ತಮಿಳುನಾಡಿನ ಹವಾಮಾನ ಸಂಪ್ರದಾಯ ತಮಿಳು ನಾಡಿನಲ್ಲಿ ಬೇರೆ ಬೇರೆ ಜನ ಸಮುದಾಯಗಳಿಗೆ ಸೇರಿದವರು ಮೀನು ಹಿಡಿಯುವ ಉದ್ಯೋಗವನ್ನು ಮಾಡುತ್ತಾರೆ ಬರುತ್ತಿದ್ದಾರೆ. ಅವರು ಈ ಉದ್ಯೋಗವನ್ನು ಸಮುದ್ರದಲ್ಲಿ ಮಾಡುತ್ತಿರುವುದರಿಂದ ಸಮುದ್ರದ ನೀರು, ಸಮುದ್ರದಲ್ಲಿ ಬೀಸುವ ಗಾಳಿ, ಸಮುದ್ರದಲ್ಲಿ ರೂಪುಗೊಳ್ಳುವ ಬಿರುಗಾಳಿ, ಮಳೆ, ಚೈತ್ರಮಾಸದಲ್ಲಿ ಉಂಟಾಗುವ ಗೊಂದಲ, ಸಮುದ್ರದ ಭೋರ್ಗರೆತ, ಸಮುದ್ರ ಮಿಡಿಯುವಿಕೆ ಅವರಿಗೆ ತಿಳಿದಿರುತ್ತದೆ. ಸಮುದ್ರದಲ್ಲಿ ಮೀನು ಹಿಡಿಯುವ ಸ್ಥಳದಲ್ಲಿದ್ದುಕೊಂಡೇ ಅಲೆಗಳ ಮೂಲಕವೂ ವಾತಾವರಣದ ಮೂಲಕವೂ ದಿಕ್ಕುಗಳನ್ನು ಕಂಡರಿಯುವ ಕ್ರಮ, ಸಮುದ್ರದಲ್ಲಿದ್ದುಕೊಂಡೇ ಸಮಯವನ್ನು ತಿಳಿದುಕೊಳ್ಳುವ ಕ್ರಮ ಮುಂತಾದ ಸಾಂಪ್ರದಾಯಿಕ ವೈಜ್ಞಾನಿಕ ಪದ್ಧತಿಗಳಿಗೆ ಸಂಬಂಧಿಸಿದ ಚಿಂತನೆಗಳು ಪ್ರಾಚೀನ ಮಾರ್ಗಗಳಾಗಿ ಮೀನುಗಾರರಲ್ಲಿ ಕಂಡುಬರುತ್ತವೆ. ರಾಮನಾಥಪುರಂ (ಬಾಂಪಂ ತಾಲ್ಲೂಕು), ಕನ್ಯಾಕುಮಾರಿ (ಪುದೂರು ಗ್ರಾಮ) ಮುಂತಾದ ಜಿಲ್ಲೆಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ವಾಸಿಸುವ ಮೀನುಗಾರರಲ್ಲಿ, ನೀರೋಟ, ಗಾಳಿಗಳ ಬಗೆಗಿನ ಪ್ರಾಚೀನ ಪದ್ಧತಿಗಳು ಕಂಡುಬರುತ್ತವೆ.

ನೀರೋಟ : ಸಮುದ್ರ ಯಾವಾಗಲೂ ಒಂದೇ ರೀತಿಯಾಗಿ ಇರುವುದಿಲ್ಲ. ಅಮಾವಾಸ್ಯೆ, ಹುಣ್ಣಿಮೆ, ಅಷ್ಟಮಿ, ನವಮಿ ಮುಂತಾದ ದಿನಗಳಲ್ಲಿ ಸಮುದ್ರದ ಸ್ವಭಾವ ಬದಲಾಗುತ್ತಲೇ ಇರುತ್ತದೆ. ಕೆಲವು ಭಾಗಗಳಲ್ಲಿ ಬೆಳಗ್ಗೆ ಸಮುದ್ರದ ನೀರು ಕಡಿಮೆಯಿದು, ಸಂಜೆ ಹೆಚ್ಚಿರುವುದು ಕಾಣಿಸುತ್ತದೆ. ಸಮುದ್ರದ ನೀರು ಕೊಳದ ನೀರಿನಂತೆ ಒಂದೇ ಜಾಗದಲ್ಲಿ ನೆಲೆಯಾಗಿರದೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನೆಡೆಗೆ ಚಲಿಸುತ್ತಿರುತ್ತದೆ. ಈ ಕ್ರಮಗಳನ್ನು ನಿರೋಟ, ನೀವಾಡು, ನೀರ್, ವೆಳ್ಳಂ ಎಂಬ ಬೇರಕೆ ಬೇರೆ ಹೆಸರುಗಳಿಂದ ಬೇರೆ ಬೇರೆ ತಾಲ್ಲೂಕುಗಳಲ್ಲಿ ವಾಸಿಸುವ ಮೀನುಗಾರರು ಕರೆಯುತ್ತಾರೆ. ನೀರೋಟದ ಹೆಸರುಗಳಲ್ಲಿಯೂ ನೀರೋಟದ ದಿಕ್ಕುಗಳಲ್ಲಿಯೂ ಭಿನ್ನತೆಗಳು ಕಂಡುಬರುತ್ತವೆ.

ಬರತವರ್ ಹೇಳುವ ದಿಕ್ಕುಗಳು : ವಾನೀವಾಡು ಕಟ್ಟಾನೀವಾಡು, ವಲೈಯರ್ ಹೇಳುವ ದಿಕ್ಕುಗಳು: ಕೊಡಂಲ್ ನೀವಾಡು, ಕಚ್ಚಾನೀವಾಡು, ವಾನೀವಾಡು, ರೋಳಗನೀವಾಡು, ಕಡೈಯರ್ ಹೇಳುವ ದಿಕ್ಕುಗಳು: ಕೊಂಡಲ್ ನೀವಾಡು, ಕಚ್ಚಾನ್ ನೀರ್, ವಾಡೈನೀರ್, ಸೋರ್ಶನೀರ್, ಅರೈನೀರ್, ಮುಕ್ಕುವರ್ ಹೇಳುವ ದಿಕ್ಕುಗಳು; ವಾಣುವಾಡು, ಸೋಣುವಾಡು, ವಾಣುವಟ್ಟು, ಸೋಣುವಾಟು ಮುಂತಾದವು.

ಇದೇ ರೀತಿ ತೂತ್ತುಕುಡಿ, ಕಡಲೂರ್, ನಾಗಪಟ್ಟಣಂ ಮುಂತಾದ ಜಿಲ್ಲೆಗಳಲ್ಲಿ ಜೀವಿಸುವ ಬೆಸ್ತರು ಎಂಟು ಬಗೆಯ ನೀರೋಟಗಳನ್ನು ಅರಿತಿದ್ದಾರೆ.

ಸಾಮ್ಯತೆ : ಬರತವರು ಎರಡು ಬಗೆಯ ನೀವಾಡುಗಳನ್ನು ವಲೈಯರು ನಾಲ್ಕು ಬಗೆಯ ನೀವಾಡುಗಳನ್ನು ಹೇಳುತ್ತಾರೆ. ಈ ಎರಡು ವರ್ಗದವರೂ ಹೇಳಿರುವ ನೀವಾಡುಗಳಲ್ಲಿ ವಾನೀವಾಟ್ಟದಲ್ಲಿ ಮಾತ್ರ ಸಾಮ್ಯತೆ ಕಾಣುತ್ತದೆ. ಈ ನೀವಾಡುಗಳ ಹೆಸರುಗಳಲ್ಲೂ ನೀರು ಚಲಿಸುವ ದಿಕ್ಕಿಗಳಲ್ಲಿಯೂ ಸಾಮ್ಯತೆ ಕಾಣುತ್ತದೆ.

ಭಿನ್ನತೆ : ಬರತವರು ಎರಡು ಬಗೆಯ ನೀವಾಡುಗಳನ್ನು ಹೇಳುತ್ತಿದ್ದಾರೆ. ಆದರೆ ವಲೈಯರು ನಾಲ್ಕು ಬಗೆಯ ನೀವಾಡುಗಳನ್ನು ಹೇಳುತ್ತಿದ್ದಾರೆ. ಬರತವರು ಹೇಳುವ ಕಚ್ಚಾ ನೀವಾಡು ದಕ್ಷಿಣದಿಂದ ಉತ್ತರದೆಡೆಗೆ ಚಲಿಸುವುದೆಂದೂ ವಲೈಯರು ಹೇಳಿರುವ ಕಚ್ಚಾನೀವಾಡು ಪಶ್ಚಿಮದಿಂದ ಪೂರ್ವದೆಡೆಗೆ ಚಲಿಸುವುದೆಂದೂ ತಿಳಿದುಬರುತ್ತದೆ. ಈ ನೀವಾಟ್ಟಿನ ಹೆಸರುಗಳಲ್ಲಿ ಸಾಮ್ಯತೆ ಕಾಣುತ್ತದೆ ಹೊರತು, ಈ ನೀವಾಡು ಚಲಿಸುವ ದಿಕ್ಕುಗಳು ಭಿನ್ನವಾಗುತ್ತದೆ.

ಬರತವರು ಹೇಳಿರುವ ಕಚ್ಚಾ ನೀವಾಟ್ಟನ್ನು ವಲ್ಯೆಯರು ಸೋಳಗನೀವಾಡು ಎಂದೂ ಹೇಳುತ್ತಾರೆ.ಬರತವರು ಹೇಳಿರುವ ಕಚ್ಚಾನೀವಾಡೂ ವಲ್ಕೆಯರು ಹೇಳಿರುವ ಸೋಳಗ ನೀವಾಡೂ ಹೆಸರುಗಳಲ್ಲಿ ಭಿನ್ನವಾಗುತ್ತವೇ ಹೊರತು, ಇವು ಚಲಿಸುವ ದಿಕ್ಕುಗಳು ಏಕ ರೀತಿಯಲ್ಲಿ ಕಾಣುತ್ತವೆ. ಬರತವರು ಹೇಳಿರದ ಎರಡು (ಸೋಳ ನೀವಾಡು, ಕೊಂಡಲ್ ನೀವಾಡು) ನೀವಾಡುಗಳನ್ನು ವಲೈಯರು ಹೇಳಿದ್ದಾರೆ.

ಸಾಮ್ಯತೆ ಭಿನ್ನತೆ : ಕಡೈಯರು ಐದು ಬಗೆಯ ನೀರೋಟಗಳನ್ನು ಹೇಳುತ್ತಿದ್ದಾರೆ. ಬರತರೂ ವಲೈಯರೂ ಹೇಳಿರುವ ನೀರೋಟಗಳಿಗಿಂತ ಹೆಚ್ಚುವರಿಯಾಗಿ ಅರೈ ನೀರೋಟ ಎಂಬುದೊಂದನ್ನೂ ಹೇಳಿದ್ದಾರೆ. ಬರತವರು ಹಾಗೂ ವಲೈಯರು ನಿರೋಟಗಳನ್ನು ‘ನೀವಾಡು’ಎಂದ್ತು ಹೇಳುತ್ತಿದ್ದಾರೆ. ವಲೈಯರು ಹೇಳಿರುವ ಸೋಳಗ ನೀವಾಡು, ಕಚ್ಚಾನ್ ನೀವಾಡು, ಕೊಂಡಲ್ ನೀವಾಡುಗಳೆಂಬ ಮೂರು ನಿರೋಟಗಳೂ, ಕಡೆಯರು ಹೇಳಿರುವಸೋಳಗ ನೀರ್, ಕಚ್ಚಾನ್ ನೀರ್, ಕೊಂಡಲ್ ನೀರಾಗಳೆಂಬ ಮೂರು ನೀರೋಟಗಳೂ ಸಾಮ್ಯತೆಯಿಂದ ಕೂಡಿವೆ. ಅಂದರೆ, ನೀರೋಟದ ಹೆಸರುಗಳಲ್ಲಿಯೂ ಅವುಗಳ ದಿಕ್ಕುಗಳಲ್ಲೂ ಬದಲಾವಣೆ ಇಲ್ಲ. ಬರತವರೂ ವೈಲೆಯರೂ ‘ವಾ ನೀವಾಡು’ ಎಂದು ಹೇಳಿರುವುದನ್ನು ಕಡೆಯವರು ವಾಡೈನೀರ್ ಎಂದೂ ಕರೆಯುತ್ತಾರೆ. ಕಡೆಯರು ಅರೈನೀರೋಟವನ್ನು ಮಾತ್ರ ಹೆಚ್ಚುವರಿಯಾಗಿ ಹೇಳಿದ್ದಾರೆ.

ಬರತವರು, ವಲೈಯರು, ಕಡೆಯವರು ಹೇಳಿರುವ ನೀರೋಟಗಳನ್ನು ಕ್ರಮವಾಗಿ ಎರಡು, ನಾಲ್ಕು, ಐದು ಎಂದು ಗುರುತಿಸುತ್ತಾರೆ. ಮುಕ್ಕುವರು ಎಂಟು ಬಗೆಯ ನಿರೋಟಗಳನ್ನು ಗುರುತಿಸುತ್ತಾರೆ. ಮುಕ್ಕುವರು ನೀರೋಟಗಳನ್ನು ಕ್ರಮಬದ್ಧವಾದ ಹೆಸರುಗಳಿಂದ ಸೂಚಿಸುವರು. ನೀರು ಚಲಿಸುವ ದಿಕ್ಕುಗಳು ರಾಮನಾಥಪುರಂ ಜಿಲ್ಲೆಯ ಗಂಗಾಯತರಲ್ಲಿ ಸ್ವಲ್ಪಮಟ್ಟಿಗೆ ಭಿನ್ನವಾಗಿವೆಯೇ ಹೊರತು ಸಾಮ್ಯತೆಯ ಅಂಶಗಳು ಕಂಡುಬಂದಿಲ್ಲ.

ಬರತವರು ಹೇಳುವ ಗಾಳಿಗಳು : ಮೂಡಣಗಾಳಿ (ಪೂ.ಪ.) ಬೇಸಗೆ ಕಾಲದ ಗಾಳಿ (ಪ.ಪೂ.,), ಬಡಗಣ ಗಾಳಿ (ಉ.ದ.), ಕಚ್ಚಾನ್‌ಗಾಳಿ(ದ.ಉ.), ಗುಲಮ್ಮ ಬಪಗಣಗಾಳಿ (ಉ.ಪು.ದ.ಪೂ) ಬಡಗಣ ಗಾಳಿ (ಉ.ಪೂ., ದ.ಪ.), ಮೂಡಣ ಗಾಳಿ (ದ.ಪೂ. ದ.ಪ.) ಬೇಸಗೆ ಜರಿ (ದ.ಪ.ದ.ಪೂ.) ಹೀಗೆ ವಲೈಯರು, ಕಡೈಯರು ಬೇರೆ ಬೇರೆ ಗಾಳಿಯನ್ನು ಹೇಳುತ್ತಾರೆ.

ನಿರೋಟವನ್ನು ವಿಭಾಗಿಸುವಂತೆ ಗಾಳಿಯನ್ನು ವಿಬಾಗಿಸುವುದರಲ್ಲಿ ಬೆಸ್ತರು ನಿಪುಣರಾಗಿದ್ದಾರೆ. ಈ ವಿಭಾಗಕ್ರಮಗಳಲ್ಲಿ ಸಾಮ್ಯತೆ ಮತ್ತು ಭಿನ್ನತೆಗಳನ್ನು ಕಾಣಬಹುದು.

ಸಾಮ್ಯತೆ : ವಲೈಯರು ಗುರುತಿಸಿರುವ ನಾಲ್ಕು ಬಗೆಯ ಗಾಳಿಗಳಲ್ಲಿ ಬಡಗಣ ಗಾಳಿಯೂ, ಮೂಡಣ ಗಾಳಿಯೂ ಬರತವರು ಹೇಳಿರುವ ಬಗೆಗಳಲ್ಲಿದೆ. ಬರತವರು ಬಡಗಣ ಗಾಳಿ, ಮೂಡಣಗಾಳಿಗಳ ಬಗ್ಗೆ ಹೇಳಿರುವ ಅಂಶಗಳನ್ನೇ ವಲೈಯರೂ ಹೇಳಿದ್ದಾರೆ.

ಬರತವರು ಹೇಳಿದ ಬಡಗಣಗಾಳಿಯನ್ನೂ, ಮೂಡಣಗಾಳಿಯನ್ನೂ, ಕಡೈಯರು ಹೇಳದಿ ಬಡಗಣಗಾಳಿಯೊಡನೆಯೂ, ಮೂಡಣಗಾಳಿಯೊಡನೆಯೂ ಹೋಲಿಸುವಾಗ ಗಾಳಿಯ ಹೆಸರಿನಲ್ಲೂ, ಅವು ಬೀಸುವ ದಿಕ್ಕುಗಳಲ್ಲಿಯೂ ಸಾಮ್ಯತೆ ಕಂಡುಬರುತ್ತದೆ. ಕಡೈಯರು ಹೇಳಿದ ಎಂಟು ಬಗೆಯ ಗಾಳಿಗಳಲ್ಲೇ ವಲೈಯರು ಹೇಳಿದ ನಾಲ್ಕು ಬಗೆಯ ಗಾಳಿಗಳು ಸೇರಿವೆ.

ಭಿನ್ನತೆ : ಬರತವರು ಕಚ್ಚಾನ್ ಗಾಳಿಯ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಬರತವರು ಹೇಳಿದ ಕಚ್ಚಾನ್ ಗಾಳಿಗೂ ಹೆಸರಲ್ಲಿ ಮಾತ್ರ ಸಾಮ್ಯತೆ ಕಾಣುತ್ತದೆಯೇ ಹೊರತು, ಅವು ಬೀಸುವ ದಿಕ್ಕುಗಳಲ್ಲಿ ಭಿನ್ನತೆ ಕಾಣುತ್ತದೆ. ಬರತವರು ಕಚ್ಚಾನ್ ಗಾಳಿ ದಕ್ಷಿಣದಿಂದ ಉತ್ತರದೆಡೆಗೆ ಬೀಸುತ್ತದೆಂದು ಹೇಳುತ್ತಿದ್ದಾರೆ. ಆದರೆ ವಲೈಯರು ಕಚ್ಚಾನ್ ಗಾಳಿ ಪಶ್ಚಿಮದಿಕ್ಕಿನಿಂದ ಪೂರ್ವದಿಕ್ಕಿನೆಡೆಗೆ ಬೀಸುತ್ತದೆಂದು ಹೇಳುತ್ತಾರೆ. ವಲೈಯರು ಸೋಳಗ ಗಾಳಿ ದಕ್ಷಿಣ ದಿಕ್ಕಿನಿಂದ ಉತ್ತರದೆಡೆಗೆ ಬೀಸುತ್ತದೆಂದು ಹೇಳುತ್ತಿದ್ದಾರೆ. ಆದರೆ ವಲೈಯರು ಕಚ್ಚಾನ್ ಗಾಳಿ ಪಶ್ಚಿಮದಿಕ್ಕಿನಿಂದ ಪೂರ್ವದಿಕ್ಕಿನೆಡೆಗೆ ಬೀಸುತ್ತದೆಂದು ಹೇಳುತ್ತಾರೆ. ವಲೈಯರು ಸಳಗ ಗಾಳಿ ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನೆಡೆಗ ಬೀಸುವುದೆಂದು ಹೇಳುತ್ತಾರೆ. ಆದರೆ ಬರತವರು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನೆಡೆಗೆ ಗಾಳಿ ಬೀಸಿದರೆ ಅದನ್ನು ಕಚ್ಚಾನ್ ಗಾಳಿ ಎಂದು ಗುರುತಿಸುತ್ತಿದ್ದಾರೆ. ಹಾಗಾಗಿ, ಈ ಅಭಿಪ್ರಾಯಗಳಲ್ಲಿ ಗಾಳಿಯ ಹಸೆರುಗಳು ಭಿನ್ನವಾಗುತ್ತದೆ. ಆದರೆ, ಅವು ಬೀಸುವ ದಿಕ್ಕುಗಳು ಏಕರೀತಿಯಲ್ಲಿವೆ.

ಬರತವರು ಹೇಳಿದ ಬಣಗಣಗಾಳಿ, ಗಲ್ಮ ಬಡಗಣಗಾಳಿ, ಮೂಡಣ ಜರಿ, ಬೇಸಿಗೆ ಜರಿ ಮುಂತಾದ ನಾಲ್ಕು ಬಗೆಯ ಗಾಳಿಗಳೂ ಕಡೈಯರು ಹೇಳಿರುವ ಬಡಗಣ, ಮೂಡಣ, ಸೋಳಗ, ಕಚ್ಚಾನ್ ಗಾಳಿ ಮುಂತಾದ ನಾಲ್ಕು ಬಗೆಯ ಗಾಳಿಗಳೂ ಹೆಸರಲ್ಲಿ ಭಿನ್ನವಾಗುತ್ತವೆ. ಆದರೆ, ಅವು ಬೀಸುವ ದಿಕ್ಕುಗಳು ಏಕ ರೀತಿಯಲ್ಲಿವೆ. ಈ ರೀತಿ ನೀರೋಟ, ಗಾಳಿ ಮುಂತಾದ ಪ್ರಾಚೀನ ಪದ್ಧತಿಗಳಲ್ಲಿ ಸಾಮ್ಯತೆ ಭಿನ್ನತೆಗಳು ಕಂಡುಬರುತ್ತವೆ.

– ಕೆ.ಆರ್.ಪಿ. ಅನುವಾದ ಎಂ.ಆರ್.

ತಮಿಳು ಬುಡಕಟ್ಟು ಜನರ ವಿವಾಹ ಪದ್ಧತಿ ಅರಣ್ಯ, ಗುಡುಡಗಾಡು ಒಂದು ರಾಷ್ಟ್ರದ ವಿಶಿಷ್ಟ ಸಂಪತ್ತು. ಇವುಗಳೊಂದಿಗೆ ಬದುಕನ್ನು ಕಟ್ಟಿಕೊಂಡಿರುವ ಹಲವಾರು ಆದಿವಾಸಿ ಸಮುದಾಯಗಳು ಇವೆ. ಭಾರತಾದ್ಯಂತ ವಿವಿಧ ಕುಲದ ಹೆಸರಿನಲ್ಲಿ ಇವು ಚದುರಿಹೋಗಿವೆ. ಇವರು ನಗರ ಸಂಸ್ಕೃತಿಯ ಬದುಕಿನ ರೀತಿ ನೀತಿಗಳಿಗಿಂತ ಭಿನ್ನವಾದ ಸಂಸ್ಕೃತಿಯ್ನು ಹೊಂದಿದವರಾಗಿದ್ದಾರೆ. ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೂ ಹಲವು ಅವಸ್ಥೆಗಳು ಇರುವಂತೆ ಆಚರಣೆಗಳು ರೂಢಿಯಲ್ಲಿವೆ. ಇವು ವಿವಿಧ ಸಮುದಾಯಗಳಲ್ಲಿ ವಿಭಿನ್ನ ಪ್ರಕಾರವಾಗಿ ಅಸ್ತಿತ್ವದಲ್ಲಿವೆ. ಜೀವನ ಕ್ರಮ, ಆಹಾರ ಪದ್ಧತಿ, ಜನನ, ಮದುವೆ, ಮರಣ ಈ ಎಲ್ಲದರಲ್ಲೂ ಆಚರಣೆ ವೈವಿಧ್ಯಪೂರ್ಣವಾಗಿದೆ.

ಇಂಥ ಬುಡಕಟ್ಟು ಜನಾಂಗಗಳಲ್ಲಿ ತಮಿಳುನಾಡಿನ ಸುತ್ತಮುತ್ತ ಕಂಡುಬರುವ ಪಳಿಯರರು, ತೋಡರು, ಕುನ್ನವರು ಪ್ರಮುಖರು, ಇವರಲ್ಲಿ ರೂಢಿಯಲ್ಲಿರುವ ವಿವಾಹಪದ್ಧತಿ – ಅದರೊಂದಿಗೆ ಸಾಗಿಬಂದಿರುವ ಆಚರಣೆಗಳು ಈ ಕೆಳಕಂಡಂತಿವೆ.

ಪಳಿಯರರು : ಇವರಲ್ಲಿ ಸರಳ ವಿವಾಹ ಪದ್ಧತಿ ರೂಢಿಯಲ್ಲಿದೆ. ಪುರುಷರು ಗಡ್ಡೆ, ಗೆಣಸು ಮತ್ತು ಕಾಡು ಪ್ರಾಣಿಗಳನ್ನು ಬೇಟೆಯಾಡಿ ತರಬೇಕು. ಪುರುಷಕರು ತಂದ ಈ ಪದಾರ್ಥಗಳಿಂದ ಹೆಂಗಸರು ಅಡುಗೆ ತಯಾರಿಸಬೇಕು. ಹೀಗೆ ತಯಾರಾದ ಅಡುಗೆಯನ್ನು ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರು ಮದುವೆಗೆ ಸಮ್ಮತಿಸಿ ಪರಸ್ಪರ ಎದುರುಬದುರು ಕುಳಿತ ಊಟ ಮಾಡಬೇಕು. ಆಗ ಆ ವಿವಾಹ ಅಧಿಕೃತವೆನಿಸುತ್ತದೆ.

ಕನ್ನವರು : ಆದಿವಾಸಿ ಸಮುದಾಯಗಳಲ್ಲಿ ಕನ್ನವರು ಅತೀ ಹೆಚ್ಚು ಪ್ರಮಾಣದಲ್ಲಿ ಕಾಣಸಿಗುತ್ತಾರೆ. ಇವರಲ್ಲಿ ಮದುವೆ ಮತ್ತು ಅದಕ್ಕು ಮುನ್ನ ನಡೆಯುವ ನಿಶ್ಚಿತಾರ್ಥ ಎರಡೂ ಸಮಾರಂಭ ಬಹಳ ವಿಶಿಷ್ಟವಾಗಿವೆ. ಇವರಲ್ಲಿಯೂ ಇಷ್ಟದೇವತಾ ಸ್ತುತಿ ಇದ್ದು ಮದುವೆ ವ್ಯವಸ್ಥಿತವಾಗಿ ಮುಕ್ತಾಯವಾಗಲೆಂದು ವಿನಾಯಕನನ್ನು ಆರಾಧಿಸಲಾಗುತ್ತದೆ. ಆ ಪ್ರಾರ್ಥನೆಯಲ್ಲಿ ಸರ್ವದೇವತೆಗಳಲ್ಲೂ ಶ್ರೇಷ್ಠನೆನಿಸಿದ ಗಣಪತಿಗೆ ಹೂವಿನ ಹಾರವನ್ನು ಹಾಕಿ ಚಂದನವನ್ನು ಕಡೆದು ಇದರಿಂದ ದೇವರಿಗೆ ವಿಭೂತಿ ಹಚ್ಚಿ ಪ್ರಾರ್ಥಿಸಲಾಗುತ್ತದೆ. ಈ ಪ್ರಾರ್ಥನೆಯೊದಿಗೆ ವಿವಾಹ ಸಮಾಪ್ತಿಯಾಗುತ್ತದೆ.

ತೋಡರು : ಇವರ ವಿವಾಹ ಪದ್ಧತಿ ಆಕರ್ಷಕವಾಗಿದೆ. ತೋಡರು ವಿವಾಹದ ದಿನ ಇಂಥದ್ದೇ ಆಗಿರಬೇಕೆಂದು ಬಯಸುವುದಿಲ್ಲ. ಅಮಾವಾಸ್ಯೆಯಂದು ಸಹ ಇವರಲ್ಲಿ ವಿವಾಹ ಕಾರ್ಯ ನಡೆಯುತ್ತದೆ. ವಿವಾಹದ ಸುದ್ದಿ ತಿಳಿಸಲು ಎಲ್ಲೆಡೆಗೂ ಇವರು ಜನರನ್ನು ಕಳುಹಿಸುವುದಿಲ್ಲ. ಬದಲಿಗೆ ಒಂದು ವಾದ್ಯವನ್ನು ಊದುತ್ತಾರೆ. ಇದು ಎಲ್ಲರಿಗೂ ವಿವಾಹದ ಸಂದೇಶವನ್ನು ಸಾರುತ್ತದೆ. ಆ ವಾದ್ಯದ ಆಧಾರದ ಮೇಲೆ ವಿವಾಹಕ್ಕೆ ಸಮುದಾಯದ ಎಲ್ಲಜನರು ಬಂದು ಸೇರುತ್ತಾರೆ.

ಮದುವೆ ಹಿಂದಿನ ದಿನಕಾಡಿನ ವಿಶಾಲ ಬಯಲಲ್ಲಿ ಇವರೆಲ್ಲರೂ ಸೇರಿ ಮದುವೆಗಾಗಿ ಪ್ರಾರ್ಥನೆ ನಡೆಸುತ್ತಾರೆ. ಮದುವೆ ಸಾಮಾನ್ಯವಾಗಿ ರಾತ್ರಿ ವೇಳೆ ನಡೆಯುತ್ತದೆ. ಹಲವು ಮರಗಳ ನಡುವಿನ ತಾಣವೇ ಮದುವೆಯ ಮಂಟಪವಾಗಿರುತ್ತದೆ.ಗಂಡು ಹೆಣ್ಣುಗಳ ಪ್ರತಿರೂಪವಾಗಿ ಎರಡು ಕಡ್ಡಿಗಳಿಗೆ ಕಪ್ಪುಬಟ್ಟೆ ಸುತ್ತಿ ಅದನ್ನು ಪೂಜಿಸುತ್ತಾರೆ. ಇತ್ತ ಹೆಣ್ಣು ಹೊಸ ಮಡಕೆಯಲ್ಲಿ ಅಡುಗೆ ತಯಾರಿಸಿ ಕಡ್ಡಿಗಳ ಮುಂದೆ ಇಡುತ್ತಾಳ. ಅನಂತರ ಆ ಕಡ್ಡಿಯನ್ನು ಸುಡಲಾಗುತ್ತದೆ. ಹುಡಗನೊಬ್ಬ ಬಂದು ಗಡಿಗೆಯಿಂದ ಸ್ವಲ್ಪ ನೀರನ್ನು ತೆಗೆದು ಕಡ್ಡಿಗಳ ಮೇಲೂ ಇನ್ನು ಸ್ವಲ್ಪವನ್ನು ತೋಡರ ಸಂಪತ್ತು ಎನಿಸಿರುವ ಎಣ್ಣೆಯ ಮೇಲೂ ಉಳಿದುದನ್ನು ಆ ಹೆಣ್ಣಿನ ಮೇಲೂ ಸುರಿಯುತ್ತಾನೆ. ಅನಂತರ ಹಬ್ಬದ ಆಚರಣೆ ಜರುಗುತ್ತದೆ. ನೆರೆದ ಸಮೂಹವೆಲ್ಲ ವಧುವರರ ಸಮೇತ ಪಾನೀಯ ಸ್ವೀಕರಿಸಿ ಕಾಡಿನ ನಡುವೆ ಇರುವ ಮಂಟಪದ ಬಳಿಗೆ ಬರುತ್ತಾರೆ. ಅಲ್ಲಿ ಮಾವನ ಒಪ್ಪಿಗೆ ಪಡೆದು ಹೆಣ್ಣಿಗೆ ತಾಳಿ ಕಟ್ಟಲಾಗುತ್ತದೆ. ತುಪ್ಪದ ಪಂಜನ್ನು ಮರಕ್ಕೆ ನೇತು ಹಾಕಿರುತ್ತಾರೆ. ಭೋಜನದೊಂದಿಗೆ ಮದುವೆ ಮುಕ್ತಾಯವಾಗುತ್ತದೆ. ವಿಶೇಷವೆಂದರೆ ಈ ಸಮುದಾಯದ ಜನರು ಮದುವೆಯ ದಿನ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಅನಂತರ ಮದುವೆ ನಡೆಯುವ ಕಡೆಗೆ ಬರುತ್ತಾರೆ.

ಮರುಮದುವೆ ಮತ್ತು ವಿವಾಹ ವಿಚ್ಛೇದನ: ಆದಿವಾಸಿ ಸಮುದಾಯಗಳಲ್ಲಿ ವೈವಾಹಿಕ ಪದ್ಧತಿ ರೂಢಿಯಲ್ಲಿರುವಂತೆ ವಿವಾಹ ವಿಚ್ಛೇದನದ ಸ್ವಾತಂತ್ರ್ಯವೂ ಈ ಜನರಿಗಿದೆ. ಮುಕ್ಕುಲುತ್ತಾರರಲ್ಲಿ (ಒಂದು ಬುಡಕಟ್ಟು)ವಿಚ್ಚೇದನ ಸಾಮಾನ್ಯ ಪ್ರಕ್ರಿಯೆ. ವಿಚ್ಛೇದನ ಪಡೆಯುವುದಕ್ಕೆ ಹೆಣ್ಣು ಮತ್ತು ಗಂಡಿಗೆ ಸ್ವಾತಂತ್ರ್ಯವಿದೆ. ವಿರಸದಿಂದ ಬೇಟ್‌ಟ ಗಂಡ ಹೆಂಡಿರನ್ನು ಕುರಿತು ವಿಚಾರಣೆ ನಡೆಯುತ್ತದೆ. ಈ ಪಂಚಾಯಿತಿ ಅದ್ ಸಮುದಾಯದ ಹಿರಿಯರನ್ನು ಒಳಗೊಂಡಿರುತ್ತದೆ. ಇವರಲ್ಲಿ ತೀರ್ಪು ನ್ಯಾಯ ಸಮ್ಮತವಾಗಿರುವುದರ ಜೊತೆಗೆ ಮಾನವೀಯತೆಯಿಂದಲೂ ಕೂಡಿರುತ್ತದೆ. ಹೆಣ್ಣು ಪರಪುರಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೂ, ಆ ಸಂಬಂಧದಿಂದ ಆಕೆಗೆ ಮಗು ಜನಿಸಿದರೂ ಅವಳನ್ನು ಕುಲದಿಂದ ಬಹಿಷ್ಕಾರ ಹಾಕುವುದಿಲ್ಲ.

ವಿಚ್ಛೇದನ ನಿರೀಕ್ಷಿಸುವ ಗಂಡು ಹೆಣ್ಣಿಗೆ ಚಿಂತಿಸಲು ನಿರ್ದಿಷ್ಟ ಕಾಲಾವಧಿಯನ್ನ ನೀಡಲಾಗುತ್ತದೆ. ಆದರೂ ವಿಚ್ಛೇದನ ಬಯಸಿದರೆ ಪಂಚಾಯಿತಿ ವಿಚ್ಛೇದನ ನೀಡುತ್ತದೆ. ವಿವಾಹ ವಿಚ್ಛೇದನ ನೀಡಿದ ಅನಂತರ ಹೆಣ್ಣು ಗಂಡು ಅಕ್ಕಪಕ್ಕದಲ್ಲೇ ವಾಸವಾಗಿದ್ದರೂ ಅವರ ನಡುವೆ ಯಾವುದೇ ರೀತಿಯ ಕಲಹ ಇರುವುದಿಲ್ಲ. ವಿಚ್ಛೇದನ ಉಂಟಾದಾಗ ಮದುವೆಯ ವೇಳೆ ಗಂಡು ಹೆಣ್ಣಿಗೆ ನೀಡಿದ್ದ ತೆರ (ವಧುದಕ್ಷಿಣೆ) ಗಂಡನಿಗೆ ಹಿಂತಿರುಗಿಸಬೇಕಾಗುತ್ತದೆ. ಹೀಗೆ ವಿಚ್ಛೇದನ ಪಡೆದ ಸ್ತ್ರೀ ಪುರುಷರು ಮರು ವಿವಾಹಕ್ಕೆ ಅವಕಾಶ ಪಡೆದಿರುತ್ತಾರೆ. ಅದರಲ್ಲೂ ಪುರುಷನಿಗೆ ಬಹುಪತ್ನಿತ್ವ ಸ್ವಾತಂತ್ರ್ಯವಿದೆ. ಕಾರಣ ಇವರ ಮೂಲ ವೃತ್ತಿ ವ್ಯವಸಾಯ. ವ್ಯವಸಾಯಕ್ಕೆ ಹೆಚ್ಚಿನ ಜನರ ಅಗತ್ಯ ಇರುವುದರಿಂದ ಈ ಪದ್ಧತಿ ರೂಢಿಯಲ್ಲಿದೆ. ಕೆಲವು ವೇಳೆ ಪುರುಷನಿಗೆ ಕನ್ಯೆಯರು ಮರುಮದುವೆಗೆ ಸಿಗದಿದ್ದರೆ ಮಧ್ಯ ವಯಸ್ಸಿನ ವಿಧವೆಯರನ್ನುಕೂಡ ವಿವಾಹವಾಗುತ್ತಾರೆ. ಈ ರೀತಿಯಲ್ಲಿ ಆದಿವಾಸಿ ಸಮುದಾಯಗಳಲ್ಲಿ ವಿವಾಹ, ವಿಧವಾ ವಿವಾಹ ಮತ್ತು ವಿಚ್ಛೆದನ ಪದ್ಧತಿಗಳು ರೂಢಿಯಲ್ಲಿವೆ.

– ಪಿ.ಎಂ.

ತರಿಗೊಂಡ ಸ್ಥಳಮಾಹಾತ್ಮ್ಯಂ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ತರಿಗೊಂಡ ಎಂಬ ಊರಿನಲ್ಲಿ ನರಸಿಂಹಸ್ವಾಮಿ ಮಜ್ಜಿಗೆಯ ಮಡಕೆಯಲ್ಲಿ ಹುಟ್ಟಿದನೆಂಬ ಐತಿಹ್ಯವಿದೆ (ತರಿಗುಂಡ ಎಂದರೆ ಮಜ್ಜಿಗೆಯ ಮಡಕೆ). ಕೊಂಡ ಎಂದರೆ ಬೆಟ್ಟ ಎಂದರ್ಥ. ತರಿಗೊಂಡ ಎಂಬುದಕ್ಕೆ ಕಡಿಯಲು ಬಳಸಿದ ಬೆಟ್ಟ ಎಂದು ಕೂಡ ಅರ್ಥ. ಐತಿಹ್ಯದ ಪ್ರಕಾರ ರಾಮಾನಾಯುಡು ಎಂಬ ವ್ಯಕ್ತಿ ಪ್ರತಿದಿನ ಹಸುಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ. ಒಮ್ಮೆ ಕಾಡಿನಲ್ಲಿ ಮಳೆ ಬಂದು ರಾಮಾನಾಯ್ಡು ಹಿಂದಿರುಗಲಾಗದೆ ಪಕ್ಕದ ಊರಿನಲ್ಲಿ ರಾತ್ರಿಯನ್ನು ಕಳೆದ. ಆ ರಾತ್ರಿ ಆ ಊರಿನ ಒಬ್ಬ ವ್ಯಕ್ತಿಯಿಂದ ಮಡಕೆಯನ್ನು ತೆಗೆದುಕೊಂಡು ಹಾಲು ಹೆಪ್ಪು ಹಾಕಿದ. ಬೆಳಗ್ಗೆ ಮಜ್ಜಿಗೆ ಮಾಡಲು ಕಡೆಯುತ್ತಿರಲು ಅಡ್ಡಿಯಾದಂತಾಯ್ತು. ನೋಡಿದರೆ ಒಂದು ಕಲ್ಲಿತ್ತು. ಅದನ್ನು ತೆಗೆದು ಹಾಕಿ ಮತ್ತೆ ಕಡೆಯಲು ಆರಂಭಿಸಿದಾಗ ಇನ್ನೊಂದು ಕಲ್ಲು ಸಿಕ್ಕಿತು. ಮರುದಿನ ರಾತ್ರಿ ಕೂಡ ರಾಮಾನಾಯಡು ಅಲ್ಲೇ ಉಳಿಯಬೇಕಾಯಿತು. ಆ ರಾತ್ರಿ ನರಸಿಂಹಸ್ವಾಮಿ ಅವ ಕನಸಿನಲ್ಲಿ ಕಾಣಿಸಿಕೊಂಡು ಮಜ್ಜಿಗೆಯಲ್ಲಿದ್ದ ಕಲ್ಲು ತಾನೇ ಎಂದು ಹೇಳಿ ತನಗೆ ದೇವಸ್ಥಾನವನ್ನು ಕಟ್ಟಿಸುವಂತೆ ಹೇಳಿದನಂತೆ.

ನರಸಿಂಹಸ್ವಾಮಿಯ ಗುಡಿ ಪೂರ್ತಿಯಾದ ಮೇಲೆ ದುರ್ವಾಸ ಮಹಾಮುನಿ ಅಲ್ಲಿಗೆ ಬಂದು ಒಂದು ಪೀಠವನ್ನು ಕೊಟ್ಟು, ತಪ್ಪು ಮಾಡಿದವರು ಅದರ ಸುತ್ತ ಮೂರು ಸಲ ಸುತ್ತಿ ಪೀಠದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದರೆ ತಪ್ಪುಮಾಡಿದವರು ಕೂಡಲೇ ರಕ್ತ ಕಕ್ಕಿ ಸಾಯುತ್ತಾರೆಂದು ಶಾಪಕೊಟ್ಟರಂತೆ. ಈಗಲೂ ತರಿಗೊಂಡ ಗುಡಿಯಲ್ಲಿ ಪ್ರಮಾಣ ಮಾಡಿಸುವ ಸಂಪ್ರದಾಯವಿದೆ. ಇಲ್ಲಿ ಪ್ರಮಾಣ ಮಾಡಿಸಲು ದೂರ ಪ್ರದೇಶಗಳಿಂದಲೂ ಜನ ಬರುತ್ತಾರೆ. ತಪ್ಪು ಮಾಡಿದವರು ಪ್ರಮಾಣ ಮಾಡುವ ಮೊದಲೇ ತಮ್ಮ ತಪ್ಪನ್ನು ಒಪ್ಪಿಕೊಂಡು ಬಿಡುತ್ತಾರೆ.

ತರಿಗೊಂಡ ವೆಂಕಮಾಂಬ ಎಂಬ ಕವಯಿತ್ತಿರಯ ಜನ್ಮಸ್ಥಳ. ಆಕೆಗೆ ಎಂಟು ವರ್ಷಕ್ಕೆ ಬಲಾತ್ಕಾರದಿಂದ ಮದುವೆ ಮಾಡಿದರು. ಆಕೆಯ ಗಂಡ ಆಕೆಯನ್ನು ಮುಟ್ಟಿದ ಕೂಡಲೇ ತಲೆ ಸಿಡಿದು ಸತ್ತುಹೋದ. ಅವರ ಆಚಾರದಂತೆ ಗಂಡಸತ್ತರೆ ಹೆಂಡತಿ ತಲೆ ಬೋಳಿಸಿಕೊಳ್ಳಬೇಕು. ಆದರೆ ವೆಂಕಮಾಂಬ ವೆಂಕಟೇಶ್ವರನೇ ನನ್ನ ಗಂಡ ಎಂದು ಹೇಳಿ ಶಂಕರಾಚಾರ್ಯರ ಮಾತನ್ನು ಕೇಳದೆ, ನಮಸ್ಕಾರ ಮಾಡದೆ ಊರಿನ ಜನರ ಕೋಪಕ್ಕೆ ಗುರಿಯಾದಳು. ಊರಿನ ಎಲ್ಲರು ಶಂಕರಾಚಾರ್ಯರ ಪಾದಕ್ಕೆ ನಮಸ್ಕರಿಸಬೇಕೆಂದು ಬಲಾತ್ಕಾರ ಮಾಡಿದಾಗ ಆಕೆ ಆಚಾರ್ಯರು ಆಸನದಿಂದ ಇಳಿಯಬೇಕೆಂದು ಹೇಳಿ ಆ ಆಸನಕ್ಕೆ ನಮಸ್ಕರಿಸಿದಳು. ಆಗ ಅದು ಭಗ್ಗೆಂದು ಉರಿದು ಬೂದಿಯಾಯಿತು. ವೆಂಕಮಾಂಬ ತೆಲುಗಿನ ಮೊದಲ ಕವಯಿತ್ರಿ ಎಂದು ಹೆಸರುವಾಸಿಯಾಗಿದ್ದಾಳೆ. ಈಗಲೂ ವೆಂಕಟೇಶ್ವರನಿಗೆ ರಾತ್ರಿ ಬಾಗಿಲು ಮುಚ್ಚುವ ಮೊದಲು ವೆಂಕಮಾಂಬಾಳ ಹೆಸರಿನಲ್ಲಿ ಮುತ್ತಿನ ಆರತಿ ಎತ್ತುತ್ತಾರೆ.

– ಎಂ.ಆರ್.ಎನ್. ಅನುವಾದ ಎಂ.ಎಂ.ಡಿ.

ತಾಲಪ್ಪೊಲಿ ಕೇರಳದುದ್ದಕ್ಕೂ ನಡೆಸುವ ಧಾರ್ಮಿಕ ಆಚರಣಾತ್ಮಕ ಕಾರ್ಯಕ್ರಮವೇ ‘ತಾಲಪ್ಪೊಲಿ’, ಸಾಮಾನ್ಯವಾಗಿ ಭದ್ರಕಾಳಿ ದೇವಾಲಯಗಳಲ್ಲಿ ಈ ಆಚರಣೆಯು ನಡೆಯುತ್ತದೆ. ಭದ್ರಕಾಳಿಯ ಸಂತುಷ್ಟಿಗಾಗಿ ಮೊದಲ ಬಾರಿಗೆ ‘ತಾಲಪ್ಪೊಲಿ’ ನಡೆಯಿತೆಂದು ಜನರು ನಂಬಿದ್ದಾರೆ. ಕಾಳಿಯು ದಾರಿಕಾಸುರನೆಂಬ ರಾಕ್ಷಸನನ್ನು ಸಂಹರಿಸಿ, ಸಂಹಾರರೂಪಿಣಿಯಾಗಿ ಕೈಲಾಸಕ್ಕೆ ತೆರಳುತ್ತಾಳೆ. ಶಿವ ಹಾಗೂ ದೇವತೆಗಳು ಭದ್ರಕಾಳಿಯ ಸಿಟ್ಟನ್ನು ಶಮನಗೊಳಿಸಲು ಬಹುಬಗೆಯಲ್ಲಿ ಪ್ರಯತ್ನಿಸುತ್ತಾರೆ. ಹೀಗೆ ಕಾಳಿಯ ಕೋಪವನ್ನು ಶಮನಗೊಳಿಸುವುದಕ್ಕಾಗಿ ಕೊನೆಯ ಊಪಾಯವೆಂಬಂತೆ ಕನ್ಯೆಯರಿಂದ ಆರತಿಯನ್ನು ಎತ್ತಿಸಿದರು. ಹರಿವಾಣದಲ್ಲಿ ಅಕ್ಕಿ, ಹಿಂಗಾರ, ಒಡೆದ ತೆಂಗಿನಕಾಯಿ ಇಟ್ಟು ದೀಪ ಬೆಳಗಿಸಿ, ‘ತಾಲಪ್ಪೊಲಿ’ ಏರ್ಪಡಿಸಿದಾಗ ಕಾಳಿ ಶಾಂತವಾದಳೆಂದು ನಂಬಿಕೆ.

ದೇವಾಲಯಗಳಲ್ಲಿ ಇಂದಿಗೂ ಈ ಆಚರಣೆಯನ್ನು ಬಹಳ ಭಕ್ತಿಯಿಂದ ನಡೆಸುತ್ತಾರೆ. ‘ತಾಲಪ್ಪೊಲಿ’ ನಡೆಸುವ ಕನ್ಯೆಯರು ಮಾಂಸಾಹಾರಗಳನ್ನು ತ್ಯಜಿಸಿ, ವ್ರತಶುದ್ಧಿಯಿಂದ ಹರಿವಾಣದಲ್ಲಿ ದೀಪ ಬೆಳಗಿಸಿ, ದೇವಾಲಯಕ್ಕೆ ಪ್ರದಕ್ಷಿಣೆ ಬರುತ್ತಾರೆ. ಅನಂತರ ದೇವಾಲಯದ ದೇವಿ ವಿಗ್ರಹದ ಮುಂಭಾಗದಲ್ಲಿ ಹರಿವಾಣದಲ್ಲಿರುವ ಅಕ್ಕಿ ಮೊದಲಾದ ವಸ್ತುಗಳನ್ನು ಸಮರ್ಪಿಸುತ್ತಾರೆ.

ಭದ್ರಕಾಳಿ ದೇವಾಲಯಗಳ ವಾರ್ಷಿಕ ಜಾತ್ರೆ, ವಿಶೇಷ ಆಚರಣೆಗಳ ಸಂದರ್ಭಗಳಲ್ಲಿ ತಾಲಪ್ಪೊಲಿ ನಡೆಯುವುದು. ದೇವಸ್ಥಾನಗಳಲ್ಲಿ ಸೇವೆಯ ರೂಪದಲ್ಲಿಯೂ ಈ ಆಚರಣೆ ನಡೆಯುತ್ತದೆ. ಹುಡುಗಿಯರು ತಮ್ಮ ಮದುವೆ ನೆರವೇರುವುದಕ್ಕಾಗಿ ‘ತಾಲಪ್ಪೊಲಿ’ ಸೇವೆ ಮಾಡುತ್ತಾರೆ. ಹೆಂಗಸರೂ ಇಷ್ಟಸಿದ್ಧಿಗಾಗಿ ಈ ಆಚರಣೆಯನ್ನು ಮಾಡುತ್ತಾರೆ. ಉತ್ತರ ಕೇರಳದಲ್ಲಿ ತರವಾಡು ದೇವಸ್ಥಾನಗಳಲ್ಲಿ ಕೂಡಾ ತಾಲಪ್ಪೊಲಿ ನಡೆಯುತ್ತದೆ. ಕೆಲವು ಕಡೆಗಳಲ್ಲಿ ಅಯ್ಯಪ್ಪನ್ ಪಾಟು ಸಂಬಂಧವಾಗಿ ತಾಲಪ್ಪೊಲಿ ನಡೆಯುತ್ತದೆ.

ತಾಲಪ್ಪೊಲಿ ಆಚರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳು ಕಂಡುಬರುತ್ತವೆ. ತೆಂಗಿನ ಕಡಿಯಲ್ಲಿ ದೀಪ ಬೆಳಗಿಸುವ ಬದಲು ಕಾಲುದೀಪ ಇರಿಸುತ್ತಾರೆ. ಪೂರವೇಲ, ಭರಣಿವೇಲ ಸಂದರ್ಭಗಳಲ್ಲಿಯೂ ತಾಲಪ್ಪೊಲಿ ಕಂಡುಬರುತ್ತದೆ. ತಾಲಪ್ಪೊಲಿಯಲ್ಲಿ ಜಾತಿಭೇದಗಳಿಲ್ಲದೆ ಎಲ್ಲಕನ್ಯೆಯರು ಭಾಗವಹಿಸುತ್ತಾರೆ. ವರ್ತಮಾನ ಕಾಲದಲ್ಲಿ ಧಾರ್ಮಿಕ ಆಚರಣೆಯ ಹೊರತಾಗಿ ಸಾಂಸ್ಕೃತಿಕ ಸಮಾರಂಭಗಳಲ್ಲಿ ಕೂಡ ‘ತಾಲಪ್ಪೊಲಿ’ ನಡೆಯುತ್ತದೆ. ಸಾಂಸ್ಕೃತಿಕ ಸಮಾರಂಭಗಳಿಗೆ ಮುಖ್ಯ ಅತಿಥಿಗಳನ್ನು ಸ್ವಾಗತಿಸುವುದಕ್ಕಾಗಿ ಕೇರಳದಲ್ಲಿ ‘ತಾಲಪ್ಪೊಲಿ’ ನಡೆಸುವರು.

ತಾಲಪ್ಪೊಲಿಯ ಕುರಿತು ಸಮಗ್ರವಾದ ಅಧ್ಯಯನ ನಡೆದಿಲ್ಲ. ಕೇರಳ ಜಾನಪದ ಅಕಾಡೆಮಿ ಪ್ರಕಟಿಸಿದ ‘ಕಾಳಿ ಸಂಕಲ್ಪಂ ಕೇರಳ ಪರಿಸರತ್ತಿಲ್ಲ’ ಎಂಬ ಕೃತಿಯಲ್ಲಿ, ಫ್ಲೋಕ್ಲೋರ್ ನಿಘಂಟುವಿನಲ್ಲಿ ಈ ಆರಣೆಯ ವಿವರಗಳಿವೆ.

– ಸಿ.ಕೆ.ಜಿ. ಅನುವಾದ ಎನ್.ಎಸ್.

ತಾಲಾಟ್ಟು ಪಾಟ್ಟು : ತಮಿಳಿನ ಜೋಗುಳ ಹಾಡು. ಇದು ಜನಪದ ಸಾಹಿತ್ಯದಲ್ಲಿ ಪ್ರಧಾನವಾಗಿ ಗುರುತಿಸತಕ್ಕಂತಹ ಪ್ರಸಿದ್ಧಿ ಪಡೆದಿದ್ದು ಹೆಣ್ಣಿಗೆ ಸೀಮಿತವಾದ ಹಾಡಿನ ಒಂದು ಮಟ್ಟು. ಮಕ್ಕಳನ್ನು ಅತಿಯಾಗಿ ಪ್ರೀತಿಸುವ, ಅವರ ಏಳ್ಗೆಯನ್ನು ಬಯಸುವ ತಾಯಿಯ ಕಲ್ಪನೆಯೇ ಹಾಡಿನ ರೂಪ ಪಡೆದಿದೆ. ಅದನ್ನೇ ಜೋಗುಳದ ಹಾಡು ಎನ್ನಲಾಗುವುದು. ಜೋಗುಳ ಹಾಡು ಪ್ರಪಂಚಾದ್ಯಂತ ಒಂದೇ ಬಗೆಯಾಗಿ ಕಾಣಬರುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಜನಪದ ಸಾಹಿತ್ಯ ವಿದ್ವಾಂಸರು ಇದನ್ನು ಹಲವು ಬಗೆಯಲ್ಲಿ ತಾಲಾಟ್ಟು, ತಾರಾಟ್ಟು, ತೋರಾಟ್ಟು, ಓರಾಟ್ಟು ಎಂದು ಕರೆದಿದ್ದಾರೆ. ಇದು ಹೆಂಗಸರಿಗೆ ಮೀಸಲಾಗಿರುವ ಸಾಹಿತ್ಯ ಪ್ರಕಾರವಾಗಿದೆ. ತಾಲ್ + ಅಟ್ಟು = ತಾಲಾಟ್ಟು, ನಾಲಗೆಯನ್ನು ಒಯ್ಯಾರದಿಂದ ಆಡಿಸಿ ಹಾಡುವುದು ಎಂಬ ವಿವರಣಎ ಲಿಖಿತ ಸಾಹಿತ್ಯದ ಜೋಗುಳಕ್ಕೆ ಸರಿಯಾದ ವ್ಯಾಖ್ಯಾನ. ಮೌಖಿಕ ಪರಂಪರೆಯ ಜನಪದರ ಜೋಗುಳ ಹಾಡಿನಲ್ಲಿ ‘ಆರಾರೋ ಆರಾರೋ ರಾರಿ ರಾರಿ ರಾರಾರೋ’; ‘ರಾರಿಕ್ಕೋ ರಾರಿ ಮೆತ್ತೈ ರಾಮರುಕ್ಕೋ ಪಂಜುಮೆತ್ತೈ’ ಮೊದಲಾದ ಪಲ್ಲವಿಗಳಿಂದ ಹಲವು ಬಗೆಯಲ್ಲಿ ನಾಲಗೆ ಒಯ್ಯಾರಕ್ಕೆ ಒಳಗಾಗುತ್ತದೆ. ಮಗುವನ್ನು ಬಣ್ಣಿಸುವಾಗ ‘ಓ’ ಕಾರ ಪ್ರಶ್ನಾರ್ಥಕ ಪದವಾಗಿಯೂ ಕೆಲವು ವೇಳೆ ಆಶ್ಚರ್ಯದ ಪದವಾಗಿಯೂ ಬಳಕೆಯಾಗುತ್ತದೆ. ‘ಏ’ಕಾರ ನಾಚಿಕೆಯ ರೀತಿಯಲ್ಲಿ ಬಳಕೆಯಾಗುತ್ತದೆ. ಎರಡೆರಡು ಸಾಲುಗಳಿಗೊಮ್ಮೆ ‘ಕಣ್ಣೆ, ಎನ್ ಕಣ್ಣೆ, ಎನ್ನಮ್ಮ ಎನ್ನಯ್ಯ’ (ಕಂದ, ನನ್ನ ಕಂದ, ಎನ್ನವ್ವ, ಎನ್ನಪ್ಪ) ಈ ಮೊದಲಾದ ಪದಗಳು ಹಾಡಿನ ಮಧ್ಯೆ ಮಧ್ಯೆ ಪ್ರಯೋಗಗೊಳುತ್ತವೆ.

ಸಾಮಾನ್ಯವಾಗಿ ಈ ಜೋಗುಳ ಹಾಡುಗಳ ವಸ್ತು ಮಕ್ಕಳನ್ನು ಕುರಿತಾದದ್ದು. ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ್ದು, ವೃತ್ತಿ ಆಧಾರಿತ ಪದಗಳು ಮತ್ತು ಕಾಲವನ್ನು ಕುರಿತದ್ದು ಎಂಬಂತೆ ವಿಂಗಡಿಸಬಹುದಾಗಿದೆ. ಮಕ್ಕಳ ವರ್ಣನೆಯಲ್ಲಿ ಮಗುವಿನ ಅಂದ – ಚೆಂದ, ಕಿವಿ ಚುಚ್ಚುವ ಶಾಸ್ತ್ರ ಜೋಗುಳ ಮೊದಲಾದವುಗಳ ಜೊತೆಗೆ ಆಟ ಪಾಠ, ಬಳೆಜೋಡಿಸುವುದು, ನೀರಾಟವನ್ನು ಕುರಿತ ಪದಗಳನ್ನು ಕೇಳಬಹುದು. ಇಲ್ಲಿ ಮಗುವಿನ ವರ್ಣನೆ ಕಿವಿಚುಚ್ಚುವು ಶಾಸ್ತ್ರ ಎಲ್ಲಾ ವರ್ಗದ ಜನರ ಹಾಡುಗಳಲ್ಲೂ ತಪ್ಪದೇ ಬರುತ್ತವೆ. ಉಡುಗೆ – ತೊಡುಗೆ , ವಸ್ತ್ರ ವಿನ್ಯಾಸ, ಮಗುವಿನ ಶೃಂಗಾರ ಹಾಗೂ ತವರು ಮನೆಯಿಂದ ಬರುವ ಈ ಸಂಪತ್ತು ಅದರಿಂದ ಉಂಟಾಗುವ ಸಂತೋಷದಿಂದ ಮತ್ತು ಬಹಳ ಹಿಂದಿನಿಂದಲೂ ಉಳಿದು ಬಂದಿರುವ ಈ ನಂಬಿಕೆಯಿಂದಾಗಿ ಈ ಬಗೆಯ ಜೋಗುಳ ಹಾಡುಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ.

ಮಗುವಿನ ಸೌಂದರ್ಯ, ಅಳುವಿಕೆ, ವಿದ್ಯಾಭ್ಯಾಸಗಳನನು ಕುರಿತಾದ ಹಾಡುಗಳು ಅಷ್ಟೇ ಆಕರ್ಷಿಸುತ್ತವೆ. ಹೊನ್ನಿನ ಹೊತ್ತಿಗೆ, ಬೆಳ್ಳಿಯ ಲೇಖನಿ ಕಂಚಿನಿಂದ ಮಾಡಿದ ಶಾಯಿಯಡಬ್ಬಿ ಎಲ್ಲವನ್ನು ಸೋದರ ಮಾವ ಕೊಡುತ್ತಾನೆ. ಹಚ್ಚ ಹಸಿರಿನ ಬೆಟ್ಟದ ಶಾಲೆಯಲ್ಲಿ ಓದಲು ಹುಟ್ಟಿದ್ದೀಯೋ? ಏಳು ಬೆಟ್ಟದ ಶಾಲೆಯಲ್ಲಿ ಬರೆಯಲು ಹುಟ್ಟಿದ್ದಿಯೋ? ಎಂದು ಹರಸುವ ತಾಯಿಯರ ಹಾಡುಗಳು ಆಕರ್ಷಕವಾಗಿರುತ್ತದೆ.

ಮೊದಲ ಭಾಗದಲ್ಲಿ ಮಗುವನ್ನು ತಾಯಿಯು ಪ್ರಶ್ನಿಸುವಂತೆ ಮಾಡುವ ತಂತ್ರ ವಿಶಿಷ್ಟವಾದುದು. ಅದರಲ್ಲಿ ಮಗುವನ್ನು ಅಜ್ಜಿ, ಅಜ್ಜ, ಮಾವ, ಅತ್ತೆ ಮೊದಲಾದವರು ಹೊಡೆದರೋ ಎಂದು ಕೇಳಿ ಮತ್ತೆ ಅವರು ಹೊಡೆದ ಬಗೆಯನ್ನು ಮಾವನು ಮಲ್ಲಿಗೆ ಹೂವಿನಿಂದ ಹೊಡೆದನೋ ಎಂಬಲ್ಲಿ ತಾಯಿಯ ಪ್ರೀತಿ ಹಾಡಿನ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಅಲ್ಲದೇ ಇವು ಅವಿಭಕ್ತ ಕುಟುಂಬಗಳ ಸಾಮರಸ್ಯದ ಬತುಕನ್ನು ಸಾರುತ್ತದೆ.

ಎರಡನೆಯ ಭಾಗದಲ್ಲಿ ದೇವರು, ನಂಬಿಕೆಗಳು, ಅಂತರಂಗ ಬಹಿರಂಗ ಜೀವನದ ನಡೆ, ಪೌರಾಣಿಕ ವಿಚಾರಗಳು, ಧರ್ಮ ಮೊದಲಾದವುಗಳನ್ನು ಕುರಿತಾದ ಹಾಡುಗಳನ್ನು ಕಾಣಬಹುದು. ಇದರಲ್ಲಿ ತಾವು ನಂಬಿದ ಧರ್ಮಷ ದೇವತೆಗಳನ್ನು ಆ ಬಗ್ಗೆ ನಂಬಿಕೆಯನ್ನು ಮಗುವಿಗೆ ಜೋಗುಳ ಹಾಡಿನ ಮೂಲಕ ಬೋಧಿಸುವುದು ಇದರ ಮತ್ತೊಂದು ಮುಖ್ಯ ಧ್ಯೇಯವಾಗಿದೆ.

ಸೋದರ ಮಾವನನ್ನು ಕುರಿತು ಹಾಡುವುದು ಹೆಣ್ಣುಗಳಿಗೆ ತುಂಬ ಇಷ್ಟವಾದ ವಿಚಾರ. ಅವನನ್ನು ಅಮ್ಮಾನ್, ಮಾಮನ್, ತಾಯಿ ಮಾಮನ್, ಅಮ್ಮಾನ್ ಮಾರ್, ಅಮ್ಮಾಂಗ್ (ಸೋದರ ಮಾವ, ಮಾವ, ಮಾಮ) ಎಂದು ಹಲವು ರೀತಿಯಲ್ಲಿ ಕರೆಯುತ್ತಾರೆ. ತಾಯಿ ತನ್ನ ಮಗುವಿಗೆ ಜೋಗುಳ ಹಾಡುವಾಗ, ಗಂಡನ ಬಗ್ಗೆಯಾಗಲಿ, ಪೋಷಕರ ಬಗ್ಗೆಯಾಗಲಿ ಬಣ್ಣಿಸದೆ ಒಡಹುಟ್ಟಿದವರನ್ನು ಹಾಡಿ ಹೊಗಳುತ್ತಾಳೆ.

ಉದಾಹರಣೆಗೆ

ಎನ್ನರಸ ಕಿವಿಚುಚ್ಚಲು – ಕಂದ
ಯಾವ ಸಿರಿಸಂಪತ್ತು ಬೇಕೇನು
ಮಣ್ಣಿಲ್ಲದ ಶುದ್ಧ ನೀರು – ಕಂದ
ಕಪ್ಪು ಕಲೆ ಇಲ್ಲದ ಬೆಂತಕ್ಕಿ
ಎಳ್ಳು ಎರಡು ಹಡಗು – ಕಂದ
ಎಳನೀರು ಮುನ್ನೂರು
ಅಡಿಕೆ ಹತ್ತು ಹಡಗು – ಕಂದ
ಬೆಂತಕ್ಕಿ ಮೂರು ಹಡಗು
ಕಿವಿಚುಚ್ಚಲು ಬರುವರು – ಕಂದ
ಕರುಣನೆ ನಿನ್ನ ಮಾವ
ಸೀರೆಕೊಂಡು ತರುತಾರೆ – ಕಂದ
ಸಹಾಯಕನೇ ನಿನ್ನ ಮಾವ
ರೇಷ್ಮೆ ಕೊಂಡು ತರುತಾರೆ – ಕಂದ
ಪಾಂಡ್ಯರಾಜನೆ ನಿನ್ಮಾವ
ರೇಷ್ಮೆಯಲ್ಲಿ ಜೋಗುಳ ಕಟ್ಟಿ
ಚಿನ್ನವೆತ್ತುವನು ಕಿವಿಚುಚ್ಚಲು – ಕಂದ

ತಾಲಾಟ್ಟು ಹಾಡುಗಳಲ್ಲಿ ಕೃಷಿ, ಬೇಟೆ, ಹಸು ಮೇಯಿಸುವುದು ಮೊದಲಾದವನ್ನು ಕುರಿತ ಹಾಡುಗಳನ್ನು ಕಾಣಬಹುದಾಗಿದೆ.

– ಎಸ್.ವಿ. ಅನುವಾದ ಪಿ.ಎಂ.