ತುಳು ಜನಪದ ನಂಬಿಕೆಗಳು ತುಳುನಾಡಿಗೆ ಬಹಳ ಸುದೀರ್ಘವಾದ ಒಂದು ಚರಿತ್ರೆಯಿದೆ. ಹಾಗೆಯೇ ಬಹಳ ಸಂಕೀರ್ಣವಾದ ಒಂದು ವರ್ತಮಾನವೂ ಇದೆ. ಇವೆರಡರ ಹದವಾದ ಮಿಶ್ರಣದಲ್ಲಿ ತುಳುನಾಡಿನ ಜನಪದ ನಂಬಿಕೆಗಳು ರೂಪುಗೊಂಡಿವೆ. ಅದರ ಸುದೀರ್ಘ ಚರಿತ್ರೆಯಲ್ಲಿ ಇತಿಹಾಸಪೂರ್ವ ಕಾಲದ ಕೆಲವು ಅಂಶಗಳೂ ಅನಂತರಕಾಲದ ಕಬ್ಬಿಣ ಯುಗದ ಹಲವು ಅಂಶಗಳೂ ಸೇರಿಕೊಂಡಿವೆ. ಕಾರ್ಕಳ ತಾಲೂಕಿನ ಪರ್ಪಲೆ, ದರೆಗುಡ್ಡೆ, ಕಣಜಾರು, ರೆಂಜಾಳ, ಮೂಡಬಿದಿರೆ ಸಮೀಪದ ಕೊಣಾಜೆ, ಉಪ್ಪಿನಂಗಡಿ ಬಳಿಯ ನೇತ್ರಾವತಿ ದಡ, ಬಂಟ್ವಾಳದ ಮಾಣಿ, ಸುಳ್ಯ ತಾಲೂಕಿನ ಕಾಂತಮಂಗಲ, ಕನಕಮಜಲು ಮೊದಲಾದ ಸ್ಥಳದಲ್ಲಿ ದೊರಕಿದ ಅವಶೇಷಗಳು ಶಿಲಾಯುಗ ಸಂಸ್ಕೃತಿಗೆ ಸೇರಿವೆ. ತುಳುನಾಡಿನ ದಟ್ಟ ಕಾಡುಗಲು ಹಾಗೂ ಪಶ್ಚಿಮಘಟ್ಟ ಕಬ್ಬಿಣದ ಕೊಡಲಿಯ ಉಪಯೋಗವನ್ನು ಬಹಳ ಹಿಂದೆಯೇ ಇಲ್ಲಿಯ ಜನರಿಗೆ ತಿಳಿಸಿ ಹೇಳಿದ್ದುವು. ‘ತುಳುನಾಡನ್ನು ಪರಶುರಾಮನ ಕೊಡಲಿ ಸೃಷ್ಟಿಸಿದೆ’ ಎಂಬ ಬಲವಾದ ನಂಬಿಕೆಯು ತುಳುನಾಡಿನ ಜನರು ಕಬ್ಬಿಣದೊಡನೆ ಹೊಂದಿರುವ ಗಾಢವಾದ ಸಂಬಂಧವನ್ನು ವಿಶದೀಕರಿಸುತ್ತದೆ.

ಈ ಚರಿತ್ರೆಯ ಜೊತೆಗೆ ತುಳುನಾಡಿನ ಭೌಗೋಳಿಕ ರಚನೆ, ಪ್ರಾಕೃತಿಕ ಸಂಪತ್ತು, ಭೂ – ಶಿಲಾರಚನೆ, ಜಲಸಮೃದ್ಧಿ, ಹವಾಮಾನದ ವೈಪರೀತ್ಯಗಳು ಕೂಡ ಅಲ್ಲಿಯ ನಂಬಿಕೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ತುಳುನಾಡಿನ ಎತ್ತರವಾದ ಬೆಟ್ಟಗುಡ್ಡಗಳು, ಇಳಿಜಾರಿನ ಫಲವತ್ತಾದ ಭೂಮಿ, ಮಳೆಗಾಲದಲ್ಲಿ ತುಂಬಿ ಹರಿದು, ಬೇಸಗೆಯಲ್ಲಿ ಬರಡಾಗುವ ನದಿಗಳು, ನೀರಿನಿಂದಾವೃತವಾದ ಕುದುರುಗಳು, ವಿಶಾಲವಾದ ಕಡಲತಡಿ ಇವೆಲ್ಲವೂ ಇಲ್ಲಿಯ ನಂಬಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿವೆ.

ತುಳುನಾಡಿನ ಕಾಡುಗಳಲ್ಲಿ ದೊರೆಯುವ ಬಗೆಬಗೆಯ ಪ್ರಾಣಿಗಳು. ಭೂಮಿಯಲ್ಲಿ ಬೆಳೆಯುವ ವಿವಿಧ ಬೆಳೆಗಳು, ನದಿ – ಕಡಲಿನಿಂದ ದೊರೆಯುವ ಮೀನುಗಳು ಕೂಡಾ ಹಲವು ಬಗೆಯ ವಿಶಿಷ್ಟ ನಂಬಿಕೆಗಳಿಗೆ ಕಾರಣವಾಗಿವೆ. ಈ ನಂಬಿಕೆಗಳನ್ ಆಧರಿಸಿ ಬದುಕು ಸಾಗಿಸುತ್ತಿರುವ ಕೊರಗರು, ಪರವರು, ಪಂಬದರು, ಮೇರರು, ನಲಿಕೆಯವರು, ಅಜಲರು, ಕುಡಿಯರು, ಪಾಮರು, ಅಗಸರು, ಕ್ಷೌರಿಕರು, ಗೌಡರು, ಬಂಟಡರು, ಬಿಲ್ಲವರು, ಗಾಣಿಗರು, ಮೊಗವೀರರು, ಕುಂಬಾರರು, ಗೌಡಸಾರಸ್ವತರು, ಬ್ರಾಹ್ಮಣರು, ಮುಸ್ಲಿಮರು, ಕ್ರಿಶ್ಚಿಯನರೆಲ್ಲಾ ಒಟ್ಟಾರೆಯಾಗಿ ತುಳು ನಂಬಿಕೆಗಳ ಭಾಗವಾಗಿದ್ದಾರೆ. ಅದರ ಜೊತೆಗೆ ಈ ಸಮುದಾಯಗಳು ತಮ್ಮ ಸಾಮುದಾಯಿಕ ಹಾಗೂ ಪ್ರಾದೇಶಿಕ ಭಿನ್ನತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಸಮುದಾಯಗಳು ಅನುಸರಿಸುವ ಧರ್ಮಗಳು ಕೂಡಾ ಬಹುಮುಖವಾಗಿವೆ. ಜೈನರು, ದ್ವೈತಿಗಳು, ಅದ್ವೈತಿಗಳು, ಸ್ಮಾರ್ತರು, ಕ್ರೈಸ್ತರು, ಇಸ್ಲಾಂ ಮತೀಯರಲ್ಲದೆ ಶಕ್ತಿಪೂಜೆ, ವೃಕ್ಷಪೂಜೆ, ಪ್ರಾಣಿಪೂಜೆ, ಭೂತಾರಾಧನೆಗಳನ್ನು ಮಾಡುವ ಜನರೂ ಇಲ್ಲಿರುವುದರಿಂದ ತುಳುನಾಡಿನ ನಂಬಿಕೆಗಳಿಗೆ ಅಗಾಧವಾದ ವ್ಯಾಪಕತೆಯೂ, ವೈವಿಧ್ಯವೂ ಪ್ರಾಪ್ತಿಸಿವೆ. ಮತ್ತಿತರ ಕುಣಿತದ ಪ್ರಕಾರಗಳು ಕೂಡಾ ತಮ್ಮದೇ ಆದ ನಂಬಿಕೆಗಳನ್ನು ಪ್ರತೀತಗೊಳಿಸಿಕೊಂಡಿವೆ. ತುಳುನಾಡಿನ ಜನಪ್ರಿಯ ಪ್ರಕಾರಗಳಾದ ಭೂತಾರಾಧನೆ, ಯಕ್ಷಗಾನ, ಕಂಬಳ, ಕೋಳಿಕಟ್ಟ ಮೊದಲಾದವುಗಳನ್ನು ಆಧರಿಸಿಯೇ ಪ್ರಧಾನವಾಗಿ ತೌಳವ ಸಂಸ್ಕೃತಿ ರೂಪುಗೊಂಡಿರುವುದರಿಂದ ಇಲ್ಲಿನ ನಂಬಿಕೆಗಳು ಕೂಡಾ ಗಮನಾರ್ಹ ವಾದುವುಗಳಾಗಿವೆ. ಕೆಲವು ನಂಬಿಕೆಗಳು ಗಾದೆಯರೂಪದಲ್ಲಿ ಪ್ರಚಲಿತದಲ್ಲಿದ್ದು ಜನಜೀವನವನ್ನು ನಿಯಂತ್ರಿಸುವೆ. ‘ನಂಬಿದವರಿಗೆ ಎದೆಯಲ್ಲಿ ದಾರಿ ಕೊಡುತ್ತೇವೆ, ನಂಬದವರಿಗೆ ಖಡ್ಗದಲ್ಲಿ ದಾರಿ ತೋರಿಸುತ್ತೇವೆ’ ಎಂಬ ಕೋಟಿ ಚೆನ್ನಯ ಪಾಡ್ಡನದ ಸಾಲು ತುಳುನಾಡಿನಾದ್ಯಂತ ಆಗಾಗ ಅನುರಣನಗೊಳ್ಳುತ್ತದೆ. ಮೇಲಿನ ಮಾತುಗಳನ್ ಸಮರ್ಥಿಸುವ, ಬಲಪಡಿಸುವ ಹಾಗೂ ವರ್ತಮಾನದಲ್ಲಿ ಅವುಗಳನ್ನು ಮುಂದುವರಿಸುವ ಕೆಲವು ನಂಬಿಕೆಗಳನ್ನು ಈಗ ಗಮನಿಸಬಹುದು.

ಚರಿತ್ರೆ ಸಂಬಂಧಿ ನಂಬಿಕೆಗಳು : ತುಳುನಾಡಿನಲ್ಲಿ ಏನಿಲ್ಲವೆಂದರೂ ೩೦೦ಕ್ಕೂ ಹೆಚ್ಚು ಭೂತಗಳಿದ್ದು, ಜನರು ಭಕ್ತಿಯಿಂದ ಭೂತಗಳನ್ನು ಆರಾಧಿಸುತ್ತಾರೆ. ಈ ಭೂತಾರಾಧನೆಯಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಮರ, ಗೀಡ, ಬಳ್ಳಿಗಳಿಗೆ ವಿಸೇಷ ಮಹತ್ವವಿದೆ. ಸೂರ್ಯ ಚಂದ್ರರ ಚಿತ್ರಗಳನ್ನು ಭೂತದ ಅಣಿಗಳಲ್ಲಿ ಬರೆಯುತ್ತಾರೆ. ಅನೇಕಭೂತಗಳ ವಾಸಸ್ಥಾನವೂ ಮರದ ಬುಡ ಅಥವಾ ಕಲ್ಲುಗಳು, ಭೂತಾರಾಧನೆಯಲ್ಲಿ ಕಾಡಿಗೆ ಹೋಗಿ ಬೇಟೆಯಾಡಿ ಬರಬೇಕು ಎಂದು ಜನ ನಂಬುತ್ತಾರೆ. ಹಾವಿನ ಹುತ್ತವೂ ತುಳುವರಿಗೆ ಪವಿತ್ರ. ಹುತ್ತದ ಮಣ್ಣಿಗೆ ವೈದ್ಯಕೀಯ ಗುಣವೂ ಇದೆ ಎಂದು ಜನರು ಭಾವಿಸುತ್ತಾರೆ. ನಾಗನನ್ನು ಆರಾಧಿಸುವ ನಾಗಮಂಡಲವಂತೂ ಅಪಾರ ಜನಪ್ರಿಯತೆಯನ್ನು ಪಡೆದಿದೆ. ತುಳುನಾಡಿನ ಗುಹೆಗಳೂ ಅನೇಕ ದೈವಗಳ ನೆಲೆವೀಡು. ವರ್ಷಕ್ಕೊಂದು ಸಲ ಗುಹಾಪ್ರವೇಶ ಮಾಡಿ ಪಾಪಗಳನ್ನು ತೊಳೆದುಕೊಳ್ಳುವವರೂ ಇಲ್ಲಿದ್ದಾರೆ. ಈ ಎಲ್ಲಾ ನಂಬಿಕೆಗಳು ಚರಿತ್ರೆ ಪೂರ್ವದ ತುಳು ಜನರ ಬದುಕನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿವೆ.

ಚರಿತ್ರೆಯುಗದ ಮುಖ್ಯ ಅನ್ವೇಷಣೆ ಎಂದರೆ ‘ಕಬ್ಬಿಣ’, ತುಳುವರಲ್ಲಿ ಕಬ್ಬಿಣದ ಬಗೆಗೆ ಅನೇಕ ಬಗೆಯ ನಂಬಿಕೆಗಳಿವೆ. ‘ಭೂತಾರಾಧನೆಯ ಗುಡಿಗಳಲ್ಲಿ ಂದಾದರೂ ಕಬ್ಬಿಣದ ತುಂಡು ಇರಿಸಬೇಕು’ ಎಂಬ ನಂಬಿಕೆ ಲೋಹಯುಗದ ಜನಸಂಸ್ಕೃತಿಯ ಕಡೆ ನಮ್ಮ ಗಮನ ಸೆಳೆಯುತ್ತದೆ. ‘ಕಾಯಿಸಿದ ಕಬ್ಬಿಣವನ್ನು ನೀರಿನಲ್ಲಿ ಮುಳುಗಿಸಿ, ಆ ನೀರನ್ನು ಮಗುವಿನ ಮೇಲೆ ಹಾಯಿಸಿದರೆ ಮಗುವಿನಲ್ಲಿ ಸೇರಿಕೊಂಡಿದ್ದ ವಿಚ್ಛದ್ರಕಾರೀ ಶಕ್ತಿಗಳು ಓಡಿ ಬಿಡುತ್ತವೆ’ ಎಂಬ ನಂಬಿಕೆಯೂ ಬಹಳ ಪ್ರಾಚೀನವಾದದ್ದು. ಮಕ್ಕಳಿಗೆ ಮತ್ತು ದನಗಳಿಗೆ ಖಾಯಿಲೆ ಬಂದರೆ ಕಾಯಿಸಿದ ಕಬ್ಬಿಣದಲ್ಲಿ ಬರೆ ಹಾಕಬೇಕು, ಮುಟ್ಟಿನ ಹೆಂಗಸಿನ ಬಳಿಯಲ್ಲಿ ಕಬ್ಬಿಣದ ತುಂಡು ಇರಬೇಕು. ಸೊಂಟದಲ್ಲಿ ಕಬ್ಬಿಣದ ಚೂರು ಇದ್ದರೆ ಭೂತ ಕಾಟ ಇರುವುದಿಲ್ಲ ಎಂಬಿತ್ಯಾದಿ ನಂಬಿಕೆಗಳು ಲೋಹ ಯುಗದಷ್ಟು ಪ್ರಾಚೀನವಾದವು. ನಾಗರಿಕತೆ ಬೆಳೆದಂತೆ ಹುತ್ತ, ಕಲ್ಲು, ಮರ, ಕಬ್ಬಿಣಗಳ ಸ್ಥಾನದಲ್ಲಿ ಮಾಡ, ಗುಡಿ, ಗುಂಡ,ಗೋಪುರ, ಚಿನ ಕಾಣಿಸಿಕೊಡವು. ಹೂವು, ತೆಂಗಿನಗರಿ ಹಾಳೆ ಮತ್ತಿತರ ಜಾಗಗಳಲ್ಲಿ ಚಿನ್ನ, ಬೆಳ್ಳಿ,ಕುಂಚುಗಳು ಕಾಣಿಸಿಕೊಂಡವು. ಇಷ್ಟಿದ್ದರೂ ಅವುಗಳ ಕುರಿತಾದ ನಂಬಿಕೆಗಳೇನೂ ಬದಲಾಗಲಿಲ್ಲ. ಕಾಡುಗಳಲ್ಲಿ ವಾಸಿಸುತ್ತಿದ್ದ ಪ್ರಾಣಿಗಳನೇಕವು ದೈವೀ ರೂಪಗಳನ್ನು ಪಡೆದುಕೊಂಡು ‘ನಂಬಿ, ನಂಬುವಂತಹ ಸ್ಥಿತಿ ನಿರ್ಮಾಣ ಮಾಡಿಕೊಡುತ್ತೇವೆ’ (ನಂಬುಲೇ, ನಂಬಾದ್ ಕೊರ್ಪೆ) ಎಂದು ಅಭಯ ಪ್ರದಾನ ಮಾಡಿದುವು. ಈ ಹಿನ್ನೆಲೆಯಲ್ಲಿ ಹುಟ್ಟಿಕಂಡ ಪಿಲಿಚಾಮುಂಡಿ, ಪಂಜುರ್ಲಿ, ಮೈಸಂದಾಯ, ನಂದಿಗೋಮ ಮೊದಲಾದ ದೈವಗಳನ್ನು ತುಳುವರು ನಂಬಿಕೊಂಡು ಬದುಕುತ್ತಿದ್ದಾರೆ. ನಾಗಾರಧನೆಯೂ ಇಂಥದ್ದೆ ನಂಬಿಕೆಯ ಆವರಣದಲ್ಲಿ ಸೃಷ್ಟಿಯಾಗಿದೆ. ನಾಗನು ರೋಗ ನಿವಾರಕನೂ ಹೌದು, ಬಂಜೆತನ ನೀಗುವ ಫಲೋತ್ಪತ್ತಿ ದೈವವೂ ಹೌದು. ನಾಗರಹಾವನ್ನು ಕೊಲ್ಲಬಾರದು, ನಾಗರಹಾವು ಬ್ರಾಹ್ಮಣ, ಅದನ್ನು ಕೊಂದರೆ ಶ್ರಾದ್ಧ ಮಾಡಬೇಕು ಇತ್ಯಾದಿ ನಂಬಿಕೆಗಳಿವೆ. ‘ನಂಬುನಕಲೆಗ್ ಇಂಬು ಕೊರ್ದು, ನಂಬಂತಿ ನಕ್ಲೆಗ್ ಅಂಬು ತೋಜಾವುನ’ (ನಂಬಿದವರಿಗೆ ಇಂಬು, ನಂಬದವರಿಗೆ ಅಂಬು ತೋರಿಸುವ) ದೈವಗಳ ಮೇಲಿನ ನಂಬುಗೆಯ ತುಳು ಸಂಸ್ಕೃತಿಯ ಮುಖ್ಯ ಭಾಗವಾಗಿದೆ.

ತುಳುನಾಡಿನ ಭೌಗೋಳಿಕ ರಚನೆಗಳು ಮತ್ತು ನಂಬಿಕೆಗಳು : ಅಸಾಮಾನ್ಯ ಭೌಗೋಳಿಕ ವೈವಿಧ್ಯ ಇರುವ ತುಳುನಾಡಿನಲ್ಲಿ ಭೌಗೋಳಿಕ ರಚನೆಗಳು ಅನೇಕ ಬಗೆಯ ನಂಬಿಕೆಗಳನ್ನು ಹುಟ್ಟಿ ಹಾಕಿವೆ. ಕಪ್ಪು ನೀರಿನಲ್ಲಿ ‘ಕಾಲೆ’ (ಒಂದು ಬಗೆಯ ದೈವ). ಇದೆ. ‘ಕಡಲ ಬದಿಯಲ್ಲಿ ತಿಂಗಳ ಬೆಳಕಲ್ಲಿ ಯಕ್ಷಿಗಳು ಓಡಾಡುತ್ತವೆ.’ ‘ಸುಂದರ ಹುಡುಗರನ್ನು ಕಂಡರೆ ಯಕ್ಷಿಗಳಿಗೆ ಇಷ್ಟ.’ ‘ಕಾಡಿನಲ್ಲಿರುವ ಕಾಳಿಂಗ ಸರ್ಪವು ಬಾಲದ ಮೇಲೆನಿಲ್ಲುತ್ತದೆ’, ‘ಆಳು ಪಕ್ಕಿ’ (ಒಂದು ಬಗೆಯ ಹಕ್ಕಿ) ಕೂಗಿದರೆ ಮರಣ ಸಂಭವಿಸುತ್ತದೆ.ಹಾದಿಗೆ ಅಡ್ಡ ಬಂದರೆ ಒಳ್ಳೆಯದು ಇತ್ಯಾದಿ. ‘ಗುಡ್ಡದಲ್ಲಿ ಭಯಾನಕ ಭೂತ ಇರುತ್ತದೆ, ನೀರಿನಲ್ಲಿ ಕಾಲೆ (ಪಿಶಾಚಿ) ಇರುತ್ತದೆ. ಏಣೆಲ್ ಬೆಳೆ ಸೂಳೆ ಇದ್ದ ಹಾಗೆ ಅದನ್ನು ನಂಬಲಾರದು, ಸ್ವಾತಿ ಮಳೆಯಲ್ಲಿ ಬತ್ತಹಾಕಿದರೆ ಒಳ್ಳೆಯದು, ಗದ್ದೆತಗ್ಗು ಇದ್ದರೆ ಒಳ್ಳೆಯದು, ಮೊದಲಾದ ನಂಬಿಕೆಗಳು ತುಳುನಾಡಿನ ಮಳೆ, ಬೆಳೆ ಮತ್ತಿತರ ಪ್ರಾಕೃತಿಕ ಅಂಶಗಳನ್ನು ಆಧರಿಸಿವೆ.

ಬಹುಮುಖೀ ಸಮುದಾಯಗಳನ್ನಾಧರಿಸಿದ ನಂಬಿಕೆಗಳು : ತುಳುನಾಡಿನಲ್ಲಿ ವಿವಿಧ ಸಮುದಾಯಗಳ ಒಟ್ಟಿಗೇ ವಾಸಿಸುತ್ತಿದ್ದು, ಪರಸ್ಪರ ಭಿನ್ನ ಭಿನ್ನ ನಂಬಿಕೆಗಳನ್ನು ಸೃಷ್ಟಿಸಿಕೊಂಡಿವೆ. ಇದರಲ್ಲಿ ಎಷ್ಟೋ ನಂಬಿಕೆಗಳು ಇಂದು ಅರ್ಥ ಕಳೆದುಕೊಂಡಿವೆ. ಕೆಲವು ನಂಬಿಕೆಗಳನ್ನು ಆಯಾ ಸಮುದಾಯಕ್ಕೆ ಸೇರಿದ ಜನರೇ ವಿರೋಧಿಸುತ್ತಾರೆ. ಉದಾಹರಣೆಗೆ ಕೆಲವನ್ನು ಗಮನಿಸಬಹುದು.

೧. ಬ್ರಾಹ್ಮಣ, ಬಂಟ ಮತ್ತು ಬಿಲ್ಲವ ಒಟ್ಟಿಗೆ ಸೇರಿದರೆ ಖೂನಿ ಆಗದು

೨. ಊಟ ಮಾಡದ ಬ್ರಾಹ್ಮಣನನ್ನು ನಂಬಲಾರದು

೩. ಬ್ರಾಹ್ಮಣರು ಗದ್ದೆ ಉಳಬಾರದು

೪. ಲಾಭ ಇಲ್ಲದೆ ಕೊಂಕಣಿ ಕೆಲಸ ಮಾಡುವುದಿಲ್ಲ

೫. ಬಂಟ ಹೋದಲ್ಲಿ ಗಲಾಟೆ ತಪ್ಪುವುದಿಲ್ಲ

೬. ಜೈನರಿಗೆ ನೆಂಟಸ್ತನದಲ್ಲಿ ನಂಬಿಕೆ ಇಲ್ಲ

೭. ಒಬ್ಬ ಬಿಲ್ಲವ ಇಬ್ಬರಿಗೆ ಸಮಾನ

೮. ಮ್ಯಾಲರ ಹೆಂಗಸರು ಚೆಂದ

೯. ಕೊರಗರಿಗೆ ಮಕ್ಕಳನ್ನು ನೀಡಿ ಹಿಂದಕ್ಕೆ ಪಡೆದರೆ ಮಕ್ಕಳ ಖಾಯಿಲೆ ಗುಣವಾಗುತ್ತದೆ.

ಇತ್ಯಾದಿ ನಂಬಿಕೆಗಳಿವೆ. ಜಾತ್ಯಾಧಾರಿತವಾದ ನಂಬಿಕೆಗಳು ಈಚೆಗೆ ವೇಗವಾಗಿ ಶಿಥಿಲವಾಗುತ್ತಿವೆ. ಶಿಥಿಲವಾಗುವುದು ಅಗತ್ಯವೂ ಹೌದು.

ಧಾರ್ಮಿಕ ನಂಬಿಕೆಗಳು : ತುಳುನಾಡಿನಲ್ಲಿ ಧಾರ್ಮಿಕ ನಂಬಿಕೆಗಳು ಹೇರಳವಾಗಿವೆ. ಭೂತಾರಾಧನೆಯ ಸುತ್ತ ಹೆಣೆದುಕೊಂಡಿರುವ ನಂಬಿಕೆಗಳಂತೂ ಅಸಂಖ್ಯ. ಕೆಲವನ್ನು ಉದಾಹರಣೆಯಾಗಿ ನೋಡಬಹುದು.

೧. ಆಟಿ ಕಳಂಜ ಬಂದರೆ ಊರಿನಲ್ಲಿ ಖಾಯಿಲೆ ಕಡಿಮೆ ಆಗುತ್ತದೆ.

೨. ಲೆಕ್ಕೇಸಿರಿ ಭೂತಕ್ಕೆ ಖಚು ಜಾಸ್ತಿ

೩. ಕಲ್ಲುರ್ಟಿ ಭೂತಕ್ಕೆ ಕೋಪ ಜಾಸ್ತಿ

೪. ಧರ್ಮಸ್ಥಳದ ಮಂಜುನಾಥನಿಗೆ ಹೇಳಿಕೊಂಡರೆ ಹೇಳಿದ್ದೆಲ್ಲ ಆಗುತ್ತದೆ.

೫. ಕುಕ್ಕೆ ಸುಬ್ರಹ್ಮಣ್ಯದ ಹುತ್ತದ ಮಣ್ಣು ಎಲ್ಲ ಖಾಯಿಲೆ ಗುಣ ಮಾಡುತ್ತದೆ.

೬. ನಾಗಮಂಡಲದಲ್ಲಿ ಹರಕೆ ಹಾಕಿದರೆ ಮಕ್ಕಳಾಗುತ್ತದೆ.

೭. ಸಿರಿ (ಒಂದು ದೈವ) ಮೈಮೇಲೆ ಬಂದ ಹೆಂಗಸರಿಗೆ ಹೊಡೆಯಬಾರದು.

೮. ಭೂತಾಳ ಪಾಂಡ್ಯನಿಂದ ಅಳಿಯಕಟ್ಟು ಬಂದಿದೆ

೯. ಭೂತಗಳಿಗೆ ಹಾದಿ ತಪ್ಪಿಸುವ ಗುಣ ಇದೆ

೧೦. ಆಟಿ ತಿಂಗಳಲ್ಲಿ ಭೂತಗಳಿಗೆ ವಿರಾಮ, ಇತ್ಯಾದಿ.

ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ನಂಬಿಕೆಗಳು : ತುಳುನಾಡಿನಲ್ಲಿ ಅನೇಕ ಬಗೆಯ ಜನಪದ ಕಲೆಗಳಿದ್ದು ಅವುಗಳ ಸುತ್ತ ಅನೇಕ ಬಗೆಯ ನಂಬಿಕೆಗಳು ಪ್ರಚಲಿತದಲ್ಲಿವೆ. ಉದಾಹರಣೆಗೆ

೧. ಒಂದು ಆಟ ನೋಡಿದರೆ ೧೬ ದೀಪೋತ್ಸವ ನೋಡಬೇಕು.

೨. ಸಿದ್ಧವೇಷದವರು ಅಂಗಳಕ್ಕೆ ಬಂದರೆ ಒಳ್ಳೆಯದಲ್ಲ

೩. ದುಡಿ ಕುಣಿತದವರು ಮನೆಗೆ ಬಂದರೆ ಒಳ್ಳೆಯದು

೪. ಮಾಯಿ ತಿಂಗಳಲ್ಲಿ ಕರಂಗೋಲು ಕುಣಿಯಬೇಕು

೫. ನವರಾತ್ರಿಯಲ್ಲಿ ಕೊರಗರ ವೇಷ ಹಾಕಿ ಮನೆ ಮನೆ ಕುಣಿದರೆ ಒಳ್ಳೆಯದು ಇತ್ಯಾದಿ.

ಇಂತಹ ಸಂಸ್ಕೃತಿ ನಿಯಂತ್ರಕ ನಂಬಿಕೆಗಳ ಜೊತೆಗೆ ಇನ್ನೂ ಹಲವು ಬಗೆಯ ನಂಬಿಕೆಗಳು ತುಳುನಾಡಿನಲ್ಲಿ ಪ್ರಚಲಿತದಲ್ಲಿವೆ. ಉದಾಹರಣೆಗೆ :

೧. ಅಮಾವಾಸ್ಯೆಯಲ್ಲಿ ಹುಟ್ಟಿದರೆ ತಂದೆಗೆ ಕೇಡು

೨. ಗುಂಡನ ಬಳಿಯ ಹುಡುಗಿಯನ್ನು ಮದುವೆಯಾದರೆ ಮನೆಗೆ ಹಾಳು

೩. ನಂದರ ಬಳಿ – ಬಂಗಾರ ಬಳಿಯ ಹೆಣ್ಣುಗಳು ಮನೆಗೆ ಒಳ್ಳೆಯದು ಮಾಡುತ್ತಾರೆ.

೪. ಉಪ್ಪಿಗಾಗಿ ಸಾಲ ಮಾಡಬಾರದು.

೫. ಎದೆಯಲ್ಲಿ ಕೂದಲು ಇಲ್ಲದವರನ್ನು ನಂಬಬಾರದು

೬. ದೀಪಾವಳಿ ಹಬ್ಬ ಕಳೆಯದೆ ಬೆಳ್ತಿಗೆ ಅಕ್ಕಿ ಕುಟ್ಟಬಾರದು ಇತ್ಯಾದಿ.

ಹೀಗೆ ತುಳುನಾಡಿನ ನಂಬಿಕೆಗಲು ತುಳು ಸಂಸ್ಕೃತಿಗೆ ಬದ್ಧವಾಗಿದ್ದು ಅವನ್ನು ರೂಪಿಸುವ, ನಿಯಂತ್ರಿಸುವ ಹಾಗೂ ಮುನ್ನಡೆಸುವ ಶಕ್ತಿಗಳಾಗಿ ಕಾರ್ಯ ನಿರ್ವಹಿಸುತ್ತವೆ.

ತುಳು ಜನಪದ ವೈದ್ಯ ತುಳು ಜನರಲ್ಲಿ ‘ಬೈದ್ಯೆರ್’ (ವೈದ್ಯರು) ಎಂಬುದಾಗಿ ಒಂದು ಸಮುದಾಯವನ್ನು ಗುರುತಿಸಲಾಗಿದೆ. ಪಾಡ್ಡನ, ಜನಪದ ಕತೆಗಳಲ್ಲಿ ಅನೇಕ ಬೈದ್ಯರನ್ನು ಕಾಣಬಹುದು. ಸಾಯನ ಬೈದ್ಯ, ದೇಯಿಬೈದ್ಯೆ, ಪಯ್ಯ ಬೈದ್ಯೆ, ಬೈರಕ್ಕೆ ಬೈದ್ಯೆದಿ, ಅಪ್ಪು ಬೈದ್ಯೆದಿ ಇತ್ಯಾದಿ ಹೆಸರುಗಳು ‘ಕೋಟಿ ಚನನಯ ಪಾಡ್ಡನ’, ‘ಕೊರಗತನಿಯ ಪಾಡ್ಡನ’, ‘ಜಾರಂದಾಯ ಸಂದಿ’ಗಳಲ್ಲಿ ಕಾಣಸಿಗುತ್ತವೆ. ಇವರೆಲ್ಲರೂ ಬಿಲ್ಲವ ಸಮುದಾಯಕ್ಕೆ ಸೇರಿದವರು. ಬಿಲ್ಲವ ಸಮುದಾಯವನ್ನು ‘ಬೈದ್ಯ’ ಎಂಬ ಪದ ನಿರ್ದೇಶಿಸಿದರೂ ತುಳುವರು ಪ್ರತಿಯೊಂದು ಸಮುದಾಯದಲ್ಲೂ ವೈದ್ಯ ಮಾಡುವವರಿದ್ದುದು ಸರ್ವವಿದಿತ. ಕೊರಗರು, ಮೊಗೇರರು, ಮುಂಡಾಲರು, ಮನ್ಸರು ಇತ್ಯಾದಿ ತುಳುವರ ಮೂಲದ ಜನರು ಜನಪದ ವೈದ್ಯದಲ್ಲಿ ಸಿದ್ಧಹಸ್ತರು. ನಲಿಕೆ ಸಮುದಾಯದ ಮಂದಿ ಸಾಮಾನ್ಯ ವೈದ್ಯದ ಜೊತೆಯಲ್ಲಿ ತಂತ್ರಗಾರಿಕೆಯ ವೈದ್ಯವನ್ನೂ ತಿಳಿದವರಾಗಿದ್ದರು.

ಕಾಡಿನ ಜೊತೆ ಬಾಳುತ್ತಿದ್ದ ಮಂದಿಗೆ ಕಾಡಿನ ವಸ್ತುಗಳ್ನು ವೈದ್ಯ ಪರಿಕರಗಳಾಗಿ ಕಂಡರೆ, ಕೃಷಿ ಭೂಮಿಯಲ್ಲಿ ದುಡಿಯುತ್ತಿದ್ದ ಜನರಿಗೆ ಅಲ್ಲಿ ದೊರೆಯುತ್ತಿದ್ದ ವಸ್ತುಗಳು ಮದ್ದಿನ ಅಂಶಗಳಾದವು. ಕಡಲಿನ ಜೊತೆ ಬದುಕುವ ಮಂದಿ ತಮ್ಮ ಅನಾರೋಗ್ಯಕ್ಕೆ ಉಪಶಮನಗಳನ್ನು ಅಲ್ಲಲ್ಲೇ ಪಡೆಯುವ ಪ್ರಯತ್ನ ಮಾಡಿರುವುದು, ಮನೆಯಲ್ಲಿಯ ಮಹಿಳೆಯರು ಅಡುಗೆಗೆ ಬಳಸುತ್ತಿದ್ದ ವಸ್ತುಗಳನ್ನು ಮದ್ದಾಗಿಯೂ ಬಳಸುತ್ತಿದ್ದುದು – ಇವೆಲ್ಲ ಪರಿಸರಕ್ಕೆ ಹೊಂದಿಕೊಳ್ಳುವ ತುಳುವ ಜನಪದರ ರೀತಿಯನ್ನು ತೋರ್ಪಡಿಸುತ್ತವೆ.

“ಆರೋಗ್ಯರಾದ ಮನುಷ್ಯರಿಲ್ಲ, ಮದ್ದಿಗಾಗದ ವಸ್ತು ಇಲ್ಲ” – ಈ ನಂಬಿಕೆಯ ತಳಹದಿಯಲ್ಲಿ ತುಳುವರು ತಮ್ಮ ಸುತ್ತ ಮುತ್ತ ಇರುವ ವಸ್ತು, ಸಸ್ಯ, ಪ್ರಾಣಿಜನ್ಯ ವಸ್ತುಗಳಿಂದಲೇ ತಮ್ಮ ಅನಾರೋಗ್ಯಕ್ಕೆ ಮದ್ದು ಮಾಡಿಕೊಳ್ಳುತ್ತಿದ್ದರು. ತುಳು ಜನಪದ ವೈದ್ಯರನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು:

೧. ಅ) ಆಹಾರ, ಆ) ಆಚರಣೆ, ಇ) ಆರಾಧನೆ

೨. ಅ) ಸಸ್ಯಜನ್ಯ, ಆ) ಪ್ರಾಣಿಜನ್ಯ, ಇ) ಇತರೆ

೩. ಅ) ವಾರ್ಷಿಕಾವರ್ತನ, ಆ) ಜೀವನಾವರ್ತನ, ಇ) ಅನಾರೋಗ್ಯ ಸಂದರ್ಭ

೪. ಅ) ಮನೆಮದ್ದು, ಆ) ಕುಲವೃತ್ತಿ, ಇ) ಮೂಲಿಕೆ (ತಂತ್ರಉಪಾಯ)

ಈ ಮೇಲಿನ ಎಲ್ಲ ವಿಂಗಡಣೆಗಳೂ ಒಂದರೊಳಗೊಂದು ಹೆಣೆದುಕೊಂಡಿವೆ. ಆದುದರಿಂದ ಪ್ರತಿಯೊಂದನ್ನು ಬೇರೆ ಬೇರೆಯಾಗಿ ನೋಡುವ ಮನಃಸ್ಥಿತಿಯನ್ನು ತೊರೆದು, ಹೆಣಿಗೆಯ ಒಳನೋಟದ ಅರಿವು ಮಾಡಿಕೊಳ್ಳಬೇಕಾಗಿದೆ.

. ಅ) ಆಹಾರ : ದಿನನಿತ್ಯದ ಅನ್ನ ಪಾನೀಯಗಳಲ್ಲಿ, ತಿಂಡಿ ತಿನಿಸುಗಳಲ್ಲಿ ಆಯಾ ಕಾಲಕ್ಕೆ ತಕ್ಕಂತೆ, ಆಯಾ ಪರಿಸರಕ್ಕೆ ಹೊಂದಿಕೊಂಡಂತೆ ದೇಹ ಸದೃಢಗೊಳಿಸುವ ಆಹಾರ ಸೇವನೆಯು ತುಳುವರ ಪದ್ಧತಿಯಾಗಿತ್ತು. ಆಹಾರ ಪದ್ಧತಿಯು ಮಾನವನ ಮನಸ್ಸನ್ನು ನಿರ್ದೇಶಿಸುವುದೆಂಬ ಅಂಶವನ್ನು ಮನಗಂಡಿದ್ದ ತುಳುವರು ಈ ನಿಟ್ಟಿನಲ್ಲೇ ತಮ್ಮ ಆಹಾರವನ್ನು ತಯಾರಿಸುತ್ತಿದ್ದ, ಸ್ವೀಕರಿಸುತ್ತಿದ್ದ ಬಗ್ಗೆ ಅಧ್ಯಯನದಿಂದ ತಿಳಿದುಬರುತ್ತದೆ.

) ಆಚರಣೆ: ಹಬ್ಬ ಹರಿದಿನಗಳ ಆಚರಣೆಯ ನೆಪದಲ್ಲಿ ದೇಹಾರೋಗ್ಯಕ್ಕೆ ಬೇಕಾದ ಆಹಾರ ಮತ್ತು ಔಷಧ ಸೇವನೆಯ ಪದ್ಧತಿಯು ತುಳುವರಲ್ಲಿತ್ತು.

) ಆರಾಧನೆ : ಆಹಾರ, ಆಚರಣೆಯ ವೈದ್ಯ ರೀತಿಯಲ್ಲಿ ಬಗ್ಗದ ಕಾಯಿಲೆಗಳಿಗೆ, ಮುಖ್ಯವಾಗಿ ಮಾನಸಿಕ ನೆಮ್ಮದಿಗೆ ಆರಾಧನೆ ಒಂದು ‘ಮೂಲಿಕೆ’ಯಾಗಿರುವುದನ್ನು ಮರೆಯುವಂತಿಲ್ಲ. ಈಡು ಕಟ್ಟುನು, ಉರ್ಕು ಕಟ್ಟುನು, ಪುರ್ಸಾದ ದೆತೊನುನು, ತೊರತ್ತ್‌ದೆಪ್ಪುನು ಇತ್ಯಾದಿ…

೨ ಅ) ಸಸ್ಯಜನ್ಯ: ಸಸ್ಯದ ಪ್ರತಿಯೊಂದು ಅಂಗಗಳೂ, ಅಂದರೆ ಬೇರು, ಚಿಗುರು, ಎಲೆ, ಕಾಂಡ ಹೂ, ಕಾಯಿ, ಹಣ್ಣು, ಬೀಜ ಎಲ್ಲವೂ ಮದ್ದಿನ ಅಂಶವನ್ನು ಹೊಂದಿವೆಯೆಂಬುದನ್ನು, ಯಾವುದೇ ಸಸ್ಯವೂ ಅನುಪಯೋಗಿಯಲ್ಲ ಎಂಬುದನ್ನು ಸ್ಪಷ್ಟವಾಗಿ ತುಳುವರು ತಿಳಿದಿದ್ದರು.

) ಪ್ರಾಣಿ ಜನ್ಯ : ಬೇರೆ ಬೇರೆ ಪ್ರಾಣಿಗಳ ಹಾಲು ಮತ್ತು ಹಾಲಿನ ಉತ್ಪನ್ನಗಳು, ಚರ್ಮಷ ಮೂತ್ರ, ಮಾಂಸ ಮಜ್ಜೆಯೆಲ್ಲವೂ ಮದ್ದಿಗಾಗಿ ಬಳಕೆಯಾಗುತ್ತಿತ್ತು. ಇದೇ ರೀತಿ ಔಷಧಗಳಿಗಾಗಿ ಪಕ್ಷಿಗಳ ಬಳಕೆಯೂ ನಡೆಯುತ್ತಿದ್ದುದನ್ನಿಲ್ಲಿ ನೆನೆಪಿಸಿಕೊಳ್ಳಬಹುದು. ಪಕ್ಷಿಗಳ ಮಾಂಸ, ರಕ್ತ, ಮೊಟ್ಟೆ ಕೊನೆಗೆ ಅವುಗಳ ಗರಿಯೂ ನಾಟಿ ವೈದ್ಯದಲ್ಲಿ ಉಪಯೋಗವಾಗುತ್ತಿತ್ತು.

) ಇತರೆ : ಮಣ್ಣು, ಕಲ್ಲು, ಲೋಹ, ಗಾಳಿ ನೀರು, ಬಿಸಿಲು ಇತ್ಯಾದಿಗಳೂ ಮದ್ದಿಗೆ ಬಳಕೆಯಾಗುತ್ತಿದ್ದವು.

೩ ಅ) ವಾರ್ಷಿಕಾವರ್ತನ : ವರ್ಷದ ಆಯಾಯ ಕಾಲಗಳಿಗೆ ತಕ್ಕಂತೆ ಆಹಾರ ಸೇವನೆ ಮತ್ತು ಔಷಧ ಸೇವನೆ ತುಳುವರಲ್ಲಿತ್ತು. ‘ಆಟಿ’ ತಿಂಗಳ ಆಹಾರ, ‘ಆಟಿ ಅಮಾವಾಸ್ಯೆ’ ಯಂದು ಕುಡಿಯಲೇಬೇಕಾದ ‘ಪಾಲೆದ ಕೆತ್ತೆದ ರಸ’, ‘ಪರ್ಬ’ದ ಅಭ್ಯಂಗ ಸ್ನಾನ, ಕೆಡ್ಡಸದ ‘ಕುಡು – ಅರಿ’ ಇತ್ಯಾದಿಗಳೆಲ್ಲವೂ ನಂಬಿಕೆಯ ನೆಲೆಯಲ್ಲಿ ತೆಲಮಾರಿನಿಂದ ಮುಂದುವರಿದಿದ್ದವು. ಆಟಿ ಅಮಾವಾಸ್ಯೆಯಂದು ‘ಪಾಲೆದ ಕೆತ್ತೆದ ರಸ’ ಕುಡಿದು, ಮೆಂತೆ ಗಂಜಿ ತಿಂದರೆ ಆ ವರ್ಷವಿಡೀ ಯಾವ ರೋಗವೂ ಬಾಧಿಸುವುದಿಲ್ಲವೆಂದು ನಂಬಿಕೆಯಿದ್ದರೆ, ಕೆಡ್ಡಸದ ಕುಡು ಅರಿ ತಿಂದವನಿಗೆ ‘ಎಲು ಕುಟ್ಟೆ ಪೋವಂದ್’ (ಎಲುಬು ಬಲವಿಲ್ಲದಂತೆ ಆಗದು) ಎಂದು ನಂಬುತ್ತಿದ್ದರು.

) ಜೀವನಾವರ್ತನ : ಗರ್ಭಾವಸ್ಥೆ, ಜನನ, ಕೌಮಾರ್ಯ, ಮದುವೆ ಮತ್ತು ಸಾವಿನ ಸಮಯದಲ್ಲಿಯೂ ಆಯಾಯ ಪರಿಸ್ಥಿತಿಗೆ ಹೊಂದಿಕೊಂಡಂತೆ ಆಹಾರ ಮೂಲಕ ಔಷಧ ಸೇವನೆ ತುಳುವರು ನಂಬಿಕೆಯ ಜೊತೆಗೆ, ಆಚರಣೆಯ ಜೊತೆಗೆ ಸಾಗಿ ಬಂದಿತ್ತು. ಗರ್ಭಿಣಿಯ ಆರೈಕೆ, ಬಾಣಂತಿ – ಮಗುವಿನ ಅನುಪಾನ ಇತ್ಯಾದಿಗಳಿಗೆ ತೀರಾ ತುಳುವರದೇ ಸಂಸ್ಕೃತಿಯಲ್ಲಿ ಪಾರಂಪರಿಕವಾದ ನಾಟೀ ವೈದ್ಯವನ್ನು ಮಾಡುತ್ತಿದ್ದರು. ಕೌಮಾರ್ಯದ ಹಿನ್ನೆಲೆಯಲ್ಲಿ ತಿನ್ನಲೇಬೇಕಾದ ಆಹಾರ, ಮದುವೆಯ ಹೊತ್ತಿಗೆ ಮದುಮಕ್ಕಳಿಗೆ ನಡೆಸುವ ಕ್ರಿಯೆಗಳು ಮತ್ತು ಅವರ ಆಹಾರ ವಿಹಾರ, ಸಾವಿನ ಸಂದರ್ಭದಲ್ಲಿ ಮರಣಾಸನ್ನದ್ದವಾದ ವ್ಯಕ್ತಿಗೆ ಮಾಡುವ ಕ್ರಿಯೆಗಳು ಹಾಗೂ ಮೃತ ವ್ಯಕ್ತಿಯ ಕುಟುಂಬದವರ ಆಹಾರ ಪದ್ಧತಿ ಮತ್ತು ಶುದ್ಧೀಕರಣ ಪ್ರಕ್ರಿಯೆಗಳು ಜನಪದ ವೈದ್ಯದ ಅಂಗಗಳೇ ಆಗಿದ್ದುದನ್ನು ಗುರುತಿಸಬಹುದು.

) ಅನಾರೋಗ್ಯ ಸಂದರ್ಭ: ದೈಹಿಕ ಅನಾರೋಗ್ಯ ಮತ್ತ ಮಾನಸಿಕ ಅಸಮತೋಲನಗಳಿಗೆ, ಪರಿಸರದ ಪ್ರಭಾವದಿಂದ ತೋರಿ ಬರುವ ಅಸ್ವಸ್ಥತೆಗೆ (ನಾಯಿ, ಹಾವು, ಕಚ್ಚುವಿಕೆ, ಕೆಲವು ಸಸ್ಯ ಅಥವಾ ಪ್ರಾಣಿಗಳ ಸಂಪರ್ಕದಿಂದ ಉಂಟಾಗುವ ಬೇನೆ ಇತ್ಯಾದಿ) ತುಳು ಜನಪದರು ಮದ್ದನ್ನು ಅರೆಯುತ್ತಿದ್ದರು.

೪ ಅ) ಮನೆಮದ್ದು : ಸಾಮಾನ್ಯ ಅಸೌಖ್ಯಗಳಿಗೆ ಮನೆ ಮಂದಿ ತಾವಾಗಿಯೇ ಔಷಧ ಮಾಡಿಕೊಳ್ಳುವ ತಿಳಿವಳಿಕೆ ಎಲ್ಲರಲ್ಲೂ ಇತ್ತು. ಇದು ಅನುಭವ ಜನ್ಯ – ನೋಡಿ ಕಲಿತು, ಮಾಡಿ ತಿಳಿದಿರುವುದು. ಮನೆಯ ಅಡುಗೆಯ ಸಂಬಾರ ವಸ್ತುಗಳಿಂದಲೋ, ಮನೆ ಹಿತ್ತಿಲಲ್ಲಿ ಒದಗುವ ವಸ್ತುಗಳಿಂದಲೋ ಮದ್ದನ್ನು ತಮ್ಮವರಿಗೆ ತಾವೇ ಮಾಡಿಕೊಳ್ಳುತ್ತಿದ್ದರು.

) ಕುಲವೃತ್ತಿ : ಮದ್ದು ಕೊಡುವ ಮಂದಿಗೆ ತುಳುವರು ‘ಪಂಡಿತೆರ್’ ಎಂಬುದಾಗಿ ಸಂಬೋಧಿಸುತ್ತಿದ್ದರು. ಈ ‘ಪಂಡಿತರು’ ಅನಕ್ಷರಸ್ಥರಾಗಿದ್ದರೂ, ಜನಪದ ವೈದ್ಯದಲ್ಲಿ ನುರಿತವರಾಗಿದ್ದರು. ತುಳವರು ಪಂಡಿತತನ ಯಾವುದೇ ಜಾತಿಗೆ ಸೀಮಿತವಾಗಿರಲಿಲ್ಲ. ಬದಲಾಗಿ ಕೆಲವು ಮನೆತನಗಳ ವಂಶಪಾರಂಪರ್ಯದ ವಿದ್ಯೆಯಾಗಿತ್ತು. ಕೆಲವು ವಿಶಿಷ್ಟ ವೈದ್ಯಗಾರಿಕೆ ಕೆಲವು ಜಾತಿಗಳಷ್ಟೇ ಸೀಮಿತವಾಗಿರುವುದೂ ಇತ್ತು. ಉದಾ. ತಲೆಯಲ್ಲಿ ‘ಬೆರು ಮೆಪಿನಿ’ ಯಂಥ ಕಾಯಿಲೆಗ ಕ್ಷೌರಿಕರು ಮದ್ದು ಕೊಟ್ಟರೆ, ಎಲ್ಲರೂ ಶುದ್ಧೀಕರಣಕ್ಕೆ ಉಪಯೋಗಿಸುತ್ತಿದ್ದ ‘ಉಜೆ’ ಎಂಬ ಭಸ್ಮವನ್ನು ಮಡಿವಾಳರು ಮಾಡಿಕೊಡುತ್ತಿದ್ದರು.

) ಮೂಲಿಗೆ : ಕೆಲವು ರೋಗಗಳಿಗೆ, ಅಸೌಖ್ಯಗಳಿಗೆ ಔಷಧ ಸೇವನೆಗಿಂತ, ತಂತ್ರೌಷಧ ಸರಿಯೆಂದು ತುಳುವರು ತಿಳಿದಿದ್ದರು. ಬಾಲಗ್ರಹ, ಸನ್ನಿಪಾತ, ಹಾವು, ಸರ್ಪ ಕಡಿತ ಇತ್ಯಾದಿಗಳಿಗೆ ಔಷಧದ ಜೊತೆಗೆ, ‘ಮೂಲಿಗೆ’ ಯನ್ನೂ ಮಾಡುತ್ತಿದ್ದರು.

ತುಳುವರು ತಮ್ಮ ಸುತ್ತಮುತ್ತಲಲ್ಲಿ ದೊರಕುವ ವಸ್ತುಗಳಿಂದಲೇ ತಮ್ಮ ಅನಾರೋಗ್ಯಕ್ಕೆ ಬೇಕಾದ ಔಷಧಗಳನ್ನು ಸದೃಢ ಆರೋಗ್ಯಕ್ಕೆ ಬೇಕಾದ ಅನುಪಾನಗಳನ್ನು ತಮಗೆ ಬೇಕಾದಂತೆ ಮಾಡಿಕೊಳ್ಳುತ್ತಿದ್ದರು. ಈ ನಾಟಿ ವೈದ್ಯ ಮನುಷ್ಯರಿಗೆ ಮಾತ್ರ ಸೀಮಿತವಾಗಿರದೆ, ಪ್ರಾಣಿ ಪಕ್ಷಿಗಳ ಆರೈಕೆಯನ್ನೂ ಒಳಗೊಂಡಿತ್ತು. ತಮ್ಮ ಸಾಕುಪ್ರಾಣಿ ಪಕ್ಷಿಗಳಲ್ಲದೆ, ಅಸೌಖ್ಯದಲ್ಲಿದ್ದ ಇತರ ಜೀವಜಂತುಗಳನ್ನೂ ಉಪಚರಿಸುತ್ತಿದ್ದ ಸಹೃದಯ ತುಳು ವೈದ್ಯರ ಬಗ್ಗೆ ಜನಪದ ಕತೆಗಳು, ಹಿರಿಯರ ಹೇಳಿಕೆಗಳು ತಿಳಿಸಿಕೊಡುತ್ತವೆ.

ಭಾರತದ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದ ಅಥರ್ವಣ ವೇದದ ಶಾಖೆಯಾಗಿದ್ದು ಒಂದು ಶಾಸ್ತ್ರೀಯ ಜ್ಞಾನವಾಗಿದೆ. ತುಳುನಾಡಿನ ಜನಪದ ವೈದ್ಯ ಪದ್ಧತಿಯ ಮೇಲೆ ಆಯುರ್ವೇದದ ಪ್ರಭಾವವಿದ್ದಂತೆ ಹೊರನೋಟಕ್ಕೆ ಅನ್ನಿಸಿದರೂ, ತುಳುವ ಮದ್ದು ತನ್ನತನವನ್ನು ತಿಳಿಯಪಡಿಸುವುದನವ್ನು ಸ್ಪಷ್ಟವಾಗಿ ಗುರುತಿಸಬಹುದು.ಈ ಬಗ್ಗೆ ತುಳುವ ನಾಟಿ ವೈದ್ಯದ ಪರಿಚಯವಿರುವ ಆಯುರ್ವೇದ ವೈದ್ಯರು ವಿವರಣೆಗಳನ್ನು ಕೊಡುತ್ತಾರೆ. ತುಳು ಜನಪದ ವೈದ್ಯ ಪದ್ಧತಿ ಒಂದು ಪಾರಂಪರಿಕವಾಗಿ ದೊರಕಿದ ಅಪೂರ್ವ ನಿಧಿ ಎಂದು ಆಯುರ್ವೇದ ವೈದ್ಯರು ಅಭಿಪ್ರಾಯ ಪಡುತ್ತಾರೆ.

‘ನಮ್ಮಿಂದ ಸಾಧ್ಯವಿರುವಷ್ಟು ಉಳಿದವರಿಗೆ ಸಹಾಯ ಮಾಡಬೇಕು, ಹಣ ತೆಗೆದುಕೊಳ್ಳದೆ ಹೋದರೆ ಮದ್ದಿಗೆ ಬೆಲೆಯಿಲ್ಲ ಎಂಬ ಕಾರಣದಿಂದ ತೀರಾ ಸ್ವಲ್ಪ ಹಣ ತೆಗೆದುಕೊಳ್ಳುತ್ತೇವೆ. ನಮ್ಮಲ್ಲಿಗೆ ಬರುವವರ ಕಷ್ಟ ನೋಡಿ ಅದನ್ನು ನಮ್ಮಿಂದ ಸಾಧ್ಯವಾದಷ್ಟು ಕಡಿಮೆ ಮಾಡಲು ಮೋಡಬೇಕು. ಇಂದಲ್ಲ ನಾಳೆ ನಮ್ಮ ಕಷ್ಟ ಕಾದಲ್ಲಿ ದೇವರು ನಮ್ಮ ಕೈ ಹಿಡಿದಾರು. ಕೈಯ್ಯಲ್ಲಿ ಕೊಡಲೇನೂ ಇಲ್ಲದಿದ್ದರೂ ನಾಲ್ಕು ಒಳ್ಳೆಯ ಮಾತುಗಳು ಸಾಕು – ಬಂದವರ ನೋವು ಕಡಿಮೆ ಮಾಡಲು, ನಮಗೆ ಪುಣ್ಯ ಬರಲು’ – ತುಳು ನಾಟಿ ವೈದ್ಯರ ಈ ಮಾತುಗಳು ಅವರ ಜೀವನ ದೃಷ್ಟಿಗೆ ಸಾಕ್ಷಿಯಾಗುತ್ತವೆ. ಅಜ್ಜಿ ಮದ್ದು, ಮನೆಮದ್ದು, ನಾಟಿ ವೈದ್ಯ, ಪುಲಮರ್ದ್ – ಎಲ್ಲಾ ಹೆಸರಿನಿಂದ ಕರೆಸಿಕೊಂಡ ತುಳುವರ ಈ ವಿದ್ಯೆತುಳುವ ಸಂಪ್ರದಾಯದಂತೆಯೇ ವಿಶಿಷ್ಟವಾದುದು. ಇದನ್ನು ಗುರುತಿಸಿ, ಸಂಗ್ರಹಿಸಿ, ಉಳಿಸಿ, ಮುಂದುವರಿಸುವಲ್ಲಿ ಜಾನಪದ ಅಧ್ಯಯನ ವಿಭಾಗಗಳ ಪಾತ್ರ ಮಹತ್ತ್ವಪೂರ್ಣವಾದುದು.

ಎಸ್. ಜಿ.