ದೊಮ್ಮರಾಟ ಇದು ಮನರಂಜನಾ ಪ್ರಧಾನವಾದ ಆಂಧ್ರಪ್ರದೇಶದಲ್ಲಿ ಪ್ರಚಲಿತವಿದ್ದ ಪ್ರಾಚೀನ ಜನಪದ ಪ್ರದರ್ಶನ ಕಲೆ (ಡೊಂಬರಾಟ). ಅಲೆಮಾರಿಗಳಾದ ದೊಂಬರ ಸಾಂಪ್ರದಾಯಿಕ ಕಲೆ ಇದು. ದೊಂಬರು ನಿರ್ದಿಷ್ಟ ಗ್ರಾಮಗಳಿಗೆ ಬಂದು, ಊರಿನ ಮಧ್ಯೆ ದೇವಸ್ಥಾನ ಇಲ್ಲವೆ ಶಾಲೆಯ ಆವರಣದಲ್ಲಿ ಒಟ್ಟಿನಲ್ಲಿ ನಾಲ್ಕು ಜನ ಸೇರುವ ಕಡೆ ಮರ ಒಂದನ್ನು ನೆಟ್ಟು ಅಲ್ಲಿ ಆಶ್ಚರ್ಯಕರವಾದ ಆಟಗಳನ್ನು ತೋರಿಸುತ್ತಾನೆ. ಇವರ ಜಾತಿಯಿಂದ ಮತ್ತು ಪ್ರದರ್ಶಿಸುವ ಕಲೆಯಿಂದಾಗಿ ಈ ಕಲೆಗ ‘ದೊಂಬರಾಟ’ ಎಂಬ ಹೆಸರು ಸಹಜವಾಗಿ ನಿಂತಿದೆ. ಮುಖ್ಯವಾಗಿ ದೊಂಬರ ಹೆಂಗಸು (ದೊಂಬಸಾನಿ) ಉದ್ದನೆಯ ಗಳದ ಮೇಲೆ ಹತ್ತಿ ಗಿರ‍್ರನೆ ತಿರುಗುವುದು ವಿಶೇಷ ಆಕರ್ಷಣೆ. ಈ ಹೆಂಗಸರು ತುಂಬ ಸೌಂದರ್ಯವತಿಯರು, ಇವರನ್ನು ದೊಂಬರ ಸಾನಿ, ಗೆಡಸಾನಿ ಎಂದು ಕರೆಯುತ್ತಾರೆ. ಇವರು ತಮ್ಮನ್ನು ಮೇನಕೆಯ ಸಂತಾನವೆಂದು ಹೇಳಿಕೊಳ್ಳುತ್ತಾರೆ. ವಯಸ್ಸಿಗೆ ಬಂದ ಹೆಣ್ಣು ಕುಟುಂಬ ನಿರ್ವಹಣೆ ಮಾಡುತ್ತಾಳೆ. ದೊಂಬರ ಜಾತಿಯಲ್ಲಿ ಮಹಿಳೆಗೆ ವಿಶೇಷ ಪ್ರಾಧನ್ಯವಿದೆ. ಈ ಆಟದಲ್ಲಿ ಸ್ತ್ರೀಯರು, ಪುರುಷರು, ಮಕ್ಕಳು ಇರುತ್ತಾರೆ. ಇವರೆಲ್ಲ ಒಟ್ಟಿಗೆ ಒಂದೇ ಕುಟುಂಬದಂತಿರುತ್ತಾರೆ. ಇವರ ವೇಷ ಭೂಷಣಗಳು ಹೀಗಿವೆ:

ಹೆಂಗಸರು, ಗಂಡಸರು ಕಚ್ಚೆ ಕಟ್ಟಿಕೊಂಡು ಲಂಗೋಟಿ ಬಿಗಿದು ಟವಲನ್ನು ಸೊಂಟಕ್ಕೆ ಬಿಗಿದಿರುತ್ತಾರೆ. ಪ್ರದರ್ಶನಕ್ಕೆ ಇವರು ಎರಡು ನಗಾರಿ ಒಂದು ಡೋಲು, ಒಂದು ಕಂಜರಿ ವಾದ್ಯಗಳನ್ನು ಬಳಸುವರು. ವಾದ್ಯಗಳು ದೊಂಬರಾಟಕ್ಕೆ ಜೀವ. ಅವಿಲ್ಲದೆ ಆಟ ನಡೆಯುವುದಿಲ್ಲ. ತಮಟೆ ಸದ್ದಿನೊಂದಿಗೆ ಸಣ್ಣ ಮಕ್ಕಳ ಮೂಲಕ ಚಿಕ್ಕ ಚಿಕ್ಕ ಭಂಗಿಗಳನ್ನು ಮಾಡಿಸುತ್ತಾರೆ. ಜನ ಸೇರಿದ ಮೇಲೆ ಪ್ರದರ್ಶನ ಪ್ರಾರಂಭವಾಗುತ್ತದೆ.

ಗಂಡಸರು ಒಂದು ಶೂಲ ನಾಲ್ಕೈದು ಕತ್ತಿಗಲು, ಎರಡು ಪಂಜು ಹಿಡಿದು ವಾದ್ಯಗಳಿಗಣುಗುಣವಾಗಿ ವಿವಿಧ ವಿನ್ಯಾಸಗಳನ್ನು ನೀಡುತ್ತಾರೆ. ಪ್ರದರ್ಶನ ನಡೆಯುವ ಸ್ಥಳದ ಒಂದು ಮೂಲೆಯಲ್ಲಿ ಚಾಪೆ ಹಾಸಿ ಅದರ ಮೇಲೆ ಒಂದು ಪೀಠವನ್ನಿಟ್ಟು ಅದರಲ್ಲಿ ಮನುಷ್ಯನ ಆಕಾರದ ಒಂದು ಗೊಂಬೆಯನ್ನು ಕೂರಿಸುತ್ತಾರೆ. ಅಲ್ಲಿ ಒಂದು ಸಣ್ಣ ಕತ್ತಿ, ಎರಡು ನಿಂಬೆಹಣ್ಣು, ಎರಡು ತೆಂಗಿನ ಕಾಯಿ, ಸ್ವಲ್ಪ ಬೇವಿನ ಸೊಪ್ಪು, ಅರಿಸಿನ, ಕುಂಕುಮ ಇಟ್ಟು ವಿಶೇಷವಾಗಿ ಪೂಜೆ ಮಾಡಿದ ಮೇಲೆ ನಿಜವಾದ ಪ್ರದರ್ಶನ ಆರಂಭವಾಗುತ್ತದೆ. ದೊಂಬರಾಟಗಳು ಮುಖ್ಯ ಪಾತ್ರವಹಿಸುತ್ತದೆ. ಅದನ್ನು ದೇವರಂತೆ ಭಾವಿಸುತ್ತಾರೆ. ಗಳುವನ್ನು ಅರಿಸಿನ ಕುಂಕುಮಗಳಿಂದ ಅಲಂಕರಿಸಿದ ಮೇಲೆ ಆರು ಗಜದಷ್ಟು ಆಳ ತೋಡಿ ನೆಟ್ಟು ಅತ್ತಿತ್ತ ಅಲುಗಾಡದಂತೆ ಗಳುವಿಗೆ ತುದಿ ಭಾಗದಿಂದ ಎರಡು ಹಗ್ಗಗಳನ್ನು ಗಳುವಿನ ಮಧ್ಯೆ ಎರಡು ಹಗ್ಗಗಳನ್ನು ನಾಲ್ಕು ಕಡೆ ಎಳೆದು ಅಲುಗಾಡದಂತೆ ಬಿಗಿಯಾಗಿ ಕಟ್ಟುತ್ತಾರೆ. ಗಳುವಿನ ತುದಿಯಲ್ಲಿ ಒಂದು ಗಜದಷ್ಟು ಉದ್ದವಿರುವ ದೊಣ್ಣೆಯನ್ನು ಮಧ್ಯದಲ್ಲಿ ಎರಡು ಗಜದ ದೊಣ್ಣೆಯನ್ನು ಅಡ್ಡಲಾಗಿ ಕಟ್ಟುತ್ತಾರೆ. ಮಧ್ಯ ಭಾಗದಲ್ಲಿರುವ ಅಡ್ಡ ದೊಣ್ಣೆಯ ಬಲಭಾಗದಲ್ಲಿ ಸಣ್ಣ ಉಯ್ಯಾಲೆ ಕಟ್ಟುತ್ತಾರೆ. ಗಳುವಿನ ತುದಿಯಲ್ಲಿ ಕಬ್ಬಿಣದ ಬೆಣೆಯೊಂದನ್ನು ಸೇರಿಸುತ್ತಾರೆ. ಅದರಲ್ಲಿ ಬೇವಿನಸೊಪ್ಪನ್ನು ಸಿಕ್ಕಿಸಿ ಕಟ್ಟುವರು. ಎಲ್ಲವೂ ಸಿದ್ಧವಾದ ಮೇಲೆ ದೊಂಬರಸಾನಿ ಉಯ್ಯಾಲೆಯಲ್ಲಿ ಕೂತು ಆಶ್ಚರ್ಯಕರವಾದ ಅನೇಕ ವಿನ್ಯಾಸಗಳನ್ನು ತೋರಿಸುತ್ತಾಳೆ.

11_70A_DBJK-KUH

ಅವುಗಳಲ್ಲಿ ಮುಖ್ಯವಾದವು ಉಯ್ಯಾಲೆಯಲ್ಲಿ ವೇಗವಾಗಿ ತೂಗುವುದು, ತಲೆ ಕೆಳಗಾಗಿ ತೂಗುವುದು, ಒಂಟಿ ಕಾಲಿನಲ್ಲಿ ತಲೆ ಕೆಳಗಾಗಿ ನೇತಾಡುವುದು, ಅನಂತರ ಗಳುವಿನ ತುದಿಗೆ ಹತ್ತಿ ಅಲ್ಲಿರುವ ಕಬ್ಬಿಣದ ಬೆಣೆಯನ್ನು ಹೊಕ್ಕಳಿಗೆ ಕಟ್ಟಿಕೊಂಡು ಕಬ್ಬಿಣದ ಬಿಲ್ಲೆಯನ್ನು ಅದರ ಮೇಲಿಟ್ಟು ಮಲಗಿ ರಂಗಿನ ರಾಟೆಯಂತೆ ಗಿರಗರನೆ ಸುತ್ತಿ ದೊಂಬರ ಹೆಣ್ಣು ಎಲ್ಲರನ್ನು ಆಕರ್ಷಿಸುವುದಲ್ಲದೆ ಆಶ್ಚರ್ಯ ಚಕಿತರನ್ನಾಗಿಸುತ್ತಾಳೆ. ತನ್ನ ಎರಡೂ ಕೈಗಳಲ್ಲಿದ್ದ ಬೇವಿನ ಸೊಪ್ಪನ್ನು ತಿರುಗುತ್ತಲೇ ತನ್ನ ಎರಡೂ ಕೈಗಳಲ್ಲಿದ್ದ ಬೇವಿನ ಸೊಪ್ಪನ್ನು ತಿರಗುತ್ತಲೇ ಕೆಳಕ್ಕೆ ಎಸೆಯುತ್ತಾಳೆ. ಬೇವಿನಸೊಪ್ಪು ಯಾವ ಕಡೆ ಬೀಳುತ್ತದೆಯೋ ಆ ದಿಕ್ಕಿನಲ್ಲಿ ಸಮೃದ್ಧವಾಗಿ ಬೆಳೆ ಬೆಳೆಯುತ್ತದೆ ಎಂದು ಗ್ರಾಮೀಣ ಜನ ನಂಬುತ್ತಾರೆ. ಈ ಪ್ರದರ್ಶನಕ್ಕೆ ೧೦ ಮಂದಿಗಿಂತ ಕಡಿಮೆ ಜನ ಇರುವುದಿಲ್ಲ. ಈ ಕಲೆ ಹಗಲು ವೇಳೆ ಪ್ರದರ್ಶಿಸುವಂಥದ್ದು. ಗುರುತಿಸಿ ಎರಡು ಗಳುಗಳನ್ನು ನೆಟ್ಟು ಎರಡು ಗಳು ಸೇರಿ ತಂತಿ ಕಟ್ಟಿ ಅದರ ಮೇಲೆ ದೊಂಬರ ಹೆಂಗಸು ಜಾಗರೂಕತೆಯಿಂದ ನಯವಾಗಿ ನಡೆಯುತ್ತಾಳೆ. ವಿವಿಧ ಗಾತ್ರದ ವೃತ್ತಾಕಾರದ ಬಳೆಗಳ ಮಧ್ಯೆ ಮಕ್ಕಳು ದೊಡ್ಡವರು ಚಾಕಚಕ್ಯತೆಯಿಂದ ನುಗ್ಗಿ ಬರುವುದು ಗಂಟಲಿನಿಂದ ಕಬ್ಬಿಣದ ಸರಳುಗಳನ್ನು ಬಗ್ಗಿಸುವುದು ಮೈವರಿರೇಳಿಸುತ್ತವೆ. ಇವುಗಳ ಪ್ರಸ್ತಾಪ ಪಾಲ್ಕುರಿಕೆ ಸೋಮನಾಥ, ನಾಚನ ಸೋಮನ, ಶ್ರೀನಾಥ ಮುಂತಾದವರ ಕೃತಿಗಳಲ್ಲಿದೆ.

ಟಿ.ಎಸ್.ಎನ್.ಅನುವಾದ ಎನ್.ಆರ್.

 

ದೊರಬೋಯಕೊಂಡ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚೌಡೇಪಲ್ಲಿ ಸಮಿಪದ ದಿಗುವಪಲ್ಲಿ ಗ್ರಾಮದಲ್ಲಿ ಒಂದು ಬೆಟ್ಟ ಇದೆ. ಅದನ್ನು ದೊರಬೋಯಕೊಂಡ ಎನ್ನುತ್ತಾರೆ. ಈ ಬೆಟ್ಟದ ಮೇಲೆ ದೊರೆಗಳು ಮತ್ತು ಬೋವಿಗಳು ವಾಸ ಇದ್ದುದರಿಂದ ಈ ಹೆಸರು ಬಂದಿರುವುದಾಗಿ ಹೇಳುತ್ತಾರೆ.ಬೆಟ್ಟದ ಮೇಲೆ ಗಂಗಮ್ಮನ ದೇವಸ್ಥಾನ ಇರುವುದರಿಂದ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳಿಂದ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ.

ಈ ಬೆಟ್ಟ ಪುಂಗನೂರಿಗೆ ೨೦ ಕಿ.ಮೀ. ದೂರದಲ್ಲಿದೆ. ಹಿಂದೆ ಪುಂಗನೂರು ಸಂಸ್ಥಾನದ ಮೇಲೆ ಮುಸಲ್ಮಾನರು ದಂಡೆತ್ತಿ ಬಂದರು. ಪುಂಗನೂರಿನ ಪಾಳೆಗಾರರು ಆ ಸೈನ್ಯವನ್ನು ಸಾಮರ್ಥ್ಯದಿಂದ ಎದುರಿಸಿದರು. ಅನಂತರ ಮತ್ತೆ ಕೆಲವು ದಿನಗಳಲ್ಲಿ ಮುಸಲ್ಮಾನರು ಮತ್ತೊಮ್ಮೆ ದಂಡೆತ್ತಿ ಬಂದರು. ಆಗ ಮುಸಲ್ಮಾನರದೇ ಮೇಲುಗೈಯಾಯಿತು. ಪಾಳೆಗಾರರು ಪ್ರಾಣಭಯದಿಂದ ಓಡಿ ಹೋಗಿ ಕಾಡುಗಳಲ್ಲಿದ್ದರು. ಅಲ್ಲಿಂದ ಬೇರೆ ಬೆರೆ ಪ್ರದೇಶಗಳಲ್ಲಿರುವ ಬಂಧು ವರ್ಗದವರಿಗೆ ಮುಸಲ್ಮಾನರ ದಾಳಿಯನ್ನು ಕುರಿತು ಸುದ್ದಿ ಮುಟ್ಟಿಸಿದರು. ಅವರೆಲ್ಲ ಬಂದ ಮುಸಲ್ಮಾನರನ್ನು ಎದುದರಿಸಿದರು. ಎರಡೂ ಕಡೆ ಸೈನ್ಯ ನಷ್ಟವಾಯಿತು.

ಯುದ್ಧದಿಂದ ಓಡಿ ಹೋದವರು ಒಂದು ಬೆಟ್ಟದ ಮೇಲೆ ತಮಗೆ ಬೇಕಾದ ಹಾಗೆ ಕೋಟೆಯನ್ನು ಕಟ್ಟಿ ತಮ್ಮ ಆಯುಧಗಳನ್ನು ಗುಹೆಗಳಲ್ಲಿ ಭದ್ರಮಾಡಿಕೊಂಡರು. ಅವರು ನಿರ್ಮಿಸಿದ ಕೋಟೆಗೆ ‘ಸತ್ತಾರಿ ಕೋಟ’ ಎಂದು ಹೆಸರು. ಇದು ಈಗಲೂ ಇದೆ. ಗುಹೆಗಳನ್ನು ‘ನಲ್ಲಮಂದು ಗೆರಸೆಲು’ ಎಂದು ಹೇಳುತ್ತಾರೆ.

ಮುಸಲ್ಮಾನರು ಪಾಳೆಯಗಾರರ ವಾಸಸ್ಥಾನವನ್ನು ತಿಳಿದು ಬೆಟ್ಟದ ಮೇಲೆ ಇರುವ ಸೈನ್ಯವನ್ನು ಸುತ್ತುವರಿದರು. ಬೆಟ್ಟದ ಮೇಲೆ ಯುದ್ಧ ನಡೆಯಿತು. ಕೊನೆಗೆ ಪಾಳೆಯಗಾರರಿಗೆ ಸೋಲುಂಟಾಗುವ ಸ್ಥಿತಿ ಬಂತು. ಆಗ ಅವರು ಗಂಗಮ್ಮನ ಕಾಲುಹಿಡಿದರು. ಗಂಗಮ್ಮ ಒಬ್ಬ ಬೋವಿಯ ಮೈಮೇಲೆ ಬಂದು ಕತ್ತಿ ಹಿಡಿದು ಮುಸಲ್ಮಾನ್‌ ಸೈನ್ಯವನ್ನು ನಾಶಮಾಡತೊಡಗಿದಳು. ಅವರು ಮುಂದೆ ಮುಂದೆ ಬಂದಾಗ ದೊಡ್ಡ ಕಲ್ಲುಗುಂಡನ್ನು ಎರಡಾಗಿ ಸೀಳಿದಳು. ಆದರೂ ಮುಸಲ್ಮಾನರು ಹೆದರದಿದ್ದಾಗ ಆಕೆ ವಿಜೃಂಭಿಸಿ ಅವರ ತಲೆಗಳನ್ನು ಕತ್ತರಿಸಿ ಆಲದ ಮರಕ್ಕೆ ನೇತು ಹಾಕಿದಳು. ಆ ಮರವನ್ನು ಈಗ ಕಲೆಗಳ ಆಲದಮರ ಎಂದು ಕರೆಯುತ್ತಾರೆ. ಗಂಗಮ್ಮ ವಿಕೃತ ರೂಪದಲ್ಲಿ ತುಂಬ ಆವೇಶದಿಂದರುವುದನ್ನು ನೋಡಿದ ಸೈನಿಕರು ‘ಶಾಂತಿಸು ತಾಯಿ ಶಾಂತಿಸು’ ಎಂದು ಹೇಳಿ ಬಲಿಕೊಟ್ಟರು. ಅಲ್ಲೇ ಒಂದು ಗುಡಿಯನ್ನು ಕಟ್ಟಿ ಬೋವಿಯವರನ್ನೆ ಪೂಜಾರಿ ಮಾಡಿದರು. ಬೆಟ್ಟದ ಮೇಲಿರುವ ಅನೇಕ ಪ್ರದೇಶಗಳಲ್ಲಿ ಜಾತಿಗೆ ಬೇರೆ ಹೆಸರುಗಳಿವೆ. ಮುಸಲ್ಮಾನರ ಹೆಂಡತಿಯರು ಈ ಬೆಟ್ಟದ ಮೇಲಿರುವ ಆಲದ ಮರವನ್ನು ನೋಡಿ ಅಲ್ಲೇ ಒಂದು ಗುಡ್ಡದ ಹತ್ತಿರ ಬಂದುಅತ್ತರಂತೆ. ಅದನ್ನು ಮುಂಡಮೋಪುಲಗುಟ್ಟ (ವಿಧವೆಯರ ಗುಡ್ಡ) ಎನ್ನುತ್ತಾರೆ.ಅವರು ಮಲ್ಲಿಗೆ ಹೂವುಗಳನ್ನು ತೆಗೆದು ಇನ್ನೊಂದು ಗುಡ್ಡದ ಮೇಲೆ ಎಸೆದರಂತೆ. ಅದಕ್ಕೆ ಮಲ್ಲೇಪೂಲಗುಟ್ಟಿ ಎಂದು ಹೆಸರು.

ಈ ಬೆಟ್ಟಕ್ಕೆ ಎರಡು ಕಿ.ಮೀ. ದೂರದಲ್ಲಿ ಒಂದು ದೊಡ್ಡ ಗೂಟ ಇದೆ. ಅದಕ್ಕೆ ಆನೆ ಗೂಟ ಎಂದು ಹೆಸರು. ಯುದ್ಧಕ್ಕೆ ಬಂದ ಮುಸಲ್ಮಾನರು ತಮ್ಮ ಆನೆಯನ್ನು ಇದಕ್ಕೆ ಕಟ್ಟಿದ್ದರಂತೆ. ಈಗ ಅದನ್ನು ನೋಡಲು ಬಯಸಿದವರು ಅರಿಸಿನ ಕುಂಕುಮಗಳಿಂದ ಪೂಜೆ ಮಾಡಿ ನೋಡಬೇಕು.

ಯಾರಾದರೂ ಮುಖ್ಯವಾದ ಕೆಲಸವನ್ನು ಪ್ರಾರಂಭಿಸಬೇಕು ಎಂದುಕೊಂಡಾಗ ದೊರಬೋಯಕೊಂಡಕ್ಕೆ ಹೋಗಿ ಗಂಗಮ್ಮ ನನ್ನು ಹೂವು ಕೇಳುತ್ತಾರೆ. ಹಾಗೆ ಕೇಳಬೇಕು ಎಂದುಕೊಂಡವರು ಕೊಳದಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆಗಳಿಂದ ಗಂಗಮ್ಮನ ಮುಂದೆ ಬೋರಲಾಗಿ ಮಲಗುತ್ತಾರೆ. ಗಂಗಮ್ಮನ ವಿಗ್ರಹದ ಮೇಲೆ ಪೂಜಾರಿ ಎರಡು ಹೂವುಗಳನ್ನು ಇಡುತ್ತಾನೆ. ಆ ಹೂವು ಬಲಗಡೆ ಬಿದ್ದರೆ ಕೆಲಸ ಆಗುತ್ತದೆ. ಎಡಗಡೆ ಬಿದ್ದರೆ ಕೆಲಸ ಆಗುವುದಿಲ್ಲ. ಮುಖ್ಯವಾಗಿ ಮಹಿಳೆಯರು ಸಂತಾನಕ್ಕಾಗಿ ಹೂವನ್ನು ಕೇಳಿಕೊಳ್ಳುತ್ತಾರೆ. ಹೂವು ಬೀಳಲು ಒಂದು ಗಂಟೆ, ಎರಡು ಗಂಟೆ ಅಥವಾ ಒಂದು ದಿನ ಆಗಬಹುದು. ಭಕ್ತರು ಅದಕ್ಕಾಗಿ ಕಾಯಬೇಕಾಗುತ್ತದೆ.

ಮಕ್ಕಳು ಬೇಕೆಂದುಕೊಂಡವರು ಬಟ್ಟೆಯಲ್ಲಿ ಒಂದು ಕಲ್ಲನ್ನು ಇಟ್ಟು ಮರಕ್ಕೆ ನೇತು ಹಾಕುತ್ತಾರೆ. ಈ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಯಾವ ಮರವನ್ನು ನೋಡಿದರೂ ಕಲ್ಲುಗಳನ್ನು ಹೊರಲಾರದೆ ಮುರಿದು ಬೀಳುವಂತಿರುತ್ತವೆ. ಯಾವುದಾದರೂ ಆಪತ್ತು ಎದುರುದಾಗ ಅಥವಾ ಏನಾದರೂ ಬಯಕೆ ಇದ್ದಾಗ ಬೆಟ್ಟಕ್ಕೆ ತಲೆಗೂದಲು ಮುಡಿಕೊಡುವುದಾಗಿ ಅಥವ ಕೋಳಿಯನ್ನೋ ಕುರಿಯನ್ನೋ ಕೋಣವನ್ನೋ ಬಲಿಕೊಡುವುದಾಗಿ ಹರಸಿಕೊಳ್ಳುತ್ತಾರೆ. ಈ ಬೆಟ್ಟದ ಗಂಗಮ್ಮನ ಬಗ್ಗೆ ಅನೇಕ ನಂಬಿಕೆಗಳಿವೆ. ಗುಡಿಯ ಮುಂದಿರುವ ಕೊಳದ ನೀರನ್ನು ಒಂದು ಮಡಕೆಯಲ್ಲಿ ತುಂಬಿಸಿ ಗಂಗಮ್ಮನ ಅರಿಸಿನ ಕುಂಕಮಗಳನ್ನು ಆ ನೀರಿನಲ್ಲಿ ಕಲಸಿ ತೀರ್ಥವಾಗಿ ಕೊಡುತ್ತಾರೆ. ಹೊಲಗಳಿಗೆ ರೋಗ ಹಿಡಿದರೆ ಗಂಗಮ್ಮನ ತೀರ್ಥವನ್ನು ಚೆಲ್ಲುತ್ತಾರೆ. ‘ಮೀದಿ’ ಎಂಬ ಹೆಸರಿನಲ್ಲಿ ಗಂಗಮ್ಮನಿಗೆ ಮುಡುಪು ಕಟ್ಟಿಕೊಳ್ಳುವ ಸಂಪ್ರದಾಯವೂ ಇದೆ. ಒಂದು ಸಣ್ಣ ಬಟ್ಟೆಯನ್ನು ನೀರಿನಲ್ಲಿ ನೆನಸಿ ಅರಿಸಿನ ಕುಂಕುಮಗಳಲ್ಲಿ ಅದ್ದಿ ದೇವರ ಮುಂದಿಟ್ಟು ಅದನ್ನು ಆಪತ್ತು ಬಂದಾಗ ಗಂಗಮ್ಮನಿಗೆ ಮುಡಿಪಾಗಿ ಸಲ್ಲಿಸುವುದಾಗಿ ಹೇಳಿಕೊಳ್ಳುತ್ತಾರೆ. ಅನಂತರ ಸಾಧ್ಯವಾದಾಗ ಬೆಟ್ಟಕ್ಕೆ ಹೋಗಿ ಅದನ್ನು ಅರ್ಪಿಸುತ್ತಾರೆ. ಈ ಬೆಟ್ಟಕ್ಕೆ ಭಾನುವಾರ, ಮಂಗಳವಾರ ಮತ್ತು ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆಗ ಪ್ರಾಣಿಗಳ ರಕ್ತ ಹೊಳೆಯಾಗಿ ಹರಿಯುತ್ತದೆ. ಮರುದಿನ ಒಂದುತೊಟ್ಟು ರಕ್ತ ಕೂಡ ಇರುವುದಿಲ್ಲ. ರಾತ್ರಿ ಹೊತ್ತು ದೇವತೆ ಬಂದು ರಕ್ತವನ್ನೆಲ್ಲ ನೆಕ್ಕಿಬಿಡುತ್ತಾಳೆಂದು ನಂಬಲಾಗಿದೆ.

ಎಂ.ಆರ್.ಎನ್.ಅನುವಾದ ಎ.ಎಂ.ಡಿ.

 

ದ್ರೌಪದಮ್ಮ-ಕರಗದಮ್ಮ ಕರಗ ನೂರಾರು ವರ್ಷಗಳಿಂದ ತನ್ನ ಛಾಪು ಉಳಿಸಿಕೊಂಡು ನಿರಂತರವಾಗಿ ಸಾಗಿ ಬರುತ್ತಿರುವ ಒಂದು ಸಾಂಸ್ಕೃತಿಕ ದೈವಿಕ ಆಚರಣೆ. ನೂರಾರು ಕಡೆಗಳಲ್ಲಿ ಕರಗದ ಆಚರಣೆಗಳು ಕಂಡು ಬಂದರೂ ಆಚರಣೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವ ಈ ಕರಗದ ಉತ್ಸವ ಮೂಲತಃ ವಹ್ನಿಕುಲ ಕ್ಷತ್ರಿಯರೆಂದು ಹೇಳಿಕೊಳ್ಳುವ ತಿಗಳರ ಒಂದು ಮುಖ್ಯ ಆಚರಣೆ. ಇಂಥ ಕರಗದಲ್ಲಿ ಪೂಜೆಗೊಳ್ಳುವ ಗ್ರಾಮದೇವತೆ ದ್ರೌಪತಮ್ಮ, ಈಕೆ ದ್ರುಪದರಾಜ ಮಾಡಿದ ಯಾಗದ ಹವಿಸ್ಸು ಅಗ್ನಿಗೆ ಸೇರಿದಾಗ, ಆ ಅಗ್ನಿಯಿಂದ ‘ಆದಿಶಕ್ತಿ’ಯ ಅಂಶದಿಂದ ಒಂದು ಹೆಣ್ಣು ಮಗುವಾಗಿ ಜನ್ಮ ತಾಳುತ್ತಾಳೆ. ಮುಂದೆ ಕೃಷ್ಣೆಯೆಂದು, ದ್ರೌಪದಿಯೆಂದು ಪ್ರಸಿದ್ಧಳಾಗುತ್ತಾಳೆ. ಹೀಗಾಗಿ ಆದಿಶಕ್ತಿ ಸ್ವರೂಪಳಾದ ದ್ರೌಪದಿಯು ಯಮಧರ್ಮನ ಅಂಶದಿಂದ ಜನಿಸಿದ ಧರ್ಮರಾಯನನ್ನು, ವಾಯುವಿನ ಅಂಶದಿಂದ ಜನಿಸಿದ ಭೀಮಸೇನನ್ನು, ಇಂದ್ರನ ಅಂಶದಿಂದ ಜನಿಸಿದ ಅರ್ಜುನನ್ನು, ಅಶ್ವಿನಿ ದೇವತೆಗಳ ಅಂಶದಿಂದ ಜನಿಸಿದ ನಕುಲ ಸಹದೇವರನ್ನು ಪತಿಗಳನ್ನಾಗಿ ಪಡೆದು ಮಹಾಭರತದ ಸೂತ್ರಧಾರಿಯಾಗಿದ್ದಾಳೆ. ಒಂದು ಪುರಾಣ ಕಥನದಂತೆ ಪಾಂಡವರು ದ್ರೌಪದಿ ಸಮೇತರಾಗಿ ಕೈಲಾಸಕ್ಕೆ ನಡೆದು ಹೋಗುತ್ತಿದ್ದಾಗ ದ್ರೌಪದಿ ಸ್ವಾಭಾವಿಕ ಸ್ತ್ರೀತನದಿಂದ ಶಕ್ತಿ ಕ್ಷೀಣಿಸಿ ಹಿಂದಾಗುತ್ತಾಳೆ. ಹೀಗಿರುವಲ್ಲಿ ಪಾಂಡವರೈವರೂ ಬಹಳ ಮುಂದೆ ಸಾಗಿರುತ್ತಾರೆ. ಇದನ್ನರಿತ ತಿಮಿರಾಸುರನು ದ್ರೌಪದಿಗೆ ಉಪದ್ರವವನ್ನು ಕೊಡಲು ಪ್ರಾರಂಭಿಸುತ್ತಾನೆ. ಆಗ ದ್ರೌಪದಿ ವಿಶ್ವರೂಪ ತಾಳಿ, ಗೌಡ, ಗಣಾಚಾರಿ, ಘಟೆ ಪೂಜಾರಿ, ವೀರ ಕುಮಾರರನ್ನು ಸೃಷ್ಟಿಸಿ ರಾಕ್ಷಸರನ್ನು ನಿರ್ನಾಮ ಮಾಡುತ್ತಾಳೆ. ಇದರ ಪ್ರತೀಕವೇ ಕರಗ ಎಂಬುದಾಗಿ ತಿಳಿದುಬಂದಿದೆ. ಒಟ್ಟಾರೆ ಹೇಳುವುದಾದರೆ ಅನಾದಿ ಕಾಲದಿಂದಲೂ ಅನೂಚಾನವಾಗಿ ಬಂದಿರುವ ಈ ಕರಗ ಆಚರಿಸುವ ಮುಖ್ಯಸ್ಥರು ಇವರೇ ಎಂದು ತಿಳಿದುಬಂದಿದೆ.

ಹೀಗೆ ತಿಗಳರು ಆಚರಿಸುವ ಕರಗದಾಚರಣೆಯೂ ಮಹಾಭಾರತಕ್ಕೂ ಸಂಬಂಧ ಕಲ್ಪಿಸಿಕೊಟ್ಟ ಆಚರಣೆ ಇದು. ದ್ರಾವಿಡ ಭಾಷೆಯಲ್ಲಿ ‘ತಿ’ ಎಂದರೆ ‘ಅಗ್ನಿ’ ಎಂಬರ್ಥ ಇರುವುದರಿಂದ ‘ತಿ’ ಗಣರು (ಬೆಂಕಿಯ ಪಂಗಡದವರು) ಎಂದು ಸಂಬೋಧಿಸುವುದು ಕಂಡುಬರುತ್ತದೆ. ತಿಗಳ ಎಂಬ ಶಬ್ದ ಬಹುತೇಕ ತ್ರಿಕುಲ > ತಿಗುಲ > ತಿಗಳ ಎಂದು ಆಗಿರಬಹುದು. ಇಲ್ಲಿ ‘ತ್ರಿ’ ಎಂದರೆ ಮೂರು ಎಂದರ್ಥ. ಅಂದರೆ ಇವರು ಮೂರು ಉಪಜಾತಿಗಳಿಂದ ಆದವರು.

೧. ವಹ್ನಿಕುಲಕ್ಷತ್ರಿಯರು, ೨. ಅಗ್ನಿಕುಲ ಕ್ಷತ್ರಿಯರು, ೩. ಶಂಭು ಕುಲಕ್ಷತ್ರಿಯರು. ಹೀಗಾಗಿ ಇವರನ್ನು ತ್ರಿಗಣರೂ ಎಂದೂ ಕರೆಯುತ್ತಾರೆ. ತ್ರಿಗಣರು ಕಾಲಾನಂತರದಲ್ಲಿ ಈ ಮುಂದೆ ಸೂಚಿಸಿದಂತೆ ಆಗಿರಬಹುದು. ತ್ರಿಗಣ > ತಿಗಣ > ತಿಗಳ ಹೀಗೆ ಗಣ = ಗುಂಪು, ತ್ರಿಗಣ = ಮೂರು ಗುಂಪುಗಳಿರುವುದರಿಂದ ಇವರನ್ನು ತಿಗಳರು ಎಂದು ಕರೆಯುವ ರೂಢಿ ಬಂದಿದೆ ಎನ್ನಬಹುದು. ಒಟ್ಟಾರೆ ಇವರು ಟಿಪ್ಪು ಸುಲ್ತಾನ್ ಕಾಲದಲ್ಲಿ ತಮಿಳುನಾಡಿನಿಂದ ಕರ್ನಟಕ್ಕೆ ತೋಟಗಾರಿಕೆಯ ಕಾರಣಕ್ಕಾಗಿ ವಲಸೆ ಬಂದವರು ಎಂದು ತಿಳಿದುಬರುತ್ತದೆ.

ವಹ್ನಿ ಮತ್ತು ಗೌಂಡರ್ ಮೊದಲಾದವರ ತಾಯಿನುಡಿ ತಮಿಳು. ಚೇರಾ, ತೀಯಾ, ಉಪಕುಲಗಳನ್ನು ಮಲಯಾಳಿಗಳಲ್ಲಿ ಕಾಣಬಹುದು. ತಮಿಳುನಾಡು ರಾಜ್ಯದಲ್ಲಿ ವಹ್ನಿಯಾರ್, ವಹ್ನಿ ಪಳ್ಳಿ, ಗೌಂಡರ್, ಪಡೆಯಾಚೆ, ನಾಯಕರ್, ಕುರುವನ್, ಪುಲಿ ಕುತ್ತಿಯನ್, ವಡನಾಯಕರ್ ಮುಂತಾದ ಉಪಜಾತಿಗಳು, ಆಂಧ್ರದಲ್ಲಿ ಧರ್ಮರಾಜ ಕಾಪು, ತೋಟರೆಡ್ಡಿ, ವಹ್ನಿರೆಡ್ಡಿ, ಎಂದೂ ಗುಜರಾತ್‌ನಲ್ಲಿ ದೀಪ ಕುಲ ಕ್ಷತ್ರಿಯ ಎಂದು ಭಾರತದ ಪ್ರಚಲಿತವಾಗಿವೆ. ಗಂಗರೇ ಇವರ ಮೂಲ ಪುರುಷರೆಂದು ಹೇಳುತ್ತಾರೆ. ಇವರು ಆಚರಿಸುವ ದ್ರೌಪದಮ್ಮನ ಕರಗ ಧರ್ಮರಾಯನ ದೇವಾಲಯದಲ್ಲಿ ನಡೆಯುತ್ತದೆ. ಮಲ್ಲಿಗೆ ಹಾಗೂ ಸುಗಂಧರಾಜ ಹೂಗಳಿಗೆ ಇಲ್ಲಿ ಪ್ರಮುಖಸ್ಥಾನ. ತಾಯಿಯ ಕರಗ ಪ್ರಮುಖವಾಗಿ ಮಲ್ಲಿಗೆ ಹೂಗಳಿಂದಲೇ ಅಲಂಕೃತವಾಗಿರುತ್ತದೆ. ಇಂಥ ಕರಗದಾಚರಣೆ ಪ್ರಮುಖವಾಗಿ ಐದು ದಿನಗಳ ನಡೆಯುತ್ತವೆ.

ಮೊದಲ ದಿನ ನವಗ್ರಹ ಪೂಜೆ ಹಾಗೂ ಹೋಮಗಳನ್ನು ಮಾಡಿ ಎಲ್ಲ ದೇವಾನುದೇವತೆಗಳಿಗೆ ಜಾತ್ರೆಗೆ ಆಮಂತ್ರಣ ನೀಡಲಾಗುತ್ತದೆ. ರಾತ್ರಿ ತೇರು ಕಟ್ಟುವ ಕಾರ್ಯನೆರವೇರುತ್ತದೆ. ಎರಡನೇ ದಿನ ಹಸಿಕರಗದಾಚರಣೆ. ಇಲ್ಲಿ ಗಂಗೆ ಪೂಜೆ, ಅಲಗುಪೂಜೆ, ಪೋತುರಾಜನಿಗೆ ಮೈಗೂಡುವಿಕೆ ಇವು ನೆರವೇರುತ್ತದೆ. ಆ ರಾತ್ರಿಯೇ ಕೆರೆಯ ಕಟ್ಟೆಯಿಂದ ಹಸಿ ಕರಗವನ್ನು ಹೊತ್ತು ತಂದು ಧರ್ಮರಾಯಸ್ವಾಮಿ ದೇವಾಲಯದಲ್ಲಿ ಇರಿಸಲಾಗುತ್ತದೆ. ಮೂರನೆಯ ದಿನ ವೀರಕುಮಾರರು ದೀಕ್ಷೆಯನ್ನು ತೊಟ್ಟು ಅಲಗು ಸೇವೆ ಮಾಡಿ, ‘ದೀಪ’ ದಾರತಿಯಿಂದ ದೇವರಿಗೆ ಹರಕೆಯನ್ನು ತೀರಿಸುತ್ತಾರೆ. ಇದೇ ಸಂದರ್ಭದಲ್ಲಿ ‘ಬಾಯಿ ಬೀಗ’ದ ಆಚರಣೆ ನಡೆಯುತ್ತದೆ. ನಾಲ್ಕನೇ ದಿನ ತೇರಿಗೆ ಬಲಿ ನೀಡಿ ತೇರಲ್ಲಿ ಊರಿನ ಶಿಷ್ಟ ದೇವರ ವಿಗ್ರಹವನ್ನು ಇಟ್ಟು ಮೆರವಣಿಗೆ ನಡೆಸಲಾಗುತ್ತದೆ. ತೇರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಂದು ದೇವಾಲಯ ತಲಪುವಷ್ಟರಲ್ಲಿ ಇತ್ತ ಹೂವಿನ ಕರಗ ಕಟ್ಟಿ ಸಿದ್ಧಗೊಳಿಸುತ್ತಾರೆ. ರಾತ್ರಿ ಸರಿಸುಮಾರು ಒಂದು ಗಂಟೆಗೆ ಹೂವಿನ ಕರಗ ಅಥವಾ ದ್ರೌಪದಮ್ಮನ ಕರಗ ಪೂಜೆಗಾಗಿ ಸಿದ್ಧಗೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ. ಹೀಗೆ ಬೆಳಗಿನ ಜಾವದವರೆಗೆ ಸಂಚರಿಸಿ ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ದೇವಾಲಯಕ್ಕೆ ಬಂದು ಸೇರುತ್ತದೆ. ಈ ಸಂದರ್ಭದಲ್ಲಿ ಅನೇಕ ದೇವ-ದೇವತೆಗಳ ಉತ್ಸವಮೂರ್ತಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೂಜೆ ಪಡೆಯುತ್ತವೆ. ಅನೇಕ ಜನಪದ ಕಲಾ ಪ್ರಕಾರಗಳು ನೋಡುಗರನ್ನು ತಣಿಸುತ್ತವೆ. ಐದನೇ ದಿನ ವಸಂತೋತ್ಸವ ಅಥವಾ ಓಕುಳಿಯಾಟ ನಡೆಸುತ್ತಾರೆ. ಸಂಜೆ ಗಾವು ಸಿಗಿಯುವ ಆಚರಣೆ ನೆರವೇರುತ್ತದೆ. ಪೋತರಾಜನಿಗೆ ಮೈಗೂಡಿದಾಗ ವೀರ ಚಾಟಿಯಿಂದ ಹೊಡೆದು ಕೊಳ್ಳುತ್ತಾನೆ. ಕಪ್ಪು ಕುರಿಯನ್ನು ಗಾವು ನೀಡಲಾಗುತ್ತದೆ. ಪೋತರಾಜ ಕಪ್ಪು ಕುರಿಯ ರಕ್ತವನ್ನು ಹೀರುತ್ತಾನೆ. ಇಡೀ ರಾತ್ರಿ ಪುರಾಣ ಪಾರಾಯಣ ನಡೆಯುತ್ತದೆ. ಅನೇಕ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ಸಂದರ್ಭದಲ್ಲಿ ನಡೆಸಲಾಗುತ್ತದೆ. ಹರಿಕಥೆ, ಸಂಗೀತ, ಭಜನೆ, ನಾಟಕ, ಮಲ್ಲಯುದ್ಧ, ಇಂತಹ ಕಾರ್ಯಕ್ರಮಗಳು ಈ ಐದೂ ದಿನಗಳ ಕಾಲ ನಡೆಯುತ್ತದೆ.

ಎಸ್‌.ಎಲ್.ಡಿ.

 

ಧವಳದ ಹಾಡು ಪ್ರಾಕೃತ ಮಾತ್ರಾವೃತ್ತಗಳನ್ನು ಲಕ್ಷಣಿಸುವ ಸಂದರ್ಭಗಳಲ್ಲಿ ‘ಧವಲ’ ಎಂಬ ಹೆಸರು ಪ್ರಾಕೃತ ಹಾಗೂ ಸಂಸ್ಕೃತ ಛಂದೋಗ್ರಂಥಗಳಲ್ಲಿ ಉಕ್ತವಾಗಿದೆ. ಪ್ರತೀಕವಾಗಿ ‘ಮಾನಸೋಲ್ಲಾಸ’ದಲ್ಲಿ ಧವಲದ ವಿಷಯಗ ಪ್ರಸ್ತಾಪವಾಗಿದೆ. ಇಲ್ಲಿ ‘ಧವಲಾ ಎಂದು ಆರಂಭಗೊಳ್ಳುವ ಪದಗಳಿಂದ ಕೂಡಿ, ಆರ್ಶೀರ್ವಾದಯುಕ್ತವಾ ಪಾದಗಳನ್ನು ಹೊಂದಿದ್ದು. ಯಾವ ಛಂದಸ್ಸಿನಲ್ಲಾದರೂ ಇರುವ ಗೀತಕ್ಕೆ ಧವಲಾ ಎಂದ ಹೆಸರು” ಎಂಬ ವ್ಯಾಖ್ಯೆಯಿದೆ. ವಿವಾಹ ಕಾಲದಲ್ಲಿ ಅದನ್ನು ಹಾಡುವುದು ಎಂಬ ನಿರ್ದೇಶನವೂ ಇದೆ.

ಜನಪದದಲ್ಲಿ ಹಾಸುಹೊಕ್ಕಾಗಿ ಹಬ್ಬಿದ ಈ ಧವಲ ಸಾಹಿತ್ಯ ಪಂಪಪೂರ್ವ ಕಾಲದ ಪ್ರಭೇದವಾಗಿದ್ದಿರಬಹುದು. ರನ್ನನ ಗದಾಯುದ್ಧಲ್ಲಿ ಬರುವ ಪದ್ಯದಲ್ಲಿಯ (೫-೪೧) ‘ಧವಲ ಮಂಗಳಶೇಯ’ವನ್ನು ವಿದ್ವಾಂಸರು ವ್ಯಾಖ್ಯಾನಿಸುತ್ತ ಇಂತಹ ಪ್ರಯೋಗ ಸಿದ್ಧರಾಮನು ಮಾಡಿಸಿದ ಸಾವಿರಾರು ಮಂಗಳ ವಿವಾಹಗಳ ಸಂದರ್ಭದಲ್ಲಿ ಅಂಗನೆಯರು ‘ಆರತಿಗಳಂ ಬೆಳಗಿ ಅಲ್ಲಲ್ಲಿ ಧವಳಗಳನ್ನು ಹಾಡುತ್ತಿದ್ದುದನ್ನು’ ಉಲ್ಲೇಖಿಸುತ್ತಾರೆ. ‘ಧವಳ’ ಎಂಬ ರಾಗವಿಶೇಷವೂ ಇದೆ. ಇದು ಹಿಂದೋಳ ಜನ್ಯರಾಗಗಳಲ್ಲಿ ಎಂಟನೆಯದು ಎಂದು ‘ಶಬ್ದಕಲ್ಪದ್ರುಮ’ ಉಲ್ಲೇಖಿಸಿದೆ. ಛಂದಶ್ಯಾಸ್ತ್ರದಲ್ಲಿ ಉಕ್ತವಾದ ‘ಧವಲ’ ವೃತ್ತದಲ್ಲಿ ಪ್ರತಿಪಾದದಲ್ಲಿ ಆರು ನಗಣಗಳನ್ನೂ ಒಂದು ಗುರು ಒಟ್ಟು ೧೯ ಅಕ್ಷರಗಳಿರುತ್ತವೆ.

ತೆಲುಗು ಸಾಹಿತ್ಯದಲ್ಲೂ ‘ಧವಳ’ದ ಹಾಡುಗಳಿರುವುದನ್ನು ಕಾಣಬಹುದು. ಚಿಂತಾ ದೀಕ್ಷಿತರು ತಮ್ಮ ‘ಆಡವಾಳ್ಳ ಪಾಟಲು’(ಹೆಂಗಸರ ಹಾಡುಗಳು) ಎಂಬ ಲೇಖನದಲ್ಲಿ ಧವಳದ ಹಲವು ಬಗೆಯ ಹಾಡುಗಳನ್ನು ಉಲ್ಲೇಖಿಸುತ್ತಾರೆ. ಅಪ್ಪಕವೀಯ, ಆನಂದರಂಗರಾಟ್ ಛಂದಸ್ಸು, ವೆಂಕಟದಾಸಕವಿಯ ಬಲರಾಮ ಚರಿತ್ರೆ, ವಿಜಯ ವಿಲಾಸಮು ಮುಂತಾದ ಆಂಧ್ರಗ್ರಂಥಗಳಲ್ಲಿ ‘ಧವಳ’ ಹಾಡಿನ ಪ್ರಸ್ತಾಪವಿದೆ. ಚಿಕ್ಕಯ್ಯ ಚರಿತ, ಪ್ರಹ್ಲಾದವಿಜಯಮು ಮುಂತಾದ ಯಕ್ಷಗಾನ ಕೃತಿಗಳಲ್ಲೂ ಧವಳದ ಹಾಡುಗಳಿವೆ. ಡಿ.ಎಲ್.ಎನ್. ಅವರು ರುದ್ರಕವಿಯ ‘ಸುಗ್ರೀವ ವಿಜಯಮು’, ‘ಮನ್ನಾರುದಾಸ ವಿಲಾಸನಾಟಕಮು’ ಗ್ರಂಥಗಳಲ್ಲಿ ಧವಳಗಳನ್ನೂ ಕಾಕುನೂರಿ ಅಪ್ಪಕವಿಯ ‘ಅಪ್ಪಕವೀಯಮು’ ಎಂಬ ಕೃತಿಯಲ್ಲಿ ಧವಳಕ್ಕೆ ಕೊಟ್ಟಿರುವ ಲಕ್ಷ್ಯವನ್ನು ಉದ್ಧರಿಸುತ್ತಾರೆ.

ಜನಪದದಲ್ಲಿ ಹಾಗೂ ಹೆಂಗೆಳೆಯರ ಹಾಡುಗಳಲ್ಲಿ ವಿಶೇಷವಾಗಿ ಧವಲ ಧನ್ಯದ ಹಾಡುಗಳಿರುವುದನ್ನು ಕನ್ನಡದಲ್ಲೂ ಕಾಣಬಹುದು. ಮದ್ರಾಸು ಓರಿಯಂಟಲ್ ಲೈಬ್ರರಿಯಲ್ಲಿ ಕೈಬರಹದ ಪ್ರತಿಯೊಂದು ‘ಧವಳದ ಹಾಡು ಮುಂತಾದವು’ ಎಂಬ ಹೆಸರಿನಲ್ಲಿದೆ. ಇದರಲ್ಲಿ ಸೀಮಂತದ ಧವಲ, ಜಾತಕರ‍್ಮದ ಧವಲ, ಉಪನಯನದ ಧವಲ, ಭರತೇಶ್ವರನ ಧವಲ ಮುಂತಾದುವು ಇವೆ.

ತನ್ನ ಕುಲದ | ಹಿರಿಯರನು
ಮನ್ನಿಸಿ ಕರೆ | ಯಿಸಿ ಮನೆಗೆ
ಬಿನ್ನವಿಸಿದ | ನವರಿಗೆ
ತನ್ನಂತ | ಸ್ಥವನು

ಮುಂತಾದವಲ್ಲಿ ಬೇಕಾದಾಗ ಗಣ ನಿಯಮಕ್ಕೆ ಹೊಂದುವಂತೆ ಭಯವನ್ನು ಹಿಗ್ಗಿಸಿಕೊಳ್ಳುವುದು ಹಾಡುವಿಕೆಯಲ್ಲಿ ಸಾಮಾನ್ಯ.

ಪ್ರಾಚೀನ ಲಕ್ಷಣಕಾರರು ಧವಲಗಳಲ್ಲಿ ಲಯ ಹಾಗೂ ಛಂದಸ್ಸಿಗನುಗುಣವಾಗಿ ಭೇದಗಳನ್ನು ಗುರುತಿಸುತ್ತಾರೆ. ಉದಾಹರಣೆಗೆ ಹೇಮಚಂದ್ರ ಧವಲವನ್ನು ಪಾದ ಸಂಖ್ಯೆಗುಣವಾಗಿ ವಿಂಗಡಿಸಿ, ಅದರ ಪ್ರಕಾರ ಹಲವು ಭೇದಗಳನ್ನುಹೇಳುತ್ತಾನೆ. ಸಂಗೀತ ಶಾಸ್ತ್ರ ಕೃತಿಗಳೂ ಸಾಂದರ್ಭಿಕವಾಗಿ ಧವಲದ ಪ್ರಸ್ತಾಪವನ್ನೂ ಲಕ್ಷಣವನ್ನೂ ಉಲ್ಲೇಖಿಸುತ್ತವೆ. ಪಾರ್ಶ್ವದೇವನ (ಸು.೧೩ನೇ ಶತಮಾನ ಪೂರ್ವಾರ್ಧ) ‘ಸಂಗೀತ ಸಮಯಸಾರ’ವು ‘ಧವಲವು ಪದ, ತಾಲ, ಸಮಾಯುಕ್ತ’ ಎನ್ನುತ್ತದೆ.

ಇದನ್ನೆಲ್ಲಾ ಗಮನಿಸಿದಾಗ ಧವಲ ಜನಪದ ಗೀತೆಯಿಂದ ಶಿಷ್ಟ ಸಾಹಿತ್ಯದಲ್ಲಿ ಮತ್ತು ಸಂಗೀತ ಶಾಸ್ತ್ರದಲ್ಲಿ ಪ್ರವೇಶ ಪಡೆದು ಲಾಕ್ಷಣಿಕರ ದೃಷ್ಟಿಯನ್ನು ಆಕರ್ಷಿಸಿದೆ ಎನ್ನಬಹುದು.

ಜಿ.ಎನ್.

 

ಧಿಂಸಾ ಆಂಧ್ರಪ್ರದೇಶದ ಒಂದೊಂದು ಬುಡಕಟ್ಟಿನಲ್ಲಿ ಒಂದೊಂದು ನೃತ್ಯವಿದೆ. ಉತ್ತರಾಂಧ್ರದಲ್ಲಿ ಪ್ರಸಿದ್ಧವಾದ ಬುಡಕಟ್ಟು ನೃತ್ಯ ಧಿಂಸಾ. ಜನಪದ ನೃತ್ಯಗಳಿಗೆ ಆದಿವಾಸಿಗಳ ನೃತ್ಯಗಳೇ ಆಧಾರ. ಇಂಥ ಭಾವನೆ. ವಿಶಾಖಪಟ್ನಂ, ವಿಜಯನಗರಂ, ಶ್ರೀಕಾಕುಳಂ ಜಿಲ್ಲೆಗಳಲ್ಲಿ ಮುಖ್ಯವಾಗಿ ಪಾಡೇರು ಕಣಿವೆಯಲ್ಲಿ ಈ ನೃತ್ಯ ಪ್ರಖ್ಯಾತಿ ಹೊಂದಿದೆ. ಈ ಪ್ರಾಂತ್ಯಗಳಲ್ಲಿ ಕೊಂಡ ದೊರ, ವಾಲ್ಮೀಕಿ, ಭಗತ, ಖೋಂದ್ (ಕೋದ್), ಕೊಟಿಯಾ, ಬೊಂಡೋ ಮುಂತಾದ ಬುಡಕಟ್ಟುಗಳಿಗವೆ. ಇವರು ಮಾಡುವ ನೃತ್ಯ ಧಿಂಸಾ ಚೈತ್ರಮಾಸದಲ್ಲಿ ವಿವಾಹಾದಿ ಶುಭಕಾರ್ಯಗಳಲ್ಲಿ, ‘ಇಟಿಕಲ ಪಂಡಗ’ ದಲ್ಲಿ ಹೆಣ್ಣು, ಗಂಡು, ಹಿರಿಯರು ಮತ್ತು ಕಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಈ ನೃತ್ಯದಲ್ಲಿ ಭಾಗವಹಿಸುತ್ತಾರೆ. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗುತ್ತಾ ಅವರು ಕೊಡುವ ಸಾಮೂಹಿಕ ಔತಣಗಳನ್ನು ಉಂಡು ಆನಂದಪಡುತ್ತಾರೆ. ಇಂತಹ ಹಬ್ಬಗಳನ್ನು ಸಂತೋಷವಾಗಿ ಆಚರಿಸಿ ನೃತ್ಯ ಮಾಡುವುದನ್ನು ‘ಸಂಕಿಡಿಕೇಲ್ಬಾರ್’ ಎನ್ನುತ್ತಾರೆ.

ಧಿಂಸಾ ತಂಡಕ್ಕೆ ಒಬ್ಬ ನಾಯಕನಿರುತ್ತಾನೆ. ಸುಮಾರು ಇಪ್ಪತ್ತು ಜನರಿಂದ ಮೂವತ್ತು ಜನ ಈ ನೃತ್ಯದಲ್ಲಿ ಭಾಗವಹಿಸುತ್ತಾರೆ. ಆಗಾಗ ಗಂಡಸರು ಮತ್ತು ಹೆಂಗಸರು ಕಲೆತು ನೃತ್ಯ ಮಾಡುತ್ತಾರೆ. ಹಲವಾರು ಸಂದರ್ಭಗಳಲ್ಲಿ ನರ್ತನ ಮಾಡುವವರು ಹೆಂಗಸರಾಗಿ ಗಂಡಸರು ವಾದ್ಯಗಳನ್ನು ಬಾರಿಸುತ್ತಾರೆ. ಈ ನೃತ್ಯದ ಜತೆಗೆ ಸನ್ನಾಯಿ, ತುಡುಮು, ಮೋರಿ, ಕಿಂಡಿ, ಜೋಡು ಕೊಮ್ಮುಲು (ಜೋಡಿಕೊಂಬುಗಳು), ಡಪ್ಪು ಮುಂತಾದ ವಾದ್ಯಗಳನ್ನು ಗಂಡಸರೇ ಬಾರಿಸುತ್ತಾರೆ. ಹೆಂಗಸರು ಸಾಂಪ್ರದಾಯಿಕವಾದ ಸೀರೆಗಳನ್ನು ಧರಿಸಿದರೆ, ಗಂಡಸರು ಪಂಚೆಗಳನ್ನು ಉಡುತ್ತಾರೆ. ಧಿಂಸಾ ನೃತ್ಯದಲ್ಲಿ ಎಂಟರಿಂದ ಹನ್ನೆರಡು ವಿಧಗಳಿವೆ. ಅದರಲ್ಲಿ ಪ್ರಧಾನವಾದದ್ದು ಬೋಡ ಧಿಂಸಾ. ಗ್ರಾಮದೇವತೆಗಳನ್ನು ಪೂಜಿಸುತ್ತಾ ಮಾಡುವ ನೃತ್ಯ ಬೋಡ ಧಿಂಸಾ. ಬಲ ಭಾಗದಲ್ಲಿ ಗಂಡಸರು, ಎಡಭಾಗದಲ್ಲಿ ಹೆಂಗಸರು ಎರಡು ಸಾಲಾಗಿ ನಿಂತು ಕೈಗಳನ್ನು ಹಿಂದಕ್ಕೆ ಹಾಕಿ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಬಲಸಾಲಿನಲ್ಲಿರುವ ಮೊದಲನೆಯವನು ಕೈಯಲ್ಲಿ ನವಿಲುಗರಿಗಳ ಗೊಂಚಲವನ್ನು ಹಿಡಿದು ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ ಮುಖಂಡನ ಪಾತ್ರವಹಿಸುತ್ತಾನೆ. ಎಡಸಾಲಿನ ಕೊನೆಯ ವ್ಯಕ್ತಿ ವಲಯಾಕಾರ ರೀತಿಯಲ್ಲಿ ಚಲಿಸುತ್ತಾರೆ. ‘ಹರಿ’ ಎಂದು ಆನಂದದಿಂದ ಕೂಗುತ್ತಾ ಸುತ್ತ ತಿರುಗಿ ಮತ್ತೆ ಬಂದು ಸಾಲಾಗಿ ನಿಲ್ಲುತ್ತಾರೆ.

ಗುಂಡೇರಿ ಧಿಂಸಾ ಅಥವಾ ಉಸುಕು ಧಿಂಸಾ ನೃತ್ಯ ತಂಡದ ಒಬ್ಬ ಗಂಡು ಸದಸ್ಯ ಹಾಡು ಹಾಡುತ್ತಾ ಹೆಂಗಸರನ್ನು ತನ್ನ ಜೊತೆ ಕುಣಿಯಲು ಆಹ್ವಾನಿಸುತ್ತಾನೆ. ಹೆಂಗಸರು ಮತ್ತು ಗಂಡಸರು ದೃಢವಾಗಿ ಹೆಜ್ಜೆ ಹಾಕುತ್ತಾ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ವೃತ್ತಾಕಾರವಾಗಿ ಲ್ಲುತ್ತಾರೆ. ಇದು ಉತ್ಸಾಹ, ಉದ್ವೇಗಗಳಿಂದ ಕೂಡಿದ ನೃತ್ಯವಾಗಿದೆ.

ಗೊಂಡಿ ಬೇಟೆ ಧಿಂಸಾ ನೃತ್ಯದಲ್ಲಿ ಕೆಳಕ್ಕೆ ಬಾಗಿ ತಲೆಯೆತ್ತಿ ಕುಣಿಯುತ್ತಾರೆ. ಇದನ್ನು ಮಾಡುವಾಗ ಅವರು ಕಲ್ಲುಗಳನ್ನು ಆರಿಸುವಂತೆ ಕಾಣುತ್ತಾರೆ. ಮುಂದಕ್ಕೆ ಬಾಗಿ ಇದ್ದಕ್ಕಿದ್ದಂತೆ ಮೇಲೆದ್ದು ೨೦-೨೫ ಹೆಜ್ಜೆಗಳು ಮುಂದಕ್ಕೆ ಹೋಗಿ ಅದೇ ರೀತಿಹಿಂದಕ್ಕೆ ಹೋಗುತ್ತಾರೆ. ಇದನ್ನು ನಾಲ್ಕೈದು ಸಲ ಪುನಃ ಪುನಃ ಮಾಡುತ್ತಾರೆ.

ಪೋತರ್ ತೋಲಾ ಧಿಂಸಾ ನೃತ್ಯ ಎಲೆಗಳನ್ನು ಆರಿಸುವುದನ್ನು ಸಂಕೇತಾತ್ಮಕವಾಗಿ ಹೇಳುತ್ತದೆ. ನರ್ತನ ಮಾಡುವವರಲ್ಲಿ ಅಧದಷ್ಟು ಜನ ಒಂದು ಸಾಲಾಗಿ ನಿಲ್ಲುತ್ತಾರೆ. ಉಳಿದವರು ಅವರ ಹಿಂದೆ ನಿಂತು ಕೈಗಳನ್ನು ಅವರ ಭುಜದ ಮೇಲಿಡುತ್ತಾರೆ. ತಲೆಯನ್ನು ಎಡಪಕ್ಕಕ್ಕೂ ಬಲಪಕ್ಕಕ್ಕೂ ತಿರುಗಿಸುತ್ತಾ ಎರಡು ಹೆಜ್ಜೆ ಮುಂದಕ್ಕೆ ಹಾಗೂ ಹಿಂದಕ್ಕೆ ಸರಿಯುತ್ತಾರೆ.

ಭಾಗ್ ಧಿಂಸಾ ನೃತ್ಯದಲ್ಲಿ ಹುಲಿಯ ಆಕ್ರಮಣದಿಂದ ತಪ್ಪಿಸಿಕೊಳ್ಳುವ ರೀತಿ ಕಂಡು ಬರುತ್ತದೆ. ತಂಡದ ಅರ್ಧದಷ್ಟು ಜನರು ಕೈ ಕೈ ಹಿಡಿದು ವೃತ್ತಾಕಾರವಾಗಿ ನಿಲ್ಲುತ್ತಾರೆ. ಮುಂಬೆರಳುಗಳ ಮೇಲೆ ನಿಂತು ತಲೆ ಬಾಗುತ್ತಾ ಎತ್ತುತ್ತಾ ಬೇಗಬೇಗನೆ ಸುತ್ತುತ್ತಾ ಕುಣಿಯುತ್ತಾರೆ. ಹೇಗೆ ಅನೇಕ ಬಾರಿ ಮಾಡಲಾಗುವುದು.

ನಟ್‌ಕಾರಿ ಧಿಂಸಾ ನೃತ್ಯವನ್ನು ವಾಲ್ಮಿಕಿಯರು ದೀಪಾವಳಿಯಂದು ಮುಖ್ಯವಾಗಿ ಮಾಡುತ್ತಾರೆ. ಒಬ್ಬರೇ ಮಾಡುವ ಈ ನೃತ್ಯವನ್ನು ಬೇರೆ ಬುಡಕಟ್ಟಿನವರು ಸಾಧಾರಣವಾಗಿ ಇತರ ಹಬ್ಬಗಳ ಕಾಲದಲ್ಲಿ ನರ್ತಿಸುತ್ತಾರೆ.

ಕುಂಡ ಧಿಂಸಾ ನೃತ್ಯದಲ್ಲಿ ನೃತ್ಯಗಾರರು ಲಯಬದ್ಧವಾಗಿ ಚಲಿಸುತ್ತಾ ಒಬ್ಬರನ್ನೊಬ್ಬರು ಭುಜಗಳನ್ನು ಹಿಡಿದು ತಳ್ಳುತ್ತಾ ಕುಣಿಯುತ್ತಾರೆ.

ಭಾಗ್ ಧಿಂಸಾ ನೃತ್ಯವನ್ನು ಬುಡಕಟ್ಟಿನ ಗಣಾಚಾರಿ ಮಾಡುತ್ತಾನೆ. ಅವನಿಗೆ ಗ್ರಾಮದೇವತೆ ಮೈಮೇಲೆ ಬಂದಾಗ ಮಾಡುವ ನೃತ್ಯವಿದು. ಗ್ರಾಂಸ್ಥರೆಲ್ಲರೂ ಗಣಾಚಾರಿಯ ಸುತ್ತ ಸೇರಿ ತಲೆಬಾಗಿ ಅವನನ್ನು ಅನುಕರಿಸುತ್ತಾರೆ. ಗಣಾಚಾರಿಯ ಮತ್ತೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಮುಂದುವರೆಯುತ್ತದೆ.

ಈ ಮೇಲೆ ಹೇಳಿದ ಎಲ್ಲ ನೃತ್ಯಗಳು ಬುಡಕಟ್ಟಿನವರು ಹಾಗೂ ಬೆಟ್ಟದ ಜನರಿಗೆ ಸಂಬಂಧಪಟ್ಟವುಗಳು. ಬುಡಕಟ್ಟಿನವರ ನೃತ್ಯಗಳಲ್ಲಿ ಸಾಮೂಹಿಕ ದೃಷ್ಟಿಕೋನ ಮುಖ್ಯವಾದುದು.

ಜಿ.ಎಸ್.ಎಂ.