ಪುಲಿವೇಡಂ ಹುಲಿವೇಷವನ್ನು ತಮಿಳುಭಾಷೆಯಲ್ಲಿ ಪುಲಿವೇಡಂ ಎನ್ನುತ್ತಾರೆ. ಸಮಾಜ ಒಂದರ ಇತಿಹಾಸ, ಸಂಪ್ರದಾಯ ಇವುಗಳೆಲ್ಲ ಜನಪದ ಕಲೆಗಳಲ್ಲಿ, ಗೀತೆಗಳಲ್ಲಿ ಹಾಗೂ ಆಟಗಳಲ್ಲಿ ಹಾಸುಹೊಕ್ಕಾಗಿವೆ. ಇವು ಆಯಾಯ ಸಮಾಜದ ಜನಸಾಮಾನ್ಯರ ಹೃದಯದಲ್ಲಿ ಸುಪ್ತವಾಗಿರುವ ಭಾವನೆಗಳನ್ನು ಅಭಿವ್ಯಕ್ತಿಸುತ್ತವೆ. ಇವುಗಳ ಬಗ್ಗೆ ಸಂಶೋಧನೆ ನಡೆಸುವುದೆಂದರೆ ಆ ಸಮಾಜದ ನಂಬಿಕೆ, ಇತಿಹಾಸ ಮತ್ತು ಸಂಪ್ರದಾಯದ ಮೂಲವನ್ನು ಹುಡುಕುವುದೇ ಆಗಿದೆ. ಜನಪದ ಆಟಗಳಲ್ಲಿ ಹುಲಿವೇಷವೂ ಒಂದಾಗಿದೆ.

ಮಾನವ ಇತಿಹಾಸದ ಪ್ರಾರಂಭ ಕಾಲದಲ್ಲಿ ನಿಸರ್ಗದೊಡನೆ ನಡೆಸಿದ್ದು ನಿರಂತರ ಹೋರಾಟ, ಕಾಡು ಪ್ರಾಣಿಗಳೊಂದಿಗೆ ಹೋರಾಟ ನಡೆಸಿದ ಬಳಿಕ ಮಾನವ ಬೇರೆ ಬೇರೆ ಗುಂಪುಗಳೊಡನೆ ಹೋರಾಟ ಮಾಡುವುದು ಅನಿವಾರ್ಯವಾಯಿತು. ಈ ಹೋರಾಟದಲ್ಲಿ ಜಯಗಳಿಸುವುದಕ್ಕಾಗಿ ಪ್ರಾರಂಭದಲ್ಲಿ ದೇಹದಾರ್ಢ್ಯತೆ ಅನಂತರ ಕೆಲವು ನಿಯಮ, ತಂತ್ರಗಳನ್ನು ಹಾಕಿಕೊಂಡು ಆಯುಧಗಳನ್ನು ಬಳಸತೊಡಗಿದ. ಇವುಗಳ ಬೆಳವಣಿಗೆ ಪ್ರಾಚೀನ ಮಾನವನ ಯುದ್ಧತಂತ್ರಕ್ಕೆ ಸಾಕ್ಷಿ. ಯುದ್ಧಕ್ಕೆ ಹೊರಡುವ ಪುರುಷರಲ್ಲದೆ ಪ್ರಯಾಣ ಮಾಡುವವರು ಕೂಡ ತಮ್ಮ ರಕ್ಷಣೆಗಾಗಿ ತರಬೇತಿ ಪಡೆಯುವುದು ಅನಿವಾರ್ಯವಾಯಿತು. ಕೆಲವು ಗುಂಪುಗಳು ಮಕ್ಕಳಿಗೂ ಈ ತರಬೇತಿ ನೀಡಿದವು. ಗುಂಪುಗಳ ಮಧ್ಯೆ ಪರಸ್ಪರ ಸ್ಪರ್ಧೆ ಬೆಳೆಯತೊಡಗಿತು. ಇವುಗಳನ್ನು ಪೋಷಿಸಿದ್ದು ತಾನೇ ಎಂಬ ಅಹಂ. ಅಂತೆಯೇ ತಾನು ಶ್ರೇಷ್ಠ ಎಂಬುದನ್ನು ಜತ್ತಿಗೆ ತಿಳಿಸಲು ಡಂಗೂರ ಸಾರಿಕೊಳ್ಳುವ ಅಹಂ ಜೊತೆ ಜೊತೆಯಲ್ಲಿಯೇ ಬೆಳೆಯಿತು. ತನಗೆ ಸರಿಸಾಟಿಯಾಗಿ ಯಾರಾದರೂ ಉಂಟೋ ಎಂಬ ಧ್ವನಿ ಅವನದಾಗಿತ್ತು. ಇಂತಹ ಸಂದರ್ಭದಲ್ಲಿ ಜನ್ಮತಾಳಿದ ಜನಪದ ಕಲೆ ಹುಲಿವೇಷ.

ಹೆಸರು ಹೊಂದಾಣಿಕೆ : ಕಾಡಿನ ಪ್ರಾಣಿಗಳಲ್ಲಿ ಕ್ರೂರ ಮತ್ತು ಬಲಿಷ್ಠವಾದದ್ದು ಹುಲಿ; ಬಲ ಹಾಗೂ ಶೌರ್ಯದ ಪ್ರತೀಕ ಕೂಡ ಹುಲಿಯೇ. ಇವೆರಡಕ್ಕೂ ಹುಲಿಯನ್ನು ಉದಾಹರಿಸುವುದು ಸಂಪ್ರದಾಯವಾಗಿ ಉಳಿದುಬಂದಿದೆ. ಚೋಳರು ತಮ್ಮ ಧ್ವಜದಲ್ಲಿ ಹುಲಿಯನ್ನು ಚಿತ್ರಿಸಿದ್ದರು. ವೀರನೊಬ್ಬ ಯುದ್ಧಕ್ಕೆ ತೆರಳುತ್ತಿದ್ದಾಗ ಆತನನ್ನು ಸಂಬೋಧಿಸುತ್ತಿದ್ದುದು ‘ಶೂರಹುಲಿ’ಯೆಂದೇ. ಹುಲಿಯೊಂದಿಗೆ ಕಾದಾಡಿ ಗೆದ್ದ ಸಂತೋಷವನ್ನು ಆಚರಿಸಲು ಪ್ರಾಚೀನ ತಮಿಳರು ಹುಲಿಗೂ ವೀರನಿಗೂ ಇರುವ ಸಂಬಂಧವನ್ನು ತೋರಿಸಲು ಹುಲಿ ಹಲ್ಲಿನಸರವನ್ನು ಆತ ಧರಿಸುತ್ತಿದ್ದ. ಹುಲಿಯ ಶೌರ್ಯದ ನಂಟನ್ನು ಪ್ರತಿಬಿಂಬಿಸುವ ದೃಷ್ಟಿಯಿಂದ ವೀರ ಆಟಗಳಲ್ಲಿ ಕಾಲಿಗೆ ಕಡಗ ಧರಿಸಿ ಹುಲಿಯಂತೆ ವೇಷ ಹಾಕಿ ಆಟ ಆಡಿಕೊಂಡು ಬರಲಾಗುತ್ತಿತ್ತು.

ಹುಲಿ ವೇಷ ಧರಿಸುವವರು ಕಾಲಿಗೆ ಕಡಗ ಧರಿಸುವುದರೊಂದಿಗೆ ದೇಹದಾರ್ಢ್ಯತೆಯಲ್ಲಿ ತರಬೇತಿ ಪಡೆಯಬೇಕಾಗಿತ್ತು. ಅವರು ಧೈರ್ಯಶಾಲಿಗಳಾಗಿರಬೇಕು. ಅವರ ದೇಹ ಸುದೀರ್ಘ ಕಾಲ ದಣಿವಾಗದೆ ತಮ್ಮೆದುರು ಆಡುವ ಆಟಗಾರನಿಗಾಗಿ ಸರಿಸಾಟಿಯಾಗಿರಬೇಕು. ಕುಶಲತೆಯನ್ನು ತಿಳಿದುಕೊಂಡು ಕಾರ್ಯೋನ್ಮುಖವಾಗುವ ಚಾಕಚಾಕ್ಯತೆ ಪಡೆದಿರಬೇಕು. ಇಂತಹ ಅರ್ಹತೆ ಉಳ್ಳವನೇ ಸುಲಭವಾಗಿ ಹುಲಿವೇಷ ಹಾಕಬಲ್ಲ. ಈ ಅರ್ಹತೆ ಇಲ್ಲದವನು ಕೇವಲ ಕಾಗದದ ಹುಲಿ. ಆತ ಗಾಳಿಯಲ್ಲಿ ಹಾರಾಡಿ ತೂರಾಡಿ ಹರಾಜಿಗೆ ಒಳಗಾಗುವ ಅಪಮಾನದ ಸನ್ನಿವೇಶ ಒದಗುತ್ತದೆ. ಆದ್ದರಿಂದಲೇ ದೊಣ್ಣೆವರಸೆ ತರಬೇತಿಯಲ್ಲಿ ಗುರುಗಳು ತಮ್ಮ ಶಿಷ್ಯನನ್ನು ಆಯ್ಕೆ ಮಾಡುವಾಗ ಅವರ ಅರ್ಹತೆಯನ್ನು ಪರಿಶೀಲಿಸುತ್ತಾರೆ.

ವೇಷ ಹಾಕುವುದು : ಹುಲಿವೇಷ ಹಾಕುವವರು ಮೊದಲಿಗೆ ತಮ್ಮ ದೇಹದ ಮೇಲೆ ಬೆಳದಿರುವ ರೋಮಗಳನ್ನು ಬೋಳಿಸಬೇಕು. ಇಲ್ಲದಿದ್ದರೆ ಕೂದಲುಗಳು ಬಣ್ಣ ಹಚ್ಚುವಾಗ ಅದರ ಜೊತೆ ಅಂಟಿಕೊಂಡು ಆಟ ಆಡುವಾಗ ತೊಂದರೆ ಕೊಡುವುದುಂಟು. ಬಣ್ಣವನ್ನು ಕುಂಚದ ಸಹಾಯದಿಂದ ಹುಲಿಯ ದೇಹದಂತೆ ಪಟ್ಟೆಪಟ್ಟೆಯಾಗಿ ಗೆರೆಗಳನ್ನು ಎಳೆಯಲಾಗುತ್ತದೆ. ಇದಕ್ಕೆ ಉಪಯೋಗಿಸುವುದು ಬಹುಪಾಲ ಕೆಂಪು, ಹಸಿರು, ಹಳದಿ ಮೊದಲಾದ ಬಣ್ಣಗಳು. ತಲೆಯಲ್ಲಿ ಹುಲಿಯ ಶಿರದಂತೆ ಹೊಂದಿಕೆಯಾಗುವ ಬಟ್ಟೆಯ ಕವಚವನ್ನು ಮುಖವಾಡದ ರೀತಿಯಲ್ಲಿ ಮಾಡಿ ಮುಖಕ್ಕೆ ಧರಿಸಲಾಗುವುದು. ಅನಂತರ ಮುಖವನ್ನು ಕೂಡ ಹುಲಿಯ ಮುಖದಂತೆ ಚಿತ್ರಿಸಿಕೊಳ್ಳಲಾಗುವುದು. ಹುಲಿಯ ನಾಲಿಗೆಯಂತೆ ನೀಳವಾದ ತಗಡಿನ ತುಂಡನ್ನು ನಾಲಿಗೆಯ ಆಕಾರ ಮಾಡಿ ಅದಕ್ಕೆ ಕೆಂಪು ಬಣ್ಣ ಹಾಕಿ ಬಾಯಿಯಲ್ಲಿ ಕಚ್ಚಿಕೊಳ್ಳುವರು. ಕೆಲವು ವೇಷಧಾರಿಗಳು ಇದರ ಬದಲಿಗೆ ನಿಂಬೆಹಣ್ಣನ್ನು ಕಚ್ಚಿ ಕೊಳ್ಳುವುದುಂಟು. ತಂತಿಯಲ್ಲಿ ಸುತ್ತಿ ಹುಲಿಯ ಬಾಲದಂತೆ ಒಂದು ಬಾಲವನ್ನು ಸೊಂಟಕ್ಕೆ ಬಿಗಿಯಾಗಿ ಕಟ್ಟಲಾಗುವುದು. ಆ ಬಾಲಕ್ಕೆ ಬಣ್ಣ ಬಳಿದು ಅದರ ತುದಿಯಲ್ಲಿ ಕುಂಚಕಟ್ಟಿ ಅಲಂಕರಿಸುವುದುಂಟು. ಕೆಲವು ಪ್ರದೇಶಗಳಲ್ಲಿ ಬಟ್ಟೆ ಹಗ್ಗ ಮೊದಲಾದವುಗಳಿಂದ ಬಾಲವನ್ನು ಮಾಡಿ ಅದನ್ನು ಬಣ್ಣದಿಂದ ಅಂಟಿಸಿ ಸೊಂಟಕ್ಕೆ ಕಟ್ಟಿಕೊಳ್ಳುವುದುಂಟು. ಕೆಲವರು ಬಾಲವನ್ನು ಬಹಳ ಉದ್ಧವಾಗಿ ಬಿಟ್ಟು ಅದನ್ನು ಬೇರೊಬ್ಬರು ಹಿಡಿದುಕೊಂಡು ಬರುವಂತೆ ಮಾಡುತ್ತಾರೆ. ಮತ್ತೆ ಕೆಲವರು ಎರಡು ಕೈಗಳಲ್ಲಿ ಹಿಡಿಕೆ ಇರುವ ಚೂಪಾದ ಕತ್ತಿಯನ್ನು ಹಿಡಿದುಕೊಳ್ಳುವುದುಂಟು. ಅಂತೆಯೇ ಕೆಲವರು ಹುಲಿಯ ಉಗುರಿನಂತೆ ಚೂಪಾದ ಉಗುರಿನ ಮಾದರಿಯನ್ನು ಬೆರಳಿಗೆ ಧರಿಸಿಕೊಳ್ಳುವುದುಂಟು. ಅದು ಸಾಧ್ಯವಾಗದಿದ್ದರೆ ತಮ್ಮ ಕೈಬೆರಳುಗಳಿಗೆ ಕೆಂಪು ಬಣ್ಣ ಬಳಿದುಕೊಳ್ಳುವರು. ತಲೆಯಿಂದ ಕಾಲಿನವರೆಗೂ ಹುಲಿಯಂತೆ ಗೋಚರಿಸುವ ಇವರು ಮಧ್ಯದಲ್ಲಿ ಲಂಗೋಟಿ ಒಂದನ್ನು ಮಾತ್ರ ಹಾಕಿಕೊಳ್ಳುವರು.

ಗುರುಗಳಿಗೆ ಮರ್ಯಾದೆ : ಹುಲಿ ವೇಷ ಮಾಡುವ ಬಹುಪಾಲು ಕಲಾವಿದರು ದೊಣ್ಣೆವರೆಸೆಯಲ್ಲಿ ಪರಿಣಿತರಾಗಿರಬೇಕು. ತರಬೇತಿ ಪಡೆದ ಮೇಲೆ ತಮ್ಮ ಗುರುಗಳಿಗೆ ಸನ್ಮಾನಿಸುವ ಪರಿಪಾಠವಿದೆ. ಒಂದು ತಟ್ಟೆಯಲ್ಲಿ ಹೊಸ ಪಂಚೆ, ತೆಂಗಿನಕಾಯಿ, ಹಣ್ಣು ಹಂಪಲು, ವೀಲ್ಯದೆಲೆ ಮುಂತಾದವುಗಳನ್ನು ತೆಗೆದುಕೊಂಡು ಹೋಗುವರು. ದೊಣ್ಣೆಗಳನ್ನು ಬಣ್ಣದಿಂದ ಅಲಂಕರಿಸಿ ವಾದ್ಯ ಮೇಳಗಳೊಡನೆ ಗುರುಗಳ ಮನೆಗೆ ತೆರಳುವರು. ಅಲ್ಲಿ ಅವರಿಗೆ ಕಾಣಿಕೆಗಳನ್ನು ಒಪ್ಪಿಸಿ ದೇವರಿಗೆ ತೆಂಗಿನಕಾಯಿ ಹೊಡೆದು ಕರ್ಪೂರ ಹಚ್ಚಿ ನೈವೇದ್ಯ ಮಾಡುವರು. ಅನಂತರ ಒಬ್ಬೊಬ್ಬ ವಿದ್ಯಾರ್ಥಿಯೂ ಕೈಯಲ್ಲಿ ದೊಣ್ಣೆ ತೆಗೆದುಕೊಂಡು ಗುರುಗಳಿಗೆ ನಮಿಸುವರು. ಆಗ ಗುರುಗಳು ಅವರಿಗೆ ಶುಭ ಕೋರುತ್ತಾರೆ. ಹುಲಿವೇಷಧಾರಿಗಳು ಕೂಡ ಗುರುಗಳಿಗೆ ನಮಸ್ಕರಿಸಿ ಮೆರೆವಣಿಗೆ ಹೊರಡುವುದುಂಟು

ಮೆರೆವಣಿಗೆ : ಕೆಲವು ಸಂದರ್ಭಗಳಲ್ಲಿ ಹುಲಿವೇಷ ದೇವರ ಮೆರೆವಣಿಗೆಯೊಂದಿಗೆ ಹೋಗುವುದುಂಟು. ಕೆಲವು ಬಾರಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಅಂತ್ಯಗೊಳ್ಳುತ್ತದೆ.

ಹುಲಿವೇಷವನ್ನು ತಮಿಳು ನಾಡಿನ ಜನ ‘ವೀರ ಆಟ’ವೆಂದೇ ಪರಿಗಣಿಸಿ ಅದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ವೀರತ್ವ ಮತ್ತು ಬಲಿಷ್ಠತೆಯ ದ್ಯೋತಕವಾಗಿ ಹುಲಿಯ ಕುರುಹನ್ನು ತಮಿಳರು ಬಳಸುವುದು ಒಂದು ಸಂಪ್ರದಾಯ. ಈ ಸಂಪ್ರದಾಯಕ್ಕೆ ಅನುಗುಣವಾಗಿ ಬಲಶಾಲಿಯಾದ ವ್ಯಕ್ತಿ ಹುಲಿವೇಷ ಧರಿಸಿ ತನ್ನ ಧೈರ್ಯ ಪ್ರದರ್ಶಿಸಿ ಬರುತ್ತಾನೆ. ಮನೆಯಲ್ಲಿ ರಚ್ಚೆ ಹಿಡಿಯುವ ಮಕ್ಕಳಿಗೆ ಈತ ‘ಎರಡು ಬಾಲದವ’ ಅಂದರೆ ಎರಡು ಬಾಲ ಕಟ್ಟಿದ ಹುಲಿ ವೇಷದವನಂತೆ ಎಂದು ಕರೆಯುವುದುಂಟು. ಹೀಗೆ ತಮಿಳುನಾಡಿನ ಜನಪದರು ತಮ್ಮ ಧೈರ್ಯ, ಶೌರ್ಯ, ವೀರತ್ವವನ್ನು ಪ್ರದರ್ಶಿಸಲು ಹುಲಿವೇಷ ಧರಿಸುವರು.

ಪಿ.ಎಂ.

 

ಪುಳ್ಳುವ ಕೊಡ ನಾಗಾರಾಧನೆಯ ಪರಂಪರೆಯಿರುವ ಕೇರಳವು ಒಂದು ಕಾಲದಲ್ಲಿ ನಾಗಬನಗಳಿಂದಲೂ ನಿಬಿಡವಾದ ಕಾಡಿನಿಂದಲೂ ತುಂಬಿಕೊಂಡಿತ್ತು. ನಾಗಬನಗಳಲ್ಲಿ ಹಾವುಗಳಿಗೆ ವಾಸವಾಗಲು ಚಿತ್ರಗಳಿಂದ ಕೂಡಿದ ಮಣ್ಣಿನ ಕೊಡಗಳನ್ನು ಇರಿಸುತ್ತಿದ್ದರು. ಇದರ ಪಕ್ಕದಲ್ಲೇ ನಾಗವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಿದ್ದರು. ಇಂತಹ ನಾಗಾರಾಧನೆಯಲ್ಲಿ ಪುಳ್ಳುವರ ಆರಾಧನೆಯು ಪ್ರಸಿದ್ಧವಾಗಿದೆ. ಸರ್ಪದೋಷಗಳನ್ನು ನಿವಾರಿಸಲು ಪುಳ್ಳುವರು ವೀಣೆ ಮತ್ತು ಕೊಡದಂತಹ ವಾದ್ಯೋಪಕರಣಗಳನ್ನು ಬಳಸಿಕೊಂಡು ‘ಸರ್ಪಪಾಟ್‌’ಗಳನ್ನು ಹಾಡುತ್ತಾರೆ.

ಪುಳ್ಳುವ ಕೊಡ : ಪುಳ್ಳುವರು ಬಳಸುವ ಚರ್ಮವಾದ್ಯವನ್ನು ‘ಪುಳ್ಳುವ ಕೊಡ’ ಎನ್ನುತ್ತಾರೆ. ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಣ್ಣಿನ ಕೊಡಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿರುವ ಕೊಡದ ಅಡಿಭಾಗದಲ್ಲಿ ವೃತ್ತಾಕಾರದ ತೂತು ಇರುತ್ತದೆ. ಈ ಕೊಡದ ಅರ್ಧಭಾಗವನ್ನು ಆವರಿಸಿಕೊಳ್ಳುವಂತೆ ಚರ್ಮವನ್ನು ಬಿಗಿಯುತ್ತಾರೆ. ಇದರ ಮೇಲೆ ಸಪೂರವಾದ ದಾರವನ್ನು ಬಿಗಿಯುತ್ತಾರೆ. ಎಡದ ಕೈಯಲ್ಲಿ ಕೊಡವನ್ನು ಹಿಡಿದು ಬಿಗಿಯಾಗಿ ಕಟ್ಟಿದ ಚರ್ಮದ ದಾರವನ್ನು ಮೀಟಿದಾಗ ವಿಶಿಷ್ಟವಾದ ನಾದ ಹೊರಡುತ್ತದೆ. ಕೊಡವನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಒತ್ತಿ ಹಿಡಿಯುವ ಮೂಲಕ ವೈವಿಧ್ಯವಾದ ನಾದಗಳನ್ನು ಹೊಮ್ಮಿಸಬಹುದು.

ಕುಂಬಾರರು ಆವೆ ಮಣ್ಣಿನಿಂದ ನಿರ್ಮಿಸುವ ಈ ವಾದ್ಯೋಪಕರಣಕ್ಕೆ ಅನೇಕ ವಿಧಿಯಾಚರಣೆಗಳಿವೆ. ಏಳು ದಿವಸ ಮೊದಲೇ ವ್ರತಾಚರಣೆಯಲ್ಲಿರುವ ಕುಂಬಾರರು ಮಧ್ಯ-ಮಾಂಸಾದಿಗಳನ್ನು ವರ್ಜಿಸಿ ಅತ್ಯಂತ ಭಕ್ತಿಯಿಂದ ಈ ಕೊಡವನ್ನು ತಯಾರಿಸುತ್ತಾರೆ.

ಕೊಡವನ್ನು ಪುಳ್ಳುವರಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಕುಂಬಾರನಿಗೆ ದಕ್ಷಿಣೆಯನ್ನು ಕೊಡಬೇಕು. ಕೊಡದೊಂದಿಗೆ ಮನೆಗೆ ತಲುಪುವ ಪುಳ್ಳುವನು ಪೂರ್ವಿಕರನ್ನು ಸ್ಮರಿಸಿಕೊಂಡು ಅನೇಕ ವಿಧಿಯಾಚರಣೆಗಳನ್ನು ನೆರವೇರಿಸಿ, ಕೊಡಕ್ಕೆ ತೂತು ಕೊರೆದು ಚರ್ಮವನ್ನು ಬಿಗಿಯುತ್ತಾನೆ. ಮನೆ-ಮನೆಗಳಿಗೆ ತೆರಳಿ ಹಾಡುವುದಕ್ಕೆ ಚಿಕ್ಕ ಗಾತ್ರದ ಕೊಡಗಳನ್ನೂ ಸರ್ಪಕಳ ಮೊದಲಾದ ಆಚರಣೆಗಳ ಹಾಡುವುದಕ್ಕೆ ದೊಡ್ಡ ಗಾತ್ರದ ಕೊಡವನ್ನೂ ಪುಳ್ಳುವರು ಬಳಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಪುಳ್ಳುವರು ಚರ್ಮದ ದಾರಕ್ಕೆ ಬದಲಾಗಿ ತಂತಿಯನ್ನು ಬಿಗಿಯುತ್ತಾರೆ.

ಪುಳ್ಳುವ ವೀಣೆ : ಪುಳ್ಳುವರು ಹಾಡುವುದಕ್ಕಾಗಿ ಬಳಸುವ ತಂತಿ ವಾದ್ಯವನ್ನು ‘ಪುಳ್ಳುವ ವೀಣೆ’ ಎನ್ನುತ್ತಾರೆ. ಕುಮಿಳ್ (ಮಲಯಾಳ) ಹಲಸು ಮೊದಲಾದ ಮರಗಳಿಂದ ಈ ವಾದ್ಯವನ್ನು ತಯಾರಿಸುತ್ತಾರೆ. ಎಂಟು ಇಂಚು ವ್ಯಾಸದ ಮರದ ಬಟ್ಟಲಿನಾಕಾರ, ಹನ್ನೆರಡು ಇಂಚು ಉದ್ದದ ಮರದ ತುಂಡು ಮತ್ತು ಅದರ ತುದಿಯಲ್ಲಿರುವ ಒಂದು ಬಿರಡೆ – ಇದು ಪುಳ್ಳುವ ವೀಣೆಯ ಮುಖ್ಯವಾದ ಭಾಗಗಳು. ಮರದ ಬಟ್ಟಲಿನಾಕಾರಕ್ಕೆ ‘ಉಡ’ (ಒಂದು ಜಾತಿಯ ಪ್ರಾಣಿ)ದ ಚರ್ಮವನ್ನು ಬಿಗಿದು ಕಟ್ಟುತ್ತಾರೆ. ಅನಂತರ ಒಂದು ದಾರವನ್ನು ಬಿರಡೆಗೆ ಬಿಗಿಯಾಗಿ ಕಟ್ಟಿ ಕಂಚಿನ ಎರಡು ಗೆಜ್ಜೆಗಳನ್ನು ಪೋಣಿಸುತ್ತಾರೆ. ತಂತಿಯನ್ನು ಬಿಲ್ಲಿನಿಂದ ಮೀಟಿದಾಗ ನಾದ ಹೊರಹೊಮ್ಮುವುದು. ತಂತಿಯ ಮೇಲೆ ಕೈ ಬೆರಳಿನ ಸಹಾಯದಿಂದ ವಿಭಿನ್ನವಾದ ಸ್ವರಗಳನ್ನು ಹೊರಡಿಸಬಹುದು. ಹಾಡಿನ ತಾಳಕ್ಕೆ ಅನುಸರಿಸಿ ಗೆಜ್ಜೆಯ ನಾದ ಹೊರಡುತ್ತದೆ. ಇದು ಪುಳ್ಳುವ ವೀಣೆಯ ವಿಶೇಷತೆಯಾಗಿರುತ್ತದೆ. ಹೆಡೆ ಬಿಚ್ಚಿದ ಹಾವಿನಾಕಾರದಲ್ಲಿಯೂ ಪುಳ್ಳುವ ವೀಣೆಯನ್ನು ನಿರ್ಮಿಸುತ್ತಾರೆ. ಪುಳ್ಳುವ ಕೊಡ ಮತ್ತು ವೀಣೆಗೆ ಪ್ರಾದೇಶಿಕ ವ್ಯತ್ಯಾಸಗಳನ್ನು ಕಾನಬಹುದು.

ಪಿ.ವಿ.ಎಂ. ಅನುವಾದ ಎನ್.ಎಸ್.

 

ಪುಳ್ಳುವರ್  ಕೇರಳದ ಹಳ್ಳಿಗಳಲ್ಲಿ ಜನಪದ ಹಾಡು ಮತ್ತು ಧಾರ್ಮಿಕ ಆಚರಣೆಗಳೊಂದಿಗೆ ಬದುಕು ಸಾಗಿಸುವ ಜನಸಮುದಾಯವೇ ಪುಳ್ಳುವರು. ‘ಪುಳ್ಳ್’ ಎಂಬ ಪದಕ್ಕೆ ಮಲಯಾಳದಲ್ಲಿ ಶಕುನದ ಪಕ್ಷಿ ಎಂಬ ಅರ್ಥವಿದೆ. ‘ಪುಳ್ಳೇರ್’ ಎಂಬ ಪದವು ಶಕುನ ಪಕ್ಷಿಯಿಂದ ಉಂಟಾಗುವ ಬಾಧೆ ಎಂಬರ್ಥ ಕೊಡುತ್ತದೆ. ಈ ಬಾಧೆಯನ್ನು ನಿವಾರಣೆ ಮಾಡುವವರೇ ಪುಳ್ಳುವರು. ಇದೇ ಅರ್ಥದಲ್ಲಿ ಪುಳ್ಳುವನ್ ಎಂಬ ಶಬ್ದ ಹುಟ್ಟಿರಬೇಕು. ಪುಳ್ಳುವರಲ್ಲಿ ಎರಡು ವಿಭಾಗಗಳಿವೆ. ಉತ್ತರ ಮಲಬಾರಿನಲ್ಲಿ ವಾಸವಾಗಿರುವ ಪುಳ್ಳುವರು ಪ್ರೇತ ಬಾಧೆಯನ್ನು ನಿವಾರಿಸುವವರಾಗಿದ್ದಾರೆ. ಕೇರಳದ ಉಳಿದ ಭಾಗಗಳಲ್ಲಿ ವಾಸವಾಗಿರುವ ಪುಳ್ಳುವರನ್ನು ‘ನಾಗಂಪಾಡಿಗಳು’ ಎನ್ನುತ್ತಾರೆ. ಇವರು ನಾಗಾರಾಧನೆಯ ಅಂಗವಾಗಿ ಸರ್ಪಂಪಾಟ್ ಮತ್ತು ಅದರ ವಿಧಿಯಾಚರಣೆಗಳನ್ನು ನಿರ್ವಹಿಸುತ್ತಾರೆ.

ಉತ್ತರ ಕೇರಳದ ಮನೆಮನೆಗಳಲ್ಲಿ ಪ್ರೇತಬಾಧೆಗಳನ್ನು ನಿವಾರಿಸುವುದಕ್ಕಾಗಿ ಪುಳ್ಳುವರು ನಡೆಸುವ ವಿಧಿಯಾಚರಣೆಯೇ ‘ಪ್ರೇತಂಪಾಟ್’. ಗರ್ಭಿಣಿ ಮಹಿಳೆಯರು ಮೃತಪಟ್ಟರೆ ಆ ಮನೆಯಲ್ಲಿ ಪುಳ್ಳುವರ ಪಾಟ್ ನಡೆಸಬೇಕೆಂಬುದು ನಂಬಿಕೆ. ಗರ್ಭಿಣಿಯ ಸಾವಿಗೆ ಪಾಪಕರ್ಮಗಳು ಮತ್ತು ದೋಷವೇ ಕಾರಣವೆಂದೂ ಸತ್ತ ಮಹಿಳೆಯ ಪ್ರೇತಕ್ಕೆ ಮೋಕ್ಷ ಸಿಗಲು ಪುಳ್ಳುವನ್ ಪಾಟ್ ನಡೆಸಬೇಕೆಂದೂ ಜನರು ನಂಬಿದ್ದಾರೆ. ಈ ಆಚರಣೆಗೆ ‘ಕಳಂ’ ಬರೆಯಬೇಕು. ಆಲದ ಮರದ ಚಿತ್ರವನ್ನು ಕಳಂ ಆಗಿ ಬರೆಯುತ್ತಾರೆ. ಚಪ್ಪರ, ಅಲಂಕಾರಗಳೆಲ್ಲ ಇರುತ್ತವೆ. ಪ್ರಸೂತಿ ಮನೆಯಂಥ ಒಂದು ಕಾಲ್ಪನಿಕ ಗುಡಿಯನ್ನು ಬಾಳೆದಿಂಡಿನಿಂದ ನಿರ್ಮಿಸುತ್ತಾರೆ. ಈ ಗುಡಿಯೊಳಗೆ ‘ಮಾಡಿಬಲಿ’ಯನ್ನು ಅರ್ಪಿಸುತ್ತಾರೆ. ಗುಡಿಯ ಮುಂಭಾಗದಲ್ಲಿ ಒಂದು ಕೋಳಿಯನ್ನು ಕಟ್ಟುತ್ತಾರೆ. ಮೃತಪಟ್ಟಿ ಮಹಿಳೆಯ ಪ್ರತೀಕವಾಗಿ ಓರ್ವ ಮಹಿಳೆ ‘ಕಳ’ದಲ್ಲಿ ಕುಳಿತುಕೊಳ್ಳುತ್ತಾಳೆ. ವಿಧಿಯಾಚರಣೆ ಆರಂಭವಾದಂತೆ ಮಹಿಳೆಗೆ ಆವೇಶ ಬಂದು ಸತ್ತ ಮಹಿಳೆಯ ಸ್ವಭಾವಗಳನ್ನು ಪ್ರಕಟಿಸುತ್ತಾಳೆ. ಈ ಸಂದರ್ಭದಲ್ಲಿ ಪುಳ್ಳುವರು ಏರುಧ್ವನಿಯಲ್ಲಿ ಹಾಡುತ್ತಾರೆ. ಸುಮಾರು ಒಂದು ವಾರ ಕಾಲ ಈ ಆಚರಣೆ ನಡೆಯುತ್ತದೆ.

ಕೃಷಿ ಸಂಸ್ಕೃತಿಗೆ ಸಂಬಂಧಪಟ್ಟಂತೆ ಕಟಾವಿನ ಸಂದರ್ಭದಲ್ಲಿ ಪುಳ್ಳುವರು ನಾಡಿನುದ್ದಕ್ಕೂ ಸಂಚರಿಸುತ್ತಾರೆ. ದೃಷ್ಟಿ ದೋಷವನ್ನು ನಿವಾರಿಸುವುದಕ್ಕೆ ಈ ಪ್ರವೃತ್ತಿ ಎಂಬುದು ನಂಬಿಕೆ. ಕೇರಳದ ಉಳಿದ ಪ್ರದೇಶಗಳಲ್ಲಿ ನಾಗದೇವತೆಯ ಸಂತುಷ್ಟಿಗಾಗಿ ಪುಳ್ಳುವರು ನಡೆಸುವ ಧಾರ್ಮಿಕ ಆಚರಣೆಯೇ ಸರ್ಪಂಪಾಟ್. ಈ ಆಚರಣೆಯನ್ನು ಸರ್ಪಂತುಳ್ಳಳ್‌, ನಾಗಕಳು, ಪಾಂಬಿನ್‌ತುಳ್ಳಳ್‌, ನಾಗತ್ತಾನ್‌ಪಾಟ್ ಎಂದೂ ಕರೆಯುತ್ತಾರೆ. ನಾಗಬಿಂಬವಿರುವ ಕಾವುಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಸರ್ಪಂಪಾಟ್ ನಡೆಸುತ್ತಾರೆ. ಮಣ್ಣಾರ್ ಶಾಲಿ, ಆಮೇಡ ಮಂಗಲಂ, ತೃಪ್ಪಾರ ಮೊದಲಾದ ನಾಗಾರಾಧನೆಯ ಕೇಂದ್ರಗಳಲ್ಲಿ ಹರಕೆಯ ರೂಪದಲ್ಲಿ ಇಂದಿಗೂ ಸರ್ಪಂಪಟ್ ನಡೆಸುತ್ತಾರೆ.

21_70A_DBJK-KUH

ಕಳಂ, ಪಾಟ್, ನೃತ್ಯ ಎಂದು ಸರ್ಪಂಪಾಟ್ ಆಚರಣೆಯಲ್ಲಿ ಮೂರು ಭಾಗಗಳಿವೆ. ಅಲಂಕೃತ ಚಪ್ಪರದಡಿಯಲ್ಲಿ ಸೆಗಣಿ ಸಾರಿಸಿ ಸರ್ಪಕಳದಲ್ಲಿ ರಚಿಸುತ್ತಾರೆ. ಬೆಳಗಿನ ಜಾವದಲ್ಲಿ ಅಕ್ಕಿಹುಡಿಯಿಂದ ಭಸ್ಮ ಕಳವನ್ನು ರಚಿಸುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿನಲ್ಲಿ ಪಂಚವರ್ಣದ ಹುಡಿಗಳಿಂದ ಕಳವನ್ನು ರಚಿಸುತ್ತಾರೆ. ಸರ್ಪಯಕ್ಷಿಕಳ, ನಾಗಯಕ್ಷಿಕಳ, ಅಷ್ಟನಾಗಕಳ ಹೀಗೆ ಅನೇಕ ವಿಧವಾದ ಕಳಗಳನ್ನು ಪುಳ್ಳುವರು ರಚಿಸುತ್ತಾರೆ. ಚಪ್ಪರದಲ್ಲಿ ತೂಗುದೀಪಗಳನ್ನು ಬೆಳಗಿಸಿ ಕಳಂ ಚಿತ್ರದ ಸುತ್ತಲೂ ಭತ್ತ, ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಹಿಂಗಾರ, ಹಾಲು ಮೊದಲಾದ ವಸ್ತುಗಳನ್ನು ವಿದ್ಯುಕ್ತವಾಗಿ ಇರಿಸುತ್ತಾರೆ. ಅನಂತರ ಕಳಂ ಪೂಜೆ ನಡೆಯುತ್ತದೆ. ಆಮೇಲೆ ಸರ್ಪಂ ತುಳ್ಳಳ್‌ಆರಂಭವಾಗುತ್ತದೆ. ನಾಗರಾಜ, ನಾಗಯಕ್ಷಿ, ಸರ್ಪಯಕ್ಷಿ, ಮಣಿನಾಗ, ಕರಿನಾಗ ಮೊದಲಾದ ರೂಪಗಳನ್ನು ಆವಾಹಿಸಿಕೊಂಡ ಮಹಿಳೆಯರು ಸರ್ಪಂತುಳ್ಳಳ್ ನಡೆಸುತ್ತಾರೆ. ಕಳಂ ಪೂಜೆಯ ನಂತರ ಈ ಮಹಿಳೆಯರು ಹಿಂಗಾರವನ್ನು ಹಿಡಿದುಕೊಂಡು ಕಳಂ ಚಿತ್ರದ ಮಧ್ಯೆ ಕುಳಿತು ಆವೇಶದಿಂದ ಓಲಾಡುತ್ತಾರೆ.

ಸರ್ಪಂಪಾಟ್‌ನ ಸಂದರ್ಭದಲ್ಲಿ ವೀಣೆ, ಕೊಡ, ತಾಳ ಮೊದಲಾದ ವಾದ್ಯಗಳನ್ನು ಬಳಸುತ್ತಾರೆ.

ನಾವೇರ್‌ಪಾಟ್, ಕಣ್ಣೀರುಪಾಟ್ ಮೊದಲಾದ ದೃಷ್ಟಿದೋಷಗಳನ್ನು ನಿವಾರಿಸುವ ಹಾಡುಗಳನ್ನು ಪುಳ್ಳುವರು ಹಾಡುತ್ತಾರೆ. ಓಣಂ, ವಿಷು ಮೊದಲಾದ ವಿಶೇಷ ದಿವಸಗಳಲ್ಲಿ ಮನೆ-ಮನೆಗಳಿಗೆ ಹೋಗಿ ಪುಳ್ಳುವರು ಹಾಡುತ್ತಾರೆ. ವೀಣೆಯನ್ನು ಪುಳ್ಳುವರು, ಕೊಡವನ್ನು ಪುಳ್ಳುವ ಸ್ತ್ರೀಯರು ವಾದ್ಯೋಪಕರಣವಾಗಿ ಬಳಸುತ್ತಾರೆ. ಉತ್ತರ ಕೇರಳದಲ್ಲಿ ಪುಳ್ಳುವರು ಮಿಳಾವ್ (ದೊಡ್ಡ ಮಣ್ಣಿ ಪಾತ್ರೆಯ ವಾದ್ಯ) ಉಪಯೋಗಿಸವರು. ಆಧುನಿಕ ಕಾಲದಲ್ಲಿ ವೈಭವದಿಂದ ಸರ್ಪಂಪಾಟ್ ನಡೆಸುವ ತರವಾಡುಗಳು ವಿರಳವಾಗಿವೆ. ನಾಗದೇವತೆಯ ಗುಡಿಗಳಲ್ಲಿ ಹರಕೆಯ ರೂಪದಲ್ಲಿ ಸರ್ಪಂಪಾಟ್‌ಗಳು ನಡೆಯುತ್ತವೆ. ಹಬ್ಬದ ಸಂದರ್ಭದಲ್ಲಿ ಮನೆ-ಮನೆಗೆ ತೆರಳಿ ಹಾಡು ಹೇಳುವ ಕ್ರಮವೂ ಇಂದು ವಿರಳವಾಗಿದೆ.

ಎಸ್.ಕೆ. ಅನುವಾದ : ಎನ್.ಎಸ್.

 

ಪೂಂಬೂಂ ಮಾಟ್ಟುಕ್ಕಾರರ್‌ ತಮಿಳುನಾಡಿನ ಉತ್ತರ ಜಿಲ್ಲೆಗಳಲ್ಲಿ ಕಂಡು ಬರುವ, ಊರೂರು ತಿರುಗಾಡುತ್ತ ತಮಗೆ ತಿಳಿದಿರುವ ಕಥೆ, ಹಾಡು, ಕುಣಿತ, ಲಾವಣಿ ಮೇಳ ಮುಂತಾದ ಕಲಾಪ್ರದರ್ಶನಗಳನ್ನು ಮಾಡಿ ಹಣ ಅಥವಾ ದವಸಧಾನ್ಯಗಳನ್ನು ಭಿಕಷೆಯಾಗಿ ಪಡೆದು ಹೊಟ್ಟೆ ಹೊರೆಯುತ್ತ ಬದುಕುವ ಅಲೆಮಾರಿ ಸಮೂಹಕ್ಕೆ ಸೇರಿದವರು (ಕೌಲೆತ್ತಿನವರು/ಕೋಲೆತ್ತಿನವರು). ತೆಲುಗು ಮಾತೃಭಾಷೆಯಾಗಿ ಹೊಂದಿರುವ ಇವರು ತಮಿಳನ್ನು ಚೆನ್ನಾಗಿ ಬಲ್ಲರು.

ಇವರನ್ನು ‘ಪೂವಿಡೈಯರ್’ ಎಂದೂ ಕರೆಯುತ್ತಾರೆ. ಅಂದರೆ ‘ಹೂಕಟ್ಟುವ ಇಡೈಯರ್’ (ಇಡೈಯರ್ ಎಂದರೆ ಜಾನುವಾರುಗಳನ್ನು ಸಾಕುವುದನ್ನು ಕಸುಬಾಗಿ ಹೊಂದಿದವರು) ಎಂದರ್ಥ. ಈ ಪಂಗಡಕ್ಕೆ ಸೇರಿದವರನ್ನು ‘ಪೂಮಾಟ್ಟುಕ್ಕಾರರ್’, ‘ಪೊಂಬೂಂ ಮಾಟ್ಟುಕ್ಕಾರರ್’, ‘ಪೆರುಮಾಳ್ ಮಾಟ್ಟುಕ್ಕಾರರ್’ ಎಂದೂ ಕರೆಯುವುದುಂಟು. ಇವರನ್ನು ಅವರ ಹೆಸರಿನ ಬಗ್ಗೆ ಕೇಳಿದರೆ ತಾವು ಆಟ್ಟಿಡೈಯರ್, ಮಾಟ್ಟಿಡೈಯರ್, ಸಾಂಬಾರ್ ಇಡೈಯರ್, ವನ್ನಿಯರಿಡೈಯರ್ ಮುಂತಾದವರಂತೆ ತಮ್ಮದು ‘ಪೂವಿಡೈಯರ್ ಜಾತಿ’ ಎಂದು ಹೇಳುವರು. ಇದಕ್ಕೆ ಆಧಾರವೆಂಬಂತೆ ಅವರು ದಂತಕಥೆಗಳನ್ನು ಹೇಳುತ್ತಾರೆ.

ಹೂಕಟ್ಟುವ ಕಾಯಕದಲ್ಲಿ ತೊಡಗಿದ್ದ ಪೂರ್ವಜರ ಕುರಿತ ಒಂದು ದಂತಕಥೆ ಹೀಗಿದೆ:

‘ನಮ್ಮ ಪೂರ್ವಜರು ಅಯೋಧ್ಯೆಯನ್ನು ಆಳಿದ ರಾಮ ಮತ್ತು ಅವನ ಕುಲಕ್ಕೆ ಸೇರಿದವರಿಗೆ ಹೂಕಟ್ಟಿ ಕೊಡುತ್ತಾ ಅವರಿಗೆ ಜೀತದಾಳುಗಳಂತೆ ಸೇವೆಗೈದರು. ರಾಮನಿಗೆ ಹೂವಿನ ಹಾರಗಳನ್ನು ಕಟ್ಟಿಕೊಡುವುದು. ಅವನ ಸೇವೆ ಮಾಡುವುದು ನಮ್ಮ ಮುಖ್ಯ ಕರ್ತವ್ಯವಾಗಿತ್ತು’ ಎಂದು ಪೂವಿಡೈಯರ್ ತಮ್ಮ ಪೂರ್ವಜರ ಜೀವನದ ಬಗ್ಗೆ ನುಡಿಯುತ್ತಾರೆ. ಅಲ್ಲದೆ, ಕೆಲವು ತಲೆಮಾರುಗಳ ಹಿಂದಿನವರೆಗೂ ಪೂವಿಡೈಯರ್ ಹೂಕಟ್ಟಿ ಮಾರುವ ವ್ಯಾಪಾರದಲ್ಲಿ ತೊಡಗಿದ್ದರು ಎಂದು ಆ ಸಮುದಾಯಕ್ಕೆ ಸೇರಿದವರು ವಿವರ ನೀಡುತ್ತಾರೆ. ಈಗ ಅವರು ಹೂವ್ಯಾಪಾರ ಮಾಡುತ್ತಿಲ್ಲ.

ತಮ್ಮ ಪೂರ್ವಜರು ಹೂಕಟ್ಟುವ ವೃತ್ತಿಯನ್ನು ಮಾಡುತ್ತಿದ್ದುದ್ದರಿಂದ ‘ಪೂವಿಡೈಯರ್’ ಎಂಬ ಹೆಸರು ಬಂದಿದೆ ಎಂದು ಪೂಂಬೂಂ ಮಾಟ್ಟುಕ್ಕಾರರ್ ಹೇಳಿದರೂ, ‘ಅಭಿಧಾನ ಚಿಂತಾಮಣಿ’ಯಲ್ಲಿ ‘ಪೂವಿಡೈಯರ್’ ಎಂಬ ಪದಕ್ಕೆ ಬೇರೆಯದೇ ಆದ ವಿವರಣೆ ನೀಡಲಾಗಿದೆ.

ಪೂವಿಡೈಯರ್ ಎಂದರೆ ಭೂ + ಇಡೈಯರ್ = ಅಂದರೆ, ಭೂಮಿಯ ಮಧ್ಯೆ ಇರುವವರು. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ತಮಿಳು ಪ್ರದೇಶವನ್ನು ಕುರಿಂಜಿ, ಮುಲ್ಲೈ, ಮರುದಂ, ನೆಯ್ದಲ್, ಪಾಲೈ ಎಂದು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕುರಿಂಜಿ ಎಂಬುದು ಬೆಟ್ಟಗುಡ್ಡಗಳಿಂದ ಕೂಡಿದ ಎತ್ತರವಾದ ಪ್ರದೇಶ. ಮರುದಂ ಎಂಬುದು ಬಯಲು ಸೀಮೆ. ನೆಯ್ದಲ್ ಎಂಬುದು ಕಡಲ ಬದಿಯಲ್ಲಿರುವ ಕರಾವಳಿ. ಹೀಗೆ ಭೌಗೋಳಿಕವಾಗಿ ಬೆಟ್ಟದಂತಹ ಎತ್ತರವಾದ ಪ್ರದೇಶದಲ್ಲಿ ವಾಸಮಾಡುತ್ತಿರುವವರು ಪೂವಿಡೈಯರ್. ಇವರ ಕುರಿತ ಪ್ರಾಚೀನ ಉಲ್ಲೇಖವನ್ನು ಭಾಗವತ ಪುರಾಣದಲ್ಲಿ ಕಾನಬಹುದು ಎಂದು ತಿಳಿಸುವ ಅಭಿಧಾನ ಚಿಂತಾಮಣಿ, ಅವರ ಮಾತೃಭಾಷೆ ತೆಲುಗು ಎಂದು ಸೂಚಿಸುತ್ತದೆ.

ಇದರಂತೆ ಐದು ತಮಿಳು ಭೂಪ್ರದೇಶಗಳ ಪೈಕಿ ಮಧ್ಯದಲ್ಲಿರುವ ನೆಲ (ಭೂಮಿ)ವಾದ ಮುಲ್ಲೈ ಪ್ರದೇಶದಲ್ಲಿ ಇವರು ವಾಸಿಸುತ್ತಿದ್ದರೆಂದು ತಿಳಿಯುವುದು.

‘ಪೂಂಬೂಂ ಮಾಟ್ಟುಕ್ಕಾರರ್’ ಎಂಬ ಹೆಸರಿನಲ್ಲಿ, ‘ಪೂಂಬೂಂ’ ಎಂಬುದು ಧ್ವನಿಸೂಚಕವಾಗಿದೆ. ಅಂದರೆ ಪೂವಿಡೈಯರ್ ಭಿಕಷೆಗೆ ಬರುವಾಗ, ತಮ್ಮ ಜೊತೆಯಲ್ಲಿ ಅಲಂಕಾರ ಮಾಡಿದ ಕೋಲೆಬಸವನೊಂದಿಗೆ ಬರುತ್ತಾರೆ. ಆಗ ತಮ್ಮ ಹೆಗಲಿಗೆ ಹಾಕಿಕೊಂಡಿರುವ ಉರುಮಿ ಮೇಳ ಎಂಬ ಚರ್ಮವಾದ್ಯವನ್ನು ಕಡ್ಡಿಯಿಂದ ಉಜ್ಜಿ ಧ್ವನಿಯುಂಟು ಮಾಡುತ್ತಾರೆ. ಆ ಧ್ವನಿ ಪೂಂ… ಬೂಂ… (ಬ್ರೂಂ… ಬ್ರೂಂ…) ಎಂದು ಕೇಳಿಸುತ್ತದೆ. ಈ ಧ್ವನಿಯಿಂದಾಗಿಯೇ ಆ ಚರ್ಮವಾದ್ಯವನ್ನು ಪೂಂಬೂಂ ಮೇಳ ಎಂದು ಕರೆಯುವುದುಂಟು. ಆ ಚರ್ಮ ವಾದ್ಯ ಹಾಗೂ ಅವರು ಜೊತೆಗೆ ಕರೆತರುವ ಕೋಲೆ ಬಸವ ಎರಡನ್ನೂ ಸೇರಿಸಿ ತಂಜಾವೂರು, ನಾಗಪಟ್ಟಿನಂ ಜಿಲ್ಲೆಗಳಲ್ಲಿ ಜನರು ಇವರನ್ನು ‘ಪೂಂಬೂರ್ ಮಾಟ್ಟುಕ್ಕಾರರ್’ ಎಂದು ಕರೆಯುತ್ತಾರೆ.

ಉತ್ತರ ಆರ್ಕಾಟ್, ದಕ್ಷಿಣ ಆರ್ಕಾಟ್ ಜಿಲ್ಲೆಗಳಲ್ಲಿಯೂ ಇವರನ್ನು ಇದೇ ಹೆಸರಿನಲ್ಲಿ ಕರೆಯಲಾಗುತ್ತದೆ. ‘ಪೆರುಮಾಳ್ ಮಾಟ್ಟುಕ್ಕಾರರ್’ ಎಂಬುದು ಪೂವಿಡೈಯರ್‌ಗಳನ್ನು ಸೂಚಿಸುವ ಮತ್ತೊಂದು ಹೆಸರಾಗಿದೆ. ಪೆರುಮಾಳ್ (ವಿಷ್ಣು) ಅನ್ನು ಪೂಜಿಸುವ ಇವರು ಅರಿಯಲೂರ್ ಸಮೀಪದ ಕಲಿಯ ಪೆರುಮಾಳ್ ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಲಾದ ಹಸು, ಎತ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ತಂದು, ತಮ್ಮ ಭಿಕ್ಷಾಟನೆ ವೃತ್ತಿಗೆ ಬಳಸಿಕೊಳ್ಳುವುದರಿಂದ ಇವರನ್ನು ‘ಪೆರುಮಾಳ್ ಮಾಟ್ಟುಕ್ಕಾರರ್’ ಎಂದೂ ಕರೆಯಲಾಗುತ್ತದೆ.

ಪೂವಿಡೈಯರ್‌ಗಳು ಅಲೆಮಾರಿಗಳಾಗಿ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುವವರು. ಆದರೆ ತಮಗೆ ಈ ಆಲೆಮಾರಿ ಜೀವನ ತಮ್ಮ ಪೂರ್ವಜರಿಂದ ಮಧ್ಯಕಾಲದಲ್ಲಿ ರೂಢಿಗೆ ಬಂದದ್ದು ಎಂದು ನಂಬುತ್ತಾರೆ. ವಾಸ್ತವವಾಗಿ ತಮ್ಮ ಪೂರ್ವಜರು ಹೊಲ ಜಮೀನುಗಳನ್ನು ಹೊಂದಿದ ಕೃಷಿಕರಾಗಿ ಜೀವನ ನಡೆಸುತ್ತಿದ್ದರು. ಆದರೆ ಅದನ್ನು ಕೈಬಿಟ್ಟು ಅಲೆಮಾರಿಗಳಾಗಲು ರಾಮನ ಶಾಪವೇ ಕಾರಣ ಎನ್ನುವ ಅವರು, ಅದಕ್ಕೆ ಸಂಬಂಧಿಸಿದ ಈ ಕೆಳಕಂಡ ಕಥೆಯನ್ನು ಹೇಳುತ್ತಾರೆ.

ಒಂದು ದಿನ ಶ್ರೀರಾಮ ಭಿಕ್ಷುಕನ ವೇಷಧರಿಸಿ, ಪೂವಿಡೈಯರ್‌ವಾಸಮಾಡುತ್ತಿದ್ದ ಊರಿಗೆ ಬಂದನು. ಕೃಷಿಕರಾಗಿ ಸಮೃದ್ಧ ಜೀವನ ನಡೆಸುತ್ತಿದ್ದ ಅವರನ್ನು, ತನಗೆ ಹಸಿವಾಗಿದೆ, ದಾನಧರ್ಮ ಮಾಡಿ ಎಂದು ಕೇಳಿಕೊಂಡನು. ಆದರೆ ಪೂವಿಡೈಯರ್ ದಾನ ನೀಡಲು ನಿರಾಕರಿಸಿದರು. ಭಿಕ್ಷುಕ ನಿಂತ ಸ್ಥಳಬಿಟ್ಟು ಕದಲಲಿಲ್ಲ. ಬಹಳವಾಗಿ ಬೇಡಿಕೊಂಡ. ಬೆಳೆಯುವ ಧಾನ್ಯಗಳಲ್ಲಿ ಒಂದು ಪಾಲನ್ನು ನೀಡಿ ತನ್ನ ಬಡತನವನ್ನು ನೀಗಿಸುವಂತೆ ವಿನಂತಿಸಿಕೊಂಡ. ಭಿಕ್ಷುಕನಿಂದ ಹೇಗಾದರು ಮಾಡಿ ತಪ್ಪಿಸಿಕೊಳ್ಳಬೇಕೆಂಬ ಉಪಾಯದಿಂದ, ಅವರು ತಾವು ಬೆಳೆಯುವ ಧಾನ್ಯಗಳಲ್ಲಿ ಅರ್ಧಪಾಲನ್ನು ನೀಡುವುದಾಗಿ ಅವನಿಗೆ ವಾಗ್ದಾನ ಮಾಡಿದರು ‘ಆಯ್ತು, ನಾವು ಈ ವರ್ಷ ಬೆಳೆಯುವ ಫಸಲಿನಲ್ಲಿ ಮೇಲಿನ ಫಸಲು ಬೇಕಾ? ಕೆಳಗಿನ ಫಸಲು ಬೇಕಾ? ಹೇಳು..’ ಎಂದು ಭಿಕ್ಷುಕನಿಗೆ ಕೇಳಿದರು. ಆತ ‘ಮೇಲಿನ ಫಸಲು ಬೇಕು’ ಎಂದು ಉತ್ತರಿಸಿದ.

ಆ ವರ್ಷ ಪೂವಿಡೈಯರ್‌ಗಳು ತಂತ್ರೋಪಾಯದಿಂದ ನೆಲಗೆಡಲೆಯನ್ನು ಬೆಳೆದರು. ಕೊಯ್ಲು ಸಂದರ್ಭದಲ್ಲಿ ಭಿಕ್ಷುಕ ಪ್ರತ್ಯಕ್ಷನಾದ. ಪೂವಿಡೈಯರ್ ‘ಇಗೋ ನೀನು ಕೇಳಿದ ಫಸಲು’ ಎಂದು ಅವನಿಗೆ ನೆಲಗಡಲೆಯ ಎಲೆಗಳನ್ನು ನೀಡಿದರು. ಮೋಸ ಹೋದ ಭಿಕ್ಷುಕ ಬೇಸರದಿಂದಲೇ ನೆಲಗಡಲೆ ಎಲೆಗಳನ್ನು ತೆಗೆದುಕೊಂಡು ಹೋದ. ಕೆಳಗಿನ ಫಸಲಾದ ಕಡಲೆಕಾಯಿಯನ್ನು ಪೂವಿಡೈಯರ್‌ತೆಗೆದುಕೊಂಡರು. ಭಿಕ್ಷುಕ ಅಲ್ಲಿಂದ ಹೊರಡುವಾಗ, ‘ಬರುವ ವರ್ಷದಲ್ಲಿ ನಿನಗೆ ಮೇಲಿನ ಫಸಲು ಬೇಕಾ? ಕೆಳಗಿನ ಫಸಲು ಬೇಕಾ?’ ಎಂದು ಕೇಳಿದರು. ಆತ ಈ ವರ್ಷವಾದರು ಫಸಲನ್ನು ಪಡೆಯಬೇಕೆಂದುಕೊಂಡು ‘ಬರುವ ವರ್ಷ ನನಗೆ ಕೆಳಗಿನ ಫಸಲು ಬೇಕು’ ಎಂದ. ಆದರೆ ಮುಂದಿನ ವರ್ಷ ಅವರು ಭತ್ತ ಬೆಳೆದರು. ಕೊಯ್ಲುಕಾಲದಲ್ಲಿ ಹೋಗಿದ್ದ ಭಿಕ್ಷುಕನಿಗೆ, ಕೆಳಗಿನ ಫಸಲಾದ ಬತ್ತದ ಹುಲ್ಲನ್ನು ನೀಡಿ, ಮೇಲಿನ ಫಸಲಾದ ಬತ್ತವನ್ನು ತಾವೇ ತೆಗೆದುಕೊಂಡರು.

ಹೀಗೆ ಪ್ರತಿ ವರ್ಷವೂ ಪೂವಿಡೈಯರ್ ಭಿಕ್ಷುಕನನ್ನು ವಂಚಿಸುತ್ತಾ ಬಂದರು. ಇದರಿಂದ ಕೋಪಗೊಂಡ ಭಿಕ್ಷುಕ, ತನ್ನ ನಿಜ ರೂಪವನ್ನು ತೋರಿಸಿ, ಅವರಿಗೆ ಶಾಪವನ್ನು ನೀಡಿದ. ಪೂವಿಡೈಯರ್‌ಗಳಿಗೆ ಒಂದು ಸೋರೆಕಾಯಿ ಬುರುಡೆಯನ್ನು ಕೊಟ್ಟು, ‘ನೀವು ಹಸಿದುಕೊಂಡು ಭಿಕ್ಷೆ ಬೇಡಿ ಬದುಕುವಂತಾಗಲಿ ! ಈ ಸೋರೆ ಬುರುಡೆಯನ್ನು ಪಾತ್ರವಾಗಿಸಿಕೊಂಡು ಗೋವಿಂದಾ, ರಮಾ ಎಂದು ನಾಮಸ್ಮರಣೆ ಮಾಡುತ್ತ, ಊರೂರು ಅಲೆದು ಭಿಕ್ಷಾಟನೆ ಮಾಡಿ ಬದುಕುವಂತಾಗಲಿ !’ ಎಂದು ಶಾಪ ನೀಡಿ ಮರೆಯಾದ. ಅಂದಿನಿಂದ ಪೂವಿಡೈಯರ್ ತಮ್ಮ ಜಮೀನುಗಳನ್ನು, ಸ್ಥಿರ ಬದುಕನ್ನು ಕಳೆದುಕೊಂಡು ಸೋರೆಬುರುಡೆಯೊಂದಿಗೆ ಅಲೆಮಾರಿಗಳಾಗಿ ಭಿಕ್ಷಾಟನೆ ಮಾಡುತ್ತ ಬದುಕುತ್ತಿದ್ದಾರೆ. ಹೀಗೆ ಅಲೆಮಾರಿಗಳಾಗಿ ಬದುಕುವ ಹೀನಾಯ ಸ್ಥಿತಿಗೆ ತಮ್ಮ ಪೂರ್ವಜರಿಗೆ ನೀಡಿದ ಶಾಪವೇ ಕಾರಣ ಎಂದು ಹೇಳುತ್ತಾರೆ.

ಈಗ ಪೂವಿಡೈಯರ್‌ಗಳಿಗೆ ಸ್ವಂತ ಜಮೀನಿಲ್ಲ. ಇವರು ಕಾರ್ಮಿಕರಾಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬುದು ಗಮನಾರ್ಹ. ಮೇಲಿನ ಕಥೆಯಲ್ಲಿ ಸೋರೆಬುರುಡೆ ಅವರ ಭಿಕ್ಷಾಪಾತ್ರೆ ಎಂದು ಪ್ರಸ್ತಪವಾಗಿದೆ. ೧೯೯೦ರ ದಶಕದವರೆಗೂ ಇವರು ಸೋರೆಬುರುಡೆಯನ್ನು ಬಳಸುತ್ತಿದ್ದದ್ದು ಕಂಡು ಬರುತ್ತದೆ. ಈಗ ಆ ಸ್ಥಾನದಲ್ಲಿ ಅಲ್ಯೂಮಿನಿಯಂ ಪಾತ್ರೆಗಳು ಪ್ರವೇಶ ಮಾಡಿವೆ.

ಇವರ ಈ ಬಗೆಯ ಬದುಕಿಗೆ ಕಾರಣವಾದ ಘಟನೆಯನ್ನು ವಿವರಿಸುವ ಇನ್ನೊಂದು ದಂತಕಥೆಯೂ ಪ್ರಚಲಿತವಿದೆ. ವೆಂಕಟಾಚಲಪತಿಯ ಆದೇಶದಂತೆಯೇ ಇವರ ಪೂರ್ವಜರು ಪೆರುಮಾಳ್ ಬಸವನನ್ನು ಕರೆದುಕೊಂಡು ಭಿಕ್ಷಾಟನೆ ಮಾಡಿ ಬದುಕುವ ಸ್ಥಿತಿಗೆ ದೂಡಲ್ಪಟ್ಟರು ಎಂಬುದಾಗಿ ಈ ಕಥೆ ಹೇಳುತ್ತದೆ.

ಹಿಂದೆ, ತಿರುಪತಿಯಲ್ಲಿರುವ ವೆಂಕಟಾಚಲಪತಿ ದೇವಸ್ಥಾನಕ್ಕೆ ಬರುವ ಕಾಣಿಕೆಗಳಲ್ಲಿ ಎರಡು ಬಾಲದ ಹಸುಗಳು, ಐದು ಕಾಲುಗಳ ಎತ್ತುಗಳು, ನಾಲ್ಕು ಕೋಡುಗಳ ಕರುಗಳು ಮುಂತಾದವು ಇರುತ್ತಿದ್ದವು. ಆಗಿನ ಕಾಲದಲ್ಲಿ ದೇವಸ್ಥಾನಕ್ಕೆ ಹೂಕಟ್ಟಿ ಕೊಡುವ ವೃತ್ತಿಯನ್ನು ಮಾಡುತ್ತಿದ್ದ ಪೂವಿಡೈಯರು, ಪ್ರಕೃತಿ ವಿಸ್ಮಯ ಸೃಷ್ಟಿಗಳಾದ ಇಂತಹ ದನಕರುಗಳನ್ನು ಮೇಯಿಸಬೇಕೆಂದು ಆದೇಶಿಸಲ್ಪಟ್ಟರು. ಆದರೆ ಒಳ್ಳೆಯ ದನಕರುಗಳನ್ನು ಮೇಯಿಸುವುದು ಗೌರವಯುತವಾದದ್ದು ಎಂದು ಭಾವಿಸಿದ್ದ ಇವರು, ಪ್ರಕೃತಿಯ ಅಸಹಜ ಸೃಷ್ಟಿಗಳನ್ನು ಮೇಯಿಸುವುದು ಮತ್ತು ಸಾಕುವುದು ತಮ್ಮ ತಲೆ ಮೇಲೆ ಬಿದ್ದ ಪಾಪದ ಕೆಲಸ ಎಂದುಕೊಂಡರು. ಆದ್ದರಿಂದ ಈ ಪಾಪವನ್ನು ನೀಗುವಂತೆ ವೆಂಕಟಾಚಲಪತಿಯನ್ನು ಪ್ರಾರ್ಥಿಸಿದರು. ಇವರ ಪ್ರಾರ್ಥನೆಯನ್ನು ಆಲಿಸಿದ ವೆಂಕಟಾಚಲಪತಿ ‘ಪೆರುಮಾಳ್‌ಮಾಡು’ (ವೆಂಕಟೇಶ್ವರನ ಹಸು) ಎಂದು ತದನಂತರ ತನ್ನ ಹೆಸರಿನಿಂದಲೇ ಕರೆಯಲಾದ ಬಸವನನ್ನು ನೀಡಿ, ಅವರಿಗೆ ಹೀಗೆ ಹೇಳಿದರು :

“ಭಕ್ತರೇ, ನಿಮ್ಮ ಮಕ್ಕನ್ನು ಹೇಗೆ ಜೋಪಾನವಾಗಿ ಸಾಕುತ್ತೀರೋ, ಹಾಗೆಯೇ ಈ ಬಸವನ್ನೂ ಸಾಕಬೇಕು. ಈ ಬಸವನನ್ನು ಪ್ರತಿದಿನ ಮನೆಮನೆಗೆ ಕರೆದುಕೊಂಡು ಹೋಗಿ ಭಿಕ್ಷೆ ಬೇಡಿದರೆ ನಿಮ್ಮ ಪಾಪ ನೀಗುತ್ತದೆ” ಎಂದು ನುಡಿದು ಮರೆಯಾದರು. ಅಂದಿನಿಂದ ಪೂವಿಡೈಯರ್‌ಗಳು ತಮ್ಮ ಪಾಪ ವಿಮೋಚನೆಗಾಗಿ ಕೋಲೆಬಸವನೊಂದಿಗೆ ಭಿಕ್ಷಾಟನೆ ಮಾಡುತ್ತ ಬದುಕುತ್ತಿದ್ದಾರೆ.

ಅಲೆಮಾರಿ ಜೀವನವನ್ನು ಸಮರ್ಥಿಸಿಕೊಳ್ಳಲು ನೆರವಾಗುವ ಈ ಕಥೆಗಳು, ಅವರ ಜೀವನ ಕ್ರಮವನ್ನು ವಿವರಿಸುತ್ತವೆ. ಒಂದೇ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಕೃಷಿ ಮಾಡುತ್ತ ಸ್ಥಿರ ಜೀವನ ನಡೆಸುವ ಜನರ ನಡುವೆ, ಇಂತಹ ಯಾವುದೇ ಸೌಕರ್ಯವಿಲ್ಲದೆ ಅಲೆಮಾರಿಗಳಾಗಿ ಬದುಕುತ್ತಿರುವವರು ಈ ಪೂವಿಡೈಯರ್.

ಈ ಎರಡು ಕಥೆಗಳಲ್ಲೂ ಎರಡು ಬಗೆಯ ಕಾಲಗಳನ್ನು ಕಾಣಬಹುದು. ಒಂದು ಪೌರಾಣಿಕ ಕಾಲ, ಇನ್ನೊಂದು ತಮ್ಮ ಪೂರ್ವಜರ ಐತಿಹಾಸಿಕ ಕಾಲ. ಇಲ್ಲಿ ಪೂವಿಡೈಯರ್‌ಗಳ ಪೂರ್ವಜರ ಐತಿಹಾಸಿಕ ಕಾಲದೊಳಗೆ ಪೌರಾಣಿಕ ಕಾಲ ಪ್ರವೇಶಿಸುತ್ತದೆ. ಇವೆರಡೂ ಕಾಲಗಳ ಸಂಗಮದಲ್ಲಿ ಆ ತಿರುವು ಕಾಣಿಸಿಕೊಳ್ಳುತ್ತದೆ. ದೇವರನ್ನು ವಂಚಿಸಿದ ಪೂರ್ವಜರಿಗೆ ಶ್ರೀರಾಮ ಶಾಪ ನೀಡಿದನೆಂಬುದು, ತಲೆತಲಾಂತರವಾಗಿ ಮುಂದುವರಿಯುವ ಕರ್ಮವನ್ನು ವಿಧಿಬರೆಹ ಎಂದು ಇವರು ಒಪ್ಪಿಕೊಂಡಂತಾಗಿದೆ. ಇನ್ನೊಂದೆಡೆ, ಶಾಪ ಎಂದು ಶಿಕ್ಷೆಯಿಂದ ಬಿಡುಗಡೆ ಪಡೆಯುವ ನಿಟ್ಟಿನಲ್ಲಿ ಪೆರುಮಾಳ್ ಬಸವನನ್ನು ಕರೆದುಕೊಂಡು ಅವರು ಯಾವಾಗಲೋ ಪ್ರಾರಂಭಿಸಿದ ವಿಮೋಚನಾ ಪಯಣ, ಕಾಲಮಿತಿ ಯಾವುದೂ ಇಲ್ಲದೆ ಮುಂದುವರಿಯುತ್ತಿದೆ. ಪೌರಾಣಿಕ ವ್ಯಕ್ತಿಗಳ ಕಾಲ ಮತ್ತು ಪೂಂಬೂಂ ಮಾಟ್ಟುಕ್ಕಾರರ್ ಇವೆರಡೂ ಕಾಲಗಳ ಸಮಾಗಮದ ಅಮಲಿನಿಂದ ಪೂಂಬೂಂ ಮಾಟ್ಟುಕ್ಕಾರರ್ ಬಿಡುಗಡೆ ಹೊಂದಿದಾಗಲೇ ಅವರು ಶಾಪವಿಮೋಚನೆ ಪಡೆಯುವರು.

.ಡಿ. ಅನುವಾದ ಐ.ಎಸ್.