ತುಳುನಾಡಿನ ಐತಿಹ್ಯ ಜಾನಪದ ಅಧ್ಯಯನದಲ್ಲಿ ಐತಿಹ್ಯವನ್ನು ಜನಪದ ಸಾಹಿತ್ಯದ ಒಂದು ಪ್ರಕಾರವಾಗಿ ಗುರುತಿಸಲಾಗುತ್ತದೆ. ಜನಪದ ಕಥೆ, ಐತಿಹ್ಯ, ಪುರಾಣಗಳು, ಮೌಖಿಕ ಗದ್ಯ ಕಥನಗಳೂ. ಹಾಗೆಂದು ಇವುಗಳ ವಸ್ತುಗಳು ಗದ್ಯ ಮಾಧ್ಯಮದಲ್ಲೇ ಉಳಿದಿವೆಯೆಂದು ಹೇಳುವಂತಿಲ್ಲ. ಕಾಲಕ್ರಮೇಣ ಪದ್ಮ ಮಾದ್ಯಮದತ್ತಲೂ ಹೊರಳಿರಬಹುದಾದ ಸಾಧ್ಯತೆಯಿದೆ. ಅದೇನೇ ಇದ್ದರೂ ಅಧ್ಯಯನದ ಅನುಕೂಲಕ್ಕಾಗಿ ಈ ತೆರನಾದ ಪ್ರತ್ಯೇಕ ವರ್ಗೀಕರಣಗಳು ಅನಿವಾರ್ಯವೆನಿಸುತ್ತವೆ. ಅದರಂತೆ ಗದ್ಯ ಮಾಧ್ಯಮದಲ್ಲಿರುವ ನಿರೂಪಣಾ ಪ್ರಧಾನವಾದ ಜನಪದ ಸಾಹಿತ್ಯದ ಒಂದು ಪ್ರಕಾರವನ್ನು ‘ಐತಿಹ್ಯ’ ಎನ್ನಲಾಗುತ್ತದೆ. ವ್ಯಕ್ತಿ ನಿರ್ದೇಶನ, ಸ್ಥಾನ ನಿರ್ದೇಶನಗಳು ಐತಿಹ್ಯದ ವೈಶಿಷ್ಟ್ಯವೆನ್ನಬಹುದು. ಅಂದರೆ ಸಾಮಾನ್ಯವಾಗಿ ಜನಪದ ಕಥೆಗಳಲ್ಲಿ ಒಂದು ಊರು, ಒಬ್ಬಾನೊಬ್ಬ ವ್ಯಕ್ತಿ ಎಂಬ ಪ್ರಸ್ತಾಪವಷ್ಟೇ ಇದ್ದರೆ, ಐತಿಹ್ಯಗಳಲ್ಲಿ ಆ ಊರು ಮತ್ತು ವ್ಯಕ್ತಿಯ ಹೆಸರು ಪ್ರಸ್ತಾವವಾಗಿರುತ್ತದೆ. ಮಾತ್ರವಲ್ಲ ಕೆಲವೊಂದು ಐತಿಹ್ಯಗಳು ನಿರ್ದಿಷ್ಟವಾದ ಪ್ರಾಕೃತಿಕ ಕುರುಹುಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಪುರಾಣಗಳಲ್ಲಿ ಈ ಅಂಶ ಕಂಡುಬುರುವುದರಿಂದ ಅವುಗಳನ್ನು ಐತಿಹ್ಯದ ಬೆಳವಣಿಗೆ ಹೊಂದದ ರೂಪವೆಂದೇ ಹೇಳಲಾಗುತ್ತದೆ. ಪವಾಡಗಳು, ಅತಿಮಾನುಷ ಘಟನೆಗಳು, ದೇವರುಗಳು ಹಾಗೂ ಋಷಿ-ಮಿನಿಗಳ ಕಥೆಗಳಿಂದ ಕೂಡಿ ಸಂಕೀರ್ಣವಾಗಿರುವುದರಿಂದ ಪುರಾಣಗಳನ್ನು ಐತಿಹ್ಯಕ್ಕಿಂತ ಭಿನ್ನವಾದ ಪ್ರಕಾರವೆಂದು ಗುರುತಿಸಲಾಗುತ್ತದೆ.

ತುಳುನಾಡಿನ ಐತಿಹ್ಯಗಳು ಅವುಗಳಲ್ಲಿಯ ಸಾಂಸ್ಕೃತಿಕ ವಿವರಗಳಿಂದಾಗಿ ಅನನ್ಯವಾಗಿವೆಯೇ ಹೊರತು ಉಳಿದಂತೆ ಬಾಹ್ಯ ಸ್ವರೂಪದ ದೃಷ್ಟಿಯಿಂದ ನಾಡಿನ ಇತರೆಡೆಯ ಐತಿಹ್ಯಗಳಿಗೂ, ಅವುಗಳಿಗೂ ವಿಶೇಷ ವ್ಯತ್ಯಾಸವೇನೂ ಕಂಡುಬುರುವುದಿಲ್ಲ. ಹಾಗಾಗಿ ತುಳುನಾಡಿನ ಐತಿಹ್ಯಗಳನ್ನಾಧರಿಸಿ ನಾವು ಮಾಡಿಕೊಳ್ಳುವ ವರ್ಗೀಕರಣಗಳು ಬಹುಮಟ್ಟಿಗೆ ಇತರೆಡೆಯ ಐತಿಹ್ಯಗಳ-ಸ್ವರೂಪ, ವಸ್ತು, ಆಶಯ, ಬಾಳಿಕೆ, ಪ್ರಸರಣ – ಹೀಗೆ ವರ್ಗೀಕರಿಸಬಹುದಾದಿಗೆ, ಸ್ವರೂಪದ ದೃಷ್ಟಿಯಿಂದ ವ್ಯಕ್ತಿ ಐತಿಹ್ಯ, ಪ್ರಾಣಿ ಐತಿಹ್ಯ, ಸ್ಥಳ ಐತಿಹ್ಯ, ಘಟನಾ ಐತಿಹ್ಯ ಎಂಬ ವರ್ಗೀಕರಣ ಸಾಧ್ಯವಾದರೆ ವಸ್ತು ದೃಷ್ಟಿಯಿಂದ ಪೌರಾಣಿಕ ಐತಿಹ್ಯ, ಐತಿಹಾಸಿಕ ಐತಿಹ್ಯ ಮತ್ತು ಸಾಮಾಜಿಕ ಐತಿಹ್ಯ ಎಂಬ ವರ್ಗೀಕರಣವನ್ನು ಮಾಡಬಹುದಾಗಿದೆ. ಅದೇ ರೀತಿ ಆಶಯದ ದೃಷ್ಟಿಯಿಂದ ಬಲಶಾಲಿ ವ್ಯಕ್ತಿ, ಬುದ್ಧಿವಂತ ವ್ಯಕ್ತಿ, ಸಮಾಜ ಸೇವಕ, ಶ್ರಮಿಕ, ಕುಖ್ಯಾತ, ವ್ಯಕ್ತಿ, ಧಾರ್ಮಿಕ – ಸಾಮಾಜಿಕ ಮುಂತಾದ ವರ್ಗೀಕರಣ ಸಾಧ್ಯವಾಗುತ್ತದೆ. ಬಾಳಿಕೆಯ ದೃಷ್ಟಯಿಂದ ಸ್ಥಿರ ಐತಿಹ್ಯ ಮತ್ತು ಅಸ್ಥಿರ ಐತಿಹ್ಯ ಎಂಬ ವರ್ಗೀಕರಣವನ್ನು ಮಾಡಿಕೊಂಡರೆ ಪ್ರಸರಣದ ದೃಷ್ಟಿಯಿಂದ ಸ್ಥಳೀಯ ಐತಿಹ್ಯ ಮತ್ತು ಸಂಚಾರಿ ಐತಿಹ್ಯ ಎಂಬ ವರ್ಗೀಕರಣವನ್ನು ಮಾಡಿಕೊಳ್ಳಬಹುದಾಗಿದೆ.

ಇವು ವಿವಿಧ ವರ್ಗೀಕರಣ ಸಾಧ್ಯತೆಗಳೇ ಹೊರತು ಲಭ್ಯವಿರುವ ಎಲ್ಲ ಐತಿಹ್ಯಗಳನ್ನೂ ಒಂದೇ ಬಗೆಯ ವರ್ಗೀಕರಣದಲ್ಲಿ ಸೇರಿಸುವುದಕ್ಕೂ ಸಾಧ್ಯವಾಗುತ್ತದೆ. ಆದರೆ ಆಶ್ಚರ್ಯದ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುವ ದೃಷ್ಟಯಿಂದ ಈ ಬಗೆಯ ವೈವಿಧ್ಯಮಯ ವರ್ಗೀಕರಣಗಳು ಅವಶ್ಯವೆನಿಸುತ್ತವೆ. ಅದರಂತೆ ವಿವಿಧ ಮಾನದಂಡಗಳಿಗನುಗುಣವಾಗಿ ಮಾಡಿಕೊಳ್ಳಲಾಗದ ಐತಿಹ್ಯಗಳ ವರ್ಗೀಕರಣಕ್ಕೂ ಈಗ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಸ್ವರೂಪದ ದೃಷ್ಟಯಿಂದ ಮಾಡಿಕೊಳ್ಳಬಹುದಾದ ವರ್ಗೀಕರಣ:

. ವ್ಯಕ್ತಿ ಐತಿಹ್ಯ : ಐತಿಹ್ಯಗಳಲ್ಲಿ ಬಹಳ ಮುಖ್ಯವಾದ ಪ್ರಭೇದವಿದು. ವಿವಿಧ ಮನೋಧರ್ಮಗಳ ವ್ಯಕ್ತಿಗಳೇ ಇಲ್ಲಿ ಕೇಂದ್ರಬಿಂದುವಾಗಿರುವುದರಿಂದ ಇವುಗಳನ್ನು ವ್ಯಕ್ತಿಕೇಂದ್ರಿತ ಐತಿಹ್ಯಗಳೆಂದೂ ಕರೆಯಬಹುದಾಗಿದೆ. ಆಶಯಾಧಾರಿತ ವರ್ಗೀಕರಣದಲ್ಲಿ ಬರುವ ಬಲಶಾಲಿ ವ್ಯಕ್ತಿ, ಶ್ರಮಿಕ ವ್ಯಕ್ತಿ, ಸಮಾಜ ಸೇವಕರೆಲ್ಲ ವ್ಯಕ್ತಿ ಐತಿಹ್ಯಗಳಲ್ಲೂ ಕಂಡುಬರುತ್ತಾರೆ. ಅದರಂತೆ ತುಳುನಾಡಿನ ವಿವಿದೆಡೆಗಳಲ್ಲಿ ಪ್ರಚಲಿತವಿರುವ ಅಸಾಮಾನ್ಯ ಬಲಶಾಲಿಗಳಾದ ಅಗೋಳಿ ಮಂಜಣ, ವುಳ್ಳೂರು ಬಾಚ; ಹೆಡ್ಡ ವ್ಯಕ್ತಿಗಳಾದ ಹೈದ್ರೂಸ್, ಗಾಣಿಗ; ಕುಖ್ಯಾತ ಕಳ್ಳನಾದಸೂರ ಅಚಲ; ಶ್ರಮಿಕನಾದ ಆದರ್ಶ ಕೃಷಿಕ ಸಣ್ಮಗು; ಸಮಾಜ ಸೇವಕನಾದ ಪರಪ್ಪಳಿ ನಾಯಕ ಮುಂತಾದವರ ಬಗೆಗಿನ ಐತಿಹ್ಯಗಳು ವ್ಯಕ್ತಿ ಐತಿಹ್ಯಗಳೆನಿಸುತ್ತವೆ. ಐತಿಹ್ಯಗಳನ್ನು ನಾವು ಯಾವುದೇ ಬಗೆಯ ವರ್ಗೀಕರಣದಡಿಯಲ್ಲಿ ಸೇರಿಸಿದರೂ ಅಲ್ಲಿ ವ್ಯಕ್ತಿಗಳ ಪಾಣಬಗ್ಗೆ ಇರುತ್ತದೆಂಬುದನ್ನು ಮರೆಯುವಂತಿಲ್ಲ.

. ಪ್ರಾಣಿ ಐತಿಹ್ಯ; ಪ್ರಾಣಿಗಳು ಕೇಂದ್ರಪಾತ್ರಗಳಾಗಿರುವ ಐತಿಹ್ಯಗಳು ಪ್ರಾಣಿ ಐತಿಹ್ಯಗಳೆನಿಸುತ್ತವೆ. ತುಳುನಾಡಿನ ವಿವಿಧೆಡೆಗಳಲ್ಲಿ ಕಂಡುಬರುವ ನಾಯಿ ಸಮಾಧಿ ಅಥವಾ ನಾಯ ಬಸವಿಯ ಐತಿಹ್ಯ, ಹಸುವು ಕೇಂದ್ರ ಪಾತ್ರವಾಗಿರುವ ನಾಕೂರು ಹಂಸದ ಐತಿಹ್ಯ ಮುಂತಾದುವು ಈ ಸಾಲಿಗೆ ಸೇರುತ್ತವೆ.

. ಸ್ಥಳೈತಿಹ್ಯ: ಸ್ಥಳ ಪ್ರಧಾನವಾದ ಸ್ಥಳ ಕೇಂದ್ರಿತ ಐತಿಹ್ಯಗಳಿವು. ವಿವಿಧ ಸ್ಥಳಗಳ ವೈಶಿಷ್ಟ್ಯಗಳಿಗೆ ಕಾರಣಗಳನ್ನು ವಿವರಿಸುವ ಐತಿಹ್ಯಗಳೂ, ಸ್ಥಳಕಾಯಗಳ ಹಿಂದಿರುವ ಐತಿಹ್ಯಗಳೂ ಈ ವರ್ಗೀಕರಣವಧಿಯಲ್ಲಿ ಬರುತ್ತವೆ. ಎಣ್ಣೆ ಹೊಳೆ, ಅಮೆದಿಕ್ಕೊಲ್ ವಿಷ ಸರೋವರ ಮುಂತಾದ ಸ್ಥಳಗಳಿಗೆ ಸಂಬಂಧಪಟ್ಟ ಐತಿಹ್ಯಗಳನ್ನು ಇಲ್ಲಿ ಉದಾಹರಿಸಬಹುದಾಗಿದೆ.

. ಘಟನಾ ಐತಿಹ್ಯ : ಎಲ್ಲಾ ಐತಿಹ್ಯಗಳಲ್ಲೂ ಒಂದಲ್ಲ ಒಂದು ಘಟನೆ ಇರಲೇಬೇಕು. ಹಾಗಾಗಿ ಘಟನಾ ಐತಿಹ್ಯವೆಂಬ ಪ್ರತ್ಯೇಕ ವರ್ಗೀಕರಣವೊಂದರ ಅವಶ್ಯಕತೆ ಇಲ್ಲವೆನಿಸುವುದು ಸಹಜ. ಆದರೂ ನಿರ್ದಿಷ್ಟ ಘಟನೆಗಳೇ ಪ್ರಧಾನ ಪಾತ್ರ ವಹಿಸುವ ಕೆಲವು ಐತಿಹ್ಯಗಳನ್ನು ಘಟನಾ ಐತಿಹ್ಯ ಅಥವಾ ಘಟನಾ ಕೇಂದ್ರಿತ ಐತಿಹ್ಯ ಎಂಬುದಾಗಿ ವರ್ಗೀಕರಿಸಲಾಗುತ್ತದೆ. ಬಸ್ರೂರು ಪಂಚಾಯಿತಿಕೆ, ಕಲ್ಯಾಣ ಕಾಟಕಾಯಿ, ಎಣ್ಣೆಹೊಳೆ ಊರುದೂರು ಮುಂತಾದ ಅದೆಷ್ಟೋ ಐತಿಹ್ಯಗಳಲ್ಲಿ ನಿರ್ದಿಷ್ಟ ಘಟನೆಗಳು ಪ್ರಮುಖ ಪಾತ್ರವಹಿಸುತ್ತವೆ.

) ವಸ್ತು ದೃಷ್ಟಿಯಿಂದ ಮಾಡಿಕೊಳ್ಳಬಹುದಾದ ವರ್ಗೀಕರಣ:

. ಪೌರಾಣಿಕ ಐತಿಹ್ಯ : ಮಹಾಭಾರತ, ರಾಮಾಯಣ, ಭಾಗವತ, ಶಿವಪುರಾಣ, ಸ್ಕಂದಪುರಾಣಗಳಂತಹ ವಿವಿಧ ಪುರಾಣಗಳ ಬೇರೆ ಬೇರೆ ಘಟನೆಗಳು ತುಳುನಾಡಿನ ಮೌಖಿಕ ಸಂಪ್ರದಾಯದಲ್ಲಿ ಐತಿಹ್ಯ ರೂಪದಲ್ಲಿ ಪ್ರಚಲಿತವಿದೆ. ಭೀಮ, ಅರ್ಜುನ, ದ್ರೌಪದಿ, ಬಕಾಸುರ, ರಾಮ, ಲಕ್ಷ್ಮಣ, ಸೀತೆ, ಶಿವ, ಪಾರ್ವತಿ, ಸುಬ್ರಹ್ಮಣ್ಯ, ಪರಶುರಾಮ, ಕೃಷ್ಣ ಮುಂತಾದ ಪೌರಾಣಿಕ ಪಾತ್ರಗಳು ತುಳುನಾಡಿನ ವಿವಿಧ ಪ್ರದೇಶಗಳಿಗೆ ಬಂದಿರುವ ಬಗೆಗೆ ಅಲ್ಲಿ ನೆಲೆಯಾದುದರ ಬಗೆಗೆ ಐತಿಹ್ಯಗಳು ವಿವರಿಸುತ್ತವೆ. ಪಾಂಡವರ ಕೆರೆ, ಬಕಾಸುರನ ಗುಹೆ, ನಿಣ್ಣಿಕಲ್ಲು, ಲಿಮೆವಿಕ್ಕೆಲ್, ವಿಷಸರೋವರ, ಪಂಜಿಕಲ್ಲು, ಮುಂತಾದ ಸ್ಥಳ ವೈಶಿಷ್ಟ್ಯ ಸ್ಥಳನಾಮಗಳ ಹಿಂದೆ ಪೌರಾಣಿಕ ವಿವರಣೆಗಳಿವೆ. ಇವುಗಳನ್ನು ಪೌರಾಣಿಕ ಐತಿಹ್ಯಗಳೆಂದು ಗುರುತಿಸಬಹುದು. ಇವಲ್ಲದೆ ಸ್ಥಳಪುರಾಣಗಳೆಂದು ಗುರುತಿಸಲಾಗುವ ಮೌಖಿಕ ಪುರಾಣಗಳ ಪ್ರತ್ಯೇಕ ಪ್ರಭೇದವೂ ಇದೆ.

. ಚಾರಿತ್ರಿಕ ಐತಿಹ್ಯ: ಐತಿಹ್ಯಗಳು ಸ್ವತಃ ಮೌಖಿಕ ಚರಿತ್ರೆಯೆನಿಸಬಹುದು; ಅಥವಾ ಚರಿತ್ರೆಯನ್ನು ಕಟ್ಟಿಕೊಳ್ಳಲು ನೆರವಾಗುವ ಆಕರಗಳೆನಿಸಬಹುದು. ಇಂತಹ ಕೆಲವು ಐತಿಹ್ಯಗಳು ಈಗಾಗಲೇ ‘ಚರಿತ್ರೆ’ಯೆಂದು ಒಪ್ಪಿತವಾಗಿರುವ ವಸ್ತುವಾಗಿಯು ಘಟನೆಗಳಿಗೆ ಸಂಬಂಧಪಟ್ಟಂತೆಯೂ ಹುಟ್ಟಿಕೊಳ್ಳುವುದುಂಟು. ಅಂಥವುಗಳನ್ನು ಚಾರಿತ್ರಿಕ ಐತಿಹ್ಯಗಳೆಂದು ಕರೆಯಬಹುದಾಗಿದೆ. ಕಾರ್ಕಳದ ಭೈರರಸ, ಮೈಸೂರುನ ತಮ್ಮಣ್ಣಾ ಜಿಲ್ಲಾ ಉಳ್ಳಾದ ರಾಣಿ ಅಬ್ಬಕ್ಕ, ವಿಟ್ಟದಡೊಂಬು ಹೆಗ್ಗಡೆ ಮುಂತಾದ ಸ್ಥಳೀಯ ಅರಸರ ಬಗೆಗೆ ಪ್ರಚಲಿತವಿರುವ ಐತಿಹ್ಯಗಳು, ಇಕ್ಕೇರಿ, ಕೆಳದಿ ನಾಯಕರ ಬಗೆಗಿರುವ ಐತಿಹ್ಯಗಳು, ಹೈದರಾಲಿ, ಟಿಪ್ಪುಸುಲ್ತಾನರ ಬಗೆಗಿನ ಐತಿಹ್ಯಗಳು, ಬ್ರಿಟಿಷ ವಿರುದ್ದ ಹೋರಾಡಿದ ಸಿಡಲು ಮರಿ ಕೆಂಗಣ್ಣನಾಯಕ, ಕಲ್ಯಾಣಸ್ವಾಮಿಯಂಥವರ ಕುರಿತು ಲಭ್ಯವಿರುವ ಐತಿಹ್ಯಗಳು – ಇವೆಲ್ಲಾ ಐತಿಹ್ಯಗಳೆನಿಸುತ್ತವೆ. ಱಶೇಷವೆಂದರೆ ಆಯಾ ಚಾರಿತ್ರಿಕ ವಸ್ತು ವ್ಯಕ್ತಿಗಳ ಬಗೆಗೆ ಲಿಖಿತ ಆಕರಗಳಲ್ಲಿ ಲಭ್ಯವಿರದ ಎಷ್ಟೋ ಸಂಗತಿಗಳು ಇಂತಹ ಐತಿಹ್ಯಗಳಲ್ಲಿ ಲಭಿಸುತ್ತಿರುವುದು.

. ಸಾಮಾಜಿಕ ಐತಿಹ್ಯ; ಐತಿಹ್ಯಗಳೆಲ್ಲಾ ಸಮಾಜದಲ್ಲಿ ಜನರ ನಡುವೆ ಪ್ರಸಾರದಲ್ಲಿರುವ ಕಾರಣ ಒಂದರ್ಥದಲ್ಲಿ ಅವೆಲ್ಲಾ ಸಾಮಾಜಿಕವಾದವುಗಳೇ. ಹಾಗಾಗಿ ಸಾಮಾಜಿಕ ಐತಿಹ್ಯಗಳೆಂಬ ವರ್ಗೀಕರಣ ಅಧ್ಯಯನದ ಅನುಕೂಲಕ್ಕಾಗಿ ಮಾತ್ರ ಸೀಮಿತವಾಗಿರುತ್ತದೆ. ಆದುದರಿಂದ ಇದಕ್ಕೆ ಪ್ರತ್ಯೇಕ ಉದಾಹರಣೆಗಳನ್ನು ಕೊಡುವ ಅಗತ್ಯವಿಲ್ಲವೆನಿಸುತ್ತದೆ. ಆದರೂ ಅಗೊಳ್ಳಿ ಮಂಜಣ, ವುಳ್ಳೂರು, ಬಾಚ, ಪರವ್ವ್ಳಿ ನಾಯಕ ಸೂರಗೋಳಿ ಅಂತು, ಸಣ್ಮಗು, ಹೈದ್ರೂಸ್, ಚಲ್ಲಮ್ಮೆರ ಮುಂತಾದ ವ್ಯಕ್ತಿಗಳ ಬಗೆಗಿನ ಐತಿಹ್ಯಗಳು, ಎಣ್ಣೆ ಹೊಳೆ, ನಾಯಿ ಬಸದಿಯಂಥ ಸ್ಧಳಗಳಿಗೆ ಸಂಬಂಧಪಟ್ಟ ಐತಿಹ್ಯಗಳು – ಇವನ್ನೆಲ್ಲ ಸಾಮಾಜಿಕ ಐತಿಹ್ಯಗಳೆಂದು ಗುರುತಿಸಬಹುದು.

) ಆಶಯಗಳ ದೃಷ್ಟಿಯಿಂದ ಮಾಡಿಕೊಳ್ಳಬಹುದಾದ ವರ್ಗೀಕರಣ:

. ಬಲಶಾಲಿ ವ್ಯಕ್ತಿ; ವ್ಯಕ್ತಿ ಐತಿಹ್ಯಗಳಲ್ಲಿ ಗಮನಿಸಲಾದ ಅಗೋಳಿ ಮಂಜಣ, ಪುಳ್ಳೂರು ಬಾಚ ಮುಂತಾದ ವ್ಯಕ್ತಿಗಳಿಗೆ ಸಂಬಂಧಪಟ್ಟ ಐತಿಹ್ಯಗಳು ಈ ಸಾಲಿಗೆ ಸೇರುತ್ತವೆ. ಅಸಾಮಾನ್ಯ ಗಾತ್ರ ಹಾಗೂ ಭಾರದ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಹೊತ್ತು ಸಾಗಿಸುವ, ಮಳೆಗಾಲದಲ್ಲಿ ಹೊಳೆಯ ತುಂಬಿದ್ದು ಪ್ರವಾಹವನ್ನು ಲೆಕ್ಕಿಸದೆ ಈಜಿ ದಾಟುವ ಬಲಪ್ರದರ್ಶನ. ಸಾಹಸ ಪ್ರವೃತ್ತಿಗಳೇ ಇಲ್ಲಿ ಪ್ರಮುಖ ಆಶಯಗಳಾಗಿರುತ್ತವೆ.

. ವೀರ ವ್ಯಕ್ತಿ: ಪೌರುಷದಿಂದ ಶತ್ರುಗಳ ವಿರುದ್ಧ ಹೋರಾಡಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಐತಿಹ್ಯಗಳಿವು. ಸಿಡಿಲುಮರಿ ಕೆಂಗಣ್ಣನಾಯಕ, ಕಲ್ಯಾಣಸ್ವಾಮಿಯಂಥ ವ್ಯಕ್ತಿಗಳಿಗೆ ಸಂಬಂಧಪಟ್ಟ ಐತಿಹ್ಯಗಳನ್ನ ಇಲ್ಲಿ ಹೆಸರಿಸಬಹುದು. ಇಲ್ಲಿ ವೀರಾವೇಶ, ಪೌರುಷ ಪ್ರದರ್ಶನಗಳೇ ಪ್ರಮುಖ ಆಶಯಗಳಾಗಿರುತ್ತವೆ.

. ಹೆಡ್ಡ ವ್ಯಕ್ತಿ : ಎಣ್ಣೆ ಹೊಳೆ, ಹೈದ್ರೂಸ್ ಹುಲಿ ಹೊಡೆದ ಐತಿಹ್ಯಗಳಲ್ಲಿ ಬರುವ ಗಾಣಿಗ ಹಾಗೂ ಹೈದ್ರೂನರು ಹೆಡ್ಡ ವ್ಯಕ್ತಿಗಳು. ಅವರ ಹೆಡ್ಡತನವೇ ಈ ಐತಿಹ್ಯಗಳಲ್ಲಿಯ ಪ್ರಮುಖ ಆಶಯಗಳು.

. ಸಮಾಜ ಸೇವಕ : ಉಡುಪಿ ಪರಿಸರದಲ್ಲಿ ಕೆರೆ, ಕಟ್ಟೆ, ಗೋಮಾಳಗಳನ್ನು ನಿರ್ಮಿಸುವ ಮೂಲಕ ವಿವಿಧ ರೀತಿಯ ಸಮಾಜ ಸೇವೆಗಳನ್ನು ಕೈಗೊಂಡ ಪರಪ್ಪಳಿ ನಾಯಕನ ಐತಿಹ್ಯ ಈ ಆಶಯವುಳ್ಳಂಥದ್ದು.

. ಶ್ರಮಿಕ ವ್ಯಕ್ತಿ : ಈಚಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಂಡಾಡಿ ಗ್ರಾಮದಲ್ಲಿದ್ದನೆಂದು ಹೇಳಲಾಗುವ ಸಣ್ಮಗು ಎಂಬ ಕೃಷಿಕನ ಬಗೆಗಿನ ಐತಿಹ್ಯ ಈ ಆಶಯವುಳ್ಳದ್ದು. ಹೆಂಡತಿಯ ಸಹಾಯದಿಂದ ತಾನೊಬ್ಬನೇ ಶ್ರಮಪಟ್ಟು ದುಡಿದು, ಕೃಷಿ ಕೆಲಸಗಳನ್ನು ನಿರ್ವಹಿಸುತ್ತಿದ್ದ. ಹತ್ತಾಳುಗಳು ಮಾಡುವ ಕೆಲಸವನ್ನು ತಾನೊಬ್ಬನೇ ಮಾಡುತ್ತಿದ್ದ. ಈತ ‘ಬಲಶಾಲಿ ವ್ಯಕ್ತಿ’ಯೂ ಹೌದು.

. ಕುಖ್ಯಾತ ವ್ಯಕ್ತಿ : ಅದೇ ಪರಿಸರದ ಸೂರಗೋಳಿ ಅಂತು ಎಂಬ ಅಸಾಮಾನ್ಯ ಕಳ್ಳನಿಗೆ ಸಂಬಂಧಪಟ್ಟ ಐತಿಹ್ಯ ಈ ಸಾಲಿಗೆ ಸೇರುತ್ತದೆ. ಈತನನ್ನು ಹಿಡಿಯಲು ಊರ ಜನರು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗುವುದು ಕೊನೆಗೆ ಆತ ಕದಿಯಲು ಬರುವನೆಂಬ ಸುಳಿವು ಸಿಕ್ಕಿ ಅಂಗಳದಲ್ಲಿ ಹೊನ್ನೆಕಾಯಿಗಳನ್ನು ಹರಡಿ, ಅವನನ್ನು ಬೀಳುವಂತೆ ಮಾಡಿ, ಹಿಡಿದ ಘಟನೆ ಜನರ ಬುದ್ಧಿವಂತಿಕೆಯನ್ನು ವಿವರಿಸುತ್ತದೆ.

. ಸಾಮಾಜಿಕ, ಧಾರ್ಮಿಕ ನಿಷೇಧ : ಜಾನಪದದಲ್ಲಿ ಇಂತಹ ನಿಷೇಧಗಳಿಗೆ ಪ್ರಮುಖ ಸ್ಥಾನವಿದೆ. ಬಸ್ರೂರು ಪೇಟೆಗೆ ದಾಸಯ್ಯರು ಬರಬಾರದು! ಕೆಂಪು ಉಳ್ಳಲ್ತಿಯ ಜಾತ್ರೆ ಸಂದರ್ಭದಲ್ಲಿ ದೇವತೆಯ ‘ತೆರಿಜಪ್ಪುದುತೆ’ (ನಿರಿಗೆ ಇಳಿಸುವುದು) ಎಂಬ ಧಾರ್ಮಿಕ ವಿಧಿಯನ್ನು ಮಹಿಳೆಯರು ನೋಡಬಾರದು! ಎಂಬಿತ್ಯಾದಿ ನಿಷೇಧಗಳ ಹಿಂದಿರುವ ಐತಿಹ್ಯಗಳು ಈ ಸಾಲಿಗೆ ಸೇರುತ್ತವೆ.

) ಬಾಳಿಕೆಯ ದೃಷ್ಟಿಯಿಂದ ಮಾಡಿಕೊಳ್ಳಬಹುದಾದ ವರ್ಗೀಕರಣ:

. ಸ್ಥಿರ ಐತಿಹ್ಯಗಳು : ಚಿರಕಾಲ ಬಾಳುಂತಹ ಐತಿಹ್ಯಗಳನ್ನು ಸ್ಥಿರ ಐತಿಹ್ಯಗಳೆಂದು ಕರೆಯಲಾಗಿದೆ. ಚಲನಶೀಲ ಗುಣವುಳ್ಳ ಐತಿಹ್ಯ ಅಥವಾ ಜಾನಪದ ಯಥಾರೂಪದಲ್ಲಿ ಚಿರಕಾಲ ಬಾಳುತ್ತದೆ ಎನ್ನುವಂದಿಲ್ಲ. ಆದರೂ ಬಹುಪಾಲು ಐತಿಹ್ಯಗಳಲ್ಲಿಯ ವಿವರಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋದರೂ ಮೂಲ ಆಶಯಗಳು ಮಾತ್ರ ಯಥಾರೂಪದಲ್ಲಿ ಮುಂದುವರಿಯುವುದುಂಟು. ಶಾಶ್ವತವಾಗಿ ಉಳಿಯುವ ಪ್ರಾಕೃತಿಕ ವಸ್ತು ಸಂಗತಿಗಳ ಮೇಲೆ ಹುಟ್ಟಿಕೊಂಡ ಐತಿಹ್ಯಗಳು ಈ ಮಾದಿರಯವು. ಆಕಾಶ, ಆಕಾಶಕಾಯಗಳು, ಭೂಮಿ, ಸಮುದ್ರ ಬೇವು, ಗುಡ್ಡ, ಹೆಬ್ಬಂಡೆ – ಇತ್ಯಾದಿಗಳ ಕುರಿತ ಪ್ರಚಲಿತವಿರುವ ಐತಿಹ್ಯಗಳನ್ನು ಇಲ್ಲಿ ಹೆಸರಿಸ,ಬಹುದು. ಅದರಂತೆ ತುಳುನಾಡಿನಲ್ಲಿ ಲಭ್ಯವಿರುವ ಪರಶುರಾಮ ಸೃಷ್ಟಿಯ ಐತಿಹ್ಯ ಗಿಣ್ಣುಕಲ್ಲು, ಅಮನಿಕ್ಕೊಲ್, ಪಾಂಡವರ ಗುಹೆಗಳಿಗೆ ಸಂಬಂಧಪಟ್ಟ ಐತಿಹ್ಯಗಳು ಸ್ಥಿರ ಐತಿಹ್ಯಗಳೆನಿಸುತ್ತದೆ.

. ಅಸ್ಥಿರ ಐತಿಹ್ಯಗಳು : ಅಲ್ಪಾಯುಷಿಯಾಗಿರುವ ಐತಿಹ್ಯಗಳಿವು. ಶಾಶ್ವತ ಬಾಳಿಕೆ ಇಲ್ಲದ ವಸ್ತುಗಳ ಬಗೆಗಿನ ಐತಿಹ್ಯಗಳು ಅಸ್ಥಿರ ಐತಿಹ್ಯಗಳೆನಿಸುತ್ತವೆ. ಕೆರೆ, ಕಟ್ಟೆ, ಕಲಉಡಿ ಮುಂತಾದವು ಪ್ರಾಕೃತಿಕ ಅಥವಾ ಆಧುನಿಕತೆಯ ಕಾರಣಗಲಿಂದಾಗಿ ಕಾಲಕ್ರಮೇಣ ಮುಚ್ಚಿಹೋಗುವ ಇಲ್ಲವೆ ಜಿಗಿದುಹೋಗುವ ಸಾಧ್ಯತೆಗಳಿವೆ. ಸ್ವಾಭಾವಿಕವೆಂಬಂತೆ ಅವುಗಳ ಜತೆಗೆ ತತ್ಸಂಬಂಧವಾದ ಐತಿಹ್ಯಗಳೂ ನಾಶಹೊಂದುತ್ತವೆ. ವ್ಯಕ್ತಿಗಳನ್ನು ಅಶಾಶ್ವತವೆಂದು ಹೇಳಬಹುದಾದರೂ ಅವರ ಸಂತತಿ ಮುಂದುವರಿಯುವುದರಿಂದ ಅವರ ಬಗೆಗಿನ ಐತಿಹ್ಯಗಳನ್ನು ಅಸ್ಥಿರ ಐತಿಹ್ಯಗಳೆಂದು ಹೇಳಲಾಗುವುದಿಲ್ಲ. ಮತ್ತೊಂದು ವಿಶೇಷವೆಂದರೆ ಸಾಮಾನ್ಯವಾಗಿ ನಿರ್ದಿಷ್ಟ ವ್ಯಕ್ತಿ ಗತಿಸಿ ಹೋದ ಮೇಲೆಯೂ ಆತನ ಅಥವಾ ಆಕೆಯ ಬಗೆಗಿನ ಐತಿಹ್ಯಗಳು ಹೆಚ್ಚು ಪ್ರಚಲಿತಕ್ಕೆ ಬರುವುದು. ಸಾಂಸ್ಕೃತೀಕರಣ ಅಥವಾ ಆಧುನವೀಕರಣದ ಕಾರಣಗಳಿಂದಾಗಿ ಕೆಲವು ಸ್ಥಳಗಳ ಮೂಲ ಹೆಸರುಗಳೂ ಇಂದು ಬದಲಾಗುತ್ತಿರುವುದರಿಂದ ಸ್ಥಳನಾಮಗಳ ಹಿಂದಿರುವ ಐತಿಹ್ಯಗಲು ಹೆಚ್ಚು ಪ್ರಚಲಿತಕ್ಕೆ ಬರುವುದು. ಸಾಂಸ್ಕೃತೀಕರಣ ಅಥವಾ ಆಧುನೀಕರಣದ ಕಾರಣಗಳಿಂದಾಗಿ ಕೆಲವು ಸ್ಥಳಗಳ ಮೂಲ ಹೆಸರುಗಳೂ ಇಂದು ಬದಲಾಗುತ್ತಿರುವುದರಿಂದ ಸ್ಥಳನಾಮಗಳ ಹಿಂದಿರುವ ಐತಿಹ್ಯಗಳಿಗೂ ಅಸ್ಥಿರ ಐತಿಹ್ಯಗಳೆಂದು ಹೇಳಲಾಗುವುದಿಲ್ಲ. ಕೆದ್ದೊಟೆ, ವಿಷ ಸರೋವರ, ಎಣ್ಣೆ ಹೊಳೆ, ಕಾಯಿ ಬಸದಿ ಮುಂತಾದ ಐತಿಹ್ಯಗಳನ್ನು ಇಲ್ಲಿ ಹೆಸರಿಸಬಹುದು. ಇವೆಲ್ಲಾ ಏನೋ ಇದ್ದರೂ ಕೇವಲ ಅಧ್ಯಯನದ ಅನುಕೂಲಕ್ಕಾಗಿ ಮಾಡಿಕೊಳ್ಳಬಹುದಾದ ವರ್ಗೀಕರಣಗಳೆಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸಬೇಕಾಗುತ್ತದೆ. ಯಾಕೆಂದರೆ ಆಧುನಿಕ ಸಂದರ್ಭದಲ್ಲಿ ಐತಿಹ್ಯಗಳನ್ನು ಪ್ರಸಾರ ಮಾಡುವ ಪ್ರವೃತ್ತಿಯೇ ಜನತೆಯಿಂದ ಮರೆಯಾಗುತ್ತಿರುವಾಗ ಮತ್ತೆ ಸ್ಥಿರ. ಅಸ್ಥಿರ ಎಂಬ ವರ್ಗೀಕರಣದ ಪ್ರಶ್ನೆಯೇ ಬರುವುದಿಲ್ಲ. ಎಲ್ಲವೂ ಒಂದರ್ಥದಲ್ಲಿ ‘ಅಸ್ಥಿರ’ ಐತಿಹ್ಯಗಳೇ.

) ಪ್ರಸರಣದ ದೃಷ್ಟಿಯಿಂದ ಮಾಡಿಕೊಳ್ಳಬಹುದಾದ ವರ್ಗೀಕರಣ:

. ಸ್ಥಳೀಯ ಐತಿಹ್ಯ : ಒಂದು ನಿರ್ದಿಷ್ಟ ಸ್ಥಳ ಅಥವಾ ಪ್ರದೇಶದಲ್ಲಿ ಹುಟ್ಟಿ, ಆ ಸುತ್ತಮುತ್ತಣ ಪ್ರದೇಶದಲ್ಲಿ ಮಾತ್ರ ಪ್ರಸಾರದಲ್ಲಿರುವ ಐತಿಹ್ಯಗಳನ್ನು ಸ್ಥಳೀಯ ಅಥವಾ ಪ್ರಾದೇಶಿಕ ಐತಿಹ್ಯಗಳೆಂದು ಕರೆಯಲಾಗುತ್ತದೆ. ಒಂದು ದೃಷ್ಟಿಯಿಂದ ನೋಡಿದರೆ ಈಗಾಗಲೇ ಗಮನಿಸಿದ ಬಹುಪಾಲು ಐತಿಹ್ಯಗಳೆಲ್ಲಾ ಸ್ಥಳೀಯ ಐತಿಹ್ಯಗಳೇ ಅಗೋಳ ಮಂಜಜಾ, ಪುಳ್ಳೂರು ಬಾಚ, ಪರಪ್ಪಳಿ ನಾಯಕ, ಕೆಂಗಣ್ಣ ನಾಯಕ, ಕಲ್ಯಾಣ ಪುರಂಥ ವ್ಯಕ್ತಿಗಳಿಗೆ ಸಂಬಂಧ ಪಟ್ಟ ಐತಿಹ್ಯಗಳು; ಎಣ್ಣೆ ಹೊಳೆ, ಅಮೆದಿಕ್ಕೊಲ್, ವಿಷ ಸರೋವರಗಳಂತಹ ಸ್ಥಳಗಳಿಗೆ ಸಂಬಂಧಪಟ್ಟ ಐತಿಹ್ಯಗಳು ಮುಂತಾದುವೆಲ್ಲಾ ಈ ಸಾಲಿಗೆ ಸೇರುತ್ತವೆ.

. ಸಂಚಾರಿ ಐತಿಹ್ಯಗಳು : ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾತ್ರವಲ್ಲದೆ ಇತರ ಪ್ರದೇಶಗಳಲ್ಲೂ ಪ್ರಚಲಿತದಲ್ಲಿರುವ ಐತಿಹ್ಯಗಳನ್ನು ಸಂಚಾರಿ ಐತಿಹ್ಯ, ಪ್ರಚಾರ ಐತಿಹ್ಯ ಅಥವಾ ವಲಸೆಯ ಐತಿಹ್ಯ ಎಂದು ಕರೆಯಲಾಗುತ್ತದೆ. ಇಲ್ಲಿ ಐತಿಹ್ಯಗಳಲ್ಲಿನ ವಸ್ತು ಅಥವಾ ಆಶಯಗಳನ್ನು ಊರಿಂದೂರಿಗೆ ಸಂಚಾರ ಕೈಗಂಡಿರಬಹುದೆಂಬ ಕಾರಣದಿಂದ ಅವುಗಳನ್ನು ಆ ಹೆಸರಿನಿಂದ ಗುರುತಿಸಲಾಗುತ್ತದೆ. ಐತಿಹ್ಯಗಳಿಗೆ ಸಂಬಂಧ ಪಟ್ಟಂತೆ ವಿಶ್ವವ್ಯಾಪ್ತಿಯಾಗಿ ಏಕ ರೀತಿಯ ವರ್ಗೀಕರಣ ಸಾಧ್ಯವಾಗಿರುವಾಗ ಈ ಬಗೆಯ ಮತ್ತೊಂದು ವರ್ಗೀಕರಣಕ್ಕೆ ಕೆಲವೊಮ್ಮೆ ಅರ್ಥವಿರುವುದಿಲ್ಲ. ಆದರೂ ನಿರ್ದಿಷ್ಟ, ಸ್ಥಳ ಮತ್ತು ವ್ಯಕ್ತಿಗಳಿಗೆ ಸಂಬಂಧಪಟ್ಟ ವಿಶಿಷ್ಟ ಸಾಂಸ್ಕೃತಿಕ ವಿವರಗಳಿಗಾಗಿ ಸ್ಥಳೀಯ ಅಥವಾ ಪ್ರಾದೇಶಿಕ ಐತಿಹ್ಯಗಳೆಂಬ ಪರಿಕಲ್ಪನೆ ಮುಖ್ಯವಾಗುತ್ತದೆ. ಇನ್ನೊಂದು ಬಹುಮುಖ್ಯ ಸಂಗತಿಯೆಂದರೆ ವಿಶ್ವವ್ಯಾಪ್ತಿಯಾಗಿ ಏಕ ರೀತಿಯ ಆಶಯ ಕಂಡುಬಂದಾಗ ಅಂತಹ ಐತಿಹ್ಯಗಳನ್ನು ಸಂಚಾರಿ ಐತಿಹ್ಯಗಳಂದು ಕರೆಯಲಾಗುತ್ತದೆ. ಆದರೆ ಎಲ್ಲಾ ಸಂದರ್ಭದಲ್ಲಿ ಅಂತಹ ವಸ್ತು. ಆಶಯಗಳು ಊರಿಂದೂರಿಗೆ, ದೇಶದಿಂದ ದೇಶಕ್ಕೆ ಸಂಚಾರ ಕೈಗೊಂಡು ಬಂದವುಗಳೆಂದು ಹೇಳಲಾಗದು. ಬಹುಪಾಲು ಐತಿಹ್ಯಗಳ ಆಶಯಗಳು ಮನುಷ್ಯ ಭಾವಗಳಿಗೆ ಸಂಬಂಧಪಟ್ಟವು. ವಿಶ್ವದೆಲ್ಲೆಡೆ ಮನುಷ್ಯನಲ್ಲಿ ಹುಟ್ಟುವ ಭಾವಗಳಲ್ಲಿ ಸಾಮ್ಯವಿದೆ. ಸಂಭವಿಸುವ ಘಟನೆಗಳಲ್ಲೂ ಸಾದೃಶ್ಯವಿದೆ. ಹಾಗಾಗಿ ಅಂಥವುಗಳನ್ನು ಸಂಚಾರಿ ಐತಿಹ್ಯಗಳೆನ್ನದೆ ಸಂಬಂಧದ ಐತಿಹ್ಯಗಳೆನ್ನುವುದೇ ಹೆಚ್ಚು ಯುಕ್ತವೆನಿಸುತ್ತದೆ.

ಐತಿಹ್ಯಗಳ ವರ್ಗೀಕರಣ ಸಾಧ್ಯತೆಗಳು ಇಲ್ಲಿಗೆ ಮುಗಿಯುವುದಿಲ್ಲ. ಆರ್.ಎಸ್. ಬಾಗ್ಸ್ ಅವರು ಐತಿಹ್ಯಗಳನ್ನು ಹೀಗೆ ವರ್ಗೀಕರಿಸಿದ್ದಾರೆ.:

೧. ಅತಿಮಾನುಷ ವರ್ಗ

೨. ಮಾನವ ವರ್ಗ

೩. ಪ್ರಜೆ ವರ್ಗ

೪. ಆಕಾಶ ಕಾಯಗಳು

೫. ಪ್ರಾಕೃತಿಕ ವಸ್ತುಗಳು

೬. ಭೂಮಿ

೭. ನೀರು

ಪ್ರತಿಯೊಂದು ವರ್ಗದಲ್ಲೂ ಈ ಉಪವರ್ಗಗಳನ್ನು ಗುರುತಿಸಲಾಗಿದೆ. ಇದು ವಿಶೇಷವಾಗಿ ಪಾಶ್ಚಿಮಾತ್ಯ ಅಥವಾ ವಿದೇಶಿ ಸಂದರ್ಭದ ವರ್ಗೀಕರಣ ಸಾಧ್ಯತೆಯಾಗಿರುವುದರ ಜತೆಗೆ ವಿಶ್ವವ್ಯಾಪ್ತಿಯಾಗಿಯೂ ಅನ್ವಯವಾಗುತ್ತದೆ.ಈ ತೆರನಾದ ಸಿದ್ಧ ವರ್ಗೀಕರಣ ವಿಧಾನಗಳೇನೇ ಇದ್ದರೂ ಆಯಾ ಪ್ರದೇಶಗಳಲ್ಲಿ ಲಭ್ಯವಿರುವ ಐತಿಹ್ಯಗಳನ್ನು ಅನ್ಯ ಪ್ರತಿಪಾದಿಸುವ ಅಂಶಗಳನ್ನಾಧರಿಸಿ ವರ್ಗೀಕರಿಸಿಕೊಳ್ಳುವುದೇ ಸರಿಯೆನಿಸುತ್ತದೆ. ಅದೇ ರೀತಿ ಅಲ್ಲಲ್ಲಿನ ಪ್ರಾದೇಶಿಕ ಸಾಂಸ್ಕೃತಿಕ ಹಿನ್ನೆಲೆಯಲ್ಲೇ ಅವುಗಳನ್ನು ಅಧ್ಯಯನಕ್ಕೊಳಪಡಿಸುವುದು ಸಮಂಜಸವೆನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಐತಿಹ್ಯಗಳಲ್ಲಿನ ವಿಶ್ವಾತ್ಮಕತೆಯನ್ನು ಕಡೆಗಣಿಸಬೇಕೆಂದು ಇದರ ಅರ್ಥವಲ್ಲ.

ತುಳುನಾಡಿನಲ್ಲಿ ಲಭ್ಯವಿರುವ ಐತಿಹ್ಯಗಳೆಲ್ಲತುಳು ಭಾಷೆಯಲ್ಲೇ ಇರುತ್ತವೆಂದು ಹೇಳಲಾಗದು. ಅಂದರೆ ತುಳು, ಕನ್ನಡ, ಮಲಯಾಳಂ, ಕೊಂಕಣಿ, ಮರಾಠಿ, ಬ್ಯಾರಿ ಭಾಷೆ ಇತ್ಯಾದಿ ವಿವಿಧ ಭಾಷೆಗಳಲ್ಲಿ ಪ್ರಸಾರದಲ್ಲಿರಬಹುದು. ಯಾವುದೇ ಭಾಷೆಗಳಲ್ಲಿದ್ದರೂ ಅವೆಲ್ಲ ತುಳುನಾಡಿನ ಐತಿಹ್ಯಗಳೇ.

ಪರಪ್ಪಳನಾಯಕ ಅಥವಾ ಪರಪ್ಪನನಾಯಕನು ಉಡುಪಿ ತಾಲೂಕಿನ ಬನ್ನಂಜೆಯವನು. ಉಡುಪಿ ಮತ್ತು ಕುಂದಾಪುರ ತಾಲ್ಲೂಕುಗಳ ಹಲವೆಡೆ ಈತನಿಗೆ ಸಂಬಂಧಪಟ್ಟ ಐತಿಹ್ಯಗಳು ಪ್ರಸಾರದಲ್ಲಿದೆ. ಉಡುಪಿ ತಾಲ್ಲೂಕು ಪಾಂಗಾಳ ಹೆಜ್ಜೆ ಮಠದ ಬಾವಿ, ಕೋಟೇಶ್ವರದ ಪಮಾಲಂ ಮನೆಯ ಬಾವಿ – ಹೀಗೆ ಹಲವಾರು ಬಾವಿಗಳನ್ನು ಈತ ನಿರ್ಮಿಸಿರುವುದೆಂಬ ಐತಿಹ್ಯಗಳಿವೆ. ಬ್ರಹ್ಮಾವರ ಬಳಿಯ ಹಂದಾಡಿಯಲ್ಲಿ ಪರಪ್ಪಳನಾಯಕನು ಕಟ್ಟಿದನೆಂದು ಹೇಳಲಾಗುವ ಮಠವೊಂದನ್ನು ಜನ ಇಂದಿಗೂ ‘ಕಾಯಕದ ಮಠ’ವೆಂದು ಕರೆಯುತ್ತಾರೆ. ಈಗ ಉಡುಪಿ ಜಿಲ್ಲಯೆ ಉಡುಪಿ, ಬಾರ್ಕೂರು, ಹಿರಿಯಕ್ಕೂ, ಬ್ರಹ್ಮಾವರ, ಬನ್ನೂರು ಮುಂತಾದೆಡೆಗಳಲ್ಲಿ ಈತನ ಸಮಾಜ ಸೇವೆಯ ಬಗೆಗೆ ಐತಿಹ್ಯಗಳಿವೆ. ಎಲ್ಲಕ್ಕೂ ಮುಖ್ಯವಾಗಿ ‘ಬಸ್ರೂರು ಪಂಚಾತಿಗೆ’ ಎಂಬ ಪಡೆನುಡಿಯಲ್ಲಿ ಉಳಿದು ಬಂದಿರುವ ಪರಪ್ಪಳನಾಯಕನಿಗೆ ಸಂಬಂಧಪಟ್ಟ ಐತಿಹ್ಯವೊಂದು ಜನಜನಿತವಾಗಿದೆ.

ಕಾರಣಾಂತರಗಳಿಂದ ಒಮ್ಮೆ ಬಸ್ರೂರಿಗೆ ಬಂದ ಪರಪ್ಪಳನಾಯಕನಿಗೆ ಅಲ್ಲಿ ಗೋವುಗಳಿಗೆ ಮೇಯಲು ಸರಿಯಾದ ಗೋಮಾಳವಿಲ್ಲದಿರುವುದನ್ನು ಕಂಡು ಮರುಕವುಂಟಾಯಿತಂತೆ. ಗೋಮಾಳಕ್ಕೆಂದು ಆತ ಊರವರಲ್ಲಿ ಸ್ವಲ್ಪ ಭೂಮಿಯನ್ನು ದಾನವಾಗಿ ಕೇಳಿದನಂತೆ. ಸಾಮಾನ್ಯನಂತೆ ಕಂಡು ಬಂದ ಪರಪ್ಪಳನಾಯಕನ ಮಾತನ್ನು ಲಘುವಾಗಿ ಪರಿಗಣಿಸಿದ ಊರ ಪರಿಚಯ ಪಂಚಾತಿಗೆ ಹೋಗಿ, ಒಂದು ಕಲ್ಲಮರಿಗೆಯಷ್ಟು ಹೊನ್ನು ಕೊಟ್ಟರೆ ಆ ಮರಿಗೆ ವ್ಯಾಪ್ತಿಯಷ್ಟು ಭೂಮಿಯನ್ನು ಕೊಡುವುದಾಗಿ ತೀರ್ಮಾನಮಾಡಿದರಂತೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಪರಪ್ಪಳ ನಾಯಕನು ಅತ್ಯಂತ ಚಾಣಾಕ್ಷತೆಯಿಂದ ಒಳಭಾಗ ಕಿರಿದಾಗಿಯೂ ಹೊರಭಾಗ ಹಿರಿದಾಗಿಯೂ ಇರುವ ಕಲ್ಲಮರಿಗೆಯೊಂದನ್ನು ಕಲ್ಲುಕುಟಿಗರ ಸಹಾಯದಿಂದ ಕಡಿಸುತ್ತಾನಂತೆ. ಮಾತಿನಂತೆ ಅದರ ತುಂಬ ಹೊನ್ನು ತುಂಬಿಸಿ ಊರ ಪಂಚರಿಗೆ ನೀಡಿದನಂತೆ.

ಪಂಚರು ಅದಕ್ಕೆ ಪ್ರತಿಯಾಗಿ ಆ ಮರಿಗೆ ವ್ಯಾಪಿಸುವುದಷ್ಟು ಭೂಮಿಯನ್ನು ಪರಪ್ಪಳನಾಯಕನಿಗೆ ನೀಡಬೇಕಾಗಿಬಂದಂತೆ. ಊರವರು ನಿರೀಕ್ಷಿಸದಿದ್ದಷ್ಟು ವ್ಯಾಪ್ತಿಯ ನೆಲವನ್ನು ಅದು ಆವರಿಸಿಕೊಂಡು ಬಿಟ್ಟಿತ್ತಂತೆ. ಆದರೆ ಅವರು ಎಣಿಕೆಯಷ್ಟು ಹೊನ್ನನ್ನು ಅದು ತನ್ನ ಹೊಟ್ಟೆಯಲ್ಲಿ ತುಂಬಿಕೊಂಡಿರಲಿಲ್ಲವಂತೆ. ಊರವರಿಂದ ಭೂಮಿಯನ್ನು ಪಡೆದ ಪರಪ್ಪಳನಾಯಕನು ಅದನ್ನು ಗೋಮಾಳವಾಗಿ ಪರಿವರ್ತಿಸಿ ಆ ಊರಿಗೆ ದಾನ ಮಾಡಿದನಂತೆ ಅಂದಿನಿಂದ ಆ ಪರಿಸರದಲ್ಲಿ ಯುಕ್ತಿ ಯುಕ್ತವಾಗಿ ಏನೇ ಪಂಚಾತಿಗೆ ನಡೆದರೂ ಅದನ್ನು ‘ಬಸ್ರೂರು ಪಂಚಾತಿಗೆ’ ಎಂದು ಕರೆಯುವ ವಾಡಿಕೆಯಾಯಿತಂತೆ

– ಎ.ಎಸ್.ಆರ್.

ತುಳುನಾಡಿನ ಕೋಳಿ ಅಂಕ ಕೋಳಿ ಕಾಳಗ ಅಥವಾ ಕೋಳಿ ಪಂದ್ಯ ವಿಶ್ವದ ವಿವಿಧೆಡೆಗಳಲ್ಲಿ ಒಂದು ಕ್ರೀಡೆಯಾಗಿ ಪ್ರಚಲಿತವಿದೆ. ಭಾರತದ, ಅದೇ ರೀತಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲೂ ಈ ಕ್ರೀಡೆಯನ್ನು ನಡೆಸಲಾಗುತ್ತದೆ. ಅದರಲ್ಲೂ ತಮಿಳುನಾಡಿನಾದ್ಯಂತ ಇದಕ್ಕೆ ವಿಶೇಷ ಮಹತ್ವವಿದೆ. ತುಳುನಾಡಿನ ಒಂದು ಜನಪದ ಕ್ರೀಡೆಯಾಗಿ ಕೋಳಿ ಅಂಕವನ್ನು ಪರಿಗಣಿಸಲಾಗುತ್ತದೆ. ಈ ಪ್ರದೇಶದಲ್ಲಿ ಕೋಳಿ ಅಂಕವನ್ನು ಕೇವಲ ಕ್ರೀಡೆಯಾಗಿ ಮಾತ್ರವಲ್ಲದೆ ಒಂದು ಧಾರ್ವೀಕ ಆಚರಣೆಯಾಗಿಯೂ ಪರಿಭಾವಿಸಲಾಗುತ್ತದೆ. ‘ತುಳು’ನಾಡು ಎಂದು ಪರಿಗಣಿಸಲಾಗುವ ಇಂದಿನ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲಾ ಪ್ರದೇಶಗಳಲ್ಲಿ ಕೋಳಿ ಅಂಕಕ್ಕೆ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಂಬಂಧಗಳನ್ನು ಕಲ್ಪಿಸಲಾಗುತ್ತದೆ.ಹಬ್ಬ ಹರಿದಿನಗಳ ಸಂದರ್ಭದಲ್ಲಿ, ದೇವಾಲಯ ಅಥವಾ ದೈವ (ಭೂತ) ಸ್ಥಾನಗಳ ಕಾಲಾವಧಿ ಜಾತ್ರೆ, ಉತ್ಸವ, ಆಯನ, ಹೋಮ, ಕೋಲಗಳಿಗೆ ಪೂರಕವಾಗಿ ಇಲ್ಲಿ ಕೋಳಿ ಅಂಕವನ್ನು ನಡೆಸಲಾಗುತ್ತದೆ. ಕೆಲವೆಡೆ ಕೋಳಿಗಳ ಅಂಕಗಳದ್ದೇ ಪ್ರತ್ಯೇಕ ಜಾತ್ರೆ ನಡೆಯುವುದೂ ಉಂಟು. ಇತ್ತೀಚಿನ ವರ್ಷಗಳಲ್ಲಿ ಅದರಲ್ಲಿಯ ಪಂದ್ಯ ಅಥವಾ ಜೂಜಿನ ಸ್ವರೂಪವನ್ನು ಗಮನಿಸಿ ಸರ್ಕಾರ ಕೋಳಿ ಅಂಕಕ್ಕೂ ನಿರ್ಬಂಧ ವಿಧಿಸಿದೆ. ಆದರೂ ಅದರ ಸಾಂಸ್ಕೃತಿಕ ಸಂಬಂಧವನ್ನು ಪ್ರತಿಪಾದಿಸಿ ಆಸಕ್ತ ಜನತೆ ಕೆಲವೊಂದು ನಿಬಂಧನೆಗಳೊಂದಿಗೆ ಸರಕಾರದ ಪರವಾನಿಗೆ ಪಡೆದು ಕೋಳಿ ಅಂಕವನ್ನು ನಡೆಸಿಕೊಂಡು ಬರುತ್ತಿದೆ.

ತುಳು ಭಾಷೆಯಲ್ಲಿ ‘ಕೋರಿದ ಕಟ್ಟ’ ಎಂದು ಕರೆಯಲಾಗುವ ಪ್ರಸ್ತುತ ಕೋಳಿ ಅಂಕದಲ್ಲಿ ಈಗಾಗಲೇ ಗಮನಿಸಿದಂತೆ ಹಲವಾರು ಪ್ರಭೇದಗಳಿವೆ. ಮುಖ್ಯವಾಗಿ ನಿತ್ಯದ ಕಟ್ಟ, ಜಾತ್ರದ ಕಟ್ಟ ಮತ್ತು ದೂದುನ ಕಟ್ಟ ಎಂಬ ಮೂರು ಪ್ರಭೇದಗಳನ್ನು ಇಲ್ಲಿ ಹೆಸರಿಸಬಹುದಾಗಿದೆ. ಸಾಮಾನ್ಯವಾಗಿ ವಾರಕ್ಕೊಮ್ಮೆಯೋ ಅಮಾವಾಸ್ಯೆ, ಸಂಕ್ರಾಂತಿಗಳಂತಹ ಪರ್ವದಿನಗಳಲ್ಲಿ ತಿಂಗಳಿಗೊಮ್ಮೆಯೋ ನಡೆಸುವ ಕೋಳಿ ಅಂಕಗಳನ್ನು ‘ನಿತ್ಯದ ಕಟ್ಟ’ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಕೋಳಿ ಅಂಕಗಳದ್ದೇ ಪ್ರತ್ಯೇಕ ಜಾತ್ರೆಗಳೂ ನಡೆಯುತ್ತವೆ. ಹಣ ಅಥವಾ ಬೇರಾವುದಾದರೂ ವಸ್ತುಗಳನ್ನು ಪಣವಾಗಿಟ್ಟು ನಡೆಸುವ ಜೂಜಿನ ಕೋಳಿ ಅಂಕಗಳನ್ನು   ‘ದೂದುದಟ್ಟ’ ಎಂದು ಕರೆಯುತ್ತಾರೆ. ಸರಕಾರದ ನಿರ್ಬಂಧದ ಕಾರಣ ಈ ಜೂಜಿನ ಪಂದ್ಯಗಳು ಈಗ ಬಹುತೇಕ ಕಡಿಮೆಯಾಗಿವೆ.

ಕೋಳಿ ಅಂಕಕ್ಕೆಂದೇ ಉಪಯೋಗಿಸಲಾಗುವ ಕೋಳಿಗಳನ್ನು ತುಳುವಿನಲ್ಲಿ ‘ಕಟ್ಟದ ಕೋಳಿ’ ಎನ್ನುತ್ತಾರೆ. ಇನ್ನು ‘ಹುಂಜ’ ಅಥವಾ ಗಂಡು ಕೋಳಿಗಳು. ತುಳು ಭಾಷೆಯಲ್ಲಿ ಇವುಗಳನ್ನು ‘ಪೂಂಜ’ ಎಂದು ಕರೆಯುತ್ತಾರೆ. ಅಂಕದ ಕೋಳಿಗಳನ್ನು ವಿಶೇಷ ಕಾಳಜಿ ವಹಿಸಿ, ಆರೈಕೆ ಮಾಡಿ ಸಾಕಲಾಗುತ್ತದೆ. ಕೋಳಿಗಳ ಬಣ್ಣ ಹಾಗೂ ಇತರ ಲಕ್ಷಣಗಳನ್ನು ಸಾಧಿಸಿ ಅವುಗಳನ್ನು ಬೊಳ್ಳೆ, ಶಾಸ್ತ್ರ ಬೊಳ್ಳೆ, ಬೊರಳ್ಳೆ, ಉರಿಯೆ, ಕಾವೆ, ಮೈಹ್ವ, ಕಮ್ಮರೆ, ಕುಫ್ಲೆ, ಸಿಡಿಯೆ, ಮಂಜಲೆ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ.

ಅಂಕದ ಕೋಳಿಗಳ ಕಾಲಿಗೆ ಪಂದ್ಯದ ವೇಳೆ ಹರಿತವಾದ ಚಕ್ಕುಗಾವುದ ಕತ್ತಿಯನ್ನು ಕಟ್ಟಲಾಗುತ್ತದೆ. ಅಂಕಕ್ಕೆಂದೇ ನಿರ್ಮಿಸಲಾದ ವಿಶಿಷ್ಟ ಆಕಾರದ ಆ ಕತ್ತಿಯನ್ನು ತುಳು ಭಾಷೆಯಲ್ಲಿ ‘ಕೋರಿದ ಬಾಳ್’ ಎನ್ನುತ್ತಾರೆ. ಅದನ್ನು ಕೋಳಿಯ ಬಲಗಾಲಿಗೆ ಹಿಮ್ಮುಖವಾಗಿ ಕಟ್ಟಲಾಗುತ್ತದೆ. ಅಂಕದಲ್ಲಿ ಭಾಗವಹಿಸುವ ಎರಡೂ ಕೋಳಗಳ ಕಾಲುಗಳಿಗೆ ಕತ್ತಿಯನ್ನು ಬಿಗಿದು, ಅವುಗಳನ್ನು ಹುರಿದುಂಬಿಸಿ, ಎದುರು ಬದುರಾಗಿ ಕಾದಾಡಲು ಬಿಡುತ್ತಾರೆ. ಅವುಗಳು ಗರ್ವದಿಂದ ಒಂದರ ಮೇಲೊಂದು ಎಗರಿ ಪರಸ್ಪರ ತುಳಿದುಕೊಳ್ಳುತ್ತವೆ. ಆಗ ಎರಡೂ ಕೋಳಿಗಳಿಗೆ ಗಾಯಗಳಾಗಬಹುದು. ತೀವ್ರವಾಗಿ ಗಾಯಗೊಂಡು ಸುಸ್ತಾದ ಕೋಳಿ ಮುಂದೆ ಕಾದಾಡಲಾಗದೆ ಬಿದ್ದು ಬಿಡಬಹುದು ಅಥವಾ ಬಿಟ್ಟುಹೋಗಬಹುದು. ಅಂತಹ ಕೋಳಿಯು ಸೋತುಹೋಯಿತೆಂದು ಅರ್ಥ. ಕೆಲವೊಮ್ಮೆ ಗಾಯಗೊಂಡು ಸಾಯುವುದೂ ಉಂಟು. ಹಿಂದೆ ಗಾಯಗೊಂಡ ಕೋಳಿಯ ಗಾಯವನ್ನು ಅಲ್ಲೇ ಹೊಲಿದು ಅದಕ್ಕೆ ಮದ್ಯ ಕುಡಿಸಿ,ಗರ್ವ ಬರುವಂತೆ ಮಾಡಿ, ಮತ್ತೆ ಕಾದಾಟಕ್ಕೂ ಅಣಿಗೊಳಿಸುವ ಪದ್ಧತಿಯೂ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ಮರೆಯಾಗುತ್ತಾ ಬಂದಿದೆ. ಹೀಗೆ ಅಂಕದಲ್ಲಿ ಗೆದ್ದ ಕೋಳಿಯನ್ನು ‘ಒಂಟೆ’ ಎಂದು ಸೋತ ಕೋಳಿಯನ್ನು ‘ಬುಟ್ಟೆ’ ಎಂದೂ ಕರೆಯಲಾಗುತ್ತದೆ.

ಅಂಕದ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟುವದುರಲ್ಲಿ, ಕೋಳಿಗಳನ್ನು ಅಂಕಕ್ಕೆ ಆಯ್ಕೆ ಮಾಡಿ, ‘ಪತಿ’ (ಜತೆ) ಮಾಡುವುದರಲ್ಲಿ, ಅವುಗಳನ್ನು ಹುರಿದುಂಬಿಸಿ ಕಾದಾಡಲು ಬಿಡುವುದರಲ್ಲಿ ತುಳಿದು ಹಿಂದಿರುಗಿದಾಗ ಮತ್ತೆ ಹಿಡಿದುಕೊಳ್ಳುವದರಲ್ಲಿ ಪಾರಂಗತರಾದವರು ಕೆಲವರಿರುತ್ತಾರೆ. ಹಾಗಲ್ಲದವರು ಕೋಳಿಯನ್ನು ಬಿಡಲು ಹೋದರೆ ಅಪಾಯವಾದೀತು. ಒಟ್ಟಿನಲ್ಲಿ ಕೋಳ ಅಂಕವೆಂಬುದು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಚರಣಾತ್ಮಕ ಪರಿವೇಶವುಳ್ಳ ಒಂದು ಜನಪದ ಕ್ರೀಡೆ ಅಥವಾ ಪಂದ್ಯವಾಗಿ ತುಳುನಾಡಿನಲ್ಲಿ ಗಮನ ಸೆಳೆಯುತ್ತವೆ.

ನಿಶ್ಚಿತ ಸ್ಥಳಗಳ ಒಣಗದ್ದೆ ಅಥವಾ ಮೈದಾನಗಳಲ್ಲಿ ಕೋಳಿ ಅಂಕಗಳನ್ನು ಏರ್ಪಡಿಸಲಾಗುತ್ತದೆ. ದೇವಾಲಯಗಳ ಜಾತ್ರೆ ಸಂದರ್ಭಗಳಲ್ಲಿ ನಡೆಯುವ ಬಹು ಧಾರ್ಮಿಕ ವಿಧಿಗಳು, ವೈದಿಕ ಸಂಪ್ರದಾಯದ ಜಾತ್ರೆಯ ಭಾಗವಾಗಿಯೂ ನಡೆಯುವ ಕೋಳಿ ಅಂಕವು ಒಂದು ಅವೈದಿಕ ಆಚರಣೆ ಅಥವಾ ಕ್ರೀಡೆಯಾಗಿ ಗಮನಾರ್ಹ ವೆನಿಸುತ್ತದೆ.

– ಎ.ಎಸ್.ಆರ್.