ಪೇರಂಟಾಳ್ಳ ಪಂಡುಗ  ಆಂಧ್ರದ ಹಬ್ಬಗಳಲ್ಲಿ ಒಂದು. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ತಮ್ಮ ಪತಿಯರು ಯುದ್ಧದಲ್ಲಿ ವೀರ ಮರಣ ಹೊಂದಿದಾಗ ಅವರ ಜೊತೆ ಸಹಗಮನ ಮಾಡಿ ದೇವತಾರೂಪ ಪಡೆಯುತ್ತಿದ್ದರು. ಅಂಥ ಮಹಾಸತಿಯರ ನೆನಪಿನಲ್ಲಿ ಮಾಡುವುದು ಪೇರಂಟಾಳ್ಳ ಪಂಡುಗ. ಇದನ್ನು ಪುಷ್ಯ ಮಾಸದ ಮೂರನೆಯ ಶುಕ್ರವಾರದಂದು ಮಾಡುತ್ತಾರೆ. ಬೆಳಗ್ಗೆ ಏಳುಗಂಟೆಗೆ ಮಂಟಪದಲ್ಲಿ ಸುಮಂಗಲಿ ಪೂಜೆಯಿಂದ ಇದನ್ನು ಆರಂಭ ಮಾಡುತ್ತಾರೆ. ಹಿರಿಯ ಮುತ್ತೈದೆಯರು ಸಾಲಾಗಿ ಕುಳಿತುಕೊಳ್ಳುತ್ತಾರೆ. ಚಿಕ್ಕವರೆಲ್ಲ ಅವರಿಗೆ ನಮಸ್ಕಾರ ಮಾಡುತ್ತಾರೆ. ಅನಂತರ ಎಲ್ಲರೂ ಸೇರಿ ಸುಮಂಗಲಿ ಪೂಜೆ ಮಾಡುತ್ತಾರೆ. ಆ ಮೇಲೆ ೧೦೧ ಬುಟ್ಟಿಗಳನ್ನು ತೆಗೆದುಕೊಂಡು ಒಂದೊಂದು ಮನೆಯ ಹಿರಿಯ ಮಗ ತನ್ನ ಹೆಂಡತಿಯ ತಲೆಯ ಮೇಲೆ ಅವುಗಳನ್ನು ಇಡುತ್ತಾನೆ. ಅದರಲ್ಲಿ ಅರಿಸಿನ, ಕುಂಕುಮ, ಪೊಂಗಲ್ ಮಾಡಲು ಪದಾರ್ಥಗಳು, ಹೂವು ಇರುತ್ತವೆ. ಆ ಬುಟ್ಟಿಯನ್ನು ಹೊತ್ತು ಅನೇಕ ಜನ ಹೆಣ್ಣು ಮಕ್ಕಳಿಗೆ ಮೈಮೇಲೆ ದೇವರು ಬರುವುದುಂಟು.

ಮನೆಗಳಿಂದ ನದೀ ತೀರಕ್ಕೆ ಹೋದವರು ಮರಳು ದಿಣ್ಣೆಗಳ ಮೇಲೆ ತಮ್ಮ ಮನೆದೇವರನ್ನು ಮಾಡುತ್ತಾರೆ. ತೆಂಗಿನಕಾಯಿಗೆ ಅರಿಸಿನ ಮುದ್ದೆ ಮೆತ್ತಿ ಕಣ್ಣು, ಮೂಗು ಮಾಡಿ, ಬೊಟ್ಟಿಟ್ಟು, ಜಡೆ ಹಾಕಿ, ಸೇರೆ ಇಟ್ಟು ಒಡವೆಗಳಿಂದ ಅಲಂಕಾರ ಮಾಡುತ್ತಾರೆ. ಅನಂತರ ಸಿಹಿ ಪೊಂಗಲ್ ಮಾಡಿ, ಆರತಿ ನೀಡಿ ಎಲ್ಲರಿಗೂ ಊಟ ಹಾಕುತ್ತಾರೆ. ಇದನ್ನು ನೂರಾರು ವರ್ಷಗಳಿಂದ ಮಾಡುತ್ತಿರುವುದಾಗಿ ಹೇಳುತ್ತಾರೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿ ಪ್ರದೇಶಗಳಲ್ಲಿ ನಡೆಯುವ ಈ ಹಬ್ಬಕ್ಕೆ ಕೋಯಂಬತ್ತೂರು, ಸೇಲಂ, ಚೆನ್ನೈ, ಬೆಂಗಳೂರು ಮುಂತಾದ ಪ್ರದೇಶಗಳಿಂದಲ್ಲದೆ ವಿದೇಶಗಳಿಂದಲೂ ಭಕ್ತರು ಬಂದು ಪಾಲ್ಗೊಳ್ಳುತ್ತಾರೆ.

ಈ ಹಬ್ಬವನ್ನು ಸತೀಸಹಗಮನ ಮಾಡಿದವರ ನೆನಪಿನಲ್ಲಿ ಮಾಡುತ್ತಾರೆ. ಸತಿ ಪ್ಧತಿಯನ್ನು ಕುರಿತಂತೆ ವೈದಿಕ ಸಾಹಿತ್ಯದ ಕಾಲದಿಂದಲೂ ಉಲ್ಲೇಖಗಳು ಕಂಡುಬರುತ್ತವೆ. ಇದು ಆಂಧ್ರದ ಪ್ರಾಚೀನ ಸಂಪ್ರದಾಯವಲ್ಲ. ಉತ್ತರ ಹಿಂದೂಸ್ಥಾನದಿಂದ ಬಂದುದು. ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮುಂತದ ಕಡೆ ಹೆಚ್ಚಾಗಿತ್ತೆಂದು ಬಂಗಾಳದ ಮೂಲಕ ದಕ್ಷಿಣ ಭಾರತಕ್ಕೆ ಬಂದಿತೆಂದು ಹೇಳುತ್ತಾರೆ. ಕಾಕತೀಯರ ಕಾಲದಲ್ಲಿ ಮತ್ತು ರೆಡ್ಡಿರಾಜರ ಕಾಲದಲ್ಲಿ ಮತ್ತು ವಿಜಯನಗರದ ಎರಡನೆಯ ದೇವರಾಯನ ಕಾಲದಲ್ಲಿ ಇದು ಹೆಚ್ಚಾಗಿತ್ತೆಂದು ವಿದೇಶಿ ಯಾತ್ರಿಕರ ಬರೆವಣಿಗೆಗಳಿಂದ ತಿಳಿಯುತ್ತದೆ.

ತೆಲುಗು ಜನಪದ ವೀರಕಾವ್ಯಗಳಲ್ಲಿ ಸತಿಯ ಉಲ್ಲೇಖ ಹಲವೆಡೆ ಕಂಡುಬರುತ್ತದೆ. ಮಧ್ಯಕಾಲೀನ ಸಮಾಜದಲ್ಲಿ ಇದು ಪ್ರಬಲವಾಗಿತ್ತೆಂಬುದು ತಿಳಿಯುತ್ತದೆ. ಮಹಾಸತಿಯರ ನೆನಪಿನಲ್ಲಿ ಅನೇಕ ಕಥನ ಗೀತೆಗಳು ಮೂಡಿಬಂದಿವೆ. ಇಂಥ ಸತಿಪದ್ಧತಿಯನ್ನು ಅನುಸರಿಸಿ ಮಹಿಳೆಯರ ತ್ಯಾಗವನ್ನು ಜ್ಞಾಪಿಸಿಕೊಳ್ಳಲು ಪೇರಂಟಾಳ್ಳ ಪಂಡುಗ (ಮುತ್ತೈದಯರ ಹಬ್ಬ) ಆಚರಿಸಲಾಗುತ್ತಿದೆ.

ಎಸ್.ಎಸ್. ಅನುವಾದ ಎ.ಎಂ.ಡಿ.

 

ಪೊಡುಪುಕಥ ಗಾದೆಗಳಂತೆಯೇ ತೆಲುಗು ಜಾನಪದ ಸಾಹಿತ್ಯದಲ್ಲಿ ಪ್ರಮುಖವಾಗಿರುವುದು ಪೊಡುಪುಕಥಲು (ಒಗಟುಗಳು) ಜನಪದ ಸಾಹಿತ್ಯದ ಪ್ರಕಾರಗಳಲ್ಲಿ ‘ಪೊಡುಪುಕಥ’ ಎನ್ನುವುದು ಲಯಬದ್ಧತೆ, ಗೇಯತೆ, ಚಾತುರ್ಯ, ಕಲ್ಪನಾಶಕ್ತಿ ಇವುಗಳನ್ನು ಒಳಗೊಂಡ ವಿನೋದ, ವಿಡಂಬನೆಗಳ ವಾಕ್ಯವೃಂದ. ತೆಲುಗಿನಲ್ಲಿ ಒಗಟನ್ನು, ಸೂಚಿಸಲು ಅನೇಕ ಶಬ್ದಗಳನ್ನು ಬಳಸಲಾಗುತ್ತದೆ. ‘ಪೊಡುಪುಕಥ’ ಎಂಬುದು ತೀರಾಂಧ್ರ ಪ್ರಾಂತ್ಯದಲ್ಲಿ ವ್ಯವಹಾರದಲ್ಲಿದ್ದರೆ, ರಾಯಲಸೀಮದಲ್ಲಿ, ಮುಖ್ಯವಾಗಿ ಚಿತ್ತೂರು ಜಿಲ್ಲೆಯಲ್ಲಿ ‘ಮಾರುಕಥ’ ಎಂದು ಕರೆಯುತ್ತಾರೆ. ಇದನ್ನೇ ಇಚ್ಚುಕತ, ವಿಚ್ಚುಕತ, ವಿಪ್ಪುಕತ ಎಂದೂ ಕರೆಯುವುದುಂಟು. ಅನಂತಪುರ ಜಿಲ್ಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಅಡ್ಡಕಥ, ಅಡ್ಡಕತ, ಅಡ್ಡುಕತ ಎಂದೂ, ಕರ್ನಾಟಕದ ಕೋಲಾರ ಪ್ರಾಂತ್ಯದವರು ‘ಒಗಟ್ಲು’ ಎಂದೂ, ‘ಒಡ್ಡುಕತ’ ಎಂದೂ ವ್ಯವಹರಿಸುತ್ತಾರೆ. ತೆಲಂಗಾಣದಲ್ಲಿ ವರಂಗಲ್ ಪ್ರದೇಶದಲ್ಲಿ ಇದನ್ನು ‘ಶಾಸ್ತ್ರಂ’ ಎಂದೂ ಕರೆಯುವುದುಂಟು.

ಅನಂತಪುರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇವುಗಳನ್ನು ‘ಎದುರುಕಥಲು’ ಎಂದು ಕರೆಯುತ್ತಾರೆ. ಇಲ್ಲಿಯ ಕನ್ನಡದವರು ಇವುಗಳನ್ನು ‘ಎದುರುಕತೆಗಳು’, ‘ಒಡಕತೆಗಳು’ ಎಂದು ಕರೆಯುವುದುಂಟು.

ತೆಲುಗಿನಲ್ಲಿ ‘ಪೊಡುಪುಕಥಲು’ ಹಲವಾರು ಸಂಖ್ಯೆಯಲ್ಲಿ ಲಭ್ಯವಾಗುತ್ತವೆ. ವಿಷಯ ಪ್ರಾಧಾನ್ಯದಿಂದ ಇವುಗಳನ್ನು ಈ ರೀತಿ ವರ್ಗೀಕರಿಸಬಹುದು.

೧. ಪ್ರಶ್ನಾಥಕ, ೨. ವಿನೋದಾತ್ಮಕ, ೩. ಕಥಾತ್ಮಕ, ೪. ಸರಪಣಿ ಕಥೆ, ೫. ವೃತ್ತಿಸಂಬಂಧ, ೬. ಸಂಘಜೀವನ ಸಂಬಂಧ, ೭, ಚಿತ್ರ ಶಬ್ದಾತ್ಮಕ ೮. ಅಶ್ಲೀಲಾರ್ಥಕ ಇತ್ಯಾದಿ.

ಕೆಲವು ಪೊಡುಪುಗಳು :

೧. ತಂಡ್ರಿಗರಗರ
ತಲ್ಲಿಪೀಚು ಪೀಚು
ಬಿಡ್ಡಲು ರತ್ನ ಮಾಣಿಕ್ಯಾಲು
ಮನುಮಲು ಬೊಮ್ಮರಾಳ್ಳು

ಉತ್ತರ : ಪನಸಪಂಡು (ಹಲಸಿನ ಹಣ್ಣು)

ಇದೇ ತರಹದ ಕನ್ನಡ ಒಗಟನ್ನು ನೋಡಿ :

ತಂದೆ ಗರಗರ
ತಾಯಿ ತರಕಲು
ಮಗಳು ಜೋಡಿ
ಮೊಮ್ಮಗಳು ಕಮ್ಮಗೆ

ಉತ್ತರ : ಹಲಸಿನ ಹಣ್ಣು.

೨. ಅಂಗೀಮೀದ ಪದಾರು ಅಂಗೀಲು

ಉತ್ತರ : ಈರುಳ್ಳಿ

ಕನ್ನಡದಲ್ಲಿಯೂ ‘ಅಂಗೀ ಮೇಲೆ ಹದ್ನಾರು ಅಂಗಿಗಳು’ ಎಂಬ ಒಗಟು ಇದೆ.

೩. ಕೊಂಡನಿಂಡಾ ಕೊಡಿವೆಂಡ್ಲು

ಉತ್ತರ : ಚಿಂತಕಾಯಲ (ಹುಣಸೇಕಾಯಿ)

ಇದೇ ಕನ್ನಡದಲ್ಲಿಯೂ ಇದೆ.

೪. ಬೆಟ್ಟದ ತುಂಬಾ ಕುಡುಗೋಲುಗಳು
ಉತ್ತರ : ಹುಣಸೇಕಾಯಿ

೫. ಕೊಡಿತೇ ಏಡುಸ್ತಾಡು
ವಿಡದೀಸ್ತೇ ನವ್ವುತಾಡು
(ಟೆಂಕಾಯ)

ಇದೇ ಒಗಟು ಕನ್ನಡದಲ್ಲಿ
ಹೊಡೆದರೆ ಅಳುವನು
ಬಿಡಿಸಿದರೆ ನಗುವನು (ತೆಂಗಿನಕಾಯಿ)

ಈ ರೀತಿಯ ಒಗಟುಗಳು ತೆಲುಗಿನಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ಇವುಗಳಲ್ಲಿ ಕೆಲವು ಪದ್ಯರೂಪದಲ್ಲೂ ಕಂಡುಬರುತ್ತವೆ.

ತೆಲುಗಿನಲ್ಲಿ ಒಗಟುಗಳ ಬಗ್ಗೆ ಒಂದು ಪಿಎಚ್.ಡಿ. ಮಹಾಪ್ರಬಂಧ ಹೊರಬಂದಿದೆ. ಎರಡು, ಮೂರು ಸಂಕಲನ ಗ್ರಂಥಗಳು ಪ್ರಕಟವಾಗಿವೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ. ಜಿ.ಎಸ್. ಮೋಹನ್‌ರವರ ಮಾರ್ಗದರ್ಶನದಲ್ಲಿ ಶ್ರೀ ಎ. ಅಂಜನಪ್ಪ ತೆಲುಗು – ಕನ್ನಡ ಒಗಟುಗಳ ಬಗ್ಗೆ ತೌಲನಿಕ ಅಧ್ಯಯನ ಮಾಡಿ ಪಿಎಚ್‌.ಡಿ. ಪಡೆದಿದ್ದಾರೆ.

ಜಿ.ಎಸ್.ಎಂ.

 

ಪೊನ್‌ಕುರಿಶ್‌ಮುತ್ತಪ್ಪನ್ ಮಲೆಯಾಟ್ಟೂರು ಇಗರ್ಜಿ ಕೇರಳದಲ್ಲಿ ಕ್ರಿಶ್ಚಿಯನ್ನರ ಒಂದು ಪ್ರಧಾನ ಆರಾಧನಾಯವಾಗಿದೆ. ಪೆರಿಯಾರ್ ನದೀ ತೀರದಲ್ಲಿ ಸಮುದ್ರಮಟ್ಟದಿಂದ ಸಾವಿರದ ಐನೂರು ಅಡಿ ಎತ್ತರದಲ್ಲಿ ಇದು ಸ್ಥಾಪನೆಗೊಂಡಿದೆ. ‘ಕುರುಶುಮಲಪ್ಪಳ್ಳಿ’ ಎಂದೂ ಇದಕ್ಕೆ ಹೆಸರಿದೆ. ಯೇಸುಕ್ರಿಸ್ತನ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬನಾದ ತೋಮಾಶ್ಲೀಹ ಈ ಇಗರ್ಜಿಯನ್ನು ನಿರ್ಮಿಸಿದನೆಂದು ನಂಬಿಕೆ. ಪುಣ್ಯಾತ್ಮನ ಪಾದಸ್ಪರ್ಶ ಪಡೆದ ಈ ಜಾಗ ಈಗ ಒಂದು ಅಂತಾರಾಷ್ಟ್ರೀಯ ತೀರ್ಥಕ್ಷೇತ್ರವಾಗಿದೆ.

ಯೇಸುಕ್ರಿಸ್ತ ದೇಹತ್ಯಾಗ ಮಾಡಿದಾಗ ಶಿಷ್ಯರಾದ ಶ್ಲೀಹರು ಜತೆಗೂಡಿ ಮುಂದಿನ ಕಾರ್ಯಗಳನ್ನು ಸಮಾಲೋಚಿಸಿದರು. ಯೇಸುಕ್ರಿಸ್ತನ ಚಿಂತನೆಗಳನ್ನು ಪ್ರಪಂಚದ ನಾನಾ ಭಾಗಗಳಲ್ಲಿ ಪ್ರಸಾರ ಮಾಡುವುದು ತಮ್ಮ ಕರ್ತವ್ಯವೆಂದು ಅವರು ನಿಶ್ಚಯಿಸಿದರು. ಒಂದೊಂದು ದೇಶಕ್ಕೆ ಪ್ರಯಾಣ ಮಾಡಿದರು. ಕ್ರೈಸ್ತ ಸಂದೇಶಗಳನ್ನು ಭಾರತಕ್ಕೆ ತಲಪಿಸುವುದಕ್ಕಾಗಿ ಕ್ರಿ.ಶ. ೫೨ ರಲ್ಲಿ ತೋಮಾಶ್ಲೀಹ ಕೇರಳವನ್ನು ತಲಪಿದ.

ಕೇರಳಾದ್ಯಂತ ಸಂಚರಿಸಿದ ಆತ ಏಳು ಇಗರ್ಜಿಗಳನ್ನು ಸ್ಥಾಪಿಸಿದ. ಅದಕ್ಕಾಗಿಯೇ ಮಲಯಾಟ್ಟೂರಿಗೂ ತಲಪಿದ. ನಿಬಿಡವನಗಳಿಂದಲೂ ಹಿಂಸ್ರಮೃಗಗಳಿಂದಲೂ ಕೂಡಿದ್ದ ಆ ಪ್ರದೇಶದಲ್ಲಿ ದಾರಿ ನಡೆಯುವುದಕ್ಕೂ ಜನರು ಹೆದರುತ್ತಿದ್ದರು. ಆದರೆ ಎಂತಹ ಗಂಡಾಂತರಗಳಿಂದಲೂ ಪಾರು ಮಾಡುವಂತೆ ಮನದ ಆಳದಿಂದ ಯೇಸು ದೇವನಲ್ಲಿ ಪ್ರಾರ್ಥಿಸಿಕೊಂಡು ತೋಮಾಶ್ಲೀಹ ಆ ಕಾಡಿನಲ್ಲಿ ಅನೇಕ ದಿನಗಳ ತನಕ ವಾಸಿಸಿದ. ಸಂಕಟಮಯ ಸಂದರ್ಭಗಳಲ್ಲಿ ಕನ್ಯಾಮರಿಯ ಮಾತೆಯೇ ಪ್ರತ್ಯಕ್ಷವಾಗಿ ತೋಮಾಶ್ಲೀಹನನ್ನು ಸಮಾಧಾನಪಡಿಸಿದ್ದಳು. ಒಮ್ಮೆ ವನಾಂತರಾಳದ ಬಂಡೆಕಲ್ಲೊಂದರಲ್ಲಿ ತೋಮಾಶ್ಲೀಹ ಒಂದು ಶಿಲುಬೆಯನ್ನು ಬರೆದ. ಬಳಿಕ ಅಲ್ಲೊಂದು ಚಿನ್ನದ ಶಿಲುಬೆ ಕಾಣಿಸಿಕೊಂಡಿತು. ಆ ಶಿಲುಬೆ ಪ್ರತಿದಿನವೂ ಬೆಳೆಯತೊಡಗಿತು- ಇದು ಆಸ್ತಿಕರ ನಂಬುಗೆ. ಇಂದು ಅದು ಒಂದು ಆಳಿಗೂ ಮಿಕ್ಕು ಎತ್ತರವಾಗಿದೆ.

ಇನ್ನೊಮ್ಮೆ ಮಲೆಯ ಮೇಲೆ ‌ಪ್ರಾರ್ಥನೆಗೆ ತಲುಪಿದ ಆತನಿಗೆ ಬಾಯಾರಿದಾಗ ದೊಣ್ಣೆಯಿಂದ ಬಂಡೆಯ ಮೇಲೆ ಒಮ್ಮೆ ಕುಟ್ಟಿದ. ಆಗಲೇ ಬಂಡೆ ಸೀಳಿಕೊಂಡು ತಿಳಿನೀರು ಒರತೆಯಾಗಿ ಹರಿಯತೊಡಗಿತು. ರೋಗ ಮುಕ್ತಿಗೂ ಪಾಪ ಪರಿಹಾರಕ್ಕೂ ಔಷಧವಾಗಿ ಆ ನೀರನ್ನು ತೀರ್ಥಾಟಕರು ಭಕ್ತಿಯಿಂದ ಪ್ರಾರ್ಥಿಸಿ ಮನೆಗಳಿಗೆ ಒಯ್ಯುತ್ತಾರೆ ಮತ್ತು ದೇವರಕೋಣೆಯಲ್ಲಿ ಇಟ್ಟುಕೊಳ್ಳುತ್ತಾರೆ.

ಮಲೆಯ ಮೇಲಿನ ಬಂಡೆಯಲ್ಲಿ ತೋಮಾಶ್ಲೀಹನ ಪಾದಗಳೂ ಮೊಣಕಾಲೂರಿ ಪ್ರಾರ್ಥಿಸಿದ ಕುರುಹಾಗಿ ಮೊಣಕಾಲಿನ ಗುರುತೂ ಮುದ್ರಿತವಾಗಿವೆ. ತೀರ್ಥಾಟಕರು ಪಾದಮುದ್ರೆಯನ್ನೂ ಮೊಣಕಾಲ ಮುದ್ರೆಯನ್ನೂ ಮುಟ್ಟಿ ನಮಸ್ಕರಿಸಿ ಬೆಟ್ಟವಿಳಿಯುತ್ತಾರೆ. ಹಿಂದೆ ಅಲ್ಲಿಯ ಮೂಲನಿವಾಸಿಗಳಾದ ಬೇಡರು ಮಲೆಯೇರಿದ್ದಾಗ ಬಂಡೆಯ ಮೇಲೆ ಪುಣ್ಯಾತ್ಮನ ಪಾದ ಮುದ್ರೆಗಳನ್ನೂ ಮೊಣಕಾಲಮುದ್ರೆಯನ್ನೂ ಕಂಡು ಆಶ್ಚರ್ಯಚಕಿತರಾದರು. ಮಲೆಯ ಮೇಲೆ ಮೂಡಿದ್ದ ಕನಕಶಿಲುಬೆಯನ್ನೂ ಕಂಡಾಗ ಅವರ ಆಶ್ಚರ್ಯ ಇಮ್ಮಡಿಸಿತು. ಅವರು ದೀಪ ಹಚ್ಚಿದರು. ಶಿಲುಬೆಗೆ ವಂದಿಸಿ ಪ್ರಾರ್ಥಿಸಿದರು. ಮಲೆಯಾಟ್ಟೂರು ಮಲೆ ಶಿಲುಬೆಮಲೆ ಎಂದೂ ಪ್ರಸಿದ್ಧವಾಯಿತು.

ಸಂಘಂಕಾಲದಲ್ಲಿ ಪೆರಿಯೂರಿನ ಮೂಲಕ ಕೊಡುಂಗಲ್ಲೂರಿಗೆ (ಮುಸಿರಿಸ್) ವ್ಯಾಪಾರ ಮಾರ್ಗಗಳಿದ್ದುವೆಂದು ಹೇಳಲಾಗುತ್ತದೆ. ಜಲಮಾರ್ಗವಾಗಿ ಸಾಗುವವರಿಗೆ ವೃದ್ಧನ ರೂಪದಲ್ಲಿ ತೋಮಾಶ್ಲೀಹ ಕಾಣಿಸಿಕೊಳ್ಳುತ್ತಾನೆ ಎಂದೂ ನಂಬುಗೆಯಿದೆ. ‘ಪೊನ್ನುಂ ಕುರಿಶ್ ಮುತ್ತಪ್ಪನ್’ ಎಂಬ ಹೆಸರು ಬರಲು ಇದೇ ಕಾರಣ. ಆರ್ತರಿಗೆ ಎಂದೂ ಪೊನ್‌ಕುರಿಶ್‌ ಮುತ್ತಪ್ಪ ಅಭಯಪ್ರದನೇ ಆಗಿದ್ದಾನೆ.

ಹಿರಿನೋಂಪಿಯಾ ಕಾಲದಲ್ಲೂ ಈಸ್ಟರ್‌ಗೆ ಮುಂಚಿನ ಆದಿತ್ಯವಾರ (ಪುದುನಾಯರಾಯ್ಚ. ಮ.) ವೂ ಶಿಲುಬೆಮಲೆ ಇಗರ್ಜಿಯಲ್ಲಿ ಪ್ರಾಧಾನ್ಯವೇರುತ್ತದೆ. ಮರದ ದೊಡ್ಡ ಶಿಲುಬೆಗಳನ್ನು ಹೊತ್ತುಕೊಂಡು ನಾಮಜಪಮಾಡುತ್ತ ದೇಹ ಮತ್ತು ಮನಸ್ಸುಗಳನ್ನು ಒಂದಾಗಿಸಿ ಭಕ್ತರು ಮಲೆಯೇರುತ್ತಾರೆ. ಕೆಳಗಿನ ತೋಮಾಶ್ಲೀಹನ ಮೂರ್ತಿಗೆ ಮೇಣದ ಬತ್ತಿ ಉರಿಸಿ ಪ್ರಾರ್ಥಿಸಿದ ಬಳಿಕ ಮಲೆಯೇರುವುದು ವಾಡಿಕೆ. ದೊಡ್ಡ ಉರುಟುಬಂಡೆಗಳ ಕ್ಲೇಶಮಯ ಹಾದಿಯನ್ನು ದಾಟಿ ಶ್ಲೀಹಾದಾರಿಯ ಒಂದನೆಯ ಜಾಗ ತಲುಪುತ್ತಾರೆ. ಬಳಿಕ ಕ್ರಿಸ್ತದೇವನ ಬದುಕಿನಲ್ಲಿ ಪ್ರಧಾನವಾದ ಹದಿನಾಲ್ಕು ಘಟನೆಗಳನ್ನು ನೆನಪಿಸುವಂತೆ ಚಿತ್ರಿಸಿರುವ ಜಾಗಗಳಲ್ಲಿ ಪ್ರಾರ್ಥಿಸುತ್ತಾರೆ. ‘ಪೊನ್ನುಂ ಕುರಿಶ್ ಮುತ್ತಪ್ಪಾ, ಪೊನ್ಮಲಕೇಟ್ಟೇ (ಹತ್ತಿಸಿಬಿಡಪ್ಪಾ)’ ಎಂಬ ಪ್ರಾರ್ಥನೆಯೊಂದಿಗೆ ಮಲೆ ಏರುತ್ತಾರೆ. ಮಲೆಯ ಮೇಲೆ ಮಾರ‍್ತೋಮಾ ಮಂಟಪದಲ್ಲಿ ನೆಲಸಿರುವ ದೇವರನ್ನು ಪ್ರಾರ್ಥಿಸಿ ಬಲಿದಾನ ವೇದಿಕೆಗೆ ತಲಪುತ್ತಾರೆ. ಆನಕುತ್ತಿಯ ಪಳ್ಳಿ, ಆಳ್ತಾರ, ಕನಕಶಿಲುಬೆ, ಪುಣ್ಯಾತ್ಮನ ಪಾದ ಮುದ್ರೆಗಳು – ಇವಕ್ಕೆಲ್ಲ ವಂದಿಸಿ ಹರಕೆಗಳನ್ನೊಪ್ಪಿಸಿ ಭಕ್ತ ಜನ ಮಲೆಯಿಳಿಯುತ್ತಾರೆ. ಕಾಳುಮೆಣಸು, ಹುರುಳಿ, ಎಳ್ಳು, ಅಕ್ಕಿ ಮುಂತಾದವರನ್ನು ಭಕ್ತರು ಹರಕೆಯಾಗಿ ಅರ್ಪಿಸುತ್ತಾರೆ.

ಕನಕಶಿಲುಬೆಯಿಂದ ಒಂದಿಷ್ಟು ಪೂರ್ವಕ್ಕೆ ‘ಆನಕುತ್ತಿಯಪ್ಪಳ್ಳಿ’ (ಆನೆ ಕುತ್ತಿದ ಇಗರ್ಜಿ) ಇದೆ. ಕಾಡೂ ವನ್ಯಮೃಗಗಳೂ ತುಂಬಿದ್ದ ಕಾಲದಲ್ಲಿ ಕಾಡಾನೆ ಈ ಇಗರ್ಜಿಯನ್ನು ಆಕ್ರಮಿಸಿದ್ದಾಗಿ ನಂಬುತ್ತಾರೆ. ಕೊಂಬುಗಳು ತಾಗಿ ಆದ ಗಾಯವನ್ನು ಈಗಲೂ ಇಗರ್ಜಿಯ ಮೂಡುಗೋಡೆಯಲ್ಲಿ ಕಾಣಬಹುದು. ಹಾಗಾದರೂ ಇಗರ್ಜಿ ಬೀಳದಿದ್ದುದು ದೇವನ ಮಹಿಮೆಯೆಂದೇ ಭಕ್ತರ ನಂಬಿಕೆ. ಈ ಗುರುತನ್ನು ಮುಟ್ಟಿ ವಂದಿಸಿ ಮೇಣದ ಬತ್ತಿ ಉರಿಸಿ ಪ್ರಾರ್ಥಿಸಿದ ಬಳಿಕ ಭಕ್ತರು ಮಲೆಯಿಳಿಯುತ್ತಾರೆ. ಇಗರ್ಜಿಯ ನವೀಕರಣವಾದಾಗಲೂ ಆನೆ ಕುತ್ತಿದ ಗುರುತನ್ನು ಹಾಗೆಯೇ ಇರಿಸಿಕೊಳ್ಳಲಾಗಿದೆ. ಪುಣ್ಯಾತ್ಮನ ಅವಶೇಷಗಳನ್ನೂ ಇಲ್ಲಿ ಸಂರಕ್ಷಿಸಲಾಗಿದೆ.

.ಕೆ.ಎಸ್. ಅನುವಾದ ಕೆ.ಕೆ.

 

ಪೊಯ್‌ಕಾಲ್ ಕುದಿರೈಯಾಟ್ಟಂ ಒಂದೂ ಕಾಲಡಿ ಉದ್ದದ ಮರದ ತುಂಡುಗಳನ್ನು ಕಾಲುಗಳಿಗೆ ಕಟ್ಟಿಕೊಂಡು ಕಾಗದ, ಗೋಣಿ, ಕಾಟಾಬಟ್ಟೆ, ಹುಣಿಸೇಬಿತ್ತದ ಗಸಿ, ಕೋಲು ಕಬ್ಬಿಣದ ತಗಡುಗಳಿಂದ ತಯಾರಿಸಲಾದ ಕುದುರೆಯನ್ನು ಹುರಿಯಿಂದ ಗಟ್ಟಿಯಾಗಿ ಕಟ್ಟಿಕೊಂಡು ಕುಣಿಯುವವರ ಸೊಂಟ ಎತ್ತರವಾಗಿ ಕಾಣುವಂತೆ ಮಾಡಿ, ಯಾವುದಾದರೂ ಜನಪದ ಮೇಳ ಸಂಗೀತದ ಲಯಕ್ಕನುಗುಣವಾಗಿ ಕುಣಿತ ಪ್ರದರ್ಶಿಸುವುದೇ ಪೊಯ್‌ಕಾಲ್ ಕುದಿರೈಯಾಟ್ಟಂ (ಕೀಲುಕುದುರೆ). ಇದನ್ನು ಸಹಜವಾದ ಕಾಲುಗಳಲ್ಲಿ ಕುಣಿದು ತೋರುವುದಿಲ್ಲ. ಬದಲಿಗೆ ಎರಡೂ ಕಾಲುಗಳಿಗೂ ಕಟ್ಟಿಗೆ ತುಂಡುಗಳನ್ನು ಕಟ್ಟಿ, ಕೃತಕ ಕಾಲುಗಳನ್ನು ರೂಪಿಸಿಕೊಂಡು, ಕೃತಕ ಕುದುರೆಯನ್ನು ತೋಳಿನಲ್ಲಿ ಹೊತ್ತುಕೊಂಡು ಆಡುವುದರಿಂದ ಇದನ್ನು ಕೀಲು ಕುದುರೆ ಎನ್ನಲಾಗುತ್ತದೆ. ಕೃತಕ ಕಾಲುಗಳ ಕೀಲುಗಳನ್ನು ಆಡಿಸುತ್ತ ಕುದುರೆಯೇ ಕುಣಿಯುತ್ತಿರುವಂತೆ ಅಭಿನಯಿಸುವುದರಿಂದ ಇದನ್ನು ಕೀಲುಕುದುರೆ ಎನ್ನಲಾಗುತ್ತದೆ. ಇದನ್ನು ತಮಿಳಿನಲ್ಲಿ ‘ಪೊಯ್‌ಕಾಲ್ ಕುದಿರೈಯಾಟ್ಟಂ’ ಎನ್ನುತ್ತಾರೆ. ಕೃತಕ ಕಾಲುಗಳನ್ನು ಕಟ್ಟಿಕೊಳ್ಳದೆ ಕುದುರೆಯನ್ನು ಮಾತ್ರ ಹೊತ್ತುಕೊಂಡು ಆಡುವ ಮಧುರೈ ಕಡೆಯಲ್ಲಿ ಆಡುವುದು ‘ಪೊಯ್‌ಕುದಿರೈಯಾಟ್ಟಂ’ ಎಂದು ಪ್ರಸಿದ್ಧವಾಗಿದೆ. ಮತ್ತೆ ಕೆಲವೆಡೆ ಇದನ್ನು ‘ಪುರವಿಯಾಟ್ಟಂ’ ಎಂದೂ ಕರೆಯಲಾಗುತ್ತದೆ.

ತಮಿಳಿನ ಪಂಚಮಮಹಾಕಾವ್ಯಗಳಲ್ಲಿ ಒಂದಾದ ‘ಶಿಲಪ್ಪದಿಗಾರಂ’ ಎಂಬ ಕಾವ್ಯದಲ್ಲಿ ಮಾಧವಿ ಮಾಡುವ ೧೧ ಬಗೆಯ ನೃತ್ಯಗಳಲ್ಲಿ ‘ಮರಕ್ಕಾಲಾಡಲ್’ ಎಂಬ ಕುಣಿತವೂ ಸೇರಿದೆ. ‘ಮಾಯವಳಾಡಿಯ ಮುರಕ್ಕಾಲಾಡಲುಮ್’ (ಶಿಲಪ್ಪದಿಗಾರಂ, ಕಡಲಾಡ್‌ಗಾದೈ) ಎಂಬ ಹಾಡಿನ ಸಾಲುಗಳಿಗೆ ಅಡಿಟಿಪ್ಪಣಿಯಲ್ಲಿ ‘ಮರದ ಕಾಲನ್ನು ಕಟ್ಟಿಕೊಂಡು ಆಡುವುದರಿಂದ ಮರಗಾಲಾಟವಾಯಿತು’ ಎಂದು ವಿವರಣೆ ನೀಡಲಾಗಿದೆ. ‘ತೊಲ್‌ಕಾಪ್ಪಿಯಮ್’ ಕಾವ್ಯದ ‘ಅಗತ್ತಿನೈ’ ಅಧ್ಯಯದಲ್ಲಿಯ, ನಾಯಕ ತಾನು ಪ್ರೀತಿಸಿದ ಹೆಣ್ಣನ್ನು ಮದುವೆಯಾಗಿ ಅವಳ ತಾಯ್ತಂದೆಯರು ಅಡ್ಡಿಪಡಿಸಿದಾಗ, ಅರಳಿ ಎಲೆಯಿಂದ ಕುದುರೆಯನ್ನು ರಚಿಸಿ ಅದನ್ನು ಮೈಮೇಲೆ ಹೊತ್ತುಕೊಂಡು ಊರ ಬೀದಿಬೀದಿಗಳಲ್ಲಿ ಸಂಚರಿಸುತ್ತ ತಾನು ಪ್ರೀತಿಸಿದ ಹೆಣ್ಣನ್ನು ಪ್ರೀತಿಸಿದ ಹೆಣ್ಣನ್ನು ತನ್ನೊಂದಿಗೆ ಸೇರುವಂತೆ ಸಹಕರಿಸಬೇಕೆಂದು ಬೇಡಿಕೆಯಿಡುತ್ತ ಹೋದ ಸಂಗತಿ ‘ಮಡಲೇರುದಲ್’ ಎಂಬ ಹೆಸರಿನಿಂದ ಪ್ರಚಾರಕ್ಕೆ ಬಂದಿದೆ. ಇದು ತೊಲ್ಕಾಪ್ಪಿಯಂನಲ್ಲಿ ‘ಏರಿಯ ಮಡಲ್‌ದಿರಮ್’ ಎಂದು ಖ್ಯಾತವಾಗಿದೆ.

26_70A_DBJK-KUH

ಪೊಯ್‌ಕಾಲ್ಕುದಿರೈ ರೂಪುಗೊಂಡ ವಿಧಾನ : ತಮಿಳುನಾಡಿನ ತಂಜಾವೂರಿನ ತಿರುವಾರೂರಿನಲ್ಲಿದ್ದ ರಾಮಕೃಷ್ಣನ್ ನಾಯ್ಡು ಎಂಬವರು ೧೯೧೦ ಕ್ಕಿಂತ ಮುಂಚೆ ಮೊಟ್ಟಮೊದಲು ಪೊಯ್ಕಾಲ್ ಕುದಿರೈಯಾಟ್ಟಂ ಅನ್ನು ಕಂಡುಹಿಡಿದು ಆಡಿ ತೋರಿಸಿದವರು. ಅದಕ್ಕೆ ಪುರಕವಾಗಿ ಒದಗಿ ಬಂದ ಸಂದರ್ಭವೆಂದರೆ ಅದೇ ಕಾಲಕ್ಕೆ ನಾಗ ಪಟ್ಟಣದಲ್ಲಿ ಪ್ರದರ್ಶನಗೊಂಡ ‘ಪಾದುಷಾ’ ನಾಟಕ. ಆ ನಾಟಕದ ನಾಯಕ ಅಬ್ಬಾಸಿಮನ್ನನ್‌ನುಗ್ಗೆ ಮರದಿಂದ ತಯಾರಿಸಿದ ಮುಖವಾಡ ಧರಿಸಿ, ತೆಂಗಿನ ಗರಿಗಳಿಗೆ ವರ್ಣಮಯವಾದ ರಂಗುಬಳಿದು ತಯಾರಿಸಿದ ಕುದುರೆಯನ್ನೇರಿ ಬರುವಂತೆ ಇದ್ದ ಸಂದರ್ಭಕ್ಕೆ ಪೊಯ್‌ಕಾಲ್‌ಕುದಿರೈಯನ್ನು ಬಳಸಿಕೊಂಡಿದ್ದರು. ಇದರ ಯಶಸ್ಸಿನಿಂದ ಸ್ಫೂರ್ತಿಗೊಂಡ ನಾಯ್ಡು ಪೊಯ್‌ಕಾಲ್‌ಕುದಿರೈಯನ್ನು ತಯಾರಿಸಿದರು. ಜೇಡಿಮಣ್ಣಿನಿಂದ ಕುದುರೆಯನ್ನು ತಯಾರಿಸಿ ಅದರ ಮೇಲೆ ಪತ್ರಿಕೆಗಳನ್ನೂ ಕಾಡಾ ಬಟ್ಟೆಗಳನ್ನೂ ಹಾಕಿ, ಹುಣಿಸೇಬಿತ್ತದ ಗಸಿಯನ್ನು ಬಳಸಿಕೊಂಡು ಹಲವು ಪದರುಗಳನ್ನಾಗಿ ಮಾಡಿ ಒಣಗಿದ ಮೇಲೆ ಒಂದು ನಿರ್ದಿಷ್ಟ ರೂಪಕ್ಕೆ ಅದನ್ನು ಕತ್ತರಿಸಿಕೊಂಡು ಕುದುರೆಯನ್ನು ತಯಾರಿಸಿ, ಅದರ ಮೇಲೆ ಮೋಹಕವಾದ ಚಿತ್ರಗಳನ್ನು ಬಿಡಿಸಿದರು. ಅದರ ಬಿಳಲುಗಳಿಂದ ಗಟ್ಟಿಯಾದ ಕಾಲುಗಳನ್ನೂ ಕಬ್ಬಿಣದ ತುಂಡುಗಳಿಂದ ಗೊರಸುಗಳನ್ನೂ ಮಾಡಿಕೊಂಡು ಸಹಜವಾದ ಕುದುರೆಯ ಗೊರಸುಗಳಿಂದುಂಟಾಗುವ ಶಬ್ದ ಅದಕ್ಕೆ ಒದಗುವಂತೆ ಲಕ್ಷ್ಯವಹಿಸಿದರು. ಹೆಣ್ಣು ಗಂಡುಪಾತ್ರಗಳು, ಮರಾಠ ಸೈನಿಕರು, ಮರಾಠಾ ರಾಣಿ ಮುಂತಾದವರು, ತಮಗೆ ತಕ್ಕ ವೇಷಭೂಷಣಗಳನ್ನು ಧರಿಸಿಕೊಂಡು, ತಮ್ಮ ಗೊಂದಳದವರು ನಿಂತು ಹಾಡಿದ ಹಾಡಿಗೆ, ಹಾಕಿದ ತಾಳಕ್ಕೆ ತಕ್ಕಂತೆ ಕುಣಿದರು. ಕಾಲಸಂದಂತೆ ಗೊಂದಳದವರಿಗೆ ಜೊತೆಯಾಗಿ ತಬಲಾವನ್ನು ಹೊಂದಿದ ನೈಯಾಂಡಿ ಮೇಳವೂ ಜೊತೆಯಾಯಿತು.

ಪೊಯ್ಕಾಲ್‌ ಕುದುರೆಯಾಡಿಸುವವರು ಗಂಡಸರಾಗಿದ್ದರೆ ಮರಾಠೀಯ ಯೋಧರ ಶೈಲಿಯಲ್ಲಿದ್ದು, ತಮ್ಮ ಹಿಡಿತಕ್ಕೆ ಸಿಗದ ಕುದುರೆಗಳನ್ನು ಶೌರ್ಯ ಪರಾಕ್ರಮಗಳಿಂದಲೂ ಪೌರುಷದಿಂದಲೂ ತಮ್ಮ ಹಿಡಿತಕ್ಕೆ ಒಗ್ಗಿಸಿಕೊಳ್ಳುತ್ತ ಧೈರ್ಯದಿಂದ ನಿಮಿರಿ ಕುಳಿತ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಕುದುರೆಯನ್ನು ನಡೆಸುವುದು, ಓಡಿಸುವುದು, ಜಗ್ಗಿಸುವುದು, ಕುಳ್ಳಿರಿಸುವುದು, ಪಕ್ಕಪಕ್ಕಕ್ಕೆ ನಡೆಸುವುದು, ಕಾಲುಗಳನ್ನು ಅಗಲಿಸುವುದು, ಮಡಿಸುವುದು, ಕಾಲುಗಳನ್ನು ಅಷ್ಟಗಲಕ್ಕೆ ಬೀಸುವುದು, ಎತ್ತರಕ್ಕೆ ಮುಂಗಾಲುಗಳನ್ನೆತ್ತಿ ಕೆನೆಯುವ ಭಂಗಿಯಲ್ಲಿ ನಿಂತು ನಡೆಯುವುದು, ಮತ್ತು ಮುಂಗಾಲುಗಳನ್ನೆತ್ತಿ ಅವನ್ನು ಒಂದರ ಮೇಲೊಂದು ಗುಣಿಸುಭಂಗಿಯಲ್ಲಿಟ್ಟುಕೊಂಡು ಕುಣಿಯುವುದು, ಲಯಬದ್ಧವಾಗಿ ತಲೆಹಾಕುತ್ತ ಸುತ್ತುವುದು ಮುಂತಾಗಿ ನವನವೀನವಾಗಿ ಅತ್ಯಾಕರ್ಷಕವಾಗಿ ಪ್ರದರ್ಶಿಸುವುದು ಕಲೆಗಾರನ ಚಾತುರ್ಯಕ್ಕನುಗುಣವಾಗಿರುತ್ತದೆ. ಸ್ತ್ರೀಯರು ಕುದುರೆ ಸವಾರಿ ಮಾಡುತ್ತ, ನಳಿನವಾದ ಪದಗತಿಯೊಂದಿಗೆ ನಾಟ್ಯಶೈಲಿಯಲ್ಲಿ ಕುದುರೆ ನಡೆಸುತ್ತ ನರ್ತಿಸುತ್ತ ಪ್ರದರ್ಶನ ಮಾಡುತ್ತಾರೆ. ಪುರುಷ ಮತ್ತು ಸ್ತ್ರೀ ಕುದುರೆಯಾಟಗಾರರು ಪರಸ್ಪರ ಗುದ್ದುವಂತೆ, ಎದುರು ಬದುರು ನಿಂತು ಒಂದೇ ರೀತಿಯ ನರ್ತನವನ್ನು ಪ್ರದರ್ಶಿಸುತ್ತಾರೆ. ತಮ್ಮ ಕುದುರೆಗಳನ್ನು ಪರಸ್ಪರ ಹೊಡೆದಾಟಕ್ಕೆ ಸಿದ್ಧಗೊಳಿಸುವುದು, ಸುತ್ತುವುದು ಮತ್ತೆ ಬಂದು ಪರಸ್ಪರ ಎದುರಿಸುವುದು, ಹಿಂದು ಮುಂದಕ್ಕೆ ಚಲಿಸುತ್ತ ಯುದ್ಧ ಭಂಗಿಗಳಲ್ಲಿ ತೊಡಗಿರುವಂತೆ ಕುಣಿಸುವುದು, ಅತ್ಯಂತ ಸುಲಭವಾಗಿ ಒನೆಯುವುದು, ಹೀಗೇ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಅನೇಕ ವೇಳೆ ಕತ್ತಿಗಳನ್ನು ಹಿಡಿದು ಝಳಪಿಸುತ್ತ ಒಬ್ಬರನೊಬ್ಬರು ಅಟ್ಟಿಸುತ್ತ ಎದುರಿಸುವಂತೆ ಅಭಿನಯಿಸುತ್ತಾರೆ. ಪುರುಷನ ಅಭಿನಯ ಶೌರ್ಯಪರಾಕ್ರಮಗಳನ್ನು ವ್ಯಕ್ತಪಡಿಸುತ್ತ, ಕುದುರೆಯಿಂದ ಕೆಳಗೆ ಜಿಗಿಯುತ್ತ, ಓಡುತ್ತ ನರ್ತನ ಭಂಗಿಯಲ್ಲೇ ಇವೆಲ್ಲವನ್ನು ನಿಭಾಯಿಸುತ್ತ ಇರುತ್ತಿದ್ದರೆ, ಸ್ತ್ರೀ ಪ್ರದರ್ಶನಕಾರರು ಅದನ್ನೇ ಅತ್ಯಂತ ಲಾಘವದಿಂದ ಬಿಂಕದಿಂದ, ಬಾಗು ಬಳುಕುಗಳಿಂದ ನಳಿನವಾಗಿರುವಂತೆ ನೋಡಿಕೊಳ್ಳುತ್ತ ಪುರುಷ – ಸ್ತ್ರೀ ಭೇದವನ್ನು ತೋರ್ಪಡಿಸುತ್ತಾರೆ. ಕೆಲವೊಮ್ಮೆ ಒಬ್ಬೊಬ್ಬರೇ ರಂಗಕ್ಕೆ ಪ್ರವೇಶಿಸುತ್ತ ಮತ್ತೆ ಕೆಲವೊಮ್ಮೆ ರಂಗದ ಇಕ್ಕೆಲಗಳಿಂದಲೂ ಒಬ್ಬೊಬ್ಬರು ಬರುತ್ತ ಪ್ರದರ್ಶನ ನೀಡುವುದುಂಟು.

‘ಅಗವಗದಿ’ ಎಂದು ಹೆಸರಾದ ತಕಧಿಮಿ / ತಕಧಿಮಿ ಲಯದಲ್ಲಿ ನಡೆಸಲಾಗುವ ಕುದುರೆಯ ಬದ್ಧನಡೆ ಚತುರಶ್ರತಾಳಬದ್ಧ ತಾಳ ಸಿನಿಮಾಗಳಲ್ಲಿ ನಾದಸ್ವರದ ಪಕ್ಕಮೇಳದೊಂದಿಗೆ, ತಬಲಾದ ಮತ್ತೊಂದು ಗೊಂದಳದೊಂದಿಗೆ ಅತ್ಯಾಕರ್ಷಕವಾಗಿ ಪ್ರದರ್ಶಿತವಾಗುತ್ತದೆ. ತಕಿಟ/ತಕಿಟ ಎಂಬ ತ್ರಿಶ್ರನಡೆಯ ಮೂರೂ ಕಾಲಗತಿಗಳಲ್ಲಿ (ವಿಳಂಬ, ಮಧ್ಯಮ, ತ್ವರಿತ) ಸಹಾ ಪೊಯ್ಕಾಲ್‌ಕುದುರೆಯನ್ನು ನರ್ತಿಸಲು ಉಪಯೋಗಿಸುವುದುಂಟು. ಬೆಂಗಳೂರಿನ ಸಿ. ಸುಂದರಮೂರ್ತಿ ಎಂಬುವರು ಕೆಲವು ನಾಟಕೀಯ ದೃಶ್ಯಗಳನ್ನು ಮೂಕಾಭಿನಯದ ಮೂಲಕವಾಗಿ ಸಹಾ ಪೊಯ್ಕಾಲ್‌ಕುದುರೆಯಾಟದಲ್ಲಿ ಪ್ರದರ್ಶಿಸಿದ್ದಾರೆ. ರಾಜಾ, ರಾಣಿ, ಯುವರಾಜ, ಯುವರಾಣಿಯರು ಮೇಳದೊಂದಿಗೆ ಬರುವಂತೆಯೂ ಇವರೇ ಅವೆಲ್ಲವನ್ನೂ ಏಕಪಾತ್ರದಲ್ಲಿ ನಿರ್ವಹಿಸುತ್ತ ಪ್ರದರ್ಶಿಸಿದ್ದಾರೆ. ತಮಿಳುನಾಡಿನಲ್ಲಿ ಈ ಪ್ರದರ್ಶನವನ್ನು ಊರ ಉತ್ಸವಗಳಲ್ಲಿ, ನಾಡಹಬ್ಬ ಹರಿದಿನಗಳಲ್ಲಿ, ಮದುವೆ ಮೆರೆವಣಿಗೆಗಳಲ್ಲಿ ಅತ್ಯಂತ ರಂಗಿನಿಂದ ಪ್ರದರ್ಶಿಸುವುದು ಸಾಮಾನ್ಯ ದೃಶ್ವೆಂಬಂತೆ ಪ್ರಚಲಿತದಲ್ಲಿದೆ.

ಎಂ.ಕೆ.ಎಂ. ಅನುವಾದ ಜಿ.ಎನ್.

 

ಪೊಲಿಮೇರಕಟ್ಟು ಜನಪದ ಆಚರಣೆ. ಇದು ತೆಲುಗಿನವರ ಆಚಾರ ಕಾಂಡಗಳಲ್ಲಿ ಮುಖ್ಯವಾದುದು. ಹೊಲದ ಮೇಲೆ ಎಂದರೆ ಊರಿನ ಎಲ್ಲೆಯಲ್ಲಿ ಗುರುತಿಸುವ ಗಡಿ ಎಂದು ಕರೆಯುತ್ತಾರೆ. ಈ ಸರಹದ್ದುಗಳನ್ನು ಊರು ಕಟ್ಟುವ ಸಮಯದಲ್ಲಿಯೇ ನಿರ್ಧರಿಸುತ್ತಾರೆ.

ಎಲ್ಲೆಯ ಗುರುತಾಗಿ ಅಲ್ಲಿ ಒಂದು ಕಲ್ಲನ್ನು ನೆಡುವರು. ಕಾಲಕ್ರಮೇಣ ಆ ಕಲ್ಲು ಹೊರಟು ಹೋಯಿತು. ಆ ಎಲ್ಲೆಯನ್ನು ಆ ಗ್ರಾಮದವರೆಲ್ಲರೂ ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಈ ಊರಿನಿಂದ ಇತರ ಗ್ರಾಮಗಳಿಗೆ ಹೊರಗೆಹೋಗುವ ಎಲ್ಲ ಮಾರ್ಗಗಳಲ್ಲೂ ಈ ಸರಹದ್ದುಗಳು ಇರುತ್ತವೆ. ಗ್ರಾಮದಲ್ಲಿಯ ವ್ಯಕ್ತಿಗಳು ಹೊರಗೆ ಹೋಗುವಾಗ ಎಲ್ಲ ಕಡೆ ಈ ಸರಹದ್ದನ್ನು ದಾಟಿ ಹೋಗುಉದುಂಟು. ಮಾಮೂಲಿನಂತೆ ಹೊರುಡವ ಸಂದರ್ಭಗಳಲ್ಲಿ ಈ ಸರಹದ್ದನ್ನು ಯಾರೂ ಗಮನಿಸುವುದಿಲ್ಲ. ಆದರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸರಹದ್ದಿಗೆ ತುಂಬಾ ಪ್ರಾಧಾನ್ಯವಿದೆ. ಈ ಗಡಿರೇಖೆಗಳಲ್ಲಿ, ಗಡಿರೇಖೆ ದೇವತೆ ಇರುತ್ತಾಳೆಂಬ ಬಲವಾದ ನಂಬಿಕೆ ಇದೆ. ಈ ದೇವತೆಯನ್ನು ಗಡಿರೇಖೆ ಸತ್ತಿ ಎಂದೂ ಹೊಲದ ದೇವತೆ ಎಂದೂ ಸಹ ಕರೆಯುತ್ತಾರೆ. ಆದ್ದರಿಂದ ವಿಶೇಷ ಸಂದರ್ಭಗಳಲ್ಲಿ ಈ ಗಡಿರೇಖೆ ಶಕ್ತಿಗೆ ಪೂಜೆ ಮಾಡಿ ಆಕೆಯನ್ನು ಸಂತುಷ್ಟಗೊಳಿಸಬೇಕಾಗುತ್ತದೆ. ಊರಿನಲ್ಲಿಯ ಒಂದು ಮನೆಯ ಹೆಣ್ಣು ಮಗು ತವರು ಮನೆಯಿಂದ ಅತ್ತೆ ಮನೆಗೆ ಹೋಗುವಾಗ ಬಂಡಿಯಲ್ಲಾಗಲಿ, ನಡೆದಾಗಲಿ ಬರುವ ಆಕೆ ಗಡಿರೇಖೆ ಬಳಿ ಬರುತ್ತೇ ಅವಳ ಕುಟುಂಬ ನಿಲ್ಲಬೇಕು. ಸರಹದ್ದಿನ ದಾರಿಯ ಮಧ್ಯದಲ್ಲಿ ಮೂರು ಸಣ್ಣ ಕಲ್ಲುಗಳನ್ನು ಇಟ್ಟು ಆ ಕಲ್ಲುಗಳ ಮೇಲೆ ಎಲೆ ಹೂಗಳಿರುವ ತಂಗೇಡಿ ರೆಂಬೆಯನ್ನು (ಹೊನ್ನಾವರಿಕೆ) ತಂದಿಟ್ಟು ಅದಕ್ಕೆ ನಮಸ್ಕರಿಸಬೇಕು. ಇದನ್ನೆ ಹೊಲದ ಮೇರೆ ಕಟ್ಟಿ ಎಂದು ಕರೆಯುತ್ತಾರೆ. ಹಾಗೆಯೇ ಆ ಹೆಣ್ಣು ಮಕ್ಕಳು ಅತ್ತೆ ಮನೆಯಿಂದ ತವರು ಮನೆಗೆ ಬರುವಾಗ ಕೂಡ ಈ ಕೆಲಸ ಮಾಡುತ್ತಾರೆ. ಗ್ರಾಮಗಳಲ್ಲಿ ಜಾತ್ರೆಗಳು ನಡೆಯುವ ಸಂದರ್ಭದಲ್ಲಿ ಈ ಹೊಲದ ಮೇರೆ ಶಕ್ತಿಗೆ ಮತ್ತಷ್ಟು ಪ್ರಾಧಾನ್ಯ ಇರುತ್ತದೆ. ಊರಿನಲ್ಲಿ ಜಾತ್ರೆಗಳಾಗಲಿ, ದೊಡ್ಡ ಸೇವೆಗಳು ನಡೆಯುವ ಸಂದರ್ಭಗಳಲ್ಲಾಗಲಿ, ಅಡಿಪಾಯದ ಕಲ್ಲು ನೆಡುವಾಗ ಆಗಲಿ ಎಲ್ಲರನ್ನು ಕರೆಯುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆ ಎಲ್ಲರೂ ಒಂದು ದಿನ ಮೊದಲೇ ಊರಿನಲ್ಲಿ ಒಂದು ಸೇರುತ್ತಾರೆ. ಹಾಗೆ ಊರಿನಲ್ಲಿ ಒಂದು ಎಲ್ಲ ಸೇರುತ್ತಲೇ ಸೇವೆಗಳನ್ನು ಸಲ್ಲಿಸುವ ಆಸಾದಿಗಳಾಗಲಿ, ಬೈಂಡ್ಲಕುಲದವರಾಗಲಿ ಆ ಊರಿಗೆ ಇರುವ ಎಲ್ಲ ಗಡಿರೇಖೆಗಳ ಬಳಿ ಹೋಗಿ ಅಲ್ಲಿ ಹೊನ್ನೇರು ಮಂಡಲದಿಂದ ಕಟ್ಟೆ ಕಟ್ಟುವರು. ಹಾಗೆ ಕಟ್ಟಿದ ಅನಂತರ ಆ ಊರಿನೊಳಗೆ ಹೊರಗಡೆಯಿಂದ ಯಾರೂ ಬರುವಂತಿಲ್ಲ. ಹಾಗೆಯೇ ಈ ಊರಿನವರು ಯಾರೊಬ್ಬರೂ ಸೇವೆ ಮುಗಿಯುವವರೆಗೆ ಹೊರಗೆ ಹೋಗುವಂತಿಲ್ಲ. ಸೇವೆ ಮುಗಿದ ಮೇಲೆ ಮತ್ತೆ ಬೈಂಡ್ಲದವರು ಅಲ್ಲಿಗೆ ಒಂದು ಕಟ್ಟು ಬಿಚ್ಚಿದ ನಂತರವೇ ಹೊರಗೆ ಹೋಗುವುದಾಗಲಿ, ಒಳಕ್ಕೆ ಬರುವುದಾಗಿ ಮಾಡಬೇಕು. ಹೀಗೆ ಗಡಿ ರೇಖೆಯಲ್ಲಿ ಶಕ್ತಿ ಇರುತ್ತದೆಂದು ಅದಕ್ಕೆ ಪೂಜೆ ಮಾಡಬೇಕೆಂದು ತೆಲುಗರು ಭಾವಿಸುತ್ತಾರೆ. ಈ ಗಡಿರೇಖೆ ದೇವತೆ ಬಹಳ ಶಕ್ತಿದೇವತೆ ಎಂದೂ ನಂಬಿಕೆ. ಹೀಗೆ ಹೊಲದ ಮೇರೆ ಬಳಿ ಮಾಡುವ ಆಚಾರವನ್ನೇ ಪೊಲಿಮೇರಕಟ್ಟು (ಸರಹದ್ದಿನ ಕಟ್ಟು) ಎಂದು ಕರೆಯುತ್ತಾರೆ.

ಪಿ.ಎಸ್.ಸಿ. ಅನುವಾದ ವಿ.ಆರ್.

 

ಪೋಟ್ಟಿ ವೇದಪಾಡಲ್‌ಗಳ್ ತಮಿಳುನಾಡಿನ ಗೀತ ಪ್ರಕಾರ. ಮುಸ್ಲಿಮರಲ್ಲಿ ಬಕೀರ್‌ಷಾ ಎನ್ನುವ ಜನಾಂಗವೊಂದು ಇದೆ. ಇವರು ‘ತಾಹಿರಾ’ ಎಂಬ ಚರ್ಮವಾದ್ಯವನ್ನು ನುಡಿಸುತ್ತ ಕೆಲವು ಕಥನಗೀತೆಗಳನ್ನು ಹಾಡುತ್ತಾರೆ. ಅಂತಹ ಕಥನಗೀತೆಗಳಲ್ಲಿ ಅಬ್ಬಾಸ್ ಅರಸರ ಕಥನಗೀತೆಯೂ ಒಂದು. ಇದರ ಕಥೆ ಹೀಗಿದೆ :

ಪರ್ಷಿಯ ದೇಶದಲ್ಲಿ ‘ಐಂದಮಾ’ ಎಂಬ ಸ್ಥಳವನ್ನು ರಾಜಧಾನಿಯನ್ನಾಗಿಸಿಕೊಂಡು ‘ಬಾದಷಾ’ ಎಂಬ ರಾಜ ರಾಜ್ಯಭಾರ ಮಾಡುತ್ತಿರುತ್ತಾನೆ. ಆ ರಾಜನ ಪತ್ನಿಯ ಹೆಸರು ಮರಿಯಂಬೀಬಿ. ಇವರ ಏಕೈಕ ಪುತ್ರನ ಹೆಸರು ಅಬ್ಬಾಸ್.

ಯುವರಾಜ ಅಬ್ಬಾಸ್ ಕೆಟ್ಟ ಗೆಳೆಯರ ಸಹವಾಸದಿಂದ ಅನೇಕ ದುರಭ್ಯಾಸಗಳನ್ನು ಕಲಿಯುತ್ತಾನೆ. ಆದ್ದರಿಂದ ರಾಜ ಬಾದಷಾ ಯುವರಾಜ ಅಬ್ಬಾಸ್‌ನನ್ನು ಗಡೀಪಾರು ಮಾಡುತ್ತಾನೆ.

ಅದೇ ಪರ್ಷಿಯ ದೇಶದ ಮತ್ತೊಂದು ಭಾಗವನ್ನು ಅಹಮದ್‌ಷಾ ಎಂಬ ರಾಜ ಆಳುತ್ತಿದ್ದನು. ‘ಸಿಂಧಿಮಿರ್’ ಅವನ ರಾಜಧಾನಿ. ರಾಜ ಅಹಮದ್‌ಷಾನಿಗೆ ಜ್ಞಾನವಲ್ಲಿ ಎಂಬ ಮಗಳಿದ್ದಳು. ಅವಳು ಹೆಸರಿಗೆ ತಕ್ಕಂತೆ ಜ್ಞಾನ ಮತ್ತು ವಿದ್ವತ್ ಹೊಂದಿದ್ದಳು. ಬುದ್ಧಿಗೆ ಸವಾಲೆಸೆಯುವ ಹಾಡುಗಳನ್ನು ಹಾಡುವುದರಲ್ಲಿ ಅವಳು ಪ್ರಸಿದ್ಧಳಾಗಿದ್ದಳು. ಜ್ಞಾನವಲ್ಲಿಯ ಸವಾಲು ಹಾಡುಗಳನ್ನು ‘ಮಸಾಲಾಹಾಡು’ಗಳೆಂಬ ಬೇರೊಂದು ಹೆಸರಿನಿಂದ ಕರೆಯುತ್ತಾರೆ. ಜ್ಞಾನವಲ್ಲಿ ಹಾಡುವ ಸವಾಲು ಗೀತೆಗಳಿಗೆ ಯಾರು ಸರಿಯಾದ ಉತ್ತರವನ್ನು ನೀಡುತ್ತಾರೊ ಅವರಿಗೆ ಮಾತ್ರ ತನ್ನ ಮಗಳನ್ನು ‘ನಿಖಾಹ್’ (ಮದುವೆ) ಮಾಡಿಕೊಡುವೆ ಎಂದು ರಾಜ ಅಹಮದ್‌ಷಾ ಪ್ರಕಟಿಸಿದನು.

ಗಡೀಪಾರುಗೊಂಡು ಪರದೇಶಿಯಾಗಿ ಜೀವಿಸುತ್ತಿದ್ದ ಯುವರಾಜ ಅಬ್ಬಾಸ್, ಜ್ಞಾನವಲ್ಲಿಯ ಸವಾಲು ಗೀತೆಗಳಿಗೆ ಸರಿಯಾದ ಉತ್ತರವನ್ನು ನೀಡಿ ಆಕೆಯನ್ನು ವರಿಸಿದ ಎನ್ನುತ್ತದೆ ಆ ಕಥೆ.

ಕೆಲವು ಸವಾಲು ವೇದಗೀತೆಗಳು ಮತ್ತು ಅವುಗಳಿಗೆ ಕೊಡುವ ಉತ್ತರ ಹೀಗಿದೆ :

ಸವಾಲುಗೀತೆ :     ೧. ಸ್ವರ್ಗದಲ್ಲಿ ಎಲ್ಲವೂ ಇದೆ
ಒಂದೇ ಒಂದು ಮಾತ್ರ ಇಲ್ಲ.
ಅದು ಯಾವುದು ? ಹೇಳು ಮುದ್ದು ?
ಉತ್ತರ : ಕಫಾಸ್ತಾನ್ (ಮುಸ್ಲಿಮರ ಸಮಾಧಿ ಸ್ಥಳ)

೨. ಕಡಿಯಲಾಗದ ಮಾನ್ (ಜಿಂಕೆ)
ಅದು ಯಾವ ಮಾ‌ನ್?
ಹೇಳು ಮುದ್ದು ಹೇಳು !
          ಉತ್ತರ : ಈ ಮಾನ್ (ಅಲ್ಲಾಹ್‌ಮೇಲಿನ ನಂಬಿಕೆ)

೩. ಏಣಿಯ ಮೇಲೆ ಕಲಗಚ್ಚು ಪಾತ್ರೆ
ಆ ಪಾತ್ರೆಯ ಮೇಲೆ ಮರದ ಕಾಲು
ಮರದ ಕಾಲಿನ ಮೇಲೆ ಮಲೆ
ಮಲೆಯ ಮೇಲೆ ಹುಲ್ಲು – ಆ
ಹುಲ್ಲಿನೊಳಗೆ ಹೊಕ್ಕು ನರಿ
ಹಲವು ಉಂಟು ಅದು ಯಾವುದು?

          ಉತ್ತರ : ಏಣಿಯ ಮೇಲೆ ಕಲಗಚ್ಚು ಪಾತ್ರೆ

ಕಾಲುಗಳ ಮೇಲೆ ಹೊಟ್ಟೆ
ಆ ಪಾತ್ರೆಯ ಮೇಲೆ ಮರದ ಕಾಲು:
ಹೊಟ್ಟೆಯ ಮೇಲೆ ಎದೆಯ ಭಾಗ
ಆ ಮರದ ಕಾಲಿನ ಮೇಲೆ ಮಲೆ (ಬೆಟ್ಟ)
ಕತ್ತಿನ ಮೇಲೆ ತಲೆ
ಮಲೆಯ ಮೇಲೆ ಹುಲ್ಲು
ತಲೆಯ ಮೇಲೆ ಕೂದಲು
ಹುಲ್ಲಿನೊಳಗೆ ಹೊಕ್ಕನರಿ
ಕೂದಲಿನೊಳಗೆ ಹೊಕ್ಕ ಹೇನು.

ಇವು ಒಗಟಿನಂತೆ ಇವೆ.

ಕೆ.ಯು. ಅನುವಾದ ಐ.ಎಸ್.