ನಿಣಬಲಿ ಕೇರಳದಲ್ಲಿ ಕಾಳಿಯ ಆರಾಧನೆಯ ಅಂಗವಾಗಿ ವ್ಯಕ್ತಿ ಅಥವಾ ಕುಟುಂಬದ ಒಳಿತಿಗಾಗಿ ‘ನಿಣಬಲಿ’ ಎಂಬ ಆರಾಧನೆಯನ್ನು ನಡೆಸುತ್ತಾರೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶಕ್ತಿಪಂಥದ ಆಚರಣೆಯಾಗಿ ಇದು ಕಂಡುಬರುತ್ತದೆ. ರೋಗ ನಿವಾರಣೆ ಹಾಗೂ ಉದ್ದೇಶಿತ ಕಾರ್ಯಸಿದ್ಧಿಗಳಿಗಾಗಿ ಈ ಆರಾಧನೆಯನ್ನು ನಡೆಸುವರು. ಮಲಯನ್ ಸಮುದಾಯದವರು ಈ ಆಚರಣೆಯನ್ನು ನಡೆಸುತ್ತಾರೆ. ವ್ಯಕ್ತಿಯೊಬ್ಬ ದುಷ್ಟಶಕ್ತಿಯ ಬಾಧೆಗೊಳಗಾದಾಗ ಅಥವಾ ಮನೆಯಲ್ಲಿ ದುರ್ಮರಣ ಉಂಟಾದಾಗ ಪರಿಹಾರ ಕ್ರಿಯೆಯಾಗಿ ನಿಣಬಲಿಯನ್ನು ಏರ್ಪಡಿಸುವರು. ಜ್ಯೋತಿಷಿಯ ಸಲಹೆಯಂತೆ ನಿಣಬಲಿಯ ದಿನಾಂಕ ಮತ್ತು ನಡೆಸಬೇಕಾದ ಸ್ಥಳವನ್ನು ನಿರ್ಧರಿಸುವರು.

ರೋಗಗಳಿಗೆ ದುಷ್ಟ ಶಕ್ತಿಗಳೇ ಕಾರಣವೆಂದು ನಂಬಿದ್ದ ಕಾಲದಲ್ಲಿ, ರೋಗ ಅಥವಾ ಸಾವಿಗೆ ಕಾರಣವಾದ ದುಷ್ಟಶಕ್ತಿಯನ್ನು ಪತ್ತೆಹಚ್ಚಿ, ಅದರ ಕೋಲವನ್ನು ಕಟ್ಟಿ ವಧಿಸುವಂತೆ ಪ್ರದರ್ಶಿಸುವುದು ನಿಣಬಲಿಯ ಆಚರಣೆ. ಇದರಿಂದ ರೋಗ ಶಾಂತಿಯಾವುದುಎಂಬ ನಂಬಿಕೆ. ಕಾಳಿ ಮತ್ತು ದಾರಿಕಾಸುರನ ಪುರಾಣ ಕಥೆಯನ್ನು ಆಧರಿಸಿ ಈ ಆಚರಣೆ ನಡೆಯುವುದು. ಜಗತ್ತನ್ನು ಸರ್ವನಾಶ ಮಾಡಲು ಹುಟ್ಟಿದ ದಾರಿಕಾಸುರನನ್ನು ನಿಗ್ರಹಿಸಲು ಶಿವನ ಮೂರನೇ ಕಣ್ಣಿನಿಂದ ಹುಟ್ಟಿದವಳು ಕಾಳಿ. ದಾರಿಕಾಸುರನ ನಿಗ್ರಹದ ಅನಂತರವೂ ಕಾಳಿಯ ಆವೇಶ ಇಳಿಯುವುದಿಲ್ಲ. ಕಾಳಿಯ ಕೋಪವನ್ನು ಶಮನಗೊಳಿಸಲು ತುಂಬ ಪ್ರಯತ್ನಗಳಾಗುತ್ತವೆ. ಇವುಗಳೆಲ್ಲ ನಿಷ್ಟ್ರಯೋಜಕವಾದಾಗ, ಶಿವನು ಕಾಳಿಯಲ್ಲಿ ಕೈ ಬೆರಳು ಗಾಯಮಾಡಿ ರಕ್ತ ಹೀರುವಂತೆ ಸೂಚಿಸುತ್ತಾನೆ. ಹೀಗೆ ಕಾಳಿ ಶಾಂತಳಾಗುತ್ತಾಳೆ. ಬಾಧೆ ವಿಮುಕ್ತಿಗಾಗಿ ನಡೆಸುವ ನಿಣಬಲಿಯಲ್ಲಿ ದಾರುಕಾಸುರ ರೋಗಗಳನ್ನು ಪ್ರತಿನಿಧಿಸುವ ಬಲಿಮೃಗವಾಗಿಯೂ, ಕಾಳಿಯನ್ನು ಫಲವಂತಿಕೆಯ ದೇವತೆಯಾಗಿಯೂ ಸಂಕಲ್ಪಿಸಲಾಗಿದೆ.

ಸೆಗಣಿ ಸಾರಿಸಿದ ಅಂಗಳದಲ್ಲಿ ತೆಂಗಿನಗರಿ, ಹೂ, ಅಡಕೆ, ವೀಳ್ಯ, ಹಣ್ಣುಗಳಿಂದ ಅಲಂಕರಿಸಿದ ಚಪ್ಪರದಲ್ಲಿ ನಿಣಬಲಿಯ ವಿಧಿಗಳು ನಡೆಯುತ್ತವೆ. ಚಪ್ಪರದ ಕಂಬಗಳಿಗೆ ಕಾಸರಕಗೆಲ್ಲು, ಹಾಲೆಗೆಲ್ಲು, ಬಾಳೆಗೊನೆಗಳನ್ನು ಕಟ್ಟಿರುತ್ತಾರೆ. ಕಳಂಚಿತ್ರದ ಸುತ್ತಲೂ ಅನೇಕ ಗಿಡಮರಗಳ ಗೆಲ್ಲುಗಳನ್ನು ತೂಗಿಸುವರು. ಬೆಲ್ಲ, ಎಳನೀರು, ಜೇನು, ಬೇಯಿಸಿದ ಹೆಸರುಕಾಳು, ತೆಂಗಿನಕಾಯಿ, ಮದ್ಯ, ಹೊದಳು ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸುವರು.

ಪೂರ್ವಕ್ಕೆ ಮುಖ ಮಾಡಿ ಕುಳಿತ ಬಾಧೆಗೊಳಗಾದ ವ್ಯಕ್ತಿಯನ್ನು ವೆಳುತೇಡನ್ (ಕರ್ಮಿ) ಸೊಪ್ಪಿನಿಂದ ನಿವಾಳಿಸುತ್ತಿರುವನು. ಮಲಯನ್ ಈ ಸಂದರ್ಭದಲ್ಲಿ ಚೆಂಡೆ, ತಾಳ, ಚೀನಿ ವಾದ್ಯಗಳ ಹಿನ್ನೆಲೆಯೊಂದಿಗೆ ಹಾಡುವನು. ಉಳಿದವರು ದನಿಗೂಡಿಸುವರು. ಬೆಳಗ್ಗೆ ಆರಂಭವಾಗುವ ವಿಧಿಯಾಚರಣೆಗಳು ಸಂಜೆಯವರೆಗೆ ಮುಂದುವರಿಯುವುದು. ಕಳಂದ ಸಮೀಪದಲ್ಲಿ ಅಗ್ನಿಕುಂಡವಿರುವುದು, ಬಾಧೆಗೊಳಗಾದ ವ್ಯಕ್ತಿಗೆ ನಿವಾಳಿಸುವ ಧಾನ್ಯಗಳು ಅಗ್ನಿಕುಂಡವಿರುವುದು, ಬಾಧೆಗೊಳಗಾದ ವ್ಯಕ್ತಿಗೆ ನಿವಾಳಿಸುವ ಧಾನ್ಯಗಳನ್ನು ಅಗ್ನಿಕುಂಡಕ್ಕೆ ಎಸೆಯುವರು. ಅನಂತರ ಬಾಧೆಗೊಳಗಾದ ವ್ಯಕ್ತಿಗೆ ಎಣ್ಣೆ ತಿಕ್ಕಿ ಸ್ನಾನ ಮಾಡಿಸುವರು. ಸಂಜೆ ಬಾಲಿ, ಕುಟ್ಟಿಚಾತನ್, ಗುಳಿಗನ್ ಮೊದಲಾದ ತೆಯ್ಯಂಗಳು ರಂಗ ಪ್ರವೇಶಿಸುತ್ತವೆ. ಈ ತೆಯ್ಯಂಗಳು ಬಾಧೆಗೊಳಗಾದ ವ್ಯಕ್ತಿಯನ್ನು ಧಾನ್ಯದಿಂದ ನಿವಾಳಿಸಿ, ಅರಸಿನ ಎಸೆಯುವುವು. ಮಧ್ಯರಾತ್ರಿಯ ಹೊತ್ತಿಗೆ ನಿಣಬಲಿ ನಡೆಯುವುದು.

15_70A_DBJK-KUH

‘ಕೇಳಿ’ಯೊಂದಿಗೆ ನಿಣಬಲಿಯ ಆರಂಭ, ಇದಕ್ಕಾಗಿ ದಪ್ಪದ ‘ವೀಕುಚೆಂಡೆ’ಯನ್ನು ಬಳಸುತ್ತಾರೆ. ನೇಪಥ್ಯದಲ್ಲಿ ದಾರಿಕಾಸುರನ ವೇಷಧಾರಿ ದೇಹದಲ್ಲಿ ಜೋಳದ ಹೊದಳನ್ನು ಅಂಟಿಸುವನು. ಅದರ ಮೇಲೆ ಹೊರಳಿನ ಹುಡಿಯನ್ನು ಎರಚುವರು. ಕಣ್ಣು ಹಾಗೂ ಹುಬ್ಬುಗಳಿಗೆ ಮಸಿ ಬಳಿದು. ಹಣೆಗೆ ಚುಚ್ಚಿ, ಇಡುವನು. ಬಾಯಿಯಲ್ಲಿ ಕೋರೆ ಹಲ್ಲುಗಳನ್ನು ಧರಿಸುವನು. ಕಾಳಿ ವೇಷಧಾರಿ ಕಣ್ಣಿಗೆ ಕಾಡಿಗೆ ಬರೆದು, ಆಭರಣಗಳನ್ನು ಧರಿಸಿ, ಕೆಂಪು ವಸ್ತ್ರಗಳನ್ನು ಧರಿಸುವನು. ‘ಕೇಳಿ’ ಮುಗಿದ ಕೂಡಲೇ ದಾರಿಕನ ಆರ್ಭಟ ಆರಂಭವಾಗುವುದು. ಆರ್ಭಟೆಯೊಂದಿಗೆ ಕೈಗಳಲ್ಲಿ ಪಂಜು ಹಿಡಿದಿರುವ ದಾರಿಕನ ರಂಗ ಪ್ರವೇಶವಾಗುತ್ತದೆ. ವಾದ್ಯಘೋಷಗಳೊಂದಿಗೆ ದಾರಿಕ ವೇಷಧಾರಿ ಎಂಟು ದಿಕ್ಕುಗಳಿಗೆ ವಂದಿಸುತ್ತಾನೆ.

ಎರಡನೇ ಭಾಗದಲ್ಲಿ ಕಾಳಿಯ ಪ್ರವೇಶವಾಗುತ್ತದೆ. ವಾದ್ಯಘೋಷಗಳೊಂದಿಗೆ ಕಾಳಿ ರೌದ್ರಭಾವದಿಂದ ಪ್ರವೇಶಿಸುತ್ತಾಳೆ. ಮನೆಯೊಳಗೆ ಹೋಗುವ ಕಾಳಿ ಬಾಧಿಕ ವ್ಯಕ್ತಿಯನ್ನು ಹರಸುವಳು. ಇದೇ ಸಂದರ್ಭದಲ್ಲಿ ರಂಗಕ್ಕೆ ಮರಳುವ ದಾರಿಕಾಸುರನ ಆರ್ಭಟವನ್ನು ಕೇಳಿ ಕಾಳಿ ಆವೇಶದಿಂದ ಬರುವಳು. ಯುದ್ಧವಾಗುತ್ತದೆ ಕೊನೆಗೆ ಕಾಳಿ ದಾರಿಕಾಸುರನನ್ನು ವಧಿಸಿ, ಕರುಳಮಾಲೆಯನ್ನು ಹೊರಗೆಳೆಯುತ್ತಾಳೆ. ವಾದ್ಯಘೋಷಗಳು ಮುಗಿಲು ಮುಟ್ಟುತ್ತವೆ. ದಾರಿಕವಧೆಯ ನಂತರ ಕಾಳಿ ತೆರೆಮರೆಗೆ ಸರಿಯುತ್ತಾಳೆ.

ಸತ್ತ ದಾರಿಕನನ್ನು ಬಿಳಿವಸ್ತ್ರದಿಂದ ಮುಚ್ಚಿ ಸಮೀಪದಲ್ಲಿ ಸಿದ್ಧಪಡಿಸಿದ ಹೊಂಡದಲ್ಲಿ ಹಾರೆ, ಹಲಗೆಯಿಂದ ಮುಚ್ಚುತ್ತಾರೆ. ಅನಂತರ ತಾಂತ್ರಿಕ ಪೂಜಾದಿ ಕರ್ಮಗಳು ನಡೆಯುತ್ತವೆ. ಪೂಜೆಯ ನಂತರ ಹಲಗೆ ಸರಿಸಿ, ಮಂತ್ರವಾದಿ ದಾರಿಕನ ಹೆಬ್ಬೆರಳನ್ನು ಜೋಡಿಸುತ್ತಾನೆ. ಹೀಗೆ ನಿಣಬಲಿಯ ವಿಧಿಯಾಚರಣೆಗಳು ಕೊನೆಗೊಳ್ಳುತ್ತವೆ.

ಆಧುನಿಕ ಯುಗದಲ್ಲಿ ನಿಣಬಲಿಯಂತಹ ಧಾರ್ಮಿಕ ಆಚರಣೆಗಳು ಮರೆಯಾಗುತ್ತಿವೆ. ಕೆಲವು ನಿರ್ದಿಷ್ಟ ಕೇಂದ್ರಗಳಲ್ಲಿ ಮಾತ್ರ ಉಳಿದುಕೊಂಡಿದೆ.

ಸಿ.ಕೆ.ಜಿ. ಅನುವಾದ ಎನ್. ಎಸ್.

 

ನಿರ ಕೇರಳದಲ್ಲಿ ಕೃಷಿಗೆ ಸಂಬಂಧಿಸಿದ ಒಂದು ಮುಖ್ಯ ಆಚರಣೆ ‘ನಿರ’ ಮನೆ, ದೇವಸ್ಥಾನಗಳಲ್ಲಿ ಇದನ್ನು ಆಚರಿಸುವರು. ಕರ್ಕಟಕಮಾಸದ ಅಮಾವಾಸ್ಯೆಯ ನಂತರವೂ, ಶ್ರಾವಣಮಾಸದ ಕೊನೆಗೊಳ್ಳುವುದಕ್ಕಿಂತ ಮುಂಚಿನ ದಿವಸಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ದಿನ ಹಾಗೂ ಮುಹೂರ್ತವನ್ನು ದೇವಾಲಯಗಳಲ್ಲಿ ನಿರ್ಧರಿಸುವರು. ಭತ್ತದ ಕೃಷಿಗೆ ಸಂಬಂಧಿಸಿದ ಈ ಆಚರಣೆಯ ವಿಧಾನದಲ್ಲಿ ಪ್ರಾದೇಶಿಕ ವ್ಯತ್ಯಾಸಗಳು ಹೇರಳವಾಗಿ ಕಂಡುಬರುತ್ತದೆ.

ಒಂದು ಉತ್ತಮ ಮೂಹೂರ್ತದಲ್ಲಿ ಹೊಸ ಭತ್ತದ ತೆನೆಯನ್ನು ಮೊದಲ ಬಾರಿಗೆ ಮನೆಗೆ ತಂದು ಪೂಜಿಸುವ ಫಲವಂತಿಕೆಯ ಆಚರಣೆಯಾಗಿದೆ ನಿರ. ಮನೆಗಳಲ್ಲಿ ಮನೆಯ ಯಜಮಾನನು ಭತ್ತದ ತೆನೆಯನ್ನು ಮನೆಯ ಒಳಗೆ ತೆಗೆದುಕೊಂಡು ಬರುವರು. ಆದರೆ ದೇವಾಲಯ, ಕಾವು, ಸ್ಥಾನ, ಕೆಲವು ಪ್ರಧಾನ ತರವಾಡು -ಗಳಿಗೆ ಪುಲಯ ಸಮುದಾಯಕ್ಕೆ ಸೇರಿದ ಜನರು ಭತ್ತದ ತೆನೆಯನ್ನು ತರುತ್ತಾರೆ. ಉತ್ತರ ಕೇರಳದ ಹಲವು ದೇವಸ್ಥಾನಗಳಲ್ಲಿ ಭತ್ತದ ತೆನೆಯನ್ನಿಡಲು ಪ್ರತ್ಯೇಕವಾದ ಸ್ಥಳ ಇದೆ. ಅದನ್ನು ‘ಕದಿರುವೆಕ್ಕು ತರ’(ತೆನೆ ಇಡುವ ಪಾಯ) ಎಂದು ಕರೆಯುವರು.

‘ನಿರ’ದ ಭಾಗವಾಗಿ ನಡೆಸುವ ಮೊದಲ ಕ್ರಿಯೆ ಶುದ್ಧೀಕರಣ. ಕಾಡು ಆವರಿಸಿರುವ ಹಿತ್ತಲು, ಅಂಗಳ, ದೇವಸ್ಥಾನದ ಪರಿಸರ, ಸಾರ್ವಜನಿಕ ದಾರಿ ಇತ್ಯಾದಿಗಳನ್ನು ಶುಚಿಗೊಳಿಸುವರು. ಅನಂತರ ದೇವಸ್ಥಾನದಲ್ಲಿ ‘ನಿರಯ್ಕ್ ಕಲ್ಪಿಕ್ಕಲ್’ನ್ನು ಹೇಳಿದರು. (‘ನಿರ’ದ ಮೂಹೂರ್ತವನ್ನು ತಿಳಿಸುವುದನ್ನು ‘ನಿರಯ್ಕ್ ಕಲ್ಪಿಕ್ಕಲ್’ ಎಂದು ಹೇಳುವರು). ಬಳಿಕ ಸಿಡಿಮದ್ದು ಸಿಡಿಸಿ ಊರಿನವರಿಗೆ ಮೂಹೂರ್ತ ಸಮಯವನ್ನು ತಿಳಿಸುವವರು. ಸಿಡಿಮದ್ದಿನ ಶಬ್ದ ಕೇಳುವಾಗಲೇ ಮನೆಯ ಯಜಮಾನ ಸ್ನಾನ ಮಾಡಿ ಗದ್ದೆಗೆ ಹೋಗುವನು. ಬಳಿಕ ವಾಯುವ್ಯ ಮೂಲೆಯಿಂದ ಒಂದು ಹಿಡಿ ತೆನೆಯನ್ನು ಕೊಯ್ದು ತೆಗೆಯುವನು. ಅದನ್ನು ಮನೆಯ ಅಂಗಳದಲ್ಲಿ, ಸಗಣಿ ಸಾರಿಸಿದ ಪಾಯ (ತರ)ದ ಮೇಲೆ ಒಂದು ಹಲಗೆಯನ್ನಿಟ್ಟು, ಅದರ ಮೇಲೊಂದು ‘ಕೊಡಿ ಎಲೆ’ಯನ್ನಿಟ್ಟು ಇರಿಸುವವರು. ಎರಡನೇ ಬಾರಿ ಸಿಡಿಮದ್ದಿನ ಶಬ್ದ ಮೊಳಗುವಾಗ ಮನೆಯ ಯಜಮಾನನು ‘ನಿರ ನಿರ ಪೊಲಿ ಪೊಲಿ, ಕ್ಷೇತ್ರ ಪಾಲಿನೀಶ್ವರಂಡೆ ಕೊಟ್ಟಾರಂ ಪೋಲೆನಿರನಿರ ಪೊಲಿ’ ಎಂದು ಸ್ತುತಿಸುತ್ತಾ ‘ಕಾರ್ನವರ’ ಸಾನಿಧ್ಯದಲ್ಲಿ ಭತ್ತದ ತೆನೆಯನ್ನು ‘ಪಡಿಞಟ’ದಲ್ಲಿ ಉರಿಸಿರುವ ದೀಪದ ಬಳಿ ತಂದಿರಿಸುವರು. ಭತ್ತದ ತೆನೆಯನ್ನು ‘ಶ್ರೀಭಗವತಿ’ ಎಂದು ಸ್ತುತಿಸಿ ಈ ಆರಾಧನೆಯನ್ನು ನಡೆಸುವವರು. ಇದಕ್ಕೆ ಅನುಬಂಧವಾಗಿ ‘ನೆರೋಲಂಕೆಟ್ಟಲ್’ ಎಂಬ ವಿಶೇಷವಾದ ಕ್ರಿಯೆ ಕೂಡ ಇದೆ. ಆಲ, ಅರಳಿ, ಕಾಸಾರಕ, ಮಾವು, ಹಲಸು, ನೆಲ್ಲಿ, ಪೊಲಿ ಬಳ್ಳಿ ಮೊದಲಾದವುಗಳ ಎಲೆಯನ್ನು ಇಟ್ಟು, ತೆಂಗಿನ ಮಡಲಿನ ಮೇಲ್ಭಾಗದ ನಾರಿನಿಂದ ಕಟ್ಟುವರು. ಬಾವಿ, ಫಲವೃಕ್ಷ, ಪೆಟ್ಟಿಗೆ ಎಂಬಿತ್ಯಾದಿಗಳನ್ನು ಅಲಂಕರಿಸುವರು. ಮುಂದಿನ ವರ್ಷದ ‘ನಿರ’ದ ವೇಳೆ ಮಾತ್ರವೇ ಇದನ್ನು ತೆಗೆಯುವರು. ಮೂರನೇ ಬಾರಿ ಸಿಡಿಮದ್ದಿನ ಶಬ್ದ ಕೇಳುವುದರೊಂದಿಗೆ ಕ್ರಿಯೆಗಳೆಲ್ಲಾ ಕೊನೆಗೊಳ್ಳುತ್ತವೆ. ತೆಂಗಿನಕಾಯಿ ತುಂಡು, ಬೆಲ್ಲ, ಬಾಳೆಹಣ್ಣು, ಅವಲಕ್ಕಿ ಇವುಗಳ ನೈವೇದ್ಯವನ್ನು ಗಣಪತಿಗೆಂದು ಇಡುವರು. ಮುಂದೆ ಭೂರಿ ಭೋಜನ ಇರುತ್ತದೆ. ಭೋಜನದ ಬಳಿಕ ಮನೆ ಯಜಮಾನನು ಗದ್ದೆಗಿಳಿದು, ಹೊಟ್ಟೆಯನ್ನು (ಉಜ್ಜುತ್ತಾ) ತೆನೆಗೆ ಕೈಮುಗಿದು ‘ನನ್ನ ಹೊಟ್ಟೆ ತುಂಬಿದ ಹಾಗೆ ನಿನ್ನ ಹೊಟ್ಟೆ ತುಂಬಲಿ’ ಎಂದು ಸುತ್ತಿಸುವ ಆಚರಣೆಯ ಕೆಲವು ಕಡೆಗಳಲ್ಲಿ ಕಂಡು ಬರುತ್ತದೆ.

‘ನಿರ’ದ ನಿರ್ವಹಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳು ಕಂಡು ಬರುತ್ತವೆ. ತ್ರಿಶ್ಯೂರು ಜಿಲ್ಲೆಯ ಪುನಯೂರ್‌ಕುಳದಲ್ಲಿ ಮೇಲೆ ಹೇಳಿದುದಕ್ಕಿಂತ ಭಿನ್ನ ರೀತಿಯ ಆಚರಣೆಗಳು ಕಂಡು ಬರುತ್ತವೆ. ಕರ್ಕಟಕ ಸಂಕ್ರಾತಿಗೆ ‘ಚೆಟ್ಟಾಭಗವತಿ’ಯನ್ನು ತೊಲಗಿಸಿದ ಬಳಿಕ ಪಂಚಾಂಗ ನೋಡಿ ಉತ್ತಮ ಮುಹೂರ್ತವನ್ನು ನಿರ್ಧರಿಸಿ ‘ನಿರ’ವನ್ನು ಆಚರಿಸುವರು. ‘ಅಡಿಯಾಳರ್’ ಸಮುದಾಯದವರು ತೆನೆಯನ್ನು ಕೈಯಲ್ಲಿ ತೆಗೆದು ತಂದು. ಅದನ್ನು ಮನೆ ಯಜಮಾನಿಗೆ ಸಮರ್ಪಿಸಿದರು. ಹೂ, ತಿರಿ, ಭತ್ತ, ಪೂವಡ ಎಂಬಿವುಗಳನ್ನು ತಯಾರಿಸಿ ವಿಷ್ಣುವನ್ನು ಸಂಕಲ್ಪಿಸಿ ತೆನೆಯನ್ನು ಪೂಜಿಸುವರು. ಉತ್ತರ ಕೇರಳದ ‘ನೆರೋಲ’ ಕ್ರಿಯೆಗೆ ಬದಲಾಗಿ ಬಾಗಿಲು ಮತ್ತು ಕಿಟಕಿಗಳಿಗೆ ವೃತ್ತಾಕೃತಿಯ ಗುರುತುಗಳನ್ನು ಹಾಕುವರು. ಮುಂದಿನ ವರ್ಷದ ‘ನಿರ’ದ ತನಕ ಇದು ಇರುತ್ತದೆ. ಪಾಲಕ್ಕಾಡು ಗ್ರಾಮಗಳಲ್ಲಿ ‘ನಿರ’ದ ಮುಹೂರ್ತವು ಕರ್ಕಟಕಮಾಸದ ಅಮಾವಾಸ್ಯೆ ಕಳೆದು ಬರು ವ ಆದಿತ್ಯವಾರವಾಗಿದೆ. ಕುನ್ನಿ, ಉಳಿಞ, ಕಂಕೊಡಿ, ಹಾಲೆಮರದ ಎಲೆ ಬಳ್ಳಿಗಳನ್ನು ಬಳಸುವರು. ಹಲಸಿನೆಲೆ, ಮಾವಿನ ಎಲೆಗಳ ಜೊತೆಯಲ್ಲಿ ಎರಡೋ, ಮೂರೋ ತೆನೆಗಳನ್ನು ಹಗ್ಗದಿಂದ ಮನೆಯ ಮುಂಭಾಗ ಕಂಬದಲ್ಲಿ, ಭತ್ತದ ಕಣಜದಲ್ಲಿ, ದಾರಂದಗಳಲ್ಲಿ ಕಟ್ಟುವುದು ಅಥವಾ ಅಂಟಿಸಿರುವುದು ಇಲ್ಲಿ ಕಂಡುಬರುವ ಒಂದು ಪ್ರಧಾನ ಕ್ರಿಯೆಯಾಗಿದೆ.

ಸೂಕ್ಷ್ಮವಾಗಿ ಗಮನಿಸಿದರೆ ವಿವಿಧ ಪ್ರದೇಶಗಳಲ್ಲಿ ‘ನಿರ’ ಆಚರಣೆ ವಿಧಾನದಲ್ಲಿ ಹಲವಾರು ವ್ಯತ್ಯಾಸಗಳಿವೆ ಎಂಬುದನ್ನು ತಿಳಿಯಬಹುದು. ‘ನಿರೋಲ’ ಎಂಬುದು ಐಶ್ವರ್ಯದ ಸಂಕೇತವಾಗಿದೆ. ಆದುದರಿಂದ ಇಂದಿನ ಕಾಲದಲ್ಲಿ ಬಟ್ಟೆ ಅಂಗಡಿಯಲ್ಲಿ, ಇಲೆಕ್ಟ್ರೋನಿಕ್ ರೋಡ್‌ಗಳಲ್ಲಿ ‘ನಿರೋಲ’ಗಳು ಕಂಡು ಬರುತ್ತದೆ.

‘ನಿರ’ ಆಚರಣೆಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ಕುರುಹುಗಳಿಲ್ಲ. ‘ಕೇರಳೀಯರುಡೆ ನಾಟರಿವ್ -೩’ರಲ್ಲಿ ಸೇರಿರುವ ವಿ.ಕೆ. ಅಜಯನ್, ಪಿ.ರಘು, ಪಿ.ಸಿ. ಸುಪ್ರಿಯ, ವಿ.ಆರ್. ಮುರಳಿಧರನ್ ಮೊದಲಾದವರು ಸಂಗ್ರಹಿಸಿದ ವಿವರಗಳು, ಫೋಕ್ಲೋರ್ ನಿಘಂಟುವಿನಲ್ಲಿರುವ ವಿವರಗಳು ಮುಂತಾದವು ಪ್ರಮುಖ ಆಧಾರಗಳಾಗಿವೆ. ಸುಜಿತ್ ಕುಮಾರ್ ಅವರ ಕೃಷಿ ಮಲಯಾಳದಲ್ಲೂ ‘ನಿರ’ದ ಕುರಿತು ತಿಳಿಸಲಾಗಿದೆ.

ವಿ.ಎಂ.ಯು.ಅನುವಾದ ಎನ್.ಎಸ್.

 

ನಿರ್ವಾಣ ಸ್ವಾಮಿ ನಿರ್ವಾಣ ಸ್ವಾಮಿ ಮಲೆನಾಡು ಭಾಗದಲ್ಲಿ ಪ್ರಭಾವ ಬೀರಿದ ಒಬ್ಬ ಜನಪದ ಸಾಂಸ್ಕೃತಿಕ ನಾಯಕ. ಈತನನ್ನು ಕುರಿತು ಶಿಷ್ಟದಿಂದ ಜನಪದದವರೆಗೆ ಹಾಡುಗಳು ದೊರೆಯುತ್ತವೆ. ಮೈಸೂರು ಭಾಗದಲ್ಲಿ ಜನಪದ ಸಮುದಾಯದ ಮೆಲೆ ಮಹದೇಶ್ವರ ಮಂಟೇಸ್ವಾಮಿಗಳು ಪ್ರಭಾವ ಬೀರಿದಂತೆ ನಿರ್ವಾಣಸ್ವಾಮಿ ಕೂಡ ಹಿಂದುಳಿದವರ ದೀನದಲಿತರ ಪ್ರೀತಿಗೆ ಪಾತ್ರನಾದ ಶರಣ. ಈ ನಿರ್ವಾಣಸ್ವಾಮಿ ಯಾರು, ಎಲ್ಲಿಂದ ಬಂದನೆಂಬುದಕ್ಕೆ ಉತ್ತರದ ಕಡೆಯಿಂದ ಬಂದನೆಂದು ಜನಪದರಲ್ಲಿ ಪ್ರತೀತಿಯಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ಸಮೀಪದ ತುರವನೂರು, ಸಕ್ರೆಪಟ್ಟಣ ಮೂಲಕ ಹೊಸಹಳ್ಳಿಗೆ ಬಂದಾಗ ಅಲ್ಲಿನ ಜನ ಈತನನ್ನು ಪ್ರೀತಿಯಿಂದ ಬರಮಾಡಿಕೊಂಡಿದುದರಿಂದ ಅಲ್ಲಿಯೇ ನೆಲಸಿದನೆಂದೂ ಮಲ್ಲೇಶಲಿಂಗವನ್ನು ಸ್ಥಾಪಿಸಿದನೆಂದು ಹೇಳಲಾಗಿದೆ. ಈ ಹೊಸಹಳ್ಳಿ ಚಿಕ್ಕಮಗಳೂರಿಗೆ ಎಂಟು ಕಿ.ಮಿ.ದೂರದಲ್ಲಿದ್ದು ಅಲ್ಲಿ ನಿರ್ವಾಣಸ್ವಾಮಿ ಮಠವಿದೆ. ಈತ ಅನೇಕ ಪವಾಡಗಳನ್ನು ಮಾಡುತ್ತಿದ್ದನೆಂಬ ಅಂಶ ಜನಜನಿತವಾಗಿದೆ.

ಚಿಕ್ಕಮಗಳೂರು, ಬೇಲೂರು, ಸಕಲೇಶಪುರ ಈ ಭಾಗದಲ್ಲೆಲ್ಲ ತಂಬೂರಿಯವರು ನಿರ್ವಾಣಸ್ವಾಮಿ ಕುರಿತು ಹಾಡುತ್ತಾರೆ. ನಿರ್ವಾಣಸ್ವಾಮಿಯ ಜನನ ವಿಚಾರದೊಂದಿಗೆ ಆರಂಭವಾಗುವ ಇವರ ಕಾವ್ಯದಲ್ಲಿ ಈತ ಕಾರಣಿಕ ಪುರುಷನಾಗಿ ಕಾಣಿಸಿಕೊಳ್ಳುತ್ತಾನೆ.

ಲಿಂಗವೇ ಲಿಂಗ ಬನ್ನಿರೋ ಅಯ್ಕೆಂಬ ಗುರುದೇವ
ಸಂಗಯ್ಯೋ ಲಿಂಗ ಬನ್ನಿರೋ
ತಾಯಿ ನೀಲಮ್ಮ ನೂರು ವರುಷದ
ಮುತ್ತಿನ ಮುದುಕಮ್ಮ ಬಾರೋ ಮಾಲಿಂಗವೇ

ಎಂದು ಆರಂಭಗೊಳ್ಳುವ ಹಾಡಿನಲ್ಲಿ ನೂರು ವರ್ಷದ ನೀಲಮ್ಮ ಎಂಬ ವೃದ್ಧೆ ಗರ್ಭಧರಿಸುವಳು. ಆಕೆ ಈ ವಯಸ್ಸಿನಲ್ಲಿ ಗರ್ಭ ಹೊರುವುದು ಹೇಗೆಂದು ಚಿಂತಿತಳಾಗಿದ್ದಾಗ ಗರ್ಭದಲ್ಲಿರುವ ಶಿಶುವೇ ಮಾತನಾಡುತ್ತದೆ. ನಾನು ದೆವ್ವ ಗಾಳಿ ಎಂದು ಹೆದರಬೇಡ ಎನ್ನುತ್ತ ಅಭಯ ನೀಡುತ್ತದೆ. ತಾಯಿಗೆ ಮಾಯದ ನಿದ್ರೆ ಬರಲೆಂದು ಪ್ರಾರ್ಥಿಸುತ್ತದೆ. ಈ ಅಪೂರ್ವ ಶಿಶುವಿಗೆ ಹಾವಿನ ಹಾಸಿಗೆ, ಜೇನಿನ ತಲೆದಿಂಬು, ರುದ್ರಾಕ್ಷಿಸರ, ಕರಡಿಗೆ, ತ್ರಿಶೂಲ, ನಿರ್ವಾಣಸ್ವಾಮಿ ಜನಿಸಿದಾಗ ದೇವತೆಗಳು ಬಂದಿಳಿಯುತ್ತಾರೆ. ಈತ ಕಣ್ಣಿಲ್ಲದವರಿಗೆ ಕಣ್ಣು, ಕಾಲಿಲ್ಲದವರಿಗೆ ಕಾಲು ನೀಡಿದ್ದನು ಎಂದು ಜನಪದ ಗಾಯಕರು ಹಾಡುತ್ತಾರೆ. ಶಿಷ್ಯಕಾವ್ಯದಲ್ಲಿ ಮುಪ್ಪಿನ ಮರುಳಯ್ಯ, ಗಾಳಿಹಳ್ಳಿ ಸಿದ್ಧ, ಪಲಾರದ ಸಿದ್ಧ ಮತ್ತು ನಿರ್ವಾಣಸ್ವಾಮಿ ಈ ನಾಲ್ವರೂ ಸೋದರರೆಂದು ಹೇಳುವುದುಂಟು.

ನಿರ್ವಾಣಸ್ವಾಮಿಯ ಗದ್ದುಗೆ ಚಿಕ್ಕಮಗಳೂರು ಕೈಮರದ ಸನಿಹದಲ್ಲಿರುವ ಹೊಸಹಳ್ಳಿಯಲ್ಲಿದ್ದು ಅದರ ಗೋಡೆಯ ಮೇಲೆ ಈತನ ಪವಾಡಗಳನ್ನು ಕೆತ್ತಲಾಗಿದೆ. ಈ ಭಾಗದ ರೈತರು ಮತ್ತು ನಿರ್ವಾಣಸ್ವಾಮಿಯ ಭಕ್ತರು ತಾವು ಬೆಳೆದ ದವಸ ಧಾನ್ಯಗಳನ್ನು ಉಪಯೋಗಿಸುವ ಮೊದಲು ಗದ್ದುಗೆಗೆ ತಂದು ಅರ್ಪಿಸುವರು. ಹಾಗಾಗಿ ಮಠದಲ್ಲಿ ನಿತ್ಯದಾಸೋಹವಾಗುತ್ತದೆ. ರಾಗಿ ಅಂಬಲಿ ಮತ್ತು ನೆಲ್ಲಿಕಾಯಿ ಉಪ್ಪಿನಕಾಯಿ ಇಲ್ಲಿಯ ಪ್ರಸಾದ. ಮಳೆ ಬಾರದೆ ಅನಾವೃಷ್ಟಿಯಾದರೆ ನಿರ್ವಾಣಸ್ವಾಮಿಗೆ ಹರಕೆ ಮಾಡಿಕೊಳ್ಳುವ ಸಂಪ್ರದಾಯ ಈಗಲೂ ಇದೆ. ಆಧುನಿಕ ಹೆಸರುಗಳು ಹಳ್ಳಿಗಳಿಗೆ ಕಾಲಿಡುವ ಮೊದಲು ಈ ಭಾಗದ ಜನಪದರು ತಮ್ಮ ಮಕ್ಕಳಿಗೆ ನಿರ್ವಾಣಸ್ವಾಮಿ, ನಿರ್ವಾಣಯ್ಯ, ನಿರ್ವಾಣೇಗೌಡ ಮುಂತಾದ ಹೆಸರುಗಳನ್ನು ಇಡುತ್ತಿದ್ದರು. ಈತನ ಸ್ಮರಣಾರ್ಥ ಪ್ರತಿವರ್ಷ ಯುಗಾದಿಯಾದ ಬಳಿಕ ನಿರ್ವಾಣಸ್ವಾಮಿಯ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ. ಮೊದಲು ಎರಡು ದಿನ ರಥ. ಮೂರನೆಯ ದಿನ ಓಕುಳಿ ಪಲ್ಲಕ್ಕಿ ಉತ್ಸವಗಳು ಜರುಗುತ್ತವೆ. ದಸರಾ ಸಂದರ್ಭದಲ್ಲಿ ನಿರ್ವಾಣಸ್ವಾಮಿ ಗದ್ದುಗೆಗೆ ಆರಾಧನೆಯಾಗುತ್ತದೆ. ಕಾರ್ತಿಕಮಾಸದಲ್ಲಿ ವಿಶೇಷ ಪೂಜೆ ಇರುತ್ತದೆ. ಗ್ರಾಮ ದೇವತೆಗಳನ್ನು ಕರೆದುಕೊಂಡು ಬಂದು ನಿರ್ವಾಣಸ್ವಾಮಿಯ ಆಶೀರ್ವಾದ ಪಡೆಯುವುದುಂಟು. ಒಟ್ಟಿನಲ್ಲಿ ನಿರ್ವಾಣಸ್ವಾಮಿಯ ಸಂಪ್ರದಾಯ ಮಲೆನಾಡಿನ ಈ ಭಾಗದ ವೈಶಿಷ್ಟ್ಯವಾಗಿದೆ. ಒಂದು ಕಾಲದ ದೀನ ದಲಿತರ ಕಣ್ಮಣಿಯೇ ಸಾಂಸ್ಕೃತಿಕ ನಾಯಕನಾಗಿ ಜನರ ದುಃಖದುಮ್ಮಾನಗಳಿಗೆ ಸ್ಪಂದಿಸಿ ಜನಮನದಲ್ಲಿ ನಿರ್ವಾಣಸ್ವಾಮಿ ಆಳವಾದ ಮುದ್ರೆ ಒತ್ತಿದಂತೆ ತೋರುತ್ತದೆ.

ವೈ.ಸಿ.ಬಿ.

 

ನಿಷೇಧಗಳು ಪ್ರಪಂಚದ ಎಲ್ಲ ಜನಸಮುದಾಯಗಳಲ್ಲಿ ಮತಪರವಾದ ಮತ್ತು ಸಾಮಾಜಿಕ ಪರವಾದ ಕೆಲವು ನಿಷೇಧಗಳಿವೆ. ಆಂಧ್ರಪ್ರದೇಶದಲ್ಲೂ ಇಂಥ ಅನೇಕ ನಿಷೇಧಗಳನ್ನು ನೋಡಬಹುದು. ಪ್ರಾಚೀನ ಕಾಲದಲ್ಲಿ ಒಬ್ಬ ವ್ಯಕ್ತಿ ಅತಿಮಾನುಷ ಶಕ್ತಿ, ವಸ್ತು, ಘಟನೆ, ಪ್ರಕೃತಿಯ ಭಾಗ, ಪದೋಚ್ಚಾರಣೆ ಮುಂತಾದವು ಅಶುಭವನ್ನು ಅಥವಾ ತೊಂದರೆಯನ್ನು ಉಂಟುಮಾಡಬಹುದೆಂಬ ನಂಬಿಕೆಯಿಂದ ಅಂಥವನ್ನು ನಿಷೇಧಿಸುವುದು ಸಂಪ್ರದಾಯವಾಗಿದೆ.

ವ್ಯಕ್ತಿಯ ಅಥವಾ ಜನಸಮೂಹದ ಅನುಭವಗಳಿಂದ ಮತ್ತು ಭ್ರಮೆಗಳಿಂದ ಉಂಟಾದ ವಿಶ್ವಾಸಗಳು ನಿಷೇಧಗಳಿಗೆ ಮೂಲವಾಗುತ್ತವೆ. ಇವು ತಲೆಮಾರಿನಿಂದ ತಲೆಮಾರಿಗೆ ಪ್ರಸಾರವಾಗುತ್ತವೆ. ಕೆಲವು ನಿಷೇಧಗಳಿಗೆ ಕಾರ್ಯಕಾರಣ ಸಂಬಂಧವಿರುತ್ತದೆ. ಆದರೆ ಅನೇಕ ನಿಷೇಧಗಳಿಗೆ ಇರುವುದಿಲ್ಲ. ನಿಷೇಧಗಳಲ್ಲಿ ಮೂರು ಬಗೆಗಳನ್ನು ಗುರುತಿಸಬಹುದು.

೧. ಕಡ್ಡಾಯ ಮಾಡುವ ನಿಷೇಧಗಳು(ಬುಧವಾರದಂದು ಉತ್ತರ ದಿಕ್ಕಿಗೆ ಪ್ರಯಾಣ ಮಾಡಬಾರದು)

೨. ಮಾಡಬಾರದ್ದನ್ನು ಮಾಡಿದರೆ ಆಗುವ ಪರಿಣಾಮವನ್ನು ಹೇಳುವ ನಿಷೇಧಗಳು. (ಇರುವೆಯನ್ನು ಸಾಯಿಸಬಾರದು, ಸಾಯಿಸಿದರೆ ಮರುಜನ್ಮದಲ್ಲಿ ಇರುವೆಯಾಗಿ ಹುಟ್ಟುತ್ತಾರೆ)

೩. ನಿಷೇಧಗಳನ್ನು ಪಾಲಿಸದಿದ್ದರೆ, ಅನುಭವಿಸಬೇಕಾದ ಶಿಕ್ಷೆಯನ್ನು ಹೇಳಿ ಅದರ ಪರಿಹಾರವನ್ನು ತಿಳಿಸುವಂಥವು (ಪುಸ್ತಕವನ್ನು ಒದೆಯಬಾರದು. ಒದ್ದರೆ ಸರಸ್ವತಿಗೆ ಕೋಪಬರುತ್ತದೆ, ವಿದ್ಯೆ ಬರುವುದಿಲ್ಲ. ಆದರೆ ಪುಸ್ತಕಕ್ಕೆ ತಕ್ಷಣ ನಮಸ್ಕರಿಸಿದರೆ ಸರಸ್ವತಿ ದೇವಿಯ ಅನುಗ್ರಹ ಲಭಿಸುತ್ತದೆ)

ನಿಷೇಧಗಳನ್ನು ಇನ್ನೊಂದು ರೀತಿ ವಿಭಾಗ ಮಾಡಬಹುದು. ಮತಪರವಾದ ನಿಷೇಧಗಳು, ಸಾಮಾಜಿಕ ನಿಷೇಧಗಳು, ಪ್ರಕೃತಿಪರ ನಿಷೇಧಗಳು ನಿಷೇಧಗಳು ಮತ್ತು ಪದೋಚ್ಚಾರಣೆಗೆ ಸಂಬಂಧಿಸಿದ ನಿಷೇಧಗಳು.

. ಮತಪರವಾದ ನಿಷೇಧಗಳು: ದೇವಾಲಯಕ್ಕೆ ಚಪ್ಪಲಿಗಳೊಂದಿಗೆ ಪ್ರವೇಶ ಮಾಡಬಾರದು. ದೇವರ ಪ್ರಸಾದವನ್ನು ಕೆಳಗೆ ಹಾಕಬಾರದು. ಬಳಸಿದ ಹೂವುಗಳನ್ನು ದೇವರಿಗೆ ಕೊಡಬಾರದು. ಹಾವುಗಳಿಗೆ ತೊಂದರೆ ಉಂಟು ಮಾಡಿದರೆ ಮಕ್ಕಳಾಗುವುದಿಲ್ಲ. ಚೌತಿಯ ಚಂದ್ರನನ್ನು ನೋಡಬಾರದು.

. ಸಾಮಾಜಿಕ ಪರವಾದ ನಿಷೇಧಗಳು: ಕುಲ ಸಂಕೇತಗಳಾಗಿ, ವಂಶಗೋತ್ರ ಸಂಕೇತಗಳಾಗಿ ಕೆಲವು ನಿಷೇಧಗಳಿವೆ. ತೆಲಂಗಾಣದ ಗೌಡ ಕುಲ ಸಂಕೇತ ಕೋಳಿ, ಅವರು ಕೋಳಿಯನ್ನು ಸಾಯಿಸಬಾರದು ಮತ್ತು ತಿನ್ನಬಾರದು. ಕೆಲವರಿಗೆ ಹಲಸು ಕುಲ ಸಂಕೇತ. ಅವರು ಹಲಸಿನ ಹಣ್ಣನ್ನು ತಿನ್ನುವುದಿಲ್ಲ. ಇದೇ ರೀತಿ ದಾಳಿಂಬೆ ಗೋತ್ರಜರು, ಸೋರೆಕಾಯಿ ಗೋತ್ರಜರು ಮುಂತಾದವರಿಗೆ ಇಂಥ ನಿಷೇಧಗಳಿವೆ.

ಸಾಮಾಜಿಕ ನಿಷೇಧಗಳಲ್ಲಿ ಹೆಣ್ಣಿಗೆ ಸಂಬಂಧಿಸಿದಂತೆ ಅನೇಕ ನಿಷೇಧಗಳಿವೆ. ಹೆಣ್ಣು ಮಕ್ಕಳು ಜೋರಾಗಿ ನಗಬಾರದು, ಕಾಲು ಆಡಿಸಬಾರದು, ಬೇಗ ಬೇಗ ನಡೆಯಬಾರದು, ವಿಧವೆಯರು ಶುಭಕಾರ್ಯಗಳಿಗೆ ಹೋಗಬಾರದು. ಬಂಜೆ ಚಿಕ್ಕ ಮಕ್ಕಳನ್ನು ಮುದ್ದು ಮಾಡಬಾರದು. ಪುರುಷ ಪ್ರಧಾನ ಸಮಾಜದಲ್ಲಿ ಈ ರೀತಿ ಹಲವು ನಿಷೇಧಗಳಿವೆ.

ಸಾಮಾಜಿಕ ನಿಷೇಧಗಳಲ್ಲಿ ನೀತಿ, ವೃತ್ತಿ, ಕುಟುಂಬ, ಮನೆ ಮುಂತಾದ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ನಿಷೇಧಗಳಿವೆ. ಸಹಾಯ ಮಾಡಿದವರಿಗೆ ದ್ರೋಹ ಮಾಡಬಾರದು ಎಂಬುದನ್ನೇ ‘ಉಪ್ಪು ತಿಂದವರಿಗೆ ಮೋಸ ಮಾಡಬಾರದು’ ಎಂದು ಹೇಳುತ್ತಾರೆ. ಬೇರೆ ಬೇರೆ ವೃತ್ತಿಗಳಿಗೆ ಸೇರಿದವರು ತಮ್ಮ ವೃತ್ತಿಗೆ ಸಂಬಂಧಿಸಿದ ಉಪಕರಣಗಳನ್ನು ಒದೆಯಬಾರದು. ವೃತ್ತಿಗಾಯಕರು ತಮ್ಮ ವಾದ್ಯಗಳಿಗೆ ನಮಸ್ಕರಿಸಿ ತಮ್ಮ ಕಲೆಯ ಪ್ರದರ್ಶನವನ್ನು ಆರಂಭಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ನಿಷೇಧಗಳಿವೆ. ಉಗುರನ್ನು ಹಲ್ಲಿನಿಂದ ಕಡಿಯಬಾರದು, ಕಾಲು ಅರ್ಧ ತೊಳೆಯಬಾರದು, ಅನಾರೋಗ್ಯದಿಂದಿರುವವರು ತಿಂದಕೂಡಲೇ ಮಲಗಬಾರದು. ಮನೆಯ ವಾಸ್ತುವಿಗೆ ಸಂಬಂಧಿಸಿದಂತೆ ಕೂಡ ಬಹಳಷ್ಟು ನಿಷೇಧಗಳಿವೆ. ಶುಕ್ರವಾರದಂದು ಯಾರಿಗೂ ದುಡ್ಡನ್ನು ಕೊಡಬಾರದು. ಮನೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕವಾಗಿ ಹಲವು ನಿಷೇಧಗಳು ಪ್ರಚಲಿತವಾಗಿವೆ. ಮನೆಯ ಹೊಸ್ತಿಲಮೇಲೆ ಕುಳಿತುಕೊಳ್ಳಬಾರದು. ಸಂಜೆಯ ಹೊತ್ತು ಮನೆಯ ಹಿಂಬಾಗಿಲನ್ನು ತೆರೆದಿಡಬಾರದು. ಮನೆಯಲ್ಲಿರುವ ಒಲೆ, ಮೊರ, ಒನಕೆ, ಧಾನ್ಯ ಮುಂತಾದವನ್ನು ಒದಯಬಾರದು.

೩. ಪ್ರಕೃತಿಯನ್ನು ಕಾಪಾಡಲು ಗಿಡಮರಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದಂತೆ ಅನೇಕ ನಿಷೇಧಗಳನ್ನು ವಿಧಿಸಲಾಗಿದೆ. ಅರಳಿ ಮರವನ್ನು ಕಡಿಯಬಾರದು, ಹೂವು ಮತ್ತು ಹಣ್ಣು ಕೊಡುವ ಮರಗಳನ್ನು ಕಡಿಯಬಾರದು. ಮನೆಯ ಮುಂದೆ ಅಥವಾ ಹಿಂದೆ ಆಲದ ಮರ ಇರಬಾರದು. ತುಳಸಿಗಿಡ ಇಲ್ಲದ ಮನೆಯಲ್ಲಿರಬಾರದು. ಪಾರಿವಾಳಗಳನ್ನು ಸಾಕಬಾರದು. ಕಪ್ಪೆ, ಮಂಗ, ಹಲ್ಲಿ, ಬೆಕ್ಕು ಮುಂತಾದವನ್ನು ಕೊಲ್ಲಬಾರದು.

೪. ಪದೋಚ್ಚಾರಣೆಗೆ ಸಂಬಂಧಿಸಿದ ನಿಷೇಧಗಳು: ರಾತ್ರಿ ಹೊತ್ತು ‘ಹಾವು, ಉಪ್ಪು, ಕಾಡುನೆಲ್ಲಿ’ ಎಂಬ ಪದಗಳನ್ನು ಹೇಳಬಾರದು. ಅದೇ ರೀತಿ ರಾತ್ರಿ ವೇಳೆ ಕೋತಿಯನ್ನು ಸ್ಮರಿಸಬಾರದು. ‘ದೀಪ ಆರಿಹೊಯ್ತು’ ಎನ್ನಬಾರದು, ‘ದೀಪ ಶಾಂತಿಸಿತು’ ಎನ್ನಬೇಕು. ‘ಜನಿವಾರ ಅಥವಾ ತಾಳಿ ಕಿತ್ತು ಹೋಯ್ತು’ ಎನ್ನಬಾರದು. ‘ಬೆಳೆಯಿತು’ ಎನ್ನಬೇಕು ಧಾನ್ಯ, ಅರಿಶಿನ, ಕುಂಕುಮ ‘ಮುಗಿದಿವೆ ಎನ್ನಬಾರದು. ‘ತುಂಬಿವೆ’ ಎನ್ನಬೇಕು. ಎಲ್ಲಾದರು ಹೋಗುವಾಗ ‘ಹೋಗ್ತೀನಿ; ಎನ್ನಬಾರದು. ‘ಹೋಗಿ ಬರ‍್ತೀನಿ’ ಎನ್ನಬೇಕು. ಹಾವು, ಚೇಳು ಎಂಬ ಪದಗಳಿಗೆ ಬದಲಾಗಿ ಹುಳು, ಕೆಂಪಿರುವೆ ಎಂದು ಬಳಸಬೇಕು. ಧಾನ್ಯವನ್ನು ಅಳೆಯುವಾಗ ‘ಏಳು’ ಎಂದು ಬಳಸಬಾರದು ‘ಆರೊಂದು’ ಎಂದು ಹೇಳಬೇಕು.

ಆಚಾರ ಸಂಪ್ರದಾಯಗಳಲ್ಲಿ ಮಾತ್ರವಲ್ಲದೆ, ಜನಪದ ಕಥೆಗಳಲ್ಲೂ ಹಲವು ನಿಷೇಧಗಳು ಕಂಡುಬರುತ್ತವೆ. ಇವೆಲ್ಲ ಕಥಾಗಮನಕ್ಕೆ ನೆರವಾಗುತ್ತವೆ. ಕಥಾನಾಯಕ ಅಥವಾ ನಾಯಿಕೆ ನಿಷೇಧ ವಿಧಿಸಿದ ದಿಕ್ಕಿನಲ್ಲೇ ಪ್ರಯಾಣ ಮಾಡುತ್ತಾರೆ. ನಿಷೇಧಿಸಿದ ಮನೆಯಲ್ಲೇ ವಾಸಮಾಡುತ್ತಾರೆ. ನಿಷೇಧಿಸಿದ ಹಣ್ಣನ್ನೇ ತಿನ್ನುತ್ತಾರೆ. ಇದರ ಫಲವಾಗಿ ಅವರಿಗೆ ಅನೇಕ ಕಷ್ಟಗಳು ಎದುರಾಗುತ್ತವೆ. ಅನೇಕ ವೇಳೆ ನಿಷೇಧಗಳನ್ನು ವಿವರಿಸುವುದು ಸಾಧ್ಯವಾಗದಿದ್ದರೂ ಅವು ಜನಸಮುದಾಯದ ಸಂಪ್ರದಾಯಗಳನ್ನು ನಂಬಿಕೆಗಳನ್ನು ಪ್ರತಿನಿಧಿಸುತ್ತವೆ ಎಂಬುದು ಮಾತ್ರ ನಿಜ.

ಆರ್.ಪಿ. ಅನುವಾದ ಎ.ಎಂ.ಡಿ.

 

ನೀಲಿಕಥಾಪಾಟ್ ನೀಲಿಕಥಾಪಾಟ್ ಪ್ರಸಿದ್ಧವಾದ ತೆಕ್ಕನ್ ಪಾಟ್ಟ್‌ಗಳಲ್ಲೊಂದಾಗಿದೆ. ತಿರುವನಂತಪುರ, ಕನ್ಯಾಕುಮಾರಿ ಜಿಲ್ಲೆಗಲ್ಲಿ ಪ್ರಾಚೀನ ಕಾಲದಿಂದಲೇ ಪ್ರಚಾರದಲ್ಲಿದ್ದ ಹಾಡುಗಳನ್ನು ಪಂಡಿತರು ‘ತೆಕ್ಕನ್‌ಪಾಟ್ಟುಗಳು’ ಎಂದು ಕರೆಯುತ್ತಿದ್ದರು. ಅವುಗಳಲ್ಲಿ ಇತಿಹಾಸ ಮತ್ತು ಪುರಾಣ ಸಂಬಂಧವಾದ ಕಥೆಗಳಿವೆ. ಅದೇ ರೀತಿ ‘ಯಕ್ಷಿ ಕಥೆ’ಗಳು ಮತ್ತು ‘ಮಲ್ಲನ್ ಕಥೆ’ಗಳೂ ಕೂಡಾ ಇವೆ. ತೆಕ್ಕನ್ ಪಾಟುಗಳನ್ನು ‘ಬಾತಪ್ಪಾಟ್’ ‘ಕೇಳ್ವಿಪಾಟ್’ ಮತ್ತು ‘ಶಾಸ್ತ್ರಪ್ಪಾಟ್’ ಎಂದು ಮೂರಾಗಿ ವಿಭಾಗಿಸಬಹುದು. ದೇವಸ್ಥಾನಗಳಲ್ಲಿ ಹಾಡಟುವವುಗಳನ್ನು ಬಾಧಪ್ಪಾಟುಗಳೆಂದು ಕರೆಯುವರು. ಚಾಮುಂಡಿ ಕತೆ, ನೀಲಿಕಥಾ, ಪೊನ್ನಿರತ್ತಾಳ್ ಕಥಾ ಎಂಬಿವುಗಳು ಈ ವಿಭಾಗಕ್ಕೆ ಸೇರುತ್ತವೆ. ತೆಕ್ಕನ್ ಪಾಟ್ಟುಗಳಲ್ಲಿ ತೋಟ್ಟಂ ಪಾಟ್ಟುಗಳು ಮತ್ತು ವಿಲ್ಲಾಡಿಚ್ಚಾಲ್‌ಪಾಟ್ಟುಗಳು ಇವೆ. ಬಿಲ್ಲು ಕೊಟ್ಟೆ (ಬಿಲ್ಲು ಬಡಿದು) ಸಹ ಬಿಲ್ಲು ಬಡಿದು ಹಾಡುತ್ತಾರೆ.

ತೆಕ್ಕನ್‌ಪ್ಪಾಟುಗಳಲ್ಲಿ ಬಹಳ ಪ್ರಸಿದ್ಧವಾದ ‘ನೀಲಿಕಥೆ’ಯನ್ನು ೧೯೫೪ರಲ್ಲಿ ‘ಭಾಷಾಗ್ರಂಥಾವಲಿ’ ಯಲ್ಲಿ ಸೇರಿಸಿ ಪ್ರಕಟಿಸಲಾಯಿತು. ‘ಪಯಕನಲ್ಲೂರ್’ ಎಂಬುದು ನೀಲಿಕಥೆಯ ಘಟನೆಗಳ ಕೇಂದ್ರಸ್ಥಾನವಾಗಿದೆ. ಇದು ಕೇರಳದ ಗಡಿಯಲ್ಲಿರುವ ‘ಪಳುಕಲ್’ ಆಗಿರಬಹುದೆಂದು ಕೆಲವು ಪಂಡಿತರು ಅಭಿಪ್ರಾಯಪಡುತ್ತಾರೆ. ಅಲ್ಲಿ ಇಂದೂ ಕೂಡಾ ‘ಯಕ್ಷಿಯಂಬಲ’ ಎಂಬ ದೇವಸ್ಥಾನ ಇದೆ. ಈ ಹಾಡು ‘ಪಂಚಾವನ್ ಕಾಟ್ಟು ನೀಲಿ’ಯ ಪೂರ್ವಜನ್ಮವನ್ನು ಅನಾವರಣ ಗೊಳಿಸುತ್ತದೆ. ಅದೇ ರೀತಿ ಯಕ್ಷಿಯಾಗಿರುವ ಆಕೆಯ ಕತೆಯನ್ನು ವಿವರಿಸುತ್ತದೆ. ಮೋಸ ಮತ್ತು ವಂಚನೆಯು ತಾತ್ಕಾಲಿಕವಾಗಿ ಗೆಲುವನ್ನು ದೊರಕಿಸುತ್ತದೆಯಾದರೂ ಅದು ದೊಡ್ಡ ದುರಂತಕ್ಕ ಎಡೆಮಾಡಿಕೊಡುತ್ತದೆ ಎಂಬುದು ಈ ಯಕ್ಷಿಕತೆಯ ಸಂದೇಶವಾಗಿದೆ.

ಪಯಕನಲ್ಲೂರ್ ಅಮ್ಮಾ ಯಪ್ಪನ್ ಗುಡಿಸಲಿನ ಒಬ್ಬಳು ದಾಸಿ, ಆ ಗುಡಿಸಲಿನ ಅರ್ಚಕನನ್ನು ತನ್ನ ಮನೆಗೆ ಆಕರ್ಷಿಸಿ, ಆತನ ಸರ್ವಸ್ವವವನ್ನೂ ಅಪಹರಿಸುತ್ತಾಳೆ. ಅಸಹಾಯಕನಾದ ಆತನನ್ನು ದಾಸಿಯ ತಾಯಿ ಹೊಡೆದು ಹೊರಗಟ್ಟುತ್ತಾಳೆ. ವಿಷಯ ತಿಳಿದು ಆ ಅರ್ಚಕನನ್ನು ಹಿಂಬಾಲಿಸಿ ಹೋದ ದಾಸಿಯನ್ನು ಆತನು ಕೊಲೆಮಾಡುತ್ತಾನೆ. ದಾಸಿಯನ್ನು ಹುಡುಕುತ್ತಾ ಬಂದ ಆಕೆಯ ಸಹೋದರನು ಸತ್ತುಬಿದ್ದಿರುವ ಸಹೋದರಿಯ ಸಮೀಪವೇ ತನ್ನ ತಲೆಯನ್ನು ಚಚ್ಚಿಕೊಂಡು ಮರಣವಪ್ಪುತ್ತಾನೆ. ಸರ್ಪ ಕಚ್ಚಿದ ಅರ್ಚಕನು ಕೂಡಾ ಆ ಕೂಡಲೇ ಮರಣವಪ್ಪುತ್ತಾನೆ. ಅನಂತರ ಚೋಳದೇಶದಲ್ಲಿ ಆನಂದ ಎಂಬ ಚೆಟ್ಟಿಯಾಗಿ ಅರ್ಚಕನೂ ಮತ್ತು ನೀಲಿ ಎಂಬ ‘ಮೋಹಿನಿ’ಯಾಗಿ ದಾಸಿಯೂ ಪುನರ್ಜನ್ಮಿಸುತ್ತಾರೆ. ನೀಲಿಯು ಆನಂದನನ್ನು ಮೋಸದಿಂದ ಕೊಲೆ ಮಾಡುವಳು.

ಇಂದು ದಕ್ಷಿಣ ತಿರುವಿದಾಂಕೂರಿನಲ್ಲಿ ಕಳ್ಳಿಯಂಗಾಟ್ಟು ನೀಲಿಯನ್ನು ಸಂಕಲ್ಪಿಸಿ ಆರಾಧನೆ ಮಾಡುವ ಯಕ್ಷಿಕೋವಿದಗಳು ಅನೇಕ ಇವೆ. ಮಂಡಾಯ್ಕಾಟೆಯ ಪ್ರಸಿದ್ಧವಾದ ದೇವಸ್ಥಾನದಲ್ಲಿ ನೀಲಿ ಇದ್ದಾಳೆ ಎಂಬ ಅಭಿಪ್ರಾಯವಿದೆ. ‘ಕುಯಿತ್ತುರ’ಕ್ಕೆ ಸಮೀಪದ ಕೆಲವು ಕುಟುಂಬಗಳ ಪ್ರಧಾನ ದೇವತೆಯ ಸ್ಥಾನವು ನೀಲಿಗೆ ಲಭಿಸಿದೆ. ನೀಲಿಯನ್ನು ದಕ್ಷಿಣ ತಿರುವಿದಾಂಕೂರಿನ ಮೇಲಂಗೋಡ್ ಕ್ಷೇತ್ರಗಳಲ್ಲೂ ಕೂಡಾ ಆರಾಧಿಸುವ ಕ್ಷೇತ್ರಗಳಿವೆ. ನೀಲಿ ದುಷ್ಟದೇವತೆಯೆಂದು ಜನರು ಆಕೆಯನ್ನು ತಿರಸ್ಕರಿಸಲಿಲ್ಲ. ಅವರು ಆಕೆಯನ್ನು ಗುಣದೇವತೆಯಾಗಿ ಸ್ವೀಕರಿಸಿದರು.

ಪಿ.ಎಸ್.ಎಂ. ಅನುವಾದ ಎನ್.ಎಸ್.

 

ನೆಲ್‌ಕೃಷಿ ರೀತಿಗಳ್ ಮಣ್ಣು, ಮನುಷ್ಯ ಮತ್ತು ಹವಾಮಾನಕ್ಕೆ ಯೋಗ್ಯವಾದ ಪರಂಪರಾಗತ ಬತ್ತ ಬೇಸಾಯ ವಿಧಾನಗಳು ಕೇರಳದಲ್ಲಿ ಬಳಕೆಯಲ್ಲಿದ್ದುವು. ಕೇರಳದ ಸಾಮಾಜಿಕ, ರಾಜಕೀಯ ಬದುಕಿನ ಮತ್ತು ಸಂಸ್ಕೃತಿಯ ತಳಪಾಯವು ಬತ್ತ ಕೃಷಿಯೇ ಆಗಿತ್ತು. ಮಣ್ಣಿನ ಗುಣ, ಹವಾಮಾನ, ನೀರಿನ ಲಭ್ಯತೆ ಇತ್ಯಾದಿಗಳಿಗೆ ಅನುಸಾರವಾಗಿ ವಿಭಿನ್ನ ಕೃಷಿ ರೀತಿಗಳೂ ವೈವಿಧ್ಯಪೂರ್ಣ ಬತ್ತದ ತಳಿಗಳೂ ನಂಬುಗೆಗಳೂ ಆಚಾರಗಳೂ ಧಾರ್ಮಿಕ ನಡವಳಿಕೆಗಳೂ ಒಂದಷ್ಟು ಪ್ರಾದೇಶಿಕ ಜ್ಞಾನವೂ ಪ್ರಚಾರದಲ್ಲಿದ್ದುವು. ಕುಮಾರಿ, ಪೊಕ್ಕಾಳಿ (ಮ.), ಕೂಟ್ಟುಮುಂಡಕನ್(ಮ.), ಕೈಪ್ಪಾಡ್, ಮೋಡೋನ್(ಮ.) ಮುಂತಾದ ಪರಂಪರಾಗತ ಕೃಷಿ ರೀತಿಗಳು ಕೇರಳದ ವಿಭಿನ್ನ ಕೃಷಿ ಸಂಪ್ರದಾಯಗಳನ್ನು ಸೂಚಿಸುತ್ತವೆ.

ಮಲೆ ಪ್ರದೇಶಗಳಲ್ಲಿ ರೂಢಿಯಲ್ಲಿದ್ದ ಕೃಷಿ ವಿಧಾನವೇ ಕುಮರಿ ಬೇಸಾಯ, ಇದಕ್ಕೆ ಮರಗಳನ್ನು ಕಡಿದು ಒಣಗಿಸಿ ಸುಟ್ಟು ನೆಲವನ್ನು ಸಿದ್ದಪಡಿಸಲಾಗುತ್ತದೆ. ಎನ್ನೆಲ್ಲಾ(ಕಂಬತ್ತ), ಇರಿಪ್ಪಾಲ ಮುಂತಾದ ಬತ್ತತಳಿಗಳ ಜತೆಗೆ ಸಾಮೆ, ರಾಗಿ, ಹುರುಳಿ, ಜೋಳ ಮುಂತಾದ ಧಾನ್ಯಗಳನ್ನೂ ಮಿಶ್ರ ಬೆಳಗಳಾಗಿ ಬೆಳೆಯಲಾಗುತ್ತಿತ್ತು. ತೆನೆಗಳು ಮಾಗುವುದಕ್ಕೆ ಅನುಸಾರವಾಗಿ ಪ್ರತೀ ಧಾನ್ಯಗಳ ಕಟಾವು ಮಾಡಲಾಗುತ್ತಿತ್ತು. ಒಂದೇ ಕಡೆ ಕುಮರಿ ಬೇಸಾಯವನ್ನು ನಿರಂತರ ವಾಗಿ ಮಾಡು ಪದ್ಧತಿ ಇಲ್ಲ. ಕೃಷಿ ಖರ್ಚು ತುಂಬ ಕಡಿಮೆಯಾಗುತ್ತದೆ ಎಂದು ಮಾತ್ರವಲ್ಲ, ಒಳ್ಳೆಯ ಫಸಲೂ ಲಭ್ಯವಾಗುತ್ತದೆಂಬುದು ಕುಮರಿ ಬೇಸಾಯದ ವೈಶಿಷ್ಟ್ಯ. ಈಗ ಕುಮರಿ ಬೇಸಾಯ ಪ್ರಚಾರದಲ್ಲಿ ಇಲ್ಲ.

ಹೆಚ್ಚು ಕಾಲಾವಧಿ ಬೇಕಾಗುವ ಮತ್ತು ಕಡಿಮೆ ಕಾಲಾವಧಿ ಸಾಕಾಗುವ ಬೀಜಗಳನ್ನು ಜತೆಗೆ ಬಿತ್ತುವುದು ಕೂಟ್ಟ್ ಮುಂಡಕನ್ ಕೃಷಿಯ ಪ್ರತ್ಯೇಕತೆ. ಮೂರರಲ್ಲೊಂದು ಭಾಗ ಮುಂಡಕನ್ ತಳಿ, ಮೂರರಲ್ಲೆರಡು ಕಯಮೆ ತಳಿಯ ಬೀಜಗಳನ್ನು ಬೆರಕೆ ಮಾಡಿ ಬಿತ್ತಲಾಗುತ್ತದೆ. ಕನ್ಯಾ ತಿಂಗಳಲ್ಲಿಕಯಮೆಯನ್ನು ಕಟಾವು ಮಾಡಲಾಗುತ್ತದೆ. ಬಳಿಕ ಮುಂಡಕವು ಮಾಗಿದಾಗ ಅದರ ಕಟಾವು. ಕಟಾವು ಮಾಡಿದ ಕಯಮೆಯ ದಂಟುಗಳು ಮುಂಡಕನಿಗೆ ಗೊಬ್ಬರವಾಗುತ್ತವೆ. ಮಾತ್ರವಲ್ಲ ಇದಕ್ಕೆ ಕಳೆಯೂ ಕಡಿಮೆ.

ಉಪ್ಪು ನೀರೇರುವ ಸವುಳು ಭೂಮಿಯಲ್ಲಿ ಕೈಪ್ಪಾಡ್ ಕೃಷಿ ನಡೆಸುತ್ತಾರೆ. ಇಂತಹ ನೆಲದಲ್ಲಿ ಮಳೆಗಾಲದಲ್ಲಿ ಎತ್ತುಗಳಿಂದ ಉಳುಮೆ ಅಸಾಧ್ಯ. ಆದುದರಿಂದ ಮೇಷ ಮಾಸದಲ್ಲಿ ನೆಲವನ್ನು ಸಿದ್ಧಗೊಳಿಸಲಾಗುತ್ತದೆ. ಒಣಗಿದ ಮಣ್ಣನ್ನು ಒಂದೂವರೆ ಅಡಿಯಷ್ಟು ಎತ್ತರಕ್ಕೆ ‘ತಡ’ಗಳಾಗಿ ಪೇರಿಸಲಾಗುತ್ತದೆ. ಒಳ್ಳೆ ಮಳೆ ಹೊಡೆದಾಗ ಮೊಳಕೆ ಬರಿಸಿದ ಬೀಜಗಳನ್ನು ಈ ತಡಗಳಲ್ಲಿ ಚೆಲ್ಲಿಕೊಡುತ್ತಾರೆ. ಓರ್‌ಕಯಮ, ಕುದಿರ ಮುಂತಾದ ತಳಿಗಳನ್ನು ಇದಕ್ಕೆ ಬಳಸಲಾಗುತ್ತದೆ. ನೇಜಿ ಸಿದ್ಧವಾದರೆ ನಾಟಿಮಾಡುವುದು ತುಂಬ ಸುಲಭ. ಗಂಡಸರು ನೇಜಿ ಸಮೇತವಾಗಿ ಮಣ್ಣನ್ನು ಹಾರೆಗಳಿಂದ ನಾಲ್ಕು ಕಡೆಗೂ ಹಾಕುತ್ತಾರೆ. ಅದರ ಬಳಿಕ ಹೆಂಗಸರು ಹೀಗೆ ಎಸೆಯಲ್ಪಟ್ಟ ನೇಜಿಯನ್ನು ತಮ್ಮ ಕೈಗಳಿಂದ ನೆಲದಲ್ಲಿ ಗಟ್ಟಿಯಾಗುವಂತೆ ಒತ್ತಿಬಿಡುತ್ತಾರೆ. ಇಷ್ಟರಿಂದಲೇ ನಾಟಿ ಕೆಲಸ ಮುಗಿಯುತ್ತದೆ. ಕೈಪ್ಪಾಡ್ ಬೇಸಾಯಕ್ಕೆ ಗೊಬ್ಬರ, ಕೀಟನಾಶಕ, ಕಳೆಕೀಳುವಿಕೆ- ಇವುಗಳ ಅಗತ್ಯವಿರುವುದಿಲ್ಲ. ಹಾಗಾಗಿ ವೆಚ್ಚ ಕೂಡ ತುಂಬ ಕಡಿಮೆ. ಆದರೂ ಒಳ್ಳೆಯ ಫಸಲು ಸಿಗುತ್ತದೆ.

ಪೊಕ್ಕಾಳಿ ಬೇಸಾಯ ಮಾಡುವುದು, ಸುಗ್ಗಿ ಬೇಸಾಯ ಮಾಡುವ ಗದ್ದೆಗಳಲ್ಲಿ ಸುಗ್ಗಿ ಬೆಳೆಯ ಕಟಾವಿನ ಬಳಿಕ ವೃಷಭ ಮಾಸದಲ್ಲಿ ಪೊಕ್ಕಾಳಿಯ ಬಿತ್ತನೆ ಮಾಡುತ್ತಾರೆ. ಪೊಕ್ಕಾಳಿ ಕೃಷಿ ಜಾಗಗಳು ತುಂಬ ತಗ್ಗಿನಲ್ಲಿರುವುದರಿಂದ ಮಳೆ ಬಂದರೆ ನೀರು ಬಲು ಬೇಗನೇ ತುಂಬಿ ಬಿಡುತ್ತದೆ. ಆದರೆ ನೀರು ಏರುವುದಕ್ಕೆ ಅನುಸಾರವಾಗಿ ಪೊಕ್ಕಾಳಿ ಪೈರೂ ನಿಬಿಡವಾಗಿ ಬೆಳೆಯುತ್ತದೆ. ಕನ್ಯಾಮಾಸದಲ್ಲಿ ಇದರ ಕಾಟವು. ಗದ್ದೆಗಳಲ್ಲಿ ನೀರು ಕಟ್ಟಿ ನಿಲ್ಲುವುದರಿಂದ ಕಟಾವು ಮಾಡಿದ ಪೈರನ್ನು ದೋಣಿಗಳಲ್ಲಿ ಸಾಗಿಸಲಾಗುತ್ತದೆ. ಪೊಕ್ಕಾಳಿಯ ದಂಟು ಕೊಳೆತು ಗೊಬ್ಬರವಾಗುವಾಗ ಸುಗ್ಗಿ ಕೃಷಿ ಆರಂಭವಾಗುತ್ತದೆ. ಇದಕ್ಕೋಸ್ಕರ ಗದ್ದೆಯ ನೀರನ್ನೆಲ್ಲ ಏತ ಮತ್ತು ದಂಬೆಗಳ ಮೂಲಕ ಬತ್ತಿಸಲಾಗುತ್ತದೆ. ಹೀಗೆ ನೀರು ಆರಿದ ಗದ್ದೆಗಳಲ್ಲಿ ಸುಗ್ಗಿ ಕೃಷಿ ಮಾಡುತ್ತಾರೆ. ಪರಸ್ಪರ ಆಶ್ರಿತವಾದ ಈ ಕೃಷಿಗೆ ಖರ್ಚು ತುಂಬ ಕಡಿಮೆ.

ಸುತ್ತಲೂ ನೀರು ಕಟ್ಟಿನಿಲ್ಲುವ ಜವುಗು ನೆಲದಲ್ಲಿ ಕಡುಂಕೃಷಿ(ಮ.)ಯನ್ನೂ ಏಣಿಲು ಮತ್ತು ಸುಗ್ಗಿ ಬೆಳೆಗಳನ್ನು ಬೆಳೆಯುತ್ತಾರೆ. ಇದರ ಎತ್ತರದ ಜಾಗಗಳಲ್ಲಿ ಏಣಿಲು ಮುಂಡಕ ಮತ್ತು ಸುಗ್ಗಿ ಬೆಳೆಯನ್ನು ಬೆಳೆಯುತ್ತಾರೆ. ಬಂಡುಗಳನ್ನು ನಿರ್ಮಿಸಿ ನೀರನ್ನು ಒಂದೇ ಸವನೆ ಹೊರಹಾಯಿಸಿ ಕಡುಂಕೃಷಿ ಮಾಡುತ್ತಾರೆ. ಬಂಡಿನ ಎತ್ತರ ಸಾಮಾನ್ಯವಾಗಿಸು. ಒಂದೂವರೆ ಮೀಟರ್‌ನಷ್ಟಿರುತ್ತದೆ. ಅದನ್ನು ತೆಂಗಿನ ಸೀಳುಗಳು, ಬಿದಿರ ತುಂಡುಗಳು ಮತ್ತು ಆವೆ ಮಣ್ಣಿನಿಂದ ಗಟ್ಟಿಗೊಳಿಸಿರುತ್ತಾರೆ. ನೀರಿನಿಂದ ಆವೃತವಾಗಿರುವ ಜವುಗು ಗದ್ದೆಗಳಲ್ಲಿ ಅರ್ಧ ಅಡಿಗಿಂತಲೂ ಹೆಚ್ಚು ನೀರು ನಿಲ್ಲುವುದಿಲ್ಲ. ಹೀಗೆ ನೀರನ್ನು ನಿಯಂತ್ರಿಸಲು ನೀರನ್ನು ನಿರಂತರವಾಗಿ ಹೊರಹಾಯಿಸುವಂತೆ ಚೋಕಲಾಗುತ್ತದೆ. ನೀರು ಚೋಕುವುದಕ್ಕೆ ಏತ ಮತ್ತು ದಂಬೆಗಳನ್ನೂ ಚಕ್ರವನ್ನೂ ಸಾಧಾರಣವಾಗಿ ಬಳಸಿಕೊಳ್ಳುತ್ತಿದ್ದರು. ಕಡುಂಕೃಷಿ ಮಾಡಿ ಮುಗಿಸಿದ ಕೂಡಲೇ ಸುಗ್ಗಿ ಕೃಷಿ ಮಾಡಬಹುದು. ಇದಕ್ಕೆ ಲಘುಕಾಲಾವಧಿಯ ಬತ್ತದ ತಳಿಗಳನ್ನು ಬಳಕೆ ಮಾಡುತ್ತಾರೆ. ಒಳ್ಳೆ ಬೆಳೆ ಬರುವುದಕ್ಕೆ ಜವುಗು ನೆಲದ ಗದ್ದೆಗಳೂ ಯೋಗ್ಯವಾಗಿವೆ.

ವಿಶಾಲವಾದ ಕರೆ ಪ್ರದೇಶಗಳಲ್ಲಿ ಮೋಡೋನ್ ಕೃಷಿ(ಮ.) ನಡೆಸುತ್ತಾರೆ. ತರಕಾರಿಗಳನ್ನು ಬೆಳೆದ ಗೊಬ್ಬರದ ಅಂಶವುಳ್ಳ ಮಣ್ಣಲ್ಲಿ ಮೇಷ ಮಾಸಕ್ಕಿಂತ, ಮೊದಲು ಹುಡಿಬಿತ್ತು (ಒಣಮಣ್ಣಲ್ಲಿ ಬಿತ್ತುವುದು) ಮಾಡುತ್ತಾರೆ. ನವರ, ಚುವನ್ನ ಪಿತ್ತ್ (ಕೆಂಪು ಬೀಜ), ಏಡಕ್ಕನ್ (ಮ) ಮುಂತಾದ ಬತ್ತದ ತಳಿಗಳನ್ನು ಇದಕ್ಕೆ ಬಳಸುತ್ತಾರೆ. ಸಿಂಹಮಾಸದಲ್ಲಿ ಕಟಾವು ಮಾಡಲಾಗುತ್ತದೆ. ಈ ಕೃಷಿ ಕ್ರಮಕ್ಕೆ ಪ್ರತ್ಯೇಕವಾಗಿ ಗೊಬ್ಬರ ಕೊಡಬೇಕಾಗಿಲ್ಲ ಎಂಬುದೇ ಮುಖ್ಯ ಲಾಭ.

ಪಡುವಂ ಕೃಷಿ: ತೀರ ಪ್ರದೇಶಗಳಿಗೆ ತಾಗಿಕೊಂಡಂತಿರುವ, ಕೆಸರುಕಟ್ಟಿ ನಿಲ್ಲುವ ಪ್ರದೇಶಗಳಿಗೆ ಪಡುವಗಳೆಂದು(ಮ.) ಹೆಸರು. ಈ ಗದ್ದೆಗಳಲ್ಲಿ ಮಳೆಗಾಲದಲ್ಲಿ ಅರ್ಧ ಅಡಿಷ್ಟು ಕೆಸರು ಕಟ್ಟಿ ನಿಂತಿರುತ್ತದೆ. ಇಲ್ಲಿ ಉಳುಮೆ ಸಾಧ್ಯವಿಲ್ಲ. ಕುಂಭ, ಮೀನ ಮಾಸಗಳಲ್ಲಿ ಅಗೆತ ಮಾಡಿ ಪಾತಿಗಳನ್ನು ಮಾಡಿಕೊಂಡು ಕಣಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲಿ ಬೀಜ ಚೆಲ್ಲಿ ಮೊಳಕೆ ಬರಿಸಿ ನಿಲ್ಲುವುದನ್ನು ತಡೆದುಕೊಳ್ಳುವ ಶಕ್ತಿಯುಳ್ಳ ಬತ್ತದ ತಳಿಗಳನ್ನು ಗದ್ದೆಗಳಿಗೆ ಬಳಸಿಕೊಳ್ಳುತ್ತಾರೆ. ಈ ಪಡವಂ ಕೃಷಿಯನ್ನು ತೀರ ಪ್ರದೇಶಗಳಲ್ಲಿ ಮಾಡುವ ರೂಢಿ ಇತ್ತು.

ಕರಪ್ಪುರಂ ಕೃಷಿ: (ಕರೆನಾಡ ಬೇಸಾಯ) ಅರಬ್ಬೀ ಸಮುದ್ರ ಮತ್ತು ವೆಂಬನಾಡು ಹಿನ್ನೀರಿನ ಮಧ್ಯೆ ಅಲಪ್ಪುಳ ಜಿಲ್ಲೆಯಲ್ಲಿ ಮರಳು ತುಂಬಿದ ಪ್ರದೇಶಗಳನ್ನು ಕರಪ್ಪುರಂ ಎನ್ನುತ್ತಾರೆ. ತೇವ ಮತ್ತು ಗೊಬ್ಬರದ ಅಂಶ ಇಲ್ಲದ ಮರಳು ಮಣ್ಣು ಕರಪ್ಪುರಂಗಳಲ್ಲಿರುತ್ತದೆ. ಮಳೆಗಾಲದಲ್ಲಿ ಮಾತ್ರ ಇಲ್ಲಿ ನೀರು ಕಟ್ಟಿ ನಿಲ್ಲುತ್ತದೆ. ಎತ್ತರದ ಜಾಗಗಳಲ್ಲಿ ತೆಂಗು, ಬಾಳೆಗಳನ್ನೂ ತಗ್ಗು ಪ್ರದೇಶಗಳಲ್ಲಿ ಬತ್ತವನ್ನೂ ಕೃಷಿ ಮಾಡುತ್ತಾರೆ. ಕಡಿಮೆ ಕಾಲಾವಧಿಯ ತಳಿ ವಿರಿಪ್ಪ್(ಏಣಿಲು)ನ್ನು, ದೀರ್ಘ ಕಾಲಾವಧಿಯ ಮುಂಡಕನನ್ನೂ ಮಿಶ್ರಮಾಡಿ ಕರೆನಾಡ ಬೇಸಾಯ ಮಾಡುತ್ತಾರೆ. ಕೃಷಿಗಾಗಿ ಆರು ಅಡಿಗಳವರೆಗೆ ಮರಗಳನ್ನು ತೋಡಿ ಅದರಲ್ಲಿ ಎಕ್ಕಲು ಮಣ್ಣನ್ನು ಹರಡುತ್ತಾರೆ. ತೋಡಿ ತೆಗೆದ ಮರಳನ್ನು ಬದಿಗಳಲ್ಲಿ ರಾಶಿ ಹಾಕುತ್ತಾರೆ. ಎಕ್ಕಲು ಮಣ್ಣು ಒಣಗಿ ಹುಡಹುಡಿಯಾದಾಗ ಅದನ್ನು ವೃತ್ತಾಕಾರದಲ್ಲಿ ಎತ್ತರಿಸಿ ಅದರಲ್ಲಿ ಮೇಲೆ ತಿಂಗಳ ಕೊನೆಗೆ ವಿರಿಪ್ಸ್ ಮತ್ತು ಮುಂಡಕದ ತಳಿಗಳನ್ನು ಬೆರಕೆ ಮಾಡಿ ಹುಡಿಬಿತ್ತು ಹಾಕುತ್ತಾರೆ. ಒಂದೂವರೆ ತಿಂಳ ಬೆಳವಣಿಗೆಯಾದ ಹರಿತವಿಲ್ಲದ ಕಿರುಗುದ್ದಲಿಯಿಂದ ನೇಜಿಯನ್ನು ಒಕ್ಕಿ ಕೃಷಿ ಮಾಡುವ ಮಣ್ಣಲ್ಲಿ ಹರಡುತ್ತಾರೆ. ಇದಕ್ಕೆ ‘ವೆಟ್ಟಿವೆಕ್ಕುಗ’ ಎಂದು ಹೆಸರು (ಕಡಿದು ಇಡುವುದು. ಕ.). ಬೂದಿ ಮತ್ತು ಸೆಗಣಿ ಹುಡಿಗಳ ಮಿಶ್ರಣವನ್ನು ಗೊಬ್ಬರವಾಗಿ ಕೊಡುತ್ತಾರೆ. ಸಿಂಹಮಾಸದಲ್ಲಿ ಏಣಿಲಿನ ಕೊಯ್ಲು. ಜತೆಜತೆಗೆ ಮುಂಡಕನ ಬೇಸಾಯವೂ ನಡೆಯುತ್ತದೆ. ಕತ್ತರಿಸ್ಲಪಟ್ಟ ಬುಡದಿಂದ ಮುಂಡಕವು ಟಿಸಿಲೊಡೆದು ಹುಲುಸಾಗಿ ಬೆಳೆದು ದೊಡ್ಡದಾಗಿ ಮಕರ ಮಾಸದಲ್ಲಿ ಕಟಾವಿಗೆ ಬರುತ್ತದೆ.

ಪುದಯಲ್ ಕೃಷಿ: (ಕೊಳಂಬೆ ಕೃಷಿ) ತೀರ ಜವುಗು ಗದ್ದೆಗಳಿಗೆ ಪುದಯನ್ (ಕೊಳಂಬೆ)ಗಳೆಂದು ಹೆಸರು. ಗದ್ದೆಗಳಲ್ಲಿ ಸೊಂಟ ಪ್ರಮಾಣದ ಕೆಸರು ಇರುವುದರಿಂದ ಎತ್ತುಗಳನ್ನು ಕಟ್ಟಿ ಉಳುವುದು ಅಸಾಧ್ಯ. ಆದುದರಿಂದ ಅಗಲವಾದ ಹಲಗೆ ತುಂಡುಗಳನ್ನು ಹಾಸಿಕೊಂಡು ಅದರ ಮೇಲೆ ನಿಂತು ಹಾರೆಗಳಿಂದ ಮಣ್ಣನ್ನು ಅಗೆದು ನೆಲವನ್ನು ಸಿದ್ಧಪಡಿಸಲಾಗುತ್ತದೆ. ಕೊಲ್ಲಂ, ವಯನಾಡು ಜಿಲ್ಲೆಗಳಲ್ಲಿ ಕೊಳಂಬೆ ಬೇಸಾಯ ಪ್ರಚಾರದಲ್ಲಿದೆ.

ಪಾಂಡಿಕೃಷಿ: ಪಾಂಡಿಗಳೆಂದರೆ ನೀರು ಕಟ್ಟಿ ನಿಲ್ಲುವ ಫಲವತ್ತಾದ ಬಯಲು ಪ್ರದೇಶಗಳು. ಸಮುದ್ರ ಮಟ್ಟಕ್ಕಿಂತ ತಗ್ಗಿನಲ್ಲಿರುವ ಪಾಂಡಿಗಳಲ್ಲಿ ಉಪ್ಪು ನೀರು ಏರಿಬಿಡುತ್ತದೆ. ಒಳ್ಳೆಯ ಗೊಬ್ಬರದ ಸತ್ವವಿರುವ ಕಪ್ಪು ಹುಡಿಮಣ್ಣಿನಲ್ಲಿ ಓರ್‌ಪಾಂಡಿ, ಸ್ವರ್ಣಪಾಂಡಿ ಮುಂತಾದ ಬತ್ತದ ತಳಿಗಳನ್ನು ಬೇಸಾಯಕ್ಕಾಗಿ ಬಳಸಿಕೊಳ್ಳುತ್ತಾರೆ. ಮಳೆಬರುವ ಮೊದಲೇ ಕೋಣಗಳನ್ನು ಉಪಯೋಗಿಸಿಕೊಂಡು ನೆಲವನ್ನು ಸಿದ್ದಗೊಳಿಸುತ್ತಾರೆ. ಬೀಜವನ್ನು ಬಿತ್ತನೆ ಮಾಡಿಯಾಗಲಿ, ಮೊಳಕೆ ಬರಿಸಿಯಾಗಲಿ ನೇಜಿಯನ್ನು ಬೆಳೆಸಿಕೊಳ್ಳುತ್ತಾರೆ. ಒಳ್ಳೆಯ ಫಲಸು ಬರುವ ಬೇಸಾಯ ಪ್ರದೇಶಗಳು-ಪಾಂಡಿಗಳು.

ತಿಡಿಲ್ ಕೃಷಿ: ತಿಡಿಲ್ ನೆಲ(ಮ.)ಗಳೆಂದರೆ ನದೀ ತೀರದ ಕೃಷಿ ಭೂಮಿಗಳು. ಹೊಳೆಗಳಿಗೆ ತಾಗಿಕೊಂಡಿರುವ ಆದರೆ ಹೊಳೆಗಳಿಗಿಂತ ಎತ್ತರದಲ್ಲಿರುವ ಜಾಗಗಳು ಇವು. ಮಳೆಗಾಲದಲ್ಲಿ ಹೊಳೆ ದಡಮೀರಿ ಹರಿಯುವಾಗ ತುಂಬ ದಿನಗಳವರೆಗೆ ತಿಡಿಲ್ ನೆಲದಲ್ಲಿ ನೀರು ಕಟ್ಟಿ ನಿಲ್ಲುತ್ತದೆ. ಹೊಳೆಯ ನೀರು ಇಳಿಯುವುದರೊಂದಿಗೆ ತಿಡಿಲ್ ನೆಲದ ನೀರೂ ಇಳಿದು ಬಿಡುತ್ತದೆ. ನೆರೆಯಲ್ಲಿ ಬಂದು ಸೇರಿಕೊಂಡ ಎಕ್ಕಲು, ಮೆಕ್ಕಲು ಮಣ್ಣು ತಿಡಿಲ್ ನೆಲವನ್ನು ಒಳ್ಳೆಯ ಗೊಬ್ಬರದ ಅಂಶವುಳ್ಳದ್ದನ್ನಾಗಿ ಮಾರ್ಪಡಿಸಿ ಬಿಡುತ್ತದೆ. ಕಯಮೆ, ಕೀರಿಪ್ಪಾಲ್ ಮುಂತಾದ ಬತ್ತದ ತಳಿಗಳನ್ನು ಇಂಥ ಗದ್ದೆಗಳಿಗೆ ಬಳಸಿಕೊಳ್ಳುತ್ತಾರೆ. ಕಣ್ಣೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ತಿಡಿಲ್ ಬತ್ತಬೇಸಾಯ ರೀತಿಯನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಾರೆ.

ಪುಯಕೃಷಿ: (ಹೊಳೆ ಬೇಸಾಯ) ಬೇಸಿಗೆಯಲ್ಲಿ ಹೊಳಗಳಲ್ಲಿ ನೀರಿನ ಮಟ್ಟ ತಗ್ಗಿದಾಗ ನೀರಿಲ್ಲದೆ ಮರಳುದಡಗಳಲ್ಲಿ ಬೇಸಾಯ ಮಾಡುತ್ತಾರೆ. ಮಕರ ಮಾಸದ ಸುಗ್ಗಿ ತಳಿಗಳನ್ನು ಬೆಳೆಯುತ್ತಾರೆ. ತೆಕ್ಕನ್ ಚೀರ, ನವರ ಮುಂತಾದ ಕಡಿಮೆ ಕಾಲಾವಧಿಯ ತಳಿಗಳನ್ನು ಹೊಳೆ ಬೇಸಾಯಕ್ಕೆ ಬಳಸುತ್ತಾರೆ. ನೆಲವನ್ನು ಉಳುವುದು ಎಂದಿಲ್ಲ. ಬದಲಾಗಿ ಹಾರೆಯಿಂದ ನೆಲವನ್ನು ಸಡಿಲು ಮಾಡಿಕೊಡಬೇಕು. ನೀರಿದ್ದರೆ ಹುಣಿ/ ಬದು ನಿರ್ಮಿಸುತ್ತಾರೆ. ಬೀಜವನ್ನು ಬಿತ್ತುವುದಾಗಲಿ ನೇಜಿಯನ್ನು ನಾಟಿ ಮಾಡುವುದಾಗಲಿ ಮಾಡುತ್ತಾರೆ. ಹೊಳೆಯ ಭಾಗಗಳಲ್ಲಿ ಹೊಳೆಬೇಸಾಯ ರೂಢಿಯಲ್ಲಿದೆ.

ಮೇಲೆ ಹೇಳಿದಂತೆ ಮಲೆನಾಡುಗಳಲ್ಲೂ ತಷ್ಪಲುಗಳಲ್ಲೂ ನದೀ ದಡಗಳಲ್ಲೂ ನೀರು ಕಟ್ಟಿ ನಿಲ್ಲುವಲ್ಲಿಯೂ ಕರೆ ಪ್ರದೇಶಗಳಲ್ಲೂ ಎಲ್ಲೆಲ್ಲೂ ಬೇಸಾಯ ಮಾಡಲು ಅಗತ್ಯವಾದ ಪರಂಪರಾಗತ ಬೀಜದ ತಳಿಗಳು ಮತ್ತು ಬೇಸಾಯ ಪದ್ಧತಿಗಳು ಕೇರಳದಲ್ಲಿ ಬಳಕೆಯಲ್ಲಿದ್ದುವು. ಆದರೆ ಹಸಿರುಕ್ರಾಂತಿಯ ಕಾರಣವಾಗಿ ಪ್ರಚಾರಕ್ಕೆ ಬಂದ ಹೊಸ ಬತ್ತದ ತಳಿಗಳು ಮತ್ತು ಕೃಷಿ ರೀತಿ ವೈವಿಧ್ಯ ಪೂರ್ಣವಾಗಿದ್ದ ಪರಂಪರಾಗತವಾದ ಬೇಸಾಯ ಪದ್ಧತಿಗಳನ್ನು ಹೆಚ್ಚು ಕಡಿಮೆ ತೊಡೆದು ಹಾಕಿ ಬಿಟ್ಟಿವೆ. ಬಯಲು ಭೂಮಿಯ ದೊಡ್ಡದೊಂದು ಭಾಗವನ್ನೇ ಮುಚ್ಚಿ ಕಟ್ಟಡಗಳನ್ನು ನಿರ್ಮಿಸಲಾಗಿದೆ, ಇಲ್ಲವೇ ಬತ್ತಕ್ಕಿಂತ ಬೇರೆಯೇ ಆದ ಬೆಳೆಗಳನ್ನು ಬೆಳೆಯಲು ಉಪಯೋಗಿಸಿಕೊಳ್ಳಲಾಗಿದೆ. ೧೯೭೦ರ ದಶಕದಲ್ಲಿ ೮.೫ಲಕ್ಷ ಹೆಕ್ಟೇರ್ ಬಯಲು ಭೂಮಿ ಇದ್ದ ಜಾಗದಲ್ಲಿ ಇಂದು ಕೇವಲ ೨.೫ಲಕ್ಷ ಹೆಕ್ಟೇರ್ ಮಾತ್ರ ಉಳಿದುಕೊಂಡಿದೆ. ಆಧುನಿಕತೆ ಮತ್ತು ಗಲ್ಫ್ ರಾಷ್ಟ್ರಗಳತ್ತ ಯುವಕರಿಗೆ ಆಕರ್ಷಣೆ ಪ್ರವಾಹವು ಹೆಚ್ಚಿದೆ, ಮಾತ್ರವಲ್ಲ ಸಾಕ್ಷರತೆ ಮತ್ತು ವಾಣಿಜ್ಯ ಬೆಳೆಗಳ ಮೋಹವೂ ಕೃಷಿ ನಿಯಮಗಳು ಮತ್ತು ಕೃಷಿ ಸಂಶೋಧನೆಗಳೂ ಜಾಗತೀಕರಣ ಮತ್ತು ರಿಯಲ್ ಎಸ್ಟೇಟ್ ದಂಧೆಯೂ ಇವೆಲ್ಲ ಬತ್ತ ಬೇಸಾಯದ ಕುರಿತಾದ ಕೇರಳೀಯ ಮನೋಭಾವವನ್ನೇ ಬದಲಾಯಿಸಿ ಬಿಟ್ಟಿವೆ. ಈ ಎಲ್ಲ ಕಾರಣಗಳಿಂದ ಇಂದು ಪರಂಪರಾಗತ ಬತ್ತ ಬೇಸಾಯ ಕೇರಳೀಯನಿಗೆ ಬಹುಪಾಲು ಅನ್ಯವೇ ಆಗಿಬಿಟ್ಟಿದೆ.

ಪಿ.ಆರ್.ಕೆ. ಅನುವಾದ ಕೆ.ಕೆ.