ಪಂಬವಾದ್ಯಂ ಆಂಧ್ರದ ಜನಪದ ವಾದ್ಯಗಳಲ್ಲಿ ಹಲಗೆಯ ನಂತರ ತುಂಬ ಜನಪ್ರಿಯವಾದ ವಾದ್ಯ. ಪುಳಕಿತಗೊಳಿಸುವ ಚಿಕ್ಕ ಶಬ್ದಗಳನ್ನು ಸೃಷ್ಟಿಸುವ ಪಂಬ ಜೋಡಿಯನ್ನು ತಯಾರಿ ಮಾಡುವ ವಿಧಾನ ಅತ್ಯಂತ ನಿಪುಣತೆಯಿಂದ ಕೂಡಿರುತ್ತದೆ. ಜನಪದ ಕತೆಗಳ ಪ್ರದರ್ಶನದ ವೇಳೆ, ಧಾರ್ಮಿಕ ಆಚರಣೆಗಳಲ್ಲಿ ಮುಖ್ಯವಾಗಿ ಗ್ರಾಮದೇವತೆಗಳ ಆರಾಧನೆಯಲ್ಲಿ, ಸುಬ್ರಹ್ಮಣ್ಯ ಕಾವಡಿ ಎತ್ತುವಾಗ, ಅಂಕಮ್ಮ ಮತ್ತು ಗಂಗಮ್ಮ ಕಥೆಗಳನ್ನು ಹೇಳುವಾಗ ತನ್ನದೆ ಪಂಬ ಜೋಡಿ ಇರಬೇಕು.

ಆಸಾದಿ (ಗ್ರಾಮದೇವತೆಗಳ ಕಥೆ ಹೇಳುವವಳು) ಪಂಬ ಜಾತಿಯವಳು ಪಂಬ ಜೋಡಿಯನ್ನು ತಯಾರಿಸುತ್ತಾಳೆ. ನಾಲ್ಕು ಅಥವಾ ಐದು ತಿಂಗಳ ಮೇಕೆಯ ಮರಿ ಸತ್ತರೆ, ಅದರ ಚರ್ಮವನ್ನು ತೆಗೆದು, ಉಪ್ಪಿಟ್ಟು ಹಾಕಿ ಹದ ಮಾಡಿ ಒಣಗಿಸುತ್ತಾರೆ. ಒಂದಡೆ ಅಗಲ ಎರಡೆಳೆ ಉದ್ದ ಇರುವ ಗುಂಡಕ್ಕೆ ಇರುವ ಒಳ್ಳೆ ಜಾತಿಮರವನ್ನು ತಂದು ಸುತ್ತ ಒಂದಂಗುಳದಷ್ಟು ಬಿಟ್ಟು ಒಳಗಡೆ ಇರುವ ಭಾಗವನ್ನು ನಿಪುಣತೆ ಇಂದ ತೆಗೆದು ಹಾಕುತ್ತಾರೆ. ಇದೇ ರೀತಿ ಎರಡಡಿ ಉದ್ದ ಅಂಚಿನಷ್ಟು ಅಗಲ ಗುಂಡಕ್ಕೆ ಇರುವ ಕಂಚಿನ ಲೋಹದಿಂದ ತಯಾರಿಸಿದ ಇನ್ನೊಂದಕ್ಕೆ, ಈ ಎರಡಕ್ಕೆ ಕಬ್ಬಿಣದ ಕಂಬಿಯಿಂದ ಮಾಡಿ ‘ರಿಂಗು’ಗಳನ್ನು ಎರಡು ಕಡೆ ಜಾರದಂತೆ ಬಿಗಿಸುತ್ತಾರೆ. ಇದರ ಮೇಲೆ ಚರ್ಮವನ್ನು ಸರಿಯಾಗಿ ಹೊಂದಿಸಿ ದಾರಗಳಿಂದ ಬಿಗಿ ಮಾಡುತ್ತಾರೆ. ಈ ರೀತಿ ತಯಾರಾದ ಎರಡು ವಾದ್ಯಗಳಿಗೆ ಉದ್ದವಾದ ಅಗಲವಾದ ‘ಟೇಪು’ಗಳನ್ನು ಕಟ್ಟಿ ಕತ್ತಿಗೆ ನೇತಾಡಿಸಿ ಕೊಳ್ಳುತ್ತಾರೆ. ಬೆರಳಷ್ಟು ಅಗಲ, ಹದಿನೈದು ಇಂಚಿನಷ್ಟು ಉದ್ದ ತುದಿಯಲ್ಲಿ ಸ್ವಲ್ಪ ತೊಟ್ಟಿಗೆ ‘ಹಾಕಿಸ್ಟಿಕ್’ನ ಹಾಗೆ ಇರುವ ಮರದ ಕೊಂಬೆಯಿಂದ ಮಾಡಿದ್ದನ್ನು ಬಲಗೈಯಲ್ಲಿ ಹಿಡಿದು ಕಂಚಿನ ಪಂಬವಾದ್ಯವನ್ನು ಎಡಗೈಯಿಂದ ಮರದ ಪಂಬವನ್ನು ಲಯಬದ್ಧವಾಗಿ ಬಾರಿಸುತ್ತಿದ್ದರೆ ಅದ್ಭುತ ಶಬ್ದಗಳು ಬರುತ್ತವೆ. ಮರದ ಪಂಬದ ಮೇಲೆ ಕಂಚಿನ ಪಂಬವವನ್ನು ಅದರ ಕೆಳಗಡೆ ಬಿಗಿಯಾಗಿ ಕಟ್ಟಿ. ದಾರಗಳನ್ನು ಬಿಗಿ ಮಾಡುವ ರೀತಿಯಿಂದ ವಿವಿಧ ನಾದಗಳು ಹುಟ್ಟುತ್ತದೆ.

ಗ್ರಾಮದೇವತೆಗಳ ಆರಾಧನೆಯ ಸಂದರ್ಭದಲ್ಲಿ ಪ್ರದರ್ಶಿಸುವಂತಹ ಕೀಲುಕುದುರೆ, ನಮ್ಯಾಂಡಿಡ್ಯಾನ್ಸು, ಕರಗ ನೃತ್ಯ ಮುಂತಾದ ಜನಪದಕಲೆಗಳ ಪ್ರದರ್ಶನನ ವೇಳೆ ಹಲಗೆಗಿಂತ ಪಂಬವಾದ್ಯದ ಪ್ರಾಮುಖ್ಯತೆ ಹೆಚ್ಚಾಗಿರುತ್ತದೆ. ಅದರಲ್ಲೂ ಕರಗ ನೃತ್ಯಕ್ಕೆ ಪಂಬ ವಾದ್ಯ ತಪ್ಪದೇ ಇರಬೇಕು. ಪಂಬ ಬಾರಿಸುತ್ತಿದ್ದರೆ ಕರಗ ನೃತ್ಯ ಮಾಡುವವರು ಲಯಬದ್ಧವಾಗಿ ನೃತ್ಯ ಮಾಡುತ್ತಿದ್ದರೆ ಎಷ್ಟು ಹೊತ್ತಾದರೂ ಹಾಗೆ ನೋಡಬೇಕೆನ್ನಿಸುತ್ತದೆ.

ಗ್ರಾಮದೇವತೆಗಳ ಆರಾಧನೆಯ ವೇಳೆ ಅದರಲ್ಲಿಯೂ ‘ಚಾಟು’ (ಜಾತರೆಯನ್ನು ಸಾರುವುದು) ಮಾಡುವ ಕರಗವನ್ನು ಇಡುವ ದಿನ, ಗಂಗಮ್ಮನ ‘ಶಿರಸ್ಸು’ ಸಂದರ್ಭದಲ್ಲಿ ಪಂಬದ ಸದ್ದು ಕೇಳಿಸದಿದ್ದರೆ ಅದಕ್ಕೆ ಮನ್ನಣೆ ಇರುವುದಿಲ್ಲ. ‘ಚಾಟು’ ಇಡುವ ದಿವಸ ಪೂಜಾರಿಗೆ ‘ಆವೇಶ’ ತರಿಸುವುದಕ್ಕೆ ಪಂಬ ವಾದ್ಯ ತಪ್ಪದೇ ಇರಬೇಕು. ಸಂದರ್ಭನುಸಾರವಾಗಿ ಶಬ್ದವನ್ನು ಹೆಚ್ಚು ಕಡಿಮೆ ಮಾಡುತ್ತಿದ್ದರೆ ಎಂಥವರಾದರೂ ತನ್ಮಯತೆಗೆ ಶರಣಾಗತರಾಗಗಲೇ ಬೇಕು.

ಪ್ರಾಪ್ತ, ಅಪ್ರಾಪ್ತ ವಯಸ್ಸಿನವರು ಅಕಾಲ ಮರಣ ಹೊಂದಿದಾಗ ‘ಗುರಿ’ ಎಂಬ ಆಚರಣೆಯನ್ನು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ‘ಕಂಬ ಬಾರಿಸುರಜಾತಿಯವರು’ ಪಂಬ ಬಾರಿಸುತ್ತಾ, ಯಾರಾದರೂ ಒಬ್ಬರ ಮೇಲೆ ಸತ್ತವರ ಆತ್ಮವನ್ನು ಆವಾಹನ ಮಾಡುತ್ತಾರೆ. ಹೀಗೆ ಆವಾಹನೆ ಆಗುವಾಗ ತಾವು ಮರಣ ಹೊಂದಿದ ವಿವರಗಳನ್ನು ತಿಳಿಸುತ್ತಾರೆ. ಹೀಗೆ ‘ಗುರಿ’ ಇಡುವಾಗ ಪಂಬ ವಾದ್ಯದಿಂದ ಬರುವ ಸದ್ದು ಭಿನ್ನವಾಗಿದ್ದು ಎಂಥವರಿಗದರೂ ಆವೇಶ ತರಿಸುವ ರೀತಿ ಇರುತ್ತದೆ. ದೆವ್ವ ಹಿಡಿದವರ ಮೈಮೇಲೆ ದೆವ್ವ ತರಿಸುವುದಕ್ಕೆ ಸಹಾ ಪಂಬವನ್ನು ಉಪಯೋಗಿಸುತ್ತಾರೆ.

ಅಂಕಮ್ಮ ಕಥೆ ಏಳು ಹಗಲು ಮತ್ತು ಏಳು ರಾತ್ರಿಗಳ ಕಥೆ. ಈ ಕಥೆಯನ್ನು ಹೇಳುವಾಗ ಆವೇಶ ಪೂರಿತವಾದ ಸನ್ನಿವೇಶಗಳಲ್ಲಿ ಪಂಬವನ್ನು ಬಾರಿಸುವ ರೀತಿ ಮೈ ಝಮ್ಮೆನಿಸುತ್ತದೆ.

ಸುಬ್ರಹ್ಮಣ್ಯಸ್ವಾಮಿಯ ಕಾವಡಿ ಹಬ್ಬಕ್ಕೆ, ಪಂಬವಾದ್ಯಕ್ಕೆ ನಂಟು ಇದೆ. ಪಂಬ ವಾದ್ಯ ಇಲ್ಲದಿದ್ದರೆ ಕಾವಡಿ ಹಬ್ಬ ಇರುವುದಿಲ್ಲ.

ಟಿ.ಎನ್.

 

ಪಂಬೈ ಒಂದು ಬಗೆಯ ಚರ್ಮವಾದ್ಯ. ಇದು ನೀಳ ವಾದ ವೃತ್ತಾಕೃತಿಯಲ್ಲಿದ್ದು ಎರಡು ಸಂಗೀತೋಪಕರಣಗಳನ್ನು ಹೊಂದಿದೆ. ಪ್ರತಿಯೊಂದೂ ಒಂದಡಿ ಉದ್ದವಿರುತ್ತದೆ. ಅವುಗಳನ್ನು ಒಂದರ ಮೇಲೊಂದು ಸೇರಿಕೊಂಡಿರುವಂತೆ ಜೋಡಿಯಾಗಿ ಕಟ್ಟಲಾಗಿರುತ್ತದೆ. ಮೇಲ್ಬದಿಯಲ್ಲಿರುವ ಉಪಕರಣ ಹಿತ್ತಾಳೆಯಿಂದ ಕೆಳಗಡೆ ಇರುವ ಉಪಕರಣವನ್ನು ಮರದಿಂದಲೂ ಮಾಡಲಾಗಿರುತ್ತದೆ. ಈ ಎರಡೂ ಉಪಕರಣಗಳ ಎರಡು ಬದಿಗಳೂ ಚರ್ಮದಿಂದ ಸುತ್ತಲ್ಪಟ್ಟಿರುತ್ತವೆ. ಮರದಿಂದ ತಯಾರಿಸಿದ ಉಪಕರಣವನ್ನು ವೀರುವಾನಂ ಎಂದೂ ಕಂಚಿನಿಂದ ಮಾಡಿದ ಉಪಕರಣವನ್ನು ‘ವೆಂಗಲವಾನಂ’ ಎಂದೂ ಕರೆಯಲಾಗುತ್ತದೆ. ಆದರೂ ಈ ಎರಡು ಉಪಕರಣಗಳಿಗೆ ಸಮಾನವಾದ ಹೆಸರು ‘ಪಂಬೈ’ ಎಂಬುದೇ ಆಗಿದೆ.

ಈ ಸಾಧನವು ಆಂಧ್ರ ಪ್ರದೇಶದಲ್ಲೂ ತಮಿಳುನಾಡಿನಲ್ಲೂ ಜನಪದ ವಾದ್ಯವೆಂದು ರೂಢಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ಇದನ್ನು ಬಾರಿಸುವುದರಲ್ಲಿ ವಿಶೇಷ ಸಾಮರ್ಥ್ಯವನ್ನು ಹೊಂದಿದ ಒಂದು ಜಾತಿಯ ಜನರು ಇದ್ದಾರೆ. ಇವರು ಸಮಾಜದಲ್ಲಿ ತಮ್ಮನ್ನು ‘ಪಂಬವಾರು’ ಎಂದು ಕರೆದುಕೊಳ್ಳುತ್ತಾರೆ.

ಪಂಬೈಯನ್ನು ಬಾರಿಸುವವರು ಅದನ್ನು ತಮ್ಮ ಶರೀರದ ಮುಂಭಾಗದಲ್ಲಿ ನೇತಾಡಿಸಿಕೊಳ್ಳುತ್ತಾರೆ. ಪಂಬಯ ಬಾರಿಸುವವರ ಸೊಂಟದ ಭಾಗದಲ್ಲಿ ಜೋತಾಡಿಕೊಂಡಿರುವಂತೆ ಪಂಬೈಯನ್ನು ಕುತ್ತಿಗೆಯಲ್ಲಿ ಕಟ್ಟಿಕೊಂಡು ನಿಂತುಕೊಂಡೇ ನುಡಿಸುತ್ತಾರೆ. ಮೇಲ್ಬದಿಯಲ್ಲಿರುವ ಹಿತ್ತಾಳೆಯ ಪಂಬೈಯ ಬಲಬದಿಯನ್ನು ಬಾಗಿದ ಒಂದು ಕಡ್ಡಿಯಿಂದ ತಟ್ಟಿ ಬಾರಿಸುತ್ತಾರೆ. ಅದೇ ಸಂದರ್ಭದಲ್ಲಿ ಕೆಳಬದಿಯಲ್ಲಿರುವ ಪಂಬೈಯನ್ನು ತಮ್ಮ ಎಡಗೈಯಲ್ಲಿ ನೇರವಾದ ಕಡ್ಡಿಯಿಂದ ಹೊಡೆದು ಬಾರಿಸುತ್ತಾರೆ.

ಪಂಬೈ ಎನ್ನುವ ಸಂಗೀತ ವಾದ್ಯ ಹೆಚ್ಚಾಗಿ ನೈಯ್ಯಾಂಡಿ ಮೇಲದ ಸಂಗೀತವಾದ್ಯಗಳೊಂದಿಗೆ ಸೇರಿಯೇ ನುಡಿಸಲ್ಪಡುತ್ತದೆ. ತಮಿಳುನಾಡಿನ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ಬಹಳ ಪ್ರಬಲವಾದ ಕಲಾರೂಪಗಳಲ್ಲಿ ನೈಯ್ಯಾಂಡಿ ಮೇಳವೂ ಒಂದಾಗಿದೆ. ನೈಯ್ಯಾಂಡಿ ಮೇಳ ಎನ್ನುವುದು ಎರಡು ನಾದಸ್ವರ, ಎರಡು ತವಿಲ್, ಎರಡು ಪಂಬೈ, ಒಂದು ಜಾಲರಾದ ಎಂದು ಒಟ್ಟು ಏಳು ಮಂದಿ ಸೇರಿ ನಡೆಸುವ ಸಂಗೀತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಪಂಬೈಯ ಪಾತ್ರ ಅತ್ಯಂತ ಮುಖ್ಯವಾದುದಾಗಿದೆ. ಪಂಬೈಯ ಧ್ವನಿಯಿಲ್ಲದೆ ನೈಯ್ಯಾಂಡಿ ಮೇಳವೇ ಇಲ್ಲ. ಪಂಬೈಯಿಂದ ಬರುವ ಉಚ್ಚ, ಮಂದ್ರ ಎಂಬ ಎರಡು ಧ್ವನಿಗಳೂ ನೈಯ್ಯಾಂಡಿ ಮೇಳ ಸಂಗೀತಕ್ಕೆ ಬೆಂಬಲ ನೀಡುತ್ತವೆ.

ದೇವಿಯ ದೇವಸ್ಥಾನದ ‘ಕೊಡೈ’ ಉತ್ಸವದ ಕಾರ್ಯಕ್ರಮದಲ್ಲಿ ನೈಯ್ಯಾಂಡಿ ಮೇಳ ದೊಡ್ಡ ಪಾತ್ರವಹಿಸುತ್ತದೆ. ವಿಶೇಷವಾಗಿ ಸಾಮ(ರಾತ್ರಿ) ಕೊಡೆಯಲ್ಲಿ ದೇವರು ಬೇಟೆಗೆ ಹೋಗುವ ದೃಶ್ಯ ನಡೆಯುತ್ತದೆ. ಆ ಸಮಯದಲ್ಲಿ ದೇವರು ದೇವಸ್ಥಾನದಿಂದ ಹೊರಟು ಸುಡುಗಾಡಿಗೆ ಹೋಗಿ ಹಿಂತಿರುಗಿ ದೇವಸ್ಥಾನಕ್ಕೆ ಬರುವವರೆಗೂ ಪಂಬೈಯನ್ನು ಬಾರಿಸುತ್ತಲೇ ಇರುತ್ತಾರೆ. ಉಳಿದ ಸಂಗೀತೋಪಕರಣಗಳೆಲ್ಲವನ್ನು ನಿಲ್ಲಿಸಿದರೂ ಪಂಬೈ ಬಾರಿಸುವುದನ್ನು ಮಾತ್ರ ನಿಲ್ಲಿಸದೆ ಬಾರಿಸುತ್ತಲೇ ಇರಬೇಕು. ಪಂಬೈ ಬಾರಿಸುವುದನ್ನು ನಿಲ್ಲಿಸಿದಲ್ಲಿ ಬೇಟೆಗೆ ಹೋದ ದೇವರಿಗೆ ಏನಾದರೂ ಕೆಟ್ಟ ಘಟನೆ ಸಂಭವಿಸಬಹುದೆಂದು ಇಂದಿಗೂ ಜನರು ನಂಬಿಕೊಂಡಿದ್ದಾರೆ. ಆ ಮಟ್ಟಕ್ಕೆ ಈ ಪಂಬೈ ಸಂಗೀತೋಪಕರಣದ ಧ್ವನಿ ಅತ್ಯಂತ ಆಕರ್ಷಕವಾದುದಾಗಿ ಬಹಳ ದೂರದವರಗೆ ಚಲಿಸುವ ಶಕ್ತಿಯನ್ನು ಹೊಂದಿದೆ. ಒಂದು ಊರಿನಲ್ಲಿ ನಡೆಯುವ ದೇವಸ್ಥಾನದ ‘ಕೊಡೈ’ ಉತ್ಸವದ ಕಾರ್ಯಕ್ರಮವನ್ನು ಪಂಬೈ ಸಂಗೀತ ಧ್ವನಿಯ ಮೂಲಕ ಪಕ್ಕದಲ್ಲಿರುವ ಗ್ರಾಮಗಳ ಜನರು ತಿಳಿದುಕೊಳ್ಳುತ್ತಾರೆ.

ಹೆಚ್ಚಿನಂಶ ಪಂಬೈ ತೆರುಕೂತ್ತುಗಳಲ್ಲಿಯೂ ಗ್ರಾಮದೇವತೆಗಳ ಧಾರ್ಮಿಕ ಧಿಗಳ ಸಂದರ್ಭದಲ್ಲಿಯೂ ನುಡಿಸಲ್ಪಡುತ್ತದೆ. ಈ ಉಪಕರಣವನ್ನು ಸಮರ್ಥವಾಗಿ ನುಡಿಸುವವರು ಇಂಪಾದ ಧ್ವನಿಯಿಂದ ಶ್ರೋತೃಗಳನ್ನು ವಶಪಡಿಸಿಕೊಳ್ಳುತ್ತಾರೆ. ಮಾರಿಯಮ್ಮನ ಉತ್ಸವಗಳಲ್ಲಿ ಅರ್ಚಕರು ಬುಡುಬುಡಿಕೆಯನ್ನು ಬಾರಿಸುತ್ತಲೂ ಕೈಗೆಜ್ಜೆಗಳನ್ನು ಧ್ವನಿ ಮಾಡುತ್ತಲೂ ಆಡುತ್ತಾ ದೇವರನ್ನು ಕರೆಯುವಾಗಲೂ ಪಿಶಾಚಿಯನ್ನು ಓಡಿಸುವಾಗಲೂ ಈ ಪಂಬೈಯನ್ನು ಬಾರಿಸುತ್ತಾರೆ. ಇದನ್ನು ಬಣ್ಣದ ಕಡ್ಡಿಗಳಿಂದ ಉಜ್ಜಿ ಬಾರಿಸುವಾಗ ಒಂದು ವಿನೋದದ ಧ್ವನಿ ಉಂಟಾಗುತ್ತದೆ. ಈ ಧ್ವನಿ ಎಲ್ಲರನ್ನೂ ಪರವಶಗೊಳಿಸುತ್ತದೆ.

ಪಂಬೈಯ ಹೊರಮೈಗೆ ಬಣ್ಣ ಹಚ್ಚಲಾಗಿರುತ್ತದೆ. ಮಾತ್ರವಲ್ಲದೆ ಹೂವಿನ ಆಕೃತಿಯನ್ನು ಚಿತ್ರಿಸಿ ಅಲಂಕರಿಸಲಾಗಿರುತ್ತದೆ. ಪಂಬೈಯು ದುಡಿ, ಮುರಜ(ಭೇರಿ), ಶಂಖ ಮೊದಲಾದ ಇತರ ಸಂಗೀತೋಪಕರಣಗಳೊಂದಿಗೆ ಒಂದುಗೂಡಿ ನುಡಿಸಲ್ಪಡುತ್ತದೆ.

ಟಿ.ಜಿ.ಅನುವಾದ ಎ.ಎಸ್.ಬಿ.

 

ಪಗಟಿ ವೇಷಂ ಆಂಧ್ರಪ್ರದೇಶ ಪ್ರಾಚೀನ ಪ್ರದರ್ಶನಾತ್ಮಕ ಜನಪದ ಕಲೆ. ಪ್ರಾಚೀನ ಕಾವ್ಯಗಳಲ್ಲಿ ಇದರ ಪ್ರಸ್ತಾಪವಿದೆ. ವೇಷಧರಿಸಿ ಹಗಲು ವೇಳೆ ಪ್ರದರ್ಶಿಸುವುದರಿಂದ ಇದಕ್ಕೆ ಹಗಲು ವೇಷ ಎಂದು ಹೆಸರು. ಪೂರ್ವಕಾಲದಲ್ಲಿ ೬೩ ವೇಷಗಳನ್ನು ತೊಟ್ಟುಕೊಂಡು ಜನರಿಗೆ ಮನರಂಜನೆಯನ್ನು ನೀಡುತ್ತಿದ್ದರು. ಪ್ರಸ್ತುತ ಹಗಲುವೇಷಗಳು ೧೮-೧೨ಕ್ಕೆ ಕುಸಿದಿವೆ. ಇವರನ್ನು ‘ಪೋಟೀಸಗಾಳ್ಳು’ (ಹಗಲು ವೇಷದವರು) ‘ಪಗಟೇಷಗಾಳ್ಳು’ ಎಂದು ಕರೆಯುತ್ತಾರೆ. ಕಾವ್ಯಗಳಲ್ಲಿ ಬಹುರೂಪಿಗಳೆಂದು, ಪ್ರಚ್ಛನ್ನ ವೇಷಗಳು, ವಿಚಿತ್ರ ವೇಷಗಳು ಎಂದು ವಿವರಿಸಲಾಗಿದೆ. ಹಿಂದಿನ ಕಾಲದಲ್ಲಿ ರಾಜಾಸ್ಥಾನದಲ್ಲಿ ಗೂಢಚಾರಿಗಳು ಇರುತ್ತಿದ್ದರು. ಅವರು ಪ್ರಜೆಗಳ ಯೋಗಕ್ಷೇಮ ತಿಳಿದುಕೊಳ್ಳಲು ಇಂತಹ ವೇಷಗಳನ್ನು ಹಾಕಿಕೊಳ್ಳುತ್ತಿದ್ದರೆಂದು ಕೆಲವು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ. ಇವರು ಪ್ರದರ್ಶಿಸುವ ವೇಷಗಳಲ್ಲಿ ಮುಖ್ಯವಾದವು ಬುಡಬುಕ್ಕಲವೇಷ (ಬುಡುಬುಡುಕೆ), ಕೃಷ್ಣ, ಜಾಂಬವಂತ, ಅರ್ಧನಾರೀಶ್ವರ, ಸಾತಾನಿ, ವೈಷ್ಣವ (ವೈಷ್ಣವರಲ್ಲಿ ಒಂದು ಪಂಗಡ), ಬೋಳು ಬ್ರಾಹ್ಮಣನ ವೇಷ, ಕಾಳಿಕಾ ಮಹಿಷಾಸುರ ವೇಷ, ಔಷಧಿಯವನ ವೇಷ, ಈಡಿಗರ, ದೇವರ ಸೆಟ್ಟಿ, ಸೋಮಯಾಜುಲು, ಸೋಮಿ, ದಮ್ಮಿ, ಬಾಣಂತಿ, ದಾದಿ, ಶಕ್ತಿ, ಪೊಲೀಸ್, ಬೇತಾಳ, ಚಿಟ್ಟಿ ಪಂತುಲು, ಪರಶುರಾಮ, ಚೆಂಚು, ಶೂರ್ಪನಖಿ ಮೊದಲಾದ ವೇಷಗಳನ್ನು ಹಾಕುವರು. ಹಗಲು ವೇಷಗಳನ್ನು ಸಾತ್ವಿಕ ವೇಷ, ತಾಮಸವೇಷಗಳೆಂದು ಎರಡು ವಿಧವಾಗಿ ವಿಭಾಗಿಸಬಹುದು. ತಾಮಸವೇಷಗಳು ರೌದ್ರರಸ ಪ್ರಧಾನವಾಗಿ ಭಯಂಕರವಾಗಿರುತ್ತವೆ.

ಹಗಲು ವೇಷದವರು ವರ್ಷಕ್ಕೊಮ್ಮೆ ಮಾತ್ರ ಗ್ರಾಮಕ್ಕೆ ಬಂದು ದಿನಕ್ಕೊಂದು ವೇಷಧರಿಸಿ ಕೊನೆಯ ದಿನ ಗ್ರಾಮದವರು ಕೊಟ್ಟಷ್ಟು ವಸ್ತುಗಳನ್ನು ಕಾಣಿಕೆಯಾಗಿ ಸ್ವೀಕರಿಸುತ್ತಾರೆ. ಇವರು ತಮ್ಮ ಪಾತ್ರಕ್ಕೆ ತಕ್ಕಂತೆ ಅಲಂಕರಿಸಿಕೊಂಡು ಅನುಕರಣ ವಿಧಾನದ ಮೂಲಕ ಎಲ್ಲರನ್ನು ಆಕರ್ಷಿಸುತ್ತಾರೆ. ಕೆಲವು ಪಾತ್ರಗಳ ಮಧ್ಯೆ ಸಂಭಾಷಣೆ ಅದ್ಭುತವಾಗಿರುತ್ತದೆ. ತಮ್ಮ ಕುಟುಂಬದ ಸದಸ್ಯರೇ ಈ ವೇಷಗಳನ್ನು ಧರಿಸಿಕೊಂಡು ಜೀವನ ನಿರ್ವಹಿಸುತ್ತಾರೆ. ವಾದ್ಯಗಳು, ಹಾರ‍್ಮೋನಿಯಂ, ಡೋಲಕ್, ತಮಟೆ, ತಾಳಗಳು. ಪೌರಾಣಿಕ ಪಾತ್ರಗಳಿದ್ದಾಗ ಇವರು ಪದ್ಯಗಳನ್ನು ಶ್ಲೋಕಗಳನ್ನು ಹೇಳುತ್ತಾರೆ. ಶಕ್ತಿಮಾತೆಯ ವೇಷ ಎಲ್ಲರನ್ನು ಭಯಪಡಿಸುವಂತಿರುತ್ತದೆ, ಈ ವೇಷದೊಂದಿಗೆ ಹಗಲುವೇಷ ಮುಗಿಯುತ್ತದೆ.

ಟಿ.ಎಸ್.ಎನ್. ಅನುವಾದ ಎನ್.ಆರ್.

17_70A_DBJK-KUH

 

ಪಗಲ್‌ವೇಡಂ ತಮಿಳುನಾಡಿನಲ್ಲಿರುವ ಜಂಗಮ ಪ್ರದರ್ಶನ ಕಲೆ(ಹಗಲು ವೇಷ). ಈ ಕಲೆಯನ್ನು ತೆಲುಗಿನ ಜಂಗಮ ಸಂಪ್ರದಾಯದವರು ಪಗಟಿ ವೇಷಾಲು ಎಂದು ಪ್ರದರ್ಶಿಸುವರು. ಕಲಾವಿದರು ಹಗಲಿನ ವೇಳೆಯಲ್ಲಿ ಈ ಕಲೆಯನ್ನು ಪ್ರದರ್ಶಿಸುವುದರಿಂದ ಹಗಲು ವೇಷವೆಂದೂ ಹಲವು ವೇಗಳಲ್ಲಿ ಪ್ರದರ್ಶಿಸುವುದರಿಂದ ಹಲವು ವೇಷ ಎಂದೂ ಹೆಸರು. ಪುರಾಣ, ಇತಿಹಾಸ ವ್ಯಕ್ತಿಗಳಾಗಿ ವೇಷಧರಿಸಿ(ರಾಮ, ಸೀತೆ, ಹನುಮಾನ್, ಭೀಮ) ದೇವರ ವೇಷ ಧರಿಸಿ (ಶಿವ, ಪಾರ್ವತಿ, ಕೃಷ್ಣ) ಜನರ ಮುಂದೆ ಕತೆ, ಹಡುಗಳನ್ನು ಹೇಳಿ ಕುಣಿದು ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಕಲಾವಿದರು ಜನಸಂದಣಿ ಸೇರುವ ಸ್ಥಳಗಳನ್ನು ಹುಡುಕಿ (ಅಂಗಡಿ ಬೀದಿ, ಚಾವಡಿ, ಬಸ್‌ನಿಲ್ದಾಣ, ಮುಖ್ಯ ವೃತ್ತಗಳು) ಪುರಾಣ, ಇತಿಹಾಸದ ತುಣುಕುಗಳನ್ನು (ಮುಂಚೆ ಒಂದು ಕಥೆಯನ್ನು ಪೂರ್ಣವಾಗಿ ಹೇಳಿ ಪ್ರದರ್ಶಿಸಿ ತೋರಿಸುತ್ತಾರೆ. ಪ್ರೇಕ್ಷಕರುಗಳೇ ಹಗಲುವೇಷ ಕಲೆ ಪ್ರದರ್ಶಿಸುವ ಕಾಲವನ್ನು, ರಂಗವನ್ನು ತೀರ್ಮಾನಿಸುತ್ತಾರೆ. ಮೂರರಿಂದ ಐದು ಜನ ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿ ಹಾಡಿ ಕುಣಿಯುತ್ತಾರೆ. ಕಲಾವಿದರು ಹಾರ್ಮೋನಿಯಂ, ಕಂಜ್ರಾ, ಜಾಲ್ರಾ ಮೊದಲಾದ ಸಂಗೀತ ವಾದ್ಯಗಳನ್ನು ನುಡಿಸಿಕೊಂಡು ಹಗಲುವೇಷ ಕಲೆಯನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ.

ಹಗಲು ವೇಷದ ಕಲಾವಿದರು ಮುಖ್ಯವಾಗಿ ತೆನ್ನಾರ್ಕಾಡು ಜಿಲ್ಲೆಯಲ್ಲಿ ವಾಸಿಸುತ್ತಾರೆ. ಆದರೆ ಹೊಟ್ಟೆ ಪಾಡಿಗಾಗಿ ಊರೂರು ಅಲೆದು ಹಗಲುವೇಷ ಕಲೆಯನ್ನು ಪ್ರದರ್ಶಿಸಿ, ಹಣವನ್ನು ಸಂಪಾದಿಸಿ ಕುಟುಂಬವನ್ನು ನಿರ್ವಹಿಸುತ್ತಾರೆ. ಗಟ್ಟಿಯಾದ ದನಿ, ತೆಳುವಾದ ಉಚ್ಚಾರಣೆ, ಹಾಸ್ಯಭಾವನೆ ನಿರೂಪಿಸುವ ಶೈಲಿ, ನೆನಪಿನ ಶಕ್ತಿ, ಸಂಗೀತ ಸಾಧನಗಳ ಜ್ಞಾನ ಮೊದಲಾದ ಸಾಮರ್ಥ್ಯವನ್ನು ಹಗಲುವೇಷದ ಕಲಾವಿದರು ಪಡೆದಿರುತ್ತಾರೆ. ತಕ್ಕ ವರಮಾನ, ಜನರ ಆದರಣೆ, ಸರ್ಕಾರದ ಸಹಾಯ ಇಲ್ಲದಿರುತ್ತಾರೆ. ತಕ್ಕ ವರಮಾನ, ಜನರ ಆದರಣೆ, ಸರ್ಕಾರದ ಸಹಾಯ ಇಲ್ಲದಿದ್ದರೂ ಕಲಾವಿದರು ಈ ಕಲೆಯನ್ನು ಪ್ರದರ್ಶಿಸುತ್ತಾರೆ. ಇಂದಿನ ಪ್ರಯಾಣದ ನೂಕುನುಗ್ಗಲು, ಕಾರ್ಖಾನೆಗಳ ಒತ್ತಡ, ಯಾಂತ್ರಿ ಬದುಕು ಮೊದಲಾದ ಸಮಸ್ಯೆಗಳು ಇದ್ದರೂ ಈ ಕಲೆ ಜೀವಂತಿಕೆಯನ್ನು ಉಳಿಸಿಕೊಂಡಿದೆ.

.ಎಂ. ಅನುವಾದ ಆರ್.ಎಸ್.

 

ಪಚ್ಚಕುತ್ ಕೇರಳದಲ್ಲಿ ಹಚ್ಚೆಗೆ ಪಚ್ಚಕುತ್ತ್ ಎನ್ನುತ್ತಾರೆ. ಪ್ರಾಚೀನ ಕಾಲದಿಂದಲೂ ದೇಹದ ಸೌಂದರ್ಯವನ್ನು ಹೆಚ್ಚಿಸಲು ಜನರು ವಿವಿಧ ಬಗೆಯ ಅಲಂಕಾರಗಳನ್ನು ಮಾಡುತ್ತಿದ್ದರು. ಹೀಗೆ ದೇಹವನ್ನು ಅಲಂಕರಿಸುವುದಕ್ಕಾಗಿ ಅಂದಿನ ಜನರು ಕಂಡುಕೊಂಡ ಉಪಾಯವೇ ‘ಪಚ್ಚಕುತ್ತ್’(ಹಚ್ಚೆ) ಎಂಬ ಶರೀರ ಚಿತ್ರಕಲೆ. ಅಳಿಸಿ ತೆಗೆದುಹಾಕಲು ಸಾಧ್ಯವಾಗದಂತೆ ಚರ್ಮದ ಅಡಿಭಾಗಕ್ಕೆ ಪ್ರತ್ಯೇಕತರದ ಶಾಯಿಯೊಂದನ್ನು ಹಚ್ಚಿ ದೇಹದ ಭಾಗಗಳನ್ನು ಶಾಶ್ವತವಾಗಿ ಬಣ್ಣಗಳಿಂದ ಅಲಂಕರಿಸುವುದನ್ನು ‘ಪಚ್ಚಕುತ್ತ್’(ಹಚ್ಚೆಹಾಕುವುದು) ಎನ್ನುತ್ತಾರೆ. ಬಣ್ಣ ಇಳಿದು ದೇಹವನ್ನು ಅಲಂಕರಿಸುವ ಪ್ರವೃತ್ತಿ ಪುರಾತನ ಜನವರ್ಗಗಳಲ್ಲೇ ಇತ್ತು. ಗಿಡಮರಗಳಿಂದ ದೊರೆಯುತ್ತಿದ್ದ ರಸ, ವಿವಿಧ ಹಣ್ಣಿನ ರಸಗಳು, ವಿವಿಧ ಧಾನ್ಯಗಳ ಹುಡಿಗಳು, ಮಸಿ ಇತ್ಯಾದಿ ಪ್ರಕೃತಿಯಿಂದ ದೊರೆಯುತ್ತಿದ್ದ ಕಚ್ಚಾವಸ್ತುಗಳನ್ನು ಬಳಸಿ, ಸೊಸಿ ತೆಗೆದ ದ್ರಾವಣದಿಂದ ಹಚ್ಚೆಗೆ ಬೇಕಾದ ಶಾಯಿಯನ್ನು ತಯಾರಿಸುತ್ತಿದ್ದರು. ಹಚ್ಚೆಗೆ ಬಳಸುವ ವಸ್ತುಗಳಲ್ಲಿ ಹಲವು ಪ್ರಾದೇಶಿಕ ಮತ್ತು ಸಾಮುದಾಯಿಕ ಭಿನ್ನತೆಗಳು ಕಾಣಸಿಗುತ್ತವೆ. ಹೀಗೆ ತಯಾರಿಸಿದ ಶಾಯಿಯಲ್ಲಿ ಮೊದಲು ರೂಪವನ್ನು ಬಿಡಿಸಿ ಬಳಿಕ ಅದರ ಮೇಲೆ ಸೂಜಿಯಿಂದ ಚುಚ್ಚುತ್ತಾರೆ. ಚುಚ್ಚಲ್ಪಟ್ಟ ಭಾಗದಲ್ಲಿ ಶಾಯಿಯು ಆಳಕ್ಕೆ ಇಳಿಯುವುದರಿಂದ ಬಿಡಿಸಿದ ಚಿತ್ರಗಳು ಅಳಿಸಿ ಹೋಗದೇ ಹಾಗೆ ಉಳಿಯುತ್ತವೆ. ಇಂತಹ ಹಚ್ಚೆಗಳಲ್ಲಿ ಹಸರಿ ಮತ್ತು ನೀಲಿ ಬಣ್ಣದ ಚಿತ್ರಗಳು ಹೆಚ್ಚಾಗಿ ಕಾಣಸಿಗುತ್ತವೆ. ಹೂ, ಹಕ್ಕಿ, ಮೀನು, ಖಡ್ಗ, ಶೂಲ, ಶಂಖ, ರಥ, ಒನಕೆ, ಸೂರ್ಯಚಂದ್ರರು ಇತ್ಯಾದಿ ನಿತ್ಯ ಬದುಕಿಗೆ ಸಂಬಂಧಿಸಿದ ಚಿತ್ರಗಳೇ ಪಚ್ಚಕುತ್ತುಗಳಲ್ಲಿ ಸಾಮಾನ್ಯವಾಗಿವೆ.

ಅಕ್ಷರಜ್ಞಾನವಿಲ್ಲದೆ ಇದ್ದ ಕಾಲದಲ್ಲಿ ಜನರು ತಮ್ಮ ವೀರಪರಾಕ್ರಮವನ್ನು ದಾಖಲಿಸುವುದಕ್ಕಾಗಿ ಹಚ್ಚೆಯನ್ನು ಉಪಯೋಗಿಸುತ್ತಿದ್ದರು. ಒಬ್ಬ ವ್ಯಕ್ತಿಯ ಕುಲ, ಗೋತ್ರ, ಸಾಮಾಜಿಕ ಪದವಿ ಇತ್ಯಾದಿಗಳೆಲ್ಲದರ ಪ್ರತೀಕವಾಗಿ ಆ ವ್ಯಕ್ತಿಯ ಮೈಮೇಲಿನ ಹಚ್ಚೆ ಇರುತ್ತಿತ್ತು. ಹಚ್ಚೆ ಹಾಕಿಸಿಕೊಳ್ಳುವುದೆಂದರೆ ಬುಡಕಟ್ಟು ಜನಾಂಗದವರಿಗೆ ಹೆಮ್ಮೆಯ ಸಂಗತಿಯಾಗಿತ್ತು. ಬುಡಕಟ್ಟು ವರ್ಗದವರಲ್ಲಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚಾಗಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಹಚ್ಚೆಯ ಚಿತ್ರಗಳು ಕೇವಲ ದೈಹಿಕವಾದ ಅಲಂಕಾರ ಎನ್ನುವುದಕ್ಕಿಂತಲೂ ಒಂದು ಸಂಪ್ರದಾಯದ ಭಾಗವಾಗಿಯೇ ಪರಿಗಣಿತವಾಗುತ್ತಿತ್ತು. ಬುಡಕಟ್ಟು ಜನಾಂಗದವರಲ್ಲಿ ಇದೊಂದು ಸಾಂಸ್ಕೃತಿಕ ಅನನ್ಯತೆಯ ಸಂಕೇತವೂ ಆಗಿದೆ. ಹಣೆ, ಕೆನ್ನೆ, ಕೈಕಾಲುಗಳು, ಬೆನ್ನು ಮುಂತಾದ ಭಾಗಗಳಿಗೆ ವಿಭಿನ್ನ ಬಗೆಯ ಹಚ್ಚೆಯ ಮುದ್ರೆಗಳ ಗುರುತು ಹಚ್ಚುವುದನ್ನು ಆಯಾ ಕುಲ ಗೋತ್ರಗಳ ವಾಂಶಿಕ ಸಂಕೇತಗಳಾಗಿಯೂ ಗುರುತಿಸುವುದಿದೆ.

ತಿರುವನಂತಪುರಂ, ಕೊಲ್ಲಂ ಜಿಲ್ಲೆಗಳಲ್ಲಿರುವ ಕಾಣಿಕ್ಕಾರ್ ಎಂಬ ಬುಡಕಟ್ಟು ಜನಾಂಗದ ಸ್ತ್ರಿ ಪುರುಷರಲ್ಲಿ ವಿಶಿಷ್ಟವಾದ ಗುರುತಿನ ಪಚ್ಚೆಕುತ್ತನ್ನು(ಹಚ್ಚೆಯನ್ನು) ಕಾಣಬಹುದಾಗಿದೆ. ಪುರುಷರು ತಮ್ಮ ಹಣೆಗಳಲ್ಲಿ ವೃತ್ತಾಕಾರದ ಚಕ್ರವೊಂದನ್ನೂ, ಸ್ತ್ರೀಯರು ತಮ್ಮ ಕೆನ್ನೆಗಳಲ್ಲಿ ಅರ್ಧಚಂದ್ರಾಕಾರದ ಚಿತ್ರವೊಂದನ್ನು ಹಚ್ಚೆಹಾಕಿಸಿಕೊಳ್ಳುತ್ತಿದ್ದರು. ವಯನಾಡ್ ಜಿಲ್ಲೆಯಲ್ಲಿ ಕಂಡುಬರುವ ವೇಟ್ಟಕುರುಮ ಎಂಬ ಬುಡಕಟ್ಟು ಜನಾಂಗದಲ್ಲಿ ಸ್ತ್ರೀಯರು ಕಿವಿಯಿಂದ ಕಿವಿಯವರೆಗೆ ಹಣೆಯಲ್ಲಿ ಮುತ್ತಿನ ಹಾರದಂತೆ ಹಚ್ಚೆಯ ಬೊಟ್ಟುಗಳನ್ನಿಡುತ್ತಿದ್ದರು. ಅವರೆಕಾಯಿಯ ಎಲೆಗೆ ಮಸಿ ಸೇರಿಸಿ ತೇದು ತೆಗೆದು ಅದಕ್ಕೆ ಮೊಲೆಹಾಲನ್ನು ಬೆರೆಸಿ ಅವರು ಹಚ್ಚೆಯ ಶಾಯಿಯನ್ನು ತಯಾರಿಸುತ್ತಿದ್ದರೆಂದು ಹೇಳಲಾಗಿದೆ. ಹಚ್ಚೆ ಹಾಕಿದ ಮೇಲೆ ಒಂದು ಜಾತಿಯ ಎಲೆಯ ರಸವನ್ನು ಅದರ ಮೇಲೆ ಚರ್ಮದ ಭಾಗಕ್ಕೆ ಲೇಪಿಸುತ್ತಾರೆ.

ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಕಣಿವೆ ಪ್ರದೇಶಗಳಲ್ಲಿ ವಾಸಿಸುವ ಇರುಳರು, ಮುಡುಗರು, ಕುರುಂಬರು ಇತ್ಯಾದಿ ಜನಾಂಗದವರಲ್ಲೂ ಪಚ್ಚೆಕುತ್ತುವ ರೂಢಿಯು ಧಾರಾಳವಾಗಿ ಕಾಣಸಿಗುತ್ತದೆ. ಹಚ್ಚೆಹಾಕುವುದನ್ನು ಕುಲಮಹಿಮೆಯೆಂದೇ ಅವರು ತಿಲಿಯುತ್ತಿದ್ದರು. ಈ ಜನಾಂಗದ ಸ್ತ್ರೀಯರು ಮದುವೆಗೆ ಮೊದಲೇ ಹಚ್ಚೆಹಾಕಿಸಿಕೊಳ್ಳುತ್ತಿದ್ದರು. ಅಟ್ಟಪಾಡಿಯ ದಟ್ಟವಾದ ಅರಣ್ಯದಲ್ಲಿ ವಾಸಿಸುವ ಕುರುಂಬರು ಎಂಬ ಜನಾಂಗದವರು ಕಾಡಿನಿಂದ ಶೇಖರಿಸಿದ ‘ತೋಂಡ’ ಎಂಬ ಕೊಡಿನಿಂದ ಬೀಜವನ್ನು ತೆಂಗಿನ ಚೆಪ್ಪಿನಲ್ಲಿಟ್ಟು ಅದಕ್ಕೆ ಮಸಿ ಮತ್ತು ಅರಿಶಿನಗಳನ್ನು ಬೆರೆಸಿ ತೇದು ಹಚ್ಚೆ ಮಿಶ್ರಣವನ್ನು ತಯಾರಿಸುತ್ತಾರೆ. ಮೊದಲಗಿಎ ಚಿಕ್ಕ ದಾರವೊಂದನ್ನು ಅದರಲ್ಲಿ ಮುಳುಗಿಸಿ ತೆಗೆದು ಹಣೆಯಲ್ಲಿ ಚಿತ್ರ ಬಿಡಿಸುತ್ತಾರೆ. ಬಳಿಕ ಸೂಜಿಯಿಂದ ಆ ಚಿತ್ರದ ಮೇಲೆ ಗೆರೆ ಎಳೆದಂತೆ ಬರೆಯುತ್ತಾ ಹೋಗುತ್ತಾರೆ. ಹೀಗೆ ಹಚ್ಚೆ ಹಾಕುವಾಗ ಹಾಡುವ ಪದ್ಧತಿಯೂ ಕೆಲವೆಡೆ ಇದೆ. ಕುರುಂಬ ಮಹಿಳೆಯರು ಹೆಚ್ಚಾಗಿ ಹಣೆಗೇ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಕೆಲವರು ಹಣೆಯಿಡೀ ಒಂದು ಬದಿಯಿಂದ ಮತ್ತೊಂದು ಬದಿಯವರೆಗೆ ಸೂರ್ಯ, ಚಂದ್ರ, ಕ ಒನಕೆ ಇತ್ಯಾದಿಗಳನ್ನೂ ಹಲವಾರು ಬಿಂದುಗಳ ಆಕೃತಿಯ ಚಿತ್ರಗಳನ್ನೂ ಬಿಡಿಸುತ್ತಿದ್ದರು. ಕೆಲವರು ಇವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಹಾಕಿಸಿಕೊಳ್ಳುವುದೂ ಇತ್ತು.

ಶತ್ರುಭಯದಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೂ, ಸತ್ತ ನಂತರದ ಸ್ವರ್ಗಪ್ರಾಪ್ತಿಗಾಗಿಯೂ ‘ಪಚ್ಚಕುತ್ತು’ ಅಗತ್ಯ ಎಂಬ ನಂಬಿಕೆ ಬುಡಕಟ್ಟು ಜನಾಂಗದವರಲ್ಲಿ ಸಾಮಾನ್ಯವಾಗಿತ್ತು. ಗಂಡ ಸತ್ತಾಗ ವಿಧವೆಯರಿಗೆ ತಮ್ಮ ಮೈಮೇಲಿನ ಆಭರಣಗಳನ್ನೆಲ್ಲಾ ಕಳಚಿಡಬೇಕಾಗಿ ಬರುವಾಗ ಈ ಹೆಚ್ಚೆಗಳು ಸಹಜ ಅಲಂಕಾರಗಳಾಗಿ ಅವರ ಮೈಮೇಲಿರುತ್ತವೆ. ಹೀಗಾಗಿಯೇ ಹಚ್ಚೆ ಹಾಕಿಸಿಕೊಳ್ಳದಿದ್ದರೆ ಮೋಕ್ಷ ಸಿಗಲಾಗದು ಎಂಬ ನಂಬಿಕೆ ವೇಟ್ಟಕುರುಮ ಜನಾಂಗದವರಲ್ಲಿದೆ. ವಯನಾಡಿನ ಕಾಟ್ಟುನಾಯಕ ಬುಡಕಟ್ಟು ವರ್ಗದವರಲ್ಲಿ ಹಚ್ಚೆ ಹಾಕಿಸಿಕೊಳ್ಳದ ಮಹಿಳೆಯರನ್ನು ಕೀಳಾಗಿ ಕಾಣಲಾಗುತ್ತದೆಯಂತೆ. ಹಚ್ಚೆ ಹಾಕಿಸಿಕೊಳ್ಳದವರನ್ನು ಪರಲೋಕದಲ್ಲಿ ಪ್ರೇತಾತ್ಮಗಳು ಹಾವಿನ ಮುಳ್ಳಿನಿಂದ ಚುಚ್ಚುವರು ಎಂಬ ನಂಬಿಕೆ ಪಣಿಯರ್ ಎಂಬ ವಿಭಾಗದಲ್ಲಿ ವರಲ್ಲಿದೆಯಂತೆ!

ಬದುಕಿನ ಅನೇಕ ಪ್ರತಿಕೂಲ ಅವಸ್ಥೆಗಳನ್ನು ಎದುರಿಸಲು ಹಚ್ಚೆ ಸಹಾಯಮಾಡುವುದೆಂಬ ನಂಬಿಕೆ ಬುಡಕಟ್ಟು ಜನಾಂಗದವರಲ್ಲಿದೆ. ಹೆರಿಗೆಯ ನಂತರ ಬಾಣಂತಿಗೆ ರಕ್ತಹೀನತೆಯ ಜಾಡ್ಯ ಅನುಭವವಾದರೆ, ಎರಡೂ ಕೈಗಳಿಗೂ ಹಚ್ಚೆಹಾಕಿಸಿಕೊಂಡ ಮಹಿಳೆಯ ಆರೈಕೆ ಸಿಕ್ಕರೆ ಆ ಬಾಣಂತಿಯು ಶೀಘ್ರವಾಗಿ ಗುಣಮುಖಳಾಗುವಳು ಎಂಬ ನಂಬಿಕೆಯಿದೆ. ಹೊಲಗಳಲ್ಲಿ ಬತ್ತದ ಬೇಸಾಯ ಮಾಡುವಾಗ, ನೇಜಿ ನೆಡುವ ಕೈಗಳಿಗೆ ಮೊದಲಾದ ಕಾಡುತ್ಪತ್ತಿಗಳನ್ನು ಸಂಗ್ರಹಿಸಲು ದಟ್ಟ ಅರಣ್ಯದೊಳಕ್ಕೆ ತೆರಳುವ ಬುಡಕಟ್ಟು ಜನಾಂಗದವರಿಗೆ ಪ್ರಾಕೃತಿಕ ಏರುಪೇರುಗಳಿಂದುಂಟಾಗುವ ಹವಾಮಾನ ಸಂಬಂಧೀ ಅನಾರೋಗ್ಯಗಳು ಉಂಟಾಗದಂತೆ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಹಚ್ಚೆಗಿದೆ ಎಂಬ ನಂಬಿಕೆ ಸಾಮಾನ್ಯವಾಗಿತ್ತು. ವನದೇವತೆಗಳ ಚಿತ್ರವನ್ನೇ ಮೈಮೇಳೆ ಹೆಚ್ಚೆಹಾಕಿಸಿಕೊಂಡರೆ ಆ ದೇವತೆಗಳು ಎಲ್ಲಾ ಬಗೆಯ ಆಪತ್ತುಗಳಿಂದಲೂ ಅವರನ್ನು ರಕ್ಷಿಸುವರು ಎಂದು ಅವರು ನಂಬುತ್ತಿದ್ದರು. ಕಾಡಿನಲ್ಲಿ ವಿಷಜಂತುಗಳು ಕಡಿಯದಿರಲೆಂದು ತಮ್ಮ ತೋಳುಗಳಿಗೆ ಹಾವು, ಚೇಳು ಮುಂತಾದವುಗಳ ಚಿತ್ರಗಳನ್ನೂ ಹಜ್ಜೆಹಾಕಿಸಿಕೊಳ್ಳುತ್ತಿದ್ದರು. ಭೂತಪ್ರೇತಗಳ ಉಪದ್ರವ ತಡೆಯುವುದಕ್ಕಾಗಿಯೂ ಮೈಮೇಲೆ ಹಚ್ಚಿ ಹಾಕಿಸಿಕೊಳ್ಳುವುದಿದೆ.

ಹೀಗೆ, ಬುಡಕಟ್ಟು ಜನಾಂಗದವರಲ್ಲಿ ಅಲಂಕಾರದ ಭಾಗವಾಗಿಯೂ ಸಾಂಪ್ರದಾಯಿಕ ಆಚರಣೆಗಳ ಭಾಗವಾಗಿಯೂ ನಡೆಯುತ್ತಿದ್ದ ‘ಪಚ್ಚಕುತ್ತು’ (ಹಚ್ಚೆ) ಇಂದು ತೀರಾ ವಿರಳವಾಗುತ್ತಿದೆ. ವಯನಾಡ್, ಪಾಲಕ್ಕಾಡ್, ಇಡುಕ್ಕಿ ಜಿಲ್ಲೆಗಳಲ್ಲಿ ಪಾರಂಪರಿಕವಾಗಿ ಹಚ್ಚೆಹಾಕುವ ವಿಧಾನ ಮತ್ತು ಸಾಮರ್ಥ್ಯಗಳು ಸಿದ್ಧಿಸಿದ್ದ ಮಹಿಳೆಯರು ಇಂದಿಲ್ಲ. ಹೊಸ ನಾಗರಿಕತೆಯೊಂದಿಗೆ ಅವರಿಗಂಟಾದ ಸಂಪರ್ಕದಿಂದಾಗಿ ಅವರಲ್ಲೂ ಆಧುನಿಕತೆಯ ಪ್ರಭಾವವು ಬೆಳೆದುದರಿಂದಲೇ ಹಚ್ಚೆಯಂತಹ ಗ್ರಾಮೀಣ ಪದ್ಧತಿಯು ಕಣ್ಮರೆಯಾಗಲು ಪ್ರಮುಖ ಕಾರಣವಾಗಿದೆ. ಹಿಂದೆಲ್ಲಾ ಸಂಪ್ರದಾಯದ ಭಾಗವಾಗಿಯೋ, ಸೌಂದರ್ಯವರ್ಧನೆಯ ಮಾನದಂಡದಿಂದಲೋ ಗುರುತಿಸಲ್ಪಡುತ್ತಿದ್ದ ‘ಪಚ್ಚಕುತ್ತ್’ ಎಂಬ ಶರೀರ ಚಿತ್ರಕಲೆಯು ಇಂದು ಕೇರಳದ ಬುಡಕಟ್ಟು ಜನಾಂಗದ ಮುದುಕಿಯರ ದೇಹದಲ್ಲಿ ಮೈಬರಹವಾಗಿ ಮಾತ್ರ ಉಳಿದುಕೊಂಡಿದೆ.

ಪಿ.ವಿ.ಎಂ. ಅನುವಾದ ವಿ.ಸಿ.

 

ಪಡಯಣಿ ಪಡಯಣಿ ಕೇರಳದ ಒಂದು ಆರಾಧನ ರಂಗಕಲೆಯಾಗಿದೆ. ದ್ರಾವಿಡ ಕಲಾರೂಪವಾದ ಪಡಯಣಿಯಲ್ಲಿ ನೃತ್ಯ ಸಂಗೀತ ಚಿತ್ರಕಲೆಗಳು ಒಂದಾಗಿವೆ. ಬಡವ ಬಲ್ಲಿದರೆನ್ನುವ ಭೇದವಿಲ್ಲದೆ ಎಲ್ಲ ಜಾತಿ ಸಮುದಾಯಗಲು ಭಾಗವಹಿಸುವ ಕಲೆಯಾಗಿದೆ. ಪ್ರಾಚೀನ ಕಾಲದ ಜನರ ಕಲಾಭಿರುಚಿ ಹಾಗೂ ದೈವಭಕ್ತಿಯ ಅಗಾಧತೆಯನ್ನು ಈ ಕಲೆಯಲ್ಲಿ ಕಾಣಬಹುದು. ಪ್ರಾಚೀನ ಕಾಲದ ಮಾನವ ಭೂಮಿ ಹಾಗೂ ಪ್ರಕೃತಿಯೊಂದಿಗೆ ಕಂಡುಕೊಂಡ ಸಾಮರಸ್ಯದ ಬದುಕಿನ ಚಿತ್ರವನ್ನು ಈ ಕಲೆಯನ್ನು ಹಿನ್ನೆಲೆಯಲ್ಲಿ ಪರಿಭಾವಿಸಬಹುದು.

ಆರಾಧನೆ: ಭೂಮಿತಾಯಿ ಪುಷ್ಪವತಿಯಾಗುವ ಮೇಷಮಾಸದ ವಿಷು ಹಬ್ಬದ ಕಾಲದಲ್ಲಿ ಪಡಯಣಿ ಮೇಳವು ನಡೆಯುತ್ತದೆ. ಪ್ರಕೃತಿಯ ವಿಕೋಪಗಳು, ಭಯ ಮತ್ತು ಆತಂಕಗಳು, ಪ್ರಕೃತಿಯ ಸೌಮ್ಯಮುಖ, ದೇವತಾಸಂತುಷ್ಟಿ, ಸೌಂದರ್ಯ ಕಲ್ಪನೆಗಳು, ತತ್ವಚಿಂತನೆಗಳು ಮೊದಲಾದ ಸಂಗತಿಗಳು ಪಡಯಣಿ ಹಾಡುಗಳ ಮುಖ್ಯ ವಿಷಯಗಳಾಗಿವೆ. ಫಲವಂತಿಕೆಯ ಆಚರಣೆಯ ಅಂಗವಾಗಿ ಕಾಳಿಯ ಆರಾಧನೆಯನ್ನು ನಡೆಸುವುದರೊಂದಿಗೆ ಪಡಯಣಿ ಕೋಲಗಳನ್ನು ಏರ್ಪಡಿಸಿ ಸಮೃದ್ಧಿಯನ್ನು ಬಯಸುತ್ತಿದ್ದರು. ಪ್ರಾಚೀನ ಕಾಲದಲ್ಲಿ ಬೆಳೆಯ ಕೊಯ್ಲು ಸಂದರ್ಭದಲ್ಲಿ ದೇವತಾ ಪ್ರೀತಿಗಾಗಿ ಕೋಲಗಳನ್ನು ಕಟ್ಟಿ ಆಡುತ್ತಿದ್ದರು. ಇದುವೇ ಪಡಯಣಿ ಕೋಲಗಳ ಆರಂಭವಾಗಿರಬೇಕು.

ಐತಿಹ್ಯ: ಭದ್ರಕಾಳಿ ದಾರಿಕಾಸುರನನ್ನು ನಿಗ್ರಹಿಸಿದ ಪ್ರಸಿದ್ಧವಾದ ಪುರಾಣಕಥೆಯು ಪಡಯಣಿಗೆ ಹಿನ್ನೆಲೆಯಾಗಿದೆ. ಪುರುಷನಿಂದ ಸಾವಿಲ್ಲ ಎಂಬ ವರಬಲದಿಂದ ಮೆರೆಯುತ್ತಿದ್ದ ದುಷ್ಟನಾದ ದಾರಿಕಾಸುರನನ್ನು ಶಿವನ ಮೂರನೇ ಕಣ್ಣಿನಿಂದ ಹುಟ್ಟಿಬಂದ ಭದ್ರಕಾಳಿಯು ಸಹಕರಿಸುತ್ತಾಳೆ. ದಾರಿಕಾಸುರನನ್ನು ಕೊಂದ ಕಾಳಿಯ ಕೋಪವನ್ನು ಶಮನಗೊಳಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆಗ ಶಿವ ಹಾಗೂ ಅವನು ಭೂತಗಣಗಳು ವಿವಿಧ ವೇಷಗಳನ್ನು ಧರಿಸಿ, ತಾಳಮೇಳಗಳೊಂದಿಗೆ ಕುಣಿದರೆಂದೂ, ಇದನ್ನು ಕಂಡ ಕಾಳಿಯ ಕೋಪ ಶಮನಗೊಂಡಿತೆಂದೂ, ಅದರ ನೆನಪಿಗಾಗಿ ಪಡಯಣಿ ಕೋಲಗಳನ್ನು ನಡೆಸುವುದೆಂದೂ ಐತಿಹ್ಯ.

ಪಡಯಣಿ ಇಂದು: ಮಧ್ಯ ತಿರುವಿದಾಂಕೂರಿನ ಕೆಲವು ದೇವಿ ಪಡಯಣಿಮೇಳ ನಡೆಯುತ್ತಿತ್ತಂತೆ. ವರ್ತಮಾನ ಕಾಲದಲ್ಲಿ ಏಳರಿಂದ ಹತ್ತು ದಿವಸಗಳ ಪಡಯಣಿ ನಡೆಯುವುದು. ವಿಷು ದಿವಸ ಕೊನೆಗೊಳ್ಳುವ ಏಳು ದಿವಸದ ಪಡಯಣಿ ಏಳುಮಾಟೂರು ಪನಮಟ್ಟಂ ಕಾವಿನಲ್ಲಿ ಜರುಗುತ್ತದೆ. ಕಡಮನಿಟ್ಟ ಕಾವಿನಲ್ಲಿ ವಿಷುವಿನಿಂದ ಆರಂಭಗೊಂಡು ಹತ್ತುದಿವಸಗಳ ಕಾಲ ಪಡಯಣಿಕೋಲ ಜರುಗುವುದು, ಚೂಟುವೆಪ್ಸ್‌, ತಪ್ಪುಕೈಮಣಿ, ಗಣಪತಿಕೋಲಂ, ಪಂಚಕೋಲಂ, ಅಡವಿ, ಇಡಪಯಣಿ, ನಿರ್ತುಪಡಯಣಿ ಹೀಗೆ ಏಳು ದಿವಸಗಳನ್ನು ವಿಭಜಿಸುತ್ತಾರೆ. ಕಣಿಯಾನ್, ಪರದೇಶಿ, ಶರ್ಕರಕುಡಕ್ಕಾರನ್, ಅಂತೋನಿ, ಪಟ್ಟರ್, ನಂಬೂರಿಶ್ಯನ್, ಅವುಗಳ ಹಾಸ್ಯ ಸಂವಾದಗಳು ಪಡಯಣಿ ಪ್ರದರ್ಶನಗಳಲ್ಲಿವೆ.

ದೇವಿಯ ಕೃಪೆ, ಇಷ್ಟಕಾರ್ಯಸಿದ್ಧಿ ಹಾಗೂ ರೋಗನಿವಾರಣೆಗಾಗಿ ಕೋಲಂ ತುಳ್ಳಲ್ ನಡೆಸುವರು. ಪಡಯಣಿಯಲ್ಲಿ ಪಿಶಾಚಿ, ಯಕ್ಷಿ, ಪಕ್ಷಿ, ಮರುತ, ಮಾಡನ್, ಭೈರವಿ, ಕಾಲನ್ ಮೊದಲಾದ ಏಳು ಮುಖ್ಯ ಕೋಲಗಳಿವೆ. ಪ್ರತಿಯೊಂದು ಕೋಲದ ಕುಣಿತದ ಹಿಂದೆ ನಿರ್ದಿಷ್ಟ ಫಲಸಿದ್ದಿಯ ಉದ್ದೇಶವಿದೆ. ಈ ಕೋಲಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಾಹಿತ್ಯ ಸಂಗ್ರಹವೂ ಇದೆ.

ವಾದ್ಯಗಳು: ಪಡಯಣಿ ವಾದ್ಯಗಳಲ್ಲಿ ಮುಖ್ಯವಾದುದು ‘ತಪ್ಪ್’ ಎಂಬ ಚರ್ಮವಾದ್ಯವಾಗಿದೆ. ಆರು ಇಂಚು ವ್ಯಾಸ ಹಾಗೂ ಮೂರು ಇಂಚು ದಪ್ಪವಿರುವ ವೃತ್ತಾಕಾರದ ಮರದ ಬಳೆಗೆ ದನದ ಚರ್ಮವನ್ನು ಬಿಗಿದು ‘ತಪ್ಪ್’ ತಯಾರಿಸುತ್ತಾರೆ. ಸ್ವಲ್ಪ ಬಿಸಿ ಮಾಡಿ ತಾಳಕ್ಕನುಸಾರವಾಗಿ ಬಡಿದರೆ ಇದರಿಂದ ಶುದ್ಧ ಹಾಗೂ ಮಧುರವಾದ ನಾದವು ಹೊರಹೊಮ್ಮುವುದು, ತಗಿಲ್, ಮದ್ದಳೆ, ಕೈಮಣಿ, ಉಡುಕ್ಕ್, ಚೆಂಡೆ ಮೊದಲಾದುವು ಪಡಯಣಿಗೆ ಬಳಸುವ ಇತರ ವಾದ್ಯಗಳು.

ಕೋಲಂ ಬರವಣಿಗೆ: ಹಸಿ ಹಾಳೆಯಲ್ಲಿ ಕೋಲಂ ರೂಪಗಳನ್ನು ಬರೆಯುತ್ತಾರೆ. ತೆಂಗಿನಗರಿಯ ಕಡ್ಡಿಯನ್ನು ಚೂಪಾಗಿಸಿ ಚಿತ್ರ ಬರೆಯಲು ಬಳಸುವರು. ಹಸಿರು, ಕೆಂಪು, ಕಪ್ಪು, ಹಳದಿ ಮತ್ತು ಬಿಳಿ ಬಣ್ಣಗಳನ್ನು ಇದಕ್ಕಾಗಿ ಬಳಸುವರು. ಹಾಳೆಯ ಹಸಿರು ಭಾಗವನ್ನು ಕೆತ್ತದೆ ಹಸಿರನ್ನೂ, ಕೆತ್ತಿ ಬಿಳಿ ಬಣ್ಣವನ್ನೂ ಸೃಷ್ಟಿಸುವರು. ಹಳದಿ ಬಣ್ಣಕ್ಕೆ ಅರಸಿನವನ್ನೂ, ಕೆಂಪುಬಣ್ಣಕ್ಕೆ ಕೆಂಪು ಕಲ್ಲಿನ ಪುಡಿಯನ್ನೂ, ಕಪ್ಪು ಬಣ್ಣಕೆ ಮಸಿಯನ್ನೂ ಬಲಸುವರು. ತೆಂಗಿನ ಮರದ ಹಾಳೆಯನ್ನು ನಿರ್ದಿಷ್ಟ ಆಕಾರದಲ್ಲಿ ಕತ್ತರಿಸಿ ಚಿತ್ರವನ್ನು ಬರೆದು, ಹಲವು ಹಾಳೆಗಳನ್ನು ತೆಂಗಿನ ಕಡ್ಡಿಯಿಂದ ಜೋಡಿಸಿ, ಕಂಗಿನ ಮರದ ತುಂಡಿಗೆ ಕಟ್ಟಿ ಬೃಹತ್ ಕೋಲರೂಪಗಳನ್ನು ತಯಾರಿಸುವರು. ಕೋಲಂ ಆರಂಭವಾಗುವಾಗ ಆಯಾ ದೈವಗಳು ಕೋಲಗಳಲ್ಲಿ ಆವಾಹನೆಗೊಂಡು ಜನರ ಅಭೀಷ್ಟೆಗಳನ್ನು ನೆರವೇರಿಸುವುದೆಂದು ನಂಬಿಕೆ. ಆದುದರಿಂದ ಒಮ್ಮೆ ಕುಣಿಯಲು ಕಟ್ಟಿದ ಕೋಲರೂಪವನ್ನು ಮರಳಿ ಬಳಸುವುದಿಲ್ಲ. ಕೋಲತುಳ್ಳಲ್ ಕಳೆದು ಅವುಗಳನ್ನು ದೇವಸ್ಥಾನದ ಪಕ್ಕದಲ್ಲಿರುವ ಆಲ ಅಥವಾ ಸಂಪಗೆ ಮರದಲ್ಲಿ ತೂಗುತ್ತಾರೆ. ಒಂದು ಹಾಳೆಯಿಂದ ಹಿಡಿದು ಸಾವಿರದ ಒಂದು ಹಾಳೆಯವರೆಗೆ ಬಳಸುವ ಕೋಲರೂಪಗಳಿವೆ. ಭೈರವಿ ಕೋಲವು ಸಾವಿರದೊಂದು ಹಾಳೆಗಳಿಂದ ನಿರ್ಮಿತವಾಗುವುದು. ಕೋಲಧಾರಿ ತಲೆಯಲ್ಲಿ ಹಾಳೆಯ ಕೋಲರೂಪವನ್ನು ಧರಿಸುವ ಜತೆಗೆ ನೆಂಜುಮೂಲ, ಅರತಾಲಿ, ತಾಲಿ, ವಟ್ಟಕಾದ್, ಕೊಂಗಾದ್, ಕುರಿ, ದಂಷ್ಟ್ರ ಮೊದಲಾದ ಪರಿಕರಗಳನ್ನು ಆಯಾ ಕೋಲಕ್ಕನುಸರಿಸಿ ಧರಿಸುವನು. ಸಾಮಾನ್ಯವಾಗಿ ಗಣಕ ಸಮುದಾಯದವರು ಕೋಲರೂಪವನ್ನು ಬರೆಯುವರು. ಕೋಲಂ ಬರವಣಿಗೆಯು ಕೇರಳದ ಚಿತ್ರಕಲೆಯ ಮೂಲಕವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಕೋಲಂ ತುಳ್ಳಲ್‌: ಕೋಲಂತುಳ್ಳಲ್ ನಡೆಸುವವರು ಪುರುಷರು ಅಥವಾ ಹುಡುಗರಾಗಿದ್ದಾರೆ. ಈ ಕುಣಿತಕ್ಕೆ ವಿಶೇಷ ತರಬೇತಿ ಹಾಗೂ ಪರಿಶ್ರಮ ಅಗತ್ಯವಾಗಿದೆ. ಕೋಲಂ ತುಳ್ಳಲ್‌ನಲ್ಲಿ ಭಾಗವಹಿಸುವವರು ವ್ರತಾಚರಣೆಯಲ್ಲಿರುತ್ತಾರೆ.

ದೇವಸ್ಥಾನದ ಮುಂಭಾಗದಲ್ಲಿ ವೃತ್ತಾಕಾರದ ಅಂಗಣದಲ್ಲಿ ಭಕ್ತರ ನಡುವೆ ಕೋಲಂತುಳ್ಳಲ್ ನಡೆಯುವುದು. ಪಡಯಣಿಯಲ್ಲಿ ಕೋಲಧಾರಿಯಂತೆ ಪ್ರೇಕ್ಷಕರೂ ಮುಖ್ಯರಾಗುವರು. ಕೇರಳದ ನಾಟಕ ರಂಗಭೂಮಿಗೆ ಪಡಯಣಿ ಮೂಲವಾಗಿರಬೇಕು. ದೇವಿಯನ್ನು ಅಗ್ನಿಯಲ್ಲಿ ಆವಾಹಿಸಿ ಕರೆದು, ತುಳ್ಳಲ್ ಆರಂಭವಾಗುತ್ತದೆ. ಹಾಡು ಮುಗಿಯುತ್ತಿರುವಂತೆ ಕೋಲಧಾರಿ ಆವೇಶದಿಂದ ಕುಣಿದು ಕಳದಿಂದ ನಿರ್ಗಮಿಸುವನು.

ಕೋಲಪಾಟುಗಳು: ತಮಿಳುಮಿಶ್ರಿತ ಮಧ್ಯಕಾಲೀನ ಮಲಯಾಳ ಭಾಷೆಯು ಕೋಲಪಾಟುಗಳಲ್ಲಿವೆ. ಕಾಲಕ್ಕೆ ಹೊಂದಿಕೊಂಡು ಈ ಹಾಡುಗಳಲ್ಲಿ ಪ್ರಕ್ಷೇಪಗಳೂ, ಪರಿಷ್ಕಾರಗಳೂ ಆಗಿವೆ. ಮೌಖಿಕ ಸಾಹಿತ್ಯವು ಇತ್ತೀಚೆಗಷ್ಟೇ ಬರಹಕ್ಕಿಳಿದಿದೆ. ಆಧುನಿಕ ಕಾಲದಲ್ಲಿ ರಚಿತವಾದ ಹಾಡುಗಳೂ ಇವುಗಳಲ್ಲಿ ಸೇರಿಕೊಂಡಿವೆ. ಅತ್ಯಂತ ಹೆಚ್ಚು ಹಾಡುಗಳು ಭೈರವಿಕೋಲಕ್ಕು, ಎರಡನೇ ಸ್ಥಾನ ಕಾಲನ್ ಕೋಲಕ್ಕೂ ಸೇರಿದ್ದಾಗಿದೆ.

ಇ.ಕೆ.ಜಿ. ಅನುವಾದ ಎನ್.ಎಸ್.