ನಲ್ಲತಂಗಾಳ್ ಕದೈ ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಹಲವಾರು ದೀರ್ಘ ಕಥನಗೀತೆಗಳಲ್ಲಿ ಒಂದು. ಈ ಗೀತೆಗಳನ್ನು ಹಾಡುವಾಗ ಉಡುಕೈ, ಪಂಬೈಮುಂತಾದ ಸಂಗೀತ ವಾದ್ಯಗಳನ್ನು ನುಡಿಸುತ್ತಾರೆ. ಮನರಂಜನೆಯೇ ಈ ಗೀತೆಗಳ ಮೂಲ ಉದ್ದೇಶ. ವಿಲ್ಲುಪ್ಪಾಟ್ಟುವಿನ ಕಲಾವಿದರು ಬಿಲ್ಲು, ಬಿಂದಿಗೆ, ಮರದ ದಿಮ್ಮಿ ಮೊದಲಾದವುಗಳಿಂದ ಸಿದ್ಧವಾದ ಸಂಗೀತ ಉಪಕರಣಗಳಿಂದ ರಾತ್ರಿಯವೇಳೆ ಈ ಕಥನಗೀತೆಗಳನ್ನು ಹಾಡುತ್ತಾರೆ. ಕೋಲೇಬಸವವನ್ನು ಆಡಿಸುವವರು ರಾಸಾದೇವಿಯ ಕತೆಯನ್ನು ಹಾಡಿದರೆ ಅವರ ಹೆಂಡತಿಯರು ನಲ್ಲತಂಗಾಳ್ ಕಥೆಯನ್ನು ಹಾಡಿ ಭಿಕ್ಷೆ ಬೇಡುವುದು ರೂಢಿಯಲ್ಲಿದೆ. ಈ ಪದ್ಧತಿ ಹೆಚ್ಚಾಗಿ ತಮಿಳುನಾಡಿ, ಆಂಧ್ರಪ್ರದೇಶದ ಗಡಿ ಭಾಗಗಳಾದ ಚಿತ್ತೂರು, ತಿರುವಳ್ಳೂರ್ ಜಿಲ್ಲೆಗಳಲ್ಲಿ ಕಾಣಸಿಗುತ್ತದೆ.

ಸಮಾಜದಲ್ಲಿ ನಲ್ಲತಂಗಾಳ್ ಒಳ್ಳೆಯತನವನ್ನು ಹೇಳಿ ಅವಳ ಅತ್ತಿಗೆ ನೀಡಿದ ಕಿರುಕುಳವನ್ನು ಹಾಡುತ್ತಾರೆ. ಅತ್ತಿಗೆಯನ್ನು ಮೂಳಿಯಲಂಗಾರಿ, ಮೂದೆಚಂಡಾಳಿ ಎಂದು ವ್ಯಂಗ್ಯವಾಗಿ ಹಾಡಿನ ಮೂಲಕ ಟೀಕಿಸುತ್ತಾರೆ.

ನಲ್ಲತಂಗಾಳ್ ವಸ್ತು: ತವರು ಮನೆಯಲ್ಲಿ ಸುಖವಾಗಿ ಹುಟ್ಟಿ ಬೆಳೆದ ಹೆಣ್ಣುಗಳಿಗೆ ಬೇರೆ ಮನೆಯಿಂದ ಬಂದ ಅತ್ತಿಗೆ ಕಿರುಕುಳ ನೀಡುವುದು ಮತ್ತು ನಲ್ಲತಂಗಾಳ್‌ಳ ದುರಂತವನ್ನು ಸಾರುವ ಕಥೆಯೇ ಇದರ ವಸ್ತು. ಪುಗಳೇಂದಿ ಎಂಬ ವಿದ್ವಾಂಸರು ಇದನ್ನು ಹಾಡಿದ್ದಾರೆಂದು ಹೇಳಲಾಗುತ್ತದೆ.

ತಮಿಳುನಾಡಿನ ಬಹುತೇಕ ಎಲ್ಲ ಜನರಿಗೂ ಈ ಕಥೆ ಗೊತ್ತಿದೆ. ಸ್ವತಃ ತಂದೆ ತಾಯಿ ಕೊಟ್ಟ ವಸ್ತುಗಳನ್ನು ಮಗಳೀಗೆ ಮುಟ್ಟಲು ಸಾಧ್ಯವಿರದ ಈ ಕಥೆ ಜನರಲ್ಲಿ ದುಃಖವನ್ನು ಮೂಡಿಸುತ್ತದೆ. ಮನೆಯ ಹಿರಿಯರಾದ ಅಜ್ಜಿಯರು ಮೊಮ್ಮಕ್ಕಳಿಗೆ ಹೇಳುವ ಕಥೆಗಳಲ್ಲಿ ಇದು ಪ್ರಸಿದ್ಧವಾಗಿದೆ. ಇದು ನಾಟಕವಾಗಿಯೂ ಬೀದಿ ನೃತ್ಯವಾಗಿಯೂ ಪ್ರದರ್ಶನಗೊಂಡಿದ್ದು ಎಲ್ಲರಿಗೂ ಚಿರಪರಿಚಿತವಾಗಿದೆ.

ನಲ್ಲತಂಬಿ, ನಲ್ಲತಂಗಾಳ್‌ಳ ಜನನ: ಮಧುರೈಯನ್ನು ರಾಮಲಿಂಗ್ ಮಹಾರಾಜ ಆಳ್ವಿಕೆ ಮಾಡುತ್ತಿದ್ದನು. ಅವನ ಹೆಂಡತಿ ಇಂದಿರಾಣಿಗೆ ಮಕ್ಕಳೇ ಇರಲಿಲ್ಲ. ಹಾಗಾಗಿ ಅವರಿಬ್ಬರು ಕಠೋರ ತಪಸ್ಸಿನಲ್ಲಿ ನಿರತರಾದರು. ದೇವರ ಆಶೀರ್ವಾದದಿಂದ ಎರಡು ವರ್ಷಗಳಲ್ಲೇ ಒಂದು ಗಂಡು ಒಂದು ಹೆಣ್ಣು ಅವರಿಗೆ ಜನಿಸಿತು. ಗಂಡು ಮಗುವಿಗೆ ನಲ್ಲ ತಂಬಿ ಎಂದು ಹೆಣ್ಣು ಮಗಳಿಗೆ ನಲ್ಲತಂಗಾಳ್ ಎಂದೂ ಹೆಸರು ಇಟ್ಟರು. ಅವರಿಬ್ಬರು ವಯಸ್ಕರಾದಂತೆ ಮೊದಲು ನಲ್ಲತಂಬಿಗೆ ಕುಂತಲ ದೇಶದ ರಾಜಕುಮಾರಿ ಮೂಳಿಯಲಂಗಾರಿ ಮೊಯ್‌ಕುಳಲ್‌ನೊಂದಿಗೆ ಮದುವೆ ಆಯಿತು.

ನಲ್ಲತಂಬಿಯ ಒಲುಮೆ: ರಾಜ ಸಾಯುವಾಗ ನಲ್ಲತಂಬಿಯನ್ನು ಕರೆದು ಕೂಡ ಹುಟ್ಟಿದ ನಲ್ಲತಂಗಾಳ್‌ಳನ್ನು ಕಣ್ಣಲ್ಲಿಕಣ್ಣಿಟ್ಟು ಕಾಪಾಡಬೇಕೆಂದು ಕೇಳಿಕೊಂಡನು. ಅಂತೆಯೇ ಮಗನು ಪ್ರತಿಜ್ಞೆ ಮಾಡಿದರು. ಇದನ್ನು ಕೇಳಿ ರಾಜ ತೃಪ್ತಿಯಿಂದ ಪ್ರಾಣಬಿಟ್ಟನು. ಹೀಗಿರುವಾಗ ಕಾಶಿರಾಜ ಬಂದು ನಲ್ಲತಂಗಾಳನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದನು. ಅದನ್ನು ಒಪ್ಪಿ ನಲ್ಲತಂಬಿ ಕಾಶಿರಾಜನಿಗ ತಂಗಿಯನ್ನು ಮದುವೆ ಮಾಡಿಕೊಟ್ಟನು. ಅವರಿಗೆ ಅಪಾರವಾದ ವಸ್ತು ಒಡವೆಗಳನ್ನು ಉಡುಗೊರೆ ಕೊಟ್ಟು ಕಳುಹಿಸಿದನು.

ನಲ್ಲತಂಗಾಳ್ ಗಂಡನೊಂದಿಗೆ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದಳು. ಏಳು ವರ್ಷಕ್ಕೆ ಏಳು ಮಕ್ಕಳನ್ನು ಪಡೆದಳು. ೧೨ನೇ ವರ್ಷ ತುಂಬಿದಾಗ ರಾಜ್ಯದಲ್ಲಿ ಬರಗಾಲ ಉಂಟಾಗಿ ಇವರಿಂದ ಎಲ್ಲವೂ ನಾಶವಾಯಿತು. ಬದುಕು ಕಷ್ಟವಾದಾಗ ನಲ್ಲತಂಗಾಳ್ ಅಣ್ಣನ ಮನೆಗೆ ಹೋಗುವುದಾಗಿ ಗಂಡನನ್ನು ಕೇಳಿದಳು. ‘ಪಿರಂದಗಮ್ ಚೆಲ್ವದು ನಗೈಪ್ಪಿರ್ಕು ಇಡಮಾಗುಮ್‌’ (ಕೆಟ್ಟು ನೊಂದು ತವರುಮನೆಗೆ ಹೋಗುವುದು ನಗೆಪಾಟಲಿಗೆ ಗುರಿಯಾಗುತ್ತದೆ) ಎಂದು ಗಂಡ ಹೇಳಿದರೂ ಆಕೆ ಕೇಳಲಿಲ್ಲ. ನಲ್ಲತಂಗಾಳ್ ತನ್ನ ಏಳು ಮಕ್ಕಳೊಂದಿಗೆ ಕಾಡಿನ ದಾರಿಯಲ್ಲಿ ಅಣ್ಣನ ಮನೆಗೆ ಪ್ರಯಾಣ ಬೆಳೆಸಿದಳು.

ನಲ್ಲತಂಬಿಯ ಸ್ವಪ್ನ: ತಂಗಿ ಕಾಡಿನಲ್ಲಿ ಬರುತ್ತಿದ್ದಾಗ ದಾರಿತಪ್ಪಿದಂತೆಯೂ ಕಷ್ಟ ಅನುಭವಿಸುತ್ತಿರುವಂತೆಯೂ ನಲ್ಲ ತಂಬಿ ಕನಸುಕಂಡನು. ತಕ್ಷಣ ಕಾಡಿಗೆ ನಡೆದ ಅವನು ತಂಗಿಯನ್ನು ಕಂಡು ‘ವನತ್ತಿಲ್ ಪುಲಂಬುಮ್ ಪೆಣ್ಮಣಿಯೇ ನೀಯರ್’(ವನದಲ್ಲಿ ಗೋಳಾಡುವ ಹೆಣ್ಣೆ ನೀನ್ಯಾರು) ಎಂದು ನಲ್ಲ ತಂಬಿ ಕೇಳಲು ನಲ್ಲ ತಂಗಾಳ್ ತನ್ನ ಕಥೆಯನ್ನು ಹೇಳಿದಳು. ಆಗ ತನ್ನ ತಂಗಿಯನ್ನು ಗುರುತಿಸಿ ಕಷ್ಟಗಳನ್ನು ಕಂಡು ಒಂದು ಪತ್ರ ಬರೆದಿದ್ದರೆ ಓಡಿಬಂದು ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದ ಎಂದು ಧೈರ್ಯ ಹೇಳಿದನು. ನಲ್ಲತಂಬಿ ತಂಗಿ ಮತ್ತು ಮಕ್ಕಳನ್ನು ತನ್ನ ಮನೆಗೆ ಕಳುಹಿಸಿಕೊಟ್ಟನು.

ಮೂಳಿ ಅಲಂಗಾರಿಯ ಕಾಟ: ನಲ್ಲತಂಗಾಳ್ ಬರುವುದನ್ನು ಅರಿತ ಇವಳು ಅವರನ್ನು ತನ್ನ ಮನೆಗೆ ಸೇರಿಸಲಿಲ್ಲ. ಸೇವಕರಿಗೆ ಬಾಗಿಲನ್ನು ಹಾಕುವಂತೆ ಆಜ್ಞೆ ಇತ್ತಳು. ತಾನು ಹಳೆಯ ಸೀರೆ ಉಟ್ಟು ದುಃಖದಿಂದ ನೆಲದ ಮೇಲೆ ಒರಗಿದಳು. ನಲ್ಲತಂಗಾಳ್ ಎಷ್ಟು ಬೇಡಿದರೂ ಅತ್ತಿಗೆ ಬಾಗಿಲು ತೆಗೆಯಲಿಲ್ಲ.

ಪತಿವ್ರತೆಯು ನಾನಾಗಿದ್ದರೆ ಹತ್ತು ಜನರು ಅವರಾಗಿದ್ದರೂ
ಸದ್ಗುಣಿ ನಾನಾಗಿದ್ದರೆ ನನಗೋರ್ವನೆ ಗಂಡನಾಗಿದ್ದರೆ
ತಾಳ ಹಾಕಿ ಸರಪಳಿ ತಾನೇ ತೆರಯಲಿ

ಎಂದು ನಲ್ಲತಂಗಾಳ್ ಮೊರೆ ಇಟ್ಟಳು. ಆಗ ಬಾಗಿಲು ತೆರೆಯಿತು. ಒಳ ಹೋದ ಮಕ್ಕಳು ಮಾವಿನ ಹಣ್ಣು ತೆಂಗಿನ ಕಾಯಿಯನ್ನು ಹಸಿವಿನಿಂದ ತೆಗೆದುಕೊಂಡರು. ಸಾವಿರ ಹಣ್ಣುಗಳಿದ್ದರೂ ಅತ್ತಿಗೆ ಅದನ್ನು ಕಿತ್ತುಕೊಂಡು ಕೊಳೆತ ಹಣ್ಣುಗಳನ್ನು ಕೊಟ್ಟಳು. ಹೀಗೆ ಇರುವಾಗ ೧೨ವರ್ಷದ ಮುಗ್ಗಿದ ರಾಗಿಯನ್ನು ಅಡುಗೆಗಾಗಿ ಅತ್ತಿಗೆ ನೀಡಿದಳು. ನಲ್ಲತಂಗಾಳ್ ಬಾಳೆ ಮರವನ್ನೇ ಸೀಳಿ ‘ನಾನ್‌ಪತ್ತಿನಿಯಾನಾಲ್ ಪಟ್ರಿ ಎರಿಯ ವೇಂಡುಮ್’ (ನಾನು ಪತಿವ್ರತೆಯಾದರೆ ಹತ್ತಿ ಉರಿಯಲಿ) ಎಂದಳು. ತಕ್ಷಣ ಬಾಳೆ ದಿಂಡು ಉರಿದು ಅದರಿಂದ ಅಡುಗೆ ಸಿದ್ಧವಾಯಿತು. ಅತ್ತಿಗೆ ಹುಣ್ಣಿಮೆ ಬರುವವರೆಗೂ ಈ ಊಟವನ್ನು ಕೊಡುವುದಿಲ್ಲವೆಂದಳು. ಇದರಿಂದ ಮನನೊಂದು ಸುತ್ತಮುತ್ತಲಿನವರಿಗೆ ಅಣ್ಣನಿಗೆ ಹೇಳಿರೆಂದು ನಲ್ಲತಂಗಾಳ್ ಕಾಡಿಗೆ ಹೋದಳು.

ಮಕ್ಕಳನ್ನು ಬಾವಿಗೆ ದೂಡುವುದು: ಕಾಡಿಗೆ ಬಂದ ನಲ್ಲತಂಗಾಳ್ ಅನಾಥರಾಗಿ ಬದುಕಿರುವ ನಮ್ಮನ್ನು ಕಂಡರೆ ಪ್ರಪಂಚ ನಗುತ್ತದೆ. ಹಾಗಾಗಿ ಸಾಯುವುದೇ ಮೇಲೆಂದು ಬಾವಿಯನ್ನು ಹುಡುಕುತ್ತ ಹೊರಟಳು. ದಾರಿಯಲ್ಲಿ ಆಡು ಮೇಯಿಸುವ ಮಕ್ಕಳನ್ನು ಕೇಳಲು ಅವರು ಬತ್ತಿದ ಬಾವಿಯ ಸುಳಿವು ಹೇಳಿದರು. ಅಲ್ಲಗಿಎ ಬಂದ ನಲ್ಲತಂಗಾಳ್ ತನ್ನ ದುಸ್ಥಿತಿಗೆ ದುಃಖಿಸಿದಳು. ತಾವರೆ ಎಲೆಯಮೇಲೆ ತನ್ನ ಮಾಂಗಲ್ಯ ಸರವನ್ನು ಇಟ್ಟು ಅದು ಕಲ್ಲಾಗಿ ಹೋಗಲೆಂದು ಬೇಡಿದಳು. ದೇವರ ಕೃಪೆಯಿಂದ ತಾಳಿ ಕಲ್ಲಾಯಿತು. ಬಾವಿಯನ್ನು ಪ್ರದಕ್ಷಿಣೆ ಮಾಡಿ ತಾನೇ ಹೆತ್ತ ಮಾಡಿ ಮಕ್ಕಳನ್ನು ಬಾವಿಗೆ ದೂಡಿದಳು.

ಮಕ್ಕಳ ಮಾತು: ಆ ಮಕ್ಕಳಲ್ಲಿ ಬದುಕುಳಿದ ಹಿರಿಯ ಮಗ ತನ್ನನ್ನು ಸಾಯಿಸಬೇಡವೆಂದು ತಾಯಿಯನ್ನು ಕೋರಿದನು. ‘ಅಮ್ಮಾ ಎನ್ನೈ ಕೊಲ್ಲಾದೇ. ತಾಯಾರ್ ಪೆಯರ್ ಚೊಲ್ಲ ತಲ್ಲೈಚ್ಚನ್‌ನಾನಿರುಪ್ಪೆ’ (ಅವ್ವ! ನನ್ನನ್ನು ಸಾಯಿಸಬೇಡ ತಾಯಿಯ ಹೆಸರು ಹೇಳಲು ಹಿರಿಯಮಗ ನಾನಿರುತ್ತೇನೆ) ‘ನಿನಗೆ ಎಳ್ಳುನೀರು ಬಿಡುತ್ತೇನೆ. ದನ ಮೇಯಿಸಿ ಆದರೂ ನಿನಗೆ ಅಂಬಲಿ ಹಾಕುತ್ತೇನೆ’ ಎಂದನು.

ತಪ್ಪಿ ಬದುಕಿದರೂ ತಬ್ಲಿ ಮಗ ಎನ್ನುತ್ತಾರೆ
ಕಂಡವರು ನಗ್ತಾರೆ ಹಣವುಳ್ಳವರು ಹಾಸ್ಯ ಮಾಡ್ತಾರೆ

ಎಂದು ಹೇಳಿ ನಲ್ಲತಂಗಾಳ್ ಅವನನ್ನು ನೂಕಿ ತಾನೂ ಸತ್ತಳು.

ಇತ್ತ ಮನೆಗೆ ಬಂದ ನಲ್ಲತಂಬಿ ತಂಗಿಯನ್ನು ಕೇಳಲು ಮೂಳಿ ಅಲಂಗಾರಿ ನಾನು ಅವರಿಗೆ ಎಲ್ಲ ಉಪಚಾರವನ್ನು ಮಾಡಿ ಮಂಚದ ಮೇಲೆ ಮಲಗಿಸಿದ್ದೆ ಎನ್ನುತ್ತಾಳೆ. ನಲ್ಲತಂಬಿ ಇತರರಿಂದ ತಂಗಿಯ ವಿಚಾರ ತಿಳಿದು ದುಃಖಿತನಾದನು. ಬಾವಿಯ ಸಮೀಪ ಬಂದ ನಲ್ಲತಂಬಿ ಸತ್ತ ನಲ್ಲತಂಗಾಳ್ ಮತ್ತು ಅವಳ ಮಕ್ಕಳ ದೇಹಗಳನ್ನು ಗಂಧದ ಮರಗಳಿಂದ ಅಂತ್ಯಸಂಸ್ಕಾರ ಮಾಡಿದನು.

ನಲ್ಲತಂಬಿ ತನ್ನ ಮಕ್ಕಳಿಗೆ ಮದುವೆ ಮಾಡಿಸಲು ನಿರ್ಧರಿಸಿದನು. ಅದಕ್ಕಾಗಿ ದೊಡ್ಡ ಚಪ್ಪರ ಹಾಕಿಸಿದನು. ಈ ಚಪ್ಪರ ಮುರಿದು ಬಿದ್ದು ಮೂಳಿ ಅಲಂಗಾರಿ ಸಂಬಂಧಿಕರೆಲ್ಲರೂ ಸತ್ತು ಹೋದರು. ಮುಂದೆ ಮೂಳಿ ಅಲಂಗಾರಿಗೆ ಕೇಶ ಮುಂಡನ ಮಾಡಿ ಕತ್ತಿಗೆ ಎಕ್ಕದ ಹೂವಿನ ಹಾರ ಹಾಕಿ ಕತ್ತೆಯ ಮೇಲೆ ಮೆರೆವಣಿಗೆ ಮಾಡಿಸಿದರು. ಕೊನೆಗೆ ಅವಳನ್ನು ಸುಣ್ಣದ ಗೂಡಿನ ಮನೆಗೆ ದೂಡು ಸುಟ್ಟು ಹಾಕಿದನು.

ಮುಕ್ತಾಯ: ತವರು ಮನೆಗೆ ಹೋದ ಹೆಂಡತಿಯನ್ನು ಕರೆತರಲು ಕಾಶಿರಾಜನು ಬಂದನು. ಇತ್ತ ಹೆಂಡತಿ ಮಕ್ಕಳು ಸತ್ತವಿಚಾರ ಕೇಳಿ ತಾನೂ ದುಃಖದಿಂದ ತನ್ನ ಖಡ್ಗದಿಂದಲೇ ಶಿರಚ್ಛೇದ ಮಾಡಿಕೊಂಡನು.

ಈ ಕಥೆಯಲ್ಲಿ ಪತಿವ್ರತಾ ಹೆಂಗಸಿನ ಪ್ರತಿಜ್ಞೆ ನಿಜವಾಗುತ್ತದೆ ಎಂದು ತಿಳಿದುಬರುತ್ತದೆ. ಇಲ್ಲಿ ಅಣ್ಣ ಒಳ್ಳೆಯವನಾದರೂ ಅತ್ತಿಗೆ ಮನಸ್ಸಿನ ಕಠೋರತೆಯನ್ನು ಚಿತ್ರಿಸಲಾಗಿದೆ.

ಪಿ.ಎ.ಎಂ.ಅನುವಾದ ಆರ್. ಎಸ್.

ನಾಗಮಂಡಲ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಕಂಡುಬರುವ ನಾಗಸಂಬಂಧಿ ಆರಾಧನಾತ್ಮಕ ನೃತ್ಯ ಸಂಪ್ರದಾಯ. ಸರ್ಪಗಳ ಬಗೆಗಿದ್ದ ಭಯ ಹಾಗೂ ವಿಸ್ಮಯಗಳು ಆರಾಧನೆಗೆ ಕಾರಣವಾಗಿದೆ ಎನ್ನುವುದು ವಿದ್ವಾಂಸರು ಅಭಿಪ್ರಾಯ. ಅಲ್ಲದೆ ಸರ್ಪ ಫಲೋತ್ಪತ್ತಿಯ ಸಂಕೇತವಾಗಿ ಕೂಡ ಆರಾಧನೆಗೆ ಒಳಪಟ್ಟಿದೆ. ಎಂ. ಗೋವಿಂದ ಪೈ ಅವರು ‘ದಕ್ಷಿಣ ಉತ್ತರ ಕನ್ನಡ ಕರಾವಳಿ ಪ್ರದೇಶಕ್ಕೆ ನಾಗರ ಖಂಡವೆಂದು ಹೆಸರಿತ್ತಲದೆ ಇಲ್ಲಿ ‘ನಾಗ’ರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪ ಕುಲಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚರಣೆಯಾಗಿ ಬಳಕೆಯಾಗುತ್ತಿದ್ದಿರಬೇಕು’ ಎಂದು ಅಭಿಪ್ರಾಯಪಡುತ್ತಾರೆ. ಕರಾವಳಿಯ ಅರಸು ಮನೆತನಗಳಲ್ಲಿ ಒಂದಾಗ ‘ಅಳುಪ’ ಎನ್ನುವ ಪದ ಶೇಷನಿಗೆ ಪರ‍್ಯಾಯ ಪದವಾದ ‘ಅಲುಕು’ ಎನ್ನುವುದರ ಪದ್ಧತಿ ಆಗಿದೆ ಎನ್ನುವುದು ವಿದ್ವಾಂಸರ ವಾದವಾಗಿದೆ. ಶ್ರೀ ಸೋಮವಂಶದ ಅಳುಪ ದೊರೆಗಳ ಶಿಲಾಶಾಸನವೊಂದರಲ್ಲಿ ಸುರುಳಿ ಹಾಕಿ ಕುಳಿತು ಹೆಡೆಬಿಚ್ಚಿದ ಹಾವಿನ ಚಿತ್ರ ಮೇಲಿನ ವಿದ್ವಾಂಸರ ವಾದಗಳನ್ನು ಪುಷ್ಟೀಕರಿಸಿದೆ.

ಎ.ವಿ. ನಾವಡ ಅವರು ನಾಗನು, ವಿವಿಧ ದೇವತೆಗಳೊಂದಿಗೆ ಸಮಾವೇಶಗೊಂಡು ಪೂಜಿತವಾಗುವುದು ಒಂದು ವಿಶಿಷ್ಟ ಸಂಗತಿ. ವಿಷ್ಣು (ಅನಂತಪದ್ಮನಾಭ) ಶಿವ (ಅನಂತೇಶ್ವರ), ಶಕ್ತಿ ಗಣಪತಿ, ಯಕ್ಷ ಸಮಾವೇಶಗೊಂಡು ಆರಾಧ್ಯವಾಗಿರುವುದು ಕಂಡು ಬರುತ್ತದೆ. ನಾಗ ಮತ್ತು ಸ್ಕಂದರು ಕರಾವಳಿಯ ಜಿಲ್ಲೆಗಳಲ್ಲಿ ಅಭಿನ್ನರಾಗಿ ಆರಾಧನೆಗೊಳ್ಳುವುದನ್ನು ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ (ಪುತ್ತೂರು ತಾಲೂಕು) ಮತ್ತಿತರೆಡೆಗಳಲ್ಲಿ ಗುರುತಿಸಬಹುದು. ಜಿಲ್ಲೆಯ ಕನ್ನಡ ಪ್ರದೇಶದ ನಾಡವರ ಮನೆಯ ಆವರಣದೊಳಗೆ ಆರಾಧ್ಯದೈವ ಸ್ವಾಮಿ (ನಾಗ)ಯನ್ನು ಹುತ್ತದ, ಕಲಶದ ರೂಪದಲ್ಲಿ ಗುರುತಿಸಿ ಆರಾಧಿಸಲಾಗುತ್ತದೆ” ಎಂದಿದ್ದಾರೆ. ಕರಾವಳಿ ಕರ್ನಾಟಕದ ತುಳುನಾಡು ಹಾಗೂ ಕನ್ನಡ ಪ್ರದೇಶಗಳೆರಡರಲ್ಲೂ ನಾಗಾರಾಧನೆ ಕಂಡುಬರುತ್ತದೆ. ಬ್ರಹ್ಮನನ್ನು ನಾಗನೊಂದಿಗೆ ಸಮೀಕರಿಸಿ, ಸಂತಾನಾಭಿವೃದ್ಧಿಯ ದೇವರೆಂದು ನಂಬಲಾಗುತ್ತಿದೆ. ನಾಗಬ್ರಹ್ಮನ ಚಿತ್ರಣಗಳು ಸರ್ಪರೂಪಿಯಾಗಿಯೂ, ಮೇಲ್ಭಾಗದಲ್ಲಿ ರಾಜದಂಡ ಅಥವಾ ಖಡ್ಗವನ್ನು ಹಿಡಿದ ಮನುಷ್ಯನಾಗಿಯೂ ಇರುವುದು ಕಂಡುಬರುತ್ತವೆ. ‘ನಾಗ ಹಾಗೂ ಬ್ರಹ್ಮನ ಚಿತ್ರಣಗಳು ಅರಸನಿಗಿರುವ ಎರಡು ಪರಸ್ಪರ ಪೂರಕ ಕರ್ತವ್ಯಗಳಾದ ರಕ್ಷಣೆ ಹಾಗೂ ಸಂಪತ್ ಅಭಿವೃದ್ಧಿಯನ್ನು ಸೂಚಿಸುತ್ತವೆ’ ಎಂದು ಪೀಟರ್ ಜೆ. ಕ್ಲಾಸ್ ಅಭಿಪ್ರಾಯಪಡುತ್ತಾರೆ.

ಆದಿಮದಲ್ಲಿ ನಾಗಾರಾಧನೆಯನ್ನು ಬ್ರಾಹ್ಮಣೇತರರೇ ಮಾಡುತ್ತಿದ್ದರೆಂದು ಮೌಖಿಕ ದಾಖಲೆಗಳು ದೃಢಪಡಿಸಿವೆ. ಬಂಟ, ನಾಡವರ ಮನೆತನಗಳ ಆಡಳಿತಕ್ಕೆ ಒಳಪಟ್ಟ ದೈವವೆ. ಬ್ರಾಹ್ಮನ ಅರ್ಚಕರೇ ಪೂಜಿಸುತ್ತಿರುವುದನ್ನು ಗಮನಿಸಬಹುದು. ‘ನಾಗಶಿಲೆ’ಗಳು ಇರುವ ತೋಪುಗಳಿಗೆ ನಾಗಬನಗಳೆಂದು ಕರೆಯುತ್ತಾರೆ. ನಾಗಬನದಲ್ಲಿ ವಟ, ಅಶ್ವತ್ಥ ಹಾಗೂ ಬೈಗೆ ಮುಂತಾದ ಮರಗಳಿರಬೇಕೆಂದು ನಿಯಮವಿದೆ. ಬಯಲು ನಾಡಿನ ಕಡೆಗಳಲ್ಲಿ ‘ನಾಗರಕಲ್ಲು’ ಎಂದು ಕರೆಯಲಾಗುತ್ತದೆ. ಸಾಕ್ಷಿಯಾಗಿ ಅರಳಿಮರದ ಕೆಳಗೆ ಪ್ರತಿಷ್ಠಾಪಿಸಲಾಗಿರುವ ನಾಗರಕಲ್ಲುಗಳನ್ನು ನೋಡಬಹುದು. ಅಲ್ಲದೆ ನಾಗನ ಆವಾಸಸ್ಥಾನವಾದ ಹುತ್ತವನ್ನು ಪೂಜಿಸುವುದು ನಾಡಿನಾಯಂತ ಕಾಣಬಹುದು. ನಾಗಾರಾಧನೆ ಅತ್ಯಂತ ಪ್ರಾಚೀನ ಪದ್ಧತಿಯಾಗಿದ್ದು, ಇಂದಿನ ಹಲವು ದೈವಗಳ ಮೂಲಸ್ಥಾನವಾಗಿದೆ. ಜನರು ಕಾಲಾನಂತರದಲ್ಲಿ ಹುತ್ತಗಳ ಮೇಲೆ ಬಿಂಬಗಳನ್ನು ಪ್ರತಿಷ್ಠಾಪಿಸಿದ್ದಾರೆ. ಫಲದಾಯಿತ್ವಕ್ಕೆ ಸಂಕೇತವಾದ ಯೋನಿ(ಹುತ್ತ) ಹಾಗೂ ಸೃಷ್ಟಿಗೆ ಕಾರಣವಾದ ಲಿಂಗ (ಶಿಶ್ನ)ಗಳನ್ನು ಬೆಸೆಯುವ ಮೂಲಕ ಪುರುಷ ಮತ್ತು ಪ್ರಕೃತಿಯರಲ್ಲಿ ಸಮನ್ವಯತೆಯನ್ನು ತರಲಾಗಿದೆ. ಹರಕೆಯ ರೂಪದಲ್ಲಿ ಯಾವ ಜಾತಿಯರು ಬೇಕೆಂದರು ಮಾಡಬಹುದು. ಆದರೆ ಮಂಡಲದ ನಿರ್ವಹಣೆ ಬ್ರಾಹ್ಮಣರದ್ದೆ ಆಗಿರುತ್ತದೆ.

13_70A_DBJK-KUH

ವೈದ್ಯರು ಎನ್ನುವ ಬ್ರಾಹ್ಮಣ ಪಂಡದವರು ನಾಗಾರಾಧನೆ ವಿಧಿವಿಧಾನಗಳ ಹುಡಿ ಸೇವೆ, ಮಂಡ್ಲಭೋಗ, ಮಂಡ್ಲಸೇವೆ ಎಂದು ಕರೆಯುತ್ತಾರೆ. ಕೆಂಪು, ಕಪ್ಪು, ಹಳದಿ, ಬಿಳಿ ಹಾಗೂ ಹಸಿರು ಪಂಚವರ್ಣದ ಹುಡಿಯಿಂದ ಹೆಡೆಯುಳ್ಳ ಸರ್ಪನ ಸುರುಳಿ ಚಿತ್ತಾರ ಬರೆಯುತ್ತಾರೆ. ನಾಗನಿಗೆ ನಾಗಪಂಚಮಿ ಅಲ್ಲದೆ ಆಶ್ಲೇಷ, ಬಲಿ, ಅನಂತವ್ರತ ಇತ್ಯಾದಿ ವಿಧಿ ಆಚರಣೆಗಳನ್ನು ನಡೆಸುತ್ತಾರೆ. ಇದಕ್ಕೆ ಸಮಾನಾಂತರವಾಗಿ ಪಾಣರೆಂಬ ದವಿತ ವರ್ಗದವರಿಂದ ಸ್ವಾಮಿ(ನಾಗ)ಗೆ ಡಕ್ಕೆ ಬಲಿಯೂ, ಮೇರರೆಂಬ ಇನ್ನೊಂದು ಜನವರ್ಗದವರಿಂದ ಕಾಡ್ಯ(ಕಾಳಿಂಗಸರ್ಪ)ನಿಗೆ ಕಾಡ್ಯನಾಟ ಜರುಗುವುದನ್ನು ಗಮನಿಸಬಹುದು.

‘ನಾಗಮಂಡಲ’ದ ಚಿತ್ತಾರ ಬರೆಯುವುದಕ್ಕಾಗಿ ವಿಶಾಲವಾದ ಬಯಲಿನಲ್ಲಿ ಎತ್ತರಿಸಿದ ವೇದಿಕೆಯನ್ನು ನಿರ್ಮಿಸಲಾಗುತ್ತದೆ. ನಾಗಮಂಡಲದ ಪ್ರಮಾಣಕ್ಕನುಗುಣವಾಗಿ ರಂಗದ ಅಳತೆ ಇರುತ್ತದೆ. ಪೂರ್ಣಮಂಡಲದಲ್ಲಿ ಹದಿನಾಲ್ಕು ಹೆಡೆಯ ಹದಿನಾರು ಪವಿತ್ರ ಗಂಟುಗಳ ರಚನೆಯನ್ನು, ಏಳು ಹೆಡೆಯ ನಾಗನ ಎಂಟು ಪವಿತ್ರ ಗಂಟುಗಳ ರಚನೆಯು ಅರ್ಧ ಮಂಡಲದಲ್ಲಿಯೂ, ಕಾಲು ಮಂಡಲದಲ್ಲಿ ಐದು ಹಡೆಯ ನಾಗನ ನಾಲ್ಕು ಪವಿತ್ರ ಗಂಟುಗಳನ್ನೂ ಕಾಣಬಹುದು. ಮಂಡಲಗಳನ್ನು ಕ್ರಮವಾಗಿ ಚೌಕಾಕಾರ, ಅಷ್ಟಕೋನ, ಷಡ್ದಳಕೋನಾಕಾರದಲ್ಲಿ ಬಿಡಿಸುತ್ತಾರೆ. ಮಂಡಲದ ಹೊರಚೌಕಟ್ಟನ್ನು ಹಳದಿ ಬಣ್ಣದ ಹುಡಿಯಿಂದ ರೇಖಿಸಿ ಮಂಡಲದ ಆಧಾರ ರೇಖೆಯನ್ನು ಬರೆಯುತ್ತಾರೆ. ಹಾವಿನ ರೂಪವನ್ನು ಹಳದಿ ಬಣ್ಣದಿಂದ ಬರೆದು, ಕಣ್ಣಿಗೆ ಕೆಂಪು ಬಣ್ಣ ಬಳಸುತ್ತಾರೆ. ಪವಿತ್ರದೊಳಗಿನ ಸುರುಳಿಗಳ ‘ಹೊಗ್ಗು’ ಹೊರಡುವಿಕೆಯನ್ನು ಕಪ್ಪು ಬಣ್ಣದಲ್ಲಿ ಬರೆಯುತ್ತಾರೆ. ನಾಗನ ಕಾಲುಗಳನ್ನು ಬಿಳಿ ಬಣ್ಣದಿಂದ ರೇಖಿಸುತ್ತಾರೆ. ಹೆಡೆಯ ಉಬ್ಬನ್ನು ಹಸಿರು, ಬಿಳಿ, ಅರಿಸಿನ, ಕಪ್ಪು, ಕೆಂಪು ಬಣ್ಣಗಳಿಂದ ಅಲಂಕರಿಸುತ್ತಾರೆ. ಅದರ ಪಕ್ಕದಲ್ಲಿ ಮರಿ ನಾಗಗಳನ್ನು, ಬ್ರಹ್ಮ, ಯಕ್ಷ, ಗಣಪತಿಯರನ್ನು ಬರೆಯುತ್ತಾರೆ. ಮಂಡಲದ ಸುತ್ತು ಚೌಕಟ್ಟಿನಲ್ಲಿ ಹದಿನಾರು ಕಾಲುದೀಪಗಳನ್ನು ಬೆಳಗುತ್ತಾರೆ. ಎಳನೀರು, ಹಿಂಗಾರ, ಅಡಕೆ, ವೀಳ್ಯೆದೆಲೆ, ಹಣ್ಣಿನ ರಾಶಿ ಇತ್ಯಾದಿಗಳನ್ನು ಮಂಡಲದ ಪಕ್ಕದಲ್ಲಿ ಇಡುತ್ತಾರೆ. ನಾಗಮಂಡಲದ ವೇದಿಕೆಯನ್ನೂ ವಸ್ತ್ರದ ಜಾಲರಿಗಳಿಂದಲೂ, ತೆಂಗಿನ ಚಿಗುರುಗರಿಗಳಿಂದಲೂ, ತಾವರೆ ಮೊಗ್ಗು, ಗಿಳಿ ಮುಂತಾದ ರಚನೆಗಳಿಂದ ಶೃಂಗರಿಸುತ್ತಾರೆ. ಇದನ್ನು ‘ಬನ’ ಎಂದು ಕರೆಯುತ್ತಾರೆ. ದೇವತೆಗಳು ನಾಗಮಂಡಲದಲ್ಲಿ ಕುಳೀತು ನೋಡುತ್ತಾರೆಂದು ನಂಬಲಾಗುತ್ತಿದೆ. ಅನ್ನಸಂತರ್ಪನೆ ನಾಗಮಂಡಲದ ವಿಶೇಷ ಧಾರ್ಮಿಕ ಕ್ರಿಯಾ ವಿಧಾನಗಳಲ್ಲಿ ಒಂದು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಅನ್ನವನ್ನು ಪ್ರಸಾದವೆಂದು ಭಕ್ತಿಯಿಂದ ಸ್ವೀಕರಿಸುತ್ತಾರೆ. ಪ್ರಸಾದಕ್ಕೆ ಬೇರೆ ಬೇರೆ ಜಾತಿಯವರಿಗಾಗಿಯೇ ಪ್ರತ್ಯೇಕ ಚಪ್ಪರವಿರುವುದನ್ನು ಗಮನಿಸಬಹುದು. ಅನ್ನ ಸಂತರ್ಪಣೆ ಆದ ಮೇಲೆ ನಾಗನ ಸೇವೆಯಾಗುತ್ತದೆ. ಇದನ್ನು ‘ಹಾಲಿಟ್ಟುಸೇವೆ’ ಎಂತಲೂ ಕರೆಯುತ್ತಾರೆ. ಅರಿಸಿನ, ಅಕ್ಕಿಹಿಟ್ಟು ಮತ್ತು ಹಾಲು ಸೇರಿಸಿದ ಆಹಾರವನ್ನು ನಾಗನ ಕಲ್ಲುಗಳಿಗೆ ಅಭಿಷೇಕ ಮಾಡಿ ಹಾಲು ಹಣ್ಣುಗಳ ನೈವೇದ್ಯ ಅರ್ಪಿಸುತ್ತಾರೆ. ಈ ಎಲ್ಲಾ ಕ್ರಿಯಾ ವಿಧಿಗಳನ್ನು ಬ್ರಾಹ್ಮಣ ಪುರೋಹಿತರೇ ಮಾಡುತ್ತಾರೆ. ನಾಗಮಂಡಲದ ಪಕ್ಕದ ಬನದಲ್ಲಿ ಸೂರ‍್ಯಾಸ್ತವಾದ ಬಳಿಕವೆ ನಡೆಯುವುದು ಕುತೂಹಲಕರವಾಗಿದ್ದು, ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಮಂಗಳಾರತಿ ಮಾಡುವಾಗ ನಾಗಪಾತ್ರಿಗೆ ಆವೇಶ ಬರುತ್ತದೆ. ಕೆಂಪು ಕಚ್ಚೆ ಹಾಕಿ ಕೆದರಿದ ತಲೆಕೂದಲನ್ನು ಹೊಂದಿ, ಹಾವಿನಂತೆ ಬುಸುಗುಟ್ಟುತ್ತಾ, ಕೈಯಲ್ಲಿ ಹಿಂಗಾಳವನ್ನು ಹೊಂದಿ, ಹಾವಿನಂತೆ ಬುಸುಗುಟ್ಟುತ್ತಾ, ಕೈಯಲ್ಲಿ ಹಿಂಗಾಳದವನ್ನು ಹಿಡಿದು ಮುಖಕ್ಕೆ ಒತ್ತಿಕೊಳ್ಳುತ್ತಿರುತ್ತಾನೆ. ವೈದ್ಯರು ಢಕ್ಕೆ ಬಾರಿಸಿ, ಹಾಡಿ, ಮಂಡಲ ಚೆನ್ನಾಗಿ ನಡೆಸುವಂತೆ ಪ್ರಾರ್ಥನೆ ಮಾಡುತ್ತಾರೆ. ಎಲ್ಲರು ವಾದ್ಯಗಳೊಂದಿಗೆ ನಾಗಮಂಡಲ ನಡೆಯುವ ಸ್ಥಳಕ್ಕೆ ಬರುತ್ತಾರೆ. ಅರ್ಧನಾರಿ ವೈದ್ಯನು ಕೆಂಪುಬಣ್ಣದ ಚೌಕುಳಿ ಸೀರೆ, ಕಾಲಿಗೆ ಗೆಜ್ಜೆ, ಎದೆಗೆ ತೋಳಿಲ್ಲದ ರವಿಕೆ, ಕೊರಳಲ್ಲಿ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಜರಿಪಟ್ಟೆಯಿರುವ ಮುಂಡಾಸು, ಅದರ ತುದಿಗೆ ಕೋರೆ ಬಂಗಾರ ಧರಿಸಿರುತ್ತಾನೆ. ಹಾಡುಗಾರ ವೈದ್ಯರು ಬಿಳಿದೋತರದ ಕಚ್ಚೆ ತೊಟ್ಟು ಬಿಳಿ ಅಂಗಿ ಧರಿಸಿರುತ್ತಾರೆ.

ನಾಗಪಾತ್ರಿಯು ಅರ್ಚಕರಿಂದ ತೀರ್ಥ ಎರೆಯಿಸಿಕೊಂಡು ಮುಖಮೈಗೆ ಉಜ್ಜಿಕೊಳ್ಳುತ್ತಾ, ನಡುಗುತ್ತಾ, ಬುಸುಗುಟ್ಟುತ್ತಾ ಚಲಿಸುತ್ತಾನೆ. ಅರ್ಧನಾರಿ ವೇಷತೊಟ್ಟವನು ಕೈಯಲ್ಲಿ ಕಂಚಿನ ಢಕ್ಕೆ ಹಿಡಿದಿರುತ್ತಾನೆ. ಇನ್ನಿಬ್ಬರು ಹಾಡುಗಾರ ವೈದ್ಯರು ಮರದ ಢಕ್ಕೆ ಹಾಗೂ ಕಂಚಿನ ತಾಳ ಬಾರಿಸುತ್ತಾ ಹಾಡುತ್ತಾರೆ. ಅರ್ಧನಾರಿ ವೇಷದ ವೈದ್ಯನು ಕಂಚಿನ ಢಕ್ಕೆಯನ್ನು ಬಾರಿಸುತ್ತಾ, ಹಾಡನ್ನು ಪುನರುಚ್ಚರಿಸುತ್ತಾ ಬಗೆಬಗೆಯಲ್ಲಿ ನೃತ್ಯ ಮಾಡುತ್ತಿರುತ್ತಾನೆ. ನಾಗಪಾತ್ರಿಯು ಮೊದಲಿಗೆ ನಿಧಾನವಾಗಿ, ಗಂಭೀರವಾಗಿ, ಹೆಜ್ಜೆ ಹಾಕತೊಡಗುತ್ತಾನೆ. ನಾಗನಂತೆ ಸುತ್ತಿಕೊಳ್ಳುತ್ತಾ, ಕುಪ್ಪಳಿಸುತ್ತಾ, ಬುಸುಗುಟ್ಟುತ್ತಾ, ಮಂಡಲವನ್ನು ಸುತ್ತುತ್ತಾನೆ. ಕುಣಿತದಲ್ಲಿ ಕಲಹ, ಸ್ನೇಹ, ದೀನತೆ, ಆಕ್ರೋಶಗಳನ್ನು ಗಮನಿಸಬಹುದು. ಬಹುಬಗೆಯ ಭಾವ ಪ್ರದರ್ಶನದಲ್ಲಿ ಭಾವರಸಾಭಿ ವ್ಯಕ್ತಿಯನ್ನು ಕಾಣಬಹುದು.

ನಾಗಮಂಡಲದ ಹಾಡುಗಳು ಸ್ತುತಿರೂಪದಲ್ಲಿವೆ. ಇವುಗಳನ್ನು ‘ಹೊಗಳಿಗಳು’ ಎಂದು ಕರೆಯುತ್ತಾರೆ. ‘ಪಾತಾಳವು ನಾಗನರಮನೆಯ ಪ್ರೀತಿಯಿಂದಲಿ ವಾಸವಿರುತಾಲಿದ್ರೀ ಭೂತಳಕ್ಕೆ ತಾನು ಬರಬೇಕೆಂದು, ಸಂಪ್ರೀತಿಯೊಳು ಮರಿ ಮಟ್ಟೆ ಕೂಡಿಕೊಂಡು, ನಾಗರಥ, ನಾಗವಾಜಿ ಏರಿಕೊಂಡು, ನಾಗಾಭರಣ ಧರಿಸಿಕೊಂಡು, ಹಿಡಿವ ಕಹಳೆಯ ಕೊಂಬು, ಬಡಿವ ಭೇರಿಯ ವಾದ್ಯ ಅಡಿಗಡಿಗೆ ಹೊಡೆವ ತಮ್ಮಟೆ, ಹೆಗ್ಗಾಳೆ, ತುಡುಬು, ಗಡೆಬಡೆ ಭೇರಿ ಹೊಡೆಸಿಕೊಂಡು ಹರುಷದಿ ಪಯಣ ಬರುತಾಲಿವು’ ಇತ್ಯಾದಿಯಾಗಿ ಹಾಡುತ್ತಾರೆ. ಅರ್ಧನಾರಿ ವೇಷಧಾರಿ ಕೆಲವೊಮ್ಮೆ ಮಂಡಿಯೂರಿ ನಾಗನಂತೆ ಮೈಯನ್ನು ಬಾಗಿ, ಬಳಕಿ ನೃತ್ಯ ಮಾಡುತ್ತಿರುತ್ತಾನೆ. ಅದನ್ನೆ ನಾಗಪಾತ್ರಿಯು ಅನುಕರಿಸುತ್ತಾನೆ. ನಾಗ ಗಂಟುಹಾಕುವ, ಗಂಟುಬಿಡಿಸುವ ಕ್ರಿಯೆಗಳನ್ನು ಅರ್ಧನಾರಿ ಹಾಗೂ ನಾಗಪ್ರತಿಗಳು ಅಭಿನಯಿಸುತ್ತಾರೆ.

ನಾಗಮಂಡಲದ ನೃತ್ಯ ಕೇರಳದ ಒಟ್ಟಂತುಳ್ಳಲ್, ಮೋಹಿನಿ ಆಟ್ಟಂ, ಕೂಡಿಯಾಟ್ಟಂ ಹಾಗೂ ಕಥಕ್ಕಳಿ ನೃತ್ಯಗಳನ್ನು ಹೋಲುತ್ತದೆ. ಭಾವಾಭಿನಯಗಳಿಂದ ಕೂಡಿದ ಇದರಲ್ಲಿ ಮಾತುಗಾರಿಕೆ ಇಲ್ಲ. ಪ್ರಕೃತಿಯ ಗೂಢತೆಯನ್ನು, ಅದೃಶ್ಯ ಶಕ್ತಿಗಳನ್ನು ಕುರಿತ ಭಯ, ಅವುಗಳನ್ನು ಒಲಿಸಿ, ಸಂತೃಪ್ತಗೊಳಿಸುವ ಆಶಯಗಳನ್ನು ಕಾಣಬಹುದಾಗಿದೆ.

ಎಸ್.ಸಿ.ಆರ್.

 

ನಾಗಾರಾಧನ ತೆಲುಗರ ಆರಾಧನಾ ಪದ್ಧತಿಗಳಲ್ಲಿ ಒಂದು. ಹಾವಿಗೆ ನಾಗ, ಸರ್ಪ, ಉರಗ, ಭೋಗ, ಫಣಿ ಇತ್ಯಾದಿ ಪರ್ಯಾಯ ನಾಮಗಳಿವೆ. ಗಿಡ, ಬೆಟ್ಟ ಹುತ್ತಗಳನ್ನು ನಂಬಿ ಪೂಜಿಸಿದವರಿಗೆ ದೇವತೆಗಳ ರಕ್ಷಣೆಯಿರುವುದೆಂದು ಜಾನಪದರ ನಂಬಿಕೆ. ಹುತ್ತಹಾವುಗಳ ಆವಾಸಸ್ಥಾನ. ಸಾಮಾನ್ಯವಾಗಿ ಹುತ್ತಗಳು ಊರಿನ ಹೊರಭಾಗದಲ್ಲೋ, ದೇವಾಲಯಗಳಲ್ಲೋ, ಹೊಲಗದ್ದೆಗಳಲ್ಲೊ ಬಯಲು ಪ್ರದೇಶದಲ್ಲೊ ಇರುತ್ತವೆ. ಗ್ರಾಮಗಳಲ್ಲಿ ಹುತ್ತಗಳು ಸಾಮಾನ್ಯವಾಗಿ ಎಲ್ಲಮ್ಮನ ದೇವಾಲಯದಲ್ಲೋ ಊರಿನ ಹೊರಭಾಗದ ಪ್ರಾಂತ್ಯಗಳಲ್ಲೊ, ಹೊಲಗಳಲ್ಲೊ, ಇರುತ್ತವೆ. ಇಷ್ಟೇ ಅಲ್ಲದೆ ಬೇವಿನ ಮರದ ಬುಡುದಲ್ಲೋ, ಅರಳಿಮರದ ಬುಡದಲ್ಲಿ ನಾಗವಿಗ್ರಹಗಳು ಇರುತ್ತವೆ. ನಾಗಪಂಚಮಿ, ನಾಗರಚತುರ್ಥಿ, ಸುಬ್ರಹ್ಮಣ್ಯಸ್ವಾಮಿ ಷಷ್ಠಿಯಂತಹ ಪ್ರತ್ಯೇಕವಾದ ನಾಗಪೂಜೆಗೆ ಸಂಬಂಧಿಸಿದ ಹಬ್ಬಗಳ ಸಂದರ್ಭಗಳಲ್ಲಿ ಹುತ್ತಕ್ಕೆ ಹಾಲನ್ನು ಹಾಕುವ ಆಚರಣೆ ಇದೆ. ಆ ಹಾಲನ್ನು ಹಾವುಗಳು ಕುಡಿದು ತಮ್ಮನ್ನು ದಯೆಯಿಂದ ಕಾಪಾಡುತ್ತವೆಯೆಂಬ ವಿಶ್ವಾಸ ಜನರಲ್ಲಿದೆ. ಈ ಹಬ್ಬದ ಸಂದರ್ಭದಲ್ಲಿ ಹಾವುಗಳನ್ನು ಹಿಡಿಯುವ ವೃತ್ತಿಯಾಗಿ ಉಳ್ಳವರು, ಕೋರೆಹಲ್ಲನ್ನು ಕಿತ್ತ ಹಾವುಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಮನೆ ಮನೆ ತಿರುಗುತ್ತಾ, ಮನೆಯವರು ಹಾಕಿದ ಹಾಲನ್ನು ಹಾವುಗಳಿಗೆ ಕುಡಿಸುತ್ತಾ ಭಿಕ್ಷಾಟನೆ ಮಾಡುತ್ತಲಿರುತ್ತಾರೆ. ಹುತ್ತಗಳ ಬಳಿಗೆ ಹೋಗಿ ಹುತ್ತಗಳಲ್ಲಿ ಹಾಲನ್ನು ಹಾಕುವ ಸೌಕರ್ಯ ಇಲ್ಲದವರು ಮನೆಯಲ್ಲೇ ನಾಗಪ್ರತಿಮೆಯನ್ನು ಪ್ರತಿಷ್ಠೆ ಮಾಡಿ, ಇಲ್ಲದಿದ್ದರೆ ಹಾವು ಹಿಡಿಯುವವರ ಹತ್ತಿರವಿರುವ ಬುಟ್ಟಿಗಳಲ್ಲಿನ ಹಾವುಗಳಿಗೆ ಹಾಲು ಹಾಕಿ ತೃಪ್ತಿಪಡುತ್ತಾರೆ.

ನಾಗಪ್ರಸಕ್ತಿ: ನಾಗಜಾತಿಗೆ, ನಾಗಪೂಜೆಗೆ ಭಾರತದೇಶದಲ್ಲಿ ಇರುವ ಪ್ರಾಚೀನತೆ, ಪ್ರಾಮುಖ್ಯ ವಿಶಿಷ್ಟವಾದುದು. ಅತಿ ಪ್ರಾಚೀನವಾದುದೆಂದು ಹೆಸರಿಸಲ್ಪಡುವ ಋಗ್ವೇದದಲ್ಲಿ ಫಣಿಗಣ ಹೆಸರಿಸಲಾಗಿದೆ.

ಅಥರ್ವವೇದದಲ್ಲಿ ಪುರಾಣ ಪ್ರಸಿದ್ಧವಾದ ತಕ್ಷಕ ಮೊದಲಾದ ಸರ್ಪಗಳ ಹೆಸರುಗಳು ಕಂಡುಬರುತ್ತವೆ.

ಪುರಾಣಗಳಲ್ಲಿ ಭೂಮಿಗೆ ಆಧಾರವಾದ ಅನಂತ, ವಾಸುಕಿ ಪುರಾಣಗಳಲ್ಲಿ ಭೂಮಿಗೆ ಆಧಾರದವಾದ ನಾಗಗಳ ಕಥೆಗಳು ಪ್ರತ್ಯೇಕವಾಗಿ ಹೇಳಲ್ಪಟ್ಟಿವೆ. ತೈತ್ತೀರಿಯ ಸಂಹಿತೆಯಲ್ಲಿ ನಾಗಪೂಜಾ ಪದ್ಧತಿ ಹೆಸರಿಸಲಾಗಿದೆ. ಮಹಾಭಾರತ ಕಥೆಗಳಲ್ಲಿ ನಾಗಗಳು ಹೇರಳವಾಗಿ ಕಂಡುಬರುತ್ತವೆ. ಜನಮೇಜಯನನ್ನು ಜನಪತಿಯಾಗಿಸಿದ ಸರ್ಪಯಾಗ ಪ್ರಸಿದ್ಧವಾದುದು. ಜೀಮೂತವಾಹನನ ಕಥೆ ನಾಗ ಗುರುಡ ಜಾತಿಗಳ ವೈರವನ್ನು ಹೋಗಲಾಡಿಸುವ ಕಥೆಯಾಗಿ ಪ್ರಸಿದ್ಧಿ ಹೊಂದಿದೆ. ಸಂಸ್ಕಾರ ಕೌಸ್ತುಭಃನಂತಹ ಕೆಲವು ಮಧ್ಯುಗದ ಸಂಕಲನ ಗ್ರಂಥಗಳಲ್ಲಿ ‘ನಾಗಬಲಿ’ ಎಂಬ ಆಚರಣೆಯ ಬಗೆಗೆ ವರ್ಣಿಸಲಾಗಿದೆ. ಬಿದಿಗೆ (ಚಂದ್ರ ರೇಖೆ ಕಾಣುವುದು) ಅಮಾವಾಸ್ಯೆ, ಪೌರ್ಣಮಿ ಇಲ್ಲವೇ ಆಶ್ಲೇಷೆಯಂದು ಚಂದ್ರನಿರುವ (ಆಶ್ಲೇಷಾ ನಕ್ಷತ್ರಕ್ಕೆ ಸರ್ಪ ಅಧಿಷ್ಠಾನ ದೇವತೆ) ಪಂಚಮಿಯಂದು, ಅಥವಾ ನವಮಿಯಂದು ನಡೆಸುತ್ತಾರೆ. ರಾಹುಕೇತುಗಳು ಸರ್ಪಾಕಾರದಲ್ಲಿ ಇರುತ್ತಾರೆಂಬುದು ನಂಬಿಕೆ. ‘ಕದ್ರುವನಾಗಮಾತ’ ಅನ್ನುವ ಪ್ರಾಮಾಣಿಕವಾದ ವ್ಯಾಕರಣ ಸೂತ್ರ ಏರ್ಪಟ್ಟಿದೆ.

ಮೊಹೆಂಜೊದಾರೋ ಪಳೆಯುಳಿಕೆಗಳಲ್ಲಿ ಅಥೋಭಾಗ ನಾಗ, ಊರ್ಧ್ವಭಾಗ ಮಾನವನಾಗಿ ಇರುವ ನಾಗ ಚಿತ್ರಗಳಿರುವ ಅನೇಕ ಮುದ್ರೆಗಳು ಲಭಿಸಿವೆ. ಇಂದಿಗೂ ಚಿತ್ರಪಟಗಳಲ್ಲಿ, ಸಿನಿಮಾಗಳಲ್ಲಿ ಪೂರ್ತಿಯಾಗಾದರೂ ಇಲ್ಲವೇ ಊರ್ಧ್ವಭಾಗ ಮಾತರವೇ ಮಾನವಾಕಾರದಲ್ಲಿರುವ ಸರ್ಪಗಳು ಕಾಣಸಿಗುತ್ತವೆ.

ಬೌದ್ಧಮತದಲ್ಲಿ ಬುದ್ಧನ ಹಿಂದಿನ ಭಾಗದಲ್ಲಿ ಹೆಡೆ ಬಿಚ್ಚಿ ನೆರಳನ್ನು ನೀಡುತ್ತಿರುವಂತೆ ಇರುವ ವಿಗ್ರಹಗಳು ಕೆತ್ತಲ್ಪಟ್ಟಿವೆ. ಬೌದ್ಧಮತಕ್ಕೆ ಪ್ರತೀಕವಾಗಿ ನಿಂತಿರುವ ಅಮರಾವತಿ ಶಿಲ್ಪಗಳು ಮೊದಲಾದ ಶಿಲ್ಪಗಳಲ್ಲಿ ನಾಗ ಪ್ರತಿಮೆಗಳು ಕೆತ್ತಲ್ಪಟ್ಟಿವೆ. ಜೈನಮತದಲ್ಲಿ ನಾಗಪೂಜೆಗೆ, ನಾಗಯಾತ್ರೆಗೆ ಪ್ರತ್ಯೇಕತೆ ಇದೆ.

ತ್ರಿಮೂರ್ತಿಗಳಲ್ಲಿ ಶಿವ ನಾಗಾಭರಣಧಾರಿ (ನಾಗ ಕಂಕಣ, ನಾಗಯಜ್ಞೋಪವೀತ, ನಾಗಮೇಖಲ, ನಾಗಕಿರೀಟಧಾರಿ). ವಿಷ್ಣುವಿಗೆ ಆದಿಶೇಷನಾದ ಅನಂತವೇ ಶಯನ, ಆದಿಶೇಷನು ಭೂಭಾರವನ್ನು ತನ್ನ ಸಾವಿರ ಹೆಡೆಗಳಮೇಲೆ ಹೊರುತ್ತಿರುವನೆಂಬುದು ಪುರಾಣ ಪ್ರಸಿದ್ಧ ನಂಬಿಕೆ. ಸುಬ್ರಹ್ಮಣ್ಯಸ್ವಾಮಿ ನಾಗರರೂಪದಲ್ಲಿ ಪೂಜಿಸಲ್ಪಡುತ್ತಾನೆ. ದೂರ್ವಾಸ ಮಹಾಮುನಿಯ ಕೋಪದ ಕಾರಣದಿಂದ ದೇವತೆಗಳ ಸಂಪತ್ತು ಹಾಲಸಮುದ್ರದ ಪಾಲಾಗಲು ಅವುಗಳನ್ನು ಹೊರತೆಗೆಯಲು ಮಂದರಪರ್ವತವೆನ್ನುವ ಕಡಗೋಲಿಗೆ ಶಿವನ ಕಂಠಾಭರಣವಾದ ವಾಸುಕಿ ಬಳಸಲ್ಪಟ್ಟಿತ್ತು.

ಯಾರಿಗಾದರೂ ಹಾವು ಹೆಡೆಎತ್ತಿ ನೆರಳನ್ನು ಇತ್ತರೆ ಮಹಾರಾಜರಾಗುತ್ತಾರೆಂಬ ನಂಬಿಕೆ, ಅದಕ್ಕೆಮಂತ್ರಿ ತಿಮ್ಮರಸ, ಸರ್ವಾಯಿ ಪಾಪನಂತಹವರ ಕಥೆಗಳನ್ನು ಉದಾಹರಣೆಯಾಗಿ ಹೆಸರಿಸಬಹುದು. ನಿದ್ದೆಯಲ್ಲಿ ಸರ್ಪಕಚ್ಚಿದಂತೆ ಕನಸಾದರೆ ಒಳ್ಳೆಯದೆಂದು, ಕಡಿಯದೆ ಹೊರಟುಹೋದಂತೆ ಕನಸಾದರೆ ಏನಾದರೂ ಕೇಡು ಸಂಭವಿಸುತ್ತದೆ. ಎಂಬುದು ಜಾನಪದರ ನಂಬಿಕೆ. ನಾಗೇಂದ್ರನನ್ನು ಆರಾಧ್ಯದೈವವಾಗಿ ಉಳ್ಳಭಕ್ತರು ನಾಗರಾಜ, ನಾಗಭೂಷಣ, ನಾಗಯ್ಯ, ಪಾಪಯ್ಯ, ಸುಬ್ಬಯ್ಯ, ಸುಬ್ರಹ್ಮಣ್ಯ, ನಾಗಮ್ಮ, ನಾಗಲಕ್ಷ್ಮಿ, ಪಾಪಮ್ಮ, ಸುಬ್ಬಮ್ಮ ಎಂಬ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟುಕೊಳ್ಳುವುದು ಸಾಮಾನ್ಯ.

ಸಪ್ತಲೋಕಗಳಲ್ಲಿ ನಾಗಲೋಕ ಒಂದು. ನಾಗಲೋಕಕ್ಕೆ ಪಾತಾಳ ಲೋಕವೆಂದೂ ಹೆಸರಿದೆ. ಹದಿನಾಲ್ಕು ಭವನಗಳಲ್ಲಿ ಭೋಗವತಿಸಹಾ ಒಂದು. ಇದು ಸರ್ಪರಾಜಧಾನಿ. ಅಮೂಲ್ಯವಾದ ನಾಗಮಣಿಗಳಲ್ಲಿಯೇ ಆ ನಗರವನ್ನು ನಿರ್ಮಿಸಿದಂತೆ ಪುರಾಣ ತಿಳಿಸುತ್ತದೆ.

14_70A_DBJK-KUH

ಅಲ್ಲಿರುವ ನಾಗರಾಜರು, ನಾಗಕತ್ಯೆಯರ ವೈಭವಕ್ಕೆ ಸಾಟಿ ಇಲ್ಲ. ನಾಗಲೋಕ ವೈಭವಕ್ಕೆ ಆಸೆಪಟ್ಟ. ಕುಯುಕ್ತಿಯ ನರಿ ನಾಗಲೋಕವನ್ನು ಸೇರದಾಯ್ತು. ಅದಕ್ಕೆಂದೇ ನರಿಯೆಲ್ಲಿ – ನಾಗಲೋಕವೆಲ್ಲಿ? ಅನ್ನುವ ಮಾತು ವಿಷಮಾಲಾಂಕಾರಕ್ಕೆ ಪ್ರಾಮಾಣಿಕವಾದ ಉದಾಹರಣೆಯಾಗಿ ಸಾಹಿತ್ಯದಲ್ಲಿ ನಿಂತುಹೋಗಿದೆ.

ನಾಗಪೂಜೆಯನ್ನು ಸಂವತ್ಸರದಲ್ಲಿ ಅನೇಕ ಸಲ ನಡೆಸುತ್ತಿರುವಂತೆ ವ್ರತಗ್ರಂಥಗಳಲ್ಲಿ ಹೆಸರಿಸಲ್ಪಟ್ಟಿದೆ. ಹೇಮಾದ್ರಿ ಪಂಡಿತನು ಚತುರ್ವರ್ಗ ಚಿಂತಾಮಣಿವ್ರತಖಂಡದಲ್ಲಿ ಚೈತ್ರ, ವೈಶಾಖ, ಶ್ರಾವಣ, ಭಾದ್ರಪದ, ಕಾರ್ತಿಕ, ಮಾರ್ಗಶಿರ, ಪಾಲ್ಗುಣ ಮಾಸಗಳಲ್ಲಿ ಆಚರಿಸಲ್ಪಡುವ ನಾಗವ್ರತಗಳನ್ನು ತಿಳಿಸಿದ್ದಾನೆ. ಆಂಧ್ರಪ್ರದೇಶದಲ್ಲಿ ಶ್ರಾವಣ ಶುದ್ಧ ಪಂಚಮಿಯ ದಿನ ನಾಗಪಂಚಮಿ (ವೈಷ್ಣವ ಸಂಪ್ರದಾಯದವರು ಇದನ್ನು ಗರುಡ ಪಂಚಮಿ ಎಂದೂ ಕರೆಯುತ್ತಾರೆ), ಕಾರ್ತಿಕ ಶುದ್ಧಾ ಚೌತಿಯದಿನ ನಾಗರಚೌತಿಯನ್ನು ನಡೆಸುವುದು ಪದ್ಧತಿ. ಈ ಹಬ್ಬಗಳ ವ್ರತಕಥೆಗಳು ಗದ್ಯ, ಪದ್ಯ, ಗೇಯರೂಪಗಳಲ್ಲಿ ಪ್ರಖ್ಯಾತಿಯಾಗಿದೆ. ಶ್ರೀನಾಥನು “ಗೆಳತಿ ಪ್ರವೇಶಿಸುವಳು ನಾಗಚೌತಿಯದಿನ” ಎಂದು ಬರೆದಿರುವುದು ಚೌತಿಯ ಪ್ರಖ್ಯಾತಿಯನ್ನು ತಿಳಿಸುತ್ತದೆ. ಈ ಹಬ್ಬದ ದಿನಗಳಂದು ಸಂಜೆ ಮರದ ಕೊಂಬೆಗಳಿಗೆ ಹಗ್ಗವನ್ನು ಕಟ್ಟಿ ಉಯ್ಯಾಲೆಮಾಡುವುದು ಇಂದಿಗೂ ಗ್ರಾಮಗಳಲ್ಲಿ ಇದೆ. ನಾಗಪೂಜೆಯನ್ನು ಕುರಿತು ಆಂಧ್ರಪ್ರದೇಶದಲ್ಲಿ ಪ್ರಸಿದ್ಧವಾದ ಎರಡು ಕಥೆಗಳನ್ನು ಬಿ.ರಾಮರಾಜುರವರು ಹೆಸರಿಸಿದ್ದಾರೆ.

ವ್ಯಾಪ್ತಿ: ಆಂಧ್ರಪ್ರದೇಶದಲ್ಲಷ್ಟೇ ಅಲ್ಲದೇ ಇಡೀ ಭಾರತದೇಶದಲ್ಲೇ ನಾಗಪೂಜೆ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ತಮಿಳರಿಗೆ ನಾಗಾಕಾರದಲ್ಲಿ ಸುಬ್ರಹ್ಮಣ್ಯಸ್ವಾಮಿ ಆರಾಧ್ಯದೈವ. ತಮಿಳುನಾಡಿನಲ್ಲಿ ಸ್ತ್ರೀಯರು ಹಾವಿನ ಹುತ್ತಗಳನ್ನೂ ಪೂಜಿಸಿ ಹಾಲು ಹಾಕುವಾಗ ಹಾಡುವಂತಹ ಹಾಡುಗಳಲ್ಲಿ “ಪುಟ್ರುನಾಗರೇ, ಭೂಮಿ ಇಡಮೇನಾಗರೇ” ಅನ್ನುವ ಹಾಡು ಪ್ರಸಿದ್ಧ. ಕೇರಳದಲ್ಲಿ ನಾಗರಗಳಿಗೆ ನೈವೇದ್ಯ ಅರ್ಪಿಸಿದರೆ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆಂದು ನಂಬುತ್ತಾರೆ. ಆಂಧ್ರದವರಿಗೆ ಸಂಬಂಧಿಸಿದ ನಾಗರಚೌತಿ ಕಥೆಗಳಲ್ಲಿ ನಾಗರಾಜು ತನಗೆ ನೈವೇದ್ಯವಿಟ್ಟು ಹಾಲನ್ನು ಸ್ವೀಕರಿಸಿ ಆ ಹಾಲು ಇಟ್ಟಪಾತ್ರೆಯಲ್ಲಿ ಅಮೂಲ್ಯವಾದ ರತ್ನಗಳನ್ನು ಇರಿಸಿ ಹೊರಟುಹೋಗುವುದು ಈ ಲಕ್ಷ್ಮೀದೇವಿಯ ಪ್ರಸನ್ನತೆಯನ್ನೇ ಸೂಚಿಸುತ್ತದೆ. ಗುಜುರಾತಿನಲ್ಲಿ ಪ್ರತ್ಯೇಕವಾಗಿ ಕೃಷ್ಣಸರ್ಪವನ್ನು ಪೂಜಿಸುತ್ತಾರೆ. ಇನ್ನು ಸಂತಾನವಿಲ್ಲದೆ ಸ್ತ್ರೀಯರು ನಾಗಪಂಚಮಿ ಮೊದಲುಗೊಂಡು ಮೂರು ಸಂವತ್ಸರಗಳವರೆಗೆ ಪ್ರತಿ ಪಂಚಮಿಯಂದು ನಾಗಪೂಜೆ ನಡೆಸಿದರೆ ಪುತ್ರ ಪ್ರಾಪ್ತಿಯಾಗುವುದೆಂದು ನಂಬುತ್ತಾರೆ. ನಾಗರುಗಳು ಸಂತಾನಕ್ಕಾಗಿ ಪೂಜಿಸುವುದು ಅನಾದಿಯಿಂದ ಪ್ರಖ್ಯಾತಿ. ‘ಹುತ್ತದಲ್ಲಿ ಹಾಲು ಸುರಿದು ಹೊಟ್ಟೆಮುಚ್ಚಿಕೊಂಬುದು’ ಅನ್ನುವ ಗಾದೆ. ಸಂತಾನಾಪೇಕ್ಷೆಯುಳ್ಳ ಸ್ತ್ರೀಯ ಆತುರವನ್ನು ವ್ಯಕ್ತ ಮಾಡಿದರೂ ‘ನಾಗೇಂದ್ರನು ಸಂತಾನವನ್ನು ಪ್ರಸಾದಿಸುವ ದೇವತೆ ‘ಅನ್ನುವ ಪ್ರಜೆಗಳ ವಿಶ್ವಾಸವನ್ನು ಈ ಗಾದೆಯಿಂದ ಗ್ರಹಿಸಬಹುದು. ಗುಜರಾತಿನಲ್ಲಿ ನಾಗರಗಳನ್ನು ಕೊಲ್ಲುವುದಿಲ್ಲ, ಅಪ್ಪಿತಪ್ಪಿ ಕೊಂದರು ಶಾಸ್ತ್ರೋಕ್ತವಾಗಿ ದಹನ ಸಂಸ್ಕಾರವನ್ನು ನಡೆಸುತ್ತಾರೆ. ಆಂಧ್ರದಲ್ಲಿ ಇಂತಹ ಆಚಾರ ಇಂದು ಕೇವಲ ನಾಮಮಾತ್ರವಾಗಿ ಉಳಿದುಹೋಗಿದೆ. ಜಾನಪದರು ಕೊಂದ ಹಾವಿನ ಬಾಯಲ್ಲಿ ತಾಮ್ರದ ನಾಣ್ಯವನ್ನು ತೆಗೆದು ಬಚ್ಚಿಟ್ಟುಕೊಳ್ಳುತ್ತಾರೆ. ಯಾರಾದರೂ ಹಾವು ಕಡಿದ ಬಾಧೆಯಿಂದ ಇದ್ದರೆ ಹಾವು ಕಚ್ಚಿದ ಸ್ಥಳದಲ್ಲಿ ಈ ಸುಟ್ಟ ತಾಮ್ರದ ನಾಣ್ಯವನ್ನು ಕಪ್ಪು ಉಣ್ಣೆದಾರದಲ್ಲಿ ಬಂಧಿಸಿ ಕಟ್ಟುತ್ತಾರೆ. ಹಾಗೆ ಮಾಡಿದರೆ ಹಾವಿನ ವಿಷ ಕಡಿಮೆಯಾಗುವುದೆಂದು ಜಾನಪದರ ವಿಶ್ವಾಸ. ಇಷ್ಟೇ ಅಲ್ಲದೆ ಅಂತಹ ತಾಮ್ರದ ನಾಣ್ಯಗಳಲ್ಲಿ ಒಂದನ್ನು ಸೊಂಟಕ್ಕೆ ಎಲ್ಲಾ ಕಾಲದಲ್ಲೂ ಧರಿಸಿದರೆ ಹಾವುಗಳು ಸುಳಿಯುವುದಿಲ್ಲವೆಂಬ ಒಂದು ಗಾಢವಾದ ವಿಶ್ವಾಸ ಸಹಾ ವ್ಯಾಪಕವಾಗಿದೆ.

ನಾಗಪಂಚಮಿ, ನಾಗಚೌತಿಯಂತಹ ನಾಗಪ್ರಧಾನವಾದ ಹಬ್ಬಗಳನ್ನು ಬೆಂಗಳೂರಿನಲ್ಲೂ ನಡೆಸುತ್ತಾರೆ. ಇದಕ್ಕೆ ‘ಮಾನಸಾದೇವಿ ಪೂಜೆ’ ಎಂದು ಹೆಸರು. ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಮಳೆ ಬಂದು ನದಿಗಳು ತುಂಬಿ ಹರಿಯುತ್ತಿರುವಾಗ, ಪ್ರಕೃತಿ ಹಸಿರಿನಿಂದ ರಮಣೀಯವಾಗಿ ಇದ್ದಾಗ ಆಚರಿಸುತ್ತಾರೆ. ಮಾನಸದೇವಿ ಸರ್ಪದೇವತೆ, ಮಾನಸಾದೇವಿ ಕಥೆಯನ್ನು ಚಾಂದ್ ಸೌದಾಗರ್‌ ಅನ್ನುವ ವ್ಯಾಪಾರಿ ಕಥೆಯನ್ನು ಪುರಾಣವಾಗಿ ಹೇಳತ್ತಾರೆ. ಈ ಕಥೆಯಲ್ಲಿ ಹೆಸರಿಸಲ್ಪಟ್ಟಿರುವ ಚಾಂದ್‌ ಸೌದಾಗರ್ ಮಾನಸದೇವಿಗೆ ಹಾಗೂ ಆ ವರ್ತಕನಿಗೆ ಅನೇಕ ಸಂವತ್ಸರಗಳವರೆಗೆ ಕಲಹ ಸಾಗಿತ್ತು. ಕೊನೆಗೆ ವರ್ತಕ ಪರಾಜಿತನಾಗಿ ಆಕೆಯನ್ನು ಪೂಜಿಸಬೇಕಾಗಿ ಬಂದಿತು. ಇದು ಮಾನಸಾದೇವಿಯನ್ನು ಕುರಿತು ವ್ಯಾಪಕವಾಗಿರುವ ಕಥೆ. ಬೆಂಗಾಲ್‌ನಲ್ಲಿ ಸನಾತನಾಚಾರದ ಓಟ, ದೊಡ್ಡ ಘರ್ಷಣೆಯ ನಂತರ ನಾಗಪೂಜೆಗೆ ಎಡೆಮಾಡಿಕೊಟ್ಟಿತು ಎಂದು ಈ ಕಥೆ ಸೂಚಿಸುತ್ತದೆ.

ಮಧ್ಯ ಪ್ರದೇಶದಲ್ಲಿ ಮಾರ‍್ಟತ್ ಎನ್ನುವ ನಾಗಯಕ್ಷಿಣಿಯನ್ನು ರೋಗಗಳು ದೂರವಾಗಬೇಕೆಂದು ಕೋರುತ್ತಾ ಪೂಜಿಸುತ್ತಾರೆ. ಒರಿಸ್ಸಾದಲ್ಲಿ ಅನಂತದೇವರನ್ನು ಗಢವಾಲಾದಲ್ಲಿ ನಾಗರಾಜನ್ನು ಔರಂಗಾಬಾದ್‌ನಲ್ಲಿ ರಾಜನಾಗನನ್ನು ಪೂಜಿಸುತ್ತಾರೆ. ಸೌರಾಷ್ಟ್ರ, ಚಂಬಾ, ಕಾಶ್ಮೀರ್‌ಗಳಲ್ಲಿ ನಾಗರ ದೇವಾಲಯಗಳು ಇವೆ. ಚೀನಾಬ್ ನದೀ ತೀರದಲ್ಲಿ ವಾಸುಕಿ ನಾಗರ ಆಲಯವಿದೆ. ಪಂಜಾಬಿನಲ್ಲಿ ಮಿರಾಸಿ ಪ್ರಜೆಗಳು ನಾಗಪೂಜೆಯೊಂದಿಗೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇವರು ತಮ್ಮ ಮನೆಗಳಲ್ಲಿ ಹಾವಿನ ಗೊಂಬೆಯನ್ನು ಇರಿಸಿಕೊಲ್ಳುತ್ತಾರೆ. ಹಾಗೆ ಮಾಡಿದರೆ ನಾಗರ ಹಾವು ತಮಗೇನೂ ಕೇಡು ಉಂಟುಮಾಡುವುದಿಲ್ಲವೆಂದು ಅವರ ವಿಶ್ವಾಸ.

ನೇಪಾಳದಲ್ಲಿ ಗರುಡ ನಾಗರ ಯುದ್ಧಗಾಥೆ ಪ್ರಸಿದ್ಧವಾದುದು. ಇಲ್ಲಿ ನಾಗಪೂಜೆಯ ಭಾಗವಾಗಿ ಚರಿಗುನಾರಾಯಣೋತ್ಸವ ಘನವಾಗಿ ನಡೆಯುತ್ತದೆ. ಟಿಬೆಟ್ಟಿನಲ್ಲಿ ಸುನಾಗುಡನೇ ನಾಗರಾಜು ಪಾಟಲೀ ಸರೋವರದಲ್ಲಿ ಜೀವಿಸಿದ್ದನೆಂದು ಕಥೆಗಳಿವೆ.

ನಾಗರ ಕಥೆಗಳು ಭಾರತ ದೇಶ ಪರಿಸರ ಪ್ರಾಂತ್ಯದಲ್ಲಿಯಷ್ಟೇ ಅಲ್ಲದೆ ಪ್ರಪಂಚದಾದ್ಯಂತ ವ್ಯಾಪ್ತಿಯಲ್ಲಿದೆ. ಮೆಕ್ಸಿಕೋದಲ್ಲಿ ಸೂರ್ಯಮಂದಿರಿಗಳಲ್ಲಿ ಸರ್ಪಶಿಲೆಗಳು ಇವೆ. ಮೆಕ್ಸಿಕೋ ಚಿತ್ರರಚನೆಯಲ್ಲಿ ಮಹಿಳೆಯ ಹಿಂದೆ ಒಂದು ದೊಡ್ಡ ಹಾವನ್ನು ಚಿತ್ರಿಸಿರುವುದು ಕಂಡು ಬರುತ್ತದೆ. ಈ ಮಹಿಳೆಯ ಹೆಸರನ್ನು ಪ್ರಾಚೀನ ಸ್ಟ್ರೈನ್ ಲೇಖಕರು “ನಮ್ಮ ಶರೀರ ಮಾಂಸಗಳ ಮಹಿಳೆ”)??? ಎಂದು ವರ್ಣಿಸಿದ್ದಾರೆ. ಈ ಸರ್ಪ ಸೂರ್ಯದೇವತೆ ಟೋನಾಕ್ಟ್ ಕೋಟ್. ಈ ದೇವತೆ ಮೆಕ್ಸಿಕೋ ದೇವತಾಗಣದಲ್ಲಿ ಪ್ರಧಾನ ದೇವತೆ. ಸ್ತ್ರೀ ರೂಪದಲ್ಲಿ ಇರುವ ದೇವತೆ, ಆದಿಮಾನವನ ತಾಯಿ. ಈಕೆಯ ಹೆಸರು ಚಿಹುನ – ಕೊಹುಯಟ್ ಅಂದರೆ ಸರ್ಪಪತ್ನಿ, ಸರ್ಪವೇ ಮಾನವ ಜಾತಿ ತಂದೆ ಎಂದು ಈ ಜಾತಿ ಪುರಾಣ ಕಥೆಗಳು ತಿಳಿಸುತ್ತವೆ. ಆಫ್ರಿಕಾ, ಅಮೆರಿಕಾಗಳಲ್ಲಿನ ಕೆಲವು ಪ್ರಾಂತ್ಯಗಳಲ್ಲಿ ಸರ್ಪಗಳನ್ನು ಪಿತೃದೇವತೆಗಳ ಸ್ವರೂಪಗಳಾಗಿ ಭಾವಿಸುತ್ತಾರೆ. ಹಾವುಗಳಿಗೆ ಪಿತೃಸ್ವರೂಪವನ್ನು ಆಪಾದಿಸುವುದನ್ನು ನರಮೇಧದಲ್ಲಿ ಸರ್ಪಪೂಜೆಗೆ ಇರುವ ಪ್ರತ್ಯೇಕತೆಯನ್ನು ಹಿಡಿದು ಗ್ರಹಿಸಬಹುದು. ಘರ‍್ಗೂಸನ್ ಈ ನರಮೇಧವನ್ನು ವಿವರಿಸಿದ್ದಾನೆ. ಅರಿಜೋನಾಗೆ ಸಂದ ಮಾಕ್ವಿನ್ ಜಾತಿ ಒಂದು ಸ್ತ್ರೀ ಪ್ರಸವಿಸಿದ ಹಾವಿನಿಂದ ಪ್ರಖ್ಯಾತಿಯಾಯ್ತು. ಹಾವು ಸಂತಾನವಾಗಿ ಜನಿಸುವುದೆಂಬ ಈ ಇತಿವೃತ್ತ ತೆಲುಗರ ‘ಹಾವು ಹಾಡುಗಳು’ ಎಂಬುದರಲ್ಲಿ, ಧರ್ಮಾಂಗದ ರಾಜನಿಗೂ ಆತನ ಪತ್ನಿ ನರ್ಮಿಲೀದೇವುಗೂ ಹಾಗು ಸಂತಾನವಾಗಿ ಜನ್ಮಿಸಿದುದನ್ನು ತಿಳಿಸುತ್ತದೆ.

ಕೊರಿಯಾ, ಸಯಾಂ, ಇಂಡೋನೇಷಿಯಾ, ಕಾಂಬೋಡಿಯಾ ಮೊದಲಾದ ದೇಶಗಳಲ್ಲಿ ಸರ್ಪಚಿತ್ರಗಳು ಕಾಣಸಿಗುತ್ತವೆ. ಯಹೂದಿಗಳು, ಅರಬ್ಬರು ಹಾವುಗಳನ್ನು ಅಧಿಷ್ಟಾನ ದೇವತೆಯಾಗಿ ಭಾವಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಸ್ಯದೇವತೆ ರನ್ನತ್ – ಸರ್ಪಗಳ ಪ್ರತೀಕ, ಭೂದೇವತೆ ‘ಸೆವ್’ ನಾಗರಾಜನ ಪತ್ನಿ ಎಂದು ನಂಬುತ್ತಾರೆ. ಗ್ರೀಕರು ಸರ್ಪ ಭೂಮಿಯ ಪುತ್ರನೆಂದು, ಆತನಿಗೆ ದವಸ ಧಾನ್ಯಗಳೊಂದಿಗೆ ಸಂಬಂಧವಿಹುದೆಂದು ನಂಬುತ್ತಾರೆ. ಹುತ್ತದಲ್ಲಿ ಇದ್ದರೂ ಭೂಮಿಗಳಿಗೆ ಮುದ್ರೆ, ಅನ್ನುವ ತೆಲುಗು ಚರಣ ಸರ್ಪಗಳು ಬೆಳೆಯನ್ನು ನೀಡುವ ದೇವತೆ ಎನ್ನುವುದನ್ನು ಬಲಪಡಿಸುತ್ತದೆ. ಎರಡು ಹುತ್ತಗಳ ಮಧ್ಯೆ ಬಾವಿಯನ್ನು ಅಗೆದರೆ ಸಮೃದ್ಧವಾಗಿ ನೀರು ಬುಗ್ಗೆ ಬರುವುದೆಂದು ಜಾನಪದರ ವಿಶ್ವಾಸ. ಈ ವಿಶ್ವಾಸ ಶಾಸ್ತ್ರಜ್ಞರ ಕೈಯಲ್ಲಿ ಅಂಗೀಕರಿಸಲ್ಪಟ್ಟಿದೆ. ಭೂಮಿಯಲ್ಲಿ ತೇವವಿರುವ ಹತ್ತಿರವೇ ಹುತ್ತಗಳು ಬೆಳೆಯುತ್ತವೆ.

ಸರ್ಪ ಒಳ್ಳೆಯದಕ್ಕಷ್ಟೇ ಅಲ್ಲದೆ ಕೆಡುಕಿಗೂ ಪ್ರತೀಕ. ಹಿಬ್ರೂ ಪುರಾಣ ಕಥೆಗಳಲ್ಲಿ ಪ್ರಲೋಭಕ್ಕೊಡ್ಡುವ ಸರ್ಪ ಮಾತನಾಡುತ್ತದೆ. ವರ್ಷಿಯಾ ಪುರಾಣ ಗಾಥೆಗಳಲ್ಲಿ ಎರಡು ಕಾಲಿನ ಮುದಿ ಹಾವು ದುಷ್ಟನಾದ ದೆವ್ವ, ಆಫ್ರೀಮಾನ್ ಅಲ್ಲದೆ ಮತ್ತೊಂದಲ್ಲ. ಬೈಬಲ್ ಪ್ರಾರಂಭದಲ್ಲಿ ಆಡಮ್, ಈವ್ ಕಥೆಗಳಲ್ಲಿ ಸೃಷ್ಟಿರಚನೆಯ ಸಮಯದಲ್ಲಿ ಗಿಡಕ್ಕೆ ಸುತ್ತಿಕೊಂಡಿರುವ ಒಂದು ಸರ್ಪವನ್ನು ವರ್ಣಿಸಿದ್ದಾರೆ. ಕ್ರಿಶ್ಚಿಯನ್ನರು ಇದನ್ನು ಮಾರುವೇಶ ಧರಿಸಿದ ದೆವ್ವವೆಂದು ಭಾವಿಸುತ್ತಾರೆ. ಸರ್ಪವನ್ನು ದೇವತೆಯೆಂದು ಭಾವಿಸುವ ದೇಶದಲ್ಲಿ ಸಹಾ ಜನರು ಹಾವು, ಪ್ರಯಾಣದಲ್ಲಿ ದಾರಿಗಡ್ಡ ಬಂದರೆ ಅದನ್ನು ಕೇಡು ಎಂದು ಶಂಕಿಸುತ್ತಾರೆ. ಸರ್ಪವನು ಒಂದು ದೇವತೆಯಾಗಿ ಆರಾಧಿಸುವ ದೇಶಗಳಲ್ಲಿ ಮುಖ್ಯವಾಗಿ ಇಂಡಿಯಾ, ಜುಡಿಯಾ, ಪೋನೀಷಿಯಾ, ಮೆಸಪಟೋಮಿಯ, ಗ್ರೀಸ್, ಇಟಲಿ, ಸ್ಕಾಂಡಿನೇವಿಯಾ, ಆಫ್ರಿಕಾ, ಅಮೆರಿಕಾ, ಮೊದಲಾದ ದೇಶಗಳನ್ನು ಹೆಸರಿಸಬಹುದು.

ನಾಗಪೂಜೆಯಲ್ಲಿ ಪ್ರತ್ಯೇಕತೆ: ನಾಗಪಂಚಮಿ, ನಾಗಚೌತಿ ಹಬ್ಬಗಳ ದಿನ ಭಕ್ತರು ಉಪವಾಸವಿದ್ದು, ಹುತ್ತಕ್ಕೆ ಹಾಲು ಹಾಕಿದ ತರುವಾಯ ಉಪವಾಸವನ್ನು ತ್ಯಜಿಸುತ್ತಾರೆ. ನಾಗಪೂಜೆಗಳಲ್ಲಿ ನೈವೇದ್ಯವಾಗಿ ಹಾಲು, ಕೊಬರಿ ಚಿಗಳಿ, ತಂಬಿಟ್ಟು, ಕೋಸಂಬರಿ, ಪಾನಕ, ಮೊಟ್ಟೆ ನಿವೇದಿಸುತ್ತಾರೆ. ವೈದ್ಯ ಗ್ರಂಥಗಳು ಈ ಆಹಾರ ಪದಾರ್ಥಗಳನ್ನು ಲಘು ಆಹಾರ ಸೇವೆಯೆಂದು; ನಾಗಪಂಚಮಿ, ನಾಗಚೌತಿ ಹಬ್ಬಗಳನ್ನು ಋತುಪರಿವರ್ತನ ಸೂಚಕವಾದ ಉತ್ಸವಗಳೆಂದು ಹೆಸರಿಸಿವೆ. ತಂಬಿಟ್ಟನ್ನು ತುಂಬಿ ಫಲವಂತಿಕೆಗಾಗಿ ಗರ್ಭಿಣಿ ಸ್ತ್ರೀಯರಿಗೆ, ಬಲಹೀನರಿಗೆ, ಇತರರಿಗೆ ನೀಡುವುದು ಸಹಾ ನಡೆಯುತ್ತಿರುವ ಕಾರಣ ತಂಬಿಟ್ಟಿಗೆ ತಂಪು ಮಾಡುವ ಗುಣವಿದೆಯೆಂದು ತಿಳಿದು ಬರುತ್ತದೆ. ಕೆಲವು ಪ್ರಾಂತ್ಯಗಳಲ್ಲಿ ಹುತ್ತದ ಬಳಿ ಧೂಪವನ್ನು ಹಾಕಿ ದೀಪಗಳನ್ನು ಬೆಳಗುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಂತ್ಯ ಪ್ರಾಂತ್ಯಗಳ ಪದ್ಧತಿಗಳಲ್ಲಿ ಮಾರ್ಪುಗಳಿರುವುದನ್ನು ಗುರುತಿಸಬಹುದು. ಧೂಪ ದೀಪಗಳನ್ನು ಹಚ್ಚದೆ ಇರಲು ಕಾರಣ ಕೆಂಡ, ಉರಿಯನ್ನು ನೋಡಿದರೆ ಹಾವುಗಳು ಭಯಪಡುವುದೆಂಬ ಭಾವನೆ ಇರಬಹುದು. ಅಷ್ಟೇ ಅಲ್ಲದೆ ನಾಗಪಂಚಮಿ ಕಥೆಯನ್ನು ಅನುಸರಿಸಿ ಹಬ್ಬದ ದಿನ ಹುತ್ತಗಳಿಗೆ ಏನಾದರೂ ಅಪಾಯವಾಗಿ ಹುತ್ತದಲ್ಲಿಯ ಹಾವುಗಳಿಗೆ ಏನಾದರೂ ಕೇಡು ಆಗುವುದೆಂಬ ಉದ್ದೇಶವೀ ಇದೆ. ಅಂದು ಭೂಮಿಯನ್ನು ನೇಗಿಲಿನಿಂದ ಉಳುವುದು, ತರಕಾರಿಗಳನ್ನು ತುಂಡರಿಸುವುದು ಕತ್ತರಿಸುವುದು, ಬೇಯಿಸುವುದು ಮೊದಲಾದ ಕೆಲಸಗಳು ನಿಷಿದ್ಧವಾಗಿದ್ದು (ಇತ್ತೀಚೆಗೆ ಸೊಪ್ಪುಗಳ ಎಲೆಗಳ ಕತ್ತರಿಸಿದರೆ ಹಾವನ್ನು ಕತ್ತರಿಸಿದ ಪಾಪ ಉಂಟಾಗುತ್ತದೆಂಬ ಉದ್ದೇಶದಿಂದ ಸೊಪ್ಪು, ಬೇಯಿಸಿ ತಿನ್ನುವುದನ್ನೇ ಬಿಟ್ಟುಬಿಟ್ಟ ಘಟನೆ ಬೆಳಕಿಗೆ ಬಂದಿದೆ) ಆದ್ದರಿಂದ ನಾಗಗಳಿಗೆ ಅಪಕ್ವ ಪದಾರ್ಥಗಳನ್ನು ನೈವೇದ್ಯವಾಗಿಸುವ ಪದ್ಧತಿ ಸಹಾ ಆಚಾರವಾಗಿ ಮಾರ್ಪಟ್ಟಿರಬಹುದು. ನಾಗಪಂಚಮಿ ನಾಗಚೌತಿ ಹಬ್ಬಗಳ ದಿನ ಹೆಂಚಿನ ಮೇಲೆ ರೊಟ್ಟಿಯನ್ನು ಬೇಯಿಸುವುದೂ ನಿಷಿದ್ಧ.

ಹಾವುಗಳನ್ನು ಪೂಜಿಸುತ್ತಾ ಆರಾಧನಾಭಾವದಿಂದ ಹಾಡುವ ಹಾಡುಗಳು, ಹಾವುಗಳು ತಮ್ಮ ಬಗ್ಗೆ ದ್ವೇಷ ಸಾಧಿಸದೇ ತಮ್ಮನ್ನು ದಯೆಯಿಂದ ಕಾಪಾಡಬೇಕೆಂದು ಹಳ್ಳಿಯ ಹಾಡುಗಳಲ್ಲಿ ಹೆಂಗಳೆಯರು ಹಾಡುವ ಹಾಡು ಅನೇಕ ಪ್ರಚಾರದಲ್ಲಿವೆ.

ಹಾಡುಗಳೊಂದಿಗೆ ನಾಗಸ್ವರ ಸದಾ ಪ್ರತ್ಯೇಕತೆಯನ್ನು ಪಡೆದುಕೊಂಡಿದೆ. ನಾಗಸ್ವರದಲ್ಲಿಯ ಮಾಧುರ್ಯ ವರ್ಣನಾತೀತ. “ಜೋಗುಳ ಹಾಡಿದರೆ ಬಾಲಕರು ನಿದ್ರೆ, ನಾಗಸ್ವರ ಊದಿದರೆ ಹಾವುಗಳಿಗೆ ನಿದ್ರೆ” (ಆಟ ಎಂಬ ಪಾಠಾಂತರವೂ ಸಹಾ ಇದೆ) ಎನ್ನುವ ಮಾತಿನಲ್ಲಿ ಜೋಗುಳದ ಹಾಡಿನಲ್ಲಿರುವ ಜೊಂಪು ನಾಗಸ್ವರದಲ್ಲಿಯ ಮಾಧುರ್ಯ ಜೊತೆಗೂಡಿಸಿ ಹೇಳಲಾಗಿದೆ.

ಹಾವು ಕಳಚಿದ ಔಷಧಿಯನ್ನು, ಬೊಂಬೆಗಳನ್ನು ತಯಾರಿಸುತ್ತಾರೆ. ಹಾವಿನ ವಿಷವನ್ನು ಕುಷ್ಟ, ಕ್ಯಾನ್ಸರ್, ರೋಗಗಳಿಗೆ ಔಷಧಿಯಾಗಿ ಬಳಸುತ್ತಾರೆ. ಹೊಲಗಳಲ್ಲಿ ಹಾವುಗಳು ಇಲಿಗಳನ್ನು ಹಿಡಿದು ತಿನ್ನುತ್ತವೆ. ಹೀಗೆ ಇಲಿಗಳಿಂದ ಬೆಳೆಯನ್ನು ಕಾಪಾಡುತ್ತಿರುತ್ತವೆ. ಹಾವಿನ ಹುತ್ತಗಳಿದ್ದರೆ ಸುತ್ತಲೂ ಭೂಮಿಯಲ್ಲಿ ನೀರಿಗಾಗಿ ಆಳವಾಗಿ ಹೋಗುವ ಅವಶ್ಯಕತೆ ಇಲ್ಲದೇ ಮೇಲಿದ ಪದರಗಳಲ್ಲೇ ನೀರು ಲಭ್ಯವಾಗುವುದೆಂದು ತಿಳಿದುಕೊಳ್ಳಬಹುದು.

ಒಮ್ಮೆ ಹಾವಿನ ಕಡಿತಕ್ಕೆ ಗುರಿಯಾಗಿ ಆರೋಗ್ಯವಂತನಾದ ವ್ಯಕ್ತಿಗೆ ಒಮ್ಮೆ ಹಾವು ಕಡಿದರೆ ವಿಷ ಹತ್ತುವುದಿಲ್ಲ. ಅಂತಹವರು ಗ್ರಾಮಗಳಲ್ಲಿ ಅಲ್ಲಲ್ಲಿ ಕಾಣಸಿಗುತ್ತಾರೆ. ಹಾವು ಯಾರನ್ನಾದರೂ ಕಡಿದಾಗ ಗ್ರಾಮಗಳಲ್ಲಿ ಇರುವ ತಿಳಿದವರು ಪ್ರಥಮ ಚಿಕಿತ್ಸೆಯಾಗಿ ಹಾವು ಕಡಿದ ಶರೀರದ ಭಾಗದಲ್ಲಿನ ರಕ್ತವನ್ನು ಬಾಯಲ್ಲಿ ಹೀರಿ ಉಗುಳುತ್ತಾ ವಿಷ ಇತರ ಸ್ಥಳಗಳಿಗೆ ವ್ಯಾಪಿಸದಂತೆ ಗಾಯದ ಸುತ್ತಲೂ ಹಗ್ಗದಲ್ಲಿ ಗಟ್ಟಿಯಾಗಿ ಬಿಗಿದು ಕಟ್ಟುಕಟ್ಟುತ್ತಾರೆ. ಆ ತರುವಾಯ ಮಂತ್ರವಾದಿಯನ್ನು ಕರೆಸಿ ಮಂತ್ರಹಾಕಿಸುತ್ತಾರೆ. ಮಂತ್ರಕ್ಕೆ ಮಹಿಮೆ ಇದೆಯೋ ಇಲ್ಲವೊ ಆದರೆ ಈ ಮಂತ್ರ ಹಾಕುತ್ತಿರುವಂತೆ ಮಾನವನು ಶರೀರದಲ್ಲಿ ಮೇಲೆ ಏರುತ್ತಿರುವ ವಿಷ ಕೆಳಗೆ ಇಳಿಯುತ್ತದೆಂಬ ನಂಬಿಕೆ ಜಾನಪದ ಮನಸ್ಸುಗಳಲ್ಲಿ ಇದೆ. ಹಾವುಗಳ ಕೃಷ್ಣಯ್ಯ, ಹಾವುಗಳ ಸತ್ತಯ್ಯ ಎಂದು ಪ್ರಖ್ಯಾತಿ ಹೊಂದಿದ ಮಂತ್ರವಾದಿಗಳು ಗ್ರಾಮಗಳಲ್ಲಿ ಕಂಡುಬರುತ್ತಾರೆ. ಇಷ್ಟೇ ಅಲ್ಲದೆ ಮಂತ್ರವಾದಿ ಸಮಯಕ್ಕೆ ಸಿಗದಿದ್ದರೆ ಆತನ ಹೆಸರನ್ನು ಹಾವು ಕಡಿದವರ ಕಿವಿಯಲ್ಲಿ ಉಸುರಿ ಯಾವುದಾದರೂ ವಸ್ತ್ರದ (ಸಾಮಾನ್ಯವಾಗಿ ಉತ್ತರೀಯ) ತುದಿಯನ್ನು ಗಂಟುಹಾಕುತ್ತಾರೆ. ಹಾವಿನ ಕಡಿತಕ್ಕೆ ಗುರಿಯಾದ ವ್ಯಕ್ತಿ ಆರೋಗ್ಯವಂತನಾದ ಬಳಿಕ, ಈ ಹಿಂದೆ ಅಂದುಕೊಂಡ ಮಂತ್ರವಾದಿ ಬಳಿಗೆ ಹೋಗಿ ಆತನಿಗೆ ವಿಷಯ ತಿಳಿಸಿ ಹಾಕಿದ ವಸ್ತ್ರದ ಗಂಟನ್ನು ಬಿಚ್ಚಿಹಾಕುತ್ತಾರೆ.

ಕೆಲವು ಹಾಡುಗಳು ಮಂತ್ರದ ಹಾಡುಗಳಾಗಿ ಪ್ರಸಿದ್ದಿ ಪಡೆದಿವೆ.

ಉದಾ:

ನಾಗನಿಳಿಯೋ ನನ್ನ ತಂದೆ ಇಳಿಯೋ,
ನಾಗಣ್ಣ ನಿಳಿಯೋ ನಾಗಾ ಇಳಿಯೋ,
ಇಳಿ ಇಳಿ ನಾಗಣ್ಣ ದಿವ್ಯ ಸುಂದರನಾಗ,
ಕಪ್ಪು ಚುಕ್ಕೆಯ ನಾಗಾ ನನ್ನ ಮುದ್ದು ನಾಗ  || ನಾಗಾ ||
ನಳ ನಳಿಸುವ ಕಪ್ಪು ಚುಕ್ಕೆಯ ನಾಗ
ಥಳ ಥಳಿಸುವ ಬಿಳಿಯ ಚುಕ್ಕೆಯ ನಾಗ
ಸ್ನಿಗ್ಧತೆಯ ಪೊರೆಯುಳ್ಳ ಹಸುರಿನ ನಾಗ  || ನಾಗಾ ||

ಹಾವಿನ ವಿಷ ಹತ್ತಿದಾಗ ಬೇವುಂಡರೂ ಸಿಹಿಯಾಗಿರುವುದಂತೆ. ಹಾವಿನ ವಿಷಕ್ಕೆ ನಿವಾರಣೆ ಎದೆ ಹಾಲಂತೆ.

ಹಾವಿನ ಬಗೆಗಿರುವ ಕೆಲವು ನುಡಿಗಟ್ಟುಗಳು: ಹಾವಿನ (ಅಂತ್ಯ ಕಾಣುವವರೆಗೆ ಬಿಡದ ಶತ್ರುತ್ವವನ್ನು ಸೂಚಿಸುತ್ತದೆ) ಹಾವಿನ ಕಿವಿ (ಹಾವಿಗೆ ಗ್ರಹಣ ಶಕ್ತಿ ಹೆಚ್ಚು. ಗ್ರಹಣ ಶಕ್ತಿ ಅಧಿಕವಾಗಿರುವವರನ್ನು ಸೂಚಿಸುವ ಪ್ರಯೋಗ) ಹಾವಿನಂತೆ ಬುಸುಗುಡುವ (ಮಿತಿಮೀರಿದ ಕೋಪೋದ್ರೆಕ). ಹಾವನ್ನು ಕಂಕುಳಲ್ಲಿ ಇಟ್ಟುಕೊಳ್ಳುತ್ತೇವಾ? (ಶತ್ರುವನ್ನು ಆದರಿಸಬಾರದು) ಹಾವಿಗೆ ಹಾಲೆರೆದು ಸಾಕಿದಂತೆ (ಕೃತಜ್ಞತೆಗೆ ಹೋಲಿಕೆ ನೀಡುವುದು) ನಾಗಮಣಿ. (ಶ್ರೇಷ್ಠವಾದ ಮಣಿ). ನಾಗಗರುಡವೈರ (ಬದ್ಧಶತ್ರುತ್ವ). ನಾಗಸ್ವರಂ (ಪರವವಾಗಿಸುವ ಸಂಗೀತ ಸ್ವರ). ಪೊರೆಕಳಚಿದ ಹಾವಿನಂತೆ (ಪೊರೆ ಬಿಟ್ಟನಂತರ ಹಾವಿಗೆ ಎಚ್ಚರ, ಚುರುಕತನ, ಕೋಪ ಹೆಚ್ಚಾಗಿರುತ್ತವೆ) ಎರಡು ಮೂತಿಯ ಹಾವು, (ಒಂದು ಮಾತಿನ ಮೇಲೆ ನಿಲ್ಲದವನು) ಹಾವಿಗೆ ಹಲ್ಲೇ ವಿಷ ಮಾನವನಿಗೆ ತನುವೆಲ್ಲ ವಿಷ (ದುಷ್ಟ) ಇವನು ಹಾವಿನ ಬಾಲ ತುಳಿದ (ಬಾಲವನ್ನು ತುಳಿದರೆ ಬಸುಗುಟ್ಟುತ್ತದೆ. ಬಾಲದಲ್ಲಿಯೂ ಸಹಾ ವಿಷಯವಿರುತ್ತದೆಂಬ ನಂಬಿಕೆ) ಮುಂತಾದವು ಪ್ರಚಾರದಲ್ಲಿರುವ ನುಡಿಗುಟ್ಟುಗಳು.

ಹೀಗೆ ಹಾವುಗಳನ್ನು ವಿಷದ ಪ್ರಾಣಿ ಎಂದಲ್ಲದೆ ದೇವತಾರೂಪದಲ್ಲಿ ಸಹಾ ಆರಾಧಿಸುವ, ಭಯ, ಭಕ್ತಿ, ವಿಶ್ವಾಸಗಳೊಂದಿಗೆ ಕೂಡಿದ ಆಚಾರಗಳನ್ನು ಅನುಸರಿಸುವ ರೀತಿ ಪ್ರಪಂಚಾದ್ಯಂತ ವ್ಯಾಪಿಯಾಗಿ ಇರುವುದನ್ನು ಗಮನಿಸಬಹುದು.

ಸಿ.ವಿ.ಅನುವಾದ ಎಸ್.ಎಲ್.ಡಿ.