ಪಣಿಯರ್ ಕೇರಳದ ಆದಿವಾಸಿ ಬುಡಕಟ್ಟು ವಿಭಾಗಕ್ಕೆ ಸೇರಿದ, ಅತಿಹೆಚ್ಚು ಜನಸಂಖ್ಯೆ ಇರುವ ಸಮುದಾಯ ಪಣಿಯರದ್ದು, ವಯನಾಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸವಾಗಿದ್ದಾರೆ. ವಯನಾಡಿನ ಬಾಣಾಸುರಕೋಚೆಯ ಇಪ್ಪಿಮಲೆಯಲ್ಲಿ ಇವರು ಉದ್ಭವಿಸಿದರೆಂದು ಅವರ ಸೃಷ್ಟಿಪುರಾಣದಲ್ಲಿದೆ. ಆಫ್ರಿಕಾದ ನೀಗ್ರೋ ಜನಾಂಗದೊಂದಿಗೆ ಆಕಾರ, ಬಣ್ಣ,ಕೂದಲು, ತುಟಿಗಳಲ್ಲಿ ಸಾಮ್ಯವಿರುವುದಾಗಿ ವಿದ್ವಾಂಸರು ಕಂಡುಕೊಂಡಿದ್ದಾರೆ.

ಹಿಂದಿನ ಕಾಲದಲ್ಲಿ ಭೂಮಾಲಿಕರ ಬಳಿಯಲ್ಲಿ ಪಣಿಯರು ದಾಸ್ಯ ಜೀವನವನ್ನು ನಡೆಸುತ್ತಿದ್ದರು. ಈ ಸಂಪ್ರದಾಯವನ್ನು ಪಣಿಯರು ‘ಕುಂಡಲ್ ಪಣಿ’ ಎಂದು ಕರೆಯುತ್ತಿದ್ದರು. ವಯನಾಡಿನ ಮುಖ್ಯ ಜಾತ್ರೆಯಾದ ‘ವಳ್ಳಿಯೂರ್ ಕಾವು’ ಉತ್ಸವದ ಸಂದರ್ಭದಲ್ಲಿ ಪಣಿಯರು ಹಾಗೂ ಇತರೆ ಬುಡಕಟ್ಟು ಜಾತಿಗಳನ್ನು ಭುಮಾಲೀಕರು ಗುತ್ತಿಗೆಯಾಧಾರದಲ್ಲಿ ಒಂದು ವರ್ಷಕ್ಕೆ ದಾಸ್ಯ ಕೆಲಸಕ್ಕೆ ಇರಿಸುತ್ತಿದ್ದರು. ಮುಂದಿನ ‘ವಳ್ಳಿಯೂರ್ ಕಾವು’ ಜಾತ್ರೆಯವರೆಗೆ ಒಂದು ವರ್ಷದ ಅವಧಿಗೆ ಭತ್ತ ಹಾಗೂ ಹಣವನ್ನುನೀಡಿ ಪ್ರತಿಯೊಂದು ಪಣಿಯ ಕುಟುಂಬದವರನ್ನು ಭೂಮಾಲೀಕರು ಖರೀದಿಸುತ್ತಿದ್ದರು. ಓರ್ವ ಪುರುಷ ಮತ್ತು ಓರ್ವ ಹೆಣ್ಣಿಗೆ ಸೇರಿ ಇಪ್ಪತ್ತು ರೂಪಾಯಿ ಬೆಲೆಯಾಗಿತ್ತು. ಇದಕ್ಕೆ ‘ನಿಪ್ಪುಪಣಂ’ ಎಂದು ಹೆಸರು. ಈ ಹಣದೊಂದಿಗೆ ಆರು ಮುಡಿ ಭತ್ತವನ್ನು ಕೊಡುತ್ತಿದ್ದರು. ಈ ಪದ್ಧತಿಯಂತೆ ಒಂದು ವರ್ಷಕಾಲ ಆಯಾ ಭೂಮಾಲೀಕರ ಮನೆಯಲ್ಲೂ ಗದ್ದೆ ಬಯಲುಗಳಲ್ಲೂ ಯಾವುದೇ ಕೆಲಸವನ್ನು ಅವರು ಮಾಡಬೇಕಾಗಿತ್ತು.

ಪಣಿಯರ ಗೋತ್ರಗಳನ್ನು ‘ಇಲ್ಲಂ’ ಎಂದು ಹೇಳುತ್ತಾರೆ. ಪ್ರತಿಯೊಂದು ಗೋತ್ರದ ಮುಖ್ಯಸ್ಥನನ್ನು ‘ಚೆಮ್ಮಕ್ಕಾರನ್’ ಎಂದು ಕರೆಯುತ್ತಿದ್ದರು. ‘ಕುಟ್ಟನ್’ ಎಂಬುವನನ್ನು ಭೂಮಾಲಿಕನು ನೇಮಕ ಮಾಡುತ್ತಿದ್ದ. ಭೂಮಾಲೀಕ ಮತ್ತು ಪಣಿಯರ ನಡುವಿನ ಒಂದು ಕೊಂಡಿಯಾಗಿ ಕುಟ್ಟನ್ ಕಾರ್ಯನಿರ್ವಹಿಸುತ್ತಿದ್ದ. ಇವನ ಮೇಲ್ವಿಚಾರಿಕೆಯಲ್ಲಿಯೇ ಬೇಸಾಯದ ಕೆಲಸಗಳು ನಡೆಯುತ್ತಿದ್ದವು. ಪಣಿಯರು ಮನೆಯನ್ನು ‘ಪರೆ’ ಎಂದು ಕರೆಯುತ್ತಿದ್ದರು. ಕೆಲವು ಪ್ರದೇಶಗಳಲ್ಲಿ ‘ಕುಡುಂಬ್’ ಎಂಬ ಪದವು ಪ್ರಯೋಗದಲ್ಲಿದೆ. ಮಣ್ಣಿನ ಗೋಡೆ ಹಾಗೂ ಬಿದಿರಿನ ಛಾವಣಿಯಿಂದ ಮನೆಗಳನ್ನುನಿರ್ಮಿಸುತ್ತಿದ್ದರು. ಬಿದಿರಿನ ಮಾಡುಗಳಿಗೆ ಮುಳಿಹುಲ್ಲು ಅಥವಾ ಬೈಹುಲ್ಲನ್ನು ಹೊದೆಸುತ್ತಾರೆ.

ಉಳಿದ ಬುಡಕಟ್ಟು ಆದಿವಾಸಿ ವಿಭಾಗಗಳಿಂದ ಪಣಿಯರನ್ನು ಅವರ ರೂಪ ಹಾಗೂ ವೇಷದ ಮೂಲಕ ಭಿನ್ನವಾಗಿಗುರುತಿಸಬಹುದು. ಮುಂದಲೆಯ ಕೂದಲನ್ನು ಸ್ವಲ್ಪ ಕತ್ತರಿಸಿ ಪಣಿಯ ಮಹಿಳೆಯರು ವಿಶಿಷ್ಟ ಕೇಶ ಅಲಂಕಾರವನ್ನು ಮಾಡುತ್ತಿದ್ದರು.

ಪಣಿಯ ಸ್ತ್ರೀಯರು ಸೀರೆಯನ್ನುಟ್ಟು ಅದರ ಎರಡೂ ಬದಿಗಳನ್ನು ಹಿಂಬದಿಯಲ್ಲೂ, ಮುಂಬದಿಯಲ್ಲಿಯೂ ತಂದು ಹೆಗಲಿಗೆ ಕಟ್ಟುತ್ತಾರೆ. ಸೊಂಟದಲ್ಲಿ ಕಟ್ಟುವ ‘ಅರಾಟ್ಟೆ’ ಎಂಬ ಚಿಕ್ಕ ಚೀಲದಲ್ಲಿ ಕೂಲಿಯಾಗಿ ದೊರಕುವ ಭತ್ತ ಹಾಗೂ ಇತರ ಸಾಮಗ್ರಿಗಳನ್ನು ಜೋಪಾನವಾಗಿಡುತ್ತಾರೆ. ಈ ‘ಅರಾಟ್ಟೆ’ ಕಟ್ಟುವುದು ಪಣಿಯ ಮಹಿಳೆಯರ ಅನನ್ಯತೆಯಾಗಿದೆ. ಇವರು ಅನೇಕ ರೀತಿಯ ಆಭರಣಗಳನ್ನು ಧರಿಸುತ್ತಾರೆ. ಕೊರಳಿಗೆ ಧರಿಸುವ ಹರಳಿನ ಮಾಲೆಯನ್ನು ‘ಕಲ್ಲುಮಾಲೆ’ ಎನ್ನುತ್ತಾರೆ. ‘ಒಳ್ಳಿಕಲ್ಲ್’, ‘ಕರುತ್ತಕಲ್ಲ್’, ‘ಪಾಲ್‌ಕಲ್ಲ್’, ‘ಪಣತ್ತಾಲಿ’, ‘ತಾತ್ತಿಕ್ಕಲ್ಲ್’ ಮೊದಲಾದ ಅನೇಕ ರೀತಿಯ ಆಭರಣಗಳನ್ನು ಪಣಿಯ ಮಹಿಳೆಯರು ಸ್ವತಃ ತಯಾರಿಸಿ ಧರಿಸುತ್ತಾರೆ. ಓಲೆ, ಚೂದುಮಣಿ ಮತ್ತು ಮುರಳೆ ಇವರ ಕಿವಿಯ ಆಭರಣಗಳು. ಬಾಡಿಸಿ, ಸುರುಳಿಸುತ್ತಿದ್ದ ಮುಂಡೇವಿನ ಗರಿಯೇ ಓಲೆ. ಈ ಓಲೆಯ ಒಳಗೆ ಕೆಂಪುಕಾಯಿಯನ್ನಿರಿಸಿ ಮಾಡಿದ ಆಭರಣವೇ ‘ಚೂದುಮಣಿ’. ವೃದ್ಧ, ಸ್ತ್ರೀಯರು ಮಾತ್ರ ಈ ಆಭರಣಗಳನ್ನು ಧರಿಸುತ್ತಾರೆ. ‘ಮುಪ್ಪೋಟ್ಟಿ’ ಎಂಬ ಆಭರವನ್ನು ಮೂಗಿನಲ್ಲಿ ಧರಿಸುತ್ತಾರೆ.

ಕಿವಿ ಚುಚ್ಚುವ ವಿಧಿ, ಋತುಮತಿ ಮದುವೆ ಮೊದಲಾದ ಆಚರಣೆಗಳು ಪಣಿಯ ಸಮುದಾಯದಲ್ಲಿದೆ. ಮೂರನೆಯ ವಯಸ್ಸಿನಲ್ಲಿ ಹೆಣ್ಣಿಗೂ ಗಂಡಿಗೂ ಕಿವಿ ಚುಚ್ಚುವ ವಿಧಿ ನಡೆಯುತ್ತದೆ. ಮದುವೆಗೆ ಸಂಬಂಧಿಸಿದಂತೆ ನಡೆಯುವ ಒಂದು ವಿಧಿಯಾಗಿದೆ. ‘ಅಡಯಾಳಮ ಕೆಟ್ಟಲ್’. ಹೆಣ್ಣು ಒಪ್ಪಿಗೆಯಾದರೆ ಗಂಡಿನ ಕಡೆಯವರು ಅವಳನ್ನು ಅಲಂಕರಿಸಿ ನಾಲ್ಕಾಣೆ ಅಥವಾ ಒಂದು ರೂಪಾಯಿಯನ್ನು ಅವಳ ‘ಅರಾಟಿ’ಯಲ್ಲಿಡುವುದನ್ನು ‘ಅಡಯಾಳಂ ಕೆಟ್ಟಲ್’ ಎನ್ನುತ್ತಾರೆ. ಈ ವಿಧಿಯ ನಂತರ ಹೆಣ್ಣಿಗೆ ಗಂಡು ಖರ್ಚಿಗೆ ಕೊಡಬೇಕೆಂದು ರಕ್ಷಿಸಲು ಏಳನೆಯ ತಿಂಗಳಲ್ಲಿ ‘ಬಲಿಕ್ಕರಳ’ ಎಂಬ ವಿಧಿಯನ್ನು ನಡೆಸುತ್ತಾರೆ. ಒಬ್ಬ ವ್ಯಕ್ತಿ ಸತ್ತರೆ ಹದಿನಾರು ದಿವಸಗಳ ಸೂತಕ ಆಚರಿಸುತ್ತಾರೆ.

ಬತ್ತ, ರಾಗಿ, ಸಾಮೆ ಮೊದಲಾದುವು ಇವರ ಮುಖ್ಯ ಆಹಾರ ಧಾನ್ಯಗಳು. ಇದರೊಂದಿಗೆ ಸೊಪ್ಪು ತರಕಾರಿಗಳನ್ನು, ಏಡಿ, ಮೀನುಮೊದಲಾದುವುಗಳನ್ನು ಆಹಾರವಾಗಿ ಬಳಸುತ್ತಾರೆ. ಪಣಿಯರು ತಮ್ಮ ಸಂಬಂಧಿಕರನ್ನು ‘ಕುಟುಂಬದವರು’ ಎಂದು ಕರೆಯುತ್ತಾರೆ. ಕುಟುಂಬದ ಹಿರಿಯನನ್ನು ‘ಪಟ್ಟೋಲೆ’ ಎಂದು ಕರೆಯುತ್ತಾರೆ. ತೀರಿ ಹೋದ ಪೂರ್ವಿಕರನ್ನು ಇದೇ ಹೆಸರಿನಿಂದ ಸಂಬೋಧಿಸುತ್ತಾರೆ.

ಇವರ ಬದುಕಿನ ಧರ್ಮಾಚರಣೆಗಳಿಗೆ ಸಂಬಂಧಿಸಿದಂತೆ ಅನೇಕ ಕುಣಿತಗಳು ಅಸ್ತಿತ್ವದಲ್ಲಿದೆ. ಹಬ್ಬಾಚರಣೆಯ ಸಂದರ್ಭದಲ್ಲಿ ‘ವಟ್ಟಕ್ಕಳಿ’ ಎಂಬ ಆಟವೂ, ವೇಜಿ, ಕೊಯ್ಲು ಮೊದಲಾದ ಬೇಸಾಯದ ಸಂದರ್ಭದಲ್ಲಿ ‘ಕಂಬಳಕ್ಕಳಿ’ ಎಂಬ ಆಟವೂ ನಡೆಯುತ್ತಿತ್ತು. ಪಣಿಯ ಸಮುದಾಯದಲ್ಲಿ ಅನೇಕ ಜನಪದ ಹಾಡುಗಳಿವೆ. ದುಡಿ, ಚೀನಿ ಮೊದಲಾದ ವಾದ್ಯೋಪಕರಣಗಳನ್ನು ಅವರು ಬಳಸುತ್ತಿದ್ದರು. ‘ಉರಾಕಿಂಜಪ್ಪಾಡ್’ ಎಂಬ ಜೋಗುಳ ಹಾಡಿನಲ್ಲಿ ಪಣಿಯರ ಬದುಕಿನ ಹೋರಾಟ ಚಿತ್ರಿತವಾಗಿದೆ.

ಪಿ.ವಿ.ಎಂ. ಅನುವಾದ ಎನ್.ಎಸ್.

18_70A_DBJK-KUH

 

ಪತ್ತಮಡೈ ಪಾಯ್ ತಮಿಳುನಾಡಿನಲ್ಲಿ ತಯಾರಾಗುವ ಕಲಾತ್ಮಕವಾದ ಚಾಪೆ. ತಿರುನಲ್ವೇಲಿ ಜಿಲ್ಲೆಯ ಮಹಾನಗರದಿಂದ ಇಪ್ಪತ್ತು ಕಿ.ಮೀ. ದೂರದಲ್ಲಿರುವ ಊರು ಪತ್ತಮಡೈ ಎಂಬುದು. ಈ ಊರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜನರೆಂದರೆ ಮಹಮ್ಮದಿಯರು. ಈ ಊರಿನಲ್ಲಿಯೇ ಜಗತ್ಪ್ರಸಿದ್ಧಿ ಪಡೆದ ‘ಪಟ್ಟುಪ್ಪಾಯ್’ (ರೇಷ್ಮೆ ಚಾಪೆ)ಯನ್ನು ಉತ್ಪತ್ತಿ ಮಾಡಲಾಗುತ್ತದೆ. ಸಹಜವಾದ ರೇಷ್ಮೆಯಿಂದ ತಯಾರಾದ ಮೃದುತ್ವ ಮತ್ತು ಗುಣಭರಿತವಾದ ಈ ಚಲುಮರದ ಗರಿಯ ಸಹಾಯದಿಂದ ಹೆಣೆಯಲಾಗುತ್ತದೆ. ಈಚಲು ಗರಿಯಿಂದ ಚಾಪೆಯನ್ನು ಹೆಣೆದರೂ ಕೂಡ ಅದರ ಮೃದುತ್ವ ಮತ್ತು ಗುಣಗಳಿಂದ ರೇಷ್ಮೆ ಚಾಪೆ ಎಂದೇ ಹೆಸರುವಾಸಿ ಪಡೆದುಕೊಂಡಿದೆ.

ತಮಿಳುನಾಡಿನ ಕಡಲ ಭಾಗಗಳಲ್ಲಿಯೇ ಈ ಮರಗಳು ಹೆಚ್ಚಾಗಿ ಬೆಳೆಯುವುದರಿಂದ ಆ ಪ್ರದೇಶದಲ್ಲೇ ಈ ಕಸುಬು ಸಮೃದ್ಧಿಯಾಗಿದೆ.

ಕೋರೈಹುಲ್ಲು (ಗೊರಗಿನ ಹುಲ್ಲು) ಎಂಬುದು ಎತ್ತರವಾಗಿ ಬೆಳೆಯುವ ಹುಲ್ಲುಗಳ ಬಗೆಗಳಲ್ಲಿ ಒಂದು. ಚೆನ್ನಾಗಿ ಬೆಳೆದ ಕೋರೈಹುಲ್ಲನ್ನು ಕುಯ್ದು ತೆಗೆದುಕೊಳ್ಳಬೇಕು. ಈ ಕೋರೈಹುಲ್ಲುಗಳನ್ನು ಕಂತೆಗಳನ್ನಾಗಿ ಕಟ್ಟಿ ಆ ಕಂತೆಗಳನ್ನು ಹರಿಯುವ ನೀರಿನಲ್ಲಿ (ನದಿ, ಕಾಲುವೆ) ಪೂರ್ಣವಾಗಿ ಮುಳುಗುವಂತೆ ಒತ್ತಿ ಇಡಬೇಕು. ಅವು ನೀರಿನಲ್ಲಿ ಜಾರಿ ಹೋಗದಂತೆ ದೊಡ್ಡ ಗಾತ್ರದ ಕಲ್ಲುಗಳನ್ನು ಆ ಕಂತೆಗಳ ಮೇಲೆ ಇಡಬೇಕು. ಕಡಿಮೆ ಎಂದರೂ ಹದಿನೈದು ದಿನಗಳ ಕಾಲವಾದರೂ ಚೆನ್ನಾಗಿ ನೆನೆಯಬೇಕು. ಪ್ರತಿದಿನವೂ ಅವನ್ನು ಗಮನಿಸುತ್ತಾ ಅನಂತರ ತೆಗೆದು ಹರಿಯುವ ನೀರಿನಲ್ಲಿ ಚೆನ್ನಾಗಿ ಜಾಲಿಸಿ ತೊಳೆಯಬೇಕು. ಆಗ ಹುಲ್ಲಿನ ಕಂತೆಗಳು ಶುದ್ಧವಾಗುವುದರೊಡನೆ ಚೆನ್ನಾಗಿ ನೆನೆದು ಚಾಪೆ ಹೆಣೆಯುವುದಕ್ಕೆ ಸುಲಭವಾಗುತ್ತದೆ.

ಹದಿನೈದು ದಿನಗಳಾದ ಮೇಲೆ ಅವನ್ನು ನೆರಳಿನಲ್ಲಿಯೇ ಒಣಗಿಸಬೇಕು. ತದನಂತರ ಚಿಕ್ಕ ಕತ್ತಿಯ ಸಹಾಯದಿಂದ ಕೋರೈಹುಲ್ಲನ್ನು ಒಂದೊಂದಾಗಿ ಸೀಳಿಅದರ ಮಧ್ಯದಲ್ಲಿರುವ ಭಾಗವನ್ನು (ಅನ್ನ, ತಿರುಳು) ತೆಗೆದು ಮೇಲ್ಭಾಗವನ್ನು ಬೇರೆಯಾಗಿ ಇಡಬೇಕು. ಈ ಗರಿಗಳನ್ನು ಎಷ್ಟು ಚಿಕ್ಕದಾಗಿ ಸೀಳಲಾಗುತ್ತದೆಯೋ ಆ ಅಳತೆಗೆ ತಕ್ಕಂತೆ ಚಾಪೆಯೂ ಮೃದುವಾಗಿ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಸಾಧಾರಣವಾಗಿ ನಾವು ಮನೆಗಳಲ್ಲಿ ಉಪಯೋಗಿಸುವ ಚಾಪೆಗಳು ತಯಾರಾಗುವುದು ಸ್ವಲ್ಪ ದಪ್ಪವಾದ ಹುಲ್ಲಿನಿಂದಲೇ.ಆದರೆ ಕೋರೈಹುಲ್ಲಿನ ನಾರು ಈರುಳ್ಳಿಯ ಹೊರಪದರದಂತೆ ತೆಳುವಾಗಿ ಇರುತ್ತದೆ. ಇದರಿಂದ ತಯಾರಿಸುವಂಥದೇ ‘ಪಟ್ಟುಪ್ಪಾಯ್’ ಎಂಬ ತುಂಬ ಮೃದುವಾದ ಚಾಪೆ.

ಸಣ್ಣದಾಗಿ ಸೀಳಿದ ಕೋರೈಹುಲ್ಲುಗಳನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಬೇಕು. ಅದರ ಸಹಜ ಬಣ್ಣದಲ್ಲಿ ಹಸಿರು ಬೆರೆತ ಸ್ವಲ್ಪ ಅರಿಶಿನ ಬಣ್ಣನ ಚಾಪೆ ಹೆಣೆಯುತ್ತಾರೆ. ಬಣ್ಣದ ಚಾಪೆಗಳನ್ನು ಮಾಡುವುದಕ್ಕೆ ಕೋರೈಹುಲ್ಲನ್ನು ಒಣಗಿಸಿದರೆ ಅನಂತರ ಬಣ್ಣ ಹಾಕಲಾಗುವುದು. ಬಹುಪಾಲು ಸಹಜವಾದ ವಸ್ತುಗಳನ್ನು ಉಪಯೋಗಿಸಿಯೇ ಬಣ್ಣ, ಹಾಕುವುದು ಉತ್ತಮ. ಸಹಜವಾದ ಬಣ್ಣ ಹಾಕುವುದರಿಂದ ನೀರಿನಲ್ಲಿ ಚೆನ್ನಾಗಿ ನೆನೆದ ಕೋರೈಹುಲ್ಲಿನ ಸೀಳುಗಳು ಒಣಗುತ್ತವೆ. ಆಗ ಚಾಪೆ ಹೆಣೆಯುವ ವಸ್ತು ತಯಾರಾಗಿದೆ ಎಂಬಂತೆ ಕಂಡುಬರುತ್ತದೆ.

ಕೋರೈ ಚಾಪೆ ಹೆಣೆಯುವುದಕ್ಕಾಗಿ ಪ್ರತ್ಯೇಕವಾದ ಮಗ್ಗ ಇದೆ. ಈ ಮಗ್ಗವನ್ನೂ ಬಿದಿರಿನ ಗಳುಗಳಿಂದಲೂ ಹಗ್ಗಗಳಿಂದಲೂ ಮಾಡಿರುತ್ತಾರೆ. ಈ ಮಗ್ಗ ಬಹಳ ಉದ್ದವಾಗಿರುತ್ತದೆ. ಈ ಮಗ್ಗದಲ್ಲಿ ಹೆಣೆಯಲಾಗುವ ಚಾಪೆಯ ಉದ್ದಕ್ಕೆ ತಕ್ಕಂತೆ ಹತ್ತಿಯ ನೂಲುಗಳನ್ನು ಹೆಣೆಯಲಾಗಿರುತ್ತದೆ. ಹೆಣೆಯಲಾಗಿರುವ ನೂಲುಗಳ ಮಧ್ಯೆ ಅಡ್ಡಲಾಗಿಯೂ ಸಾಲಾಗಿಯೂ ಒತ್ತೊತ್ತಾಗಿಯೂ ಬಣ್ಣಕ್ಕೆ ತಕ್ಕ ರೂಪವನ್ನು ಕೋರೈಹುಲ್ಲನ್ನು ಉಪಯೋಗಿಸಿ ಚಾಪೆಯನ್ನು ತಯಾರು ಮಾಡುತ್ತಾರೆ. ಇದು ತುಂಬ ತಾಳ್ಮೆಯಿಂದ ಮಾಡಬೇಕಾದ ಕೆಲಸ. ಈ ಕೆಲಸವನ್ನು ಹೆಂಗಸರಿಂದಲೇ ಬಹುಪಾಲು ಮಾಡಿಸಲಾಗುತ್ತದೆ. ಹೆಂಗಸರು ಮಗ್ಗದ ಮೇಲೆ ಕುಳಿತುಕೊಂಡು ಮಗ್ಗದ ಹಲಗೆಗಳನ್ನು ಕಾಲುಗಳಿಂದ ನೂಕುವರು. ಸೂಜಿಗೆ ನೂಲು ಪೋಣಿಸುವಂತೆ ಮರದಿಂದ ಮಾಡಲ್ಪಟ್ಟ ಉದ್ದವಾದ ಕೋಲಿನ ತುದಿಯಲ್ಲಿರುವ ತೂತಿನಲ್ಲಿ ಕೋರೈಹುಲ್ಲನ್ನು ಪೋಣೀಸಿ ಅದನ್ನು ಹೆಣೆಯಲಾದ ದಾರಗಳ ಮಧ್ಯದಲ್ಲಿ ಅಡ್ಡಲಾಗಿ ನುಗ್ಗಿಸಿ ಮುಂದಿನ ಬದಿಗೆ ತಳ್ಳುವರು. ಅದಲ್ಲೆ ಅಡ್ಡಲಾಗಿ ಒಂದು ಚಾಪೆಯ ಸಾಲನ್ನು ಹಾಕಲಾಗುತ್ತದೆ. ಒಂದು ಹಲಗೆಯ ಸಹಾಯದಿಂದ ಅದನ್ನು ನೇರವಾಗಿಯೂ ಮುಂದೆ ಹಾಕಿದ ಕೋರೈಹುಲ್ಲನ್ನು ಒತ್ತಾಗಿಯೂ ಅದನ್ನು ಅಮುಕಿ ಚಾಪೆಯ ರೂಪವನ್ನು ಕೊಡುತ್ತಾರೆ. ಒಂದು ಸಲ ಒಂದು ಕೋರೈಹುಲ್ಲನ್ನು ಹಾಕಿ ಒತ್ತಿದ ಮೇಲೆ ಕಾಲಿನಿಂದ ಹೆಣೆಯಲಾದ ದಾರಗಳ ರೂಪ ಬದಲಾವಣೆಗೊಳ್ಳುತ್ತದೆ.

ಅನಂತರ ಬೇರೆ ಕೋರೈ ಹುಲ್ಲನ್ನು ಹಾಕಲಾಗುವುದು. ಈ ರೀತಿಯಾಗಿ ಪ್ರಾರಂಭದಿಂದ ಹುಲ್ಲನ್ನು ಹಾಕಿದಾಗ ಅದು ದಪ್ಪನೆಯ ಚಾಪೆಯಾಗಿ ರೂಪುಗೊಳ್ಳುತ್ತದೆ. ಕೋರೈ ಚಾಪೆಯನ್ನು ಹೆಣೆಯುವ ಹೆಂಗಸರು ಚಾಪೆಯನ್ನು ಸುಂದರವಾಗಿ ಹೆಣೆಯುವುದರಲ್ಲಿ ಹೆಸರಾದವರು. ಆದ್ದರಿಂದ ಕೋರೈಹುಲ್ಲನ್ನು ಹಾಕುವಾಗಲೇ ರೂಪಕ್ಕೆ ತಕ್ಕಂತೆ ಬಣ್ಣಗಳ ಬಳಕೆಯನ್ನು ಆಯ್ಕೆ ಮಾಡಿ ಚಾಪೆಯನ್ನು ಹೆಣೆಯುವರು. ಕೋರೈನ ಮೇಲ್ಭಾಗಕ್ಕೆ ಯಾವ ರೂಪವನ್ನು ಕೊಡಬೇಕು ಎಂಬುದನ್ನು ಮುಂಚಿತವಾಗಿಯೇ ತೀರ್ಮಾನಿಸಿರುತ್ತಾರೆ. ಅದಕ್ಕೆ ತಕ್ಕಂತೆ ಮಗ್ಗದಲ್ಲಿ ದಾರಗಳನ್ನು ಹೆಣೆದಿರುತ್ತಾರೆ. ಚಾಪೆ ಪೂರ್ಣ ರೂಪ ಪಡೆದ ಮೇಲೆ ಅದನ್ನು ಮಗ್ಗದಿಂದ ಬಿಡಿಸಿ ತೆಗೆದು ಅದರ ಉದ್ದವಾಗಿರುವ ಎರಡು ಕೊನೆಯ ಭಾಗಗಳನ್ನು ಹೆಚ್ಚಾಗಿರುವಮಥ ದಾರಗಳಿಂದ ಗಟ್ಟಿಯಾಗಿ ಅಲಂಕಾರಭರತಿವಾಗಿ ಕಟ್ಟಿಬಿಡುವರು. ಇದರಿಂದ ಕೋರೈಗಳು ಚಾಪೆಯ ರೂಪದಿಂದ ಇನ್ನೊಂದು ರೂಪ ಪಡೆಯುವುದು ತಪ್ಪುತ್ತದೆ. ಅನಂತರ ಎರಡು ಬದಿಯ ಭಾಗಗಳನ್ನು ಹಗ್ಗದ ಸಹಾಯದಿಂದ ಮುಚ್ಚುವಂತೆ ಹೊಲಿದುಬಿಡುತ್ತಾರೆ.

ಈ ರೀತಿಯಲ್ಲಿ ಮಗ್ಗದಲ್ಲಿ ನೆಯ್ಯುವ ಚಾಪೆಯನ್ನು ತಾಮಿರಬರಣಿ ನದಿ ತೀರದಲ್ಲಿ ಸಿಗುವಂತಹ ನುಣ್ಣನೆಯ ಕಲ್ಲುಗಳ ಸಹಾಯದಿಂದ ಚೆನ್ನಾಗಿ ಉಜ್ಜಲಾಗುವುದು. ಈ ರೀತಿಯಲ್ಲಿ ಉಜ್ಜುವುದರಿಂದ ಚಾಪೆಯು ತನ್ನ ಒರಟುತನವನ್ನು ಬಿಟ್ಟು ಮೃದುತನ ಪಡೆಯುತ್ತದೆ. ಚಾಪೆಯನ್ನು ಮಗ್ಗದಲ್ಲಿ ನೆಯ್ಯುವಾಗ ಒಂದು ಹಿಡಿ ಅಳತೆಯ ಎಷ್ಟು ಕೋರೈಗಳನ್ನು ಹಾಕಲಾಗಿರುತ್ತದೆ. ಒತ್ತಾಗಿ ರೂಪುಪಡೆಯುತ್ತಿರುವುದರ ಲೆಕ್ಕದ ಹಿನ್ನೆಲೆಯಲ್ಲಿ ಕೋರೈಗಳ ಗುಣವನ್ನು ತಿಳಿಯಲಾಗುತ್ತದೆ. ಒಂದು ಹಿಡಿಯಷ್ಟು ಅಳತೆಯಲ್ಲಿ ಇಪ್ಪತ್ತರಿಂದ ನಲ್ವತ್ತರವರೆಗಿನ ಲೆಕ್ಕದಲ್ಲಿ ಕೋರೈಗಳು ಇದ್ದರೆ ಅವು ಕಠಿಣ ಚಾಪೆಗಳು ಎಂದು ವಿಭಾಗಿಸಲಾಗುತ್ತದೆ. ನಾವು ಮನೆಯಲ್ಲಿ ಉಪಯೋಗಿಸುವ ಚಾಪೆ ಈ ಉದ್ದಳತೆಯ ಬಂಧನಕ್ಕೆ ಉಪಯೋಗಿಸುವ ಚಾಪೆ ಈ ಉದ್ದಳತೆಯ ಬಂಧನಕ್ಕೆ ಸೇರಿದ್ದಾಗಿರುತ್ತದೆ. ಇದರ ಬೆಲೆಯೂ ಕೂಡ ತುಂಬ ಕಡಿಮೆ. ಅದಲ್ಲದೆ ಈ ಅಳತೆಯ ಚಾಪೆಯನ್ನು ನೆಯ್ಯಲು ಕಡಿಮೆ ಸಮಯ ಸಾಕಾಗುತ್ತದೆ.

ಕೋರೈಗಳ ಲೆಕ್ಕ ಹೆಚ್ಚಾದಾಗ ಚಾಪೆಯ ಮೃದುತ್ವ ಗುಣ ಇಮ್ಮಡಿಗೊಳ್ಳುತ್ತದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುವ ಸಮಯ ಕೂಡ ಹೆಚ್ಚಾಗುತ್ತದೆ. ಆದ್ದರಿಂದಲೇ ಚಾಪೆಯ ಬೆಲೆಯಲ್ಲೂ ಬದಲಾವಣೆ ಕಂಡುಬರುತ್ತದೆ. ರೇಷ್ಮೆ ಚಾಪೆ ಎಂಬುದು ಒಂದು ಹಿಡಿಯಷ್ಟು ಅಳತೆಯಲ್ಲಿ ೪೦೦ರಿಂದ ೫೦೦ ವರೆಗಿನ ಮೃದುವಾದ ಕೋರೈಗಳನ್ನು ಒಳಗೊಂಡಿರುತ್ತದೆ. ಆದ್ದರಿಂದಲೇ ಅದನ್ನು ನೆಯ್ಯುವುದಕ್ಕೆ ಒಂದು ತಿಂಗಳ ಕಾಲ ಬೇಕಾಗುವುದರಿಂದ, ಅದರ ಬೆಲಯೂ ಕೂಡ ಅದಕ್ಕೆ ತಕ್ಕಂತೆ ಹೆಚ್ಚಾಗಿಯೇ ಇರುತ್ತದೆ. ಮುಖ್ಯವಾಗಿ ತಮಿಳುನಾಡಿನಲ್ಲಿ ರೇಷ್ಮೆ ಚಾಪೆ ಎಂಬುದು ‘ಪತ್ತಮಡೈ’ ಎಂಬ ಪ್ರದೇಶದಲ್ಲಿ ಮಾತ್ರ ತಯಾರಾಗುತ್ತದೆ. ಅಲ್ಲದೆ ೬ ಅಡಿ ಉದ್ದ, ೪ಅಡಿ ಅಗಲವನ್ನು ಒಳಗೊಂಡ ಪಟ್ಟುಪಾಯ್‌ನ್ನು ಚೆನ್ನಾಗಿ ಮಡಿಸಿ ಕೈ ಚೀಲದಲ್ಲಿ ಸುಲಭವಾಗಿ ನಾವು ತೆಗೆದುಕೊಂಡು ಹೋಗಬಹುದು.

ಚಾಪೆಯ ರೂಪ ನಿರ್ಮಾಣದಲ್ಲಿ ಬಣ್ಣಗಳು ಮುಖ್ಯ ಪಾತ್ರವಹಿಸುವ ಹಾಗೆಯೇ, ರೂಪ, ಅಲಂಕಾರಿಕ ಅಕ್ಷರ ಮತ್ತು ಚಿತ್ರಗಳು ಕೂಡ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಲ್ಲದೆ ಮದುವೆಯಾಗುವ ಹೊಸ ದಂಪತಿಗಳಿಗೆ ಅವರ ಹೆಸರುಗಳನ್ನು, ಮದುವೆಯ ದಿನಾಂಕವನ್ನು ಒಳಗೊಂಡ ಚಾಪೆಯನ್ನು ಉಡುಗೊರೆಯಾಗಿ ಕೊಡಲಾಗುತ್ತದೆ ಎಂಬುದು ಈಗಲೂ ಕೆಲವರಲ್ಲಿ ರೂಢಿಯಲ್ಲಿದೆ ಎಂಬುದು ವಿಶೇಷ ಸಂಗತಿ. ಕೋರೈ ಚಾಪೆ ಎಂಬುದು ಜನರ ಜೀವನದೊಡನೆ ಬೆಸೆದು ಹೋಗುವ ಒಂದು ಕೈಚಳಕದ ವಸ್ತು. ಇದನ್ನು ನೆಲದ ಮೇಲೆ ಹಾಸಿ ಮಲಗುವುದರ ಮೂಲಕ ನೆಲದಲ್ಲಿರುವ ತಂಪು ಗುಣ ಹಾಗೂ ಉಷ್ಣ ಗುಣಗಳು ನಮ್ಮ ದೇಹವನ್ನು ತಾಕದು ಎಂದು ಹೇಳುತ್ತಾರೆ. ಕೋರೈ ಚಾಪೆ ನಮ್ಮ ಚರ್ಮಕ್ಕೆ ತೊಂದರೆಯಾಗದೆ ಒಳ್ಳೆಯ ಫಲವನ್ನು ನೀಡುತ್ತದೆ ಎಂಬುದು ಇದರ ವೈಶಿಷ್ಟ್ಯವಾಗಿದೆ.

ಪಿ.ಎ. ಅನುವಾದ ಆರ್.ಎಸ್.

 

ಪತ್ತಾಯಪ್ಪುರ ಕೇರಳೀಯ ವಾಸ್ತುಶಿಲ್ಪ ಸಂಪ್ರದಾಯವು ವೈವಿಧ್ಯಪೂರ್ಣ ಮನೆಗಳ ನಿರ್ಮಾಣಕ್ಕೆ ರೂಪದಾನ ಮಾಡಿದೆ. ಸಮಾಜದಲ್ಲಿನ ಸ್ಥಾನಮಾನ, ಆರ್ಥಿಕ ಸಾಮರ್ಥ್ಯಗಳಿಗನುಗುಣವಾಗಿ ದೊಡ್ಡ ಅಥವಾ ಸಣ್ಣ ಮನೆಗಳ ನಿರ್ಮಾನವಾಗುತ್ತದೆ. ಕುಡಿಲ್ (ಗುಡಿಸಲು), ಮಾಡಂ, ಚಾಳ, ಚೆಟ್ಟ (ತಡಿಕೆಮನೆ), ಒಟ್ಟಪ್ಪುರ (ಒಂಟಿಮನೆ), ನಾಲ್‌ಕೆಟ್ಟ್(ಚೌಕಟ್ಟಿನ ಮನೆ), ಕೊಟ್ಟಾರಂ(ಅರಮನೆ), ಕೋವಿಲಗಂ (ದೇವಾಲಯ), ಇಲ್ಲಂ (ಬ್ರಾಹ್ಮಣ/ನಂಬೂದಿರಿಗಳು ಮನೆ), ಮನ-ಹೀಗೆ ಆ ಪಟ್ಟಿ ಬೆಳೆಯುತ್ತದೆ. ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗತಿಗಳು ಉನ್ನತವಾಗಿರುವವರು ತುಂಬ ಸಂಕೀರ್ಣವಾದ ಕಟ್ಟಡ ಸಮುಚ್ಚಯಗಳಲ್ಲಿ ವಾಸಿಸುತ್ತಾರೆ. ಈ ಕಟ್ಟಡ ಸಮುಚ್ಚಯಗಳಿಗೆಲ್ಲ ನಿರ್ದಿಷ್ಟ ಧರ್ಮಗಳಿವೆ. ನಾಲ್ಕು ಕಟ್ಟಿನ ಮನೆಯ ಮಾದರಿಯಲ್ಲಿ ಅವುಗಳ ಮುಂಭಾಗ ಹಿಂಭಾಗಗಳಲ್ಲಿ ‘ಪಡಿಪ್ಪುರ’ ಮಾಳಿಗೆಗಳನ್ನು ನಿರ್ಮಿಸುವುದಿದೆ. ಬರುವ ಅತಿಥಿಗಳಿಗೆ ಉಳಕೊಳ್ಳಲು ಅದರಲ್ಲಿ ಸೌಕರ್ಯವಿರುತ್ತದೆ. ಅರಮನೆಗಳಲ್ಲಿ ‘ಕುಳಪ್ಪುರ’ಗಳ ಸ್ಥಾನದಲ್ಲಿ ‘ಕುಳಪ್ಪುರಮಾಳಿಗೆ’ ಇರುತ್ತದೆ. ರೇಶ್ಮೆ ಬಟ್ಟೆಯನ್ನೂ ಚಿನ್ನದ ಬಳೆಗಳನ್ನೂ ನೀಡಿ ಸ್ವೀಕರಿಸಿದ ರಾಣಿಯರಿಗೆ ವಾಸಿಸಲು ಈ ಕಟ್ಟಡ ಉಪಯೋಗವಾಗುತ್ತದೆ. ನಿತ್ಯ ಅನ್ನದಾಸೋಹದ ಪ್ರಭುಭವನಗಳಲ್ಲಿ ಅನ್ನಚ್ಛತ್ರಗಳನ್ನು ನಿರ್ಮಿಸುವ ಕ್ರಮವಿದೆ. ದಾರಿಹೋಕರಿಗೂ ಊಟ ಮಾಡುವವರಿಗೂ ಬಂಧುಜನಕ್ಕೂ ಊರವರಿಗೂ ಊಟವನ್ನು ತಯಾರಿಸಿ ಉಣಬಡಿಸಲು ಅಗತ್ಯವಾದ ಸೌಕರ್ಯ ಈ ಸತ್ರಗಳಲ್ಲಿರುತ್ತದೆ. ಧಾನ್ಯಗಳು, ತರಕಾರಿ, ಪಾತ್ರೆ ಸಾಮಾನುಗಳನ್ನು ಕಾಪಿಡಲು ‘ಕಲವರ’ ಇರುತ್ತದೆ. ಇವುಗಳ ಹಾಗೆಯೇ ಒಂದು ಪ್ರತ್ಯೇಕ ಉದ್ದೇಶದ ಕಟ್ಟಡ-ಪತ್ತಾಯಪ್ಪುರ (ಕಣಜಮನೆ).

ಹೆಸರಿನಂತೆಯೇ ಈ ಪತ್ತಾಯಪ್ಪುರವು ಮುಖ್ಯವಾಗಿ ಧಾನ್ಯಗಳನ್ನೂ ಬೆಳೆಸಿದ ಇತರ ವಸ್ತುಗಳನ್ನೂ ಕಾಪಿಡುವ ಮನೆ. ‘ನಾಲ್ಕುಕಟ್ಟಿನ ಮನೆ’ಗಳ ಆಗ್ನೇಯ ದಿಕ್ಕಿನಲ್ಲಿ ಸಾಮಾನ್ಯವಾಗಿ ಪತ್ತಾಯಪ್ಪುರ ನಿಂಆðನವಾಗುತ್ತದೆ. ಪ್ರತಿ ಕೋಣೆಗಳಿಗೆ ಎರಡು ಅಂತಸ್ತು ಇರುತ್ತದೆ. ಕೆಳಗಿನ ಅಂತಸ್ತು ಎರಡೋ ಮೂರೋ ಅಡಿ ಎತ್ತರವಿರುತ್ತದೆ. ಇದರ ಬಾಗಿಲು ಸಪಾಟು ಹಲಗೆಯಂತಿರುತ್ತದೆ. ಮೇಲಿನ ಅಂತಸ್ತಿಗೂ ಕೆಳಗಿನ ಅಂತಸ್ತಿನಲ್ಲಿ ಬಾಳೆಗೊನೆಗಳನ್ನು ಹಣ್ಣು ಮಾಡಲು ಇರಿಸುವುದಿದೆ. ಮೇಲಂತಸ್ತಿನಲ್ಲಿ ಭತ್ತವನ್ನು ತುಂಬಿಡುತ್ತಾರೆ. ಪತ್ತಾಯಪ್ಪುರದ ಎರಡನೆ ನೆಲೆಯಲ್ಲೂ ಹೀಗೆಯೇ ಇರುವ ಮರದ ಅಂತಸ್ತುಗಳಿರುತ್ತವೆ. ಒಂದೆರಡು ಕೋಣೆಗಳು ವಾಸಯೋಗ್ಯವೂ ಆಗಿರುತ್ತವೆ. ಮೂರನೇ ನೆಲೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಬಳಸುವ ಗೃಹೋಪಯೋಗಿ ಪಾತ್ರೆ ಸಾಮಾನುಗಳನ್ನೂ ದೀಪಗಳನ್ನೂ ಜೋಪಾನವಿರುಸುತ್ತಾರೆ. ಇದು ಮೂರು ನೆಲೆಯ ಕಟ್ಟಡವಾಗಿರುತ್ತದೆ. ಇದರ ಮುಖ ಬಡಗು ದಿಕ್ಕಿಗಿರುತ್ತದೆ. ತೆಂಕು ಭಾಗವನ್ನು ಪೂರ್ತಿಯಾಗಿ ಗೋಡೆಗಳಿಂದ ಮುಚ್ಚಲಾಗಿರುತ್ತದೆ. ಆದರೂ ಅನಿವಾರ್ಯವಾಗಿ ಹೊರಗೆ ಹೋಗಲು ಒಂದು ಬಾಗಿಲು ಇರುತ್ತದೆ. ಕೆಳಗಿನ ನೆಲೆಯಲ್ಲಿ ಬಡಗು ಮುಖವಾಗಿರುವುದೇ ‘ಪೂಮುಖಂ’ ತರವಾಡು ಮುಖ್ಯಸ್ಥ ಇಲ್ಲೇ ವಾಸಿಸುತ್ತಾನೆ. ಕೆಳನೆಲೆಯ ಹೆಚ್ಚಿನ ಭಾಗವೂ ಕಚೇರಿಯಾಗಿ ಬಳಕೆಯಾಗುತ್ತದೆ. ಉಳಿದ ಭಾಗವನ್ನು ಕೋಣೆಗಳಾಗಿ ವಿಭಜನೆ ಮಾಡಿರುತ್ತದೆ. ಈ ಕೋಣೆಗಳ ಮುಕ್ಕಾಲು ಭಾಗವೂ ಮರದ ಹಲಗೆಗಳಿಂದಲೇ ರಚಿಸಿದ ಕಿರುಕೋಣೆಗಳಾಗಿರುತ್ತವೆ. ಮೂರನೇ ನೆಲೆಗೆ ಛಾವಣಿಯೂ ಇರುತ್ತದೆ. ದೊಡ್ಡ ಪತ್ತಾಯಪ್ಪುರವಾಗಿದ್ದಲ್ಲಿ ಅದರ ಎರಡು ಕಡೆಯಲ್ಲೂ ಏಣಿ ಮೆಟ್ಟಲುಗಳಿರುತ್ತವೆ.

.ಕೆ.ಜಿ. ಅನುವಾದ ಕೆ.ಕೆ.

 

ಪತ್ತಿರಿ ಪತ್ತಿರಿಯು ಮಲಬಾರಿನ ಮುಸ್ಲಿಂ ಜನರಲ್ಲಿ ತುಂಬ ಪ್ರಸಿದ್ಧವಾದ ತಿನಿಸು ರೊಟ್ಟಿ. ಕೋಳಿಪದಾರ್ಥ ಮತ್ತು ಪತ್ತಿರಿ ತುಂಬ ಪ್ರಶಸ್ತವಾದ ಸೇರ್ಕೆ (Combination) ಪತ್ತಿರಿಯನ್ನು ಹಲವಾರು ಹಂತಗಳಲ್ಲಿ ಸಿದ್ದಪಡಿಸಬೇಕಾಗುತ್ತದೆ. ಅಕ್ಕಿಯನ್ನು ತುಂಬ ಚಿಕ್ಕದಾಗಿ ಪುಡಿ ಮಾಡಬೇಕು. ಇವುಗಳನ್ನು ಹುರಿದು ಇಟ್ಟುಕೊಳ್ಳುತ್ತಾರೆ. ಇದನ್ನು ಕುದಿ ನೀರಿಗೆ ಹಾಕಿ ಸ್ವಲ್ಪ ಬೇಯಿಸಿ ತೆಗೆಯಬೇಕು. ಬಳಿಕ ಅದನ್ನು ಕಲಸಿ ಸಣ್ಣ ಉಂಡೆಗಳಾಗಿ ಮಾಡಲಾಗುತ್ತದೆ. ಅದನ್ನು ತೆಳ್ಳಗೆ ಹಲಗೆಯಲ್ಲಿ ಹರಡಲಾಗುತ್ತದೆ. ಇದನ್ನು ಹರಡಲು ಬಳಸುವ ಸ್ವಲ್ಪ ಉದ್ದನೆಯ ಉಪಕರಣಕ್ಕೆ ‘ಪತ್ತಿರಿಕುಯಲ್’ ಎಂದು ಹೆಸರು. ಉರುಟಾಗಿ ಹರಡುವುದು ಪರಿಣತರಿಗಷ್ಟೆ ಸಾಧ್ಯ. ಬಳಿಕ ಇದನ್ನು ಒಲೆಯ ಓಡಿನಲ್ಲಿ ಸುಟ್ಟು ತೆಗೆಯುತ್ತಾರೆ. ಪತ್ತಿರಿಯನ್ನು ಸುಟ್ಟು ತೆಗೆಯುವ ಪಾತ್ರೆ ಕೂಡ ಕೆಲವು ಮುಸ್ಲಿಂ ಮನೆಗಳಲ್ಲಿ ವಿಶೇಷತೆಯದಾಗಿರುತ್ತದೆ. ‘ಪತ್ತಿರಿಚಟ್ಟ’ ಎಂಬ ಹೆಸರಿನ ಇದನ್ನು ಬೇರೆ ಉಪಯೋಗಕ್ಕೆ ಬಳಸಿದರೆ ಮತ್ತೆ ಇದರಲ್ಲಿ ರೊಟ್ಟಿ ಸರಿಯಾಗಿ ಬೆಂದು ಸಿಗುವುದಿಲ್ಲ (ಎಂಬುದು ನಂಬಿಕೆ).

ಪತ್ತಿರಿಯ ಮಲಬಾರ್ ಮುಸ್ಲಿಮರ ನಿತ್ಯ ಆಹಾರ. ವಿಶೇಷ ದಿನಗಳಲ್ಲಂತೂ ಇದು ಇದ್ದೇ ಇರಬೇಕು. ವ್ರತಾಚರಣೆಯ ಕಾಲದಲ್ಲಿ ‘ನೋಂಎಬ್ ತುರಕ್ಕಲ್’ (ಪಾರಣೆ)ಗೆ ಮೂವತ್ತು ದಿನಗಳಲ್ಲೂ ಇದು ಸಿದ್ಧವಾಗುತ್ತದೆ. ಧಾರ್ಮಿಕ ಮನೋಭಾವದ ಮುಸ್ಲಿಮರಿಗೆ ಇದು ಪ್ರಾಧಾನ್ಯವುಳ್ಳ ತಿನಿಸು. ಹರಕೆಯ ರೂಪದಲ್ಲಿ ಇದನ್ನು ಮಸೀದಿಗಳಿಗೆ ನೀಡುತ್ತಾರೆ. ಅಂಥ ದಿನಗಳಲ್ಲಿ ಅಲ್ಲಿ ಸಂಗ್ರಹಿತವಾದವುಗಳನ್ನು ಎಲ್ಲ ಮನೆಗಳಿಗೂ ಹಂಚಲಾಗುತ್ತದೆ. ಇಂಥ ಪತ್ತಿರಿಯನ್ನು ಸೇವಿಸಿದರೆ ತುಂಬ ಬರ್ಕತ್ತ್‌(ಭಾಗ್ಯ) ಉಂಟಾಗುವುದೆಂದು ನಂಬುತ್ತಾರೆ.

ಪತ್ತಿರಿ ತಯಾರಿಯಲ್ಲಿ ಇಂದು ತುಂಬ ಬದಲಾವಣೆಗಳಾಗಿವೆ. ಕೆಲಸವನ್ನು ಹಗುರಗೊಳಿಸುವ ಯಂತ್ರಗಳು ಬಂದಿವೆ. ಪತ್ತಿರಿಕುಯಲ್ ಮತ್ತು ಪತ್ತಿರಿಚಟ್ಟಗಳು ಇಂದು ಅಷ್ಟೇನೂ ಪರಿಚಿತವಲ್ಲ. ಇಂದು ಪತ್ತಿರಿಯನ್ನು ಹರಡಲು ಒತ್ತು ಯಂತ್ರವೂ ಸುಟ್ಟು ತೆಗೆಯಲು ಪಾನ್‌ಗಳೂ ನಾನ್‌ಸ್ಟಿಕ್ (Non-stick) ಪಾತ್ರೆಗಳೂ ಉಪಯೋಗವಾಗುತ್ತವೆ.

ಪತ್ತಿರಿಯನ್ನು ಹಲವು ವಿಧದಲ್ಲಿ ತಯಾರಿಸುತ್ತಾರೆ. ಅದಕ್ಕೆ ಪ್ರಾದೇಶಿಕ ಭೇದಗಳೂ ಇವೆ. ಕೆಲವೆಡೆ ಇದನ್ನು ಸ್ವಲ್ಪ ದಪ್ಪವಾಗಿಯೂ ಚಿಕ್ಕದಾಗಿಯೂ ಹರಡಿಕೊಂಡು ಎಣ್ಣೆಯಲ್ಲಿ ಕರಿಯುತ್ತಾರೆ. ಕಟ್ಟಿಪತ್ತಿರಿ (ದಪ್ಪ), ತೇಙಾ (ತೆಂಗಿನಕಾಯಿ) ಪತ್ತಿರಿ, ಬೇಯಿಸಿದ ಪತ್ತಿರಿ, ವೀಶಿ (ಮ.) ಪತ್ತಿರಿ, ಅರ್ಧ ಸುಟ್ಟ ಪತ್ತಿರಿ, ಮೀನು ಪತ್ತಿರಿ, ಮಾಂಸ ಪತ್ತಿರಿ, ಚಟ್ಟಿ ಪತ್ತಿರಿ, ತೂತೂ ತೂತೂ ಪತ್ತಿರಿ, ಪೆಟ್ಟಿ (ಗೆ) ಪತ್ತಿರಿ, ಮೊಟ್ಟೆ ಪತ್ತಿರಿ-ಹೀಗೆ ಹಲವು ತೆರನ ಪತ್ತಿರಿಗಳಿವೆ. ಇದರಲ್ಲಿ ನಿರ್ಣಾಯಕವಾಗುವುದು ಅವನ್ನು ತಯಾರಿಸುವ ರೀತಿಯಲ್ಲಿನ ವ್ಯತ್ಯಾಸ. ಬೇಯಿಸಿದ ಪತ್ತಿರಿ, ವೀಶಿಪತ್ತಿರಿಗಳು ಆವಿಯಲ್ಲಿ/ಹಬೆಯಲ್ಲಿ ಬೇಯಿಸಿ ತೆಗೆಯುವಂಥವು. ಸೇರಿಸಿಕೊಳ್ಳುವ ವ್ಯಂಜನಗಳಿಗೆ ಅನುಸಾರವಾಗಿಯೂ ಪತ್ತಿರಿಗಳಲ್ಲಿ ಹಲವು ವಿಧದವುಗಳಿವೆ. ಕೊನೆಗೆ ಹೇಳಿದ ಚಟ್ಟಿಪತ್ತಿರಿ, ಪೆಟ್ಟಿ(ಗೆ) ಪುತ್ತರಿ ಮುಂತಾದವುಗಳಲ್ಲಿ ಅಕ್ಕಿ ಹುಡಿಯಾಗಲಿ ಮೇಲೆ ಹೇಳಿದ ತಯಾರಿಯ ಹಂತಗಳೇ ಇಲ್ಲ. ಬಹುಶಃ ಅದರ ವೃತ್ತಾಕೃತಿ ಮಾತ್ರವೇ ಇವನ್ನು ಪತ್ತಿರಿ ಎಂಬ ಹೆಸರಿನಿಂದ ಕರೆಯಲು ಕಾರಣವಿರಬೇಕು.

.ಕೆ.ಎಸ್. ಅನುವಾದ ಕೆ.ಕೆ.

 

ಪದನೀರ್‘ಪದನೀರ್’ (ನೀರಾ) ಎಂಬುದು ದಕ್ಷಿಣ ತಮಿಳುನಾಡಿನ ಜನರ ನಿಸರ್ಗದತ್ತ ಪಾನೀಯಗಳಲ್ಲಿ ಒಂದು. ತೆಂಗು, ಪನೆಮರ (ತಾಟಿನಿಂಗುಮರ), ಈಚಲು, ತಾಳೆ ಮುಂತಾದವು ನೀರಾ ಸ್ರವಿಸುವ ಸಸ್ಯವರ್ಗಗಳಾಗಿವೆ. ‘ಪತಿಗಳು’ (ಅರಸರು) ಪನೆಮರದ ರಸವನ್ನು ಕುಡಿಯುತ್ತಿರುವುದರಿಂದ ಅದಕ್ಕೆ ‘ಪದನೀರ್’ ಎಂಬ ಹೆಸರು ಬಂದಿದೆ. ಇದನ್ನು ಜನರು ‘ಪೈನಿ’, ‘ಪದಿನಿ’ ಎಂದು ಕರೆಯುತ್ತಾರೆ. ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಸಾಮಾನ್ಯವಾಗಿ ಪನೆಮರದಿಂದ ನೀರಾ ಇಳಿಸಲಾಗುತ್ತದೆ. ಪನೆಮರದಲ್ಲಿ ಗಂಡು ಪನೆಮರ, ಹೆಣ್ಣು ಪನೆಮರ ಎಂದು ಎರಡು ವಿಧಗಳಿವೆ. ಎರಡು ಬಗೆಯ ಮರಗಳೂ ನೀರಾವನ್ನು ನೀಡುತ್ತವೆ. ಗಂಡು ಪನೆಮರ ಜನವರಿಯಿಂದ ಮಾರ್ಚ್‌ ತಿಂಗಳವರೆಗೆ, ಹೆಣ್ಣು ಪನೆಮರ ಏಪ್ರಿಲ್‌ನಿಂದ ಜುಲೈ ತಿಂಗಳವರೆಗೆ ನೀರಾವನ್ನು ಸ್ರವಿಸುತ್ತವೆ. ಪನೆಮರವನ್ನು ಹತ್ತುವುದು, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಹತ್ತುವುದು ಮುಂತಾದ ವಿಧಾನಗಳನ್ನು ಅನುಸರಿಸುತ್ತಾರೆ.

ಗಂಡು ಪನೆಮರವನ್ನು ಹತ್ತುವ ಕಾಲವಾದ ಜನವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಒಂದು ದಿನಕ್ಕೆ ಮೂರುಬಾರಿ ನೀರಾ ಇಳಿಸಲು ಮರವೇರುತ್ತಾರೆ. ಹೆಣ್ಣು ಪನೆಮರವನ್ನು ಏಪ್ರೀಲ್, ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಒಂದು ದಿನಕ್ಕೆ ನೀರಾ ಇಳಿಸಲು ಎರಡುಬಾರಿ ಏರುತ್ತಾರೆ. ಮರವನ್ನೇರುವ ಸಮಯವನ್ನು ಆಧರಿಸಿ ‘ಕಾಲೈಪನೈ’ (ಬೆಳಗಿನ ಪನೆ), ‘ಮಾಲೈಪನೈ’ (ಸಂಜೆಪನೆ) ಅಥವಾ ‘ಅಂದಿಪನೈ’ (ಸಂಧ್ಯಾಪನೆ) ಎಂದು ಮೂರು ರೀತಿಯಲ್ಲಿ ಕರೆಯಲಾಗುತ್ತದೆ.

ನೀರಾ ಇಳಿಸುವುದು: ನೀರಾ ಸ್ರವಿಸುವ ಕಾಲಕ್ಕೆ ಮುನ್ನವೇ ಪನೆಮರದ ಗರಿಗಳನ್ನು ಕಡಿಯಲಾಗುತ್ತದೆ. ಗಂಡು ಮರಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಹಾಗೂ ಹೆಣ್ಣು ಮರಗಳಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಗರಿಗಳನ್ನು ಕಡಿಯಲಾಗುತ್ತದೆ. ಗಂಡು ಮರಗಳಲ್ಲಿ ಗರಿಗಳು ಲಂಬವಾಗಿ ಹಾಗೂ ಹೆಚ್ಚು ಸಂಖ್ಯೆಯಲ್ಲಿ ಬೆಳೆಯುವುದೇ ಇದಕ್ಕೆ ಕಾರಣ. ಮಡಕೆ ಕಟ್ಟಲು ಅನುವಾಗಲಿ ಎಂಬ ಉದ್ದೇಶದಿಂದ ಗರಿಗಳನ್ನು ಕೆಳಮುಖವಾಗಿರುವಂತೆ ಅಣಿಗೊಳಿಸಲಾಗುತ್ತದೆ. ಗಂಡುಮರದ ಹೊಂಬಾಳೆಯಲ್ಲಿ ಬೆರಳಿನಾಕಾರದಲ್ಲಿ ಬೆಳೆಯುತ್ತ ಹೊರಬರುವ ಭಾಗವನ್ನು ಚಿವುಟಲಾಗುತ್ತದೆ. ಇದನ್ನು ‘ಕಟ್ಟುಪನೆ ಚಿವುಟುವುದು’ ಎನ್ನುತ್ತಾರೆ.

ಹೊಂಬಾಳೆಯನ್ನು ಅಣಿಗೊಳಿಸಿದ ಬಳಿಕ ‘ಒಸಕು’ ಹಾಕುವುದು ಮಾಡಲಾಗುತ್ತದೆ. ಒಸಕು ಹಾಕುವುದು ಎಂದರೆ ಹೊಂಬಾಳೆಯಲ್ಲಿಯ ತೊಗಟೆಯನ್ನು ತೆಗೆದು ಮೇಲೆ ಅದನ್ನು ಕೆಳಗಿನಿಂದ ಮೇಲಕ್ಕೆ ಕೈಯಿಂದ ನೀವಿ ಅದರ ಚಿಗುರನ್ನು ಒಸಕುವುದಾಗಿದೆ. ಈ ಚಿಗುರನ್ನು ಒಸಕಿದ ಏಳುದಿನಗಳ ಅನಂತರ ನೀರಾ ಸ್ರವಿಸಲಾರಂಭಿಸುತ್ತದೆ. ನೀರಾ ಸ್ರವಿಸಲಾರಂಭಿಸುವುದನ್ನು ಮರದಡಿಯಲ್ಲಿ ಚದುರಿ ಬಿದ್ದಿರುವ ನೀರಾ ಹನಿಗಳಿಂದ ತಿಳಿದುಕೊಳ್ಳಲಾಗುತ್ತದೆ. ತದನಂತರ ಮರದಲ್ಲಿ ಮಡಕೆಯನ್ನು ಕಟ್ಟಲಾಗುತ್ತದೆ. ಮಣ್ಣಿನ ಮಡಕೆಯ ಬಾಯಿಯ ಭಾಗದಲ್ಲಿ ಎರಡು ಪನೆನಾರನ್ನು ಕಟ್ಟಿ ಹಗ್ಗದ ಸಹಾಯದಿಂದ ಮರದ ಎದುರು ಬದುರು ದಿಕ್ಕಿಗೆ ಮಡಕೆಯನ್ನು ಕಟ್ಟಲಾಗುತ್ತದೆ. ಹೀಗೆ ವ್ಯವಸ್ಥಿತವಾಗಿ ಸಂಗ್ರಹವಾಗಿರುವ ನೀರಾವನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡಿರುವ ಐದಾರು ಲೀಟರ್ ಸಾಮರ್ಥ್ಯದ ಆಲಿಕೆಯಾಕಾರದ ಪಾತ್ರೆಯಲ್ಲಿ ತುಂಬಿಸಿಕೊಳ್ಳುತ್ತಾರೆ. ನೀರಾ ಇಳಿಸುವ ಮಡಕೆಯ ಒಳಭಾಗಕ್ಕೆ ಸುಣ್ಣವನ್ನು ಬಳಿಯಲಾಗುತ್ತದೆ.

ಪ್ರಾರಂಭದ ಹಂತದಲ್ಲಿ ಒಮ್ಮೆಗೆ ಅರ್ಧ ಲೀಟರ್, ಮುಕ್ಕಾಲು ಲೀಟರ್ ನೀರಾ ದೊರೆತರೆ ಉಚ್ಛ್ರಾಯ ಹಂತದಲ್ಲಿ ಪ್ರತಿಸಲ ಐದಾರು ಮಡಕೆಯಷ್ಟು ನೀರಾ ದೊರೆಯುತ್ತದೆ. ಮರವೇರುವವರು ಮಡಕೆಯಲ್ಲಿರುವ ನೀರಾವನ್ನು ಮರದ ಮೇಲಿದ್ದುಕೊಂಡೇ ತಮ್ಮ ಬೆನ್ನಿಗೆ ಕಟ್ಟಿಕೊಂಡಿರುವ ಪಾತ್ರೆಗೆ ರವಾನಿಸುತ್ತಾರೆ. ಬಳಿಕ ಅದನ್ನು ಮರದ ಕೆಳಗೆ ತಂದು ಇನ್ನೊಂದು ದೊಡ್ಡ ಪಾತ್ರೆಗೆ ಸುರಿಯಲಾಗುತ್ತದೆ. ಪ್ರಮಾಣವನ್ನು ಆಧರಿಸಿ ನೀರಾ ಕಡಿಮೆ ಇದ್ದರೆ ಅದನ್ನು ನೇರ ಮಾರಾಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಧಿಕವಾಗಿದ್ದರೆ ಪನೆಬೆಲ್ಲ ತಯಾರಿಸಲು ಒಯ್ಯಲಾಗುತ್ತದೆ. ನೀರಾ ‘ಸೇಂದಿ’ (ಹೆಂಡವಾಗಿ)ಯಾಗಿ ಮಾರ್ಪಡುವುದನ್ನು ತಡೆಗಟ್ಟುವ ಸಲುವಾಗಿ ಮಡಕೆಯ ಒಳಭಾಗದಲ್ಲಿ ಸುಣ್ಣವನ್ನು ಬಳಿಯಲಾಗುತ್ತದೆ. ಇದರ ಜೊತೆಗೆ ನೀರಾಗೆ ಸ್ವಾದ ಮತ್ತು ಪರಮಳವನ್ನು ನೀಡಿ ಅದು ಕೆಡದಂತೆ ಸಂರಕ್ಷಿಸುವ ಕೆಲಸವನ್ನು ಸುಣ್ಣ ಮಾಡುತ್ತದೆ. ಪಕ್ಷಿಗಳು ಅಶುದ್ಧಗೊಳಿಸುವುದನ್ನು ಹಾಗೂ ಮಳೆಗಾಲದಲ್ಲಿ ನೀರಾದೊಂದಿಗೆ ಮಳೆನೀರು ಬೆರೆಯುವುದನ್ನು ತಡೆಗಟ್ಟುವ ನಿಟ್ಟಿನಿಂದ ಕೆಲವೊಮ್ಮೆ ಮಡಕೆಯನ್ನು ಗರಿಗಳಿಂದ ಮುಚ್ಚಿಡಲಾಗುತ್ತದೆ. ಪನೆಬೆಲ್ಲ, ಪನೆಕಲ್ಲು ಸಕ್ಕರೆ ಮುಂತಾದ ಪದಾರ್ಥಗಳ ತಯಾರಿಕೆಗೆ ನೀರಾ ಕಚ್ಚಾವಸ್ತುವಾಗಿದೆ. ನೀರಾ ಮಾನವ ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸಿ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ನೀರಾದಿಂದ ‘ಸೇಂದಿ’ ಎಂಬ ಮದ್ಯಪಾನವನ್ನು ಸಹ ತಯಾರಿಸಲಾಗುತ್ತದೆ.

ಎನ್.ವಿ.ಕೆ. ಅನುವಾದ ಐ.ಎಸ್.