ತಮಿಳು ಜನಪದ ಸಾಹಿತ್ಯ ತಮಿಳಿನ ಜನಪದ ಸಾಹಿತ್ಯವನ್ನು ಎಷ್ಟು ಹಿಂದಕ್ಕೊಯ್ಯಬಹುದು ಎಂಬುದು ದೊಡ್ಡ ಒಗಟು. ತಮಿಳು ಸಾಹಿತ್ಯದ ಪ್ರಾಚೀನತೆಯ ವಿಷಯ ಹೇಗಿದ್ದರೂ ವಾಚಿಕ ಸಾಹಿತ್ಯ ಕ್ರಿಸ್ತಶಕದ ಆದಿಭಾಗದಿಂದಲೂ ಇದ್ದಿರಬಹುದೆಂದು ತೋರುತ್ತದೆ. ಸಂಗಸಾಹಿತ್ಯದ ಬಹುಪಾಲು ಕವಿತೆಗಳಲ್ಲಿ ಜನಪದ ಆಶಯಗಳು ಕಂಡು ಬರುತ್ತವೆ. ಸಂಗ ಕಾಲದ ಕೃತಿಗಳ ಜನಪದೀಯ ಅಧ್ಯಯನವನ್ನು ಕೂಡ ಕೆಲವರು ಕೈಗೊಂಡರು (ವಾನಮಾಮಲೈ ಎನ್. ೧೯೬೯)

ತಮಿಳಿನ ಮೊಟ್ಟಮೊದಲ ಲಭ್ಯಕೃತಿಯಾದ ತೊಲ್ಕಾಪ್ಪಿಯಂ ಕೃತಿಕಾರನಿಗೆ ಜನಪದ ಗೀತೆಗಳ ಬಗ್ಗೆ ತಿಳಿದಿತ್ತೆಂದು ಹೇಳಲಾಗಿದೆ. ಜನಪದ ಗೀತೆಗಳನ್ನು ‘ಪಣ್ಣತ್ತಿ’ ಎಂಬ ಹೆಸರಿನಿಂದ ಕರೆಯುತ್ತಿದ್ದರೆಂದು ವಾನಮಾಮಲೈ ಹೇಳುತ್ತಾರೆ (೧೯೬೯:೨) ಸಂಗ ಸಾಹತ್ಯದಲ್ಲಿ ಉಲ್ಲೇಖಗೊಂಡಿರುವ ತುಣಂಗೈ, ವಳ್ಳೈ, ಕುರವೈ ಮುಂತಾದವು ಜನಪದ ಕುಣಿತಗಳೆನ್ನಲಾಗಿದೆ. ಸ್ವಾಮಿನಾಥ ಅಯ್ಯರ್ ಪಟ್ಟಿಮಾಡಿರುವ ೫೬ ಬಗೆಯ ಜನಪದ ಗೀತೆಗಳಲ್ಲಿ ಕೆಲವಾದರೂ ಸಂಗ ಕಾಲದಲ್ಲಿ ಅಸ್ತಿತ್ವದಲ್ಲಿದ್ದವೆಂದು ಭಾವಿಸಲಾಗಿದೆ. ತೊಲ್ಕಾಪ್ಪಿಯರ್ ಇವುಗಳಲ್ಲಿ ಕೆಲವನ್ನು ಗುರುತಿಸಿ ಲಕ್ಷಣಗಳನ್ನು ನಿರ್ದೇಶಿಸಲು ಪ್ರಯತ್ನಪಟ್ಟಿದ್ದಾನೆ. ತೊಲ್ಕಾಪ್ಪಿಯಂ ಮತ್ತು ಸಿಲಪ್ಪದಿಗಾರಂಗಳ ವ್ಯಾಖ್ಯಾನಕಾರರು ಪುರಾತನ ಕಾಲದ ಹಾಡುಗಳು ದೊಡ್ಡ ಮೊತ್ತದಲ್ಲಿ ಇದ್ದುದನ್ನು ಗುರುತಿಸಿದ್ದಾರೆ. ಆ ಕಾಲದ ಹಾಡುಗಳಲ್ಲಿ ವರಿಷ್ಪಾಡಲ್ ಎಂಬುದೊಂದು. ‘ವರಿ’ ಎಂದರೆ ಕುಣಿತವನ್ನು, ಹಾಡನ್ನು ಸೂಚಿಸುವ ಪದ. ಈ ಹಾಡುಗಳಲ್ಲಿ ಆಟ್ರುವರಿ (ಹೊಳೆಯ ಹಾಡು), ಅಮ್ಮನೈವರಿ, ನಿಲೈವರಿ ಮುಂತಾದ ಬಗೆಗಳಿವೆ. ಸಿಲಪ್ಪದಿಗಾರಂ ಅಲ್ಲದೆ ಇನ್ನೂ ಬೇರೆ ತಮಿಳು ಕಾವ್ಯಗಳಿಮದ ವಿವಿಧ ರೀತಿಯ ಜನಪದ ಗೀತೆಗಳು ನೂರಾರು ವರ್ಷಗಳಿಂದ ಪ್ರಚಲಿತವಾಗಿದ್ದ ವಿಷಯ ತಿಳಿದು ಬರುತ್ತದೆ.

ಜನಪದ ಗೀತೆ : ಜನಪದ ಗೀತೆಗಳನ್ನು ತಮಿಳಿನಲ್ಲಿ ನಾಟ್ಟುಪ್ಪಾಡಲ್‌ಗಳ್ ಅಥವಾ ನಾಟ್ಟುಪ್ಪುಱಪ್ಪಾಡಲ್‌ಗಳ್ (ಸಾಂಪ್ರದಾಯಿಕ ಗೀತೆಗಳು) ಎಂದು ಕರೆಯುತ್ತಾರೆ.

ತಮಿಳಿನ ಮೊಟ್ಟ ಮೊದಲ ಜನಪದ ಗೀತೆಗಳ ಸಂಕಲನವೆಂದು ಹೇಳಬಹುದಾದ ‘ಮಲೈಯರುವೈ’ (ಕೆ.ವಿ. ಜಗನ್ನಾದನ್ ೧೯೫೮)ಯಲ್ಲಿ ಹನ್ನೆರಡು ತರಹದ ಹಾಡುಗಳನ್ನು ಕೊಡಲಾಗಿದೆ. ೧. ತೆಮ್ಮಾಂಗು, ೨. ತಂಗರತ್ತಿನಮೇ, ೩. ರಾಜಾತ್ತಿ, ೪. ಗಂಡುಹೆಣ್ಣಿನ ಸಂವಾದಗಳು, ೫. ಕೆಲಸದ ಹಾಡುಗಳು, ೬. ಕಳ್ಳರ ಹಾಡುಗಳು, ೭. ಕುಟುಂಬ ೮. ಲಾಲಿ ಪದಗಳು, ೯. ಮಕ್ಕಳ ಹಾಡುಗಳು, ೧೦. ಶೋಕದ ಹಾಡು, ೧೧. ಕಮ್ಮೈ, ೧೨. ದೇವರುಗಳು, ೧೩. ಇತರ

ಜಗನ್ನಾದನ್ ಅವರ ವರ್ಗೀಕರಣದಲ್ಲಿ ವಸ್ತುವನ್ನು, ಪಲ್ಲವಿಯನ್ನು (೨,೩) ಸ್ವರೂಪವನ್ನು (೧,೧೧) ತೆಗೆದುಕೊಳ್ಳಲಾಗಿದೆ. ಈ ರೀತಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ ವಿಭಜನೆ ಮಾಡುವುದು ಸರಿಯಲ್ಲವೆಂದು ಹೇಳುತ್ತಾ ಎನ್. ವಾನಮಾಮಲೈ ಬೇರೆ ರೀತಿಯ ವರ್ಗೀಕರಣವನ್ನು ಕೊಟ್ಟಿರುತ್ತಾರೆ. (೧೯೬೯, ೫ – ೬) ಇವರ ಪ್ರಕಾರ ಮಾನವ ಜೀವನದ ವಿವಿಧ ಘಟ್ಟಗಳನ್ನು ಸ್ವೀಕರಿಸಿ ಜನಪದ ಗೀತೆಯ ಪ್ರಕಾರಗಳನ್ನು ಗುರುತಿಸಬೇಕು. ಹುಟ್ಟಿನಿಂದ ಸಾವಿನವರೆಗಿನ ಬೇರೆ ಬೇರೆ ಹಂತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಭಜಸಿದರೆ ಎಲ್ಲ ಹಾಡುಗಳನ್ನು ಪರಿಶೀಲಿಸಲು ಸಾಧ್ಯವಾಗುವುದೆಂದು ವಾನಮಾಮಲೈ ಅವರ ಅಭಿಪ್ರಾಯ. ಹುಟ್ಟಿಗೆ ಸಂಬಂಧಿಸಿದ ಹಾಡು ಮತ್ತು ಲಾಲಿಪದಗಳು ಮೊದಲನೆಯ ಪ್ರಕಾರ. ಮಕ್ಕಳು ಆಟದ ಹಂತಕ್ಕೆ ಬಂದಾಗ ಎರಡನೆಯ ರೀತಿಯ ಹಾಡುಗಳನ್ನು ಗುರುತಿಸಬಹುದು. ತರುಣ ವಯಸ್ಸು ಬಂದಾದ ಹಾಡುವ ಪ್ರಣಯಗೀತೆಗಳು ಮೂರನೆಯ ರೀತಿಗೆ ಸೇರುತ್ತವೆ. ಕೆಲಸದ ಹಾಡುಗಳು ನಾಲ್ಕನೆಯ ಬಗೆ. ಮದುವೆ ಮತ್ತು ಕೆಲಸ ಸಾಮಾಜಿಕ ಸಂಬಂಧಗಳಿಗೆ ಕಾರಣವಾಗುತ್ತವೆ. ಇದರಿಂದ ಸಾಮಾಜಿಕ ಸಂಸ್ಥೆಗಳು ಮತ್ತು ದಾಂಪತ್ಯ ಜೀವನವನ್ನು ಕುರಿತ ಹಾಡುಗಳೇರ್ಪಡುತ್ತವೆ. ಸಾವು ಶೋಕಕ್ಕೆ ಕಾರಣವಾಗಿ ಶೋಕಗೀತೆಗಳು ರೂಪುಗೊಳ್ಳುತ್ತವೆ. ದೇವರ ಮೇಲೆ ನಂಬಿಕೆ, ಸ್ತುತಿಗಳು, ಪೂಜಾವಿಧಾನಗಳು ಇನ್ನೊಂದು ಬಗೆಯ ಹಾಡುಗಳನ್ನು ನೀಡುತ್ತವೆ. ಒಟ್ಟಿನಲ್ಲಿ ವಾನಮಾಮಲೈ ಅವರ ವರ್ಗೀಕರಣ ಬಹುಪಾಲು ಗೀತೆಗಳನ್ನು ಒಳಗೊಂಡಿದೆ.

‘ನಾಟ್ಟುಪ್ಪು ಪ್ಪಾಡಲ್ ವಗೈಗಳ್’ ಎಂಬ ಹೆಸರಿನಲ್ಲಿ ಆರ್. ರಾಮನಾದನ್ ಬರೆದ ಲೇಖನದಲ್ಲಿ ತಮಿಳು ಜನಪದ ಗೀತೆಗಳನ್ನು ಕುರಿತಂತೆ ಇದುವರೆಗೆ ಗುರುತಿಸಿದ ಎಲ್ಲ ಬಗೆಗಳನ್ನೂ ಒಂದೆಡೆ ಸೇರಿಸಲಾಗಿದೆ (ಪುಲಮೈ, ಜೂನ್ ೧೯೮೨) ತಮಿಳುನಾಡಿನ ವಿದ್ವಾಂಸರು ಗುರುತಿಸಿದ ಜನಪದ ಗೀತ ಪ್ರಕಾರಗಳಲ್ಲೇ ಕೆಲವನ್ನು, ಅವುಗಳ ಹೆಸರುಗಳನ್ನು ಗಮನಿಸಬಹುದು. ೧. ಕುಳಂದೈಪಾಡಲ್‌ಗಳ್ (ಮಕ್ಕಳಹಾಡುಗಳು), ೨. ಬಕ್ತಿಪ್ಪಾಡಲ್‌ಗಳ್ (ಭಕ್ತಿಯ ಹಾಡು), ೩. ತೊಱಪ್ಪಾಡಲ್‌ಗಳ್ (ಕೆಲಸದ ಹಾಡುಗಳು),೪. ಕೊಂಡಾಟ್ಟಪ್ಪಾಡಲ್‌ಗಳ್, (ಭಾವೋದ್ವೇಗದ ಹಾಡುಗಳು) ೬. ತಾಲಾಟ್ಟು (ಲಾಲಿ), ೭. ಒಪ್ಪಾರಿ (ಶೋಕಗೀತೆ), ೮. ನಟನಪ್ಪಾಡಲ್‌ಗಳ್ (ಕುಣಿತದ ಹಾಡುಗಳು), ೯. ಮಣಪ್ಪಾಡಲ್‌ಗಳ್ (ಮದುವೆಯ ಹಾಡುಗಳು), ೧೦. ವಿಳೈಯಾಟ್ಟು ಪಾಡಲ್‌ಗಳ್ (ಆಟದ ಹಾಡುಗಳು), ೧೧. ಇರತ್ತಲ್ ಪಾಡಲ್‌ಗಳ್ (ಭಿಕ್ಷುಕರ ಹಾಡುಗಳು), ೧೨. ಮಗಳಿರ್ ಪಾಡಲ್‌ಗಳ್ (ಹೆಂಗಸರ ಹಾಡುಗಳು), ೧೩. ಏಟ್ರಪ್ಪಾಟ್ಟು (ಏತದ ಹಾಡುಗಳು), ೧೪. ಕಾದಲ್‌ಪಾಟ್ಟು (ಪ್ರಣಯ ಗೀತೆ) ೧೫, ವಿವಸಾಯ ಪಾಡಲ್‌ಗಳ್ (ವ್ಯವಸಾಯದ ಹಾಡುಗಳು)

ಯಾವುದೇ ಭಾಷೆಯಲ್ಲಾದರೂ ಮೊದಲು ಹೇಳಬೇಕಾದಂಥವು ಕೆಲಸದ ಹಾಡುಗಳೆನ್ನಬಹುದು. ಕೆಲಸದ ಹಾಡುಗಳಲ್ಲಿ ಬೇಸಾಯದ ಹಾಡುಗಳಿಗೆ ಮೊದಲ ಸ್ಥಾನ. ಕೃಷಿಕಾರ್ಯದಲ್ಲಿ ಹೆಂಗಸರೇ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ತಮಿಳುನಾಡಿನಿಂದ ಕೃಷಿಕರಾಗಿ ಶ್ರೀಲಂಕ ದೇಶಕ್ಕೆ ವಲಸೆಹೋದವರ ಹಾಡುಗಳಿವೆ. ತೀರ ಬಡವರನ್ನು ದುಡ್ಡಿನ ಆಸೆಗೆ ನಮ್ಮ ದೇಶದಿಂದ ಕರೆದುಕೊಂಡು ಹೋಗುತ್ತಿದ್ದರು. ಟೀ ತೋಟಗಳಲ್ಲಿ ಕೆಲಸ ಮಾಡುವ ಹೆಂಗಸರ ಕಷ್ಟಗಳನ್ನು ವರ್ಣಿಸುವ ಹಾಡುಗಳಿವೆ.

ಬೇಸಾಯದ ಹಾಡುಗಳಲ್ಲಿ ನಾಟಿ ಹಾಕುವ ಹಾಡುಗಳು, ಕಳೆಕೀಳುವ ಹಾಡುಗಳು ಮುಂತಾದವಿದೆ. ಏತದ ಹಾಡು ಬಹಳ ಹಿಂದಿನಿಂದಲೂ ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿರುವ ಒಂದು ಬಗೆ. ಈ ಹಾಡುಗಳಲ್ಲಿ ಬೆನಕನ ಸ್ತುತಿಗಳೂ ಇತರ ದೇವತಾ ಸ್ತುತಿಗಳೂ ಇವೆ. ಬೆನಕನ (ಪಿಳ್ಳೈಯಾರ್) ಆನೆ ಮುಖವನ್ನು ದಪ್ಪಹೊಟ್ಟೆಯನ್ನು ವರ್ಣಿಸುತ್ತಾ ಹಾಡುವ ಏಟ್ರಪಾಟ್ಟು ಕೆಳಗಿನದು.

ಪಿಳ್ಳೈಯಾರೇ ವಾರುಮ್
ಪಿಳ್ಳೈವರಾಮಲ್ ಕಾರುಮಾ
ಅಂಜುಕರತ್ತೋನೇ
ಆನೈ ಮುಗತ್ತೋನೇ
ತುಂಬಿ ಮುಗತ್ತೋನೇ
ತೊಂದೆ ವಯಿಟ್ರೋನೇ
ಪಾರ್ವತಿ ಕುಮರಾ
ಪರಮನುಡ ಬಾಲಾ
ಮಾಯನ್ ಮುರುಗೋನೇ
ಮಂಗೈ ಉಮೈಬಾಗಾ
….

ನಾಟ ಹಾಕುವಾಗ ಹಾಡುವವರು ಹೆಂಗಸರು. ಈ ಗೀತೆಗಳಲ್ಲಿ ‘ಏಲಂಗಿಡಿಲೇಲೋ’ ಮುಂತಾದ ಪಲ್ಲವಿಗಳಿರುತ್ತವೆ. ಈ ಹಾಡುಗಳನ್ನು ಹಾಡುವ ಗೀತನಾಯಕರೆಂಬವರು ಇರುತ್ತಾರೆ. ಅವನು ಅಥವಾ ಅವರು ಗೀತೆಯ ಒಂದೋ ಎರಡೋ ಸಾಲುಗಳನ್ನು ಹಾಡುತ್ತಿದ್ದರೆ ಉಳಿದವರು ಅದನ್ನು ಪುನರುಚ್ಚರಿಸುತ್ತಾರೆ ಅಥವಾ ಪಲ್ಲವಿಯನ್ನು ಮಾತ್ರ ಪುನಃ ಪುನಃ ಹೇಳುತ್ತಾರೆ. ನಾಟಿ ಹಾಡು ಮುಂತಾದ ಸಾಮೂಹಿಕ ಗೀತೆಗಳಲ್ಲಿ ಸಾಮಾನ್ಯವಾಗಿ ಪಲ್ಲವಿಗಳು ಇದ್ದೇ ಇರುತ್ತವೆ. ಇವು ಕೆಲಸದಲ್ಲಿ ಜನರಿಗೆ ಉತ್ಸಾಹವನ್ನು ತುಂಬುತ್ತವೆ.

ಬೇಸಾಯದ ಹಾಡುಗಳಲ್ಲಿ ಕಳೆಕೀಳುವ ಹಾಡಿಗೂ ಹೆಚ್ಚಿನ ಪ್ರಾಧನ್ಯವುಂಟು. ಪೈರು ಚೆನ್ನಾಗಿ ಬೆಳೆಯಬೇಕೆಂದರೆ ಕಳೆ ಕೀಳುವುದು ಒಳ್ಳೆಯದು. ಈ ಸಂದರ್ಭದ ಹಾಡುಗಳನ್ನು ತಮಿಳಿನಲ್ಲಿ ಕಳೈಯೆಡುಕ್ಕುಮ್ ಪಾಟ್ಟು ಎಂದೂ ಕನ್ನಡದಲ್ಲಿ ಕಳೆಕೀಳುವ ಹಾಡು ಎಂದೂ, ತೆಲುಗಿನಲ್ಲಿ ಕಲುಪುತೀತಪಾಟ ಎಂದೂ ಹೇಳುತ್ತಾರೆ. ಒಂದು ತಮಿಳು ಹಾಡಿನಲ್ಲಿ ಹುಲ್ಲು, ಕಸ ಅಲ್ಲದೆ ಏನೇನು ಬೇರೆ ಗಿಡಗಳಿದ್ದರೂ ಕಿತ್ತೆಸೆಯಿರಿ ಎಂದು ಹಾಡುತ್ತಿದ್ದಾರೆ.

ಅತ್ತುಕ್ಕುಳ್ಳೇ ಏಲೇಲೋ
ಅತ್ತಿಮರಮ್ ಅಗಿಲಗಿಲಾ ಅತ್ತಿಮರಮ್
ಅಳವು ಪಾತ್ತು ಏಲಪ್ಪಿಡಿ
ಅಱುಕ್ಕಿತ್ತಳ್ಳು ಅಗಿಲಗಿಲಾ ಅಱಕ್ಕಿತ್ತಳ್ಳು
….

ಬೇಸಾಯದ ಹಾಡುಗಳನ್ನು ಬಿಟ್ಟರೆ ಇನ್ನೂ ವಿವಿಧ ವೃತ್ತಿಗಳಿಗೆ ಸಂಬಂಧಿಸಿದ ಹಾಡುಗಳಿವೆ. ಮಾನವನ ತೀರಹಳೆಯ ವೃತ್ತಿಯೆಂದರೆ ಬೇಟೆ. ನಾಗರಿಕತೆಯ ಪ್ರಪಂಚಕ್ಕೆ ಮಾನವ ಕಾಲಿಡದ ಕಾಲದಲ್ಲಿ ಬೇಟೆಯ ಹಾಡುಗಳೇ ಪ್ರಮುಖ ಪ್ರಕಾರವಾಗಿದ್ದವು. ಈಗ ಬೇಟೆ ಒಂದು ಕ್ರೀಡೆಯೇ ಹೊರತು ಆಹಾರ ಸಂಪಾದನೆಯ ಮುಖ್ಯ ಮಾರ್ಗವಲ್ಲ. ಈ ಕಾರಣದಿಂದ ಬೇಟೆಯ ಹಾಡುಗಳು ನಮ್ಮಲ್ಲಿ ಹೆಚ್ಚಾಗಿ ಸಿಕ್ಕುವುದಿಲ್ಲ.

ವಿಲ್ಲೈವಳ್ಳೆಚ್ಚು : ಬಿಲ್ಲನ್ನು ಬಗ್ಗಿಸಿ

ಅಂಬೈ ಮಾಟ್ಟುಣ : ಅಂಬನ್ನು ಇಟ್ಟು

ಚೊಲ್ಲುಮ್‌ಶೆಯಲಾಗಮ್ : ತಂಬಿ ಮಾತೇಕಾರ್ಯವಾಗುವುದು

ತಮ್ಮ

ಚೊಲ್ಲುಮ್‌ಶೆಯಲಾಗಮ್ : ಅಣ್ಣೇ ಮಾತೇಕಾರ್ಯವಾಗುವುದು

ಅಣ್ಣ

ಇಂತಹ ಹಾಡುಗಳು ಬಹಳ ವಿರಳವೆಂದೇ ಹೇಳಬೇಕು.

ಮೀನುಗಾರ ಹಾಡುಗಳು ಕಡಲತೀರವಿರುವ ಪ್ರಾಂತ್ಯಗಳಲ್ಲಿ ಹೇರಳವಾಗಿ ಸಿಕ್ಕುತ್ತವೆ. ತಮಿಳುನಾಡು ಮೂಡಲ ಕಡಲ ತೀರವನ್ನೂ ತೆಂಕಣ ಕಡಲ ತೀರವನ್ನೂ ಒಳಗೊಂಡಿರುವುದರಿಂದ ತಮಿಳಿನಲ್ಲಿ ತುಂಬಾ ಪ್ರಾಚೀನಕಾಲದಿಂದಲೆ ದೋಣಿ ಹಾಡುಗಳು ಪ್ರಚಲಿತವಾಗಿದ್ದವು. ತೂತ್ತುಕ್ಕುಡಿಯ ಸಮೀಪದಲ್ಲಿ ರೋಮನ್ ಕೆಥೊಲಿಕ್ ಭಾರತ ಮೀನುಗಾರರು ‘ಅಂಬಾಪಾಟ್ಟು’ ಹಾಡುತ್ತಾರೆ. ಇತರ ಅನೇಕ ಜಾನಪದರು ‘ಕಪ್ಪಲ್ ಪಾಟ್ಟು’ (ಹಡಗಿನ ಹಾಡು) ಹಾಡುತ್ತಾರೆ. ನದಿತೀರದಲ್ಲಿರುವವರು ‘ತೋಣಿಪಾಟ್ಟು’ (ದೋಣಿಯ ಹಾಡು) ಹಾಡುತ್ತಾರೆ. ಬೇರೆಯವರೆಲ್ಲಾ ‘ಐಲಸಾ’ ಹಾಡುಗಳನ್ನು ಹಾಡುತ್ತಾರೆ. ಈ ಎಲ್ಲ ರೀತಿಯ ಹಾಡುಗಳಲ್ಲೂ ಪ್ರೇಮ ಮುಖ್ಯವಾದ ಆಶಯವಾಗಿರುತ್ತದೆ (ಎನ್ ವಾನಮಾಮಲೈ ೧೯೬೯, ೧೮)

ಪರಮಾರ್ಥ ಗೀತೆಗಳಲ್ಲಿ ಸ್ತುತಿ ಪದಗಳು, ಆಚರಣಾತ್ಮಕ ಗೀತೆಗಳು ಹಾಗೂ ತತ್ತ್ವಪದಗಳು ಸೇರಿವೆ. ಲಾಲಿ ಪದಗಳಲ್ಲೂ ಸ್ತುತಿ ಪದಗಳಿವೆ. ಕರಗದ ಹಾಡುಗಳು, ಕಾವಡಿ ಹಾಡು ಮುಂತಾದುವೂ ತಮಿಳಿನಲ್ಲಿವೆ. ಪಿಳ್ಳೈಯಾರ್, ಸರಸ್ವತಿ, ಮುರುಗನ್, ಕಣ್ಣನ್, ಶಿವನ್ ಮುಂತಾದವರು ಸ್ತುತಿಗೀತೆಗಳಲ್ಲಿ ಬರುವ ದೇವತೆಗಳು ‘ಚಾಪೆಯನ್ನು ಹಾಸಿ ಅಚ್ಯುತನ ಹೆಸರು ಹೇಳಿ ಕೃಷ್ಣಾ ಎಂದು ಮಲಗಿದವರಿಗೆ ಎಂದಿಗೂ ಕೇಡಿಲ್ಲ. ಗೋವಿಂದಾ ಎಂದು ಮಲಗಿದರೆ ಒಂದು ದಿನವೂ ಕೊರತೆ ಇರುವುದಿಲ್ಲ’ ಎನ್ನುವ ಸ್ತುತಿಪದ ಮುಂದಿನದು.

ಅರಿಯನ್ನು ಪಾಯ್ ವಿರಿಚ್ಚು
ಅಚ್ಚು ತಾನ್ನು ಪೇರ್ ಚೊಲ್ಲಿ
ಕೃಷ್ಣಾನ್ನು ಪಡತ್ತವರ
್ಕು
ಕೇಡಿಲ್ಲೈ ಒರುನಾಳುಮ್
ಗೋವಿಂದಾನ್ನು ಪಡುತ್ತವರ
್ಕು
ಕುವಿಲ್ಲೈ ಒರುನಾಳುಮ್

ತಮಿಳುನಾಡಿನ ಜಾತ್ರೆಗಳಲ್ಲಿ, ಇತರ ಪೂಜೆಗಳಲ್ಲಿ, ನೋಂಪಿಗಳಲ್ಲಿ ಹಾಡುವ ಜನಪದ ಗೀತೆಗಳನ್ನು ಪರಮಾರ್ಥಗೀತೆಗಳಲ್ಲಿ ಹೇಳಬೇಕಾಗಿದೆ. ದಕ್ಷಿಣ ಭಾರತದಲ್ಲಿ ಎಲ್ಲ ಪ್ರದೇಶಗಳಲ್ಲೂ ನಾಗಪೂಜೆ ಇದೆ. ಮರದಡಿಯ ನಾಗಪ್ರತಿಮೆಗಳನ್ನು ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ನೋಡಬಹುದು. ನಾಗಪೂಜೆಯನ್ನು ಮಾಡಿ ಹುತ್ತಗಳಿಗೆ ನಮಸ್ಕಾರ ಮಾಡಿ ಹೀಗೆ ಹಾಡುತ್ತಾರೆ.

ನಾಗರಹಾವೆ ನಾಗರಹಾವೇ
ನಿನ್ನ ಬಾಲ ಎಷ್ಟು ಚೆಂದ ರನ್ನದ ಹಾಗೆ
!
ಎತ್ತಿದ ಹೆಡೆಯು ಮುತ್ತಿನಂಥಾ ಕಣ್ಣು
ಅಕ್ಕಿಯಂಥ ಹಲ್ಲು ಎಷ್ಟೆಷ್ಟು ಚೆಂದ!
ದಾರಿಕೊಡು ನನ್ನ ಕಂದ

ಶಕ್ತಿ ದೇವತೆಯ ಉಪಾಸನೆ ತಮಿಳುನಾಡಿನಲ್ಲೂ ಇದೆ. ಅಂಗಾಲೇಶ್ವರಿ, ವೆಯಿಲುಹಂದ ಅಮ್ಮನ್, ಮಾರಿಯಮ್ಮನ್ ಮುಂತಾದ ದೇವತೆಗಳನ್ನು ಇಲ್ಲಿ ಹೆಸರಿಬಹುದು. ಮಾರಿಯಮ್ಮ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ದೇವತೆ. ಸಮಯಪುರಂ, ಪೆಯಪಾಳಯಂ ಮುಂತಾದ ಪ್ರದೇಶಗಳಲ್ಲಿ ಮಾರಿಯಮ್ಮನ ದೇವಸ್ಥಾನಗಳಿವೆ. ಮಾರಿಯಮ್ಮನಿಗೆ ಸಂಬಂಧಿಸಿದ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸುತ್ತಾರೆ. ಜಾತ್ರೆಯ ಒಂಬತ್ತನೆಯ ದಿನದಿಂದ ಹೆಂಗಸರು ಕುಮ್ಮೈ ಹಾಡುಗಳನ್ನು ಹಾಡುತ್ತಾರೆ.

ದಕ್ಷಿಣ ಭಾರತದ ಲಾಲಿ ಪದಗಳಲ್ಲಿ ತುಂಬ ಹೋಲಿಕೆ ಕಂಡುಬರುತ್ತದೆ. ಪಲ್ಲವಿಗಳಲ್ಲಿ, ಲಾಲಿ ಪದಗಳ ವಸ್ತುವಿನಲ್ಲಿ, ತಾಯಿಯ ಹರಕೆಗಳಲ್ಲಿ ಬಹಳಷ್ಟು ಹೋಲಿಕೆಯಿದೆ. ‘ತಾಲೇಲೋ’ ಎಂಬ ಪಲ್ಲವಿಯುಳ್ಳ ಲಾಲಿ ಪದಗಳನ್ನು ಕೃಷ್ಣನನ್ನು ಕುರಿತು ಪೆರಿಯಾಳ್ವಾರ್ ರಚಿಸಿದ್ದನು.

ಮಲಗು ನನ್ನ ಮುತ್ತೇ ತಪ್ಪಸ್ಸಿನ ಫಲವೇ
ಮಲಗು ಉಯ್ಯಾಲೆಯಲ್ಲಿ ಮಗುವೇ ನನ್ನ ಮುತ್ತೇ

ಮುಂತಾದ ಲಾಲಿ ಪದಗಳು ತಮಿಳುನಾಡಿನಲ್ಲಿ ಇಂದಿಗೂ ಕೇಳಿಬರುತ್ತವೆ. ಇವುಗಳಿಂದ ‘ಕೈ ಬೀಸಮ್ಮ ಕೈ ಬೀಸು, ಅಂಗಡಿಗೆ ಹೋಗೋಣ ಕೈ ಬೀಸು, ಮಿಠಾಯಿ ತೆಗೆದುಕೊಳ್ಳೋಣ ಕೈ ಬೀಸು, ಮೆಲ್ಲಗೆ ತಿನ್ನೋಣ ಕೈ ಬೀಸು’ ಎಂಬುದು ತಾಯಿ ಮಗುವಿಗಾಗಿ ಹಾಡುವ ಹಾಡು.

ಕೈ ವೀಚಮ್ಮ ಕೈವೀಚು
ಕಡೈಕ್ಕು ಪೋಗಲಾಮ್ ಕೈವೀಚು
ಮಿಟ್ಟಾಯ್ ವಾಂಗಲಾಮ್ ಕೈವೀಚು
ಮೆದುವಾಯ್ ತಿನ್ನಲಾಮ್ ಕೈವೀಚು

ಚಂದಮಾಮನನ್ನು ಕರೆಯುತ್ತಾ ಮಗುವಿಗೆ ಅನ್ನ ತಿನ್ನಿಸುವ ಹಾಡುಗಳೂ ದಕ್ಷಿಣ ಭಾರತದಲ್ಲೆಲ್ಲಾ ಕಂಡು ಬರುತ್ತವೆ.

ನಿಲಾ ನಿಲಾ ಓಡಿವಾ ನಿಲ್ಲಾ ಮಲ್ ಓಡಿವಾ
ಮಲೈ ಮೇಲೆ ಏಱವಾ
, ಮಲ್ಲಿಗೈಪ್ಪೊಕೊಂಡು ವಾ

ಮಕ್ಕಳ ಹಾಡುಗಳಲ್ಲಿ ಆನೆಯನ್ನು ಕುರಿತ ಹಾಡುಗಳು ಕೂಡ ತಮಿಳು, ಕನ್ನಡ ಮತ್ತು ತೆಲುಗುಗಳಲ್ಲಿ ಕಂಡುಬರುತ್ತವೆ.

ಆನೆ ಬಂತೊಂದಾನೆ ಯಾವೂರಾನೆ ಬಿಜಾಪುರದಾನೆ ಎಂದು ಕನ್ನಡಿಗರು ಹಾಡಿದರೆ;

ಏನುಗೊಚ್ಚಿಂದೇನುಗು ಏವೂರೊಚ್ಚಿಂದೇನಗು ಎಂದು ತೆಲುಗರು ಹಾಡುತ್ತಾರೆ.

ಅನೈ ಅನೈ ಅಳುಗರ್ ಯಾನೈ
ಅಳಗರುಮ್ ಚೊಕ್ಕರುಮ್ ಏಱುಮ್ ಯಾನೈ
ಕಟ್ಟಿಕ್ಕರುಮ್ ಬೈ ಮುಱಕ್ಕುಮ್ ಯಾನೈ
ಕಾವೇರಿ ನೀರೈಕ್ಕಲಕ್ಕುಮ್ ಯಾನೈ

ಎಂದು ತಮಿಳರು ಹಾಡುತ್ತಾರೆ.

ಮಕ್ಕಳ ಹಾಡುಗಳಲ್ಲಿ ಪ್ರಶ್ನೋತ್ತರಗೀತೆಗಳಿಗೆ ತುಂಬ ಪ್ರಾಧಾನ್ಯವಿದೆ.

ಕಾಗೆ ಕಾಗೆ ಕವ್ವ
ಯಾರ್ ಬತ್ತಾರವ್ವ
ಮಾವ ಬತ್ತಾನ್ ಕವ್ವ
ರೀತಿ ಕನ್ನಡದ್ದಾದರೆ

ಪ್ರಶ್ನೆ : ಕಕ್ಕಾ ಕಾಕ್ಕಾ

ಎಂಗೈ ಪೋನಾಯ್?

ಉ : ಇರೈ ತೇಡ ಪೋನೇನ್

ಪ್ರಶ್ನೆ : ಇರೈ ಎನ್ನ ಕಿಡೈತ್ತದು?

ಉ : ವೈಕ್ಕೋಲ್ ಕಿಡೈತ್ತದು ಇದು ತಮಿಳರದು

ಇಂತಹ ಹಾಡುಗಳಿಂದ ಮಕ್ಕಳ ಆಟಕ್ಕೆ ಉತ್ಸಾಹವೇರುತ್ತದೆ.

ಜನಪದ ಗೀತೆಗಳಲ್ಲಿ ಗರತಿಯ ಪಾತ್ರ ಮಹತ್ತ್ವದ್ದು. ಕುಟುಂಬದಲ್ಲಿ ಸ್ತ್ರೀ ವಹಿಸುವ ವಿವಿಧ ಪಾತ್ರಗಳನ್ನು ಜನಪದ ಗೀತೆಗಳು ಪರಿಣಾಮಕಾರಿಯಾಗಿ ಚಿತ್ರಿಸುತ್ತವೆ. ಅವಿಭಕ್ತ ಕುಟುಂಬಗಳಲ್ಲಿಯ ಹೆಂಗಸಿನ ಸಂಕಷ್ಟಗಳನ್ನು ಕೆಲವು ಗೀತೆಗಳಲ್ಲಿ ವರ್ಣಿಸಲಾಗಿದೆ.

ನನ್ನ ಭೂಮಿ ಒಳ್ಳೇದು ನನ್ನ ಗಂಡ ಒಳ್ಳೆಯವನು

ನನ್ನ ಗಂಡನನ್ನು ಹೆತ್ತ ಕೋತಿ ಮಾತ್ರ ಕೆಟ್ಟದ್ದು ಎಂದು ಹೇಳುವಷ್ಟು ಅತ್ತೆ ಮನೆಯ ಕಾಟ ಗೀತೆಗಳ ವಸ್ತುವಾಗಿದೆ.

ಪ್ರಣಯ ಗೀತೆಗಳು ಕೂಡ ತಮಿಳಿನಲ್ಲಿ ಹೇರಳವಾಗಿ ಸಿಕ್ಕುತ್ತವೆ. ಜನಪದ ಗೀತೆಗಳಲ್ಲಿ ಪ್ರಣಯ ಗೀತೆಗಳದು ಪ್ರಮುಖಸ್ಥಾನ. ತಮಿಳಿನ ಶೋಕ ಗೀತೆಗಳನ್ನು ಕುರಿತು ಪ್ರತ್ಯೇಕವಾಗಿ ಹೇಳಬೇಕಾಗಿದೆ. ಕರ್ನಾಟಕದ ಮಂಡ್ಯ, ಚಾಮರಾಮನಗರ, ಕೊಡಗು ಜಿಲ್ಲೆಗಳಲ್ಲಿ ಸತ್ತವರ ಮನೆಗೆ ಬಂದು ಸತ್ತವನ ಗುಣಗಾನ ಮಾಡಿ ಹಾಡಿ ಸಂಭಾವನೆ ಪಡೆಯುವವರೂ ಇದ್ದಾರೆ.

ತೆಲುಗಿನಲ್ಲಿ ಇಂತಹ ಗೀತೆಗಳನ್ನು (ಮರಣಗೀತೆ) ಹೆಚ್ಚಾಗಿ ಕಾಣಲಾಗುವುದಿಲ್ಲ. ತಮಿಳಿನ ಒಪ್ಪಾರಿ ಹಾಡು ವಿಧವೆಯ ಸಂತಾಪವನ್ನು ಚಿತ್ರಿಸುತ್ತವೆ.

ಮುಳ್ಳು ಹೂವಿನ ಈ ಕಾಡಿನಲ್ಲಿ ಒಂಟಿಯಾಗಿ ಬಿಟ್ಟು
ನೀನು ಹೊರಟು ಹೋದೆ ಗೆಳೆಯಾ

ಎಂದು ಒಂದು ಗೀತೆಯಲ್ಲಿ ತನ್ನ ದುಃಖವನ್ನು ತೋಡಿಕೊಳ್ಳುತ್ತಾಳೆ ಒಂದು ಹೆಣ್ಣು. ಹೆಣವನ್ನು ಮುಂದಿಟ್ಟುಕೊಂಡು ಗೀತೆಗಳ ಮೂಲಕ ಶೋಕವನ್ನು ವ್ಯಕ್ತಮಾಡುವ ಸಂಪ್ರದಾಯ ತಮಿಳುನಾಡಿನಲ್ಲಿ ಇದೆ. ಮರಣಗೀತೆಗಳನ್ನು ಹಾಡುವ ವೃತ್ತಿಗಾಯಕರೂ ಇದ್ದಾರೆ. ಅವರು ಇಂಥ ಸಂದರ್ಭದಲ್ಲಿ ಬಂದು ಜನಪದ ಗೀತೆಗಳನ್ನು ಹಾಡುತ್ತಾರೆ.

ಕಥನಗೀತೆಗಳು – ಮಹಾಕಾವ್ಯಗಳು : ಜನಪದ ಕಾವ್ಯದ ಭಾಗವಾದ ಕಥನಗೀತೆ ಮತ್ತು ಮಹಾಕಾವ್ಯ ಸಂಪ್ರದಾಯಗಳ ವಸ್ತು, ಛಂದಸ್ಸು ಮತ್ತು ವರ್ಣನೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದಾಗ ಸಂಸ್ಕೃತಿಯ ಸಮಾನಾಂಶಗಳನ್ನು ಗುರುತಿಸಬಹುದು.

ತಮಿಳಿಗೆ ವೃತ್ತಿಗಾಯಕರ ಭವ್ಯ ಪರಂಪರೆ ಇದೆ. ಪಾಣರ್, ಕೂತ್ತಾರ್, ಪೊರುನರ್, ಪುಲವರ್, ಅಗವುನರ್ ಮುಂತಾದ ವೃತ್ತಿಗಾಯಕರ ಬಗ್ಗೆ ತಮಿಳಿನ ಪ್ರಾಚೀನ ಸಾಹಿತ್ಯದಲ್ಲಿ ಹೇಳಲಾಗಿದೆ. ಪಾಣರ್ ಎಂಬ ಜನ ‘ಯಾಳ್’ ಎಂಬ ವಾದ್ಯವನ್ನು ನುಡಿಸುತ್ತಾ ವೀರಗೀತೆಗಳನ್ನು ಹಾಡುತ್ತಿದ್ದರು. ವೃತ್ತಿಗಾಯಕ ಪರಂಪರೆಯ ಮೇಲೆ ಉಲ್ಲೇಖಿಸಿದ ಗಾಯಕರು ಜನಪದ ಗಾಯಕರೇ ಎಂಬ ಸಂದೇಹವಿದೆ.

ಇಳಂಗೋ ಅಡಿಗಳ್ ಬರೆದ ‘ಸಿಲಪ್ಪದಿಗಾರಂ’ ಪ್ರಾಚೀನ ಮಹಾಕಾವ್ಯಗಳಲ್ಲೊಂದು. ಈ ಕಾವ್ಯದಲ್ಲಿ ಸಮಕಾಲೀನ ಗಾಯಕ ಪರಂಪರೆಯ ಬಗ್ಗೆ ಅನೇಕ ಸೂಚನೆಗಳಿವೆ. ಕಡಲತೀರದ ಹಾಡುಗಳು, ಬೇಟೆಯ ಹಾಡುಗಳು, ಗೋಪಾಲಕರ ಗೀತೆ, ಉಯ್ಯಾಲೆ ಪದ ಮುಂತಾದವುಗಳನ್ನು ಕುರಿತ ಸೂಚನೆಗಳು ಇವೆ. ‘ಸಿಲಪ್ಪದಿಗಾರಂ’ ಜನಪದ ಅಶಯಗಳ ಮೂಲಕ ರೂಪುಗೊಂಡಿದೆ. ಕಣ್ಣಗಿಯ ಕತೆಯನ್ನೊಳಗೊಂಡ ‘ಸಿಲಪ್ಪದಿಗಾರಂ’ ಇಂದಿಗೂ ವಾಚಿಕ ಸಾಹಿತ್ಯದಲ್ಲಿ ಜೀವಂತವಾಗಿದೆ. ಕಣ್ಣಗಿ ಶಕ್ತಿಯ ಸಂಕೇತವಾಗಿ ಜನಪದ ಮಹಾಕಾವ್ಯದಲ್ಲೂ ಮುಖ್ಯ ಪಾತ್ರವಾಗಿದೆ. ಒಂದು ಅಭಿಪ್ರಾಯದಂತೆ ಕಣ್ಣಗಿಯೇ ಕನ್ಯಕಾಪರಮೇಶ್ವರಿಯಾಗಿ ವೈಶ್ಯರ ಆರಾಧ್ಯದೇವತೆಯಾದಳು. ಕನ್ಯಕೆಯ ದೇವಸ್ಥಾನಗಳು ತಮಿಳುನಾಡಿನಲ್ಲಿವೆ. ಬೆಜವಾಡದ ಕನಕದುರ್ಗ ಎಂಬ ಆಂಧ್ರರ ಆರಾಧ್ಯದೇವತೆ ಕಣ್ಣಗಿಯ ಅವತಾರವೆನ್ನುತ್ತಾರೆ. ಕೇರಳದಲ್ಲಿ ಕಣ್ಣಗಿ ಭದ್ರಕಾಳಿಯ ಅವತಾರವೆನ್ನಲಾಗಿದೆ. ಮಲಯಾಳದ ಲಾವಣಿಗಳಲ್ಲಿ ಕಣ್ಣಗಿಯನ್ನು ಕುರಿತಂತಹವು. ಇವೆ. ಕೊಡುಂಗಲ್ಲೂರಿನ ಪರಣ ಉತ್ಸ ‘ಸಿಲಪ್ಪದಿಗಾರಂ’ ಕಾವ್ಯದ ಆಚರಣಾತ್ಮಕ ರೂಪವೆಂದು ಭಾವಿಸಲಾಗಿದೆ.

ಮಹಾಭಾರತ ಕಥೆಯನ್ನಾಧರಿಸಿ ತಮಿಳಿನಲ್ಲಿ ರೂಪುಗೊಂಡ ಖಂಡ ಕಾವ್ಯಗಳು ಕೂಡ ಹಲವಿದೆ. ಅಲ್ಲಿ ‘ಅರಶಾಣಿಮಾಲೈ’, ‘ಪವಳಕ್ಕೊಡಿ’ ಮುಂತಾದವು ಮಹಾಭಾರತ ಕಥೆಯಿಂದ ರೂಪುಗೊಂಡಿವೆ. ‘ಅಲ್ಲಿ ಕಥೆ’ಯಲ್ಲಿ ಕಣ್ಣನ್ ಕುರವ ಹೆಂಗಸಿನ ರೂಪವನ್ನು ಧರಿಸುತ್ತಾನೆ. ಅರ್ಜುನ ‘ಅಲ್ಲಿ’ಯನ್ನು ಗೆಲ್ಲಲು ಸಹಾಯ ಮಾಡುತ್ತಾನೆ.

ತಮಿಳಿನಲ್ಲಿ ಐತಿಹಾಸಿಕ ಕಥನಗೀತೆಗಳು ನೂರಾರು ಸಿಕ್ಕುತ್ತವೆ. ಇವುಗಳಲ್ಲಿ ವೀರರಸಪ್ರಧಾನವಾದವೇ ಹೆಚ್ಚು. ಈಗಲೂ ತಮಿಳುನಾಡಿನಲ್ಲಿ ಪ್ರಚಲಿತವಾಗಿರುವ ಕೆಲವು ವೀರಗೀತೆಗಳು ಹೀಗಿವೆ (ಎನ್. ವಾನಮಾಮಲೈ, ೧೯೬೯, ೫೦). ‘ಐವರ್ ರಾಜಾಕ್ಕಳ್ ಕದೈ’ (ಐವರು ರಾಜರ ಕತೆ) ‘ಕನ್ನಡಿಯನ್ ಪಡೈಪೋರು’ (ಕನ್ನಡ ಸೈನ್ಯದ ಹೋರಾಟ), ‘ಮೂನ್ರುಲಗು ಕೊಂಡ ಅಮ್ಮನ್ ಕದೈ’ (ಮೂರು ಲೋಕ ಪಡೆದ ಅಮ್ಮನ ಕಥೆ), ‘ಇರವೈಕ್ಕುಟ್ಟಿ ಪಿಳ್ಳೈಪೋರ್’, ‘ಶಿವಗಂಗೈ ಅಮ್ಮಾನ್ನೈ’, ‘ಶಿವಗಂಗೈಕುಮ್ಮಿ’, ‘ಪೂಲುತ್ತೇವನ್ ಚಿಂದು’, ‘ಕಟ್ಟಬೊಮ್ಮನ್ ಕದೈಪ್ಪಾಡಲ್’ ಮುಂತಾದವು.

‘ದೇಸಿಂಗುರಾಜನ್ ಕದೈ’ ಎನ್ನುವುದು ‘ದೇಶಿಂಗು ರಾಜು ಕಥೆ’ ಎಂಬ ಹೆಸರಿನಲ್ಲಿ ತೆಲುಗಿನಲ್ಲಿ ಪ್ರಸಿದ್ಧವಾಗಿದೆ. ‘ಐವರ್ ರಾಜಾಕ್ಕಳ್‌ಕದೈ’ಯನ್ನು ವಿಲ್ಲುಪ್ಪಾಟ್ಟಾಗಿ (ಬಿಲ್ಲಿನ ಹಾಡು) ತಿರುನೆಲ್ವೇಲಿ ಜಿಲ್ಲೆಯ ಕೆಲವು ಪ್ರಾಂತ್ಯಗಳಲ್ಲಿ ಇಂದಿಗೂ ಹಾಡುತ್ತಾರೆ.

ಐತಿಹಾಸಿಕ ಗೀತೆಗಳನ್ನು ಕುರಿತಂತೆ ಒಂದು ಮಾತನ್ನು ಹೇಳಬಹುದು. ಜಗತ್ತಿನ ಜನಪದ ವೀರಗೀತೆಗಳೆಲ್ಲಾ ೧೨ನೆಯ ಶತಮಾನದಿಂದೀಚೆಗೆ ರೂಪುಗೊಂಡವೆಂದು ಹೇಳಲಾಗಿದೆ. ಪೌರಾಣಿಕ ಗೀತೆಗಳಿಗೆ ಈ ಕಾಲನಿರ್ಣಯ ಅನ್ವಯಿಸುವುದಿಲ್ಲ. ಜನಪದ ರಾಮಾಯಣಗಳು, ಜನಪದ ಮಹಾಭಾರತಗಳು ಯಾವ ಕಾಲದವೆಂದು ಖಚಿತವಾಗಿ ನಿರ್ಧರಿಸಿ ಹೇಳಲಾಗುವುದಿಲ್ಲ. ಐತಿಹಾಸಿಕ ವಸ್ತುಗಳನ್ನೊಳಗೊಂಡ ಕಥನಗೀತೆಗಳಾಗಲಿ, ಮಹಾಕಾವ್ಯಗಳಾಗಲಿ ೧೨ನೆಯ ಶತಮಾನಕ್ಕಿಂತ ಹಿಂದನವೆಂದು ಖಚಿತವಾಗಿ ನಿರ್ಧರಿಸಬಹುದಾದ ಸಂದರ್ಭವಿಲ್ಲವೆಂದು ವಿದ್ವಾಂಸರು ಹೇಳುತ್ತಾರೆ.

ತಮಿಳಿನ ಐತಿಹಾಸಿಕ ಕಾವ್ಯಗಳೂ ೧೫ನೆಯ ಶತಮಾನ ದಿಂದೀಚಿನವಾದ ಮೊದಲ ಹಂತದ ಈ ವೀರಗೀತೆಗಳಿಗೂ ಕನ್ನಡ ನಾಡಿಗೂ ಸಂಬಂಧವಿರುವುದು ಈ ತೌಲನಿಕ ಅಭ್ಯಾಸದಲ್ಲಿ ಪರಿಶೀಲನಾರ್ಹವಾಗಿದೆ. ಕನ್ನಡನಾಡಿನ ರಾಜರಿಗೂ ಪಾಂಡ್ಯರಾಜರಿಗೂ ನಡೆದ ಯುದ್ಧಗಳನ್ನು ಪ್ರತಿಬಿಂಬಿಸುವ ತಮಿಳು ಗೀತೆಗಳಿವೆ ‘ಪಂಚಪಾಂಡಿಯರ್ ಕದೈ’, ‘ಐವರ್ ರಾಜಾಕ್ಕಳ್ ಕದೈ’, ‘ಕನ್ನಡಿಯನ್ ಪಡೈಪೋರ್’ ಮುಂತಾದವು ಇದೇ ವಿಷಯವನ್ನು ಪ್ರಸ್ತಾವಿಸುತ್ತವೆ. ತಮಿಳರೊಡನೆ ಹೋರಾಡಿದ ಕನ್ನಡರಾಜನ ಹೆಸರಿಲ್ಲ. ‘ಕನ್ನಡಿಯನ್ ಪಡೈಪೋರ್’ ಪ್ರಕಾರ ಕುಲಶೇಖರಪಾಂಡ್ಯನೆಂಬ ವಳ್ಳಿಯೂರ್ ದೊರೆಗೆ ಕನ್ನಡದೊರೆ ತನ್ನ ಮಗಳನ್ನು ಕೊಡಬೇಕೆಂದು ಆಸೆ ಪಡುತ್ತಾನೆ. ಆದರೆ ಪಾಂಡ್ಯದೊರೆ ಒಪ್ಪುವುದಿಲ್ಲ. ಇದರಿಂದ ಕೆರಳಿದ ಕನ್ನಡದೊರೆ ಯುದ್ಧವನ್ನು ಪ್ರಕಟಿಸುತ್ತಾನೆ. ಈ ಯುದ್ಧದಲ್ಲಿ ಕನ್ನಡ ದೊರೆಗೆ ಸೋಲುಂಟಾಗುತ್ತದೆ. ಅನಂತರ ಕನ್ನಡದೊರೆ ತನ್ನ ಕಡೆಯವರನ್ನು ಗುಟ್ಟಾಗಿ ಕಳುಹಿಸಿ ಪಾಂಡ್ಯರಾಜನನ್ನು ಕೊಲ್ಲಿಸುತ್ತಾನೆ.

ತಮಿಳುನಾಡಿನ ಮಧುರೆಯ ಮೇಲೆ ಕನ್ನಡ ದೊರೆಗಳು ಕೆಲವರು ದಾಳಿ ನಡೆಸಿ ಗೆದ್ದ ವಿಷಯ ಇತಿಹಾಸದಲ್ಲಿದೆ. ಮೂರನೆಯ ಬಲ್ಲಾಳ ಮಧುರೆಯ ಸುಲ್ಲಾನನನ್ನು ಜಯಿಸಿದ ಐತಿಹಾಸಿಕ ದಾಖಲೆಗಳಿವೆ. ವೀರಕಂಪಣ ಮಧುರೆಯನ್ನು ಗೆದ್ದ ವಿಷಯವನ್ನು ಅವನ ಸತಿ ಗಂಗಾದೇವಿ ‘ಮಧುರಾ ವಿಜಯ’ವೆಂಬ ಸಂಸ್ಕೃತ ಕಾವ್ಯದಲ್ಲಿ ವರ್ಣಿಸಿದ್ದಾಳೆ. ಕನ್ನಡ ದೊರೆಗಳು ತೆನ್‌ಕಾಶಿಯ ಪಾಂಡ್ಯದೊರೆಗಳನ್ನು ಗೆದ್ದ ವಿಷಯವೇ ತಮಿಳಿನ ಕಥನಗೀತೆಗಳಲ್ಲಿ ಉಲ್ಲೇಖಗೊಂಡಿವೆ ಎನ್ನಬಹುದು. ಕನ್ನಡನಾಡಿನಿಂದ ತಮಿಳುನಾಡಿಗೆ ಹೋದ ದೊರೆ ವಿಜಯನಗರದ ನರಸನಾಯಕನೆನ್ನಲಾಗಿದೆ.

ಇದಕ್ಕೂ ಮುಂಚೆ ಕದಂಬರ ಕಾಲದಿಂದಲೂ ಕರ್ನಾಟಕಕ್ಕೂ ತಮಿಳುನಾಡಿಗೂ ಸಂಬಂಧವಿತ್ತೆಂದು ತಿಳಿದು ಬರುತ್ತದೆ. ಬಾದಾಮಿ ಚಾಳುಕ್ಯರಿಗೂ ಪಲ್ಲವರಿಗೂ ರಾಷ್ಟ್ರಕೂಟರಿಗೂ ಚೋಳರಿಗೂ ಅನೇಕ ಯುದ್ಧಗಳು ನಡೆದುವು. ಯುದ್ಧದ ಜೊತೆ ಜೊತೆಗೆ ಹೆಣ್ಣನ್ನು ಕೊಟ್ಟು ತರುವ ಸಂಬಂಧಗಳೂ ಇದ್ದವು. ನೃಪತುಂಗನ ಮಗಳು ಶಂಖಾದೇವಿಯನ್ನು ಪಲ್ಲವರ ಮನೆಗೆ ಕೊಟ್ಟರು.

ರಾಮಪ್ಪ ಅಯ್ಯನ್ ಅಮ್ಮಾನೈ ಎಂಬುದು ಕೂಡ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರದ ಐತಿಹಾಸಿಕ ಸಂಗತಿಗಳನ್ನೊಳಗೊಂಡಿದೆ. ಇದರಲ್ಲಿ ತಿರುಮಲನಾಯಕ ದಳವಾಯಿ ಸೇತುಪತಿ ಎಂಬವನೊಂದಿಗೆ ನಡೆಸಿದ ಯುದ್ಧವನ್ನು ವಣಿಘಸಲಾಗಿದೆ. ತಿರುಮಲನಾಯಕನನ್ನು ಸೇತುಪತಿ ಧಿಕ್ಕರಿಸಲು ರಾಮಪ್ಪಯ್ಯ ಎಂಬ ಬ್ರಾಹ್ಮಣ ಸೇನಾಪತಿಯನ್ನು ಕಳುಹಿಸಲಾಯಿತು. ಮೊದಲನೆಯ ದಿನದ ಯುದ್ಧದಲ್ಲಿ ರಾಮಪ್ಪಯ್ಯನ ಸೈನ್ಯಕ್ಕೆ ಬಹಳಷ್ಟು ನಷ್ಟವಾಯಿತು. ಕೊನೆಗೆ ರಾಮಪ್ಪಯ್ಯ ತಮಿಳುರಾಜರನ್ನು ಗೆದ್ದನು. ಇದೇ ರಾಮಪ್ಪಯ್ಯ ವಂಜಿಯ ಅರಸನೊಂದಿಗೆ ಮಾಡಿದ ಯುದ್ಧವನ್ನು ‘ಇರವಿಕುಟ್ಟಿಪಿಳ್ಳೈಪೋರ್’ ಎಂಬ ವೀರಗೀತೆಯ ವಸ್ತುವನ್ನಾಗಿ ಮಾಡಲಾಗಿದೆ.

ತಿರುನೆಲ್ವೇಲಿಯ ಪರಿಸರಗಳಲ್ಲಿ ಕಟ್ಟಬೊಮ್ಮನ ಕಥೆಗಳು ತುಂಬ ಪ್ರಸಿದ್ಧವಾಗಿವೆ. ಕಟ್ಟಬೊಮ್ಮನ ಬಗೆಗಿನ ಗೀತೆಗಳು ಜನಪದ ನಾಟಕಗಳಲ್ಲೂ ಬಳಕೆಯಾಗುತ್ತಿವೆ. ಈ ನಾಟಕಗಳನ್ನು ಹೆಚ್ಚಾಗಿ ತೆಲುಗು ತಿಳಿದಿರುವ ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಿದ್ದ ಕಾರಣ, ಕೆಲವು ಸಂಭಾಷಣೆಗಳು ತೆಲುಗು ತಮಿಳು ಮಿಶ್ರಿತವಾಗಿವೆ (ಎನ್. ವಾನಮಾಮಲೈ, ೧೯೬೯:೮೨). ಕಟ್ಟಬೊಮ್ಮನ್ ವಂಶದವರು ಬಳ್ಳಾರಿಯಿಂದ ತಮಿಳುನಾಡಿಗೆ ಹೋದ ತೆಲುಗರು. ಕಟ್ಟಬೊಮ್ಮನ್ ತನ್ನದೇ ಆದ ಕೋಟೆಯನ್ನು ನಿರ್ಮಿಸಿಕೊಂಡು, ಸೈನ್ಯ ಬೆಳೆಸಿ ನೆರೆಹೊರೆಯ ಪಾಳೆಗಾರರ ಕೋಪಕ್ಕೆ ಗುರಿಯಾದನು. ಎಟ್ಟಿಯಾಪುರಂನ ಅರಸನೂ ಇನ್ನೂ ಕೆಲವರು ಸೇರಿ ಈಸ್ಟ್ ಇಂಡಿಯಾ ಕಂಪನಿಗೆ ದೂರಿತ್ತರು. ಕಟ್ಟಬೊಮ್ಮನ್‌ಗೂ ಇಂಗ್ಲಿಷರಿಗೂ ವಿರಸವುಂಟಾಯಿತು. ಇಂಗ್ಲಿಷರನ್ನು ನಡುಗಿಸಿದ ಕಟ್ಟಬೊಮ್ಮನ್ ಕೊನೆಗೆ ಪರದೇಶಿಯರ ಕೈಗೆ ಸಿಕ್ಕಿದಾಗ ಅವನನ್ನು ಗಲ್ಲಿಗೇರಿಸಿದರು. ೧೮ನೆಯ ಶತಮಾನದಲ್ಲಿ ಬ್ರಿಟಿಷರ ವಿಸ್ತರಣಾಭಿಲಾಷೆಯನ್ನು ಎದುರಿಸಿದ ಸ್ಚದೇಶಿ ಪಾಳೆಗಾರರ ಸಾಲಿನಲ್ಲಿ ಕಟ್ಟಬೊಮ್ಮನನಿಗೆ ಪ್ರಮುಖ ಸ್ಥಾನವಿದೆ.

ತಮಿಳಿನ ವೀರಗೀತೆಗಳ ಅಧ್ಯಯನದಿಂದ ಕುತೂಹಲಕಾರಿ ವಿಷಯಗಳು ತಿಳಿದು ಬರುತ್ತವೆ. ಮೇಲೆ ಉಲ್ಲೇಖಿಸಿದ ಎಲ್ಲ ವೀರಗೀತೆಗಳಿಗೂ ತೆಲುಗು ಮತ್ತು ಕನ್ನಡಗಳೊಂದಿಗೆ ಯಾವುದೋ ಒಂದು ರೀತಿಯ ಸಂಬಂಧವಿದೆ. ಮಧುರೈ ತಿರುಚ್ಚಿ ಮತ್ತು ತಂಜಾವೂರು ಜಿಲ್ಲೆಗಳ ಕಥನಕಾವ್ಯಗಳಿಗೆ ‘ಲಾವಣಿ’ ಎಂಬ ಹೆಸರಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ತಿರುನೆಲ್ವೇಲಿ ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ ‘ವಿಲ್ಲುಪ್ಪಾಟ್ಟು’, ಕೋಯಿಲ್‌ಪಟ್ಟಿ ಮತ್ತು ಮಧುರೈಯ ಕೆಲವು ಪ್ರಾಂತ್ಯಗಳಲ್ಲಿ ‘ಓಯಿಲ್‌ಕುಮ್ಮಿ’, ರಾಮನಾದಂ ಜಿಲ್ಲೆಯಲ್ಲಿ ‘ಕೋಲಾಟ್ಟುಕ್ಕುಮ್ಮಿ’ ಸಂಪ್ರದಾಯಗಳಿವೆ.

ತಮಿಳು ಕಥನಕಾವ್ಯಗಳಲ್ಲಿ ಸಾಮಾಜಿಕ ಗೀತೆಗಳದು ಒಂದು ಗುಂಪಾಗಿದೆ. ಇವುಗಳಲ್ಲಿ ಸಾಮಾಜಿಕ ಸಮಸ್ಯೆಗಳಾದ ಜಾತಿಪದ್ಧತಿ, ಅಂತರ್ಜಾತೀಯ ವಿವಾಹ, ಅವಿಭಕ್ತ ಕುಟುಂಬದ ಸಮಸ್ಯೆಗಳು ಮುಂತಾದುವನ್ನು ಸ್ವೀಕರಿಸಲಾಗಿದೆ. ಒಂದು ರೀತಿಯಲ್ಲಿ ಇವನ್ನು ಕರುಣರಸಪ್ರಧಾನ ಕಾವ್ಯಗಳೆನ್ನಬಹುದು. ಇವುಗಳಲ್ಲಿ ಸಾಮಾನ್ಯವಾಗಿ ಸಮಸ್ಯೆಗಳಿಗೆ ಸಿಕ್ಕಿ ನರಳುವಂತಹವಳು ಸ್ತ್ರೀ. ‘ನಲ್ಲತಂಗಾಳ್‌ಕದೈ’, ‘ವೆಂಗಳರಾಜನ್‌ಕದೈ’, ‘ಮದುರೈವೀರನ್‌ಕದೈ’ ಮುಂತಾದುವೂ ಸಾಮಾಜಿಕ ಕಾವ್ಯಗಳೇ ಆಗಿವೆ.

‘ನಲ್ಲತಂಗಾಳ್’ ಮತ್ತು ‘ಮದರೈವೀರನ್‌ಕದೈ’ಗಳು ಅಮ್ಮಾನೈ ಮಾಧ್ಯಮದಲ್ಲಿವೆ. ಇವನ್ನು ಹೆಚ್ಚಾಗಿ ರಾಮನಾಥಪುರಂ ಮತ್ತು ಮದುರೈ ಜಿಲ್ಲೆಗಳಲ್ಲಿ ಹಾಡುತ್ತಾರೆ. ಹಲವು ಗೀತೆಗಳನ್ನು ವಿಲ್ಲುಪ್ಪಾಟ್ಟು ಮಾಧ್ಯಮದಲ್ಲಿ ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಹಾಡುತ್ತಾರೆ. ‘ಮದರೈವೀರನ್’, ‘ಸಿನ್ನನಂದನ್‌ಕದೈ’ ಮುಂತಾದವು ಅಂತರ್ಜಾತಿಯ ವಿವಾಹದಿಂದುಂಟಾದ ಸಮಸ್ಯೆಗಳನ್ನು ಚರ್ಚಿಸುತ್ತವೆ. ‘ನಲ್ಲತಂಬಿಕದೈ’ಯಲ್ಲಿ ದಲಿತ ಜನಾಂಗ ಶಿಷ್ಟರಿಂದ ಅನುಭವಿಸುವ ಕಷ್ಟಗಳನ್ನು ಚಿತ್ರಿಸಲಾಗಿದೆ. ಹೆಂಗಸರು ಆಸ್ತಿಯನ್ನು ಪಡೆಯದೆ ಅನುಭವಿಸುವ ಸಂತಾಪವನ್ನು ‘ನಲ್ಲತಂಗಾಳ್’ ವಿವರಿಸುತ್ತದೆ.

ಮೇಲೆ ಉದಾಹರಿಸಿದ ಕೆಲವು ಕಥನಕಾವ್ಯಗಳಿಗೆ ಇತರ ದಕ್ಷಿಣ ದೇಶೀಯ ಪ್ರಾಂತ್ಯಗಳೊಂದಿಗೆ ಸಂಬಂಧವಿರುವುದನ್ನು ಗುರುತಿಸಬಹುದು. ‘ಮುತ್ತುಪಟ್ಟನ್’ ಎಂಬ ಪ್ರಸಿದ್ಧ ಸಾಮಾಜಿಕಗೀತೆಯ ನಾಯಕ ಪಟ್ಟನ್. ಅವನು ತಂದೆಯೊಡನೆ ಜಗಳವಾಡಿ ಕೊಟ್ಟಾರಕರದ ಮಲಯಾಳಿ ಅರಸನ ಬಳಿ ಕೆಲಸ ಮಾಡಲು ಹೋಗುತ್ತಾನೆ. ‘ಮದರೈವೀರನ್’ನಲ್ಲಿ ಮದರೈವೀರನ್ ತೆಲುಗು ನಾಯಕ ಅರಸು ಮನೆತನದ ಬೊಮ್ಮಿ ಎಂಬವನ ಮಗಳನ್ನು ಪ್ರೀತಿಸುತ್ತಾನೆ.

ತಮಿಳಿನ ಕಥನ ಕಾವ್ಯಗಳಲ್ಲಿ ಇನ್ನೊಂದು ಪ್ರಕಾರವಾದ ರಮ್ಯಕಾವ್ಯಗಳಲ್ಲಿ ಪ್ರಣಯ, ಸಾಹಸ ಇತ್ಯಾದಿಗಳು ಪ್ರಧಾನವಾಗಿ ಕಂಡು ಬರುತ್ತವೆ. ‘ಮದನಕಾಮರಾಜನ್‌ಕದೈ’ ಎಂಬುದು ತೆಲುಗಿನಲ್ಲೂ ‘ಮದನಕಾಮರಾಜಕಥೆ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ‘ಆಯಿರಮ್ ತಲೈವಾಂಗಿಯ ಅಪೂರ‍್ವ ಚಿಂತಾಮಣಿ’ ಕೂಡ ತೆಲುಗರಿಗೆ ಪರಿಚಿತವಾದ ವಸ್ತುವಾಗಿದೆ. ಹೀಗೆ ತಮಿಳು ನಾಡಿನ ಕಥನಕಾವ್ಯಗಳ ವಿಷಯದಲ್ಲಿ ತೌಲನಿಕ ಅಭ್ಯಾಸಕ್ಕೆ ತುಂಬ ಅವಕಾಶವಿದೆ.

ಗದ್ಯ ಕಥನಗಳು : ತಮಿಳು ಪುರಾಣಗಳನ್ನು ಮೊಹೆಂಜೊದಾರೋ, ಹರಪ್ಪಾ ಮತ್ತು ಇತರ ಪೂರ್ವದ್ರಾವಿಡ ನಾಗರಿಕತೆಗಳ ಕಾಲಕ್ಕೆ ಕೊಂಡೊಯ್ಯಬೇಕೆಂದು ತಮಿಳು ವಿದ್ವಾಂಸರು ಹೇಳುತ್ತಾರೆ. ಇದರ ಸತ್ಯಾಂಶ ಹೇಗಿದ್ದರೂ ತಮಿಳುನಾಡಿನ ಪುರಾಣಗಳು ಮತ್ತು ಐತಿಹ್ಯಗಳು ಸಾಮಾಜಿಕ ಜೀವನದ ಹಲವು ಮುಖಗಳನ್ನು ಪ್ರತಿಬಿಂಬಿಸುತ್ತವೆ. ಸೂರ್ಯ, ಚಂದ್ರ, ದೇವತೆಗಳ ಹುಟ್ಟು ಕೆಲವು ಪುರಾಣಗಳ ವಸ್ತುವಾಗಿದೆ. ಸ್ಥಳೀಯ ದೇವತೆಗಳನ್ನು ಕುರಿತ ಪುರಾಣಗಳು ಪ್ರತ್ಯೇಕವಾಗಿ ಪರಿಶೀಲಿಸತಕ್ಕವು. ಹಳ್ಳಿಯ ಜನರನ್ನು ಸಾಂಕ್ರಾಮಿಕ ರೋಗಗಳಿಂದ, ಕೆಟ್ಟದೆವ್ವಗಳಿಂದ, ಕಳ್ಳಕಾಕರಿಂದ ಕಾಪಾಡುವ ದೇವರೆಂದು ಅಯ್ಯನಾರ್‌ಗೆ ಹೆಸರಿದೆ. ಪಾರ್ವತಿಯ ಸೇವಕಿಯರಲ್ಲಿ ಕಾದಲ್ ಅಮ್ಮನ್ ಎಂಬವಳೊಬ್ಬಳು. ಈಕೆ ಕುರತ್ತಿ ಹುಡುಗಿ. ಕೆಲವು ದೇವಾಲಯಗಳಲ್ಲಿ ಕಾದಲ್ ಅಮ್ಮನ್‌ಗೂ ಪೂಜೆಗಳು ಸಲ್ಲುತ್ತವೆ. ಈಕೆ ಮುರುಗನನ್ನು ಮದುವೆಯಾದಳೆಂದು ಹೇಳಲಾಗಿದೆ. ತಮಿಳುನಾಡಿನ ಗ್ರಾಮ ದೇವತೆಗಳಲ್ಲಿ ಮಾರಿಯಮ್ಮನ್, ಪ್ರಧಾನ ದೇವತೆ. ಈಕೆ ಆರೋಗ್ಯ ದೇವತೆ. ಸಮಯಪುರಮ್, ಪೆರಿಯಪಾಳಯಂ, ಪೊಲ್ಲಾಚ್ಚಿ ಮುಂತಾದ ಪ್ರದೇಶಗಳಲ್ಲಿ ಮಾರಿಯಮ್ಮನ ಪ್ರಸಿದ್ಧ ದೇವಸ್ಥಾನಗಳಿವೆ. ಈಕೆಗೆ ಸಂಬಂಧಿಸಿದ ಕೆಲವು ಪುರಾಣಗಳು ಪರಶುರಾಮನ ಕಥೆಗೆ ಸಂಬಂಧವಿರುವಂತಹವು. ಕೆಲವು ಕಡೆ ಈಕೆಯನ್ನು ಸಿಲಪ್ಪಿದಿಗಾರಮ್ ಕೃತಿಯ ನಾಯಿಕೆಯಾದ ಕಣ್ಣಗಿಯೆಂದು ಹೇಳಲಾಗಿದೆ.

ಮದುರೆಯ ಮೀನಾಕ್ಷಿಯನ್ನು ಕುರಿತ ಪುರಾಣ ಹೀಗಿದೆ:

‘ಮೀನಾಕ್ಷಿ ಪಾಂಡ್ಯರಾಜನಾದ ಮಲಯಧ್ವಜನ್ ಮತ್ತು ಕಾಂಚನಮಾಲೈ ದಂಪತಿಗಳ ಮಗಳು. ಅರಸು ದಂಪತಿಗಳು ಒಟ್ಟು ತೊಂಬತ್ತೊಂಬತ್ತು ಯಜ್ಞಗಳನ್ನು ಮಾಡಿದರು. ನೂರನೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದಾಗ ಇಂದ್ರನು ಬೇಡವೆಂದ. ಇದಕ್ಕೆ ಮದುರೆಯ ಅರಸ ಒಪ್ಪಿಕೊಂಡ, ಇಂದ್ರನ ಸಂತೋಷಕ್ಕೆ ಪಾತ್ರನಾದುದರಿಂದ ಮೀನಾಕ್ಷಿ ಮದುರೆಯಲ್ಲೇ ನೆಲಸಿದಳು (ಎಸ್.ಎಮ್.ಎಲ್. ಲಕ್ಷ್ಮಣನ್ ಚೆಟ್ಟಿಯಾರ್, ೧೯೭೩:೧೯೧)

ತಮಿಳುನಾಡಿನ ಪ್ರಾಚೀನಕಾಲದ ಅರಸರ ಬಗೆಗಿನ ಹಲವು ಐತಿಹ್ಯಗಳಿವೆ. ತುಂಬ ಪ್ರಸಿದ್ಧವಾದ ಒಂದು ಐತಿಹ್ಯ ಹೀಗಿದೆ: ಜನರು ದೂರುಗಳನ್ನು ಕೊಡಲು ಅನುವಾಗುವಂತೆ ಚೋಳರಾಜರು ಒಂದು ಗಂಟೆಯನ್ನು ನೇತುಹಾಕಿದ್ದರು. ಮನುನೀತಿ ಚೋಳನ ಮಗ ಒಂದು ಕರುವಿನ ಮೇಲೆ ರಥವನ್ನು ಬಿಟ್ಟಾಗ ಹಸು ಗಂಟೆ ಬಾರಿಸಿತಂತೆ. ರಾಜನೂ ತನ್ನ ಮಗನ ಮೇಲೆ ರಥ ಹರಿಸಿ ಕೊಂದನಂತೆ ಆಗ ದೇವರು ಪ್ರತ್ಯಕ್ಷನಾಗಿ ರಾಜನ ಮಗನನ್ನೂ ಕರವನ್ನೂ ಬದುಕಿಸಿದನು. ಚೋಳ ರಾಜರ ಬಗೆಗಿನ ಇಂತಹ ಕತೆಗಳು ತೆಲುಗು ನಾಡಿನಲ್ಲೂ ಕೇಳಿ ಬರುತ್ತವೆ.

ಗಾದೆ, ಒಗಟು: ಜನರ ಸಾಮಾಜಿಕ ಜೀವನವನ್ನು ಪ್ರತಿಬಿಂಬಿಸುವ ಪ್ರಕಾರಗಳಲ್ಲಿ ಗಾದೆಯೂ ಒಂದು. ಒಂದು ಸಮಾಜದ ಸಂಸ್ಕೃತಿ, ರಾಜಕೀಯ ಪರಿಸ್ಥಿತಿಗಳು, ಅಭಿರುಚಿಗಳು ಮುಂತಾದವೆಲ್ಲ ಗಾದೆಗಳಲ್ಲಿ ವ್ಯಕ್ತವಾಗುತ್ತವೆ. ‘ಹೈದರಾಲಿ ಎನ್ರಾಲ್ ಅಳುತ್ತ ಪಿಳ್ಳೈಯುಮ್ ವಾಯ್ ಮೂಡುಮ್’ (ಹೈದರಾಲಿ ಎಂದರೆ ಅಳುವ ಮಗು ಕೂಡ ಬಾಯಿ ಮುಚ್ಚುತ್ತದೆ) ಎಂಬ ಈ ಗಾದೆ ಕರ್ನಾಟಕದ ಹೈದರಾಲಿ ತಮಿಳುನಾಡಿನ ಮೇಲೆ ದಾಳಿ ನಡೆಸಿದಾಗ ರೂಪುಗೊಂಡಿತು. ‘ಆರ್ಕಾಟ್ ನವಾಬನ ಮಗನಂತೆ ಎಂಬುದು ಒಂದು ನುಡಿಗಟ್ಟಾಗಿ ತಮಿಳಿನಲ್ಲಿ ಬಳಕೆಗೆ ಬಂದಿತು.

ತಮಿಳನ ನಂಬಿಕೆಗಳು, ಆಚಾರ ಮತ್ತು ಸಂಪ್ರದಾಯಗಳುತಮಿಳು ಗಾದೆಗಳಿಂದ ತಿಳಿದು ಬರುತ್ತವೆ. ‘ಎಟ್ಟಾವದು ಪೆಣ್ ಎಟ್ಟಿ ಪಾತ್ತ ಇಡಮ್ ಎಲ್ಲಾಮ್ ಕುಟ್ಟಿಚ್ಚುವರ್’ (ಎಂಟನೆಯ ಹೆಣ್ಣು ಮಗು ದಿಟ್ಟಿಸಿ ನೋಡಿದ ಸ್ಥಳವೆಲ್ಲಾ ಒಡೆದ ಗೋಡೆ). ಎಂಟನೆಯ ಹೆಣ್ಣು ಮಗು ಹುಟ್ಟಿದರೆ ನಾಶಕ್ಕೆ ಕಾರಣವೆಂಬುದು ಒಂದು ನಂಬಿಕೆ. ದೇವರನ್ನು ನಂಬಿದವರಿಗೆ ನಾಶವಿಲ್ಲವೆಂಬ ನಂಬಿಕೆಯ ಆಧಾರದ ಮೇಲೆ ರೂಪಗೊಂಡ ಗಾದೆಗಳಲ್ಲಿ ಕೆಳಗಿನದು ಒಂದು.

ನಂಬಿದವರ್ಕು ಕಲ್ಕಂಡು, ನಂಬಾದವರ್ಕು ಕಲ್ಗುಂಡು
(ನಂಬಿದವರಿಗೆ ಕಲ್ಲು ಸಕ್ಕರೆ, ನಂಬದವರಿಗೆ ಕಲ್ಲು ಗುಂಡು)

ತೈ (ಪುಷ್ಯ) ತಿಂಗಳು ಸುಗ್ಗಿಯ ಅನಂತರ ಬರುವ ಶುಭಮಾನಸ. ‘ತೈ’ ಪಿರಂದಾಲ್ ವೞಪಿರಕ್ಕುಮ್’ (ತೈ ಹುಟ್ಟಿದರೆ ದಾರಿ ಉಂಟಾಗುತ್ತದೆ) ಎಂಬದೊಂದು ತಮಿಳು ಗಾದೆ. ಇದರರ್ಥ ಈ ಶುಭದಿನಗಳಲ್ಲಿ ಮದುವೆಗಳನ್ನು ನಡೆಸಲು ಒಂದು ದಾರಿ ಏರ್ಪಡುತ್ತದೆಂದರ್ಥ.

ದಕ್ಷಿಣ ಭಾರತದ ಗಾದೆಗಳಲ್ಲಿ ಸಮಾನಾರ್ಥವಿರುವಂಥವು ಸಾವಿರಾರು ಸಂಖ್ಯೆಯಲ್ಲಿವೆ. ಕೆಲವು ಸಲ ಅರ್ಥದಲ್ಲಿ, ಶಬ್ದಗಳಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಕನ್ನಡ ಮತ್ತು ತೆಲುಗುಗಳಲ್ಲೂ ಕಾಣಬರುವ ಕೆಲವು ತಮಿಳು ಗಾದೆಗಳು ಹೀಗಿವೆ:

ಮಯಿರುಳ್ಳ ಚೀಮಾಟ್ಟಿ ಅಲ್ಲಿ ಯುಮ್ ಮುಡಿಯಲಾಮ್, ಅವುದುಮ್ ವಿಡಲಾಮ್
(ಕೂದಲುಳ್ಳ ಶ್ರೀಮತಿ ತನ್ನ ಕೂದಲನ್ನು ಹೇಗಾದರೂ ಕಟ್ಟಿಕೊಳ್ಳಬಹುದು)

ಮರುನ್ದವನ್ ಕಣ್ಣುಕ್ಕು ಇರುನ್ದದೆಲ್ಲಾಮ್ ಪೆಯ್
(ಹೆದರಿದವನ ಕಣ್ಣಿಗೆ ಇರುವುದೆಲ್ಲಾ ದೆವ್ವ)

ಆಡ ತೆರಿಯಾದ ತೇವಡಿಯಾಳ್ ತೇರುಕ್ಕೊನಲ್ ಎನ್ಹಲಾಮ್
(ಆಡಲು ತಿಳಿಯದ ದೇವದಾಸಿ ರಂಗಸ್ಥಳ ಸರಿಯಿಲ್ಲ ಎನ್ನಬಹುದು)

ಸುಕ್ಕುಕ್ಕು ಮೇಲೆ ಮರುಂದುಮ್ ಇಲ್ಲೈ; ಸುಬ್ರಹ್ಮಣ್ಯರುಕ್ಕು ಮೇಲೆ ದೆಯ್ವಮುಮ್ ಇಲ್ಲೈ
(ಶುಂಟಿಗಿಂತ ಒಳ್ಳೆಯ ಮದ್ದಿಲ್ಲ; ಸುಬ್ರಹ್ಮಣ್ಯನಿಗಿಂತ ಒಳ್ಳೆಯ ದೇವರಿಲ್ಲ)

ಒಗಟುಗಳಲ್ಲೂ ತಮಿಳಿಗೂ ಮತ್ತು ಬೇರೆ ದಕ್ಷಿಣ ಭಾರತೀಯ ಭಾಷೆಗಳಿಗೂ ಹೋಲಿಕೆ ಕಂಡು ಬರುತ್ತದೆ. ಕೆಲವು ವಿಷಯಗಳಲ್ಲಿ ಈ ಮಾತು ಜಗತ್ತಿನ ಎಲ್ಲ ಭಾಷೆಗಳಿಗೂ ಅನ್ವಯವಾಗುತ್ತದೆ. ಒಗಟುಗಳಲ್ಲಿರುವ ಗೂಢತೆ, ಪ್ರಕೃತಿ ವಸ್ತುಗಳ ರೂಪಕಗಳಾಗಿರುವುದು ಇತ್ಯಾದಿ ಲಕ್ಷಣಗಳು ಸಮಾನವಾಗಿರುತ್ತವೆ. ಒಂದೇ ಕುಟುಂಬದ ಭಾಷೆಗಳಲ್ಲಿ ಈ ಸಮಾನತೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಒಂದೆರಡು ಉದಾಹರಣೆಗಳು (ಎಸ್.ಎಂ.ಎಲ್. ಲಕ್ಷ್ಮಣನ್ ಚೆಟ್ಟಿಯಾರ್, ೧೯೭೩, ೧೯೧)

ಎಲ್ಲೈ ಇಲ್ಲಾದ ವಯಲಿಲೇ
ಎಣ್ಣ ಮುಡಿಯಾದ ಆಡುಗಳ್
ಎಲ್ಲೆಯಿಲ್ಲದ ಬಯಲಿನಲ್ಲಿ ಎಣಿಸಲಾಗದ ಆಡುಗಳು
(ಆಕಾಶ, ನಕ್ಷತ್ರಗಳು)

ಇಂಗುಂಡು, ಅಂಗು ಇಲ್ಲೈ
ಅಂಗುಂಡು, ಅಂಗು ಇಲ್ಲೈ
ಇಂಗುಮ್ ಉಂಡು, ಅಂಗುಮ್ ಉಂಡು
ಅಂಗುಮ್ ಇಲ್ಲೈ, ಇಂಗುಮ್ ಇಲ್ಲೈ

(ಇಲ್ಲಿ ಉಂಟು ಅಲ್ಲಿಲ್ಲ, ಅಲ್ಲಿ ಉಂಟು ಇಲ್ಲಿಲ್ಲ, ಇಲ್ಲೂ ಉಂಟು, ಅಲ್ಲೂ ಉಂಟು, ಅಲ್ಲೂ ಇಲ್ಲ, ಇಲ್ಲೂ ಇಲ್ಲ. ಇದರರ್ಥ: ಸ್ವಾರ್ಥಪರರಿಗೆ ಇಲ್ಲಿ ಸಂತೋಷ ಉಂಟಾಗಬಹುದು. ಆದರೆ ಪರಲೋಕದಲ್ಲಿ ಸಂತೋಷವಿಲ್ಲ. ದಾನಶೀಲರು ಇಲ್ಲಿ ದುಃಖಪಡಬಹುದು, ಆದರೆ ಪರಲೋಕದಲ್ಲಿ ಅವರಿಗೆ ದುಃಖವಿಲ್ಲ. ಶ್ರೀಮಂದನಾಗಿದ್ದವನು ಅನುಕಂಪವುಳ್ಳವನಾದರೆ ಇಲ್ಲೂ ದುಃಖವಿಲ್ಲ, ಅಲ್ಲೂ ದುಃಖವಿಲ್ಲ, ಕೆಟ್ಟವರಿಗೆ ಇಲ್ಲೂ ಸುಖವಿಲ್ಲ ಅಲ್ಲೂ ಸುಖವಿಲ್ಲ)

ತಮಿಳುನಾಡಿನ ವಾಚಿಕ ಸಾಹಿತ್ಯ ಸಮೃದ್ಧವಾಗಿದೆ.ಆದರೆ ಅದರ ಸಂಗ್ರಹಕಾರ್ಯವಾಗಲಿ, ಅಧ್ಯಯನವಾಗಲಿ ತಕ್ಕಮಟ್ಟಿಗೆ ನಡೆದಿಲ್ಲ. ಕೆಲವು ಪಿಎಚ್.ಡಿ. ಪ್ರಬಂಧಗಳು ಹಾಡು ಮತ್ತು ಕಥನಗೀತೆಗಳ ಸಂಕಲನಗಳನ್ನು ಬಿಟ್ಟರೆ ಹೆಚ್ಚಿನ ಗ್ರಂಥಗಳು ಪ್ರಕಟವಾಗಿಲ್ಲ. ನ್ಯಾಶನಲ್ ಬುಕ್ ಟ್ರಸ್ಟ್ ಪ್ರಕಟಿಸುವ ‘ಪೋಕ್‌ಲೋರ್ ಆಫ್ ತಮಿಳುನಾಡು’ ಕೆಲವು ವಿವರಗಳನ್ನು ಒದಗಿಸುತ್ತದಾದರೂ ವೈಜ್ಞಾನಿಕ ದೃಷ್ಟಿ ಇಲ್ಲದ ಬರವಣಿಗೆಯಾದುದರಿಂದ ಸಕ್ರಮ ವಿವರಣೆಯನ್ನು ಅಪೇಕ್ಷಿಸುವವರಿಗೆ ನಿರಾಶೆ ಉಂಟಾಗುತ್ತದೆ.

– ಆರ್.ವಿ.ಎಸ್.