ತಮಿಳಿನ ಸಾಂಪ್ರದಾಯಿಕ ಕಥೆಗಳು ಸಾಂಪ್ರದಾಯಿಕ ಕಥೆಗಳನ್ನು ಹೇಳುವುದರಿಂದ, ಕೇಳುವುದರಿಂದ ಇವು ನಿಜವಾಗಿಯೂ ನಡೆದಿವೆ ಎಂದು ನಂಬಲಾಗುತ್ತದೆ. ಆದರೆ ಇವು ಪುರಾಣಕಥೆಗಳಂತೆ ಪ್ರಾಚೀನ ಕಾಲದಲ್ಲಿ ಹುಟ್ಟಿರುವವಲ್ಲ. ಇವು ಶ್ರೀ ಸಾಮಾನ್ಯರ ಕತೆಯನ್ನೇ ಹೇಳುತ್ತವೆ. ಇವುಗಳ ಕಥಾನಾಯಕರು ಮನುಷ್ಯರೇ ಆಗಿರುತ್ತಾರೆ. ವೇದಗಳು, ಆಳುವ ನಾಯಕರು, ವೀರರು, ಯುದ್ಧಗಳು, ಜಯಗಳು, ಹಿಂದಿನ ರಾಜರುಗಳು ಅವರ ಶೌರ್ಯ, ಆಳ್ವಿಕೆಯ ಆರಂಭ ಮೊದಲಾದವು ಈ ಕಥೆಗಳಲ್ಲಿ ವಸ್ತುವಾಗಿರುತ್ತವೆ. ಈ ಕಥಾ ಪರಂಪರೆಯನ್ನು ಗ್ರಂಥಸ್ಥ ಇತಿಹಾಸ ಎನ್ನದೆ ಮೌಖಿಕ ಇತಿಹಾಸ ಎನ್ನಬಹುದಾಗಿದೆ.

ಈ ಕಥೆಗಳು ಒಂದು ನಿಗದಿತ ಪ್ರದೇಶದ ಜನ ಜೀವನದ ವಿಚಾರಗಳಿಗೆ ಹೊಂದಿಕೆಯಾಗುವಂತೆ ರಚಿತವಾಗಿರುತ್ತವೆ. ಕಲ್ಪನೆಯ ನಯಗಾರಿಕೆ ಹೊಂದಿದ್ದು, ಮೇಲು ಕೀಳು ಎಂಬ ತಾರತಮ್ಯ ರಹಿತವಾದ ವಸ್ತುನಿಷ್ಠ ವಿಚಾರವನ್ನು ಹೇಳುವುದರಿಂದ ನೈಜ ಇತಿಹಾಸದ ನಿರ್ಮಾಣಕ್ಕೆ ಇವು ಸಹಾಯಕವಾಗುತ್ತವೆ. ಇವು ಜನರನ್ನು ಉತ್ತಮವಾದ ಬದುಕನ್ನು ನಡೆಸುವಂತೆ ಕಲಿಸುವ ಶ್ರೀ ಗುರುವಿನ ಪಾತ್ರವನ್ನು ನಿರ್ವಹಿಸುತ್ತವೆ. ಒಂದು ನಿರ್ದಿಷ್ಟ ಜನಸಮೂಹದ ಇತಿಹಾಸ ತಿಳಿಯಲು ದಾಖಲೆ ಪತ್ರಗಳನ್ನು ಕೂಡಿಡುವ ಕಡತದ ರೀತಿಯಲ್ಲಿ ಇರುವ ಅಸಾಧಾರಣ ಅನುಭವವಾಗಿವೆ. ಅಲ್ಲದೆ ಪ್ರಸ್ತುತತೆಯನ್ನು ಸಂಶೋಧನೆಯ ಸಹಾಯವಿಲ್ಲದೆ ತಿಳಿದುಕೊಳ್ಳಬಹುದಾದ ಸ್ಥಿತಿ ಎಂದು ಬಗೆ ಬಗೆಯಾಗಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇವುಗಳಿಂದ ಸೀಮಿತ ವಲಯದ ಜನರ ಅವಶ್ಯಕತೆಗಳನ್ನು ನೆರವೇರಿಸಲು ಸಹಾಯಕವಾಗುತ್ತದೆ. ಅಲ್ಲದೆ ಜನಜೀವನದ ಕನ್ನಡಿಯಾಗಿ ತೋರುತ್ತದೆ. ಈ ಸಾಂಪ್ರದಾಯಿಕ ಕತೆಗಳು ಮನೋರಂಜನೆ ಅಥವಾ ಕಾಲಹರಣದ ಹರಟೆಗಾಗಿಯಾಗಲೀ ಹೇಳಿದುವಲ್ಲ. ಜನರಿಗೆ ಈ ಮೂಲಕ ಲೋಕಜ್ಞಾನ ತಿಳಿಸುವುದಕ್ಕಾಗಿ ಹಿರಿಯರು ಕಂಡುಕೊಮಡ ದಾರಿ. ಇದರಿಂದ ಜನರ ಮನೋವ್ಯಾಪಾರ ಸನ್ನಡತೆಯ ಕಡೆಗೆ ಪರಿವರ್ತನೆಯಾಗುವಂತೆ ಇವು ಪ್ರೇರೇಪಿಸುತ್ತವೆ. ಈ ಕಥೆಗಳನ್ನು ಒಂದು ವ್ಯವಸ್ಥಿತ ನೆಲೆಯಲ್ಲಿ, ನಂಬಿಕೆ, ಉದ್ದೇಶಗಳನ್ನಿಟ್ಟು ಕೊಮಡು ನೋಡಿದಾಗ ಇವು ಸುಲಭವಾಗಿ ಅರ್ಥವಾಗುತ್ತವೆ. ಇದರ ನಾಯಕ ನಾಯಕಿಯರು ಮಹಾನ್ ಸಾಧನೆಗೈದವರಲ್ಲ; ಶ್ರೀಸಾಮಾನ್ಯರು. ಇತರರಿಗಿಂತ ಭಿನ್ನವಾದ ವಿಶಿಷ್ಟವಾದ ಬದುಕನ್ನು ನಡೆಸಿರುವವರಾಗಿರುತ್ತಾರೆ. ಇಲ್ಲಿ ಈ ನಾಯಕರು ತಮ್ಮ ಸ್ವಜ್ಞಾನ, ಪರಿಶ್ರಮದಿಂದಲೇ ಎದುರಾಗುವ ಎಲ್ಲ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ಈ ಪಾತ್ರಗಳು ತಮಗೆ ತಿಳಿಯದ, ಗೊತ್ತಿರದ ವಿಚಾರವನ್ನು ಕಲಿಯುವ ಮೂಲಕ ತಮ್ಮ ಜಿಜ್ಞಾಸೆಯ ಹಸಿವನ್ನು ತೀರಿಸಿಕೊಳ್ಳುತ್ತಾರೆ. ಈ ಕಥೆಗಳು ಸಾಮಾನ್ಯ ವಿಚಾರಗಳನ್ನು ಹೇಳುವ ಜೊತೆಗೆ ಮಹತ್ತ್ವ ಪೂರ್ಣ ವಿಚಾರಗಳನ್ನು ಕುರಿತುದಾಗಿರುತ್ತವೆ. ಕಥೆಗಳು ಜನರಿಗೆ ಉತ್ತಮ ಸಂದೇಶವನ್ನು ನಾಟಕೀಯ ತಂತ್ರಗಳ ಮೂಲಕ ಹೇಳುತ್ತವೆ. ಈ ಕಥೆಗಳು ಆಯಾ ಭಾಷಿಕ ಸಮೂಹದ ಜನರಿಗೆ ರೂಢಿಗತವಾಗಿ ಅರ್ಥವಾಗುತ್ತವೆ.

ಉದಾ: ತೊಂಡಮಾನ್ ಪುದುಕೋಟೆಗೆ ಹತ್ತಿರದಲ್ಲಿರುವ ಊರುಗಳಲ್ಲಿ ವಾಸಿಸುತ್ತಿದ್ದ ಕುಂಬಾರ ಜಾತಿಯವರು ಮಧುರೈಗೆ ಬಂದ ಕಥೆಯೊಂದು ಹೀಗಿದೆ: ‘ಒಂದು ದಿನ ಮೆರೆವಣಿಗೆಗೆ ಬಂದ ಯುವರಾಜ ಕುಂಬಾರ ಜಾತಿಯ ಹೆಣ್ಣುಗಳಿಬ್ಬರನ್ನು ಕಂಡು ಅವರ ಮೇಲೆ ಆಸೆಗೊಂಡು ಮದುವೆಗೆ ಒತ್ತಾಯಿಸುತ್ತಾನೆ. ಇದನ್ನು ಆ ಹೆಣ್ಣುಗಳ ಕಡೆಯ ಕುಂಬಾರರ ಬಳಗ ಒಪ್ಪುವುದಿಲ್ಲ. ಆಗ ಏನು ಮಾಡುವುದು ಎಂದು ಯೋಚಿಸುತ್ತಿರಲು, ಈ ಕಡೆ ಹೆಣ್ಣುಗಳಿಬ್ಬರೂ ತಾವೇ ಸ್ವಯಂ ಮಡಕೆ ಸುಡುವ ಗೂಡಿನಲ್ಲಿ ಬಿದ್ದು ಮರಣವನ್ನಪ್ಪಿದರು. ಇದನ್ನು ತಿಳಿದ ಯುವರಾಜ ಎಲ್ಲರನ್ನು ಹಿಡಿದು ತರಲು ಸೇವಕರಿಗೆ ಆಜ್ಞಾಪಿಸುತ್ತಾನೆ. ಇದನ್ನು ಅರಿತ ಕುಂಬಾರರು ಹೆದರಿ ಆ ರಾತ್ರಿಯೇ ಪುದುಕೋಟೆಯನ್ನು ಬಿಟ್ಟು ಮಧುರೈ ರಾಮನಾಥಪುರಂ ಮೊದಲಾದ ಪ್ರದೇಶಗಳಿಗೆ ಹೋಗಿ ನೆಲೆಗೊಂಡರು.

– ಎಸ್. ವಿ. ಅನುವಾದ ಪಿ.ಎಂ.

ತಮಿಳು ಗಾದೆಗಳು ಗಾದೆ ಎಂಬುದು ತೊಲ್ಕಾಪ್ಪಿಯಂ ಎಂಬ ವ್ಯಾಕರಣ ಗ್ರಂಥದ ಪ್ರಕಾರ ಸರಳ, ಸಂಕ್ಷಿಪ್ತ ಸೂಕ್ಷ್ಮ, ಮೊನಚು ಮುಂತಾದ ಗುಣಗಳನ್ನು ಒಳಗೊಂಡಿರುವ ಒಂದು ಅತಿಶಯ ಉಕ್ತಿ. ಸಾಲೈ ಇಳಂದಿರೈಯನ್ ಎಂಬ ಜಾನಪದ ವಿದ್ವಾಂಸರು ಗಾದೆಯ ಬಗ್ಗೆ ವಿಶ್ಲೇಷಿಸುತ್ತ, ಅದನ್ನು ವಿವರಿಸುವ ಸರಿಯಾದ ಸಾಹಿತ್ಯ ಇಲ್ಲಿಯವರೆಗೆ ರಚನೆ ಆಗಿಲ್ಲ ಎಂದು ಹೇಳುತ್ತಾರೆ. ‘ಬದುಕಿನ ಸೂಕ್ಷ್ಮ ವಾಸ್ತವ ಸಂಕ್ಷಿಪ್ತ ರೂಪವೇ ಗಾದೆ’ ಎಂಬ ಆಕ್ಸ್‌ಫರ್ಡ್ ನಿಘಂಟುವಿನ ಅರ್ಥವನ್ನು ಈ ವಿದ್ವಾಂಸರು ಪರಿಗಣಿಸಿದ್ದಾರೆ. ಗಾದೆಗಳು ಸಾಮಾನ್ಯವಾಗಿ ಉಪಮೆಗಳನ್ನು ಒಳಗೊಂಡು ಬಳಕೆಯಾಗುವುದಿದ್ದರೂ ಈ ವಿದ್ವಾಂಸರು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದೆ ‘ಗಾದೆಯೇ ಬೇರೆ, ಉಪಮೆಯೇ ಬೇರೆ’ ಎಂದು ವಿಭಾಗ ಮಾಡಿಕೊಂಡಿದ್ದಾರೆ. ಹಾಗೆ ವಿಭಾಗ ಮಾಡಿಕೊಂಡರೂ ಉಪಮೆಗಳ ನಿರಂತರ ಬಳಕೆಯನ್ನು, ಉಪಮೆಗಳು ಗಾದೆಗಳೊಳಗೆ ಸೂಕ್ಷ್ಮವಾಗಿ ಬೆರೆತು ಹೋಗಿರುವ ಅಂಶವನ್ನು ಆ ವಿದ್ವಾಂಸರು ನಿರಾಕರಿಸುವುದಿಲ್ಲ.

ಅಂಥ ಎರಡು ಗಾದೆಗಳನ್ನು ಅವರು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ೧. ಏಳೂರು ಸುತ್ತಿ ನನ್ನೆಸರು ಮುತ್ತಿ. ೨. ಶುಂಟಿ ಲಾಭ ಅರಿಸಿನದಲ್ಲಿ. ಮೊದಲನೆಯ ಗಾದೆಯೂ ತಿರುವೈಯಾರು ಪ್ರದೇಶದಲ್ಲಿ ಪ್ರತಿ ವರ್ಷವೂ ನಡೆಯುವ ಒಂದು ಜಾತ್ರೆಯನ್ನು ಹಿನ್ನೆಲೆಯಾಗಿ ಉಳ್ಳದ್ದಾಗಿದೆ. ಈ ಜಾತ್ರೆ ಏಳೂ ಗ್ರಾಮಗಳು ಸೇರಿ ನಡೆಸುವ ಜಾತ್ರೆಯಾಗಿದೆ. ವರ್ಷದ ಚೈತ್ರ ಮಾಸದ ವಿಶಾಖ ನಕ್ಷತ್ರದಂದು ತಿರುವೈಯಾರಿನಲ್ಲಿ ಪ್ರಾರಂಭದಲ್ಲಿ ಮರುದಿನ ಅಲ್ಲಿಯೇ ಮುಕ್ತಾಯವಾಗುವ ಜಾತ್ರೆ ಇದಾಗಿದೆ. ಈ ಒಂದು ದಿನದ ಅವಧಿಯಲ್ಲಿ ಐಯ್ಯಾರಪ್ಪರ್ ದೇವಾಲಯದಿಂದ ಹೊರಡುವ ಸ್ವಾಮಿಯು, ತಿರುಪಳನಮ್, ತಿರುಚೊಟ್ಟುತುರೈ, ತಿರುವೇದಿಕುಡಿ, ತಿರುಕಂಡಿಯೂರ್ (ವೀರಟ್ಟಂ), ತಿರುಪೂಂದ್ತಿರುತಿ, ತಿರುನೈತಾನಮ್ (ತಿಲ್ಲೈಸ್ಥಾನಮ್) ಈ ಆರು ಊರುಗಳನ್ನು ತಲುಪಿ, ಅಲ್ಲಿಯ ದೈವಗಳನ್ನು ಹೊರಡಿಸಿಕೊಂಡು ಮತ್ತೆ ಮರುದಿನ ತಿರುವೈಯಾರಿಗೇ ಬಂದು ಸೇರುವುದು ಒಂದು ಸಂಪ್ರದಾಯ. ಏಳು ಊರುಗಳ ದೇವರುಗಳನ್ನು ಒಟ್ಟಿಗೇ ದರ್ಶನ ಮಾಡಲು ಸುತ್ತಮುತ್ತಲಿನ ಜನ ಹೇರಳ ಸಂಖ್ಯೆಯಲ್ಲಿ ತಿರುವೈಯಾರಿಗೆ ಬರುತ್ತಾರೆ. ಹಲವು ಊರುಗಳ ಭಕ್ತರು ಭಜನೆ ಗೋಷ್ಠಿಗಳನ್ನು ನಡೆಸುವುದು ಉಂಟು. ಹೀಗೆ ದೇವರು ಹೊರಟ ಸ್ಥಳದಿಂದ ತಿರುಪಳ, ಕುಡಮುರುಟಿ, ತಿರುಚೊಟ್ಟುತುರೈ, ತಿರುವೇದಿಕುಡಿ, ತಿರುಕಂಡಿಯೂರ್ ಮುಂತಾದ ಊರುಗಳನ್ನು ಸುತ್ತುವಾಗ ಕಾವೇರಿ ನದಿಯ ದರ್ಶನವೂ ಆಗುವುದರಿಂದ ಪುಣ್ಯ ಲಭಿಸುವುದೆಂದು ಮನೆಮಠಗಳ ಭಾಗ್ಯ ವೃದ್ಧಿಸುವುದೆಂದು ಬಲವಾದ ನಂಬಿಕೆ ಈ ಆಚರಣೆಯ ಹಿನ್ನೆಲೆಯಲ್ಲಿದೆ. ಈ ಎಲ್ಲ ವಿವರಗಳ ಫಲಿತಾಂಶವೇ ‘ಏಳೂರು ಸುತ್ತಿ ನನ್ನೆಸರು ಮುತ್ತಿ’ ಎಂಬ ಗಾದೆಯಾಗಿದೆ.

ಎರನಡೆಯ ಗಾದೆಯಾ ‘ಶುಂಠಿ ಲಾಭ ಅರಿಸಿನದಲ್ಲಿ’ ಎಂಬುದರಲ್ಲಿ ಬದುಕಿನ ಒಂದು ಮುಖ ಅಡಗಿದೆ. ಸಾಮಾನ್ಯವಾಗಿ ಹಳ್ಳಿಗಳ ಬದುಕು ಬೇಸಾಯವನ್ನೇ ಅವಲಂಬಿಸಿರುತ್ತದೆ. ಒಂದು ಬೆಳೆಯಲ್ಲಿ ಉಂಟಾಗಬಹುದಾದ ನಷ್ಟವು ಇನ್ನೊಂದು ಬೆಳೆಯಲ್ಲಿ ಪರಿಹಾರ ಆಗುವ ಕ್ರಮವು ನಿರಂತರ ಪ್ರಕ್ರಿಯೆ. ಹಾಗೆಯೇ ಇಲ್ಲಿ ಲಾಭ ನಷ್ಟಗಳ ಸಮತೋಲನಕ್ಕಾಗಿ ಶುಂಠಿ ಮತ್ತು ಅರಿಸಿನ ಬೆಳೆಗಳು ಪ್ರಸ್ತಾಪವಾಗಿವೆ.

ಒಬ್ಬ ಮನುಷ್ಯ ಮಾತನಾಡುವ ರೀತಿ ನೀತಿಗಳು ಹಾವ ಭಾವಗಳು ಮುಂತಾದ ಲಕ್ಷಣಗಳಿಂದ ಅವನು ಬದುಕುತ್ತಿರುವ ಪ್ರದೇಶ, ಕುಟುಂಬದ ಹಿನ್ನೆಲೆ, ಸೇರಿರುವ ಸಮಾಜ, ಅವನ ವೃತ್ತಿ, ಆರ್ಥಿಕ ಸ್ಥಿತಿಗತಿ ಮೊದಲಾದವುಗಳನ್ನು ನಾವು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು. ಅದರೊಂದಿಗೆ ಬಳಕೆಯಾಗುವ ಭಾಷಾ ಪ್ರಯೋಗದಿಂದ ಆ ಪ್ರದೇಶದ ಜನರ ಜೀವನ ರೀತಿ, ನಾಗರಿಕತೆ, ಆರ್ಥಿಕ ಸ್ಥಿತಿಗತಿ ಮುಂತಾದವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕೆಲವು ಗಾದೆಗಳು ಹೀಗಿವೆ:

೧. ಕೊಕ್ಕರೆಯನ್ನು ಹಿಡಿಯಲು ಸೂರನ್ನು ಏರಲಾರದವನು, ಸ್ವರ್ಗಲೋಕ ಸೇರಲು ಆಕಾಶವನ್ನು ಹತ್ತಿಯಾನೆ?

೨. ಸ್ವಲ್ಪದರಲ್ಲಿ ನಿಜ ಹೇಳದವನು, ಕೋಟಿಯಲ್ಲಿ ಹೇಳಿಯಾನೆ?

೩. ಕುಳಿತವನನ್ನು ಕಟ್ಟಲಾರದವನು, ಓಡುವವನನ್ನು ಕಟ್ಟಲಾರ

೪. ಕಾಲುವೆಯನ್ನು ದಾಟದವನು, ಕಡಲನ್ನು ದಾಟನು

೫. ಊರಲ್ಲಿ ಬೆಲೆಯಾಗದ ಹಸು, ಪರ ಊರಿನಲ್ಲಿ ಬೆಲೆಯಾಗದು

೬. ಅನ್ನದಲ್ಲಿರುವ ಕಲ್ಲನ್ನು ಎತ್ತಲಾರದವನು, ಕೆಸರಲ್ಲಿ ಬಿದ್ದ ಎಮ್ಮೆಯನ್ನು ಎತ್ತಲಾರನು.

ಈ ಎಲ್ಲ ಗಾದೆಗಳ ಸಾರಾಂಶ ಒಂದೇಯಾಗಿದೆ. ಅಂದರೆ, ಚಿಕ್ಕ ಹಾಗೂ ಸುಲಭವಾದ ಕೆಲಸಗಳನ್ನು ಮಾಡದವನು ಬೃಹತ್ತಾದ ಹಾಗು ಕಠಿಣತಮವಾದ ಕೆಲಸಗಳನ್ನು ಮಾಡಲಾರ ಎಂಬುದೇ ಆಗಿದೆ.

ಸಾಮಾನ್ಯವಾಗಿ ಗಾದೆಗಳು ಎರಡು ಘಟಕಗಳನ್ನು ಹೊಂದಿರುತ್ತವೆ. ಒಂದು ಘಟಕ ಇನ್ನೊಂದರ ಪರಿಪೂರ್ಣತೆಗೆ ಸಹಕಾರಿ. ಎರಡೂ ಘಟಕಗಳು ಪ್ರತ್ಯೇಕವಾಗಿ ಪೂರ್ಣತೆಯನ್ನು ಹೊಂದಿದ್ದರೂ ಒಂದಿಲ್ಲದೆ ಇನ್ನೊಂದಿಲ್ಲ. ಇದು ಗಾದೆಗಳಲ್ಲಿ ಕಂಡು ಬರುವ ಒಂದು ಸಾಮಾನ್ಯ ಗುಣ.

ಮೀನುಗಳಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಎರಡು ಬಗೆಯ ಮೀನುಗಳನ್ನು ಹೆಸರಿಸಿ ರೂಪುಗೊಂಡಿರುವ ಒಂದು ಗಾದೆ ಹೀಗಿದೆ; ‘ಅಯಿರಿಗೆ ಯಾಕ್ಲಾ ವೇಲಾಂಗು ಚೇಷ್ಟೆ’ ಇಲ್ಲಿ ಆಯಿರು ಮತ್ತು ವೇಲಾಂಗು ಎಂಬ ಎರಡು ಜಾತಿಯ ಮೀನುಗಳು ಪ್ರಸ್ತಾಪವಾಗಿವೆ. ಆಯಿರು ಎಂಬುದು ಚಿಕ್ಕ ಆಕಾರದ ಮೀನು, ಲಘು ಸಾಮರ್ಥ್ಯವನ್ನು ಉಳ್ಳದ್ದು. ವೇಲಾಂಗು ಎಂಬುದು ದೊಡ್ಡ ಆಕಾರದ ಬಲಿಷ್ಠ ಮೀನು. ಈ ಗಾದೆಯ ಅರ್ಥ ಇಷ್ಟೇ. ಅಶಕ್ತರು ಸಶಕ್ತರಂತೆ ವರ್ತಿಸಲು ಹೋದಾಗ ಅಪಹಾಸ್ಯಕ್ಕೆ ಈಡಾಗಬೇಕಾಗುತ್ತದೆ. ಸಾರಾಂಶವೆಂದರೆ, ಯಾರು ಎಷ್ಟು ಶಕ್ತರೋ ಅವರು ಅಷ್ಟನ್ನು ಮಾತ್ರ ಮಾಡಬೇಕು ಎಂಬ ನೀತಿಯನ್ನು ಈ ಗಾದೆ ಸಾರುತ್ತದೆ.

ಇನ್ನೊಂದು ಗಾದೆ ಹೀಗಿದೆ : ‘ಕೊಯ್ಯಲಾರದವನ ಸೊಂಟದಲ್ಲಿ ಹರಿತವಾದ ಐದಾರು ಕುಡುಗೋಲು’ ಈ ಗಾದೆಯ ಹಲವಾರು ಅರ್ಥಗಳನ್ನು ಸ್ಫುರಿಸುತ್ತಿದೆ. ತಿರುಚ್ಚಿ ಜಿಲ್ಲೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಈ ಗಾದೆ, ದುಡಿದು ಬದುಕಲಾರದವನನ್ನು ಮನುಷ್ಯನೆಂದು ಭಾವಿಸಲಾಗದು ಎಂಬ ಅರ್ಥದ ಹಿನ್ನೆಲೆಯನ್ನು ಒಳಗೊಂಡಿದೆ. ಬದುಕಿನ ಒಂದು ಹಾಸ್ಯಸ್ಪದ ಚಿತ್ರ ಕುಡ ಇಲ್ಲಿದೆ. ಒಂದು ಕುಡುಗೋಲನ್ನು ಬಳಸಿ ಶ್ರಮಪಡಲಾರದ ವ್ಯಕ್ತಿಯೊಬ್ಬ ಅನೇಕ ಕುಡುಗೋಲುಗಳನ್ನು ಹೊಂದಿರುವುದು ಬೇಜವಾಬ್ದಾರಿತನ ಆಗುವುದಲ್ಲದೆ, ಇಡಿಯಾಗಿ ಬದುಕಿನ ಒಂದು ವ್ಯಂಗ್ಯವೂ ಆಗಿ ಇಲ್ಲಿ ಚಿತ್ರಿತವಾಗಿದೆ.

‘ಜಂಬ ಒಂದು ಮೊರವಂತೆ, ಕೇರಿನೋಡಿದರೆ ಬರಿಮೊರ’ ಸಾಮಾನ್ಯವಾಗಿ ಜಂಬಗಾತಿ ಹೆಣ್ಣುಗಳನ್ನು ಕುರಿತು ಈ ಗಾದೆ ಬಳಕೆಯಾಗುತ್ತದೆ. ಹೆಚ್ಚು ಸದ್ದು ಮಾಡುವುದು ಖಾಲಿ ಡಬ್ಬಿಯ ಗುಣ, ಇಂಥ ಗುಣವನ್ನು ಉಳ್ಳ ಹೆಣ್ಣೇ ಈ ಗಾದೆಯಲ್ಲಿ ಬಳಕೆಯಾಗಿರುವ ಜಂಬಗಾತಿ. ಜಂಬ ಎಂಬುದು ಯೌವನದಲ್ಲಿಯ ಒಂದು ಸಾಮಾನ್ಯ ಗುಣ. ಯೌವನ ಮುಗಿದ ಮೇಲೂ ಅದು ಇದ್ದರೆ, ಐಶ್ವರ್ಯ ಮದದಿಂದ ಉದ್ಭವವಾಗುವ ಒಣ ಪ್ರತಿಷ್ಠೆಯ ರೂಪವಾಗುತ್ತದೆ. ಅತ್ತೆ ಮತ್ತು ಸೊಸೆಯರ ನಡುವಿನ ಸಂಬಂಧ ಈ ಗಾದೆಯೊಡನೆ ತಳಕು ಹಾಕಿಕೊಂಡಿರುವುದು ಸಾಮಾನ್ಯ.

ತಮಿಳಿನ ಕೆಲವು ಗಾದೆಗಳು :

೧. ತಲೆಯ ಮೇಲೆ ಸಮುದ್ರ ಹರಿದು ಹೋದ್ರೆ, ಅಡಿಯೇನು ಮೊಳವೇನು?

೨. ಸಾಯಲು ನಿಶ್ಚಯಿಸಿದರೆ ಸಮುದ್ರ ಮೊಳಕಾಲು ಮಟ್ಟ

೩. ಅಣೆ ದಾಟಿದ ಪ್ರವಾಹ ಅತ್ತರೂ ಬಾರದು

೪. ಬರೆದ ವಿಧಿ ಅತ್ತರೆ ತೀರುವುದೇ?

೫. ರಾವಣ ಆಳಿದರೇನು ರಾಮ ಆಳಿದರೇನು, ಕಬ್ಬಿಣ ಬಡಿಯುವ ಜಾಗದಲ್ಲಿ ನೊಣಕ್ಕೇನು ಕೆಲಸ

೬. ಕೆಳಗೆ ಬಿದ್ದರೂ ಮೀಸೆಗೆ ಮಣ್ಣು ಅಂಟಲಿಲ್ಲ

೭. ಗಡ್ಡ ಹೊತ್ತಿಕೊಂಡು ಉರಿಯುವಾಗ, ಚುಟ್ಟ ಹಚ್ಚಿಕೊಂಡನು

೮. ಚಂದ್ರನನ್ನು ನೋಡಿ ನಾಯಿ ಬೊಗಳಿದಂತೆ

೯. ಬೆಂಕಿ ಎಂದು ಹೇಳಿದರೆ, ಬಾಯಿ ಸುಟ್ಟು ಹೋಗುವುದೇ?

೧೦. ಮನಸ್ಸಿನ ರೋಗಕ್ಕೆ ಔಷಧಿಯುಂಟೋ?

೧೧. ನಿರ್ಧರಿಸಿದವನಿಗೆ ದುಃಖವಿಲ್ಲ

ನಮ್ಮ ಮೇಲೆ ಸಮುದ್ರವೇ ಹರಿದು ಹೋದಾಗ ನಾವು ಇಡಿಯಾಗಿ ಕೊಚ್ಚಿ ಹೋಗುತ್ತೇವೆ. ಅಲ್ಲಿ ಅಡಿ, ಮೊಳ ಎಂಬ ಅಳತೆಗಳು ಸಲ್ಲುವುದಿಲ್ಲ. ಮಾನಸಿಕವಾಗಿ ಯಾವುದಾದರೊಂದು ಕಾರ್ಯವನ್ನು ಮಾಡಬೇಕೆಂದು ನಿಶ್ಚಯಿಸಿಕೊಂಡರೆ ಯಾವುದೂ ಅಗಾಧವಲ್ಲ. ಕಷ್ಟಕರವಲ್ಲ, ಭಯಾನಕವೂ ಅಲ್ಲ. ಇದು ಬದುಕಿನ ಒಂದು ಸಹಜ ಸತ್ಯ.

ಹರಿಯುವ ನೀರಿಗೆ ಎದುರಾಗಿ ಅಣೆಕಟ್ಟೆಯನ್ನು ಕಟ್ಟುತ್ತೇವೆ. ಆ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗುತ್ತದೆ. ಹೆಚ್ಚು ಸಂಗ್ರಹವಾದ ಅಣೆಯನ್ನು ದಾಟಿ ಹರಿದು ಹೋಗುತ್ತದೆ.ಆ ನೀರು ಮತ್ತೆ ಅಣೆಯನ್ನು ಸೇರಲಾರದು. ಇದು ಒಂದು ಭೌತಿಕ ಸತ್ಯವಾದರೂ ಹಿನ್ನೆಲೆಯಲ್ಲಿ ಬದುಕಿನ ಒಂದು ನಿಗೂಢ ಅಡಗಿದೆ. ಬದುಕಿನಲ್ಲಿ ಎದುರಾಗುವ ಕಷ್ಟಸುಖಗಳನ್ನು ಅಣೆಯನ್ನು ದಾಟುವ ನೀರು ಸಂಕೇತಿಸುತ್ತದೆ.

ಹೀಗೆ ಗಾದೆಗಳು ಬದುಕಿನ ಮೂಲದಿಂದ ಜನ್ಮತಾಳಿ ವಿಶಿಷ್ಟ ಶಕ್ತಿಯೊಂದನ್ನು ಪಡೆದುಕೊಂಡು ಅದೇ ಬದುಕಿನ ಸಂಕೇತಗಳಾಗಿ, ರೂಪಕಗಳಾಗಿ ಬಳಕೆಯಾಗುತ್ತವೆ. ಇದು ಗಾದೆಗಳ ಜೀವಾಳ.

– ಪಿ.ಎಂ.

ತಮಿಳು ಜನಪದ ಗೀತೆಗಳಲ್ಲಿ ಸಂಗೀತ : ವ್ಯಾಕರಣ ಬದ್ಧವಾಗಿ ಸುಶ್ರಾವ್ಯವಾಗಿ ಹಾಡುವುದನ್ನು ಶಾಸ್ತ್ರೀಯ ಸಂಗೀತ ಎನ್ನಲಾಗಿದೆ. ಆದರೆ ವ್ಯಾಕರಣದ ವ್ಯಾಪ್ತಿಗೆ ಒಳಪಡದೆ ಆಗಾಗ ಮನಸ್ಸಿನಲ್ಲಿ ಹೊರಹೊಮ್ಮುವ ಭಾವನೆಗಳಿಗೆ ರೂಪು ಕೊಡುವುದು ಜನಪದ ಸಂಗೀತ. ಇದನ್ನು ನಿರಕ್ಷರಕುಕ್ಷಿಗಳ ಸಂಗೀತ, ಸಾಮಾನ್ಯರ ಸಂಗೀತ, ಗ್ರಾಮ್ಯ ಸಂಗೀತ – ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಜನಪದ ಗೀತಿಗಳಲ್ಲಿ ಕಥ ಗೀತೆಗಳು, ಜನಪದ ಕಲೆಗಳು ಮುಂತಾದವು ಒಳಗೊಂಡಿವೆ.

ಜನಪದ ಗೀತೆಗಳಲ್ಲಿ ಇರುವ ಸಂಗೀತದ ಅಂಶ ಕುರಿತಂತೆ ಸತ್ಯಮೂರ್ತಿ ಎಂಬ ವಿದ್ವಾಂಸರು ಹೀಗೆ ಹೇಳಿದ್ದಾರೆ: “ಜಾನಪದ ಧಾಟಿಯಿಲ್ಲದೆ ಹಾಡಲಾಗುವ ಜನಪದ ಗೀತೆಗಳು ರೆಕ್ಕೆ ಇಲ್ಲದ ಹಕ್ಕಿಯಂತೆ.’’ ಅಂತೆಯೇ ಜೆ.ಸಿ. ಹಾಟ್‌ಕಾಟ್ ಎಂಬ ಆಂಗ್ಲ ವಿದ್ವಾಂಸ “ಜ್ಞಾಪಕದಲ್ಲಿ ಇರಿಸಿಕೊಳ್ಳುವುದಕ್ಕೆ ಸಂಗೀತ ಒಂದು ಬಲವಾದ ಶಕ್ತಿಯ ಸಾಧನವಾಗಿದೆ. ಸಂಗೀತವಿಲ್ಲದಿದ್ದರೆ ಈ ಮೌಖಿಕ ಭಾಷೆ ಕವಿತೆಯ ರೂಪದಲ್ಲಿ ಬರಲು ಸಾಧ್ಯವಿಲ್ಲ’’ ಎಂಬ ಈ ಮೇಲಿನ ಹೇಳಿಕೆಗಳು ಜನಪದ ಗೀತೆಗಳಲ್ಲಿ ಸಂಗೀತವೇ ಆತ್ಮಭಾವ ಎಂಬುವುದನ್ನು ಸೂಚಿಸುತ್ತವೆ. ಆದ್ದರಿಂದಲೇ ಜನಪದಗೀತೆಗಳು ಅಳಿಯದಂತೆ ರಕ್ಷಿಸುವ ಕಾರ್ಯವನ್ನು ಸಂಗೀತ ಮಾಡುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ರೂಪುಗೊಳ್ಳಲು ಕೂಡ ಮೂಲತಃ ಜನಪದ ಗೀತೆಗಳೇ ಕಾರಣವಾಗಿವೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.

ಗೀತೆಗಳು ಬಗೆಗಳು : ಜನಪದ ಗೀತೆಗಳು ಮಾನವನ ಹುಟ್ಟಿನಿಂದ ಸಾಯುವವರೆವಿಗೂ ಅತಿ ಮುಖ್ಯ ಸ್ಥಾನವನ್ನು ಅಲಂಕರಿಸಿವೆ. ಇವುಗಳನ್ನು ವಿದ್ವಾಂಸರು ಹಲವು ಬಗೆಗಳಲ್ಲಿ ವಿಭಾಗಿಸಿದ್ದಾರೆ. ಈ ವಿಭಜನೆಯಲ್ಲಿ ಹಲವು ರೀತಿಯ ವ್ಯತ್ಯಾಸಗಳನ್ನು ಕಾಣಬಹುದು. ಇದಕ್ಕೆ ಕಾರಣ ಒಬ್ಬೊಬ್ಬ ವಿದ್ವಾಂಸರು ಒಂದೊಂದು ರೀತಿಯಲ್ಲಿ ತಮಗೆ ಸರಿತೋಚಿದಂತೆ ವಿಶ್ಲೇಷಿಸಿರುವುದೇ ಇದಕ್ಕೆ ಮುಖ್ಯ ಕಾರಣ. ಈಹಾಡುಗಳು ಕಲೆ, ಸಾಹಿತ್ಯ, ಸಂಪ್ರದಾಯ ಮುಂತಾದವುಗಳನ್ನು ಒಗ್ಗೂಡಿಸುವ ಸಾಧನಗಳಾಗಿವೆ. ಜನಪದ ಗೀತೆಗಳ ವರ್ಗೀಕರಣದಲ್ಲೂ ಇದನ್ನು ಕಾಣಬಹುದು. ಮಗುವಿನ ಬೆಳವಣಿಗೆಗೆ ಜನಪದ ಲಾಲಿಹಾಡು ಸಹಕಾರಿ. ಆಟಕ್ಕೆ ಸಂಬಂಧಿಸಿದ ಹಾಡು, ಕಸುಬಿಗೆ ಸಂಬಂಧಿಸಿದ ಹಾಡುಗಳಲ್ಲದೆ ಸಂತೋಷವನ್ನು ಅಭಿವ್ಯಕ್ತಿಸುವ ಹಾಡುಗಳು, ರಕ್ತಸಂಬಂಧದ ಹಾಡುಗಳು, ಮರಣದ ಹಾಡುಗಳು ಎಂದು ವರ್ಗೀಕರಿಸಲಾಗಿದೆ. ಜನಪದ ಹಾಡುಗಳಲ್ಲಿ ಸಂಗೀತದ ರಚನೆಯನ್ನು ಗುರುತಿಸಿದ ಜಾನಪದ ತಜ್ಞ ಸಾಂಬಮೂರ್ತಿ ಅವರು ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶ ಎಂದು ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಮೊದಲನೆಯ ಭಾಗದಲ್ಲಿ ಕೃಷಿ ಮತ್ತು ವೃತ್ತಿ ಸಂಬಂಧಿತ ಹಾಡುಗಳು ಇದ್ದರೆ ಎರಡನೆಯ ಭಾಗದಲ್ಲಿ ಪುರಾಣ ಮತ್ತು ಮದು ಹಾಡುಗಳು ಇವೆ. ಈ ಹಾಡುಗಳಿಗೆ ರಾಗಗಳನ್ನು ಜೋಡಿಸಿ ಹಾಡುವುದುಂಟು. ಜಾನಪದ ಸಂಶೋಧನೆ ಕೈಗೊಂಡ ಶ್ಯಾಮಲಬಾಲಕೃಷ್ಣನ್ ಅವರು ಈ ಪದ್ಧತಿಯನ್ನು ಅನುಸರಿಸಿದ್ದಾರೆ. ಜನಪದಗೀತೆಗಳಿಗೆ ಅವನ್ನು ಹಾಡುವ ರೀತಿಯಲ್ಲಿ ಏಕ ವ್ಯಕ್ತಿ ಹಾಡುಗಳು ಮತ್ತು ಸಮೂಹ ಹಾಡುಗಳು ಎಂದು ವಿಂಗಡಿಸಲಾಗಿದೆ.

ಜನರ ಕಸುಬುಗಳಿಗೆ ಸಂಬಂದಿಸಿದಂತೆ ಜನಪದಗೀತೆಗಳಲ್ಲಿ ಸಂಗೀತ ಮೈತಳೆದಿದೆ. ಗುಂಪಾಗಿ ಸೇರಿ ಕೆಲಸ ಮಾಡುವಾಗ, ಹಬ್ಬ ಹರಿದಿನಗಳನ್ನು ಆಚರಿಸುವಾಗ ಅದಕ್ಕೆ ತಕ್ಕಂತೆ ಗೀತೆಗಳಿಗೆ ಸಂಗೀತ ಅಳವಡಿಸಲಾಗುತ್ತದೆ. ಕೆಲಸ ಮಾಡುಗ ಮನುಷ್ಯನ ದೇಹದಲ್ಲಿ ಉಂಟಾಗುವ ಹಲವು ಕಂಪನಗಲನ್ನು ಸಂಗೀತದ ತಾಳ ಲಯದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ದಣಿವಾದಾಗ ಅದರ ಅರಿವು ಅಗದಿರಲೆಂದೇ ಹಾಡಲಾಗುತ್ತದೆ. ಇಲ್ಲಿ ಕೆಲಸಕ್ಕೆ ಹೆಚ್ಚು ಗಮನ ಕೊಡುತ್ತಾರೆ, ಹಾಡುಗಳಿಗಲ್ಲ, ರಸಿಕ ಸಮೂಹವನ್ನು ಆಕರ್ಷಿಸಲು ಅಥವಾ ತಮ್ಮ ಕಲೆಯನ್ನು ಪ್ರದರ್ಶಿಸಲು ಹಾಡುವುದಿಲ್ಲ. ಕತೆ ಹೇಳುವುದನ್ ಒಳಗೊಂಡಂತೆ ತಮ್ಮ ಪ್ರೀತಿ, ಜ್ಞಾನ ಮುಂತಾದವುಗಳನ್ನು ಅನ್ಯರೊಂದಿಗೆ ಹಂಚಿಕೊಳ್ಳುವುದೇ ಮುಖ್ಯ ಉದ್ದೇಶವಾಗಿ ಹಾಡುವುದುಂಟು. “ಇಲ್ಲಿ ಕಸಬುಗಾರಿಕೆಯೇ ಸಂಗೀತ, ಸಂಗೀತವೇ ಕಸುಬುಗಾರಿಕೆ’’ ಹೀಗೆ ಜನಪದ ಸಂಗೀತ ಅನಾದಿ ಸಂಗೀತ ಇಲ್ಲವೇ ಗ್ರಾಮ್ಯ ಸಂಗೀತವೆಂದು ಬದಲಾವಣೆಯಾಗಿದೆ. ದುಡಿಯುವ ವರ್ಗವೇ ಹೆಚ್ಚಾಗಿ ಇದನ್ನು ಹಾಡುವುದರಿಂದ ಸುಲಭವಾಗಿ ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಸಂಗೀತದ ಧಾಟಿಗಳಿಲ್ಲದಿದ್ದರೂ ಜನರನ್ನು ಆಕರ್ಷಿಸುವ ಗುಣವನ್ನು ಜನಪದಗೀತೆಗಳು ಹೊಂದಿವೆ.

ತಮ್ಮ ಪೂರ್ವಜರು ಹಾಡುವುದನ್ನು ಕೇಳಿಸಿಕೊಂಡಿದ್ದ ಜನ ಅದನ್ನು ಪುನಃ ನೆನಪಿಗೆ ತಂದುಕೊಂಡು ಹಾಡುವುದರಿಂದ ಸುಲಭವಾಗಿ ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಸಂಗೀತದ ಧಾಟಿಗಳಿಲ್ಲದಿದ್ದರೂ ಜನರನ್ನು ಆಕರ್ಷಿಸುವ ಗುಣವನ್ನು ಜನಪದಗೀತೆಗಳು ಹೊಂದಿವೆ.

ತಮ್ಮ ಪೂರ್ವಜರು ಹಾಡುವುದನ್ನು ಕೇಳಿಸಿಕೊಂಡಿದ್ದ ಜನ ಅದನ್ನು ಪುನಃ ನೆನಪಿಗೆ ತಂದುಕೊಂಡು ಹಾಡುವುದುಂಟು. ಕಿವಿಯಿಂದ ಕಿವಿಗೆ ಹರಡುವ ಗುಣವನ್ನು ಈ ಗೀತೆಗಳು ಹೊಂದಿವೆ. ಹಿಂದಿನವರು ಹಾಡಿದ್ದನ್ನು ನೆನಪಿಸಿಕೊಂಡು ಹಾಡುವುದರಿಂದ ಕೆಲವು ಸೊಲ್ಲುಗಳು ಮರೆತು ಹೋಗುವ ಸಾಧ್ಯತೆಗಳು ಇಲ್ಲದಿಲ್ಲ. ಇದಕ್ಕಾಗಿ ತಮ್ಮದೇ ಆದ ಕೆಲವು ಪದ ಇಲ್ಲವೇ ಸಾಲುಗಳನ್ನು ಸೇರಿಸಿ ಹಾಡುವುದುಂಟು. ಹೀಗೆ ಹಾಡುವುದರಿಂದ ಹೊಸ ಹೊಸ ಪದ ಗೀತೆಗಳು ಸೇರ್ಪಡೆಯಾಗುತ್ತಾ ಹೋಗುವುದನ್ನು ಕಾಣಬಹುದು.

ಜನಪದಗೀತೆಗಳಿಗೆ ವ್ಯಾಕರಣ ಬದ್ಧವಾದಕೆಲವು ಅಂಶಗಳು ಇವೆ. ಸಂಗೀತವೆಲ್ಲ ಒಂದು ವಿಧವಾದ ಮಿತಿಯಿದೆ. ಆ ಮಿತಿಯಲ್ಲೇ ಇವು ರಚನೆಗೊಂಡಿರುವುದು. ಬಹುಪಾಲು ಹಾಡುಗಳಲ್ಲಿಸಂಗೀತದ ಮೂರು ನಾಲ್ಕು ಸ್ವರಗಳು ಮಾತ್ರ ಕೇಳಿ ಬರುವುದುಂಟು. ಇದರಿಂದ ಹಾಡುಗಳ ರಾಗಗಳನ್ನು ಅರಿತುಕೊಳ್ಳುವುದು ಕಷ್ಟ. ಜನಪದಗೀತೆಗಳಲ್ಲಿ ಕೇಳುವ ರಾಗಗಳೆಂದರೆ ತೋಡಿ, ನಟಭೈರವಿ, ಕೀರವಾಣಿ, ಹರಿಕಾಂಬೋಧಿ, ಶಂಕರಾಭರಣಂ ಮೊದಲಾದವು. ಮೇಲೆ ಉಲ್ಲೇಖಿಸಿದ ಮೇಳಕರ್ತ ರಾಗಗಳಿಂದ ಜನ್ಯರಾಗಗಳಾದ ಕುರುಂಜಿ, ನವರೋಜ್, ಆನಂದಭೈರವಿ, ನೀಲಾಂಬರಿ, ಪುನ್ನಾಗವರಾಲಿ, ನಾದನಾಮಕ್ರಿಯೆ ಇವುಗಳನ್ನು ಹೆಚ್ಚಾಗಿ ಜನಪದಗೀತೆಗಳಲ್ಲಿ ಬಳಸಲಾಗುತ್ತಾದೆ.

ಜನಪದಗೀತೆಗಳಲ್ಲಿ ಛಂದಸ್ಸಿಗೂ ಯುಕ್ತ ಸ್ಥಾನಮಾನವಿದೆ. ಹಾಡುಗಳಿಗೆ ಶ್ರುತಿ, ವಾದ್ಯದ ಹಿಮ್ಮೇಳ ಇರುವುದಿಲ್ಲ. ಹೀಗಿದ್ದರೂ ಕೆಲವು ಹಾಡುಗಳಲ್ಲಿ ನಮ್ಮ ಕಂಠವೇ ಅದಕ್ಕೆ ಸ್ವರ ನೀಡುತ್ತದೆ. ಬಹುಪಾಲು ಹಾಡುಗಳು ಮಧ್ಯಮ ಶ್ರುತಿಯಲ್ಲೂ ವರ್ಜ್ಯರಾಗಗಳಲ್ಲೂ ರೂಪುಗೊಂಡಿವೆ. ಹನ್ನೆರಡು ರಾಗಗಳಲ್ಲಿ ಪ್ರತಿ ಮಧ್ಯಮವನ್ನುಳಿದಂತೆ ಬೇರೆಲ್ಲ ಸ್ವರಗಳು ಸಹಕಾರಿಯಾಗಿವೆ. ಆದಿರೂಪಕ, ನಾಟ, ಮೊದಲಾದ ತಾಳಬಗೆಗಳು ಜನಪದಗೀತೆಗಳಲ್ಲಿವೆ. ಸಾಮಾನ್ಯವಾಗಿ ಬಹುಪಾಲು ಹಾಡುಗಳು ಅನುಸರಿಸುವುದು ತ್ರಿಶ್ರ ನಡೆಯನ್ನು ಎಂಬುದು ಗಮನಿಸತಕ್ಕ ವಿಷಯ.

ಜನಪದ ಗೀತೆಗಳನ್ನು ಮತ್ತು ಕಥನಗೀತೆಗಳಲ್ಲಿ ಸಂಗೀತವನ್ನು ಗುರುತಿಸಲು ಕೆಲವು ಪ್ರಸಿದ್ಧ ದಾಟಿಗಳಿವೆ. ಈ ಮಟ್ಟುಗಳನ್ನು ಸಾಮೂಹಿಕವಾಗಿ ಹಾಡಿದಾಗ ಮಾತ್ರ ಅವುಗಳನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬಹುದು. ಈ ಮಟ್ಟುಗಳಿಗೆ ತಕ್ಕ ಪದಗಳನ್ನು ತೆಗೆದು ಏರಿದ ಧ್ವನಿಯಲ್ಲಿ ಹಾಡಿದಾಗ ಅವನ್ನು ಧ್ವನಿಯಲ್ಲಿ ಅಥವಾ ಯಾಂತ್ರಿಕವಾಗಿ ನುಡಿಸಲಾಗುವುದು.

ಮಟ್ಟುಗಳ ಸಂಗೀತದ ರೂಪಗಳನ್ನು ಹೇಳುವಲ್ಲಿ ಲಾವಣಿ, ಜಡಂ, ಕುಮ್ಮಿ, ಸಿಂಧು ಎಂಬ ಹೆಸರುಗಳನ್ನು ಹೇಳಲಾಗುತ್ತದೆ. ಆದಿವಾಸಿಗಳ ಮಟ್ಟುಗಳು ಬಯಲಿನಲ್ಲಿ ಹಾಡುವ ಹಾಡುಗಳಲ್ಲಿ ನಾಟಿ ಮಾಡುವುದು, ತೆನೆ ಕೊಯ್ಯುವುದು, ಕಳೆತೆಗೆಯುವುದು ಮೊದಲಾದ ಮಟ್ಟುಗಳು ತೆನೆ ಕೊಯ್ಯುವುದು, ಕಳೆತೆಗೆಯುವುದು ಮೊದಲಾದ ಮಟ್ಟುಗಳು ಹಾಗೆಯೇ ಗಾಡಿವನ ಮಟ್ಟು, ಕರಗದ ಮಟ್ಟು, ಕಾವಡಿಯ ಮಟ್ಟು, ಬಯಲಾಟದ ಮಟ್ಟು, ಕಥಾ ಹಾಡುಗಳಲ್ಲಿ ಕಾತ್ತವರಾಯನ್ ಕಥೆಯ ಮಟ್ಟು, ಗಂಧದ ಹಾಡಿನ ಮಟ್ಟು, ಲಾಲಿ ಮಟ್ಟು ಮುಂತಾದವುಗಳು. ಜನಪದಗೀತೆಗಳ ವಿವಿಧ ಬಗೆಗಳನ್ನು ಅವುಗಳ ಸಂಗೀತದ ಹಿನ್ನೆಲೆಯಲ್ಲಿ ಹಾಡುಗಳೆಂದು ಗುರುತಿಸಲಾಗಿದೆ.

ಮಗುವನ್ನು ತೊಟ್ಟಿಲಿನಲ್ಲಿ ಹಾಕಿ ಮಲಗಿಸುವುದಕ್ಕೆ ಹಾಡುವ ಹಾಡೇ ಲಾಲಿ. ಈ ಹಾಡುಗಳು ಮಧುರವಾಗಿವೆ. ಲಾಲಿಯ ಪ್ರಾರಂಭ ಮಧ್ಯ ಮತ್ತು ಕೊನೆಯಲ್ಲಿ “ರಾರಾಗೋ, ರಾರಿರಾರೋ, ಆರೋರೋ, ಆರಿರಾರೋ’’ ಎಂದು ಹಾಡಲಾಗುತ್ತದೆ. ಈಮಟ್ಟಿಗೆ ತಕ್ಕಂತೆ ಹಾಡುಗಳನ್ನು ಹೆಣೆಯಲಾಗುತ್ತದೆ. ಅಂದರೆ “ಅಜ್ಜಿ ಹೊಡೆದರೋ, ಬೆಳ್ಳಿಯ ಕೋಲಿಂದಾ’’ ಎಂಬುವಲ್ಲಿ ದೀರ್ಘ ಅಕ್ಷರಗಳಿಂದ ಕೊನೆಗೊಳ್ಳುತ್ತದೆ. ಈ ಹಾಡುಗಳು ನವಿರಾಗಿದ್ದು ಸೂಕ್ಷ್ಮವಾದ ಅನುಭವವನ್ನು ಅಭಿವ್ಯಕ್ತಿಸುತ್ತದೆ.ಹಾಡಿನ ಮುಖ್ಯ ಉದ್ದೇಶ ಮಗು ಮಲಗುವ ವಾತಾವರಣವನ್ನು ನಿರ್ಮಿಸುವುದು. ಹಾಡಿನ ಲಯ, ಹಾಡುವ ಪರಿ, ಧ್ವನಿ, ರಾಗ ಮೊದಲಾದವು ಮಗುವನ್ನು ಮಲಗಿಸುವಲ್ಲಿ ಸಹಕಾರಿಯಾಗುತ್ತವೆ.

ತೀರಿಕೊಂಡವರ ಮೇಲೆ ಹಾಡುವ ಹಾಡುಗಳೇ ಒಪ್ಪಾರಿ ಹಾಡುಗಳು. ಇವು ಸಾಮಾನ್ಯವಾಗಿ ಆಱಶಭರಿತವಾಗಿವೆ. ಸಂಗೀತವು ವಿಲಂಬ ಮತ್ತು ಮಧ್ಯಮದ ಲಯದಲ್ಲಿರುತ್ತದೆ. ಇನ್ನು ಮುಖಾರಿ, ಆಹಿರಿ ಮೊದಲಾದ ರಾಗಗಳಿಂದ ಇದು ಸ್ಪಷ್ಟವಾಗುತ್ತದೆ. ಒಪ್ಪಾರಿ ಹಾಡುಗಳಲ್ಲಿ ಸಂಗೀತದ ಅಂಶಗಳನ್ನು ಕಾಣಬಹುದಾಗಿದೆ.

ಜನಪದ ಗೀತೆಗಳ ರಚನೆ ಆಯಾಯ ಕೆಲಸದ ಮೇಲೆ ರಚನೆಯಾಗುವುದುಂಟು. ಹಾಗೆಯೇ ಅದರಲ್ಲಿ ಬದಲಾವಣೆಯನ್ನು ಕಾಣಬಹುದು. ನಾಟಿ ಮಾಡುವುದು, ಕಳೆ ತೆಗೆಯುವುದು, ಗಾಡಿ ಹೊಡೆಯುವುದು, ಕಲ್ಲು ಹೊರುವುದು, ಮೀನು ಹಿಡಿಯುವ ಸಂದರ್ಭದಲ್ಲಿ ಹಾಡುವ ಹಾಡುಗಳು ಆಯಾ ಕೆಲಸಕ್ಕೆ ತಕ್ಕಂತೆ ರೂಪುಗೊಂಡಿವೆ. ದೀರ್ಘ ಕಾಲ ಕೆಲಸ ಮಾಡುವಂತ ಸಂದರ್ಭಗಳಲ್ಲಿ ಹಾಡುವ ಹಾಡುಗಲು ಸುದೀರ್ಘವಾಗಿವೆ. ಎತ್ತಿನ ಗಾಡಿಯವರು ಭಾರ ಹಾಕಿಕೊಂಡು ಹೋಗುವಾಗ ದೂರಪ್ರಯಾಣಕ್ಕೆ ಸಹಾಯಕವಾಗಿ ಸವಿಯುವ ಹಾಡುಗಳು ರಚನೆಗೊಂಡಿವೆ. ಈ ಹಾಡಿನ ಮಟ್ಟುಗಳನ್ನು ‘ಗೊಲ್ಲರಹಾಡು’ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಕರಗ, ಕಾವಡಿ ಮೊದಲಾದ ಜನಪದ ಕಲೆಗಳಲ್ಲೂ ಮೇಳದವರು ಸಾಮೂಹಿಕವಾಗಿ ಹಾಡುವುದೇ ಸರ್ವೇ ಸಮಾನ್ಯ.

ಪಿ.ಎಂ.