ನಂಬೂದಿರಿಗಳು ಕೇರಳದ ಬ್ರಾಹ್ಮಣರನ್ನು ‘ನಂಬೂದಿರಿ’ ಎನ್ನುತ್ತಾರೆ. ‘ನಂಬಲು ಅರ್ಹನಾದ ಸಜ್ಜನ’ ಎಂಬುದೇ ನಂಬೂದಿರಿ ಎಂಬ ಪದದ ಅರ್ಥ. ‘ಕೇರಳೋತ್ಪತ್ತಿ’ಯಲ್ಲಿ ಕಾಣಸಿಗುವ ಐತಿಹ್ಯದ ಪ್ರಕಾರ ಪರಶುರಾಮ ಉತ್ತರ ಭಾರತದಿಂದ ಕರೆತಂದ ಬ್ರಾಹ್ಮಣರು ನಂಬೂದಿರಿಗಳು. ಅವರು ಅರುವತ್ತನಾಲ್ಕು ಗ್ರಾಮಗಳಲ್ಲಿ ನೆಲಸಿದರು. ಇಂದಿನ ಕೇರಳದ ಗಡಿ ಪ್ರದೇಶ ಮಂಜೇಶ್ವರದಿಂದ ತೊಡಗಿ ಪಾರಶ್ಯಾಲೆ ಎಂಬ ಊರಿನವರೆಗೆ ಮೂವತ್ತೆರಡು ಗ್ರಾಮಗಳಲ್ಲಿ ನಂಬೂದಿರಿಗಳು ವಾಸಿಸುತ್ತಾರೆ. ಮಕ್ಕಳ ಕಟ್ಟನ್ನು ಆಚರಿಸುವ ಆರು ವಿಭಾಗಗಳು ಮತ್ತು ಅಳಿಯಕಟ್ಟು ಆಚರಣೆಯಲ್ಲಿರುವ ಪಯ್ಯನ್ನೂರು ಗ್ರಾಮ-ಇವು ಒಟ್ಟು ಏಳು ವಿಭಾಗಗಳು ಅವರಲ್ಲಿವೆ. ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನಮಾನಗಳನ್ನು ಅನುಸರಿಸಿ ಇವರನ್ನು ಬೇರೆ ಬೇರೆಯಾಗಿ ಗುರುತಿಸಲಾಗಿದೆ. ಇವರನ್ನು ಅತ್ಯುನ್ನತ ಸ್ತರದವರೆಂದು ಪರಿಗಣಿತರಾದವರು ‘ತಂಬ್ರಾ’ಗಳು. ಹಿಂದೆ ತಂಬ್ರಾಗಳ ಎರಡು ತರವಾಡುಗಳಿದ್ದರೆ ಇಂದು ‘ಆಯ್ವಾನ್ಚೇರಿ’ ಎಂಬ ತಂಬ್ರಾ ಕುಟುಂಬ ಮಾತ್ರ ಉಳಿದುಕೊಂಡಿದೆ. ಸಾಮಾದಿರಿ ಅರಸರಿಗೆ ಮಂತ್ರಾಕ್ಷತೆಯ ಅಕ್ಕಿಕಾಳು ಹಾಕಿ ಸ್ವಸ್ತಿ ವಾಚನ ಮಾಡುತ್ತಿದ್ದವರು ಇವರೇ. ಆರು ವರ್ಷಗಳ ಹಿಂದೊಮ್ಮೆ ತಿರುವಾಂಕೂರಿನ ಮಹಾರಾಜರು ತಂಬ್ರಾ ಗಳನ್ನು ಬರಮಾಡಿಸಿ ಆದರಿಸಿ ಗೌರವಿಸಿದ್ದರು.

ಆಢ್ಯರದು ನಂಬೂದಿರಿಗಳಲ್ಲಿ ಇನ್ನೊಂದು ವಿಭಾಗ. ಇವರಿಗೆ ಎಂಟು ಕುಟುಂಬಗಳಿವೆ. ದೇವಾಲಯಗಳಲ್ಲಿಯ ಆಚಾರ ಅನುಷ್ಠಾನಗಳ ಬಗೆಗೆ ಕೊನೆಯ ಮಾತನ್ನು ಹೇಳುವ ಅಧಿಕಾರ ಆಢ್ಯರದು.

ಈ ವಿಶಿಷ್ಟ ಬ್ರಾಹ್ಮಣ ವರ್ಗದಲ್ಲಿ ಎರಡು ಗುಂಪುಗಳಿವೆ-ಅಗ್ನಿಹೋತ್ರಿಗಳು, ಭಟ್ಟತ್ತಿಂಗಳು. ಮೊದಲನೆಯ ವಿಭಾಗದವರು ಯಾಗಗಳನ್ನು ಮಾಡಿ ಅಕ್ಕಿತ್ತಿರಿ, ಅಡಿತಿರಿ, ಜೋಮಾತಿರಿ-ಎಂಬ ಮೂರು ಗಣಗಳಲ್ಲಿ ಹಂಚಿಹೋಗುತ್ತಿದ್ದಾರೆ. ಇನ್ನೊಂದು ಗಣ ಸಾಮಾನ್ಯ ನಂಬೂದಿರಿಗಳದು. ಇವರು ದೇವಾಲಯಗಳ ಪೂಜಾದಿ ಕರ್ಮಗಳನ್ನು ನಿರ್ವಹಿಸುವವರು. ‘ಜಾತಿಮಾತ್ರ’ರೆಂದು ಪರಿಗಣಿತವಾಗುವ ವೈದ್ಯಕುಟುಂಬಗಳದು ಮತ್ತೊಂದು ಗುಂಪು. ಇವರದು ಎಂಟು ತರವಾಡು ಮನೆಗಳು. ಪರಶುರಾಮನ ಶಾಪ ತಗಲಿಸಿಕೊಂಡ ನಂಬೂದಿರಿಗಳದು ‘ಶಾಪಗ್ರಸ್ಥ’ರೆಂಬ ವರ್ಗ. ‘ಅಮ್ಮೋಲ್’ ಎಂದು ಕರೆಸಲ್ಪಡುವ, ಹದಿನಾರು ಕುಟುಂಬಗಳನ್ನೊಳಗೊಂಡ ‘ಪಯ್ಯಾನ್ನೂರು ಗ್ರಾಮವು’ ಅಳಿಯ ಕಟ್ಟನ್ನು ಅನುಸರಿಸುವವರದು. ಅಳಿಯ ಕಟ್ಟು ಆಚರಣೆಯ ಏಕೈಕ ನಂಬೂದಿರಿ ಮನೆತನ ಇವರದು. ಇವರು ‘ತಿರುಮುಂಬ್‌’ ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ.

ನಂಬೂದಿರಿಗಳನ್ನು ಓದು ಉಳ್ಳವರು, ಓದು ಇಲ್ಲದವರು ಎಂದು ಪ್ರತ್ಯೇಕಿಸಿದ್ದಾರೆ. ವೇದಾಧಿಕಾರಿಗಳು ಓದುಳ್ಳವರು; ಅಧಿಕಾರಿಗಳಲ್ಲದವರು ಓದಿಲ್ಲದವರು. ಓದುಳ್ಳವರು ಷೋಡಶ ಸಂಸ್ಕಾರಗಳನ್ನು ಆಚರಿಸುವವರು. ‘ಜಾತಿಮಾತ್ರ’ರೂ ‘ಶಾಪಗ್ರಸ್ತ’ರೂ ವೇದಾಧಿಕಾರವನ್ನಾಗಲಿ, ಷೋಡಶ ಸಂಸ್ಕಾರವನ್ನೂ ಪಾಲಿಸುವ ರೂಡಿಯನ್ನಾಗಲಿ ಇಲ್ಲದವರು.

ಮುಂಜುಟ್ಟು (ತಲೆಯ ಮುಂಭಾಗದಲ್ಲಿ ಜುಟ್ಟು) ತ್ರಿಪುಂಡ್ರ, ಓಲೆಕೊಡೆ ಇವು ನಂಬೂದಿರಿಗಳ ಚಿಹ್ನೆಗಳು. ಇವರು ಮಕ್ಕಳ ಕಟ್ಟನ್ನು ಆಚರಿಸುತ್ತಾರೆ. ಹಿರಿಯ ಮಗನಿಗೆ ಮಾತ್ರ ವಿವಾಹಾವಕಾಶ. ಸ್ವಂತ ಜಾತಿಯಿಂದ ಮದುವೆಯಾಗುವುದನ್ನು ‘ವೇಳಿ’ ಎಂಬ ಹೆಸರಿಂದ ಕರೆದರೆ, ಹಿರಿಯ ಮಗನನ್ನು ಬಿಟ್ಟು ಉಳಿದ ಗಂಡುಮಕ್ಕಳು ಕ್ಷತ್ರಿಯ, ಶೂದ್ರಜಾತಿಗಳ ಹೆಂಗಸರನ್ನು ಇಟ್ಟುಕೊಳ್ಳುವುದನ್ನು ‘ಸಂಬಂಧ’ ಎಂದು ಕರೆಯುತ್ತಾರೆ. ಆದರೆ ತಂಬ್ರಾ ಕುಟುಂಬಗಳಲ್ಲಿ ಹಿರಿಯ ಮಗನಿಗೆ ಮಾತ್ರ ವಿವಾಹ. ಅಪ್ಪನ್ ನಂಬೂದಿರಿಗಳೆಂದು ಕರೆಸಿಕೊಳ್ಳುವ ಕಿರಿಯ ಸಹೋದರರಿಗೆ ‘ಸಂಬಂಧ’ ಮಾಡಿ ಕೊಳ್ಳುವುದಕ್ಕೆ ಕೂಡ ಅವಕಾಶವಿಲ್ಲ. ಒಂದು ಕಾಲದಲ್ಲಿ ಬಹುಪತ್ನಿತ್ವ ಮತ್ತು ಬಾಲ್ಯವಿವಾಹಗಳು ಆಚರಣೆಯಲ್ಲಿದ್ದುವು. ನಂಬೂದಿರಿಗಳು ಶುದ್ಧ ಸಸ್ಯಾಹಾರಿಗಳು.

ಗೋತ್ರ, ಸೂತ್ರ, ಪ್ರವರ, ವೇದ, ವೇದಾಂತ ಎಂಬ ಐದು ವಿಚಾರಗಳು ಪ್ರತಿಯೊಂದು ಬ್ರಾಹ್ಮಣ ಕುಟುಂಬವನ್ನೂ ಇತರ ಗುಂಪುಗಳಿಂದ ಪ್ರತ್ಯೇಕಿಸಿ ಬಿಡುತ್ತವೆ. ಬೇರೆ ಬೇರೆ ಗೋತ್ರಕ್ಕೆ ಸೇರಿದರೆ ಮಾತ್ರ ವಿವಾಹಕ್ಕೆ ಅನುಮತಿ. ಸ್ವಗೋತ್ರ ವಿವಾಹ ಇಲ್ಲ. ಪ್ರತಿಲೋಮ ವಿವಾಹಕ್ಕೂ ಅನುಮತಿ ಇರಲಿಲ್ಲ. ವಿಧವಾ ವಿವಾಹ ನಿಷಿದ್ಧ.

ಭೂಮಸೂದೆ ಜಾರಿಯಾಗುವವರೆಗೆ ನಂಬೂದಿರಿಗಳಿಗೆ ಜೀವನೋಪಾಯಕ್ಕೆ ತೊಂದರೆ ಇರಲಿಲ್ಲ. ಆರ್ಥಿಕವಾಗಿ ಹಿಂದುಳಿದಿದ್ದ ನಂಬೂದಿರಿಗಳು ಭೂಮಾಲೀಕರಾಗಿದ್ದ ನಂಬೂದಿರಿಗಳಿಗೆ ಸಹಾಯಕರಾಗಿದ್ದುಕೊಂಡು ಬದುಕು ಸಾಗಿಸುತ್ತಿದ್ದರು. ಭೂಮಸೂದೆ ಜಾರಿಯಿಂದಾಗಿ ಆ ವ್ಯವಸ್ಥೆಗಳೆಲ್ಲ ಬದಲಾವಣೆಯಾದುವು. ವರ್ಣಾಶ್ರಮ ವ್ಯವಸ್ಥೆಯನ್ನು ನಂಬೂದಿರಿಗಳು ಪಾಲಿಸಿದ್ದರು. ಷೋಡಶ ಸಂಸ್ಕಾರ ಕ್ರಿಯೆಗಳನ್ನು ತಪ್ಪದೆ ಆಚರಿಸುತ್ತಿದ್ದರು.

ನಂಬೂದಿರಿಗಳು ‘ವೇಳಿ’ (ಮದುವೆ) ಮಾಡಿಕೊಂಡು ವಾಸಿಸುವ ಮನೆಗಳಿಗೆ ‘ಇಲ್ಲಂ’ಗಳೆಂದೂ ‘ಸಂಬಂಧ’ ಮಾಡಿಕೊಂಡು ವಾಸಿಸುವ ಮನೆಗಳಿಗೆ ‘ಮಠಂ’ ಎಂದೂ ಹೆಸರು. ‘ವೇಳಿ’ಯಿಂದ ಹುಟ್ಟಿದ ಮಕ್ಕಳಿಗೆ ಮಾತ್ರ ಆಸ್ತಿಯ ಹಕ್ಕು. ಮದುವೆ ಮಾಡಿ ಕೊಟ್ಟ ಬಳಿಕ ಹೆಣ್ಣುಮಕ್ಕಳಿಗೆ ತಂದೆಯ ಮನೆಯಲ್ಲಿ ಯಾವುದೇ ಹಕ್ಕುಗಳು ಇರಲಿಲ್ಲ. ಜಮೀನ್ದಾರರಾಗಿದ್ದ ನಂಬೂದಿರಿಗಳು ಇತರ ಉದ್ಯೋಗಗಳನ್ನು ಮಾಡುವ ರೂಢಿ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಹತ್ತು ದಿನಗಳ ತನಕ ನಡೆಯುತ್ತಿದ್ದ ‘ವೇಳಿ’ ಸಾಮಾನ್ಯ ಸರಳ ವಿವಾಹವಾಗಿದೆ. ಅಪ್ಪನ್ ನಂಬೂದಿರಿಗಳ ‘ಸಂಬಂಧ’ ನಿಂತು ಹೋಗಿದೆ. ಪ್ರತಿಲೋಮ ವಿವಾಹ, ವಿಧವಾ ವಿವಾಹಗಳು ರೂಢಿಯಾಗಿವೆ. ಮೇಲು ಕೀಳು ಭಾವನೆ ತೊಲಗಿದೆ. ಮುಖ್ಯಧಾರೆಗೆ ನಂಬೂದಿರಿಗಳು ಸೇರುತ್ತಿದ್ದಾರೆ. ಚೌಕಟ್ಟಿನ ಮನೆಗಳು, ಪಡಿಪ್ಪುರೆಗಳು, ಪತ್ತಾಯಪುರೆಗಳು (ಭವ್ಯ ಪ್ರವೇಶದ್ವಾರ ಮತ್ತು ಬೃಹತ್ ಉಗ್ರಾಣದ ಮನೆಗಳು) ಕಣ್ಮರೆಯಾಗಿವೆ. ಸಣ್ಣ ಮನೆಗಳಲ್ಲಿ ವಿಭಕ್ತ ಕುಟುಂಬಗಳಾಗಿ ವಾಸಿಸುತ್ತಿದ್ದಾರೆ.

.ಕೆ.ಜಿ. ಅನುವಾದ ಕೆ.ಕೆ.

 

ನಗಾರಿ ನಗಾರಿ ಒಂದು ಚರ್ಮವಾದ್ಯ, ನಗಾರಿಗೆ ಪ್ರಾಚೀನ ಕಾಲದಲ್ಲಿ ಭೇರಿ, ದುಂದುಭಿ ಎಂದು ಕರೆಯುತ್ತಿದ್ದರು. ‘ಭೂಮಿ ದುಂದುಭಿ’ ಎಂಬುದು ನಗಾರಿ ಪ್ರಕಾರಗಳಲ್ಲಿ ಪ್ರಾಚೀನವಾದ್ದಾಗಿರಬಹುದು. ಭೂಮಿದುಂದುಭಿ ಎಂದರೆ ನೆಲದಲ್ಲಿ ತಗ್ಗು ಮಾಡಿ ಅದರ ಮೇಲೆ ಚರ್ಮವನ್ನು ಹೊದಿಸಿ ಬಾರಿಸುತ್ತಿದ್ದ ಒಂದು ವಾದ್ಯ ಎಂದು ಹೇಳಲಾಗುತ್ತದೆ.

ನಗಾರಿಯ ಬಳಕೆ ಬಹಳ ಪ್ರಾಚೀನ ಕಾಲದಿಂದಲೂ ಇದೆ. ಇದನ್ನು ಬೇರೆ ಬೇರೆ ಉದ್ದೇಶಕ್ಕಾಗಿ ಬಳಸುತ್ತಿದ್ದರು. ರಾಜರು ನಗಾರಿಗಳನ್ನು ಕೋಟೆಯ ಬಾಗಿಲಿನಲ್ಲಿ ಇಡುತ್ತಿದ್ದರು. ಪ್ರಜೆಗಳಿಗೆ ಅನ್ಯಾಯವಾಗಿದ್ದರೆ ರಾಜನಿಗೆ ಸಲಹೆ ಸೂಚನೆಗಳನ್ನು ತಿಳಿಸಬೇಕಾಗಿದ್ದರೆ, ಪುರಜನರು ನಗಾರಿಯನ್ನು ಬಡಿಯುತ್ತಿದ್ದರು. ರಾಜ ಬಂದು ಅವರನ್ನು ವಿಚರಿಸುತ್ತಿದ್ದ. ವೈರಿಗಳು ಬರುತ್ತಿದ್ದರೆ ಸೈನಿಕರು ಅವರನ್ನು ದೂರದಿಂದ ಕಂಡು ಕೋಟೆಯ ಮೇಲಿರುವ ಅಥವಾ ಊರ ಹೊರಗೆ ಎತ್ತರ ಪ್ರದೇಶದಲ್ಲಿಟ್ಟಿರುವ ನಗಾರಿಯನ್ನು ಬಾರಿಸುತ್ತಿದ್ದರು. ರಾಜರು ಸೇನಾಧಿಪತಿಗಳು ನಗಾರಿ ಶಬ್ದ ಕೇಳಿ ವೈರಿಗಳನ್ನು ಸದೆಬಡಿಯಲು ಸೈನ್ಯಸಜ್ಜುಗೊಳಿಸುತ್ತಿದ್ದರು. ಯುದ್ಧದಲ್ಲಿ ಗೆದ್ದು ಬಂದರೆ ಸಂತೋಷಕ್ಕೂ ನಗಾರಿಯನ್ನು ಬಾರಿಸುತ್ತಿದ್ದರು. ಯುದ್ಧದಲ್ಲಿ ಸೈನಿಕರಿಗೆ ಸ್ಪೂರ್ತಿ ಶಕ್ತಿ ತುಂಬುವುದ ಕ್ಕೋಸ್ಕರ ನಗಾರಿ ಬಡಿಯುತ್ತಿದ್ದರು.

ಸಾಮಾನ್ಯವಾಗಿ ಹೆಣ್ಣು ದೇವತೆ ಇದ್ದ ಕಡೆ ನಗಾರಿ ಇದ್ದೇ ಇರುತ್ತದೆ. ದೇವಿಯ ಪೂಜೆ ನಡೆದಾಗ ನಗಾರಿಯನ್ನು ಬಾರಿಸುತ್ತಾರೆ. ದುರುಗವ್ವ, ದ್ಯಾಮವ್ವನ ಗುಡಿಗಳಲ್ಲಿ ಮುಂಜಾನೆ ಸಾಯಂಕಾಲ ನಗಾರಿ ಬಾರಿಸುತ್ತಾರೆ. ಜಾತ್ರೆ ಉತ್ಸವ ಮುಂತಾದ ವಿಶೇಷ ಸಂದರ್ಭಗಳಲ್ಲಿ ನಗಾರಿಯನ್ನು ಕೆಲ ಕಡೆ ಎತ್ತಿನ ಮೇಲಿಟ್ಟುಕೊಂಡು ಬಾರಿಸುತ್ತಾರೆ. ಗೌಡ, ಕುಲಕರ್ಣಿಗಳಿಗೆ ಇದು ಗೌರವ ಮತತು ಪ್ರತಿಷ್ಠೆಯ ಸಂಕೇತವಾಗಿತ್ತು. ಕೆಲವೊಂದು ಕಡೆಗಳಲ್ಲಿ ಜೋಡಿ ನಗಾರಿಯನ್ನು ಹೊಂದಿದ ಗುಡಿಗಳಿವೆ. ಅಲ್ಲಿ ಏಕಕಾಲಕ್ಕೆ ಎರಡು ನಗಾರಿಯನ್ನು ಬಾರಿಸುತ್ತಾರೆ. ಇದರಿಂದ ಮಂದ್ರವಾದ ಸ್ವರನಾದ ಬರುತ್ತದೆ. ನಗಾರಿ ಬಡಿಯುವುದು ಒಂದು ಕಲೆ. ಲಯ ಮತ್ತು ತಾಳಬದ್ಧವಾಗಿ ಬಡಿದರೆ ಮಾತ್ರ ಅದರ ಸೊಗಸಾದ ಶಬ್ದ ಕಿವಿಗೆ ಇಂಪನ್ನು ಕೊಡುತ್ತದೆ. ನಗಾರಿಯಿಂದ ಸೂಕ್ಷ್ಮವಾದ ಶಬ್ದ ತರಂಗಗಳನ್ನು ಹೊರಡಿಸುವುದಕ್ಕೆ ಬರುವುದಿಲ್ಲ. ಧನಧನಧಂಧನ ಎಂದು ಒಂದೇ ಪ್ರಕಾರದ ಹೊಡೆತದಿಂದ ಸುತ್ತಲೂ ಗಂಭೀರವಾದ ವಾತಾವರಣ ಮೂಡುತ್ತದೆ. ಆ ಶಬ್ದ ಬಹುದೂರದವರೆಗೆ ಕೇಳಿಸುತ್ತದೆ. ಪಟಾ ಕುಣಿತ, ಪೂಜಾ ಕುಣಿತ, ಸುಗ್ಗಿ ಮೇಳಗಳು ತಮಟೆ ಜೊತೆಗೆ ನಗಾರಿ ಗತ್ತು ಇಲ್ಲದೆ ನಡೆಯಲಾರವು. ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಂತೂ ನಗಾರಿ ಇದ್ದೇ ಇರುತ್ತದೆ.

ಎಚ್.ಸಿ.ಬಿ.

 

ನಡವುಪ್ಪಾಟ್ಟು ಜನಪದೀಯವಾಗಿ ನಾಟಿ ಎನ್ನುವುದು ಜನರ ಬದುಕಿನೊಂದಿಗೆ ಬೆಳೆದು ಬಂದ ಪರಂಪರೆ. ಇರುವ ಬೂಮಿಯನ್ನು ಉತ್ತಿಬಿತ್ತುವುದರಿಂದ ಮಾನವನ ಹೊಟ್ಟೆಪಾಡಿನ ಹಂಗು ನಿವಾರಣೆಯಾಗುತ್ತದೆ. ಹಳ್ಳಿಗಳಲ್ಲಿ ನಾಟಿಮಾಡುವ ಪರಂಪರೆಯೂ ಇಂದಿನದಲ್ಲ. ಅದು ಬಹಳ ಹಿಂದಿನಿಂದಲೂ ನಡೆದು ಬಂದ ವ್ಯವಸಾಯ ಪ್ರಧಾನವಾದ ಉತ್ತಮ ಪರಿಕಲ್ಪನೆ. ಉಳ್ಳವನ ಭೂಮಿಯಲ್ಲಿ ಟೊಂಕಕಟ್ಟಿ ದುಡಿಯುವ ವ್ಯವಧಾನವನ್ನು ನಾಟಿಯ ಪರಂಪರೆ ತಿಳಿಸಿಕೊಡುತ್ತದೆ.

ನಾಟಿ ಎನ್ನುವ ಪದವನ್ನು ನಾಟಿ ಹಾಡುಗಳು ಕುಲವೈ, ತೊಗೈಯರಾ, ಮುನ್‌ಪಾಟ್ಟು, ಪಿನ್‌ಪಾಟ್ಟು ಎಂಬ ರೀತಿಯಲ್ಲಿ ಕರೆಯಲಾಗುತ್ತದೆ. ನಾಟಿ ಮಾಡುವಾಗ ಹಾಡುವ ಹಾಡುಗಳು ದೇವರನ್ನು ಸ್ತುತಿಸಿಕೊಂಡು ಪೈರು ಬೆಳೆಯುವಿಕೆಯನ್ನು, ವ್ಯವಸಾಯ ಉತ್ಪತ್ತಿಯನ್ನು, ಪ್ರೇಮ ಮತ್ತು ಸಂಬಂಧಿಕರನ್ನು ಕುರಿತಂತೆ ಹಾಡುಗಳನ್ನು ಕಟ್ಟಿ ನಾಟಿ ಮಾಡುವ ಸಂದರ್ಭದಲ್ಲಿ ತಮ್ಮೊಳಗಿನ ನೋವುಗಳನ್ನು ನಲಿವುಗಳನ್ನು ಕೆಲಸದ ಮುಖೇನ ಮರೆಯುತ್ತಾರೆ. ನಾಟಿ ಮಾಡುವ ಹೆಂಗಸರು ಪದೇ ಪದೇ ಸೊಲ್ಲನ್ನು ಎತ್ತಿ ತಮ್ಮಲ್ಲೇ ಹಾಡಿಕೊಳ್ಳುತ್ತಾರೆ. ಜಮೀನ್ದಾರನು ತನ್ನ ಹೊಲವನ್ನು ನೋಡಲು ಬರುವಾಗ ಆತನನ್ನು ತೃಪ್ತಿಪಡಿಸಲು ಅಥವಾ ಹೊಗಳಲು ಸೊಲ್ಲನ್ನು ಎತ್ತಿ ಹೆಂಗಸರು ಹಾಡನ್ನು ಹಾಡುತ್ತಾರೆ.

ಬೇರೆಯ ಹೆಂಗಸರು ಯಾರಾದರೂ ನಾಟಿಮಾಡಿಕೊಂಡಿರುವಾಗ ತೆವರಿಯ ಮೇಲೆ ಜಮೀನ್ದಾರನು ಬಂದಾಗ, ತೆರವರಿಯ ಮೇಲೆ ಪೈರಿನ ಕಂತೆಗಳನ್ನು ಹಾಕಿಬಿಡುವರು. ಏಕೆಂದರೆ ಪೈರಿನ ಕಂತೆಯೂ ಹಸುಕಂದಮ್ಮನಿಗೆ ಸಮ. ಮಗುವನ್ನು ದಾಟಿಹೋಗುವ ಪದ್ಧತಿ ಹೇಗೆ ಇಲ್ಲವೋಹಾಗೆಯೇ ಈ ಕಂತೆಗಳನ್ನು ದಾಟಿ ಹೋಗುವ ಪದ್ಧತಿಯೂ ಇಲ್ಲ. ಈ ಅಭಿಮತದ ಪ್ರಕಾರ ಆ ತೆವರಿಯ ಮೇಲೆ ಬರುವ ಜಮೀನುದಾರನಿಂದ ಹಣ ಪಡೆಯುವುದೇ ನಾಟಿ ಹಾಕುವ ಹೆಂಗಸರ ಕಲೆಗಾರಿಕೆಯಾಗಿದೆ.

ಈ ರೀತಿ ಮಾಡುವಾಗ ಪಲ್ಲವಿಯನ್ನು (ಸೊಲ್ಲನ್ನು) ಹಾಡುವುದು, ಲೇವಡಿ ಮಾಡುವುದು ಹಾಗೂ ಭಾವನೆಗಳನ್ನು ತಿಳಿಸುತ್ತಿದ್ದೇವೆ ಎಂಬುದನ್ನು ತಿಳಿಸುವ ಪ್ರಯತ್ನವಾಗಿ ಕುಲವೈ ಎಂಬ ಸೊಲ್ಲನ್ನು ಹಾಡುತ್ತಾರೆ. ಹಾಡುಗಳನ್ನು ಹಾಡುವವರು ಹಾಡಿನ ಮಟ್ಟು ಬದಲಾಗುವ ಸಂದರ್ಭದಲ್ಲಿ ಕುಲವೈ ಎಂದು ಹಾಡುವುದುಂಟು. ಈ ರೀತಿ ಪ್ರಾರಂಭವಾಗುವ ಹಾಡನ್ನು ಕೊನೆಯವರೆಗೂ ಹಾಡಿದ ಮೇಲೆ ಮತ್ತೊಬ್ಬರು ಇನ್ನೊಂದು ಸೊಲ್ಲನ್ನು ಹಾಡಲು ಆರಂಭಿಸುವರು. ಅದಲ್ಲದೆ ಮೊದಲನೆಯದಾಗಿ ಸೊಲ್ಲೆತ್ತುವವರು ನಾಟಿ ಕೆಲಸವನ್ನು ಮಾಡಲು ಉತ್ಸಾಹದ ನೆಲೆಗೆ ಹೋಗಲೆಂದು ತೋರಿಸುವುದನ್ನು ಸೊಲ್ಲನ್ನು ಎತ್ತುತ್ತಾರೆ. ಅದೇ ರೀತಿಯಾಗಿ ನಾಟಿ ಕೆಲಸ ಮುಗಿದ ಮೇಲೂ ಹೆಂಗಸರು ಸೊಲ್ಲನ್ನು ಹಾಡುವ ಪದ್ಧತಿ ಉಂಟು. ಇದು ಏನನ್ನು ತಿಳಿಸುತ್ತದೆ ಎಂದರೆ ಮಂಗಳದಾಯಕ ಸೂಚನೆಯನ್ನು ತಿಳಿಸಿಕೊಡುತ್ತದೆ.

ತೊಗೈಯಾರಾ-

ತಾಜ ಮೀನೆಂದು ಸಾರಿ
ನವಿಲಿನ ಹಾಗೆ ಬಂದ ಹೆಣ್ಣು
ಗೆಂಡೆಮೀನು, ಬಾಂಗ್ಡೆ ಮೀನು
ಎಂದು ಸಾರುತ ಬಂದ ಹೆಣ್ಣು

ಚಿನ್ನದ ಕೊಳಲನ್ನು ಊದಿಸಿ
ಹಾಡಿರಿ ಹೆಣ್ಣುಗಳೇ
ಪೂಜೆಗೆ ಹೂವುಗಳ ಕಟ್ಟಿ
ನೈವೇದ್ಯಕ್ಕೆ ಬೆಲ್ಲದ ಅನ್ನವಿಟ್ಟು
ಸಂತೋಷ ಉಕ್ಕುವ ಸಮಯದಲಿ
ಮುನಿಯಪ್ಪನಿಗೆ ಪೂಜೆ ನಡೆಯುತ್ತಿರುವಾಗ
ಚಿನ್ನದ ಕೊಳಲನ್ನು ಊದಿಸಿ
ಹಾಡಿರಿ ಹೆಣ್ಣುಗಳೇ

ನಾಟಿ ಹಾಡುಗಳಲ್ಲಿ ಎರಡು ವಿಧ. ೧ತಮಿಳು ಅಕ್ಷರ (ಕ್) ದಂತೆ ಮೂರು ಸ್ಥಳಗಳಲ್ಲಿ ನಾಟಿ ಮಾಡಲು ಹೋಗುವ ಪದ್ಧತಿಯೂ ಉಂಟು. ಈ ನಾಟಿಯನ್ನು ಮಾಡುವಂಥ ಸಂದರ್ಭದಲ್ಲಿ ಐದು ಅಥವಾ ಪೈರುಗಳನ್ನು ಹಿಡಿದು ನಾಟಿ ಮಾಡುವುದು ಕಂಡು ಬರುತ್ತದೆ. ಇದನ್ನು ‘ಮುಕ್ಕನಿನಾಲ್’ ನಾಟಿ ಪದ್ಧತಿ ಎಂದು ಕರೆಯುವರು. ೨. ಪೈಟರಿನ ನಾಟಿ ಪದ್ಧತಿ: ಒಂದೇ ಬಗೆಯ ಪೈರನ್ನು ಎತ್ತಿಕೊಂಡು ಹಗ್ಗ ನಾಟಿ ಮಾಡುವುದಕ್ಕೆ ನೇರ ನಾಟಿ ಎಂದು ಹೆಸರು. ಹಗ್ಗ ನಾಟಿ ಎಂದರೆ ಒಂದು ಹಗ್ಗವನ್ನು ಹಿಡಿದು ಸಾಲುಗಳನ್ನು ಮಾಡಿಕೊಂಡು ನಾಟಿ ಮಾಡುವ ಪದ್ಧತಿಯಾಗಿದೆ.

ನಾಟಿ ಮಾಡಲು ತೊಡಗುವ ಮೊದಲು ಗದ್ದೆಯೊಳಗೆ ಶನಿಮೂಲೆ ಚದರವಾಗಿ ತೆವರಿನವರೆಗೆ ಹಾಗೂ ನೆಲಭಾಗ ಗದ್ದೆಯ ಒಂದು ಮೂಲೆಯಿಂದ ನಾಟಿಯನ್ನು ಮಾಡಲು ಆರಂಭಿಸಿ ಗದ್ದೆಯ ಪೂರ್ತಿ ನಾಟಿ ಮಾಡುವರು. ಒಂದು ಎಕರೆ ಭೂಮಿಯಲ್ಲಿ ಸುಮಾರು ಹದಿನಾರು ಹೆಂಗಸು ಸೇರಿಕೊಂಡು ನಾಟಿ ಮಾಡುವುದಕ್ಕೆ ಸುಮಾರು ಮೂರುಗಂಟೆ ಆಗಿಬಿಡುವುದು. ಬೆಳಗ್ಗೆ ಅಂಬಲಿ ಕುಡಿದು ಸುಮಾರು ಹತ್ತು ಗಂಟೆಗೆ ನಾಟಿ ಮಾಡುವ ಕಾಯಕಕ್ಕೆ ತೊಡಗುವ ಹೆಂಗಸರು ಮಧ್ಯಾಹ್ನದ ಎರಡು ಅಥವಾ ಮೂರು ಗಂಟೆಗೆ ಕೆಲಸ ಮುಗಿಸುವರು. ನಾಟಿಯನ್ನು ಬಹು ವೇಗವಾಗಿ ಮಾಡುವುದಕ್ಕೆ ಆ ನಾಟಿ ಹಾಕುವ ಹೆಂಗಸರುಗಳ ತಮ್ಮಲ್ಲೇ ತೀರ್ಮಾನಿಸಿಕೊಳ್ಳುತ್ತಾರೆ. ಅಂದರೆ ಜಮೀನ್ದಾರನ ಗದ್ದೆಯಲ್ಲಿ ಕೂಲಿಗಾರರು ಒಡೆಯನ ಗದ್ದೆಯನ್ನು ಚೆನ್ನಾಗಿ ಉತ್ತು ಹೆಂಟೆಗಳನ್ನು ಸಮನಾಗಿ ಒಡೆದು ಸಮಪ್ರಮಾಣದ ನೀರನ್ನು ಬಿಟ್ಟು ಭೂಮಿಯನ್ನು ಸಮನಾಗಿ ಮಾಡಿದರೆ ಹದಗೊಂಡ ಭೂಮಿಯೂ ನಾಟಿ ಕೆಲಸಕ್ಕೆ ಸುಲಭವಾಗಿ ಕಾಣುತ್ತದೆ.

ಹೆಚ್ಚು ಸಮಯ ನಾಟಿ ಮಾಡುವ ಹೆಂಗಸರು ಮೊದ ಮೊದಲು ಗದ್ದೆಯ ಬಳಿ ನಾಟಿ ಮಾಡಲು ಬಂದಂತಹ ಸಂದರ್ಭದಲ್ಲಿ ಆ ಹೆಣ್ಣುಗಳು ಮೊದಲು ಪೂಜೆಯನ್ನು ಮಾಡುತ್ತಾರೆ. ಏಕೆಂದರೆ ಪೂಜೆ ಮಾಡುವುದರಿಂದ ತಮ್ಮ ಕೆಲಸ ಸುಗಮವಾಗಿ ಮುಗಿಯುತ್ತದೆ. ಅಲ್ಲದೇ ಯಾವ ಕಷ್ಟವೂ ಇಲ್ಲದೆ ನಿರಾಳವಾಗಿ ನಾಟಿ ಕೆಲಸ ಮುಗಿಯುತ್ತದೆ ಎಂಬ ಅಭಿಪ್ರಾಯ ನಾಟಿ ಮಾಡುವ ಹೆಂಗಸರಲ್ಲಿ ಪರಂಪರಾಗತವಾಗಿ ಬೆಳೆದು ಬಂದಿರುವುದನ್ನು ಕಾಣುತ್ತೇವೆ.

ನಾಟಿ ಹಾಕುವುದರಲ್ಲಿ ನಾಟಿಗೆ ಇಳಿಯುವುದು, ನಾಟಿಗೆ ಏರುವುದು ಎಂದು ಎರಡು ಹಂತಗಳಿವೆ. ಇವುಗಳ ಅರ್ಥ ಇ ಕೆಳಕಂಡಂತಿದೆ- ‘ಗದ್ದೆಯಲ್ಲಿ ನಾಟಿ ಮಾಡಲು ಎಲ್ಲರೂ ಇಳಿದು ನಾಟಿ ಕೆಲಸ ಮಾಡುವ ಕ್ರಮಕ್ಕೆ ನಾಟಿಗೆ ಇಳಿಯುವುದು ಎಂದೂ ಕರೆಯುತ್ತಾರೆ.’ ಒಡೆಯನನ್ನು ಕುರಿತ ಹಾಗೆ ತೊಗೈಯಾರಾ ಹಾಡಿನ ಮೂಲಕ ಒಬ್ಬಾಕೆ ಏರುಧ್ವನಿಯಲ್ಲಿ ಮೊದಲು ಹಾಡನ್ನು ಪ್ರಾರಂಭಿಸಿದರೆ, ಅನಂತರ ಇನ್ನೊಬ್ಬಾಕೆ ಆ ಹಾಡನ್ನು ಪೂರ್ಣಗೊಳಿಸಲು ಎಂಬಂತೆ ಧ್ವನಿಯನ್ನು ಜೊತೆಗೂಡಿಸುತ್ತಾಳೆ. ಇದನ್ನು ನಾಟಿಗೆ ಏರುವುದು ಎಂದು ಕರೆಯುತ್ತಾರೆ.

ತೊಗೈಯಾರಾ-

ಸೂರ್ಯನೇ ಚಂದ್ರನೇ
ಸ್ವಾಮಿ ಭಗವಾನನೇ
ಇಂದ್ರನಂತೆ ನೋಡಿದೆ ಪೈರನ್ನು
ಬೆಳೆಯುವ ಆ ಬಗೆಯನ್ನು

ಚಂದ್ರನ ನೋಡಿ ಎತ್ತಿದೆ
ಆ ಬಗೆಯ ಪೈರನು

ಪೈರಿನ ಮೆರಗು ಛಿದ್ರವಾಗದಂತೆ
ಮಳೆ ಮಾರಿ ಹೂಯ್ಯಬೇಕು
ಸಕಲ ಜೀವರಾಶಿಗಳು ಉಳಿಯಲು

ಸೃಷ್ಟಿಗೆ ಒಡೆಯನು ನೀನು
ಚಿನ್ನದ ಪೈರು ಎತ್ತುವಾಗ
ತುಸುವು ಚೆದರದೆ
ಸಮೃದ್ಧಿಯ ದಯಪಾಲಿಸುವವನೇ

ಹೊಚ್ಚ ಹೊಸ ಮಡಕೆಯಲಿ
ಮಾರಮ್ಮನ ಹೊಸ್ತಿಲಲಿ
ಪೊಂಗಲಿಟ್ಟು ನಮಿಸುವೆವು
ಆದಿ ಭಗವಾನನೇ

ಜಮೀನ್ದಾರರು ನಾಟಿ ಕೆಲಸ ಹೇಗೆ ನಡೆಯುತ್ತಿದೆ ಎಂಬುದನ್ನು ಗಮನಿಸಲು ಬರುವಂತಹ ಸಂದರ್ಭದಲ್ಲಿ ನಾಟಿ ಮಾಡುವ ಪೈರನ್ನು ತೆವರಿನ ಮೇಲೆ ಹಾಕಿ, ಒಡೆಯನನ್ನು ಹೋಗಲೀಯದೆ ಅವನಿಂದ ಕಾಣಿಕೆ ಪಡೆಯುವುದುಂಟು. ಆ ಹಾಡನ್ನು ನಾಟಿ ಮಾಡುವ ಹೆಂಗಸರು ಜಮೀನ್ದಾರನ್ನು ಹೊಗಳುವ ಸಲುವಾಗಿಯೇ ಹಾಡುವರು.

ವೃತ್ತಾಕಾರದ ಛತ್ರಿ ಹಿಡಿದು
ಗದ್ದೆ ನೋಡಲು ಬರುವಾಗ
ಗದ್ದೆ ಪೂರ್ತಿ ಪೈರಾಯ್ತು
ಹೊಲವೆಲ್ಲ ತೋಪಾಯ್ತು

ಎತ್ರದ ಛತ್ರಿ ಹಿಡಿದು
ನಮ್ಮ ಯಜಮಾನ್ರು ಬರುವ ನೆಲ
ಹಚ್ಚ ಹಸಿರಿನಿಂದ ಕಂಗೊಳಿಸಿತು

ಮಾವನ ಮಗ ಅಲ್ಲದೆ ಸಂಬಂಧಗಾರರು ತೆವರಿಗಳ ಮೇಲ ನಡೆದು ಹೋಗುವಾಗ ಹಾಡುವ ಹಾಡಾಗಿ ಈ ಕೆಳಕಂಡ ಸಾಲುಗಳನ್ನು ಕಾಣಬಹುದಾಗಿದೆ-

ನಮ್ಮನ್ನು ನರ್ತಕಿ ಎನ್ನುವ
ಇವನಿಗೆ ಇಬ್ಬರು ಹೆಂಡಿರು
ಆಡು ಮರಿಗೂ ಹೆಗಲಾಗಿರುವ
ಹಾಡುವ ಮರಿಗೆ ಹಾಲು ಕೊಡುವ
ಕೆಲಸಗಾತಿಗೆ ಸಂಬಳ ಕೊಡುವ
ಕೆಲಸದವರಿಗೆ ಅಡ್ಡೆ ನೀಡುವ
ತೊಡೆ ತುಂಬಿದ, ಮಲಗಿ
ಒರಳುವ ಮಾವಿನಂತ ಹೆಣ್ಣಿಗೆ
ಮನಸ್ಸನ್ನು ಕೊಡುವ

ಗದ್ದೆಯಲ್ಲಿ ನಾಟಿ ಮಾಡಿದ ಅನಂತರ ತೆವರಿನ ಮೇಲ್ಭಾಗಕ್ಕೆ ಏರುವ ಸಂದರ್ಭದಲ್ಲಿ ಹಾಡುವ ಹಾಡನ್ನು ಈ ಕೆಳಕಂಡ ರೀತಿಯಲ್ಲಿ ಕಾಣಬಹುದು-

ಮುಟ್ಟಿ ಕೇಳುವರು
ನುಗ್ಗೇಕಾಯಿ ಒಗ್ಗರಣೆಯ
ತಲೆಯ ಮೇಲೆ ಹಿಟ್ಟು ಹೊತ್ತು
ತಲೆ ನೋವುದು ಎನ್ನುವಳು
ಹಚ್ಚ ಹಸರಿನ ಗಿಣಿಯಂತೆ
ಪಾಂಡ್ಯರು ಏರು ಉಳುವರು
ಮುದ್ದಿನ ಅರಗಿಣಿಯಂತೆ
ಊಟ ಹೊತ್ತು ಬರುವಾಗ

ಈ ರೀತಿಯಾಗಿ ನಾಟಿ ಹಾಕಲು ಹೋದ ಹೆಂಗಸರುಗಳು ನಾಟಿ ಹಾಕಲೆಂದು ಗದ್ದೆಯ ಒಳಗೆ ಇಳಿದ ತಕ್ಷಣದಿಂದ ಹಿಡಿದು ತಾವು ಕೊನೆಯಲ್ಲಿ ತೆವರಿ ಮೇಲೆ ಏರುವ ತನಕ ಈ ತೆರನಾದ ಹಾಡುಗಳನ್ನು ಹಾಡುತ್ತಾ ತಮ್ಮ ಕೆಲಸವನ್ನು ಮಾಡಿ ಮುಗಿಸುವರು.

ಕೆ.ಎ.ಜಿ.ಅನುವಾದ ಆರ್.ಎಸ್.

ನಲುಂಗು ಪಾಡಲ್ ತಮಿಳುನಾಡಿನ ಮದುವೆ ಹಾಡುಗಳಲ್ಲಿ ಒಂದು ಬಗೆ. ಸಾಂಪ್ರದಾಯಿಕ ಮದುವೆಗಳಲ್ಲಿ ಇದು ಅತ್ಯಗತ್ಯವಾಗಿ ನಡೆಯಬೇಕಾಗಿರುವ ಒಂದು ಕಾರ್ಯಕ್ರಮ. ದೃಷ್ಟಿ ದೋಷ ಪರಿಹಾರಕ್ಕಾಗಿ ಇದನ್ನು ನಡೆಸಲಾಗುತ್ತದೆ. ಅಲ್ಲದೆ ಸಮಯವನ್ನು ಉಪಯುಕ್ತವಾಗಿ ಕಳೆಯಲು, ವಧು ಮತ್ತು ವರನ ಕಡೆಯ ಕುಟುಂಬಗಳು ಪರಸ್ಪರ ನಿಕಟ ಸಂಪರ್ಕ ಬೆಳೆಸಲು ಹಾಗೂ ಹೆಣ್ಣು ಮತ್ತು ಗಂಡು ನಾಚಿಕೆಯನ್ನು ದೂರ ಮಾಡಲು ಇಂತಹ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. ಹೊಸ ಸಂಬಂಧಗಳು ಹೆಚ್ಚು ಪಳಗಳು ಅದಕ್ಕೆ ಅನುಕೂಲಕರವಾದ ಸನ್ನಿವೇಶವನ್ನು ಇಂತಹ ಕಾರ್ಯಕ್ರಮ ಸಹಾಯವಾಗುತ್ತದೆ.

ಇಂತಹ ಸಂದರ್ಭದಲ್ಲಿ ಹಾಡುವ ಹಾಡುಗಳು ಹಾಸ್ಯಭರತವಾಗಿಯೂ ಕೆಲವು ಹಾಡುಗಳು ಪ್ರೇಮಾಂಕುರವನ್ನುಂಟು ಮಾಡುವಂಥವೂ ಆಗಿರುತ್ತವೆ. ಕರ್ನಾಟಕ ಸಂಗೀತದ ಪರಿಚಯವಿರುವಂತಹ ಹಾಡುಗಾರರು ಈ ಹಾಡುಗಳನ್ನು ಆನಂದ ಭೈರವಿ ರಾಗದಲ್ಲಿ ಹಾಡಬೇಕೆಂದು ಹೇಳುತ್ತಾರೆ. ಈ ಕಾರ್ಯಕ್ರಮದಲ್ಲಿ ವಧು ಮತ್ತು ವರನ ಒಡಹುಟ್ಟಿದವರು ವಿಶೇಷವಾಗಿ ಭಾಗವಹಿಸುತ್ತಾರೆ. ಅರಿಶಿನ, ಕುಂಕುಮ, ಚಂದನ, ಆರತಿ, ಹೂವು ಮುಂತಾದವುಗಳನ್ನು ಈ ಕಾರ್ಯಕ್ರಮದಲ್ಲಿ ಬಳಸಲಾಗುತ್ತದೆ. ವಧೂವರರ ಗಲ್ಲ ಹಾಗೂ ಕಾಲುಗಳಿಗೆ ಅರಿಸಿನ ಮತ್ತು ಚಂದನ ಹಚ್ಚುವುದು, ಕನ್ನಡಿಯಲ್ಲಿ ಅವರ ಮುಖಗಳನ್ನು ತೋರಿಸುವುದು, ವಧೂವರರು ಅಕ್ಕಿ, ಬೇಳೆ ಮುಂತಾದವುಗಳನ್ನು ಮೂರು ಬಾರಿ ಬದಲಾಯಿಸಿಕೊಳ್ಳುವುದು, ತಲೆಯ ಮೇಲೆ ಹಪ್ಪಳವನ್ನು ತುಂಡರಿಸುವುದು, ಹೂಮಾಲೆಯನ್ನು ಹಾಕುವುದು, ತೆಂಗಿನಕಾಯಿಯನ್ನು ಉರುಳಿಸುವುದು, ಮಂಗಳಾರತಿ ಬೆಳಗಿ ಮಂಗಳ ಹಾಡುವುದು ಮುಂತಾದ ಚಟುವಟಿಕೆಗಳನ್ನು ನೋಡಲು ಬಹಳ ಸಂತೋಷದಾಯಕವಾಗಿರುತ್ತದೆ.

ವಧು ವರನನ್ನು ಉರುಣೆಗೆ ಆಹ್ವಾನಿಸುವುದು, ಅದಕ್ಕೆ ವರನು ಪ್ರತ್ಯುತ್ತರ ನೀಡಿ ಹಾಡುವುದು ಕೇಳಲು ಇಂಪಾಗಿರುತ್ತದೆ. ವರನು ಸುಂದರನಾಗಿದ್ದನೆಂದು ಅವನನ್ನು ಶ್ರೀರಾಮ, ವೇಲು, ಅೞಗರ್, ನಟರಾಜ ಮುಂತಾದವರಿಗೆ ಹೋಲಿಸಿ ಹೇಳುವ ಸುಶ್ರಾವ್ಯ ಹಾಡುಗಳನ್ನು ಸಂಪ್ರದಾಯದ ರೀತಿಯಲ್ಲಿ ಹಾಡುತ್ತಾರೆ. ಉದಾ:

ಉರುಟಣೆಗೆ ಬನ್ನಿ ಸಮಯವಿದಲ್ಲವೆ?
ದೇವಾನುದೇವತೆಗಳ ಪಾದಗಳಿಗೆರಗೋಣ
ಕಳ್ಳ ಗೊಂಡೆ ಧರಿಸಿ
ಪಲ್ಲಕ್ಕಿ ಮೇಲೇರಿ
ತಳ್ಳಕೊಳದ ನೀರಲ್ಲಿ
ಕಳ್ಳಂದದವನು ನೋಡೇ
ಅಳಗನ ಚೆಲುವು ನೋಡೇ || ಉರುಟಣೆಗೆ ||

ಉರುಟಣೆಗೆ ಬಾ ಕಣ್ಣಾ
ನಾಗರಿಕ ರಾಜಾ
ಸೇನಾನಾಯಕನೇ
ಗಜವದನನ ಕಿರಿಯವನೇ
ಆರ‍್ಮುಗವೇಲುವೇ || ಉರುಟಣೆಗೆ ||

ಉರುಟಣೆಗೆ ಬಾ ಕಣ್ಣಾ
ನಳಿನ ಒಯ್ಯಾರ ಸಿಂಗಾರ ಮಂಟಪದಿ
ಮಲ್ಲಿಗೆ ಮೊಲ್ಲೆ ಸುಗಂಧ ರೋಜಾ
ಮಂದಾರ ಸಂಪಿಗೆ ಇರುವಂತಿಗೆ
ಸರಿಸಮ ರಾಸಿ ಮಲ್ಲಿಗೆ
ಮುದವ ನೀಡುವ ಹಾರ ನೀಡುವೆ || ಉರುಟಣೆಗೆ ||

ಉರುಟಣೆಗೆ ಬಾ ಈಶ
ವಂದಿಸುವೆ ಕಾಮೇಶ || ಉರುಟಣೆಗೆ ||
ಹೊನ್ನಂಬಲ ನಟರಾಜ
ನೆಲೆಸು ಬಾ ಇಲ್ಲಿ ಕೂಡಿ ||ಉರುಟಣೆಗೆ ||

ವರನು ವಧುವನ್ನು ನೋಡಿ ಹೇಳುವ ಒಂದು ಹಾಡು:

ಪ್ರೀತಿಯ ಉರುಟಣೆಗೆ
ನೀ ಬಲವಾಗು
ನವಿಲೇ ನವಿಲೇ
ಸೋಗೇ ನವಿಲೇ
ಸವಿಜೇನೇ || ಪ್ರೀತಿಯ ||
ಕಮಲನಯನೇ
ಪಂಚವರ್ಣ ಗಿಳಿಯೇ
ಸವಿಮಾತಿದು ವಂಚನೆಯಲ್ಲವದು
ಕುಂಜರಿ ನಿನಗೇಕೆ? || ಪ್ರೀತಿಯ ||

ಈ ಹಾಡುಗಳಲ್ಲಿ ವ್ಯಂಗ್ಯವಾಗಲೀ ಗೇಲಿಯಾಗಲೀ ಇಲ್ಲದೆ ಪ್ರೀತಿಗೆ ಮಾತ್ರ ಸ್ಥಾನ ನೀಡಿರುವುದನ್ನು ಗಮನಿಸಬಹುದು.

ವರನ ಪದ್ಯ ಎಂಬ ಒಂದು ಬಗೆಯ ಹಾಡನ್ನು ಈ ಉರುಟಣೆ ಹಾಡಿನಲ್ಲಿ ಸೇರಿಸಿದೆ. ವರನಿಗೆ ತಾಂಬೂಲ ನೀಡಿ ಆತನನ್ನು ದೇವರ ಸಮಾನನೆಂದು ಭಾವಿಸಿ ವಧು ಆತನಲ್ಲಿ ಭಿನ್ನವಿಸುತ್ತಾಳೆ. ಮುಂದಿನ ದಿನಗಳಲ್ಲಿ ತಾನು ಮಾಡಬಹುದಾದ ತಪ್ಪುಗಳಿಗೆ ಕ್ಷಮೆ ಈಗಲೇ ಯಾಚಿಸುತ್ತಾಳೆ. ಹೀಗೆ ವಿನಂತಿಸಿಕೊಳ್ಳುವಾಗ ಅವಳು ತನ್ನನ್ನು ಕಡೆಗೆಣೆಸಿಯೇ ಕೋರುತ್ತಾಳೆ, ಇಲ್ಲಿ ವಿನಯಸಂಪನ್ನಳಾಗಿರುತ್ತಾಳೆ.

ಪ್ರಾಣನಾಥನೇ ಏಳುಲೋಕದೊಡೆಯ!
ಮಡದಿ ನಾನು ಆಲಿಸು ನನ್ನ ನುಡಿ
ಪತಿಯೇ ದೈವವೆಂದು ಬಗೆಯುವೆ ನಾನು
ಭಕ್ತಿಯಿಂದ ಪೂಜೆಗೈವೆ
ಸೇವಿಸುವೆ ನಾನು ಪರದೈವ

ತನ್ನ ಸೇವೆಯಲ್ಲಿ ಏನಾದರೂ ಅಪಚಾರ ನಡೆದರೆ ಅದನ್ನು ನೀನು ಉಪಚಾರವಾಗಿಯೇ ಗ್ರಹಿಸಿ ನನ್ನ ತಪ್ಪುಗಳೇನಿದ್ದರೂ ಮನಸ್ಸಿಗೆ ಅಂಟಿಸಿಕೊಳ್ಳದೆ ಪ್ರಾಣದೇವ ನನ್ನ ಕ್ಷಮಿಸು ಎಂದು ಮನಃಪೂರ್ವಕ ಬೇಡಿಕೊಳ್ಳುತ್ತಾಳೆ.

ಎಸ್.ವಿ. ಅನುವಾದ ವಿ.ಜಿ.