ತೆರುಕ್ಕೂತ್ತು ತಮಿಳುನಾಡಿನ ಪ್ರಸಿದ್ಧ ಜನಪದ ಕಲೆ, ಕನ್ನಡದ ಜನಪದ ಯಕ್ಷಗಾನ ಬಯಲಾಟಗಳನ್ನು ಹೋಲುವಂಥದು.

ತಮಿಳುನಾಡಿನಲ್ಲಿ ಪ್ರಚಲಿತವಾಗಿರುವ ಜಾನಪದ ಗೀತ-ನೃತ್ಯಗಳು: ಮಂಜಿವಿರಟ್ಟು, ಕೋಲಾಟ, ಕಾವಡಿ ನೃತ್ಯ, ಕರಗ ನೃತ್ಯ, ಪುರವಿ ಅಟ್ಟಮ್, ಓಯಿಲ್ ಆಟ್ಟಮ್, ಸಿಲಂಬಾಟ್ಟಮ್, ಲಾವಣಿ, ವಿಲ್ಲುಪ್ಪಾಟ್ಟು ಹಾಗೂ ಬೊಮ್ಮಲಾಟ್ಟಮ್.

ಈ ಜನಪದ ಸಂಗೀತ ನೃತ್ಯಗಳನ್ನು ಕೆಳಗಿನಂತೆ ವಿಂಗಡಿಸಬಹುದು:

. ಕೆಲಸದ ಪರಿಶ್ರಮವನ್ನು ಕಡಿಮೆ ಮಾಡುವ ಹಾಡುಗಳು– ‘ವಿವಸಾಯಪ್ಪಾಡಲ್‌ಗಳ್’ ಅಥವಾ ಕಾರ್ಮಿಕ ಗೀತೆಗಳು, ಕಾಲುವೆಯಿಂದ ನೀರೆತ್ತುವಾಗ, ದೋಣಿ ಬಿಡುವಾಗ, ಮಾರ್ಗವನ್ನು ಸರಿಪಡಿಸುವಾಗ, ಕಲ್ಲುಗಳನ್ನುರುಳಿಸುವಾಗ, ಬಂಡಿ ಹೊಡೆಯುವಾಗ ಈ ರೀತಿಯ ಹಾಡುಗಳನ್ನು ಹಾಡುತ್ತಾರೆ.

೨. ಕುಟುಂಬ ಸಂಬಂಧ ಹಬ್ಬಗಳಲ್ಲೂ, ದೈವೋಪಾಸನೆ ಸಂದರ್ಭಗಳಲ್ಲೂ ಹಾಡುವ ಸ್ತುತಿಗೀತೆಗಳು ಮತ್ತು ನೃತ್ಯಗಳು-ಮದುವೆಗಳಲ್ಲಿ ಹಾಡುವ ಲಾಲಿ, ಉಯ್ಯಾಲೆ ಹಾಡು, ನಲಂಗು, ಪದ್ಯಮ್, ಶೋಭಾನೆ, ಸಮ್ಮಂದಿ ಏಚಲ್, ಕಾವಡಿ ಚಿಂದು, ತಾಲಾಟ್ಟು ಪಾಟ್ಟು, ವಿಲ್ಲುಪ್ಪಾಟ್ಟು, ಲಾವಣಿ ಮುಂತಾದುವು ಈ ವಿಭಾಗಕ್ಕೆ ಸೇರುತ್ತವೆ. ಇದೇ ರೀತಿ ಜನಪದ ನಾಟಕಗಳಲ್ಲಿ ಮುಖ್ಯವಾಗಿ ವಸಂತಕಾಲವನ್ನು ಕೊಂಡಾಡುವ ಕುಮ್ಮಿ, ಕೋಲಾಟ ಪಿನಲ್‌ಕ ಓಲಾಟ ಮೊದಲಾದುವನ್ನು ಹೆಂಗುಸುರು ಆಡುತ್ತಾರೆ. ಓಯಿಲಾಟ್ಟಂ, ಸಕ್ಕೈಯಾಟ್ಟಂ ಕೈಚ್ಚಿಲಂಬು ಮೊದಲಾದುವು ಕಾಂಚೀಪುರಂಗೆ ಸೇರಿದವುಗಳು.

ವೃತ್ತಿಪರ ನಾಟ್ಯಗಳು– ಬೊಂಬೆಯಾಟ, ಕಾವಡಿ ನೃತ್ಯ, ಕರಗ ನೃತ್ಯ, ಮರಗಾಲಿನ ಕುದುರೆಯಾಟ ಇವು ನಾಲ್ಕು ಮುಖ್ಯವಾದ ವೃತ್ತಿಪರ ನಾಟ್ಯಗಳು. ಆದರೆ ಇವುಗಳೆಲ್ಲಕ್ಕಿಂತಲೂ ಶ್ರೇಷ್ಠವಾದುದು ಹಾಗೂ ಮುಖ್ಯವಾದುದು ‘ತೆರುಕ್ಕೂತ್ತು’ ಎಂಬ ಜಾನಪದ ನೃತ್ಯನಾಟಕ. ಉತ್ತರ ಆರ್ಕಾಟ್ ಜಿಲ್ಲೆಯಲ್ಲಿ ಈ ಬಗಯ ನಾಟಕಗಳನ್ನಾಡುವ ಕಲಾವಿದರ ಮೇಳಗಳು ಅನೇಕ ಇವೆ. ಇವುಗಳಲ್ಲಿ ಪುರಿಸೈ ಗ್ರಾಮದ ಮೇಳವು ಅತ್ಯುತ್ತಮವಾಗಿದ್ದು ಜನಪ್ರಿಯವಾಗಿದೆ.

೪. ವನದಲ್ಲಿ, ಬೆಟ್ಟಗುಡ್ಡಗಳಲ್ಲಿ ವಾಸಿಸುವವರ ಹಾಡುಗಳು- ನೃತ್ಯಗಳು.

01_70A_DBJK-KUH

ಹಲವು ವಿಧದ ಕೂತ್ತುಗಳು: ‘ಕೂತ್ತು’ ಎಂಬ ಪದವು ನಟನೆ, ನಾಟ್ಯ, ನಾಟಕ, ಆಟ ಮೊದಲಾದ ಅನೇಕ ಪದಗಳಿಗೂ ಸಮಾನವಾದ ಅರ್ಥದಲ್ಲಿ ಉಪಯೋಗಿಸಲ್ಪಡುವ ಪದವಾದರೂ ಹಿಂದಿನ ಕಾಲದಿಂದಲೂ ಅದು ‘ತೆರುಕೂತ್ತು’ ಒಂದಕ್ಕೆ ಹೆಚ್ಚಾಗಿ ಬಳಸಲ್ಪಡುತ್ತಿದ್ದ ಪದವಾಗಿ. ಸಂಗಂ ಸಾಹಿತ್ಯದಲ್ಲಿ ಬರುವ ‘ಕೂತ್ತರ್’ ಎಂಬ ಪದ ಕೂಡ ಬೀದಿಗಳಲ್ಲಿ ಮನೆ ಮನೆಗೆ ಅಲಂಕಾರ ಮಾಡಿಕೊಂಡು ಹೋಗಿ ಆಡುವ ಪಾಣರ ಒಂದು ಕುಲಕ್ಕೆ ಸಂಬಂಧಿಸಿದ್ದು. ಇಂದೂ ತಮಿಳು ರಾಜ್ಯದ ಹಲವೆಡೆಗಳಲ್ಲಿ ಅಲಂಕಾರ ಮಾಡಿಕೊಂಡು ಬೀದಿಗಳಲ್ಲಿ ಆಡುವ ಕೂತ್ತರನ್ನು ಕಾಣಬಹುದು. ಈ ‘ಕೂತ್ತರ್’ ಎಂಬ ಪದದಿಂದಲೇ ಕೂತ್ತಾಡಿಗಳ್, ಕೂತ್ತಿ, ಕೂತ್ತರ್‌ಕುಡಿ, ಕೂತ್ತರ್ ಕೋಯಿಲ್ ಮೊದಲಾದ ಅವರ ಗುಂಪನ್ನ, ಸ್ತ್ರೀಯನ್ನು, ಅವರು ವಾಸಿಸುವ ಸ್ಥಳವನ್ನು, ಅವರ ದೇವಸ್ಥಾನವನ್ನು ನಿರ್ದೇಶಿಸುವ ಪದಗಳುಂಟಾದವು. ‘ಕೂತ್ತು’ ಎಂಬ ಪದ ತುಂಬ ಹಳೆಯದು. ಇದಕ್ಕೆ ಸಂಬಂಧಿಸಿದ ಪದಗಳು ತೊಲ್‌ಕಾಪ್ಪಿಯಂ , ಶಿಲಪ್ಪದಿಕಾರಂ, ತಿರುಕ್ಕುರಳ್ ಮೊದಲಾದ ಅನೇಕ ತಮಿಳು ಪ್ರಾಚೀನ ಗ್ರಂಥಗಳಲ್ಲಿ ದೊರಕುತ್ತವೆ. ಒಂದನೇ ಶತಮಾನದ ‘ಪದಿಟ್ರು ಪತ್ತು’ ಎಂಬ ತಮಿಳು ಕಾವ್ಯದಲ್ಲಿಯೂ ಕೂತ್ತಿನ ಉಲ್ಲೇಖವಿದೆ. ಶಿಲಪ್ಪದಿಕಾರಂನಲ್ಲಿಯೂ ವಿನೋದ ಕೂತ್ತು, ಪಾವೈ ಕೂತ್ತು, ಕುರವೈ ಕೂತ್ತು ಮೊದಲಾದ ಅನೇಕ ವಿಧವಾದ ಕೂತ್ತುಗಳನ್ನು ಹೆಸರಿಸಲಾಗಿದೆ. ಪಲ್ಲವರ ಅನಂತರದ ಅನೇಕ ಶಾಸನಗಳಲ್ಲಿ ತೆರಕೂತ್ತಿನ ಬಗ್ಗೆ. ಉಲ್ಲೇಖವಿದೆ. ಸಂಗಂ ಸಾಹಿತ್ಯದಲ್ಲಿಯ ಅಗನಾನೂರು ಎಂಬುದರಲ್ಲಿ ‘ಗಳೈ ಕೂತ್ತಾಡಿಗಳ್’ ಎಂಬವರ ಉಲ್ಲೇಖವಿದೆ. ಗಳೈ ಕೂತ್ತಾಡಿಗಳ್ ಎಂದರೆ ಬಿದಿರಿನ ಮೇಲೆ ನಿಂತು ಆಡುವವರು. ‘ಗಳೈ ಕೂತ್ತು’ ಎಂಬುದೂ ತಮಿಳು ನಾಡಿನ ಒಂದು ರೀತಿಯ ಜನಪದ ನೃತ್ಯ.

ತೊಲ್ಕಾಪ್ಪಿಯಂನಲ್ಲಿ ‘ಕೂತ್ತರುಂ ಪಾಣರುಂ ಪೊರುಣರುಂ ವಿರಳಿಯುಂ’ ಎಂಬುದಾಗಿ ಒಂದು ಕಡೆ ಬರುತ್ತದೆ. ಅಂತೆಯೇ ತಿರುಕ್ಕುರಳ್‌ನಲ್ಲಿ ‘ಕೂತ್ತಾಟ್ಟು ಅವೈಕುಳಾತ್ತಟ್ರೇ’ ಎಂಬ ವಾಕ್ಯವಿದೆ.

‘ಆರ್ಯ ಕೂತ್ತಾಡಿನಾಲುಂ ಕಾರ್ಯತ್ತಿಲ್ ಕಣ್ಣಿರ್ಕವೆಣ್ಣುಂ’ ಎಂಬ ಗಾದೆ ತಮಿಳಿನಲ್ಲಿದೆ. ಇಲ್ಲೆಲ್ಲ ಕೂತ್ತು ಎಂಬ ಪದದ ಪ್ರಯೋಗವನ್ನು ಕಾಣಬಹುದು. ಕೂತ್ತನ್, ಕೂತ್ತಾಡಿ ಎಂದರೆ ನಟ ಅಥವಾ ನಾಟ್ಯ ಮಾಡುವವ. ಶಿವನು ನಟರಾಜನಾದುದರಿಂದ ತಮಿಳಿನಲ್ಲಿ ಅವನನ್ನು ಕೂತ್ತನ್, ಕೂತ್ತನಾರ್‌ಷ ಕೂತ್ತರಸನ್ ಎಂದು ಹೇಳುವರು. ಪ್ರಸಿದ್ಧವಾದ ಚಿದಂಬರಂ ದೇವಸ್ಥಾನದ ನಟರಾಜ ದೇವರನ್ನು ‘ತಿಲ್ಲೈ ಕೂತ್ತನ್’ ಎನ್ನುವರು. ಕೂತ್ತಿ, ಕೂತ್ತಾಡಿಚ್ಚಿ ಎಂದರೆ ನಟಿ ಅಥವಾ ನಾಟ್ಯ ಮಾಡುವವಳು. ಕೂತ್ತನ ಮಡದಿಯನ್ನು ‘ವಿರಲಿ’ ಎಂದು ಹೇಳುತ್ತಾರೆ. ಇವಳೂ ನೃತ್ಯವನ್ನು ಬಲ್ಲವಳಾಗಿರುವಳು. ಅರಮನೆಗೆ ಸೇರಿದ ನಾಟ್ಯಶಾಲೆಗೆ ‘ಕೂತ್ತಪ್ಪಳ್ಳಿ’ ಎಂದು ಹೆಸರು. ‘ಕೂತ್ತಾಂಡವರ್’ ಎಂಬುದು ತಮಿಳುನಾಡಿನ ಗ್ರಾಮದೇವತೆಯ ಹೆಸರು. ‘ಕಲೈಕಳುಜಿಯಂ’ ಎಂಬ ತಮಿಳು ವಿಶ್ವಕೋಶದಲ್ಲಿ ‘ದೇಶೀ’ ಹಾಗೂ ‘ಮಾರ್ಗ’ ಎಂಬುದಾಗಿ ಕೂತ್ತಿನಲ್ಲಿ ಎರಡು ವಿಧವಿದೆಯೆಂದು ಹೇಳಲಾಗಿದೆ. ಅಲ್ಲದೆ ವಸೈಕೂತ್ತು, ಪುಗಳ್‌ಕೂತ್ತು, ವೇತ್ತಿಯಲ್, ಪೊದುವಿಯಲ್, ವರಿಕೂತ್ತು, ವರಿಚ್ಚಾಂದಿ ಕೂತ್ತು, ಶಾಂತಿ ಕೂತ್ತು, ವಿನೋದ ಕೂತ್ತು, ಆರ‍್ಯಂ ತಮಿಳ್ ವಿಯಲ್‌ಪು ಕೂತ್ತು, ದೇಶಿ ಕೂತ್ತು ಎಂಬುದಾಗಿ ಹಲವು ವಿಧದ ಕೂತ್ತುಗಳನ್ನು ಹೆಸರಿದೆ. ತಮೀಲಿನ ನಿಘಂಟಿನಲ್ಲೂ ತಮಿಳಿನ ಕಲೈಕಳಂಜಿಯಂನಲ್ಲೂ ಮುಖ್ಯವಾಗಿ ಅಲ್ಲಿಯಂ, ಕೊಟ್ಟಿ,ಕುಡೈ, ಕಂಡಮ್, ಪಾಂಡ ರಂಗಮ್, ಮಲ್, ತುಡಿ, ಕಡೈಯಮ್, ಪೇಡು, ಮರಕ್ಕಾಲ್, ಪಾವೈ ಎಂಬ ಹನ್ನೊಂದು ರೀತಿಯ ಕೂತ್ತುಗಳ ವಿವರಣೆಯಿದೆ.

ಸಂಗಂ ಕಾಲದಲ್ಲಿ ಕೂತ್ತರು ಎಂಬ ಜಾತಿಯವರು ಬಯಲಾಟ ದಂತಹ ಪ್ರದರ್ಶನಗಳನ್ನು ನಡೆಸುತ್ತಿದ್ದರು. ರಾಜರು ಅವರಿಗೆ ಹೊನ್ನು, ಆನೆ, ವಸ್ತ್ರ, ಊರು ಮೊದಲಾದವುಗಳನ್ನು ಸನ್ಮಾನವಾಗಿ ಕೊಡುತ್ತಿದ್ದರು. ಕೂತ್ತನಿಗೆ ಕೊಟ್ಟ ಊರು, ‘ಕೂತ್ತಪ್ಪಾಡಿ’ ಎನ್ನಿಸುತ್ತದೆ. ಈ ಹೆಸರಿನ ಊರುಗಳು ಇಂದಿಗೂ ತಮಿಳು ನಾಡಿನ ಕೆಲವೆಡೆಗಳಲ್ಲಿ ಇವೆ. ‘ಪಾರಿ’ ಎಂಬ ರಾಜನು ಈ ಕಲಾವಿದರಿಗೆ ಮುನ್ನೂರು ಊರುಗಳನ್ನು ನೀಡಿದನಂತೆ. ‘ಮರನ್ ಕಡೈ ಕೂತ್ತು’ ಎಂಬುದು ಪುರಾಣ ಕಥೆಯೊಂದನ್ನು ಆಧರಿಸಿ ರಚಿಸಿದ್ದು. ‘ಇಂದ್ರಾಣಿ’ ಎಂಬ ನೃತ್ಯಗಾತಿ ದೇವ ಲೋಕದಲ್ಲಿ ನರ್ತನ ಮಾಡುತ್ತಿದ್ದಾಗ ಶತ್ರುಗಳು ಚೇಳು ಮತ್ತು ಹಾವಿನ ರೂಪದಲ್ಲಿ ಆಕೆಯ ಕಾಲನ್ನು ಕಚ್ಚಲು ಬರುತ್ತಾರೆ. ಅದನ್ನು ತಪ್ಪಿಸಲು ಆಕೆ ಮರದ ಕಾಲುಗಳನ್ನು ಹಾಕಿಕೊಂಡು ನರ್ತನ ಮಾಡುತ್ತಾಳೆ. ತಂಜಾವೂರಿನಲ್ಲಿ ಈ ರೀತಿಯ ಮರದ ಕಾಲಿನ ನರ್ತನ ಬಳಕೆಯಲ್ಲಿತ್ತೆಂದು ಹೇಳುವರು. ಇದರ ಪ್ರಭಾವದಿಂದಲೇ ಮುಂದೆ ‘ಮರಕ್ಕಾಲಿನ ಕುದುರೆಯಾಟ’ ಮುಂತಾದುವು ಬಂದವು. ‘ಕೊರವೈಕೂತ್ತ’ ಎಂಬುದು ದಾರಿಹೋಕ ಪ್ರೇಮಿಯನ್ನು ಕುರಿತದ್ದು.

ಹದಿಮೂರನೇ ಶತಮಾನದಲ್ಲಿ ಕಂಡು ಬರುವ ಇನ್ನಿತರ ಪ್ರಕಾರಗಳು ನೊಂಡಿಕೂತ್ತು, ಪಳ್ಳು ಕೂತ್ತು, ಕೊರವಂಜಿ ಕೂತ್ತು ಮುಂತಾದವು. ಇವುಗಳಲ್ಲಿ ಕೊರವಂಜಿ ಕೂತ್ತು ಪ್ರಮುಖವಾದುದು. ಕೊರವಂಜಿಕೂತ್ತಿನ ಪ್ರಮುಖ ಪಾತ್ರಧಾರಿಗಳು ಇಬ್ಬರು ‘ಜಿಪ್ಸಿ’ ನಾಟ್ಯಕಾರರು. ಇದರ ಮೂಲ ಉದ್ದೇಶ ಶಿವನ ಪೂಜೆ, ಅರ್ಚನೆ ಹಾಗೂ ವರ ಪಡೆಯುವುದು. ಈ ಪ್ರದರ್ಶನ ಪೂರ್ತಿ ಹಾಡುನರ್ತನದಲ್ಲಿ ಕೊನೆಗೊಳ್ಳುತ್ತದೆ. ‘ಕುಟ್ರಾಲ ಕೊರವಂಜಿ’ ಎಂಬುದರಲ್ಲಿ ಕೊಟ್ಟಿರುವ ಕಥೆಯ ಪ್ರಕಾರ ಜಿಪ್ಸಿ ಯುವತಿಯೊಬ್ಬಳು ಶಿವನನ್ನು ಪ್ರೇಮಿಸುತ್ತಾಳೆ. ಅವಳ ಪ್ರೇಮದಲ್ಲಿ ಸಿಲುಕಿದ ಜಿಪ್ಸಿ ಯುವಕ ತನ್ನ ನಲ್ಲೆಯನ್ನು ಹುಡುಕಿಕೊಂಡು ಬರುತ್ತಾನೆ. ಇಬ್ಬರೂ ಒಟ್ಟಾಗಿ ಶಿವನನ್ನು ಅರ್ಚಿಸುತ್ತಾರೆ. ಇದು ಪುರಾಣದ ಆಧಾರವನ್ನು ಹೊಂದಿರುವ ಕಥೆ. ಇದಲ್ಲದೆ (೧೫ನೇ ಶತಮಾನದಲ್ಲಿದ್ದ) ‘ಶರಭೇಂದ್ರ ಭೂಪಾಲ ಕೊರವಂಜಿ’, ಕುಂಭೇಶ್ವರ ಕೊರವಂಜಿ, ಚಿದಂಬರ ಕೊರವಂಜಿ, ತ್ಯಾಗೇಶ್ವರ ಕೊರವಂಜಿ ಮುಂತಾದ ಕಥೆಗಳೂ ಪ್ರಸಿದ್ಧವಾಗಿವೆ.

‘ಪಳ್ಳುಕ್ಕೂತ್ತಿ’ನಲ್ಲಿ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರಿರುತ್ತಾರೆ. ಇವರಿಬ್ಬರಲ್ಲಿ ವಿವಾದವುಂಟಾದಾಗ ಊರಿನ ಮುಖ್ಯಸ್ಥ ಜಮೀನ್ದಾರ ವಿವಾದವನ್ನು ಬಗೆಹರಿಸುತ್ತಾನೆ. ಅಲ್ಲದೆ ಜಮೀನ್ದಾರ ಊರಿನ ‘ಪಳ್ಳರ್’ ಹುಡುಗಿಯರ ಮೇಲೆ ತನ್ನ ದೃಷ್ಟಿಯನ್ನು ಬೀರುತ್ತಾನೆ. ‘ಮುಕ್ಕಡಳೂರ್ ಪಳ್ಳು ‘ವಿನ ವಸ್ತು ರೈತರನ್ನು ಕುರಿತ ಕಷ್ಟಸುಖಗಳ ವಿಚಾರವಾಗಿದೆ. ‘ನೊಂಡಿ ಕೂತ್ತು’ ಹೆಸರೇ ಸೂಚಿಸುವಂತೆ ಅಂಗವಿಕಲರನ್ನು ಕೇಂದ್ರವಾಗುಳ್ಳ ಕಥೆ. ಈ ರೀತಿಯ ಪಾತ್ರಗಳು ತಮ್ಮ ಹಿಂದಿನ ದಿನಗಳಲ್ಲಿ ಕಳ್ಳರಾಗಿದ್ದು ಶಿಕ್ಷೆಗೊಳಪಟ್ಟು ಕಾಲನ್ನೋ ಕೈಯನ್ನೋ ಕಳೆದುಕೊಂಡವರಾಗಿರುತ್ತಾರೆ. ಇವರು ಊರಿನ ಶಿವಾಲಯದಲ್ಲಿ ತಮ್ಮ ಉಳಿದ ವೇಳೆಯನ್ನು ಕಳೆಯುತ್ತ ಶಿವಸ್ತೋತ್ರ ಮಾಡುತ್ತ ಮೋಕ್ಷಕ್ಕೆ ಪ್ರಯತ್ನಿಸುತ್ತಾರೆ. ೧೭ನೇ ಶತಮಾನದ ‘ಸಾತೆಯಾನ್ ಕುಡಿ ನೊಂಡಿ ನಾಟಕಮ್’ ಪ್ರಮುಖವಾದುದು. ‘ಸಾಕೈಕೂತ್ತು’ ಕೇರಳದ ‘ಸಾಕೈಯಾರ್’ ಎಂಬ ಪಂಗಡವನ್ನು, ಅವರ ಆಚರಣೆಗಳನ್ನು ಕುರಿತದ್ದು. ಈ ರೀತಿ ಅನೇಕ ಕೂತ್ತುಗಳು ತಮಿಳು ನಾಡಿನಲ್ಲಿ ಪ್ರಚಲಿತವಾಗಿದೆ.

ತೆರುಕ್ಕೂತ್ತು: ತಮಿಳುನಾಡಿನಲ್ಲಿ ಬಯಲಾಟವನ್ನು ತೆರುಕ್ಕೂತ್ತು ಎಂದು ಹೇಳುವರು. ತೆರು ಎಂದರೆ ಬೀದಿ ಕೂತ್ತು ಎಂದರೆ ನಾಟ್ಯ ಅಥವಾ ಆಟ ತೆರುಕ್ಕೂತ್ತು; ಎಂದರೆ ಬೀದಿನೃತ್ಯ ಅಥವಾ ಬಯಲಾಟ ಎಂದು ಹೇಳಬಹುದು. ಇದನ್ನು ವೀದಿನಾಟಕ ಎಂದೂ ಕರೆಯುತ್ತಾರೆ. ದಶರೂಪಕಗಳಲ್ಲಿ ‘ವೀಥಿ’ ಎಂಬ ಒಂದು ಪ್ರಕಾರವಿದೆ. ಆದರೆ ಅದು ಬೇರೆ ತೆರುಕ್ಕೂತ್ತು ಬೇರೆ. ಆಂಧ್ರ ಪ್ರದೇಶದಲ್ಲಿಯೂ ವೀಧಿ ನಾಟಕವೆಂಬ ಪ್ರಕಾರವಿದೆ. ಆದರೆ ಅದು ಹಾಸ್ಯ ಪ್ರಹಸನ. ತೆರುಕ್ಕೂತ್ತು ಆಂಧ್ರದ ‘ಕೂಚಿಪುಡಿ’ಯ ಅನುಕರಣೆ ಎಂದು ಹೇಳುತ್ತಾರೆ. ಕೂಚಿಪೂಡಿ ತೆರುಕ್ಕೂತ್ತಿಗಿಂತಲೂ ಹಿಂದಿನದು ಮಾತ್ರವಲ್ಲ, ಅದು ಅಭಿವೃದ್ಧಿ ಹೊಂದಿದೆ. ತೆರುಕ್ಕೂತ್ತಿನ ಕಲಾವಿದರಲ್ಲಿ ವಿದ್ಯಾವಂತರು ಯಾರೂ ಇಲ್ಲದುದರಿಂದ ಅದನ್ನು ಅಭಿವೃದ್ಧಿ ಗೊಳಿಸಲು ಯಾರೂ ಆಸಕ್ತಿ ತೋರಿಸಲಿಲ್ಲ. ದೇಶಿಯ ಕೂತ್ತು ಮತ್ತು ಆರ್ಯ ಕೂತ್ತು ಇವೆರಡರ ಕುರಿತೂ ತಮಿಳು ಸಾಹಿತ್ಯದಲ್ಲಿ ಉಲ್ಲೇಖವಿದೆ.

ಅರಸರ ಮುಂದೆ ಹಾಗೂ ಹಿರಿಯರ ಮುಂದೆ ನಡೆಸುವ ಕೂತನ್ನು ‘ವೇತ್ತಿಯಲ್’ ಎನ್ನುತ್ತಾರೆ. ‘ವೇಂದು’ ಎಂದರೆ ತಮಿಳಿನಲ್ಲಿ ಅರಸ ಎಂದರ್ಥ. ಓದು ಬರೆಹವಿಲ್ಲದ ಹಳ್ಳಿಯ ಒಕ್ಕಲು ಜನರ ಮುಂದೆ ಪ್ರದರ್ಶಿಸಲ್ಪಡುವ ಕೂತ್ತನ್ನು ‘ಪೊದುವಿಯಲ್’ ಎನ್ನುವರು. ಶಿಲಪ್ಪದಿಕಾರಂನಲ್ಲಿಯೂ ಈ ಎರಡು ಬಗೆಯ ಕೂತ್ತುಗಳ ಬಗ್ಗೆ ಉಲ್ಲೇಖವಿದೆ. ಇವುಗಳಲ್ಲಿ ಪೊದುವಿಯಲ್ ಎಂಬ ಸಾಮಾನ್ಯ ಜನರಿಗಾಗಿ ನಡೆಸುತ್ತಿದ್ದ ಕೂತ್ತು ತಮಿಳುನಾಡಿನಲ್ಲಿ ಇಂದೂ ‘ತೆರುಕ್ಕೂತ್ತು’ ಎಂಬ ಬಯಲಾಟವಾಗಿ ಉಳಿದಿದೆ. ತಮಿಳರಸರು ಪಾಣರೆಂಬ ಹಾಡುಗಾರರನ್ನೂ, ವಾದ್ಯಗಾರರಾದ ಓಲಗಾರರನ್ನೂ, ಬಯಲಾಟದವರಾದ ಕೂತ್ತರನ್ನೂ ಪೋಷಿಸಿದರು. ಸಾಹಿತ್ಯ, ಸಂಗೀತ ಮತ್ತು ನಾಟಕ ಈ ಮೂರನ್ನು ಪೋಷಿಸಿದ್ದರಿಂದ ತಮಿಳರಸರಿಗೆ ‘ಮುತ್ತಮಿಳ್ ವೇಂದರ್’ ಎಂಬ ಹೆಸರು ಬಂತು.

ಮೊದಲು ತೆರುಕ್ಕೂತ್ತಿನಲ್ಲಿ ಸಂಭಾಷಣೆ ಇರಲಿಲ್ಲವೆಂದೂ, ಸಂಸ್ಕೃತ ನಾಟಕಗಳ ಪ್ರಭಾವದಿಂದಲೇ ತೆರುಕೂತ್ತಿನಲ್ಲಿ ಸಂಭಾಷಣೆ ಪ್ರಾರಂಭವಾಗಿರಬೇಕೆಂದೂ ಕೆಲವು ವಿದ್ವಾಮಸರು ಅಭಿಪ್ರಾಯ ಪಡುತ್ತಾರ. ಸಂಸ್ಕೃತ ನಾಟಕಗಳು ಗದ್ಯ ಹಾಗೂ ಪದ್ಯ ಸಂಭಾಷಣೆಯುಳ್ಳವಂಥವು. ಆದರೆ ದಕ್ಷಿಣದ ನಾಟಕಗಳಲ್ಲಿ ನೃತ್ಯ, ಸಂಗೀತ, ಅಭಿನಯಗಳೇ ಮುಖ್ಯವಾಗಿದ್ದುವು. ಸಂಸ್ಕೃತದ ಪ್ರಭಾವದಿಂದ ದಕ್ಷಿಣದ ನಾಟಕಗಳಲ್ಲಿಯೂ ಸಂಭಾಷಣೆ ಪ್ರಾರಂಭವಾಗಿರಬೇಕೆಂಬ ಸಂಶಯ ಬಲವಾಗುತ್ತದೆ. ಆದುದರಿಂದ ಯಕ್ಷಗಾನ ಬಯಲಾಟಗಳಲ್ಲಿಯೂ ಹಿಂದೆ ಸಂಭಾಷಣೆ ಇದ್ದಿರಲಾರದೆಂದು ಊಹಿಸಬಹುದಾಗಿದೆ. ಹಳ್ಳಿಯ ಸಾಮಾನ್ಯ ಜನರಿಗೆ ಹಾಡು, ನೃತ್ಯ ಅಭಿನಯಗಳಿಂದ ಕಥೆಯನ್ನು ಪೂರ್ಣ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೆಂಬ ಕಾರಣದಿಂದ ತೆರುಕೂತ್ತು ಹಾಗೂ ಯಕ್ಷಗಾನ ಬಯಲಾಟ ಮುಂತಾದ ದಾಕ್ಷಿಣಾತ್ಯ ಕಲೆಗಳಲ್ಲಿ ಸಂಭಾಷಮೆಯೂ ಸ್ಥಾನ ಪಡೆದಿರಬೇಕು.

ಮೊದಲು ಒಬ್ಬೊಬ್ಬರಾಗಿ ಬೀದಿಗಳಲ್ಲಿ ಆಡಿ ಜನರಿಗೆ ಸಂತೋಷವನ್ನುಂಟು ಮಾಡುತ್ತಿದ್ದ ಕೂತ್ತರು ಅಥವಾಕೂತ್ತಾಡಿಗಳು ಮುಂದೆ ಕಥೆಯಿಂದೊಡಗೂಡಿದ ಕೂತ್ತುಗಳನ್ನು ಊರಿನ ಬಯಲು ಪ್ರದೇಶಗಳಲ್ಲಿಯೂ, ಬೀದಿಗಳಲ್ಲಿಯೂ ಆಡತೊಡಗಿದ್ದರಿಂದ ಇದು ತೆರುಕ್ಕೂತ್ತಾಯಿತು ಎನ್ನುತ್ತಾರೆ. ದಕ್ಷಿಣ ಕನ್ನಡದಲ್ಲೂ ಮಳೆಗಾಲದಲ್ಲಿ ರಾತ್ರಿಯಕ್ಷಗಾನ ಸ್ತ್ರೀವೇಷಗಳನ್ನು ಕುಣಿಸುವವರು ಮನೆಮನೆಗೆ ಬರುವುದು ವಾಡಿಕೆ. ಒಬ್ಬ ಪುರುಷ ಪಾತ್ರಧಾರಿ ಮತ್ತು ಒಬ್ಬ ಸ್ತ್ರೀ ಪಾತ್ರಧಾರಿ, ಭಾಗವತ, ಮದ್ದಲೆಗಾರ ಹಾಗೂ ಶ್ರುತಿ ನುಡಿಸುವವ-ಇಷ್ಟು ಜನರಿರುವ ಗುಂಪು ಪುರಾಣದ ಕಥೆಗಳಲ್ಲಿ ಪ್ರಸಿದ್ಧವಾದ ಕೆಲವು ಅಂಶಗಳನ್ನು ಅಭಿನಯಿಸಿ ತೋರಿಸುವುದು. ಬಹುಶಃ ಯಕ್ಷಗಾನ ಬಯಲಾಟದ ಮೂಲರೂಪ ಇದಾಗಿರಬಹುದೇ ಎಂಬ ಸಂಶಯ ಬರುವುದು ಸಹಜವಾಗಿದೆ. ಹಾಗಿದ್ದಲ್ಲಿ ತೆರುಕ್ಕೂತ್ತಿಗೂ ಯಕ್ಷಗಾನ ಬಯಲಾಟಕ್ಕೂ ವಿಕಾಸಕ್ರಮದಲ್ಲಿ ಸಾಮ್ಯವಿದೆಯೆಂದು ಹೇಳಬಹುದು. ಈ ಬಗ್ಗೆ ಸರಿಯಾದ ಸಂಶೋಧನೆ ಆಗಬೇಕಾಗಿದೆ.

ತೆರುಕ್ಕೂತ್ತು ವಿಚಾರದಲ್ಲಿ ಲಿಖಿತ ದಾಖಲೆಗಳಿಲ್ಲ. ಇದು ಮೌಖಿಕವಾಗಿ ನಡೆದುಕೊಂಡು ಬಂದ ಸಂಪ್ರದಾಯಬದ್ಧ ಕಲೆಯಾಗಿವೆ. ಇದನ್ನು ಯಕ್ಷಗಾನ ಬಯಲಾಟದೊಂದಿಗೆ ಹೋಲಿಸಿದಾಗ ಕೆಲವು ಸಮಾನ ಅಂಶಗಳನ್ನು ಕಾಣಬಹುದು. ಇದು ತೆಂಕುತಿಟ್ಟಿನ ಬಯಲಾಟವನ್ನು ಹೋಲುತ್ತದೆ. ಅಲ್ಲಲ್ಲಿ ಕಥಕ್ಕಳಿಯ ಲೇಪವನ್ನೂ ಕಾಣಬಹುದು. ಇಂತಹ ಬಯಲು ನಾಟಕಗಳು ಹದಿಮೂರನೆಯ ಶತಮಾನದಿಂದ ಆಚರಣೆಯಲ್ಲಿರುವುದಾಗಿ ತಿಳಿದು ಬಂದಿದೆ. ಆಟಗಳು ತಮಿಳಿನ ಯಕ್ಷಗಾನ ಪ್ರಸಂಗಗಳ ವಸ್ತುಗಳನ್ನೇ ಹೊಂದಿರುತ್ತವೆ. ಆಟಕ್ಕೆ ಮಧುರೆ ಕೇಂದ್ರ ಸ್ಥಾನವಾಗಿತ್ತು. ಇಂದಿಗೂ ಒಂದು ಗುಂಪು ಉತ್ತರ ಆರ್ಕಾಟಿನಲ್ಲಿ ಈ ಬಯಲಾಟದ ಪೂರ್ವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ.

ಹಿಂದಿನ ಕಾಲದಲ್ಲಿ ಅಂದರೆ ಸುಮಾರು ನೂರು ವರ್ಷಗಳ ಹಿಂದೆ ಸ್ತ್ರೀಯರೂ ತೆರುಕೂತ್ತಿನಲ್ಲಿ ಭಾಗವಹಿಸುತ್ತಿದ್ದರು. ಕ್ರಿ.ಶ. ೧೮೭೨ರ ಹೊತ್ತಿಗೆ ಕಾಂಚೀಪುರದ ಬಾಲಾಮಣಿ ಎಂಬವಳು ತೆರುಕೂತ್ತು ಮೇಳವನ್ನು ನಡೆಸುತ್ತಿದ್ದಳು. ಮಹಾರಾಷ್ಟ್ರದವರಾದ ಗೋವಿಂದ ಸ್ವಾಮಿರಾವ್‌ ಎಂಬವರು ಆಧುನಿಕ ತಮಿಳು ರಂಗ ಭೂಮಿಯ ಸ್ಥಾಪಕರೆಂದು ಹೇಳುತ್ತಾರೆ. ಅವರ ಬಳಿಕ ಬಂದವಳೇ ಬಾಲಾಮಣಿ. ಸಾಮಾನ್ಯವಾಗಿ ತೆರುಕ್ಕೂತ್ತಿನ ಪ್ರದರ್ಶನ ಹಳ್ಳಿಯ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಬಯಲು ರಂಗಮಂದಿರದಲ್ಲಾಗುತ್ತದೆ. ಹಳ್ಳಿಯ ಪ್ರಮುಖ ವ್ಯಕ್ತಿಜಮೀನ್ದಾರನು ಪ್ರದರ್ಶನದ ಹಕ್ಕನ್ನು ಪಡೆದಿರುತ್ತಾನೆ. ಮೂಲತಃ ಈ ಪ್ರಸಂಗಗಳ ವಸ್ತುಗಳು ಅಶ್ಲೀಲದಿಂದ ಕೂಡಿರುತ್ತಿದ್ದುವು. ಶಂಕರಲಿಂಗ ಸ್ವಾಮಿ ಎಂಬವರು ಇದಕ್ಕೆ ಒಳ್ಳೆಯ ತಿರುವನ್ನು ಕೊಟ್ಟಿದಾರೆ. ಇವರು ಸುಮಾರು ಮೂವತ್ತು ನಲವತ್ತು ಪ್ರಸಂಗಗಳನ್ನು ರಚಿಸಿದ್ದಾರೆ. ತೆರುಕ್ಕೂತ್ತಿನಲ್ಲಿ ಪಾತ್ರಗಳ ನಡುವೆ ಸಂಭಾಷಣೆ ತೀರಾ ಕಡಿಮೆ. ಪಾತ್ರಗಳು ಯಕ್ಷಗಾನ ಪ್ರಸಂಗದಲ್ಲಿಯಂತೆ ಹಾಡಿನ ಮುಖಾಂತರ ತಮ್ಮ ತಮ್ಮವಿಚಾರವನ್ನು ನಿರೂಪಿಸುತ್ತಾರೆ. ಹೆಚ್ಚಾಗಿ ಸಾಮಾಜಿಕ ಪ್ರಸಂಗಗಳೂ ಪುರಾಣದ ಹಿನ್ನೆಲೆಯಿಂದ ಕೂಡಿರುತ್ತವೆ. ಹಳ್ಳಿಗಳಲ್ಲಿ ಮಳೆಯನ್ನು ತರಿಸುವುದಕ್ಕಾಗಿಯೂ ಈ ಬಯಲಾಟಗಳನ್ನು ದೇವಸ್ಥಾನಗಳಲ್ಲಿ ಪ್ರದರ್ಶಿಸುತ್ತಾರೆ. ದೇವಸ್ಥಾನಗಳಲ್ಲಿ ಪ್ರದರ್ಶಿಸಲ್ಪಡುವುದರಿಂದ ಇವುಗಳನ್ನು ‘ಶಾಂತಿ ಕೂತ್ತು’ ಎಂದೂ ಕರೆಯುತ್ತಾರೆ. ಪರಂಪರೆ ಪ್ರಕಾರ ‘ದ್ರೌಪದಿ ಅಮ್ಮನ್’ ಎಂಬ ಉತ್ಸವಕ್ಕೆ ಸಂಬಂಧವಾಗಿ ಕೂತ್ತು ಪ್ರದರ್ಶಿಸಲ್ಪಡುತ್ತದೆ. ಜಾತ್ರೆ, ಉತ್ಸವಗಳ ಹಾಗೂ ಧಾರ್ಮಿಕ ಸಮಾರಂಭಗಳ ಸಂದರ್ಭದಲ್ಲಿಯೂ ಈ ತೆರುಕೂತ್ತು ಬಯಲಾಟಗಳನ್ನು ಪ್ರದರ್ಶಿಲ್ಪಡುತ್ತವೆ.

ತೆರುಕ್ಕೂತ್ತು ತುಂಬ ಪ್ರಾಚೀನವಾದ ಜನಪದ ಕಲೆ. ಮೊಗಲರಿಗಿಂತಲೂ ಮೊದಲು ತೆರುಕ್ಕೂತ್ತು ಪ್ರಚಾರದಲ್ಲಿತ್ತೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ‘ತಮಿಳುನಾಡಿನ ಜನಪದ ರಂಗಭೂಮಿ’ ಎಂಬ ಲೇಖನದಲ್ಲಿ ಜೀ.ಶಂ ಪರಮಶಿವಯ್ಯನವರು ತೆರುಕೂತ್ತಿನ ಬಗ್ಗೆ ‘ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟಗಳಂತೆಯೇ ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯವಾದ ಆಟ ತೆರುಕೂತ್ತು-ಆಂಧ್ರದ ವೀಧಿನಾಟಕ, ಕರ್ನಾಟಕದ ಬಯಲಾಟಗಳ ತಮಿಳುನಾಡಿನ ರೂಪವೇ ‘ತೆರುಕ್ಕೂತ್ತು’. ಅದರ ಹೆಸರಿನಲ್ಲೂ ಸಹ ಈ ಸಾಮ್ಯವನ್ನು ಕಾಣಬಹುದು. ‘ಮೂಡಲಪಾಯ’ ಬಯಲಾಟಕ್ಕೆ ತೀರ ಹತ್ತಿರವಾದ ತಿರುಕೂತ್ತಿನ ವೇಷಭೂಷಣಗಳು ಇದರ ಪ್ರತಿರೂಪವೋ ಎಂಬಷ್ಟು ಭ್ರಮೆಯನ್ನು ತಂದುಕೊಡುತ್ತವೆ. ಇಲ್ಲಿಯ ಭುಜಕೀರ್ತಿ, ಕಿರೀಟ, ಕರ್ಣಹಾರ, ಎದೆಕವಚ, ವೀರಗಾಸೆ ಎಲ್ಲವೂ ಮೂಡಲಪಾಯದ ಪಡಿಯಚ್ಚುಗಳೇ. ವೀಧಿ ನಾಟಕವೂ ಇದರಿಂದ ಭಿನ್ನವಲ್ಲ” ಎಂದಿದ್ದಾರೆ.

ತೆರುಕ್ಕೂತ್ತಿನ ಸಂಗೀತವು ಹೆಚ್ಚಾಗಿ ಮೇಳಗೀತ, ಆನಂದಭೈರವಿ, ನೀಲಾಂಬರಿ, ನಾದನಾಮಕ್ರಿಯಾ, ಪುನ್ನಾಗವರಾಳಿ, ಕುರವಂಜಿ, ನಾಟ, ಸಹಾನ ಮೊದಲಾದ ರಾಗಗಳನ್ನು ಈ ಜಾನಪದ ಹಾಡುಗಳಲ್ಲಿ ಬಳಸುತ್ತಾರೆಂಬುದು ಗಮನಿಸಬೇಕಾದ ಅಂಶ. ಅಂತೆಯೇ ತಾಳಗಳಲ್ಲಿ ಛಾಪು, ಆದಿ, ರೂಪಕ ಮೊದಲಾದುವನ್ನು ಬಳಸುತ್ತಾರೆ. ರಾಗಗಳಲ್ಲಿ ಹಾಡುಗಳು ರಚಿತವಾದರೂ ನಿಶ್ಚಿತವಾಗಿ ರಾಗಗಳನ್ನು ಗುರುತಿಸುವುದು ಕಷ್ಟ. ಇದು ಸರಳ ರೀತಿಯ, ನಯವಿಲ್ಲದ, ಮಧ್ಯಯುಗದ ಗಾಯನ. ನಾಟಿ ರಾಗವನ್ನು ಗುರುತಿಸಬಹುದೆಂದೂ, ಶ್ರಮವಹಿಸಿದರೆ ಸಹಾನರಾಗವನ್ನು ಗುರುತಿಸಬಹುದೆಂದೂ ಸಂಗೀತ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಹಿಮ್ಮೇಳಕ್ಕೆ ಮುಖವೀಣೆ, ಮೃದಂಗ, ತಾಳಗಳನ್ನು ಉಪಯೋಗಿಸುತ್ತಾರೆ. ಶ್ರುತಿಗಾಗಿ ಹಾರ್ಮೋನಿಯಂ ಬಳಸುತ್ತಾರೆ. ‘ಚೆಂಡ’ಯ ಬಳಕೆ ಇಲ್ಲಿಲ್ಲ. ತೆರುಕೂತ್ತಿನಲ್ಲಿ ಬಳಸುವ ವಾದ್ಯ ವಿಶೇಷಗಳು ಮೂಡಲಪಾಯದ ವಾದ್ಯ ವಿಶೇಷಗಳಿಗೆ ತೀರ ಸಮೀಪವಾದುವೆಂದು ಹೇಳಬಹುದಾಗಿದೆ. ಶ್ರುತಿಗಾಗಿ ಹಿಂದೆ ಚರ್ಮವಾದ್ಯವನ್ನು ಬಳಸಲಾಗುತ್ತಿತ್ತೆಂದೂ ಹೇಳಲಾಗಿದೆ. ಪಾತ್ರಗಳ ಪ್ರವೇಶ ಸಂದರ್ಭದಲ್ಲಿ ಹಿಡಿಯಲಾಗುವ ಅಡ್ಡ ಪರದೆಯ ಬಳಕೆ ತೆರುಕ್ಕೂತ್ತಿನಲ್ಲಿದೆ.

ತೆರುಕ್ಕೂತ್ತಿನ ಕಲಾವಿದರಿಗೆ ಧ್ವನಿವರ್ಧಕದ ಹಾಗೂ ಹಿನ್ನೆಲೆ ಗಾಯಕರ ಸಹಾಯ ಬೇಕಾಗಿಲ್ಲ. ಪಾತ್ರಧಾರಿಗಳು ತಾವೇ ಹಾಡು ಹಾಡುತ್ತಾರೆ. ಅವರ ಧ್ವನಿಯ ಸುಮಾರು ಒಂದು ಮೈಲು ವಿಸ್ತೀರ್ಣಕ್ಕೆ ಕೇಳುತ್ತದೆ. ಅವರು ಶಕ್ತಿಯುತವಾದ ತಮ್ಮ ಕಂಠದಲ್ಲಿ ಪದಗಳ ಸ್ಪಷ್ಟ ಉಚ್ಚಾರಣೆಯೊಂದಿಗೆ ಶ್ರುತಿಬದ್ಧವಾಗಿ ಅಧಿಕ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರೆದುರು ಹಾಡುತ್ತಾರೆ. ಯಕ್ಷಗಾನ ಬಯಲಾಟದಲ್ಲಿಯೂ, ಪಾತ್ರಧಾರಿಗಳೂ ಹಾಡುವ ಪದ್ಧತಿಯು ಹಿಂದೆ ಬಳಕೆಯಲ್ಲಿದ್ದಿರಬೇಕು. ಈಗಲೂ ಕೆಲವು ವೇಷಧಾರಿಗಳು ಪದ್ಯದ ಕೆಲವು ಪಾದಗಳನ್ನು ಭಾಗವತನ ಹಾಡಿನೊಂದಿಗೇ ರಾಗವಾಗಿ ಹೇಳುತ್ತಾರೆ. ಅಥವಾ ಪದ್ಯದ ಪ್ರಾರಂಭವನ್ನು ಮಾತ್ರ ಎತ್ತಿಕೊಡುತ್ತಾರೆ. ಮೊದಲು ಪೂರ್ತಿ ಪದ್ಯವನ್ನು ಹಾಡುತ್ತಿದ್ದ ಸಂಪ್ರದಾಯ ಕ್ರಮೇಣ ಈ ಸ್ಥಿತಿಗೆ ಬಂದಿರಬೇಕೆಂದು ಊಹಿಸಬಹುದಾಗಿದೆ. ಸಂಪ್ರದಾಯ ಬದ್ಧವಾದ ತರಬೇತಿಯನ್ನು ಪಡೆದ ಕಲಾವಿದರಿಗೆ ಅಂಗಾಂಗಗಳ ಚಲನೆ, ಹಾವಭಾವಗಳ ಮೂಲಕ ತಮ್ಮ ಭಾವನೆಗಳನ್ನು ಪ್ರದರ್ಶಿಸಿ ವಿವಿಧ ರೀತಿಯ ನಟನೆಯೊಂದಿಗೆ ಹೃದಯಂಗಮವಾಗಿ ಪಾತ್ರವನ್ನು ಚಿತ್ರಿಸುವ ನೈಪುಣ್ಯವಿರುತ್ತದೆ. ನಟರು ಪ್ರಾಚೀನ ಹಾಗೂ ಭಯಾನಕವಾದ ವೇಷಭೂಷಣಗಳನ್ನು ಧರಿಸುತ್ತಾರೆ. ತೆರುಕೂತ್ತಿನ ನಾಟ್ಯವು ತುಂಬಾ ಚಟುವಟಿಕೆಯುಳ್ಳದ್ದು; ಚುರುಕುಳ್ಳದ್ದು. ತುಂಬಾ ಸರಳವಾದುದು ಕೂಡ. ಅಭಿನಯವು ಉತ್ಸಾಹಭರಿತವಾದುದು. ಮುಖ್ಯ ಪಾತ್ರಗಳು ಆಡಂಬರದ ರೀತಿಯ ಮಾತನ್ನಾಡಿದರೆ ಇತರ ಪಾತ್ರಗಳ ಹಾಗೂ ಸ್ತ್ರೀ ಪಾತ್ರಗಳ ಮಾತಿನ ಧಾಟಿ ತುಂಬಾ ಸರಳ. ತೆರುಕೂತ್ತಿನ ವೇಷಭೂಷಣ, ಉಡಿಗೆ ತೊಡಿಗೆ, ಹೊಳೆಯುವ ಅಲಂಕಾರಗಳೆಲ್ಲ ಕಥಕ್ಕಳಿಯನ್ನು ನೆನಪಿಗೆ ತರುತ್ತವೆ.

ತೆರುಕ್ಕೂತ್ತಿನ ಕಥೆ ತುಂಬಾ ಜನಪ್ರಿಯವಾದುದು. ಹೆಚ್ಚಿನ ಕಲಾ ಪ್ರಕಾರಗಳ ವಸ್ತು ಮಹಾಭಾರತ – ರಾಮಾಯಣ – ಭಾಗವತಗಳನ್ನು ಆಧರಿಸಿರುತ್ತದೆ. ಈಗ ಪ್ರದರ್ಶಿತವಾಗುವ ತೆರುಕ್ಕೂತ್ತುಗಳಿಗೆ ಪುರಾಣ, ಇತಿಹಾಸಕ್ಕೆ ಸಂಬಂಧಪಟ್ಟ ಕತೆಗಳನ್ನೇ ಆಯ್ದುಕೊಳ್ಳುತ್ತಾರೆ. ಆದರೆ ತಮಿಳುನಾಡಿನ ಹರಿಜನರು ಬಯಲಾಟಗಳಿಗೆ ತಮ್ಮದೇ ಆದ ‘ಶೆಮನ್ ಶಂಡೈ’, ‘ಗೋವು ಕಥೆ’ ಮೊದಲಾದುವುಗಳನ್ನು ಆರಿಸಿಕೊಳ್ಳುತ್ತಾರೆ. ತೆರುಕ್ಕೂತ್ತನ್ನು ಕಲಿಸುವ ಉಪಾಧ್ಯಾಯರಿಗೆ ‘ತೆರುಕೂತ್ತು ವಾದ್ಯಾರ್’ ಎಂದು ಹೆಸರು. ಸಾಧಾರಣವಾಗಿ ಫೆಬ್ರವರಿ ತಿಂಗಳಿನಿಂದ ಜೂನ್ ತಿಂಗಳವರೆಗೂ ತಮಿಳು ನಾಡಿನ ಎಲ್ಲ ಹಳ್ಳಿಗಳಲ್ಲಿ ವಿಶೇಷವಾಗಿ ತೆರುಕ್ಕೂತ್ತಿನ ಪ್ರದರ್ಶನಗಳು ನಡೆಯುತ್ತವೆ. ಕನ್ನಡದ ಬಯಲಾಟದ ಪ್ರಸಂಗವಾದ ‘ಮೀನಾಕ್ಷಿ ಕಲ್ಯಾಣ’ದ ಬೆಳವಣಿಗೆ ಮತ್ತು ಮೂಲ ಪುರಾಣ ಪ್ರಸಂಗವೊಂದರ (ತಿರುವಿಳೈಯಾಡಲ್) ಆಧಾರದಿಂದಾಗಿರಬಹುದೆಂದು ಊಹಿಸಲಾಗಿದೆ. ಇತ್ತೀಚೆಗೆ ಯಕ್ಷ ಗಾನ ಮೇಲೆ ವ್ಯಾಸಂಗ ಮಾಡಿದ ಮಾಥಾ ಆಸ್ಟನ್ ತಮ್ಮ ಗ್ರಂಥದಲ್ಲಿ ಮೂವತ್ತಾರು ಬಯಲಾಟಗಳನ್ನು ಗುರುತಿಸಿದ್ದಾರೆ. ಅದರಲ್ಲಿ ತಮಿಳುನಾಡಿನ ನಾಲ್ಕು ಬಯಲಾಟದ ಕಥೆಗಳನ್ನು ಉಲ್ಲೇಖಿಸಿದ್ದಾರೆ.

ತೆರುಕ್ಕೂತ್ತನ್ನು ನಡೆಸಲು ಊರಿನ ಬೀದಿಯಲ್ಲಿ ಅಥವಾ ದೇವಾಲಯದ ಮುಂಭಾಗದಲ್ಲಿ ಹುಲ್ಲಿನಿಂದ ಹೊದಿಸಲ್ಪಟ್ಟ ಅಥವಾ ಸೋಗೆಯ ಮೇಲ್ಛಾವಣಿಯ ಚಪ್ಪರ ಅಥವಾ ಅಟ್ಟವನ್ನು ರಂಗಮಂಟಪಕ್ಕಾಗಿ ಸಿದ್ಧಗೊಳಿಸುತ್ತಾರೆ. ಇಲ್ಲವೇ ಊರಿನ ಮಧ್ಯದಲ್ಲಿ ಮೂರು ಮಾರ್ಗಗಳು ಅಥವಾ ನಾಲ್ಕು ಮಾರ್ಗಗಳು ಸೇರುವಲ್ಲಿ ಎರಡು ಮರದ ಕೊಂಬೆಗಳನ್ನು ನೆಡುವರು. ಅವುಗಳ ಮಧ್ಯೆ ಉದ್ದವಾದ ಬಿದಿರೊಂದನ್ನು ಇಟ್ಟು ಗಟ್ಟಿಯಾಗಿ ಕಟ್ಟುವರು. ಆ ಬಿದಿರಿನ ಎರಡೂ ತುದಿಗಳಲ್ಲಿ ಎರಡು ಪೆಟ್ರೋಮೇಕ್ಸ್‌ ದೀಪಗಳನ್ನು ತೂಗಿಸುವರು. ಪೆಟ್ರೋಮೇಕ್ಸ್ ದೀಪಗಳು ಬಳಕೆಗೆ ಬರುವುದಕ್ಕೆ ಮೊದಲು ಎರಡು ಬದಿಗಳಲ್ಲಿಯೂ ಇಬ್ಬರು ನಿಂತು ದೀವಟಿಗೆಗಳನ್ನು ಹಿಡಿಯುತ್ತಿದ್ದರು. ದೀವಟಿಗೆಗಳ ಬೆಳಕು ಕಡಿಮೆಯಾದಾಗ ಅವುಗಳಿಗೆ ಎಣ್ಣೆಯನ್ನೆರೆಯಲು ಇಬ್ಬರು ಎಣ್ಣೆಯ ಪಾತ್ರೆಗಳನ್ನು ಹಿಡಿದು ನಿಲ್ಲುತ್ತಿದ್ದರು. ಇದು ಆಗಿನ ಕಾಲದ ರಂಗಸ್ಥಳದ ಬೆಳಕಿನ ವ್ಯವಸ್ಥೆ. ಅರ್ಧ ವೃತ್ತಾಕಾರದಲ್ಲಿ ತೆರುಕೂತ್ತನ್ನು ನೋಡಲು ಸೇರಿರುವ ಜನರ ಮುಂದೆ ಇರುವ ಸ್ವಲ್ಪ ಎತ್ತರವಾದ ಸ್ಥಳವೇ ಕೂತ್ತನ್ನಾಡುವ ರಂಗ. ಅಲ್ಲಿ ಒಂದು ಬೆಂಚನ್ನಿಟ್ಟು ಅದರಲ್ಲಿ ಶ್ರುತಿ ಬಾರಿಸುವವ, ಮದ್ದಲೇಗಾರ ಮೊದಲಾದವರು ಕುಳಿತುಕೊಳ್ಳುತ್ತಾರೆ. ತಾಳ ಹಾಕುವವನೂ, ಹಾಡುವವನೂ ನಿಂತುಕೊಂಡೇ ತಮ್ಮ ಕಾರ್ಯ ನಿರ್ವಹಿಸಿದವರು. ಯಕ್ಷಗಾನ ಬಯಲಾಟದಲ್ಲಿಯೂ ಹಿಂದಿನ ಕಾಲದಲ್ಲಿ ಭಾಗವತರು ನಿಂತುಕೊಂಡೇ ಹಾಡುತ್ತಿದ್ದರೆಂಬುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು. ತೆರುಕೂತ್ತಿನಲ್ಲಿ ವೇಷಧಾರಿಯ ಹಾಡಿದ ಬಳಿ ಹಿಮ್ಮೇಳದವರೆಲ್ಲಾ ಒಟ್ಟಾಗಿ ಹಾಡುವುದೂ ಇದೆ. ಆ ಬೆಂಚಿನ ಮೇಲೆ ಮರದಿಂದ ಮಾಡಿದ ಒಂದು ಒರಳನ್ನು ಇಟ್ಟಿರುತ್ತಾರೆ. ಇದುವೇ ರಂಗಸ್ಥಳದಲ್ಲಿ ರಾಜಪಾತ್ರಗಳು ಕುಳಿತುಕೊಳ್ಳುವ ಆಸನ. ಈಗ ಒರಳಿಗೆ ಬದಲಾಗಿ ಮೇಜನ್ನು ಉಪಯೋಗಿಸುವರು.

ಪಾತ್ರಗಳ ಅಲಂಕಾರಕ್ಕಾಗಿ ಗಾಜಿನ ವಾಣಿಗಳಿಂದ ಮಾಡಿದ ಕುತ್ತಿಗೆಯ ಆಭರಣಗಳು, ಕಿವಿಯಾಭರಣಗಳು, ಎದೆಗಟ್ಟು, ಚಿನ್ನದಂತಹ ಮಿರುಗು ಕಾಗದಗಳಿಂದ ಅಲಂಕೃತವಾದ ಮರದಿಂದ ಮಾಡಿದ ಭುಜಕಟ್ಟುಗಳು, ಟೋಪನ್‌ಗಳು, ಕವಚಗಳು ಮೊದಲಾದುದವನ್ನು ಉಪಯೋಗಿಸಿಕೊಳ್ಳುತ್ತಾರೆ. ಕೆಲವು ಪಾತ್ರಗಳಿಗೆ (ಹೆಚ್ಚಾಗಿ ರಾಕ್ಷಸ ಪಾತ್ರಗಳಿಗೆ) ಎರಡು ಮೂರು ಸೀರೆಗಳನ್ನು ಲಂಗಗಳಂತೆ ಮಡಿಸಿ ನಡುವಿಗೆ ಸುತ್ತಿ ಕಟ್ಟುತ್ತಾರೆ. ಕೆಲವು ದುಷ್ಟ ಪಾತ್ರಗಳಿಗೆ ನೋಡುಗರಿಗೆ ಭಯವುಂಟಾಗುವಂಥ ಅಲಂಕಾರವನ್ನು ಮಾಡಲಾಗುತ್ತದೆ. ಕಿರೀಟಗಳನ್ನು ಮಿರುಗು ಕಾಗದ ಮತ್ತು ಗಾಜಿನ ಚೂರುಗಳಿಂದ ಅಲಂಕರಿಸುತ್ತಾರೆ. ಚಲ್ಲಣ, ನಿಲುವಂಗಿ, ಒಳ್ಳೆಯ ಅಂಚಿನ ಧೋತಿಗಳನ್ನು ಉಡುಪಾಗಿ ಬಳಸಲಾಗುವುದು. ಒಳ್ಳೆಯ ಪ್ರಭಾವಳಿಯಿಂದ ಕೂಡಿದ ಕಿರೀಟಗಳು ರಾಜಪಾತ್ರಗಳ ವೈಭವವನ್ನು ಹೆಚ್ಚಿಸುತ್ತವೆ. ಭುಜಕೀರ್ತಿಗಳು ಉದ್ದವಾಗಿದ್ದು ಕಲಾತ್ಮಕವಾಗಿರುತ್ತವೆ. ಘೋರ ಪಾತ್ರಗಳ ಕಿರೀಟಗಳು ಮಟ್ಟಸವಾಗಿರುತ್ತವೆ. ಯಕ್ಷಗಾನ ಬಯಲಾಟಗಳಂತೆ ಸ್ತ್ರೀಪಾತ್ರಗಳನ್ನು ಇಲ್ಲಿಯೂ ಪುರುಷರೇ ಧರಿಸುತ್ತಾರೆ. ಸ್ತ್ರೀ ಪಾತ್ರವನ್ನು ಧರಿಸಿದಾಗ ಅವರ ನಡೆನುಡಿ, ವೇಷ-ಭೂಷಣ, ಭಾವನೆ ಎಲ್ಲವೂ ಸ್ತ್ರೀಯರಂತೆಯೇ ಇರುತ್ತವೆ.

ತೆರುಕ್ಕೂತ್ತಿನ ಆರಂಭದಲ್ಲಿ ‘ಕಟ್ಟಿಯಂಕಾರನ್’ ಎಂಬ ಒಬ್ಬನು ಬರುವನು. ಈತನ ಪಾತ್ರ ಬಹಳ ಪ್ರಮುಖವಾದುದು. ಸಂಸಜ್ಜಿತ ವೇದಿಕೆಗಳಲ್ಲಿ ಪ್ರದರ್ಶಿಸಲ್ಪಡುವ ನಾಟಕಗಳಲ್ಲಿಯೂ ಈ ರೀತಿಯ ಪಾತ್ರವೊಂದು ಬರುವುದುಂಟು. ಆ ಪಾತ್ರವನ್ನು ವಿದೂಷಕ, ಬಫೂನ್, ಸೂತ್ರಧಾರಿ ಎಂದೆಲ್ಲ ಹೇಳುವರು. ಕಟ್ಟಿಯಂಕಾರನನ್ನು ಸೂತ್ರಧಾರನೆಂದೂ ಹೇಳುತ್ತಾರೆ. ಈತನೇ ತೆರುಕೂತ್ತಿನ ಭಾಗವತ ಎಂದೂ ಕೆಲವರ ಅಭಿಪ್ರಾಯ. ಈ ಕಟ್ಟಿಯಂಕಾರವನು ತನ್ನ ವಿನೋದಗಳ ಮೂಲಕ ಹಾಗೂ ಮಾತುಗಳ ಮೂಲಕ ನಗಿಸುತ್ತಾನೆ. ಆದರೆ ಈಗಿನ ನಾಟಕಗಳಲ್ಲಿ ಈ ರೀತಿಯ ಪ್ರತ್ಯೇಕ ಪಾತ್ರಗಳು ಕಡಿಮೆ. ತೆರುಕ್ಕೂತ್ತಿನಲ್ಲಿ ಬರುವ ಕಟ್ಟಿಯಂಕಾರವನದು ಒಂದು ವಿಶಿಷ್ಟ ಪಾತ್ರ. ಅವನು ಎಲ್ಲ ಪ್ರದರ್ಶನಗಳಲ್ಲಿಯೂ ಎಲ್ಲಾ ಕಥೆಗಳಲ್ಲಿಯೂ ಇರುತ್ತಾನೆ. ಆತನು ದೇವರ ಪ್ರಾರ್ಥನೆಯನ್ನು ಹಾಡಿ ಸಭೆಗೆ ಸಮಸ್ಕಾರ ಮಾಡಿ ಅಂದು ನಡೆಯಲಿರುವ ಕಥೆಯ ಹೆಸರನ್ನು ಹೇಳೀ ಅದರಲ್ಲಿರುವ ಲೋಪದೋಷಗಳನ್ನು ತಿಳಿಸಿ ಗುಣವನ್ನು ಮಾತ್ರವೇ ಸ್ವೀಕರಿಸಬೇಕೆಂದು ಪ್ರೇಕ್ಷಕರಲ್ಲಿ ಕೇಳಿಕೊಳ್ಳುತ್ತಾನೆ. ಅಲ್ಲದೆ ಮುಂದೆ ಬರುವ ಕಥೆಯ ಪಾತ್ರವನ್ನು ಪರಿಚಯ ಮಾಡಿ ಕೊಡುತ್ತಾನೆ. ಹೆಚ್ಚಾಗಿ ಎಲ್ಲ ಪಾತ್ರಗಳೂ ಹಾಡಿ ಕುಣಿದು ಸ್ವತಃ ತಮ್ಮನ್ನು ತಾವೇ ಪರಿಚಯ ಮಾಡಿಕೊಡುತ್ತವೆ. ಮೊದಲು ಒಂದು ಬಟ್ಟೆಯ ಪರದೆಯ ಹಿಂದೆ ಪಾತ್ರಗಳು ಮರೆಯಾಗಿರುತ್ತವೆ. ಪರದೆಯನ್ನು ಥಟ್ಟನೆ ತೆಗೆದು ಬಿಡುತ್ತಾರೆ. ಆಗ ಪಾತ್ರಗಳು ಹಾಡಿಕೊಂಡೂ ಕುಣಿದುಕೊಂಡೂ ರಂಗಪ್ರವೇಶ ಮಾಡಿ ಪ್ರೇಕ್ಷಕರಿಗೆ ತಮ್ಮ ಪರಿಚಯ ಮಾಡಿಕೊಡುತ್ತವೆ. ಬಳಿಕ ಪ್ರದರ್ಶನದ ಕಥೆಯ ದೃಶ್ಯಗಳು ಪ್ರಾರಂಭವಾಗುತ್ತವೆ. ಪಾತ್ರಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಕುಣಿಯುತ್ತವೆ. ಯಕ್ಷಗಾನ ಬಯಲಾಟದಲ್ಲಿ ಪಾತ್ರಗಳು ಎಡಬದಿಗೆ ತಿರುಗುತ್ತವೆ. ವೇಷಗಳೆಲ್ಲ ಹೆಚ್ಚಾಗಿ ರಂಗಸ್ಥಳದ ಬಲಬದಿಯಿಂದ ಪ್ರವೇಶಿಸಿ ಬಲಬದಿಯಿಂದಲೇ ಒಳಗೆ ಹೋಗುತ್ತವೆ. ಯಕ್ಷಗಾನ ಬಯಲಾಟದಲ್ಲಿ ಪಾತ್ರಗಳೆಲ್ಲ ರಂಗಸ್ಥಳದ ಬಲಬದಿಯಿಂದ ಪ್ರವೇಶಿಸಿ ಎಡಬದಿಯಿಂದ ನಿರ್ಗಮಿಸುತ್ತವೆ. ಕೆಲವೊಮ್ಮೆ ತೆರುಕೊತ್ತಿನಲ್ಲಿ ಕೋಡಂಗಿ, ವಿದೂಷಕ, ಸೇವಕ, ಸಖಿ ಎಲ್ಲಾ ಒಬ್ಬನೇ ಆಗುತ್ತಾನೆ. ತೆರೂಕೂತ್ತಿನ ಸ್ತ್ರೀ ಪಾತ್ರಗಳೆಲ್ಲ-ದೇವಿಯಾಗಲಿ, ರಾಣಿಯಾಗಲಿ-ಸಾಮಾನ್ಯ ಸ್ತ್ರೀಯರಂತೆ ಅಲಂಕಾರ ಮಾಡಿಕೊಂಡಿರುತ್ತವೆ.

ಉದಾಹರಣೆಗಾಗಿ ವಿರಾಟಪರ್ವ ತೆರುಕೂತ್ತು ಪ್ರಸಂಗದ ಕೆಲವು ದೃಶ್ಯಗಳನ್ನು ನೋಡಬಹುದು: ಕಟ್ಟಿಯಂಕಾರನು ಬರುವ ದೃಶ್ಯ ಹೀಗಿದೆ.

ವೃತ್ತಂ

ಚೆಂದುರತ್ತಿಲಕಮಿಟ್ಟು ಸಿ ಕೈಯಿಲ್ ಮುಂಡಾಸು ಕಟ್ಟಿ
ಮಂತಿರಿ ಮನ್ನನ್ ಮೆಚ್ಚವಾಳುಂ ಕೇಡಯ ಮುತ್ತಾಂಗಿ
ಚಂದಿರ ಕುಲತ್ತು ವೇಂದನ್ ಸಬೈಯಿಲ್ ಕಟ್ಟಿಯ ಮೇ ಕೂರ ಸುಂದರ ಬಿರುದು ಕಾಮಿಯಕ್ ಸುರುಕ್ಕುಡನ್ ವರುಗಿ ನ್ರಾನೇ

(ಕೆಂಪು ತಿಲಕವನ್ನಿಟ್ಟು ತಲೆಯಲ್ಲಿ ಮುಂಡಾಸನ್ನು ಕಟ್ಟಿ ಮಂತ್ರಿಯೂ ರಾಜನೂ ಮೆಚ್ಚುವಂತೆ ಖಡ್ಗ, ಗುರಾಣಿಗಳನ್ನು ಧರಿಸಿ ಚಂದ್ರವಂಶದ ರಾಜನ ಸಭೆಯಲ್ಲಿ ವಿವರವನ್ನು ತಿಳಿಸಲು ಸುಂದರನಾದ ಬಿರುದು ಕಾಮಿಯನ್ ಎಂಬವನು ಬೇಗನೇ ಬರುತ್ತಿದ್ದಾನೆ). ಕಟ್ಟಿಯಂಕಾರನೆಂದರೆ ವಿವರ ಹೇಳುವವನೆಂದರ್ಥ. ಇವನನ್ನು ‘ಕೋಮಾಳಿ’ ಎಂದೂ ಹೇಳುವರು.

ತರು

ಬಿರುದು ಕಾಮಿಯಲ್ ನಾನೇ! ಕಟ್ಟಿಯಂ ಕೂರುಂ
ಬಿರುದು ಕಾಮಿಯರ್ ನಾನೇ!
ಪಟ್ಟಿಯಂ ಪರಿಯೈ ಪಾರಾ ಪಾಂಗಾ ಕಟ್ಟಾರಿಯೀಟ್ಟಿ
ಸಟ್ಟಯಂ ಸಮುದಾಡು ಕಚ್ಚೈ ತಟ್ಟಿಪ್ಪಿಗುತ್ತು ಕಟ್ಟಿ…(ಬಿರುದು)
ವೀರ ಗಂಟಾಮಣಿಗಳ್ ವೆಂಟಮುಂ ಕಲಕಲೆನ್ನ
ಆರುಕ್ಕಾಗಿಲುಂ ಅಂಜಾ ಆಣ್
ಪುಲಿ ದೀರಮುಡೈಯ (ಬಿರುದು)

(ಬಿರುದು ಕಾಮಿ ಎಂಬುವನು ನಾನೇ. ವಿವರ ತಿಳಿಸುವ ಬಿರುದು ಕಾಮಿ ನಾನೇ. ಕಠಾರಿ-ಈಟಿ ಧರಿಸಿ, ಅಂಗಿ ಹಾಕಿಕೊಂಡು, ನಡುವಿಗೆ ವೀರಗಂಟೆಗಳನ್ನು ಕಟ್ಟಿಕೊಂಡು, ಕಚ್ಚೆ ಕಟ್ಟಿಕೊಂಡು ಕಾಲಿನಲ್ಲಿ ಪಾದರಕ್ಷೆ ಮೆಟ್ಟಿಕೊಂಡು, ಗೆಜ್ಜೆಗಳನ್ನು ಗಲಗಲವೆಂದು ಶಬ್ದ ಮಾಡುವ, ಯಾರಿಗೂ ಅಂಜಲಾರದ ಗಂಡು ಹುಲಿಯಂತೆ ಧೈರ್ಯ ಹೊಂದಿರುವ ಬಿರುದು ಕಾಮಿಯು ನಾನೇ.)

ಪಾಮರರ ನಾಟಕವಾದ ತೆರುಕೂತ್ತಿನಲ್ಲಿ ಕಟ್ಟಿಯಂಕಾರನು ಹಾಡುವ ಹಾಡುಗಳಲ್ಲಿಯೂ ಪ್ರಾಸ, ಗಂಭೀರತೆ, ಚುರುಕುತನ ಹಾಗೂ ಸೊಗಸು ಸೇರಿರುವುದನ್ನು ಕಾಣಬಹುದು. ತಾನು ಇಟ್ಟುಕೊಂಡಿರುವ ಬೊಟ್ಟಿನಿಂದ ತೊಡಗಿ ತನ್ನ ಮೇಲಂಗಿ, ಮುಂಡಾಸು, ಕತ್ತಿ, ಗುರಾಣಿ ಮೊದಲಾದುದ ವಿವರಗಳನ್ನೆಲ್ಲ ತಾನೇ ಹೇಳಿಕೊಂಡು ಬರುವ ಆತನ ಚಂದವೇ ಚಂದ.

ಮುಂದೆ ವಿರಾಟ ರಾಜನು ಬರುವ ದೃಶ್ಯ ಹೀಗಿದೆ…

ತರು

ಮಚ್ಚದೇ ಸತ್ತೈಯಾಳುಂ ಮೆಚ್ಚುಂ ವಿರಾಟಪತಿ
ಮನ್ನನ್ ಕೊಲುವದಾಕಿನಾರ್ ವೆನು ವೇಇಕ್ಕೈಯಾಗವೇ(ಮನ್ನನ್)
ಕಚ್ಚುಡರ್ ನರಮಣಿ ಮಕುಟಂ ಪಳ ಪಳೇನ್ನ
ಕನ್ನಡರ್ ತೆಲುಂಗರುಂ ಮನ್ನುಂ ತನ್ನಗರ್ ಪತಿ
ಆಳಗೈ ನಗರೈ ಯೊತ್ತವಳ ಮೈ ನಗರ್ಕ್ಕಧಿಷರ್
…………………………………..ಮಚ್ಚದೇ ಸತ್ತೈ.

(ಮತ್ಸ್ಯ ದೇಶವನ್ನಾಳುವ, ಎಲ್ಲರ ಮೆಚ್ಚುಗೆ ಗಳಿಸಿದ ವಿರಾಟರಾಜರು ಬಹಳ ಸುಂದರವಾಗಿ ಸಿಂಹಾಸನವನ್ನಲಂಕರಿಸಿದ್ದಾನೆ. ಹೊಳೆವ ನವರತ್ನಗಳಿಂದ ಕೂಡಿದ ಕಿರೀಟವು ಥಳಥಳಿಸುತ್ತದೆ. ಕನ್ನಡದ, ತೆಲುಗಿನ, ಮರಾಠದ ಹಾಗೂ ಉಳಿದ ದೇಶಗಳ ರಾಜರುಗಳೆಲ್ಲಾ ಬಂದು ಸೇರಿದ್ದಾರೆ. ಅವನ ನಗರವು ಅಲಕಾಪುರ (ಕುಬೇರನ ರಾಜಧಾನಿ)ದಂತೆ ಶೋಭಿಸುತ್ತದೆ. ಅಷ್ಟು ಸುಂದರವಾದ ದೇಶದ ರಾಜ ಆತ).

ತಾನು ಯಾರು, ತನ್ನ ನಾಡು ಯಾವುದು, ತನ್ನ ಹಿರಿಮೆ ಏನು ಎಂಬುದನ್ನೆಲ್ಲ ಹೇಳಿಕೊಂಡು ರಾಜರು ಬರುವ ಸನ್ನಿವೇಶ ನಮಗೆ ನಗುವನ್ನುಂಟು ಮಾಡಿದರೂ, ಓದುಬರೆಹವಿಲ್ಲದ ಜನರಿಗೆ ಅರ್ಥವಾಗುವಂತೆ ಇವುಗಳನ್ನು ಹೇಳುವುದು ಸೂಕ್ತವೇ ಆಗಿದೆ. ತೆರುಕೂತ್ತಿನಲ್ಲಿ ಸ್ತ್ರೀ ಪಾತ್ರಗಳು ಬರುವ ದೃಶ್ಯವೂ ಸುಂದರವಾಗಿದೆ. ಬಲರಾಮನ ಮಡದಿ ರೇವತಿ ರಂಗಕ್ಕೆ ಪ್ರವೇಶಿಸುವ ರೀತಿಯನ್ನು ನೋಡಬಹುದು.

ಕುಂಕುಮ ತಿಲಕವಿಟ್ಟುಕ್ಕೂರ್ವಿಳಿ ಮೈಯುಂ ತೀಟ್ಟಿ
ಕಂಕಣ ಕಡಗು ಪೊಂಡು ಕನ್ನಿಯುಂ ಎಳುಂದಿರುಂದು
ನಂಗೈ ಎನ್
ದಾದಿ ಮಾರ್ಗಳ್ ನಲಮುಡೆನ್ ಕವರಿ ವೀಸ
ಸಿಂಗಾರ ರೇವತಿ ಚಿರಪ್ಪುಡನ್ ವರುಗಿನ್ ರೇ ನೇ…

(ಕುಂಕುಮದ ತಿಲಕವನ್ನಿಟ್ಟು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಕಂಕಣ ಕಡಗಗಳನ್ನು ಧರಿಸಿ ಎದ್ದ ಕನ್ನಿಕೆಯಾದ ನನಗೆ ಸಖಿಯರು ಬೀಸಣಿಗೆಯಿಂದ ಬೀಸುತ್ತಿರಲು ಶೃಂಗರಿಸಲ್ಪಟ್ಟ ರೇವತಿಯಾದ ನಾನು ವಯ್ಯಾರದೊಂದಿಗೆ ಅಂದವಾಗಿ ಬರುತ್ತಿದ್ದೇನೆ).

ತೆರುಕ್ಕೂತ್ತಿನ ಯಾವುದೇ ಪಾತ್ರವು ರಂಗವನ್ನು ಪ್ರವೇಶಿಸುವಾಗ ಒಂದು ವೃತ್ತವನ್ನು ಹಾಡಿಕೊಂಡು ಬರುವುದು ಪದ್ಧತಿ. ರಂಗಕ್ಕೆ ಬಂದ ರೇವತಿಯು ಕಟ್ಟಿಯಂಕಾರವನ್ನು ನೋಡಿ ‘ಎಲವೋ ಸಖೀ’ ಎಂದು ಕರೆಯುವಳು. ಆಗ ಆತನು ಒಂದು ಬಟ್ಟೆಯ ತುಂಡನ್ನು ಸ್ತ್ರೀಯರ ಹಾಗೆ ಎದೆಯ ಮೇಲೆ ದಾವಣಿಯಂತೆ ಹೊದ್ದುಕೊಂಡು ‘ದೇವಿ, ಆಜ್ಞೆಯೇನು?’ ಎಂದು ಬಿನ್ನವಿಸುವನು. ಕೂಡಲೇ ರೇವತಿಯು ‘ನಾನು ನನ್ನ ಪತಿಯನ್ನು ನೋಡುವುದಕ್ಕಾಗಿ ಬಂದಿರುವೆನು. ಹೋಗಿ ನೋಡೋಣವೇ?’ ಎಂದು ಕೇಳುವಳು. ಬಳಿಕ ಉದ್ಯಾನದಿಂದ ಹೂಗಳನ್ನು ಕೊಯ್ದುಕೊಂಡು ಹೋಗಿ ಪತಿಯ ಪಾದಗಳಿಗೆ ಅರ್ಪಿಸಿ ಸ್ತೋತ್ರ ಮಾಡುವಳು.

ತೆರಕ್ಕೂತ್ತಿಗೆ ಪುರಾಣ ಮೂಲದಿಂದ, ಜಾನಪದ ಮೂಲ ದಿಂದ, ಇತಿಹಾಸ ಮೂಲದಿಂದ ಕಥಾವಸ್ತುವನ್ನು ಆರಿಸಿಕೊಂಡು ಪ್ರಸಂಗಗಳನ್ನು ರಚಿಸಲಾಗಿದೆ. ಜಲಕ್ರೀಡೆ, ದ್ರೌಪದಿ ಸ್ವಯಂವರ, ದ್ರೌಪದಿ ವಸ್ತ್ರಾಪಹರಣ, ವಿರಾಟ ಪರ್ವ, ಕೀಚಕವಧೆ, ಕರ್ಣಮೋಕ್ಷ, ಸುಭದ್ರಾ ಪರಿಣಯ, ಪ್ರಹ್ಲಾದ, ವಳ್ಳಿಯಮ್ಮನ್ ಕಥೆ, ಹರಿಶ್ಚಂದ್ರ ಮಾರ್ಕಾಂಡೇಯ, ಕೋವಲನ್, ನಲ್ಲ ತಂಗಳ್, ತಿರುನೀಲಕಂಠ ನಾಯನಾರ್, ವಲ್ಲಾಳ ಮಹಾರಾಜನ್, ಮಧುರೈ ವೀರನ್ ಮುಂತಾದ ಅನೇಕ ತೆರುಕೂತ್ತು ಪ್ರಸಂಗಗಳು ಜನಪ್ರಿಯವಾಗಿವೆ.

ಹಳ್ಳಿಯ ಜನರು ತೆರುಕ್ಕೂತ್ತಿನ ವೇಷಧಾರಿಗಳಿಗೆ ಬಹುಮಾನ ನೀಡುವುದೂ ಇದೆ. ತೆರುಕ್ಕೂತ್ತು ಮೇಳ ತಮ್ಮ ಊರಿಗೆ ಬಂದಾಗ ಊಟ ಉಪಚಾರಗಳನ್ನು ಕೆಲವರು ನಡೆಸುತ್ತಾರೆ. ಪ್ರತಿಯೊಬ್ಬ ವೇಷಧಾರಿಯ ನೃತ್ಯ, ಮಾತು ಬೇರೆ ಬೇರೆಯಾಗಿರುವುದು ಬೇರೆ ಬೇರೆ ಮೇಳಗಳವರು ಆಡುವ ಒಂದೇ ಕಥೆಯನ್ನಾದರೂ ನೋಡಲು ಹಳ್ಳಿಯ ಜನರು ಕಷ್ಟಪಡುತ್ತಾರೆ. ಪಾತ್ರಗಳ ಅಲಂಕಾರಕ್ಕೆ ಬೇಕಾದ ವೇಷಭೂಷಣ ಸಾಧನಗಳನ್ನು ಪಾತ್ರಧಾರಿಗಳೇ ತರುತ್ತಾರೆ. ಸ್ತ್ರೀಯ ಪಾತ್ರಧಾರಿಯು ತನಗೆ ಬೇಕಾದ ಸೀರೆ, ರವಿಕೆ ಇತ್ಯಾದಿಗಳನ್ನು ಹಳ್ಳಿಯ ಹೆಂಗುಸರಿಂದ ಕೇಳಿ ಪಡೆಯುತ್ತಾನೆ. ಇವುಗಳನ್ನು ಕೊಡಲು ಹಳ್ಳಿಯ ಹೆಂಗುಸರು ಆಸೆಪಡುತ್ತಾರೆ. ವೇಷಧಾರಿಯು ತೆರುಕ್ಕೂತ್ತಿನ ಕಥೆಗಳಿಗೆ ಸಂಬಂಧಪಟ್ಟ ಹಾಡುಗಳನ್ನೂ ಮಾತುಗಳನ್ನೂ ಚೆನ್ನಾಗಿ ಬಾಯಿಪಾಠ ಮಾಡಿಕೊಂಡಿರಬೇಕಾಗುತ್ತದೆ. ತೆರುಕೂತ್ತಿಗೆ ಬೇಕಾದ ವೇಷಭೂಷಣಗಳನ್ನು ತಯಾರಿಸುವವರು ತಂಜಾವೂರಿನಲ್ಲಿ ಈಗಲೂ ಇದ್ದಾರೆ.

ಸಂಪ್ರದಾಯಬದ್ಧ ತೆರುಕ್ಕೂತ್ತು ಜಾನಪದ ನಾಟಕ ಕಲೆಯ ತಮಿಳುನಾಡಿನ ತಂಜಾವೂರು, ತಿರುಚಿನಾಪಳ್ಳಿ, ಮಧುರೈ, ರಾಮನಾಥಪುರ, ತಿರುನೆಲ್ವೇಲಿ, ಸೇಲಂ, ಉತ್ತರ ಆರ್ಕಾಟು ಮೊದಲಾದ ಹಲವಾರು ಜಿಲ್ಲೆಗಳಲ್ಲಿ ಪ್ರಚಾರದಲ್ಲಿದೆ. ಉತ್ತರ ಆರ್ಕಾಟು ಜಿಲ್ಲೆಯ ಪುರಿಸೈ ಗ್ರಾಮದ ಶ್ರೀ ಪುರಿಸೈ ನಟೇಶ ತಂಬಿರಾನೆಯ ತೆರುಕ್ಕೂತ್ತು ಮೇಲ ಬಹಳ ಪ್ರಸಿದ್ಧವಾದ ಮೇಳವಾಗಿದೆ. ಈ ಮೇಳ ನಟೇಶ ತಂಬಿರಾನೆಯ ಚಿಕ್ಕಪ್ಪ ದಿ. ರಾಘವ ತಂಬಿರಾನೆಯವರಿಂದ ಸ್ಥಪಿತವಾಯಿತು. ಈ ಮೇಳ ಮೂವತ್ತಕ್ಕಿಂತೂ ಹೆಚ್ಚು ವರ್ಷಗಳಿಂದ ಸಕ್ರಿಯವಾಗಿ ನಡೆದು ಬರುತ್ತಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ನಟೇಶ ತಂಬಿರಾನೆಯವರನ್ನು ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ. ತಮಿಳುನಾಡಿನ ಸಂಗೀತ ನಾಟಕ ಸಭೆಯು (ಇಯಲ್ ಇಶೈ ನಾಟಕ ಮನ್ರಮ್) ಜಾನಪದ ನಾಟಕ ಕಲೆಗೆ ಅವರು ನೀಡಿದ ಅಸಾಧರಣ ಕೊಡುಗೆಯನ್ನು ಕಂಡು ಅವರಿಗೆ ‘ಕಲೈ ಮಾಮಣಿ’ ಎಂಬ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಈಮೇಳದ ಇತರ ಮೂರು ಜನ ಕಲಾವಿದರುಗಳಾದ ಕಣ್ಣನ್ ತಂಬಿರಾನ್, ವಿ. ರಾಜು ತಂಬಿರಾನ್ ಮತ್ತುತಂಗವೇಲು ಎಂಬವರೂ ‘ಕಲೈಮಾಮಣಿ’ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಹತ್ತಿಪ್ಪತ್ತು ವರ್ಷಗಳಿಗೆ ಮೊದಲು ‘ತಾತಾಪುರಂ ಕೃಷ್ಣನ್ ಸಭಾ’ ಎಂಬ ಒಂದು ತೆರುಕೂತ್ತು ಮೇಳ ಇತ್ತೆಂದೂ, ಈ ಮೇಳವು ಹೆಚ್ಚಾಗಿ ಭಾರತ ಕಥೆಯ ಹಲವು ಭಾಗಗಳ ತೆರುಕೂತ್ತು ಪ್ರಸಂಗಗಳನ್ನು ಊರೂರುಗಳಿಗೆ ಹೋಗಿ ಅಭಿನಯಿಸುತ್ತಿತ್ತೆಂದೂ ಹೇಳುತ್ತಾರೆ. ವೃತ್ತಿಪರ ಮೇಳಗಳಂತೆ ತೆರುಕೂತ್ತನ್ನು ಅಭ್ಯಾಸ ಮಾಡಿದ ಹವ್ಯಾಸೀ ಕಲಾವಿದರ ಸಂಘಗಳೂ ಇವೆ. ಆದರೆ ಈ ಸಂಘಗಳ ಕಲಾವಿದರುಗಳಿಗೆ ಸರಿಯಾದ ಅನುಭವವಿಲ್ಲದಿರುವುದರಿಂದ ಕಲಾನೈಪುಣ್ಯವನ್ನೂ ಉಚಿತವಾದ ಸಂಭಾಷಣೆ ಹಾಗೂ ಹಾಡುಗಳನ್ನೂ ಇವರ ಪ್ರದರ್ಶನಗಳಲ್ಲಿ ಕಾಣಲು ಸಾಧ್ಯವಿಲ್ಲ. ನೃತ್ಯವಿಲ್ಲದೆ ಕೇವಲ ಅಭಿನಯದ ಮೂಲಕ ಪ್ರದರ್ಶಿಸಲ್ಪಡುವ ತೆರುಕೂತ್ತು ನಾಟಕಗಳನ್ನಾಡುವ ಸಂಘಗಳೂ ಇರುತ್ತವೆ. ಇವರು ನಾಟಕದ ವೇಷಭೂಷಣಗಳನ್ನು ಧರಿಸಿ ನಾಟಕದಂತೆ ವರ್ಣಾಲಂಕಾರ ಮಾಡಿಕೊಳ್ಳುವರು. ಹಿನ್ನೆಲೆಗೆ ಹಾರ್ಮೋನಿಯಂನ್ನೂ ಬಳಸುವರು. ಈ ಪ್ರದರ್ಶನ ಸಾಮಾನ್ಯವಾಗಿ ಸಂಗೀತ ನಾಟಕದಂತೆ ಇರುತ್ತದೆ.

ಕರ್ನಾಟಕದ ಯಕ್ಷಗಾನ ಬಯಲಾಟ, ಕೇರಳದ ಕಥಕ್ಕಳಿ, ಆಂಧ್ರದ ಕೂಚಿಪೂಡಿ ಹಾಗೂ ತಮಿಳುನಾಡಿನ ತೆರುಕ್ಕೂತ್ತುಗಳು ದ್ರಾವಿಡ ಮೂಲಕ್ಕೆ ಸೇರಿದ ಹೆಚ್ಚಿನ ಹೋಲಿಕೆಗಳಿರುವ ಜಾನಪದ ಕಲೆಗಳೆಂದು ಕಂಡುಬರುತ್ತದೆ. ಆದರೆ ತೆರುಕ್ಕೂತ್ತು ಯಕ್ಷಗಾನ, ಬಯಲಾಟ, ಕಥಕ್ಕಳಿ, ಕೂಚಿಪೂಡಿಗಳಷ್ಟು ಅಭಿವೃದ್ಧಿಯನ್ನು ಹೊಂದಿಲ್ಲ. ಅಷ್ಟು ಜನಪ್ರಿಯತೆಯನ್ನೂ ಗಳಿಸಲಿಲ್ಲ. ಇದಕ್ಕೆ ಮುಖ್ಯ ಕಾರಣ ತಮಿಳುನಾಡಿನಲ್ಲಿ ವಿದ್ಯಾವಂತರು ಯಾರೂ ತೆರುಕೂತ್ತಿನ ಅಭಿವೃದ್ದಿಗಾಗಿ ಶ್ರಮಿಸದಿರುವುದು ಮತ್ತು ವಿದ್ಯಾವಂತ ಸಮಾಜ ತೆರುಕ್ಕೂತ್ತನ್ನು ಹೆಚ್ಚು ಮಾನ್ಯ ಮಾಡದಿರುವುದು. ಪಟ್ಟಣಗಳಲ್ಲಿ ತೆರುಕೂತ್ತಿನ ಪ್ರದರ್ಶನಗಳು ಜರಗುವುದು ತುಂಬ ಕಡಿಮೆ. ಕೇವಲ ಕೆಲವು ಹಳ್ಳಿಗಳಲ್ಲಿ ಮಾತ್ರ ಈಗಲೂ ತೆರುಕೂತ್ತಿನ ಪ್ರದರ್ಶನಗಳು ನಡೆಯುತ್ತಿವೆ. ದಕ್ಷಿಣ ಭಾರತದ ಮುಖ್ಯ ಜಾನಪದ ಕಲೆಗಳಾದ ಯಕ್ಷಗಾನ ಬಯಲಾಟ, ಕಥಕ್ಕಳಿ, ಕೂಚಿಪೂಡಿ ಹಾಗೂ ತೆರುಕ್ಕೂತ್ತುಗಳ ಬಗ್ಗೆ ಅವುಗಳ ಹುಟ್ಟು, ಬೆಳವಣಿಗೆ ಹಾಗೂ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ತೌಲನಿಕ ಅಧ್ಯಯನ ಸಂಶೋಧನೆ ಆಗಬೇಕಾಗಿದೆ.

.ಎಸ್.ಬಿ.