ನೆಲ್ಲಿಪ್ಪಡಿ ಕೇರಳದಲ್ಲಿ ಬಾವಿಯ ತಳಭಾಗಕ್ಕೆ ಹಾಕುವ, ಬಳೆಯ ಆಕಾರದ ದಪ್ಪವಾದ ನೆಲ್ಲಿಮರದ ಒಂದು ಸಾಧನವೇ ನೆಲ್ಲಿಪ್ಪಡಿ. ಇದನ್ನು ಬಾವಿಯ ತಳಭಾಗದಲ್ಲಿ ಹಾಕಿ ಅದರ ಮೇಲೆ ಕಲ್ಲುಗಳನ್ನು ಕಟ್ಟಲಾಗುತ್ತದೆ. ಆದುದರಿಂದ ಬಾವಿಗೆ ಕಲ್ಲುಕಟ್ಟಲು ಬಳಸುವ ನಿಜವಾದ ಅಡಿಪಾಯವೇ ನೆಲ್ಲಿಪ್ಪಡಿ. ಇದನ್ನು ಬಾವಿಯ ತಳಭಾಗದಲ್ಲಿ ಇಡುವುದರಿಂದ, ಬಳಕೆಯ ಭಾಷೆಯಲ್ಲಿ-ಕೊನೆಗೆ ಕಾಣುವ ಎಂಬ ಅರ್ಥದಲ್ಲಿ ‘ನೆಲ್ಲಿಪ್ಪಡಿ ಕಾಣುವುದು’ ಎಂಬ ನುಡಿಗಟ್ಟೇ ಇದೆ.

ನೆಲ್ಲಿಯು ನೀರಿನಲ್ಲಿ ಹಾಕಿದರೆ ಹಾಳಾಗದ ಮರ. ನೆಲ್ಲಿಮರ ನೀರನ್ನು ತಂಪಾಗಿಡುವುದಲ್ಲದೆ ಶುದ್ಧೀಕರಿಸುವ ಕೆಲಸವನ್ನೂ ಮಾಡುತ್ತದೆ. ಆದುದರಿಂದ ನೆಲ್ಲಿಪ್ಪಡಿ ಹಾಕಿದ ಬಾವಿಯ ನೀರು ಶುದ್ಧವಾಗಿರುತ್ತದೆ. ಆ ನೀರನ್ನು ಕುಡಿದರೆ ರೋಗಗಳು ಬರುವುದಿಲ್ಲ ಎಂಬ ವಿಶ್ವಾಸವಿದೆ. ನೆಲ್ಲಿಮರದ ತೊಗಟೆಯನ್ನು ಹಾಕಿದ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮದ ಕಾಂತಿ ಹೆಚ್ಚುವುದಲ್ಲದೆ, ದೇಹ ಸೌಂದರ್ಯ ಮತ್ತು ಉತ್ಸಾಹವೂ ಹೆಚ್ಚುತ್ತದೆ, ನರವ್ಯಾಧಿಗಳು ಬಾಧಿಸಲಾರವು ಎಂಬುದಾಗಿ ಹಳ್ಳಿವೈದ್ಯರ ಅಭಿಪ್ರಾಯ. ಕುಡಿಯುವ ನೀರಿಗೆ ಹಾಕುವ “ಕರಿಂಙಾಪ್ಪೊಡಿ” (ಒಂದು ಮರದ ತೊಗಟೆಯ ಹುಡಿ) ಯಲ್ಲಿ ನೆಲ್ಲಿಮರದ ಸಿಪ್ಪೆಯೂ ಇರಬಹುದು. ನೆಲ್ಲಿಮರದಿಂದ ದೊರಕುವ ನೆಲ್ಲಿಕಾಯಿ, ವಾತ, ಪಿತ್ತ, ಕಫಗಳನ್ನು ಶಮನಗೊಳಿಸುತ್ತದೆ. ಮೂತ್ರದೋಷ (ಮೂತ್ರ ಕಟ್ಟಿದರೆ) ಇದ್ದವರು ನೆಲ್ಲಿಕಾಯಿಯನ್ನು ಅರೆದು ಹೊಟ್ಟೆಯ ಕೆಳಭಾಗಕ್ಕೆ ಲೇಪಿಸಿದರೆ ದೋಷ ಪರಿಹಾರವಾಗುತ್ತದೆ. ಇದಲ್ಲದೆ ಇನ್ನೂ ಹಲವು ಔಷಧ ಗುಣಗಳಿವೆ.

ಮನೆ ಅಥವಾ ಇನ್ನಿತರ ಕಟ್ಟಡಗಳ ನಿರ್ಮಾಣಗಳಲ್ಲಿ ಬಾವಿಯು ಪ್ರಧಾನವಾದದ್ದು. ಹಿಂದಿನ ಕಾಲದಲ್ಲಿ ವಾಸ್ತು ಗೃಹಗಳ, ಮಂದಿರಗಳ ಕೆಲಸ ಪ್ರಾರಂಭ ಮಾಡುವ ಮೊದಲು ನೀರಿನ ಉಪಯೋಗಕ್ಕಾಗಿ ಬಾವಿಯನ್ನೋ, ಕೊಳಗಳನ್ನೋ ನಿರ್ಮಿಸುವುದು ತುಂಬ ಅಗತ್ಯವಾಗಿತ್ತು. ಇತ್ತೀಚೆಗೆ ಬಾವಿಗಳನ್ನು ನಿರ್ಮಿಸುತ್ತಾರೆಯೇ ಹೊರತು ಕೊಳಗಳ ನಿರ್ಮಾನವಿಲ್ಲದಾಗಿದೆ. ಇರುವ ಕೊಳಗಳನ್ನೂ ಮಣ್ಣು ಹಾಕಿ ಮುಚ್ಚಲಾಗುತ್ತಿದೆ.

ಬಾವಿಯ ನಿರ್ಮಾಣ ರೀತಿ ಸುಮಾರಾಗಿ ಹಳೆಯದೇ ಆದರೂ ನೆಲ್ಲಿಪ್ಪಡಿ ಹಾಕಿದ ಬಾವಿಗಳನ್ನು ಇಂದು ಕಾಣುವುದು ಅಪರೂಪ. ‘ಕ್ಷಮೆಯುಡೆ ನೆಲ್ಲಿಪ್ಪಡಿ ಕಾಣುಗ’ (ತಾಳ್ಮೆಯ ಕೊನೆಯ ಹಂತಕ್ಕೆ ತಲಪು) ಮುಂತಾದ ಭಾಷಾ ಪ್ರಯೋಗಗಳಲ್ಲಿ ಮಾತ್ರ ಅದು ಉಳಿದುಕೊಂಡಿದೆ. ಅದರಿಂದಷ್ಟೆ ಇಂದು ಕೆಲವರಿಗಾದರೂ ‘ನೆಲ್ಲಿಪ್ಪಡಿ’ ಎಂಬ ಶಬ್ದ ಪರಿಚಿತವಾಗಿದೆ.

ನೆಲ್ಲಿಮರದಲ್ಲಿರುವ ರಸವನ್ನು ತೆಗೆಯಲು ಮರವನ್ನು ನೀರಿನಲ್ಲಿ ಹಾಕುತ್ತಾರೆ. ಹಾಗೆ ನೀರಲ್ಲಿ ಹಾಕಿ ಬಳಿಕ ವೃತ್ತಾಕಾರವಾಗಿ ಕತ್ತರಿಸಿ ಆ ತುಂಡುಗಳನ್ನು ಸರಿಯಾದಂತೆ ಹೊಂದಿಸಿ ಮರದ ಕೀಲುಗಳಿಂದಲೇ ಗಟ್ಟಿಗೊಳಿಸಿ ನೆಲ್ಲಿಪ್ಪಡಿಯನ್ನು ತಯಾರಿಸುತ್ತದೆ. ಇದನ್ನು ಆಚಾರಿ ಸಮುದಾಯದವರು ಸಿದ್ಧಪಡಿಸುತ್ತಾರೆ. ಹೀಗೆ ಸಿದ್ಧಗೊಳಿಸಿದ ನೆಲ್ಲಿಪ್ಪಡಿಯನ್ನು ಬಾವಿಯ ತಳಭಾಗದಲ್ಲಿ ಇರಿಸಿ ಅದರ ಮೇಲೆ ಚೆಂಗಲ್ಲು ಇಡಲಾಗುತ್ತದೆ. ನೀರು ಕೊಳಕಾಗದೆ ಶುದ್ಧವಾಗಿಡಲು ನೆಲ್ಲಿಪ್ಪಡಿ ಮತ್ತು ಮಣ್ಣಿನ ಮಧ್ಯೆ ಮರಳನ್ನು ಹಾಕಲಾಗುತ್ತದೆ. ಮರಳಿನ ಬದಲು ಮಣ್ಣನ್ನು ಹಾಕಿದರೆ ಪ್ರತಿನಿತ್ಯ ನೀರು ಮಣ್ಣು ಮಿಶ್ರಿತವಾಗಬಹುದು. ಆದುದರಿಂದ ನೆಲ್ಲಿಪ್ಪಡಿ ಮತ್ತು ಮಣ್ಣಿನ ಮಧ್ಯೆ ಮರಳನ್ನು ಹಾಕಲಾಗುತ್ತದೆ. ಮೊದಲಿಗೆ ಬಾವಿಯ ಗಾತ್ರಕ್ಕನುಗುಣವಾಗಿ ಎತ್ತಿನ ಗಾಡಿಯ ಚಕ್ರದ ಆಕೃತಿಯಂತೆ ಹಲವು ನೆಲ್ಲಿಪ್ಪಡಿಗಳನ್ನು ಮಾಡಲಾಗುತ್ತದೆ. ನೆಲ್ಲಿಪ್ಪಡಿಯ ಹೊರವ್ಯಾಸ ಮತ್ತು ಬಾವಿಯ ವ್ಯಾಸ ಸಮಾನವಾಗಿರುತ್ತದೆ. ಬಾವಿಗೆ ಕಟ್ಟುವ ಕಲ್ಲುಗಳ ಅಗಲಕ್ಕೆ ನೆಲ್ಲಿಪ್ಪಡಿಯ ಹಲಗೆಗಳ ಅಗಲವನ್ನು ಹೊಂದಿಸಲಾಗುತ್ತದೆ. ಸಾಮಾನ್ಯವಾಗಿ ಇದು ೮ ಅಂಗುಗಳಷ್ಟು (೨೪ ಸೆಂ.ಮೀ.) ಅಗಲವಿರುತ್ತದೆ. ಬಾವಿಯ ಒಳಭಾಗ ಕಲ್ಲಿನ ಅಗಲದಿಂದ ಸ್ವಲ್ಪ ಹೆಚ್ಚು ತೆರೆದಿರುತ್ತದೆ. ಆ ತೆರೆದ ಭಾಗಗಳಿಗೆ ಮರಳನ್ನು ತುಂಬಲಾಗುತ್ತದೆ. ಆಗ ಬಾವಿಗೆ ಶಕ್ತಿ ಬರುವುದಲ್ಲದೆ ರೂಪವೂ ಹೊಂದಿಕೊಳ್ಳುತ್ತದೆ. ನೆಲ್ಲಿಪ್ಪಡಿಯ ಎಲ್ಲಾ ಭಾಗಗಳು ನೆಲದಲ್ಲಿ ಸರಿಯಾಗಿ ನಿಲ್ಲುವಂತೆ ಗಟ್ಟಿಗೊಳಿಸುತ್ತಾರೆ. ಆನಂತರ ಅದರ ಮೇಲೆ ಬಾವಿಯ ಎಲ್ಲ ಭಾಗಗಳು ಆವರಿಸುವಂತೆ ತುಂಡರಿಸಿದ ಕಲ್ಲುಗಳನ್ನು ಕಟ್ಟಲಾಗುತ್ತದೆ. ಸಾಮಾನ್ಯವಾಗಿ ಗಟ್ಟಿ ಮಣ್ಣು ಸಿಗುವವರೆಗೆ ಕಲ್ಲು ಕಟ್ಟುವುದಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಮಣ್ಣಿನ ಸ್ವಭಾವಕ್ಕನುಗುಣವಾಗಿ ಬಾವಿಯ ಮೇಲ್ಭಾಗದವರೆಗೆ ಕಲ್ಲು ಕಟ್ಟಬೇಕಾಗುತ್ತದೆ. ಕಲ್ಲುಗಳನ್ನು ಒಳಗೆ ವೃತ್ತಾಕಾರವಾಗಿ ಒಂದರ ನಂತರ ಒಂದರಂತೆ ಹತ್ತಿರ ಹತ್ತಿರ ಇಡುತ್ತ ಬರುವುದು. ಆ ಕಲ್ಲುಗಳ ಸಂದಿಗಳಿಗೆ ನೀಳವಾದ ಮತ್ತು ಚೂಪಾದ ಚಿಕ್ಕ ಕಲ್ಲುಗಳನ್ನು ಇಟ್ಟು ಆಣೆಯ ಹಾಗೆ ಹೊಡೆದು ಗಟ್ಟಿಗೊಳಿಸಲಾಗುತ್ತದೆ. ಬಾವಿ ವೃತ್ತಾಕಾರವಾಗಿದ್ದರೆ ಎಲ್ಲಾ ಭಾಗಗಳಿಂದ ಚೆನ್ನಾಗಿ ಬಲಗೊಳಿಸಲು ಸಾಧ್ಯವಾಗುತ್ತದೆ. ಆದುದರಿಂದ ಬಾವಿಯನ್ನು ವೃತ್ತಾಕಾರವಾಗಿ ತೋಡುತ್ತಾರೆ.

ಇದೇ ರೀತಿ ಹಿಂದೆ ‘ಇಲ್ಲಿಮುಳ್’ ಎಂಬ ಮರದಿಂದಲೂ ಬಾವಿಯ ಅಡಿಪ್ಪಡಿಯನ್ನು ಮಾಡುತ್ತಿದ್ದರು. ಅದನ್ನು ‘ಇಲ್ಲಿಪ್ಪಡಿ’ ಎಂದು ಕರೆಯುತ್ತಿದ್ದರು. ಇಲ್ಲಿಪ್ಪಡಿಯನ್ನು ನೀರಿನ ಶುದ್ಧಿಗೆ ಮತ್ತು ಬಾವಿಯ ತಳಭಾಗ ಕುಸಿಯದಂತೆ ರಕ್ಷಿಸಲು ಹಾಕುತ್ತಿದ್ದರು.

ನೆಲ್ಲಿ ಹಲಗೆಯ ಬದಲಿಗೆ ಕಸಿಮಾವಿನ ಮರವನ್ನು ಉಪಯೋಗಿಸುತ್ತಿದ್ದರು. ಇದು ಕೂಡ ನೀರಿನಲ್ಲಿ ಹಾಕಿದರೆ ಹಾಳಾಗದೆ ಹಲವು ಕಾಲ ಉಳಿಯುವ ಮರ. ಆದರೆ ನೆಲ್ಲಿಮರಕ್ಕಿರುವ ಗುಣಗಳು ಯಾವುವೂ ಇದಕ್ಕಿಲ್ಲ. ನೆಲ್ಲಿ ಹಲಗೆಗಿಂತ ಮಾವಿನ ಹಲಗೆಗೆ ಖರ್ಚು ಕಡಿಮೆಯಾದರೂ, ಇದರ ಬಣ್ಣ ನೀರಿಗೆ ಬಿಡುಗಡೆಯಾಗುವುದರಿಂದ ನೀರು ಕೆಟ್ಟು ಹೋಗುತ್ತದೆ. ಆದಕಾರಣ ಪ್ರತಿನಿತ್ಯ ಕುಡಿಯಲು ನೀರು ಬಳಸುವ ಬಾವಿಗೆ ಇದನ್ನು ಹಾಕುವುದಿಲ್ಲ.

ಇಂದು ನೆಲ್ಲಿಪ್ಪಡಿಯ ಸ್ಥಾನವನ್ನು ಕಾಂಕ್ರೀಟ್‌ರಿಂಗ್‌ಗಳು ಪಡೆದುಕೊಂಡಿವೆ. ಇತ್ತೀಚೆಗೆ ರೆಡಿಮೇಡ್ ರಿಂಗುಗಳ ಅಳತೆಗೆ ಹೊಂದುವಂತೆ ಬಾವಿಗಳನ್ನು ನಿರ್ಮಿಸುತ್ತಾರೆ. ರಿಂಗುಗಳನ್ನು ಹಾಕಿದ ಬಾವಿಗಳಲ್ಲಿ ನೀರು ತಂಪಾಗಿರುವುದಿಲ್ಲ. ಮಾತ್ರವಲ್ಲದೆ ನೀರಿನ ರುಚಿಯಲ್ಲೂ ತುಂಬಾ ವ್ಯತ್ಯಾಸವಾಗುತ್ತದೆ.

ಕೇರಳದ ಉತ್ತರದಿಕ್ಕಿನ ಕಣ್ಣೂರು, ಕಾಸರಗೋಡು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಇಂದಿಗೂ ನೆಲ್ಲಿಪ್ಪಡಿ ಹಾಕಿದ ಬಾವಿಗಳನ್ನು ಕಾಣಬಹುದು. ನೆಲ್ಲಿಪ್ಪಡಿಯನ್ನು ಮಾಡಿಕೊಡುವವರು ಇಲ್ಲಿ ಇಂದಿಗೂ ಇದ್ದಾರೆ. ಕೇರಳದ ದಕ್ಷಿಣ ಜಿಲ್ಲೆಗಳ ಹಳೆಯ ಬಾವಿಗಳಲ್ಲಿ ಇಂದಿಗೂ ನೆಲ್ಲಿಪ್ಪಡಿಯನ್ನು ಬಳಸಿರುವುದು ಕಾಣಬಹುದು. ತ್ರಿಶೂರ್ ಜಿಲ್ಲೆಯಲ್ಲಿ ನೆಲ್ಲಿಪ್ಪಡಿ, ಇಲ್ಲಿಪ್ಪಡಿಗಳಿರುವ ಬಾವಿಗಳಿವೆ. ಕೃಷಿಗೆ ಅವಶ್ಯಕವಾದ ನೀರನ್ನು ಬಳಸುವ ಬಾವಿಗಳಿಗೆ ಕಸಿಮಾವಿನ ಪಡಿಗಳನ್ನು ಹಾಕಿರುವುದು ಕಂಡುಬರುತ್ತದೆ. ನೆಲ್ಲಿಪ್ಪಡಿಯನ್ನು ತಯಾರಿಸುವ ಖರ್ಚು ಹೆಚ್ಚಾದುದಲ್ಲದೆ, ನೆಲ್ಲಿ ಮರಗಳು ಕಡಿಮೆಯಾದುದರಿಂದ ಜನರು ಇಂಥ ಕೌಶಲವನ್ನು ಬಳಸಿಕೊಳ್ಳು ಔದಾಸೀನ್ಯವನ್ನು ತೋರುತ್ತಾರೆ.

ಕೆ.ಯು.ಎಚ್.ಅನುವಾದ ಕೆ.ಕೆ. ಎಸ್.

 

ನೈಯಾಂಡಿ ಮೇಳಮ್ ಜನಪದ ಬದುಕಿನ ವಿಶಿಷ್ಟತೆ ಕಾಣಬರುವುದು ಅವರೇ ಕಟ್ಟಿದ ಹಾಡುಗಳಲ್ಲಿ, ಅದರೊಂದಿಗೆ ಬಳಸಿದ ವಾದ್ಯಗಳ ಮೂಲಕ. ಜೀವನಾನುಭವ ಹಾಡಾಗಿ, ಮನರಂಜನೆಯ ಸಾಧನವಾಗಿ ಪ್ರಖ್ಯಾತವಾಗಿದೆ. ಎಲ್ಲ ಕಲೆಗಳು ಪ್ರದರ್ಶನಗೊಳ್ಳುತ್ತಿದ್ದುದು ದೇವಾಲಯಗಳಲ್ಲಿ, ರಾಜರ ಆಸ್ಥಾನಗಳಲ್ಲಿ, ಇದರೊಂದಿಗೆ ಕೆಲವು ವಾದ್ಯಗಳು ಪ್ರಸಿದ್ಧಿ ಪಡೆದಿದೆ. ಇಂತಹ ವಾದ್ಯಗಳಲ್ಲಿ ತಮಿಳುನಾಡಿನ ‘ನೈಯಾಂಡಿ ಮೇಳ’ವೂ ಒಂದು.

ಶಿಷ್ಟ ಮತ್ತು ದೇಸಿ ಕಲೆಗಳ ಸಂಗಮವಿದು. ಕಲಾವಿದರು ಬಳಸುವ ವಾದ್ಯಗಳಲ್ಲೂ ಭಿನ್ನತೆ ವೈಶಿಷ್ಟ್ಯತೆ ಇದೆ. ಆದಿವಾಸಿ ಸಮುದಾಯ ಅಥವಾ ಬೀದಿ ಬದಿಯಲ್ಲಿ ದೇವರೆದುರಿಗೆ ಹಾಡು ಕುಣಿಯುವ ಪ್ರದರ್ಶಕ ಕಲೆಗಳಲ್ಲಿ ನೈಯಾಂಡಿ ಮೇಳ ಪ್ರಾಶಸ್ತ್ಯಪಡೆದಿದೆ. ವಿಶೇಷವಾಗಿ ಈ ವಾದ್ಯ ಕೊರವಕೊರತ್ತಿ ಆಟಂ, ರಾಜ-ರಾಣಿ ಆಟಂ, ಕಾವಡಿಯಾಟ್ಟಂ, ಮಯಿಲಾಟ್ಟಂ(ನಿವಲುನೃತ್ಯ), ಪೊಯ್‌ಕಾಲ್‌ಕುದುರೈಯಾಟಂ (ಹುಸಿಕಾಲುಕುದುರೆಯಾಟ), ಒಪ್ಪಾರಿಪ್ಪಾಟ್ಟು (ಶೋಕಗೀತೆ) ಮುಂತಾದ ಸಂದರ್ಭಗಳಲ್ಲಿ ಅಷ್ಟೇ ಅಲ್ಲದೆ ಇತ್ತೀಚೆಗೆ ರಾಜಕೀಯದ ಕಾರ್ಯಕ್ರಮಗಳಲ್ಲೂ ಈ ವಾದ್ಯದ ಬಳಕೆ ಕಾಣಸಿಗುತ್ತದೆ. ಮುಂದುವರಿದು ಕಿವಿಚುಚ್ಚುವ ಶಾಸ್ತ್ರ, ಮೈಮೇಲೆ ದೇವರು ಬರುವ ಸಂದರ್ಭ, ಮೈಮೇಲೆ ದೇವರನ್ನು ಆಹ್ವಾನಿಸುವಾಗ ಕಡ್ಡಾಯವಾಗಿ ಈ ವಾದ್ಯವನ್ನು ಬಳಸುತ್ತಾರೆ.

ಮನರಂಜನೆಯೇ ಮೂಲ ಉದ್ದೇಶವಾಗಿರುವ ಕೊರವ-ಕೊರತಿ ಮುಂತಾದ ಮೇಲ್ಕಂಡ ಆಟಗಳಲ್ಲಿ ನೈಯಾಂಡಿ ಮೇಳದ ವಾದ್ಯಗೋಷ್ಠಿಯೂ ಏರುಶ್ರುತಿಯಿಂದ ಕೂಡಿದ್ದು, ಕಲಾವಿದರು ಕುಣಿತದ ಗತಿಗೆ ತಕ್ಕಂತೆ ವಾದ್ಯವನ್ನು ಕೂಡ ಅನುಲೋಮ ವಿಲೋಮ ಪ್ರಮಾಣದಲ್ಲಿ ನುಡಿಸುತ್ತಾರೆ. ಇದು ನೋಡುಗರನ್ನು ಹೆಚ್ಚು ಆಕರ್ಷಿಸುತ್ತದೆ. ನೈಯಾಂಡಿ ಮೇಳದ ಆಕರ್ಷಣೆಗೆ ಮತ್ತೊಂದು ಕಾರಣ ಇಲ್ಲಿ ಕಲಾವಿದರು ಕೇವಲ ವಾದ್ಯಗಳನ್ನು ಬಾರಿಸುವುದರ ಜೊತೆಗೆ ಹಾಡಿಗೆ ತಕ್ಕಂತೆ ಕುಣಿಯುತ್ತಾರೆ. ಕುಣಿಯುವ ಜೊತೆಗೆ ಗೇಲಿ ಮತ್ತು ವ್ಯಂಗ್ಯವನ್ನು ಕೂಡ ಅಭಿನಯಿಸುತ್ತಾರೆ. ಮೂಲತಃ ನೈಯಾಂಡಿಮೇಳ ಅಥವಾ ಚಿನ್ನಮೇಲವು (ಚಿಕ್ಕಮೇಳ) ಶಾಸ್ತ್ರೀಯ ವಾದ್ಯವಾದ ನಾದಸ್ವರದ ಅನುಕರಣೆಯಂತಿದೆ. ಈ ನೈಯಾಂಡಿಮೇಳ ನೃತ್ಯ ಮತ್ತು ನಾಟಗಳ ಹಿನ್ನೆಲೆಯಾಗಿ ಬರುವ ಮೂಲಕ ಆ ನೃತ್ಯ ಮತ್ತು ನಾಟಕ ಹೆಚ್ಚು ಆಕರ್ಷಕವಾಗುವಂತೆ ಮಾಡುತ್ತದೆ. ಕೀಲುಕುದುರೆ ಕುಣಿತ ಮತ್ತು ಮಾಟಗಾತಿಯರ ಕುಣಿತಕ್ಕೆ ನೈಯ್ಯಾಂಡಿ ಮೇಳ ಅತ್ಯಗತ್ಯವಾದ ವಾದ್ಯ.

ಈ ನೈಯ್ಯಾಂಡಿ ಮೇಳದ ಗೋಷ್ಠಿಯಲ್ಲಿ ಎರಡು ನಾಯನಮ್ (ನಾದಸ್ವರ), ಎರಡು ತವಿಲ್‌ಗಳ (ಡೋಲು), ಪಂಬೈ(ಒಂದು ಬಗೆಯ ಚರ್ಮವಾದ್ಯ), ಒಂದು ತಮ್ಕು, ಒಂದು ಜೊತೆ ತಾಳ, (ಜಾಲ್ರಾ, ಕಂಜ್ರಾ) ಉರುಮಿ(ಒಂದು ಬಗೆಯ ಡೋಲು ವಾದ್ಯ), ಒಂದು ಶ್ರುತಿ ಪೆಟ್ಟಿಗೆ ಇರುತ್ತವೆ.

16_70A_DBJK-KUH

ತಮಿಳುನಾಡಿನಲ್ಲಿ ನೆಯಾಂಡಿ ಮೇಳವನ್ನು ನುಡಿಸುವ ಜನ ಸಮೂಹಗಳಿವೆ. ಇದರಲ್ಲಿ ಅರುಂಧತಿಯರು (ಬಲಗೈ), ಪರೈಯರ್(ಎಡಗೈ), ಪಳ್ಳರ್, ನಾವಿದರ್, ಕಂಬರ್, ದೇವರ್, ವಣ್ಣಾರ್, ಮೊದಲಾದ ವಿವಿಧ ಜಾತಿಯ ಜನರು ನೈಯ್ಯಾಂಡಿ ಮೇಳವನ್ನು ನುಡಿಸುವುದರಲ್ಲಿ ಪರಿಣಿತರಾಗಿದ್ದಾರೆ. ಅರುಂಧತಿಯರು, ಪಳ್ಳರು ಮೊದಲಾದವರು ನುಡಿಸುವ ನೈಯ್ಯಾಂಡಿ ಮೇಳದಲ್ಲಿ ವಿಶೇಷವಾಗಿ ಉರುಮಿ(ಡೋಲು) ಬಳಕೆಯಾಗುತ್ತದೆ. ತಮಿಳುನಾಡಿನಲ್ಲಿ ಕಂಡು ಬರುವ ನೈಯಾಂಡಿ ಮೇಳ ಹೆಚ್ಚಾಗಿ ತೇನಿ, ಮದುರೈ, ವಿರುದುನಗರ್, ಕನ್ಯಾಕುಮಾರಿ, ದಿಂಡುಕ್ಕಲ್, ರಾಮನಾಥಪುರಂ ಈ ಭಾಗಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ತಂಜಾವೂರಿನಲ್ಲಿ ಇದು ‘ತಂಜಾವೂರ್ ಮೇಳಂ’ ಎಂದೇ ಪ್ರಸಿದ್ಧಿಯಾಗಿದೆ. ನೈಯಾಂಡಿ ಮೇಳಕ್ಕೆ ‘ಮೇಳ’ ಅಥವಾ ‘ಕೊಟ್ಟು’ ಎಂಬ ಹೆಸರೂ ಇದೆ.

ಪಿ.ಎಚ್.ವಿ. ಅನುವಾದ ಆರ್.ಎಸ್.

 

ನೋಕುಕುತ್ತಿ ಕೇರಳದಲ್ಲಿ ಇಂದಿಗೂ ಜೀವಂತವಾಗಿರುವ ನಂಬಿಕೆಗಳಲ್ಲಿ ದೃಷ್ಟಿ ಮತ್ತು ವಾಕ್‌ದೋಷ ಮುಖ್ಯವಾಗಿವೆ. ಕೆಲವರ ನೋಟದಲ್ಲಿ, ಕೆಲವರ ಮಾತಿನಲ್ಲಿ ದೊಷ ತಗುಲುವುದೆಂದು ಜನಪದರು ನಂಬಿದ್ದಾರೆ. ನೋಕುಕುತ್ತಿಯನ್ನು ನಿಲ್ಲಿಸುವ ಮೂಲಕ ದೃಷ್ಟಿಯನ್ನೂ, ಅದರ ಪಕ್ಕದಲ್ಲಿ ಬರಹಗಳನ್ನು ಬರೆಯುವ ಮೂಲಕ ಮಾತಿನ ದೋಷವನ್ನೂ ನಿವಾರಿಸಬಹುದು ಎಂದು ಜನರು ನಂಬಿದ್ದಾರೆ.

ಭಾರತದ ಇತರೆಡಗಳಂತೆ ಕೇರಳದಲ್ಲಿಯೂ ದೃಷ್ಟಿ ಮತ್ತು ಮಾತಿನ ಪರಿಣಾಮದ ಬಗ್ಗೆ ನಿರ್ದಿಷ್ಟ ನಂಬಿಕೆಗಳಿವೆ. ಆದರೆ ಬೆರ್ಚಪ್ಪಗಳನ್ನು ನಿಲ್‌ಇಲಸುವ ಮೂಲಕ ಜನರ ಗಮನವನ್ನು ಸೆಳೆದು ದೋಷ ತಟ್ಟದಂತೆ ಜನಪದರು ಪ್ರಯತ್ನಿಸುವರು.

ಯಾವುದೇ ವಸ್ತುಗಳಿಗೆ ದೋಷ ತಟ್ಟದಂತೆ ಅವುಗಳ ಪಕ್ಕದಲ್ಲಿ ಭಯಂಕರವಾದ ಅಥವಾ ವಿರೂಪವಾಗಿರುವ ಆಕೃತಿಗಳನ್ನು ನಿಲ್ಲಿಸುತ್ತಾರೆ. ಸಾಮಾನ್ಯವಾಗಿ ನೂತನವಾಗಿ ಮನೆ ಕಟ್ಟುವಾಗ ಮತ್ತು ಹೊಲಗಳಲ್ಲಿ ನೋಕುಕುತ್ತಿಗಳನ್ನು ನಿಲ್ಲಿಸಲಾಗುತ್ತದೆ. ಇವುಗಳಲ್ಲಿ ಪ್ರಾದೇಶಿ, ಪ್ರಭೇದಗಳಿವೆ. ಸಾಮಾನ್ಯವಾಗಿ ಮಡಕೆಯಲ್ಲಿ ಕಣ್ಣು ಮೂಗು ಬಾಯಿಯ ಚಿತ್ರವನ್ನು ಬರೆದು ಮನುಷ್ಯ ಆಕಾರದಂತೆ ಕಟ್ಟಿ ನಿಲ್ಲಿಸುತ್ತಾರೆ. ಪಾಲಕಾಡು ಪ್ರದೇಶದಲ್ಲಿ ಮೂಕನ್‌ಚಾತನ್ ಆಕಾರವನ್ನು ರಚಿಸುತ್ತಾರೆ. ಕೇರಳದ ದಕ್ಷಿಣಕ್ಕೆ ಹೋದಂತೆ ಪಡಯಣಿಯ ಮಾಡನ್, ಮರುದ, ಪಕ್ಷಕೋಲಗಳನ್ನು ನಿರ್ಮಿಸಿ ನೋಕುಕುತ್ತಿಗಳಾಗಿ ಬಳಸುತ್ತಾರೆ. ಕೇರಳದ ಉತ್ತರಕ್ಕೆ ಬಂದಂತೆ ಕುಚ್ಚಿಚಾಪನ್, ಗುಳಿಗೆ ಮೊದಲಾದ ತೆಯ್ಯಂಗಳ ರೂಪಗಳನ್ನು ನೋಕುಕುತ್ತಿಗಳಲ್ಲಿ ಕಾಣಬಹುದು. ತೆಯ್ಯಂ ಆಕಾರಗಳನ್ನು ವಿರೂಪಗೊಳಿಸಿ ನೋಕುಕುತ್ತಿಗಳನ್ನು ನಿರ್ಮಿಸುವುದೂ ಇದೆ. ಮನೆ, ವಾಹನ ಹಾಗೂ ಸಾಕುಪ್ರಾಣಿಗಳಿಗೆ ದೃಷ್ಟಿ ತಗುಲುವುದೆಂಬ ನಂಬಿಕೆ ಜನರಿಗಿದೆ. ಮನುಷ್ಯರು, ಮಕ್ಕಳು, ಗರ್ಭಿಣಿಯರು, ಮೊಲೆಯೂಣಿಸುವ ತಾಯಂದಿರು, ಸುಂದರಿಯರಿಗೂ ದೃಷ್ಟಿಯಾಗುವುದೆಂದು ಜನರು ನಂಬಿದ್ದಾರೆ.

ಕಣ್ಣುದೃಷ್ಟಿ: ಕೆಲವು ಮಕ್ಕಳು ಮೊಲೆಹಾಲು ಕುಡಿಯಲು ಹಿಂಜರಿಯುತ್ತಾರೆ. ದೃಷ್ಟಿಯೇ ಇದಕ್ಕೆ ಕಾರಣವೆಂದು ಜನಪದರು ನಂಬುತ್ತಾರೆ. ಇದರ ದೋಷ ನಿವಾರಣೆಗಾಗಿ ಮಗುವಿನ ತಾಯಿ ಅಥವಾ ಇತರ ಮಹಿಳೆಯರು ತೆಂಗಿನಕಾಯಿ ತುರಿಯುವ ಮಣೆಯನ್ನು ತಲೆಕೆಳಗಾಗಿ ಇರಿಸುತ್ತಾರೆ. ಅದೇ ರೀತಿ ಕುಡುಗೋಲಿಗೆ ಮೊಲೆಹಾಲನ್ನು ಹರಿಸುವರು. ತುಂಬುಗರ್ಭಿಣಿಯರಿಗೆ ದೃಷ್ಟಿಯಾಗದಂತೆ ಅವರು ಮನೆಯಿಂದ ಹೊರಗಿಳಿಯುವಾಗ ಕಬ್ಬಿಣವನ್ನು ಕೈಯಲ್ಲಿ ಕೊಡುತ್ತಾರೆ. ಎಳೆಯ ಮಕ್ಕಳಿಗೆ ದೋಷ ತಟ್ಟದಂತೆ ೧೦೧ ಒಲೆಗಳ ಬೂದಿಯನ್ನು ಸಂಗ್ರಹಿಸಿ ತಾಯಿತದಲ್ಲಿ ತುಂಬಿಸಿ ಸೊಂಟಕ್ಕೆ ಕಟ್ಟುವ ಕ್ರಮವಿದೆ. ಬಂಜೆಯಾದ ಹೆಂಗಸು ಮಗುವನ್ನು ನೋಡಲು ಬಂದರೆ ದೋಷ ತಟ್ಟುವುದೆಂದು ನಂಬಿಕೆ. ಗಂಡು ಮಕ್ಕಳಿಲ್ಲದ ಹೆಂಗಸು ಹೆಣ್ಣು ಮಗುವನ್ನು ನೋಡಲು ಬಂದರೂ ಹೆಣ್ಣು ಮಕ್ಕಳಿಲ್ಲದ ಹೆಂಗಸು ಗಂಡು ಮಗುವನ್ನು ನೋಡಲು ಬಂದರೂ ದೋಷ ತಟ್ಟುವುದು ಎಂಬ ನಂಬಿಕೆ ಇದೆ.

ದೃಷ್ಟಿ ತಗುಲದಂತೆ ಜನಪದರು ಉಪ್ಪು, ಒಣಮೆಣಸು, ಸಾಸಿವೆಗಳನ್ನು ನಿವಾಳಿಸಿ ಬೆಂಕಿಗೆ ಮಗುವಿಗೆ ದೃಷ್ಟಿ ತಗುಲಿದೆ ಎಂದು ಅರ್ಥ. ಕರಕುಶಲಕರ್ಮಿಗಳು ತಮಗೆ ದೃಷ್ಟಿ ತಗುಲದಂತೆ ಏನಾದರೂ ಕೊರತೆಯನ್ನು ತಮ್ಮ ಕೆಲಸಗಳಲ್ಲಿ ಮಾಡಿರುತ್ತಾರೆ. ಬೆಳೆಗಳಿಗೆ ದೃಷ್ಟಿ ತಗಲುವಂತೆ ಯಾರಾದರೂ ಮಾತನಾಡಿದರೆ, ಯಜಮಾನ ಅದಕ್ಕೆ ವಿರುದ್ಧವಾಗಿ ಮಾತನಾಡಿ ದೋಷವನ್ನು ನಿವಾರಿಸುವನು.

ದೃಷ್ಟಿ ನಿವಾರಣೆಗಾಗಿ ಉತ್ತರ ಕೇರಳದ ಜನರು ನಡೆಸುವ ವಿಧಿಯಾಚರಣೆಗೆ ಕಣ್ಣೀರುಪಾಟು ಎಂದು ಹೆಸರು. ದೃಷ್ಟಿ ತಗುಲಂತೆ ಪುಟ್ಟ ಮಕ್ಕಳ ಕೆನ್ನೆಗೆ ಕಪ್ಪು ಬೊಟ್ಟು ಇಡುವ ಕ್ರಮವಿದೆ. ಯಾರಾದರು ಆಸೆ ತಗುಲಿದರೆ ಮಗುವಿಗೆ ವಾಂತಿಯಾಗುತ್ತದೆಂದೂ, ಇದಕ್ಕಾಗಿ ಉಪ್ಪು ನಿವಾಳಿಸಿ ಒಲೆಗೆ ಹಾಕಿ ದೋಷ ನಿವಾರಣೆ ಮಾಡುವ ಕ್ರಮವಿದೆ.

ದೃಷ್ಟಿ ತಗುಲಿಸುವ ವ್ಯಕ್ತಿ ಈ ಗುಣವನ್ನು ಪರಂಪರೆಯಿಂದ ಹೊಂದಿರುತ್ತಾನೆ ಎಂಬುದು ನಂಬಿಕೆ ಮನೆ ನಿರ್ಮಾನದ ಸಂದರ್ಭದಲ್ಲಿ ಕಾಣದಂತೆ ಮರೆಮಾಚುವುದು ಅಥವಾ ಕಳ್ಳಿ ಗಿಡಗಳನ್ನು ನೆಡುವುದು ದೃಷ್ಟಿ ನಿವಾರನೆಯ ಮಾರ್ಗವಾಗಿದೆ. ಪ್ರಾಣಿಗಳಿಗೆ ದೃಷ್ಟಿ ತಗುಲದಂತೆ ಅವುಗಳ ಕೊರಳಿಗೆ ಕಪ್ಪುದಾರವನ್ನು ಬಿಗಿಯುವ ಪರಿಪಾಠವಿದೆ. ಸುಂದರಿಯರು ಗಲ್ಲಕ್ಕೆ ಕಪ್ಪು ಬೊಟ್ಟು ಇಡುವ ಕ್ರಮವಿದೆ. ವಾಹನಗಳಿಗೆ ದೃಷ್ಟಿ ತಗುಲದಂತೆ ಕಪ್ಪು ಕಂಬಳಿದಾರ, ಲಿಂಬೆ ಮತ್ತು ಮೆಣಸು ಪೋಣಿಸಿ ತೂಗಿಸುವುದು, ಭೀಕರ ರೂಪಗಳನ್ನು ಹಾಕುವುದು ಮೊದಲಾದ ವಿಧಾನಗಳನ್ನು ಅನುಸರಿಸುತ್ತಾರೆ.

ನಾಲಗೆಯ ದೋಷ: ನಾಲಗೆಯಲ್ಲಿ ಕಪ್ಪು ಮಚ್ಚೆ ಇರುವ ವ್ಯಕ್ತಿಗಳು ಹೇಳಿದಂತೆ ಆಗುವುದೆಂದೂ, ಅವರಿಂದ ದೋಷ ತಗುಲುವುದೆಂದೂ ಜನರು ನಂಬಿದ್ದಾರೆ. ಹೀಗೆ ನಾಲಗೆ ಮಚ್ಚೆ ಇರುವವರು ಕೆಟ್ಟದಾಗಿ ಏನಾದರೂ ನುಡಿದರೆ, ಕೂಡಲೇ ಬೈಗುಳ ಹೇಳಬೇಕೆಂದು ಜನರು ನಂಬಿದ್ದಾರೆ. ಕೆಲವು ಒಳ್ಳೆಯ ವಾಕ್ಯಗಳನ್ನು ಬರೆದಿಡುವ ಮೂಲಕ ನಾಲಗೆಯ ದೋಷದಿಂದ ಪಾರಾಗಬಹುದು.

ಜನಪದ ಕಲಾಪ್ರಕಾರಗಳಾದ ಕಾಕರಣ್ಣಿ ನಾಟಕ, ಪಡಯಣಿ, ಮುಡಿಯೇಟ್ ಮೊದಲಾದವುಗಳು ದೋಷ ನಿವಾರಣೆಗೆ ನಡೆಸುವ ಆರಾಧನೆಗಳಾಗಿವೆ. ಸರ್ಕಸ್ಸಿನ ವಿದೂಷಕರೂ ದೃಷ್ಟಿ ನಿವಾರಣೆ ಕೆಲಸವನ್ನು ಮಾಡುತ್ತಾರೆ. ಆಧುನಿಕ ಕಾಲದಲ್ಲಿಯೂ ಜನರಲ್ಲಿ ಕಣ್ಣು ಮತ್ತು ಮಾತಿನ ದೋಷಗಳ ಕುರಿತಾಗಿ ಅನೇಕ ನಂಬಿಕೆಗಳಿವೆ, ಆಚರಣೆಗಳಿವೆ.

ಕೆ.ಯು.ಎಚ್. ಅನುವಾದ ಎನ್.ಎಸ್.