ತೆಲುಗುನಾಡಿನ ಜನಪದ ವಾದ್ಯಗಳು ಜನಪದ ನೃತ್ಯ, ಸಂಗೀತ, ರೂಪಕ, ಮುಂತಾದ ಪ್ರದರ್ಶನ ಕಲೆಗಳಲ್ಲಿ ಗೀತೆ ಮತ್ತು ವೀರಕಾವ್ಯಗಳಲ್ಲಿ ಹಲವಾರು ವಾದ್ಯಗಳನ್ನು ಜನಪದರು ಬಳಸುತ್ತಾರೆ. ಪ್ರಕೃತಿಯ ಸಂಪನ್ಮೂಲಗಳನ್ನು ಬಳಸಿಕೊಂಡೇ ನಾದವನ್ನು ಸೃಷ್ಟಿಸಿರುವುದು ಈ ವಾದ್ಯಗಳಿಂದ ತಿಳಿಯುತ್ತದೆ. ಹಾಗಾಗಿ ಮಧುರ, ಸರಳ, ಕರ್ಕಶ ಧ್ವನಿಗಳು ಸಹ ಈ ವಾದ್ಯಗಳಿಂದ ಆವಿಷ್ಕಾರವಾಗಿದೆ.

ಗ್ರಾಮೀಣ ಜನರಲ್ಲಿ ಬಳಕೆಯಲ್ಲಿರುವ ವಾದ್ಯಗಳೇ ಜನಪದ ವಾದ್ಯಗಳು. ಲಯಪ್ರಧಾನವಾದ ವಾದ್ಯಗಳಿಂದ ಆನಂದಾನುಭವ ಉಂಟಾಗುತ್ತದೆ. ಅಂತೆಯೇ ನಿರಾಸೆ, ಮರಣ ಮುಂತಾದವುಗಳನ್ನು ವಾದ್ಯಗಳ ಮೂಲಕ ಪ್ರದರ್ಶಿಸಿದಾಗ ಖಿನ್ನರಾಗುತ್ತೇವೆ.

ಜನಪದ ವಾದ್ಯಗಳು ಕಾಲದಿಂದ ಕಾಲಕ್ಕೆ ಆಕಾರ ಮತ್ತು ಪ್ರಯೋಗ ವಿಧಾನಗಳಿಂದ ವಿಕಾಸಗೊಂಡದ್ದನ್ನು ಕಾಣುತ್ತೇವೆ. ಇವುಗಳನ್ನು ಆಕಾರ ಮತ್ತು ನಾದಗುಣಗಳಿಗೆ ಅನುಸಾರವಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಹೀಗಾಗಿ ವಾದ್ಯಗಳಲ್ಲಿ ಚರ್ಮವಾದ್ಯ ತಾಳವಾದ್ಯ, ಗಾಳಿವಾದ್ಯ, ತಂತೀ ವಾದ್ಯ ಎಂದು ನಾಲ್ಕು ವಿಧಗಳಿವೆ.

ಚರ್ಮವಾದ್ಯಗಳಲ್ಲಿ ಢಕ್ಕೆ, ಡಮರುಗಂ, ಡಿವಿಟಿ, ನಗಾರಾ, ಮೃದಂಗಂ, ತಪ್ಪೆಟ, ಡೋಲು, ಉರುಮುಲು ಬುಡುಕುಲು ಮುಂತಾದ ವಾದ್ಯಗಳು ಪ್ರಧಾನವಾದುವು. ಇವುಗಳು ಜೋಡಿಯಾಗಿಯೂ ಅಥವಾ ಒಂಟಿಯಾಗಿಯೂ ಅಥವಾ ದ್ವಿಮುಖವಾಗಿಯೂ ಇರುವುದನ್ನು ನೋಡಬಹುದು. ಇವುಗಳಲ್ಲಿ ದೊಡ್ಡ ವಾದ್ಯವೆಂದರೆ ದೇವಸ್ಥಾನಗಳಲ್ಲಿ ಬಳಸುವ ನಗಾರಾ ಮತ್ತು ಚಿಕ್ಕವಾದ್ಯವೆಂದರೆ ಬುಡುಬುಡಿಕೆ.

03_70A_DBJK-KUH

ಬೇರೆ ಬೇರೆ ವಸ್ತುಗಳ ಮೂಲಕ ಗಾಳಿಯನ್ನೂ ಊದಿ ನುಡಿಸುವ ವಾದ್ಯಗಳನ್ನು ಗಾಳಿವಾದ್ಯಗಳೆಂದು ಕರೆಯುವುದುಂಟು. ಕೋಮ್ಮು, ಪಿಲ್ಲಂಗೋವಿ, ನಾಗಸ್ವರಂ, ಮುಖವೀಣ, ಶಂಖಂ ಮುಂತಾದ ಅನೇಕ ವಾದ್ಯಗಳು ಆಂಧ್ರದಲ್ಲಿ ಬಳಕೆಯಲ್ಲಿವೆ. ಈ ವಾದ್ಯಗಳು ಕೊಳವೆಯ ಆಕಾರದಲ್ಲಿರುತ್ತವೆ. ಪಿಲ್ಲಂಗೋವಿ, ನಾಗಸ್ವರಂ ಬಿದಿರಿನಿಂದ ಮಾಡಲ್ಪಟ್ಟ ಉಸಿರಿನ ವಾದ್ಯಗಳಾದರೆ, ಕೊಮ್ಮು ಮುಂತಾದವುಗಳು ಲೋಹದಿಂದ ಮಾಡಿದ ಉಸಿರಿನ ವಾದ್ಯವಾಗಿದ್ದರೆ ಇನ್ನೂ ‘ಗಟ್ಟಂಗ್ರೋವಿ’, ‘ಅಲಕೋಜ ಅಥವಾ ಮಿಸ್ಕಾ’ ನಾಗಸ್ವರದಂತ ಊದುವಾದ್ಯಗಳು. ‘ತಿತ್ತಿ’ ಎಂಬುವ ಊದು ವಾದ್ಯವೂ ಶ್ರುತಿಗಾಗಿ ಸುತ್ತು ಹೊಲೆದ ಚರ್ಮದ ಚೀಲ. ತಯಾರುಮಾಡಿದ ಶಂಖವನ್ನು ದೇವಸ್ಥಾನಗಳಲ್ಲಿ ಜಂಗಂ ದೇವರಗಳು ತತ್ತ್ವಪದಗಳನ್ನು ಹಾಡುತ್ತಾ ಶಂಖವನ್ನು ಊದುತ್ತಾರೆ.

ತಂತೀ ವಾದ್ಯಗಳಲ್ಲಿ ಜಮುಕುಲು ಅಥವಾ ಜಮಿಡಿಕ, ಕಿನ್ನೆರ, ತಂಬೂರ ಮುಂತಾದವುಗಳು ಪ್ರಮುಖವಾಗಿವೆ. ತೆಲಂಗಾಣ ಪ್ರಾಂತ್ಯದಲ್ಲಿ ‘ಕಡ್ಡೀ’ ವಾದ್ಯವೊಂದಿದೆ. ಇದು ಶಾಸ್ತ್ರೀಯ ಸಂಗೀತದಲ್ಲಿ ಬಳಸುವ ‘ಗೋಟು’ ವಾದ್ಯದಂತೆ ಇರುತ್ತದೆ. ಈ ವಾದ್ಯಗಳನ್ನು ಬೆರಳಿನಿಂದ ನುಡಿಸುತ್ತಾರೆ.

ತಾಳವಾದ್ಯಗಳಲ್ಲಿ ತಾಳಾಳು, ಗಜ್ಜೆಲು, ಮುವ್ವಲು, ಗಂಟ, ‘ಜಯಗಂಟಲು’, ಚಿರುತಲು ಇತ್ಯಾದಿ ಪ್ರಧಾನವಾಗಿವೆ. ದೊಡ್ಡ ಪ್ರಮಾಣದಲ್ಲಿರುವ ‘ತಾಳಾಲು’ಗಳನ್ನು ‘ಬ್ರಹ್ಮತಾಳಾಲು’ ಎಂದು ಕರೆಯುತ್ತಾರೆ. ಇದು ಗೊಲ್ಲರು ‘ಗೊಲ್ಲಸುದ್ದುಲ ಕಥೆಗಳನ್ನು ಹೇಳುವ ಸಂದರ್ಭದಲ್ಲಿ ಬಳಸುತ್ತಾರೆ. ಕೈವರ ಹಬ್ಬಗಳಲ್ಲಿ ‘ರುಂಜ’ ಎಂಬ ವಾದ್ಯದೊಂದಿಗೆ ಈ ವಾದ್ಯವನ್ನು ಬಳಸುತ್ತಾರೆ.

04_70A_DBJK-KUH

ಚರ್ಮ ವಾದ್ಯಗಳಲ್ಲಿ ಒಂದಾದ ಮೃದಂಗ ವಾದ್ಯದಲ್ಲಿ ಪೆದ್ದರಾಮಡೋಲು, ಚಿನ್ನೆರಾಮಡೋಲು ಎಂಬ ಎರಡು ವಾದ್ಯಗಳಿವೆ. ತಪ್ಪೆಟ ಎಂಬ ವಾದ್ಯಕ್ಕೆ ತಮ್ಮೆಟ, ಡಪ್ಪು, ಫಲಕ ಎಂಬ ಹೆಸರುಗಳು ಆಯಾ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ. ಕರ್ನಾಟಕದಲ್ಲಿ ತಮ್ಮಟೆ, ರಮ್ಮಡಿ ಎಂಬ ಹೆಸರಿನಲ್ಲಿ ತಪ್ಪೆಟ ಪ್ರಖ್ಯಾತವಾಗಿದೆ. ಪಂಬ, ರುಂಜ, ಬುರ‍್ರ ಮುಂತಾದ ಚರ್ಮವಾದ್ಯಗಳು ಬಳಕೆಯಲ್ಲಿವೆ. ಇವುಗಳಲ್ಲಿ ಒಂದೇ ಕಡೆ ಚರ್ಮವಿರುತ್ತದೆ. ‘ಪಂಬ’ ವಾದ್ಯವನ್ನು ಆಂಧ್ರದಲ್ಲಿ ‘ಮಾಲದಾಸರುಲು’ ಹೆಚ್ಚಾಗಿ ಬಳಸುತ್ತಾರೆ. ‘ರುಂಜ’ ವಾದ್ಯವು ದೊಡ್ಡದಾದ ವಾದ್ಯ. ಇದನ್ನು ಶೈವರು ಉತ್ಸವಗಳಲ್ಲಿ, ವೀರಭದ್ರ ನೃತ್ಯಕ್ಕೆ ಬಳಸುತ್ತಾರೆ. ಆಂಧ್ರದಲ್ಲಿ ಬಳಕೆಯಲ್ಲಿರುವ ಚರ್ಮ ವಾದ್ಯಗಳಿಗೆ ಸಮಾನವಾಗಿ ಈ ಕೆಳಕಂಡ ವಾದ್ಯಗಳು ಕರ್ನಾಟಕದಲ್ಲಿ ಬಳಕೆಯಲ್ಲಿವೆ.

೧. ಬುಡುಬುಡಿಕೆ (ಕರ್ನಾಟಕ)/ಬುಡುಬುಡುಕಲು (ಆಂಧ್ರಪ್ರದೇಶ್)
೨. ಡಮರುಗ (ಕರ್ನಾಟಕ ಮತ್ತು ಆಂಧ್ರಪ್ರದೇಶ)
೩. ಡಕ್ಕೆ (ಕರ್ನಾಟಕ)/ಗುಮ್ಮಟ (ಆಂಧ್ರಪ್ರದೇಶ)
೪. ಗುಮ್ಮಟೆ (ಕರ್ನಾಟಕ) / ಗೊಮ್ಮಟ (ಆಂಧ್ರಪ್ರದೇಶ)
೫. ತಮ್ಮಟೆ, ದಮ್ಮಡಿ (ಕರ್ನಾಟಕ) / ತಪ್ಪೆಟ, ತಮ್ಮೆಟ, ಡಪ್ಪು, ಪಲಕ (ಆಂಧ್ರಪ್ರದೇಶ)
೬. ನಗಾರಿ (ಕರ್ನಾಟಕ) / ನಗಾರಾ (ಆಂಧ್ರಪ್ರದೇಶ)
೭. ಕನಕ ತಮ್ಮಟೆ (ಕರ್ನಾಟಕ)/ಕನಕ ತಪ್ಪೆಟ, (ಆಂಧ್ರಪ್ರದೇಶ)
೮. ಡೊಳ್ಳು (ಕರ್ನಾಟಕ)/ ಡೋಲು (ಆಂಧ್ರಪ್ರದೇಶ)
೯. ಉರುಮೆ (ಕರ್ನಾಟಕ)/ ಉರುಮುಲು (ಆಂಧ್ರಪ್ರದೇಶ)

ಗಾಳಿವಾದ್ಯಗಳು

೧. ಕೊಂಬು (ಕರ್ನಾಟಕ)/ಕೊಮ್ಮು (ಆಂಧ್ರಪ್ರದೇಶ)
೨. ಕೊಳಲು (ಕರ್ನಾಟಕ)/ ಪಿಲ್ಲನಗ್ರೋವಿ (ಆಂಧ್ರಪ್ರದೇಶ)
೩. ಪುಂಗಿ (ಕರ್ನಾಟಕ)/ನಾಗಸ್ವರಂ (ಆಂಧ್ರಪ್ರದೇಶ)
೪. ಮುಖವೀಣೆ/ಮುಖವೀಣ (ಆಂಧ್ರಪ್ರದೇಶ)

ತಂತೀವಾದ್ಯಗಳು

೧. ಏಕತಾರಿ (ಆಂಧ್ರಪ್ರದೇಶ ಮತ್ತು ಕರ್ನಾಟಕ)
೨. ಚೌಡಿಕೆ (ಕರ್ನಾಟಕ)/ಜಮುಕುಲ, ಜಮಿಡಿಕ (ಆಂಧ್ರಪ್ರದೇಶ)
೩. ಕಿನ್ನರಿ (ಕರ್ನಾಟಕ)/ ಕಿನ್ನೆರ(ಆಂಧ್ರಪ್ರದೇಶ)
೪. ತಂಬೂರಿ (ಕರ್ನಾಟಕ)/ತಂಬೂರ (ಆಂಧ್ರಪ್ರದೇಶ)

ತಾಳವಾದ್ಯಾಲು

೧. ತಾಳ (ಕರ್ನಾಟಕ)/ತಾಳಾಲು (ಆಂಧ್ರಪ್ರದೇಶ)
೨. ಗೆಜ್ಜೆ (ಕರ್ನಾಟಕ)/ ಗಜ್ಜೆಲು (ಆಂಧ್ರಪ್ರದೇಶ)
೩. ಗಂಟೆ (ಕರ್ನಾಟಕ)/ ಗಂಟ (ಆಂಧ್ರಪ್ರದೇಶ)
೪. ಚಿಟಿಗೆ (ಕರ್ನಾಟಕ)/ ಚೆರುತಲು (ಆಂಧ್ರಪ್ರದೇಶ)

ಹೀಗೆ ಆಂಧ್ರಪದೇಶದ ಜನಪದ ವಾದ್ಯಗಳು ವೈವಿಧ್ಯ ಪೂರ್ಣವಾಗಿವೆ ಮತ್ತು ಸಂಖ್ಯೆಯಲ್ಲಿ ಹೇರಳವಾಗಿವೆ. ಬಹುಮಟ್ಟಿನ ಈವಾದ್ಯಗಳು ಧಾರ್ಮಿಕ ಸಂಪ್ರದಾಯಗಳಿಗೆ ಬಳಸುವಂತೆ ಕಂಡುಬರುತ್ತದೆ.

ಜಿ.ಎಸ್.ಎಂ.

 

ತೆಲುಗುನಾಡಿನ ಸುಗಾಲಿ ವಿಶಿಷ್ಟವಾದ ಸಾಂಸ್ಕೃತಿಕ ರೂಪುರೇಷೆಗಳನ್ನು ಹೊಂದಿದ ಒಂದು ಬುಡಕಟ್ಟು ಸಮುದಾಯ ಸುಗಾಲಿ. ಇವರನ್ನು ‘ಲಂಬಾಣಿ’ಗಳೆಂದೂ ‘ಬಂಜಾರ’ರೆಂದು ಕರೆಯುತ್ತಾರೆ. ಅಷ್ಟೇ ಅಲ್ಲದೆ ‘ಬ್ರಿಂಜಾರಿ’, ‘ಸುಕಾಲಿ’, ‘ಬ್ರಂಜರಿ’, ‘ಬೋಯಪೊರಿ’, ‘ಗೋರು ಬಂಜಾರಾಲು’ ಎಂದು ಸಹ ಕರೆಯಲಾಗುತ್ತದೆ. ಕೊಯಂಬತ್ತೂರು, ಆರ್ಕಾಟ್ ಜಿಲ್ಲೆಗಳಲ್ಲಿ, ರಾಯಲ ಸೀಮ ಜಿಲ್ಲೆಗಳಲ್ಲಿ ಇವರನ್ನು ‘ಸುಗಾಲಿ’ ಇಲ್ಲವೆ ‘ಸುಕಾಲಿ’ ಎಂದು ಕರೆಯಲಾಗುತ್ತಿದೆ. ರಾಯಲಸೀಮ ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಅನಂತಪುರ ಜಿಲ್ಲೆಯಲ್ಲಿ ಇವರನ್ನು ‘ಪಾಪಿಡೋಳ್ಳು’ (ಬೈತಲೆಯವರು) ಎಂದೂ ಕರೆಯಲಾಗುತ್ತದೆ. ಬೈತಲೆಯನ್ನು ಚೆನ್ನಾಗಿ ಕಾಣುವಂತೆ ಬಾಚಿಕೊಳ್ಳುವುದರಿಂದ ಇವರಿಗೆ ‘ಪಾಪಿಟೋಳ್ಳು’ (ಪಾಪಿಟ-ಪಾಪಿಡಿ-ಬೈತಲೆ) ‘ಪಾಪಿಡೋಳ್ಳು’ ಎಂಬ ಹೆಸರು ಬಂದಿರಬಹುದು.

ಕರ್ನಾಟಕ, ಹೈದ್ರಾಬಾದ್, ಉತ್ತರ ಪ್ರದೇಶ ಮೊದಲಾದ ಪ್ರಾಂತಗಳಲ್ಲಿ ‘ಬ್ರಿಂಜಾರರು’ ಇಲ್ಲವೆ ‘ಬಂಜಾರರು’ ಎಂಬುದಾಗಿ ಇವರನ್ನು ಕರೆಯಲಾಗುತ್ತದೆ. ಬ್ರಿಂಜಾರಿ, ಬಂಜಾರಿ ಎಂಬ ಹೆಸರುಗಳು ಸಂಸ್ಕೃತ ಭಾಷೆಯಲ್ಲಿಯ ವಾಣಿಜ್ಯ, ‘ಆರಾಜ್’ ಎಂಬ ಪದಗಳಿಂದ ಬಂದಿರಬೇಕೆಂದು ಕೆಲವರ ಅಭಿಪ್ರಾಯ. ‘ಬಂಜಾರ’ ಎಂದರೆ ‘ವನಚರ’ ಎಂದ ಅರ್ಥವೆಂಬ ಅಭಿಪ್ರಾಯವೂ ಸಹ ಇದೆ. ಅಂದರೆ ಕಾಡಿನಲ್ಲಿ ಸಂಚರಿಸುವವರೆಂದು ಅರ್ಥ. ವನಚರ ಶಬ್ದ ಕ್ರಮೇಣ ಬಂಜಾರವಾಗಿದೆ.

ಒರಿಸ್ಸಾ, ಜಯಪೂರ್ ಪ್ರಾಂತಗಳಲ್ಲಿ ಇವರನ್ನು ‘ಬೋಯಪಾರಿ’ ಎಂದು ಕರೆಯಲಾಗುತ್ತದೆ. ಕರ್ನಾಟಕದ ಕೆಲವು ಪ್ರಾಂತಗಳಲ್ಲಿ ಇವರನ್ನು ಲಂಬಾಣಿಗಳು, ಲಮಾಇಗಳು ಎಂದು ಕರೆಯುತ್ತಾರೆ. ಬಹುಶಃ ಲವಣ ಶಬ್ದ ಲಂಬಾಡಿಯ ಎಂಬ ಮಾತು ಲಂಬಾರುನಿಂದ ಹುಟ್ಟಿದೆ. ಲಂಬಾರು ಎಂದರೆ ‘ಉದ್ದನೆಯ’ ಎಂದು ಅರ್ಥ. ಬಹುಶಃ ಈ ಉದ್ದ, ಅವರು ಉಪಯೋಗಿಸುತ್ತಿದ್ದ ಸುದೀರ್ಘವಾದ ಎತ್ತಿನ ಬಂಡಿಗಳ ಸಾಲನ್ನು ಸೂಚಿಸುತ್ತಿರಬಹುದೆಂದು ಒಂದು ಅಭಿಪ್ರಾಯವಿದೆ. ವೃತ್ತಿಪರವಾಗಿ ಲಂಬಾಣಿಗಳು ಲವಣ ವಾಹಕರು ಎಂಬ ಅಭಿಪ್ರಾಯವಿದೆ.

ಇವರು ಸಂಚಾರಿಗಳಾದ್ದರಿಂದ ಇವರನ್ನು ‘ಇಂಡಿಯನ್ ಜಿಪ್ಸಿ’ಗಳೆಂದೂ ಕರೆಯಲಾಗುತ್ತದೆ. ವೆರಿಯರ್ ಎಲ್ಟಿನ್ ಸಹ ಇವರನನ್‌ಉ ಜಿಪ್ಸಿಗಳೆಂದೇ ಕರೆದಿದ್ದಾನೆ. ‘ಲಂಬಾಣಿ’ ಪದ ಕಾಬೂಲ್ ನದಿ ಕಡೆಗಿರುವ ‘ಲಾಂಬುರಿ’ ಎಂಬ ಪ್ರದೇಶದಲ್ಲಿ ವಾಸಿಉತ್ತಿದ್ದುದರಿಂದ ಬಂದಿದೆಯೆಂದು, ಗ್ರೀಕ್ ಭೂಗೋಳಶಾಸ್ತ್ರಜ್ಞ ‘ಟಾಲೆಮಿ’ ಹೇಳಿದ ಹೆಸರುಗಳಲ್ಲಿ ‘ಲಂಬಟಾಯಿ’ ಎಂದ ಪದ ‘ಲಂಬಾಡಿ’ಗೆ ಸಮೀಪ ಪದವೆಂದು, ಆದ್ದರಿಂದ ‘ಲಂಬಬಾಯಿ’ ಎಂಬ ಪದಿಂದಲೇ ‘ಲಂಬಾಡಿ’ ಪದ ಬಂದಿದೆಯೆಂದೂ ವಿದ್ವಾಮಸರ ಅಭಿಪ್ರಾಯ.

ಲಂಬಾಡಿ ಸಮುದಾಯವನ್ನೇ ‘ಲಂಬಾರ್ಡಿ’ ರೂಪದಲ್ಲಿ ಮುಂಬಯಿ, ಗುಜರಾತಿ, ಮುಂತಾದ ಪ್ರಾಂತದ ಅನೇಕ ಭಾಗಗಳಲ್ಲಿ ಕರೆಯಲಾಗುತ್ತದೆ. ಇವರನ್ನೇ ‘ಲಂಬಾನಿ’ ಎಂದು ‘ಲಬ್ಬಾನಿ’ ಎಂದು ಕರೆಯಲಾಗುತ್ತದೆಯಂತೆ. ಆದರೆ ಕೆಲವು ಪ್ರದೇಶಗಳಲ್ಲಿ ‘ಲಬ್ಬಾನಿ’ ಎಂಬ ಹೆಸರು ಬೀರಾರ್ ಪ್ರದೇಶದಲ್ಲಿರುವ ಲಂಬಾಣಿ ಜಾತಿಯಲ್ಲಿಯ ಒಂದು ಉಪಜಾತಿಗೆ ಮಾತ್ರವೇ ಅನ್ವಯಿಸಲಾಗುತ್ತದೆಯೆಂದು ಹೇಳಲಾಗುತ್ತದೆ. ‘ಲಂಬಾ’, ‘ಹಗ್’ ಎಂಬ ಎರಡು ಹಿಂದೂಸ್ಥಾನಿ ಪದಗಳ ಸಮ್ಮೇಳನಕ್ಕೆ ‘ಉದ್ದನೆಯ ಪಾದ’ (ದೀರ್ಘ ಪಯಣ) ಎಂಬ ಅರ್ಥವಿದೆಯಂತೆ. ಮಹಮ್ಮದೀಯ ಆಡಳಿತ ಕಾಲದಿಂದ ಇಂದಿನವರೆಗೂ ಲಂಬಾಣಿಗಳು ಇತರ ಗ್ರಾಮಗಳಿಗೆ ಇಲ್ಲವೆ ಇತರ ರಾಜ್ಯಗಳಿಗೆ ಕಾಲುನಡಿಗೆಯಿಂದ ತಮಗೆ ಬೇಕಾದ ಸಾಮಾನುಗಳನ್ನು ಹೊತ್ತೊಯ್ದು ಜೀವನವನ್ನು ಸಾಗಿಸುತ್ತಿದ್ದರಂತೆ. ಹಾಗಾಗಿ ಲಂಬಾಣಿ ಶಬ್ದಕ್ಕೆ ‘ಉದ್ಧನೆಯ ಪಾದ’ ಎಂಬುದು (ದೀರ್ಘ ಪಯಣ) ಅನ್ವಯಿಸುತ್ತದೆ.

ವಾಲಿ ಸುಗ್ರೀವರಿಂದ ಉದ್ಭವಿಸಿದವರೆಂಬುದಾಗಿ ಹೇಳಿಕೊಳ್ಳು ಲಂಬಾಡಿಗಳು ಕರ್ನಾಟಕದ ಬಳ್ಳಾರಿ, ಹೊಸಪೇಟೆ ಪ್ರಾಂತಗಳಲ್ಲಿದ್ದಾರೆಂದು ಅವರಿಗೆ ‘ಸುಗಾಲಿ’ ಎಂಬ ಹೆಸರೇ ಗೊತ್ತಿಲ್ಲವೆಂದು ತಿಳಿದುಬರುತ್ತದೆ. ಸುಗಾಲಿ, ಇಲ್ಲವೆ ಸುಕಾಲಿ ಎಂಬ ಪದ ಸುಗ್ರೀವ, ವಾಲಿ ಎಂಬ ಪದ ಸಮ್ಮೇಳನಕ್ಕೆ ವಿಕೃತ ರೂಪವಾಗಿರಬಹುದೆಂಬುದಾಗಿ ಒಂದು ಅಭಿಪ್ರಾಯವಿದೆ. ಇವರಲ್ಲಿ ಅಣ್ಣ ಸತ್ತಾಗ ಆತನ ಹೆಂಡತಿಯನ್ನು ತಮ್ಮ ಮದುವೆಯಾಗಬಹುದೆಂದು ತಿಳಿದು ಬರುತ್ತದೆ. ಈ ಮದುವೆಯಿಂದಾಗಿ ತಮ್ಮನಿಗೆ ಹುಟ್ಟಿದ ಮಕ್ಕಳನ್ನು ಅಣ್ಣನ ಮಕ್ಕಳೆಂಬುದಾಗಿಯೇ ಪರಿಗಣಿಸಲಾಗುತ್ತದೆಯೆಂತೆ. ಇಂತಹ ಸಂಪ್ರದಾಯ ಇನ್ನೂ ಅನೇಕ ಬುಡಕಟ್ಟುಗಳಲ್ಲಿಯೂ ಕಂಡು ಬರುತ್ತದೆ.

ಸುಗಾಲಿ, ಸುಕಾಲಿ ಎಂಬ ಹೆಸರುಗಳು ಸುಪಾರಿ ಎಂಬ ಪದದಿಂದ ಬಂದಿರಬಹುದೆಂದು ಕೆಲವರು ಅಭಿಪ್ರಾಯಪಟ್ಟರೆ ಸುಗಾಲಿ ಎಂಬ ಪದ ಸುಗ್ಯಾಲಾ ಎಂದರೆ ಒಳ್ಳೆಯ ಗೋರಕ್ಷಕ ಎಂಬ ಪದದಿಂದ ಬಂದಿರಬಹುದೆಂದು ಇನ್ನು ಕೆಲವರು ಅಭಿಪರಾಯಪಟ್ಟಿದ್ದಾರೆ.

ಸುಗಾಲಿಗಳಿರುವ ಹಳ್ಳಿಗಳನ್ನು ‘ತಾಂಡಾ’ಗಳೆನ್ನುತ್ತಾರೆ. ಒಂದೊಂದು ತಾಂಡಾದಲ್ಲಿ ೧೫ರಿಂದ ೨೦ ಗುಡಿಸಲುಗಳಿರುತ್ತವೆ. ಇವು ತುಂಬಾ ಚಿಕ್ಕದಾಗಿರುತ್ತವೆ. ಪ್ರತಿಯೊಂದು ಹಳ್ಳಿಯ ಸುತ್ತಲು ಬೇಲಿಯನ್ನು ಹಾಕಿಕೊಳ್ಳುತ್ತಾರೆ. ದುಷ್ಟಗ್ರಹಗಳು ತಮ್ಮ ಹಳ್ಳಿಗೆ ಕಾಲಿಡದಂತೆ ತಮ್ಮ ಕುಲದೇವತೆ ಭವಾನಿದೇವಿ ಮಾಡಿದ ಕಟ್ಟುಪಾಡಂತೆ ಅದು. ಹೆಚ್ಚು ಕಡಿಮೆ ಹತ್ತು ವರ್ಷಗಳಿಗೆ ಇಲ್ಲವೆ ಅದಕ್ಕೂ ಕಡಿಮೆ ಅವಧಿಯಲ್ಲಿಯೇ ತಮ್ಮ ತಾಂಡಾಗಳನ್ನು ಹೊಸ ಪ್ರದೇಶಗಳಿಗೆ ಬದಲಿಸುತ್ತಾರೆ. ಮುಖ್ಯವಾಗಿ ಅವರಲ್ಲಿಜಗಳಗಳಾದಾಗ, ಅಂಟು ವ್ಯಾಧಿಗಳು ಪ್ರಬಲಿಸಿದಾಗ, ದುಷ್ಟಗ್ರಹಗಳು ಓಡಾಡುತ್ತಿವೆಯೆಂಬ ಅನುಮಾನ ಬಂದಾಗ ಹೀಗೆ ತಾಂಡಾಗಳನ್ನು ಸ್ಥಳಾಂತರಿಸುವುದು ಅವರ ಸಾಮಾಜಿಕ ಜೀವನದಲ್ಲಿ ರೂಢಿಯಲ್ಲಿದೆ.

ಕೆಲವು ಕುಟುಂಬಗಳು ಸೇರಿ ‘ತಾಂಡಾ’ಗಳಾಗಿ ಏರ್ಪಡುತ್ತವೆ. ಕುಟುಂಬದಲ್ಲಿ ಬಂಧುತ್ವವನ್ನು ಪುರುಷನ ಕಡೆಯಿಂದ ನಿಶ್ಚಯಿಸುತ್ತಾರೆ. ಇಂತಹ ಕುಟುಂಬಗಳೆಲ್ಲ ಸೇರಿ ಒಂದು ಗೋತ್ರವಾಗುತ್ತದೆ. ಕೆಲವು ಗೋತ್ರಗಳು ಸೇರಿ ಒಂದು ತಾಂಡಾವಾಗಿ ಏರ್ಪಡಬಹುದು. ಯಾವ ಗೋತ್ರವೂ ಇಲ್ಲದೆ ಇವರಲ್ಲಿ ಐದು ಉಪಜಾತಿಗಳು ಕಂಡುಬರುತ್ತವೆ. ಅವು ‘ರಸಪುತ್ರರು’, ‘ಭಟ್ಲು’, ‘ಭೂರ‍್ಯಾಲು’, ‘ಧಾನಿಯಾಲು’, ‘ನಾವಾಲು’, ಇವರಷ್ಟೇ ಅಲ್ಲದೆ ‘ಜಂಗಾರು’ ಎಂಬ ಇನ್ನೊಂದು ಉಪಜಾತಿಯೂ ಸಹ ಇದೆ. ಇವರಿಗೆ ಸಮಾಜದಲ್ಲಿ ಎಂತಹ ಸ್ಥಾನವೂ ಇಲ್ಲ. ಪೂರ್ವಕಾಲದಲ್ಲಿ ವ್ಯಾಪಾರ ಮಾಡುವಾಗ ಲಂಬಾಡಿಗಳು ಮಕ್ಕಳನ್ನು ಹೊತ್ತುಕೊಂಡು ಹೋಗಿ ತಮ್ಮ ಜಾತಿಯಲ್ಲಿ ಸೇರಿಸಿಕೊಳ್ಳುತ್ತಿದ್ದರು. ಹೀಗೆ ಹೊರಗಿನಿಂದ ಸೇರಿಸಿಕೊಂಡವರೇ ‘ಜಂಗಾರ‍್ಲು’,

ಪ್ರತಿಯೊಂದು ತಾಂಡಾಕ್ಕೂ ನಾಯಕನಿರುತ್ತಾನೆ. ತಾಂಡಾದಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರದ ಮೇಲೆಯೂ ಈತನದೇ ಅಧಿಕಾರ. ಕುಲದಲ್ಲಿ ಯಾರಾದರೂ ತಪ್ಪು ಮಾಡಿದರೆ ಈ ನಾಯಕ ಪಂಚಾಯಿತಿದಾರರ ಸಹಾಯದಿಂದ ವಿಚಾರಣೆ ಮಾಡಿ ಶಿಕ್ಷಿಸುತ್ತಾನೆ. ನಾಯಕನಿಗೆ ಸಹಾಯಕನಾಗಿ ಮತ್ತೊಬ್ಬನಿರುತ್ತಾನೆ. ಈತನನ್ನು ‘ಕಾರ್ಯಭಾರಿ’ ಎನ್ನುತ್ತಾರೆ. ಇವರಿಬ್ಬರಷ್ಟೇ ಅಲ್ಲದೆ ‘ನಿಂಬುಕಟ್ನಲ್’, ‘ಜಂತ’ ಎಂಬ ಇಬ್ಬರು ಮತಾಧಿಕಾರಿಗಳು ಸಹ ಇರುತ್ತಾರೆ. ನಾಯಕನ ಪಟ್ಟ ವಂಶ ಪಾರಂಪರ್ಯ.

ಲಂಬಾಡಿಗಳಲ್ಲಿ ಮದುವೆಯೆಂಬದು ಒಂದು ಸಾಮಾಜಿಕ ಅನಿವಾರ್ಯತೆ. ಸಗೋತ್ರಿಕರಲ್ಲಿ ಮದುವೆಯಾಗುವುದಿಲ್ಲ. ಸಾಮಾನ್ಯವಾಗಿ ಗಂಡಸು ಇಬ್ಬರು ಹೆಂಗಸರನ್ನು ಮದುವೆಮಾಡಿಕೊಳ್ಳಬಹುದು. ಇಬ್ಬರು ಸೋದರರು ಅಕ್ಕತಂಗಿಯರನ್ನು ಮದುವೆಮಾಡಿಕೊಳ್ಳಬಹುದು. ಗಂಡ ಸತ್ತರೆ ಆತನ ತಮ್ಮನನ್ನು ಮರುಮದುವೆ ಮಾಡಿಕೊಳ್ಳುವುದು ಮರ್ಯಾದಿತ ಸಂಪ್ರದಾಯ. ಇವರಲ್ಲಿ ವಿವಾಹ ವಿಚ್ಛೇದನವೂ ಉಂಟು. ಬ್ರಹ್ಮಚಾರಿಗಳು ವಿಧವೆಯರನ್ನು ಮದುವೆ ಮಾಡಿಕೊಳ್ಳಬಾರದಂತೆ.

ಮಕ್ಕಳು ಹುಟ್ಟಿದಾಗ ‘ಜಾನಿಕೇ’ ಎಂಬ ಪದ್ದತಿಯನ್ನು ಆಚರಿಸುತ್ತಾರೆ. ಬಾಣಂತಿಗೆ ಸ್ನಾನ ಮಾಡಿಸಿದೊಡನೆ ಬೆಲ್ಲ, ಲವಂಗ, ಮೆಣಸುಗಳನ್ನು ಅರೆದು ಆಕಳ ತುಪ್ಪದಲ್ಲಿ ಕಲಸಿ ಬಾಣಂತಿಗೆ ತಿನಿಸುತ್ತಾರೆ.

ಅವಿವಾಹಿತನು ಅಂಟು ರೋಗದಿಂದ ಮರಣಿಸಿದರೆ ಹೂಳುತ್ತಾರೆ. ಉಳಿದವರನ್ನು ಸುಡುತ್ತಾರೆ. ಈ ಸಂದರ್ಭದಲ್ಲಿ ಮೂರನೆಯ ದಿನ, ಐದನೆಯ ದಿನ ‘ನಾನಕಿಡಾಡೋ’ ‘ಮೋಟಡಾಡೋ’ ಎಂಬ ಎರಡು ಕರ್ಮಗಳನ್ನು ಮಾಡುತ್ತಾರೆ.

ಇವರು ಬಾಲಾಜಿ, ಭವಾನಿ,ಮರಿಯಾಲ ಮಾಡಿ, ಪೋತಿಕಗಮ್ಮರನ್ನು ಆರಾಧಿಸುತ್ತಾರೆ. ಈ ದೇವತೆಗಳಿಗೆ ಗುಡಿಗಳನ್ನು ಕಟ್ಟಿಸುತ್ತಾರೆ. ಬೇಡಿಕೆಗಳನ್ನು ಪೂರೈಸುತ್ತಾರೆ. ಪ್ರಾಚೀನ ಕಾಲದಲ್ಲಿ ದುರ್ಗಇ ಮೊದಲಾದ ದೇವತೆಗಳಿಗೆ ನರಬಲಿಯನ್ನು ಸಹ ಕೊಡುತ್ತಿದ್ದರು.

ಯಂತ್ರ, ತಂತ್ರ, ಮಂತ್ರಗಳಲ್ಲಿ ಲಂಬಾಣಿಗಳಿಗೆ ತುಂಬಾ ನಂಬಿಕೆ. ಇವುಗಳಿಂದ ರೋಗಗಳು ವಾಸಿಯಾಗುತ್ತವೆಯೆಂಬ ನಂಬುತ್ತಾರೆ. ಇವರಲ್ಲಿ ‘ಭಗಲ್’ ಎಂಬ ಭೂತವೈದ್ಯನಿರುತ್ತಾನೆ. ಈತನ ಪ್ರಭಾವದಿಂದಾಗಿ ದುಷ್ಟಶಕ್ತಿಗಳು ಹತ್ತಿರಕ್ಕೆ ಬರುವುದಿಲ್ಲವೆಂಬುದಾಗಿ ನಂಬುತ್ತಾರೆ.

ಲಂಬಾಣಿ ಹೆಂಗಸರು ಇತರ ಬುಡಕಟ್ಟು ಸಮುದಾಯಕ್ಕೆ ಸೇರಿದ ಹೆಂಗಸರು ಹಾಕಿಸಿಕೊಳ್ಳುವಂತೆಯೇ ಮುಖ, ಎದೆ, ಕೈ, ಕಾಲುಗಳಿಗೆ ಮೂಗಿನ ಮೇಲೆ, ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ.

ಪುನರ್ಜನ್ಮದಲ್ಲಿ ನಂಬಿಕೆಯಿದ್ದದ್ದು ಕಂಡು ಬರುತ್ತದೆ. ಕನಸುಗಳ ಮೇಲೆ ಅವುಗಳ ಫಲಿತಗಳ ಮೇಲೆ ನಂಬಿಕೆಯಿದೆ. ಯಾವುದನ್ನು ತಾವು ಅನುಭವಿಸಬೇಕಾಗುತ್ತದೆಯೋ ಅದು ಕನಸಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆಯೆಂದು ನಂಬುತ್ತಾರೆ.

ಸುಗಾಲಿಗಳು ಇಲ್ಲವೆ ಲಂಬಾಡಿಗಳು ಆಂಧ್ರಪ್ರದೇಶದ ತುಂಬಾ ವ್ಯಾಪಿಸಿಕೊಂಡಿದ್ದಾರೆ. ಇವರ ಪ್ರಧಾನ ವೃತ್ತಿ ಪಶುಪಾಲನೆ. ಕಾಲಕ್ರಮೇಣ ಇವರು ವ್ಯವಸಾಯವನ್ನು ಪ್ರಧಾನವೃತ್ತಿಯನ್ನಾಗಿ ಮಾಡಿಕೊಂಡು ಪಶುಪಾಲನೆ ಅನುಬಂಧ ವೃತ್ತಿಯನ್ನಾಗಿ ಮಾಡಿಕೊಂಡಿರುವುದು ಕಂಡುಬರುತ್ತದೆ. ಆಂಧ್ರಪ್ರದೇಶದ ಲಂಬಾಣಿಗಳು ಅವರದೇ ಆದ ಭಾಷೆಯನ್ನು ಮಾತನಾಡುತ್ತಾರೆ.

ಜಿ.ಎಸ್.ಎಂ.ಅನುವಾದ ಕೆ.ಎಸ್.

 

ತೆಲುಗು ಮಹಿಳೆಯರ ಸಂಪ್ರದಾಯದ ಹಾಡುಗಳು ಸಾಂಸಾರಿಕ ಜೀವನವು ಒಂದು ನಾಟಕರಂಗ. ಇದರಲ್ಲಿ ಸ್ತ್ರೀಪುರುಷರು ಪ್ರಧಾನ ಪಾತ್ರಗಳು. ಇವರೇ ಸತಿಪತಿಗಳು . ಆ ಸತಿಪತಿಯರ ಸಂತಾನ, ಅವರ ಬಂಧು ಮಿತ್ರಾದಿಗಳು ಉಪಪಾತ್ರಗಳು. ಇವರು ಅಪ್ರಧಾನ ಪಾತ್ರರು. ಪಾತ್ರಗಳಲ್ಲಿ ಲೀನವಾಗಿ ತಾದಾತ್ಮ್ಯವನ್ನು ಹೊಂದುವ ಸಹಜಾಭಿನಯ ನಿಜವಾಗಿ ಒಬ್ಬ ಸ್ತ್ರೀ ಮೂರ್ತಿಗೇ ಸೇರಿದೆಯೆಂದು ಹೇಳುವಲ್ಲಿ ಸಂದೇಹವಿಲ್ಲ. ಆದುದರಿಂದಲೆ ಆಕೆ ತನ್ನ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿಕೊಳ್ಳುವಲ್ಲಿ ಸಮರ್ಥಳಾಗಿ ಕಾಣಿಸಿಕೊಳ್ಳುವಳು. ತಾಯಿ-ಮಗಳು, ಅತ್ತೆ-ಸೊಸೆ-ಸೋದರ-ಹೆಣ್ಣು ಮಗಳು, ಅತ್ತಿಗೆ-ನಾದಿನಿ ಇತ್ಯಾದಿ ಬಂಧುತ್ವ ಶಬ್ದಗಳಿಂದ ಕರೆಸಿಕೊಂಡು ತನ್ನ ಪಾತ್ರಕ್ಕೆ ನ್ಯಾಯವನ್ನು, ಸಂಘದಲ್ಲಿ ಸ್ತ್ರೀ ತನ್ನ ಸ್ಥಾನವನ್ನು ನಿಲ್ಲಿಸಿಕೊಂಡಿರುವುದು ಕಂಡುಬರುತ್ತದೆ.

ಸ್ತ್ರೀ ಜೀವನ ಚಕ್ರದಲ್ಲಿ ನಾಲ್ಕು ಘಟ್ಟಗಳನ್ನು ನೋಡಬಹುದು. ಮೊದಲು ಮಾತೃಮೂರ್ತಿ ಹಾಡು ಲಾಲಿ ಜೋಗುಳದ ಹಾಡುಗಳನ್ನು ಕೇಳಿ ಆನಂದ ಹೊಂದುವ ಆಕೆಯ ಶೈವಸ್ಥಿತ; ಎರಡನೆಯದು ಆಕೆಯ ಪ್ರಾಯ. ಮೂರನೆಯದು ಅತಿ ಪ್ರಧಾನ ಘಟ್ಟ. ಅದೆಂದರೆ ವಿವಾಹ. ನಾಲ್ಕನೆಯದು ಮಾತೃತ್ವ.

ಮಕ್ಕಳು ದೇವರ ಸಮಾನ. ಪುತ್ರನಾದರೆ ರಾಮನಂತೆಯೋ, ಕೃಷ್ಣನಂತೆಯೋ ಭಾವಿಸಿ ತಾಯಿ ಲಾಲಿ ಲಾಲಿ ಹಾಡುಗಳನ್ನು ಹಾಡುಗಳನ್ನು ಹಾಡುವಳು. ಜೋಗುಟ್ಟುವ ಜೋಗುಳ ಹಾಡುಗಳನ್ನು ಹಾಡುವಳು. ಮಗಳಾದರೆ ಸೀತ ಶಕುಂತಲಾ ಇತ್ಯಾದಿ ಪುರಾಣ ಸ್ತ್ರೀಯಂತೆ ಭಾವಿಸಿ ಲಾಲಿ-ಜೋಗುಳದ ಹಾಡುಗಳನ್ನು ಹಾಡುವಳು. ಲಾಲಿ ಜೋಗುಳದ ಹಾಡುಗಳಲ್ಲಿ ಭಾವಕ್ಕಿಂತಲೂ ಲಯಕ್ಕೆ ರಾಗಕ್ಕೆ ಅತ್ಯಧಿಕ ಪ್ರಾಧಾನ್ಯ ಇರುವುದರಿಂದಲೇ ಶಿಶುಗಳಿಗೆ ಶೃತಿ ಶ್ರಾವ್ಯವಾಗಿದ್ದು ರಸಾನುಭವವನ್ನುಂಟು ಮಾಡುವುದು.

ಈ ಕೆಳಗಿನ ಹಾಡನ್ನು ಗಮನಿಸಿರಿ:

”ಊರು ಮಂಚಿದಮ್ಮ ಉಭಯ ಕಾವೇರೀ
ವಾಡ ಮಂಚಿದಮ್ಮ ವೈಷ್ಣವುಲವಾಡ
ಅಪ್ಪ ಮಂಚಿವಾಡು ಶ್ರೀ ವೆಂಕಟ್ರಮಣಾ
ಅಮ್ಮ ಮಂಚಿದಮ್ಮ ಅಲುಮೇಲುಮಂಗಾ

|| ಚಿಚ್ಚೊಳಲಲಹಾಯಿ ||

ಶ್ರುತಿ ಸುಭಗವಾದ ಈ ಹಾಡು ಒಂದು ಚಿಕ್ಕ ಮಗುವೇ ಅಲ್ಲ, ದೊಡ್ಡವರನ್ನು ಸಹಿತ ಜೋಲಿಯಲ್ಲಿ ಹಾಕಿ ತೂಗಿದಂತೆ. ತನ್ಮಯತೆಯನ್ನು ಹೊಂದುವಂತೆ ಮಾಡುತ್ತದೆ. ನಾಲ್ಕು ಸಾಲುಗಳಲ್ಲಿ ಸಾಗುವ ಇಂತಹ ಲಾಲಿ ಹಾಡುಗಳು ಸ್ತ್ರೀಯರ ಸಾರಸ್ವತ ಸಾಗರದಲ್ಲಿ ಅನೇಕ.

ಬಾಲೆಯರಲ್ಲಿ ಯೌವನವು ಅಂಕುರಿಸಿ ವಿವಾಹಾದಿ ಸಮಸ್ತ ವಿಷಯಗಳೆಲ್ಲಕ್ಕೂ ಆಕೆ ಸಮರ್ಥಳಾಗುವಂತೆ ಮಾಡುವುದು ನೆರೆಯುವಿಕೆ (ಸಮರ್ಥ). ‘ಸಮರ್ತ’ ಒಂದು ಪದ್ಧತಿ. ಈ ಪದ್ಧತಿಯನ್ನು ಅವರವರ ಶಕ್ತ್ಯಾನುಸಾರವಾಗಿ ಮೂರು ದಿನ ಮೊದಲುಗೊಂಡು ಒಂಬತ್ತು ಇಲ್ಲವೇ ಹದಿನಾರು ದಿನಗಳವರೆಗೆ ಜರುಗಿಸುವುದು ಬಳಕೆಯಲ್ಲಿದೆ. ಸಮರ್ತಪದ್ಧತಿಗಳ ಸಮಯದಲ್ಲಿ ಮುತ್ತೈದೆಯರನ್ನು ಆರತಿಗೆ ಕರೆದು ಹಾಡುಗಳನ್ನು ಹಾಡಿಸುವರು. ಈ ಹಾಡುಗಳಲ್ಲಿ ಪದ್ಧತಿಗಳು, ಆಚಾರ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯವೇ ಅಲ್ಲದೆ ಋತುಮತಿಯಾದ ಬಾಲಕಿಗೆ ಸಂಬಂಧಿಸಿದ ಶುಭಾಶುಭ ವಾರಗಳನ್ನು ತಿಳಿಸುವ ಹಾಡುಗಳು ಇಲ್ಲದೇ ಇಲ್ಲ-ಉದಾ.ಗೆ:

”ಅಲ್ಲೋ ನೇರೇಡಲ್ಲೋ ವೆಲದಿ ರುಕ್ಮಿಣಿ ಸಮರ್ತವೇಡೂಕಲಾಯ
ಅಲ್ಲೋ ನೇರೇಡಲ್ಲೋ ಆದಿವಾರಮುನಾಡು ಅತಿರೋಗಿಯೌನು
ಅಲ್ಲೋ ನೇರೇಡಲ್ಲೋ ಸೋಮವಾರಮುನಾಡು ಶುಭತಿಪತಿವ್ರತ
ಅಲ್ಲೋ ನೇರೇಡಲ್ಲೋ ಮಂಗಳವಾರಮುನಾಡು ಮತಿಮಂತುರಾಲು
ಅಲ್ಲೋ ನೇರೇಡಲ್ಲೋ ಬುಧವಾರಮುನಾಡು ಬುದ್ಧಿ ಮತಿಯೌನು
ಅಲ್ಲೋ ನೇರೇಡಲ್ಲೋ ಬೇಸ್ತ ವಾರಮುನಾಡು ಪುತ್ರವತಿಯಗುನು
ಅಲ್ಲೋ ನೇರೇಡಲ್ಲೋ ಶುಕ್ರವಾರಮುನಾಡು ಶುಭತಿ ಸಂಪತಿ ಕಲಿಗಿಯುಂಡು
ಅಲ್ಲೋ ನೇರೇಡಲ್ಲೋ ಶನಿವಾರಮುನಾಡು ಸತಿ ಪೇದರಾಲು
|| ಅಲ್ಲೋ || ೨

ಈ ಹಾಡಿನಲ್ಲಿ ಋತುಮತಿಯಾದ ಬಾಲೆ ರುಕ್ಮಿಣಿಗೆ ಹೋಲಿಸಲ್ಪಟ್ಟಿದ್ದಾಳೆ.

ಷೋಡಶ ಸಂಸ್ಕಾರಗಳಲ್ಲಿ ಒಂದಾದ ವಿವಾಹವು ಕನ್ಯೆಯ ಜೀವನವ್ನೇ ಬದಲಾಯಿಸುವುದು. ಭಾವೀಪತಿ ಹುಡುಗನಾದರೂ, ಮುದುಕನಾದರೂ, ವಿದ್ಯಾವಂತನಾದರೂ, ಅವಿದ್ಯಾವಂತನಾದರೂ, ಧನಿಕನಾದರೂ, ದರಿದ್ರನಾದರೂ ಸರಿ ಪವಿತ್ರವಾದ ವಿವಾಹ ಬಂಧಕ್ಕೆ ಪ್ರಾಧನ್ಯ ಕೊಟ್ಟು ತನ್ನ ಸಂಸಾರವನ್ನು ಮೂರು ಹೂವು, ಆರು ಕಾಯಿಗಳಂತೆ ಸಹಿಸಿಕೊಳ್ಳುವುದಕ್ಕೆ ಸ್ತ್ರೀಯು ಪ್ರಯತ್ನಿಸುತ್ತಾಳೆ. ಸ್ತ್ರೀಯರಿಗೆ ವಿವಾಹ ಸಂದರ್ಭವು ಆನಂದವನ್ನೂ ವಿನೋದವನ್ನೂ ತಂದು ಕೊಡುವುದೇ ಅಲ್ಲದೆ ವೈವಾಹಿಕ ಆಚಾರಗಳನ್ನು ಚೊಕ್ಕವಾಗಿ ನಿರ್ವಹಿಸುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ವಿವಾಹ ಸಂದರ್ಭದ ಪ್ರತಿಘಟ್ಟಕ್ಕೆ ಹಾಡುಗಳನ್ನು ಹಾಡಿ ವಿವಾಹ ಪ್ರಾಧಾನ್ಯವನ್ನು ಎತ್ತಿ ತೋರಿಸುವುದು ‘ಮದುವೆ ಹಾಡು’ಗಳಲ್ಲಿ ಕಾಣಿಸುತ್ತದೆ. ಎದುರುಗೊಳ್ಳುವ ಹಾಡುಗಳು ಮೊದಲುಗೊಂಡು ಶೋಭಾನೆ ಹಾಡುಗಳವರೆಗೆ ಸ್ತ್ರೀಯರು ಹಾಡುಗಳಲ್ಲಿ ತಮಗೆ ಇರುವ ಆಸಕ್ತಿಯನ್ನು ತೋರಿಸುವರು. ವಿವಾಹಾದಿ ಕಾರ್ಯಗಳಲ್ಲಿ ಸ್ತ್ರೀಯರದೇ ಮೇಲುಗೈ ಎಂದು ಹೇಳಲು ಮದುವೆ ಹಾಡುಗಳೇ ನಿದರ್ಶನ.

ಜರಿಯುವ ಪದಗಳು ಬಿಟ್ಟು ಮಿಕ್ಕ ಎಲ್ಲವನ್ನೂ ಭಗವಂತನ ಪರವಾಗಿ ಹಾಡಲಾಗುವುದು. ಇದಕ್ಕೆ ಕಾರಣ ಇಲ್ಲದಿಲ್ಲ. ಈ ಹಾಡುಗಳಲ್ಲಿ ಹಾಸ್ಯವು ಪ್ರಧಾನವಾಗಿ ಇರುವುದರಿಂದ ಭಗವಂತನಲ್ಲಿ ಲೋಪವನ್ನು ಎತ್ತಿ ಹಿಡಿಯುವುದೆಂದು ನೇರವಾಗಿ ಭಾವಿಸುವರು. ಜರಿಯುವ ಪದಗಳು ಸೂಕ್ಷ್ಮವಾಗಿದ್ದು ಬೀಗರ ಹೃದಯಗಳಲ್ಲಿ ನೇರವಾಗಿ ತೂರಿಕೊಂಡು ಹೋಗುವ ಭಾವಗಳನ್ನು, ಸ್ವಭಾವಗಳನ್ನು ತಿಳಿಸುತ್ತವೆ. ವಿವಾಹ ಸಮಯವು ಒಬ್ಬೊಬ್ಬರದಲ್ಲವಲ್ಲ. ವಧೂವರರ ಪಕ್ಷಗಳೆರಡಕ್ಕೂ ಸೇರಿದಂತಹವು. ಎದುರು ಪಕ್ಷದವರನ್ನು ಪರಸ್ಪರ ಅರ್ಥ ಮಾಡಿಕೊಂಡು ಸಖ್ಯತೆಯಿಂದ ಇರುವುದಕ್ಕೆ ಇಂಥ ಹಾಡುಗಳು ಹೊರ ಬಂದಿರಬಹುದು.

ಸ್ತ್ರೀಯರ ಸಾರಸತ್ವದ ಕರುಣರಸ ಭರತವಾದ ಹಾಡುಗಳು ಹೆಣ್ಣು ಒಪ್ಪಿಸುವ ಹಾಡುಗಳು. ಹೆಣ್ಣೊಪ್ಪಿಸುವ ಸಂದರ್ಭ ಹಡೆದ ತಂದೆ ತಾಯಿಯವರಿಗೆ ಕರುಣೆಯ ಸನ್ನಿವೇಶ. ಈ ಸಮಯದಲ್ಲಿ ಅವರು ಪಡುವ ವೇದನೆ ಅಷ್ಟಿಷ್ಟಲ್ಲ. ಆಕಾಶದಲ್ಲಿ ದಾರಿ ತಿಳಿದು ತಿಳಿಯದೆ ಹಾರಾಡುವ ಪಕ್ಷಿಗೆ ವಧುವನ್ನು ಹೋಲಿಸಬಹುದು. ಆದ್ದರಿಂದಲೇ ಮನೆದುಂಬಿಸುವಿಕೆ ಅಷ್ಟೊಂದು ಪ್ರಾಧಾನ್ಯ. ಮನೆದುಂಬಿಸುವಿಕೆಯ ಸಮಯದಲ್ಲಿ ಪತಿಗೆ, ಅತ್ತೆ ಮಾವಂದಿರಿಗೆ, ಹೆಣ್ಣನ್ನು ಒಪ್ಪಿಸುತ್ತಾ ಹೆಣ್ಣು ಮಕ್ಕಳಿಗೆ ಬುದ್ಧಿಮಾತನ್ನು ಹೇಳುವುದು ಒಬ್ಬ ವಧುವಿಗೇ ಅಲ್ಲ. ವಿವಾಹವಾಗುವ ಕನ್ಯೆಯರೆಲ್ಲರಿಗೂ ಕಣ್ಣು ಬಿಚ್ಚಿಸುವಂತಹುದು. ಅಂದರೆ ವಿವಾಹವಾಗುವ ಕನ್ಯೆ ಒಂದು ದಿನ ಒಬ್ಬ ಹುಡುಗ ಕೈಯಲ್ಲಿ ಇಡಲ್ಪಡುವಳೆಂದು ವಧುವಿಗೆ ಹೇಳಬೇಕಾಗುವ ಬುದ್ಧಿ ಮಾತುಗಳನ್ನು ಹೇಳಿ, ಈ ದಿನದಂದೇ ಆಕೆ ಕೂಡ ಹಾಗೆ ನಡೆದುಕೊಳ್ಳಬೇಕೆಂಬುದು ಸಂದೇಶ.

ಒಂದು ಹೆಣ್ಣೊಪ್ಪಿಸುವ ಹಾಡು:

ಅಮ್ಮಾ ನೀನು ಬಂಪನಾ ಅತ್ತ ವಾರಿಂಟಿಕೆ
ಏತೀರು ಉಂಡೆಕಿದವೋ ಏಮಿತೋಚದೆ ತಲ್ಲಿ’
||ಅಮ್ಮಾ||

ಕರುಣರಸಭರತಿವಾದ ಈ ಚರಣಗಳು ಹೆತ್ತ ಮಮಕಾರಕ್ಕೆ ಉದಾರಣೆಗಳಾದ ಕಣ್ಣೀರಿನ ಅಲೆಗಳು, ಹೆತ್ತ ಮಗಳನ್ನು ಅಗಲಲಾರದೆ ಆ ಮಾತೃಹೃದಯದಿಂದ ಹೊರಬಂದಿರುವ ಕಣ್ಣೀರಿನ ಪ್ರವಾಹ. ಬಾಳಕನಾದರೆ ತನ್ನ ಮನೆಯಲ್ಲಿ ಇದ್ದು ಮಾತೃ ಮಮತೆಯನ್ನು ಹಂಚಿಕೊಳ್ಳುತ್ತಿದ್ದನೆಂದು ಬಾಲಕಿಯಾದ್ದರಿಂದ ಆಕೆಯನ್ನು ಬೇರೆಯವರಿಗೆ ಕೊಡುವುದು ತಪ್ಪುವುದಿಲ್ಲವೆಂದೂ, ತಾಯಿ ಮಗಳ ಮಧ್ಯೆ ಪ್ರೇಮಾನುರಾಗಗಳು ಕಡಿಮೆಯಾಗುವುದೆಂದು ಆಕೆಯ ಭಾವನೆ. ಆ ಅನುಬಂಧವು ಇಂಥಹದು. ಆದ್ದರಿಂದಲೆ ಬಾಲಕಿಯನ್ನು ಸೃಷ್ಟಿಸಿದ ಬ್ರಹ್ಮನಿಗೆ ಸಹಿತ ಅಪವಾದ ಬರುವುದು ತಪ್ಪುವುದಿಲ್ಲ.

ಗರ್ಭಿಣಿಯ ಪರಿಣಾಮ ಚಿಹ್ನೆಗಳನ್ನು ಹಾಡಿನಲ್ಲಿ ಜೊತೆಮಾಡಿ, ಕೇಳುವವರಿಗೆ ಉತ್ಸುಕತೆಯನ್ನು ಹೆಚ್ಚಿಸುವುದೇ ಅಲ್ಲದೆ, ವಿಜಞಾನ ವಿಷಯಗಳನ್ನು ಸಹಿತ ಬಯಲುಪಡಿಸುವುದು ಸ್ತ್ರೀ ಹಾಡುಗಳಲ್ಲಿ ಕಾಣಿಸುವ ಪ್ರಧಾನ ಅಂಶ. ಗರ್ಭವು ಧರಿಸುವುದು ಅಂದರೆ ತಿಂಗಳು ತಪ್ಪಿದೆ ಎಂದು ಅರ್ಥವು. ಸ್ತ್ರೀ ಗರ್ಭವು ೫ನೇ ಅಥವಾ ೭ನೇ ತಿಂಗಳಲ್ಲಿ ನಡೆಸುವ ಪದ್ಧತಿಯನ್ನು ‘ಸೀಮಂತ’ ಎನ್ನುವರು. ಇದೇ ‘ಶ್ರೀಮಂತ’ ಎಂದು ವ್ಯವಹರಿಸಲ್ಪಡುವುದು. ಹುಟ್ಟುವ ಶಿಶುವಿನ ಕ್ಷೇಮ, ಗರ್ಭಿಣಿ ಸ್ತ್ರೀ ಉಲ್ಲಾಸವಾಗಿರಲಿ ಎಂಬ ಆಶಯ ಸೀಮಂತ ಮಾಡುವುದರ ಉದ್ದೇಶವೆಂದು ಕಾಣಿಸುವುದು. ಈ ಸಮಯದಲ್ಲಿ ಹಾಡನ್ನು ಹೇಳುವ ಪದ್ಧತಿ ಉಂಟು:

ಶ್ರೀಮಂತಮುಚೇರಿಸಿರಪುಡು ಸೀತಕು ಶೃಂಗಾರವತಿಕೆ
ರಾಮಚಂದ್ರ ದೇವರಿಕಿ ರಾಜಮುಖಿಕಿ ಸುಕುಮಾರಿಕಿ
|| ಶ್ರೀಮಂ ||
ಪನ್ನೀಟನು ಜಲಕಾಮಾರ‍್ಚಿ ಕನ್ನುಲ ಕಾಟುಕದಚ್ಚಿ |
ವೆನ್ನುವ ವಾಲ್ಚಡಲಮರ‍್ಚಿ ಸನ್ನ ಜಾಜಿಪಿರುಲು ಗೂರ್ಚಿ || ಶ್ರೀಮಂ ||

ಕದಳೀ ಪನಸ ನಾರಿಕೇಳ ಕರ್ಜುರ ಫಲಮುಲತೊ
ವಿದಿತ ಮೈನ ಶುಭವಸ್ತೂ ಲಧಿ ಕಮುಗ ವಡಿ ನಿಡಿ || ಶ್ತ್ರೀಮಂ ||
ಸೀತಾಕು ಚಲಿ ಬಿಂಡಿ, ಲಡ್ಡು, ಪದರ ಪೇಣಿ ಅತಿರಸಮುಲು
ಅನೇಕಮುಲುಗು ಪಿಂಡಿ ವಂಟಲು ಆ ಕಲ್ಯಾಣಿ ವಡಿನಿಡಿ || ಶ್ರೀಮಂ ||೫

ಈ ಹಾಡಿನಲ್ಲಿ ಸೀಮಂತ ಪದ್ಧತಿಯ ಸಮಯದಲ್ಲಿ ಮಾಡುವ ವಿಧಾನಗಳೆಲ್ಲವನ್ನು ಹೇಳಲಾಗಿದೆ.

‘ಮೈನೆರೆಯುವಿಕೆ, ಮದುವೆ, ಸೀಮಂತ’ ಇವುಗಳಿಗೆ ಸಂಬಂಧಿಸಿದ ಹಾಡುಗಳು, ಶಾಸ್ತ್ರದ ಹಾಡುಗಳು. ಇವುಗಳ ಹಿಂದೆ ಸ್ತ್ರೀಯರಿಗೇ ತಿಳಿಯದ ಎಷ್ಟೋ ಆಚಾರ ವ್ಯವಹಾರಗಳು, ಸಂಪ್ರದಾಯಗಳು, ಕಟ್ಟುಪಾಡುಗಳು, ನಿರೂಪಣೆಗೊಂಡಿವೆ. ಗಾಳಿಯ ಚಕ್ರದಂತೆ ಕಾಲ ಚಕ್ರವು, ಕಾಲಚಕ್ರದಂತೆ ಸ್ತ್ರೀ ಜೀವನ ಚಕ್ರವು, ಕಾಲಚಕ್ರದಂತೆ ಸ್ತ್ರೀ ಜೀವನ ಚಕ್ರವು ನಿರಂತರ ತಿರುಗುತ್ತಲೇ ಇರುತ್ತದೆ. ಆದುದರಿಂದಲೇ ಒಂದು ದಿನ ತಾನು ಕೇಳಿದ ಹಾಡುಗಳನ್ನು ತನ್ನ ಮಗಳಿಗೆ ಕೇಳಿಸಿ ತಾಯಿ ಮಾಡಿಸಿಕೊಂಡ ಸಮರ್ತ, ಸೀಮಂತ ಇತ್ಯಾದಿ ಪದ್ಧತಿಗಳನ್ನು ತನ್ನ ಮಗಳಿಗೆ ಮಾಡಿ, ಅಂದಿನ ವಿಶಿಷ್ಟ ಸಂಪ್ರದಾಯಗಳನ್ನು ಆಚಾರ ವ್ಯವಹಾರಗಳನ್ನು ನಿಲ್ಲಿಸಿಕೊಳ್ಳಲು ಇಚ್ಛಿಸುತ್ತಾಳೆ. ತಾನು ತಿಳಿದುಕೊಂಡ ಪೂಜೆ ಪುರಸ್ಕಾರಗಳು, ವ್ರತಗಳು, ನೇಮಗಳು ಇತ್ಯಾದಿ ಭಕ್ತಿ ಸಂಬಂಧಗಳನ್ನು ಮಗಳಿಂದ ಮಾಡಿಸುವುದೇ ಅಲ್ಲದೆ ಹಾಡಿನ ರೂಪದ ಭಕ್ತಿ ಪ್ರಭಾವವನ್ನು ಸರ್ವರಿಗೂ ತಿಳಿಸುತ್ತಾಳೆ. ಮಗಳು ಸಹಿತ ತನ್ನಂಥ ಸ್ತ್ರೀರೂಪವೆಂದು ಭಾವಿಸಿಯೇ ಮದುವೆಗೆ ಬರುವ ಸಮಯಕ್ಕೆ ವಿವಾಹ ಶುಭಕಾರ್ಯ ಮೊದಲುಗೊಂಡು ಗಂಡನೊಂದಿಗೆ ತನ್ನಮುಖ್ಯ ಕರ್ತವ್ಯವನ್ನು ನೇರವೇರಿಸಿ ಕನ್ಯಾದಾನ ಫಲವನ್ನು ಸ್ವೀಕರಿಸುತ್ತಾಳೆ.

ಸ್ತ್ರೀಯರ ಹಾಡುಗಳಲ್ಲಿ ಮೇಲೆ ಹೇಳಿರುವ ವಿಶೇಷಗಳೇ ಅಲ್ಲದೆ ಹಾಡುಗಳಲ್ಲಿ ಉಪಯೋಗಿಸುವ ಭಾಷೆ, ಧ್ವನಿಗಳ ಮಾರ್ಪಾಡು, ಮೂಲ ಪದಗಳು ಇತ್ಯಾದಿ ಭಾಷಾ ಸಂಬಂಧವಾದ ವಿಷಯಗಳು, ಅಲಂಕಾರಗಳು, ಗಾದೆಗಳು, ಆಚಾರ ವ್ಯವಹಾರಗಳು, ಸಂಪ್ರದಾಯಗಳು, ನಂಬಿಕೆಗಳು, ಅಡಿಗೆಗಳು, ವೇಷಭೂಷಣಾದಿಗಳು, ಪ್ರೇಮಾನುರಾಗಗಳು, ವಿಜ್ಞಾನ ಸಂಬಂದ ವಿಷಯಗಳು, ಶೃಂಗಾರ, ಹಾಸ್ಯ, ಕರುಣೆ ಇತ್ಯಾದಿ ರಸ ಸಂಬಂಧ ವಿಷಯಗಳು, ಪುರಾಣ ಸಂಬಂಧದ ವಿಷಯಗಳು, ವೇದಾಂತ ತತ್ವ ಸಂಬಂಧದ ಅಂಶಗಳು, ಸಂಗೀತ, ಛಂದಸ್ಸು ಸ್ತ್ರೀಯ ಮನಸ್ತತ್ತ್ವ ಹೀಗೆ ಎಲ್ಲವೂ ಇರುವುದರಿಂದ ಸ್ತ್ರೀಯ ಸಾರಸತ್ವವನ್ನೇ ಒಂದು ವಿಜ್ಞಾನಕೋಶವಾಗಿ ಪರಿಗಣಿಸಬಹುದು.

ಇಂಥ ವಿಶಿಷ್ಟ ಲಕ್ಷಣಗಳನ್ನುಹೊಂದಿರುವ ಸ್ತ್ರೀಯರ ಹಾಡುಗಳು ಇಂದು ಕ್ರಮಕ್ರಮವಾಗಿ ಮಾಯವಾಗುತ್ತಿವೆ. ಇದರಿಂದ ಅನೇಕ ಸಾಂಸ್ಕೃತಿಕ ವಿಷಯಗಳು ಮರೆಯಾಗುತ್ತಿವೆ.

ಜಿ.ಎಸ್.ಎಂ.