ತೀಜ್ಹಬ್ಬ ಈ ಹಬ್ಬವನ್ನು ಕೆಲವು ಕಡೆ ಮಹಾನವಮಿಯಂದು ಆಚರಿಸಿದರೆ, ಮತ್ತೆ ಕೆಲವು ಕಡೆ ಶ್ರಾವಣ ಮಾಸ, ಯುಗಾದಿ ಮತ್ತು ಮಾರಿಹಬ್ಬಗಳಂದು ಆಚರಿಸುತ್ತಾರೆ. ಉತ್ತರ ಭಾರತದ ಕಡೆ ಶ್ರಾವಣ ಮತ್ತು ಭಾದ್ರಪದಗಳೆಂದು ಆಚರಿಸುವುದುಂಟು. ಈ ಹಬ್ಬದಲ್ಲಿ ಮಹಿಳೆಯರು, ಯುವತಿಯರು ಪಾಲ್ಗೊಳ್ಳುತ್ತಾರೆ. ಈ ಹಬ್ಬದಂದು ಮಹಿಳೆಯರು ಮನೆ ಮಠಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ, ಸ್ವಚ್ಛಗೊಳಿಸಿ ಸಾಂಪ್ರದಾಯಿಕ ಉಡುಗೆ, ವಿವಿಧ ಆಭರಣ, ಬಳೆಗಳನ್ನು ಧರಿಸಿ ಮಹಿಳೆಯರು ತೀಜ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ.

Sawan Festival – ಎಂದೇ ಪ್ರಸಿದ್ಧವಾಗಿರುವ ಈ ಹಬ್ಬವನ್ನು ಮಳೆಗಾಲದ ಶ್ರಾವಣಮಾಸದಂದು ಆಚರಿಸಲಾಗುತ್ತದೆ. ಆದರೆ ದಕ್ಷಿಣ ಭಾರತದ ಕಡೆ ವಲಸೆ ಬಂದು ನೆಲಸಿರುವ ಲಂಬಾಣಿಗರು ತಮ್ಮ ಬಿಡುವಿನ ವೇಳೆಯಲ್ಲಿ ಆಚರಿಸುವ ಇತರ ಹಬ್ಬಘಲೊಂದಿಗೆ ತೀಜ್ ಹಬ್ಬವನ್ನು ಇಟ್ಟುಕೊಳ್ಳುತ್ತಾರೆ. ಶಿವ – ಪಾರ್ವತಿಯರ ಸ್ಮರಣಾರ್ಥ ನಡೆಯುವ ಈ ಹಬ್ಬ ಭಾರತ ಮತ್ತು ಪ್ರಪಂಚದ ಇತರೆಡೆಯಲ್ಲಿ ರೂಢಿಯಲ್ಲಿದೆ. ತೀಜ್ ಹಬ್ಬವನ್ನು ಉತ್ತರ ಭಾರತದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲೂ ರಾಜಾಸ್ಥಾನದ ಸಾಂಸ್ಕೃತಿಕ ರಾಜಧಾನಿಯಾಗಿರುವ ಜೈಪುರದಲ್ಲಿ ಇದನ್ನು ವಿಶೇಷವಾಗಿ ಆಚರಿಸುತ್ತಾರೆ.

ಹರಿಯಾಳಿ ತೀಜಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಮಹಿಳೆಯರು ಚಂದ್ರನನ್ನು ಹಾಲು, ಮೊಸರು ಮತ್ತು ಹೂವಿನ ನೈವೇದ್ಯಮಾಡಿ ಪೂಜಿಸುತ್ತಾರೆ.

ಖಜಾರಿ ತೀಜ್ಇದು ಕೃಷ್ಣಪಕ್ಷದ ತೃತೀಯದಂದು ಆಚರಿಸಲ್ಪಡುತ್ತದೆ. ಅಂದು ಮಹಿಳೆಯರು ನಾನಾ ರೀತಿಯ ಆಭರಣಗಳೊಂದಿಗೆ ಬಣ್ಣ ಬಣ್ಣದ ಉಡುಪನ್ನು ಧರಿಸಿ ಉಪವಾಸವಿದ್ದು ಭಕ್ತಿ – ಭಾವದಿಂದ ಬೇವಿನ ಮರವನ್ನು ಪೂಜಿಸಿ, ಅದರ ಸುತ್ತಾ ಏಳು ಸುತ್ತು ತಿರುಗಿ ನಮಿಸುತ್ತಾರೆ. ಮನೆ ಮಂದಿಗಳ ಪರವಾಗಿ ಶುಭಕೋರುತ್ತಾರೆ.

ಹರತಾಳಿಕ ತೀಜ್ಭಾದ್ರಪದದ ತೃತೀಯದಂದು ಈ ಹಬ್ಬವನ್ನು ಆಚರಿಸುವುದುಂಟು. ಈ ಹಬ್ಬದ ದಿನದಂದು ಹೆಂಡತಿ ಗಂಡನ ಶ್ರೇಯಸ್ಸಿಗೋಸ್ಕರ ನಿರ್ಜಳ ವ್ರತವನ್ನು ಕೈಗೊಳ್ಳುತ್ತಾಳೆ. ೨೪ ಗಂಟೆ ಉಪವಾಸವಿದ್ದು ತನ್ನ ಗಂಡನಿಗೆ ಆಯುರಾರೋಗ್ಯ ಹೆಚ್ಚಾಗಲೆಂದು ಮುತ್ತೈದೆ ದೇವಿಯಲ್ಲಿ ಪ್ರಾರ್ಥಿಸುತ್ತಾಳೆ. ಈ ಸಂದರ್ಭದಲ್ಲಿ ಹೆಂಗಸರಿಗೆ ಧೈರ್ಯ, ತಾಳ್ಮೆ ಇರಬೇಕು. ಸೊಸೆ ಅನಾರೋಗ್ಯ ಪೀಡಿತಳಾಗಬಾರದೆಂದು ಅತ್ತೆ ಹಣ್ಣಿನ ರಸ, ಟೀ ಮಾಡಿಕೊಡುತ್ತಿರುತ್ತಾಳೆ. ಹೂ, ಆಭರಣಗಳಿಂದ ಶೃಂಗರಿಸಲ್ಪಟ್ಟ ಪಾರ್ವತಿ ವಿಗ್ರಹ ಹೊಸ ಬಟ್ಟೆ ತೊಡಿಸಿ ಹಣ್ಣು, ಸಿಹಿ ಮತ್ತು ನಾಣ್ಯಗಳಂತಹ ವಸ್ತುಗಳನ್ನಿಟ್ಟು ಪೂಜಿಸುತ್ತಾರೆ. ವಿವಾಹಿತ, ಅವಿವಾಹಿತ ಹೆಣ್ಣು ಮಕ್ಕಳು ಬಣ್ಣ ಬಣ್ಣದ ಉಡುಗೆ ಧರಿಸಿ ವಿವಿಧ ಬಗೆಯ ಹಾಡುಗಳನ್ನು ಹೇಳುತ್ತಾ, ನೃತ್ಯ ಮಾಡುತ್ತಾ, ತೀಜ್ ಕಥೆಗಳನ್ನು ಹೇಳುತ್ತಾ ಶಿವ – ಪಾರ್ವತಿಯರನ್ನು ಪೂಜಿಸುತ್ತಾರೆ.

ಒಂದು ಐತಿಹ್ಯದ ಪ್ರಕಾರ ಪಾರ್ವತಿ ನೂರು ವರ್ಷಗಳ ದೇಹ ದಂಡನೆಯ ಅನಂತರ ಶ್ರಾವಣ ಮಾಸದಂದು ಶಿವನೊಂದಿಗೆ ಸಮಾಗಮವಾಗುತ್ತಾಳೆ. ಪಾರ್ವತಿ ೧೦೭ ಜನ್ಮವೆತ್ತರೂ ಶಿವನನ್ನು ಒಲಿಸಿಕೊಳ್ಳಲಾಗಿರಲಿಲ್ಲ. ಆದರೆ ಪಾರ್ವತಿಯ ೧೦೮ನೇ ಜನ್ಮದಿನದಂದು ಶಿವನಿಗೆ ಜ್ಞಾನೋದಯವಾಗಿ ಅವಳ ದೃಢಭಕ್ತಿಯನ್ನು ಮೆಚ್ಚಿ ಪ್ರೀತಿಸಿ ಹೆಂಡತಿಯಾಗಿ ಸ್ವೀಕಾರಮಾಡುತ್ತಾರೆ. ಆದ್ದರಿಂದ ಈ ಶುಭದಿನದಂದು .ಯಾರು ಪಾರ್ವತಿದೇವಿಯನ್ನು ಭಕ್ತಿಭಾವದಿಂದ ಆರಾಧಿಸುತ್ತಾರೋ ಅವರ ದಾಂಪತ್ಯ ಜೀವನ ಸುಖವಾಗಿರುತ್ತದೆಂಬ ಪ್ರತೀತಿಯಿದೆ. ಈ ಸಂದರ್ಭದಲ್ಲಿ ಭಕ್ತರು ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ವಿವಿಧ ಹರಕೆಗಳನ್ನು ಹೊರುತ್ತಾರೆ.

ಹೀಗೆ ಭಾರತದ ಇತರ ಬುಡಕಟ್ಟುಗಳಂತೆ ಪ್ರತ್ಯೇಕ ಅಸ್ತಿತ್ವವನ್ನು ಹೊಂದಿರುವ ಲಂಬಾಣಿಗರು ಹಬ್ಬ, ಹರಿದಿನಗಳಲ್ಲೂ ವೈವಿಧ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ತೀಜ್ ಹಬ್ಬವನ್ನು ಕುರಿತ ಲಂಬಾಣಿಗರ ದಂತಕತೆಯ ಪ್ರಕಾರ ತಚೀಜ್ ಮಾತಾ ಅವಿವಾಹಿತಳಾಗೇ ಉಳಿದಿದ್ದರಿಂದ ಇದು ಅವಿವಾಹಿತ ಹೆಣ್ಣು ಮಕ್ಕಳಿಗಾಗಿ ಇರುವ ಹಬ್ಬವಾಗಿದೆ. ಈ ಹಬ್ಬದಂದು ತಾಂಡಾದವರೆಲ್ಲ ಒಟ್ಟಿಗೆ ಸೇರಿ ಒಳ್ಳೆಯ ಮೂಹೂರ್ತ ಇರುವ ದಿನದಂದು ಉತ್ತಮ ತಳಿಯ ಗೋದಿಯನ್ನು ಬಿತ್ತಬೇಕೆಂದು ತೀರ್ಮಾನಿಸುತ್ತಾರೆ. ಬಿದಿರಿನಿಂದ ಹೆಣೆದಿರುವ ಒಂಬತ್ತು ಸಣ್ಣ ಸಣ್ಣ ಪುಟ್ಟಿಗಳಲ್ಲಿ ಹದಮಾಡಿದ ಮೂರು ಥರದ ಮಣ್ಣು ಹಾಗೂ ಗೊಬ್ಬರವನ್ನು ಹಾಕುತ್ತಾರೆ. ಹೀಗೆ ತುಂಬಿರುವ ಒಂಬತ್ತು ಪುಟ್ಟಿಗಳಿಗೆ ತಾಂಡಾದ ನಾಯಕ, ನಾಯಕಣ್, ಡಾವೊ, ಕಾರಬಾರಿ ಮುಂತಾದ ಪ್ರಮುಖರು ಸೇರಿ ಗೋದಿ ಬಿತ್ತಿ ನೀರನ್ನು ಹಾಕುತ್ತಾರೆ. ಬಿತ್ತನೆ ಮುಗಿದ ಮೇಲೆ ಒಂದೊಂದು ಪುಟ್ಟಿಯನ್ನು ಒಬ್ಬೊಬ್ಬ ಕೋರು ಹುಡುಗಿಯರು ಜವಾಬ್ದಾರಿಯಿಂದ ಆರೈಕೇ ಮಾಡಬೇಕು. ಒಂದು ಚೂರು ಹೆಚ್ಚು ಕಡಿಮೆಯಾದರೂ, ಅದನ್ನು ನಿರ್ವಹಿಸುತ್ತಿರುವವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹೆಣ್ಣುಮಕ್ಕಳು ಊಟದಲ್ಲಿ ಪಥ್ಯ ಅನುಸರಿಸಬೇಕು. ಅರಿಸಿನ, ಬೆಳ್ಳುಳ್ಳಿ ಇನ್ನಿತರೆ ಸಾಂಬಾರ ಪದಾರ್ಥಗಳಿಂದ ಮಾಡಿದ ಅಡಿಗೆಯನ್ನು, ಮಾಂಸದೂಟವನ್ನು ಬಳಸುವಂತಿಲ್ಲ. ಮುಟ್ಟಾದವರ, ಸೂತಕದವರ ಸಂಪರ್ಕ, ನೆರಳೂ, ಕೂಡ ಬೀಳಿಸಿಕೊಳ್ಳಬಾರದು.

ಹೀಗೆ ಒಂಬತ್ತು ದಿನ ಒಂಬತ್ತು ಜನ ಹೆಣ್ಣು ಮಕ್ಕಳು ಸೂರ್ಯೋದಯಕ್ಕೆ ಮುನ್ನವೇ ಎದ್ದು ತಮ್ಮ ತಮ್ಮ ಪುಟ್ಟಿಗಳ ಆರೈಕೆಯಲ್ಲಿ ತೊಡಗಿರಬೇಕು. ಯಾರದಾದರೊಂದು ಪುಟ್ಟಿಯಲ್ಲಿಯ ಗೋದಿ ಸಸಿಗಳು ಕಳಪೆಯಾಗಿ ಬೆಳೆದಿದ್ದರೆ ಅದರ ಉಸ್ತುವಾರಿಯಲ್ಲಿದ್ದವರನ್ನೇ ತಪ್ಪಿತಸ್ಥರನ್ನಾಗಿ ಮಾಡುತ್ತಾರೆ. ಆದ್ದರಿಂದ ಹೆಣ್ಣುಮಕ್ಕಳು ತುಂಬ ಕಟ್ಟುನಿಟ್ಟಾಗಿರುತ್ತಾರೆ. ಒಂಬತ್ತು ದಿನಗಳವರೆಗೆ ಬಾಯಲ್ಲಿ ಕ್ಕಿಕಾಳನ್ನು ಹಾಕಿಕೊಂಡು ಆರೈಕೆ ಮಾಡುವುದರ ಜೊತೆಗೆ ಪ್ರತಿದಿನ ಪೂಜೆ, ಪುರಸ್ಕಾರಗಳು ನಡೆಯುತ್ತಿರುತ್ತವೆ. ಒಂಬತ್ತು ದಿನವೂ ದೇವಸ್ಥಾನದ ಮುಂದೆ ಹಾಡು, ಭಜನೆ, ನೃತ್ಯ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಎಂಟನೆಯ ದಿನದಂದು ಗಣಗೋರಿ (ಹೆಂಗಸರ ವೇಷದ ಚವ್ಹಾಣ) ಮತ್ತು ಗಣಗೋರ (ಗಂಡಸರ ವೇಷದ ರಾಠೊಡ್)ನನ್ನು ಎರೆಮಣ್ಣಿನಿಂದ ಮಾಡಿಕೂರಿಸಿರುತ್ತಾರೆ. ಗಣಗೋರಿ, ಗಣಗೋರನನ್ನು ಒಂಬತ್ತನೆಯ ದಿನದ ಕಾರ್ಯಕ್ರಮದಲ್ಲಿ ತುಳಿಯುತ್ತಾಳೆ. ಒಂಬತ್ತನೆಯ ದಿನದಂದು ಸಾಯಂಕಾಲ ಸೂರ್ಯ ಮುಳುಗುವ ಸಂದರ್ಭದಲ್ಲಿ ಪುಟ್ಟಿಯಿಂದ ಸಸಿಗಳನ್ನು ಕೀಳುವ ಸಂಪ್ರದಾಯವಿರುತ್ತದೆ. ಆದರೆ ಹೆಣ್ಣು ಮಕ್ಕಳು ತಾವು ಸಾಕಿ, ಸಲುಹಿದ ಗೋದಿ ಸಸಿಗಳನ್ನು ಮುರಿಯಲು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಪುಟ್ಟಿಗಳನ್ನು ಗಟ್ಟಿಯಾಗಿ ಹಿಡಿದುಕೊಡು ಗುಣಗಾನ ಮಾಡುತ್ತಾ ಅಳುತ್ತಿರುತ್ತಾರೆ. ಆಗ ಪ್ರಾಯದ ಹುಡುಗರು ಕಷ್ಟಪಟ್ಟು ಪುಟ್ಟಿಗಳನ್ನು ಅವರಿಂದ ಕಿತ್ತುಕೊಂಡು ತಾಂಡಾದ ನಾಯಕಣ್ ಮತ್ತು ನಾಯಕನ ಕೈಗೆ ಕೊಡುತ್ತಾರೆ. ಆಗ ಅವರೂ ದುಃಖತಪ್ತರಾಗಿಯೇ ಸಸಿಗಳನ್ನು ಮುರಿದು ಸುತ್ತುಮುತ್ತ ನೆರೆದಿರುವರಿಗೆ ಹಂಚುವಂತೆ ಆದೇಶಿಸುತ್ತಾರೆ. ಹೀಗೆ ಒಬ್ಬರಿಗೊಬ್ಬರು ಸಸಿಗಳ ವಿನಿಮಯ ಮಾಡಿಕೊಂಡು ರಾಂರಾಮ ಮಾಡುತ್ತಾರೆ. ಹಿರಿಯರು ಕಿರಿಯರಿಗೆ ಆಶೀರ್ವದಿಸಿದರೆ, ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ.

ಹೀಗೆ ಸಸಿಗಳನ್ನು ಮುರಿದಿರುವ ಪುಟ್ಟಿಗಳನ್ನು ತಲೆಯ ಮೇಲೆ ಹೊತ್ತು ಶೋಕ ಗೀತೆಗಳನ್ನು ಹಾಡುತ್ತ, ನೃತ್ಯ ಮಾಡುತ್ತಾರೆ. ಅಂದು ಸಂಜೆ ಗೋದಿ ಪುಟ್ಟಿಗಳನ್ನು ಹತ್ತಿರದ ಕೆರೆಯಲ್ಲಿ ವಿಸರ್ಜನೆ ಮಾಡುವ ಕಾರ್ಯಕ್ರಮವಿರುತ್ತದೆ. ಹೆಣ್ಣು ಮಕ್ಕಳು ಈ ಪುಟ್ಟಿಗಳನ್ನು ಅಷ್ಟು ಸುಲಭವಾಗಿ ವಿಸರ್ಜಿಸಲು ಬಿಡದೆ ಹಟಮಾಡುತ್ತಾರೆ. ಆಗ ಪ್ರಾಯದ ಹುಡುಗರು ಅವರ ಕೈಯಿಂದ ಬಲವಂತವಾಗಿ ಕಿತ್ತುಕೊಂಡು ಕೆರೆಯಲ್ಲಿ ಮುಳುಗಿಸಿ ಬರುತ್ತಾರೆ. ಇದೆಲ್ಲ ಮುಗಿದ ಮೇಲೆ ಮಾರನೆಯ ದಿನ ಕುರಿ ಬಲಿಕೊಟ್ಟು, ತಂಡಾದವರು ನೆಂಟರಿಷ್ಟರೊಂದಿಗೆ ಊಟ ಮಾಡಿ ಹಬ್ಬವನ್ನು ಮುಕ್ತಾಯಗೊಳಿಸುತ್ತಾರೆ.

– ಕೆ.ಎನ್.ಜಿ.

ತೀಯರು ತಿರುವಿದಾಂಕೂರು – ಕೊಚ್ಚಿ ಪ್ರದೇಶಗಳಲ್ಲಿರುವ ಈಳವರಂತೆ ಶೇಂದಿ ಇಳಿಸುವ ಕಸುಬು ಮಾಡುತ್ತಿರುವ ತೀಯರು ಉತ್ತರ ಕೇರಳದಲ್ಲಿ ಪ್ರಬಲರಾಗಿದ್ದಾರೆ. ೧೯೦೯ರಲ್ಲಿ ಎಡ್ಗರ್ ಥರ್ಸ್ಟನ್ ಪ್ರಕಟಿಸಿದ Castes and Tribes of India ಕೃತಿಯಲ್ಲಿ ತೀಯರ ಉಲ್ಲೇಖವಿದೆ. ಆ ಕಾಲದಲ್ಲಿ ಕೇರಳದ ಒಟ್ಟು ಜನಸಂಖ್ಯೆಯ ೧೦.೧% ತೀಯರೆಂದೇ ಥರ್ಸ್ಟನ್ ಸೂಚಿಸುತ್ತಾನೆ. ಇಂದಿಗೂ ಉತ್ತರ ಕೇರಳದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ತೀಯರು ವಾಸವಾಗಿದ್ದರೆ. ವರ್ತಮಾನ ಕಾಲದಲ್ಲಿ ತೀಯರು ಮೂರ್ತಿಗಾರಿಕೆಯಲ್ಲದೆ ಕೃಷಿ ಹಾಗೂ ಇತರ ಕಸುಬುಗಳನ್ನು ಮಾಡುತ್ತಿದ್ದಾರೆ.

ತೀಯರ ಸೃಷ್ಟಿ ಪುರಾಣದಂತೆ ಶಿವನ ಮೂಲಕ ತೀಯನ ಸೃಷ್ಟಿಯಾಯಿತು. ಶಿವಪಾರ್ವತಿಯರು ಕಾಡಿನಲ್ಲಿ ವಹರಿಸುತ್ತಿದ್ದಾಗ, ಶಿವನಿಗೆ ಅಕಾಲದಲ್ಲಿ ಪಾರ್ವತಿಯ ಮೇಲೆ ಮೋಹ ಹುಟ್ಟಿಕೊಳ್ಳುತ್ತದೆ. ಆದರೆ ಪಾರ್ವತಿ ನಿರಾಕರಿಸುತ್ತಾಳೆ.ಇಂದ್ರಿಯ ಸ್ಖಲನಗೊಂಡ ಶಿವನ ವೀರ್ಯದಿಂದ ಮೂರು ವೃಕ್ಷಗಳು ಹುಟ್ಟಿಕೊಳ್ಳುತ್ತವೆ. ಅವುಗಳಿಗೆ ಕರಿಮಗಳ್, ತಿರುಮಗಳ್ ಮತ್ತು ತೇನ್‌ಮಗಳ್ ಎಂದು ಹೆಸರನ್ನಿಟ್ಟು ತೇನ್‌ಮಗಳ್ (ತೆಂಗು) ವೃಕ್ಷದ ಬುಡದಿಂದ ಹರಿಯುತ್ತಿದ್ದ ಮಧುರಸವನ್ನು ಕುಡಿದ ಶಿವನು ಮತ್ತನಾದ, ಪಾರ್ವತಿ ಆ ರಸವನ್ನು ಕೈಗಳಿಂದ ತಡವಿ ಮರದ ಮೇಲಕ್ಕೇರಿಸುತ್ತಾಲೆ. ಇದರಿಂದ ಸಿಟ್ಟುಗೊಂಡ ಶಿವನು ತನ್ನ ತೊಡೆಗೆ ಬಡಿಯುವನು. ಆಗ ದಿವ್ಯಪುರುಷನೊಬ್ಬ ಹುಟ್ಟಿಕೊಳ್ಳುತ್ತಾನೆ. ವನು ತೆಂಗಿನ ಮರದಿಂದ ಶೇಂದಿ, ತೆಗೆಯುವ ಕೆಲಸಕ್ಕೆ ನಿಯುಕ್ತನಾಗುತ್ತಾನೆ. ಶಿವನು ಅವನಿಗೆ ‘ದಿವ್‌ಯನ್’ ಎಂದು ಕರೆಯುತ್ತಾನೆ. ದಿವ್ಯ ಶಬ್ದವೇ ಅಪಭ್ರಂಶಗೊಂಡು ‘ತೀಯನ್’ ಆಗಿರಬಹುದೆಂದು ಕೆಲವರು ಹೇಳುತ್ತಾರೆ.

ಇನ್ನೊಂದು ಐತಿಹ್ಯದ ಪ್ರಕಾರ ಚೇರಮಾನ್ ಪೆರುಮಾಳ್ ಆದೇಶದಂತೆ ಶ್ರೀಲಂಕಾದ ರಾಜ ತನ್ನ ರಾಜ್ಯದಿಂದ ಈಳವರನ್ನು ಕೇರಳಕ್ಕೆ ಕಳುಹಿಸಿದನೆಂದು ಹೇಳಲಾಗಿದೆ. ಚೇರಮನ್ ಪೆರುಮಾಳ್ ಇವರುಗೆ ‘ಚೇಕೋನ್’ ಎಂಬ ಪದವಿಯನ್ನು ನೀಡಿ ಗೌರವಿಸಿರುವುದಾಗಿ ವಡಕ್ಕನ್‌ಪಾಟುಗಳಲ್ಲಿ ಉಲ್ಲೇಖವಿದೆ. ವಡಕ್ಕನ್ ಪಾಟುಗಳಲ್ಲಿ ಕಂಡುಬರುವ ಅರೋಮಲ್ ಚೇಗವರ್ ಮೊದಲಾದವರು ತೀಯರ ಪೂರ್ವಿಕರೆಂದು ತಿಳಿಯಲಾಗಿದೆ. ಈಳತ್ತುನಾಡು ಎಂಬುದು ಶ್ರೀಲಂಕಾ ಆಗಿರಬೇಕೆಂದು ಊಹಿಸಲಾಗಿದೆ. ಸಿಂಹಳದ ಇಳ್ಳ ಎಂಬ ರಾಜ ತಮಿಳುನಾಡಿಗೆ ಬಂದು, ಬೌದ್ಧ ಮತ್ತು ಶೈವ ಸನ್ಯಾಸಿಗಳ ಸಂವಾದಕ್ಕೆ ವೇದಿಕೆಯೊದಗಿಸಿ, ಶೈವಮತಕ್ಕೆ ಪರಿವರ್ತನೆಗೊಂಡಿರುವುದಾಗಿ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಮಲಬಾರಿನ ತೀಯರ ಸೃಷ್ಟಿ ಪುರಾಣಕ್ಕು, ಈ ಚಾರಿತ್ರಿಕ ಉಲ್ಲೇಖಕ್ಕು ಸಂಬಂಧವನ್ನು ಕಲ್ಪಿಸಲಾಗುತ್ತದೆ.

ತೀಯರು ಮತ್ತು ಈಳವರು ಒಂದೇ ಸಮುದಾಯಕ್ಕೆ ಸೇರಿದವರೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಥರ್ಸ್ಟನ್ ಇವರೊಳಗೆ ಅನೇಕ ವ್ಯತ್ಯಾಸಗಳನ್ನು ಗುರುತಿಸಿದ್ದಾನೆ. ಥರ್ಸ್ಟನ್ ಅಧ್ಯಯನ ಮಾಡುವ ಕಾಲದಲ್ಲಿ ಮಲಬಾರಿನ ತೀಯರ ಸಾಮಾಜಿಕ ಸ್ಥಿತಿಗತಿಗಳು ಈಳವರಿಗಿಂತ ಎಷ್ಟೋ ಚೆನ್ನಾಗಿದ್ದವು. ತೀಯ ಸಮುದಾಯದಲ್ಲಿ ವಿದ್ಯಾವಂತರು, ಬ್ರಿಟಿಷ್ ಸರಕಾರದ ಉದ್ಯೋಗಿಗಳೂ ಇದ್ದರೆಂದು ಥರ್ಸ್ಟನ್ ಉಲ್ಲೇಖಿಸುತ್ತಾನೆ.

ಬಟ್ಟೆ ತೊಳೆಯುವ ಕುಲಕಸುಬಿನ ವಣ್ಣಾನ್ ಸಮುದಾಯದ ಮಹಿಳೆ ಕೊಡುವ ವಸ್ತ್ರದಿಂದ ವರ ನಾಯರ್, ತೀಯರ್ ಮೊದಲಾದವರಿಗೆ ಸೂತಕ ಮೊದಲಾದ ಅಶುದ್ಧಿಗಳು ದೂರವಾಗುತ್ತವೆ. ಈ ವಸಕ ‘ವಣ್ಣಾತ್ತಿಮಟ್ಟ್’ ಎಂದು ಹೇಳುವರು. ಈ ಮಾಟ್ಟ್ ನಿಷೇಧಿಸಿದರೆ, ಜಾತಿ ಭ್ರಷ್ಟತೆಗೆ ಸಮಾನವಾಗಿರುತ್ತದೆ. ತೀಯರ ಸೂತಕ ಕಳೆದು ಶುದ್ಧಿಯಾಗಬೇಕಾದರೆ, ಕೂದಲು ತೆಗೆಯುವ ಕೆಲಸ ಮಾಡುವ ‘ಕಾವುತೀಯನ್’ ಅಗತ್ಯ. ಇಂತಹ ಶುದ್ಧಿಯ ಆಚರಣೆಗಳು ಈಳವರಲ್ಲಿ ಇಲ್ಲ. ಮಾತ್ರವಲ್ಲ, ತೀಯರ ಮನೆಯ ಆಹಾರವನ್ನು ಈಳವರು ತಿಂದರೂ, ಈಳವರ ಮನೆಯಿಂದ ತೀಯರು ತಿನ್ನುತ್ತಿರಲಿಲ್ಲ. ಇವುಗಳು ತೀಯರ ಸಾಮಾಜಿಕ ಮನ್ನಣೆಯನ್ನು ಸೂಸುವ ಅಂಶಗಳಾಗಿವೆ.

ಹಿಂದಿನ ಕಾಲದಲ್ಲಿ ತೀಯರ ಮದುವೆ ನಿಶ್ಚಯಕ್ಕೆ ವಧುವಿನ ಕಡೆಯಿಂದ ತಂಡಾನ್ (ಗುರಿಕಾರ) ಮದುವೆ ನಿಶ್ಚಯಿಸಿ ಘೋಷಿಸುತ್ತಿದ್ದ. ವಧೂವರರ ಇಲ್ಲಂ (ಬಳಿ), ಮನೆತನ, ತರವಾಡು, ನಕ್ಷತ್ರ ಇತ್ಯಾದಿಗಳನ್ನು ನೋಡಿ, ಹೊಂದಿಕೆಯಾದರೆ ಹಿರಿಯರ ಸಮ್ಮತಿಯೊಂದಿಗೆ ವಿವಾಹ ನಿಶ್ಚಯಿಸಿ ನಡೆಸುತ್ತಿದ್ದರು.

ತೀಯರಿಗೆ ಎಂಟು ಇಲ್ಲಂಗಳು. ಜಾತಿಯ ಒಳವಿಭಾಗಗಳೇ ಇಲ್ಲಂ. ತಲಕೋಡನ್, ನೆಲ್ಲಿಕ್ಕ, ಪರಕ್ಕ, ಪಾಲ, ತೇನಾಂಗುಡಿ, ಪಡೆಯಂಗುಡಿ, ವರಕಾಟ್, ಪಳಂಬಾಯಿ ಇವೇ ಉತ್ತರ ಮಲಬಾರಿನಲ್ಲಿ ಪ್ರಚಲಿತವಾಗಿರುವ ಇಲಾಲಂಗಳು. ಪ್ರಾದೇಶಿಕವಾಗಿ ಈ ಹೆಸರುಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು.

ತರವಾಡು, ತರ ಮತ್ತು ಕಳಗಂ ತೀಯರ ಸಾಮಾಜಿಕ ವ್ಯವಸ್ಥೆಯ ಮುಖ್ಯ ಅಂಗಗಳು. ತಾಯಿಯ ಮೂಲಕ ಬಂದಿರುವ ಕೌಟುಂಬಿಕ ಸಂಸ್ಥೆ ತರವಾಡು. ಅನೇಕ ತರವಾಡುಗಳು ಸೇರಿಕೊಂಡಿರುವ ಒಕ್ಕೂಟವನ್ನು ತರ ಎನ್ನುವರು. ಸಾಮುದಾಯಿಕವಾದ ಅನೇಕ ಸಂಗತಿಗಳು ತರಗಳಲ್ಲಿ ತೀರ್ಮಾನವಾಗುತ್ತಿದ್ದುವು. ತರಯಿಲಚ್ಚನ್ ಅಥವಾ ಕಾರ್ನವರ್ ‘ತರ’ದ ಮುಖ್ಯ ವ್ಯಕ್ತಿಗಳು. ಇವರು ಪ್ರಾಯದಲ್ಲಿ ಹಿರಿಯರಾಗಿರುತ್ತಾರೆ. ‘ತರ’ಗಳು ಇಲ್ಲದಲ್ಲಿ ದೈವಸ್ಥಾನಗಳನ್ನು ಅಥವಾ ಉಳಿದ ಕೇಂದ್ರಗಳನ್ನು ‘ಕಳಗ’ ಎನ್ನುತ್ತಾರೆ. ನಿಲಮಂಗಲ, ಪಾಲಕುನ್ನ, ರಾಮವಿಲ್ಯಂ, ಕರುವಂದಟ್ಟ, ಕಂಡಂಗಾಳಿ, ಕನಕತ್ತ್, ಓಲಾಚೇರಿ, ಆಡಂಲ್ಲೂರು, ಕುದ್ರೋಳಿ ಮೊದಲಾದ ಭಗವತಿ ಕ್ಷೇತ್ರಗಳು ತೀಯರ ಮುಖ್ಯ ಕಳಗಗಳಾಗಿವೆ. ಅನೇಕ ಕಳಗಗಳು ಸೇರಿ ‘ಪೆರುಂ ಕಳಗ’ಗಳು ಆಗುತ್ತವೆ. ಆಂಡಲ್ಲೂರು ಅಂತಹ ಒಂದು ಕೇಂದ್ರವೆಂದು ಹೇಳಲಾಗಿದೆ. ತೀಯರು ಆಚಾರ ವಿಧಿಗಳಲ್ಲಿ ಮರುಮಕ್ಕತ್ತಾಯ ಕುಟುಂಬ ವ್ಯವ್ಥೆಯನ್ನು ಅನುಸರಿಸುತ್ತಾರೆ.

ತೀಯರ ಕಳಗಗಳಲ್ಲಿ ಭಗವತಿ ಮುಖ್ಯ ದೇವತೆ. ಚೀರುಂಬಾ ಕಾವುಗಳು ತೀಯರ ಆರಾಧನೆ ಕೇಂದ್ರಗಳಾಗಿವೆ. ಚೀರುಂಬಾ ಭಗವತಿ, ಪೂಮಾಲ ಭಗವತಿ, ಘಂಟಾಕರ್ಣ, ವಸೂರಿಮೂಲ, ದಂಡರ‍್ಜನ್ ಮೊದಲಾದ ದೈವಗಳನ್ನು ತೀಯರು ಆರಾಧಿಸುತ್ತಾರ ಮುತ್ತಪ್ಪನ್ ತೀಯರ ಇನ್ನೊಂದು ಮುಖ್ಯ ದೈವ. ತೀಯರು ಹಾಗೂ ಮುತ್ತಪ್ಪನ್ ದೈವಕ್ಕೆ ಸಂಬಂಧಿಸಿದ ಅನೇಕ ಪುರಾಣಗಳು ಪ್ರಚಲಿತವಾಗಿವೆ. ಮುತ್ತಪ್ಪನ್ ದೈವಕ್ಕೆ ಸಂಬಂಧಿಸಿದ ಅನೇಕ ಪುರಾಣಗಳು ಪ್ರಚಲಿತವಾಗಿವೆ. ಮುತ್ತಪ್ಪನ್ ಮಡಪುರಗಳಲ್ಲಿ ಮುಖ್ಯ ಸ್ಥಾನವಾದ ಮಡಯನ್ ಸ್ಥಾನವು ತೀಯರಿಗೆ ಮೀಸಲು. ಈ ದೈವಕ್ಕೆ ಅತಿ ಪ್ರಿಯವಾದ ಶೇಂದಿಯನ್ನು ಅರ್ಪಿಸುವವರು ತೀಯರು. ಮುತ್ತಪ್ಪನ ಆರಾಧನೆಯನ್ನು ನಡೆಸುವ ಅಧಿಕಾರವೂ ತೀಯರಿಗೆ ಸೇರಿದ್ದು.

ವಯನಾಟು ಕುಲವನ್ ತೀಯರ ಕುಲದೈವವಾಗಿದೆ. ತೀಯರ ಸೃಷ್ಟಿಪುರಾಣದ ಆದಿದಿವ್ಯನೇ ವಯನಾಟು ಕುಲವನೆಂದು ಪುರಾಣಗಲು ಹೇಳುತ್ತವೆ. ವಯನಾಟು ಕುಲವನ್ ಬೇಟೆಯ ದೈವ. ಕದಿವನ್ನೂರು ವೀರನ್, ಕಂಡನಾರ್ ಕೇಳನ್, ಪೊಟ್ಟನ್ ಮೊದಲಾದ ದೈವಗಳನ್ನು ತೀಯರು ಆರಾಧಿಸುತ್ತಾರೆ. ತೆಯ್ಯಾರಾಧನೆಯಲ್ಲಿ ತೀಯರಿಗೆ ಮಹತ್ವದ ಸ್ಥಾನವಿದೆ. ಪೂರಂ, ಪಾಟ್ಟುತ್ಸವಗಳು ತೀಯರು ಆಚರಿಸುತ್ತಾರೆ. ಮೀನ ಮಾಸದ ಕಾರ್ತಿಕ ನಕ್ಷತ್ರದಿಂದ ಪೂರಂವರೆಗೆ ಕಾಮದೇವನನ್ನು ಪೂಜಿಸುವ ಪೂರಂ ಉತ್ಸವ ತೀಯರ ಮನೆಗಳಲ್ಲಿಯೂ ನಡೆಯುತ್ತದೆ. ತೀಯರ ಕನ್ಯೆಯರು ಹೂವಿನಿಂದ ಕಾಮನನ್ನು ಪೂಜಿಸುತ್ತಾರೆ. ವೃಶ್ಚಿಕ ಮಾಸದಲ್ಲಿ ನಡೆಯುವ ಪಾಟುತ್ಸವ ನಿರ್ದಿಷ್ಟ ತರವಾಡು ಮನೆಗಳಲ್ಲಿ ಜರಗುತ್ತದೆ.

ಹಿಂದಿನ ಕಾಲದಲ್ಲಿ ಒಂದೇ ‘ಇಲ್ಲಂ’ಗೆ ಸೇರಿದ ಹೆಣ್ಣು ಗಂಡಿನ ಸಂಬಂಧ ನಿಷಿದ್ಧವಾಗಿತ್ತು. ಗಂಡಿನ ಕಡೆಯುರು ವಧುವನ್ನುಹುಡುಕುತ್ತಿದ್ದರು. ವಧುದಕ್ಷಿಣ ಕೊಡುವ ಸಂಪ್ರದಾಯ ಹಿಂದೆ ಜಾರಿಯಲ್ಲಿತ್ತು. ಇದಕ್ಕೆ ‘ತಲಪಣಂ’ ಎಂದು ಹೆಸರು. ಹಿಂದಿನ ಕಾಲದಲ್ಲಿ ವಧುವಿನ ಮನೆಯಲ್ಲಿ ರಾತ್ರಿ ಕಾಲದಲ್ಲಿ ಮದುವೆಯ ವಿಧಿವಿಧಾನಗಳು ನಡೆಯುತ್ತಿದುವು. ಈಗ ಈ ವಿಧಿವಿಧಾನಗಳೆಲ್ಲ ಬಹದಲಾಗಿದೆ. ಆಧುನಿಕ ಜಗತ್ತಿಗೆ ತೀಯರು ಹೊಂದಿಕೊಂಡಿದ್ದಾರೆ.

ಉತ್ತರ ಮಲಬಾರಿನ ತೀಯರು ದಕ್ಷಿಣದ ತೀಯರಿಗಿಂತ ಪ್ರಬಲರೂ, ಸಂಘಟಿತರೂ ಆಗಿದ್ದಾರೆ. ಕಳಗಂ ಮೊದಲಾದ ಸಾಮಾಜಿಕ ಸಂಸ್ಥೆಗಳು ಇಂದಿಗೂ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಕಂಡುಬರುತ್ತಿವೆ. ಶ್ರೀ ನಾರಾಯಣ ಗುರುವನ್ನು ಅನುಸರಿಸಿ, ಸಂಘಟಿತರಾಗಿರುವ ತೀಯರು ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಪ್ರಗತಿಯನ್ನು ಹೊಂದಿದ್ದಾರೆ. ಕುಲಕಸುಬು, ಸಂಸ್ಕಾರ ವಿಧಿಗಳು ಹಾಗೂ ಜೀವನ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ತೀಯರು ಪರಂಪರೆಯನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿಲ್ಲ.

ವಡಕ್ಕನ್ ಪಾಟುಗಳಲ್ಲಿ ಅನೇಕ ತೀಯ ಕಥಾಪಾತ್ರಗಳಿವೆ. ಪರಾಕ್ರಮ, ಸಾಹಸ, ವೀರಗಾಥೆಗಳಿಗೆ ಹೆಸರಾದವರು ತೀಯರು, ತಚ್ಚೋಳಿ ಒದೇನನ್ನು ಎದುರಿಸಿದ ಕಲ್ಲೇರಿ ತಂಡಾನ್ ತೀಯನೆಂದು ಹೇಳುತ್ತಾರೆ. ತೀಯರಿಗೆ ಸಂಬಂಧಿಸಿದ ಅನೇಕಸಾಹಸ ಕಥೆಗಳೂ ನುಡಿಗಟ್ಟುಗಳೂ ಪ್ರಚಲಿತವಾಗಿವೆ.

ಆಧುನಿಕ ಕಾಲದಲ್ಲಿ ತೀಯರ ಜಾತಿ ಸಂಘಟನೆ, ಸಾಮಾಜಿಕ ಒಳಾಡಳಿತ ಪದ್ಧತಿಗಳು ದುರ್ಬಲವಾಗಿವೆ. ಕೇರಳದ ರಾಜಕೀಯ ಸ್ಥಿತಿಗತಿ, ಪ್ರಜಾಪ್ರಭುತ್ವ, ಆಧುನಿಕತೆಗಳೆಲ್ಲ ತೀಯರ ಬುದುಕಿನಲ್ಲಿಯೂ ಪ್ರಬಾವ ಬೀರಿವೆ. ಶ್ರೀ ನಾರಾಯಣಗುರು ಧರ್ಮಪರಿಪಾಲನ ಸಂಘಗಳಂಥ ಸಂಘಟನೆಗಲು ತೀಯರನ್ನು ಸಂಘಟಿಸಲು ಪ್ರಯತ್ನಿಸುತ್ತಿವೆ. ಈ ನಿಟ್ಟಿಲ್ಲಿ ಈಳವರು, ತೀಯರು, ಬಿಲ್ಲವರು ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರೆಂಬ ಭಾವ ಬಲವಾಗುತ್ತಿದೆ.

– ಕೆ.ಎಂ.ಬಿ. ಅನುವಾದ ಎನ್.ಎಸ್.

ತೀಯಾಟ್ಟ್ ಕೇರಳದಲ್ಲಿ ಆಚರಣೆಯಲ್ಲಿರುವ ಒಂದು ಕಲಾ ಪ್ರಕಾರ. ಇದರಲ್ಲಿ ‘ಅಯ್ಯಪ್ಪನ್ ತೀಯಾಟ್ಟ್’ ಮತ್ತು ‘ಭದ್ರಕಾಳಿ ತೀಯಾಟ್ಟ್’ ಎಂಬ ಎರಡು ವಿಧಗಳಿವೆ. ‘ಅಯ್ಯಪ್ಪನ್ ತೀಯಾಟ್ಟ್’ ಉತ್ತರ ಕೇರಳದಲ್ಲಿ ಮತ್ತು ಮಧ್ಯ ಕೇರಳದಲ್ಲಿ ಹೆಚ್ಚಿನ ಪ್ರಚಾರವನ್ನು ಗಿಟ್ಟಿಸಿಕೊಂಡಿವೆ. ಮಲಪ್ಪುರಂ, ಪಾಲಕ್ಕಾಡು, ತ್ರಿಶೂರ್ ಜಿಲ್ಲೆಗಳಲ್ಲಿ ಈ ಕಲಾರೂಪವನ್ನು ಹೆಚ್ಚಾಗಿ ಪ್ರದರ್ಶಿಸಲಾಗುತ್ತಿತ್ತು. ‘ಅಯ್ಯಪ್ಪನ್ ತೀಯಾಟ್ಟ್’ ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ‘ಅಯ್ಯಪ್ಪನ್ ಕಲಾತ್ತ್’ ಎಂಬ ಹೆಸರಿನಲ್ಲಿಯೂ ತಿಳಿಯಲ್ಪಡುತ್ತದೆ. ಪಯ್ಯನ್ನೂರಿನಿಂದ ಉತ್ತರ ಭಾಗಕ್ಕೂ ಮತ್ತು ‘ಚಾಲಕ್ಕುಡಿ ಹೊಳೆಯ ದಕ್ಷಿಣ ಭಾಗದಲ್ಲಿ ಕಲಾರೂಪವು ಬಹಳ ಅಪೂರ್ವವಾಗಿ ಕಂಡುಬರುತ್ತದೆ.

‘ಭದ್ರಕಾಳಿ ತೀಯಾಟ್ಟ್’ ಎಂಬುದು ದಕ್ಷಿಣ ಕೇರಳದಲ್ಲಿ ಕಂಡುಬರುತ್ತದೆ. ಆಲಪ್ಪುಳ, ಪತ್ತನಂತಿಟ್ಟೆ ಜಿಲ್ಲೆಗಳಲ್ಲಿ ಭದ್ರಕಾಳಿ ತೀಯಾಟ್ಟ್ ಹೆಚ್ಚಿನ ಪ್ರಚಾರವನ್ನು ಗಿಟ್ಟಿಸಿಕೊಂಡಿದೆ. ‘ತೀಯಾಟ್ಟ್’ ‘ತೀಯಿಲುಳ್ಳ ಆಟ್ಟಂ’ (ಬೆಂಕಿ ಜೊತೆಗಿನ ಆಟ) ಎಂಬ ಅರ್ಥವೂ ಇದೆ. ಆದರೆ ತೀಯಾಟ್ಟುಗಳಲ್ಲಿ ‘ಬೆಂಕಿಯಲ್ಲಿ ನಿಂತು ಅಥವಾ ಬೆಂಕಿಯಲ್ಲಿ ನಡೆದು ಹೋಗುವ’ ಆಟವು ಕಂಡುಬರುವುದಿಲ್ಲ. ಆದರೂ ಹೊತ್ತಿಸಿದ ‘ಪಂಜು’ ಕೈಯಲ್ಲಿ ಹಿಡಿದು ಆಟ ಆಡುವುದು ಇದೆ. ಆದುದರಿಂದ ತೀಯಾಟ್ಟ್‌ಗೆ ‘ತೀಕೊಂಡುಳ್ಳ ಆಟ್ಟಂ’ ಎಂಬ ಅರ್ಥವೂ ಇದೆ. ‘ಕೂತ್ತ್’ (ಕಥಾಭಿನಯ)ಗೆ ಹೆಚ್ಚಿನ ಪ್ರಾಧಾನ್ಯವಿರುವುದರಿಂದ ‘ಅಯ್ಯಪ್ಪನ್ ತೀಯಾಟ್ಟ್’ಗೆ ‘ಅಯ್ಯಪ್ಪನ್ ಕೊತ್ತ್’ ಎಂಬ ಹೆಸರು ಬಂದಿದೆ.

ಅಯ್ಯಪ್ಪ ಕ್ಷೇತ್ರಗಳಲ್ಲಿ ಮತ್ತು ಕಾವುಗಳಲ್ಲಿ ಅಯ್ಯಪ್ಪನ್ ತೀಯಾಟ್ಟ್‌ನಡೆಯುತ್ತದೆ. ಅದೇ ರೀತಿ ‘ಕಾಳಿತೀಯಾಟ್ಟು’ ಕಾಳಿ ಕಾವುಗಳಲ್ಲಿ ನಡೆಯುತ್ತದೆ. ಈ ಕಾವುಗಳೆಲ್ಲವೂ ನಾಯರ್ ಜಾತಿಗಿಂತ ಮೇಲ್ಜಾತಿಯ ಅಧಿಕಾರದಲ್ಲಿರುತ್ತದೆ. ಅರಮನೆಗಳಲ್ಲಿ, ಬ್ರಾಹ್ಮಣರ ಮನೆ ಮತ್ತು ಗುಡಿಗಳಲ್ಲಿ ‘ತೀಯಾಟ್ಟ್’ನ್ನು ಪ್ರದರ್ಶಿಸಲಾಗುತ್ತದೆ. ಕಾಳಿ ಮೂರ್ತಿಯನ್ನು ಆರಾಧಿಸುವುದಕ್ಕೋಸ್ಕರ ಈ ತೀಯಾಟ್ಟು ಪ್ರದರ್ಶಿಸಲ್ಪಡುತ್ತದೆ. ‘ತೀಯಾಡಿಗಳ್’ ಎಂಬ ಅಂಬಲವಾಸಿ ವಿಭಾಗಕ್ಕೆ ಸೇರಿದ ಜನರು ತೀಯಾಟ್ಟನ್ನು ಪ್ರದರ್ಶಿಸುತ್ತಾರೆ. ‘ಅಯ್ಯಪ್ಪನ್ ತೀಯಾಟ್ಟನ್ನು ‘ತೀಯಾಡಿ ನಂಬ್ಯಾರ್’ ಸಮುದ್ಯದವರು ಮತ್ತು ‘ಕಾಳಿತಿಯಾಟ್ಟ್’ನ್ನು ಸಮುದಾಯದವರು ಮಲಪ್ಪುರ, ಪಾಲಕ್ಕಾಡು, ತ್ರಿಶೂರ್ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ‘ತೀಯಾಟ್ಟುಣ್ಣಿ’ಗಳು ಸಾಮಾನ್ಯವಾಗಿ ದಕ್ಷಿಣ ಕೇರಳದಲ್ಲಿ ವಾಸಿಸುತ್ತಿದ್ದರು. ಎರಡೂ ವಿಭಾಗದವರೂ ಈ ಆಚರಣೆಯನ್ನು ತಮ್ಮ ಕುಲಕಸುಬಾಗಿ ನಡೆಸುತ್ತಿದ್ದರು.

‘ಕಳಮೆಳುತ್ತ್‌ಪಾಟ್ಟ್’ ಎಂಬುದು ಎರಡೂ ತೀಯಾಟ್ಟುಗಳ ಮುಖ್ಯ ವಿಶೇಷತೆಯಾಗಿದೆ. ಪ್ರತ್ಯೇಕವಾಗಿ ತಯಾರು ಮಾಡಿದ ‘ತಿಯಾಟ್ಟುತರ’ ಎಂಬಲ್ಲಿ ಈ ‘ಕಳಂ’ನ್ನು ಬರೆಯುತ್ತಾರೆ. ‘ತೀಯಾಟ್ಟುತರ’ದ ನಾಲ್ಕು ಮೂಲೆಗಳಲ್ಲೂ ಕಂಬವನ್ನು ನಾಟಿ, ಅದರ ಮೇಲಿನ ಭಾಗವನ್ನು ಹಗ್ಗದಿಂದ ಜೋಡಿಸಿ, ಅದರ ಮೇಲೆ ‘ಕುರ’ (ಕೆಂಪು ಬಟ್ಟೆ) ಹೊದಿಸುತ್ತಾರೆ. ಚಪ್ಪರದ ಕಂಬಗಳಿಗೆ ಬಿಳಿಬಟ್ಟೆಯನ್ನು ಸುತ್ತಿ, ಬಾಳೆಗೊನೆ, ಮಾವಿನ ಎಲೆ ಎಂಬಿವುಗಳನ್ನು ಕಟ್ಟಿ ಅಲಂಕರಿಸುವರು. ಚಪ್ಪರದ ಸುತ್ತಲೂ ತೆಂಗಿನ ಎಳೆಗರಿಯ ತೋರಣವೂ ಇದೆ. ಅದೇ ರೀತಿ ನಾಲ್ಕು ಮೂಲೆಗಳ (ಬದಿಗಳ) ಮಧ್ಯಭಾಗದಲ್ಲಿ ದೀಪವನ್ನು ಬೆಳಗಿಸುವರು. ಹಾಗೆಯೇ ಬಾಳೆ ಎಲೆಯ ಮೇಲೆ ಅಕ್ಕಿ, ಸೀಯಾಳ, ವೀಳ್ಯದೆಲೆ, ಅಡಕೆ, ಕರುಳಿ ಬಾಳೆ ಹಣ್ಣು ಎಂಬಿವುಗಳನ್ನು ಇಡುವ ಕ್ರಮವೂ ಇದೆ.

‘ಕಳಮೆಯುತ್ತ್’ ಎಂಬುದು ತೀಯಾಟ್ಟುಗಳಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ‘ಅಯ್ಯಪ್ಪನ್ ತೀಯಾಟ್ಟ್’ನಲ್ಲಿ ಅಯ್ಯಪ್ಪನು ಬಿಲ್ಲು,ಬಾಣ, ಖಡ್ಗ ಮುಂತಾದವುಗಳನ್ನು ಕೈಯಲ್ಲಿ ಹಿಡಿದಿರುವ ರೂಪವನ್ನು ಮತ್ತು ಹುಲಿ, ಕುದುರೆ, ಆನೆ ಮೊದಲಾದ ವಾಹನಗಳ ಜೊತೆಗಿರುವ ‘ಶಾಸ್ತಾಕಳಂ’ ಹಾಗೆಯೇ ಪ್ರಭ ಎಂಬ ಪತ್ನಿಯ ಜೊತೆ, ಸತ್ಯಕನ್ ಎಂಬಪುತ್ರನ ಜೊತೆ ಅಯಪ್ಪನು ನಿಂತಿರುವ ಕಳಂ ಹೀಗೆ ಮೂರು ವಿಧದ ‘ಕಳಂ’ಗಳು ಅಯ್ಯಪ್ಪನ್ ತೀಯಾಟ್ಟಿನಲ್ಲಿ ಬರೆಯಲಾಗುತ್ತದೆ. ‘ಕಾಳಿ ತೀಯಾಟ್ಟ್’ ನಲ್ಲಿ ದಾರಿಕನ್ ಎಂಬ ಅಸುರನನ್ನು ವಧಿಸಿ ಕೋಪದಿಂದ ನಿಂತಿರುವ ಭದ್ರಕಾಳಿಯ ರೂಪನ್ನು ಬರೆಯಲಾಗುತ್ತದೆ. ಅದೇ ರೀತಿಯ ಒಂದು ಕೈಯಲ್ಲಿ ದಾರಿಕನ ತಲೆ, ಮತ್ತೊಂದು ಕೈಯಲ್ಲಿ ರಕ್ತದ ಈಟಿ, ಇತರ ಕೈಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದಿರುವ ಕಾಳಿಯ ರೂಪವನ್ನು ಕೂಡಾ ‘ಕಾಳಿತೀಯಾಟ್ಟಿ’ನಲ್ಲಿ ಬರೆಯಲಾಗುತ್ತದೆ.

ಈ ಎರಡು ತೀಯಾಟ್ಟುಗಳಲ್ಲಿ ಪಂಚವರ್ಣ ಹುಡಿಗಳಿಂದಲೇ ಕಳಂನ್ನು ಬರೆಯುತ್ತಾರೆ.ಬಾಗೆಹುಡಿ (ಬಾಗೆ ಮರದ ಎಲೆಯ ಹುಡಿ [ಹಸಿರು]), ಮಸಿಹುಡಿ (ಕಪ್ಪು) ಅಕ್ಕಿ ಹುಡಿ (ಬಿಳಿ), ಅರಸಿನ ಹುಡಿ (ಹಳದಿ), ಸುಣಅಣದ ಹುಡಿ ಮತ್ತು ಅರಸಿನ ಹುಡಿ ಮಿಶ್ರಗೊಳಿಸಿ ಕೆಂಪು ಬಣ್ಣ – ಇತ್ಯಾದಿಗಳನ್ನುಪಯೋಗಿಸಿ ಬಣ್ಣ ಹಾಕುತ್ತಾರೆ. ‘ಕಳಂ’ ಪೂರ್ತಿಯಾದ ಬಳಿಕ ‘ಕಳಂ’ ಬರೆದ ಮೂರ್ತಿರೂಪದ ತಲೆಯ ಬಳಿ ಪೀಠವನ್ನಿಟ್ಟು ಅದರಲ್ಲಿ ‘ತಿರುವುಡಯಾಡ’ವನ್ನು ಮತ್ತು ಘೋಷಯಾತ್ರೆ (ಎಯನ್ನಳತ್ತ್) ಯೊಂದಿಗೆ ತಂದ ಖಡ್ಗ, ಮುಂತಾದವುಗಳನ್ನು ಪೀಠಕ್ಕೆ ತಾಗಿಸಿ ಇಡುವ ಪದ್ಧತಿ ಇದೆ. ಉಳಿದ ಆಚಾರ ಕ್ರಮಗಳು ಮುಸ್ಸಂಜೆ ಕಳೆದ ಬಳಿಕ ನಡೆಯುತ್ತದೆ.

‘ಕಳಂಪೂಜೆ’, ‘ಕಳಂಪಾಟ್ಟ್’, ‘ಕೂತ್ತ್’, ‘ತಿರಿಯುಯಿಚ್ಚಿತ್’, ‘ಕೋಮರಂ ಕಲ್ಪಿಕ್ಕಲ್’ ಮತ್ತು ‘ಕಳಂ ಮಾಯ್ಕಲ್’ ಮುಂತಾದವುಗಲು ತೀಯಾಟ್ಟುಗಳಲ್ಲಿ ಸಾಮಾನ್ಯವಾಗಿ ಕಂಡುಬರ ಕ್ರಮಗಳಾವೆ. ಅದೇ ರೀತಿ ಕೆಲವೆಡೆಗಳಲ್ಲಿ ‘ಕಳಂ’ ಪೂರ್ತಿಯಾದ ಬಳಿಕ, ‘ತೀಯಾಟ್ಟು ಇದೆ’ ಎಂಬುದನ್ನು ತಿಳಿಸಲು ‘ಕೊಟ್ಟಿಯರಿಯಿಕ್ಕಲ್’ ಎಂಬ ಕ್ರಮವೂ ಇದೆ. ಭದ್ರಕಾಳಿ ತೀಯಾಟ್ಟಿನಲ್ಲಿ ಕಳಂಪಾಟು ಕಳೆದ ಬಳಿಕ ‘ಕುರುದಿ’ ಎಂಬ ಕ್ರಮ ಕಂಡುಬರುತ್ತದೆ. ಅರಸಿಣ ನೀರಿನಲ್ಲಿ ಸುಣ್ಣವನ್ನು ಕಲಸಿ ‘ಕುರುದಿ’ ಯನ್ನು ತಯಾರಿಸುತ್ತಾರೆ. ಪಾತ್ರೆಯಲ್ಲಿ ಕಲಸಿಟ್ಟ ಕುರುದಿಯನ್ನು ಚೆಲ್ಲಿದ ಬಳಿಕ ಪಾತ್ರೆಯನ್ನು ಕವುಚಿ ಹಾಕಿ ಅದರ ಮೇಲೆ ‘ತಿರಿ’ (ಬತ್ತಿ) ಉರಿಸಿಡುವ ಕ್ರಮವನ್ನು ‘ಕುರುವಿ’ ಎಂದು ಕರೆಯುತ್ತಾರೆ.

‘ತೀಯಾಟ್ಟ್’ನಲ್ಲಿ ಕೂತ್ತ್ ಎಂಬ ಪದ್ಧತಿ ಇದೆ. ‘ಕೂತ್ತ್’ ಎಂದರೆ ‘ಕಥಾಭಿನಯ’ ಎಂಬ ಅರ್ಥ. ಎರಡೂ ತೀಯಾಟ್ಟುಗಳಲ್ಲಿ ಒಂದೇ ಆಹಾರ್ಯಾಭಿನಯ ಕಂಡುಬರುತ್ತದೆ. ಅಯ್ಯಪ್ಪನ್ ತೀಯಾಟ್ಟ್‌ನಲ್ಲಿ ನಂದಿಕೇಶ್ವರನ ವೇಷ ಮತ್ತು ಕಾಳಿ ತೀಯಾಟ್ಟಿನಲ್ಲಿ ಭದ್ರಕಾಳಿಯ ವೇಷವು ಕಂಡುಬರುವುದು. ತನ್ನ ಜನ್ಮರಹಸ್ಯವನ್ನು ತಿಳಿಯಲು ಅಯ್ಯಪ್ಪನು, ತಾಂಡವನೃತ್ಯ ಮಾಡುತ್ತಿದ್ದ ಶಿವನ ಬಳಿ ಹೋಗುತ್ತಾನೆ. ಈ ವೇಳೆ ನಂದಿಕೇಶ್ವರನು ಶಿವನ ಆಜ್ಞೆಯ ಪ್ರಕಾರ ಅಯ್ಯಪ್ಪನ ಜನ್ಮದ ಕತೆಯನ್ನು ತನ್ನ ಮುದ್ರೆ ಕೈಗಳಿಂದ ಅಭಿನಯಿಸಿ ತೋರಿಸುತ್ತಾನೆ. ಇದನ್ನು ಅನುಕರಿಸುವುದೇ ‘ಅಯ್ಯಪ್ಪನ ತೀಯಾಟ್ಟಿನ’ ‘ಕೂತ್ತಭಿನಯ’. ಅದೇ ರೀತಿ ಕಾಳಿತೀಯಾಟ್ಟಿನಲ್ಲಿ ‘ದಾರಿಕವಧ ಕಥೆ’ಯನ್ನು ಅಭಿನಯಿಸಿ ತೋರಿಸಲಾಗುತ್ತದೆ. ‘ಕಳಂ’ನ ಎದುರುಗಡೆ ನಿಂತು ‘ಕೂತ್ತ’ನ ವಸ್ತ್ರಾಭರಣಗಳನ್ನು ಧರಿಸಲಾಗುತ್ತದೆ. ‘ತೀಯಾಡಿನಂಬ್ಯಾರ್’ ಎಂಬ ಜನವಿಭಾಗವದರು ನಂದಿಕೇಶ್ವರನ ವೇಷವನ್ನು ಧರಿಸುತ್ತಾರೆ. ಇವರು ಮೊದಲು ತಲೆಗೆ ಬಟ್ಟೆಯನ್ನು ಕಟ್ಟಿ ಬಳಿಕ ಕೆಂಪು ಅಂಗಿಯನ್ನು ಧರಿಸುತ್ತಾರೆ. ಅನಂತರ ಕೊರಲಾರ, ಮಣಿಮಾಲೆ, ಮುತ್ತಿನ ಮಾಲೆ, ಬಳೆ, ಕಡಗ, ಕಿವಿಹೂ, ತೋಡ, ಸೊಂಟದ ಆಭರಣ ಇತ್ಯಾದಿಗಳನ್ನು ಧರಿಸುತ್ತಾರೆ. ಆದರೆ ಮುಖದಲ್ಲಿ ‘ತೆಪ್ಪೊ’, ‘ಚುಟ್ಟಿ’ಯನ್ನು ಇಡುವುದಿಲ್ಲ. ತಲೆಗೆ ‘ಪಾತಿಯಂ’ ಎಂಬ ಹೆಸರಿನ ಕೂದಲನ್ನು ಕಟ್ಟುತ್ತಾರೆ.

‘ಕಾಳಿತೀಯಾಟ್ಟಿನ’ ಕಾಳಿ ವೇಷದಲ್ಲಿ ಕೆಂಪು ಅಂಗಿಯನ್ನು ಧರಿಸಲಾಗುತ್ತದೆ. ಕಣ್ಣಿನ ಸುತ್ತಲೂ ಗಲ್ಲದಲ್ಲಿ ಕಪ್ಪು ಬಣ್ಣವನ್ನು ಬಳಿಯುತ್ತಾರೆ. ಕಣ್ಣನ್ನು ಕೆಂಪಾಗಿಸಲು ‘ಚೆಂಡಪೂ’ವನ್ನು ಇಡುವ ಕ್ರಮವಿದೆ. ಹಣೆಯ ಮಧ್ಯದಲ್ಲಿ ದೊಡ್ಡ ಸಿಂಧೂರ ಬೊಟ್ಟನ್ನು ಹಾಕುತ್ತಾರೆ. ಹಾಗೆಯೇ ತಲೆಗೆ ಅರ್ಧ ವೃತ್ತಾಕೃತಿಯ ದೊಡ್ಡ ಕಿರೀಟವನ್ನು ಧರಿಸುವರು. ಕಿರೀಟದ ಹಿಂಬದಿಯಲ್ಲಿ ತೆಂಗಿನಗರಿಯಿಂದ ತಯಾರಿಸಿದ ಉದ್ದನೆಯ ಕೂದಲನ್ನು ಕಟ್ಟಿರುವುದು ಕಾಣಬಹುದು. ಈ ಎರಡೂ ತೀಯಾಟ್ಟುಗಳಲ್ಲಿ ಚೆಂಡೆ, ಕೈತಾಳ, ಪರ ಮುಂತಾದ ವಾದ್ಯಗಳನ್ನು ಉಪಯೋಗಿಸುವರು. ‘ಕಳಂ ಪೂಜೆ’ ಯ ಸಂದರ್ಭದಲ್ಲಿ ಮದ್ದಳೆ, ಕೊಂಬು, ಕೊಳಲು,ಹಕ್ಕಿ, ತಿಮಿಲಿ ಮೊದಲಾದ ವಾದ್ಯೋಪಕರಣಗಳನ್ನು ಬಳಸುತ್ತಾರೆ. ‘ಕಳಂತಾಟಿ’ಗೂ ಮತ್ತು ‘ತೀಯಾಟ್ಟಿ’ ಗೂ ಹಾಡುವ ಹಾಡುಗಳಿಗೆ ನಿರ್ದಿಷ್ಟವಾದ ರಾಗವಿದೆ.

– ಎಸ್.ಕೆ. ಅನುವಾದ ಎನ್.ಎಸ್.

ತುರಮುಖಪ್ಪಾಟ್ಟ್ ಕೇರಳದ ‘ತುರಮುಖಪ್ಪಾಟ್ಟ್’ ಎಂಬುದು ಹಲವಾರು ಶತಮಾನಗಳ ಚರಿತ್ರೆ ಮತ್ತು ಪರಂಪರೆ ಇರುವ ಜಾನಪದ ಪ್ರಕಾರವಾಗಿದೆ. ಕೊಚ್ಚಿಯ ಬಂದರು ಕಾರ್ಮಿಕರು ಈ ಹಾಡನ್ನು ಉಪಯೋಗಿಸುತ್ತಾರೆ.

ಕ್ರಿ.ಶ. ೧೫ನೇ ಶತಮಾನದಲ್ಲಿ ಕೊಚ್ಚಿಯು ಒಂದು ಪುಟ್ಟ ಬಂದರು ಆಗಿತ್ತು. ಆದರೂ ಅರೇಬಿಯರು, ಫಿನ್ನಿಷರು ಮತ್ತಿತರರು ಇಲ್ಲಿ ವ್ಯಾಪಾರ ನಡೆಸುತ್ತಿದ್ದರು. ಅರೇಬಿಯರ ಜೊತೆ ನಿಕಟ ಸಂಬಂಧವನ್ನಿಟ್ಟುಕೊಂಡಿದ್ದ ಮುಸ್ಲಿಂ ಬಂದರು ಕಾರ್ಮಿಕರು ಈ ಹಾಡನ್ನು ಮೊತ್ತ ಮೊದಲ ಬಾರಿಗೆ ಉಪಯೋಗಿಸಿದರು.

ಸಂಘರ್ಷಗಳಿಂದ, ಪ್ರಕೃತಿಯಲ್ಲುಂಟಾದ ಏರಿಳಿತಗಳಿಂದಾಗಿ ಕಾಲಾಂತರಕದಲ್ಲಿ ಕೊಚ್ಚಿಯ ಇತಿಹಾಸದಲ್ಲಿ, ಜನ ಜೀವನದಲ್ಲಿ ಹಲವಾರು ಬದಲಾವಣೆಗಳುಂಟಾದವು. ಡಚ್ಚರನ್ನು, ಅರೇಬಿಯರನ್ನು ಕೊಚ್ಚಿಯಿಂದ ಹೊರಗಟ್ಟಿದ ಬ್ರಿಟಿಷರು ಅಲ್ಲಿ ದೊಡ್ಡ ಸಾಮ್ರಾಜ್ಯ ಶಕ್ತಿಯಾಗಿ ಬೆಳೆದು ನಿಂತರು. ಆಧುನಿಕ ಕೊಚ್ಚಿಯ ಶಿಲ್ಪ ಎಂದು ತಿಳಿಯಲ್ಪಡುವ ರೋಬರ್ಟ್ ಬ್ರಿಸ್ಟೋನ ಕಾಲದಲ್ಲಿ ಈ ಕೊಚ್ಚಿ ಬಂದರು ವಿಶ್ವದಲ್ಲಿಯೇ ಖ್ಯಾತಿ ಪಡೆಯಿತು.

ಕೊಚ್ಚಿಯಲ್ಲಿ ಒಂದು ದ್ವೀಪ ನಿರ್ಮಿಸುವ ಕೆಲಸವು ನಡೆಯಿತು. ಇದರಿಂದಾಗಿ ಕೊಚ್ಚಿಯಲ್ಲಿ ಹೊಸ ಕಾರ್ಮಿಕರ ಆಗಮನ ಮತ್ತು ಅವರ ನಡುವೆ ಸಂಸ್ಕೃತಿಯ ಮಿಶ್ರಣವು ಉಂಟಾಯಿತು. ತೃತ್ವಣಿತ್ತುರ, ಪೊತ್ತೋಟ್ಟಿ ಪ್ರದೇಶಗಳಿಂದ ದ್ವೀಪ ನಿರ್ಮಿಸುವುದಕ್ಕೋಸ್ಕರ ಕಗ್ಗಲ್ಲು ಮತ್ತು ಮಣ್ಣನ್ನು ತರಲಾಯಿತು. ಇದರ ಜೊತೆಗೆ ಆ ಪ್ರದೇಶದ ದಲಿತ ಕಾರ್ಮಿಕರೂ ಕೊಚ್ಚಿಗೆ ಆಗಮಿಸಿದರು. ಇದರಿಂದಾಗಿ ‘ತುರಮುಖಪ್ಪಾಟ್’ ನ ರಾಗದ ಆಧಾರ ಶಿಲೆಯು ಅರೇಬಿಯನ್ ಮುಸ್ಲಿಂ ಸಂಪ್ರದಾಯ ಮತ್ತು ಕೇರಳದ ಜಾನಪದ ಸಂಪ್ರದಾಯದ ಮಿಶ್ರಣವಾಗಿದೆ.

ಕೇರಳದಲ್ಲಿ ಮೊತ್ತ ಮೊದಲ ಬಾರಿಗೆ ಒಂದು ‘ಕಾರ್ಮಿಕ ಸಂಘಟನೆ’ ರೂಪುಗೊಂಡದ್ದು ಕೊಚ್ಚಿ ಬಂದರಿನಲ್ಲಾಗಿದೆ. ಪಿ. ಗಂಗಾಧರನ್ ಇವರ ನೇತೃತ್ವದಲ್ಲಿ ‘ಕೊಚ್ಚಿ ಬಂದರು ಕಾರ್ಮಿಕರ ಯೂನಿಯನ್’ ರೂಪುಗೊಂಡಿತು. ಯೂನಿಯನ್ ಚಟುವಟಿಕೆಯಲ್ಲಿ ಮತ್ತು ಜನರನ್ನು ಒಟ್ಟುಗೂಡಿಸುವಲ್ಲಿ ಈ ಜನಪದ ಪ್ರಕಾರವು ತುಂಬ ಪ್ರಭಾವ ಬೀರಿದೆ.

‘ತುರಮುಖಪ್ಪಾಟ್’ನ ಗಾಯಕರಲ್ಲಿ ಹೆಚ್ಚಿನವರೂ ಕೊಚ್ಚಿಯ ಮುಸ್ಲಿಂ ವಿಭಾಗಕ್ಕೆ ಸೇರಿದವರಾಗಿದ್ದಾರೆ. ‘ಸೂಫಿ’ ರೀತಿಯನ್ನು ಅವಲಂಬಿಸಿದ್ದ ಇವರು ಉದ್ದನೆಯ ಗಡ್ಡ, ಮುಂಡಾಸು ಮತ್ತು ಉದ್ದನೆಯ ಜುಬ್ಬವನ್ನು ಧರಿಸುತ್ತಿದ್ದರು. ಅದೇ ರೀತಿ ಇವರು ಮರದಿಂದ ನಿರ್ಮಿಸಿದ ‘ಚಪ್ಲಂಗಟ್ಟ’ ಎಂಬ ವಾದ್ಯೋಪಕರಣವನ್ನು ಉಪಯೋಗಿಸುತ್ತಿದ್ದರು.

ಕೊಚ್ಚಿಯಲ್ಲಿ ‘ತುರಮುಖಪ್ಪಾಟ್’ ಧಾರಾಳವಾಗಿದ್ದವು. ಕೊಳೇರ ಮುಂತಾದ ರೋಗಗಳು ಬರುವುದನ್ನು ತಡೆಗಟ್ಟುವುದಕ್ಕೋಸ್ಕರ ನಡೆಸುವ ಪ್ರಾರ್ಥನೆಗಳು ಹಲವು ಹಾಡುಗಳಲ್ಲಿ ಪ್ರಕಟಿತವಾಗಿದೆ. ಹಾಡುಗಾರರು ಮನೆ ಮನೆಗೆ ತೆರಳಿ ಹರಕೆಗಳನ್ನು ಸ್ವೀಕರಿಸುವರು. ಅದೇ ರೀತಿ ಈ ಹಾಡುಗಳು ಕೊಚ್ಚಿಯ ಹಡಗುಗಳ ಕುರಿತು, ಆಚರಣೆ ವಿಶೇಷತೆಗಳು ಇತ್ಯಾದಿಗಳನ್ನು ವರ್ಣಿಸುತ್ತುವೆ.

ಹಿಂದಿನ ಕಾಲದ ಸಿನಿಮಾ ಹಿನ್ನೆಲೆ ಗಾಯಕನಾದ ಮೆಹಬೂಬ್ ಎಂಬುವರು ‘ತುರಮುಖಪ್ಪಾಟ್ಗೆ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಟ್ಟರು. ಇಂದೂ ಕೂಡ ಹಲವು ಹಾಡುಗಳು ‘ಕೊಚ್ಚಿಯ ಬಂದರು ಕಾರ್ಮಿಕರ’ ನೆನಪಿನಲ್ಲಿ ಅಳಿಯದೇ ಉಳಿದಿದೆ.

– ಕೆ.ಎಸ್.ಎಚ್. ಅನುವಾದ ಎನ್.ಎಸ್.