ತೆಲುಗು ಜನಪದ ಗಾಯಕರು ಜನಪದ ಸಾಹಿತ್ಯದಲ್ಲಿ ಜನಪದ ಗೀತೆಗಳು, ಕಥನ ಗೀತೆಗಳು ಪ್ರಾಧನ್ಯವನ್ನು ಪಡೆದಿವೆ. ಇಂಥ ಗೀತೆಗಳನ್ನು, ಕಥನ ಗೀತೆಗಳನ್ನು ಹಾಡುವವರು ಭಿಕ್ಷುಕರು. ಇವರು ವೀರ ಕಾವ್ಯಗಳನ್ನು ಗಂಟೆಗಳ ಕಾಲ ಗಾಯನ ಮಾಡುತ್ತಾರೆ. ಈ ವೀರ ಕಾವ್ಯಗಳಲ್ಲಿ ವೀರ ಕಾವ್ಯ ಚಕ್ರಗಳು, ಲಘು ವೀರಕಾವ್ಯಗಳು ಮುಖ್ಯವಾದವು. ರಾಗ, ತಾಳ ಲಕ್ಷಣಗಳು ತಿಳಿಯದಿದ್ದರೂ ಈ ಜನಪದ ಗಾಯಕರು ತನ್ಮಯತೆಯಿಂದ ಹಾಡುತ್ತಾ ಪಂಡಿತರನ್ನು ಪಾಮರರನ್ನು ಆಕರ್ಷಿಸುತ್ತಾರೆ. ಇವರ ಗಾಯನವಿಧಾನ ಒಂದೇ ರೀತಿ ಇರುವುದಿಲ್ಲ. ಒಬ್ಬರು ಹಾಡಿದರೆ ವ್ಯಕ್ತಿಗತ. ಇಬ್ಬರು ಹಾಡಿದರೆ ಯುಗಳ ಗೀತೆ, ಹೆಚ್ಚು ಜನ ಹಾಡಿದರೆ ಸಮೂಹಗಾಯನವಾಗುತ್ತದೆ.

ಜನಪದ ಹಾಡುಗಳನ್ನು ಹಾಡುವ ಈ ಭಿಕ್ಷಾವ್ಯತ್ತಿಯ ಗಾಯಕರು ಸಂಚಾರಿಗಳಾಗಿದ್ದು ಒಂದೇ ಊರಿನಲ್ಲಿ ನೆಲಸುವುದಿಲ್ಲ. ಹೊಟ್ಟೆಪಾಡಿಗಾಗಿ ಊರೂರು ತಿರುಗುತ್ತಾ, ಹಾಡಿನ ರೂಪದಲ್ಲಿ ಕಥಾ ಸಾಹಿತ್ಯವನ್ನು ನಮಗೆ ತಲೆಮಾರುಗಳಿಂದ ನೀಡುತ್ತಿದ್ದಾರೆ. ಇವರೊಂದಿಗೆ ಇವರ ಕುಟುಂಬ, ವೇಷ ಧರಿಸಲು ಬೇಕಾದ ವಸ್ತ್ರಗಳು, ವಾದ್ಯಪರಿಕರಗಳು ಇರುತ್ತದೆ. ಸಾಮಾನ್ಯವಾಗಿ ಇವರೆಲ್ಲರಿಗೂ ಹಾಡಲು ವಾದ್ಯಗಳನ್ನು ನುಡಿಸಲು ಬರುತ್ತದೆ.

ಬುಡಿಗೆ ಜಂಗಾಲು, ಶಾರದ ಕಾಂಡ್ರು, ಬಾಲ ಸಂತುಲು, ಭಾಗವತರು, ತೊಗಲುಗೊಂಬೆಯವರು, ವೀರಮುಷ್ಟಿಯವರು, ಒಗ್ಗರು, ಗೊಂದಲಿಗರು(ಗೋಂಧಳೀಲು) ಮೊದಲಾದವರೆಲ್ಲ ಜನಪದ ಗಾಯನಕರೇ.

ಬುಡಿಗೆ ಜಂಗಾಲು: ಉದ್ದನೆಯ, ಸಣ್ಣ ಮೂತಿಯ ಪಾತ್ರೆಯನ್ನು ನುಡಿಸುತ್ತಾ ಕಥೆಯನ್ನು ಹಾಡುವುದು ಇವರ ವೃತ್ತಿ. ವಾದ್ಯಕ್ಕೆ ತಕ್ಕಂತೆ ಇವರನ್ನು ಬುಡಿಗೆ ಜಂಗಮರು ಎಂದು ಕರೆಯುತ್ತಾರೆ. ಹಾರ‍್ಮೋನಿಯಂ, ಮದ್ದಲೆ, ಮೃದಂಗ, ಬುಡಿಗೆ ಇಲ್ಲವೆ ಗೊಮ್ಮೆಟಿ, ಕಿನ್ನರಿ ಮೊದಲಾದ ವಾದ್ಯಗಳನ್ನು ಸಹ ಇವರು ಹಾಡು ಹಾಡುತ್ತಾ, ಸಂದರ್ಭಕ್ಕೆ ತಕ್ಕಂತೆ ನುಡಿಸುತ್ತಾರೆ.

ಅನಂತಪುರ ಜಿಲ್ಲೆ, ಚಿತ್ತೂರು, ನೆಲ್ಲೂರು, ಪ್ರಕಾಶಂ, ಕಡಪ, ಕರ್ನೂಲು, ಉಭಯ ಗೋದಾವರಿ ಜಿಲ್ಲೆಗಳು, ಕೃಷ್ಣ, ಗುಂಟೂರು-ತೆಲಂಗಾಣ ಜಿಲ್ಲೆಗಳಲ್ಲಿ ಹಾಗೂ ಮಹಾರಾಷ್ಟ್ರ, ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಇವರು ವಿಸ್ತರಿಸಿ ಸಂಚಾರ ಜೀವನವನ್ನು ಮಾಡುತ್ತಿದ್ದಾರೆ. ವಿವಿಧ ವೇಷಗಳಲ್ಲಿ ತೊಡುವುದರಲ್ಲಿ, ಕಥೆಯನ್ನು ಹೇಳುವುದರಲ್ಲಿ ಸ್ತ್ರೀ ವೇಷಗಳನ್ನು ನಿರ್ವಹಿಸುವುದರಲ್ಲಿ ಇವರು ನಿಪುಣರು. ಬೇರೆ ಬೇರೆ ಯಕ್ಷಗಾನ ಕವಿಗಳು ಭಾಗವತಗಳನ್ನು ಆಡುತ್ತಾರೆ.

ಶಾರದಕಾಂಡ್ರು: ಶಾರದಕಾಂಡ್ರು ತೆಲಂಗಾಣ ಪ್ರಾಂತ್ಯದಲ್ಲಿ ಹೆಚ್ಚಾಗಿದ್ದಾರೆ. ಇವರು ‘ಶಾರದ’ ಎಂದು ಕರೆಯುವ ತಂತೀವಾದ್ಯದೊಂದಿಗೆ, ಬುಡಿಗೆಗಳೊಂದಿಗೆ ಕಥೆಗಳನ್ನು ಮಾಡುತ್ತಾರೆ. ಆದ್ದರಿಂದಲೇ ಇವರಿಗೆ ಶಾರದಕಾಂಡ್ರು ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಆದರೆ ಶಾರದಲಯದಲ್ಲಿ ಪದಗಳನ್ನು ಹಾಡುವುದರಿಂದ ಇರಿಗೆ ಈ ಹೆಸರು ಬಂದಿದೆ ಎಂಬುದು ಕೆಲವರ ವಾದ. ಇವರು ತೆಲಂಗಾಣ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.

ಇವರು ಶಾರದಲಯದ ಸಾರಂಗಧರ, ಸರ್ವಾಯಿಪಾಪಡು, ಸದಾಶಿವರೆಡ್ಡಿ ಕಥೆ, ಬಾಲನಾಗಮ್ಮ, ಬೊಬ್ಬಿಲಿಕಥ, ಪಲನಾಡಿನ ಕಥೆಗಳನ್ನು ಹಾಡುತ್ತಾರೆ. ಪುರುಷನು ಎಡಗೈಯ ಹೆಬ್ಬೆರಳಿಗೆ ಗೆಜ್ಜೆಗಳನ್ನು ಧರಿಸಿ ಭುಜದ ಮೇಲೆ ಇಟ್ಟುಕೊಂಡಿರುವ ಶಾರದ (ತಂಬೂರಿ) ಯನ್ನು ಬಲಗೈಯಲ್ಲಿ ನುಡಿಸುತ್ತಾ ಹಾಡುತ್ತಾನೆ. ಅಲ್ಲಿರುವ ಹೆಂಗಸು ಧ್ವನಿಗೂಡಿಸುತ್ತಾ ದಮ್ಮಡಿ ಬಡಿಯುತ್ತಾಳೆ.

ಬಾಲ ಸಂತುಲು: ಇವರನ್ನು ಬಾಲಸಂತೋಷಿ, ಶಂಖುಸಂತು, ತೆಲ್ಲಸಂತ, ಗಂಟಸಂತು, ಚಿಲುಕಸಂತು, ಮೂಗಸಂತು, ಕೋಯಸಂತು ಎಂದು ಆಯಾ ಪ್ರಾಂತ್ಯಗಳಲ್ಲಿ ವ್ಯವಹರಿಸುತ್ತಾರೆ. ಇವರು ಹಾಡುತ್ತಾ ಗಂಟೆ ಬಾರಿಸುತ್ತಾ ಮಧ್ಯೆ ಮಧ್ಯೆ ಶಂಖವನ್ನು ಊದುತ್ತಾರೆ.

ತೆಲಂಗಾಣದಲ್ಲಿ ಬಾಲಸಂತುಲು ಹೆಚ್ಚು. ಭಾರತ ಕಥೆಗಳನ್ನು ಬೊಬ್ಬಲಿ ಕಥೆಯನ್ನು, ಬಾಲನಾಗಮ್ಮ ಕಥೆ, ವಿವಿಧ ದೇವತೆಗಳನ್ನು ಕುರಿತಾದ ಹಾಡುಗಳನ್ನು ತಿಂಗಳುಗಳ ಕಾಲ ಗಂಟೆ ಬಾರಿಸುತ್ತಾ ಮಧ್ಯೆ ಮಧ್ಯೆ ಶಂಖ ಊದುತ್ತಾ ಹಾಡುತ್ತಾರೆ. ಇವರು ಬಗೆ ಬಗೆಯ ಜನಪದ ಹಾಸ್ಯ ಕಥೆಗಳನ್ನು ಹೇಳುತ್ತಾರೆ.

ಭಾಗವತರು: ಭಗವಂತನಿಗೆ ಸಂಬಂಧಿಸಿದ ಕಥೆಗಳನ್ನು ಹೇಳುವವರನ್ನು ಭಾಗವತರೆಂದು ಕರೆಯುತ್ತಾರೆ. ಇವರನ್ನು ಭಾಗೋತುವಾಳ್ಳು, ಭಾಗೋತಮೋಳ್ಳು ಎಂದೂ ಕರೆಯುತ್ತಾರೆ. ಪುರಾಣಗಳಲ್ಲಿ ವಿಷಯಗಳನ್ನು ಚೆನ್ನಾಗಿ ತಿಳಿದವನನ್ನು ಭಾಗವತ ಎನ್ನುವುದು ರೂಢಿ. ಇವರು ತಮ್ಮ ಪ್ರದರ್ಶನಗಳಲ್ಲಿ ಹಾರ‍್ಮೋನಿಯಂ ಸಣ್ಣಶ್ರುತಿ ಇಲ್ಲವೆ ಸ್ವರಪೆಟ್ಟಿಗೆ, ಮೃದಂಗ, ತಾಳ ಮತ್ತು ಗೆಜ್ಜೆಗಳನ್ನು ಉಪಯೋಗಿಸುತ್ತಾರೆ.

ಭಾಗವತರಿಗೆ ಜ್ಞಾಪಕ ಶಕ್ತಿ ಹೆಚ್ಚು. ಅನೇಕ ಕಥೆಗಳ ಜ್ಞಾನ ಆ ಕಥೆಗೆ ಸಂಬಂಧಿಸಿದ ಭಾಗವತ ಅದರಲ್ಲಿಯ ರಾಗಗಳು, ತಾಳಗಳು ಹಾಡುಗಳು ಅವರಿಗೆ ಚೆನ್ನಾಗಿ ಗೊತ್ತು.

ಮಾಯಾಬಜಾರ್, ಶಶಿರೇಖಾ ಪರಿಣಯಂ, ಮೈನಾವತಿ, ಭಕ್ತಸಿರಿಯಾಳ, ಬಾಲನಾಗಮ್ಮ, ಅಲ್ಲೀ ರಾಣಿ, ಹರಿಶ್ಚಂದ್ರ, ಮುಗ್ಗುರು ಮರಾಠೀಲು, ಗುಲೇಬಕಾವಲಿ, ಗಾಂಧಾರಿ, ಕೀಚಕ ವಧೆ ಮೊದಲಾದ ಕಥೆಗಳನ್ನು ಪ್ರದರ್ಶಿಸುವ ಇವರು ತೆಲಂಗಾಣ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡಬರುತ್ತದೆ.

ತೊಗಲುಗೊಂಬೆಯವರು: ಗೊಂಬೆಯವರು, ಗೊಂಬೆಯಾಡಿಸುವವರು ಎಂದು ಕರೆಯಲ್ಪಡುವ ಇವರು ತೊಗಲು ಗೊಂಬೆಗಳನ್ನು ಪ್ರದರ್ಶಿಸಿ ಜೀವನ ಸಾಗಿಸುತ್ತಿದ್ದಾರೆ. ತೊಗಲುಗೊಂಬೆಯಾಟ ತುಂಬ ಪ್ರಸಿದ್ಧಿ ಹೊಂದಿದ ಜನಪದ ಕಲಾಪ್ರಕಾರ. ತೆಲಂಗಾಣ, ರಾಯಲಸೀಮೆ, ತೀರ ಪ್ರಾಂತ್ಯದಲ್ಲಿ ಈ ಅಟ ಬಹಳ ಕಾಲ ಇದ್ದಂತೆ ಕಾಣಿಸುತ್ತದೆ. ಇವರು ಬಿಜಾಪುರ, ಬೆಳ್ಗಾಂ, ಸತಾರ, ಕೊಲ್ಲಾಪುರ, ಪುಣೆ ಪ್ರಾಂತ್ಯಗಳಿಂದ ತೆಲುಗು ಪ್ರದೇಶಕ್ಕೆ ಬಂದು ಸ್ಥಿರವಾಗಿ ನೆಲೆಯೂರಿದರು.

ಸಾಧಾರಣವಾಗಿ ತೊಗಲುಗೊಂಬೆಯಾಟದಲ್ಲಿ ನಾಲ್ಕು ಜನ ಸ್ತ್ರೀಯರು ನಾಲ್ಕು ಜನ ಪುರುಷರು ಇರುತ್ತಾರೆ. ಗೊಂಬೆಗಳ ಅವಯವಗಳನ್ನು ಚಲಿಸುತ್ತಾ ಗೊಂಬೆಗಳ ಜೊತೆಯಲ್ಲಿ ತಾವು ಚಲಿಸುವ ನೈಪುಣ್ಯವನ್ನು ಪಡೆದಿರುತ್ತಾರೆ. ಒಟ್ಟು ೧೫-೨೦ ಮಂದಿ ವೃಂದದಲ್ಲಿರುತ್ತಾರೆ. ವಾದ್ಯಗಾರರು ರಂಗಸ್ಥಳದ ತೆರೆಯ ಮರೆಯಲ್ಲಿ ಕುಳಿತು ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ.

ರಾಮಾಯಣ, ಮಹಾಭಾರತಗಳನ್ನು ತೊಗಲುಗೊಂಬೆಯಾಟದಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಸಕಾಲದಲ್ಲಿ ಮಳೆಗಳು ಬೀಳದೆ ಹೋದರೆ ಉತ್ತರಗೋಗ್ರಹಣ, ವಿರಾಟ ಪರ್ವ ಮೊದಲಾದ ಆಟಗಳನ್ನು ಪ್ರದರ್ಶಿಸುತ್ತಾರೆ.

ಒಗ್ಗುಲು: ಯಾದವ ಕುಲದ ಗಾಯಕದಲ್ಲಿ ಒಗ್ಗುಲು ಪ್ರಸಿದ್ಧರು. ಒಗ್ಗುಲು, ಮಲ್ಲನ್ನಲು, ಗೊಲ್ಲಸುದ್ದುಲ ವಾಳ್ಳು ಎಂದು ತೆಲಂಗಾಣ ಪ್ರಾಂತ್ಯದಲ್ಲಿ ಇವರನ್ನು ಕರೆಯುತ್ತಾರೆ. ಒಗ್ಗು ಕಥೆಗಳನ್ನು ಹೇಳುವ ಗುಂಪಿನಲ್ಲಿ ಮೂವರಿಂದ ಆರು ಜನರವರೆಗೆ ಇರುತ್ತಾರೆ. ಪ್ರಧಾನ ಕಥೆಗಾರ ಕಾಲುಗಳಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು, ಸೊಂಟಕ್ಕೆ ತೊಡೆತನಕ ಬರುವಂತೆ ಕೆಂಪು ಬಣ್ಣದ ಧೋತಿಯನ್ನು ಕಟ್ಟಿಕೊಂಡು, ಕೆಂಪು ಅಥವಾ ಬಿಳಿಯ ಬಣ್ಣದ ಅಂಗಿಯನ್ನು ತೊಟ್ಟಿರುತ್ತಾನೆ. ಡೋಲು, ತಾಳಗಳ ಧ್ವನಿಗೆ ಲಯಬದ್ಧವಾಗಿ ಕುಣಿಯುತ್ತಾ ಕಾಲ್ಗೆಜ್ಜೆಯನ್ನು ಕುಣಿಸಿ ಕಥೆಯನ್ನು ಹೇಳುವುದು ರೂಠಿ. ಪುರುಷರು ಸ್ತ್ರೀವೇಷ ಹಾಕುವುದನ್ನು ಕಾಣುತ್ತೇವೆ. ಪ್ರಧಾನ ಕಥೆಗಾರನೇ ಸ್ತ್ರೀವೇಷ ಹಾಕುವುದನ್ನು ಕಾಣುತ್ತೇವೆ. ಪ್ರಧಾನ ಕಥೆಗಾರನೇ ಸ್ತ್ರೀವೇಷ ಧರಿಸುತ್ತಾನೆ. ಪ್ರಧಾನ ಕಥೆಗಾರರನಿಗೆ ಹಾಸ್ಯವನ್ನೊದಗಿಸಲು ಅವನಂತೆಯೇ ಮತ್ತೊಬ್ಬನು ವೇಷವನ್ನು ಧರಿಸುತ್ತಾನೆ. ಮತ್ತೊಬ್ಬ ಸಹಗಾಯಕನ ವೇಷ ಸಹ ಹೀಗೆ ಇರುತ್ತದೆ.

ಕಾಟಮರಾಜು ಕಥೆ, ಕೋಮಿರೆಲ್ಲಿ ಮಲ್ಲನ್ನ ಕಥೆ, ಎಲ್ಲಮ್ಮ ಕಥೆ, ಬೀರಪ್ಪನ ಕಥೆ, ಮಾಂಧಾತ ಕಥೆ, ನಲ್ಲ ಪೋತಮ್ಮ ಕಥೆ, ಸಾರಂಗಧರ ಮೊದಲಾದ ಕಥೆಗಳನ್ನು ಹೇಳುತ್ತಾರೆ. ಸಾಧಾರಣವಾಗಿ ಈ ಕಥೆಗಳು ವೀರರಸ ಪ್ರಧಾನವಾಗಿರುತ್ತವೆ.

ವೀರಮುಷ್ಟಿಗರು: ವೀರಮುಷ್ಟಿ, ವೀರಭಟ, ಭದ್ರಪಾದ ಮೊದಲಾದ ಹೆಸರುಗಳಿಂದ ಇವರನ್ನು ಕರೆಯುತ್ತಾರೆ. ವೀರರಾದ ಯೋಧರೆಂದು, ವೀರಶೈವ ಭಿಕ್ಷುಕರೆಂದು ವೀರಮುಷ್ಠಿಯವರನ್ನು ಗುರುತಿಸಬಹುದು. ಮುಷ್ಟಿ ಎಂದರೆ ಹಿಡಿ. ಇವರು ಜಂಗಾಲರನ್ನು, ಕೋಮಟಿಗರನ್ನು ಯಾಚಿಸಿ ಜೀವನ ಸಾಗಿಸುತ್ತಾರೆ.

ವೀರಮುಷ್ಟಿಯವರ ವಾದ್ಯ ಜೇಗಂಟ ಅಥವಾ ತಪ್ಪೆಟ (ತಮಟೆ). ಇದನ್ನು ಬಡಿಯುತ್ತ ಶೈವ ಸಂಬಂಧವಾದ ಗೀತೆಗಳನ್ನು ಭಕ್ತರ ಕಥೆಗಳನ್ನು ಹಾಡುತ್ತಾರೆ. ಶೈವರಿಗೆ ಸಂಬಂಧಿಸಿದ ಕಥೆಗಳನ್ನು, ಕನ್ಯಕಾಪರಮೇಶ್ವರಿ ಕಥೆಗಳನ್ನು, ಹಾಡುಗಳನ್ನು ಹಾಡುತ್ತಾ ಹಳ್ಳಿಗಳಲ್ಲಿ ಸುತ್ತುತ್ತಾರೆ.

ಬಿಳಿ ಧೋತಿ ಕಟ್ಟಿಕೊಂಡು, ತಲೆಗೆ ರುಮಾಲು ಸುತ್ತಿ, ಕೊರಳಲ್ಲಿ ರುದ್ರಾಕ್ಷಿಮಾಲೆ, ಲಿಂಗವನ್ನು ಧರಿಸಿಕೊಂಡು, ಹಣೆಗೆ ವಿಭೂತಿ ಬಳಿದು, ಒಂದು ಗಂಟೆ ಅಥವಾ ತಮಟೆಯನ್ನು ಬಡಿಯುತ್ತಾ ‘ಓಂ ಶಿವ ಶವ ಹರಹರ ಶಂಭೋ ಓಂ’ ಎಂಬ ಓಂಕಾರದೊಂದಿಗೆ ಶಿವನ ಹೆಸರನ್ನು ನೆನೆಯುತ್ತಾ ಶಂಖವನ್ನು ಊದಿ ಭಿಕ್ಷೆ ಯಾಚಿಸುತ್ತಾರೆ.

ತೆಲಂಗಾಣ, ರಾಯಲಸೀಮೆ, ನೆಲ್ಲೂರು, ಓಂಗೋಲು, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ, ಕೃಷ್ಣ, ಗುಂಟೂರು ಮೊದಲಾದ ವಿಶಾಲ ಪ್ರಾಂತ್ಯಗಳಲ್ಲಿ ನೆಲಸಿದ್ದಾರೆ.

ಬವನೀಲು: ಇವರನ್ನು ಬೈಂಡ್ಲವಾರು, ಪಂಬಲವಾರು ಎಂದು ಕರೆಯುತ್ತಾರೆ. ಇವರು ನುಡಿಸುವ ವಾದ್ಯದಿಂದ ಇವರನ್ನು ಬೈಂಡ್ಲವಾರು ಎನ್ನುತ್ತಾರೆ. ಇವರ ವಾದ್ಯಕ್ಕೆ ‘ಜಮಿಡಿಕ’ಗಳೆಂದು ಹೆಸರು. ಶಿಷ್ಟ ಭಾಷೆಯಲ್ಲಿ ಈ ವಾದ್ಯವನ್ನು ಬವನಿಕ ಎನ್ನುತ್ತಾರೆ. ಬವನಿಕವನ್ನು ನುಡಿಸುವವರು ಬವನೀಯ ಅಥವಾ ಬೈಂಡ್ಲವಾರು. ಬವನಿಕವನ್ನೇ ಪಂಬ ಎನ್ನುವರು. ಪಂಬವನ್ನು ನುಡಿಸುವುದರಿಂದ ಇವರು ಪಂಬಲರಾದರೆಂದು ಅಭಿಪ್ರಾಯವಿದೆ. ಕೃಷ್ಣ, ಗುಂಟೂರು ಪ್ರಾಂತ್ಯಗಳಲ್ಲಿ ಜಮಿಡಿಕವನ್ನು ಜಮುಕುಲು ಎನ್ನುತ್ತಾರೆ. ಅವುಗಳ ಸಹಾಯದಿಂದ ಮಾಡುವ ಕಥೆಗಳನ್ನು ಜಮುಕುಲ ಕಥೆಗಳೆನ್ನುವರು.

ಬವನೀಲು ಎರಡು ಜಮಿಡಿಕಗಳನ್ನು ಬಡಿಯುತ್ತಾ ಕಥೆಯನ್ನು ಹೇಳುತ್ತಾರೆ. ಇವನೊಂದಿಗೆ ಹಾಡುವವನ ಬಳಿ ಸಣ್ಣ ಜಮಿಡಿಕ ಇರುತ್ತದೆ. ಇದು ಕೇವಲ ಶ್ರುತಿಗಾಗಿ ಉಪಯೋಗವಾಗುತ್ತದೆ. ತೆಲಂಗಾಣದ ಗ್ರಾಂದೇವತೆಗಳ ಮೆರವಣಿಗೆಯ ಸಂದರ್ಭದಲ್ಲಿ ಹತ್ತರ, ಸಿಡುಬಿನಂಥ ರೋಗಗಳನ್ನು ವಾಸಿ ಮಾಡುವ ಮಾಂತ್ರಿಕರಾಗಿಯೂ ಬವನೀಲು ಪ್ರಸಿದ್ಧರೆನ್ನುವರು.

ಗೊಲ್ಲಸುದ್ದುಲು: ಇವರು ಪ್ರಧಾನವಾಗಿ ಗೊಲ್ಲರನ್ನು ಯಾಚಿಸಿ ಜೀವನ ಸಾಗಿಸುತ್ತಾರೆ. ಕಾಟಮ ರಾಜು ಕಥೆ, ಕೃಷ್ಣಲೀಲಲು ಮೊದಲಾದ ಹಾಡುಗಳನ್ನು ಹಾಡುವರು. ಇವರು ಬೊಂಬೆಗಳನ್ನು ಪ್ರದರ್ಶಿಸಿ ಈ ಕಥೆಗಳನ್ನು ಹೇಳುತ್ತಾರೆ. ಕೊಂಬು, ವೀರಣಮುಲುಗಳನ್ನು ನುಡಿಸುತ್ತಾರೆ. ಕೇವಲ ಶಂಖವನ್ನು ಊದುವರು.

ಪಿಚ್ಚುಕುಂಟ್ಲು: ಪಿಚ್ಚಕುಂಟ, ಪಿಚ್ಚಿಕುಂಟ, ಪಿಚ್ಚುಕ ಕುಂಟ-ಮುಂತಾಗಿ ಕರೆಯಲ್ಪಡುವ ಇವರು ರೆಡ್ಡಿಗಳು, ಕಮ್ಮ, ವೆಲಮ, ಯಾದವ, ಒಕ್ಕಲಿಗರು ಮೊದಲಾದವರನ್ನು ಬೇಡಿ ಜೀವಿಸುತ್ತಿದ್ದಾರೆ. ಕರ್ನಾಟಕದಲ್ಲಿ ಒಕ್ಕಲಿಗರನ್ನು ಬೇಡಿ, ಕಥೆಗಳನ್ನು ಹೇಳಿ ಹೊಗಳಿ ಗೋತ್ರಗಳನ್ನು ಹೇಳುವವರನ್ನು, ‘ಹೆಳವರು’ ಎಂದು ಕರೆಯುತ್ತಾರೆ. ಇವರು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಜೀವನೋಪಾಯಕ್ಕಾಗಿ ಬಂದವರು.

ಪಲ್ನಾಡಿನ ಪ್ರಾಂತ್ಯಕ್ಕೆ ಸಂಬಂಧಿಸಿದ ಪಲ್ನಾಟವೀರ ಚರಿತ್ರೆಯನ್ನು ಇವರು ಮುಖ್ಯವಾಗಿ ಗಾಯನ ಮಾಡುತ್ತಾರೆ. ಪಲ್ನಾಟಿ ವೀರ ಚರಿತ್ರೆಯನ್ನು ‘ಪಲನಾಟಿ ಭಾರತಂ’ ಎಂದು ಕರೆಯುತ್ತಾರೆ. ಯಾದವರಾಜರ ಕಥೆಗಳನ್ನು ಸಹ ಹಾಡುತ್ತಾರೆ. ದ್ರೌಪದೀ ವಸ್ತ್ರಾಪಹರಣಂ, ಕೀಚಕವಧೆ, ರಾಜಸೂಯಂ, ದೇಶಿಂಗು ರಾಜುಕಥೆ, ಮುಗ್ಗುರು ಮರಾಠೀಲು, ಬಾಲನಾಗಮ್ಮ ಮೊದಲಾದವು ಇವರು ಹೇಳುವ ಇತರ ಕಥೆಗಳು. ಗಂಟೆ, ಡಕ್ಕಿ, ತೋಲುತಿತ್ತಿ ಜೊತೆಗೆ ಕೆಲವರು ತಮ್ಮಟೆಯನ್ನು ಸಹ ಕಥೆಗಳಲ್ಲಿ ವಾದ್ಯವನ್ನಾಗಿ ಉಪಯೋಗಿಸುವುದು ಕಂಡುಬರುತ್ತದೆ.

ಮೇಲೆ ಹೆಸರಿಲ್ಪಟ್ಟವರಲ್ಲದೆ ಬೈರಾಗಿಗಳು, ಗೌಡಶೆಟ್ಟರು, ಸಾತಾನರು, ಹಟ್ಕರುಲು, ಗೊಲ್ಲದಾಸರ‍್ಲು, ಪಾಂಡವುಲವಾಳ್ಳು, ಕೊಮ್ಮುಲವಾರು, ವೀರವಿದ್ಯಾವಂತುಲು, ಬುಡಬುಡಕೆಯವರು ಮೊದಲಾದವರು ಜನಪದಗಾಯಕರಾಗಿ ಪ್ರಸಿದ್ಧರಾಗಿದ್ದಾರೆ.

ಜಿ.ಎಸ್.ಎಂ. ಅನುವಾದ ಕೆ.ಎಸ್.

 

ತೆಲುಗು ಜನಪದ ಮಹಾಕಾವ್ಯಗಳು          ತೆಲುಗು ಜನಪದ ಸಾಹಿತ್ಯದಲ್ಲಿ ಮಹಾಕಾವ್ಯಗಳಿಗೆ ಪ್ರತ್ಯೇಕವಾದ ಸ್ಥಾನವಿದೆ. ಪ್ರಪಂಚದಲ್ಲಿ ಅತ್ಯಂತ ಮಹತ್ತ್ವದ ಜನಪದ ಮಹಾಕಾವ್ಯಗಳೆಂದು ಹೇಳಬಹುದಾದ ಸುದೀರ್ಘ ಕಾವ್ಯ ಪರಂಪರೆ ತೆಲುಗಿನಲ್ಲಿದೆ. ಜನಪದ ಕಥನ ಗೀತೆಗಳಲ್ಲಿ ಕೆಲವು ಲಘುಕಾವ್ಯಗಳು. ಇವುಗಳನ್ನು ಕೆಲವೇ ನಿಮಿಷಗಳಲ್ಲಿ ಅಥವಾ ಒಂದು ಗಂಟೆಯಲ್ಲಿ ಹಾಡಬಹುದು. ಅಷ್ಟುದೀರ್ಘಲ್ಲದ ಜನಪದ ಕಾವ್ಯಗಳು ತೆಲುಗಿನಲ್ಲಿ ಅಸಂಖ್ಯಾತವಾಗಿವೆ. ಇವುಗಳನ್ನು ಕೆಲವು ಗಂಟೆಗಳಲ್ಲಿ ಅಥವಾ ಒಂದೆರಡು ದಿನಗಳಲ್ಲಿ ಹಾಡಬಹುದು. ಜನಪದ ಮಹಾಕಾವ್ಯ ಎಂಬುದು ಒಂದು ಸುದೀರ್ಘ ಪರಂಪರೆ. ಇಂಥವನ್ನು ಸಂಸ್ಕೃತದಲ್ಲಿ ಇತಿಹಾಸ ಎಂದು ಕರೆಯುತ್ತಾರೆ. ರಾಮಾಯಣ ಮತ್ತು ಮಹಾಭಾರತ ಕೇವಲ ಮಹಾಕಾವ್ಯಗಳಲ್ಲ. ಅವು ಇತಿಹಾಸಗಳು. ಇಡೀ ಭಾರತ ದೇಶದಲ್ಲಿ ಮತ್ತು ಇತರ ದೇಶಗಳಲ್ಲೂ ಅವುಗಳಲಿಗೆ ಸಂಬಂಧಿಸಿದ ಸಂಸ್ಕೃತಿ ಹರಡಿಕೊಂಡಿದೆ. ಅದೇ ರೀತಿ ಜನಸಮುದಾಯದಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಮಹಾಕಾವ್ಯಗಳನ್ನು ಇತಿಹಾಸ ಎಂದು ಕರೆಯಬಹುದು. ಕನ್ನಡದಲ್ಲಿ ಮಲೆಯಮಹದೇಶ್ವರ, ಮಂಟೇಸ್ವಾಮಿ ಮುಂತಾದವನ್ನು ಜನಪದ ಇತಿಹಾಸಗಳೆಂದು ಕರೆಯಬಹುದು. ಈ ರೀತಿಯ ಸುದೀರ್ಘ ಮಹಾಕಾವ್ಯಗಳು ತೆಲುಗಿನಲ್ಲಿ ಕಂಡು ಬರುತ್ತವೆ. ಇಂಥವನ್ನು ಜನಪದ ಮಹಾಕಾವ್ಯ ಅಥವಾ ಕಥಾಕಾವ್ಯ ಚಕ್ರ ಎಂದು ಕರೆಯುತ್ತಾರೆ. ಏಕೆಂದರೆ ಈ ರೀತಿಯ ಸುದೀರ್ಘ ಕಾವ್ಯಗಳಲ್ಲಿ ಸ್ವಯಂ ಸಂಪೂರ್ಣವಾದ ಅನೇಕ ಕಾವ್ಯಗಳು ಸೇರಿಕೊಂಡಿರುತ್ತವೆ. ಆ ಕಾವ್ಯಗಳನ್ನು ಸ್ವತಂತ್ರ‍್ಯವಾಗಿಯೇ ಓದಿಕೊಳ್ಳಬಹುದು ಅಥವಾ ವೃತ್ತಿಗಾಯಕರಿಂದ ಕೇಳಬಹುದು. ತೆಲುಗಿನ ಅತ್ಯಂತ ಮಹತ್ವ್ತದ ಮಹಾಕಾವ್ಯಗಳಲ್ಲಿ ಪಲನಾಡಿನ ವೀರರ ಚರಿತ್ರೆ, ಕಾಟಮರಾಜನ ಚರಿತ್ರೆ ಮುಂತಾದವು ಪ್ರಪಂಚದಲ್ಲೇ ಬೆರಳೆಣಿಕೆಯಲ್ಲಿರುವ ಜನಪದ ಇತಿಹಾಸಗಳಾಗಿವೆ. ಪಲನಾಡಿನ ವೀರರ ಚರಿತ್ರೆಯಲ್ಲಿ ಬ್ರಹ್ಮನಾಯ್ಡು ಎಂಬ ವೀರನ ಬಗ್ಗೆ ಸುಮಾರು ಇಪ್ಪತ್ತೈದು ಕಥಾಕಾವ್ಯಗಳಿವೆ. ಇವುಗಳನ್ನು ಹಾಡಬೇಕಾದರೆ ಪ್ರತಿರಾತ್ರಿ ಒಂದೊಂದು ಕಥೆಯಂತೆ ಸುಮಾರು ಒಂದು ತಿಂಗಳ ಕಾಲ ಹಿಡಿಯುತ್ತದೆ. ಕಾಟಮರಾಜ ಎಂಬ ವೀರನಿಎ ಸಂಬಂಧಿಸಿದಂತೆ ೩೨ ಕಾವ್ಯಕಥೆಗಳಿವೆ. ಪರಶುರಾಮನ ಕಥಾಚಕ್ರದಲ್ಲಿ ಒಂಬತ್ತು(೯) ಕಥಾ ಕಾವ್ಯಗಳಿವೆ. ಅಂಕಮ್ಮನ ಕಥಾ ಚಕ್ರದಲ್ಲಿ ಮೂರು (೩) ಕಥಾಕಾವ್ಯಗಳಿವೆ. ಈ ಎಲ್ಲಾ ಕಥಾಕಾವ್ಯಗಳನ್ನು ಹತ್ತುದಿನಗಳಿಂದ ಒಂದು ಅಥವಾ ಒಂದುವರೆ ತಿಂಗಳುಗಳ ವರೆಗೆ ಹಾಡುತ್ತಾರೆ. ಪಲನಾಡಿನ ವೀರರಚರಿತ್ರೆ, ಕಾಟಮರಾಜನ ಕಥೆ ಮುಂತಾದವು ಸಾಮಾನ್ಯ ಕಥನಗೀತೆಗಳಲ್ಲ. ಇವುಗಳ ಸುತ್ತ ಒಂದು ನಿರ್ದಿಷ್ಟ ಸಂಸ್ಕೃತಿ ಇದೆ. ಈ ಮಹಾಕಾವ್ಯಗಳಲ್ಲಿ ಇರುವ ವೀರರಿಗೆ ಗುಡಿಗಳಿವೆ. ಅವರನ್ನು, ಅವರ ಆಯುಧಗಳನ್ನು ಜನ ಪೂಜೆ ಮಾಡುತ್ತಾರೆ. ಈ ಕಥೆಗಳಲ್ಲಿರುವ ಅಸ್ಪಷ್ಟ ಇತಿಹಾಸದ ಜೊತೆಗೆ ಅನೇಕ ಐತಿಹ್ಯಗಳು ಸೇರಿಕೊಂಡಿವೆ.

ಪಲನಾಡು ಆಂಧ್ರಪ್ರದೇಶದ ಗುಂಟೂರು ಒಂದು ಭಾಗ. ಇದನ್ನು ಕ್ರಿ.ಶ. ೧೨ನೇ ಶತಮಾನದಲ್ಲಿ ಹೈಹಯವಂಶದ ರಾಜರು ಆಳಿದರು. ಅನುಗುರಾಜು ಎಂಬವನು ಅವರಲ್ಲಿ ಒಬ್ಬ. ಇವನ ಮಕ್ಕಳು ನಲಗಾಮರಾಜು ಮತ್ತು ಮಲಿದೇವರಾಜು. ನಲಗಾಮನಿಗೆ ನಾಗಮ್ಮ ಎಂಬವಳು ಸಚಿವೆಯಾಗಿದ್ದಳು. ಮಲಿದೇವನಿಗೆ ಬ್ರಹ್ಮನಾಯ್ಡು ಮಂತ್ರಿಯಾಗಿದ್ದನು. ನಾಗಮ್ಮ ಮತ್ತು ಬ್ರಹ್ಮನಾಯ್ಡು ಪ್ರತಿಸ್ಪರ್ಧಿಗಳಾಗಿದ್ದರು. ಮಹಾಭಾರತದಲ್ಲಿ ಜೂಜಿನಿಂದ ಧರ್ಮರಾಜ ಸೋತಂತೆ ನಾಗಮ್ಮನೊಂದಿಗೆ ಕೋಳಿ ಪಂದ್ಯದಲ್ಲಿ ಮಲಿದೇವ ಸೋತ. ಮಹಾಭಾರತದಲ್ಲಿ ಪಾಂಡವರಂತೆ ಮಲಿದೇವಾದಿಗಳು ಕಾಡಿಗೆ ಹೋದರು. ಅಲ್ಲಿಂದ ಬಂದ ಮೇಲೆ ರಾಜ್ಯವನ್ನು ಅವರಿಗೆ ಹಿಂದಿರುಗಿಸಿದೆ ಇದ್ದುದರಿಂದ ಯುದ್ಧ ಅನಿವಾರ್ಯವಾಯಿತು. ಇದರಿಂದ ಕ್ರಿ.ಸ.೧೧೮೧-೮೨ರಲ್ಲಿ ಪಲನಾಡಿನ ಯುದ್ಧ ನಡೆಯಿತು. ಬ್ರಹ್ಮನಾಯ್ಡುವಿನ ಮಗ ಬಾಲಚಂದ್ರ ಮಹಾಬಾರತದಲ್ಲಿ ಅಭಿಮನ್ಯುವಿನಂತೆ ಧೈರ್ಯ ಸಾಹಸಗಳನ್ನು ತೋರಿ ಕೊನೆಗೆ ಬ್ರಹ್ಮನಾಯ್ಡು ನಲಗಾಮನಿಗೆ ರಾಜ್ಯ ಕೊಟ್ಟು ನಾಗಮ್ಮನನ್ನೇ ಸಚಿವೆಯನ್ನಾಗಿ ಮಾಡಿ ತಪಸ್ಸು ಮಾಡಿಕೊಳ್ಳಲು ಹೊರಟು ಹೋದ. ಮಹಾಭಾರತದ ಕಡೆಯ ನೆರಳಿನಂತೆ ಪಲನಾಡಿನ ವೀರರ ಕಥೆ ಸಾಗುತ್ತದೆ.

ಪ್ರಪಂಚದ ಎಲ್ಲ ವೀರಕಾವ್ಯಗಳು ಇತಿಹಾಸದ ಮಧ್ಯಯುಗಗಳಲ್ಲಿ ಹುಟ್ಟಿರುವುದಾಗಿ ಹೇಳುತ್ತಾರೆ. ೧೨ನೇ ಶತಮಾನದ ಘಟನೆಗಳನ್ನು ಆಧರಿಸಿ ಪಲನಾಡಿನ ವೀರಕಾವ್ಯ ಹುಟ್ಟಿಕೊಂಡಿದೆ. ಅದೇ ರೀತಿ ೧೩ನೇ ಶತಮಾನದ ಘಟನೆಗಳ ಆಧಾರದಿಂದ ಕಾಟಮರಾಜು ಇತಿಹಾಸ ಹುಟ್ಟಿಕೊಂಡಿದೆ. ಪ್ರಪಂಚ ಸಾಹಿತ್ಯದಲ್ಲೇ ಪಲನಾಡಿನ ವೀರ ಕಥಾ ಚಿತ್ರಕ್ಕಿಂತ ಮೊದಲು ಹುಟ್ಟಿದ ಆ ಪ್ರಮಾಣದ ವೀರ ಕಾವ್ಯ ಇನ್ನೊಂದಿಲ್ಲ. ಅದೇ ರೀತಿ ೩೨ ವೀರ ಕಾವ್ಯಗಳಿಂದ ಕೂಡಿದ ಕಾಟಮರಾಜನ ಕಥಾಚಕ್ರದಷ್ಟು ಗಾತ್ರದ ಇನ್ನೊಂದು ಜನಪದ ಮಹಾಕಾವ್ಯ ಪ್ರಪಂಚದಲ್ಲೇ ಇಲ್ಲ. ಕಾಟಮರಾಜನ ತಾತನಾದ ಒಲುರಾಜನ ಕಥೆಯಿಂದ ಪ್ರಾರಂಭವಾಗಿ ಅವನ ಮಕ್ಕಳ ಕಥೆಗಳೆಲ್ಲ ಸೇರಿ ಅವನ ಮೊಮ್ಮಗನಾದ ಕಾಟಮರಾಜನ ಕಥೆಯೊಂದಿಗೆ ಒಟ್ಟು ೩೨ ಕಥಾಕಾವ್ಯಗಳಲ್ಲಿ ಈ ಮಹಾಕಾವ್ಯ ವಿಸ್ತರಿಸಿಕೊಂಡಿದೆ.

ಈ ಕಥಾಕಾವ್ಯದ ಭೌಗೋಳಿಕ ಪರಿಸರ ತೀರಾಂಧ್ರದ ತುದಿಯಲ್ಲಿರುವ ವಿಶಾಖ ಜಿಲ್ಲೆಯಿಂದ ಕರ್ನಾಟಕ ಕಲ್ಯಾಣದವರೆಗೂ ವಿಸ್ತರಿಸಿಕೊಂಡಿದೆ. ವಲುರಾಜ ವಿಶಾಕ ಜಿಲ್ಲೆಯ ಯಲಮಂಚಿಯನ್ನು ಆಳಿದ. ಅವನ ಮಗ ಪೆದ್ದಿರಾಜ ಅಲ್ಲೇ ಹತ್ತು ವರ್ಷ ಆಳ್ವಿಕ ನಡೆಸಿದ. ಅನಂತರ ಸೋದರರೊಂದಿಗೆ ಬಂದು ಪಂಪಾದ್ರಿಯನ್ನು ಏಳು ವರ್ಷ ಆಳಿದ. ಅವನಿಗೆ ಕಲ್ಯಾಣದ ಸೋಮೇಶ್ವರನ ಕರುಣೆಯಿಂದ ಕಾಟಮರಾಜ ಹುಟ್ಟಿದ. ಕಾಟಮರಾಜ ಲಕ್ಷಗಟ್ಟಲೆ ಹಸುಗಳಿಗೆ ನಾಯಕನಾಗಿದ್ದ. ಇವನ ಕಾಲಕ್ಕೆಇವರ ವಂಶದವರು ನೆಲ್ಲೂರಿನ ಹತ್ತಿರದ ಕಣಿಗಿರಿಗೆ ಬಂದರು. ಇವರ ಆಳ್ವಿಕೆ ಶ್ರೀ ಶೈಲದವರೆವಿಗೂ ಇತ್ತು. ನೆಲ್ಲೂರಿನ ನಲ್ಲಸಿದ್ದಿಯೊಂದಿಗೆ ಕಾಟಮರಾಜ ಒಪ್ಪಂದ ಮಾಡಿಕೊಂಡಿದ್ದ. ಆದರೆ ಕುಂದಮದೇವಿ ಎಂಬವಳ ಕುತಂತ್ರದಿಂದ ಕಾಟಮರಾಜನಿಗೂ ನಲ್ಲಸಿದ್ದಿ ರಾಜನಿಗೂ ಯುದ್ಧವಾಯಿತು. ಎಂದೂ ಸೈನ್ಯಗಳ ಎರಡು ಕಡೆಯಲ್ಲಿ ಅನೇಕ ವೀರರು ಸತ್ತುಹೋದರು.

ಕಾಟಮರಾಜನ ಕಥೆಗಳನ್ನು ಕೊಮ್ಮುಲವಾರು ಎಂಬ ವೃತ್ತಿಗಾಯಕರು ಹಾಡುತ್ತಾರೆ. ಕೊಂಬು, ಪಂಬ, ತಿತ್ತಿ, ತಾಳ ಎಂಬ ವಾದ್ಯಗಳನ್ನು ಇವರು ಬಳಸುತ್ತಾರೆ. ಇದು ಯಾದವರಿಗೆ ಸಂಬಂಧಿಸಿದ ಕಥೆ. ಕಾಟಮರಾಜನನ್ನು ಯಾದವರು ತುಂಬ ಪ್ರೀತಿಯಿಂದ ನೆನೆಯುತ್ತಾರೆ. ಯಾದವರ ಕುಲದೇವತೆ ಗಂಗಮ್ಮ. ಈಕೆಯನ್ನು ಆಂಧ್ರದ ಅನೇಕ ಸ್ಥಳಗಳಲ್ಲಿ ಪೂಜೆ ಮಾಡುತ್ತಾರೆ. ಜಾತ್ರೆಗಳನ್ನು ನಡೆಸುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ಕಾಟಮರಾಜನ ಕಥೆಗಳನ್ನು ಹಾಡುತ್ತಾರೆ.

ಎಲ್ಲಮ್ಮನ ಕಥಾಕಾವ್ಯ ಗೌತುಮಪುರಾಣ ಅಥವಾ ಪರಶುರಾಮನ ಕಥಾ ಚಕ್ರ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದು ಕನ್ನಡದ ಯಲ್ಲಮ್ಮನ ಕಥಾ ಕಾವ್ಯಗಳಂತೆಯೇ ಆಂಧ್ರದಲ್ಲಿ ಪ್ರಸಿದ್ಧವಾಗಿದೆ. ಇದರಲ್ಲಿ ಆಲದಮರದ ಕಥೆ, ಪಾರ್ವತಿ ಕಥೆ, ರೇಣುಕೆಯ ಜನನ, ರೇಣುಕಾಕಲ್ಯಾಣ, ರೇನುಕೆಯ ಯುದ್ಧ, ಪರಶುರಾಮನ ಜನನ, ಪರಶುರಾಮನ ಯುದ್ಧ ಮುಂತಾದ ಕಥೆಗಳಿವೆ. ಆಂಧ್ರದ ಗ್ರಾಮದೇವತೆಗಳಾದ ಅಂಕಮ್ಮ, ಚೌಡಮ್ಮ, ಪೋಲೇರಮ್ಮ, ಕಾಕತಮ್ಮ ಮುಂತಾದವರ ಬಗ್ಗೆಯೂ ಕಥಾಕಾವ್ಯಗಳಿವೆ. ಇವೆಲ್ಲ ಈಗಲೂ ಜನಪದರ ಆಚರಣೆ, ಸಂಪ್ರದಾಯ, ನಂಬಿಕೆ, ಕಲಾಭಿವ್ಯಕ್ತಿಗಳ ಭಾಗವಾಗಿ ಪ್ರಚಾರದಲ್ಲಿವೆ. ಇವೆಲ್ಲ ತೆಲುಗರ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುತ್ತವೆ.

ಟಿ.ವಿ.ಎಸ್.ಅನುವಾದ ಎ.ಎಂ.ಡಿ.

 

ತೆಲುಗು ಜನಪದ ರಾಮಾಯಣಗಳು ತೆಲುಗರ ಜೀವನದಲ್ಲಿ ರಾಮಾಯಣದ ಅಪಾರವಾದ ಪ್ರಭಾವ ಕಂಡುಬರುತ್ತದೆ. ರಾಮಯ್ಯನ ದೇವಸ್ಥಾನವಿಲ್ಲದ ಊರಾಗಲಿ, ತ್ಯಾಗಯ್ಯನ ಹೆಸರು ಕೇಳದ ಆಂಧ್ರರಾಗಲಿ ಇಲ್ಲವೆಂದು ಹೇಳುವ ಮಾತಿನಲ್ಲಿ ಸತ್ಯವಿದೆ. ರಾಮಾಯಣದಲ್ಲಿ ಬರುವ ಜನಸ್ಥಾನ, ಪಂಚವಟಿ ಆಂಧ್ರದಲ್‌ಇವೆ ಎಂದು ತೆಲುಗರ ನಂಬಿಕೆ. ‘ಸೀತಮ್ಮ ಮಾಯಮ್ಮ ಶ್ರೀರಾಮುಡು ನಾಕು ತಂಡ್ರಿ’ (ಸೀತಮ್ಮ ನಮ್ಮಮ್ಮ ಶ್ರೀ ರಾಮನು ನನಗೆ ತಂದೆ) ಎಂದು ತ್ಯಾಗರಾಜ ಹಾಡುವ ಮೊದಲೇ ತೆಲುಗು ದೇಶದ ಜನಪದರಲ್ಲಿ ಸೀತೆಗೆ ಮಾತೃಸ್ಥಾನ, ಶ್ರೀರಾಮನಿಗೆ ಪಿತೃಸ್ಥಾನ ಸಿಕ್ಕಿವೆ. ತೆಲುಗಿನಲ್ಲಿರುವಷ್ಟು ರಾಮಾಯಣಗಳು ಇನ್ನು ಬೇರೆ ಯಾವ ಶಿಷ್ಟ ಸಾಹಿತ್ಯದಲ್ಲಿಯೂ ಇದ್ದಂತೆ ತೋರುವುದಿಲ್ಲ. ತೆಲುಗಿನ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ರಾಮಾಯಣ ಕಥೆಯನ್ನು ನಾವು ನೋಡುಬಹುದು. ಚಂಪೂ, ದ್ವಿಪದಿ, ಯಕ್ಷಗಾನ, ಕೀರ್ತನೆ, ವಚನ ಮುಂತಾದ ಅನೇಕ ರೂಪಗಳಲ್ಲಿ ಸಾವಿರಾರು ರಾಮಾಯಣಗಳು ಬಂದಿವೆ. ಭಾಸ್ಕರ, ತಿಕ್ಕನ, ಮೊಲ್ಲ, ಎರ‍್ರನಾಮಾತ್ಯ, ಬುದ್ಧಾರೆಡ್ಡಿ, ರಾಮದಾಸ, ತ್ಯಾಗರಾಜ, ವಿಶ್ವನಾಥ ಸತ್ಯನಾರಾಯಣ, ರಂಗನಾಯಕಮ್ಮ ಮುಂತಾದ ಲೇಖರು, ಲೇಖಕಿಯರು ರಾಮಾಯಣದ ಕಥೆಯನ್ನು ವಿವಿಧ ರೂಪಗಳಲ್ಲಿ ನೀಡಿ ಅದಕ್ಕೆ ಅತ್ಯಂತ ಜನಪ್ರಿಯತೆಯನ್ನು ತಂದಿದ್ದಾರೆ.

ರಾಮಾಯಣ ತೆಲುಗಿನಲ್ಲಿ ಎಷ್ಟೇ ಪ್ರಕಾರಗಳಲ್ಲಿ ಬೆಳೆದು ಬಂದರೂ ಜಾನಪದ ಕ್ಷೇತ್ರದಲ್ಲಿ ಅದಕ್ಕೆ ಒಂದು ವೈಶಿಷ್ಟ್ಯವಿದೆ. ಗಾದೆಗಳ ರೂಪದಲ್ಲಿಯೂ, ಒಗಟುಗಳು ಮುಂತಾದ ಬೇರೆ ಬೇರೆ ವಾಚಕ ಸಂಪ್ರದಾಯಗಳಲ್ಲಿಯೂ ಸ್ಥಳ ನಾಮಗಳಲ್ಲಿಯೂ ವ್ಯಕ್ತಿ ನಾಮಗಳಲ್ಲಿಯೂ ಕಥೆಗಳಲ್ಲಿಯೂ ರಾಮಾಯಣದ ಕಥೆ, ಪ್ರಭಾವ ಬೇರೆ ಬೇರೆ ರೀತಿಯಲ್ಲಿ ಕಂಡುಬರುತ್ತದೆ. ರಾಮಾಯಣದ ಕಥೆಗಳನ್ನೊಳಗೊಂಡ ಜನಪದ ಕಥನಗೀತೆಗಳು ತೆಲುಗಿನಲ್ಲಿ ನೂರಾರು ಕಂಡುಬರುವುದನ್ನು ನೋಡಿದರೆ ಅದರ ಪ್ರಭಾವ ಎಷ್ಟು ಬೇರೂರಿ ನಿಂತಿದೆ ಎಂಬುದು ಅರಿವಾಗುವುದು. ಈ ಅನೇಕ ಕಥೆಗಳಲ್ಲಿ ವಾಲ್ಮೀಕಿ ರಾಮಾಯಣದಲ್ಲಿಯೂ ಇತರ ಶಿಷ್ಟ ರಾಮಾಯಣಗಳಲ್ಲಿಯೂ ನೋಡಲಾಗದ ಅನೇಕ ಕಲ್ಪನೆಗಳು ಸಿಕ್ಕುತ್ತವೆ. ಜನಪದ ಸಂಪ್ರದಾಯದಲ್ಲಿ ಬೆಳೆದು ಬಂದಿರುವ ಇಂತಹ ಕಲ್ಪನೆಗಳು ಅವರ ಮುಗ್ಧ ಮನೋಭಾವಕ್ಕೆ ದರ್ಪಣದಂತಿರುತ್ತವೆ. ಈ ಕಲ್ಪನೆಗಳನ್ನಾಧರಿಸಿ ಶಿಷ್ಟ ಕವಿಗಳೂ ತಮ್ಮ ಕಾವ್ಯಗಳಲ್ಲಿ ಕೆಲವು ಉಪಾಖ್ಯಾನಗಳನ್ನು ಬರೆದಿರುವ ಸಂದರ್ಭಗಳು ಕೆಲವಿವೆ.

ಜನಪದ ಕಥನಗೀತೆಗಳಲ್ಲಿ ‘ಊರ್ಮಿಳಾದೇವಿ ನಿದ್ರ’ ಎಂಬುದು ತೆಲುಗಿನಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಇದನ್ನು ದೇವೇಂದ್ರ ಸತ್ಯಾರ್ಥಿ ಎಂಬ ಪ್ರಮುಖ ಜಾನಪದ ವಿದ್ವಾಂಸರು ನೇದುನೂರಿ ಗಂಗಾಧರಂ ಎಂಬ ತೆಲುಗು ವಿದ್ವಾಂಸರಿಂದ ಕೇಳಿ ‘ಮಾಡರನ್ ರಿವ್ಯೂ’ (ಜನವರಿ, ೧೯೪೨)ನಲ್ಲಿ ಪ್ರಶಂಸಾಪೂರ್ವಕವಾಗಿ ಪ್ರಕಟಿಸಿದ್ದಾರೆ. ರವೀಂದ್ರನಾಥ ಠಾಕೂರರು ಸತ್ಯಾರ್ಥಿಯವರಿಗೆ ‘ವಾಲ್ಮೀಕಿ ಊರ್ಮಿಳೆಗೆ ಅನ್ಯಾಯ ಮಾಡಿದರೆಂದು’ ಹೇಳಿದರಂತೆ. ಆದರೆ ಜಾನಪದರು ಊರ್ಮಿಳೆಗೆ ಸಂಪೂರ್ಣ ನ್ಯಾಯ ಒದಗಿಸಿರುವುದು ಸತ್ಯಾರ್ಥಿಯವರಿಗೆ ಸಂತೋಷವನ್ನುಂಟು ಮಾಡಿದೆ. ಹದಿನಾಲ್ಕು ವರ್ಷಗಳಾದ ಮೇಲೆ ಗಂಡನನ್ನು ನೋಡಿದಾಗ ಊರ್ಮಿಳೆಯ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನು ಜಾನಪದರು ತಮ್ಮದೇ ಆದ ಮುಗ್ಧನೇತ್ರದಿಂದ ನೋಡಿ ಈ ಹಾಡನ್ನು ಕಟ್ಟಿದ್ದಾರೆ. ಶ್ರೀರಾಮ ಭೂಪಾಲ ಪಟ್ಟಾಭಿಷಿಕ್ತನಾಗಿ ಓಲಗದಲ್ಲಿರಲು ಜಾನಕಿ ಬಂದು ಊರ್ಮಿಳೆಯೂ ಪಯಣವಾದಳು. ಲಕ್ಷ್ಮಣ ನಮಗೆ ಸೇವೆ ಮಾಡಲು ಆಕೆಯನ್ನು ಬೇಡವೆಂದ. ಅಂದಿನಿಂದ ಇಂದಿನವರೆಗೂ ಊರ್ಮಿಳೆ ನಿದ್ದೆ ಹೋಗುತ್ತಿದ್ದಾಳೆ ಎಂದು ಹೇಳಿ, ‘ಇನ್ನಾದರೂ ಲಕ್ಷ್ಮಣನನ್ನು ಊರ್ಮಿಳೆಯಲ್ಲಿಗೆ ಕಳಿಸಿ’ ಎಂದು ಪ್ರಾರ್ಥಿಸುವಾಗ ಸೀತೆಯ ಸ್ತ್ರೀ ಹೃದಯ ಎದ್ದು ನಿಲ್ಲುತ್ತದೆ. ಊರ್ಮಿಳೆ ಲಕ್ಷ್ಮಣನನ್ನು ಗುರುತಿಸದೆ ನೀವು ಯಾರಯ್ಯ? ಇಲ್ಲಿಗೆ ಏಕೆ ಬಂದಿದ್ದೀರಿ’ ಎಂದು ಪ್ರಶ್ನಿಸುವಾಗ ಊರ್ಮಿಳೆಯನ್ನು ನೋಡಿ ಮರುಕ ಹುಟ್ಟದಿರದು. ಈ ಕಥನಗೀತೆಯ ಪ್ರತಿಯೊಂದ ಸಾಲು ಜನಪದ ಹೃದಯಕ್ಕೆ ಕನ್ನಡಿ ಹಿಡಿಯುತ್ತದೆ.

ಜಾನಪದರ ಮುಗ್ಧ ಕಲ್ಪನೆಗಳು ಹೃದಯಸ್ಪರ್ಶಿಯಾಗಿ ಮೂಡಿ ಬರುತ್ತದೆ. ‘ಲಕ್ಷ್ಮಣ ದೇವರ ನವ್ವು’ (ಲಕ್ಷ್ಮಣನ ನಗೆ) ಎಂಬ ಇನ್ನೊಂದು ಗೀತೆ ಜಾನಪದರ ಕಲ್ಪನಾ ಚಾರ್ತುರ್ಯಕ್ಕೆ ಒಳ್ಳೆಯ ಉದಾಹರಣೆ. ಶ್ರೀರಾಮ ರಾವಣ ಸಂಹಾರ ಮುಗಿಸಿ ಪಟ್ಟಾಭಿಷಿಕ್ತನಾಗಿ ವೈಭವದಿಂದ ಮೆರೆಯುವ ದಿನ ಅದು. ಸೋದರರು, ವಿಭೀಷಣ, ಹನುಮಂತ, ಮಂತ್ರಿ ಸಾಮಂತರೆಲ್ಲ ಇರಲು ಶ್ರೀರಾಮ ಓಲಗದಲ್ಲಿರುವವನು. ಇದ್ದಕ್ಕಿದ್ದಂತೆ ಲಕ್ಷ್ಮಣ ನಗುವುದಕ್ಕೆ ಪ್ರಾರಂಭಮಾಡುತ್ತಾನೆ. ‘ಏನಪ್ಪಾ ಇದು’ ಎಂದು ಕೇಳಿದರೆ ಉತ್ತರವಿಲ್ಲ. ಇದು ಎಷ್ಟರಮಟ್ಟಿಗೆ ಹೋಗುತ್ತದೆಂದರೆ ಲಕ್ಷ್ಮಣ ತನ್ನನ್ನು ಅಪಹಾಸ್ಯ ಮಾಡುತ್ತಿದ್ದಾನೆಂದು ಭಾವಿಸಿದ ಶ್ರೀರಾಮ ಕತ್ತಿಯನ್ನೆತ್ತುತ್ತಾನೆ. ಲಕ್ಷ್ಮಣನು ತನ್ನ ನಗುವನ್ನು ಸ್ವಲ್ಪ ತಡೆದುಕೊಂಡು ತಾನು ನಕ್ಕ ಕಾರಣವನ್ನು ಹೇಳತೊಡಗುತ್ತಾನೆ. ಲಕ್ಷ್ಮಣ ಕಾಡಿನಲ್ಲಿರುವ ಹದಿನಾಲ್ಕು ವರ್ಷಗಳ ಕಾಲ ನಿದ್ರೆ ಅವನ ಹೆಂಡತಿಯಾದ ಊರ್ಮಿಳೆಯನ್ನು ಆಶ್ರಯಿಸಿರಬೇಕು. ಈಗ ಹದಿನಾಲ್ಕು ವರ್ಷಗಳು ತುಂಬಿವೆಯಾದುದರಿಂದ ನಿದ್ರಾದೇವಿ ಲಕ್ಷ್ಮಣನನ್ನು ಪೀಡಿಸಲು ಪ್ರಾರಂಭಮಾಡಿದಳಂತೆ. ಲಕ್ಷ್ಮಣನ ಮಾತುಗಳನ್ನು ಕೇಳಿದಾಗ ಶ್ರೀರಾಮನ ಸ್ಥಿತಿ ಏನಾಗಿರಬೇಕೆಂದು ನಾವು ಊಹಿಸಬಹುದು. ಎತ್ತಿದ ಕತ್ತಿಯಿಂದ ತನ್ನನ್ನೇ ಕತ್ತಿರಿಸಲು ಯತ್ನಿಸುತ್ತಾನೆಂಬುದು ಬೇರೆ ಮಾತು. ಲಕ್ಷ್ಮಣನ ನಗುವಿಗೆ ಹಾಸ್ಯರಂಜಕವಾದ ಕಲ್ಪನೆ ಮಾಡಿರುವ ಜನಪದರ ಜಾಣ್ಮೆ ಅನನ್ಯತರವಾದುದು. ಅಷ್ಟೇ ಅಲ್ಲ ಒಂದೇ ಸನ್ನಿವೇಶದಲ್ಲಿ ಹಾಸ್ಯವನ್ನೂ, ಮರುಕವನ್ನೂ ಹುಟ್ಟಿಸುವ ರೀತಿ ಅಪೂರ್ವ. ಲಕ್ಷ್ಮಣನ ಉತ್ತರ ಕೇಳಿ ಶ್ರೀರಾಮಾದಿಗಳು ನಗಬೇಕೋ, ಅಳಬೇಕೋ ಊಹಿಸಲಾಗದು. ಇಂತಹ ಸ್ವಾರಸ್ಯಕರ ಪ್ರಸಂಗಗಳು ತೆಲುಗಿನ ಜನಪದ ರಾಮಾಯಣಗಳಲ್ಲಿ ಅನೇಕ ಬರುತ್ತವೆ.

‘ಲಕ್ಷ್ಮಣ ಮೂರ್ಛ’ ಎಂಬುದು ಇನ್ನೊಂದು ಕಥನಗೀತೆ. ವೀಭೀಷಣ ಯುದ್ಧ ಮಾಡುತ್ತಿರುವುದನ್ನು ನೋಡಿ ರಾವಣ ‘ಮೊದಲು ಇವನನ್ನು ಕೊಂದು ಆ ಮೇಲೆ ರಾಘವನ್ನು ಕೊಲ್ಲುವೆ’ ನೆಂದು ಭಾವಿಸಿ ‘ಶಕ್ತಿಬಾಣ’ವನ್ನು ತೆಗೆದು ವಿಭೀಷಣನ ಮೇಲೆ ಹಾಕಿದನಂತೆ. ಆಗ ಲಕ್ಷ್ಮಣ ವಿಭೀಷಣನಿಗೆ ಶ್ರೀರಾಮ ಅಭಯಹಸ್ತ ನೀಡಿರುವುದರಿಂದ ನಾನು ಅವನನ್ನು ರಕ್ಷಿಸಬೇಕು ಎಂದು ಶಕ್ತಿ ಬಾಣಕ್ಕೆ ಅಭಿಮುಖವಾಗಿ ಹೋದ. ಅದು ಲಕ್ಷ್ಮಣನಿಗೆ ತಗುಲಿ ಅವನು ಮೂರ್ಛೆ ಬಿದ್ದ. ಆಗ ರಾಮ, ಕಪಿಗಳು ದುಃಖಿಸುವ ರೀತಿ ಬಹಳ ಮಟ್ಟಿಗೆ ಜಾನಪದರದೇ. ಸಂಜೀವಿನಿಯನ್ನು ತರಲು ಹನುಮಂತನನ್ನು ಕಳಿಸುತ್ತಾ ‘ಇದುವರಿಗೂ ನಾವು ನಾಲ್ಕುಜನ ಅಣ್ಣ ತಮ್ಮಂದಿರಿದ್ದೇವೆ. ಈಗ ನೀನೂ ಸೇರಿ ಐದು ಜನ ಎಂದು ಭಾವಿಸುತ್ತೇನೆ’ ಎಂದು ಹೇಳುತ್ತಾನೆ. ಈ ಕಥೆಯಲ್ಲಿ ಕೆಲವು ಸ್ವಾರಸ್ಯಕರವಾದ ಪ್ರಸಂಗಗಳು ಬರುತ್ತವೆ.

ಸಂಜೀವಿನಿಯನ್ನು ತೆಗೆದುಕೊಂಡು ಹನುಮಂತ ಬರುತ್ತಾ ದಾರಿಯಲ್ಲಿ ಭರತನನ್ನು ನೋಡುತ್ತಾನೆ. ಅವನೇ ಶ್ರೀರಾಮನೆಂದು ಭಾವಿಸಿ ಅವನು ಅಲ್ಲಿ ಏಕೆ ಇರಬೇಕೆಂದು ಬೆರಗಾಗುತ್ತಾನೆ. ಸಂಜೀವಿನಿಯನ್ನು ಸೂರ್ಯನೆಂದು ಭಾವಿಸಿದ ರಾಮ, ಸೂರ್ಯೋದಯವಾದರೆ ಲಕ್ಷ್ಮಣ ಮರಣಿಸುತ್ತಾನೆಂದು ತಿಳಿದು ‘ಔಷಧಿ ಬರುವ ಮೊದಲೇ ಉದಯಿಸಿದ ಈ ಸೂರ್ಯನನ್ನು ಕೊಲ್ಲುತ್ತೇನೆ’ ಎನ್ನುತ್ತಾನೆ. ಆ ಮೇಲೆ ಹನುಮಂತ ಬಂದು ಲಕ್ಷ್ಮಣನನ್ನು ಸಂಜೀವಿನಿಯಿಂದ ಬದುಕಿಸುತ್ತಾನೆ.

ರಾಮಾಯಣ ಕಥೆ ಪೂರ್ತಿಯಾಗಿ ಇರುವ ಕಥನ ಗೀತೆಗಳಲ್ಲಿ ‘ಲಂಕಾಯಾಗ’ ಎಂಬುದೊಂದು. ಇದರಲ್ಲಿ ಶ್ರೀರಾಮ ವನವಾಸಕ್ಕೆ ಹೋಗುವ ಪ್ರಸಂಗದಿಂದ ಪಟ್ಟಾಭಿಷೇಕದವರೆಗೂ ಇದೆ. ಬಾಲಕಾಂಡ ಪ್ರಕ್ಷಿಪ್ತವೆಂದು ಕೆಲವರು ವಿದ್ವಾಂಸರು ಹೇಳುವುದು ನಿಜವಾದರೆ ಈ ಕಥೆಯಲ್ಲಿ ಶ್ರೀರಾಮನ ಬಾಲ್ಯವೃತ್ತಾಂತ ಇಲ್ಲದಿರುವುದು ಯುಕ್ತವೆನಿಸುತ್ತದೆ. ವನವಾಸಕ್ಕೆ ಹೋಗುವಾಗ ಊರ್ಮಿಳೆಗೆ ಲಕ್ಷ್ಮಣ ಸಮಾಧಾನ ಹೇಳುವ ಪ್ರಸಂಗ ಇದರಲ್ಲಿ ಬರುತ್ತದೆ. ಊರ್ಮಿಳೆ ಅರಣ್ಯಕ್ಕೆ ಹೋಗಬಾರದೆನ್ನುವುದಕ್ಕೆ ‘ಭಾವ (ರಾಮು) ನಡದ ದಾರಿಯಲ್ಲಿ ನಡೆಯಬಾರದು’ ಎಂಬ ಕಾರಣವನ್ನು ಹೇಳುವುದು ಪೂರ್ತಿ ಜನಪದ ಕಲ್ಪನೆ. ಈ ಕಥೆಯಲ್ಲಿ ಸೀತಾ ರಾಮ ಲಕ್ಷ್ಮಣರ ವನವಾಸ, ಶೂರ್ಪಣಖೆಯ ವೃತ್ತಾಂತ, ರಾವಣ ಸೀತೆಯನ್ನಪಹರಿಸಿದ್ದು, ಜಟಾಯುಯುದ್ಧ, ಹನುಮಂತ, ರಾಮ ರಾವಣಯುದ್ಧ, ಅಗ್ನಿಪ್ರವೇಶ, ರಾಮಪಟ್ಟಾಭಿಷೇಕ ಉಂತಾದ ಪ್ರಸಂಗಗಳಿವೆ. ಹಾಡಿನ ಉದ್ದಕ್ಕೂ ಜನಪದರ ಆಚಾರಗಳು, ಗಾದೆಗಳು, ನುಡಿಗಟ್ಟುಗಳು ಅತ್ಯಂತ ಸಹಜವಾಗಿ ಮೂಡಿ ಬಂದಿವೆ. ಲಕ್ಷ್ಮಣ ಮೂರ್ಛೆ ಬಿದ್ದಾಗ ಶ್ರೀರಾಮ ದುಃಖಿಸುತ್ತಾ ‘ಉಪ್ಪಿಗಾಗಿ ಬಂದ ನಾನು ಕರ್ಪೂರವನ್ನು ಕಳೆದುಕೊಂಡಿದ್ದೇನೆ’ ಎನ್ನುತ್ತಾನೆ. ಶ್ರೀರಾಮ ವನವಾಸಕ್ಕೆ ಹೋಗುತ್ತಾ ಸೀತೆಯನ್ನು ‘ಬೇಡ’ ವೆಂದಾಗ ಆಗ ‘ಮರದ ಬಳ್ಳಿ ಮರ ಬಿದ್ದ ಮೇಲೆ ಹೇಗೆ ನಿಲ್ಲುತ್ತೆ. ಎಣ್ಣೆ ಇಲ್ಲದ ದೀಪ ಎಷ್ಟು ಕಾಲ ಬೆಳುತ್ತೆ’ ಎಂದು ಹೇಳಿ ಆ ಮೇಲೆ ‘ಭರತ ಶತ್ರುಘ್ನರು ರಾಜ್ಯವಾಳಲು ನನ್ನನ್ನು ಅವರಿಗೆ ಸೇವಕಿಯನ್ನಾಗಿ ಮಾಡಿ ಹೋಗಿ’ ಎಂದ ತತ್‌ಕ್ಷಣ ಶ್ರೀರಾಮ ಆಕೆ ವನವಾಸಕ್ಕೆ ಬರಲು ಒಪ್ಪಿಕೊಳ್ಳುತ್ತಾನೆ.

ರಾಮಾಯಣಕ್ಕೆ ಸಂಬಂಧಿಸಿದಂತೆ ಇನ್ನೂ ಸೀತಾರಾಮ ಕಲ್ಯಾಣ, ಸೀತಾದೇವಿಯ ಬಯಕೆಗಳು, ಸೀತೆ ರಜಸ್ವಲೆಯಾದ ಪ್ರಸಂಗ, ಸೀತೆಯ ಅಗ್ನಿಪ್ರವೇಶ, ಲವಕುಶರ ಕಾಳಗ ಮುಂತಾದ ಅಸಂಖ್ಯಾತ ಕಥನಗೀತೆಗಳಿರುತ್ತವೆ. ಇಂತಹ ಸಾವಿರಾರು ಜನಪದ ಸಂಪ್ರದಾಯದ ಗೀತೆಗಳೇ ವಾಲ್ಮೀಕಿಯ ರಾಮಾಯಣ ಒಂದು ರಾಷ್ಟ್ರೀಯ ಮಹಾಕಾವ್ಯವಾಗಿ ರೂಪುಗೊಳ್ಳಲು ಕಾರಣವಾಗಿರಬೇಕು. ಸರಳ ಜನಪದ ಜೀವನಕ್ಕೆ ಕನ್ನಡಿ ಹಿಡಿಯುವ ಈ ಹಾಡುಗಳಲ್ಲಿ ಮುಗ್ಧ ಕಲ್ಪನೆಗಳು ಸಮೃದ್ಧವಾಗಿ ಸಿಕ್ಕುತ್ತವೆ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ.

ಆರ್.ವಿ.ಎಸ್.