ತಮಿಳುನಾಡಿನ ಆಟದ ಹಾಡುಗಳು ತಮಿಳುನಾಡಿನ ಆಟಗಳಲ್ಲಿ ನಾನಾ ಬಗೆಯ ಹಾಡುಗಳಿವೆ. ಭೂಮಿಯ ಮೇಲೆ ಮಾನವನು ಹುಟ್ಟಿದಾಗಿನಿಂದಲೂ ಒಂದಲ್ಲ ಒಂದು ರೀತಿ ತನನ ಜೀವನವನ್ನು ಸಾಗಿಸುವಂತಹ ಸದರ್ಭದಲ್ಲಿ ತನ್ನ ಜೀವನಯಾನದ ಕೆಲವೊಂದು ಸಮಯವನ್ನು ಆಟದ ಮೂಲಕ ಕಳೆಯುತ್ತಾ, ಆಟವನ್ನು ಆಡುವಂತಹ ಸಂದರ್ಭದಲ್ಲಿ ಆ ಆಟಕ್ಕೆ ತಕ್ಕನಾದ ಹಾಡುಗಳನ್ನು ಹೆಣೆದುಕೊಳ್ಳುತ್ತಾ ತನ್ನ ಬಿಡುವಿನ ವೇಳೆಗನ್ಲ್ಲಿ ಬೇಸರನು ಹೋಗಲಾಡಿಸುವ ನಿಟ್ಟಿನಲ್ಲಿಆಟಗಳನ್ನು ಬೆಳೆಸುತ್ತಾ ಬಂದ ಎಂಬುದಾಗಿ ತಿಳಿದುಬರುತ್ತದೆ.

ಚಿಕ್ಕ ಮಕ್ಕಳಿಗೆ ಆಟವೆಂಬುದು ಸಮಯವನವ್ನು ಕಳೆಯಲೆಂದು ಆದಂತಹ ಮಾರ್ಗವಲ್ಲ, ಬದಲಾಗಿ ಸಮಾಜದಲ್ಲಿ ಶಾಸನವಾಗಿಯೂ eಜಾನಶಕ್ತಿ ಮತ್ತು ತಮ್ಮೊಳಗಿನ ಚಾತುರ್ಯವನ್ನು ಬೆಲೆಸಿಕೊಳ್ಳುವ ಉಪಾಯದ ಮಾರ್ಗವಾಗಿಯೂ ಇವೆ. ಆಟಗಳನ್ನು ಎರಡು ವಿಭಾಗವಾಗಿ ಮಾಡಿಕೊಳ್ಳಬಹುದು.

೧. ಸ್ಪರ್ಧೆಯ ಆಟಗಳು (Games)

೨. ಸ್ಪರ್ಧೆಯೇತರ ಆಟಗಳು (Non Games)

ಇವುಗಳಲ್ಲಿದೆ ಚಿಕ್ಕ ಚಿಕ್ಕ ನಾಟಗಳ (Mini Dramas) ನ್ನು ಕಾಣಬಹುದು ಸಾಮಾನ್ಯವಾಗಿ ಈ ಆಟಗಳು ವ್ಯವಸಾಯ ಮತ್ತು ಮೀನು ಹಿಡಿಯುವುದನ್ನೇ ತಮ್ಮ ಕಸುಬಾಗಿಸಿಕೊಂಡಿರುವವರ ಮಕ್ಕಳಲ್ಲಿ ಹೆಚ್ಚಾಗಿರುವುದನ್ನು ಕಾಣಬಹುದು. ಸುಡುಗುಡು (ಕಬ್ಬಡ್ಡಿ), ಪಾಯಂದಾನ್ ಕೋಡು (ಗೆರೆ ಮುಟ್ಟುವುದು), ಪಂಬರಮ್ ವಿಡುದಲ್ (ಬುಗುರಿ ಬಿಡುವುದು), ಕೋಳಿ ವಿಳೈಯಾಟ್ಟ್ (ಕೋಳಿ ಟ), ಜಲ್ಲಿಕ್ಕೋಡು, ಪಚ್ಚಾಕ್ಕುತ್ತಿರೈ, ತಾಂಡುದಲ್, ಕಲ್ಲಾಂಗಲ್ಲಾಂದಾಪೆಟ್ಟಿ, ಕಣ್ಣಾಮೂಚ್ಚಿ (ಕಣ್ಣಾಮುಚ್ಚಾಲೆ), ಎಳಾಂಗಾಯ್ (ಏಳು ಚಿಕ್ಕ ಕಲ್ಲಿನ ಆಟ) ಈ ಮೊದಲಾದ ಆಟಗಳನ್ನು ಗುರುತಿಸಬಹುದು. ಕೆಲವು ಆಟಗಳು ಹಾಡನ್ನು ಹಾಡಿಕೊಂಡು ಮೈದಾನಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಅಂತೆಯೇ ಓಡಿಪ್ಪಿಡಿತ್ತಲ್ (ಓಡಿ ಹಿಡಿಯುವುದು), ಒಳಿಂದು ಪಿಡಿತ್ತಲ್ (ಅವಿತು ಹಿಡಿಯುವುದು), ನಿಂಡ್ರನಿಲೈ (ನಿಂತಲ್ಲೇ), ಅಮರ್ದಂದ ನಿಲೈ (ಕುಳಿತಲ್ಲೇ) ಈ ಬಗೆಯ ಹಲವು ಆಟಗಳನ್ನು ಹುಡುಗರು ಮತ್ತು ಹುಡುಗಿಯರು ಆಡುವರು.

ದೇಹದಾರ್ಢ್ಯದ ಆಟದ ಹಾಡುಗಳು : ಅ) ಕಬಡ್ಡಿ ಆಟದ ಹಾಡುಗಳು: ಗ್ರಾಮ ಮಟ್ಟದಲ್ಲೂ ನಗರ ಪ್ರದೇಶಗಳಲ್ಲೂ ತಮ್ಮ ಶಕ್ತಿ ಸಾಮರ್ಥ್ಯ ಮತ್ತು ಆಟದ ಕೌಶಲ್ಯವನ್ನು ಪ್ರದರ್ಶಿಸುವ ಆಟವೇ ಕಬಡ್ಡಿ ಆಟ. ಈ ಆಟದಲ್ಲಿ ಒಬ್ಬೊಬ್ಬರು ಎದುರಾಳಿಯ ಎಲ್ಲೆಯೊಳಗೆ ನುಗ್ಗಿ ಸಡುಗುಡು (ಕಬಡ್ಡಿ, ಕಬಡ್ಡಿ) ಎಂದು ಹೇಳುತ್ತ ಆಡುವ ಆಟವಾಗಿದೆ. ಈ ಆಟವನ್ನು ಪಾಂಡ್ಯನಾಡಿನಲ್ಲಿ ‘ಕುಡಟ್ಟಿ’ ಎಂತಲೂ ಉತ್ತರ ಚೋಳನಾಡಿನಲ್ಲಿ ‘ಪಲಿಚ್ಚಲಿಳಾನ್’, ಪಲೀನ್ ಸಡುಗುಡು ಎಂತಲೂ ಕರೆಯುವುದುಂಟು. ಅಂತೆಯೇ ಸಡುಗುಡು (ಕಬಡ್ಡಿ) ಎಂಬುದಕ್ಕೆ ದಕ್ಷಿಣ ಚೋಳನಾಡಿನಲ್ಲೂ ಕೊಂಗುನಾಡಿನಲ್ಲೂ (ತಮಿಳುನಾಡಿನ ಒಂದು ಭಗ) ಇದೇ ಹೆಸರು ಇರುವುದನ್ನು ಕಾಣಬಹುದು. (ಜ್ಞಾ. ದೇವನೇಯನ್ ೧೯೬೨: ೫೭) ನಾಗಪಟ್ಟಣಂ ಜಿಲ್ಲೆಯಲ್ಲಿ ‘ಸಪ್ಳಾರ್‌ಗುಡು’, ‘ಸಪ್ಳಾಂಜಿಕೋಡು’ ಎಂದೂ ಮೀನಿನವರು ಇದನ್ನು ‘ಪಲಿಂಜಿಕ್ಕೊಂಡು’, ‘ಕಪಾಡಿ’, ‘ಸುಡುಗುಡು’ ಎಂದೂ ಕರೆಯುತ್ತಾರೆ.

ಸಮುದ್ರದ ದಡದಲ್ಲಿ ವಿಶಾಲವಾಗಿ ಮರಳು ರಾಶಿ ಹರಡಿರುವುದರಿಂದ ಮೀನು ಹಿಡಿಯಲು ಹೋದಂತಹ ಬೆಸ್ತರು ವಿಶ್ರಾಂತಿಯ ಸಮಯದಲ್ಲಿ ಕಬಡ್ಡಿ ಆಟವನ್ನು ಆಡುತ್ತಾರೆ. ಅಲ್ಲದೆ ವ್ಯವಸಾಯದಲ್ಲಿ ನಿರತದರಾಗಿರುವ ಜನರು ಕೂಡ ಬೇಸಗೆ ಕಾಲದಲ್ಲಿ ಕಬಡ್ಡಿ ಆಟವನ್ನು ಆಡುತ್ತಾರೆ. ಕನ್ನಿಪೊಂಗಲ್ ಎಂಬ ವಿಶೇಷ ದಿನದಂದು ಕಬಡ್ಡಿ ಆಟ ಇಂದಿಗೂ ನಡೆಯುತ್ತದೆ.

ಒಂದು ತಂಡಕ್ಕೆ ಎಂಟು ಜನರಂತೆ ಎರಡು ತಂಡಗಳಗಾ ನವಿಭಾಗ ಮಾಡಿ ಆಡುವ ಈ ಆಟದಲ್ಲಿ ಉಸಿರು ಎಳೆದುಕೊಂಡು ಸಮಪ್ರಮಾಣದಲ್ಲಿ ಸಡುಗುಡು (ಕಬಡ್ಡಿ ಕಬಡ್ಡಿ) ಎಂಬ ಪದವನ್ನು ನಿರಂತರವಾಗಿ ಉಚ್ಚರಿಸುತ್ತಾರೆ.

ಕಬಡ್ಡಿ ಹಾಡುಗಳು ಸಾಮಾನ್ಯವಾಗಿ ಹತ್ತು ಶಬ್ದಗಳನ್ನು ಒಳಗಂಡಿರುತ್ತದೆ. ಬಹುಮಟ್ಟಿಗೆ ಗಾದೆ ಮಾತುಗಳು ಮತ್ತು ಒಗಟುಗಳನ್ನೇ ಹೆಚ್ಚಾಗಿ ಬಳಸಿಕೊಳ್ಳುವುದು ರೂಢಿಯಲ್ಲಿದೆ. ಈ ಆಟದಲ್ಲಿ ಧ್ವನಿ ಸಹಜವಾಗಿ ಹಾಡುಗಳ ಮೂಲಕ ಇರುತ್ತದೆ. ಅಂತೆಯೇ ಕಬಡ್ಡಿ ಎಂಬ ಪದವು ಪದೇ ಪದೇ ಪುನರಾವರ್ತನೆಗೊಳ್ಳುತ್ತದೆ.

ಹಾಡು – ೧

ಜೇನುಗೂಡು ಹೊಡೆಯಲು
ಕಾಲು
– ಗೀಲು ಮುರಿಯಲು
ಅವ್ವನೂ ಅಪ್ಪನೂ…
ಒಂದು ಸೇರು ದಂಡತೆತ್ತರು

ಹಾಡು – ೨

ದಟ್ಟ ಕಾಡಿನ ಬೆಟ್ಟದಲಿ
ನೆಲ್ಲಿಕಾಯಿ ಕೀಳಲು ಹೋದೆ
ಕಂಡ ಮುಸ್ಲಿಂ ಹುಡುಗ
ಪಟ್ಟನೆ ಹಿಡಿದುಕೊಂಡನು
– ನಾನು
ಹಿಡಿತದಿಂದ ತಪ್ಪಿಸಿಕೊಂಡೆ

ಓಡವಿಳೈಯಾಟ್ಟು ಪಾಡಲ್ಗಳು (ದೋಣಿ ಆಟದ ಹಾಡುಗಳು) : ಆಟಗಳಲ್ಲಿ ನಾನಾ ಬಗೆ, ದೈಹಿಕ ಆಟ (ಶ್ರಮ ಪ್ರಧಾನ) ಮತ್ತು ಚಾತುರ್ಯ ಪ್ರಧಾನ ಆಟ. ಅಂದರೆ ಇನ್ನೊಂದು ನೆಲೆಯಲ್ಲಿ ಅದಕ್ಕೆ ಒಳಾಂಗಣ ಆಟ ಮತ್ತು ಹೊರಾಂಗಣ ಆಟಎಂಬ ಹೆಸರೂ ಇದೆ. ಒಳಾಂಗಣ ಆಟಗಳು ಮಕ್ಕಳು, ಹೆಂಗಸರು ಎಲ್ಲರೂ ಆಡಬಹುದಾದ ಆಟಗಳಾಗಿರುತ್ತವೆ. ಆದರೆ ಹೊರಾಂಗಣ ಆಟ ದೈಹಿಕ ಸಾಹಸದ ಆಟವಾಗಿರುತ್ತದೆ. ಇಲ್ಲಿ ಸಾಮಾನ್ಯವಾಗಿ ಯುವಕರು ಮತ್ತು ಹುಡುಗರಿಗೆ ಮಾತ್ರ ಅವಕಾಶ. ಇಂತಹ ಹೊರಾಂಗಣ ಆಟಗಳು ವಿವಿಧ ಪ್ರಾಂತ, ಮತ, ಪಂಗಡಗಳ ಜನರಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಉಳಿದುಬಂದಿವೆ. ಅದರಲ್ಲೂ ಮೀನುಗಾರರು ಕಡಲ ತೀರದಲ್ಲಿ ಅಲೆಗಳೊಂದಿಗೆ ಆಡುವ ಆಟವೇ ಈ ದೋಣಿ ಆಟ. ಈ ಆಟದಂದಿಗೆ ಮೀನು ಹಿಡಿಯಲು ಸಾಗರದಲ್ಲಿ ಹೋಗುವಾಗ ತಮ್ಮದೇ ಆದ ಭಾಷೆ ಮತ್ತು ಜೀವನಾನುಭವಗಲನ್ನು ಹಾಡಾಗಿ ಕಟ್ಟಿ ಆ ಸಾಲುಗಳನ್ನು ಹಾಡುವುದು, ಅದರ ಲಯಬದ್ಧವಾದ ಸೊಲ್ಲುಗಳನ್ನು ಗುನುಗುವುದು ಇಂದಿಗೂ ರೂಢಿಯಲ್ಲಿದೆ. ಇಂತಹ ಹಾಡುಗಳನ್ನು ದೋಣಿ ಆಟ ಆಡುವಾಗಲೂ ಹಾಡುತ್ತಾರೆ.

ಈ ಆಟಕ್ಕೆ ವಿಶಾಲವಾದ ಕಡಲು, ಸಮುದ್ರ, ನೀರಿನ ರಭಸಕ್ಕೆ ಭೋರ್ಗರೆವ ಅಲೆಗಳು ಮೇಲಿಂದ ಮೇಲೆ ದೊಡ್ಡ ಗಾತ್ರದಲ್ಲಿ ಬರುವಾಗಲೆ ಈ ಆಟಕ್ಕೆ ಅವಕಾಶ ಹೆಚ್ಚು. ಈ ಆಟದಲ್ಲಿ ಮೀನುಗಾರರ ಮಕ್ಕಳು ವಿಶೇಷವಾಗಿ ಎಂಟರಿಂದ ಹದಿನೈದು ವಯಸ್ಸಿನ ಒಳಗಿನ ಮಕ್ಕಳು ಆಡುತ್ತಾರೆ. ತಮ್ಮ ತಂದೆಯವರು ಮೀನು ಹಿಡಿಯಲು ಹಡಗೇರಿದಾಗ ಅವರ ಹಿಂದೆಯೇ ಬೆನ್ನಟ್ಟಿ ಬರುವ ಮಕ್ಕಳ ಸಮೂಹ ಆ ಕಡಲಿನ ಹಾದಿಯಲ್ಲೇ ನಿಂತುಬಿಡುತ್ತದೆ. ಸುಮಾರು ೫ ಅಡಿ ಆಳ, ೧ ಅಡಿ ಅಗಲ, ೧/೨     ಅಡಿ ವಿಸ್ತೀರ್ಣದ ಒಂದು ಮರದ ದಿಮ್ಮಿ ಈ ಆಟಕ್ಕೆ ಅತ್ಯಗತ್ಯ. ಇದರ ಮೇಲೆ ಮಕ್ಕಳು ಕುಳಿತು ಜೋರಾಗಿ ಬರುವ ಎಲೆಗಳ ಹೊಡೆತಕ್ಕೆ ಸಿಕ್ಕಿ ಕೆಳಕ್ಕೆ ಮೇಲಕ್ಕೆ ಅಪ್ಪಲಿಸುವುದು. ಪುನಃ ಆ ಮಕ್ಕಳು ಮರದ ದಿಮ್ಮಿಯ ಮೇಲೆ ಕುಳಿತು ಆಡುತ್ತಾರೆ. ದಡದಿಂದ ಸುಮಾರು ೧೦೦ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಈ ಆಟ ನಡೆಯುತ್ತದೆ. ಅಲೆಗಳು ಬರುವಾಗ, ಮಕ್ಕಲು ಆಡುವಾಗ ಹಾಡುವ ಹಾಡು ಬಹುಮುಖ್ಯವಾದುದು. ಅಲ್ಲಿ ಬಳಕೆಯಾಗುವ ಮರದ ದಿಮ್ಮಿಗೆ ‘ಪಟ್ಟರೈಕಟ್ಟೆ’ ಎನ್ನುತ್ತಾರೆ.

ನೀರಿನ ಅಲೆಗಳು ಹಾಗೂ ಮರದ ದಿಮ್ಮಿಯ ಮೇಲಿನ ಮಕ್ಕಳ ಆಟ ಎಲ್ಲವೂರಮಣೀಯವಾಗಿರುತ್ತದೆ. ಮಕ್ಕಳಿಗೆ ದಿಮ್ಮಿಯ ಮೇಲೆ ಕೂತು ಅಲೆಗಳ ಹೊಡೆತದಿಂದ ಹಿಂದು – ಮುಂದಕ್ಕೆ ಚಲಿಸುವುದು. ಒಂದು ರೀತಿಯಲ್ಲಿ ಕುದುರೆ ಸವಾರಿಯ ಮೋಜನ್ನು ನೀಡುತ್ತದೆ. ಈ ಬಾಗು – ಬಳುಕು ಇನ್ನಿತರ ಮಕ್ಕಳ ಮೋಜಿಗೆ ಕಾರಣವಾಗುತ್ತದೆ. ಆಗ ಅವರೆಲ್ಲರೂ ಸಂತಸದಿಂದ ‘ಅಲೆಡುತ್ತು ವಾರಲ್’ ಹಾಡನ್ನು ಹಾಡುವರು. ‘ಅಲೇಲೋ ಜಯಿಂದು’ ಎಂಬುದಾಗಿ ಪ್ರಾರಂಭವಾಗುವ ಹಾಡು ಸುಮಾರು ಎಂಟು ಸಾಲನ್ನು ಒಳಗೊಂಡಿರುತ್ತದೆ. ಇದರ ಕೊನೆಯ ಸಾಲಿನ ‘ಓಯಿಂದು ವಾ ಎಂದರೆ ನಿಧಾನವಾಗಿ ಅಥವಾ ಸುಸ್ತಾಗಿ ಬಾ ಎಂದರ್ಥ. ಅಂದರೆ ದಿಮ್ಮಿಯ ಮೇಲೆ ಕುಳಿತು ಆಡುವ ಮಕ್ಕಳು ನೀರಿನ ಅಲೆಯ ಹೊಡೆತ ಮತ್ತು ಈಜು ಈ ಎರಡರಲ್ಲೂ ಸುಸ್ತಾಗುವವರೆಗೂ ಆಡುತ್ತಾರೆ. ಹೀಗೆ ಆಡುವವರನ್ನು ಬೇರೆ ಮಕ್ಕಲು ಬನ್ನಿ ಎಂದು ಕರೆಯುತ್ತಾರೆ. ಅಂದರೆ ಮೀನು ಹಿಡಿಯಲು ತಂದೆ ಜೊತೆ ಹೋಗುವ ಮಕ್ಕಲು ತಮ್ಮ ಪ್ರೀತಿಯನ್ನು ಹಾಡಿನ ಮೂಲಕ ತೋರಿಸುತ್ತಾರೆ.

ಈ ಹಾಡುಗಳ ಮೂಲಕ ಜನರು ತಮ್ಮ ಬದುಕನ್ನು ನಿವೇದಿಸಿಕೊಳ್ಳುವ ಅಥವಾ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಅಧ್ಯಾತ್ಮ ಶಕ್ತಿ ಮತ್ತು ಪ್ರಕೃತಿ ಶಕ್ತಿಗಳನ್ನು ಒಲಿಸಿಕೊಳ್ಳಬಹುದೆಂದು ಗಾಢವಾಗಿ ನಂಬುತ್ತಾರೆ. ಇದರಿಂದ ಕಡಲಿನ ಅಲೆಗಳ ಪ್ರಮಾಣ ಹೆಚ್ಚುತ್ತದೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ. ಆದ್ದರಿಂದ ಈ ಹಾಡುಗಳು ಕೇವಲ ಮನರಂಜನೆಯ, ಜಾನಪದ ಹಾಡುಗಳಾಗಿರದೆ ಅವು ಮಂತ್ರಗಳ ರೂಪದಲ್ಲಿರುತ್ತವೆ. ಇದರ ಉದ್ದೇಶ ವಿಶಿಷ್ಟವಾದುದು. ಏಕೆಂದರೆ, ಮೀನುಗಾರರ ಜೀವನ ನಿಂತಿರುವುದೇ ಕಡಲಿನ ಅಲೆಗಳ ಮೇಲೆ. ಬೇಸಗೆ ಅಥವಾ ಚಳಿಗಾಲ, ಅನಾವೃಷ್ಟಿಯ ವೇಳೆ ಕಡಲಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಆಗ ಮೀನುಗಾರರಿಗೆ ಜೀವನ ನಡೆಸುವುದು ತುಂಬ ಕಷ್ಟ. ಆದ್ದರಿಂದ ಸಮಪ್ರಮಾಣದ ಹರಿವು ಮೀನುಗಾರಿಕೆಗೆ ಉತ್ತಮವಾದುದರಿಂದ ಅವರು ಕಡಲಿನ ಮುಂದೆ ನಿಂತು, ಅದನ್ನೇ ದಿಟ್ಟಿಸಿ ನೋಡುತ್ತಾ ಮಾವಿನಕಾಯಿ, ತೆಂಗಿನಕಾಯಿಗಳನ್ನು ತಿನ್ನುವುದಕ್ಕೆ ನೀಡುತ್ತೇವೆ ಎಂದು ಹೇಳುತ್ತಾರೆ. ಅದರಿಂದಸಂತೋಷಗೊಂಡ ಸಮುದ್ರ ದೇವತೆ ವರ ನೀಡಿ ಅಲ್ಲಿರುವ ಅಮೂಲ್ಯ ವಸ್ತುಗಳು ದೊರಕುತ್ತವೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ. ಆ ಹಾಡು ಹೀಗಿದೆ :

ಆಲೇಲೋ ಯೋ ಬಾ
ಹುಟ್ಟು ಹಾಕಿ ಬಾ
ಬೆಟ್ಟಗುಡ್ಡ ಸುತ್ತಿ ಬಾ
ಮಾವು ಬೀಳಿಸಿ ಕೊಡುತ್ತೇವೆ
.
ರಥದ ಮೇಲೆ ಏರಿ ಬಾ
ತೆಂಗಿನ ಕಾಯಿ ಕೊಡುತ್ತೇವೆ
ಬಿಸಿ ಮಾಡಿ ಕೊಡುವೆವು
ರಭಸದಿಂದ ಬಾ…

ದೋಣಿ ಆಟದ ಈ ಹಾಡುಗಳನ್ನು ಮಕ್ಕಳು ಬಾಯಲ್ಲಿ ಸದಾ ಗುನುಗುತ್ತಿರುತ್ತಾರೆ.

ದೋಣಿ ಬಿಡುವ ಮಕ್ಕಳಾಟದ ಹಾಡುಗಳು : ಮೀನುಗಾರ ಮಕ್ಕಳ ಆಟಗಳು ಮತ್ತು ಅವರ ಹಾಡುಗಳು ಇಡೀ ಬದುಕನ್ನು ಹೇಳುತ್ತವೆ. ಕಡಲಿನಲ್ಲಿ ಈ ಮಕ್ಕಳ ‘ದೋಣಿ ಆಟದ ಹಾಡು’ ಎಷ್ಟು ಸುಂದರವಾಗಿದೆಯೋ ಅಷ್ಟೇ ವೈವಿಧ್ಯವಾಗಿದೆ. ಇತರ ಮಕ್ಕಳ ಆಟಗಳು ಮತ್ತು ಅದಕ್ಕೆ ಸಂಬಂಧಿಸಿದ ಇನ್ನು ಹಲವು ಹಾಡುಗಳು ಸಹ ಉತ್ತಮವಾಗಿವೆ.

ಈ ಆಟ ಹೀಗಿದೆ : ಮೀನುಗಾರರ ಮಕ್ಕಳು ಹರಿಯುವ ನೀರಿನಲ್ಲಿ ತೆಂಗಿನ ಗರಿಗಳಿಂದಲೂ ಕಾಗದಗಳಿಂದಲೂ ಚಿಕ್ಕ ಚಿಕ್ಕ ದೋಣಿಗಳನ್ನು ಮಾಡಿ ಅದನ್ನು ನೀರಿನಲ್ಲಿ ಹರಿಯಬಿಟ್ಟು ಸಂತಸ ಪಡುತ್ತಾರೆ. ಈ ಆಟವನ್ನೇ ‘ದೋಣಿ ಬಿಡುವ ಆಟ’ ಎನ್ನಲಾಗುತ್ತದೆ. ಇದು ಚಿಕ್ಕ ಮಕ್ಕಳು ಮಾಡುವ ದೋಣಿಗಳ ಬಗೆಯಾದರೆ, ಆ ದೋಣಿಗಳ ಸಾಗುವಿಕೆ ಹಾಗೂ ಅದು ರಭಸವಾಗಿ ಬೀಸಿದ ಗಾಳಿಯ ಹೊಡೆತಕ್ಕೆ ಸಿಕ್ಕಿ ಬೀಳುವುದು. ಇದನ್ನೇ ಬಿಟ್ಟ ಕಣ್ಣುಗಳಿಂದ ತದೇಕಚಿತ್ತದಿಂದ ನೋಡುವ ಮಕ್ಕಳು ಕೆಲವು ಹಾಡುಗಳನ್ನು ಉತ್ಸಾಹದಲ್ಲಿ ಹಾಡುತ್ತಾರೆ. ಈ ಹಾಡುಗಳು ಸರಳವಾದ ಪದಪುಂಜಗಳಿಂದ ಹೆಣೆಯಲ್ಪಟ್ಟಿರುತ್ತವೆ. ಇದರ ಜೊತೆಗೆ ಮೋಗೈ, ಎದುಗೈ, ಇಯೈಪು ಎಂಬ ಸಂಗೀತದ ಮಟ್ಟುಗಳು ಬೆಸೆದು ಹಾಡಿನ ಸುಮಧುರ ಸ್ವರ ಹೊರಹೊಮ್ಮುತ್ತದೆ.

ಮಕ್ಕಳಂತೆಯೇ ದೊಡ್ಡವರಿಗೂ ಕೋಲಾಮರದ ದೋಣಿಗಳು ಮನವನ್ನು ಸೆಳೆಯುತ್ತವೆ. ಅಂದರೆ ಈ ಮರ ಅಥವಾ ಚಾಪೆ ಮರದ ದೋಣಿಗಳು ನೀರಿನಲ್ಲಿ ಬಹಳ ದೂರ ಸುಲಲಿತವಾಗಿ ಸಾಗುತ್ತವೆ. ಇಂತಹ ದೋಣಿಗಳಲ್ಲಿ ಸಾಮಾನ್ಯವಾಗಿ ದೊಡ್ಡವರೇ ಮೀನು ಹಿಡಿಯಲು ಹೋಗುವುದು. ಹಿಂದಿರುಗಿ ಬರುವಾಗ ಮೀನಿನ ಜೊತೆ ಬರುವರು. ಈ ಮೀನುಗಳನ್ನು ಮಾರಿ ಬರುವ ಹಣದಲ್ಲಿ ಪುರುಷರು ಕುಡಿದು ತೂರಾಡುವುದು. ಮನೆಗೆ ಬಂದು ಹೆಂಡತಿ – ಮಕ್ಕಳನ್ನು ಬೈಯ್ಯುವುದು ಬಡಿಯುವುದು – ಈ ವಸ್ತುಗಳನ್ನೇ ಅಳವಡಿಸಿಕೊಂಡು ಹಾಡುವರು. ಇಂಥ ವ್ಯಂಗ್ಯ ಗೀತೆಗಳನ್ನು ಹಾಡುವಲ್ಲಿ ಕಿರಿಯರಿಗಿಂತ ಹಿರಿಯವರೆ ನಿಷ್ಣಾತರು. ಅಂತೆಯೇ ನೈಯ್ಯಾಂಡಿ ಮೇಳದ ಕಲಾವಿದರು ಈ ಹಾಡಗಾರಕೆಯಲ್ಲಿ ತುಂಬ ನಿಪುಣರು. ಹೀಗಾಗಿ ಈ ಹಾಡುಗಳು ಜನಮನವನ್ನು ಗೆದ್ದಿವೆ.

ಹೀಗೆ ಪ್ರಸ್ತುತಗೊಳ್ಳುವ ಹಾಡುಗಳಲ್ಲಿ ಒಂದು ಉದಾಹರಣೆ ಹೀಗಿದೆ :

ಈಜುತಿದೆ ಕೋಲಾಮೀನು
ಒಟ್ಟಿನಲ್ಲಿ ಶ್ರೇಷ್ಠಮೀನು
ಸಾಗಿದಷ್ಟು ಸಾಗುವ ಅದರ
ದೂರ ನೋಡಿರೋ

ತಾಯಿಯೆಂಬಕಡಲಿನಲ್ಲಿ
ಹಿಡಿದು ಒಂದು ಮೀನನು
ಮೀನು ಮೀನು ಎಂದು ಸಾರಿ
ಮಾರಿ ಹಣವ ಪಡೆದವರು

ಕಂಠಪೂರ್ತಿ ಸಹಾಯಿ ಕುಡಿದು
ತಿರುತಿರುಗಿ ಮನೆಗೆ ಬಂದು
ಹೆಂಡ್ತಿ ಮಕ್ಳಗಳ ಬಡಿಬಡಿದು
ಮನೆಯಿಂದಾಚೆ ನೂಕುವವ

ಹೀಗಿದ್ದು ಗಂಡನಿಗೆ ಊಟಕೊಟ್ಟು
ಮಲಗೆಂದು ಮಲಗಿಸುವಳು
ಕೋಲಾಮೀನಿನ ಮೇಲೆಯೇ
ಆತನ ಕಣ್ಣು

ಮೀನುಗಾರರ ಬುತ್ತಿ: ಮೀನು ಹಿಡಿಯಲು ಹೋಗುವ ಮೀನುಗಾರರು ನೀರಿನಲ್ಲಿ ಕಾಲಿಟ್ಟರೆ ಹಿಂದಕ್ಕೆ ಬರುವರೆಂದು ಹೇಳಲಾಗುವುದಿಲ್ಲ. ಹೀಗೆ ಪ್ರಯಾಣ ಮಾಡುವಾಗ ತಮ್ಮೊಡನೆ ಬುತ್ತಿಯನ್ನು ಕೊಂಡೊಯ್ಯುತ್ತಾರೆ. ಇಂಥ ಪ್ರಸಂಗಗಳನ್ನು ಕುರಿತು ಹಾಡುವ ಹಾಡುಗಳಿವೆ. ಸಾಮಾನ್ಯವಾಗಿ ಕೋಲಾಮೀನನ್ನು ಹಿಡಯಲು ಹೋಗುವ ದೋಣಿಯಲ್ಲಿ ಆರು ಜನ ಮೀನುಗಾರರು ಇರುತ್ತಾರೆ. ತಮ್ಮ ಪ್ರಯಾಣದ ಮಧ್ಯದಲ್ಲಿ ತಂದಿರುವ ಬುತ್ತಿಯನ್ನು ಬಿಚ್ಚಿ ತಿನ್ನುತ್ತಾರೆ. ಈ ದೃಶ್ಯಾವಳಿಯನ್ನು ಕುರಿತಂತೆ ಒಂದು ಹಾಡು ಹೀಗಿದೆ :

ಗಾಳಿಯೆಂದರೆ ಗಾಳಿ
ಕಡಲ ತೀರದ ಗಾಳಿ
ದಿಕ್ಕು ದಿಕ್ಕಿಗೂ ಬಿಸುವ
ಭವ್ಯ ಬಿರುಗಾಳಿ

ಎಲ್ಲೆಲ್ಲೊ ಕೋಲಾ ಮೀನು
ಈಜುವ ಒಳ್ಳೆ ಮೀನು
ನಡು ನಡುವೆ ನಿಮಿರುವ ಮೀನು
ಕೆರೆಯ ದಡದ ಕೋಲಾ ಮೀನು
.

ಕೋಲಾಮೀನು ಹಿಡಿಯಲು ಹೋದ ಮೀನುಗಾರರು ತಾವು ತಂದ ಆಹಾರವನ್ನು ಹಂಚಿಕೊಂಡು ತಿನ್ನುವರು. ಈ ಎಲ್ಲ ವಿಷಯಗಳನ್ನ ಸೇರಿಸಿ ಹಾಸ್ಯ ಚಟಾಕಿಯಿಂದ ಹಾಡುವ ಹಾಡು ಮನಸ್ಸನ್ನು ರಂಜಿಸುತ್ತದೆ. ಅಂತೆಯೇ ಮನಸ್ಸು ಮನಸ್ಸನ್ನು ಬೆಸೆದು ಸಂತೋಷದ ಜೀವನಕ್ಕೆ ಹಾದಿ ಹಾಕಿಕೊಡುತ್ತದೆ.

– ಎ.ಡಿ. ಅನುವಾದ ಆರ್.ಎಸ್.

ತಮಿಳುನಾಡಿನ ಆಹಾರ ಪದ್ಧತಿ ಜನಪದರು ಪರಂಪರಾಗತವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಂದ ಆಹಾರ ಪದ್ಧತಿ. ಸಮುದಾಯದಿಂದ ಸಮುದಾಯಕ್ಕೆ ಭಿನ್ನವಾಗಿಯೂ ಇರುತ್ತದೆ. ತಮಿಳರಿಗೂ ಅವರದ್ದೇ ಆದ ಆಹಾರ ಪದ್ಧತಿಯಿದೆ.

ಒಂದು ಪ್ರದೇಶದಲ್ಲಿ ಬೆಳೆಯುವ ಧಾನ್ಯಗಳಿಗೆ ಅನುಗುಣವಾಗಿ ಆ ಪ್ರದೇಶದ ಜನರು ಆಹಾರ ಕ್ರಮವನ್ನು ರೂಢಿಸಿಕೊಳ್ಳುತ್ತಾರೆ. ರಾಗಿ, ಗೋಧಿ, ಜೋಳ, ಗೆಣಸು, ಮರಗೆಣಸು, ಹೆಸರುಕಾಳು, ಮೊಚ್ಚೈ (ನವಣೆ) ಮತ್ತು ಉದ್ದು, ತೊಗರಿ, ಎಳ್ಳು, ಬತ್ತ ಮೊದಲಾದ ದವಸ ಧಾನ್ಯಗಳಿಂದ ತಯಾರಿಸಲಾದ ಆಹಾರವನ್ನ ಜನಪದರು ಉಂಡು ಬಾಳಿದರು. ಈಗ ದಕ್ಷಿಣ ಭಾರತದ ಬಹುತೇಕ ಪ್ರದೇಶಗಳಲ್ಲಿ ಅಕ್ಕಿಯ ಬಳಕೆ ಸಾರ್ವತ್ರಿಕವಾಗಿ ಕಂಡುಬರುತ್ತದೆ. ಅಕ್ಕಿಯ ಅನ್ನವನ್ನು ಅಮಾವಾಸ್ಯೆಯಂದು ಮಾತ್ರಬಳಸುವ ಸಂಪ್ರದಾಯವಿತ್ತೆಂದು ಜನಪದರು ಹೇಳುತ್ತಾರೆ.

ಕಂಬು, ಜೋಳ, ಸಜ್ಜೆ ಮೊದಲಾದ ಧಾನ್ಯಗಳನ್ನು ಬಳಸಿ ಗಂಜಿ, ಅಂಬಲಿ, ದೋಸೆ ಮುಂತಾದ ತಿಂಡಿಗಳನ್ನು ತಯಾರಿಸಿ ಉಣ್ಣುತ್ತಿದ್ದುದು ಸಂಪ್ರದಾಯ.

ಹಿಂದಿನ ದಿನದ ಅನ್ನಕ್ಕೆ ನೀರು ಸೇರಿಸಿಟ್ಟು ಮರುದಿನ ಬೆಳಗ್ಗೆ ತಂಗಳನ್ನವಾಗಿ ಊಟ ಮಾಡುವ ಪದ್ಧತಿ ಈಗಲೂ ತಮಿಳುನಾಡಿನಲ್ಲಿ ರೂಢಿಯಲ್ಲಿದೆ. ಪ್ರಯಾಣ ಮಾಡುವಾಗ ಎಣ್ಣೆ, ಹುಳಿ ಬೆರೆಸಿ ಹುಳಿಯನ್ನ ಮಾಡಿ ತೆಗೆದುಕೊಂಡು ಹೋಗುವ ಅಭ್ಯಾಸವೂ ಜನಪದರಲ್ಲಿದೆ.

ವಿವಿಧ ಬಗೆಯ ಗೆಣಸು, ಬೀಜಗಳು, ಮಾಂಸ ಇವುಗಳನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವವರೂ ಜನಪದರಲ್ಲಿದ್ದಾರೆ. ಈಗ ಸೌದೆ ಉರಿಸಿ ಅಡುಗೆ ಮಾಡುವ ವ್ಯವಸ್ಥೆ ಕಡಿಮೆಯಾಗುತ್ತಿರುವುದರಿಂದ ಸುಟ್ಟು ತಿನ್ನುವ ಅಭ್ಯಾಸವೂ ಮರೆಯಾಗುತ್ತಿದೆ.

ಹೊಲದಲ್ಲಿ ಕಳೆಯನ್ನು ತೆಗೆಯಲು ಹೋಗುವ ಮಹಿಳೆಯರು ಅಲ್ಲಿ ಸಿಗುವ ವಿವಿಧಸೊಪ್ಪುಗಳನ್ನು ಸಂಗ್ರಹಿಸಿ ಮಾಡುವ ಅಡುಗೆಯನ್ನು ‘ಕಲಪ್ಪು ಕೀರೈ’ (ಬೆರಕೆ ಸೊಪ್ಪು) ಅಡುಗೆ ಎನ್ನುವರು.

ಮಾಂಸದ ಅಡುಗೆಗಳಲ್ಲಿ ಕೆಲವು ಪ್ರಾಣಿಗಳ ಮಾಂಸಗಳನ್ನುಕೆಲವೇ ಕೆಲವು ಜಾತಿಯವರು ತಿನ್ನುವುದರಿಂದ ಅವರಲ್ಲಿ ಮೇಲು – ಕೀಳು ಎಂಬ ತಾರತಮ್ಯ ಕಂಡುಬರುತ್ತದೆ.

ಊಟದ ಪದ್ಧತಿಯಲ್ಲೂ ಜನಪದರಲ್ಲಿ ಬೇರೆ ಬೇರೆ ರೀತಿಯ ನಂಬಿಕೆಗಳಿವೆ. ಯಾರು ಯಾರಿಗೆ ಯಾವುದನ್ನು ಹಂಚಿಕೊಳ್ಳಬಹುದು, ಹಂಚಬಾರದು ಇತ್ಯಾದಿ ನಿರ್ಬಂಧಗಳೂ ಇವೆ. ಊಟ ಮಾಡುವಾಗ ಬೆರಳನ್ನು ತೀಡಿ ಉಣ್ಣಬಾರದು, ಉಂಡೆ ಮಾಡಿ ಊಟ ಮಾಡಬಾರದು ಇತ್ಯಾದಿ ನಂಬಿಕೆಗಳೂ ಇವೆ.

ಅತಿಥಿಗಳಿಗೆ ಎಲೆಗಳಲ್ಲಿ ಊಟವನ್ನು ಬಡಿಸುವ ಸಂಪ್ರದಾಯ ಜನಪದರಲ್ಲಿದೆ. ಬಾಳೆ ಎಲೆ, ತಾವರೆ ಎಲೆ, ಪತ್ರೆ ಎಲೆಗಳನ್ನು ಊಟಕ್ಕಾಗಿ ಬಳಸುವರು. ಹಿಂದಿನ ಕಾಲದಲ್ಲಿ ಅಡುಗೆಗೆ ಮಣ್ಣಿನ ಪಾತ್ರೆಯನ್ನೇ ಬಳಸಲಾಗುತ್ತಿತ್ತು. ಈಗ ಎವರ್ ಸಿಲ್ವರ್, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುತ್ತಾರೆ.

ಮದುವೆ ಔತಣಕ್ಕಾಗಿ ತಮ್ಮ ಬಳಗದವರೊಂದಿಗೆಸೇರಿ ವಿಶೇಷ ಅಡುಗೆಯನ್ನು ಮಾಡಿ ಊರವರನ್ನು ಕರೆದು ಪಂಕ್ತಿ ಹಾಕಿ ಊಟ ಬಡಿಸುವುದು ಸಂಪ್ರದಾಯ. ಪಂಕ್ತಿ ಹಾಕುವುದರಲ್ಲೂ ಕೆಲವು ವಿಧಾನಗಳಿವೆ. ಹೊರ ಊರವರ ಪಂಕ್ತಿ, ಊರಿನವರ ಪಂಕ್ತಿ, ಗಂಡಸರ ಪಂಕ್ತಿ, ಹೆಂಗಸರ ಪಂಕ್ತಿ, ಕೆಲಸಗಾರರ ಪಂಕ್ತಿ ಇತ್ಯಾದಿಗಳಿವೆ.

ಕೆಲವು ಆಚರಣೆ, ಸಂಪ್ರದಾಯಗಳಿಗೆ ತಕ್ಕಂತೆ ಆಹಾರ ಕ್ರಮದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ದೈವಗಳಿಗೆ ನೀಡಲಾಗುವ ಆಹಾರದಲ್ಲೂ ಹಲವಾರು ಬಗೆಗಳಿವೆ. ಕೆಲವು ಸಮಯಗಳಲ್ಲಿ ಕೆಲವು ನಿರ್ದಿಷ್ಟ ಆಹಾರವನ್ನು ಸೇವಿಸಬಾರದೆಂಬ ನಿಷೇಧವನ್ನು ಜನಪದರು ಹಾಕಿಕೊಂಡಿದ್ದಾರೆ. ಬದಲಾಗುವ ಕಾಲಮಾನಕ್ಕನುಗುಣವಾಗಿ ಉಷ್ಣ, ಶೀತ ಪದಾರ್ಥಗಳನ್ನು ಸೇವಿಸುವ ಸಂಪ್ರದಾಯವನ್ನೂ ಕಾಣಬಹುದು. ಕಿರಿಯವರು, ಹಿರಿಯವರು, ಹೆಂಗಸರು, ರೋಗಿಗಳು ಇತ್ಯಾದಿ ವಯಸ್ಸು, ಶಾರೀರಿಕ ವಿಧಾನಕ್ಕೆ ತಕ್ಕಂತೆ ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುತ್ತದೆ. ಹೊಸ ಸಂಬಂಧವನ್ನು ಬೆಳೆಸಿಕೊಳ್ಳುವ ಸಂದರ್ಭದಲ್ಲಿ ನೆಂಟರೊಂದಿಗೆ ಫಲಾಹಾರವನ್ನು ಹಂಚಿಕೊಳ್ಳುವುದನ್ನು ‘ಊರ್ ವಳಕ್ಕಂ’ (ಊರಿನ ಸಂಪ್ರದಾಯ) ಎನ್ನುವರು.

ಆರು ರಸಗಳುಳ್ಳ ಭೋಜನ ಸಹಜವಾಗಿಯೇ ಜನಪದರ ಆಹಾರದಲ್ಲಿ ಸೇರಿಕೊಂಡಿವೆ. ಕೆಲವು ರುಚಿಗಳ ಆಹಾರಗಳನ್ನು ಕ್ರಮಬದ್ಧವಾಗಿ ಅವರು ಉಪಯೋಗಿಸುತ್ತಾರೆ. ನಿರ್ದಿಷ್ಟ ರುಚಿಯ ಆಹಾರವನ್ನು ತಿಂದ ಮೇಲೆ ಅದಕ್ಕೆ ಸೂಕ್ತವೆನಿಸುವ ಇನ್ನೊಂದು ರುಚಿಯ ಆಹಾರವನ್ನು ಸೇವಿಸುತ್ತಾರೆ. ಶೇಂಗಾಕಾಯಿ ತಿಂದ ಅನಂತರ ಅದಕ್ಕೆ ಸರಿಯೆನಿಸುವ ರುಚಿಯುಳ್ಳ ಬೆಲ್ಲವನ್ನು ತಿನ್ನುವ ಸಂಪ್ರದಾಯ ಜನಪದರಲ್ಲಿ ಬಳಕೆಯಲ್ಲಿದೆ.

ಆರ್.ಪಿ.ಯು. ಅನುವಾದ ಬಿ.ಎಸ್.ಎಸ್.

ತಮಿಳುನಾಡಿನ ಕುಲದೇವರು ಭಾರತದಂತಹ ಜಾತ್ಯತೀತ ರಾಷ್ಟದಲ್ಲಿಯೂ ಜಾತಿ, ಮತಗಳ ಹೊರತಾದ ಬದುಕಿನ ಅಧ್ಯಯನ ಅಸಾಧ್ಯ. ಬದುಕಿನ ಒಂದು ಭಾಗವೇ ಆಗಿರುವ ಧರ್ಮ, ದೇವರು ಇವುಗಳನ್ನು ಕೂಡ ನಿರ್ದಿಷ್ಟ ಜಾತಿ – ಪಂಥಗಳಿಗೆ ತಮ್ಮ ಸ್ವತ್ತು ಎಂಬಂತೆ ಬಳಸಿಕೊಂಡಿದ್ದು ಆಯಾ ದೇವರು ಸಂಬಂಧಿತ ಪೂಜೆ, ಆಚಾರ – ವಿಚಾರ ಎಲ್ಲವೂ ಆ ನಿರ್ದಿಷ್ಟ ಪಂಥವೇ ಆಚರಿಸಿಕೊಂಡು ಬರುವುದನ್ನು ನಾವು ಕಾಣಬಹುದಾಗಿದೆ.

ಯಾವುದೇ ಒಂದು ಮೂಲ ಕುಟುಂಬ ಅಥವಾ ಅವಿಭಕ್ತ ಕುಟುಂಬ ವಿವಿಧ ಉದ್ದೇಶಗಳಿಗಾಗಿ ಕಾಲಾಂತರದಲ್ಲಿ ಬೇರೆಯಾಗಿ ವಿಭಕ್ತ ಕುಟುಂಬವಾಗುತ್ತದೆ. ಆ ಒಡೆದ ಕುಟುಂಬಗಳು ಪ್ರಾದೇಶಿಕ ಕಾರಣಗಳು, ವೈವಾಹಿಕ ಕಾರಣಗಲು, ಪ್ರಭಾವಗಳು ಬದುಕಿನ ಒತ್ತಡಗಳು – ಇವೇ ಮುಂತಾದ ಕಾರಣಗಳಿಂದ ತಮ್ಮ ಜೀವನದ ಶೈಲಿಯನ್ನು ಬದಲಿಸಿಕೊಳ್ಳುತ್ತವೆ. ಈ ಹಂತದಲ್ಲಿ ‘ಕುಲದೇವರು’ ಅಥವಾ ಮನೆದೇವರು ಎಂದು ನಿರ್ದಿಷ್ಟ ದೈವಾರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ.

‘ಕುಲ’ ಎಂಬ ಪದಕ್ಕೆ ಹಲವು ವ್ಯಾಖ್ಯಾನಗಳಿವೆ. ಮನೆ ಹಿರಿಯರು ಅನುಸರಿಸಿದ ರೂಢಿ, ಸಂಪ್ರದಾಯಗಳನ್ನು ತಾವು ಅನುಸರಿಸಿಕೊಂಡು ಬರುವ ಒಂದು ಜನಸಮೂಹಕ್ಕೆ ‘ಕುಲ’ ಕುಲಬಾಂಧವರು ಎನ್ನುವರು. ಮೇಲೆ ಹೇಳಿದಂತೆ ಒಂದು ಮನೆತನದ ಆರಾಧ್ಯ ದೈವ ಆ ಮನೆಯ ‘ಮನೆದೇವರು’ ಆಗುತ್ತದೆ. ಇದನ್ನು ಕಾಲಾನಂತರದಲ್ಲಿ ಸ್ವೀಕರಿಸಿಕೊಳ್ಳುವ ಜನಸಮೂಹ ಪರಸ್ಪರ ದಯಾದಿಗಳೆನಿಸುತ್ತಾರೆ. ಈ ದಾಯಾದಿಗಳಲ್ಲಿ ಪರಸ್ಪರ ವೈವಾಹಿಕ ಸಂಬಂಧ ಏರ್ಪಡುವಂತಿಲ್ಲ. ಬೇರೆ ದೇವರನ್ನು ಪೂಜಿಸುವವರೊಡನೆ ವೈವಾಹಿಕ ಸಂಬಂಧ ಉಂಟಾಗಬೇಕು ಎಂಬ ನಿಯಮವಿದೆ. ತಮಿಳುನಾಡಿನ ನಾಟುಕೋಟೈ ಶೆಟ್ಟಿಯಾರು ಇದನ್ನು ವಿಶೇಷವಾಗಿ ಅನುಸರಿಸುತ್ತಾ ಬರುತ್ತಿದ್ದಾರೆ. ದೇಗುಲವನ್ನೇ ಆಧಾರವಾಗಿಟ್ಟುಕೊಂಡು ಸಂಬಂಧವನ್ನು – ಕುಲಗಳನ್ನು ಕವಲುಗಳಾಗಿ, ಉಪಗುಂಪುಗಳಾಗಿ ವಿಂಗಡಿಸುತ್ತಾರೆ. ಈ ಕುಲದೇವತೆಗಳು ‘ಶಿಷ್ಟದೇವತೆ’ ಗಳೇ ಆಗಬೇಕೆಂದೆನಿಲ್ಲ. ಇಹದ ತಮ್ಮ ಬದುಕಿನಲ್ಲಿಯೇ ಸಕಲ ಸುಖ – ದುಃಖಗಳನ್ನು ಉಂಡು ಬಾಳ್ವೆನಡೆಸಿ ಇತರರಿಗೆ ಅನುಕೂಲವಾಗುವ ಕಾರಣಗಳಿಗಾಗಿ ಪ್ರಾಣಾರ್ಪಣೆ ಮಾಡಿದ ಆದರ್ಶ ವ್ಯಕ್ತಿಗಳು ಕೂಡ ಜನಪದರ ದೈವಗಳಾಗುತ್ತಾರೆ. ವಿವಾಹವಾದ ಪತಿವ್ರತಾ ಸ್ತ್ರೀಯರು, ವಿವಾಹವಾಗುವ ಹೆಣ್ಣುಗಳಿಗೆ ಅಸಾಧ್ಯ ತೊಂದರೆ ಉಂಟಾದಾಗ ಅವರು ಪ್ರಾಣಾರ್ಪಣೆ ಮಾಡಿಕೊಳ್ಳುವ ಪದ್ಧತಿ ನಮ್ಮ ಕಣ್ಮುಂದೆ ಇದೆ. ಉದಾ. ರಾಜಸ್ಥಾನದ ‘ಜೌಹಾರ್’ ಪದ್ಧತಿ ಇಂತಹ ಹೆಣ್ಮುಗಳು ಸಮಾಜದ ಗೌರವಕ್ಕೆ ಪಾತ್ರವಾಗಿ ಅವರಿಗೆ ದೇವರಾಗುತ್ತಾರೆ. ಈ ದೇವತೆಗಳನ್ನು ಆರಾಧಿಸುವ ಜನರ ಸಮೂಹ ಅವರು ಆಚರಿಸುವ ಹಬ್ಬ, ಜಾತ್ರೆ, ಪರ ಅಂದಿನ ಪೂಜೆಯ ವಿಧಿ – ವಿಧಾನಗಳು ಅದರ ಜೊತೆಗೆ ಕಟ್ಟಿ ಹಾಡುವ ಶೌರ್ಯದ ಅಭಿಮಾನದ ಹಾಡು, ಕಥೆಗಲು ಹುಟ್ಟಿಕೊಳ್ಳುತ್ತವೆ. ಈ ದೇವರುಗಳು ಯಾವ ಕುಲಕ್ಕೆ ಸೇರಿರುತ್ತಾರೋ ಆ ಕುಲದವರೇ ಇವರ ಹೆಸರಿನಲ್ಲಿ ದೇವಾಲಯಗಳನ್ನು ನಿರ್ಮಿಸುತ್ತಾರೆ ಮತ್ತು ಆ ಕುಲದವರೇ ಅರ್ಚಕರೂ ಪುರೋಹಿತರೂ ಆಗಿರುತ್ತಾರೆ.

ಹಲವು ಜಾತಿಗಳಲ್ಲಿರುವ ಕುಲಗಳ ದೇವರು ಒಂದೇ ಆಗಿರುವುದನ್ನು ನಾವು ಕಾಣುತ್ತೇವೆ. ಆದರೆ ಎಲ್ಲಾ ಕುಲಗಳೂ ಕಾಲಾನಂತರದಲ್ಲಿ ಒಡೆದು ಪ್ರದೇಶಗಳಿಗೆ ವಲಸೆ ಹೋಗಿ ಬಾಳ್ವೆ ನಡೆಸುತ್ತಿರುವ ಒಂದೇ ಮೂಲದ ಬಳ್ಳಿಗಳು, ಎಂಬುದು ಕ್ಷೇತ್ರಕಾರ್ಯದಿಂದ ಸಾಬೀತಾಗಿದೆ. ಉದಾ. ತಮಿಳು ನಾಡಿನ ದೇವಕರುಪ್ಪುಸ್ವಾಮಿ ನಾಡಾರ್, ಪಳ್ಳರ್, ಗೌಂಡರ್, ನಾಯ್ಕರ್, ಪಂಡಾರರ್ ಮೊದಲಾದ ಎಲ್ಲ ಕುಲಗಳಿಗೂ ಮನೆದೇವರು. ಕರುಪ್ಪುಸ್ವಾಮಿ ಜನ ಸಾಮಾನ್ಯ. ಬಹಳ ಹಿಂದೆಯೇ ಇದ್ದ ವ್ಯಕ್ತಿ. ಆತ ಸತ್ತ ಅನಂತರ ಆ ಕುಲದ ಆರಾಧ್ಯ ದೈವವಾದವರು. ಈ ಮೇಲ್ಕಂಡ ಎಲ್ಲ ಕುಲಗಳು ಕುರುಪ್ಪುಸ್ವಾಮಿಯ ಕುಲಕ್ಕೆ ಸೇರಿದ್ದು ಕಾಲಾನಂತರದಲ್ಲಿ ವಲಸೆ ಹೋಗಿ ಪ್ರತ್ಯೇಕಗೊಂಡ ಕುಟುಂಬಗಳಾದರೂ ಅವರ ಆರಾಧ್ಯ ಮನೆ ದೇವರಾಗಿ ಪೂಜೆಗೆ ಒಳಗಾಗಿದ್ದಾರೆ. ಆದ್ದರಿಂದ ‘ಕುಲದೇವ’ ಎಂಬುದು ನಿರ್ದಿಷ್ಟ ಕುಟುಂಬ ಜಾತಿಯ ಒಳಪಂಥಕ್ಕೆ ಸೇರಿದುದಾಗಿದೆ.

– ಟಿ.ಆರ್. ಅನುವಾದ ಪಿ.ಎಂ.

ತಮಿಳುನಾಡಿನ ಕೃಷಿ ಸಾಧನಗಳು : ನೆಲವನ್ನು ಉಪಯೋಗಿಸಿ ತನಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಬೆಳೆದು ಜೀವಿಸಲಾರಂಭಿಸಿದ ಮಾನವ ಕುಲ, ಮರಗೆಲಸ ಮಾಡುವವರನ್ನೂ, ಕಬಿಬ್ಣ ಕೆಲಸ ಮಾಡುವರನ್ನೂ ಜಾನುವಾರಗಳನ್ನು ಸಾಕುವವರನ್ನೂ ಕೃಷಿ ಕೆಲಸಕ್ಕೆ ಉಪಯೋಗಿಸಿದ್ದಾರೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಕೃಷಿಕರು ಹಲವಾರು ವಿಧವಾದ ಕೃಷಿಯೋಗ್ಯ ಸಾಧನಗಳನ್ನು ರಚಿಸಿ ಉಪಯೋಗಿಸಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಎಂಬುದಕ್ಕೆ ಕೈ ಉಪಕಾರ, ಕೊಡುಗೆ ನೀಡುವಂಥದ್ದು, ಬತ್ತದ ಪೈರು ನಾಟಿ ಮಾಡುವ ಕೆಲಸ ಎಂದು ತಮಿಳು ನಿಘಂಟು ಅರ್ಥವನ್ನು ನೀಡುತ್ತದೆ.

ಮನುಷ್ಯನಿಗೆ ಅಗತ್ಯವಾದ ಆಹಾರದಲ್ಲಿ ಬಹುಪಾಲು ಕೃಷಿ ಕೆಲಸದ ಮೂಲಕವೇ ದೊರೆಯುತ್ತದೆ. ಕೃಷಿ ಕೆಲಸದಲ್ಲಿ ತೊಡಗುವವರನ್ನು ರೈತರೆಂದು ಕರೆಯಲಾಗುತ್ತದೆ. ಕೃಷಿಯನ್ನು ಒಂದು ಕಲೆ ಎಂದೂ ಒಂದು ವಿಜ್ಞಾನವೆಂದೂ ಹೇಳಬಹುದು. ಇದು ಆರ್ಥಿಕ ಬೆಳವಣಿಗೆಗಾಗಿ ಪೈರುಗಳನ್ನೂ ಜಾನುವಾರುಗಳನ್ನೂ ಉಪಯೋಗಿಸಿ ಮಾಡುವ ಕೆಲಸವೆಂದು ತೊಲ್‌ಕಾಪ್ಪಿಯಂ ಹೇಳುತ್ತದೆ.

ಕೃಷಿ ಮೂಲಕ ಉತ್ಪತ್ತಿ ಮಾಡಲಾಗುವ ವಸ್ತುಗಳು :

ಕೃಷಿ ಮೂಲಕ ಉತ್ಪತ್ತಿ ಮಾಡಲಾಗುವ ವಸ್ತುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ :

೧. ಧಾನ್ಯ ಬಗೆಗಳು

೨. ಕಾಳುಗಳು

೩. ಹಣ್ಣು, ಕಾಯಿ, ಗಡ್ಡೆಗೆಣಸುಗಳು

೪. ಹೂಗಳು

. ಧಾನ್ಯಗಳು : ಬತ್ತ, ಜೋಳ, ಸಜ್ಜೆ, ರಾಗಿ, ಸಾಮೆ, ಮುಸುಕಿನ ಜೋಳ ಮುಂತಾದವು.

. ಕಾಳುಗಳು : ಹಸಿರುಕಾಳು, ಉದ್ದು, ತೊಗರಿ, ಅವರೆ, ಅಲಸಂದೆ ಮುಂತಾದವು.

೩. ಹಣ್ಣು, ಕಾಯಿ, ಗೆಡ್ಡೆಗೆಣಸುಗಳು

ಬದನೆಕಾಯಿ, ಟೊಮ್ಯಾಟೋ, ಬೆಂಡೆಕಾಯಿ, ನುಗ್ಗೇಕಾಯಿ, ಮೆಣಸಿನಕಾಯಿ, ಹಿತ್ತಲವರೆಕಾಯಿ, ಬಾಳೆಕಾಯಿ, ಮಾವು, ಹಲಸಿನಹಣ್ಣು, ಪರಂಗಿಹಣ್ಣು, ಸೋರೆಕಾಯಿ, ಕುಂಬಳಕಾಯಿ, ಹೀರೆಕಾಯಿ, ಹಾಗಲಕಾಯಿ, ಈರುಳ್ಳಿ ಮುಂತಾದ ಹಣ್ಣುಕಾಯಿಗಳ್ನೂ, ಸಣ್ಣ ಗೆಣಸು, ಮರಗೆಣಸು, ಸಿಹಿಗೆಣಸು, ಸುವರ್ಣಗಡ್ಡೆ ಮುಂತಾದ ಗೆಣಸುಗಳನ್ನು ಬಲೆಯಲಾಗುತ್ತಿದೆ. ಅದೇ ರೀತಿ ಸೂರ್ಯಕಾಂತಿ, ಮಲ್ಲಿಗೆ, ಜಾಜಿ, ಕನಕಾಂಬರ, ಸೇವಂತಿಗೆ ಮುಂತಾದ ನಾನಾ ಬಗೆಯ ಹೂಗಳನ್ನು ಬೆಳೆದುಕೊಂಡು ಬರಲಾಗುತ್ತದೆ.

ಕೃಷಿ ಉಪಯೋಗಿ ಸಾಧನಗಳು : ಭೂಮಿಯನ್ನು ಉತ್ತು ಹದಗೊಳಿಸಿ ನಾಟಿ ಮಾಡುವುದಕ್ಕೆ ಹಲವಾರು ಸಾಧನಗಳನ್ನು ಉಪಯೋಗಿಸಲಾಗುತ್ತದೆ. ಅವುಗಳೆಂದರೆ ನೇಗಿಲು, ಗುದ್ದಲಿ, ಕಳೆ ತೆಗೆಯುವ ಉಪಕರಣ, ಕುಡುಗೋಲು, ಕೊಡಲಿ, ಮಚ್ಚು, ಸುತ್ತಿಗೆ ಮುಂತಾದ ಸಾಧನಗಳು. ಪೈರು ನಾಟಿ ಮಾಡಿ ಪದಾರ್ಥಗಳನ್ನು ಬೆಳೆಸುವುದಕ್ಕೆ ನೀರಾವರಿ ಅತ್ಯಗತ್ಯ. ಇದಕ್ಕೆ ಹಲವಾರು ವಿಧವಾದ ಸಾಧನಗಳನ್ನು ಉಪಯೋಗಿಸಲಾಗುತ್ತದೆ.

೧. ಎತ್ತಿನ ಗಾಡಿ

೨. ಏತ

೩. ಮೋಟಾರ್ ಪಂಪ್‌ಸೆಟ್‌ಗಳು

ಇವುಗಳನ್ನು ಮರ, ಕಬ್ಬಿಣ, ಚರ್ಮಗಳಿಂದ ಮಾಡಿ ಬಳಸಲಾಗುತ್ತದೆ.

ಎತ್ತಿನಗಾಡಿ; ಭೂಮಿಯನ್ನು ಹದಗೊಳಿಸುವ ವಸ್ತುಗಳನ್ನು ರವಾನಿಸಲು, ಕೃಷಿ ಉತ್ಪನ್ನಗಳನ್ನು ಒಂದೆಡೆಯಿಂದ ಮತ್ತೊಂದೆಡೆಗ ರವಾನಿಸಲು ಎತ್ತಿನಗಾಡಿ ಉಪಯೋಗವಾಗುತ್ತದೆ. ಇದು ಹಲವಾರು ಮೂಲ ವಸ್ತುಗಳಿಂದ ರೂಪಿತವಾಗುತ್ತದೆ.

೧) ನೊಗ, ೨) ನೊಗದ ಕೋಲು, ೩) ಫೋಲ್ ಮರ ೪) ಗಾಡಿಯ ಅಚ್ಚಿನ ಮರ ೫) ಕಬ್ಬಿಮದ ತಂಭ ೬) ನೇಮಿ ೭) ಪಟ್ಟಿ ೮) ಕಡೆಗೀಲು ೯) ಕುದುರೆಮರ ೧೦) ಬಂಡಿಯ ಕಾಲು ಮುಂತಾದುವು.

ಏತದ ಭಾಗಗಳು : ಕೃಷಿಯಲ್ಲಿ ಬಾವಿಯ ನೀರು ಮಹತ್ತ ಪಾತ್ರವಹಿಸುತ್ತದೆ. ಬಾವಿಯಿಂದ ನೀರನ್ನು ಮೇಲೆತ್ತಲು ಏತವನ್ನು ಉಪಯೋಗಿಸಲಾಗುತ್ತದೆ. ಅವುಗಳಿಗೆ ಬೇಕಾದ ವಸ್ತುಗಳೆಂದರೆ ೧) ದೊಡ್ಡಕಲ್ಲುಗಳು ೨) ಚಪ್ಪಟೆಯಾಕಾರದ ಕಲ್ಲುಗಳು ೩) ಹಲಗೆಗಳು ೪) ಏತದ ಬಂಡಿ, ೫) ಮರಗಳು ೬) ಚಕ್ರ ಮುಂತಾದವು.

ನೊಗ, ನೊಗದ ಕಡ್ಡಿ, ದೊಡ್ಡದಾರ, ಕಡಾಯಿ, ದೊಡ್ಡದಾದ ಚರ್ಮಧ ತೊಗಟೆ ಮುಂತಾದುವು ಹಾಗೂ ಎತ್ತುಗಳು ಬೇಕೇ ಬೇಕು. ಇವು ಏತದ ನೀರಾವರಿಗೆ ಉಪಯೋಗಿಸುವಂಥ ಸಾಧನಗಳು. ಅವುಗಳನ್ನು ದೃಢತೆಗನುಗುಣವಾಗಿ, ಆಕಾರಕ್ಕೆ ತಕ್ಕಂತೆ ಗಟ್ಟಿಯಾದ ಬೇರೆಬೇರೆ ಮರಗಳಿಂದ ತಯಾರಿಸಲಾಗುತ್ತದೆ.

ಎತ್ತಿನಗಾಡಿ ಮಾಡುವುದಕ್ಕೆ ಉಪಯೋಗಿಸುವ ಮರಗಳು :

೧. ಚಕ್ರ – ತೇಗದ ಮರ

೨. ನೇಮಿ – ವೈಮರ

೩. ಚಕ್ರದ ಕಡ್ಡಿಗಳು – ಬಾಗೆಮರ

೪. ಪಟ್ಟಿಗಲು – ಗೊಬ್ಬಳಿ, ಬಾಗೆ ಮರ

೫. ಗಾಡಿಯ ಅಚ್ಚಿನ ಮರ – ಬಾಗೆ, ಗೊಬ್ಬಳಿ, ನೆಲ್ಲಿಯಮರ

೬. ಫೋಲ್ ಮರ – ತೇಗ, ನೆಲ್ಲಿ

೭. ಕುದುರೆ – ಗೊಬ್ಬಳಿ, ಬಾಗೆ

೮. ನಗ – ಹಡಗಿನ ಕೂವೆಮರ, ಅತ್ತಿಮರ

೯. ನೊಗದ ಕಡ್ಡಿ – ಗೊಬ್ಬಳಿ

ಮುಂತಾದ ಮೂಲವಸ್ತುಗಳಿಂದ ಎತ್ತಿನ ಗಾಡಿಯನ್ನು ತಯಾರಿಸಿ ಉಪಯೋಗಿಸಲಾಗುತ್ತದೆ.

ನೀರು ಎತ್ತುವ ಏತ ತಯಾರಿಸಲು ಬೇಕಾಗುವ ಮೂಲವಸ್ತುಗಳು :

೧. ಕಡಾಯ – ಕಬ್ಬಿಣದ ತಗಡು

೨. ಒತ್ತುಕಲ್ಲು – ಕಲ್ಲು

೩. ಆಧಾರಕಂಬ – ತೇಗ, ಗೊಬ್ಬಳಿ ಮರ

೪. ಮೇಲಿನ ಚಕ್ರ – ಗೊಬ್ಬಳಿ

೫. ಉದ್ದದ ಮರಗಳು – ತೇಗ, ಗೊಬ್ಬಳಿ ಮರ

೬. ಕೆಳಗಿನ ಚಕ್ರ – ಗೊಬ್ಬಳಿ

೬. ಏತದ ಬಂಡಿ – ಬಾಗೆಮರ

೮. ಬಿಲ್ಲೆ – ಬಾಗೆಮರ

೯. ದೊಡ್ಡ ಚರ್ಮಧ ತೊಗಟೆ – ಹಸುವಿನ ಚರ್ಮ

ಇವುಗಳ ಸಹಾಯದಿಂದ ಏತದ ನೀರಾವರಿ ನಡೆಯುತ್ತದೆ.

ಆಧುನಿಕ ಕೃಷಿಯೋಗ್ಯ ಸಾಧನಗಳು : ಆಧುನಿಕತೆ ಬೆಳೆದಂತೆಲ್ಲಾ ವಿಜ್ಞಾನದ ಅಭಿವೃದ್ಧಿಯಿಂದಲೂ ಕೃಷಿಯೋಗ್ಯ ಸಾಧನಗಳನ್ನು ಆಧುನೀಕರಣಗೊಳಿಸಿ ಯಂತ್ರಗಳ ಸಹಾಯದಿಂದಲೂ ಕೃಷಿಕೆಲಸಗಳನ್ನು ಮಾಡಲಾಗುತ್ತದೆ. ಭೂಮಿ ಉಳುವುದಕ್ಕೆ ಟ್ರ್ಯಾಕ್ಟರ್ ಯಂತ್ರವನ್ನು ಉಪಯೋಗಿಸಲಾಗುತ್ತದೆ. ಅದೇ ರೀತಿ ಟಿಲ್ಲರ್, ಡೆಸ್ಕ್ (Desk) ನೇಗಿಲುಗಳೆಂದು ವರ್ಗೀಕರಿಸಿಕೊಂಡು ಕೃಷಿ ಕೆಲಸಗಳನ್ನು ಮಾಡಲಾಗುತ್ತದೆ. ತಮಿಳುನಾಡಿನಲ್ಲಿ ಗುಳು ಇರುವ ನೇಗಿಲಿನ ಉಳುವಿಕೆ, ಚಪ್ಪಡಿ ನೇಗಿಲಿನ ಉಳುವಿಕೆ ಎಂಬ ಹೆಸರುಗಳಲ್ಲಿ ಕರೆಯಲಾಗುತ್ತದೆ. ಅದೇ ರೀತಿ ಕಳೆ ತೆಗೆಯಲು, ಕೊಯ್ಲು ಮಾಡಲು ಯಂತ್ರಗಳನ್ನೇ ಬಳಸಲಾಗುತ್ತದೆ. ಬಾವಿ ನೀರಾವರಿಗೆ ಮೋಟಾರ್ ಪಂಪು ಸೆಟ್‌ಗಳನ್ನು ಅಳವಡಿಸಿಕೊಳ್ಳಲಾಗುತ್ತದೆ.

ನದಿ ತೀರದಲ್ಲಿ ನಾಗರಿಕತೆ ಉಗಮಗೊಂಡಿತು ಎನ್ನುತ್ತಾರೆ. ನಾಗರಿಕತೆ ಉಗಮಗೊಂಡಂದಿನಿಂದ ಮನುಷ್ಯನು ಕೃಷಿ ಕೆಲಸದ ಮೂಲಕ ಒಂದೆಡೆ ತಂಗಿದ್ದು ಆಹಾರ ಪದಾರ್ಥಗಳನ್ನು ಉತ್ಪತ್ತಿ ಮಾಡಿ ಉಂಡು ಜೀವಿಸುತ್ತಿದ್ದನು. ಉಳಿದುದನ್ನು ಇತರರಿಗೆ ಕೊಟ್ಟು ಬೇಕಾದದ್ದನ್ನು ಪಡೆದು ಪದಾರ್ಥಗಳ ವಿನಿಮಯ ಮಾಡಿಕೊಂಡನು. ಇದೇ ಕಾಲಕ್ರಮೇಣ ವಾಣಿಜ್ಯ ಉದ್ದೇಶದೊಂದಿಗೆ ಕಾರ್ಯಗತಗೊಳ್ಳಲಾರಂಭಿಸಿತು ಎಂದು ಇತಿಹಾಸದ ಅರಿಯಬಹುದಾಗಿದೆ. ಹೀಗಾಗಿ ಆಹಾರ ಪದಾರ್ಥಗಳನ್ನು ಉತ್ಪತ್ತಿಮಾಡಿ ಉಂಡು ಜೀವಿಸುವುದಕ್ಕೂ ವಾಣಿಜ್ಯ ಉದ್ದೇಶದೊಂದಿಗೆ ಕೃಷಿ ವಸ್ತುಗಳನ್ನು ಉತ್ಪತ್ತಿ ಮಾಡಿ ಆರ್ಥಿಕ ಸ್ಥಿತಿಯನ್ನು ವೃದ್ಧಿಗೊಳಿಸುವುದಕ್ಕೂ ಕೃಷಿ ಯೋಗ್ಯ ಸಾಧನಗಳೇ ಬಹಳ ಮುಖ್ಯ ಕಾರಣವಾಗಿವೆ ಎಂಬುದನ್ನು ಅರಿಯಲು ಸಾಧ್ಯವಾಗುತ್ತದೆ.

– ಕೆ.ಆರ್.ಡಿ. ಅನುವಾದ ಎಂ.ಆರ್.