ದೊಂಬರ್ ದೊಂಬಾರಾ, ದೊಂಬರ್, ಕಂಬದ ಆಟಗಾರರು ಪತಾನಿಯರು ಎಂಬ ಹಲವು ಹೆಸರುಗಳಿಂದ ಇವರನ್ನು ಕರೆಯಲಾಗುತ್ತದೆ. ಪಾಶ್ಚಿಮಾತ್ಯ ವಿದ್ವಾಂಸರು ಫ್ರೆಡರಿಕ್ ಎಸ್.ಮುಲ್ಲಾಲಿ ಅವರ ವ್ಯಾಖ್ಯಾನದಂತೆ ದೊಂಬರನ್ನು ಎರಡು ಪಂಗಡಗಳಾಗಿ ವಿಭಾಗಿಸಲಾಗಿದೆ. ಒಂದು ಪಂಗಡವಾದ ‘ರೆಡ್ಡಿ ದೊಂಬರು’ ಆಂಧ್ರದಿಂದ ಬಂದವರೆಂದೂ ಮತ್ತೊಂದು ಪಂಗಡ ‘ಆರ್ಯ ದೊಂಬರ್’ ಎಂದೂ ವಿಭಾಗಿಸುತ್ತಾರೆ. ಆರ್ಯ ದೊಂಬರ ಪಂಗಡಕ್ಕೆ ‘ಮರಾಠಿ ದೊಂಬರ್’ ಎಂಬ ಮತ್ತೊಂದು ಹೆಸರಿದೆ. ಮಹಾರಾಷ್ಟ್ರದಿಂದ ಬಂದುದರಿಂದ ಇವರಿಗೆ ಈ ಹೆಸರಾಯಿತು. ಇವರು ಕಂಬದ ಮೇಲೆ ಆಟ ಆಡುವಾಗ ಬಾರಿಸುವ ಮೇಳ ಶಬ್ಧವು ‘ಡೊಮ ಡೊಮ’ ಎಂದು ಕೇಳುವುದರಿಂದ ಇವರಿಗೆ ‘ಡೋಮ ಡೋ ದೊಂಬರು’ ಎಂದು ಹೆಸರೂ ಬಂದಿದೆ.

ಪತಾನಿಯರು, ಮುಖಚರ್ಯೆ, ದೈಹಿಕ ರಚನೆಗಳು ಉತ್ತರ ಭಾರತದವರನ್ನು ಹೋಲುವುದರಿಂದಲೂ ಈ ಕಂಬದ ಆಟದ ಕಲೆಯು ತಮಿಳರಲ್ಲಿ ಇಂದು ಇಲ್ಲದಿರುವುದರಿಂದಲೂ ಈ ಜನತೆ ಉತ್ತರದಿಂದ ವಲಸೆ ಬಂದಿರಬಹುದೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಇದು ಮಾತ್ರವಲ್ಲದೆ ಈ ಜನತೆ ತಮಿಳುನಾಡಿನಲ್ಲಿ ಮೊದ ಮೊದಲು ತಂಜಾವೂರು ಜಿಲ್ಲೆಯಲ್ಲಿ ನೆಲೆಸಿದ್ದುದರಿಂದ ಸೌರಾಷ್ಟ್ರ ದೊರೆಗಳ ಕಾಲದಲ್ಲಿ, ತಮಿಳುನಾಡಿಗೆ ಬಂದಿರಬಹುದೆಂಬ ಸಂಶೋಧಕರ ಅಭಿಮತ. ಇವರ ಭಾಷೆಯಲ್ಲಿ ಮರಾಠಿಯೂ ಗುಜರಾತಿಯೂ ಬೆರೆತಿರುವುದರಿಂದ ಈ ಪತಾನಿಯರು ಭಾರತದ ಪಶ್ಚಿಮದಿಂದ ತಮಿಳುನಾಡಿಗೆ ಬಂದಿರಬಹುದೆಂದೂ ಅಭಿಪ್ರಾಯಪಡಲಾಗಿದೆ. ಇವರ ಆಹಾರ ಪದ್ಧತಿ, ಉಡುಪು, ದೈವಭಕ್ತಿ ಮುಂತಾದವು ಉತ್ತರ ಪದ್ಧತಿಗಳಿಗನುಸಾರವಾಗಿರುವುದರಿಂದ ಇವರು ದಕ್ಷಿಣದವರಲ್ಲ ಎಂದು ಹೇಳಲಾಗುತ್ತಿದೆ.

ಭಾಷೆ: ಪತಾನಿಯರ ಜನತೆ ಮಾತನಾಡುವ ಭಾಷೆಯನ್ನು ಪತಾನಿಯೂ ಎಂದು ಕರೆಯಲಾಗುತ್ತದೆ. ಈ ಭಾಷೆಯ ಮಾತುಗಳು ವಾಡಿಕೆಯಲ್ಲಿ ಮಾತ್ರ ಇದೆ. ಇದಕ್ಕೆ ಲಿಪಿಯಿಲ್ಲ. ಇದು ಮರಾಠಿ, ಗುಜರಾತಿ, ಹಿಂದಿ ಬೆರೆತ ಒಂದು ಮಿಶ್ರ ಭಾಷೆಯಾಗಿದೆ.

ವಾಸವಾಗಿರುವಿಕೆ: ಈ ಜನರು ತಮಿಳುನಾಡಿನಲ್ಲಿ ಕೆಲವು ನಿರ್ದಿಷ್ಟವಾದ ೫ ಅಥವಾ ೬ ಸ್ಥಳಗಳಲ್ಲಿ ವರ್ಷಕ್ಕೊಂದು ಸಾರಿ ಒಗ್ಗೂಡಿ ತಂತಮ್ಮ ಜನನ, ಮರಣ, ಆಚಾರ ವಿಚಾರಗಳು, ವಿವಾಹ, ದೈವಿಕ ಪೂಜಾವಿಧಾನ ಮುಂತಾದವುಗಳ ಬಗ್ಗೆ ಚರ್ಚಿಸಿ ಆಚರಿಸಿಕೊಳ್ಳುತ್ತಾರೆ. ಈ ವಾಸ ಸ್ಥಳಗಳಲ್ಲಿ ಬಹಳ ಪ್ರಾಚೀನವಾದದ್ದು ನಾಗಪಟ್ಟಣ ಜಿಲ್ಲೆ, ಮಹಿಲಾಡುತುರೈ ತಾಲ್ಲೂಕಿನಲ್ಲಿರುವ ‘ಕಾಳಿ’ ಎಂದು ಕರೆಯಲ್ಪಡುವ ಕಾಳಿ ಸಾರಂಗನೂರು ಎಂಬುದು ಚೆನ್ನೈನ ಪೂರ್ವ ತಾಂಬರಲ್ಲಿರುವ ‘ಮೇಡವಾಕ್ಕಂ’ ಎಂಬ ಊರು ಕೂಡ ಬಹಳ ಮುಖ್ಯವಾದದ್ದು.

ವಾಸಸ್ಥಳ: ಪತಾನಿಯರು ಉದ್ಯೋಗವನ್ನು ಹುಡುಕಿಕೊಂಡು ಹಲವು ಊರುಗಳಿಗೆ ಹೋಗುವುದರಿಂದ ಅವರ ವಾಸಸ್ಥಾನ ತಾತ್ಕಾಲಿಕವಾದದ್ದು. ಸಾಮಾನ್ಯವಾಗಿ ಹೋಗುವ ಕಡೆಗಳಲ್ಲಿ ಗುಡಾರಗಳನ್ನು ನಿರ್ಮಿಸಿ ಅದರಲ್ಲಿ ವಾಸಮಾಡುತ್ತಾರೆ. ಬಹುಪಾಲು ಕುಟುಂಬಗಳು ಗುಡಾರಗಳನ್ನು ಗೋಣಿಚೀಲ, ದೊಡ್ಡಬಿಳಿ ಚೀಲಗಳು, ಟಾರ್ಪಾಲಿನ್ ಮುಂತಾದವುಗಳಿಂದ ನಿರ್ಮಿಸಿಕೊಳ್ಳುತ್ತಾರೆ. ಸ್ವಲ್ಪ ಸ್ಥಿತಿವಂತರಾಗಿರುವವರು ಕಬ್ಬಿಣದ ತಗಡುಗಳಿಂದ ಗೋಡೆಗಳನ್ನು ನಿರ್ಮಿಸಿ ಅದರ ಮೇಲ ಅದೇ ಕಬ್ಬಿಣದ ತಗಡುಗಳನ್ನು ಹಾಕಿ ಗುಡಾರಗಳನ್ನು ಮಾಡಿಕೊಳ್ಳುತ್ತಾರೆ.

ಉಡುಪು, ಆಸ್ತಿ, ಆಭರಣಗಳು: ಸಾಮಾನ್ಯವಾಗಿ ಇವರು ಕೆಲಸಕ್ಕೆ ಹೋಗುವಾಗ ಚಡ್ಡಿಗಳನ್ನು ಧರಿಸುವುದು ವಾಡಿಕೆ. ಇದನ್ನು ಹಳೆಯ ಬಟ್ಟೆಗಳಿಂದ ಇವರೆ ತಯಾರಿಸಿಕೊಳ್ಳುತ್ತಾರೆ. ಅದೇ ರೀತಿ ಹೆಣ್ಣಮಕ್ಕಳು ಲಂಗ, ಅಂಗಿ ಮುಂತಾದವುಗಳನ್ನು ಹಳೆಯಬಟ್ಟೆಯಿಂದ ತಾವಾಗಿಯೇ ತಯಾರಿಸಿಕೊಳ್ಳುವರು. ಪತಾನಿಯರ ಹೆಣ್ಣು ಮಕ್ಕಳು ಇತರ ಪಂಗಡದ ಹೆಣ್ಣು ಮಕ್ಕಳಂತೆಯೇ ಎಲ್ಲ ವಿಧದ ಉಡುಪುಗಳನ್ನು ಧರಿಸುತ್ತಾರೆ. ಬಹಳ ವಯಸ್ಸಾದ ಗಂಡಸರು ತಲೆಗೆ ಪೇಟಗಳನ್ನು ಕಟ್ಟಿ ಅದರಲ್ಲಿ ಬಣ್ಣದ ಗಾಜಿನ ಮಣಿಗಳಿಂದ ಮಾಡಿದ ‘ಕುಂಚ’ಗಳನ್ನು ಧರಿಸಿಕೊಳ್ಳುತ್ತಾರೆ.

ಇವರು ಹಾಸಿಗೆ, ದಿಂಬುಗಳನ್ನು ಪ್ರತ್ಯೇಕವಾಗಿ ಅಂಗಡಿಗೆ ಹೋಗಿ ಕೊಂಡುಕೊಳ್ಳುವುದಿಲ್ಲ. ಹಳೆಯ ಬಟ್ಟೆಗಳನ್ನು ಇಟ್ಟು ಒಂದನ್ನೊಂದು ಸೇರಿಸಿ ಹೊಲಿದು ಹೊದಿಕೆಯನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಇದಕ್ಕೆ ‘ಕುಂಗಡಿ’ ಎಂದು ಹೆಸರು. ಹಳೆಯ ಬಟ್ಟೆಗಳಿಂದಲೇ ಚೌಕಾಕಾರದ ತಲೆದಿಂಬುಗಳನ್ನು ಮಾಡಿಕೊಳ್ಳುತ್ತಾರೆ. ಇದಕ್ಕೆ ‘ಗೋದಿರಿ’ ಎಂದು ಹೆಸರು.

ಎಲ್ಲಾ ಬಗೆಯ ಅಲ್ಯುಮಿನಿಯಂ ಪಾತ್ರೆಗಳನ್ನು ಉಪಯೋಗಿಸುತ್ತಿದ್ದಾರೆ. ಅರಿಸಿನ ದಾರದಲ್ಲಿ ಪೋಣಿಸಲ್ಪಟ್ಟ ಕಪ್ಪು ಮಣಿ ಹಾರವನ್ನು ಇವರು ಧರಿಸುತ್ತಾರೆ. ಇವರ ಬಹಳ ಮುಖ್ಯವಾದ ಆಭರಣಗಳೆಂದರೆ ಬೆಳ್ಳಿಯ ಉಂಗುರ ಮುಂತಾದವುಗಳು.

ವಿವಾಹ ಪದ್ಧತಿ: ಪತಾನಿಯರು ಜ್ಯೋತಿಷ್ಯವನ್ನು ನೋಡುವುದಿಲ್ಲ. ಇವರಿಗೆ ಜಾತಕ ಯಾವುದೂ ಇಲ್ಲ. ಮುಹೂರ್ತ ದಿನವೆಂದು ಯಾವುದನ್ನೂ ನೋಡುವುದಿಲ್ಲ. ಮಾನಸಿಕ ಒಪ್ಪಂದದೊಡನೆ ತಾಯಿ ತಂದೆಯರ, ಪಂಗಡದ ಹಿರಿಯರ ಒಪ್ಪಂದದೊಡನೆ ಮದುವೆ ನಡೆಯುತ್ತದೆ. ಇವರ ಮದುವೆಯು ಸಂಜೆ ವೇಳೆಯಲ್ಲಿ ಪ್ರಾರಂಭವಾಗುತ್ತದೆ. ಮದುಮಗನು ಕುಲಪದ್ಧತಿಯಂತೆ ಅಲಂಕಾರ ಮಾಡಿಕೊಳ್ಳುತ್ತಾನೆ. ತಲೆಗೆ ಪೇಟ, ಹೆಗಲಮೇಲೆ ಚಿಕ್ಕ ವಸ್ತ್ರದ ತುಂಡು(ಟವಲು), ಚಡ್ಡಿ ಮುಂತಾದವುಗಳನ್ನು ಧರಿಸಿ ಹೂವಿನ ಹಾರ, ಬೆಳ್ಳಿಯಿಂದ ಮಾಡಿದ ಕಿವಿಯೋಲೆಗಳನ್ನೂ ಹಾಕಿ ಮೇಳ ತಾಳದೊಡನೆ ಮದುಮಗನ ಮನೆಯಿಂದ ಅವರ ಗುಡಿಸಲಿನ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಅಲ್ಲಿ ಕೂರಿಸುತ್ತಾರೆ.

ಆಗ ಅಲ್ಲಿ ನೆರೆದಿರುವ ಪ್ರತಿಯೊಬ್ಬರಿಗೂ ಒಂದು ಎಲೆ, ಒಂದು ಅಡಕೆ ಕೊಡಲಾಗುತ್ತದೆ. ಅನಂತರ ಮದುಮಗನು ಪುನಃ ಮೆರವಣಿಗೆಯಲ್ಲಿ ಮದುಮಗಳ ತಂದೆಯ ಬಳಿ ಕೂರಿಸಲಾಗುತ್ತದೆ. ಒಂದು ನಿಮಿಷದ ಬಳಿಕ ಮದುಮಗ, ಮದುಮಗಳ ತಂದೆಯ ಕಾಲಿಗೆ ಬಿದ್ದು ಆಶಿರ್ವಾದ ಪಡೆಯುತ್ತಾನೆ. ಆ ಅಲ್ಲಿ ನೆರೆದಿರುವ ಪ್ರತಿಯೊಬ್ಬರಿಗೂ ಎರಡು ಎಲೆ ಎರಡು ಅಡಕೆ ಕೊಡಲಾಗುತ್ತದೆ. ಇದರೊಂದಿಗೆ ಈ ರಾತ್ರಿಯ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಅಂದಿನ ರಾತ್ರಿ ಯಾವ ಬಗೆಯ ಭೋಜನವನ್ನು ಯಾರಿಗೂ ನೀಡುವುದಿಲ್ಲ.

ಮಾರನೇ ದಿನ ಬೆಳಗ್ಗೆ, ಮದುಮಗಳನ್ನು ಕೆಂಪು ಬಣ್ಣದ ಉಡುಪುಗಳಿಂದ ಚೆನ್ನಾಗಿ ಅಲಂಕರಿಸಲ್ಪಟ್ಟು ಮದುಮಗನ ಪಕ್ಕದಲ್ಲಿ ಕೂರಿಸಲಾಗುತ್ತದೆ. ಸಾಮಾನ್ಯವಾಗಿ ಈ ಮದುವೆಯ ವಿಧಿ ವಿಧಾನ ಕ್ರಿಯೆಗೆ ತಾಪ್ಪಾನರಿಯೋ ಎಂಬ ಪಂಗಡದವರಾದ ವಯಸ್ಸಾದ ಹಿರಿಯರೊಬ್ಬರು ತಾಳಿಯನ್ನು ತೆಗೆದು ಮದುಮಗನ ಕೈಗೆ ಕೊಡುತ್ತಾರೆ. ಅನಂತರ ಆ ಮದುಮಗ ಉದ್ದವಾದ ದೊಡ್ಡ ಬಟ್ಟೆಯಿಂದ ಮದುಮಗಳನ್ನು ಮುಚ್ಚಿ ಮರೆಮಾಡುವನು. ಅರಿಶಿಣ ದಾರದಲ್ಲಿ ಕಪ್ಪು ಮಣಿಗಳನ್ನು ಪೋಣಿಸಿದ ತಾಳಿಯನ್ನು ಮದುಮಗಳು ಮದುಮಗನಿಗೆ ಕಟ್ಟುತ್ತಾಳೆ. ಅಂದಿನ ಎಲ್ಲ ಖರ್ಚು ವೆಚ್ಚವನ್ನು ಮದುಮಗಳ ತಂದೆಯೇ ಭರಿಸಬೇಕು. ಮುದವೆ ಮುಗಿದ ಅನಂತರ ಭೋಜನ, ಮದ್ಯಪಾನೀಯಗಳಂಥವನ್ನು ಗಂಡಸರು ಮತ್ತು ಮಹಿಳೆಯರು, ಚಿಕ್ಕವರಿಂದ ದೊಡ್ಡವವರೆಗೂ ಕುಡಿದು ಸಂತೋಷಪಡುವರು. ಸಾಮಾನ್ಯವಾಗಿ, ಮಾತೃಪ್ರಧಾನ (ಅಯವಸಡೈವೇಯಡ) ಪದ್ಧತಿಯ ವಿವಾಹಗಳನ್ನು ಇವರು ಪ್ರೋತ್ಸಾಹಿಸುತ್ತಾರೆ. ಪ್ರೇಮ ವಿವಾಹಗಳನ್ನೂ ಹಿರಿಯರ ಒಪ್ಪಿಗೆಯೊಡನೆ ಸ್ವೀಕರಿಸಲಾಗುತ್ತದೆ. ‘ಓಡಿ ಹೋಗುವಿಕೆ’ ಎಂಬ ಅಭ್ಯಾಸ ಇವರಲ್ಲಿ ಇಲ್ಲ.

ಕರುತಮಾಯಿ ಪದ್ಧತಿ: ಪತಾನಿಯರಲ್ಲಿ ಕಂಡುಬರುವ ಒಂದು ವಿಶೇಷವೇನೆಂದರೆ ಅವರು ಅನುಸರಿಸುವ ‘ಕರುತಮಾಯಿ’ (ಸೊಸೆ ಅಳಿಯಂದಿರ ತಾಯಿ ಸಂಬಂಧ) ಪದ್ಧತಿ ಮುಖ್ಯವಾಗುತ್ತದೆ. ಮದುವೆಯಾದ ಮೇಲೆ ಗಂಡ ಹೆಂಡತಿಯ ಮನೆಯಲ್ಲೇ ಇರಬೇಕು. ಒಂದು ಪತಾನಿಯಾ ಕುಟುಂಬದಲ್ಲಿ ಐದು ಹೆಣ್ಣು ಮಕ್ಕಳಿದ್ದರೆ ಆ ಹೆಣ್ಣುಗಳ ತಂದೆ ಬಡವನಾಗಿದ್ದರೂ ಅರಸನಾಗುತ್ತಾನೆ. ಏಕೆಂದರೆ, ಐದು ಅಳಿಯಂದಿರೂ ಮಾವನ ಮನೆಯಲ್ಲಿಯೇ ಇರುವುದರಿಂದ ಆದಾಯ ಹೆಚ್ಚುತ್ತದೆ. ಸಾಮಾನ್ಯವಾಗಿ, ಈ ಪದ್ಧತಿ ಇತರ ಹಿಂದೂ ಸಮೂಹಗಳಲ್ಲಿ ಕಂಡುಬರುವುದಿಲ್ಲ. ಈ ಕರುತಮಾಯಿ ಪದ್ಧತಿಯನ್ನು ಪತಾನಿಯರ ಪ್ರತಿಯೊಂದು ಕುಟುಂಬಗಳಲ್ಲಿಯೂ ಅನುಸರಿಸಲಾಗುತ್ತದೆ.

ಪ್ರದರ್ಶನ: ದೊಂಬರು ಸಾಮಾನ್ಯವಾಗಿ ೩೦ಅಡಿ ಎತ್ತರವಾದ ಕಂಬವನ್ನು ನೆಟ್ಟು ಅದರ ತುದಿಯಲ್ಲಿ ನಿಂತು ಅವರ ಮಾಯವಿದ್ಯೆಯನ್ನು (ಕೈಚಳಕ) ತೋರಿಸುವರು. ಎರಡು ಕಡೆಯೂ ಕಂಬವನ್ನು ನೆಟ್ಟು ಅವುಗಳ ನಡುವೆ ಉದ್ದವಾದ ತಂತಿಯನ್ನು ಕಟ್ಟಿ ಅದರ ಮೇಲೆ ನಡೆಯುವರು. ಆಕಾಶದಲ್ಲಿ (ಮೇಲೆ) ಪಲ್ಟಿ ಹೊಡೆಯುವರು. ಒಂದು ದೊಡ್ಡ ಕೈ ಕೋಳದಲ್ಲಿ ಬೆಂಕಿ ಹತ್ತಿಸಿ ಅದರಲ್ಲಿ ನುಸುಳಿ ಹೊರಗೆ ಬರುತ್ತಾರೆ. ಇಂತಹ ಇನ್ನಿತರ ವಿನೋದಗಳನ್ನು ತೋರಿಸುವರು. ಒಂದು ದಿನಕ್ಕೆ ನಾಲ್ಕು ಅಥವಾ ಐದು ಸಾರಿ ಊರಿನ ಬೀದಿ, ಬಸ್ ನಿಲ್ದಾಣಗಳಲ್ಲಿ, ಸರ್ಕಲ್‌ಗಳಲ್ಲಿ ಈ ವಿನೋದಗಳನ್ನು ಮಾಡುವರು. ರಾತ್ರಿವೇಳೆಯಲ್ಲಿ ಇದನ್ನು ಮಾಡುವುದಿಲ್ಲ. ಇವರು ವಿನೋದ ಮಾಡಿ ಮುಗಿಸಿದ ಅನಂತರ ನೋಡಿ ಆನಂದಪಟ್ಟ ಜನರಲ್ಲಿ ಹಣ, ಆಹಾರಪದಾರ್ಥಗಳು, ಹಳೆಯ ಬಟ್ಟೆಗಳು ಮುಂತಾದವುಗಳನ್ನು ಕೇಳಿ ಪಡೆಯುವರು.

ಇವರ ಕಸುಬಿನಲ್ಲಿ ಸಣ್ಣ ಮಕ್ಕಳು ಹೆಚ್ಚಿನ ಪ್ರಾಮುಖ್ಯವನ್ನು ಹೊಂದುತ್ತಾರೆ. ಸಣ್ಣಮಕ್ಕಳನ್ನಿಟ್ಟುಕೊಂಡು ಹಲವು ಬಗೆಯ ವಿನೋದಗಳನ್ನು ತೋರಿಸುವರು. ಉದಾಹರಣೆಗೆ, ಒಂದು ಸಣ್ಣ ತಂತಿಯ ಮೇಲೆ ನಡೆದು ಬರುವಂತೆ ಮಾಡುತ್ತಾರೆ. ಒಂದು ಸಣ್ಣ ತಂತಿ ಬಳೆಯ ಮೂಲಕ ನುಗ್ಗಿ ಬರುವಂತೆ ಹೇಳುವರು. ಆವಾಗ, ಹೆಂಗಸರು ಮೇಳವನ್ನು ಹೊಡೆದು ಆ ಸಣ್ಣಮಕ್ಕಳ ಗಮನವನ್ನು ಸೆಳೆಯುತ್ತಾರೆ. ಇವರ ಉದ್ಯೋಗದಲ್ಲಿ ಮೇಳದ ಶಬ್ದವು ಡೊಮ, ಡೊಮ ಎಂದು ಕೇಳುವುದರಿಂದ ಡೊಡೊ ದೊಂಬರೆಂಬ ಹೆಸರು ಇವರಿಗೆ ನೀಡಲಾಯಿತು. ವಿನೋದ ಮಾಡಿ ಮುಗಿಸಿದ ಅನಂತರ ಸಣ್ಣಮಕ್ಕಳು ತಟ್ಟೆ ಹಿಡಿದು ಹಣ ವಸೂಲಿ ಮಾಡುವರು. ಹಾಗಾಗಿ ಸಣ್ಣಮಕ್ಕಳು ಉದ್ಯೋಗಿಗಳೆಂಬುದೂ, ಮಹಿಳಾ ಉದ್ಯೋಗಿಗಳೆಂಬುದೂ ಇವರ ಉದ್ಯೋಗದಲ್ಲಿ ಹೊಸತನವಿದೆ. ಇವರಿನ್ನಿತರ ಉಪಕಸುಬುಗಳೆಂದರೆ ಊರ ಹೊಗಿರುವ ನದಿ, ಕೆರೆಗಳಲ್ಲಿ ಮೀನು ಹಿಡಿಯುವುದು, ಮುಂಗೂಸಿ, ಅಳಿಲು, ಪಕ್ಷಿಗಳನ್ನು ಬೇಟಯಾಡುವುದು, ಸಣ್ಣಮಕ್ಕಳು ಮತ್ತು ಮಹಿಳೆಯರು ಇಲ್ಲವೆಂದರೆ ಇವರ ಉದ್ಯೋಗವಿಲ್ಲ. ಸಣ್ಣಮಕ್ಕಳು ಹಾಗೂ ಮಹಿಳೆಯರು ಗುಂಪಿನ ಜನರ ಗಮನವನ್ನು ಸೆಳೆಯುವಂಥವರಾಗಿರುತ್ತಾರೆ.

ವಿಧಿ ವಿಧಾನಗಳ ಉಗಮ: ಜನ್ಮ ವಿಧಿವಿಧಾನ ಕ್ರಿಯೆ ಎಂಬ ಯಾವುದನ್ನು ಇವರು ಅನುಸರಿಸುವುದಿಲ್ಲ. ಕಳೆದ ೨೦ರಿಂದ ೩೦ ವರ್ಷಗಳಿಂದ ಇತರ ಜಾತಿಯ ವರ್ಗದ ಜನರನ್ನು ನೋಡಿ ಮಗು ಜನಿಸಿದ ಐದನೆಯ ದಿನ ‘ನಾಮಕರಣದ ಕಾರ್ಯಕ್ರಮ’ ಎಂದು ಸಣ್ಣ ಪ್ರಮಾಣದಲ್ಲಿ ಅವರ ಸಂಬಂಧಿಕರೊಡನೆ ನಡೆಸಲಾಗುತ್ತದೆ. ಕಾರಣವೇನೆಂದರೆ, ಇವರು ಉದ್ಯೋಗದ ನಿಮಿತ್ತ ಅಲ್ಲಲ್ಲಿ ಬೇರ್ಪಟ್ಟು ಹೋಗಿಬಿಡುವುದರಿಂದ ಜನ್ಮ ವಿಧಿ ವಿಧಾನ ಕ್ರಿಯೆ ಎಂದು ಯಾವುದನ್ನು ಅನುಸರಿಸುವುದಿಲ್ಲ. ಆದರೂ ಕುಲಕಸುಬನ್ನು ಬಿಟ್ಟು ಇತರ ಕಸುಬನ್ನು ಅನುಸರಿಸುವವರು ಒಂದೇ ಕಡೆ ಇರುವುದರಿಂದ ಜನ್ಮ ವಿಧಿ ವಿಧಾನ, ಒಸಗೆ ಕಾಯಕ್ರಮಗಳಂಥವನ್ನು ಇತರ ಒಕ್ಕಲಿಗರನ್ನು ನೋಡಿ ಇವರೂ ಅನುಸರಿಸುತ್ತಾರೆ.

ಒಸಗೆ ಕಾರ್ಯಕ್ರಮ(ದೊಡ್ಡವಳಾದಾಗ): ಈ ಜನತೆ ಒಸಗೆ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ತ್ವ ಕೊಡುವುದಿಲ್ಲ. ಸೋದರಮಾವ ಹೊಸ ಬಟ್ಟೆಗಳು, ಆಹಾರ ಪದಾರ್ಥಗಳು ದೊಡ್ಡವಳಾದ ಮೂರನೆಯ ದಿನ ಕೊಡುವನು. ಸೋದರಮಾವ ಹತ್ತಿದ್ದಲ್ಲೇ ಇದ್ದರೆ ಇಂಥ ಉಡುಗೊರೆಗಳನ್ನು ಕೊಡಲಾಗುತ್ತದೆ. ಒಂದು ವೇಳೆ ಇಲ್ಲವಾದರೆ ವರ್ಷದಲ್ಲಿ ಒಂದು ಸಾರಿ ಸೇರುವ ಸ್ಥಳದಲ್ಲಿ ಉಡುಗೊರೆಗಳನ್ನು ಕೊಟ್ಟು ಹೆಣ್ಣನ್ನು ಗೌರವಿಸಲಾಗುತ್ತದೆ.

ಮರಣ: ಪತಾನಿಯರು ಮರಣದ ಬಗೆಗಿನ ವಿಧಿ ವಿಧಾನಗಳಿಗೆ ಪ್ರಾಮುಖ್ಯವನ್ನು ಕೊಡುತ್ತಾರೆ. ಮೃತ ದೇಹವನ್ನು ಮನೆ ಅಥವಾ ಗುಡಾರದಲ್ಲಿ ಮಧ್ಯೆ ಮಲಗಿಸುವರು. ಮೃತ ದೇಹದ ತಲೆ ಉತ್ತರ ದಿಕ್ಕಿಗೂ ಕಾಲುಗಳು ದಕ್ಷಿಣಕ್ಕೂ ಇರುವಂತೆ ಮಲಗಿಸುತ್ತಾರೆ. ಸತ್ತವರು ತಣುಹಣತ್ತಿ ಪಂಗಡಕ್ಕೆ ಸೇರಿದವರಾಗಿದ್ದರೆ ಅದೇ ಪಂಗಡಕ್ಕೆ ಸೇರಿದ ಸಂಬಂಧಿಕರು ಮಾತ್ರ ಮೃತ ದೇಹವನ್ನು ಮೊದಲು ಮುಟಬೇಕು. ಅನಂತರ ಒಂದು ಬಿಳಿ ಬಟ್ಟೆಯಿಂದ ಆ ದೇಹವನ್ನು ಮುಚ್ಚುವರು. ‘ಪಾಯಿಡಿ(ಯೆನೈ)’ ಎಂಬ ಸಣ್ಣ ಕಬ್ಬಿಣದ ಹಾರೆಯನ್ನು (೧ ಅಡಿ ಉದ್ದ) ಮೃತ ದೇಹದ ತಲೆಯ ಹತ್ತಿರ ಇಡುವರು.

ಹೆಣವನ್ನು ಅದೇ ಪಂಗಡಕ್ಕೆ ಸೇರಿದ ಇಬ್ಬರು ಪ್ರತ್ಯೇಕವಾಗಿ ಹೆಗಲಲ್ಲಿ ಹಾಕಿಕೊಂಡು ಶ್ಮಶಾನಕ್ಕೆ ಕೊಂಡೊಯ್ಯುತ್ತಾನೆ. ಕೊಂಡೊಯ್ದ ವ್ಯಕ್ತಿ ಆ ‘ಪಾಯಿಡಿ’ ಎಂಬ ಸಣ್ಣ ಹಾರೆಯಿಂದ ಮೃತ ದೇಹಕ್ಕೆ ಗುಂಡಿ ತೋಡುವರು. ಆ ಗುಂಡಿಯಲ್ಲಿ ಮೃತ ದೇಹವನ್ನಿಟ್ಟು ಶವ ಸಂಸ್ಕಾರ ಮಾಡುವರು. ಸಂಬಂಧಿಕರು, ಗಂಡಸರು, ಮಹಿಳೆಯರು ಎಲ್ಲರೂ ಶ್ಮಶಾನಕ್ಕೆ ಬರುವರು.

ಶವವನ್ನು ಹೂತಾದ ಮೇಲೆ ಯಾರು ಸ್ನಾನ ಮಾಡುವುದಿಲ್ಲ. ಬಟ್ಟೆಗಳನ್ನು ಒಗೆಯುವುದಿಲ್ಲ. ಕೈ, ಕಾಳು, ಮುಖಗಳನ್ನು ತೊಳೆದುಕೊಂಡು ಮನೆಗೆ ಬಂದುಬಿಡುವರು. ಅನಂತರ ಸತ್ತವರ ಮನೆಯಲ್ಲಿ ಒಲೆಯನ್ನು ಹೊತ್ತಿಸಿ ಅಡುಗೆ ಮಾಡಲಾರಂಭಿಸಿದ ಮೇಲೆ ಇತರರು ಒಲೆಯನ್ನು ಹೊತ್ತಿಸುವರು.

ಉದ್ಯೋಗದ ನಿಮಿತ್ತ ಬೇರೆ ಸ್ಥಳಗಳಿಗೆ ಹೋಗುವಾಗ ಅಲ್ಲಿ ಯಾರಾದರೂ ಸತ್ತರೆ ಅದೇ ಪಂಗಡಕ್ಕೆ ಸೇರಿದವರು ಈ ಕ್ರಿಯೆಯನ್ನು ಮಾಡುವುದು ಕಷ್ಟ. ಮತ್ತೆ ಸಣ್ಣ ಹಾರೆಯನ್ನಿಟ್ಟುಕೊಂಡು ತಕ್ಷಣ ಗುಂಡಿ ತೋಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಸತ್ತವರನ್ನು ಇತರ ವರ್ಗದವರ ಸಹಾಯದಿಂದ ಗುದ್ದಲಿ, ಇತರ ಉಪಕರಣಗಳಿಂದ ಗುಂಡಿ ತೋಡಿಹೂಳುವರು. ಈ ರೀತಿ ಮಾಡುವುದರಿಂದ ಅವರು ತಮ್ಮ ಕುಲದ ಸಂಪ್ರದಾಯದ ಕಟ್ಟುಪಾಡನ್ನು ಮೀರಿದ್ದಾಗಿ ಭಾವಿಸಿ, ಶವಗುಂಡಿ ತೋಡುವುದಕ್ಕೆ ಗುದ್ದಲಿ ಉಪಯೋಗಿಸಿದ್ದ ಒಂದು ಅಪರಾಧವೆಂತಲೂ, ಮೃತ ದೇಹವನ್ನು ಬೇರೆ ವರ್ಗದವರು ಮುಟ್ಟಿದಲ್ಲಿ ಎರಡನೇ ಅಪರಾಧವೆಂತಲೂ ಭಾವಿಸಿ, ನಿರ್ದಿಷ್ಟ ಸ್ಥಳದಲ್ಲಿ ವರ್ಷಕ್ಕೆ ಒಂದು ಸಾರಿ ಎಲ್ಲರೂ ಸೇರಿ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವಾಗ ಅಪರಾಧದ ಶುಲ್ಕವನ್ನು ಕಟ್ಟುವರು.

ಸತ್ತವರ ಸ್ಮರಣಾರ್ಥವಾಗಿ ಮಡು ವಿಧಿ ವಿಧಾನ: ಶವಸಂಸ್ಕಾರ ಮಾಡಿದ ಮೂರನೆಯ ದಿನದಂದು ಒಂದು ಮಣ್ಣಿನ ಮಡಕೆಯ ತುಂಬ ನೀರನ್ನು ತೆಗೆದುಕೊಂಡು ಸಂಸ್ಕಾರ ಮಾಡಿದ ಸ್ಥಳದಲ್ಲಿರುವರು. ಸತ್ತವರ ಮೊಮ್ಮಗ ಅಥವಾ ಮದುವೆಯಾಗದ ಒಬ್ಬರು ತಲೆಯನ್ನು ಬೋಳಿಸಿಕೊಂಡು ನೀರು ತುಂಬಿದ ಮಡಕೆಯನ್ನು ಹೊತ್ತುಕೊಂಡು ಬಂದು ಸಂಸ್ಕಾರ ಮಾಡಿದ ಸ್ಥಳದಲ್ಲಿ ಅದನ್ನಿಡುವರು. ಇದಾದ ಅನಂತರ ಸಮೀಪವೇ ಅಡುಗೆ ಮಾಡುವರು. ಒಂದು ಆಡನ್ನು ಕೊಯ್ದು ತಲೆ, ಕಾಲುಗಳ ಭಾಗದಲ್ಲಿರುವ ಮಾಂಸವನ್ನು ಪ್ರತ್ಯೇಕವಾಗಿ ಅಡುಗೆ ಮಾಡಿ ಸತ್ತವರ ಹತ್ತಿರದ ಸಂಬಂಧಿಕರಲ್ಲಿ ಗಂಡಸರು ಮಾತ್ರ ಉಣ್ಣವರು.ಇತರ ಮಾಂಸವನ್ನು ಅನಂತರ ಅಡುಗೆ ಮಾಡಿ ಎಲ್ಲರಿಗೂ ಬಡಿಸುವರು.

ಈ ವಿಧಿ ವಿಧಾನವನ್ನು ಸಾಮಾನ್ಯವಾಗಿ, ಸಂಸ್ಕಾರ ಮಾಡಿದ ಮೂರನೆಯ ದಿನ ಮಾಡುವರು. ಆ ರೀತಿ ಅಂದು ಮಾಡಲಿಲ್ಲವೆಂದು ಒಂದು ವರ್ಷದ ಅನಂತರವೋ ಸಮಯ ಸಂದರ್ಭ ಸಿಕ್ಕಾಗಲೇ ಮಾಡುವರು. ಹತ್ತನೇ ದಿನ ಕ್ರಿಯೆ ಹದಿನಾರನೇ ದಿನ ಕ್ರಿಯೆ ಎಂದು ಯಾವುದನ್ನು ಇವರು ಮಾಡುವುದಿಲ್ಲ.

ಮತ್ತೆ ಸತ್ತವರಿಗೆ ಆಕಾಶ ಲೋಕದಲ್ಲಿ ನೀರು ದೊರೆಯುವುದಿಲ್ಲ ಎಂಬ ನಂಬಿಕೆಯಿಂದ ಪತಾನಿಯರು ಎರಡು ಬಗೆಯ ಕ್ರಿಯೆಗಳನ್ನು ಮಾಡುತ್ತಾರೆ. ತಾಸ್ಪಾ ನರಿಯೋ ಎಂಬ ಪಂಗಡಕ್ಕೆ ಸೇರಿದ ಗುರುವಿನ ಸ್ಥಾನದಲ್ಲಿರುವ ಒಬ್ಬರು ಅವರ ಗುಡಿಸಲು ದೇವಸ್ಥಾನದ ಮುಂದೆ ಒಲೆ ಹತ್ತಿಸಿ ಹೊಸಮಡಕೆಯನ್ನು ಅದರ ಮೇಲಿಟ್ಟು ಅದರಲ್ಲಿ ನೀರು ಸುರಿಯುವರು. ಅನಂತರ ಆ ನೀರಲ್ಲಿ ಸ್ವಲ್ಪ ಬೇವಿನ ಸೊಪ್ಪನ್ನು ಹಾಕುವರು. ಕುದಿಯುತ್ತಿರುವ ಬೇವಿನ ಸೊಪ್ಪಿನ ನೀರನ್ನು ದೇವಸ್ತಾನದ ಮುಂದೆ ಕೆಳಗೆ ಸುರಿಯುವರು. ಆ ರೀತಿ ಸುರಿಯಲ್ಪಡುವ ನೀರು ಆಕಾಶ ಲೋಕದಲ್ಲಿರುವವರಿಗೆ ಸಿಗುವುದಾಗಿ ನಂಬುತ್ತಾರೆ. ಮುಂದೆ, ಮಾರನೆಯ ದಿನ ಬೆಳಗಾಗುವುದಕ್ಕೆ ಮುಂಚೆ ಸತ್ತವರ ಸಂಬಂಧಿಕರಲ್ಲಿ ಏಳು ಗಂಡಸರ ಕೈಗಳಲ್ಲಿ ನೀರನ್ನು ಸುರಿಯಲು ಹೇಳುತ್ತಾರೆ. ಆ ಏಳು ಜನರೂ ಆ ನೀರನ್ನು ಬಾಯಿಯಲ್ಲಿ ಹಾಕಿ ನುಂಗದೆ ಹಾಗೆಯೇ ಇಟ್ಟು ಸ್ವಲ್ಪ ಹೊತ್ತಾದ ಮೇಲೆ ಕೆಳಗೆ ಉಗಿಯುವರು. ಈ ರೀತಿ ಉಗಿದ ನೀರು ಸತ್ತವರಿಗೆ ಸಿಗುವುದಾಗಿ ನಂಬುತ್ತಿದ್ದಾರೆ.

ಆಹಾರ ಪದ್ಧತಿ: ಆಡು, ಕೋಳಿ ಇವುಗಳೊಡನೆ ಕಾಡುಬೆಕ್ಕು, ಮುಂಗೂಸಿ, ಆಮೆ, ಅಳಿಲು ಮುಂತಾದವುಗಳನ್ನು ಎಲ್ಲ ಬಗೆಯ ಮೀನುಗಳನ್ನು ಇಷ್ಟಪಟ್ಟು ಸೇವಿಸುವರು. ಉದ್ಯೋಗಕ್ಕೆ ಹೋಗುವಾಗ ಬೀದಿಗಳಲ್ಲಿ ಹೋಗುವಾಗ ಅಲ್ಲಿ ದೊರೆಯುವ ಆಹಾರವನ್ನು ಕೇಳಿ ಪಡೆಯುವರು. ತಂಗಳನ್ನ, ಕಳ್ಳು, ಸಾರಾಯಿ ಮುಂತಾದವುಗಳನ್ನು ಪ್ರತಿದಿನವೂ ಸೇವಿಸುತ್ತಾರೆ.

ಪೂಜಾ ವಿಧಾನ: ಇವರು ತಮ್ಮದೇ ಆದ ದೈವವನ್ನು ಪೂಜಿಸುತ್ತಾರೆ. ಇವರಲ್ಲಿ ಗಂಡು ದೇವರನ್ನು ಪೂಜಿಸುವ ವಿಧಾನವಿಲ್ಲ. ಇವರೆಲ್ಲರೂ ಹೆಣ್ಣು ದೇವರನ್ನೇ ಪೂಜಿಸುತ್ತಾರೆ. ಸಟ್ಟು ವಾಯಿ, ಆಯಿ, ಮಾತಾ, ಕರೋಬಾರಿಗಳಂತಹ ತಾಯಿ ಸ್ಥಾನದ ದೈವಗಳನ್ನು ಪೂಜಿಸುತ್ತಾರೆ. ದೈವವನ್ನು ಪೂಜಿಸುವ ಮೊದಲನೇ ದಿನ ಸಂಜೆ ವೇಳೆಯಲ್ಲಿ ಗುಡಿಸಲು ದೇವಸ್ಥಾನದ ಸುತ್ತಲೂ ನಾಲ್ಕು ಕಡೆಯೂ ಕಂಬವನ್ನು ನೆಟ್ಟು ಅನಂತರ ಆ ನಾಲ್ಕು ಕಂಬಗಳನ್ನು ಅವರ ಪಂಗಡ ಗುರುವಾದ ‘ಬೋಬೋ’ (ಕ್ಷಡಿಯಿಡಿ) ಎನ್ನುವ ಹಿರಿಯ ವ್ಯಕ್ತಿ ಹಸುವಿನ ಹಾಲು ಅಥವಾ ಕಳ್ಳನ್ನು ಭೂಮಿಯಲ್ಲಿ ಸುರಿದು, ಹನ್ನೆರಡು ಕಾಸುಗಳನ್ನು ಕಾಣಿಕೆಯನ್ನಾಗಿ ಅಲ್ಲಿಡುತ್ತಾರೆ. ಈ ರೀತಿ ಮಾಡುವುದರಿಂದ ಅವರ ಪಂಗಡದ ಜನರ ಪಾಪ ಕಳೆದುಹೋಗುವುದಾಗಿ ಭಾವಿಸುತ್ತಾರೆ. ಅನಂತರ ಒಂದೊಂದು ಗುಡಿಸಲು ಅಥವಾ ಗುಡಾರದ ಮುಂದೆ ನೆಟ್ಟಿರುವ ಹಳೆಯ ಕೆಂಪು ಬಣ್ಣದ ಬಾವುಟಗಳನ್ನು ತೆಗೆದು ಹೊಸ ಕೆಂಪು ಬಣ್ಣದ ಬಾವುಟವನ್ನು (ಪಾರೋಕ್ಷಯ ಸಡಿ) ಏರಿಸುತ್ತಾರೆ.

ಈ ಬಾವುಟ ಏರಿಸುವ ಕಾರ್ಯಕ್ರಮಕ್ಕೆ ‘ಪಾರೋನಿಷಾಂತ್’ ಎಂದು ಹೆಸರು. ‘ಬೋಬೋ’ ಎನ್ನುವ ಹಿರಿಯ ವ್ಯಕ್ತಿ ದೇವಸ್ಥಾನದೊಳಗೆ ಹೋಗಿ ‘ಕಣ್ಣು’ ಎನ್ನುವ ಗೂಡೆಯಲ್ಲಿ ಕೆಂಪುಬಟ್ಟೆಯಲ್ಲಿ ಕಟ್ಟಿರುವ ‘ಮಾತಾ’ ಎನ್ನುವ ದೇವರ ಶಿಲೆಯನ್ನು ಹೊರಗೆ ತೆಗೆದುಕೊಂಡು ಬರುತ್ತಾರೆ. ಆವಾಗ ಐದು ಬೇರೆ ಬೇರೆ ಬಗೆಯ ನಾದ ಸಂಗೀತಗಳನ್ನು ಮಾಡಲಾಗುತ್ತದೆ. ಅವರ ಪಂಗಡದ ಹಿರಿಯರು ತಕ್ಷಣ ಹುಣೆಸೆಮರದ ಪಟ್ಟೆಗಳನ್ನು ಒಂದು ಸ್ಥಳದಲ್ಲಿ ಬೆಂಕಿಯಿಟ್ಟು ಅದರಲ್ಲಿ ಸಾಂಬ್ರಾಣಿ ಹೊಗೆ ಹಾಕುತ್ತಾರೆ. ಈ ಸಾಂಬ್ರಾಣಿ ಹೊಗೆ ಆ ರಾತ್ರಿ ಪೂರ್ತಿ ಮುಂದುವರಿಕೆಯಾಗಿ ಹೊಗೆಯಾಡುತ್ತಲೇ ಇರಬೇಕು. ನಂತರ ‘ಬೋಬೋ’ ಎಂಬ ಪಂಗಡ ಗುರು ಆ ದೇವರ ಶಿಲೆಯನ್ನು ಮರದ ಹಲಗೆಯ ಮೇಲಿಟ್ಟು ಹಾಲಿನಿಂದಲೂ, ನೀರಿನಿಂದಲೂ ಅಭಿಷೇಕ ಮಾಡುವರು. ಆ ಸಮಯದಲ್ಲಿ ನಾದ ಸಂಗೀತಗಳ ನಡುವೆ ಆಡು, ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಬಲಿ ಕೊಟ್ಟ ತಕ್ಷಣ ‘ಬೋಬೋ’ ಎಂಬ ಹಿರಿಯ ವ್ಯಕ್ತಿ ಮೇಲೆ ‘ದೇವರು’ ಬರುತ್ತವೆ. ಆ ದೇವರು ಆಡುವಾಗ ವೇಗವಾಗಿ ಭವಿಷ್ಯ ನುಡಿಯುವರು. ಅದನ್ನು ಕೇಳಲು ಜನರು ಬಹಳ ಕಾತುರದಿಂದ ಇರುತ್ತಾರೆ. ಅದಾದ ನಂತರ ಕೆಲವು ಮುಖ್ಯ ಹಿರಿಯರು ಮೂರು ಕಲ್ಲುಗಳನ್ನು ತ್ರಿಕೋಣ ಆಕಾರದಲ್ಲಿಟ್ಟು ಒಲೆ ತಯಾರು ಮಾಡುತ್ತಾರೆ. ಈ ರೀತಿ, ಐದು ಒಲೆಗಳನ್ನಿಟ್ಟು ಅದರ ಮೇಲೆ ದೋಸೆ ಕಲ್ಲುನ್ನಿಡುವರು. ಅನಂತರ, ಅಕ್ಕಿ ಹಿಟ್ಟಿನಿಂದ ದೋಸೆ ಮಾಡುತ್ತಾರೆ. ಇದನ್ನು ‘ರೊಟ್ಟಿ’ ಎಂದು ಹೇಳುತ್ತಾರೆ. ಈ ರೊಟ್ಟಿಗಳನ್ನು ಸಿಕ್ಕನ್ನೂ ದೇವರಿಗೆ ಇಡುತ್ತಾರೆ. ಇಟ್ಟ ಆಹಾರ ಪದಾರ್ಥಗಳನ್ನು ಪ್ರತಿಯೊಬ್ಬರಿಗೂ ಹಂಚುತ್ತಾರೆ. ಅಂದಿನ ರಾತ್ರಿ ಪೂರ್ತಿ ನಿದ್ರಿಸದೆ ಕುಣಿದಾಡಿ ಸಂತೋಷಪಡುವರು.

ಮಾರನೆಯ ದಿನ ಬೆಳಗ್ಗೆ ಅವರ ಪಂಗಡದ ಗುರು ಮರದ ಹಲಗೆಯ ಮೇಲಿರುವ ಶಿಲೆಯನ್ನು ತೆಗೆದು ಕೆಂಪು ಬಟ್ಟೆಯಲ್ಲಿ ಸುತ್ತಿ ‘ಕಣ್ಣು’ ಎನ್ನುವ ಗೂಡೆಯಲ್ಲಿಟ್ಟು ಹನ್ನೆರಡು ಕಾಸುಗಳನ್ನು ಕಾಣಿಸಿಯಾಗಿಟ್ಟು ಶಿಲೆಯನ್ನು ದೇವಸ್ಥಾನದೊಳಗೆ ಇಡುತ್ತಾರೆ. ಆ ಸಂದರ್ಭದಲ್ಲಿ, ಮೇಳ, ನಾದ ಮುಂತಾದವುಗಳನ್ನು ನುಡಿಸಲಾಗುತ್ತದೆ. ದೇವಸ್ಥಾನದ ಸುತ್ತ ಇರುವ ಹಗ್ಗದ ಬೇಲಿಯೊಳಗೆ ಪ್ರಾಣಿಗಳಿಗೆ, ಮನುಷ್ಯರಿಗೆ ಅನುಮತಿಯಿಲ್ಲ. ಅದನ್ನು ಮೀರಿ ನುಗ್ಗುವರು ಅಪರಾಧವನ್ನು ಕಟ್ಟಬೇಕು. ಪ್ರತಿಯೊಂದು ಗುಡಿಸಲಿನ, ಗುಡಾರದ ಮುಂದೆ ಏರಿಸಿರುವ ಬಾವುಟ ಮುಂದಿನ ವರ್ಷದವರಿಗೆ ಹಾಗೆಯೇ ಇರುತ್ತದೆ. ಈ ರೀತಿ ಅವರ ದೈವಿಕ ಪೂಜವಿಧಾನ ಬಹಳ ಭಕ್ತಿಪೂರ್ವಕವಾಗಿ ಇರುತ್ತದೆ.

ಮಹಿಳೆಯರ ನೆಲೆ: ಪತಾನಿಯರಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯವಿದೆ. ಮಹಿಳೆಯರಿಗೆ ಸಣ್ಣ ಮಕ್ಕಳನ್ನು ತಮ್ಮ ಕುಲ ಕಸುಬಿಗೆ ತರಬೇತಿಗೊಳಿಸುವುದು ಮುಖ್ಯ ಕೆಲಸವಾಗುತ್ತದೆ. ಮಕ್ಕಳ ಕೈ, ಕಾಲುಗಳಿಗೆ ಎಣ್ಣೆಯನ್ನು ಬಳಿದು ಬಾಗಿಸುವುದು, ಪಲ್ಟಿ ಹೊಡೆಯುವುದನ್ನು ಹೇಳಿಕೊಡುವುದು, ತಂತಿಯ ಮೇಲೆ ನಡೆಯಲು ಕಲಿಸುವುದು ಮುಂತಾದ ಎಲ್ಲವನ್ನು ಮಹಿಳೆಯರೇ ಕಲಿಸುತ್ತಾರೆ. ಇವರ ಕಸುಬಿನಲ್ಲಿ ಎಲ್ಲ ಬಗೆಯ ಸಹಾಯಗಳನ್ನು ಸರಿಸಮವಾಗಿ ಮಾಡುವುದು ಕೂಡ ಮಹಿಳೆಯರೇ. ಮಹಿಳೆಯರನ್ನು ನಿಂದಿಸುವುದೋ ಮನಸ್ಸನ್ನು ನೋಯಿಸುವುದೋ ಇಲ್ಲವೇ ಇಲ್ಲ. ಮಹಿಳೆಯರನ್ನು ಇವರು ಆಸ್ತಿಯಾಗಿ ಪರಿಗಣಿಸುತ್ತಾರೆ.

ಡೊಂಬರಾಟದ ಕಸುಬಿನಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ಡೊಂಬರಾಟದೊಂದಿಗೆ ಸಿನಿಮಾ ಹಾಡುಗಳಿಗೆ ತಕ್ಕಂತೆ ಉಡುಪುಗಳನ್ನು ಬದಲಾಯಿಸಿ ಗಂಡು ಹೆಣ್ಣು ಇಬ್ಬರೂ ನೃತ್ಯವನ್ನು ಮಾಡುತ್ತಾರೆ. ಇವರಲ್ಲಿ ಕೆಲವು ಕುಟುಂಬಗಳು ದೊಡ್ಡ ಗುಡಾರವನ್ನು ನಿರ್ಮಿಸಿ ಅದರ ಸುತ್ತಲೂ ತಾತ್ಕಾಲಿಕ ಬೇಲಿಯನ್ನು ಹಾಕಿ ಸಣ್ಣ ಪ್ರಮಾಣದ ಸರ್ಕಸ್ಸನ್ನು ಏರ್ಪಡಿಸುತ್ತಾರೆ. ದೃಶ್ಯವನ್ನು ನೋಡಲು ಬರುವವರಲ್ಲಿ ಟೀಕೆಟನ್ನು ನೀಡಿಹಣ ವಸೂಲಿ ಮಾಡುತ್ತಾರೆ. ಇನ್ನು ಕೆಲವರು ಈ ಕಸುಬನ್ನು ಬಿಟ್ಟು ಕೂಲಿ ಕೆಲಸ, ಸಣ್ಣ ಸಣ್ಣ ವ್ಯಾಪಾರ ಮಾಡುವರು.

ಪತಾನಿಯರು ರೊಗರುಜಿನಗಳೆಂದು ಹಿಂಸೆಗೊಳಗಾಗುವುದಿಲ್ಲವೆಂದೂ ಒಂದು ವೇಳೆ ಒಳಗಾದರೆ ನಾಟಿ ವೈದ್ಯವನ್ನು ಮಾಡಿಕೊಳ್ಳುತ್ತಾರೆ. ಕೈ, ಕಾಲು ಮುರಿದರೆ ಹಸಿರು ಸೊಪ್ಪಿನ ಔಷಧಿಯನ್ನು ಅನುಸರಿಸುತ್ತಿದ್ದಾರೆ. ಪ್ರಸವಸಂದರ್ಭಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ವಯಸ್ಸಾದವರಿಗೆ ಆರೋಗ್ಯವಿಲ್ಲವಾದರೆ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸುತ್ತಾರೆ.

ಜನ್ಮ ವಿಧಿ ವಿಧಾನಗಳು ಸಂದರ್ಭಗಳಲ್ಲಿ ಇತರ ಪಂಗಡಗಳಲ್ಲಿರುವಂತೆಯೇ ಶ್ರೀಮಂತರಾದವರು ಅಂಗಡಿಯಲ್ಲಿ ಸಿಹಿ ಪದಾರ್ಥಗಳನ್ನು ಖರೀದಿಸಿ ಎಲ್ಲರಿಗೂ ಹಂಚಿ ನಾಮಕರಣ ಮಾಡುತ್ತಾರೆ.

ಮರಣ ವಿಧಿ ವಿಧಾನಗಳಲ್ಲಿ ಈಗ ಬಹಳವಾದ ಬದಲಾವಣೆಗಳು ಬಂದಿವೆ. ವರ್ಷಕ್ಕೊಂದು ಸಾರಿ ಕೂಡುವ ಸಂದರ್ಭಗಳಲ್ಲಿ ಯಾರಾದರೂ ಸತ್ತರೆ ಹಳೆಯ ವಿಧಿ ವಿಧಾನಗಳನ್ನು ಆ ರೀತಿಯೇ ಮಾಡಲಾಗುತ್ತದೆ. ಜೀವನಕ್ಕಾಗಿ ಹೊರಗಿನ ಸ್ಥಳಗಳಿಗೆ ಹೋಗಿದ್ದಾಗ ಯಾರಾದರೂ ಸತ್ತರೆ ಅಲ್ಲಿ ಸಿಗುವಂಥ ಸೌಕರ್ಯಗಳಿಗನುಗುಣವಾಗಿ ಇತರ ಪಂಗಡದವರ ಸಹಾಯದಿಂದ ಸಂಸ್ಕಾರ ಮಾಡಲಾಗುತ್ತದೆ. ಈ ರೀತಿ ಮಾಡುವಾಗ ಅಥವಾ ಮಾಡಿ ಆದ ಮೇಲೆ ಕುಲದೇವರನ್ನು ಪೂಜಿಸುವಾಗ ದಂಡದ (ಕಾಣಿಕೆಯ) ಮೊತ್ತವನ್ನು ಕಟ್ಟುವುದಾಗಿ ಹೇಳುತ್ತಾರೆ.

ಸಣ್ಣಮಕ್ಕಳಿಂದ ದೊಡ್ಡವರವರೆಗೂ ಡೊಂಬರಾಟದಲ್ಲಿ ತೊಡುಗುವುದರಿಂದ ಶಿಕ್ಷಣವೆಂಬುದು ಕೈಗೆ ಎಟುಗದ ಫಲವಾಗಿದೆ. ಆದರೆ ಕಳೆದ ಹತ್ತು ವರ್ಷಗಳಿಂದ ಈ ಕಸುಬನ್ನು ಬಿಟ್ಟ ಕುಟುಂಬಗಳಲ್ಲಿ ಕೆಲವು ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಈ ಸಮೂಹದಲ್ಲಿ ಮೂವರು ಪದವಿವರೆಗೆ ಓದಿದ್ದಾರೆಂಬುದು ಗಮನಾರ್ಹವಾದ ವಿಚಾರ.

ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಿ ತನ್ನ ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡು ಬಂದ ಪತಾನಿಯರು ಈಗ ಇತರ ಸಮೂಹದವರನ್ನುನೋಡಿ ತಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಂದೇ ಕಡೆ ನೆಲೆಯಾಗಿ ಜೀವಿಸುವ ಪದ್ಧತಿಯೂ ಕಂಡುಬರುತ್ತಿದೆ.

ವಿ.ಜಿ. ಅನುವಾದ ಎಂ.ಆರ್.

 

ದೊಂಬಿದಾಸರು ಕರ್ನಾಟಕಾದ್ಯಂತ ಇಂದಿಗೂ ಕಂಡುಬರುವ ಕಲಾವಿದರಲ್ಲಿ ದೊಂಬಿದಾಸರಿಗೆ ಅಗ್ರಸ್ಥಾನ ಸಲ್ಲುತ್ತದೆ. ಇವರು ಲಾವಣಿಗಳು, ಕಥನ ಗೀತೆಗಳು, ತತ್ವಪದಗಳು, ಐತಿಹಾಸಿಕ ವೀರ ಕಾವ್ಯಗಳು, ಬಯಲಾಟದ ಸಂಭಾಷಣೆಗಳು, ಕೋಡಂಗಿ ಪಾತ್ರ ಮುಂತಾದುವನ್ನು ಹಾಡುತ್ತಾ ಹಾಗೂ ಅತ್ಯುತ್ತಮವಾಗಿ ಅಭಿನಯಿಸುತ್ತಾ ಜನಮದಲ್ಲಿ ಉಳಿದಿದ್ದಾರೆ. ಇವರನ್ನು ಪ್ರಾದೇಶಿಕವಾಗಿ ದುಂಬೇದಾಸರು, ಗರುಡದಾಸರು, ಹೆಣ್ಣು ವೇಷದವರು, ತಿರುಮಲದಾಸರು, ಗೋಪಾಲಬುಟ್ಟಿದಾಸರು, ಗರುಡಗಂಬದ ದಾಸರು, ಶಂಕದಾಸರು, ಗಂಗೆದುವಾಳ್ಳು, ಚೆನ್ನದಾಸರ್, ಹೊಲೆಯ ದಾಸರ್, ಮೂಲದಾಸರ್, ದಂಡಿಗ ದಾಸರ್, ಚಕ್ರವಾದ್ಯದಾಸರು ಇತ್ಯಾದಿಯಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇವರ ಮನೆಮಾತು ತೆಲುಗು. ಕರ್ನಾಟಕಕ್ಕೆ ಬಂದು ನೆಲೆ ನಿಂತ ಮೇಲೆ ಕನ್ನಡ ಭಾಷೆ ಕಲಿತು ಜನಪದ ಕಾವ್ಯವಗಳನ್ನು ಕಟ್ಟಿ ಹಾಡಿ ಸಾಂಸ್ಕೃತಿಕ ವೃತ್ತಿಗಾಯಕರಾಗಿ ಜನಪ್ರಿಯರಾದರು. ತೆಲುಗು ಮುತ್ತು ಕನ್ನಡ ಭಾಷೆಯ ಜೊತೆಗೆ ‘ಮರುಗುಭಾಷೆ’ (Code language) ಯನ್ನು ಬಳಸುತ್ತಿದ್ದರು. ಇದು ಹಳೆಯ ತಲೆಮಾರಿನವರ ನಡುವೆ ಈಗಲೂ ಚಾಲ್ತಿಯಲ್ಲಿದ್ದು ಲಿಪಿ ಇಲ್ಲದ ಭಾಷೆಯಾಗಿದೆ.

೧೯೦೧ ಜನಗಣತಿಯ ವರದಿಯಲ್ಲಿ ದಾಸರಿ ಸಮುದಯಕ್ಕೆ ಗುಡುಮದಾಸರಿ, ದೊಂಬಿದಾಸರು, ಧರ್ಮದಾಸರು, ಶಂಕದಾಸರು, ಚಕ್ರವಾದ್ಯದಾಸರು, ನಾಮಧಾರಿ ದಾಸರು, ಶನಿವಾರದಾಸರು ಮುಂತಾದ ಸ್ವಗೋತ್ರಪಂಗಡಗಳನ್ನು ಸೇರಿಸಿದ್ದಾರೆ. ಇವರಿಗೆ ದೊಂಬಿದಾಸರು ಎಂಬ ಹೆಸರು ಹೇಗೆ ಬಂದಿತೆಂಬುದರ ಬಗ್ಗೆ ಭಿನ್ನಾಭಿಪ್ರಾಯಗಳು ಇವೆ. ಇವರು ಶ್ರೀ ಕೃಷ್ಣದೇವರಾಯನ ನಂಬಿಕಸ್ಠ ಗೂಢಾಚಾರರಾಗಿ ರಾಜ್ಯಾಡಳಿತಕ್ಕೆ ಸಂಬಂಧಿಸಿದ ಗುಪ್ತ ಮಾಹಿತಿಗಳನ್ನು ಅದರಲ್ಲೂ ಸೈನಿಕರ ಮಾಹಿತಿಗಳನ್ನು ಸಂಗ್ರಹಿಸಲು ನೆರವಾಗುತ್ತಿದ್ದರು. ಸೈನಿಕರಿಗೆ ತಮ್ಮ ಕಲೆಯಿಂದ ಮನರಂಜನೆಯನ್ನು ನೀಡಿ ದಂಡಿನ ದಾಸರಾದರು. ಇವರೇ ಮುಂದೆ ದೊಂಬಿದಾಸರಾಗಿರುವ ಸಾಧ್ಯತೆ ಇದೆ. ಇವರು ಹಾಡಲು ಬಳಸುತ್ತಿದ್ದ ‘ದಂಡಿಗೆ’ (ಏಕತಾರಿ) ಎಂಬ ವಾದ್ಯದಿಂದ ದಂಡಿಗೆ ದಾಸರಾಗಿದ್ದು ತರುವಾಯ ದಂಡಿನದಾಸರು, ದೊಂಬಿದಾಸರು ಆಗಿರಬಹುದೆಂಬ ಅಭಿಪ್ರಾಯವೂ ಇದೆ. ಅನಂತ ಕೃಷ್ಣ ಅಯ್ಯರ್ ಹೇಳುವಂತೆ ಏಕತಾರಿಯೊಂದಿಗೆ ದುಂಬಿಯಂತೆ ಇಂಪಾಗಿ ಹಾಡುತ್ತಾ ಭಿಕ್ಷೆ ಬೇಡುವಾಗ ಅವರ ಸಂಗೀತ ಬಹು ಜನರನ್ನು ಆಕರ್ಷಿಸುತ್ತಿದ್ದುದರಿಂದ ಇವರನ್ನು ದೊಂಬಿ(ದುಂಬಿ) ದಾಸರೆಂದು ಕರೆದಿರಬಹುದು. ತಮ್ಮ ಮನೆ ದೇವರಾದ ತಿರುಪತಿ ವೆಂಕಟರಮಣಸ್ವಾಮಿಗೆ ಸಲ್ಲಿಸಬೇಕಾಗಿದ್ದ ವಾರ್ಷಿಕ ಪೊಗದಿ (ಕಾಣಿಕೆ)ಯನ್ನು ಸಲ್ಲಿಸಲಾಗದೇ ದೊಂಗ(ಕಳ್ಳ) ದಾಸರಾದರು. ಈ ದೊಂಗದಾಸರೇ ದೊಂಬಿದಾಸರಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ದೊಂಬಿದಾಸರು ಹೆಸರಾಂತ ಬಯಲು ನಾಟಕ ಕಲಾವಿದರಾಗಿದ್ದು ನಾಟಕಗಳನ್ನು ಪ್ರದರ್ಶಿಸುವಾಗ ‘ಗದ್ದಲ’ ದೊಂಬಿ ಸೃಷ್ಟಿಯಾಗುತ್ತಿತ್ತು. ಮತ್ತೆ ಕೆಲವು ಸಂದರ್ಭಗಳಲ್ಲಿ ಪರದೆಯ ಹಿಂದುಗಡೆ ತಮ್ಮೊಳಗೆ ಗದ್ದಲವೇರ್ಪಡುತ್ತಿತ್ತು. ಈ ಕಾರಣದಿಂದಾಗಿಯೂ ಇವರಿಗೆ ದೊಂಬಿದಾಸರೆಂದು ಹೆಸರು ಬಂದಿರಬಹುದು. ರೆವರೆಂಡ್ ಎಫ್ ಕಿಟಲ್ ಅವರು ೧೮೯೪ರಲ್ಲಿ ದೊಂಬಿದಾಸರು One of a Comapny of Stage Player ಎಂದು ಅವರ ವೃತ್ತಿಯನ್ನಾಧರಿಸಿದ ಅರ್ಥವಿವರಣೆ ನೀಡಿದ್ದಾರೆ.

ದೊಂಬಿದಾಸರು ವೈಷ್ಣವ ಸಂಪ್ರದಾಯಕ್ಕೆ ಸೇರಿದವರು. ಈ ಸಂಪ್ರದಾಯದ ದೇವತೆಗಳಾದ ವೆಂಕಟರಮಣಸ್ವಾಮಿ, ನರಸಿಂಹಸ್ವಾಮಿ, ಗರುಡಪ್ಪ, ಆಂಜನೇಯ, ಬೇಟೆರಾಯ ಮುಂತಾದುವು. ಇವರ ಮನೆದೇವತೆಗಳ ವಿಚಿತ್ರವೆಂದರೆ ಶೈವಸಂಪ್ರದಾಯದ ಹೆಣ್ಣು ದೇವತೆಗಳಾದ ಮೆಳೆಯಮ್ಮ, ಸುಂಕಲಮ್ಮ, ಹಳೇಕೋಟಮ್ಮ, ಗದ್ದೆಕೆಂಪಮ್ಮ, ಚಿಕ್ಕದೇವಮ್ಮ, ಎಲ್ಲಮ್ಮ, ದೊಡ್ಡಮ್ಮ, ಕಬ್ಬಾಳಮ್ಮ, ದುರ್ಗಾ ಪರಮೇಶ್ವರಿ, ಮುತ್ಯಾಲಮ್ಮ ಮುಂತಾದವು.

ಈ ಒಂದೊಂದು ದೇವರ ಆರಾಧಕರೂ ಒಂದೊಂದು ಬೆಡಗಿನವರಾಗಿರುತ್ತಾರೆ. ಶೆಟ್ಟೊಳ್ಳು, ಅರವೊಳ್ಳು, ಆಚಾರಿವೊಳ್ಳು, ಬಂಗಲೊಳ್ಳು, ಬಂಗಾರೊಳ್ಳು, ನಬಿಗೊಳ್ಳು, ಬೊಮ್ಮನ ಪಲ್ಲೋಳು, ದಂಡೊಳ್ಳು, ದ್ಯಾವರ ಕೊಂಡೊಳ್ಳು, ಇಂಗೊಳ್ಳು, ಇರಗೊಂಟೋಲ್ಳು, ಗದ್ದೆವೊಳ್ಳು, ಗ್ವಾಲೊಳ್ಳು, ಗುಡ್ಡೆಗಾಳ್ಳು, ಗುರುಮೊಳ್ಳು, ಮಿರಾಲೊಳ್ಳು ಹೀಗೆ ನೂರಾರು ಬೆಡಗುಗಳು ಇವರಲ್ಲಿವೆ. ವಿವಾಹದ ಸಂದರ್ಭದಲ್ಲಿ ಒಂದೇ ಬೆಗಡಿನಲ್ಲಿ ಸಂಬಂಧ ಮಾಡಬಾರದು. ಅದು ಅಣ್ಣ-ತಂಗೆಯ ವರಸೆ ಹಾಗಾಗಿ ಬೇರೆ ಬೇರೆ ಬೆಡಗುಗಳೊಂದಿಗೆ ಸಂಬಂಧ ಮಾಡುತ್ತಾರೆ. ಇವರ ಶಾಸ್ತ್ರ ಸಂಬಂಧ ಒಕ್ಕಲಿಗರಂತೆಯೇ. ಆದರೆ ಮದುವೆಗಳಿಗೆ ಪುರೋಹಿತರು ಬರುವುದಿಲ್ಲ. ಮದುವೆ ಗಂಡಿನ ಮನೆಯ ಬಾಗಿಲಲ್ಲೇ (ಅಂಗಳ) ನಡೆಯುತ್ತದೆ. ತುಂಬಾ ಹಿಂದೆ ಇದರಲ್ಲಿ ಐದು ದಿನಗಳ ಮದುವೆ ನಡೆಯುತ್ತಿತ್ತು. ಈಗ ಎರಡು ದಿನಕ್ಕೆ ಸೀಮಿತಗೊಳಿಸಿಕೊಂಡಿದ್ದಾರೆ. ಮದುವೆ ಸಂದರ್ಭದಲ್ಲಿ ಚಪ್ಪರದ ಶಾಸ್ತ್ರ, ಹರಣಿಶಾಸ್ತ್ರ, ಮುಹೂರ್ತ, ದೇವಲಾಡೋ ಶಾಸ್ತ್ರ, ಸಿಂಹಾಸನ ವಕ್ಕಾಕುಶಾಸ್ತ್ರ ಮಾಡುತ್ತಾರೆ. ಇವರಲ್ಲಿ ಏಕಪತ್ನಿತ್ವಕ್ಕೆ ಮನ್ನಣೆ ಇದೆ. ಅಂತರ್ಜಾತಿ ವಿವಾಹಕ್ಕೂ ವಿಧವಾ ವಿವಾಹ(ಕೂಡಿಕೆ)ಕ್ಕೂ ಅವಕಾಶವಿದೆ. ವಿವಾಹ ವಿಚ್ಛೇದನಗಳು ನಡೆಯುತ್ತವೆ.

ಮಕ್ಕಳು ಹುಟ್ಟಿದ ಶಾಸ್ತ್ರದಲ್ಲಿ ಹೆಚ್ಚೇನು ಗಮನಾರ್ಹ ಅಂಶಗಳಿಲ್ಲ. ಒಂಬತ್ತನೇ ದಿನ್ಕಕೆ ಸೂತಕ ತೆಗೆದು ದಾಸಯ್ಯನನ್ನು ಮನೆಗೆ ಕರೆಸಿ ಶಂಖ, ಜಾಗಟೆ, ನುಡಿಸಿ ಕುಲದೇವರ ಹೆಸರು ಹೇಳಿ ನಾಮಕರಣ ಮಾಡುತ್ತಾರೆ. ಋತುಮತಿಯಾದಾಗ ‘ಗುಡ್ಲುಕೊಡುವ’ ಶಾಸ್ತ್ರ ಇವರಲ್ಲಿದೆ. ಗುಡ್ಲು ಕೂಡಿಸಿದ ಹೆಣ್ಣಿಗೆ ಕೊಬ್ಬರಿ, ಬೆಲ್ಲ, ಉದ್ದಿನಕಾಳು, ಮೆಂತ್ಯ ಬೇಯಿಸಿ ಕೊಟ್ಟು ಮೂರು ತಿಂಗಳ ಆರೈಕೆ ಮಾಡುತ್ತಾರೆ. ಶವಸಂಸ್ಕಾರದಲ್ಲಿ ‘ಹೂಳುವ’ ಪದ್ಧತಿ ಇದೆ. ಮೂರು ದಿವಸಕ್ಕೆ ದೊಡ್ಡ ತಿಥಿ. ಆಗ ಕುಲಸ್ಥರೆಲ್ಲ ಸೇರಿ ಶಾಕಾಹಾರವನ್ನು ಸೇವಿಸಿ ರಾತ್ರಿಯೆಲ್ಲ ದೀಪ ಆರದಂತೆ ತತ್ವ ಪದಗಳನ್ನೂ ಭಜನೆ ಹಾಡುಗಳನ್ನೂ ಹಾಡುತ್ತಾರೆ. ಇತರ ಒಕ್ಕಲು ಮಕ್ಕಳ ಹಬ್ಬಗಳನ್ನೇ ಇವರೂ ಆಚರಿಸುತ್ತಾರೆ. ಜೊತೆಗೆ ಗ್ರಾಮದೇವರಂತೆಯೇ ಗ್ರಾಮದೇವತೆಗಳ ಹಬ್ಬಗಳನ್ನು ಆಚರಿಸುವರು.

ಇವರು ನಿರ್ದಿಷ್ಟ ನೆಲೆಯಿಲ್ಲದ ಜನ. ಊರೂರು ಸುತ್ತುತ್ತಾ ಬೆಳೆ ಬೆಳೆದಿರುವ ಕಡೆ ಬೀಡು ಬಿಡುತ್ತಾರೆ. ಮಂಟಪಗಳು, ಪಾಳು ಗುಡಿಗಳಲ್ಲಿ ವಾಸಿಸುತ್ತಾರೆ. ಮಕ್ಕಳು ಮತ್ತು ವೃದ್ಧರನ್ನು ಮನೆಗಳಲ್ಲಿಯೇ ಬಿಟ್ಟು ಏಕತಾರಿ, ದಮ್ಮಡಿ, ಚಿಟಗಿ, ಶೃತಿಪೆಟ್ಟಿಗೆ, ಜೋಳಿಗೆಗಳೊಡನೆ ಸುಗ್ಗಿಯ ಕಾಲದಲ್ಲಿ ಊರೂರು ಸುತ್ತಿ ಹಣ ಮತ್ತು ದಿನಸಿಯನ್ನು ಸಂಪಾದಿಸುತ್ತಿದ್ದರು. ಹೀಗೆ ಭಿಕ್ಷೆಯಲ್ಲಿ ದೊರೆತ ಅಕ್ಕಿ ಹಸಿಟ್ಟು ಮುಂತಾದುವನ್ನು ಶೇಖರಿಸಿ ತಾವು ನೆಲೆ ನಿಂತ ಜಾಗದಲ್ಲಿ ಮೂರು ಕಲ್ಲುಗಳನ್ನು ಹೂಡಿ ಒಲೆ ಮಾಡಿ ಅಡುಗೆ ತಯಾರಿಸುತ್ತಿದ್ದರು. ಇವರು ಮಾಂಸಾಹಾರಿಗಳಾಗಿದ್ದು ನದಿಗಳಿಗೆ ಹೋಗಿ ಮೀನು, ಆಮೆ ಹಿಡಿಯುವರು. ನದಿದಡಗಳಲ್ಲಿಯ ಪಕ್ಷಿಗಳನ್ನು ಬೇಟೆಯಾಡಿ ತರುತ್ತಿದ್ದರು. ಪ್ರತಿದಿನ ಕುಡಿಯುವ ಇವರು ಮಕ್ಕಳನ್ನು ಜೊತೆಗೆ ಕರೆದೊಯ್ದು ಅವರಿಗೂ ಸ್ವಲ್ಪ ಕುಡಿಸಿ ಚಾಕಣ ಮುಂತಾದುವನ್ನು ತಿನ್ನಿಸುತ್ತಿದ್ದರು. ಮೀನು ಹಿಡಿಯಲು ಬೇಕಾದ ಮೀನಿನ ಬಲೆಯನ್ನು ಇವರೇ ನೇಯುತ್ತಿದ್ದರು.

ಕರ್ನಾಟಕದ ಗಡಿಭಾಗಗಳಾದ ತಮಿಳುನಾಡಿನ ಉತ್ತರ ಆರ್ಕಾಟ್, ತಂಜಾವೂರು, ಮಧುರೈ ಮತ್ತು ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಪೆನುಗೊಂಡ ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕದ ತುಮಕೂರು, ದಾವಣಗೆರೆ, ಶಿವಮೊಗ್ಗ, ಬೆಂಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಚಿತ್ರದುರ್ಗ ಮುಂತಾದ ಕಡೆ ಇವರ ನೆಲೆಗಳಿವೆ.

ಸಾಂಸ್ಕೃತಿಕ ರಾಯಭಾರಿಗಳಾದ ದೊಂಬಿದಾಸರು ಈ ನಾಡಿನಾದ್ಯಂತ ಸಂಚರಿಸುತ್ತಾ ನಾಟಕ ಕಲೆ, ಲಾವಣಿ, ಜನಪದ ಕಾವ್ಯ, ಬಯಲಾಟ ಮುಂತಾದವುಗಳನ್ನು ಪ್ರಸಾರ ಮಾಡುವುದರಲ್ಲಿ ನಿಷ್ಣಾತರು. ಲಾವಣಿಗಳಲ್ಲೇ ಗುರುತಿಸಲಾಗಿದೆ. ಇದರೊಂದಿಗೆ ಶಿವಕಥೆಗಳು (ಗೌರಿ ಮದುವೆ, ಗಂಗೆ-ಗೌರಿ ಜಗಳ, ಗಂಗೆ-ಗೌರಿ ಸವಾಲು), ಕೃಷ್ಣ ಕಥೆಗಳು (ಶ್ರೀಕೃಷ್ಣ ಕೊರವಂಜಿ, ಶ್ರೀಕೃಷ್ಣ ಪಾರಿಜಾತ, ದೇವಗನ್ನೇರು ತಾನಾಕೆ ನಡೆದಾರು), ರಮ್ಯಲಾವಣಿಗಳು (ಪ್ರೇಮ ಸತ್ಯ ಭೋಜ, ಬಾಲ ನಾಗಮ್ಮ, ಬಸವಕುಮಾರ, ಲೋಹಿತ ಕುಮಾರ, ಅತ್ತೆ-ಸೊಸೆ ಮಾರೇಗೌಡ, ಘಾತುಕ ಅಣ್ಣಯ್ಯ, ಧರ್ಮರಾಯ ಕರ್ಮರಾಯ, ಕಲಿಯುಗ ಬಾಲೆ, ಐತಿಹಾಸಿಕ ಲಾವಣಿಗಳು (ಮಾಗಡಿ ಕೆಂಪೇಗೌಡ, ಕಿತ್ತೂರು ರಾಣಿ, ಚೆನ್ನಮ್ಮ, ಮುಂಡರಗಿ ಭೀಮರಾಯ, ನರಗುಂದ ಬಂಡಾಯ, ಸ್ವಾತಂತ್ರ‍್ಯ ಸಂಗ್ರಾಮ) ಹೀಗೆ ಹತ್ತು ಹಲವು ಲಾವಣಿಗಳನ್ನು ರಚಿಸಿ ಹಾಡಿ ಪ್ರಚಾರ ಮಾಡಿದ್ದಾರೆ. ಫ್ಲೀಟ್‌ರವರು ಸಂಗ್ರಹಿಸಿರುವ ನರಗುಂದ ಬಂಡಾಯ ಲಾವಣಿಗಳು ದೊಂಬಿದಾಸರು ಹಾಡಿದವೆಂದು ತಿಳಿದು ಬಂದಿದೆ. ಕಂಸವಧೆ, ಶನಿ ಮಹಾತ್ಮೆ, ಹರಿಶ್ಚಂದ್ರ, ಭಕ್ತ ಪ್ರಹ್ಲಾದ, ನಳಚರಿತ್ರೆ, ಭಕ್ತ ಮಾರ್ಕಂಡೇಯ. ಹೀಗೆ ರಾಮಾಯಣ, ಮಹಾಭಾರತ, ಭಾಗವತ ಮಹಾಕಾವ್ಯಗಳ ಪ್ರಸಂಗಗಳನ್ನು, ಜನಪದ ನಾಯಕರ ಜೀವನ ಚರಿತ್ರೆಗಳನ್ನು ಇವರು ಹೆಚ್ಚಾಗಿ ಆಡುತ್ತಾರೆ. ಬಹುಪಾಲು ಕಂಠಸ್ಥ ಸಂಪ್ರದಾಯದಲ್ಲೇ ಈ ಕಲಾವಿದರು ನಾಟಕಗಳನ್ನು ಆಡುವ ಪದ್ಧತಿಯನ್ನು ಬೆಳೆಸಿಕೊಂಡು ಬಂದವರು. ಆದರೆ ಈಗ ಇವರ ನಾಟಕಗಳು ಸಂಪೂರ್ಣವಾಗಿ ಕಣ್ಮರೆಯಾದಂತೆ ತೋರುತ್ತದೆ.

ಎನ್.ಆರ್.