ತೆಲುಗರ ಕ್ರೀಡಾ ವಿನೋದಗಳು ತೆಲುಗಿನಲ್ಲಿ ನನ್ನಯನಿಂದ (೧೧ನೆಯ ಶತಮಾನ) ಇಂದಿನವರೆಗೂ ಕವಿಗಳು ತಮ್ಮ ತಮ್ಮ ಕಾವ್ಯಗಳಲ್ಲಿ ಹಲವಾರು ಕ್ರೀಡಾವಿನೋದಗಳನ್ನು ವರ್ಣಿಸಿದ್ದಾರೆ. ನನ್ನಯನು ತನ್ನ ಮಹಾಭಾರತದಲ್ಲಿ ಕುರುಕುಮಾರರ ಬಾಲ್ಯ ಕ್ರೀಡಾ ವರ್ಣನೆಯನ್ನು ಮಾಡುತ್ತಾ ‘ಕಂದುಕ ಕ್ರೀಡೆ’ಯನ್ನು ಬಣ್ಣಿಸಿದ್ದಾನೆ. ಶಿವ ಕವಿಗಳು, ಬಂಧ ಕವಿಗಳು ಸಹ ಸಂದರ್ಭಾನುಸಾರವಾಗಿ ಕ್ರೀಡೆಗಳನ್ನು ವರ್ಣಿಸಿದ್ದಾರೆ. ಹೀಗೆ ಕಾವ್ಯಗಳಲ್ಲಿ ಉಲ್ಲೇಖಿಸಲ್ಪಟ್ಟು ಜನಪದಗಳಲ್ಲಿ ಬಾಲ ಬಾಲೆಯರಿಗೆ ಅತ್ಯಂತ ಪ್ರೀತಿ ಪಾತ್ರವಾದ ಹಲವಾರು ಆಟಗಳು ಇಂದಿಗೂ ಜನಪ್ರಿಯವಾಗಿವೆ. ಉದಾಹರಣೆಗೆ ಅಕ್ಕಿಬಿಕ್ಕಿ ದಂಡ, ಅಚ್ಚನಗಂಡ್ಲು, ಅಲ್ಲೋನೇರೇಳ್ಳು, ಅಷ್ಟಚೆಮ್ಮಾನ, ಒಪ್ಪುಲಕುಪ್ಪ, ಓಮನ ಗುಂಡಲು, ಕಾಳ್ಳಾಗಜ್ಜಿ, ಕೋತಿಕೊಮ್ಮಚ್ಚುಲು, ಗುಜ್ಜೇನಗೂಳ್ಳು, ಗುಡುಗುಡು ಗುಂಚಂ ಗೋಲೀಲು, ಚೇಡುಗುಡು, ಚೆಮ್ಮಚೆಕ್ಕ, ಜಾರುಡುಬಿಳ್ಳ, ತೊಕ್ಕಡುಬಿಳ್ಳಗಾಡು, ಮೂತಲು, ನಾಲುಗು ಸ್ತಂಭಾಲಾಟ, ಪಚ್ಚೀಸು, ಸಿಚ್ಚುಗಗೂಳ್ಳು, ಬೊಂಗರಾಲಾಟ, ವೈಕುಂಠ ಪಾಳಿ ಮುಂತಾದವು ತೆಲುಗುನಾಡಿನಲ್ಲೆಲ್ಲ ಕಂಡುಬರುತ್ತವೆ.

ಆಟಕ್ಕೆ ಮತ್ತು ಕ್ರೀಡೆಗೆ ಸ್ವಲ್ಪ ಭೇದ ಕಂಡುಬರುತ್ತದೆ. ಒಂದು ಆಟದಲ್ಲಿ ಇಬ್ಬರು ಅಥವಾ ಒಂದು ಸಮೂಹಕ್ಕೆ ಮತ್ತು ಇನ್ನೊಂದು ಸಮೂಹಕ್ಕೆ ಸ್ಪರ್ಧೆ ಇಲ್ಲದಿದ್ದಲ್ಲಿ ಅದು ಆಟ (Play) ಎನ್ನಿಸಿಕೊಳ್ಳುತ್ತದೆ. (Games) ಎಂದು ಭಾವಿಸುವುದುಂಟು. ಆಟಗಳಿಗೆ ಸಾಧಾರಣವಾಗಿ ನಿಯಮ ನಿಬಂಧನೆಗಳು ಇರುವುದಿಲ್ಲ. ಆದರೆ ಕ್ರೀಡೆಗಳಲ್ಲಿ ಇವು ಇರುವುದು ಸಹಜ. ಸಾಮಾನ್ಯವಾಗಿ ಆಟ ಮತ್ತು ಕ್ರೀಡೆಗಳನ್ನು ಸಮಾನ ಅರ್ಥದಲ್ಲೇ ಬಳಸುವುದುಂಟು.

‘ತೆಲುಗು ಸಾಹಿತ್ಯದಲ್ಲಿ ಕ್ರೀಡಾ ವಿನೋದಗಳು’ (ತೆಲುಗು ಸಾಹಿತ್ಯಂಲೋ ಕ್ರೀಡಾ ವಿನೋದಾಲು) ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿರುವ ಡಾ. ವಡ್ಲಾ ಸುಬ್ರಹ್ಮಣ್ಯಂ ಕ್ರೀಡೆಗಳನ್ನು ಈ ರೀತಿಯಾಗಿ ವಿಭಜಿಸಿದ್ದಾರೆ.

೧. ವ್ಯಕ್ತಿಯ ವಯಸ್ಸಿನ ವಿವಿಧ ಹಂತಗಳಿಗೆ ಅನುಗುಣವಾಗಿ

ಅ. ಬಾಲ್ಯ: ೧. ಪೂರ್ವ ಬಾಲ್ಯದಶೆ (೫ವರ್ಷದೊಳಗೆ)
ಉದಾ: ಚೆಕ್ಕೆ ಗೊಂಬೆಗಳಿಂದ ಆಡಾಡುತ್ತಾರೆ.

ಆ. ಉತ್ತರಬಾಲ್ಯದಶೆ (೫-೧೫ ವರ್ಷಗಳೊಳಗೆ)
ಉದಾ: ಅಕ್ಕೆಬಿಕ್ಕಿದಂಡ, ಕಾಳ್ಳಾಗಜ್ಜಿ, ಒಪ್ಪುಲಕುಪ್ಪ ಇತ್ಯಾದಿ.
ಆ. ಯೌವನ (೧೫-೨೫ ವರ್ಷಗಳೊಳಗೆ)
ಉದಾ: ಅಷ್ಟಚೆಮ್ಮ ಗೋಲೀಲಾಟ
ಇ. ಕೌಮಾರ (೨೫ ವರ್ಷಗಳೊಳಗೆ)
ಉದಾ: ಅಷ್ಟ ಚೆಮ್ಮ, ಕೋಡಿ ಪಂದೆಂ, ಕೋಲಾಟಂ
ಗೋಬ್ಬಿಳ್ಳು ಇತ್ಯಾದಿ.

ಈ. ವಾರ್ಧಕ್ಯ (೬೦ರ ಮೇಲೆ) ದಶಗಳಲ್ಲಿ ಆಡುವ ಆಟಗಳು.

೨. ಗಂಡು-ಹೆಣ್ಣು ವ್ಯತ್ಯಾಸ.

ಅ) ಬಾಲಿಕೆಯರು, ಯುವತಿಯರು, ಸ್ತ್ರೀಯರು ಆಡುವ ಆಟಗಳು.

ಉದಾ: ಗಚ್ಚಲಾಟಲು, ಓಮನಗುಂಟಲು, ಕೋಲಾಟಂ, ಗೊಬ್ಬಿಳ್ಳು, ಚೆಮ್ಮಚೆಕ್ಕ ಇತ್ಯಾದಿ.

ಆ) ಹುಡುಗರು, ಯುವಕರು ಮತ್ತು ಪುರುಷರು ಆಡುವ ಆಟಗಲು.
ಉದಾ: ಚೆಡುಗುಡು, ಗಂಗೆದ್ದುಲಾಟಲು, ಕೋಲಾಟಂ,
ಪುಲಿಯಾಟ, ಬೊಂಗರಾಲು ಇತ್ಯಾದಿ.
ಇ) ಸ್ತ್ರೀ ಪುರುಷರು ಇಬ್ಬರು ಆಡುವ ಆಟಗಳು
ಉದಾ: ದಾಗುಡು ಮೂತಲು, ತೋಲುಬೊಮ್ಮಲಾಟಲು,
ಕೋಲಾಟಂ ಇತ್ಯಾದಿ.

೩. ಸಾಂದರ್ಭಿಕ:

ಸಾಧಾರಣ ದಿನಗಳಲ್ಲಿ ಆಡುವ ಆಟಗಳು
ಹಬ್ಬ ಹರಿದಿನಗಳಲ್ಲಿ ಆಡುವ ಆಟಗಳು
ಉದಾ: ಅಟ್ಲತದ್ದೆ, ಉಟ್ಲಪಂಡಗ ಇತ್ಯಾದಿ

೪. ಮನೆಯೊಳಗೆ ಆಡುವ ಆಟಗಳು:

ಉದಾ: ಚೆಮ್ಮ ಚೆಕ್ಕ, ಗವ್ವಲಾಟಲು, ಒಪ್ಪಲಕುಪ್ಪ
ಪುಲಿಜಾದಂ ಇತ್ಯಾದಿ

೫. ಹಗಲು ಆಡುವ ಆಟಗಳು ಮತ್ತು ರಾತ್ರಿವೇಳೆ ಆಡುವ ಆಟಗಳು.
ಉಯ್ಯಾಲ, ದಾಗುಡುಮೂತಲು, ಬೊಂಗರಾಲು ಇತ್ಯಾದಿ
ಹಗಲು ಆಡುವ ಆಟಗಳು.

ಗವ್ವಲಾಟಲು, ಗುಜಗುಜರೇಕುಲು, ಪುಲಿಯಾಟ ಇತ್ಯಾದಿ
ರಾತ್ರಿವೇಳೆಯಲ್ಲಿ ಆಡುವ ಆಟಗಳು.

೬. ಸೌರ (Urban) ಜನಪದ (Rural) ಎಂಬ ಭೇದವನ್ನಾಶ್ರಯಿಸಿ
ಆಡುವ ಆಟಗಳು.

೭. ಕ್ರೀಡಾಕಾರರ ಸಂಖ್ಯೆನ್ನನುಸರಿಸಿ.
ಅ) ವ್ಯಷ್ಟಿ ನಿರೂಪಕಗಳು: ಉದಾ: ಅಚ್ಚಸಗಂಡ್ಲು, ಹಾಲಿಪಟಂ,
ಬೊಂಗರಾಲಾಪಿ ಇತ್ಯಾದಿ.
ಆ) ಸಮಷ್ಟಿ ನಿರೂಪಕಗಳು
ಉದಾ: ನಾಲುಗುಸ್ತಂಭಾಲಾಟ, ದಾಗುಡುಮೂತಲು
ಇತ್ಯಾದಿ.

೮. ಕ್ರೀಡಾ ಸಾಧನಗಳನ್ನನುಸರಿಸಿ:
ಅ) ನಿರ್ಜೀವ ಪದಾರ್ಥಗಳ ಸಹಾಯದಿಂದ ಆಡುವ ಆಟಗಳು.
ಉದಾ: ಅಚ್ಚನಗಂಡ್ಲು, ಅಷ್ಟ ಚೆಮ್ಮ, ಸರೀಬೇಸು,
ಪುಲಿಜೂದಂ ಇತ್ಯಾದಿ.
ಆ) ಪ್ರಾಣಿಗಳ ಆಧಾರದಿಂದ ಆಡುವ ಆಟಗಳು.
ಕೋಳಿ, ಎತ್ತುಗಳ ಸ್ಪರ್ಧೆಗಳು ಇತ್ಯಾದಿ.

ಇ) ಯಾವ ಉಪಕರಣಗಳ ಸಹಾಯವಿಲ್ಲದೇ ಆಡುವ ಆಟಗಳು.
ಉದಾ: ಅಕ್ಕಿ ಬಿಕ್ಕಿದಂಡ, ಅಲ್ಲೋನೇರೇಳ್ಳು, ಕುಪ್ಪಿಗಂತುಲ,
ಚಿಮ್ಮ ಚೆಕ್ಕ ಇತ್ಯಾದಿ.

೯. ಬುದ್ಧಿ ಅಥವಾ ಶರೀರ ಸಂಬಂಧಿ:
ಉದಾ: ಚದರಂಗಂ, ಪುಲಿಜೂದಂ ಇತ್ಯಾದಿ.

೧೦. ಮತಪರ(Related to religion)ಮತೇತರ (Non-
religion) ವಾದ ಆಟಗಳು.
ಉದಾ: ಅಟ್ಲತದ್ದೆ, ಉಟ್ಲತಂಡನ, ವೈಕುಂಠಪಾಳಿ ಇತ್ಯಾದಿ.

೧೧. ಋತುಗಳಿಗೆ ಸಂಬಂಧ ಪಟ್ಟ

೧೨. ನಿಸರ್ಗ ಸ್ಥಿತಿಗೆ ಸಂಬಂಧಿ ಆಟಗಳು
ಉದಾ: ಪಿಚ್ಚುಕಗುಳ್ಳು, ವೆನ್ನೆಲ ಕುಪ್ಪಲು ಇತ್ಯಾದಿ.

ಆಟಗಳಲ್ಲಿ ಹಲವಾರು ವೈದ್ಯವಿಜ್ಞಾವಾಂಶಗಳು ಕಂಡು ಬರುತ್ತವೆ. ಉದಾಹರಣೆಗೆ ‘ಒಪ್ಪುಲಕುಪ್ಪ’ ಆಟದಲ್ಲಿ ಹಾಡುವ ಹಾಡಿನಲ್ಲಿ ಸ್ತ್ರೀಪುರುಷರಿಗೆ ಸಂಬಂಧಪಟ್ಟ ವಾಜೀಕರಣಯೋಗವಿದ್ದಂತೆ ತಿಳಿದುಬರುತ್ತದೆ. ಅಂತೆಯೇ ‘ಚೆಮ್ಮ-ಚೆಕ್ಕ’ ಆಟದಲ್ಲಿ ಹಾಡುವ ಹಾಡಿನಲ್ಲಿಯೂ ವಾಜೀಕರಣ ಯೋಗವಿದೆ ಎನ್ನುತ್ತಾರೆ.

ಜಿ.ಎಸ್.ಎಂ.

 

ತೆಲುಗರ ಜನಪದ ಪ್ರದರ್ಶನ ಕಲೆಗಳು ಅನೇಕ ರೀತಿಯ ಜನಪದ ಪ್ರದರ್ಶನ ಕಲೆಗಳಿಗೆ ತೆಲುಗು ನೆಲ ತವರೂರು. ಶತಮಾನಗಳಿಂದ ಜನಗಳಿಗೆ ವಿನೋದವನ್ನು ವಿಜ್ಞಾನವನ್ನು ನೀಡಿದ್ದು ಜನಪದ ಪ್ರದರ್ಶನ ಕಲೆಗಳೇ. ಪ್ರಾಚೀನ ಸಮಾಜದಲ್ಲಿ ಮನರಂಜನೆಗಾಗಿ ಜನಪದ ಕಲಾಮಾಧ್ಯವನ್ನು ಬಿಟ್ಟು ಜನರಿಗೆ ಮತ್ತೊಂದು ಇರಲಿಲ್ಲ. ಪರಿವರ್ತನೆಗೊಂಡ ಶಿಷ್ಟರ ಕಲೆಯ ರೂಪಗಳು ಜನರ ಬಳಿ ಬರುವಂಥವಲ್ಲ. ಅವು ಪ್ರಭುಗಳ ಸೇವೆಗೆ ಅರಮನೆಗಳಿಗೆ ಪರಿಮಿತವಾದವು. ಹಾಗಾಗಿ ಜನಸಾಮಾನ್ಯರಿಗೆ, ಜನಪದರಿಗೆ, ಹತ್ತಿರವಾಗಿದ್ದು ಅವರ ಬದುಕನ್ನೇ ವಸ್ತುವನ್ನಾಗಿ ಮಾಡಿಕೊಂಡು ಆಡಿದ ನಾಟಕಗಳು ಜನಪದ ಕಲೆಗಳೇ.ನಮ್ಮ ಎಲ್ಲ ಪುರಾಣಗಳನ್ನು ದೃಶ್ಯ ಮಾಧ್ಯದಲ್ಲಿ ಪ್ರಜೆಗಳಿಗೆ ತಲಪಿಸಿ ಜನರಿಗೆ ಪುರಾಣಗಳನ್ನು ದೃಶ್ಯಮಾಧ್ಯಮದಲ್ಲಿ ಪ್ರಜೆಗಳಿಗೆ ತಲಪಿಸಿ ಜನರಿಗೆ ಪುರಾಣ ಜ್ಞಾನವನ್ನು ಉಂಟುಮಾಡಿದಂಥವೂ ಈ ಜನಪದ ಕಲೆಗಳೇ. ಆಂಧ್ರಪ್ರದೇಶದಲ್ಲಿ ಅನೇಕ ಜನಪದ ಪ್ರದರ್ಶನ ಕಲಾರೂಪಗಳು ಈಗಲೂ ಜೀವಂತವಾಗಿವೆ. ತೆಲುಗರ ಜನಪದ ಪ್ರದರ್ಶನ ಕಲೆಗಳಲ್ಲಿ ಯಾವುದೊಂದನ್ನು ತೆಗೆದುಕೊಂಡರೂ ಒಂದೊಂದು ಕಲೆಯನ್ನು ಕುರಿತು ಒಂದು ಬೃಹತ್‌ಗ್ರಂಥ ಬರೆಯಲು ಅವಕಾಶವಿದೆ. ಹಾಗೆ ಬರೆದಿದ್ದಾರೆ ಕೂಡ. ತೆಲುಗು ಜನಪದ ಚರಿತ್ರೆಯನ್ನು ಅವಲೋಕಿಸಿದರೆ ನಮಗೆ ಕೆಲವು ವಿಷಯಗಳು ಮನದಟ್ಟಾಗುತ್ತವೆ. ಎಂದಿನಿಂದ ಈ ಕಲಾಪ್ರಕಾರಗಳಿವೆ ಎಂದು ಪ್ರಶ್ನಿಸಿದರೆ ಸರಿಯಾಗಿ ಯಾವ ಶತಮಾನದಲ್ಲಿ ಇವು ಪ್ರಾರಂಭವಾದ ಎಂದು ಹೇಳಲು ಆಧಾರಗಳಿಲ್ಲ. ಆದರೆ ಜನಪದ ಸಾಹಿತ್ಯವೇ ಜನಪದ ಕಲೆಗಳಿಗಿಂತ ಮೊದಲಿನದೆಂದು ಮಾತ್ರ ತಾರ್ಕಿಕವಾಗಿ ಹೇಳಲು ಅವಕಾಶವಿದೆ. ಸಂಸ್ಕೃತಿಯ ಮಟ್ಟ ಮೇಲೇರಿದಂತೆ ಜನಪದ ಪ್ರದರ್ಶನ ಕಲೆಗಳು ಕ್ರಮವಾಗಿ ಜೀವಿಸುತ್ತವೆ. ಜನಪದ ಪ್ರದರ್ಶನ ಕಲೆಗಳು ಪರಿವರ್ತಿತ ನಾಟಕಗಳ ಹಾಗೆ. ಪರಿವರ್ತಿತ ನಾಟಕಕ್ಕೂ ಆಧುನಿಕ ನಾಟಕಕ್ಕೂ ಜನಪದ ನಾಟಕಗಳೇ ಮೂಲ. ಎರಡು ಸಾವಿರ ವರ್ಷಗಳದೆಂದು ನಾವು ಭಾವಿಸುವ ಭರತನ ನಾಟ್ಯಶಾಸ್ತ್ರದಲ್ಲಿ ಆ ಕಾಲಕ್ಕೆ ಲಭ್ಯವಾಗುತ್ತಿದ್ದ ದೇಶೀ ನಾಟಕ ರೂಪಗಳ ಪ್ರಕ್ರಿಯೆಯನ್ನು ಕುರಿತ ವಿವರಗಳಿವೆ. ಅವುಗಳನ್ನು ಜನಪದ ಪ್ರದರ್ಶನ ಕಲೆಗಳು ಎಂದು ಅರ್ಥ ಮಾಡಿಕೊಳ್ಳಬೇಕು. ಸಂಸ್ಕೃತ ಪ್ರಕ್ರಿಯೆಗೆ ಸೇರಿದ ವೀಥಿ ಎಂಬ ರೂಪಕ ಪ್ರಕಾರ ಜಾನಪದ ಕಲಾರೂಪದ ಪ್ರತಿರೂಪವೆ. ಆದರೆ ಭಾಷೆ ಬೇರೆ. ಸಂಸ್ಕೃತ ಸಾಹಿತ್ಯದಲ್ಲಿಯ ಅನೇಕ ಆಧಾರಗಳನ್ನು ಪರಿಶೀಲಿಸಿದರೆ ಭಾರತದಲ್ಲಿ ಜಾನಪದ ಪ್ರದರ್ಶನ ಕಲೆಗಳು ಹತ್ತಿರ ಹತ್ತಿರ ಈ ಕಾಲದಿಂದಲೇ ಇದ್ದವೆಂದು ಹೇಳಲು ಅವಕಾಶವಿದೆ. ಆದರೆ ಅಷ್ಟು ಪ್ರಾಚೀನ ಕಾಲದಿಂದ ಎಂದರೆ ಎರಡು ಸಾವಿರ ವರ್ಷಗಳಿಂದ ತೆಲುಗರ ಜನಪದ ಕಲಾರೂಪಗಳು ಇದ್ದುವೆಂದು ಹೇಳಲು ನಿಖರವಾದ ಆಧಾರಗಳಿಲ್ಲ.

02_70A_DBJK-KUH

ಹಾಗೆ ನೋಡಿದರೆ ತೆಲುಗು ಭಾಷೆ ಆಗ ಇತ್ತೊ ಇಲ್ಲವೋ ಎಂದು ಹೇಳಲು ಅಗತ್ಯವಾದ ಚಾರಿತ್ರಿಕ ಆಧಾರಗಳು ಯಾವುವೂ ನಮಗೆ ಲಭಿಸುವುದಿಲ್ಲ. ಶಾತವಾಹನರು ತೆಲುಗು ರಾಜರು ಎನ್ನುವರು. ಅವರ ಕಾಲದ್ದಾದ ಗಾಥಾ ಸಪ್ತಶತಿಯಲ್ಲಿ ಕಲೆಯ ರೂಪಗಳಿಗೆ. ಸಂಗೀತವಾದ್ಯಗಳಿಗೆ ಸಂಬಂಧಿಸಿದ ಕೆಲವು ಪರೋಕ್ಷ ಆಧರಗಳನ್ನು ಕೆಲವು ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಆದರೆ ಗಾಥಾಸಪ್ತಶತಿ ತೆಲುಗಿನಲ್ಲಿಲ್ಲ. ಪ್ರಾಕೃತದಲ್ಲಿದೆ. ಆಧಾರಗಳು ಇದ್ದರೂ ಅವು ಯಾವ ಭಾಷೆಯಲ್ಲಿದ್ದ ಕಲೆಯ ರೂಪಗಳಿಗೆ ಸಂಬಂಧಿಸಿದವೋ ಹೇಳುವುದು, ಸಮರ್ಥಿಸುವುದು ಕಷ್ಟ. ಕೇವಲ ೧೧-೧೨ನೆಯ ಶತಮಾನಗಳ ಕಾಲದಿಂದಲೇ ನಮಗೆ ನಂಬತಕ್ಕ ಚಾರಿತ್ರಿಕ ಆಧಾರಗಳು ಕಾಣಿಸುತ್ತವೆ. ೧೧ನೆಯ ಶತಮನಾಕ್ಕಾಗಲೇ ಅನೇಕ ಜನಪದ ಕಲೆಗಳು ಇದ್ದುವೆಂದು ಆಧಾರ ಸಹಿತವಾಗಿ ನಿರೂಪಿಸಬಹುದು. ಆದರೆ ಅದಕ್ಕಿಂತ ಹಿಂದೆ ಇರಲಿಲ್ಲ ಎಂದು ಹೇಳುವುದು ಕಷ್ಟ. ಆಧಾರಗಳಿಲ್ಲ ಎಂದ ಮಾತ್ರಕ್ಕೆ ಐದಾರು ಶತಮಾನಗಳಲ್ಲಿ ಏಳೆಂಟು ಶತಮಾನಗಳಲ್ಲಿ ಜನಪದ ಕಲಾರೂಪಗಳು ಇರಲಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಆರನೇ ಶತಮಾಣದ ಕಾಲಕ್ಕೆ ತೆಲುಗು ಭಾಷೆ ಚೆನ್ನಾಗಿ ಅಭಿವೃದ್ಧಿ ಹೊಂದಿತೆಂದು ಹೇಳಲು ಚರಿತ್ರಕಾರರು, ಶಾಸನ ತಜ್ಞರು, ಸಾಕಷ್ಟು ಶಾಸನ ಆಧಾರಗಳನ್ನು ತೋರಿಸುತ್ತಿದ್ದಾರೆ. ಅಷ್ಟು ಅಭಿವೃದ್ಧಿ ಹೊಂದಿದ ಭಾಷೆ ಎಂದಾಗ ಆ ಕಾಲಕ್ಕೆ ಜನಪದ ಪ್ರದರ್ಶನ ಕಲೆಗಳು ಇದ್ದೇ ಇರಬೇಕು. ಆದರೂ ಅವುಗಳನ್ನು ವಿವರವಾಗಿ ಹೇಳುವ ವಿಸ್ತೃತವಾದ ಆಧಾರಗಳು ಈ ಶಾಸನಗಳಲ್ಲಿ ಸಿಗಲಿಲ್ಲ. ಕ್ರಿ.ಶ. ೧೨೦೦ರ ಕಾಲದವನಾದ ಪಾಲ್ಕುರಿಕಿ ಸೋಮನಾಥನು ದೇಶೀ ಸಾಹಿತ್ಯದ ಪಿತಾಮಹನಾಗಿದ್ದು ಪಂಡಿತಾರಾಧ್ಯ ಚರಿತ್ರೆ, ಬಸವ ಪುರಾಣ ಎಂಬ ಶೈವ ಸಾಹಿತ್ಯ ಗ್ರಂಥಗಳನ್ನು ದೇಶಿ ಸಾಹಿತ್ಯದಲ್ಲಿ ರಚಿಸದ್ದಾನೆ. ದ್ವಿಪದ ಛಂದಸ್ಸು ಜನಪದ ಸಾಹಿತ್ಯಕ್ಕೆ ಅತ್ಯಂತ ಹತ್ತಿರವಾದ ರೂಪ. ನಿರ್ದಿಷ್ಟವಾಗಿ ರಚಿತವಾಗಿರುವ ಅನೇಕ ಜನಪದ ಗೇಯಗಳಲ್ಲಿ ಈ ಛಂದಸ್ಸಿನ ರೂಪಗಳಿವೆ. ಆದ್ದರಿಂದಳೇ ಪ್ರಚಾರ ಅವಶ್ಯಕ ಹಾಗೂ ವಿಷಯಗಳನ್ನು ಜನರಿಗೆ ವಿವರವಾಗಿ ತಲುಪಿಸಬೇಕು ಎಂದುಕೊಂಡ ಕಥೆಗಳನ್ನು ಅಂದಿನ ಕವಿಗಳು ಜನಪದ ಸಾಹಿತ್ಯಕ್ಕೆ ತುಂಬಾ ಹತ್ತಿರವಾಗಿದ್ದ ದ್ವಿಪದ ಛಂದಸ್ಸನ್ನು ಸ್ವೀಕರಿಸಿ ರಚಿಸಿದರು.

ಪಾಲ್ಕುರಿಕೆ ಸೋಮನಾಥನ ಕೃತಿಗಳು ಮತ್ತು ಪಲ್ನಾಟಿ ವೀರಚರಿತ್ರ, ರಂಗನಾಥ ರಾಮಾಯಣ ಮುಂತಾದವು ಇದಕ್ಕೆ ಉತ್ತಮ ಉದಾಹರಣೆ. ಜನಪದ ಜೀವನವನ್ನು ವಿಸ್ತಾರವಾಗಿ ವರ್ಣಿಸಿದ ಸೋಮನಾಥ ಜನಪದರಾದ ಶಿವಭಕ್ತರ ಜೀವನ ಕಥೆಗಳನ್ನು, ಜನಪದ ಕಲೆಗಳನ್ನು ಸಮರ್ಪಕವಾಗಿ ವರ್ಣಿಸಿದ್ದಾನೆ. ತನ್ನ ಕಾಲಕ್ಕೆ ತಿಳಿದು ಬಂದ ಅನೇಕ ಜನಪದ ಕಲೆಗಳನ್ನು ಕುರಿತು ಸೂಚನೆಗಳನ್ನು ಹೇಳುವುದು ಇದರಲ್ಲಿ ಚೆನ್ನಾಗಿ ಕಾಣಿಸುತ್ತಿದೆ. ಪಾಲ್ಕುರಿಕೆ ಸೋಮನಾಥನ ರಚನೆಯಲ್ಲಿರುವ ಜನಪದ ಕಲೆಗಳನ್ನು ಕುರಿತು ಇದುವರೆಗೂ ಅನೇಕ ವಿದ್ವಾಂಸರು ಹೇಳಿದ್ದಾರೆ. ತನ್ನ ಕಾಲದಲ್ಲಿ ಅನೇಕರು ನಾಟಕಗಳನ್ನು ಆಡುತ್ತಿದ್ದರೆಂದು ಈ ಕವಿ ಹೇಳಿದ್ದಾನೆ. ಅವೆಲ್ಲ ಜನಪದ ನಾಟಕಗಳೇ. ಒನಕೆಯ ಹಾಡು ಕುರಿತು ಕೇಳಿ ಅವುಗಳನ್ನು ಹಾಡುವ ರೀತಿಯನ್ನು ಹೇಳಿದ್ದಾನೆ. ಪಿಚ್ಚು ಕುಂಟ್ಲು ಕಲೆಗಾರರು ಶ್ರೀಶೈಲಂಗೆ ಹೋದಂತೆ ವರ್ಣಿಸಿದ್ದಾನೆ. ಇವರ ಕಲಾ ರೂಪವಾದ ಪಿಚ್ಚುಕುಂಟಿಕಥೆ ಈಗಲೂ ಪ್ರಚಲಿತದಲ್ಲಿದೆ. ಇದರಲ್ಲಿ ಪಲ್ನಾಟಿ ವೀರಚರಿತ್ರೆ ಪ್ರಸಿದ್ಧವಾದುದು. ಇದೇ ಕವಿ ತನ್ನ ಕಾಲದಲ್ಲಿ ಬಹುರೂಪಗಳು ಮುಂತಾದವನೂ ಹೇಳಿದ್ದಾನೆ. ಬಹುರೂಪಿಗಳು ಎಂದರೆ ವಿವಿಧ ವೇಷಗಳನ್ನು ಹಾಕುವ ಕಲೆಗಾರರು ಎಂದೂ ಹಗಲು ವೇಷದವರೆಂದೂ ಅರ್ಥ. ಈಗಲೂ ರಾಯಲಸೀಮೆಯಲ್ಲಿ ಕಂಡು ಬರುವ ಮೆರವಣಿಗೆ ಎಂಬುದನ್ನು ಕುರಿತು ಪಾಲ್ಕುರಿಕೆ ಸೋಮನಾಥ ಪ್ರಸ್ತಾವಿಸಿದ್ದಾನೆ.

ಆ ಕಾಲಕ್ಕೆ ತೊಗಲು ಗೊಂಬೆಯಾಟ, ಕೀಲು ಗೊಂಬೆಯಾಟಗಳು ಇದ್ದುವೆಂದು ಸ್ಪಷ್ಟವಾದ ಚಾರಿತ್ರಿಕ ಆಧಾರಗಳನ್ನು ಸೋಮನಾಥನು ಕೊಟ್ಟಿದ್ದಾನೆ. ಭಾರತಾದಿ ಕಥೆಗಳನ್ನು ಬಟ್ಟೆಯ ಮರೆಲಯಲ್ಲಿ ಗೊಂಬೆಗಳ ಮೂಲಕ ಆಡಿಸುತ್ತಿದ್ದರೆಂಬ ವಿವರಗಳನ್ನು ಸೋಮನಾಥ ನೀಡಿದ್ದಾನೆ. ‘ಚೆನ್ನಾಗಿಗಳುಗಳು ಮೇಲೆ ಆಡುತ್ತಾರೆ’ ಎಂದು ಹೇಳಿ, ದೊಂಬರಾಟವನ್ನು ಕುರಿತು ಹೇಳಿದ್ದಾನೆ. ಯಕ್ಷಗಾನ ಚಿಂದು ಎಂಬ ಕಲಾಪ್ರಕಾರದ ಪ್ರಸಕ್ತಿ ಇರುವುದರಿಂದ ಅದು ಚಿಂದು ಯಕ್ಷಗಾನವಿರಬಹುದು. ವೆಡಯಾಟ, ಕೋಡಂಗಿಯಾಟ, ವೆಡ್ಡಂಗಮು ಇವುಗಳನ್ನು ಹೇಳಿದ್ದಾನೆ. ಇಂದು ಇವೆಲ್ಲ ಕಲಾ ಪ್ರಕಾರಗಳೂ ಕಾಣಿಸುವುದಿಲ್ಲ. ಕಾಲಗತಿಯಲ್ಲಿ ಮರೆಯಾಗಿವೆ. ಇನ್ನು ಪಕ್ಷಗಳ ಆಟಗಳು, ಪ್ರಾಣಿಗಳಿಂದ ಆಡಿಸುವ ಆಟ, ಪೇರಣಿ, ಕೋಲಾಟ, ಗೊಂಡ್ಲಿನೃತ್ಯ ಮೊದಲಾದ ಕಲಾರೂಪಗಳನ್ನು ಕೂಡ ಪಾಲ್ಕುರಿಕೆ ಸೋಮನಾಥ ಪ್ರಸ್ತಾವಿಸಿದ್ದಾನೆ. ಇನ್ನು ನಟರಿಗೆ ಸಂಬಂಧಿಸಿದಂತೆ ಅನೇಕ ವಿವರಗಳನ್ನು ಕೊಟ್ಟಿದ್ದಾನೆ. ಪಂಡಿತಾರಾಧ್ಯ ಚರಿತ್ರೆ ಮತ್ತು ಬಸವ ಪುರಾಣ ಗ್ರಂಥಗಳು ವಿಶ್ವಕೋಶದಂಥವು. ಸೋಮನಾಥ ಸೂಚಿಸಿದ ಅನೇಕ ಜನಪದ ಕಥೆಗಳು ಇಂದು ಉಳಿದಿಲ್ಲ. ನೂರು ವರ್ಷಗಳ ಹಿಂದೆ ಇದ್ದ ವಾಲಕಂ ಎಂಬ ಕಲೆ ಈಗ ಅದೃಶ್ಯವಾಗಿದೆ. ಕೆಲವೇ ವರ್ಷಗಳಲ್ಲಿ ಅದೃಶ್ಯವಾಗಬಹುದಾದ ಕಲೆಗಳು ಸಹ ಸಾಕಷ್ಟಿವೆ. ಇನ್ನು ಮಧ್ಯಯುಗದಲ್ಲಿಯ ಅನೇಕ ಕಾವ್ಯಗಳಲ್ಲಿ, ಪ್ರಬಂಧಗಳಲ್ಲಿ ಅನಂತರ ಕಾಲದ ಗ್ರಂಥಗಳಲ್ಲಿ ಅಂದಿನ ತೆಲುಗು ಜನಪದ ಕಲೆಗಳ ಉಲ್ಲೇಖ ಅನೇಕ ಕಡೆ ನಮಗೆ ಗೋಚರವಾಗುತ್ತದೆ. ಅದರಲ್ಲಿಯ ಅನೇಕವು ಇಂದು ಸಹ ನಮಗೆ ಕಾಣಿಸುತ್ತವೆ.

ಜನಪದ ಪ್ರದರ್ಶನ ಕಲೆಗಳು ಎರಡು ರೀತಿಯಲ್ಲಿ ಕಂಡುಬರುತ್ತದೆ. ಸರ್ವ ಜನಪದ ಕಲೆಗಳು, ವೃತ್ತಿ ಜನಪದ ಕಲೆಗಳು ಎಂದು ಇವುಗಳನ್ನು ಎರಡು ರೀತಿಯಲ್ಲಿ ವಿಭಜಿಸಲು ಅವಕಾಶವಿದೆ. ತೆಲುಗು ಜನಪದ ಕಲೆಗಳಲ್ಲಿ ಹೆಚ್ಚಾಗಿ ಒಂದು ಜಾತಿಯವರು ಅವರಿಗೆ ಜೀವನೋಪಾಯವನ್ನು ನೀಡುವ ವೃತ್ತಿಯಾಗಿ ಸ್ವೀಕರಿಸಿದ ಕಲೆಗಾರರು ಪ್ರದರ್ಶಿಸುವ ಕಲೆಯೇ ಹೆಚ್ಚಾಗಿ ಕಂಡು ಬರುತ್ತದೆ. ಭಾರತದ ಅನೇಕ ರಾಜ್ಯಗಳಲ್ಲಿ ವಿವಿಧ ಭಾಷಾ ಪ್ರಾಂತ್ಯಗಳಲ್ಲಿ ಇರುವ ಜನಪದ ಕಲೆಗಳಲ್ಲಿ ಹೆಚ್ಚಾಗಿರುವುದು ವೃತ್ತಿ ಜನಪದ ಕಲೆಗಳೇ. ತೆಲುಗು ಜನಪದ ಕಲೆಗಳಲ್ಲೂ ಹೆಚ್ಚಾಗಿರುವುದು ವೃತ್ತಿ ಜನಪದ ಕಲಾರೂಪಗಳೇ. ಒಗ್ಗು ಕಥೆ, ಪಂಬಕಥೆ, ಆಸಾದಿಕಥೆ, ಬೈಂಡ್ಲಕಥೆ, ಕೊಮ್ಮುಲಕಥೆ, ಪಾಂಡವಕಥೆಯಂತಹ ಕಲೆಯ ರೂಪಗಳೆಲ್ಲವು ಸಹ ಒಂದು ಜಾತಿಯವರಿಗೆ ವೃತ್ತಿಯಾಗಿರುವ ಕಲಾರೂಪಗಳೇ ಆಗಿವೆ. ವೃತ್ತಿಯಾಗಿ ಅಲ್ಲದೆ ಊರಿನವರಿಂದ ಮನರಂಜನೆಯನ್ನು ನೀಡುವ ಕಲೆಯ ರೂಪದಲ್ಲೂ ಕೆಲವು ಇದೆ. ಕೆಲವು ಉದಾಹರಣೆಗಳನ್ನು ನೋಡಬಹುದು. ಕೋಲಾಟ, ಚೆಕ್ಕ ಭಜನೆ, ಪಂಡರಿ ಭಜನೆ ಮತ್ತು ಕೆಲವು ಜನಪದ ನಾಟಕ ಪ್ರಕಾರಗಳು ವೃತ್ತಿ ಕಲಾರೂಪಗಳಲ್ಲ. ಒಂದು ಗ್ರಾಮದಲ್ಲಿಯ ಯಾವ ಜಾತಿಯವರಾದರೂ ಎಲ್ಲರೂ ಸೇರಿ ಮಾತನಾಡಿಕೊಂಡು ಎಲ್ಲವನ್ನೂ ಸಿದ್ಧಗೊಳಿಸಿಕೊಂಡು ಅವರವರ ವಿನೋದ ಕಲೆಗಳನ್ನು ಅವರು ಪ್ರದರ್ಶಿಸಿಕೊಳ್ಳುತ್ತಾರೆ. ಇದರಲ್ಲಿ ಪ್ರದರ್ಶಿಸುವವರು ತಮ್ಮ ಮನರಂಜನೆಗಾಗಿ ಪ್ರದರ್ಶನ ಮಾಡುತ್ತಾರೆಯೇ ಹೊರತು ಆದಾಯಕ್ಕಾಗಿಯಲ್ಲ. ಪ್ರದರ್ಶಿಸುವವರಿಗೂ ಅದನ್ನು ವಿವರಿಸುವವರಿಗೂ ಮನರಂಜನೆ ನೀಡುತ್ತವೆ. ಇಂತಹವುಗಳನ್ನು ಸರ್ವ ಜನಪದ ಕಲೆಗಳು ಎಂದು ಕರೆಯಬಹುದು. ಮೇಲೆ ಹೇಳಿದ್ದು ವೃತ್ತಿ ಜನಪದ ಕಲೆಗಳು. ಆದ್ದರಿಂದ ಇಲ್ಲಿ ಸರ್ವ ಜನಪದ ಕಲೆಗಳು, ವೃತ್ತಿ ಜನಪದ ಕಲೆಗಳು ಎಂದು ಕರೆಯಬಹುದು. ಮೇಳೆ ಹೇಳಿದ್ದು ವೃತ್ತಿ ಜನಪದ ಕಲೆಗಳು. ಆದ್ದರಿಂದ ಇಲ್ಲಿಸರ್ವ ಜನಪದ ಕಲೆಗಳು, ವೃತ್ತಿ ಜನಪದ ಕಲೆಗಳು ಎಂಬ ಎರಡು ರೀತಿಯ ವರ್ಗೀಕರಣ ಬಂದಿದೆ. ತೆಲುಗು ಜನಪದ ಕಲೆಗಳನ್ನು ಮತ್ತೊಂದು ರೀತಿಯಲ್ಲಿ ವಿಭಜಿಸುವ ಅವಕಾಶವಿದೆ. ಯಾರು ಯಾರಿಗೆ ಪ್ರದರ್ಶಿಸುತ್ತಿದ್ದಾರೆ ಎನ್ನುವ ವಿಷಯದ ಆಧಾರದ ಮೇಲೆ ಈ ವಿಭಜನೆ ಮಾಡಬಹುದು. ಇವುಗಳನ್ನೇ ಆಶ್ರಯ ರಹಿತ ಕಲೆಗಳು. ಆಶ್ರಿತ ಕಲೆಗಳು ಎನ್ನಬಹುದು. ಆಶ್ರಯ ರಹಿತ ಕಲೆಗಳು ಎಂದರೆ ಕಲಾಕಾರ ತನ್ನ ಕಲೆಯನ್ನು ಯಾರಿಗಾದರೂ ಪ್ರದರ್ಶಿಸಬಹುದು ಎಂದರ್ಥ.

ಉದಾ: ಒಬ್ಬ ಹಾವಾಡಿಗ ಒಂದು ಗ್ರಾಮದಲ್ಲಿ ಪ್ರವೇಶ ಮಾಡಿದರೆ ತನ್ನ ಕಲೆಯನ್ನು ಆ ಗ್ರಾಮದ ಎಲ್ಲರಿಗೂ ಪ್ರದರ್ಶಿಸುತ್ತಾನೆ. ಕೆಲವು ಜಾತಿಗಳಿಗೆ ಪ್ರದರ್ಶಿಸಬಹುದು. ಕೆಲವು ಜಾತಿಗಳಿಗೆ ಪ್ರದರ್ಶಿಸಬಾರದು ಎಂಬ ನಿಬಂಧನೆಯಾಗಲಿ ಅಡೆತಡೆಗಳಾಗಲಿ ಅವನಿಗಿಲ್ಲ. ಅದೇ ರೀತಿಯಲ್ಲಿ ಒಬ್ಬ ಹರಿದಾಸ ಒಂದು ಗ್ರಾಮಕ್ಕೆ ಹೋದರೆ ಅವನು ಸಹ ಎಲ್ಲರ ಮನೆಗಳಿಗೆ ತೆರಳಿ ತನ್ನ ಕಥೆಯನ್ನಾಗಲಿ ಹಾಡನ್ನಾಗಲಿ ಪ್ರದರ್ಶಿಸಿ ತನಗೆ ಬರಬೇಕಾದದ್ದನ್ನು ತಾನು ಪಡೆಯುತ್ತಾನೆ. ಬಹುರೂಪಿಗಳು (ಹಗಲು ವೇಷದವರು) ಸಹ ಊರಿನವರೆಲ್ಲರಿಗೂ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ತೊಗಲು ಗೊಂಬೆ, ಕೀಲುಗೊಂಬೆ ಆಟಗಳು ಹಾಗೆಯೇ ಎಲ್ಲರಿಗಾಗಿ ಪ್ರದರ್ಶಿಸಲ್ಪಡುತ್ತವೆ. ಇನ್ನೂ ಇಂತಹ ಅನೇಕ ಕಲೆಗಳನ್ನು ಹೇಳಬಹುದು. ಹೀಗಲ್ಲದೆ ಕೇವಲ ಒಂದು ಜಾತಿಯವರಿಗೆ ಪ್ರದರ್ಶಿಸುವ ಜನಪದ ಕಲೆಗಳು ಕೆಲವು ಇವೆ. ಇವುಗಳನ್ನು ಆಶ್ರಿತ ಜಾನಪದಕಲೆಗಳು ಎಂದು ಹೇಳಬಹುದು. ಇಲ್ಲಿ ಕೆಲವು ಉದಾಹರಣೆಗಳನ್ನು ಪರಿಶೀಲಿಸಬಹುದು. ಒಬ್ಬ ರುಂಜಕಥೆಯ ಗಾಯಕ ಒಂದು ಗ್ರಾಮಕ್ಕೆ ಬಂದರೆ ಅವನು ತನ್ನ ಕಲೆಯನ್ನು ಇಡೀ ಗ್ರಾಮಕ್ಕೆ ಪ್ರದರ್ಶಿಸುವಂತಿಲ್ಲ. ಕೇವಲ ಆತನಿಗೆ ಸಂಬಂಧಪಟ್ಟ ದಾತರಾದ ವಿಶ್ವಕರ್ಮ ಇಲ್ಲವೆ ವಿಶ್ವಬ್ರಾಹ್ಮಣ ಕುಲದವರಾದ ಐದು ವೃತ್ತಿಗಳವರಿಗೆ ಮಾತ್ರವೇ ಅವನು ರುಂಜಕಥೆಯನ್ನು ಪ್ರದರ್ಶಿಸುತ್ತಾನೆ. ಅಷ್ಟೇ ಅಲ್ಲ; ಅವನು ಕಲಾರೂಪದಲ್ಲಿ ಪ್ರಧಾನವಾಗಿ ಪ್ರದರ್ಶಿಸುವ ಕಥೆಯೂ ವಿಶ್ವ ಕರ್ಮ ಪುರಾಣ ಇಲ್ಲವೆ ಆ ಜಾತಿಗೆ ಸೇರಿದ ಇತರ ಕಥೆಗಳು ಮಾತ್ರ. ಈ ಕಥೆಗಳು ಇತರ ಜಾತಿಯವರಿಗೆ ಇರುವುದಿಲ್ಲ. ಆದ್ದರಿಂದ ಅವನ ಕಲಾ ಪ್ರದರ್ಶನ ಅವನ ದಾತರಿಗೆ ಮಾತ್ರವೇ ಸಂಬಂಧ ಪಟ್ಟಿರುತ್ತದೆ. ಪಿಚ್ಚುಕುಂಟ್ಲ(ಹೆಳವ) ಕಲೆಯ ಪ್ರದರ್ಶನ ಅವರ ಆಶ್ರಯದಾತರಾದ ರೆಡ್ಡಿಗಳಿಗೆ ಮಾತ್ರವೇ ಪರಿಮಿತವಾಗಿರುತ್ತದೆ. ಎಂದರೆ ಅವನು ಕಥೆ ಹೇಳುವುದು ರೆಡ್ಡಿ ಜಾತಿಯವರಿಗೆ ಮಾತ್ರ. ಆದರೆ ಅವನು ಕಥೆ ಹೇಳುವಾಗ ಇತರ ಜಾತಿಯವರು ಅಲ್ಲಿ ಕೂರಬಾರದೆಂದಾಗಲಿ, ಕೇಳಬಾರದೆಂದಾಗಲಿ ನಿರ್ಬಂಧವಿಲ್ಲ. ಆದರೆ ಆತನ ಆಶ್ರಯದಾತರೇ ಅವನಿಗೆ ಮಿರಾಸೆ ಕೊಡುವವರು. ಆದ್ದರಿಂದ ಆತನ ಉದ್ದೇಶ ರೆಡ್ಡಿಗಳಿಗೆ ಮಾತ್ರ ಕಥೆ ಹೇಳುವುದಾಗಿರುತ್ತದೆ. ಕೂನಪುಲಿಯವರು ಸಾಲಿಗರಿಗೆ ಕಥೆ ಹೇಳುತ್ತಾರೆ. ಜೆಟ್ಟಿಗರು ಗೌಡರಿಗೆ ಹೇಳುತ್ತಾರೆ. ಚಿಂದುಗರು ಅವರ ಗೋಸಂಗಿ ವೇಷವನ್ನು ದಲಿತರಿಗೆ ಮಾತ್ರ ಪ್ರದರ್ಶಿಸುತ್ತಾರೆ. ಹೀಗೆ ಕನಿಷ್ಠ ಅರವತ್ತು ಕುಲದವರು ಅವರ ಆಶ್ರಿತರಿಗೆ ಮಾತ್ರ ಕಥೆ ಹೇಳುತ್ತಿದ್ದಾರೆ. ಅಂತಹವರನ್ನು ಆಶ್ರಿತ ಗಾಯಕರು, ಆಶ್ರಿತ ಕಲಾಕಾರರು ಎಂದು ಕರೆಯಬಹುದು. ಇವರು ಪ್ರದರ್ಶಿಸುವ ಜಾನಪದ ಕಲೆಗಳನ್ನು ಆಶ್ರಿತ ಕಲಾರೂಪಗಳು ಎಂದೆನ್ನಬಹುದು. ಹಾಗೆಯೇ ಇವರು ಸೃಷ್ಟಿಸುವ ಕಥಾ ಸಾಹಿತ್ಯವನ್ನು ಆಶ್ರಿತ ಜನಪದ ಸಾಹಿತ್ಯ ಅಥವಾ ಆಶ್ರಿತ ಸಾಹಿತ್ಯ ಜ್ಞಿ ಕರೆಯಬಹುದು. ಆದ್ದರಿಂದಲೇ ತೆಲುಗು ಜನಪದ ಕಲೆಗಳನ್ನು ಆಶ್ರಯ ರಹಿತ ಪ್ರಕಾರಗಳು, ಆಶ್ರಿತ ಜನಪದ ಪ್ರಕಾರಗಳು ಎಂದು ಎರಡು ವಿಧವಾಗಿ ವಿಭಜಿಸಬಹದು. ತೆಲುಗು ಜನಪದ ಕಲೆಗಳಲ್ಲಿರುವ ವೈವಿಧ್ಯವನ್ನೆಲ್ಲ ಇಲ್ಲಿ ವಿವರಿಸಲು ಸಾಧ್ಯವಿಲ್ಲ. ಆದರೂ ಜನಪದ ಕಲೆಗಳು ಎಷ್ಟು ಸಮೃದ್ಧವಾಗಿದೆ ಎಂದು ಹೇಳಲು ಅವುಗಳಲ್ಲಿರುವ ಭಿನ್ನ ಭಿನ್ನವಾದ ಪ್ರದರ್ಶನ ರೀತಿಗಳನ್ನು ಇಲ್ಲಿ ವಿವರಿಸಿದರೆ ತೆಲುಗು ಜನಪದ ಕಲೆಗಳಿಗಿದ್ದ ಸಮಗ್ರ ಸ್ವರೂಪ ತಿಳಿಯುತ್ತದೆ. ಒಬ್ಬನೇ ಕಲಾವಿದನಿದ್ದು ಒಂದು ಸಂಗೀತ ವಾದ್ಯದ ಸಹಾಯದಿಂದ ಕಥೆ ಹೇಳುತ್ತಾ ಪ್ರದರ್ಶಿಸುವ ಕಲಾರೂಪಗಳೂ ಇವೆ. ರುಂಜಕಥೆ, ಪಿಟ್ಟಲದೊರ ಪ್ರದರ್ಶನ, ಸಂಕ್ರಾಂತಿ ಹರಿದಾಸರು, ವಾಲಕಂ ಮುಂತಾದವು ಇಂತಹ ಪ್ರದರ್ಶನಗಳು. ರುಂಜಕಥೆಯಲ್ಲಿ ಕಥೆ ಮತ್ತು ಹಾಡು ಇರುತ್ತದೆ. ಒಬ್ಬನೇ ಕಲಾಕಾರನು ಎಲ್ಲ ಪಾತ್ರಗಳನ್ನು ನಟಿಸಿ ಅಭಿನಯಿಸುತ್ತಾ ಕಥೆಯನ್ನು ಪ್ರೇಕ್ಷಕರಿಗೆ ಪ್ರದರ್ಶಿಸುತ್ತಾನೆ.

‘ಪಿಟ್ಟಲ ದೊರ’ ಪ್ರದರ್ಶನದಲ್ಲಿ ಕಥೆ ಇರುವುದಿಲ್ಲ. ಕಲಾವಿದ ಒಬ್ಬನೇ ಎಲ್ಲವನ್ನು ಪ್ರದರ್ಶಿಸುತ್ತಾನೆ. ವಾಲಕಂನಲ್ಲಿಕಥೆ ಇರುವುದಿಲ್ಲ. ಆದರೂ ವಿಭಿನ್ನ ಪಾತ್ರಗಳನ್ನು ಒಬ್ಬನೇ ಅಭಿನಯಿಸಿ ಪ್ರದರ್ಶಿಸುವುದು ಉಂಟು. ಇಂತಹ ಏಕವ್ಯಕ್ತಿ ಪ್ರದರ್ಶನದ ಕಲಾರೂಪಗಳು ಜನಪದ ಪ್ರದರ್ಶನ ಕಲಾ ಸಂಪ್ರದಾಯಗಳಲ್ಲಿ ಪ್ರಾಚೀನವಾದವು ಎಂದು ಹೇಳಲು ಅವಕಾಶವಿದೆ. ಹೀಗೆ ಒಬ್ಬ ಕಲಾವಿದನ ಪ್ರದರ್ಶನಗಳೇ ಮೊದಲು ಇದ್ದು ಅನಂತರ ಬಹು ಕಲಾವಿದರ ಪ್ರದರ್ಶನಗಳು ಬಂದಿರಬಹುದೆಂದು ಇವುಗಳ ರೀತಿಯನ್ನು ನೋಡಿ ವಿಕಾಸಕ್ರಮವನ್ನು ಹೇಳಲು ಅವಕಾಶವಿದೆ. ತೆಲುಗರ ಜನಪದ ಪ್ರದರ್ಶನ ಕಲೆಗಳ ಸಂಪ್ರದಾಯಗಳಲ್ಲಿ ಹೀಗೆ ಏಕವ್ಯಕ್ತಿ ಪ್ರದರ್ಶನಗಳು ಇದರ ಪ್ರಾಚೀನತೆಯನ್ನು ತಿಳಿಸಿಕೊಡುತ್ತದೆ. ಇದಾದ ಅನಂತರ ಇಬ್ಬರು ಕಲಾವಿದರು ಪ್ರದರ್ಶಿಸುವ ಕಲೆಗಳೂ ಇವೆ. ಚಿಂದು ಮಾದಿಗರ ಗೋಸಂಗಿವೇಷದ ಕಲೆ ಇಂಥದ್ದೇ. ಜಾಂಬವಂತನೂ ಬ್ರಾಹ್ಮಣ ಪಾತ್ರಗಳೂ ಸಂವಾದ ರೂಪದಲ್ಲಿ ಕಥೆಯನ್ನು ಹೇಳುವುದು, ಪುರಾಣಾಂಶಗಳನ್ನು ಚರ್ಚಿಸುವುದು ಈ ಕಲೆಯಲ್ಲಿ ಕಂಡುಬರುತ್ತದೆ. ಇದರ ಅನಂತರ ಮೂರು ಜನ ಕಲಾವಿದರು ಪ್ರಧಾನವಾಗಿದ್ದು ಒಬ್ಬ ಪ್ರಧಾನ ಕಥೆಗಾರನಾಗಿದ್ದು ಇಬ್ಬರು ಕಲಾವಿದರು ಜೊತೆಗಿದ್ದು (ಹಿಮ್ಮೇಳವಾಗಿ) ಕಥೆಯನ್ನು ಅಭಿನಯಪೂರ್ವಕವಾಗಿ ಮಾಡಿ ತೋರಿಸುವ, ಪ್ರದರ್ಶಿಸುವ ಕಲೆಗಳು ಪರಿವರ್ತಿತ ಕಲೆಯ ರೂಪಗಳು. ಪರಿಪೂರ್ಣವಾದ ನಾಟಕಕ್ಕೆ ಇವು ಮೊದಲ ರೂಪಗಳೆಂದು ಹೇಳಲು ಅವಕಾಶವಿದೆ. ಇಂತಹ ಕಲೆಗಳು ತೆಲುಗಿನಲ್ಲಿ ಅಧಿಕ ಸಂಖ್ಯೆಯಲ್ಲಿವೆ.

ಮೂರುಜನ ಕಲಾವಿದರಿದ್ದು ಕಲೆಯನ್ನು ಪ್ರದರ್ಶಿಸುವುದರಲ್ಲಿ ತುಂಬಾ ಅನುಕೂಲವಿದೆ. ಸಂಭಾಷಣೆಗಳಲ್ಲಿ ಒಬ್ಬೊಬ್ಬರು ಒಂದೊಂದು ಪಾತ್ರವನ್ನು ವಹಿಸಿಕೊಂಡು ಮಾತನಾಡುತ್ತಾರೆ. ಹಾಡುವಾಗ ಕಥೆಯನ್ನು ಹೇಳುವ ಸಂದರ್ಭದಲ್ಲಿ ಆ ಕಲಾವಿದರು ವಿವಿಧ ಪಾತ್ರಗಳನ್ನು ವಹಿಸಿ ಹೇಳುವುದು ಇಲ್ಲಿ ನಡೆಯುತ್ತದೆ. ಪ್ರೇಕ್ಷಕರಿಗೆ ಇಲ್ಲಿ ಕಥೆ ಚೆನ್ನಾಗಿ ಗೋಚರವಾಗುತ್ತದೆ. ಏಕವ್ಯಕ್ತಿ ಪ್ರದರ್ಶನಗಳಲ್ಲಿ ಮೊದಲು ಪ್ರಾರಂಭವಾದ ಜನಪದ ಪ್ರದರ್ಶನ ಕಲಾ ಸಂಪ್ರದಾಯ ಇಲ್ಲಿ ಪ್ರಮುಖವಾಗಿದೆ. ಸಂಪೂರ್ಣವಾದ ನಾಟಕ ವ್ಯವಸ್ಥೆಯಲ್ಲಿ ಸ್ವಲ್ಪ ಪರಿಣಾಮಕಾರಿಯಾದ ರೂಪ ತಾಳಿದೆ ಎಂದು ಹೇಳಬಹುದು. ತೆಲುಗಿನವರ ಜನಪದ ಕಲಾ ಸಂಪ್ರದಾಯಗಳಲ್ಲಿ ಇಂತಹ ಮೂರು ಜನ ವ್ಯಕ್ತಿಗಳು ಪ್ರಧಾನವಾಗಿರುವ ಕಲೆಗಳು ಬಹಳಷ್ಟಿವೆ. ಇವುಗಳಲ್ಲಿ ಮೊದಲಿಗೆ ಹೇಳಬೇಕಾದ ಕಲಾ ರೂಪವೆಂದರೆ ಶಾರದ (ತಂಬೂರಿ) ಕಥೆ. ಇದನ್ನೇ ಜಂಗಂ ಕಥೆ ಎಂದು ಕರೆಯುತ್ತಾರೆ. ಇಂದು ಪ್ರಚಲಿತದಲ್ಲಿರುವ ಬುರ‍್ರಕಥೆ ಕಲಾರೂಪಕ್ಕೆ ಇದು ಮೂಲ ರೂಪ. ಇದರಲ್ಲಿ ಒಬ್ಬ ಪ್ರಧಾನ ಕಥೆಗಾರ, ಇಬ್ಬರು ಹಿಮ್ಮೇಳದವರು ಇರುತ್ತಾರೆ. ಕಥಾಗಾನವನ್ನು ಪ್ರಧಾನವಾಗಿ ಕಥೆಗಾರನೇ ಮಾಡಿದರೂ ಕಥಾ ವಿಸ್ತರಣೆ ಮಾತ್ರ ಮೂವರಿಂದ ನಡೆಯುತ್ತದೆ. ಮೂರು ಜನರ ಮಧ್ಯೆ ನಡೆಯುವ ಸಂಭಾಷಣೆಗಳ ರೂಪದಲ್ಲಿ ಕಥಾ ವ್ಯಾಪ್ತಿ ಇರುತ್ತದೆ. ಇಂತಹ ಕಲೆಯ ರೂಪಗಳಿಗೆ ಉದಾಹರಣೆಯಾಗಿ ಆಸಾದಿ ಕಥೆ, ಪಿಚ್ಚುಕುಂಟರ ಕಥೆ, ಪಾಂಡವರ ಕಥೆ, ಗೊಲ್ಲಸುದ್ದುಲು, ಒಗ್ಗು ಕಥೆಯಂಥ ಅನೇಕ ಕಲಾರೂಪಗಳನ್ನು ಹೇಳಬಹುದು. ಜನಪದ ಪ್ರದರ್ಶನ ಕಲಾ ಸಂಪ್ರದಾಯಗಳಲ್ಲಿ ಮತ್ತೊಂದು ವಿಶಿಷ್ಟ ಶೈಲಿ ತೆಲುಗಿನವರಿಗಿದೆ.

ಇಂತಹ ಪ್ರದರ್ಶನ ಸಂಪ್ರದಾಯಗಳು ತುಂಬ ವಿರಳ ಎನ್ನಬಹುದು. ಒಂದು ಚಿತ್ರ ಪಟವನ್ನು ಪ್ರದರ್ಶಿಸುತ್ತಾ ಮೇಲೆ ಹೇಳಿದ ಮೂವರು ಕಲಾವಿದರು ಸೇರಿ ಕಥೆಯ ಗಾನಮಾಡುವುದು ಇಲ್ಲಿ ವಿಶೇಷ. ಕಲಾವಿದರು ಹೇಳುವ ಕಥೆಯನ್ನು ಕುರಿತಂತೆ ಒಂದು ಬಟ್ಟೆಯ ಮೇಳೆ ಚಿತ್ರ ಬಿಡಿಸುತ್ತಾರೆ. ಈ ಬಟ್ಟೆ ನಾಲ್ಕು ಐದು ಅಡಿಗಳಷ್ಟು ಅಗಲವಿರುತ್ತದೆ. ೪೦ ರಿಂದ ೫೦ ಅಡಿಗಳಷ್ಟು ಉದ್ದವಾಗಿ ಸುತ್ತ ಸುತ್ತಿರುತ್ತದೆ. ಈ ಸುರಳಿಯನ್ನು ಸಮಾನಾಂತರವಾಗಿರುವ ಎರಡು ಕಂಬಗಳ ಮೇಳೆ ಕೂರಿಸಿ ಪಟವನ್ನು ಬಿಡಿಸುತ್ತಾ ಪ್ರಧಾನ ಕಥೆಗಾರ ಚಿತ್ರಿಸಿದ ಚಿತ್ರಗಳನ್ನು ಕೋಲಿನಿಂದ ತೋರಿಸುತ್ತಾ ಕಥೆಯನ್ನು ಹಾಡುವುಉದ, ವಿವರಿಸುವುದು ಇಲ್ಲಿಯ ವಿಶೇಷ. ನೇತು ಹಾಕಿರದ ಪಟದ ಮುಂದೆ ಇವರು ನಿಂತು ಕಥೆಯನ್ನು ಸಂಗೀತ ವಾದ್ಯಗಳ ಸಹಾಯದಿಂದ ಪ್ರದರ್ಶಿಸುತ್ತಾರೆ. ಕಥೆಗಾರ ಹಿಮ್ಮೇಳದವರು ಸಂಗೀತ ವಾದ್ಯಗಳು, ಮೇಲೆ ಹೇಳಿದ ಶಾರದ ಕಥೆಯಂಥ ಕಲಾರೂಪಗಳಲ್ಲಿ ಇರುವಂತೆ ಕಾಣುವ ಪಟ ಪ್ರದರ್ಶನ ಇಲ್ಲಿಯ ಕಲಾಪ್ರದರ್ಶನಗಳಲ್ಲಿ ವಿಶೇಷ. ಇಂತಹ ಕಲೆಗಳು ಸಾಕಷ್ಟಿವೆ. ರಜಕರ ಪಟದ ಕಥೆ(ಚಾಖಲಿ ಪಟ ಕಥೆ), ಗೌಡಜೆಟ್ಟಿ ಪಟದ ಕಥೆ, ದಕ್ಕಲಿ ಪಟದ ಕಥೆ ಕೂನಪುಲಿ ಪಟದ ಕಥೆ ಇದಕ್ಕೆ ಉತ್ತಮ ಉದಾಹರಣೆಗಳು. ಯಾದವರಿಗೆ ಕಥೆಗಳನ್ನು ಹೇಳುವ ತೆರಚೀರಲವಾರು ಎಂಬ ಕಲಾವಿದರು ಸಹ ಚಿತ್ರಿಸಿದ ಪಟವನ್ನು ಆಧಾರವಾಗಿ ಮಾಡಿಕೊಳ್ಳುವ ಕಥೆಗಳನ್ನು ಹೇಳುತ್ತಾರೆ. ಆದರೆ ಇವರ ಪಟದ ಶೈಲಿ ಸ್ವಲ್ಪ ಭಿನ್ನವಾಗಿರುತ್ತದೆ. ಮುಂದೆಚ್ಚುವಾಳ್ಳು ಎಂಬ ಯಾದವರಿಗೆ ಆಶ್ರಿರಾದವರಲ್ಲಿಯೂ ಮತ್ತಷ್ಟು ಭಿನ್ನವಾದ ಕಲಾರೂಪವಿದೆ. ಅವರು ಕಥೆಯಲ್ಲಿಯ ಪಾತ್ರಗಳನ್ನು ಕೆಲವು ಗೊಂಬೆಗಳನ್ನಾಗಿ ಮಾಡಿ ಅವುಗಳನ್ನು ಮುಂದೆ ಇಟ್ಟು ಪ್ರದರ್ಶಿಸುತ್ತಾ ಕಥೆಯನ್ನು ಹೇಳುತ್ತಾರೆ.

ಕಲಾಪ್ರದರ್ಶನದ ಪರಿಣಾಮ ಕುರಿತಂತೆ ಹೇಳುವಾಗ ತೊಗಲುಗೊಂಬೆ ಆಟಕ್ಕೆ ಈ ಪಟದ ಕಥೆಗಳನ್ನು ಮೊದಲ ರೂಪವೆಂದು ಹೇಳಲು ಅವಕಾಶವಿದೆ. ಪಟದ ಪ್ರದರ್ಶನ ಕಲೆಗಳು ತೆಲುಗು ಜನಪದ ಪ್ರದರ್ಶನ ಕಲೆಯ ಸಂಪ್ರದಾಯಗಳಲ್ಲಿ ಒಳ್ಳೆಯ ಸಂಪ್ರದಾಯವೆನ್ನಬಹುದು. ಪ್ರದರ್ಶನ ಕಲೆಯ ಕ್ರಮದಲ್ಲಿ ವೀಧಿ ನಾಟಕ ಪ್ರಕಾರ ನಾಟಕದ ಅನಂತರದ ಸ್ಥಾನವನ್ನು ಪಡೆದದ್ದು ಎಂದು ಹೇಳಬಹುದು. ಇದರಲ್ಲಿ ಒಬ್ಬೊಬ್ಬ ವ್ಯಕ್ತಿಒಂದೊಂದು ಪಾತ್ರವನ್ನು ಗ್ರಹಿಸಿ ನಡೆಸಲು ಅವಕಾಶವಿದೆ. ಅಷ್ಟೇ ಅಲ್ಲದೆ ಪೂರ್ಣ ಪ್ರಮಾಣದ ಅಭಿನಯಕ್ಕೂ ಇಲ್ಲಿ ಸ್ಥಾನವಿದೆ. ಆಹಾರ್ಯ, ಇತರ ಪ್ರದರ್ಶನ ವಸ್ತುಗಳು, ರಂಗ ಸೌಕರ್ಯಗಳು ಏನೂ ಇಲ್ಲದೆಯೇ ಎಲ್ಲವೂ ಇದ್ದಂತೆ ಭಾವಿಸಿಕೊಂಡು ಪ್ರದರ್ಶಿಸಲು ಅವಕಾಶವಿರುವ ನಾಟಕ ರೂಪವಾಗಿ ವೀಧಿ ನಾಟಕಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿವೆ. ತೆಲಂಗಾಣ, ಪ್ರಾಂತ್ಯದಲ್ಲಿರುವ ವೀಧಿ ನಾಟಕಗಳು, ರಾಯಲಸೀಮೆಯ ಅನಂತರಪುರ ಪ್ರಾಂತಗಳಲ್ಲಿರು ಬಯಲಾಟಗಳು, ಕುಪ್ಪಂನ ವೀಧಿ ನಾಟಕ ಇಂಥವು. ಇವುಗಳಿಗೆ ಪ್ರತ್ಯೇಕವಾಗಿ ರಂಗಸ್ಥಳ ಅವಶ್ಯಕತೆ ಇಲ್ಲ. ವಾಲಕಂ ಎನ್ನುವುದು ಸಹ ವೀಧಿ ನಾಟಕ ಪ್ರಕಾರ. ಒಬ್ಬನೆ ಕಲಾವಿದನಿರುವುದು ಅಲ್ಲಿಯ ವಿಶೇಷ. ಈ ವೀಧಿ ನಾಟಕ ರೀತಿಯ ಪ್ರದರ್ಶನ ಕಲೆಯ ಸಂಪ್ರದಾಯಗಳು ಅನಂತರ ಮತ್ತಷ್ಟು ಮಾರ್ಪಾಡುಗೊಂಡು ನಾಟಕಕ್ಕೆ ಪರಿಪೂರ್ಣವಾಗಿ ಸೇರಿದಂಥ ಕಲೆ, ಯಕ್ಷಗಾನ. ತೆಲುಗಿನಲ್ಲಿ ಭಿನ್ನವಾದ ಯಕ್ಷಗಾನ ಕಲಾರೂಪಗಳು ಇವೆ. ಎಲ್ಲ ಪಾತ್ರಗಳಿಗೂ ವೇಷಧಾರಿಗಳಿದ್ದು ಪೂರ್ಣ ಆಹಾರ್ಯಇದ್ದು ರಂಗಸ್ಥಳವನ್ನು ಸಹ ವ್ಯವಸ್ಥಿತವಾಗಿ ಏರ್ಪಡಿಸಿಕೊಂಡು ಪ್ರದರ್ಶಿಸುವ ಕಲೆ ಯಕ್ಷಗಾನ.

ಕೆಲವು ಯಕ್ಷಗಾನ ಪ್ರದರ್ಶನಗಳಿಗೆ ಪ್ರತ್ಯೇಕವಾದ ರಂಗಸ್ಥಳದ ಅವಶ್ಯಕತೆ ಇಲ್ಲದೆಯೇ ಬೀದಿಯಲ್ಲೂ ಪ್ರದರ್ಶಿಸಬಹುದು. ಆದರೆ ಇಲ್ಲಿ ಪಾತ್ರಗಳು ಪಾತ್ರಧಾರಿಗಳು ಸಂಪೂರ್ಣವಾಗಿರುವುದನ್ನು ಗಮನಿಸಬೇಕು. ಇಂಥ ಯಕ್ಷಗಾನಗಳಲ್ಲಿ ಚಿಂದುಯಕ್ಷಗಾನವನ್ನು ಕುರಿತು ಮೊದಲು ಉದಾಹರಿಸಬಹುದು. ಚಿಂದು ಯಕ್ಷಗಾನವನ್ನು ತೆಲುಗಿನಲ್ಲಿರುವ ಎಲ್ಲ ಯಕ್ಷಗಾನಗಳಿಗಿಂತ ಪ್ರಾಚೀನವಾದುದೆಂದು ಹೇಳಲು ವಿವಿಧ ಚಾರಿತ್ರಿಕ ಆಧಾರಗಳು ದೊರೆಯುತ್ತವೆ. ಚಿಂದು ಯಕ್ಷಗಾನ ಇಂದಿಗೂ ತನ್ನ ತನವನ್ನು ಕಳೆದುಕೊಳ್ಳದೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ತೆಲಂಗಾಣ ಯಕ್ಷಗಾನ ಪ್ರಕಾರವೂ ಚಿಂದು ಯಕ್ಷಗಾನಕ್ಕೆ ತುಂಬಾ ಹತ್ತಿರ. ಕರ್ನಾಟಕದಲ್ಲಿ ಇಂದು ಬಹಳ ಪ್ರಚಾರದಲ್ಲಿರುವ ಯಕ್ಷಗಾನ ಶೈಲಿ ಚಿಂದು ಯಕ್ಷಗಾನ ಶೈಲಿಗೆ ಹತ್ತಿರವಾಗಿದು ಇದು ಚಿಂದು ಯಕ್ಷಗಾನದಿಂದ ಅಭಿವೃದ್ಧಿ ಹೊಂದಿದೆಯೆಂದು ಹೇಳಲು ಅವಕಾಶವಿವೆ. ಚಿಂದು ಯಕ್ಷಗಾನ ತೆಲಂಗಾಣದಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಇನ್ನು ಕೂಚಿಪುಡಿ ಯಕ್ಷಗಾನ ಈ ಕಾಲದಲ್ಲಿ ತುಂಬ ಪರಿಣಾಮಕಾರಿಯಾಗಿ ಆಧುನೀಕರಣಗೊಂಡು ಶಾಸ್ತ್ರೀಯ ಪ್ರದರ್ಶನ ಸಂಪ್ರದಾಯ ಎಂದು ಹೆಸರು ಪಡೆದರೂ ಇದು ಪ್ರಾಚೀನ ಕಾಲದಿಂದ ಇದ್ದಂಥ ಯಕ್ಷಗಾನ ಸಂಪ್ರದಾಕ್ಕೆ ಸೇರಿದೆ. ಉತ್ತರ ಭಾಗವತ, ಕುಪ್ಪಂ ನಾಟಕ ಕೂಡ ಭಿನ್ನವಾದ ಯಕ್ಷಗಾನ ಸಂಪ್ರದಾಯಗಳೇ. ಚಿರುತಲ ಯಕ್ಷಗಾನ ಎಂಬ ಪ್ರಕಾರ ತುಂಬ ಭಿನ್ನ ಶೈಲಿಯಲ್ಲಿರುತ್ತದೆ. ಯಕ್ಷಗಾನದಲ್ಲಿ ಪಾತ್ರ ಮಾಡುವ ಕಲಾವಿದರೆಲ್ಲರೂ ಚಿರುತಲ ಯಕ್ಷಗಾನ ಎಂಬ ಪ್ರಕಾರ ತುಂಬ ಭಿನ್ನ ಶೈಲಿಯಲ್ಲಿರುತ್ತದೆ. ಯಕ್ಷಗಾನದಲ್ಲಿ ಪಾತ್ರ ಮಾಡುವ ಕಲಾವಿದರೆಲ್ಲರೂ ಚಿರುತಲು ಎಂಬ ಮರದ ತಾಳವಾದ್ಯವನ್ನು ಧರಿಸಿ ಬಾರಿಸುತ್ತಾ ಹಾಡುಹಾಡುತ್ತಾ ಕಥೆಯನ್ನು ಹೇಳುತ್ತಾರೆ. ಇವರು ಸುತ್ತ ತಿರುಗುತ್ತಿರಲು ಸಂಭಾಷಣೆಗಳು ಇರುವ ಪಾತ್ರಗಳು ಮಾತ್ರ ಮಧ್ಯೆ ಬಂದುಹಾಡುತ್ತ ಕಥೆ ಹೇಳುತ್ತಿರುತ್ತವೆ. ಎಲ್ಲ ಪಾತ್ರಗಳಿಗೂ ವೇಷಭೂಷಣಗಳು ಇರುತ್ತವೆ. ಪ್ರಾಚೀನ ಕಾಲದಿಂದ ಜನಪದ ಪ್ರದರ್ಶನ ಕಲೆಗಳಲ್ಲಿ ಮನುಷ್ಯ ಸಾಧಿಸಿದ ಸಾಧನೆಗೆ ಉದಾಹರಣೆಗೆ ಪ್ರಾಯೋಗಿಕವಾಗಿ ಕಾಣಿಸುತ್ತ ಮನುಷ್ಯ ಈ ಕಲಾ ಸಂಪ್ರಾದಯದಲ್ಲಿ ಸಾಧಿಸಿದ ವೈಜ್ಞಾನಿಕ ಸಾಧನೆಗೆ ಪ್ರತೀಕವಾಗಿ ಕಾಣಿಸುವ ಕಲಾ ರೂಪವೇ ತೊಗಲುಗೊಂಬೆಯಾಟ. ಇದನ್ನು ಪ್ರಾಚೀನ ಕಾಲದ ಸಿನಿಮಾ ಎಂದು ಹೇಳಬಹುದು.

ಒಂದು ಕಥೆಯನ್ನು ಮಾನವನ ಪಾತ್ರದಲ್ಲಿ ಪ್ರದರ್ಶಿಸುವುದು ಪ್ರಥಮ ಚಿಂತನೆಯಾದರೆ, ಕಥೆಯನ್ನು ಮಾನವನ ಪಾತ್ರದಲ್ಲಿ ಅಲ್ಲದೆ ಮಾನವ ನಿರ್ಮಿತ ಬೊಂಬೆಗಳಿಂದ ಪ್ರದರ್ಶಿಸಬಹುದು ಎಂಬ ಆಲೋಚನೆ ಇನ್ನೊಂದು. ಮಾನವನು ಅಭಿವೃದ್ಧಿ ಹೊಂದಿ ಸಂಕೇತವಾಗಿ ಹೇಳಬಹುದಾದ ವಿಷಯ. ಇಂತಹ ಕಲೆಗಳೇ ತೊಗಲುಗೊಂಬೆಯಾಟ, ಕೀಲುಗೊಂಬೆಯಂತಹ ಕಲೆಗಳು. ಜನಪದ ಕಲಾ ಪ್ರದರ್ಶನದಲ್ಲಿ ಮನುಷ್ಯ ಸಾಧಿಸಿದ ಪ್ರಗತಿಗೆ ಇವು ಗುರುತುಗಳು. ತೆಲುಗರಿಗೆ ಈ ಎರಡು ಕಲಾ ಪ್ರದರ್ಶನ ಸಂಪ್ರದಾಯಗಳು ಇವೆ. ತೆಲುಗಿನಲ್ಲಿ ತೊಗಲು ಗೊಂಬೆಯಾಟ, ಕೀಲುಗೊಂಬೆಯಾಟ ೧೨ನೆಯ ಶತಮಾನದಿಂದ ಇದ್ದುವೆಂದು ಹೇಳಲು ಚಾರಿತ್ರಿಕ ಆಧಾರಗಳು ಸಿಕ್ಕಿವೆ. ತೊಗಲುಗೊಂಬೆಯಾಟದ ಸಂಗೀತ ರೀತಿ, ಸಾಹಿತ್ಯದ ರೀತಿ ಇವು. ಪ್ರಾಥಮಿಕ ಯಕ್ಷಗಾನಕ್ಕೆ ಸೇರಿದವು. ಇಲ್ಲಿಯ ಪಾತ್ರಗಳು ಮನುಷ್ಯರಿಗೆ ಬದಲಾಗಿ ಗೊಂಬೆಗಳು. ತೊಗಲುಬೊಂಬೆಯಾಟಗಳನ್ನು ಪ್ರದರ್ಶಿಸುವವರು ಆರಂಭದ ದಿನಗಳಿಂದಲೂ ತೆಲುಗರೇ ಆಗಿದ್ದಾರೇನೋ ಹೇಳಲಾಗದು. ಆದರೆ ಕಾಲಾಂತರದಲ್ಲಿ ಕಾಣಿಸುವ ತೊಗಲುಗೊಂಬೆಯ ಕಲಾವಿದರೆಲ್ಲರೂ ಮರಾಠಿ ಭಾಷೆಯನ್ನು ಮಾತನಾಡುವ ಆರೆ ಮರಾಠಿಗರು ಎನ್ನುವ ಪಂಗಡಕ್ಕೆ ಸೇರಿದವರು. ನಮಗೆ ನಾಟಕ ಪ್ರಕಾರ ಸಹ ಮಹಾರಾಷ್ಟ್ರದಿಂದ ಸ್ವಲ್ಪ ಮಟ್ಟಿಗೆ ವಲಸೆ ಬಂದಂತೆ ತಿಳಿದು ಬರುತ್ತದೆ. ಜನಪದ ಕಲೆಗಳು ಪ್ರಯಾಣ ಬೆಳೆಸಿದ್ದು ಸಹಜವಾಗಿ ನಡೆದ ಪ್ರಕ್ರಿಯೆ. ಇವರ ಮಾತೃಭಾಷೆ ಮರಾಠಿಯಾದರೂ ಇವರ ಪ್ರದರ್ಶನಗಳಲ್ಲಿ ಮಾತನಾಡುವ ತೆಲುಗಿನಲ್ಲಿ ಮಾತ್ರ ಮರಾಠಿ ಕಾಣಿಸುವುದಿಲ್ಲ. ತೆಲುಗು ಮಾತ್ರ ಭಾಷೆಯಾದವರ ತೆಲುಗು ಹೇಗೆ ಇರುತ್ತದೆಯೋ ಹಾಗೆಯೇ ಇವರ ತೆಲುಗು ಇರುತ್ತದೆ. ಕೆಲವು ಶತಮಾನಗಳಿಂದ ಇವರು ಇಲ್ಲಿ ಇರುವುದರಿಂದ ಇದು ಸಾಧ್ಯವಾಗಿದೆ. ರಾಮಾಯಣ, ಭಾರತ ಕಥೆಗಳನ್ನು ಇವರು ಪ್ರದರ್ಶಿಸುತ್ತಿದ್ದಾರೆ. ಕೀಲುಗೊಂಬೆ ಆಟದ ಕಲಾವಿದರು ತೆಲುಗರೇ. ತೆಲುಗು ಮೂಲದ ದಲಿತ ಕುಲಗಳ ಉಪಕುಲಗಳಲ್ಲಿ ಒಂದಾದ ಬುಡಿಗ ಜಂಗಾಲರು. ಆದರೆ ಬುಡಿಗ ಜಂಗಾಲರೆಲ್ಲರಿಗೂ ವೃತ್ತಿ ಇಲ್ಲ. ಅದಕ್ಕೆ ಇವರನ್ನು ಬೊಮ್ಮಲೋಳ್ಳು(ಗೊಂಬೆಯವರು) ಎಂದು ಪ್ರತ್ಯೇಕವಾಗಿ ಕರೆಯುತ್ತಾರೆ.

ಕೀಲುಗೊಂಬೆಯಾಟವೂ ೧೨ನೆಯ ಶತಮಾನಕ್ಕಾಗಲೇ ಇತ್ತೆಂದು ಹೇಳಲು ಆಧಾರಗಳು ಸಿಕ್ಕಿವೆ. ಇವರಿಗೆ ಅವಶ್ಯಕವಾದ ಕೀಲು ಬೊಂಬೆಗಳನ್ನು ತಯಾರಿಸಿ ಕೊಟ್ಟ ವಿಶ್ವಕರ್ಮ ಕುಟುಂಬಗಳು ಈಗಲೂ ಇವೆ. ಇವರನ್ನು ಗೊಂಬೆಟಾಯದವರು ಎಂದು ಕರೆಯುತ್ತಾರೆ. ಕೀಲುಗೊಂಬೆಯಾಟ ಸಹ ಮೂಲದಲ್ಲಿ ಯಕ್ಷಗಾನ ಪ್ರಕಾರವೇ. ಪ್ರದರ್ಶನ ಕಲೆಗಳಲ್ಲಿ ಮಾನವೇತರ ಪಾತ್ರಧಾರಿಗಳಲ್ಲಿದ್ದ ಕಲಾರೂಪಗಳು ತೆಲುಗು ಸಂಪ್ರದಾಯದಲ್ಲಿ ಹೇಗಿವೆ ಎಂದು ನೋಡಿದೆವು. ಇಲ್ಲಿ ಪ್ರಸ್ತಾವಿಸಿರುವ ಕಲಾ ರೂಪಗಳಲ್ಲಿ ಹಲವನ್ನು ಕುರಿತು ವಿವರವಾದ ಮಾಹಿತಿಗಳು ಈ ಗ್ರಂಥದಲ್ಲೇ ದೊರೆಯುತ್ತವೆ. ಇವಲ್ಲದೆ ಇಲ್ಲಿ ಪ್ರಸ್ತಾಪಿಸಬೇಕಾದ ವೈವಿಧ್ಯಮಯವಾದ ಕಲಾರೂಪಗಳು, ಸಂಗೀತ ಪ್ರಧಾನವಾದ ಕಲೆಗಳು ಕೆಲವಿವೆ. ಉತ್ತರಾಂಧ್ರ ಪ್ರಾಂತ್ಯದಲ್ಲಿ ಪ್ರಚಲಿತದಲ್ಲಿರುವ ತಪ್ಪೆಟಗುಳ್ಳು ಕಲೆ ಸಂಗೀತ ಪ್ರಧಾನವಾದುದು. ಪ್ರದರ್ಶನ ಅವಕಾಶವಿದ್ದರೂ ಇದರಲ್ಲಿ ವಾದ್ಯಕ್ಕೆ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯ ಇರುತ್ತದೆ. ಕೋಲಾಟ, ವಿವಿಧ ರೀತಿಯ ಭಜನೆ ಸಂಪ್ರದಾಯಗಳು ಪ್ರದರ್ಶನದ ಜೊತೆಗೆ ಸಂಗೀತಕ್ಕೂ ಪ್ರಾಧನ್ಯತೆ ಇರುವ ಕಲೆಗಳು. ಇನ್ನು ವಿವಿಧ ನೃತ್ಯ ಸಂಪ್ರದಾಯಗಳು, ಗಿರಿಜನ ನೃತ್ಯ ಸಂಪ್ರದಾಯಗಳು ನಮ್ಮಲ್ಲಿ ಇವೆ. ತೆಲುಗು ನಾಡಿನಲ್ಲಿ ಈ ರೀತಿ ಜನಪದ ಕಲೆಗಳಲ್ಲಿ ಹೆಚ್ಚು ವೈವಿಧ್ಯಭರಿತವಾದ ಪ್ರದರ್ಶನ ಸಂಪ್ರದಾಯಗಳು ಇರುವುದನ್ನು ತುಂಬಾ ಪ್ರಾಚೀನವಾದವು ಇರುವುದನ್ನು ವಿವಿಧ ಕಲೆಯ ಪರಿಣಾಮಕರವಾದ ಕ್ರಿಯಗಳನ್ನು ಮುಟ್ಟುವ ಕಲೆಯ ರೂಪಗಳು ಇರುವುದನ್ನು ಗಮನಿಸಬಹುದು.

ಪಿ.ಎಸ್.ಸಿ. ಅನುವಾದ ವಿ.ಆರ್.