ತಾರೆ. ತರಕಾರಿಗಳೊಡನೆ ಅವರೆಕಾಲು, ಅಳಸಂದೆಕಾಳು, ಕಡಲೆಕಾಳುಗಳನ್ನು ಸೇರಿಸಿ ಖಾರದ ಸಾರನ್ನು ಮಾಡುತ್ತಾರೆ.

ಪಲ್ಯದ ಬಗೆಗಳು : ಎಲ್ಲ ವಿಧದ ತರಕಾರಿಗಳನ್ನು ಉಪಯೋಗಿಸಿ ಹಲವಾರು ಬಗೆಯ ಪಲ್ಯ, ಸಾಗು ಮಾಡುತ್ತಾರೆ. ತರಕಾರಿಗಳನ್ನು ಎಣ್ಣೆಯಲ್ಲಿ ಹುರಿದು ಕರಿದ ಪಲ್ಯವನ್ನು ತಯಾರಿಸುತ್ತಾರೆ. ಜೊತೆಗೆ ಮಾವಿನಕಾಯಿ ಇಲ್ಲವೆ ಟೊಮೊಟೊ ಸೇರಿಸುತ್ತಾರೆ.

ಒಂದೇ ತರಕಾರಿಯಿಂದ ಬಗೆ ಬಗೆಯ ಪಲ್ಯ, ಸಾಗುಗಳನ್ನು ಮಾಡುವ ರೂಢಿ ಜನಪದರಲ್ಲಿದೆ. ಉದಾಹರಣೆಗೆ; ಬೆಂಡೆಕಾಯಿಯನ್ನು ತೆಗೆದುಕೊಂಡರೆ ೧. ಬೆಂಡೆಕಾಯಿಯನ್ನು ಶುಚಿಗೊಳಿಸಿ ಚಿಕ್ಕ ಚಿಕ್ಕ ತುಂಡಾಗಿ ಕತ್ತರಿಸಿಕೊಂಡು ಈರುಳ್ಳಿಯೊಡನೆ ಸೇರಿಸಿ ಹುರಿದು ಅದರೊಡನೆ ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಜೀರಿಗೆ, ಸರಳವಾಗಿ ರುಬ್ಬಿದ ಮಸಾಲೆ ಹಾಕಿ ಹುರಿದು ಬೆಂಡೆಕಾಯಿ ಪಲ್ಯ ಮಾಡುತ್ತಾರೆ. ೨. ಬೆಂಡೆಕಾಯಿಯನ್ನು ಚೆನ್ನಾಗಿ ಎಣ್ಣೆಯಲ್ಲಿ ಹಾಕಿ ಉಪ್ಪು ಖಾರ ಸೇರಿಸಿ ಕಪ್ಪಾಗದಂತೆ ಕರದಿ ಪಲ್ಯವನ್ನು ಸಿದ್ಧಪಡಿಸುತ್ತಾರೆ. ೩. ಬೆಂಡೆಕಾಯಿಯನ್ನು ಈರುಳ್ಳಿ ಟೊಮ್ಯಾಟೊ ಜೊತೆ ಹುರಿದು ಮಸಾಲೆ ಪುಡಿ ಸೇರಿಸಿ ಒಂದು ಬಗೆಯ ಪಲ್ಯ ಮಾಡುತ್ತಾರೆ.

ಇದೇ ರೀತಿಯಲ್ಲಿ ಒಂದೊಂದು ತರಕಾರಿಯನ್ನು ಮೇಲೆ ಹೇಳಿದ ರೀತಿ ಮಾಡಿ ಪಲ್ಯ ಕರಿದ ಪಲ್ಯ ಮತ್ತು ಗೊಜ್ಜುಗಳನ್ನು ತಯಾರಿಸುತ್ತಾರೆ. ಜನಪದರಲ್ಲಿ ಗೊಜ್ಜು ಮತ್ತು ಸಾರು ಬೇರೆ ಬೇರೆ ರೀತಿ ಇರುತ್ತವೆ. ಎಲ್ಲ ವಿಧವಾದ ತರಕಾರಿಗಳನ್ನು ಗೆಣಸುಗಳನ್ನು ಚೆನ್ನಾಗಿ ಬೇಯಿಸಿ ಅದರೊಡನೆ ತೆಂಗಿನಕಾಯಿ, ಜೀರಿಗೆ, ಹಸಿಮೆಣಸಿನಕಾಯಿ ಸೇರಿಸಿ ರುಬ್ಬಿ ಸಾಗು ಮಾಡುತ್ತಾರೆ. ಅದಕ್ಕೆ ಈರುಳ್ಳಿಯ ಒಗ್ಗರಣೆಯನ್ನು ಸಹ ಕೊಡುತ್ತಾರೆ. ತಮಿಳುನಾಡಿನ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ತೆಂಗಿನ ಎಣ್ಣೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕೆಲವರು ಸಾಗುವಿನಲ್ಲಿ ಹುಳಿಯ ರುಚಿಗಾಗಿ ಮೊಸರನ್ನು ಸೇರಿಸುವುದುಂಟು. ಬಹುಪಾಲು ಜನ ಸಾಗುವಿನಲ್ಲಿ ಹುಳಿ ರುಚಿಗೆ ಮಾವಿನ ಕಾಯಿಯನ್ನೇ ಸೇರಿಸುತ್ತಾರೆ.

ತರಕಾರಿ ಸಾರು ಎಂಬುದು ತರಕಾರಿ ಮತ್ತು ಬೇಳೆಯನ್ನು ಸೇರಿಸಿ ಮಾಡುವಂಥದು. ಇದಕ್ಕೆ ಸಣ್ಣ ಬೇಳೆ, ದೊಡ್ಡ ತೊಗರಿಬೇಳೆ, ಕಡಲೆಬೇಳೆ ಮೊದಲಾದ ಬೇಳೆಗಳನ್ನು ಉಪಯೋಗಿಸುತ್ತಾರೆ.

. ದಿನನಿತ್ಯ ಮಾಡುವ ಸಾರು : ಜನಪದರ ದಿನನಿತ್ಯದ ಸಾರಿನ ಬಗೆಗಳು ಬಹಳ ಸರಳವಾದವು. ದಿನನಿತ್ಯ ಸಿಗುವ ತರಕಾರಿಗಳನ್ನು ಉಪಯೋಗಿಸಿಕೊಂಡು ಸಾರು, ಪಲ್ಯ ಮೊದಲಾದವುಗಳನ್ನು ತಯಾರಿಸುತ್ತಾರೆ. ತಮಿಳರ ದಿನನಿತ್ಯದ ಆಹಾರದಲ್ಲಿ ಕೀರೆಸೊಪ್ಪಿಗೆ ಪ್ರಮುಖವಾದ ಸ್ಥಾನವಿದೆ. ಕೀರೆ ಸೊಪ್ಪಿನಲ್ಲಿ ಔಷಧೀಯ ಗುಣವಿರುವುದರಿಂದ ಜನಪದರು ದಿನನಿತ್ಯದ ಆಹಾರದಲ್ಲಿ ಬಳಸುತ್ತಾರೆ. ಸಾರು, ಪಲ್ಯ, ರಸಂ, ಮಜ್ಜಿಗೆ ಇತ್ಯಾದಿಗಳು ದಿನನಿತ್ಯದ ಊಟದಲ್ಲಿ ಸ್ಥಾನ ಪಡೆದಿವೆ. ಆದರೆ ಸಾಮಾನ್ಯವಾಗಿ ದಿನವೂ ಈ ರೀತಿಯ ಅಡುಗೆ ಮಾಡಲಾಗುವುದಿಲ್ಲ. ಬದಲಾಗಿ ಒಂದು ತರಕಾರಿಯನ್ನೇ ಉಪಯೋಗಿಸಿ ಒಂದು ಸಾರು, ಒಂದು ಪಲ್ಯ ಎಂಬ ರೀತಿಯಲ್ಲಿಯೇ ಅಡುಗೆ ಮಾಡುವುದು ರೂಢಿ. ಶುಕ್ರವಾರ ಮತ್ತು ಮಂಗಳವಾರ ಈ ಎರಡು ದಿನಗಳಲ್ಲಿ ತರಕಾರಿಗಳನ್ನೇ ಉಪಯೋಗಿಸಿ ಸಾರನ್ನು ಮಾಡುತ್ತಾರೆ. ಮಾಂಸಾಹಾರಿಗಳ ಮನೆಯಲ್ಲೂ, ಈ ಎರಡು ದಿನಗಳಲ್ಲಿ ಬೇಳೆ ಸಾರನ್ನೇ ಮಾಡುತ್ತಾರೆ. ಸಾಮಾನ್ಯವಾಗಿ ವಾರದ ಕೊನೆಯ ದಿನಗಳು ಮಾಂಸಾಹಾರಕ್ಕೆ ಮೀಸಲಾಗಿರುತ್ತವೆ. ಆ ದಿನಗಳಲ್ಲಿ ಜನಪದರು ತಮ್ಮ ಅಭಿರುಚಿಗೆ ತಕ್ಕಂತೆ ಆಡಿನ ಮಾಂಸ, ಕೋಳಿ ಮಾಂಸ, ಮೀನು, ಒಣಮೀನು, ಮೊಟ್ಟೆ ಮೊದಲಾದವುಗಳನ್ನು ಉಪಯೋಗಿಸಿ ಮಾಂಸಹಾರವನ್ನು ಸಿದ್ಧಪಡಿಸುತ್ತಾರೆ. ಉಳಿದ ದಿನಗಳಲ್ಲಿ ಹುಳಿಸಾರು, ಖಾರದ ಸಾರು, ರಸಂ ಮೊದಲಾದ ಸರಳ ಸಾರುಗಳನ್ನು ಮಾಡುತ್ತಾರೆ.

. ಹಬ್ಬದ ದಿನಗಳಲ್ಲಿ ಸಾರು : ಹಿಂದೂಗಳು ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಮಾಂಸದ ಸಾರನ್ನು ಮಾಡುವುದಿಲ್ಲ. ಹಬ್ಬಕ್ಕೆ ತಕ್ಕಂತೆ ಬೇಳೆ ಸಾರು, ಸಾಗು, ಪಲ್ಯ, ಕರಿದ ಪಲ್ಯ, ಗೊಜ್ಜು ತಯಾರಿಸಿ ಇವುಗಳ ಜೊತೆಗೆ ಹಪ್ಪಳ, ಪಾಯಸ ಇತ್ಯಾದಿಗಳನ್ನು ಮಾಡಿ ತಿನ್ನುತ್ತಾರೆ. ಕೆಲವು ಹಬ್ಬಗಳಲ್ಲಿ ಮತ್ತು ಹಬ್ಬದ ಅನಂತರದ ದಿನಗಳಲ್ಲಿ ಮಾಂಸದ ಸಾರನ್ನು ಮಾಡುವುದು ಜನಪದರಲ್ಲಿ ರೂಢಿಗತವಾಗಿದೆ. ಅಂದು ಎಷ್ಟೇ ಬೆಲೆಯಾದರೂ ಆಡಿನ ಮಾಂಸವನ್ನು ಕೊಂಡು ತಂದು ಸಾರನ್ನು ಮಾಡುತ್ತಾರೆ. ಆಡಿನ ಮಾಂಸದಲ್ಲಿ ವೈವಿಧ್ಯಮಯವಾದ ಅಡುಗೆ ಮಾಡುತ್ತಾರೆ. ಇಡ್ಲಿ, ದೋಸೆ ಮೊದಲಾದ ತಿಂಡಿಗಳಿಗೆ ತಕ್ಕಂತೆ ತೆಂಗಿನಕಾಯಿಯನ್ನು ಹೆಚ್ಚು ಸೇರಿಸಿದ ಸಾರು, ಅನ್ನಕ್ಕೆ ತಕ್ಕಂತೆ ತೆಂಗಿನಕಾಯಿ ಸಮಪ್ರಮಾಣದಲ್ಲಿ ಸೇರಿಸಿದ ಗಟ್ಟಿಸಾರನ್ನು ತಯಾರಿಸುತ್ತಾರೆ. ಮೆಣಸು ಹಾಕಿ ಮಾಂಸವನ್ನು ಕರಿದು ತಿನ್ನುತ್ತಾರೆ. ಅದೇ ರೀತಿ ಕೋಳಿ ಮಾಂಸ ಸಹ ಅಂದು ಮುಖ್ಯ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಜನಪದರು ಪೊಂಗಲ್ ಹಬ್ಬದ ದಿನದಂದು ಕಡ್ಡಾಯವಾಗಿ ಸಸ್ಯಾಹಾರದ ಅಡುಗೆಯನ್ನೇ ಮಾಡಬೇಕು. ಅಂದು ಎಲ್ಲ ತರಕಾರಿಗಳನ್ನು ಹಾಕಿ ಮಸಾಲೆ ವಸ್ತುಗಳನ್ನು (ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ) ತೆಂಗಿನಕಾಯಿ ತುರಿ ಒಂದೊಂದನ್ನು ಬೇರೆ ಹುರಿದು ಬೇಳೆಯೊಡನೆ ಸೇರಿಸಿ ಸಾರು ಮಾಡುತ್ತಾರೆ. ಉಪ್ಪಿಲ್ಲದ ಪೊಂಗಲ್‌ಗೆ ಈ ಸಾರು ತುಂಬ ರುಚಿಯಾಗಿರುತ್ತದೆ. ಅದರ ಜೊತೆ ಎಲ್ಲ ತರಕಾರಿ ಗೆಣಸನ್ನು ಹಾಕಿ ಸಾಗು, ಬೆಂಡೆಕಾಯಿ ಮತ್ತು ಟೊಮೊಟೊ ಗೊಜ್ಜು, ಹಪ್ಪಳ, ಮೊಸರು ಇತ್ಯಾದಿಗಳನ್ನು ಊಟಕ್ಕೆ ಬಳಸುತ್ತಾರೆ. ಮರುದಿನ ಮಾಂಸಾಹಾರಿ ಕುಟುಂಬಗಳು ಆಡಿನ ಮಾಂಸ ತಂದು ಸಾರು ಮಾಡಿ ಉಪ್ಪಿಲ್ಲದ ಪೊಂಗಲ್ ಜೊತೆಗೆ ತಿನ್ನುತ್ತಾರೆ.

ವಿಶೇಷ ದಿನಗಳಲ್ಲಿ ಆ ದಿನಕ್ಕೆ ತಕ್ಕಂತೆ ತರಕಾರಿ ಮತ್ತು ಕೀರೆಸೊಪ್ಪನ್ನು ಅಡುಗೆಯಲ್ಲಿ ಬಳಸುತ್ತಾರೆ. ಏಕಾದಶಿಯಂದು ಉಪವಾಸವಿದ್ದು ಇಡ್ಲಿ, ದೋಸೆಯನ್ನು ಮಾತ್ರ ತಿನ್ನುತ್ತಾರೆ. ದ್ವಾದಶಿಯಂದು ಊಟದಲ್ಲಿ ನೆಲ್ಲಿಕಾಯಿ, ಕೀರೆಸೊಪ್ಪನ್ನು ಬಳಸಲೇಬೇಕು. ಅಮಾವಾಸ್ಯೆ ಮೊದಲಾದ ದಿನಗಳಲ್ಲಿ ಹಿರಿಯರಿಗೆ ಎಡೆ ಹಾಕಲು ಬದನೆಕಾಯಿ, ಬಾಳೆಕಾಯಿ, ಕುಂಬಳಕಾಯಿ ಮೊದಲಾದವುಗಳನ್ನು ಬಳಸಿ ಅಡುಗೆ ಮಾಡುತ್ತಾರೆ.

. ಔಷಧೀಯ ಸಾರುಗಳು (ಪಥ್ಯದ ಸಾರು) : ಮುಖ್ಯವಾಗಿ ಬಾಣಂತಿಯರಿಗೆ ಮೊದಲ ಇಪ್ಪತ್ತು ದಿನಗಳವರೆಗೆ ಕೊಡಲಾಗುವ ಸಾರನ್ನು ಔಷಧಿ ಸಾರು ಅಥವಾ ಪಥ್ಯದ ಸಾರು ಎಂದು ಕರೆಯುತ್ತಾರೆ. ಮಗುವನ್ನು ಹೆತ್ತ ಮೇಲೆ ದುರ್ಬಲವಾಗಿರುವ ತಾಯಿಯ ದೇಹ ಚೇತರಿಸಿಕೊಳ್ಳಲು ಈ ಸಾರು ತುಂಬ ಉಪಯುಕ್ತ. ದೇಹವನ್ನು ಬೆಚ್ಚಗಿಡಲು ಔಷಧೀಯ ಗುಣಗಳಿರುವ ವಸ್ತುಗಳನ್ನು ಬಳಸಿ ಈ ಸಾರನ್ನು ತಯಾರಿಸುತ್ತಾರೆ. ಇಂಗು, ಟೊಮೊಟೋ, ಗಣಿಕೆಸೊಪ್ಪು, ಸುಂಡೆಕಾಯಿ, ಮೆಣಸು, ಜೀರಿಗೆ, ದನಿಯ ಮೊದಲಾದವನ್ನು ಬರಿ ಮಡಿಕೆಯಲ್ಲಿ ಹಾಕಿ ಹುರಿದು ಕುಟ್ಟಿ ಜರಡಿಯಿಂದ ಸೋಸಿ ತೆಳುವಾದ ಬಟ್ಟೆಯಲ್ಲಿ ಎತ್ತಿಕೊಂಡು ಹೆಚ್ಚು ಎಳ್ಳೆಣ್ಣೆ ಬಿಟ್ಟು ಈ ಸಾರನ್ನು ಮಾಡುತ್ತಾರೆ. ಎಳ್ಳೆಣ್ಣೆ ಮತ್ತು ಗಣಿಕೆಸೊಪ್ಪು ತಾಯಿಗರ್ಭದ ಗಾಯವನ್ನು ವಾಸಿ ಮಾಡಲು ತುಂಬ ಪರಿಣಾಮಕಾರಿಯಾದವು. ತೊಗರಿಬೇಳೆ, ಕಾಳುಗಳು, ಒಣಮೆಣಸಿನಕಾಯಿ, ಖಾರ ಪದಾರ್ಥ ಮೊದಲಾದ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ಉರಿತ ಉಂಟು ಮಾಡುವ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸುವುದಿಲ್ಲ.

ಈ ಸಾರನ್ನು ಬಾಣಂತಿಯರಲ್ಲದೆ ಇತರರು ಸಹ ಮಾಡಿ ತಿನ್ನುತ್ತಾರೆ. ಸಾಮಾನ್ಯ ದಿನಗಳಲ್ಲಿ ಹದಿನೈದು ದಿನಗಳಿಗೆ ಒಮ್ಮೆ ಮಾಡಿ ತಿನ್ನುವುದರಿಂದ ದೇಹಕ್ಕೆ ಒಳ್ಳೆಯದು. ಹಿಂದಿನ ಕಾಲದಲ್ಲಿ ದೇಹ ಆರೋಗ್ಯವಾಗಿಲ್ಲದಿದ್ದರೆ ಔಷದಿ ಸಾರನ್ನು ಬಳಸುತ್ತಿದ್ದರು. ಕೆಮ್ಮು ನೆಗಡಿಗೆ ತೂದು ವಳೈ ಎಂಬ ಒಂದು ಜಾತಿಯ ಸೊಪ್ಪಿನ ಗೊಜ್ಜು ಮಾಡಿ ತಿನ್ನುತ್ತಾರೆ. ತುಂಬ ನೆಗಡಿಯಾದರೆ ನುಗ್ಗೆಸೊಪ್ಪಿನ ರಸವನ್ನು ತಯಾರಿಸಿ ಕುಡಿಯುತ್ತಾರೆ. ಹೊಟ್ಟೆ ಹುಣ್ಣು ಆದರೆ ಗಣಿಕೆ ಸೊಪ್ಪಿನ ಸಾರು ತಯಾರಿಸಿ ತಿನ್ನುತ್ತಾರೆ. ಬಾಯಿಹುಣ್ಣು ಆದರೆ ಗಸಗಸೆ ಮತ್ತು ತೆಂಗಿನಕಾಯಿಯನ್ನು ಅರೆದು ತಿನ್ನಲು ಕೊಡುತ್ತಾರೆ. ಹೀಗೆ ಜನಪದರು ಆಹಾರದಲ್ಲಿ ಕೆಲವು ವಸ್ತುಗಳನ್ನು ಔಷಧಿಯಾಗಿ ಉಪಯೋಗಿಸಿಕೊಂಡು ಬಂದಿದ್ದಾರೆ ಎಂಬುದನ್ನು ಗಮನಿಸಬಹುದಾಗಿದೆ.

– ಪಿ.ಎಸ್.ಟಿ.ಅನುವಾದ ಆರ್.ಎಸ್.