ತೆಲುಗರ ಅಡುಗೆಗಳು ತೆಲುಗರ ಅಡುಗೆ ಸಂಪ್ರದಾಯಗಳು ತುಂಬ ವೈವಿಧ್ಯದಿಂದ ಕೂಡಿರುವಂಥವು. ಆಹಾರ ಪದಾರ್ಥಗಳು, ಅವುಗಳ ತಯಾರಿ, ಅವುಗಳನ್ನು ಹೆಚ್ಚು ಕಾಲ ಉಳಿಸುವ ವಿಧಾನಗಳು, ಅವುಗಳ ಸಾಮಾಜಿಕ ಲಕ್ಷಣಗಳು, ಜನಪದ ಜೀವನದಲ್ಲಿ ಅವುಗಳ ಪಾತ್ರ ಮುಂತಾದವೆಲ್ಲ ಪರಿಶೀಲನೆಗೆ ಅರ್ಹವಾಗಿವೆ. ತೆಲುಗರ ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು ಪರಿಶೀಲಿಸಿದಾಗ ಅವುಗಳ ಇತಿಹಾಸ, ಉಲ್ಲೇಖ ಸಮಕಾಲೀನ ಸಮಾಜದಲ್ಲಿ ಅವುಗಳಿಗಿರುವ ಪಾತ್ರ ಅರ್ಥವಾಗುತ್ತದೆ. ಅಡುಗೆಗಳನ್ನು ತಯಾರು ಮಾಡುವ ಅನೇಕ ಪದ್ಧತಿಗಳು ಆಂಧ್ರದಲ್ಲಿ ಬಳಕೆಯಲ್ಲಿವೆ. ಕತ್ತರಿಸುವುದು, ಬೇಯಿಸುವುದು, ಕರಿಯುವುದು, ಒಣಗಿಸುವುದು, ಉಪ್ಪು ಹಾಕಿ ನೆನಸುವುದು ಮುಂತಾದವೆಲ್ಲ ಬಳಕೆಯಲ್ಲಿವೆ. ಹುಳಿ ಸಾರು ಮುಂತಾದ ಮಿಶ್ರ ಆಹಾರಗಳ ತಯಾರಿಯಲ್ಲಿ ನಿರ್ದಿಷ್ಟ ವಿಧಾನಗಳಿವೆ.

ಆಂಧ್ರದ ಅಡುಗೆಗಳನ್ನು ನೋಡಿದಾಗ ಮತ ಸಂಬಂಧವಾದ ಅಡುಗೆಗಳು ಮತ್ತು ಲೌಕಿಕ ಅಡುಗೆಗಳು ಎಂಬ ಎರಡು ಮುಖ್ಯ ಬಗೆಗಳು ಕಂಡು ಬರುತ್ತವೆ. ಅಡುಗೆ ಮಾಡುವುದು ಮತ್ತು ಊಟ ಬಡಿಸುವುದು ಅನೇಕ ಸಂಪ್ರದಾಯಗಳಿಂದ ಕೂಡಿದ ಕೆಲಸ. ಇದರಲ್ಲಿ ಹಲವು ನಂಬಿಕೆಗಳು ಕೂಡ ಸೇರಿಕೊಂಡಿವೆ. ಊಟದ ವೇಳೆ ಒಂದೇ ಸಾಲಿನಲ್ಲಿ ಏಳು ಜನ ಕುಳಿತುಕೊಳ್ಳಬಾರದೆಂಬ ನಂಬಿಕೆ ಕೆಲವು ಪ್ರದೇಶಗಳಲ್ಲಿದೆ. ಎಲ್ಲರಿಗೂ ಎಲ್ಲ ಪದಾರ್ಥಗಳನ್ನು ಬಡಿಸಿದ ಮೇಲೆ ಊಟ ಮಾಡಬೇಕು. ಅದೇ ರೀತಿ ಎಲ್ಲರೂ ಊಟ ಮಾಡಿ ಆದ ಮೇಲೆ ಏಳಬೇಕು. ಅನೇಕ ಸಂದರ್ಭದಲ್ಲಿ ವಿಶೇಷವಾದ ಅಡುಗೆಗಳನ್ನು ಮಾಡುತ್ತಾರೆ. ಗಣೇಶ ಹಬ್ಬಕ್ಕೆ ಕುಡುಮು, ಉಂಡ್ರಾಳ್ಳು ಮುಂತಾದವನ್ನು ಮಾಡುವುದು ಉಗಾದಿಗೆ ಹೋಳಿಗಲು (ಹೋಳಿಗೆ) ಮಾಡುವುದು ಅಭ್ಯಾಸ. ಸಾಧಾರಣವಾಗಿ ಮದುವೆ ಸಂದರ್ಭದಲ್ಲಿ ಶಾಕಾಹಾರವನ್ನೇ ಬಳಸುತ್ತಾರೆ.

ತೆಲುಗು ಸಾಹಿತ್ಯದಲ್ಲಿ ಹಲವೆಡೆ ಅಡುಗೆಗಳ ಉಲ್ಲೇಖ ಕಂಡು ಬರುತ್ತದೆ. ಶ್ರೀಕಾಳಹಸ್ತೀಶ್ವರ ಮಾಹಾತ್ಮ್ಯ, ಹರವಿಲಾಸ, ಭೀಮೇಶ್ವರ, ಪುರಾಣ, ಕ್ರೀಡಾಭಿರಾಮ, ಕೇಯೂರಬಾಹು ಚರಿತ್ರ, ಆಮುಕ್ತಮಾಲ್ಯದ-ಮುಂತಾದ ಕೃತಿಗಳಲ್ಲಿ ತೆಲುಗರ ಅನೇಕ ಅಡುಗೆಗಳನ್ನು ಪ್ರಸ್ತಾವಿಸಲಾಗಿದೆ.

ತೆಲುಗರ ಅಡುಗೆಗಳನ್ನು ವಿವಿಧ ರೀತಿಯಲ್ಲಿ ವಿಭಜಿಸಬಹುದು. ೧. ಸಸ್ಯಹಾರ, ೨. ಮಾಂಸಾಹಾರ, ೩, ನಂಜಿಕೊಳ್ಳುವ ಪದಾರ್ಥಗಳು, ೪. ಪಾನೀಯಗಳು ಎಂಬುದು ಒಂದು ತರಹದ ವಿಭಜನೆ. ೧. ದ್ರವ ಪದಾರ್ಥಗಳು ೨. ಘನ ಪದಾರ್ಥಗಳು, ೩. ಅರೆ ದ್ರವಗಳು ೪. ಪಚ್ಚಡಿಗಳು, ೫. ಪುಡಿಗಳು ಮುಂತಾದವು ಇನ್ನೊಂದು ರೀತಿಯ ವಿಭಜನೆ. ಸಿಹಿ ತಿಂಡಿಗಳು, ಕಾರದ ತಿಂಡಿಗಳು ಎಂಬುದು ಕೂಡ ಇನ್ನೊಂದು ರೀತಿ ವಿಭಜನೆ. ಪ್ರಾದೇಶಿಕವಾಗಿ ಅನೇಕ ರೀತಿಯ ಅಡುಗೆಗಳಿವೆ. ತೆಲಂಗಾಣದ ಅಡುಗೆಗಳಿಗೂ ತೀರಪ್ರಾಂತ್ಯದ ಅಡುಗೆಗಳಿಗೂ ರಾಯಲಸೀಮೆಯ ಅಡುಗೆಗಳಿಗೂ ವ್ಯತ್ತಾಸವಿದೆ. ಈ ಆಹಾರ ಪದ್ಧತಿ ಮಳೆ, ಭೌಗೋಳಿಕ ಪರಿಸ್ಥಿತಿಗಳು, ನೆಲದ ಗುಣ, ನೀರಿನ ಸೌಕರ್ಯ, ಸಾಮಾಜಿಕ ಮತ್ತು ಆರ್ಥಿಕ ಪ್ರಭಾವಗಳು ಈ ಎಲ್ಲವನ್ನು ಅವಲಂಬಿಸಿರುತ್ತದೆ. ಇದೇ ರೀತಿ ಜನಪದ ಅಡುಗೆಗಳು ನಾಗರಿಕ ಅಡುಗೆಗಳು ಎಂಬ ವಿಭಾಗವನ್ನು ಮಾಡಬಹುದು. ಆಂಧ್ರಪ್ರದೇಶದಲ್ಲಿ ಜನಪ್ರಿಯವಾಗಿರುವ ಕೆಲವು ಅಡುಗೆಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ಸಂಗಟಿ ಮುದ್ದ: ರಾಗಿಮುದ್ದೆ ರಾಯಲ ಸೀಮೆಯ ಮುಖ್ಯವಾದ ಆಹಾರಗಳಲ್ಲಿ ಒಂದು. ಸಂಗಟಿ ಮುದ್ದ ರಾಗಿ ಮುದ್ದೆಗಿಂತ ಸ್ವಲ್ಪ ಭಿನ್ನವಾದದ್ದು. ನೀರನ್ನು ಚೆನ್ನಾಗಿ ಕುದಿಸಿ ಅದರಲ್ಲಿ ನುಚ್ಚಕ್ಕಿಯನ್ನು ಹಾಕಿ ಅದು ಬೆಂದ ಮೇಲೆ ತಕ್ಕಷ್ಟು ರಾಗಿ ಹಿಟ್ಟನ್ನು ಸೇರಿಸಿದ ಆ ಮಿಶ್ರಣವನ್ನು ಗಂಟಾಗದಂತೆ ಸಂಗಟಿ ಕೋಲಿನಿಂದ ಚೆನ್ನಾಗಿ ತಿರುಗಿಸಿ ಕೈಯನ್ನು ನೀರಿನಿಂದ ತೇವ ಮಾಡಿಕೊಂಡು ಮುದ್ದೆ ಮಾಡುತ್ತಾರೆ. ಕೆಲವರು ನುಚ್ಚಕ್ಕಿಗೆ ಬದಲಾಗಿ ಅಕ್ಕಿಯನ್ನು ಬೇಯಿಸಿ ರಾಗಿ ಹಿಟ್ಟು ಸೇರಿಸಿ ಸಂಗಟಿ ಮಾಡುತ್ತಾರೆ.

ಹುಳಿಗಳು: ತೆಲುಗರ ಮನೆಗಳಲ್ಲಿ ಅನೇಕ ತರಹದ ಹುಳಿ ಅಥವಾ ಸಾರುಗಳನ್ನು ಮಾಡುತ್ತಾರೆ. ಸಾಂಬಾರ್ ಎಂದು ಈಗ ಜನಪ್ರಿಯವಾಗಿರುವ ಪದಾರ್ಥವನ್ನು ಸಾಂಪ್ರದಾಯಿಕವಾಗಿ ಪುಲುಸು(ಹುಳಿ) ಎಂದೇ ಕರೆಯುತ್ತಿದ್ದರು. ಬದನೆಕಾಯಿ, ನುಗ್ಗೆಕಾಯಿ, ಅಲಸಂದೆ, ಸೋರೆಕಾಯಿ, ಬಾಳೆಕಾಯಿ, ಟೊಮ್ಯಾಟೊ, ಈರುಳ್ಳಿ, ಆಲುಗಡ್ಡೆ ಮುಂತಾದವು ಎಲ್ಲ ಹುಳಿಗಳಿಗೆ ಬಳಸುವ ತರಕಾರಿಗಳು. ತೊಗರಿಬೇಳೆ, ಹೆಸರುಬೇಳೆ, ಕಡಲೆಕಾಯಿ, ಮುಂತಾದವುಗಳಿಂದಲೂ ಬೇರೆ ಬೇರೆ ತರಹದ ಹುಳಿಗಳನ್ನು ಮಾಡುತ್ತಾರೆ. ಕೆಲವು ಕಡೆ ಮೆಣಸು, ಹಸಿಶುಂಠಿ ಮುಂತಾದವನ್ನು ಸೇರಿಸಿ ವಿಶೇಷವಾದ ಹುಳಿಗಳನ್ನು ಮಾಡುತ್ತಾರೆ. ಅಲ್ಲದೆ ಮಜ್ಜಿಗೆ ಹುಳಿ, ಹಸಿ ಹುಳಿ(ಪಚ್ಚಿಪುಲುಸು)ಮುಂತಾದವು ಕೂಡ ತೆಲುಗರ ಅಡುಗೆಗಳಲ್ಲಿ ಸೇರಿವೆ.

ಸಾರುಗಳು: ರಸಂ ಎಂದು ಈಗ ಜನಪ್ರಿಯವಾಗಿರುವ ಪದಾರ್ಥವನ್ನು ತೆಲುಗಿನಲ್ಲಿ ‘ಚಾರು’ (ಸಾರು) ಎನ್ನುತ್ತಾರೆ. ಜೀರ್ಣಕಾರಿಯಾದ ‘ಚಾರು’ ಅನೇಕ ಬಗೆಗಳಲ್ಲಿ ತಯಾರಾಗುತ್ತದೆ. ಸಾಮಾನ್ಯವಾಗಿ ‘ತಿಳಿಸಾರನ್ನು’ ಹುಣಿಸೆಹಣ್ಣಿನ ರಸ, ನೀರು, ಸ್ವಲ್ಪ ಅರಿಸಿನ ಉಪ್ಪು ಹಾಕಿ ಒಗ್ಗರಣೆ ಕೊಟ್ಟ ನಂತರ ಈ ಮೊದಲೆ ತಯಾರಿಸಿಟ್ಟುಕೊಂಡ ‘ಚಾರುಪೊಡಿ’ (ಧನಿಯಾ, ಮೆಂತೆ, ಮೆಣಸು, ಸಾಸುವೆ, ಜೀರಿಗೆ ಸೇರಿಸಿ ಮಾಡಿದ ಪುಡಿ) ಹಾಕಿ ಕುದಿಸುತ್ತಾರೆ. ‘ಚಾರು ಪೊಡಿ’, ಸ್ವಲ್ಪ ಹಿಂಗು, ಕೊತ್ತಂಬರಿ, ಕರಿಬೇವಿನ ಸೊಪ್ಪು ಮತ್ತು ಒಗ್ಗದರಣೆಗಳಿಂದ ಘಮಘಮಿಸುತ್ತದೆ. ಇದನ್ನು ರುಚಿಗೆ ತಕ್ಕಂತೆ ಅಭಿರುಚಿಗೆ ತಕ್ಕಂತೆ ಅನೇಕ ರೀತಿ ತಯಾರು ಮಾಡುತ್ತಾರೆ. ಕೆಲವರು ನಿಂಬೆಹಣ್ಣಿನ ರಸವನ್ನು ಹುಣ್ಣಿಸೆಹಣ್ಣಿಗೆ ಬದಲಾಗಿ ಬಳಸುತ್ತಾರೆ. ಕೆಲವರು ಟೊಮ್ಯಾಟೊ ಬಳಸುತ್ತಾರೆ. ಇನ್ನೂ ಕೆಲವರು ನುಗ್ಗೇಕಾಯಿ ಹಾಕುತ್ತಾರೆ. ತೊಗರಿಬೇಳೆ ಬೇಯಿಸಿದ ಕಟ್ಟನ್ನು (ರಸವನ್ನು) ಹಾಕಿದರೆ ಒಂದು ತರಹದ ರುಚಿ. ಹುರುಳಿಕಾಳಿನ ಕಟ್ಟಿನಿಂದ ಮಾಡಿದ ಉಲವ ಸಾರಿನದೇ ಇನ್ನೊಂದು ತರದ ರುಚಿ. ಮೆಣಸಿನ ಸಾರಿನದು ಮತ್ತೊಂದು ತರದ ರುಚಿ.

ಪಲ್ಯಗಳು: ಅನೇಕ ರೀತಿಯ ತರಕಾರಿಗಳಿಂದ ಮಾಡುವ ಪಲ್ಯಗಳ ಸಂಖ್ಯೆಗೆ ಲೆಕ್ಕವಿಲ್ಲ. ಬದನೆಕಾಯಿ ಬಾಳೆಕಾಯಿ, ಆಲುಗಡ್ಡೆ ಮುಂತಾದವುಗಳಿಂದ ಮಾಡುವ ಮಾಮೂಲಿ ಪಲ್ಯಗಳ ಜೊತೆಗೆ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಮಾಡುವ ಹಲಸಿನ ಪಲ್ಯ, ಬಾಳೆದಿಂಡಿನ ಪಲ್ಯ, ಬಾಳೆಕಾಯಿಗೆ ಸಾಸುವೆ ಪುಡಿ ಸೇರಿಸಿ ಮಾಡುವ ಪಲ್ಯ ಮುಂತಾದವನ್ನು ಹೆಸರಿಸಬಹುದು.

ಸೊಪ್ಪಿನ ಸಾರುಗಳು: ಭಾರತ ದೇಶದಲ್ಲಿ ಶಾಕಾಹಾರಿಗಳ ಸಂಖ್ಯೆಯೇ ಹೆಚ್ಚು. ತಿನ್ನಲು ಯೋಗ್ಯವಾಗಿರುವ ಸೊಪ್ಪುಗಳು ಹತ್ತಾರು ಜನಪ್ರಿಯವಾಗಿವೆ. ಸೊಪ್ಪುಗಳಿಂದ ಮಾಡುವ ‘ತೀಯಗೂರ’ (ಸಿಹಿ ಸೊಪ್ಪಿನ ಸಾರು) ಮತ್ತು ಪುಲ್ಲಗೂರ (ಹುಳಿ ಸೊಪ್ಪಿನ ಸಾರು) ಪ್ರಧಾನವಾದವು. ಈ ಪುಲ್ಲಗೂರ ಪಲ್ಯವನ್ನು ತೊಗರಿಬೇಳೆ ಹಾಕಿಯೂ ಮಾಡಬಹುದು. ಬೇಳೆ ಹಾಕದೆಯೂ ಮಾಡಬಹುದು. ಒಂದೊಂದು ಒಂದೊಂದು ತರಹದ ರುಚಿಯನ್ನು ಕೊಡುತ್ತವೆ.

ಪಚ್ಚಡಿಗಳು ಮತ್ತು ಉಪ್ಪಿನ ಕಾಯಿಗಳು: ತೆಲುಗರಲ್ಲಿ ಹಲವಾರು ರೀತಿಯ ಚಟ್ನಿಗಳನ್ನು ಉಪ್ಪಿನ ಕಾಯಿಗಳನ್ನು ಕಾಣಬಹುದು. ತೆಲುಗರಿಗೆ ಅತ್ಯಂತ ಪ್ರಿಯವಾದುದೆಂದರೆ, ‘ಗೋಂಗೂರ’ (ಪುಂಡಿಸೊಪ್ಪ). ತೆಲುಗರು ಎಲ್ಲಿದ್ದರೂ ಯಾವ ದೇಶದಲ್ಲಿದ್ದರೂ ಗೋಂಗೂರ ಸೊಪ್ಪನ್ನು ಮಾತ್ರ ಬಿಡುವುದಿಲ್ಲ. ಗೋಂಗೂರ ಪಚ್ಚಡಿ ಅವರಿಗೆ ಅತ್ಯಂತ ಪ್ರಿಯವಾದುದು. ಪುಂಡಿ ಸೊಪ್ಪಿನಿಂದ ಪಚ್ಚಡಿ ಮತ್ತು ಪುಲ್ಲಗೂರ ಮಾಡಿ ತಿನ್ನುವುದೆಂದರೆ ತೆಲುಗರಿಗೆ ಬಹಳ ಇಷ್ಟ. ತೆಲುಗರ ಮನೆಗಳಲ್ಲಿ ಯಾವಾಗಲೂ ಹುಣಸೆಕಾಯಿಯ ಚಟ್ನಿ, ಅಲ್ಲದೆ ಚಟ್ನಿ (ಹಸಿಶುಂಠಿ ಚಟ್ನಿ), ಕಾಡುನೆಲ್ಲಿಯ ಚಟ್ನಿ ಮುಂತಾದವು ಸಿದ್ಧವಾಗಿರುತ್ತವೆ. ಇವುಗಳನ್ನೇ ಅನ್ನದಲ್ಲಿ ಕಲಸಿಕೊಂಡು ತಿನ್ನುವ ಅಭ್ಯಾಸ ತೆಲುಗರಿಗಿದೆ. ಜೊತೆಗೆ ಉಪ್ಪಿನ ಕಾಯಿಗಳನ್ನು ತಯಾರು ಮಾಡುವ ಕೆಲ ತೆಲುಗರಿಗೆ ವಿಶೇಷವಾಗಿ ಕರಗತವಾಗಿದೆ. ಮುಖ್ಯವಾಗಿ ‘ಆವಕಾಯ’ (ಸಾಸುವೆ ಸೇರಿಸಿದ ಮಾವಿನಕಾಯಿ) ಆಂಧ್ರರಿಗೆ ಅತ್ಯಂತ ಪ್ರಿಯವಾದುದು. ತೆಲುಗರ ಮನೆ ಮನೆಗಳಲ್ಲಿ ಆವಕಾಯ, ಮಾಗಾಮ (ಮಾವಿನ ಕಾಯಿ ಒಣಗಿಸಿ ಮಾಡಿದ ಇನ್ನೊಂದು ತರಹದ ಉಪ್ಪಿನಕಾಯಿ) ಮುಂತಾದವೆಲ್ಲವನ್ನೂ ಇಡೀ ವರ್ಷಕ್ಕಾಗುವಷ್ಟು ಸಿದ್ಧಪಡಿಸಿಕೊಂಡಿರುತ್ತಾರೆ. ಇವು ಒಂದೆರಡು ವರ್ಷಗಳ ಕಾಲ ಕೆಡದೆ ಉಳಿಯುವಂತೆ ಮಾಡುವ ಕೆಲ ಪರಂಪರಾಗತವಾಗಿ ಬಂದಿದೆ.

ಪುಡಿಗಳು: ತೆಲುಗರ ಆಹಾರಗಳಲ್ಲಿ ಪುಡಿಗಳು ಕೂಡ ಒಂದು ಭಾಗವಾಗಿವೆ. ತೆಲುಗರ ಮನೆಗಳಲ್ಲಿ ಯಾವಾಗಲೂ ಕೆಲವು ಪುಡಿಗಳು ಸಿದ್ದವಾಗಿರುತ್ತವೆ. ಇವು ಕೇವಲ ಚಟ್ನಿ ಪುಡಿಗಳಲ್ಲ. ಅನ್ನದ ಜೊತೆಗೆ ಕೂಡ ಕೆಲವು ಪುಡಿಗಳನ್ನು ಕಲಸಿ ತುಪ್ಪ ಅಥವಾ ಎಣ್ಣೆ ಹಾಕಿಕೊಂಡು ತಿನ್ನು ಅಭ್ಯಾಸವಿದೆ. ಬೇಳೆ ಪುಡಿ, ಎಳ್ಳು ಪುಡಿ, ಕರಿಬೇವು ಸೊಪ್ಪಿನ ಪುಡಿ, ಬೆಳ್ಳುಳ್ಳಿ ಪುಡಿ ಮುಂತಾದವೆಲ್ಲ ಜನಪ್ರಿಯವಾದ ಪುಡಿಗಳು. ಇವು ಕೂಡ ಬಹಳ ಕಾಲ ಕೆಡದೆ ಇರುವುದರಿಂದ ಸಿದ್ಧ ಆಹಾರಗಳಾಗಿ ಇವುಗಳನ್ನು ಬಳಸಬಹುದು.

ತೆಲುಗರ ಅಡುಗೆಗಳಲ್ಲಿ ಎಲ್ಲ ತರಹದ ಪದಾರ್ಥಗಳಲ್ಲೂ ಬಹಳಷ್ಟು ವೈವಿಧ್ಯ ಕಂಡುಬರುತ್ತದೆ. ಸಾಮಾನ್ಯವಾಗಿ ಊಟ ಅಂದ ಮೇಲೆ ಮೊದಲು ತೊವ್ವೆ (ಸಾಮಾನ್ಯವಾಗಿ ತೊಗರಿಬೇಳೆ ಬೇಯಿಸಿ ಮಾಡಿದ್ದು) ಆಮೇಲೆ ಒಂದೆರಡು ತಾಳಿಸಿದ ಪಲ್ಯಗಳು, ಅನಂತರ ಅವಕಾಯದಂಥ ಉಪ್ಪಿನಕಾಯಿ ಅಥವಾ ಗೋಂಗೂರ ಪಚ್ಚಡಿಯಂಥ ಚಟ್ನಿಗಳು ಅದಾದ ಮೇಲೆ ಹುಳಿ ಆಮೇಲೆ ತಿಳಿಸಾರು, ಅನಂತರ ಮೊಸರು-ಇದು ಸಾಮಾನ್ಯ ಊಟ. ಇದರ ಜೊತೆಯಲ್ಲಿ ಅನೇಕ ಇತರ ಪದಾರ್ಥಗಳು ಸೇರಿಕೊಂಡಿರುತ್ತವೆ. ವಿಧವಿವಾದ ಪಚ್ಚಡಿಗಳು, ಪುಡಿಗಳು, ಹುಳಿಗಳು ಮುಂತಾದವು ಭೋಜನಪುಷ್ಟಿಗೆ ಸಂಕೇತಗಳಾಗಿರುತ್ತವೆ. ಇದರ ಜೊತೆಗೆ ಪಾಯಸ, ವಡೆ, ಹಲವು ರೀತಿಯ ಸಿಹಿ ತಿಂಡಿಗಳು ಸಾಂದರ್ಭಿಕವಾಗಿ ತಯಾರು ಮಾಡುವ ಇತರ ಪದಾರ್ಥಗಳು. ಬಾಳಕಗಳು, ಹಪ್ಪಳ ಸಂಡಿಗೆ ಮುಂತಾದವೆಲ್ಲ ರಸದೌತಣವನ್ನು ನೀಡುತ್ತವೆ. ತೆಲುಗರ ಊಟದಲ್ಲಿ ಎಷ್ಟು ವೈವಿಧ್ಯವಿದೆಯೆಂದರೆ ಬದನೆಕಾಯಿಯೊಂದರಿಂದಲೇ ನೂರು ತರಹದ ಪದಾರ್ಥಗಳನ್ನು ತಯಾರು ಮಾಡುತ್ತಾರೆ. ಈ ಅಡುಗೆಗಳು ಅನೇಕ ವೇಳೆ ವೈದ್ಯಕೀಯ ಉಪಯೋಗವನ್ನು ಪಡೆದಿರುತ್ತವೆ. ಒಂದೊಂದು ಕಾಲದಲ್ಲಿ, ಸಂದರ್ಭದಲ್ಲಿ, ಆಚರಣೆಯಲ್ಲಿ ಬೇರೆ ಬೇರೆ ರೀತಿಯ ಅಡುಗೆಗಳನ್ನು ತಯಾರು ಮಾಡುವುದನ್ನು ತೆಲುಗರಲ್ಲಿ ನೋಡಬಹುದು.

ಜಿ.ಎಸ್.ಎಂ. ಅನುವಾದ ಎ.ಎಂ.ಡಿ.

 

ತೆಲುಗರ ಕುಲಪುರಾಣಗಳು ಜನಪದ ಸಾಹಿತ್ಯ ಪ್ರಕಾರ. ಜನಪದ ಸಂಸ್ಕೃತಿಯಲ್ಲಿ ನಿಮ್ಮ ಕುಲವೇನು ಎಂದು ಕೇಳುವುದು ತಪ್ಪಲ್ಲ. ನಾಗರಿಕ ಸಮಾಜದೊಳಗೆ ಕುಲದ ಹೆಸರು ಕೇಳುವುದು ತಪ್ಪು. ಅಂತಹಪ್ರಶ್ನೆಗಳಿಗೆ ಉತ್ತರವಾಗಿ ಒಂದು ಕಥೆಯನ್ನು ಹೇಳುತ್ತಾರೆ. ಈ ಕಥೆ ಕುಲದ ಕಥೆ. ಇದು ಪುರಾಣ ಪ್ರಕಾರಕ್ಕೆ ಸಂಬಂಧಿಸಿದ್ದಾದ್ದರಿಂದ ಕುಲ ಪುರಾಣವಾಗುತ್ತದೆ. ಕುಲ ಕಥೆ ಎನ್ನುವ ಮಾತು ಜಾನಪದ ತಜ್ಞರು ಮೊದಲು ಇಟ್ಟ ಹೆಸರಲ್ಲ. ಇದು ವೃತ್ತಿ ಗಾಯಕರು ಆಯಾ ಕುಲಗಳ ಹೆಸರಿನ ಜೊತೆಗೆ ಪುರಾಣವನ್ನು ಹೇಳುವುದರಿಂದ ಆರಂಭವಾಯಿತು. ಉದಾಹರಣೆಗೆ ಗೌಡರ ಕುಲ ಕಥೆಯನ್ನು ಅದರ ಗಾಯಕರು ಗೌಡಪುರಾಣ ಎನ್ನುತ್ತಾರೆ. ವಿಶ್ವ ಕರ್ಮದವರ ಕುಲದ ಕಥೆಯನ್ನು ವಿಶ್ವಕರ್ಮ ಪುರಾಣ ಎನ್ನುತ್ತಾರೆ. ಕೆಲವು ಕುಲಗಳ ಕಥೆಗಳ ಹೆಸರು ಅವರ ಕುಲದೇವರ ಹೆಸರಿನಲ್ಲಿರುತ್ತವೆ. ಜಾಂಬವಂತನ ಹೆಸರಿನ ಮೇಲೆ ಜಾಂಬುರಾಣಂ, ರೆಡ್ಡಿಗಳ ಕುಲದೈವವಾದ ಕುಂಟಮಲ್ಲಾರೆಡ್ಡಿ ಹೆಸರಿನಲ್ಲಿ ಮಲ್ಲಯ್ಯ ಪುರಾಣ. ಯಾದವರ ಪುರಾಣವೂ ಮಲ್ಲಯ್ಯ ಪುರಾಣವೇ. ಹೀಗೆ ಕುಲಕಥೆಗಳನ್ನು ಆಯಾ ಕುಲಗಳ ಹೆಸರಿನಲ್ಲಿ ಕುಲ ಪುರುಷರ ಹೆಸರಿನಿಂದ ಕರೆಯುವುದು ಜಾನಪದ ಶೈಲಿಯಲ್ಲಿದೆ. ಇವೆಲ್ಲವನ್ನು ಒಳಗೊಂಡಂತೆ ಈಪ್ರಕಾರವನ್ನು ಕುಲಪುರಾಣಗಳೆಂದು ಕರೆದುದು ಸಂಶೋಧಕರು ಮಾಡಿದ ಕೆಲಸ.

ಹೀಗೆ ಈ ಕುಲ ಪುರಾಣಗಳು ಎನ್ನುವ ಪ್ರಕಾರ ಮೌಖಿಕ ಮಾಧ್ಯಮದಲ್ಲಿದ್ದ ಜನಪದ ಸಾಹಿತ್ಯ ಪ್ರಕಾರ. ಇದನ್ನು ಒಂದು ಪ್ರತ್ಯೇಕ ಜಾನಪದ ಸಾಹಿತ್ಯ ಪ್ರಕಾರವಾಗಿ ಗುರುತಿಸಿ ಸಂಶೋಧನೆ ಪ್ರಾರಂಭವಾದುದು ೧೯೮೫ರಿಂದ. ಆದರೂ ಕುಲ ಪುರಾಣಗಳು ಎನ್ನುವ ಪ್ರಕಾರ ತುಂಬ ಪ್ರಾಚೀನವಾದುದು. ಇದು ಎಷ್ಟು ಪ್ರಾಚೀನವೆಂದರೆ ಕುಲವಷ್ಟೆ ಪ್ರಾಚೀನವೆಂದು ಹೇಳಬಹುದು. ಆಂಧ್ರ ಪ್ರದೇಶದಲ್ಲಿರುವ ಎಲ್ಲ ಕುಲಗಳಿಗೂ ಕುಲಕಥೆಗಳಿವೆ. ಅವೇ ಕುಲಪುರಾಣಗಳು. ಆಂಧ್ರ ಪ್ರದೇಶದಲ್ಲಿ ೧೯೬ ಕುಲಗಳು ಇವೆಯೆಂದು ಸಂಶೋಧನೆಗಳಿಂದ ತಿಳಿದುಬರುತ್ತದೆ. ಸೂತ್ರಪ್ರಾಯವಾಗಿ ಇವೆಲ್ಲಕ್ಕೂ ಕುಲ ಪುರಾಣಗಳು ಇವೆ. ಇವುಗಳಲ್ಲಿ ಕೆಲವು ಪತ್ತೆಯಾಗಿವೆ. ಕೆಲವು ಪತ್ತೆಯಾಗುತ್ತಿವೆ. ಮತ್ತೆ ಕೆಲವು ಇನ್ನೂ ಸಂಗ್ರಹಿಸಬೇಕಾಗಿದೆ. ಕುಲಕಥೆ ಪ್ರಧಾನವಾಗಿ ಪುರಾಣ ಕಥೆ. ಮೌಖಿಕ ಪರಂಪರೆಯಲ್ಲಿರುವ ಪುರಾಣಗಳನ್ನೇ ಪುರಾಣ ಕಥೆಗಳು ಎಂದೂ ಇಂಗ್ಲಿಷ್‌ನಲ್ಲಿ ಮಿಥ್ ಎಂದೂ ಕರೆಯುತ್ತಾರೆ.

ಪುರಾಣ ಕಥೆ ಪ್ರಧಾನವಾಗಿ ಪವಿತ್ರ ಕಥೆ. ಇದು ನಡೆದಿದೆ ಎಂದು ಜನರೆಲ್ಲ ನಂಬಿರುವ ಕಥೆ. ಪ್ರಾಚೀನವಾದ ಈ ಕಥೆಗಳು ಮಾತಾವಲಂಬಿಗಳಾಗಿರುತ್ತವೆ. ಇಂತಹ ಕಥೆಗಳನ್ನು ಪ್ರಶ್ನಿಸುವಂತಿಲ್ಲ. ಇದು ಹೀಗೆ ನಡೆದಿರಬಹುದೆ ಎಂದು ಕೇಳುವುದು ಸಹ ತಪ್ಪಾಗುತ್ತದೆ. ಹೀಗೆ ಕೇಳುವುದು ಮತದ ವಿಶ್ವಾಸವನ್ನೇ ಪ್ರಶ್ನಿಸಿದಂತೆ ಎಂದು ಭಾವಿಸುತ್ತಾರೆ. ಇದು ಅತಿ ಪ್ರಾಚೀನ ಕಾಲಕ್ಕೆ ಸಂಬಂಧಿಸಿದುದು. ಇದು ಸೃಷ್ಟಿಯ ಉಗಮದಿಂದಲೇ ಪ್ರಾರಂಭವಾಗುತ್ತದೆ. ಮನುಷ್ಯರು ಮಾಡುವ ಆಚರಣೆಗಳನ್ನು ವಿವರಿಸುವುದು ಇದರ ಉದ್ದೇಶ. ಪುರಾಣ ಕಥೆಗಳಲ್ಲಿ ದೇವತೆಗಳು ಪ್ರಧಾನ ಪಾತ್ರಗಳನ್ನು ವಹಿಸುತ್ತಾರೆ. ಇದು ಮಾನವ ಸಮಾಜವನ್ನು ಕುರಿತು ಹೇಳಿದರೂ ಪ್ರಧಾನವಾಗಿ ಈ ಕಥೆ ಮಾನವ ಲೋಕಕ್ಕೆ ಸಂಬಂಧಿಸಿದುದಷ್ಟೇ ಅಲ್ಲದೆ ದೇವಲೋಕಕ್ಕೆ ಸಂಬಂಧಿಸಿದುದೂ ಆಗಿದೆ.

ಒಂದು ಮತಾಚಾರವನ್ನು ಯಾರಾದರೂ ಮಾಡುತ್ತಿರುವಾಗ ‘ಇದನ್ನು ಏಕೆ ಹೀಗೆ ಮಾಡುತ್ತಿದ್ದಿರಿ’ ಎಂದು ಕೇಳಿದರೆ, ‘ಇಂತಹ ಪುರಾಣದಲ್ಲಿ ಹೀಗೆ ಮಾಡಬೇಕೆಂದು ಹೇಳಿದೆ ಅದಕ್ಕೆ ಮಾಡುತ್ತಿದ್ದೇವೆ’ ಎನ್ನುವ ಉತ್ತರ ಬರುತ್ತದೆ. ಮತಾಚಾರವನ್ನು ವಿವರಿಸುವುದು ಪುರಾಣ ಕಥೆ ಎಂದು ಅವರ ಲಕ್ಷಣವನ್ನು ಕುರಿತು ಹೇಳುವುದರಿಂದಲೇ ನಡೆಯುತ್ತದೆ. ಇಲ್ಲಿ ಹೇಳಿ ಪುರಾಣಕಥೆಯ ಪ್ರಧಾನ ಲಕ್ಷಣಗಳೆಲ್ಲವೂ ಕುಲ ಕಥೆಗಳಿಗೂ ಇವೆ. ಕುಲ ಕಥೆಯನ್ನು ಅತಿ ಪವಿತ್ರವಾದುದೆಂದು ಎಲ್ಲ ಕುಲದವರೂ ಭಾವಿಸುತ್ತಾರೆ. ಕುಲ ಕಥೆಯೊಳಗಿನ ವಿಷಯಗಳೆಲ್ಲ ಸಂಪೂರ್ಣವಾಗಿ ಯಥಾವತ್ತಾಗಿ ನಡೆದ ವಿಷಯಗಳೆಂದು ಆ ಕುಲಕ್ಕೆ ಸೇರಿದವರೆಲ್ಲರೂ ಭಾವಿಸುತ್ತಾರೆ. ಈ ಕುಲಕಥೆ ಹೀಗೆ ನಡೆದಿದೆಯೇ ಎಂದು ಪ್ರಶ್ನಿಸುವುದು ಪಾಪವೆನಿಸುತ್ತದೆ. ಇದು ಯಾವಾಗ ನಡೆಯಿತು ಎಂದು ಕೇಳಿದರೆ, ಸೃಷ್ಟಿಯ ಪ್ರಾರಂಭದಲ್ಲಿಯೇ ನಡೆದಿದೆ ಎಂದು ಹೇಳುತ್ತಾರೆ. ಕುಲ ಪುರುಷನು ಕುಲಕ್ಕೆ ಆದ್ಯನಾದ ವ್ಯಕ್ತಿ. ದೇವರಾದ್ದರಿಂದ ದೈವವನ್ನೂ ದೈವ ಮಾಡಿದ ಸೃಷ್ಟಿಯನ್ನೂ ಪ್ರಶ್ನಿಸಲು ಸಾಧ್ಯವಿಲ್ಲ. ಕುಲದೊಳಗಿನ ವ್ಯಕ್ತಿಗಳು ಮಾಡುವ ಮತ ಕರ್ಮಗಳು, ಪಾಲಿಸುವ ಆಚಾರಗಳನ್ನು ಕುಲಪುರಾಣ ವಿವರಿಸುತ್ತದೆ. ಮಾಡುವ ಆಚರಣೆಗಳಲ್ಲಿ ಯಾರಾದರೂ ತಪ್ಪುಗಳನ್ನು ಹುಡುಕಿದರೆ, ಈ ಪುರಾಣದ ಪ್ರಕಾರ ನಡೆಯುತ್ತದೆ. ಆದ್ದರಿಂದ ಇದನ್ನು ಹಾಗೆ ಮಾಡಬಾರದು ಹೀಗೆ ಮಾಡಬಾರದು ಎಂದು ಹೇಳುತ್ತಾರೆ. ಪುರಾಣ ಕಥೆಗೆ(ಮಿಥ್) ಇರುವ ಲಕ್ಷಣಗಳೆಲ್ಲ ಕುಲ ಕಥೆಗೂ ಇವೆ. ಆದ ಕಾರಣ ಕುಲ ಕಥೆ ಎನ್ನುವುದು ಪುರಾಣಕಥೆ. ಆದ್ದರಿಂದಲೇ ಈ ಮೌಖಿಕ ಪುರಾಣಗಳೆಲ್ಲವನ್ನು ಒಟ್ಟಿಗೆ ಸೇರಿಸಿ ಕುಲ ಪುರಾಣಗಳು ಎಂದು ಇಟ್ಟುಕೊಳ್ಳಲಾಗಿದೆ. ಕುಲ ಪುರಾಣಗಳು ಆಂಧ್ರ ಪ್ರದೇಶದಲ್ಲಿ ಮಾತ್ರವಲ್ಲದೆ ಎಲ್ಲ ರಾಜ್ಯಗಳಲ್ಲೂ ಎಲ್ಲ ಕುಲದವರಿಗೂ ಇದ್ದಂತೆ ತಿಳಿದುಬರುತ್ತದೆ.

ಬುಡಕಟ್ಟು ಪಂಗಡದವರಿಗೂ ಅವರ ಜಾತಿಯ ಉಗಮವನ್ನು ಕುರಿತು ವಿವರಿಸುವ ಕಥೆಗಳನ್ನು ಅವರಿಗೆ ಸಂಬಂಧಿಸಿದವರು ಹೇಳಿ ಪ್ರಚಾರ ಮಾಡುವುದು ಕಂಡುಬರುತ್ತದೆ. ಆದ್ದರಿಂದ ಪ್ರಾಂತಭೇದವಿಲ್ಲದೆ ದಕ್ಷಿಣ ಭಾರತದ ಎಲ್ಲ ಕಡೆ ಕಂಡು ಬರುವ ಜನಪದ ಸಾಹಿತ್ಯ ಪ್ರಕಾರವಾಗಿ ಕುಲಪುರಾಣವನ್ನು ಹೇಳಬಹುದು. ಕುಲ ಪುರಾಣ ಎನ್ನುವುದು ಕೇವಲ ಕುಲದವರ ಮಧ್ಯದಲ್ಲೇ ಮೌಖಿಕವಾಗಿ ನಿಂತು ಹೋದ ಪ್ರಕಾರ ಮಾತ್ರವೇ ಅಲ್ಲ. ಕುಲ ಪುರಾಣವನ್ನು ಶಾಶ್ವತವಾಗಿ ಒಂದು ಪದ್ಧತಿ, ಪ್ರಕಾರವಾಗಿ ಪ್ರಚಾರ ಮಾಡಲು ಆಯಾ ಕುಲದವರು ಒಂದು ವ್ಯವಸ್ಥೆಯನ್ನು ಸಹ ಮಾಡಿಕೊಂಡಿದ್ದಾರೆ. ಅನೇಕ ಕುಲದವರು ಅವರ ಕುಲಕ್ಕಾಗಿಯೇ ಇದ್ದು ಅವರ ಕುಲ ಕಥೆಯನ್ನು ಪ್ರಚಾರ ಮಾಡಲು ಕುಲಗಾಯಕರ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಇವರು ಗಾಯಕ ಕುಲದವರೇ ಆಗಿದ್ದು ಒಂದು ಕಲಾ ಪ್ರದರ್ಶನ ಮಾಡುತ್ತಾ ಅದನ್ನು ಅವರಿಗೆ ಹೇಳಿಕೊಡುತ್ತಾ ಜೀವಿಸುತ್ತಿದ್ದಾರೆ. ಹೀಗೆ ಒಂದು ಕುಲವನ್ನೇ ಅವಲಂಬಿಸಿ ಅವರಿಗಷ್ಟೇ ಕಥೆಗಳನ್ನು ಹೇಳಿ ಅವರು ಕೊಡುವ ದಾನಗಳನ್ನು ಮಾತ್ರ ಸ್ವೀಕರಿಸುವ ಈ ಜನಪದ ಗಾಯಕ ಕುಲಗಳನ್ನು ಅರ್ತಿ ಬಿಡ್ಡಲು(ಅರ್ಥಿಬಿಡ್ಡಲು) ಆರ್ಥಿ ಮಕ್ಕಳು, ಕುಲಮಕ್ಕಳು ಎನ್ನುತ್ತಾರೆ. ಇವರನ್ನೇ ಆಶ್ರಿತ ಕುಲದವರು ಎಂದಿಟ್ಟುಕೊಳ್ಳಬಹುದು. ಗಾಯಕರನ್ನು ಪೋಷಿಸುವ ಕುಲದವರನ್ನು ಅಸಾಮುಲು ಎಂದೂ ಯಜಮಾನರು ಎಂದೂ ಹೇಳುತ್ತಾರೆ. ಇವರನ್ನೇ ದಾತೃಕುಲದವರು ಎಂದು ಕರೆಯುತ್ತಾರೆ. ಹೀಗೆ ದಾತೃಕುಲದವರು ಕೊಡುವ ದಾನಗಳನ್ನು ಮೇರ, ಕಟ್ನಂ, ತ್ಯಾಗಂ, ವಂತನ (ವರ್ತನೆ) ಎಂದು ನಾನಾ ಹೆಸರುಗಳಿಂದ ಕರೆಯುತ್ತಾರೆ. ವರ್ಷಕ್ಕೊಮ್ಮೆ ಬಂದು ಆಶ್ರಿತಗಾಯಕ ಕುಲದವರು ಇರುವ ಗ್ರಾಮದ ಗಡಿ ಮನೆಗಳಲ್ಲಿ ಅವರಿಗೆ ಕುಲ ಪುರಾಣಗಳನ್ನು ಪ್ರದರ್ಶಿಸಿ ಅವರು ಕೊಡುವ ದಾನಗಳನ್ನು ಸ್ವೀಕರಿಸುತ್ತಾರೆ. ಹಣ, ದವಸಧಾನ್ಯ, ವಸ್ತ್ರ, ಪಶುಗಳು, ಇನ್ನಿತರ ರೂಪಗಳಲ್ಲಿ ದಾನಗಳನ್ನು ಸ್ವೀಕರಿಸುತ್ತಾರೆ. ಹೀಗೆ ದಾತೃಕುಲದವರಿಗೂ ಆಶ್ರಿತಕುಲದವರಿಗೂ ಮಧ್ಯೆ ಇರುವ ಸಂಬಂಧ ಹುಟ್ಟಿನಿಂದಲೇ ಬಂದುದಾಗಿದ್ದು ಶಾಶ್ವತವಾಗಿರುತ್ತದೆ. ಆರ್ಶರಿತ ಗಾಯಕನಿಗೂ ಆತನ ದಾತ (ಆಶ್ರಯದಾತ)ನ ಕುಟುಂಬಕ್ಕೂ ಮಧ್ಯೆ ಇಂತಹ ಸಾಂಪ್ರದಾಯಿಕವಾದ ಸಂಬಂಧಗಳು ತುಂಬಾ ಇರುತ್ತದೆ. ಇವೆಲ್ಲವನ್ನೊಳಗೊಂಡಂತೆ ಒಟ್ಟು ಸಂಬಂಧಗಳನ್ನು ಆಶ್ರಿತ ವ್ಯವಸ್ಥೆಯೆಂದೂ ಆಶ್ರಿತ ಸಂಪ್ರದಾಯಿಕವಾದ ಸಂಬಂಧಗಳನ್ನು ಆಶ್ರಿತ ವ್ಯವಸ್ಥೆಯೆಂದೂ ಆಶ್ರಿತ ಸಂಪ್ರದಾಯವೆಂದೂ ಇಟ್ಟುಕೊಳ್ಳಬಹುದು. ಆದ್ದರಿಂದಲೇ ಆಶ್ರಿತ ಗಾಯಕರು ಹೇಳುವ ಈ ಪುರಾಣ ಕಥಾ ಸಾಹಿತ್ಯವನ್ನು ಒಟ್ಟಾಗಿ ಆಶ್ರಿತ ಸಾಹಿತ್ಯ ಎನ್ನಬಹುದು. ತೆಲುಗಿನವರ ಕುಲಪುರಾಣಗಳೆಲ್ಲ ಇಂದಿಗೂ ಪ್ರಚಾರದಲ್ಲಿವೆ. ಜಾಂಬಪುರಾಣ (ದಲಿತರಿಗೂ ಸಂಬಂಧಿಸಿದ್ದು), ಗೌಡ ಪುರಾಣ (ಗೌಡರಿಗೆ ಸಂಬಂಧಿಸಿದ್ದು), ಕುಂಟ ಮಲ್ಲಾರೆಡ್ಡಿ ಕಥೆ (ರೆಡ್ಡಿಗಳ ಪುರಾಣ), ವಿಶ್ವಕರ್ಮ ಪುರಾಣ (ವಿಶ್ವಕರ್ಮ ಬ್ರಾಹ್ಮಣರದ್ದು), ಮಲ್ಲಣ್ಣನ ಪುರಾಣ (ಉಣ್ಣೆ ಕಂಕಣ, ಹತ್ತಿಕಂಕಣ ಗೊಲ್ಲರದು) ಕನ್ಯಕಾಪುರಾಣ (ಕೋಮಟಿಗರದು ಇಲ್ಲವೆ ವೈಶ್ಯರದು) ಪಾಂಡವರ ಕತೆ (ಮುತ್ರಾಸಿನವರದು), ಮಾರ್ಕಾಂಡೇಯ ಪುರಾಣ, ಭಾವನಹಿತಪುರಾಣ (ಸಾಲಿಗರದು) ಶಾಲಿವಾಹನ ಪುರಾಣ (ಕುಂಭಕಾರರದು) ಮಡೇಲ, ಮಡಿವಾಳರ ಪುರಾಣ (ರಜಕರರದು) ಅದ್ದಪೋಳ್ಳ ಕಥೆ (ಓಲಗದವರು) ಗೌತ ಪುರಾಣ (ಆಸಾದಿಕಥೆ) ದೇವಾಂಗ ಪುರಾಣ (ದೇವಾಂಗದವರದು) ಇವು ಆಂಧ್ರ ಪ್ರದೇಶದಲ್ಲಿ ಹೆಚ್ಚು ಪ್ರಚಲಿತವಾಗಿ ಪ್ರಚಾರದಲ್ಲಿರುವ ಕುಲ ಪುರಾಣಗಳು. ಈ ಕುಲಗಳಿಗೆಲ್ಲ ಆಶ್ರಿತಗಾಯಕ ಸಂಪ್ರದಾಯವಿದೆ. ರುಂಜರು, ಪಿಚ್ಚು ಕುಂಟರು, ಗೌಡ ಶೆಟ್ಟಿ, ಕೂನಪುಲಿ, ಪಾಂಡವುಲವಾರು, ಅದ್ದಪೋಳ್ಳು, ಆಸಾದಿ, ದಕ್ಕಲಿನವರು, ಪೆಕ್ಕರ‍್ಲು, ಪಟಂವಾರು, ಪ್ರಮುಖವಾದ ಆಶ್ರಿತಗಾಯಕ ಕುಲದವರು. ಇವರನ್ನೇ ಅರ್ಥಿಮಕ್ಕಳು (ಅರ‍್ಥಿಬಿಡ್ಡಲು) ಎಂದು ಕರೆಯುವುದು.

ಈ ಕುಲದವರಲ್ಲಿ ಸಾಮಾನ್ಯವಾಗಿ ಎಲ್ಲರೂ ಈಗಲೂ ಕುಲಪುರಾಣಗಳ ಪ್ರಚಾರ ಮಾಡುತ್ತಲೇ ಇದ್ದಾರೆ. ತೆಲುಗಿನ ಪ್ರಧಾನ ಜನಪದ ಕಲಾರೂಪಗಳು ರುಂಜ ಕಥೆ, ಪಟದ ಕಥೆ, ಡಕ್ಕಲಿ ಪಟದ ಕಥೆ, ಪಾಂಡವರ ಕಥೆ, ಜಮುಕುಲ ಕಥೆ, ಚಿಂದು ಕಥೆಗಳಂತಹ ಕಲಾ ರೂಪಗಳೆಲ್ಲವೂ ಆರ್ಶರಿತ ಗಾಯಕರಲ್ಲೇ ಇರುವುದನ್ನು ಗಮನಿಸಬಹುದು. ಆದ್ದರಿಂದ ತೆಲುಗರ ಜನಪದ ಕಲಾ ಸಂಪ್ರದಾಯದಲ್ಲಿಯೂ ಸಾಹಿತ್ಯ ಸಂಪ್ರದಾಯದಲ್ಲೂ ಸಹ ಕುಲಪುರಾಣ ಸಂಪ್ರದಾಯ ಪ್ರಮುಖವಾಗಿ ಇರುವುದನ್ನು ಗಮನಿಸಬಹುದು. ಕುಲಪುರಾಣಗಳ ಉಗಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚಾರಿತ್ರಿಕ ಆಧಾರಗಳು ಕಂಡುಬರುತ್ತವೆ. ಕುಲ ಪುರಾಣಗಳು ಸರಿ ಸುಮಾರು ೨೦೦೦ ವರ್ಷಗಳಷ್ಟು ಹಿಂದೆಯೇ ಇದ್ದ ಹಾಗೆ ಕೆಲವು ಪ್ರಾಚೀನ ಲಿಖಿತ ಪುರಾಣ(ಸಂಸ್ಕೃತ) ಎರಡು ಸಾವಿರ ವರ್ಷಗಳಿಗಿಂತ ಪ್ರಾಚೀನವಾದುದೆಂದು ಕೆಲವು ಆಂತರಿಕ ಸಾಕ್ಷ್ಯಾಧಾರಗಳಿಂದ ತಿಳಿದುಬರುತ್ತದೆ. ಇನ್ನು ತೆಲುಗಿನ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದರೆ ತೆಲುಗಿನವರಾದ ವಿಶ್ವ ಬ್ರಾಹ್ಮಣರಿಗೆ ಆಶ್ರಿತರಾದ ರುಂಜದವರ ವಾದ್ಯವಾದ ರುಂಜ ೨೦೦೦ ವರ್ಷಗಳಷ್ಟು ಹಿಂದಿನದೆಂಬುದಕ್ಕೆ ಸಾಕ್ಷ್ಯ ನಾಗಾರ್ಜುನಕೊಂಡ ಶಿಲ್ಪಗಳಲ್ಲಿ ಕಾಣಿಸಿಕೊಂಡಿದೆ. ಶೈವ ಸಾಹಿತ್ಯದಲ್ಲಿ ರೆಡ್ಡಿಗಳ ಆಶ್ರಿತರಾದ ಪಿಚ್ಚು ಕುಂಟ್ಲರ ಪ್ರಸ್ತಾವ ಇದೆ. ಹಾಗೆಯೇ ಮಡೇಲ ಪುರಾಣದ ಕಥೆ ಬಸವ ಪುರಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಚಲಿತದಲ್ಲಿದ್ದವೆಂದು ಹೇಳಲು ಈ ಆಧಾರಗಳು ತುಂಬ ಉಪಯೋಗಕ್ಕೆ ಬರುತ್ತವೆ. ಅನಂತರ ೧೪, ೧೫, ೧೬, ೧೭ನೇ ಶತಮಾನಗಳಲ್ಲಿ ಕೂಡ ಕುಲ ಪುರಾಣಗಳು ಮತ್ತು ಆಶ್ರಿತ ಕುಲದವರು ಪುರಾಣಗಳ ಪ್ರಕಾರ ಮೌಖಿಕ, ಲಿಖಿತ ಸಾಹಿತ್ಯ ರೂಪದಲ್ಲೀ ಇರುವುದೇ ಅಲ್ಲದೆ ಆಶ್ರಿತ ಕುಲದವರ ಪುರಾಣಗಳು ಕೂಡ ಇದ್ದುವೆಂದು ಹೇಳಲು ಈ ಆಧಾರಗಳು ಉಪಯೋಗಕ್ಕೆ ಬರುತ್ತವೆ.

ಈ ಭೂಮಿ, ಆಕಾಶ, ಗಾಳಿ, ನೀರು ಅಗ್ನಿ, ಇಂತಹ ಚರಾಚರ ಸೃಷ್ಟಿ ಏನೂ ಇಲ್ಲದ ಶೂನ್ಯದಲ್ಲಿ ಎಲ್ಲರಿಗಿಂತ ಆರು ತಿಂಗಳು ಮೊದಲು ತಾತ ಜಾಂಬವಂತನು ಹುಟ್ಟಿದನು. ಆತ ಓಂಕಾರನಾದ ಮಾಡಿದ್ದರಿಂದ ಸುತ್ತಲೂ ನೀರು(ಜಲ) ಹುಟ್ಟಿತು. ಅದರಿಂದ ದೂರದಲ್ಲಿ ಒಂದು ಕಮಲ ಹುಟ್ಟಿತು. ಅದರಲ್ಲೇ ಆದಿ ಶಕ್ತಿ ಹುಟ್ಟಿದಳು. ಆದಿಶಕ್ತಿ ತನ್ನ ಹಾಗೆ ಬೇರೆ ಇನ್ನೊಬ್ಬರು ಯಾರಾದರೂ ಇದ್ದಾರೆಯೇ ಎಂದು ಸುತ್ತ ನೋಡಿದಳು. ದೂರದಲ್ಲಿ ತಾತ ಜಾಂಬವಂತ ಕಾಣಿಸಿದನು. ಆತನ ಹತ್ತಿರ ಹೋಗಿ ತನ್ನನ್ನು ರಮಿಸುವಂತೆ ಕೇಳಿದಳು. ನೀನು ನನ್ನ ಅಂಶದಿಂದ ಹುಟ್ಟಿರುವುದರಿಂದ ಹೀಗೆ ನಿನ್ನೊಡನೆ ರಮಿಸುವುದಿಲ್ಲ ಎಂದನು. ಆಗ ಇಬ್ಬರೂ ನವಿಲು ರೂಪ ತಾಳಿದರು. ಗಂಡು ನವಿಲಿನ ಕಣ್ಣಿನಿಂದ ಬಂದ ನೀರನ್ನು ಹೆಣ್ಣು ನವಿಲು ಕುಡಿಯಿತು. ಅದರಿಂದ ಹೆಣ್ಣು ನವಿಲು ಎಂದರೆ ಆದಿಶಕ್ತಿ ನವಿಲು ಮೂರು ಮೊಟ್ಟೆಗಳನ್ನು ಇಟ್ಟಿತು. ಆ ಮೂರು ಮೊಟ್ಟೆಗಳ ಮೇಲೆ ಜಾಂಬವಂತನು ಓಂಕಾರ ಶಬ್ದ ಮಾಡಿ ತನ್ನ ಮಂತ್ರ ಜಲವನ್ನು ಎರಚಲು ಮೂರು ಮೊಟ್ಟೆಗಳಿಂದ ಬ್ರಹ್ಮ, ವಿಷ್ಣು, ಮಹೇಶ್ವರರು ಹುಟ್ಟಿದರು. ಆಗ ಬ್ರಹ್ಮನ ಹತ್ತಿರ ಹೋಗಿ ಆದಿಶಕ್ತಿ ತನ್ನನ್ನು ರಮಿಸುವಂತೆ ಕೇಳಿದಳು. ನೀನು ನನಗೆ ತಾಯಿ. ಆದ್ದರಿಂದ ನಿನ್ನನ್ನು ವರಿಸುವುದಿಲ್ಲವೆಂದನು. ಆಗ ಆದಿಶಕ್ತಿ ತನ್ನ ಹಣೆಗಣ್ಣಿನಿಂದ ಆತನನ್ನು ಭಸ್ಮ ಮಾಡಿದಳು. ಹಾಗೆಯೇ ವಿಷ್ಣು ಮೂರ್ತಿಯನ್ನು ಕೋರಲು ಅವನು ತಿರಸ್ಕರಿಸಲು ಅವನನ್ನೂ ಭಸ್ಮಮಾಡಿದಳು. ಕೊನೆಗೆ ಶಿವನನ್ನು ಕೇಳಿದಳು. ಶಿವನು ವಿವೇಕದಿಂದ ಜಾಂಬವಂತನ ಸಲಹೆ ಪಡೆದು ತನಗೆ ಹಣೆಗಣ್ಣನ್ನೂ ಮಂತ್ರ ಶಕ್ತಿಯನ್ನೂ ಕೊಟ್ಟರೆ ರಮಿಸುವೆನು ಎಂದನು. ಆಕೆಗೆ ಸಮುದ್ರದೊಳಗೆ ಶುದ್ಧವಾಗಿ ಸ್ನಾನ ಮಾಡಿ ಬರುವಂತೆ ಹೇಳಿದನು. ಆದಿಶಕ್ತಿ ಆಕಡೆ ತಿರುಗಿರುವಾಗಲೇ ತನ್ನ ಹಣೆಗಣ್ಣಿನಿಂದ ಅವಳನ್ನು ದಹಿಸಿದನು. ಆಗ ಜಾಂಬವಂತನು ಆ ಮೂರು ಗುಡ್ಡೆ ಬೂದಿಯ ಬಳಿ ಬರುತ್ತಾನೆ. ಅವುಗಳಲ್ಲಿಯ ಒಂದು ಗುಡ್ಡೆಯಿಂದ ಮೂವರು ಸ್ತ್ರೀಯರನ್ನು ಸೃಷ್ಟಿಸಿದನು. ಅವರೇ ಸರಸ್ವತಿ, ಲಕ್ಷ್ಮಿ, ಪಾರ್ವತಿ, ಮತ್ತೊಂದು ಗುಡ್ಡೆಯಿಂದ ಚಿಂದು ಕುಲದ ಮೂಲಪುರುಷ, ಅವನ ಹೆಂಡತಿ ಜನಿಸಿದರು. ಮತ್ತೊಂದು ಗುಡ್ಡೆಯಿಂದ ಅಖಿಲ ಚರಾಚರ ಸೃಷ್ಟಿಯನ್ನು ಮಾಡಿದನು. ಇದು ಜಾಂಬವ ಪುರಾಣದ ಅತ್ಯಂತ ಸಂಕ್ಷಪ್ತರೂಪ. ಇದು ಮಾದಿಗರ ಕುಲಪುರಾಣ. ಈ ಜಾಂಬವನೇ ಮಾದಿಗರ ಮೂಲ ಕುಲದವರ ಮೂಲ ಪುರಷನನ್ನು ಸೃಷ್ಟಿಸಿದವನು ಮತ್ತು ಕುಲಕ್ಕೆ ಮೂಲವಾದನು. ಇದರಲ್ಲಿಯೇ ಚಿಂದುಕುಲದವರ ಹುಟ್ಟು ನುಲಕ ಚಂದಯ್ಯನ ಹುಟ್ಟು ಸಹ ಬರುತ್ತದೆ. ಈ ಕಥೆಯ ಮೂಲಕ ಈ ಕುಲಗಳೆಲ್ಲ ಅತ್ಯಂತ ಪವಿತ್ರವಾದವೂ ಅತ್ಯಂತ ಪ್ರಾಚೀನವಾದವೂ ಗೌರವಯುತವಾದವೂ ಎಂದು ಸ್ಥಾಪಿತಗೊಂಡಿದೆ.

ಕುಲ ಪುರಾಣಗಳೆಲ್ಲವೂ ಅವರ ಇತರ ಕುಲಗಳಿಗಿಂತ ಕೀಳಲ್ಲವೆಂದೂ ವಾಸ್ತವವಾಗಿ ಅವರ ಕುಲಪುರುಷನೇ ಸೃಷ್ಟಿಗೆ ಮೊದಲನೆಯವನೆಂದು ಉಳಿದವರೆಲ್ಲರೂ ಅವರ ಕುಲ ಪುರುಷನಿಗಿಂತ ಅನಂತರದವರೆಂದು ವಾದಿಸುತ್ತವೆ. ಆ ಕುಲಕ್ಕೆ ಸೇರಿದ ವೃತ್ತಿಯನ್ನು ದೇವತೆಗಳೇ ಮೊದಲು ಆರಂಭ ಮಾಡಿದರೆಂದು ವೃತ್ತಿ ಪರಿಕರಗಳನ್ನು ದೇವತೆಗಳೇ ಸೃಷ್ಟಿಸಿದರೆಂದು ಪುರಾಣ ಕಥೆಗಳು ಹೇಳುತ್ತವೆ. ಆದ್ದರಿಂದ ಆಯಾಯ ಕುಲದವರು ನಿರ್ವಹಿಸುವ ವೃತ್ತಿಗಳೆಲ್ಲಾ ಪವಿತ್ರವಾದವೆಂದು, ಅವರು ಬಳಸುವ ಉಪಕರಣಗಳು ಪವಿತ್ರವಾದವೆಂದು ಈ ಕುಲ ಪುರಾಣಗಳು ವಾದಿಸುತ್ತವೆ. ಹೀಗೆ ಕುಲಪುರಾಣಗಳು ಆಯಾ ಕುಲಗಳ ಮೂಲ ಚರಿತ್ರೆಯನ್ನು, ಸಂಸ್ಕೃತಿಯನ್ನು ವಿವರಿಸುತ್ತಿವೆ. ಕುಲ ಪುರಾಣಗಳು ರಾಷ್ಟ್ರಾದ್ಯಂತ ವ್ಯಾಪಿಸಿ, ಎಲ್ಲ ಕುಲಗಳನ್ನು ಕುರಿತು ವಿವರಿಸುತ್ತವೆ. ವಿಸ್ತೃತವಾಗಿ ವಿಪುಲವಾಗಿ ವ್ಯಾಪಿಸಿರುವ ಪ್ರಧಾನ ಜನಪದ ಸಾಹಿತ್ಯ ಪ್ರಕಾರವಿದು.

ಪಿ.ಎಸ್.ಸಿ. ಅನುವಾದ ವಿ.ಆರ್.