ದೆಯ್ಯಂ ಆಂಧ್ರದಲ್ಲಿ ‘ದೆಯ್ಯಂ’ (ದೆವ್ವ) ಬಗ್ಗೆ ಅನೇಕ ನಂಬಿಕೆಗಳಿವೆ. ದೆವ್ವ, ಗಾಳಿ, ಧೂಳಿ, ಪ್ರೇತಾತ್ಮ, ಭೂತ ಸಮಾನಾರ್ಥಕಗಳು. ಅಕಾಲಿಕ ಸಾವನ್ನಪ್ಪಿದವರ ಆತ್ಮಗಳು ಪ್ರೇತಾತ್ಮವಾಗುತ್ತದೆ ಎಂದು ಜನಪದರ ನಂಬಿಕೆ. ಅದರಲ್ಲೂ ಬಯಕೆಗಳು ಈಡೇರದ ನೇಣಿಗೆ ಆತ್ಮಹತ್ಯೆಗೆ ಶರಣಾದವರು. ಹತ್ಯೆಗೆ ಗುರಿಯಾದವರು, ಬೆಂಕಿಯಲ್ಲಿ ಮರಣ ಹೊಂದಿದವರ ಆತ್ಮಗಳು ಮನುಷ್ಯರನ್ನು ಪೀಡಿಸುವ ದೆವ್ವಗಳಾಗುತ್ತವೆ ಎಂದು ಹೇಳುತ್ತಾರೆ. ಕಳ್ಳರು, ಕಾಮುಕರು, ಕ್ರೂರಿಗಳು, ಜಿಪುಣರು, ಹೆಂಗಸರು ಮತ್ತು ಬ್ರಾಹ್ಮಣರನ್ನು ಹತ್ಯೆ ಮಾಡಿದವರು, ದ್ರೋಹ ಮಾಡಿದವರು ಸಹ ಸಾವನ್ನಪ್ಪಿದರೆ ದೆವ್ವವಾಗುತ್ತಾರೆಂದು ಹೇಳಲಾಗುತ್ತಿದೆ. ಜನಪದರ ಪ್ರಕಾರ ದೆವ್ವಗಳು ವಿವಿಧ ರೀತಿ, ಹೆರಿಗೆ ಸಮಯದಲ್ಲಿ ಅಥವಾ ಮೂರು ವರ್ಷಗಳ ವಯಸ್ಸಿನಲ್ಲಿ ಸತ್ತವರ ಆತ್ಮಹ ‘ಪೀಡ’ ಎಂಬ ಪ್ರೇತ ಆಗುತ್ತದೆ. ಹತ್ಯೆಗೆ ಗುರಿಯಾದವರು ‘ಕಾತ’ ಎಂಬ ದೆವ್ವವಾಗುತ್ತಾರೆ. ಬೆಂಕಿಯಲ್ಲಿ ಸಾವನ್ನಪ್ಪಿದರೆ ‘ಭೂತ’ ನೀರಲ್ಲಿ ಸತ್ತರೆ ‘ಪ್ರೇತ’, ದುರಾಶೆಯಿಂದ ಸತ್ತರೆ ‘ಗಾಳಿ’, ನೇಣಿಗೆ ಶರಣಾದರೆ ‘ಗರಾವು’, ಹೆರಿಗೆ ಸಮಯದಲ್ಲಿ ಸತ್ತರೆ ‘ಬಸ್ತಿ’ ಎಂಬ ದೆವ್ವಗಳಾಗುತ್ತಾರೆಂದು ಹೇಳುತ್ತಾರೆ. ವಯಸ್ಸಿಗೆ ಬಂದ ಹೆಣ್ಣು ಮಗಳು ಸತ್ತರೆ ‘ಮೋಹಿನಿ’ ಎಂಬ ದೆವ್ವವಾಗುತ್ತಾಳೆಂದು ಜನಪದರು ನಂಬುತ್ತಾರೆ. ಬ್ರಾಹ್ಮಣರು ಅಕಾಲಿಕ ಸಾವನ್ನಪ್ಪಿದರೆ ‘ಪಿಶಾಚಿ’ ಅಲ್ಲದೆ ‘ಬ್ರಹ್ಮ ಪಿಶಾಚಿ’ ಆಗುತ್ತಾರಂತೆ. ಶಾಪಕ್ಕೆ ಗುರಿಯಾದ ದೇವತೆಗಲು ‘ಭೇತಾಳ’ ರೂಪಗಳಾಗಿ ಹುಟ್ಟುತ್ತಾರಂತೆ. ದೆವ್ವಗಳಿಗೆ ಮುನೀಶ್ವರನು ಅಧಿಪತಿಯಾಗಿರುತ್ತಾನೆ.

ರಾತ್ರಿ ಹೊತ್ತಿನಲ್ಲಿ ಕೈಯಲ್ಲಿ ಬೆಂಕಿಯನ್ನು ಹೊತ್ತಿಕೊಂಡು ಹೋಗುವ ದೆವ್ವಗಳನ್ನು ‘ಕೊಳ್ಳಿದೆವ್ವ’ ಎಂದು ಕರೆಯುತ್ತಾರೆ. ದೆವ್ವಗಳಿಗೆ ಶರೀರ ಇರುವುದಿಲ್ಲ. ಆದ್ದರಿಂದ ಇವು ನೆರಳಿನ ರೂಪದಲ್ಲಿ, ಪ್ರಾಣೀಗಳ ರೂಪದಲ್ಲಿ, ಗಾಳಿಯಲ್ಲಿ ಅಲೆದಾಡುತ್ತಾ ಇರುತ್ತವೆ. ದೆವ್ವಗಳು ಸಾಮಾನ್ಯವಾಗಿ ಮೇಕೆ, ನಾಯಿಮರಿ, ಕುರಿಮರಿ ರೂಪದಲ್ಲಿ ಕಾಣಿಸುತ್ತವೆ. ಒಂದು ವೇಳೆ ಮನುಷ್ಯನ ರೂಪದಲ್ಲಿ ಕಾಣಿಸಿದರೂ ಕಾಲುಗಳು ಹಿಂದಕ್ಕೆ ಇರುತ್ತದೆ. ದೆವ್ವಗಳನ್ನು ನೋಡಿದ ತಕ್ಷಣ ನಾಯಿಗಳು ಬೊಗಳುತ್ತವೆ. ನಾಯಿಕಣ್ಣಿಗೆ ದೆವ್ವಗಳು ಚೆನ್ನಾಗಿ ಕಾಣಿಸುತ್ತದೆ ಎಂದು ಹೇಳುತ್ತಾರೆ. ಆದ್ದರಿಂದಲೇ ರಾತ್ರಿಯ ವೇಳೆ ನಾಯಿಗಳು ಬೊಗಿದರೆ ಹಳ್ಳಿಗಳಲ್ಲಿ ಭಯಪಡುತ್ತಾರೆ. ಇವು ಒಲೆಯಲ್ಲಿ ಕಾಲುಗಳನ್ನು ಇಟ್ಟು ಅಡುಗೆ ಮಾಡುತ್ತವೆ. ಅಮಂಗಳವಾದ ಪದಾರ್ಥಗಳನ್ನು ಇವು ಇಷ್ಟಪಡುತ್ತದೆ. ಮಂಗಳಕರಣದ ವಸ್ತುಗಳನ್ನು ನೋಡಿದರೆ ದೆವ್ವಗಳು ಭಯಪಡುತ್ತದೆ. ಬೆಳಕು ದೆವ್ವಗಳಿಗೆ ಸರಿಬರುವುದಿಲ್ಲ. ಆದರೆ ಮಧ್ಯಾಹ್ನದ ವೇಳೆ ದೆವ್ವಗಳಿಗೆ ವಿಶೇಷವಾದ ಶಕ್ತಿ ಬರುತ್ತದೆ. ದೆವ್ವಗಳು ಹಗಲು ಹೊತ್ತಿನಲ್ಲಿ ನಿದ್ರೆ ಮಾಡಿ ರಾತ್ರಿಯ ವೇಳೆ ಕೆಲಸಗಳನ್ನು ಮಾಡುತ್ತವೆ. ಅಮಾವಾಸ್ಯೆಯ ದಿನ ದೆವ್ವಗಳಿಗೆ ವಿಶೇಷವಾದ ಶಕ್ತಿ ಬರುತ್ತದೆ. ಆದರೆ ‘ಮೋಹಿನಿ’ ಎಂಬ ದೆವ್ವಕ್ಕೆ ಹುಣ್ಣಿಮೆ ದಿನ ತುಂಬಾ ಇಷ್ಟ. ದೆವ್ವಗಳು ದೈವದ ಕಣ್ಣು ಇರುವವರಿಗೆ, ರಾಕ್ಷಸರಾದವರಿಗೆ, ನಾಯಿಗಳಿಗೆ ಮಾತ್ರ ಕಾಣಿಸುತ್ತದೆ.

ದೇವ ಗಣದಲ್ಲಿ ಜನನ ಹೊಂದಿದ ಮನುಷ್ಯರಿಗೆ ಇವು ಕಾಣಿಸುವುದಿಲ್ಲ. ದೆವ್ವಗಳಿಗೆ ಮನುಷ್ಯರೆಂದರೆ ಶತ್ರುಗಳೆಂಬ ಅಭಿಪ್ರಾಯ ಇರುತ್ತದೆ. ಸಾಮಾನ್ಯವಾಗಿ ಗಂಡುದೆವ್ವ ಹೆಂಗಸರನ್ನು, ಹೆಣ್ಣು ದೆವ್ವ ಗಂಡಸರನ್ನು ಹಿಡಿಯುತ್ತವೆ. ಅದರಲ್ಲೂ ‘ಮೋಹಿನಿ’ ದೆವ್ವಗಳು ಯುವಕರನ್ನು ಮಾತ್ರ ಹಿಡಿಯುತ್ತವೆ. ಯಾರನ್ನಾದರೂ ಹಿಡಿದು ಬೇಕಾದರೆ ಅವರನ್ನು ಹಿಂಬಾಲಿಸಿ, ಅವರು ಭಯಸ್ಥರೆಂದು ಗೊತ್ತಾದರೆ ಅವರ ಗುದ ಅಲ್ಲದೆ ಮರ್ಮಾವಯವಗಳಿಂದ ಪ್ರವೇಶಿಸುತ್ತವೆ. ಪ್ರಾಣ ಹೋಗುವುದಕ್ಕೆ ಮುನ್ನವೇ ಯಾರನ್ನಾದರೂ ಹೂತರೆ ಅಂತಹವರು ‘ರಕ್ತಪಿಶಾಚಿ’ ಯಾಗುತ್ತಾರೆಂದು ಹೇಳುತ್ತಾರೆ. ರಕ್ತ ಪಿಶಾಚಿ, ದೆವ್ವಗಳಿಗೆ ಸಂಬಂಧಿಸಿದ ಕಥೆಗಳು ಎಲ್ಲ ಆದೇಶಗಳಲ್ಲಿ ಇರುತ್ತವೆ.

ದೆವ್ವ ಹಿಡಿದವರ ವರ್ತನೆ ವಿಭಿನ್ನವಾಗಿರುತ್ತದೆ. ಕೆದರಿದ ಕೂದಲು, ಕೆಂಪಾದ ಕಣ್ಣುಗಳು, ಹೇಗೆ ಹಾಗೆ ತೂಗುವುದು, ಜಾಸ್ತಿ ತಿನ್ನುವುದು, ಅಸಂಬದ್ಧ ಪ್ರಲಾಪ ಇವರಲ್ಲಿ ಕಾಣಿಸುವ ಲಕ್ಷಣಗಳು. ಭೂತ ವೈದ್ಯರು, ಗ್ರಾಮದೇವತೆಗಳ ಪೂಜಾರಿಗಳು ದೆವ್ವ ಹಿಡಿದವರಿಗೆ ವೈದ್ಯ ಮಾಡುತ್ತಾರೆ.

ಟಿ.ಎನ್.

 

ದೇವ್‌ಕೂತ್ತ್ ದೇವಕೂತ್ತನ್ನು ಕೇರಳದ ಮಲಯ ಪಂಗಡದ ಹೆಂಗಸರು ಮಾತ್ರ ರಂಗಪ್ರದರ್ಶನ ಮಾಡುತ್ತಾರೆ. ದೇವಕೂತ್ತ್‌ನ ರಂಗಾವತರಣವು ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.

ಹಿಂದೆ ತೆಕ್ಕಂಬಾಡ್ ಎಂಬ ಜಾಗವು ತುಂಬ ಮನೋಹರವೂ ಅನೇಕ ಹೂಗಳಿಂದ ಸಮೃದ್ಧವೂ ಆಗಿ ಪುಷ್ಪೋದ್ಯಾನವೊಂದರಂತೆ ಶೋಭಿಸುತ್ತಿತ್ತು. ಅಪೂರ್ವ ಸಸ್ಯಗಳು ಬೆಳೆಯುವ ತಾಣವೂ ಆಗಿತ್ತು. ಒಂದು ದಿನ ಅನೇಕ ಅಪ್ಸರ ಕನ್ನಿಕೆಯರು ಅಲ್ಲಿಗೆ ಬಂದರು. ಆ ಸಪ್ತಾ‌ಪ್ತರ ಕನ್ನಿಕಯಿರು ಅಪೂರ್ವವಾದ ಹೂಗಳನ್ನು ಹುಡುಕುತ್ತ ದೇವಲೋಕದಿಂದ ಭೂಮಿಗೆ ಇಳಿದು ಬಂದಿದ್ದರು. ತೆಕ್ಕಂಬಾಡು ದ್ವೀಪದ ಹೂಗಳ ಸೌಂದರ್ಯದಿಂದ ಮತಿಮರೆತು ಲವಲವಿಕೆಯಿಂದ ಓಡಾಡುತ್ತಿದ್ದ ಅವರು ಸಂಜೆಯಾದುದನ್ನೇ ತಿಳಿಯಲಿಲ್ಲ. ಸೂರ್ಯಾಸ್ತಮಾನಕ್ಕಿಂತ ಮುಂಚಿತವಾಗಿ ಅವರು ದೇವಲೋಕಕ್ಕೆ ಹೋದರೂ ಅವರಲ್ಲಿ ಒಬ್ಬಾಕೆ ಗೂಡೆಯೊಂದರಲ್ಲಿ ಉಳಿದುಹೋದಳು. ಹೆದರಿ ಕಂಗಾಲಾದ ಆಕೆ ದೇವದೇವಿಯರನ್ನು ಕರೆದು ಪ್ರಾರ್ಥಿಸಿದಳು. ರಾತ್ರೆ ಹೆಚ್ಚೆತ್ತ ಹೋದಂತೆ ಅವಳ ಭಯ ಹೆಚ್ಚುತ್ತ ಹೋಯಿತು. ಜತೆಗೆ ಒಬ್ಬರು ಇಲ್ಲ, ಬದಲಾಯಿಸಿ ಉಟ್ಟುಕೊಳ್ಳಲು ಒಂದು ಬಟ್ಟೆಯಿಲ್ಲ; ಆಕೆ ನಾರದ ಮಹರ್ಷಿಯನ್ನು ಧ್ಯಾನಿಸಿದಳು. ಮರುದಿನ ಮುಂಜಾನೆ ನಾರದರು ತೆಕ್ಕುಂಬಾಡ್ ತಲುಪಿದರು. ಅಪ್ಸರ ಕನ್ನಿಕೆಗೆ ಬಟ್ಟೆ ಕೊಟ್ಟು ದೇವಲೋಕಕ್ಕೆ ಕರೆದುಕೊಂಡು ಹೋದರು. ಹೋಗುವ ಮುನ್ನ ಆ ದೇವಕನ್ನಿಕೆ ಒಂದು ಇಡೀ ರಾತ್ರಿ ಕಳೆದ ಪುಷ್ಪೋಧ್ಯಾನಕ್ಕೂ ಸಮಸ್ತ ಜನರಿಗೂ ಸಕಲ ಸಂಪದಗಳನ್ನೂ ಅನುಗ್ರಹವನ್ನೂ ನೀಡಿದಳು. ನಾರದರು ಅವಳನ್ನು ಪತಿವ್ರತಾರತ್ನವಾಗಿ ನಿತ್ಯ ಚೈತನ್ಯದಿಂದ ಭೂಮಿಗೆ ಬರುವಂತೆ ಹೇಳಿದರು. ಇದು ದೇವಕೂತ್ತ್‌ನ ಹಿನ್ನೆಲೆಯಾದ ವೃತ್ತಾಂತ/ಐತಿಹ್ಯ.

ದೇವಕ್ಕನಿಕೆಗೆ ಬಟ್ಟೆ ನೀಡಿದ ನಾರನಿಗೂ ದೇವಕೂತ್ತ್‌ನಲ್ಲಿ ರಂಗವೇರುವ ಅವಕಾಶವಿದೆ. ದೇವಕನ್ನಿಕೆ ದೇವಲೋಕದಿಂದ ಬಂದ ಮತ್ತು ದೇವಲೋಕಕ್ಕೆ ಹೋದ ಘಟನಾ ಪ್ರಧಾನವಾದ ಕಥೆಯನ್ನು ಅವಲಂಬಿಸಿ ತೆಕ್ಕಂಬಾಡ್ ದೇವಾಲಯದಲ್ಲಿ ದೇವಕೂತ್ತ್ ಅಥವಾ ವಳ್ಳಿಯ ಮ್ಮಕೂತ್ತ್‌ನ ಪ್ರದರ್ಶನ ನಡೆಯುತ್ತದೆ.

ಎರಡು ವರ್ಷಗಳಿಗೊಮ್ಮೆ ಡಿಸೆಂಬರ್ (ಧನುಮಾಸ) ತಿಂಗಳಲ್ಲಿ ದೇವಕೂತ್ತ್ ರಂಗವೇರುತ್ತದೆ. ಕಣ್ಣೂರು ಜಿಲ್ಲೆಯ ಮಾಟ್ಟೂನ್ ಪಂಚಾಯಿತಿಗೆ ಸೇರಿದ ತೆಕ್ಕಂಬಾಡ್ ದೇವಾಲಯದಲ್ಲಿ ಈ ಜನಪದ ಕಲಾರೂಪವನ್ನು ಪ್ರದರ್ಶಿಸುತ್ತಾರೆ. ಧನುಮಾಸ ಒಂದರಿಂದ ಇಲ್ಲಿ ‘ಕಳಿಯಾಟ’ (ತೆಯ್ಯಂಗಳ್ ಉತ್ಸವ) ಪ್ರಾರಂಭವಾಗುತ್ತದೆ. ದೇವಾಲಯದ ಉಳಿದೆಲ್ಲ ದೈವಗಳ ಉತ್ಸವವು ಮುಗಿದ ಬಳಿಕೆ ಕಸಕಡ್ಡಿಗಳನ್ನೆಲ್ಲ ಬಾಚಿ ತೆಗೆದು ಶುದ್ಧ ಮಾಡಿದ ಬಳಿಕವಷ್ಟೇ ದೇವಕೂತ್ತ್‌ನ ಪ್ರದರ್ಶನ. ಉಳಿದ ದೈವಗಳೊಂದಿಗೆ ಇದಕ್ಕೆ ಯಾವ ಸಂಬಂಧವೂ ಇಲ್ಲ. ದೇವಾಲಯದಲ್ಲಿ ದೈವಕೂತ್ತ್‌ಗಾಗಿ ಪ್ರತ್ಯೇಕ ಪ್ರದರ್ಶನ ಜಾಗ ಇಲ್ಲ.

ವಿಶೇಷತೆಗಳು: ತೆಯ್ಯಂಗಳು ಮಾತನಾಡುವುದಿದೆ. ಇದನ್ನು ‘ಉರಿಯಾಟ್ಟ್‌ಕೇಳ್ಪಿಕ್ಕಲ್’ (ಮಾತನಾಡಿ ಕೇಳಿಸುವುದು) ಎನ್ನುತ್ತಾರೆ. ಆದರೆ ದೇವಕೂತ್ತ್‌ನಲ್ಲಿ ಸುತ್ತಿ ಗೀತೆಗಳನ್ನು ಹೇಳುವುದು ಬಿಟ್ಟರೆ ಬೇರೆ ಏನನ್ನು ಮಾತನಾಡುವುದಿಲ್ಲ. ದೇವಕೂತ್ತ್‌ನ ಸಂದರ್ಭದಲ್ಲಿ ಇತರ ತೆಯ್ಯಂಗಳು ಇಲ್ಲದುದದರಿಂದ ಪರಸ್ಪರ ಭೇಟಿ ಇರುವುದಿಲ್ಲ. ಎಲ್ಲ ತೆಯ್ಯಂ ವೇಷಗಳೂ ತಮ್ಮ ಕೆಲಸವಾದ ಬಳಿಕ ಮುಖಕ್ಕೆ ಬಳಿದಿರುವ ಬಣ್ಣಗಳನ್ನು ಒರಸಿ ತೆಗೆಯುತ್ತವೆ. ಆದರೆ ದೇವಕೂತ್ತ್‌ನ ನಾಮವನ್ನು ಮಾತ್ರ ಅಳಿಸದೆ ಉಳಿದೆಲ್ಲ ಮುಖವರ್ಣಿಕೆಯನ್ನು ಅಳಿಸಲಾಗುತ್ತದೆ.

ವೇಷಭೂಷಣಗಳು: ಉಳಿದ ತೆಯ್ಯಂಗಳ ಹಾಗೆಯೇ ತಲೆಯ ಆಭರಣ, ಕೈಕಡಗಗಳು, ಕಾಲಕಡಗ-ಹೀಗೆ ಅಲಂಕಾರವಸ್ತುಗಳನ್ನು ದೇವಕೂತ್ತ್‌ನಲ್ಲೂ ಬಳಸಿಕೊಳ್ಳುತ್ತಾರೆ. ಶಿರೋಭೂಷಣಕ್ಕಾಗಿ ತಲೆಪ್ಪಾಳಿ, ತೊಪ್ಪಾರಂ ಚಯಿಪ್ಟ್, ತಲತ್ತಂಡ, ಮಾಲ, ಪೌವ್ವಂ (ಎಲ್ಲ ಮಲಯಾಳಿ ಪದಗಳು) ಇರುತ್ತವೆ. ತೊಪ್ಪಾರದ ಮೇಲ್ಭಾಗದಲ್ಲಿ ಬೆಳ್ಳಿ ಹೂಗಳು, ತೋಡವಗಳು, ಚೂಡಕ (ಮ), ಉಂಗುರ, ಬಳೆಗಳು ಎಂಬಿವುಗಳು ಕೈಗಳಿಗೂ ಇರುತ್ತವೆ. ಕಾಲುಗಳಿಗೆ ಗಗ್ಗರದ ಬದಲು ಗೆಜ್ಜೆಗಳಿರುವ ಕಾಲಸರಪಳಿ (ಪಟ್ಟು ಪಾಡಂ), ಮಣಿ ಕಾಯಪ್ಪ್ (ಇದನ್ನು ಹೊಲಿದು ತಯಾರಿಸಲಾಗುತ್ತದೆ) ಇವುಗಳೂ ಇರುತ್ತವೆ. ಉಡುಪುಗಳು ಹೆಚ್ಚೇನೂ ಇಲ್ಲ. ಗಂಜಿ ಮುಳುಗಿಸಿದ ಬಿಳಿ ಬಟ್ಟೆ ಸೊಂಟಕ್ಕೆ ಅದರ ಕೆಂಪು ಬಟ್ಟೆ, ದೇಹವನ್ನಿಡೀ ಆವರಿಸುವಂತೆ ವಸ್ತ್ರಧಾರಣೆ ಇರುತ್ತದೆ. ಮುಖಕ್ಕೆ ಬಣ್ಣಹಾಕಿ ಮಾಂಕಣ್ಣೀಮಿತ್ತ್ (ಜಿಂಕೆಯ ಕಣ್ಣು ಬರೆವಣಿಗೆ), ನಾಮ; ಹಣೆಯಲ್ಲಿ ಚಂದ್ರಕಲೆಯನ್ನು ಇಡುತ್ತಾರೆ. ಚಾಯಿಲ್ಯಂ ಮನಯೋಲ (ಮ), ಕಾಡಿಗೆ, ಅರಸಿನ ಹುಡಿ-ಇತ್ಯಾದಿಗಳನ್ನು ಮುಖವರ್ಣಿಕೆಗೆ ಬಳಸಿಕೊಳ್ಳುತ್ತಾರೆ. ಅಲಂಕಾರವೆಲ್ಲ ಪೂರ್ತಿಯಾದ ಬಳಿಕ ಪೂಚ್ಚಿರಿಲ್ (ದೇವಕೂತ್ತ್‌ನ ನೇಪಥ್ಯ) ನಿಂದ ರಂಗಕ್ಕೆ ಬರುತ್ತಾರೆ. ದೇವಕೂತ್ತ್‌ನ ಸಿದ್ಧತೆಯನ್ನು ಯಾರೂ ನೋಡುವಂತಿಲ್ಲ. ಗಂಡ ಅಥವಾ ಮಗನಿಗೆ ಮಾತ್ರ ಅಲ್ಲಿ ಪ್ರವೇಶ ಪೂಚ್ಚಿರಿನ ದೇವಚೈತನ್ಯವುಳ್ಳ ಕಲ್ಲಿಗೆ ನಮಸ್ಕರಿಸಿದ ಬಳಿಕ ಇಬ್ಬರೂ ಸ್ತ್ರೀಯರು ತೆರೆಹಿಡಿದುಕೊಂಡು ಮುಂದೆ ನಡೆಯುತ್ತಾರೆ. ಅದರ ಬೆನ್ನಿಗೇ ದೇವಕೂತ್ತ್‌ನ ವೇಷವೂ ರಂಗವನ್ನು ಪ್ರವೇಶಿಸುತ್ತದೆ.

ಕೂತ್ತ್‌ ವೇಷಧರಿಸುವ ಸ್ತ್ರೀಗೆ ಇರುವ ಮಹತ್ತ್ವ: ದೇವಕೂತ್ತ್ ವೇಷಧರಿಸುವ ಸ್ತ್ರೀಯನ್ನು ದೇವಾಲಯಕ್ಕೆ ಕರೆದುಕೊಂಡು ಬರುವ ವಿಶೇಷ ಕಾರ್ಯಕ್ರಮಗಳಿರುತ್ತವೆ. ತೆಯ್ಯಂಕಟ್ಟುವುದರ ಮೂರು ದಿನ ಮುಂಚಿತವಾಗಿಯೇ ವ್ರತ ಶುದ್ಧಿಯಿಂದ ಇಲ್ಲಿಗೆ ತಲುಪಬೇಕಾಗುತ್ತದೆ. ಧನುಮಾನಸದ ಮೂರನೇ ದಿದನಂದು ಹೊಳೆಯ ಆಎಯ ಬದಿಯ ಆಯಿರಂ ತೆಂಙ್ ಕಡವ್ (ಸಾವಿರ ತೆಂಗಿನ ಕಡವು) ನಿಂದ ಈಕೆಯನ್ನು ಎರಡು ದೋಣಿಗಳನ್ನು ಸೇರಿಸಿ ಕಟ್ಟಿದ ‘ಚಂಙಾಡೆತ್ತ್‌’ನಲ್ಲಿ ಈಚೆಯ ಬದಿಗೆ ಕರೆತರಲಾಗುವುದು. ಅಂದು ಆಯಿರಂ ತೆಂಙ್ ಕಡವ್‌ನಲ್ಲಿರುವ ಪ್ರತ್ಯೇಕ ಪ್ರಾಧಾನ್ಯಗಳಿಸಿದ ಒಂದು ಆಲದ ಮರದ ಕಟ್ಟೆಗೆ ಪ್ರದಕ್ಷಿಣೆ ಬಂದು ಕೈಯಲ್ಲಿ ಹಿಡಿದುಕೊಂಡಿರುವ ಹರಿವಾಣದಲ್ಲಿನ ಗ್ರಂಥ, ಅಕ್ಕಿ/ಭತ್ತ ತುಂಬಿಸಿದ ಹಾನೆ, ಮಡಚಿಟ್ಟಿರುವ ಪುಡವಬಟ್ಟೆ ಮುಂತಾದುವನ್ನು ಆಲದ ಕಟ್ಟೆಯಲ್ಲಿ ಇಡುತ್ತಾರೆ. ಈಕೆಯನ್ನು ಆಚೆಯ ದಡ ತಲಪಿಸುವ ಹಕ್ಕು ವಳ್ಳುವ ಕುರುಪ್ಪರದು. ಆ ಪ್ರಯಾಣದಲ್ಲಿ ಸ್ತ್ರೀಯರು ಮಾತ್ರ ಹೋಬೇಕೆಂಬುದು ನಿಯಮ. ತೆಕ್ಕುಂಬಾಡಲ್ಲಿ ಇವರನ್ನು ಸ್ವಾಗತಿಸಲು ಅಧಿಕಾರ ಹೊಂದಿದವರೂ ಸಂಘಟಿಕರೂ ಊರ ಮಹನೀಯರೂ ಊರವರೂ ಸಂಗಮಿಸಿ ಕಾಲುದೀಪ, ಕೈದೀಪ, ಮುತ್ತುಕೊಡೆ, ಪಂಜು, ವಾದ್ಯಗಳು ಮುಂತಾದವುಗಳೊಂದಿಗೆ ವಿಜೃಂಭಣೆಯಿಂದ ಸ್ವಾಗತಿಸಿ ದೇವಾಲಯಕ್ಕೆ ಕರೆದೊಯ್ಯುತ್ತಾರೆ. ದೇವಾಲಯಕ್ಕೆ ತಲುಪಿದಾಗ ಅಕ್ಕಿಕಾಳುಗಳನ್ನು ಎರಚಿ ಇವರನ್ನು ಸ್ವಾಗತಿಸುತ್ತಾರೆ. ಸಮಾಪನಗೊಂಡ ಬಳಿಕ ದೇವಕೂತ್ತ್‌ ನಡೆಸಿದ ಸ್ತ್ರೀ ವೇದಿಕೆಯಿಂದ ಕೆಳಗಿಳಿದು ಬಂದು ಪಳ್ಳಿ ಮೇಡ(ಮ)ದಲ್ಲಿ ಬಟ್ಟೆ ಬದಲಾಯಿಸಿಕೊಳ್ಳುತ್ತಾಳೆ. ಅದರ ಬಳಿಕ ಹತ್ತಿರವಿರುವ ಮನೆಗಳಿಗೆ ಹೋಗಿ ಕುಳಿತುಕೊಳ್ಳುತ್ತಾಳೆ.

ಕೆ.ವಿ.ಎಫ್. ಅನುವಾದ ಕೆ.ಕೆ.

 

ದೇವರಾಟಂ ತೆಲುಗು ಭಾಷೆಯನ್ನಾಡುವ ಕಂಬಳದ ನಾಯಕರಿಂದ ಬಹಳ ಹಿಂದಿನ ಕಾಲದಿಂದಲೂ ಆಡುತ್ತಾ ಬರುವ ಜನಾಂಗ ಆಧಾರಿತ ಕಲೆ (Ethnic Dance). ದೇವರಾಟಂ, ದೇವರಾಟಲು, ಉರುಮಿ ಆಟಲು, ಉರುಮಿಕೊಟ್ಟು ಆಟಲು ಎಂದು ತೆಲುಗಿನಲ್ಲಿ ಕರೆಯಲಾಗುವ ಈ ಆಟ ಕಂಬಳ ನಾಯಕರ ಜೀವನ ಮತ್ತು ಪ್ರಾರ್ಥನಾ ವಿಧಿಗಳ ಸಂದರ್ಭದಲ್ಲಿ ತಪ್ಪದೆ ನಡೆಯುತ್ತದೆ.

ಕೈಲಾಸ ಪರ್ವತದಲ್ಲಿ ಶಿವಪಾರ್ವತಿಯ ವಿವಾಹ ಸಂದರ್ಭದಲ್ಲಿ ದೇವತೆಗಳೆಲ್ಲರೂ ಸೇರಿ ಆಡಿದ ನೃತ್ಯ ಎಂದೂ ಶಿವನ ಸಿಟ್ಟನ್ನು ತಣಿಸಲು ದೇವತೆಗಳೆಲ್ಲರೂ ಒಂದುಗೂಡಿ ಆಡಿದ ನೃತ್ಯವೆಂದೂ ಪೌರಾಣಿಕ ಕಥೆಗಳಲ್ಲಿ ಹೇಳಲಾಗುತ್ತದೆ.

ದೇವದುಂದುಭಿ ಎಂಬ ದ್ವಿಮುಖ ವಾದ್ಯದ ಸದ್ದಿಗೆ ಅನುಗುಣವಾಗಿ ದೇವರಾಟವನ್ನು ಆಡಲಾಗುತ್ತದೆ. ಉರುಮಿ, ಉರುಮೈ, ಉರುಮಿಕೊಟ್ಟಲು ಎಂದು ಕರೆಯುವ ಈ ವಾದ್ಯವನ್ನು ‘ಮಾಲಾ’ ಎಂಬ ಜಾತಿ ಜನ ನುಡಿಸುತ್ತಾರೆ. ಒಂದೊಂದು ಆಟಕ್ಕೂ ಒಂದೊಂದು ಬಗೆಯ ಮಾತು. ಈ ಮಾತು ಕಂಬಳದ ನಾಯಕ ಜಾತಿಯ ಜನರಿಗೆ ಮಾತೃಭಾಷೆಯಂತೆ ಅರ್ಥವಾಗುತ್ತದೆ. ದೇವದುಂದುಭಿಯನ್ನು ನುಡಿಸುವ ವಿಧಾನವೇ ದೇವರಾಟದ ದೈಹಿಕ ಚಲನವಲನಗಳನ್ನು ನಿರ್ಧರಿಸುತ್ತದೆ. ಉದ್ದವಾದ ಸಾಲಿನಲ್ಲಿ ಪ್ರಾರಂಭಗೊಂಡು ವೃತ್ತಾಕಾರವಾಗಿ ಬೆಳೆದು ಕೊನೆಗೆ ಉದ್ದನೆಯ ಸಾಲಿನಲ್ಲಿ ಮುಕ್ತಾಯಗೊಳ್ಳುತ್ತದೆ. ದೇವರಾಟದ ನೃತ್ಯ ವಿಧಾನಗಳು ವಿಳಂಬ, ಮಧ್ಯಮ, ತ್ವರಿತ ಗತಿಯಲ್ಲಿ ಸಾಗುತ್ತದೆ. ಇದರಲ್ಲಿ ಸೊಂಟದ ಭಾಗ ಹೆಚ್ಚು ಬಳಕೆಯಾಗುತ್ತವೆ. ಈ ಅಂಗಾಂಗಗಳ ಚಲನೆಯಲ್ಲಿ ಒಂದು ಬಗೆಯ ಶಿಸ್ತು ಇರುವುದನ್ನು ಪ್ರೇಕ್ಷಕರು ಗುರುತಿಸಬಹುದು.

ದೇವರಾಟದ ವಿಧಗಳನ್ನು ‘ಪದ್ದಕಾಲ ಆಟ’ (ಹಳೆಯ ಆಟ), ‘ಪಾದ್ದ ಆಟ’ (ಹೊಸ ಆಟ) ಎಂಬ ಆಧಾರದ ಮೇಲೆ ವಿಂಗಡಿಸಲಾಗಿದೆ. ಹಳೆಯ ಆಟಗಳನ್ನು ವಯಸ್ಕರೂ ಹೊಸ ಆಟಗಳನ್ನು ಯುವಕರೂ ಇಷ್ಟಪಟ್ಟು ಆಡುತ್ತಾರೆ. ದೇವರಾಟದಲ್ಲಿ ಕಂಡುಬರುವ ಸರಳ ಉಡುಪು, ವೇಷಭೂಷಣ (ಪೂಜಾ ಸಂದರ್ಭದಲ್ಲಿ ಮೇಲ್ವಸ್ತ್ರ ಧರಿಸದೆ ರುಮಾಲು ಸುತ್ತಿಕೊಂಡು ಆಡುವುದು ಉಲ್ಲೇಖನೀಯ) ಆಟಗಾರರ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಕಾರ್ಯಕ್ರಮ ನಡೆಯುವ ಸಂದರ್ಭಕ್ಕೆ ಅನುಗುಣವಾಗಿ ಕೈಯಲ್ಲಿ ಕೋಲು, ಕಬ್ಬು, ಬಿಲ್ಲು ಬಾಣ, ಕರವಸ್ತ್ರ ಹಿಡಿದು ಕುಣಿಯುವ ಪದ್ಧತಿ ಇದೆ.

ಜನಾಂಗ ಆಧಾರಿತ ಕಲೆಯಾಗಿರುವ ದೇವರಾಟ ಕಂಬಳದ ನಾಯಕರನ್ನು ಗುರುತಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಅವರನ್ನು ತಲ್ಲೀನಗೊಳಿಸಿ ಮುನ್ನಡೆಸುತ್ತದೆ.

.ಎಂ.ಅನುವಾದ ಐ.ಎಸ್.

 

ದೇವೋಸ್ತು ವಿಳಿ‘ದೇವೋಸ್ತುವಿಳಿ’ ಎಂಬುದು ಎರ್ನಾಕುಳಂ ಕೊಚ್ಚಿ ಪ್ರದೇಶಗಳಲ್ಲಿನ ಲಾಟೀನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಈಸ್ಟರ್ ನೋಂಬು (ಉಪವಾಸ) ಕಾಲದಲ್ಲಿ ನಡೆಸುತ್ತಿದ್ದ ಪ್ರಾರ್ಥನೆ. ಈ ಕಲಾರೂಪವು ಸಮುದ್ರದಲ್ಲಿ ಮೀನುಗಾರಿಕೆ ಮತ್ತು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಲಾಟೀನ್, ಕ್ಯಾಥೋಲಿಕ್ ವಿಭಾಗದವರ ನಂಬಿಕೆಗೆ ಸಂಬಂಧಿಸಿದುದಾಗಿದೆ.

ಈಸ್ಟರ್‌ಗೆ ಮೊದಲು ಇರುವ ನೋಂಬನ್ನು ‘ಅಂಬನೋಂಬು’ ಎಂದು ಕರೆಯುತ್ತಾರೆ. ಈಸ್ಟರ್‌ಗೆ ಐವತ್ತು ದಿವಸ ಮೊದಲು ಬುಧವಾರದಂದು ನೋಂಬು ಆರಂಭಗೊಳ್ಳುತ್ತದೆ. ಈ ದಿನವು ‘ಫಾರಬುಧನ್’ ಎಂಬುದಾಗಿ ತಿಳಿಯಲ್ಪಡುತ್ತದೆ. ಈ ದಿನ ಭಕ್ತರು ತೆಂಗಿನ ಗರಿಯನ್ನು ಉರಿಸಿ, ಅದರ ಭಸ್ಮವನ್ನು ಪವಿತ್ರ ಜಲದಲ್ಲಿ ಕಲಸಿ ತಮ್ಮ ಹಣೆಯಲ್ಲ ಶಿಲುಬೆಯನ್ನು ಬರೆಯುತ್ತಾರೆ. ಅಂದಿನಿಂದ ನೋಂಬು ಪ್ರಾರಂಭವಾಗುತ್ತದೆ. ತೆಂಗಿನ ಗರಿಯನ್ನು ಹೊತ್ತಿಸಿ ಭಸ್ಮ ಉಂಟು ಮಾಡುವುದರದಿಂದ ಆ ದಿನವನ್ನು ‘ಫಾರಬುಧನ್’ ಎಂದು ಕರೆಯಲಾಗುತ್ತದೆ.

‘ಫಾರಬುಧನ್’ನಿಂದ ಈಸ್ಟರ್ ತನಕ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ‘ದೇವೋಸ್ತುವಿಳಿ’ ನಡೆಸುತ್ತಾರೆ. ದುಃಖವೆಳ್ಳಿ (Good Friday)ಯ ದಿನದಂದು ಇದು ಕೊನೆಗೊಳ್ಳುತ್ತದೆ. ಚರ್ಚ್ ಕೇಂದ್ರವಾಗಿ ಸಭಾ ವ್ಯಾಪ್ತಿಯನ್ನು ಏಳು ಪ್ರಾರ್ಥನಾದಾರಿಯಾಗಿ ವಿಭಾಗಿಸಿ ದೇವೋಸ್ತುವಿಳಿ ನಡೆಸಲಾಗುತ್ತದೆ. ಪ್ರಾರ್ಥನೆ ನಡೆಸುವವರು ರಾತ್ರಿ೯ ಗಂಟೆಗೆ ಸರಿಯಾಗಿ ೭ ದಿಶೆಗಳಿಗೆ ತೆರಳುತ್ತಾರೆ. ೯ಗಂಟೆಗೆ ಆರಂಭಗೊಳ್ಳುವ ಪ್ರಾರ್ಥನಾ ಹಾಡು ರಾತ್ರಿ ೧೨.೩೦-೧ಗಂಟೆಯ ತನಕ ಮುಂದುವರಿಯುತ್ತದೆ. ಇಬ್ಬರು ಜೊತೆಯಾಗಿ ಒಂದು ಶಿಲುಬೆಯನ್ನು ತಮ್ಮ ಹೆಗಲಲ್ಲಿ ಹೊತ್ತುಕೊಳ್ಳುತ್ತಾ ‘ವಿಳಿಚು ಚೊಲ್ಲಲ್‌’ ನಡೆಸುತ್ತಾರೆ. ಭಕ್ತರ ಪೈಕಿ ಪ್ರತ್ಯೇಕವಾಗಿ ಹಾಡು ಕಲಿಕ ೧೪ ಜನರು ಶಿಲುಬೆಯನ್ನು ಹೊತ್ತು ಏಳು ದಿಶೆಗಳಿಗೆ ನಡೆಯುತ್ತಾರೆ. ಗಂಟೆ ಬಾರಿಸಲು ಮತ್ತು ಜೊತೆಯಲ್ಲಿ ಹಾಡಲು ಇವರ ಜೊತೆ ಇತರ ಜನರು ಕೂಡ ಇದ್ದಾರೆ.

ಪ್ರತ್ಯೇಕ ರಾಗದಲ್ಲಿರುವ ಈ ಪ್ರಾರ್ಥನಾ ಹಾಡು ಜನರಲ್ಲಿ ಭಯ ಭಕ್ತಿಯನ್ನು ಹುಟ್ಟಿಸುತ್ತದೆ. ಭಯ ಎಂಬುದು ಇಲ್ಲಿ ಕಂಡುಬರುವ ಪ್ರಮುಖ ಅಂಶವಾಗಿದೆ. ಹಾಡು ಕೇಳುವಾಗಲೇ ಕೆಲವರು ಮನೆಯ ಒಳ ಪ್ರವೇಶಿಸಿ ಬಾಗಿಲು ಮುಚ್ಚುವರು. ಭೀತಿಯಿಂದ ಮಲಗುವವರೂ ಕೂಡಾ ಇದ್ದಾರೆ. ಈ ವೇಳೆಯಲ್ಲಿ ಅವರ ಮನಸ್ಸು ಪೂರ್ತಿ ಪ್ರಾರ್ಥನೆಯಿಂದ ಕೂಡಿರುತ್ತದೆ.

ದುಷ್ಟಶಕ್ತಿಗಳು, ಸಿಡುಬು ಮೊದಲಾದ ರೋಗಗಳು ಬಾರದಿರಲು ಈ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಇಲ್ಲಿ ನಿರಂತರವಾದ ಹಾಡುಗಾರಿಕೆ ಇರುವುದಿಲ್ಲ. ಹಾಡುವುದಕ್ಕೆ ನಿರ್ದಿಷ್ಟ ಸಮಯವಿದೆ. ಒಂದು ಮೈಲು ದೂರ ಇದರ ಲೆಕ್ಕವಾಗಿದೆ. ಒಂದು ಕಡೆಯಿಂದ ಹಾಡಿದರೆ ಅದು ಕೇಳುವಷ್ಟು ದೂರದ ತನಕ ಮತ್ತೆ ಹಾಡುವುದಿಲ್ಲ. ಅಲ್ಲಿಯವರೆಗೆ ನಿಶ್ಯಬ್ದ. ಈ ನಿಶಬ್ದಕ್ಕೆ ಬಹಳ ಭೀಕರತೆ ಇದೆ. ಈ ವೇಳೆ ನಿಶ್ಚಿತ ತಾಳದಲ್ಲಿ ಗಂಟೆ ಬಾರಿಸುತ್ತಾ ಇರುವರು. ರೋಗಗಳಿಂದ, ಪೀಡೆಗಳಿಂದ ರಕ್ಷಣೆ ಪಡೆಯಲು ದೇವರಲ್ಲಿ ನಡೆಸುವ ಬೇಡುವಿಕೆಯು ಈ ಹಾಡಿನಲ್ಲಿ ವ್ಯಕ್ತವಾಗುತ್ತದೆ. ತಮ್ಮ ಪಾಪವನ್ನು ದೇವರು ನಿವಾರಿಸಿಯಾನು ಎಂಬುದು ಭಕ್ತರ ನಂಬಿಕೆ. ಇಲ್ಲಿ ಶಿಲುಬೆ ಹೊರುವ ಘಟನೆಯು ಏಸುವನ್ನು ಶಿಲುಬೆಗೇರಿಸುವುದನ್ನು ಸ್ಮರಿಸುತ್ತದೆ. ಸಮುದ್ರಕ್ಕೆ ತೆರಳುವವರಿಗೆ ಮತ್ತು ಊರಿನಲ್ಲಿರುವವರಿಗೆ ಪ್ರತ್ಯೇಕವಾದ ಪ್ರಾರ್ಥನೆಗಳು ಕೂಡಾ ಇವೆ.

ದುಃಖವೆಳ್ಳಿಯ ದಿನದಂದು ಇವೆಲ್ಲವೂ ಮುಕ್ತಾಯಗೊಳ್ಳುತ್ತದೆ. ಅಂದು ಏಳೂದಿಶೆಗಳಿಂದಲೂ ಹಾಡುಗಳೆಲ್ಲವೂ ಮರಳಿ ಚರ್ಚಿಗೆ ಹಿಂತಿರುಗಿ ಬರುತ್ತವೆ. ಈ ದಿವಸ ಮರದ ಗಂಟೆಯನ್ನು ತಾಳವಾಗಿ ಉಪಯೋಗಿಸುತ್ತಾರೆ. ಮರದಿಂದ ತಯಾರಿಸಿದ ಮತ್ತು ಚೌಕಾಕಾರದಲ್ಲಿರುವ ಈ ಮರದ ಗಂಟೆ ಸೃಷ್ಟಿಸಿರುವ ಶಬ್ದವು ಬಹಳ ಭೀತಿ ಸೃಷ್ಟಿಸುತ್ತದೆ. ಚರ್ಚುಗಳಲ್ಲಿ ಅಂದು ಮಧ್ಯರಾತ್ರಿ ಸಮಾಧಿ ಪ್ರಾರ್ಥನೆ ನಡೆಯುತ್ತದೆ.

ಕರಾವಳಿ ಪ್ರದೇಶದ ಕ್ರೈಸ್ತರಲ್ಲಿ ಆಚರಣೆಯಲ್ಲಿರುವ ‘ದೇವೋಸ್ತುವಿಳಿ’ಯ ರೂಪವು ಬದಲಾಗುತ್ತಿದೆ. ಆಧುನಿಕ ಯುಗದ ಅವಸರದ ಬದುಕಿನಲ್ಲಿ ಪಂಪರಾಗತವಾದ ಬದಲಾವಣೆಗಳು ಸಹಜ. ಈ ಆಚರಣೆಗೆ ಬಳಸುವ ತಮಿಳು ಮಿಶ್ರಿತ ಹಾಡು ಇಂದು ಯಾರಿಗೂ ತಿಳಿದಿಲ್ಲ. ಸಾಮಾನ್ಯ ಬದುಕಿನಲ್ಲಿ ದೈವ ಭಕ್ತಿ ಹುಟ್ಟಿಸಲು ಚಾಲ್ತಿಗೆ ಬಂದ ಆಚರಣೆಗಳು ಒಳ್ಳೆಯ ಉದ್ದೇಶಕ್ಕಾಗಿ ರೂಪುಗೊಂಡವು.

.ಕೆ.ಎಸ್.ಅನುವಾದ ಎನ್.ಎಸ್.

 

ದೇಸಿಂಗರಾಜನ್ ಕದೈ ಇಂದಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿರುವ ಚೆಂಜಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ದೇಶಿಂಗರಾಜನ ವೀರ ಇತಿಹಾಸವನ್ನು ಕೇಂದ್ರವಾಗಿಟ್ಟು ಹಾಡುವ ಕಥನಗೀತೆ ಇದಾಗಿದೆ.

ಚೆಂಜಿಯ ಇತಿಹಾಸ ಕ್ರಿ.ಶ. ೧೨ನೆಯ ಶತಮಾನದಲ್ಲಿ ಪ್ರಾರಂಭವಾಗಿತ್ತು. ಕ್ರಿ.ಶ. ೧೮ನೆಯ ಶತಮಾನದವರೆಗೂ ಅನೇಕ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಈ ಅವಧಿಯಲ್ಲಿ ಚೆಂಜಿಕೋಟೆ ಆರ್ಥಿಕವಾಗಿ ಬೆಳವಣಿಗೆಯನ್ನು ಕಂಡಿತು. ಇಂಥ ವೈಭವೋಪೇತ ಇತಿಹಾಸವನ್ನು ಪಡೆದಿರುವ ಚೆಂಜಿಕೋಟೆ ಎಂದಾಕ್ಷಣ ೧೮ನೆಯ ಶತನಮಾನದ ಪ್ರಾರಂಭದಲ್ಲೇ ಅಧಿಕಾರಕ್ಕೆ ಬಂದ ದೇಸಿಂಗರಾಜನ ನೆನಪು ಎಲ್ಲರಿಗೂ ವೀಳ್ಯದೆಲೆ ಹಾಕಿದಂತಾಗಿದೆ. ಈ ಕಥೆ ತಮಿಳುನಾಡಿನಾದ್ಯಂತ ತೊಡರ್ಬಳ್ಳಿ ಪಸರಿಸಿದಂತಿದೆ.

ಕಥನಗೀತೆಯ ಕಥಾವಿವರ: ಚೆಂಜಿಯನ್ನು ಆಳುತ್ತಿದ್ದ ತೇರಣಿ ರಾಜ ದೆಹಲಿಯ ಬಾದಷಹನ ಬಂಧನದಲ್ಲಿದ್ದನು. ಕಾರಣವೇನೆಂದರೆ ದೇವಲೋಕದ ಕುದುರೆ ಹಿಡಿಯುವುದರಲ್ಲಿ ಸೋಲನ್ನು ಅನುಭವಿಸಿದನು. ಚೆಂಜಿಯಲ್ಲೇ ಹುಟ್ಟಿ ಬೆಳೆದ ದೇಸಿಂಗನು ತನ್ನ ಐದನೆಯ ವಯಸ್ಸಿನಲ್ಲಿ ಗೆಳೆಯ ಮೋವುತ್ತಿನೊಡನೆ ದೆಹಲಿಗೆ ಹೋಗಿ ಕುದುರೆಯನ್ನು ಬಂಧಿಸಿ ತಂದೆಯಾದ ತೇರಣಿಸಿಂಗ್‌ನನ್ನು ಬಿಡಿಸಿ ಮುಸ್ಲಿಂ ದೊರೆಯಿಂದ ಕುದುರೆ ಮತ್ತು ಹೊನ್ನು ಇತ್ಯಾದಿಗಳನ್ನು ಬಹುಮಾನವಾಗಿ ಪಡೆದು ಹಿಂದಿರುಗುತ್ತಾರೆ.

ದೇಸಿಂಗನಿಗೆ ಎಂಟು ವರ್ಷ ತುಂಬಿರುವಾಗಲೇ ಅವನ ಪೋಷಕ ಇಹಲೋಕವನ್ನು ತ್ಯಜಿಸಿದರು. ಆಗ ತೇರಣಿಸಿಂಗ್‌ನ ತಮ್ಮನಾದ ಧರಣಿಸಿಂಗ್ ರಾಜ್ಯದ ಸರ್ವ ಜವಾಬ್ದಾರಿಯನ್ನು ವಹಿಸಿಕೊಂಡು ದೇಶಿಂಗನನ್ನು ಬೆಳೆಸುತ್ತಾನೆ. ಹೀಗೆ ಬೆಳೆದ ದೇಸಿಂಗನಿಗೆ ಹದಿನೆಂಟು ವರ್ಷ ತುಂಬಿದಾಕ್ಷಣ ಮೊದಲೇ ಒಪ್ಪಂದವಾದಂತೆ ಧರಣಿಸಿಂಗ್ ದೇಸಿಂಗನಿಗೆ ರಾಜ್ಯಭಾರವನ್ನು ವಹಿಸಿಕೊಡುತ್ತಾನೆ.

ಇದೇ ಸಂದರ್ಭದಲ್ಲಿ ಕೇಂದ್ರದ ಬಾದಷಹನು ಕಂದಾಯ ವಸೂಲಿ ಮಾಡುವಂತೆ ಆರ್ಕಾಟದ ನವಾಬನಿಗೆ ಆಜ್ಞೆ ಹೊರಡಿಸುತ್ತಾನೆ. ಚೆಂಜಿಯನ್ನು ಆಳುತ್ತಿದ್ದ ದೇಸಿಂಗನ ಸಾಮ್ರಾಜ್ಯ ಹಿಂದಿನಿಂದ ಅಂದರೆ ೧೨ ವರ್ಷಗಳ ಕಂದಾಯವನ್ನು ಕಟ್ಟಿರಲಿಲ್ಲ. ಆದ್ದರಿಂದ ಹಿಂದಿನ ಬಾಕಿ ಹಣವನ್ನು ತಕ್ಷಣದಲ್ಲೇ ಕುಟ್ಟುವಂತೆ ತೋನ್ರಮಲ್ಲ ಎಂಬುವನ ಹತ್ತಿರ ಹೇಳಿ ಕಳುಹಿಸುತ್ತಾನೆ. ಈ ವಿಚಾರವನ್ನು ತಿಳಿದ ದೇಸಿಂಗನು ಯದ್ಧ ಭೂಮಿಯಲ್ಲಿ ಸಂಧಿಸುವುದಾಗಿ ಬಂದ ದೂತನ ಕೈಯಲ್ಲಿ ಹೇಳಿ ಕಳುಹಿಸುತ್ತಾನೆ. ಇದನ್ನು ಅರಿತ ನವಾಬನು ತನ್ನ ಆಳ್ವಿಕೆಗೆ ಒಳಪಟ್ಟಿರುವ ಪಾಳೆಗಾರರ ಸೈನ್ಯದೊಡನೆ ತನ್ನ ಸೈನ್ಯವನ್ನು ತಂದು ಚೆಂಜಿಗೆ ತುಸು ದೂರ ದಲ್ಲಿರುವ ದೇವನೂರಿನಲ್ಲಿ ನೆಲೆಗೊಳ್ಳುತ್ತಾನೆ.

ತಿರುವಣ್ಣಾಮಲೈ ಕೋಟೆಯ ನಾಯಕ ಸಬಂಗುದರೈ ನವಾಬನ ಅನುಮತಿಯಿಂದ ಚೆಂಜಿಯನ್ನು ಕೊಳ್ಳೆ ಹೊಡೆಯುತ್ತಾನೆ. ಇದರಿಂದ ಚೆಂಜಿಯ ಜನತೆ ನೊಂದು ಬೆಂದು ದೇಸಿಂಗನ ಹತ್ತಿರ ಬೇಡಿಕೊಳ್ಳುತ್ತಾರೆ.

ದೇಸಿಂಗನಿಗೆ ಕಂದಾಯ ಹಣ ಕಟ್ಟಿ ನವಾಬನೊಡನೆ ಸಂಧಾನ ಮಾಡಿಕೊಳ್ಳಬೇಕೆಂಬ ಸಲಹೆ ನೀಡಿದನು. ತನ್ನ ಚಿಕ್ಕಪ್ಪ ಧರಣಿಸಿಂಗನ ಮಾತನ್ನು ನಿರಾಕರಿಸಿ ಊರಿನಲ್ಲಿರುವ ತನ್ನ ಗೆಳೆಯ ಮೋವುತ್ತುಕ್ಕಾರನಿಗೆ ವಿಷಯ ಮುಟ್ಟಿಸುತ್ತಾನೆ. ತನ್ನ ಮದುವೆಯ ಸಂಭ್ರಮದಲ್ಲಿದ್ದ ಮೋವುತ್ತನು ಆತ್ಮೀಯ ಮಿತ್ರನ ಸಹಾಯಕ್ಕೆ ಹೆಗಲುಕೊಟ್ಟು ನಿಲ್ಲುತ್ತಾನೆ.

ಕೋಟೆಯಲ್ಲಿದ್ದುಕೊಂಡೇ ಯುದ್ಧ ಮಾಡು ಎಂಬ ಸಲಹೆಯನ್ನು ಕೊಟ್ಟ ಹೆಂಡತಿ ಇರಣಿಯ ಮಾತನ್ನು ಕೇಳದೆ ದೇಸಿಂಗನು ಚಿಕ್ಕ ಸೈನ್ಯ ಹಿಂಬಾಲಿಸಿ ಯದ್ಧರಂಗಕ್ಕೆ ಹೋಗುತ್ತಾನೆ. ತನ್ನ ಮನೆದೇವರಾದ ಅರಂಗನಾದರು ತಡೆದರು ಸಹ ಮುಂದಿಟ್ಟ ಕಾಲನ್ನು ಹಿಂದೆ ಇಡುವವನಲ್ಲ.

ದೇಶಿಂಗ ಸೈನ್ಯದೊಡನೆ ಯುದ್ಧ ಭೂಮಿಗೆ ಬರುವ ಸುದ್ಧಿಯನ್ನು ನವಾಬನಿಗೆ ರವಾನಿಸಿದ ಬಂಗಾರು ನಾಯಕನ ಸೈನ್ಯವನ್ನು ತಡೆದು ನಿಲ್ಲಿಸಲು ಒಂದು ಉಪಾಯ ಮಾಡುತ್ತಾನೆ. ತುಂಬಿ ತುಳುಕುವ ಕೊಳಗಳನ್ನೆಲ್ಲ ಒಡೆದು ಬಿಟ್ಟ ಪರಿಣಾಮವಾಗಿ ಶಂಗರಾಬರಣೆ ನದಿಯಲ್ಲಿ ಪ್ರವಾಹ ಉಕ್ಕಿ ಬರುವಂತೆ ಮಾಡುತ್ತಾನೆ. ದೇಸಿಶಿಂಗನು ಪ್ರವಾಹವನ್ನು ಲೆಕ್ಕಿಸದೆ ಮುನ್ನುಗುತ್ತಾನೆ. ಆತನ ಮೂವತ್ತು ಸೈನಿಕರು ಹಿಂಬಾಲಿಸುತ್ತಾರೆ. ಉಳಿದವರೆಲ್ಲರೂ ತಮ್ಮ ತಾಯ್ನಾಡಿಗೆ ಹಿಂದಿರುಗುತ್ತಾರೆ.

ಯುದ್ಧ ಭೂಮಿಯಲ್ಲಿ ಗೆಳೆಯನಾದ ಮೋವುತ್ತಕ್ಕನು ವೀರಮರಣವನ್ನು ಅಪ್ಪುತ್ತಾನೆ. ಆತನಿಗೆ ಶವ ಸಂಸ್ಕಾರ ಮಾಡಿದನು. ಈ ಎಲ್ಲಾ ಸಾವು ನೋವಿನ ಕೋಪದ ಹಿನ್ನೆಲೆಯಲ್ಲಿ ಸಿಂಹ ಗರ್ಜನೆ ಮಾಡಿ ಯುದ್ಧಭೂಮಿಗೆ ನುಗ್ಗಿ ಚೇತುಪ್ಪಟ್ಟು, ದಾವುತ್ತುಕ್ಕಾರನನ್ನು ಕೊಲ್ಲುತ್ತಾನೆ. ವೀರ ಸೇನಾನಿ ಎಂಬ ನಾಮಧೇಯನಾದ ದಾವುತ್ತು ಸತ್ತ ಸುದ್ದಿ ಕೇಲಿ ಭಯಗೊಂಡ ನವಾಬನು ತೊಂಡ್ರಮಲ್ಲನನ್ನು ದೇಸಿಂಗನ ಹತ್ತಿರ ಸಂಧಾನಕ್ಕೆ ಕಳುಹಿಸಿಕೊಡುತ್ತಾಣೆ. ಆದರೂ ಆತನು ಒಪ್ಪಿಕೊಳ್ಳಲಿಲ್ಲ. ಮರೆಯಿಂದ ದೇಸಿಂಗನ ಕುದುರೆಯ ಕಾಲನ್ನು ಕತ್ತರಿಸುತ್ತಾನೆ. ಆದರೂ ಕೂಡ ದೇಸಿಂಗನು ಭಯಪಡದೆ ಹೋರಾಡುತ್ತಾನೆ. ಈ ವೀರನ ಸಾಹಸವನ್ನು ಕಂಡ ನವಾಬನು ತಲೆ ಮರೆಸಿಕೊಂಡು ಓಡಿಹೋಗುತ್ತಾನೆ. ಕೊನೆಯಲ್ಲಿ ದೇಸಿಂಗನು ತನ್ನ ಕತ್ತಿಯಿಂದ ತನ್ನನ್ನು ಇರಿದುಕೊಂಡು ವೀರಮರಣವನ್ನಪ್ಪುತ್ತಾನೆ. ನವಾಬನು ವಿಚಾರ ತಿಳಿದು ಬೇಸರಗೊಂಡು ದೇಸಿಂಗನ ಪಾರ್ಥೀವ ಶರೀರವನ್ನು ಚೆಂಜಿಗೆ ತರುತ್ತಾನೆ. ಇದನ್ನು ದೇಸಿಂಗನ ಪಾರ್ಥೀವ ಶರೀರವನ್ನು ಚೆಂಜಿಗೆ ತರುತ್ತಾನೆ. ಇದನ್ನು ತಿಳಿದ ಆತನ ಹೆಂಡತಿ ಇರಣಿಯಮ್ಮಾಳ್ ಸತಿಸಹಗಮನ ಮಾಡುತ್ತಾಳೆ.

ಎಂ.ಸಿ. ಅನುವಾದ ಆರ್.ಎಸ್.

 

ದೇಸಿಂಗರಾಜು ಕಥ ತೆಲುಗಿನ ಪ್ರಸಿದ್ಧ ಜನಪದ ವೀರಕಾವ್ಯಗಳಲ್ಲಿ ಒಂದು. ಇದು ಕ್ರಿ.ಶ. ೧೭೧೩ ಜನವರಿ ೧೭ನೇ ತಾರೀಖು ದಕ್ಷಿಣ ಆರ್ಕಾಟ್ ಜಿಲ್ಲೆಯ ಚೆಂಜಿಕೋಟೆಯಲ್ಲಿ ನಡೆದ ಐತಿಹಾಸಿಕ ಘಟನೆ. ಚೆಂಜಿ ಕೋಟೆ ಈಗ ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿದೆ. ವೀರಕಾವ್ಯದಲ್ಲಿ ಹೇಸಿಂಗು ಎಂದಿರುವ ಹೆಸರು ಇತಿಹಾಸದಲ್ಲಿ ತೇಜಸಿಂಗ್. ಈಗ ಬುಂದೇಲ್‌ಖಂಡ್ ರಾಜಪುತ್ರ. ಈತನ ತಂದೆ ಸೂರೂಪ್‌ಸಿಂಗ್. ಕ್ರಿ.ಶ. ೧೭೦೦ ಸುಮಾರರಲ್ಲಿ ಔರಂಗಜೇಬ್ ಸುರೂಪ್‌ಸಿಂಗನ ಶೌರ್ಯಕ್ಕೆ ಮೆಚ್ಚಿ ಜಿಂಜಿ (ಅಥವಾ ಚೆಂಜಿ) ಕೋಟೆಯನ್ನು ಬಳುವಳಿಯಾಗಿ ಕೊಟ್ಟ. ಸುರೂಪ್‌ಸಿಂಗ್ ಮತ್ತು ಆಂಗ್ಲೇಯರ ನಡುವೆ ವಿರಸವುಂಟಾಯಿತು. ಆಂಗ್ಲೇಯರ ಸಹಕಾರದಿಂದ ಆರ್ಕಾಟ್ ನವಾಬ್ ಚೆಂಜಿಕೋಟೆಯ ಮೇಲೆ ಧಾಳಿ ನಡೆಸಿದ. ಆ ಯುದ್ಧದ ವಿಷಯವೇ ವೀರಕಾವ್ಯವಾಗಿ ಮೂಡಿಬಂದಿದೆ. ಇದರ ಕಥಾಸ್ಥಳ ತಮಿಳುನಾಡಾದರೂ ಇದು ಆಂಧ್ರಪ್ರದೇಶದಲ್ಲಿ ಜನಪ್ರಿಯವಾಗಿದೆ. ಇದು ಐತಿಹಾಸಿಕ ಕಥೆಯಾದರೂ ಅಲೌಖಿಕವಾದ ಮತ್ತು ಅದ್ಭುತವಾದ ಹಲವು ವಿಷಯಗಳು ಸೇರಿವೆ.

ಗೋಲಕೊಂಡವನ್ನು ದೆಹಲಿಯ ಬಾದುಷ ಆಳುತ್ತಿದ್ದಾಗ ಮೇರುವಿನ ಬಳಿ ಗೋಗುಫಕೀರ್ ಎಂಬವನಿದ್ದ. ತಪಸ್ಸು ಮಾಡಿ ಲೋಕಗಳಲ್ಲೆಲ್ಲ ಸುತ್ತಲು ಬಲ್ಲ ಬಾರಾ ಹಜಾರಿ ಎಂಬ ಕುದುರೆಯನ್ನು ಪಡೆದು ದೆಹಲಿ ಬಾದುಷನಿಗೆ ಕೊಟ್ಟ. ಆ ಕುದುರೆಯ ಮೇಲೆ ಸವಾರಿ ಮಾಡಿದವರಿಗೆ ಬಹುಮಾನ ಕೊಡುವುದಾಗಿ ವಿಫಲರಾದರೆ ಸೆರೆಮನೆಯಲ್ಲಿ ಹಾಕುತ್ತೇನೆಂದು ಬಾದುಷ ಪ್ರಕಟಿಸಿದ. ಚೆಂಜಿ ಕೋಟೆಯನ್ನು ಆಳುತ್ತಿದ್ದ ಶೂರಸಿಂಗ್ ಪ್ರಯತ್ನಿಸಿ ಬಂದಿಯಾದ. ಶೂರಸಿಂಗ್ ಹೆಂಡತಿ ರಾಂಬಾಯಿ. ಆಕೆಗೆ ಹೇಸಿಂಗು ಹುಟ್ಟಿದ. ಆತನಿಗೆ ಮುಸ್ಲಿಂ ಮಿತ್ರ ಮಹತ್‌ಖಾನ್. ಐದು ವರ್ಷದ ವಯಸ್ಸಿಗೇ ದೇಸಿಂಗು ಅತಿಮಾನುಷ ಶಕ್ತಿಗಳನ್ನು ಪ್ರದರ್ಶಿಸಿದ. ತನ್ನ ಇಷ್ಟದೈವವಾದ ರಂಗನಾಥನಿಗೆ ನಮಸ್ಕರಿಸಿ, ಪ್ರತ್ಯಕ್ಷಗೊಳಿಸಿಕೊಂಡು, ದೆಹಲಿಗೆ ಹೋಗಿ ಬಾರಾಹಜಾರಿ ಮೇಲೆ ಸವಾರಿ ಮಾಡಿ ತಂದೆಯನ್ನು ಬಿಡುಗಡೆಗೊಳಿಸಿದ. ತನಗೆ ಬಾರಾಹಜಾರಿಯನ್ನು, ಮಿತ್ರನಿಗೆ ನೀಲವೇಣಿ ಎಂಬ ಕುದುರೆಯನ್ನು ಬಳುವಳಿಯಾಗಿ ಪಡೆದ ಚೆಂಜಿಗೆ ಬಂದ.

ದೆಹಲಿಯ ಬಾದುಷ ತನ್ನ ಮಗಳನ್ನು ಸಾಉಲ್‌ಖಾನ್ ಎಂಬನಿಗೆ ಕೊಟ್ಟು ಮದುವೆ ಮಾಡಿ ಬಳುವಳಿಯಾಗಿ ಆರ್ಕಾಟ್ ಮಂಡಲವನ್ನು ಕೊಟ್ಟ. ಆ ಮಂಡಲದಲ್ಲಿ ಚೇತಿಪಟ್ಟು, ಪಾತಪಾಲೆಂ, ಕಳ್ಳಕುರಂಜಿ, ಕಳ್ಳಿಕೋಟ, ತಿರುವಣ್ಣಾಮಲೈ, ಚೆಂಗಲ್‌ಪಟ್ಟು, ವೆಂಕಟಗಿರಿ, ಕಾಳಹಸ್ತಿ, ತಿಮಿರಿಕೋಟ, ಕಾರ್ವೇಡು, ಚೆಂಜಿ ಮುಂತಾದ ಸಂಸ್ಥಾನಗಳಿದ್ದುವು. ಅಕಸ್ಮಾತ್ತಾಗಿ ಬಾದುಷ ದೇಸಿಂಗ್‌ಗೆ ಕೊಟ್ಟ ಚೆಂಜಿ ‘ಬಳುವಳಿಯನ್ನು ತನ್ನ ಅಳಿಯನಿಗೆ ಕೊಟ್ಟ ಬಳುವಳಿಯಲ್ಲಿ ಸೇರಿಸಿದ. ಆರ್ಕಾಟ್ ನವಾಬ ಎಲ್ಲ ಸಂಸ್ಥಾನಾಧೀಶರಿಂದ ಹಣ ವಸೂಲಿ ಮಾಡಲು ತೋಂಡ್ರಮಲ್ಲು ಎಂಬುವನನ್ನು ಸೈನ್ಯ ಕೊಟ್ಟು ಕಳುಹಿಸಿದ. ದೇಸಿಂಗು ಕೆಂಡ ಮಂಡಲವಾದ. ನವಾಬ ಒಂದು ಲಕ್ಷ ಸೈನ್ಯದೊಂದಿಗೆ ಚೆಂಜಿಗೆ ಮುತ್ತಿಗೆ ಹಾಕಿದ. ಯುದ್ಧಕ್ಕೆ ಹೊರಟ ದೇಸಿಂಗು ಹೆಂಡತಿಯ ಅನುಮತಿಯನ್ನು ಕೇಳಲು ಹೋದ. ಆಗ ಆಕೆ ಹೀಗೆಂದಳು:

ಘನ ವಿಕ್ರಮದಿಂದ ಸೈನ್ಯದಲ್ಲಿ ನುಗ್ಗಿ
ಸಾಯಿಸುವ ಸಮಯದಲ್ಲಿ ನೀನೇ ಅಸುನೀಗಿದರೆ
ಸಂದೇಹವಿಲ್ಲ ನಾನು ಸಹಗಮನ ಮಾಡುವೆ

ದೇಸಿಂಗು ಹೊರಟಾಗ ಎಲ್ಲಾ ಅಪಶಕುನಗಳೇ ಕಂಡುಬಂದವು. ಬಾರಾಹಜಾರಿ ಕಣ್ಣೀರು ಸುರಿಸಿತು. ಮನೆದೇವರು ರಂಗನಾಥನ ಕೊರಳ ಹಾರ ನೆಲದ ಮೇಲೆ ಬಿತ್ತು. ಗೋಪುರ ಶಿಖರಗಳು ನೆಲಕ್ಕೆ ಉರುಳಿದುವು. ರಂಗನಾಥಸ್ವಾಮಿ ತನ್ನ ಮುಖವನ್ನು ಪಡುವಣದ ಕಡೆ ತಿರುಗಿಸಿದ. ದೇಸಿಂಗು ಹೊರಟ ಸುದ್ದಿ ತಿಳಿದ ನವಾಬ ಮತ್ತು ಬಂಗಾರುನಾಯುಡು ಯೋಚನೆ ಮಾಡಿ ದೇಸಿಂಗು ರಾಜನನ್ನು ಅಡ್ಡಿ ಮಾಡುವ ಉದ್ದೇಶದಿಂದ ಮಲಯನೂರು, ತಾಯನೂರು ಕೆರೆಗಳನ್ನು ಒಡೆದು ಎರಡು ಸೈನ್ಯಗಳ ನಡುವೆ ಹರಿಯುತ್ತಿದ್ದ ಶಂಕರಾಭರಣ ನದಿಉಕ್ಕುವಂತೆ ಮಾಡಿದರು. ದೇಸಿಂಗು ಅದನ್ನು ಲೆಕ್ಕಿಸದೆ ತನ್ನ ಸೈನ್ಯದೊಡನೆ ನದಿಯಲ್ಲಿ ಬಿದ್ದು ಕೆಲವು ಜನರೊಂದಿಗೆ ನದಿಯನ್ನು ದಾಟಿದ. ಶತ್ರುಗಳು ಈ ದೃಶ್ಯವನ್ನು ನೋಡಿದ ಅಶ್ಚರ್ಯಪಟ್ಟರು. ದೇಸಿಂಗು ಬೇಡ ಎಂದು ಹೇಳಿದರೂ ಮಹತ್‌ಖಾನ್ ಒಂಟಿ ಹೋರಾಟಕ್ಕೆ ಸಿದ್ದವಾದ. ಆತ ಸುಭಂಗಿ ಸೇನೆಯನ್ನು ಕೊಂದು, ಷೇಕ್ ಮಹಮ್ಮದ್ ಎಂಬ ಸರದಾರನನ್ನು ಕೊಂದು ಮತ್ತೆ ದೇಸಿಂಗು ಬಳಿ ಬರುತ್ತಿರುವಾಗ ಫಿರಂಗಿಯ ಗುಂಡಿಗೆ ಬಲಿಯಾದ. ಶತ್ರುಗಳು ಆತನ ಕುದುರೆ ನೀಲವೇಣಿಯನ್ನು ಹಿಡಿಯಲು ಯತ್ನಿಸಿದರು. ಆದರೆ ಅದು ಅವರಿಗೆ ಸಿಕ್ಕದೆ ತುಂಬ ಚಾಕಚಕ್ಕದಿಂದ ತಪ್ಪಿಸಿಕೊಂಡಿತ್ತು. ನೀಲವೇಣಿಯನ್ನು ನೋಡಿ ದೇಸಿಂಗು ತನ್ನ ಮಿತ್ರ ಸತ್ತುಹೋದನೆಂದು ತಿಳಿದ.

ರಣರಂಗದಲ್ಲಿ ದೇಸಿಂಗನ ವೀರವಿಹಾರವನ್ನು ಜನಪದ ಕವಿ ಅದ್ಭುತವಾಗಿ ವರ್ಣಿಸಿದ್ದಾನೆ. ಆತ ಮೊದಲು ದಾವೂದ್‌ಖಾನನೊಂದಿಗೆ ಹೋರಾಡಿದ. ದಾವೂದ್‌ಖಾನ್‌ದೇಸಿಂಗು ರಾಜನ ಮೇಲೆ ೫೦೦ ಕುದುರೆಗಳನ್ನು ಕಳುಹಿಸಿದ. ದೇಸಿಂಗು ತನ್ನ ಬಾರಾಹಜಾರಿ ಕುದುರೆಯ ಮೇಲೆ ಸವಾರಿ ಮಾಡುತ್ತಾ ಆ ಆಶ್ವಿಕರನ್ನೆಲ್ಲ ಕೊಂದುಬಿಟ್ಟ. ಕುದುರೆಗಳನ್ನು ತುಂಡು ತುಂಡು ಮಾಡಿ, ಬಾಳೆ ಕಂಬಗಳಂತೆ ಸೈನ್ಯವನ್ನೆಲ್ಲ ಕತ್ತರಿಸಿ, ಸೋರೆಕಾಯಿಯಂತೆ ಸೈನ್ಯವನ್ನು ಕತ್ತರಿಸಿದನಂತೆ. ದಾವೂದ್ ಖಾನ್ ಅರವತ್ತು ಸಾವಿರ ಮದದಾನೆಗಳೊಂದಿಗೆ ದೇಸಿಂಗು ರಾಜನನ್ನು ಎದುರಿಸಿದ. ಆಗ ದೇಸಿಂಗು ರಾಜನ ವೀರವಿಹಾರದ ವರ್ಣನೆ ಅದ್ಭುತವಾಗಿದೆ. ಆನೆಗಳ ಸೊಂಡಿಲುಗಳನ್ನು ತುಂಡುತುಂಡು ಮಾಡಿದನಂತೆ. ಕುಂಭ ಸ್ಥಳವನ್ನು ಕತ್ತಿಯಿಂದ ತಿವಿದನಂತೆ. ಆಗ ನೆತ್ತರು ಹೊಳೆಯಾಗಿ ಹರಿಯಿತು. ಕಾಲು, ಕೈ, ಬಾಲ ಮುರಿದ ಆನೆಗಳು ರಾಶಿರಾಶಿಯಾಗಿ ಬಿದ್ದಿದ್ದವು.

ದೇಸಿಂಗು ೫೦ ಸಾವಿರ ಕುದುರೆಗಳನ್ನು ಕೊಂದು ನವಾಬನೆಂದು ಭಾವಿಸಿ ದಾವೂದ್‌ಖಾನನ್ನು ಕೊಂದ. ಆದರೆ ತನ್ನ ತಪ್ಪನ್ನು ಗ್ರಹಿಸಿದ. ಮತ್ತೆ ಯುದ್ಧಕ್ಕೆ ಹೊರಟಾಗ ರಂಗನಾಥ ಬೇಡವೆಂದು ತಡೆದ. ಆದರೆ ದೇಸಿಂಗು ಒಪ್ಪಲಿಲ್ಲ. ಯುದ್ಧಮಾಡಿ ಸರದಾರರೆಲ್ಲವನ್ನು ಕೊಂದು ನವಾಬನನ್ನು ಹಿಡಿದುಕೊಂಡ. ನವಾಬನೊಂದಿಗೆ ದೇಸಿಂಗು ‘ಚೆಂಜಿ ಹಣವನ್ನು ನನ್ನ ಕತ್ತಿಯ ತುದಿಯಲ್ಲಿ ತೆಗೆದುಕೋ’ ಎನ್ನುತ್ತಾನೆ. ಇದರರ್ಥ ‘ನಾನು ಕತ್ತಿಯ ಮೂಲಕವೇ ಮಾತನಾಡುತ್ತೇನೆ’ ಎಂದು ದೇಸಿಂಗು ಆನೆಯ ಮೇಲಿರುವ ನವಾಬನನ್ನು ಸಾಯಿಸಲು ತನ್ನ ಕುದುರೆಯನ್ನು ಮುನ್ನುಗಿಸಲು ಶತ್ರುವಿನ ಕಡೆಯವನು ಬಾರಾಹಜಾರಿ ಕಾಲು ಕತ್ತಿರಿಸದ. ದೇಸಿಂಗು ಪಾದಚಾರಿಯಾಗಿ ಯುದ್ಧಮಾಡಿ ಅನೇಕರನ್ನೂ ಕೊಂದ. ಕೊನೆಗೆ ಸೋಲನ್ನೊಪ್ಪದೆ ಶತ್ರುಗಳಿಗೆ ಸಿಕ್ಕದೆ ಕತ್ತಿಯಿಂದ ಕತ್ತರಿಸಿಕೊಂಡು ಅಸುನೀಗಿದ. ಆತನನ್ನು ನೋಡಿದ ನವಾಬ.

ಇಂಥ ಶೂರನೆಂದು ಗೊತ್ತಿದ್ದರೆ ಆಗ ದೇಸಿಂಗು
ಇಷ್ಟೂ ರಾಜ್ಯ ನಿನಗೇ ಕೊಡುತ್ತಿದ್ದೆ ವೀರದೇಸಿಂಗು

ಎಂದು ಗೌರವಾನ್ವಿತವಾಗಿ ಆ ಹೆಣವನ್ನು ಚೆಂಜಿಗೆ ತೆಗೆದುಕೊಂಡು ಹೋದ. ದೇಸಿಂಗು ಕ್ರಿ.ಶ. ೧೭೧೪ ಅಕ್ಟೋಬರ್ ೩ನೇ ತಾರೀಖು ಸತ್ತು ಹೋದನೆಂದು ಇದನ್ನು ಕುರಿತು ಸಂಶೋಧನೆ ಮಾಡಿದ ಡಾ. ಬಿ. ರಾಮರಾಜು ಅವರು ತಮ್ಮ ಮಹಾಪ್ರಬಂಧದಲ್ಲಿ ದಾಖಲಿಸಿದ್ದಾರೆ. ದೇಸಿಂಗುರಾಜು ಯುದ್ಧ ಮಾಡಿದ ಸ್ಥಳದಲ್ಲಿ ಪತೇಪೇಟ ಎಂಬ ಹಳ್ಳಿ ಇದೆ.

ಟಿ.ವಿ.ಎಸ್.ಅನುವಾದ ಎ.ಎಂ.ಡಿ