ತಿರುಮಣಚ್ಚಡಂಗು ತಮಿಳುನಾಡಿನ ಮದುವೆ ಶಾಸ್ತ್ರ. ಜನರ ಜೀವಲ್‌ಲಿ ವಿವಾಹ ಒಂದು ಅವಿಭಾಜ್ಯ ಅಂಗ. ತಮಿಳುನಾಡಿನ ವಿವಾಹಪದ್ಧತಿ ನಿರ್ದಿಷ್ಟ ಪರಿಮಿತಿಯಲ್ಲಿ ಜರುಗುತ್ತದೆ. ಮದುವೆಯ ನಿಷ್ಕರ್ಷೆ ಎರಡು ಬಗೆಯಾಗಿ ಆಗುತ್ತದೆ. ಒಂದು ಒಳಕುಟುಂಬ ಮತ್ತು ಒಳ ಜಾತಿಯ ನಡುವೆ ನಡೆಯುವುದು. ಇದನ್ನು ಅಗಮಣಮ್ ಎನ್ನುತ್ತಾರೆ. ಇಲ್ಲಿ ಸ್ವಕುಟುಂಬ,ಸ್ವಜಾತಿ, ಒಂದೇ ದೇವರು, ವೃತ್ತಿ ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ. ಮತ್ತೊಂದು ಹೊರ ಕುಟುಂಬ ಮತ್ತು ಹೊರ ಜಾತಿಗಳೊಂದಿಗೆ ಏರ್ಪಡ ವಿವಾಹ ಇದನ್ನು ಪುರಮಣಮ್ ಎನ್ನುತ್ತಾರೆ. ಇಲ್ಲಿಯೂ ಸಹ ಕುಟುಂಬ, ದೇವರು, ವೃತ್ತಿ ಮುಂತಾದ ಅಂಶಗಳನ್ನು ಆದರಿಸಲಾಗುತ್ತದೆ.

ನಿಶ್ಚಿತಾರ್ಥ ಮಾಡುವುದು : ಇದು ಮದುವೆಗೆ ಮುನ್ನ ನಡೆಯುವ ಆಚರಣೆ. ಇದರಲ್ಲಿ ಗಂಡಿನ ಮನೆಯವರು ಹೆಣ್ಣಿನ ಮನೆಯವರು, ಅವರ ಸಂಬಂಧಿಕರು, ಊರ ಪ್ರಮುಖರೂ ಹಾಗೂ ಊರಿನ ಜನರು ಒಟ್ಟುಗೂಡಿ ಹುಡುಗನ ಮನೆಯೊಂದಿಗೆ ತಟ್ಟೆಗಳಲ್ಲಿ ತಾಂಬೂಲವನ್ನು ತೆಗೆದುಕೊಂಡು ಹೆಣ್ಣಿನ ಮನೆಗೆ ಹೋಗುತ್ತಾರೆ. ತಟ್ಟೆಗಳಲ್ಲಿ ತಾಂಬೂಲವನ್ನು ತೆಗೆದುಕೊಂಡು ಹೆಣ್ಣಿನ ಮನಗೆ ಹೋಗುತ್ತಾರೆ. ತಟ್ಟೆಗಳಲ್ಲಿ ಹೆಣ್ಣಿನ ಹೊಸ ಸೀರೆ, ಬಾಳೆ ಹಣ್ಣು (ಏಳುಚಿಪ್ಪು) ಏಳು ತೆಂಗಿನಕಾಯಿ, ಒಂದು ಸೇರು ಅಡಕೆ, ಒಂದು ಕೌಳಿಗೆ ವೀಳ್ಯೆದೆಲೆ ಗಂಧ,ಕುಂಕುಮ, ಹೂವಿನ ಹಾರ ಮುಂತಾದವುಗಳೊಂದಿಗೆ ಹೆಣ್ಮಿನ ಮನೆಗೆಬಂದು ಕೂರುತ್ತಾರೆ. ಇಲ್ಲಿ ಊರಿನ ಯಜಮಾನ ಹುಡುಗ ಹುಡುಗಿಯ ತಂದೆ ತಾಯಿಗಳು ವಿವಾಹ ಮಧ್ಯಸ್ಥಿಕೆದಾರರು ಹಾಗೂ ಹುಡಗ ಹುಡುಗಿ ಮುಖ್ಯವಾಗಿ ಇರುತ್ತಾರೆ. ಇಲ್ಲಿ ನಡೆಯುವ ಆಚರಣೆಯನ್ನು ‘ಗುರುತು ಹಾಕುವುದು’ ಎಂದು ಕರೆಯುತ್ತಾರೆ. ಇಲ್ಲಿ ಪರಸ್ಪರ ಉಂಗುರಗಳನ್ನು ಹುಡುಗ ಹುಡುಗಿ ಹಾಕಿಕೊಳ್ಳುವುದು ರೂqಡಿ ವರನ ಮನೆಯವರು ತಂದ ಹೊಸ ಸೀರೆ, ಹಣ್ಣು, ಹೂವು ಮುಂತಾದ ವಸ್ತುಗಳನ್ನು ಕಂಡು ಊರಿನ ಯಜಮಾನ ಏಳು ಬಂಡಿ ಬಾಳೆಹಣ್ಣು, ಏಳು ಬಂಡಿ ತೆಂಗಿನಕಾಯಿ, ಏಳು ಕೌಳಿಗೆ ವೀಲ್ಯೆದೆಲೆ, ಸುಣ್ಣ, ಹೂವು ಎಲ್ಲವೂ ಬಂದಿದೆ ಎಂದು ಏರು ಧ್ವನಿಯಲ್ಲಿ ನೆರೆದ ಜನರಿಗೆ ಕೇಳುವಂತೆ… ಇಂಥವರ… ಮಗನಿಗೂ ಇಂಥವರ ಮಗಳಿಗೂ ಮದುವೆ ನಿಶ್ಚಯ ಎಂದು ಹೇಳಿದಾಗ ಅಲ್ಲಿದ್ದವರೆಲ್ಲ ಸಮ್ಮತಿ… ಸಮ್ಮತಿ ಎಂದು ಮದುವೆಯನ್ನು ಒಪ್ಪುತ್ತಾರೆ. ಅನಂತರ ಸೀರೆಯನ್ನು ಮದುಮಗಳು ಉಟ್ಟುಕೊಂಡು ಬಂದು ಅತ್ತೆ ಮತ್ತು ಮಾವನಿಗೆ ನಮಸ್ಕರಿಸುತ್ತಾಳೆ.

ಈ ವೇಳೆ ವಧುವಿಗೆ ಅವರವರ ಅನಕೂಲಕ್ಕೆ ತಕ್ಕಂತೆ ೧೦೦೧, ೫೦೧, ೧೦೧ ರೂಪಾಯಿ ಹಣವನ್ನು (ವಧುದಕ್ಷಿಣೆ) ನೀಡುತ್ತಾರೆ. ಇದನ್ನು ಒಂದು ಚಿಕ್ಕ ಮಗು ತೆಗೆದುಕೊಂಡು ಹೋಗಿ ಹೆಣ್ಣಿನ ತಂದೆಗೆ ನೀಡುತ್ತದೆ. ಇದನ್ನು ಸ್ವೀಕರಿಸಿದರೆ ಮದುವೆಗೆ ಹೆಣ್ಣಿನ ಮನೆಯ ಒಪ್ಪಿಗೆ ತಿಳಿಸಿದಂತೆ ಆಗುತ್ತದೆ. ಇದನ್ನು ಮನೆ ತುಳಿಯುವುದು, ಮಾತುಕೊಡುವುದು, ನಿಶ್ಚಯ ಮಾತಾಡುವುದು ಎಂದು ಕರೆಯಲಾಗುತ್ತದೆ. ಈ ವೇಳೆ ಅಕ್ಕಿಯಲ್ಲಿ ವೀಳ್ಯೆದೆಲೆ ಇಟ್ಟು ಅದರ ಮೇಲೆ ಹೂವು ಹಣ್ಣು ಇಟ್ಟು ಪೂಜಿಸುತ್ತಾರೆ. ಅಕ್ಕಿ (ಬತ್ತ) ಸಮೃದ್ಧಿಯನ್ನು, ವೀಳ್ಯೆದೆಲೆ ಸುಖವಾದ ಬದುಕನ್ನು ಸೂಚಿಸುತ್ತವೆ. ಇದನ್ನು ಸೂರ್ಯನ್ ಪಡೈಪ್ಪು (ಸೂರ್ಯನಿಗೆ ಅರ್ಪಿಸುವುದು) ಎನ್ನುತ್ತಾರೆ. ಅಂದರೆ ಸೂರ್ಯನ ಸಾಕ್ಷಿಯಾಗಿ ವಿವಾಹಕ್ಕೆ ಒಪ್ಪಿಗೆ ಇದೆ ಎಂದರ್ಥ. ವರನು ೧೨೧/೨ ರೂಪಾಯಿಯನ್ನು ವಧುವಿಗೆ ಕಾಣಿಕೆಯಾಗಿ ಸಲ್ಲಿಸುತ್ತಾರೆ. ಉಳಿದ ಹನ್ನೊಂದು ರೂಪಾಯಿಗಳನ್ನು ಪುನಃ ಹೆಣ್ಣಿನ ಮನೆಯವರು ಗಂಡಿನ ಮನೆಗೆ ಕೊಟ್ಟು ಆ ಹಣದಿಂದ ಹೆಣ್ಣಿಗೆ ಚಿನ್ನದ ಆಭರಣ ಕೊಡಿಸಬೇಕೆಂದು ಕೇಳುತ್ತಾರೆ. ಇವೆಲ್ಲ ಕೇವಲ ಸಾಂಕೇತಿಕವಾಗಿ ನಡೆಯುವ ಶಾಸ್ತ್ರಗಳು.

ಉಪ್ಪು ಬದಲಿಸುವುದು : ಮದುವೆಯ ದಿನ ನಿರ್ಧಾರವಾದ ಮೇಲೆ ಮದುವೆಗಾಗಿ ಹೆಣ್ಣಿನ ಮನೆಯವರು ಅಗತ್ಯವಾದ ಹೊಸ ಬಟ್ಟೆ, ಆಭರಣಗಳನ್ನು ಕೊಂಡುಕೊಳ್ಳುವ ಸಲುವಾಗಿ ಹೋಗುತ್ತಾರೆ. ಈ ಆಚರಣೆಯನ್ನೇ ಉಪ್ಪು ಬದಲಿಸುವುದು ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಅಲಂಕಾರಿಕ ವಸ್ತುಗಳನ್ನು ಕೊಳ್ಳುವುದು ಪ್ರಮುಖ ಉದ್ದೇಶ. ಈ ಎರಡು ಮನೆಯವರು ಪರಸ್ಪರ ಎಲ್ಲ ವಸ್ತುಗಳನ್ನು ಕೊಂಡುಕೊಂಡು ಗಣಪತಿ ದೇವಾಲಯದ ಬಳಿ ತೆಂಗಿನಕಾಯಿ, ಬಾಳೆಹಣ್ಣು, ಹೂವು, ಎಲೆ ಅಡಕೆ, ಕುಂಕುಮ, ಅರಿಸಿನಗಳನ್ನು ಇಟ್ಟು ಮದುವೆ ಚೆನ್ನಾಗಿ ಆಗಲಿ ಎಂದು ಪೂಜೆ ಸಲ್ಲಿಸುತ್ತಾರೆ. ಅನಂತರ ಇವರಿಬ್ಬರು ತಂದಿರುವ ವಸ್ತುಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಪೂಜೆ ಆದ ಮೇಲೆ ನೇರವಾಗಿ ತಾಳಿಯನ್ನು ತರಲು ಹೋಗುತ್ತಾರೆ. ಜೊತೆಗೆ ತರುವ ಬಟ್ಟೆಗಳನ್ನು ಉಪ್ಪು ಜವಳಿ ಎನ್ನುತ್ತಾರೆ.

ಮುಹೂರ್ತ ಕಂಬ ನೆಡುವುದು : ಮದುವೆಗೆ ಮೂರು ಅಥವಾ ಐದು ದಿನ ಮುಂಚೆ ಹೆಣ್ಣಿನ ಮನೆಯ ಮುಂದೆ ಒಳ್ಳೆಯ ಶುಭ ಮುರ್ಹೂತದಲ್ಲಿ ಚಪ್ಪರ ನಿಲ್ಲಿಸುವುದಕ್ಕಾಗಿ ಅದರ ಕುರುಹು ಎಂಬಂತೆ ಒಂದು ಬಿದಿರಿನ ಕಂಬವನ್ನು ನೆಡುತ್ತಾರೆ. ಇದಕ್ಕೆ ಸಂಬಂಧಿಸಿದ ಹಾಡುಗಳೂ ಇವೆ. ಅದನ್ನು ನಲಂಗುಪಾಡಲ್ (ಆರತಿ ಎತ್ತುವುದು) ಎನ್ನುವರು.

ಬಿದಿರನ್ನು ಸೀಳಿ ಮುಹೂರ್ತದ ಕಂಬವ ನೆಟ್ಟು
ಬಾಳೆಕಂಬವ ಇಟ್ಟು ಹೊಸ್ತಿಲಲಿ ಚಪ್ಪರವ ಕಟ್ಟಿ
ಕಟ್ಟಿರುವ ಚಪ್ಪರ ಎಂಟುನೂರು ಗಳಗಳು
ನಿಲ್ಲಿಸಿದ ಚಪ್ಪರಕ್ಕೆ ತೊಂಬತ್ತು ಗಳಗಳು
ಕಲ್ಯಾಣವೆಂದು ಹೇಳಿ ಕೂದಲೊಂದನ್ನು ಕಟ್ಟಿ
ಗಡಿಗಳಾಚೆಗೂ ತಾಂಬೂಲವನ್ನು ಕೊಟ್ಟು
ಜಗತ್ತಿನಾಚೆಗೂ ತಾಂಬೂಲವನ್ನು ಕೊಟ್ಟು
ಆನೆಯ ಮೇಲೆ ಅಡಕೆ ಇಟ್ಟು ಆಳುಗಳನ್ನು ಕಳುಹಿಸಿ
ದನದ ಮೇಲೆ ಅಡಕೆ ಇಟ್ಟು ಜನರ ಕಳುಹಿಸಿದರೆ

ಮುಹೂರ್ತದ ಕಂಬವನ್ನು ನೆಡುವುದಕ್ಕೆ ನಾಲ್ಕು ದಿಕ್ಕಿಗೂ ನಾಲ್ಕು ಕಾವುಟ್ಲು ಕಂಬವನ್ನು ನೆಟ್ಟು ಅದರ ಮೇಲೆ ಚಪ್ಪರ ಹಾಕಲಾಗುತ್ತದೆ. ಸೂರ್ಯೋದಯಕ್ಕೂ ಮೊದಲೆ ಈ ಕಾರ್ಯ ಆಗಬೇಕು. ಈ ಆಚರಣೆಯಲ್ಲಿ ಊರಿನ ಯಜಮಾನರು ಹೆಣ್ಣಿನ ಸೋದರ ಮಾವ, ಸಂಬಂಧಿಕರು ವಧು ಹಾಗೂ ವರ ನೆರೆದಿರುತ್ತಾರೆ. ಈ ಕಂಬಕ್ಕೆ ಅರಳೀ ಎಲೆ, ನವ ಧಾನ್ಯ, ಕಬ್ಬು ಮೊದಲಾದವನ್ನು ಒಟ್ಟಿಗೆ ಕಟ್ಟಿ ಅಲಂಕರಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಹಸಿ ಮತ್ತು ಒಣ ಮರದ ಕವುಟ್ಲುಗಳನ್ನು ನೆಡುತ್ತಾರೆ. ಆ ಕಂಬಗಳಿಗೆ ಬಣ್ಣ ಬಳಿದು ಕುಂಕುಮ ಅರಿಸಿನ ಹಚ್ಚುತ್ತಾರೆ. ಪಾಚ್ಚಾನ್ ಕುಚ್ಚಿ (ಅಂಕೋಲೆ ಕಡ್ಡಿ) ಗೆ ಅರಿಸಿನದ ಬಟ್ಟೆಯಲ್ಲಿ ನವಧಾನ್ಯಗಳ ಗಂಟನ್ನು ಸೋದರ ಮಾವ ಕಟ್ಟಿ ಹೆಣ್ಣಿನ ಕೈಗೆ ಕೊಡುತ್ತಾನೆ. ಆ ಹೆಣ್ಣು ಆ ಅಂಕೋಲೆ ಕಡ್ಡಿಗೆ ಮೂರು ಕವಟಲು ಇರುತ್ತದೆ. ಅದರ ಅರ್ಥ ಬ್ರಹ್ಮ, ಶಿವ, ವಿಷ್ಣು ಈ ತ್ರಿಮೂರ್ತಿಗಳ ಆಶೀರ್ವಾದ ಪಡೆಯುವುದೇ ಆಗಿದೆ. ಅರಳೀಮರದ ಎಲೆ, ಆಲದ ಮರದ ಕೊಂಬೆ ಇವು ಚಪ್ಪರದಲ್ಲಿ ಪ್ರಮುಖವಾಗಿರುತ್ತವೆ. ಈ ಹಾಲು ಸೋರುವ ಮರದ ಕೊಂಬೆಗಳನ್ನು ಮುಹೂರ್ತ ಕಂಬಕ್ಕೆ ನೆಡುವುದು ಅದು ಹೇಗೆ ಹಾಲು ಕೊಡುತ್ತದೆ ಮತ್ತು ಚಿಗುರುತ್ತದೆ ಅದೆ ರೀತಿ ವಧುವರರ ಬಾಳು ಸಮೃದ್ಧಿಯಾಗಿರುತ್ತದೆ ಎಂಬುದು ಇವರ ನಂಬಿಕೆಯಾಗಿದೆ.

ಸಾಲುಕರಗ ಹೊರುವುದು : ಮದುವೆ ನಿಶ್ಚಿತಾರ್ಥ ಆದ ಅನಂತರ ಗಂಡಿನ ಮನೆಯವರು ಕುಂಬಾರನ ಮನೆಗೆ ಹೋಗಿ ಮದುವೆ ಮನೆಗೆ ಹೊಸ ಮಡಕೆ ತರಿವುದು ಒಂದು ಸಂಪ್ರದಾಯ. ಇದನ್ನೇ ಸಾಲು ಕರಗ ಹೊರುವುದು ಎನ್ನುತ್ತಾರೆ. ಮದುವೆಯ ಹಿಂದಿನ ದಿನ ಒಂದು ಬಳ್ಳ ಅಕ್ಕಿ, ಒಂದು ತೆಂಗಿನಕಾಯಿ, ಬಾಳೆಹಣ್ಣು, ವೀಳ್ಯೆದೆಲೆ, ಅಡಕೆ ಮೊದಲಾದವುಗಳನ್ನು ತಟ್ಟೆಯಲ್ಲಿಟ್ಟು ಅಗಸ ಬಟ್ಟೆಯಲ್ಲಿ ಹಾಸಿದ ಮೇಲೆ ಅದನ್ನು ಪಡೆಯುತ್ತಾನೆ. ಆಗ ವರನ ಮನೆಯವರು ನಯ್ಯಾಂಡಿ ಮೇಳದೊಡನೆ ಕುಂಬಾರನ ಮನೆಗೆ ಹೋಗಿ ೧.೫೦ ರೂಪಾಯಿ ಕೊಟ್ಟು ದೊಡ್ಡದಾದ ಬಾನಿ (ಪಾನೈ), ಐದು ಮಡಕೆಗಳು, ಒಂದು ಬಿಂದಿಗೆ, ಎರಡು ಮುಚ್ಚಳಕೊಂಡು ಸಾಲುಕರಗದ ಜೊತೆಗೆ ಪಕ್ಕವಾದ್ಯ ಸಮೇತ ಊರ ಯಜಮಾನರ ಮನೆಯಲ್ಲಿ ಇಟ್ಟಿರುತ್ತಾರೆ. ಈ ಮಡಕೆ ತಯಾರಿಸುವುದಕ್ಕಾಗಿ ಹಿಂದೆ ಕೆಲವು ಕುಂಬಾರ ಮನೆತನಗಳು ಇದ್ದವೆಂದು ತಿಳಿದುಬರುತ್ತದೆ.

ಸಾಲುಕರಗವನ್ನು ಆಹ್ವಾನಿಸುವುದು : ವಧುವಿನ ಮನೆಯವರು ಮದುವೆ ಹೆಣ್ಣಿನೊಂದಿಗೆ ಊರಿನ ಯಜಮಾನನ ಮನೆಯಲ್ಲಿರುವ ಮಡಕೆಯನ್ನು ತರಲು ಹೋಗುತ್ತಾರೆ. ಒಂದು ತಟ್ಟೆಯಲ್ಲಿ ಅಕ್ಕಿ, ತೆಂಗಿನಕಾಯಿ, ವೀಳ್ಯೆದೆಲೆ, ಹಣ್ಣು, ಅಡಕೆ ಇವುಗಳನ್ನು ಯಜಮಾನ ಒಪ್ಪಿಸಿಕೊಂಡು ಆ ಕಳಶಗಳನ್ನು ಮದುಮಗಳಿಗೆ ಕೊಡುತ್ತಾನೆ. ಅದರಲ್ಲಿ ಒಂದನ್ನು ಮದುವೆ ಹೆಣ್ಣು, ಉಳಿದವನ್ನು ಇತರ ಸುಮಂಗಲಿಯರು ಹೊತ್ತು ತಂದು ಹಸೆಮಣೆಯ ಮುಂದೆ ಹೆಣ್ಣಿನ ಅಮೋಂತರ ಒಬ್ಬೊಬ್ಬರಾಗಿ ಕೆಳಗೆ ಇಡುತ್ತಾರೆ. ಈ ಬಿಂದಿಗೆಗಳಿಗೆ ಅಶ್ವತ್ಥಮರದ ಕೊಂಬೆಗಳನ್ನು ಕಟ್ಟಿರುತ್ತಾರೆ.

ಮದುವೆ ಮಂಟಪ ನಿರ್ಮಿಸುವುದು : ಮದುವೆಗೆ ಐದು ದಿನಗಳ ಮೊದಲೇ ಮಂಟಪ, ವೇದಿಕೆಯನ್ನು ನಿರ್ಮಿಸುತ್ತಾರೆ. ಇದನ್ನೇ ಮದುವೆಯ ವೇದಿಕೆ ಎನ್ನಲಾಗುತ್ತದೆ. ಈ ಜವಾಬ್ದಾರಿಯನ್ನು ವಧುವಿನ ಸಹೋದರಿ ವಹಿಸಿಕೊಂಡಿರುತ್ತಾಳೆ. ಅಲ್ಲಿ ದೊಡ್ಡ ಬಿಂದಿಗೆಗಳಿಗೆ ಸುಣ್ಣ ಬಳಿದು ಕೆಂಪುಬಣ್ಣದಿಂದ ಚಿತ್ರ ಬಿಡಿಸಿರುತ್ತಾರೆ. ಇದನ್ನು ಚಪ್ಪರದ ಹೊಸ್ತಿಲು, ಕಲ್ಯಾಣ ಮಂಟಪ ಎಂದು ಸಹ ಕರೆಯುತ್ತಾರೆ. ಶುಭ ಮುಹೂರ್ತದಲ್ಲಿ ತೆಂಗಿನ ಕಾಯಿ, ಹಣ್ಣು, ಹೂವು, ಗಂಧದಕಡ್ಡಿ, ಕುಂಕುಮ ಅರಿಸಿನದ ಮೂಲಕ ಕುಲದೇವರನ್ನು ಪೂಜಿಸುತ್ತಾರೆ. ಅನಂತರ ಈ ಹಸೆನಿರ್ಮಿಸುವ ಕಾರ್ಯ ಪ್ರಾರಂಭವಾಗುತ್ತದೆ.ಇದರ ಸುತ್ತಲು ನಾಲ್ಕು ಭಾಗದಲ್ಲಿ ಗೊನೆ ಬಿಟ್ಟ ಬಾಳೆ ಕಂಬಗಳನ್ನು ನಿಲ್ಲಿಸುತ್ತಾರೆ. ಒಂದು ಗಿಡದಲ್ಲಿ ಮಾತ್ರ ಕಪ್ಪು ಕಬ್ಬು, ಅರಳಿ ಮರದ ಎಲೆ, ಬತ್ತ ಮೊದಲಾದ ಧಾನ್ಯಗಳನ್ನು ಕಟ್ಟುತ್ತಾರೆ. ಒಂದರ ಮೇಲೊಂದರಂತೆ ಐದು ಅಥವಾ ಏಳು ಗುಂಬಗಳನ್ನು ಜೋಡಿಸುತ್ತಾರೆ. ಈ ಗುಂಬಗಳಲ್ಲಿ ಬತ್ತ, ಅಕ್ಕಿ, ಅರಿಸಿನ, ಉಪ್ಪು, ನೀರು ಎಲ್ಲರನ್ನು ಹಾಕುವುದು ಸಂಪ್ರದಾಯವಾಗಿದೆ. ಈ ಕಲ್ಯಾಣಮಂಟಪಕ್ಕೆ ಮಾವಿನ ಎಲೆಯ ತೋರಣವನ್ನು ಕಟ್ಟಿರುತ್ತಾರೆ. ಗೊನೆ ಬಿಟ್ಟ ಬಾಳೆ ನೆಡುವುದು ಆ ದಂಪತಿಗಳಿಗೆ ಮಕ್ಕಳಾಗಲೆಂಬ ಸಂಕೇತವನ್ನು ತಿಳಿಸುತ್ತದೆ.

ಮಣ್ಣಿನ ಮಡಕೆಯಲ್ಲಿ ಮಾಡುವ ಪೊಂಗಲ್ : ಮದುವೆ ದಿನದಂದು ಮಾಡಲಾಗುವ ಈ ಪೊಂಗಲ್‌ಗೆ ವೈಶಿಷ್ಟ್ಯದೆ. ವಧುವಿನ ಮನೆಯವರು ತರುವ ಸೀರೆ ಹಣ್ಣು ಹಂಪಲು ಹೂವು ಹಾರ ನವಧಾನ್ಯ ಅಕ್ಕಿ ತರಕಾರಿಗಳು ಮತ್ತು ತಾಳಿ ಇದನ್ನು ಖಾತರಪಡಿಸಿಕೊಂಡ ಅನಂತರವೇ ಯಜಮಾನ ಮದುವೆಗೆ ಅಂಗೀಕಾರ ನೀಡುತ್ತಾನೆ. ಈ ಶಾಸ್ತ್ರಕ್ಕೆ ‘ಸಡತ್ತಿ ಪಾರ್ತ್ತಲ್’ ಎಂದು ಹೆಸರು.

ಅರಿಸಿನ ಕೊಡುವುದು : ಮದುವೆಗೆ ಮುನ್ನ ವರನ ಕಡೆಯವರು ಮದುವೆ ವಸ್ತುಗಳೊಂದಿಗೆ ದೇವಾಲಯದಲ್ಲಿ ಕಾಯುತ್ತಿರುತ್ತಾರೆ. ಊರಿನ ಯಜಮಾನನೊಂದಿಗೆ ವಧುವಿನ ಮನೆಯವರು ನೈಯ್ಯಾಂಡಿ ಮೇಳದೊಡನೆ ವರನ ಕಡೆಯವರಿಗೆ ಆಹ್ವಾನ ಕೊಡುವ ಶಾಸ್ತ್ರಕ್ಕೆ ಅರಿಸಿನ ಕೊಡುವುದು ಎನ್ನುತ್ತಾರೆ.

ಮದುವೆ ಶಾಸ್ತ್ರಕ್ಕೆ ಬೇಕಾದ ವಸ್ತುಗಳು :

೧. ಬತ್ತ ಮತ್ತು ತಾಂಬೂಲ ತುಂಬಿದ ತಟ್ಟೆ

೨. ಮಂಟಪದಲ್ಲಿ ಬತ್ತವನ್ನು ಹರಡುವುದು

೩. ತಟ್ಟೆಯಲ್ಲಿ ಅಕ್ಷತೆಯನ್ನು ಇಡುವುದು

೪. ತೆಂಗಿನಕಾಯಿಯ ಕಳಸ

೫. ಮಂಗಳಕರ ವಸ್ತುಗಳು (ತೆಂಗಿನಕಾಯಿ, ಕುಂಕುಮ, ಅರಿಸಿನ ಇತ್ಯಾದಿ)

೬. ಅಲಂಕೃತ ಮಡಕೆಗಳು

೭. ಬತ್ತದ ಪಯಿರು, ಹೊಂಬಾಳೆ

೮. ಬೆಳಗುತ್ತಿರುವ ದೀಪಗಳು

ತಾಳಿಗೆ ನಮಸ್ಕರಿಸುವುದು : ತಟ್ಟೆಯಲ್ಲಿರುವ ತಾಂಬೂಲದ ಜೊತೆಗೆ ಇರುವ ಅಕ್ಷತೆಯನ್ನು ತೆಗೆದುಕೊಂಡು ಜನರೆಲ್ಲರೂ ತಾಳಿಯನ್ನು ಮುಟ್ಟಿ ನಮಸ್ಕರಿಸಿ ಆಶೀರ್ವದಿಸುತ್ತಾರೆ. ಊರಿನ ಯಜಮಾನನಿಂದ ಇದು ಆರಂಭವಾಗುತ್ತದೆ. ನಾಗಸ್ವರದ ಏರುಧ್ವನಿಯೊಂದಿಗೆ ಎಲ್ಲರೂ ಮುಟ್ಟಿ ಆಶೀರ್ವದಿಸಿದ ತಾಳಿಯನ್ನು ಗಂಡು ಹೆಣ್ಣಿಗೆ ಕಟ್ಟುತ್ತಾನೆ. ಅನಂತರ ಗಂಡು ಹೆಣ್ಣು ಇಬ್ಬರು ಕಿರುಬೆರಳು ಹಿಡಿದು ಮಂಟಪಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ವರನ ಮನೆಯವರು ಮತ್ತು ವಧುವಿನ ಮನೆಯವರು ಒಟ್ಟಿಗೆ ಊಟ ಮಾಡುತ್ತಾರೆ. ಈ ಎರಡು ಮನೆಯವರು ಹೊಂದುವ ಹೊಸ ಸಂಬಂಧವೇ ಮದುವೆಯ ಆಚರಣೆಯಾಗಿದೆ.

.ಬಿ. ಅನುವಾದ ಆರ್.ಎಸ್.

ತಿರುಮಣವಾಳ್ ತುಪ್ಪಾಡಲ್ ಮದುವೆ ಸಂದರ್ಭದಲ್ಲಿ ವಧೂವರರನ್ನು ಎಲ್ಲಾ ಬಂಧು ಬಳಗದವರೂ ಶುಭಕೋರಿ ಹಾರೈಸುವ ಹಾಡುಗಳು (ಸೋಬಾನೆ ಹಾಡು). ಬಹಳ ಹಿಂದಿನಿಂದಲೂ ನಡೆದು ಬಂದಿರುವ ಈ ಸಂಪ್ರದಾಯವನ್ನು ಇಂದಿಗೂ ಅನೇಕ ಜಾತಿಗಳಲ್ಲಿ ರೂಢಿಯಲ್ಲಿರಿಸಿಕೊಳ್ಳಲಾಗಿದೆ. ವಧೂ ವರರನ್ನು ಸಾಕ್ಷಾತ್ ದೇವತೆಗಳ ಸ್ವರೂಪವೆಂದೂ ಲಕ್ಷ್ಮೀನಾರಾಯಣರ್‌ ರತಿರೂಪವೆಂದು ಹಾಡಿ ಹೊಗಳುವ ಸಂಪ್ರದಾಯ ಎಲ್ಲಾ ಜಾತಿಗಳಲ್ಲಿ ಇಂದಿಗೂ ರೂಢಿಯಲ್ಲಿದೆ.

ತಮಿಳುನಾಡಿನಲ್ಲಿ ಒಂದೊಂದು ಪ್ರದೇಶದಲ್ಲಿಯೂ, ವಿಭಿನ್ನ ರೀತಿಯಲ್ಲಿಸೋಬಾನೆ ಹಾಡುಗಳನ್ನು ಹೇಳುವ ಸಂಪ್ರದಾಯವಿದೆ. ಮದುರೈ ಪ್ರದೇಶದಲ್ಲಿ ವಧೂವರನಿಗೆ ಶುಭ ಹಾರೈಸುವವರು ವಯಸ್ಸಾದ ಮುತ್ತೈದೆಯರು. ಅವರು ಹೇಳುವ ಹಾಡು.

ಮದುರೆಯ ಕ್ಷೇತ್ರದಲ್ಲಿ
ಮೀನಾಕ್ಷಿ ಕಲ್ಯಾಣ
ಮುದ್ದಾದ ಹೆಣ್ಣಿಗೆ
ಕಲ್ಯಾಣ
ಆನೆ ಮೇಲೇರಿ
ಅಂದವಾದ ತಾಂಬೂಲ
ಕುದುರೆ ಮೇಲೇರಿ
ಕುದುರೆ ತಾಂಬೂಲ

ಕೊಂಗುನಾಡಿನ ಮದುವೆಮನೆಗಳಲ್ಲಿ ನಾಪಿತರು ಶುಭ ಹಾರೈಸುತ್ತಾರೆಂದು ತಿಳಿದುಬಂದಿದೆ.

ವಧೂವರರನ್ನು ದೇವತೆಗಳೆಂದು ಭಾವಿಸಿ ಅದಕ್ಕೆ ತಕ್ಕ ರೀತಿಯಲ್ಲಿ ಹಾಡುವುದು ಬ್ರಾಹ್ಮಣರಲ್ಲಿ ರೂಢಿಯಿದೆ.

ಉದಾ:

ಗೌರೀ ಕಲ್ಯಾಣ ವೈಭೋಗವೇ
ವಸುದೇವ ತವಪಾಲಾ ಅಸುರಕುಲ ಕಾಲಾ
ಶಶಿವದನ ರುಕ್ಮಿಣಿ ಸತ್ಯಭಾಮ ಲೋಲಾ
ಕತ್ತರಿಸಿದ ಬಾಳೆಮರ ತಂದು ನಿಲ್ಲಿಸಿ
ಅಂದದಾ ಪಂದಲಿಗೆ ಮೇಲ್ಕಟ್ಟು ಹಾಕಿ
||ಗೌರಿ||

ವೈಷ್ಣವರು ‘ಲಕ್ಷ್ಮಿಕಲ್ಯಾಣ ವೈಭೋಗವೇ’ ಎಂದು ಪ್ರಾರಂಭಿಸುತ್ತಾರೆ. ಜಾತಕ ತಾಳೆ ನೋಡಿ ಮದುವೆಯನ್ನು ನಿರ್ಧರಿಸುವುದು ಬಹುಮಟ್ಟಿಗೆ ಎಲ್ಲಾ ವರ್ಗಗಳಲ್ಲಿ ರೂಢಿಯಲ್ಲಿದೆ. ಕಾಮಾಕ್ಷಿ, ಮೀನಾಕ್ಷಿ, ಲಕ್ಷ್ಮಿ ಮುಂತಾದವರ ಕೃಪೆಯಿರುವ ಮನೆ ಹೆಣ್ಣಿನ ಮನೆಯೆಂದೂ, ಅವರ ಮನೆಯಲ್ಲಿ ಹಲ್ಲಿಹ ಶುಭವನ್ನು ಕೋರುತ್ತದೆಂದು ಅವರ ಸೋಬಾನೆ ಹಾಡುಗಳು ಕೊಂಡಾಡುತ್ತವೆ.

– ಎಸ್.ವಿ. ಅನುವಾದ ವಿ.ಜಿ.

ತಿರುವಾದಿಕರ ಕಳಿ : ಹಿಂದಿನ ಕಾಲದಲ್ಲಿ ಕೇರಳದ ಸಾಮಾಜಿಕ ಮತ್ತು ಧಾರ್ಮಿಕವಾದ ವಿಶೇಷ ಆಚರಣೆಗಳೆಲ್ಲದರಲ್ಲೂ ಸಾಮಾನ್ಯವಾಗಿ ಕಾಣಸಿಗುತ್ತಿದ್ದ. ಅನಿವಾರ್ಯವಾದ ಒಂದು ಸಾಮೂಹಿಕ ನೃತ್ಯವೇ ‘ಕೈಕೊಟ್ಟಿಕಳಿ’ (ಚಪ್ಪಾಳೆ ಪ್ರಧಾನವಾಗಿರುವ ಸಾಮೂಹಿಕ ಕುಣಿತ). ತಿರುವಾದಿರ ದಿನಗಳಲ್ಲಿ (ಧುನುಮಾಸದ ಆರ್ದ್ರಾ ನಕ್ಷತ್ರ) ಇದು ಕಡ್ಡಾಯವೆನಿಸಿದುದರಿಂದ ಈ ಕುಣಿತಕ್ಕೆ ‘ತಿರುವಾದಿರ ಕಳಿ’ ಎಂದು ಹೆಸರಾಯಿತು. ಕೆಲವೆಡೆ ಇದನ್ನು ‘ಓಣಕ್ಕಳಿ’ (ಓಣಂ ಹಬ್ಬದ ದಿನಗಳಲ್ಲಿ ಕುಣಿಯುವ ಕುಣಿತ) ಎಂತಲೂ ‘ಪಾಟ್ಟುಪಾಡಿಕಳಿ’ (ಹಾಡುತ್ತಾ ಕುಣಿಯುವ ಕುಣಿತ) ಎಂತಲೂ ಕರೆಯುವದಿದೆ. ಕೈಕೊಟ್ಟಿಕಳಿಯಲ್ಲೇ ಸ್ವಲ್ಪ ವೇಗದ ತಾಳ, ಹೆಜ್ಜೆಗಳಿಂದ ಕೂಡಿದ ‘ಕುಮ್ಮಿ’ ಎಂಬ ಪ್ರಕಾರ ಪ್ರಭೇದವೂ ಇದೆ. ಈಗಂತೂ ಇದರ ಹಾಡು, ಚಲನೆ, ತಾಳ, ಪದಗತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

ಕೇರಳದ ಹಿಂದುಗಳಲ್ಲಿ ಪ್ರಚಲಿತವಿರುವ ಆರ್ದ್ರಾವ್ರತದ ಆಚರಣೆಯೊಂದಿಗೆ ತಿರುವಾದಿರ ಕಳಿ ತಳುಕು ಹಾಕಿಕೊಂಡಿದೆ. ಕನ್ಯೆಯರು ತಮಗೆ ಅನುರೂಪನಾದ ಗಂಡು ದೊರೆಯಲೆಂದೋ, ಸುಮಂಗಲೆಯರು ದೀರ್ಘಸುಮಂಗಲಿ ಭಾಗ್ಯವೊದಗಲೆಂದೋ ಮುತ್ತೈದೆತನ ಪ್ರಾಪ್ತವಾಗಲೆಂದೋ ಆರ್ದ್ರಾವ್ರತವನ್ನು ಅಥವಾ ತಿರುವಾದಿರ ನೋಂಪಿಯನ್ನು ಆಚರಿಸುತ್ತಾರೆ. ಇದು ಮಾರ್ಗಶಿರ ಮಾಸದ (ಧನುಮಾಸ) ಆರ್ದ್ರಾ ನಕ್ಷತ್ರದಂದು ಆಚರಿಸಲ್ಪಡುತ್ತದೆ. ಈ ವ್ರತಾಚರಣೆಯಲ್ಲಿ ಹಲವಾರು ಆಚಾರ, ಸಂಪ್ರದಾಯಗಳಿವೆ. ವಿಶೇಷವಾಗಿ ಹಿಂದೂ ಸ್ತ್ರೀಯರು, ಅದರಲ್ಲೂ ಮೇಲ್ಜಾತಿಯ ಸ್ತ್ರೀಯರಲ್ಲಿ ಈ ವ್ರತಾಚರಣೆ ಹೆಚ್ಚಾಗಿದೆ. ಇದೊಂದು ಹೇಮಂತ ಋತುವಿನ ಹಬ್ಬವಾಗಿದೆ.

ತಿರುವಾದಿರಕ್ಕೆ ಸಂಬಂಧಿಸಿದ ಐತಿಹ್ಯಗಳು ಸಾಕಷ್ಟಿವೆ: ಮನ್ಮಥನನ್ನು ಸುಟ್ಟ ಶಿವನು ರತಿಯ ವಿಲಾಪವನ್ನು ಕೇಳಿ ಮನಕರಗಿ ಮನ್ಮಥನಿಗೆ ಮತ್ತೆ ಜೀವದಾನ ಮಾಡಿದ ದಿವೆಂತಲೂ, ಪಾರ್ವತಿಯ ತಪಸ್ಸಿಗೆ ಶಿವನು ಸಂತುಷ್ಟನಾದ ದಿನ ವೆಂತಲೂ, ಶಿವನ ಹುಟ್ಟಿದ ದಿನವೆಂತಲೂ, ದಕ್ಷಯಾಗದಲ್ಲಿ ಶಿವಾಂಶುಸಂಭೂತನಾದ ವೀರಭದ್ರನು ಯಜ್ಞಪುರುಷನ ಶಿರಚ್ಛೇದನ ಮಾಡಿದ ಪಾಪ ಪರಿಹಾರಕ್ಕಾಗಿ ಪಾರ್ವತೀ ಪರಮೇಶ್ವರರು ಉಪವಾಸ ವ್ರತ ಆಚರಿಸಿದ ದಿನವೆಂತಲೂ, ಸಮುದ್ರ ಮಥನ ಸಂದರ್ಭದಲ್ಲಿ ಉದ್ಭವವಾದ ಕಾಲಕೂಟ ವಿಷವನ್ನು ಶಿವನ ಕುಡಿದಾಗ ಆತನಿಗೆ ಮರಣ ಬಾರದಿರಲಿ ಎಂದು ಪಾರ್ವತಿಯು ಆಚರಿಸಿದ ವ್ರತವೆಂತಲೂ ವೈವಿಧ್ಯಮಯವಾದ ಐತಿಹ್ಯಗಳಿವೆ. ಶ್ರೀ ಕೃಷ್ಣನನ್ನೇ ಗಂಡನಾಗಿ ಪಡೆಯಲು ಗೋಪಿಕಾಸ್ತ್ರೀಯರು ಪಾರ್ವತೀ ಪೂಜೆ ನಡೆಸಿದ ದಿನವೆಂದೂ ಹೇಳುವುದಿದೆ. ಏನ ಇರಲಿ, ಈ ತಿರುವಾದಿರ ನೋಂಪಿ ಮತ್ತು ಅದಕ್ಕೆ ಸಂಬಂಧಿಸಿದ ಆಚಾರಗಳೂ ನಂಬಿಕೆಗಳೂ ಪಾರ್ವತಿಯನ್ನೋ ಪರಮೇಶ್ವರನನ್ನೋ ಕುರಿತದ್ದಾಗಿದೆ ಎನ್ನುವುದಂತೂ ಸತ್ಯ. ತಿರುವಾದಿರ ದಿನವನ್ನು ಉತ್ಸವ ದಿನವನ್ನಾಗಿ ಆಚರಿಸುವ ದೇವಸ್ಥಾನಗಳು ಶಿವಾಲಯಗಳೇ ಆಗಿವೆ ಎನ್ನುವೂದೂ ಗಮನಿಸಿಬೇಕಾದ ಸಂಗತಿ.

82

ತಿರುವಾದಿರ ಆಚರಣೆಯು ರೇವತಿ ನಕ್ಷತ್ರದ ದಿನದಿಂದಲೇ ಪ್ರಾರಂಭವಾಗುತ್ತದೆ. (ಆರ್ದ್ರ ನಕ್ಷತ್ರದ ಹಿಂದಿನ ಆರು ದಿನಗಳು). ಹಿಂದೆ ದಕ್ಷಿಣ ಕೇರಳದಲ್ಲಿ ಇದು ೨೯ ದಿನಗಳ ಆಚರಣೆಯಾಗಿತ್ತು ‘ಕುಳಿ’ ಮತ್ತು ‘ಕಳಿ’ (ಸ್ನಾನ ಮತ್ತು ಕುಣಿತ (ಆಟ) ಈ ಹಬ್ಬದ ವಿಶೇಷ. ನಸುಕಿನಲ್ಲೇ ಎದ್ದು ಸ್ತ್ರೀಯರು ಗುಂಪು ಗುಂಪಾಗಿ ಕೆರೆಗಳಿಗೋ ಹೊಳೆಗೊ ಸ್ನಾನಕ್ಕೆ ಹೊರಡುತ್ತಾರೆ. ಭರಣೀ ನಕ್ಷತ್ರದಂದು ಮನೆಗೆಲಸವೆಲ್ಲಾ ಮುಗಿದ ಮೇಲೆ; ಕೃತ್ತಿಕಾದಂದು ಕಾಗೆ ಕೂಗುವ ಮೊದಲು; ಆರ್ದ್ರಾದಂದು ಗಂಗೆ ಎಚ್ಚರಗೊಳ್ಳುವ ಮೊದಲು ಎಂಬಂತೆ ಸ್ನಾನದ ಸಮಯಕ್ಕೂ ಒಂದು ಕ್ರಮವಿದೆ. ಜಾತಿ ಭೇದಗಳಿಲ್ಲದೆ ಎಲ್ಲ ಸ್ತ್ರೀಯರು ಒಟ್ಟಾಗಿ ಸ್ನಾನಕ್ಕೆ ತೆರಳುತ್ತಾರೆ. ಚಂದನ, ಅರಿಶಿನ, ಕುಂಕುಮ, ಕಾಡಿಗೆ, ಬಟ್ಟೆಬರೆ, ದೀಪ ಇತ್ಯಾದಿ ಮಂಗಳವಸ್ತುಗಳ ಜೆತೆಗ ಸ್ನಾನಘಟ್ಟಕ್ಕೆ ತೆರಳಬೇಕು. ಹಾಗೆ ಹೋಗುವಾಗ ಬಾಯಿಯಲ್ಲಿ ತಾಂಬೂಲ ಜಗಿಯುತ್ತಿರಬೇಕು. ತಲೆತುಂಬಾ ಎಣ್ಣೆ ಹಚ್ಚಿರಬೇಕು. ಸ್ನಾನದ ಸಂದರ್ಭದಲ್ಲಿ ಎರಡೂ ಕೆನ್ನೆಗಳಿಗೆ ಅರಿಸಿನ ಹಚ್ಚಬೇಕು. ನೀರಿಗಿಳಿದ ಮೇಲೆ ಗಂಗೆಯನ್ನ ಎಬ್ಬಿಸುವ ಕ್ರಿಯೆ, ನಾಲ್ಕು ದಿಕ್ಕುಗಳಿಗೂ ನೀರು ಚಿಮ್ಮಿಸುವುದು ಇತ್ಯಾದಿ ಆರ್ದ್ರಾಸ್ನಾನದ ವಿವಿಧ ಹಂತಗಳಾಗಿವೆ.

ಸ್ನಾನದ ಬಳಿಕ ಜೋಕಾಲಿಯಾಟ. ಪಲ್ಲಾಂಗಳಿ, ಮಾಣಿಕ್ಯ ಚೆಂಬಳುಕ್ಕ, ತಾಲಿಪ್ಪೀಲೆ ಮುಂತಾದ ಕೆಲವು ಗ್ರಾಮೀಣ ವಿನೋದಗಳೂ ಇರುವುದಿದೆ. ರಾತ್ರೆ ನಿದ್ದೆ ಬಾರದಂತೆ ತಾಲೋಲಂ (ಜೋಕಾಲಿ ಹಾಡುಗಳು), ತುಂಬಿತುಳ್ಳಲ್ ಮುಂತಾದ ಜನಪದ ಹಾಡುಗಳನ್ನು ಹಾಡುತ್ತಾರೆ. ವ್ರತಾಚರಣೆಯಲ್ಲಿರುವ ಸ್ತ್ರೀಯರನ್ನು ಸಂತೋಷಪಡಿಸಲು ಕೆಲವೆಡೆ ಪುರುಷರು ‘ಪೋರಾಟ್ಟ್’ ಎಂಬ ವೇಷ ಧರಿಸಿ ಕುಣಿಯುವುದು ಇದೆ.

ತಿರುವಾದಿರ ದಿನ ಅಕ್ಕಿಯಿಂದ ಮಾಡಿದ ತಿನಿಸುಗಳು ನಿಷಿದ್ಧ. ಕೂವೆ ಪಾಯಸಂ, ಪಳಂನುರುಕ್ಕು, ವರುತ್ತುಪ್ಪೇರಿ (ಬಾಳೆಕಾಯಿ, ಬಾಳೆಹಣ್ಣಿನ ಖಾದ್ಯಗಳು) ಇತ್ಯಾದಿ ಜನಪದ ಖಾದ್ಯಗಳು ಕಡ್ಡಾಯವೂ ಹೌದು. ‘ಅಳಿಯ ಕಟ್ಟು’ ಸಂಪ್ರದಾಯದ ಮನೆಗಳಲ್ಲಿ ಗಂಡನ ಮನೆಯಿಂದಲೂ, ‘ಮಕ್ಕಳ ಕಟ್ಟು’ ಸಂಪ್ರದಾಯದ ಮನೆಗಳಲ್ಲಿ ತವರುಮನೆಯಿಂದಲೂ ಉಡುಗೊರೆಗಳು ಸಲ್ಲಬೇಕು. ಈ ಉಡುಗೊರೆಗಳನ್ನು ಬುಟ್ಟಿಗಳಲ್ಲಿ ಹೊತ್ತು ತರುವ ಪದ್ಧತಿಯಿರುವುದರಿಂದ ಈ ಕ್ರಿಯೆಗೆ ‘ಬುಟ್ಟಿ ತರುವುದು’ ಎಂಬ ಹೆಸರೇ ಚಾಲ್ತಿಯಲ್ಲಿದೆ. ಈ ಉಡುಗೊರೆ ಬುಟ್ಟಿಗಳಲ್ಲಿ ಇರುವ ವಸ್ತುಗಳ ಬಗ್ಗೆ ತಿರುವಾದಿರದ ಹಾಡುಗಳಲ್ಲಿ ವಿವರವಾದ ವರ್ಣನೆಗಳು ದೊರೆಯುತ್ತವೆ.

ತಿರುವಾದಿರ ಆಚರಣೆಯ ಮತ್ತೊಂದು ಮುಖ್ಯವಾದ ಭಾಗವೇ ಅರ್ಧರಾತ್ರಿಯಲ್ಲಿ ಹೂ ಮುಡಿಯುವ ಕ್ರಿಯೆ. ಇದಕ್ಕೆ ‘ಪಾದಿರಾಪ್ಪೂಚೂಡಲ್’ ಎನ್ನುತ್ತಾರೆ. ಸ್ತ್ರೀಯರು ಅಂಗಳದಲ್ಲಿ ಮೊದಲೇ ಸಿದ್ಧಗೊಳಿಸಿಟ್ಟ ದಶಪುಷ್ಟಗಳನ್ನು (ಗರಿಕೆ, ವಿಷ್ಣು ಕ್ರಾಂತಿ ಮೊದಲಾದ ಗ್ರಾಮೀಣ ಪ್ರದೇಶಗಳಲ್ಲಿ ದೊರೆಯುವ ಹತ್ತು ಬಗೆಯ ಹೂಗಳ ಗುಚ್ಚ), ಅಡಿಕೆ ಮರದ ಹಿಂಗಾರವನ್ನೂ ಮನೆಯೊಳಗೆ ತರುವರು. ಆಗ ಕೆಲವು ನಿರ್ದಿಷ್ಟ ಹಾಡುಗಳನ್ನೂ ಹಾಡುತ್ತಾರೆ. ಈ ಸಂದರ್ಭಗಳಲ್ಲಿ ಕೇರಳದ ಜನಪ್ರಿಯ ಜನಪದ ಹಾಡುಗಳಲ್ಲೊಂದಾದ ವಂಜಿಪ್ಪಾಟ್ ಹಾಡಬೇಕೆಂಬ ನಿಯಮವೂ ಕೆಲವೆಡೆ ಇದೆ. ಮುಂದೆ ಅವರು ಆ ಹೂಗಳನ್ನು ಮುಡಿಯುತ್ತಾರೆ ಮತ್ತು ತಮ್ಮ ತಮ್ಮ ಗಂಡಂದಿರಿಗೂ ಮುಡಿಸುತ್ತಾರೆ. ಮುಂದೆ ಸ್ವಸ್ತಿಕ, ದೀಪವಿಟ್ಟು ವಂದಿಸಿ ಮುಂಜಾನೆಯವರೆಗೂ ಕೈಕೊಟ್ಟಿಕಳಿ (ಚಪ್ಪಾಳೆ ತಟ್ಟುತ್ತಾ ವೃತ್ತಾಕಾರದಲ್ಲಿ ಕುಣಿಯುವ ಕುಣಿತ) ಕುಣಿಯುತ್ತಾ, ಉಷಃಕಾಲದಲ್ಲಿ ಮತ್ತೆ ಸ್ನಾನ ಮಾಡಿ ಬಂದು ಆರ್ದ್ರಾ ನಕ್ಷತ್ರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸುವಲ್ಲಿಗೆ ಆಚರಣೆಯ ಕ್ರಿಯೆಗಳು ಮುಗಿಯುತ್ತವೆ.

ಗ್ರಾಮದ ಸ್ತ್ರೀಯರೆಲ್ಲರೂ ಗ್ರಾಮದ ಮುಖ್ಯಸ್ಥರ ಮನೆಯ ಅಂಗಳದಲ್ಲಿ ಒಟ್ಟು ಸೇರಿ ತಿರುವಾದಿರ ಕಳಿಕುಣಿಯುವುದೂ ಇದೆ. ನೃತ್ಯ ನೋಡಲು ಬರುವವರಿಗೆ ಮನೆಯ ಯಜಮಾನನಿಂದ ಆಹಾರ, ತಾಂಬೂಲ ಇತ್ಯಾದಿಗಳ ಪೂರೈಕೆಯಾಗುತ್ತಿತ್ತು. ಅಂಗಳದ ಮಧ್ಯೆ ಕಾಲುದೀಪ ಉರಿಸಿ ಬತ್ತ ತುಂಬಿದ ಕಳಸೆಯಲ್ಲಿ ಅರಳಿದ ತೆಂಗಿನ ಹಿಂಗಾರ ಇರಿಸಿ, ಸ್ವಸ್ತಿಕವನ್ನೂ ವಿವಿಧ ನೈವೇದ್ಯಗಳನ್ನೂ ಇರಿಸಿ ಗಣಪತಿಯನ್ನು ಸ್ತುತಿಸಿ ನೃತ್ಯ ಪ್ರಾರಂಭವಾಗುತ್ತದೆ. ಮೊದಲ ಕುಣಿತಕ್ಕೆ ‘ಗಣಪತಿ ಹೆಜ್ಜೆ’ ಎಂದು ಕರೆಯುವರು. ಮುಂದೆ ಸರಸ್ವತಿ, ಶ್ರೀಕೃಷ್ಣ, ಶಿವ ಮುಂತಾದ ದೇವರನ್ನು ಸ್ತುತಿಸಿ ಇತರ ಹಾಡುಗಳನ್ನು ಆಯ್ದುಕೊಳ್ಳುತ್ತಾರೆ. ಅವು ಹೆಚ್ಚಾಗಿ ಪುರಾಣ, ಇತಿಹಾಸಗಳಿಂದ ಅಥವಾ ಕಥಕಳಿಯ ಹಾಡುಗಳಿಂದ ಆಯ್ದವುಗಳಾಗಿರುತ್ತವೆ. ಹಾಡಿನ ತಾಳಗತಿಗೆ ಅನುಗುಣವಾಗಿ ಹೆಜ್ಜೆ ಹಾಕುತ್ತಾ ವೃತ್ತಾಕಾರವಾಗಿ ನೃತ್ಯ ಸಾಗುತ್ತದೆ.

‘ಕೈಕೊಟ್ಟಿಕಳಿ’ ಸಾಮಾನ್ಯವಾಗಿ ಎಲ್ಲಾ ಮಂಗಳ ಕಾರ್ಯಗಳಲ್ಲೂ, ಅದರಲ್ಲೂ ಸ್ತ್ರೀಯರು ಒಟ್ಟು ಸೇರುವ ಹೆಚ್ಚಿನ ಕಾರ್ಯಕ್ರಮಗಳಲ್ಲೂ ಇರುತ್ತವೆ. ಉದಾಹರಣೆಗೆ ಓಣಂ, ವಿಷು, ಮದುವೆ, ಗೃಹಪ್ರವೇಶ, ಅನ್ನಪ್ರಾಶನ ಇತ್ಯಾದಿ. ತಿರುವಾದಿರ ಸಂಭ್ರಮದಲ್ಲಿ ಅದು ‘ತಿರುವಾದಿರ ಕಳಿ’ ಎನಿಸಿಕೊಳ್ಳುತ್ತದೆ.

ತಿರುವಾದಿರದ ಹಾಡುಗಳನ್ನು ಗಂಗೆಯನ್ನು ಎಬ್ಬಿಸುವ ಹಾಡು, ಜೋಕಾಲಿ ಹಾಡುಗಳು, ವಿವಿಧ ದೇವತಾಸ್ತುತಿಗಳು, ರಂಗೋಲಿ ಹಾಡುಗಳು, ಹೂ ಮುಡಿಯುವ ಹಾಡುಗಳು, ಕೈಕೊಟ್ಟಿಕಳಿ ಹಾಡು, ಕುಮ್ಮಿಹಾಡು – ಹೀಗೆಲ್ಲಾ ಆಚರಣೆಯ ಸಂದರ್ಭದ ಆಧಾರದಲ್ಲಿ ವರ್ಗೀಕರಿಸಬಹುದು. ಕೈಕೊಟ್ಟಿಕಳಿಯಲ್ಲಿ ಪಾರ್ವತೀ ಸ್ವಯಂವರ, ಸೀತಾ ಸ್ವಯಂವರ, ರುಕ್ಮಿಣೀ ಸ್ವಯಂವರ, ಮಂಗಳ ಹಾಡುಗಳು ಇವುಗಳು ಕಡ್ಡಾಯವಾಗಿ ಇರಬೇಕೆಂಬ ನಿಯಮವಿದೆ. ಇವುಗಳಲ್ಲದೆ ಗಣಪತಿ, ಸರಸ್ವತಿ, ಶ್ರೀಕೃಷ್ಣ, ಭಗವತಿ ಮುಂತಾದ ದೇವಸ್ತುತಿಗಳೂ ತಿರುವಾದಿರದ ಐತಿಹ್ಯವನ್ನು ಒಳಗೊಂಡ ಹಾಡುಗಳೂ, ದಶಪುಷ್ಟ ಮಹಾತ್ಮೆ ಇತ್ಯಾದಿಗಳೂ ಈ ಹಾಡುಗಳಲ್ಲಿ ಒಳಗೊಳ್ಳುತ್ತವೆ. ಇವುಗಳಲ್ಲಿ ಹಲವು ಹಾಡುಗಳನ್ನು ಸಂಗ್ರಹಿಸುವ, ಪ್ರಕಟಪಡಿಸುವ ಕೆಲಸಗಳು ಆಗಿಲ್ಲ.

೧. ಸ್ನಾನದ ಹಾಡುಗಳು – ೧. ಗಂಗೆಯನ್ನು ಎಬ್ಬಿಸುವ ಹಾಡು. ಸ್ನಾನಕ್ಕಾಗಿ ಕೆರೆಗೋ ಹೊಳೆಗೋ ಇಳಿಯುವಾಗ ಕೆರೆಯ ನೀರನ್ನು ಗಂಗೆಯೆಂದು ಸಂಕಲ್ಪಿಸಿ, ನೀರನ್ನು ಕೈಯಿಂದ ಮುಟ್ಟಿ ಹಾಡವ ಹಾಡ ಗಂಗೆಯನ್ನು ಎಬ್ಬಿಸುವ ಹಾಡು. ಇದಕ್ಕೆ ‘ತೊಟ್ಟುವಂದನಂ’ ಎಂತಲೂ ಕರೆಯುತ್ತಾರೆ.

೨. ಸ್ನಾನದ ಹಾಡುಗಳು – ೨. ನೀರಿಗಿಳಿದ ಮೇಲೆ ಮುಗಿದ ಕೈಯಿಂದಲೇ ನಾಲ್ಕೂ ದಿಕ್ಕುಗಳಿಗೆ ನೀರನ್ನು ಚಿಮ್ಮಿಸುತ್ತಾ ಹಾಡುವ ಹಾಡು. ಮುಂದೆ ಕೈಗಳಿಂದ ನೀರಿಗೆ ಹೊಡೆಯುತ್ತಾ ನೀರಾಟ ಮುಂದುವರಿಯುತ್ತದೆ.

ಹಿಂದೆಲ್ಲಾ ಇಂತಹ ತಿರುವಾದಿರ ಕಳಿಯ ಹಾಡುಗಳಿಗೆ ಯಾವುದೇ ಹಿಮ್ಮೇಳಗಳಿರುತ್ತಿರಲಿಲ್ಲ. ಅಲ್ಲಿ ರಾಗ, ಭಾವಗಳಿಗೆ ಬದಲಾಗಿ ಕುಣಿಯುವ ಗುಂಪಿನ ಒಗ್ಗಟ್ಟಿಗೆ ಪ್ರಾಮುಖ್ಯತೆ ಇತ್ತು. ಮುಂದೆ ಹಲವು ಹೊಸತನಗಳು ತಿರುವಾದಿರಕಳಿಯಲ್ಲಿ ಕಾಣಿಸಿಕೊಳ್ಳತೊಡಗಿತು. ಈಗ ಸ್ಪರ್ಧಾವೇದಿಕೆಗಳಲ್ಲಿ ಕಾಣಸಿಗುವ ತಿರುವಾದಿಕಳಿ ಪ್ರದರ್ಶನಗಳಲ್ಲಿ ಮೃದಂಗ, ಕೊಳಲು, ಗೆಜ್ಜೆ, ತಾಳ ಇತ್ಯಾದಿ ಪಕ್ಕವಾದ್ಯಗಳೂ ಸೇರಿಕೊಂಡಿವೆ.

ತೀಚಟ್ಟಿ ಆಟ್ಟಂ ತಮಿಳುನಾಡಿನ ಜನಪದ ಕುಣಿತ (ಬೆಂಕಿ ಮಡಕೆ ಕುಣಿತ). ಬೆPಕಿಯನ್ನು ಪೂಜಿಸುವುದು ತುಂಬ ಪ್ರಾಚೀನ ಸಂಪ್ರದಾಯ. ಈ ಪದ್ಧತಿ ಸ್ವಲ್ಪ ಪರಿವರ್ತನೆಗೊಂಡು ‘ಬೆಂಕಿಯೊಂದಿಗೆ ಆರಾಧಿಸುವುದು’ ಎಂಬ ಸ್ವರೂಪವನ್ನು ತಾಳಿದೆ. ಕಾಳಿ ಆರಾಧನೆಯೊಂದಿಗೆ ಸಂಬಂಧ ಹೊಂದಿರುವ ಈ ಪ್ರಕಾರ ತಮಿಳುನಾಡಿನಲ್ಲಿ ನಾಗಪಟ್ಟಣ, ತಿರುವಾರೂರು ಮುಂತಾದ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಇದು ನೋಡಲು ತುಂಬ ಸರಳವೆಂಬಂತೆ ಕಾಣಿಸಿದರೂ ತುಂಬ ಕಠಿಣವಾದ, ಕಷ್ಟಸಾಧ್ಯವಾದ ಕ್ರಿಯೆಯಾಗಿದೆ. ಇದು ದೇವಾಲಯಕ್ಕೆ ಸಂಬಂಧಿಸಿದ ಆಚರಣೆಗಳೊಂದಿಗೆ ಹೆಣೆದುಕೊಂಡಿರುವುದರಿಂದ ನೋಡುವವರಲ್ಲಿ ಭಯ – ಭಕ್ತಿಯನ್ನು ಮೂಡಿಸುತ್ತದೆ. ಇದರಲ್ಲಿ ಬಳಸುವ ಬೆಂಕಿಯ ಮಡಕೆಯನ್ನು ‘ಕಪ್ಪರೈ’ ಎಂದು ಕರೆಯುತ್ತಾರೆ. ಇದನ್ನು ಮಾಡುವವರು ವೃತ್ತಿ ಕಲಾವಿದರಷ್ಟೇ ಆಗಿರುತ್ತಾರೆ. ಕೇವಲ ಗಂಡಸರು ಮಾತ್ರ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ನಿರ್ದಿಷ್ಟ ಸಂಭಾವನೆಯನ್ನು ಸ್ವೀಕರಿಸಿ ಎಲ್ಲಿ, ಯಾರು ಕರೆದರೂ ಹೋಗಿ ಬೆಂಕಿ ಮಡಕೆ ಕುಣಿತವನ್ನು ಪ್ರದರ್ಶಿಸುವ ವೃತ್ತಿ ಕಲಾವಿದರು ಇವರು. ಬೆಳಗಿನಿಂದ ಸಂಜೆಯವರೆಗೂ, ನಾಲಿಗೆ ಚಾಚಿ ಉರಿಯುತ್ತಿರುವ ಬೆಂಕಿ ಮಡಕೆಯನ್ನು ಅಂಗೈಗಳಲ್ಲಿ ಹಿಡಿದುಕೊಂಡು ಇವರು ನರ್ತಿಸುತ್ತಾರೆ. ತಮ್ಮ ಕೈಯಲ್ಲಿರುವ ಬೆಂಕಿ ಮಡಕೆಯನ್ನು ಆಗಾಗ ಕೈಬದಲಿಸಿ ಕೊಳ್ಳುತ್ತಿರುತ್ತಾರೆ. ಇವರು ಹೀಗೆ ಕುಣಿಯುತ್ತಿರುವಾಗ ತಾಳಮೇಳ ವಾದ್ಯಗಳೂ ಮೊಳಗುತ್ತಿರುತ್ತು. ಉತ್ಸವಗಳ ಸಂದರ್ಭದಲ್ಲಿ ಬೀದಿಗಳಲ್ಲಿ ಇವರು ಹೀಗೆ ಕುಣಿಯುತ್ತಾ ಮೆರೆವಣಿಗೆ ಬರುವುದರ ಮೂಲಕ ಭಕ್ತರನ್ನು ಪರವಶಗೊಳಿಸುತ್ತಾರೆ.

ಕಲೆ ಸರಿಸಮವಾಗಿ ಬೆಸೆದುಕೊಂಡಿರುವುದನ್ನು ಇಲ್ಲಿ ಧರ್ಮದೊಂದಿಗೆ ಕಾಣಬಹುದು. ಕರ್ಪೂರ ಉರಿಸುವುದು, ಕಾರ್ತಿಕ ದೀಪ ಹಚ್ಚುವುದು, ಚೊಕ್ಕಪ್ಪನನ್ನು ಸುಡುವುದು ಇತ್ಯಾದಿಗಳ ಮುಂದುವರಿಕೆಯಂತೆ ಇಂದು ಕಾಣಿಸಿದರೂ, ಆಚರಣೆಗಳ ವಿಕಾಸದಲ್ಲಿ ಇದು ಅವುಗಳಿಗಿಂತ ಭಿನ್ನವಾಗಿದೆ. ಈ ಕಲೆಯ ಉಗಮ ಹೇಗಾಯಿತೆಂಬುದರ ಬಗೆಗೆ ಯಾವುದೇ ಮಾಹಿತಿಗಳಿಲ್ಲ. ಒಂದೇ ಕಡೆ ನಿಂತು ಅಥವಾ ಬೀದಿಗಳಲ್ಲಿ ಸಂಚರಿಸುತ್ತಾ, ಸಂಗೀತ ವಾದ್ಯಗಳ ನೆರವಿನೊಂದಿಗೆ ನಡೆಯುವ ಈ ಕುಣಿತ ಧಾರ್ಮಿಕ ಆಚರಣೆಗಳೊಂದಿಗೆ ಮನರಂಜನೆಯ ದೃಷ್ಟಿಕೋನವನ್ನೂ ಹೊಂದಿದೆ. ಸಾವಿನ ಸಂದರ್ಭದಲ್ಲಿ ಬೆಂಕಿ ಮಡಕೆಯನ್ನು ಹಿಡಿದುಕೊಂಡು ಹೋಗುವ ಆಚರಣೆಗಿಂತ ಇದು ಸಂಪೂರ್ಣ ಭಿನ್ನವಾದುದಾಗಿದ್ದು, ಅವೆರಡಕ್ಕೂ ಸಂಬಂಧವಿಲ್ಲ ಎನ್ನಿಸುತ್ತದೆ. ಇದು ತುಂಬ ಕಷ್ಟಕರವಾದುದಾದರೂ ಕಲಾವಿದರು ಇದರಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುತ್ತಾರೆ. ಅದಕ್ಕೆ ಕಾರಮ, ಅವರೇ ಹೇಳುವ ಪ್ರಕಾರ ವರ್ಷಕ್ಕೊಮ್ಮೆಯಾದರೂ ದೊರಕುವ ಒಳ್ಳೆಯ ಆದಾಯ, ವಸ್ತ್ರಾಭರಣಗಳು, ಹಾರ – ಸನ್ಮಾಮಾನಗಳ ಗೌರವ, ಕುಣಿತದ ವೇಷ ಧರಿಸಿದೊಡನೆ ದೈವತ್ವಕ್ಕೇರಿಸುವುದು, ತಮ್ಮ ಕುಣಿತವನ್ನು ಕಂಡು ಜನರು ಹರ್ಷೋದ್ಗಾರ ಮಾಡುವುದು, ಅದರಿಂದ ತಮಗಾಗುವ ಆನಂದ ಇತ್ಯಾದಿಗಳು ಈ ಕಲೆಯನ್ನು ಮುಂದುವರಿಸಲು ಸ್ಫೂರ್ತಿದಾಯಕವಾಗಿದೆ.

ಬೆಂಕಿ ಮಡಕೆ ಕುಣಿತವನ್ನು ಪ್ರದರ್ಶಿಸುವ ಕಲಾವಿದರು, ಉತ್ಸವದ ದಿನ ಮುಂಜಾನೆಯೇ ಎದ್ದು ಸ್ನಾನಾದಿಗಳನ್ನು ಪೂರೈಸಿಕೊಂಡು ಕಾಳಿದೇವಾಲಯಕ್ಕೆ ಬಂದು ಅಲ್ಲಿ ವೇಷಭೂಷಣಗಳೊಂದಿಗೆ ಸಿದ್ಧರಾಗುತ್ತಾರೆ. ಮಂಡಿಯವರೆಗೆ ಉಟ್ಟ ದಟ್ಟಿಪಂಚೆ, ಸೊಂಟದ ಸುತ್ತ ಬಿಗಿದು ಕಟ್ಟಿದ ಬಿಳಿಯ ತುಂಡು, ಕುತ್ತಿಗೆಯಲ್ಲಿ ಉದ್ದವಾಗಿ ತೂಗುವ ಹಾರಗಳು, ಕಾಲುಗಳಲ್ಲಿ ಗೆಜ್ಜೆ, ತಲೆಗೂದಲನ್ನುಬಿಗಿದು ಗಂಟು ಹಾಕಿಕೊಂಡು ಅದರೊಳಗೆ ಕುಲ್ಲಾ ಸಿಕ್ಕಿಸಿ ತೂಗು ಬಿಡುವುದು, ಹಣೆಯನ್ನು ಸುತ್ತುವರಿದಂತೆ ಕಿರೀಟ, ಮುಖ – ಮೈಗಳಿಗೆ ವಿಭೂತಿ ಹಚ್ಚಿಕೊಳ್ಳುವುದು, ಕುಂಕುಮ ಕೈಕಾಲುಗಳಿಗೆ ಹೂವಿನ ದಂಡೆ ಸುತ್ತಿಕೊಳ್ಳುವುದು, ಕಿವಿಗಳಲ್ಲಿ ತೂಗುವ ಕುಂಡಲಗಳು – ಹೀಗೆ ವೇಷ ಧರಿಸಿ ತಯಾರಾಗುತ್ತಾರೆ. ಅನಂತರ ಕೆನ್ನಾಲಿಗೆ ಚಾಚಿ ಉರಿಯುವ ಬೆಂಕಿ ಕಪ್ಪು ಮಡಕೆಯನ್ನು ಅಂಗೈಗಳಲ್ಲಿ ಹಿಡಿದುಕೊಂಡು ತೂಗುತ್ತಾ ಆಡುತ್ತಾ ಕುಣಿಯುತ್ತಾ ದೇವಾಲಯದ ಹೊರೆಗ ಬಂದು ಬೀದಿಗಳಲ್ಲಿ ಮೆರೆವಣಿಗೆ ಹೋಗುತ್ತಾರೆ. ಇವರೊಂದಿಗೆ ತಾಳ ಮೇಳಗಳ ವಾದ್ಯದವರೂ ಹೊರಡುತ್ತಾರೆ. ಉರಿಯುವ ಮಡಕೆಯಲ್ಲಿ ಆಗಾಗ ಎಣ್ಣೆ ಸುರಿಯುವುದಕ್ಕೆಂದೇ ಇರುವ ಸಹಾಯಕರೂ ಜೊತೆಗೆ ಹೊರಡುತ್ತಾರೆ. ತಬಲ, ಪಂಬೈ, ಮೇಳಗಾರರು, ವಿಭೂತಿ ಹಂಚುವವರು, ನಾದಸ್ವರ ವಾದಕರು, ಕಾಣಿಕೆ ತಟ್ಟೆ ಹಿಡಿದುಕೊಂಡು ಹೋಗುವವರು – ಹೀಗೆ ಒಂದು ಸಣ್ಣ ಗುಂಪೇ ಅವರೊಂದಿಗೆ ಹೊರಡುತ್ತದೆ. ಹಿನ್ನೆಲೆಯಲ್ಲಿ ಕೆಲವೊಮ್ಮೆ ಸಿನಿಮಾ ಹಾಡುಗಳೂ ಧ್ವನಿಸುತ್ತಿತ್ರುತ್ತವೆ. ಪ್ರತಿವರ್ಷವೂ ಕೆಲವು ನಿರ್ದಿಷ್ಟ ಪ್ರದೇಶಗಳೊಳಗೆ ಈ ಪ್ರದರ್ಶನ ನಡೆಯುತ್ತದೆ. ಕುಣಿತಕ್ಕೆ ಮುಂಚೆ ಯಾವುದೇ ತರಬೇತಿ ಇರುವುದಿಲ್ಲ. ಅನುಭವವೇ ಅವರಿಗೆ ಜೊತೆ ಬೆಂಕಿ ಮಡಕೆ ಹಿಡಿದು ಕುಣಿಯುವ ವ್ಯಕ್ತಿಗಳನ್ನು ದೈವಿಕ ನೆಲೆಗೇರಿಸಿನೋಡುವ ಪರಿಪಾಠವಿದೆ. ದೀಪಾರಾಧನೆ ಮಾಡುವುದು, ಕಾಲುಗಳ ಮೇಲೆ ನೀರು ಸುರಿಯುವುದು, ಕಾಲುಗಳಡಿ ಬಿದ್ದು ನಮಸ್ಕರಿಸುವುದು, ವಿಭೂತಿ ಇಡುವಂತೆ ಕೇಳಿಕೊಳ್ಳುವುದು. ಹುಂಡಿಯೊಳಗೆ ಕಾಣಿಕೆ ಹಾಕುವುದು ಇತ್ಯಾದಿಗಳು ಮೇಲಿನ ಮಾತನ್ನು ಪುಷ್ಟೀಕರಿಸುತ್ತವೆ. ಮಧ್ಯಾಹ್ನ ಆದ ಮೇಲೆ ಬೀದಿ ಬೀದಿ ಮೆರೆವಣಿಗೆ ಮುಗಿಸಿದೇವಾಲಯದ ಬಳಿಗೆ ಹಿಂದಿರುಗುತ್ತಾರೆ. ಅಲ್ಲಿ ಕೈಗಳಲ್ಲಿ ತೆಂಗಿನ ಗರಿಗಳನ್ನು ಹಿಡಿದುಕೊಂಡು ಇನ್ನೂ ಸ್ವಲ್ಪ ಹೊತ್ತು ಕುಣಿಯುತ್ತಾರೆ. ಅನಂತರ ಚೂಪಾದ ಕತ್ತಿಗಳ ಮೇಲೆ ನಡೆದು ಆಲಯದೊಳಗೆ ಪ್ರವೇಶಿಸುತ್ತಾರೆ. ಇಲ್ಲಿಗೆ ಬೆಂಕಿ ಮಡಕೆ ಕುಣಿತ ಮುಗಿಯುತ್ತದೆ.

ಆಚರಣೆ ಎಂಬುದು ಕೂಡ ಒಂದು ಬಗೆಯ ಸಂವಹನ ಎನ್ನುತ್ತಾರೆ ತಜ್ಞರು. ಇದು ಆಂತರಿಕವಾಗಿಯೂ ಮಾನಸಿಕವಾಗಿಯೂ ಇರಬಹುದು. ಆಚರಣೆಯೊಂದಿಗೆ ಸಂಬಂಧ ಹೊಂದಿರುವ ಬೆಂಕಿ ಮಡಕೆಯ ಕುಣಿತ ಪ್ರಾಚೀನ ಸಂಪ್ರದಾಯವೊಂದರ ಮುಂದುವರಿಕೆಯಾಗಿರಬೇಕು. ದುಷ್ಟ ಶಕ್ತಿಗಳನ್ನು ದೂರ ಓಡಿಸುವ ಹಿನ್ನೆಲೆಯಲ್ಲಿ ಉಗಮವಾಗಿರಬಹುದಾದ ಇದು ಕಲಾ ರೂಪವನ್ನು ಪಡೆದುಕೊಂಡು, ಮನರಂಜನೆಯ ಮಾಧ್ಯಮವಾಗಿಯೂ ಪರಿಣಿಸಿದೆ.

– ಇ.ಎಲ್. ಅನುವಾದ ಟಿ.ಎಸ್.