ತಮಿಳುನಾಡಿನ ಮರದ ಶಿಲ್ಪಗಳು ಮಣ್ಣು, ಕಲ್ಲು ಹಾಗೂ ಕೆಲವು ಲೋಹಗಳಿಂದ ತಯಾರಾಗುವಂತೆಯೇ ಮರದ ಶಿಲ್ಪಗಳೂ ತಯಾರಾಗುತ್ತವೆ. ತೇರು ಮತ್ತು ದೇವರ ಮೂರ್ತಿಗಳನ್ನು ಮಾಡುವ ವಿಧಾನಗಳಿಂದ ಮರದ ಶಿಲ್ಪಗಳು ಪ್ರತ್ಯೇಕವಾಗಿ ನಿಲ್ಲುತ್ತವೆ. ಇದು ಕಲೆಯ ವಿಧಾನಕ್ಕೇ ಸೇರಿದ್ದರೂ ಮರಶಿಲ್ಪದ ಕಲೆ ವಿಶೇಷವಾಗಿದೆ. ತಮಿಳುನಾಡಿನ ವಿಳುಪ್ಪುರಮ್, ಕಳ್ಳಕ್ಕುರಿಚ್ಚಿ, ಚಿನ್ಸೇಲಂ, ಪೆರಂಬಲೂರ್ ಜಿಲ್ಲೆಯ ಅರುಂಬಾವೂರ್ ಮತ್ತು ಸುತ್ತಮುತ್ತಲಿನ ಊರುಗಳಲ್ಲೂ ಅರುಂಬಲೂರೇ ಇದಕ್ಕೆ ಹೆಚ್ಚು ಪ್ರಸಿದ್ಧ. ಲೋಹ ಮತ್ತು ಕಲ್ಲುಗಳಿಂದ ತಯಾರಾಗುವ ಶಿಲ್ಪಗಳು, ಶಾಸ್ತ್ರ, ಆಗಮ ವಿಧಿಗಳಿಗನುಸಾರವಾಗಿ ರೂಪುಗೊಂಡರೆ, ಮರದ ಶಿಲ್ಪಗಳು ಅಳತೆ, ಅಂದ ಮುಂತಾದವುಗಳನ್ನು ಪ್ರಧಾನವಾಗಿಟ್ಟುಕೊಂಡು ತಯಾರಾಗುವಂತೆ ಕಾಣುತ್ತದೆ.

ಮಾವು, ಹಲಸು, ವಾಗೈ ಎಂದು ಪ್ರಾಂತೀಯವಾಗಿ ಪ್ರಸಿದ್ಧವಾದ ಒಂದು ಜಾತಿಯ ಹೂವಿನ ಮರ, ಮಾವಿಲಂದಮ್ ಎಂದು ಪ್ರಸಿದ್ಧವಾದ ಮನೆಮದ್ದಿಗೆ ಬಳಸಲ್ಪಡುವ ಪೊದೆ ಜಾತಿಯ ಗಿಡ, ತೇಗ, ಹಾಗೂ ಬೆತ್ತದ ಜಾತಿಮರಗಳನ್ನು ಮರದ ಶಿಲ್ಪಗಳಿಗಾಗಿ ಬಳಸಲಾಗುತ್ತದೆ. ಕಾಳಿಯ ವೇಷವನ್ನು ತೊಡುವವರು ಕಾಳಿಯ ಮುಖವನ್ನು ಅತ್ತಿಮರದಿಂದಲೂ, ಗಣಪತಿಯ ಶಿಲ್ಪವನ್ನು ಹಾಲು ಸೋರುವ ‘ಎರುಕ್ಕು’ ಎಂಬ ಒಂದು ವಿಧ ಪೊದೆಯಾಗಿ ಬೆಳೆಯುವ ಗಿಡದ ಕಾಂಡದಿಂದಲೂ ಮಾಡಲಾಗುತ್ತದೆ. ತೇರುಗಳಲ್ಲಿ ಕಂಡರಿಸುವ ಶಿಲ್ಪಗಳನ್ನು ಸಾಮಾನ್ಯವಾಗಿ ಬಿದಿರು ಜಾತಿಯ ಪೊದೆಯಂಥ ಗಿಡದ ಕಾಂಡಗಳಿಂದಲೋ ತೇಗದಂಥ ಮರಗಳಿಂದಲೋ ತಯಾರಿಸಲಾಗುತ್ತದೆ.

ಮರಗೆಲಸದ ಮೂಲಕ ಹುಟ್ಟಿಕೊಂಡ, ಮರಶಿಲ್ಪಗಳನ್ನುಕೆತ್ತುವ ಕಲೆ ಶೈವ, ವಷ್ಣವ, ಬೌದ್ಧ, ಶ್ರವಣ (ಜೈನ) ದೇವರುಗಳು, ಸಮಾಜೋದ್ಧಾರಕರು, ಸಂಸ್ಥಾಪಕರು, ದೇವರ ವಾಹನಗಲು, ಆಲಂಕಾರಿಕ ವಸ್ತು, ಒಡವೆಗಲು, ವಾದ್ಯಗಳು, ಆಯುಧಗಳು, ಸರಪಳಿಗಳು ಮುಂತಾದವುಗಳನ್ನೂ ರಚಿಸುವ ಮಟ್ಟಕ್ಕೆ ತಲುಪಿತು.

ವಿನಾಯಕ, ಮುರುಗ, ಕೃಷ್ಣ, ಹನುಮ, ಗೋಕುಲಕೃಷ್ಣ, ವೆಂಕಟೇಶ, ಅಷ್ಟಲಕ್ಷ್ಮಿಯರು, ನಟರಾಜ, ದಕ್ಷಿಣಾಮೂರ್ತಿ ಮುಂತಾದ ದೇವತಾಮೂರ್ತಿಗಳೂ, ಮಾರಿಯಮ್ಮ, ಕಾಳಿಯಮ್ಮ, ದ್ರೌಪದಿಯಮ್ಮ, ಕಾತ್ತವರಾಯ ಮುಂತಾದ ಗ್ರಾಮೀಣ ಜನಪದ ದೇವತೆಗಳೂ ಮರಶಿಲ್ಪಗಳಲ್ಲಿ ಕಂಡುಬರುತ್ತವೆ. ಮಕ್ಕಳ ಆಟಿಕೆಗಳಲ್ಲೊಂದಾದ ಮರಪಾಚಿ ಬೊಂಬೆ (ಚಂದನದ ಗೊಂಬೆ) ಮರದ ಶಿಲ್ಪಗಳಲ್ಲಿ ಉತ್ತಮಮಟ್ಟದ್ದು.

ಹಿಂದಿನ ಕಾಲದ ಮರದ ಶಿಲ್ಪಗಳಲ್ಲಿ ಬುದ್ಧ, ಕ್ರಿಸ್ತ, ತಿರುವಳ್ಳುವರ್ ಮುಂತಾದವರ ಮೂರ್ತಿಗಳೂ, ಆ ಕಾಲದ ರಾಜಕೀಯ ಧುರೀಣರ ಮೂರ್ತಿಗಳೂ ಇರುತ್ತಿದ್ದುವು. ಮರದ ಅಳತೆ, ಗುಣ, ಮೌಲ್ಯಯುತವಾದ ಕೆತ್ತನೆ ಮುಂತಾದವುಗಳ ಆಧಾರದ ಮೇಲೆ ಅವು ವಿಕ್ರಯವಾಗುತ್ತವೆ. ಈ ಕಲೆಯ ಕುರಿತ ಅರಿವಿನ ಹಿನ್ನೆಲೆಯಲ್ಲಿ ಹಲವು ತಲೆಮಾರುಗಳಿಂದ ಸಾಗಿ ಬಂದ ಕಲೆಗಾರರ ಕುಟುಂಬಗಳು ‘ವಿಶ್ವಕರ‍್ಮ’ ಎಂಬುದಾಗಿ ಪ್ರಸಿದ್ಧರಾಗಿ, ಬೋಯರ್ ಎಂಬ ಜಾತಿಗೆ ಸೇರಿದ ಸ್ಥಪತಿಗಳಾಗಿ ಹೆಸರಾಗಿದ್ದಾರೆ.

– ಪಿ.ಎಸ್.ವಿ. ಅನುವಾದ ಜಿ.ಎನ್.

ತಮಿಳುನಾಡಿನ ಲೋಹದ ಉಪಕರಣಗಳು ಸಂಗೀತದಲ್ಲಿ ಮತ್ತು ಧಾರ್ಮಿಕ ಸಂದರ್ಭಗಳಲ್ಲಿ ಬಳಕೆಯಾಗುವ ಅನೇಕ ಲೋಹದ ಉಪಕರಣಗಳಿವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ.

ಗೆಜ್ಜೆ : ಕಿರುಗೆಜ್ಜೆ, ದೊಡ್ಡ ಗೆಜ್ಜೆ ಎಂದು ಎರಡು ವಿಧಗಳಿವೆ. ಕರಗ, ಕಾವಡಿ, ಮರಗಾಲಿನ ಕುದುರೆ, ಒಯಿಲಾಟ್ಟಂ ಮೊದಲಾದ ಕುಣಿತಗಳನ್ನು ಮಾಡುವವರು ಕಾಲುಗಳಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ನರ್ತಿಸುತ್ತಾರೆ.

ದೊಡ್ಡ ಗೆಜ್ಜೆ ಅಂದರೆ ದೊಡ್ಡ ಗೆಜ್ಜೆ ಎಂದು ಎರಡು ವಿಧಗಳಿವೆ. ಕರಗ, ಕಾವಡಿ, ಮರಗಾಲಿನ ಕುದುರೆ, ಒಯಿಲಾಟ್ಟಂ ಮೊದಲಾದ ಕುಣಿತಗಳನ್ನು ಮಾಡುವವರು ಕಾಲುಗಳಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ನರ್ತಿಸುತ್ತಾರೆ.

ದೊಡ್ಡ ಗೆಜ್ಜೆ ಅಂದರೆ ದೊಡ್ಡ ಗೆಜ್ಜೆಗಳನ್ನು ಒಂದು ಚರ್ಮದ ಪಟ್ಟಿಗೆ ಹೊಂದಿಸಿರುತ್ತಾರೆ. ಕಾಲಗಂಟಿನಿಂದ ಮೊಣಕಾಲಿಮನವರೆಗೆ ದೊಡ್ಡ ಗೆಜ್ಜೆಗಳನ್ನು ಧರಿಸಿಕೊಳ್ಳುತ್ತಾರೆ. ಈರೋಡು, ಪಲ್ಲಡಂ ಸುತ್ತುಮುತ್ತಲ ಪ್ರದೇಶಗಳಲ್ಲಿ ದೊಡ್ಡ ಗೆಜ್ಜೆಯಾಟ ಗಂಡಸರಿಂದ ಪ್ರದರ್ಶಿಸಲ್ಪಡುತ್ತದೆ. ಕೆಲವೊಮ್ಮೆ ಕಾವಡಿಯಾಟದೊಂದಿಗೂ ದೊಡ್ಡ ಗೆಜ್ಜೆಯಾಟಕ್ಕೆ ಅವಕಾಶ ದೊರೆಯುತ್ತದೆ.

ದೊಡ್ಡತಾಳ : ‘ತಿಡುಂ’ ಎಂಬ ಸಂಗೀತವಾದ್ಯವನ್ನು ನುಡಿಸುವವರು ವೃತ್ತಾಕಾರವಾಗಿ ಸೇರಿ ನಿಂತು ತಿಡುಂ ಸಂಗೀತದ ಉಪಕರಣಗಳನ್ನು ಮೊಳಗಿಸುವರು. ಈ ಸಂದರ್ಭದಲ್ಲಿ ಬಹಳ ಘನವಾದ ದೊಡ್ಡ ತಾಳವನ್ನು ತಟ್ಟಿ ಧ್ವನಿಯನ್ನು ಹೊರಡಿಸುವರು.

ಜಾಗಂಟೆ : ವಿಷ್ಣುವಿನ ದೇವಸ್ಥಾನದಲ್ಲಿ ಜಾಗಂಟೆ ಪ್ರಧಾನವಾದ ಸ್ಥಾನವನ್ನು ಪಡೆಯುತ್ತದೆ. ದಾಸರುಗಳು ಶಂಖ ಜಾಗಟೆಗಳನ್ನು ಒಟ್ಟಿಗೆ ಸೇರಿಸಿ ಮೊಳಗಿಸುತ್ತಾರೆ. ಕೇರಳ ರಾಜ್ಯದಿಂದ ಪಳನಿಗೆ ಬರುವ ಜನರು ಗುಂಪು ಗುಂಪಾಗಿ ಶಂಖಗಳನ್ನು ಊದಿಕೊಂಡೂ ಜಾಗಂಟೆಗಳನ್ನು ಬಡಿಯುತ್ತಲೂ ಬರುತ್ತಾರೆ. ಸಾವಿನ ಮನೆಗಳಲ್ಲಿ ಶಂಖವನ್ನು ಜಾಗಂಟೆಗಳನ್ನೂ ನುಡಿಸಲಾಗುತ್ತದೆ.

ಮಣಿ : ಗ್ರಾಮೀಣ ಪ್ರದೇಶದ ದೇವಸ್ಥಾನಗಳಲ್ಲಿಪೂಜೆಯ ಸಮಯದಲ್ಲಿ ಮಣಿಗಳನ್ನು ಬಾರಿಸುತ್ತಾರೆ. ಮಣಿಯ ಶಬ್ದವನ್ನು ಕೇಳಿ ದುರ್ದೇವತೆಗಳು ಓಡಿ ಬಿಡುತ್ತವೆಯೆಂದೂ ಗ್ರಾಮೀಣ ಜನರು ನಂಬುತ್ತಾರೆ.

ಪಿ.ಎಸ್.ಎಂ. ಅನುವಾದ ಎ.ಎಸ್.ಬಿ.

ತಮಿಳುನಾಡಿನ ವಾದ್ಯಗಳು ಜನಪದ ವಾದ್ಯಗಳು ಜನಪದರಿಂದಲೇ ತಯಾರಾಗಿ ಇರುವಂತಹವು. ತಲೆತಲಾಂತರದಿಂದ ಅವು ಬಳಕೆಯಲ್ಲಿವೆ. ಪಕ್ಷಿಗಳು, ಪ್ರಾಣಿಗಳ ಧ್ವನಿಯನ್ನು ಆಲಿಸಿದ ಆದಿಮಾನ ಅವುಗಳ ಸ್ವರ ಅನುಕರಣೆ ಮಾಡುವ ರೀತಿಯಲ್ಲಿ ಜನಪದ ವಾದ್ಯಗಳನ್ನು ರೂಪಿಸಿಕೊಂಡ. ಪ್ರಕೃತಿಯಲ್ಲಿ ಸಹಜವಾಗಿ ದೊರೆತ ‘ಶಂಖ’ವನ್ನು ಊದುವ ವಾದ್ಯವಾಗಿಸಿಕೊಂಡ, ಬಿದಿರಿನಿಂದ ‘ಕೊಳಲು’ ಮಾಡಿ ಊದಿದ. ಜನಪದರು ಸಾಮೂಹಿಕ ಆಚರಣೆಯ ಸಂದರ್ಭದಲ್ಲಿ ಜನಪದ ವಾದ್ಯಗಳನ್ನು ಮೊಳಗಿಸುತ್ತಿದ್ದರು. ಆದಿಮಾನವನ ವೃತ್ತಿ ಮತ್ತು ಆಚರಣೆಗಳಲ್ಲಿ ಜನಪದ ವಾದ್ಯಗಳು ಹಾಸುಹೊಕ್ಕಾಗಿವೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಆಚರಣೆಗೊಳ್ಳುವ ಜನಪದ ಉತ್ಸವಗಳಲ್ಲಿ ಜನಪದ ವಾದ್ಯಗಳು ಪ್ರಮುಖ ಸ್ಥಾನವನ್ನು ಪಡೆದಿವೆ.

ಚರ್ಮವಾದ್ಯಗಳು : ಚರ್ಮ ಹೊದಿಸಿ ಮಾಡಲ್ಪಟ್ಟ ವಾದ್ಯಗಳೇ ಚರ್ಮವಾದ್ಯಗಳು. ಜನಪದ ಸಂಗೀತದ ಜೀವಾಳ ಈ ಚರ್ಮವಾದ್ಯಗಳು. ಜನಪದ ಸಂಗೀತದ ಜೀವಾಳ ಈ ಚರ್ಮವಾದ್ಯಗಳು. ಆದಿಮಾನವ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮದಿಂದ ಚರ್ಮವಾದ್ಯಗಳನ್ನು ಮಾಡಿಕೊಂಡ. ಒಂದು ಮರವನ್ನು ಕಡಿದು ಅದರ ಒಳಭಾಗವನ್ನು ಕೊರೆದು, ಅದರ ಒಂದು ಬದಿಯಲ್ಲಿ ಅಥವಾ ಎರಡುದ್ದಿಗಳಲ್ಲಿ ಚರ್ಮವನ್ನು ಹೊದಿಸಿ ಚರ್ಮವಾದ್ಯಗಳನ್ನು ಮಾಡಿದ. ಮಣ್ಣಿನ ಮಡಕೆಗಳ ಬಾಯಿಗೆ ಚರ್ಮವನ್ನು ಹೊದಿಸಿ ಸಹ ಚರ್ಮವಾದ್ಯಗಳನ್ನು ಮಾಡಿಕೊಳ್ಳುತ್ತಿದ್ದ. ಹಲವು ಬಗೆಯ ಚರ್ಮವಾದ್ಯಗಳು ಈಗ ಬಳಕೆಯಲ್ಲಿವೆ. ಚಿಕ್ಕಹರೆ ಮೊದಲುಗೊಂಡು ದೊಡ್ಡ ನಗಾರಿಯವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಚರ್ಮವಾದ್ಯಗಳು ಬಳಕೆಯಲ್ಲಿವೆ. ಖಂಜರಾ, ತಬಲ, ದಪ್ಪು, ನಗಾರಿ, ಚಂಡೆ ಮದ್ದಲೆ, ಹರೆ, ಡಮರುಗ, ತಮಟೆ ಮುಂತಾದುವು ಪ್ರಮುಖ ಚರ್ಮವಾದ್ಯಗಳಾಗಿವೆ.

78

ಕೊಂಗು ಪ್ರದೇಶದಲ್ಲಿ ಬಾಯಿ ಅಗಲವಿರುವ ಮಡಕೆಗೆ ಚರ್ಮವನ್ನು ಹೊದಿಸಿ ಸಣ್ಣ ಕಡ್ಡಿಗಳ ನೆರವಿನಿಂದ ಸಾಲಾಗಿ ನಿಂತು ಬಾರಿಸುತ್ತಾ ಮೊಳಗಿಸುತ್ತಾರೆ. ಇದಕ್ಕೆ ‘ಮೊಡಾಮೇಳಂ’ (ಮಡಮೇಳ) ಎಂದು ಕರೆಯುತ್ತಾರೆ. ಮಣ್ಣಿನ ಪಾತ್ರೆಯಿಂದ ಮಾಡಿದ ಈ ಚಮವಾದ್ಯ ಅತ್ಯಂತ ಪ್ರಾಚೀನವಾದದ್ದು. ಒಂದು ದೊಡ್ಡ ಮಣ್ಣಿನ ಕುಂಭದ ಬಾಯಿಗೆ ಚರ್ಮವನ್ನು ಹೊದಿಸಿ ಸಣ್ಣಕಡ್ಡಿಗಳಿಂದ ಬಾರಿಸುತ್ತಾರೆ. ಇದಕ್ಕೆ ‘ಮೊಡಾಮತ್ತಳಂ’ (ಮಡಮದ್ದಲೆ) ಎಂದು ಹೆಸರು.

ಜೋರು ಸದ್ದಿಗೆ ಆಡಿನ ಚರ್ಮವನ್ನು, ಸಣ್ಣ ಸದ್ದಿಗೆ ಜಿಂಕೆಯ ಚರ್ಮವನ್ನು ಪ್ರಾಚೀನ ತಮಿಳರು ಬಳಸುತ್ತಿದ್ದರು. ಖಂಜರಾ ತಯಾರಿಸಲು ಉಡದ ಚರ್ಮವನ್ನು ಬಳಸುತ್ತಾರೆ. ತಬಲ ತಯಾರಿಕೆಗೆ ಕರುವಿನ ಚರ್ಮವನ್ನು ಬಳಸುತ್ತಾರೆ. ಆಡಿನ ಚರ್ಮದ ರಬ್ಬರಿನಂತಹ ಭಾಗದಿಂದ ಹರೆಯನ್ನು ತಯಾರಿಸುತ್ತಾರೆ. ನಗಾರಿ, ಮದ್ದಲೆ, ಚಂಡೆ ಮುಂತಾದ ದೊಡ್ಡ ದೊಡ್ಡ ಚರ್ಮದ ವಾದ್ಯಗಳಿಗೂ ಪ್ರಾಣಿಗಳ ಚರ್ಮ ಹೊದಿಸಿ ಚರ್ಮಪಟ್ಟಿಯಿಂದ ಅವುಗಳನ್ನು ಬಿಗಿದು ಕಟ್ಟುತ್ತಾರೆ.

ಕೊಂಗುನಾಡಿನಲ್ಲಿ ದೊಡ್ಡ ನಗಾರಿಗಳು, ‘ದಿಡುಂ’ (ಚಂಡೆ) ವಾದ್ಯಗಳು ಹೆಚ್ಚು ಬಳಕೆಯಲ್ಲಿವೆ. ಅಲಂಕೃತಗೊಂಡ ‘ದೇವರ ನಂದಿಯ’ ಎರಡು ಬದಿಗಳಲ್ಲೂ ನಗಾರಿಗಳನ್ನು ಕಟ್ಟಿ ನಂದಿಯ ಮೇಲೆ ಒಬ್ಬರು ಹತ್ತಿ ಕುಳಿತುಕೊಂಡು ನಗಾರಿಗಳನ್ನು ಬಾರಿಸುವುದನ್ನು ಕೊಂಗುನಾಡಿನಲ್ಲಿ ಕಾಣಬಹುದು. ಜನಪದ ಕಥೆಗಳನ್ನು ಹಾಡುವವರು ಕೊಂಗುನಾಡಿನ ಸುತ್ತಮುತ್ತ ಬುಡಬುಡಕೆ ಆಡಿಸಿಕೊಂಡು ಕಥೆ – ಹಾಡನ್ನು ಹೇಳುತ್ತಾರೆ. ಹಿಂದೆ ‘ತಕ್ಕೈ’ ಎಂಬ ಚರ್ಮವಾದ್ಯದ ಮೂಲಕ ರಾಮಾಯಣದ ಕತೆಯನ್ನು ಹೇಳುತ್ತಿದ್ದರು.

ಹಿಂದಿನ ಕಾಲದಲ್ಲಿ ಸುದ್ದಿಯನ್ನು ಸಾರಲು ಚರ್ಮವಾದ್ಯಗಳನ್ನು ಬಳಸುತ್ತಿದ್ದರು. ಯುದ್ಧವನ್ನು ಸಾರಲು ಸಹ ಕೆಲವು ವಾದ್ಯಗಳು ಬಳಕೆಯಾಗುತ್ತಿದ್ದವು. ದೇವಸ್ಥಾನಗಳ ಉತ್ಸವದ ಸಂದರ್ಭದಲ್ಲಿ ಚರ್ಮವಾದ್ಯಗಳನ್ನು ಮೊಳಗಿಸಲಾಗುತ್ತಿತ್ತು. ವಳ್ಳುವನ್ ಐರಾವತದ (ಆನೆಯ) ಮೇಲೆ ಕುಳಿತುಕೊಂಡು ಮದ್ದಲೆಯನ್ನು ಬಾರಿಸುತ್ತಾ ಇಂದ್ರನ ಹಬ್ಬವನ್ನು ಸಾರಿದನೆಂದು ಸಿಲಪ್ಪದಿಗಾರಂ ಮತ್ತು ಮಣಿಮೇಖಲೈ ಕೃತಿಗಳಲ್ಲಿ ಹೇಳಲಾಗಿದೆ. ಅರಸನ ವಿಜಯದ ಸಂಕೇತಗಳಲ್ಲಿ ‘ಮದದಲೆ’ ಬಾರಿಸುವುದೂ ಕೂಡ ಒಂದು.

ಚರ್ಮವಾದ್ಯಗಳನ್ನು ಏಕಮುಖವಾದ್ಯಗಳು, ದ್ವಿಮುಖ ವಾದ್ಯಗಳೆಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಮೃದಂಗ, ಘಟ, ತಬಲ ಮುಂತಾದವುಗಳನ್ನು ಕೈಗಳಿಂದ ಬಾರಿಸಲಾಗುತ್ತದೆ. ತಮಟೆ, ತಬಲ ಮುಂತಾದ ವಾದ್ಯಗಳನ್ನು ಕಡ್ಡಿಗಳಿಂದ ಬಾರಿಸಲಾಗುತ್ತದೆ. ಸಣ್ಣಕೋಲುಗಳಿಂದ ಚಂಡೆ, ಮದ್ದಲೆ, ನಗಾರಿ, ಡೊಳ್ಳು ಮುಂತಾದವುಗಳನ್ನು ಬಾರಿಸುತ್ತಾರೆ.

ಮೃದಂಗ, ತಬಲ, ಖಂಜರಾ ಮುಂತಾದ ವಾದ್ಯಗಳು ಸಂಗೀತ ಕಛೇರಿಗಳಲ್ಲಿ ಬಳಕೆಯಾಗುತ್ತವೆ. ನಗಾರಿ, ಭೇರಿ ಮುಂತಾದವು ಸಂಗೀತ ಕಛೇರಿಗಳಲ್ಲಿ ಬಳಕೆಯಾಗುವುದಿಲ್ಲ. ಆದರೂ ಬೇರೆ ಅನೇಕ ಸಂದರ್ಭಗಳಲ್ಲಿ ಬಳಕೆಯಾಗುತ್ತವೆ. ‘ದಪ್ಪಾಟ’, ‘ಚಂಡೆ ಆಟ’ ಮೊದಲಾದವು ಚರ್ಮವಾದ್ಯಗಳನ್ನು ಬಳಸಿ ಆಡುವ ಪ್ರದರ್ಶಕ ಕಲೆಗಳಾಗಿವೆ.

ಪ್ರಾಚೀನ ಕಾಲದಲ್ಲಿ ಚರ್ಮವಾದ್ಯಗಳನ್ನು ನಿರ್ದಿಷ್ಟ ಪಂಗಡದವರು ಮಾತ್ರ ಬಳಸುತ್ತಿದ್ದರು. ತುಡಿಯನ್‌ಕುಡಿ, ಪಾಣನ್‌ಕುಡಿ, ಪೞಯನ್‌ಕುಡಿ, ಕಡಂಬನ್ ಕುಡಿ ಮುಂತಾದ ಹೆಸರುಗಳು ಚರ್ಮವಾದ್ಯಗಳನ್ನು ಮೊಳಗಿಸಿದ್ದರಿಂದ ಬಂದ ಹೆಸರುಗಳಾಗಿವೆ. ಮೇಲ್ಕಂಡ ಜಾತಿ ಹೆಸರುಗಳ ಮೂಲ ಪ್ರಾಚೀನ ತಮಿಳುನಾಡಿನಲ್ಲಿ ಜಾತಿ ಹಿನ್ನೆಲೆಯೊಂದಿಗೆ ಸಂಗೀತ ರೂಢಿಯಲ್ಲಿತ್ತು ಎಂದು ತಿಳಿದು ಬರುತ್ತವೆ.

ಪುರಾತನ ತಮಿಳು ಸಾಹಿತ್ಯ ಸಿಲಪ್ಪದಿಗಾರಂ, ಸಾಂಪ್ರದಾಯಿಕ ಸಂಗೀತ ಗ್ರಂಥ ಮತ್ತು ಅದರಲ್ಲಿರುವ ಜನಪದ ಉಕ್ತಿಗಳ ಮೂಲಕ ಅನೇಕ ಚರ್ಮವಾದ್ಯಗಳು ಬಳಕೆಯಲ್ಲಿದ್ದವೆಂದು ತಿಳಿಯಬಹುದು. ಅವುಗಳ ಪಟ್ಟಿ ಹೀಗಿವೆ:

ಅಡಕ್ಕಂ, ಅಂದಿರಿ, ಅಮುದಕುಂಡಲಿ, ಅರಿಪ್ಪರೈ, ಅಗುಳಿ, ಆಮಂದ್ರಿಗೈ (ಆಮಂತ್ರಿಕೆ), ಆವಂಜಿ, ಉಡಲ್, ಉಡುಕ್ಕೈ (ಬುಡಬುಡಕೆ), ಉರುಮಿ (ಹರೆ), ಎಲ್ಲಿರಿ, ಏೞಂಗೋಳ್, ಒರುವಾಯ್ ಕದೈ, ಖಂಜರಾ, ಕಣ್‌ವಿಡು ತೂಂಬು, ಕಣ್ಣಪ್ಪೞ, ಕಣ್ಣಿನಿ, ಕರಡಿಗೈ, ಕಲ್ಲಲ್, ಕಲ್ಲಲಗು, ಕಲ್ಲವಡತ್ತಿರಳ್, ಕಿಣೈ, ಕಿರಿಕಟ್ಟಿ (ಗಿರಗಟ್ಟೆ), ಕುಡಮುಳಾ, ಕುಂಡಲಂ, ಗುಮ್ಮಡಿ, ಕೈತ್ತಿರಿ, ಕೊಟ್ಟು, ಕೋಟ್‌ಪಳೈ, ಸಗಡೈ, ಚಂದ್ರಪಿರೈ, ಸೂರ್ಯಪಿರೈ, ಚಂದ್ರವಲಯಂ, ಸಲ್ಲಿರಿ, ಸಲ್ಲಿಗೈ, ಸಿರುಪೞ ಸುತ್ತಮತ್ತಳಂ (ಶುದ್ಧಮದ್ದಲೆ), ಸೆಂಡಾ, ಡಮಾರಂ, ತಕ್ಕೈ, ತಗುಣಿತಂ, ತಟ್ಟೈ, ತಡಾರಿ, ತಂಡೋಲ್, ತಣ್ಣುಮೈ, ತಬಲ, ತಮರುಗಂ (ಡಮರುಗ) ದಮುಕು, ತವಂಡೈ, ತವಿಲ್, ದಾರಸಿಪಟ್ಟೈ, ತಿಮಿಲಾ, ತುಡಿ (ದುಡಿ), ತುಡುಮೈ, ತುತ್ತಿರಿ (ತುತ್ತೂರಿ), ದುಂಧುಭಿ, ತೂರಿಯಂ, ತೊಂಡಗ ಸಿರುಪಳೈ, ತೋಲಕ (ಡೋಲಕ) ನಗರಿ (ನಗಾರಿ), ನಿಸಾಳಂ, ಪಡವಂ, ಪಡಲಿಗೈ, ಪಂಬೈ, ಪದಲೈ, ಪೞ, ಪಾಗಂ, ಪೂಮಾಡು ವಾದ್ಯಂ, ಪೆರುಂಪೞ, ಬೆಲ್ಜಿಯಂ, ಕನ್ನಾಡಿ ತಾಳಂ, ಭೇರಿ ಮಗುಳಿ, ಮತ್ತಾಳಂ (ಮದ್ದಳೆ) ಮೃದಂಗಂ, ಮುರಸು ಮುರುಡು, ಮುಳವು, ಮೇಳಂ, ಎಮಾಂದೈ, ವಿರಲೇಯಿ, ಜಮಾಲಿಕ ಇತ್ಯಾದಿ. ತಮಿಳರ ವಾದ್ಯಗಳ ತಮಿಳು ಜನಪದರ ಸಾಂಸ್ಕೃತಿಕ ಅಭಿವಯ್ಕ್ತಿಗಳಾಗಿವೆ.

ಊದುವ ವಾದ್ಯಗಳು :

. ಪುಲ್ಲಾಂಗುಳಲ್ (ಪಿಳ್ಳಂಗೋವಿ / ಕೊಳಲು): ಊದುವ ವಾದ್ಯಗಳಲ್ಲಿ ಅತ್ಯಂತ ಪುರಾತನವಾದುದು. ಪಿಳ್ಳಂಗೋವಿ ಅಥವಾ ಕೊಳಲು. ಪಳನಿಮಲೆ ಸುತ್ತಮುತ್ತ ಕಂಡುಬರುವ ಪಳಿಯರ್ ಎಂಬ ಬುಡಕಟ್ಟು ಜನರು ಕೊಳಲು ವಾದನ ಮಾಡುತ್ತಾರೆ. ಸೋಲಿಗ ಬುಡಕಟ್ಟು ಜನರು ಸ್ವಲ್ಪ ಉದ್ದವಾದ ಕೊಳಲನ್ನು ಹಾಗೂ ದೊಡ್ಡ ಬಿದಿರು ಕೊಳವೆಗೆ ರಂಧ್ರ ಕೊರೆದು ದಪ್ಪನೆಯ ಕೊಳಲನ್ನು ವಾದನ ಮಾಡುತ್ತಾರೆ. ಕಂಬಳದ ನಾಯಕ ಜನರು ದೈವರಾಧನೆಯ ಸಂದರ್ಭದಲ್ಲಿ ‘ಸಿಂಗುಳಲ್’ (ದೊಡ್ನು) ಎಂಬ ಉದ್ದವಾದ ಕೊಳಲನ್ನು ಹಾಗೂ ಸೇವೆಯಾಟದ ಸಂದರ್ಭದಲ್ಲಿ ಚಿಕ್ಕ ಕೊಳಲನ್ನು ವಾದನ ಮಾಡುತ್ತಾರೆ. ಇದೇ ಜನರು ಕಣಿ ಹೇಳುವಾಗ ಕಬ್ಬಿನ ಜಲ್ಲೆಯಂತಹ ತುಂಬಾ ಉದ್ದವಾದ ಕೊಳಲನ್ನು (ಗಣೆ) ವದಾನ ಮಾಡುತ್ತಾರೆ.

) ಸತ್ತಕುಳಲ್ (ಸದ್ದಿನ ಕೊಳಲು) : ಬುಡಕಟ್ಟು ಜನರು ಪಳನಿ ಮುರುಗನ್ ದೇವಸ್ಥಾನಕ್ಕೆ ಕಾವಡಿ ಹೊತ್ತು ಬರುವಾಗ ‘ಸದ್ದಿನ ಕೊಳಲನ್ನು’ (ಸತ್ತಕುಳಲ್) ಊದುತ್ತ ಬರುತ್ತಾನೆ. ಸದ್ದಿನ ಕೊಳಲು ಎರಡು ಅಡಿ ಉದ್ದ ಇರುತ್ತದೆ. ನಾದಸ್ವರದ ಶ್ರುತಿಗಿಂತ ಸದ್ದಿನ ಕೊಳಲಿನ ಶೃತಿ ಭಿನ್ನವಾಗಿರುತ್ತದೆ.

ಕೊಡೈಕೆನಾಲ್ ಬೆಟ್ಟದಲ್ಲಿ ವಾಸಿಸುವ ಪಳಿಯರ್ ಬುಡಕಟ್ಟು ಜನರು ಚಿಕ್ಕನಾದಸ್ವರವನ್ನು ವಾದನ ಮಾಡುತ್ತಾರೆ. ಈ ವಾದ್ಯವನ್ನು ಊದುವುದು ಕಷ್ಟ. ಆದರೂ ಇದರ ನಾದ ಎಲ್ಲರನ್ನು ಆಕರ್ಷಿಸುವ ರೀತಿಯಲ್ಲಿ ಹಕ್ಕಿಯ ಧ್ವನಿಯಂತೆ ಬಹಳ ಇಂಪಾಗಿರುತ್ತದೆ.

. ಶಂಕು (ಶಂಖ) : ಶಂಖ – ನಿಸರ್ಗದಲ್ಲಿಸಹಜವಾಗಿ ದೊರಕುವ ಒಂದು ಊದುವ ವಾದ್ಯ. ಅದನ್ನು ‘ಕೋಡು’, ‘ವಳೈ’ ಎಂದೂ ಕರೆಯುತ್ತಾರೆ. ಪ್ರಾಚೀನ ತಮಿಳರು ಶಂಖವನ್ನು ಮಂಗಳವಾದ್ಯವೆಂದು ಭಾವಿಸಿದ್ದರು. ಶಂಖವನ್ನು ಪಂಚವಾದ್ಯಗಳಲ್ಲಿ ಪ್ರಮುಖವಾದುದೆಂದು ಪರಿಗಣಿಸಲಾಗಿದೆ. ರಾಜರ ವಿಜಯವನ್ನು ಸಾರುವಾಗ ಶಂಖರವನ್ನು ಊದಲಾಗುತ್ತದೆ. ವಿಷ್ಣುವಿನ ಎಡಹಸ್ತದಲ್ಲಿ ಶಂಖ ನೆಲೆಗೊಂಡಿದೆ. ಇದಕ್ಕೆ ‘ಪಾಂಚಜನ್ಯ’ ಎಂದು ಹೆಸರು. ಕೋಣಿಗೆ ಸಮೀಪದ ಕಾರಮಡೈ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪುರಟ್ಟಾಸಿ (ಸೆಪ್ಟೆಂಬರ್ – ಅಕ್ಟೋಬರ್) ತಿಂಗಳಲ್ಲಿ ಬರುವ ಶನಿವಾರಗಳಲ್ಲಿ ನೂರಾರು ದಾಸರು ಶಂಖವನ್ನು ಊದಿ ಜಾಗಟೆಯನ್ನು ಬಾರಿಸುತ್ತಾ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ರಂಗನಾಥಸ್ವಾಮಿ ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ದಾಸರು ಸಾಲುಸಾಲಾಗಿ ನಿಂತು ಶಂಖ ಊದಿ ಪೂಜೆ ಮಾಡುತ್ತಾರೆ. ಶಂಖದಲ್ಲಿ ವಲಂಬುರಿ ಶಂಖ, ಇಡಂಬುರಿ ಶಂಖ ಎಂದು ಎರಡು ವಿಧಗಳಿವೆ. ವಲಂಬುರಿ ಶಂಖದ ನಾದ ಬಹಳ ವಿಶಿಷ್ಟವಾದದ್ದು ಎನ್ನುತ್ತಾರೆ. ಅರಸರ ಯುದ್ಧದ ಬಿಡಾರಗಳಲ್ಲಿ ‘ಶಂಖ’ವನ್ನು ಊದಿರುವ ಬಗ್ಗೆ ಸಂಘಂ ಸಾಹಿತ್ಯದಲ್ಲಿ ಪ್ರಸ್ತಾಪಿಸಲಾಗಿದೆ.

. ಕೊಂಬು : ಕೊಂಬು ಬಹಳ ಪ್ರಾಚೀನವಾದ ಊದುವ ವಾದ್ಯ. ಜನಪದರಲ್ಲಿ, ಬುಡಕಟ್ಟು ಜನರಲ್ಲಿ ಕೊಂಬು ಊದುವುದು ಹೆಚ್ಚು ಬಳಕೆಯಲ್ಲಿದೆ. ಕೊಂಬಿನಲ್ಲಿ ಎರಡು ವಿಧಗಳಿವೆ. ೧. ನೇರವಾದ ಕೊಂಬು, ೨. ಬಾಗಿದ ಕೊಂಬ, ಅನೇಕ ಬಗೆಯ ಕೊಂಬುಗಳು ಈಗ ಬಳಕೆಯಲ್ಲಿವೆ. ಬೇಟೆಗೆ ಹೋಗುವ ಕೆಲವು ಜಾತಿಗಳ ಜನರು ಕಾಡೆಮ್ಮೆಯ ಕೋಡಿಗೆ ರಂಧ್ರ ಕೊರೆದು ‘ಕರಿಕೊಂಬು’ ಊದುತ್ತಾ ಹೋಗುತ್ತಾರೆ. ತಮಿಳುನಾಡಿನಲ್ಲಿ ದೇವಸ್ಥಾನಗಳ ಉತ್ಸವಗಳು, ವಿವಾಹೋತ್ಸವ, ಸಾರ್ವಜನಿಕ ಉತ್ಸವಗಳು ಮತ್ತು ಬೇಟೆಗೆ ಹೋಗುವಾಗ ‘ಕೊಂಬು’ ಊದಲಾಗುತ್ತದೆ. ಪಳನಿ ಮುರುಗನ್ ದೇಗುಲಕ್ಕೆ ಕಾವಡಿ ಹೊತ್ತು ಬರುವ ಕೊಂಗುನಾಡಿನ ಜನರು ತಮ್ಮಟೆ ಬಾರಿಸುತ್ತಾ, ಕೊಂಬು ಊದುತ್ತ ಬರುತ್ತಾರೆ.

. ತಾರೈ (ಕಹಳೆ/ತುತ್ತೂರಿ) : ತಾರೈ (ತುತ್ತೂರಿ) ತುಂಬಾ ಉದ್ದನೆಯ ಊದುವ ವಾದ್ಯ. ಕೊಂಗು ನಾಡಿನಲ್ಲಿ (ಸೇಲಂ ಜಿಲ್ಲೆಯಲ್ಲಿ) ತುತ್ತೂರಿ ಹೆಚ್ಚು ಬಳಕೆಯಲ್ಲಿದೆ.     ತುತ್ತೂರಿ ತಮ್ಮಟೆ ಮೊಳಗಲು’ ಎಂಬುದು ಜನಪದ ಉಕ್ತಿ, ತುತ್ತೂರಿಯೊಂದಿಗೆ ತಮ್ಮಟೆಯನ್ನು ಸೇರಿಸಿ ಊದುವುದನ್ನು ಸೂಚಿಸುತ್ತದೆ. ದೇವಸ್ಥಾನದ ಹಬ್ಬಗಳು ಹಾಗೂ ಸಾಮಾಜಿಕ ಉತ್ಸವಗಳ ಸಂದರ್ಭದಲ್ಲಿ ತುತ್ತೂರಿ ಊದುವುದು ಕಂಡುಬರುತ್ತದೆ. ನಾಲ್ಕೈದು ತುತ್ತೂರಿಗಳನ್ನು ಒಟ್ಟಿಗೆ ಊದುವಾಗ ಬಹಳ ಇಂಪಾದ ನಾದ ಹೊರಹೊಮ್ಮುತ್ತದೆ.

. ತಿರುಚಿನ್ನಮ್ : ರಂಧ್ರಗಳೇ ಇಲ್ಲದ ಕಂಚಿನಿಂದಾದ ಊದುವ ವಾದ್ಯ ತಿರುಚಿನ್ನಮ್. ಇದನ್ನು ಉಸಿರು ಬಿಗಿಹಿಡಿದುಕೊಂಡು ಊದಬೇಕು. ಒಬ್ಬರೇ ಎರಡು ತಿರುಚಿನ್ನಮ್‌ಗಳನ್ನು ಬಾಯಲ್ಲಿಟ್ಟು ಊದುತ್ತಾರೆ. ತಿರುಚಿರಾಪಳ್ಳಿಯ ಲಾಲ್‌ಗುಡಿ ಸುತ್ತಮುತ್ತ ಈ ವಾದ್ಯ ಹೆಚ್ಚು ಬಳಕೆಯಲ್ಲಿದೆ. ದೇವರ ಮೆರೆವಣಿಗೆ ಹಾಗೂ ಹಬ್ಬ ಹರಿದಿನಗಳಲ್ಲಿ ಇದನ್ನು ಊದಲಾಗುತ್ತದೆ. ಪಳನಿ ವಸ್ತು ಸಂಗ್ರಹಾಲಯದಲ್ಲಿ ಅತ್ಯಂತ ಹಳೆಯದಾದ ಎರಡು ತಿರುಚಿನ್ನಮ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ.

. ನಾಗಸುರಂ (ನಾದಸ್ವರ): ‘ನಾಗಸುರಂ’ (ನಾದಸ್ವರ) ದಕ್ಷಿಣದ ಪ್ರಮುಖ ಊದುವ ವಾದ್ಯ. ‘ನಾಗಸುರಂ’ ಎಂಬುದು ನಾಗಚಿನ್ನಮ್, ನಾಯನಂ ಎಂಬ ಹೆಸರುಗಳನ್ನು ಹೊಂದಿದೆ. ಇದೊಂದು ಮಂಗಳವಾದ್ಯ, ನಾದಸ್ವರದಲ್ಲಿ ‘ತಿಮಿರಿ ನಾಯನಂ’, ‘ಪಾರಿನಾಯನಂ’ ಎಂದು ಎರಡು ವಿಧಗಳಿವೆ. ತಿಮಿರಿನಾಯನನ್ನು ‘ಮುಖವೀಣೆ’ ಎಂದೂ ಕರೆಯುತ್ತಾರೆ.

ದೇವಸ್ಥಾನಗಳ ಪೂಜೆ ಹಾಗೂ ದೇವರ ಮೆರೆವಣಿಗೆಯ ಸಂದರ್ಭದಲ್ಲಿ ನಾದಸ್ವರವನ್ನು ಊದಲಾಗುತ್ತದೆ. ಮದುವೆ ಸಂದರ್ಭದಲ್ಲಿ ನಾದಸ್ವರ ಪ್ರಮುಖ ಸ್ಥಾನ ಪಡೆಯುತ್ತದೆ. ನಾದಸ್ವರ, ತಬಲ, ಸನಾದಿ, ತಾಳ ಎಲ್ಲವನ್ನು ಒಟ್ಟಿಗೆ ನುಡಿಸಲಾಗುತ್ತದೆ. ದೇವರು ಮೆರವಣಿಗೆ ಹೊರಡುವಾಗ ಹಾಗೂ ಹಬ್ಬ ಹರಿದಿನಗಳಲ್ಲಿ ‘ಮುಲ್ಹಾರಿ’ ಎಂಬ ವಾದ್ಯವನ್ನು ಊದಲಾಗುತ್ತದೆ.

– ಪಿ.ಎಸ್.ಎಂ. ಅನುವಾದ ಐ.ಎಸ್.

ತಮಿಳುನಾಡಿನ ಸಂಗೀತೋಪಕರಣಗಳು ತಮಿಳು ನಾಡಿನಲ್ಲಿ ಸಂಗೀತವನ್ನು ನುಡಿಸುವುದಕ್ಕೂ ಸಂಗೀತಕ್ಕೆ ಮತ್ತಷ್ಟು ಸಾಂದ್ರತೆಯನ್ನುಂಟು ಮಾಡುವುದಕ್ಕೂ ಹಲವು ವಿವಿಧ ಉಪಕರಣಗಳನ್ನು ಸಹಾಯಕ ಉಪಕರಣಗಳನ್ನಾಗಿ ಉಪಯೋಗಿಸಲಾಗುತ್ತದೆ; ಇವೇ ಸಂಗೀತೋಪಕರಣಗಳು.

ಇದುವರೆಗೆ ಹದಿನಾರು ಬಗೆಯ ಘನವಾದ್ಯಗಳೂ ಹನಂದು ಬಗೆಯ ಅವನದ್ದ ವಾದ್ಯಗಳೂ ಹನ್ನೆರಡು ಬಗೆಯ ಸುಷಿರ ವಾದ್ಯಗಳೂ ಹದಿನೈದು ಬಗೆಯ ತತ ವಾದ್ಯಗಳೂ ಇರುವುವೆಂದು ಸಂಶೋಧಕರು ಲೆಕ್ಕಹಾಕಿದ್ದಾರೆ.

ವಿವರಿಸಲು ಅಸಾಧ್ಯವಾದ ರೀತಿಯಲ್ಲಿ ಆದಿ ಮಾನವನಿಗೆ ಪರಿಚಯವಾದ ತಾಳ ಸಂಗೀತದ ಅರಿವಿನಿಂದ ಹೇಗೆ ಸಂಗೀತದ ಉದಯವಾಯಿತೋ ಆ ರೀತಿಯಲ್ಲೇ ಸಂಗೀತೋಪಕರಣಗಳೂ ನಿಶ್ಚಯವಾಗಿ ಹೇಳಲು ಸಾಧ್ಯವಿಲ್ಲದ ರೀತಿಯಿಂದ ಹುಟ್ಟಿಕೊಂಡಿರಬೇಕು. ಮನುಷ್ಯ ಶರಹೀರವೇ ಮೊದಲು ಘನವಾದ್ಯವಾಗಿ ಇದ್ದಿರಬೇಕು. ಪಾದಗಳಿಂದ ನೆಲವನ್ನು ತಟ್ಟುವುದು, ಕೈತಟ್ಟುವುದು, ತೊಡೆಯ ಮೇಲೆ ತಾಳ ಹಾಕುವುದು ಮುಂತಾದವುಗಳಿಂದಾಗಿ ನಮ್ಮ ಶರೀರವೇ ಮೊತ್ತಮೊದಲು ಸಂಗೀತೋಪಕರಣವಾಗಿದ್ದಿರಬಹುದು.

ಇದರ ಬಳಿಕ ಕೈತಾಳ ಹಾಕುವುದಕ್ಕೆ ಬದಲಾಗಿ ಕೈಗಳಿಗಿಂತ ಗಟ್ಟಿಯಾದ ಕಲ್ಲುಗಳು, ಕೋಲುಗಳು ಮುಂತಾದವುಗಳನ್ನು ಉಪಯೋಗಿಸಿಕೊಂಡಿದ್ದಾರ. ಇವುಗಳಿಂದಲೆ ಘನವಾದ್ಯಗಳು ಹುಟ್ಟಿಕೊಂಡವು. ಶಿಬ್ಲಾಮರದ ತುಂಡುಗಳು, ಟಂಡಾ ಎನ್ನುವ ಕೋಲುಗಳು, ಮಣಿಗಳು,ಕಂಚಿನ ತಾಳಗಳು ಮೊದಲಾದವು ಕಂಡುಬಂದವು.

ಸಂಗೀತಕ್ಕೆ ಬೇಕಾದ ಮತ್ತು ತಕ್ಕುದಾದ ಉಪಕರಮಗಳನ್ನು ಘನವಾದ್ಯಗಳಿಂದ ಸೃಷ್ಟಿಸಲು ಸಾಧ್ಯವಿಲ್ಲ. ಈ ಉಪಕರಣಗಳು ತಾಳಕ್ಕೆ ಮಾತ್ರವೇ ತಕ್ಕವುಗಳಾಗಿವೆ. ಅವುಗಳೊಳಗೆ ಕೆಲವು ಉಪಕರಣಗಳು ಮಾತ್ರವೇ ಇಂಪಾದ ನಾದವನ್ನು ಹೊರಡಿಸತಕ್ಕವುಗಳು. ಉಳಿದ ಉಪಕರಣಗಳೆಲ್ಲವೂ ತಾಳದ ಉಪಕರಣಗಳೇ ಆಗಿವೆ.ಈ ಉಪಕರಣಗಳಿಂದ, ಶಾಸ್ತ್ರೀಯ ಸಂಗೀತದ ಇಂಪಾದ ಶೃತಿಗಳನ್ನು ಹೊರಡಿಸುವುದೂ ರಾಗ ಸಂಗೀತಕ್ಕೆ ಉನ್ನತ ಸ್ಥಾನ ಮುಂತಾದ ಗಮಕಗಳನ್ನು ಧ್ವನಿಸುವುದೂ ಅಸಾಧ್ಯವಾಗಿದೆ.

ಘನವಾದ್ಯಗಳಲ್ಲಿ ಕಲೆವು ಕಾಷ್ಠತಂರಗ, ಕೋಲುಗಳು, ಬಳೆಗಳು, ಕಿರಿಕಟ್ಟಿಕಾ ಮತ್ತು ಘಟ.

ಘನವಾದ್ಯಗಳ ಬಳಿಕ ಚರ್ಮದಿಂದ ಮುಚ್ಚಲ್ಪಟ್ಟ ಸಂಗೀತೋಪಕರಣಗಳು ತಯಾರಿಸಲ್ಪಡುತ್ತವೆ. ಈ ಉಪಕರಣಗಳನ್ನು ಚರ್ಮವಾದ್ಯಗಳೆಂದು ಕರೆಯಲಾಯಿತು. ಚರ್ಮವಾದ್ಯಗಳ ಅಭಿವೃದ್ಧಿಗೆ ಬಡಗಿಯ ಕೆಲಸವೂ ಮಣ್ಣಿನ ಮಡಕೆ ಮಾಡುವ ಕೆಲಸವೂ ಮುಖ್ಯ ಪಾತ್ರವಹಿಸುತ್ತದೆ. ಮಣ್ಣಿನ ಮಡಕೆಗಳ ಮೂಲಕವಾಗಿಯೇ ಹೆಚ್ಚಿನ ಚರ್ಮವಾದ್ಯಗಳು ಸೃಷ್ಟಿಯಾದುವು. ಮರದಿಂದ ತಯಾರಿಸಲು ಸಾಧ್ಯವಿಲ್ಲದ ಹಲವು ಆಕೃತಿಗಳನ್ನು ಮಣ್ಣಿನಿಂದ ಮಾಡಲು ಸಾಧ್ಯವಿದೆ. ಆದುದರಿಂದಲೇ ಅನಂತರ ಕಾಲದಲ್ಲಿ ತಯಾರಿಸಲ್ಪಟ್ಟ ಚರ್ಮವಾದ್ಯಗಳಲ್ಲಿ ಹೆಚ್ಚಿನವು ಮಣ್ಣಿನ ಚರ್ಮವಾದ್ಯಗಳಾಗಿಯೇ ಕಂಡುಬರುತ್ತವೆ.

ತಂದೂರಾ ಮಣ್ಣಿನ ಮಡಕೆಗಳು, ತಂಬಕ್‌ನಾರಿ ಮುಂತಾದ ಉಪಕರಮಗಳು ಆವೆ ಮಣ್ಣಿನಿಂದ ತಯಾರಾದವುಗಳೇ. ಮೃದಂಗದ ಕಟ್ಟೆಯನ್ನು ಮರದಿಂದ ತಯಾರಿಸುವುದರ ಬದಲು ಮಣ್ಣಿನಿಂದ ತಯಾರಿಸುವುದು ಸುಲಭ. ಆದರೆ ಈಗ ಎಲ್ಲ ಚರ್ಮವಾದ್ಯಗಳನ್ನು ಮರದಿಂದಲೇ ತಯಾರಿಸಲಾಗುತ್ತದೆ. ಆರಂಭದ ಕಾಲದಲ್ಲಿ ಅಡುಗೆ ಮಾಡಲು ಉಪಯೋಗಿಸಿದ ಮಣ್ಣಿನ ಪಾತ್ರೆಗಳೇ ಚರ್ಮವಾದ್ಯಗಳ ತಯಾರಿಕೆಗೆ ಪೀಠಿಕೆಯಾಗಿ ಇದ್ದಿರಬೇಕು. ಅಡುಗೆಮಾಡಲು ಉಪಯೋಗಿಸಿದ ಮಣ್ಣಿನ ಪಾತ್ರೆಗಳನ್ನು ಚರ್ಮದಿಂದ ಮುಚ್ಚಿ ಸಂಗೀತ ನುಡಿಸಲು ಆರಂಭಿಸಿದರು. ಇದುವೇ ಮೊದಲ ಚರ್ಮವಾದ್ಯವಾಗಿದೆ. ಅಳೆಯುವುದಕ್ಕೂ ಉಪಯೋಗಿಸುವ ಪಾತ್ರೆಗಳು ಪರ, ಪರೇ, ಪರೈ ಎನ್ನುವ ಹೆಸರುಗಳಿಂದಕರೆಯುವುದನ್ನು ನೋಡಿ ತಿಳಿದುಕೊಳ್ಳಬಹುದು.

ನೆಲ ಚರ್ಮವಾದ್ಯಗಳು ಅಥವಾ ಕುಳಿಪ್ಪರೈಗಳು ಮಣ್ಣಿನಿಂದ ಮರದಿಂದ ತಯಾರಿಸಲ್ಪಟ್ಟ ಚರ್ಮವಾದ್ಯಗಳಿಗಿಂತ ಕಾಲದ ದೃಷ್ಟಿಯಲ್ಲಿ ಪ್ರಾಚೀನವಾದವು. ವೇದಕಾಲದ ಗ್ರಂಥಗಳಲ್ಲಿ ಇದನ್ನು ‘ಭೂಮೀ ದುಂದುಭಿ’ ಎಂದು ಕರೆಯಲಾಗಿದೆ. ಚರ್ಮವಾದ್ಯಗಳಲ್ಲಿ ಇದುವೇ ಕಾಲದ ದೃಷ್ಟಿಯಿಂದ ಹಳೆಯದಾಗಿದೆ. ತಂತಿಯ ಮೂಲಕ ತಯಾರಿಸಿದ ವಾದ್ಯಗಳನ್ನು ಕಂಡುಹಿಡಿಯುವುದಕ್ಕೆ ಹಲವು ಸಾವಿರ ವರ್ಷಗಳ ಮದಲೇ ಮಾನವನು ವಾದ್ಯಗಳನ್ನು ಬಾರಿಸಿ ಸುದ್ದಿಯನ್ನು ತಿಳಿಸುತ್ತಿದ್ದನು. ಸುದ್ದಿಯನ್ನು ತಿಳಿಸಲು ಉಪಯೋಗವಾದ ಈ ಉಪಕರಣಗಳು ಸಂಗೀತಕ್ಕೆ ಸಹಾಯಕವಾದ್ಯಗಳಾಗಿ ಸಂಗೀತ ಕಾರ್ಯಕ್ರಮಗಳಲ್ಲಿ ಉಪಯೋಗಿಸಲ್ಪಟ್ಟಿವೆ.

ಚರ್ಮ ವಾದ್ಯದ ಕೆಲವು ಉಪಕರಣಗಳು : ಬುಡುಬುಡಿಕೆ, ಡೋಲದ್ಯ, ಖಂಜರಾ, ಕುಂಡಲ, ಚಿಕ್ಕಚರ್ಮವಾದ್ಯ, ಶುದ್ಧಮದ್ದಳೆ, ಚೆಂಡೆ, ಡಮಾರಂ, ತಬಲ, ಡಮರುಗ, ತಮಟೆ, ದುಡಿ, ಪಂಬೈ, ನಗಾರಿ, ದೊಡ್ಡ ಚರ್ಮವಾದ್ಯ, ಮದ್ದಳೆ, ಮೃದಂಗ, ಮುರಸು ಮೊದಲಾದವು.

ಸಂಗೀತದ ವಾದ್ಯಗಳಲ್ಲಿ ಮುಖ್ಯವಾದವು ಸಾಹಯಕ ಉಪಕರಣಗಳು. ಬಿದಿರಿನ ಕಾಡುಗಳಲ್ಲಿ ಗಾಳಿ ಬೀಸಿದಾಗ ಬಿದಿರಿನಲ್ಲಿರುವ ರಂಧ್ರಗಳ ಮೂಲಕ ಗಾಳಿ ಊದಿಕೊಂಡಾಗ ಹೊರಟ ಧ್ವನಿಯನ್ನು ಕೇಳಿದ ಆದಿಮಾನವನು ಉಪವಾದ್ಯಗಳನ್ನು ಕಂಡುಹಿಡಿದನು ಎನ್ನುವುದು ಸಾಮಾನ್ಯ ನಂಬಿಕೆ. ಬಾಯಿಯಿಂದ ಊದಿ ಧ್ವನಿಯನ್ನು ಹೊರಡಿಸುವುದು ಬಹಳ ಪ್ರಾಚೀನವಾದ ಸಂಗತಿಯಾಗಿದೆ. ಬಾಯಿಯ ಮೂಲಕ ಸಿಳ್ಳುಹಾಕುವುದು, ಕೊಳಲುಗಳು, ಶಂಖ, ಅಡುಗೆಯ ಒಲೆಯನ್ನು ಊದುವ ಕೊಳವೆ ಮುಂತಾದವುಗಳು ಕೂಡ ರಂಧ್ರವುಳ್ಳ ಉಪಕರಣಗಳನ್ನು ತಯಾರಿಸಲು ಸಹಾಯಕವಾಗಿ ಇದ್ದಿರಬೇಕು. ಪ್ರಾರಂಭ ಕಾಲದಲ್ಲಿ ಎಲುಬಿನ ಕೊಳವೆಗಳಿದ್ದುವು. ಮುಂದಿನ ಕಾಲದಲ್ಲಿ ಲೋಹದಿಂದ ತಯಾರು ಮಾಡಿದ ಕೊಂಬುಗಳು, ಬಿದಿರಿನಿಂದ ತಯಾರಿಸಲ್ಪಟ್ಟ ಕೊಳಲುಗಳನ್ನು ಸಿದ್ಧಪಡಿಸಲಾಯಿತು. ನಾದಸ್ವರ, ಶಹನಾಯ್‌ಗಳಂಥ ವಾದ್ಯೋಪಕರಣಗಳು ಬಹಳ ಹಿಂದಿನ ಕಾಲದಲ್ಲಿ ಸಿದ್ಧಮಾಡಿದವುಗಳೇ ಆಗಿವೆ.

ಈ ತೂತಿನ ಉಪಕರಣಗಳು ಸಾಮಾಜಿಕ ಉತ್ಸವಗಳಲ್ಲೂ, ಧರ್ಮ ಕಾರ್ಯಗಳಲ್ಲೂ ಸ್ಥಾನ ಪಡೆದವು. ಕಹಳೆ, ತುತ್ತರಿ, ಕೊಂಬು, ಬಿದಿರಿನ ಕೊಳಲು ಮೊದಲಾದವು ಬಿಡಿ ಭಾಗಗಳಿಲ್ಲದ ಬಗೆಗಳು. ಹಾರ್ಮೋನಿಯಂನಂತಹ ಉಪಕರಣಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಗಗಳು ಇರುತ್ತವೆ. ಮೃಗಗಳ ಕೋಡುಗಳೇ ಅತ್ಯಂತ ಹಳೆಯ ರಂಧ್ರವಿರುವ ಉಪಕರಣಗಳು. ಎತ್ತು, ಎಮ್ಮೆ ಮುಂತಾದವುಗಳ ಕೊಂಬುಗಳಿಂದ ತಯಾರಿಸಿದ ಊದುವ ಕೊಳವೆಗಳು ಬಳಕೆಯಾಗುತ್ತಿದ್ದವು ಎಂಬುದನ್ನು ಕಾಣಲು ಸಾಧ್ಯ.

ಸಂಗೀತೋಪಕರಣಗಳಲ್ಲಿ ತಂತಿ ವಾದ್ಯಗಳು ಅಥವಾ ನರವಾದ್ಯಗಳು ಬೇಟೆಗೆ ಸಹಕರಿಸುವ ಬಲ್ಲಿನಿಂದ ಹುಟ್ಟಿದವು ಎಂಬುದಾಗಿಯೂ ಕೆಲವರು ಹೇಳುತ್ತಾರೆ.

ತಂತಿ ವಾದ್ಯಗಳನ್ನು ಮೂರು ರೀತಿಯಲ್ಲಿ ವಿಭಾಗಿಸಬಹುದು. ಇವುಗಳೊಳಗೆ ಒಂದು ಬಗೆಯವು ರಾಗ ಮುಂತಾದವುಗಳನ್ನು ನುಡಿಸುವುದಕ್ಕೆ ಉಪಯೋಗವಾಗುತ್ತಿವೆ. ಇನ್ನೊಂದು ಬಗೆಯವು ಹಲವು ತಂತಿಗಳಿಂದ ಕೂಡಿದ ಯಾಳ್, ಲಯರ್, ಟಲ್ ಸಿಮರ್ ಮೊದಲಾದ ಉಪಕರಣಗಳು. ಮೂರನೆಯ ಬಗೆಯ ಅವೆಲ್ಲವುಗಳಿಗಿಂತಲೂ ದೊಡ್ಡದು. ಅಂದರೆ ಒಂದೇ ರೀತಿಯಲ್ಲಿ ಎಲ್ಲಾ ರೀತಿಯ ಸಂಗೀತವನ್ನು ನುಡಿಸಲು ಸಾಧ್ಯವಾಗುವ ಉಪಕರಣಗಳು.ಈ ರೀತಿಯ ಉಪಕರಣಗಳಲ್ಲಿ ಒಂದಕ್ಕಿಂತ ಹೆಚ್ಚು ತಂತಿಗಳನ್ನು ಜೋಡಿಸಲಾಗಿರುತ್ತದೆ. ಈ ತಂತಿ ವಾದ್ಯಗಳ ರೂಪವನ್ನು ಕುರಿತು ಎಲ್ಲರೂ ಒಪ್ಪಿಕೊಳ್ಳಬಹುದಾದಂತಹ ಅಭಿಪ್ರಾಯವೆಂದರೆ ಬೇಡರ ಬಿಲ್ಲಿನಿಂದ ಹಾರ್ಪ್‌ನಂತಹ ಉಪಕರಣಗಳ ಉದಯವಾಗಿರಬಹುದೆನ್ವುದು. ಬಿಲ್ಲಿನಿಂದ ಹುಟ್ಟಿದ ಧ್ವನಿಯೇ ಆದಿಮಾನವನಿಗೆ ಅದನ್ನೊಂದು ಸಂಗೀತದ ಉಪಕರಣವನ್ನಾಗಿ ಉಪಯೋಗಿಸಬಹುದೆನ್ನು ಭಾವನೆ ಉಂಟುಮಾಡಿರಬಹುದು. ಆ ಮೂಲಕ ತಂತಿವಾದ್ಯಗಳು ಹುಟ್ಟಿಕೊಂಡಿರಬಹುದು. ತಂತಿವಾದ್ಯಗಳಲ್ಲಿ ಕೆಲವು : ಯಾಳ್, ಸುರಮಂಡಲಂ ಮೊದಲಾದವು.

– ಟಿ.ಜಿ. ಅನುವಾದ ಎ.ಎಸ್.ಬಿ.