ತೆಲುಗಿನ ವ್ರತಕತೆಗಳು ತೆಲುಗರ ಜನಪದ ಜೀವನದಲ್ಲಿ ವ್ರತ, ನೋಂಪಿ ಮುಂತಾದವು ಅನಿವಾರ್ಯವಾದ ಭಾಗವಾಗಿವೆ. ಯಜ್ಞ ಯಾಗಾದಿ ಆಚಾರಣೆಗಳು ಸಾಮಾನ್ಯ ಜನರಿಗೆ ಎಟುಕದ ವಿಷಯಗಳಾದ್ದರಿಂದ ಪೂಜೆಗಳನ್ನು ವ್ರತಗಳನ್ನು ನೋಂಪಿಗಳನ್ನು ಅವರು ಕಲ್ಪಿಸಿಕೊಂಡಿದ್ದಾರೆ. ವ್ರತ ಎಂಬುದು ನಿಯಮ, ನಿಷ್ಠೆ, ಪುಣ್ಯ ಪಡೆಯಲು ಮಾಡುವ ಕಾರ್ಯದ ದೀಕ್ಷೆ ಎಂಬ ಅರ್ಥಗಳು ಬರುತ್ತವೆ. ದಶವಿಧ ನಿಯಮಗಳಲ್ಲಿ ವ್ರತವೂ ಒಂದು. ನೋಂಪಿ ಎಂಬ ಪದಕ್ಕೆ ಸ್ವಲ್ಪ ಮಟ್ಟಿಗೆ ವ್ರತ ಎಂಬ ಅರ್ಥವೇ ಇದೆ. ತೆಲುಗಿನಲ್ಲಿ ಇದನ್ನು ‘ನೋಮು’ ಎಂದು ಹೇಳುತ್ತಾರೆ. ವ್ರತಗಳಲ್ಲಿ ನಿಮಿತ್ತವ್ರತ, ನಿತ್ಯವ್ರತ, ಕಾಮ್ಯವ್ರತ ಎಂಬ ಮೂರು ಬಗೆಗಳಿವೆ. ಏಕಾದಶಿ ವ್ರತದಂಥವು ಎಲ್ಲ ಕಾಲಗಳಲ್ಲಿ ಮಾಡುವುದರಿಂದ ಅವುಗಳನ್ನು ನಿತ್ಯವ್ರತಗಳೆಂದು ಹೇಳುತ್ತಾರೆ. ಚಾಂದ್ರಾಯನಾದಿ ವ್ರತಗಳು ನಿಮಿತ್ತವ್ರತಗಳು. ನಿಗದಿತ ತಿಥಿಗಳನ್ನು ಉಪವಾಸ ಮಾಡಿ ಆಚರಿಸುವ ವ್ರತಗಳು ಕಾಮ್ಯವ್ರತಗಳು.

ವ್ರತಗಳಲ್ಲಿ ಉಪವಾಸ, ಪೂಜೆ, ನಿಯಮನಿಷ್ಠೆಗಳು ಪ್ರಧಾನವಾಗಿರುತ್ತವೆ. ವ್ರತವನ್ನಾಚರಿಸುವ ಮಹಿಳೆಯರು ವ್ರತ ಮಾಡುವ ದಿನ ಅಭ್ಯಂಜನ ಸ್ನಾನ ಮಾಡಿ ಮಡಿಯುಟ್ಟು ಪೂಜೆ ಮಾಡಿ ವ್ರತಕತೆಗಳನ್ನು ಹೇಳುತ್ತಾರೆ. ವ್ರತದ ದಿನ ಉಪವಾಸ ಇರುವುದು ಕೂಡ ಉಂಟು. ವ್ರತಗಳ ಮೂಲಕ ದಯೆ, ಸತ್ಯ, ಶುಚಿತ್ವ, ನೀತಿ, ಆರೋಗ್ಯ, ಮೋಕ್ಷ ಅಪೇಕ್ಷಿಸುವ ಮುಂತಾದವನ್ನು ಬೋಧಿಸುವ ಆಶಯವಿದೆ. ಇಷ್ಟಸಿದ್ಧಿಗಾಗಿ ಗಂಡಸರು ತಪಸ್ಸು ಮಾಡಿದರೆ, ಹೆಂಗಸರು ವ್ರತಮಾಡುತ್ತಾರೆ. ಆಯಾ ವ್ರತಗಳಲ್ಲಿ ವ್ರತಗಳನ್ನು ಮಾಡಿದ್ದರಿಂದಲೇ ಪೌರಾಣಿಕ ವ್ಯಕ್ತಿಗಳಿಗೆ ಉತ್ತಮ ಲೋಕಪ್ರಾಪ್ತಿ ಆಗಿದೆಯೆಂದು ವ್ರತಕತೆಗಳು ಹೇಳುತ್ತವೆ. ಎಲ್ಲ ವ್ರತಗಳಲ್ಲೂ ಒಂದು ಮಹಾಫಲವನ್ನು ಸೂಚಿಸುವುದುಂಟು.

ಅನೇಕ ವ್ರತಕತೆಗಳು ಆದಿಶಂಕರನು ಪಾರ್ವತಿದೇವಿಗೆ ಕಥೆ ಹೇಳಿದನೆಂಬ ನಿರೂಪಣೆಯಿಂದ ಪ್ರಾರಂಭವಾಗುತ್ತವೆ. “ಆದಿಶಂಕರನು ಒಂದು ದಿನ ಪಾರ್ವತಿ ಸಮೇತವಾಗಿ ನಂದೀಶ್ವರ, ಭೃಂಗೇಶ್ವರ, ಚಂಡೀಶ್ವರ-ಮುಂತಾದ ಪ್ರಮುಖರೊಂದಿಗೆ, ಸೂತ, ಶೌನಕ ನಾರನಾದಿ ಮುನೀಶ್ವರರೊಂದಿಗೆ, ೩೩ ಕೋಟಿ ದೇವತೆಗಳೊಂದಿಗೆ, ಅಪ್ಸರ ಸ್ತ್ರೀಯರೊಂದಿಗೆ, ಪುಣ್ಯಸ್ತ್ರೀಯರೊಂದಿಗೆ ಸಭೆ ಮಾಡಿದನು ಎಂದು ಕಥೆ ಪ್ರಾರಂಭವಾಗುತ್ತದೆ. ಅನಂತರ ಪಾರ್ವತಿ, ಶಂಕರನನ್ನು ನೋಡಿ “ಪುಣ್ಯಸ್ತ್ರೀಯರಿಗೆ ಯೋಗ್ಯವಾದುದು ಶುಭಪ್ರದವಾದುದು ಭೋಗ ಭಾಗ್ಯಕ್ಕೆ ನೆಲೆಯವಾದುದು, ಮೋಕ್ಷ ಪ್ರದವಾದುದು ಮುತ್ತೈದೆತನವನ್ನು ಕೊಡುವಂಥದು ಆದ ವ್ರತವನ್ನು ಸೂಚಿಸಿ” ಎಂದು ಕೇಳುತ್ತಾಳೆ. ಆಗ ಪರಮೇಶ್ವರನು ದಯಾಮಯನಾಗಿ ವ್ರತಗಳಲ್ಲಿಯೇ ಉತ್ತಮವಾದ ವ್ರತವನ್ನು ಪಾರ್ವತಿಗೆ ವಿವರಿಸುತ್ತಾನೆ. ವ್ರತದ ಪ್ರಾಧನ್ಯ, ವ್ರತದ ಫಲ ವ್ರತಾಚರಣೆಯ ವಿಧಾನ ಮುಂತಾದವನ್ನು ಕಥೆಗಳ ರೂಪದಲ್ಲಿ, ಹಾಡಿನ ರೂಪದಲ್ಲಿ ತೆಲುಗರ ಹೇಳುತ್ತಾರೆ. ತೆಲುಗರ ವ್ರತಗಳಲ್ಲಿ ಒಂದು ವರ್ಷದಲ್ಲಿ ಮಾಡುವಂಥದ್ದು, ಅನೇಕ ವರ್ಷಗಳ ಕಾಲ ಮಾಡುವಂಥದ್ದು ಸೇರಿವೆ. ಈ ವ್ರತಗಳಲ್ಲಿ ಅನೇಕ ಆರೋಗ್ಯ ಸೂತ್ರಗಳು ಕೂಡ ಅಡಕವಾಗಿವೆ. ವ್ರತಗಳನ್ನು ಮುಖ್ಯವಾಗಿ ಮಾಂಗಲ್ಯರಕ್ಷಣೆಗಾಗಿ ಭೋಗಭಾಗ್ಯಗಳನ್ನು ಪಡೆಯಲು ತವರುಮನೆಯವರು ಮತ್ತು ಅತ್ತೆಯಮನೆಯವರು ಚೆನ್ನಾಗಿರಲು ಆಚರಿಸಲಾಗುತ್ತದೆ. ಇವುಗಳ ಜೊತೆಗೆ ಅನುಕೂಲ ದಾಂಪತ್ಯ, ಸಂತಾನ ಪ್ರಾಪ್ತಿ, ದೇಹಾರೋಗ್ಯ, ಅಪಾಯಗಳ ಪರಿಹಾರ-ಮುಂತಾದವು ಆಶಯಗಳಾಗಿರುತ್ತವೆ.

ಶ್ರಾವಣಮಾಸದಿಂದ ನಾಲ್ಕೈದು ತಿಂಗಳುಗಳ ಕಾಲ ವ್ರತಗಳ ಕಾಲವೆಂದೇ ಹೇಳಬಹುದು. ಆಗ ತೆಲುಗರ ಮನೆಗಳು ಹಸಿರು ತೋರಣಗಳಿಂದ, ಹೊಸ ಬಟ್ಟೆಗಳಿಂದ, ಹಣ್ಣು ಕಾಯಿಗಳಿಂದ, ಅರಿಸಿನ ಕುಂಕುಮಗಳಿಂದ ಮನೆಗಳು ಶೋಭಿಸುತ್ತಿರುತ್ತವೆ.

ತೆಲುಗರು ಆಚರಿಸುವ ವ್ರತಗಳಲ್ಲಿ ಶ್ರಾವಣ ಮಂಗಳವಾರ ಮತ್ತು ಶ್ರಾವಣ ಶುಕ್ರವಾರ ಅತ್ಯಂತ ಪ್ರಧಾನವಾದದ್ದು. ಶ್ರಾವಣ ಮಂಗಳವಾರದ ವ್ರತವನ್ನು ನಿರಂತರವಾಗಿ ಅಥವಾ ಐದು ವರ್ಷಗಳ ಕಾಳವಾದರೂ ಆಚರಿಸಬೇಕೆಂಬ ನಿಯಮವಿದೆ. ಈ ವ್ರತದ ಕತೆ ಇಂತಿದೆ; ಅಮರಾವತಿಯ ರಾಜದಂಪತಿಗಳು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಶಿವ ಪ್ರತ್ಯಕ್ಷವಾಗಿ ಅವರಿಗೆ ಸುಪುತ್ರವನ್ನು ವರವಾಗಿ ನೀಡುತ್ತಾನೆ. ಮಗುವಿಗೆ ಶಿವಧರ್ಮನೆಂದು ಹೆಸರಿಡುತ್ತಾರೆ. ಆದರೆ ಅವನು ಅಲ್ಪಾಯುಷ್ಯನೆಂದು ತಿಳಿಯುತ್ತದೆ. ತೀರ್ಥಯಾತ್ರೆಗಳಿಂದ ಆಯುಷ್ಯ ವೃದ್ಧಿಯಾಗುತ್ತದೆಂದು ತಿಳಿದು ಸೋದರ ಮಾವನೊಂದಿಗೆ ಶಿವಧರ್ಮ ನಂದಿಪುರ ಪಟ್ಟಣಕ್ಕೆ ಹೋಗುತ್ತಾನೆ. ಅಲ್ಲಿ ಶ್ರಾವಣ ಮಂಗಳವಾರದಂದು ರಾಜಕನ್ಯೆಯರು ಒಬ್ಬರಿಗೊಬ್ಬರು ಬೈಯುತ್ತ ಕಾಣಿಸಿಕೊಳ್ಳುತ್ತಾರೆ. ‘ನೀನು ವಿಧವೆಯಾಗುವೆ’ ಎಂದು ಗೆಳತಿಯರು ರಾಜಕುಮಾರಿಯನ್ನು ಬೈದಾಗ ಆಕೆ ‘ಶ್ರಾವಣ ಮಂಗಳವಾರ ವ್ರತ ಮಾಡುವುದರಿಂದ ನಮ್ಮಲ್ಲಿ ಯಾರಿಗೂ ವೈಧವ್ಯ ಇಲ್ಲ’ ಎಂದು ಉತ್ತರಿಸುತ್ತಾಳೆ. ಇದನ್ನು ಕೇಳಿದ ಶಿವಧರ್ಮನ ಸೋದರಮಾವ ಹೇಗಾದರೂ ಮಾಡಿ ರಾಜಕುಮಾರಿಯನ್ನು ತನ್ನ ಸೋದರ ಅಳಿಯನಿಗೆ ಕೊಟ್ಟು ಮದುವೆ ಮಾಡಬೇಕೆಂಬುದು ಕೊಳ್ಳುತ್ತಾನೆ. ಮದುವೆಯಾದ ಶಿವಧರ್ಮನನ್ನು ೧೨ತಲೆಯ ಹಾವು ಕಚ್ಚಲಿದ್ದಾಗ ರಾಜಕುಮಾರಿ ಮಂಗಳಗೌರಿಯನ್ನು ಬೇಡಿ ಗಂಡನನ್ನು ಕಾಪಾಡಿಕೊಳ್ಳುತ್ತಾಳೆ. ಈ ಕತೆಯಲ್ಲಿ ಇನ್ನು ಅನೇಕ ಬಗೆಯ ಆಶಯಗಳಿವೆ. ಒಟ್ಟಿನಲ್ಲಿ ಶ್ರಾವಣ ಮಂಗಳವಾರ ವ್ರತವನ್ನು ಆಚರಿಸುವುದರಿಂದ ಶುಭವಾಗುತ್ತದೆಂಬ ನಂಬಿಕೆ ದೃಢವಾಗಿದೆ. ಈ ವ್ರತಕತೆ ಹಾಡಿನ ರೂಪದಲ್ಲೂ ಇದೆ.

ತೆಲುಗು ಮಹಿಳೆಯರು ಆಚರಿಸುವ ವ್ರತಗಳಲ್ಲಿ ಶ್ರಾವಣ ಶುಕ್ರವಾರ ವ್ರತವೂ ಮುಖ್ಯವಾದುದು. ಮಂಗಳವಾರ ವ್ರತ ಗೌರಿ ಪೂಜೆಯಾದರೆ, ಶುಕ್ರವಾರದ ವ್ರತ ವರಲಕ್ಷ್ಮೀ ಪೂಜೆ, ಇದೊಂದು ಪ್ರಕೃತಿ ಪೂಜೆ ಎಂದು ಹೇಳಬಹುದು. ತೆಲುಗರ ವ್ರತಗಳನ್ನು ಚಿಲಕದ್ವಾದಶಿ, ಗೋಪದ್ಮನೋಂಪಿ, ಗರುಡ ಪಂಚಮಿ ನೋಂಪಿ, ಅನಂತ ಪದ್ಮನಾಭ ವ್ರತ, ಕೇದಾರಗೌರಿ ವ್ರತ ಮುಂತಾದವನ್ನು ಹೇಳಬಹುದು. ಈ ವ್ರತಗಳ ಭಾಗವಾಗಿ ಹಸುಗಳನ್ನು, ನಾಗದೇವತೆಗಳನ್ನು ಪೂಜೆ ಮಾಡುವುದು, ಬಾಗಿನಗಳನ್ನು ಕೊಡುವುದು, ಉಪವಾಸ ಇರುವುದು, ಮನೆಗಳನ್ನು ಅಲಂಕರಿಸುವುದು, ಸಾಂಪ್ರದಾಯಿಕ ಅಡುಗೆಗಳನ್ನು ಸಿದ್ಧ ಮಾಡುವುದು ಮುಂತಾದವನ್ನು ಕಾಣಬಹುದು.

ಜಿ.ಎಸ್.ಎಂ. ಅನುವಾದ ಎಂ.ಎಂ.ಡಿ.

ತೆಲುಗು ಗ್ರಾಮನಾಮಗಳು ಒಂದು ಪ್ರದೇಶದಲ್ಲಿ ಪ್ರಚಲಿತವಾಗಿರುವ ಹೆಸರನ್ನು ‘ಸ್ಥಳನಾಮ’ ಅಥವಾ ‘ಗ್ರಾಮನಾಮ’ ಎಂದು ಕರೆಯುವುದುಂಟು. ವ್ಯಕ್ತಿಗಳಿಗೆ ಅವರ ಕುಲಗೋತ್ರಗಳು, ನಕ್ಷತ್ರಗಳ ಹೆಸರಿನಲ್ಲಿ ಹೆಸರಿಟ್ಟಂತೆಯೇ, ಆಯಾ ಪ್ರದೇಶಗಳಿಗೂ ಆಯಾ ಭೌಗೋಳಿಕ ಲಕ್ಷಣಗಳಿಗೆ ಅನುಸಾರವಾಗಿ ಅಥವಾ ಕುಟುಂಬ ನಾಮಗಳಿಗೆ ಅನುಸಾರವಾಗಿ, ಅಥವಾ ಗ್ರಾಮದೇವತೆಗಳ ಹೆಸರುಗಳಿಗೆ ಅನುಸಾರವಾಗಿ ಹೆಸರುಗಳನ್ನು ಇಡಲಾಗಿದೆ. ಅಷ್ಟೇ ಅಲ್ಲದೆ ಇತಿಹಾಸದ ವ್ಯಕ್ತಿಗಳು, ಆಯಾ ಪ್ರಾಂತ್ಯದಲ್ಲಿರುವ ಅಧಿಕಾರಿಗಳು, ರಾಜಕೀಯ ನಾಯಕರು ಮುಂತಾದವರ ಹೆಸರುಗಳಲ್ಲಿ ಗ್ರಾಮನಾಮಗಳು ಏರ್ಪಟ್ಟಿವೆ.

ತೆಲುಗಿನಲ್ಲಿ ಮೊಟ್ಟಮೊದಲು ಗ್ರಾಮನಾಮಗಳ ಬಗ್ಗೆ ಸಂಶೋಧನೆ ನಡೆಸಿದವರು ಡಾ. ಕೇತು ವಿಶ್ವನಾಥರೆಡ್ಡಿಯವರು. ಇವರ ಪಿಹೆಚ್‌.ಡಿ. ಮಹಾಪ್ರಬಂಧ ‘ಕಡಪ ಜಿಲ್ಲಾ ಊರ್ಲಪೇರ‍್ಲು’, ಆದರೆ ಇವರಿಗಿಂತ ಮುಂಚೆಯೇ ಡಾ.ಚಿಲುಕೂರಿನಾರಾಯಣರಾವ್ ತಮ್ಮ ‘ಆಂಧ್ರ ಭಾಷಾ ಚರಿತ್ರ’ ಪಿಎಚ್.ಡಿ. ಮಹಾಪ್ರಬಂಧ ಮೊದಲನೆಯ ಸಂಪುಟದಲ್ಲಿ ಅನಂತಪುರಂ ಜಿಲ್ಲೆಯ ಗ್ರಾಮನಾಮಧೇಯಗಳನ್ನು ಕುರಿತ ಮೀಮಾಂಸೆ’ ಎಂಬ ವಿಷಯವನ್ನು ಸೇರಿಸಿದ್ದಾರೆ. ಇದು ಅನಂತರದ ಸಂಶೋಧಕರಿಗೆ ಮಾರ್ಗದರ್ಶಕಾಯಿತು.

ಭೌಗೋಳಿಕವಾಗಿಯೂ, ಚಾರಿತ್ರಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಆಂಧ್ರ ಪ್ರದೇಶ ಪ್ರಾಶಸ್ತ್ಯವನ್ನು ಹೊಂದಿದೆ. ರಾಯಲ ಸೀಮೆಯಲ್ಲಿ ಮುಖ್ಯವಾಗಿ ಅನಂತಪುರಂ ಜಿಲ್ಲೆಯ ಮೇಲೆ ಕನ್ನಡ ಭಾಷಾ ಪ್ರಭಾವವು ಹೆಚ್ಚಾಗಿದೆ. ಕನ್ನಡ ಭಾಷೆಯ ಪದಗಳೇ ಅಲ್ಲದೆ ಕೆಲವು ಸ್ಥಳನಾಮಗಳು ಕೂಡ ಕನ್ನಡದಲ್ಲಿಯೇ ಇವೆ. ಇವುಗಳನ್ನು ಪರಿಶೀಲಿಸಿದಾಗ ತೌಲನಿಕ ಅಧ್ಯಯನಕ್ಕೆ ನೆರವು ಸಿಕ್ಕಿದಂತಾಗುತ್ತದೆ.

ನೈಸರ್ಗಿಕ ನಾಮಗಳು, ಸಾಂಸ್ಕೃತಿಕ, ಚಾರಿತ್ರಿಕ ಸೂಚಕಗಳು:

ಜಲವಾಚಕ ಸ್ಥಳನಾಮಗಳು

೧. ‘ಚೆರುವು’ (ಕೆರೆ) ಅಂತ್ಯಪ್ರತ್ಯಯವಾಗಿರುವ ಹಲವಾರು ಗ್ರಾಮನಾಮಗಳಿವೆ.

ಉದಾ: ಕೊತ್ತ ಚೆರುವು, ವಲ್ಲ ಚೆರುವು, ಮುಲಕಲ ಚೆರುವು, ವೆಂಗಳಮ್ಮ ಚೆರುವು ಇತ್ಯಾದಿ.

ಕನ್ನಡದ ‘ಕೆರೆ’ ಅಥವಾ ‘ಕೆರ’ ಅಂತ್ಯಪ್ರತ್ಯಯವಾಗಿರುವ ಗ್ರಾಮನಾಮಗಳು ಅನಂತಪುರ ಜಿಲ್ಲೆಯಲ್ಲಿವೆ.

ಉದಾ: ಕರಿಕೆರ, ಕಿರಿಕೆರ, ಮದ್ದಿಕೆರ, ತಾಳಿಕೆರ ಇತ್ಯಾದಿ.

೨. ಸಮುದ್ರಮು: ಕಂಜೈ ಸಮುದ್ರಮು, ವಿರುಪಸಮುದ್ರಮು, ಬುಕ್ಕರಾಯಸಮುದ್ರಮು, ಭೂಪಸಮುದ್ರಮು, ಕಾಳಸಮುದ್ರಮು ಇತ್ಯಾದಿ.

೩. ಕಾಲುವ: ಕಾಲುವಕುಲ್ಲೆ, ಕೇತಗಾನಿ ಕಾಲ್ವ, ಮಲ್ಲಾಕಾಲ್ವ

೪. ಏರು: ಕೂಡೇರು, ಇಪ್ಪೇರು, ಯಾಲೇರು, ಪೂಲೇರು

೫. ಕುಂಟ: ರೇಕುಲಕುಂಟ, ತೂಮಕುಂಟ, ಪೂಲಕುಂಟಪಲ್ಲೆ, ದುರದಕುಂಟ ಇತ್ಯಾದಿ.

೬. ಬಾವಿ: ಪಾಲಬಾವಿ, ಶೀಬಾಯಿ

೭. ನಾಯಿ: ಪಾಲವಾಯಿ, ಮೇಲವಾಯಿ.

ಇಲ್ಲಿ ‘ವಾಯಿ’ ಎಂಬ ಶಬ್ದಕ್ಕೆ ಕನ್ನಡದಲ್ಲಿ ‘ಕುಡಿಯುವುದು’ ಎಂಬ ಅರ್ಥವಿದೆ.

ವ್ಯವಸಾಯಸೂಚಕಗಳು:

ಮಡಕ: ಮಡಕಸಿರ, ಮಂಗಲ ಮಡಕ.
ಇಲ್ಲಿ ಮಡಕ ಎಂದರೆ ‘ನೇಗಿಲು’
ಕುಡ್ಲು: ಕುಡ್ಲೂರು. ಕನ್ನಡದಲ್ಲಿ ಕುಡ್ಲು ಎಂಬ ಶಬ್ದವಿದೆ.

ಧಾನ್ಯ ಸೂಚಕಗಳು: ಧನಿಯಾಲ ಚೆರ್ವು, ಸಾಸುಪುಲ ಕುಂಟ, ಕೊರ್ಲಪಲ್ಲಿ. ಇಲ್ಲಿ ‘ಸಾಸುವೆ’ ಎಂಬ ಮಾತು ಕನ್ನಡಕ್ಕೆ ಸೇರಿದ್ದು.

ಪ್ರಾಣಿ ಸೂಚಕಗಳು: ಮಿಡುತೂರು, ಎನುಮುಲದೊಡ್ಡಿ, ನಕ್ಕಲಕುಂಟ, ಎದ್ದುಲದೊಡ್ಡಿ, ನೆಮಳ್ಳಪಲ್ಲಿ, ಪಾಮಿಡಿ(ಪಾಮು+ಮುಡಿ), ಪಾಮುದುರ್ತಿ, ಕೋಡಿಪಲ್ಲಿ ಇತ್ಯಾದಿ.

ಸಸ್ಯ ಸೂಚಕಗಳು: ಆಮಿದಾಲ, ಮಾಮಿಳ್ಳಪಲ್ಲಿ, ತಾಡಿವುರ‍್ರಿ, ಮುಲಕಲೇಡು, ವೇಪಮಾನಿ ಪೇಟೆ,ಇತ್ಯಾದಿ.

ಭೂಸೂಚಕಗಳು: ಇಟಿಕೆಲಪಲ್ಲಿ, ಚೌಳೂರು, ರೇಗಟಿಪಲ್ಲಿ, ವಿಡಪನಕಲ್ಲು. ಬೂದಿಲಿ, ಬೂದಿಹಾಳ್ ಇತ್ಯಾದಿಇಲ್ಲಿ ‘ಕಲ್ಲು’ ಕನ್ನಡ ಪದ.

ವಾಸ್ತುಸೂಚಕಗಳು: ಕಂಬದೂರು, ನಿಲುವುರಾತಿಪಲ್ಲೆ, ತಲುಪುಲ, ರಾಯದುರ್ಗಂ, ಶಾಸನ ಕೋಟೆ, ಕೋಟೂರು, ಮೇಡಾಪುರಂ ಇತ್ಯಾದಿ.

ಕುಲವೃತ್ತಿಸೂಚಕಗಳು: ಬ್ರಾಹ್ಮಣ ಪಲ್ಲೆ, ಬೊಮ್ಮನಹಾಳ್, ರೆಡ್ಡಿವಾರಿಪಲ್ಲೆ, ಗೊಲ್ಲಪಲ್ಲಿ, ಬಲಿಜೇಪಲ್ಲಿ, ಕಮ್ಮವಾರಿ ಪಲ್ಲೆ, ಗಾಂಡ್ಲದಿನ್ನೆ, ಅಯ್ಯವಾರಿ ಪಲ್ಲೆ, ಉಪ್ಪರಪಲ್ಲೆ, ದಾದುಊರು, ಸಾನಿಪಲ್ಲೆ, ವಡ್ಡೆಪಾಳ್ಯಂ, ಬೆಸ್ತರಪಲ್ಲೆ, ಈಡಿಗವಾರಿ ಪಲ್ಲೆ, ಸೆಟ್ಟೂರು ಕುರುಬರಪಲ್ಲಿ. ಇಲ್ಲಿ ‘ಕುರುಬರು’ ಎಂಬುದು ಕನ್ನಡ ಪದ.

ವ್ಯಕ್ತಿ ನಾಮಸೂಚಕಗಳು: ಮಲಯನೂರು, ನಾಗಪ್ಪಲ್ಲಿ, ಹಂಪಾಪುರಂ, ಬಾಗಿನಾಯಕನ ಹಳ್ಳಿ, ಲೋಕೋಜೀಪಲ್ಲಿ, ಗಂಗಿರೆಡ್ಡಿಪಲ್ಲಿ, ಸಿನಮಜ್ಜನಪಲ್ಲಿ, ಗಂಗಂಪಲ್ಲಿ, ವೆಂಕಟಪಲ್ಲಿ, ರಾಮಕ್ಕಪಲ್ಲಿ, ಓಬುಳಂಪಲ್ಲಿ, ಅಂಕಂಪಲ್ಲಿ, ಲಕ್ಷ್ಮಂಪಲ್ಲಿ, ಮಲ್ಲಿನಾಯಕನ ಹಳ್ಳಿ, ಗೌಡನಹಳ್ಳಿ ಇತ್ಯಾದಿ.

ಆಭರಣ ಸೂಚಕಗಳು: ಕಮ್ಮ ಚೆರುವು, ಗಾಜುಲಪಲ್ಲೆ, ಗಾಜುಕುಂಟಪಲ್ಲೆ, ವಜ್ರಕರೂರು, ಹೊನ್ನೂರು ಹೇಮಾವತಿ ಇತ್ಯಾದಿ. ‘ಹೊನ್ನು’ ಕನ್ನಡ ಶಬ್ದ.

ಆಹಾರ ಸೂಚಕಗಳು: ಪುಲಗಂಪಲ್ಲೆ, ಪಪ್ಪೂರು, ಚಾರುಪಲ್ಲೆ, ಪಾಲಬಾಯಿ ಇತ್ಯಾದಿ.

ಕುಟುಂಬನಾಮಾಲು: ಗೋಪಿರೆಡ್ಡಿವಾರಿ ಪಲ್ಲೆ, ಕೊಟ್ಟುವಾರಿಪಲ್ಲಿ, ಸಾನೇವಾಂಡ್ಲಪಲ್ಲಿ, ಮಬ್ಬುವಾರಿಪಲ್ಲಿ, ತಲಮರ‍್ಲ ವಾಂಡ್ಲಪಲ್ಲೆ, ಚಲ್ಲಾವಾರಿಪಲ್ಲೆ, ಪೇರಮುವಾಂಡ್ಲಪಲ್ಲೆ, ಬಚ್ಚಲವಾರಿ ಪಲ್ಲೆ, ಪುಟ್ಟುಗೋಸುಲವಾಂಡ್ಲ ಪಲ್ಲೆ, ಪರಾಕುವಾಂಡ್ಲಪಲ್ಲೆ ಇತ್ಯಾದಿ.

ರಾಜರು, ಮಂತ್ರಿಗಳು, ಪಾಳೇಗಾರರ ಹೆಸರುಗಳಲ್ಲಿರುವ ಗ್ರಾಮ ನಾಮಗಳು:

ಕರ್ನಾಟಕ, ಆಂಧ್ರಪ್ರಾಂತ್ಯಗಳನ್ನು ಪಾಲಿಸಿದವರ ರಾಜರ ಹೆಸರುಗಳಲ್ಲಿ ಏರ್ಪಟ್ಟ ಗ್ರಾಮನಾಮಗಳು:

ಬುಕ್ಕರಾಯರ ಹೆಸರಿನಲ್ಲಿ ಬುಕ್ಕಪಟ್ನಂ, ಬುಕ್ಕರಾಯಸಮುದ್ರಂ ಬುಕ್ಕಾಪುರಮು, ಬುಕ್ಕ ಚೆರ್ಲ ಗ್ರಾಮಗಳು. ಹರಿಹರರಾಯರ ಹೆಸರಿನಲ್ಲಿ ಹರೇ ಸಮುದ್ರಂ, ಹರಿಕೂರು ಇತ್ಯಾದಿ. ಬುಕ್ಕರಾಜನ ಮಂತ್ರಿಯಾದ ಅನಂತರಸು ಅಗೆಸಿದ ಕೆರೆ ಅನಂತಸಾಗರಮು, ಇದೇ ಕ್ರಮವಾಗಿ ಅನಂತಪುರವಾಗಿದೆ. ನರಸನಾಯಕನ ಹೆಸರಿನಲ್ಲಿ ನರಸಾಪುರಂ, ನರಸಾಂಬುಧಿ ಗ್ರಾಮಗಳಿವೆ.

ಚೋಳರ ಕಾಲದಲ್ಲಿಯ ಮಲ್ಲಯ್ಯನಾಯಕ್ ಹೆಸರಿನಲ್ಲಿ ಮಲಯನೂರು ಎಂಬ ಗ್ರಾಮವೇರ್ಪಟ್ಟಿದೆ.

ಬಂಗಾರು ತಿಮ್ಮರಾಜನ ಹೆಸರಿನಲ್ಲಿ ೪, ೫ ತಿಮ್ಮಾಪುರಂ ಗ್ರಾಮಗಳಿವೆ. ಶ್ರೀಕೃಷ್ಣದೇವರಾಯನ ಹೆಸರಿನಲ್ಲಿ ಕೃಷ್ಣಾಪುರಂ, ಕ್ರಿಷ್ಟಿಪಾಡು, ಮಹಾರಾಷ್ಟ್ರರ ಪಾಲನೆಯಲ್ಲಿ ಬಂದಿರುವ ಹೆಸರುಗಳು ಲೋಕೋಜಿಪಲ್ಲೆ, ಅಪ್ಪಾಜೀಪೇಟ, ವಿರಾಪಲ್ಲಿ ಇತ್ಯಾದಿ.

ಮತಸೂಚಕಗಳು: ಬಸವಮತ ಪ್ರಾಬಲ್ಯದಿಂದ ಬಸಂಪುರಂ, ಬಸಾಪಲ್ಲಿ, ಬಸಾಪುರಂ, ಬಸಿನೇಪಲ್ಲಿ, ಬಸವನಹಳ್ಳಿ ಇತ್ಯಾದಿ. ‘ಹಳ್ಳಿ’ ಕನ್ನಡ ಪದವಾಗಿದೆ.

ಬೌದ್ಧ ಸ್ಥಳಗಳು: ಕೊಪ್ಪಲಕೊಂಡ, ಜಂಬುಲದಿನ್ನೆ, ಎರ‍್ರಗುಡಿ, ಬೆಳಗುಪ್ಪ, ಭೈರವಾನಿತಿಪ್ಪ, ಆಮಳ್ಳದಿನ್ನೆ, ಕಂಬಾಲದಿನ್ನೆ, ಜಂಕರ‍್ಲೇಡುದಿನ್ನೆ, ಬೊಂದಲದಿನ್ನೆ, ಬುಡ್ಡೇಪಲ್ಲಿ ಇತ್ಯಾದಿ.

ಜೈನಮತ ಸ್ಥಳಗಳು: ರತ್ನಗಿರಿ, ಕೊನಕೊಂಡ್ಲ, ಅಮರಾಪುರಂ, ಪೆನುಗೊಂಡ, ಗುತ್ತಿ ಇತ್ಯಾದಿ.

ದೇವತಾಸೂಚಕಗಳು: ಧರ್ಮವರಂ, ಮದ್ದೆಮ್ಮ ಗೂಡುಪಲ್ಲೆ, ಯಂಗಳಮ್ಮ ಚೆರುವು, ರಾಮಾಪುರಂ, ಓಬುಲದೇವರ ಚೆರುವು, ಪೆನ್ನ ಅಹೋಬಲಂ, ಕೃಷ್ಣಾಪುರಂ, ಶ್ರೀರಂಗಾಪುರಂ, ಶ್ರೀಕಂಠಾಪುರಂ, ನಾರಾಯಣಪುರಂ, ಹನುಮಾಪುರಂ, ಗಂಗವರಂ, ಬ್ರಹ್ಮಸಮುದ್ರಂ, ಮಾರಂಪಲ್ಲಿ, ಯಲ್ಲಂಪಲ್ಲಿ, ಅಕ್ಕಂಪಲ್ಲಿ, ದೇವರಪಲ್ಲಿ, ಹುಲಿಕೆರ, ದೇವರಹಳ್ಳಿ, ಕದಿರಿ ದೇವರಪಲ್ಲಿ, ತಿರುಮಲ ದೇಗುಲಪಾಡು, ದೇವರಹಳ್ಳಿ ಇತ್ಯಾದಿ.

ಇದಿ ದೇವರ, ಹಳ್ಳಿ, ಹುಲಿಕೆರ, ದೇಗುಲ ಇತ್ಯಾದಿ ಕನ್ನಡ ಪದಗಳು.

ಮುಸ್ಲಿಂ ಹೆಸರಿನಲ್ಲಿರುವ ಗ್ರಾಮಗಳು: ಖಾದರ್‌ಪೇಟ, ಸೈದಾಪುರಂ, ಷೇಕ್‌ಸಾನಿಪಲ್ಲಿ, ಮಹಬೂಬ್‌ನಗರ್, ನಿಜಾಮಾಬಾದ್, ಕರೀಂನಗರ್, ಮಹಮ್ಮದಾಬಾದ್, ಅಮೀನ್‌ಪಲ್ಲಿ, ಸತಾರ‍್ಲಪಲ್ಲಿ ಇತ್ಯಾದಿ.

ಐತಿಹ್ಯ ಸೂಚಕ ಗ್ರಾಮನಾಮಗಳು: ಉಂಡಬಂಡ, ತಾಡಿಪತ್ರಿ, ನಿಡಿಮಾಮಿಡಿ, ಕಂಬದೂರು ಇತ್ಯಾದಿ.

ಜಿ.ಎಸ್.ಎಂ.

 

ತೆಲುಗು ಜನಪದ ಕಥೆಗಳು ಸಾಧಾರಣವಾಗಿ ಮನೆಯಲ್ಲಿ ಮಕ್ಕಳಿಗೆ ಅಜ್ಜಿಯರು, ಅಜ್ಜಂದಿರು ಕಥೆಗಳನ್ನು ಹೇಳುತ್ತಿದ್ದರು. ಆದುದರಿಂದಲೇ ಇವುಗಳಿಗೆ ‘ಅಮ್ಮಮ್ಮ ಕಥೆ’, ‘ತಾತಯ್ಯ ಕಥೆ’ ಎಂದು ತೆಲುಗಿನಲ್ಲಿ ಹೇಳುತ್ತಾರೆ.

ಕಥಾ ಸಾಹಿತ್ಯದಲ್ಲಿಯೂ ಎರಡು ಬಗೆಯ ಸಂಪ್ರದಾಯಗಳನ್ನು ನೋಡಬಹುದು. ೧. ಶಿಷ್ಟ ಕಥಾ ಸಂಪ್ರದಾಯ, ೨. ಜನಪದ ಕಥೆ ಸಂಪ್ರದಾಯ. ಇವೆರಡೂ ಜನಸಾಮಾನ್ಯರಿಗಾಗಿಯೇ ಮೂಡಿಬಂದಿವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಶಿಷ್ಟಕಥಾ ಸಂಪ್ರದಾಯವು ಒಂದು ನಿರ್ದಿಷ್ಟವಾದ ವ್ಯಕ್ತಿಗೆ, ವಿಷಯಕ್ಕೆ, ಕೆಲವು ನಿರ್ದಿಷ್ಟವಾದ ಉದ್ದೇಶಗಳಿಗೆ ಸಂಬಂಧಿಸಿರುತ್ತದೆ.

ತೆಲುಗಿನಲ್ಲಿ ಜನಪ್ರಿಯವಾದ ಕಥೆಗಳನ್ನು ಮೂರು ಬಗೆಗಳಾಗಿ ವಿಂಗಡಿಸಬಹುದು.

೧. ಅನುವಾದ ಕಥೆಗಳು: ಉದಾ: ಜಾತಕಥೆಗಳು (ಪಾಲೀಭಾಷೆಯಿಂದ ಅನುವಾದ), ಭಜ್ಜಿ ವಿಕ್ರಮಾರ್ಕರಕಥೆಗಳು (ಸಂಸ್ಕೃತದಿಂದ ಅನುವಾದ), ಕಥಾ ಸರಿತ್ಸಾಗರಂ (ಸಂಸ್ಕೃತದಿಂದ ಅನುವಾದ).

೨. ಲಿಖಿತ ಜನಪ್ರಿಯ ಕಥೆ: ಉದಾ: ಕಾಶೀರಾಮೇಶ್ವರ ಮಜಿಲೀ ಕಥೆ. ಇವುಗಳನ್ನು ಮದ್ದೂರಿ ಶ್ರೀರಾಮಮೂರ್ತಿಯವರು ಬರೆದಿದ್ದಾರೆ.

೩. ಜನಪದ ಕಥೆಗಳು

ತೆಲುಗು ಜನಪದ ಕಥೆಗಳಲ್ಲಿ ಕಂಡುಬರುವ ಅಂಶಗಳು: ಈ ಕಥೆಗಳಲ್ಲಿ ವಾಸ್ತವವಾದ ಘಟನೆಗಳಿಗೆ ವ್ಯಕ್ತಿಗಳಿಗೆ ಸ್ಥಾನವಿಲ್ಲದಿದ್ದರೂ ಜನಪದ ಸಂಸ್ಕೃತಿ, ನಂಬಿಕೆ ವಿಶ್ವಾಸಗಳು, ಸಾಮಾಜಿಕ ಜೀವನ, ಧರ್ಮದ ಸಂಪ್ರದಾಯಗಳು ನಿರೂಪಣೆಗೊಂಡಿರುತ್ತದೆ. ಅಂತೆಯೇ ಭೂತಪ್ರೇತಗಳು, ಪಿಶಾಚಿಗಳು ಮುಂತಾದ ಅಲೌಕಿಕ ಶಕ್ತಿಗಳು, ಮಾಂತ್ರಿಕರು ಮತ್ತು ಅವರ ಮಂತ್ರ ತಂತ್ರಗಳು ಪ್ರಾಮುಖ್ಯವನ್ನು ಹೊಂದಿರುತ್ತವೆ. ಇಂತಹ ಅತಿಮಾನುಷ ಶಕ್ತಿಗಳಿಗೆ ಸಂಬಂಧ ಪಟ್ಟ ವಿಷಯಗಳನ್ನು ‘ರೇಚುಕ್ಕ ಪಗಟಿ ಚುಕ್ಕ’ ಕಥೆಗಳಲ್ಲಿ, ವಿಕ್ರಮಾರ್ಕನ ಕಥೆಗಳಲ್ಲಿ ನೋಡಬಹುದು.

ಈ ಕಥೆಗಳಲ್ಲಿ ಕಂಡುಬರುವ ದುಷ್ಟ ಪಾತ್ರಗಳೆಲ್ಲವೂ ಭಯಂಕರವಾದ ಆಕಾರವನ್ನುಳ್ಳ ರಾಕ್ಷಸರಿಗೆ, ಭೂಗಳಿಗೆ ಸಂಕೇತವಾಗಿ ತೆಗೆದುಕೊಂಡಂತೆ ತಿಳಿಯುತ್ತದೆ. ಇವು ನಮಗೆ ಮೇಲ್ನೋಟಕ್ಕೆ ಅಸತ್ಯಾಂಶಗಳಾಗಿ ಕಂಡುಬಂದರೂ, ಈ ಭಯಂಕರಾಕಾರಗಳಿಂದ ಆಯಾ ಪಾತ್ರಗಳ ಕ್ರೂರ ಸ್ವಭಾವಗಳು ವ್ಯಕ್ತವಾಗುತ್ತದೆ.

ಜನಪದ ಕಥೆಗಳಲ್ಲಿ ಮನುಷ್ಯರ ಸಾಹಸಗಳೇ ಅಲ್ಲದೇ ಪ್ರಾಣಿಗಳ ಸಾಹಸಗಳು ವರ್ಣಿಸಲ್ಪಟ್ಟಿವೆ. ಕಾಡು ಪ್ರಾಣಿಗಳಿಂದಲೂ ನಮಗೆ ಪಾತ್ರಗಳ ಸ್ವಭಆವ ತಿಳಿದುಬರುತ್ತದೆ. ಪ್ರಾಣಿಗಳು, ಪಕ್ಷಿಗಳು ಮಾನವರಿಗೆ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಬಲ್ಲವು. ಈ ಪ್ರಾಣಿ ಕಥೆಗಳನ್ನೇ ನೀತಿ ಕಥೆಗಳೆಂದೂ ಹೇಳಬಹುದು.

ಜನಪದಗಳಲ್ಲಿ ಹಾಸ್ಯವೂ ಸಹ ಕಂಡುಬರುತ್ತವೆ. ಇಂತಹ ಕಥೆಗಳಲ್ಲಿ ವಿನೋದವೇ ಪ್ರಧಾನ. ಹಾಸ್ಯ ಮಾತ್ರವಲ್ಲದೆ ಮೂರ್ಖತ್ವ, ಬುದ್ಧಿವಂತಿಕೆ ಕಾಣಿಸಿಕೊಳ್ಳುತ್ತವೆ. ತೆನಾಲಿ ರಾಮಲಿಂಗನ ಕಥೆಗಳು, ಮರ್ಯಾದ ರಾಮನ್ನ ಕಥೆಗಳು ಹಾಸ್ಯ ಕಥೆಗಳಿಗೆ ಒಳ್ಳೆಯ ಉದಾಹರಣೆಗಳು.

ಎಲ್ಲ ಕಥೆಗಳು ಸುಖಾಂತವಾಗಿರುತ್ತವೆ. ‘ಅನಗನಗಾ ಒಕ ಊಳ್ಳೋ’, ‘ಒಕ ಊಳ್ಳೋ’, ‘ಪೂರ್ವ ಕಾಲಂಮೇ’, ‘ಅನಗವಗಾ ಒಕರಾಜು’ ಎಂಬ ಮಾತುಗಳಿಂದ ಕಥೆ ಆರಂಭವಾಗಿ ‘ಕಥ ಕಂಜಿಕೆ ಮನಮಿಂಟಿಕೆ’, ‘ವಾಳ್ಳು ಸುಖಂಗಾ ಕಾಲಂ ಗಡಿಪಾರು’ ಎಂಬ ಮಾತುಗಳಿಂದ ಮುಗಿಯುತ್ತವೆ.

ಜನಪದ ಕಥೆಗಳಲ್ಲಿ ವಿವಿಧ ಆಶಯಗಳು ಕಂಡು ಬರುತ್ತವೆ. ತೆನಾಲಿ ರಾಮಕೃಷ್ಣನ ಕಥೆಗಳಲ್ಲಿನ ‘ಚಿಲುಕಪಲುಕುಲು’ (ಗಿಣಿಯ ಮಾತುಗಳು), ಮರ್ಯಾದ ರಾಮನ್ನಕಥೆಗಳಲ್ಲಿನ ಕಾಳಿಕಾದೇವಿ ವರಕೊಡುವುದು ಆಶಯಗಳಿಗೆ ಉದಾಹರಣೆಗಳು. ಕತ್ತೆ ನಾಯಿಯನ್ನು ಅನುಕರಿಸಿ ಹೊಡೆತ ತಿನ್ನುವುದು, ಬ್ರಾಹ್ಮಣ-ಮುಂಗುಸಿ ಕಥೆ ಮಾದರಿಗಳಿಗೆ ಉದಾಹರಣೆ.

ತೆಲುಗು ಜನಪದ ಕಥೆಗಳ ವರ್ಗೀಕರಣ: ಜನಪ್ರಿಯದಲ್ಲಿರುವ ತೆಲಗು ಜನಪದ ಕಥೆಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು.

೧. ಪುರಾ ಕಥಲು (Mythological tales)

೨. ಐತಿಹಾಸಿಕ ಕಥಲು (Legendary teales)

೩. ಹಾಸ್ಯಕಥಲು ಅಥವಾ ಮೂರ್ಖುಲಕಥಲು (Drolls and Noodlen)

೪. ಮೊಸಗಾಂಡ್ರಕಥಲು (Trickster tales)

೫. ಸುದೀರ್ಘಕಥಲು (Tall tales)

೬. ಸಮಸ್ಯಾತ್ಮಕ ಕಥಲು (Dilemma tales or Riddles Stories)

೭. ಪ್ರಾಣಿ ಕಥಲು (Animal tales)

೮. ಅದ್ಭುತಕಥಲು (Fairy tales)

೯. ಸಾಮಾಜಿಕ ಕಥಲು (Moral tales or Falder)

೧೦. ನೀತಿ ಕಥಲು (Socilogical tales)

ಮೇಲೆ ಹೇಳಿದ ಕಥೆಗಳೇ ಅಲ್ಲದೆ ಗ್ರಾಮದೇವತಲ ಕಥಲು, ವ್ರತಕಥಲು, ಪೇದರಾಶಿ ಪೆದ್ದಮ್ಮ ಕಥಲು, ಪೇರಂಟಾಂಡ್ರ ಕಥಲು (ಸ್ತ್ರೀಯರು ದೇವತೆಯ ರೂಪವನ್ನು ಪಡೆದು ಆ ದೇವತೆಯ ಜೆಹ್ನವಾಗಿ ಮಾರ್ಪಡಾಗಿರುವ ಕಲ್ಲುಗಳನ್ನು ‘ಸತೀ ಕಲ್ಲು’ ಎನ್ನುತ್ತಾರೆ. ಈ ‘ಸತಿ’ಯೇ ಪೇರಂಟಾಲು. ಇವರು ತಮ್ಮ ಸಮಾಜದ ಒಳಿತಿಗಾಗಿ ಗ್ರಾಮದ ಅಭಿವೃದ್ಧಿಗಾಗಿ ಪ್ರಾಣತ್ಯಾಗ ಮಾಡಿಕೊಂಡವರು) ತೆಲುಗಿನಲ್ಲಿವೆ.

ತೆಲುಗು ಜನಪದ ಕಥೆಗಳ ಸಂಗ್ರಹಣೆ ಮತ್ತು ಅಧ್ಯಯನ: ತೆಲುಗಿನಲ್ಲಿ ಜನಪದ ಕಥೆಗಳ ಸಂಗ್ರಹಣ ಕಾರ್ಯ ಹೆಚ್ಚು ನಡೆದಿಲ್ಲ. ಆದರೆ ‘ಗುಜರೀ ಪುಸ್ತಕ ವ್ಯಾಪಾರಿಗಳು’ ಹಿಂದೆ ಹಲವಾರು ಕಥೆಗಳನ್ನು ಶೇಖರಿಸಿ ಪ್ರಕಟಿಸಿದ್ದಾರೆ. ಎನ್.ವಿ. ಗೋಪಾಲ್ ಅಂಡ್ ಕೊ. ಕಾಳಹಸ್ತಿತಮ್ಮಾರಾವ್ ಅಂಡ್ ಸನ್ಸ್, ಸಿ.ವಿ. ಕೃಷ್ಣ ಬುಕ್‌ಡಿಪೋ, ಗೊಲ್ಲಪೂಡಿ ವೀರಾಸ್ವಾಮಿ ಅಂಡ್‌ ಸನ್ಸ್, ವಾವಿಳ್ಳರಾಮಸ್ವಾಮಿ ಶಾಸ್ತ್ರುಲು ಅಂಡ್ ಸನ್ಸ್‌, ಕೊಂಡಾ ಶಂಕರಯ್ಯ, ಶ್ರೀ ಲಕ್ಷ್ಮಿನಾರಾಯಣ ಬುಕ್ ಡಿಪೋ ಮುಂತಾದವರನ್ನು ಇಲ್ಲಿ ಹೆಸರಿಸಬಹುದು. ತೆಲುಗು ಜನಪದ ಕಥೆಗಳ ಬಗ್ಗೆ ಸಂಶೋಧನೆ ಮಾಡಿ ಅನೇಕರು ಪಿ.ಹೆಚ್.ಡಿ., ಪಡೆದಿದ್ದಾರೆ. ಅವರುಗಳಲ್ಲಿ ಡಾ. ಕೆ. ಸುಮತಿ, ಡಾ. ರಾವಿ ಪ್ರೇಮಲತ, ಡಾ. ಬುಕ್ಕಾ ಬಾಲಸ್ವಾಮಿ, ಡಾ. ಸಿ. ಪೆದ್ದಿರೆಡ್ಡಿ, ಡಾ. ವಿ.ವೈ.ವಿ. ಸೋಮಮಾಚಿ ಮುಂತಾದವರನ್ನು ಹೆಸರಿಸಬಹುದು.

ಜಿ.ಎಸ್.ಎಂ

 

ತೆಲುಗು ಜನಪದ ಕಾವ್ಯಗಳು ತೆಲುಗಿನಲ್ಲಿ ನೂರಾರು ಜನಪದ ವೀರಗೀತೆಗಳಿವೆ. ಭಾರತದಲ್ಲಿ ರಾಜಸ್ಥಾನವನ್ನು ಬಿಟ್ಟರೆ ಆಂಧ್ರಪ್ರದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಜನಪದ ವೀರಗೀತೆಗಳು ಲಭ್ಯವಾಗುತ್ತಿವೆ. ಜನಪದ ಕಾವ್ಯಗಳಲ್ಲಿ ಅನೇಕ ಬಗೆಗಳಿವೆ. ಗಾತ್ರದ ದೃಷ್ಟಿಯಿಂದ ಇವುಗಳನ್ನು ಲಘು ಕಥನ ಗೀತೆಗಳು, ದೀರ್ಘ ಕಥನ ಗೀತೆಗಳು ಮತ್ತು ಮಹಾಕಾವ್ಯಗಳೆಂದು ಮೂರು ರೀತಿ ವಿಂಗಡಿಸಬಹುದು. ಅಲ್ಲದೆ ವಸ್ತುವಿನ ದೃಷ್ಟಿಯಿಂದ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಎಂದು ಮೂರು ಭಾಗ ಮಾಡಬಹುದು. ರಾಮಾಯಣ, ಮಹಾಭಾರತ, ಭಾಗವತ ಮತ್ತು ಇತರ ಪುರಾಣಗಳಿಗೆ ಸಂಬಂಧಿಸಿದ ಹಲವು ಗೀತೆಗಳಿವೆ. ಇತಿಹಾಸ ಅಥವಾ ಅಸ್ಪಷ್ಟ ಇತಿಹಾಸವಿರುವ ಅನೇಕ ವೀರಗೀತೆಗಳಿವೆ. ಅಲ್ಲದೆ ಸುದೀರ್ಘವಾದ ಜನಪದ ಮಹಾಕಾವ್ಯಗಳಿವೆ. ತೆಲುಗಿನಲ್ಲಿ ಈ ಎಲ್ಲ ತರಹದ ಕಥನಗೀತೆಗಳು ನೂರಾರು ವರ್ಷಗಳಿಂದ ಪ್ರಚಲಿತವಾಗಿವೆ.

ಜನಪದ ವೀರಗೀತೆಗಳನ್ನು ವೀರ ವಿದ್ಯಾವಂತರು, ಕೊಮ್ಮುಲವಾರು, ಬವನೀಲು, ಜಂಗಮರು, ದಾಸರು ಮುಂತಾದ ವೃತ್ತಿ ಗಾಯಕರು ಹಾಡುತ್ತಾರೆ. ಹೆಣ್ಣು ಮಕ್ಕಳು ಹಾಡುವ ರಾಮಾಯಣದ ಹಾಡುಗಳು, ಮಹಾಭಾರತದ ಹಾಡುಗಳು ಮುಂತಾದವುಗಳಿಗೆ ವಾದ್ಯಗಳ ಸಹಕಾರ ಬೇಕಾಗಿಲ್ಲ. ಆದರೆ ವೀರಗೀತೆಗಳನ್ನು ವೃತ್ತಿಗಾಯಕರು ಹಾಡುವಾಗ ಚೌಡಿಕೆ, ಕೊಮ್ಮು, ಪಂಬ, ಜಮುಕು, ಕಿನ್ನರಿ, ಗಂಟೆ, ತಂಬೂರಿ ಮುಂತಾದವನ್ನು ಬಳಸುತ್ತಾರೆ.

ವೀರಗೀತೆಗಳಲ್ಲಿ ಸುದೀರ್ಘವಾದ ಜನಪದ ಮಹಾಕಾವ್ಯಗಳನ್ನು ಬಿಟ್ಟರೆ ಉಳಿದ ವೀರಗೀತೆಗಳನ್ನು ಕೆಲವು ನಿಮಿಷಗಳಿಂದ ಕೆಲವು ಗಂಟೆಗಳವರೆಗೆ ಹಾಡುತ್ತಾರೆ. ಇವುಗಳಲ್ಲಿ ಕೆಲವನ್ನು ಎರಡು ಮೂರು ರಾತ್ರಿ ಹಾಡಿದರೆ ಮತ್ತೆ ಕೆಲವನ್ನು ಒಂದು ತಿಂಗಳು ಕೂಡ ಹಾಡುತ್ತಾರೆ. ಬೊಬ್ಬಲಿಕಥ, ದೇಸಿಂಗುರಾಜುಕಥೆ, ಬಾಲನಾಗಮ್ಮ ಕಥೆ, ಕಾಂಭೋಜರಾಜು ಕಥ, ಅರೆ ಮರಾಠೀಲ ಕಥ, ಲಕ್ಷ್ಮಮ್ಮಕಥ, ಸನ್ಯಾಸಮ್ಮ ಕಥ, ಸರ್ವಾಯಿ ಪಾಪನಿ ಕಥ, ಚಿನ್ನಪ್ಪರೆಡ್ಡಿ ಕಥ, ಸದಾಶಿವರೆಡ್ಡಿ ಕಥ, ಕರ್ನೂಲು ನವಾಬು ಕಥ, ಬಂಗಾರು ತಿಮ್ಮರಾಜು ಕಥ, ಕುಮಾರ ರಾಮುನಿ ಕಥ, ಜಗಪತಿ ರಾಜು ಕಥ ಮುಂತಾದ ನೂರಾರು ವೀರಕಥೆಗಳು ಮತ್ತು ಅದ್ಭುತ ಕಥೆಗಳು ತೆಲುಗಿನಲ್ಲಿವೆ.

ವೀರಗೀತೆಗಳನ್ನು ಮತ್ತು ಇತರ ಕಥನಗೀತೆಗಳನ್ನು ಛಂದಸ್ಸಿನ ದೃಷ್ಟಿಯಿಂದ, ಪಲ್ಲವಿಯ ದೃಷ್ಟಿಯಿಂದ ವಿಭಾಗಮಾಡುವುದುಂಟು. ಬೊಬ್ಬಿಲಿಕಥ ತರಹದ ವೀರಗೀತೆಗಳಲ್ಲಿ ರಗಳೆ (ತೆಲುಗಿನಲ್ಲಿ ಒಂಬತ್ತು ತರಹದ ರಗಳೆಗಳಿವೆ) ನವಡೆಯಲ್ಲಿ ೮+೮+೯. ಮಾತ್ರೆಗಳಲ್ಲಿ ಸಾಗುವ ಅನೇಕ ವೀರಗೀತೆಗಳಲ್ಲಿ ‘ರಾಮರಾಮ ಶ್ರೀರಾಮ ರಾಘವಾ, ರಾಮಾ ರಘುರಾಮಾ’ ಮುಂತಾದ ಪಲ್ಲವಿಗಳಿಂದ ಈ ಗೀತೆಗಳನ್ನು ಹಾಡುತ್ತಾರೆ. ಮೇಲೆ ಹೆಸರಿಸಿದ ಅನೇಕ ವೀರಗೀತೆಗಳನ್ನು, ಅದ್ಬುತ ಗೀತೆಗಳನ್ನು ಇದೇ ಲಯದಲ್ಲಿ ಹಾಡುತ್ತಾರೆ.

ಆಂಧ್ರದ ತೀರ ಪ್ರಾಂತ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರಾಂಧ್ರ (ಕಳಿಂಗಾಂಧ್ರ)ದಲ್ಲಿ ‘ಹರಿಹರೀ ಪದಗಳು’ ಎಂಬ ಹೆಸರಿನಲ್ಲಿ ವೀರಗೀತೆಗಳನ್ನು, ಇತರ ಕಥನ ಗೀತೆಗಳನ್ನು ಹಾಡುತ್ತಾರೆ. ಇವುಗಳಲ್ಲಿ ‘ಹರಿಹರೀನಾರಾಯಣಾ ಆದಿ ನಾರಾಯಣಾ, ಕರುಣಿಂಚಿ ಮಮ್ಮೇಲು ಕಮಲಲೋಚನುಡ’ ಎಂಬ ಪಲ್ಲವಿ ಕಂಡುಬರುತ್ತದೆ. (ಒಂದು ಭಾಗದಲ್ಲಿ ಲಲಿತ ರಗಳೆಯಂತೆ ೫+೫+೫+೫ ಮಾತ್ರೆಗಳು, ಇನ್ನೊಂದು ಭಾಗದಲ್ಲಿ ೫+೫+೫+೩ ಮಾತ್ರೆಗಳು ಇರುತ್ತವೆ). ಈ ಲಯ ಇರುವ ವೀರಗೀತೆಗಳು ಮತ್ತು ಇತರ ಕಥನಗೀತೆಗಳೆಂದರೆ ಗಂಗಾವಿವಾಹ, ಶತಕಂಡ ರಾಮಾಯಣ, ಕುಶಲಾಯಕ, ಧರ್ಮಾಂಗದ ಚರಿತ್ರ ಮುಂತಾದವು. ಇವುಗಳನ್ನು ಬವನೀಲು, ಜಮುಕುಲ ಗಾಯಕರು ಹಾಡುತ್ತಾರೆ. ತೆಲಂಗಾಣದಲ್ಲಿ ಶಾರದ ಕಾಂಡ್ರು ಎಂಬ ವೃತ್ತಿಗಾಯಕರಿದ್ದಾರೆ. ಇವರು ಶಾರದ ಪದಗಳು ಎಂಬ ಗೀತೆಗಳನ್ನು ಹಾಡುತ್ತಾರೆ. ಇವುಗಳಲ್ಲಿ ೩+೫+೫+೩ ಮಾತ್ರೆಗಳಿರುತ್ತವೆ. ಒಮ್ಮೊಮ್ಮೆ ೫+೫+೩ ಮಾತ್ರೆಗಳೂ ಇರುತ್ತವೆ. ಶಾರದ ರಾಮಾಯಣ, ಶಾರದ ಹರಿಶ್ಚಂದ್ರ, ಶರದ ಸಾರಂಗಧರ ಮುಂತಾದವು ಇವರ ಗೀತೆಗಳು.

ಜಂಗಮರು ಹಾಡುವ ಕಥನಗೀತೆಗಳನ್ನು ಜಂಗಂ ಕಥಲು ಎಂದು ಹೇಳುತ್ತಾರೆ. ಈ ಆಂಧ್ರದಲ್ಲಿ ಅತ್ಯಂತ ಜನಪ್ರಿಯವಾಗಿರುವ ಬುರ‍್ರಕಥ ಎಂಬ ಕಲಾಪ್ರದರ್ಶನಕ್ಕೆ ಜಂಗಂ ಕಥೆಗಳೇ ಮೂಲ. ೮+೮+೯ ಎಂಬ ಗತಿಯಲ್ಲಿ ಸಾಗುವ ಬೊಬ್ಬಿಲಿ ಕಥೆ ತರಹದ ಸಾಲುಗಳಿಗೆ ವಡಿಪ್ರಾಸಗಳನ್ನು ಸೇರಿಸಿ ಜಂಗಂ ಕಥೆಗಳನ್ನು ಮಾಡುತ್ತಾರೆ. ಸಿರಿಯಾಳ ಮಹಾರಾಜನ ಚರಿತ್ರೆ, ಬಲ್ಲಾಳರಾಯನ ಚರಿತ್ರೆ, ನಿಜಲಿಂಗ ಚಿಕ್ಕಯ್ಯನ ಕಥೆ, ವಿರಾಟ ಪರ್ವ, ವಾಮನ ವಿಜಯ, ದೇವಯಾನಿ ಚರಿತ್ರೆ ಮುಂತಾದವು ಜಂಗಂ ಕಥೆಗಳು, ಇವುಗಳಲ್ಲಿ ತಂಬೂರಿ, ಗುಮಟೆ ಎಂಬ ವಾದ್ಯಗಳನ್ನು ಬಳಸುತ್ತಾರೆ. ಇವೆಲ್ಲ ಪೌರಾಣಿಕ ಗೀತೆಗಳು.

ತೆಲುಗಿನ ವೀರಗೀತೆಗಳಲ್ಲಿ ಬೊಬ್ಬಲಿ ಕಥ, ಕುಮಾರರಾಮನ ಕಥೆ, ಸರ್ವಾಯಿ ಪಾಪನಿ ಕಥ ಮುಂತಾದವು ಪ್ರಸಿದ್ಧವಾಗಿವೆ. ಬೊಬ್ಬಲಿ ಎಂಬ ಪ್ರದೇಶದಲ್ಲಿ ನಡೆದ ಯುದ್ದವನ್ನು ಅದ್ಬುತವಾಗಿ ಚಿತ್ರಿಸುವ ಕಥನಗೀತೆ ಬೊಬ್ಬಲಿ ಕಥ. ಕನ್ನಡ ಮ್ತು ತೆಲುಗು ಭಾಷೆಗಳಲ್ಲಿ ಜನಪ್ರಿಯವಾಗಿರುವ ವೀರಗೀತೆಗಳಲ್ಲಿ ಕುಮಾರರಾಮನ ಕಥೆ ಒಂದು. ತೆಲಂಗಾಣದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕಾವ್ಯಗಳಲ್ಲಿ ಸರ್ವಾಯಿಪಾಪನಿ ಕಥ ಒಂದು.

ಬೊಬ್ಬಲಿ ಕಥ ತೆಲುಗರ ವೀರಗುಣವನ್ನು, ಧೈರ್ಯ ಸಾಹಸಗಳನ್ನು ಅದ್ಭುತವಾಗಿ ವರ್ಣಿಸುವ ಕಾವ್ಯ. ವೀರ ಮತ್ತು ಕರುಣ ರಸಗಳ ಅಪೂರ್ವ ಸಮ್ಮೇಳನವಿದು. ‘ರಾಮರಾಮ ಅನಂತಕಾಳಮು ರಾಜ್ಯಮೇಲ ಮೇಮು, ಜಗಮುವುಂಡು ಕಾಲಮುವರಕು ಮನಮು ವುಂಡಬೋಮು’ (ರಾಮ ರಾಮ ಅನಂಕಾಲ ರಾಜ್ಯವಾಳಲಾರೆವು, ಜಗತ್ತಿರುವವರೆಗೆ ನಾವಿರಲಾರೆವು) ಎಂಬುದು ಈ ಕಾವ್ಯದ ಆಶಯ. ಈ ಜನಪದ ಕಾವ್ಯ ಶಿಷ್ಟರ ಕೈಯಲ್ಲೂ ಕಾವ್ಯ ಮತ್ತು ನಾಟಕರೂಪದಲ್ಲಿ ಮರುಹುಟ್ಟು ಪಡೆದಿದೆ. ಬೊಬ್ಬಿಲಿಯಲ್ಲಿ ಹುಟ್ಟಿದ ಮನುಷ್ಯರು ಮಾತ್ರವಲ್ಲದೆ ಕೋಳಿಯಂಥವು ಕೂಡ ಪೌರುಷ ತುಂಬಿರುತ್ತವೆಂದು ವರ್ಣಿಸಲಾಗಿದೆ. ಈ ಕಾವ್ಯದಲ್ಲಿ ಬರುವ ರಂಗಾರಾಯನ ಶೌರ್ಯವನ್ನು ಹೇಳಲು ಜನಪದ ಕವಿ ‘ರಂಗಾರಾಯನ ಮುಂಗೈಯಲ್ಲಿ ಮೀಸೆಯಿದೆ’ ಎನ್ನುತ್ತಾನೆ. ಎಂದರೆ ಪೌರುಷದ ಚಿಹ್ನೆಯಾದ ಮೀಸೆ ಅವನ ಮುಂಗೈಯಲ್ಲಿದೆ ಎಂದು ಹೇಳುವಾಗ ರಂಗಾರಾಯನ ಭುಜಬಲವನ್ನು ಸೂಚಿಸಲಾಗಿದೆ.

ಸರ್ವಾಯಿ ಪಾಪನ ಕಥೆಯಲ್ಲಿ ನಾಯಕ ಸರ್ವಾಯಿ ಪಾಪನ್ನ. ಅವನು ಹುಟ್ಟಿದ ಪುಲಗಾಂ (ಬೆಳಗಾಂ) ಬೆಳೆದದ್ದು ಆಂಧ್ರದ ತಾಟಿಕೊಂಡ. ಆಟ ದನಕಾಯುವವನು. ದನ ಕಾಯುತ್ತಾ ಕಾಡಿನಲ್ಲಿ ನಿದ್ರಿಸುತ್ತಿರಲು ಹನ್ನೆರಡು ಶಿರಸ್ಸಿನ ಸರ್ಪಹೆಡೆಬಿಚ್ಚಿ ನೆರಳು ಹಿಡಿಯಿತು. ಆ ದಾರಿಯಲ್ಲಿ ಹೋಗುತ್ತಿದ್ದ ಬ್ರಾಹ್ಮಣರು ಇದನ್ನು ನೋಡಿ ‘ಗೋಲಕೊಂಡ ಆಳಲು, ಏಳು ಗಳಿಗೆ ಆಳಲು ಪಾಪನಿಗೆ ಹಠ ಇದೆ’ ಎಂದರು. ಪಾಪನಿಗೆ ಗೋಲಕೊಂಡ, ನೆಲ್ಲೂರು, ಕಡಪ, ಮೈಸೂರು ಮುಂತಾದವನ್ನೆಲ್ಲಾ ಕೊಳ್ಳೆ ಹೊಡೆಯಬೇಕೆಂಬ ಆಸೆ. ಅವನ ಮಾತು ಕೇಳಿದರೆ ಸಾಕು ಎಲ್ಲ ನಡುಗುತ್ತಿದ್ದರು. ಮನುಷ್ಯರು ಮಾತ್ರವಲ್ಲದೆ ಪಶುಪಕ್ಷ್ಯಾದಿಗಳಿಗೂ ಅವನನ್ನು ಕಂಡರೆ ಸಾಕು ನಡುಕ ಆಗುತ್ತಿತ್ತು. ‘ಅವನು ಬರುತ್ತಿದ್ದಾನೆ’ ಎಂದು ಹೇಳಿದರೆ ‘ಹಸುಗೂಸುಗಳು ಹಾಲು ಕುಡಿಯುತ್ತಿರಲಿಲ್ಲ, ಕುದುರೆಗಳು, ಆನೆಗಳು ಏನೂ ತಿನ್ನುತ್ತಿರಲಿಲ್ಲ.

ವೀರಗೀತೆಗಳ ಜೊತೆಗೆ ತೆಲುಗಿನಲ್ಲಿ ಹಲವಾರು ಪೌರಾಣಿಕ ಮತ್ತು ಸಾಮಾಜಿಕ ಗೀತೆಗಳಿವೆ. ರಾಮಾಯಣ ಮಹಾಭಾರತ ಮತ್ತು ಭಾಗವತಗಳಿಗೆ ಸಂಬಂಧಿಸಿದಂತೆ ತೆಲುಗಿನಲ್ಲಿ ಅನೇಕ ಕಥನಗೀತೆಗಳಿವೆ. ರಾಮಾಯಣದ ಕಥೆಗಳಲ್ಲಿ ವಾಲ್ಮೀಕಿ ರಾಮಾಯಣಕ್ಕೆ ಭಿನ್ನವಾದ ಹಲವು ಪ್ರಸಂಗಗಳನ್ನು ಕಾಣಬಹುದು. ಊರ್ಮಿಳಾದವಿಯ ನಿದ್ರೆ, ಲಕ್ಷಣ ನಕ್ಕಾಗ, ಸೀತೆಯ ಅಗ್ನಿಪ್ರವೇಶ ಮುಂತಾದವೆಲ್ಲ ಜನಪದ ಕಲ್ಪನೆಯ ಉದಾಹರಣೆಗಳೆಂದು ಹೇಳಬಹುದು. ರಾಮಾಯಣಕ್ಕೆ ಸಂಬಂಧಿಸಿದಂತೆ ತೆಲುಗಿನಲ್ಲಿ ಹಲವು ಗೀತೆಗಳು ಸಿಕ್ಕುತ್ತಿವೆ. ರಾಮಾಯಣದ ಪೂರ್ತಿ ಕಥೆಯನ್ನೊಳಗೊಂಡ ಶಾರದ ರಾಮಾಯಣ, ಧರ್ಮಪುರಿ ರಾಮಾಯಣ, ಮೋಕ್ಷಗುಂಡ ರಾಮಾಯಣ, ಸೂಕ್ಷ್ಮ ರಾಮಾಯಣ, ಸಂಕ್ಷೇಪ ರಾಮಾಯಣ, ಅಧ್ಯಾತ್ಮ ರಾಮಾಯಣ ಮುಂತಾದವಿವೆ. ರಾಮಾಯಣದ ಕೆಲವು ಭಾಗಗಳನ್ನು ಸ್ವೀಕರಿಸಿ ರಾಮಾಯಣದ ಗೀತೆಗಳನ್ನು ಜನಪದರು ಸೃಷ್ಟಿಸಿದ್ದಾರೆ. ಮಹಾಭಾರತಕ್ಕೆ ಸಂಬಂಧಿಸಿದಂತೆ ವಿರಾಟಪರ್ವ, ದ್ರೌಪದೀ ಸ್ವಯಂವರ, ಕೀಚಕವಧೆ, ಶ್ರೀಕೃಷ್ಣ ರಾಯಭಾರ, ಧರ್ಮರಾಜನ ಜೂಜು ಮುಂತಾದ ಹೆಸರುಗಳಲ್ಲಿ ಕಥನಗೀತೆಗಳು ಕಂಡುಬರುತ್ತವೆ. ಭಾಗವತದ ಕಥೆಗಳನ್ನು ಸ್ವೀಕರಿಸಿ ಶ್ರೀಕೃಷ್ಣನ ಬಾಲ್ಯಕ್ರೀಡೆಗಳು, ಧ್ರುವೋಪಾಖ್ಯಾನ, ಪ್ರಹ್ಲಾದ ಚರಿತ್ರೆ, ಕಂಸವಧೆ ಮುಂತಾದವನ್ನು ಕೂಡ ಜನಪದರು ಸೃಷ್ಟಿಸಿ ಪ್ರಚಾರಕ್ಕೆ ತಂದಿದ್ದಾರೆ.

ತೆಲುಗು ಮತ್ತು ಕನ್ನಡಗಳಲ್ಲಿ ಜನಪ್ರಿಯವಾಗಿರುವ ಅನೇಕ ಪೌರಾಣಿಕ ಕಾವ್ಯಗಳಿವೆ. ಗಂಗೆ-ಗೌರಿಯಂಥವು ಎರಡು ಭಾಷೆಗಳಲ್ಲಿ ಬಹಳಷ್ಟು ಪ್ರಚಾರವನ್ನು ಪಡೆದಿವೆ. ಈ ಇಬ್ಬರನ್ನು ಪೌರಾಣಿಕ ಪಾತ್ರಗಳಂತೆ ನೋಡದೆ ಜನಪದರು ತಮ್ಮ ನಡುವಿನ ಸಾಮಾನ್ಯ ಜನರಂತೆಯೇ ಚಿತ್ರಿಸಿದ್ದಾರೆ. ದಕ್ಷಯಜ್ಞ ಗಂಗಾವಿವಾಹ ಸುರಾಭಾಂಡೇಶ್ವರ ಸಿರಿಯಾಳ ಚರಿತ್ರೆ ಮುಂತಾದವೆಲ್ಲ ಶೈವ ಸಂಬಂಧ ಗೀತೆಗಳು. ವೈಷ್ಣವ ಸಂಬಂಧವಾದ ಶ್ರೀರಂಗ ಮಾಹಾತ್ಮ್ಯ ಚೆಂಚುಲಕ್ಷ್ಮೀ ಕಂಚಿವರದರಾಜನ ಕಥೆ ಮುಂತಾದವನ್ನು ಇಲ್ಲಿ ಹೆಸರಿಸಬಹುದು.

ತೆಲುಗಿನ ನೂರಾರು ಜನಪದ ಕಾವ್ಯಗಳಲ್ಲಿ ಭಷೆ, ವರ್ಣನೆಗಳು ಭೌಗೋಳಿಕ ಮತ್ತು ಕಾಲ್ಪನಿಕ ವಾತಾವರಣ, ಪಾತ್ರಗಳ ಚಿತ್ರಣ, ಐತಿಹಾಸಿಕ ಸಂಗತಿಗಳು ಮುಂತಾದವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿದೆ. ತೆಲುಗು ಸಾಹಿತ್ಯ ಚರಿತ್ರೆಯಲ್ಲಿ ಈ ಜನಪದ ಸಾಹಿತ್ಯಕ್ಕೂ ಸಮಂಜಸವಾದ ಸ್ಥಾನವನ್ನು ನೀಡಬೇಕಾಗಿದೆ.

ಟಿ.ವಿ.ಎಸ್. ಅನುವಾದ ಎ.ಎಂ.ಡಿ.