ತಮಿಳುನಾಡಿನ ಚರ್ಮವಾದ್ಯಗಳು ವಾದ್ಯಗಳು ಮಾನವನ ಬದುಕಿನೊಳಗೆ ಬಂದು ಹೋಗುವ ಹಾಗೂ ಹಳ್ಳಿಗರ ಬದುಕಿಗೆ ಸುಖದ – ದುಃಖದ ಸಂದರ್ಭದಲ್ಲಿ ಬಳಸುವ ಸಾಧನಗಳಾಗಿ ಕಾಣಿಸುತ್ತವೆ. ವಾದ್ಯಗಳಲ್ಲಿ ನಾವು ಅನೇಕ ಬಗೆಯನ್ನು ಕಾಣಬಹುದು. ಅವುಗಳಲ್ಲಿ ಚರ್ಮವಾದ್ಯ ಕೂಡ ಒಂದು. ಮದುವೆ, ಸಾವು, ಉತ್ಸವ, ಜಾತ್ರೆ ಇತ್ಯಾದಿ ಸಂದರ್ಭಗಳಲ್ಲಿ ಚರ್ಮವಾದ್ಯ ಬಳಸುವುದಿದೆ.

ಮರದಿಂದ ಮಾಡಲಾದ ವರ್ತಲಾಕಾರದ ಡೋಲಿಗೆ ಹಸುವಿನ ಚರ್ಮವನ್ನು ಹೊದಿಸಿ ಮಾಡಿರುವುದಕ್ಕೆ ಚರ್ಮವಾದ್ಯ ಎಂದು ಹೆಸರು. ಆರಂಭಿಕ ಹಂತದಲ್ಲಿ ಅಡುಗೆ ಮಾಡಲು ಬಳಸುವ ಮಣ್ಣಿನ ಗಡಿಗೆ ಮೇಲೆ ಹಸುವಿನ ಚರ್ಮವನ್ನು ಹೊದಿಸಿ ನುಡಿಸಲು ಆರಂಭಿಸಿದರು. ಇದು ಡೋಲು ವಾದ್ಯಗಳು ರೂಪಿತವಾಗಲು ಕಾರಣವಾಗಿರುವ ಅಂಶವಾಗಿರಬಹುದು.

ಮರದಿಂದ ಮಾಡಲ್ಪಟ್ಟ ಚರ್ಮವಾದ್ಯಗಳನ್ನು ಭೂಮಿಯ ಚರ್ಮವಾದ್ಯ ಹಾಗೂ ಹಲ್ಳದ ವಾದ್ಯ ಎಂದು ಕರೆಯಲಾಗಿದೆ. ಈ ಉಪಕರಣವನ್ನು ವೇದಕಾಲದ ಗ್ರಂಥಗಳಲ್ಲಿ ‘ಭೂಮಿ ತಂದೂಬಿ’ (ಭೂಮಿ ದುಂದುಭಿ) ಎಂದು ಗುರುತಿಸಲಾಗಿದೆ. ಭೂಮಿವಾದ್ಯ ಎಂದರೆ ಒಂದು ದೊಡ್ಡ ಹಳ್ಳವನ್ನು ತೋಡಿ ಅದರ ಮೇಲೆ ಎತ್ತಿನ ಚರ್ಮವನ್ನು, ರೋಮಗಳು ಹೊರಗೆ ಕಾಣುವಂತೆ ಹೊದಿಸಿ ಸುತ್ತಲೂ ಮೊಳೆಗಳನ್ನು ಹೊಡೆಯುತ್ತಾರೆ. ಕವಲಿನಿಂದ ಕತ್ತರಿಸಲಾಗದ ಕೋಲನ್ನು ಉಪಯೋಗಿಸಿ ಈ ಡೋಲನ್ನು ಹೊಡೆಯುವರು. ತೋರು ಉಪಕರಣಗಳಲ್ಲಿ ದೇ ಪ್ರಾಚೀನವಾದುದು. ಮರದ ದಿಮ್ಮಿಯೊಂದನ್ನು ವಡತ್ತಾಕಾರವಾದ ಚೌಕಟ್ಟಿನಲ್ಲಿ ಸಿದ್ಧ ಮಾಡಿಕೊಂಡು, ಹದಮಾಡಲಾದ ಹಸುವಿನ ಚರ್ಮವನ್ನು ಎಳೆದು ಅಂಟಿಸಿ ಚರ್ಮವಾದ್ಯವನ್ನು ಮಡಲಾಗುತ್ತದೆ. ಈ ರೀತಿಯಾಗಿ ಹಸುವಿನ ಚರ್ಮವನ್ನು ಅಂಟಿಸುವುದಕ್ಕೆ ಹುಣಸೆಬೀಜದಿಂದ ತಯಾರಿಸಿ ಅಂಟನ್ನು ಉಪಯೋಗಿಸುತ್ತಾರೆ. ಈ ಉಪಕರಣವನ್ನು ನುಡಿಸುವುದಕ್ಕೆ ಒಂದೂ ಕಾಲ ಅಡಿ ಉದ್ದ, ೧ ಸಟಿಮೀಟರ್ ಅಗಲವಾದ ಬಿದಿರಿನ ಕಡ್ಡಿಯನ್ನು ಉಪಯೋಗಿಸುತ್ತಾರೆ. ಈ ಕೋಲಿನಿಂದ ನುಡಿಸುವವರು ಎಡಗೈಯಲ್ಲಿ ಈ ಕಡ್ಡಿಯನ್ನು ಇಟ್ಟುಕೊಂಡು, ಟೊಲಿಪ್‌ಮರದ ಕೋಲನ್ನು ಚೆನ್ನಾಗಿ ಕುಸುರಿ ಮಾಡಿ ಅರ್ಧ ಅಡಿ ಉದ್ದ, ೩ ಸೆಂ.ಮೀ. ಸುತ್ತಳತೆ ಇರುವಂತಹ ಬೆತ್ತವನ್ನು ಬಲಗೈನಲ್ಲಿ ಇಟ್ಟುಕೊಂಡು ವಾದ್ಯವನ್ನು ನುಡಿಸುವರು.

ಈ ಉಪಕರಣ ಒಂದು ಮುಖವುಳ್ಳದಾಗಿಯೂ ಮತ್ತು ಎರಡು ಮುಖವುಳ್ಳದಾಗಿಯೂ ಇರುತ್ತದೆ. ಒಂದು ಕಣ್ಣು ಇರುವ ವಾದ್ಯವನ್ನು ಒಂದು ಮುಖ್ಯವಾದ್ಯವೆಂತಲೂ ಎರಡು ಮುಖವಿರುವ ವಾದ್ಯವನ್ನು ಜಂಟಿ ಮುಖವಾದ್ಯವೆಂದೂ ಹೇಳಲಾಗುತ್ತದೆ. ವಾದ್ಯದ ದನಿಯನ್ನು ಕುರಿತ ಹಾಗೆ ಹೇಳುವೂದಾದರೆ ಉಚ್ಚ ಸ್ವರದ ವಾದ್ಯವೆಂದೂ ಯುದ್ಧದ ವಾದ್ಯವೆಂದೂ ಭೇರಿ ವಾದ್ಯವೆಂದೂ ಆವೇಶ ಆಟದ ವಾದ್ಯವೆಂದೂ ಪಟ್ಟೆವಾದ್ಯವೆಂದೂ ಹಲವು ವಿಧವಾಗಿ ವಿಭಾಗಿಸಲಾಗಿದೆ.

ತೊಲ್ಕಾಪ್ಪಿಯಂ ವ್ಯಾಕರಣ ಗ್ರಂಥದಲ್ಲಿ ಒಂದೊಂದು ನೆಲಕ್ಕೂ ಒಂದೊಂದು ರೀತಿಯಾದ ವಾದ್ಯವಿರುವುದಾಗಿ ಹೇಳಲಾಗುತ್ತದೆ. ಆ ತೆರನಾದ ವ್ಯತ್ಯಾಸಗಳು ಕಂಡು ಬರುವುದನ್ನು ಈ ಕೆಳಗಿನ ರೀತಿಯಲ್ಲಿ ಕಾಣಬಹುದು. ತೊಡಂಗಮ್ (ಬೆಟ್ಟ ಪ್ರದೇಶಗಳಲ್ಲಿ ವಾಸಿಸುವವರು ಉಪಯೋಗಿಸುವ ಒಂದು ಚಿಕ್ಕ ಚಮದ್ಯ) ಮುರುಗಿಯಮ್ (ಪಕ್ವವಾಗು), ತುಡಿ (ಮಿಡಿ, ಕಂಪಿಸು) ಮೊದಲಾದವು ಚಿಕ್ಕ ವಾದ್ಯಗಳ ಪ್ರಕಾರದಲ್ಲಿ ಕಂಡು ಬರುತ್ತದೆ. ಕುರಿಂಜಿ (ಬೆಟ್ಟದ ವಾದ್ಯಗಳು) ತುಡಿ ಎಂಬ ವಾದ್ಯ ಈ ಕುರಿಂಜಿಯಲ್ಲಿ ಕಂಡುಬರುತ್ತದೆ. ಪಾಲೈ (ಮರುಭೂಮಿ)ನಲ್ಲಿ ಪಂಬೈ (ಒಂದು ಬಗೆಯ ಚರ್ಮವಾದ್ಯ) ಏರಂಗೋಟ್ ವಾದ್ಯಗಲು ಕಂಡುಬರುತ್ತದೆ. ಮುಲ್ಲೈ (ಕಾಡು)ನಲ್ಲಿ ಕಿಣೈ ಎಂಬ ವಾದ್ಯ ಕಾಣಸಿಗುತ್ತದೆ. ಮರದ ಪರೈ( ಬಯಲು ಪ್ರದೇಶ ವಾದ್ಯ)ನಲ್ಲಿ ಸಾಪ್ಪರೈ ಎಂಬ ವಾದ್ಯ ಕಾಣಿಸಿಗುತ್ತದೆ. ನೆಯ್ದೆಲ್ ಪರೈ (ಕಡಲ ತೀರದ ವಾದ್ಯ) ಎಂಬಲ್ಲಿಯೂ ವಾದ್ಯ ಕಾಣಸಿಗುವುದರಿಂದ ವಾದ್ಯಗಳನ್ನು ಈ ರೀತಿಯಾಗಿ ವಿಭಾಗಿಸಬಹುದು.

ಈ ವಾದ್ಯವನ್ನು ಕುರಿತಾಗಿ ತಮಿಳರು ಹೀಗೆ ಹೇಳುತ್ತಾರೆ. ಅಂದರೆ ಕಾಲುವೆಗಳನ್ ಕಾಯುತ್ತಿರುವ ಕಾವಲುಗಾರರು ಪ್ರವಹ ಅಧಿಕವಾಗಿ ಬರುವುದನ್ನು ತೋರಿಸುವ ಸಲುವಾಗಿ ಹೆಚ್ಚಿನ ಸ್ವರವನ್ನು ಎಬ್ಬಿಸುವುದಕ್ಕಾಗಿ ವಾದ್ಯಗಳನ್ನು ನುಡಿಸಿದುವಾಗಿ ಪ್ರಾಚೀನ ಕಾವ್ಯಗಳು ಹೇಳುತ್ತವೆ. ಅದೇ ರೀತಿಯಾಗಿ ಶತ್ರು ರಾಜ್ಯವನ್ನು ಸೋಲಿಸಿ ಜಯಗಳಿಸಿದ ಅನಂತರ ವಾದ್ಯ ಮೊಳಗಿಸುವ ಸಂಸ್ಕೃತಿ ಹಾಗೂ ವಾದ್ಯಕ್ಕೆ ಬಲಿಕೊಟ್ಟು ವಂದಿಸುವ ಸಂಪ್ರದಾಯ ತಮಿಳಿರಲ್ಲಿ ಕಾಣಸಿಗುತ್ತದೆ.

ಸೋಲನ್ನು ತಿಳಿಸುವುದಕ್ಕೂ ಕೂಡ ವಾದ್ಯವನ್ನು ನುಡಿಸುತ್ತಾರೆ. ಆ ವಾದ್ಯವು ಸೋಲನ್ನು ತಿಳಿಸುವುದಕ್ಕಾಗಿಯೇ ಎಂದು ಪ್ರತ್ಯೇಕ ಗುಣಹೊಂದಿರುವ ಹಾಗೂ ಹೆಚ್ಚಿನ ಸದ್ದನ್ನು ಮಾಡುವ ವಾದ್ಯಗಳಿಂದ ಸೂಚಿಸುತ್ತಾರೆ. ಅಲ್ಲದೆ ಗದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಉತ್ಸಾಹಗೊಳ್ಳಲಿ ಎಂಬುದಕ್ಕಾಗಿ ವಾದ್ಯವನ್ನು ನುಡಿಸುತ್ತಾರೆ. ಅಂತೆಯೇ ಮರದ ರೈತಿ (ಬಯಲು ಪ್ರದೇಶ) ವನ್ನು ಬತ್ತ ಕೊಯ್ಯುವಾಗಲು ವಾದ್ಯ ಮೊಳಗಿಸುವುದನ್ನು ಕೊಯ್ಲುವಾದ್ಯ ಎಂದು ಕರೆಯುತ್ತಾರೆ. ಕೆಸುವಿನಗಡ್ಡೆ, ಅರಿಸಿನದ ಗಡ್ಡೆ ಮೊದಲಾದವುಗಳನ್ನು ಹಂದಿಗಳ ಕಾಟದಿಂದ ಕಾಪಾಡುವ ಸಲುವಾಗಿ ವಾದ್ಯ ನುಡಿಸುವರು. ಅದು ‘ಹಂದಿವಾದ್ಯ’ವಾಗಿದೆ. ಮಾವಟಿಗನ ಹತೋಟಿ ಮೀರಿ ಬರುವ ಮದ್ದಾನೆಯ ಬರುವಿಕೆಯನ್ನು ತಿಳಿಸಲು ವಾದ್ಯಗಳನ್ನು ನುಡಿಸುತ್ತಾರೆ. ಹಾಗೆಯೇ ಆನೆಗಳನ್ನು ನೀರಿಗೆ ಬಿಡುವಾಗ ವಾದ್ಯವನ್ನು ಮೊಳಗಿಸಿಯೇ ಹೋಗಬೇಕೆಂದು ಪ್ರಾಚೀನ ಕಾಲದ ರಾಯರುಗಳ ಆಜ್ಞೆಯಾಗಿತ್ತು ಎಂದು ತಿಳಿದು ಬರುತ್ತದೆ. ಅಲ್ಲದೆ ವಿಷಯಗಳನ್ನು ಜನರಿಗೆ ತಿಳಿಸುವ ಸಲುವಾಗಿ ವಾದ್ಯ ನುಡಿಸಿ ಡಂಗುರದ ಮೂಲಕ ಸುದ್ದಿಯ ಪ್ರಚುರತೆಯನ್ನು ಮಾಡುವುದು, ರಾಜ ತನ್ನ ಹೆಸರಿನಿಂದಲೇ ವಾದ್ಯ ನುಡಿಸುವ ಒಂದು ಸಂಪ್ರದಾಯ ಹಾಗೂ ಆನೆಯ ಮೇಲೆ ವಾದ್ಯವನ್ನು ಏರಿಸಿ ವಾದ್ಯ ಮೊಳಗಿಸಿ ಒಳ್ನುಡಿಯನ್ನು ಸಾರುವ ಸಂಪ್ರದಾಯವೂ ತಮಿಳುನಾಡಿನಲ್ಲಿತ್ತು.

– ಟಿ.ಜಿ. ಅನುವಾದ ಪಿ.ಎಂ.

ತಮಿಳುನಾಡಿನ ಜನಪದ ನಂಬಿಕೆಗಳು ವಂಶಪಾರಂಪರ್ಯವಾಗಿ ಜನರ ಮನಸ್ಸಿನಲ್ಲಿ ನೆಲೆಗೊಂಡಿರುವ ಒಂದು ಮಾನಸಿಕ ಒಪ್ಪಿಗೆ. ಜನಪದರು ತಮ್ಮ ಹಲವಾರು ಅನುಭವಗಳಿಂದ ಯಾವುದನ್ನು ಮಾಡಿದರೆ ಒಳ್ಳೆಯದಾಗುತ್ತದೆ, ಯಾವುದನ್ನು ಮಾಡಿದರೆ ಕೆಟ್ಟದಾಗುತ್ತದೆ ಎಂಬುದನ್ನು ಅವರು ಕಲ್ಪಿಸಿಕೊಳ್ಳುತ್ತಾರೆ. ತಮಿಳು ಜನಸಮುದಾಯದಲ್ಲಿರುವ ಕೆಲವು ಜನಪದ ನಂಬಿಕೆಗಳು ಹೀಗಿವೆ:

ದೇವರ ಮೇಲಿನ ನಂಬಿಕೆಗಳು : ಮಕ್ಕಳು ಜನಿಸುವುದು ದೇವರ ಕೃಪಯಿಂದ ಎಂಬುದು ಒಂದು ಗಾಢವಾದ ನಂಬಿಕೆ ಜನರ ಮನದಲ್ಲಿ ಮನೆಮಾಡಿದೆ. ಈ ಕಾರಣದಿಂದಲೇ ಮಗುವಿಗೆ ಒಂದು ವರ್ಷ ತುಂಬಿದ ಬಳಿಕ ದೇವರು ನೀಡಿದ ವರ ಎಂದು ಭಾವಿಸಿ ಹುಟ್ಟು ಹಬ್ಬವನ್ನು ಆಚರಿಸುವರು. ಆ ದಿನದಂದು ಮಗುವನ್ನು ಸ್ನಾನ ಮಾಡಿಸಿ ಮಡಿಬಟ್ಟೆಯನ್ನು ಧರಿಸಿ ಮನೆದೇವರನ್ನು ಪೂಜಿಸಿದ ಮೇಲೆ ಪಳನಿಬೆಟ್ಟ, ಮಧುರೆ ಮುಂತಾದ ಪುಣ್ಯಕ್ಷೇತ್ರಗಳಿಗೆ ತೆರಳಿ ಅಲ್ಲಿ ಪುಣ್ಯಸ್ನಾನವನ್ನು ಮಾಡಿ ಮಗುವನ್ನು ದಯಪಾಲಿಸಿದ ಭಗವಂತನನ್ನು ಕುಣಿದು ಕುಪ್ಪಳಿಸಿ ಹಾಡುತ್ತಾರೆ.

77

ಅಂತೆಯೇ ತಮ್ಮ ಗ್ರಾಮದೇವತೆಗಳಾದ ಮುನಿಯಪ್ಪನ್ ಮತ್ತು ಮಾರಿಯಮ್ಮನ್ ಮೊದಲಾದ ದೇವತೆಗಳನ್ನು ಬೇಡಿದುದರ ಪರಿಣಾಮವಾಗಿ ತಮಗೆ ಮಕ್ಕಳ ಭಾಗ್ಯ ದೊರಕಿತು ಎಂದು ಜನಪದರು ನಂಬುತ್ತಾರೆ. ದೇವರು ತಾವುಕೇಳಿದ್ದನ್ನು ದಯಪಾಲಿಸಿದ್ದಕ್ಕೆ ಕಾಣಿಕೆಯನ್ನು ಹಾಕುವುದು, ಮುಡಿಕೊಡುವುದು, ಉಪವಾಸ, ವ್ರತವನ್ನು ಮಾಡುವುದು, ಕಾವಡಿ ಎತ್ತುವುದು, ಬಾಯಿಬೀಗ ಚುಚ್ಚಿಕೊಳ್ಳುವುದು, ಪ್ರಾಣಿ ಬಲಿ ಕೊಡುವುದು, ಪೊಂಗಲ್ ಇತ್ಯಾದಿಗಳ ಮೂಲಕ ಹರಕೆ ಸಲ್ಲಿಸುವುದರಿಂದ ದೇವರು ಸಂಪ್ರೀತನಾಗುತ್ತಾನೆ ಎಂಬುದು ಅವರ ನಂಬಿಕೆ. ಸತ್ತವರ ಮನೆಯಲ್ಲಿಯೇ ದೇವರಾಗಿ ಇರುತ್ತಾರೆಂದು ಭಾವಿಸಿ ಅವರಿಗೆ ಮನೆದೇವರೆಂದು ಕರೆಯುತ್ತಾರೆ. ಅವರು ಬದುಕಿದ್ದಾಗ ಅವರಿಗೆ ಪ್ರಿಯವಾಗಿದ್ದ ಅಡುಗೆ, ಬಟ್ಟೆ ಬರೆಗಳನ್ನು ಎಡೆ ಇಡುವುದು ಪದ್ಧತಿ. ಕನ್ಯೆ ನಿಧಾನಳಾಗಿದ್ದಲ್ಲಿ ಅವಳನ್ನು ‘ಲಂಗದಮ್ಳ’ ಎಂದು ಕರೆಯುತ್ತಾರೆ. ಆತ್ಮಹತ್ಯೆ ಮಾಡಿಕೊಂಡವರು ದೈವತ್ವಕ್ಕೆ ಏರುವುದಿಲ್ಲ ಎನ್ನುವುದು ಇವರ ನಂಬಿಕೆ. ಅವರಿಗೆ ಆತ್ಮಶಾಂತಿ ಮಾಡದಿದ್ರೆ ಅವರು ಭೂತಪ್ರೇತಗಳಾಗಿ ಗಾಳಿಯಲ್ಲಿ ಓಡಾಡಿಕೊಂಡಿದ್ದು ಜನರನ್ನು ಭಯಪಡಿಸುತ್ತಾರೆ ಎನ್ನುವುದು ಇನ್ನೊಂದು ನಂಬಿಕೆ.

ತಮ್ಮ ಮುಖದ ಮೇಲೆ ಗುಳ್ಳೆ ಅಥವಾ ಗಾಯದ ಗುರುತುಗಳಿದ್ದರೆ ಅವು ಹೋಗಬೇಕೆಂದು ಆಷಾಢ (ಅಡಿ) ಮಾಸದ ಮಂಗಳವಾರದಂದು ಹೆಣ್ಣು ಗಂಡು ಇಬ್ಬರೂ ಉಪವಾಸ ಮಾಡುವುದುಂಟು. ಈ ನಂಬಿಕೆ ವಿಶೇಷತಃ ಗ್ರಾಮೀಣ ಪ್ರದೇಶಗಳಲ್ಲಿದೆ.

ದೃಷ್ಟಿ ತೆಗೆಯುವುದು : ಕೆಲವು ವ್ಯಕ್ತಿಗಳ ದೃಷ್ಟಿ ಕೆಟ್ಟದೆಂದು ಈ ದೃಷ್ಟಿಯಿಂದ ಕೇಡಾಗುವುದು ಎಂಬ ನಂಬಿಕೆ ಜನಪದರಲ್ಲಿದೆ. ‘ಕಲ್ಲೇಟಿನಿಂದ ತಪ್ಪಿಸಿಕೊಂಡರೂ ಕಣ್ಣೇಟಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂಬ ಗಾದೆ ಮಾತಿದೆ. ಸಮೃದ್ಧವಾಗಿ ಬೆಳದ ಪೈರು ಕೆಟ್ಟ ದೃಷ್ಟಿಯಿಂದ ಹಾಳಾಗಬಾರದೆಂದು ಅಲ್ಲಿ ಕಡ್ಡಿಯ ಸಹಾಯದಿಂದ ಬೊಂಬೆ ಮಾಡಿ ಬಟ್ಟೆ ಸುತ್ತಿ ನಿಲ್ಲಿಸುವುದುಂಟು. ಒಂದು ಮಡಕೆಗೆ ಕಪ್ಪು ಬಳಿದು ಅದರ ಮೇಲೆ ಸುಣ್ಣದಿಂದ ಚುಕ್ಕಿಗಳನ್ನು ಬರೆದು ಅದು ಎಲ್ಲರ ಕಣ್ಣಿಗೆ ಕಾಣಿಸುವಂತೆ ತೋಟದಲ್ಲಿ ಇಡುತ್ತಾರೆ. ನೋಡುವವರ ಕಣ್ಣು ಮಡಕೆಯ ಬೊಂಬೆಯ ಮೇಲೆ ಬೀಳುವುದರಿಂದ ತಮ್ಮ ಪೈರು ನಾಶವಾಗುವುದಿಲ್ಲ ಎಂಬುದು ನಂಬಿಕೆ. ಮಕ್ಕಳಿಗೆ ದೃಷ್ಟಿ ಬೀಳದಂತೆ ಇರಲು ತಾಯಿ ಎದೆ ಹಾಲನ್ನು ಸ್ವಲ್ಪಭೂಮಿಗೆ ಚೆಲ್ಲಿ ಅದನ್ನು ತಿಕ್ಕಿ ಮಗುವಿನ ಹಣೆಗೆ ಇಡುವಳು. ಸಂಜೆಯ ಸಮಯದಲ್ಲಿ ಸಾಂಬ್ರಾಣಿಯ ಹೊಗೆಯನ್ನು ಹಾಕಿ ಮೆಣಸಿನಕಾಯಿ, ಉಪ್ಪು, ಕಸಪೊರಕೆಯ ಕಡ್ಡಿ ಇವುಗಳೊಂದಿಗೆ ಮಗುವನ್ನು ನೋಡಿದ ಜನರ ಪಾದಧೂಳಿ ಹಾಕಿ ಮಗುವಿನ ತಲೆಸುತ್ತ ಮೂರುಬಾರಿ ಸುತ್ತಿ ನಾಲ್ಕು ರಸ್ತೆ ಕೂಡುವಲ್ಲಿ ಸುರಿದು ಬರುವುದುಂಟು. ಮಗುವಿಗೆ ಯಾರ ದೃಷ್ಟಿ ಬಿದ್ದಿದೆ ಎಂಬ ಅರಿವು ಇಲ್ಲದಿದ್ದರೂ ಆ ದಾರಿಯಲ್ಲಿ ಮಗುವನ್ನು ನೋಡಿದವರು ಆ ದಾರಿಯಲ್ಲಿ ಹೋಗುತ್ತಾರೆ ಎಂಬುದು ಜನಪದರ ನಂಬಿಕೆಯ ಹಿಂದಿದ್ದ ಉದ್ದೇಶ. ಧೂಪಕ್ಕೆ ಹಾಕಿದ ಮೆಣಸಿನ ಘಾಟು ಜೋರಾಗಿ ಬಂದರೆ ದೃಷ್ಟಿ ಕಡಿಮೆ ಆಯಿತು ಎಂದೂ, ಘಾಟು ಬಾರದಿದ್ದರೆ ದೃಷ್ಟಿ ಕಡಿಮೆ ಆಗಲಿಲ್ಲ ಎಂಬುದು ನಂಬಿಕೆ. ದೇವರಿಗೆ ಕಣ್ಣಿನ ರೂಪ ಒಂದನ್ನು ಮಾಡಿ ಕಾಣಿಕೆ ನೀಡಿದರೆ ದೃಷ್ಟಿ ದೋಷ ಪರಿಹಾರವಾಗದೆಂಬುದು ಒಂದು ನಂಬಿಕೆ.

ಕಣ್ಣಿನ ದೃಷ್ಟಿ ಮಕ್ಕಳಿಗಷ್ಟೇ ಅಲ್ಲ ಹಾಲು ಕೊಡುವ ಹಸುಗಳಿಗೂ ಬೀಳುವುದು. ಹೀಗೆ ಬಿದ್ದಲ್ಲಿ ಅವು ಹಾಲನ್ನು ಕಡಿಮೆ ಕೊಡುತ್ತವೆ. ಇಲ್ಲವೇ ರೋಗ ರುಜಿನಗಳಿಗೆ ತುತ್ತಾಗುತ್ತವೆ ಎಂಬುದು ನಂಬಿಕೆ. ಮಂಗಳವಾರ ಶುಕ್ರವಾರಗಳಂದು ಮಗುವಿಗೆ ದೃಷ್ಟಿ ತೆಗೆಯುವಂತೆ ಹಸುವಿಗೂ ದೃಷ್ಟಿ ತೆಗೆಯುವುದುಂಟು.

ಯಮನ ಕುರಿತ ನಂಬಿಕೆಗಳು : ಮನುಷ್ಯ ಜನಿಸಿದಾಗಲೇ ಆತ ಇಷ್ಟು ಕಾಲ ಬದುಕಿರಬೇಕೆಂಬುದು ನಿರ್ಧಾರವಾಗುತ್ತದೆ. ಅನಂತರ ಕಾಲ ಮುಗಿದ ಬಳಿಕ ಯಮ ಆ ಜೀವಿಯ ಪ್ರಾಣಹರಣ ಮಾಡುತ್ತಾನೆ ಎಂಬುದು ನಂಬಿಕೆ. ಮನುಷ್ಯನ ಜೀವಿತದ ಕಾಲ ಎಷ್ಟು ಎಂಬ ಲೆಕ್ಕವನ್ನು ಯಮನೇ ಇಟ್ಟಿರುತ್ತಾನೆ ಎಂಬುದು ಒಂದು ನಂಬಿಕೆ. ಒಬ್ಬ ವ್ಯಕ್ತಿ ಸುದೀರ್ಘ ಕಾಲ ಜೀವಿಸಿದ್ದಲ್ಲಿ ಯಮ ತನ್ನ ಕಡತವನ್ನೇ ತಿರುಗಿಸಿಲ್ಲ ಎನ್ನುವುದುಂಟು. ಯಮನನ್ನು ಬಿಟ್ಟು ಉಳಿದ ದುಷ್ಟಶಕ್ತಿಗಳು ಮನುಷ್ಯನಿಗೆ ಏನನ್ನೂ ಮಾಡಲಾರವು ಎಂಬುದು ನಂಬಿಕೆ. ಯಮನ ಆವಾಸಸ್ಥಾನವನ್ನು ಕರೆಯುವುದು ಯಮಲೋಕವೆಂದು.

ಪ್ರಾಣಿಗಳನ್ನು ಕುರಿತ ನಂಬಿಕೆ: ಗೋವನ್ನು ದೇವತೆಯಿಂದು ಪೂಜಿಸುವ ಪರಿಪಾಠವಿದೆ. ಬಾಗಿಲ ಮುಂದೆ ಸಗಣಿಯಿಂದ ಸಾರಿಸುವುದು ಸಗಣಿಯಲ್ಲೇ ಗಣೇಶನನ್ನು ಮಾಡಿ ಪೂಜಿಸುವ ಪದ್ಧತಿ ಇದೆ. ಮುಂಜಾನೆ ಕೂಗಲುಕೋಳಿ, ಬೊಗಳಲು ನಾಯಿ ಹಾಗೂ ಬೆಕ್ಕು ಯಾರ ಮನೆಯಲ್ಲಿ ಇರುವುದೋ ಅವರನ್ನು ಶ್ರೇಷ್ಠರೆಂದು ಗೌರವಿಸಲಾಗುವುದು. ಹಾಲು ಕರೆಯದಿದ್ದರೂ ಮನೆಗೊಂದು ಹಸು ಬೇಕು. ಅದು ದೇವತೆಯೆಂದು ಭಾವಿಸುವುದೇ ಇದಕ್ಕೆ ಕಾರಣ. ದೇವಾಲಯಗಳಿಗೆ ಗೋವುಗಳನ್ನು ದಾನವಾಗಿ ನೀಡಲಾಗುವುದು. ಅವುಗಳನ್ನು ದೇವರ ಹಸು ಎಂದೇ ಕರೆಯುವುದುಂಟು. ಈ ಹಸುಗಳನ್ನು ಕಟ್ಟಿ ಹಾಕುವುದಿಲ್ಲ. ಅವು ಸ್ವೇಚ್ಛೆಯಾಗಿ ಎಲ್ಲಿ ಬೇಕಾದರೂ ಮೇಯಬಹುದು. ದೇವಾಲಯದ ಹಸುಗಳು ಪೂಜನೀಯವಾದುದರಿಂದ ಅವುಗಳಿಗೆ ಹೊಡೆಯುವುದಾಗಲಿ, ಹಿಂಸಿಸುವುದಾಗಲಿ ಮಾಡಕೂಡದು. ಹೀಗೆ ಮಾಡಿದ್ದಲ್ಲಿ ಅದರ ಪಾಪ ತಲೆಮಾರಿನಿಂದ ತಲೆಮಾರಿಗೆ ಅಂಟಿಕೊಂಡು ಮುಂದುವರಿಯುವುದೆಂದು ಜನಪದರ ನಂಬಿಕೆ. ನಮಗೆ ಏನು ಕೆಡುಕು ಮಾಡದ ಪ್ರಾಣಿಗಳಿಗೆ ಕೆಡುಕು ಮಾಡಿದರೆ ಅದು ಪಾಪ ಎಂದು ಭಾವಿಸಲಾಗುವುದು. ನವಿಲಿನ ಗುಂಪಿನಿಂದ ಕೋಗಿಲೆಯನ್ನು ಬೇರ್ಪಡಿಸುವುದು ಪಾಪ. ನವಿಲನ್ನು ಮತ್ತು ಕೋಗಿಲೆಯನ್ನು ಬೇರ್ಪಡಿಸುವುದಾಗಲಿ, ಓಡಿಸುವುದಾಗಲಿ ಮಾಡಿದರೆ ಆ ಪಾಪ ನಮ್ಮ ಮಕ್ಕಳಿಗೆ ಸುತ್ತಿಕೊಳ್ಳುವುದು ಎಂಬುದು ಜನಪದರ ನಂಬಿಕೆ.

ವಿಧಿ ಬರೆಹ – ವಿಧಿ ಕುರಿತ ನಂಬಿಕೆಗಳು: ಮನುಷ್ಯ ಜನಿಸುವಾಗಲೇ ಅವರ ಒಳಿತು ಕೆಡಕುಗಳನ್ನು ಅವರ ಹಣೆಯಲ್ಲಿ ಬರೆಯಲಾಗುವುದು. ವಿಧಿಬರೆಹದಂತೆ ಎಲ್ಲವೂ ನಡೆಯುವುದು ಎಂಬುದು ಜನಪದರ ನಂಬಿಕೆ. ‘ಪತಿ, ಪತ್ನಿ ಮತ್ತು ಗುರು ಲಭಿಸುವುದು ಅವರವರ ವಿಧಿಯಂತೆ’. ಸಹಿಸಲಾರದ ನೋವು ಬಂದರೂ ವಾಸಿಯಾಗದ ರೋಗ ಬಂದರೂ ಅದಕ್ಕೆಲ್ಲ ವಿಧಿಯೇ ಕಾರಣವಾಗುತ್ತದೆ.

ನೀ ಹೆತ್ತ ಮಗಳಿಗೆ ತಲೆಯ ಬಾಚಿ
ತಲೆ ತುಂಬ ತಾಳೆಯ ಹೂವು ಮುಡಿದರೂ
ವಿಧಿ ಬರೆಹಕ್ಕೆ ನೀನು
ತಾಯಾಗಿ ಏನು ಮಾಡುವೆ

ತಂದೆ ತಾಯಗಳಿದ್ದರೂ ವಿಧಿ ಬರೆಹವನ್ನು ಅವರು ಬದಲಾಯಿಸಲಾರರು. ಒಬ್ಬ ಹೆಣ್ಣು ಕೋಪದಿಂದ ಆತ್ಮಹತ್ಯೆ ಮಾಡಿಕೊಂಡರೂ ನೀರಿನಲ್ಲಿ ಬಿದ್ದು ಅನಸುನೀಗಿದರೂ ಅದಕ್ಕೆ ಕಾರಣ ಆ ಹೆಣ್ಣಿನ ಹಣೆಬರೆಹ ಎನ್ನಲಾಗುತ್ತದೆ.

ಶಕುನ ನೋಡುವುದು : ಶಕುನದ ಬಗ್ಗೆ ಹಲವು ನಂಬಿಕೆಗಳು ಮನೆ ಮಾಡಿವೆ. ಶಕುನ ನೋಡುವಾಗ ಪ್ರಾಣಿ ಪಕ್ಷಿ ಮೊದಲಾದವುಗಳು ಕೂಡ ಮನುಷ್ಯನ ಎದುರುಬಂದು ನಿಲ್ಲುತ್ತವೆ. ಕೆಲವರು ಸೀನಿದಾಗ ಒಳ್ಳೆಯದು ಎಂದೂ ಇನ್ನು ಕೆಲವರು ಅದು ಒಳ್ಳೆಯ ಶಕುನವಲ್ಲವೆಂದೂ ಭಾವಿಸುತ್ತಾರೆ. ಪ್ರಯಾಣಿಸುವಾಗ ಕಾಲು ಎಡವಿದರೆ, ತಲೆ ಹೊಡೆದುಕೊಂಡರೆ ಅದು ಅಶುಭವೆಂದು ಭಾವಿಸಲಾಗುತ್ತದೆ. ಕಾಗೆಗಳ ಬಗ್ಗೆಯೂ ಕೆಲವು ನಂಬಿಕೆಗಳಿವೆ ಕಾಗೆ ಕಾ… ಕಾ… ಎಂದು ಒಂದೇ ಸಮನೇ ಕಿರುಚುತ್ತಿದ್ದರೆ ಮನೆಗೆ ಅತಿಥಿಗಳ ಆಗಮನದ ಸೂಚನೆ, ಕಾಗೆಗಳು ಜಗಳವಾಡಿಕೊಂಡು ಬಿದ್ದರೆ ಅದು ಕೆಟ್ಟದರ ಮುನ್ಸೂಚನೆ ಎಂದು ನಂಬಲಾಗಿದೆ. ಗೂಬೆ ಮನೆಯ ಸಮೀಪ ಕೂಗಿಕೊಳ್ಳುವುದು, ನಾಯಿ ವಿಕಾರ ಸ್ವರದಲ್ಲಿ ಊಳಿಡುವುದು ಒಳ್ಳೆಯ ಶಕುನವಲ್ಲ. ಆಗಸ ಎದುರು ಬಂದರೆ ಶುಭ ಶಕುನ, ವಿಧವೆ, ಕ್ಷೌರಿಕ ಎದುರು ಬಂದರೆ ಅಶುಭ ಅಥವಾ ಕೆಟ್ಟ ಶಕುನ ಎನ್ನುವರು.

ಪ್ರಯಾಣಕ್ಕೆ ಹೊರಟಾಗ ಕೆಟ್ಟ ಶಕುನಗಳು ಆದರೆ ಮನೆಗೆ ತಿರುಗಿ ಬಂದು ಸ್ವಲ್ಪ ನೀರು ಕುಡಿದು ಕೆಲಕಾಲ ವಿಶ್ರಮಿಸಿ ತೆರಳಿದರೆ ಆ ಕೆಟ್ಟಗಳಿಗೆ ಕಳೆದು ಹೋಯಿತು ಎಂದು ನಂಬುತ್ತಾರೆ.

ಶುಭದಿನ ನೋಡುವುದು : ಗ್ರಾಮೀಣ ಪ್ರದೇಶದ ಜನರು ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವಾಗಲೂ ಶುಭದಿನ ನೋಡುತ್ತಾರೆ. ಪ್ರಯಾಣಕ್ಕೆ, ಮನೆಕಟ್ಟಲಿಕೆ ಮುಹೂರ್ತ ನೋಡುವುದುಂಟು. ಬೀಜ ಬಿತ್ತಲು ಭಾನುವಾರ ಮಂಗಳವಾರ ಗುರುವಾರ ವಿಶೇಷವಾದ ದಿನವೆಂದು ಭಾವಿಸುವರು. ಸೋಮವಾರ ಶುಕ್ರವಾರ ಶನಿವಾರಗಳಂದು ಬಿತ್ತನೆ ಮಾಡಿದರೆ ಕ್ರಿಮಿಕೀಟಗಳು ಹೆಚ್ಚುತ್ತವೆ ಎಂಬುದು ಜನಪದರ ನಂಬಿಕೆ. ಹಾಗೆಯೇ ಭಾನುವಾರ ಮತ್ತು ಗುರುವಾರದಂದು ಬತ್ತವನ್ನು ಬೇಯಿಸುವುದಿಲ್ಲ. ಭಾನುವಾರ ಬತ್ತ ಮೊಳಕೆಯೊಡೆದ ದಿನವೆಂದು ಗುರುವಾರ ಮಡಕೆ ಹುಟ್ಟಿದ ದಿನವೆಂದು ಹೇಳಲಾಗುತ್ತದೆ. ಈ ದಿನ ಬತ್ತ ಬೇಯಿಸಿದರೆ ಮಡಕೆ ಒಡೆದು ಹೋಗುವುದು ಎಂಬುದು ಒಂದು ನಂಬಿಕೆ. ಶುಕ್ರವಾರದ ದಿನ ಮನೆಯ ಧಾನ್ಯವನ್ನು ಸಾಲವಾಗಿ ಇಲ್ಲವೇ ಕೂಲಿಯಾಗಿ ಕೊಡುವುದಿಲ್ಲ. ರಾತ್ರಿಯ ಹೊತ್ತು ಉಪ್ಪು, ಮಜ್ಜಿಗೆ ಮತ್ತು ಹಣವನ್ನು ಬೇರೆಯವರಿಗೆ ಕೊಟ್ಟರೆ ಲಕ್ಷ್ಮಿ ತಮ್ಮನ್ನು ಬಿಟ್ಟು ಹೋಗುವುದೆಂದು ನಂಬುತ್ತಾರೆ. ನೇಗಿಲು ಉಳುವಾಗಲೂ ಒಳ್ಳೆಯ ದಿನ ನೋಡಲಾಗುತ್ತದೆ. ಉಳುವವರು ಇದನ್ನು ‘ಹೊನ್ನಾರು ಕಟ್ಟುವುದು’ ಎಂದು ಹೇಳುವರು. ಒಳ್ಳೆಯ ದಿನ ನೋಡಿ ಕೆಲಸ ಪ್ರಾರಂಭಿಸಿದರೆ ವರಮಾನ ಅಧಿಕ ಪಡೆಯಬಹುದೆಂಬುದು ನಂಬಿಕೆ.

ಜ್ಯೋತಿಷದಲ್ಲಿ ನಂಬಿಕೆ : ಯಾವುದೇ ಒಳ್ಳೆಯ ಕೆಲಸವನ್ನು ಪ್ರಾರಂಭಿಸುವಾಗಲೂ ಗ್ರಾಮೀಣ ಜನ ಜ್ಯೋತಿಷದ ಮೊರೆಹೋಗುವರು. ಮನೆ ಕಟ್ಟಲು, ಬಾವಿ ತೋಡಲು, ಹೊಸ ನಿವೇಶನ ಖರೀದಿಸಲು ಅಷ್ಟೇಕೆ ಆಡು ಕುರಿಗಳನ್ನು ಕೊಳ್ಳುವಾಗಲೂ ಜ್ಯೋತಿಷಿಯ ಸಲಹೆ ಪಡೆಯುವರು. ಹೀಗೆ ಯಾವುದೇ ವಸ್ತುವನ್ನು ಖರೀದಿಸುವುದು ಸಾಧ್ಯವಾಗದಿದ್ದಾಗ ಅದು ನಮಗೆ ತಾಳೆ ಬಂದಿಲ್ಲ ಎನ್ನುವುದುಂಟು. ಜ್ಯೋತಿಷಿ ಹೇಳಿರುವುದರಲ್ಲಿ ಏನಾದರೂ ಕುಂದುಕೊರತೆ ಉಂಟಾದರೆ ಜ್ಯೋತಿಷಿ ತಪ್ಪು ಹೇಳಿದ ಎಂದು ದೂಷಿಸುತ್ತಾರೆ.

ಮಳೆ ಕುರಿತಂತೆ ನಂಬಿಕೆ: ಕೃಷಿಗೆ ಬಹುಮುಖ್ಯವಾಗಿ ಮಳೆ ಅಗತ್ಯ. ಸರಿಯಾದ ಸಮಯಕ್ಕೆ ಮಳೆ ಬಾರದಿದ್ದರೆ, ಮಳೆ ಬರಲೆಂದು ಪ್ರಾರ್ಥಿಸುವರು. ಹೀಗೆ ಪ್ರಾರ್ಥಿಸಿದಲ್ಲಿ ಮಳೆ ಸುರಿಯುವುದು ಎಂಬುದು ಜನಪದರ ನಂಬಿಕೆ. ಮರಳಿನಲ್ಲಿ ಮಾನವನ ರೂಪ ಮಾಡಿ ಅದರಸುತ್ತಲು ಮಹಿಳೆಯರು ಕಣ್ಣೀರು ಸುರಿಸುತ್ತಾರೆ.

ಬಡ್ಜಿಗೆ ಬತ್ತಕೊಂಡು
ಗದ್ದೆಗೆ ಚೆಲ್ಲಿದೇವು
ಬಡ್ಡಿ ಬೆಳೆಯುತ್ತಿದೆ ಅಯ್ಯ

ಹೀಗೆ ಮಳೆರಾಯನ ತೃಪ್ತಿಗಾಗಿ ಹಲವು ಹಾಡನ್ನು ಹಾಡುವುದುಂಟು. ಕಡ್ಡಿಗಳಿಂದ ಮನುಷ್ಯನ ಆಕಾರ ಮಾಡಿ ಅದಕ್ಕೆ ಬಟ್ಟೆ ಸುತ್ತಿ ಬೀದಿಯಲ್ಲಿ ಎಳೆದುಕೊಂಡು ಹೋಗಿ ಅದನ್ನು ಸ್ಮಶಾನದಲ್ಲಿ ಸುಟ್ಟರೆ ಮಳೆ ಬರುವುದೆಂದು ತಮಿಳು ನಾಡಿನ ಜನಪದರು ನಂಬುತ್ತಾರೆ. ಇದನ್ನು ‘ಪಾಪಿಷ್ಟನ’ ಸುಟ್ಟ ಕಾರ್ಯಕ್ರಮ ಎನ್ನುತ್ತಾರೆ.

ತಮಿಳು ನಾಡಿನ ಜನರ ಮಧ್ಯೆ ಇಂತಹ ಹಲವು ನಂಬಿಕೆಗಳು ಇಂದಿಗೂ ಜೀವಂತವಾಗಿವೆ. ಹುಟ್ಟಿನಿಂದ ಸಾವಿನವರೆಗೂ ಈ ನಂಬಿಕೆಗಳನ್ನು ಪಾರಂಪರಿಕವಾಗಿ ಅನುಸರಿಸಿಕೊಂಡು ಬರಲಾಗುತ್ತಿದೆ.

– ಪಿ.ಎಂ.

ತಮಿಳುನಾಡಿನ ಮಕ್ಕಳ ಆಟಗಳು ಮಕ್ಕಳು ಇಷ್ಟಪಟ್ಟು ಆಡುವ ಆಟಗಳನ್ನು ‘ಮಕ್ಕಳ ಆಟ’ ಎಂದು ಕರೆಯಲಾಗುವುದು. ಮಕ್ಕಳು ಸಾಮಾನ್ಯವಾಗಿ ಆಟದ ಕಡೆಗೆ ಹೆಚ್ಚು ಗಮನಕೊಡುವುದರಿಂದ ಬಾಲ್ಯವನ್ನು ‘ಆಟದ ಪರ್ವ’ವೆಂದೇ ಕರೆಯುವುದುಂಟು. ಹಳ್ಳಿಗಳಲ್ಲಿ ಮಕ್ಕಳು ನಾನಾ ರೀತಿಯ ಆಟಗಳನ್ನು ಆಡುತ್ತಾರೆ. ಹೆತ್ತವರು, ಸಂಬಂಧಿಕರು, ಗೆಳೆಯರು ಹೀಗೆ ನಾನಾ ಜನರಿಂದ ಮಕ್ಕಳು ಆಟವನ್ನು ಆಡುವ ರೀತಿಯನ್ನೂ ಆಯಾ ಆಟಗಳಿಗೆ ಸಂಬಂಧಿಸಿದ ಹಾಡುಗಳನ್ನೂ ಕಲಿತುಕೊಳ್ಳುತ್ತಾರೆ. ಮಕ್ಕಳು ಕಲಿತುಕೊಳ್ಳುವ ಮೊದಲ ಆಟ ‘ಅಂಬುಲಿ’ (ಚಂದಮಾಮಾ) ಆಟ ಎನ್ನಬಹುದು.

ಅಂಬುಲಿ (ಚಂದಮಾಮಾ) : ನೆಲದ ಮೇಲೆ ಮಲಗಿರುವ ಹಿರಿಯರೊಬ್ಬರು ತಮ್ಮ ಮೊಣಕಾಲುಗಳ ಮೇಲೆ ಮಗುವನ್ನು ಮಲಗಿಸಿಕೊಂಡು, ತಮ್ಮ ಮಡಚಿದ ಕಾಲುಗಳನ್ನು ಮೇಲಕ್ಕೂ ಕೆಳಕ್ಕೂ ಆಡಿಸುತ್ತಾ ಹೀಗೆ ಹಾಡು ಹೇಳುತ್ತಾರೆ:

ಚಂದಮಾಮ ಚಂದಮಾಮ
ಎಲ್ಲಿಗೋಗಿದ್ದೆ
?
ತಂಗಡಿ ಕಾಡಿಗೋಗಿದ್ದೆ!
ಯಾಕೋಗಿದ್ದೆ?
ಕಡ್ಡಿಮುರ್ಕೊಂಬರೋಕೋಗಿದ್ದೆ!
ಕಡ್ಡಿ ಯಾಕೆ?
ಹಳ್ಳ ತೋಡೋಕೆ!
ಹಳ್ಳ ಯಾಕೆ?
ಹಣ ಹುದುಗ್ಸಿಡೋಕೆ!
ಹಣ ಯಾಕೆ?
ಹಸು ಕೊಳ್ಳೋಕೆ!
ಹಸು ಯಾಕೆ?
ಸಗಣಿ ಹಾಕೋಕ್ಕೆ!
ಸಗಣಿ ಯಾಕೆ?
ಮನೆ ಸಾರ
್ಸೋಕೆ?
ಮನೆಯಾಕೆ?
ಮಕ್ಳು ಬೆಳೆಯೋಕೆ!
ಮಕ್ಳು ಯಾಕೆ?
ನದಿ ತೀರದಲ್ಲಿ ಆಡೋಕೆ!
ಹುಲ್ಲಿನ ಚಾಪೇಲಿ ಮುದ್ದಿಸೋಕೆ!

ಹೀಗೆ ಹಾಡು ಮುಗಿಯುತ್ತದೆ. ಹಿರಿಯರೂ, ಮಕ್ಕಳೂ ಒಂದೊಂದು ಸಾಲನ್ನು ಕ್ರಮವಾಗಿ ಹೇಳುತ್ತಾ ಹೋಗುತ್ತಾರೆ.

ಏಳಾಂಗಾಯ್ (ಅಣ್ಣೆ ಕಲ್ಲಾಟ): ಮೂರರಿಂದ ಏಳು ಹುಡುಗಿಯವರೆಗೂ ವೃತ್ತಾಕಾರವಾಗಿ ಕುಳಿತುಕೊಂಡು ಏಳು ಸಣ್ಣಸಣ್ಣ ಕಲ್ಲುಗಳನ್ನಿಟ್ಟುಕೊಂಡು ಆಡುವ ಆಟವೇ ‘ಏಳನೇ ಕಾಯಿ ಆಟ’. ಕಲ್ಲುಗಳನ್ನು ಮೊದಲಿಗೆ ನೆಲದ ಮೇಲೆ ಹರಡಿ, ಯಾವುದಾದರೊಂದು ಕಲ್ಲನ್ನು ಮಾತ್ರ ಕೈಯಲ್ಲಿಟ್ಟುಕೊಳ್ಳುತ್ತಾರೆ. ತಮ್ಮ ಕೈಯಲ್ಲಿರುವ ಕಲ್ಲನ್ನು ಮೇಲೆಸೆದು ಅದು ಕೆಳಗೆ ಬರುವ ಮುನ್ನವೇ, ಕಳಗೆ ಬಿದ್ದಿರುವ ಕಲ್ಲುಗಳನ್ನು ಆಯ್ದುಕೊಂಡು, ಮೇಲಿಂದ ಬೀಳುತ್ತಿರುವ ಕಲ್ಲು ನೆಲ ತಾಕುವ ಮುನ್ನವೇ ತಮ್ಮ ಕೈಯೊಳಗೆ ಹಿಡಿದುಕೊಳ್ಳುತ್ತಾರೆ. ಈ ಆಟವನ್ನು ಆಡುತ್ತಾ ಹೀಗೆ ಹಾಡುತ್ತಾರೆ:

ಮಕ್ಕುಟ್ಟು ಚಿಕ್ಕುಟ್ಟು ಹಾಗಲಕಾಯಿ
ಮುಳ್ಳಿಲ್ಲದ ಏಲಕ್ಕಿ ಕಾಯಿ
ನಾಕು ಸೀಕು
ಮರಗೆಣಸು
ಐವರ ಗುಂಪು
ಚಂಪಾ ಥಳುಕು
ಐದು ಗುದ್ದು ನಾದಿನಿ
ಅಳ್ತಾನ್ ಕಣೋ ಮದುವಣಿಗ
ಏಳಣ್ಣಾ ಎಲ್ಲಣ್ಣಾ
ಬರೆದಿರುವುದನ್ನು ಓದಣ್ಣಾ
ಅರ್ಥವ ತಿಳಿಸಣ್ಣಾ
!

ತಂಬಿ: ಇಬ್ಬರು ಹುಡುಗಿಯರು ಎದುರು – ಬದುರು ನಿಂತು ಪರಸ್ಪರ ಇಬ್ಬರ ಕೈಗಳನ್ನೂ ಒಬ್ಬರ ಕೈಯೊಳಗೊಬ್ಬರು ಹೆಣೆಯುವಂತೆ ಹಿಡಿದುಕೊಂಡು ಸ್ವಲ್ಪ ಮೇಲೂ ಕೆಳಗೂ ತೂಗುತ್ತಾ, ನಿಂತುಕೊಂಡೇ ಈ ಹಾಡುಗಳನ್ನು ಹಾಡುತ್ತಾರೆ.

ಎಣ್ಣೆ ಇಲ್ಲ ಹೆಣಿಗೆ ಇಲ್ಲ
ಊದಾ ಬಣ್ಣದ ಸೀರೆ ಇಲ್ಲ
,
ನಿನ್ಜೊತೆ ನಾನ್ ಬರೋಲ್ಲ

ನೀನೂ ನಾನೂ ಜೋಡಿ
ಬತ್ತ ಕುಟ್ಟೋಕ್ ಬಾರೆ ಓಡಿ
!
ನದಿ ಮರಳು ಬಾಚಿ ಹಾಕ್ಕೊಂಡ್
ಅವಲಕ್ಕಿ ಕುಟ್ಟೋಣ ಬಾರೆ, ಓಡಿ!
ಕೀಚ್ಚು ಕೀಚ್ಚು ತಾಂಬೂಲ
ಕೀಯಾ ಕೀಯಾ ತಾಂಬೂಲ
ಮಚ್ಚು ಮಚ್ಚು ತಾಂಬೂಲ
ಮಾಯಾ ಮಾಯಾ ತಾಂಬೂಲ!

ಎಂದು ಹಾಡುತ್ತಾರೆ.

ಕಾಯೇ ಕಡುಪ್ಪಂಗಾಯೇ (ಕಾಯೇ ಸಿಟ್ಟು ತರಿಸುವ ಕಾಯೇ)

ಹತ್ತಕ್ಕಿಂತಲೂ ಹೆಚ್ಚಿನ ಮಕ್ಕಳು ಒಟ್ಟಿಗೆ ಸೇರಿ ಈ ಆಟವನ್ನು ಆಡುತ್ತಾರೆ. ಇವರು ಎರಡು ಗುಂಪುಗಳಾಗಿ ಎದುರು ಬದುರಾಗಿ ಕುಳಿತುಕೊಳ್ಳುತ್ತಾರೆ. ಗುಂಪಿನ ನಾಯಕ ಆಯಾ ಸಾಲಿನ ಹೀಂದೆ ನಿಂತುಕೊಳ್ಳುತ್ತಾನೆ. ಒಂದು ಗುಂಪಿನ ನಾಯಕ ತನ್ನ ಬಳಿಯಿರುವ ಕಾಯನ್ನು ತನ್ನ ಗುಂಪಿನ ಯಾರಾದರೊಬ್ಬ ಸದಸ್ಯನ ಕೈಯೊಳಗೆ ಬಚ್ಚಿಡುತ್ತಾರೆ. ಎಲ್ಲರೂ ತಮ್ಮ ಕೈಗಳನ್ನು ಹಿಂದಕ್ಕೆ ಮಡಿಚಿಟ್ಟುಕೊಂಡಿರುತ್ತಾರೆ. ಎದುರು ಗುಂಪಿನವರು ಅದು ಯಾರ ಕೈಯಲ್ಲಿದೆಯೆಂಬುದನ್ನು ಕಂಡುಹಿಡಿಯಬೇಕು. ಈ ಆಟವನ್ನು ಆಡುವ ಸಂದರ್ಭದಲ್ಲಿ ಹಾಡು ಹೇಳುವರು:

ಕಾಯೇ ಕಡುಪ್ಪಂಗಾಯೇ
ಗಂಜಿ ಕೊಟ್ಟ ನೆಲ್ಲಿಕಾಯೇ
ಉಪ್ಪು ಹುಣಿಸೇಕಾಯೇ
ಉಪ್ಪಿನಕಾಯಿಯಾದ ನೆಲ್ಲಿಕಾಯೇ
ಕಳ್ಳ ಬರ
್ತಾನೆ ಕದ ಹಾಕು
ಬಿಳಿಯ ಬರ
್ತಾನೆ ದೀಪ ಹಚ್ಚು
ದಡಬಡ ದಡಬಡ ವಾಯ್ದಾ ಹಣ

ಕಾತ್ತಾಡಿ (ಗಾಳಿಯೋಲೆ): ಕೈ ಬೆರಳಿನಷ್ಟು ಉದ್ದದ ಎರಡು ತಾಳೆಗರಿಗಳ ತುಂಡನ್ನು ತೆಗೆದುಕೊಂಡು, ಅವುಗಳನ್ನು ಒಟ್ಟಿಗೇ ಜೋಡಿಸಿಟ್ಟು, ನಡುವೆ ಕರಿಬೇಲದ ಮುಳ್ಳನ್ನು ಚುಚ್ಚುತ್ತಾರೆ. ಇದನ್ನು ಕೈಗಳಲ್ಲಿ ಹಿಡುದುಕೊಂಡು ಗಾಳಿ ಚಲಿಸುವ ದಿಕ್ಕಿನ ಕಡೆಗೆ ಓಡುತ್ತಾರೆ. ಆಗ ಅದು ಗಾಳಿಯಲ್ಲಿ ಗಿರಗಿರನೆಸುತ್ತುತ್ತದೆ. ಓಡುತ್ತಾ ಮಗು ಹೀಗೆ ಹಾಡುತ್ತದೆ:

‘ಗಾಳಿ ಗಾಳೀ
ಗಾಳಿಯವನು ಸತ್ತು ಹದೋ
ಗಾಳಿಯೇ ಬಾ! ಎಂದೂ;
‘ಕುನ್ನಾಂಗ್ ಕುನ್ನಾಂಗ್ ಕುರ್ರ್ರ್…
ಕಿವುಡು ನಾಯೇ ಕುರ್ರ್ರ್…
ಗಾಳಿ ಬೀಸಿತು ಕುರ್ರ್ರ್…
ಚಿಕ್ಕ ಗಾಳೀನ ಗುಳಿಯೊಳಗೆ ತಳ್ಳಿ
ದೊಡ್ಡ ಗಾಳಿಯೇ ಓಡಿ ಬಾ…!’’

ಕಣ್ಣಾಮುಚ್ಚಾಲೆಯಾಟ: ಎರಡಕ್ಕಿಂತ ಹೆಚ್ಚಿನ ಹುಡುಗರು ಒಟ್ಟಾಗಿ ಸೇರಿ ಆಡುವ ಮಕ್ಕಳಿಗೆ ತುಂಬ ಇಷ್ಟವಾದ ಆಟ. ಒಂದು ಮಗುವಿನ ಕಣ್ಣನ್ನು ಗುಂಪಿನಲ್ಲಿರುವ ಇನ್ನೊಂದು ಮಗು ಗಟ್ಟಿಯಾಗಿ ಮುಚ್ಚಿಕೊಳ್ಳುತ್ತದೆ. ಉಳಿದ ಹುಡುಗರು ಆ ಸಮಯದಲ್ಲಿ ಎಲ್ಲಾದರೂ ಬಚ್ಚಿಟ್ಟುಕೊಳ್ಳುತ್ತಾರೆ. ಹೀಗೆ ಬಚ್ಚಿಟ್ಟುಕೊಳ್ಳುವ ಕ್ರಿಯೆ ಒಂದೆಡೆ ನಡೆಯುತ್ತಿದ್ದರೆ, ಒತ್ತಿ ಕಣ್ಣನ್ನು ಮುಚ್ಚಿ ಹಿಡಿದುಕೊಂಡಿರುವ ಮಗು ಪ್ರಶ್ನೆ ಕೇಳಲು ತೊಡಗುತ್ತದೆ. ಮುಚ್ಚಿಸಿಕೊಂಡಿರುವ ಮಗು ಉತ್ತರ ಹೇಳಲು ತೊಡಗುತ್ತದೆ. ಈ ಪ್ರಶ್ನೋತ್ತರಗಳು ಹಾಡಿನ ರೂಪದಲ್ಲಿರುತ್ತವೆ.

ಕಣ್ಣಾ ಮುಚ್ಚಿ ಕಿವಿ ಮುಚ್ಚಿ
ನಿಮ್ಮ ಮನೇಲೇನಡುಗೆ
?
ಅನ್ನ ಸಾರು!
ನೊಣ ಬಿದ್ದಿತ್ತು, ಇರುವೆ ಬಿದ್ದಿತ್ತು?
ಇರುವೆ ಬಿದ್ದಿತ್ತು!
ತೆಗ್ದಾಕಿ ತಿಂದಾ? ತೆಗೀದೇನೇ ತಿಂದಾ?
ತೆಗ್ದಾಕಿ ತಿಂದೆ!
ಹಾಗಾದ್ರೆ ಕಾಡಿಗೆ ಹೋಗಿ
ಒಂದು ಸಿಂಹ, ಒಂದು ಹುಲಿ, ಒಂದು ಕರಡಿ
ಎಲ್ಲ ಹಿಡ್ಕೊಂಬಾ ಹೋಗು…’

ಎಂದು ಹೇಳಿ ಕಣ್ಣುಗಳನ್ನು ಬಿಟ್ಟ ಕೂಡಲೆ, ಆ ಮಗು ಬಚ್ಚಿಟ್ಟುಕೊಂಡಿರುವ ಮಕ್ಕಳನ್ನು ಹುಡುಕಲು ಹೊರಡುತ್ತದೆ.

ಕಿಚ್ಚು ಕಿಚ್ಚು ತಾಂಬೂಲ : ಎರಡು ಮಕ್ಕಳು ಎದುರುಬದುರಾಗಿ ಮಣ್ಣಿನ ಮೇಲೆ ಕುಳಿತುಕೊಂಡು, ತಮ್ಮ ಮುಂದೆ ಮಣ್ಣನ್ನು ಅಣೆಕಟ್ಟೆಯಂತೆ ಉದ್ದಕ್ಕೆ ರಾಶಿ ಮಾಡುತ್ತವೆ. ಈ ಮಣ್ಣಿನ ರಾಶಿಯೊಳಗೆ ಒಂದು ಸಣ್ಣ ಕಡ್ಡಿಯನ್ನು ಒಂದು ಮಗು ಇನ್ನೊಂದಕ್ಕೆ ಕಾಣದಂತೆ ಹುದುಗಿಡುತ್ತದೆ. ಆ ಇನ್ನೊಂದು ಮಗು ಅದನ್ನು ಹುಡುಕಿ ತೆಗೆಯಬೇಕು. ಈ ಆಟ ಆಡುವಾಗ ಹಾಡುಗಳನ್ನು ಹೇಳುತ್ತಾರೆ.

– ಆರ್.ಪಿ.ಯು. ಅನುವಾದ ಟಿ.ಎಸ್.