ತೆಕ್ಕನ್ ಪಾಟುಗಳ್ ಉತ್ತರ ತಿರುವಾಂಕೂರಿನಲ್ಲಿ ಪ್ರಾಚೀನ ಕಾಲದಿಂದಲೇ ಪ್ರಚಲಿತದಲ್ಲಿರುವ ಜನಪದ ಹಾಡುಗಳನ್ನು ತೆಕ್ಕನ್‌ ಪಾಟುಗಳ್ ಎಂದು ಕರೆಯುತ್ತಾರೆ. ಇಂದಿನ ಕೇರಳ, ತಮಿಳುನಾಡು ರಾಜ್ಯಗಳಿಗೆ ಸೇರಿದ ತಿರುವನಂತಪುರ, ಕನ್ಯಾಕುಮಾರಿ ಜಿಲ್ಲೆಗಳನ್ನು ಹಿಂದಿನ ಕಾಲದಲ್ಲಿ ಉತ್ತರ ತಿರುವಿದಾಂಕೂರು ಎಂದು ಕರೆಯುತ್ತಿದ್ದರು. ತಿರುವನಂತಪುರದಿಂದ ಉತ್ತರ ಭಾಗದ ಪ್ರದೇಶಗಳಾದ ನೆಡುಮಂಗಾಡ್, ನೆಯ್ಯಾಟಿಂಗರ, ವಿಳವಂಗೋಡು, ಕಲ್ಕುಳಂ, ತೇವಾಲ, ಅಗಸ್ತೀಶ್ವರ ತಾಲೂಕುಗಳಲ್ಲಿ ತೆಕ್ಕನ್‌ ಪಾಟುಗಳ್ ಹೇರಳವಾಗಿ ಕಾಣಿಸುತ್ತವೆ. ಹಾಡುಗಳಲ್ಲಿ ಕಂಡು ಬರುವ ಚಾರಿತ್ರಿಕ ವಸ್ತುಗಳ ಹಿನ್ನೆಲೆಯಲ್ಲಿ ಇವುಗಳು ೧೪ನೇ ಶತಮಾನದಿಂದ ೧೮ನೇ ಶತಮಾನದ ಮಧ್ಯೆ ರಚಿತವಾಗಿರಬಹುದೆಂದು ಊಹಿಸಲಾಗಿದೆ. ಅತ್ಯಂತ ಪ್ರಾಚೀನ ತೆಕ್ಕನ್‌ಪಾಟು ಯಾವುದೆಂದು ಗುರುತಿಸಲು ಯಾವುದೇ ಆಧಾರಗಳಿಲ್ಲ. ಜನಸಾಮಾನ್ಯರು ಬಳಸುವ ಮಲಯಾಳಂ ಮತ್ತು ತಮಿಳು ಮಿಶ್ರಿತವಾದ ಆಡುಭಾಷೆಯನ್ನು ತೆಕ್ಕನ್‌ ಪಾಟುಗಳಲ್ಲಿ ಕಾಣಬಹುದು.

ತೆಕ್ಕನ್‌ ಪಾಟುಗಳಲ್ಲಿ ವೀರರ ಆರಾಧನೆ ಸಂಬಂಧವಾದ ಹಾಡುಗಳು ಮಾತ್ರವಲ್ಲದೆ ವೈವಿಧ್ಯಪೂರ್ಣ ಹಾಡುಗಳಿವೆ. ಹಾಡಿನ ವಸ್ತು, ಆಶಯ ಮತ್ತು ಉದ್ದೇಶಗಳನ್ನು ಗಮನಿಸಿಕೊಂಡು ಅವುಗಳನ್ನು ವಾಯನಪಾಟ್, ಶಾಸ್ತ್ರಪಾಟ್, ಕೇಳ್ವಿಪಾಟ್ ಎಂದು ವಿಂಗಡಿಸಲಾಗಿದೆ. ವಾಯನಪಾಟುಗಳು ಪೂರ್ಣವಾಗಿ ಧಾರ್ಮಿಕ ಹಿನ್ನೆಲೆಯುಳ್ಳವು. ಕೆಲವು ದೇವಸ್ಥಾನಗಳಲ್ಲಿ ಸಂಜೆ ದೀಪಾರಾಧನೆ ಮಾಡಿ, ತೆಕ್ಕನ್ ಪಾಟುಗಳನ್ನು ವಾಚಿಸುವರು. ಈ ವಾಚನವನ್ನು ‘ಏಡುವಾಯನ’ ಎನ್ನುವರು. ‘ಏಡು’ ಎಂದರೆ ಮಲಯಾಳದಲ್ಲಿ ‘ಓಲೆಗ್ರಂಥ’ ಎಂದರ್ಥ.

ಶಾಸ್ತ್ರಸಂಬಂಧವಾದ ಹಾಡುಗಳನ್ನು ಶಾಸ್ತ್ರಪಾಟ್ ಎನ್ನುವರು. ಮುಖ್ಯವಾಗಿ ಮರ್ಮಚಿಕಿತ್ಸೆ, ಆಯುರ್ವೇದ ಚಿಕಿತ್ಸೆ ಮೊದಲಾದ ಸಂದರ್ಭಗಳಲ್ಲಿ ಈ ಹಾಡುಗಳನ್ನು ಹಾಡುವರು. ಕೇಳ್ವಿಪಾಟು ಆರಾಧನೆ ಮತ್ತು ಮನರಂಜನೆಗೆ ಸಂಬಂಧಿಸಿರುವುದಾಗಿದೆ. ಮನರಂಜನೆಗೆ ಹಿಮ್ಮೇಳ ಹಾಗೂ ಧಾರ್ಮಿಕತೆಯ ಅಂಗವಾಗಿ ಕೂತ್ತು, ವೆಳಿಚ್ಚಪಾಡನ ಕುಣಿತಗಳು ಇದ್ದು, ಇದೊಂದು ಧಾರ್ಮಿಕ ರಂಗಕಲೆಯ ಗುಣವನ್ನು ಪ್ರಕಟಿಸುವುದು. ದೇವಸ್ಥಾನಗಳ ಜಾತ್ರೆ ಹಾಗೂ ಮದುವೆಯಂತಹ ಶುಭ ಸಮಾರಂಭಗಳಲ್ಲಿ ಕೇಳ್ವಿಪಾಟು ಹಾಡುವರು. ಎಲ್ಲ ವಾಯನ ಮತ್ತು ಕೇಳ್ವಿಪಾಟುಗಳು ತೆಕ್ಕನ್ ಪಾಟುಗಳಲ್ಲ. ನೀಲಿಕಥ, ವಲಿಯಕೇಳಿಕಥ, ಮುತ್ತಾರಮ್ಮನ್ ಕಥ ಇವೆಲ್ಲ ಎರಡೂ ವಿಭಾಗಕ್ಕೆ ಸೇರುತ್ತವೆ.

ಕೇಳ್ವಿಪಾಟುಗಳನ್ನು ಆಶಯಕ್ಕೆ ಹೊಂದಿಕೊಂಡಂತೆ ಮೂರು ವಿಭಾಗ ಮಾಡಿಕೊಳ್ಳಬಹುದು. ದೇವತಾಸ್ತುತಿಪರ, ಕಥಾಪರ ಮತ್ತು ಶಾಸ್ತ್ರಪರ. ದೇವತಾಸ್ತುತಿಪರ ಕೇಳ್ವಿಪಾಟುಗಳನ್ನು ದೇವಸ್ಥಾನಗಳ ಜಾತ್ರೆಯ ಸಂದರ್ಭದಲ್ಲಿ ಹಾಡುತ್ತಾರೆ. ಕಥೆಗೆ ಪ್ರಾಧಾನ್ಯ ನೀಡುವ ಹಾಡುಗಳೇ ಕಥಾಪರ ಪಾಟುಗಳು. ಇವುಗಳನ್ನು ಪುರಾಣ ಕಥೆ. ಇತಿಹಾಸ ಕಥೆ, ಸಾಮುದಾಯಿಕ ಕಥೆ ಎಂದು ಮತ್ತೆ ಮೂರು ವಿಭಾಗ ಮಾಡಬಹುದು. ಶಾಸ್ತ್ರಪಾಟು ಕೃತಿಗಳಿಂದ ಕೆಲವು ಹಾಡುಗಳನ್ನು ತೆಗೆದು, ರಾಗತಾಳಬದ್ಧವಾಗಿ ಹಾಡುವುದನ್ನು ಶಾಸ್ತ್ರಪರ ಪಾಟುಗಳೆನ್ನುವರು.

ಜನಪದ ಕಥಾಗಾನಗಳು (ಕಥನ ಗೀತೆಗಳು): ವಡಕ್ಕನ್ ಪಾಟುಗಳಂತೆ ತೆಕ್ಕನ್‌ಪಾಟುಗಳಲ್ಲಿ ಜನಪದ ಕಥನಗೀತೆಗಳೇ ಮುಖ್ಯವಾಗಿವೆ. ವಸ್ತುವಿನ ಆಧಾರದಲ್ಲಿ ಇವುಗಳನ್ನು ದೈವಿಕ ಕಥೆಗಳು, ಇತಿಹಾಸ ಪುರಾಣ ಕಥೆಗಳು, ಸಾಮಾಜಿಕ ಕಥೆಗಳು, ಚಾರಿತ್ರಿಕ ಕಥೆಗಳು ಎಂದು ವಿಭಾಗಿಸಲಾಗಿದೆ.

೧ ದೈವಿಕ ಕಥೆಗಳು: ಇದರಲ್ಲಿ ಪುರಣಾಪ್ರಸಿದ್ಧ ಕಥೆಗಳು ಮತ್ತು ಗ್ರಾಮದೇವತೆಗಳ ಕಥೆಗಳು ಎಂಬ ಎರಡು ವಿಭಾಗಗಳಿವೆ. ಶಿವ, ವಿಷ್ಣು, ಧರ್ಮಶಾಸ್ತ್ರ ಮೊದಲಾದ ಹಿಂದೂ ಪುರಾಣಗಳ ಕಥೆಗಳು ಒಂದು ವಿಭಾಗವಾದರೆ, ಗ್ರಾಮದೇವತೆಗಳಿಗೆ ಸಂಬಂಧಿಸಿದ ಪುರಾಣ ಕಥೆಗಳು ಎರಡನೆಯದು. ತೆಕ್ಕನ್‌ಪಾಟುಗಳಲ್ಲಿ ಅಕಾಲದಲ್ಲಿ ಸಾವಿಗೀಡಾದ ವೀರಪುರುಷರ, ಮಹಿಳೆಯರ ಕಥೆಗಳು ಸಾಕಷ್ಟಿವೆ. ಗ್ರಾಮದೇವತೆಗಳಾಗಿ ಆರಾಧನೆಗೊಳ್ಳುವ ಇಂತಹ ಕಾರಣಿಕ ವ್ಯಕ್ತಿಗಳು ಜನರ ಧಾರ್ಮಿಕತೆಯ ಅಂಗವಾಗಿ ಶಾಶ್ವತವಾಗಿ ಪಾಟುಗಳಲ್ಲಿ ನೆಲೆನಿಂತಿದ್ದಾರೆ. ನೀಲಿಕಥ, ಮೇಲಾಂಗೋಡು ಯಕ್ಷಿ ಕಥ, ವಲಿಯಕೇಶಿ ಕಥ, ಪುದುವಾತಪಾಟುಗಳೆಲ್ಲ ಇವುಗಳಿಗೆ ಉದಾಹರಣೆಗಳಾಗಿವೆ.

. ಇತಿಹಾಸ ಪುರಾಣ ಕಥೆಗಳು: ರಾಮಾಯಣ, ಮಹಾಭಾರತ ಮೊದಲಾದ ಇತಿಹಾಸ ಕಾವ್ಯಗಳಿಂದ ಆಯ್ದ ಕಥೆಗಳಾಗಿವೆ.

. ಸಾಮಾಜಿಕ ಕಥೆಗಳು: ಸಾಮಾಜಿಕ ಸಮಸ್ಯೆಗಳನ್ನು ಅನಾವರಣಗೊಳಿಸುವುದೇ ಸಾಮಾಜಿಕ ಕಥೆಗಳು. ಶ್ರೀಮಂತರ ದೌರ್ಜನ್ಯಕ್ಕೆ ಬಲಿಯಾಗುವ ಬಡವರು, ಜಾತಿಭೇದದ ಸಮಸ್ಯೆ, ಮಿಶ್ರ ವಿವಾಹದ ಅವಾಂತರಗಳು ಈ ವಿಭಾಗದ ಕಥೆಗಳ ವಸ್ತುಗಳಾಗಿವೆ.

. ಚಾರಿತ್ರಿಕ ಕಥೆಗಳು: ಅಲಿಖಿತವಾದ ಚರಿತ್ರೆಗಳಿಗೆ ಬೆಳಕು ಚೆಲ್ಲುವ ಕಥೆಗಳು ಈ ವಿಭಾಗದ ಪಾಟುಗಳಲ್ಲಿವೆ. ಕಲ್ಕುಳಂ ರಾಜಧಾನಿಯಾಗಿ ವೇನಾಡನ್ನು ಆಳಿರುವ ಕಾಲದ ವಿವರಗಳು ‘ಇರುವಿಕುಟ್ಟಿಪಿಳ್ಳಪೋರ್’ ಎಂಬ ಹಾಡಿನಿಂದ ದೊರಕುತ್ತವೆ.

ಜನಪದ ವೀರಕಥನಗೀತೆಗಳು: ಜನಪದ ವೀರಗೀತೆಗಳಷ್ಟೇ ಮುಖ್ಯವಾದುವು ಜನಪದ ವೀರರ ಕಥನ ಗೀತೆಗಳು. ವಡಕ್ಕನ್ ಪಾಟುಗಳ ನಾಯಕರಾದ ಆರೋಮ್ಮಲ್ ಚೇಗವರ್, ಒದೇನನ್, ಉಣ್ಣಿಯಾರ್ಚಿ ಅವರಂತೆ ತೆಕ್ಕನ್ ಪಾಟುಗಳಲ್ಲಿ ಇರವಿಕುಟ್ಟಿಪಿಳ್ಳಿ, ಕಾಳಿನಾಯರ್ ಮೊದಲಾದವರು ವೀರಪರಾಕ್ರಮಿಗಳಾಗಿದ್ದರೆ. ತೆಕ್ಕನ್‌ಪಾಟುಗಳು ಜನಪದ ಕಲಾಪ್ರಕಾರಗಳಿಗೆ ಸಂಬಂಧಿಸಿವೆ. ಅಮ್ಮಾನ, ಚಂದ್, ಕುಮ್ಮಿ, ಲಾವಣಿ, ವಿಲ್‌ಪಾಟ್, ಕನ್ನಿಯಾನ್ ಕೂತ್, ಕುರತ್ತಿಪಾಟ್ ಮೊದಲಾದುವು ಅವುಗಳಲ್ಲಿ ಕೆಲವು. ಇದರಲ್ಲಿ ವಿಲ್‌ಪಾಟಿಗೆ ಮುಖ್ಯಸ್ಥಾನವಿದೆ. ಜಾಣಪದ ಶೈಲಿಯ ಪಾಟು ಸಾಹಿತ್ಯ; ತೆಕ್ಕನ್‌ಪಾಟುಗಳ ವೈಶಿಷ್ಟ್ಯವೆಂದರೆ ಅವುಗಳ ಸಾಹಿತ್ಯ. ತೆಕ್ಕನ್ ಪಾಟುಗಳು ಪ್ರಚಲಿತವಾಗಿದ್ದ ಪ್ರದೇಶದಲ್ಲಿ ಕೆಲವು ಕವಿಗಳು ಅವುಗಳಿಂದ ಪ್ರಭಾವಿತರಾಗಿ ಸಾಹಿತ್ಯವನ್ನು ರಚಿಸಿದ್ದಾರೆ. ಅಯ್ಯಪ್ಪಪಿಳ್ಳೆ ಆಶಾನರ ರಾಮಕಥಾಪಾಟ್ ಇದಕ್ಕೆ ಉತ್ತಮ ನಿದರ್ಶನ.

ಚಾರಿತ್ರಿಕ ಹಿನ್ನೆಲೆ ಇರುವ ಅನೇಕ ತೆಕ್ಕನ್‌ಪಾಟುಗಳಿವೆ. ವ್ಯಕ್ತಿಚರಿತ್ರೆ ಅಥವಾ ಸಾಮ್ರಾಜ್ಯ ಚರಿತ್ರೆ ಸಂಪೂರ್ಣವಾಗಿ ತೆಕ್ಕನ್‌ಪಾಟುಗಳಲ್ಲಿ ಕಾಣಿಸುವುದಿಲ್ಲ. ನಿರ್ದಿಷ್ಟ ಘಟನೆಗಳ ಇತಿಹಾಸವನ್ನು ಈ ಪಾಟುಗಳಲ್ಲಿ ಕಾಣಬಹುದು. ತೆಕ್ಕನ್‌ಪಾಟುಗಳ ಕಾಲಕ್ರಮವನ್ನು ಅನುಸರಿಸಿ ಘಟನೆಗಳನ್ನು ಅಭ್ಯಾಸ ಮಾಡಿದರೆ ಮಾನವ ಬದುಕಿನ ವಿವರಗಳು ಲಭ್ಯವಾಗುತ್ತವೆ. ಯಾವುದೇ ಕಾವ್ಯವನ್ನು ವಾಸ್ತವ ದೃಷ್ಟಿಕೋನದಲ್ಲಿ ಅಧ್ಯಯನ ಮಾಡಿದರೆ ಮಾತ್ರ ಸಾಮಾಜಿಕ, ಸಾಂಸ್ಕೃತಿಕ ವಿವರಗಳು ಅನಾವರಣಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಕೆಲವು ತೆಕ್ಕನ್‌ಪಾಟುಗಳನ್ನು ಗಮನಿಸಬಹುದು.

ಇರುವಿಕುಟ್ಟಿಪೋರ್ಪಾಟ್‌(ಕಣಿಯಾಂಗುಳ ಪೋರ್ಪಾಟ್): ವೇನಾಡಿನ ಇತಿಹಾಸದೊಂದಿಗೆ ಸಂಬಂಧವಿರುವುದರಿಂದ ಇರವಿಕುಟ್ಟಿಪೋರ್ಪಾಟ್ ತೆಕ್ಕನ್ ಪಾಟುಗಳಲ್ಲಿ ಮುಖ್ಯ ಸ್ಥಾನವನ್ನು ಪಡೆದಿದೆ. ಇದು ಸೇನಾಪತಿಯೊಬ್ಬನ ಹೋರಾಟದ ಕಥೆಯಾಗಿದೆ. ಆದುದರಿಂದಲೇ ಇದಕ್ಕೆ ‘ಕಣಿಯಾಂಗುಳ ಪೋರ್’ ಎಂಬ ಹೆಸರೂ ಇದೆ.

ಕಣಿಯಾಂಗುಳ ಎಂಬ ಸ್ಥಳದಲ್ಲಿ ರಾಮಪಯ್ಯನ ಸೈನ್ಯ ಹಾಗೂ ವೇನಾಡಿನ ಸೈನ್ಯಗಳು ಪರಸ್ಪರ ಕಾದಾಡುತ್ತದೆ. ಯುದ್ಧದ ನಡುವೆ ಇಡತ್ತರ ತೇವರ್ ಮೊದಲಾದವರು ರಹಸ್ಯ ಸಭೆಯನ್ನು ನಡೆಸಿ ವೇನಾಡ್ ಪಕ್ಷವು ರಾಮಪಯ್ಯನನ್ನು ಬೆಂಬಲಿಸಿತು. ಈ ವಂಚನೆಯ ಫಲವಾಗಿ ವೇನಾಡಿನ ಸೇನಾಧಿಪತಿ ಇರವಿಕುಟ್ಟಿ ಸಾಯುತ್ತಾನೆ. ಇರವಿಕುಟ್ಟಿಯ ನಂಬಿಗಸ್ಥ ಸೇವಕನೂ ಪರಾಕ್ರಮಿಯೂ ಆದ ಕಾಳಿನಾಯರ್ ಶತ್ರುಸೈನ್ಯದಿಂದ ಅವನ ತಲೆಯನ್ನು ತಂದು ರಾಜ ಮರ‍್ಯಾದೆಯಿಂದ ಸಂಸ್ಕಾರ ಕ್ರಿಯೆಗಳನ್ನು ನಡೆಸುವನು. ಈ ಯುದ್ಧ ನಡೆದ ಕಾಲದ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಕೆಲವು ಹಾಡುಗಳಲ್ಲಿ ಕೊಲ್ಲ ವರ್ಷ ೮೧೦ ಎಂದೂ ಕೆಲವೆಡೆ ಕೊಲ್ಲವರ್ಷ ೮೧೨ ಎಂದೂ ಹೇಳಲಾಗಿದೆ.

ವಲಿಯತಂಬಿ ಕಥಾಪಾಟ್: ಶುಚೀಂದ್ರ ಕ್ಷೇತ್ರದ ಜಾತ್ರೆಗೆ ಬಂದಿದ್ದ ವೇನಾಡು ರಾಜ ಅಯೋಧ್ಯೆಯ ಅಭಿರಾಮಿ ಮತ್ತು ಸಹೋದರ ಕೃಷ್ಣನನ್ನು ಕಂಡು, ಅಭಿರಾಮಿಗೆ ಮೋಹಿತನಾಗುತ್ತಾನೆ. ಅನಂತರ ಅವರನ್ನು ನಾಗರಕೋವಿಲಿಗೆ ಕರೆದುಕೊಂಡು ಹೋಗಿ, ಅಭಿರಾಮಿಯನ್ನು ‘ಸಂಬಂಧಂ’ (ವಿವಾಹದ ಒಂದು ವಿಧಾನ) ಮಾಡಿಕೊಳ್ಳುತ್ತಾನೆ. ಅವರಿಬ್ಬರ ಹೆಸರುಗಳನ್ನು ಬದಲಿಸುತ್ತಾನೆ. ರಾಮವರ್ಮ ರಾಜನಿಗೆ ಕೃಷ್ಣತಾಳಮ್ಮ(ಅಭಿರಾಮಿ)ಗಳಲ್ಲಿ ಮೂವರು ಮಕ್ಕಳು ಹುಟ್ಟುತ್ತಾರೆ. ವಲಿಯತಂಬಿ, ಕುಂಜುತಂಬಿ, ಕೊಚ್ಚು ಮಣಿತಂಗ ಅವರ ಹೆಸರುಗಳು. ಕೊಚ್ಚು ಮಣಿತಂಗ ತಂಬಿಗಳ ಸಹೋದರಿ. ವಲಿಯತಂಬಿಗೆ ಇಪ್ಪತ್ತು ವರುಷ ತುಂಬಿದ್ದ ವರುಷ ತುಂಬಿದಾಗ, ರಾಜ ಸಾಯುವನು. ಮಾರ್ತಾಂಡವರ್ಮ ಆಗ ಆಟಿಂಗಲ್ ಸ್ವರೂಪದಲ್ಲಿ ಯುವರಾಜನಿಗಿದ್ದ. ರಾಮವರ್ಮ ರಾನ ಸಾವಿಗೆ ಮೊದಲು ಯಾವುದೇ ಸಮಸ್ಯೆಇರಲಿಲ್ಲ. ತಂಬಿಗಳು ವೇನಾಡಿನ ದಕ್ಷಿಣ ಭಾಗವನ್ನು ಆಳುತ್ತಿದ್ದರು. ಒಂದು ದಿವಸ ಮಾರ್ತಾಂಡವರ್ಮ ರಾಜ ಕೊಚ್ಚು ತಂಗಮಣಿಯನ್ನು ಕಂಡು, ಮೋಹಿತನಾಗಿ ಮದುವೆಯಾಗಲು ಬಯಸುತ್ತಾನೆ. ಆದರೆ ತುಂಬಿಗಳು ವಿರೋಧಿಸುವರು. ಹೀಗೆ ಹಗೆತನ ಕಟ್ಟಿಕೊಂಡ ಮಾರ್ತಾಂಡವರ್ಮ ತಂಬಿಯರನ್ನು ಉಪಾಯದಲ್ಲಿ ಕೊಲ್ಲಿಸುತ್ತಾನೆ. ಮರಣ ವಾರ್ತೆ ತಿಳಿದ ತಂಬಿಯರ ತಾಯಿ, ತಂಗಿ ಆತ್ಮಹತ್ಯೆ ಮಾಡುವರು. ಅವರು ಅನಂತರ ದೈವಗಳಾದರು ಎಂದು ಕಥೆ ತಿಳಿಸುತ್ತದೆ.

ವಲಿಯಕೇಶಿ ಕಥಾಪಾಟ್: ಪೈಂಗುಳ ಮಶಾಕತೋಪು ಎಂಬಲ್ಲಿ ವಾಸವಾಗಿ ಊರಾಳಿ ವಂಶಜ ಕಾಲ ಮತ್ತು ಕುಂಜುನೀಲಮ್ಮ ದಂಪತಿಗಳ ಅವಳಿ ಮಕ್ಕಳು ವಲಿಯಕೇಶಿ ಹಾಗೂ ಕೊಚ್ಚು ಕೇಶಿ. ಬಾಲ್ಯದಲ್ಲಿ ಇವರು ಯುದ್ಧ ವಿದ್ಯೆಯಲ್ಲಿ ಪ್ರವೀಣರಾದರು. ಮಾತ್ರವಲ್ಲದೆ ವ್ಯಕ್ತಿಪಲ್ಲಟ, ತಲೆಮರೆಸುವುದು ಮೊದಲಾದ ತಂತ್ರಗಳನ್ನು ತಿಳಿದುಕೊಂಡಿದ್ದರು. ಕೇಶಿಯ ಶಕ್ತಿಯನ್ನು ಅರಿತುಕೊಂಡ ಪೈಂಗುಳದ ಕಳರಿಕುರಪ್ ಅವನನ್ನು ತನ್ನ ನಂಬಿಗಸ್ಥ ಸೇವಕನಾಗಿ ನೇಮಿಸಿದ.

ವೇನಾಡಿನಲ್ಲಿ ಮಣ್ಣಪೇಡಿ, ಪುಲಪೇಡಿ ಮೊದಲಾದ ಆಚರಣೆಗಳಿದ್ದ ಕಾಲ ಕ್ರಿ.ಶ. ೧೬೯೬ರಲ್ಲಿ ಇಂತಹ ಹೀನ ಆಚರಣೆಗಳಿಗೆ ನಿಷೇಧ ಬಂದರೂ ಕೆಲವರು ಗುಟ್ಟಿನಲ್ಲಿ ನಡೆಸುತ್ತಿದ್ದರು. ಅಂತಹವರನ್ನು ನಿರ್ಮೂಲನಗೊಳಿಸಲು ವೇನಾಡಿನ ರಾಜ ಕೇರಳವರ್ಮ ತುಂಡರಸರ ಸಹಾಯ ಕೇಳಿದ್ದ. ಪೈಂಗುಳದ ಕುರುಪ್ಪು ಕೇಶಿಗಳನ್ನು ರಾಜನಲ್ಲಿಗೆ ಕಳುಹಿಸಿದ. ರಾಜನು ಅವರನ್ನು ಅರಮನೆಗೆ ಕರೆಸಿ ಖಡ್ಗ ಗುರಾಣಿಗಳನ್ನು ನೀಡಿದ. ಹೀಗೆ ಕೇಶಿಗಳು ಅನೇಕ ಪ್ರದೇಶಗಳನ್ನು ದಾಟಿ, ಮಣವಾಳಕುರಿಚ್ಚಿ ಸಮೀಪದ ಪದ್ಮನಾಭ ತೋಪಿಗೆ ತಲುಪುವರು. ಅಲ್ಲಿ ಚಿಕ್ಕಮ್ಮನ ಮನೆಯಲ್ಲಿ ವಿಶ್ರಾಂತಿ ಪಡೆದರು. ಅಲ್ಲಿಯೇ ಪಕ್ಕದಲ್ಲಿ ಅಪರಾಧಿಗಳಾದ ಮಣ್ಣಾನರು ಅಭಯ ಪಡೆದಿರುವರೆಂದು ಕೇಶಿಗಳಿಗೆ ತಿಳಿಯುತ್ತದೆ. ಅಪಶಕುನಗಳನ್ನು ಲೆಕ್ಕಿಸದೆ ಅವರು ಮಣ್ಣನರನ್ನು ಸದೆ ಬಡಿಯುತ್ತಾರೆ. ಇದನ್ನು ತಿಳಿದ ಅಭಯ ನೀಡಿದ ಕಾಳಿಪೊರಾಳ್ ಎಂಬುವನು ಕೇಶಿಯರನ್ನು ಇರಿದು ಕೊಲ್ಲುತ್ತಾನೆ. ಅಣ್ಣನ ಜತೆಯಲ್ಲಿ ಶಿವಲೋಕವನ್ನು ಸೇರಿದ ಕೊಚ್ಚುಕೇಶಿ, ಅನಂತರ ಭೂಮಿಯಲ್ಲಿ ದೈವಗಳಾಗಿ ಹುಟ್ಟುತ್ತಾರೆ. ಇದು ವಲಿಯಕೇಶಿಯಕಥೆ.

ಉಲಕುಡಯ ಪೆರುಮಾಳ್: ಇದನ್ನು ತಂಬೂರಾನ್ ಪಾಟ್ ಎಂದೂ ಕರೆಯುತ್ತಾರೆ. ಇದು ಸುದೀರ್ಘವಾದ ಕಥನಗೀತೆ. ಉಲಕುಡಯ ಪೆರುಮೊಳ್ ಮಧುಕೇಶಿ ತೆರಳಿ, ತನ್ನ ಮಾವಂದಿರನ್ನು ಕೊಂದ ರಾಜನೊಂದಿಗೆ ಹೋರಾಡುವನು. ಎರಡೂ ಕಡೆಯವರು ಸಮಬಲರಾಗುತ್ತಾರೆ. ಕೊನೆಗೆ ಮಧುರೈಯ ರಾಜ ಪೆರುಮಾಳನ್ನು ಸೋಲಿಸುವನು. ಶತ್ರುವಿಗೆ ಶರಣಾಗಲು ಬಯಸದ ಉಲಕುಡಿಯ ಪೆರಮಾಳ್ ತನ್ನ ತಮ್ಮಂದಿರ ಬಯಕೆಯಂತೆ ಅವರನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಳ್ಳುವನು.

ಕನ್ನಡಿಯನ್ ಪೋರುಪಾಟ್‌: ಇದು ಪ್ರಸಿದ್ಧವಾದ ತೆಕ್ಕನ್ಪಾಟು ಆಗಿದೆ. ‘ಐವರು ರಾಜರು’ ಗಳಲ್ಲಿ ಒಬ್ಬನಾದ ಪಾಂಡ್ಯರಾಜ ಕುಲಶೇಖರ ಮತ್ತು ಕನ್ನಡಿಯನ್ ಎಂಬ ವಡುಗರಾಜನ ಮಧ್ಯೆ ನಡೆದ ಹೋರಾಟವೇ ಈ ಹಾಡಿನ ವಸ್ತು.

ನೀಲಿಕಥ: ಇದೂ ಕೂಡಾ ಪ್ರಸಿದ್ಧವಾದ ತೆಕ್ಕನ್‌ಪಾಟು ಆಗಿದೆ. ಇದನ್ನು ಕೇರಳದ ಬಾಧೆಪಾಟುಗಳಲ್ಲಿ ಸೇರಿಸಲಾಗಿದೆ. ಪಂಜವಗಾಡು ನೀಲಿಯ ಪೂರ್ವಜನ್ಮದ ವೃತ್ತಾಂತ ಹಾಗೂ ಆಕೆ ಯಕ್ಷಿಯಾಗಿ ಪುನರ್ಜನಿಸಿದ ಕಥೆಯನ್ನು ಈ ಕಥನಗೀತೆ ತಿಳಿಸುತ್ತದೆ.

ಮೂವೋಚ್ಮಲ್ಲನ್ ಕಥೆ: ರೈತಾಪಿವರ್ಗದ ಆಸೆ, ನಿರಾಸೆ, ಹಗೆತನ, ಪ್ರತೀಕಾರಗಳ ಕಥೆಯನ್ನು ಈ ಕಥನ ಗೀತೆ ಅನಾವರಣಗೊಳಿಸುತ್ತದೆ. ಕೃಷಿ ಮಾಡುವ ತಮ್ಮ ಹಕ್ಕಿಗೆ ಚ್ಯುತಿ ಬಂದಾಗ, ದುಷ್ಟ ದೇವತೆಗಳ ಸಹಾಯ ಪಡೆದು ಮಾವಂದಿರನ್ನು ನಿಗ್ರಹಿಸುವ ಅಳಿಯಂದಿರ ಕಥೆ ಇದೆ. ಇದು ಅಪೂರ್ಣವಾಗಿ ಲಭ್ಯವಾಗಿದೆ.

ಓಣಪಾಟ್: ತಿರುವನಂತಪುರ ಜಿಲ್ಲೆಯಲ್ಲಿ ಊಚ್ ಎಂಬ ಆಚರಣೆಯನ್ನು ನಡೆಸುತ್ತಿದ್ದ ವಾಯ್ತಿ-ಕಣಿಯಾರ್ ಸಮುದಾಯದವರು ಓಣಂ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡುಗಳಿವು. ಶ್ರೀಕೃಷ್ಣನ ಕಥೆಗಳೇ ಮುಖ್ಯವಸ್ತು. ಇದನ್ನು ಹಾಡುವಾಗ ‘ನಂದುಣಿ’ ಎಂಬ ವಾದ್ಯವನ್ನು ಹಿನ್ನೆಲೆಯಾಗಿ ಬಳಸುತ್ತಾರೆ. ಆದುದರಿಂದ ಇವುಗಳನ್ನು ‘ನಂದುಣಿಪಾಟು’ಗಳೆಂದೂ ಹೇಳುತ್ತಾರೆ.

ರಾಪಾಟ್: ತಿರುವನಂತಪುರ ಜಿಲ್ಲೆಯಲ್ಲಿ ರೋಗರುಜಿನಗಳು ದೂರವಾಗಿ, ಸಂಪತ್ತು ಸಮೃದ್ಧಿಗಳಿಗಾಗಿ ರಾತ್ರಿಕಾಲದಲ್ಲಿ ಪಾಣರು, ಕಾಣಿಕಾರರು ಮನೆಮನೆಗೆ ಹೋಗಿ ಹಾಡುವ ಹಾಡು ರಾಪಾಟ್.

ಪಾಚಲ್ಲೂರು ಪದಿಕಂಗಳ್: ತಿರುವನಂತಪುರ ಜಿಲ್ಲೆಯ ಪಾಚಲ್ಲೂರು ಗ್ರಾಮದಲ್ಲಿಎರಡು ಭದ್ರಕಾಳೀ ದೇವಸ್ಥಾನಗಳಿವೆ. ಚೂಡುಕಾಡ್ ಭದ್ರಕಾಳೀ ಕ್ಷೇತ್ರ ಅದರಲ್ಲೊಂದು. ಪ್ರಾಚೀನ ಕಾಲದಲ್ಲಿ ಇದು ಬ್ರಾಹ್ಮಣರ ಅಗ್ರಹಾರವಾಗಿತ್ತು. ಅಲ್ಲಿ ಬಡವನೂ ಸಾತ್ವಿಕನೂ ಆಗಿರುವ ಪುರೋಹಿತ ತನ್ನ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದ. ಬ್ರಾಹ್ಮಣ ಅಕಾಲದಲ್ಲಿ ಸಾವನ್ನಪ್ಪುವನು, ಆರ್ಥಿಕ ತೊಂದರೆಯಿಂದ ಬ್ರಾಹ್ಮಣನ ಪತ್ನಿಗೆ ಮಗನಿಗೆ ಮದುವೆ ಮಾಡಲಾಗಲಿಲ್ಲ. ಅಲ್ಲಿ ಜನರು ತಾಯಿ ಮತ್ತು ಮಗನ ವಿರುದ್ಧ ಅಪವಾದಗಳನ್ನು ಪ್ರಚಾರ ಮಾಡಿ, ಭ್ರಷ್ಟತೆಯನ್ನು ಕಲ್ಪಿಸಿದರು. ಇದರಿಂದ ಮನನೊಂದ ಆ ಪತಿವ್ರತೆ ಸೂರ‍್ಯೋದಯವನ್ನು ನೋಡುತ್ತಾ ಹಾಡಿದ ಹಾಡು ಇದು. ಈ ಹಾಡು ಮುಗಿಯುವಾಗ ಆ ಗ್ರಾಮವೇ ಬೆಂಕಿಯಿಂದ ನಾಶವಾಗಿತ್ತು ಎಂಬುದು ಐತಿಹ್ಯ.

ಹೀಗೆ ಸಮೃದ್ಧವಾದ ಜನಪದ ಸಾಹಿತ್ಯ ಪ್ರಕಾರವೊಂದು ದಕ್ಷಿಣ ಕೇರಳದಲ್ಲಿದ್ದು, ತೆಕ್ಕನ್ ಪಾಟುಗಳೆಂದು ಪ್ರಸಿದ್ಧವಾಗಿದೆ.

ತೆಪ್ಪೋತ್ಸವಂ ತೆಲುಗರು ಆಚರಿಸುವ ಒಂದು ಉತ್ಸವ. ದೇವರ ಆಲಯದಲ್ಲಿರುವ ‘ಕಲ್ಯಾಣಿ’ಯನ್ನು ‘ಪುಷ್ಕರಣಿ’ ಎಂದು ಕರೆಯುತ್ತಾರೆ. ಈ ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ. ತೆಪ್ಪೋತ್ಸವವನ್ನು ತುಂಬ ವೈಭವದಿಂದ ಆಚರಿಸುತ್ತಾರೆ. ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಅನೇಕ ದೇವಾಲಯಗಳ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಇಂತಹ ಉತ್ಸವಗಳನ್ನು ಗಮನಿಸಬಹುದು.

ತೆಪ್ಪೋತ್ಸವಗಳಲ್ಲಿ ಆಯಾ ಆಲಯದಲ್ಲಿರುವ ದೇವರನ್ನು ತೆಪ್ಪದ ಮೇಲೆ ಕೂರಿಸಿ ಪುಷ್ಕರಣಿಯಲ್ಲಿ ಪ್ರದಕ್ಷಿಣೆ ಮಾಡಿಸುತ್ತಾರೆ. ಸಾಮಾನ್ಯವಾಗಿ ಕತ್ತಲಲ್ಲಿ ಎಂದರೆ ಸಂಜೆ ಕತ್ತಲಾದ ಮೇಲೆ ಬೆಳದಿಂಗಳ ಸುಂದರ ಬೆಳಕಿನಲ್ಲಿ ಈ ಉತ್ಸವಗಳು ನಡೆಯುತ್ತವೆ.

ಪುಷ್ಕರಣಿಯ ಎಲ್ಲ ಮೂಲೆಗಳಲ್ಲಿ ಆರತಿಯನ್ನು ಬೆಳಗುತ್ತಾ ತೆಪ್ಪವನ್ನು ಮುಂದೆ ಸಾಗಲು ಬಿಡುತ್ತಾರೆ. ದೇವರನ್ನು ಬಗೆ ಬಗೆಯ ಹೂವುಗಳಿಂದಲೂ ದೀಪಗಳಿಂದಲೂ ವಿಶೇಷವಾಗಿ ಅಲಂಕಾರ ಮಾಡಿರುತ್ತಾರೆ. ಈ ಉತ್ಸವವನ್ನು ವೀಕ್ಷಿಸಲು ಬರುವ ಭಕ್ತರು, ಆರತಿ ಬೆಳಗಿ (ಕರ್ಪೂರಹಾರತಿ) ನೀರಿನಲ್ಲಿ ತೇಲಿ ಬಿಡುತ್ತಾರೆ. ಶೈವ, ವೈಷ್ಣವ ದೇವಾಲಯಗಳೆರಡರಲ್ಲೂ ಈ ಉತ್ಸವಗಳು ನಡೆಯುತ್ತವೆ. ಇತ್ತೀಚೆಗೆ ವಿದ್ಯುತ್ ದೀಪಗಳ ಆಧುನಿಕ ಸ್ಪರ್ಶದಿಂದ ತೆಪ್ಪೋತ್ಸವ ಹಿಂದಿಗಿಂತಲೂ ಹೆಚ್ಚು ಆಕರ್ಷಣೀಯವಾಗಿ ಕಾಣಿಸುತ್ತದೆ.

 

ತೆರಂಡ್ ಕಲ್ಯಾಣಂ ಕೇರಳದಲ್ಲಿ ಹೆಣ್ಣಿನ ಮೊದಲ ಮುಟ್ಟಾಗುವ ಘಟನೆಗೆ ಸಂಬಂಧಿಸಿದಂತೆ ಹಿಂದಿನ ಕಾಲದಲ್ಲಿ ಆಚರಿಸುತ್ತಿದ್ದ ಕಾರ್ಯಕ್ರಮವೇ ತೆರಂಡಂ ಕಲ್ಯಾಣ ಹಿಂದಿನ ಕಾಲದಲ್ಲಿ ಹಿಂದೂ ಸಮುದಾಯಗಳಲ್ಲಿ ವಿಜೃಂಭಣೆಯಿಂದ ನಡೆಸುತ್ತಿದ್ದ ಕಾರ್ಯಕ್ರಮ ಇದಾಗಿತ್ತು. ಕಲ್ಯಾಣಂ ಎಂದರೆ ಮದುವೆ ಎಂದರ್ಥ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಮೂರು ರೀತಿಯ ಮದುವೆಗಳು ನಡೆಯುತ್ತಿದ್ದುವು.

೧. ತಾಲಿಕೆಟ್ಟ್, ೨. ತೆರಂಡ್‌ ಕಲ್ಯಾಣಂ, ೩. ಮದುವೆ

ಇವುಗಳಲ್ಲಿ ಮೊದಲ ಎರಡು ಮದುವೆಗಳನ್ನು ವಿಜೃಂಭಣೆಯಿಂದ ನಡೆಸುತ್ತಿದ್ದರು. ಕುಟುಂಬದ ಸಾಮಾಜಿಕ ಮನ್ನಣೆ ಹಾಗೂ ಆರ್ಥಿಕ ಸ್ಥಿತಿಗನುಸಾರವಾಗಿ ತೆರಂಡ್‌ ಕಲ್ಯಾಣ ನಡೆಯುತ್ತಿತ್ತು. ಹಿಂದೂ ಸಮುದಾಯಗಳಲ್ಲಿ, ಬುಡಕಟ್ಟು ಪಂಗಡಗಳಲ್ಲಿ ಹಾಗೂ ಮುಸ್ಲಿಂ ಸಮುದಾಯದ ಕೆಲವರಲ್ಲಿ ಈ ಸಂಪ್ರದಾಯ ಚಾಲ್ತಿಯಲ್ಲಿತ್ತು. ಸಾಮುದಾಯಿಕ ಭೇದಕ್ಕೆ ಹೊಂದಿಕೊಂಡು ವಿಧಿ ವಿಧಾನಗಳಲ್ಲಿ ವ್ಯತ್ಯಾಸಗಳು ಕಂಡು ಬರುತ್ತವೆ.

ಬುಡಕಟ್ಟು ಸಮಾಜದಲ್ಲಿ ಇಂದಿಗೂ ತೆರಂಡ್ ಕಲ್ಯಾಣ ರೂಢಿಯಲ್ಲಿದೆ. ತೇನ್ ಕುರುಮ ಪಂಗಡದ ಹೆಣ್ಣು ಋತುಮತಿಯಾದರೆ, ಸಮುದಾಯದ ಯಜಮಾನ(ಮೊದಲಿ)ನಿಗೆ ತಿಳಿಸುವರು. ಅವನು ಉಳಿದವರ ಸಹಾಯದೊಂದಿಗೆ ಒಂದು ಗುಡಿಸಲು ನಿರ್ಮಿಸುತ್ತಾನೆ. ಅಲಂಕೃತ ಗುಡಿಸಲಿಗೆ ಸ್ನಾನ ಮಾಡಿದ ಋತುಮತಿಯನ್ನು ಯಾರೂ ಕಾಣದಂತೆ ರಾತ್ರಿ ತಲುಪಿಸುತ್ತಾರೆ. ಜತೆಯಲ್ಲಿ ಚಿಕ್ಕಪ್ರಾಯದ ಇನ್ನೊಬ್ಬಳು ಹುಡುಗಿ ಇರುತ್ತಾಳೆ. ಪುರುಷರ ದರ್ಶನವಾಗದೆ ಆಕೆ ೨೧ ದಿವಸಗಳ ಕಾಲ ಆ ಗುಡಿಸಲಿನಲ್ಲಿ ಕಳೆಯಬೇಕು. ಅನಂತರ ವಿಜೃಂಭಣೆಯ ತೆರಂಡ್‌ಕಲ್ಯಾಣ. ಈಕಾರ್ಯಕ್ರಮ ತಂಬ ವೆಚ್ಚವುಳ್ಳದ್ದು. ಈ ಕಾರ್ಯಕ್ರಮ ಮುಂದಕ್ಕೆ ಹೋದಂತೆ ಹುಡುಗಿಯ ಏಕಾಂತವಾಸವೂ ಮುಂದುವರಿಯುವುದು. ಮದುವೆಯ ದಿವಸ ರಾತ್ರಿ ಮಹಿಳೆಯರು ಆಕೆಗೆ ಸ್ನಾನ ಮಾಡಿಸುವರು. ಅಲಂಕರಿಸಿ ಚಪ್ಪರಕ್ಕೆ ತರುವರು. ಅನಂತರ ಪುರುಷರು ನೋಡಬಹುದು. ಆ ಮೇಲೆ ಹುಡುಗಿ ಮಣ್ಣಿನ ಪಾತರೆಯಲ್ಲಿ ನೀರು ತಂದು ಹಿರಿಯರ ಕಾಲು ತೊಳೆಯುವಳು. ಅನಂತರ ಮನೆಗೆ ಮೂರು ಪ್ರದಕ್ಷಿಣೆ ಬರುವಳು. ಅನಂತರ ಭೂರಿ ಭೋಜನವಿರುವುದು. ಆ ಏಲೆ ಬೆಳಗಾಗುವವರೆಗೆ ಹಾಡು ಕುಣಿತಗಳ ಸಂಭ್ರಮ. ಏಳು ದಿವಸಗಳ ನಂತರ ಬೆಳಗಾಉವವರೆಗೆ ಹಾಡು ಕುಣಿತಗಳ ಸಂಭ್ರಮ. ಏಳು ದಿನಗಳ ನಂತರ ‘ಮೊದಲ’ ಕಟ್ಟಿದ ಗುಡಿಸಲನ್ನು ಉರಿಸುವರು. ಆತನಿಗೆ ದಕ್ಷಿಣೆಯನ್ನು ನೀಡಬೇಕು.

ತೆರಂಡ್‌ ಕಲ್ಯಾಣ ಕಳೆಯದೆ ಋತುಮತಿಯಾದ ಹೆಣ್ಣು ಹೊರಗಿಳಿಯಬಾರದು ಎಂಬುದು ಅಡಿಯರ ಆಚಾರ. ಋತುಮತಿಯಾಗುವುದಕ್ಕಿಂತ ಮೊದಲು ಮದುವೆ ಮಾಡುತ್ತಿರಲಿಲ್ಲ. ಮದುವೆ ನಿಶ್ಚಯವಾಗಿದ್ದರೆ ತೆರಂಡ್ ಕಲ್ಯಾಣದ ದಿವಸವೇ ಅವಳನ್ನು ಮದುವೆಯಾಗಬಹುದು. ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾ ಕೊಡುತ್ತಿದ್ದರು. ಋತುಮತಿಯಾದ ಹೆಣ್ಣಿಗೆ ಹಸಿ ಅರಸಿನ ಹಾಗೂ ತೆಂಗಿನೆಣ್ಣೆಯನ್ನು ಲೇಪಿಸುವರು. ಅನಂತರ ‘ಮೂಪ’ನ ಶಾಸ್ತ್ರ ವಿಧಿಗಳು ನಡೆಯುತ್ತವೆ. ಅನಂತರ ಸ್ನಾನ ಮಾಡಿಸಿ, ಹೊಸ ವಸ್ತ್ರ ಉಡಿಸಿ, ತೆಂಗಿನಕಾಯಿ ಒಡೆದು, ವೈಭವದಿಂದ ಮನೆಗೆ ತಲುಪಿಸುವರು.

ಹಿಂದೂಗಳಲ್ಲಿ ಪ್ರತಿಯೊಂದು ಸಮುದಾಯಗಳಲ್ಲೂ ತೆರಂಡ್‌ಕಲ್ಯಾಣಂ ವಿಧಿಯುಕ್ತವಾಗಿ ನಡೆಯುತ್ತಿದ್ದುವು. ಪುಲಯ ಸಮುದಾಯ ಈ ಸಂದರ್ಭದಲ್ಲಿ ‘ಪೂತಂಕೆಟ್ಟಿಕಳಿ’ ಹಾಗೂ ‘ಮಾಲಪಾಟು’ಗಳನ್ನು ಹಾಡುತ್ತಿದ್ದರು. ಉತ್ತರ ಕೇರಳದಲ್ಲಿ ‘ವಾಗಕರ್ಮಂ’ ಎಂಬ ಆಚರಣೆ ಮುಖ್ಯವಾಗಿದೆ. ಬಾಗೆಯ ಗೆಲ್ಲನ್ನು ಅಂಗಳದಲ್ಲಿ ನೆಟ್ಟು ನಡೆಸುವ ಮಾಂತ್ರಿಕ ವಿಧಿ ಇದಾಗಿದೆ. ಬಾಣೆಯ ತೊಗಟೆಯನ್ನು ಕೆತ್ತಿ, ಕನ್ನೆಯರು ಅದನ್ನು ಪುಡಿಮಾಡಿ, ಋತುಮತಿ ಹುಡುಗಿಯನ್ನು ಸ್ನಾನ ಮಾಡಿಸುವರು. ಋತುಮತಿಗೆ ಉಡುಗೊರೆಗಳನ್ನು ನೀಡುವ ಸಂಪ್ರದಾಯವೂ ಕೆಲವು ಕಡೆಯಲ್ಲಿದೆ.

ಭಾರತೀಯ ಸಮುದಾಯದಲ್ಲಿ ಋತುಮತಿಯಾದ ಹೆಣ್ಣಿನ ‘ತಲೆಗೆ ನೀರು ಸುರಿಯುವ’ ವಿಧಿ ಮುಖ್ಯವಾಗಿದೆ. ಒಂದು ಚಿನ್ನದ ನಾಣ್ಯದ ಮೇಲೆ ಮೂರು ಬಾರಿ ಎಣ್ಣೆ ಹಾಗೂ ನೀರು ಸುರಿದು ಸ್ನಾನ ಮಾಡಿಸುವರು. ಋತುಮತಿಯಾಗಿ ದೂರವಿರುವಾಗ ದುಷ್ಟಶಕ್ತಿಗಳ ಬಾಧೆಯಿಂದ ತಪ್ಪಿಸಲು ಕಬ್ಬಿಣದ ತುಂಡನ್ನು ಇರಿಸುತ್ತಿದ್ದರು. ಮಲಗುವಾಗ ಇದನ್ನು ಚಾಪೆಯಡಿಯಲ್ಲಿ ಇರಿಸುತ್ತಿದ್ದರು. ಏಳು ದಿವಸಗಳ ಕಾಲ ಅಸ್ಪೃಶ್ಯತೆಯನ್ನು ಪಾಲಿಸಿ, ಬೇರೆ ಕೊಠಡಿ ಅಥವಾ ಕೊಟ್ಟಿಗೆಯಲ್ಲಿ ವಾಸವಾಗಬೇಕು. ಸ್ನಾನ ಮಾಡಿದ ಮೇಲೆ ಫಲವೃಕ್ಷಗಳಿಗೆ ಪ್ರದಕ್ಷಿಣೆ ಬರುವ ಕ್ರಮರೂಢಿಯಲ್ಲಿದೆ.

ಸವರ್ಣ ಜಾತಿಗಳಲ್ಲಿಯೂ ತೆರಂಡ್‌ಕಲ್ಯಾಣದ ವಿಧಿಯಾಚಾರಣೆಗಳಿವೆ. ಆಚರಣೆಗಳಲ್ಲಿ ಸಾಮುದಾಯಿಕ ಭೇದಗಳು ಕಾಣಿಸುತ್ತವೆ. ಹೆಣ್ಣು ಋತುಮತಿಯಾದರೆ ಕೂಗು ಹಾಕಿ ತಿಳಿಸುವರು. ಮಹಿಳೆಯರು ಸೇರಿಕೊಂಡು ಸ್ನಾನ ಮಾಡಿಸಿ, ಪ್ರತ್ಯೇಕ ಕೊಠಡಿಯಲ್ಲಿ ಇರಿಸುವರು. ಋತುಮತಿಯಾದರೆ ಸಿಹಿತಿಂಡಿ ವಿತರಿಸುವ ಕ್ರಮವೂ ಇದೆ. ಉತ್ತರ ಕೇರಳದ ನಾಯರ್ ಸಮುದಾಯದಲ್ಲಿ ‘ಎಲಯಡ’ ಎಂಬ ತಿಂಡಿಯನ್ನು ವಿತರಿಸುವರು. ಋತುಮತಿಯಾದ ಹೆಣ್ಣು ಆ ಕಾಲದಲ್ಲಿ ನಿತ್ಯ ಸ್ನಾನ ಮಾಡಬಾರದು. ಆದರೆ ಪುಷ್ಟಿಯುಳ್ಳ ಆಹಾರ ಸೇವಿಸಬೇಕು. ಸಂಬಂಧಿಕರೂ, ಸ್ನೇಹಿತರೂ ತಿಂಡಿತಿನಿಸುಗಳನ್ನು ತಂದುಕೊಡುವುದು ಕ್ರಮ ‘ಚಕ್ಕರ್‌ಚೋರ್‌’ ಎಂಬ ಸಿಹಿ ಅನ್ನವನ್ನು ವಿತರಿಸುವರು. ಅನೇಕ ಸಮುದಾಯಗಳಲ್ಲಿ ಋತುಸ್ನಾನ ನಾಲ್ಕನೇ ದಿವಸ. ಕೆಲವರು ಏಳನೇ ದಿವಸ ನಡೆಸುವರು. ಅಂದು ಭೂಮಿ ಭೋಜನವನ್ನು ಏರ್ಪಡಿಸಿ ಎಲ್ಲರಿಗೂ ಆಹ್ವಾನ ಕೊಡುವುದು ಸಂಪ್ರದಾಯ.

ಮಧ್ಯ ಕೇರಳದಲ್ಲಿ ಈ ಸಂದರ್ಭದಲ್ಲಿ ಮಣ್ಣಾನ್ ಪಾಟು ಹಾಡುತ್ತಾರೆ. ಆಯಾ ಪ್ರದೇಶ ಹಕ್ಕಿನ ಮಣ್ಣಾನ್ ಮತ್ತು ಮಣ್ಣಾತಿಗಳು ಲಯಬದ್ಧವಾಗಿ ಹಾಡನ್ನು ಹಾಡುತ್ತಾರೆ. ಋತುವಾದ ಹೆಣ್ಣು ಅವರ ಮುಂದೆ ನಿಲ್ಲುವಳು. ಎಣ್ಣೆ, ಬಾಗೆ ಹುಡಿ, ಅರಸಿನಗಳನ್ನು ಅವಳಮೈಗೆ ಲೇಪಿಸಿ, ಮಡಿವಸ್ತ್ರವನ್ನು ಸ್ವೀಕರಿಸಿ ಸ್ನಾನಕ್ಕೆ ಹೋಗುವರು.

ಉತ್ತರ ಕೇರಳದಲ್ಲಿ ವಣ್ಣಾತಿ ಮಾಟ್ಟ್‌ (ಮಡಿವಾಳಗಿತ್ತಿ ಕೊಡುವ ಶುದ್ಧವಸ್ತ್ರ) ಅಶುದ್ಧಿ ನಿವಾರಿಸಲು ಅಗತ್ಯವಾಗಿದೆ. ನಂಬೂದಿರಿ, ನಾಯರ್, ಮಣಿಯಾಣಿ, ವಾಣಿಯ, ತೀಯ ಮೊದಲಾದ ಸಮುದಾಯಗಳಲ್ಲಿ ಇಂತಹ ಆಚರಣೆಗಳಿವೆ. ಮಣಿಯಾಣಿಗಳಲ್ಲಿ ಶುದ್ಧಿ ಕೆಲಸವನ್ನು ಮಾಡುವವರು ಪುಷ್ಟಕ ಸಮುದಾಯದ ‘ಪಾಪಿನಿ’ಗಳಾಗಿದ್ದಾರೆ.

ಮಣಿಯಾಣಿಗಳಲ್ಲಿ ಹೆಣ್ಣು ಋತುಮತಿಯಾದರೆ ಪುರುಷರನ್ನು ಸಂಧಿಸದೆ ಸಂಬಂಧಿಕೆ ಹಾಸಿಕೊಟ್ಟ ಶುದ್ಧಿವಸ್ತ್ರದಲ್ಲಿ ಮಲಗುತ್ತಾಳೆ. ನಾಲ್ಕನೇ ದಿವಸ ತೆರಂಡ್‌ಕಲ್ಯಾಣಂ. ಆ ದಿವಸ ಮನೆಯ ಇತರ ಮಹಿಳೆಯರೊಂದಿಗೆ ಸ್ನಾನಕ್ಕೆ ಹೋಗುತ್ತಾಳೆ. ಕೈಯಲ್ಲಿ ವಾಲ್‌ಕನ್ನಾಡಿ ಹಾಗೂ ಹಿಂಗಾರವಿರುತ್ತದೆ. ತೆಂಗಿನ ಗರಿಯ ಆಭರಣಗಳನ್ನು ಧರಿಸಿರುತ್ತಾಳೆ. ಅರಸಿಣ ಹಚ್ಚಿ ಸ್ನಾನ ಮಾಡುವಳು. ಅನಂತರ ಹಿಂಗಾರವನ್ನು ನೀರಿಗೆ ಬಡಿದು ಪುಡಿ ಮಾಡುತ್ತಾಳೆ. ದಡದಲ್ಲಿ ಮಹಿಳೆಯರು ಉದ್ಘೋಷ ಹಾಕುವರು. ಸ್ನಾನ ಮಾಡಿದ ಹೆಣ್ಣಿಗೆ ಪಾಪಿನಿ ಸ್ತ್ರೀ ಶುದ್ಧಿ ವಸ್ತ್ರ ನೀಡಿ, ಶ್ರೀಗಂಧ, ಕುಂಕುಮ ಹಚ್ಚುವಳು.

ಮುಸ್ಲಿಂ ಸಮುದಾಯದಲ್ಲಿಯೂ ಋತಿಮತಿ ಆಚರಣೆಗಳಿವೆ. ಅಂದು ಬಂದವರಿಗೆ ಸಕ್ಕರೆ ಹಾಗೂ ಕೊಬ್ಬರಿ ಹಂಚುವರು. ಹೆಣ್ಣನ್ನು ಹೊಸವಸ್ತ್ರ ಹಾಗೂ ಆಭರಣಗಳಿಂದ ಅಲಂಕರಿಸುವರು. ಹಾಡು, ಕುಣಿತ, ಭೋಜನಗಳಿರುವುದು. ಕ್ಷತ್ರಿಯರ ಸಮುದಾಯಗಳಲ್ಲಿ ಋತುಮತಿ ಆಚರಣೆಗಳಿವೆ. ನಾಯರ್ ಸಮುದಾಯದ ಆಚರಣೆಗಳೇ ಇದರಲ್ಲಿ ಕಂಡುಬರುತ್ತವೆ. ಆದರೆ ಮೂರನೇ ದಿವಸದ ‘ಚಕ್ಕರ್ ಚೋರ್‌’ಗೆ ಬದಲಾಗಿ ಹಾಲಿನಗಂಜಿ(ಪಾಲ್ಕಾಞಿ) ನೀಡುವರು. ತಿರಂಡುಪಾಟುಗಳನ್ನು ಹಾಡುವರು.

ತೆರಂಡ್‌ ಕಲ್ಯಾಣಕ್ಕೆ ಸಂಬಂಧಿಸದಂತೆ ವಣ್ಣಾತಿಮಾಟ್, ವಣ್ಣಾನ್‌ಪಾಟ್, ಪೂದಂ ಕೆಟ್ಟಿಕಳಿ, ಪಾಪಿನಿಪಾಟ್ ಮೊದಲಾದ ಆಚರಣೆಗಳು ಕೇರಳದಲ್ಲಿವೆ. ಸವರ್ಣರಲ್ಲಿಯೂ, ಅವರ್ಣರಲ್ಲಿಯೂ ಶುದ್ಧಿಯ ಕುರಿತಾಗಿರುವ ಕಲ್ಪನೆಗಳು, ನಂಬಿಕೆಗಳು ಇಂತಹ ಆಚರಣೆಗಳಿಗೆ ಕಾರಣವಾದುವು. ಹೆಣ್ಣಿನ ಮದುವೆ ಸಂತಾನಭಾಗ್ಯದ ಕುರಿತು ಈ ಆಚರಣೆಗಳ ವಿಧಿಗಳ ಮೂಲಕ ಭವಿಷ್ಯ ಹೇಳುವ ಪರಿಪಾಠವೂ ರೂಢಿಯಲ್ಲಿತ್ತು. ಮಣಿಯಾಣಿ ಋತುಮತಿ ಹುಡುಗಿ ನೀರಿಗೆ ಬಡಿಯುವ ಹಿಂಗಾರದ ಎಳೆಗಾಯಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಸಂತಾನ ಭಾಗ್ಯವನ್ನು ಹೇಳುತ್ತಿದ್ದರು. ಹಾಗೆಯೇ ಪಾತ್ರೆಯಲ್ಲಿ ನೀರು ತುಂಬಿಸಿ, ಅಕ್ಕಿ, ತುಂಬೆ ಹೂವು ಹಾಕಿ, ಅದು ಚಲಿಸಿದ ದಿಕ್ಕಿನಿಂದ ವರ ಆಗಮಿಸುತ್ತಾನೆ ಎಂಬುದು ನಂಬಿಕೆಯಾಗಿತ್ತು.

ಋತುಮತಿ ಮದುವೆಯ ಕಾರ್ಯಕ್ರಮಗಳು ತುಂಬ ವೆಚ್ಚದಾಯಕವಾಗಿದ್ದುವು. ಇಂದಿಗೂ ಬುಡಕಟ್ಟು ಸಮಾಜದಲ್ಲಿ ಇಂತಹ ಆಚರಣೆಗಳು ರೂಢಿಯಲ್ಲಿವೆ. ಉಳಿದ ಸಮುದಾಯಗಳಲ್ಲಿ ಈ ಆಚರಣೆಗಳು ವಿರಳವಾಗುತ್ತಿವೆ. ಮುಟ್ಟಿನ ಅಶುದ್ಧಿಯ ಆಚರಣೆಗಳೂ ಕಡಿಮೆಯಾಗಿವೆ. ಅಸ್ಪೃಶ್ಯತೆ, ಶುದ್ಧಿಸ್ನಾನ, ವಣ್ಣಾತ್ತಿಮಾಟ್ ಮೊದಲಾದ ವಿಧಿಗಳನ್ನು ಆಧುನಿಕ ಸಮಾಜ ತಿರಸ್ಕರಿಸುತ್ತಿದೆ.

ಮುಟ್ಟಿನ ಕಾಲ ಪ್ರೇತ ಬಾಧೆಗಳನ್ನು ಆಕರ್ಷಿಸುವ ಕಾಲವೆಂಬುದು ನಂಬಿಕೆ. ಹಿಂದೆ ಶುದ್ದಿ ಸ್ನಾನದ ಜತೆಗೆ ಪ್ರೇತಗಳ ಉಚ್ಛಾಟನೆಯೂ ನಡೆಯುತ್ತಿತ್ತು. ಸಂಬಂಧಿಕರು ಹಾಗೂ ನೆರೆಹೊರೆಯವರ ಸೌಹಾರ್ದ ಸಂಬಂಧವನ್ನು ಹೆಚ್ಚಿಸುವುದು. ಮನೆ, ಕೆರೆಗಳ ನಿರ್ಮಾಣ ಮೊದಲಾದ ಸಂಗತಿಗಳು ಇಂತಹ ಆಚರಣೆಗಳೊಂದಿಗೆ ಸಂಬಂಧವನ್ನು ಹೊಂದಿದ್ದುವು. ಆಚರಣೆಗಳು ಮರೆಯಾದಂತೆ ಇಂತಹ ಸಂಗತಿಗಳ ಆಶಯಗಳಲ್ಲಿ ಬದಲಾವಣೆ ಉಂಟಾಗಿದೆ.

ಪಿ.ವಿ.ಕೆ. ಅನುವಾದ ಎನ್.ಎನ್.