ತಮಿಳು ಜನಪದಗೀತೆಗಳು ಮತ್ತು ಅವುಗಳ ಬಗೆಗೆಗಳು ಜನರು ನಡೆದುಕೊಂಡು ಹೋಗುವಾಗ ಅವರ ಕಾಲಿನ ಹೆಜ್ಜೆಗಳಿಂದ ರೂಪುಗೊಳ್ಳುವ ಕುರುಹುಗಳಂತೆ ಮಾನವನ ಸಮಾಜ ಜೀವನದ ಪಯಣದ ಮೂಲಕ ಹಲವು ಹಂತಗಳನ್ನು ಒಳಗೊಂಡು ರೂಪುಗೊಳ್ಳುವ ಕುರುಹುಗಳೇ ಜನರ ಕಲೆ, ಸಾಹಿತ್ಯ ರಚನೆಗಳಾಗಿರುತ್ತವೆ. ‘ಜನರ ಹಿಂದಿನಿಂದ ನಡೆದು ಬಂದ ಪದ್ಧತಿ’, ‘ಜನಪದ ಪದ್ಧತಿ’, ‘ನಾಡಿನ ಪದ್ಧತಿ’ ಎಂದು ಹಲವು ಬಗೆಯಲ್ಲಿ ಹೇಳಲಾಗುವ ಈ ರೀತಿಯ ರಚನೆಗಳು ಯಾವ ಒಂದು ಜನ ಸಮುದಾಯಕ್ಕೆ ಸ್ವಂತವಾಗಿರುತ್ತದೆಯೋ ಆ ಸಮಾಜದ ಜನರ ಜೀವನ ಪದ್ಧತಿಯನ್ನು ಮನೋಭಾವವನ್ನು ಪ್ರತ್ಯಕ್ಷವಾಗಿ ಅಪ್ರತ್ಯಕ್ಷವಾಗಿ ಪ್ರತಿಬಿಂಬಿಸುವುವು. ಆದ್ದರಿಂದ ಕಲೆ ಸಾಹಿತ್ಯ ರಚನೆಗಳನ್ನು ಜನರ ಜೀವನದ ಪಾರದರ್ಶಕ ಕನ್ನಡಿಗಳೆಂದು ಹೇಳಿದರೆ ಆತಿಶಯವಾಗದು. ಮೌಖಿಕಗೀತೆ, ಕಥನಗೀತೆ, ಪುರಾಣ ಮೊದಲಾದ ಮೌಖಿಕ ರೂಪಗಳು, ನಂಬಿಕೆ, ಶಾಸ್ತ್ರ, ಧರ್ಮ ಎಂಬ ಕಾರ್ಯರೂಪದ ಪದ್ಧತಿಗಳು, ಮಡಕೆ, ಕುಡಿಕೆ, ಕಲೆ, ಶಿಲ್ಪ ಮುಂತಾದ ಕರಕುಶಲ ಕಲೆಗಳೆಂಬ ಕೈಚಳಖದ ತಯಾರಿಕಾ ವಸ್ತುಗಳೆಂಬ ಹಲವು ಬಗೆಯ ಸರಕು ಸಂಸ್ಕೃತಿ, ಸಂಗೀತ, ಹಾಡು, ನೃತ್ಯ ಮೊದಲಾದವುಗಳನ್ನು ಒಳಗೊಂಡ ಪ್ರದರ್ಶನ ಕಲೆಗಳು – ಎಂದು ವಿಶಾಲವಾದ ಹಲವು ಪದ್ಧತಿಗಳನ್ನು ಒಳಗೊಂಡ ಬೃಹತ್ತಾದ ರಚನೆಯೇ ಜನರ ಪದ್ಥತಿಗಳು. ಇವುಗಳಲ್ಲಿ ಒಂದು ಬಗೆಯೇ ಜನಪದ ಹಾಡುಗಳು.

ಜನಪದ ಹಾಡು ಮತ್ತು ಸಂಗೀತ : ಬೇರೆ ರೂಪಗಳಿಗಿಂತ ಮೌಖಿಕ ರೂಪದ ಹಾಡುಗಳಿಗೆ ತನ್ನದೇ ಆದ ಪ್ರಾಮುಖ್ಯ ಲಭಿಸಿದೆ. ಅದರಿಂದಲೆ ಕಂಬನ್, ಭಾರತೀಯಾರ್ ಮೊದಲಾದ ಕವಿರತ್ನಗಳು ಜನಪದ ಗೀತೆಯ ಮಟ್ಟುಗಳಿಗೆ ತಮ್ಮ ಅನುಭವಗಳನ್ನು ಬಳಸಿಕೊಂಡಿದ್ದಾರೆ. ಮೌಖಿಕ ಪರಂಪರೆಯ ಜನಪದ ಹಾಡುಗಳು ಅನೇಕರನ್ನು ಕಾರ್ಷಿಸಿವೆ. ‘ತಮಿಳರ ಜೀವನ ಎಂದರೆ ಗೀತಮಯವಾದುದು’ ಎಂದು ವಿದ್ವಾಂಸರು ಹೇಳಿದ್ದಾರೆ. ಅವರುಗಳಲ್ಲಿ ಕೆಲವರು ಜನಪದ ಗೀತೆಗಳನ್ನು ಅವುಗಳ ಬಗೆಗೆಳನ್ನು ಕಂಡು ವಿವರಣಎ ಕೊಡಲು ಪ್ರಯತ್ನಿಸಿದರು. ಮೌಖಿಕ ಹಾಡು ಅಲ್ಲದೆ ಜನಪದ ಗೀತೆ ಎಂದರೇನು? ‘ಅದು ಸಾಧಾರಣ ಜನರ ಹಾಡು, ವಿದ್ಯೆ ಇಲ್ಲದ ಗ್ರಾಮಸ್ಥರು, ಗದ್ದೆಯಲ್ಲಿ ಉಳುವವರು, ಪೈರು ನಾಟಿ ಮಾಡುವವರು, ಬಾವಿ ತೋಡುವವನು, ಏತದವರು, ದೋಣಿ ನಡೆಸುವವರು, ಗಾಡಿ ಓಡಿಸುವವರು ಮೊದಲಾದ ಜನರು ಹಾಡುವ ಹಾಡೇ ಜನಪದ ಗೀತೆ’. ‘ಅಕ್ಷರ ಜ್ಞಾನ ಇಲ್ಲದ ಕಾರ್ಮಿಕ ವರ್ಗಧವರ ಹೃದಯದಲ್ಲಿ ಉತ್ಸಾಹ ಉಕ್ಕಿ ಅದುವೇ ಹಾಡಾಗಿ ಹೊರ ಹೊಮ್ಮುವುದುಂಟು, ಅಂತಹ ಹಾಡುಗಳಲ್ಲಿ ಭಾವಗಳುಂಟು. ಸುಮಧುರ ಹಸ್ತ ಸಂಕೇತಗಳು ಇರುವುದು, ವಾದ್ಯದನಿ ಸೂಕ್ತವಾಗಿರುತ್ತದೆ. ಮಾತು ಅಲಂಕಾರಭರಿತವಾಗಿರುವುದು. ಆದ್ದರಿಂದಲೇ ಸಾಹಿತ್ಯ ಪರಿಧಿಗೆ ಒಳಗಾಗದೆಯೂ ಇರುವುದು. ನಾಡಿನ ಹಾಡುಗಳನ್ನು ಓಲೆಗರಿಯಲ್ಲಿ, ಕಾಗದದಲ್ಲಿ ಬರೆಯಲಾಗದು. ಪಾರಂಪರಿಕವಾಗಿ ನಾಡಿನ ಜನರು ಈ ಹಾಡುಗಳನ್ನು ಹಾಡಿಯೂ ಹಾಡಿದ್ದನ್ನು ಕೇಳಿಯೂ ನಿರೂಪಿಸಲು ಮುಂದಾದರು. ಜನಪದ ಗೀತೆಗಳ ಮೂಲಭೂತ ಸಹಜತೆಗಳಲ್ಲಿ ಒಂದು ‘ಮೌಖಿಕ ಗುಣ’’. ಮುದ್ರಣಯಂತ್ರ, ಆಕಾಶವಾಣಿ, ಚಲನಚಿತ್ರ, ದೂರದರ್ಶನ ಮೊದಲಾದ ಮಾಧ್ಯಮಗಳ ಮೂಲಕ ಸಂದಿಗ್ಧತೆ ತುಂಬ ದೊಡ್ಡ ರೂಪದಲ್ಲಿ ವ್ಯಕ್ತವಾಗಿದೆ. ರೂಪಕಗಳು ಮೂಲಕ ವಿಶಾಲವಾಗಿ ಹಾಡುವ ಹಾಡುಗಳೇ ಜನಪದ ಗೀತೆಗಳೆಂಬ ಅಭಿಪ್ರಾಯ ಹರಡಿದೆ. ಆದರೆ ಈ ಲಕ್ಷಣವನ್ನು ಮೀರಿದ ರೂಪಗಳನ್ನು ಅಶ್ಲೀಲ ಹಾಡುಗಳೆಂದು ಹೇಳಿ ಪ್ರತ್ಯೇಕಿಸಿ ತೋರಿಸುತ್ತಾರೆ.

ಜನಪದ ಗೀತೆಯ ಸ್ವರೂಪ : ಜನಪದ ಗೀತೆಗಳು ಎನ್ನುವುದು ಪದಗಳಿಂದ ಸಂಗೀತಗಳಿಂದ ಆದುದು. ಅವು ನಿಗದಿತ ಒಂದು ತಂಡಕ್ಕೆ ಸೇರಿದವರಿಂದ ಪ್ರದರ್ಶನಗೊಳ್ಳುವ ಹಾಡುಗಳಾಗಿವೆ. ಇತರೆ ಜನಪದ ಪ್ರಕಾರಗಳಂತೆ ಜನಪದ ಹಾಡುಗಳು ಹಲವಾರು ಕಾರಣಗಳಿಂದ ಹುಟ್ಟಿರಬಹುದು. ಈ ಹಾಡುಗಳನ್ನು ಮೂಲಭೂತ ಸಂಗೀತ ಸಾಧನಗಳಿಂದ ಹಾಡಲಾಗುತ್ತದೆ. ಈನೆಲೆಯಲ್ಲಿ ಮೌಖಿಕ ಹಾಡುಗಳು ಹಲವಾರು ಕಸಬುಗಳ ಶ್ರಮ ನಿವಾರಣೆ, ಅಲ್ಲದೆ ಮನೋರಂಜನೆಯ ಉಪಯೋಗವನ್ನು ಕೇಂದ್ರವಾಗಿಟ್ಟುಕೊಂಡು ಜನರ ಅಭ್ಯಾಸಗಳಿಂದಲೇ ಈ ಜನಪದ ಗೀತೆಗಳು ಹೊರ ಹೊಮ್ಮುತ್ತವೆ. ಜನಪದ ಗೀತೆಗಳಲ್ಲಿಯ ಮೌಖಿಕ ಗುಣವೇ ಜನಪದ ಹಾಡುಗಳನ್ನು ‘ನಿಜವಾದ ಜನಪದ ಹಾಡುಗಳು’ ಎಂದು ಗುರುತಿಸಲು ಸಹಾಯವಾಗಿದೆ.

ಅಶ್ಲೀಲ ಜನಪದ ಗೀತೆಗಳು : ಪ್ರಕೃತ ತಮಿಳು ನಾಡಿನಲ್ಲಿ ಜನರು ಹಳೆಯ ಪದ್ಧತಿಗೆ ಹೆಚ್ಚು ಗಮನ ಕೊಡುವುದನ್ನು ನೋಡಬಹುದು. ಈ ರೀತಿಯ ಜನರಿಂದ ಸಂಗ್ರಹಿಸಿದ ಹಾಡುಗಳನ್ನು ಜನಪದ ಸಂಗೀತದ ಮಟ್ಟಿನಲ್ಲೇ ವೇದಿಕೆಯಲ್ಲಿ ಬಹುಜನರಿಂದ ವೀಕ್ಷಕರ ಮುಂದೆ ಹಾಡಿ ಪ್ರದರ್ಶಿಸಲಾಗುತ್ತದೆ. ನವೀನ ಸಂಗೀತದ ಉಪಕರಣಗಳನ್ನು ಉಪಯೋಗಿಸಿ ಸಂಗೀತವನ್ನು ರೂಪಿಸಿಕೊಂಡು ರಂಗಗೀತೆಗಲು, ಹಿನ್ನೆಲೆ ಗೀತೆಗಳು ಮೊದಲಾದವುಗಳನ್ನು ಜನರನ್ನು ಆಕರ್ಷಿಸುವ ದೃಷ್ಟಿಯಿಂದ ಹಾಡುತ್ತಾರೆ. ಜನಪದ ಗೀತೆಗಳನ್ನು ಆಕಾಶವಾಣಿ, ದೂರದರ್ಶನ ಮೊದಲಾದವುಗಳ ಮೂಲಕ ದನಿಪ್ರಸಾರ ಮಾಡಲಾಗುತ್ತದೆ. ಚಿತ್ರಗೀತೆಗಳಲ್ಲೂ ಜನಪದ ಧಾಟಿಯ ಹಿನ್ನೆಲೆಯಲ್ಲಿ ಮಾತು ಹಾಡುಗಾರಿಕೆಗಳನ್ನು ಬಳಸುವುದರಿಂದ ಹೆಚ್ಚಿನ ಜನರಿಗೆ ನೇರವಾಗಿ ಮುಟ್ಟುಲ ಸಹಾಯಕವಾಗುತ್ತದೆ.

ಮೌಖಿಕ ಪರಂಪರೆಯ ಪ್ರಾಚೀನತೆ : ಜನಪದಕ್ಕೆ ತಕ್ಕಂತೆ ಒಂದು ಅಭಿಪ್ರಾಯವನ್ನು ಸಾಮಾನ್ಯವಾಗಿ ತಮಿಳುನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಕಾಣಬಹುದು. ‘ಮೌಖಿಕ ಹಾಡುಗಳು ಎಂದರೆ ಅವು ಬಹಳ ಪ್ರಾಚೀನವಾದುದಾಗಿ ಇರಬೇಕು’ ಎಂಬುದು ಸಾಮಾನ್ಯವಾಗಿ ಕಲೆಯ ಒಂದು ಅಭಿಪ್ರಾಯವಾಗಿದೆ. ನಿಜವಾದ ಸಾಹಿತ್ಯ ಎಂದರೆ ಜನಪದ ಸಾಹಿತ್ಯವೇ ಎಂಬ ಅಭಿಪ್ರಾಯವೂ ಗೋಚರಿಸುತ್ತದೆ. ಒಂದು ಹಾಡನ್ನು ಜನಪದ ಗೀತೆ, ನಾಡ ಗೀತೆ ಎಂಬ ಮುದ್ರೆ ಹಾಕುವುದು ಹೇಗೆಂದರೆ ‘ಒಂದು ಹಾಡು ನಿಗದಿತ ತಂಡದ ಬಾಯಿಂದ ಹಾಡುಗಾರಿಕೆಯಾಗಿ ಹೊಮ್ಮಬೇಕು’.

ಜನಪದಗೀತೆಗಳ ಬಗೆಗಳು : ಜನರ ಜೀವನದ ಹಲವು ಘಟ್ಟಗಳಲ್ಲಿ ಜನಪದ ಗೀತೆಗಳನ್ನು ಹಾಡಲಾಗುತ್ತದೆ. ಮಾನವ ಸಮಾಜದ ಹಲವಾರು ಪರಿಸರದಲ್ಲಿ ಜನಪದ ಹಾಡುಗಳನ್ನು ಹಾಡಲಾಗುತ್ತದೆ. ಈ ರೀತಿಯ ಹಾಡುಗಳಿಗೆ ಜನರೇ ಹೆಸರನ್ನು ಕೊಟ್ಟಿದ್ದಾರೆ.

ತಮಿಳು ನಾಡಿನಲ್ಲಿ ಜನಪದ ಗೀತೆಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸುವವರು, ಅವುಗಳನ್ನು ಸಂಶೋಧನೆಗೆ ತೆಗೆದುಕೊಂಡಿರುವ ಸಂಶೋಧಕರುಕಳೆದ ಅರವತ್ತು ವರ್ಷಗಳಿಂದ ಹಲವು ದೃಷ್ಟಿಕೋನಗಳಲ್ಲಿ ವಿಭಾಗ ಮಾಡಿರುವುದನ್ನು ಕಾಣಬಹುದಾಗಿದೆ. ಹಾಡುಗಳು ಹುಟ್ಟಲು ಆಯಾಯ ಸಮಾಜದ ಪರಿಸರವೇ ಮುಖ್ಯ ಕಾರಣವಾಗಿರುತ್ತದೆ.

೧. ತಾಲಾಟ್ಟುಪ್ಪಾಡಲ್‌ಗಳ್

೨. ಕುಳಂದ್ಯೆ ವಳಚ್ಚಿಕನಿಲೈ ಪಾಡಲ್‌ಗಳ್

೩. ವಿಳ್ಯೆಯಾಟ್ಟು ಪಾಡಲ್‌ಗಳ್

೪. ತೊಳಿರ್ಪಾಡಲ್‌ಗಳ್

೫. ವಳಿಪಾಟ್ಟು ಪಾಡಲ್‌ಗಳ್

೬. ಕೊಂಡಾಟ್ಟ ಪಾಡಲ್‌ಗಳ್

೭. ಇರತ್ತಲ್ ಪಾಡಲ್‌ಗಳ್

೮. ಇಳತ್ತಲ್ ಪಾಡಲ್‌ಗಳ್

ಎಂದು ಎಂಟು ಬಗೆಗಳಾಗಿ ವಿಭಾಗಿಸಲಾಗಿದೆ.

. ತಾಲಾಟ್ಟು ಪ್ಪಾಡಲ್ಗಳು (ಜೋಗುಳದ ಹಾಡುಗಳು) : ಮಹಿಳೆಯರ ರಚನಾ ಕೌಶಲ್ಯವನ್ನು ಅಭಿವ್ಯಕ್ತಿಸುವ ಜನಪದ ಕಲೆಯ ರೂಪ ಜೋಗುಳದ ಹಾಡುಗಳು. ಮಗುವಿನ ಅಳುವನ್ನು ನಿಲ್ಲಿಸುವ, ಮಗುವನ್ನು ನಿದ್ರಿಸುವಂತೆ ಮಾಡುವ ಶಕ್ತಿ ಜೋಗುಳದ ಹಾಡುಗಳಿಗೆ ಉಂಟು. ಋತುಮತಿಯಾದ ಹೆಣ್ಣುಗಳಿಂದ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೂ ಜೋಗುಳದ ಹಾಡುಗಳನ್ನು ಹಾಡುತ್ತಾರೆ. ತಾಲಾಟ್ಟು ಎಂಬ ಹೆಸರು ಜನರು ಇಟ್ಟಿದ್ದಾಗಿದೆ. ತಮಿಳು ನಾಡಿನಲ್ಲಿ ಪ್ರದೇಶಕ್ಕೆತಕ್ಕಂತೆ ತಾಲಾಟ್ಟು, ತಾರಾಟ್ಟು, ರಾರಾಟ್ಟು, ರೋರಾಟ್ಟು, ಓರಾಟ್ಟು ಎಂಬುದಾಗಿ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ತಾಲಾಟ್ಟು ಎಂಬ ಹೆಸರಿನ ರೂಪಕ್ಕೆ ‘ತಾಯಿ ಜೋಗುಳವನ್ನು ಹಾಡಿ ಮಗುವನ್ನು ಮಲಗಿಸುವುದು’ ಎಂಬ ಅರ್ಥವಿದೆ. ತಾಲಾಟ್ಟು ಹಾಡಿಗೆ ಮೂಲವನ್ನು ಹೇಳುವುದು ಕಷ್ಟ. ಮಗುವನ್ನು ಮಲಗಿಸಲು ಮಗು ಅಳುವುದನ್ನು ನಿಲ್ಲಿಸಲು, ಮಗು ಮಲಗುವವರೆಗೆ ಜೋಗುಳ ಹಾಡನ್ನು ಹಾಡಲಾಗುತ್ತದೆ. ಮಗು ನಿದ್ರೆ ಮಾಡಿದ ಮೇಲೆ ತಾಯಿಜೋಗುಳದ ಹಾಡನ್ನು ನಿಲ್ಲಿಸುತ್ತಾಳೆ. ಈ ಸಹಜ ಸನ್ನಿವೇಶವೇ ಹಾಡಿನ ವಿಸ್ತಾರವನ್ನು ನಾವು ಗುರುತಿಸಲು ಸಾಧ್ಯವಾಗಿರುತ್ತದೆ.

ಆರಾರೋ ಆರಿರಾರೋ
ಆರಾರೋ ಆರಿರಾರೋ
ರಬಸದಿ ಪ್ರವಾಹ ಬರಲು
ದಾಳಿಂಬೆ ಹೂ ಅರಳಲು
ಭಾದ್ರಪದ ಮಾಸದಲ್ಲಿ
ಹುಟ್ಟಿದ ಬೆಟ್ಟಗಿಳಿಯೋ
ಐದು ದಾರಿಯಲ್ಲಿ ರಸ್ತೆಯಲ್ಲಿ
ಉತ್ತಮ ರಸ್ತೆ ಕುತ್ತಾಲಮ್

ದೇಗುಲದ ತೇರು ಬರಲಿಲ್ಲ
ಶಿವಶಂಕರ ದೇಗುಲಕ್ಕೆ
ಕಾಡಿನ ಮಲ್ಲೆ ಜಾಜಿ ದಡದ ಸಂಪಿಗೆ ಹೂವು
ನಾಡೆಲ್ಲ ಪರಿಮಳ ಬೀರಲು
ಉತ್ತಮ ಮಗ ಹೋಗೋ ದಾರಿ

ಜೋಗುಳ ಹಾಡಿನ ಪ್ರಾಮುಖ್ಯತೆ : ಮಗುವಿನ ಅಳುವನ್ನು ನಿಲ್ಲಿಸಲು. ಮಗುವನ್ನು ಮಲಗಿಸಲು ಜೋಗುಳ ಹಾಡು ತುಂಬ ಪ್ರಾಮುಖ್ಯ ಪಡೆದಿದೆ. ಅದೇ ಸಮಯದಲ್ಲಿ ಹಾಡನ್ನು ಹಾಡುವ ತಾಯಿ ಮಗುವಿನ ಭವಿಷ್ಯದ ಕನಸುಗಳನ್ನು ಕಾಣಲು ಸಹಾಯಕವಾಗುತ್ತದೆ.ಅಂದಂದಿನ ಕುಟುಂಬದ ಸಮಸ್ಯೆಗಳನ್ನು ಹಾಡಾಗಿ ಹೊರ ಹೊಮ್ಮಿಸುವುದಕ್ಕೂ ಜೋಗುಳದ ಹಾಡು ಉಪಯೋಗಕ್ಕೆ ಬರುತ್ತದೆ.

. ಕುಳಂದೈ ವಳಚ್ಚಿಕನಿಲೈ ಪ್ಪಾಡಲ್ಗಳ್ (ಮಗುವಿನ ಲಾಲನೆ ಪಾಲನೆಯ ಹಾಡುಗಳು): ಮಗುವಿನ ಬೆಳವಣಿಗೆಯ ಹಂತದೊಂದೊಂದು ಘಟ್ಟದಲ್ಲೂ ಹಾಡುಗಲು ಬದಲಾವಣೆ ಆಗುತ್ತವೆ. ಮಗು ತೆವಳುವಾಗ, ಉಣ್ಣುವಾಗ, ಕೈಬೀಸುವಾಗ, ಚಪ್ಪಾಳೆ ತಟ್ಟುವಾಗ, ಕುಣಿಯುವಾಗ ಪೋಷಕರು ಮತ್ತು ಸಂಬಂಧಿಕರು ಸಂತೋಷದಿಂದ ಹಾಡಿ. ಆ ಚೇಷ್ಟೆಗಳನ್ನು ಮತ್ತೆ ಮಾಡುವಂತೆ ಮಗುವಿಗೆ ಪ್ರೇರೇಪಿಸುವರು. ಚಂದಮಾಮನನ್ನು ತೋರಿಸುವಾಗಲೂ ಪರಿಹಾಸ್ಯ ಮಾಡುವಗಲೂ ನಗಿಸುವಾಗಲೂ ಪೋಷಕರು ಹಾಡುಗಲನ್ನು ಹಾಡುವುದುಂಟು. ಈ ರೀತಿಯ ಹಾಡುಗಳನ್ನು ಪ್ರತ್ಯೇಕವಾಗಿ ಕಾಣಲಾಗುತ್ತದೆ.

ಹಾಸಿಗೆ ಮೇಲೆ ಯಾರು?
ನಾನೇ…
ಏನು ಮಾಡುತ್ತಿದ್ದೀಯಾ?
ಹಕ್ಕಿ ಸುಡುತ್ತಿದ್ದೀನಿ…
ನನಗೂ ವಸಿ ಕೊಡುವೆಯಾ?
ಕೊಡಲಾರೆ
ಹಾಸಿಗೆ ಬಿಟ್ಟು ಕೆಳಗೆ ಇಳಿಯಪ್ಪ

ಎಂದು ಮಗುವನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ತಾಯಿಯೂ ತನ್ನ ಮಗುವಿನೊಡನೆ ಸಂಭಾಷಿಸುವ ರೀತಿಯಲ್ಲಿ ಹಾಡು ರೂಪುಗೊಂಡಿದೆ.

. ವಿಳೈಯಾಟ್ಟು ಪಾಡಲ್ಗಳ್ (ಆಟದ ಹಾಡುಗಳು): ಆಟದ ಹಾಡುಗಳು ಸಮಾನ್ಯವಾಗಿ ಹಾಡುವ ಹಾಡುಗಳಾಗಿವೆ. ಆಟದ ಹಾಡುಗಳಲ್ಲಿ ಎರಡು ಮುಖ್ಯಬಗೆಗಳಿವೆ. ಅವೆಂದರೆ ೧. ದೈಹೀಕ ಆಟಗಳು, ೨. ಮೌಖಿಕ ಆಟಗಳು. ದೈಹಿಕ ಆಟಗಳು ದೈಹಿಕ ಪರಿಶ್ರಮದಿಂದ ಬಾಲಕರು ಆಡುವ, ಆಟಗಳಾಗಿವೆ. ಮೂಕಾಭಿನಯ ಎಂಬುದು ದೇಹ ಕಸರತ್ತಿನ ಆಟದಲ್ಲಿ ಇಂದಿಗೂ ಮುಖ್ಯವಾದುದಾಗಿದೆ. ಕಬಡ್ಡಿ, ತಿಂಬಿ, ಕಣ್ಣು ಮುಚ್ಚಾಲೆ, ಬಿಸಿಲು ನೆರಲು, ಎಳಾಂಗಾಯಿ ಮೊದಲಾದ ಆಟಗಳನ್ನು ದೇಹ ಕಸರತ್ತಿನ ಆಟಗಳಲ್ಲಿ ಸೇರಿಸಬಹುದು. ಈಆಟಗಳಲ್ಲಿ ಒಂದೊಂದಕ್ಕೂ ಒಂದೊಂದು ಹಾಡುಗಳಿವೆ. ಉದಾ: ಕಬಡ್ಡಿ ಆಟದಲ್ಲಿ ಹಾಡುವ ಹಾಡುಗಳು. ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆ ಹಾಡುಗಳ ರೂಪಗಳು ಚಿಕ್ಕವರಿಂದ ಹಾಡಲಾಗುತ್ತದೆ. ಚಿಕ್ಕವರು ಎರಡು ತಂಡಗಳಾಗಿ ಆಡುವ ಕಬಡ್ಡಿ ಆಟದಲ್ಲಿ ಒಬ್ಬ ಎದುರಾಳಿಯನ್ನು ನೋಡಿ ಮುನ್ನುಗ್ಗುವರು, ಅವರನ್ನು ಮುಟ್ಟಿ ಹಿಂದಿರುಗುವುದಕ್ಕೆ ಉಪಯೋಗವಾಗುವ ಹಾಡುಗಳು ‘ಉಸಿರಾಟದ ಹಾಡು’ ಗಳಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಕಬಡ್ಡಿ ಕಬಡ್ಡಿ ಮಾವಿನ ಹಣ್ಣು ಮಡಿಕೇಲಿ
ಅನ್ನ ಸಾಂಬಾರು ಬಂಡಿಯಲಿ
ಕೋಳಿ ಹೊಡೆದ ಸಂಭ್ರಮ
ಲಂಗೋಟಿ ಬಟ್ಟೆಗೆ ಪರದಾಟ
ಪರದಾಟ
…. ಪರದಾಟ…

ಈ ರೀತಿ ಹಾಸ್ಯ ಗೇಲಿ ಮಾಡಲು ಕಡಿಮೆ ಪದಗಳು ಸಾಲುಗಳನ್ನು ಹಾಕಿ ಹಾಡಲು ಕಬಡ್ಡಿ ಆಟದ ಹಾಡುಗಳು ಸಹಾಯಾವಾಗಿವೆ. ಈ ರೀತಿಯಲ್ಲೇ ಕಣ್ಣಾಮುಚ್ಚಾಲೆ, ಏಳಾಂಗಾಯ್ ಮೊದಲಾದ ಆಟದ ಹಾಡುಗಳು ಆಯಾಯ ಆಟಕ್ಕೆ ತಕ್ಕಂತೆ ರಚನೆಗೊಂಡಿರುತ್ತದೆ.

ಮೌಖಿಕ ಆಟದ ಹಾಡುಗಳು : ಸಾಮಾನ್ಯವಾಗಿ ದೈಹಿಕ ಶ್ರಮವಿಲ್ಲದೆ ಆಡುವ ಆಟವೇ ಮೌಖಿಕ ಆಟಗಳು. ಈ ಸಂದರ್ಭದಲ್ಲಿ ಬಾಲಕ ಬಾಲಕಿಯರು ಕೆಲವು ರೀತಿಯ ಹಾಡುಗಳನ್ನು ಹಾಡುವುದುಂಟು. ಈ ರೀತಿಯ ಹಾಡುಗಳನ್ನೇ ಮೌಖಿಕ ಹಾಡುಗಳು ಎಂದು ಕರೆಯುವರು. ಹಾಸ್ಯದ ಹಾಡುಗಳು, ಪ್ರಶ್ನೋತ್ತರ ಹಾಡುಗಳು ಈ ಮೊದಲಾದ ಹಾಡುಗಳನ್ನು ಮೌಖಿಕ ಹಾಡುಗಳು ಒಳಗೊಂಡಿರುತ್ತವೆ. ಸಮಾನ ವಯಸ್ಸಿನ ಚಿಕ್ಕವರು ಬೋಳು ತಲೆಯ ಹುಡುಗನನ್ನು ನೋಡಿ

ಬೋಳು ತಲೆಯವನಾದ ವಾದ್ಯಗಾರನು
ವಾದ್ಯವನು ಕೆಳಗಿಟ್ಟು
ಎರಡಕ್ಕೆ ಹೋದ
ನಾಯೋ ನರಿಯೋ ಹೊತ್ತುಕೊಂಡು ಹೋದಾಗ
ನಾನೇನು ಮಾಡಲಿ ನಾಗಪ್ಪ

ಬಯಲು ಜಾಗದಲಿ ನುಗ್ಗಿಕೋ
ಕಾಮಾಕ್ಷಿ ದೇಗುಲದಲ್ಲಿ ಬೇಡಿಕೋ
ಸೊಪ್ಪನ್ನು ಒಗ್ಗರಣೆ ಮಾಡಿಕೋ
ಲಪ ಲಪಕ್ಕನೇ ಬಾಯಿಗೆ ಹಾಕಿಕೋ

ಎಂದು ಪರಿಹಾಸ್ಯ ಮಾಡುವ ರೀತಿಯಲ್ಲಿ ಹಾಡುವುದುಂಟು. ಈ ರೀತಿಯ ಹಾಡು ಹಾಡುವುದಕ್ಕೆ ಮುಖ್ಯ ಉದ್ದೇಶ ಬೇರೆಯವನನ್ನು ಹಾಸ್ಯ ಮಾಡುವುದೇ ಆಗಿದೆ. ಆದ್ದರಿಂದ ಈ ರೀತಿಯ ಹಾಡುಗಳನ್ನು ‘ಬೇರೆಯವರಿಗೆ ಗೇಲಿ ಮಾಡುವ ಹಾಡುಗಳು’ ಎಂದು ಗುರುತಿಸುತ್ತಾರೆ (ಆರ್. ಧನಂಜಯನ್)

ಪ್ರಶ್ನೋತ್ತರ ಹಾಡುಗಳು : ಇಬ್ಬರು ಸಂಭಾಷಿಸುವಂತೆ ಪ್ರಶ್ನೆ ಉತ್ತರ ಎಂಬ ರೀತಿಯಲ್ಲಿ ರೂಪುಗೊಂಡ ಹಾಡುಗಳನ್ನು ಪ್ರಶ್ನೋತ್ತರ ಹಾಡುಗಳೆಂದು ಕರೆಯುವರು.

ಸ್ನಾನ ಮಾಡಲು ಕೊಳ ಉಂಟೋ?
ಕಲ್ಲು ಕುಟಿಗ ನಿನ್ನ ನಾಡಿನಲ್ಲಿ
ಹಂತ ಹಂತದ ಕೊಳ ಡಿಂಗು ಡಿಂಗಾಲೋ
ಹದವಾದ ಸ್ನಾನ ಮಾಡೋಣ ಡಿಂಗು ಡಿಂಗಾಲೋ
ಕೂರಲು ಒರಳುಂಟೋ?
ಕಲ್ಲು ಕುಟಿಗ ನಿನ್ನ ನಾಡಿನಲ್ಲಿ
ಕಲ್ಲು ಉರುಲುವವನೇ ಡಿಂಗು ಡಿಂಗಾಲೋ
ಸೇರಿ ಕುಟ್ಟೋಣ ಡಿಂಗು ಡಿಂಗಾಲೋ

ಎಂದು ಪ್ರಾರಂಭವಾಗುವ ಮೇಲ್ಕಂಡ ಸಾಲುಗಳು ಪ್ರಶ್ನೆ ಉತ್ತರ ಸ್ವರೂಪದಲ್ಲಿ ರಚನೆಯಾದ ಹಾಡಿನ ಭೇದಗಳಾಗಿವೆ. ಈ ರೀತಿಯ ಹಾಡುಗಳು ಚಿಕ್ಕವರ ಮಧ್ಯೆ ಸಂಭಾಷಣೆಯ ಸಾಮರ್ಥ್ಯ ಹಾಸ್ಯ ಭಾವವನ್ನು ಬೆಳೆಸುವುದೇ ಆಗಿದೆ. ಈ ಬಗೆಯ ಹಾಡುಗಳು ಚಿಕ್ಕವರಲ್ಲಿ ಹೆಚ್ಚಿಗೆ ಕಂಡು ಬರುತ್ತದೆ.

. ತೊಳಿರ್ಪಾಡಲ್ಗಳ್ (ಕಸುಬಿನ ಹಾಡುಗಳು) : ಕಸುಬಿನ ಹಾಡು ಅಥವಾ ದುಡಿಮೆಯ ಹಾಡು ಎಂಬುದು ಮಾನವ ಒಂಟಿಯಾಗಿ ಇಲ್ಲವೇ ಒಗ್ಗಟ್ಟಾಗಿ ದುಡಿಮೆಯಲ್ಲಿ ತೊಡಗುವಾಗ ಹಾಡಲಾಗುವ ಹಾಡುಗಳಾಗಿವೆ. ಅಂದರೆ ದೋಣಿ ನಡೆಸುವಾಗ ಭಾರ ವಸ್ತುಗಳನ್ನು ಎತ್ತುವಾಗ, ಎಳೆಯುವಾಗ, ಕುಯ್ಲು ಮಾಡುವಾಗ, ನೂಲು ತೆಗೆಯುವಾಗ ಕಾರ್ಮಿಕರು ಹಾಡುವ ಹಾಡಾಗಿದೆ.

ದುಡಿಮೆಯಲ್ಲಿ ಒಂದಾಗುವ ಕಾರ್ಮಿಕರ ಶ್ರಮದ ರೀತಿಗೆ ತಕ್ಕಂತೆಯೇ ದುಡುಮೆಯ ಹಾಡುಗಳು ಹುಟ್ಟಿವೆ ಎನ್ನುವರು. ದುಡಿಯುವ ಜನರ ಒಗ್ಗಟ್ಟಿನ ಪ್ರಯತ್ನದಿಂದ ಏರ್ಪಟ್ಟ, ಆ ಕಲೆಯ ಹೊರಹೊಮ್ಮುವಿಕೆಯನ್ನು ಕುರಿತು ಕ. ಕೈಲಾಸವತಿ ಅವರು ‘ಒಗ್ಗಟ್ಟಾಗಿ ಕೆಲಸ ಮಾಡುವಾಗ ದೇಹದ ಕಸರತ್ತಿಗೆ ತಕ್ಕ ಹಾಡುಗಳು ಹುಟ್ಟಿದವು. ಇವುಗಳನ್ನು ದುಡಿಮೆಯ ಹಾಡುಗಳು ಎನ್ನುವರು’ ಎಂದು ಹೇಳಿದ್ದಾರೆ.

ವ್ಯವಸಾಯ ಮಾಡುವವರು, ದೋಣಿ ನಡೆಸುವವರು, ಮೀನು ಹಿಡಿಯುವವರು, ಮರ ಕಡಿಯುವವರು, ಬಾವಿ ತೋಡುವವರು ಮೊದಲಾದವರು ಇಂದಿಗೂ ತಮ್ಮ ತಮ್ಮ ದುಡಿಮೆಯ ಹಾಡುಗಳನ್ನು ಹಾಡುತ್ತಾರೆ. ದುಡಿಮೆಯಿಂದ ಹಾಡಿನ ಕಲೆ ಇನ್ನು ಕೊನೆಗೊಳ್ಳದ ಸ್ಥಿತಿಯನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ದುಡಿಮೆಯ ಹಾಡುಗಳನ್ನು ವ್ಯವಸಾಯ ಮತ್ತು ವ್ಯವಸಾಯೇತರ ಹಾಡುಗಳೆಂದು ಎರಡು ಭಾಗಗಳಾಗಿ ವಿಂಗಡಿಸಿ ವಿವರಿಸುತ್ತಾರೆ. (ಆರ್. ರಾಮನಾಥನ್ ೧೯೯೭:೬೯) ನೇಗಿಲ ಹಾಡು, ಏತದ ಹಾಡು, ನಾಟಿ ಹಾಡು, ಕಳೆ ಕೀಳುವ ಹಾಡು, ಕೊಯ್ಲು ಹಾಡು, ಮಳೆ ಹಾಡು ಮೊದಲಾದವು ವ್ಯವಸಾಯದ ಕೆಲಸದ ಸಮಯದಲ್ಲಿ ಹಾಡುವಂಥವು. ಬತ್ತ ಕುಟ್ಟುವ ಹಾಡು, ಸುಣ್ಣ ಕುಟ್ಟುವ ಹಾಡು, ಭಾರತ ಹೊರುವ ಹಾಡು ಮೊದಲಾದವು ವ್ಯವಸಾಯೇತರ ಕಸುಬಿನ ಹಾಡುಗಳಾಗಿವೆ.

. ವಳಿಪಾಟ್ಟು ಪಾಡಲ್ಗಳ್ (ಪೂಜೆಯ ಹಾಡುಗಳು): ತಮಿಳುನಾಡಿನಲ್ಲಿ ಹಲವು ಬಗೆಯ ಜನಪದ ದೇವರುಗಳನ್ನು ಪೂಜಿಸುತ್ತಾರೆ. ಪುರಾಣ ಕಥೆಗಳು, ನಂಬಿಕೆಗಳು, ಆಚರಣೆಗಳು, ಹರಕೆಗಳು, ಉಪವಾಸ, ಜೀವ ಬಲಿ, ಮೈಮೇಲೆ ದೇವರು ಬಂದು ಮಾತನಾಡುವುದು, ಬೇವಿನ ಔಷಧಿ, ದೇವರಾಟ, ಬೀದಿ ಮೆರವಣಿಗೆ, ಕೊಂಡ ಹಾಯುವುದು, ಗಂಧದ ಅಭಿಷೇಕ, ಹಾಲಿನ ಅಭಿಷೇಕ ಎಂಬುದಾಗಿ ಹಲವು ರೀತಿಯ ಪೂಜಾ ವಿಧಾನಗಳಿಮದ ಜನಪದ ದೇವರುಗಳನ್ನು ಜನರು ಪೂಜಿಸುತ್ತಾರೆ. ಅಗೋಚರ ಶಕ್ತಿಯನ್ನು ಆರಾಧಿಸುವ ಮನುಷ್ಯನ ನಡತೆಯನ್ನೇ ದೇವರ ಪೂಜೆ ಎನ್ನುತ್ತೇವೆ. ಈ ನಡತೆಯ ಒಟ್ಟು ಅಂಶದಿಂದ ಧರ್ಮ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ. ಜನಪದ ದೇವರ ಆರಾಧನೆಯ ಹಿನ್ನೆಲೆಯಲ್ಲಿ ರೂಪುಗೊಂಡ ಹಾಡುಗಳನ್ನು ಪೂಜಾ ಹಾಡುಗಳೆಂದು ಗುರುತಿಸಲಾಗುತ್ತದೆ. ಒಂದು ರೀತಿಯಲ್ಲಿ ಇವನ್ನು ಮೌಖಿಕ ಆರಾಧನೆ ಎಂದು ಹೇಳಬಹುದು. ಮಾರಮ್ಮನ ಆಶೀರ್ವಾದವನ್ನು ಪಡೆಯುವುದಕ್ಕಾಗಿ ಪೂಜಾರಿಗಳೋ ಊರಿನ ಜನರೋ ಡಮರುಗ ಬಾರಿಸಿಕೊಂಡು ಹಾಡುವ ಹಾಡುಗಳು ಮಾರಮ್ಮನ ಉಯ್ಯಾಲೆ ಹಾಡುಗಳಾಗಿವೆ. (ನಾ. ವಾನಮಾಮಲೈ ೨೦೦೦:೪೪ – ೫೧) ಏಳು ಜನ ಕನ್ಯೆಯರ ಪೂಜೆಗಳಲ್ಲಿ ಅವರ ಶಕ್ತಿಗಳನ್ನು ತಮ್ಮ ಮೈ ಮೇಲೆ ಬರಿಸುವುದಕ್ಕಾಗಿ ಕನ್ಯೆಯರು ಚಪ್ಪಾಳೆ ತಟ್ಟಿ ಹಾಡುವ ಹಾಡುಗಳನ್ನು ಪೂಜಾ ಹಾಡುಗಳು ಎನ್ನುವರು.

. ಕೊಂಡಾಟ ಪಾಡಲ್ಗಳು (ಸಂಭ್ರಮದ ಹಾಡುಗಳು) : ನಿಗದಿತ ಜಾತಿಯ ಜನ ತಮ್ಮ ಕಸಬು, ಜೀವನ, ಇತ್ಯಾದಿ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ವರ್ಷದ ವಿಶೇಷ ದಿನಗಳಲ್ಲಿ ಪ್ರಮುಖ ಪ್ರದರ್ಶನಗಳನ್ನು ನಡೆಸುವರು. ಜನರು ಒಂದಾಗಿ ಸೇರಿ ನಡೆಸುವ ಈ ರೀತಿಯ ಪ್ರದರ್ಶನದಲ್ಲಿ ಕೆಲವೊಂದು ಗುಣನಡತೆಗಳಿಗೂ ರೂಢಿಗಳಿಗೂ ವಿಶೇಷ ಸ್ಥಾನಮಾನವನ್ನು ಕೊಡಲಾಗಿದೆ. ಈ ರೀತಿಯ ವಿಶೇಷತೆಗಳನ್ನು ಹಬ್ಬ ಉತ್ಸವ ಎಂದು ಗುರುತಿಸಲಾಗುತ್ತದೆ. ಪೊಂಗಲ್, ಪುತ್ತಾಂಡು ಪಿರಪ್ಪು (ಹೊಸ ವರ್ಷದ ಹಬ್ಬ), ನಿನೈವುನಾಲ್ (ಸ್ಮರಣೆಯ ದಿನಗಳು) ಮೊದಲಾದ ವಾರ್ಷಿಕ ವಿಶೇಷ ದಿನಗಳು, ಕುಳಂದೈ ಪುರಪ್ಪು (ಮಗುವಿನ ಹುಟ್ಟಿನ ಹಬ್ಬ), ಪೆಯರ್ ಸೂಟ್ಟುದಲ್ (ನಾಮಕರಣ), ಪೂಪ್ಪುಚಡಂಗು (ಋತುಮತಿ ಶಾಸ್ತ್ರ), ವಳೈಕಾಪ್ಪು (ಬಳೆ ತೊಡುವುದು), ಮಣಿವಿಳಾ, ಇರಪ್ಪುಚಡಂಗು (ಸಾವಿನ ಸಂಸ್ಕಾರ) ಜೀವನದಲ್ಲಿ ಬಂದು ಹೋಗುವ ಮೊದಲಾದ ಆಚರಣೆಗಳು, ಅಮಾವಾಸ್ಯೆ, ಪೌರ್ಣಿಮಿವೃತ್ತ, ಕಾರ್ತಿಕ, ಮಾಸಿ (ಮಾರ್ಚ್) ಪಂಗುನಿ (ಸೌರಮಾನ ಮಾಸ ಮಾರ್ಚ್ ಏಪ್ರಿಲ್) ಚಿತ್ರ ಪೌರ್ಣಿಮಿ ಮೊದಲಾದ ಧಾರ್ಮಿಕ ಆಚರಣೆಗಳು ಪ್ರಸಿದ್ಧ ಕಾಲಗಳಲ್ಲಿ ನಡೆಯುವ ಪ್ರದರ್ಶನಗಳನ್ನು ವಿಶೇಷವಾದ ಪ್ರದರ್ಶನಗಳು ಎಂದು ಹೇಳುವರು. ಹೀಗೆ ಸಮಾಜದ ಬಹುಪಾಲು ಜನರ ತಂಡಗಳೇ ಹಾಡು ಕುಣಿತದಲ್ಲಿ ತೊಡಗುವುದನ್ನು ಕಾಣಬಹುದು.

೧. ಅರಿಸಿನ ನೀರಿನ ಹಬ್ಬದ ಹಾಡುಗಳು

೨. ಕೋಲಾಟದ ಹಾಡುಗಳು

೩. ಮದುವೆಯ ಹಾಡುಗಳು

೪. ಆರತಿ ಹಾಡುಗಳು

೫. ಉಯ್ಯಾಲೆ ಹಾಡುಗಳು

೬. ಭಿಕ್ಷೆ ಹಾಡುಗಳು

ದುಡಿಮೆಯ ಹಾಡುಗಳು ಸಾಮಾನ್ಯವಾಗಿ ಕಾರ್ಮಿಕರ ಒಗ್ಗಟ್ಟಿನಿಂದ ಮೂಡಿ ಬಂದವುಗಳಾಗಿವೆ. ಇಬ್ಬರು ಹಾಡುಗಾರರು ಕೊನೆಯ ಸಾಲುಗಳನ್ನು ಹಾಡಲು ಉಳಿದ ಕಾರ್ಮಿಕರು ಒಗ್ಗಟ್ಟಿನ ದನಿಯಲ್ಲಿ ಕೊನೆಯ ಸಾಲುಗಳನ್ನು ಹಾಡುವ ರೀತಿಯನ್ನು ಒಳಗೊಂಡ ರಚನೆಗಳು ದುಡಿಮೆಯ ಹಾಡುಗಳಾಗಿವೆ. ಉದಾ: ಕಡಲಿನಲ್ಲಿ ದೋಣಿಯ ಮೇಲೆ ಮೀನು ಹಿಡಿಯಲು ಹೋಗುವಾಗ ಮೀನುಗಾರರು ಹಾಡುವ ‘ಅಂಬಾ’ ಹಾಡನ್ನು ಇಲ್ಲಿ ಗಮನಿಸಬಹುದು.

ಮೊದಲ ಹಾಡುಗ : ಮೀನಿನಂತೆ ತೆಳ್ಳಗಿರುವವಳೇ

ಕೋಲಿನವರು : ಏಲೆಲೋ ಈಲೋ

ಮೊದಲ ಹಾಡುಗ : ಮೀನಾಕ್ಷಿ ಅಮ್ಮನ ಬಲೆ

ಕೋಲಿನವರು : ಏಲೆಯೋ ಈಲೋ

ಎರಡನೇ ಹಾಡುಗಾರ : ಕಾಲ ಒಂದು ದೊಡ್ಡ ಬಲೆ

ಕೋಲಿನವರು : ಏಲೆಯೋ ಈಲೋ

ಎರಡನೇ ಹಾಡುಗಾರ : ಕಾಮಾಕ್ಷಿ ಅಮ್ಮನ ಬಲೆ

ಕೋಲಿನವರು : ಏಲೆಯೋ ಈಲೋ

ಈ ರೀತಿ ಹಾಡುಗಾರ ಬೆಸ್ತರು ಒಗ್ಗಟ್ಟಾಗಿ ಹಾಡುವ ಹಾಡಾಗಿ ದುಡಿಮೆ ಹಾಡುಗಳಾಗಿ ‘ಅಂಬಾ’ ಹೆಸರು ಪಡೆಯುತ್ತದೆ. ಅಂಬಾ ಮೊದಲಾದ ದುಡಿಮೆಯ ಹಾಡುಗಳು ಕಾರ್ಮಿಕರ ಒಗ್ಗಟ್ಟನ್ನು ತೋರಿಸಿ ಅವರ ಶ್ರಮವನ್ನು ಕಡಿಮೆ ಮಾಡಿ ಉತ್ಸಾಹ ನೀಡುವ ಕಾರ್ಯವನ್ನು ಮಾಡುತ್ತವೆ ಎನ್ನಬಹುದು.

ತಮಿಳುನಾಡಿನಲ್ಲಿ ಮೀನುಗಾರರು ಮೊದಲಾದ ವೃತ್ತಿ ಸಮಾಜದ ಹೆಣ್ಣು ಮಗಳು ಋತುಮತಿಯಾದಾಗ ಅದನ್ನು ಆಚರಣೆಯಾಗಿ ಮಾಡಿಕೊಂಡು ಬರಲಾಗುತ್ತಿದೆ. ಸುಮಾರು ಹದಿನಾಲ್ಕು ದಿನ ಋತುಮತಿಯ ಮನೆಯಲ್ಲಿ ಹೆಂಗಸರು ಚಪ್ಪಾಳೆತಟ್ಟಿ ಹಲವು ಬಗೆಯಾದ ಹಾಡುಗಳನ್ನು ಹಾಡುವರು. ಕಣ್ಣಗಿ ಕೋವಲನ್ ಕಥೆ, ಅಲ್ಲಿ ಅರಸಾನಿ ಮಾಲೈ, ನಲ್ಲತಂಗಾಳೆ ಕದೈ, ಕಾತ್ತವರಾಯನ್ ಕದೈ ಮೊದಲಾದ ಕಥೆಯ ಹಾಡುಗಳನ್ನು ಚಪ್ಪಾಳೆ ತಟ್ಟಿ ಕುಣಿಯುವರು. ಕುಮ್ಮಿ ಕುಣಿತಗಳಲ್ಲಿ ಹಾಡುವ ಹಾಡೊಂದು ಹೀಗಿದೆ.

ತೇಂತಂದಿನಾ ತೆನತ್ತಂದಿನಾ
ತೆನ್ದಂದಿನಾ ತೆನನಾ ತೆನ್ದತ್ತಿನಾ ತೆನನಾ
ತೆನ್ನಾ ದಿನತ್ತನ್ದಿನಾ
ತೆನ್ದಂದಿನಾ ತೆನನಾ

ಹಚ್ಚ ಹಸಿರಿನ ಬೆಟ್ಟ ಸಾಲು
ನಮ್ಮ ಹವಳದ ಮಲೆನಾಡು
ಪರಶಿವನ ರಥ ಓಡುವುದು
ಬೀದಿಯನ್ನೆಲ್ಲ ವ್ಯಾಪಿಸಿ
ಉಚ್ಚಿಮಲೈ ಕೊಡುಗುಮಲೈ
ನಮ್ಮ ಮಲೆನಾಡು…. ನಮ್ಮ ನಾಡು

ಕೊರತಿಗಳು ಕುಣಿಯುವ
ಗಡಿಯ ಗರತಿಯರು
ಹಚ್ಚ ಹಸುರಿನ ಬೆಟ್ಟದಲಿ ವಾಸ
ಹಣ್ಣು ಹಂಪಲನ್ನು ಕೀಳುವೆವು
ಪರಿವಾರ ಹೆಚ್ಚಾದುದರಿಂದ
ಪಟ್ಟಣಕ್ಕೆ ಬರುವೆವು

ಕಣಿ ಹೇಳುವ ಕೊರವಂಜಿ ಹೆಂಗಸು ಹಾಡುವಂತೆ ಮೇಲ್ಕಂಡ ಹಾಡನ್ನು ಚಪ್ಪಾಳೆ ತಟ್ಟಿ ಹಾಡಲಾಗುತ್ತದೆ.

ಅರಗಿನ ಮನೆ ಕಟ್ಟಿ
ಬೆಂಕಿಯನ್ನು ಹಾಕಿ ಬೆಂಕಿಯನ್ನು ಹಾಕಿ
ಪಂಚಪಾಂಡವರನ್ನು
ಸಾಯಿಸಲು ಮಾಡಿದರು
ಸ್ನಾನ ಮಾಡುವ ಕೊಳದಲಿ
ಚೂಪಾದ ಸೂಜಿ ಇಟ್ಟು –  ಚೂಪಾದ ಸೂಜಿ ಇಟ್ಟು….
ಸ್ನಾನಕ್ಕೆ ಬಂದ ಪಾಂಡವರನ್ನು
ಸಾಯಿಸಲು ಮುಂದಾರು

ಈ ಮೇಲ್ಕಂಡ ಎರಡು ಪದ್ಯಗಳಲ್ಲಿ ಮಹಾಭಾರತ ಕಥಾಂಶಗಳು ಸ್ಥಾನ ಪಡೆದಿವೆ. ಕಾವ್ಯ ಮತ್ತು ಜನಪದ ಕಥಾ ಹಾಡುಗಳಲ್ಲಿ ಕೆಲವು ಭಾಗಗಳನ್ನು ಹಾಡುವುದು ಚಪ್ಪಾಳೆ ಹಾಡಿನಲ್ಲಿ ಅನುಸರಿಸುವ ಪದ್ಧತಿಯಾಗಿದೆ. ಋತುಮತಿಗೆ ಶಾಸ್ತ್ರ ನಡೆಯುವಾಗ ಹಾಡುವ ಚಪ್ಪಾಳೆ ಹಾಡು ಇಲ್ಲಿದೆ.

ಏ ಬುದ್ದಿ ಗೆಟ್ಟ ಮಾವ
ಹೆಣ್ಣನ್ನು ಬೆಳಸಿದ
ಚಪ್ಪರ ಹಾಕಿದ

ಏ ಬುದ್ದಿ ಗಟ್ಟ ತಾಯಿ
ಹೆಣ್ಣನ್ನು ಬೆಳೆಸಿದಳು

ಏ ನಾನಾಗಿ ಬೆಳೆಸಿದನೇ
ಅದೇ ಬೆಳೆದು ನಿಂತಿದೆ

ಮೇಲ್ಕಂಡ ಚಪ್ಪಾಳೆ ಹಾಡುಗಳಲ್ಲಿ ಪರಿಹಾಸ್ಯದ ಭಾವನೆಗಳು ಹೊರಹೊಮ್ಮುವುದನ್ನು ಕಾಣಬಹುದು.

. ಇರತ್ತಲ್ ಪಾಡಲ್ಗಳ್ (ಬೇಡುವಿಕೆಯ ಹಾಡುಗಳು) : ಸ್ಥಿರವಾಗಿ ವಾಸಿಸುವ ಸ್ಥಳ. ಒಂದೇ ರೀತಿಯಾದ ಜೀವನ ಪದ್ಧತಿ. ಆಹಾರ ಮೊದಲಾದ ನಿತ್ಯ ಜೀವನದ ಅವಶ್ಯಕತೆಗಳನ್ನು ಪಡೆಯದ ಜನರು ಇನ್ನೂ ಇದ್ದಾರೆ. ಇವರು ಊರಿಂದ ಊರಿಗೆ ಹೋಗಿ ಸಾಮಾನ್ಯ ಸ್ಥಳಗಳಲ್ಲಿ ಗುಡಿಸಲು ಹಾಕಿ ಭಿಕ್ಷೆ ಬೇಡಿ ತಂದ ವಸ್ತುಗಳಿಂದ ಜೀವನ ನಡೆಸುವರು. ಇವರನ್ನು ಅಲೆಮಾರಿ ಜನರು ಎನ್ನುವರು. ಇವರು ಎತ್ತು, ಮಂಗ ಆಡಿಸುವರು, ಚಾಟಿಯಿಂದ ತಮ್ಮ ಮೈಮೇಲೆ ಹೊಡೆದುಕೊಳ್ಳುವವರು. ಬುಡಬುಡಕೆ ಹಿಡಿದುಕೊಂಡು ಅಂಗೈ ನೋಡಿ ಶಾಸ್ತ್ರ ಹೇಳುವವರು ಈ ಮೊದಲಾದ ವೃತ್ತಿಯಿಂದ ಬೇಡಿ ಜೀವನ ನಡೆಸುವರು. ತಮ್ಮ ಜೀವನಕ್ಕೆ ಬೇಕಾದ ಆಹಾರ, ಉಡುಪು ಮೊದಲಾದವುಗಳನ್ನು ಇತರರಿಂದ ಬೇಡಲು ಹಾಡುಗಳನ್ನು ಹಾಡುವರು. ಈ ಹಾಡುಗಳು ಬೇಡುವಿಕೆಯನ್ನೇ ಮುಖ್ಯವಾಗಿ ಇಟ್ಟುಕೊಂಡಿವೆ.

ಆದ್ದರಿಂದ ಅವುಗಳನ್ನು ಬೇಡುವಿಕೆಯ ಹಾಡುಗಳು ಎಂಬ ವಿಭಾಗದಲ್ಲಿ ಸೇರಿಸುವುದು ಉತ್ತಮವಾದುದು. (ಆರ್. ರಾಮನಾಥನ್ ೧೯೯೭:೭೨)

. ಇಳತ್ತಲ್ ಪಾಡಲ್ಗಳ್ (ಶೋಕದ ಹಾಡುಗಳು) : ಸಂಬಂಧಿಕರು, ತುಂಬ ಹತ್ತಿರದವರು, ಮೌಲ್ಯವುಳ್ಳ ವಸ್ತು, ಆಸ್ತಿ ಮತ್ತು ಸಾಕು ಪ್ರಾಣಿಗಳು ಕಳೆದು ಹೋದಾಗ ಜನರ ಮಧ್ಯೆ ಹುಟ್ಟುವ ಹಾಡುಗಳು ಶೋಕದ ಪ್ರತಿಬಿಂಬವಾಗಿ ರೂಪ ಪಡೆದಿವೆ. ಈ ಹಾಡುಗಳನ್ನು ಶೋಕದ ಹಾಡುಗಳು ಎನ್ನುವರು. ಈ ರೀತಿಯ ಹಾಡುಗಳನ್ನು ಸಾವಿನ ಹಾಡುಗಳು ಮತ್ತು ಕಳೆದು ಹೋದ ವಸ್ತುಗಳ ಮೇಲೆ ಹಾಡುವ ಹಾಡುಗಳು ಎಂದು ಎರಡು ಭಾಗ ಮಾಡುವರು. ಸಾವಿನ ಹಾಡುಗಳನ್ನು ಹೆಚ್ಚಾಗಿ ಹೆಂಗಸರು, ಕಲಾವಿದರು ಹಾಡುವರು. ಸಾವಿನ ಹಾಡುಗಳು ತಮಿಳುನಾಡಿನಲ್ಲಿ ವಿಶಾಲವಾಗಿ ಹರಡಿ ನಿಂತಿವೆ. ಬಹುಪಾಲು ಬಡತನ, ಕಷ್ಟಗಳ ಮಧ್ಯೆ ಜೀವನ ನಡೆಸುವ ಜನರ ಸಮಾಜಗಳಲ್ಲಿ ಶೋಕ ಗೀತೆಗಳನ್ನು ಕಾಣಬಹುದು. ಜನರ ಬಳಕೆಯಲ್ಲಿ ಈ ಹಾಡುಗಳು ಒಪ್ಪಾರಿ (ಸಾವಿನ ಹಾಡುಗಳು) ಹಾಡುಗಳು ಎಂದು ಹೆಸರು ಪಡೆಯುತ್ತವೆ. ಮನದಲ್ಲಿ ಅಗಣಿತವಾಗಿರುವ ಶೋಕವನ್ನು ಕಳೆದುಕೊಳ್ಳಲು ಒಪ್ಪಾರಿ ಹಾಡುಗಳು ಸಹಾಯಕವಾಗಿವೆ. ಸತ್ತವರ ಆತ್ಮ ಒಪ್ಪಾರಿ ಹಾಡುಗಳಿಂದ ಶಾಂತಿಗೊಳ್ಳುವುದಾಗಿ, ಒಪ್ಪಾರಿ ಹಾಡುಗಳನ್ನು ಹಾಡದಿದ್ದರೆ ಅವು ದೆವ್ವವಾಗಿ ತೊಂದರೆ ಕೊಡುವುದು ಎಂಬ ನಂಬಿಕೆ ಜನರ ಮಧ್ಯೆ ಇದೆ (ಸು. ಶಕ್ತಿವೇಲ್ ೧೯೮೩:೪೫)

) ಹೆಂಗಸರು ಹಾಡುವ ಒಪ್ಪಾರಿ ಹಾಡುಗಳು : ತುಂಬ ಹತ್ತಿರದ ಸಂಬಂಧಿಕರಾದ ಗಂಡ, ತಾಯಿ, ತಂದೆ, ಸಹೋದರ, ಸಹೋದರಿ, ತಾತ, ಅಜ್ಜಿ, ಮಗ, ಮಗಳು, ಮಾವ, ಅತ್ತೆ ಮೊದಲಾದವರು ಇಹಲೋಕ ತ್ಯಜಿಸಿದಾಗ ದುಃಖ ಸಹಿಸಿಕೊಳ್ಳದೆ ಜನರು ಅಳುವರು, ಒದ್ದಾಡುವರು. ಈ ಅಳುವಿಕೆಯಲ್ಲಿ ಹೆಂಗಸು ಗಂಡಸು ಭೇದವಿಲ್ಲದೆ ಇಬ್ಬರೂ ಭಾಗಿಯಾಗುತ್ತಾರೆ. ಹೆಂಗಸು ಮಾತ್ರ ಆ ನೋವನ್ನು ಕಳೆದುಕೊಳ್ಳಲು ಹಲವು ಹಾಡುಗಳ ಮೂಲಕ ಹೊರ ಹೊಮ್ಮಿಸುತ್ತಾಳೆ. ತಾಯಿಯನ್ನು ಕಳೆದುಕೊಂಡ ಒಪ್ಪಾರಿ ಹಾಡು ಹೀಗಿದೆ:

ಚಿನ್ನದ ರೈಲು ಏರಿ – ನಾನು
ತಾಯಿ ಮನೆಗೆ ಹೋಗುವಲ್ಲಿ – ನನಗೆ
ನೆಲೆಗೊಳ್ಳಲು ನೆಲೆಯಿಲ್ಲ – ನನಗೆ
ತಾಯಿ ಮನೆಯಲ್ಲಿ ತಾಯಿ ಇಲ್ಲ
ಚಿನ್ನದ ರೈಲು ಏರಿ
ಗಂಡನ ಮನೆಗೆ ಹೋಗುವಲ್ಲಿ
ಚಿನ್ನದ ರಥದ ಹಂಗಿಲ್ಲ
ಹೋದ ಮನೆಯಲ್ಲೂ ಸುಖವಿಲ್ಲ
(ನಾ. ವಾನಮಾಮಲೈ ೨೦೦೦ ತಮಿಳುನಾಟ್ಟು ಪಾಡಲ್‌ಗಳ್ : ೫೦೨)

ಗಂಡನ್ನು ಕಳೆದುಕೊಂಡ ಒಂದು ಹೆಣ್ಣಿನ ದುಃಖವನ್ನು ದಾಖಲಿಸುವ ಮತ್ತೊಂದು ಒಪ್ಪಾರಿ ಹಾಡು :

ಹೂವಿನ ಮರದ ಕೆಳಗೆ ನಿಂತು
ಕಷ್ಟವನ್ನು ಹೇಳಿ ಅತ್ತರೆ
ಹೂವಿನ ಮರದ ಮೇಲಿರುವ
ಹಕ್ಕಿಯೂ ಗೋಳಿಟ್ಟಿತು

ಮಾಮರದ ಕೆಳಗೆ ನಿಂತು
ಕಷ್ಟವನ್ನು ಹೇಳಿ ಅತ್ತರೆ
ಮಾಮರದ ಮೇಲಿರುವ ಕೋಗಿಲೆ
ಕೂಡ ಗೋಳಿಟ್ಟಿತು
(ನಾ. ವಾನಮಾಮಲೈ ೨೦೦೦ : ೫೧೩)

ದುಃಖವನ್ನು ಹೇಳಲಾಗದಷ್ಟು ಇರುವ ಶೋಕ ಗೀತೆಗಳು, ಹೆಂಗಸರ ಅಳಲನ್ನು ಈ ಹಾಡುಗಳು ಹೊರ ಹೊಮ್ಮಿಸುತ್ತವೆ.

) ಕಲಾವಿದರು ಹಾಡುವ ಶೋಕ ಗೀತೆಗಳು : ಸತ್ತ ಮನೆಗಳಲ್ಲಿ ಹಾಡು ಹಾಡಿ ಎದೆ ಬಡಿದು ಕೊಳ್ಳುವುದಕ್ಕೆಂದೇ ಕೆಲವು ಕಲಾವಿದರು ಇದ್ದಾರೆ. ತಮಿಳುನಾಡಿನ ದಕ್ಷಿಣ ಭಾಗಗಳಲ್ಲಿ ಈ ಪದ್ಧತಿ ಕಾಣಲು ಸಿಗುತ್ತದೆ. ನಾಡಿನ ಎಲ್ಲಾ ಭಾಗಗಳಲ್ಲಿ ಕಂಡು ಬರುವ ‘ಕೂಲಿಗೆ ಎದೆ ಬಡಿಯುವವರು’ ಎಂಬ ಪದ್ಧತಿ ಈ ಕಲಾವಿದರನ್ನೇ ಕುರಿತದ್ದು. ಇವರ ಹಾಡುಗಳನ್ನು ‘ಎದೆ ಬಡಿದುಕೊಂಡು ಹಾಡುವ ಹಾಡು’ ಎಂದು ಕರೆಯಲಾಗುತ್ತದೆ. ಎದೆ ಬಡಿದುಕೊಂಡು ಹಾಡದೆ ವಾದ್ಯ ಬಾರಿಸಿಕೊಂಡು ಹಾಡುವ ಕೈಲಾಸ ಹಾಡಿನ ಕಲಾವಿದರನ್ನು ತಮಿಳುನಾಡಿನ ಉತ್ತರ ಭಾಗಗಳಲ್ಲಿ ಕಾಣಬಹುದು. ಸತ್ತವರನ್ನು ಕೈಲಾಸಕ್ಕೆ ಕಳುಹಿಸುವುದಕ್ಕಾಗಿ ಈ ಹಾಡುಗಳು ರಚನೆಗೊಳ್ಳುತ್ತವೆ. ಈ ರೀತಿಯ ಹಾಡುಗಳು ಸಾವಿನ ಹಾಡುಗಳಾಗಿವೆ.

) ಇತರೆ ಶೋಕದ ಹಾಡುಗಳು : ನೆಲ, ಹಣ ಮೊದಲಾದ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡ ನೆಲೆಯಲ್ಲಿ, ಮಾನ ಕಳೆದುಕೊಂಡ ನೆಲೆಯಲ್ಲಿ ಕುಟುಂಬದ ಯಜಮಾನನಿಗೆ ಇರುವ ಕುಂದು ಕೊರತೆಗಳ ನೆಲೆಯಲ್ಲಿ ಹೆಂಗಸರು, ಹಿರಿಯರು ಕಷ್ಟದಲ್ಲಿರುವಾಗ, ಜೀವನದ ಕಷ್ಟಗಳಿಂದ ದುಃಖದ ನೆಲೆಯಲ್ಲಿ ಪ್ರತ್ಯೇಕವಾಗಿ ಹಾಡಲಾಗುವ ಹಾಡುಗಳನ್ನು ಇತರೆ ಶೋಕದ ಹಾಡುಗಳೆಂದು ಹೇಳಬಹುದು. ಇವು ಹಾಡಿನ ರೂಪದಲ್ಲಿ ಒಪ್ಪಾರಿಯನ್ನು (ಶೋಕ) ಹೊಂದಿರುವುದು, ಇವುಗಳನ್ನು ‘ಕೂಗಾಟ’ ಎಂದು ಕರೆಯಬಹುದು. ದುಃಖ ಆದಾಗ ಕೂಗಾಟದಲ್ಲಿ ಅದನ್ನು ನೆನೆದು ದುಃಖಿಸುವುದು, ಸಾವನ್ನು ನೆನೆದು ದುಃಖಿಸುವುದು. ಕೂಗಾಡಿದಾಗ ಅವರ ದುಃಖ ಕಳೆದು ಮನಸ್ಸಿಗೆ ಸಮಾಧಾನವಾಗಬಹುದು (ಆರ್. ರಾಮನಾಥನ್ ೧೯೯೭:೮೩)

ಜನಪದ ಹಾಡುಗಳ ಪ್ರಾಮುಖ್ಯತೆ : ಮೌಖಿಕ ಸಂಪ್ರದಾಯವನ್ನು ಪಡೆದ ನಿಗದಿತ ಜನರ ಸಮಾಜದಲ್ಲಿ ಕಾಣಲಾಗುವ ಬಾಯ್ಮಾತಿನ ಹಾಡುಗಳಲ್ಲಿ ಹಲವಾರು ಉಪಯೋಗಗಳನ್ನು ಕಾಣಬಹುದು.

೧. ಜನಪದ ಗೀತೆಗಳಲ್ಲಿ ಕಂಡು ಬರುವ ಧರ್ಮ ಅಥವಾ ಮಂತ್ರಕ್ಕೆ ಸೇರಿದ ಹಾಡುಗಳು ಧರ್ಮದ ಪ್ರಾಮುಖ್ಯತೆಯನ್ನು ಕಟ್ಟಿಕೊಡುತ್ತವೆ.

೨. ಜನಪದ ಗೀತೆಗಳು ಒಂದು ನಿಗದಿತ ಜಾತಿಗೆ ಸೇರಿದ ಜನರ ಸಂಸ್ಕೃತಿಯನ್ನು ಕಟ್ಟಿಕೊಡುತ್ತವೆ.

೩. ದುಡಿಮೆ ಹಾಡುಗಳು ಕೆಲಸ ಮಾಡಲು ಉತ್ಸಾಹವನ್ನು ಕೊಡುವುದಲ್ಲದೆ ದುಡಿಮೆಯಿಂದ ಆದ ದಣಿಯನ್ನು ನಿವಾರಿಸಲು ಸಹಾಯಕವಾಗುತ್ತದೆ.

೪. ಜನಪದ ಹಾಡುಗಳು ಒಂದು ನಿಗದಿತ ಸಮಾಜದ ಇತಿಹಾಸದ ಆಧಾರಗಳಾಗಿರುತ್ತವೆ.

೫. ಜನರ ಗುಂಪಿನ ಹಾಡಿನ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡುತ್ತದೆ.

೬. ಸೌಂದರ್ಯಾನುಭವವನ್ನು ಕೊಡುವಲ್ಲಿ ಜನಪದ ಗೀತೆಗಳ ಪಾತ್ರ ಪ್ರಮುಖವಾದದ್ದು.

೭. ಜನರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಜನಪದ ಗೀತೆಗಳು ಸಹಾಯಕವಾಗಿವೆ.

ಹೀಗೆ ಹಲವು ಬಗೆಯ ಉಪಯೋಗಗಳನ್ನು ಹೊಂದಿರುವುದರಿಂದ ಜನಪದ ಗೀತೆಗಳು ಪ್ರಾಮುಖ್ಯತೆಯನ್ನು ಪಡೆದಿವೆ.

– ಎ.ಡಿ. ಅನುವಾದ ಪಿ.ಎಂ.