ಪರಯಿಪೆಟ್ಟ ಪಂದಿರಿಕುಲಂ ಮಲಯಾಳಂನ ಗದ್ಯಕಥಾನಕಗಳಲ್ಲಿ ಪರಯಿಪೆಟ್ಟ ಪಂದಿರಿಕುಲಂ(ಪರಯತಿ ಹೆತ್ತ ಹನ್ನೆರಡು ಕುಲಗಳು) ಒಂದು. ಅದರ ಕುರಿತಾದ ಉತ್ಪತ್ತಿ ಪುರಾಣವು ಕೇರಳಾದ್ಯಂತ ಪ್ರಚಾರದಲ್ಲಿದ್ದು ಅದು ಈ ಕೆಳಗಿನಂತಿದೆ-

ಇತಿಹಾಸ ಪ್ರಸಿದ್ಧನಾದ ಗೋವಿಂದಸ್ವಾಮಿಯ ಮಗನೂ ವಿಕ್ರಮಾದಿತ್ಯನ ಸಭಾಸದನೂ ಜ್ಯೋತಿಶ್ಯಾಸ್ತ್ರ ಗ್ರಂಥಕರ್ತನೂ ಸರ್ವವಿದ್ಯಾಪಾರಂಗತನೂ ಆದ ವರರುಚಿಯೊಡನೆ ಒಮ್ಮೆ ಚಕ್ರವರ್ತಿಯು ರಾಮಾಯಣದ ಪ್ರಧಾನ ವಾಕ್ಯ ಯಾವುದು ಎಂದು ಕೇಳಿದ. ಉತ್ತರ ತಿಳಿದು ಹೇಳಲು ನಲುವತ್ತೊಂದು ದಿನದ ಕಾಲಾವಧಿಯನ್ನೂ ಕೊಟ್ಟ. ನಲವತ್ತು ದಿನಗಳು ಕಳೆದರೂ ಉತ್ತರ ಗೊತ್ತಾಗದ ವರರುಚಿಯು ಆಲದ ಮರದ ಬುಡದಲ್ಲಿ ಪ್ರಾರ್ಥನೆ ಮಾಡಿ ಮಲಗಿದ. ಮರದಲ್ಲಿ ವಾಸವಾಗಿದ್ದ ದೇವತೆಗಳು ‘ಪರಯನ ಮನೆಯಲ್ಲಿ ಹೆಣ್ಣುಮಗು ಹುಟ್ಟಿದೆ. ಅವಳು ಮಾಂಸಾಹಾರಿ ಎಂದು ತಿಳಿಯದೆ ವರರುಚಿ ಅವಳನ್ನು ಮದುವೆಯಾಗುತ್ತಾನೆ’ ಎಂದು ಪರಸ್ಪರ ಮಾತನಾಡುತ್ತಿದ್ದುದನ್ನು ಕೇಳಿ ಆತ ದುಃಖಿತನಾದರೂ ಹುಡುಕುತ್ತಿದ್ದ ಉತ್ತರ ದೊರೆತ ಸಂತೋಷದಿಂದ ಅರಮನೆಗೆ ಹೋದ. ಪರಯನ ಗುಡಿಸಲಲ್ಲಿ ಹುಟ್ಟಿದ ಮಗು ರಾಜ್ಯಕ್ಕೆ ನಾಶವನ್ನು ತಂದೀತು ಎಂಬುದನ್ನು ತಿಳಿದುಕೊಂಡು ರಾಜಾಜ್ಞೆಗನುಸಾರವಾಗಿ ಬಾಳೆದಿಂಡುಗಳಿಂದ ತೆಪ್ಪವನ್ನು ನಿರ್ಮಿಸಿ ಮಗುವಿನ ತಲೆಯಲ್ಲಿ ಉರಿಸಿದ ದೀವಟಿಗೆ ಕಟ್ಟಿ ತೆಪ್ಪವನ್ನು ನದಿಯಲ್ಲಿ ತೇಲಿಬಿಡಲಾಯಿತು.

ಬಹಳ ಕಾಲ ಕಳೆಯಿತು. ಪ್ರಯಾಣದ ಮಧ್ಯೆ ಒಂದು ಬ್ರಾಹ್ಮಣಗೃಹಕ್ಕೆ ಹೋದ ವರರುಚಿ ಅಲ್ಲಿ ಬುದ್ಧಿವಂತೆಯಾದ ಒಬ್ಬ ಕನ್ನಿಕೆಯನ್ನು ವಿವಾಹವಾದ. ಬಳಿಕ ಅವಳು ಪರಯಗುಡಿಸಲಿನಲ್ಲಿ ಮಗುವಾಗಿದ್ದವಳೆಂಬುದು ತಿಳಿದು ಬಂತು. ಬಾಕಿ ಉಳಿದ ಕಾಲವನ್ನು ದಂಪತಿಗಳು ದೇಶಸಂಚಾರಕ್ಕೆ ಮೀಸಲಿಟ್ಟರು. ದಾರಿಯ ಮಧ್ಯೆ ಗರ್ಭಿಣಿಯಾದ ಪರಯಿತಿ ಮಗುವನ್ನು ಹೆತ್ತಳು. ‘ಬಾಯಿ ಸೀಳಿದ ದೈವ ಉಪವಾಸ ಕೆಡವದು’ ಎಂಬುದು ಪರರುಚಿಯ ಅಭಿಪ್ರಾಯ. ಅಂತೆಯೇ ಹನ್ನೊಂದು ಮಕ್ಕಳನ್ನೂ ಹೆತ್ತ ಕಡೆಯಲ್ಲೇ ಬಿಟ್ಟು ಬಿಡಲಾಯಿತು. ಹನ್ನೆರಡನೆಯ ಮಗುವನ್ನು ಸಾಕಲು ಬಯಸಿದ ಪರಯಿತಿ ‘ಮಗುವಿಗೆ ಬಾಯಿ ಇಲ್ಲ’ ಎಂದಳು. ಆ ಮಗುವಿಗೆ ಬಾಯಿ ಇಲ್ಲವಾದ್ದರಿಂದ ವರರುಚಿ ಮಗುವನ್ನು ವಾಯಲ್ಲಾಕುನ್ನಿಲಪ್ಪ (ಬಾಯಿಲ್ಲದ ಗುಡ್ಡೆಯಪ್ಪ)ನಾಗಿ ಪ್ರತಿಷ್ಠೆ ಮಾಡಿದ. ಉಳಿದ ಹನ್ನೊಂದು ಮಕ್ಕಳನ್ನೂ ಬ್ರಾಹ್ಮಣನಿಂದ ತೊಡಗಿ ಅದರ ಕೆಳಗಿನ ಹನ್ನೊಂದು ಜಾತಿಗೆ ಸಂಬಂಧಿಸಿದವರು ತೆಗೆದುಕೊಂಡು ಸಲಹಿದರು. ತಂದೆ ತಾಯ್ಗಳ ಶ್ರಾದ್ಧಕ್ಕೆ ಇವರು ಅಗ್ನಿಹೋತ್ರಿಯ ಮನೆಯಲ್ಲಿ ಒಟ್ಟಾಗುತ್ತಿದ್ದರು. ಇದರಲ್ಲಿ ಶ್ರಾದ್ಧಕ್ಕಾಗಿ ಒಟ್ಟಾದ ಉಳಿದ ಹತ್ತು ಜನರೂ ನಿದ್ರಿಸುತ್ತಿದ್ದ ಕೋಣೆಗಳಿಗೆ ಸ್ವಂತ ಮಡದಿಯನ್ನೂ ಮಡಿವಂತ ಬ್ರಾಹ್ಮಣರನ್ನೂ ಕರೆದುಕೊಂಡು ಅಗ್ನಿಹೋತ್ರಿ ಹೋದ. ಅಗ್ನಿಹೋತ್ರಿಯನ್ನು ಮುಟ್ಟಿಕೊಂಡೇ ಆ ಹತ್ತು ಜನರನ್ನೂ ನೋಡಲು ಆತ ಹೇಳಿದಾಗ ಆ ಹತ್ತು ಜನರೂ ಸಾಕ್ಷಾತ್ ವಿಷ್ಣು ದೇವರ ರೂಪದಲ್ಲೇ ಇವರಿಗೆ ಕಂಡರು.

ಈ ಕಥೆಯಲ್ಲಿ ಬರುವ ಜಾಗಗಳು, ಜಾತಿಯ ಜನರು ಮತ್ತು ಕುಟುಂಬದವರು ಮುಂತಾದ್ದೆಲ್ಲ ಚಾರಿತ್ರಿಕ ವಾಸ್ತವಗಳಾಗಿವೆ. ಆದರೆ ವಿಭಿನ್ನ ಜಾತಿಯ ಉತ್ಪತ್ತಿಯ ಕುರಿತು-ವರರುಚಿಯು ತಂದೆ ಮತ್ತು ಪರಯಿತಿ ತಾಯಿ ಎಂಬ ವಿಚಾರವೂ ವಿಭಿನ್ನ ಸಮುದಾಯಗಳಲ್ಲಿ ಮಕ್ಕಳು ಬೆಳೆದು ಬರುವ ವಿಚಾರಗಳೂ ಕಲ್ಪನಾಪ್ರಪಂಚಕ್ಕೆ ಸೇರಿದ ಸಂಗತಿಯಾಗಿದೆ. ವರರುಚಿ ಮತ್ತು ವಿಕ್ರಮಾದಿತ್ಯರ ಕುರಿತಾದ ಐತಿಹ್ಯದ ಅಂಶವು ಕೂಡ ಕಾಲ್ಪನಿಕವಾಗಿದೆ. ಚಾರಿತ್ರಿಕ ಸತ್ಯಗಳ ಬೆಂಬಲದಿಂದ ಈ ಕಥೆಯನ್ನು ಐತಿಹ್ಯವೆಂದು ಪರಿಗಣಿಸಬಹುದು. ಜತೆಗೆ ಈ ಕೇರಳೀಯ ಸಮುದಾಯವು ಒಬ್ಬಾಕೆ ತಾಯಿ ಹೆತ್ತ ಮಕ್ಕಳಿಂದ ಉಂಟಾದುದೆಂಬುದನ್ನು ಈ ಐತಿಹ್ಯವು ಶ್ರುತ ಪಡಿಸುತ್ತದೆ.

ಬೇರೆ ಬೇರೆ ಸಮುದಾಯಗಳು ಕಾಲಕ್ರಮೇಣ ಒಂದಾಗುವ ಸನ್ನಿವೇಶ, ಅಂತೆಯೇ, ಜತೆಯಾದ ಸಮುದಾಯಗಳಲ್ಲಿ ಮೂಡಬಹುದಾದ ಬಿರುಕುಗಳು ಇವನ್ನು ಮುಂಚಿತವಾಗಿ ಕಂಡುಕೊಂಡು ಸಮುದಾಯಗಳ ಸುಸ್ಥಿತಿಗಾಗಿ ಭಾವನೆಗಳನ್ನು ಬೆರೆಸಿದ ಸಂದೇಶಗಳನ್ನು ಚಾರಿತ್ರಿಕ ತಥ್ಯಗಳೊಂದಿಗೆ ಬೆರೆಸಿ ರಸವತ್ತಾಗಿ ಕಥನಿಸುವ ಒಂದು ಉತ್ಪತ್ತಿ ಕಥೆ ಇದೆ.

ಪರಯಿತಿಯ ಮಕ್ಕಳನ್ನು ಕೇರಳದಲ್ಲಿ ಇದ್ದ ಸಮುದಾಯಗಳ ಸದ್ಯರೆಂಬಂತೆ ಪರಿಗಣಿಸಲಾಗಿದೆ. ಅಗ್ನಿಹೋತ್ರಿ, ರಜಕ, ಬಡಗಿ, ಪಾಣ, ನಾಯರ್, ವಳ್ಳೋನ್ ಮುಂತಾದವು ಸಮುದಾಯ ಸೂಚಕಗಳಾಗಿವೆ. ಕಾರೈಕಲ್ ಮಾತೆ ಕ್ಷತ್ರಿಯ ಸ್ತ್ರೀಯೆಂದೂ ಉಪ್ಪು ಕೊಟ್ಟನ್ ಮಾಪ್ಪಿಳೆಯೆಂದೂ ನಾರಣತ್ತು ಭ್ರಾಂತನ್ ಇಳೆಯದ್ (ಬ್ರಾಹ್ಮಣ) ಎಂದೂ ಅಗವೂರ್ ಚಾತ್ತನ್ ವೈಶ್ಯನೆಂದೂ ಪಾಕ್ಕನಾರ್ ಪರಯನೆಂದೂ ಪರಂಪರಾಗತ ಸಮಾಜವು ನಂಬಿಕೊಂಡಿದೆ.

ಪರಯತಿ ಹೆತ್ತ ಹನ್ನೆರಡು ಕುಲಗಳ ಸದಸ್ಯರಲ್ಲಿ ಅನೇಕರು ದಿವ್ಯವಾದ ಐತಿಹ್ಯ ಕಥನದ ಕಥಾಪಾತ್ರಗಳೂ ಆಗಿದ್ದಾರೆ. ಪೆರುಂದಚ್ಚನ್, ನಾರಣತ್ತು ಭ್ರಾಂತನ್, ಪಾಕನಾರ್, ಅಗ್ನಿಹೋತ್ರಿ, ಅಗವೂರ್ ಚಾತ್ತನ್, ಪಾಣನಾರ್ ಇವರೆಲ್ಲ ಕೇರಳದಲ್ಲಿ ಒಳ್ಳೆಯ ಪ್ರಚಾರವುಳ್ಳ ಐತಿಹ್ಯಗಳಲ್ಲಿ ಕಾಣಿಸಿಕೊಂಡು ಸುಪರಿಚಿತರಾಗಿದ್ದಾರೆ.

ಪರಯತಿ ಹೆತ್ತ ಹನ್ನೆರಡು ಕುಲಗಳ ಐತಿಹಾಸಿಕ ಅಂಶದತ್ತ ಹಲವಾರು ಸಂಶೋಧನೆಗಳು ಕೇರಳದಲ್ಲಿ ನಡೆದಿವೆ. ಐತಿಹಾಸಿಕ ಸತ್ಯದ ಹೊರತಾಗಿ, ಸಾಮಾಜಿಕ ಮನಸ್ಸಿಗೆ ರವಾನಿಸಲಿರುವ ಏಕೀಭಾವದ ಸಂದೇಶವನ್ನು ಅತ್ಯಂತ ಶಕ್ತಿಯುತವಾಗಿ ದಾಟಿಸಲು ಸಾಧ್ಯವಾಗುವ ಒಂದು ಮಾಧ್ಯಮವಾಗಿ ಈ ಕಥಾನಕ ಮತ್ತು ಅದರ ಅನುಬಂಧ ಕಥಾನಕಗಳನ್ನು ಉತ್ಪತ್ತಿ ಕಥೆಗಳೆಂಬ ನೆಲೆಯಲ್ಲಿ ಪರಿಗಣಿಸಬೇಕಾಗಿದೆ.

ಪಿ.ವಿ.ಕೆ. ಅನುವಾದ ಕೆ.ಕೆ.

 

ಪರಿಚಮುಟ್ಟು ಕಳಿ ಕೇರಳದ ಒಂದು ಕಲೆ. ಒಕ್ಕೂಟದ ಶಕ್ತಿ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ಪಂಚಮುಟ್ಟು ಕಳಿ ಕಲಾರೂಪ ಸಹಕಾರಿಯಾಗಿದೆ. ಒಂದು ದೇಶದ ಐಕ್ಯತೆಯ ಸದೃಢತೆ, ಸ್ವಾತಂತ್ರ‍್ಯ, ಸ್ನೇಹಪರತೆಯನ್ನು ಇದು ಸಾದರಪಡಿಸುತ್ತದೆ. ದೈಹಿಕ ಕಸರತ್ತಿನ ಈ ಕಲೆಯಲ್ಲಿ ಕಳರಿಪ್ಪಯಟ್ಟಿನ ಹೆಜ್ಜೆ ಹಾಗೂ ತಾಳಗಳು ಬಳಕೆಯಾಗುತ್ತವೆ. ದಲಿತ ಪರಂಪರೆ, ಕ್ರೈಸ್ತ ಪರಂಪರೆ, ಹಿಂದೂ ಪರಂಪರೆ, ಮುಸ್ಲಿಂ ಪರಂಪರೆ ಮೊದಲಾದ ವಿವಿಧ ಪರಂಪರೆಗಳ ಅಂಶಗಳು ಈ ಕಲೆಯಲ್ಲಿ ಪ್ರಕಟಗೊಳ್ಳುತ್ತವೆ. ಕಳರಿಪ್ಪಯಟ್ಟಿನ ವಿಧಾನವನ್ನೇ ಪರಿಚಮುಟ್ಟುಕಳಿಯಲ್ಲೂ ಕಾಣಬಹುದು. ದೀಪ ಹಚ್ಚುವಿಕೆ, ದೀಪಕ್ಕೆ ನಮಸ್ಕರಿಸುವುದು, ವೇದಿಕೆಗೆ ನಮಸ್ಕರಿಸುವುದು, ಗುರುದಕ್ಷಿಣೆ, ಗುರುವಂದನೆ, ಗುರುವಿನಿಂದ ಕತ್ತಿತಯನ್ನೂ ಇತರ ಸಲಕರಣೆಯನ್ನು ಸ್ವೀಕರಿಸುವುದು, ವಂದನಗೀತೆ, ಪರಿಚಮುಟ್ಟುಕಳಿ ಅವತರಣದೊಂದಿಗೆ ರಂಗಸ್ಥಳಕ್ಕೆ ನಮಸ್ಕರಿಸಿ ಪ್ರದರ್ಶನ ಮುಕ್ತಾಯಗೊಳಿಸಲಾಗುವುದು.

ವಿಷಯದ ಆಧಾರದಲ್ಲಿ ಪರಿಮುಟ್ಟು ಕಳಿ ಹಾಡುಗಳನ್ನು ಧಾರ್ಮಿಕ, ಸಾಮಾಜಿಕ, ಕ್ರೈಸ್ತ ಹಾಡುಗಳು, ವಿವಾಹ ಗೀತೆಗಳು, ವಿನೋದ, ಪ್ರಾರ್ಥನಾ ಗೀತೆಗಳು, ನೃತ್ಯ ಗೀತೆಗಳು ಇತ್ಯಾದಿಯಾಗಿ ವಿಂಗಡಿಸಲಾಗುತ್ತದೆ. ತಾಳ ಹಾಗೂ ರಾಗದಿಂದ ಸುಲಭವಾಗಿ ಹಾಡಲು ಅನುಕೂಲವಾಗುವಂತೆ ಇವುಗಳನ್ನು ರಚಿಸಲಾಗಿದೆ.

ಬಿಳಿ ಧೋತಿಯುಟ್ಟು, ಕೆಂಪು ರೇಷ್ಮೆ ಬಟ್ಟೆ ಸೊಂಟಕ್ಕೆ ಬಿಗಿದು, ತಲೆಗೆ ಕೆಂಪಗಿನ ಮುಂಡಾಸು, ಕಾಲಿಗೆ ಗೆಜ್ಜೆಕಟ್ಟಿ, ಕೈಗೆ ಕಪ್ಪು ದಾರ ಸುತ್ತಿ, ಹಣೆಗೆ ಚಂದನ ಇಟ್ಟು, ಕೊರಳಲ್ಲಿ ಹಾರ ಹಾಕಿ, ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಪರಿಚಮುಟ್ಟು ಕಳಿ ನಡೆಸಲಾಗುವುದು. ವೇಷಭೂಷಣ, ಹಾಡುಗಳಲ್ಲಿ ಪ್ರಾದೇಶಿಕತೆಯನ್ನು ಕಾಣಬಹುದು. ಕೈಮಣಿ, ಗೆಜ್ಜೆ, ಚೆಂಡೆ ಮುಂತಾದ ವಾದ್ಯೋಪಕರಣಗಳನ್ನು ಇದರಲ್ಲಿ ಬಳಸಲಾಗುವುದು.

ಕ್ರೈಸ್ತ್ರ ಸಮುದಾಯದಲ್ಲಿ ಪಂಚಮುಟ್ಟುಕಳಿ ಸುಮಾರು ಐನೂರು ವರ್ಷಗಳಿಂದ ರೂಢಿಯಲ್ಲಿದೆ. ಸುರಿಯಾನಿ ಸಮುದಾಯ ತೋಮಾಶಿಹಾನ ಆಗಮನದ ಬಗ್ಗೆಯೂ ವಿಶುದ್ಧನಿಂದ ಸ್ಥಾಪಿತವಾದ ಚರ್ಚ್‌‌ಗಳ ಬಗ್ಗೆಯೂ ಹಾಡುಗಳಲ್ಲಿ ವಿವರಗಳು ಬರುತ್ತವೆ.

ಕೋಟ್ಟಾಯಂ, ಆಲಪ್ಪುಳ, ಎರ್ನಾಕುಲಂ, ಕೊಲ್ಲಂ ಜಿಲ್ಲೆಗಳ ದಲಿತ ಸಮುದಾಯಗಳಲ್ಲಿ ಹಿಂದೂ ಪರಂಪರೆ ಕಂಡುಬರುತ್ತದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳ ಅರಯ ಸಮುದಾಯದವರೂ ಈ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಪುರಾಣೇತಿಹಾಸ ಕಥೆಗಳೂ, ದೇವಿ-ದೇವ ಸ್ತುತಿಗಳೂ ವೀರನಾಯಕ ಸ್ತುತಿಗಳೂ ಇವರ ಹಾಡುಗಳಿಗೆ ವಿಷಯಗಳಾಗಿವೆ.

ಮಲಪ್ಪುರ, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಮುಸ್ಲಿಂ ಸಂಪ್ರದಾಯದ ಪರಿಚಮುಟ್ಟುಕಳಿ ಪರಚಲಿತದಲ್ಲಿದೆ. ಕಳರಿಪ್ಪಯಟ್ಟು ಹಾಗೂ ದೈಹಿಕ ಕಸರತ್ತಿನಲ್ಲಿ ನಿಪುಣರಾದ ಇವರು ಈ ಕಲೆಯಲ್ಲಿ ಸಿದ್ಧಹಸ್ತರು. ಮುಹಮ್ಮದ್ ನಬಿ, ಇತರ ಪ್ರವಾಚಕರು, ಪುಣ್ಯ ಸ್ಥಳಗಳು ಮುಂತಾದ ವಿಷಯಗಳು ಇವರ ಹಾಡುಗಳ ವಸ್ತುಗಳಾಗಿವೆ.

ಪರಿಚಮುಟ್ಟುಕಳಿಯ ಸಾಂಘಿಕ ವ್ಯವಸ್ಥೆಯನ್ನು ಪಪುನರ್‌ಸೃಷ್ಟಿಸುತ್ತವೆ. ರಂಗದಲ್ಲಿ ಇರಿಸಲಾಗುವ ದೀಪ, ಗುರುದಕ್ಷಿಣೆ, ಗುರುವಂದನೆ,ಕತ್ತಿ ಗುರಾಣಿಯನ್ನು ನಮಸ್ಕರಿಸಿ ಸ್ವೀಕರಿಸುವುದು ಇವು ಕಳರಿಪ್ಪಯಟ್ಟು ಹಾಗೂ ಕೇರಳದ ಸಂಸ್ಕೃತಿಯ ಪ್ರತಿಫಲಗಳಾಗಿವೆ. ಕಠಿಣವಾದ ಸಮಾಜ ವಿಮರ್ಶೆ, ಸಮಾಜದ ಮನಸ್ಸುಗಳ ಕ್ರಮಬದ್ಧಗೊಳಿಸುವ ಕೆಲಸ ಇಲ್ಲಿ ನಡೆಯುತ್ತದೆ. ಕೇರಳ ಜಾನಪದ ಲೋಕದಲ್ಲಿ ಪ್ರದರ್ಶನ ಕಲೆಗಳಲ್ಲಿ ಪರಿಚಮುಟ್ಟು ಕಳಿ ಒಂದು ನೃತ್ಯ ರೂಪಕವಾಗಿದೆ. ವಿವಿಧ ಸಮುದಾಯಗಳಲ್ಲಿ ರೂಢಿಯಲ್ಲಿರುವ ಪರಿಚಮುಟ್ಟು ಕಳಿ ಕೇರಳದ ಪರಂಪರಾಗತ ಕಲೆಯೆನಿಸಿದೆ.

19_70A_DBJK-KUH

ನೃತ್ಯಗಾರರು ಬಿಳಿ ವಸ್ತ್ರವನ್ನು ಉಡುತ್ತಾರೆ. ಅಲ್ಲದೆ, ಅದರ ಮೇಲೆ ಕೆಂಪಗಿನ ಬಟ್ಟೆ ಉಟ್ಟುಕೊಳ್ಳುವರು. ಎಡಗೈಯಲ್ಲಿ ಗುರಾಣಿ, ಬಲಗೈಯಲ್ಲಿ ಕೋಲನ್ನೂ ಹಿಡಿಯುವರು. ದೀಪದ ಸುತ್ತಲೂ ಅವರ ನೃತ್ಯ ಮಾಡುವರು. ವಂದನಾಗೀತೆಯೊಂದಿಗೆ ಪ್ರದರ್ಶನ ಆರಂಭಿಸುವರು. ಮುಖ್ಯ ಗಾಯಕ (ಆಶಾನ್) ಹಾಡಿದ ನಂತರ ಉಳಿದವರು ಆತನನ್ನು ಅನುಸರಿಸಿ ಅದನ್ನು ಪುನರಾವರ್ತನೆ ಮಾಡುವರು. ಹಾಡಿನೊಂದಿಗೆ ತಾಳ ಹಾಕುತ್ತ ನೃತ್ಯ ಮಾಡುವರು. ಹಾಡಿನ ಕೊನೆಯಲ್ಲಿ ತಾಳ ಹಾಕುವರು. ವಿವಿಧ ರೀತಿಯಲ್ಲಿ ಹೆಜ್ಜೆ ಹಾಕಿ ಹಾಡಿನ ಕೊನೆಯಲ್ಲಿ ಸದ್ದು ಮಾಡುವ ತಾಳಕ್ಕೆ ತಕ್ಕಂತೆ ಕುಣಿದು ಮುಕ್ತಾಯ ಮಾಡಲಾಗುವುದು. ಎಲ್ಲ ಕಲಾರೂಪಗಳಂತೆ ಪರಿಚಮುಟ್ಟುಕಳಿಯೂ ಕಣ್ಮರೆಯಾಗುವ ಹಂತದಲ್ಲಿದೆ. ಯುವ ಜನೋತ್ಸವಗಳಲ್ಲಿ ಇದನ್ನು ಪ್ರದರ್ಶಿಸುತ್ತಿರುವುದು ಸ್ವಲ್ಪ ಮಟ್ಟಿಗೆ ಆಶಾಕಿರಣ ಮೂಡಿಸಿದಂತಾಗಿದೆ.

.ಕೆ.ಎ.ಅನುವಾದ ಬಿ.ಎಸ್.ಎಸ್.

 

ಪಾಕ್ಕನಾರ್ ತುಳ್ಳಲ್ ಸಂಕಷ್ಟವನ್ನು ದೂರ ಮಾಡುವುದಕ್ಕೋಸ್ಕರ ಮನೆ ಮನೆಗೆ ತೆರಳಿ ಪ್ರದರ್ಶನ ಮಾಡುವ ಒಂದು ಆಚರಣೆ ಪಾಕ್ಕನಾರ್ ತುಳ್ಳಲ್, ಇದನ್ನು ಸಾಂಬವ ಸಮುದಾಯದವರು ನಡೆಸುವರು. ಪಾಕ್ಕನಾರ್ ಪಾಟ್ಟು ಎಂಬುದು ಅವರ ಜನ್ಮಪುರಾಣ (ವೆಟ್ಟಿಯಾರ್ ಪ್ರೇಂನಾಥ್ ೧೯೯೪: ೬೧-೭೪). ಪರಯ ಜಾತಿಯ ಪಾಕ್ಕನಾರ್ ಜನನ ಕೇರಳದ ಐತಿಹ್ಯಗಳಲ್ಲಿ ಮಹತ್ವವಾದುದು. ಮಹಾವಿಷ್ಣು ರೋಗಪೀಡಿತನಾದಾಗ ಪಾಕ್ಕನಾರ್ ಹಾಗೂ ಪಾಕ್ಕತ್ತಿಯರು ಪರ ಹಾಗೂ ದುಡಿಯನ್ನು ಹಿಡಿದು ಮಂತ್ರವಾದ ಮಾಡಿ ಪೀಡೆಯನ್ನು ತೊಲಗಿಸುತ್ತಾರೆ. ಆ ಮೂಲಕವಾಗಿ ದೇವರಾಧನೆ, ಮಂತ್ರವಾದ, ಮೊರ ಹೆಣೆಯುವಿಕೆ ಮುಂತಾದ ಕಸುಬುಗಳಿಗೆ ಅವಕಾಶವಾಯಿತೆಂದು ಹೇಳಲಾಗುತ್ತಿದೆ.

ಪಾಕ್ಕನಾರ್ ಬಿಲ್ಲನ್ನು ಎದೆಗೆ ಒತ್ತಿ ಹಿಡಿದುಕೊಂಡು ಕಾಲಿಗೆ ಗೆಜ್ಜೆಕಟ್ಟಿ, ತಲೆಗೂದಲನ್ನು ಗಂಟು ಹಾಕಿ ಹಾಡುತ್ತ ನೃತ್ಯ ಮಾಡುತ್ತ ಮನೆ ಮನೆಗಳಿಗೆ ತೆರಳುವರು. ಪಾಕ್ಕನಾರ್ ಪಾಟ್ಟ ಪರಯ ಜನಾಂಗದವರ ಹಾಡುಗಳಿಗೆ ಉತ್ತಮ ಉದಾಹರಣೆಯಾಗಿದೆ. ಈ ಹಾಡುಗಳಲ್ಲಿ ಪರಯ ಜನಾಂಗದವರ ಉತ್ಪತ್ತಿ ಕಥೆಗಳು, ಜೀವನ ರೀತಿ, ಬೇರೆ ಜಾತಿಗಳವರೊಂದಿಗಿನ ಸ್ನೇಹ ಸಂಬಂಧ, ಸಮಾಜದ ಕುರಿತ ಅವರ ದೃಷ್ಟಿಕೋನಗಳು ಮುಂತಾದುವು ಸೇರಿಕೊಂಡಿದೆ. ಪ್ರಕೃತಿ, ಬದುಕಿನ ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವ ಈ ಜನಾಂಗದವರ ಬದುಕಿನ ಒಟ್ಟು ಚಿತ್ರಣ ಈ ಹಾಡುಗಳಲ್ಲಿವೆ. ಸುಲಲಿತವಾದ ಭಾಷೆ ಹಾಗೂ ಲಯಬದ್ಧತೆ ಈ ಹಾಡುಗಳ ವಿಶಿಷ್ಟ ಅಂಶಗಳಾಗಿವೆ. ಪಾಕ್ಕನಾರಾಟ್ಟಂ ಪರಯರು ಅವತರಿಸಿದ ಬಗ್ಗೆ ಹೇಳುವ ದೃಶ್ಯ ಕಲಾರೂಪ. ಪಾಕ್ಕನಾರ್ ತುಳ್ಳಲ್ ಪಾಕ್ಕನಾರ್ ಆಟವಾಗಿದೆ. ಇದರಲ್ಲಿ ಪಾಕ್ಕನಾರ್ ಹಾಗೂ ಪಾಕ್ಕತ್ತಿಯಾರ್‌ಗಳ ವೇಷ ಧರಿಸಿದ ಎರಡು ಕಥಾ ಪಾತ್ರಗಳಿವೆ. ಪುರುಷರೇ ಸ್ತ್ರೀವೇಷ ಹಾಕುವರು. ನಾಲ್ಕು ಮಂದಿ ವಾದ್ಯಗಾರರು ಇದರಲ್ಲಿರುತ್ತಾರೆ. ಪಾಕ್ಕನಾರ್ ಇದರ ಕಥಾನಾಯಕ. ತಲೆಯಲ್ಲಿ ವಿಚಿತ್ರ ಬಣ್ಣ ಧರಿಸಿ ಈ ಪಾತ್ರಧಾರಿಗಳು ಮನೆಗಳನ್ನು ಸಂದರ್ಶಿಸುವರು. ದೀಪ ಹಾಗೂ ಅಕ್ಕಿ ತುಂಬಿದ ನಾಳಿ(ಪಾತ್ರೆ)ಯೊಂದಿಗೆ ಮನೆಯವರು ಇವರನ್ನು ಸ್ವಾಗತಿಸುವರು. ಮನೆಗಳಿಗೆ ದೋಷ ಪರಿಹಾರ ಹಾಗೂ ಸಂಪತ್ತು ನೆಲೆ ನಿಲ್ಲಲು ಪಾಕ್ಕನಾರ್ ತುಳ್ಳಲ್ ನಡೆಸುವರು.

ಭೂಮಿಯ ಉತ್ಪತ್ತಿ ಕುರಿತ ಕಥೆಯೊಂದಿಗೆ ಪಾಟ್ಟು(ಹಾಡು) ಆರಂಭವಾಗುತ್ತದೆ. ಆದಿಯೂ ಅಂತ್ಯವೂ ಕತ್ತಲು ಬೆಲಕು ಇಲ್ಲದ ಕಾಲದಲ್ಲಿ ಅಣುವಿನ ಗಾತ್ರದ ವಸ್ತು ದಾರದಲ್ಲಿ ಬಂದು ಒಂದು ಮೊಟ್ಟೆಯಾಗಿ, ಮೊಟ್ಟೆಯೊಡೆದು ಮೇಲಿನ ಲೋಕವೂ ಕೆಳ ಲೋಕವೂ ಉಂಟಾಯಿತಾದರೂ ಕೋಟಿ ಸೂರ್ಯರೂ ಪಂಚಭೂತಗಳೂ ಒಂದಾಗಿ ಸೇರದೆ ಭೂಮಿ ರೂಪ ಪಡೆಯಲಿಲ್ಲ. ಆದರೂ ಕೊಕ್ಕು ಬಂದು, ರೆಕ್ಕೆ ಮೂಡಿ ಕೇತಕರಿ ಹಾಗೂ ನೀಲಕರಿ ಎಂಬ ಎರಡು ಹಕ್ಕಿಗಳು ಉಂಟಾದುವು. ಅವು ಮೇಲಕ್ಕೆ, ಕೆಳಕ್ಕೆ ಹಾರಾಡಿ ವಿಶ್ರಮಿಸಲು ಭೂಮಿಯಿಲ್ಲದೆ ಸಂಕಟಪಟ್ಟವು. ಆಗಸದಲ್ಲಿ ಬಹಳ ದೂರ ಹಾರಾಡಿ ಕೊನೆಗೆ ಕೆಂದಾವರೆಯ ಹಾಲ್ಗಡಲಲ್ಲಿ ಎತ್ತರವಾಗಿ ಬೆಳೆದು ನಿಂತಿದ್ದ ಹೂವಿನ ಮರದಲ್ಲಿ ಕುಳಿತು ವಿಶ್ರಮಿಸಿದವು. ಹೂಮರದಲ್ಲಿ ಜೇನುಕುಡಿದು ಆಯಾಸ ಕಳೆದ ಮೇಲೆ ಅವು ಭೂಮಿ ದೇವಿಯನ್ನು ಪ್ರಾರ್ಥಿಸಿದವು. ಭೂದೇವಿಗೆ ಆಕ್ರಂದನ ಕೇಳಿಸಿತು. ತಮಗೆ ವಾಸ ಮಾಡಲು ಭೂಮಿಯಲ್ಲದೆ, ಹಾರಾಡಿ ಕುಳಿತುಕೊಳ್ಳಲು ಮರಗಳಿಲ್ಲದೆ ತೊಂದರೆಯಾಗಿದೆ ಎಂದು ಅವು ದಯನೀಯವಾಗಿ ಹೇಳಿದುವು. ಭೂ ದೇವಿ ಮೂರು ಮಣ್ಣಿನ ಉಂಡೆಯನ್ನು ಹಕ್ಕಿಗಳಿಗೆ ನೀಡಿದಳು. ಅಷ್ಟು ಹೊತ್ತಿಗೆ ನಾಲ್ಕು ದಿಕ್ಕಿನಿಂದ ಗಾಳಿ ಬೀಸಿತು. ಗಡಗಡನೆ ಅಲುಗಾಡಿ ಭೂಮಿ ರೂಪ ಪಡೆಯಿತು. ಭೂದೇವಿ ಪ್ರತ್ಯಕ್ಷವಾದಳು.

ಕರು, ಮರ, ಪರ, ಉಡುಕ್ಕು ಮುಂತಾದ ವಾದ್ಯಗಳು ಅದೇ ರೀತಿ ಚೆಂಡೆಯನ್ನೂ ಇದರಲ್ಲಿ ಬಳಸುವರು. ಕೆಲವೆಡೆ ಮದ್ದಳೆಯನ್ನೂ ಉಪಯೋಗಿಸುವರು. ಉಳಿದ ಜಿಲ್ಲೆಗಳನ್ನು ಗಮನಿಸಿದರೆ, ಪತ್ತನಂತಿಟ್ಟ ಜಿಲ್ಲೆಯಲ್ಲಿ ಪಾಕ್ಕನಾರ್ ತುಳ್ಳಲ್ ಹಾಗೂ ಹಾಡು ಇನ್ನೂ ರೂಢಿಯಲ್ಲಿದೆ.

ಈ ಆಚರಣಾತ್ಮಕ ಕಲಾರೂಪ ಬಹುತೇಕ ಮರೆಯಾಗುವ ಹಂತದಲ್ಲಿದೆ. ಓಣಂ, ವಿಷು ಮುಂತಾದ ಹಬ್ಬಗಳಲ್ಲಿ ಇದರ ಪ್ರದರ್ಶನ ನಡೆಯುತ್ತದೆ.

.ಕೆ.ಎ. ಅನುವಾದ ಬಿ.ಎಸ್.ಎಸ್.

 

ಪಾಣಾರಾಟ ಕರಾವಳಿ ಕರ್ನಾಟಕದ ಭಾಗದಲ್ಲಿರುವ ಭೂತಾರಾಧನೆ. ಕರಾವಳಿ ಕರ್ನಾಟಕವೆಂದರೆ ಥಟ್ಟನೆ ನೆನಪಿಗೆ ಬರುವುದು ಯಕ್ಷಗಾನ, ಇನ್ನೊಂದು ಅದರ ದಾಯಾದಿ ಕಲೆ ಭೂತಾರಾಧನೆ. ತುಳು ಸಂಪ್ರದಾಯದ ಭೂತ/ದೈವ ಪ್ರಪಂಚದ ಸ್ವರೂಪ, ವೈವಿಧ್ಯ, ಆಶಯಗಳನ್ನು ಕುರಿತಂತೆ ಬಹುಮುಖೀ ಅಧ್ಯಯನಗಳು ಕಳೆದ ಶತಮಾಣದ ಕೊನೆಯಿಂದ ತೊಡಗಿ ಇಂದಿಗೂ ಗಂಭೀರವಾಗಿ ಸಾಗುತ್ತಿವೆ. ಆದರೆ ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಕನ್ನಡ ದೇಶ ‘ಭೂತಾರಾಧನೆಯ ಬಗೆಗೆ ವಿದ್ವಾಂಸರ ವಿಶೇಷ ಗಮನ ಹರಿದಂತೆ ಕಾಣಿಸುತ್ತಿಲ್ಲ.

ಭಾಷಿಕ ಭಿನ್ನತೆಯೊಂದೇ ಅಲ್ಲ, ದೈವಗಳ ಸ್ವರೂಪ, ಪರಿಕಲ್ಪನೆ, ಆರಾಧನಾ ಸಂಪ್ರದಾಯ, ವೇಷಭೂಷಣ, ಕುಣಿತ, ಸಂಭಾಷಣೆ, ಹಾಡು-ಹೀಗೆ ಹಲವು ನಿಟ್ಟುಗಳಲ್ಲಿ ತುಳು ಹಾಗೂ ಕನ್ನಡ ಸಂಪ್ರದಾಯದ ದೈವಾರಾಧನೆಯಲ್ಲಿ ವ್ಯತ್ಯಾಸಗಳು ಗೆರೆಕೊರೆದಂತೆ ಸ್ಪಷ್ಟ. ಆದರೆ ಕೆಲವೊಂದು ವಿಧಿ ಆಚರಣೆಗಳಲ್ಲಿ. ಮೇಲ್‌ಸೇರುವೆ ಹಾಗೂ ಸಾದೃಶ್ಯ ಇಲ್ಲದಿಲ್ಲ.

ಅಲ್ಲಿಯ ಕನ್ನಡ ಪ್ರದೇಶದ ದೇಶೀಯ ದೈವಗಳಿಗೆ ಕೋಲ ಹಾಗೂ ಡಕ್ಕೆ ಬಲಿ ಎಂಬ ಇಬ್ಬಗೆಯ ಆಚರಣೆ ಸಲ್ಲುತ್ತಿದೆ. ನಾಗನ ಒಂದು ಪ್ರಭೇದವಾದ ಸ್ವಾಮಿ ಇಲ್ಲಿಯ ಪ್ರಧಾನ ದೈವ. ನಂದಿ, ಹಾಯ್ಗುಳಿ, ಹುಲಿ ಮುಂತಾದ ಕುಲ ಲಾಂಛನ ದೈವಗಳು, ಹಳೆಯಮ್ಮ, ಎಳೆಯಮ್ಮ, ಚಿಕ್ಕಮ್ಮ, ಮಾಸ್ತಿಯಮ್ಮ, ಹಲವು ಮಕ್ಕಳ ತಾಯಿ, ಉಮ್ಮಳ್ತಿ ಮುಂತಾದ ಮಾತೃ ದೇವತೆಗಳು, ಜೊತೆಗೆ ಪಂಜುರ್ಲಿ, ಬೊಬ್ಬರ್ಯ, ಕಲ್ಕುಡಗಳಂತಹ ತುಳು ನಾಡಿನ ಜನಪ್ರಿಯ ದೈವಗಳಿಗೂ ಇಲ್ಲಿ ಆರಾಧನೆ ಸಲ್ಲುತ್ತಾ ಬರುತ್ತಿದೆ.

ಉಡುಪಿ ಜಿಲ್ಲೆಯ ಕನ್ನಡ ಪ್ರದೇಶದ ಆರೈತರ ಆಚರಣೆಗಳನ್ನು ನಡೆಸಿಕೊಡುವವರು ಪಾಣರು ಹಾಗೂ ವೈದ್ಯರೆನ್ನುವ ಬ್ರಾಹ್ಮಣ ಮೂಲದವರು. ತುಳುನಾಡಿನ ‘ಭೂತಕಟ್ಟುವ’ ಸಮುದಾಯಗಳಲ್ಲಿ ಒಂದಾದ ನಲ್ಕೆಯವರೇ ಕನ್ನಡ ಪ್ರದೇಶದಲ್ಲಿ ಪಾಣಾರರೆಂದೇ ಪರಿಚಿತರಾಗಿದ್ದಾರೆ. ಪಾಣರು ತುಳು ಬಲ್ಲವರಾದರೂ ಅವರ ಸಾಮಾಜಿಕ, ಧಾರ್ಮಿಕ ವ್ಯವಹಾರಗಳ ಭಾಷೆ ಕನ್ನಡ.

ಗ್ರಾಮದ ಸ್ವಾಮಿ ಮನೆಗಳಲ್ಲಿ, ‘ದೊಡ್ಡಮನೆ’ ಗಳ ಚಾವಡಿಗಳಲ್ಲಿ ಅಥವಾ ಗ್ರಾಮದ ಗುಡಿಗಳಲ್ಲಿ ವರ್ಷಕ್ಕೊಮ್ಮೆ ಕೋಲ ಹಾಗೂ ಡಕ್ಕೆ ಬಲಿಗಳ ಆರಾಧನೆ ನಡೆಯುತ್ತದೆ. ಕನ್ನಡ ಪ್ರದೇಶಗಳಲ್ಲಿ ಪಾಣರು ನಡೆಸುವ ಕೋಲ, ಡಕ್ಕೆ ಬಲಿಗಳ ಮತಾಚಾರ ಸಂಕೀರ್ಣವನ್ನು ಪಾಣಾರಾಟವೆಂದು ಕರೆಯಲಾಗುತ್ತದೆ. ಈ ಪಾಣಾರಾಟದೊಳಗೆ ಗೆಂಡ (ಕೆಂಡ) ಎಂಬ ಕೊಂಡ ಹಾಯುವ ಆಚರಣೆಯೂ ಉಂಟು. ಕೆಲವು ವಿಶಿಷ್ಟ ಗುಡಿಗಳಲ್ಲಿ ಬ್ರಾಹ್ಮಣ ವೈದ್ಯರು ಡಕ್ಕೆ ಬಲಿ ನಡೆಸಿ ಕೊಡುವುದುಂಟು. ಇವರು ಕೋಲ ಆಚರಣೆಯನ್ನು ನಡೆಸುವುದಿಲ್ಲ ಎನ್ನುವುದನ್ನು ಗಮನಿಸಬೇಕು. ವೈದ್ಯರು ಈ ಆಚರಣೆಯನ್ನು ಡಕ್ಕೆ ಬಲಿ ಎಂದು ಕರೆಯುವುದಕ್ಕಿಂತ ‘ಮಂಡಲ ಸೇವೆ’/‘ಮಂಡಲ ಭೋಗ’ ಎಂಬ ಹೆಸರಿನಿಂದ ಕರೆಯಲು ಬಯಸುತ್ತಾರೆ.

ಪಾಣಾರಾಟದಲ್ಲಿ ಪ್ರಮುಖವಾಗಿ ಎರಡು ಆಚರಣ ವಿಧಿಗಳನ್ನು ಕಾಣಬಹುದು. ಒಂದು, ತುಳು ಪ್ರದೇಶದ ಕೋಲ ಸಂಪ್ರದಾಯವನ್ನು ಹೋಲುವ ಆಚರಣೆ. ಇನ್ನೊಂದು ನಾಗಮಂಡಲವನ್ನು ಹೋಲುವ ಸ್ಥಳೀಯ ದೈವಗಳಿಗೆ ಮಾತ್ರ ನಡೆಯುವ ಡಕ್ಕೆ ಬಲಿ ಎನ್ನುವ ಆಚರಣೆ.

ತುಳುನಾಡಿನ ಭೂತ/ ದೈವಸ್ಥಾನಗಳಲ್ಲಿ ಭೂತದ ಪ್ರತಿಮೆಗಳಿರುವುದಿಲ್ಲ. ದೈವದ ಮಂಚ, ಖಡ್ಗ, ಮುಖವಾಡಗಳೇ ದೈವದ ಸಂಕೇತಗಳು. ಆದರೆ ಕನ್ನಡ ಪ್ರದೇಶದ ದೈವದ ಮನೆಗಳಲ್ಲಿ ವಿವಿಧ ಗಾತ್ರದ ಮರದ ದೈವ ಪ್ರತಿಮೆಗಳಿರುತ್ತದೆ. ಇವುಗಳನ್ನು ದೈವದ ಉರುಗಳೆಂದು ಜನ ಕರೆಯುತ್ತಾರೆ.

ಗುಡಿಯೊಳಗೆ ದೈವದ ಗುಣ ಸ್ವಭಾವವನ್ನನುಸರಿಸಿ ವಿವಿಧ ಗಾತ್ರ, ಆಕೃತಿಗಳ ಮರದ ಉರು (ಪ್ರತಿಮೆ)ಗಳಿರುತ್ತವೆ. ಪೂಜಾರಿ ಗೆಜ್ಜೆ ಚಲ್ಲಣ ತೊಟ್ಟ ದೈವಪಾತ್ರಿಗೆ ‘ಹೂ ನೀರು’ ನೀಡಿ ದೈವಾವೇಶಕ್ಕೆ ಪ್ರೇರಣೆ ನೀಡುತ್ತಾನೆ. ಇದು ನಡೆಯುತ್ತಿರುವಾಗಲೇ ಗುಡಿಯ ಬಾಗಿಲಲ್ಲಿ ಪಾಣರ ಹೆಂಗಸರು ತೆಂಬರೆ ನುಡಿಸುತ್ತಾ ಪ್ರಾರ್ಥನಾ ರೂಪದಲ್ಲಿ ತುಳು ಹಾಡುಗಳನ್ನು ಹಾಡುತ್ತಾರೆ. ಆಗಲೇ ಪಾಣರ ಮೇಳ ಚೌಕಿಯಿಂದ ಹೊರಟು ಪಾಣರಾಟದ ಕಳದಲ್ಲಿ ನಿಂತಿರುತ್ತದೆ. ಈ ಪಾಣರ ಮೇಳವು ಕೈಯಲ್ಲಿ ಕಂಚಿನ ಡಕ್ಕೆ ಹಿಡಿದ ಅರ್ಧನಾರಿ ವೇಷಗಾರ, ಮರದ ಡಕ್ಕೆ ಹಾಗೂ ಚಕ್ರತಾಳ ಧರಿಸಿ ಸಾಮಾನ್ಯ ನಾಗರಿಕರಂತೆ ವೇಷ ತೊಟ್ಟ ಪುರುಷ ವೇಷಗಾರ ಹಾಗೂ ದೈವವನ್ನು ಮೈದುಂಬಿಕೊಂಡು ಅಣಿತೊಟ್ಟ ವೇಷಗಾರರಿರುತ್ತಾರೆ.

ದೈವರ ಮನೆಯೆದುರು ಯಕ್ಷಗಾನದ ರಂಗಸ್ಥಳದಂತೆ ನಾಲ್ಕು ಚೌಕದ ಒಂದಿಷ್ಟು ಜಾಗ ಬಿಟ್ಟು ಸುತ್ತಲೂ ಪ್ರೇಕ್ಷಕವರ್ಗ ಕುಳಿತಿರುತ್ತದೆ. ದೈವಾವೇಶೀತನಾದ ಪಾತ್ರಿ ಅಬ್ಬರದ ವಾದ್ಯದ ನುಡಿತದೊಂದಿಗೆ ಸಿಂಗಾರದ ಹೂವನ್ನು ಮುಖಕ್ಕೆ ಉಜ್ಜಿಕೊಳ್ಳುತ್ತಾ ಥರಥರ ನಡುಗುತ್ತಾ ಗುಡಿಯಿಂದ ಪ್ರದರ್ಶನ ಕಳಕ್ಕೆ ಬರುತ್ತಾನೆ. ಆಗ ಪಾಣರ ಮೇಳ ಡಕ್ಕೆ, ತಾಳ ನುಡಿಸುತ್ತಾ ‘ಹೊಗಳಿಕೆ’ ಹಾಡುತ್ತಾ ದೈವರೂಪಿ ವೇಷಗಾರನಲ್ಲಿ ದೈವ ಮೈದುಂಬುವಂತೆ ಮಾಡುತ್ತದೆ. ಹೀಗೆ ಒಂದು ವಿಶಿಷ್ಟ ಕಾಲ, ಸಂದರ್ಭದ ಮೂಲಕ ಮಧ್ಯಂತರ ಜಗತ್ತು ಆರಾಧನಾ ಕಳದಲ್ಲಿಸೃಷ್ಟಿಯಾಗುತ್ತದೆ. ಅಲೌಕಿಕ ಜಗತ್ತಿನ ದೈವಗಳು ನಿರ್ದಿಷ್ಟ ವ್ಯಕ್ತಿಯೊಬ್ಬನ ಮೂಲಕ ಪ್ರಕಟಗೊಳ್ಳುತ್ತವೆ. ಆಯಾ ದೈವದ ಗುಣ, ಸ್ವಭಾವ, ಸ್ವರೂಪಕ್ಕನುಗುಣವಾಗಿ ವೇಷ-ಭೂಷಣ, ಅಣಿಯ ಗಾತ್ರ-ಸ್ವರೂಪ ಮಾರ್ಪಡುತ್ತದೆ. ಮುಖವರ್ಣಿಕೆಯಲ್ಲೂ ವೈವಿಧ್ಯವಿರುತ್ತದೆ. ದೈವ ಪಾತ್ರಿಯಲ್ಲಿ ತೊಟ್ಟ ವೇಷದಲ್ಲೇ ಹತ್ತಾರು ದೈವಗಳು ಒಂದಾದ ಮೇಲೊಂದರಂತೆ ಪ್ರಕಟಗೊಂಡರೆ ದೈವರೂಪಿ ಪಾಣನಲ್ಲಿ ವಿಭಿನ್ನ ದೈವಗಳು ವಿಭಿನ್ನ ವೇಷಗಳಲ್ಲಿ ಪ್ರಕಟವಾಗುತ್ತವೆ. ಕನ್ನಡದ ದೈವಗಳಾದ ಚಿಕ್ಕಮ್ಮ(ಚಿಕ್ಕು), ಹಳೆಯಮ್ಮ, ಉಮ್ಮಳ್ತಿ, ಕಾಡ್ತಿ, ಮಾಂಕಾಳಿ, ಹಾಯ್ಗುಳಿ ಮೊದಲಾದವುಗಳಿಗೆ ‘ಹೊಗಳಿಕೆ’ಯ ಹಾಡಿನ ಮೂಲಕ ಮೊದಲಿಗೆ ಕೋಲ ಆ ಬಳಿಕ ಡಕ್ಕೆ ಬಲಿ ಜರುಗುತ್ತದೆ. ತುಳು ದೈವಗಳಾದ ಕಲ್ಕುಡ್ಕ, ಪಂಜುರ್ಲಿ, ಕ್ಷೇತ್ರಪಾಲ, ಬೊಬ್ಬರ್ಯಗಳಿಗೆ ಅಣಿಕಟ್ಟಿ ಕೋಲ ನಡೆಯುತ್ತದೆ. ಅಣಿಕಟ್ಟಿ ನಡೆಸುವ ತುಳು ಸಂಪ್ರದಾಯವನ್ನು ಹೋಲುವ ಕೋಲಗಳಲ್ಲೂ ಹಾಡುವುದು ಕನ್ನಡದ ‘ಹೊಗಳಿಕೆ’ಗಳನ್ನೇ ಹೊರತು ತುಳು ಪಾಡ್ದನಗಳನ್ನಲ್ಲ. ಇಂತಹ ಕೋಲಗಳ ಆರಂಭದಲ್ಲಿ ದೈವರೂಪಿ ಪಾಣ ತುಳುವಿನಲ್ಲಿ ನುಡಿ ಕೊಡಲು ತೊಡಗುತ್ತಾನೆ. ಆಗ ಊರಿನ ಹತ್ತು ಸಮಸ್ತರ ಪರವಾಗಿ ಗುಡಿಯ ಯಜಮಾನನು “ನಮ್ಗೆನುಡಿ ಕೊಡ್ಕ್” ಎಂದು ಬಿನ್ನವಿಸಿಕೊಳ್ಳುತ್ತಾನೆ. ಮುಂದೆ ಇಡಿಯ ಆಚರಣೆಯ ಸಂವಾದ ಭಾಗ ಕನ್ನಡಕ್ಕೆ ತಿರುಗುತ್ತದೆ.

ಅರ್ಧನಾರಿ ವೇಷ ತೊಟ್ಟ ಪಾಣನ ಡಕ್ಕೆಯ ನುಡಿತದ ಜತೆಗೆ ದೈವಮಾಧ್ಯಮ (ಪಾಣ) ಕುಣಿದು ಆ ಬಳಿಕ ಪಾತ್ರಿಯ ಜತೆಗೆ ತನ್ನ ಹುಟ್ಟು, ಸಾಧನೆಯನ್ನು ಕುರಿತು ಸಂಭಾಷಣೆ ನಡೆಸಿ (ಕಡ್‌ಕಟ್ಟ್ ಕುಣಿತ) ದೈವಾವೇಶವನ್ನು ಕೊನೆಗೊಳಿಸುತ್ತಾನೆ. ಗುಡಿಯ ದರ್ಶನ ಪಾತ್ರಿ ಗುಡಿಯೊಳಗೆ ಹೋಗಿ ತನ್ನಲ್ಲಿ ಮೈದುಂಬಿದ ದೈವವನ್ನು ವಿಸರ್ಜಿಸಿಕೊಳ್ಳುತ್ತಾಳೆ. ಮುಂದೆ ಪುನಃ ವಾಲಗದ ಅಬ್ಬರದ ನಡುವೆ ಇನ್ನೊಂದು ದೈವವನ್ನು ಮೈದುಂಬಿಸಿಕೊಂಡು ಹೊರಬಂದು ಇನ್ನೊಂದು ಕೋಲಕ್ಕೆ ಅಣಿಯಾಗುತ್ತಾನೆ. ಹೀಗೆ ಹತ್ತಾರು ದೈವಗಳಿಗೆ ಒಂದೇ ರಾತ್ರಿ ಉಪಚಾರ ಜರಗುತ್ತದೆ.

ದೇಸೀಯ ಮತಾಚಾರ ಡಕ್ಕೆ ಬಲಿ

ಡಕ್ಕೆ ಬಲಿ ಕರಾವಳಿ ಕರ್ನಾಟಕದ ಕನ್ನಡ ಪ್ರದೇಶದ್ದೇ ಆದ ವಿಶಿಷ್ಟ ಆಚರಣೆ. ಡಕ್ಕೆ ಬಲಿಯೆಂದರೆ ಅದು ನಾಗಮಂಡಲದ ಸಂಕ್ಷೇಪ ರೂಪ ಎಂದು ಕೆಲವು ವಿದ್ವಾಂಸರು ಹೇಳಿರುವುದುಂಟು. ಆದರೆ ವಾಸ್ತವಿಕವಾಗಿ ಸ್ವಾಮಿಯ ಗುಡಿಗಳಲ್ಲಿ ಅಥವಾ ಇನ್ನಿತರ ಗುಡಿಗಳಲ್ಲಿ ಸ್ವಾಮಿ, ಹಾಯ್ಗುಳಿ, ಚಿಕ್ಕು, ಹಳೆಯಮ್ಮ ಮುಂತಾದ ದೈವಗಳಿಗೆ ಮಂಡಲ ಚಿತ್ತಾರದ ಸುತ್ತ ಡಕ್ಕೆ ನುಡಿಸಿ ಹಾಡಿ ಕುಣಿದು ಪಾತ್ರಿಯನ್ನು ಕುಣಿಸಿ ನಡೆಸುವ ಉಪಚಾರವೇ ಡಕ್ಕೆ ಬಲಿ. ಸ್ವಾಮಿ ಕನ್ನಡ ಪ್ರದೇಶದ ಅತ್ಯಂತ ಜನಪ್ರಿಯ ದೈವ. ಸ್ವಾಮಿ ಗುಡಿಗಳಿರುವಲ್ಲಿ ಬೃಹತ್ ಗಾತ್ರದ ಹುತ್ತ ಬೆಳೆದಿರುತ್ತದೆ. ಸ್ವಾಮಿಯ ಹೊಗಳಿಕೆಯ ಪದವನ್ನು ಕಂಡರೆ ಹಾಗೂ ಅದರ ಕೊನೆಯಲ್ಲಿ “ಚಿತ್ತಾ ಸಂತೋಷದಲ್ಲಿ ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಲ್ಲುವಂಥಾ ಮುದ್ದು ಸ್ವಾಮಿ” ಎನ್ನುವುದನ್ನು ಕಂಡರೆ ಈ ಸ್ವಾಮಿ ಸುಬ್ರಹ್ಮಣ್ಯ ರೂಪದ ನಾಗನಲ್ಲದೆ ಬೇರೆ ಅಲ್ಲ. ಕೇರಳದಲ್ಲಿ ಸುಬ್ರಹ್ಮಣ್ಯನನ್ನು ಮುದ್ದುಸ್ವಾಮಿ ಎನ್ನುತ್ತಾರಂತೆ. ನಾಗಾರಾಧನೆ ಕರಾವಳಿಯ ಆದಿಮ ಉಪಚಾರಗಳಲ್ಲಿ ಒಂದು. ನಾಗಮಂಡಲ ಇಂದು ಒಂದು ಆರ್ಯವಿಧಿಯಾಗಿ ಬ್ರಾಹ್ಮಣ ‘ವೈದ್ಯ’ರಿಂದ ನಡೆಸಲ್ಪಡುತ್ತಿದ್ದರೂ ಅದರ ಮೂಲಸ್ವರೂಪವನ್ನು ಪಾಣರು ಸ್ವಾಮಿಗೆ ಇಂದು ನಡೆಸುತ್ತಿರುವ ಡಕ್ಕೆ ಬಲಿಯಲ್ಲಿ ಗುರುತಿಸಬಹುದು. ದೇಸೀಯ ದೈವಗಳಿಗೆ ವೈದ್ಯರು ನಡೆಸುವ ಡಕ್ಕೆ ಬಲಿಗಿಂತ ತೀರಾ ಭಿನ್ನವಾದುದೇನೂ ಅಲ್ಲ.

ಡಕ್ಕೆ ಬಲಿಯಲ್ಲಿ ಪಾಣರು ನಾಗ, ಬ್ರಹ್ಮ ಹಾಗೂ ಸ್ವಸ್ತಿಕ(ಗಣಪತಿ)ದ ರೂಪಗಳನ್ನು ಪಂಚವರ್ಣದ ಹುಡಿಯಲ್ಲಿ ರೇಖಿಸುವರು. ಪಾಣರು ತೊಡವು ಅರ್ಧನಾರಿ ವೇಷದ ಸ್ವರೂಪ ನಾಗಮಂಡಲದ ಅರ್ಧನಾರಿ ವೇಷವನ್ನು ಹೋಲುತ್ತದೆ. ಹಿಂದಿನ ಕಾಲದ ಚೌಕುಳಿ ಸೀರೆ ಹೊರಟು ಹೋಗಿ ಜರಿ ಸೀರೆ ಕಾಣಿಸಿಕೊಂಡಿದೆ. ಕಾಲಿಗೆ ಪಾಡಗ (ಗಗ್ಗರ), ಎದೆಗೆ ತೋಳಿಲ್ಲದ ರವಕೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಕಡಗ, ತಲೆಗೆ ಜರಿಪಟ್ಟಿ ಸುತ್ತಿದ್ದ ಮುಂಡಾಸು, ತುದಿಗೆ ತುರಾಯಿ, ಕೈಯಲ್ಲಿ ಡಕ್ಕೆ ಇವಿಷ್ಟು ಅರ್ಧ ನಾರಿಯ ವೇಷ. ತಲೆಗೆ ರುಮಾಲು ಸುತ್ತಿದ ಇಬ್ಬರು ನಾಗರಿಕ ವೇಷದಲ್ಲಿದ್ದು ಒಬ್ಬನ ಕೈಯಲ್ಲಿ ಮರದ ಡಕ್ಕೆ ಅಥವಾ ತೆಂಬರೆ ಇರುತ್ತದೆ. ಇನ್ನೊಬ್ಬನಲ್ಲಿ ಕಂಚಿನ ತಾಳವಿರುತ್ತದೆ.

ದೈವಾವೇಶಗೊಂಡ ದರ್ಶನ ಪಾತ್ರಿ ಗುಡಿಯ ಯಜಮಾನ(ಕರ್ತು)ನ ಸೂಚನೆಯಂತೆ ತಾನು ಅವಾಹಿಸಿಕೊಂಡ ದೈವಕ್ಕೆ ಮಂಡ್ಲಭೋಗ ನೀಡಲು ಕೈಯಲ್ಲಿ ಸಿಂಗಾರದ ಎಳೆಗಳೊಂದಿಗೆ ಸಿದ್ಧನಾಗುತ್ತಾನೆ. ಆ ಪಾತ್ರಿ ಆ ಸಂದರ್ಭದಲ್ಲಿ ಯಾವ ದೈವದ ಪ್ರತಿನಿಧಿಯೋ ಆ ದೈವಕ್ಕೆ ಸಂಬಂಧಿಸಿದ ‘ಹೊಗಳಿಕೆ’ಯನ್ನು ಹಾಡುಗಾರ ಪಾಣ ಹಾಡತೊಡಗುತ್ತಾನೆ. ಜೊತೆಗೆ ಅರ್ಧನಾರಿ ವೇಷದ ಪಾಣ ಡಕ್ಕೆ ನುಡಿಸುತ್ತಾ ಬಾಯಲ್ಲಿ ಅದೇ ಹಾಡನ್ನು ಪುನರಾವರ್ತಿಸುತ್ತಾ ತನ್ನೆದುರಿನ ದೈವದ ಪ್ರತಿನಿಧಿ (ದರ್ಶನಪಾತ್ರಿ)ಯನ್ನು ಕುಣಿಸುತ್ತಾನೆ. ಪಾತ್ರಿ ತನ್ನಲ್ಲಿ ಮೈದುಂಬಿದ ದೈವದ ಗುಣಶೀಲವನ್ನು ಹಳೆಯಮ್ಮ ನಾದರೆ ಮೈತುಂಬಾ ಬಟ್ಟೆ ಹೊದ್ದುಕೊಂಡು ಗೂನು ಬೆನ್ನಿನ ಹೆಂಗಸನ್ನು ಅನುಸರಿಸಿಕೊಂಡು, ಮರ‍್ಲ್‌ಚಿಕ್ಕುವಾದರೆ ಹುಚ್ಚಿಯಂತೆ ನಟಿಸುತ್ತಾ-ಅನುಕರಣೆ ಮಾಡುತ್ತಾ ಮಂಡಲದ ಪ್ರದಕ್ಷಿಣೆಗೆ ಬರುತ್ತಾರೆ. ಈ ಮತಾಚಾರವು ಹಾಡು, ಕುಣಿತ, ನಟನೆ, ವಾದ್ಯಮೇಳಗಳಿಂದಾಗಿ ಶೈಲೀಕೃತ ಸ್ವರೂಪವನ್ನು ಪಡೆದು ಆಚರಣಾತ್ಮಕ ರಂಗಭೂಮಿಯ ಸ್ವರೂಪವನ್ನು ನಡೆಯುತ್ತದೆ.

ಭಾಷೆಯ ಪರಿಧಿ ದಾಟಿದ ಸಂಸ್ಕೃತಿ: ತುಳು ಪ್ರದೇಶದಿಂದ ವಲಸೆ ಬಂದು ಕನ್ನಡದ ನೆಲದಲ್ಲಿ ಕೋಲದ ರೂಪದ ಉಪಚಾರವನ್ನು ಕೈಗೊಳ್ಳುವ ದೈವಗಳೆಂದರೆ ಬೊಬ್ಬರ್ಯ, ಪಂಜುರ್ಲಿ, ಕಲ್ಲುಡ್ಕ(ಕಲ್ಕುಡ) ಈ ದೈವಗಳಿಗೆ ತುಳುನಾಡಿನಲ್ಲಿ ಸಲ್ಲುವ ಉಪಚಾರವನ್ನು ಹೋಲುವ ಆಚರಣೆ ಕನ್ನಡ ಭಾಷಿಕರಾದ ಪಾಣರಿಂದ ನಡೆಯುವುದನ್ನು ಕಂಡರೆ ಸಂಸ್ಕೃತಿಯೊಂದಕ್ಕೆ ಭಾಷೆಯ ಗಡಿರೇಖೆಯನ್ನು ನೆಗೆದು ಸಾಗುವ ಸಾಮರ್ಥ್ಯವಿರುವುದು ತಿಳಿದು ಬರುತ್ತದೆ. ತುಳುನಾಡು ತುಳು ಭಾಷೆಯನ್ನು ಆಡುವ ಪ್ರದೇಶಕ್ಕಿಂತ ಬಹಳ ವಿಸ್ತಾರವಾದ ಪ್ರದೇಶ ಹಾಗೂ ಅದು ಒಂದು ಆಡಳಿತ ವಿಭಾಗ ಸೂಚಕ ಪದವೇ ಹೊರತು ಒಂದು ಭಾಷೆ ಪ್ರಚಲಿತವಿದ್ದ ಸೀಮಿತ ಪ್ರದೇಶವಾಗಿರಲಿಲ್ಲ ಎನ್ನುವ ವಿದ್ವಾಂಸರ ಅಭಿಪ್ರಾಯವನ್ನು ಇಲ್ಲಿ ಗಮನಿಸಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡ ಮಾತನಾಡುವ ಪಾಣನಲ್ಲಿ ತುಳುನಾಡಿನ ದೈವ ಮೈದುಂಬಿದೊಡನೆಯೇ ಆತ ತುಳುವಿನಲ್ಲಿ ಮಾತಿಗೆ ತೊಡುಗುದು ಗಮನಿಸತಕ್ಕ ಅಂಶ. ಪಾಣರಾಟ ಆರಂಭವಾಗುವುದು ಪಾಣರ ಹೆಂಗಸರು ತೆಂಬರೆ ಬಡಿದು ತುಳು ಹಾಡುಗಳನ್ನು ಹಾಡುವುದರ ಮೂಲಕ. ಕಲ್ಕುಡ, ಬೊಬ್ಬರ್ಯ, ಪಂಜುರ್ಲಿ ದೈವಗಳಿಗೆ ಕೋಲದ ಸಂದರ್ಭದಲ್ಲಿ ಹೇಳುವ ‘ಹೊಗಳಿಕೆ’ ತುಳು ಪಾಡ್ಡನಗಳ ಕನ್ನಡ ರೂಪಾಂತರ ಹೊರತು ಬೇರೆ ಅಲ್ಲ.

ಹೊಗಳಿಕೆಗಳು: ಪಾಣರು ಡಕ್ಕೆ ಬಲಿಯ ಸಂದಭ್ದಲ್ಲಿ ಹಾಡುವ ಕನ್ನಡ ‘ಹೊಗಳಿಕೆ’ಗಳ ಬಗೆಗೆ ಅಧ್ಯಯನ ನಡೆದಿಲ್ಲ. ತುಳುನಾಡಿನ ಪಾಡ್ಡನವನ್ನು ಹೋಲುವ ದೈವಗಳ ಉಗಮ, ಸಾಹಸಗಳನ್ನು ಕುರಿತ ಹಾಡ್ಗತೆಗಳು ಇವು. ಬಾಲ್‌ಚಿಕ್ಕು, ಬಗ್ಗು ಚಿಕ್ಕು, ಮರ್ಲ್‌‌ಚಿಕ್ಕು, ದೊಟ್ಟೆಕಾಲ್ ಚಿಕ್ಕು, ಹಳೆಯಮ್ಮ, ಚಿಕ್ಕಮ್ಮ, ಮಾಂಕಾಳಿ, ಕಾಡ್ತಿ ಮುಂತಾದ ದೈವಗಳ ‘ಹೊಗಳಿಕೆ’ಗಳನ್ನು ಕಂಡರೆ ತುಳುನಾಡಿನ ಹಲವು ಭೂತಗಳಂತೆ ಅಸಹಜ ದುರ್ಘಟನೆಗಳಿಂದ ಜೀವ ತೆತ್ತು ಇವು ದೈವಗಳಾದಂತೆ ಕಾಣಿಸುತ್ತದೆ. ಈ ಹೊಗಳಿಕೆಗಳನ್ನು ಪರಿಶೀಲಿಸಿದರೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಳಹಾಳ(ಉಳ್ಳಾಲ?) ಉರ್ಕಿತೋಟ ಮುಂತಾದ ತುಳುನಾಡಿನ ಪ್ರದೇಶಗಳಿಂದ ಕಥಾಕ್ರಿಯೆ ಪ್ರಸರಣಗೊಂಡಂತೆ ಕಾಣುತ್ತದೆ. ಅಬ್ಬಗ ದಾರಗರ ಚೆನ್ನಯಾಟ, ಅವರ ಆಂತರಿಕ ಕಲಹ, ಸಹೋದರಿಯರ ದುರ್ಮರಣದ ದುರಂತ ಕಥೆಯ ಮರ್ಲ್‌‌ಚಿಕ್ಕುವಿನ ಹೊಗಳಿಕೆಯಾಗಿ ಪಾಣರ ಬಾಯಲ್ಲಿ ಸಿಗುತ್ತದೆ. ಪಾಣರ ಹಾಡ್ಗತೆಗಳ ಭಿನ್ನ ಭಿನ್ನ ಪಠ್ಯಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರೆ ಇಂದು ಕುಂದಾಪುರ ಪರಿಸರ ಭಾಷಿಕವಾಗಿ, ಸಾಂಸ್ಕೃತಿಕವಾಗಿ ತುಳುನಾಡಿನಿಂದ ಭಿನ್ನವಾಗಿ ತೋರುತ್ತಿದ್ದರೂ ಇತಿಹಾಸ ಕಾಲದಲ್ಲಿ ಒಂದೇ ಸಾಂಸ್ಕೃತಿಕ ಚೌಕಟ್ಟಿನೊಳಗೆ ಅಳವಟ್ಟಿತ್ತೆಂದು ಪುನಾರಚಿಸಲು ಸಾಧ್ಯವಾಗಬಹುದು.

ಮಾಂಕಾಳಿ ದೈವದ ಡಕ್ಕೆ ಬಲಿಯ ಸಂದರ್ಭದಲ್ಲಿ ಹಾಡುವ ಮಾಂಕಾಳಿಯ ಹೊಗಳಿಕೆ ‘ಸಮಗರ ಗಂಡ ಮಗ ಮಿಂಡ’ ಕಥೆಯೆಂದೇ ಪ್ರಸಿದ್ಧವಾಗಿದ್ದು, ಮಾತೃಗಮನದ ನಿಷಿದ್ಧವನ್ನು ಸಾರುತ್ತದೆ. ಈ ಕಥೆಯ ಎಳೆಯನ್ನು ಕರ್ನಾಟಕದ ಎಲ್ಲೆಡೆಗಳಲ್ಲೂ (ಸೆಟವಿಯ ಹಾಡು) ಗುರುತಿಸಬಹುದು.

ಕರಾವಳಿ ಕರ್ನಾಟಕದ ಕನ್ನಡ ನೆಲದ ದೈವಾರಾಧನೆ-ಪಾಣಾರಾಟ ಕೋಲ ಹಾಗೂ ಡಕ್ಕೆ ಬಲಿ ಎಂಬ ಎರಡು ನೆಲೆಯಲ್ಲಿ ನಡೆಯುವ ಒಂದು ಆರಾಧನಾ ಪ್ರಕ್ರಿಯೆ.

.ವಿ.ಎನ್.