ನಂಜುಂಡೇಶ್ವರ ನಂಜುಂಡೇಶ್ವರ ಜನಪದ ಸಾಹಿತ್ಯದಲ್ಲಿ ಕಂಡುಬರುವ ವರ್ಣರಂಜಿತ ವ್ಯಕ್ತಿ. ನಂಜನಗೂಡಿನಲ್ಲಿ ನೆಲೆಸಿರುವ ದೇವರು. ನಂಜುಂಡೇಶ್ವರನನ್ನು ಶ್ರೀಕಂಠೇಶ್ವರ, ಕರಕಂಠೇಶ್ವರ, ಗರಳಕಂಠ, ಕಪ್ಪುಕೊರಳಯ್ಯ, ಹಕೀಂ ನಂಜುಂಡ, ದಳಪತಿ ನಂಜುಂಡ, ಭೋಗ ನಂಜುಂಡೇಶ್ವರ ಮುಂತಾದ ಹೆಸರುಗಳಿಂದ ಗುರುತಿಸುವುದಿದೆ.

ಈತ ಒಬ್ಬ ಐತಿಹಾಸಿಕ ವ್ಯಕ್ತಿ. ಮಲೆಯಮಾದೇಶ್ವರನ ಸಹಪಾಠಿಯಾಗಿದ್ದನೆಂಬ ನಂಬಿಕೆಯಿದೆ. ಮಲೆಯ ಮಾದೇಶ್ವರ, ವೈದ್ಯನಾಥ ಪುರದ ವೈದ್ಯೇಶ್ವರ, ಉಮ್ಮತ್ತೂರಿನ ಭುಜಂಗೇಶ್ವರ, ಹರದನಹಳ್ಳಿ ದಿವೀಲಿಂಗೇಶ್ವರ, ತಲಕಾಡಿನ ವೈದ್ಯೇಶ್ವರ ಇವರೆಲ್ಲ ಸೋದರರೆಂಬ ಕಲ್ಪನೆ ಇದೆ.

ಐತಿಹ್ಯವೊಂದರ ಪ್ರಕಾರ, ನಾರಾಯಣ ಶೇಖರನೆಂಬ ಚೋಳರಾಜನು ನಾರಾಯಣ ಗುಡಿಯನ್ನು ಮತ್ತು ಒಂದು ಊರನ್ನು ಕಟ್ಟಿದ. ಆ ನಾರಾಯಣ ಗುಡಿಯೇ ಜನಪದರ ಬಾಯಿಯಲ್ಲಿ ನಾರಾಯಣ ಗುಡಿ ಆಗಿ, ನಂದ್ಯಾಲ ಗುಡಿ ಆಗಿ ಕೊನೆಗೆ ನಂಜನಗೂಡು ಆಯಿತು.

‘ಅದು ಬೆಟ್ಟ ಇದು ಬೆಟ್ಟವೋ-ನಂಜುಂಡ-ನಂದ್ಯಾಲ ಗಿರಿ ಬೆಟ್ಟವೊ’ ಎಂಬ ಹಾಡಿನಲ್ಲಿ ಇಂದಿಗೂ ‘ನಂದ್ಯಾಲ’ ಎಂಬ ಪ್ರಯೋಗ ಉಳಿದಿದೆ. ಶಾಸನಗಳಲ್ಲಿಯೂ ‘ನಂಜಲಗೂಡು’, ‘ನಂಜೆಲಗೂಡು’ ಎಂಬ ರೂಪಗಳಿವೆಯೇ ಹೊರತು ‘ನಂಜನಗೂಡು’ ಎಂಬ ರೂಪವಿಲ್ಲ.

ಜಾನಪದದಲ್ಲಿ ನಂಜುಂಡೇಶ್ವರನು ವೈದ್ಯನಾಗಿದ್ದನೆಂಬ ಸಂಗತಿ ಉಲ್ಲೇಖವಾಗಿವೆ. ಇದಕ್ಕೆ ಉದಾಹರಣೆಯಾಗಿ ಒಂದು ಪ್ರಸಂಗವಿದೆ: ಒಮ್ಮೆ ಟಿಪ್ಪುಸುಲ್ತಾಣ ಆನೆಯೊಂದಕ್ಕೆ ಕಣ್ಣು ಹೋಯಿತಂತೆ. ಅಲ್ಲಿ ಇಲ್ಲಿ ಹಲವಾರು ಚಿಕಿತ್ಸೆಗಳನ್ನು ಕೊಡಿಸಿದರೂ ಆ ಆನೆಗೆ ದೃಷ್ಟಿ ಬರಲಿಲ್ಲ. ಕೊನೆಗೆ ಸುಲ್ತಾನನು ವೈದ್ಯನಾಗಿದ್ದ ನಂಜುಂಡೇಶ್ವರನಿಗೆ ಮೊರೆ ಹೋದ. ಹೋದ ಕಣ್ಣು ನಲವತ್ತೆಂಟು ದಿನಗಳಲ್ಲಿ ಮತ್ತೆ ಬಂದಿತು. ಆನೆ ಎಂದಿನಂತೆ ನಡೆದಾಡತೊಡಗಿತು. ಇದರಿಂದ ಸಂತುಷ್ಟನಾದ ಟಿಪ್ಪು ನಂಜುಂಡೇಶ್ವರನಿಗೆ ‘ಹಕೀಂ ನಂಜುಂಡ’ ಎಂಬ ಬಿರುದು ನೀಡಿ ಪಚ್ಚೆಯ ಕಂಠೀಹಾರವನ್ನು ಉಡುಗೊರೆಯಾಗಿ ಕೊಟ್ಟದ್ದೂ ಅಲ್ಲದೆ ಪಚ್ಚೆ ಲಿಂಗವನ್ನು ಸ್ಥಾಪಿಸಿದ.

ನಂಜುಂಡೇಶ್ವರನು ನಂದಕಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದ ಎಂಬ ಒಂದು ನಂಬಿಕೆಗೆ ಆಧಾರವಾಗಿ ನಂಜನಗೂಡಿನಲ್ಲಿ ಈಗಲೂ ‘ರಾಕ್ಷಸ ಬೀದಿ’ ಎಂಬ ಹೆಸರಿನ ಬೀದಿಯೊಂದಿದೆ. ಸಂಕ್ರಾಂತಿ ತಿಂಗಳ ಹುಣ್ಣಿಮೆಯ ದಿನ ಇಟ್ಟಿಗೆ ಪುಡಿ, ಇದ್ದಿಲುಪುಡಿ, ರಂಗೋಲಿಪುಡಿಗಳಿಂದ ನೆಲದ ಮೇಲೆ ರಾಕ್ಷಸನ ಚಿತ್ರವನ್ನು ಬಿಡಿಸುವ ಸಂಪ್ರದಾಯವಿದೆ. ಬಿದಿರಿನ ದಬ್ಬೆಗಳಿಂದ ರಾಕ್ಷಸನ ರೂಪವನ್ನು ರಚಿಸಿ ದೇವರುಗಳೊಡನೆ ಮೆರವಣಿಗೆಯಲ್ಲಿ ತಂದು ನಂಜುಂಡೇಶ್ವರ ದೇವಾಲಯದೆದುರು ಅದನ್ನು ಸುಡುತ್ತಾರೆ. ಹಾಗೆ ರಾಕ್ಷಸನನ್ನು ಸುಟ್ಟ ಮೇಲೆಯೇ ದೇವರು ಗುಡಿಯನ್ನು ಪ್ರವೇಶಿಸುವ ರೂಢಿಯಿದೆ.

ಜನಪದ ಸಾಹಿತ್ಯದಲ್ಲಿ ನಂಜುಂಡ ಚಾಮುಂಡಿಯವರ ಪ್ರಣಯ ಪ್ರಸಂಗ ಒಂದು ರೋಚಕ ಸನ್ನಿವೇಶ. ನಂಜುಂಡೇಶ್ವರನ ಬದುಕಿನಲ್ಲಿ ಚಾಮುಂಡಿ ಮೂರನೆಯವಳು. ಪಾರ್ವತಿ ಮತ್ತು ದೇವೀರಿ ಎಂಬ ಹೆಂಡತಿಯರು ನಂಜುಂಡೇಶ್ವರನನ್ನು ಹೊತ್ತುಕೊಂಡು ಬೆಟ್ಟ ಹತ್ತುವ ಅಪರೂಪದ ದೃಶ್ಯ ಕೂಡ ಕಾವ್ಯದಲ್ಲಿದೆ. ಹಾಗೆ ಹೊತ್ತುಕೊಂಡು ಹೋಗಿ ಚಾಮುಂಡಿಯ ಸನ್ನಿಧಿಯಲ್ಲಿ ಬಿಟ್ಟುಬರುತ್ತಾರೆ. ಚಾಮುಂಡಿಯ ಬಗೆಗಿನ ಇನ್ನೊಂದು ಪ್ರಸಂಗ ಮತ್ತು ಅದರ ಹಿನ್ನೆಲೆಯಲ್ಲಿರುವ ನಂಬಿಕೆ ಇನ್ನೂ ಸ್ವಾರಸ್ಯವಾಗಿದೆ. ಅದು ಹೀಗಿದೆ:

ನಂಜನಗೂಡಿನ ಕಪಿಲಾ ನದಿಯ ದಡದಲ್ಲಿಯೂ ಒಂದು ಚಾಮುಮಡಿಯ ದೇವಾಲಯವಿದೆ. ನಂಜುಂಡೇಶ್ವರನ ತೇರು ರಾಕ್ಷಸನ ಬೀದಿಯಲ್ಲಿ ಬರುವಾಗ, ಚಾಮುಂಡೇಶ್ವರಿ ಗುಡಿಯ ಕಡೆಗೆ ಗಕ್ಕನೆ ತಿರುಗಿ ನಿಲ್ಲುತ್ತದೆಯಂತೆ. ತೇರು ಹಾಗೆ ತಿರುಗಿ ನಿಂತಾದ ನಂಜುಂಡೇಶ್ವನು ಚಾಮುಂಡಿಯ ಮನೆಗೆ ಹೋಗಿದ್ದಾನೆ ಎಂಬುದು ನಂಬಿಕೆ. ಇದ್ದಕ್ಕಿದ್ದಂತೆ ಮಾಯವಾದ ಗಂಡನು ಎಲ್ಲಿಗೆ ಹೋಗಿರಬಹುದೆಂದು ಕುತೂಹಲದಿಂದ, ಪಕ್ಕದಲ್ಲೇ ಕುಳಿತಿದ್ದ ದೇವೀರಿಯು ಹುಡುಕುತ್ತಾ ಚಾಮುಂಡಿಯ ಗುಡಿಗೆ ಬರುತ್ತಾಳೆ. ಅಲ್ಲಿಯ ದೃಶ್ಯ ಕಂಡು ದಿಗ್ಭ್ರಾಂತಳಾಗುತ್ತಾಳೆ. ನಂಜುಂಡನನ್ನು ಚಾಮುಂಡಿಯ ತೋಳ್ತೆಕ್ಕೆಯಲ್ಲಿ ನಿರೀಕ್ಷಿಸಿದ್ದ ದೇವೀರಿಗೆ ಅಲ್ಲಿ ಅವರನು ರಾಗಿ ಬೀಸುತ್ತಾ ಕುಳಿತಿರುವುದು ಕಾಣಿಸುತ್ತದೆ. ಅವಳು ಸಹನೆ ಕಳೆದುಕೊಳ್ಳುತ್ತಾಳೆ. ದೇವೀರಿಗೂ ಚಾಮುಂಡಿಗೂ ಜಗಳ ಪ್ರಾರಂಭವಾಗುತ್ತದೆ. ಇವರಿಬ್ಬರ ಕಾದಾಟ ಸಾಗಿದ್ದಾಗ ನಂಜುಂಡ ಏನೂ ಅರಿಯದವನಂತೆ ಹಿತ್ತಿಲ ಬಾಗಿಲಿನಿಂದ ಬಂದು ತೇರು ಹತ್ತುತ್ತಾನೆ. ತೇರು ನೇರಕ್ಕೆ ತಿರುಗುತ್ತದೆ. ಮೆರವಣಿಗೆ ಮುಂದುವರಿಯುತ್ತದೆ.

ನಂಜುಂಡೇಶ್ವರ ವೈದ್ಯನಾಗಿದ್ದ ಎಂಬ ನಂಬಿಕೆ ಈಗಾಗಲೇ ಪ್ರಸ್ತಾಪವಾಗಿದೆ. ಕಣ್ಣು ನೋವು, ಕಿವಿ ಸೋರಿಕೆ, ಗಂಟಲು ನೋವು, ಹುಲ್ಲುರಿ ಎಂಬ ಚರ್ಮದ ಗಡ್ಡೆ, ಗಾಳಿ ಹಿಡಿದಿದೆಯೆಂಬ ನಂಬಿಕೆ ಮುಂತಾದ ಸಂದರ್ಭಗಳಲ್ಲಿ ನಂಜುಂಡೇಶ್ವರನಿಗೆ ಹರಕೆ ಕಟ್ಟಿಕೊಳ್ಳುವ ಸಂಪ್ರದಾಯವಿದೆ. ಗುಣವಾದ ಮೇಲೆ ಬೆಳ್ಳಿಯಲ್ಲಿ ಕಣ್ಣು ಕಿವಿ ಮೂಗು ಇತ್ಯಾದಿಗಳನ್ನು ಮಾಡಿಸಿ ದೇವರಿಗೆ ಒಪ್ಪಿಸಿ ಹರಕೆ ಸಲ್ಲಿಸುವುದಿದೆ. ಉರುಳುಸೇವೆ, ವಚ್ಚಮಗ್ಗಲು ಸೇವೆ, ಕಂಬಿ ಸೇವೆ, ಹೆಜ್ಜೆ ನಮಸ್ಕಾರ, ಮುಡಿಕೊಡುವಿಕೆ ಮುಂತಾದ ವಿಧಾನಗಳಲ್ಲಿ ಸೇವೆ ಸಲ್ಲಿಸುವುದಿದೆ.

ನಂಜುಂಡೇಶ್ವರನು ಫಲದೇವತೆಯೆಂಬ ಇನ್ನೊಂದು ನಂಬಿಕೆ ಇದೆ. ಈ ಕಾರಣದಿಂದ ಅವನಿಗೆ ಭೋಗ ನಂಜುಂಡೇರ್ಶವರ ಎಂಬ ಹೆಸರೂ ಇದೆ. ಗಂಡನಿಂದ ಮಕ್ಕಳಾಗದವರು ದೇವರ ಹೆಸರಿನಲ್ಲಿ ಹೊಳೆ ಕರೆ ಸೇವೆ, ತಾಳೆಮೆಳೆ ಸೇವೆ, ತೇರಿನ ಪಟ್ಟಡಿ ಸೇವೆ ಮುಂತಾದ ಹೆಸರುಗಳಿಂದ ಪರಪುರುಷರಿಂದ ಗಭಾದಾನ ಮಾಡಿಸಿಕೊಳ್ಳುವ ವಿಚಿತ್ರ ಸಂಪ್ರದಾಯವೂ ಇದೆ.

ನಂಜುಂಡೇಶ್ವರ ಕಾವ್ಯದಲ್ಲಿ ಅತಿಮಾನುಷ ಘಟನೆಗಳು ಇರುವಂತೆಯೇ ಜನಪದ ಬದುಕಿನ ವಾಸ್ತವ ಚಿತ್ರಗಳೂ ಕಂಡುಬರುತ್ತವೆ. ಹೊಟ್ಟೆಗೆ ಹಿಟ್ಟಿಲ್ಲದೆ, ಉಡಲು ಬಟ್ಟೆಯಿಲ್ಲದೆ, ಕೂಲಿ ಮಾಡುವ ಚಿತ್ರಗಳು ಹಾಗೂ ಇನ್ನೊಬ್ಬರ ಮನೆಯಲ್ಲಿ ಜೀತ ಮಾಡುವ ಚಿತ್ರಗಳು ಕಾವ್ಯದಲ್ಲಿದೆ.

ಕೆ.ಆರ್.

 

ನಂದಿಧ್ವಜ ಕರ್ನಾಟಕದ ವಿಶಿಷ್ಟ ಜನಪದ ಕಲೆ. ನಂದಿ ಧ್ವಜ ಕಂಬವನ್ನು ಹಿಡಿದು ಕುಣಿಯುವುದು ಆರಾಧನೆಯ ಹಿನ್ನೆಲೆಯ ಶಕ್ತಿಪ್ರದರ್ಶಕ ಕಲೆ. ದೈವದ ಮುಂದೆ ಜಾತ್ರೆಯ ಮೆರವಣಿಗೆಗಳಿಗೆ ನಂದಿ ಧ್ವಜದ ಕುಣಿತ ಇರುತ್ತದೆ. ಅತಿ ಎತ್ತರದ ಬಿದಿರು ಕಂಬಕ್ಕೆ ಗೆಜ್ಜೆ ಗಗ್ಗರ ಕೊಳಗ ಇವನ್ನೆಲ್ಲ ಜೋಡಿಸಲಾಗಿದ್ದು, ಕಂಬವನ್ನೆತ್ತಿ ಕುಣಿಯುವಾಗ ಇವೆಲ್ಲ ಲಯಬದ್ಧಸದ್ದು ಮಾಡುತ್ತವೆ. ಇದನ್ನು ನಂದಿಕಂಬ, ನಂದಿಕೋಲು, ನಂದಿಪಟ ಎಂತಲೂ ಕರೆಯುತ್ತಾರೆ. ವೀರಶೈವರು ಹೇಳುವಂತೆ ಇದು ವೀರಭದ್ರ ತನ್ನ ವಿರೋಧಿಯಾದ ದಕ್ಷಬ್ರಹ್ಮನ ಮೇಲೆ ಸಾಧಿಸಿದ ವಿಜಯದ ಸಂಕೇತವಾಗಿದೆ. ನಾಯಕ ಜನಸಮೂಹಕ್ಕೆ ತಮ್ಮ ಆರಾಧ್ಯ ದೈವ ಮತ್ತು ಸಂತನಾದ ನಾಯಕನಹಟ್ಟಿ ತಿಪ್ಪೇಸ್ವಾಮಿ(ಚಿತ್ರದುರ್ಗ ಜಿಲ್ಲೆ, ಬೆಳಗೆರೆ ತಾಲೂಕು, ನಾಯಕನಹಟ್ಟಿ) ಮುಂದೆ ನಡೆಯುವ ಉತ್ಸವಗಳಲ್ಲಿ ಎತ್ತಿ ಕುಣಿಯುವ ಧ್ವಜ ಇದು. ಆಯಾ ಪರಿಸರದಲ್ಲಿ ಇದು ತನ್ನ ವಿಶೇಷತೆಯನ್ನು ಪಡೆದುಕೊಂಡಿದೆ. ಸುಮಾರು ಹದಿನೈದು ಅಡಿ ಅಥವಾ ಅದಕ್ಕಿಂತಲೂ ಎತ್ತರವಿರುವ ಬಿದಿರು ಬೊಂಬಿಗೆ ನಾನಾ ರೀತಿಯ ಅಲಂಕಾರ ಮಾಡಿ ಗಟ್ಟಿಮುಟ್ಟಾದ ವ್ಯಕ್ತಿ ಕಂಬವನ್ನು ತೆಗೆದು ತನ್ನ ನಡುವಿಗೆ ಕಟ್ಟಿಕೊಂಡ ಬಟ್ಟೆಯ ಮಡಿಲಿನ ಒಳಗೆ ಇರಿಸಿಕೊಂಡು ಮೆರವಣಿಗೆಯ ಮುಂದೆ ಸಾಗುತ್ತಾನೆ.

12_70A_DBJK-KUH

ಒಮ್ಮೆ ಒಂದೇ ನಂದಿಧ್ವಜ ಪ್ರದರ್ಶನವೂ, ಕೆಲವೊಮ್ಮೆ ಅನೇಕ ನಂದಿಕಂಬಗಳ ಪ್ರದರ್ಶನವೂ ಇರಬಹುದು. ಬಹಳ ಹೊತ್ತು ಈ ನಂದಿ ಧ್ವಜವನ್ನು ಹಿಡಿದು ಕುಣಿಸುವುದು ಅತ್ಯಂತ ಪ್ರಯಾಸಕರ ಕೆಲಸ. ಹಾಗಾಗಿ ಶಕ್ತಿಯುಳ್ಳ ಯುವಕರು ಆಗಾಗ್ಗೆ ಕಂಬವನ್ನು ಕೈ ಬದಲಾಯಿಸಿ ತೆಗೆದುಕೊಂಡು ಹೋಗುವುದುಂಟು. ಮತ್ತೆ ಈ ಪವಿತ್ರ ಕಂಬವನ್ನು ನೆಟ್ಟಗೆ ನಿಲ್ಲಿಸಿ ಹೊತ್ತು ಕುಣಿಯುವಾಗ ಅದು ಯಾವುದೇ ಕಾರಣಕ್ಕೂ ಬೀಳಬಾರದು. ಹಾಗೆ ಬಿದ್ದರೆ ಅದು ಒಟ್ಟು ಉತ್ಸವಕ್ಕೆ ಅಪಶಕುನ ಎಂದು ಭಾವಿಸುತ್ತಾರೆ.

ಕೆ.ಎಚ್.

ನಂದುಣಿ ಕೇರಳದ ಪ್ರಾಚೀನ ತಂತಿವಾದ್ಯ. ‘ತತಂ’ ಎಂಬುದಕ್ಕೆ ‘ಗಟ್ಟಿಯಾಗಿ ಕಟ್ಟಿದ್ದು’ ಎಂದು ಅರ್ಥವಿದೆ. ಹಗ್ಗ ಅಥವಾ ತಂತಿಯನ್ನು ಉಪಯೋಗಿಸಿ, ಒಂದು ಬದಿಯಿಂದ ಇನ್ನೊಂದು ಬದಿಗೆ ಎಳೆದು ಕಟ್ಟಿ, ಅದರಲ್ಲಿ ಕಂಪನವನ್ನು ಉಂಟುಮಾಡಿ ನಾದವನ್ನು ಹೊಮ್ಮಿಸುತ್ತಾರೆ. ತಂತಿವಾದ್ಯಗಳನ್ನು ಮೀಟುವ ವಾದ್ಯಗಳು ಮತ್ತು ಬಾರಿಸುವ ವಾದ್ಯಗಳು ಎಂದು ಎರಡು ವಿಭಾಗ. ನಂದುಣಿ ಮೊದಲನೆಯದಕ್ಕೂ, ಪುಳ್ಳುವ ವೀಣೆ ಎರಡನೆಯದಕ್ಕೂ ಉದಾಹರಣೆಯಾಗಿದೆ.

ನಂದುಣಿ ವಾದ್ಯಕ್ಕೆ ಎರಡು ಭಾಗಗಳಿವೆ. ಒಂದು ಮರದ ಭಾಗ. ಎರಡು, ತಂತಿಯ ಭಾಗ. ಕೂವಳಂ(ಮ. ), ಹಲಸು ಮೊದಲಾದ ಮರಗಳಿಂದ ಇದರ ಮರಭಾಗವನ್ನು ನಿರ್ಮಿಸುತ್ತಾರೆ. ಈರ್ಚುವಳ್ಳಿ (ಒಂದು ಬಗೆಯ ಕಾಡುಬಳ್ಳಿ), ಚಿತ್ತಾಮೃತ ಮೂತಬಳ್ಳಿ, ಹನೆನಾರು ಇವುಗಳಲ್ಲಿ ಒಂದನ್ನು ದಾರವಾಗಿ ಬಳಸುತ್ತಾರೆ. ಈ ದಾರವನ್ನು ಬೆರಳಿನಿಂದಲೋ ಮರದ ತುಂಡಿನಿಂದಲೋ ಮೀಟಿ ನಾದ ಹೊಮ್ಮಿಸುತ್ತಾರೆ. ಎರಡು ತಂತಿಗಳಲ್ಲಿ ಒಂದು ಐದು ಅಡಿಯಷ್ಟು, ಇನ್ನೊಂದು ಎರಡು ಅಡಿಗಳಷ್ಟು ಉದ್ದವಿದೆ.

ಯಾಳ್‌(Harp) ಎಂಬ ಪ್ರಾಚೀನ ತಂತಿವಾದ್ಯವನ್ನು ಹೋಲುವ ನಂದುಣಿಯಲ್ಲಿ ಸಪ್ತಸ್ವರಗಳನ್ನು ಹೊಮ್ಮಿಸಲು ಅಸಾಧ್ಯ. ವೀಣೆಯ ಶ್ರುತಿಮಧುರವಾದ ನಾದವೂ ಇದರಿಂದ ಹೊಮ್ಮದು. ಆದುದರಿಂದ ಯಾಳ್ ಹಾಗೂ ವೀಣೆಯ ಮಧ್ಯೆ ನಂದುಮಣಿಯ ಸ್ಥಾನ.

ಶ್ರುತಿ ವಾದ್ಯ ಎಂಬ ನೆಲೆಯಲ್ಲಿ ನಂದುಣಿಯನ್ನು ಬಳಸುತ್ತಿದ್ದರು. ಕಲ್ಲಾಟ್ ಕುರುಪ್, ತೆಯ್ಯಂಬಾಡಿ, ಮಣ್ಣಾನ್, ಗಣಿಕನ್ ಮೊದಲಾದ ಸಮುದಾಯದವರು ನಂದುಣಿಯನ್ನು ಬಳಸುವರು. ಹಳೆಯ ವಳ್ಳುವನಾಡು, ಪೊನ್ನಾವಿ ಪ್ರದೇಶಗಳಲ್ಲಿ ಕಲ್ಲಾಟು ಕುರುಪ್ಪರು, ಕೋಲತ್ತುನಾಡಿನಲ್ಲಿ ತೆಯ್ಯಂಬಾಕಿಗಳು ನಂದುಣಿಯನ್ನು ಬಳಸಿ ಹಾಡುವರು. ಮಧ್ಯಕೇರಳದಲ್ಲಿ ಮಣ್ಣಾನ್ ಸಮುದಾಯದವರು ಭಗವತಿಪಾಟ್ ಹಾಡುವಾಗ ನಂದುಣಿಯನ್ನು ಉಪಯೋಗಿಸುತ್ತಾರೆ. ಕೇರಳದಲ್ಲಿ ಗಣಿಕ ಸಮುದಾಯದವರು ಸರ್ಪಕಾವುಗಳಲ್ಲಿ ‘ಊಟುಪಾಟು’ ನಡೆಸುವಾಗ ನಂದುಣಿಯನ್ನು ಬಳಸುತ್ತಾರೆ. ನಂದುಣಿ ಬಳಸಿ ಹಾಡುವ ಹಾಡುಗಳಿಗೆ ‘ನಂದುಣಿ ಪಾಟು’ ಎಂದು ಹೆಸರು.

ಎಸ್.ಕೆ. ಅನುವಾದ ಎನ್. ಎಸ್.

 

ನಂಬಿಕೆಗಳು‘ನಂಬಿಕೆ’ ಮನುಷ್ಯನ ಜೀವನದಲ್ಲಿ ಆದಿಯಿಂದಲೂ ಹಾಸುಹೊಕ್ಕಾಗಿದೆ. ಎಷ್ಟೋ ಸಲ ಇದು ಜನಪದರ ಜೀವನಕ್ರಮವನ್ನೇ ನಿರ್ದೇಶಿಸುತ್ತದೆ. ಕೆಲವೊಮ್ಮೆ ತಪ್ಪು ಅಭಿಪ್ರಾಯಗಳಿಂದ ವ್ಯಕ್ತಿಯ ಅಂತರ್ಗತದಲ್ಲಿ ಅಡಗಿ, ಅಂಧಕಾರವನ್ನು ಉಂಟು ಮಾಡಿ ಮೂಢನಂಬಿಕೆಯಾಗಿಯೂ ಕೆಲಸ ನಿರ್ವಹಿಸುತ್ತದೆ. ಮನುಷ್ಯನ ಮಾನಸಿಕ ಮೌಲ್ಯ, ಅಭಿವೃದ್ಧಿ ಸಂಪೂರ್ಣವಾಗಿ ಕುಸಿದಾಗ, ಜ್ಞಾನಸಂಪತ್ತು ನಶ್ವರವಾದಾಗ ನಂಬಿಕೆ ವಿಜೃಂಭಿಸುತ್ತದೆ.

ಧಾರ್ಮಿಕ ನಂಬಿಕೆ: ಇದು ಮನುಷ್ಯನ ಮನಸ್ಸಿನೊಳಗಿನ ಭಯದಿಂದ ಹುಟ್ಟಿದ್ದು. ಪ್ರಕೃತಿಯ ವಿಕೋಪಗಳಾದ ಪ್ರವಾಹ, ಬರ, ಚಂಡಮಾರುತ, ಅತಿವೃಷ್ಟಿ ಮುಂತಾದುವುಗಳಿಂದ ಕಂಗೆಟ್ಟ ಮಾನವ ಅಗೋಚರ ಶಕ್ತಿಯೊಂದನ್ನು ಆರಾಧಿಸುತ್ತ ನಂಬಿಕೆಯ ಹುಟ್ಟಿಗೆ ಕಾರಣಕರ್ತನಾದ. ದೇವಾಲಯ ಕಟ್ಟಿಸಿದರೆ ಅಷ್ಟಫಲಗಳು ದೊರೆಯುತ್ತವೆ. ದೇವರನ್ನು ಪೂಜಿಸಿದರೆ ಮಾನಸಿಕ ಶಾಂತಿ, ತೃಪ್ತಿ ಸಿಗುವುದರೊಂದಿಗೆ ಸಂತೋಷದಿಂದ ಬದುಕು ಸಾಗುತ್ತದೆ. ಹರಿಕಥೆ ಶ್ರವಣದಿಂದ, ವಾಚನದಿಂದ ಯಥೇಚ್ಛ ಸರಿ-ಸಂಪತ್ತು ಲಭಿಸುತ್ತವೆ. ದಾನ-ಧರ್ಮಗಳನ್ನು ಮಾಡಿದರೆ ಮನೆತನಕ್ಕೆ ಯಾವುದೇ ತೊಂದರೆಯೂ ಸಂಭವಿಸುವುದಿಲ್ಲ. ಗುಣಪೂರಿತ ಮುತ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಇಡೀ ಕುಟುಂಬ ಸುಖ-ಸಮೃದ್ಧಿಯಿಂದ ಇರುತ್ತದೆ. ಬಡಬಗ್ಗರಿಗೆ ಉಳ್ಳವರು ಚಿನ್ನದ ತಾಳಿಯೊಂದಿಗೆ ಬೆಳ್ಳಿಕಾಲುಂಗರಗಳನ್ನು ಮದುವೆ ಸಮಯದಲ್ಲಿ ಮಾಡಿಸಿಕೊಟ್ಟರೆ, ಮಾಡಿಸಿ ಕೊಟ್ಟವರಿಗೆ ಮುತ್ತೈದೆತನ ದೀರ್ಘಕಾಲ ಲಭಿಸುತ್ತದೆ. ವಿವಾಹಿತ ಸ್ತ್ರೀ ಗೌರಿಹಬ್ಬದ ದಿನ ಮುತ್ತೈದೆಯರಿಗೆ ಬಾಗಿನ ಅರ್ಪಿಸಿದರೆ, ಸಂಸಾರದಲ್ಲಿ ಯಾವುದೇ ತಾಪತ್ರಯಗಳು ಬರುವುದಿಲ್ಲ. ಯಾವುದೇ ಹಬ್ಬ ಮಾಡಿದಾಗ ನಾಲ್ಕಾರು ಜನ ಹಿತೈಷಿಗಳನ್ನು ಕರೆದು ಊಟ ಹಾಕಿದರೆ, ಅವರ ಎಂಜಲೆಗಳನ್ನು ಎತ್ತಿ ಪುಣ್ಯ ಲಭಿಸುತ್ತದೆ. ಈ ರೀತಿಯ ಧಾರ್ಮಿಕ ನಂಬಿಕೆಗಳು ಜನಪದ ಸಮಾಜದ ಭಾಗವಾಗಿವೆ.

ಪೌರಾಣಿಕ ನಂಬಿಕೆಗಳು: ಇವು ಮಾನವನ ಅಂತರಂಗದಲ್ಲಿ ಅಡಗಿವೆ. ಬಹುಕಾಳದಿಂದಲೂ ಅವರೊಂದಿಗೆ ಉಳಿದು, ಬೆಳೆದು ಬಂದಿವೆ. ಪ್ರಾಚೀನ ಕಾಲದಿಂದಲೂ ಇರುವ ನಂಬಿಕೆಗಳನ್ನು ನಿರಾಕರಿಸುವುದು, ನಿಷೇಧಿಸುವುದು ಅಷ್ಟು ಸುಲಭವಲ್ಲ. ವಿವಾಹಿತ ಗಂಡು ರಾಮನಂತೆ ಏಕಪತ್ನಿ ವ್ರತಸ್ಥನಾಗಿರಬೇಕು. ಹೆಣ್ಣು ಸೀತೆಯಂತೆ ಸಾಧ್ವಿಯಾಗಿ, ಕಷ್ಟ-ನಷ್ಟ ಸಹಿಷ್ಣುವಾಗಬೇಕು. ದೇವತೆಗಳ ಮತ್ತು ಮಹಾರಾಜರ ಬಿಟ್ಟು ಬೇರೆ ಯಾರು ಸೊಂಟದಿಂದ ಕೆಳಗೆ ಒಡವೆಗಳನ್ನು ಧರಿಸಬಾರದು. ಏಕೆಂದರೆ ಆಭರಣಗಳು ಲಕ್ಷ್ಮಿಗೆ ಸಮಾನ. ಶ್ರೀ ಕೃಷ್ಣನನ್ನು ಪದ್ಮರಾಗಗಳಿಂದ ಪೂಜಿಸಿದವನು ಮುಂದಿನ ಜನ್ಮದಲ್ಲಿ ಚಕ್ರವರ್ತಿಯಾಗಿ ಹುಟ್ಟುತ್ತಾನೆ. ಹನುಮಂತನ ತಾಯಿತನವನ್ನು ಮಕ್ಕಳ ರಕ್ಷಣೆ, ಬಲ ಮತ್ತು ಧೈರ್ಯದ ಸಲುವಾಗಿ ಬಳಸುವರು. ಚಿನ್ನದ ಹೂಗಳಿಂದ ಒಂದು ತಿಂಗಳ ಕಾಲ ದೇವರನ್ನು ಪೂಜಿಸಿದರೆ, ಪೂಜಿಸಿದವರು ಐಶ್ವರ್ಯ ಹೊಂದಿ ಮೋಕ್ಷವನ್ನು ಪಡೆಯಬಹುದು. ಮಾಣಿಕ್ಯದ ಹರುಳನ್ನು ಧರಿಸಿದರೆ ದೈವೀಶಕ್ತಿಗಳು ಬಂದು ನೆಲೆಸಿ ಸಮಾಜದ ಜನರಿಂದ ಅದರ, ಗೌರವ ದೊರೆಯುತ್ತದೆ. ಹವಳದಿಂದ ಯಾವುದೇ ದೇವರನ್ನು ಪೂಜಿಸಿದರೂ ಮೂರುಲೋಕವನ್ನು ಗೆಲ್ಲಬಹುದು. ಸಣ್ಣ ಹರಳುಗಳಿಂದ ದೇವರನ್ನು ಪೂಜಿಸಿದರೆ ರಾಜನಾಗಿ ಹುಟ್ಟಬಹುದು. ಪಚ್ಚೆಯನ್ನು ದೇವರಿಗೆ ಸಮರ್ಪಿಸಿದರೆ ಆತ್ಮಜ್ಞಾನ ಉಂಟಾಗುತ್ತದೆ. ವಜ್ರದಿಂದ ದೇವರನ್ನು ಪೂಜಿಸಿದರೆ ಮುಕ್ತಿ ಪ್ರಾಪ್ತಿಯಾಗುತ್ತದೆ.

ಐತಿಹಾಸಿಕ ನಂಬಿಕೆಗಳು: ಪ್ರಾಚೀನ ಕಾಲದಿಂದಲೂ ಇವು ನಮ್ಮ ಜನರ ಜೀವನದಲ್ಲಿ ಬದಲಾವಣೆ ತಂದಿವೆ ಎನ್ನಬಹುದು. ಚಾರಿತ್ರಿಕ ನಂಬಿಕೆಗಳಿಂದ ಜನರು ಜಾಗೃತರಾಗಿರುವುದು ಕಂಡು ಬರುತ್ತದೆ. ರಾಜ ಮನೆತನಗಳಲ್ಲಿ ಸ್ತ್ರೀಯರು ತೊಡುವ ಕಾಲುಂಗರ ಚಿನ್ನದ್ದೇ ಆಗಿರಬೇಕು. ಏಕೆಂದರೆ ಅರಸಗಿತ್ತಿಯರು ಚಿನ್ನವನ್ನು ಮೆಟ್ಟಿ ನಡೆದರೆ ರಾಜ್ಯಲಕ್ಷ್ಮೀ, ಕೋಶಲಕ್ಷ್ಮಿ ತಮ್ಮಲ್ಲೇ ಉಳಿಯುವಳೆಂಬ ನಂಬಿಕೆ ಇದೆ. ರಾಜರು ಕೆಂಪು ಮತ್ತು ಹಳದಿ ವಜ್ರಗಳನ್ನು ಧರಿಸಬೇಕು. ರಾಜ-ಮಹಾರಾಜರುಗಳು ಊಟದ ಸಮಯದಲ್ಲಿ ತಮ್ಮ ದೇಶವನ್ನು ವಜ್ರಕಾಯ ಮಾಡಿಕೊಳ್ಳಲು ಅತಿ ಸೂಕ್ಷ್ಮವಾದ ಚಿನ್ನದ ತಡಗನ್ನು ಸೇವಿಸಿ ಜೀರ್ಣಿಸಿಕೊಳ್ಳುತ್ತಿದ್ದರು. ಇದರಿಂದ ಅವರ ಶಕ್ತಿ, ಬಾಹುಬಲ ದ್ವಿಗುಣವಾಗುತ್ತಿತ್ತು.

ಸಾಮಾಜಿಕ ನಂಬಿಕೆಗಳು: ಇವು ಮನುಷ್ಯನ ಅಂತರಂಗದಲ್ಲಿ ಸಹಜವಾಗಿಯೇ ಉತ್ಪತ್ತಿಯಾಗುತ್ತವೆ. ಬಹಳ ಹಿಂದೆ ಮಾಂತ್ರಿಕ ಗುಣವುಳ್ಳ ವಸ್ತುಗಳಲ್ಲಿ ಮನುಷ್ಯನ ಒಡವೆಗಳ ಮೂಲೋತ್ಪತ್ತಿ ಇದೆ ಎಂದು ನಂಬಲಾಗಿತ್ತು. ಇಷ್ಟಾರ್ಥಗಳ ಸಿದ್ಧಿಗಾಗಿ ಮಾಂತ್ರಿಕ ಉಂಗುರಗಳನ್ನು ಜನರು ಧರಿಸುವರು. ಸ್ತ್ರೀ ವಶೀಕರಣ, ಸಂತಾನಪ್ರಾಪ್ತಿ, ಸಂಪತ್ತುಗಳನ್ನು ಗಳಿಸಿ ಸುಖ ಜೀವನ ನಡೆಸಲು ಇಚ್ಛಿಸುವರು. ಮಂತ್ರದ ಉಂಗುರಗಳನ್ನು ಹಾಕಿಕೊಳ್ಳುವರು. ಹುಚ್ಚು ಹಿಡಿದವರ ಕೈಗೆ ಮಂತ್ರಿಸಿದ ಕಬ್ಬಿಣದ ಬಳೆಗಳನ್ನು ಹಾಕುತ್ತಾರೆ. ಹುಲಿಯುಗುರು ಅಥವಾ ಅದರ ಮೀಸೆ, ಆನೆಯ ಕೂದಲನ್ನು ತಾಯಿತದೊಳಗೆ ಸೇರಿಸಿ ಕುತ್ತಿಗೆಗೆ ಇಲ್ಲವೆ ತೋಳಿಗೆ ಕಟ್ಟಿಕೊಂಡರೆ ಧೈರ್ಯ ಬರುತ್ತದೆ. ಶುಭಕಾರ್ಯಕ್ಕೆ ಹೊರಟಾಗ ಬಳೆಗಾರ ಎದುರಾದರೆ ಒಳ್ಳಯದು. ಮುಖದ ಮೇಲೆ ಮೊಡವೆಗಳಿದ್ದರೆ ಅವುಗಳ ನಿವಾರಣೆಗಾಗಿ ಬಲಗೈನ ಮಧ್ಯದ ಬೆರಳಿಗೆ ತಾಮ್ರದ ಉಂಗುರ ಹಾಕಿಕೊಳ್ಳುತ್ತಾರೆ. ಮಾಂಗಲ್ಯಕ್ಕೆ ಬೆಲೆ ಕೊಟ್ಟವಳು ಗಂಡನಿಗೂ ಬೆಲೆ ಕೊಡುತ್ತಾರೆ. ಮಕ್ಕಳಿಗೆ ಸನ್ನಿ ಹಿಡಿದರೆ ಬಳೆಗಾಜು ಅಥವಾ ಎಕ್ಕಡದ ಚೂರು ಇಲ್ಲವೆ ಮಾಂಗಲ್ಯದ ತುದಿಯನ್ನು ನಂದಾದೀಪದಲ್ಲಿ ಕಾಯಿಸಿ ಚಿಟಿಕಿ ಹಾಕಿದರೆ ವಾಸಿಯಾಗುತ್ತದೆ. ಬಳೆ ತೊಡಿಸಿ ಕೊಂಡಾದ ಮೇಲೆ ಮಲ್ಹಾರಕ್ಕೆ ನಮಸ್ಕರಿಸಿದರೆ ಒಳ್ಳೆಯದಾಗುತ್ತದೆ. ಎಳೆ ಮಕ್ಕಳಿಗೆ ರಚ್ಚೆ ತಾಳಿ ಕಟ್ಟಿದರೆ ರಗಳೆ ಮಾಡುವುದಿಲ್ಲ.

ಅತಿಮಾನುಷ ನಂಬಿಕೆ: ಮನುಷ್ಯನಿಗೆ ದೇವರ ನಂಬಿಕೆ ಇರುವಂತೆ ದೆವ್ವಗಳ ಬಗ್ಗೆಯೂ ಭಯಭಕ್ತಿ ಇದೆ. ಮಧ್ಯರಾತ್ರಿ, ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಲ್ಲಿ ದೆವ್ವಗಳು ಸಂಚರಿಸುತ್ತವೆ. ಆತ್ಮಹತ್ಯೆ, ಅಕಾಲಿಕ ಮರಣ, ಅಪಘಾತಕ್ಕೀಡಾದವರು ದೆವ್ವ ಭೂತಗಳಾಗುತ್ತಾರೆಂದು ನಂಬಲಾಗಿದೆ. ದೆವ್ವಗಳು ಹಸಿಮೈ ಬಾಣಂತಿ, ಮುಟ್ಟಾದ ಹೆಂಗಸರು ಎದುರಾದರೆ, ಅವರ ಮೈಯೊಳಗೆ ಪ್ರವೇಶಿಸಿ ಅವರ ಸಾವಿಗೆ ಕಾರಣವಾಗುತ್ತವೆ. ಮಟ ಮಧ್ಯಾಹ್ನ ಹುಣಸೇ ಮರದಡಿಯಲ್ಲಿ ಬರಬಾರದು. ರಾತ್ರಿ ಹೊತ್ತು ನಾಯಿಗಳು ವಿಚಿತ್ರವಾಗಿ ಕೂಗಿದರೆ, ಅವುಗಳ ಕಣ್ಣಿಗೆ ದೆವ್ವ ಕಂಡಿದೆ ಎಂದೇ ಅರ್ಥ ಜುಟ್ಟಿಲ್ಲದ ತೆಂಗಿನ ಕಾಯನ್ನು ದೇವರಿಗೆ ಒಡೆಯಬಾರದು. ಕಡುಬಣ್ಣದ ಹವಳ ದುಷ್ಟಶಕ್ತಿಗಳಿಗೆ ಇಷ್ಟವಾದುದರಿಂದ ಅದನ್ನು ಧರಿಸಬಾರದು. ಮೂರನೇ ಮದುವೆ ಮಾಡಿಕೊಳ್ಳುವರು ಮೊದಲು ಎಕ್ಕದ ಗಿಡಕ್ಕೆ ತಾಳಿಕಟ್ಟಿ ಅನಂತರ ಹೆಣ್ಣಿಗೆ ಕಟ್ಟಬೇಕು.

ಮಾನುಷ ನಂಬಿಕೆಗಳು: ಜನನ-ಮರಣ, ಹಬ್ಬ-ಹರಿದಿನ, ಕುಟುಂಬ, ನಿದ್ರೆ-ಕನಸು, ಕಾಲ-ಪಲ್ಲಟ, ಬಂಜೆತನ ಮದುವೆ, ಹೆಣ್ಣು-ಗಂಡು, ವಾರಗಳು, ಹೆತ್ತವರು-ಒಡಹುಟ್ಟಿದವರ ವಿಷಯಗಳು ಇಲ್ಲಿ ಪ್ರಮುಖವಾಗುತ್ತವೆ.

ಜನನ: ನವರತ್ನಗಳನ್ನು ಹೆಂಗಸರು ಕನಸಿನಲ್ಲಿ ಕಂಡರೆ ಸಂತಾನಲಾಭ. ಬಸುರಿ ಹೆಂಗಸು ಒಡವೆಗೆ ಆಸೆಪಡಬಾರದು. ಬಾಣಂತಿ ಮೂರು ತಿಂಗಳವರೆಗೆ ಹೂ, ಕುಂಕುಮ ಇಡಬಾರದು. ಹುಟ್ಟಿದ ಮಕ್ಕಳು ಸಾಯುತ್ತಿದ್ದರೆ ಅವಕ್ಕೆ ಮೂಗು ಚುಚ್ಚಿ, ಮುರ ಹಾಕುವರು, ಮಕ್ಕಳು ಹುಟ್ಟಿದ ಕೂಡಲೇ ನಾಲಿಗೆಗೆ ಚಿನ್ನ ಸೋಕಿಸುವ ಪದ್ಧತಿ ಇದೆ. ಮಕ್ಕಳಿಗೆ ಸಂದು ಅದರ ಬೆಳ್ಳಿ ಕಡ್ಡಿಯಲ್ಲಿ ಸುಡುಹಾಕಿದರೆ ಅದು ನಿವಾರಣೆಯಾಗುತ್ತದೆ. ಮುರು ಚುಚ್ಚದಿದ್ದರೆ ಮಗುವಿಗೆ ಚೇಳು-ಹಾವು ಕಡಿಯುವ ಸಂಭವವಿದೆ. ಹೆಣದ ಮೇಲೆ ಎಸೆವ ತಾಮ್ರದ ಕಾಸನ್ನು ಹೆಕ್ಕಿ ತಂದು ಅದನ್ನು ಮಕ್ಕಳ ಕೊರಳಿಗೆ ಸರ ಮಾಡಿಸಿ ಹಾಖಿದರೆ, ಅವರಿಗೆ ಯಾವುದೇ ಪೀಡೆ-ಪಿಶಾಚಿಗಳ ಕಾಟ ಇರುವುದಿಲ್ಲ.

ಮರಣ: ವ್ಯಕ್ತಿ ಸಾಯುವ ಸ್ಥಿತಿಯಲ್ಲಿದ್ದು ಹಿಂಸೆ ಪಡುತ್ತಿದ್ದರೆ, ಚಿನ್ನವನ್ನು ನೀರಿನಲ್ಲಿ ಸ್ವಲ್ಪವೇ ತೇದು ಆ ನೀರನ್ನು ಕುಡಿಸಿದರೆ ಅವರು ನೆಮ್ಮದಿಯಿಂದ ಸಾಯುವರು. ವಜ್ರದ ಹರಳು ಮೈಮೇಲಿದ್ದರೆ ಸಾಕು ನೋವು ಸಂಭವಿಸುವುದಿಲ್ಲ. ಸತ್ತ ಹೆಣ್ಣಿನ ಮಂಗಳ ಸೂತ್ರವನ್ನು ಅಂತ್ಯಕರ್ಮ ಮಾಡಿದವರು ಅದನ್ನು ಕರಗಿಸಿ ಉಂಗುರ ಮಾಡಿಸಿ ಹಾಕಿಕೊಂಡರೆ ದೀರ್ಘಾಯುಷಿಗಳಾಗುವರು. ಹರಕೆಯ ಮಗು ಹುಟ್ಟಿದೊಡನೆ ಅದಕ್ಕೆ ಮುರ ಹಾಕಿ ಸಾಯುವವರೆಗೂ ತೆಗೆಯುವುದಿಲ್ಲ.

ಹಬ್ಬ-ಹರಿದಿನ: ಹಬ್ಬ ಹರಿದಿನ ಇರುವಾಗ ಮಕ್ಕಳನ್ನು ಹೊಡೆಯಬಾರದು. ಹಬ್ಬದ ದಿನ ಕೈಯಲ್ಲಿಯ ಬಳೆ ಒಡೆಯುವುದು, ತಲೆಯಿಂದ ಹೂಕಿತ್ತು ಬೀಳುವುದು ಅಶುಭ. ಹಬ್ಬದ ದಿನಗಳಲ್ಲಿ ಹೆಂಗಸು ಮುಟ್ಟಾದರೆ, ಆಕೆ ಆ ಕಾರ್ಯದಲ್ಲಿ ಅನಿವಾರ್ಯವಾಗಿ ಭಾಗಿಯಾಗಲೇ ಬೇಕಾಗಿದ್ದಲ್ಲಿ ಚಿನ್ನ ಬೆಳ್ಳಿಯ ಪುಟ್ಟ ಚೊಂಬುಗಳನ್ನು ನುಂಗುವುದರಿಂದ ಸೂತಕವನ್ನು ಕಳೆದುಕೊಳ್ಳಬಹುದು.

ಕುಟುಂಬ: ಗಂಡನ ತಾಳಿಯ ಜೊತೆಗೆ, ತಾಯಿ ಮನೆಯ ದೇವರ ತಾಳಿಯನ್ನು ಹಾಕಿಕೊಂಡರೆ ಶ್ರೇಯಸ್ಸು. ತಾಳಿ ಬಿಚ್ಚಿದಾಗ ಹೊಸಲು ದಾಟಬಾರದು. ಪಂಚರತ್ನಗಳು, ಪಂಚಶೀಲಗಳನ್ನು ಕಾಯುತ್ತವೆ. ಬಳೆ ತೊಡಿಸಿಕೊಳ್ಳವಾಗ ಚೊಚ್ಚಲ ಮಕ್ಕಳು ಪಕ್ಕದಲ್ಲಿ ಬಂದು ಕುಳಿತರೆ ಬಳೆ ಒಡೆದು ಹೋಗುತ್ತವೆ. ಮದುವೆಗೆ ಮುಂಚೆ ಹೆಣ್ಣು ಮಕ್ಕಳು ಕಂಬಳಿ ತೊಡಬಾರದು. ಮೂಗುತಿ, ಮಂಗಳಸೂತ್ರ, ಕಡಗ, ಕಾಲುಂಗರ, ಕುಂಕುಮಗಳು ಹೆಣ್ಣಿಗೆ ಸೌಭಾಗ್ಯದ ಸಂಕೇತಗಳು. ‘ಹರಿನೀಲ’ ಎಂಬ ಒಡವೆ ಧರಿಸಿದರೆ ಕುಟುಂಬದಲ್ಲಿ ಸುಖ-ಸಮೃದ್ಧಿ ಸಿಗುತ್ತವೆ. ಪರಪುರಷರಿಗೆ ಹಾಕಿದ ಹೂವಿನ ಹಾರವನ್ನು ಸಂಬಂಧವಿಲ್ಲದ ಮುತ್ತೈದೆಯವರು ಮುಡಿದುಕೊಳ್ಳಬಾರದು. ಗುಣಪೂರಿತ ಮುತ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಇಡೀ ಕುಟುಂಬದಲ್ಲಿ ಶಾಂತಿ-ನೆಮ್ಮದಿ ನೆಲೆಸಿರುತ್ತದೆ.

ನಿದ್ರೆ ಕನಸು: ತೊಲೆಯ ಕೆಳಗೆ ಮಲಗಿದರೆ ಕನಸುಗಳು ಜಾಸ್ತಿ. ಕನಸಿನಲ್ಲಿ ನೀರು ಬೆಂಕಿಯಂತಹ ಪಂಚಭೂತಗಳನ್ನು ಕಾಣಬಾರದು. ಕನಸಿನಲ್ಲಿ ಭಾರೀ ಭೋಜನ ಉಂಡರೆ ಮಾರನೆಗೆ ಹತ್ತಿರದ ನೆಂಟರು ಸಾಯುತ್ತಾರೆ. ಸತ್ತ ಹಿರಿಯರು/ಬದುಕಿರುವ ಹಿರಿಯರು ಕನಸಿನಲ್ಲಿ ಕಾಣಿಸಿಕೊಂಡು ವಜ್ರ ಕೊಟ್ಟರೆ ಐಶ್ವರ್ಯ ಹೆಚ್ಚುತ್ತದೆ. ಕನಸಿನಲ್ಲಿ ಮದುವೆಯಾದಂತೆ ಕಂಡರೆ ಅಂತಹವರ ಮದುವೆ ತುಂಬಾ ತಡವಾಗುತ್ತದೆ. ಮಲಗುವಾಗ ಎಡ ಮಗ್ಗುಲಲ್ಲೂ, ಏಳುವಾಗ ಬಲಮಗ್ಗುಲಲ್ಲೂ ಏಳಬೇಕು. ಅಂಗಾತ ಮಲಗಿದರೆ ಕೆಟ್ಟ ಕನಸುಗಳು ಹೆಚ್ಚಾಗಿ ಬೀಳುತ್ತವೆ. ಹಾಸಿಗೆಯ ಮೇಲೆ ಮಲಗುವುದಕ್ಕಿಂತ ಚಾಪೆಯ ಮೇಲೆ ಮಲಗಿದರೆ ಆರೋಗ್ಯ ಸರಿಯಾಗಿರುತ್ತದೆ.

ಕಾಲ/ಪಲ್ಲಟ: ಕಾಲಕಾಲಕ್ಕೆ ಮಳೆ ಬರುಬೇಕು ಇಳೆ ನಗಬೇಕು. ಕಾಲಕ್ಕೆ ಕಾಯಲಾರದವನು ಏತಕ್ಕೂ ಕಾಯಲಾರ. ಒಳ್ಳೇ ಕಾಲ ಬಂದಾಗ ಜೀವನವೇ ಬದಲಾಗುತ್ತದೆ. ಬದುಕಿನಲ್ಲಿ ಕೆಟ್ಟ ಕಾಲ ಬಂದಾಗ ಕುಗ್ಗದೆ ಧೈರ್ಯವಾಗಿ ಎದುರಿಸಿ ನಿಂತರೆ ಅದೇ ಒಳ್ಳೆಯ ಕಾಲವಾಗುತ್ತದೆ. ಕಾಲಾಯ ತಸ್ಮೈ ನಮಃ ನಾವು ಕಾಲವನ್ನು ಕಾಯಬಹುದು. ಆದರೆ ಕಾಲವೆಂದೂ ನಮ್ಮನ್ನು ಕಾಯುವುದಿಲ್ಲ. ಕಾಲದಿಂದ ಕಾಲಕ್ಕೆ ಎಂತಹವರನ್ನಾದರೂ ನಿಯಂತ್ರಿಸುವ, ಬುದ್ಧಿ ಕಲಿಸುವ ಸಾಮರ್ಥ್ಯ ಇರುತ್ತದೆ.

ಬಂಜೆತನ: ಪುಷ್ಪರಾಗವನ್ನು ಬಂಜೆಯರು ಸದಾಕಾಲ ಧರಿಸಿದರೆ ಮಕ್ಕಳಾಗುತ್ತವೆ. ಮಕ್ಕಳೇ ಆಗದಿದ್ದ ಮಹಿಳೆಗೆ ಹೆಳವರನ್ನು ಕರೆಯಿಸಿ, ಅವಳು ಹೊಕ್ಕಳಿನ ಸುತ್ತ ಚಿನ್ನದ ಅಥವಾ ಬೆಳ್ಳಿಯ ಸೂಡನ್ನು ಹಾಕಿಸುತ್ತಾರೆ. ಬಂಜೆಯಾದವಳ ಕೈಗೆ ಮಕ್ಕಳನ್ನು ಕೊಡಬಾರದು. ಬಂಜೆಯಾದವಳು ಭಿಕ್ಷೆ ಹಾಕಲು ಯೋಗ್ಯಳಲ್ಲ ಎಂಬಂತೆ ಅವಳನ್ನು ಚಿತ್ರಿಸಿ, ಮಾನಸಿಕ ಹಿಂಸೆಗೆ ಕಾರಣವಾಗುತ್ತಾರೆ.

ಮದುವೆ: ಮದುವೆ ಗಂಡು ಅರಿಶಿಣ ಮೈಯಲ್ಲಿ ಅಥವಾ ಕಂಕಣ ಕಟ್ಟಿದ ಮೇಲೆ ಹೊರಗಡೆ ತಿರುಬಾರದು. ತಿರುಗಿದರೆ ಅಪಾಯ. ಮದುವೆಯಾದ ಹೆಂಗಸರು ಹಣೆಗೆ ಕುಂಕುಮ ಇಟ್ಟುಕೊಳ್ಳುವಾಗ ತಾಳಿಗೂ ಇಟ್ಟುಕೊಂಡರೆ ಶ್ರೇಯಸ್ಸಾಗುತ್ತದೆ. ಮದುವೆ ಮನೆಯಲ್ಲಿ ಕಂಕಣ ಬಾಸಿಂಗಗಳನ್ನು ಕಟ್ಟುವನು ಸೋದರ ಮಾವ. ಮದುವೆ ಗಂಡು ಕೆಲವೆಡೆ ದೇವರ ತಾಳಿ ಧರಿಸುತ್ತಾನೆ. ಮದುವೆಯಾದವರು ಮೂಗು ಬೊಟ್ಟು ಕಾಲುಂಗರಗಳಿಲ್ಲದೆ ಇರಬಾರದು.

ಹೆಣ್ಣು-ಗಂಡು: ವಿಧವೆಯರು ಒಡವೆಗಳನ್ನು ಧರಿಸಬಾರದು. ಹಸಿರು ಬಳೆಗಳನ್ನು ಗರ್ಭಿಣಿ ಸ್ತ್ರೀಯರಿಗೆ ತೊಡಿಸಿದರೆ ಒಳ್ಳೆಯದಾಗುತ್ತದೆ. ಹೆಂಗಸರು ದದ್ದು ಬಳೆ ತೊಟ್ಟುಕೊಂಡರೆ ಗಂಡನಿಗೆ ಕೇಡು. ಹೆಣ್ಣು ತಗ್ಗಿ ಬಗ್ಗೆ ಬಾಳಬೇಕು. ಗಂಡು ಹಿರಿಯರು ಹಾಕಿದ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾನೆ. ಗಂಡಾಗುಂಡಿ ಮಾಡಿಯಾದರೂ ಗಂಡನ ಜೊತೆಗೆ ಬಾಳಬೇಕು. ಹೆಣ್ಣು ಮಣ್ಣಿನ ದೀಪ, ಗಂಡು ಮಾಣ್ಣಿಕ್ಯದ ಹರಳು. ಗಟ್ಟಿಗಿತ್ತಿಯಾರಂದದ್ದಕ್ಕೆ ಗಂಡನಿಗೆ ಗುದ್ದಿಳಂತೆ. ಹೆಣ್ಣು-ಗಂಡು ಸಂಸಾರದ ಎರಡು ಕಣ್ಣುಗಳು.

ವಾರಗಳು: ಸೋಮವಾರ ಸೊಸೆಯನ್ನು ತೌರಿಗೆ ಕಳುಹಿಸಬಾರದು, ಮಂಗಳವಾರ ಮಂಡೆ ಮೇಲೆ ನೀರಾಕಿಸಿಕೊಳ್ಳಬಾರದು, ಬುಧವಾರ ಪುಣ್ಯವನ್ನು ಸಂಪಾದಿಸುವ ವಾರ, ಗುರುವಾರ ದೇವರನ್ನು ಪೂಜಿಸುವುದರೊಂದಿಗೆ, ಮಡಿಯನ್ನು ಮಾಡಬಹುದು, ಶುಕ್ರವಾರ ಲಕ್ಷ್ಮೀದೇವಿಯ ವಾರ ಅಂದು ಕಾಸನ್ನು ಯಾರಿಗೂ ಕೊಡಬಾರದು, ಮೈಮೇಲೆ ಹಾಕಿದ ಒಡವೆಯನ್ನು ತೆಗೆಯಬಾರದು. ಮಗಳನ್ನು ಈ ದಿನದಂದು ಮದುವೆ ಮಾಡಿಕೊಡಬಾರದು, ಶನಿವಾರ ಮೈಮೇಲೆ ಬಟ್ಟೆ ಹಾಕಿಕೊಂಡರೆ ಮತ್ತೆ ಹೊಸ ಬಟ್ಟೆ ಸಿಗುವುದಿಲ್ಲ. ಭಾನುವಾರ ಭೈರವೇಶ್ವರ ವಾರ. ಭಯ ಭಕ್ತಿಯಿಂದ ಇರಬೇಕಾಗುತ್ತದೆ.

ಹೆತ್ತವರು: ನಾಯಿಯಾದರೂ ತಾಯಿ. ತಾಯಿಯನ್ನು ಕಾಲಲ್ಲಿ ಒದ್ದವನು ನಾಯಾಗಿ ಹುಟ್ಟುತ್ತಾನೆ. ತಂದೆಯನ್ನು ಯಾರೂ ಹೀಗಳೆಯಬಾರದು. ತಂದೆ-ತಾಯಿ ದೇವರಿಗೆ ಸಮಾನ. ಭೂಲೋಕದ ಪ್ರತ್ಯಕ್ಷ ದೇವರುಗಳೆಂದರೆ ಕಾಣುತ್ತಾಳೆ. ತಂದೆ ಮಕ್ಕಳಿಗೆ ವ್ಯವಹಾರ ಜ್ಞಾನವನ್ನು ಬೋಧೀಸುವ ಗುರು, ಮಗನ ಸೊಂಟದಲ್ಲಿ ಉಡುದಾರವಿಲ್ಲದಿದ್ದಾಗ, ಅವನ ಬೋಳು ಬೆನ್ನನ್ನು ತಾಯಾದವಳು ನೋಡಬಾರದು.

ಒಡಹುಟ್ಟಿದವರು: ಅಣ್ಣ ಅತ್ತಿಗೆ ಬರುವ ತನಕ, ತಮ್ಮ ತಾಯಿ ಇರುವ ತನಕ. ಒಡೆದು ಹೋದ ಬಳೆಗಳನ್ನು ಹಾಕಿಕೊಳ್ಳಬಾರದು. ಅದರಿಂದ ಒಡ ಹುಟ್ಟಿದವರಿಗೆ ಕೇಡಾಗುತ್ತದೆ. ಯಾವುದೇ ಸಂಬಂಧ ಕಳೆದು ಹೋಗಬಹುದು. ಆದರೆ ಒಡಹುಟ್ಟಿನ ಬಾಂಧವ್ಯ ಸಾಯುವವರೆಗೂ ಇರುವಂತಹುದು. ಅಣ್ಣನಾಸೆಗೆ ತಂಗಿ ಅವಮಾನಕ್ಕೆ ಈಡಾದಳಂತೆ.

ಅಂಗಾಂಗಗಳಿಗೆ ಸಂಬಂಧಿಸಿದ ನಂಬಿಕೆಗಳು: ಗಂಡಸರಿಗೆ ಬಲಗಣ್ಣು, ಹೆಂಗಸರಿಗೆ ಎಡಗಣ್ಣು ಅದುರಿದರೆ ಒಳ್ಳೆಯದು. ಕಣ್ಣಿನ ಹುಬ್ಬು ಕುಣಿದರೆ ಅಶುಭ. ಆ ಸಮಯದಲ್ಲಿ ಮನೆ ದೇವರನ್ನು ನೆನೆದು ಮೂರು ಭಾರಿ ಬೆರಳಿಂದ ಹುಬ್ಬನ್ನು ಸವರಿದರೆ ಅದು ಇಲ್ಲವಾಗುತ್ತದೆ. ಮಾಲುಗಣ್ಣು ಅದೃಷ್ಟದ ಸಂಕೇತ. ಮೆಳ್ಳೆಗಣ್ಣು ಮನೆಗೆ ಕೇಡನ್ನು ತರುತ್ತದೆ. ಆರು ಬೆರಳಿದ್ದರೆ ಪುಣ್ಯ ಬರುತ್ತವೆ. ತಲೆ ದಪ್ಪವಾಗಿದ್ದರೆ ಬುದ್ಧಿವಂತ, ತಲೆ ಸಣ್ಣಗಿದ್ದರೆ ಸ್ವಾರ್ಥಿ. ಕಾಫಿ ಬಣ್ಣದ ಮಚ್ಚೆ ಹೆಣ್ಣಿಗೆ ಎಡಭಾಗದಲ್ಲಿ ಗಂಡಿಗೆ ಬಲಭಾಗದಲ್ಲಿದ್ದರೆ ಶುಭ. ತೋಳು/ಅಂಗೈನಲ್ಲಿ ಗರುಡ ಮಚ್ಚೆ ಇದ್ದರೆ ವಿಷಜಂತುಗಳು ಕಚ್ಚುವುದಿಲ್ಲ. ತುಂಬು ಹಸ್ತಪಾದ ಹೆಣ್ಣಿಗಿದ್ದರೆ ಅಂತಹ ಮನೆಯಲ್ಲಿ ಲಕ್ಷ್ಮೀ ತಾಂಡವವಾಡುತ್ತಾಳೆ. ಅಂಕುಡೊಂಕು ಹಲ್ಲಿದ್ದವರು ನಂಬಿಕೆಗೆ ಅರ್ಹರಲ್ಲ. ಎಡವಿದ ಕಾಲೇ ಮತ್ತೆ ಎಡವುತ್ತದೆ. ಗಂಡಿಗೆ ಬಲಗೈ, ಹೆಣ್ಣಿಗೆ ಎಡಗೈ, ಗಂಡಿಗೆ ಎಡಗೈ ಕಡಿದರೆ ಧನನಷ್ಟ, ಅಂಗಾಲುಗಳು ಕಡಿದರೆ ಜಗಳ ಜಾಸ್ತಿ, ಎಡಭುಜ ಅದುರಿದರೆ ಒಳ್ಳೆಯದು, ಬಲಭುಜ ಅದುರಿದರೆ ಸಂಭೋಗ ಸುಖ. ತಲೆಯ ಮೇಲೆ ಕೈಯಿಟ್ಟರೆ ಚಿಂತೆ, ಸಾವಾಗಿದೆ. ಹೆಂಗಸರ ಮೈಮೇಲೆ ಕೂದಲ್ಲಿದ್ದರೆ, ಅಂತಹವರಿಗೆ ಅಸಾಧ್ಯ ಧೈರ್ಯ, ಭೋಗಕ್ಕೆ ಒಂದೇ ಗಂಡು ಸಾಕಾಗುವುದಿಲ್ಲ. ಏನೇ ಕೆಟ್ಟ ಕೆಲಸ ಮಾಡಿದರೂ ಅದನ್ನು ಸಮರ್ಥಿಸಿಕೊಳ್ಳುವರು. ಹೆಣ್ಣಿಗೆ ಮೂಗನ್ನು ಚುಚ್ಚಿಸುವಾಗ ಅವರ ಬಳಿ ಕೊಬ್ಬರಿ ತೆಗೆದುಕೊಂಡು ಹೋಗಿ ನೀವಾಳಿಸಿ ಮುರಿದರೆ ಮೂಗು ಚುಚ್ಚುವಾಗ ನೋವಾಗುವುದಿಲ್ಲ.

ಜನಪದ ವೈದ್ಯ ಮತ್ತು ನಂಬಿಕೆ: ಇದು ಮನುಷ್ಯನ ಜೀವನ ಕ್ರಮವನ್ನೇ ಬದಲಿಸುವಂತಹದು. ಅಜೀರ್ಣದಿಂದ ಹೊಟ್ಟೆ ಉಬ್ಬರಸಿಕೊಂಡರೆ, ನೋವು ಕಾಣಿಸಿದರೆ, ಬೆಚ್ಚನೆಯ ಬೂದಿಯನ್ನು ನುಂಗಿದರೆ ಕ್ರಮೇಣ ಅದು ವಾಸಿಯಾಗುತ್ತದೆ. ಕಣ್ಣು ಉಷ್ಣದಿಂದ ಉರಿಯುತ್ತಿದ್ದರೆ ನೆತ್ತಿಗೆ ಹರಳೆಣ್ಣೆ ಹಾಕಿ ತಟ್ಟಬೇಕು. ಕೆಮ್ಮು, ನಾಯಿಕೆಮ್ಮು ಏಣಾದರೂ ಬಂದರೆ ನವಿಲುಗರಿಯನ್ನು ಎಣ್ಣೆ ದೀಪದಲ್ಲಿ ಸುಟ್ಟು ಅದರ ಬೂದಿಯನ್ನು ಜೇನು ತುಪ್ಪದೊಂದಿಗೆ ಕಲಸಿ ತಿನ್ನಬೇಕು. ಇಲ್ಲವಾದರೆ ಒಂದು ವೀಳ್ಯದೆಲೆ ೨ ಹರಳುಪ್ಪು, ೧ಲವಂಗವನ್ನು ಸೇರಿಸಿ ಅದರ ರಸವನ್ನು ನಿಧಾನಕ್ಕೆ ಸವಿಯುತ್ತಿದ್ದರೆ, ಎಂತಹ ಕೆಮ್ಮಾದರೂ ತಹಬದಿಗೆ ಬರುತ್ತದೆ. ಕಾಲು ಉಳುಕಿದರೆ ಕೈಯೆಣ್ಣೆ ಹಾಕಿ ನೀವಬೇಕು. ಕಿಬ್ಬೊಟ್ಟೆಯಲ್ಲಿ ಸಣ್ಣನೆ ನೋವಾದರೆ ಒಕ್ಕುಳಿಗೆ ಕೈಯ್ಯೆಣ್ಣೆಯನ್ನು ಕಾಯಿಸಿ, ಆರಿಸಿ ಹುಯ್ಯಬೇಕು. ತಲೆ ಸುತ್ತು ಬಂದರೆ ಜೀರಿಗೆ, ಹಸಿಶುಂಠಿ, ಕೆಂಪು ಕಲ್ಲು ಸಕ್ಕರೆಯನ್ನು ಒಟ್ಟಿಗೆ ಸೇರಿಸಿ ಗಸಗಸ ಅಗಿದು ತಿನ್ನಬೇಕು. ಒಣ ಹಣ್ಣುಗಳು ಆರೋಗ್ಯದಲ್ಲಿ ತಂಪನ್ನು ಕಾಯ್ದಿಡುತ್ತವೆ. ತಾಮ್ರದ ನೀರು ಮೈಮೇಲೆ ಬಿದ್ದರೆ ಚರ್ಮರೋಗ ಬರುವುದಿಲ್ಲ. ಗಂಟಲಲ್ಲಿ ಹುಣ್ಣಾದರೆ, ಗಂಟಲು ನೋವಾದರೆ ಉಪ್ಪಿನ ಹರಳಿನೊಂದಿಗೆ ಒಂದೆರಡು ಕಾಳು ಮೆಣಸನ್ನು ಅಗಿದು ನುಂಗಿ, ಬಿಸಿನೀರಿನಲ್ಲಿ ಗಂಟಲನ್ನು ಮುಕ್ಕಳಿಸಿದರೆ ಅದು ತಹಬದಿಗೆ ಬರುತ್ತದೆ. ಮಜ್ಜಿಗೆ ಸೇವಿಸದಿದ್ದವರು ಸೇವಿಸಬೇಕಾಗಿ ಬಂದಾಗ ಅದಕ್ಕೆ ಈರುಳ್ಳಿ, ಕೊತ್ತಂಬರಿಸೊಪ್ಪು, ಹಸಿಶುಂಠಿ, ಬೆಳ್ಳುಳ್ಳಿ, ಇಂಗು,ಹಸಿ ಕರಿಬೇವಿನ ಸೊಪ್ಪು ಹಾಕಿ ಕುಡಿದರೆ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡುಬರುವುದಿಲ್ಲ. ವಾತರೋಗ/ಕೀಲುರೋಗದಿಂದ ಪಾರಾಗಲು ಚಿನ್ನದ ಉಂಗುರ ಧರಿಸಬೇಕು.

ಆಭರಣ ಮತ್ತು ನಂಬಿಕೆ: ಆಭರಣಗಳು ಮನುಷ್ಯನ ಆಪದ್ಧನಗಳಾಗಿವೆ. ಅವು ಕೇವಲ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಆರೋಗ್ಯವರ್ಧಕದಂತೆ ಕೆಲಸ ಮಾಡಿರುವುದನ್ನು ಕಾಣಬಹುದು. ಒಡವೆಗಳನ್ನು ಧರಿಸಿದಾಗ ಅವು ಕಪ್ಪಾದರೆ, ಅದನ್ನು ಧರಿಸಿದವರ ನಡತೆ ಸರಿಯಾಗಿಲ್ಲವೆನ್ನಲಾಗಿದೆ. ಕಿವಿಯೊಡವೆಗಳು ಮರ್ಮಸ್ಥಾನದಲ್ಲಿ ಉದ್ಭವಿಸುವ ರೋಗಗಳನ್ನು ನಿವಾರಿಸಿ, ವಾತ, ಪಿತ್ತ, ಶ್ಲೇಷ್ಮಗಳಿಂದ ಉಂಟಾಗುವ ದೋಷಗಳನ್ನು ನಾಶ ಮಾಡುತ್ತವೆ. ಮೂಗುತಿ ಉಸಿರಾಟವನ್ನು ಸಮತೋಲನವಾಗಿ ಕಾಯ್ದುಕೊಳ್ಳುತ್ತದೆ. ಕುತ್ತಿಗೆ ಒಡವೆಗಳು ಧರಿಸುವ ವ್ಯಕ್ತಿಗೆ ಯಾವುದೇ ದೋಷವಿದ್ದರೂ ಪರಿಹರಿಸಿ, ವಾಯುದೋಷವನ್ನು ನಿವಾರಿಸಿ, ಮಾನವನಿಗೆ ಆಯುರಾಭಿವೃದ್ಧಿಯನ್ನು ಉಂಟು ಮಾಡುತ್ತವೆ. ಕಡಗಗಳು ಕೈನ ಕಾಲಿನ ನರನಾಡಿಗಳನ್ನು ಪ್ರಜೋದಿಸಿ, ರಕ್ತ ಚಲನೆಯನ್ನು ಹೆಚ್ಚು ಮಾಡುತ್ತವೆ. ಅಲ್ಲದೆ ಅವನ್ನು ಧರಿಸುವುದರಿಂದ ಅವು ಸೊಂಟದ ಭಾಗಗಳಿಗೆ ಬಲ ನೀಡುವುದರೊಂದಿಗೆ, ಜನನೇಂದ್ರಿಯಗಳ ಆರೋಗ್ಯವನ್ನು ಕಾಪಾಡುತ್ತವೆ. ಗೋಮೇಧಿಕ ಹರಳನ್ನು ಹೃದಯದ ಮೇಲೆ ಇಟ್ಟುಕೊಂಡರೆ ಬಾಯಾರಿಕೆ ನಿವಾರಣೆಯಾಗುತ್ತದೆ. ಚಿನ್ನದ ಪುಡಿಯ ನಿತ್ಯಪ್ರಯೋಗ ಹೃದಯ ರೋಗವನ್ನು ತಡೆಗಟ್ಟುವುದು. ಜೀವಸಹಿತವಿದ್ದಾಗ ಚಿನ್ನದಿಂದ ಮಾಡಿಸಿದ ಒಡವೆಗಳನ್ನು ಬಾಯಿಗೆ ಹಾಕಬಾರದು. ಸೊಂಟಕ್ಕೆ ಉಡುದಾರ ಹಾಕದಿದ್ದರೆ ಹೊಟ್ಟೆಯಲ್ಲಿ ಹುಳು ಹೆಚ್ಚಾಗುತ್ತವೆ. ತಾಮ್ರದ ಬಳೆ ನರವೃದ್ಧಿಗೆ ಒಳ್ಳೆಯದು. ಸುವರ್ಣಭಸ್ಮ ದೇಹದ ಯೌವನವನ್ನು ಕಾಪಾಡುವುದು.

ಪ್ರಕೃತಿ ಮತ್ತು ನಂಬಿಕೆ: ನಿಸರ್ಗ ಮನುಷ್ಯನ ಜೊತೆ ಜೊತೆಯಲ್ಲೇ ಇರುವಂತಹುದು. ಏಕೆಂದರೆ ಪ್ರಕೃತಿಯ ಕೈಕೂಸು ಮಾನವ. ಎಳೆ ಬಿಸಿಲು ಮೈಗೆ ಹಿತ, ಮುದ ನೀಡುತ್ತದೆ. ಮಧ್ಯಾಹ್ನದ ಬಿಸಿಲು ಮೈಗೆ ಒಳ್ಳೆಯದಲ್ಲ. ಮಳೆಗಾಲದ ಆರಂಭದಲ್ಲಿ ಆಲಿಕಲ್ಲೇನಾದರೂ ಬಿದ್ದರೆ ಆ ವರ್ಷ ಸಕಾಲದಲ್ಲಿ ಮಳೆಯಾಗುತ್ತದೆ. ರಾತ್ರಿಯ ಹೊತ್ತು ಹಸಿಗೆ ಕೈ ಹಾಕಬಾರದು. ದೇವಕಣಗಿಲೆ ಮರದ ಹಾಲು ಪತ್ತುಬುಂಡೆ (ಅರೆಕೂದಲು)ಗೆ ಹಾಕುತ್ತಾರೆ. ಹಾವನ್ನು, ಕಪ್ಪೆಯನ್ನು ಕೊಂದರೆ ಪಾಪತಟ್ಟಿ, ವಂಶದಲ್ಲಿ ಮೂಕರು, ಕಿವುಡರಾದ ಮಕ್ಕಳು ಜನಿಸುತ್ತಾರೆ. ಕಪ್ಪೆ ವಟಗುಟ್ಟಿದರೆ ಮಳೆಯಾಗುತ್ತದೆ. ನಿಲ್ಲುವುದಿಲ್ಲ. ಜೇನುಹುಟ್ಟನ್ನು ಜಾಣ್ಮೆಯಿಂದ ಕೀಳಬೇಕು. ಆಲದ ಮರಕ್ಕೆ ನೂರು ವರ್ಷ ಆಯಸ್ಸು. ವೀಳ್ಯದೆಲೆಯನ್ನು ರಾತ್ರಿ ಹೊತ್ತು ಕೀಳಬಾರದು. ನಂದಿ ಬಟ್ಟಲು ಹೂವಿನಲ್ಲಿ ಮಾಡುವ ಕಪ್ಪು ಕಣ್ಣಿಗೆ ತಂಪು. ನಾರಿರುವ ತರಕಾರಿ ಶರೀರದಲ್ಲಿಯ ಕೊಬ್ಬಿನ ಅಂಶಗಳನ್ನು ಕರಗಿಸುತ್ತದೆ.

ಪ್ರಾಣಿ ಪಕ್ಷಿ ಸಂಬಂಧ ಮತ್ತು ನಂಬಿಕೆಗಳು: ಇರುವೆ ಗೂಡಿಗೆ ಅಕ್ಕಿ ಬೆಲ್ಲ ಹಾಕಿದರೆ ಪುಣ್ಯ ಬರುತ್ತದೆ. ಕರಿ ಇರುವೆ ಗೂಡಿಗೆ ಪ್ರಾಪ್ತ ವಯಸ್ಕರು ಸಕ್ಕರೆ/ಬಿಳಿ ಎಳ್ಳು ಹಾಕಿದರೆ ಬೇಗನೆ ಮದುವೆಯಾಗುತ್ತದೆ. ಮನೆಯೊಳಗೆ ಕಡಜ ಗೂಡು ಕಟ್ಟಿದರೆ ಸಂತಾನಲಾಭ. ಅದು ಒಂದು ಗೂಡು ಕಟ್ಟಿದರೆ ಗಂಡು ಮಗು, ಎರಡು ಗೂಡು ಕಟ್ಟಿದರೆ ಹೆಣ್ಣು ಮಗುವಾಗುತ್ತದೆ. ಪಕ್ಷಿಗಳು ಮನೆಯೊಳಗೆ ಗೂಡು ಕಟ್ಟಬಾರದು. ನಾಯಿ ನಾರಾಯಣನಾದ್ದರಿಂದ ಅದನ್ನು ಕಾಲಲ್ಲಿ ಒದೆಯಬಾರದು. ಕೊತ್ತಿ ಕೊಂದು ತಿಂದ ಪಾಪ ತಿತ್ತಿ (ತಿರುಪತಿ) ಹೊಕ್ಕರು ಬಿಡದು. ಹಸುವಿಗೆ ಮೇವು ಹಾಕಿ, ಪೂಜಿಸಿದರೆ ಪುಣ್ಯ ಉಂಟಾಗುವುದು. ಯಾವುದೇ ಪ್ರಾಣಿಯನ್ನು ಕಸಬರಿಕೆಯಿಂದ ಹೊಡೆದರೆ ಹೊಡೆದ ಕೈಗೆ ಲಕ್ವ ಹೊಡೆಯುತ್ತದೆ. ಪಾರಿವಾಳವನ್ನು ಮನೆಯಲ್ಲಿ ಸಾಕಿದರೆ ಆ ಮನೆ ಏಳಿಗೆ ಹೊಂದುವುದಿಲ್ಲ. ಮಾತಾಡುವ ಅರಗಿಣಿ ಪ್ರಣಯ ಪಕ್ಷಿಗಳನ್ನು ಒಂಟೊಂಟಿ ಸಾಕಬಾರದು. ಸಾಕಿದರೆ ಅವು ಬದುಕಲಾರವು. ಗರುಡ ಮನೆಯ ಮೇಲೆ ವಾರಗಟ್ಟಲೆ ಒಂದೇ ಸಮನೆ ಹಾರಾಡುತ್ತಿದ್ದರೆ, ನಾವು ದೂರದೂರಿಗೆ ಪ್ರಯಣ ಬೆಳೆಸುತ್ತೇವೆ. ನವಿಲು ಗರಿಯನ್ನು ಮನೆಯಲ್ಲಿಟ್ಟುಕೊಂಡರೆ ಒಳ್ಳೆಯದಾಗುತ್ತದೆ. ಕಾಗೆ ಮನೆಯೊಳಗೆ ನುಗ್ಗಿದ್ದರೆ ಆ ಮನೆಗೆ ಕೆಡುಕಾಗುತ್ತದೆ. ಕಾಗೆ ತಲೆ ಸ್ಪರ್ಶಿಸಿ ಹಾರಿದರೆ ತಂದೆ ತಾಯಿಗೆ ಕಂಟಕ. ಮನೆ ಮುಂದೆ ಒಂಟಿ ಕಾಗೆ ಕೂಗಿದರೆ ಯಾರಾದರೂ ನೆಂಟರು ಬರುವ ಸೂಚನೆ. ಮನೆಯ ಮೇಲ್ಗಡೆ/ ಹಿಂಬದಿಯಲ್ಲಿ ಕಾಗೆ ತನ್ನ ಇಡೀ ಸಮೂಹದೊಂದಿಗೆ ಅರಚುತ್ತಿದ್ದರೆ, ಸಮೀಪದಲ್ಲೇ ಯಾರಾದರೂ ಸಾಯುತ್ತಾರೆ. ಕೋತಿ, ಆನೆ, ಹಸುವನ್ನು ಕೊಲ್ಲಬಾರದು. ಹುಲಿ ಮೀಸೆ, ಆನೆ ಬಾಲದ ಕೂದಲನ್ನು ಉಂಗುರ ಮಾಡಿಸಿ ಹಾಕಿಕೊಂಡರೆ ಯಾವುದೇ ಸಂದರ್ಭ ಸನ್ನಿವೇಶಗಳಲ್ಲೂ ಎದೆಗುಂದುವುದಿಲ್ಲ.

ಕೌಟುಂಬಿಕ ಮತ್ತು ನೀತಿಪ್ರಧಾನ ನಂಬಿಕೆಗಳು: ಊಟವನ್ನು ಊಟದ ತಟ್ಟೆಯನ್ನು ಕಾಲಿನಿಂದ ಒದೆಯಬಾರದು. ಎಂಜಲು ತಟ್ಟೆಯನ್ನು ದಾಟಿದರೆ ಕಾಲಿನಿಂದ ಒದೆಯಬಾರದು. ಎಂಜಲು ತಟ್ಟೆಯನ್ನು ದಾಟಿದರೆ ಕಾಲುಧೂಳಾಗುತ್ತದೆ. ಉಣ್ಣುವಾಗ ಮತ್ತು ಕೆಳಗೆ ಬಿದ್ದರೆ ಯಾರಾದರೂ ನೆಂಟರು ಮನೆಗೆ ಬರುತ್ತಾರೆ. ತುತ್ತನ್ನು ತೂಕ ಮಾಡಿ ಉಣ್ಣಬಾರದು. ಒಬ್ಬರ ಎಂಜಲನ್ನು ಮತ್ತೊಬ್ಬರು ತಿನ್ನಬಾರದು. ಮಾಂಸವನ್ನು ಕದ್ದು ತಿನ್ನಬಾರದು ಮತ್ತು ಅವಿತಿಡಬಾರದು, ಇಟ್ಟರೆ ಅಂತಹವರಿಗೆ ತೊನ್ನಾಗುತ್ತದೆ. ಎಣ್ಣೆ/ಸೀಗೆಯನ್ನು ಮನೆಯಲ್ಲಿ ಒಟ್ಟಿಗೆ ಇಡಬಾರದು. ಊಟ ಮಾಡುವಾಗ ಮುಖಸಿಂಡರಿಸದೆ, ನಗು ನಗುತ್ತಾ ಮಾಡಿದರೆ, ಉಂಡ ಊಟ ಮೈಗೆ ಹತ್ತುತ್ತದೆ. ಊಟ ಮಾಡಿದ ಮೇಲೆ ನೆಲಕ್ಕೆ ಕೈಯೂರಿ ಮೇಲೆದ್ದರೆ ತಿಂದ್ದೆಲ್ಲ ಭೂಮಿಗೆ ಸೇರುತ್ತದೆ. ಉಂಡ ನಂತರ ಮೈ ಮುರಿಯಬಾರದು. ವರ್ಷ ತುಂಬುವ ತನಕ ಅಳಿಯನಿಗೆ ಮುದ್ದೆ ಕೊಡಬಾರದು. ಅಳಿಯನ ಎಂಜಲು ತಟ್ಟೆಯಲ್ಲಿ ಅತ್ತೆ ಕೈಯೂರಬಾರದು. ಉಂಡ ಮನೆಗೆ ಎರಡು ಬಗೆಯಬಾರದು. ಉಪ್ಪು ಕೊಟ್ಟವನನ್ನು ಮುಪ್ಪಿನವರೆಗೂ ನೆನೆಯಬೇಕು. ಹಸಿದವರನ್ನು ನೆರಳಿಗೆ ಕರೆದು ಊಟ ಮಾಡಿಸಬೇಕು. ತುಂಬಿದ ಕೆರೆ, ಮನೆ ಬಡಿಯಬಾರದು. ತಾಯಿ-ಮಗುವನ್ನು ಬೇರೆ ಮಾಡಬಾರದು.

ಕೆ.ಎಸ್.ಬಿ.