ದಫ್‌ಮುಟ್ಟ್ ಕೇರಳದ ಕೋಲಾಟ, ಒಪ್ಪನ ಮೊದಲಾದ ಮುಸ್ಲಿಂ ಕಲೆಗಳಿಂದ ಭಿನ್ನವಾದ, ಸ್ವಲ್ಪ ಧಾರ್ಮಿಕ ಪ್ರಭಾವವಿರುವ ಕಲೆ. ಇದು ತುಂಬ ಪ್ರಾಚೀನ ಕಲೆಯಾಗಿದೆ. ಮಹಮ್ಮದ್ ನಬಿ ಮದೀನಾಕ್ಕೆ ಪಲಾಯನ ಮಾಡಿದಾಗ, ಮದೀನಾದ ಮಹಿಳೆಯರು ದಫ್‌ ಬಡಿದು ಸ್ವಾಗತಿಸಿದರೆಂಬುದು ಐತಿಹ್ಯ. ಕೇರಳದಲ್ಲಿ ಇದು ಗಂಡಸರ ಕಲೆಯಾಗಿದೆ.

09_70A_DBJK-KUH

ದಫ್‌ ಒಂದು ವೃತ್ತಾಕಾರದ ವಾದ್ಯೋಪಕರಣವಾಗಿದೆ. ಸುಮಾರು ೮ ಇಂಚು ಸುತ್ತಳತೆಯ, ನಾಲ್ಕರಿಂದ ಆರು ಇಂಚು ಎತ್ತರದ ಮರದ ಉಪಕರಣಕ್ಕೆ ಆಡಿನ ಚರ್ಮವನ್ನು ಬಿಗಿದು ದಫ್ ತಯಾರಿಸುತ್ತಾರೆ. ಎರಡು ಸಾಲುಗಳಲ್ಲಿ ಮುಖಾಮುಖಿಯಾಗಿ ನಿಂತು ದಫ್ ಪ್ರದರ್ಶಿಸುತ್ತಾರೆ. ಬಾಗಿ ಬಳುಕಿ, ತಾಳಕ್ಕೆ ಅನುಗುಣವಾಗಿ ಹೆಜ್ಜೆ ಹಾಕುತ್ತಾ ದಫ್ ಬಡಿಯುತ್ತಾರೆ. ಸಾಮಾನ್ಯವಾಗಿ ಬೈತುಗಳನ್ನು ಹಾಡುತ್ತಾರೆ.

ದಫ್ ಒಂದು ನೃತ್ಯಕಲೆ ಎನ್ನುವುದಕ್ಕಿಂತ ಆರಚಣಾತ್ಮಕ ವಾದ್ಯಕಲೆ ಎನ್ನಬಹುದು. ಕೂತ್ ರಾತೀಬ್ ಮೊದಲಾದ ಧಾರ್ಮಿಕ ಆಚರಣೆಗಳಲ್ಲಿ ಈ ಕಲೆಗೆ ಸ್ಥಾನವಿದೆ. ಮಹಿಳೆಯರ ದಫ್ ತಂಡಗಳೂ ಇಂದು ಅಸ್ತಿತ್ವದಲ್ಲಿವೆ. ಲಕ್ಷ ದ್ವೀಪದಲ್ಲಿಯೂ ಈ ಕಲೆ ಪ್ರಚಾರದಲ್ಲಿದೆ. ಹಾಡು ಹಾಗೂ ಪ್ರದರ್ಶನ ಶೈಲಿಯಲ್ಲಿ ಅರೇಬಿಯನ್ ಪ್ರಭಾವ ಕಂಡುಬರುತ್ತದೆ. ವರ್ತಮಾನ ಕಾಲದಲ್ಲಿ ದಫ್‌ಮುಟ್ಟ್ ಒಂದು ಧಾರ್ಮಿಕ ಕಲೆ ಮಾತ್ರ ಆಗಿರದೆ, ಕೇರಳದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

.ಕೆ.ಎಸ್.ಅನುವಾದ ಎನ್.ಎಸ್.

 

ದಸರ ದಶಹರ, ದಶರಾತ್ರಿ, ನವರಾತ್ರಿ ಇತ್ಯಾದಿ ಹೆಸರುಗಳಿಂದ ಕರೆಯುವ ಈ ಹಬ್ಬವನ್ನು ಆಶ್ವಯುಜ ಶುದ್ಧಪಾಡ್ಯಮಿಯಿಂದ ದಶಮಿಯವರೆಗೆ ಒಟ್ಟು ೧೦ ದಿನಗಳು ಆಚರಿಸಲಾಗುತ್ತದೆ. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳ ಹಬ್ಬ. ದಸರ ಹಬ್ಬದ ಮೊದಲ ೯ದಿನಗಳನ್ನು ನವರಾತ್ರಿ ಎಂದೂ ೧೦ನೆಯ ದಿನವನ್ನು ವಿಜಯದಶಮಿ ಎಂದೂ ಕರೆಯುವುದುಂಟು. ಬೇಸಿಗೆಯ ಆರಂಬಕ್ಕೆ ‘ರಾಮನವರಾತ್ರಿ’ ಯನ್ನೂ ಚಳಿಗಾಲದ ಆರಂಬಕ್ಕೆ ಶರನ್ನವರಾತ್ರಿಯನ್ನೂ ಆಚರಿಸಲಾಗುತ್ತದೆ. ಶರನ್ನವರಾತ್ರಿಯನ್ನು ದಸರ ಅಥವಾ ದುರ್ಗಾ ನವರಾತ್ರಿ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ೧೦ ದಿನಗಳೂ ಶಕ್ತಿ ಪೂಜೆಗೆ ಸಂಬಂಧಿಸಿದಂತೆ ಉಪಾಸನೆ ಮಾಡಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಸತ್ವ-ರಜ-ತಮೋಗುಣಗಳಿಗೆ ಪ್ರತೀಕರಾದ, ಶಕ್ತಿ ಸ್ವರೂಪಿಣಿಯರಾದ ಸರಸ್ವತಿ-ಲಕ್ಷ್ಮಿ-ಕಾಳಿಯರನ್ನು ಉಪಾಸನೆ ಮಾಡಲಾಗುತ್ತದೆ. ಅಂದರೆ ದೇವಿಯು ಮೊದಲ ಮೂರು ದಿನ ಮಹಾಲಕ್ಷ್ಮಿಯಾಗಿ ಮತ್ತೆ ಮೂರು ದಿನಗಳು ಮಹಾಸರಸ್ವತಿಯಾಗಿ ಕಡೆಯ ಮೂರು ದಿನಗಳು ಮಹಾಕಾಳಿಯಾಗಿ ಆರಾಧಿಸಲ್ಪಡುತ್ತಾಲೆ. ಪುರಾಣದ ಪ್ರಕಾರ ಮಹಾಲಕ್ಷ್ಮಿ, ಸರಸ್ವತಿ, ಮಹಾಕಾಳಿಯರು ಅನುಕ್ರಮವಾಗಿ ಯಜುರ್ವೇದ, ಸಾಮವೇದ, ಋಗ್ವೇದಗಳ ಸ್ವರೂಪಿಗಳೂ ಹೌದು. ಬಹುಮುಖ್ಯವಾಗಿ ಮಹಾಲಕ್ಷ್ಮಿ ಸಂಪತ್ತನ್ನು, ಸರಸ್ವತಿ ಜ್ಞಾನವನ್ನು, ಮಹಾಕಾಳಿ ತೇಜಸ್ಸು ಮತ್ತು ಶಕ್ತಿಯನ್ನೂ ಪ್ರಸಾದಿಸುವ ದೈವಗಳಾಗಿದ್ದಾರೆ.

ಒಂಬತ್ತು ಎಂಬ ಸಂಖ್ಯೆ(೯) ಪರಿಪೂರ್ಣತೆಯ ಸಂಕೇತವಾಗಿದ್ದು ದೇವಿಯು ಎಷ್ಟೇ ಅವತಾರ ತಾಳಿದರೂ ಕೊನೆಗೆ ಆದಿಶಕ್ತಿಯಾಗಿ ಉಳಿಯುವಳು ಎಂಬುದರ ಪ್ರತೀಕವಾಗಿದೆ. ನವ ಎಂಬುದಕ್ಕೆ ಹೊಸತು ಎಂಬ ಅರ್ಥವೂ ಇದೆ ಎಂಬುದನ್ನು ಗಮನಿಸಬೇಕು. ದುಷ್ಟಶಕ್ತಿಯ ಸಂಹಾರ, ವಿದ್ಯೆ, ಐಶ್ವರ್ಯ, ಶ್ರೇಯಸ್ಸುಗಳ ಯಾಚನೆ-ಇವು ದಸರಾ ಹಬ್ಬದ ಪ್ರಮುಖ ಉದ್ದೇಶ.

ಕರ್ನಾಟಕದಲ್ಲಿ ದಸರ ಹಬ್ಬದಾಚರಣೆ ಪುರತಾನವಾಗಿದ್ದು ತನ್ನದೇ ಆದ ಹಲವು ವೈಶಿಷ್ಟ್ಯತೆಗಳನ್ನು ರೂಢಿಸಿಕೊಂಡಿದೆ. ವಿಜಯನಗರದ ಅರಸರ ಕಾಲದಲ್ಲಿ ಅತ್ಯಂತ ಸಂಬ್ರಮ, ವೈಣವಗಳಿಂದ ಆಚರಣೆಗೊಳ್ಳುತ್ತಿದ್ದ ಈ ಹಬ್ಬ ಅಂದು ಭಾರತಕ್ಕೆ ಭೇಟಿ ನೀಡಿದ್ದ ಹಲವಾರು ವಿದೇಶಿ ಯಾತ್ರಿಕರಿಂದಲೂ ಮರೆಯಲಾಗದ ವೈಭವವಾಗಿ ಹಾಡಿಹೊಗಳಿಸಿಕೊಂಡಿದೆ. ಮಳೆಗಾಲದ ಅನಂತರ ಯುದ್ಧಕ್ಕೆ ಹೊರಡಲು ಸಿದ್ಧತೆ ನಡೆಸಲು; ಸೈನ್ಯಗಳನ್ನು ಜಮಾಯಿಸಲು; ಎಲ್ಲ ಸಾಮಂತರು, ಮಂಡಲಾಧಿಕಾರಿಗಳು, ದಂಡನಾಯಕರುಗಳು ರಾಜಧಾನಿಯಲ್ಲಿ ತಮ್ಮ ತಮ್ಮ ಸೈನ್ಯಗಳನ್ನು ಪ್ರದರ್ಶಿಸಲು, ಕಪ್ಪಕಾಣಿಕೆಗಳನ್ನು ನೀಡಲು ಈ ಹಬ್ಬದಸಂದರ್ಭ ಪ್ರಶಸ್ತವಾಗಿತ್ತು. ನವರಾತ್ರಿಯ ಒಂಬತ್ತು ದಿನಗಳು ಚಕ್ರವರ್ತಿಯ ಸಮ್ಮುಖದಲ್ಲಿ ನಡೆಯುತ್ತಿದ್ದ ಸೈನಿಕ ಕವಾಯತುಗಳು, ನೃತ್ಯಗಳೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶೇಷತೆಗಳ ಅವಶೇಷಗಳನ್ನು ಇಂದಿಗೂ ಹಂಪೆಯ ಮಹಾನವಮಿಯ ದಿಬ್ಬ ಪ್ರತಿನಿಧಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಮುಕ್ತಯದೊಂದಿಗೆ ಅವನತಿಗೊಂಡಿದ್ದ ಇಂತಹ ದಸರೆಯ ವೈಭವ ಪುನರುಜ್ಜೀವನಗೊಂಡದ್ದು ಮೈಸೂರರಸರ ಕಾಲದಲ್ಲಿ. ಮೈಸೂರಿನ ಮೊದಲ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಮೊದಲು ದಸರ ಉತ್ಸವ ನಡೆಯುತ್ತಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನಡೆಯುತ್ತಿದ್ದ ಜಂಬೂಸವಾರಿ ಉತ್ಸವದ ವೈಭವ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪರಾಕಾಷ್ಠತೆಯನ್ನು ತಲುಪಿತ್ತು. ಒಂದು ಕಡೆ ಅರಸರ ವೈಭವದ ಪ್ರದರ್ಶನವಾಗಿ ಮತ್ತೊಂದೆಡೆ ಜನತೆಯ ಸಂಭ್ರಮದ ಹಬ್ಬವಾಗಿ ಆಚರಣೆಗೊಳ್ಳುವುದರಿಂದಲೇ ಕರ್ನಾಟಕದಲ್ಲಿ ಈ ಹಬ್ಬ ವೈಶಿಷ್ಟ್ಯ ಗಳಿಸಿದೆ. ಈ ಹಬ್ಬದ ಆಚರಣೆಗೆ ಹಲವು ಪೌರಾಣಿಕ ಹಿನ್ನೆಲೆಗಳಿವೆ. ಪಾರ್ವತಿದೇವಿಯು ತವರನ್ನು ನೋಡುವ ಆಸೆ ವ್ಯಕ್ತಪಡಿಸಿದಾಗ ಶಿವ ಒಂಬತ್ತು ದಿನಗಳು ಮಾತ್ರ ತವರಿಗೆ ಹೋಗಲು ಒಪ್ಪಿಗೆ ನೀಡಿದ. ಆದ್ದರಿಂದ ಪಾರ್ವತಿ ಪಾಡ್ಯದಂದು ತವರಿಗೆ ಬಂದು ದಶಮಿಯಂದು ಹಿಂತಿರುಗಿದಳು ಎಂಬುದು ಒಂದು ಹಿನ್ನಲೆಯಾದರೆ, ೧೦ನೆಯ ದಿನವಾದ ವಿಜಯದಶಮಿ ಶ್ರೀರಾಮ ರಾವಣನನ್ನು ಸಂಹಾರ ಮಾಡಿ ಅಯೋಧ್ಯೆಗೆ ಹಿಂತಿರುಗಿ ಸಿಂಹಾಸನಾರೂಢನಾದ ದಿನವಾಗಿದೆ. ಹಾಗೆಯೇ ಪಾಂಡವರು ತಮ್ಮ ಅಜ್ಞಾತವಾಸವನ್ನು ಮುಗಿಸಿ ಅದುವರೆಗೆ ಶಮೀವೃಕ್ಷದ ಮೇಲೆ ಕಟ್ಟಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ವಿಜಯದಶಮಿಯಂದು ಹೊರತೆಗೆದು ವಿಜಯೋತ್ಸವ ಆಚರಿಸಿದರು ಎಂಬಿತ್ಯಾದಿ ಕಥಾ ಹಿನ್ನೆಲೆಗಳಿವೆ. ಈ ಕಾರಣಗಳಿಂದಾಗಿಯೇ ‘ರಾಮಲೀಲಾ’ ಸಂಪ್ರದಾಯ ಹಾಗೂ ವಿಜಯದ ಸಂಕೇತವಾದ ಶಮೀವೃಕ್ಷ ಪೂಜೆ ಇತ್ಯಾದಿ ಆಚರಣೆಗಳು ಈ ಹಬ್ಬದಲ್ಲಿ ಪ್ರಸಿದ್ಧವಾಗಿವೆ. ವ್ಯಾಪಾರ, ವ್ಯವಹಾರಗಳನ್ನು ಪ್ರಾರಂಭಿಸಲು, ಮನೆ ಕಟ್ಟಲು, ಗೃಹಪ್ರವೇಶ ಮಾಡಲು, ವಿವಹಾ ಮಾಡಲು ಹಾಗೂ ಇನ್ನಿತರ ಯಾವುದೇ ಶುಭಕಾರ್ಯಗಳಿಗೂ ಪ್ರಶಸ್ತವಾಗಿದೆ.

ದಸರ ಹಬ್ಬ ಮಕ್ಕಳಿಗೆ ಹೆಚ್ಚು ಸಂತೋಷ ನೀಡುವ ಹಬ್ಬ. ಈ ಹಬ್ಬದಲ್ಲಿ ಮಕ್ಕಳಿಗೆ ಅತ್ಯಂತ ಪ್ರಿಯವಾದದ್ದು ಗೊಂಬೆ ಜೋಡಣೆ. ದುರ್ಗೆ ಎಂಟು ವರ್ಷದ ಬಾಲಕಿಯಾಗಿ ಅವತರಿಸಿ ಬಂದು ರಾಕ್ಷಸನನ್ನು ಸಂಹರಿಸಿದ್ದಕ್ಕಾಗಿ ೧೦ ದಿನಗಳು ಗೊಂಬೆಗಳನ್ನು ಕಲಾತ್ಮಕವಾಗಿ ಜೋಡಿಸಲಾಗುತ್ತದೆ. ಈ ಹತ್ತು ದಿನಗಳೂ ಮಕ್ಕಳು ಮನೆ-ಮನೆಗಳಿಗೆ ಹೋಗಿ ವೈವಿಧ್ಯಮಯ ಗೊಂಬೆಗಳನ್ನು ನೋಡಿ ಸಂತೋಷಿಸುತ್ತಾರೆ. ಮನೆಮನೆಗಳಲ್ಲಿ ಪ್ರತಿದಿನವೂ ಬಗೆಬಗೆಯ ತಿಂಡಿಗಳನ್ನು ಮಾಡಿ ಬಂದ ಮಕ್ಕಳಿಗೆ ‘ಬೊಂಬೆಬಾಗಿನ’ ನೀಡಲಾಗುತ್ತದೆ. ಕೆಲವರು ಪಾಡ್ಯದಿಂದಲೇ ಬೊಂಬೆ ಇಡುತ್ತಾರೆ. ಮತ್ತೆ ಕೆಲವರು ಸರಸ್ವತಿಯ ಹಬ್ಬದ ದಿನದಿಂದ ಗೊಂಬೆಗಳನ್ನಿಡುತ್ತಾರೆ. ಗೊಂಬೆಗಳನ್ನಿಡುವಾಗ ಪಟ್ಟದ ಗೊಂಬೆಗಳನ್ನು ಕಡ್ಡಾಯವಾಗಿ ಇಡುತ್ತಾರೆ. ವಿಜಯದಶಮಿಯಂದು ರಾತ್ರಿ ಈ ಪಟ್ಟದ ಗೊಂಬೆಗಳನ್ನು ಮಲಗಿಸಿ ಮರುದಿನ ಎಲ್ಲ ಗೊಂಬೆಗಳನ್ನೂ ತೆಗೆದಿರಿಸುತ್ತಾರೆ. ಹೀಗೆ ಈ ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲಿ ಗೊಂಬೆಗಳನ್ನಿಟ್ಟು ಪೂಜಿಸುವ ಸಂಪ್ರದಾಯ ಹೆಚ್ಚಾಗಿ ವೈಶ್ಯರಿಗೆ ಮತ್ತು ಬ್ರಾಹ್ಮಣರಿಗೆ ಕಡ್ಡಾಯವಾಗಿದೆ.

ಗೊಂಬೆಗಳನ್ನಿಡುವ ಈ ಹತ್ತು ದಿನಗಳೂ ಲಲಿತಾ ಸಹಸ್ರನಾಮ, ದೇವೀ ಮಹಾತ್ಮೆ, ದುರ್ಗಾಸಪ್ತಶತೀ ಮತ್ತು ರಾಮಾಯಣಗಳನ್ನು ಪಠಿಸಲಾಗುತ್ತದೆ. ೨ರಿಂದ ೧೦ ವರ್ಷದ ಕನ್ಯೆಯರಿಗೆ ಪೂಜೆ ಮಾಡಿ ಸಿಹಿತಿಂಡಿ ಮತ್ತು ಹೊಸಬಟ್ಟೆಯನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿದೆ. ನವರಾತ್ರಿಯ ೬ ಅಥವಾ ೭ನೇ ದಿನ ಸರಸ್ವತಿಯ ಹಬ್ಬವನ್ನೂ ೮ನೆಯ ದಿನ ದುರ್ಗಾಷ್ಟಮಿಯನ್ನೂ ಆಚರಿಸಲಾಗುತ್ತದೆ. ದುರ್ಗೆಯನ್ನು ಕರ್ನಾಟಕದ ಕಟೀಲ್‌ನಲ್ಲಿ ಜಲದುರ್ಗೆಯಾಗಿ, ವೈಷ್ಣವಿಯಲ್ಲಿ ಗಿರಿದುರ್ಗೆಯಾಗಿ, ಶೃಂಗೇರಿಯಲ್ಲಿ ದುರ್ಗೆಯಾಗಿ ಆರಾಧಿಸುತ್ತಾರೆ. ನವರಾತ್ರಿಯ ೯ನೆಯ ದಿನ ಮಹಾನವಮಿ. ‘ಮಾರ್ನೋಮಿಮಗನಿಗೆ’ ಎಂಬಂತೆ ಈ ದಿನದಲ್ಲಿ ಗಂಡುಮಕ್ಕಳಿಗೆ ಅಭ್ಯಂಜನ ಮಾಡಿಸಿ ಹೊಸ ವಸ್ತ್ರ ನೀಡಿ ಹೋಳಿಗೆ ಊಟ ಹಾಕುವ ಸಂಪ್ರದಾಯವಿದೆ. ವಿಶೇಷವಾಗಿ ಆಯುಧಗಳನ್ನು ಪೂಜಿಸುವ ದಿನ ಇದಾಗಿದೆ. ಹತ್ತನೆಯ ದಿನದಂದು ವಿಜಯದಶಮಿಯ ಆಚರಣೆ. ದೇವಿ ಚಾಮುಂಡಿಯು ದುಷ್ಟಶಕ್ತಿಗಳ ವಿರುದ್ಧ ವಿಜಯ ಸಾಧೀಸಿದ ಪ್ರತೀಕವಾಗಿ ರಾಜಮನೆತನಗಳು ದಸರಾ ಮೆರವಣಿಗೆ ಉತ್ಸವಾದಿಗಳನ್ನು ಆಚರಿಸುವ ಪದ್ಧತಿಯುಂಟು. ಶಮೀಪತ್ರ ವಿಜಯದ ಸಂಕೇತವೆಂದು ಶಮೀವೃಕ್ಷ ಅಥವಾ ಬನ್ನಿಮರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸುವುದಂಟು. ಮೈಸೂರು ದಸರೆಯ ಮೆರವಣಿಗೆ ಉತ್ಸವಾದಿಗಳು ಅರಮನೆಯಿಂದ ಹೊರಟು ಬನ್ನಿಮಂಟಪವನ್ನು ತಲುಪಿ ಅಲ್ಲಿ ಮುಕ್ತಾಯಗೊಳ್ಳುವುದನ್ನು ಇಲ್ಲಿ ನೆನೆಸಿಕೊಳ್ಳಬಹುದು. ಶಮೀಪತ್ರೆಕ್ಕೆ ಕನ್ನಡದಲ್ಲಿ ಬನ್ನಿಪತ್ರೆ ಎಂದೂ ತಮಿಳಿನಲ್ಲಿ ಜಂಬು ಎಂದೂ ತೆಲುಗಿನಲ್ಲಿ ಜೆಂಬಿ ಎಂದೂ ಕರೆಯುವುದುಂಟು.

ನವರಾತ್ರಿಯ ಸಂದರ್ಭದಲ್ಲಿಯೇ ನಾಡು, ನುಡಿ, ಸಂಸ್ಕೃತಿಗಳ ಬಗೆಗೆ ನಾಡಿನ ಜನತೆಗೆ ಅರಿವು ಮೂಡಿಸುವಂತೆ ನಾಡಹಬ್ಬದಾಚರಣೆಯೂ ನಡೆಯುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮೈಸೂರು ದಸರಾ ಮಹೋತ್ಸವ. ಒಟ್ಟಿನಲ್ಲಿ ದಸರ ಹಬ್ಬವು ಕೇವಲ ಅಲಂಕಾರ ಪೂಜೆಯಾಗಿರದೆ ಬ್ರಾಹ್ಮಶಕ್ತಿ ಮತ್ತು ಕ್ಷಾತ್ರಶಕ್ತಿಗಳ ಸಮನ್ವಯದ ಪ್ರತೀಕವಾಗಿರುವುದು ಹೆಚ್ಚು ವೈಶಿಷ್ಟ್ಯ ಪೂರ್ಣವಾಗಿದೆ.

ಎನ್.ಕೆ.

 

ದಸರಾ ತೆಲುಗರ ಮುಖ್ಯವಾದ ಹಬ್ಬಗಳಲ್ಲಿ ಒಂದು ‘ದಶಹರಾ’ ಎಂಬ ಪದದಿಂದ ದಸರಾ ಎಂಬ ಪದ ಬಂದಿದೆ. ಹತ್ತು ರಾತ್ರಿಗಳೆಂದು ಇದರ ಅರ್ಘ. ವಿಜಯದಶಮಿಯನ್ನು ಸೇರಿಸಿಕೊಂಡು ಹತ್ತು ದಿನಗಳ ಹಬ್ಬ. ಪ್ರತಿವರ್ಷ ಆಶ್ವಯುಜ ಶುದ್ಧಪೌರ್ಣಮಿಯಂದು ಪ್ರಾರಂಭವಾಗಿ ಶುದ್ಧದಶಮಿಗೆ ಇದು ಮುಗಿಯುತ್ತದೆ. ಈ ದಿನಗಳನ್ನು ‘ನವರಾತ್ರಿಗಳು’ ‘ದೇವೀ ನವರಾತ್ರಿಗಳು’ ‘ಶರನ್ನವರಾತ್ರಿಗಳು’ ‘ಮಹಾರಾತ್ರಿಗಳು’ ಎಂಬ ಹೆಸರುಗಳಿಂದಲೂ ಗುರುತಿಸುತ್ತಾರೆ. ಈ ಒಂಬತ್ತು ದಿನ, ಒಂಬತ್ತು ರೀತಿಯಲ್ಲಿ ದೇವತೆಯನ್ನು ಅಲಂಕರಿಸುತ್ತಾರೆ.

ಒಂಬತ್ತು ಪ್ರತ್ಯೇಕ ಕಥೆಗಳನ್ನು ಹೇಳುತ್ತಾರೆ.

ಒಂಬತ್ತು ದಿನಗಳು ದುರ್ಗೆಯನ್ನು ಒಂಬತ್ತು ರೀತಿಯ ಅವತಾರಗಳೆಂದು ಭಾವಿಸಿ ಪೂಜಿಸುತ್ತಾರೆ.

ಮೊದಲನೆಯ ದಿನ – ಶೈಲಪುತ್ರ
ಎರಡನೆಯ ದಿನ – ಬ್ರಹ್ಮಚಾರಿಣಿ
ಮೂರನೆಯ ದಿನ – ಚಂದ್ರಘಂಟ
ನಾಲ್ಕನೆಯ ದಿನ – ಕೂಷ್ಮಾಂಡ
ಐದನೆಯ ದಿನ – ಸ್ಕಂದ ಮಾತೆ
ಆರನೆಯ ದಿನ – ಕಾತ್ಯಾಯಿನಿ
ಏಳನೆಯ ದಿನ -ಕಾಳರಾತ್ರಿ
ಎಂಟನೆಯ ದಿನ – ಮಹಾಗೌರಿ
ಒಂಬತ್ತನೆಯ ದಿನ – ಸಿದ್ಧಿ ರಾತ್ರಿ

ಹೀಗೆ ‘ನವದುರ್ಗ’ಳಾಗಿ ದುರ್ಗೆ ಪೂಜಿಸಲ್ಪಡುತ್ತಾಳೆ. ಈ ಒಂಬತ್ತು ಅವತಾರಗಳೇ ಅಲ್ಲದೇ ಬೇರೆ ಹೆಸರುಗಳೂ ಪ್ರಚಾರದಲ್ಲಿವೆ. ಮಾಯಾದೇವಿ, ಮಹಿಷಾಸುರ ಮರ್ದಿನಿ, ಶ್ರೀ ಚಾಮುಂಡೇಶ್ವರಿ, ಮಹಾಮಾಯೆ, ರಕ್ತದಂತಿ, ಶಾಖಾಂಬರಿ, ದುರ್ಗ, ಮಾತಂಗಿ, ಭ್ರಮರಾಂಬಿಕ ಮೊದಲಾದ ಹೆಸರುಗಳಿಂದ ಗುರ್ತಿಸುತ್ತಾರೆ. ಹಬ್ಬದ ಮೊದಲ ಮೂರು ದಿನಗಳು ಈ ದೇವತೆಯನ್ನು ಪಾರ್ವತಿಯ ರೂಪದಲ್ಲಿ, ಮತ್ತೆ ಮೂರು ದಿನಗಳು ಲಕ್ಷ್ಮಿದೇವಿ ರೂಪದಲ್ಲಿ, ಕೊನೆಯ ಮೂರು ದಿನ ಸರಸ್ವತಿಯ ರೂಪದಲ್ಲಿ ಪೂಜಿಸುತ್ತಾರೆ. ಲಕ್ಷ್ಮಿ, ಪಾರ್ವತಿ, ಸರಸ್ವತಿ ಈ ಮುವರನ್ನು ಶಕ್ತಿ ರೂಪವೆಂದು ಭಾವಿಸುತ್ತಾರೆ. ಆಯುಧ ಪೂಜೆ, ಸರಸ್ವತಿ ಪೂಜೆ, ದುರ್ಗಾಷ್ಟಮಿ, ಮಹಾರ‍್ನವಮಿ, ವಿಜಯದಶಮಿ ಎಂದು ವಿಶೇಷವಾಗಿ ಪೂಜಿಸುವುದು ಈ ದಿನಗಳಲ್ಲಿ ಒಂದು ಆಚಾರವಾಗಿದೆ.

ರಾಷ್ಟ್ರವ್ಯಾಪಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಎಲ್ಲ ಪ್ರಾಂತ್ಯಗಳಲ್ಲೂ ಗೊಂಬೆಗಳನ್ನು ಮನೆಗಳಲ್ಲಿ ಜೋಡಿಸಿ ಪೂಜಿಸುತ್ತಾರೆ. ತಮ್ಮ ಮನೆಗಳಲ್ಲೇ ಇರುವ ಗೊಂಬೆಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಜೋಡಿಸಿ ಪ್ರದರ್ಶಿಸುತ್ತಾರೆ. ಕೆಲವರು ಹಬ್ಬಕ್ಕೆಂದೇ ಗೊಂಬೆಗಳನ್ನು ಮೊದಲೆ ಕೊಂಡುಕೊಡು ಬಂದಿರುತ್ತಾರೆ. ಪ್ರತಿ ಮನೆಯ ಮುತ್ತೈದೆಯರನ್ನು ಆರತಕ್ಷತೆಗೆ ಕರೆಯುತ್ತಾರೆ. ಆರತಕ್ಷತೆಗೆ ಬಂದವರು ಗೊಂಬೆ ಪ್ರದರ್ಶನ ನೋಡಿ, ಹಾಡುಗಳನ್ನು ಹಾಡಿ ಕೈಮುಗಿಯುತ್ತಾರೆ. ಅರಿಸಿನ-ಕುಂಕುಮ ಪಡೆದು ತಮ್ಮ ಮನೆಗಳಿಗೆ ಹಿಂತಿರುಗುತ್ತಾರೆ.

ಹಿಂದೆ ಈ ಹಬ್ಬದ ದಿನ ‘ದಸರಾ ಪದ’ಗಳನ್ನು ಹಾಡುತ್ತಾ ವಿದ್ಯಾರ್ಥಿಗಳು ತಮ್ಮ ಉಪಾಧ್ಯಾಯರೊಂದಿಗೆ ಮೆರವಣಿಗೆಯಲ್ಲಿ ಬರುತ್ತಿದ್ದರು. ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದ ವಿದ್ಯಾರ್ಥಿಗಳು ಸೈನ್ಯವಾದರೆ ಜೊತೆಗಿರುವ ಉಪಾಧ್ಯಾಯ ಸೇನಾನಿ.

ಅಯ್ಯವಾರಿಕೆ ಚಾಲು ಅಯಿದುವರಹಾಲು
(ಅಯ್ಯನವರಿಗೆ ಸಾಕು ಐದು ವರಹಗಳು)
ಪಿಲ್ಲ ವಾಂಡ್ರಕು ಚಾಲು ಪಪ್ಪು ಬೆಲ್ಲಾಲು
(ಮಕ್ಕಳಿಗೆ ಸಾಕು ಪಪ್ಪು ಬೆಲ್ಲ)

ಎಂದು ಹಾಡುಗಳನ್ನು ಹಾಡುತ್ತಾ ಮನೆ ಮನೆ ಸುತ್ತುತ್ತಿದ್ದರು. ‘ದಸರಾ ಪದ್ಯಗಳು’ ಎಂಬ ಕರೆಯುವ ಪ್ರತ್ಯೇಕ ಪದಗಳನ್ನು ಹಾಡುತ್ತಿದ್ದರು. ಎಂದರೆ ಕಾವ್ಯಗಳಲ್ಲಿ ದೊರೆಯುವ ಕೆಲವು ಆಯ್ದ ಪದ್ಯಗಳನ್ನು ಇವರು ಸಂದರ್ಭಕ್ಕೆ ತಕ್ಕಂತೆ ಹಾಡುತ್ತಿದ್ದರು. ಈ ಹಬ್ಬದ ಸಂರ್ಭಕ್ಕೆ ಅನುಗುಣವಾಗಿ ಸ್ವಲ್ಪಮಟ್ಟಿಗೆ ಕಾವ್ಯ ಸೃಷ್ಟಿ ಪ್ರತ್ಯೇಕವಾಗಿ ಸಿದ್ಧಗೊಳ್ಳುತ್ತಿತ್ತು.

10_70A_DBJK-KUH

ಜಯ ವಿಜಯೀ ಭವ! ದಿಗ್ವಿಜಯೀಭವ! ಎಂದು ಮಕ್ಕಳು ಹೇಳುತ್ತಿದ್ದರು. ಇದು ಒಂದು ಕಾಲದಲ್ಲಿ ಇದ್ದ ವಿಶೇಷ ಸಂಪ್ರದಾಯವಾಗಿತ್ತು. ಈ ಹಬ್ಬದ ಶರತ್ಕಾಲದಲ್ಲಿ ಬರುತ್ತದೆ. ಮಳೆಯ ರಭಸ ಕಡಿಮೆಯಾಗಿ ಬಿಸಿಲ ಧಗೆ ಹಿತವಾಗಿ, ಚಳಿ ಇನ್ನೂ ಆರಂಭವಾಗದೆ ಎಲ್ಲ ವಾತಾವರಣ ಸಮಸ್ಥಿತಿಯಲ್ಲಿರುವ ಕಾಲವದು. ಪಾದಯಾತ್ರಿ ಮಾಡಲು ಎಲ್ಲಿಯೂ ಪ್ರವಾಹಗಳು ಉಕ್ಕದ ಕಾಲವದು. ಬದಿ ಇಲ್ಲದ ನೆಲ, ಅಶುದ್ಧಗೊಳ್ಳದ ನೀರು, ತಣ್ಣನೆಯ ಬೆಳದಿಂಗಳ ರಾತ್ರಿಗಳು ಇವೆಲ್ಲದರಿಂದ ಕೂಡಿ ರಾಜರು ದಂಡಯಾತ್ರೆ ಮಾಡಲು ಅನುಕೂಲವಾದ ಕಾಲದ ಇದು. ಆದ್ದರಿಂದಲೇ ಈ ದಿನಗಳಲ್ಲಿ ಆಯುಧಗಳನ್ನು ಸಿದ್ಧಗೊಳಿಸಿಕೊಳ್ಳುವರು. ಇದರ ಅಂಗವಾಗಿ ತಮ್ಮ ಆಯುಧಗಳನ್ನು, ವಾಹನಗಳನ್ನು, ದುರಸ್ತಿ ಮಾಡಿಸಿ ಪುನಃ ನವೀಕರಿಸಿಕೊಳ್ಳುತ್ತಾರೆ. ಕಾಲಕ್ರಮೇಣ ಇದು ಆಯುಧ ಪೂಜೆ, ವಾಹನಪೂಜೆಯಾಗಿ ರೂಪುಗೊಂಡಿತು. ಇಂದು ದಂಡಯಾತ್ರೆಗಳು ಇಲ್ಲದಿದ್ದರೂ ತಮ್ಮ ತಮ್ಮ ಮನೆಗಳಲ್ಲಿರುವ ಎಲ್ಲಾ ಆಯುಧಗಳನ್ನು ವಾಹನಗಳನ್ನು ಕತ್ತಿ ಕಠಾರಿಗಳನ್ನು ತೊಳೆದು ಮನೆಯ ಒಂದು ಭಾಗದಲ್ಲಿಟ್ಟು ಪೂಜೆ ಮಾಡುತ್ತಾರೆ. ಹೀಗೆ ಪೂಜಿಸಿದ ಆಯುಧಗಳನ್ನು ಆ ದಿನ ಯಾವುದೇ ಕಾರಣಕ್ಕೂ ಉಪಯೋಗಿಸುವುದಿಲ್ಲ.

ಸರಸ್ವತಿ ಪೂಜಾ ದಿನದಂದು ತಮ್ಮ ಮನೆಯಲ್ಲಿರುವ ಪುಸ್ತಕಗಳನ್ನು ಒಂದು ಕಡೆ ಕ್ರಮವಾಗಿ ಜೋಡಿಸಿ ಪೂಜಿಸುತ್ತಾರೆ. ಕಲೆಯನ್ನು ಪ್ರಧಾನವಾಗಿ ಕಲಿಸುವ ಶಾಲೆಗಳಲ್ಲಿ ಈ ಹಬ್ಬವನ್ನು ಒಂದು ಪರ್ವದಿನದಂತೆ ಆಚರಿಸಿಕೊಳ್ಳುತ್ತಾರೆ. ವಿಜಯದಶಮಿಯ ದಿನ (ಶಮೀವೃಕ್ಷ) ಬನ್ನಿಮರವನ್ನು ಪೂಜಿಸುತ್ತಾರೆ. ಬನ್ನೀಮರ ಮಹಾಭಾರತದಲ್ಲಿ ಪಾಂಡವರ ಆಯುಧಗಳನ್ನು ರಕ್ಷಿಸಿದ ಮರ. ಅಜ್ಞಾತ ವಾಸವನ್ನು ಕಳೆಯಬೇಕಾದ ಪಾಂಡವರು ತಮ್ಮ ಆಯುಧಗಳನ್ನು ಎಲ್ಲಿ ಬಚ್ಚಿಡಬೇಕೆಂದು ಯೋಚಿಸಿದಾಗ ಅವರಿಗೆ ಹತ್ತಿರದಲ್ಲಿ ಕಂಡುಬಂದ ಬನ್ನಿಮರ ಆಶ್ರಯ ನೀಡಿತು. ವಿಶಾಲವಾಗಿ ದಟ್ಟವಾಗಿ ಹರಡಿಕೊಂಡ ಮರದ ಕೊಂಬೆಗಳಲ್ಲಿ ತಮ್ಮ ಆಯುಧಗಳನ್ನು ಮುಚ್ಚಿಬಚ್ಚಿಟ್ಟರೂ, ಈ ದಶಮಿಯ ದಿನಕ್ಕೆ ಅವರ ಅಜ್ಞಾತವಾಸದ ಅವಧಿ ಮುಗಿಯಿತು. ಆ ದಿನ ಬಿಲ್ಲುಧರಿಸಿ ಅರ್ಜುನನು ಗೋಗ್ರಹಣ ಯುದ್ಧದಲ್ಲಿ ವಿಜಯವನ್ನು ಸಾಧಿಸಿದನು. ಬೃಹನ್ನಳೆಯ ರೂಪದಲ್ಲಿದ್ದ ಅರ್ಜುನನು ವಿಜಯಿಯಾಗಿ ವೀರನೆನಿಸಿದನು. ಆದಕಾರಣ ಇದು ವಿಜಯದಶಮಿ ಆಗಿದೆ ಎಂದು ಒಂದು ಐತಿಹ್ಯ. ವಿಜಯವನ್ನು ತಂದುಕೊಡುವ ದಶಮಿಯಾದ್ದರಿಂದ ವಿಜಯದಶಮಿ ಎನ್ನುವರು. ಬನ್ನಿಮರವನ್ನು ದರ್ಶನ ಮಾಡುವುದು ಆ ಮರದ ಎಲೆಗಳನ್ನು ಪವಿತ್ರವೆಂದು ಧರಿಸುವುದು ಇಂದಿಗೂ ಒಂದು ಆಚಾರವಾಗಿ ಉಳಿದಿದೆ. ಮಕ್ಕಳು ಹಿರಿಯರಿಗೆ ಬನ್ನಿಪತ್ರೆಯನ್ನು ನೀಡಿ ಕಾಲುಗಳಿಗೆ ನಮಸ್ಕರಿಸುವ ಪದ್ಧತಿ ಸಹ ಇಲ್ಲಿ ಕಂಡುಬರುತ್ತದೆ.

ಶಮೀ ಶಮಯತೇ ಪಾಪಂ
ಶಮೀ ಶತ್ರು ವಿನಾಶನಂ
ಅರ್ಜುನ್ಯ ಧನುರ‍್ಧಾರೇ
ರಾಮಾಸ್ಯ ಪ್ರಿಯದರ್ಶನ್

ಎಂಬ ಶ್ಲೋಕವನ್ನು ಹೇಳಿ ನಮಸ್ಕರಿಸುತ್ತಾನೆ. ಆಗ ಹಿರಿಯರಾದವರು ಆಶೀರ್ವದಿಸಿ ಸ್ವಲ್ಪ ಹಣವನ್ನು ನೀಡುತ್ತಾರೆ. ದಸರಾದಲ್ಲಿ ಹೊಸ ಉಡುಪುಗಳನ್ನು ಕೊಂಡು, ಅಂದವಾಗಿ ಅಲಂಕಾರ ಮಾಡಿಕೊಳ್ಳುವುದು ಹಾಗೂ ವಿಶೇಷವಾಗಿರುವುದರಿಂದಲೇ ‘ದಸರಾ ಬುಲ್ಲೋಡು’ ಎಂಬ ಮಾತುಗಳು ಹುಟ್ಟಲು ಕಾರಣವಾಗಿವೆ.

ದಸರಾ ಹಬ್ಬಕ್ಕೆ ಮೈಸೂರು ಹೆಸರುವಾಸಿಯಾಗಿದೆ. ಈ ಹಬ್ಬವನ್ನು ವಿಜಯನಗರದ ಅರಸರು ತಮ್ಮ ಆಳ್ವಿಕೆಯ ಕಾಲದಲ್ಲಿ ವಿಶೇಷವಾಗಿ ಆಚರಿಸುತ್ತಿದ್ದರು. ರಾಜರು ಮತ್ತು ಮಾಂಡಲಿಕರು ಪರಸ್ಪರ ಉಂಬಳಿಗಳು, ಮಾನ, ಸನ್ಮಾನಗಳನ್ನು ಮಾಡಿಕೊಳ್ಳಲು ಈ ಹಬ್ಬವನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತಿದ್ದರು. ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ವೈಭವೋಪೇತವಾಗಿ ಆಚರಿಸಿದ ಅನಂತರ ಹಿಂದೂ ಸಾಮ್ರಾಜ್ಯದ ಅವನತಿಯೊಂದಿಗೆ ಈ ಹಬ್ಬ ಕಣ್ಮರೆಯಾಗುವುದರಲ್ಲಿತ್ತು. ಆ ಸಂದರ್ಭದಲ್ಲಿ ತಲೆ ಎತ್ತಿದ ಮೈಸೂರು ಒಡೆಯರು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು. ಅಂದಿನಿಂದ ಇಂದಿನವರೆಗೂ ಯಾವುದೇ ವಿಘ್ನಗಳಿಲ್ಲದೆ ಸಾಂಗೋಪಾಂಗವಾಗಿ ದಸರಾ ಹಬ್ಬ ನಡೆದುಕೊಂಡು ಬರುತ್ತಿದೆ. ಪ್ರಪಂದ ಎಲ್ಲ ಕಲೆಗಳನ್ನು ಈ ಹಬ್ಬದಲ್ಲಿ ಮೆರೆವಣಿಗೆ ಸಂದರ್ಭದಲ್ಲಿ ತೋರಿಸುತ್ತಾರೆ. ಆರಂಭದಲ್ಲಿ ನಂದಿಧ್ವಜ ಅನಂತರ ಆನೆ, ಕುದುರೆಗಳು, ಸ್ತಬ್ಧ ಚಿತ್ರಗಳು, ಅಪರೂಪದ ಕಲೆಗಳು, ಕಡೆಗೆ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ಚಿನ್ನದ ಅಂಬಾರಿಯಲ್ಲಿ ಕುಳಿತು ಬರುತ್ತಾರೆ. ಈ ಮನಮೋಹಕ ದೃಶ್ಯವನ್ನು ನೋಡಲು ಪ್ರಪಂಚದ ನಾಲ್ಕು ಮೂಲೆಗಳಂದ ಈ ಉತ್ಸವಕ್ಕೆ ಮೈಸೂರಿನಲ್ಲಿ ಜನಸಾಗರವೇ ಸೇರುತ್ತದೆ. ಭಾರತದಾದ್ಯಂತ ದಸರಾ ವೀಶೇಷಗಳು ಕಂಡುಬರುತ್ತವೆ. ಬಂಗಾಳದಲ್ಲಿ ದುರ್ಗಾದೇವಿಯನ್ನು ಪೂಜಿಸುತ್ತಾರೆ. ಕೊಡಗು, ಪಶ್ಚಿಮಬಂಗಾಳ ಮುಂತಾದ ಕಡೆಗಳಲ್ಲೆಲ್ಲಾ ತಮ್ಮ ತಮ್ಮ ನಾಡದೇವಿಯನ್ನು ಪೂಜಿಸುವುದರ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.

ಪಿ.ಆರ್.ಎಚ್. ಅನುವಾದ ವಿ.ಆರ್.

 

ದೀಪಾವಳಿ ಗೌರಿ ಗಣೇಶ ಮತ್ತು ಸಂಕ್ರಾಂತಿಯ ಹಬ್ಬಗಳಂತೆ ದೀಪಾವಳಿಯೂ ಜನಪದರ ನಡುವೆ ಬರುವ ಪ್ರಾಕೃತಿ ಹಬ್ಬ. ಗೌರಿಗಣೇಶ ಎನ್ನುವ ಅರ್ಥದ ಮಳೆ ಮತ್ತು ಮಣ್ಣಿನ ಹಬ್ಬ ವ್ಯವಸಾಯದ ಆರಂಭದಲ್ಲಿ ಬಂದರೆ, ದೀಪಾವಳಿ ಹಬ್ಬ ಬೆಳೆಯ ಸಮೃದ್ಧಿಯ ಕಾಲದಲ್ಲಿ ಬರುತ್ತದೆ. ಬೆಳೆಯ ಕೊಯ್ಲಿಗೆ ಪೂರ್ವದಲ್ಲಿ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಈ ಹಬ್ಬ ಬರುತ್ತದೆ. ದೀಪಾವಳಿಯನ್ನು ಬೆಳಕಿನ ಹಬ್ಬ ಎಂತಲೂ ಕರೆಯುವುದಿದೆ. ಹಾಗಾಗಿ ಈ ಹಬ್ಬದಂದು ಪ್ರತಿ ಮನೆಯ ಮುಂದೆಯೂ ಹಣತೆಗಳನ್ನು ಕಾಣಬಹುದು. ಈ ಹಬ್ಬದ ಜತೆ ಒಂದು ಪುರಾಣ ಕಥೆಯೂ ಸೇರಿಕೊಂಡಿದೆ. ಬಲಿಚಕ್ರವರ್ತಿ ಭೂಮಿಯ ಮೇಲೆ ಅತ್ಯಂತ ಪ್ರಬಲ ರಾಜನಾಗಿದ್ದನಂತೆ. ದೀಪಾವಳಿಯ ಹಬ್ಬದ ಸಂಭ್ರಮ ಅವನ ಕಾಲದಲ್ಲಿ ದಿನನಿತ್ಯವೂ ಇದ್ದಿತು. ಇಂಥ ವೇಳೆ ವಿಷ್ಣುವು ವಾಮನ ಹೆಸರಿನ ಬ್ರಾಹ್ಮಣ ವೇಷವನ್ನು ಧರಿಸಿಕೊಂಡು ಬಂದು ಬಲಿಯನ್ನು ಮೂರು ಹೆಜ್ಜೆಯ ಭೂಮಿ ಬೇಡಿದನಂತೆ. ಸಮೃದ್ಧಿಗೆ ಹೆಸರಾದ ಬಲಿಚಕ್ರವರ್ತಿ ಇಂಥ ವಾಮನ ಮೂರ್ತಿಗೆ ಮೂರು ಹೆಜ್ಜೆ ಭೂಮಿ ನೀಡುವುದು ಮಹತ್ವದ್ದಲ್ಲವೆಂದು ಭಾವಿಸಿದ. ಆದರೆ ವಾಮನನು ತ್ರಿವಿಕ್ರಮನಾಗಿ ಒಂದು ಹೆಜ್ಜೆಗೆ ಭೂಮಿಯನ್ನೆಲ್ಲ ಅಳೆದು ತೆಗೆದುಕೊಂಡ. ಇನ್ನೊಂದು ಹೆಜ್ಜೆಗೆ ಆಕಾಶವನ್ನೆಲ್ಲ ಅಳೆದುಬಿಟ್ಟ. ವಾಮನ ಮೂರನೆಯ ಹೆಜ್ಜೆಗೆ ಜಾಗವಿಲ್ಲ ಎಂದು ಕೇಳಿದ. ಬಲಿ ಬೇರೆ ಹಾದಿ ಕಾಣದೆ ತನ್ನ ಮಸ್ತಕವನ್ನೇ ತೋರಿಸಿದ. ವಾಮನಮೂರ್ತಿ ಬಲಿಚಕ್ರವರ್ತಿಯ ತಲೆಯ ಮೇಲೆ ಕಾಲಿಟ್ಟು ಅವನನ್ನು ಪಾತಾಳಕ್ಕೆ ತುಳಿದುಬಿಟ್ಟ. ಅನಂತರ ಬಲಿಯ ದಾನ ಬುದ್ಧಿಗೆ ಮೆಚ್ಚಿದ ವಿಷ್ಣು ಪಾತಾಳಕ್ಕೆ ಹೋಗುವ ಮುನ್ನ ವರ ಕೇಳುವ ಎಂದನಂತೆ. ಬಲಿ ವರ್ಷಕ್ಕೊಮ್ಮೆಯಾದರೂ ನನ್ನ ಸಮೃದ್ಧ ರಾಜ್ಯವನ್ನು ನೋಡಿಕೊಂಡು ಹೋಗುವಂತೆ ವರ ಕರುಣಿಸು ಎಂದು ಬೇಡಿದ. ಹಾಗಾಗಿ ಪ್ರತಿ ದೀಪಾವಳಿಯಂದು ಬಲಿಚಕ್ರವರ್ತಿ ತನ್ನ ಸಮೃದ್ಧ ಭೂಮಿಯನ್ನು ನೋಡಲು ಬರುತ್ತಾನೆಂಬುದು ಜನಪದರ ನಂಬಿಕೆಯಾಗಿದ್ದು ಆತ ನೋಡಲೆಂದೇ ಅನೇಕ ಸಂಭ್ರಮದ ಆಚರಣೆಗಳನ್ನು ಆಚರಿಸುವುದುಂಟು.

ಕೆ.ಎಚ್.

 

ದೃಷ್ಟಿ ದೃಷ್ಟಿಯನ್ನು ಕುರಿತಂತೆ ಜನಪದರಲ್ಲಿ ಪ್ರಪಂದಲ್ಲೆಲ್ಲ ನಂಬಿಕೆ ಇದೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ (ಅಂದವನ್ನು) ಸೌಂರ್ದೈವನ್ನು ಅಥವಾ ವಸ್ತುವಿನ ಸೌಂದರ್ಯವನ್ನು ನಕಾರಾತ್ಮಕ ದೃಷ್ಟಿಯಿಂದ ದಿಟ್ಟಿಸಿ ನೋಡಿದಾಗ ಅಥವಾ ಅತಿಶಯವಾಗಿ ಹೊಗಳಿದಾಗ ದೃಷ್ಟಿಯಾಗುತ್ತದೆ. ಮರಗಳನ್ನು ಹಣ್ಣುಗಳನ್ನು ಮನೆಗಳನ್ನು ಪ್ರಾಣಿಗಳನ್ನು ನೋಡಿದಾಗಲೂ ದೃಷ್ಟಿಯಾಗುತ್ತದೆಂದು ಹೇಳುತ್ತಾರೆ. ಹಾಗಾದಾಗ ಅನಾರೋಗ್ಯದಿಂದ ನರಳುವುದು ಸಾಯುವುದು ಮುಂತಾದವು ನಡೆಯಬಹುದೆಂದು ನಂಬುತ್ತಾರೆ. ಮನೆಯ ಮೇಲೆ ದೃಷ್ಟಿಬಿದ್ದರೂ ಆ ಮನೆ ಕುಸಿದು ಬೀಳುತ್ತದೆಂದು ಜನಪದರು ನಂಬುತ್ತಾರೆ.

ಭಾರತದಲ್ಲಿ ದೃಷ್ಟಿಯ ಬಗ್ಗೆ ನಂಬಿಕೆ ದೃಢವಾಗಿದೆ. ಮಾನವ ಶರೀರದಲ್ಲಿ ಎಲ್ಲ ಭಾಗಗಳಿಗಿಂತ ಕಣ್ಣಿನ ನೋಟ ತುಂಬ ಶಕ್ತಿಯಿಂದ ಕೂಡಿರುವುದೆಂದು ಭಾರತೀಯರ ನಂಬಿಕೆ. ದೃಷ್ಟಿಗೆ ಮೂಲಕಾರಣ ಈರ್ಷ್ಯೆ. ಮಕ್ಕಳಿದಲ್ಲದ ಮಹಿಳೆ ಇನ್ನೊಬ್ಬ ಮಹಿಳೆಯ ಮಕ್ಕಳನ್ನು ಈರ್ಷ್ಯೆಯಿಂದ ನೋಡಿದಾಗ ಕೆಡಕಾಗಬಹುದೆಂದು ಭಾವಿಸುತ್ತಾರೆ. ಹಾಲು ಕೊಡುವ ಹಸುವನ್ನು ಅಥವಾ ಮಹಿಳೆಯನ್ನು ದಿಟ್ಟಿಸಿ ನೋಡಿದಾಗ ಹಾಲು ಬತ್ತಿ ಹೋಗುತ್ತವೆಂಬುದಾಗಿ ನಂಬುತ್ತಾರೆ. ಹಿಂದೂ ಸಮಾಜದಲ್ಲಿ ಮಕ್ಕಳಾದ ಮೇಲೆ, ಹುಡುಗಿಯರು ಮೈನೆರೆದಾಗ, ಮದುವೆಯ ಸಂದರ್ಭದಲ್ಲಿ ದೃಷ್ಟಿ ಆಗಬಾರದೆಂದು ಭಾವಿಸುತ್ತಾರೆ. ಸಾಮಾನ್ಯವಾಗಿ ಸ್ತ್ರೀಯರ ಮತ್ತು ದೇವತೆಗಳ ದೃಷ್ಟಿ ಪ್ರಭಾವ ಹೆಚ್ಚಾಗಿರುತ್ತದೆಂದು ತೆಲುಗರು ನಂಬುತ್ತಾರೆ. ತೋಳ, ಹಾವು ಮುಂತಾದವುಗಳಿಗೆ ಹೆಚ್ಚಿನ ದೃಷ್ಟಿ ಶಕ್ತಿ ಇರುತ್ತದೆಂದು ಜನಪದರ ನಂಬಿಕೆ. ಇದಕ್ಕಾಗಿ ಸ್ತ್ರೀಯರು ಮಕ್ಕಳು ಮಸಿಯನ್ನು ಕಣ್ಣಿಗೆ ಕಾಡಿಗೆಯಂತೆ ಇಟ್ಟುಕೊಳ್ಳುವುದು, ಕೆನ್ನೆಯ ಮೇಲೆ ಕಪ್ಪು ಚುಕ್ಕಿ ಇಡುವುದು ಮುಂತಾದವುಗಳಿಂದ ದೃಷ್ಟಿ ನಿವಾರಣೆಯಾಗುತ್ತದೆಂಬ ನಂಬಿಕೆ ಇದೆ.

ದೃಷ್ಟಿ ತೆಗೆಯಲು ಇಳಿ ತೆಗೆಯುವ ಪದ್ಧತಿ ಇದೆ. ಚಿಕ್ಕ ಮಕ್ಕಳ ಕಣ್ಣು ನೀಲಿ ಬಣ್ಣಕ್ಕೆ ತಿರುಗುವುದು, ಒಂದೇ ಸಮನೆ ಅಳುವುದು, ಹೊಟ್ಟೆ ನೋವು, ತಲೆನೋವು, ಭೇದಿಯಾಗುವುದು ಮುಂತಾದವು ದೃಷ್ಟಿ ಲಕ್ಷಣಗಳೆಂದು ಭಾವಿಸುತ್ತಾರೆ. ದೃಷ್ಟಿ ತೆಗೆಯಲು ಬೆಳಗಿನ ಜಾವ ಅಥವಾ ಸಂಜೆ ಹೊತ್ತು ಅಗಲವಾದ ತಟ್ಟೆಯಲ್ಲಿ ನೀರು ತುಂಬಿ ಅರಿಸಿನ, ಸುಣ್ಣ, ಕುಂಕುಮ ಸೇರಿಸಿ ‘ಕೆಂಪು ನೀರು’ ತಯಾರು ಮಾಡುತ್ತಾರೆ. ಈ ನೀರಿನಲ್ಲಿ ಎಲೆ ಅಡಿಕೆ ಇಟ್ಟು ಅನ್ನವನ್ನು ತಂದು ಮೂರು ಮುದ್ದೆ ಮಾಡುತ್ತಾರೆ. ಒಂದು ಮುದ್ದೆಗೆ, ಕುಂಕುಮ, ಇನ್ನೊಂದಕ್ಕೆ ಮಸಿ ಅಥವಾ ಇದ್ದಿಲು ಪುಡಿ, ಹಚ್ಚಿ ಮೂರನೆಯ ಮುದ್ದೆಯನ್ನು ಹಾಗೆಯೇ ಬಿಡುತ್ತಾರೆ. ಈ ಮೂರನ್ನು ಕೆಂಪು ನೀರಿನ ತಟ್ಟೆಯಲ್ಲಿಟ್ಟು ದೃಷ್ಟಿಯಾದವರನ್ನು ಮೂಡಣ ದಿಕ್ಕಿಗೆ ಅಭಿಮುಖವಾಗಿ ಕೂರಿಸಿ ಆ ವ್ಯಕ್ತಿಯ ಸುತ್ತ ಥೂ ಥೂ ಎಂದು ಉಗುಳುತ್ತಾ ಬಲಗಡೆ, ಎಡಗಡೆ ಮತ್ತು ಹಿಂದುಗಡೆ ತಟ್ಟೆಯಲ್ಲಿ ಇಳಿ ತೆಗೆಯುತ್ತಾರೆ. ಕೊನೆ ಆ ವ್ಯಕ್ತಿ ತಟ್ಟೆಯಲ್ಲಿ ಉಗುಳಿದ ಮೇಲೆ ಆ ನೀರನ್ನು ಮೂರು ದಾರಿಗಳ ಸಂಗಮದಲ್ಲಿ ಯಾರೂ ನೋಡದಂತೆ ಸುರಿಯುತ್ತಾರೆ. ಆಮೇಲೆ ದೃಷ್ಟಿ ತೆಗೆದ ಹಿಂದಕ್ಕೆ ನೋಡದೆ ಬೇಗ ಬೇಗನೇ ನಡೆದು ಮನೆಯ ಮುಂದೆ ಕಾಲು ತೊಳೆದು ಮನೆಯಲ್ಲಿ ಹೆಜ್ಜೆ ಇಡುತ್ತಾರೆ.

ರಸ್ತೆಯಲ್ಲಿ ಸುರಿದ ಕೆಂಪು ನೀರಿನ ಮೇಲೆ ಬೇರೆಯವರು ನಡೆದಾಗ ಅವರ ಮೇಲೆ ದೃಷ್ಟಿಯ ಪ್ರಭಾವವಿರುತ್ತರೆಂದು ಭಾವಿಸಲಾಗಿದೆ. ಕೆಲವರು ಕೆಂಪು ನೀರು ಮೇಲೆ ನಡೆಯದೆ ತಪ್ಪಿಸಿಕೊಂಡು ನೆಗೆದು ಹೋಗುತ್ತಾರೆ. ಕೆಂಪು ನೀರಿನ ಮೇಲೆ ಕಾಲಿಟ್ಟ ವ್ಯಕ್ತಿಗೆ ಕಾಲು ನೋವಾಗುತ್ತದೆಂದು ಜನಪದರು ನಂಬುತ್ತಾರೆ.

ದೃಷ್ಟಿ ತೆಗೆಯಲು ಇನ್ನೊಂದು ವಿಧಾನವಿದೆ. ಹರಳೆಣ್ಣೆಯಲ್ಲಿ ನೆನೆಸಿದ ಉದ್ದನೆಯ ಬತ್ತಿಯನ್ನು ಕಬ್ಬಿಣದ ಸಲಾಕೆಗೆ ಸುತ್ತಿ ದೃಷ್ಟಿಯಾದವನಿಗೆ ಇಳಿ ತೆಗೆದ ಮೇಲೆ ಆ ಬತ್ತಿಯನ್ನು ಹತ್ತಿಸುತ್ತಾರೆ. ಬತ್ತಿ ಸುಡುತ್ತಿರುವಾಗ ಹರಳೆಣ್ಣೆ ಕೆಂಪುಧಾರೆಯಾಗಿ ಸುರಿದರೆ ತುಂಬ ದೃಷ್ಟಿಯಾಯಿತೆಂದು ಭಾವಿಸುತ್ತಾರೆ. ಬತ್ತಿ ಉರಿದ ಮೇಲೆ ಅದರ ಬೂದಿಯನ್ನು ಎಡಗಾಲಿನ ಹೆಬ್ಬೆಟ್ಟಿನಿಂದ ತೆಗೆದು ದೃಷ್ಟಿಯಾದವನ ಹಣೆಗೆ ಬೊಟ್ಟನ್ನಾಗಿ ಇಡುತ್ತಾರೆ.

ಆಂಧ್ರದ ಕೆಲವು ಪ್ರದೇಶಗಳಲ್ಲಿ ಒಣಮೆಣಸಿನ ಕಾಯಿ ಉಪ್ಪು ಎಡೆಗೈಯಲ್ಲಿಟ್ಟುಕೊಂಡು ದೃಷ್ಟಿಯಾದವನಿಗೆ ಮೂರು ದಿಕ್ಕುಗಳಲ್ಲಿ ಇಳಿತೆಗೆದು ಉರಿಯುತ್ತಿರುವ ಒಲೆಯಲ್ಲಿ ಹಾಕುತ್ತಾರೆ. ಹೊಸದಾಗಿ ಮದುವೆಯಾದ ವಧುವರರ ಮೇಲೆ ದೃಷ್ಟಿಯಾಗದಂತೆ ಸುಣ್ಣ, ಅರಿಸಿನ, ಕುಂಕುಮ ಸೇರಿಸಿದ ನೀರಿನಲ್ಲಿ ಎಲೆ ಅಡಿಕೆಯನ್ನು ಇಟ್ಟು ಅದರ ಮೇಲೆ ಕರ್ಪೂರವನ್ನಿಟ್ಟು, ಆರತಿ ಮಾಡುತ್ತಾರೆ. ದೃಷ್ಟಿಯಾಗದಂತೆ, ಚಿಕ್ಕ ಮಕ್ಕಳಿಗೆ ತಾಮ್ರದ ಅಥವಾ ಬೆಳ್ಳಿಯ ಯಂತ್ರ ತಯಾರು ಮಾಡಿಸಿ ಕೊರಳಿಗೆ ಕಟ್ಟುತ್ತಾರೆ. ಕೆಲವು ಪ್ರದೇಶಗಳಲ್ಲಿ ಆಂಜನೇಯನ ತಾಯಿತವನ್ನು ಕತ್ತಿಗೆ ಕಟ್ಟುತ್ತಾರೆ. ಕರಡಿ, ಆನೆ ಅಥವಾ ಕುದುರೆಯ ಕೂದಲನ್ನು ತಂದು ಬೆಳ್ಳಿ ಕೊಳವೆಯಲ್ಲಿಟ್ಟು ಮಕ್ಕಳ ಕೊರಳಿಗೆ ಹಾಕುವುದು ಕೂಡ ಒಂದು ಸಂಪ್ರದಾಯ. ಆಂಧ್ರದ ಕೆಲವೆಡೆ ಹುಲಿಯ ಉಗುರನ್ನು ಮಕ್ಕಳ ಕತ್ತಿಗೆ ಕಟ್ಟುವುದು ರೂಢೀಯಲ್ಲಿದೆ. ಫಕೀರ್‌ಗಳಿಂದ ಯಂತ್ರಗಳನ್ನು ತಂದು ಮಕ್ಕಳ ಉಡುದಾರಕ್ಕೆ ಸಿಕ್ಕಿಸುವುದು ಇದೆ.

ಆಂಧ್ರದ ಬುಡಕಟ್ಟು ಜನರಲ್ಲಿ ದೃಷ್ಟಿ ನಿವಾರಣೆಗೆ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಸಂಪ್ರದಾಯ ಇದೆ. ಹೊಸದಾಗಿ ಮನೆಯನ್ನು ಕಟ್ಟಿದಾಗ ಕುಂಬಳ ಕಾಯಿಯನ್ನು ನೇತು ಹಾಕುವ ಸಂಪ್ರದಾಯವಿದೆ. ಹೊಲದಲ್ಲಿ ದೃಷ್ಟಿ ಆಗದಂತೆ ಒಂದು ಮಡಕೆಗೆ ಸುಣ್ಣ ಹಚ್ಚಿ ಬೊಟ್ಟಿಟ್ಟು ಹೊಲದ ಮಧ್ಯದಲ್ಲಿ ಇಡುವುದು ಸಂಪ್ರದಾಯ. ಹುಲ್ಲಿನಿಂದ ದೃಷ್ಟಿ ಗೊಂಬೆಯನ್ನು ತಯಾರು ಮಾಡಿ ಹೊಲದ ಮಧ್ಯದಲ್ಲಿ ಇಡುತ್ತಾರೆ. ಹುಣ್ಣಿಮೆ ದಿನ ಕುರಿಯನ್ನು ಬಲಿಕೊಟ್ಟು ಅದರ ಕರುಳಿನಿಂದ ಆಹಾರವನ್ನು ತೆಗೆದು ರಕ್ತವನ್ನು ಅನ್ನವನ್ನು ಬೆರೆಸಿ ಹೊಲದ ನಾಲ್ಕು ದಿಕ್ಕುಗಳಲ್ಲಿ ಚೆಲ್ಲಿ ಉಳಿದುದ್ದನ್ನು ಹೊಲದ ಮಧ್ಯದಲ್ಲಿ ಹೂಳುತ್ತಾರೆ. ಕೊಯ್ಲು ಪ್ರಾರಂಭಿಸುತ್ತಾರೆ. ಹೀಗೆ ಮಾನವ ಸಮಾಜದಲ್ಲಿ ವ್ಯಕ್ತಿಗಳು ಸುಂದರವಾಗಿದ್ದರೂ ಹಾಲು ಮೊಸರು ಬತ್ತ ಸಮೃದ್ಧವಾಗಿದ್ದರೂ ಅವರನ್ನು ನಕಾರಾತ್ಮಕವಾಗಿ ಅಥವಾ ಸಕಾರಾತ್ಮಕವಾಗಿ ನೋಡಿದಾಗ ದೃಷ್ಟಿ ಆಗುತ್ತದೆಂದು ಭಾವಿಸುತ್ತಾರೆ. ಇದಕ್ಕಾಗಿ ತೆಲುಗರು ಕೂಡ ಅನೇಕ ಪರಿಹಾರಗಳನ್ನು ಕಂಡುಕೊಂಡಿದ್ದಾರೆ.

ಆರ್.ಪಿ.ಅನುವಾದ ಎ.ಎಂ.ಡಿ.

 

ದೃಷ್ಟಿ ತೆಗೆಯುವುದು ದೃಷ್ಟಿತೆಗೆ, ನಿವಾಳಿಸು, ಸುಟ್ಟುಹಾಕು, ಆಸರಾ ತೆಗೆ, ನೆಟಗಿಮುರಿ (ಎರಡೂ ಕೈ ಬೆರಳುಗಳನ್ನು ಸಟ, ಸಟನೆ ಮುರಿಯುವುದು) ಮೊದಲಾದ ಪದ, ವಿಧಾನಗಳಿಂದ ದೃಷ್ಟಿ ತೆಗೆಯುವ ಒಂದು ಪರಿಯಾದ ನಂಬಿಕೆ ಜನಪದದಲ್ಲಿ ಇದೆ. ಜನರ ಕೆಟ್ಟ ಕಣ್ಣಿನಿಂದ ಉಂಟಾಗುವ ಹಾನಿಗಳಿಗೆ ಪರಹರಿಸಿಕೊಳ್ಳುವ ಒಂದು ಬಗೆ ಈ ದೃಷ್ಟಿ ತೆಗೆಯುವಿಕೆ.

ದೃಷ್ಟಿ ದೋಷಕ್ಕೆ ಸಂಬಂಧಿಸಿದ ಈ ರೀತಿಯ ನಂಬಿಕೆಗಳು ಮತ್ತು ಅದನ್ನು ನಿವಾರಿಸಿಕೊಳ್ಳುವ ಪರಿಹಾರ ಕ್ರಮಗಳು ಕರ್ನಾಟಕ ಕೂಡಿದಂತೆ ಭಾರತಾದ್ಯಂತ ಇವೆ. ಪ್ರಪಂದ ಇತರ ಎಲ್ಲ ದೇಶಗಳಲ್ಲಿಯೂ ಬಹಳ ಹಿಂದಿನಿಂದಲೂ ದೃಷ್ಟಿ ತೆಗೆಯುವ ಕ್ರಮ ಬಳಕೆಯಲ್ಲಿದೆ. ಪ್ರಾದೇಶಿಕ ವೈಶಿಷ್ಟ್ಯತೆಯಿಂದ ಪ್ರದೇಶದಿಂದ ಪ್ರದೇಶಕ್ಕೆ ನಂಬಿಕೆ, ಪರಿಹಾರಗಳಲ್ಲಿ ವ್ಯತ್ಯಾಸವನ್ನು ಹೊಂದಿರುವ ಸಂಗತಿಗಳನ್ನು ಹೊರತು ಪಡಿಸಿದರೆ, ಮೂಲತಃ ಕೆಟ್ಟ ಕಣ್ಣಿನಿಂದ ದೃಷ್ಟಿದೋಷ ಉಂಟಾಗುತ್ತದೆಂಬ ನಂಬಿಕೆ ಮಾತ್ರ ಸಾರ್ವತ್ರಿಕ.

ಮನುಷ್ಯನ ಮನಸ್ಸಿನಿಂದಲೇ ಉಂಟಾಗುವ ಅತಿಯಾದ ಅಸೂಯೆ, ಕೋಪ, ಸಂಕಟ, ವಿಕಾರ ಮನೋಭಾವಗಳನ್ನು ಕೆಟ್ಟ ದೃಷ್ಟಿ ಎಂದು ಗುರುತಿಸಲಾಗಿದೆ. ಕೆಟ್ಟ ಕಣ್ಣಿನ ನೋಟ ಹಾನಿಕಾರಕವಾದುದು. ಈ ನೋಟ ಎಳೆಯ ಕಂದಮ್ಮ, ಬಸುರಿ ಬಾಣಂತಿಯರ ಮೇಲೆ, ಊಟ ಮಾಡುವವರ ಮೇಲೆ ಬಿದ್ದರೆ, ವಾಂತಿಯಾಗುವುದು, ಹೊಟ್ಟೆನೋವು ಬರುವುದು, ಶಕ್ತಿ ಕುಂದುವುದು, ಸಪ್ಪಗಾಗುವುದು ಈ ಕೆಟ್ಟ ಕಣ್ಣಿನ ಪ್ರಭಾವ ಆಗಿದೆ. ಹಾಲು ಕೊಡುವ ಹಸು, ಎಮ್ಮೆಗಳ ಕೆಚ್ಚಲಿನ ಮೇಲೆ ದೃಷ್ಟಿ ಬಿದ್ದರೆ ಹಾಲಿನ ಬದಲು ರಕ್ತವನ್ನು ಕರೆಯಬೇಕಾದ ಪರಿಸ್ಥಿತಿ ಒದಗುತ್ತದೆ. ಕುರಿ, ಕೋಳಿ, ಬೆಕ್ಕು, ಮೊಲ ಮೊದಲಾದ ಸಾಕು ಪ್ರಾಣಿಗಳ ಮೇಲೂ ಈ ವಕ್ರದೃಷ್ಟಿಯ ಪ್ರಭಾವ ಇದೆ.

ಈ ಕೆಟ್ಟ ಕಣ್ಣಿನ ಪ್ರಭಾವ ಜೀವಂತ ವಸ್ತುಗಳ ಮೇಲೆ ಮಾತ್ರವಲ್ಲದೆ ನಿರ್ಜೀವ ವಸ್ತುಗಳ ಮೇಲೂ ಉಂಟಾಗುತ್ತದೆ. ಮನುಷ್ಯರಲ್ಲಿ ಮಾತ್ರವಲ್ಲದೆ ಕೆಲವು ಪ್ರಾಣಿಗಳಲ್ಲಿಯೂ ಕೆಟ್ಟ ಕಣ್ಣಿನ ಪ್ರಭಾವ ಇರುತ್ತದೆಯೆಂಬ ನಂಬಿಕೆಯೂ ಇದೆ.

ಈ ದೃಷ್ಟಿ ತೆಗೆಯುವಲ್ಲಿ ಹಲವಾರು ಪರಿಹಾರಗಳು ಜನಪದರಲ್ಲಿವೆ. ಉರಿಯುತ್ತಿರುವ ಹಂಚಿಕಡ್ಡಿಗಳನ್ನು ನಿವಾಳಿಸಿ ಬೆಂಕಿ ಹಚ್ಚಿ, ಅದರ ಕಪ್ಪನ್ನು ಹಣೆಗೆ ಇಡುವುದು; ಕೆಟ್ಟ ಕಣ್ಣು ತಾಕಿಸಿದವರು ಹಾಳಾಗಲಿ ಎಂದು ಲಟಿಗೆ ಮುರಿಯುವುದು; ಉಪ್ಪು ಮೆಣಸಿನಕಾಯಿ ಎರಡನ್ನು ನಿವಾಳಿಸಿ ಒಲೆಗೆ ಹಾಕುವುದು; ಬೀದಿಗೆ ಎಸೆಯುವುದು, ಕೆಂಡದ ರಂಜು ಹಾಕುವುದು, ವೀಳ್ಯದೆಲೆಗೆ ಮೂರು ತೂತು ಮಾಡಿ ಇಳಿ ತೆಗೆದು ಉಗುಳಿ, ಹರಿದು ಚೂರು ಚೂರು ಮಾಡಿ ಚರಂಡಿಗೆ ಎಸೆಯುವುದು. ಮೊಟ್ಟೆ ಇಳಿತೆಗೆದು ಮೂರು ನೆಲೆ ಕೂಡಿದ ಜಾಗದಲ್ಲಿ ಹೊಡೆಯುವುದು, ಸಕ್ಕರೆಯನ್ನು ಮಂತ್ರಿಸಿ ತಿನ್ನಲು ಕೊಡುವುದು, ಕೆಟ್ಟ ಕಣ್ಣುಳ್ಳವರು ಹೋದ ಜಾಗದಲ್ಲಿ ಮೂರು ಸಲ ಉಗುಳುವುದು, ರತ್ನೀರು ಮಾಡುವುದು (ಅರಿಶಿನ, ಸುಣ್ಣ, ಕೆಂಡ) ಮೊದಲಾದ ಈ ರೀತಿಯ ಪರಿಹಾರಗಳು ಜನಪದರಲ್ಲಿವೆ.

ಹಂಚಿಕಡ್ಡಿಗಳು ಉರಿಯುವಾಗ ಹೆಚ್ಚು ಚಟ, ಚಟ, ಸದ್ದು ಮಾಡಿದರೆ, ಉಪ್ಪು ಮೆಣಸಿನಕಾಯನ್ನು ಒಲೆಗೆ ಹಾಕಿದಾಗ ಮೆಣಸಿನಕಾಯಿಯ ಘಾಟು ಕಾಣದೆ ಹೋದರೆ, ಕಾಲು ರಂಜು, ಕೆಂಡದ ರಂಜು ಅತಿ ಕೆಂಪಾಗಿ ಕಂಡರೆ, ದೃಷ್ಟಿ ತಗುಲಿದೆ ಎಂಬುದಕ್ಕೆ ರುಜುವಾತು ಎಂದು ಜನಪದರು ಭಾವಿಸುತ್ತಾರೆ.

ಮನೆಗಳಿಗೆ, ಬೆಳೆಗಳಿಗೆ ದೃಷ್ಟಿದೋಷ, ತಾಗದಿರಲೆಂಬ ಉದ್ದೇಶದಿಂದ ತೆಂಗಿನಕಾಯಿ ಕಟ್ಟುವುದು, ಕುಂಬಳಕಾಯಿ ಕಟ್ಟುವುದು, ಹೊಂಗ್ನೂಲು (ಸಪ್ಪದಾರ) ಮಂತ್ರಿಸಿ ಇಳಿ ಬಿಡುವುದು. ಬೆಚ್ಚು ಕಟ್ಟುವುದು. ಒಂದು ಕೋಲಿಗೆ ಮನುಷ್ಯನ ಬಟ್ಟೆಗಳನ್ನು ತಗಲುಹಾಕಿ ಮೇಲ್ಭಾಗದಲ್ಲಿ ಸುಣ್ಣ ಬಳಿದ ಮಡಕೆಯನ್ನು ನೇತು ಹಾಕಿ ಅದನ್ನು ಮನೆಯ ಮೇಲು ಭಾಗಕ್ಕೆ ಕಟ್ಟುವುದು ಮೊದಲಾದ ಕ್ರಮಗಳೂ ಜನಪದರಲ್ಲುಂಟು.

ಆದರೆ ಇತ್ತೀಚೆಗೆ ಪರಾಮನೋವಿಜ್ಞಾನ ಪ್ರತಿಕ್ರಿಯಿಸಿರುವ ಹಾಗೆ ಮನುಷ್ಯನಲ್ಲಿ ಅತೀಂದ್ರಿಯ ದರ್ಶನ ಶಕ್ತಿ ಮತ್ತು ಮನಃಚಲನಶಕ್ತಿ ಕೆಟ್ಟ ಕಣ್ಣಿನ ಪ್ರಭಾವಕ್ಕೆ ಸೂಕ್ತ ಉದಾಹರಣೆಗಳಾಗಿವೆ. ದೃಷ್ಟಿ ದೋಷಕ್ಕೆ ಸಂಬಂಧಿಸಿದ ಪರಿಹಾರಗಳಿಂದ ಮಾನಸಿಕವಾಗಿ ಒಂದು ಬಗೆಯ ಸಮಾಧಾನ ದೊರೆತು ಆ ಮೂಲಕ ಸ್ವಲ್ಪಮಟ್ಟಿಗೆ ಕೆಟ್ಟ ಕಣ್ಣಿನ ಪ್ರಭಾವ ಕಡಿಮೆಯಾಗಬಹುದು.

ಈ ದೃಷ್ಟಿ ತೆಗೆಯುವಿಕೆಯ ವಿಧಾನವೂ ಮಾಟ, ಮಂತ್ರದ ಪ್ರಾಮುಖ್ಯವನ್ನು ಸಹ ಹೊಂದಿದೆ. ನಿಂಬೆಹಣ್ಣು ಇಳಿ ತೆಗೆಯುವುದು, ಮಂತ್ರಿಸಿ ಕೊಡುವುದು, ಕೊಯ್ದು ನಾಲ್ಕು ಚೂರು ಮಾಡಿ ನಾಲ್ಕಾರು ಮೂಲೆಗೆಸೆಯುವುದು, ಹೊಸ್ತಿಲಲ್ಲಿ ನಿಂಬೆಹಣ್ಣಿಗೆ ಕುಂಕುಮಹಚ್ಚಿ ಇಡುವುದು, ಕೊಯ್ದು ಕೋಳಿಯ ರಕ್ತವನ್ನು ಬೆರಳುಗಳಿಗೆ ಅದ್ದಿಕೊಂಡು ಮನೆಯ ಬಾಗಿಲ ಮುಂಭಾಗಕ್ಕೆ ಹಸ್ತ ಮೂಡಿಸುವುದು, ಚಿತ್ರ ಬರೆಯುವುದು, ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಾಮ ಬಳಿಯುವುದು, ತಡೆ ಒಡೆಯುವುದು (ಕಲ್ಲಿನ ಮೇಲೆ ಒಂದು ತೆಂಗಿನಕಾಯಿ, ನಿಂಬೆಹಣ್ಣು, ಕುಡಿಕೆಯಿಟ್ಟು ಮಚ್ಚಿನಿಂದ ಹೊಡೆದು ಕಲ್ಲನ್ನು ಎತ್ತುಹಾಕುವುದು)

ಇವೆಲ್ಲ ಕೆಟ್ಟ ಕಣ್ಣಿನ ಪ್ರಭಾವವನ್ನು ಕುಗ್ಗಿಸುವ ಮನಃಚಲನಶಕ್ತಿಯ ಒಂದು ಬಗೆಯಾಗಿವೆ. ಆದ್ದರಿಂದಲೇ ಜನಪದರ ಪರಿಕಲ್ಪನೆಯೊಳಗೆ ಈ ದೃಷ್ಟಿದೋಷ ಸಂಪೂರ್ಣವಾಗಿ ಮೂಢನಂಬಿಕೆ ಅಲ್ಲ ಎನಿಸುತ್ತದೆ.

ಎಂ.ಕೆ.