ತೆಲುಗು ಜನಪದ ಸಾಹಿತ್ಯ ತೆಲುಗುನಾಡಿನ ಜಾನಪದರೆಂದರೆ ತೆಲುಗರೆಲ್ಲಾ ಸೇರುತ್ತಾರೆ. ತೆಲುಗು ಜಾನಪದಕ್ಕೆ ಅವರೆಲ್ಲರೂ ಒಂದೊಂದು ಕೈ ಹಾಕಿದವರೇ, ಒಂದೊಂದು ವಾಕ್ಯವನ್ನು ಸೇರಿಸಿದವರೇ. ಭಾರತದ ಎಲ್ಲ ಕಡೆಗಳಲ್ಲೂ ಇರುವಂತೆ ತೆಲುಗರಲ್ಲೂ ಶೇ.೮೦ ರಷ್ಟು ಗ್ರಾಮೀಣ ಜನರೇ. ಎಣಿಕೆಗೂ ಸಿಕ್ಕಿದಷ್ಟು ಕಾಲದಿಂದ ಜನಪದ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿರುವ ಬುಡಕಟ್ಟು ಜನಾಂಗದವರು ಆಂಧ್ರದಲ್ಲಿ ಸುಮಾರು ೧೭ ಲಕ್ಷಕ್ಕಿಂತ ಹೆಚ್ಚು ಇದ್ದಾರೆ. ಚೆಂಚು, ಕೋಯ, ಕೊಂಡದೊರ, ಕೊಂಡರೆಡ್ಡಿ, ಮನ್ನದೊರ, ಸವರ, ಯಾನಾದಿ, ಎರುಕುಲ ಮುಂತಾದವರು ಬುಡಕಟ್ಟು ಜಾನಪದವನ್ನು ಕಾಪಾಡಿಕೊಂಡು ಬಂದಿದ್ದಾರೆ.

ಜನಪದ ಗೀತೆ: ಜನಪದ ಗೀತೆಗಳಲ್ಲಿ ಕೆಲಸದ ಹಾಡುಗಳಿಗೆ ಪ್ರಥಮ ಸ್ಥಾನ; ಅದರಲ್ಲೂ ಬೇಸಾಯದ ಹಾಡುಗಳಿಗೆ ಮೊದಲಸ್ಥಾನ ಸಿಕ್ಕುತ್ತದೆ. ಮಳೆರಾಯನ ಹಾಡು, ಏತದ ಹಾಡು, ನಾಟಿ ಹಾಡು, ಕಳೆಕೀಳುವ ಹಾಡು, ಕೊಯ್ಲು ಹಾಡು ಮುಂತಾದುವು ತೆಲುಗಿನಲ್ಲೂ ಇವೆ. ಏತದ ಹಾಡುಗಳು ಕೆಲವು ಕಡೆ ಇದ್ದರೆ ‘ಕಪಿಲಪಾಟಲು’ ಎಂಬುವು ಇನ್ನು ಕೆಲವು ಕಡೆ ಇವೆ. ಬಾವಿಯಿಂದ ನೀರೆತ್ತುವ ಸಾಧನ ಕಪಿಲೆ. ಈ ಹಾಡುಗಳು ಅನಲ್ಪಾರ್ಥವನ್ನು ಕೊಡುತ್ತವೆ.

ಈತ ಮಾನು ಇಲ್ಲು ಕಾದು, ತಾಟಿ ಮಾನು ತಾವು ಕಾದು
ತಗಿಲಿನೋಡು ಮೊಗುಡು ಕಾದು, ತಗರು ಬಂಗಾರು ಕಾದು
(ಈಚಲು ಮರ ಮನೆಯಲ್ಲ, ತಾಳೆಮರ ತಾವಲ್ಲ
ತಗಲಿಕೊಂಡವ ಗಂಡನಲ್ಲ, ತವರ ಬಂಗಾರವಲ್ಲ)

ಇಂತಹ ಗಾದೆಗಳು ಕೂಡ ಕಪಿಲೆ ಹಾಡುಗಳಲ್ಲಿ ಸೇರಿರುತ್ತವೆ.

ಕೆಲಸದ ಶ್ರಮವನ್ನು ಮರೆಸುವಂತಹ ಕೆಲಸದ ಹಾಡುಗಳು:

ಕುಟ್ಟುಕುಟ್ಟು ಎನ್ನುವರು ಅದೆಂಥಾಕುಟ್ಟು
ಬತ್ತದ ರಾಶಿಯ ಮೇಲೆ ಕೈಯಿಟ್ಟಂತೆ
ಅಡುಗೆ ಅಡುಗೆ ಎನ್ನುವರು ಅದೆಂಥಾ ಅಡುಗೆ
ಅತ್ತಿಗೆ ಜೊತೆ ನಾದಿನಿ ವಾದ ಮಾಡಿದಂತೆ

ಎಂಬ ಹಾಡು ಕೆಲಸದಲ್ಲಿ ಜಾನಪದರಿಗೆ ಇರುವ ಆಸಕ್ತಿಯನ್ನು ತೋರಿಸುತ್ತದೆ. ತೆಲುಗಿನ ಕೆಲಸದ ಹಾಡುಗಳಲ್ಲಿ ದೋಣಿಯ ಹಾಡುಗಳು ಮುಖ್ಯವಾಗಿವೆ. ಆಂಧ್ರಕ್ಕೆ ತುಂಬ ಉದ್ದವಾದ ತೀರಪ್ರದೇಶವಿದೆ. ಕೃಷ್ಣ ಮತ್ತು ಗೋದಾವರಿ ನದಿಗಳಲ್ಲಿ ಪ್ರಯಾಣ ಮತ್ತು ಹಡಗಿನಲ್ಲಿ ಸರಕುಗಳ ಸಾಗಾಣಿಕೆ ಹೆಚ್ಚಾಗಿ ನಡೆಯುತ್ತದೆ. ದೋಣಿಯ ಹಾಡುಗಳಲ್ಲಿ ಹೆಚ್ಚಾಗಿ ತತ್ವಪದಗಳಿವೆ. ಕೆಲವು ಹಾಡುಗಳು ಬರಿ ಧ್ವನ್ಯನುಕರಣ ಶಬ್ದಗಳಿಂದ ತುಂಬಿರುತ್ತವೆ.

ಏಲೆಸ್ಸಾ ಓಲೆಸ್ಸಾ ಏಲೆಸ್ಸಾ ಓಲೆಸ್ಸಾ
ಏಲೆಸ್ಸಾಬೋ ಓಲೆಸ್ಸಾ ಓಲೆಸ್ಸಾಬೋ ಓಲೆಸ್ಸಾ
ಎಲಾ ಯೇಲಾ ಯೇಲಾ ಯೇಲಾ ಯೇಲಾ ಯೇಲಾ ತಂಡೇಲಾ
ಏಲಾ ಏಲಾ ಜೋರ‍್ಶೆಯ್ ಬಾರೈಯ್

ತೆಲುಗಿನ ಸ್ತುತಿಪದಗಳಲ್ಲಿ ರಾಮನನ್ನು ಕುರಿತವು ಹೆಚ್ಚು. ತೆಲುಗಿನಲ್ಲಿರುವಷ್ಟು ರಾಮಾಯಣಗಳು ಬಹುಶಃ ಇನ್ನಾವ ಭಾಷೆಯಲ್ಲೂ ಇಲ್ಲ. ರಾಮ, ಸೀತೆ ತೆಲುಗು ಜಾನಪದರ ಜೀವನದ ಮೇಲೆ ಬೀರಿರುವ ಪ್ರಭಾವ ಅಪಾರವಾದುದು. ಇವರಿಬ್ಬರು ಜೊತೆಗೆ ಗಣನಾಥ, ಗೌರಿ, ನಾಗರಾಜ ಮುಂತಾದವರೆಲ್ಲರ ಮೇಲೆ ಸುತ್ತಿ ಗೀತೆಗಳಿವೆ. ಆಚರಣಾತ್ಮಕ ಗೀತೆಗಳೂ ತೆಲುಗಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಕ್ಕುತ್ತವೆ. ಗೌರೀವ್ರತ, ಶ್ರಾವಣ ಶುಕ್ರವಾರ, ಶ್ರಾವಣ ಮಂಗಳವಾರ, ನಾಗಪೂಜೆ ಮುಂತಾದವೆಲ್ಲಾ ಹೆಂಗಸರವು, ಜಾತ್ರೆಗಳಲ್ಲಿ ಗಂಡಸರ ಪದಗಳು ಜಾನಪದದ ಆಚರಣಾತ್ಮಕ ಜೀವನ ವಿಧಾನವನ್ನು ಪ್ರತಿಬಿಂಬಿಸುತ್ತವೆ. ಎಲ್ಲಮ್ಮ, ಗಂಗಮ್ಮ, ಪೋಲೇರಮ್ಮ, ಇರಗಾಳಮ್ಮ, ಕಲುಗೋಳಮ್ಮ, ಪೋಚಮ್ಮ, ಮೈಸಮ್ಮ ಮುಂತಾದವರು ಗ್ರಾಮೀಣರಿಂದ ಪೂಜೆಗಳನ್ನು ಪಡೆಯುತ್ತಾರೆ. ಎಲ್ಲಮ್ಮ ಕರ್ನಾಟಕದಲ್ಲೂ ಪ್ರಸಿದ್ಧವಾಗಿರುವ ದೇವತೆ. ಆಂಧ್ರದ ತೆಲಂಗಾಣ ಮತ್ತು ರಾಯಲಸೀಮ ಪ್ರಾಂತ್ಯಗಳಲ್ಲಿ ಹಲವಾರು ಗ್ರಾಮಗಳಲ್ಲಿ ಎಲ್ಲಮ್ಮ ಮತ್ತು ಪರಶುರಾಮ ದೇವಸ್ಥಾನಗಳಿವೆ. ಅನೇಕ ಸ್ಥಳಗಳಲ್ಲಿ ಹುತ್ತವನ್ನೇ ಎಲ್ಲಮ್ಮನೆಂದು ಪೂಜಿಸುವುದುಂಟು. ರಾಯಲಸೀಮೆಯ ಗ್ರಾಮಗಳಲ್ಲಿ ಗಂಗಮ್ಮನ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.

ನಿಲ್ಲು ನಿಲ್ಲು ಗಂಗಮ್ಮ ತಾಯಿ, ನಿಲ್ಲಮ್ಮ ಗಂಗಮ್ಮ ತಾಯಿ
ನಿನ್ನಿಂದಲೇ ನಾವು ಬದುಕೋದು
ನಿಲ್ಲಲಾರೆ ನಿಲ್ಲ ಲಾರೆ ತಡೆಯಲಾರೆ
ನಾನು ತಡೆಯಲಾರೆ ಹೋಗ್ತೀನಿ ನಾನು
ಮದವಾಡ ಕೆರೆಗೆ….

ಈ ತರಹದ ಹಾಡುಗಳು ಗಂಗಮ್ಮನ ಜಾತ್ರೆಯಲ್ಲಿ ಕೇಳಿಬರುತ್ತವೆ. ತತ್ತ್ವ ಪದಗಳಿಗೂ ತೆಲುಗನಾಡು ಹೆಸರುವಾಸಿಯಾಗಿದೆ. ರಾಜಯೋಗವನ್ನು ತತ್ತ್ವ ಪದಗಳಲ್ಲಿ ಬೋಧಿಸಲಾಗುತ್ತದೆ. ತೆಲುಗಿನ ದೋಣಿ ಹಾಡುಗಳು ಬಹುಪಾಲು ತತ್ತ್ವ ಪದಗಳೇ.

ದಡ ತಲುಪುತ್ತಾ ನನ್ನ ದೋಣಿ?
ಕಲ್ಲೋಲದ ಕಡಲಲ್ಲೆ ಮುಳುಗುತ್ತಾ?…

ಎಂದು ಒಬ್ಬ ದೋಣಿ ನಡೆಸುತ್ತಾ ಹಾಡುತ್ತಾನೆ. ಇಲ್ಲಿ ದೋಣೀ ಬದುಕನ್ನು ಸೂಚಿಸುತ್ತದೆ.

ತೆಲುಗು ಜನಪದ ಗೀತೆಗಳಲ್ಲಿ ಗರತಿಯ ಚಿತ್ರಣವನ್ನೂ ಬೇರೆ ಕಡೆಯ ಚಿತ್ರಣಗಳೊಂದಿಗೆ ಹೋಲಿಸಿ ನೋಡಬೇಕಾಗಿದೆ. ಕನ್ನಡ ಮುಂತಾದ ಭಾಷೆಗಳಲ್ಲಿರುವ ಗೀತೆಗಳಲ್ಲಿ ತಾಯಿಗೆ ನೀಡಿರುವ ಪವಿತ್ರ ಸ್ಥಾನವನ್ನೇ ತೆಲುಗು ಹಾಡುಗಳಲ್ಲೂ ನೋಡಬಹುದು. ತೌರು ಮನೆಯೆಂದರೆ ತೆಲುಗು ಗರತಿಗೆ ಹೃದಯ ಉಕ್ಕಿ ಪರವಶ ಭಾವವನ್ನು ಹೊಂದುತ್ತದೆ.

ಕಾಶಿಗೆ ಹೋಗೋಣವೆಂದರೆ ಕದಲದು ಕಾಲು
ದೆಹಲಿಗೆ ಹೋಗೋಣವೆಂದರೆ ಬಯಸದು ಮನಸು
ನನ್ನ ತವರು ಮನೆ ಎಂದರೆ ಸಾಕು
ಕಾಲು ರಥವಾಗಿ ನಡೆಯುವುದು
ಕೈ ಉಯ್ಯಾಲೆಯಾಗಿ ಆಡುವುದು

ಎಂದು ಹಾಡುತ್ತಾಳೆ ಒಬ್ಬಾಕೆ.

ಲಾಲಿ, ಜೋಗುಳ, ಉಯ್ಯಾಲೆಯ ಹಾಡು, ಶಿಶುಪ್ರಾಸಗಳೂ ತೆಲುಗಿನಲ್ಲಿ ಹೇರಳವಾಗಿವೆ. “ಅಳಬೇಡ ಅಳಬೇಡ ನನ್ನ ಮುದ್ದು ಮಗನೆ ಅತ್ತರೆ ಕಣ್ಣಲ್ಲಿ ನೀಲಗಳು ಉರುಳುತ್ತವೆ” ಎಂದು ಹಾಡುವ ತಾಯಿಯ ಪ್ರೀತಿ ಲಾಲಿ ಪದಗಳಲ್ಲಿ ಮಧುರವಾಗಿ ವ್ಯಕ್ತವಾಗುತ್ತದೆ. ಶೃಂಗಾರ, ಹಾಸ್ಯ, ಶೋಕ ಮುಂತಾದವು ಕೂಡ ಜನಪದ ಗೀತೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಶ್ರಮ ಪರಿಹಾರಕ್ಕಾಗಿ ಜನಪದರು ಕಲ್ಪಿಸಿಕೊಂಡ ಈ ಹಾಡುಗಳು ಪ್ರಣಯ ಗೀತೆಗಳಾಗಿ ಮೂಡಿ ಬಂದುದರಲ್ಲಿ ಆಶ್ಚರ್ಯವೇನಿಲ್ಲ.

ಗ್ರಾಮೀಣ ಸಮಾಜದಲ್ಲಿ ನಾಗರಿಕ ಸಮಾಜಕ್ಕಿಂತ ಹೆಚ್ಚಿನ ಸಾಮಾಜಿಕ ಪ್ರಜ್ಞೆ ಇರುವುದು ಆಶ್ಚರ್ಯವನ್ನುಂಟುಮಾಡುತ್ತದೆ. ತೆಲುಗು ಜನಪದ ಗೀತೆಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ವ್ಯಕ್ತಮಾಡುವ ಹಾಡುಗಳು ಹಲವು ಸಿಕ್ಕುತ್ತವೆ. ಕೋಲಾರ ಜಿಲ್ಲೆಯ ಒಂದು ಹಾಡಿನಲ್ಲಿ ಮಗಳನ್ನು ಅತ್ತೆಯ ಮನೆಗೆ ಕಳುಹಿಸುವಾಗ ತಾಯಿಯ ಮನೋಭಾವನೆಯನ್ನು ಕೆಳಗಿನಂತೆ ವ್ಯಕ್ತಮಾಡಲಾಗಿದೆ.

ಆರೆಕರಾಲ್ ಚೆನಿಸ್ತಾ ಅಂಟಿ ಮಾಮಿಡಿ ತೋಪಿಸ್ತಾ
ಪೋಯಮ್ಮ ನಾ ಕೂತುರಾ
ಪೋಯಿಂಟಿಕಿ ಕೀರ್ತಿ ತೇವಮ್ಮಾ
ಆರೆಕರಾಲ್ ಚೇನಿಸ್ತಾ ಆವುಲಪ್ಪನಿ ನೀ ಜತಕಿಸ್ತಾ
ಪೋಯಮ್ಮ ನಾ ಕೂತುರಾ
ಪೋಯೂರಿಕಿ ಕೀರ್ತಿ ತೇವಮ್ಮಾ

(ಆರೆಕರೆ ಜಮೀನು ಕೊಡುತ್ತೇವೆ, ಮಾವಿನ ತೋಪು ಕೊಡುತ್ತೇನೆ, ನನ್ನ ಮಗಳೇ ಹೋಗಮ್ಮಾ ಹೋಗಿ ಮನೆಗೆ ಕೀರ್ತಿ ತಾರಮ್ಮಾ ಆರೆಕರೆ ಜಮೀನು ಕೊಡುತ್ತೇನೆ, ಆವುಲಪ್ಪನನ್ನು ಜತೆಗೆ ಕೊಡುತ್ತೇನೆ ಹೋಗಮ್ಮಾ ನನ್ನ ಮಗಳೆ, ಹೋಗಿ ಊರಿಗೆ ಕೀರ್ತಿ ತಾರಮ್ಮಾ)

ಈ ಹಾಡಿನಲ್ಲಿ ಮನೆಗೆ ಕೀರ್ತಿ ತರಬೇಕೆಂದು ಕೇಳುವುದರ ಜತೆಗೆ ಊರಿಗೆ ಕೀರ್ತಿ ತರಬೇಕೆಂದು ತಾಯಿ ಕೇಳುವುದು ಗ್ರಾಮೀಣ ಸಮಾಜದಲ್ಲಿ ನೆರೆಹೊರೆಯ ಮನೆಗಳನ್ನು, ಇಡೀ ಹಳ್ಳಿಯ ಸಮಾಜವನ್ನು ಬಿಟ್ಟು ಬಾಳುವುದು ಸಾಧ್ಯವಿಲ್ಲವೆಂಬುದನ್ನು ತಿಳಿಸುತ್ತದೆ.

ಹಾಡುಗಳು ಚಿಕ್ಕವಾದರೂ ಅವುಗಳಲ್ಲೇ ನಮ್ಮ ಸಂಸ್ಕೃತಿಯ ತಿರುಳೆಲ್ಲಾ ವ್ಯಕ್ತವಾಗುವುದು. ಅಣ್ಣ ತಂಗಿಗೆ ನಮ್ಮ ಸಮಾಜದಲ್ಲಿರುವ ಅನುಬಂಧ ಹೃದಯಸ್ಪರ್ಶಿಯಾದುದು.

ನನಗೆ ಕಪ್ಪು ಸೀರೆ ನವಿಲು ಬಣ್ಣದ ರವಿಕೆ
ಮಡಿಲ ತುಂಬ ಅಕ್ಕಿ, ಹಣ್ಣು ಕೊಬರಿ
ಅರಿಸಿನ ಕುಂಕುಮ ಕೊಟ್ಟು ಕಳಿಸಿದ ನಮ್ಮಣ್ಣ

ಎಂಬ ಮಾತುಗಳಲ್ಲಿ ಈ ಮಧುರ ಬಾಂಧವ್ಯ ಪ್ರತಿಬಿಂಬಿಸುತ್ತದೆ.

ಕಥನಗೀತೆ ಮಹಾಕಾವ್ಯ: ತೆಲುಗಿನ ಜನಪದ ಕಾವ್ಯ ಪರಂಪರೆ ತುಂಬ ವಿಸ್ತಾರವಾದುದು. ವೈವಿಧ್ಯಪೂರ್ಣವಾದುದು, ಪ್ರಾಚೀನವಾದುದು. ಕಥನಕಾವ್ಯ ಗಾನವನ್ನು ವೃತ್ತಿಯಾಗಿ ಮಾಡಿಕೊಂಡು ಕಲಾರಾಧನೆಯನ್ನು ಕೈಗೊಂಡ ವೃತ್ತಿಗಾಯಕ ಪರಂಪರೆ ಆಂಧ್ರದಲ್ಲಿ ಭವ್ಯವಾಗಿದೆ. ಇವರಲ್ಲಿ ಶ್ರೀಮಂತರಾದ ಕೆಲವು ಜಾತಿಯವರನ್ನು ಆಶ್ರಯಿಸಿ ಕುಲಕೀರ್ತನೆ ಮಾಡಿ ಜೀವನ ನಡೆಸುವವರು ಕೆಲವರು. ಬ್ರಾಹ್ಮಣರನ್ನು ಕೀರ್ತಿಸುತ್ತಿದ್ದವರು ವಿಪ್ರವಿನೋದಿಗಳು; ಕ್ಷತ್ರಿಯರಿಗೆ ಭಟ್ರಾಜುಗಳು ಇದ್ದರು. ವೀರಮುಷ್ಠಿಯವರು ವೈಶ್ಯರನ್ನು, ಪಿಚ್ಚುಕುಂಟ್ಲು ಇತರ ಕುಲದವರನ್ನು ಆಶ್ರಯಿಸುತ್ತಾರೆ. ಇನ್ನು ಎರಡನೆಯ ತರಹದವರು ಅಲೆಮಾರಿಗಳು ಮತ್ತು ಭಿಕ್ಷುಕ ಗಾಯಕರು.

ತೆಲುಗು ವೃತ್ತಿಗಾಯಕರಲ್ಲಿ ಕೆಲವರು ನೆರೆಹೊರೆಯ ರಾಜ್ಯಗಳಿಗೂ ಹೋಗಿ ಅಲ್ಲಿ ಹಾಡುಗಳನ್ನೂ ಕಥನಕಾವ್ಯಗಳನ್ನೂ ಕಲಿತುಕೊಂಡು ಹಾಡಿ ಜೀವಿಸುತ್ತಿದ್ದಾರೆ. ಪಿಚ್ಚು ಕುಂಟ್ಲು ಪಾಲ್ಕುರಿಕೆ ಸೋಮನಾಥನ ಕಾಲದಿಂದ (೧೩ ಶತ) ಕುಂಟರೆಂದು ಹೇಳಲಾದವರು. ಇವರು ಹೆಳವರೆಂಬ ಹೆಸರಿನಲ್ಲಿ ಕರ್ನಾಟಕದಲ್ಲೂ ಪ್ರಸಿದ್ಧರಾಗಿದ್ದಾರೆ. ಗಂಟೆ ಮತ್ತು ತಿತ್ತಿ ಪಿಚ್ಚುಕುಂಟರ ವಾದ್ಯಗಳು. ಶ್ರೀಶೈಲ ಮಲ್ಲಿಕಾರ್ಜುನ ಭಕ್ತರಾದ ಇವರು ಎಲ್ಲ ನಾಗಿರೆಡ್ಡಿ ಕಥ, ವೇಮಾರೆಡ್ಡಿಕಥ, ಕುಂಟಮಲ್ಲಾರೆಡ್ಡಿಕಥ ಮುಂತಾದುದನ್ನು ಹಾಡುತ್ತಾರೆ. ತಮ್ಮ ವಂಶದಲ್ಲಿ ಏರ್ಪಟ್ಟ ಕುಂಟತನವನ್ನು ಕುರಿತು ಇವರು ಅನೇಕ ಕಥೆಗಳನ್ನು ಹೇಳುತ್ತಾರೆ.

ವೀರವಿದ್ಯಾವಂತರು ಅಥವಾ ಪಲ್ನಾಟಿವಾರು ಹೇಳುವ ‘ಪಲ್ನಾಟೀವೀರಚರಿತ್ರ’ ಜಗತ್ತಿನ ಜನಪದ ಮಹಾಕಾವ್ಯಗಳಲ್ಲೇ ಅತ್ಯಂತ ಪ್ರಶಸ್ತವಾದುದು. ಹರಿಜನ ಗಾಯಕರಾದ ವೀರ ವಿದ್ಯಾವಂತರು ವೀರಜೋಡು. ಗಂಟೆ, ತಿತ್ತಿ, ತಾಳ, ಕತ್ತಿ, ಡಾಲು ಉಪಯೋಗಿಸುತ್ತಾರೆ. ‘ಪಲ್ನಾಟಿವೀರಚರಿತ್ರ’ ಸು. ೧೫ನೆಯ ಶತಮಾನದಲ್ಲಿ ರೂಪುಗೊಂಡು ಜನಪದ ಮಹಾಕಾವ್ಯ. ಇದರ ಕೆಲವು ಭಾಗಗಳನ್ನು ದ್ವಿಪದಿ ರೂಪದಲ್ಲಿ ತೆಲುಗಿನ ಮಹಾಕವಿ ಶ್ರೀನಾಥ (೧೫ಶ) ಬರೆದನೆಂದು ಹೇಳುತ್ತಾರೆ.

ಧಾರ್ಮಿಕಗಾಯಕರಲ್ಲಿ ದಾಸರು ಮುಖ್ಯರು. ಬುಕ್ದಾಸರಿ, ಪಾಗದಾಸರಿ, ಭಾಗವತದಾಸರಿ, ದಂಡೆದಾಸರಿ, ಮಾಲದಾಸರಿ ಮುಂತಾದ ಉಪಜಾತಿಗಳಿವೆ. ಶಂಖ, ತಂಬೂರಿ, ಚಿಟಿಕೆ ಇವರ ವಾದ್ಯಗಳು. ಕನ್ನಡ ನಾಡಿನಲ್ಲೂ ತೆಲುಗು ಮನೆಮಾತಾಗಿರುವ ದೊಂಬಿದಾಸರಿದ್ದಾರೆ. ಕನ್ನಡನಾಡಿನಲ್ಲಿ ಪ್ರಸಿದ್ಧರಾಗಿರುವ ಗಾಯಕರಲ್ಲಿ ತೆಲುಗು ಬಣಜಿಗರನ್ನೂ ಹೇಳಬಹುದು. ಇವರೇ ಬಲಿಜಲು. ಈ ಗಾಯಕರು ಬೊಬ್ಬಿಲಿಕಥ, ಬಾಲನಾಗಮ್ಮ, ಮರಾಟೀಲ ಕಥ, ಚಿನ್ನಮ್ಮ ಕಥ, ಕಾಮಮ್ಮ ಕಥ ಮುಂತಾದುವನ್ನು ಹಾಡುತ್ತಾರೆ.

ಜಂಗಮರು ತೆಲುಗಿನ ಕಥನಕಾವ್ಯಗಳಲ್ಲಿ ಬಹುಪಾಲು ಹಾಡುಗಳನ್ನು ಹಾಡುತ್ತಾರೆ. ಜಂಗಂಕಥ ಎಂಬ ಕಲಾಪ್ರಕಾರವನ್ನೂ ಇವರು ರೂಪಿಸಿದ್ದಾರೆ. ‘ಬೊಬ್ಬಲಿಕಥ’ ಲಯದಲ್ಲಿರುವ ಕಥೆಗಳಿಗೆ ಪದ್ಯಗಳನ್ನು ಕೀರ್ತನೆಗಳನ್ನು ಸೇರಿದ ಯಕ್ಷಗಾನದಂಥ ‘ಜಂಗಂಕಥೆ’ಗಳನ್ನು ಇವರು ಸೃಷ್ಟಿಮಾಡಿದ್ದಾರೆ. ಮೊದಲು ಇವರು ಶೈವ ಕಥೆಗಳನ್ನೂ ಹಾಡಲಾರಂಭಿಸಿದರು. ವೀರಶೈವರಾದ ವೀರಮುಷ್ಠಿಯವರು ಕನ್ಯಕಾಪರಮೇಶ್ವರಿಯನ್ನು ಕುರಿತ ಹಾಡುಗಳನ್ನು ಹೇಳುತ್ತಿರುತ್ತಾರೆ. ಶೈವರೇ ಆದ ಶಾರದಕಾಂಡ್ರು ತೆಲಂಗಾಣ ಪ್ರಾಂತ್ಯದಲ್ಲಿ ಪ್ರಸಿದ್ಧರಾಗಿದ್ದಾರೆ. ಸರ್ವಾಯಿ ಪಾಪಡು, ಸದಾಶಿವರೆಡ್ಡಿ ಮುಂತಾದವರನ್ನು ಕುರಿತ ವೀರಗೀತೆಗಳನ್ನು ಇವರು ಹಾಡುತ್ತಾರೆ. ಒಗ್ಗು ಎಂಬ ದೊಡ್ಡ ವಾದ್ಯವನ್ನು ಬಾರಿಸುವವರು ಒಗ್ಗುವಾರು. ಇವರು ಬೀರನ್ನನ ಭಕ್ತಾರಾದ್ದರಿಂದ ಬೀರನ್ನಗಳೆಂದು ಹೆಸರು. ‘ಮಲ್ಲನ ಕಥ’ ಇವರು ಹೇಳುವ ಪ್ರಸಿದ್ಧ ಕಥೆ.

ಬವನೀಲು ಎಂಬವರು ಚೌಡಿಕೆಯವರು. ಇವರನ್ನು ಕುರಿತ ಉಲ್ಲೇಖಗಳೂ ತೆಲುಗು ಸಾಹಿತ್ಯದಲ್ಲಿ ಸುಮಾರು ೧೩ನೆಯ ಶತಮಾನದಿಂದಲೂ ಇವೆ. ಇವರನ್ನು ಬೈಂಡ್ಲ ಅಥವಾ ಪಂಬದವರೆಂದೂ ಹೇಳುತ್ತಾರೆ. ಇವರ ವಾದ್ಯ ಜಮಿಡಿಕ (ಚೌಡಿಕೆ). ಇವರು ಪ್ರಧಾನವಾಗಿ ಎಲ್ಲಮ್ಮನನ್ನು ಕುರಿತ ಮಹಾಕಾವ್ಯವನ್ನೇ ಹಾಡುತ್ತಾರೆ. ಗೊಲ್ಲಸುದ್ದುಲು ಎಂಬುವರು ‘ಕಾಟಮರಾಜುಕಥ’ ಎಂಬ ಮಹಾಕಾವ್ಯ ಹೇಳುತ್ತಾರೆ. ಇದಲ್ಲದೆ ವೈಷ್ಣವ ಕಥೆಗಳಾದ ‘ಕೃಷ್ಣಲೀಲ’ ಮುಂತಾದವನ್ನೂ ಗೊಲ್ಲರು ಹೇಳುತ್ತಾರೆ.

ಜನಪದ ವೃತ್ತಿಗಾಯಕರಲ್ಲದಿದ್ದರೂ ಈ ಸಾಹಿತ್ಯವನ್ನು ಅನೇಕ ಶತಮಾನಗಳಿಂದಲೂ ಕಾಪಾಡಿಕೊಂಡು ಬಂದವರೆಂದರೆ ಗರತಿಯರೇ. ಸಂಪ್ರದಾಯದ ಹಾಡುಗಳನ್ನು, ರಾಮಾಯಣ ಮಹಾಭಾರತ ಕಥಾಗೀತೆಗಳನ್ನು ಪರಂಪರಾಗತವಾಗಿ ಗರತಿಯರು ಹೇಳುತ್ತಾ ಬಂದಿದ್ದಾರೆ.

೧೨ನೆಯ ಶತಮಾನದ ನನ್ನೆ ಚೋಡನೆಂಬ ಕವಿ ಗೌಡುಗೀತಗಳನ್ನು ಹೆಸರಿಸಿದ್ದಾನೆ. ಗೌಡು ಜಾತಿಯವರ ಆರಾಧ್ಯದೇವರು ಕಾಟಮಯ್ಯ. ಬಹುಶಃ ನನ್ನೆಚೋಡನ ಕಾಲಕ್ಕೆ ಕಾಟಮಯ್ಯನನ್ನು ಕುರಿತ ಗೌಡಕಾವ್ಯಗಳಿದ್ದಿರಬಹುದು. ಶಿವಭಕ್ತರ ಚರಿತೆಗಳನ್ನು ಕಾವ್ಯಗಾನ ಮಾಡುತ್ತಿದ್ದ ಬಗೆಗೆ ಪಾಲ್ಕುರಿಕೆ ಸೋಮನಾಥ ತನ್ನ ‘ಬಸವಪುರಾಣ’ದಲ್ಲಿ ಹೇಳಿದ್ದಾನೆ. ವೀರಾಮಹಾದೇವಿ (ಕಾಕತೀಯ ಓರುಗಲ್ಲಿನಲ್ಲಿ)ಯ ಮುಂದೆ ನಿಂತು ಜಮಿಡಿಕವನ್ನು ನುಡಿಸುತ್ತಾ ಪರಶುರಾಮನ ಕಥೆಗಳನ್ನು ಹಾಡುತ್ತಿದ್ದ ಬವನೀಲ ಚಕ್ರವರ್ತಿ (ಚೌಡಿಕೆಯವರು)ಯ ಬಗ್ಗೆ ‘ಕ್ರೀಡಾಭಿರಾಮ’ (೧೫ ಶ.) ಹೇಳುತ್ತದೆ. ರಾಮಾಯಣದ ಆರು ಕಾಂಡಗಳನ್ನೂ ಜನಪದ ರೂಪದಲ್ಲಿ ಹಾಡುತ್ತಿದ್ದುದರ ಬಗೆಗೂ ‘ಕ್ರೀಡಾಭಿರಾಮ’ದಲ್ಲಿ ಸೂಚನೆಯಿದೆ.

ತೆಲುಗಿನಲ್ಲಿ ರಾಮಾಯಣದ ಹಾಡುಗಳು ಹೇರಳವಾಗಿ ಸಿಕ್ಕುತ್ತವೆ. ಸೀತೆಯ ಜನನ, ಸೀತಾಕಲ್ಯಾಣ, ಸೀತೆಯನ್ನು ಅತ್ತೆ ಮನೆಗೆ ಕಳುಹಿಸಿದ್ದು, ಸೀತೆಯ ಸೆರೆ, ಸೀತೆಯ ಅಗ್ನಿ ಪ್ರವೇಶ, ಸೀತೆಯ ಬಯಕೆ ಇತ್ಯಾದಿ ಸೀತೆಯನ್ನು ಕುರಿತ ಕಥನಗೀತೆಗಳನ್ನು ಹಾಡುತ್ತಾರೆ. ಹದಿನಾಲ್ಕು ವರ್ಷ ನಿದ್ರೆಯಲ್ಲೇ ಕಳೆದ ಊರ‍್ಮಿಳೆಯ ಅನುಪಮಾನ ತ್ಯಾಗವನ್ನು ಕುರಿತ ಹಾಡೊಂದಿದೆ. ಲಕ್ಷ್ಮಣನ ನಗೆಯನ್ನು ಕುರಿತ ಸ್ವಾರಸ್ಯಕರವಾದ ಕಥನಗೀತೆಯೊಂದಿದೆ. ಶ್ರೀರಾಮನ ಪಟ್ಟಾಭಿಷೇಕ ಸಂದರ್ಭದಲ್ಲಿ ಲಕ್ಷ್ಮಣ ಬಿದ್ದು ಬಿದ್ದು ನಗುತ್ತಾನೆ. ರಾಮನೂ ಸೇರಿದ್ದಂತೆ ಎಲ್ಲರೂ ತಮ್ಮನ್ನು ಗೇಲಿ ಮಾಡುತ್ತಿರುವುದಾಗಿ ತಿಳಿದುಕೊಳ್ಳುತ್ತಾರೆ. ರಾಮ ವಿಪರೀತ ಕೋಪಗೊಂಡು ಲಕ್ಷ್ಮಣನನ್ನು ಕೊಲ್ಲಲು ಕೂಡ ಮುಂದಾಗುತ್ತಾನೆ. ೧೪ ವರ್ಷಗಳಿಂದ ಎಚ್ಚರದಿಂದಿದ್ದುರಿಂದ ತನಗೆ ನಿದ್ರೆ ಬರುತ್ತಿದ್ದುದೇ ಕಾರಣವೆಂದು ಲಕ್ಷ್ಮಣ ಹೇಳಿದಾಗ ರಾಮ ನಾಚಿಕೆಯಿಂದ ಆತ್ಮಹತ್ಯೆಗೂ ಸಿದ್ಧನಾಗುತ್ತಾನೆ. ಲಕ್ಷ್ಮಣನ ತ್ಯಾಗ ಬುದ್ದಿಗೆ ಕನ್ನಡಿ ಹಿಡಿಯುವ ಕಥನಗೀತೆ ಇದು.

ಭಾರತ ಮತ್ತು ಭಾಗವತಗಳಿಗೆ ಸಂಬಂಧಿಸಿದ ಕಾವ್ಯಗಳು ಕೂಡ ಅಧಿಕಸಂಖ್ಯೆಯಲ್ಲಿವೆ. ಧರ್ಮರಾಜನ ಜೂಜು, ವಿರಾಟಪರ್ವ, ಸುಭದ್ರೆಯ ಕನಸು, ನಳಚರಿತ್ರೆ ಮುಂತಾದವು ಜನಪದ ಜೀವನವನ್ನೂ ಸಂಸ್ಕೃತಿಯನ್ನೂ ವ್ಯಕ್ತಮಾಡುತ್ತವೆ. ದುರ‍್ಯೋಧನನೊಂದಿಗೆ ದ್ರೌಪದಿ ನೆತ್ತವಾಡಿದ ಸಂದರ್ಭದಲ್ಲಿ ಜನಪದ ಕವಿ ಹೀಗೆ ಬರೆದಿದ್ದಾನೆ:

ರಾರಾಜ ತನ್ನ ಕೈಯಲ್ಲಿ ಹಾಕಿದ ದಾಳಗಳ
ಪಾಂಚಾಲಿ ತನ್ನ ಕಾಲಿಂದ ತಳ್ಳಿದಳು ದಾಳಗಳ…(ಅನು)

ಪಾಂಚಾಲಿಯ ಸ್ವಭಾವವನ್ನು ವರ್ಣಿಸುವ ಮಧುರಗೀತೆಗಳು ತೆಲುಗರಲ್ಲಿ ಪ್ರಸಿದ್ಧವಾಗಿವೆ.

ಕಸ್ತೂರಿ ರಂಗ ರಂಗಾ ನಾಯನ್ನ ಕಾವೇಟಿ ರಂಗ ರಂಗಾ
ಶ್ರೀರಂಗ ರಂಗರಂಗಾ ನಿನುಬಾಸಿ ಯೆಟ್ಲುನೇ ಮರಚುಂದುರಾ

ಎಂಬುದು ಶ್ರೀ ಕೃಷ್ಣ ಜನನವೆಂಬ ಪ್ರಸಿದ್ಧಗೀತೆ. ಬಾಲಕೃಷ್ಣನ ಲೀಲೆಯನ್ನು ವರ್ಣಿಸುವ ಮಧುರಗೀತೆಗಳೂ ಪ್ರಸಿದ್ಧವಾಗಿವೆ.

ಪೌರಾಣಿಕ ಗೀತೆಗಳಲ್ಲಿ ‘ಗಂಗೇಗೌರಿ’ ತುಂಬ ಪ್ರಖ್ಯಾತವಾದುದು. ಇದು ಹೆಸರಿಗೆ ಪೌರಾಣಿಕವಾದರೂ ಜನಪದ ಸಮಾಜದ ಚಿತ್ರಣವೇ ಇದರಲ್ಲಿ ಮುಖ್ಯ. ಗಂಗೆಗೌರಿ ಜಗಳವಾಡಿದಾಗ ಗಂಗೆ ಮುನಿದು ಹೊರಟು ಹೋದಳು. ಗಂಗೆ ಹೋದ ತಕ್ಷಣ ಗೌರಿ ಮುಟ್ಟಾದಳು. ಸ್ನಾನಪಾನಗಳಿಗೆ ನೀರಿಲ್ಲದೆ ಗೌರಿ ತಲ್ಲಣಿಸಿದಳು. ದರ್ಪದಿಂದ ಆಕೆ ತಂದೆ ದಕ್ಷನಿಗೆ ಹೇಳಿ ಕಳುಹಿಸಿದಾಗ ಕಾವಡಿಗಳಲ್ಲಿ ಹಾಲು, ತುಪ್ಪ ಬಂದಿತು. ಗೌರಿ ಹಾಲು ತುಪ್ಪಗಳಿಂದ ಸ್ನಾನ ಮಾಡಿದಾಗ ಇರುವೆ, ನೊಣ ಮುತ್ತಿದವು. ಕೊನೆಗೆ ಹೇಗೋ ಅವಮಾನವನ್ನು ಸಹಿಸಿಕೊಂಡು ಗೌರಿ ನೀರನ್ನು ಕೇಳಲು ಗಂಗೆಯ ಬಳಿಗೆ ಹೋದಾಗ

ಹಸಿ ಮೀನುಗಳ ಚಪ್ಪರ ಕಟ್ಟಿ
ಒಣ ಮೀನುಗಳ ತೋರಣ ಕಟ್ಟಿ
ದೊಡ್ಡ ಮೀನುಗಳ ಜಗಲಿ ಮಾಡಿ
ಕಪ್ಪೆ ಸತ್ತ ನೀರನ್ನು ಮನೆ ಮುಂದೆ ಚೆಲ್ಲಿದಳು(ಅನು)

ಈ ಹಾಡಿನಲ್ಲಿ ಗಂಗೆ ಗೌರಿಯರು ಜನಪದ ಜೀವನದ ಸವತಿಯರಂತೆಯೇ ನಡೆದುಕೊಳ್ಳುತ್ತಾರೆ.

ಗದ್ಯ ಕಥನಗಳು: ತೆಲುಗುನಾಡಿನ ಒಂದೊಂದು ಊರಿಗೂ ಒಂದೊಂದು ಕೆರೆಗೂ ಗುಡ್ಡ ಬೆಟ್ಟ ಕಣಿವೆಗಳಿಗೂ ಐತಿಹ್ಯಗಳಿವೆ. ಊರಿಗಾಗಿ, ಕೆರೆಗಾಗಿ ಆತ್ಮಬಲಿ ಮಾಡಿಕೊಂಡ ಹೆಣ್ಣುಗಳನ್ನು ಕುರಿತ ಐತಿಹ್ಯಗಳು ಹೇರಳವಾಗಿವೆ. ಅನಂತಪುರದ ಕೆರೆಯನ್ನು ಎಷ್ಟು ಸಲ ನಿರ್ಮಿಸಿದ್ದರೂ ಕಟ್ಟೆ ಒಡೆದು ಹೋಗುತ್ತಿತ್ತು. ಆಗ ಗಂಗಾಭವಾನಿ ಒಬ್ಬಾಕೆಯ ಮೈಮೇಲೆ ಬಂದು ಬಸುರಿಯಾದ ಸುಮಂಗಲಿಯನ್ನು ಕಟ್ಟೆಯಲ್ಲಿಟ್ಟು ಕಟ್ಟಿದರೆ ನಿಲ್ಲುತ್ತದೆಂದು ಹೇಳಿದಳು. ಬುಕ್ಕರಾಯ ಸಮುದ್ರದ ಬಸಿರೆಡ್ಡಿಯ ಕಡೆಯ ಸೊನೆ ಮುಸಲಮ್ಮ ಎಂಬಳು ಇದಕ್ಕೆ ಒಪ್ಪಿ ಆತ್ಮಬಲಿಗೆ ಸಿದ್ಧವಾದಳು. ಆಕೆಗೆ ಇಂದಿಗೂ ಪೂಜೆಗಳು ಸಲ್ಲುತ್ತಿವೆ.

ಇಂತಹ ಐತಿಹ್ಯಗಳೂ ಜೊತೆಗೆ ಒಂದೊಂದು ಸ್ಥಳಕ್ಕೆ ಸಂಬಂಧಿಸಿದ ಪುರಾಣಗಳೂ ಇವೆ. ಇವು ದಕ್ಷಿಣಭಾರಗದಲ್ಲೆಲ್ಲ ಬಹುಪಾಲು ಸಮಾನವಾಗಿಯೇ ಇರುತ್ತವೆ. ಉದಾಹರಣೆಗೆ ನೆಲ್ಲೂರು ಎಂಬ ಹೆಸರಿನ ಜಿಲ್ಲಾ ಮುಖ್ಯ ಕೇಂದ್ರವನ್ನು ಕುರಿತ ಪುರಾಣ ಹೀಗಿದೆ: “ಹಿಂದೆ ಮುಕ್ಕಂಟಿರೆಡ್ಡಿ ಎಂಬವನು ಆಳುತತಿದ್ದ. ಒಂದು ದಿನ ಅವನಿಗೆ ಮುಕ್ಕಣ್ಣ ಪ್ರತ್ಯಕ್ಷನಾಗಿ ನೆಲ್ಲಿಗಿಡದ ಕೆಳಗೆ ತನಗೆ ಗುಡಿ ಕಟ್ಟಿಸಬೇಕೆಂದು ಕೋರಿದನು. ಈಗ ನೆಲ್ಲೂರಿನ ಮೂಲಪೇಟದಲ್ಲಿರುವ ಮೂಲಸ್ಥಾನೇಶ್ವರ ಹಾಗೆ ಪ್ರತಿಷ್ಠಾಪನೆಯಾದವನೇ. ನೆಲ್ಲಿಗಿಡದ ಕೆಳಗೆ ಪ್ರತಿಷ್ಠಾಪನೆಗೊಂಡ ಕಾರಣ ನೆಲ್ಲೂರೆಂಬ ಹೆಸರು ಬಂದಿತು”. ‘ನೆಲ್’ ಎಂದರೆ ಬತ್ತ. ನೆಲ್ಲೂರು ಆಂಧ್ರದ ಕಣಜವೆಂದು ಪ್ರಸಿದ್ಧವಾಗಿದೆ. ಅದರಿಂದಲೇ ಈ ಹೆಸರು ಬಂದಿತೆನ್ನುತ್ತಾರೆ. ಆದರೆ ಜನಪದ ವಿವರಣೆ ಬೇರೆ ರೀತಿಯೇ ಇರುತ್ತದೆಂಬುದಕ್ಕೆ ಮೇಲಿನ ಪುರಾಣವೇ ಉದಾಹರಣೆ.

ತೆಲುಗಿನ ಜನಪದ ಕಥೆಗಳಲ್ಲಿ ಪ್ರಾಣಿಕಥೆ, ಅತಿಮಾನುಷಕಥೆ, ಕಿನ್ನರಿ ಕಥೆ, ಹಾಸ್ಯಕಥೆ, ಒಗಟುಕಥೆ, ನೀತಿಕಥೆ ಮುಂತಾದ ಎಲ್ಲ ಪ್ರಕಾರಗಳೂಇವೆ. ಯಾವುದೇ ಭಾಷೆಯ ಕಥೆಯಲ್ಲಾದರೂ ಜನಪದ ಆಶಯಗಳು ತುಂಬಿರುತ್ತವೆ. ಈ ಆಶಯಗಳನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಮನೋವಿಶ್ಲೇಷಣಾತ್ಮಕವಾಗಿ ಪರಿಶೀಲಿಸಬೇಕಾದ ಅವಶ್ಯಕತೆ ಇದೆ. ಬರಿ ಹಾಸ್ಯಕಥೆಯಾದರೂ ಅದರ ಹಿಂದೆ ಅಪಾರವಾದ ಜೀವನಾನುಭವ ಇರುತ್ತದೆ. ಉದಾಹರಣೆಗೆ ಕೆಳಗಿನ ಚಿಕ್ಕ ಕಥೆ ಅವಿವೇಕಿಯ ಕಷ್ಟಗಳು ಹೇಗಿರುತ್ತವೆಂಬುದನ್ನು ತಿಳಿಸುತ್ತದೆ.

(ವಕ್ತೃ: ವೆಂಕಟಲಕ್ಷ್ಮಮ್ಮ, ನಾರಾಯಣರೆಡ್ಡಿಪೇಟ, ನೆಲ್ಲೂರು ಜಿಲ್ಲೆ)

“ಒಬ್ಬ ಬ್ರಾಹ್ಮಣ ಸ್ನಾನಕ್ಕೆ ಹೋದಾಗ ಸೂರ್ಯ ಪ್ರತ್ಯಕ್ಷನಾಗಿ ‘ವರವನ್ನು ಬೇಡು, ಕೊಡುತ್ತೇನೆ’ ಎಂದ. ಆ ಅವಿವೇಕಿ ‘ಹೆಂಡತಿಯನ್ನು ಕೇಳಿಕೊಂಡು ಬರುತ್ತೇನೆ’ ಎಂದ. ಹೆಂಡತಿಯನ್ನು ಕೇಳಿದಾಗ ಅವನಿಗಿಂತ ಅವಿವೇಕಿ ಮತ್ತು ದುರಾಶಾಪರಳಾದ ಹೆಂಡತಿ ‘ಒಂದು ನೆನೆಸಿದರೆ ಎರಡಾಗುವಂತೆ’ ಕೇಳಿ ಎಂದಳು. ಸೂರ್ಯನನ್ನು ಬೇಡಿ ಹಾಗೆಯೇ ವರ ಪಡೆದ ಆ ಬ್ರಾಹ್ಮಣ.

ಮನೆಗೆ ಬಂದ ಬ್ರಾಹ್ಮಣ ದುಡ್ಡು, ಕೆಲವು ಸಾಮಾನುಗಳು ತೆಗೆದುಕೊಂಡು ಪ್ರಯಾಣ ಹೊರಟ. ಅವನ ಸಾಮಾನುಗಳ ಮೂಟೆ ಎರಡಾಯಿತು. ಆ ಮೇಲೆ ಎರಡು ನಾಲ್ಕಾದವು. ಅವನು ಹೊರಲಾರದೆ ಮನೆಗೆ ಬಂದು ಆಯಾಸದಿಂದ ನೀರು ಕೇಳಿದ. ಒಂದು ಲೋಟ ನೀರು ಕುಡಿದರೆ ಎರಡಾಯಿತು. ಒಟ್ಟುಒಂಬತ್ತು ಲೋಟ ನೀರು ಕುಡಿದು ಅವನು ಸತ್ತ. ಬೆಳಗ್ಗೆ ನಾಲ್ಕು ಜನ ತಿರುಕರು ಬಂದು. ‘ಹೆಣ ಎತ್ತಿ’ ಎಂದು ಬ್ರಾಹ್ಮಣದ ಹೆಂಡತಿ ಬೇಡಿಕೊಂಡಳು. ಅವರು ಹೋಗಿ ಹೆಣವನ್ನು ಸುಟ್ಟು ಬಂದರು. ಇನ್ನೊಂದು ಹೆಣ ಇತ್ತು. ಮತ್ತೆ ಅದನ್ನು ಕೆರೆಗೆ ಎಸೆದು ಬಂದರು. ಇನ್ನೊಂದು ಹೆಣ ಇತ್ತು! ಈ ಸಲ ಅವರು ‘ನಿನಗೆ ಎಷ್ಟು ಜನ ಗಂಡಂದಿರು!’ ಎಂದು ಕೋಪದಿಂದ ಕೇಳಿದರು. ಮತ್ತೆ ಹೆಣವನ್ನು ತೆಗೆದುಕೊಂಡು ಹೋಗಿ ಹೂತುಬಿಟ್ಟು ಬಂದರು. ಬ್ರಾಹ್ಮಣ ಮತ್ತೂ ಎದ್ದು ಬರುತ್ತಿದ್ದ. ಆ ನಾಲ್ಕು ಜನ ಅವನನ್ನು ಚೆನ್ನಾಗಿ ಬಡಿದು ಹೊರಟು ಹೋದರು.”

ಕೊನೆಗೆ ಈ ಕಥೆ ಹೇಗೆ ಮುಕ್ತಾಯವಾಗುತ್ತದೆಂಬುದು ಯಾರಿಗೂ ಗೊತ್ತಿಲ್ಲ. ಮನುಷ್ಯನ ಆಸೆಗೆ ಕೊನೆ ಇಲ್ಲದಂತೆ ಈ ಕಥೆಗೂ ಕೊನೆ ಇಲ್ಲ.

ಗಾದೆ-ಒಗಟು: ತೆಲುಗು ನಾಡಿನ ಜನರು ಆಗಾಗ್ಗೆ ‘ಏನೋ ಗಾದೆ ಹೇಳಿದಂತೆ ಎನ್ನುವುದುಂಟು. ಗಾದೆ ಅವರ ಜೀವನದ ಅನುಭವ ವ್ಯಕ್ತೀಕರಣ ಸಾಧನ. ತೆಲುಗರ ಸಂಸ್ಕೃತಿ ತೆಲುಗು ಗಾದೆಗಳಲ್ಲಿ ಚೆನ್ನಾಗಿ ವ್ಯಕ್ತವಾಗುತ್ತದೆ. ನುಡಿಗಟ್ಟುಗಳು ಒಂದು ಪ್ರದೇಶದ ವಿಶೇಷ ಸಂಗತಿಗಳನ್ನು ನೆನಪಿಗೆ ತರುತ್ತವೆ. ‘ತಿರುಪತಿಕ್ಷೌರ’ ಎಂಬುದು ತಿರುಪತಿಯಲ್ಲಿ ದೇವರ ಹೆಸರಿನಲ್ಲಿ ನಡೆಯುವ ದರೋಡೆಯನ್ನು ನೆನಪಿಗೆ ತರುತ್ತದೆ. ‘ಕಾಶಿಗೆ ಹೋದವನೂ ಸುಡುಗಾಡಿಗೆ ಹೋದವನೂಒಂದೇ’ ಎಂಬ ಗಾದೆ ಹಿಂದಿನ ಕಾಲದಲ್ಲಿ ಕಾಶಿಗೆ ಹೋದವರು ಹಿಂದಿರುಗಿ ಬರುತ್ತಾರೆಂಬ ನಂಬಿಕೆ ಇರುತ್ತಿರಲಿಲ್ಲವೆಂಬುದನ್ನು ಸೂಚಿಸುತ್ತದೆ. ‘ತೀಟೆಯಿರುವವನಿಗೂ ತೋಟ ಇರುವವನಿಗೂ ಬಿಡುವೇ ಇರುವುದಿಲ್ಲ’ವೆಂಬುದು ಅನುಭವದಿಂದ ಮೂಡಿಬಂದ ಗಾದೆ.

ಅನುಭವದಿಂದ ರೂಪುಗೊಳ್ಳುವ ಗಾದೆಗಳು ನಮ್ಮ ಸಂಪ್ರದಾಯಗಳೆಲ್ಲಿರುವ ಕೆಲವು ಕೊರತೆಗಳನ್ನೂ ವಿಮರ್ಶಿಸದೇ ಬಿಡುವುದಿಲ್ಲ. ಒಂದು ಪ್ರದೇಶದ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಗಾದೆಗಳು ಮಾಡುವ ಸಹಾಯವನ್ನು ಅಲ್ಲಗಳೆಯಲಾಗದು. ವಿವಾಹ ಸಂಬಂಧಗಳು, ಕುಟುಂಬದ ವಿವಿಧ ಬಾಂಧವ್ಯಗಳು, ಅಭಿರುಚಿಗಳು, ಅಭ್ಯಾಸಗಳು ಮುಂತಾದವೆಲ್ಲಾ ಗಾದೆಗಳಿಂದ ತಿಳಿದು ಬರುತ್ತವೆ. ಪಿತೃಪ್ರಧಾನ ಕುಟುಂಬವಿರುವ ಸಂಸ್ಕೃತಿಯಿಂದ ಮೂಡಿ ಬಂದ ಗಾದೆಗಳೇ ಒಂದು ರೀತಿಯಾದರೆ, ಮಾತೃಪ್ರಧಾನ ಸಂಬಂಧವನ್ನು ಪ್ರತಿಬಿಂಬಿಸುವ ಗಾದೆಗಳೇ ಇನ್ನೊಂದು ರೀತಿ ಇರುತ್ತದೆ.

ಸಂತೆಯವಳನ್ನು ನಂಬಿ ಮನೆಯವಳನ್ನು ಬಿಟ್ಟಂತೆ
ಹೆತ್ತ ತಾಯಿಗೆ ಅನ್ನ ಹಾಖದವನು ಚಿಕ್ಕಮ್ಮನಿಗೆ ತಿಥಿ ಮಾಡ್ತಾನೆಯೇ
ಅತ್ತೆಯ ಕಾಲ ಕೆಲವು ದಿನ ಸೊಸೆಯ ಕಾಲ ಕೆಲವು ದಿನ

ಇವೆಲ್ಲ ಸಂಬಂಧ ಬಾಂಧವ್ಯಗಳನ್ನು ತಿಳಿಸುವಂಥವೆ. ಇವುಗಳಿಗೆಲ್ಲಾ ಶೀರೋಭೂಷಣದಂಥ ಗಾದೆ ‘ಅತ್ತೆ ಮನೆಯ ಸುಖ ಮೊಣಕ್ಕೆಗೆ ಏಟು ಬಿದ್ದಂತೆ’ ಎನ್ನುವುದು. ಇಂಥದು ಕನ್ನಡದಲ್ಲೂ ಇದೆ. ಅತ್ತೆಯ ಮನೆಯ ಕಾಟದ ಬಗ್ಗೆ ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳುವ ಗಾದೆ ಇನ್ನೊಂದಿಲ್ಲ.

ತೆಲುಗಿನಲ್ಲಿ ಒಗಟುಗಳನ್ನು ‘ಪೊಡುಪುಕಥ’ ಎನ್ನುತ್ತಾರೆ. ಕೆಲವು ಕಡೆ ಇವುಗಳಿಗೆ ‘ಶಾಸ್ತ್ರ’ ಎಂಬ ಹೆಸರೂ ಇದೆ. ಶಬ್ದಿಂದ, ಅರ್ಥದಿಂದ ಒಗಟುಗಳನ್ನು ಗಂಭೀರವಾಗಿಡುವ ಅಭ್ಯಾಸದಿಂದ ವೈವಿಧ್ಯಮಯ ಪ್ರಭೇದಗಳನ್ನು ತೆಲುಗು ಜಾನಪದರು ಸೃಷ್ಟಿ ಮಾಡಿದ್ದಾರೆ. ಶಬ್ದದಿಂದ ತಿಳಿಯಬೇಕಾದ ಒಂದು ಪ್ರಸಿದ್ಧ ಒಗಟು ಹೀಗಿದೆ:

ವಂಕರ ಟಿಂಕರ ಶೊ…(ಶೊಂಠಿ)-ಶುಂಠಿ
(ಅಂಕುಡೊಂಕಿನ ಶೊ)
ವಾನಿ ತಮ್ಮುಡು ಅ…(ಅಲ್ಲಂ)-ಹಸಿಶುಂಠಿ
(ಅವನ ತಮ್ಮ ಅ)
ನಲ್ಲ ಗುಡ್ಲ ಮಿ…(ಮಿರಿಯಂ)-ಮೆಣಸು
(ಕಪ್ಪು ಕಣ್ಣಿನ ಮಿ)
ನಾಲುಗು ಕಾಳ್ಳ ಮೇ…(ಮೇಕ)-ಮೇಕೆ
(ನಾಲ್ಕು ಕಾಲಿನ ಮೇ)

ಮೇಲಿನ ಒಗಟಿನಲ್ಲಿ ಚಮತ್ಕಾರವಿದೆ. ಮೊದಲ ಮೂರು ಆಹಾರ ಪದಾರ್ಥಗಳು. ಮೂರನ್ನೂ ಹಾಗೆಯೇ ಮುಂದುವರಿಸಿ ನಾಲ್ಕನೆಯದನ್ನು ಪ್ರಾಣಿಗೆ ಸಂಕೇತ ಮಾಡಿ ಉತ್ತರ ಹೇಳುವವನ್ನು ಗೊಂದಲಕ್ಕೀಡು ಮಾಡುವ ಜಾಣ್ಮೆ ಗಮನಾರ್ಹವಾದುದು. ಕೆಲವು ಒಗಟುಗಳ ಬಾಹ್ಯ ಸ್ವರೂಪವೂ ಮನೋಹರವಾಗಿರುತ್ತದೆ. ಹುದುಗಿರುವ ಅರ್ಥವೂ ರಮಣೀಯವಾಗಿರುತ್ತದೆ.

‘ಗುಡಿ ತುಂಬ ಮುತ್ತು ಗುಡಿಗೆ ಬೀಗ’-ಇದೊಂದು ಚೆಲುವಾದ ಒಗಟು. ಗುಡಿಯ ತುಂಬ ಮುತ್ತುಗಳನ್ನಿಟ್ಟು ಬೀಗ ಹಾಕಿರುವುದು ಪಾವಿತ್ರ‍್ಯವನ್ನು ಸೂಚಿಸುತ್ತದೆ. ಈ ಒಗಟಿನ ಅರ್ಥ ದಾಳಿಂಬೆ.

ಕೆಲವು ಒಗಟುಗಳಲ್ಲಿ ರಮಣೀಯವಾದ ಪದಚಿತ್ರಗಳು ಇರುತ್ತವೆ. ಅಂಥವುಗಳಲ್ಲಿ ಒಂದು:

ಒಂದೇ ಕಂಬದ ಮಹಡಿ ಮೇಲೆ
ಒಪ್ಪಾದ ಚಪ್ಪರ
ತಂಪಾದ ಮಡಕೆಯಲ್ಲಿ
ಸವಿಯಾದ ಕೆನೆ-ತೆಂಗು

ಆರ್.ವಿ.ಎಸ್.