ತೆಲುಗು ವೈಜ್ಞಾನಿಕ ಜಾನಪದ ಜಾನಪದದಲ್ಲಿ ವೈಜ್ಞಾನಿಕ ಬಗೆ ಎಂಬುದು ಜನಪದ ನಂಬಿಕೆಗಳಿಗೆ ಕೊಟ್ಟ ಇನ್ನೊಂದು ಹೆಸರೆಂದು ಸೂಕ್ಷ್ಮ ಪರಿಶೀಲನೆಯಿಂದ ಸ್ಪಷ್ಟವಾಗುತ್ತದೆ. ವೈಜ್ಞಾನಿಕ ಬಗೆಯನ್ನು ಜಾನಪದದ ಒಂದು ವಿಭಾಗವೆಂದು ಹೇಳಿದ ಆರ್.ಎಸ್. ಬಾಗ್ಸ್ “‘ವೈದ್ಯ, ಭವಿಷ್ಯ’ ಮಾಟ ಮತ್ತುನಂಬಿಕೆ ಇನ್ನಿತರ ಎಲ್ಲಾ ವಿಭಾಗಗಳು ವೈಜ್ಞಾನಿಕ ಬಗೆಗಳಾಗುತ್ತವೆಂದು” ಬರೆದಿದ್ದಾನೆ (ಮರಿಯ ಲೀಚ್ ಸಂ. ೧೯೭೫: ೬೯೦). ಮಂತ್ರ, ಮಾಟ, ವೈದ್ಯ, ಭವಿಷ್ಯ, ಕಣಿ, ಯಕ್ಷಿಣಿ ಮುಂತಾದವೆಲ್ಲಾ ಜನಪದ ನಂಬಿಕೆಯ ಭಾಗವೇ ಆಗಿವೆ. ಆದುದರಿಂದ ಜನಪದ ನಂಬಿಕೆಗಳ ಸಮಗ್ರ ಚಿತ್ರವನ್ನು ಕೊಟ್ಟರೆ ವೈಜ್ಞಾನಿಕ ಬಗೆಯ ಸ್ವರೂಪ ತಿಳಿದುಬರುತ್ತದೆನ್ನಬಹುದು.

ವೈಜ್ಞಾನಿಕ ಬಗೆ ಎಂಬ ಹೆಸರೇ ಅವೈಜ್ಞಾನಿಕವೆಂದು ತೋರುತ್ತದೆ. ಆದರೆ ಆರ್.ಎಸ್. ಬಾಗ್ಸ್ ಇದನ್ನು ಕುರಿತು ಹೇಳುವಾಗ ಈ ವರ್ಗಕ್ಕೆ ಸೇರಿದ ವಿಷಯಗಳು ಕಾರ್ಯಕಾರಣ ಸಂಬಂಧವನ್ನು ಹೇಳುತ್ತವೆಂದು ಹೇಳಿರುವುದು ಗಮನಾರ್ಹ. ಮನುಷ್ಯನಲ್ಲಿ ಕಾರ್ಯಕಾರಣ ಸಂಬಂಧವನ್ನು ಹುಡುಕುವ ಕುತೂಹಲವೇ ವಿಜ್ಞಾಣದ ಮುನ್ನಡೆಗೆ ಮೂಲ. ತೀರ ಅಂಧ ವಿಶ್ವಾಸವೆನ್ನಲಾಗುವ ಜನಪದ ನಂಬಿಕೆಗಳಲ್ಲಿ ಕೂಡ ವಿವೇಚನೆ ಮಾಡಬೇಕೆಂಬ ಕುತೂಹಲವು ಅಡಗಿದೆ. ಈ ವಿವೇಚನೆ ಪ್ರಯೋಗದ ತಳಹದಿಯ ಮೇಲೆ ವಿಕಾಸಗೊಂಡಾಗ ವಿಜ್ಞಾನವಾಗುತ್ತದೆ. ಆದರೆ ಜನಪದ ನಂಬಿಕೆಗಳಲ್ಲಿ ವಿಚಾರಧಾರೆ ಅವೈಜ್ಞಾನಿಕ ಮಟ್ಟದಲ್ಲೇ ಉಳಿದಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಎಷ್ಟೇ ಅವೈಜ್ಞಾನಿಕವಾದರೂ ಜನಪದ ನಂಬಿಕೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿಮಾನವ ಮನೋಧರ್ಮದ ವೈಚಿತ್ರ‍್ಯವನ್ನು, ವೈವಿಧ್ಯವನ್ನು ಅರಿಯಲು ಸಾಧ್ಯವಾಗುತ್ತದೆ. ಆರ್.ಎಸ್.ಬಾಗ್ಸ್ ಅವರೇ ನಂಬಿಕೆಗಳ ಅಧ್ಯಯನದಲ್ಲಿ ಮನೋವಿಜ್ಞಾನ, ಜಾನಪದ. ಮಾನವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಧರ್ಮ ನೆರವಾಗುತ್ತವೆಂದು ಹೇಳಿದ್ದಾನೆ (ಮರಿಯ ಲೀಚ್‌ ಸಂ. ೧೯೭೫: ೬೯೧).

ತೆಲುಗು ಜಾನಪದ ವೈಜ್ಞಾನಿಕ ಬಗೆಯ ವೈವಿಧ್ಯಮಯ ವಿಭಾಗಗಳಿಂದ ಪರಿಪುಷ್ಟವಾಗಿದ್ದರೂ ಅದರ ಬಗೆಗಿನ ಅಧ್ಯಯನ ನಡೆಯಲೇ ಇಲ್ಲವೆಂಬುದು ವಿಷಾದದ ಸಂಗತಿ. ಬೇರೆ ವಿಭಾಗಗಳಿಗೆ ಹೋಲಿಸಿದಾಗ ಈ ವಿಭಾಗದಲ್ಲಿ ನಡೆದ ಕೃಷಿ ಶೂನ್ಯವೆಂದು ಹೇಳಬೇಕು. ಈ ವಿಭಾಗದ ಕೆಳಗೆ ಬರುವ ಅಂಶಗಳ ಸಂಗ್ರಹಗಳಾಗಲಿ ವಿಶ್ಲೇಷಣೆಯಾಗಲಿ, ವಿಮರ್ಶೆಯಾಗಲಿ ಕಂಡುಬರುವುದಿಲ್ಲ. ತೆಲುಗರ ಜನಪದ ನಂಬಿಕೆಗಳನ್ನು ಕುರಿತಂತೆ ಜಿ.ಎಸ್.ಮೋಹನ್ ಅವರ ಒಂದೇ ಒಂದು ಪುಸ್ತಕ ಪ್ರಕಟವಾಗಿದೆ. ನಂಬಿಕೆಗಳ ಸಂಗ್ರಹವಲ್ಲದೆ ವೈಜ್ಞಾನಿಕ ಬಗೆಯ ಆಚಾರ, ಸಂಪ್ರದಾಯ, ಮಾಟ, ಮಂತ್ರ, ವೈದ್ಯ, ಭವಿಷ್ಯ, ಯಕ್ಷಿಣಿ ಮುಂತಾದ ಎಲ್ಲ ಪ್ರಕಾರಗಳನ್ನೂ ಪರಿಚಯಿಸುವ ಒಂದೇ ಒಂದು ಗ್ರಂಥ ಪ್ರಸ್ತುತ ಲೇಖಕನ ‘ಆಂಧ್ರುಲ ಜಾನಪದ ವಿಜ್ಞಾನಂ.’ ಸಾಮಾಜಿಕ ವಿಧಿಗಳೆಂಬ ಅಧ್ಯಾಯದಲ್ಲಿ ಮೇಲಿನ ಎಲ್ಲ ಪ್ರಕಾರಗಳನ್ನು ಕುರಿತು ಸುಮಾರು ನೂರು ಪುಟಗಳಲ್ಲಿ ವಿವರಿಸಲಾಗಿದೆ.

05_70A_DBJK-KUH

ತೆಲುಗು ಭಾಷಾ ಸಮಿತಿಯ ಆಂಧ್ರ ವಿಶ್ವಕೋಶದ ಸಂಪುಟಗಳಲ್ಲಿಯೂ ಮೇಲಿನ ಕೆಲವು ಪ್ರಕಾರಗಳ ವಿವರಣೆ ಸಿಕ್ಕುತ್ತದೆ. ಮೂಢವಿಶ್ವಾಸಗಳೆಂಬ ಹೆಸರಿನಲ್ಲಿ ಜಗನ್ನಾಥಂ ಮುಂತಾದವರು ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸತ್ಯಭೂಷಣರಾಣೀ ಎಂಬುವರು ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ತೆಲುಗಿನ ನಂಬಿಕೆಗಳನ್ನು ಕುರಿತು ಎಂ.ಫಿಲ್‌ ಪದವಿಗಾಗಿ ಸಂಶೋಧನೆ ನಡೆಸಿದ್ದಾರೆ. ‘ಗಾರಡಿ’ (ಯಕ್ಷಿಣಿ) ‘ವಿಪ್ರವಿನೋದ’ ಮುಂತಾದುವನ್ನು ಕುರಿತು ಪಿ.ಎಸ್.ಆರ್. ಅಪ್ಪಾರಾವ್ ತಮ್ಮ ‘ತೆಲುಗು ನಾಟಕ ವಿಕಾಸಮು’ ಎಂಬ ಪಿಎಚ್‌ಡಿ. ನಿಬಂಧದಲ್ಲಿ ಚರ್ಚಿಸಿದ್ದಾರೆ. ಡಾ. ಬಿ. ರಾಮರಾಜು ಅವರು ತಮ್ಮ ‘ತೆಲುಗು ಜಾನಪದಗೇಯ ಸಾಹಿತ್ಯಮು’ ಎಂಬ ‘ಮಹಾಪ್ರಬಂಧದಲ್ಲಿ ಮತ್ತು ಫೋಕ್‌ ಲೋಕ್ ಆಫ್ ಆಂಧ್ರಪ್ರದೇಶ್; ಎಂಬ ಆಂಗ್ಲಗ್ರಂಥದಲ್ಲಿ ಕೆಲವು ವಿಷಯಗಳನ್ನು ವಿವರಿಸಿದ್ದಾರೆ. ಅನುಭವ ‘ಗೃಹವೈದ್ಯಮು’ ತರಹದ ಜನಪದ ವೈದ್ಯಗ್ರಂಥಗಳು ಕೆಲವು ಪ್ರಕಟವಾಗಿವೆ. ಶಕುನ, ಭವಿಷ್ಯ, ಮಾಟ, ಮಂತ್ರ ಮುಂತಾದ ಹಲವು ಬಗೆಯ ನಂಬಿಕೆಗಳನ್ನು ಆಚಾರಗಳನ್ನು ಸವಿವರವಾಗಿ ‘ಗುಪ್ತ ಪಂಚಾಂಗಂ’ ಎಂಬ ಜನಪ್ರಿಯ ಪಂಚಾಂಗ ಪ್ರತಿ ವರ್ಷ ನೀಡುತ್ತದೆ. ‘ತೆಲುಗು ಪುರಾಣಗಳ ಅಧ್ಯಯನ’ (ರಾವಿ ಪ್ರೇಮಲತ) ‘ತೆಲುಗು ವೀರಗಾಥಾ ಕವಿತ್ವ’ (ಟಿ.ವಿ. ಸುಬ್ಬರಾವ್), ‘ತೆಲುಗು ಕಥಾ ಕಾವ್ಯಗಳು’ (ನಾಯನಿ ಕೃಷ್ಣಕುಮಾರಿ) ಮುಂತಾದ ಪಿಎಚ್‌.ಡಿ. ಪ್ರಬಂಧಗಳಲ್ಲಿ ಸಾಂದರ್ಭಿಕವಾಗಿ ವೈಜ್ಞಾನಿಕ ಬಗೆಯ ಕೆಲವು ಪ್ರಕಾರಗಳನ್ನು ವಿವರಿಸಲಾಗಿದೆ. ಮೈಸೂರಿನ ‘ಜಾನಪದ ವಿಜ್ಞಾನ ಭಾರತೀಯ’ ವತಿಯಿಂದ ಪ್ರಕಟವಾಗುತ್‌ಇತರುವ ‘ಜಾನಪದಂ’ ಎಂಬ ತ್ರೈಮಾಸಿಕದಲ್ಲಿ ನಂಬಿಕೆ, ವೈದ್ಯ ಮುಂತಾದವನ್ನು ಕುರಿತ ಲೇಖನಗಳು ಪ್ರಕಟವಾಗಿವೆ. ವೈಜ್ಞಾನಿಕ ಬಗೆಯ ಕ್ಷೇತ್ರದಲ್ಲಿ ನಡೆದ ಕೆಲಸದ ಸಂಕ್ಷಿಪ್ತ ವಿವರಣೆ ಇದು. ತೆಲುಗ ನಾಡಿನ ಜನಪದ ನಂಬಿಕೆಗಳಲ್ಲಿರುವ ವೈವಿಧ್ಯ, ಇತಿಹಾಸ, ಸ್ವರೂಪ ಮುಂತಾದುವನ್ನು ಮುಂದೆ ನೀಡಲಾಗಿದೆ.

ನಂಬಿಕೆ-ಮೂಢನಂಬಿಕೆ ಎಂಬುವು ವಿದ್ಯಾವಂತರು ವಿದ್ಯಾವಿಹೀನರು ಗ್ರಾಮೀಣರು ನಾಗರಿಕರು ಎಂಬ ಭೇದವಿಲ್ಲದೆ ಎಲ್ಲರಲ್ಲೂ ಇರುವಂಥವು. ವಿಚಾರವಾದಿಗಳೆನಿಸಿಕೊಂಡವರಲ್ಲೂ ಯಾವುದಾದರೂ ನಂಬಿಕೆಗಳು ಮೂಢನಂಬಿಕೆಗಳಿದ್ದೇ ಇರುತ್ತವೆ. “ದೇವರಾಣೆ ನಾನು ದೇವರನ್ನು ನಂಬುವುದಿಲ್ಲ” ಎಂದು ಹೇಳುವ ಮನುಷ್ಯರು ನಾವು! ಮೂಢನಂಬಿಕೆಗಳಲ್ಲಿ ಹುರುಳಿಲ್ಲವೆಂದು ಅಪಹಾಸ್ಯ ಮಾಡುವುದಕ್ಕಿಂತ ಅವುಗಳ ಅಂತರಾರ್ಥವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದು ಒಳ್ಳೆಯದು. ಮಾಟ, ಮಂತ್ರ, ಯಕ್ಷಿಣಿ ಮುಂತಾದವು ಕೆಲವು ಸಲಕರಣೆಗಳ ಸಹಾಯದಿಂದ ಪ್ರಯೋಗಗಳನ್ನು ಪಡೆಯುತ್ತವೆ. ಇಂಥ ಪ್ರಯೋಗಪೇಕ್ಷೆಯ ಪ್ರಕಾರಗಳನ್ನು ಬಿಟ್ಟು ಕೇವಲ ನುಡಿಯ ರೂಪದಲ್ಲಿ ಪ್ರಸಾರವಾಗುವುದನ್ನೇ ನಾವು ಸಾಮಾನ್ಯವಾಗಿ ಜನಪದ ನಂಬಿಕೆ ಎನ್ನುತ್ತೇವೆ. ಇವುಗಳಲ್ಲಿ ಕಾರ್ಯಾಚರಣೆ ಇದ್ದರೂ ಅದು ಅಪ್ರಧಾನವಾಗುತ್ತದೆ. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಕೂಡ ಕಷ್ಟ. ಮನುಷ್ಯನೇ ಸೃಷ್ಟಿ ಮಾಡಿಕೊಂಡ ಈ ನಂಬಿಕೆಗಳಲ್ಲಿ ಕೆಲವು ಹದರಿಕೆಯನ್ನು ಹುಟ್ಟಿಸಿ ಮಾನವ ಜೀವನದ ಮೇಲೆ ಸವಾರಿ ಮಾಡುತ್ತವೆ. ಕೆಲವು ನಂಬಿಕೆಗಳಲ್ಲಿ ವೈಜ್ಞಾನಿಕ ಸತ್ಯವೂ ಅಡಗಿರಬಹುದು. ಜನಪದ ಜೀವನದಲ್ಲಿ ನಂಬಿಕೆಗಳು ಎಷ್ಟರಮಟ್ಟಿಗೆ ಬೆರೆತಿವೆ ಎಂದರೆ ಅವನ್ನು ಅನುಸರಿಸುತ್ತಿದ್ದೇವೆಂಬ ಅರಿವೂ ಜಾನಪದರಿಗಿರುವುದಿಲ್ಲ.

ತೆಲುಗರ ನಂಬಿಕೆಗಳಿಗೆ ತೆಲುಗರಷ್ಟೇ ಪ್ರಾಚೀನತೆಯಿದೆ ಎಂಬುದು ಅತಿಶಯೋಕ್ತಿ ಅಲ್ಲ. ಆದ್ದರಿಂದ ಆಂಧ್ರರ ಉಲ್ಲೇಖವಿರುವ ಐತರೇಯ ಬ್ರಾಹ್ಮಣ ಕಾಲದಿಂದಲೂ ಆಂಧ್ರ ನಂಬಿಕೆಗಳಿದ್ದಿರಬೇಕು. ಇವುಗಳ ದಾಖಲೆಗಳು ಮಾತ್ರ ನಮಗೆ ಕ್ರಿಸ್ತಶಕದ ಶಾಸನಗಳಲ್ಲಿ ಮಾತ್ರ ಮೊದಲು ಸಿಕ್ಕುತ್ತವೆ. ಹದ್ದು, ಗೂಬೆ ಮುಂತಾದವು ಮನೆ ಸೇರಿದರೆ ಶಾಂತಿ ಮಾಡಬೇಕೆಂದು ತಿಕ್ಕನನ ಭಾರತದಲ್ಲಿ ಹೇಳಿದೆ (ಆನುಶಾಸನಿಕ ಪರ್ವ ೪-೧೧೯ ಕ್ರಿ.ಶ. ೧೩ಶ.) ಮುದ್ದು ತಿನ್ನಿಸಿ ಗಂಡನನ್ನು ವಶ ಮಾಡಿಕೊಳ್ಳುತ್ತಾರೆಂದೂ, ಈ ಮದ್ದಿನಿಂದ ವಶವಾಗುವುದು ಹೇಗಿದ್ದರೂ ಪ್ರಾಣ ಹಾನಿಯಾಗುತ್ತದೆಂದು ತೆಲುಗು ಭಾರತದ ಅರಣ್ಯಪರ್ವದಲ್ಲಿ ಹೇಳಿದೆ (೫-೨೯೬). ಮೈಯ ರಕ್ಷೆಗಾಗಿ ತಾಯಿತ ಕಟ್ಟುವುದನ್ನು ‘ಪಲ್ನಾಟಿ ವೀರ ಚರಿತ್ರೆ’ ಮುಂತಾದ ಗ್ರಂಥಗಳು ವಿವರಿಸಿವೆ. ತಾಯಿ ಶಿಶುವಿನ ರಕ್ಷೆಗಾಗಿ ಕಟ್ಟುವುದರಿಂದ ‘ತಾಯಿತ’ ಆಯಿತೆಂದು ಅಷ್ಟಕವಿ ಎಂಬುವನು ಜನಪದ ನಿರುಕ್ತಿಯನ್ನೂ ಹೇಳಿದ್ದಾನೆ. ಮುಹೂರ‍್ತ, ಶಕುನ, ಅಪಶಕುನ ಮುಂತಾದವನ್ನು ತೆಲುಗಿನ ಅನೇಕ ಸಾಹಿತ್ಯ ಗ್ರಂಥಗಳು ವಿವರಿಸುತ್ತವೆ.

ನಂಬಿಕೆಗಳಲ್ಲಿ ಬಹುಪಾಲು ವಿಶ್ವಜನೀನವಾದುವು. ಕೋಟೆ ಅಥವಾ ಯಾವುದಾದರೂ ಕಟ್ಟಡ ಭದ್ರವಾಗಿರಬೇಕಾದರೆ ಹಸುಗೂಸನ್ನು ಬಲಿಕೊಡುತ್ತಾರೆಂಬ ನಂಬಿಕೆ ಜಗತ್ತಿನಲ್ಲೆಲ್ಲ ಹರಡಿದೆ. ಕೆಲವು ನಂಬಿಕೆಗಳು ಭಾರತೀಯರಿಗೆಲ್ಲಾ ಸಮಾನವಾದವು; ಪಾಶ್ಚಾತ್ಯರಿಂದ ಭೀನ್ನವಾದುವು. ಕೋಗಿಲೆ ನಮ್ಮ ಪಾಲಿಗೆ ಮೃದುಮಧುರವಾಗಿಹಾಡುವ ಒಳ್ಳೆಯ ಹಕ್ಕಿಯಾದರೆ ಪಾಶ್ಚಾತ್ಯರಿಗೆ ಅದು ಮೋಸಕ್ಕೆ ಸಂಕೇತ. ಗೂಬೆ ನಮಗೆ ಕೆಟ್ಟ ಶಕುನವಾದರೆ ಪಾಶ್ಚಾತ್ಯರಿಗೆ ಒಳ್ಳೆಯ ಸಂಕೇತ.ನಂಬಿಕೆಗಳಲ್ಲಿ ಕೆಲವು ತೀರ ಪ್ರಾದೇಶಿಕವಾದುವು. ಅಮಾವಾಸ್ಯೆ ತೆಲುಗರಿಗೆ, ವೀರರಿಗೆ, ಪ್ರದೇಶಗಳಿಗೆ ಸಂಬಂಧಿಸಿದ ನಂಬಿಕೆಗಳು ಕೂಡ ತೆಲುಗರಿಗೆ ಮಾತ್ರ ಸೀಮಿತವಾದುವು. ಆದರೆ ಈ ನಂಬಿಕೆಗಳ ಮೂಲೋದ್ದೇಶ ಮಾತ್ರ ಸರ್ವಮಾನವರಿಗೂ ಸಮಾನವಾದುದಿರಬಹುದು.

ತೆಲುಗರಲ್ಲಿ ಎಲ್ಲ ತರಹದ ನಂಬಿಕೆಗಳೂ ಇವೆ. ಮನುಷ್ಯ ಜೀವನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಾದೇಶಿಕ ನಂಬಿಕೆಗಳನ್ನು ಇಲ್ಲಿ ಕೊಡಬಹುದು.

೧. ಅಪರೂಪವಾಗಿ ಹುಟ್ಟಿದ ಮಗುವನ್ನು ಎಂಜಲೆಲೆಯಲ್ಲಿ ಹೊರಳಾಡಿಸಿ ಪುಲ್ಲಯ್ಯ (ಪುಲ್ಲಾಕು= ಎಂಜಲೆಲೆ) ಎಂದು ಹೆಸರಿಡಬೇಕು.

೨. ಮಕ್ಕಳಿಗೆ ಸ್ನಾನ ಮಾಡಿಸುವಾಗ ಪ್ರತಿದಿನ ‘ಶ್ರೀರಾಮ ರಕ್ಷನೂರೇಳ್ಳಾಯುಸ್ಸು’ (ಶ್ರೀರಾಮ ರಕ್ಷೆ ನೂರು ವರ್ಷ ಆಯುಸ್ಸು) ಎಂದೂ ಎಣ್ಣೆಸ್ನಾನ ಮಾಡಿಸಿದಾಗ ‘ಶ್ರೀರಾಮರಕ್ಷ ವೆಯ್ಯೇಳ್ಳಾಯುಸ್ಸು’ (ಸಾವಿರ ವರ್ಷ) ಎಂದೂ ಹಾರೈಸಬೇಕು.

೩. ದಾನ ಮಾಡುವಾಗ ೧೧೬ ಅಥವಾ ೧೧೧೬ ರೂಪಾಯಿಗಳನ್ನು ಕೊಡಬೇಕು.

ಇವಲ್ಲದೆ ಭಾಷಿಕವಾಗಿ ವಿಶ್ಲೇಷಿಸಬಹುದಾದ ಎಲ್ಲ ರೀತಿಯ ನಂಬಿಕೆಗಳೂ ತೆಲುಗಿನಲ್ಲಿ ಸಿಕ್ಕುತ್ತವೆ. ನಂಬಿಕೆಗಳು ಯಾವುದಾದರೂ ಗುರುತನ್ನು ಅಥವಾ ಕಾರಣವನ್ನು ಹೇಳಿ ಅದರ ಫಲಿತಾಂಶವನ್ನು ಹೇಳುತ್ತವೆ. ರಾತ್ರಿಯಲ್ಲಿ ಕೋಗಿಲೆ ಕೂಗುವುದಾದರೆ (ಗುರುತ) ಮಳೆ ಬರುತ್ತದೆ. (ಫಲ). ಬಿದ್ದ ಹಲ್ಲನ್ನು ಇಲ್ಲಿಯ ಕನ್ನದಲ್ಲಿ ಹಾಕಿದರೆ(ಕಾರಣ ಅಥವಾ ಕಾರ್ಯ) ಇಲಿಯ ಹಲ್ಲಿನ ಹಾಗೆ ಗಟ್ಟಿ ಹಲ್ಲು ಬರುತ್ತದೆ (ಫಲ). ಯಾವುದಾದರೂ ಕೆಲಸದಿಂದಾದ ಗುರುತಿನಿಂದ ಕೆಟ್ಟ ಫಲ ಉಂಟಾಗುವುದು ಕೆಲವು ನಂಬಿಕೆಗಳಲ್ಲಿ ಕಾಣುತ್ತದೆ. ಕನ್ನಡಿಯನ್ನು ಒಡೆದರೆ ಕೆಟ್ಟದಾಗುತ್ತದೆ. ಇದೇ ನಂಬಿಕೆ ಇನ್ನು ಮುಂದುವರಿದು ಪರಿವರ್ತನೆಯ ನಂಬಿಕೆಯಾಗುವುದುಂಟು. ಕನ್ನಡಿಯನ್ನು ಒಡೆದರೆ ಏಳುವರ್ಷ ಕೆಟ್ಟದ್ದು. ಅದನ್ನು ತಪ್ಪಿಸಿಕೊಳ್ಳಬೇಕಾದರೆ ಮುರಿದ ಚೂರುಗಳನ್ನು ಹರಿಯುವ ನೀರಿಗೆಸೆಯಬೇಕು ಎಂದು ಪಾಶ್ಚಾತ್ಯರ ನಂಬಿಕೆ ಹೇಳುತ್ತದೆ. ಜನನ, ಬಾಲ್ಯ, ವೈದ್ಯ, ಕೌಟುಂಬಿಕ, ಆರ್ಥಿಕ, ಸಾಮಾಜಿಕ ಸಂಬಂಧಗಳು, ವಿಷಯಗಳು, ಪ್ರಕೃತಿ, ಕಾಲ, ಋತು, ಹವಾಮಾನ, ಪ್ರಾಣಿ, ಪಕ್ಷಿ, ಗಿಡ, ಮರಗಳಿಗೆ ಸಂಬಂಧಿಸಿದ ಎಲ್ಲ ತರಹದ ತೆಲುಗು ನಂಬಿಕೆಗಳನ್ನೂ ಇನ್ನೂ ಸಂಗ್ರಹಿಸಬೇಕಾಗಿದೆ, ಅಧ್ಯಯನ ಮಾಡಬೇಕಾಗಿದೆ.

ಜನಪದ ವೈದ್ಯ: ವಿಜ್ಞಾನಕ್ಕೆ ನೇರವಾಗಿ ಸಂಬಂಧಿಸಿದ ವೈಜ್ಞಾನಿಕ ಬಗೆ ಎಂದರೆ ಜನಪದ ವೈದ್ಯ. ಜನಪದೀಯ ಚಿಕಿತ್ಸಾ ವಿಧಾನಗಳನ್ನು ಜಗತ್ತಿನಾದ್ಯಂತ ಆಚರಿಸುವವರು ಮಾಂತ್ರಿಕರು, ಕ್ಷೌರಿಕರು, ಷ್ಯಾಮನ್ನರು, ಪೂಜಾರಿಗಳು, ಕಳ್ಳವೈದ್ಯರು ಮುಂತಾದವರು. ಜನಪದ ವೈದ್ಯದ ಮುಖ್ಯ ಗುಣ ರೋಗ ನಿವಾರಣೆ, ಇದು ಅನುಭವ ಗೃಹವೈದ್ಯ; ಪ್ರಯೋಗ ಮೂಲದ್ದಲ್ಲ. ಗಾಯಗಳನ್ನು ಗುಣಪಡಿಸುವುದು, ರೋಗ ನಿದಾನ, ಆರೋಗ್ಯ ಸೂತ್ರಗಳು ವಿವಿಧ ರೋಗ ಚಿಕಿತ್ಸೆ ಮುಂತಾದುವನ್ನು ಕುರಿತು ಗೀತೆಗಳಲ್ಲಿ, ಗಾದೆಗಳಲ್ಲ, ಇತರ ನುಡಿಗಟ್ಟುಗಳಲ್ಲಿ ಹೇಳಲಾಗಿದೆ. ತೆಲುಗಿನ ಹಲವು ಮಕ್ಕಳ ಹಾಡುಗಳಲ್ಲಿ ವೈದ್ಯ ರಹಸ್ಯವಿರುವುದು ವಿಶೇ. ಕಾಳ್ಳಾಗಜ್ಜೆ (ಕಾಲಿನ ಗೆಜ್ಜೆ) ಎಂಬ ಆಟದ ಹಾಡಿನಲ್ಲಿ ರಜಸ್ವಲೆಯಾಗದವರಿಗೆ ಔಷಧಿ ಇದೆ. ತೆಲುಗು ‘ಬಸವ ಪುರಾಣ’ದಲ್ಲಿ ಊತ ಮುಂತಾದವುಗಳಿಗೆ ಔಷಧಿಗಳನ್ನು ಹೇಳಲಾಗಿದೆ (ಪು. ೭೭). ಪಶು ವೈದ್ಯವನ್ನು ಕುರಿತ ಉಲ್ಲೇಖ ‘ನವನಾಥ ಚರಿತ್ರ’ದಲ್ಲಿದೆ (೧೪ಶ.). ಆಂಧ್ರದ ಕಾಡುಜನರಿಗೆ ಇಡೀ ದಕ್ಷಿಣ ಭಾರತದಲ್ಲಿ ಜನಪದ ವೈದ್ಯರಾಗಿ ಪ್ರಸಿದ್ಧಿ ಇದೆ. ಕೊಂಡಮಾಮಗಳು ಶ್ರೀಶೈಲ ಮುಂತಾದ ಪ್ರದೇಶಗಳಿಂದ ಕರ್ನಾಟಕ ಹಾಗೂ ತಮಿಳುಣಾಡುಗಳಿಗೂ ಹೋಗಿ ರಕ್ತದ ಒತ್ತಡ ಮುಂತಾದವುಗಳಿಗೆ ಮೂಲಿಕಾ ವೈದ್ಯವನ್ನು ಮಾಡುತ್ತಾರೆ. ಆಂಧ್ರದ ಒಕಂಡರಾಜು, ಯಾನಾದಿ, ಚೆಂಚು, ಕೋಯ, ಎರುಕ, ಮನ್ನೆಂದೊರ ಮುಂತಾದವರು ಬಗೆಬಗೆಯ ವೈದ್ಯವನ್ನು ಮಾಡುತ್ತಾರೆ. ತೆಲುಗಿನಲ್ಲಿ ಈ ತರಹದ ವೈದ್ಯಕ್ಕೆ ‘ನಾಟು ವೈದ್ಯಂ’ (ನಾಟು=ಒರಟು, ದೇಶಿಯ, ಕಚ್ಚಾ ಮುಂತಾದ ಅರ್ಥಗಳಿವೆ.) ‘ಕೂರಗಾಯ ವೈದ್ಯಂ’ (ತರಕಾರಿ ವೈದ್ಯ), ‘ನಾಡಿ ವೈದ್ಯಂ’, ‘ಮೂಲಿಕಾ ವೈದ್ಯಂ’, ‘ಪ್ರಕೃತಿ ವೈದ್ಯಂ’, ‘ಗೃಹ ವೈದ್ಯಂ’ ಮುಂತಾದ ಹೆಸರುಗಳಿವೆ.

ಜನಪದ ವೈದ್ಯ ಹಲವು ಸಲ ಅಲೋಪತಿ ವೈದ್ಯಕ್ಕೂ ತಳಹದಿಯಾಗಬಲ್ಲದು. ಆದರೆ ಇದರಲ್ಲಿ ಶುದ್ಧೀಕರಣ ವಿಧಾನಗಳಿಲ್ಲ. ನಂಬಿಕೆಯೇ ಇದಕ್ಕ ಮೂಲ. ಇದರಲ್ಲಿ ರಹಸ್ಯಗುಣ ಹೆಚ್ಚು. ಶಾಸ್ತ್ರೀಯವಾದ ಹಿನ್ನೆಲೆ ಇಲ್ಲದಿರುವುದರಿಂದ ಜನಪದ ವೈದ್ಯದ ಹಲವು ಪ್ರಯೋಗಗಳನ್ನು ಅನುಮಾನದಿಂದ ನೋಡಬೇಕಾಗುತ್ತದೆ. ಆಯುರ್ವೇದವೂ ಜನಪದ ವೈದ್ಯಕ್ಕೆ ಸಮೀಪವಾದುದಾದರೂ ಅದರಲ್ಲಿ ಶುದ್ಧೀಕರಣ ವಿಧಾನಗಳಿವೆ.

ಜನಪದ ವೈದ್ಯ ಪ್ರಾದೇಶಿಕವಾದುದು. ಎಲ್ಲ ರೋಗಗಳೂ ಎಲ್ಲರಿಗೂ ಬರುವುದಲ್ಲ. ಎಲ್ಲ ರೋಗಗಳೂ ಒಂದೇ ಔಷಧಿಗೆ ನಿವಾರಣೆಯಾಗುವುದಿಲ್ಲ. ಅನುಭವ ಹಾಗೂ ಪ್ರಯೋಗ ಒಂದೊಂದು ಪ್ರದೇಶಕ್ಕೂ ಭಿನ್ನವಾಗುತ್ತಿರುತ್ತವೆ. ಜನಪದ ವೈದ್ಯರಲ್ಲಿ ನಂಬಿಕೆಯೇ ಮುಖ್ಯವಾದ್ದರಿಂದ ಗಿಡ, ಮೂಲಿಕೆ ಇತರ ವಸ್ತುಗಳನ್ನೇ ಉಪಯೋಗಿಸಬೇಕೆಂಬುದೇನೂ ಇಲ್ಲ. ಮಂತ್ರವೂ ಮದ್ದಿನಂತೆ ಉಪಯೋಗವಾಗುತ್ತದೆ. ಕೆಲವು ಸಲ ಒಳ್ಳೆಯ ಮಾತೇ ವೈದ್ಯವಾಗಬಹುದು. ಮಾನಸಿಕವಾಗಿ ದುರ್ಬಲರಾದವರಿಗೆ ದೃಷ್ಟಿಯಿಂದ, ಕೆಟ್ಟ ಕಣ್ಣಿನಿಂದ, ಬಾನುಮತಿಯಿಂದ ತಲೆನೋವು, ಹೊಟ್ಟೆನೋವು, ವಾಂತಿ, ಮೂರ್ಛೆ ಇನ್ನೂ ಹಲವು ಮನೋರೋಗಗಳು ಬರುತ್ತವೆ. ಇವೆಲ್ಲ ಸ್ವಯಂಕೃತ, ಸ್ವಪ್ರೇರಿತವಾದವು. ಮಿಥ್ಯಾರೋಗಗಳನ್ನು ಗುಣಪಡಿಸಲು ಮಿಥ್ಯಾ ಕಲ್ಪನೆಯನ್ನೇ ಮಾಡಿ ಮಿಥ್ಯಾ ವೈದ್ಯವನ್ನೇ ಮಾಡಬೇಕಾಗುತ್ತದೆ.

ಮಂತ್ರ-ತಂತ್ರ-ಯಂತ್ರಗಳನ್ನು ವೈದ್ಯಕ್ಕೆ ಬಳಸುವುದು ಎಲ್ಲ ಪ್ರದೇಶಗಳಲ್ಲೂ ಇದ್ದರೂ ಬಳಸುವ ಪದಾರ್ಥಗಳು ಅಥವಾ ನುಡಿಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಕೆಳಗಿನ ಮಂತ್ರ ಹೇಳಿ ಕಲ್ಲೆಸೆದರೆ ಹಾವು ಕಟ್ಟುಬೀಳುತ್ತದಂತೆ! ಬಜಾರೀ ಬಜ್‌ರೀ ವಜರ್‌ಕಿವಾಡ್ ಬಜ್‌ರೀ ಕಾಲುಂ ಆಸ್‌ಪಾಸ್ ಮಠ್…” ವಂಧ್ಯಾದೋಷ ನಿವಾರಣೆಗೆ, ಸುಖ ಪ್ರಸವಕ್ಕೆ, ಹೊಟ್ಟೆ ನೋವಿಗೆ, ಕಣ್ಣಿನ ನೋವಿಗೆ ಮಂತ್ರಗಳು, ಯಂತ್ರಗಳುಇವೆ. ಇವುಗಳಲ್ಲಿ ಕೆಲವು ಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿಸಿದವು (ಶಾಸ್ತ್ರವಲ್ಲದ ಶಾಸ್ತ್ರ)

೮೨        ೮೯        ೨          ೭
೬          ೩          ೮೬        ೮೫
೮೮        ೮೩        ೮          ೧
೪          ೫          ೮೪        ೮೦

ಇದೆಲ್ಲ ಇದ್ದರೂ ಜಾನಪದರಿಗೆ ತಮ್ಮ ವೈದ್ಯದ ಇತಿಮಿತಿಗಳ ಬಗ್ಗೆ ಗೊತ್ತಿದೆ. ಆದುದರಿಂದಲೇ ‘ತೂತೂ ಮಂತ್ರಂ ತುಮ್ಮಾಕು ಮಂತ್ರಂ’ (ತೂತೂ ಮಂತ್ರ ತುಂಬೆಯೆಲೆ ಮಂತ್ರ) ಕೆಲಸ ಮಾಡುವುದಿಲ್ಲವೆಂದು ಹೇಳುತ್ತಾರೆ. ಆದರೆ ಜಾನಪದದ ಮನಸ್ಸಿನ ಸ್ಥಿತಿಯೊಳಗೆ ಮಂತ್ರ, ತಂತ್ರ, ಯಂತ್ರ, ಎಲೆ, ಬೇರು, ಕಾಯಿ, ಹಣ್ಣುಗಳ ವೈದ್ಯ ಅನಿವಾರ್ಯವೆನಿಸುತ್ತದೆ.

ಮಾಟ, ಮಂತ್ರ, ಮೋಡಿ, ಯಕ್ಷಿಣಿ: ಬರಿ ನಂಬಿಕೆ, ವೈದ್ಯಗಳಿಗಿಂತ ಹೆಚ್ಚು ಭಯವನ್ನು ಮಾನಸಿಕ ವೈಕಲ್ಯವನ್ನು ಬೆರಗುಗಳನ್ನು ಉಂಟುಮಾಡುವುವು ಮಾಟ, ಮಂತ್ರ ಮುಂತಾದವು. ಈ ಶಕ್ತಿಗಳು ಕೆಲವು ಪವಾಡ ಪುರುಷರಲ್ಲಿವೆ ಎಂದು ನಂಬಲಾಗಿದೆ. ಅಂಥವರಿಗೆ ಅತಿಮಾನುಷ ಶಕ್ತಿಗಳು ವಶದಲ್ಲಿರುತ್ತವೆಂಬ ನಂಬಿಕೆಯಿಂದ ಬೇರೆ ವ್ಯಕ್ತಿಗಳಲ್ಲಿ ಪರಿಣಾಮವುಂಟಾಗುತ್ತದೆ. ಭವಿಷ್ಯ ಹೇಳುವುದು ತನ್ನನ್ನು ಅಥವಾ ಬೇರೆಯವರನ್ನು ರೂಪಾಂತರಗೊಳಿಸುವುದು, ಹಾರುವುದು, ಮಾಯವಾಗುವುದು, ಮಾಯವಾಗಿಸುವುದು, ಸೃಷ್ಟಿ ಮಾಡುವುದು, ಪ್ರೀತಿಸಲು, ಫಲನೀಡಲು ಅಥವಾ ಸಾಯಲು ಔಷಧಿಗಳನ್ನು ಮಂತ್ರಗಳನ್ನು ಪ್ರಯೋಗಿಸುವುದು ಪವಾಡ ಪುರುಷರ ಅಥವಾ ಸ್ತ್ರೀಯರ ಕೆಲವು ಶಕ್ತಿಗಳು. ಸಂಬಂಧವಿಲ್ಲದ ಎರಡು ವಸ್ತುಗಳ ಮಧ್ಯೆ ಮಾಟ, ದೆವ್ವ, ಭೂತ ಮುಂತಾದವುಗಳ ಚೇಷ್ಟೆ ಮುಂತಾದುವನ್ನು ಪ್ರಧಾನವಾಗಿ ಮನೋವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಭ್ರಮೆ (illusion), ಸ್ಥಿರಭ್ರಮೆ (hallucination), ವಿರುದ್ಧ ಭಾವನೆ (negativisim), ಸುಳ್ಳು ನಂಬಿಕೆ (delusions) ನಿರಾಶ ಪ್ರವೃತ್ತಿ (Depression) ಮುಂತಾದವೆಲ್ಲ ಮಾನಸಿಕ ಕಾಯಿಲೆಗಳೆಂದು ತಿಳಿಯದೆ ಇದಕ್ಕೆ ಅತಿಮಾನುಷ ನೇಪಥ್ಯವನ್ನು ಕಲ್ಪಿಸಿಕೊಳ್ಳುತ್ತಾರೆ. ಗರ್ಭೋನ್ಮಾದ (Hysteria) ನರದೌರ್ಬಲ್ಯ (neurasthemia) ಮನೋವಿದಲನ (schizophrenia) ಮುಂತಾದುವನ್ನು ಹಿಪ್ನಾಸಿಸ್‌ನಂಥ ಪ್ರಯೋಗಗಳಿಂದ ಶಾಸ್ತ್ರೀಯವಾಗಿ ಗುಣಪಡಿಸಬಹುದು.

ಆಂಧ್ರದ ಮಾಟ, ಮಂತ್ರ ಮುಂತಾದವುಗಳ ಬಗ್ಗೆ ಉಲ್ಲೇಖಗಳು ಅನೇಕ ಶತಮಾನಗಳಿಂದ ಕಂಡುಬರುತ್ತವೆ. ನನ್ನೆಚೋಡನ ‘ಕುಮಾರಸಂಭವ’ದಲ್ಲಿ ಕಾಳಮಾರ್ಗದ ವಾಮಾಚಾರಿಗಳ ಅಸ್ತಿತ್ವವನ್ನು ಸೂಚಿಸಲಾಗಿದೆ. ಅಭಿಚಾರ (ಬಾನಾಮತಿ) ಇಂದ್ರಜಾಲ ಮುಂತಾದವುಗಳನ್ನು ಕುಮಾರ ಸಂಭವ ಹೇಳುತ್ತದೆ. ಶಾಕ್ತೇಯ, ಭೈರವ, ತಂತ್ರ ಮುಂತಾದ ವಾಮಾಚಾರಗಳನ್ನು ಪ್ರೋತ್ಸಾಹಿಸುವ ತಂತ್ರವಿದ್ಯೆ ಪ್ರಚಾರದಲ್ಲಿತ್ತು. ಬಲಿವಿಧಾನಗಳು, ಮಾಟ ಮುಂತಾದುವನ್ನು ಇಂದಿಗೂ ಆಚರಿಸುತ್ತಿದ್ದಾರೆ. ನರಬಲಿಗಳ ಬಗ್ಗೆ ಕೂಡ ಕೆಲವು ಉಲ್ಲೇಖಗಳಿವೆ. ಅಂಥವನ್ನು ಚಂಪುಡುಗುಡಿ (ಕೊಲ್ಲುವ ಗುಡಿ) ಎನ್ನುತ್ತಿದ್ದರು. (‘ಸಿಂಹಾಸನದ್ವಾತ್ರಿಂಶಿಕ’ ಭಾಗ೧ ಪುಟ ೭೮). ಶ್ರೀಶೈಲದಲ್ಲಿ ಭಕ್ತರು ‘ಕನುಮಾರಿ’ ಆಚರಿಸುತ್ತಿದ್ದರು. ಕರ್ಮಾರೀಶ್ವರವೆಂಬ ಪುಣ್ಯಸ್ಥಳ ಶ್ರೀಶೈಲದಲ್ಲಿದೆ. ಅದೊಂದು ಬೆಟ್ಟದ ಕೊನೆ. ಅಲ್ಲಿಂದ ಭಕ್ತರು ಬಿದ್ದು ಆತ್ಮಬಲಿ ಮಾಡಿಕೊಳ್ಳುತ್ತಿದ್ದರು.

ಮಂತ್ರವಿದ್ಯೆ, ತಂತ್ರವಿದ್ಯೆ ಒಂದೇ ನಾಣ್ಯದ ಎರಡು ಮುಖಗಳು. ದೈವ, ದೆವ್ವ ಆದಂತೆ ಮಂತ್ರವೇ ತಾಂತ್ರಿಕನ ಕೈಯಲ್ಲಿ ತಂತ್ರವಾಗುತ್ತದೆ. ಕಣ್‌ಕಟ್ಟು, ಇಂದ್ರಜಾಲ, ಅಭಿಚಾರ, ವಶೀಕರಣ, ಸಮ್ಮೋಹನ ಮುಂತಾದುವು ಇದರ ಭಾಗಗಳು. ಇವುಗಳಲ್ಲಿಕೆಲವು ಸಂವೇದಾನಾತ್ಮಕ ತಂತ್ರವಿದ್ಯೆ (sympathetic magic)ಗಳಾದರೆ ಕೆಲವು ಸಾಂಕ್ರಾಮಿಕ ತಂತ್ರವಿದ್ಯೆ (contagious magic) ಗಳಾಗಿರುತ್ತವೆ. ಅನುಕರಣೆ ಇದರಲ್ಲಿ ಮುಖ್ಯ. ಒಬ್ಬನ ಗೊಂಬೆಯನ್ನು ಮಾಡಿ ಹಿಂಸಿಸಿದರೆ ಆ ವ್ಯಕ್ತಿಗೇ ಅದು ತಟ್ಟುತ್ತದೆಂದು ನಂಬಿಕೆ. ಪುನರಾವೃತ್ತಿ ಇದರ ಇನ್ನೊಂದು ಗುಣ. ಒಬ್ಬರಿಂದ ಇನ್ನೊಬ್ಬರಿಗೆ ಪ್ರಸಾರವಾದಾಗ ನಂಬಿಕೆ ಬಲವಾಗಿ ಅದರಿಂದ ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ.

ಮಾಟ, ಮಂತ್ರ ಮುಂತಾದವುಗಳಿಗೆ ಸಂಬಂಧಿಸಿದಂತೆ ಆಂಧ್ರದಲ್ಲಿ ಪ್ರಚಾರದಲ್ಲಿರುವ ಕೆಲವು ಸಂಪ್ರದಾಯಗಳು, ಪ್ರಯೋಗಗಳು ಈ ರೀತಿಇವೆ. ಕೋಯದೊರ ಮುಂತಾದವರ ಭವಿಷ್ಯ, ಎರುಕರ ಕಣಿ, ಯಾನಾದಿ ಅವರ ರಂಗಂ ಮುಂತಾದವು ಭವಿಷ್ಯಕ್ಕೆ ಸಂಬಂಧಿಸಿದವು. ಗಿಳಿ ಜ್ಯೋತಿಷ್ಯ, ನಾಡೀಜ್ಯೋತಿಷ್ಯ ಹಸ್ತಸಾಮುದ್ರಿಕ ಮುಂತಾದುವೂ ಪ್ರಾಂತೀಯ ಭೇದಗಳೊಂದಿಗೆ ಎಲ್ಲ ಪ್ರದೇಶಗಳಲ್ಲೂ ಇರುವಂಥವು. ವೈಜ್ಞಾನಿಕವಾಗಿ ವಿವೇಚಿಸಲು ಸಾಧ್ಯವಾದರೂ, ಧಾರ್ಮಿಕವಾಗಿ ಅತಿಮಾನುಷ ಶಕ್ತಿಗಳ ಕೈವಾಡವೆಂದು ನಂಬಲಾಗಿರುವ ಪದ್ಧತಿಗಳು, ಆಚರಣೆಗಳು ಹಲವಿದೆ. ಕೊಂಡ ತುಳಿಯುವುದು (ಕೆಂಡದ ಮೇಲೆ ನಡೆಯುವುದು) ನಾಲಗೆಗೆ ಶೂಲ ಚುಚ್ಚಿಕೊಳ್ಳುವುದು (ಬಾಯಿ ಬೀಗ), ತಲೆಯ ಮೇಲೆ ತೆಂಗಿನಕಾಯಿ ಒಡೆಯುವುದು, ಕರ್ಪೂರ ನಾಲಿಗೆಯ ಮೇಲೆ ಉರಿಸುವುದು ಮುಂತಾದುವಿದೆ, ಎಲ್ಲಮ್ಮನ ಜಾತ್ರೆ ಮುಂತಾದುವಲ್ಲಿ ಚೌಡಿಕೆಯ ಸಮ್ಮೋಹಕ ಶಬ್ದದಿಂದ ವಶೀಕರಣಕ್ಕೆ ಒಳಗಾಗುವುದು ಆಂಧ್ರದ ತೆಲಂಗಾಣದಲ್ಲಿ ಸರ್ವೇಸಾಮಾನ್ಯ. ಪ್ರಾಣಿಗಳ ಕೆಲವು ಭಾಗಗಳನ್ನು ಧರಿಸುವುದರಿಂದ ಅವುಗಳ ಗುಣ ಲಭಿಸುತ್ತವೆಂದು ಭಾವಿಸುತ್ತಾರೆ. ಹುಲಿಯ ಉಗುರನ್ನು ಧರಿಸುವುದು ಕರಡಿಯ ಕೂದಲನ್ನು ಮಂತ್ರಿಸಿ ಧರಿಸುವುದು, ಮುಂತಾದುವಿದೆ. ಮತದ ಆಚರಣೆಗಳಲ್ಲಿ ಸೌಮ್ಯತೆ, ಪ್ರೇಮ, ವಿಶ್ವಾಸ ತಕ್ಕಮಟ್ಟಿಗೆ ಕಾಣಿಸುತ್ತದೆ. ಆದರೆ ಜನಪದ ಮೌಢಾಚಾರಗಳಲ್ಲಿ ಭಯ, ಆಶ್ಚರ್ಯ, ಮೂಢನಂಬಿಕೆ ಹೆಚ್ಚಾಗಿರುತ್ತದೆ. ಇದನ್ನು ಮುಖ್ಯವಾಗಿ ಮನೋವಿಶ್ಲೇಷಣಾತ್ಮಕವಾಗಿ ಪರಿಶೀಲಿಸಬೇಕು.

ವೈಜ್ಞಾನಿಕ ಬಗೆ ಮಾನವನ ಮನಸ್ಸಿನ ಒಳಪದರಗಳಿಗೆ ಸಂಬಂಧಿಸಿದ್ದು. ಇದು ಮೌಖಿಕವಾಗಿ ವ್ಯಕ್ತವಾಗಲೇಬೇಕೆಂಬ ನಿಯಮವೇನೂ ಇಲ್ಲ. ನಂಬಿಕೆ ಮಂತ್ರ ಮತ್ತು ಕೆಲವು ವೈದ್ಯ ಪದ್ಧತಿಗಳು ಮೌಖಿಕ ಅಭಿವ್ಯಕ್ತಿಯನ್ನು ಪಡೆದರೂ ಹೆಚ್ಚಿನ ವೈಜ್ಞಾನಿಕ ಬಗೆಗಳು ಪ್ರಾಯೋಗಿಕ ಜಾನಪದಕ್ಕೆ ಸೇರುತ್ತವೆನ್ನಬಹುದು. ಮನೋಸಂಬಂಧವಾದ ವೈಜ್ಞಾನಿಕ ಬಗೆಗಳಿಗೆ ಭಾಷೆಯ ನಂಟು ಹೆಚ್ಚಿಗೆ ಇಲ್ಲದಿರುವುದರಿಂದ ತೆಲುಗಿನ ವೈಜ್ಞಾನಿಕ ಬಗೆಗಳೆಂದು ನಿರ್ದೇಶಿಸಿ ಹೇಳುವುದು ಕೂಡ ಸಾಧ್ಯವಾಗುವುದಿಲ್ಲ. ಹೆಸರುಗಳು ಬದಲಾದರೂ ಪ್ರಯೋಗ, ಬಳಕೆಯಾಗುವ ವಸ್ತುಗಳು ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಮಂತ್ರಗಳಲ್ಲಿ ಬಳಕೆಯಾಗುವ ಭಾಷೆ, ಪ್ರಾದೇಶಿಕವಾಗಿ ವಿಕಾಸಗೊಳ್ಳುವ ನಂಬಿಕೆಗಳು ಪ್ರಾದೇಶಿಕ ದೇವತೆಗಳಿಗೆ ಸಂಬಂಧಿಸಿದ ನಂಬಿಕೆ, ಮಂತ್ರ ತಂತ್ರ ಹಿನ್ನೆಲೆಯಲ್ಲಿ ನೋಡಿದಾಗ ತೆಲುಗರಿಗೆ ಮಾತ್ರ ಸಂಬಂಧಿಸಿದ ಕೆಲವು ವಿಶೇಷ ಬಗೆಗಳನ್ನು ಗುರುತಿಸಬಹುದು. ೧. ದಾನ ಮಾಡುವಾಗ ೧೧೬ ರೂಪಾಯಿ ಅಥವಾ ೧,೧೧೬ ರೂಪಾಯಿ ಕೊಡಬೇಕೆನ್ನುವುದು; ೨. ಎಂಜಲೆಲೆಯಲ್ಲಿ ಮಗುವನ್ನು ಹೊರಳಾಡಿಸಿ ‘ಪುಲ್ಲಯ್ಯ’ ಎಂದು ಹೆಸರಿಡುವುದು; ೩. ಶ್ರೀ ಶೈಲದಲ್ಲಿ ಆತ್ಮಬಲಿ ಜನಾಂಗದ ‘ರಂಗಂ’ ಎಂಬ ಭವಿಷ್ಯ ಹೇಳುವ ವಿಭಾಗಗಳನ್ನು ಕುರಿತಂತೆ ಆಳವಾದ ಅಧ್ಯಯನ ನಡೆಯುತ್ತಿದ್ದರೂ ವೈಜ್ಞಾನಿಕ ಬಗೆಗಳನ್ನು ಶಾಸ್ತ್ರೀಯವಾಗಿ ವಿಶ್ಲೇಷಿಸಬೇಕೆಂಬ ಯೋಚನೆ ಮಾಡದಿರುವುದು ವಿಷಾದಕರ. ಈ ಮಾತು ತೆಲುಗು ಜಾನಪದಕ್ಕೆ ಹೆಚ್ಚು ಅನ್ವಯವಾಗುತ್ತದೆ.

ಆರ್.ವಿ.ಎಸ್.