ಪಾಣಿ ಕೇರಳದ ದೇವಾಲಯಗಳಲ್ಲಿನ ಧಾರ್ಮಿಕ ವಿಧಿ ಸಂಬಂಧಿ ಸಂಗೀತ: ಆ ಸಂಗೀತಕ್ಕೆ ಬಳಕೆಯಾಗುವ ಉಪಕರಣ-ಈ ಎರಡು ಅರ್ಥಗಳನ್ನು ‘ಪಾಣಿ’ ಪದವು ಧ್ವನಿಸುತ್ತದೆ.

ಪಾಣಿಯ ಬಗೆಗಿನ ಐತಿಹ್ಯಗಳು: ಒಮ್ಮೆ ಹಿರಿಯ ‘ತಂತ್ರಿ’ಯೊಬ್ಬರಿಗೆ ಅನಾರೋಗ್ಯ ನಿಮಿತ್ತ ದೇವಾಲಯಕ್ಕೆ ಕರ್ತವ್ಯಕ್ಕಾಗಿ ಹೋಗಲು ಅಸಾಧ್ಯವಾಯಿತು. ಆತ ತನ್ನ ಇಬ್ಬರು ಮಕ್ಕಳನ್ನು ಆ ಕೆಲಸಕ್ಕಾಗಿ ನೇಮಿಸಿದರು. ಹಿರಿಮಗ ದೇವರ ಬಿಂಬಕ್ಕೆ ಅಭಿಷೇಕ ಮಾಡುವುದು; ಕಿರಿಯವನು ಸಹಾಯಕ್ಕಾಗಿ ಬಳಿಯಲ್ಲೆ ನಿಂತಿರುವುದು-ಹೀಗೆ ವ್ಯವಸ್ಥೆ ಮಾಡಿಕೊಂಡರು. ಆದರೆ ಮುಂದೆ ಏನು ಮಾಡುವುದೆಂದು ಅಣ್ಣನಿಗೆ ಹೊಳೆಯಲಿಲ್ಲ. ಅಣ್ಣನ ಗೊಂದಲವನ್ನು ಕಂಡ ಹಿರಿಯವನು ದೇವಾಳದ ಛಾವಣಿಗೆ ಸಂಬಂಧಿಸಿದ ತಾಮ್ರದ ತಗಿನ ಮೇಲೆ ಕೈಬೆರಳುಗಳಿಂದ ಬಾರಿಸಿ ಏನೋ ಸದ್ದು ಹೊರಡಿಸಿದ. ಬಳಿಕ ತಮ್ಮನು ಬೆರಳಿನಿಂದ ಬಾರಿಸುತ್ತಿದ್ದ ಕೆಲಸವನ್ನು ನಿಲ್ಲಿಸಿ ಜಾಗ ಬದಲಾಯಿಸಲು ಹೇಳಿದ. ಹಾಗೆ, ತಮ್ಮನಿಗೆ ಬದಿಗೆ ಸರಿಯುವುದು-ಎಂದು ಮಲಯಾಳದಲ್ಲಿ ಅರ್ಥಕೊಡುವ ‘ಮಾರರ್’ ಎಂಬ ಹೆಸರು ಬಂತು. ಬಳಿಕ ಅಣ್ಣನು ಅವನಿಗೆ ಶಂಖವನ್ನು ನೀಡಿ ಇನ್ನು ಮುಂದೆ ಯಾವುದೇ ತಾಂತ್ರಿಕ ವಿಧಿಗಳು ಶಂಖನಾದ ಮತ್ತು ಪ್ರಣವ ಮಂತ್ರ ‘ಓಂ’ ಕಾರದಿಂದಲ್ಲದೆ ಪ್ರಾರಂಬವಾಗದಿರಲೆಂದೂ ಅನುಗ್ರಹಿಸಿದ. ಕೇರಳದ ಮಾರಾರ್ ಸಮುದಾಯಕ್ಕೆ ಹೀಗೆ ಆ ಹೆಸರು ಬರಲು ಈ ಘಟನೆಯೇ ಮೂಲ ಎಂದು ಹೇಳುತ್ತಾರೆ. ಆದರೆ ತಮ್ಮ ತುಂಬ ಮುಜುಗರಕ್ಕೆ ಒಳಗಾದ. ಎಲ್ಲವೂ ವಿಪರೀತವಾಗಿ ಪರಿಣಮಿಸಿತೆಂದು ಅಣ್ಣನಿಗೆ ಹೇಳಿದ. ಹಾಗೆ ‘ತಕಿಡಂ ಮರಿಯುಗ’ ಎಂಬ ನುಡಿಗಟ್ಟು ಹುಟ್ಟಿಕೊಂಡಿತಂತೆ. ‘ದುಃಖಿಸುವುದಕ್ಕಾಗಲಿ ಪಶ್ಚಾತ್ತಾಪ ಪಡುವುದಕ್ಕಾಗಲಿ ಏನಾಯಿತು? ಹಾಗೆಲ್ಲ ಚಿಂತಿಸಬಾರದೆಂದು’ ಅಣ್ಣ ಸಮಾಧಾನ ಮಾಡಿದನಂತೆ. ನಿನ್ನ ಲಯದಲ್ಲಿ (‘ತಕಿಡ’ದಲ್ಲಿ ನಿಶ್ಚಿತನಾಗಿ ದೃಢವಾಗಿರು ಎಂದನಂಎ. ವಾದ್ಯ ಸಂಗೀತಗಾರನೊಬ್ಬ ಇಂದಿಗೂ ತನ್ನ ವಿದ್ಯೆಯನ್ನು ಆರಂಭಿಸುವಾಗ ಈ ಮೂಲಭೂತ ಸ್ವರ(ತಕ್ಕಿಟ)ವನ್ನು ಮೊದಲು ಹೊರಡಿಸಿ ಆಮೇಲೆ ಅದನ್ನು ಮುಂದುವರಿಸುತ್ತಾನೆ. ಕಾಲಾನಂತರ ತಂತರಿಗಳಿಗೆ ದೇವಬಲಿ ಮಾಡುವಾಗ ಮತ್ತು ‘ಕಲಾಶ’ಕ್ಕೆ ಮಾರಾರರೇ ಪಾಣಿ ಬಾರಿಸುತ್ತ ಸಹಾಯಕರಾದರಂತೆ. ಅದಕ್ಕೆ ಸಂಬಂಧಿಸಿದಂತೆಯೂ ಒಂದು ಹೇಳಿಕೆ ರೂಢಿಯಲ್ಲಿದೆ. ಪಾಣಿ ಬಾರಿಸುವುದರಲ್ಲಿ ಒಂದು ಸಣ್ಣ ತಪ್ಪಾದರೂ ಅದರ ಪರಿಣಾಮ ಘೋರವಾದುದು ಎಂಬರ್ಥದ ‘ಪಾಣಿ ಪಿಳಚ್ಚಾಲ್ ಕೋಣಿ’ ಎಂಬ ಮಾತು ಜಾರಿಯಲ್ಲಿದೆ. ಮಾರಾರ್‌ರಿಗೆ ನಾಲ್ಕು ವಿಶೇಷ ಹಕ್ಕುಗಳಿವೆ-ಪಾಣಿ, ಕೋಣಿ, ತಿರುಮುಟ್ಟಂ, ನಡುಮುಟ್ಟಂ. ಇವುಗಳಲ್ಲಿ ಮೊದಲಿನದ ಪಾಣಿ. ಮಾರಾರ್ ಮತ್ತು ಪಾಣಿ-ಇವರೊಳಗಿನ ವಿಶೇಷ ಮಹತ್ವವನ್ನು ಇದು ಸೂಚಿಸುತ್ತದೆ. ಮರಪ್ಪಾಣಿ, ತಿಮಿಲೆಪಾಣಿ, ಚೆಂಗಲಪಾಣಿ-ಎಂಬ ಮೂರುತೆರನ ಪಾಣಿಗಳಿವೆ.

ಮರಪ್ಪಾಣಿ: ಮರಪ್ಪಾಣಿಯ ಮುಖ್ಯ ಉಪಕರಣವೆಂದರೆ ಮರ ಉಳಿದವು-ಶಂಖ, ಚೆಂಗಲ(ಕಂಟೆ) ಮತ್ತು ಮರ. ಮರಪ್ಪಾಣಿಯನ್ನು ‘ಕಲಶ’ದ ಸಂದರ್ಭದಲ್ಲಿ ಬಾರಿಸಲಾಗುತ್ತದೆ. ದೇವಬಿಂಬಕ್ಕೆ ಮಾಡುವ ವಿಶೇಷ ಧಾರ್ಮಿಕ ಕ್ರಿಯೆಯೆ ಕಲಶ. ಅದು ದೇವಬಿಂಬಕ್ಕೆ ವಿಶೇಷ ಚೈತನ್ಯವನ್ನು ನೀಡುವ ಧಾರ್ಮಿಕ ವಿಧಿ. ಉತ್ಸವ ಬಲಿಯ ಸಂದರ್ಭದಲ್ಲಿ ಕಲಶ ನೆರವೇರುತ್ತದೆ.

ಮರಪ್ಪಾಣಿ ನಿರ್ಮಾಣ: ಹನ್ನೆರಡಂಗುಲ ಉದ್ದ ಮತ್ತು ಆರಂಗುಲ ವ್ಯಾಸದ ಹಲಸಿನ ಮರದ ಕಾಂಡವನ್ನು ಆಯ್ದು, ಒಳಗಿನ ಭಾಗವನ್ನು ಕೊರೆದು ತೆಗೆದು ಟೊಳ್ಳಾಗಿಸಿ ಅದರ ಎರಡು ಬದಿಗಳನ್ನು ಹಸುವಿನ ಅಥವಾ ಜಿಂಕೆಯ ತೆಳು ಚರ್ಮದ ಮುಚ್ಚಿಗೆಯಿಂದ ಮುಚ್ಚಬೇಕು. ಅವನ್ನು ಪರಸ್ಪರ ಜೋಡಿಸಲು ಚರ್ಮದ ಮಿಣಿಯನ್ನು ಅರವತ್ತು ನಾಲ್ಕು ಬಾರಿ ಆಚೀಚೆಗೆ ಸುರಿಯಬೇಕು. ಬಳಿಕ ಪಾಣಿಯನ್ನು ಸೊಂಟಕ್ಕೆ ಕಟ್ಟಿಕೊಂಡೂ ಬಾರಿಸಬಹುದು. ಅದರ ‘ಬಾರ’ವನ್ನು (ತೂಗಾಡಿಸಿಕೊಳ್ಳಲು ಬಳಸು ಬಟ್ಟೆಯ ಪಟ್ಟಿ) ಎಡ ಹೆಗಲಿಗೆ ನೇತು ಹಾಕಿಕೊಂಡೂ ಬಾರಿಸಬಹುದು.

ಪಾಣಿ ಬಾರಿಸುವ ವಿಧಾನ: ಪಾಣಿ ಬಾರಿಸುವವನು ಸೋಪಾನದ ಬಡಗು ದಿಕ್ಕಲ್ಲಿ ನಿಂತುಕೊಳ್ಳಬೇಕು. ಒಂದು ಕಳ್ಳನಿಗೆ ಭತ್ತ ಮತ್ತು ಒಂದು ಬಳ್ಳ ಬೆಳ್ತಿಗೆ ಅಕ್ಕಿಯನ್ನು ಗಣಪತಿಗೆ ಇಟ್ಟು ಒಂದು ದೀಪ ಉರಿಸಬೇಕು. ಬೆಲ್ಲ, ಜೇನು, ಬಾಳೆಹಣ್ಣು, ಅವಲಕ್ಕಿ, ಹೊದಳು, ವೀಳ್ಯದೆಲೆ, ಅಡಕೆ ಇತ್ಯಾದಿಗಳನ್ನು ಇಡಬೇಕು. ತಂತ್ರಿಯ ಹಾಗೆಯೇ ಪಾಣಿ ಬಾರಿಸುವವನ ಉಡುಪೂ ಇರುತ್ತದೆ. ಕಾರ್ಯಕ್ರಮ ನೀಡುವ ಮುಂಚಿತವಾಗಿ ಆತ ಕಠಿಣ ವ್ರತದಲ್ಲಿರಬೇಕು. ತನ್ನ ಗುರುವಿನಿಂದ ವಿಶೇಷ ಅನುಜ್ಞೆಯನ್ನು ಪಡೆದು ಸಾಂಪ್ರದಾಯಿಕ ರೀತಿಯಲ್ಲಿ ಅಭ್ಯಾಸ ಮಾಡಿದ ಬಳಿಕವಷ್ಟೆ ಕಾರ್ಯಕ್ರಮ ನೀಡಬಹುದು. ಎಲ್ಲರನ್ನು ಮೂರುಬಾರಿ ವಿನಂತಿಸಿ ಅವರ ಅಪ್ಪಣೆ-ಅನುಗ್ರಹವನ್ನೂ ಪಡೆಯಬೇಕು. ಪಾಣಿ ಬಾರಿಸುವಾಗ ಅದನ್ನು ಒಂದು ಹೊಸಬಟ್ಟೆಯಲ್ಲಿ ಹೊದೆದಿರಬೇಕು. ಮೂರು ಬಾರಿ ಶಂಖ ಊದಿದ ಬಳಿಕ ಮರಪ್ಪಾಣಿಯನ್ನು ಬಹಳ ಗೌರವದಿಂದ ಬಾರಿಸಲು ಆರಂಭಿಸಬೇಕು. ಮೊದಲ ಪೆಟ್ಟು ಬಲಗೈಯಲ್ಲಿ ಬಾರಿಸಿ ‘ತ’ ಎಂಬ ಸದ್ದು ಹೊರಡಿಸಬೇಕು. ಬಳಿ ಬಲಗೈಯನ್ನು ಮರಪ್ಪಾಣಿಯ ಬಲಬದಿಯಿಂದ ಸರಿಸಿಕೊಂಡು ಎಡಗೈಯಿಂದ ‘ತ್ವಂ’ ಎಂದು ಬಾರಿಸಬೇಕು. ತಲೆಯನ್ನು ಒಂದಿಷ್ಟು ಮುಂದಕ್ಕೆ ಬಾಗಿಸಿ ನಿಲ್ಲಬೇಕು. ಬಳಿಕ ಎಡಗೈಯ ಮೇಲೆ ಬಲಗೈಯನ್ನು ಇರಿಸಿ ಬಲಗೈಯಿಂದ ಬಾರಿಸಿದ ಮೇಲೆ ಬಲಗೈಯ ಮೇಲೆ ಎಡಗೈಯನ್ನು ಇರಿಸಬೇಕು. ಹೀಗೆಯೇ ಪರಸ್ಪರ ಬದಲಾವಣೆ ಮುಂದುವರಿಸಬೇಕು.

ತಿಮಿಲೆ ಪಾಣಿ: ಇದರ ಮುಖ್ಯ ಉಪಕರಣ ತಿಮಿಲೆ. ಉಳಿದವುಗಳೆಂದರೆ ಶಂಖ ಮತ್ತು ಚೆಂಗಲ (ಕಂಟೆ-ಜಾಗಟೆಯಂಥ ವಾದ್ಯ). ಇದನ್ನು ದೈನಂದಿನ ಧಾರ್ಮಿಕ ವಿಧಿಯಾದ-ಶ್ರೀ ಬಲಿ ಮತ್ತು ಶ್ರೀ ಭೂತಬಲಿಯ ವೇಳೆ ನಡೆಸಲಾಗುತ್ತದೆ. ತಿಮಿಲೆ ಪಾಣಿಯಲ್ಲಿ ಹೊರಡಿಸುವ ಸದ್ದು ಈ ರೀತಿ ಇರುತ್ತದೆ-ತತ್ತೋಂ; ತ ತ್ತೋಂ; ತತ್ತೋಂ; ತ ತೋಂ ತೋಂ.

ಶಿವನ ಡಮರುವಿನ ವಿಸ್ತೃತ ರೂಪವೇ ತಿಮಿಲೆ ಎನ್ನುವಂತಿದೆ. ಮರಂನಂತೆಯೇ ತಿಮಿಲೆಯಲ್ಲಿಯೂ ಬದಿಗಳ ‘ಮುಚ್ಚಿಗೆ’ಯನ್ನು ಜೋಡಿಸಲು ಚರ್ಮದ ಮಿಣಿಯನ್ನು ಬಳಸಲಾಗುತ್ತದೆ. ಅಗತ್ಯವಾದಾಗಲೆಲ್ಲ ತಿಮಿಲೆಯ ಮುಚ್ಚಿಗೆಯನ್ನು ತೆಗೆದಿರಿಸಿಕಳ್ಳಬಹುದು. ತಿಮಿಲೆಯು ಪಂಚವಾದ್ಯಗಳಲ್ಲಿನ ಒಂದು ವಾದ್ಯ ಕೂಡ ಆಗಿದೆ.

ಚೆಂಗಲ ಪಾಣಿ: ಕಂಟೆ(ಚೆಂಗಲ) ಕೂಡ ಕೆಲವು ದೇವಾಲಯಗಳಲ್ಲಿ ಪಾಣಿಗೆ ಬದಲಾಗಿ ಬಳಕೆಯಾಗುತ್ತದೆ. ಉದಾಹರಣೆಗೆ ಗುರುವಾಯೂರಿನ ದೇವಾಲಯದಲ್ಲಿ ನಡೆಯುವ ಪಾಣಿ. ಇಲ್ಲಿ ಮರಂ ಅಥವಾ ತಿಮಿಲೆಗೆ ಬದಲಾಗಿ ಚೆಂಗಲ/ ಕಂಟೆಯು ಬಳಸಲ್ಪಡುತ್ತದೆ.

ಚೆಂಗಲವೆಂದರೆ ಹಿತ್ತಾಳೆಯ ತಟ್ಟೆ. (ಕಥಕ್ಕಳಿಯ ಮುಖ್ಯ ಭಾಗವತ ತಾಳಲಯಗಳು ತಪ್ಪದಂತೆ ಇದರ ಸಹಾಯವನ್ನು ಪಡೆಯುತ್ತಾನೆ.)

ತಾಂತ್ರಿಕ ಸಂಗೀತ ಮತ್ತು ವಾದ್ಯ ಸಂಗೀತಗಳನ್ನು ಸಂಗಮಿಸುವ ಸಂದರ್ಭವೆಂದರೆ ಪಾಣಿ. ತತ್ವಂ ಎಂಬ ಶಬ್ದವನ್ನು ಮಾರಾರ್ ಹೊರಡಿಸುತ್ತಾರೆ. ತನ್ಮೂಲಕ ವೈದಿಕ ಚಿಂತನೆಯಾದ ‘ತತ್ವಮಸಿ’ಯನ್ನು ನೆನಪು ಮಾಡಿಕೊಡುತ್ತಾನೆ. ದೈವಿಕ ಶಕ್ತಿಯೊಂದರ ಇರುವಿಕೆಯು ದೇವಾಲಯದಿಂದ ಮಾತ್ರವಲ್ಲ ದೈವಿಕ ವಾದ್ಯೋಪಕರಣ ವಾದನದಲ್ಲೂ ಎಚ್ಚರಿಸಲ್ಪಡುತ್ತದೆ. ತನ್ಮೂಲಕ ಸರ್ವವ್ಯಾಪಿ ಭಗವಂತನ ಸರ್ವಶಕ್ತತೆಯ ಅಸ್ಮಿತೆಯನ್ನು ತಿಳಿಸುತ್ತದೆ.

.ಕೆ.ಜಿ. ಅನುವಾದ ಕೆ.ಕೆ.

 

ಪಾನ ಕೇರಳದ ಮಲ್ಲಪ್ಪುರ, ಪಾಲಕಾಡು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಹಳೆಯ ವಳ್ಳುವನಾಡು ಪ್ರದೇಶದ ಕೆಲವು ಭದ್ರಕಾಳಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಪೂರ್ವವಾದ ಧಾರ್ಮಿಕ ಆಚರಣೆಯಾಗಿದೆ. ಪಾನ ತೋಲನ್ನೂರ್ ಕುರಿಡಂಕುಳಂಗರ ಭಗವತಿ ಕ್ಷೇತ್ರ, ಶುಕಪುರಂ ಕುಳಂಗರಕಾವ್ ಎಂಬ ಕ್ಷೇತ್ರಗಳಲ್ಲಿ ಇದು ಪ್ರಧಾನ ಆಚರಣೆಯಾಗಿದೆ. ಮಕರ ಮಾಸದ ಕೊಯ್ಲು ಕಳೆದು ‘ಪರಯೆಡುಪ್ಪು’ ಎಂಬ ಆಚರಣೆಯ ಕೊನೆಯಲ್ಲಿ ಪಾನ ನಡೆಸುತ್ತಾರೆ. ತ್ರೇತಾಯುಗದಿಂದ ಕಲಿಯುಗಕ್ಕೆ ಬಂದಾಚರಣೆ ಇದೆಂದೂ, ಮೆಳನ್ನೂರು ಅಗ್ನಿಹೋತ್ರಿ ಇದನ್ನು ಆರಂಭಿಸಿದವರೆಂದೂ ಹೇಳುತ್ತಾರೆ.

ಕಾಳೀಪೂಜೆಯ ಅತ್ಯಂತ ಪ್ರಾಚೀನವಾದ ರೂಪವೇ ಪಾನ. ಪಾನ ಎಂಬ ಶಬ್ದದ ಅರ್ಥ ಕುಡಿಯುವುದು ಎಂದಾಗಿದೆ. ಇದಕ್ಕೆ ಒಂದು ರೀತಿಯ ಮಣ್ಣಿನ ಪಾತ್ರೆ ಎಂಬ ಅರ್ಥವನ್ನು ವಿದ್ವಾಂಸರು ಕೊಟ್ಟಿದ್ದಾರೆ. ಮಣ್ಣಿನ ಪಾತ್ರೆಯಲ್ಲಿ ತುಂಬಿಸಿದ ಪದಾರ್ಥಗಳಿಂದ ಮಾಡುವ ಪೂಜೆ ಎಂಬ ಅರ್ಥವನ್ನು ಅವರು ನೀಡುತ್ತಾರೆ. ಪಾನಕಪೂಜೆ ಎಂಬ ಪೂಜಾವಿಧಾನಗಳು ರೂಢಿಯಲ್ಲಿವೆ.

ಪಾನ ಸಂದರ್ಭದಲ್ಲಿ ದಾರಿಕವಧೆಯ ಕಥೆಯನ್ನು ಹಾಡುತ್ತಾರೆ. ಪ್ರತ್ಯೇಕ ತಾಳಗತಿಯಲ್ಲಿ ಚೆಂಡೆಯ ವಾದನದೊಂದಿಗೆ ೪ ೪ ೪ ೪ ಪದಗಳನ್ನು ಹಾಡುವುದು ಕ್ರಮ. ವಿಶಿಷ್ಟವಾಗಿ ನಿರ್ಮಿಸಿದ ಚಪ್ಪರದಲ್ಲಿ ಈ ಆಚರಣೆಗಳು ನಡೆಯುತ್ತವೆ. ಪಾನ ಚಪ್ಪರಕ್ಕೆ ೬೪ಕಂಬಳಿರಬೇಕು ಎಂಬುದು ನಿಯಮ. ಹಾಲೆ ಮರದಿಂದ ಕಂಬಗಳನ್ನು ನಿರ್ಮಿಸಬೇಕು. ಶುಕ್ರವಾರ ಅಥವಾ ಮಂಗಳವಾರ ಶುಭಮುಹೂರ್ತದಲ್ಲಿ ಕಂಬ ನಾಟಬೇಕು. ಚಪ್ಪರದ ಕೆಲಸ ಪೂರ್ಣಗೊಂಡರೆ, ನೆಲದಲ್ಲಿ ಸೆಗಣಿ ಸಾರಿಸಿ ಶುದ್ಧೀಕರಿಸಬೇಕು. ತೆಂಗಿನಗರಿ, ಬಾಳೆ, ತೆಂಗಿನ ಗೊನೆ, ಹಿಂಗಾರ, ಮಾವಿನೆಲೆಗಳಿಂದ ಚಪ್ಪರವನ್ನು ಅಲಂಕರಿಸುವ ಪದ್ಧತಿ ಇದೆ.

ಪಾನ ಆಚರಣೆಯಲ್ಲಿ ಅನೇಕ ವಿಧಿಗಳಿವೆ. ಹಾಲೆ ಕೊಂಬೆ ಕಡಿಯುವುದು, ಹಾಲೆಕೊಂಬೆ ಮೆರವಣಿಗೆ, ಹಾಲೆ ಕೊಂಬೆ ನಾಟುವುದು, ಪಾನಪೂಜೆ, ದೀಪ ನಿವಾಳಿಸುವುದು, ಕೇಳಿಕೈ, ಪಾನಪಿಡುತ್ತರಿ, ಪಾನತೋಟ್ಟಂ, ವೆಳಿಚ್ಚಪಾಡ್, ನುಡಿಗಟ್ಟು, ಕೆಂಡಸೇವೆ, ಕುರ್ದಿ ಪ್ರಧಾನ ಆಚರಣಾ ವಿಧಿಗಳು. ಪಾನದ ಮೊದಲ ಕಾರ್ಯಕ್ರಮವೇ ಹಾಲೆಯ ಗೆಲ್ಲನ್ನು ಕಡಿದು, ಮೆರವಣಿಗೆಯೊಂದಿಗೆ ತಂದು ನಿರ್ದಿಷ್ಟ ಸ್ಥಳದಲ್ಲಿ ನಾಟುವುದು. ಚೆಂಡೆಮೇಳದೊಂದಿಗೆ ಹಕ್ಕಿನ ಆಚಾರಿ ಊರವರೊಂದಿಗೆ ಹಾಲೆಮರದ ಗೆಲ್ಲನ್ನು ಕಡಿಯುತ್ತಾನೆ. ಅನಂತರ ಪಾನ ಆಚರಣೆ ನಡೆಸುವ ವ್ಯಕ್ತಿ ಆ ಗೆಲ್ಲನ್ನು ವೈಭವದಿಂದ ಮೆರವಣಿಗೆಯಲ್ಲಿ ಪಾನ ನಡೆಯುವ ಪ್ರದೇಶಕ್ಕೆ ತರುತ್ತಾನೆ. ಅನಂತರ ಅದನ್ನು ಪಾನ ನಡೆಯುವ ಚಪ್ಪರದ ಮಧ್ಯಭಾಗದಲ್ಲಿ ನಾಟಲಾಗುವುದು. ಈ ಹಾಲೆಗೆಲ್ಲಿನ ಮೂಡುಬದಿಯಲ್ಲಿ ಒಂದು ಪೀಠದ ಕೆಂಪು ವಸ್ತ್ರ ಹಾಗೂ ಖಡ್ಗವನ್ನು ಇರಿಸುತ್ತಾರೆ. ಈ ಪೀಠದಲ್ಲಿ ಭಗವತಿ ಕುಳಿತಿರುತ್ತಾಳೆ ಎಂಬುದು ನಂಬಿಕೆ.

ಪಾನಪೂಜೆಯನ್ನು ಹಿರಿಯ ವ್ಯಕ್ತಿಯೊಬ್ಬ ನಡೆಸುತ್ತಾನೆ. ಇದು ನೃತ್ಯದೊಂದಿಗೆ ನಡೆಸುವ ಪೂಜೆಯಾಗಿದೆ. ಪೂಜೆ ಮಾಡುವ ವ್ಯಕ್ತಿ ಸ್ನಾನ ಮಾಡಿ, ಶ್ರೀಗಂಧ ಧರಿಸಿ, ಮಡಿಬಟ್ಟೆ ಧರಿಸಿ, ಸೊಂಟ ಪಟ್ಟಿ ಕಟ್ಟುತ್ತಾರೆ. ಕೈಯಲ್ಲಿ ಕಡಗ ಧರಿಸುವ ಪೂಜಾರಿ ಚೆಂಡೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಪೂಜೆ ಮಾಡುತ್ತಾರೆ.

ಪಾನ ನಡೆಯುವ ಮಾಹಿತಿಯನ್ನು ಜನರಿಗೆ ತಿಳಿಸುವ ಕಾರ್ಯಕ್ರಮವೇ ‘ಕೇಳಿಕೈ’ ಚೆಂಡೆ. ಮದ್ದಳೆ, ಚಕ್ರತಾಳಗಳನ್ನು ಇದಕ್ಕಾಗಿ ಬಳಸುತ್ತಾರೆ. ಪಾನದ ಇನ್ನೊಂದು ಮುಖ್ಯ ಆಚರಣೆ ದೀಪ ನಿವಾಳಿಸುವುದು. ಎರಡು ಮೂರು ಅಡಿ ಉದ್ದದ ದೊಂದಿಯಲ್ಲಿ ದೀಪ ಬೆಳಗಿಸಿ ಮಾಡುವ ನೃತ್ಯವಿದು. ಈ ‘ಅಗ್ನಿಪೂಜೆ’ಗೆ ವಿಶೇಷವಾದ ತರಬೇತಿ ಅಗತ್ಯ. ಹಾಲೆಮರದ ತುಂಡುಗಳನ್ನು ಕೈಯಲ್ಲಿ ಹಿಡಿದು ನಡೆಸುವ ಸಮೂಹ ನೃತ್ಯವೇ ಪಾನಪಿಡುತ್ತಂ. ಪಾನ ತೋಟ್ಟಂ ಪಾತಿನಲ್ಲಿ ಕಾಳಿಯ ಉದ್ಭವ, ದಾರುಕವಧೆಯ ಕಥೆ ಇದೆ. ತೋಟ್ಟಂಪಾಟಿಗೆ ಪ್ರತ್ಯೇಕ ತಾಳ ಹಾಗೂ ಲಯವಿದೆ. ತೋಟ್ಟಂ ಮುಗಿದ ಕೂಡಲೇ ವೆಳಿಚ್ಚಪಾಡನ ಆಗಮನವಾಗುತ್ತದೆ. ಭಗವತಿಯ ಪ್ರತಿನಿಧಿಯಾದ ವೆಳಿಚ್ಚಪಾಡ ಆವೇಶಗೊಂಡು ಅಭಯದ ನುಡಿಗಟ್ಟುಗಳೊಂದಿಗೆ ಹರಸುವನು.

ಕೆಂಡಸೇವೆ ಹಾಗೂ ಕುರ್ದಿ ಸೇವೆ ಪಾನ ಆಚರಣೆಯಲ್ಲಿ ಪ್ರಧಾನವಾಗಿದೆ. ಹಲಸಿನಮರದ ಸೌದೆಯನ್ನು ಎತ್ತರಕ್ಕೆ ಪೇರಿಸಿ, ಬೆಂಕಿ ಕೊಡುತ್ತಾರೆ. ಇದಕ್ಕೆ ‘ಮೇಲೇರಿ’ ಎಂದು ಹೆಸರು ಸೌದೆ ಉರಿದು ಕೆಂಡವಾದಾಗ, ವೆಳಿಚ್ಚಪಾಡ ಹಾಗೂ ಪಾನ ನಡೆಸುವವರು ಬೆಂಕಿಯ ಮೇಲೆ ನಡೆಯುತ್ತಾರೆ. ಇದನ್ನು ಕನಲಾಟಂ (ಕೆಂಡಸೇವೆ) ಎನ್ನುತ್ತಾರೆ. ನೀರಿನಲ್ಲಿ ಸುಣ್ಣ, ಅರಿಸಿನ ಕಲಸಿ, ಕುದಿ, ತರ್ಪನ ನಡೆಸುವುದು ಪಾನದ ಮುಖ್ಯ ಭಾಗವಾಗಿದೆ.

ಕಳಿಪಾನ, ಪಳ್ಳಿಪಾನ ಎಂದು ಪಾನದಲ್ಲಿ ಎರಡು ವಿಧ. ಒಂದು ಹಗಲಿನಲ್ಲಿ ನಡೆಯುವುದು ಕಳಿಪಾನ, ಒಂದು ಹಗಲು ಹಾಗೂ ಒಂದು ರಾತ್ರಿ ನಡೆಯುವುದು ಪಳ್ಳಿಪಾನ. ಕನಲಾಟ ಪಳ್ಳಿಪಾನದ ಅಂಗವಾಗಿದೆ. ರೋಗರುಜಿನಗಳ ನಿವಾರಣೆ, ಜಾನುವಾರುಗಳ ರಕ್ಷಣೆ ಹಾಗೂ ಕೃಷಿ ಸಮೃದ್ಧಿಗಾಗಿ ಪಾನವನ್ನು ನಡೆಸುತ್ತಾರೆ. ಚೇಲನಾಡು ಅಚ್ಯುತ ಮೆನೋನ್ ಅವರ ‘ಕೇರಳತ್ತಿತಿ ಕಾಳಿಸೇವೆ’ ಎಂಬ ಕೃತಿಯಲ್ಲಿ ಪಾನ ಆಚರಣೆಯ ವಿವರಗಳಿವೆ.

ಎಸ್.ಕೆ. ಅನುವಾದ ಎನ್.ಎಸ್.

 

ಪಾನೀಯ ಜನಪದ ಆಹಾರ ಸೇವನಾ ವ್ಯವಸ್ಥೆಯಲ್ಲಿ ದ್ರವಾಹಾರಕ್ಕೆ ಪ್ರಮುಖ ಸ್ಥಾನವಿದೆ. ಆಯುರ್ವೇದದಲ್ಲಿ ದ್ರವಾಹಾರವನ್ನು ಪೀತವೆಂಬ ಗುಂಪಿಗೆ ಸೇರಿಸಲಾಗಿದೆ. ಪೀತಾಹಾರದಲ್ಲಿ ಪಾನಕ ಮಂಥ ಪಾನೀಯ ಶಾರ್ಕರ ತಕ್ರ ಇತ್ಯಾದಿ ಬಗೆಗಳನ್ನು ಕುರಿತು ಅಲ್ಲಿ ಹೇಳಲಾಗಿದೆ. ಆದರೆ ಈ ಬಗೆಯ ಹೆಸರುಗಳು ಜಾನಪದರಲ್ಲಿ ಬಳಕೆಯಲ್ಲಿಲ್ಲ. ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪಾನೀಯ; ಪೇಯವೆಂಬ ಹೆಸರುಗಳು ಜನ ಬಳಕೆಗಿಂತ ಬರವಣಿಗೆಯಲ್ಲಿ ಹೆಚ್ಚು ರೂಢಿಯಲ್ಲಿವೆ. ಪಾನಕ ಎಂಬ ಪದ ಸಂಸ್ಕೃತದಿಂದ ಕನ್ನಡ ಜಾನಪದವನ್ನು ಪ್ರವೇಶಿಸಿ, ಜಾನಪದರಲ್ಲಿ ಪಾನೀಯದ ಒಂದು ನಿರ್ದಿಷ್ಟ ಗುಂಪಿನ ಹೆಸರಾಗಿ ಬಳಕೆಯಾಗುತ್ತದೆ. ಕರ್ನಾಟಕದಲ್ಲಿ ಊಟದ ಸಂದರ್ಭ ಮತ್ತು ಊಟಕ್ಕೆ ಹೊರತಾದ ಸಂದರ್ಭದಲ್ಲಿ ಬಳಸುವ ಪಾನೀಯಗಳು ಪ್ರತ್ಯೇಕವಾಗಿವೆ. ಈ ಪಾನೀಯಗಳನ್ನು ಕರಾವಳಿ ಮತ್ತು ಮಲೆನಾಡಿನ ಜಾನಪದರು ಆಸರವೆನ್ನುತ್ತಾರೆ. ಇಲ್ಲಿಹಲವಾರು ಕನ್ನಡ ಮತ್ತು ಇತರ ಭಾಷಾ ಹೆಸರನ್ನು ಹೊಂದಿದ ಅನೇಕ ಪಾನೀಯ ಗುಂಪುಗಳಿರುವದು ಕಂಡುಬರುತ್ತದೆ. ಈ ಪ್ರತಿ ಗುಂಪಿಗೂ ಪ್ರತ್ಯೇಕ ಹೆಸರಿರುತ್ತದೆ. ಹಳೆಯ ಹೆಸರುಗಳು ಬದಲಾಗುವದುಂಟು. ಶರಬತ್ತು ಎಂಬ ಉರ್ದು ಹೆಸರು ಮತ್ತು ಡ್ರಿಂಕ್ಸ್ ಎಂಬ ಇಂಗ್ಲಿಷ್ ಹೆಸರು ಪಾನೀಯಕ್ಕೆ ಪರ್ಯಾಯವಾಗಿ ಬಳಕೆಯಲ್ಲಿವೆ. ಸೂಪ್ ಮತ್ತು ಕಟ್ನೆ ಎಂಬ ಬಿಸಿ ಪಾನೀಯಗಳ ಜೊತೆ ತಂಬುಳಿ, ತನಿ ಇತ್ಯಾದಿ ತಂಪು ಪಾನೀಯಗಳೂ ಬಳಕೆಯಲ್ಲಿವೆ.

ಪಾನೀಯಗಳಲ್ಲಿ ಸಿದ್ಧಸ್ಥಿತಿಯಲ್ಲಿರುವ ನೈಸರ್ಗಿಕ ಪಾನೀಯ ಹಾಗೂ ಮನುಷ್ಯ ಹಸ್ತಕ್ಷೇಪದಿಂದ ಸಿದ್ಧಗೊಂಡಿರುವ ಪರಿಷ್ಕೃತ ಪಾನೀಯಗಳು ಎಂದು ಎರಡು ಗುಂಪುಗಳನ್ನು ಗುರುತಿಸಬಹುದಾಗಿದೆ.

ನೈಸರ್ಗಿಕ ಪಾನೀಯಗಳು: ಸಸ್ಯಗಳ ಫಲ ಬೇರು ಕಾಂಡಗಳಲ್ಲಿಯ ರಸ ಮತ್ತು ಪ್ರಾಣಿಗಳ ಮೂಲಕ ಪಡೆಯುವ ಹಾಲು ನೈಸರ್ಗಿಕ ಪಾನೀಯಗಳಾಗಿವೆ. ನೀರು ನೈಸರ್ಗಿಕವಾಗಿ ಕುಡಿಯಲು ಸಿದ್ಧ ಸ್ಥಿತಿಯಲ್ಲಿ ದೊರೆಯುವ ಜಗತ್ತಿನ ಬಹುದೊಡ್ಡ ಪಾನೀಯ. ಜಾನಪದರು ನೀರಿನದಾನಕ್ಕೆ ಮಹತ್ವ ನೀಡಿದ್ದರು. ಅವರಮಟ್ಟಿಗೆಯಿಟ್ಟು ನೀರದಾನ ಮಾಡುತ್ತಿದ್ದರು. ಮನೆಗೆ ಬಂದ ಅತಿಥಿಗಳಿಗೆ ಕುಡಿಯಲು ಬೆಲ್ಲ ಮತ್ತು ನೀರನ್ನಿತ್ತು ಸತ್ಕರಿಸುವುದು ಜನಪದ ಆತಿಥ್ಯದ ಕ್ರಮವಾಗಿದೆ. ಮಣ್ಣಿನ ಮಡಕೆ ಮತ್ತು ತತ್ರಾಣಿಗಳಲ್ಲಿಯ ತಣ್ಣೀರು; ಜಾನಪದರು ಕಂಡುಕೊಂಡ ಶೋಧ. ಇದರಂತೆ ಮರ ಗಿಡಗಳು ತಮಗಾಗಿ ಸಂಗ್ರಹಿಸಿಕೊಂಡಿರುವ ಬೇರು ಕಾಂಡ ಫಲಗಳಲ್ಲಿ ದೊರೆಯುವ ನೀರಿನಂತ ರಸಗಳ ಶೋಧ ಹಾಗೂ ಇವುಗಳ ಬಳಕೆ ಇವರ ಜಾಣ್ಮೆಗೆ ಸಾಕ್ಷಿ ನೀಡುತ್ತದೆ. ತೆಂಗಿನ ಎಳನೀರು, ಕಬ್ಬಿನ ಹಾಲು ಮುಂತಾದ ಸಸ್ಯಗಳಲ್ಲಿಯ ನೀರನ್ನು ನೇರವಾಗಿ ಇವರು ಕುಡಿಯುತ್ತಿರುವುದು ಇವರ ಪರಂಪರಾಗತ ಅನುಭವಗಳ ಮೇಲೆ ಇವರಿಗಿರುವ ನಂಬಿಕೆಯನ್ನು ಸೂಚಿಸುತ್ತದೆ. ತನ್ನ ಸಂತತಿಗಾಗಿ ಸಿದ್ಧಗೊಳ್ಳುವ ಪ್ರಾಣಿಗಳ ಶರೀರದಲ್ಲಿಯ ಹಾಲನ್ನು ಸಂಗ್ರಹಿಸಿ ಅದನ್ನು ಪಾನೀಯವಾಗಿ ಬಳಸಿಕೊಂಡದ್ದು ಪ್ರಾಚೀನ ಮಾನವನ ಬಹುದೊಡ್ಡ ಇನ್ನೊಂದು ಸಂಶೋಧನೆ. ಅಕಳ ಹಾಲು ಮತ್ತು ಕುರಿ ಹಾಲು ಶ್ರೇಷ್ಠವೆಂದು ತಿಳಿಯಲಾಗುತ್ತದೆಯಾದರೂ ಎಮ್ಮೆ ಹಾಲಿನ ಬಳಕೆ ಸಾಕಷ್ಟಿದೆ.

ಪರಿಷ್ಕೃತ ಪಾನೀಯಗಳು: ಕರ್ನಾಟಕದಲ್ಲಿ ಈ ನೈಸರ್ಗಿಕ ಪಾನೀಯಗಳನ್ನು ಯಥಾಸ್ಥಿತಿಯಲ್ಲಿ ಕುಡಿಯುವುದಲ್ಲದೆ ಹಲವಾರು ಬಗೆಯ ಸಸ್ಯ ರಸವನ್ನು ಹಾಗೂ ಹಾಲು ಮಜ್ಜಿಗೆ ಮತ್ತು ಇತರ ಆಹಾರ ವಸ್ತುಗಳನ್ನು ಇವುಗಳಿಗೆ ಸೇರಿಸಿ ಇವು ಕುಡಿಯಲು ಸಾಧ್ಯವಾಗುವಂತೆ ನೂರಾರು ಬಗೆಯಲ್ಲಿ ಪಾನೀಯಗಳನ್ನು ತಯಾರಿಸಲಾಗುತ್ತದೆ. ಆರೋಗ್ಯ ಪ್ರಜ್ಞೆಯುಳ್ಳವರು ಆಹಾರವಾಗಿ ಸೇವಿಸಬಹುದಾದ ಕೆಲವು ಪಾನೀಯಗಳನ್ನು ದ್ರವಾಹಾರ ಅಥವಾ ಆಹಾರ ಪಾನೀಯವೆಂದು ಗುರುತಿಸಬಹುದು. ಪರಿಷ್ಕರಣೆಯ ವ್ಯತ್ಯಾಸ ಮತ್ತು ಅವು ಸೇವಿಸಿದವರಿಗೆ ನೀಡುವ ದೈಹಿಕ ಮಾನಸಿಕ ಪರಿಣಾಮವನ್ನು ಗಮನಿಸಿ ಇದರಲ್ಲಿ ಮಾದಕ ಮತ್ತು ಮಾರಕ ಎಂದು ಇನ್ನೆರಡು ವಿಭಾಗಗಳನ್ನು ಕಲ್ಪಿಸಿಕೊಳ್ಳಲಾಗಿದೆ.

ಇತ್ತೀಚೆಗೆ ಆರೋಗ್ಯಕ್ಕೆ ತೀರ ಮಾರಕವಾದ ಆಹಾರ ಪರಿಕರಗಳಿಂದ ತಯಾರಾದವೆಂಬ ಭ್ರಮೆಯನ್ನು ಹುಟ್ಟಿಸುವ ಮಾರಕ ರಾಸಾಯನಿಕಯುಕ್ತವಾದ ಮೃದು ಪಾನೀಯಗಳೆಂಬ ಹೆಸರಿನಿಂದ ಜನರನ್ನು ಮೋಸಗೊಳಿಸುವ ಕ್ರೂರ ಪಾನೀಯಗಳು ನಮ್ಮಸುತ್ತ ತುಂಬಿಕೊಂಡಿವೆ. ಇವು ಜನಪದ ಪಾನೀಯಗಳಲ್ಲ. ಮಾರಕ ಪಾನೀಯಗಳು.

ಆಹಾರ ಪಾನೀಯಗಳು: ಕರ್ನಾಟಕದ ಪರಂಪರಾಗತ ಆಹಾರ ಪಾನೀಯ ತಯಾರಿಕೆಗಾಗಿ ಧಾನ್ಯ ಬೀಜ ಚಕ್ಕೆ ಬೇರು ಎಲೆ ಹೂವು ಕಾಯಿ ಹಣ್ಣುಗಳ ಸತ್ವವನ್ನು ಹಲವಾರು ವಿಧಾನಗಳಿಂದ ನೀರಿಗೆ ಇಳಿಸಿ ಅಗತ್ಯವಿದ್ದಲ್ಲಿ ಅದನ್ನು ಹಾಲಿಗೆ ಅಥವಾ ಮಜ್ಜಿಗೆಗೆ ಸೇರಿಸಿ ಸಿಹಿ ಸಿಹಿ ಹುಳಿ ಚೋಗರು ಮುಂತಾದ ಷಡ್ರಸ ರುಚಿಯ ನೈಸರ್ಗಿಕ ಬಣ್ಣ ಮತ್ತು ಪರಿಮಳಗಳ ಪಾನೀಯವನ್ನು ಸಿದ್ಧಪಡಿಸಿ ಸೇವಿಸುತ್ತಾರೆ.ಹೀಗೆ ಪ್ರಮುಖವಾಗಿ ನೀರು ಮತ್ತು ಹಾಲುಗಳನ್ನು ಮಾಧ್ಯಮವಾಗಿಟ್ಟುಕೊಂಡು ಮಾಡುವ ಪಾನೀಯಗಳು ನೂರಾರು ಬಗೆಯಲ್ಲಿದ್ದು ಅವು ಹತ್ತಕ್ಕೂ ಹೆಚ್ಚು ಗುಂಪುಗಳಲ್ಲಿ ಕಂಡು ಬರುತ್ತವೆ. ಪ್ರತಿ ಗುಂಪಿಗೆ ಅದಕ್ಕೆ ಅರ್ಹವಾದ ಹೆಸರಿರುವುದು ವಿಶೇಷವಾಗಿದೆ.

ಪಾನಕ: ಪಾನೀಯಗಳ ಒಂದು ಗುಂಪು ಪಾನಕ ಇದನ್ನು ಶರಬತ್ತು ಎಂದು ಹೆಸರಿಸುವುದುಂಟು. ಸಾಮನ್ಯವಾಗಿ ಇವು ಹಣ್ಣುಗಳಿಂದ ತಯಾರಾಗುತ್ತವೆ. ಹುಳಿ ರುಚಿಯ ನಿಂಬೆ ಮುರಗಲ ಮಾವು ಸಿಹಿ ರುಚಿಯ ನೇರಲ ಬಿಲ್ವ ಬೇಲ ಇತ್ಯಾದಿ ಹಣ್ಣುಗಳಿಂದ ಪಾನಕವು ತಯಾರಾಗುತ್ತದೆ. ನಿಂಬೆ ಪಾನಕವು ರಾಷ್ಟ್ರಮಟ್ಟದಲ್ಲಿ ಪ್ರಸಿದ್ದವಾದದ್ದು, ವಸಂತ ಕಾಲದ ಧಾರ್ಮಿಕ ಆಚರಣೆಯಲ್ಲಿ ಪಾನಕ ವಿನಿಯೋಗವೂ ಸೇರಿಕೊಂಡಿದೆ. ಯುಗಾದಿಯ ಹಬ್ಬ ಹಾಗೂ ಗಡಿಹಬ್ಬದ ದಿನ ದೇವರಿಗೆ ಮತ್ತು ನೆರೆದ ಪರಿಸೆಗೆ ಪಾನಕ ವಿತರಿಸುವದು ದೇವರ ಸೇವೆಯ ಒಂದು ಅಂಗವಾಗಿದೆ. ಆಚರಣೆಯ ನಿಮಿತ್ತ ನೀಡುವ ಈ ಪಾನೀಯದಲ್ಲಿ ನೀರಿಗೆ ಬೆಲ್ಲ ಲಿಂಬುರಸ ಮತ್ತು ಮೆಣಸಿನಕಾಳಿನ ಪುಡಿಯನ್ನು ಸೇರಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಕಪಿತ್ಥ(ಬೇಲ) ಹಣ್ಣಿನಿಂದ ತಯಾರಾಗುವ ಪಾನಕವೂ ಜನಪದ ಧಾರ್ಮಿಕ ಆಚರಣೆಯಲ್ಲಿ ಸ್ಥಾನಪಡೆದಿದೆ. ಎಲ್ಲ ಕಡೆ ರಾಮನವಮಿಯಂದು ಈ ಪಾನಕವನ್ನು ವಿತರಿಸಲಾಗುತ್ತದೆ. ಉತ್ತರ ಕರ್ನಾಟಕದ ರಸಬೇವು ಯುಗಾದಿಯ ಹಬ್ಬದ ಸಂದರ್ಭದಲ್ಲಿ ತಯಾರಾಗುತ್ತದೆ. ಬೇವು ಮಾವುಗಳ ರಸ ಮಿಶ್ರಣಕ್ಕೆ ಕಸಕಸಿ ಉತ್ತತ್ತಿ ಹಣ್ಣಿನ ತುಂಡುಗಳನ್ನು ಸೇರಿಸುತ್ತಾರೆ. ಇದಕ್ಕೆ ಬೇವು ಕಚ್ಚುವುದು ಎನ್ನಲಾಗುತ್ತದೆ. ಮೊಹರಂ ಹಬ್ಬದ ಶರಬತ್ತು ಧೂಪದ ಹೊಗೆಯಲ್ಲಿ ವಿಶೇಷ ಪರಿಮಳವನ್ನು ಪಡೆಯುತ್ತದೆ. ನವರಾತ್ರಿಯಲ್ಲಿ ಮುತ್ತೈದೆಯರಿಗೆ ಬಾಗಿನವಿತ್ತು, ಅವರಿಗೆ ಕುಡಿಯಲು ಪಾನಕವಿತ್ತು ಸತ್ಕರಿಸುವ ಸಂಪ್ರದಾಯ.

ಬಂಪು: ಇದು ಮಸೆ ಬಂಡಾರಿ ಹಾಡೆ ದಾಗಡಿ ದಾಸಾಳ ಮುಂತಾದ ಲೋಳೆಯಂತಹ ರಸವಿರುವ ಎಲೆಗಳಿಂದ ತಯಾರಿಸಬಹುದಾದ ಪಾನೀಯ. ಬೇಸಿಗೆಯ ದಾಹ ತಣಿಸಲು ಇದು ಪ್ರಯೋಜನಕಾರಿ. ಹರಿತ್ ನಿಂದ ಕೂಡಿದ ಇದು ತಂಪು. ಆಹಾರ ಧಾನ್ಯಗಳಾದ ಉದ್ದು ಪಚ್ಚೆಸರು ಅಕ್ಕಿ ಎಳ್ಳು ಕಸಕಸೆ ರಾಗಿ ಮತ್ತು ತರಕಾರಿಯ ಬೀಜಗಳಾದ ಸವ್ತೆ ಮೊಗೆ ಅಳ್ಳೀಮುಳುಕದ ಬೀಜವನ್ನು ಕಾಲಕಾಲಕ್ಕೆ ಅರೆದು ಸಿಹಿ ಸೇರಿಸಿ ತನಿ ಮತ್ತು ನೀರು ಇತ್ಯಾದಿ ಹೆಸರಿನ ಪಾನೀಯವನ್ನು ತಯಾರಿಸುತ್ತಾರೆ. ತುಳಸಿ ಮುಡಿಯಾಳ ಹಾಲ್ಬಳ್ಳಿಬೇರು ಮುಂತಾದವುಗಳಿಂದ ಪರಿಮಳದ ನೀರನ್ನು ತಯಾರಿಸಲಾಗುತ್ತದೆ. ಇವು ದಾಹ ನೀಗುವದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ತರುತ್ತವೆ.

ಕಷಾಯಗಳು: ಕೆಲವು ಔಷಧ ಸಸ್ಯಗಳನ್ನು ಬಳಸಿಕೊಂಡು. ಮನೆಯ ಸದಸ್ಯರ ರೋಗರುಜಿನಗಳನ್ನು ಪ್ರತಿಬಂಧಿಸಲು ಅಥವಾ ನಿವಾರಿಸಲು ಮನೆಮದ್ದುಗಾರರಾದ ಹಿರಿಯ ಮಹಿಳೆಯರು ಪಾನೀಯಗಳನ್ನು ತಯಾರಿಸುತ್ತಾರೆ. ಇವುಗಳನ್ನು ಕಷಾಯ ಕಾಢ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಜೀರಿಗೆ ಕೊತ್ತುಂಬರಿ ಶುಂಠಿ ಇತ್ಯಾದಿ ಮಸಾಲೆ ಜಿನಸುಗಳನ್ನು ಸೇರಿಸಿ ರೋಗ ಬಂದಾಗ ಮತ್ತು ರೋಗ ಬರದಂತೆ ತಡೆಯಲು ನಿತ್ಯ ಸೇವಿಸುತ್ತಾರೆ. ಇವುಗಳನ್ನು ಮರಾಠಿ ಭಾಷಿಕರ ಬಳಿಯಿರುವ ಕನ್ನಡಿಗರು ಕಾಡೆ ಎನ್ನುತ್ತಾರೆ. ಈ ಪ್ರದೇಶದಲ್ಲಿ ಅರಸಿನ ಕಾಡೆ ಶುಂಠಿ ಕಾಡೆಗಳು ಪ್ರಚಾರದಲ್ಲಿವೆ. ನಿರೋಗಿಗಳು ಇದನ್ನು ನಿತ್ಯ ಸೇವಿಸುವಾಗ ಕೆಲವು ಬಗೆಯ ಕಷಾಯಕ್ಕೆ ಹಾಲು ಸಕ್ಕರೆ ಸೇರಿಸುತ್ತಾರೆ. ಆಧುನಿಕ ಜನಪ್ರಿಯ ಪಾನೀಯಗಳಾದ ಕಾಫಿ ಚಹಗಳು ಅನುಕ್ರಮವಾಗಿ ಎಲೆಬೀಜಗಳ ಕಷಾಯಗಳೆ ಆಗಿವೆ. ಕನ್ನಡ ಕರಾವಳಿಯಿಂದ ಕೇರಳ ಕರವಾಳಿಯವರೆಗಿನ ಜನರು ಬಳಸುವ ಕುಚ್ಚಲಕ್ಕಿಯ ಗಂಜಿ ತಿಳಿಯು ಜೀವಸತ್ವದ ಗಣಿಯಾಗಿ ಬಹುದೊಡ್ಡ ಪ್ರಮಾಣದಲ್ಲಿ ಜನಸಾಮಾನ್ಯರ ದಾಹವನ್ನು ನೀಗಿಸುವ ಅಮೂಲ್ಯ ಪಾನೀಯವಾಗಿದೆ. ಆದರೆ ಇದು ಆಧುನಿಕತೆಯ ದಾಳಿಗೆ ಸಿಕ್ಕು ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಿದೆ. ಉತ್ತರ ಕರ್ನಾಟಕದ ಅಕ್ಕಿ ಗಂಜಿ ಅಳವೆ ಗಂಜಿಗಳು ಸ್ಥಳೀಯ ಧಾನ್ಯದ ಹಿಟ್ಟಿನಿಂದ ತಯಾರಾಗುತ್ತವೆ. ಹಿಟ್ಟಿನಿಂದ ತಯಾರಾಗುವ ಹುರುಳಿ ಸಂಕಟಿ; ಮಜ್ಜಿಗೆ ಅಮ್ರ; ಕಟಂಬಲಿ ಹಂತೆಂಬಲಿಗಳಿಗೆ ಸೌಮ್ಯವಾದ ಮಸಾಲೆಯನ್ನು ಬೆರೆಸುವ ಕಾರಣ ಇವುಗಳನ್ನು ಮಸಾಲೆ ಪಾನೀಯಗಳು ಎನ್ನುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಹುರಿದ ರಾಗಿಯ ಹಿಟ್ಟಿನ ಪಾನೀಯಗಳು ಪ್ರಸಿದ್ಧ.

ಕರಾವಳಿ ಮತ್ತು ಮಲೆನಾಡುಗಳಲ್ಲಿ ಊಟದ ಸಂದರ್ಭದಲ್ಲಿ ಬಳಸುವ ಅನೇಕ ವಿಧದ ದ್ರವಾಹಾರಗಳನ್ನು ಕುಡಿಯಲು ಅನುವಾಗುವಂತೆ ಮಾಡುವರು.

ಇಲ್ಲಿ ಸಸ್ಯಗಳ ಎಲೆ, ಹೂವು, ಕಾಯಿ, ಹಣ್ಣು, ಗಡ್ಡೆ, ಬೇರು, ಬೀಜ, ತೊಗಟೆಗಳನ್ನು ಬಳಸಿಕೊಂಡು ನೂರಾರು ಬಗೆಯ ತಂಬುಳಿಯನ್ನು ಅಟ್ಟು ಅನ್ನದ ಜೊತೆಯಲ್ಲಿ ಉಣ್ಣುತ್ತಾರೆ. ಸೋಸಿ ಕುಡಿಯುತ್ತಾರೆ. ಇವುಗಳ ರುಚಿಯನ್ನು ಹೆಚ್ಚಿಸಲು ಇವಕ್ಕೆ ಮಜ್ಜಿಗೆಯನ್ನು ಕೂಡಿಸುವದು ಸಾಮಾನ್ಯವಾಗಿರುತ್ತದೆ. ಮಾವಿನಕಾಯಿ ಹುಣಸೆಹಣ್ಣು ಬಿಂಬಲಗಳ ಅಪ್ಪೆ ಹುಳಿಗಳು ಉತ್ತಮ ನಿದ್ರೆಗೆ ಸಹಕಾರಿಯಾಗಿವೆ. ಅಪ್ಪೆಹುಳಿಗೆ ತುಸು ತೆಂಗಿನಕಾಯಿರಸ ಸೇರಿಸಿದರೆ ಸಾಮ್ರಾಣಿಯೆಂಬ ಪಾನೀಯ ಸಿದ್ದ. ಕಟ್ನೆಯು ಸೂಪ ಮಾದರಿಯ ಪಾನೀಯವಾಗಿದೆ.

ಮಜ್ಜಿಗೆ: ಹಾಲಿನಿಂದ ಹಲವು ಬಗೆಯ ಮೊಸರನ್ನು ಸಿದ್ಧಪಡಿಸುತ್ತಿದ್ದ ಬಗ್ಗೆ ಪ್ರಾಚೀನ ಕನ್ನಡ ಸೂಪ ಶಾಸ್ತ್ರಗಳಲ್ಲಿ ಮಾಹಿತಿಯಿದೆಯಾದರೂ ಕರ್ನಾಟಕದಲ್ಲಿ ಮೊಸರನ್ನು ತಯಾರಿಸುವ ವಿಧಾನದಲ್ಲಿ ವೈವಿಧ್ಯ ಕಂಡುಬರುವುದಿಲ್ಲ. ಆದರೆ ಸಾದಾ ಮೊಸರನ್ನು ಹಲವು ಬಗೆಯ ಮಜ್ಜಿಗೆಯನ್ನಾಗಿಸುವ ಪಾನೀಯ ಪಾಕಕಲೆ ಇಲ್ಲಿ ಜೀವಂತವಾಗಿದೆ. ಮಜ್ಜಿಗೆಯನ್ನು ಕಡೆದ ಮಜ್ಜಿಗೆ ಸಿಹಿಮಜ್ಜಿಗೆ ಒಗ್ಗರಣೆ ಮಜ್ಜಿಗೆ ಮಸಾಲೆ ಮಜ್ಜಿಗೆ ಇತ್ಯಾದಿಯಾಗಿ ವಿವಿಧ ಬಗೆಯ ಕುಡಿಯುವ ಮಜ್ಜಿಗೆಯನ್ನಾಗಿಸಲಾಗುತ್ತದೆಯಲ್ಲದೆ ನೀರಿನ ಜೊತೆಗೆ ಮಜ್ಜಿಗೆಯನ್ನು ಸೇರಿಸಿಕೊಂಡು ಹಲವಾರು ಬಗೆಯ ಪಾನೀಯಗಳನ್ನು ತಯಾರಿಸಲಾಗುತ್ತದೆ. ನೀರಿನ ದಾನದಂತೆ ಮಜ್ಜಿಗೆ ದಾನವೂ ಜನಪದ ಧಾರ್ಮಿಕ ಆಚರಣೆಯಲ್ಲಿ ಸ್ಥಾನ ಪಡೆದಿದೆ. ಜಾತ್ರೆಯಂತಹ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ನೆರೆದ ಪರಿಸೆಗೆ ಮಸಾಲೆ ಮಜ್ಜಿಗೆ ದಾನ ಮಾಡುತ್ತಾರೆ.

ಜನಪದ ಮಾದಕ ಪಾನೀಯ: ಈ ಪಾನೀಯಗಳು ತಮ್ಮ ಮೂಲ ಸ್ಥಿತಿಯಲ್ಲಿ ಆಹಾರ ಪಾನೀಯಗಳೇ ಆಗಿದ್ದು ಮನುಷ್ಯನ ಮಾದಕ ಪಾನೀಯ ಸೇವಿಸಬೇಕೆಂಬ ಚಟ ಅದನ್ನು ವಿವಿಧ ರೀತಿಯಲ್ಲಿ ಮಾದಕಗೊಳಿಸಲು ಪ್ರೇರೇಪಿಸಿದೆ. ಇವು ಜನಪದ ಆಹಾರ ಪಾನೀಯದ ವಿಕಟ ಪಾಕವಾಗಿವೆ. ಆಹಾರ ಪಾನೀಯಗಳಿಗೆ ಬಳಸುವ ಆಹಾರ ಪರಿಕರಗಳನ್ನು ಕೆಡಿಸಿ ಕೊಳೆಯಿಸಿ ಹುಳಿಯಿಸಿ ಮತ್ತು ಬರಿಸುವ ಸಸ್ಯಾಂಗವನ್ನು ಮತ್ತು ರಾಸಾಯನಿಕಗಳನ್ನು ಕೂಡಿಸಿ ಹಲವು ಬಗೆಯ ಪಾನೀಯಗಳನ್ನು ಸಿದ್ಧಪಡಿಸಲಾಗುತ್ತದೆ. ಇವುಗಳನ್ನು ಮಾದಕ ಪಾನೀಯವೆಂದು ಹೆಸರಿಸಬಹುದಾಗಿದೆ. ಪ್ರಾಚೀನ ಇತಿಹಾಸವುಳ್ಳ ಇವು ನಶಾಪ್ರಿಯರ ಪಾನೀಯಗಳಾಗಿವೆ. ಆರೋಗ್ಯಕ್ಕಿಂತ ಮನೋರಂಜನ ಇಲ್ಲಿ ಪ್ರಮುಖವಾಗುತ್ತದೆ.

ಮಾದಕ ಪಾನೀಯಗಳ ಗುಂಪಿಗೆ ಸುರೆಯು ಸೇರುತ್ತದೆ ಯಾದವರು ಸುರಾಪಾನ ಮಾಡಿ ಹೊಡೆದಾಡಿ ಸತ್ತರು ಎಂದು ಪ್ರಾಚೀನ ಗ್ರಂಥಗಳು ತಿಳಿಸುತ್ತವೆ. ಮೊಗಲರ ಕಾಲದಲ್ಲಿ ಸುರಾಪಾನ ರಾಜವೈಭವದ ಸಂಕೇತವಾಗಿತ್ತು. ಜಾನಪದ ಆಚರಣೆಗಳಲ್ಲಿಯೂ ಮಾದಕ ಪಾನೀಯವನ್ನು ದೇವರ ತೀರ್ಥವೆಂಬ ಹೆಸರಿನಲ್ಲಿ ತಾವು ಕುಡಿಯುವದಲ್ಲದೆ ತಮ್ಮ ದೇವರಿಗೆ ಅರ್ಪಿಸುವ ಪದ್ಧತಿಯಿದೆ.

ಮಾದಕ ಪಾನೀಯವೆಂದು ನಾವು ಗುರುತಿಸುವ ನೀರಾ ಸೇಂದಿ ಸಾರಾಯಿ ರಾಮರಸ ಮುಂತಾದ ಕೆಲವು ಮಾದಕ ಪಾನೀಯಗಳನ್ನು ಈ ಪಾನೀಯ ಭಕ್ತರು ತಾವು ಸೇವಿಸುವುದಲ್ಲದೆ ತಮ್ಮ ದೇವರಿಗೂ ಅರ್ಪಿಸುತ್ತಾರೆ. ಸರಕಾರವೇ ತೆರೆದಿರುವ ಸಾರಾಯಿ ಅಂಗಡಿಗಳ ಜೊತೆಗೆ ಕಳ್ಳಭಟ್ಟಿಗಳೂ ಸಾರಾಯಿ ತಯಾರಿ ಮಾಡಿ ಮಾರಾಟ ಮಾಡುವದು ಅವ್ಯಾಹತವಾಗಿ ಸಾಗಿದೆ.

ಎಸ್.ಎನ್.

 

ಪಿಟ್ಟಲದೊರ ತೆಲಂಗಾಣದಲ್ಲಿ ಹಾಸ್ಯರಸ ಪ್ರಧಾನವಾದ ಮಾತುಗಳನ್ನಾಡುತ್ತಾ ತಿರುಗಾಡವ ವೇಷಧಾರಿ. ಪಿಟ್ಟಲದೊರ ಎಂದರೆ ‘ಹಕ್ಕಿಯ ದೊರೆ’. ಹಕ್ಕಿಗಳನ್ನು ಬೇಟಾಡುವವನಂತೆ ಒಂದು ತುಪಾಕಿಯನ್ನು ಕೈಯಲ್ಲಿ ಹಿಡಿದು ವಿಚಿತ್ರ ವೇಷಧಾರಣೆಯಿಂದ ಜನರನ್ನು ರಂಜಿಸುತ್ತಾ ತಿರುಗಾಡುವ ಕಲಾವಿದರಾದ್ದರಿಂದ ಇವರಿಗೆ ‘ಪಿಟ್ಟಲದೊರ’ ಎಂಬ ಹೆಸರು ಬಂದಿದೆ.

ಹಕ್ಕಿ ಬೇಟೆಗಾರನ ವೇಷದಲ್ಲಿ ಬರುವ ಈ ಕಲಾವಿದರನ್ನು ‘ತುಪಾಕಿ ರಾಮುಡು’ (ತುಪಾಕಿರಾಮ), ‘ಕೊತ್ತಿಮೀರಸಾಬ್’ (ಕೊತ್ತಂಬರಿ ಸಾಬ್) ಎಂದು ಕೂಡ ಕರೆಯುತ್ತಾರೆ. ಬುಡಿಗೆ ಜಂಗಾಲು ಎಂಬ ಸಾಮಾಜಿಕ ವರ್ಗಕ್ಕೆ ಸೇರಿದ ಈ ಕಲಾವಿದರು ನಗಿಸಲೆಂದೇ ವೇಷಧಾರಣೆ ಮಾಡುತ್ತಾರೆ, ಚಮತ್ಕಾರದ ಮಾತುಗಳನ್ನಾಡುತ್ತಾರೆ.

ತುಪಾಕಿರಾಮ ಪೋಲಿಸರಂತೆ ಖಾಕಿ ಬಣ್ಣದ ಷರ್ಟನ್ನು ಧರಿಸುತ್ತಾನೆ. ಆದರೆ ಆ ಷರ್ಟಿಗೆ ಅಲ್ಲಲ್ಲಿ ತೂತುಗಳಿರುತ್ತವೆ ಅಥವಾ ತೇಪೆ ಹಾಕಿರುತ್ತದೆ. ಪ್ಯಾಂಟು ಬಲಗಾಲಿಗೆ ಪೂರ್ತಿ ಇದ್ದರೆ ಎಡಗಾಲಿಗೆ ಅರ್ಧ ಮಡಸಿರುತ್ತಾರೆ. ಷರ್ಟಿನ ಮೇಲೆ ಖಾಕಿ ಬಣ್ಣದ ಅಥವಾ ಕಪ್ಪು ಬಣ್ಣದ ಕೋಟು ಅದರ ಜೇಬಿಗೆ ಹಳೆಯ ಗಡಿಯಾರದ ಜೈನು ಇರುತ್ತವೆ. ತಲೆಯ ಮೇಲೆ ಹಳೆಯ ಟೋಪಿ(ಇಂಗ್ಲಿಷರು ಇಟ್ಟುಕೊಳ್ಳುತ್ತಿದ್ದ ದಪ್ಪನೆಯ ಖಾಕಿ ಬಣ್ಣದ ಟೋಪಿ) ಇರುತ್ತದೆ. ಹಳೆಯ ಕಾಲದ ಮಿಲಿಟರಿ ಬೂಟು, ಕೈಯಲ್ಲಿ ಮರದ ತುಪಾಕಿ ಇರುವ ಈ ತುಪಾಕಿ ರಾಮನ ಹಿಂದೆ ಮಕ್ಕಳ ಗುಂಪು ಓಡುತ್ತಿರುತ್ತದೆ.

ತುಪಾಕಿ ರಾಮನ ಮಾತುಗಾರಿಕೆ ಅತ್ಯಂತ ಆಕರ್ಷಕವಾಗಿರುತ್ತದೆ. ಅವರ ಮಾತುಗಳು ತುಪಾಕಿಯ ಗುಂಡುಗಳಂತೆಯೇ ಹಾರಿ ಬರುತ್ತವೆ. ಮಧ್ಯೆ ಮಧ್ಯೆ ಇಂಗ್ಲಿಷ್ ಮತ್ತು ಉರ್ದು ಪದಗಳು ಸೇರಿ ಆ ವೇಷಧಾರಿ ಇಂಗ್ಲೀಷಿನಲ್ಲೇ ಮಾತನಾಡುತ್ತಿದ್ದಾನೇನೋ ಎಂಬ ಭ್ರಮೆ ಹುಟ್ಟಿಸುತ್ತವೆ. “ಒರೇ ಡ್ಯಾಂ, ಫಟಾಫಟ್, ಫೋಲೇ ಕಮಾನ್, ಮಸ್ಕಾಕಟ್ಟಾ, ಹೆಡ್ಡೆಂಕಾ, ಚಟ್ಕಾ, ತಟ್ಕಾ, ಮಟ್ಕಾ, ಬಿಟ್ಕಾ, ಗುಟ್ಕಾ, ಜಟ್ಕಾ, ಹೆಡ್ಡೆಂಕಾ, ದವ್ವಡ್‌ದಾರ್, ಏಡ್ವಡ್‌ದಾರ್, ಸಾಹೆಬ್‌ಲ ಹುಕುಂಕ ಅಯ್ಯಂದಿ, ಈ ಪಾತ ಇಂಡ್ಲಂನೀ ಕೂಲಾ ಗೊಟ್ಟೆಯ್ಯಾಲಿ.

ಅಲ್ಲಂಸಾಬ್, ಬೆಲ್ಲಂ ಸಾಬ್, ಕೋತಿಮೀರ‍್ಸಾಬ್, ಪೊದೀನಾ ಸಾಬ್, ಪಸುಪುಕೊಮ್ಮು ಸಾಬ್, ರೇಪು ಒಂಟಿಗಂಟಕಲ್ಲಾ ಅಂದರೂ ಮಿಲಾಖತ್ ಕಿ ರಾವಾಲೆ…” ಹೀಗೆ ಸಾಗುತ್ತದೆ ವಾಕ್ ಪ್ರವಾಹ.

ಒಮ್ಮೊಮ್ಮೆ ಇವರ ಮಾತುಗಳಲ್ಲಿ ಪ್ರಾಸಗಳು ಬಿಟ್ಟರೆ ಅರ್ಥವೇನೂ ಇರುವುದಿಲ್ಲ. ಕೆಲವೊಮ್ಮೆ ಗಿಡ, ಮರ, ಪ್ರಾಣಿಗಳ ಹೆಸರುಗಳನ್ನೇ ಪುನರುಕ್ತಗೊಳಿಸುವುದನ್ನು ನೋಡಬಹುದು. ಇವರ ವೇಷ, ಅಭಿನಯ, ಮಾತಿನ ಮೋಡಿ ಅತಿಶಯವಾಗಿರುತ್ತವೆ.

ಎನ್.ವೈ.ಎಸ್.ಅನುವಾದ ಎ.ಎಂ.ಡಿ.