ತಮಿಳುನಾಡಿನಗೃಹೋಪಕರಣಗಳುಜನಪದ ಕಲಾವಸ್ತುಗಳ ತೌರೂರೇ ಗ್ರಾಮಗಳು. ಗ್ರಾಮೀಣ ಜನರ ದಿನನಿತ್ಯದ ಅಗತ್ಯವಾದ ಗೃಹ ಉಪಯೋಗಿ ವಸ್ತುಗಳನ್ನು ತಮ್ಮ ಅರಿವಿನ ಸೂಕ್ಷ್ಮತೆಯಿಂದ ಕಲಾಸಾವ್‌ರ್ಯವನ್ನು ಉಪಯೋಗಿಸಿ ತಮಗೆ ದೊರಕಿದ ಕಲ್ಲು, ಮಣ್ಣು, ಮರ, ನಾರು, ಕಬ್ಬಿಣ, ತಾಮ್ರ, ತವರ, ಅಲ್ಯುಮಿನಿಂಯ ಮುಂತಾದ ಮೂಲವಸ್ತುಗಳಿಂದ ಪರಂಪರಾಗತವಾಗಿ ಹಲವಾರು ಉಪಯೋಗವಸ್ತುಗಳನ್ನು ತಯಾರಿಸಿ ಉಪಯೋಗಿಸುತ್ತಾ ಬರುತ್ತಿದ್ದಾರೆ. ಕೆಲವು ವಸ್ತುಗಳ ಕೆಲಸಗಳು ಜಗತ್ತೇ ಚಕಿತಗೊಳ್ಳುವ ಪ್ರಮಾಣಕ್ಕೆ ಬಹಳ ಸೂಕ್ಷ್ಮವಾಗಿಯೂ ಕಲಾತ್ಮಕವಾಗಿಯೂ ನಿರ್ಮಾಣಗೊಂಡಿರುವುದನ್ನು ಕಾಣಬಹುದಾಗಿದೆ.

ಮಾನವ ಕುಲವು ರೂಪಗೊಂಡ ಕಾಲದಿದಲೇ ಪ್ರಕೃತಿದತ್ತವಾಗಿ ದೊರಕಿದ ವಸ್ತುಗಳ ಸಹಾಯದಿಂದ ಅಗತ್ಯಕ್ಕನುಗುಣವಾಗಿ ರಚಿಸಿ ಉಪಯೋಗಿಸಿದ್ದಾರೆ ಎಂಬುದನ್ನು ಇತಿಹಾಸತಜ್ಞರೂ ಪ್ರಾಚೀನ ಸಂಶೋಧಕರೂ ಹೇಳುತ್ತಿದ್ದಾರೆ. ಮನುಷ್ಯರು ಅಲಮಾರಿ ಜೀವನದಲ್ಲಿ ಸೊಪ್ಪುಗಳನ್ನೂ ಮರಕಡ್ಡಿಗಳನ್ನೂ ಕಲ್ಲುಗಳನ್ನೂ ಉಪಯೋಗಿಸಿ ಕಾಯಿ, ಹಣ್ಣು, ಗಡ್ಡೆಗೆಣಸುಗಳನ್ನು ಉಂಡು, ಕಾಡು ಪ್ರಾಣಿಗಳನ್ನು ಬೇಟೆಯಾಡಿ ಜೀವಿಸಿದ್ದರೆಂಬುದನ್ನು ಇತಿಹಾಸಗಳ ಮೂಲಕ ಅರಿಯಲು ಸಾಧ್ಯವಾಗುತ್ತದೆ. ಕಾಡಿಗೆ ಕೆಲಸಕ್ಕೆ ಹೋಗುವವರು ನೀರನ್ನು ಕುಡಿಯಲು, ಆಹಾರ ಉಣ್ಣಲು, ಸಿಹಿಮದ್ಯ, ಕಳ್ಳು ಮುಂತಾದ ಪಾನೀಯಗಳನ್ನು ಕುಡಿಯುವುದಕ್ಕೆ ಬಾಳೆ ಎಲೆ, ಈಚಲುಗರಿಗಳನ್ನು ಹದಗೊಳಿಸಿ ಉಪಯೋಗಿಸುತ್ತಿದ್ದ. ಅದನ್ನು ಇಂದೂ ಕಾಣಬಹುದಾಗಿದೆ. ಅದೇ ರೀತಿ ವ್ಯವಸಾಯದ ಮೂಲಕ ದೊರೆಯುವಂಥ ಧಾನ್ಯಗಳನ್ನು ರುಚಿಗೊಳಿಸಿ, ಸಂರಕ್ಷಿಸಿ ಅಡುಗೆಮಾಡಿ ಉಣ್ಣುವುದಕ್ಕೂ, ಕಟ್ಟುವಿಕೆ, ಬೀಸುವಿಕೆ, ರುಬ್ಬುವಿಕೆ, ಶುದ್ಧಗೊಳಿಸುವಿಕೆ ಮುಂತಾದ ಕೆಲಸಗಳನ್ನು ಮಾಡುವುದಕ್ಕೂ ಹಿಂದೆ ಕಾಲದಲಿ (ಪ್ರಾಚೀನ ಕಾಲಘಟ್ಟದಲ್ಲಿ) ಸಾಧನಗಳನ್ನು ತಯಾರಿಸಿ ಉಪಯೋಗಿಸಿದ್ದಾರೆ.

ಕಲ್ಲಿನ ಸಾಧನಗಳು: ಮನುಷ್ಯನು ಮೊದಮೊದಲು ಕಲ್ಲಿನಿಂದಲೇ ವಸ್ತುಗಳನ್ನು ಮಾಡಲಾರಂಭಿಸಿದನು. ಇದನ್ನು ಸಂಶೋಧಕರು ಶಿಲಾಯುಗ ಎನ್ನುತ್ತಾರೆ. ಇದು ಮನುಷ್ಯನಿಗೆ ಸರಿಯಾಗಿ ಬುದ್ಧಿ ಬೆಳವಣಿಗೆಯಿಲ್ಲದ ಕಾಲಘಟ್ಟಕ್ಕೆ ಸೇರಿದ್ದೇ ಶಿಲಾಯುಗ ನಾಗರಿಕತೆ ಎಂದು ಬಹುಪಾಲು ಚಿಂತಕರು ಅಭಿಪ್ರಾಯಪಡುತ್ತಾರೆ. ಆದರೂ ಕೂಡ ಒರಳುಕಲ್ಲು, ಅರೆಯುವ ಕಲ್ಲು, ರುಬ್ಬುವಿಕೆ, ರಾಗಿಕಲ್ಲು, ಗಾಣ ಮುಂತಾದುವು ಶಿಲಾಯುಗ ನಾಗರಿಕತೆಯ ಗುರುತುಗಳು ಇಂದಿಗೂ ನಮ್ಮ ಬಳಿ ಜೀವಂತವಾಗಿಯೇ ಇವೆ. ಅದು ಮಾತ್ರವಲ್ಲದೆ ನಾಗರಿಕತೆ ಬೆಳವಣಿಗೆ ಹೊಂದಿಯೂ, ಕಂಪ್ಯೂಟರ್ ಯುಗದ ಅನಂತರವೂ, ಹಿಟ್ಟು ರುಬ್ಬುವ ಯಂತ್ರವಾದ ಗ್ರೈಂಡರ್ನಲ್ಲಿಯೂ ತಳಭಾಗದಲ್ಲಿಯೂ ಮೇಲೆ ಅರೆಯುವುದರಲ್ಲಿಯೂ ಕಲ್ಲುಗಳನ್ನೇ ಹೊಂದಿಸಿರುವುದನ್ನು ಕಾಣಬಹುದಾಗಿದೆ.

ಮಣ್ಣಿನ ವಸ್ತಗಳು: ದಕ್ಷಿಣ ತಮಿಳುನಾಡಿನ ಕೆಲವು ಸಂಶೋಧನೆಗಳಲ್ಲಿ ಅದಿಚ್ಚನಲ್ಲೂರ್, ಮಾಂಗುಡಿ, ಕಳುಗುಮಲೈ, ಶಂಕರನ್ ಕೋವಿಲ್‌ನ ಪಾಟ್ಟಂಕುಳಮ್, ಕೊಲ್ಲಕೊಂಡಾನ್ ಮುಂತಾದ ಭಾಗಗಳಲ್ಲಿ ದೊರಕಿದ ಸತ್ತವರ ಶರೀರಗಳನ್ನು ಇಡುವ ಮಣ್ಣಿನ ದೊಡ್ಡ ದೊಡ್ಡ ಪಾತ್ರೆಗಳೂ, ಇನ್ನಿತರ ಮಣ್ಣಿನ ಪಾತ್ರೆಗಳೂ ಇದರ ಪ್ರಾಚೀನತೆಗೆ ನಿದರ್ಶನವಾಗಿವೆ. ಅದು ಮಾತ್ರವಲ್ಲದೆ ಕಾರ್ತಿಕ ದೀಪವನ್ನು ಬೆಳಗಿಸಲು ಇಂದಿಗೂ ಮಣ್ಣಿನ ದೀಪವನ್ನು ಬಳಸುವುದುಂಟು.

ತೆನಾಲಿರಾಮನ ಕತೆಗಳಲ್ಲಿ, ಶ್ರೀಮಂತನ ಮನೆಯ ಮದುವೆ ನಡೆಯುತ್ತದೆ. ಅದರಲ್ಲಿ ಆನೆ ಮೆರೆವಣಿಗೆಯಲ್ಲಿ ದಿಢೀರನೆ ಸಾಯುತ್ತದೆ. ಶ್ರೀಮಂತ ಮನೆಗೆ ಹೋಗಿ ಬಾಗಿಲನ್ನು ಹಾಕಿಕೊಂಡು ಮಡಕೆಗಳನ್ನು ಜೋಡಿಸಿಡುತ್ತಾನೆ. ಆನೆ ಸತ್ತ ವಿಷಯವು ಮಾವುತನಿಗೆ ತಲುಪುತ್ತದೆ ಮಾವುತ ಶ್ರೀಮಂತನನ್ನು ಹುಡುಕಿಕೊಂಡು ಬರುತ್ತಾನೆ. ಬಾಗಿಲು ಹಾಕಿರುವುದನ್ನು ನೋಡಿದ ಅವನು ತಳ್ಳುತ್ತಾನೆ. ಆಗ ಮಡಕೆಗಳು ಸಂಪೂರ್ಣವಾಗಿ ಬಿದ್ದು ಚೂರು ಚೂರಾಗುತ್ತವೆ. ತಕ್ಷಣ ಇಬ್ಬರೂ ನ್ಯಾಯಾಧೀಶರ ಬಳಿ ಹೋಗುತ್ತಾರೆ. ಆನೆಗೂ ಮಡಕೆಗೂ ಸರಿಸಮನಾಯಿತು ಎಂದು ತೀರ್ಪು ನೀಡಲಾಯಿತು. ಅದರಂತೆ “ಆನೆಯಿದ್ದರೂ ಸಾವಿರ ಹೊನ್ನು ಸತ್ತರೂ ಸಾವಿರ ಹೊನ್ನು” ಅಷ್ಟೊಂದು ಬೆಲೆಯುಳ್ಳದ್ದು ಆನೆ ಎನ್ನುವರು. ಆದರೆ ಈ ಕಥೆಯಲ್ಲಿ ಮಡಕೆಯ ದರ ಅಥವಾ ಮೌಲ್ಯವನ್ನು ಸಾವಿರ ಹೊನ್ನಿಗೆ ಸಮನಾಗಿ ಪರಿಗಣಿತವಾಗಿರುವುದನ್ನು ಕಾಣಬಹುದಾಗಿದೆ. ವಿಜ್ಞಾನ ಸರಿಯಾಗಿ ಬೆಳವಣಿಗೆ ಹೊಂದಿರದ ಕಾಲಘಟ್ಟದಲ್ಲಿ ಮಣ್ಣಿನ ಸಾಧನಗಳು ಬೆಲೆಯುಳ್ಳದ್ದಾಗಿದ್ದುವು. ಈ ಮಣ್ಣಿನ ಸಾಧನಗಳೂ ಕಪ್ಪುಮಣ್ಣು, ಕೆಮ್ಮಣ್ಣು, ಮಡ್ಡಿ ಮುಂತಾದವುಗಳಿಂದ ಮಾಡಿದ್ದು ದಕ್ಷಿಣ ತಮಿಳುನಾಡಿನಲ್ಲಿ ದೊರೆಯುತ್ತವೆ. ಈ ಮಣ್ಣುಗಳಿಂದ ಜೋಡಿಕೆಯ ಮಡಕೆ, ಆಹಾರ ತಯಾರಿಸುವ ಮಡಕೆ, ಉಪ್ಪು ಸಂಗ್ರಹಿಸಿಡುವ  ಮಡಕೆ ಮುಂತಾದುವುಗಳನ್ನು ತಯಾರಿಸಲಾಗುತ್ತಿತ್ತು. ಅವುಗಳನ್ನು ಆಯಾ ಉಪಯೋಗದ ಹೆಸರುಗಳಿನುಗುಣವಾಗಿ ಕರೆಯಲಾಯಿತು. ಸಾಂಬಾರ ಪಾತ್ರೆ, ಮುಚ್ಚಳ, ಲೋಟ, ದೀಪ, ಬಾನಿ, ಒಲೆ ಮುಂತಾದವುಗಳನ್ನು ಮಾಡಿಕೊಳ್ಳುತ್ತಿದ್ದರು. ದವಸಧಾನ್ಯಗಳನ್ನು ಸಂಗ್ರಹಿಸಿಡಲು, ಎಣ್ಣೆಗಳನ್ನು ಸಂರಕ್ಷಿಸಿಡಲು, ಆಹಾರ ಪದಾರ್ಥಗಳನ್ನು ಪಕ್ವಗೊಳಿಸಿ ಅಡುಗೆ ಮಾಡಲಿಕ್ಕೆ ನಿತ್ಯ ಗೃಹೋಪಯೋಗಿ ವಸ್ತಗಳಾಗಿ ಉಪಯೋಗಿಸುತ್ತಾರೆ.

ಮರದ ವಸ್ತುಗಳು : ಮರಗಳಿಂದ ದೊರೆಯುವಂಥ ಮೂಲವಸ್ತುಗಳಿಂದ ಸೌಟು, ಮಂಜನಪೆಟ್ಟಿಗೆ, ಸಟ್ಟುಗ, ಕವೆಕೋಲು, ಕಡೆಕೋಲು, ತೂಗು ಹಲಗೆ, ಊಟದ ಮೇಜು ಮುಂತಾದುವುಗಳನ್ನೂ ಮನೆ ಕಟ್ಟುವುದಕ್ಕೆ ಅಗತ್ಯವಾದ ನೆಲೆಮರ, ಬಾಗಿಲು, ಕಿಟಕಿ, ಸ್ತಂಭ, ಕುರ್ಚಿ, ಮಂಚ, ಬೀರು, ಮೂರುಕಾಲಿನ ಕುರ್ಚಿ, ಮರದ ಪೆಟ್ಟಿಗೆ, ಏಣಿ ಮುಂತಾದ ವಸ್ತುಗಳನ್ನು ಪ್ರಸ್ತುತ ವಿಜ್ಞಾನ, ಕಂಪ್ಯೂಟರ್ ಯುಗದಲ್ಲಿಯೂ ಆಧುನಿಕ ಸಾಧನಗಳಿಂದ ಹಲವಾರು ಆಕಾರಕ್ಕೆ ಸುಂದರಗೊಳಿಸಿ, ಅಲಂಕರಿಸಿ, ಬಣ್ಣಗಳನ್ನು ಬಳಿದು ಉಪಯೋಗಿಸುವುದನ್ನು ಕಾಣಬಹುದಾಗಿದೆ. ರಾಜರ ಆಳ್ವಿಕೆಯಲ್ಲಿ ಕಟ್ಟಿಸಿರುವ ಅರಮನೆಗಳಲ್ಲೂ ಕಾಣಬಹುದಾಗಿದೆ. ಕೆಳವರ್ಗದವರಿಂದ ಮೇಲ್ವರ್ಗದವರವರೆಗೂ ಆಲಂಕಾರಿಕ ವಸ್ತುಗಳಾಗಿಯೂ ದಿನಿತ್ಯದ ಉಪಯೋಗ ವಸ್ತುಗಳಾಗಿಯೂ ತಯಾರಿಸಿ ಉಪಯೋಗಿಸುವುದನ್ನು ಕಾಣಬಹುದಾಗಿದೆ. ಅದೇ ರೀತಿ ಪನೆಮರದಲ್ಲಿ ದೊರೆಯುವಂಥ ಗರಿ, ನಾರುಗಳಿಂದ ಪೆಟ್ಟಿಗೆ, ಗೂಡೆ, ಕಡಾಯಿ, ಕೊಟ್ಟ,. ಮೊರ, ಹಗ್ಗ ಮುಂತಾದವುಗಳನ್ನೂ ಗರಿಯಿಂದ ಚಾಪೆ, ಸಣ್ಣ ಮಕ್ಕಳಿಗೆ ಅಗತ್ಯವಾದ ಅಲಂಕಾರಿಕ ಆಟದ ವಸ್ತುಗಲನ್ನೂ ತಯಾರಿಸಿ ಉಪಯೋಗಿಸುತ್ತಿದ್ದಾರೆ.

ಕಬ್ಬಿಣ, ತಾಮ್ರ, ತವರ, ಕಂಚುಗಳ ಲೋಹದಿಂದ ದಿನನಿತ್ಯ ಬಳಕೆಗೆ ಅಗತ್ಯವಾದ ಅಳತೆಕೋಲು, ಪಡಿ, ಪಾವು, ಬಳ್ಳ, ಸೇರು, ಅರ್ಥಪಾವು, ಅರ್ಧ ಸೇರು ಮುಂತಾದ ಅಳತೆ ಸಾಧನಗಳನ್ನು ತಯಾರಿಸಿ ಎಣ್ಣೆ, ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಇತ್ಯಾದಿ ಪದಾರ್ಥಗಳನ್ನು ಅಳೆಯಲು ಉಪಯೋಗಿಸಲಾಗುತ್ತಿದೆ. ಈ ಲೋಹದಿಂದ, ಪ್ರತಿದಿನ ಆಹಾರ ಪದಾರ್ಥಗಳನ್ನು ಪಕ್ವಗೊಳಿಸಿ ಅಡುಗೆ ಮಾಡುವುದಕ್ಕೂ ಊಟ ಬಡಿಸುವುದಕ್ಕೂ ಉಣ್ಣುವುದಕ್ಕೂ ಮಡಕೆ, ಸೌಟು, ತಟ್ಟೆ, ಬಕೆಟ್, ಬಾನಿ, ಕೊಪ್ಪರಿಗೆ, ಲೋಟ, ಪ್ಲೇಟು, ವಗ್ಗರಣೆ ಸೌಟು, ಬಾಣಲಿ, ತುಪ್ಪದ ತಪ್ಪಲೆ, ಕೊಡ ಮುಂತಾದ ವಸ್ತುಗಳನ್ನು ಅಗತ್ಯಕ್ಕೆ ತಕ್ಕಂತೆಯೂ, ಉಪಯೋಗಕ್ಕೆ ತಕ್ಕಂತೆಯೂ ತಯಾರಿಸಿ ಉಪಯೋಗಿಸುತ್ತಾ ಬರುತ್ತಿದ್ದಾರೆ. ಅದು ಮಾತ್ರವಲ್ಲದೆ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದಾದ ಬದುಕಿನ ಸಂಪ್ರದಾಯಗಳಲ್ಲಿ ವಿವಾಹ ಪ್ರಮುಖವಾದದ್ದು. ವಿವಾಹದ ಸಂದರ್ಭಗಳಲ್ಲಿ ಹೆಣ್ಣಿನ ಮನೆಯವರು ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆ (ವರದಕ್ಷಿಣೆ)ಯಾಗಿ ಕೊಡಬೇಕು. ಹೆಣ್ಣು ಮಕ್ಕಳನ್ನು ‘ಕುಟುಂಬದ ಕುಲಬೆಳಕು’ ಎನ್ನುವರು. ಅದಕ್ಕೆ ತಕ್ಕಂತೆ ಮದುಮಗಳ ಸಹೋದರರು ಕಾಲುದೀಪವನ್ನು ಹೊತ್ತುಕೊಂಡು ಸಹೋದರಿ ಮದುವೆಯಾಗಿ ಸೇರಲಿರುವ ಮನೆಗೆ ಹೋಗಿ ಅಲ್ಲಿಡಬೇಕು. ಈ ಸಂಪ್ರದಾಯ ನಮ್ಮ ಮನೆಯ ಜ್ಯೋತಿಯನ್ನು ನಿಮಮ ಮನೆಯಲ್ಲಿ ಬೆಳಗಿಸುತ್ತೇವೆ’ ಎಂಬುದನ್ನು ಸಂಕೇತವಾಗಿ ಸೂಚಿಸುತ್ತದೆ. ಮಡಕೆಗಳಲ್ಲಿ ಚಕ್ಕುಲಿ, ಕೋಡಬಳೆ, ಅತಿರಸ, ಲಾಡು, ಕಡುಬು ಮುಂತಾದ ತಿಂಡಿತಿನಿಸುಗಳನ್ನು ಹೊತ್ತುಕೊಂಡು ಬಂದು ಕೊಡಬೇಕು. ಇದನ್ನು ಫಲಾಹಾರ ಮಡಕೆ ಎನ್ನುವರು. ಈ ರೀತಿ ಸಂಸ್ಕೃತಿಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ರೀತಿ ಅಗತ್ಯಕ್ಕೆ ತಕ್ಕಂತೆ ಜನತೆ ವಸ್ತುಗಳನ್ನು ಮಾರ್ಪಾಟು ಮಾಡಿಕೊಂಡು ಉಪಯೋಗಿಸುತ್ತಿದ್ದಾರೆ. ಇದನ್ನೇ ಗೃಹೋಪಕರಣಗಳು ಅಥವಾ ದಿನನಿತ್ಯ ಬಳಕೆಯ ವಸ್ತುಗಳೆಂದು ಕರೆಯುತ್ತೇವೆ.

– ಕೆ.ಆರ್.ಡಿ. ಅನುವಾದ ಎಂ.ಆರ್.

ತಮಿಳುನಾಡಿನ ಗ್ರಾಮ ದೇವತೆಗಳು : ಹಳ್ಳಿ ಬದುಕನ್ನು ಜನಪದ ಬದುಕೆಂದು ಹೇಳುವುದುಂಟು. ಹಳ್ಳಿಯ ಜನರ ಬದುಕನ್ನು ತಿಳಿದುಕೊಳ್ಳಬೇಕಾದರೆ ಅಲ್ಲಿರುವ ಜನಪದ ದೈವಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಗ್ರಾಮಗಳಿಗೆ ಜನಪದ ದೇವತೆಗಳೇ ಉಸಿರಿದ್ದಂತೆ. ಅವೆಲ್ಲವೂ ಆ ಊರಿನ ಜನರಿಂದಲೇ ಪ್ರಾರಂಭಿಸಲಾದಂಥವು. ಬದುಕಿನ ಆಶೋತ್ತರಗಳಿಗಾಗಿ, ಸಂಪ್ರದಾಯಗಳಿಗೆ ಕುಂದುಬಾರದಂತೆ ನಡೆಸುವುದಕ್ಕಾಗಿ ಮಾಡಿಕೊಂಡಂಥವು ಈ ಹಳ್ಳಿದೇವತೆಗಳು. ಇವುಗಳನ್ನು ಕಿರಿಯ ದೇವತೆಗಳೆಂದೂ ಹೇಳುವುದುಂಟು. ದೇವತೆಗಳಲ್ಲಿ ಕಿರಿಯವು ಮತ್ತು ಹಿರಿಯವೆಂದು ಕರೆಯುತ್ತಾರೆ.

ಗತಿಸಿಹೋದ ಹಿಂದಿನವರನ್ನು ಗೌರವಿಸಿ ಪೂಜಿಸುವ ಸಂಪ್ರದಾಯವೇ, ಈ ಜನಪದ ದೇವತೆಗಳು. ಹಳೆಯ ತಮಿಳು ಸಾಹಿತ್ಯಕೃತಿಗಳಲ್ಲಿ ವಿಶೇಷವಾಗಿ ‘ತೂಗೈ’ ಕೃತಿಗಳಲ್ಲಿ ಕುರುಂತೊಂಗೈ, ನಡುತ್ತೊಗೈ (ನಟ್ರಿಣೈ), ನೆಡುಂತೊಗೈ (ಅಗನಾನೂಱು), ಪುಱತ್ತೊಗೈ (ಪುಱನಾನೂಱು) ಮುಂತಾದವುಗಳಲ್ಲಿ, ಗತಿಸಿದ ಹಿಂದಿನವರನ್ನು ಹೂತ ಗೋರಿಯ ಜಾಗದಲ್ಲಿ ಕಳಮಾಡುತ್ತಾರೆ. ಸತ್ತವರನ್ನು ಹೂಳುವುದು ಹಳೆಯ ತಮಿಳು ಸಂಪ್ರದಾಯ. ಈ ರೀತಿಯಲ್ಲಿ ಹೂಳಳಾದ ವ್ಯಕ್ತಿಗಳಿಗೆ ದೊಡ್ಡ ದೊಡ್ಡ ಕಲ್ಲುಗಳಿಂದ ಮನೆಗಳನ್ನು ಕಟ್ಟಲಾಗುತ್ತದೆ. ಅನಂತರದ ಕಾಲದಲ್ಲಿ ಅದಕ್ಕೆ ಸೇರಿದಂತೆ ಒಂದು ಆಧಾರಕಲ್ಲನ್ನು ನೆಟ್ಟುಬಿಡಲಾಗುತ್ತದೆ.ಅದರ ಮುಂದಿನ ಕಾಲದಲ್ಲಿ, ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ. ಮುಂದೆ, ಆ ಮೂರ್ತಿಗೆ ಹೆಸರನ್ನು ಹಾಕಿಬಿಡಲಾಗುತ್ತದೆ. ಈಗಲೂ ತಮಿಳುನಾಡಿನಲ್ಲಿ ಕಲವು ಜಾತಿಯ ಜನರು ತೀರಿಕೊಂಡ ವ್ಯಕ್ತಿಗೆ ಮೂರ್ತಿಯನ್ನು ಸ್ಥಾಪಿಸಿ ಹೆಸರನ್ನು ಕೆತ್ತಿ, ಕಲ್ಲನ್ನು ನೆಟ್ಟು ನಡೆದುಕೊಂಡು ಬರುತ್ತಾರೆ. ಹಳೆಯ ತಮಿಳು ಕಾವ್ಯಗಳಲ್ಲಿ ಇವನ್ನು ವೀರಗಲ್ಲು ಸಂಪ್ರದಾಯವೆಂದು ಕರೆಯಲಾಗಿದೆ. ಈ ಹಳೆಯ ಸಂಪ್ರದಾಯ ಮುಂದೆ ದೈವಿಕ ಸಂಪ್ರದಾಯವಾಗಿ ನಡೆದು ಬಂತು. ಇವೇ ಅವರಿಗೆ ದೈವಿಕ ಆಚರಣೆಗಳೆನ್ನಿಸಿತು. ಪ್ರಾಣಇ ಬಲಿಯನ್ನು, ಪೊಂಗಲನ್ನು ಅರ್ಪಿಸಿ ಆಚರಣೆ ನಡೆಸುತ್ತ ಬಂದಿದ್ದಾರೆ. ಈ ಸಂಪ್ರದಾಯವನ್ನು ಹಳ್ಳಿಗಳಲ್ಲಿ ಜನಪದ ದೈವ ಸ್ಥಾನಗಳಲ್ಲಿ ಬಿಡದೆ ನಡೆಸಿಕೊಂಡು ಬರಲಾಗುತ್ತಿದೆ.

ಗ್ರಾಮದೇವತೆಗಳನ್ನು ಆರಾಧಿಸುವ ಕಟ್ಟು ಕಟ್ಟಳೆಗಳಲ್ಲಿ ಜನರ ಬೇಡಿಕೆಗಳೂ ಸೇರಿರುತ್ತವೆ. ಅವರ ಬೇಡಿಕೆಗಳಿಗನುಗುಣವಾಗಿ ಅವುಗಳಲ್ಲಿ ವ್ಯತ್ಯಾಸಗಳೂ ಏರ್ಪಡುತ್ತವೆ. ಮುಖ್ಯವಾದ ಬೇಡಿಕೆಯಾಗಿದ್ದರೆ ಅದು ಸಂಪ್ರದಾಯವೆನಿಸುತ್ತದೆ. ಅದು ಸಂಪ್ರದಾಯವಾದ ಮೇಲೆ ಅದನ್ನೇ ನಡೆಸಿಕೊಂಡು ಬರುತ್ತಾರೆ. ಜನಪದ ದೇವತೆಗಳು ಜನರ ಗೆಳೆಯರಂತೆ ಇರುವಂಥವು. ಹಿಂದಿನದನ್ನು ಮುಂದಿನವರು ಆರಾಧಿಸಿಕೊಂಡು ಬರುತ್ತಿರುವುದರಿಂದ, ತಮ್ಮೊಳಗಿನ ಭಿನ್ನಾಭಿಪ್ರಾಯಗಳೆಲ್ಲವನ್ನೂ ತೀರಿಸಿಕೊಂಡು ಮರೆತುಬಿಡುತ್ತಾರೆ. ಆದುದರಿಂದಲೇ ಪೊಂಗಲ್ ಹಬ್ಬದ ದಿನಗಳಲ್ಲಿ, ಊರ ಉತ್ಸವದ ದಿನಗಳಲ್ಲಿ ಮೊದಲಾಗಿ, ಪರವೂರುಗಳಲ್ಲಿರುವ ಬಂಧು ಬಾಂಧವರನ್ನು ಕರೆದು ಸಂತರ್ಪಣೆ ನಡೆಸುತ್ತಾರೆ. ಭಿನ್ನಾಭಿಪ್ರಾಯಗಳಿರಬಹುದಾದ ತಮ್ಮ ಸ್ವಜಾತಿ ಬಾಂಧವರನ್ನು ಕರೆದುತರುತ್ತಾರೆ. ಆ ರೀತಿ, ಕರೆದಿಲ್ಲವೆಂದಾದರೆ, ಹಗೆತನ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತಲೇ ಇರಬಹುದು, ಅದಕ್ಕಾಗಿಯೇ ಈಆಚರಣೆ ಮಹತ್ವಪೂರ್ಣ ಹಾಗೂ ಉತ್ಸವ ಹಬ್ಬಗಳ ಸಂದರ್ಭಗಳಲ್ಲಿ ತಮ್ಮೊಳಗಿನ ಭಿನ್ನಾಭಿಪ್ರಾಯಗಳ ಕುರಿತಾಗಿ ಚರ್ಚಿಸಲು ಸಾಧ್ಯವಾಗುತ್ತದೆ. ಹೀಗೆಯೇ ಮದುವೆ ಸಂಬಂಧಗಳ ನಿಶ್ಚಿತಾರ್ಥಗಳನ್ನು ಮಾಡುವುದಕ್ಕೂ ಈ ಜಾತ್ರೆ/ಹಬ್ಬವು ಸಹಕಾರಿಯಾಗುತ್ತದೆ. ವಿರುದುನಗರದಲ್ಲಿರುವ ಮಾರಿಯಮ್ಮನ ಜಾತ್ರೆಯಲ್ಲಿ, ಮದುವೆಯಾದ ಹೆಣ್ಣುಮಕ್ಕಳಿಗೆ ವರನನ್ನು ಆರಿಸಿಕೊಳ್ಳುವುದಕ್ಕೆ, ಅಮ್ಮನ ಮೆರೆವಣಿಗೆ ಬರುತ್ತಿರುವಾಗ, ಅವರವರ ಬಳಗಗಳಲ್ಲಿ, ಮನೆಯ ಮುಂಭಾಗಗಳಲ್ಲಿ ಪ್ರತ್ಯೇಕವಾಗಿ ಅಲಂಕರಿಸಿಕೊಂಡಿರುವುದು ಇಂದೂ ನಡೆದು ಬರುತ್ತಿರುವ ವಿಚಾರ. ಸಂಬಂಧಗಳನ್ನು ಸೇರಿಸುವ ವ್ಯಕ್ತಿಗಳು ಈ ಉತ್ಸವದಂದು ಮದುವೆ ಗಂಡುಗಳನ್ನು ನಿಶ್ಚಯಿಸುವುದು. ಸಂಬಂಧಗೊತ್ತು ಮಾಡುವುದು ಇತ್ಯಾದಿ ನಿಶ್ಚಯಗಳನ್ನು ಮಾಡುತ್ತಾರೆ. ಇದು ಆಯಾ ಕುಟುಂಬದ ಹಿರಿಯರ ಸಮ್ಮುಖದದಲ್ಲೇ ನಡೆದು ಬರುತ್ತಿದೆ.

ಈ ಗ್ರಾಮದೇವತೆಗಳ ಕುರಿತಾದ ವ್ರತ – ಆಚರಣೆಗಳು ತಮಿಳುನಾಡಿನಲ್ಲಿ ಮಾತ್ರವೇ ಅಲ್ಲ, ದಕ್ಷಿಣ ಭಾರತದ ಕೇರಳ, ಕರ್ನಾಟಕ, ಆಂಧ್ರಪ್ರದೇಶಗಳಲ್ಲೂಯ ನಡೆದು ಬರುತ್ತಿದೆ. ಆದುದರಿಂದ ಈ ಗ್ರಾಮ್ಯದೇವತೆಗಳನ್ನು ದ್ರಾವಿಡ ದೇವತೆಗಳೆಂದರೇ ಕರೆಯಲಾಗುತ್ತದೆ. ಮೇಲ್‌ಸ್ತರದ ದೇವತೆಗಳು ಸಮಗ್ರ ಹಿಂದೂ ಸಮುದಾಯಕ್ಕೆ ಸೇರಿದಂಥವು. ಸಣ್ಣಪುಟ್ಟ ದೇವತೆಗಳೊಂದಿಗೆ ಮೇಲ್‌ಸ್ತರದವರನ್ನೂ ಸಮಗ್ರ ಹಿಂದೂ ಸಮಾಜದೊಂದಿಗೆ ಸೇರಿಕೊಂಡಿರುವುದಾದರೂ, ಅವೆಂದೂ ಒಟ್ಟಿಗೆ ಸೇರಲಾರದಂಥವು. ಅಂದರೆ ಆಚರಣೆಯಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿಯೇ ನಿಲ್ಲುವಂಥವು. ಗ್ರಾಮ ದೇವತೆಗಳು ಬೇರೆಬೇರೆಯಾಗಿಯೇ ಆರಾಧಿಸಲ್ಪಡುವಂಥವು. ಒಂದರೊಡನೊಂದ ಬೆಸೆಯಲಾರದಂಥವು. ಗಂಡು ದೇವತೆಗಳೂ ಹೆಣ್ಣು ದೇವತೆಗಳೂ ಬೇರೆ ಬೇರೆಯಾಗಿ ದೇವಾಲಯಗಳು ಇರುತ್ತವೆ.

ಒಂದು ಊರಿನಲ್ಲಿರುವ ಗ್ರಾಮದೇವತೆಗೆ ಬೇರೆ ಹಲವೆಡೆಗಳಲ್ಲಿಯೂ ದೇವಾಲಯಗಳಿರುತ್ತವೆ. ಮೊದಲನೆಯದಾಗಿ ಕಟ್ಟಿದ ಗುಡಿಯೇ (ಸ್ಥಳದ) ಮೊದಲ ಗುಡಿಯೆನಿಸಿಕೊಳ್ಳುತ್ತದೆ. ಬೇರೆಡೆಗಳಲ್ಲಿಯವು ಬರಿ ಮಣ್ಣಿನಿಂದ ಕಟ್ಟಲಾದವು (ಹಾಗೂ) ಅಧೀನ ಗುಡಿಗಳೆನಿಸುತ್ತವೆ, ಅಂದರೆ, ಮೂಲದ ಸ್ಥಾನದಿಂದ ಹಳದಿ ಬಟ್ಟೆಯಲ್ಲಿ ಮಣ್ಣನ್ನು ತೆಗೆದುಕೊಂಡು ಬಂದು ಕಟ್ಟಲಾದವು ‘ಪಿಡಿಮಣ್ ಕೋವಿಲು’ ಎನಿಸಿಕೊಳ್ಳುತ್ತದೆ.

ಗ್ರಾಮದೇವತೆಗಳಲ್ಲಿ ಊರದೇವತೆಗಳು, ಜಾತಿಯ ದೇವತೆಗಳು, ಕುಲದೇವತೆಗಳು ‘ಮಾಲೈ’ ದೇವತೆಗಳು, ಸಮಾಧಿ ದೇವತೆಗಳು ಹಾಗೂ ಇತರ ಉಪದೇವತೆಗಳು ಸೇರುತ್ತವೆ. ಊರನ್ನು ಕಾಯುವವು ಊರ ದೇವತೆಗಳು. (ವಿವರಗಳನ್ನು ಆಯಾ ವಿಭಾಗದಲ್ಲಿ ನೋಡಬಹುದು). ಜಾತಿಯ ದೇವತೆಗಳೆಂದರೆ ಆಯಾ ಜಾತಿಗೆ ಸೇರಿದ್ದೆಂದರ್ಥ, ಆ ಜಾತಿಯ ಅಭಿವೃದ್ಧಿಗಾಗಿ ಶ್ರಮಿಸಿದಂಥವರು ತೀರಿಕೊಂಡ ಮೇಲೆ ದೇವತೆಗಳಾಗಿ, ಅಂಥವರು ಆಯಾ ಜಾತಿಯವರಿಂದ ಪೂಜಿಸಿಕೊಳ್ಳುತ್ತಾರೆ. ಉದಾಹರಣೆಗೆ ಅನುಪ್ಪಗೌಂಡರ್ ಜಾತಿಯವರಿಗೆ ಹೊನ್ನಮ್ಮಾಳ್ ಹಾಗೂ ದೊಡ್ಡರಾಮನ್‌ಗಳು ಜಾತಿ ದೇವತೆಗಳು ‘ಕಂಬಳತ್ತು ನಾಯಕ’ರುಗಳಿಗೆ ದೇವಿ ಜಕ್ಕಮ್ಮ, ಕೈಕ್ಕೋಳ್ ಮೊದಲಿಯಾರ್‌ಗಳಿಗೆ ಬಂಡಿಮಲೈಚ್ಚಿಯಮ್ಮ, ನಾಡಾರ್ ಜನರಿಗೆ ಭದ್ರಕಾಳಿಯಮ್ಮ ದೇವತೆಗಳು.

ಕುಲದೇವತೆಗಳಕುರಿತಾದ ವಿವರಗಳನ್ನು ಆ ವಿಭಾಗದಲ್ಲಿ ನೋಡಬಹುದು.

ಮದುವೆಗೆ ಕಾದಿರುವ ಹೆಣ್ಣು ಮಕ್ಕಳಿಗೆ, ಮದುವೆಯಾಗಿರುವ ಹೆಂಗಸರಿಗೆ, ಯೋಗ್ಯ ಜನರಿಗೆ – ಆದಿಯಾಗಿ, ಹೇಳಿಕೊಳ್ಳಲಾಸಾಧ್ಯವಾದ ಕಷ್ಟಗಳು ಬಂದೆರಗಿದಾಗ, ಪೂಕ್ಕೞ (ಹೂಕುಂಡ) ಎನ್ನಲಾಗುವ ಬೆಂಕಿಕೊಂಡದಲ್ಲಿ ಹಾಯ್ದು ಪ್ರಾಣಕಳೆದುಕೊಂಡು ದೇವತೆಗಳಾಗುವ ಹೆಣ್ಣುಮಕ್ಕಳೇ ‘ಮಾಲೈದೈವ’ಗಳು. ತಮಿಳುನಾಡಿನಲ್ಲಿ ಮಾಲೈಯಮ್ಮನೇ, ತೀರ್‌ಪ್ಪಾ.ನ್ದಮ್ಮನ್, ಸೀಲೈಕ್ಕಾರಿಯಮ್ಮನ್, ತೀಪ್ಪಾಂಜಾಯಿ, ತೀಪ್ಪಾಂಜಾಲಿ, ಪಚ್ಚೈಯಮ್ಮನ್ ಎಂಬುದಾಗಿ ಹಲವಾರು ಹೆಸರುಗಳಿಂದ ಪೂಜಿಸಲ್ಪಡುತ್ತವೆ. ಆಂಧ್ರದಲ್ಲಿ, ಬೆಂಕಿಗೆ ಹಾರಿ ಪ್ರಾಣಕಳೆದುಕೊಂಡು ದೈವಗಳಾದುವನ್ನು ‘ಪೇರಂಟಾಲು’ ಎಂಬ ಹೆಸರಿನಿಂದ ಪೂಜಿಸುತ್ತಾರೆ. ಸುಮಂಗಲಿಯರಾಗಿ ಪ್ರಾಣಬಿಟ್ಟವರೇ ಈ ಪೇರಂಟಾಲುಗಳು.

‘ಮಾಲೈದೈವ’ಗಳಿಗೆ ಸಂಬಂಧಿಸಿದಂತೆ ತೂತ್ತುಕುಡಿ ಜಿಲ್ಲೆಯ ನಾಗಲಾಚುತ್ತಿಯ ಸಮೀಪದ ಮೇಲಕ್ಕಲ್ಲೂರಣಿಯಲ್ಲಿರುವ ಮಾಲೈಕೋವಿಲ್‌ನ್ನು ಆಯ್ದುಕೊಳ್ಳಲಾಗಿದೆ. ೩೦೦ ವರ್ಷಗಳ ಹಿಂದೆ ಮೇಲಕ್ಕಲ್ಲೂರಣಿಯಿದ್ದ ಜಾಗ ಕಾಡಾಗಿತ್ತು. ಪಕ್ಕದ ಊರಾದ ‘ಗಂಡನ್‌ಪೆಟ್ಟೆ’ಯಿಂದ ಆಡುಗಲನ್ನು ಮೇಯಿಸುವುದಕ್ಕಾಗಿ ಇಬ್ಬರು ಇಲ್ಲಿಗೆ ಬಂದಿದ್ದರು. ಅವರಿಗೆ ಅವರ ಅಕ್ಕಂದಿರಾದ ವೀರವೈ ಮತ್ತು ಸಿನ್ನುವೈ ಎನ್ನುವ ಇಬ್ಬರು ಮಧ್ಯಾಹ್ನದ ಊಟವನ್ನು ತೆಗೆದುಕೊಂಡು ಬರುತ್ತಾರೆ. ಬರುವ ಹಾದಿಯಲ್ಲಿ ಮೇಲಕ್ಕೆಲ್ಲೂರಣೆಯಲ್ಲಿ ಮಾಲೈಯಮ್ಮನ ಕೋವಿಲು ಇರುವ ಜಾಗದಲ್ಲಿ ಹಾವೊಂದು ಅವರೀರ್ವರ ಕಾಲುಗಳನ್ನು ಸುತ್ತಿಕೊಳ್ಳುತ್ತದೆ. ಏನು ಮಾಡಲೂ ತೋಚದೆ ಅವರಿಬ್ಬರೂ ಅಲ್ಲೇ ನಿಂತುಬಿಡುತ್ತಾರೆ. ಊಟವನ್ನು ತೆಗೆದುಕೊಂಡು ಬರುವವರಿನ್ನೂ ಬಂದಿಲ್ಲ, ವೇಳೆಯಾಯಿತಲ್ಲಾ ಎಂದು, ಅವರ ಸೋದರಮಾವ ಒಂದು ಮರವನ್ನೇರಿ ಸುತ್ತಲೂ ನೋಡುತ್ತಾನೆ. ಇವರಿಬ್ಬರೂ ಅಸಹಾಯಕರಾಗಿ ನಿಂತಿರುವುದನ್ನು ಕಂಡು, ಮರದಿಂದ ಕೆಳಗಿಳಿದು ಆ ಸ್ಥಳಕ್ಕೆ ಓಡೋಡಿ ಬರುತ್ತಾನೆ. ಕಾಲುಗಳನ್ನು ಸುತ್ತಿಕೊಂಡಿರುವ ಹಾವನ್ನು ಕತ್ತಿಯಿಂದ ತುಂಡುತುಂಡಾಗಿ ಕತ್ತರಿಸಿ ಬಿಸಾಕುತ್ತಾನೆ. ಈ ಹೆಣ್ಮಕ್ಕಳಿಬ್ಬರೂ ಸಂತೋಷದಿಂದ ಕುಣಿದಾಡುತ್ತಾರೆ. ಅಷ್ಟರಲ್ಲಿ ತುಂಡಾಗಿ ಬಿದ್ದಿರುವ ಹಾವಿನ ತಲೆ ಥಟ್ಟನೆ ಎಗರಿಬಿದ್ದು, ಮಾವನನ್ನು ಕಚ್ಚಿಬಿಡುತ್ತದೆ. ಮಾವ ಸ್ಥಳದಲ್ಲೇ ಸುತ್ತುಬಿಡುತ್ತಾನೆ. ತೀರಿಕೊಂಡ ಈ ಸೋದರಮಾವನೊಂದಿಗೆ ಇವರ ಮದುವೆ ನಿಶ್ಚಯವಾಗಿರುತ್ತದೆ.ಇನ್ನು, ನಾವು ಬದುಕಿ ಏನು ಪ್ರಯೋಜನವೆಂದುಕೊಂಡು, ಈಗ ಕೋವಿಲು ಇರುವ ಜಾಗದಲ್ಲಿ, ಬೆಂಕಿಯನ್ನು ನಿರ್ಮಿಸಿಕೊಂಡು ಅದರಲ್ಲಿ ಬಿದ್ದು ಪ್ರಾಣವನ್ನು ಕಳೆದು, ದೈವಗಳಾಗಿ ಬಿಡುತ್ತಾರೆ – ಎಂಬುದು ಕತೆ. ಅವರು ಬೆಂಕಿಗೆ ಹಾರಿದ ಜಾಗದಲ್ಲೇ ಕೋವಿಲು ಇದೆ.

ಸತ್ತ ಅನಂತರ, ಅಂಥವರಿಗೆ ಸಮಾಧಿಯನ್ನು ಕಟ್ಟಿ, ಪೂಜಿಸಿಕೊಂಡು ಬರುವುದೇ ಸಮಾಧಿ ದೈವಗಳು. ಇದಕ್ಕೆ ಪೂರಕವಾಗಿ, ತೂತ್ತುಕುಡಿ ಜಿಲ್ಲೆಯಲ್ಲಿರುವ ಕಾಡಲ್‌ಕುಡಿಯ ಕುಪ್ಪುಸಾಮಿ ಸಮಾಧಿ ದೈವವನ್ನು ಉದಾಹರಿಸಬಹುದು. ಕುಪ್ಪುಸಾಮಿ ಎಂಬುವರು ಪಿಳ್ಳೆ ಜಾತಿಗೆ ಸೇರಿದವರು. ಅವರು ಅದೇ ಊರಿನವರು, ಪರವೂರಿಗೆ ಹೋದಾಗ ಅಲ್ಲಿ ಮುಸಲ್ಮನರಾಗಿ ಮತಾಂತರಗೊಂಡರು. ಮತ್ತೆ ಹಿಂತಿರುಗಿ ಬಂದು ಸ್ವಂತ ಊರಾದ ಕಾಡಲ್‌ಕುಡಿಯಲ್ಲಿ ತೀರಿಕೊಂಡರು. ಇಲ್ಲಿ ಅವರಿಗೆ ಒಂದು ಸಮಾಧಿಯನ್ನು ಕ್ಟಟಲಾಗಿದೆ. ಈ ಸಮಾಧಿ ಕೋವಿಲನ್ನು ಈಗ ಹಿಂದುಗಳೂ ಮುಸಲ್ಮಾನರೂ ಆರಾಧಿಸುತ್ತ ಬರುತ್ತಿದ್ದಾರೆ. ಊರಿನ ಜಾತ್ರೆಯ ಸಂದರ್ಭದಲ್ಲಿ ಊರಿನ ಜನರು ಪೂಜೆ ನೈವದ್ಯ ಪ್ರಾಣಿಬಲಿಗಳನ್ನು ಕೊಟ್ಟು ನಡೆದುಕೊಳ್ಳುತ್ತಾರೆ. ಈ ಆಚರಣೆ ಮುಗಿದೊಡನೆ, ಮಧುರೆಯಿಂದ ಮುಸಲ್ಮಾನರು ಬಂದು, ದರ್ಗಾ ರೀತಿಯ ಆಚರಣೆಗಳನ್ನು ನಡೆಸುತ್ತಾರೆ. ಯಾವುದೇ ರೀತಿಯ ಜಾತಿ ಧರ್ಮ ಭೇದ – ಕಿರಿಕಿರಿಗಳಿಲ್ಲದೆ ಇವು ನಡೆದು ಬರುತ್ತಿದೆ. ಹಿಂದೂ ಮುಸ್ಲಿಂ ಏಕತೆಗೆ ಇದೊಂದು ಉತ್ತಮ ಉದಾಹರಣೆ.

ಸಾಮಾನ್ಯವಾಗಿ ಗ್ರಾಮ ದೇವತೆಗಳ ಗುಡಿಗಳಿರುವ ಊರಿನ ಹೆಸರುಗಳೂ ಆಯಾ ದೈವಗಳ ಹೆಸರಿನಿಂದಲೇ ಕೂಡಿರುತ್ತದೆ. ಚೆನ್ನೈಯಲ್ಲಿ ಮುನೀಶ್ವರರ್ ಕೋವಿಲಿರುವ ಜಾಗವೇ ಪಲ್ಲವನ್ ಬೀದಿ. ಅದು ಹಿಂದಿನ ಕಾಲದಲ್ಲಿ ಗವರ್ನರ್ ಬಾಡಿಗಾರ್ಡ್ ಬೀದಿ ಎಂದಾಗಿತ್ತು. ಈಗ ಅಲ್ಲಿರುವ ಮುನೀಶ್ವರರ ಕೋವಿಲು, ಬಾಡಿಗಾರ್ಡ್ ಮುನೀಶ್ವರ ಕೋವಿಲು ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಪದ್ಧತಿ ಎಲ್ಲೆಡೆಗಳಲ್ಲಿ ಚಾಲ್ತಿಯಲ್ಲಿದೆ. ಪೆರಿಯಪಾಳ್ಯದಲ್ಲಿ ಇರುವುದು ಭವಾನಿಯಮ್ಮನ ಕೋವಿಲು. ಭವಾನಿಯಮ್ಮನೆಂಬುದಾಗಿ ಯಾರೂ ಕರೆಯುವುದಿಲ್ಲ, ಪೆರಿಯಪಾಳ್ಯದಮ್ಮ ಎಂದೇ ಕರೆಯುತ್ತಾರೆ. ಇರುಕ್ಕನ್ ಕುಡಿಯಮ್ಮನ್, ಸಮಯಪುರದಮ್ಮ, ಕಣ್ಣಪುರದಮ್ಮ – ಎಂಬುದಾಗಿ ಆಯಾಯ ಊರುಗಳಲ್ಲಿರುವ ಮಾರಿಯಮ್ಮಂದಿರನ್ನು ಕರೆಯಲಾಗುತ್ತದೆ.

ಈ ಗ್ರಾಮೀಣ ದೈವಗಳು ಮೇಲ್ಮಟ್ಟಕ್ಕೆ ಏರಿ, ಸಮಷ್ಟಿಯಲ್ಲಿ ಹಿಂದೂ ದೇವತೆಗಳೇ ಆಗಿಬಿಡುವುದುಂಟು. ಮೇಲ್ ಮರುವತ್ತೂರಿನ ರಾಷ್ಟ್ರೀಯ ದಾರಿಯ ಪಕ್ಕದಲ್ಲಿ ಒಂದು ತೋಪಿನಲ್ಲಿರುವ ಕಾಳಿಯಮ್ಮನ್ ಇಂದು ಮೇಲ್ಮಟ್ಟಕ್ಕೆರಿ ಏರಿ ನಿಂತಿದೆ. ೪೦ – ೫೦ ವರ್ಷಗಳ ಹಿಂದೆ ಅದೊಂದು ಪುಟ್ಟ ಗ್ರಾಮೀಣ ಗುಡಿಯಾಗಿತ್ತು. ಮೇಲ್ ಸ್ತರಕ್ಕೇರುತ್ತಿರುವಂತೆ ಶಿವನೊಡನಿರುವ ಶಕ್ತಿಯಾಗಿ, ಹೆಂಡತಿಯಾಗಿ ಅವತಾರವನ್ನು ತಾಳಿದೆ, ಎಂದರೆ ಪರಾಶಕ್ತಿಯಾಗಿ ಮಾರ್ಪಟ್ಟಿದೆ. ಇಂಥ ಗುಡಿಗಳಲ್ಲಿ ಹೆಂಗಸರೂ ಪೂಜೆಯನ್ನು ನಡೆಸುತ್ತಾರೆ. ಪರಶಕ್ತಿಗೆ ಯಾರು ಬೇಕಾದರೂ ಪೂಜೆಯನ್ನು ಮಾಡಬಹುದು. ಈಗ ಇಲ್ಲೆಲ್ಲಾ ಹೆಂಗಸರೂ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರ ಮೇಲ್‌ವರ್ಗಧ ಕೋವಿಲುಗಳಲ್ಲಿ ಈ ಬಗೆಯ ಪೂಜಾ ಪದ್ಧತಿಯನ್ನು ಕಾಣಲು ಸಾಧ್ಯವಿಲ್ಲ.

ಹಳೆಯ ತಮಿಳು ಸಾಹಿತ್ಯದಲ್ಲಿ ಪ್ರಸ್ತಾವಿಸಲಾಗಿರುವ ಜಾಗಗಳು ಇಂದು ಸುಡುಗಾಡುಗಳಲ್ಲಿ ಹೆಣವನ್ನು ಹೂಳುವ ಜಾಗಗಳು.ಆದರೆ ಇಂದು ಇವನ್ನು ಯಾರೂ ದೇವತೆಗಳನ್ನಾಗಿಸಿಲ್ಲ. ಪ್ರತ್ಯೇಕವಾದ ಜಾಗದಲ್ಲಿ ಹೂತು ಸಮಾಧಿ ಕಟ್ಟಿರುವಂಥವೇ ಸಮಾಧಿ ದೈವಗಳು. ಇವುಗಳು ದಿಬ್ಬದಂತಿರುವ ಜಾನಪದ ಕೋವಿಲುಗಳು. ಸಾಮಾನ್ಯವಾಗಿ ಇಂಥವುಗಳಲ್ಲಿ ಗಂಡಸು ದೈವವಾದರೆ ವೇಲು ಹಾಗೂ ಖಡ್ಗಗಳು ನಡೆಲ್ಪಟ್ಟಿರುತ್ತವೆ. ಹೆಣ್ಣು ದೇವತೆಯಾದರೆ, ಶೂಲವನ್ನು ನೆಡಲಾಗಿರುತ್ತದೆ. ಇವನ್ನು ಬರಡು ನೆಲದಲ್ಲಿ ಪೀಠದ ಮೇಲೆ ಸ್ಥಾಪಿಸುತ್ತಾರೆ.ಬರಬರುತ್ತಾ ಇವುಗಳಲ್ಲಿ ಬದಲಾವಣೆಗಳಾಗಿ, ಮಣ್ಣಿನಿಂದ, ಗಾರೆಯಿಂದ ಕೋವಿಲುಗಳನ್ನು ಕಟ್ಟುತ್ತಾರೆ. ಎಲ್ಲವೂ ಹೂಮೊಗ್ಗಿನ ರೂಪದಲ್ಲಿದ್ದು, ವೇಲು ಶೂಲಗಳಿಂದ ಕಂಗೊಳಿಸುತ್ತವೆ. ಈಗೆಲ್ಲಾ ಮಣ್ಣಿನಿಂದ ಮೂರ್ತಿಗಳನ್ನು ಮಾಡಿಡುತ್ತಾರೆ. ಮಾತ್ರವಲ್ಲ ಕಪ್ಪುಶಿಲೆ, ಸಿಮೆಂಟಿನಿಂದ ಪ್ರತಿಮೆಗಳನ್ನು ಮಾಡುತ್ತಾರೆ. ಅಪಾರ ಸಂಖ್ಯೆಯಲ್ಲಿ ಇಂಥಾ ಕೋವಿಲುಗಲನ್ನು ಕಾಣಬಹುದು. ಈ ಬಗೆಯ ವ್ಯವಸ್ಥೆಗಳಿಲ್ಲದ ಜಾಗಗಳಲ್ಲಿ, ಉತ್ಸವದ ಕಾಲಗಳಲ್ಲಿ ಮಾತ್ರವೇ ಅಲಂಕರಿಸಲ್ಪಟ್ಟ ತಾಮ್ರದ ಕರಗ ಬಿಂದಿಗೆಯಲ್ಲಿ ಅಮ್ಮನನ್ನು ಕೂರಿಸಿಟ್ಟು ಆಚರಿಸಲಾಗುತ್ತದೆ.

ಇಂಥಾ ಕೋವಿಲ್‌ಗಳಲ್ಲಿ ನಡೆಯುವ ಮಹೋತ್ಸವವನ್ನು ಸಾಮಾನ್ಯವಾಗಿ ‘ಪೊಂಗಲ್’ ಹಬ್ಬವೆಂದೂ, ‘ಕೂಡೈ’ ಎಂದೂ, ಜಾತ್ರೆ ಎಂದೂ ಕರೆಯುತ್ತಾರೆ. ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಜರುಗುವ ಈ ‘ಪೊಂಗಲ’ನ್ನು ‘ದೊಡ್ಡಹಬ್ಬ’ (ಮಹೋತ್ಸವ)ವೆಂದೂ ಕರೆಯಲಾಗುತ್ತದೆ. ಪೊಂಗಲ್ ತಿಂಡಿಯನ್ನು ನೈವೇದ್ಯಮಾಡದೆ ಯಾವುದೇ ಪೂಜೆಯಿಲ್ಲ. ‘ತೈ’ ಮಾಸದಲ್ಲಿ ಆಚರಿಸುವ ‘ಕೊಯ್ಲಿನ ಹಬ್ಬ’ದಲ್ಲಿಯ ‘ಪೊಂಗಲು’ ಬೇರೆ, ಇದು ಬೇರೆ. ಅದೇ ರೀತಿ, ಪ್ರಾಣಿ ಬಲಿ ಹಾಗೂ ಕೋಳಿ ಬಲಿ ಸಲ್ಲಿಸುವುದು ಸಂಪ್ರದಾಯ. ಇಂದು ಅವಕ್ಕೆ ಬದಾಗಿ, ಆಡು – ಹುಂಜಗಳನ್ನು ದೇವಾಲಯಕ್ಕೆ ಬಿಟ್ಟುಬಿಡುತ್ತಾರೆ ಅಷ್ಟೆ. ಉತ್ತರದ ಜಿಲ್ಲೆಗಳಲ್ಲಿರುವ ಈ ಗುಡಿಗಳಲ್ಲಿ ಗಡಿಗೆಗಳಲ್ಲಿ ಅನ್ನವನ್ನಿಟ್ಟು ಹರಕೆ ಸಲ್ಲಿಸುತ್ತಾರೆ.

ದೀಪೋತ್ಸವ : ‘ಮುಳೈಪ್ಪಾರಿ’ ತೆಗೆದು ಆಚರಿಸುವುದು, ಸಾವಿರ ಕಣ್ಣುಕೊಡಪಾನವನ್ನು ಹೊರುವುದು, ಅಗ್ನಿ ಕುಂಡಿಕೆಯನ್ನು ಹಿಡಿಯುವುದು, ‘ಕವೞುಕುತ್ತಲ್’ ಮೊದಲಾದ ಆಚರಣೆಗಳಿವೆ. ಇವನ್ನು ದೈವದ ಹರಕೆಯಾಗಿಯೂ ವಿಶೇಷ ಆರಣೆಯಾಗಿಯೂ ಮಾಡುತ್ತಾರೆ. ಇದೇ ರೀತಿಯಲ್ಲಿ ‘ಪೂಕ್ಕುಳಿ ಇರಂಗುದಲ್’ (ಹೂಕುಂಡವಿಳಿಸುವುದು), ಕೆಂಡದ ಮೇಲೆ ನಡೆಯುವುದು, ಕುಂಡಕ್ಕೆ ಇಳಿಯುವುದು – ಇಲ್ಲಿಯ ಪ್ರಮುಖ ಆಚರಣೆಗಳು. ಇವೆಲ್ಲ ಅಮ್ಮನ್ ಕೋವಿಲುಗಳಲ್ಲಿ ಮಾತ್ರವೆ ನಡೆಯುವಂಥವು. ಕರಗವನ್ನೆತ್ತುವುದೂ ಇದೇ ರೀತಿ. ಗಂಡುದೈವವನ್ನು ‘ಅಯ್ಯನಾರ್’ ಎಂದೂ ಹೆಣ್ಣುದೈವವನ್ನು ‘ಅಮ್ಮನಾರ್’ ಎಂದು ನೀಲಗಿರಿಯ ಗುಡ್ಡಗಾಡಿನ ಜನರು ನಂಬುತ್ತಾರೆ. ಇದು ತಮಿಳುನಾಡಿನಾದ್ಯಂತ ಕಂಡುಬರುತ್ತದೆ. ಆದ್ದರಿಂದ, ಅಯ್ಯನಾರ್ ಕೋವಿಲೆಂದರೆ ಗಂಡು ದೈವದ ಕೋವಿಲೆಂದೇ ಅರ್ಥ. ಇದಕ್ಕೆ ಆಯಾಯ ಊರುಗಳಲ್ಲಿ ಬೇರೆ ಬೇರೆ ಹೆಸರುಗಳು ಇರುವುದು ಸಾಮಾನ್ಯ. ಊರಿನಲ್ಲಿರುವ ಗಂಡುದೇವತೆಯ ಕೋವಿಲು – (ಸಾಮಿಕೋವಿಲು) ಅಯ್ಯನಾರ್ ಕೋವಿಲು ಎನಿಸಿಕೊಳ್ಳುತ್ತದೆ. ಜೈನ ಶ್ರವಣರೂ, ಬೌದ್ಧಮತದವರೂ ಅಯ್ಯನಾರ್ ಗುಡಿಗಳನ್ನು ಕಟ್ಟಿಕೊಳ್ಳುವುದಿದೆ. ಇವೆಲ್ಲವೂ ಅಲ್ಲಿಯ ಗಂಡುದೇವತೆಗಳ ಗುಡಿಗಳೇ.

ಹರಕೆ ಸಲ್ಲಿಸುವ ಸಂಪ್ರದಾಯ ಇದೆ. ಪೊಳ್ಳಾಚ್ಚಿಯ ‘ಮಲೈಮಾಸಾನಿಯಮ್ಮ’ನ ಗುಡಿಯಲ್ಲಿ ಮೆಣಸನ್ನು ಅರೆದು ಸಲ್ಲಿಸುವುದೇ ಪ್ರಧಾನ ಹರಕೆ. ಮಾರಿಯಮ್ಮನ ಗುಡಿಗಳಲ್ಲಿ ಅಗ್ನಿಕುಂಡ ಸೇವೆ, ಸಾವಿರ ಕಣ್ಣುಕೊಡಪಾನ ಸೇವೆ, ಹೂಕುಂಡದ ಸೇವೆಗಳು ಮುಖ್ಯವಾದವು. ‘ಪೆರಿಯ ಮಾಳೈತ್ತಮ್ಮ’ನ ಗುಡಿಯಲ್ಲಿ, ಸೀರೆಯನ್ನುಡಿಸುವುದು, ಬೇವಿನೆಲೆಗಳ ಉಡುಗೆ ಮೊದಲಾದ ಸೇವೆಗಳನ್ನು ಹಳೆಯ ತಮಿಳು ಕಾವ್ಯಗಳಲ್ಲಿ ಹೇಳಲಾಗಿವೆ. ಕಬ್ಬಿನ ತೊಟ್ಟಿಲಲ್ಲಿ ಮಗುವನ್ನು ಹಾಕುವುದು, ವ್ಯಕ್ತಿಯನ್ನು ಕುಳಿಯಲ್ಲಿಟ್ಟು ಮಣ್ಣುಮುಚ್ಚಿ ಮತ್ತೆ ತೆಗೆಯುವುದು, ತುಲಾಭಾರ ಸೇವೆ, ದೀಪಗಳನ್ನಿಡುವುದು, ಒಡಲಿಗೆ ಕತ್ತಿಯಿಂದ ಹೊಡೆದುಕೊಳ್ಳುವುದು ಮೊದಲಾದ ಹರಕೆ ಸೇವೆಗಳನ್ನು ಮಾಡಲಾಗುತ್ತದೆ.

ಇಲ್ಲೆಲ್ಲ ಬೀಡಿ, ಚುಟ್ಟಾ, ಮದ್ಯ ಮದು ಮಂಸಗಳನ್ನು ಅರ್ಪಿಸುವ ಪದ್ಧತಿಯಿದೆ. ಊರಿನ ಜನರಿಗೆ ಒಳ್ಲೆಯದನ್ನು ಮಾಡಿದವರು ದೈವಗಳಾದ ಅನಂತರವೂ, ಒಳ್ಳೆಯದನ್ನೇ ಮಾಡುತ್ತಿರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗೆಯೇ, ಕೆಟ್ಟದ್ದನ್ನು ಮಾಡಿದಂಥವರು, ಸತ್ತಮೇಲಾದರೂ ಕೆಟ್ಟದನ್ನು ಮಾಡಬಾರದು ಎಂಬುದಕ್ಕಾಗಿ, ಬೀಡಿ, ಚುಟ್ಟಾ, ಮದ್ಯಮಾಂಸಗಳನ್ನು ಅರ್ಪಿಸಿ, ಪ್ರಾರ್ಥಿಸುತ್ತಾರೆ.

ಸಾಮಾನ್ಯವಾಗಿ ಇಂಥ ಗುಡಿಗಳಲ್ಲಿ ನಿತ್ಯ ಪೂಜೆಗಳಿಲ್ಲ. ವರ್ಷವಿಡೀ ಜಾತ್ರೆ – ಉತ್ಸವಗಳು ನಡೆಯದಿರುವ ಗುಡಿಗಳೂ ಇವೆ. ಆಯಾ ಊರಿನ ಜನರು ಭಿನ್ನಾಭಿಪ್ರಾಯಗಳಿಲ್ಲದೆ ಒಂದಾಗಿ ಸೇರುವ ವರ್ಷಗಳಲ್ಲಿ ಮಾತ್ರಜಾತ್ರೆಯನ್ನು ನಡೆಸುತ್ತಾರೆ. ಇಂಥ ದಿನವೇ ಎಂದು ನಿಗದಿಗೊಳಿಸದೆ, ‘ಆಡಿ’ ಮಾಸದಲ್ಲೋ ‘ಚಿತ್ತಿರೈ’ ಮಾಸದಲ್ಲೋ ಹೆಚ್ಚಾಗಿ ಆಚರಿಸುತ್ತಾರೆ. ಆದರೆ, ಮಂಗಳವಾರ ಹಾಗೂ ಶುಕ್ರವಾರಗಳಲ್ಲೇ ನಡೆಸುವುದು ರೂಢಿ. ಈಗ ಚೆನ್ನೈ ಸಮೀಪದಲ್ಲಿರುವ ಪೆರಿಯಪಾಳ್ಯದ ಭವಾನಿಯಮ್ಮನ ಕೋವಿಲಿನಲ್ಲಿ ಭಾನುವಾರಗಳಲ್ಲಿ ಮಾತ್ರ ನಡೆಸುತ್ತಾರೆ, ಸಾರ್ವಜನಿಕ ರಜಾದಿನವೆಂಬುದೇ ಇದಕ್ಕಿರುವ ಮುಖ್ಯ ಕಾರಣ.

ಹಿಂದೂ ಧರ್ಮದ ದೇವಾಲಯಗಳಲ್ಲೆಲ್ಲಾ ಸಾಮಾನ್ಯವಾಗಿ ಬ್ರಾಹ್ಮಣ ಸಮುದಾಯದವರು ಅರ್ಚಕರಾಗಿರುತ್ತಾರೆ. ಆದರೆ, ಇಂಥಾ ಗ್ರಾಮೀಣ ಗುಡಿಗಳಲ್ಲಿ ಎಲ್ಲಾ ಜಾತಿಯ ಎಲ್ಲಾ ವರ್ಗದವರು ಪೂಜಾರಿಗಳಾಗಿದ್ದಾರೆ. ಜಾತಿ ಭೇದವಿಲ್ಲ. ಹೆಚ್ಚಿನೆಡೆ ವೇಳಾರ್ ಚೆಟ್ಟಿಯಾರ್, ಭಂಡಾರಮ್ ಜನರು ಪೂಜಾರಿಗಳಾಗಿರುವ ಗ್ರಾಮದ ಗುಡಿಗಳಿವೆ. ತೂತ್ತುಕುಡಿ ಜಿಲ್ಲೆ ವೆನ್ರಾಲ್ ಚೋಲೈಸಾಮಿ ಗುಡಿಯಲ್ಲಿ ಸಹಪಂಙ್ತಿ ಭೋಜನವೂ ನಡೆದು ಬರುತ್ತಿದೆ. ಆದಿದ್ರಾವಿಡರು ತಯಾರಿಸಿದ ಅನ್ನ – ಹಂದಿ ಮಾಂಸದಡುಗೆಯನ್ನು ಇತರರೂ ಸೇವಿಸುತ್ತಾರೆ.

– ಟಿ.ಆರ್. ಅನುವಾದ ಎಚ್.ಬಿ.

ತಮಿಳುನಾಡಿನ ಗ್ರಾಮದೇವರು ಒಂದು ಊರಿನಲ್ಲಿ ಎಲ್ಲಾ ಜಾತಿಯವರಿಗೂ ಇರುವ ದೇವರುಗಳನ್ನು ಗ್ರಾಮದೇವರು, ಊರು ದೇವರುಗಳೆಂದೂ ಕರೆಯಲಾಗುತ್ತದೆ. ಮಾನವನು ತನ್ನ ಸುಖ – ದುಃಖಗಳಲ್ಲಿ, ದೇವರು ತನ್ನ ಜೊತೆ ಇರಲಿ ಎಂದು ಬಯಸುತ್ತಾರೆ. ಈ ರೀತಿಯಲ್ಲಿ ಅವನ ಒಳ್ಳೆಯ, ಕೆಟ್ಟ ಸಂದರ್ಭಗಳಲ್ಲಿ ಭಾಗವಹಿಸಲು, ಕಾಪಾಡಲು ಕೆಲವೊದು ದೇವರುಗಳನ್ನು ಪೂಜಿಸುವುದು ಸಹಜ. ಇವನ್ನು ಊರು ಅಥವಾ ಗ್ರಾಮದೇವರುಗಳೆಂದು ಕರೆಯುತ್ತಾರೆ. ಊರನ್ನು ಕಾಪಾಡುವುದೇ ಊರು ದೇವರುಗಳ ಕರ್ತವ್ಯ. ಈ ರೀತಿಯಲ್ಲಿ ಊರನ್ನು ಕಾಪಾಡುವ ದೇವರುಗಳನ್ನು ‘ಊರಿನ ಕಾವಲು ದೇವರು’ ಗಳೆಂದು ಸಹ ಕರೆಯುವುದುಂಟು. ಕಾವಲುದೇವರಿಗೆ ಸಹಾಯಕ ದೇವರುಗಳು ಬೇರೆ ಇರುತ್ತವೆ. ಗ್ರಾಮದೇವರ ಗುಡಿಗಳಲ್ಲಿ ಮುಖ್ಯ ದೇವರು ಒಂದು ಇರುತ್ದದೆ. ಮೊದಲು ಮುಖ್ಯ ದೇವರಿಗೆ ಪೂಜೆಯನ್ನು ನೆರವೇರಿಸುತ್ತಾರೆ. ಹೀಗೆ ಊರಿನಲ್ಲಿರುವ ಎಲ್ಲರಿಂದಲೂ ಪೂಜಿಸಲ್ಪಡುವ ದೇವರುಗಳೇ ಊರು ದೇವರು ಅಥವಾ ಗ್ರಾಮ ದೇವರುಗಳಾಗಿವೆ ಎನ್ನಬಹುದು.

ಒಂದು ನಿಗದಿತ ಜಾತಿಯವರು ಪೂಜಿಸುವ ಜಾತಿ ದೇವರು ಒಂದು ನಿಗದಿತ ಕುಲದವರು ಪೂಜಿಸುವ ಕುಲದೇವರುಗಳು, ಸಮಾಧಿದೇವರು ಇತ್ಯಾದಿ ದೇವರ ಪರಿಕಲ್ಪನೆಗಳು ಊರಿನ ದೇವರಾಗುವುದಿಲ್ಲ. ಊರಿನಲ್ಲಿರುವ ಬೇರೆ ಬೇರೆ ಜಾತಿಯವರು ಒಟ್ಟಾಗಿ ಸೇರಿ ಒಂದು ದೇವರನ್ನು ಸಂರ್ಪೂವಾಗಿ ನಂಬಿ ಪೂಜಿಸಿದರೆ ಅದು ಊರು ದೇವರಾಗುತ್ತದೆ. ಬರಿ ಪೂಜಿಸುವುದು ಮಾತ್ರವಲ್ಲ ಎಲ್ಲ ಜಾತಿಯವರು ಸೇರಿ ಬೆಲ್ಲದ ಅನ್ನದ ನೈವೇದ್ಯವನ್ನು ಮತ್ತು ಕಾಣಿಕೆಯನ್ನು ಅರ್ಪಿಸಬೇಕು. ಈ ರೀತಿಯಲ್ಲಿ ದೇವರನ್ನು ಪೂಜೆ ಮಾಡಿದರೆ ಮಾತ್ರ ‘ಊರು ದೇವರು’ ಎಂಬ ಸ್ಥಾನವನ್ನು ಪಡೆಯಲು ಸಾಧ್ಯ.

ಮಾರಮ್ಮ, ಕಾಳಿಯಮ್ಮ, ಐಯ್ಯನಾರ್, ಮುನೀಶ್ವರನ್, ಭವಾನಿಯಮ್ಮಾಳ್, ಸುಡಲೈಮಾಡನ್, ವೇಟಿಯಪ್ಪನ್ ಮೊದಲಾದ ದೇವರುಗಳು ಗ್ರಾಮದೇವರುಗಳಾಗಿ ಪೂಜಿಸಲ್ಪಡುತ್ತಾರೆ. ಜನರು ಒಂದೊಂದು ದೇವರಿಗೆ ಒಂದೊಂದು ಶಕ್ತಿಯಿದೆ ಎಂದು ಭಾವಿಸುತ್ತಾರೆ. ಆ ಊರಿನಲ್ಲಿ ಭೂಭಾಗ, ನೀರು, ಜನರು, ಹಸು, ಆಡು ಮೊದಲಾದವುಗಳನ್ನೆಲ್ಲ ಕಾಪಾಡುವ ಹೊಣೆ ಆ ದೇವರುಗಳಿಗೆ ಸೇರುತ್ತದೆ. ಆದ್ದರಿಂದ ಆ ಗ್ರಾಮಗಳಲ್ಲಿ ನೆಲೆಗೊಂಡಿರುವ ದೇವರುಗಳ ಅನುಮತಿ ಇಲ್ಲದೆ ಯಾವ ರೀತಿಯ ಕೆಟ್ಟ ಶಕ್ತಿಗಳೂ ಊರಿಗೆ ಪ್ರವೇಶ ಮಾಡುವುದಕ್ಕೆ ಸಾಧ್ಯವಿಲ್ಲ. ಆಚರಣೆಗಳು, ಹರಕೆಯ ಕಾಣಿಕೆಗಳ ಮೂಲಕ ಊರಿನ ದೇವರನ್ನು ಸಂತೋಷಪಡಿಸಬೇಕು. ಇಲ್ಲದಿದ್ದರೆ ಊರಿನಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಊರಿನ ದೇವರುಗಳನ್ನು ಕುರಿತು ಊರಿನ ಜನರು ಈ ರೀತಿಯ ನಂಬಿಕೆಗಳನ್ನು ಹೊಂದಿರುತ್ತಾರೆ. ಈ ದೇವರುಗಳನ್ನು ಹೆಚ್ಚಾಗಿ ಬಡವರು ಮೆಚ್ಚಿ ಪೂಜಿಸುತ್ತಾರೆ.

ಊರಿನ ದೇವರು ಬೇರೆ, ಊರಿನ ಗಡಿಯ ದೇವರು ಬೇರೆ ಊರಿನ ಗಡಿಯನ್ನು ರಕ್ಷಿಸುವ ದೇವರು ‘ಎಲ್ಲೆ ದೇವರು’ ಆಗುವುದು. ಇದಕ್ಕೆ ‘ಎಲ್ಲೆಯಮ್ಮ’ ಎಂದು ಹೆಸರು. ತಮಿಳುನಾಡಿನ ಹಲವು ಭಾಗಗಳಲ್ಲಿ ಮಂದೈಯಮ್ಮ ಎಂದುಕೂಡ ಕರೆಯುತ್ತಾರೆ. ಈ ದೇವರು ಊರಿನ ದೇವರ ಅಧೀನಕ್ಕೆ ಒಳಪಟ್ಟ ದೇವರಾಗಿರುತ್ತದೆ. ‘ಎಲ್ಲೆಯಮ್ಮ’ನಿಗೆ ಪೊಂಗಲ್ ನೈವೇದ್ಯವಿಟ್ಟು ಪೂಜಿಸುವ ನೆಲವನ್ನು ‘ಎಲ್ಲೈಪುಂಜೈ’ ಎಂದೂ ಮೇಲಕಲ್ಲೂರನಿಲ್ ಎಂದೂ ಹೇಳಲಾಗುತ್ತದೆ.

ಪ್ರತಿವರ್ಷವೂ ಪೊಂಗಲ್ ಹಬ್ಬ, ಜಾತ್ರೆ ನಡೆಸುವ ದೇವಾಲಯಗಳಲ್ಲಿರುವ ದೇವರುಗಳನ್ನು ಊರುದೇವರು ಎಂದು ಸಾಮಾನ್ಯವಾಗಿ ಗುರುತಿಸುವುದಿಲ್ಲ. ಅಂತಹ ಊರುಗಳಲ್ಲಿ ಒಂದೆರಡು ಗುಡಿಗಳು ಮಾತ್ರ ಇವೆ. ಅವೆಲ್ಲ ಅವರುಗಳಿಗೆ ಊರು ದೇವರುಗಳೇ ಆಗಿವೆ. ಅಂತಹ ಊರಿನಲ್ಲಿ ಎಲ್ಲರು ಒಂದೇ ಜಾತಿಯವರು ಇರುತ್ತಾರೆ. ಆದ್ದರಿಂದ ಅವರಿಗೆ ಎಲ್ಲವು ಊರ ದೇವರುಗಳು ಆಗುವುವು.

– ಟಿ.ಆರ್. ಅನುವಾದ ಪಿ.ಎಂ