ತಮಿಳಿನಲ್ಲಿ ಕಡಲಿನ ಪುರಾಣ : ‘ಕಡಲಿನ ಪುರಾಣ’ ಪುರಾಣ ಕತೆಗಳಲ್ಲಿ ಒಂದು ಮುಖ್ಯವಾದ ಬಗೆಯೆಂದು ಭಾವಿಸಲಾಗಿದೆ. ಪ್ರಪಂಚದ ಹಲವು ಭಾಗಗಳಲ್ಲಿ, ಹಲವಾರು ಜನರಲ್ಲಿ ಬಳಕೆಯಾಗಿರುವ ಪುರಾಣ ಕಥೆಗಳಲ್ಲಿ ಕಡಲ ಪುರಾಣದಂತೆ ಬೇರೆ ಪುರಾಣಗಳು ಆಕರ್ಷಕವಾಗಿ ರಚನೆಯಾಗಿಲ್ಲ ಎನ್ನುತ್ತಾರೆ. ಹೊಸ ಒಡಂಬಡಿಕೆಯಲ್ಲಿ ಕಡಲು ಪುರಾಣ ಸ್ಥಾನವನ್ನು ಪಡೆದಿದೆ.

ತಮಿಳು ಸಾಹಿತ್ಯದಲ್ಲಿ ಬರುವ ಮೊದಲ ಸಂಘ, ಮಧ್ಯಸಂಘ ಇವೆರಡು ಇದ್ದ ಮಧುರೈ, ಕಬಾಡಪುರಂ ಮೊದಲಾದ ಊರುಗಳನ್ನು ನಾಶ ಮಾಡಿದ ಉಬ್ಬರವನ್ನು ಕುರಿತ ವಿಷಯ ಇರೈಯನಾರ್ (ತಿರುವಳ್ಳುವರ್) ಧರ್ಮ ಗ್ರಂಥದಲ್ಲಿ ಕಾಣುತ್ತೇವೆ. ಪಾಂಡ್ಯ ರಾಜರುಗಳು ಮೊದಲ ಸಂಘವನ್ನು ಕಟ್ಟಿ ತಮಿಳು ಬೆಳೆಸಿದ ಸುದ್ದಿ, ಮೊದಲ ಸಂಘದಲ್ಲಿ ಶಿವನು, ಸುಬ್ರಹ್ಮಣ್ಯನು ಸದಸ್ಯರುಗಳಾಗಿ ಇದ್ದುದು, ಸಂಘ ಮಧುರೈನಲ್ಲಿ ೪೪೦೦ ವರ್ಷಗಳು ಇದ್ದುದು ಅದು ಕಡಲಿನ ಪ್ರವಾಹದಿಂದ ನಾಶವಾಗಿದ್ದು ಈ ಮೊದಲಾದವುಗಳನ್ನು ತಿಳಿಯಬಹುದಾಗಿದೆ. ಹಾಗೆಯೇ ಕಬಾಡಪುರದಲ್ಲಿ ಸಂಭವಿಸಿದ ಮಧ್ಯ ಸಂಘ ೩೭೦೦ ವರ್ಷಗಳವರೆಗೆ ಇದ್ದು ಕಡಲಿನ ಪ್ರವಾಹದಿಂದ ನಾಶವಾಯಿತು. ಅನಂತರ ಕೊನೆಯ ಸಂಘ ಉತ್ತರ ಮಧುರೈನಲ್ಲಿ ರೂಪಿತವಾಗಿತ್ತು. ಶಿಲಪ್ಪದಿಗಾರಂ, ತಿರುಕ್ಕುರಳ್, ಲ್ಲಾರುರೈಯಲ್ ಈ ಮೊದಲಾದ ಗ್ರಂಥಗಳಲ್ಲಿ ಈ ಸಂಗತಿಗಳೆಲ್ಲ ವಿವರವಾಗಿ ಹೇಳಲಾಗಿದೆ. ಅದರಲ್ಲಿ ಪಾಂಡ್ಯನಾಡಿನ ನದಿಯಿಂದ ಕನ್ಯಾಕುಮಾರಿ ಉತ್ತರ ವಡಕರೈವರೆಗೆ ರಚಿತವಾದ ೪೯ ನಾಡುಗಳು ಸಮುದ್ರದಿಂದ ಮಳುಗಲ್ಪಟ್ಟವು ಎಂದು ಹೇಳಲಾಗುತ್ತದೆ. ಪಣ್‌ಡೈನಾಡಿನ ಚೋಳರ ಬಂದರಾದ ಪುಗಾರ್‌ನಗರ ಪ್ರಳಯದಿಂದ ನಾಶವಾಯಿತ್ತೆಂದು ಮಣೆಮೇಖಲೈಯಲ್ಲಿ ಹೇಳಲಾಗಿದೆ. ತಮಿಳಿನಲ್ಲಿರುವ ಕಡಲ ಪುರಾಣಗಳು ಎರಡು ಬಗೆಯಲ್ಲಿವೆ. ಇವು ಸೃಷ್ಟಿ ಪುರಾಣಗಳು ಮತ್ತು ಪುಗಾರ್ ನಗರದ ನಾಶದ ಅನಂತರ ಉಳಿದಿರುವುವು. ಹಲವು ಮುಖ್ಯ ಪುರಾಣಗಳಲ್ಲಿ ದೇವಸ್ಥಾನ ಪ್ರಳಯದಿಂದ ತಪ್ಪಿ ಉಳಿದವನ್ನು ವಿವರಿಸುವ ಪುರಾಣವಿದೆ.

ಪ್ರವಾಹವು ಭೂಖಂಡವೆಲ್ಲ ವ್ಯಾಪಿಸಿ ಮೂಲದೇವರಾದ ಶಿವನನ್ನು ಉಳಿದು ಎಲ್ಲ ಜೀವಿಗಳು ನಾಶವಾದವು. ಶಿವ – ಪಾರ್ವತಿ ಪ್ರಣವ ಮಂತ್ರವಾದ ‘ಓಂ’ ಎಂಬ ಮಂತ್ರದಿಂದಾದ ದೋಣಿಯಲ್ಲಿ ಹತ್ತಿ ಮೂಲಾಧಾರ ಕ್ಷೇತ್ರವನ್ನು ಸೇರಿದರು. ಅಷ್ಟದಿಕ್ಕುಗಳಲ್ಲಿ ಕಾವಲಿನವರು ಮತ್ತು ಕಡಲಿನ ಅಧಿಪತಿಯಾದ ವರುಣನು ಅಲ್ಲಿ ಬಂದು ಅವರನ್ನು ಆರಾಧಿಸಿದರು.

‘ಶೀರ್‌ಗಾಳಿ’ ಮುಖ್ಯ ಪುರಾಣದಲ್ಲಿರುವ ಒಂದು ಪುರಾಣ ಕಥೆ. ‘ದೋಣಿಪುರಂ’ ದೇವಸ್ಥಾನದ ದೇವರು ನೆಲೆಗೊಳ್ಳುವ ಸ್ಥಳವಾಗಿಯೂ ಮತ್ತೆ ಸೃಷ್ಟಿ ಕ್ರಿಯೆಯನ್ನು ಆರಂಭ ಮಾಡುವ ಸ್ಥಳವಾಗಿಯೂ ಇರುತ್ತದೆ. ಶಿವನು ಮೊದಲ ಹಂತದಲ್ಲಿ ತನ್ನ ಮೂರನೆಯ ಕಣ್ಣಿನಿಂದ ಕಡಲನ್ನು ಬತ್ತಿಸುತ್ತಾನೆ. ನೀರು ಕಡಿಮೆಯಾದ ಮೇಲೆ ಭೂಮಿ ಕಾಣಿಸುತ್ತದೆ. ಅನಂತರ ಸೃಷ್ಟಿ ಕಾರ್ಯ ಪ್ರಾರಂಭವಾಗುವುದು.

ಕುಬೇರ ಆರಾಧಿಸಿದ ಉತ್ತರ ಆಲಯವನ್ನು ಹೊರತುಪಡಿಸಿ ಮಧುರೈಗೆ ಸಮೀಪದಲ್ಲಿರುವ ಎಲ್ಲ ಪವಿತ್ರ ಸ್ಥಳಗಳೂ ಪ್ರವಾಹದಲ್ಲಿ ನಾಶವಾದುವು. ತಿರುಪ್ಪುರದಲ್ಲಿರುವ ಗಣಪತಿ ಈ ಪ್ರಪಂಚವನ್ನು ಪ್ರವಾಹದಿಂದ ಕಾಪಾಡಿದ್ದರಿಂದ ಜನರು ಪ್ರಳಯವನ್ನು ಕಾಪಾಡಿದ ಗಣೇಶ ಎಂದು ಹೊಗಳುತ್ತಾರೆ.

ತಮಿಳು ಪುರಾಣಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪ್ರಖ್ಯಾತಿ ಪಡೆದಿರುವ ಮತ್ತೊಂದು ಪುರಾಣ ಕಥೆ ಕಾಂಜಿಪುರದಲ್ಲಿರುವ ಲಿಂಗ ಪ್ರವಾಹದಿಂದ ತಪ್ಪಿದುದನ್ನು ಕುರಿತು ಹೇಳಲಾಗಿದೆ. ‘ಪಾರ್ವತಿ’ ಶಿವನ ಕಣ್ಣುಗಳನ್ನು ಮುಚ್ಚಿದ ಪಾಪವನ್ನು ತೊಳೆದುಕೊಳ್ಳಲು ಹೂವಿನ ಪ್ರಪಂಚಕ್ಕೆ ಒಂದು ಕಾಂಜಿ ದೇವರನ್ನು ಲಿಂಗದ ರೂಪದಲ್ಲಿ ಆರಾಧಿಸುವಳು. ಅವಳನ್ನು ಪರೀಕ್ಷಿಸುವುದಕ್ಕಾಗಿ ಶಿವನು ದೊಡ್ಡ ಪ್ರವಾಹದ ಬರುವಂತೆ ಮಾಡುವನು. ಕಾಂಜಿನಗರ ಪೂರ್ಣವಾಗಿ ಕಂಬೈನದಿಯ ಪ್ರವಾಹದಿಂದ ತೇಲಿತು. ಪಾರ್ವತಿ ತಾಯಿ ಲಿಂಗವನ್ನು ತನ್ನ ಎದೆಗೆ ತಬ್ಬಿಕೊಂಡು ಕಾಪಾಡಿದಳು. ಶಿವನು ಕಡಲನ್ನು ಬತ್ತಿಸಿದನು. ಕಾಂಜಿಯಲ್ಲಿರುವ ಲಿಂಗ ಅಂದಿನಿಂದ ಪಾರ್ವತಿ ತಾಯಿಯ ಎದೆ ಗುರುತನ್ನು, ಬಳೆಯ ಗುರುತನ್ನು ಹೊಂದಿ ವಿಜೃಂಭಿಸುತ್ತದೆ. ಈ ಕಥೆ ‘ಪೆರಿಯ ಪುರಾಣ’ದಲ್ಲೂ ಕಾಂಜಿ ಪುರಾಣದಲ್ಲೂ ಇದೆ.

ಈ ರೀತಿಯಲ್ಲಿ ಕಡಲಿನ ಪುರಾಣಗಳನ್ನು ಭಾರತದ ಕೆಲವು ಭಾಗಗಳಲ್ಲೂ ಮತ್ತು ಕೆಲವು ತಮಿಳು ಕಥನಗಳಲ್ಲೂ ಕಾಣಬಹುದು.

– ಎಸ್.ವಿ. ಅನುವಾದ ಪಿ.ಎಂ.

ತಮಿಳಿನಲ್ಲಿ ಕಾರ್ಯ ಕಾರಣ ಕಥೆ ಕಾರ್ಯಕಾರಣ ಕಥೆಗಳೆಂದರೆ ಮಾನವನು ತನ್ನ ಚಿಕ್ಕ ಪ್ರಪಂಚದಲ್ಲಿದ್ದು, ಆ ಪ್ರಪಂಚವನ್ನು ಸೂಕ್ಷ್ಮವಾಗಿ ನೋಡಿ ಆಶ್ಚರ್ಯಗೊಂಡು ರಚಿಸಿದ ಅಸಾಧಾರಣವಾದ ನೆಲೆಯ ಕತೆಗಳು ಎಂದರ್ಥ. ಈ ಕತೆಗಳು ಮಾನವನನ್ನು ಆಕರ್ಷಿಸಿದ ನಿಸರ್ಗ ವಿಷಯಗಳನ್ನು ಒಳಗೊಂಡಿರುತ್ತವೆ. ಅಂದರೆ ಗಿಡ ಮರಗಳು, ಪ್ರಾಣಿ ಪಕ್ಷಿಗಳು ಮೊದಲಾದವುಗಳ ಗುಣ, ಸ್ವಭಾವ, ಸಂಪ್ರದಾಯಗಳು, ಕಟ್ಟುಪಾಡುಗಳನ್ನು ಕುರಿತು ವಿವರಣೆ ನೀಡುತ್ತವೆ. ಈ ಕತೆಗಳು ಹಲವಾರು ತಲೆಮಾರುಗಳಿಂದ ಮೌಖಿಕವಾಗಿ ಪಸರಿಸುವಿಕೆಯಿಂದ ಸಂಗ್ರಹಿಸಿದ ಜನಪದ ಜ್ಞಾನ ಸಂಪತ್ತಾಗಿದೆ. ಈ ಕತೆಗಳನ್ನು ಕುರಿತ ವಿವರಣೆಯನ್ನು ‘ಕಾರ್ಯ ಕಾರಣ ವಿವರಣ ತತ್ತ್ವ’ಎಂದು ಒಂದು ಪುರಾಣ ಕಥೆ ಹೇಳುತ್ತದೆ. ಎಲ್ಲ ಸಂಪ್ರದಾಯಗಳಲ್ಲೂ ಮಾನವರು ಈ ಕತೆಗಳನ್ನು ರಚನೆ ಮಾಡಿದ್ದಾರೆ. ಈ ಕಥೆಗಳು ಆಯಾಯ ಸಂಸ್ಕೃತಿ, ಸಂಪ್ರದಾಯ, ಪರಿಸರಕ್ಕೆ ತಕ್ಕಂತೆ ಜನರ ಮನಸ್ಸಿಗೆ ಇಷ್ಟವಾಗುವಂತೆ ಇವೆ. ಈ ಕತೆಗಳು ಸಂಸ್ಕೃತಿ, ಸಂಪ್ರದಾಯ, ಪರಿಸರಕ್ಕೆ ವಿರುದ್ಧವಾಗಿದ್ದರೆ, ಇದನ್ನು ಜನರು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದಲ್ಲಿ ನಿರಂತರವಾಗಿ ನೆಲೆಗೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ.

ತಮಿಳಿನಲ್ಲಿ ಈ ತರಹದ ಕಥೆಗಳು ಹೆಚ್ಚಾಗಿವೆ. ಉದಾಹರಣೆಗೆ ಕೆಲವು ಕಥೆಗಳನ್ನು ನೋಡಬಹುದು.

ಒಂದಾನೊಂದು ಕಾಲದಲ್ಲಿ ಎರಡು ಹಕ್ಕಿಗಳು ಜೀವಿಸುತ್ತಿದ್ದುವು. ಅದರಲ್ಲಿ ಒಂದು ಅಕ್ಕ ಹಕ್ಕಿ, ಇನ್ನೊಂದು ತಂಗಿ ಹಕ್ಕಿ. ಒಂದು ದಿನ ಅವು ನದಿಗೆ ಸ್ನಾನಕ್ಕೆ ಹೋದುವು. ನದಿಯಲ್ಲಿ ನೀರಿನ ಪ್ರವಾಹ ಭೋರ್ಗರೆದು ಹರಿಯುತ್ತಿತ್ತು. ಅಕ್ಕ ಹಕ್ಕಿ ನದಿಯಲ್ಲಿ ಇಳಿಯಿತು. ತಂಗಿ ಹಕ್ಕಿಗೆ ನೀರಿನಲ್ಲಿ ಇಳಿಯಲು ಭಯವಾಗಿ ದಡದಲ್ಲೇ ನಿಂತುಕೊಂಡಿತು. ನದಿಯಲ್ಲಿ ಇಳಿದ ಅಕ್ಕ ಹಕ್ಕಿಗೂ ಈಜು ಬರದೆ ದಡಕ್ಕೆ ಬರಲಾರೆ ಅಂದುಕೊಂಡಿತು. ತಂಗಿ ಹಕ್ಕಿಗೂ ಇದು ಗೊತ್ತಾಯಿತು. ತಕ್ಷಣ ‘ಅಕ್ಕ’ ಎಂದು ದುಃಖದ ದನಿಯಲ್ಲಿ ಕೂಗುತ್ತಿತ್ತು. ಇಲ್ಲಿಯವರೆಗೆ ತಂಗಿ ಹಕ್ಕಿ ತನ್ನ ಅಕ್ಕನಿಗಾಗಿ ಕಾಯ್ದುಕೊಂಡು ಕೂಗಿಕೊಂಡೇ ಇದೆ. ಆದ್ದರಿಂದ ಅದರ ಹೆಸರು ‘ಅಕ್ಕಹಕ್ಕಿ’ ಎಂದಾಯಿತು.

ಪ್ರಾಣಿಗಳು, ಹಕ್ಕಿಗಳು ಮೊದಲಾದವುಗಳಿಂದ ಕೆಲವು ಗುರುತಿಸಲಾದ, ವಿನೋದವಾದ ಸ್ವಭಾವಗಳನ್ನು ವಿವರಿಸಲು ಆಧ್ಯಾತ್ಮಿಕ ಸನ್ನಿವೇಶಗಳನ್ನು ಜೋಡಿಸಿ ಹೇಳುವ ಕಥೆಗಳು ಹಲವುಂಟು ‘ಅಳಿಲಿನ ಬೆನ್ನಲ್ಲಿರುವ ಮೂರು ಸುಂದರವಾದ ಕಪ್ಪು ಗೆರೆಗಳನ್ನು ಕುರಿತು ಅಂದವಾದ ಕಥೆಯನ್ನು ನಾವು ತಿಳಿಯಲು ಸಾಧ್ಯ. ರಾಮನು ಸೀತೆಯನ್ನು ಬಿಡಿಸಿತರಲು ಲಂಕಾ ಪಟ್ಟಣಕ್ಕೆ ಹೋಗಲು ವಾನರ ಸೇನೆಯ ಸಹಾಯದಿಂದ ಸೇತುವೆ ಕಟ್ಟುತ್ತಿರುತ್ತಾನೆ. ಆಗ ಅಳಿಲು ತನ್ನಿಂದ ಆಗುವ ಸಹಾಯ ಮಾಡಲು ಇಚ್ಫಿಸಿ ಚಿಕ್ಕದಾದ ಕಲ್ಲನ್ನು ಹೊತ್ತುಕೊಂಡು ಬರುತ್ತದೆ. ರಾಮನು ಕಲ್ಲನ್ನು ಹೊತ್ತುಕೊಂಡು ಬಂದ ಅಳಿಲನ್ನು ಪ್ರೀತಿಯಿಂದ ನೋಡಿ ಅದರ ಬೆನ್ನಿನ ಮೇಲೆ ತನ್ನ ಮೂರು ಬೆರಳಿನಿಂದ ಸವರಲು ತಕ್ಷಣ ಅಳಿಲಿನ ಬೆನ್ನಲ್ಲಿ ಮೂರು ಸುಂದರವಾದ ಗೆರೆಗಳು ಮೂಡಿದವು’ ಎಂಬುದು ಹಲವರು ತಿಳಿದಿರುವ ಕಾರ್ಯ ಕಾರಣ ಕಥೆ.

ರಾಮ ಸೀತೆಯೊಡನೆ ಕಾಡಿನಲ್ಲಿ ವಾಸಿಸುತ್ತಿದ್ದರು. ಒಂದು ದಿನ ರಾಮ ಒಂದು ಮರದ ಕೆಳಗೆ ಸೀತೆಯ ಮಡಿಲಿನಲ್ಲಿ ತಲೆ ಇಟ್ಟು ಮಲಗಿದನು. ಆಗ ಇಂದ್ರನ ಮಗ ಸಯಂದನ್ ಎಂಬುವನು ಸೀತೆಯ ಸೌಂದರ್ಯಕ್ಕೆ ಮನಸೋತು, ಕಾಗೆಯ ರೂಪ ಧರಿಸಿ ಅವಳ ಎದೆಯನ್ನು ಕುಕ್ಕಿತು. ಆದರೆ ಸೀತೆ ಗಂಡನ ನಿದ್ರೆಗೆ ಭಂಗವಾಗಬಾರದು ಎಂಬ ಉದ್ದೇಶದಿಂದ ಆ ನೋವನ್ನು ಸಹಿಸಿಕೊಂಡಳು. ಸೀತೆಯ ರಕ್ತವು ರಾಮನ ತಲೆಗೆ ಸೋಕಿದಾಗ ಅವನು ಎಚ್ಚರವಾದ. ಆಗ ಕೋಪಗೊಂಡ ರಾಮನು ಕಾಗೆಯ ವೇಷಧಾರಿ ಸಯಂದನಿಗೆ ಬಾಣವನ್ನು ಹೂಡಿದನು. ಆಗ ಸಯಂದನು (ಕಾಗೆ) ಏಳೇಳು ಲೋಕವನ್ನು ಸುತ್ತಿ ಕಡೆಯಲ್ಲಿ ರಾಮನ ಕಾಲಿಗೆ ಬಂದು ಬಿತ್ತು. ರಾಮ ಅವನನ್ನು ನೋಡಿ ‘ನನ್ನ ಗುರಿ ತಪ್ಪದು. ಆದರೆ ನೀನು ನನ್ನ ಕಾಲಿಗೆ ಬಂದು ಬಿದ್ದುದರಿಂದ ನಿನ್ನ ಒಂದು ಕಣ್ಣನ್ನು ಮಾತ್ರ ಕೊಡುವೆನು’ ಎಂದು ಹೇಳಿದನು. ಅಂದಿನಿಂದ ಕಾಗೆ ಒಂದು ಕಣ್ಣಿನಿಂದ ನೋಡಲು ತೊಡಗಿತು.

ಈ ರೀತಿಯಾಗಿ ಜನರು ತಮ್ಮ ಮನಸ್ಸನ್ನು ಆಕರ್ಷಿಸುವ ವಿಷಯಗಳಿಗೆ ವಿವರಣೆ ಕೊಟ್ಟು ಕಥೆಗಳನ್ನು ಹೆಣೆದಿದ್ದಾರೆ.

– ಎಸ್.ವಿ.ಅನುವಾದ ಪಿ.ಎಂ.

ತಮಿಳಿನಲ್ಲಿ ಜನಪದ ಗೀತೆಗಳ ಅಧ್ಯಯನ ತಮಿಳಿನಲ್ಲಿ ಜಾನಪದ (Folklore) ಒಂದು ಪ್ರತ್ಯೇಕ ಕ್ಷೇತ್ರವಾಗಿಯೇ ಪರಿಗಣಿಸಲ್ಪಟ್ಟಿದೆ. ಇದು ಒಂದು ಅಧ್ಯಯನ ಕ್ಷೇತ್ರವೆಂದು ಪರಿಗಣಿಸುವ ಮುನ್ನವೇ, ಜನಪದ ಸಾಹಿತ್ಯವನ್ನು ಸಂಗ್ರಹಿಸುವ ಹಾಗೂ ವಿವಿಧ ಹಿನ್ನೆಲೆಯಲ್ಲಿ ವಿಂಗಡಿಸುವ ಕಾರ್ಯದಲ್ಲಿ ಹಲವಾರು ಸಂಶೋಧಕರು ತಮ್ಮನ್ನು ತೊಡಗಿಸಿಕೊಂಡದ್ದುಂಟು. ನಿರ್ದಿಷ್ಟವಾಗಿ ಹೇಳುವುದಾದರೆ ಜನಪದ ಗೀತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಪ್ರಕಟಿಸುವ ಕಾರ್ಯ ಆರಂಭವಾದಾಗಿನಿಂದಲೂ (೧೯೪೦) ಇವುಗಳನ್ನು ವಿಭಾಗಿಸುವ ಪದ್ಧತಿ ಬೆಳೆದು ಬಂದಿದೆ. ಹೀಗೆ ಗುರುತಿಸಿದವರಲ್ಲಿ ಮು. ಅರುಣಾಚಲಂ (೧೯೪೩), ಸಾಂಬಮೂರ್ತಿ ಮೊದಲಾದವರು ಪ್ರಮುಖರು. ಇವರು ಹಲವು ಬಗೆಯ ಮಾನದಂಡಗಳನ್ನಾಧರಿಸಿ ಈ ಹಾಡುಗಳನ್ನು ವಿಭಾಗಿಸಿದ್ದಾರೆ. ಕಿ.ವ. ಜಗನ್ನಾಥನ್, ಅನ್ನಕಾಮು (೧೯೬೬), ಆರು. ಅಳಗಪ್ಪನ್ (೧೯೭೩), ಮ. ಕೋದಂಡರಾಮನ್, ಮು.ವರದರಾಜನ್ (೧೯೭೮), ಸು.ಷಣ್ಮುಗ ಸುಂದರಂ (೧೯೮೧) ಮೊದಲಾದವರು ಕೂಡ ಜನಪದ ಗೀತೆಗಳ ವಸ್ತು ವೈವಿಧ್ಯವನ್ನಾಧರಿಸಿಯೂ; ನಾ. ವಾನಮಾಮಲೈ (೧೯೭೭), ಕ. ಕೃಷ್ಣಸ್ವಾಮಿ (೧೯೭೮) ಮೊದಲಾದವರು ಮಾನವ ಜೀವನದ ವಿವಿಧ ಹಂತಗಳನ್ನಾಧರಿಸಿ; ಜನಪದ ಗೀತೆಗಳನ್ನು ವಿಭಾಗಿಸಿರುವುದುಂಟು.

ಮೇಲೆ ತಿಳಿಸಲಾದ ವಿಭಾಗ ಕ್ರಮಗಳನ್ನಾಧರಿಸಿ ಅಧ್ಯಯನ ಮಾಡಿದ ಆರು ರಾಮನಾಥನ್ ಅವರು ಸಮಾಜ ಹಾಗೂ ಮಾನವ ಜೀವನದ ಘಟನೆಗಳನ್ನಾಧರಿಸಿಯೂ ಇವುಗಳನ್ನು ನೋಡಬಹುದೆನ್ನುತ್ತಾರೆ. ಇವರು,

೧. ಜೋಗುಳದ ಹಾಡುಗಳು

೨. ಮಗುವಿನ ಬೆಳೆವಣಿಗೆಯ ಹಂತಗಳನ್ನಾಧರಿಸಿರುವ ಹಾಡುಗಳು

೩. ಆಟದ ಹಾಡುಗಳು

೪. ವೃತ್ತಿ ಸಂಬಂಧೀ ಹಾಡುಗಳು

೫. ಆರಾಧನಾ ಹಾಡುಗಳು

೬. ಆಚರಣಾ ಸಂದರ್ಭಗಳ ಹಾಡುಗಳು

೭. ದುಃಖದ ಹಾಡುಗಳು

೮. ಸಾವಿನ ಹಾಡುಗಳು

ಎಂದು ಎಂಟು ರೀತಿಯಲ್ಲಿ ಗುರುತಿಸಿದ್ದಾರೆ. ಇವುಗಳಲ್ಲಿ ಪ್ರತಿಯೊಂದರಲ್ಲೂ ಉಪವಿಭಾಗಗಳು ಉಂಟು. ಘಟನೆಗಳನ್ನು ಮಾತ್ರವೇ ಮಾನದಂಡವನ್ನಾಗಿಸಿ ಕೊಂಡಿರುವ ಈ ವಿಭಾಗ ಕ್ರಮ ತಮಿಳು ಜಾನಪದವನ್ನು ಇದುವರೆಗೂ ನೋಡಿರುವ ಕ್ರಮಗಳಿಗಿಂತ ತೀರ ಭಿನ್ನವಾದುದಾಗಿದೆ. ಈ ವಿಭಾಗ ಕ್ರಮದ ಮೂಲಕ ಜನಪದ ಗೀತೆಗಳ ಬಗೆಗಿನ ಸಂಶೋಧನೆ ಇನ್ನೂ ಹೆಚ್ಚು ಕ್ರಮಬದ್ಧವಾಗಿದೆಯೆಂಬ ನಂಬಿಕೆಯೂ ಜನರಲ್ಲಿದೆ.

ಜನಪದ ಗೀತೆಗಳ ಮೇಲೆ ನಡೆದಿರುವ ಅಧ್ಯಯನ : ಕಳೆದ ಇಪ್ಪತ್ತು ವರ್ಷಗಳಿಗಿಂತ ಹೆಚ್ಚಾಗಿ ತಮಿಳುನಾಡಿನ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕ ಸ್ನಾತಕೋತ್ತರ ತರಗತಿಗಳ ಪಠ್ಯವಸ್ತುವಾಗಿ ಜನಪದ ಸಾಹಿತ್ಯವನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ತಮಿಳು ಸಾಹಿತ್ಯವನ್ನು ಪ್ರಧಾನ ಪಠ್ಯವನ್ನಾಗಿ ಹೊಂದಿರುವ ಪದವಿ ತರಗತಿಗಳಲ್ಲೂ ಸ್ನಾತಕೋತ್ತರ ತರಗತಿಗಳಲ್ಲೂ ಸಾಹಿತ್ಯ ಒಂದು ಕಡ್ಡಾಯ ಪಠ್ಯವಾಗಿಯೊ, ಐಚ್ಫಿಕ ವಿಷಯವಾಗಿಯೊ ಕಲಿಸಲ್ಪಡುತ್ತಿದೆ. ತಮಿಳು ಸಾಹಿತ್ಯವನ್ನು ಅಭ್ಯಾಸ ಮಾಡುವವರೂ, ಎಂ.ಫಿಲ್. ಪಿಎಚ್.ಡಿ. ಪದವಿಗಳಿಗಾಗಿ ಸಂಶೋಧನೆ ನಡೆಸುವವರೂ ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗೆಯ ಅಧ್ಯಯನ ಕ್ರಮ ಇಂದು ವ್ಯಾಪಕವಾಗಿ ಕಮಡುಬರುತ್ತಿದೆ. ೧೯೮೦ರ ದಶಕದಲ್ಲಿ ಜಾನಪದ ಕ್ಷೇತ್ರವು ಒಂದು ಪ್ರತ್ಯೇಕ ಅಧ್ಯಯನ ಕ್ಷೇತ್ರವಾಗಿ ಬೆಳಕಿಗೆ ಬಂದಾಗಿನಿಂದ ಆರಂಭಿಸಿ ಇಂದಿನ ಈ ಪರಿಸ್ಥಿತಿಯನ್ನು ತಲುಪುವ ಮುನ್ನ, ಇಂತಹ ಅಧ್ಯಯನ ನಾನಾ ಹಂತಗಳನ್ನು ದಾಟಿಕೊಂಡು ಬಂದಿದೆ. ಅವುಗಳನ್ನು ಹೀಗೆ ಗುರುತಿಸಬಹುದು:

೧. ಪಾಶ್ಚಾತ್ಯರ ಅಧ್ಯಯನಕ್ಕಿಂತ ಹಿಂದಿನ ಕಾಲ ಘಟ್ಟಿ

೨. ಪಾಶ್ಚಾತ್ಯರ ಕಾಲ

೩. ದೇಶೀ ಪ್ರಜ್ಞೆಯ ಕಾಲ

೪. ಶೈಕ್ಷಣಿಕ ಅಧ್ಯಯನಗಳ ಕಾಲ

ಹೀಗೆ ಇದನ್ನು ನಾಲ್ಕು ರೀತಿಯಲ್ಲಿ ನೋಡಲಾಗುವುದು. ಇವುಗಳೊಳಗೆ ನಾಲ್ಕನೇ ಕಾಲಘಟ್ಟ ತುಂಬ ಪ್ರಮುಖವಾದುದು. ೧೯೫೦ರ ದಶಕದಿಂದಾರಂಭಿಸಿ ಇಂದಿನವರೆಗೂ ಸಾಗಿ ಬಂದಿರುವ ಈ ಹಂತದಲ್ಲಿ ನಡೆದಿರುವ ಸಂಗ್ರಹಣಾ ಕಾರ್ಯ, ಸಂಪಾದನೆ, ಸಂಶೋಧನೆ, ಪ್ರಕಟಣೆಗಳೂ ಗಮನಾರ್ಹವಾಗಿವೆ. ಜಾನಪದಕ್ಕೇ ಸೀಮಿತವಾದ ಬಗೆಯಲ್ಲಿ ಯಾವುದನ್ನೂ ಗಮನಿಸದೆ ಕೇವಲ ಜನಪದ ಪ್ರಕಾರಗಳನ್ನು ಮಾತ್ರ ಸಂಗ್ರಹಿಸಿ, ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸಿರುವುದು ಮೊದಲ ಕಾಲಘಟ್ಟದಲ್ಲಿ ಕಂಡು ಬರುತ್ತದೆ. ಎರಡನೇ ಕಾಲಘಟ್ಟದಲ್ಲಿ ತುಂಬ ಆಸಕ್ತಿಯಿಂದ ಇದ್ದುದನ್ನು ಇದ್ದಂತೆಯೇ ಸಂಗ್ರಹಿಸಿ, ಅಗತ್ಯ ವಿವರಗಳನ್ನು ನೀಡಿದ ಕ್ರಮ ಕಂಡುಬರುತ್ತದೆ. ಆದರೆ, ಮೂರನೆಯ ಕಾಲಘಟ್ಟದಲ್ಲಷ್ಟೇ ಜನಪದಕ್ಕಷ್ಟೇ ಸಂಬಂಧಿಸಿದ ಕ್ಷೇತ್ರಕಾರ್ಯವನ್ನಾಧರಿಸಿ, ಮಾಹಿತಿಗಳನ್ನು ಸಮಗ್ರವಾಗಿ ಸಂಗ್ರಹಿಸಿ, ಅವುಗಳನ್ನು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನೋಡುವ ಪದ್ಧತಿ ರೂಢಿಗೆ ಬಂತು. ಇಂದಿನ ದಿನಗಳಲ್ಲಿ ಜಾನಪದವೆಂಬುದು ಒಂದು ಪ್ರತ್ಯೇಕ ಅಧ್ಯಯನ ಶಿಸ್ತಾಗಿ ಬೆಳೆದು ಬಂದಿದ್ದರು ಕೂಡ, ಇದಕ್ಕಿಂತ ಹಿಂದಿನ ಕಾಲಘಟ್ಟಗಳ ತಮಿಳು ವಿಭಾಗದ ವಿದ್ವಾಂಸರೂ ಸಂಶೋಧಕರೂ ಇದರಲ್ಲಿ ಹೆಚ್ಚು ಆಸಕ್ತಿ ತೋರಿಸಿರುವುದುಂಟು. ಹೀಗಾಗಿ ಜನಪದ ಗೀತೆಗಳ ಬಗೆಗಿನ ಸಂಶೋಧನೆಗಳು ಹೆಚ್ಚು ನಡೆದಿವೆ. ಇತ್ತೀಚಿನ ದಿನಗಳಲ್ಲಿ ಸಮಾಜಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರ, ಮೊದಲಾದ ಕ್ಷೇತ್ರಗಳಲ್ಲಿ ಕೂಡ ಜಾನಪದವನ್ನು ಅಧ್ಯಯನ ವಿಷಯವನ್ನಾಗಿ ನೋಡಲಾಗುತ್ತಿದೆ. ಸಮಾಜದ ಅವಿಭಾಜ್ಯ ಅಂಗಗಳಾದ ಕುಟುಂಬ, ಧರ್ಮ, ಆರ್ಥಿಕ ಅಂಶಗಳು, ಪ್ರದರ್ಶನ ಕಲೆಗಳು, ಕರಕುಶಲ ಕಲೆಗಳು, ಆಹಾರ, ಉಡುಪು ಇತ್ಯಾದಿಗಳು ಕೂಡ ಇಂದು ಅಧ್ಯಯನ ವಸ್ತುಗಳಾಗಿವೆ. ಆದರೂ ಸಂಗ್ರಹ ಸಂಶೋಧನೆ ಎಂಬ ಎರಡು ಹಂತಗಳಲ್ಲೂ ತುಂಬ ದಿನಗಳಿಂದಲೂ ಜನಪದ ಹಾಡುಗಳಿಗೆ ಮಹತ್ತ್ವದ ಸ್ಥಾನ ಲಭಿಸಿದೆ.

ಜನಪದ ಗೀತೆಗಳ ಸಂಗ್ರಹ ಮತ್ತು ಸಂಶೋಧನಾ ಕಾರ್ಯ : ತಮಿಳಿನಲ್ಲಿ ಮೊಟ್ಟಮೊದಲಿಗೆ ಜನಪದ ಗೀತೆಗಳು ನಿಯತಕಾಲಿಕ ಪತ್ರಿಕೆಗಳಲ್ಲೂ ಪ್ರತ್ಯೇಕ ಸಂಗ್ರಹ ಕೃತಿಗಳಾಗಿಯೂ ಪ್ರಕಟವಾದವು. ಹೀಗೆ ಇವು ಬೆಳಕಿಗೆ ಬರಲು ಆರಂಭವಾದದ್ದು ೧೯೪೦ರ ದಶಕದಲ್ಲಿ. ತಮಿಳು ವಿದ್ವಾಂಸರಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸಬೇಕೆನ್ನುವ ಆಸಕ್ತಿ ಉಂಟಾಗಲು ಕಾರಣಕರ್ತರಾದವರು ಮೂಲತಃ ಪಂಜಾಬ್‌ನವರಾದ ದೇವೇಂದ್ರ ಸತ್ಯಾರ್ಥಿಯವರು. ಇವರು ಭಾರತದ ಹಲವು ರಾಜ್ಯಗಳಲ್ಲಿ ಸಂಚರಿಸಿ, ಸುಮಾರು ೨೪ ಭಾಷೆಗಳಲ್ಲಿಯ ಪಠ್ಯವನ್ನು ಸಂಗ್ರಹಿಸಿ, ‘ಮೀಟ್ ಮೈ ಪೀಪಲ್’ (೧೯೪೬) ಎಂಬ ಕೃತಿಯನ್ನು ಪ್ರಕಟಿಸಿದರು. ತಮಿಳುನಾಡಿನ ಹಲವೆಡೆಗಳಲ್ಲಿ ಸಂಚರಿಸಿರುವ ಇವರು ಅಂದಿನ ಪ್ರಸಿದ್ಧ ತಮಿಳು ವಿದ್ವಾಂಸರಾದ ಉ.ವೆ. ಸ್ವಾಮಿನಾಥ ಅಯ್ಯರ್, ಜಗನ್ನಾಥನ್ ಮುಂತಾದವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ತಮಗೆ ನೀಡಿದ ಸ್ಫೂರ್ತಿಯಿಂದಾಗಿ, ಜನಪದ ಗೀತೆಗಳ ಸಂಗ್ರಹ, ಪ್ರಕಟಣೆ ಸಾಧ್ಯವಾಯಿತೆಂದು ಅವರು ಹೇಳುತ್ತಾರೆ. ೧೯೩೦ ರಿಂದ ತಮಿಳಿನಲ್ಲಿ ಜಾನಪದ ಗೀತೆಗಳ ಸಂಗ್ರಹ ಕೃತಿಗಳು ಹೊರಬರಲಾರಂಭಿಸಿದುವು. ಮೂಲತ: ಶ್ರೀಲಂಕಾದವರಾದ ತಿ. ಸದಾಶಿವ ಅಯ್ಯರ್ (ವಸಂತನ್ ಕವಿ ತಿರಟ್ಟು), ವಸಂತ ಕಾವ್ಯ ಸಂಗ್ರಹ (೧೯೪೦), ಮು. ಅರುಣಾಚಲಂ (ಕಾಟ್ರಿಲ್ ಮಿದಂದ ಕವಿದೈ) ಗಾಳಿಯಲ್ಲಿ ತೇಲಿಬಂದ ಕವಿತೆ (೧೯೪೩), ಕೀ.ವ. ಜಗನ್ನಾಥನ್ (ನಾಡೋಡಿ ಇಲಕ್ಕಿಯಂ) ವಲಸಿಗರ ಸಾಹಿತ್ಯ (೧೯೪೧), ಕಂಜಿಯಿಲುಂ ಇನ್ಬಂ (ಗಂಜಿಯೊಳಗೂ ಸುಖ) ೧೯೪೯; ಮಚ್ಚುವೀಡು (ಮಚ್ಚಿನ ಮನೆ) ೧೯೫೨); ಕುಳಂದೈ ಉಲಗಂ (ಮಕ್ಕಳ ಲೋಕ, (೧೯೫೨), ತಮಿಳ್ ಅನ್ನಲ್ (ತಾಲಾಟ್ಟು) (ಜೋಗುಳ) ೧೯೫೬), ಪೆ. ತೂರನ್ (ಕಾಟ್ರಿಲ್ ವಂದ ಕವಿದ್ಯೆ) ಗಾಳಿಯಲ್ಲಿ ಬಂದ ಕವಿತೆ (೧೯೫೮). ಸೆ. ಅನ್ನಕಾಮು (ಏಟ್ಟಿಲ್ ಎಳುದಾ ಕವಿದೈಗಳ್) (ಹಾಳೆಯಲ್ಲಿ ಬರೆಯದ ಕವಿತೆಗಳು, ೧೯೫೯), ನಾ. ವಾನಮಾಮಲೈ (ತಮಿಳ್ ನಾಟ್ಟು ಪಾಮರ ಪಾಡಲ್‌ಗಳ್ (ತಮಿಳುನಾಡಿನ ವಾಮರ ಗೀತೆಗಳು, ೧೯೬೦); ತಮಿಳನಾಟ್ಟು ಪಾಡಲ್‌ಗಳ್ (ತಮಿಳುನಾಡಿನ ಹಾಡುಗಳು, ೧೯೬೪) ಆರು. ಅಳಗಪ್ಪನ್ ತಾಲಾಟ್ಟು ಪಾಡಲ್‌ಗಳು (ಜೋಗುಳದ ಹಾಡುಗಳು, ೧೯೬೦), ನಾಟ್ಟು ಪಾಡಲ್‌ಗಳು (ದೇಶೀಯ ಗೀತೆಗಳು, ೧೯೬೬), ಮು.ವೈ. ಅರವಿಂದನ್ (ತಮಿಳಗನಾಟ್ಟು ಪಾಡಲ್‌ಗಳ್) ತಮಿಳುನಾಡಿನ ದೇಶೀಯ ಗೀತೆಗಳು, ೧೯೭೦, ೧೯೭೭) ಕವಿ. ಮ. ವರದರಾಜನ್ (ತಮಿಳಗನಾಟ್ಟು ಪಾಡಲ್ ಗಳು) ತಿಲುನಾಡಿನ ಜನಪದ ಗೀತೆಗಳು, ೧೯೭೮; ಕ. ಕೃಷ್ಣಸ್ವಾಮಿ ಕೊಂಗು ನಾಟ್ಟುಪುರ ಪಾಡಲ್‌ಗಳು) ಕೊಂಗುನಾಡಿನ ಜನಪದ ಗೀತೆಗಳು, ೧೯೭೮, ೧೯೮೦) ಎ.ಎನ್. ಪೆರುಮಾಳ್ (ಗುಮ್ಮಿ ಪಾಡಲ್‌ಗಳ್) ಗುಮ್ಮಿ ಪಾಡಲ್‌ಗಳ್ ಗುಮ್ಮಿ ಹಾಡುಗಳು, ೧೯೮೨ ಸ. ಮುರುಗಾನಂದನ್ (ನಾಟ್ಟುಪುರ ಪಾಡಲ್‌ಗಳ್ ಜಾನಪದ ಗೀತೆಗಳು, ೧೯೮೭; ತಮಿಳಗೆ ನಾಟ್ಟುಪುರ ಮಕ್ಕಳೆನ್ ಪಾಡಲ್‌ಗಳ್ (ತಮಿಳುನಾಡಿನ ಜಾನಪದರ ಹಾಡುಗಳು, ೧೯೯೦), ಸು. ಷಣ್ಮುಗ ಸುಂದರಂ (ತಿರುಮಣ ಪಾಡಲ್‌ಗಳ್) ಮದುವೆಯ ಗೀತೆಗಳು, ೧೯೮೭; ತಮಿಳಗ ನಾಟ್ಟುಪುರ ಪಾಡಲ್‌ಗಳ್ (ತಮಿಳುನಾಡಿನ ಜನಪದ ಗೀತೆಗಳು, ೧೯೯೪ ಎಸ್. ಮುತ್ತುಮೀರಾನ್ (ಕಿಳಕ್ಕು ಇಲಂಗೈ ಮುಸ್ಲಿಂಗಳಿನ್ ನಾಟ್ಟಾರ್ ಪಾಡಲ್‌ಗಳ್) ಪೂರ್ವ ಶ್ರೀಲಂಕಾದ ಮುಸ್ಲಿಂ ಜನಾಂಗದವರ ಹಾಡುಗಳು, ೧೯೭೭; ಆರು. ರಾಮನಾಥನ್ (ನಾಟ್ಟುಪುರ ಪಾಡಲ್ ಕಳಂಜಿಯಂ (ಜಾನಪದ ಗೀತಗಳ ಕೋಶ, ೨೦೦೧ ಮುಂತಾದ ಸಂಶೋಧಕರು ಜನಪದ ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಇವುಗಳಲ್ಲಿ ಆರು. ರಾಮನಾಥನ್ ಅವರ ಪ್ರಧಾನ ಸಂಪಾದಕತ್ವದಲ್ಲಿ, ಬಂದಿರುವ ತಮಿಳುನಾಡಿನ ಜನಪದ ಗೀತೆಗಳ ಕೋಶ ಒಟ್ಟು ಹತ್ತು ಸಂಪುಟಗಳಲ್ಲಿ ಬಂದಿದ್ದು, ಇವು ಪ್ರಮುಖ ಕೃತಿಗಳೆನಿಸಿವೆ. ಹಾಡುಗಾರರು, ಹಾಡು, ಹಾಡಿನ ಸಂದರ್ಭ ಇತ್ಯಾದಿ ವಿವರಗಳೊಂದಿಗೆ ಪ್ರಕಟವಾಗಿರುವ ಈ ಸಂಪುಟಗಳೆಲ್ಲವೂ ಕ್ರಮಬದ್ಧವಾಗಿ ಪೂರ್ವ ಯೋಜನೆಯೊಂದಿಗೆ ವ್ಯವಸ್ಥಿತವಾಗಿ ಹೊರಬಂದಿವೆ. ತಮಿಳುನಾಡಿನ ವಿವಿಧ ಪ್ರಾಂತ್ಯಗಳ ಜನಪದ ಸಾಹಿತ್ಯವನ್ನು ಪ್ರತಿಬಿಂಬಿಸುವ ಈ ಪ್ರತಿಯೊಂದು ಸಂಪುಟದ ಸಂಪಾದಕರ ಹೆಸರುಗಳು ಹೀಗಿವೆ: ಆರು ರಾಮನಾಥನ್ (ಮೊದಲ ಮೂರು ಸಂಪುಟಗಳು ಕಡಲೂರು, ಏಳುಪುರಂ ಜಿಲ್ಲೆಯ ಹಾಡುಗಳು ಅ. ಧನಂಜಯನ್ (೫ನೆಯ ಸಂಪುಟ ನಾಗಪಟ್ಟಣ ಜಿಲ್ಲೆಯ ಮೀನುಗಾರರ ಹಾಡುಗಳು) ಸಿ.ಮ. ರವಿಚಂದ್ರನ್ (೬ನೇ ಸಂಪುಟ ಕೊಯಂಬತ್ತೂರ್ ಜಿಲ್ಲೆಯ ಹಾಡುಗಳು ಓ. ಮುತ್ತಯ್ಯನ್ (೭ನೇ ಸಂಪುಟ ತೇನಿ, ದಿಂಡುಕ್ಕಲ್, ಮದುರೈ ಜಿಲ್ಲೆಯ ಹಾಡುಗಳು ಆರು ರಾಮನಾಥನ್ (೮ ಮತ್ತು ೯ನೇ ಸಂಪುಟಗಳು ಶಿವಗಂಗೆ, ವಿರುದ್‌ನಗರ್, ರಾಮನಾಥ ಪುರಂ ಜಿಲ್ಲೆಯ ಹಾಡುಗಳು ಆ. ಶಿವ ಸುಬ್ರಹ್ಮಣ್ಯ ೧೦ನೇ ಸಂಪುಟ ತೂತ್ತುಕುಡಿ, ಕನ್ಯಾಕುಮಾರಿ, ತಿರುನಲ್ವೇಲಿ ಜಿಲ್ಲೆಯ ಹಾಡುಗಳು ಸ್ಪಷ್ಟ ನಿರೂಪಣಾ ಶೈಲಿಯಲ್ಲಿ ಸಂಪಾದಿಸಲ್ಪಟ್ಟಿರುವ ಈ ಕೃತಿಗಳು ತುಂಬ ಮಹತ್ತ್ವ ಪೂರ್ಣವಾಗಿವೆ. ಈ ಎಲ್ಲ ಸಂಪುಟಗಳಲ್ಲಿರುವ ಹಾಡುಗಳು, ಅವುಗಳ ಸಂಗ್ರಹ ಹಾಗೂ ದಾಖಲೀಕರಣದಲ್ಲಿ ಜಾನಪದ ತಜ್ಞರ ಗಮನಾರ್ಹ ಸಾಧನೆಯಿದೆ.

ಜನಪದ ಗೀತೆಗಳ ಬಗೆಗಿನ ಸಂಶೋಧನೆಗಳು : ಈಗಾಗಲೇ ಜನಪದ ಗೀತೆಗಳನ್ನು ಸಂಗ್ರಹಿಸಿ, ಸಂಪಾದಿಸಿದ ಸುಮಾರು ನೂರಕ್ಕಿಂತಲೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. ಈ ಕೃತಿಗಳಲ್ಲಿರುವ ಹಾಡುಗಳನ್ನು ಪ್ರಮುಖ ಆಕರಗಳನ್ನಾಗಿಟ್ಟುಕೊಂಡು ಸಂಶೋಧನೆ ಕೈಗೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಭಾವಿಸಿ, ಸಂಶೋಧಕರು ತಾವಾಗಿಯೇ ಕ್ಷೇತ್ರ ಕಾರ್ಯ ಕೈಗೊಂಡು ಜನರನ್ನು ಭೇಟಿಯಾಗಿ ತಾವೆ ಸಂಗ್ರಹಿಸಿದ ಮಾಹಿತಿಯನ್ನು ಮೂಲ ಆಧಾರವನ್ನಾಗಿಟ್ಟುಕೊಂಡು ಸಂಶೋಧನಾಧ್ಯಯನ ಮಾಡುತ್ತಿರುವುದನ್ನು ಕಾಣಬಹುದು. ಕ್ಷೇತ್ರಕಾರ್ಯವೆಂಬುದು ಹಾಡುಗಳನ್ನು ಹಾಡುವ ಸಂದರ್ಭಗಳನ್ನು ಪ್ರತ್ಯಕ್ಷವಾಗಿ ಗಮನಿಸಲೂ ಆಯಾ ಸನ್ನಿವೇಶಗಳು ಹಾಗೂ ಅವುಗಳ ಸಂದರ್ಭದಲ್ಲಿ ಹಾಡುವ ಹಾಡುಗಳು ಯಾವುವು ಎಂಬುದನ್ನು ಗಮನಿಸಲೂ, ಹಾಡುಗಾರರು ಅಥವಾ ವಕ್ಷಗಳನ್ನು ಪ್ರತ್ಯಕ್ಷ ಸಂದರ್ಶಿಸಿ ಅವರ ಮೂಲಕ ಹಾಡಿನೊಂದಿಗೆ ಸಂಬಂಧ ಹೊಂದಿರುವ ಇತರ ಮಾಹಿತಿಗಳನ್ನು ಸಂಗ್ರಹಿಸಿಲೂ ಅಗತ್ಯ. ಹೀಗೆ ಸಂಗ್ರಹಿಸಿದ ಮಾಹಿತಿಗಳ ಮೂಲಕ ಹಾಡುಗಳನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು, ಅವುಗಳನ್ನು ವಿವರಿಸಲು ಸುಲಭ ಸಾಧ್ಯವಾಗುತ್ತದೆ. ಈಗಾಗಲೇ ಸಂಗ್ರಹಿತವಾಗಿರುವ ಹಾಡುಗಳನ್ನು ಸಂಶೋಧಕರು ದ್ವಿತೀಯ ಆಕಾರಗಳಾಗಿ ಬಳಸಿಕೊಳ್ಳುತ್ತಿರುವುದೂ ಉಂಟು. ಮೇಲೆ ತಿಳಿಸಿದ ರೀತ್ಯಾ ಜನಪದ ಗೀತೆಗಳನ್ನು ಸಂಗ್ರಹಿಸಿ, ಅವುಗಳನ್ನು ಎಂ.ಫಿಲ್., ಪಿ.ಎಚ್.ಡಿ., ಪದವಿಗಳಿಗಾಗಿ ಸಂಶೋಧನೆಗೊಳಪಡಿಸಿರುವುದೂ ಉಂಟು. ಸರ್ಟಿಫಿಕೇಟ್ ಕೋರ್ಸ್‌ಗಳಲ್ಲೂ ಸ್ನಾತಕೋತ್ತರ ಪದವಿ ತರಗತಿಗಳಲ್ಲೂ ಜಾನಪದವನ್ನು ಅಧ್ಯಯನ ಮಾಡುವವರಿದ್ದಾರೆ. ಇವರಷ್ಟೇ ಅಲ್ಲದೆ, ವೈಯಕ್ತಿಕಾಸಕ್ತಿಯಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರೂ ಉಂಟು.

ವಿಶ್ವವಿದ್ಯಾಲಯಗಳಲ್ಲಿ ಡಾಕ್ಟೊರೇಟ್ ಪದವಿಗಾಗಿ ಇದುವರೆಗೂ ತಮಿಳುನಾಡಿನಲ್ಲಿ ಶ್ರೀಲಂಕಾದಲ್ಲಿ ಹಲವಾರು ಸಂಶೋಧಕರು ಜನಪದ ಗೀತೆಗಳನ್ನು ಪ್ರಾಥಮಿಕ ಆಕರವಾಗಿ ತೆಗೆದುಕೊಂಡು ಅಧ್ಯಯನ ನಡೆಸಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ ೧೯೬೦ – ೧೯೯೦ ಅವಧಿಯಲ್ಲಿ ಗಣನೀಯ ಪ್ರಮಾಣದ ಸಂಶೋಧಕರು ಜನಪದ ಗೀತೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. ಈ ಕಾಲಘಟ್ಟದಲ್ಲಿ ನಡೆಸಿರುವ ಇಂತಹ ಅಧ್ಯಯನಗಳಲ್ಲಿ ಕೆಲವರನ್ನು ಇಲ್ಲಿ ಗಮನಿಸಬಹುದು; ಪಾ.ರಾ. ಸುಬ್ರಹ್ಮಣ್ಯಂ ಅವರ ಜೋಗುಳ ಹಾಗೂ ಸಾವಿನ ಪದಗಳ (ಒಪ್ಪಾರಿ) ಶೈಲಿ (೧೯೬೯) ಸು. ಷಣ್ಮುಗ ಸುಂದರಂ ಅವರ ‘ತಿರುನೆಲ್ವೇಲಿ ಜಿಲ್ಲೆಯ ಜನಪದ ಗೀತೆಗಳಲ್ಲಿ ಸಮಾಜದ ಸ್ವರೂಪ’ (೧೯೭೭) ವಿ. ಸರಸ್ವತಿ ಅವರ ‘ಜಾತಿ ಆಧಾರಿತ ಜೋಗುಳ ಹಾಗೂ ಸಾವಿನ ಪದಗಳ ಸಾಮ್ಯ ವೈಷಮ್ಯಗಳು’ (೧೯೭೮) ಮುಂತಾದವು ಗಮನಾರ್ಹವಾದವು. ಅಲ್ಲದೆ ‘ತಂಜಾವೂರು ಜಿಲ್ಲೆಯ ವೀಳ್ಯದೆಲೆ ನಡುವೆ ಸಂದರ್ಭದ ಹಾಡುಗಳು’ ಎಂಬ ವಿಷಯದ ಮೇಲೆ (೧೯೯೯) ಕುರುವಿ ಕ್ಕರಂಬೈ ಷಣ್ಮುಗಂ ಅವರು ಸಂಶೋಧನೆ ನಡೆಸಿದ್ದಾರೆ. ಇದು ನಿರ್ದಿಷ್ಟ ವೃತ್ತಿಯೊಂದಕ್ಕೆ ಸಂಬಂಧಿಸಿದ ಗೀತೆಗಳ ಅಧ್ಯಯನವಾಗಿದೆ. ಭಾಷಾ ಶಾಸ್ತ್ರದ ಹಿನ್ನೆಲೆಯಲ್ಲಿ, ‘ತಮಿಳುನಾಡಿನ ಜನಪದ ಗೀತೆಗಳ ಭಾಷಿಕ ರಚನೆ’ (೧೯೭೯) ಎಂಬ ವಿಷಯವನ್ನು ಕುರಿತು ಕ. ಶಾಂತಿಯವರು ಅಧ್ಯಯನ ಕೈಗೊಂಡಿದ್ದಾರೆ. ಆರು ರಾಮನಾಥನ್ ಅವರು ದಕ್ಷಿಣ ಆರ್ಕಾಟ್ ಜಿಲ್ಲೆಯ ಹಲವಾರು ಜಾತಿಗಳಿಗೆ ಸೇರಿದ ಜನರಿಂದ ಸುಮಾರು ಏಳುನೂರ ನಲವತ್ತು ಹಾಡುಗಳನ್ನು ಸಂಗ್ರಹಿಸಿ, ‘ದಕ್ಷಿಣ ಅರ್ಕಾಟ್ ಜಿಲ್ಲೆಯ ಜನಪದ ಗೀತೆಗಳು’ ಎಂಬ ವಿಷಯ ಕುರಿತು ಸಂಶೋಧನೆ ಮಾಡಿದ್ದಾರೆ (೧೯೮೦).

ಇತರ ಜಾನಪದ ತಜ್ಞರ ಸಂಶೋಧನೆಗಳು ಪುಸ್ತಕ ರೂಪದಲ್ಲಿ ಪ್ರಕಟವಾದಂತೆ ಅರು ರಾಮನಾಥನ್ ಅವರ ಸಂಶೋಧನಾ ಕೃತಿ, ‘ಜನಪದ ಗೀತೆಗಳಲ್ಲಿ ಕಂಡು ಬರುವ ತಮಿಳರ ಜೀವನ ವಿಧಾನ’ (೧೯೮೨) ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಅರು ರಾಮನಾಥನ್ ಅವರ ಪ್ರಯತ್ನವನ್ನು ಅನುಕರಿಸಿ ಯಾವುದಾದರೊಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅಲ್ಲಿಯ ಜನರ ನಡುವೆ ಪ್ರಚಲಿತದಲ್ಲಿರುವ ಹಾಡುಗಳನ್ನು ಸಂಗ್ರಹಿಸಿ, ಸಂಶೋಧನೆ ನಡೆಸಿ ಡಾಕ್ಟೊರೇಟ್ ಪದವಿಗಾಗಿ ಅಧ್ಯಯನ ನಡೆಸುವ ಕ್ರಮವೊಂದು ಮುಂದಿನ ಸಂಶೋಧಕರ ನಡುವೆ ಬೆಳೆದು ಬಂದಿರುವುದನ್ನು ಗಮನಿಸಬಹುದು. ಎಂದರೆ ಸಂಶೋಧಕರಿಗೊಂದು ಮಾದರಿಯನ್ನು ಇವರು ಹಾಕಿ ಕೊಟ್ಟಿದ್ದಾರೆಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ಮೀ.ಅ.ಮು. ನಸೀರ್ ಅವರ, ‘ತಿರುಚ್ಚಿ ಜಿಲ್ಲೆಯ ಜನಪದ ಗೀತೆಗಳು’ (೧೯೮೭), ನಿರ್ಮಲಾ ಬಾಯಿಯವರ, ‘ಕನ್ಯಾಕುಮಾರಿ ಜಿಲ್ಲೆಯ ಜನಪದ ಗೀತೆಗಳು’, ಕೋದಂಡರಾಮನ್ ಅವರ, ‘ಉತ್ರರ ಅರ್ಕಾಟ್ ಜಿಲ್ಲೆಯ ಜನಪದ ಗೀತೆಗಳು’, ಷಣ್ಮುಗಂ ಸುಂದರಂ ಅವರ, ‘ತಂಜಾವೂರು ಜಿಲ್ಲೆಯ ಜಾನಪದ ಗೀತೆಗಳು’, ಸೇತುರಾಮಲಿಂಗಂ ಅವರ, ‘ರಾಮನಾಥ ಪುರಂ ಜಿಲ್ಲೆಯ ಜನಪದ ಗೀತೆಗಳು’, ಮೀನಾಕ್ಷಿ ಸುಂದರಂ ಅವರ ‘ಚಿತ್ತೂರು ಜಿಲ್ಲೆಯ ಜಾನಪದ ಗೀತೆಗಳು’ ಅ. ಧನಂಜಯನ್ ಅವರ ‘ತಂಜಾವೂರು ಜಿಲ್ಲೆಯ ಮೀನುಗಾರರ ಹಾಡುಗಳು ಒಂದು ಅಧ್ಯಯನ (೧೯೮೭) ಅ. ಕರುಣಾನಿಧಿ ಅವರ ‘ಪೂಂಬುಹಾರ್ ಪ್ರಾಂತ್ಯದ ಜಾನಪದ ಗೀತೆಗಳು ಒಂದು ಅಧ್ಯಯನ’ ಇತ್ಯಾದಿ ಸಂಶೋಧನಾ ಪ್ರಬಂಧಗಳು ನಿರ್ದಿಷ್ಟ ಜಿಲ್ಲೆಯೊಂದನ್ನಾಧರಿಸಿ ಅಧ್ಯಯನ ನಡೆಸಿರುವುದನ್ನು ನೋಡಬಹುದು.

ಡಾಕ್ಟೊರೇಟ್ ಪದವಿಯನ್ನು ಕೇಂದ್ರವಾಗಿಟ್ಟುಕೊಳ್ಳದೆ ಕೇವಲ ತಮ್ಮ ಆಸಕ್ತಿಗಾಗಿಯೇ ಜನಪದ ಗೀತೆಗಳ ಮೇಲೆ ಸಂಶೋಧನೆ ಕೈಗೊಂಡವರೂ ಉಂಟು. ಅಂತಹ ಕೆಲವು ಆಸಕ್ತ ಸಂಶೋಧಕರಲ್ಲಿ ‘ಪಶ್ವಿಮ ತಮಿಳುನಾಡಿನ ಜನಪದ ಸಾಹಿತ್ಯ ಒಂದು ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸದಿ ಸೆಂಗೋ ವರದರಾಜನ್ ಮುಖ್ಯವಾದವರು. ಇವರ ಈ ಕೃತಿ ಈರೋಡು, ಕೊಯಮತ್ತೂರು ಜಿಲ್ಲೆಗಳನ್ನೊಳಗೊಂಡ ಕೊಂಗು ಪ್ರಾಂತ್ಯದಲ್ಲಿ ವಾಸಿಸುವ ಹಲವು ಜಾತಿಗಳವರ ನಾನಾ ಪ್ರಕಾರದ ಗೀತೆಗಳನ್ನು ಗಮನಿಸುವ ಮೂಲಕ, ಆಯಾ ಜನರ ಸಂಸ್ಕೃತಿ ಆಚಾರ ವಿಚಾರಗಳನ್ನು ವಿಶ್ಲೇಷಣೆಗೊಳಪಡಿಸಿದೆ. ಈ ಕೃತಿಯ ಅನುಬಂಧದಲ್ಲಿ ಕನ್ನಡ, ತೆಲುಗು ಭಾಷೆಯ ಹಾಡುಗಳನ್ನೂ, ಅವುಗಳ ತಮಿಳು ಅನುವಾದದೊಂದಿಗೆ ನೀಡಿರುವುದು ವಿಶೇಷವಾಗಿದೆ. ಇವರ ಇನ್ನೊಂದು ಕೃತಿ, ‘ಕೊಲ್ಲಿಮಲೆ ಪ್ರಾಂತ್ಯದ ಜನರ ಹಾಡುಗಳು’ (೨೦೦೨) ಇದು ಕೂಡ ಪ್ರಮುಖ ಕೃತಿಯಾಗಿದೆ. ಇದರಲ್ಲಿ ಕೊಲ್ಲಿಮಲೆ ಪ್ರಾಂತ್ಯದಲ್ಲಿ ವಾಸಿಸುವ ಗಿರಿಜನರ ನಡುವೆ ಇರುವ ನಾನಾ ಪ್ರಕಾರದ ಹಾಡುಗಳನ್ನು ಜಾನಾಂಗಿಕ ಹಿನ್ನೆಲೆಯಲ್ಲಿ ಸಂಶೋಧನೆಗೊಳಪಡಿಸಲಾಗಿದೆ.

ಜನಪದ ಗೀತೆಗಳ ಸಂಗ್ರಹ ಕೃತಿಗಳು, ಅವುಗಳ ಬಗೆಗೆ ನಡೆದಿರುವ ಅಧ್ಯಯನ, ಸಂಶೋಧನೆ ಮೊದಲಾದವುಗಳನ್ನು ಒಟ್ಟಾರೆಯಾಗಿ ಗಮನಿಸುವಾಗ, ಕೆಲವೊಂದು ಸಾಮಾನ್ಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದೆ.

ಜನಪದ ಸಾಹಿತ್ಯ ತಮಿಳು ಶಿಷ್ಟ ಸಾಹಿತ್ಯಕ್ಕೆ ಈಡು ಜೋಡಾಗುವಂತಹ ಸಾಮರ್ಥ್ಯ ಹೊಂದಿದೆ ಎಂಬ ಅಭಿಪ್ರಾಯ ಜಾನಪದ ತಜ್ಞರದು. ಇದನ್ನು ಸಾಬೀತುಪಡಿಸುವಂತೆ ಕಿ.ವಾ. ಜಗನ್ನಾಥನ್ ಮೊದಲಾದ ಕೆಲವು ತಮಿಳು ಪಂಡಿತರು ಜನಪದ ಸಾಹಿತ್ಯವನ್ನು ಶಿಷ್ಟೀಕರಣಗೊಳಿಸಿ ದಾಖಲಿಸಿದ್ದಾರೆ. ಮೌಖಿಕ ಸಾಹಿತ್ಯ ಪ್ರಕಾರಗಳಲ್ಲೊಂದಾದ ಜನಪದ ಗೀತೆಗಳು ಎಲ್ಲ ವರ್ಗದ ಜನರನ್ನೂ ಆಕರ್ಷಿಸುವ ಕಾರಣದಿಂದ ಇವುಗಳ ಬಗೆಗೆ ತುಂಬ ಜನರು ಆಸಕ್ತಿ ತೋರಿಸಿದ್ದಾರೆ. ಇವುಗಳನ್ನು ವಿವಿಧ ಮಾನದಂಡಗಳನ್ನಾಧರಿಸಿ ವಿಭಾಗಿಸಿರುವುದೂ ಉಂಟು. ತಮಿಳುನಾಡಿನ ಎಲ್ಲ ಜಿಲ್ಲೆಗಳನ್ನೂ ಪ್ರತಿನಿಧೀಕರಿಸುವಂತಹ ಹೆಸರನ್ನೊಳಗೊಂಡ ‘ತಮಿಳುನಾಡಿನ ಜನಪದ ಗೀತೆಗಳು’ ಎಂಬಂತಹ ಅಧ್ಯಯನಗಳು ಎಲ್ಲ ಪ್ರಾಂತ್ಯಗಳ ಜಿಲ್ಲೆಗಳ ಜನರ ಗೀತೆಗಳನ್ನು ದಾಖಲಿಸಿರುವುದಿಲ್ಲ ಎಂಬ ಅಂಶವನ್ನೂ ನಾವು ಮರೆಯಬಾರದು. ಇದೇ ಸಂದರ್ಭದಲ್ಲಿ ಆಯಾ ಪ್ರಾಂತ್ಯದ ಜಿಲ್ಲೆಗಳ ಎಲ್ಲೆಯೊಳಗೆ ಹಾಡುಗಳನ್ನು ಸಂಗ್ರಹಿಸಿ, ಅಧ್ಯಯನಕ್ಕೊಳಪಡಿಸಿರುವುದನ್ನು ಗಮನಿಸಬೇಕು. ಹೀಗೆ ನಾನಾ ದೃಷ್ಟಿಕೋನಗಳಲ್ಲಿ ಹಲವು ಕೃತಿಗಳು ಬಂದಿರುವುದನ್ನು ನೋಡಬಹುದು. ಜನಪದ ಗೀತೆಗಳ ಶೈಲಿಯನ್ನಾಧರಿಸಿ ನೋಡುವಾಗ ಜೋಗುಳದ ಪದಗಳು, ಸೋಬಾನೆ ಪದಗಳು, ಆಟದ ಹಾಡುಗಳು, ಸಾವಿನ ಪದಗಳು (ಒಪ್ಪಾರಿ), ಸಂಸ್ಕಾರದ ಹಾಡುಗಳು ಹೀಗೆ ಅವುಗಳ ವಸ್ತುವನ್ನಾಧರಿಸಿಯೂ ಹಾಡುಗಳನ್ನು ಸಂಗ್ರಹಿಸಿರುವುದುಂಟು. ಜಾತಿ, ಕುಲ, ವರ್ಗ, ವೃತ್ತಿಗಳನ್ನಾಧರಿಸಿ ಸಂಗ್ರಹಿಸಿರುವ ಕೃತಿಗಳೂ ಇವೆ.

ಸಂಶೋಧನಾಧ್ಯಯನ ಎಂಬ ದೃಷ್ಟಿಕೋನದಿಂದ ನೋಡಿದಾಗ, ಜಿಲ್ಲೆಗಳನ್ನಾಧರಿಸಿ ಪ್ರತಿಯೊಂದು ಜಿಲ್ಲೆಯ ಜನರ ನಡುವಿನ ಗೀತೆಗಳನ್ನೂ ಸಂಗ್ರಹಿಸಿ, ಡಾಕ್ಟೊರೇಟ್ ಪಟ್ಟಕ್ಕಾಗಿ ಅಧ್ಯಯನ ನಡೆಸುವ ಕ್ರಮ ೧೯೭೦ – ೮೦ರ ದಶಕದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಸಾಹಿತ್ಯಕ ದೃಷ್ಟಿಕೋನದಿಂದಲೂ ಜನಪದ ಗೀತೆಗಳನ್ನು ವಿಶ್ಲೇಷಣೆಗೊಳಪಡಿಸಿರುವುದುಂಟು. ಜಾನಪದ ಶಾಸ್ತ್ರ ಒಂದು ಪ್ರತ್ಯೇಕ ಅಧ್ಯಯನ ಕ್ಷೇತ್ರವಾಗಿ ವ್ಯಾಪಕ ಪ್ರಚಾರ ಪಡೆದುಕೊಂಡ ಅನಂತರ ಇಂತಹ ಅಧ್ಯಯನಗಳಲ್ಲಿ ಬದಲಾವಣೆಗಳು ಕಂದು ಬರತೊಡಗಿದವು. ಸಂಗ್ರಹ, ಸಂಶೋಧನೆ ಎಂಬ ಅಧ್ಯಯನ ಕ್ರಮ ಹೆಚ್ಚು ರೂಢಿಯಲ್ಲಿ ಬಂತು. ನಾನಾ ಬಗೆಯ ಜಾತಿ ಕುಲ ವೃತ್ತಿಗಳಿಗೆ ಸೇರಿದ ಜನರ ಜೀವನಕ್ರಮವನ್ನು ಅರಿಯುವ ಪ್ರಯತ್ನವೂ ಇಂತಹ ಅಧ್ಯಯನಗಳಲ್ಲಿ ನಡೆದಿರುವುದುಂಟು. ಈ ಹಿನ್ನೆಲೆಯಲ್ಲಿ ಹಲವಾರು ಕೃತಿಗಳಷ್ಟೇ ಅಲ್ಲದೆ, ಸಂಶೋಧನಾ ಲೇಖನಗಳೂ ಪ್ರಕಟವಾಗಿವೆ.

– ಎ.ಡಿ. ಅನುವಾದ ಟಿ.ಎಸ್.

ತಮಿಳಿನಲ್ಲಿ ಪುರಾಣ ಪುರಾಣ ಎಂಬುದು ದೇವರ ಕಥೆ. ಇದು ಪ್ರಪಂಚದ ಮತಧರ್ಮಗಳ ಆಂತರಿಕ ಬಾಹ್ಯ ರಚನೆಯ ಮೂಲ ನಡಾವಳಿ, ಪರಿಸರ ಸಿದ್ಧಾಮತ ಮೊದಲಾದವುಗಳ ಹುಟ್ಟಿಗೆ ಕಾರಣವಾದ ರಹಸ್ಯ ಕುರಿತ ನಿಗೂಢ ವಿಷಯವಾಗಿದೆ. ಸಮಾಜದ ಮತ ಮೌಲ್ಯಗಳು ವಿಧಿ ನಿಷೇಧಗಳನ್ನು ವ್ಯಕ್ತಪಡಿಸಲು ವಸ್ತು ನಿಖರತೆಯನ್ನು ಪ್ರಚುರಪಡಿಸಲು ಅನುಸರಿಸುವ ರೀತಿಯನ್ನು ಶಾಸ್ತ್ರಗಳ ಹಿನ್ನೆಲೆಯಲ್ಲಿ ಇದು ಹೇಳುತ್ತದೆ. ಅಗತ್ಯಕ್ಕೆ ತಕ್ಕಂತೆ ಪ್ರಮಾಣಭೂತವಾಗಿ ಒಂದು ಪರಂಪರೆಯ ಶ್ರೇಷ್ಠತೆಯನ್ನು ಕೂಡ ಇದು ನಿರೂಪಿಸುತ್ತದೆ. ಶಾಸ್ತ್ರ ಸಮಯಗಳಲ್ಲಿ ಮತಾಚರಣೆಗಳಲ್ಲಿ ಪುರಾಣದ ನಿಜಸಂಗತಿಗಳನ್ನು ಕಾಣಬಹುದು. ಆಗಮಿಕ ಶಾಸ್ತ್ರಗಳಲ್ಲಿ ಪುರಾಣಗಳನ್ನು ಮತ್ತೆ ಮತ್ತೆ ಹೇಳುವುದು ನಾಡಿನ ಕ್ಷೇಮಕ್ಕಾಗಿ, ಮುನ್ನುಳಿವಿಗಾಗಿ; ಪವಿತ್ರಾತ್ಮರ ಚರಿತೆ ಅವರ ಕಾರ್ಯವೈಖರಿಯನ್ನು ವ್ಯಕ್ತಿತ್ವವನ್ನು ಪ್ರದರ್ಶಿಸುವ, ಆದರಿಸುವ, ಅನುಸರಿಸುವ, ಸಂಧಾನ ಮಾಡಿಕೊಳ್ಳುವ ಮೂಲಕ ಪ್ರಾಪಂಚಿಕ ಸಮಸ್ಯೆಗಳಿಗೆ ತಿಲಾಂಜಲಿ ಇಟ್ಟು ಜೈವಿಕ ಬೌದ್ಧಿಕ ವಿನಾಶದಿಂದ ನಮ್ಮನ್ನ ನಾವು ರಕ್ಷಿಸಿಕೊಳ್ಳುವ ಹೆದ್ದಾರಿಗಳಾಗಿ ಪುರಾಣಗಳು ಕೆಲಸ ಮಾಡುತ್ತವೆ. ಸನಾತನತೆಯಲ್ಲಿ ಧರ್ಮದಲ್ಲಿ ತನ್ನತನದಲ್ಲಿ ಅಚಲವಾದ ನಂಬಿಕೆ ವಿಶ್ವಾಸ ಹೊಂದಿರುವವನಿಗೆ ಅದು ನಿತ್ಯನೂತನ; ಸಾರ್ವತ್ರಿಕ ಸತ್ಯವಾಗಿರುತ್ತದೆ.

ಪುರಾಣದ ನಾಲ್ಕು ಮೂಲಭೂತ ಅಂಶಗಳು : ಆಕೃತಿಯನ್ನು ನೋಡಿದರೆ ಪುರಾಣ, ಪವಿತ್ರವಾದ ಪ್ರಾರಂಭ ಕಾಲದ ವಿಷಯಗಳನ್ನು ಕುರಿತು ಹೇಳುವ ಕತೆಯಾಗಿದೆ. ಪುರಾಣದ ಗುರುತುಗಳನ್ನು ಪ್ರತ್ಯಕ್ಷವಾಗಲ್ಲದೆ ಅಪ್ರತ್ಯಕ್ಷವಾಗಿ ತಿಳಿಸುವ ವಿಷಯವು ಉಮಟು. ಅವುಗಳನ್ನು ಒಂದು ಪೌರಾಣಿಕ ಹಿನ್ನೆಲೆಯಿಲ್ಲದೆ ಅರ್ಥಮಾಡಿಕೊಳ್ಳಲಾಗದು. ‘ಹನುಮಂತನ ಬಾಲದಂತೆ’ ಅವರ ಮಾತುಗಳಿದ್ದವು ಎಂದು ಹೇಳಿದಾಗ ಹನುಮಂತ ರಾವಣನ ಆಸ್ಥಾನದಲ್ಲಿ ಅವನಿಗೆ ಸರಿಸಮಾನಾಗಿ ಬಾಲವನ್ನು ಉದ್ದಗೊಳಿಸಿ, ವೃತ್ತಾಕಾರವಾಗಿ ಸುರುಳಿ ಸುತ್ತಿ ಅದರ ಮೇಲೆ ಕುಳಿತ ವಿಷಯವನ್ನು ಅರಿತಾಗ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪುರಾಣದಲ್ಲಿ ಮೂಲ ರೂಪಗಳು, ಆದರ್ಶವಾದ ಪಾತ್ರಗಳು, ಮತ್ತೆ ಮತ್ತೆ ಸಂಭವಿಸುವ ವೀರ ಕಾರ್ಯಗಳು ಮುಂತಾದವುಗಳನ್ನು ಕಥೆಯ ರೂಪದಲ್ಲಿ ನಿರೂಪಿಸಲಾಗುತ್ತದೆ.

ಮತದ ಮೇಲೆ ಅಕ್ಕರೆ ಹೊಂದಿದವನು ಒಂದು ವೇಳೆ ತನ್ನನ್ನು ಪುರಾಣ ಪಾತ್ರವಾಗಿ ಭಾವಿಸಲು ಸಾಧ್ಯ. ಅವನ ಬದುಕಿನಲ್ಲಿ ಉಂಟಾದ ಸಾಧಕ ಬಾಧಕಗಳನ್ನು ಇವುಗಳೊಂದಿಗೆ ಸಮೀಕರಿಸಿ ಸಾತತ್ಯವನ್ನು ಕಂಡುಕೊಳ್ಳುತ್ತಾನೆ. ತನ್ನ ಅನುಭವಗಳನ್ನು ಸಾಂದ್ರಗೊಳಿಸಿ ಕ್ರಮಾಗತವಾಗಿ ಹೆಣಕೆಗೊಂಡು ಕಥಾರೂಪದಲ್ಲಿ ಹೇಳುತ್ತಾನೆ. ಕಾಲಾಂತರದಲ್ಲಿ ಪುರಾಣ ವಿಭಿನ್ನ ಸ್ವರೂಪ ಪಡೆದು ವಿಜೃಂಭಿಸುತ್ತದೆ.

ವಸ್ತು ಪ್ರಧಾನ ಪುರಾಣಗಳಲ್ಲಿ ವರ್ಣಿಸಲ್ಪಡುವ ಅಂಶಗಳು ಹಲವು ವಿಧವಾದವು. ಅವು ಪ್ರಪಂಚದ ಆರಂಭಘಟ್ಟದಲ್ಲಿ ಜರುಗಿದ ರಚನೆಯ ಕಾರ್ಯ ಮೊದಲಾದವುಗಳನ್ನು ಕುರಿತ ವಿಷಯಗಳನ್ನು ಒಳಗೊಂಡಿರುತ್ತವೆ. ಹಲವು ಪುರಾಣಗಳಲ್ಲಿ ಭೂಮಿಯನ್ನು ಕುರಿತ ವರ್ಣನೆಗಳು ವಿಪುಲವಾಗಿರುವುದನ್ನು ಕಾಣಬಹುದು. ಪಂಚಾಂಗದಲ್ಲಿ ಉಲ್ಲೇಖಿಸಲ್ಪಟುವ ಶಾಸ್ತ್ರ, ಪ್ರವೇಶಾತಿ ಶಾಸ್ತ್ರ, ತಿಥಿ ಪ್ರಕಾರ ಆಚರಿಸುವ ಶಾಸ್ತ್ರಗಳು ಎಂಬ ಈ ಮೂರು ವಿಧದ ಶಾಸ್ತ್ರಗಳಲ್ಲಿ ಭೂಮಿಯ ಪಾತ್ರ ಮುಖ್ಯವಾದುದು. ‘ಭೂಮಿಯ ಉಗಮದ ವಿಷಯ’ ಎಂಬುದರಲ್ಲಿ ಈ ಜಗತ್ತು ಯಾವ ರೀತಿಯಲ್ಲಿ ಉಗಮವಾಯಿತು? ಪ್ರಾರಂಭವಾಯಿತು? ನಮ್ಮ ಸಂಪರ್ಕ ಹೇಗೆ ಆರಂಭಗೊಂಡಿತು? ಗುರಿಗಳನ್ನು ಸಾಧಿಸುವುದು ಹೇಗೆ ಮುಂತಾದವು ನಮ್ಮ ಪ್ರಾಚೀನರಿಂದ ತೀರ್ಮಾನಿಸಲ್ಪಟ್ಟವು. ಪವಿತ್ರವಾದ, ಪ್ರಸಿದ್ಧವಾದ ನಮ್ಮ ಹಿರಿಯರ ಜ್ಞಾನ ಯಾವ ರೀತಿಯಲ್ಲಿ ಕಾರ್ಯಪ್ರವೃತ್ತಗೊಳ್ಳುತ್ತದೆ ಎಂಬ ವಿಷಯವನ್ನು ಪುರಾಣಗಳು ಪ್ರಚುರಪಡಿಸುತ್ತವೆ.

ಕಾರ್ಯ ಪುರಾಣಗಳು, ಜೀವನ ಮೌಲ್ಯ, ತತ್ತ್ವಾದರ್ಶಗಳನ್ನು ತಿಳಿ ಹೇಳುವುದಕ್ಕಾಗಿ ರಚಿಸಲ್ಪಟ್ಟಿವೆ. ಪ್ರಸ್ತುತ ಮನುಷ್ಯ ಕಾರ್ಯಗಳಿಗೆಲ್ಲಕ್ಕೂ ಪುರಾಣೋಕ್ತ ಆಧಾರಗಳನ್ನು ಕಾಣಬಹುದು. ಮತ – ಧರ್ಮಗಳಲ್ಲಿ ನಂಬಿಕೆ ಇರುವವನು ಈ ಎಲ್ಲವನ್ನು ಕಾಪಾಡಿಕೊಂಡಿರುತ್ತಾನೆ. ಪುರಾಣೋಕ್ತವಾಗಿರುವ ನಡಾವಳಿಯಂತೆ ನಡೆದುಕೊಳ್ಳುತ್ತಾನೆ. ಜಗತ್ತನ್ನು ಅರಿಯಲು ಪುರಾಣಗಳು ಸಹಕಾರಿಯಾಗುತ್ತವೆ. ಜೀವನದಲ್ಲಿಯ ಹಲವು ಮುಖ್ಯವಾದ ಸಂಗತಿಗಳನ್ನು ಅವು ಉತ್ತಮವಾಗಿ ತಿಳಿಸುತ್ತವೆ.

ಸಂದರ್ಭ : ಪುರಾಣಕಥೆಗಳು ತಿಳಿಸುವ ಸಂದರ್ಭ ಸಾಮಾನ್ಯವಾಗಿ ಆಚರಣೆಯ ವಿಚಾರವಾಗಿರುತ್ತದೆ. ತುಂಬ ಶ್ರೇಷ್ಠವಾದ ರಿತಿಯಲ್ಲಿ ಜೀವಿಸುವುದಕ್ಕೆ ಪ್ರೇರಣಾರ್ಥ ಸಂಗತಿಗಳನ್ನು ಹೇಳುವುದು. ‘ಆಚರಣೆ’ ಎಂಬುದು ಮುಂಚೆ ಯಾವಾಗಲೋ ಜರುಗಿದ ಕಾರ್ಯಕ್ಕೆ ಪುನಃ ಜೀವಕೊಟ್ಟು ಮತ್ತೆ ಅವು ಬಳಕೆಯಾಗುವಂತೆ, ಪ್ರಸ್ತುತಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಸುಬ್ರಹ್ಮಣ್ಯ ಶೂರನನ್ನು ವಧೆ ಮಾಡಿದ ಕಾರ್ಯ ಪ್ರಸಂಗ ಮತ್ತೆ ಮತ್ತೆ ನಡೆಯುವ ಒಂದು ನಾಟಕದ ರೂಪದಲ್ಲಿ ರಚನೆಗೊಂಡು, ಒಂದೊಂದು ಸಲ ಪ್ರದರ್ಶಿಸುವಾಗಲೂ ಜನರು ತಮ್ಮ ದಿನನಿತ್ಯ ಜೀವನದ ಸಂಗತಿಗಳನ್ನು ತುಸು ಮರೆತು ಸುಬ್ರಹ್ಮಣ್ಯನೊಡನೆ ಸಮೀಕರಿಸಿಕೊಳ್ಳುತ್ತಾರೆ.

ಕೃಷಿ ಹಿನ್ನೆಲೆ : ವ್ಯವಸಾಯದ ದೃಷ್ಟಿಯಲ್ಲಿ ವಿವರಣೆ ನೀಡಿದವರಲ್ಲಿ ಮೊದಲಿಗರು ಸಿಗ್ಮಂಡ್ ಫ್ರಾಯ್ಡ್, ಕಾರ್ಲ್‌ಯುಂಗ್ ಪ್ರಮುಖರು. ಮಾಲಿನೋವಸ್ಕಿ ಮೊದಲಾದವರು ‘ಪುರಾಣ ಸಮಾಜವನ್ನು ನಾಶವಾಗದಂತೆ ಕಾಪಾಡಲು ಸಹಾಯಕ ಸಾಧನವಾಗಿದೆ’ ಎಂದಿದ್ದಾರೆ. ಪುರಾಣಗಳು ದೇವರನ್ನು ಕುರಿತಾದುದರಿಂದ ಕಾಲಮಿತಿ ಎಂಬುದರಿಂದಲೂ ಅವುಗಳನ್ನು ಬಹಳ ಗೌರವಿಸುತ್ತಾರೆ. ಅವುಗಳನ್ನು ಸಮಯದೊಡನೆ (ಧರ್ಮ) ಸಂಪರ್ಕಗೊಳಿಸದೆ ಕನಸುಗಳೊಡನೆ ಸಮೀಕರಿಸುತ್ತಾರೆ. ಈ ರೀತಿಯಲ್ಲಿ ಅವರು ಪುರಾಣಗಳನ್ನು ಒಂದು ಸಮುದಾಯಕ್ಕೆ ಸಾಮಾನ್ಯವಾದ ಅಲ್ಲದೆ ಅವರುಗಳಿಂದ ಹಂಚಿಕೊಳ್ಳುವ ಮನೋವ್ಯಾಪಾರ ಎಂದು ಪರಿಭಾವಿಸಿದ್ದಾರೆ.

ಪುರಾಣ ಪ್ರಸ್ತುತದಲ್ಲಿಯ ವಿಷಯಗಳನ್ನು ವಿವರಿಸುವುದಕ್ಕೆ ಲಿಖಿತ ದಾಖಲೆಗಳಿಲ್ಲದ ಮೌಖಿಕ ಸಂಸ್ಕೃತಿಯ ವಿಷಯಗಳನ್ನು ಹುಡುಕಿ ಒಂದು ಐತಿಹ್ಯ ನ್ಯಾಯವನ್ನು ಒದಗಿಸುತ್ತದೆ. ಪುರಾಣ ಪ್ರತಿಯೊಂದು ಜೀವಿಯೊಡನೆಯೂ ಇರುತ್ತದೆ.

ಪುರಾಣಕ್ಕೆ ಪೂರಕ ಆಕರಗಳು : ಪುರಾಣ ಎಂಬುದು ಆದಿ ಕಾಲದಲ್ಲಿ ಜರುಗಿದ ಸತ್ಯಮಿಥ್ಯಗಳ ಘಟನೆಯಾಗಿದೆ. ಅದು ಘಟಿಸಿರಬಹುದು ಇಲ್ಲವೇ ವೈಭವೀಕರಿಸುವುದಕ್ಕಾಗಿ ಹುಟ್ಟಿದ ಕಟ್ಟುಕಥೆಯಾಗಿರಬಹುದು. ಏನೇ ಇದ್ದರು ಒಂದರ್ಥದಲ್ಲಿ ಇವು ದಂತಕಥೆಗಳಾಗಿವೆ. ಇದನ್ನು ನಿಜ ಎಂದು ನಂಬುವವರಿದ್ದಾರೆ. ಪ್ರತಿರೋಧಿಸುವವರೂ ಇದ್ದಾರೆ. ಅದು ಅವರವರು ಕಂಡುಕೊಂಡ ಜೀವನ ಸಾಮರಸ್ಯದ ಮಾರ್ಗವಾಗಿದೆ. ನಮ್ಮ ಪರಂಪರೆಯಲ್ಲಿ ಪುರಾಣಗಳಿಗೆ ಬಹುಮುಖ್ಯ ಸ್ಥಾನವಿದೆ. ಪವಿತ್ರವಾದವುಗಳು ಎಂಬ ಅಭಿದಾನವು ಇದೆ. ಅವು ನಮ್ಮ ಧಾರ್ಮಿಕ ತತ್ತ್ವಗಳ ಪ್ರತಿರೂಪ; ಪ್ರೀತಿ, ದಯೆ, ಕರುಣೆ, ಭಕ್ತಿ ಮುಂತಾದವುಗಳನ್ನು ಒಳಗೊಂಡು ದೇವರನ್ನ ಸಾಕ್ಷಾತ್ಕಾರಗೊಳಿಸುವ ಮೂರ್ತಾಮೂರ್ತ ಸಂಪರ್ಕ ಕಲ್ಪಿಸುವ ಶಾಸ್ತ್ರಗಳಾಗಿವೆ.

ಪುರಾಣೋಕ್ತ ನಾಯಕರು ಶ್ರೀ ಸಾಮಾನ್ಯರಲ್ಲಿ, ದೈತ್ಯಾಕರವನ್ನು ಹೊಂದಿ ಮಾನವೀಯ ಗುಣಗಳನ್ನು ಹೊಂದಿರುತ್ತಾರೆ. ಪ್ರಾಚೀನ ಕಾಲದಲ್ಲಿ ಜೀವಿಸಿದ್ದ ಇಂದ್ರಲೋಕ, ಪಾತಾಳಲೋಕಗಳಲ್ಲಿ ಜೀವಿಸಿದ ದೇವರುಗಳ ಮೃಗಗಳು ವೀರನಾಯಕರುಗಳನ್ನು ಕುರಿತಂತೆ ಪುರಾಣಗಳು ರೂಪುಗೊಳ್ಳುತ್ತವೆ. ಅವು ಜಗತ್ತಿನ ಹುಟ್ಟು ಸಕಲ ಚರಾಚರಗಳ ಹುಟ್ಟು ಕುರಿತಂತೆ ವಿರಚಿಸಲ್ಪಟ್ಟಿರುತ್ತವೆ. ದೇವತೆಗಳ ಕಾರ್ಯಗಳು ಅಷ್ಟಾದಶ ವರ್ಣನೆಗಳು ಕುರಿತಂತೆ ರಚನೆಯಾಗಿರುತ್ತವೆ. ಕೆಲವು ಪುರಾಣಗಳು ಲೌಕಿಕವಾಗಿಯೂ ಇನ್ನು ಕೆಲವು ಪುರಾಣ ಅಲೌಕಿಕವಾಗಿಯೂ ಇರುತ್ತವೆ. ಇವುಗಳನ್ನು ಸಂಸ್ಕೃತಿಯ ಪರಿಭಾಷೆಯಲ್ಲಿ ವಸ್ತುಕ, ವರ್ಣಕವೆಂದು ಹೆಸರಿಸಿದ್ದಾರೆ. ಉದಾ :

೧. ಸುಬ್ರಹ್ಮಣ್ಯ ಮತ್ತು ಅಯ್ಯಪ್ಪ ಮೊದಲಾದ ದೇವರುಗಳು ಹುಟ್ಟಿದ ಕಥೆ.

೨. ಸತಿ ಸಾವಿತ್ರಿ ತನ್ನ ಗಂಡನನ್ನು ಯಮನಿಂದ ಬಿಡಿಸಿಕೊಂಡ ಕಥೆ.

೩. ಅವ್ವೈಯಾರ್ ನೋಂಪಿಯ ಕಥೆ

೪. ಅಳಿಲಿನ ಬೆನ್ನಿನ ಮೇಲೆ ಮುಡಿರುವ ಗೆರೆಗಳ ಕಥೆ

೫. ಕಾಗೆಗೆ ಒಂದು ಕಣ್ಣಿನ ದೃಷ್ಟಿ ಹೋದ ರೀತಿಯನ್ನು ಕುರಿತು ರಚಿತವಾದ ಕಥೆ.

ಪುರಾಣ ಒಂದು ಆಚರಣೆ : ಹಲವರ ಅಭಿಪ್ರಾಯದಲ್ಲಿ ‘ಪುರಾಣ ಎಂಬುದು ಒಂದು ಆಚರಣೆಯ ಮುಖೇನ ಹೇಳುವ ಕಥೆಯಾಗಿರುತ್ತದೆ’.

ಉದಾ : ಅವ್ವೈಯಾರ್ ನೋಂಪಿಯ ಕಥೆ, ಸಾವಿತ್ರಿಯ ಕಥೆ, ಉಪವಾಸ ಮೊದಲಾದ ಆಚರಣೆಗಳ ಸಂದರ್ಭಗಳಲ್ಲಿ ಮೊಟ್ಟಮೊದಲಿಗೆ ಯಾವ ರೀತಿ ಕಥಾಗರ್ಭ ರೂಪುಗೊಂಡಿತು ಎಂಬುದನ್ನು ಐತಿಹ್ಯವನ್ನು ಹೊರತುಪಡಿಸಿ ಆಚರಣೆ ಮುಖೇನ ತಿಳಿಯಬಹುದು.

ತಮಿಳುನಾಡಿನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಐಪಸಿ ತಿಂಗಳು (ಐ – ಎಂದರೆ ಸ್ವಾಮಿ, ಪಸಿ ಎಂದರೆ ಹಸಿವು ಸ್ವಾಮಿಗೆ ನೋಂಪಿಯನ್ನು ಕೈಗೊಳ್ಳುವುದರ ಮೂಲಕ ಒಡಲ ಹಸಿವನ್ನು ನಿವೇದಿಸಿಕೊಳ್ಳುವುದು, ಅಕ್ಟೋಬರ್ ನವೆಂಬರ್ ‘ಕಂದ ಷಷ್ಠಿಯಾಗ’ ‘ಶೂರನ ವಧೆ’ಯ ಪೂಜಾವಿಧಿಗಳನ್ನು ಪುರೋಹಿತರಾದಿಯಾಗಿ ಸರ್ವರು ಕೈಗೊಳ್ಳುತ್ತಾರೆ. ಪುರಾಣ ಮತ್ತು ಶಾಸ್ತ್ರ ಚರಿತ್ರೆಯ ಎರಡು ಕಣ್ಣುಗಳಾಗಿವೆ. ಪಂಗುಣಿ (ಫಾಲ್ಗುಣ ಮಾಸ, ಮಾರ್ಚ್ ಏಪ್ರಿಲ್, ಉತ್ತಿರಂ, ವೈಗಾಶಿ (ತಮಿಳು ಮಾಸಗಳಲ್ಲಿ ಎರಡನೆಯದು ವೈಶಾಖ) ವಿಸಾಗಮ್, ಚಿತ್ತರೈ (ತಮಿಳು ಆರಂಭದ ಮಾಸ ಚಿತ್ತಾ ನಕ್ಷತ್ರ) ತಿಂಗಳಿನಲ್ಲಿ ‘ಮೀನಾಕ್ಷಿ ತಿರುಕಲ್ಯಾಣಂ’ ಮೊದಲಾದ ಹಲವು ಆಚರಣೆಗಳು ಪುರಾಣ ಮತ್ತು ಶಾಸ್ತ್ರ ಸಂಗಮವಾದ ನೆಲೆಯನ್ನು ಬಿಂಬಿಸುತ್ತವೆ.

ಯಾವ ದೇವರಾಗಿದ್ದರೂ ಅದಕ್ಕೆ ಒಂದು ವೃತ್ತಾಂತ, ಸ್ಥಳ ಪುರಾಣ, ಮಹಾತ್ಮ್ಯೆ ಇದ್ದೇ ಇರುತ್ತದೆ. ಕೇಳೀಲಾಲ್ ನಾಯಕರುಗಳು ಮುತ್ತಾಲ್ ಅಮ್ಮನಿಗೆ ಉತ್ಸವ ಜರುಗಿಸುವರು. ಅವಳು ದೇವರಾದ ನೆಲೆಯನ್ನು ಶಾಸ್ತ್ರವಾಗಿ ನಟಿಸಿತೋರಿಸುತ್ತಾರೆ. ಮುತ್ತಾಲ್ ಅಮ್ಮನ್ ಬಳಕೆಗಳು ಹಾಕಿಸಿಕೊಳ್ಳುವ ಆಸೆಯೊಡನೆ ಬರೆಯುವಳು. ಒಬ್ಬ ಸಾಮಾನ್ಯನು ಆಕೆಯ ಕೈ ಮುಟ್ಟಿದ್ದುದ್ದನ್ನ ಸಹಿಸದ ಅಣ್ಣ ಕೋಪೋದ್ರಿಕ್ತನಾಗಿ ಓಡಿರುವುದನ್ನು ನೋಡಿ ಮುತ್ತಾಲ್ ಅಮ್ಮ ಕುಂಬಾರರ ಮನೆಯಲ್ಲಿ ಆಶ್ಯ ಪಡೆಯುತ್ತಾಳೆ. ಅವರು ರಕ್ಷಿಸಿ ಅನಂತರ ಹೊರಗಡೆ ಕಳುಹಿಸುತ್ತಾರೆ. ಕಾದುಕುಳಿತಿದ್ದ ಅಣ್ಣ ಓಡಿಸಿಕೊಂಡು ಹೋಗಿ ಊರಿನ ಗಡಿಯಲ್ಲಿ ಕೊಲ್ಲುತ್ತಾನೆ. ಇದರ ಸ್ಮರಣೆಗಾಗಿ ಈ ಉತ್ಸವವನ್ನು ಅಮ್ಮನ ಹಬ್ಬದಲ್ಲಿ ಆಚರಿಸಲಾಗುತ್ತದೆ. ಶಾಸ್ತ್ರಗಳಲ್ಲಿ ಇದರ ನೆನಪಿಗಾಗಿ ಬಲಿ ಕೊಡುವ ಪದ್ಧತಿ ಇದೆ.

ಒಂದು ಸಮಾಜದ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ರಚಿತವಾದ ಪುರಾಣಗಳು ಜನಾದರಣೀಯವಾಗಿವೆ. ಕಾಲಕಾಲಕ್ಕೂ ಬದಲಾಗುತ್ತ ಮೌಖಿಕ ಸಂಪ್ರದಾಯದಿಂದ ಅಕ್ಷರ ಸಂಪ್ರದಾಯಕ್ಕೆ ಒಗ್ಗಿಕೊಂಡು ಪುರಾಣಗಳು ಅಸ್ತಿತ್ವ ಮತ್ತು ಮಹತ್ತ್ವವನ್ನು ಬಿಂಬಿಸಿವೆ.

– ಎಸ್.ವಿ. ಅನುವಾದ ಪಿ.ಎಂ.