ಪೂರಕಳಿ ಮೀನಮಾಸದ ಪೂರಂ ಆಚರಣೆಯ ಅಂಗವಾಗಿ ಉತ್ತರ ಕೇರಳದ ಭಗವತಿ ಕಾವುಗಳಲ್ಲಿ ಹಾಗೂ ತಾನ, ಕಳಗಗಳಲ್ಲಿ ಕೆಲವು ಸಮುದಾಯದವರು ನಡೆಸುವ ಆರಾಧನ ಕುಣಿತವೇ ಪೂರಕಳಿ. ಮೀನಮಾಸದ ಕಾರ್ತಿಕ ನಕ್ಷತ್ರದಿಂದ ಪೂರ್ವ ನಕ್ಷತ್ರದವರೆಗೆ ಒಂಭತ್ತು ದಿವಸಗಳಲ್ಲಿ ಉತ್ತರ ಕೇರಳದಲ್ಲಿ ಪೂರಂ ಹಬ್ಬ ನಡೆಯುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಪೂರಂಕಳಿಯು ನಡೆಯುತ್ತದೆ. ಮಣಿಯಾಣಿ, ತೀಯ, ಮುಗಯ, ಶಾಲಿಯ, ಮೂವಾರಿ, ತಟ್ಟಾನ್, ಕೊಲ್ಲನ್, ಮೂಶಾರಿ ಮೊದಲಾದ ಜಾತಿಗಳ ಪುರುಷರು ಪೂರಂಕಳಿಯನ್ನು ಆಡುವವರು. ವಾಣಿಯ ಸಮುದಾಯದ ಮುಚ್ಚಿಲೋಟು ಕಾವುಗಳಲ್ಲಿ ಮಣಿಯಾಣಿಗಳು ಹಾಗೂ ಆಶಾರಿಗಳ ತಾಣವಾದ ಉಣಿಯರಪ್ಪು ಮಾಲಕಾವಿಯಲ್ಲಿ ತೀಯರು ಪೂರಂಕಳಿನ್ನು ನಡೆಸುವುದನ್ನು ಬಿಟ್ಟರೆ, ಉಳಿದೆಡೆಗಳಲ್ಲಿ ಆಯಾ ಜಾತಿಯವರೇ ಈ ಕಲೆಯನ್ನು ನಿರ್ವಹಿಸುತ್ತಾರೆ. ಪ್ರಾಯ ಭೇದವಿಲ್ಲದೆ ಆಬಾಲವೃದ್ಧರಾಗಿ ಎಲ್ಲರೂ ಭಾಗವಹಿಸುವ ಒಂದು ಕಲೆಯಾಗಿದೆ ಪೂರಕಳಿ. ಕಾಮಪೂಜೆಯಾಗಿರುವ ಪೂರಂ ಅಂಗವಾಗಿ ಪೂರಕಳಿ ನಡೆದರೂ, ದೈವಿಕಭಕ್ತಿಯೂ ಈ ಕಲೆಯ ಹಿಂದೆ ಇದೆ.

ಪೂರಕಳಿಯ ಹುಟ್ಟಿನ ಬಗ್ಗೆ ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಒಂದು ಕಾಮದಹನ ಪ್ರಸಂಗಕ್ಕೆ ಸಂಬಂಧಿಸಿದೆ. ಶಿವನ ತಪಸ್ಸನ್ನು ಕೆಡಿಸಲು ಹೊರಟ ಮನ್ಮಥನನ್ನು ಶಿವನು ತನ್ನ ಹಣೆಗಣ್ಣಿನಿಂದ ಸುಟ್ಟು ಬಿಡುತ್ತಾನೆ. ಇದರಿಂದಾಗಿ ಕನ್ಯೆಯರಿಗೆ ಕಾಮಭಾವನೆ ನಷ್ಟವಾಯಿತು. ದೇವತೆಗಳೂ ಮನುಷ್ಯರೂ ದುಃಖಿತರಾದರು. ಮನ್ಮಥನ ಪತ್ನಿಯಾದ ರತೀದೇವಿಯು ದುಃಖಿಸುತ್ತಾ, ಪಾರ್ವತಿಯೊಂದಿಗೆ ಶಿವನ ಬಳಿಗೆ ತೆರಳಿ ಬಗೆ ಬಗೆಯಾಗಿ ವಿಲಾಪಿಸುತ್ತಾಳೆ. ಪಾರ್ವತಿಯ ಸೂಚನೆಯಂತೆ ಶಿವನ ಮುಂದೆ ಕಾಮನ ರೂಪವನ್ನು ಕಲ್ಪಿಸಿ ಹೂವುಗಳಿಂದ ಕಾಮನನ್ನು ಸೃಷ್ಟಿಸುತ್ತಾರೆ. ದೇವತೆಗಳೆಲ್ಲ ಈ ಸಂದರ್ಭದಲ್ಲಿ ಹಾಡಿ ಕುಣಿದರು. ಅವರನ್ನು ಅನುಸರಿಸಿ ಭೂಲೋಕದ ಮಹಿಳೆಯರೂ ಕುಣಿದರಂತೆ. ಹೀಗೆ ಮಹಿಳೆಯರು ಕಾಮನಪೂಜೆಯನ್ನು ಮಾಡಿ, ಕುಣಿದುದೇ, ಪೂರಕಳಿ ಎಂದೂ, ಅನಂತರ ಅದು ಪುರುಷರ ಕಲೆಯಾಗಿ ಬೆಳೆಯಿತೆಂದೂ ಒಂದು ಪುರಾಣ ಹೇಳುತ್ತದೆ.

24_70A_DBJK-KUH

ಪೂರಕಳಿಯ ‘ಪಳ್ಳಿಯರ ಶಾಸ್ತ್ರ’ ಎಂಬ ಹಾಡಿನಲ್ಲಿ ಇನ್ನೊಂದು ಕಥೆಯಿದೆ. ಶಿವನು ಕಾಮದಹನದ ನಂತರ ರತಿಗೆ ಅಭಯವನ್ನು ಕೊಡುತ್ತಾನೆ. ಮನ್ಮಥನು ಪ್ರದ್ಯುಮ್ನ ಎಂಬ ಹೆಸರಿನಲ್ಲಿ ಶ್ರೀಕೃಷ್ಣನ ಮಗನಾಗಿ ರುಕ್ಮಿಣಿಗೆ ಹುಟ್ಟುವನು. ಈ ಮನ್ಮಥನನ್ನು ಮೀನಮಾಸದ ಕಾರ್ತಿಕ ನಕ್ಷತ್ರದಿಂದ ಒಂಭತ್ತು ದಿವಸಗಳ ವರೆಗೆ ಸ್ತ್ರೀಯರು ಹೂಗಳಿಂದ ಪೂಜಿಸುತ್ತಾರೆ. ಅನಂತರ ಮೂರು ಲೋಕಗಳಲ್ಲಿ ಪೂರಂ ಆಚರಣೆ ಹಾಗೂ ಪೂರಕಳಿ ಆರಂಭವಾಯಿತು. ಇನ್ನೊಂದು ಕಥೆಯ ಪ್ರಕಾರ, ‘ಪೂರ’ ಎಂಬ ಕನ್ಯೆಯ ನೃತ್ಯವನ್ನು ನೋಡಲು ಹೊಗಿದ್ದ ಕೃಷ್ಣನು ಆಕೆಯನ್ನು ವೃಂದಾವನಕ್ಕೆ ಕರೆಸಿಕೊಂಡು, ಗೋಪಿಕೆಯರೊಡನೆ ಕುಣಿಯುತ್ತಾನೆ. ಪೂರಳನ್ನು ದುರ್ಗೆಯೆಂದು ಕಲ್ಪಿಸಿ ಆರಾಧಿಸಲು ಹಾಗೂ ಪೂರಕಳಿಯನ್ನು ನಡೆಸಲು ಕೃಷ್ಣ ಗೋಪಾಲಕರಿಗೆ ಹೇಳಿದನಂತೆ. ಇನ್ನೊಂದು ಕಥೆಯಂತೆ, ರಂಭೆ ಮೊದಲಾದವರು ದೇವಲೋಕದಲ್ಲಿ, ಅಹಲ್ಯೆ ಮೊದಲಾದವರು ಹಾಗೂ ರತೀದೇವಿ ಮೊದಲಾದವರು ಪಾತಾಳದಲ್ಲಿ ನಡೆಸಿದ ಮನ್ಮಥಪೂಜೆಯ ಅನುಕರಣೆಯೇ ಪೂರಕಳಿ. ಶ್ರೀಕೃಷ್ಣನ ರಾಸಲೀಲೆಯ ಸ್ಮರಣೆಯೇ ಪೂರಕಳಿ ಎಂಬ ವಾದವೂ ಇದೆ.

ಪೂರಕಳಿ ನಡೆಸಬೇಕಾದರೆ ‘ಕಳಿಯಾಶಾನ್’ (ಆಟದ ಗುರು) ಮುಖ್ಯ ವ್ಯಕ್ತಿ. ಅವನನ್ನು ಸ್ವಾಗತಿಸುವುದು ಮೊದಲ ಕ್ರಿಯೆ. ಅನಂತರ ಕಾವುಗಳ, ತಾನಗಳ ಮುಖ್ಯಸ್ಥರು ಸೇರಿಕೊಂಡು ಪೂರಕಳಿಯನ್ನು ನಡೆಸಲು ವೀಳ್ಯವನ್ನು ಕೊಡುತ್ತಾರೆ. ಒಳ್ಳೆಯ ಮುಹೂರ್ತದಲ್ಲಿ ಪಣಿಕ್ಕರನ್ನು ಕರೆತಂದು, ಕಾವಿನ ಹೊರಭಾಗದಲ್ಲಿ ಚಪ್ಪರ ಹಾಕಿ, ‘ಚಿತ್ರತೂಣ್’ ಎಂಬ ಕಂಬವನ್ನು ಹಾಕುತ್ತಾರೆ. ಇಲ್ಲಿ ತುಂಬೆಹೂ ಅರ್ಪಿಸುತ್ತಾರೆ. ಪಣಿಕ್ಕರ್ ಈ ದೈವಸಾನ್ನಿಧ್ಯದಲ್ಲಿ ಪ್ರತಿದಿವಸ ಹೂ ಹಾಕುತ್ತಾನೆ. ಇಷ್ಟದೇವತಾ ವಂದನೆ, ಪೂರಮಾಲ, ತೊಳುನ್ನ ಕಳಿಯನ್ನು ನಿತ್ಯವೂ ನಿರ್ವಹಿಸುವನು.

ಜ್ಯೋತಿಷಿಗಳಿಂದ ಮುಹೂರ್ತ ನಿಶ್ಚಯಿಸುವ ವಿಧಿ ‘ಪಂದಲಿಲ್ ಪೊನ್ನುವೆಕ್ಕುಗ’ ಅಂದಿತಿರಿಯನ್ ಅಥವಾ ಪೂಜಾಕರ್ಮಿ ಇದನ್ನು ನೆರವೇರಿಸುತ್ತಾನೆ. ಒಳ್ಳೆಯ ಮುಹೂರ್ತ ನೋಡಿ ಹೊರಭಾಗದ ಚಪ್ಪರದಿಂದ ಪೂರಕಾಳಿಯನ್ನು ಕಾವಿನ ಒಳಗೆ ಕೊಂಡೊಯ್ಯುತ್ತಾರೆ. ಇದನ್ನು ‘ಕಳಗಂ ಕಯರಲ್ ಎನ್ನುವರು. ವಾದ್ಯ ಘೋಷಾದಿಗಳೊಂದಿಗೆ ಸಂಜೆಯ ವೇಳೆಗೆ ದೀಪಾರಾಧನೆಯ ನಂತರ ಈ ವಿಧಿ ನಡೆಯುತ್ತದೆ. ಒಳಭಾಗದಲ್ಲಿ ನಡೆಯುವ ಪ್ರದರ್ಶನಕ್ಕೆ ‘ಕಳಿಮಾರಲ್’ ಎಂದು ಹೆಸರು. ಹೀಗೆ ಎಲ್ಲ ವಿಧಿಗಳೂ ಕಾವಿನ ಒಳಗೆ ಆರಂಭವಾಗುವುದು. ಕಾವಿನ ಅಂದಿತಿರಿಯನ್ ಚಪ್ಪರದಲ್ಲಿ ದೀಪ ಬೆಳಗಿಸುವುದರೊಂದಿಗೆ, ಪಣಿಕ್ಕರ್ ಹಾಗೂ ಅವನ ಶಿಷ್ಯಂದಿರು ಗುರುವಂದನೆ, ದೇವ ವಂದನೆ ಮಾಡಿ ಪೂರಕಳಿಯನ್ನು ಆರಂಭಿಸುವರು.

ಕಲಾವಿದರ ಚಪ್ಪರ ಪ್ರವೇಶ ಮುಂದಿನ ಆಚರಣೆ. ಚಪ್ಪರದ ಚಿತ್ರದ ಕಂಬವನ್ನು ವಂದಿಸಿ, ಕಾವಿನ ಯಜಮಾನ ಆಚಾರಕರ್ಮಿಗಳಿಗೆ ವಂದಿಸಿ ಪ್ರಸಾದ ಸ್ವೀಕರಿಸುತ್ತಾರೆ. ಗಣಪತಿ, ಸರಸ್ವತಿ, ಶ್ರೀಕೃಷ್ಣ ಮೊದಲಾದ ದೇವತೆಗಳ ವಂದನೆ ನಡೆಯುವುದು. ಅನಂತರ ಪೂರಕಳಿಯ ‘ಪೂರಮಾಲ’ ಆರಂಭಿಸುತ್ತಾರೆ. ಇದು ಆರಾಧನೆಗೆ ಸಂಬಂಧಿಸಿದ ಪೂರನಟನವಾಗಿದೆ. ಹದಿನೆಂಟು ರಾಗ ವೈವಿಧ್ಯಗಳಿಂದ ಕೂಡಿದ ಪೂರಂಪಾಟುಗಳನ್ನು ಈ ಸಂದರ್ಭದಲ್ಲಿ ಹಾಡುತ್ತಾರೆ. ಹಾಡಿನ ಆರಂಭದಲ್ಲಿ ನಾರಾಯಣಸ್ತುತಿ ಇರುತ್ತದೆ.

ಅನಂತರ ನಡೆಯುವ ಕಲೆಗೆ ‘ವನ್‌ಕಳಿ’ ಎಂದು ಹೆಸರು. ಇದರಲ್ಲಿ ಗಣಪತಿಪಾಟ್, ರಾಮಾಯಣ ಕಥೆಗಳನ್ನು ಹಾಡುವರು. ಕಾಮನಹಾಡು, ಹಾವಿನಹಾಡು, ಅಂಕ, ಭಾರತಪಾಟುಗಳನ್ನು ಹಾಡುತ್ತಾ, ವಿಭಿನ್ನ ಶೈಲಿಗಳಲ್ಲಿ ಕುಣಿಯುವರು. ಅನಂತರ ‘ತೊಳ್ಳುನ್ನ ಪಾಟ್’ ವಿಭಾಗದಲ್ಲಿ ಕಾವಿನ ಮುಖ್ಯದೇವತೆಯನ್ನು ಸ್ತುತಿಸುವ ಹಾಡುಗಳಿರುತ್ತವೆ.

‘ಪೂರಕುಳಿ’ (ಪೂರಸ್ನಾನ) ಎಂಬುದು ಪೂರ ಆಚರಣೆಯ ಒಂದು ವಿಧಿ. ಈ ದಿವಸ ಪೊಲಿಪಾಟ್, ಆಂಡ್ ಮೊದಲಾದ ಹಾಡುಗಳನ್ನು ಹಾಡುತ್ತಾರೆ. ಮರತ್ತುಕಳಿ ನಡೆಯುವ ತೀಯರ ಕಾವುಗಳಲ್ಲಿ ಯೋಗಿ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಪೂರ ಆಚರಣೆಯ ನಂತರ ಒಳ್ಳೆಯ ದಿವಸ ನೋಡಿ ಗಣಪತಿ ಪೂಜೆ ನಡೆಸಿ, ಚಪ್ಪರದ ‘ತರ’ ಮುರಿದು, ಪಣಿಕ್ಕರನನ್ನು ಮೆರವಣಿಗೆಯೊಂದಿಗೆ ಮನೆಗೆ ತಲುಪಿಸುವರು. ಇದರೊಂದಿಗೆ ಪೂರಕಳಿ ಕೊನೆಗೊಳ್ಳುವುದು.

ಉತ್ತರಕೇರಳದ ನೈಜ ಜನಪದ ಕಲೆ ಪೂರಕಳಿ. ಜಾತಿ ಸಂಘಟನೆಗೆ ಪೂರಕಳಿಯನ್ನು ವರ್ತಮಾನಕಾಲದಲ್ಲಿ ಬಳಸುತ್ತಿದ್ದಾರೆ. ಪೂರಕಳಿಯ ಕುರಿತು ಡಾ. ಎಂ.ವಿ. ವಿಷ್ಣುನಂಬೂದಿರಿ, ಡಾ. ಕೆ.ಕೆ. ಕರುಣಾಕರನ್, ಸಿ.ಎಂ.ಎಸ್. ಚಂದೇರಾ, ಚಿರಕ್ಕಲ್ ಬಾಲಕೃಷ್ಣನ್ ನಾಯರ್, ಕಾಂಚಿಲ್ ಅನಂತನ್ ಮೊದಲಾದವರು ಅಧ್ಯಯನ ಮಾಡಿ ಕೃತಿಗಳನ್ನು ಪ್ರಕಟಿಸಿದ್ದಾರೆ.

ವಿ.ಎಂ.ಯು. ಅನುವಾದ ಎನ್.ಎಸ್.

ಪೆರಿಯಮೇಳಂ ಚರ್ಮದ ಸಾಧನದಿಂದ ಪ್ರಸ್ತುತಪಡಿಸುವ ಒಂದು ಪ್ರಮುಖ ಕಲೆ (ಡೊಳ್ಳು ಕುಣಿತ). ಇದು ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ವಿಸ್ತಾರವಾಗಿ ಹರಡಿದೆ. ಈ ಕಲೆಯನ್ನು ಬಹುಪಾಲು ಎಡಪಂಥೀಯರೇ ಪ್ರದರ್ಶಿಸುತ್ತಾರೆ. ಈ ಕಲೆಯನ್ನು ದೇವಸ್ಥಾನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ರಾಜಕೀಯ ಪಕ್ಷದ ಸಮಾವೇಶಗಳಲ್ಲಿ, ಕೆಲವು ಜಾತಿಯ ಮದುವೆ ಸಂದರ್ಭದಲ್ಲಿ, ಸಾವಿನ ಸಂದರ್ಭಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಪೆರಿಯಮೇಳಂ (ದೊಡ್ಡಮೇಳ) ಏಳು ಜನರನ್ನು ಒಳಗೊಂಡಿರುತ್ತದೆ. ಈ ತಂಡವನ್ನು ಕೆಲವು ಕಡೆ ‘ಮೇಳದ ಸೆಟ್’ ಎಂದು ಕರೆಯುತ್ತಾರೆ. ದೊಡ್ಡಮೇಳ ಕಲಾತಂಡದಲ್ಲಿ ದೊಡ್ಡ ಡೊಳ್ಳು, ಡಮರು, ಗಡಿಗೆ, ದಮಕ್ಕು, ಜಾಲ್ರಾ ಮೊದಲಾದ ಸಂಗೀತ ಉಪಕರಣಗಳು ಸ್ಥಾನ ಪಡೆದಿರುತ್ತದೆ. ಸಾಮಾನ್ಯವಾಗಿ ಒಂದೊಂದೊ ತಂಡದಲ್ಲೂ ಎರಡು ಡಮರುಗಳು ಇರುತ್ತವೆ. ಹೀಗೆ ಒಟ್ಟು ಆರು ಸಂಗೀತ ಸಾಧನಗಳನ್ನು ಆರು ಜನ ಕಲಾವಿದರು ನುಡಿಸುತ್ತಲೇ ಕುಣಿಯುತ್ತಿರುತ್ತಾರೆ. ದೊಡ್ಡ ಡೊಳ್ಳು ಸುಮಾರು ಹತ್ತು ಕೆ.ಜಿ.ಯವರೆಗೆ ತೂಕ ಇರುತ್ತದೆ. ಆದ್ದರಿಂದ ಆ ದೊಡ್ಡಮೇಳವನ್ನು ಮಾತ್ರ ಬದಲಾಯಿಸಿ ಬಾರಿಸಲು ಒಬ್ಬ ಕಲಾವಿದ ಯಾವಾಗಲೂ ತಯಾರಿರುತ್ತಾನೆ. ಒಬ್ಬ ಕಲಾವಿದನಿಗೆ ದಣಿವಾದಾಗ ಹೆಚ್ಚುವರಿ ಕಲಾವಿದರು ಡೊಳ್ಳನ್ನು ಪಡೆದುಕೊಂಡು ಬಾರಿಸುತ್ತಾರೆ. ಹೀಗೆ ಇಬ್ಬರು ಕಲಾವಿದರು ದಣಿವಾದಾಗ ಡೊಳ್ಳನ್ನು ಬದಲಾಯಿಸಿಕೊಂಡು ನುಡಿಸುತ್ತಾರೆ.

ದೊಡ್ಡ ಮೇಳದ ಪ್ರದರ್ಶನ ನೀಡುವಾಗ ಒಂದೊಂದು ಏಟಿನ (ತಾಳ) ಬದಲಾವಣೆಯನ್ನು ಕಲಾವಿದರು ಚೆನ್ನಾಗಿ ಅರಿತುಕೊಂಡಿರುತ್ತಾರೆ. ತಂಡದ ಮಧ್ಯದಲ್ಲಿ ಕುಣಿಯುವವರು ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಇತರ ವಾದ್ಯಗಳನ್ನು ಬಾರಿಸುವವರು ಕೂಡ ದೊಡ್ಡ ಡೊಳ್ಳಿನ ತಾಳವನ್ನು ಕೇಳಿಕೊಂಡು ಬಾರಿಸಲು ಪ್ರಾರಂಭಿಸುತ್ತಾರೆ. ತಮ್ಮ ಏಟಿನ ರೀತಿಯನ್ನು ನೋಡುವ ಪ್ರೇಕ್ಷಕರಿಗೆ ಪತ್ತೆಹಚ್ಚಲು ಅಸಾಧ್ಯವಾಗುವಂತೆ ಬದಲಾಯಿಸಿ ಬಾರಿಸುತ್ತಾರೆ. ದೊಡ್ಡ ಮೇಳದಲ್ಲಿ ಒಟ್ಟು ಹತ್ತು ಏಟಿನ ರೀತಿಗಳು ಇರುವುದಾಗಿ ಆ ಕಲಾವಿದರೇ ಗುರುತಿಸುತ್ತಾರೆ. ಈ ಏಟಿನ ರೀತಿಯನ್ನು ‘ಪಾಗಮ್’ (ಪಕ್ವತೆ) ಎಂದು ಕರೆಯುತ್ತಾರೆ.

ಈ ಕಲಾವಿದರಿಗೆ ತಾಳ, ರಾಗ ಕುರಿತು ಯಾವುದೇ ಅರಿವು ಇರುವುದಿಲ್ಲ. ಆದರೆ ರೂಢಿಗತವಾಗಿ ಎಲ್ಲ ತಾಳದ ರೀತಿಗಳನ್ನು ನುಡಿಸುತ್ತಾ ಬರುತ್ತಿದ್ದಾರೆ. ಇದನ್ನು ಗುರುವಿನಿಂದ ಪಾರಂಪರಿಕವಾಗಿ ನುಡಿಸಿಯೇ ಕಲಿತುಕೊಳ್ಳುತ್ತಾರೆ. ತಂಡದಲ್ಲಿ ಮಡಕೆ ನುಡಿಸುವವನು ಏಟನ್ನು ಬದಲಾಯಿಸುವಾಗ ಬೇರೆ ಕಲಾವಿದರು ಅದಕ್ಕೆ ತಕ್ಕಂತೆ ಏಟನ್ನು ತಕ್ಷಣದಲ್ಲಿಯೇ ಬದಲಾಯಿಸಿ ಹೊಡೆಯಲು ಆರಂಭಿಸುತ್ತಾರೆ. ಕಲಾವಿದರು ಕಾಲಿನಲ್ಲಿ ಕಾಲ್ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕುತ್ತಾರೆ. ಅವರು ಸಂಗೀತ ಸಾಧನಗಳನ್ನು ನುಡಿಸಿಕೊಂಡು ಕುಣಿಯುವಾಗ ಕಾಲ್ಗೆಜ್ಜೆಯ ಸ್ವರವೂ ಅದರಲ್ಲಿ ಮಿಳಿತಗೊಳ್ಳುತ್ತದೆ.

25_70A_DBJK-KUH

ಹತ್ತು ಜನರು ಬಾರಿಸುವ ಮೊದಲನೆಯ ಏಟಿನ ರೀತಿ ಆಯಾ ಸಂದರ್ಭವನ್ನು ಸೂಚಿಸುತ್ತದೆ. ಇದನ್ನು ಅವರು ‘ಮೊದಲು ಏಟು’ ಎಂದು ಗುರುತಿಸುತ್ತಾರೆ. ಎರಡನೆಯ ಏಟು ಸಾಮಾನ್ಯವಾಗಿ ಎಲ್ಲ ಕಾರ್ಯಗಳಲ್ಲಿ ಬಾರಿಸುವ ಏಟಿನ ರೀತಿಯಾಗಿದೆ. ಮದುವೆಗೆ ಬಾರಿಸಿಕೊಂಡು ಹಾಡುವುದು ಮೂರನೆಯ ಏಟಿನ ರೀತಿಯಾಗಿದೆ. ಗಂಗೆಗೆ ಪಿಂಡವನ್ನು ಬಿಡುವಾಗ ಬಾರಿಸುವ ಏಟು ನಾಲ್ಕನೆಯ ಏಟಿನ ರೀತಿ. ವೇಗವಾದ ಹಾಡಿಗೆ ತಕ್ಕಂತೆ ಬಾರಿಸುವುದು ಐದನೆಯ ಏಟಿನ ರೀತಿಯಾಗಿದೆ. ಆರನೆಯ ಏಟಿನ ರೀತಿಯನ್ನು ಮಾರಿಗೆ ಎಡೆಯನ್ನು ಅರ್ಪಿಸುವ ಸಂದರ್ಭದಲ್ಲಿ ಹಾಕುತ್ತಾರೆ. ಪೊಂಗಲ್ ಹಬ್ಬದಂದು ಏಳನೆಯ ಏಟಿನ ರೀತಿಯನ್ನು ಬಾರಿಸುತ್ತಾರೆ. ಹುಲಿ ಆಟದ ಸಂದರ್ಭದಲ್ಲಿ ಎಂಟನೆಯ ಏಟಿನ ರೀತಿಯನ್ನು ಹಾಕುತ್ತಾರೆ. ಈ ಏಟಿನ ರೀತಿಯನ್ನು ‘ಐಡಲಡಿ’ ಎಂದು ಹೇಳುತ್ತಾರೆ. ಸಮಾರಂಭಗಳಲ್ಲಿ ಎರಡನೆಯ ಏಟಿನ ರೀತಿಯೊಂದಿಗೆ ಒಂಬತ್ತನೆಯ ಏಟಿನ ರೀತಿಯನ್ನು ಹಾಕುತ್ತಾರೆ.

ಸಾವಿನ ಸಂದರ್ಭಗಳಲ್ಲಿ ಹೊಡೆಯಲಾಗುವ ಏಟು ಹತ್ತನೆಯ ಏಟಿನ ರೀತಿಯಾಗಿದೆ. ಊರಿನಲ್ಲಿ ಯಾರಾದರೂ ಸತ್ತರೆ ಕಾಲಿಗೆ ಕಾಲ್ಗೆಜ್ಜೆ ಕಟ್ಟಿ ದೊಡ್ಡ ಮೇಳಲದ್ಲಿ ಸಾವಿನ ಏಟು ಹೊಡೆದು ಬಿಟ್ಟರೆ ಊರಿನ ಎಲ್ಲ ಜನರು ಸೇರಿಬಿಡುತ್ತಾರೆ. ಊರಿನಲ್ಲಿರುವವರೆಲ್ಲರು ಸಾವಿನ ಏಟನ್ನು ಕೇಳಿ ಊರಿನಲ್ಲಿ ಸಾವಾಗಿದೆ ಎಂದು ತಿಳಿಯುವಲ್ಲಿ ಕಲೆ ಜನರೊಂದಿಗೆ ಬೆಸೆದುಕೊಂಡಿರುವುದನ್ನು ನೋಡಬಹುದು.

ಇಂದು ಶಾಸ್ತ್ರಗಳು, ವಿಶೇಷ ದಿನಗಳು, ಹಬ್ಬಗಳು ಇಂಥ ಹಲವು ಸಂದರ್ಭಗಳಲ್ಲಿ ಈ ಕಲೆಯ ಪ್ರದರ್ಶನ ಕಡಿಮೆಯಾಗುತ್ತಿದೆ. ಈ ಕಲೆ ಇಂದು ಸಾವಿನ ಕಾರ್ಯಕ್ಕೆ ಮಾತ್ರ ಸೀಮಿತವಾಗಿರುವುದರಿಂದ ದೊಡ್ಡ ಮೇಳ ಕಲೆಯ ಕಲಾವಿದರು ಕಡಿಮೆ ಆಗುತ್ತಿದ್ದಾರೆ.

ಈ ದೊಡ್ಡ ಮೇಳವನ್ನು ನುಡಿಸುವ ಕಲಾವಿದರು ಈ ಕಲೆಯನ್ನು ‘ಜಮಾ ದೊಡ್ಡ ಮೇಳ’ ಎಂದು ಕರೆಯುತ್ತಾರೆ. ಎಡಪಂಥೀಯ ಕಲಾವಿದರು ಕಾಲಿನಲ್ಲಿ ಕಾಲ್ಗೆಜ್ಜೆ ಕಟ್ಟಿಕೊಂಡು ವಾದ್ಯ ನುಡಿಸುತ್ತ ಕುಣಿಯುವರು. ಉತ್ತರ ತಮಿಳುನಾಡಿನ ಪಾಪ್ಪಮ್‌ಪಟ್ಟಿ ಭಾಗಗಳಲ್ಲಿ ಈ ಕಲೆ ಪ್ರಬಲವಾಗಿ ಬೆಳೆದಿದೆ.

ಟಿ.ಜಿ. ಅನುವಾದ ಆರ್.ಎಸ್

 

ಪೆರಿಯಾಂಡವರ್ ತಮಿಳುನಾಡಿನ ಜನಪದ ಹಾಡುಗಳಲ್ಲಿ ಜನಪದ ದೇವರಾದ ಪೆರಿಯಾಂಡವರ್‌ಗೆ ಪ್ರಮುಖ ಸ್ಥಾನವಿದೆ. ತಿರುವಳ್ಳೂರ್, ಚಿತ್ತೂರ್ ಜಿಲ್ಲೆಯಲ್ಲಿರುವ ಚೆಂಗುಂದರ್‌ಮೊದಲಿಯಾರ್ ವಂಶದವರ ಮುಖ್ಯ ಕಾವಲುದೇವರು. ಚೆಂಗುಂದ ವಂಶಗಳಲ್ಲಿ ಕುಲಪರಂಪರೆಯನ್ನು ಮುಖ್ಯವಾಗಿ ಕಾಣಬಹುದು.

ತಿರುವಳ್ಳೂರ್ ಜಿಲ್ಲೆಯಲ್ಲಿರುವ ಆರ್.ಕೆ. ಪೇಟೈ, ಅತ್ತಿಪಾಂಜಚೇರಿ ಪೇಟೈ, ಪೊದಟ್ಟುರ್ ಪೇಟೈ, ಪುಚ್ಚಿರೆಟ್ಟಸಯಳ್ಳಿ, ಮತ್ತೂರ್, ಮೇಲತ್ತಿರುತ್ತಣಿ, ವಳರ್‌ಪುರಂ, ಮಿನ್ನಲ್, ವಂಗನೂರ್, ಅಮ್ಮೈಯಾರ್ ಕುಪ್ಪಂ, ಚೋಳಿಯಂಗರ್, ಗುರುವರಾಯಪ್ಪೇಟೈ ಮೊದಲಾದ ಊರುಗಳಲ್ಲಿರುವ ಚೆಂಗುಂದರ್ ಮೊದಲಿಯಾರ್ ವಂಶದಲ್ಲಿ ಹಲವು ಕುಲಪಂಗಡಗಳು ಇವೆ. ಉದಾಹರಣೆಗೆ ವೆಳ್ಳಾತ್ತೂರ್ ಪಂಗಡ, ಕರಿಕಾಲ ಪಂಗಡ, ಕುಲಕರ್ಣಿ ಪಂಗಡ, ಆಲಾಕನಮ್ ಪಂಗಡ, ರಾಮಚಂದ್ರ ಪಂಗಡ, ಮೂಕ್ಕುತೊಂಡಿ ಪಂಗಡ, ಎಚ್ಚಾಂಗಟ್ಟ ಪಂಗಡ ಮೊದಲಾದ ಪಂಗಡಗಳಿವೆ. ಇದರಲ್ಲಿ ವೇಳಾತ್ತೂರ್ ಪಂಗಡಕ್ಕೆ ಸೇರಿದವರು ವೆಳ್ಳಾತ್ತೂರ್ ಎಂಬಲ್ಲಿ ಇರುವ ವೆಳ್ಳಾತ್ತೂರ್ ಅಮ್ಮನಿಗೆ ಕುಲಪದ್ಧತಿಯಂತೆ ವರ್ಷಕ್ಕೆ ಒಂದು ಬಾರಿ ಪೊಂಗಲ್ ಹಬ್ಬವನ್ನು ಮಾಡುತ್ತಾರೆ. ಆ ಪೆರಿಯಾಂಡವರ್ ಎಂಬ ಕಾವಲು ದೇವರಿಗೆ ವರ್ಷಕ್ಕೆ ಒಂದು ಬಾರಿ ಪೊಂಗಲ್‌ನ ಎಡೆ ಇಟ್ಟು ಜಾತ್ರೆ ನಡೆಸುತ್ತಾರೆ. ಈ ಜಾತ್ರೆಯನ್ನು ಮತ್ತೂರ್ ಎಂಬ ಊರಲ್ಲಿ ಇರುವ ರಾಮಚಂದ್ರ ಪಂಗಡದವರು ನಡೆಸುತ್ತಾರೆ.

ಚಿತ್ತೂರು ಜಿಲ್ಲೆಯಲ್ಲಿರುವ ಬೆತ್ತಿರಾವಸ, ಏಗಾಂಬರ ಕುಪ್ಪಂ, ಪುದುಪೇಟೆ, ನಾರಾಯಣವನಂ, ಸಿಂದಲಪಟ್ಟಡೈ, ಪುತ್ತೂರ್, ಯೋಗಿಮಲ್ಲಾವರಮ್, ಪಾಪ್ಪಾನಾಯುಡುಪೇಟೈ ಮೊದಲಾದ ಊರುಗಳಲ್ಲಿ ವಾಸಿಸುವ ಚೆಂಗುಂದ ಮೊದಲಿಯಾರ್ ವಂಶದವರು ತಮ್ಮ ಕುಲಪದ್ಧತಿಯಂತೆ ಪೆರಿಯಾಂಡವರ್ ಎಂಬ ಕಾವಲು ದೇವರನ್ನು ಪೂಜಿಸುತ್ತಾರೆ.

ಇಲ್ಲಿ ವಾಸಿಸುವ ಚೆಂಗುತ್ತರ್ ಪೆರುಮಾಳ್ ಪಂಗಡದವರು ತಮ್ಮ ಪೂರ್ವಿಕರು ವಾಸಿಸಿದ್ದ ಸ್ಥಳದ ಹೆಸರನ್ನು ತಮ್ಮ ಹೆಸರಿನ ಮುಂಚೆ ಸೇರಿಸಿಕೊಳ್ಳುವರು. ಉದಾಹರಣೆಗೆ ಪಾರಾಂಜಿ ಎಂಬ ವಂಶಕ್ಕೆ ಸೇರಿದ ಚೆಂಗುಂದರರ ಪೂರ್ವಿಕರು ಪಾರಾಂಜಿ ಎಂಬ ಊರಲ್ಲಿ ವಾಸಿಸಿದ್ದುದರಿಂದ ಆ ಊರಿನ ಹೆಸರನ್ನು ತಮ್ಮ ಹೆಸರಿನ ಮೊದಲು ಸೇರಿಸಿಕೊಳ್ಳುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಆ ವಯೋವೃದ್ಧರು ಹಾಡುವ ಹಾಡು ಈ ಕೆಳಗಿನಂತಿದೆ :

ಪಾರಾಂಜಿ ಪರ್ವತ್ತೂರಿನವರಾದ ನಾವು
ಗೊತ್ತಿಲ್ಲದೆ ದಾರಿ ತಪ್ಪಿ ಬಂದೆವು
ನಿತ್ಯವು ಒಂದು ಹಿಡಿ ಅನ್ನ
ನಾವು ತುಪ್ಪವಿಲ್ಲದೆ ಊಟ ಮಾಡಲಾರೆವು (ಪುಚ್ಚಿರೆಡ್ಡಿ ಪಳ್ಳಿ)

ಜನಪದ ದೇಗುಲಗಳ ಸ್ವರೂಪ : ಜಗತ್ತಿನ ಆವಿರ್ಭಾವಕ್ಕೆ ಕಾರಣವಾಗಿರುವ ಅನಂತಶಕ್ತಿಯನ್ನು ದೇವರು ಎಂದು ಭಾವಿಸಿ ಅದನ್ನು ಆಕೃತಿಯಲ್ಲಿ ಚಿತ್ರಿಸಿ ಪೂಜಿಸುವ ರೀತಿಯನ್ನು ಪೂಜಾವಿಧಾನ ಎನ್ನಬಹುದು. ಬಹುಪಾಲು ಮಾನವನೇ ದೇವರಾಗಿ ಬದಲಾದ ಹಿನ್ನೆಲೆಯಲ್ಲಿ ಜನಪದ ದೇವರ ದೇಗುಲಗಳು ರೂಪುಗೊಂಡಿವೆ. ಉದಾ : ಮಾರಿಯಮ್ಮನ್, ತಿರುಪ್ಪತಿ ಗಂಗೈಯಮ್ಮನ್ ಅಥವಾ ಗಂಗೈಯಮ್ಮನ್, ಮುತ್ತುಮಾರಿಯಮ್ಮನ್, ನಂದಾಳಿಯಮ್ಮನ್, ಎಲ್ಲೈಯಮ್ಮನ್, ವೆಳ್ಳಾತ್ತೂರ್ ಅಮ್ಮನ್, ಒಸೂರಮ್ಮನ್, ಪೆರಿಯಾಂಡವರ್ ಮೊದಲಾದ ಹಲವು ದೇವರುಗಳನ್ನು ಗುರುತಿಸಬಹುದು.

ದೇಗುಲಗಳ ಸ್ವರೂಪ, ದೇವರ ಸ್ವರೂಪ ಮೊದಲಾದವುಗಳು ಆ ಪ್ರದೇಶದ ಆರ್ಥಿಕ ಪರಿಸ್ಥಿತಿಯ ಕುರುಹುಗಳು ಮತ್ತು ಮಾನದಂಡಗಳಾಗಿವೆ.

ಕೋನಾಗರ್‌ನಾಡಿನಲ್ಲಿ ರೂಪಿತವಾಗಿರುವ ದೇಗುಲವನ್ನು ಮೂರು ಭಾಗಗಳಲ್ಲಿ ತೋರಿಸಬಹುದು :

೧. ದೇಗುಲದ ನಿರ್ಮಾಣದ ಸ್ಥಳ
೨. ದೇಗುಲದ ವಿನ್ಯಾಸ
೩. ದೇವ ಆಕೃತಿ ಮತ್ತು ರೂಚನೆ

ಜನಪದ ದೇವರ ಬಗೆಗಳು : ಹೆನ್ರಿ ವೈಟ್ ಹೆಡ್ (೧೯೨೧, ೧೯೮೩) ಎಂಬುವರು The Village Gods of South India ಎಂಬ ಶೀರ್ಷಿಕೆಯಲ್ಲಿ, ಡಬ್ಲ್ಯೂ, ಪಿ.ಎಲ್‌ಮೋರ್ (೧೯೧೩) ಎಂಬುವರು Dravidian Gods in Modern Hinduism ಎಂಬ ಶೀರ್ಷಿಕೆಯಲ್ಲಿ ಜನಪದ ದೇವರನ್ನು ಕುರಿತು ಸಂಶೋಧನೆಯನ್ನು ನಡೆಸಿ ವಿವರಗಳನ್ನು ಸಂಗ್ರಹಿಸಿದ್ದಾರೆ.

ಲೂಯಿ ತುಯ್‌ಮೋನ್ (೧೯೫೭) ೧. ಗ್ರಾಮ್ಯರು ಪೂಜಿಸುವ ದೇವರುಗಳು, ೨. ಕುಲದವರು ಪೂಜಿಸುವ ದೇವರುಗಳು, ೩. ಊರಿನವರು ಪೂಜಿಸುವ ದೇವರುಗಳೆಂದು ಮೂರು ವಿಭಾಗಗಳಲ್ಲಿ ಜನಪದ ದೇವರನ್ನು ವಿಭಾಗಿಸಿದ್ದಾರೆ.

ಊರಿನ ಸಾಮಾನ್ಯ ದೇವರು ಸಂಖ್ಯೆಯಲ್ಲಿ ಹೆಚ್ಚಾಗಿರಲೂ ಬಹುದು; ಕಡಿಮೆಯಾಗಿರಲೂ ಬಹುದು. ಸಂಶೋಧನೆಗೆ ಒಳಪಟ್ಟು ಮೂರು ಸಾಮಾನ್ಯ ದೇವರುಗಳಿವೆ. ಇವು ಜನರು ಪೂಜಿಸುವ ರೀತಿಯ ಹಿನ್ನೆಲೆಯಲ್ಲಿ, ಅವುಗಳ, ಸ್ಥಾನದ ಹಿನ್ನೆಲೆಯಲ್ಲಿ ವ್ಯತ್ಯಾಸಗೊಳ್ಳುತ್ತವೆ.

ದೇವರುಗಳ ಸ್ಥಾನ :

೧. ವೆಳ್ಳಾತ್ತೂರ್ ಅಮ್ಮನ್‌ವಳಿಪಾಡು
೨. ಪೆರಿಯಾಂಡವರ್ ವಳಿಪಾಡು

ವೆಳ್ಳಾತ್ತೂರ್‌ಅಮ್ಮನ್ – ಊರಿನ ಮಧ್ಯದಲ್ಲಿರುವ ಈ ದೇಗುಲ ಬಹುಶ್ರೇಷ್ಠ ಸ್ಥಾನವನ್ನು ಪಡೆದಿರುತ್ತದೆ.

ಪೆರಿಯಾಂಡವರ್- ಊರಿಗೆ ಸೇರಿದ ದಕ್ಷಿಣ ಗಡಿಯಲ್ಲಿರುವ ಈ ದೇಗುಲ ಸಾಮಾನ್ಯವಾದ ವಿಶೇಷತೆಯನ್ನು ಪಡೆದಿರುತ್ತದೆ.

ಕುಲದೇವರ ದೇಗುಲಗಳ ಸಂಖ್ಯೆ :

ಚೆಂಗುಂದರ್‌- ೨
ಆದಿದ್ರಾವಿಡ – ೧

ಸಾಮಾಜಿಕ, ಆರ್ಥಿಕ, ಜಾತಿ ಇತ್ಯಾದಿಗಳ ಶ್ರೇಷ್ಠತೆಯ ಹಿನ್ನೆಲೆಯಲ್ಲಿ ಚೆಂಗುಂದರ್ ವಂಶದವರಿಗೆ ವಿಶಾಲ ಮತ್ತು ಒಳ್ಳೆಯ ವಿನ್ಯಾಸದಿಂದ ಕೂಡಿದ ದೇಗುಲಗಳಿವೆ.

ಕುಲದೇವರ ಸ್ಥಾನ : ಒಂದೊಂದು ಜಾತಿಯಲ್ಲೂ ಕುಲದೇವರು ಪೂಜಿಸುವವರ ಹಿನ್ನೆಲೆಗೆ ತಕ್ಕಂತೆ ಮುಖ್ಯ ಸ್ಥಾನವನ್ನು ಪಡೆದಿರುತ್ತದೆ.

ವೆಳ್ಳಾತ್ತೂರ್ ಅಮ್ಮನ್ ಸಾಮಾನ್ಯ ದೇವರಾಗಿದೆ. ಈ ದೇವರು ಚೆಂಗುಂದರ್ ಕುಲಕ್ಕೆ ಸೇರಿದ ಪಾರಾಂಜಿ ಕುಟುಂಬದಲ್ಲಿ ಹುಟ್ಟಿದುದಾಗಿ ಜನರ ಮೌಖಿಕ ಇತಿಹಾಸದ ಕಥೆಯೊಂದು ಹೇಳುತ್ತದೆ. ಅದರಿಂದ ಪಾರಾಂಜಿಕುಲದವರಿಗೆ ಊರಿನ ಸಾಮಾನ್ಯ ದೇವರ ಪೂಜೆಯಲ್ಲಿ ಮುಖ್ಯಸ್ಥಾನವುಂಟು. ಇವರ ಕುಲದೇವರು ವೆಳ್ಳಾತ್ತೂರ್ ಅಮ್ಮನ್. ಆದ್ದರಿಂದ ಕುಲದೇವರ ಪೂಜೆಯಲ್ಲಿ ವೆಳ್ಳಾತ್ತೂರ್ ಅಮ್ಮನ್ ಮೊದಲ ಸ್ಥಾನವನ್ನು ಪಡೆಯುತ್ತಾಳೆ. ಈ ಪೂಜೆಯಲ್ಲಿ ಚಿಕ್ಕ ದೇವರನ್ನು ಪೂಜಿಸುವ ಹಾಗೆ ದೊಡ್ಡದೇವರುಗಳನ್ನು ಸಹ ವಿಶೇಷವಾಗಿ ಪೂಜಿಸಲಾಗುತ್ತದೆ.

ಪಿ.ಎ.ಎಂ. ಅನುವಾದ ಆರ್.ಎಸ್.

 

ಪೇದರಾಶಿ ಪೆದ್ದಮ್ಮ ರಾಜಕುಮಾರರಿಗೆ ಸಂಬಂಧಿಸಿದ ಎಲ್ಲಾ ಕಥೆಗಳಲ್ಲಿ ಪೇದರಾಶಿ ಪೆದ್ದಮ್ಮ (ಅಡುಗೂಲಜ್ಜಿ) ಇರುತ್ತಾಳೆ. ಹೊತ್ತು ಹೊತ್ತಿಗೆ ಅನ್ನ ಇಡುವ ಛತ್ರದಲ್ಲಿ, ಅಷ್ಟೋ ಇಷ್ಟೋ ದುಡ್ಡು ಪಡೆದು ಪರದೇಶಗಳಿಂದ ಬರುವ ಎಲ್ಲರಿಗೂ ಈಕೆ ಅನ್ನ ಹಾಕುತ್ತಾಳೆ. ಈಕೆಗೆ ಗಂಡ ಇರುವುದಿಲ್ಲ. ಇರುವ ಒಬ್ಬ ಮಗಳು, ತಂಗಿ ಇನ್ನೊಂದು ರಾಜ್ಯದಲ್ಲಿ ಮದುವೆ ಆಗಿರುತ್ತಾರೆ. ಈಕೆಯನ್ನು ಪೆದ್ದಮ್ಮ (ದೊಡ್ಡವ್ವ) ಅಜ್ಜಿ ಎಂದು ಕರೆಯುತ್ತಾರೆ.

ಯಾರಾದರೂ ರಾಜಕುಮಾರನು ಇಲ್ಲದಿದ್ದರೆ, ಕತಾನಾಯಕರು ಅಜ್ಜಿ ಇರುವ ರಾಜ್ಯಕ್ಕೆ ಬಂದರೆ ಆಕೆಯ ಮನೆ, ಆತನಿಗೆ ಆಶ್ರಯವಾಗಿರುತ್ತದೆ. ಇಂತಹ ಜನರಿಗೆ ಮೂರು ಹೊತ್ತು ಊಟದ ವ್ಯವಸ್ಥೆಯನ್ನು ಮಾಡಿ ತನ್ನ ಮೊಮ್ಮಗನ ಹಾಗೆ ನೋಡಿಕೊಳ್ಳುತ್ತಾಳೆ. ಆ ಊರಿನಲ್ಲಿನ ವಿಶೇಷಗಳನ್ನು ಹೇಳುತ್ತಾಳೆ. ಕೆಲವು ಕಥೆಗಳಲ್ಲಿ ಈಕೆಯ ಮೊಮ್ಮಗನೆ ನಾಯಕನಾಗಿರುತ್ತಾನೆ. ಕೆಲವು ಕಥೆಗಳಲ್ಲಿ ಪರದೇಶದ ರಾಜಕುಮಾರನು ಈಕೆಯ ತಂಗಿಯ ಮಗನೆಂದೋ, ಮಗಳ ಮಗನೆಂದೋ ಅಜ್ಜಿಯನ್ನು ನಂಬಿಸಿ ಆಶ್ರಯ ಪಡೆಯುತ್ತಾನೆ.

ಅಜ್ಜಿಯ ಇನ್ನೊಂದು ಕೆಲಸ ಹೂವಿನ ಹಾರ ಮತ್ತು ದಿಂಡುಗಳನ್ನು ಕಟ್ಟುವುದು. ಮನೆಯ ಹಿತ್ತಲಿನಲ್ಲಿ ಬೆಳೆಸಿದ ಹೂವಿನ ಗಿಡಗಳಿಂದ ಹೂವಿನ ಹಾರಗಳನ್ನು ತಟ್ಟೆ ಮಾರುವುದು ಈಕೆಯ ದಿನ ನಿತ್ಯದ ಕೆಲಸ. ಅದರಲ್ಲೂ ಈಕೆ ಕಟ್ಟಿದ ಹೂವಿನ ದಿಂಡುಗಳ ಹಾರಗಳನ್ನು ರಾಜಕುಮಾರಿಗೆ, ರಾಣಿಗೆ ಅಥವಾ ರಾಜನು ಇಷ್ಟ ಪಡುವ ಹೆಂಗಸಿಗೆ ಪ್ರತಿದಿನ ಅಲಂಕಾರ ಮಾಡುತ್ತಾಳೆ. ಆದ್ದರಿಂದ ಈ ಅಜ್ಜಿ ಅಂದರೇ ರಾಜಕುಮಾರಿಗೆ ಅಥವಾ ರಾಣಿಗೆ ತುಂಬಾ ಇಷ್ಟ. ಆದ್ದರಿಂದಲೆ ಇವರು ಅವರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಈಕೆಯ ಹತ್ತಿರ ಹೇಳಿಕೊಳ್ಳುತ್ತಾರೆ. ಇದಲ್ಲದೆ ಅರಮನೆಯ ರಹಸ್ಯಗಳೆಲ್ಲಾ ಈಕೆಗೆ ಗೊತ್ತಿರುತ್ತದೆ. ಅರಮನೆಯ ಸಂಸ್ಕಾರ, ಮರ್ಯಾದೆ ಈಕೆಗೆ ಗೊತ್ತಿರುತ್ತದೆ. ಆದ್ದರಿಂದ ಈಕೆಯ ವರ್ತನೆಯ ಸಹಾ ತುಂಬಾ ಗಂಭೀರವಾಗಿರುತ್ತದೆ.

ಕೆಲವು ಕಥೆಗಳಲ್ಲಿ ಈ ಅಜ್ಜಿಗೆ ಮಂತ್ರ ತಂತ್ರ ಸಹಾ ಗೊತ್ತಿರುತ್ತದೆ. ಆದರೆ ಇವುಗಳಿಂದ ಯಾರಿಗೂ ಕೆಡಕು ಮಾಡುವುದಿಲ್ಲ. ಕಥೆಯ ನಾಯಕರು ಕಷ್ಟದಲ್ಲಿದ್ದಾಗ ಮಾತ್ರ ತನ್ನ ಮಂತ್ರ ತಂತ್ರಗಳನ್ನು ಉಪಯೋಗಿಸುತ್ತಾರೆ. ಆದ್ದರಿಂದಲೆ ಈಕೆ ಒಬ್ಬಂಟಿ ಹೆಂಗಸು ಆದರೂ ನಿರ್ಭಯವಾಗಿ ಜೀವನ ಮಾಡುತ್ತಾಳೆ. ಆ ರಾಜ್ಯದಲ್ಲಿರುವರಿಗೆ, ಹೆಣ್ಣು ಮಕ್ಕಳಿಗೆ ಉಚಿತವಾಗಿ ಸಲಹೆಗಳನ್ನು ಕೊಡುತ್ತಾಳೆ. ಹೆಣ್ಣು ಎಲ್ಲರ ಮನವನ್ನು ಗೆದ್ದು ಮನ್ನಣೆ ಪಡೆಯುತ್ತಾಳೆ. ಅರಮನೆಯ ಜನರಿಂದ ಹಿಡಿದು ಸಾಮಾನ್ಯ ಜನರ ತನಕ ಎಲ್ಲರ ಪ್ರಭಾವ ಗೊತ್ತಿರುವುದರಿಂದ ಯಾರನ್ನಾದರೂ ನೋಡಿದ ತಕ್ಷಣ ಅವರ ಸ್ವಭಾವವನ್ನು ಗುರುತಿಸುವ ಶಕ್ತಿ ಈಕೆಗೆ ಇರುತ್ತದೆ. ಅದಲ್ಲದೆ ಈಕೆ ಒಳ್ಳೆಯ ಮಾತುಗಾರಿಕೆ ಇರುವವಳೂ ಆಗಿರುತ್ತಾಳೆ. ಒಟ್ಟಾಗಿ ಈಕೆ ಒಂದು ಜ್ಞಾನಭಂಡಾರ.

ಆದ್ದರಿಂದಲೆ ಜನಪದ ಕಥೆಗಳಲ್ಲಿನ ನಾಯಕನು ಯಾವುದೋ ಒಂದು ರೀತಿ ಈಕೆಯ ಆಶ್ರಯವನ್ನು ಪಡೆದು ಮನವನ್ನು ಗೆಲ್ಲುತ್ತಾನೆ. ರಾಜ ಕುಮಾರಿಯನ್ನು ಮದುವೆ ಆಗುವುದು. ಖಳ ನಾಯಕನ ರಹಸ್ಯ, ಪ್ರಾಣ ಇರುವ ಸ್ಥಳವನ್ನು ಕಂಡು ಹಿಡಿಯುವ ಆಶಯದಿಂದ ಬಂದಿರುವ ನಾಯಕನಿಗೆ ಈಕೆ ದೈವ ಸಮಾನ. ಆಕೆಯ ಸಹಾಯದಿಂದಲೆ ಎಲ್ಲವನ್ನು ಸಾಧಿಸುತ್ತಾನೆ. ಆದ್ದರಿಂದ ಜನಪದ ಕಥೆಗಳಲ್ಲಿ ಈಕೆ ಅತ್ಯಂತ ಪ್ರಧಾನವಾದ ಶಕ್ತಿಯಾಗಿರುತ್ತಾಳೆ. ಕಥಾನಾಯಕನ ಕಾರ್ಯ ಸಾಧನೆಗೆ ಈಕೆ ಕಾಮಧೇನು, ಕಲ್ಪವೃಕ್ಷ ಮತ್ತು ಅಕ್ಷಯಪಾತ್ರೆ.

ಟಿ.ಎನ್.

 

ಪೇಯ್ ಒಟ್ಟುಮ್‌ಪಾಡಲ್ ಮನುಷ್ಯರನ್ನು ದೆವ್ವ ಹಿಡಿದುಕೊಳ್ಳುತ್ತದೆ ಎಂಬ ನಂಬಿಕೆ ಈಗಲೂ ಜನರಲ್ಲಿದೆ. ಹೀಗೆ ಮನುಷ್ಯರನ್ನು ಬಂದು ಹಿಡಿದಿರುವ ದೆವ್ವವನ್ನು ದೂರ ಓಡಿಸುವುದಕ್ಕಾಗಿ, ತಮಿಳುನಾಡಿನಲ್ಲಿ ದೆವ್ವ ಓಡಿಸುವವರು (ಬಿಡಿಸುವವರು) ಹಾಡುವ ಹಾಡುಗಳೇ ‘ದೆವ್ವ ಓಡಿಸುವ ಹಾಡು’ಗಳಾಗಿವೆ. ದೆವ್ವ ಓಡಿಸುವುದನ್ನೇ ವೃತ್ತಿಯನ್ನಾಗಿಸಿಕೊಂಡವರು ಇಂತಹ ಹಾಡುಗಳನ್ನು ಹಾಡುವುದರಿಂದ ಇದನ್ನು ‘ವೃತ್ತಿಕ್ಷೇತ್ರದ ಹಾಡುಗಳೆಂದೂ ಕೆಲವು ನಿರ್ದಿಷ್ಟ ಆಚರಣೆಗಳೊಂದಿಗೆ ಹಾಡುವುದರಿಂದ ಇವುಗಳನ್ನು ‘ಆಚರಣಾ ವಿವರಣೆಯ ಹಾಡುಗಳು’ ಎಂದೂ ಹೆಸರಿಸುವುದುಂಟು. ದೆವ್ವ ಓಡಿಸುವವರು ‘ಉಡುಕ್ಕೈ’ ಎಂಬ ಹೆಸರಿನ (ಚಿಕ್ಕ ಗಾತ್ರದ ಡಮರುಗದಂತಿರುವ) ವಾದ್ಯವನ್ನೂ, ಬೆತ್ತದ ಕಡ್ಡಿ, ಬೇವಿನೆಲೆ, ವಿಭೂತಿ, ಒಂದು ಚೆಂಬು ನೀರು, ಕೋಳಿ, ವೀಳ್ಯದೆಲೆ, ತೆಂಗಿನಕಾಯಿ, ಕರ್ಪೂರ, ಸಾಂಬ್ರಾಣಿ, ಉದುಬತ್ತಿ, ಹೂ ಇತ್ಯಾದಿಗಳನ್ನು ಇಟ್ಟು ಪೂಜಿಸಿದ ನಂತರ ದೆವ್ವ ಓಡಿಸುವ ಕ್ರಿಯೆಯನ್ನು ಆರಂಭಿಸಿ, ಅದರೊಂದಿಗೇ ಈ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳು ಎರಡು ಹಂತಗಳಾಗಿ ಹಾಡುವಂತಹುವು. ಮೊದಲ ಹಂತ ದೇವರನ್ನೂ, ಗುರುವನ್ನೂ ನಮಿಸುವುದಾಗಿದೆ. ಎರಡನೇ ಹಂತದಲ್ಲಿ ದೆವ್ವದ ಬಗೆಗಿನ ಸುದ್ದಿಗಳು ಸ್ಥಳ ಪಡೆದಿಕೊಳ್ಳುತ್ತದೆ. ಪರಿಸ್ಥಿತಿಗೆ ತಕ್ಕಂತೆ ದೆವ್ವದ ಬಗ್ಗೆ ತಿಳಿದುಕೊಳ್ಳುವಂತೆಯೂ, ದೆವ್ವದ ಆಸೆ ಏನೆಂದು ತಿಳಿದುಕೊಳ್ಳುವಂತೆಯೂ, ಬೇಡುವುದು, ಆಜ್ಞಾಪಿಸುವುದು, ಇತ್ಯಾದಿ ರೂಪಗಳಲ್ಲಿ ದೆವ್ವ ಓಡಿಸುವ ಹಾಡು ಸಾಗುತ್ತದೆ.

ದೈವ ಸ್ತುತಿ

ಹರಿವ ಗಂಗೆಯಲಿ
ಒಂದು ತಂಬಿಗೆ ನೀರು ತೆಗೆದುಕೊಂಡು
ಸುತ್ತು ಹಾಕಿ ನಮಿಸುವೆ
ಸೂರ್ಯ ದೇವನ ಸ್ತುತಿಸುವೆ

ಗುರುಸ್ತುತಿ

ಸೇನೆಗೆ ಅಧಿಕಾರಿ ನಮ್ಮ
ಗುರುನಾಥನೆನ್ನ ರಕ್ಷಿಸಲಿ
ದಾರಿ ತೋರಲಿ ಎನಗೆ
ಎನ್ನ ನಮನವು ಅವನಿಗೆ

ಮಲಯಾಳ ಮಹಾಋಷಿಯ ಬಳಿ
ಮಂತ್ರವ ಕಲಿತವನು ಅವನ
ಮರೆಯಲಾರೆ ನಾನೆಂದೂ ಅವನನು

ದೆವ್ವವನ್ನು ಪ್ರಶ್ನಿಸುವುದು

ಯಾರು ಯಾರು ನೀನಾರು
ಏಕೆ ಬಂದೆಯಿಲ್ಲಿಗೆಯೆಂದು
ಹೇಳಿದೆಯಾದರೆ – ನಮಿಸುವೆ
ನಿನ್ನ ನಾನು
ಯಾವ ಊರು
ಯಾವ ದೇಶ
ಹೆಣ್ಣೋ – ಗಂಡೋ
ಹೇಳೆನಗೆ ತಿಳಿದುಕೊಳ್ಳಬೇಕು ನಾನು
ಕನ್ಯೆಯಾ ಮೇಲೆ – ಈ
ಕನ್ಯೆಯಾ ಮೇಲೆ ಬಂದ
ಕಾರಣವೇನು ಹೇಳು ನೀನು!

ಹೀಗೆ ಪ್ರಶ್ನಿಸುವ ರೀತಿ ಹಾಡುವ ಈ ಹಾಡನ್ನು, ತಮ್ಮ ಪ್ರಶ್ನೆಗೆ ಉತ್ತರ ದೊರಕುವವರೆಗೂ ದೆವ್ವ ಓಡಿಸುವವರು ನಾನಾ ರೀತಿಯಲ್ಲಿ ಮುಂದುವರಿಸುತ್ತಾರೆ. ಈ ಹಾಡನ್ನೂ ಡಮರುಗದ ಧ್ವನಿಯನ್ನೂ ಕೇಳಿ ದೆವ್ವ ಹಿಡಿದಿರುವ ವ್ಯಕ್ತಿ ತನ್ನನ್ನೇ ಮರೆತು, ಅವರೊಳಗಿನ ದೆವ್ವ ಮಾತನಾಡತೊಡಗುತ್ತದೆ ಎಂದು ಜನ ನಂಬುತ್ತಾರೆ. ಭಾವೋದ್ರೇಕಕ್ಕೆ ಸಿಲುಕಿದ, ದೆವ್ವ ಹಿಡಿದು ವ್ಯಕ್ತಿಯೂ ಆವೇಶದಿಂದ ಹಾಡತೊಡಗುತ್ತಾನೆ. ಇಂತಹ ಹಾಡುಗಳನ್ನೇ ‘ದೆವ್ವದ ಹಾಡುಗಳು’ ಎಂದು ಹೇಳುವುದು.

ದೆವ್ವದ ಹಾಡು

ವಾಯ್ಕಾಪಟ್ಟಿ ನನ್ನೂರು
ಬಾಗಿಲ ಮುಂದೆ ರಂಗೋಲಿ
ಇರುವುದೆ ನನ್ನ ಮನೇ…

ರಾಜಾ ಎಂದು ಕರೆಯುತ್ತಿದ್ದರು ಈ ರೋಷಗೆಟ್ಟವನು

ಹುಡುಗಿಗಾಗಿ ಹಂಬಲಿಸಿ
ತಿರುಗಿದೆ ನಾನೆಲ್ಲ ಕಡೆ

ಕೆಲಸವಿಲ್ಲದ ಪೋಕರಿಗೆಲ್ಲಿ ಸಿಗುವಳೋ ಹುಡುಗಿ ಎಂದು ಸಿಡುಕಿದಳು ನನ್ನವ್ವ

ಸಿಟ್ಟಿನಿಂದ ತಿಂದು ನಾನು
ಹಾಳಾಗಿ ಹೋದೆ

ಅರಳಿ ಬೀಜವ….

ವಾಯ್ದಾ ಮುಗಿಯಲಿಲ್ಲವಲ್ಲಾ…!
ನಾನು ಬಾನಿನ ಲೋಕವ ತಲುಪಲು
ಇನ್ನೂ ಬಂಡಿಯು ಕಾಣಲಿಲ್ಲವಲ್ಲಾ!
ದೆವ್ವವಾಗಿ ಅಲೆಯುತಿರುವೆ ಇನ್ನೂ
ಮಾತಿಗೊಂದು ಜೊತೆ ಬೇಕೆಂದು

ಹೀಗೆ ದೆವ್ವ ಹಿಡಿದ ವ್ಯಕ್ತಿ ತನ್ನ ಕಥೆ ಹೇಳುತ್ತಾರೆ. ಅನಂತರ ದೆವ್ವ ಬಿಡಿಸುವ ಮಾಂತ್ರಿಕರು, ದೆವ್ವ ಹಿಡಿದುಕೊಂಡಿರುವ ವ್ಯಕ್ತಿಯು ಅದರ ಕಾರಣದಿಂದ ಅನುಭವಿಸುವ ಕಷ್ಟಗಳನ್ನೆಲ್ಲ ಅದರ ಮುಂದೆ ಹೇಳಿಕೊಂಡು ಆ ವ್ಯಕ್ತಿಯನ್ನು ಬಿಟ್ಟು ಹೋಗುವಂತೆ ಕೇಳಿಕೊಳ್ಳುತ್ತಾರೆ.

ಬೇಡಿಕೊಳ್ಳುವ ಹಾಡು

ತಲೆಗೂದಲು ಕೆದರಿಕೊಂಡು
ತಂಗಿ ಆಡುತ್ತಾಳೆ.
ಹುಳಿ ಹೆಂಡ ಕೊಡ್ತೀವಿ
ಅವಳ ಬಿಟ್ಟು ಹೋಗ್ಬಿಡಪ್ಪಾ!

ಇಂತಹ ಬೇಡಿಕೆಯ ಹಾಡನ್ನು ಮತ್ತೆ ಮತ್ತೆ ವಿಧವಿಧವಾಗಿ ಹಾಡುತ್ತಾರೆ. ಹಾಗೆ ಹಾಡಿಯೂ ದೆವ್ವ ಆ ವ್ಯಕ್ತಿಯನ್ನು ಬಿಟ್ಟು ಹೋಗದಿದ್ದರೆ, ಆಜ್ಞಾಪಿಸುವಂತಹ, ಆದೇಶಿಸುವಂತಹ ಬೆದರಿಸುವಂತಹ ಹಾಡುಗಳನ್ನು ಹಾಡತೊಡಗುತ್ತಾರೆ.

ಆದೇಶಿಸುವ ಹಾಡು

ಬಿಟ್ಟೋಗ್ದಿದ್ರೆ ನಿನ್ನಾ
ಒದ್ದೊಡುಸ್ತೀನಿ ನೋಡು
ಮಂತ್ರದ ತಾಯ್ತ ಕಟ್ತೀನಿ
ಮರ್ಯಾದೆಯಿಂದ ಬಿಟ್ಹೋಗು!
ಹೋಗೋಗು…..! ಛೀ….! ಥೂ….!

ಹೀಗೆ ಸಿಟ್ಟಿನಿಂದ ಬೆದರಿಕೆ ಹಾಕುತ್ತಾರೆ. ಅನಂತ ದೆವ್ವ ಹಿಡಿದುಕೊಂಡ ವ್ಯಕ್ತಿ ಸ್ವಲ್ಪ ಇಳಿದು ಬಂದು ತಮಗೆ ಬೇಕಾದ ಕೆಲವು ವಸ್ತುಗಳನ್ನು ಕೇಳುವುದುಂಟು. ದೆವ್ವ ಬಯಸಿದ ವಸ್ತುಗಳನ್ನು ನೀಡುವುದಾಗಿ ಇವರೂ ಭರವಸೆ ನೀಡುತ್ತಾರೆ. ಅವರ ಭರವಸೆಯನ್ನು ನಂಬಿ ದೆವ್ವ ಅದರ ಪ್ರಕಾರ ನಡೆದುಕೊಳ್ಳುತ್ತದೆಂದು ಜನ ನಂಬುತ್ತಾರೆ. ದೆವ್ವ ಬಿಡಿಸುವ ವ್ಯಕ್ತಿಯನ್ನು ‘ಕೋಡಂಗಿ’ ಎಂದು ತಮಿಳುನಾಡಿನ ದಕ್ಷಿಣ ಭಾಗದ ಪ್ರಾಂತ್ಯಗಳಲ್ಲಿ ಕರೆಯುತ್ತಾರೆ. ಉತ್ತರ ಭಾಗದ ಪ್ರಾಂತ್ಯಗಳಲ್ಲಿ ‘ಪೂಜಾರಿ’ ಎಂದು ಕರೆಯುತ್ತಾರೆ. ದೆವ್ವ ಓಡಿಸುವ ಹಾಡುಗಳು ಪ್ರಾದೇಶಿಕ ವ್ಯತ್ಯಾಸವನ್ನು ಹೊಂದಿರುತ್ತವೆ.

ಆರ್.ಪಿ.ಯು. ಅನುವಾದ ಟಿ.ಎಸ್.