ನಾಗಾರಾಧನೆ ಭಾರತದ ಬಹುಪ್ರಾಚೀನ ಆರಾಧನೆ. ಭಾರತದಲ್ಲಿ ಮಾತ್ರವಲ್ಲದೆ ಗ್ರೀತಸ್, ಈಜಿಪ್ಟ್, ಮೆಸಪಟೋಪಿಯ ಹಾಗೂ ಮೆಡಿಟರೇನಿಯನ್ ಮುಂತಾದ ಪುರಾಥನ ಸಂಸ್ಕೃತಿಗಳಲ್ಲಿ ಸರ್ಪ ಆಧಿದೈವವಾಗಿದ್ದು ಆರಾಧನೆಗೊಳ್ಳುತ್ತಿದ್ದ ಉಲ್ಲೇಖಗಳಿವೆ. ಭರತಖಂಡದಲ್ಲಿ ಶೈವ, ಶಾಕ್ತ, ವೈಷ್ಣವ, ಬೌದ್ಧ, ಜೈನ ಮೊದಲಾದ ಎಲ್ಲ ಮತ ಸಂಪ್ರದಾಯಗಳಲ್ಲಿಯೂ ನಾಗಪೂಜೆ ವ್ಯಾಪಕವಾಗಿದೆ. ವೈದಿಕ, ಆವೈದಿಕ, ತಾಂತ್ರಿಕ ವಿಧಿವಿಧಾನಗಳಲ್ಲಿ ನಾಗಾರಾಧನೆ ನಡೆಯುತ್ತಿದೆ. ಹೀಗಾಗಿ ನಾಗಾರಾಧನೆ ಒಂದು ಸಂಕೀರ್ಣ ಆರಾಧನಾ ಸಂಪ್ರದಾಯವಾಗಿದೆ. ಅದರಲ್ಲೂ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ನಾಗಾರಾಧನೆ ಪರಿಶಿಷ್ಟ ಜನವರ್ಗದಿಂದ ಹಿಡಿದು ಬ್ರಾಹ್ಮಣರವರೆಗೆ ಎಲ್ಲ ಜಾತಿ, ಸಮುದಾಯಗಳಲ್ಲಿ ವಿವಿಧ ಆರಾಧನಾ ಸಂಪ್ರದಾಯಗಳಾಗಿ ಬಹಳ ವೈಭವ ಹಾಗೂ ಕಲಾತ್ಮಕವಾಗಿ ನಡೆಯುತ್ತದೆ.

ಪಶ್ಚಿಮ ಕರಾವಳಿಯ ಗೋಕರ್ಣದಿಂದ ಕನ್ಯಾಕುಮಾರಿವರೆಗಿನ ಪ್ರದೇಶಕ್ಕೆ ಪ್ರಾಚೀನ ಕಾಲದಲ್ಲಿ ನಾಗರಖಂಡ ಎಂಬ ಹೆಸರಿತ್ತು. ಇಂದಿಗೂ ನಾಗ ಈ ಭಾಗದ ಪ್ರಧಾನ ಆರಾಧ್ಯ ದೈವ. ಚರ್ಮ, ದೃಷ್ಟಿ ಸಂತಾನ ಆದಿದೇವತೆಯಾಗಿ ಗುರುತಿಸಿಕೊಳ್ಳುವ ನಾಗ ಇತರ ದೇವತೆಗಳೊಂದಿಗೆ ಸಮೀಕರಣಗೊಂಡು ಭಿನ್ನ ಭಿನ್ನ ಆರಾಧನಾ ಪ್ರಕ್ರಿಯೆಗಳಿಂದ ಆರಾಧನೆಗೊಳ್ಳುತ್ತಿದೆ. ಬ್ರಹ್ಮ, ಶಿವ, ಶಕ್ತಿ ಹಾಗೂ ಸುಬ್ರಹ್ಮಣ್ಯನೊಂದಿಗೆ ನಾಗ ಸಮಾವೇಶಗೊಂಡು ಸಂಕೀರ್ಣ ಸ್ವರೂಪದಲ್ಲಿ ಕಂಡು ಬರುತ್ತಿರುವುದು ಇಲ್ಲಿಯ ವಿಶಿಷ್ಟತೆ.

ನಾಗಾರಾಧನೆ ವೈದಿಕ ಹಾಗೂ ಅವೈದಿಕ ನೆಲೆಗಳಲ್ಲಿ ನಡೆಯುತ್ತದೆ. ಈ ಎರಡು ನೆಲೆಯ ವಿಧಿ ಆಚರಣೆಗಳಲ್ಲೂ ನಾಗವನ್ನು ಸಮೃದ್ಧಿಯ ಹಾಗೂ ಫಲವಂತಿಕೆಯ ಸಂಕೇತವಾಗಿ ಪರಿಭಾವಿಸಲಾಗುತ್ತದೆ. ಕರ್ನಾಟಕದ ಉದ್ದಗಲಕ್ಕೂ ವ್ಯಾಪಕವಾದ ನಾಗಾರಾಧನೆಯ ಪ್ರಕಾರವೆಂದರೆ ನಾಗರಪಂಚಮಿ ಹಬ್ಬ, ಶ್ರಾವಣ ಮಾಸದ ಶುದ್ಧ ಪಂಚಮಿಯಂದು ನಡೆಯುವ ಈ ಹಬ್ಬ ಕರ್ನಾಟಕದ ಮನೆ ಮನೆಗಳಲ್ಲೂ ಆಚರಿಸುವಂತಹದು. ಕರಾವಳಿಯಲ್ಲಿ ಉಳಿದು ಕರ್ನಾಟಕದ ಇತರ ಭಾಗಗಳಲ್ಲಿ ಇದು ಹೆಣ್ಣು ಮಕ್ಕಳ ಹಬ್ಬವಾಗಿದೆ. ಸುಮಂಗಲಿಯರು ಮಡಿಯುಟ್ಟು ನಾಗಪ್ರತಿಮೆ ಅಥವಾ ಹುತ್ತಕ್ಕೆ ಪೂಜೆ, ನೈವೇದ್ಯ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬದೂಟ ಮಾಡಿ ಉಯ್ಯಾಲೆಯಾಡುವುದು ಸಂಪ್ರದಾಯ. ಆದರೆ ಕರಾವಳಿಯಲ್ಲಿ ನಾಗನ ಬನಗಳಲ್ಲಿ ತಂಬಿಲ ಅಥವಾ ತನುಹಾಕುವವರು ಪೂಜೆ ಮಾಡುವವರು ಪುರುಷ ಅರ್ಚಕರು.

ಅನಂತನವ್ರತ ನಾಗಸಂಬಂಧಿ ಆಚರಣೆಗಳಲ್ಲಿ ಪ್ರಮುಖವಾದುದು. ಸಂತಾನ ಸಮೃದ್ಧಿಗಾಗಿ ಅನೇಕ ಮನೆಯಲ್ಲಿ ಈ ವಿಧಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಭಾದ್ರಪದ ಶುಕ್ಲಪಕ್ಷ ಚತುದರ್ಶಿಯ ದಿನ ಪುಣ್ಯಜತುಂಬಿದ ಕಲಶದ ಪೂಜೆ ಇದರ ಪ್ರಧಾನ ಅಂಶ. ಅನಂತನ ವ್ರತದಂತೆ ಆಶ್ಲೇಷಬಲಿ ಕೂಡಾ ವೈದಿಕ ಕ್ರಿಯಾರೂಪದ ಆಚರಣೆ. ನಿಸ್ಸಂತಾನ, ಚರ್ಮವ್ಯಾಧಿ ನಿವಾರಣೆಗಾಗಿ ಆಶ್ಲೇಷಬಲಿಯನ್ನು ಮನೆಗಳಲ್ಲಿ ಹಾಗೂ ನಾಗಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. ಪ್ರತಿ ತಿಂಗಳ ಆಶ್ಲೇಷ ನಕ್ಷತ್ರದ ದಿನ ರಾತ್ರಿ ಅಥವಾ ಹಗಲು ಆಶ್ಲೇಷಬಲಿ ನಡೆಸಬಹುದು. ಪಂಚವರ್ಣದಿಂದ ಕಲಾತ್ಮಕವಾದ ಮಂಡಲ ಸುರುಳಿ ಹಾಕಿ ಕುಳಿತ ಹೆಡೆಬಿಚ್ಚಿದ ನಾಗನನ್ನು ಹೋಲುತ್ತದೆ. ಸುಮಾರು ಆರೆಂಟು ತಾಸುಗಳು ದೀರ್ಘಾಚರಣೆಯಲ್ಲಿ ಆರಂಭ ಹಾಗೂ ಮುಕ್ತಾಯದ ಹಂತದಲ್ಲಿ ‘ನಾಗದರ್ಶನ’ವಾಗುತ್ತದೆ. ನಾಗಪಾತ್ರಿಗಳ ಮೈಯಲ್ಲಿ ನಾಗರದೇವತೆ ಯಕ್ಷಿರೂಪದಲ್ಲಿ ಮೈದುಂಬಿ ನಡೆಸುವ ಆರಾಧನೆಗೆ ನಾಗದರ್ಶನ ಎನ್ನುತ್ತಾರೆ. ಸಾಮಾನ್ಯವಾಗಿ ನಾಗದರ್ಶನ ನಡೆಯುವುದು ನಾಗಬನಗಳಲ್ಲಿ. ನಾಗಪಾತ್ರಿ ನಾಗನಂತೆ ಬುಸುಗುಟ್ಟುತ್ತಾ ಆವೇಶಕ್ಕೊಳಗಾಗುತ್ತಾನೆ. ನಂಬಿದ ಭಕ್ತರ ಸಮಸ್ಯೆಗಳಿಗೆ ಪರಿಹಾರದ ಅಭಯ ದೊರೆಯುತ್ತದೆ. ಸಂತಾನ ಹಾಗೂ ದೃಷ್ಟಿಗಾಗಿ ನಾಗಪ್ರತಿಮೆ ಅಥವಾ ಕಲ್ಲಿನ ನಾಗನನ್ನು ನಾಗಕ್ಷೇತ್ರ ಅಥವಾ ನಾಗಬನಗಳಲ್ಲಿ ಪ್ರತಿಷ್ಠಾಪಿಸುವುದಿದೆ. ಪೂರ್ಣವಾಗಿ ವೈದಿಕ ಕ್ರಿಯಾಚರಣೆಯಾದ ಇದನ್ನೂ ‘ನಾಗಪ್ರತಿಷ್ಠೆ’ ಎಂದು ಕರೆಯುತ್ತಾರೆ. ನಾಗನ ಬಗೆಗೆ ಅತ್ಯಂತ ಭಯ ಹಾಗೂ ಭಕ್ತಿ ಇರುವುದರಿಂದಲೇ ಸತ್ತ ಸರ್ಪವನ್ನು ಕಂಡರೆ ವೈದಿಕ ವಿಧಿಯಂತೆ ಅದಕ್ಕೆ ಅಪರಸಂಸ್ಕಾರ ಮಾಡಲಾಗುತ್ತದೆ.

ನಾಗಮಂಡಲ: ನಾಗಮಂಡಲ ದಕ್ಷಿಣ ಕನ್ನಡದಲ್ಲಿ ಕಂಡುಬರುವ ಅತ್ಯಂತ ಕಲಾತ್ಮಕವಾದ ನಾಗರಾಧನಾ ರಂಗಕಲೆ, ಬ್ರಾಹ್ಮಣ ಅರ್ಚಕ, ಬ್ರಾಹ್ಮಣ ಪಾತ್ರಿ, (ನಾಗ ನರ್ತಕ)ಗಳ ಕೂಡುವಿಕೆಯಲ್ಲಿ ಮಂತ್ರೋಕ್ತ ಹೋಮ ಹವನಾದಿಗಳ ಹಿನ್ನೆಲೆಯಲ್ಲಿ ಈ ಆರಾಧನೆ ಜರಗುತ್ತದೆ. ನಾಗಮಂಡಲ ಮುಖ್ಯವಾಗಿ ಸಂತಾನ ಬಯಕೆ ಹಾಗೂ ಕುಷ್ಠರೋಗ ನಿವಾರಣ ಉದ್ದೇಶದಿಂದ ನಡೆಸಲಾಗುವ ವಿಧಿಕ್ರಿಯೆ. ಮಂಡಲ ನೃತ್ಯಾಚರಣೆಗೆ ಪೂರ್ವಭಾವಿಯಾಗಿ ನಾಗದರ್ಶನ, ನಟುಗಳ ಆರಾಧನೆ, ಹೋಮ, ದಾನ ಸಂಸ್ಕಾರಗಳು ನಡೆಯುತ್ತವೆ. ಜಾತಿಮತಭೇಧವಿಲ್ಲದೆ ಎಲ್ಲರಿಗೂ ಅನ್ನಸಂತರ್ಪಣೆ ನಡೆಸುವುದು ಇಲ್ಲಿಯ ವಿಶೇಷ. ಪಂಚವರ್ಣದ ಹುಡಿಯಿಂದ ವೈದ್ಯರು ಏಳು ಹೆಡೆಯ ಸರ್ಪನ ಆಕೃತಿಯಲ್ಲಿ ಪವಿತ್ರಗಂಟುಗಳ ಜೋಡಣೆಯಿಂದ ಅತ್ಕಾಕರ್ಷವಾಗಿ ಬರೆಯುತ್ತಾರೆ. ವಿಷ್ಣುಪಾದ, ಬ್ರಹ್ಮಕಪಾಲ, ಯಕ್ಷ, ಗಣಪತಿ (ಸ್ವಸ್ತಿಕ)ಗಳನ್ನು ರೇಖಿಸಲಾಗುತ್ತದೆ. ಸುತ್ತ ದ್ರಾಕ್ಷಿ ಬಳ್ಳಿ, ಎಲೆ ಇತ್ಯಾದಿಗಳನ್ನು ಚಿತ್ರಿಸಲಾಗುತ್ತದೆ. ಮಂಡಲದ ಗಾತ್ರಕ್ಕನುಸರಿಸಿ ಇಡಿಮಂಡಲ, (ಹದಿನಾರು ಪವಿತ್ರ) ಅರ್ಧಮಂಡಲ, ಕಾಲು ಮಂಡಲ ಎಂದು ಕರೆಯಲಾಗುತ್ತದೆ. ಪ್ರತಿ ಪವಿತ್ರಕ್ಕೆ ಒಂದರಂತೆ ಮಂಡಲದ ಸುತ್ತ ಕಾಲುದೀಪ ಬೆಳಗಿಸಲಾಗುತ್ತದೆ. ಸೂರ್ಯಾಸ್ತವಾದ ಮೇಲೆ ನಾಗಬನದಲ್ಲಿ ಹಾಲಿಟ್ಟು ಸೇವೆ ಆದ ನಂತರ, ನಾಗದರ್ಶನವಾಗಿ ನಾಗಪಾತ್ರಿ ಮೈದುಂಬಿ ಮಂಡಲಕ್ಕೆ ಬರುತ್ತಾನೆ. ಮಂಡಲಕ್ಕೆ ಪೂಜೆ ನಡೆದು ನಾಗಪಾತ್ರಿಗೆ ‘ಹೂ ನೀರು’ ಕೊಡಲಾಗುತ್ತದೆ. ಹಿಂಗಾರವನ್ನು ಮೈಮುಖಕ್ಕೆ ಉಜ್ಜಿಕೊಳ್ಳುತ್ತಾ ಬುಸುಗುಟ್ಟುವ ನಾಗನಾಗಿ ಪಾತ್ರಿ ಪ್ರಕಾಶಗೊಳ್ಳುತ್ತಾನೆ. ಆಗ ಡಕ್ಕೆ ತಾಳ ಬಡಿಯುತ್ತ ವೈದ್ಯರು ಪ್ರವೇಶಿಸುತ್ತಾರೆ. ಹಿಮ್ಮೇಳದ ಹಾಡನ್ನು ಪುನರುಚ್ಚರಿಸುತ್ತಾ ಅರ್ಧನಾರಿ ವೇಷಧಾರಿ ನಾಗನರ್ತಕ ಮಾಡುತ್ತಾನೆ. ಬಗೆ ಬಗೆಯ ತಾಳಗತಿಯಲ್ಲಿ ಡಕ್ಕೆ ನುಡಿಸುತ್ತಾ ಕುಣಿಯುತ್ತಾನೆ. ನಾಗ ಪಾತ್ರಿ ಡಕ್ಕೆಯ ನುಡಿತದ ನಡೆಗೆ ತಕ್ಕಂತೆ ಕುಣಿದು ಕುಪ್ಪಳಿಸುತ್ತ ಮಂಡಲದ ಸುತ್ತು ಬರುವ ದೃಶ್ಯ ಚಿತ್ತಾಕರ್ಷಕ. ಒಮ್ಮೆ ಕುಪಿತನಾಗಿ ಹೂಂಕರಿಸುತ್ತಾ ಬುಸುಗುಟ್ಟುವ ನಾಗ ಇನ್ನೊಮ್ಮೆ ಒಲಿದು ಸ್ನೇಹಕ್ಕೆ ಮಣಿಯುವ ಬಹುಬಗೆಯ ಭಾವಪ್ರದರ್ಶನ ಇಲ್ಲಿ ಕಂಡು ಬರುತ್ತದೆ.

ಸ್ವಾಮಿ ಆರಾಧನೆ(ಪ್ರಾಣಾರಾಟ): ಕರಾವಳಿಯ ಕನ್ನಡ ಪ್ರದೇಶದಲ್ಲಿ ಬ್ರಾಹ್ಮಣೇತರ ಜನವರ್ಗದಲ್ಲಿ ನಾಗರೂಪಿಯಾದ ಸ್ವಾಮಿ ಒಂದು ಆರಾಧ್ಯದೈವ ಕೃಷಿಕರಾದ ಬಂಟರು (ನಾಡವರು) ಸ್ವಾಮಿಯನ್ನು ತಮ್ಮ ಮನೆದೈವವೆಂದು ನಂಬಿ ನಡೆಯುತ್ತಾರೆ. ತಮ್ಮ ಮನೆ ಆವರಣದೊಳಗಿರುವ ಸ್ವಾಮಿಗೆ ಪ್ರತಿದಿನ ನೀರಿಟ್ಟು ದೀಪ ಹಚ್ಚಿಡುತ್ತಾರೆ. ವಾರ್ಷಿಕವಾಗಿ ಮನೆತನದ ಮಟ್ಟದಲ್ಲಿ ಅಥವಾ ಗ್ರಾಮಮಟ್ಟದಲ್ಲಿ ಭೂತಮಾಧ್ಯಮರಾದ ಪಾಣಾರರಿಂದ ಸ್ವಾಮಿಗೆ ಆರಾಧನೆ ನಡೆಸಲಾಗುತ್ತದೆ. ಪಾಣಾರಾಟ ಆರಂಭವಾಗುವುದೇ ಸ್ವಾಮಿ ಕೋಲದಿಂದ. ಅಲ್ಲಿ ಮಂಡಲ ಚಿತ್ತಾರದ ಸುತ್ತ ಸ್ವಾಮಿ – ನಾಗನ ಕುರಿತ ‘ಹೊಗಳಿಕೆ’ಯನ್ನು ಕುಣಿತದೊಂದಿಗೆ ಹಾಡಲಾಗುತ್ತದೆ.

ಕಾಡ್ಯನಾಟ– ಕಾಳಿಂಗ ಆರಾಧನೆ: ಪರಿಶಿಷ್ಟ ಜನವರ್ಗವಾದ ಮೇರರು ನಡೆಸುವ ಕಾಳಿಂಗ ಸರ್ಪಾರಾಧನೆಯೇ ಕಾಡ್ಯನಾಟ. ಕುಂದಾಪುರ ತಾಲೂಕು ಹಾಗೂ ಕುಂದಾಪುರ – ಉಡುಪಿ ತಾಲೂಕುಗಳ ಗಡಿ ಪ್ರದೇಶದಲ್ಲಿ ಕಾಡ್ಯನ ಅನೇಕ ಆರಾಧನಾ ಕೇಂದ್ರ ಹಾಗೂ ಕಾಡ್ಯನ ಮನೆಗಳು ಇವೆ. ಕಾಡ್ಯನಾಟ ಕಾಡ್ಯನ ಮನೆಯಲ್ಲಿ ನಾಲ್ಕು ರಾತ್ರೆ, ಮೂರು ಹಗಲುಗಳಲ್ಲಿ ನಡೆಸುವ ಸುದೀರ್ಘ ಆಚರಣೆ. ಕಾಡ್ಯ ನಾಟದಲ್ಲಿ ಸರ್ಪನ ಹೆಡೆ ಒತ್ತಿದ ಉಬ್ಬು ಶಿಲ್ಪ ಮಾದರಿಯಲ್ಲಿ ಮಣ್ಣಿನ ಕಲಶಗಳಿಗೆ ವಿಶೇಷ ಮಹತ್ವ, ಕಲಶಪೂಜೆ, ಕಾಡ್ಯನ ದರ್ಶನಗಳ ಹಿನ್ನೆಲೆಯಲ್ಲಿ ಪಂಚವರ್ಣದ ಹುಡಿಯಿಂದ ಬೃಹತ್ ಮಂಡಲ ರಚನೆ, ಬೈದ್ಯನ ಹಾಡು ಕುಣಿತಗಳು ಕಾಡ್ಯನಾಟದ ಪ್ರತಿದಿನದ ವಿಧಿ. ಸುಮಾರು ಹತ್ತು ಅಡಿ ವ್ಯಾಸದ ವೃತ್ತಾಕಾರದ ಮಂಡಲದಲ್ಲಿ ಕಾಡ್ಯ, ನಾಗನ ಜೊತೆಗೆ ಆದಿ ಸಮಾಜದ, ಬದುಕನ್ನು ಪ್ರಭಾವಿಸಿದ ಅನೇಕ ವಸ್ತು ಸಂಗತಿಗಳನ್ನು ಚಿತ್ರಿಸುತ್ತಾರೆ. ಇಡಿಯ ಆಚರಣೆ ಅವೈದಿಕ ಕ್ರಿಯಾವಿಧಿಗಳಲ್ಲಿ ಮೇರಜಾತಿ ಬಾಂಧವರ ಪಾಲ್ಗೊಳ್ಳುವಿಕೆಯಲ್ಲಿ ನಡೆಯುತ್ತದೆ.

ನಾಗನ ಹುಟ್ಟು

ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ವರ್ಗಕ್ಕೆ ಸೇರಿದ ಉಪ್ಪಾರರು ವಿಶೇಷವಾಗಿ ನಾಗಾರಾಧಕರು. ಬೇರೆ ಬೇರೆ ಬಳಿಗೆ (ಗೋತ್ರಕ್ಕೆ ) ಸೇರಿದವರಿಗೆ ಪ್ರತ್ಯೇಕ ನಾಗಬನಗಳಿರುತ್ತವೆ. ಅದನ್ನು ಅವರು ‘ಹುಟ್ಟು’ ಎಂದು ಕರೆಯುತ್ತಾರೆ. ‘ಹುಟ್ಟಿ’ನಲ್ಲಿ ವಾರ್ಷಿಕವಾಗಿ ನಡೆಯುವ ಹುಟ್ಟು ಆಚರಣೆ ಹಾಗೂ ಕದಿರು ಹಬ್ಬ ಬಹಳ ವಿಶೇಷವಾದುದು. ನಾಗನಿಗೆ ಹಾಲು, ಹಣ್ಣು ಪೂಜೆ ಒಪ್ಪಿಸುತ್ತಾರೆ. ನಾಗಪ್ರತಿ (ಅವರ ಜಾತಿಯವರೆ) ಮೈದುಂಬಿ ದರ್ಶನ ನಡೆದು ಭಕ್ತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಾರೆ. ಉಪ್ಪಾರರ ಕದಿರುಹಬ್ಬ ಅವರವರ ‘ಹುಟ್ಟಿ’ನಲ್ಲೇ ನಡೆಯುತ್ತದೆ. ಹುಟ್ಟಿನ ನಾಗನಿಗೆ ಕದಿರು ಒಪ್ಪಿಸಿ ಪೂಜೆ ಸಲ್ಲಿಸಿ ಅಲ್ಲಿಂದ ಪ್ರಸಾದ ರೂಪವಾಗಿ ಆರ್ಚಕನಿಂದ ಕದಿರು ಪಡೆದು ಮನೆ ತುಂಬಿಸುತ್ತಾರೆ.

ಒಟ್ಟಿನಲ್ಲಿ ನಾಗ ಎಲ್ಲ ವರ್ಗದವರಿಗೆ ಆರಾಧನೆಗೊಳ್ಳುವ ದೈವ. ಕರ್ನಾಟಕದಂತೆ ಕೇರಳದಲ್ಲೂ ಪೂಳ್ಳುವರ್ ಎಂಬ ದಲಿವರ್ಗದವರು ನಾಗಾರಾಧಕರಾಗಿದ್ದಾರೆ. ನಾಗಮಂಗಲ, ಕಾಡ್ಯನಾಟಕಗಳನ್ನು ಹೋಲುವವು ಕೇರಳದ ಸರ್ಪಂತುಳ್ಳಲ್ ಹಾಗೂ ‘ನೂರುಪಾಲುಂ’ . ಸರ್ಪಬಲಿ, ಸರ್ಪಪ್ಪಾಟ್ಟು ಆಚರಣೆಗಳಲ್ಲದೆ ಅನೇಕ ಬಗೆಯ ಹರಕೆ ಪೂಜೆಗಳು ನಾಗನಿಗೆ ಸಲ್ಲುತ್ತದೆ. ಸ್ಥಳಿಕ ಮತಾಚರಣೆಯಾಗ ನಾಗಾರಾಧನೆ, ಹಾಡು, ಕುಣಿತ, ನಟನೆ, ಚಿತ್ರ, ವಾದ್ಯ, ರಂಗ ಸಜ್ಜಿಕೆಯಿಂದ ಒಡಗೂಡಿ ಒಂದು ಕಲಾತ್ಮಕ ಜನಪದ ರಂಗಭೂಮಿಯಾಗಿ ಬೆಳೆದಿದೆ.

.ವಿ.ಎನ್.

 

ನಾಟ್ಟಾರ್ ಓವಿಯಂಗಳ್ ತಮಿಳು ಜನಪದರ ಚಿತ್ರಕಲೆ ಎರಡು ಬಗೆಗಳಲ್ಲಿ ಕಾಣಸಿಗುತ್ತವೆ. ೧. ಆಚರಣೆಗಳಿಗೆ ಸಂಬಂಧಿಸಿದ ಚಿತ್ರಕಲೆ, ೨. ಅಲಂಕಾರಕ್ಕಾಗಿ ಬರೆಯುವ ಚಿತ್ರಕಲೆ.

ಆಚರಣೆಗಳಿಗೆ ಸಂಬಂಧಿಸಿದ ಚಿತ್ರಕಲೆ: ಯಾವುದಾದರೂ ಸಮಾರಂಭಗಳಿಗೆ ಸಂಬಂಧಿಸಿದ, ಮಂತ್ರಶಕ್ತಿಗಳಿಗೆ ಸಂಕೇತವಾಗಿ ಬಳಸಲಾಗುವ ಚಿತ್ರಗಳನ್ನೇ ಆಚರಣೆಗಳಿಗೆ ಸಂಬಂಧಿಸಿದ ಚಿತ್ರಗಳು ಎನ್ನಲಾಗುತ್ತದೆ.

ಉತ್ತರ ಆರ್ಕಾಡು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಜನಪದರು ತಮ್ಮ ಪೂಜಾಗೃಹದ ಗೋಡೆಯ ಮೇಲೆ ಚೌಕಾಕಾರದಲ್ಲಿ ಮತ್ತು ನೀಳ ಗೆರೆಗಳಾಗಿ ಅರಿಸಿನವನ್ನು ಬಳಿದು ಅದರ ಮೇಲೆ ಅಡ್ಡಗೆರೆಯಲ್ಲಿ ಅಥವಾ ಗುಂಡಾದ ಚುಕ್ಕಿಗಳಾಗಿ ಕುಂಕುಮವನ್ನು ಇಡುತ್ತಾರೆ. ಇವನ್ನು ಶುಕ್ರವಾರಗಳು ಮತ್ತು ವಿಶೇಷ ಸಮಾರಂಭಗಳಂದು ಅಳಿಸಲಾಗುತ್ತದೆ. ಮತ್ತೆ ಮಿಕ್ಕ ದಿನಗಳಲ್ಲಿ ಅವನ್ನು ಹಾಗೆಯೇ ಬರೆಯುತ್ತಾರೆ. ಇದು ಅಯಾ ಕುಟುಂಬದ ಸಂಕೇತ ಅಥವಾ ಅವರ ಪೂರ್ವಿಕರು ನಡೆಸಿಕೊಂಡು ಬಂದ ವಿಶಿಷ್ಟ ಮಂತ್ರದ ಅರ್ಥವದ ಸಂಕೇತವಾಗಿರುತ್ತದೆ. ಊಟಿಯಲ್ಲಿಯ ತೊದವರು ತಮ್ಮ ಮನೆಗಳಲ್ಲಿ ದೊಡ್ಡ ಕೊಂಬು, ಕೋಡುಗಳನ್ನು ಹಸುವಿನ ತಲೆಯನ್ನು ಬರೆದಿರುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ‘ಮಾಟ್ಟುಪೊಂಗಲ್’ ದಿನದ ಮರುದಿನ ಹಸುಗಳಿಗೆ ಕಿಚ್ಚುಹಾಯಿಸುವರು. ಊರಿನ ನಿರ್ದಿಷ್ಟ ಜಾಗದಲ್ಲಿ ಗ್ರಾಮಸ್ಥರೆಲ್ಲರೂ ತಂತಮ್ಮ ಮನೆಯ ಹಸುಗಳನ್ನು ತಂದು ಊರ ಬಯಲಲ್ಲಿ ನಿಲ್ಲಸುತ್ತಾರೆ. ಮೊದಲು ಅವುಗಳಿಗೆ ಪೂಜೆ ಮಾಡುತ್ತಾರೆ. ಅನಂತರ ಊರ ಹಿರಿಯರು ಮತ್ತು ಗ್ರಾಮದ ಪಂಚಾಯಿತಿಯ ಮುಖ್ಯಸ್ಥರು ಹಸುಗಳೊಂದಿಗೆ ಊರ ಮನೆಗಳಿಗೆ ಅರಿಸಿನದ ನೀರನ್ನು ಮಾವಿನೆಲೆಯ ಗೊಂಚಲಿನಿಂದ ಚಿಮುಕಿಸುತ್ತಾರೆ. ದನದ ಸಗಣಿಯಿಂದ ಮನೆಯ ಮುಂಬಾಗಿಲಿನ ಎರಡು ಕಡೆಗಳಲ್ಲೂ ಕೈಬೆರಳಚ್ಚನ್ನು ಮೂಡಿಸುತ್ತಾರೆ. ಅದನ್ನು ‘ಕಾವಲುಗಾರ’ನೆಂದು ಕರೆಯುವುದು ವಾಡಿಕೆ. ಇದು ಮನೆಯೊಳಗೆ ದುಷ್ಟಶಕ್ತಿಗಳು ನುಸುಳದಂತೆ ತಡೆಯುತ್ತದೆ ಮತ್ತು ಕಳ್ಳರಿಂದಲೂ ಮನೆಯನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇದೆ. ಸಗಣಿಯ ಸಾರಣೆ ಮನೆಯನ್ನು ಚಂದಗಾಣಿಸುತ್ತದೆ ಎಂದೂ ಜನಪದರು ಯಾವ ರೀತಿಯ ಕಟ್ಟುಪಾಡುಗಳಿರುವುದಿಲ್ಲ. ಹಸ್ತಗುಣಕ್ಕನುಗುಣವಾಗಿ, ಕೈಗೆ ಬಂದಂತೆ ಅವನ್ನು ಬರೆಯಬಹುದು.

ಸಗಣಿಯಲ್ಲಿ ಐದೂ ಬೆರಳುಗಳನ್ನು ಸಪೂರ್ಣವಾಗಿ ಊರಿ ಗೋಡೆಗಳ ಮೇಲೆ ಆ ಕೈಯನ್ನೊತ್ತಿ ಆಕಾರ ಮೂಡಿಸುತ್ತಾರೆ. ಕೆಲವರು ಸ್ವಸ್ತಿಕ್ ಚಿಹ್ನೆಗಳನ್ನೂ ಮೂಡಿಸುವುದುಂಟು. ಉತ್ತರ ಅರ್ಕಾಟ್ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ‘ಪೊಂಗಲ್ ಅನಂತರ’ ಅದರಲ್ಲಿ ಮನೆಯ ಪೂಜಾಗೃಹದ ಗೋಡೆಯ ಮೇಲೆ ಸಣ್ಣದಾಗಿ ಚೌಕಾಕಾರದಲ್ಲಿ ವೀಳ್ಯದೆಲೆಯನ್ನು ಅರೆದು ಬಳಿಯುತ್ತಾರೆ. ಹೀಗೆ ಹಸಿರು ಬಣ್ಣದ ಹಿನ್ನೆಲೆ ಮೂಡಿಸಿದ ಅನಂತರ ಅದರ ಮೇಲೆ ನಾಮದುಂಡೆಯಿಂದ ಗರಿಬಿಚ್ಚಿದ ನವಿಲನ್ನು ಹೆಣ್ಣುಮಕ್ಕಳು ಬರೆಯುತ್ತಾರೆ. ಇದು ಮನೆಗೆ ‘ಲಾಭಕ’ವೆಂಬ ಅರ್ಥದಲ್ಲಿ ಆಚರಿಸಲ್ಪಡುತ್ತದೆ. ಮದುವೆ ಸಂದರ್ಭದಲ್ಲಿ ಬಳಸುವ ಸಾಂಪ್ರದಾಯಿಕ ಮಡಕೆಗಳ ಮೇಲೆ ಸುಣ್ಣವನ್ನು ಪೂಸಿ ಆ ಬಳಿಕ ಬಣ್ಣದ ಹಿನ್ನೆಲೆಯಲ್ಲಿ ನೀಲ, ಅರಿಸಿನ, ಕೆಂಪು, ಹಸಿರು ಬಣ್ಣಗಳಿಂದ ಸುಂದರೆ ಚಿತ್ರಗಳನ್ನು ಬರೆಯುತ್ತಾರೆ. ಇವೂ ಸಾಂಪ್ರದಾಯಿಕ ಆಚರಣಾ ಸಂಬಂಧ ಸಂಕೇತಗಳುಳ್ಳ ಚಿತ್ರಗಳೇ ಆಗಿರುತ್ತದೆ. ಪೆರುವಾರಿಯಾಗ, ಪುದುಕ್ಕೋಟ್ಟೈ, ರಾಮನಾಥಪುರಂ, ತಿರುಚ್ಚಿ ಮೊದಲಾದ ಸ್ಥಳಗಳಲ್ಲಿ, ಮತ್ತಿತರ ಸಣ್ಣಪುಟ್ಟ ಗ್ರಾಮಗಳಲ್ಲಿ ‘ಪುರವಿ ಎಡುಪ್ಪು’ ಎಂಬ ಆಚರಣೆಗೆ ಸಂಬಂಧಿಸಿದಂತೆ ಸುಟ್ಟ ಮಣ್ಣಿನ ಟೆರ್ರಾಕೋಟಾದ ಕುದುರೆ, ಆನೆ ಮುಂತಾದವುಗಳ ಮೇಲೆ ಸುಣ್ಣ ಬಳಿದು ಆ ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನೀಲ, ಅರಿಸಿನ, ಕೆಂಪು ಬಣ್ಣಗಳಿಂದ ನಿರ್ದಿಷ್ಟ ಆಕಾರಗಳನ್ನೂ ಚಿತ್ರಗಳನ್ನೂ ಬರೆಯಲಾಗುತ್ತದೆ. ಇದೂ ನಿರ್ದಿಷ್ಟ ಆಚರಣಾ ಸಂಬಂಧದ ಪ್ರಯತ್ನವೇ ಆಗಿದೆ.

ಅಲಂಕಾರಕ್ಕಾಗಿ ಬರೆಯುವ ಚಿತ್ರಕಲೆ: ಪೊಂಗಲ್ ಸಂಭ್ರಮಾಚರಣೆಗೂ ಮುಂಚೆ ಗ್ರಾಮಗಳಲ್ಲಿ ತಂತಮ್ಮ ಮನೆಗಳನ್ನು ಶುದ್ದೀಕರಿಸಿ, ಸುಣ್ಣ ಬಳಿದು ಚೆಂದಗೊಳಿಸುವುದುಂಟು. ಆಗಲೇ ಮನೆಯ ಗೋಡೆಗಳಲ್ಲಿ ಕೆಲವರು ಗೆರೆಗಳಿಂದ ಕೂಡಿದ ಸಾಂಕೇತಿಕ ಚಿಹ್ನೆಗಳನ್ನು ಬರೆಯುತ್ತಾರೆ. ಇದರ ಉದ್ದೇಶ ಮನೆ ಸುಂದರವಾಗಿ ಕಾಣಲಿ ಎಂಬುದೇ ಆಗಿರುತ್ತದೆ. ಹಾಗಾಇಗ ಇಂತಹ ಚಿತ್ರಗಳನ್ನು ಅಲಂಕಾರಿಕ ಚಿತ್ರಗಳೆಂದು ಕರೆಯುತ್ತಾರೆ. ಹೀಗೆ ಬರೆಯುವ ಚಿತ್ರಗಳಲ್ಲಿ ಹಳದಿ, ಕಾವಿ ಹಾಗೂ ನೀಲವರ್ಣಗಳು ವಿಶೇಷವಾಗಿ ಬಳಕೆಯಾಗುತ್ತವೆ. ನವಿಲು, ಹಾವು, ಪಾರಿವಾಳ, ಗಿಳಿ, ಆನೆ. ಕುದುರೆ, ಗೂಳಿ, ಮೀನು, ನಕ್ಷತ್ರ, ಹೂ, ತೋರಣ ಮುಂತಾದವುಗಳನ್ನೂ ಚೌಕ ಅಥವಾ ಗೆರೆಗಳು, ತ್ರಿಕೋನ, ವೃತ್ತ, ಗುಣಾಕಾರ ಚಿಹ್ನೆಬಿಡಿಸುವುದುಂಟು ಪ್ರಕೃತಿ ಚಿತ್ರಗಳನ್ನು ಬಡಿಸುವವರ ಕಲ್ಪನಾಸಾಮರ್ಥ್ಯಕ್ಕೆ ತಕ್ಕಂತೆ. ಬಣ್ಣಗಳಲ್ಲಿ ಬಟ್ಟೆಯನ್ನು ಅದ್ದಿ ಉಜ್ಜಿ ಹಿನ್ನೆಲೆಯನ್ನು ಮೂಡಿಸಿಕೊಳ್ಳಲಾಗುತ್ತದೆ. ಇವುಗಳನ್ನು ಬಿಡಿಸುವುದಕ್ಕೆ ಯಾವ ವಿಧವಾದ ಸಂಪ್ರದಾಯ ಅಥವಾ ಕಟ್ಟುಪಾಡುಗಳ ಅಗತ್ಯವಿರುವುದಿಲ್ಲ. ಇವುಗಳನ್ನು ಮತ್ತೆ ಮನೆಗೆ ಸುಣ್ಣಬಣ್ಣ ಬಳಿಯುವ ಕಾಲದವರೆಗೆ ಹಾಗೇ ಉಳಿಸಿಕೊಳ್ಳಬಹುದು. ಕೆಲವು ಪ್ರದೇಶಗಳಲ್ಲಿ ಮದುವೆಯ ಸಂಭ್ರಮ ಹಾಗೂ ವಧೂವರರನ್ನು ಎದುರುಗೊಳ್ಳುವ ಸಂಭ್ರಮಾಚರಣೆಗಳ ಚಿತ್ರಗಳನ್ನೂ ಬಿಡಿಸುವುದುಂಟು. ಕೆಲವೊಮ್ಮೆ ಹಸುಗಳನ್ನು ಕಟ್ಟುವ ಸ್ಥಳಗಳಲ್ಲಿ ಸಹ ಇಂತಹ ಚಿತ್ರಗಳನ್ನು ಬಿಡಿಸಿರುವುದನ್ನು ಕಾಣಬಹುದು.

ಪಿ.ಯು.ಅನುವಾದ ಜಿ.ಎನ್.

 

ನಾಡನ್ ಫಲಿತಂಙಳ್ ಕೇರಳದ ಗ್ರಾಮೀಣ ತಮಾಷೆಗಳು. ಭೂಮಿಯಲ್ಲಿನ ಇತರ ಜಿಪುಣಿಗಳಿಂದ ಮನುಷ್ಯನನ್ನು ಪ್ರತ್ಯೇಕಿಸುವ ಮುಖ್ಯ ಘಟಕವೆಂದರೆ ಅವನ ನಗುವ ಸಾಮರ್ಥ್ಯ. ಆಧುನಿಕ ವೈದ್ಯಕೀಯವೂ ಮನಶ್ಯಾಸ್ತ್ರವೂ ನಗುವಿಗೆ ಆರೋಗ್ಯವನ್ನೂ ಆಯುಷ್ಯವನ್ನೂ ಹೆಚ್ಚಿಸುವ ಶಕ್ತಿಯಿದೆ ಎಂದು ಹೇಳುತ್ತದೆ. ಆದರೆ ನಗುವೂ ಹೊರಗೆ ಅಭಿವ್ಯಕ್ತವಾಗುವ ವಿಚಾರವಾದರೆ ತಮಾಷೆಯು ಅದರ ಕಾರಣಗಳಲ್ಲೊಂದು. ಗ್ರಾಮೀಣ ತಮಾಷೆಗಳೆಂದರೆ ಒಂದು ಗುಂಪಿನಲ್ಲಿರುವ ಜನರು ಮಾನಸಿಕವಾಗಿ ಉಲ್ಲಸಿತರಾಗಿದ್ದು ಸಂದರ್ಭದಲ್ಲಿ ಹೊತ್ತು ಹೋಗುವುದಕ್ಕಾಗಿ ಪರಸ್ಪರ ಹೇಳುವ ಪುಟ್ಟಪುಟ್ಟ ವಾಙ್ಮಯಗಳು/ಮಾತುಗಳು.

ಗ್ರಾಮೀಣ ತಮಾಷೆಗಳ ನಿರ್ಮಾಣದಲ್ಲೂ ಪ್ರಯೋಗದಲ್ಲೂ ನಮ್ಮ ಸ್ವಭಾವ, ಬುದ್ಧಿ, ಭಾವ, ಔಚಿತ್ಯಗಳು ಅನಿವಾರ್ಯ ಯುಕ್ತಿಯಿಂದ ತಮಾಷೆ ಹುಟ್ಟಲಾರದು. ಹಲವಾರು ಬಾರಿ ಸಮವಯಸ್ಕರಾದ ಒಂದಷ್ಟು ಜನರು ಅಥವಾ ಯಾರೋ ಒಬ್ಬರು ತಮಾಷೆಯನ್ನು ಸೃಷ್ಟಿಸುತ್ತಾರೆ. ಸಂದರ್ಭಾನುಸಾರವಾಗಿ ಅದು ಸಮಾಜದಲ್ಲಿ ಪ್ರಸಾರವಾಗುತ್ತದೆ. ಸಮಾಜವು ಅದರಲ್ಲಿ ಪುಸಸೃಷ್ಟಿ ನಡೆಸಿ ಅದಕ್ಕೆ ಹೊಸ ಪಾಠಾಂತರಗಳನ್ನು ಸೃಷ್ಟಿಸಿರುತ್ತದೆ.

ಧಾರ್ಮಿಕ ಕಲೆಗಳಂತೆ ಕ್ಲುಪ್ತವೂ ಪೂರ್ವನಿಶ್ಚಿತವಾದ ಒಂದು ಸಂದರ್ಭವೂ ಗ್ರಾಮೀಣ ತಮಾಷೆಗಳಿಗೆ ಇಲ್ಲ. ಆದರೆ ಅವು ಕಾಣಿಸಿಕೊಳ್ಳಬಹುದಾದ ಕೆಲವು ಸಂದರ್ಭಗಳಿವೆ. ಮದುವೆಯ ಹಿಂದಿನ ದಿನ ಗೆಳೆಯರೆಲ್ಲ ಒಂದಾದಾಗ, ಪಾನಗೋಷ್ಠಿಯ ಕೆಲವು ಸಂದರ್ಭಗಳಲ್ಲಿ, ತುಂಬ ಹೊತ್ತು ಕಾದು ನಿಲ್ಲುತ್ತಿರುವ ಸೈನಿಕರು, ಡ್ರೈವರುಗಳು ಪೊಲೀಸರು ಮುಂತಾದವರ ಗುಂಪುಗಳಲ್ಲಿ, ಶಾಲೆ ಕಾಲೇಜುಗಳ ಸ್ಟಾಫ್‌ರೂಮುಗಳಲ್ಲಿ, ಹೋಸ್ಟೆಲಿನ ಜನ ಬಂದು ಸೇರಿದಾಗ, ವೀಳ್ಯದ ಅಂಗಡಿಗಳು ಮತ್ತು ಚಹಾಧ ಅಂಗಡಿಗಳಲ್ಲಿ ಜನರು ಸೇರಿರುವ ಸಂದರ್ಭದಲ್ಲಿ ಹೀಗೆ ಅವು ಹುಟ್ಟಿಕೊಳ್ಳುತ್ತವೆ. ಮೇಲೆ ಸೂಚಿಸಿದ ಸಂದರ್ಭಗಳಿಂದ ಮಾನಸಿಕವಾಗಿ ಉಲ್ಲಾಸಗೊಳ್ಳುವ, ಸಮಾನವಯಸ್ಕರಾಗಿದ್ದು ಒಂದೇ ವೃತ್ತಿಯಲ್ಲಿರುವ ಜನರ ಗುಂಪುಗಳು ತಮಾಷೆಗಳನ್ನು ಹೇಳುವವರು ಎಂಬುದು ವ್ಯಕ್ತವಾಗುತ್ತದೆ.

ಇತರ ಕೆಲವು ಜನಪದ ಪ್ರಕಾರಗಳ ಹಾಗೆ ಗ್ರಾಮೀಣ ತಮಾಷೆಗಳ/ಪದ ಹಾಸ್ಯದ ಸರಿಯಾದ ವರ್ಗೀಕರಣವು ಸುಲಭ ಸಾಧ್ಯವಲ್ಲ. ರೂಪ, ಆಶಯ, ಧರ್ಮ, ವಕ್ತಾರರು ಮುಂತಾದ ಅನೇಕ ವಿಚಾರಗಳ ಆಧಾರದಲ್ಲಿ ಅವುಗಳನ್ನು ಬೇರೆ ಬೇರೆಯಾಗಿ ವಿರ್ಗೀಕರಿಸಬಹುದು. ಮಾತ್ರವಲ್ಲ, ಅನೇಕಬಾರಿ ಒಗಟು, ಗಾದೆಗಳಂಥ ಇತರ ರೂಪಗಳು ಕೂಡ ಈ ವಿಭಾಗಕ್ಕೆ ಸೇರ್ಪಡೆಯಾಗಬಹುದು. ಆದುದರಿಂದ ವಿಭಿನ್ನ ಮಾನದಂಡಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಅವುಗಳ ಆಧಾರದಲ್ಲಿ ವರ್ಗೀಕರಣ ಮಾಡುವುದು ಹೆಚ್ಚು ಶಾಸ್ತ್ರೀಯ ಕ್ರಮವಾದೀತು.

ಕೇರಳದ ಗ್ರಾಮೀಣ ತಮಾಷೆ / ಜನಪದ ಹಾಸ್ಯವನ್ನು ಅದರ ರೂಪದ ಆಧಾರದಲ್ಲಿ ಎರಡಾಗಿ ವಿಂಗಡಿಸಬಹುದು. ೧. ಅಖ್ಯಾನ ಹಾಸ್ಯ ೨. ಲಘುಹಾಸ್ಯ, ಕಥಾ ಖ್ಯಾತಿಸ್ವಭಾವವುಳ್ಳಗಳನ್ನು ಅಖ್ಯಾನ ಹಾಸ್ಯಗಳೆನ್ನಬಹುದು. ಲಘುಹಾಸ್ಯಕ್ಕೆ ಅಖ್ಯಾನ ಹಾಸ್ಯದ ಸ್ವಭಾವವಿರುವುದಿಲ್ಲ. ಲಘುಹಾಸ್ಯಗಳನ್ನು ಹಾಸ್ಯಬಿಂದುಗಳು, (ನಗೆಹನಿಗಳು), ಒಡಪುರೂಪದವುಗಳು, ಪದ್ಯರೂಪದವು, ಅಂಗಿಕ ರೂಪದವು, ಗಾದೆಗಳ ರೂಪದವು ಎಂದು ವರ್ಗೀಕರಿಸಿಕೊಳ್ಳಬಹುದು. ವಸ್ತುವಿನ ಆಧಾರದಲ್ಲಿ ಗ್ರಾಮೀಣ ಹಾಸ್ಯವನ್ನು ನಾಲ್ಕು ತೆರನಾಗಿ ವಿಂಗಡಿಸಬಹುದು ೧. ನಿರ್ದೋಷಹಾಸ್ಯ ೨. ಆಕ್ಷೇಪ ಹಾಸ್ಯ. ೩. ಆಶ್ಲೀಲ ಹಾಸ್ಯ ೪. ಉತ್ಪತ್ತಿ ಹಾಸ್ಯ. ಇವು ಹೇಗಿವೆ ಎಂಬುದನ್ನು ಕೆಳಗೆ ಸೂಚಿಸಲಾಗಿದೆ.

. ನಿರ್ದೋಷ ಹಾಸ್ಯ: ತಿಳಿಹಾಸ್ಯವನ್ನಷ್ಟೇ ಹರಡುವಂಥವು ಉತ್ತರ ಕೇರಳದಲ್ಲಿ ಪ್ರಚಾರದಲ್ಲಿರುವ ಇಂಥ ಒಂದು ಹಾಸ್ಯವನ್ನು ನೋಡೋಣ. ಮಧ್ಯವಯಸ್ಸಿನ ಒಬ್ಬಾಕೆ ಮುಸ್ಲಿಂ ಹೆಂಗಸು ಓಟು ಹಾಕಲು ಹೋದಳು. ಓಪನ್ ಓಟು ಹಾಕಲು ಯತ್ನಿಸಿದಳು. ಆಗ ಪೊಲಿಂಗ್ ಅಧಿಕಾರಿ – ಕಣ್ಣು ಕಾಣಿಸುವುದಿಲ್ಲವೆ? ಎಂದು ಕೇಳಿದ. ಬಳಿಕ ಒಂದು ಸೂಚಿ ಎತ್ತಿ ತೋರಿಸಿದ. ನನಗೆ ಏನು ಕಾಣಿಸುತ್ತಿಲ್ಲ ಎಂದಳು ಹೆಂಗಸು. ಆಗ ಅಧಿಕಾರಿ ಪೆನ್ನು ತೋರಿಸಿದ. ಕೂಡಲೆ ಆಕೆ ಎಂದಳು – ನೀವು ತೋರಿಸಿದ ಸೂಜಿಯನ್ನೇ ಕಾಣಲಾಗದ ನನಗೆ ಪೆನ್ನು ಕಾಣಿಸುತ್ತದೆಯೇ? ಹೀಗೆಯೇ ಸೈನಿಕರು, ಮಾವುತರು, ಬೇಟೆಗಾರರು ಮುಂತಾದವರ ಬಡಾಯಿಗಳು ಕೂಡ ನಿರ್ದೋಷ ಸ್ವಭಾವದವು. ಕೇರಳದಾದ್ಯಂತ ಪ್ರಚಾರದಲ್ಲಿರುವ ನಂಬೂದಿರಿ ಹಾಸ್ಯಗಳು, ಮಾಪ್ಪಿಳೆ ಹಾಸ್ಯಗಳು – ಇಲ್ಲೆಲ್ಲ ಇರುವ ಹೆಚ್ಚಿನವು ನಿರ್ದೋಷ ಸ್ವಭಾದವುಗಳೇ ಆಗಿವೆ.

. ಆಕ್ಷೇಪ ಹಾಸ್ಯಗಳು: ಯಾವುದಾದರೂ ವ್ಯಕ್ತಿ/ ಗುಂಪು/ ವ್ಯವಸ್ಥೆಯನ್ನು ಗೇಲಿ ಮಾಡುವ ಹಾಸ್ಯವು ಈ ವಿಭಾಗಕ್ಕೆ ಸೇರುತ್ತದೆ. ಇವುಗಳಲ್ಲಿ ಹೆಚ್ಚಿನವು ಒಂದು ಜಾತಿಯನ್ನು ಗುರಿಯಾಗಿಸಿಕೊಂಡಿರುತ್ತವೆ. ನಂಬೂದಿರಿ, ಮಾಪ್ಪಿಳೆ, ಕಣಿಯಾನ್ (ಜ್ಯೋತಿಷಿ), ತೀಯನ್ ಮುಂತಾದ ಜಾತಿಗಳು ಹೆಚ್ಚಾಗಿ ಇದರ ವಸ್ತುಗಳಾಗುತ್ತಾರೆ. ಅಂತೆಯೇ ಮತ, ನೌಕರಿಯ ಗುಂಪುಗಳನ್ನು ಕೂಡ ಇವು ಗೇಲಿ ಮಾಡುತ್ತವೆ.

. ಅಶ್ಲೀಲ ಹಾಸ್ಯ: ಸಂದರ್ಭವನ್ನು ಹೊಂದಿಕೊಂಡು ಹಾಸ್ಯವೊಂದು ಅಶ್ಲೀಲವಾಗಿ ಬಿಡಬಹುದು. ಈ ವಿಭಾಗದಲ್ಲಿ ಸೇರುವುವುಗಳಲ್ಲಿ ಹೆಚ್ಚಿನವುಗಳ ವಸ್ತು ಲೈಂಗಿಕತೆಯಾಗಿರುತ್ತದೆ. ಮನುಷ್ಯರು, ದೈವ-ದೇವತೆಗಳು, ಪ್ರಾಣಿಗಳು – ಇವುಗಳ ಬಗೆಗೆ ಕೇರಳದ ಆಶ್ಲೀಲ ಹಾಸ್ಯಗಳು ಸಂಬಂಧವುಳ್ಳವು ದ್ವಂದ್ವಾರ್ಥಕ ಶಬ್ದ ಪ್ರಯೋಗವು ಸಾಮನ್ಯವಾಗಿ ಅಶ್ಲೀಲ ಹಾಸ್ಯಗಳ ಒಂದು ವೈಶಿಷ್ಟವೇ ಆಗಿರುತ್ತದೆ. ಕೇರಳದಲ್ಲಿ ಪ್ರಚಾರದಲ್ಲಿರುವ ಹಾಸ್ಯದಲ್ಲಿ ಶೇಕಡಾ ಅರುವತ್ತೈದರಷ್ಟೂ ಅಶ್ಲೀಲ ಹಾಸ್ಯಗಲೇ ಆಗಿವೆ.

. ಉತ್ಪತ್ತಿ ಹಾಸ್ಯ: ಯಾವುದಾದರೂ ವಸ್ತುವಿನ ಅಥವಾ ವ್ಯವಸ್ಥೆಯ ಉದ್ಭವದ ಕುರಿತಾದ ಹಾಸ್ಯವನ್ನು ಉತ್ಪತ್ತಿ ಹಾಸ್ಯ ಎನ್ನಬಹುದು. ಅ ಅರ್ಥದಲ್ಲಿ ಇದಕ್ಕೆ ಐತಿಹ್ಯದ/ ಪುರಾಣದ ಸ್ವಭಾವವಿದೆ. ಶಿವನು ಲೈಂಗಿಕವಾಗಿ ಪಾರ್ವತಿಯನ್ನು ಅವಗಣಿಸಿದ ಕಾರಣಕ್ಕಾಗಿ ಪಾರ್ವತಿ ಸಿಟ್ಟುಗೊಂಡು ತನ್ನ ಲೈಂಗಿಕ ಅಂಗವನ್ನು ಕಿತ್ತು ಎಸೆದಳೆಂದೂ ಅವೇ ಕಲ್ಲುಮ್ಯಲ್‌ಕ್ಕಾಯ ಎಂಬ ಮೀನಾಗಿ ಹುಟ್ಟಿತು ಎಂದೂ ಒಂದು ಕಥೆಯಿದೆ. ಅದು ಉತ್ಪತ್ತಿ ಹಾಸ್ಯಕ್ಕೆ ಒಂದು ಉದಾಹರಣೆ. ಈ ಮೀನಿನ ರೂಪವೇ ಈ ಕಥೆಗೆ ಆಧಾರವಾಗಿದೆ.

ವಿಭಿನ್ನ ವಿಭಾಗಗಳಿಗೆ ಸೇರುವ ತಮಾಷೆಗಳಿಗೆ ವಿಭಿನ್ನ ಹಾಸ್ಯಗಳಿಗೆ ಇವೆ. ಯಾವುದಾದರೂ ಜಾತಿಯವರನ್ನು ಗೇಲಿ ಮಾಡುವ ಹಾಸ್ಯಗಳಿಗೆ ಅಶ್ಲೀಲ ಹಾಸ್ಯದ ಧರ್ಮ ಇರುವುದಿಲ್ಲ. ಆದರೂ ಸಾಮಾನ್ಯವಾಗಿ ಈ ಕೆಳಗಿನ ಧರ್ಮಗಳು ಹಾಸ್ಯಗಳಲ್ಲಿರುತ್ತವೆ:

೧. ನಗುವಿನ ಮೂಲಕ ಬದುಕಿನ ದುಃಖಗಳು – ಸಂಕಷ್ಟಗಳನ್ನು ಒಂದಿಷ್ಟು ಹೊತ್ತಿನವರೆಗಾದರೂ ಮರೆಯಲು ಸಾಧ್ಯವಾಗುವುದರ ಮೂಲಕ ಮಾನಸಿಕವಾದ ಸಮತೋಲನವನ್ನು ಕಾಯ್ದುಕೊಳ್ಳುವುದು.

೩. ಮನಸ್ಸು ಅಂತರಾಳದಲ್ಲಿ ಅದುಮಿಡಲ್ಪಟ್ಟ ಭಾವನೆಗಳನ್ನು ಹೊರಗೆ ಬಿಡಲು ಸಾಧ್ಯವಾಗುತ್ತದೆ. ಮಾನಸಿಕ ಭಾವನೆಗಳಲ್ಲಿ ಪ್ರಧಾನವಾದುದು ಕಾಮ. ಆದರೆ ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಮವನ್ನು ಕಂಡಕಂಡಂತೆ ಶಮನಗೊಳಿಸಲು ಸಾಧ್ಯವಾಗುವುದಿಲ್ಲ. ಇದು ವ್ಯಕ್ತಿಯ ಮನಸ್ಸನ್ನೂ ದೇಹವನ್ನೂ ಗುರುತರವಾದ ಪರಿಣಾಮಗಳಿಗೆ ಒಳಗು ಮಾಡುತ್ತದೆ. ಅಂಥ ಪರಿಣಾಮವನ್ನು ಒಂದು ಹಂತದವರೆಗಾದರೂ ತಡೆದುಕೊಳ್ಳಲು ಅಶ್ಲೀಲ ಹಾಸ್ಯಕ್ಕೆ ಸಾಧ್ಯ.

೪. ಗುಂಪುಗಳು ತಮ್ಮೊಳಗಿನ ಪರಸ್ಪತ ಸ್ಪರ್ಧೆಯನ್ನು ಒಂದು ಮಟ್ಟದ ತನಕ ನಿಯಂತ್ರಿಸುತ್ತವೆ. ಜಾತಿ/ಮತ/ನೌಕರಿಯ ಗುಂಪುಗಳ ಕುರಿತಾದ ತಮಾಷೆಗಳು ನಿರ್ವಹಿಸುವ ಧರ್ಮವು ಮುಖ್ಯವಾಗಿ ಇದೆ.

ಇಂದು ಧಾರಾಳ ಜನಪದ/ ಗ್ರಾಮೀಣ ತಮಾಷೆಗಳು ಪ್ರಚಾರದಲ್ಲಿವೆ. ಆದರೆ ಅವುಗಳ ಸ್ವಭಾವದಲ್ಲಿ ಬದಲಾವಣೆಗಳಾಗಿವೆ. ಹಳೆಯ ತಲೆಮಾರಿನ ತಮಾಷೆಗಳಲ್ಲಿ ಹೆಚ್ಚಿನವುಗಳು ಕೂಡ ಜಾತಿಯ ಇಲ್ಲವೇ ಅಶ್ಲೀಲ ಸ್ವರೂಪದವು. ಹೊಸ ತಲೆಮಾರು ಜಾತೀಯವಾದ ತಮಾಷೆಗಳನ್ನು ಹೇಳುವುದಿಲ್ಲ. ಅದೇ ವೇಳೆ ಒಂದು ತೆರನ ಫ್ಯಾಂಟಸಿ, ವಕ್ತಾರನು ಹೇಳುವ ಉತ್ತರವಷ್ಟೇ ಸರಿಯಾಗಿರುವ, ಅಬದ್ಧ ತಮಾಷೆಗಳು ಇಂದು ಪ್ರಚಾರದಲ್ಲಿವೆ. ಅದೇ ರೀತಿ ಎಸ್.ಎಮ್.ಎಸ್. ಹಾಸ್ಯಗಳು ಇಂಟರ‍್ನೆಟ್ ಹಾಸ್ಯಗಳೂ ದೊಡ್ಡ ಪ್ರಮಾಣದಲ್ಲಿಯಾಗುತ್ತಿವೆ. ಗುಂಪೊಂದರ/ ಸಮೂಹವೊಂದರ ಸತ್ತ್ವವನ್ನು ಗುರುತಿಸುವುದಕ್ಕೆ ಒಂದು ಒಳ್ಳೆಯ ಉಪಾಧಿಯೆಂದರೆ ಅವರಲ್ಲಿ ಬಳಕೆಯಲ್ಲಿರುವ ಹಾಸ್ಯವನ್ನು ಗುರುತಿಸುವುದು.

ಪಿ.ಆರ್.ಕೆ. ಅನುವಾದ ಕೆ.ಕೆ.

 

ನಾಡವರು ಕರ್ನಾಟಕದ ಕರಾವಳಿ ಪ್ರದೇಶವಾದ ಉಡುಪಿಯಿಂದ ಉತ್ತರಕ್ಕೆ ಚೈಂದೂರಿನವರೆಗೂ ವಾಸಿಸುವ ಜನ ನಾಡವರು. ಕರಾವಳಿ ಪ್ರದೇಶದಲ್ಲಿ ಬ್ರಾಹ್ಮಣರ ಆಗಮನ ಮುಂಚಿನಿಂದಲೂ ಇದ್ದವರು. ಇವರ ದೇಹ, ಆಕೃತಿ ಮೊದಲಾದವರನ್ನು ಗಮನಿಸಿ ಇವರು ದ್ರಾವಿಡ ಮೂಲದವರೆಂದೇ ಪರಿಗಣಿಸಲಾಗಿದೆ. ನಾಡವರು ಶಕ್ತಿವಂತರೂ ಕಾರ್ಯಶಕ್ತಿಉಳ್ಳವರೂ ಆಳುವವರೂ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನಾಡವರು ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಆಡುವರು.

ಕ್ರಿ.ಶ. ಮೂರನೇ ಶತಮಾನದಲ್ಲಿ ಜೈನಧರ್ಮ ಕರಾವಳಿ ಪ್ರದೇಶಕ್ಕೆ ಬಂದಾಗ ಅನೇಕ ನಾಡವರು ಜೈನಧರ್ಮಾನುಯಾಯಿಗಳಾದರು. ಜೈನಧರ್ಮವನ್ನು ಅವಲಂಬಿಸಿದ ನಾಡವರಿಗೆ ‘ಮಾಸಾದಿ’ ಜೈನರು ಎಂದು ಕರೆಯಲಾಯಿತು. ನಾಡವರು ಕದಂಬ, ಚೌಳುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರದ ಅರಸರ ಕಾಲದಲ್ಲಿ ದೊಡ್ಡ ದೊಡ್ಡ ಸೇನಾಧಿಪತಿಗಳಾಗಿಯೂ ಸೈನಿಕರಾಗಿಯೂ ವೃತಿ ನಿರ್ವಹಿಸುತ್ತಿದ್ದರು. ದಕ್ಷಿಣ ಕನ್ನಡದ ಸ್ಥಳೀಯ ಜೈನ ಅರಸರ ಬಳಿಯೂ ನಾಡವರು ಸೇನಾಧಿಪತಿಗಳಾಗಿದ್ದರಿಂದ ಅವರನ್ನು ‘ಬಂಟರು’ ಎಂಬ ಹೆಸರಿನಿಂದ ಕರೆಯಲಾಯಿತು. ಮುಂದೆ ‘ಬಂಟ’ ಎಂಬ ಪದವೇ ಚಾಲ್ತಿಗೆ ಬಂದು ಕ್ರಮೇಣ ನಾಡವರು ಎಂಬ ನಾಮಾಂಕಿತ ಮರೆಯಾಯಿತು. ಸೈನ್ಯದಲ್ಲಿದ್ದ ನಾಡವರು ಕ್ರಮೇಣ ಕೃಷಿಕರಾದರು. ನಾಡವರು ಹಿಂದೂ ಮತ್ತು ಜೈನಧರ್ಮಗಳಲ್ಲದೆ ಪ್ರಾಚೀನ ದ್ರಾವಿಡರ ಭೂತಾರಾಧನೆಯನ್ನು ಆಚರಿಸುತ್ತಾರೆ.

ನಾಡವರು ಮಲೆನಾಡು ಪ್ರದೇಶವಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನಜಿಲ್ಲೆಯ ಕೆಲಭಾಗಗಳಲ್ಲಿಯೂ ಇದ್ದರು. ಇವರು ಹೊಯ್ಸಳರ ಕಾಲದಲ್ಲಿ ನಾಮಧಾರಿ (ವೈಷ್ಣ) ಒಕ್ಕಲಿಗರಾಗಿ ಮತಾಂತರಗೊಂಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕೆಲವು ಗೌಡ ಸಮುದಾಯವನ್ನು ‘ನಾಡಜನ’ ಎಂದೇ ಇಂದಿಗೂ ಕರೆಯಲಾಗುತ್ತದೆ.

ತಮಿಳುನಾಡಿನ ಸೇಲಂ ಜಿಲ್ಲೆಯ ‘ನಾಟ್ಟರ್ ಅಥವಾ ನಾಟ್ಟನ್’ ಎಂಬ ಹೆಸರಿನಲ್ಲ ಬರುವ ಸಮುದಾಯ ಸಹ ನಾಡವರೇ ಎಂದು ಹೇಳಬಹುದು.

ದಕ್ಷಿಣ ಕನ್ನಡ ಜಿಲ್ಲೆಯ ನಾಡವರ ಸಮುದಾಯ ಇಂದು ನಾಲ್ಕು ಕವಲುಗಳಾಗಿದೆ

೧. ಮಾಸಾದಿಕೆ ಬಂಟರು – ತುಳುನಾಡಿನ ಸಾಮಾನ್ಯ ಬಂಟರು.

೨. ನಾಡವರು ಅಥವಾ ನಾಡ ಬಂಟರು – ಇವರು ಜಿಲ್ಲೆಯ ಉತ್ತರಭಾಗದಲ್ಲಿದ್ದು ಕನ್ನಡ ಮಾತನಾಡುವವರು.

೩. ಪರಿವಾರ ಬಂಟರು – ಅಳಿಯ ಸಂತಾನ ಪದ್ಧತಿಯನ್ನು ಅವಲಂಬಿಸದಿರುವವರು

೪. ಜೈನ ಬಂಟರು

ಇವರು ದ್ರಾವಿಡ ಮೂಲದ ಜನವೆಂದೂ ನಾಡವರೂ ಬಂಟರೂ ಒಂದೇ ಪಂಗಡಕ್ಕೆ ಸೇರಿದವರೆಂದೂ ಹೇಳಬಹುದು. ಬಹಳ ಹಿಂದೆಯೇ ಅವರ ಪೂರ್ವಜರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ನೆಲಸಿ ಇಲ್ಲಿಯ ಯಜಮಾನರಾದರು. ಇವರ ಪಂಗಡ ದ್ರಾವಿಡ ಪ್ರದೇಶಗಳಲ್ಲಿ ಬೇರೆ ಬೇರೆ ಕಡೆ ಬೇರೆ ಹೆಸರಿನಿಂದ ಇದ್ದಿರಬಹುದು.

ನಾಡವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಧಾನ ಘಟಕವಾಗಿದ್ದುದಲ್ಲದೆ. ಇಲ್ಲಿಯ ಆಡಳಿತಗಾರರೂ ಆಗಿದ್ದರೆನ್ನಬಹುದು. ಇವರು ತುಳುನಾಡಿನ ಇತರ ಜನರೊಡನೆ ರಕ್ತ ಸಂಬಂಧಗಳನ್ನು ಪ್ರಾಚೀನ ಕಾಲದಿಂದಲ್ಲೇ ಹೊಂದಿದ್ದರು.

ನಾಡವರು ಕಾಲಕ್ಕೆ ತಕ್ಕಂತೆ ಧರ್ಮಾಂತರ, ಮತಾಂತರ ಗೊಂಡವರಾಗಿದ್ದು, ಅದಕ್ಕೆ ಅನುಸಾರವಾಗಿ ತಮ್ಮ ಜೀವನ ಕ್ರಮವನ್ನು ರೂಪಿಸಿಕೊಂಡಿದ್ದರು ಇವರು ಮೊದಲು ಸೈನಿಕರಾಗಿದ್ದು, ನಂತರ ಕೃಷಿಕರು, ಆಳುವ ಅರಸರಾದರು. ಇವರು ತುಳುನಾಡಿನಲ್ಲಿ ತುಳು ಹಾಗೂ ಕನ್ನಡವನ್ನು ಆಡುಭಾಷೆಯಾಗಿ ಹೊಂದಿದ್ದಾರೆ.

ವಿ.ಕೆ.

 

ನಾಯಕ್ ಆಂಧ್ರದ ಶ್ರೀಕಾಕುಳಂ, ವಿಜಯನಗರಂ, ವಿಶಾಖ, ತೂರ್ಪ, ಪಶ್ಚಿಮ ಗೋದಾವರಿ ಅಲ್ಲದೆ ಖಮ್ಮಂ ಜಿಲ್ಲೆಗಳಲ್ಲಿ ಇರುವ ಬುಡಕಟ್ಟು, ಇವರು ವಿಜಯನಗರದ ರಾಜರ ಸೈನ್ಯದಲ್ಲಿ ಸೈನಿಕರಾಗಿ ಕೆಲಸ ಮಾಡಿದುದರಿಂದ ತಮಗೆ ‘ನಾಯಕ್’ ಎಂಬ ಹೆಸರು ಬಂದಿದೆಯೆಂದು ಹೇಳುತ್ತಾರೆ. ಇವರ ಮಾತೃ ಭಾಷೆ ತೆಲಗು, ಏಕಪತ್ನಿತ್ವ ‘ನಾಯಕ್’ರಲ್ಲಿ ಹೆಚ್ಚಾಗಿದೆ. ಇವರದು ಪಿತೃಪ್ರಧಾನ ವ್ಯವಸ್ಥೆ. ಅತ್ತಿಗೆಯನ್ನು ಮದುವೆಯಾಗುವುದಿದೆ. ವಿವಾಹ ವಿಚ್ಛೇದನ, ಪೂನರ್ವಿವಾಹ ಮುಂತಾದವು ಇವೆ. ಮೈನೆರೆದ ಹುಡುಗಿ ಏಳು ದಿನದಿಂದ ಒಂಬತ್ತು ದಿನಗಳವೆರೆಗೆ ಮನೆಯಲ್ಲಿಯೇ ಇರುತ್ತಾಳೆ. ಬಾಲ್ಯ ವಿವಾಹ ಕಡಿಮೆ. ಅತಿ ಕಡಿಮೆ ಖರ್ಚಿನಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತವೆ. ಗರ್ಭಿಣಿಯಾದ ಹೆಣ್ಣಿಗೆ ಮೊದಲ ಹೆರಿಗೆ ತವರು ಮನೆಯಲ್ಲಿಯೇ ನಾಯಕ್‌ರು ಬೇಸಾಯ, ಒಣ ಬೇಸಾಯಗಳನ್ನು ಮಾಡುತ್ತಾರೆ. ವ್ಯವಸಾಯ ಕೂಲಿಗಳಾಗಿಯೂ ದುಡಿಯುತ್ತಿದ್ದಾರೆ. ರಾಗಿ, ಸಜ್ಜೆ, ನವಣೆ, ಕಾಯಿಪಲ್ಲೆ ಮುಂತಾದವನ್ನು ಬೆಳೆಯುತ್ತಾರೆ. ಮಾಂಸಾಹಾರಿಗಳಾದರೂ ದನದ ಮಾಂಸ ತಿನ್ನುವುದು ಇವರಲ್ಲಿ ಅಪರಾಧ.

ನಾಯಕ್‌ರು ದೇವತೆಗಳನ್ನು ಪೂಜಿಸುತ್ತಾರೆ. ಇವರು ಲಕ್ಷ್ಮೀ ದೇವರು, ಪಾಂಡವರು, ಸಿಗಬೋಯರು, ಬಂದ ರಾಜರನ್ನು ಪೂಜಿಸುತ್ತಾರೆ. ಅಲ್ಲದೆ ಗ್ರಾಮ ದೇವತೆಗಳಾದ ಪೆದ್ದ್ಮ, ಮೈಸಮ್ಮ, ಸಮ್ಮಕ್ಕ ಮತ್ತು ಕೊರ್ರರಾಜರಿಗೆ ಪ್ರಾಣಿ ಬಲಿ ಕೊಡುತ್ತಾರೆ. ಮನೆಯ ಹೆಸರಿನ ಮೇಲಿಂದ ಇವರಿಗೆ ಅಣ್ಣ -ತಮ್ಮ, ಅಕ್ಕ – ತಂಗಿ, ಸಂಬಂಧಗಳಿರುತ್ತವೆ. ಮದುವೆಯಾದ ಹೆಂಗಸರು ತೀರಿಕೊಂಡರೆ ಸುಡುತ್ತಾರೆ. ಅವಿವಾಹಿತರನ್ನು ಹೂಳುತ್ತಾರೆ. ನಾಯಕ್‌ರಲ್ಲಿ ಅಕ್ಷರಸ್ಥರು ಕಡಿಮೆ.

೨೦೦೧ರ ಜನಗಣತಿಯ ಪ್ರಕಾರ ಅವರ ಒಟ್ಟು ಜನಸಂಖ್ಯೆ ೧೪,೨೨೨. ಅಂದರೆ ಶೇಕಡಾ ೦.೨೮.

ಬಿ.ಕೆ.ಅನುವಾದ ಕೆ.ಎಸ್.

 

ನಾಯಕ್‌ ಪೋಡು ಇವರು ಹೆಚ್ಚಾಗಿ ತೆಲಂಗಾಣದ ಆದಿಲಾಬಾದ್, ವರಂಗಲ್, ಖಮ್ಮಂ ಜಿಲ್ಲೆಗಳಲ್ಲಿಯೂ ಮಹಾರಾಷ್ಟ್ರದಲ್ಲಿಯ ರೆನ್ವಟ್ ಪ್ರಾಂತದಲ್ಲಿಯೂ ವಾಸಿಸುತ್ತಿದ್ದರು ಪಾಂಡವ ನಾಯಕ್, ಪದ್ಮಾನಾಯಕ್, ಎಂಬ ಹೆಸರುಗಳಿಂದಲೂ ಕರೆಯಲಾಗುವುದು. ಗೋಂಡು ಸಂಸ್ಕೃತಿಯೊಂದಿಗೆ ಇವರಿಗೆ ಸ್ವಲ್ಪ ಸಂಬಂಧಗಳಿವೆ. ಇವರ ಮಾತೃಭಾಷೆ ತೆಲುಗು, ನಾಯಕ್ ಪೊಡುಗಳದು ಪಿತೃಪ್ರಧಾನ ವ್ಯವಸ್ಥೆ. ಇವರು ಸ್ಥಿರ ವ್ಯವಸಾಯಗಾರರು. ಜೋಳ, ರಾಗಿ, ಭತ್ತ, ಗೋಧಿ, ಹೊಗೆ ಸೊಪ್ಪು, ನೆಲಗಡಲೆ, ಮೆಣಸಿನಕಾಯಿ ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ. ಹೊಲಗಳಿಲ್ಲದವರು ಬೇಸಾಯದ ಕೂಲಿಕಾರರಾಗಿದ್ದಾರೆ. ಹೆಂಡ ಕುಡಿಯುತ್ತಾರೆ. ಮೀನನ್ನು ಹಿಡಿದು ತಿನ್ನುತ್ತಾರೆ. ಆದರೆ ಆಕಳಿನ ಮಾಂಸ ನಿಷಿದ್ಧ. ಮನೆಯ ಹೆಸರನ್ನು ಹಿಡಿದು ಮದುವೆಗಳಾಗುತ್ತವೆ. ‘ಓಲಿ’ ವ್ಯವಸ್ಥೆ ಇವರಲ್ಲಿಯೂ ಇದೆ. ಪ್ರೇಮ ವಿವಾಹಗಳು, ಓಡಿ ಹೋಗಿ ಮದುವೆ ಮಾಡಿಕೊಂಡು ಬಂದು ದೈವದವರಿಗೆ ದಂಡ ತೆತ್ತು ಸಾಮೂಹಿಕ ಔತಣವನ್ನು ಏರ್ಪಡಿಸಿಯಾದ ಮೇಲೆ ಕುಲದೊಳಗೆ ಸೇರಿಸಿಕೊಳ್ಳುತ್ತಾರೆ. ‘ಓಲಿ’ ಕೊಡಲಾಗದ ಹುಡುಗ ಭಾವಿ ಮಾವನಿಗೆ ಸೇವೆ ಮಾಡಬೇಕು. ಹಾಗೆ ಮಾಡಿದರೆ ಮಾವನೇ ಆಗುವ ಖರ್ಚನ್ನೆಲ್ಲ ಭರಿಸಿ ಮದುವೆ ಮಾಡುತ್ತಾನೆ. ಪಂಚಾಯಿತಿ ವ್ಯವಸ್ಥೆ ತುಂಭಾ ಬಲವಾದುದು. ಗ್ರಾಮದ ಹಿರಿಯರು ಇದರಲ್ಲಿರುತ್ತಾರೆ. ಒಬ್ಬರ ತಮ್ಮ ಹಿರಿಯರಾಗಿ ವ್ಯವಹರಿಸುತ್ತಾರೆ. ಇವರಿಗೆ ಆ ಸಮುದಾಯದಲ್ಲಿಯ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳ ಸಂಪೂರ್ಣ ಪರಿಜ್ಞಾನವಿರುತ್ತದೆ.

ನಾಯಕ್‌ಪೊಡ್‌ರಿಗೆ ಶ್ರೀಕೃಷ್ಣನ ಸಹಚಾರಣಿಯಾದ ಲಕ್ಷ್ಮೀದೇವಿ ಮುಖ್ಯ ದೇವತೆ. ಲಕ್ಷ್ಮಿ, ಶಿವ, ಶ್ರೀಕೃಷ್ಣ, ಪಂಚಪಾಂಡವರು, ಪಂದಿರಾಜು(ವರಾಹ), ಪೋತುರಾಜು (ಶುನಕ ದೇವತೆ), ಗೊರ್ರ ಪೋತು(ಚಾಘ ದೇವ), ಸಿಂಗರಾಯ – ಮುಂತಾದವರ ಮುಖವಾಡಗಳನ್ನು ಧರಿಸಿ ಹಬ್ಬಗಳನ್ನು ಆಚರಿಸುತ್ತಾರೆ. ನಾಯಕ್ ಪೊಡರನ್ನು ಗೋಂಡುಗಳು ‘ಮುತ್ಸಾಲು’ (ಮತ್ಸ್ಯಕಾರರು) ಎಂದು ಕರೆಯುತ್ತಾರೆ. ಒಂದು ತಿಂಗಳ ಕಾಲ ಇವರು ‘ಕುಲ ಹಬ್ಬ’ವನ್ನು ಆಚರಿಸುತ್ತಾರೆ. ಇದರಲ್ಲಿ ಗಂಡಸರ ಪಾತ್ರವೇ ಹೆಚ್ಚಾಗಿದ್ದು ಹೆಚ್ಚಿನ ವೆಚ್ಚದಿಂದ ಕೂಡಿದುದು.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೪,೬೨,೧೬೭ ಅಂದರೆ ಶೇಕಡಾ ೯.೧೯.

ಬಿ.ಕೆ.ಆರ್. ಅನುವಾದ ಕೆ.ಎಸ್.