ತಾಲಿ ತಾಲಿ (ತಾಳಿ) ಎಂಬ ಪದವನ್ನು ವಿವಾಹದ ಗುರುತು ಎಂಬ ನೆಲೆಯಲ್ಲಿ, ಕರಳಿನಲ್ಲಿ ಮಹಿಳೆಯರು ಧರಿಸುವ ಆಭರಣ ಎಂಬ ಅರ್ಥದಲ್ಲಿ ತಿಳಿಯಲಾಗುತ್ತದೆ. ತಾಲಿ ಎಂಬುದು ಒಂದು ಆಭರಣವಾಗಿ ಸಂಘ ಕಾಲದಿಂದಲೇ ಕೇರಳದಲ್ಲಿ ಪ್ರಚಾರದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ತಾಲಿ, ಪುಲಿಪೇಲ್‌ತಾಲಿ, ಅಯ್ಯಡತಾಲಿ ಎಂಬ ಹೆಸರುಗಳು ಸಂಘಂ ಕೃತಿಗಳಲ್ಲಿ ದೊರಕುತ್ತವೆ. ಇವುಗಳೆಲ್ಲ ಆಭರಣಗಳಾಗಿವೆ.

ತಾಲಿ ಮದುವೆಗೆ ಸಂಬಂಧಿಸಿದಂತೆ ಕೇರಳದಲ್ಲಿ ತಾಲಿಕೆಟ್ಟ್ ಕಲ್ಯಾಣಂ ಎಂಬ ವಿಧಿಯಲ್ಲಿ ಕಾಣಿಸಿಕೊಳ್ಳುತ್ತದೆ.ಕೇರಳಧ ವಿವಿಧ ಸಮುದಾಯಗಳಲ್ಲಿ ಪ್ರಚಲಿತವಾಗಿದ್ದ ತಾರುಣ್ಯ ಪೂರ್ವ ಆಚರಣೆಯೇ ತಾಲಿಕೆಟ್ಟ್‌ಕಲ್ಯಾಣಂ. ಈ ಆಚರಣೆಯಲ್ಲಿ ಓರ್ವ ವ್ಯಕ್ತಿ ಕನ್ಯೆಯ ಕೊರಳಿಗೆ ತಾಲಿ ಕಟ್ಟುವನು.

ಸಂಘಂ ಕಾಲದಿಂದಲೇ ‘ತಾಲಿ’ ಎಂಬ ಪದಕ್ಕೆ ಕಂಠಾಭರಣ ಅಥವಾ ಪದಕ ಎಂಬ ಅರ್ಥವಿತ್ತು. ತಮಿಳಿನಲ್ಲಿ ‘ತಾಲೇಲ್’ ಎಂದರೆ ತೂಗಾಡುವುದು ಎಂದು ಅರ್ಥ. ಇದರಿಂದಲೇ ‘ತಾಲಿ’ ಪದ ನಿಷ್ಪನ್ನವಾಗಿರಬೇಕು (‘ತಾಲಿ’ಗೂ ತಾಳೆ ಎಲೆಗೂ ಸಂಬಂಧವಿದೆ ಎಂದು ಕೂಡ ಹೇಳುತ್ತಾರೆ. ‘ಓಲೆ’ ಎಂದರೂ ತಾಳೆಗರಿ). ಅನಂತರ ಕೇರಳೀಯರ ಮದುವೆಯ ಗುರುತಾಗಿ ತಾಲಿ ಸ್ಥಾನವನ್ನು ಪಡೆಯಿತು. ಹಿಂದಿನ ಕಾಲದಲ್ಲಿ ಎಲ್ಲಜಾತಿಗಳಲ್ಲಿ ಮದುವೆಗೆ ತಾಲಿಕಟ್ಟುವ ಸಂಪ್ರದಾಯ ಇರಲಿಲ್ಲ. ತಾಲಿಕಟ್ಟ್ ಕಲ್ಯಾಣವನ್ನು ಬಹಳ ವಿಜೃಂಭಣೆಯಿಂದ ನಡೆಸುತ್ತಿದ್ದರು. ಆದರೆ ಮದುವೆ ಸರಳವಾಗಿ ನಡೆಯುತ್ತಿತ್ತು. ನಾಯರ್ ಸಮುದಾಯದಲ್ಲಿ ‘ಪುಡವಮುಠಿ’ (ಸೀರೆ ಕೊಡುವುದು) ಮದುವೆಯ ಮುಖ್ಯ ವಿಧಿ. ತಾಲಿ ಕಟ್ಟುವ ಆಚರಣೆ ಆಮೇಲೆ ಸೇರ್ಪಡೆಯಾದುದು. ಮದುವೆಯ ಸಂದರ್ಭಧಲ್ಲಿ ಕಟ್ಟುವ ತಾಲಿಗೆ ‘ಕೆಟ್ಟುತಾಲಿ’ ಎಂದು ಹೆಸರು. ಇದನ್ನು ಚಿನ್ನದಿಂದ ನಿರ್ಮಿಸಿ, ದಾರದಲ್ಲಿ ಅಥವಾ ಚಿನ್ನದ ನೂಲಿನಲ್ಲಿ ಪೋಣಿಸಿ ತಾಲಿ ಮಾಲೆಯಾಗಿ ಬಳಸುತ್ತಾರೆ.

ತಾಲಿಗಳಲ್ಲಿ ಧಾರ್ಮಿಕ, ಸಾಮುದಾಯಿಕ, ಪ್ರಾದೇಶಿಕ ಭೇದಗಳನ್ನು ಕಾಣಬಹುದು. ಬ್ರಾಹ್ಮಣರು, ನಂಬೂದಿರಿಗಳು ಜೋಡಿ ತಾಲಿಯನ್ನು ಬಳಸುತ್ತಾರೆ. ಆಲದ ಎಲೆಯ ಆಕಾರದಲ್ಲಿರುವ ತಾಲಿಯನ್ನು ಉಳಿದ ಸಮುದಾಯದವರು ಬಳಸುತ್ತಾರೆ. ನಂಬೂದಿರಿಗಳಲ್ಲಿ ತಂದೆಯೇ ಮಗಳಿಗೆ ತಾಲಿ ಕಟ್ಟುವುದು ಸಂಪ್ರದಾಯ. ಮಾವ ಅಥವಾ ಸಮುದಾಯದ ‘ಗುರಿಕಾರ’ ತಾಲಿಕಟ್ಟುವ ಸಂಪ್ರದಾಯಗಳು ಕೆಲವು ಜಾತಿಗಳಲ್ಲಿವೆ. ಕ್ರಿಶ್ಚಿಯನ್ ಸಮುದಾಯದವರು ತಾಲಿಗೆ ‘ಮಿನ್ನ್’ ಎನ್ನುವರು. ಜೋಡಿತಾಲಿಯನ್ನು ಶಿವಶಕ್ತಿ ಪ್ರತೀಕವಾಗಿ ಪರಿಗಣಿಸುತ್ತಾರೆ. ತಾಲಿಯನ್ನು ಲಿಂಗದ ರೂಪವೆಂದು ನಂಬಿದವರೂ ಇದ್ದಾರೆ. ಪ್ರಕೃತಿ ಪುರುಷ ಸಂಯೋಗ ಎಂಬ ಅರ್ಥದಲ್ಲಿಯೂ ತಾಲಿಯ ಸಂರಚನೆಯನ್ನು ವ್ಯಾಖ್ಯಾನಿಸುತ್ತಾರೆ. ಎರಡಿದ್ದರೂ ಒಂದೇ ಎಂಬರ್ಥದಲ್ಲಿ ಆಲದ ಎಲೆಯ ಆಕೃತಿಯ ತಾಲಿಯಲ್ಲಿ ಓಂಕಾರವನ್ನು ಬರೆದಿರುತ್ತಾರೆ. ಧಾರ್ಮಿಕ ಹಿನ್ನೆಲೆಯಲ್ಲಿ ಶಿಲುಬೆ ಅಥವಾ ಚಂದ್ರಕಲೆಯನ್ನು ಕೆತ್ತಿರುವ ತಾಲಿಗಳನ್ನು ಆಯಾ ಧರ್ಮದವರು ಬಳಸುತ್ತಾರೆ.

ಕೊರಳ ಆಭರಣವಾಗಿರುವ ತಾಲಿಯಲ್ಲಿ ಅನೇಕ ವೈವಿಧ್ಯಗಳಿವೆ. ಪುಲಿನಖತಾಲಿ, ಕಾಶುತಾಲಿ, ಮಾಂಙತಾಲಿ, ಮಣಿತಾಲಿ, ಚೆರುತಾಲಿ, ನಾಗಪಡತಾಲಿ, ಎಳೆಕತಾಲಿ ಹೀಗೆ ತಾಲಿಯ ರೂಪಕ್ಕೆ ಹೊಂದಿಕೊಂಡು ಹೆಸರುಗಳನ್ನು ಕೊಡಲಾಗಿದೆ. ಚೆರುತಾಲಿಯನ್ನು ನಂಬೂದಿರಿ ಮಹಿಳೆಯರು ಬಳಸುತ್ತಾರೆ. ಮಾಂಙತಾಲಿ, ಮಣಿತಾಲಿಗಳನ್ನು ಮುಸ್ಲಿಂ ಮಹಿಳೆಯರು ಧರಿಸುವರು. ಒಪ್ಪನ ಹಾಡುಗಳಲ್ಲಿ ಈ ಹೆಸರುಗಳಿವೆ. ಕಾಡಾಂಗೋಡು ಮಾಕಂ ಪುರಾಣದಲ್ಲಿ ಚಕ್ರತಾಲಿ, ಪೂತಾಲಿ, ಮಣಿತಾಲಿ ಮೊದಲಾದ ಹೆಸರುಗಳಿವೆ. ನಾಗಪಡತಾಲಿ ಫಲವಂತಿಕೆಯ ಪ್ರತೀಕವಾಗಿಯೂ, ಪುಲಿನಖತಾಲಿ ಧೈರ್ಯದ ಪ್ರತೀಕವಾಗಿಯೂ ಬಳಕೆಯಲ್ಲಿದೆ.

– ಪಿ.ವಿ.ಕೆ. ಅನುವಾದ ಎನ್.ಎಸ್.

ತಾಳಮದ್ದಳೆ ಕನ್ನಡ ನಾಡಿನ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ಡ, ದಕ್ಷಿಣ ಕನ್ನಡ ಹಾಗೂ ಒಳನಾಡಿನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದೆಡೆಗಳಲ್ಲಿ ಪ್ರಚಲಿತವಿರುವ ‘ವಾಚಿಕಾಭಿನಯ’ವೇ ತಾಳಮದ್ದಳೆ. ಈ ಭಾಗದ ಪ್ರಸಿದ್ಧ ಹಾಗೂ ವರ್ಣರಂಜಿತ ಪ್ರದರ್ಶನ ಕಲೆಯಾದ ಯಕ್ಷಗಾನ ಬಯಲಾಟಕ್ಕೆ ಆಧಾರ ಪಠ್ಯವಾಗಿ ಬಳಸುವ ‘ಪ್ರಸಂಗ ಪಠ್ಯ’ವನ್ನೇ ಈ ಕಲೆಗೂ ಆಧಾರ ಪಠ್ಯವಾಗಿ ಬಳಸಲಾಗುತ್ತದೆ. ಯಕ್ಷಗಾನದ ಹಿಮ್ಮೇಳನವನ್ನೇ ಇಲ್ಲಿಯೂ ಬಳಸಲಾಗುತ್ತದೆ. ಹಿಂದೆ ‘ಯಕ್ಷಗಾನ’ವೆಂಬ ಹೆಸರಿನ ಹಾಡುಗಬ್ಬಗಳು ರಚಿತವಾಗುತ್ತಿದ್ದು, ಅವುಗಳೊಳಗಿನ ಕೆಲವು ಭಾಗಗಳನ್ನು ತದಾಳಮದ್ದಳೆಗೂ, ಬಯಲಾಟಕ್ಕೂ ಬಳಸುತ್ತಿದ್ದಿರಬೇಕು. ಈ ಕಾರಣದಿಂದ ಬಯಲಾಟವನ್ನು ಯಕ್ಷಗಾನ ಬಯಲಾಟವೆಂದೂ ತಾಳಮದ್ದಳೆಯನ್ನು ಯಕ್ಷಗಾನ ತಾಳಮದ್ದಲೆಯೆಂದೂ ಕರೆಯುವ ರೂಢಿ ಬಂದಿರಬೇಕು. ನಂತರದ ಕಾಲದಲ್ಲಿ ಈ ‘ಆಟ’ ಹಾಗೂ ತಾಳಮದ್ದಳೆಗಳಿಗಾಗಿಯೇ ‘ಪ್ರಸಂಗ ಪಠ್ಯ’ಗಳು ರಚಿತವಾಗುತ್ತಿರವೆ ಯಾದರೂ ಅವುಗಳನ್ನು ಯಕ್ಷಗಾನ ಪ್ರಸಂಗಗಳೆಂದೇ ಕರೆಯಲಾಗುತ್ತಿದೆ. ತಾಳಮದ್ದಳೆಗೆ ಜಾಗರ, ಬೈಠಕ್, ಪ್ರಸಂಗ, ಮುಂತಾದ ಹೆಸರುಗಳನ್ನು ಬಳಸಲಾಗುತ್ತಿದೆ.

ಈ ಕಲಾ ಸ್ವರೂಪದಲ್ಲಿ ವೇಷಭೂಷಣ, ಮುಖವರ್ಣಿಕೆ, ದೃಶ್ಯಾವಳಿಗಳು, ಸಿದ್ಧ ಸಂಭಾಷಣೆ ಮುಂತಾಗಿ ಯಾವುದೇ ಪರಿಕರಗಳನ್ನು ಬಳಸದೆ ‘ಅರ್ಥಧಾರಿ’ಗಳು ನಿತ್ಯವೇಷದಲ್ಲಿಯೇ ಕುಳಿತು ಚಂಡೆಮೃದಂಗಗಳ ವಾದನದ ಜೊತೆಗೆ ತಾಳ ಇಲ್ಲವೆ ಜಾಗಟೆಯನ್ನು ಹಿಡಿದ ಭಾಗವತರು ಹಾಡುವ ಪದ್ಯದ ಆಧಾರದ ಮೇಲೆ ಸಂಭಾಷಣೆಯನ್ನು ಹೊಸೆಯುತ್ತಾ, ಆಶುನಾಟಕವೊಂದನ್ನು ಎಲ್ಲರೂ ಸೇರಿ ಹೆಣೆಯುತ್ತಾ ಹೋಗುತ್ತಾರೆ. ಹೀಗೆ ಪದ್ಯಗಳ ಆಧಾರದ ಮೇಲೆ ಆಡುವ ಮಾತಿಗೆ ‘ಅರ್ಥ’ ಹೇಳುವುದು ಎಂದೂ ತಾಳಮದ್ದಳೆಯ ಕಲಾವಿದರನ್ನು ‘ಅರ್ಥಧಾರಿ’ಗಳು ಎಂದೂ ಕರೆಯಲಾಗುತ್ತದೆ. ‘ಅರ್ಥ’ವೆನ್ನುವುದು ‘ಪದ್ಯ’ಗಳ ಆದಾರದ ಮೇಲೆ ಮಾಡುವ ಆಶುವಿಸ್ತರಣೆಯಾಗಿರುತ್ತದೆ.

ಪ್ರಸಂಗ ಪಠ್ಯ: ಸಾಮಾನ್ಯವಾಗಿ ತಾಳಮದ್ದಳೆಯ ಆಧಾರ ಪಠ್ಯಗಳಿಂದ ‘ಪ್ರಸಂಗಗಳು’ ರಾಮಾಯಣ, ಮಹಾಭಾರತ ಅಥವಾ ಭಾಗವತದ ಕಥಾನಕಗಳಿಗೆ ಸಂಬಂಧಿಸಿದವಾಗಿರುತ್ತವೆ.

ಪ್ರಸಂಗಗಳ ವಸ್ತು ಸಾಮಾನ್ಯವಾಗಿ ಕಾಳಗ ಇಲ್ಲವೆ ಕಲ್ಯಾಣವಾಗಿರುತ್ತದೆ. ಅಂದರೆ ಬಯಲಾಟಗಳಲ್ಲಿ ಪ್ರಧಾನವಾಗಿ ವೀರ ಇಲ್ಲವೆ ಶೃಂಗಾರ ರಸಗಳಿಗೆ ಅವಕಾಶವಿದ್ದರೆ ತಾಳಮದ್ದಳೆಯಲ್ಲಿ ಸಾಧ್ಯವಾದೆಡೆಗಳಲ್ಲೆಲ್ಲ ‘ಕಾಳಗ’ಗಳನ್ನು ಮೋಕ್ಷಗಳಾಗಿಸಿ ಭಕ್ತಿ ಪ್ರಧಾನವಾಗಿ ಪರಿವರ್ತಿಸಿಕೊಳ್ಳಲಾಗುತ್ತದೆ. (ಉದಾ: ವಾಲಿಮೋಕ್ಷ, ಅತಿಕಾಯ ಮೋಕ್ಷ, ಸುಧನ್ವಮೋಕ್ಷ ಇತ್ಯಾದಿ)

ಹಿಂದೆ ಪ್ರಸಂಗಗಳಲ್ಲಿ ಸಾವಿರಾರು ಪದ್ಯಗಳಿರುತ್ತಿದ್ದು ರಾತ್ರಿಯಿಡೀ ನಡೆಸುವ ಕಾರ್ಯಕ್ರಮಗಳಲ್ಲಿ ಅವುಗಳ ಬಳಕೆಯಾಗುತ್ತಿತ್ತು. ಆದರೆ, ಈಚಿನ ದಿನಗಳಲ್ಲಿ ಒಂದು ಕಥಾನಕವನ್ನು ಎರಡರಿಂದ ಮೂರು ಗಂಟೆಗಳ ಅವಧಿಯವರೆಗೆ ನಡೆಸುವುದನ್ನು ಕಾಣುತ್ತೇವೆ. ಹಾಗಾಗಿ ಇನ್ನೂರು ಮುನ್ನೂರು ಪದ್ಯಗಳಿರುವ ಪ್ರಸಂಗಗಳನ್ನೇ ವಿಶೇಷವಾಗಿ ರಚಿಸಲಾಗುತ್ತಿದೆ. ಪ್ರಸಂಗದ ಪದ್ಯಗಳಲ್ಲಿ ಸಂಭಾಷಣೆಯಂತೆ ಛಂದೋವೈವಿಧ್ಯ, ಗೇಯತೆ, ಅರ್ಥ ಪ್ರಸನ್ನತೆ, ಸರಳತೆ, ಔಚಿತ್ಯಜ್ಞಾನ, ಕೇಂದ್ರ ಆಶಯ, ರಸಪೋಷಕ ಗುಣ – ಇವೆಲ್ಲ ಅಪೇಕ್ಷಣೀಯ ಅಂಶಗಳು. ಪ್ರಸಂಗಗಳಲ್ಲಿಯ ಪದ್ಯಗಳಲ್ಲಿ ಇದ್ದಷ್ಟನ್ನು ಇದ್ದಕ್ಕಿದ್ದಂತೆ ಬಳಸದೆ, ಇರುವ ಕಾಲಾವಕಾಶ, ಪಾತ್ರಧಾರಿಗಳ ಸಂಖ್ಯೆ, ಧೋರಣೆ ಹಾಗೂ ಸಾಮರ್ಥ್ಯ, ಭಾಗವತರ ಒಲವು, ಪ್ರೇಕ್ಷಕರ ನಿರೀಕ್ಷೆ, ಸಂಘಟಕರ ಆಶಯ ಮೊದಲಾದವುಗಳನ್ನುಸರಿಸಿ ಪದ್ಯಗಳನ್ನು ಆಯ್ದುಕೊಳ್ಳಲಾಗುತ್ತದೆ.ಹೀಗೆ ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ‘ಪ್ರಸಂಗ ಸಂಪಾದನೆ’ ಎಂದು ಗುರುತಿಸಲಾಗಿದೆ.

ಭಾಗವತರ ಪಾತ್ರ : ಹೀಗೆ ಆಯ್ದ ಪದ್ಯಗಳನಿಟ್ಟುಕೊಂಡು ತಾಳಮದ್ದಳೆ ನಡೆಸುವಾಗ ಭಾಗವತರಿಗೆ ಈ ಮುಂದಿನ ಹೊಣೆಗಾರಿಕೆಗಳಿರುತ್ತವೆ. ಪ್ರಸಂಗ ಮಂಡನೆ, ನಾದಾವರಣಲಯಾವರಣಗಳ ನಿರ್ಮಾಣ ಹಾಗೂ ನಿರ್ವಹಣೆ, ಪಾತ್ರಭಾವ ಪ್ರತಿಪಾದನೆಗೆ ಪ್ರಚೋದನೆ ಹಾಗೂ ಕಥಾ ಸಂವಿಧಾನ ನಿರ್ವಹಣೆ ಇತ್ಯಾದಿ. ಆದ್ದರಿಂದ ಸೃಜನಶೀಲನಾದ ಭಾಗವತನೊಬ್ಬ ಸೂತ್ರಧಾರ, ನಿರ್ದೇಶಕ, ನಿಯಂತ್ರಕ, ಕವಿ, ಸಂಗೀತಗಾರ, ನಾಟಕಕಾರ, ಇಂಗಿತಜ್ಞ ಇವೆಲ್ಲವೂ ಆಗಿರುತ್ತಾನೆ.

79

ಹಿಮ್ಮೇಳ ವಾದನಗಳು: ತಾಳಮದ್ದಳೆಯೊಂದು ‘ಕೇಳುವ’ ಮೂಲಕವೇ ‘ನೋಡುವ’ ನಾಟಕವಾಗಿರುವುದರಿಂದ ಈ ಶ್ರವ್ಯ ನಾಟಕದಲ್ಲಿ ಅದೃಶ್ಯವಾಗಿರುವ ಕ್ರಿಯೆಗಳು, ಘಟನೆಗಳು, ದೃಶ್ಯಗಳನ್ನು ‘ನುಡಿಸಿ’ ಕೇಳಿಸುವ ಮೂಲಕ ‘ಕಾಣಿಸುವ’ ಕೆಲಸವನ್ನು ಹಿಮ್ಮೇಳನವಾದನಗಳು ಮಾಡಬೇಕಾಗುತ್ತದೆ. ಕಥಾನಕದಲ್ಲಿಯ ಯುದ್ದ, ಬೇಟೆ, ಒಡ್ಡೋಲಗ, ನಾಟ್ಯಗಳು ಮುತಾದ ಸಂದರ್ಭಗಳನ್ನೂ ವಿವಿಧ ರಸ ಭಾವಗಳ ಸನ್ನಿವೇಶಗಳನ್ನೂ ವಿಶಿಷ್ಟ ರೀತಿಯ ಚಂಡೆ ಮದ್ದಳೆಗಳ ಪೆಟ್ಟಿನಿಂದ ಸೃಷ್ಟಿಸಲು ಸಾಧ್ಯ. ಚಂಡೆ ಮದ್ದಳೆಗಳ ಪೆಟ್ಟಿನಿಂದ ಸೃಷ್ಟಿಸಲು ಸಾಧ್ಯ. ಚಂಡೆ ಮದ್ದಳೆ ವಾದನ ಇಲ್ಲಿ ಸನ್ನಿವೇಶ – ಸಂದರ್ಭಗಳ ಪರಿವರ್ತನೆಯನ್ನು ಭಾವಬದಲಾವಣೆಯನ್ನೂ ಸೂಚಿಸುವುದಲ್ಲದೆ ಗೀತರೂಪಕದ ಬಂಧಸೌಂದರ್ಯವನ್ನೂ ಕಾಪಾಡುತ್ತದೆ ಹಾಗೂ ಕ್ರಿಯೆಗಳ ಏಕಸೂತ್ರತೆಯನ್ನು ಕಾಪಾಡುತ್ತದೆ.

ತಾಳಮದ್ದಳೆಯ ಪ್ರಧಾನ ಅಂಗ ವಾಜಿಕಾಭಿನಯ ಅಥವಾ ಅರ್ಥಗಾರಿಕೆ. ಇಲ್ಲಿ ವಾಚಿಕಾಭಿನಯ ಅರ್ಥಧಾರಿಯ ಒಂದು ಸೃಜನಶೀಲ ಕ್ರಿಯೆ ಮಾತ್ರವೇ ಆಗಿರದೆ ಪ್ರೇಕ್ಷಕರನ್ನು ಸೃಜನಶೀಲರಾಗಲು ಆಹ್ವಾನಿಸುತ್ತದೆ.ತಾಳಮದ್ದಳೆಯ ‘ಅರ್ಥ’ ಎನ್ನುವುದು ಒಂದು ವಿಶಿಷ್ಟ ಪರಿಭಾಷೆ. ಇಲ್ಲಿ ‘ಅರ್ಥ’ವೆಂದರೆ ಅದು ಭಾಗವತರು ಹಾಡುವ ಪದ್ಯದ ವಾಚ್ಯಾರ್ಥವಾಗಲೀ ಸರಳಾನುವಾದವಾಗಲೀ ಆಗಿರದೆ, ಆ ಹಾಡುವಿಕೆಯಿಂದ ಸಿಗಬಹುದಾದ ಹಾಗೂ ಅರ್ಥಧಾರಿಯ ಮನಸ್ಸಿನಲ್ಲಿ ಹೊಳೆಯಬಹುದಾದ ಮತ್ತು ಆತನ ಭಾವಕೋಶದಲ್ಲಿ ನಿರ್ಮಾಣವಾಗಬಲ್ಲ ಎಲ್ಲ ‘ಅರ್ಥ’ ಅದಾಗಿರುತ್ತದೆ. ಇಲ್ಲಿ ‘ವಾಚಿಕ’ವೆಂದರೆ ಅದು ಮಾತಿನ ಎಲ್ಲಸಾಧ್ಯತೆಗಳ ಮೊತ್ತವಾಗಿರುತ್ತದೆ.

ಭಾಷೆಯಂತೆಯೇ ಇಲ್ಲಿಯ ಮಾತೂ ಕಲಾಪ್ಪಪಂಚದಲ್ಲಿಯೇ ವಿಶಿಷ್ಟ ಹಾಗೂ ಅನನ್ಯವಾಗಿರುತ್ತದೆ.

ಇಂತಹ ವಿಶೇಷವಾದ ಮಾತು ‘ಅರ್ಥ’ವೆಂದು ಕರೆಸಿಕೊಂಡು ಪ್ರತಿನಿತ್ಯ ತಾಳಮದ್ದಳೆಯಲ್ಲಿ ಹೊಸ ಹೊಸ ‘ಮಾತಿನಕೃತಿ’ಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಪ್ರತಿನಿತ್ಯವೂ ಪುರಾಣದ ಪುನರ್‌ಸೃಷ್ಟಿಯೂ ಪುರಾಣವಿಸ್ತರಣೆಯೂ ಪ್ರಸಂಗ ಕವಿಯ ‘ಕಾವ್ಯ’ಕ್ಕೆ ಪ್ರತಿಕಾವ್ಯ ನಿರ್ಮಾಣವೂ ಇಲ್ಲಿ ನಡೆಯುತ್ತ ಹೋಗುತ್ತದೆ. ‘ಅರ್ಥ’ಕ್ಕೆ ಆಧಾರವಾಗಿರುವ ಪ್ರಸಂಗ ಪಠ್ಯಕ್ಕೆ ಬದ್ಧನಾಗಿದ್ದುಕೊಂಡೇ ಅರ್ಥಧಾರಿ ಅದನ್ನು ವಿಸ್ತರಿಸುವ ಹಾಗೂ ಎತ್ತರಿಸುವ ಕೆಲಸವನ್ನು ಮಾಡುತ್ತಾನೆ.

ಹೀಗೆ ನಿರ್ಮಾಣಗೊಳ್ಳುವ ಅಶುನಾಟಕದಲ್ಲಿ ಪ್ರತಿಯೊಬ್ಬ ಕಲಾವಿದನೂ ತನ್ನ ಅರ್ಥದಮಟ್ಟಿಗೆ ಸರ್ವತಂತ್ರನಾಗಿರುತ್ತಾನೆ. ಪೂರ್ಣ ಪ್ರಸಂಗ ನಿರ್ಮಾಣದ ದೃಷ್ಟಿಯಿಂದ ಇಲ್ಲಿ ಒಬ್ಬರು ಮತ್ತೊಬ್ಬರಿಗೆ ಪೂರಕರೂ ಪರಸ್ಪರಾವಲಂಬಿಗಲೂ ಆಗಿರುತ್ತಾರೆ. ಅಂದರೆ ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಂತಿರುತ್ತದೆ.ಪ್ರತಿಯೊಬ್ಬರೂ ಸ್ವಯಂ ಪ್ರಭುಗಳಾಗಿಯೂ ಒಂದು ರಾಷ್ಟ್ರ ಕಟ್ಟುವ ಬೃಹತ್ ಹೊಣೆಗಾರಿಕೆ ಎಲ್ಲರೂ ಬದ್ದರಾಗಿರುವಂತೆ ಇಲ್ಲಿ ಪ್ರತಿಯೊಬ್ಬರೂ ಸ್ವತಂತ್ರರಿದ್ದೂ ಒಂದು ಒಳ್ಲೆಯ ಕಲಾಕೃತಿ ರೂಪಿಸುವ ಯೋಜನೆಗೆ ಬದ್ಧರಾಗಿರುತ್ತಾರೆ.

ತಂತ್ರಗಳು: ಈ ‘ಅರ್ಥ’ ನಿರ್ಮಾಣದ ವಾಚಿಕಾಭಿನಯವನ್ನು ಪರಿಣಾಮಕಾರಿ ಯಾಗಿಸಲು ಪ್ರಸಂಗ ವೇದಿಕೆ, ಪಾತ್ರಪೀಠಿಕೆ, ಸ್ವರಮೇಲನ, ಸಂದರ್ಭ ಕೊಡುವುದು, ಮಾತಿನ ವೇಗ, ಲಯ, ಭಾಷೆಯ ಶಾಬ್ದಿಕ ಅಶಾಬ್ದಿಕ ಸಂವಹನಗಳು – ಮುಂತಾದ ತಂತ್ರಗಳೆಲ್ಲಕಲಾವಿದರ ನೆರವಿಗೆ ಬರುತ್ತವೆ.

ಪ್ರೇಕ್ಷಕರ ಪಾತ್ರ : ಅರ್ಥಧಾರಿಗಳು ನಿರ್ಮಿಸುವ ವಿಶಿಷ್ಟವಾದ ಈ ಮಾತಿನ ನಾಟಕವು ಪ್ರೇಕ್ಷಕರನ್ನು ತಲುಪಿ ಪರಿಣಾಮ ಮಾಡಬೇಕಾದರೆ ಇಲ್ಲಿಯ ಪ್ರೇಕ್ಷಕರನ್ನು ತಲುಪಿ ಪರಿಣಾಮ ಮಾಡಬೇಕಾದರೆ ಇಲ್ಲಿಯ ಪ್ರೇಕ್ಷಕರಿಗೆ ವಿಶೇಷವಾದ ಯೋಗ್ಯತೆ ಬೇಕಾಗುತ್ತದೆ. ಯಾವುದೋ ಪುರಾಣದ ಯಾವುದೋ ಭಾಗ, ಸನ್ನಿವೇಶ, ಕೇವಲ ಮಾತಿನಲ್ಲಿ ಆರಂಭಗೊಳ್ಳುತ್ತದೆ. ಹಾಗೂ ನಿತ್ಯವೇಷದಲ್ಲಿ ಕುಳಿತಿರುವ ಯಾವುದೋ ಕಲಾವಿದ ಯಾವುದೋ ಪಾತ್ರದ ಅರ್ಥಮಾತಾಡುತ್ತಾನೆ. ಅವರೆಲ್ಲರ ನಡುವೆ ನಾಟಕ ಬೆಳೆಯುತ್ತ ಹೋಗುತ್ತದೆ. ಹೀಗಿರುವಾಗ ಅಲ್ಲಿಯ ಸನ್ನಿವೇಶವನ್ನು ಗ್ರಹಿಸಲು ಯಾರು ಯಾರದೂ ಯಾವ ಯಾವ ಪಾತ್ರವೆಂಬುದನ್ನು ಅರಿಯಲು – ಅವರ ನಡುವಿನ ತರ್ಕಸಂಭಾಷಣೆ ಪೂರ್ವಸಂಗತಿಗಳ ಪ್ರಸ್ತಾಪ – ಮೊದಲಾದವುಗಳನ್ನೆಲ್ಲ ನೆನಪಿಸಿಕೊಳ್ಳಲು ಇಲ್ಲಿಯ ಪ್ರೇಕ್ಷಕನಿಗೂ ಸಾಕಷ್ಟು ಅನುಭವ, ಪುರಾಣಜ್ಞಾನ, ಸೃಜನಶೀಲತೆಗಳು ಬೇಕಾಗುತ್ತದೆ. ಅರ್ಥಧಾರಿಯು ಪ್ರೇಕ್ಷಕರ ಮನಸ್ಸಿನ ವಿವಿಧ ಸ್ತರಗಳೊಂದಿಗೆ ಸಂಭಾಷಿಸುತ್ತಾನಾದ ಕಾರಣ – ಅಂತಹ ಮನ ಸಂಭಾಷಣೆಗೆ ಆತ ಮಾನಸಿಕವಾಗಿ ಸಿದ್ಧನಾಗಿರಬೇಕು. ಆಗ ಮಾತ್ರ ತಾಳಮದ್ದಳೆಯ ಸ್ವಾರಸ್ಯ ಅವನ ಕೈವಶವಾಗುತ್ತದೆ.ಹೀಗೆ ತಾಳಮದ್ದಳೆಯು ಪ್ರಸಂಗ ಪಠ್ಯದಿಂದ ಆರಂಭವಾಗಿ ಭಾಗವತರ ಹಾಡು, ಹಿಮ್ಮೇಳವಾದನ, ಅರ್ಥಗಾರಿಕೆ ಹಾಗೂ ಪ್ರೇಕ್ಷಕ ಗ್ರಹಿಕೆ ಎಂಬ ಪಂಚಅಂಶಗಳೊಂದಿಗೆ ಪೂರ್ಣಗೊಳ್ಳುತ್ತದೆ.

– ವಿ.ಎನ್.ಆರ್.

ತಿಡಂಬು ನೃತ್ಯ ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳ ದೇವಸ್ಥಾನಗಳಲ್ಲಿ ಹಾಗೂ ಕಲ್ಲಿಕೋಟೆ ಜಿಲ್ಲೆಯ ಕೋಳಪುರ ನದಿಯ ಉತ್ತರಕ್ಕಿರುವ ಪ್ರದೇಶಗಳ ದೇವಸ್ಥಾನಗಳಲ್ಲಿ ನಡೆಸುವ ಧಾರ್ಮಿಕ ಕಲೆಯಾಗಿದೆ ತಿಡಂಬು ನೃತ್ಯ. ದೇವರ ವಿಗ್ರಹವನ್ನು ಹೊತ್ತು ನಡೆಸುವ ವಿಶಿಷ್ಟ ಶೈಲಿಯ ನೃತ್ಯವಿದು. ದೇವಸ್ಥಾನದ ಹೊರಾಂಗಣದಲ್ಲಿ ಸಾಮಾನ್ಯವಾಗಿ ತಿಡಂಬು ನೃತ್ಯ ಜರುಗುವುದು. ಆದರೆ ತಳಿಪರಂಬ ತೃಚ್ಚಂಬರ ಕ್ಷೇತ್ರದಲ್ಲಿ ದೇವರನ್ನು ಹೊತ್ತು ಮೆರೆವಣಿಗೆ ಸಾಗಿ ಪೂಕೋತ್ ಎಂಬ ಸ್ಥಳದಲ್ಲಿ ಧಾರ್ಮಿಕ ಆಚರಣೆ ನಡೆಯುತ್ತದೆ.

ಪ್ರತಿಯೊಂದು ದೇವಸ್ಥಾನದ ವಾರ್ಷಿಕ ಜಾತ್ರೆಯ ಅನುಬಂಧವಾಗಿ ತಿಡಂಬು ನೃತ್ಯ ನಡೆಯುವುದು. ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಸಂದರ್ಭಧಲ್ಲಿಯೂ ಈ ಆಚರಣೆ ಕಂಡು ಬರುತ್ತದೆ. ತೀರ ಧಾರ್ಮಿಕವಾದ ಆಚರಣೆಯಾಗಿದ್ದರೂ ಈ ನೃತ್ಯವನ್ನು ಕಲೆ ಎಂಬ ನೆಲೆಯಲ್ಲಿಯೂ ಆಸ್ವಾದಿಸಬಹುದು. ಸಾಮಾನ್ಯವಾಗಿ ದೇವಸ್ಥಾನಗಳ ಜಾತ್ರೆ ತುಲಾಮಾಸದಿಂದ ಮೇಷ ಮಾಸದವರೆಗೆ ನಡೆಯುತ್ತದೆ. ಆದುದರಿಂದ ತಿಡಂಬು ನೃತ್ಯವೂ ಈ ಕಾಲದಲ್ಲಿ ನಡೆಯುತ್ತದೆ.

ದೇವಸ್ಥಾನಗಳಲ್ಲಿ ಪ್ರತಿಷ್ಠಾವಿಗ್ರಹಗಳ ಜತೆಗೆ ತಲೆಯಲ್ಲಿ ಹೊತ್ತುಕೊಳ್ಳುವ ವಿಗ್ರಹಗಳೂ ಇರುತ್ತವೆ. ಇವುಗಳಿಗೆ ಶೀವೇಲಿ ವಿಗ್ರಹ ಎನ್ನುತ್ತಾರೆ. ಪ್ರತಿಷ್ಠಾ ವಿಗ್ರಹವು ಕಲ್ಲು, ಲೋಹ ಅಥವಾ ಪಂಚಲೋಹಗಳಿಂದ ನಿರ್ಮಿತವಾಗಿರುತ್ತದೆ. ಆದರೆ ಶೀವೇಲಿ ವಿಗ್ರಹ ಸಾಮಾನ್ಯವಾಗಿ ಬೆಳೆಯದಾಗಿರುತ್ತದೆ. ಈ ವಿಗ್ರಹಕ್ಕೆ ಒಂದು ಪ್ರಬಾವಳಿ ಇರುತ್ತದೆ. ಬೆಳ್ಳಿ ಹಾಗೂ ಚಿನ್ನದ ಹೂಗಳಿಂದ ಪ್ರಭಾವಳಿ ಅಲಂಕೃತವಾಗಿರುತ್ತದೆ. ಜಾತ್ರೆಯ ಸಂದರ್ಭದಲ್ಲಿ ನಂಬೀಳ ಸಮುದಾಯದವರು ಕಟ್ಟಿದ ಹೂ ಮಾಲೆಗಳಿಂದ ಅಲಂಕರಿಸಿ, ನಿರ್ದಿಷ್ಟ ವ್ಯಕ್ತಿ ತಲೆಯಲ್ಲಿ ಧರಿಸಿ ನೃತ್ಯ ಮಾಡುತ್ತಾನೆ.

ದೇವರ ವಿಗ್ರಹವನ್ನು ಗರ್ಭಗುಡಿಯಿಂದ ಹೊರತರಲು ದೀಪ ಹಾಗೂ ವಾದ್ಯಗಳ ಸಾನ್ನಿಧ್ಯಬೇಕು. ನಂಬೀಶನ್, ವಾರ್ಯರ್, ಶಾರೋಡಿ ಮೊದಲಾದ ಸಮುದಾಯದ ಹಕ್ಕಿನ ಕುಟುಂಬದ ವ್ಯಕ್ತಿಗಳು ದೇವರ ವಿಗ್ರಹವನ್ನು ಹೊರತಂದು, ನೃತ್ಯ ಮಾಡಿಸಿ ಗರ್ಭಗುಡಿಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಕಂಚಿನ ದೀಪವನ್ನು ದೇವರ ವಿಗ್ರಹಕ್ಕೆ ಅಭಿಮುಖವಾಗಿ ಎರಡೂ ಬದಿಗಳಲ್ಲಿ ಹಿಡಿದುಕೊಂಡಿರಬೇಕು. ಮಾರಾರ್ ಸಮುದಾಯದವರು ಪಂಚವಾದ್ಯಗಳನ್ನು ಮೊಳಗಿಸುವರು. ನೃತ್ಯ ಮಾಡುವ ವ್ಯಕ್ತಿ ಪರಂಪರೆಯಿಂದ ಬಂದಿರುವ ವಸ್ತ್ರಗಳನ್ನು ಉಟ್ಟು, ಉತ್ತರೀಯವನ್ನು ಧರಿಸುತ್ತಾನೆ. ಕೊರಳಿಗೆ ಹಾರ, ಕಿವಿಗೆ ಕುಂಡಲ, ಕೈಗಳಿಗೆ ಬಳೆ, ಹಣೆಯಲ್ಲಿ ಚಿನ್ನದ ಪಟ್ಟಿ ಧರಿಸುತ್ತಾನೆ. ನಂಬೂದಿರಿಗಳು ಮಾತ್ರ ತಿಡಂಬು ನೃತ್ಯ ಮಾಡುತ್ತಾರೆ. ಚಿಂಡೆಯ ತಾಳಕ್ಕೆ ಅನುಗುಣವಾಗಿ ವಿಗ್ರಹ ಹೊತ್ತ ವ್ಯಕ್ತಿಯ ದೇಹದಲ್ಲಿ ಸಂಚಲನವಾಗಿ, ನೃತ್ಯದ ವಿಶಿಷ್ಟ ಹೆಜ್ಜೆಗಳನ್ನಿಡುತ್ತಾ ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುತ್ತಾನೆ. ಗರ್ಭಗುಡಿಯಲ್ಲಿರುವ ದೇವರು ಭಕ್ತರನ್ನು ಹರಸಲು ವರ್ಷಕ್ಕೊಮ್ಮೆ ಹೊರಬರುವುದಾಗಿ ನಂಬಿಕೆ, ಜಾತ್ರೆಯ ಸಂದರ್ಭವಾದ ಕಾರಣ ತಿಡಂಬು ನೃತ್ಯಗಳನ್ನು ನೋಡಲು ಬಹಳ ಜನರು ಸೇರುತ್ತಾರೆ. ದೇವರು ಭಕ್ತರ ಮಧ್ಯೆ ಬರುವ ವಿಶಿಷ್ಟ ಆಚರಣೆ ತಿಡಂಬು ನೃತ್ಯದ ಆಕರ್ಷಣೆಯಾಗಿದೆ.

ಆಯಾ ಕ್ಷೇತ್ರದ ಪರಂಪರಾಗತ ಪೂಜಾರಿ ಅಥವಾ ತಂತ್ರಿಗಳು ತಿಡಂಬು ನೃತ್ಯವನ್ನು ಮಾಡುತ್ತಾರೆ. ತಿಡಂಬು ನೃತ್ಯವನ್ನು ಮಾಡಲು ವಿಶೇಷ ಪರಿಣತಿ ಅಗತ್ಯವಾಗಿದೆ. ಬ್ರಾಹ್ಮಣರು ಈ ನೃತ್ಯವನ್ನು ಮಾಡುವವರಾದರೂ, ಮಾರಾರ್ ಸಮುದಾಯದವರು ಇದನ್ನು ಕಲಿಸಿಕೊಡುತ್ತಾರೆ. ಮಾರಾರ್ ಗುರುವಿನಿಂದ ಅನುಮತಿ ಪಡೆದು, ತಾಳ ಬಡಿದು ತರಬೇತಿ ಆರಂಭವಾಗುತ್ತದೆ. ಅನಂತರ ತಲೆಯ ಮೇಲೆ ಮರದ ಹಲಗೆಯನ್ನಿರಿಸಿ ನೃತ್ಯವನ್ನು ಅಭ್ಯಸಿಸುತ್ತಾರೆ. ಈ ಕಲೆಯ ಕುರಿತು ವಿಶೇಷವಾದ ಅಧ್ಯಯನಗಳು ಇದುವರೆಗೂ ನಡೆದಿಲ್ಲ.

– ಇ.ಕೆ.ಜಿ. ಅನುವಾದ ಎನ್.ಎಸ್.

ತಿಮ್ಮಮ್ಮ ಮರ್ರಿಚೆಟ್ಟು : ಆಂಧ್ರದಲ್ಲಿರುವ ದೊಡ್ಡ ಆಲದ ಮರ. ಭಾರತ ದೇಶದಲ್ಲಿ ಪ್ರಕೃತಿ ಸಂಪತ್ತಿಗೆ ಯಾವ ಕೊರೆತೆಯೂ ಇಲ್ಲ. ನಮ್ಮ ದೇಶದಲ್ಲಿರುವ ವನ ಸಂಪತ್ತು ಎಲ್ಲಾ ತರಹದ ಅಭಿವೃದ್ಧಿಗೆ ವಿಶೇಷ ಕಾರಣವಾಗುತ್ತದೆ. ಮದ್ರಾಸಿನಲ್ಲಿರುವ ಅಡಯಾರ್ ‘ಆಲದಮರ’ ಕ್ಕಿಂತಲೂ ಕಲ್ತತ್ತಾ ಬೊಟಾನಿಕಲ್ ಗಾರ್ಡನ್‌ನಲ್ಲಿರುವ ಆಲದ ಮರಕ್ಕಿಂತಲೂ ನಾಲ್ಕೈದು ರಷ್ಟು ದೊಡ್ಡ ಆಲದ ಮರ ತಿಮ್ಮಮ್ಮನ ಆಲದಮರ. ಇದು ಆಂಧ್ರ ಪ್ರದೇಶಧ ಅನಂತಪುರ ಜಿಲ್ಲೆಯಲ್ಲಿದೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಆಲದಮರದ ವಯಸ್ಸು ಸುಮಾರು ೫೫೦ ವರ್ಷಗಳು. ಈ ಮರ ಅನಂತಪುರದಿಂದ ಸುಮಾರು ೧೨೦ ಕಿ.ಮೀ.ದೂರದಲ್ಲಿ ಕದಿರಿ ರಾಯಚೋಟಿ ಮಾರ್ಗದಲ್ಲಿ ಕದಿರಿಯಿಂದ ೨೭ ಕಿ.ಮೀ. ದೂರದಲ್ಲಿ ಗೂಟ ಬೈಲು ಗ್ರಾಮದಲ್ಲಿದೆ. ಇದಕ್ಕೆ ೧೧೦೦ ಬಿಳಲು ಇದ್ದ ಹಾಗೆ ತಿಳಿಯುತ್ತದೆ. ಇದಕ್ಕೆ ಸಂಬಂಧ ಪಟ್ಟಂತೆ ಈ ಪ್ರಾಂತ್ಯದಲ್ಲಿ ರೂಢಿಯಲ್ಲಿರುವ ಕಥೆಯ ಪ್ರಕಾರ ಅನಂತಪುರ ಜಿಲ್ಲೆಯಲ್ಲಿರುವ ಪೆನುಕೊಂಡ ತಾಲ್ಲೂಕಿನಲ್ಲಿ ಬುಕ್ಕ ಪಟ್ಟಣ ಎಂಬ ಗ್ರಾಮದಲ್ಲಿ ಶೆಟ್ಟಿ ಬಲಿಜ ಕುಲಕ್ಕೆ ಸೇರಿದ ಚೆನ್ನಕ ವೆಂಕಟಪ್ಪ ದಂಪತಿಗಳಿಗೆ ತಿಮ್ಮಾಂಬ ಎಂಬ ಹೆಸರುಳ್ಳ ಮಗಳು ಇದ್ದಳು. ಆಕೆಗೆ ಚಿಕ್ಕಂದಿನಿಂದ ದೈವ ಭಕ್ತಿ ಬಡವರ ಬಗ್ಗೆ ಕನಿಕರ ಭಾವವಿತ್ತು. ಆಕ್ಗೆ ತರುಣ ವಯಸ್ಸು ಬಂದ ನಂತರ ಗೂಟ ಬೈಲು ಗ್ರಾಮಕ್ಕೆ ಸೇರಿದ ಬಾಲ ವೀರಯ್ಯನ ಜೊತೆ ಮದುವೆಯಾಯಿತು. ದುರದೃಷ್ಟದಿಂದ ಕೆಲವು ವರ್ಷಗಳ ನಂತರ ಆಕೆಯ ಗಂಡ ವ್ಯಾಧಿಗೆ ಗುರಿಯಾದ ಎಷ್ಟು ವೈದ್ಯ ಮಾಡಿಸಿದರೂ ರೋಗ ಗುಣವಾಗಲಿಲ್ಲ. ಅದು ಅಂಟುರೋಗವೆಂದು ಗ್ರಾಮಕ್ಕೆಲ್ಲಾ ವ್ಯಾಪಿಸುತ್ತದೆಯೆಂದು ಭಾವಿಸಿ ಗ್ರಾಮಸ್ಥರು ಬಾಲವೀರಯ್ಯನ್ನು, ತಿಮ್ಮಮಾಂಬಳನ್ನು ಊರಿನಿಂದ ಹೊರ ಹಾಕಿದರು. ಅನಂತರಆಕೆ ಗಂಡನಿಗೆ ಸೇವೆಯನ್ನು ಮಾಡುತ್ತಾ ಕಾಲ ಕಳೆದಳು.ಆದರೆ ಕೆಲವು ಕಾಲಕ್ಕೆ ವೀರಯ್ಯ ಸಾವನ್ನಪ್ಪಿದ. ಪತಿಯೊಡನೆ ಸತಿ ಕೂಡ ದೇಹ ತ್ಯಜಿಸುವುದು ಸತಿಯ ಧರ್ಮವೆಂದು ಭಾವಿಸಿದ ತಿಮ್ಮಮಾಂಬ ಬಂಧುಗಳು ಬೇಡವೆಂದರು ಕೇಳದೆ ಸತಿಸಹಗಮನ ಮಾಡಬೇಕೆಂದು ಹಠ ಹಿಡಿದು ಚಿತೆ ಹತ್ತಿದಳು. ಆ ಚಿತೆ ಮುಂದೆ ಹಸಿ ಆಲದ ಕೊಂಬೆಗಳಿಂದ ನಾಟಿದ ಚಿತೆಗೆ ಮಾವಿನ ತೋರಣಗಳು ಕಟ್ಟಿದರು. ಆ ಮರವೇ ಈಗ ಬೃಹದಾಕಾರವಾಗಿ ಬೆಳೆಯಿತು.

– ಕೆ.ಎಸ್.ಎಂ. ಅನುವಾದ ಎ.ಎ

ತಿರಯಾಟಂ ಕೇರಳದ ಹಳ್ಳಿಗಳಲ್ಲಿ ಅನೇಕ ದೇವಸ್ಥಾನಗಳಿವೆ. ಮಾತ್ರವಲ್ಲ, ಹಳೆಯ ಮನೆತನಗಳಿಗೆ ಸಂಬಂಧಿಸಿದಂತೆ ಎಷ್ಟೋ ಆರಾಧನಾಲಯಗಳಿವೆ. ಇಂತಹ ತರವಾಡು ಮನೆಗಳಲ್ಲಿ ಮನೆಯ ವಾಯವ್ಯ ದಿಕ್ಕಿನಲ್ಲಿ ಕೆಲವು ಆರಾಧನಾ ಮೂರ್ತಿಗಳಿರುವ ಆರಾಧನಾಲಯಗಳಿವೆ. ಇದನ್ನು ‘ಮಂಡಕ’ ಎಂದು ಕರೆಯುತ್ತಾರೆ. ಕೆಲವು ತರವಾಡುಗಳಲ್ಲಿ ಅಲ್ಲಿ ಹಿಂದೆ ಬದುಕಿದ್ದ ಪೂರ್ವಿಕರನ್ನೂ ಆರಾಧಿಸುವರು. ವರ್ಷಂ ಪ್ರತಿ ಇಂತಹ ಮಂಡಕಗಳಲ್ಲಿ ಆರಾಧನೆಗಲು ನಡೆಯುತ್ತವೆ. ಅವುಗಳಲ್ಲಿ ಮುಖ್ಯವಾದುದು ತಿರಯಾಟಂ. ಈ ಧಾರ್ಮಿಕ ಆಚರಣಾತ್ಮಕ ಕಲೆ ಮುಖ್ಯವಾಗಿ ಕಲ್ಲಿಕೋಟೆ ಜಿಲ್ಲೆಯಲ್ಲಿ ಧನುರ್ಮಾಸದಿಂದ ಮೇಷ ಮಾಸದವರೆಗೆ ಜರುಗುತ್ತದೆ.

ತಿರಯಾಟದ ಮೊದಲಿಗೆ ವೆಳ್ಳಾಟಂ ನಡೆಯುತ್ತದೆ. ತಲೆಯಲ್ಲಿ ಚಿಕ್ಕ ಶಿರೋಭೂಷಣಗಳು, ಎದೆಯಲ್ಲಿ ಹಾರ, ವರ್ಣರಂಜಿತ ಉಡುಗೆ, ಕಾಲಿಗೆ ಗಗರ ಮೊದಲಾದವು ವೆಳ್ಳಾಟದ ವೇಷಭೂಷಣ.

80

ವೇಷಧರಿಸಿ ಅಂಗಳಕ್ಕೆ ಬಂದ ಕೂಡಲೇ ತಿರ ಪಾತ್ರಧಾರಿ ಕುಣಿತ ಆರಂಭಿಸುವನು. ಚೆಂಡೆ ವಾದ್ಯಗಳ ತಾಳಕ್ಕೆ ಅನುಸಾರವಾಗಿ ಕುಣಿದು, ಪ್ರತಿಷ್ಠೆಯ ಮುಂಭಾಗದಲ್ಲಿ ಕೈ ಮುಗಿದು ನಿಲ್ಲುವನು. ಆಗ ಕೆಲವರು ತೋಟ್ಟಂಪಾಟುಗಳನ್ನು ಹೇಳುತ್ತಾರೆ. ಸ್ವಲ್ಪವೇ ಸಮಯದಲ್ಲಿ ತಿರ ಪಾತ್ರಧಾರಿ ಆವೇಶಗೊಳ್ಳುವನು. ಅನಂತರ ತಿರ ಪಾತ್ರಧಾರಿ ನುಡಿಗಟ್ಟುಗಳನ್ನು ಹೇಳುವನು. ಹೀಗೆ ವೆಳ್ಳಾಟಂ ಕೊನೆಗೊಳ್ಳುವುದು.

ವೆಳ್ಳಾಟದ ಅನಂತರ ಕೆಲವು ದೈವಗಳಿಗೆ ವೆಳ್ಳಕಟ್ಟ್ ಎಂಬ ಆರಣೆ ಇದೆ. ಸರಳವಾದ ವೇಷವನ್ನು ಧರಿಸಿ, ಒಂದು ವಸ್ತ್ರನು ತಲೆಯಮೇಲೆ ಬೀಸುತ್ತಾ ಕುಣಿಯುವುದೇ ವೆಳ್ಳಕಟ್ಟ್, ಅನೇಕ ವಿಧಿಗಳು ನಡೆದು ಈ ಕಾರ್ಯಕ್ರಮ ಮುಗಿಯುತ್ತದೆ. ಕೊನೆಯಲ್ಲಿ ತಿರಯಾಟ ರಂಗಕ್ಕೆ ಬರುತ್ತದೆ.ಬೃಹತ್ ಮುಡಿ, ಮುಖ ಹಾಗೂ ದೇಹದಲ್ಲಿ ವರ್ಣರಂಜಿತ ಬರೆವಣಿಗೆ, ಕೈಗಳಲ್ಲಿ ಆಯುಧಗಳು, ವರ್ಣರಂಜಿತ ಉಡುಗೆ, ಕಾಲಿಗೆ ಗಗ್ಗರ, ವೇಷ ವಿಧಾನದೊಂದಿಗೆ ಗಾಂಭೀಕ್ಯದಿಂದ ತಿರ ಅಂಗಳವನ್ನು ಪ್ರವೇಶಿಸುತ್ತದೆ. ಇದು ದೈವದ ಪೂರ್ಣರೂಪ ಎಂಬುದು ನಂಬಿಕೆ.

ತಿರ ಎಂಬ ಶಬ್ದಕ್ಕೆ ಅರ್ಧವೃತ್ತಾಕಾರದಲ್ಲಿರುವ ಮರದಿಂದ ನಿರ್ಮಿಸಿದ ಶಿರೋಭೂಷಣ ಎಂದರ್ಥ. ಇಂತಹ ಸುಂದರ ಕಿರೀಟವನ್ನು ಧರಿಸಿ ಕುಣಿಯುವುದರಿಂದ ತಿರಯಾಟ ಎಂಬ ಹೆಸರು ಬಂದಿರಬೇಕು. ತಿರ ವೇಷಧಾರಿ ಅಂಗಳಕ್ಕೆ ಬಂದ ಕೂಡಲೇ ಚೆಂಡೆವಾದ್ಯ ಕುಣಿತಗಳ ವೈಭವ ಕಂಡುಬರುತ್ತದೆ. ಪ್ರತಿಯೊಂದು ತಿರಕ್ಕೂ ನಿರ್ದಿಷ್ಟ ತೋಟ್ಟಂ ಹಾಗೂ ಕುಣಿತಗಳಿವೆ. ಆಚರಣೆಗಳಲ್ಲಿ ವ್ಯತ್ಯಾಸಗಲು ಕಂಡುಬರುತ್ತವೆ.

ಗುಳಿಗ, ಕುಟ್ಟಿಚಾತ, ಭೈರವ, ಪರದೇವತೆ, ವೀರಭದ್ರ, ಭಗವತಿ, ಕರಿಯಾತನ್, ಕರುವೇಲನಾಗ ಮೊದಲಾದ ದೈವಗಳನ್ನು ತಿರಯಾಟದಲ್ಲಿ ಸಾಮಾನ್ಯವಾಗಿ ಕೋಲವಾಗಿ ಕಟ್ಟುತ್ತಾರೆ. ಈ ಆಚರಣೆಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳು ಕಂಡುಬರುತ್ತವೆ. ತರವಾಡಿನ ಹಿರಿಯ ವ್ಯಕ್ತಿಗಳು ತೀರಿ ಹೋದರೆ ಅವರ ಕೋಲವನ್ನು ತೀರ ರೂಪದಲ್ಲಿ ಕಟ್ಟುತ್ತಾರೆ. ತಿರಯಾಟದಲ್ಲಿ ವೇಷ ಕುಣಿತ, ಹಾಡು, ವಾದನ ಇತ್ಯಾದಿ ಅಂಶಗಳಿಗೆ ಸ್ಥಾನವಿದೆ. ಮಣ್ಣಾನ್, ಮುನ್ನೂಟಾನ್, ಪಾಣನ್ ಸಮುದಾಯದವರು ತಿರಕೋಲಗಳನ್ನು ಕಟ್ಟುತ್ತಾರೆ.

– ಸಿ.ಜಿ.ಎನ್. ಅನುವಾದ ಎನ್.ಎಸ್.

ತಿರಿಯುಳಿಚ್ಚಿಲ್ ನಾಗಾರಾಧನೆಯ ಅಂಗವಾಗಿ ನಾಗ ಪ್ರೀತಿಗಾಗಿ ನಡೆಸುವ ಧಾರ್ಮಿಕ ಆಚರಣೆಯನ್ನು ‘ತಿರಿಯುಳಿಚ್ಚಿಲ್ ನಡೆಯುತ್ತದೆ ನಾಗಕಳವನ್ನು ಬರೆದು ಅದರ ಮುಂಭಾಗದಲ್ಲಿ ವಾದ್ಯಘೋಷಗಳೊಂದಿಗೆ ತುಪ್ಪದ ದೀಪವನ್ನು ಶರೀರವಿಡೀ ನಿವಾಳಿಸಿ ಕುಣಿಯುವುದು ಇದರ ಪ್ರಧಾನ ಆಚರಣೆಯಾಗಿದೆ. ಪುಳ್ಳುವ ಸಮುದಾಯದವರು ಇದನ್ನು ನಡೆಸಿಕೊಂಡುತ್ತಾರೆ. ಕೌಟುಂಬಿಕ ಸಮೃದ್ಧಿ ಹಾಗೂ ಸಂತಾನಾಭಾಗ್ಯಕ್ಕಾಗಿ ಈ ಆಚರಣೆಯನ್ನು ನಡೆಸುತ್ತಾರೆ. ಪಾಲಕಾಡು, ತ್ರಿಶ್ಶೂರು, ಮಲಪುರಂ, ಕಲ್ಲಿಕೋಟೆ ಜಿಲ್ಲೆಗಳಲ್ಲಿ ನಾಗಕಳದೊಂದಿಗೆ ಈ ಆಚರಣೆ ಪ್ರಚಲಿತವಾಗಿದೆ.

ನಾಗಕಳವನ್ನು ಬರೆದು ಪೂಜೆಯನ್ನು ಮಾಡಿದ ನಂತರ ತಿರಿಯುಳಿಚ್ಚಿಲ್ ನಡೆಯುತ್ತದೆ. ಹತ್ತಿಯ ಬಟ್ಟೆಯಿಂದ ಹೊಸೆದ ಬತ್ತಿಗಳನ್ನು ಜೋಡಿಸಿ, ತೆಂಗಿನೆಣ್ಣೆಯಲ್ಲಿ ಮುಳುಗಿಸಿ ಉರಿಸುವರು. ಉರಿಯುವ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಬಾಳೆಯ ಸಿಪ್ಪೆಯಿಂದ ಮುಚ್ಚುವರು. ಈ ಬತ್ತಿಯನ್ನು ಉರಿಸಿ ಆಚರಣೆಯನ್ನು ನಡೆಸುವ ಕುಟುಂಬ೯ ಹಿರಿಯ ವ್ಯಕ್ತಿ ಪುಳ್ಳುವವನಿಗೆ ನೀಡುವನು. ಪುಳ್ಳುವನ್ ಈ ಬತ್ತಿಯನ್ನು ಕೈಯಲ್ಲಿ ಹಿಡಿದು ದೇಹಕ್ಕೆ ನಿವಾಳಿಸಿ, ಬೀಸುತ್ತಾ ಅನೇಕ ಕುಣಿತಗಳಿಂದ ರಂಜಿಸುವನು. ಮುತ್ತಾಳಂ, ಅಡಂದ, ಚೆಂಬ, ಪಾಂಚಾರಿ, ನಾಲಿರಟ್ಟಿ ಮೊದಲಾದ ತಾಳಗಳನ್ನು ಪುಳ್ಳುವಕುಡದಲ್ಲಿ ಬಾರಿಸುವಾಗ ವಿವಿಧ ಭಗೆಯ ಕುಣಿತಗಳು ಜರುಗುತ್ತವೆ. ಹಿನ್ನೆಲೆಯಲ್ಲಿ ಪುಳ್ಳುವ ಹಾಗೂ ಪುಳ್ಳುವತ್ತಿ ನಿರ್ದಿಷ್ಟರಾಗದಲ್ಲಿ ಹಾಡುತ್ತಾರೆ. ಪುಳ್ಳುವವೀಣೆ, ಪುಳ್ಳುವಕುಡ, ಚಕ್ರತಾಳ ಹಿನ್ನೆಲೆ ವಾದ್ಯಗಳಾಗಿವೆ. ತಿರಿಯುಳಟ್ಟಿಲ್ ದೈಹಿಕ ಪರಿಶ್ರಮವಿರುವ ಕುಣಿತವಾಗಿದೆ. ದೇಹವಿಡೀ ದೀಪದಿಂದ ಸ್ಪರ್ಶಿಸಿದರೂ ಕರ್ಮಿಗ ಸುಟ್ಟ ಗಾಯಗಳಾಗುವುದಿಲ್ಲ.

81

ಕೆಲವು ಪ್ರದೇಶಗಳಲ್ಲಿ ನಾಗಕಳವಿಲ್ಲದೆಯೂ ತಿರಿಯುಳಿಚ್ಚಿಲ್ ನಡೆಯುವುದು. ನಾಗ ಸಂತುಷ್ಟಿಗಾಗಿ ಹಾಡುಗಳನ್ನು ಹಾಡಿದ ನಂತರ ಈ ವಿಧಿ ನಡೆಯುತ್ತದೆ ಕೇರಳದ ಇತರಕೆಲವು ಧಾರ್ಮಿಕ ಕಲೆಗಳೊಂದಿಗೆ ಈ ಆಚರಣೆಯನ್ನು ನಡೆಸುವುದಿದೆ. ಕಳಮೆಳುತ್ತಪಾಟು, ತೀಯಾಚು ಮೊದಲಾದ ಧಾರ್ಮಿಕ ಕಲೆಗಳ ಸಂದರ್ಭಗಳಲ್ಲಿ ಈ ಆಚರಣೆ ನಡೆಯುವುದು, ಭದ್ರಕಾಳಿ, ಅಯ್ಯಪ್ಪನ್, ವೇಟುಕೊರುಮಗನ್ ಮೊದಲಾದ ಕಳಂಪಾಟು ಸಂದರ್ಭಗಳಲ್ಲಿಯೂ ತಿರಿಯುಳಿಚ್ಚಿಲ್ ಆಚರಣೆ ನಡೆಯುತ್ತದೆ. ಕಳಂ ಮಾಸುವ ಮೊದಲು ಈ ಆಚರಣೆ ನಡೆಯುತ್ತದೆ. ಆದರೆ ದೇಹಾದ್ಯಂತ ನಿವಾಳಿಸುವ ಕ್ರಮವಿಲ್ಲ. ಅಯ್ಯಪ್ಪನ್ ತೀಯಾಟು ಹಾಗೂ ಭದ್ರಕಾಳಿ ತೀಯಾಟಿನಲ್ಲಿ ಪಂಜು ನಿವಾಳಿಸುವ ಕ್ರಮವಿದೆ. ಕೆಲವು ತೆಯ್ಯಂ ಆರಾಧನೆಯ ಸಂದರ್ಭಗಳಲ್ಲಿ ತಿರಿಯುಳಿಚ್ಚಿಲ್ ವಿಧಿಯೂ ಇದೆ. ಒಬ್ಬರ್ಯ, ವೀರನ್ ಮೊದಲಾದ ತೆಯ್ಯಂಗಳ ಸಂದರ್ಭಗಳಲ್ಲಿ ಈ ಆಚರಣೆ ನಡೆಯುತ್ತದೆ. ಅಗ್ನಿಯು ಪರಿಶುದ್ಧಿಯ ಸಂಕೇತವಾಗಿದ್ದು, ಜನಪದ ಧಾರ್ಮಿಕ ರಂಗಕಲೆಗಳಲ್ಲಿ ವಿಶಿಷ್ಟವಾಗಿ ಬಳಕೆಯಾಗುತ್ತಿದೆ.

ತಿರಿಯುಳಿಚ್ಚಿಲ್ ಒಂದು ಆರಾಧನ ಕಲೆಯಾಗಿಯೂ, ಸಾಂಸ್ಕೃತಿಕ ಕಲೆಯಾಗಿಯೂ ಕೇರಳದಲ್ಲಿ ಚಾಲ್ತಿಯಲ್ಲಿದೆ. ಆಧನಿಕ ಕಾಲದಲ್ಲಿ ಯುವಕರೂ ಕೂಡ ಈ ಕಲೆಯಲ್ಲಿ ಭಾಗವಹಿಸುತ್ತಿದ್ದಾರೆ.

– ಪಿ.ಆರ್.ಕೆ. ಅನುವಾದ ಎನ್.ಎಸ್